ತಮ್ಮ ೨೬ನೇ ವಯಸ್ಸಿನಲ್ಲಿ ಶಾಸಕರಾಗಿ, ನಂತರ ಭೂಹೋರಾಟ ಸಂಘಟಿಸಿ ೧೩ ಸಾವಿರ ಎಕರೆ ಭೂಮಿ ಉಳುವ ರೈತರಿಗೆ ದೊರಕಿಸಿ, ನಿವೇಶನರಹಿತರ ಆಂದೋಲನ ಸಂಘಟಿಸಿ ಕೊಡಲಿ ಮೆರವಣಿಗೆ, ಬೃಹತ್‌ ಗಾತ್ರದ ಮನವಿ ಪತ್ರ, ರಸ್ತೆಪಕ್ಕ ಅಡಿಗೆಮಾಡಿ ಪ್ರತಿಭಟನೆಗಳಂತಹ ವಿಭಿನ್ನ ಹೋರಾಟ ಮಾದರಿಗಳನ್ನು ಪರಿಚಯಿಸಿದ ನೀಲಗಂಗಯ್ಯ ಪೂಜಾರ್, ಒಬ್ಬ ಸಕ್ರಿಯ ಸಮಾಜವಾದಿ ಹೋರಾಟಗಾರರು.

೧೯೨೬ರಲ್ಲಿ, ರೋಣ ತಾಲೂಕು ಹೊಸಹಳ್ಳಿ ಗ್ರಾಮದ ಸಾಮಾನ್ಯ ಬೇಸಾಯಗಾರ ಕುಟುಂಬದಲ್ಲಿ ನೀಲಗಂಗಯ್ಯ ಪೂಜಾರ್‌ ಹುಟ್ಟಿದರು. ಧಾರವಾಡದಲ್ಲಿ ಕಾಲೇಜು ವ್ಯಾಸಂಗ ಮಾಡುವಾಗಲೇ ಕ್ವಿಟ್‌ ಇಂಡಿ ಚಳವಳಿಯಲ್ಲಿ ಭಾಗವಹಿಸಿ ಜೈಲುವಾಸವನ್ನು ಅನುಭವಿಸಿದರು. ಜೈಲಿನಿಂದ ಹೊರಬರುತ್ತಲೇ ಸದಾಶಿವ ಕಾರಂತರೊಡನೆ ಒಟ್ಟಾಗಿ ೧೯೪೬ರಲ್ಲಿ ಕಾಂಗ್ರೆಸ್‌ ಸಮಾಜವಾದಿ ಪಕ್ಷ ಸ್ಥಾಪಿಸಿದರು. ಅವಿಭಜಿತ ಧಾರವಾಡ ಜಿಲ್ಲೆಯಲ್ಲಿ ಸಮಾಜವಾದಿ ಚಟುವಟಿಕೆಗಳನ್ನು ನಡೆಸಿದ ಪೂಜಾರರು ಮುಖ್ಯವಾಗಿ ಜಮೀನ್ದಾರಿ ಪದ್ಧತಿಯ ನಾಶಕ್ಕಾಗಿ ರೈತ ಸಂಘಟನೆಗಳನ್ನು ಕಟ್ಟುವಲ್ಲಿ ಆಸಕ್ತಿ ತೋರಿದರು. ೧೯೪೯ರಲ್ಲಿ ಪಕ್ಷದ ಚಟುವಟಿಕೆಗಳಿಂದ ತಟಸ್ಥವಾಗುಳಿದರು ಹಾಗೂ ಕಾನೂನು ವ್ಯಾಸಂಕ್ಕಾಗಿ ಬೆಳಗಾವಿಗೆ ತೆರಳಿದರು.

೧೯೫೩ರಲ್ಲಿ ಮುಂಬೈ ವಿಧಾನಸಭಾ ಸದಸ್ಯರಾಗಿದ್ದ ಅಂದಾನಪ್ಪ ದೊಡ್ಡ ಮೇಟಿಯವರು ರಾಜಿನಾಮೆ ಸಲ್ಲಿಸಿದ್ದರಿಂದ ತೆರವಾದ ಸ್ಥಾನಕ್ಕೆ ನೀಲಗಂಗಯ್ಯ ಪೂಜಾರರು ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಕರ್ನಾಟಕ ಏಕೀಕರಣ ಚಳವಳಿಯ ಬೆಂಬಲದೊಂದಿಗೆ ಉಪಚುನಾವಣೆಯಲ್ಲಿ ಗೆದ್ದು, ಮುಂಬೈ ವಿಧಾನ ಸಭಾ ಸದಸ್ಯರಾಗಿ ಆಯ್ಕೆಯಾದರು. ೧೯೫೬ರಲ್ಲಿ ಅಸ್ತಿತ್ವಕ್ಕೆ ಬಂದ ಹೊಸ ರಾಜ್ಯಕ್ಕೆ ಕರ್ನಾಟಕ ರಾಜ್ಯವೆಂದು ಹೆಸರಿಡಬೇಕೆಂದು ರಾಜ್ಯ ಪುನರ್‌ರಚನಾ ಮಸೂದೆಗೆ ತಿದ್ದುಪಡಿಯಲ್ಲಿ ಮಂಡಿಸಿದರು. ೧೯೭೨ ಮತ್ತು ೭೮ರಲ್ಲಿ ಸಾರ್ವತ್ರಿಕ ಚುನಾವಣೆಗಳಲ್ಲಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಸೋತರು.

ನೀಲಗಂಗಯ್ಯ ಪೂಜಾರ ಅವರ ಜೀವನದ ಬಹುಮಹತ್ವದ ಹೋರಾಟವೆಂದರೆ ೧೯೫೯ರ ಹೆಬ್ಬಳ್ಳಿ ಭೂ ಹೋರಾಟ. ಜಾಗೀರುದಾರಿಕೆ ರದ್ದತಿಯಿಂದ ಸರಕಾರದ ವಶವಾದ ಭೂಮಿಯನ್ನು ಸಾಗುವಳಿದಾರ ರೈತರಿಗೆ ಹಂಚಬೇಕೆಂದು ನಡೆಸಿದ ಹೋರಾಟ ಯಶಸ್ವಿಯಾಗಿ ಸುಮಾರು ೧೩ ಸಾವಿರ ಎಕರೆ ಭೂಮಿ ರೈತರಿಗೆ ಹಾಗೂ ಭೂರಹಿತ ಕೃಷಿಕಾರ್ಮಿಕರಿಗೆ ದೊರಕಿತು.

೧೯೬೧ ಹಾಗೂ ೧೯೭೪ರ ಭೂಸುಧಾರಣಾ ಕಾಯ್ದೆಯ ಪರಿಣಾಮವಾಗಿ ಭೂಮಿ ಹಂಚಿಕೆಯ ಹೋರಾಟ ಮಹತ್ವ ಕಳೆದುಕೊಂಡಿತು ಎಂದು ಭಾವಿಸಿ ೧೯೭೯ರಲ್ಲಿ ನಗರವಾಸಿ ವಸತಿರಹಿತರ ಹೋರಾಟ ಮುಂದುವರಿಸಲು ನಿರ್ಧರಿಸಿದರು. ಈ ಉದ್ದೇಶಕ್ಕಾಗಿ ನಿವೇಶನ ರಹಿತರ ಆಂದೋಲ’ವನ್ನು ನಡೆಸಿ ಹುಬ್ಬಳ್ಳಿಯಲ್ಲಿ ದುರ್ಬಲ ವರ್ಗದವರಿಗಾಗಿ ೧೨೦೦ ನಿವೇಶನಗಳುಳ್ಳ ಆನಂದನಗರ ಸ್ಥಾಪಿಸುವಲ್ಲಿ ಯಶಸ್ವಿಯಾದರು. ನಂತರದಲ್ಲಿ ಈ ನಗರ ಎರಡುಸಾವಿರ ನಿವೇಶಗಳಿಗೆ ವಿಸ್ತಾರಗೊಂಡಿತು.

ಆನಂದನಗರದ ಯಶಸ್ಸಿನ ಹಿನ್ನೆಲೆಯಲ್ಲಿ ನಿವೇಶನ ರಹಿತರ ಆಂದೋಲನವನ್ನು ಮುನ್ನಡೆಸಿ ಸುದೀರ್ಘ ಹೋರಾಟ ಮಾಡಿ ದುರ್ಬಲ ವರ್ಗದವರಿಗಾಗಿ ಮತ್ತೆ ಮೂರು ಸಾವಿರ ನಿವೇಶನಗಳನ್ನು ದೊರಕಿಸಿ ರಾಮಮನೋಹರ ಲೋಹಿಯಾ ನಗರ ಸ್ಥಾಪಿಸಿದರು. ಹುಬ್ಬಳ್ಳಿ ಕೇಂದ್ರಿತ ನಿವೇಶನ ರಹಿತರ ಆಂದೋಲನವನ್ನು ಧಾರವಾಡ ನಗರಕ್ಕೂ ವಿಸ್ತರಿಸಿದ ಪೂಜಾರ್‌ ಅವರು ಲಕಮ್ಮನಹಳ್ಳಿ ಪ್ರದೇಶದಲ್ಲಿ ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದಿಂದ ೯೦೯ ನಿವೇಶನಗಳನ್ನು ನಿವೇಶನರಹಿತರಿಗಾಗಿ ದೊರಕಿಸಿ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ನಡುವೆ ಧಾರವಾಡ ಜಿಲ್ಲೆಯಲ್ಲಿ ಶಿಕ್ಷಕರ ತರಬೇತಿ ಪಡೆದು ನಿರುದ್ಯೋಗಿಗಳಾಗಿ ಉಳಿದಿದ್ದ ಸುಮಾರು ಎರಡು ಸಾವಿರ ಯುವಕರಿಗೆ ಉದ್ಯೋಗ ದೊರಕಿಸಿ ಕೊಡುವಲ್ಲಿಯೂ ಅವರು ಹೋರಾಟ ಸಂಘಟಿಸಿ ಯಶಸ್ವಿಯಾದರು. ೧೯೮೦ರಲ್ಲಿ ಧಾರವಾಡ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸ್ಥಾಪನೆಯನ್ನು ಮಾಡಿದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ. ರಾಜ್ಯ  ಸರ್ಕಾರವು ಇವರಿಗೆ ಸುವರ್ಣ ಕರ್ನಾಟಕ ಏಕೀಕರಣ ಪುರಸ್ಕಾರ ಪ್ರಶಸ್ತಿ ನೀಡಿ ಗೌರವಿಸಿದೆ.

ಲಲಿತ ಸಾಹಿತ್ಯಕ್ಕಿಂತ ಸಂಶೋಧನೆಯಲ್ಲಿ ಆಸಕ್ತಿ ಹೊಂದಿದ್ದೇನೆ ಎನ್ನುವ ನೀಲಗಂಗಯ್ಯ ಪೂಜಾರ ಗಂಭೀರ ಓದುಗರೂ ಹೌದು.

*

ನಿಮ್ಮ ಆರಂಭದ ದಿನಗಳ ಬಗ್ಗೆ ಹೇಳ್ರಿ ಸಾರ್‌? ಸಮಾಜವಾದಿ ಚಳವಳಿ ಪ್ರವೇಶಿಸೋದಿಕ್ಕೆ ನಿಮಗೆ ಪ್ರೇರಣೆ ನೀಡಿದ ಹೋರಾಟಗಳು, ಗೆಳೆಯರು ಮತ್ತು ಹೊತ್ತಿನ ಸೈದ್ಧಾಂತಿಕ ಚರ್ಚೆಗಳು ಇವುಗಳ ಬಗ್ಗೆ?

ನಾವು ಮೂಲತಃ ೧೯೪೨ರ ಕ್ವಿಟ್‌ ಇಂಡಿಯಾ ಮೂವ್‌ಮೆಂಟ್‌ನಿಂದ ಬಂದೋವ್ರು. ಅದಕ್ಕಾಗೀನಾ ಒಂದ್ವರ್ಷ ವಿದ್ಯಾಭ್ಯಾಸ ಸ್ಥಗಿತ ಕೂಡಾ ಆಯ್ತು. ಪುನಃ ನಾನು ವಿದ್ಯಾಭ್ಯಾಸ ಆರಂಭ ಮಾಡಾಕ, ಧಾರವಾಡಕ್ಕ ಬಂದಾಗ ಕೆ. ಸದಾಶಿವ ಕಾರಂತರ ಪರಿಚಯ ಆತು. ಅವ್ರು ಆವಾಗ ವಿದ್ಯಾಭ್ಯಾಸ ಮುಂದುವರಿಸಬೇಕಂತ ಮಂಗಳೂರಿನಿಂದ ಇಲ್ಲಿಗೆ ಬಂದವ್ರು. ಹಿಂಗ ಅವರಿಗೂ ನಮಗೂ ಪರಿಚಯ ಆದದ್ದು. ಕಾರಂತರಿಗೆ ಏನಾಗಿತ್ತು. ಅವರು ಜೈಲಿನ್ಯಾಗ ಇದ್ದಾಗ ಕಮ್ಯುನಿಸ್ಟರಿಗೂ ಅವರಿಗೂ ವಾಗ್ವಾದ ಚರ್ಚೆ ಗಿರ್ಚೆ ನಡೆದ್ವು. ಹೀಗಾಗಿ ಅವರು ಒಂದಿಷ್ಟು ಮಾರ್ಕ್ಸ್ ವಾದದ ಬಗ್ಗೆ ಓದಿದ್ರು. ನಮಗೆ ಮಾರ್ಕ್ಸ್ ವಾದದ ಬಗ್ಗೆಯಾಗಲಿ, ಎದ್ರ ಬಗ್ಗೆಯಾಗಲಿ ಗೊತ್ತಾ ಇದ್ದಿರ್ಲಿಲ್ಲ. ನಾವು ಗಾಂಧೀಜೀನಾ ನಂಬಿದವು. ಗಾಂಧೀಜಿಯವ್ರ ಮೇಲಿನ ಶ್ರದ್ದೆಯಿಂದ ಹೋರಾಟಕ್ಕೆ ಧುಮಿಕಿದವು, ಕಾರಂತರ ಜೊತೀಗೆ ನಾನು ಸ್ನೇಹ ಬೆಳೆಸಿಕೊಂಡಾಗ ಕಾರಂತರು ನನಗೆ ಹೇಳಿದ್ರು, ಸ್ವಾತಂತ್ರ್ಯ ಹೋರಾಟದಿಂದ ಬರೀ ರಾಜಕೀಯ ಸ್ವಾತಂತ್ರ ಸಿಕ್ರ ಮುಗೀಲಿಲ್ಲ. ಪುನಃ ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯಕ್ಕೂ ನಾವು ಹೋರಾಟ ಮುಂದುವರಿಸಿಕೊಂಡು ಹೋಗಬೇಕಾಗ್ತದ. ಅವ್ರು ಒಂದು ಉದಾಹರಣೆ ಹೇಳಿದ್ರು, ಜಯಪ್ರಕಾಶ್‌ ನಾರಾಯಣ, ಆಚಾರ್ಯ ನರೇಂದ್ರ ದೇವ ಮತ್ತು ಅಚ್ಯುತ ಪಟವರ್ಧನ್‌ ಇವರೆಲ್ಲ ಮಾರ್ಕ್ಸ್‌ವಾದಿಗಳು, ಆದ್ರೆ ಸಮಾಜವಾದಿಗಳು. ಕಾಂಗ್ರೆಸ್‌ ಸಮಾಜವಾದಿಗಳು. ಮಾರ್ಕ್ಸ್‌ವಾದಕ್ಕನೂ ನಾವು ನಂಬ್ಕಂಡಿರೋ ಸಮಾಜವಾದಕ್ಕನೂ ಅಂತ ಇದೆ, ಅಂತಂದು ಲೋಹಿಯಾರವರು ಹೇಳ್ತಿದ್ರು. ಪ್ರಾಣಾನಾ ಅಂಗೈಯಾಗ ಹಿಡ್ಕಂಡು ಏನೋ ತಪ್ಪಿದೆ ಅಂತನ್ನೋದನ್ನ ಲೋಹಿಯಾರವರು ಆಗ್ಲೇ ವಿಶ್ಲೇಷಿಸಿ ಅದನ್ನ ಕಾರ್ಯಕರ್ತರೆದುರಿಗೆ ಹೇಳ್ತಿದ್ರು. ಮೂಲತಃ ಬಂಡವಾಳದ ಶೇಖರಣೆ ಆಗೋದು ಕಾರ್ಮಿಕರ ದುಡಿತದ ಉಳಿತಾಯನ್ನ ಸರ್‌ಪ್ಲಸ್‌ ವ್ಯಾಲ್ಯೂ ಅಂತನ್ಕಂಡು. ಕ್ಯಾಪಿಟಲ್‌ ಅಕ್ಯುಮುಲೇಷನ್ನು ಅದರಿಂದ ಆಗ್ತದೆ ಅಂತ ತಿಳ್ಕೊಂಡಾರ ಅವ್ರು. ಇದು ಯುರೋಪಿಗೆ ಅನ್ವಯವಾಗೋ ಮಾತು ಇರ್‌ಬಹ್ದು. ಸಾರ್ವತ್ರಿಕವಾಗಿ ಇದು ಪ್ರೊಲೆಟಾರಿಯೇಟ್ಸ್‌ ಎಕ್ಸ್‌ಪ್ಲಾಯಟೇಶನ್‌ನಿಂದ ಕ್ಯಾಪಿಟಲ್‌ ಅಕ್ಯುಮುಲೇಟ್‌ ಆಗ್ತದೆ ಅನ್ನೋ ಮಾತು ಸುಳ್ಳು, ಈ ಇಂಡಸ್ಟ್ರೀಯಲೈಜೇಶನ್‌ ಆದಮ್ಯಾಲೆ, ಕ್ಯಾಪಿಟಲ್‌ ಅಕ್ಯುಮುಲೇಟ್‌ ಆಗೋದು ಅಂತಂದ್ರ, ವಸಾಹತುಗಳೇನದಾವ, ಇವ್ರನ್ನ ಎಕ್ಸ್‌ಪ್ಲಾಯಿಟ್‌ ಮಾಡಿ ಈ ಕ್ಯಾಪಿಟಲ್‌ ಬೇಳಿತೆ ಹೊರತಾಗಿ ಅಲ್ಲಿ ಪ್ರೋಲೆಟಾರಿಯೇಟ್‌ ಭಾಗ ಭಾಳಾ ಕಡಿಮೆ ಅದ. ಅದ್ರೊಳಗಾ ಲೆನಿನ್‌ ಹೇಳಿದ್ರು. “ಇಂಪೀರಿಯಲಿಸಂ ಈಸ್‌ ದಿ ಹೈಯೆಸ್ಟ್‌ ಸ್ಟೇಟ್‌ ಆಫ್‌ ಕ್ಯಾಪಿಟಲಿಸಂ” ಅಂತಿಳ್ಕೊಂಡು. ಹಾಗಲ್ಲದು ಇಂಪೀರಿಯಲಿಸಂ ಬೇಕಾದದ್ದು ಅವ್ರ ಬಂಡವಾಳ ಬೆಳೀಲಿಕ್ಕೆ, ಅವ್ರಿಗೆ ಮಾರ್ಕೆಟ್‌ ಬೇಕಾಗಿತ್ತು. ಸುಲಿಗೆಗೆ ವಸಾಹತುಶಾಹಿ ಬೇಕಾಗಿತ್ತು. ಈ ವಸಾಹತುಶಾಹಿಯಿಂದನಾ ಬಂಡವಾಳ ಬೆಳೀಲಿಕ್ಕೆ, ಅವ್ರಿಗೆ ಮಾರ್ಕೆಟ್‌ ಬೇಕಾಗಿತ್ತು. ಸುಲಿಗೆಗೆ ವಸಾಹತುಶಾಹಿ ಬೇಕಾಗಿತ್ತು. ಈ ವಸಾಹತುಶಾಹಿಯಿಂದನಾ ಬಂಡವಾಳಶಾಹಿ ಬೆಳೀತಾ ಹೊರ್ತಾಗಿ ಬಂಡವಾಳಶಾಹಿಯಿಂದ ವಸಾಹತುಶಾಹಿ ಅಥವಾ ಇಂಪೀರಿಯಲಿಸಂ ಬೆಳೆದದ್ದು ಸುಳ್ಳು” ಅಂತಾ ಲೋಹಿಯಾ ಅಂದ್ರು.

ಇನ್ನಾ ಕ್ಲಾಸ್‌ವಾರು. ಹ್ಯೂಮನ್‌ ಹಿಸ್ಟರಿ ಕ್ಲಾಸ್‌ವಾರ್‌ನಿಂದ ಆಯ್ತು ಅಂತಂದು ಹೇಳ್ತಾರ. ಪೂರ್ಣತಃ ಅದಾ ಸತ್ಯ ಅಲ್ಲ. ಈ ಕ್ಲಾಸ್‌ವಾರ್‌ಕ್ಕಿಂತಲೂ ಬೇರೆ ಬೇರೆ ಅಂಶಗಳೂ ಬೆಳವಣಿಗೆಗಳು ಪಾತ್ರವನ್ನು ವಹಿಸ್ತಾವ. ಫಿಲಾಸಫಿ ಇರ್ತದ, ಆಧ್ಯಾತ್ಮಿಕತೆ ಇರ್ತದ, ಕಲ್ಚರಲ್‌ ಡೈಮೆನ್ಷನ್ನೂ ಇರ್ತವ. ಅವೂ ಕೂಡಾ ಪರಿಣಾಮ ಬೀರ್ತವ. ಬರೇ ಆರ್ಥಿಕವಾಗಿ ವರ್ಗಸಂಘರ್ಷದ ಮೂಲಕಾನಾ ಸಮಾಜವಾದಕ್ಕೆ ನಾವು ಬರ್ಲಕ್ಕೆ ಆಗಾದಿಲ್ಲ. ಈ ಎಲ್ಲ ಮುಖಾಂತರ ಲೋಹಿಯಾರವರು ಮಾರ್ಕ್ಸ್‌ವಾದದ ಬೇರುಗಳಿಗೆ ಕತ್ರಿ ಹಾಕಲಿಕ್ಕತ್ತಿದ್ರು. ಇದನ್ನ ನಾವು ಭಾಳಾ ಒಪ್ಪಿದ್ವಿ. ಅದಕ್ಕ ಮರುಳಾದ್ವೊ, ಆಕರ್ಷಿತರಾದ್ವೊ… ಆದ್ವಿ, ಆಗಿ ೪೬ನೇ ಇಸ್ವೀ ಒಳಗಾ ನಮ್ಮ ಸೋಷಲಿಸ್ಟ್‌ ಗೆಳೆಯರ ಗುಂಪು ಮಾಡಿದ್ವಿ. ನಾವ್‌ ಕಾಂಗ್ರೆಸ್‌ನಿಂದಾನಾ ಬಂದವು. ಕಾಂಗ್ರೆಸ್ಸಿನೊಳಗಾ ಬೆರೆತ್‌ಕೊಂಡು ಇರತಿದ್ವಿ. ಆದ್ರ ನಾವು ಸೋಷಲಿಸ್ಟರು. ಬೇರೆ ಅದಿವಿ ಹೇಳ್ಬೇಕಂತಂದ್ರ ವರ್ಗ ಸಂಘರ್ಷಕ್ಕೆ ಕೆಲವರ್ಷದವರೆಗೆ ನಾವೂ ಬೆನ್ನಹತ್‌ ಬೇಕಾತು.

ಅಂದರೆ, ವರ್ಗ ಸಂಘಟನೆಗಳು ಕಟ್ಟಿ, ಹೋರಾಟಗಳನ್ನೇನಾದ್ರೂ ಮಾಡಿದಾ? ಅವುಗಳ ಸ್ವರೂಪ ಮತ್ತು ಪರಿಣಾಮಗಳೇನು?

ನಾವು ಧಾರವಾಡದಲ್ಲಿ ೧೯೪೬ರ ಸುಮಾರಿನಲ್ಲಿ ಈ ಕಾರ್ಮಿಕರ ಸಂಘಟನೆ ಮಾಡ್ಲಿಕ್ಕೆ ಶುರು ಮಾಡಿದ್ದಿ. ಧಾರವಾಡದೊಳಗೆ ಇದ್ದ ಹೋಟೆಲ್‌ ವರ್ಕರ್ಸು, ಬೀಡಿ ಕಾಮಗಾರರು, ಟ್ರಾನ್ಸ್‌ ಪೋರ್ಟ್‌ ವರ್ಕರ್ಸು, ಬೀಡಿ ಕಾಮಗಾರರು, ಟ್ರಾನ್ಸ್‌ ಪೋರ್ಟ್ ವರ್ಕರ್ಸು, ಪೌರ ಕಾರ್ಮಿಕರು ಹಿಂಗ ನಾಲ್ಕೈದು ಸಂಘಟನೆಗಳನ್ನು ಮಾಡಿದ್ವಿ. ಭಾಳಾ ಬಲವತ್ತಾಗೇ ಮಾಡಿದ್ವಿ. ವೇಜ್‌ ಇನ್‌ಕ್ರೀಜ್‌ ಸಲುವಾಗಿ ಹೋರಾಟ, ಸಾಧಾರಣ ಬೀಡಿ ವರ್ಕ್ಸ್‌ದು ಆತು, ಪೌರಕಾರ್ಮಿಕರ್ದು ಆತೂ, … ಇವೆಲ್ಲಾ ಭಾಳಾ ಸಕ್ಸಸ್‌ಪುಲ್‌ ಆಗಿ ಆದ್ವು. ಸಾಧಾರಣವಾಗಿ ಅವಾಗ ಕಾರ್ಮಿಕರು ಧಾರವಾಡದಾಗ ನಮ್ಮ ಸಂಘಟನೆಯಿಂದ ಬಂದವರು ಇದ್ರು. ಆದ್ರ ಇದ್ರ ಸಾರ್ವರ್ತಿಕ ಪರಿಣಾಮ ಏನ್‌ ಸಮಾಜದ ಮ್ಯಾಲೆ ಆಗ್ತಿರಲಿಲ್ಲ (ನಗು) ವರ್ಗ ಸಂಘಟನ ಅಂತಂದ್ರ ಪೌರಕಾರ್ಮಿಕರ್ದು ಒಂದು ದೊಡ್ಡ ಸ್ಟ್ರೈಕ್‌ ಮಾಡಿದ್ವಿ. ಸಾಧಾರಣ ಒಂದ್ಹತ್ತು ದಿವ್ಸಾ ನಡೀತು. ನಡದಾಗ ಜನರೆಲ್ಲ ನಮ್ಮನ್ನು ಬೈತಿದ್ರು, ಯಾಕಂದ್ರ ಅವ್ರ ಲೆಟ್ರಿನ್ನು ಸ್ವಚ್ಛ ಆಗ್ತಿರಲಿಲ್ಲ, ಅವ್ರ ಗಟಾರಗಳು ಸ್ವಚ್ಛ ಆಗ್ತಿರಲಿಲ್ಲ, ಬೀದಿಯಲ್ಲಿ ಕಸಾ ತುಂಬಿರಾದು, ಇದಕ್ಕೆಲ್ಲ ಉಪದ್ರವಕಾರಿಗಳು ಇವ್ರಾ ಅಂತಾ ತಿಳ್ಕಂಡು ನಮ್ಮನ್ನಾ ನಿಂದಾ ಮಾಡ್ತಿದ್ರು. ಹಿಂಗಾಗಿ ನಾವು ಸೋಷಲಿಸ್ಟ್ರು ಕಾಂಗ್ರೆಸ್‌ನಿಂದ ಪ್ರತ್ಯೇಕ ಅಂತ ಅನಿಸಿಕೊಂಡಿದ್ವಿ. ಈ ಪೌರಕಾರ್ಮಿಕರ ಹೋರಾಟದಲ್ಲಂತೂ ಕಾಂಗ್ರೆಸಿನ ಕೆಲವು ಈ ನರಸಿಂಹದಾಬಡೆ, ಈಗ್ಲೂ ಅದಾರೆ ಇವ್ರು ಮತ್ತು ಕೆಲವರು ನಮ್ಮ ಹೋರಾಟಾನಾ ಮುರೀಬೇಕು ಅಂತಿಳ್ಕೊಂಡು ಕಕ್ಕಸುಗಳನ್ನು ಬಳೀಲಿಕ್ಕೂ ಮುಂದಾದ್ರು. ನಾವು ಕಾಂಗ್ರೆಸ್‌ನಿಂದ ಬಂದವ್ರು ಆದ್ರೂ ಕೂಡಾ ನಮ್ಮ ಮತ್ತು ಕಾಂಗ್ರೆಸಿಗರ ನಡುವೆ ಭಾಳಾ ತಿಕ್ಕಾಟ ಇತ್ತು. ನಾವು ಪ್ರಾರಂಭ ಮಾಡಿದಾಗ ಇನ್ನೂ ಲೋಹಿಯಾ ಮತ್ತು ಜಯಪ್ರಕಾಶರು ಲಾಹೋರ್‌ ಜೈಲಿನ್ಯಾಗ ಇದ್ರು. ಸ್ವಾತಂತ್ರ ಪೂರ್ವದ್ದು ಇದು.

ಆಗಿನ ರಾಷ್ಟ್ರೀಯ ವಿದ್ಯಮಾನಗಳೇನಿದ್ದವು?

ಆಗ ಕ್ಯಾಬಿನೆಟ್ಟು ಮಿಶಸ್ಸು ಅವೆಲ್ಲ ಬರ್ಲಿಕ್ಕೆ ಹತ್ತಿದ್ವು, ಹಿಂದುಸ್ಥಾನಕ್ಕೂ ಸ್ವಾತಂತ್ರ್ಯ ಸಿಗಬೇಕು ಅಂತಾ ಚರ್ಚಿಲರ ಮ್ಯಾಲೆ ಅಮೇರಿಕಾದ ರೂಸ್‌ವೆಲ್ಟ್ ದೂ ಒತ್ತಡ ಬರ್ಲಿಕ್ಕೆ ಹtftತ್ತು, ಮುತ್ತು ಇಲ್ಲಿ ಸ್ಟ್ಯಾಫರ್ಡ್‌ ಕ್ರಿಪ್ಸ್‌ ಬ್ಯಾರೆ ಇದ್ರುವಾರ್‌ ಕ್ಯಾಬಿನೆಟ್‌ನೊಳಾಗ. ಕ್ರಿಪ್ಸ್‌ ಸ್ವಲ್ಪ ಭಾರತದ ಪರವಾಗಿ ಇದ್ದ. ಅವಾಗ ಜಯಪ್ರಕಾಶರ್ದು, ಲೋಹಿಯಾರ್ದು ಬಿಡುಗಡೆ ಆತು. ಆಮ್ಯಾಲೆ ಅವ್ರ ನೇತ್ರತ್ವದೊಳಗಾನ ಕಾಂಗ್ರೆಸ್‌ ಸೋಷಲಿಸ್ಟ್ ಪಾರ್ಟಿ ಆತು. ಆದಮ್ಯಾಲೆ ಯುದ್ಧದ ಸಂದರ್ಭ ಬಂತು, ಆ ಸಂದರ್ಭದೊಳಗ ಬ್ಯಾನಾ ಮಾಡ್ಬಿಟ್ರು. ಹೊಸ್ತಾಗಿ ಪ್ರಾರಂಭ ಮಾಡ್ಬೇಕಾಗಿ ನಾಸಿಕ್‌ದೊಳಗೇನಾ ಅಧಿವೇಶನ ಕರೆದಿದ್ರು. ಕೆ.ಎಸ್‌. ಕಾರಂತರನ್ನ ಮಾತ್ರ ಕಳಿಸಿ ಕೊಟ್ಟಿದ್ವಿ. ಕಾರಂತ್ರು ಅಲ್ಲಿಂದ ಲಿಟರೇಚರು ಅವೂ… ಇವೂ ತಂದಿದ್ರು.

ನೀವು ೪೬ ಕಾಂಗ್ರೆಸ್ನಲ್ಲೇ ಇದ್ದು, ಕಾಂಗ್ರೆಸ್ಸೋಷಲಿಸ್ಟ್ಪಾರ್ಟಿ ಚಟುವಟಿಕೆ ಮಾಡ್ತಿದ್ರಿ ನಂತರ ಸೋಷಲಿಸ್ಟ್ಪಾರ್ಟಿ ಅಂತಾ ಬೇರೆ ಆಗೋಕೆ ಕಾರಣವಾದ ತಾತ್ವಿಕ ಭಿನ್ನಾಭಿಪ್ರಾಯಗಳೇನು?

ತಾತ್ವಿಕ ಭಿನ್ನಾಪ್ರಾಯ ಅಂದ್ರೆ ಬಹಳಷ್ಟು ಗಾಂಧೀ ನೆಹರು ತಾವು ಸಮಾಜವಾದಿಗಳು ಅಂತಾ ಹೇಳ್ಕೋತಿದ್ರು, ಅಷ್ಟಲ್ದೇನೇ ಕೆಲವು ಸಲ ಲೋಹಿಯಾರನ್ನ ಜಯಪ್ರಕಾಶರನ್ನ ತಮ್ಮ ಸ್ನೇಹಿತ್ರು ಅಂತಾ ಭಾವಿಸ್ತಿದ್ರು. ಅವ್ರನ್ನ ಕಾಂಗ್ರೆಸ್‌ ವರ್ಕಿಂಗ್‌ ಕಮಿಟಿಯೊಳಗೂ ತಗೊಂಡಿದ್ರು ಅಂತಾ ಕಾಣಿಸ್ತದ. ಕಾಂಗ್ರೆಸ್‌ನ್ಯಾಗ ಬಲಪಕ್ಷವಾದಿಗಳೂ ಇದ್ರು.

ಬಲಪಕ್ಷವಾದಿಗಳು, ಅಂದ್ರೆ ಯಾರು…?

ಸರ್ದಾರ್‌ ಪಟೇಲ್‌ರನ್ನು ಹೆಸರಿಸಬಹ್ದು, ರಾಜಾಜಿಯವರನ್ನು ಹೇಳಬಹ್ದು. ಅವು ತಕರಾರು ಮಾಡಿದ್ರು. ಕಾಂಗ್ರೆಸ್ಸಿನೊಳಗಾ ಇವ್ರು ಮತ್ತೊಂದು ವಿಭಾಗ ಮಾಡ್ತಾರ, ತಾವೇನಾದ್ರೂ ಮಾಡ್ಕೊಳ್ಳೋದಾದ್ರೆ ಕಾಂಗ್ರೆಸ್ಸಿನೊಳಗೆ ಇದ್ದು, ಮಾಡ್ಕೋಳ್ಳೋ ಅವಶ್ಯಕತೀ ಇಲ್ಲ. ತಮ್ಮ ಸಂಘಟನಾ ಏನೈತಿ ಕಾಂಗ್ರೆಸ್‌ ಸೋಷಲಿಸ್ಟ್‌ ಪಾರ್ಟಿ ಅಂತಾ, ಅದನ್ನ ವಿಸರ್ಜನೆಗೊಳಿಸಿ ಪೂರ್ಣ ಕಾಂಗ್ರೆಸ್ಸಿನೊಳಗ ಇರ್ಬೇಕೋ ಹೊರ್ತಾಗಿ ಅಲ್ಲೀ ಒಂದು ಗುಂಪು ಮಾಡ್ತೀವಿ ಅಂದ್ರ ನಾವದಕ್ಕ ಅವಕಾಶ ಮಾಡಿಕೊಡಾದಿಲ್ಲ ಅನ್ನೋ ಮಾತನ್ನ ಅಂದಿದ್ರು.

ಜಮೀನ್ದಾರೀ ಪದ್ಧತಿ ವಿರುದ್ಧದ ನಿಮ್ಮ ಆರಂಭದ ಪ್ರಯತ್ನಗಳು ಯಾವುವು?

ನೋಡ್ರಿ ಆಗ, ನಮ್ದು ಭಾಳಾ ರಿಸ್ಟ್ರಿಕ್ಟೆಡ್‌ ಏರಿಯಾ ಧಾರವಾಡ ಮತ್ತು ಧಾರವಾಡ ತಾಲ್ಲೂಕುಗಳಲ್ಲಿ ನಾವು ರೈತ ಸಂಘಟನೆ ಮಾಡ್ತಿದ್ವಿ. ನಮ್ಮ ಕೇಂದ್ರ ಏನಪಾ ಅಂತಂದ್ರ ಗರಗ – ಇಲ್ಲೇ ಧಾರವಾಡದ ಹತ್ರ. ಅಲ್ಲಿ ಗರುಡ ಶರ್ಮ ನಮ್ಮ ಜೊತೆಯಲ್ಲಿ ಇದ್ರು. ಧಾರವಾಡ ತಾಲೂಕಿನ್ಯಾಗ ಜಮೀನ್ದಾರು ಜಾಸ್ತಿ. ಎರಡೆರಡು ಮೂರ್ಮೂರು ಹಳ್ಳಿಗಳಿಗೆ ಒಬ್ಬೊಬ್ರೆ ಜಮೀನಾರ್ರು ಇರ್ತಿದ್ರು. ಹಂಗರಕಿ ಅಂತನ್ನಾದೋ ೧೪ ಹಳ್ಳಿಗಳಿಗೆ ಜಮೀನ್ದಾರರು. ಅವ್ರು (ಗರುಡಶರ್ಮ) ಜಮೀನ್ದಾರರ ವಿರುದ್ಧ ಇದ್ರು.

ಜಮೀನ್ದಾರರ ಭೂಮಿ ನೂರಾರು ಎಕರೆ ಅಲ್ಲ ಸಾವಿರಾರು ಎಕ್ರೆ…!

ಹೌದು ಸಾವಿರಾರು ಎಕ್ರೆ ಇರ್ತಿತ್ತು.ಆಮ್ಯಾಲೆ ಮಮ್ಮಿ ಗಟ್ಟಿ ದೇಸಾಯ್ರು ಅಂತಿದ್ರು. ಅವ್ರ ವಿರುದ್ಧ ನಾವು ಸಂಘಟನೆ ಮಾಡ್ತಿದ್ವಿ. ಗರಗದಲ್ಲಿ ರೈತ ಸಮ್ಮೇಳನಗಳನ್ನೂ ಮಾಡಿದ್ವಿ, ಆವಾಗ ಕಮಲಾದೇವಿ ಚಟ್ಟೋಪಾಧ್ಯಾದಯ ಅವ್ರನ್ನ ಮುಖ್ಯ ಅತಿಥಿಯಾಗಿ ಕರೆಸಿದ್ವಿ. ೪೭ಕ್ಕೂ ಮೊದಲೇ ನಾವು ಒಂದು ಸಮ್ಮೇಳನ ಜರುಗಿಸಿದ್ವಿ ೧೯೪೨ರ ಹೋರಾಟದೊಳಗ ಗರಗ, ಮುಮ್ಮೀ ಗಟ್ಟಿ, ತಡಕೋಡ, ಉಪ್ಪಿನ ಬೆಟಗೇರಿ ಇಲ್ಲೆಲ್ಲಾ. ಸ್ವಾತಂತ್ರ್ಯ ಹೋರಾಟದಾಗ ಭಾಳಷ್ಟು ಭಾಗವಹಿಸಿ ಪ್ರಸಿದ್ಧಿಗೆ ಬಂದಂಥ ಹಳ್ಳಿಗಳಿದ್ದು. ಅವ್ರು ಆ ನಲವತ್ತೆರಡರ ಹೋರಾಟದ ಸಂಪರ್ಕದಿಂದಾಗ ಗರುಡಶರ್ಮರ ಜೊತೆಗಿರ್ತಿದ್ರು. ಹಂಗಾಗಿ ಗರದ ಸಮ್ಮೇಳನ ಭರ್ಜರಿಯಾಗಿ ನಡೀತ್ರಿ. ಅವಾಗ ಕಾಂಗ್ರೆಸ್‌ನ್ಯಾಗ ‘ಕಿಸಾನ್‌ಸೆಲ್‌’ ಏನೋ ಮಾಡಿದ್ರು ಅಂತಾ ಕಾಣಿಸ್ತದ. ಕಿಸಾನ್‌ ಸೆಲ್‌ನ ಪ್ರಮುಖರು ಇಲ್ಲಿ ಸರ್ದಾರ್‌ ವೀರನಗೌಡ್ರು ಅಂತಿದ್ರು. ಅವ್ರು ನಮ್ಮ ಪ್ಲಾಟ್‌ಪಾರ್ಮ್‌ ಮ್ಯಾಲೆ ಬಂದು, ನಿಮಗೆಲ್ಲ ರೈತ ಸಮ್ಮೇಳನ ಮಾಡ್ಲಿಕ್ಕೆ ಏನ್‌ ಅಧಿಕಾರವಿದೆ. ನೀವ್ಯಾರ್ ಇದನ್ನ ಮಾಡ್ಲಿಕ್ಕೆ. ಕಾಂಗ್ರೆಸ್‌ ನನ್ನನ್ನು ‘ಕಿಸಾನ್‌ ಸೆಲ್‌’ನ ಕನ್‌ವೀನರ್‌ ಅಂತಾ ನೇಮಿಸಿದೆ. ರೈತ ಸಂಘಕ್ಕ ನಾನು ಸಂಚಾಲಕ. ಕಾಂಗ್ರೆಸ್ಸಿನ ಪರವಾಗಿ ಹಾಗೆ ಹೀಗೆ ಅಂತಂದ್ರು ಆಮ್ಯಾಲೆ ಕೂಡಿದ ಜನ ಕೇಳ್ಲಿಲ್ಲ. ಅವ್ರನ್ನ ಎತ್ತಿ ಕೆಳಗಿಳಿಸಿದ್ರು, ಅವರಿಗೆ ಮುಖಭಂಗ ಆತು. ಹೋದ್ರು.

ಮಟ್ಟಕ್ಕೆ ಕಾಂಗ್ರೆಸ್ ಮತ್ತು ಸೋಷಲಿಸ್ಟರ ನಡವೆ ತಿಕ್ಕಾಟ ಇತ್ತಾ!

ಹೌದೌದು, ಪೌರಕಾರ್ಮಿಕರ ಸಂಘ ಮಾಡಿದ್ವಿ. ಕಾಂಗ್ರೆಸ್‌ನೋರು ಅದನ್ನ ವಿರೋಧಿಸಿದ್ರು. ಹೋರಾಟ ಮುರೀಬೇಕಂತಾನಾ ಪ್ರಯತ್ನ ಮಾಡಿದ್ರು ಆಮ್ಯಾಲೆ ಬೀಡಿ ವಿರೋಧಿಸಿದ್ರು. ಹೋರಾಟ ಮುರೀಬೇಕಂತಾನಾ ಪ್ರಯತ್ನ ಮಾಡಿದ್ರು. ಆಮ್ಯಾಲೆ ಬೀಡಿ ಕಾರ್ಮಿಕರ ಸಂಘಟನೆ ಮಾಡೋವಾಗ ಬೀಡಿ ಮಾಲಿಕರ ಪರವಾಗಿ ಕಾಂಗ್ರೆಸ್ಸಿನವರೂ ಇರ್ತಿದ್ರು. ಹೀಗೆಲ್ಲಾ ಬೆಳ್ಕಂಡಾ ಬಂದಿತ್ತು ಇದು. ನಿಮಗ ಹೆಸ್ರು ಹೇಳ್ಬೇಕಂತಂದ್ರ ಬೀಡಿ ಮಾಲಕರ ಪರವಾಗಿ ಇಲ್ಲಿ ತಂಬಾಕದ ವಕೀಲ್ರು. ಅಂತಿದ್ರೀ ಹಿಂದಗಡೆ ಅವರು ಎಂ. ಎಲ್ಲೋನೂ ಆದ್ರು. ಪ್ರಾಸಿಕ್ಯೂಷನ್ಯಾಗ ಅವ್ರು ಮಾಲಕರ ಪರವಾಗಿ ವಾದಿಸ್ಲಾಕಂತಾ ಬರ್ತಿದ್ದು, ನಾವು ನಮ್ಮಷ್ಟಕ್ಕ ನಾವಾ ವಾದಾಮಾಡ್ತಿದ್ವಿ.

ರೀತಿ ಟ್ರೈಡ್ಯೂನಿಯನ್ಗಳನ್ನು ಕಟ್ಟೋ ಹೊತ್ತಿನಲ್ಲಿ ನಿಮ್ಮ ಜೊತೆಗೆ ಯಾರ್ಯಾರಿದ್ರು?

ನಮ್ಮ ಜೊತೇಗೆ ಗಂಗಾಧರ ಪದಕಿಯವ್ರು, ಆರ್‌.ಎಸ್‌. ಮುನವಳ್ಳಿ ಅಂತಿದ್ರು. ಆಮ್ಯಾಲೆ ಜಿ.ಎನ್‌.ನರಬೋಳಿ ಇದ್ರು. ಅವ್ರು ದೊಡ್ಡ ಅರ್ಥಶಾಸ್ತ್ರಜ್ಞರು. ಮೊದ್ಲ ಐ.ಐ.ಟಿ.ನೊಳಗ ಇದ್ರು, ಪ್ರೊಫೆಸರ್‌ ಆಗಿ. ಆಮ್ಯಾಲೆ ಅಮೇರಿಕಾಕ್ಕೆ ಹೋಗ್ಬಿಟ್ರು. ಅಲ್ಲೇ ಸಿಟಿಜನ್‌ ಶಿಪ್‌ ತಗೊಂಡ್ರು.

ಸದಾಶಿವ ಕಾರಂತ್ರು ಇದ್ರಾ ಅವಾಗ…?

ಕಾರಂತ್ರು ಇದ್ರು. ಆದ್ರ ಅವಾಗಿನ್ನೂ ಆನಂದ (ಸಮಾಜವಾದಿ ಅಮ್ಮೆಂಬಳ ಆನಂದ) ಅವ್ರು ಬಂದಿರಲಿಲ್ಲ. ಆಮ್ಯಾಲ ನಮ್ಮ ಗುಂಪು ವಿದ್ಯಾಭ್ಯಾಸಕ್ಕಂತ ಚದುರಬೇಕಾತು. ಅವಾಗ ಇಲ್ಲಿದ್ದಂಥ ಆಫೀಸ್‌ ಬಂದಾತು. ಇಲ್ಲೀ ಆಫೀಸ್ನಾ ಒಂದ್ ವರ್ಷದ ವರೆಗೂ ನಡೆಸಿದ್ವೀ ಅಂತಾ ಕಾಣಿಸ್ತದ. ಅದಕ್ಕಾಗಿ ಕಲೆಕ್ಷನ್‌ ಮಾಡಿ ಜಯ ಪ್ರಕಾಶರಿಗೆ ಅರ್ಪಿಸಿದ್ವಿ. ಅದು ನಲವತ್ತೇಳರ ಮೇದಲ್ಲಿ. ಒಂದು ಹತ್ತು ಸಾವಿರ ರೂಪಾಯಿ ಫಂಡ್ ಏನಾ ಕಲೆಕ್ಟ್ ಆಗಿತ್ತದು. ಅದನ್ನ ಕಮಲಾದೇವಿ ಚಟ್ಟೋಪಾಧ್ಯಾಯ ಅವ್ರು ಮ್ಯಾನೇಜ್‌ ಮಾಡಿದ್ರು. ನಮ್ಮಂತ ಸಣ್ಣ ಹುಡುಗ್ರಿಗೆ ಯಾರ್‌ ಕೊಡ್ತಾರ. ಮೈಸೂರು ಭಾಗದಲ್ಲಿ ಸಾವ್ಕಾರು ಚನ್ನಯ್ಯನವರ ಸಹಾಯ ತಗೊಂಡಿದ್ರು. ದಕ್ಷಿಣ ಕನ್ನಡ ಜಿಲ್ಲೆಯೊಳಗ ಶ್ರೀನಿವಾಸ ಮಲ್ಯ ಅವ್ರ ಸಹಾಯ ತಗೊಂಡಿದ್ರು. ಆಗ ಹತ್ತು ಸಾವಿರಂದ್ರ ಭಾಳಾ ದೊಡ್ಡ ಅಮೌಂಟು. ಆ ಅಮೌಂಟಿನ ಸಹಾಯದಿಂದ ಕಮಲಾದೇವಿ ಚಟ್ಟೋಪಾಧ್ಯಾಯ ಪತ್ರಿಕೇನಾ ಶುರು ಮಾಡಿಬಿಡ್ರೆಲ್ಲ ಒಂದು ಅಂತದ್ರು. ‘ಸಂಯುಕ್ತ ಕರ್ನಾಟಕ’ ಏನದ ಆ ಪತ್ರಿಕೆಗೆ ಕಟ್‌ ಆದ ಕಾಗದ ಏನಿರ್ತಾವ ಅದನ್ನ ನಮಗ ಪೂರೈಕೆ ಮಾಡ್ರಿ ಅಂತ ಶ್ರೀನಿವಾಸ ಮಲ್ಯ ಹೇಳಿದ್ರು. ಅವ್ರು ಹೇಳಿಕೆ ಮೇರೆಗೆ ‘ಸಂಯುಕ್ತ ಕರ್ನಾಟಕ’ ದ ವು ಕೊಡ್ತಿದ್ರು. ಮಲ್ಯ ಭಾಳಾ ಚಾಣಾಕ್ಷ ಮನುಷ್ಯ ಅವ್ರು. ಜವಹರಾಲಾಲ್‌ ನೆಹ್ರು ಅವರ ಪರ್ಸನಲ್‌ ಸೆಕ್ರಟರಿ ಆಗಿದ್ರು. ಅವ್ರ ಡೊಮೆಸ್ಟಿಕ್ ಅಫೇರ್ಸ್ ನೆಲ್ಲಾ ಅವ್ರು ನೋಡ್ತಿದ್ರು ಆವಾಗ.

ಅವ್ರು ಸೋಷಲಿಸ್ಟ್ಪಕ್ಷದ ಪರವಾಗಿದ್ರಾ?

ಬಿಕಾಸ್‌ ಆಫ್ ಕಮಲಾದೇವಿ ಚಟ್ಟೋಪಾಧ್ಯಾಯ. ಅವ್ರು ಪ್ರಬಲ ಕಾಂಗ್ರೆಸ್ ನಾಯಕರು ಆಗಿದ್ರು ಕೂಡ. ಕಮಲಾದೇವಿ ಚಟ್ಟೋಪಾಧ್ಯಾಯರಿಗೂ ಅವ್ರಿಗೂ… ಸ್ವಲ್ಪ ಋಣಾನುಬಂಧ ಸಂಬಂಧ ಇತ್ತು ಅಂತಾ ಕಾಣಿಸ್ತದ. ಅವ್ರು ಕಮಲಾದೇವಿ ಚಟ್ಟೋಪಾಧ್ಯಯರ ಮಾತು ಕೇಳ್ಕಂಡು ನಮಗ ಸಹಾಯ ಮಾಡ್ತಿದ್ರು.

ಹುಬ್ಬಳ್ಳಿ ಧಾರವಾಡ ಭಾಗದಲ್ಲಿ ಸ್ವಾತಂತ್ರ್ಯ ಹೋರಾಟ ವಾತಾವರಣ ಹೇಗಿತ್ತು?

ಅಲ್ಲ… ನಲವತ್ತೆರಡರ ಹೋರಾಟ ಮುಗಿದ್ಮ್ಯಾಲಲ್ಲ ನಾವು ಸೋಷಲಿಸ್ಟ್ರು ಆಗಿದ್ದು. ನಲವತ್ತೆರಡರ ಹೋರಾಟದಾಗ ನಾವು ಭಾಗವಹಿಸಿದ್ವಿ. ಅವಾಗ ಧಾರವಾಡದಾಗ ನಮಗೆ ಭಾಳ ಸಹಾಯ ಆಗಿದ್ದಂದ್ರ ಗರುಡಶರ್ಮರಿಂದ.

೪೬ರಲ್ಲಂತೂ ನೀವು ಸ್ವಾತಂತ್ರ ಹೋರಾಟಕ್ಕಿಂತ ಸಮಾಜವಾದೀ ಸಂಘಟನೆಯಲ್ಲೇ ತೊಡಗಿಸಿಕೊಂಡಿದ್ರಿ ಅಂತಾ ಕಾಣಿಸುತ್ತೆ?

ಹಾಂ…ಹಾಂ…ಹಾಗಲ್ಲ, ಸ್ವಾತಂತ್ರ್ಯದ ಹೋರಾಟ, ಬರೇ ಸಂಧಾನದ ಮೂಲಕ ಆಗೋದಿಲ್ಲ. ಕ್ರಿಪ್ಸ್ ಸಂಧಾನ ಮುರಿದು ಬಿದ್ದ ಮ್ಯಾಲ ಇದು, ಅಸಾಧ್ಯದ ಮಾತು. ಚರ್ಚಿಲ್ ಸಂಧಾನ ಮಾಡ್ ಗೊಡಾದಿಲ್ಲ. ಹಿಂಗಾಗಿ ಇನ್ನೊಂದು ಹೋರಾಟ ನಾವು ಮಾಡಬೇಕಾಗ್ತದ. ಸಿದ್ಧತೆಗಳನ್ನೂ ಬೇರೆ ಮಾಡಬೇಕಾಗ್ತದ. ಅದರ ತಂತ್ರಗಾರಿಕೆಯನ್ನೂ ಬೇರೆ ಮಾಡಬೇಕಾಗ್ತದ. ನಾವು ಗ್ರಾಮ ಸ್ವರಾಜ್ಯದ ತಳಹದಿಮ್ಯಾಲೆ ಗ್ರಾಮಕ್ಕೂ ಮತ್ತು ದಿಲ್ಲಿಗೂ ಏನು ಸಂಪರ್ಕ ಇದೆ. ಆ ಸಂಪರ್ಕನ್ನ ಕಡಿದು ಹಾಕುವಂತಹ ಹೋರಾಟ ಮಾಡ್ಬೇಕು. ಪ್ರತೀ ಗ್ರಾಮಗಳನ್ನ ಸ್ವಾಯತ್ತ ಮಾಡ್ಬೇಕು ದಿಲ್ಲಿ ಮತ್ತು ಹಳ್ಳಿಗಳ ನಡುವಿನ ಸಂಪರ್ಕ ಏನದ ಅದು ಸಾಮ್ರಾಜ್ಯಶಾಹಿ. ಈ ಸಾಮ್ರಾಜ್ಯಶಾಹಿ ಸಂಬಂಧಗಳನ್ನು ಕತ್ತರಿಸೋವಂಥ ಕಾರ್ಯಕ್ರಮಗಳನ್ನ ನಾವು ರೂಪಿಸಬೇಕಾಗ್ತದ ಅಂತನ್ನೋ ವಿಚಾರ ನಮ್ಮ ಸೋಷಲಿಸ್ಟರದು. ಈ ವಿಚಾರ ಮೂಲತಃ ಲೋಹಿಯಾರವರ್ದು.

ನೀವು ಬಾಂಬ್ ಮಾಡ್ಲಿಕ್ಕೆ ಕಲೀರಿ. ನೀವು ರೇಡಿಯೋ ಕೇಂದ್ರಗಳನ್ನ ನಡೆಸೋಕ ಸಿದ್ಧರಾಗ್ರಿ. ತಾಲೂಕಿಗೊಂದರಂಗ ರೇಡಿಯೋ ಕೇಂದ್ರಗಳನ್ನು ಮಾಡ್ರೀ, ಹೀಗೆಲ್ಲಾ ಹೇಳ್ತಿದ್ರು. ಆದ್ರೆ ಪ್ರತ್ಯಕ್ಷದಲ್ಲಿ ನಮಗೆ ಮಾಡ್ಲಿಕ್ಕೆ ಆಗ್ತಿದ್ದಿಲ್ಲ ಬಿಡ್ರಿ. ಆದ್ರೆ ಇನ್ನೊಂದು ಸ್ವಾತಂತ್ರ್ಯ ಹೋರಾಟ ಬರ್ತದೆ. ಅದ್ರಾಗ ನಮ್ಮದು ಪ್ರಮುಖ ಪಾತ್ರ ಅದೆ ಅಂತಾ ಅಂದ್ಕೊಂಡಿದ್ವಿ.

ಅಂದ್ರೆ ನೀವು ಹೋರಾಟಕ್ಕ ಪೂರಕವಾಗಿ ಪೌರಕಾರ್ಮಿಕರ, ಬೀಡಿಕಾರ್ಮಿಕರ ಸಂಘಗಳಂತಹ ಟ್ರೆಡ್ ಯೂನಿಯನ್ ಮಾರ್ಕ್ಸ್ ವಾದೀ ಮಾದರಿಗಳನ್ನೇ ಅನುಸರಿಸಿದ್ರೀ?

ಇಲ್ಲ, ೧೯೪೨ರಲ್ಲಿ ಬಿಹಾರ ಮತ್ತು ಮಹಾರಾಷ್ಟ್ರದ ಸತಾರ ಜಿಲ್ಲೆಗಳಲ್ಲಿ ಪ್ರಯೋಗಗಳಾಗಿದ್ದವು. ಆ ಮಾದರಿ ಮ್ಯಾಲೆ ನಾವು ಸ್ವಾತಂತ್ರ್ಯ ಹೋರಾಟಕ್ಕೆ ಇಳಿದ್ವಿ. ಕಮ್ಯುನಿಸ್ಟ್ರೇನು ಸ್ವಾತಂತ್ರ್ಯ ಹೋರಾಟದ ಪರ ಏನಿದ್ವಿಲ್ಲ. ಅವ್ರು ಮೊದಮೊದಲು ಮಹಾಯುದ್ಧ ಪ್ರಾರಂಭವಾದ ದಿವಸಗಳಲ್ಲಿ ಮಿತ್ರರಾಷ್ಟ್ರಗಳಿಗೆ ಅಂದ್ರೆ ಸಾಮ್ರಾಜ್ಯಶಾಹಿ ರಾಷ್ಟ್ರಗಳಿಗೆ ವಿರುದ್ಧ ಇದ್ರು. ಮುಂದೆ ಹಿಟ್ಲರ್ ಗೂ ಮತ್ತು ಸ್ಟಾಲಿನ್‌ಗೂ ಒಪ್ಪಂದ ಆಗಿ ರಷ್ಯಾ ಮಿತ್ರ ರಾಷ್ಟ್ರಗಳನ್ನು ಸೇರಿದ ನಂತರ ಅವ್ರು ಮುಸಲೋನಿ ಮತ್ತು ಫ್ಯಾಸಿಸ್ಟ್ ಶಾಹಿ ವಿರುದ್ಧ ಪ್ರಜಾಸತ್ತಾತ್ಮಕ ರಾಷ್ಟ್ರಗಳ ಹೋರಾಟ ಅವರು ನೋಡಿದ್ರು. ಆದ್ರ ನಾವು ಸ್ವಾತಂತ್ರ ಹೋರಾಟವನ್ನ ಸಾಮ್ರಾಜ್ಯಶಾಹಿ ವಿರುದ್ಧದ ಪ್ರಜಾಸತ್ತಾತ್ಮಕ ಹೋರಾಟ ಅಂತ ನೊಡ್ತಿದ್ವಿ.

ಹೊತ್ತು ಹಿಟ್ಲರನ ಸೈನ್ಯವನ್ನು ರಷ್ಯಾ ತಡೆಯದೇ ಹೋಗಿದ್ದರೆ ಭಾರತವನ್ನೂ ಅದು ಆಕ್ರಮಿಸುವ ಸಾಧ್ಯತೆ ಇತ್ತು ಅನ್ನಿಸೋದಿಲ್ವೇ?

ಫ್ಯಾಸಿಸ್ಟ್ ಅಪಾಯಗಳನ್ನ ನಾವೂ ಮನಗಂಡಿದ್ವಿ. ಆದರೆ ನಾವು ಏನ್ ಹೇಳ್ತಿದ್ವಿ ಅಂದ್ರ ಏನು ಕಲೋನಿಗಳು ಅದಾವಾ, ಅವುಗಳನ್ನು ನಿಮ್ಮಿಂದ ರಕ್ಷಣೆ ಮಾಡ್ಲಿಕ್ಕೆ ಆಗೋದಿಲ್ಲ. ಈಗಾಗಲೇ ಪೂರ್ವದ ಕಲೋನಿಗಳಿದ್ದು. ಮಲಯ, ಜಾವಾ, ಸಿಂಗಾಪುರ ಇವುಗಳನ್ನು ಜಪಾನ್ ನುಂಗಿ ಹಾಕಿತ್ತು. ಅವುಗಳನ್ನ ನೀವು ರಕ್ಷಣಾ ಮಾಡ್ಲಿಲ್ಲ. ಬರ್ಮಾನೂ ಹೋಗಿತ್ತು. ಅವುನ್ನೂ ರಕ್ಷಣೆ ಮಾಡ್ಲಿಕ್ಕಾಗಿಲ್ಲ. ಅದಕ್ಕ ನಾವು ಹೇಳ್ತೀದ್ವಿ ನೀವ್ ಮೊದ್ಲು ಹೋಗ್ರೀ. ನಮ್ಮ ರಕ್ಷಣೆ ನಾವ್ ಮಾಡ್ಕೊಂತೀವಿ ಅಂತಾ. ಅದಕ್ಕಾಗಿ ಗಾಂಧಿ ಶಾಂತ ರೀತಿಯಿಂದ ತೊಲಗಿ ಹೋಗ್ರಿ ಅಂತಿದ್ರು.

ಕಮ್ಯುನಿಸ್ಟರು ಸಂದರ್ಭದಲ್ಲಿ ಜಾಗತಿಕ ಸನ್ನಿವೇಶವನ್ನು ಪರಿಗಣಿಸಿದ್ರು, ನೀವು ಭಾರತದ ಸ್ವಾತಂತ್ರವೇ ಪ್ರಧಾನ ಅಂತಾ ಮನಗಂಡಿದ್ರೀ ಅಲ್ವೇ?

ಜಾಗತಿಕ ಸನ್ನಿವೇಶದಲ್ಲಿ ವಸಾಹತು ರಾಷ್ಟ್ರಗಳೇನಿದ್ವು ಅವುಗಳಲ್ಲಿ ಅವ್ರೇನು ಅಂಥಾ ಜಾಗೃತಿ ಹುಟ್ಟಿಸೋದಾಗ್ಲೀ, ಹೋರಾಟ ಮಾಡೋದಾಗ್ಲಿ ಮಾಡ್ಲಿಲ್ಲ.

ವಸಾಹತುಶಾಹಿ ವಿರೋಧಿ ಹೋರಾಟದಲ್ಲಿ ಕಮ್ಯುನಿಸ್ಟರು ಬಂಧಿತರಾಗಿ ಜೈಲುಗಳಲ್ಲಿ ಹಿಂಸೆ ಅನುಭವಿಸಲಿಲ್ಲವೇ?

ಎಲ್ಲಿ, ಎಲ್ಲಿ ಮಾಡ್ಯಾರ ಅವ್ರು? ನನಗೇನನ್ನಿಸ್ತದೆ ಏಶಿಯನ್‌ ಮತ್ತು ಆಫ್ರಿಕನ್ ಕಲೋನಿಗಳೇನಿದ್ವು, ಆ ಕಲೋನಿಗಳಲ್ಲಿ ಅವರೇನು ಮಾಡ್ತಿರಲಿಲ್ಲ. ಈ ದಕ್ಷಿಣ ಆಫ್ರಿಕಾ ಮತ್ತು ಏಶ್ಯಾ ಈ ಯಾವ ರಾಷ್ಟ್ರಗಳಲ್ಲೂ ಇವರು ಸಾಮ್ರಾಜ್ಯಶಾಹಿಯನ್ನ ಮತ್ತು ಫ್ಯಾಸಿಸಂ ಅನ್ನ ವಿರೋಧಿಸಿ ಹೋರಾಟ ಮಾಡ್ತಿರಲಿಲ್ಲ. ಅವರ ತೆಲಂಗಾಣದ್ದು ಆತೂ, ಕೇರಳದ್ದೂ ಆತೂ ಆಂಟಿ ಪ್ಯೂಡಲಿಸಂ ಅವೆಲ್ಲ.

ನಲವತ್ತೇಳರ ಆಗಸ್ಟ್೧೫ ದಿನದ ಅನುಭವ ಏನು ನಿಮ್ಮದು. ಅವತ್ತಿನ ನಿಮ್ಮ ಆಚರಣೆ ಸ್ವರೂಪ ಮತ್ತು ಜನರ ಪ್ರತಿಕ್ರಿಯೆ ಹೇಗಿತ್ತು?

ಅದನ್ನ ನಾವು ಸ್ವಾಗತಿಸಿದ್ವಿ. ಎನ್ಜಾಯ್ ಮಾಡಿದ್ವಿ. ಮೆರಣಿಗೆ ಮಾಡಿದ್ವಿ. ಸ್ವಾತಂತ್ರ್ಯ ಸಿಕ್ಕಿದ್ದಕ್ಕ ಭಾಳ ಸಂತೋಷ ಪಟ್ಟೋರು ನಾವು. ಅವತ್ತು ನಾವಂದು ಬೇರೆ ಮೆರವಣಿಗೆ ಮಾಡಿದ್ವಿ… ಅವರೊಂದು ಬೇರೆ ಮೆರವಣಿಗೆ ಮಾಡಿದ್ರು.

ಅವ್ರು ಅಂದ್ರೆ?

ಕಾಂಗ್ರೆಸ್ಸಿನೋರು, ಅವರು ಬೇರೆ, ನಾವು ಸೋಷಲಿಸ್ಟ್ರು ಬೇರೆ.

ಸ್ವಾತಂತ್ರ್ಯದ ಪ್ರಥಮ ದಿನಾಚರಣೆನೇ ಪ್ರತ್ಯೇಕವಾಗಿ ಆಯ್ತು?

ಹೌದು, ನಮ್ಮ ನಾಲ್ಕಾರು ಕಾರ್ಮಿಕ ಸಂಘಟನೆಗಳ ಜನರನ್ನ ಕರ್ಕೊಂಡು ನಾವು ಮಾಡಿದ್ವಿ. ಅವ್ರು ಬೇರೆ ಮಾಡಿದ್ರು.

ನೀವು ಧ್ವಜ ಹಾರಿಸಿದ್ದೆಲ್ಲಿ?

ನಾವು ಕಡಪಾ ಮೈದಾನದಲ್ಲಿ ಹಾರಿಸಿದ್ವಿ. ಈಗಿನ ನಗರಸಭೆ ಐತಲ್ಲ ಅಲ್ಲಿ. ಅವ್ರು ಡಿ.ಸಿ.ಕಾಂಪೌಂಡ್‌ನಲ್ಲಿ ಮಾಡಿದ್ರು.

ಆನಂತರ ಗಾಂಧೀ ಕೊಲೆಯಾದಾಗ ಕೆಲವರು ಧಾರವಾಡದಲ್ಲಿ ಸಿಹಿ ಹಂಚಿದ್ರು ಅಂತಾ ನಿಮ್ಮ ಸಮಾಜವಾದೀ ಮಿತ್ರರಿಂದ ಕೇಳಿದ್ದೆ ನಾನು, ಹೌದಾ?

ಗಾಂಧೀ ಸತ್ತಾಗ ಸಾಧಾರಣ ಆರ್‌.ಎಸ್‌.ಎಸ್‌.ನವ್ರು ಹುಷಾರಾಗೇ ಇರ್ತಿದ್ರು. ಏನಾದ್ರೂ ಮಾಡಬೇಕಾಗಿತ್ತಪ್ಪಾ ಅಂದ್ರೆ ಸಾಮಾನ್ಯವಾಗಿ ರಾತ್ರಿ ಸಮಯದಲ್ಲಿ ಮಾಡಿರತಿದ್ರು. ಗೋಡೆ ಬರಹಗಳನ್ನು ಮಾಡ್ತಿರಬೇಕಾದ್ರೆ ಸೋಷಲಿಸ್ಟರು ನಾವು ಒಂದು ಸಂಘಟನೆ ಮಾಡ್ಕಂಡು ರಾತ್ರಿ ಗಸ್ತು ತಿರುಗ್ತಿದ್ವಿ. ಒಮ್ಮೆ ಗೋಡೆ ಬರಹಗಳನ್ನು ಅವ್ರು ಮಾಡ್ತಿರಬೇಕಿದ್ರೆ ವೈಎಸ್‌.ಪಾಟೀಲ್‌ ಅಂತಾ ಎಂ.ಎಲ್‌.ಸಿ ಆಗಿದ್ರು ಅವ್ರು. ಕೆಲವು ದಿವಸ ಭಾರತೀಯ ಜನಸಂಘದ ಅಧ್ಯಕ್ಷ ಇದ್ರು. ಅವರನ್ನ ಹಿಡ್ಕಂಡು ಅವರ ಕೈಯಿಂದ ಬಣ್ಣಗಿಣ್ಣ ಎಲ್ಲ ಕಸ್ಕಂಡು ಅದೆಲ್ಲ ಸುರುವಿದ್ವಿ… ಅಷ್ಟಾ ಅಲ್ಲ, ಅವ್ರು ಜಗನ್ನಾಥರಾವ್ ಜೋಷಿ ಅವರನ್ನ ಕರ್ನಾಟಕದ ಸಿಂಹ ಅಂತಿದ್ರು. ಇಲ್ಲೇ ಮುನ್ಸಿಪಲ್‌ ಮೈದಾನದಾಗ ಆರ್.ಎಸ್‌.ಎಸ್‌ ನಿಷೇಧದ ವಿರುದ್ಧ ನಾನು ಸತ್ಯಾಗ್ರಹ ಮಾಡ್ತೀನಿ ಅಂತಾ, ಮಾಡಿದ್ರು. ಸತ್ಯಾಗ್ರಹ ಅಂದ್ರೇನು ಘೋಷಣೆ ಕೂಗೋದು ನಮ್ಮನ್ನು ದೋಷಮುಕ್ತರನ್ನಾಗಿ ಮಾಡ್ರಿ, ಆರ್.ಎಸ್‌.ಎಸ್‌. ನಿಷೇಧ ತಗೀರಿ ಹಿಂಗೆಲ್ಲಾ ಘೋಷಣೆ ಕೂಗಿ ಅರೆಸ್ಟ್ ಆಗ್ಬೇಕು ಅನ್ನೋರು ಅವ್ರು. ಆದ್ರೆ ನಾವು ಸೋಷಲಿಸ್ಟ್ರು ಏನು ಮಾಡಿದ್ವಿ. ಅವರನ್ನೆಲ್ಲಾ ಮುತ್ತಿಗೆ ಹಾಕಿದ್ವಿ. ಅವರ್ನ ಘೋಷಣೆ ಹಾಕದಂತೆ ತಡೆದ್ವಿ. ಪೋಲೀಸ್ರನ್ನ ಕರ್ದು, ತಗಂಡು ಹೋಗ್ರೀ ಇವ್ರನ್ನ ಅಂತಂದು, ಜಗನ್ನಾಥ್ ರಾವ್ ಜೋಶೀನ ಪೋಲೀಸರ ವಶಕ್ಕೆ ಒಪ್ಪಿಸಿದ್ವಿ. ಸ್ವತಃ ನಾನ್‌ ಅದ್ರಾಗ ಇದ್ದೆ.

ಸಿಹಿ ಹಂಚಿದ್ರು ಅಂತಾ ನಾನೂ ಕೇಳಿದ್ದೆ. ಅವ್ರು ಮಾಡಿದ್ರೂ ಮಾಡಿರಬಹ್ದು. ಅಲ್ಲ ಅಂತನ್ನೋದಿಲ್ಲ. ಗಾಂಧೀಜಿಗೆ ಗುಂಡು ಹಾಕಿದ್ರು ಅಂತಾ ಆಗ ರೇಡಿಯೋ ಮೂಲಕ ಸುದ್ದಿ ಬಂದಿತ್ತು. ರೇಡಿಯೋ ಮೂಲಕ ಸುದ್ದಿ ತಿಳದಾಗ ಉಳಿದ ನಮ್ಮ ಸಂಗಾತಿಗಳೆಲ್ಲ ಮುಸ್ಲಿಂ ಲೀಗ್‌ನವ್ರು ಮಾಡಿರ್ಬೇಕು, ಅಂತೆಲ್ಲಾ ಅಂದ್ರು. ನಾನವಾಗ ಸ್ಪಷ್ಟವಾಗಿ ಹೇಳ್ದೆ. ಮುಸ್ಲಿಂರಿಂದ ಆದದ್ದೂ ಅಲ್ಲ, ಮುಸ್ಲಿಂ ಲೀಗ್‌ನಿಂದ ಆದದ್ದೂ ಅಲ್ಲ. ಗಾಂಧೀಜಿಯವ್ರನ್ನ ಕೊಲೆ ಮಾಡಿರ್ಭೇಕು, ಅಂತೆಲ್ಲಾ ಅಂದ್ರು. ನಾನವಾಗ ಸ್ಪಷ್ಟವಾಗಿ ಹೇಳ್ದೆ. ಮುಸ್ಲಿಂರಿಂದ ಆದದ್ದೂ ಅಲ್ಲ, ಮುಸ್ಲಿಂ ಲೀಗ್‌ನಿಂದ ಆದದ್ದೂ ಅಲ್ಲ. ಗಾಂಧೀಜಿಯವ್ರನ್ನ ಕೊಲೆ ಮಾಡಿರ್ಬೇಕು ಅಂದ್ರೆ, ಆರ್‌.ಎಸ್‌.ಎಸ್‌.ನವನೇ ಇರ್ತಾನ. ಆರ್. ಎಸ್‌.ಎಸ್‌. ನವರೇ ಮಾಡಿರ್ತಾನ ಅಂದೆ. ಆಗಾ ಐದ್‌ ನಿಮಿಷದಲ್ಲೇ ನ್ಯೂಸ್‌ ಬಂತು…ನಾಥೂರಾಂ ಗೋಡ್ಸೆ ಗುಂಡು ಹಾಕ್ಯಾನ ಅಂತ.

ಸ್ಪಷ್ಟ ಸುದ್ದಿ ಬರೋಕೂ ಮೊದ್ಲೇ ನಿಮಗೆ ಖಾತ್ರಯಾಗಿತ್ತಾ?

ಹೌದು, ಅಷ್ಟು ಹೊತ್ತಿಗೆ ಅವರೇ ಮಾಡ್ತಾರ ಅನ್ನಾದು ಖಾಯಂ ಆಗಿತ್ತು. ಒಂದಿಲ್ಲ ಒಂದಿವಸ ಅವ್ರೇ ಮಾಡೋದು ಅಂತಾ ಖಾತ್ರಿ ಇತ್ತು. ಕಾರಣ ಏನಪ್ಪಾ ಅಂದ್ರೆ ನೀವು ಕೆ.ಜಿ. ಮಿಶ್ರವಾಲ, ‘ಗಾಂಧೀಸ್‌ ಲಾಸ್ಟ್‌ ಫೇಜ್‌’ ಅಂತಾ ಪುಸ್ತಕ ಬರ್ದಾರ. ಅಂದ್ರೆ ಮಹಾದೇವ ದೇಸಾಯಿ ಕ್ವಿಟ್‌ ಇಂಡಿಯಾ ಮೂವ್‌ಮೆಂಟ್‌ ಕಾಲಕ್ಕಾ ಆಗಾಖಾನ್ ಅರಮನಿಯೊಳಗ ತೀರ್ಕೊಂಡ ನಂತರ, ಮಿಶ್ರವಾಲಾ ಅವ್ರು ಗಾಂಧೀಜೀಯವರ ಆಪ್ತಕಾರ್ಯದರ್ಶಿಯಾಗಿದ್ರು. ಅವ್ರು ‘ಲಾಸ್ಟ್ ಫೇಜ್’ ಅಂತಾ ಪುಸ್ತಕ ಬರ್ದಾರ. ಅಂದ್ರೆ ಮಹಾದೇವ ದೇಸಾಯಿ ಕ್ವಿಟ್ ಇಂಡಿಯಾ ಮೂವ್‌ಮೆಂಟ್‌ ಕಾಲಕ್ಕಾ ಆಗಾಖಾನ್ ಅರಮನಿಯೊಳಗೆ ತೀರ್ಕೊಂಡ ನಂತರ, ಮಿಶ್ರವಾಲಾ ಅವ್ರು ಗಾಂಧೀಜೀಯವರ ಆಪ್ತಕಾರ್ಯದರ್ಶಿಯಾಗಿದ್ರು. ಅವ್ರು ‘ಲಾಸ್ಟ್‌ ಫೇಜ್‌’ ಅಂತಿಳ್ಕಂಡು ಎರಡೋ ಮೂರೋ ಸಂಪುಟ ಮಾಡ್ಯಾರ. ಏನ ಅವ್ರು ಅಂತಂದ್ರೆ; ಪುಣೆ ನಗರಸಭೆಯವ್ರು ಗಾಂಧೀಜಿಯವರನ್ನ ಸತ್ಕರಿಸಬೇಕು ಅಂತ ೧೯೩೨ರ ಸುಮಾರಿನಲ್ಲಿ ವ್ಯವಸ್ಥೆ ಮಾಡಿದ್ರು. ಆಗ ಗಾಂಧೀಜಿಯವರ ಮೇಲೆ ಹಿಂದೂ ಸಂಘಟನೆಯವರು ಬಾಂಬ್‌ ಹಾಕಿದ್ರು, ಏನ್ರೀ. ಮೇಲೆ ಇವ್ರು ಹರಿಜನ ಫಂಡ್‌ಗೆ ಅಂತ ಗಾಂಧೀಜಿಯವರು ಪಾದಯಾತ್ರೆ ಕೈಗೊಂಡಾಗ ಇವರು ಗಾಂಧೀಜಿಯವರ ಮೇಲೆ ಪಾದರಕ್ಷೆ ತೊರಿದ್ರು. ಅದರ ನಂತರ ಕೊನೇಗೊಮ್ಮೆ…. ಸ್ಟಷ್ಟವಾಗಿ ನನಗೆ ಸಿಟ್ಟು ಇದ್ದಿದ್ದು ಅಂದ್ರ… ಗಾಂಧೀಜಿ ಜಿನ್ನಾ ಮಾತುಕತೆಗಳು ನಡದ್ದು. ಗಾಂಧೀಜಿ ಪ್ರತೀ ದಿನಾನೂ ಸೇವಾ ಗ್ರಾಮದಿಂದ ಹೊರಡಬೇಕು, ರೈಲು ಹತ್‌ಬೇಕು, ಮುಂಬೈಗೆ ಬರ್ಬೇಕು. ಮುಂಬೈನಲ್ಲಿ ಜಿನ್ನಾ ಗಾಂಧಿ ಮಾತುಕತೆಗಳು ನಡೀತಿದ್ವು ಅದನ್ನ ಹಿಂದೂ ಮಹಾಸಭಾದವ್ರು ಪ್ರತಿಭಟಿಸ್ತಿದ್ರು. ಗಾಂಧೀಜೀನ ಆಶ್ರಮದಿಂದ ಹೊರ ಬರದಂಗ ಮಾಡ್ಬೇಕು ಅಂತ. ಪೋಲಿಸ್ರು ಕಾಯೋದೂ ಅವರನ್ನ ಹಿಂದಕ್ಕ ಸರಸಾದೂ ಆಗ್ತಿತ್ತು. ಒಮ್ಮೇನು ಆಯ್ತಪ್ಪ ಅಂದ್ರ, ಗಾಂಧೀಜಿ ಆಶ್ರಮದಿಂದ ಹೊರಗೆ ಬರಬೇಕಾದ್ರೇನಾ ಒಂದು ಬಡಗೀ ಬೀಸಿ ಅವರ್ನ ಹೊಡೆಯಕ ಪ್ರಯತ್ನ ಮಾಡಿದ್ರು. ಅವಾಗ ಒಬ್ಬ ಪೋಲೀಸ್ ಅಧಿಕಾರಿ ಅವರ್ನ ಹಿಡ್ದು ಹಿಂದಕ್ಕೆ ಎಳದ್ ಗಾಂಧೀಜೀನ ಹೊಡ್ಡು ಸಾಯಿಸಬೇಕು ಅಂತಾ ಮಾಡಿದ್ದೇನಾ ಅಂತಾ ಬಾಯ್ ಮಾಡಿದಾಗ, ಗಾಂಧೀಜಿ ಕೊಲೆಗೆ ನಮ್ಮ ಜಮೇದಾರ ಅದಾನ. ಅವನ್ನಿಟ್ಟೀವಿ, ಅಂದಿದ್ದ. ಆ ಜಮೇದಾರ್‌ ಅಂತಂದ್ರ ಇಂವ ಗೋಡ್ಸೆ. ಗೋಡ್ಸೆ ಅವರ ಜಮೇದಾರ. ಇದನ್ನ ೧೯೪೬ದಾಗಾ ಹೇಳಿದ್ರು ಅವ್ರು. ಆವಾಗ ಘೋಷಣೆ ಮಾಡಿದ್ರು ಅವ್ರು. ಹಂಗಾಗಿ ಅವ್ರದು ಗಾಂಧೀಜಿನಾ ಕೊಲ್ಲೋದೂ ದೀರ್ಘಕಾಲದ ಸಂಚಿತ್ತು. ಗಾಂಧೀಜಿ ಕೊಲೆ ಆಗ್ತದೆ ಅಂತಾ ಕಲ್ಪನೇನೂ ಇರಲಿಲ್ಲದ ಹೊತ್ತನ್ಯಾಗ ಅವರ ಬಾಯಿಂದಾ ಗಾಂಧೀಜೀನ ಕೊಲ್ಲಾಕ ಬೇರೆ ಅದಾನ ಅನ್ನಾ ಮಾತು ಬಂದಿತ್ತು.

ಸ್ವಾತಂತ್ರ ಬಂದನಂತರ ಸೋಷಲಿಸ್ಟ್ ಚಟುವಟಿಕೆಗಳು ಏನಾಗಿದ್ದವು?

ಆಮ್ಯಾಲೆ ನಮ್ಮನ್ನು ಕಾಂಗ್ರೆಸ್ಸಿನ್ಯಾಗ ಇದ್ದು ಕೆಲಸ ಮಾಡಾಕ ಕೊಡ್ಲಿಲ್ಲ. ಅವಾಗ ಪಟೇಲ್ರು ಜವಹರಲಾಲರ ಜನಪ್ರಿಯತೆಯನ್ನ ಮೀರ್ತಿರಲಿಲ್ಲ. ಆದ್ರ ಸಂಘಟನೆ ಮಾತ್ರ ನೂರಕ್ಕ ನೂರರಷ್ಟು ಪಟೇಲ್ರ ಹಿಡಿತದಾಗ ಇತ್ತು. ಅವ್ರು ನಮಗ ಹೇಳಿದ್ರು, ಗಾಂಧೀಜೀ ಸ್ವಾತಂತ್ರ್ಯ ಹೋರಾಟದ ಮಹಾಯಾತ್ರೆ ನಡದದ ಅಂದು, ಒಂದು ಉದಾಹರಣೆ ಹೇಳಿದ್ರು, “ರಥ ಹೋಗೋವಂತೆ ಹೋಗ್ತಿರ್ತದ. ಅದ್ರ ನೆರಳಿನ್ಯಾಗ ನಾಯಿ ಓಡ್ತಿರತದ” ಈ ರಥ ಓಡೋದು ನನ್ನಿಂದಾನ ಅಂತಾ ನಾಯಿ ತಿಳ್ಕೊಳ್ತದ. ಆ ರೀತಿ ಅದಾರ ಇವ್ರು ಸೋಷಲಿಸ್ಟ್ರು ಅಂತಿಳ್ಕಂಡು, ವಲ್ಲಭಬಾಯಿ ಪಟೇಲ್ರು ಹೇಳಿದ್ರು. ಹೊರಾಗ ನಿಂತು ಮಾಡು ಅನ್ನ ಅವ್ರನ್ನ ಕಾಂಗ್ರೆಸ್ ಪಾರ್ಟಿ ಬಿಟ್ಟು ಯಶಸ್ವಿ ಮಾಡಿ ತೋರಿಸ್ಲೀ. ಇಲ್ಲಿ ಕಾಂಗ್ರೇಸ್‌ನ ಹೋರಾಟದ ರಥ ನಡ್ದದ. ತಮ್ಮಿಂದಾನ ಈ ರಥ ನಡ್ದಾದ ಅಂತಿಳ್ಕೊಂಡು ಸೋಷಿಯಲಿಸ್ಟ್ರು ಅದಾರ. ಅವರು ಮೊದ್ಲು ಹೊರಾಗ ಹೋಗ್ಲಿ ಅಂದಿದ್ರು. ಹಂಗಾಗಿ ನಮಗ ಮುಂದೆ ಭಾಳಾ ದಿವ್ಸ ಕಾಂಗ್ರೆಸ್ಸಿನೊಳಗ ಇರಾಕ ಆಗ್ಲೇ ಇಲ್ಲ. ೧೯೪೮ರಾಗ ನಾವು ಹೊರಾಗ ಬಿದ್‌ ಬಿಟ್ಟಿ. ಹೊರಾಗ ಬಿದ್ದು ಸೋಷಲಿಸ್ಟ್‌ ಪಾರ್ಟಿ ಅಂತಾ ಮಾಡಿದ್ವಿ.

ಕರ್ನಾಟಕದಲ್ಲಿ ಸೋಷಲಿಸ್ಟ್ ಪಾರ್ಟಿಯ ಮೊದಲ ತಲೆಮಾರು ಅಂದ್ರೆ ಯಾವ್ದು?

ಮೊದಲ ತಲೆಮಾರು ಅಂದ್ರೆ, ಇಲ್ಲೇ ಧಾರವಾಡಕ್ಕಾನ. ಯಾಕಂದ್ರೆ ಅಷ್ಟೊತ್ತಿಗೆ ಕಾರಂತರು ಇಲ್ಲಿಗೆ ಬಂದು, ಇದನ್ನು ಮಾಡಿದ್ರು. ಆಮ್ಯಾಲೆ ಅವರೊಂದಿಗೆ ಗರುಡಶರ್ಮರು ಯಾವಾಗ ಸೇರ್ಕೊಂಡ್ರೋ, ಆವಾಗ ನಮಗ ಬಲಬಂತು. ‘ಜಾಗೃತಿ’ ಅಂತಾ ಒಂದು ವಾರಪತ್ರಿಕೇನೂ ನಡೆಸಿದ್ವಿ ಅದಕ್ಕೆ ಎಡಿಟರ್ ಅಂತಾ ಖಾದ್ರಿ ಶಾಮಣ್ಣನ್ನ ಕರ್ಕೊಂಡು ಬಂದಿದ್ವಿ. ಜಯಪ್ರಕಾಶರು ಕೊಟ್ಟ ಹತ್ತುಸಾವಿರ ರೂಪಾಯಿ ನಿಧಿ ಏನಿತ್ತು ಭಾಳಷ್ಟು ಅದಾ….

ಪತ್ರಿಕೇನಾ ನಡೆಸ್ತು?

ಅಲ್ಲ, ನುಂಗಿ ಬಿಟ್ಟಿತು ಪೂರಾ. ನುಂಗಿತು, ನಮ್ಮ ಹೋರಾಟಾನಾ.

ಅಂದ್ರೆ ಭಿನ್ನಾಭಿಪ್ರಾಯ ಹುಟ್ಟಿತ್ತಾ?

ಹೌದೌದು ಎರಡು ಪಂಗಡಗಳಾ ಆದ್ವು. ಒಮ್ಮೆ ಅದರ ಬಗ್ಗೆ ಅಶೋಕ ಮೆಹ್ತಾ ಇಲ್ಲಿಗೆ ಬಂದಾಗ ಪ್ರಸ್ತಾಪ ಮಾಡಿದ್ವಿ. ಅಶೋಕ್ ಮೆಹ್ತಾ ಒಂದು ರೀತಿ ಲೋಹಿಯಾ ಅವ್ರಿಗೆ ವಿರುದ್ಧ. ನಾವಾ ಅವಾಗ ಲೋಹಿಯಾ ಅವರಿಗೆ ಮನಸೋತಿದ್ದು. ಹೀಗಾಗಿ ಅವ್ರಿಂದಾನೂ ನಮಗೆ ನ್ಯಾಯ ಸಿಗ್ಲಿಲ್ಲ. ಹೀಗಾಗಿ ನಮ್ಮ ಪಕ್ಷದ ಆಫೀಸ್ ಮುಚ್ಕಂಡು ಹೋಗಬೇಕಾಯ್ತು. ಆಮೇಲೆ ನಾವು ನಮ್ಮನ್ನು ವಿದ್ಯಾಭ್ಯಾಸಕ್ಕಂತ ಬೇರೆ ಬೇರೆ ಕಡೆಗೆ ಹೋಗ್ಬಿಟ್ವಿ. ಒಬ್ಬೊಬ್ರು ಒಂದೊಂದು ಕಡೀಗೆ ಆಗಿಬಿಟ್ವಿ ಇಲ್ಲೆಲ್ಲ ನಿಂತ್ಹೋತು.