ಲೋಹಿಯಾ ಅವರ ಹೆಸರು ಕೇಳುತ್ತಲೇ ಪುಳಕಗೊಳ್ಳುವ, ಅವರೊಂದಿಗಿನ ಸಭೆ ಓಡಾಟಗಳನ್ನು ಮಕ್ಕಳಷ್ಟು ಉತ್ಸಾಹದಿಂದ ವಿವರಿಸುವ ಕೆ. ಜಿ. ಮಹೇಶ್ವರಪ್ಪ ಸೈದ್ಧಾಂತಿಕ ರಾಜಕಾರಣ ಮತ್ತು ಅಧಿಕಾರ ರಾಜಕಾರಣಗಳೆರಡರ ಒಳಹೊರಗನ್ನು ಬಲ್ಲವರು. ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದ ಇವರು ಶಾಂತವೇರಿ ಗೋಪಾಲಗೌಡ. ಜೆ. ಹೆಚ್. ಪಟೇಲ್ ಮೊದಲಾದವರಿಗೆ ಆಪ್ತರಾಗಿದ್ದರು. ಇತ್ತೀಚಿನ ರಾಜ್ಯ ರಾಜಕಾರಣದಲ್ಲಿ ಸಿದ್ಧರಾಮಯ್ಯನವರೊಂದಿಗೆ ಗುರುತಿಸಿಕೊಂಡು ಅಲ್ಲಿಯೂ ಈಗ ನೇಪಥ್ಯಕ್ಕೆ ಸರಿದಿರುವವರು.

“ನಮ್ಮಪ್ಪ ವೆರಿ ಫವರ್ ಫುಲ್ ಮ್ಯಾನ್” ಎಂದು ಹೇಳುವ ಮಹೇಶ್ವರಪ್ಪನವರ ತಂದೆ ಮೈಸೂರು ಪ್ರಜಾಪ್ರತಿನಿಧಿ ಸಭೆಯ ಸದಸ್ಯರಾಗಿದ್ದರು. ಭೂಮಾಲಕ ಕುಟುಂಬದಲ್ಲಿ ಹುಟ್ಟಿ ಬೆಳೆದ ಮಹೇಶ್ವರಪ್ಪ ಕಾನೂನು ವ್ಯಾಸಂಗ ಮುಗಿಸಿದ ಬಳಿಕ ಸಮಾಜವಾದಿ ಪಕ್ಷದ ಸಂಪರ್ಕಕ್ಕೆ ಬಂದರು. ಬಹುಕಾಲ ಬೆಂಗಳೂರಿನಲ್ಲಿದ್ದು ಹೈಕೋರ್ಟ್ ನಲ್ಲಿ ವಕೀಲವೃತ್ತಿ ನಡೆಸಿ ಬಂದ ಆದಾಯದ ಒಂದು ಪಾಲನ್ನು ಪಕ್ಷದ ಸಂಘಟನೆಗೆ ವಿನಿಯೋಗಿಸಿದವರು.

ತುರ್ತುಪರಿಸ್ಥಿತಿ ವಿರೋಧಿ ಹೋರಾಟದಲ್ಲಿ ಬಹುವಾಗಿ ತೊಡಗಿಸಿಕೊಂಡ ಮಹೇಶ್ವರಪ್ಪ ಜಾರ್ಜ್ ಫರ್ನಾಡೀಸ್ ರ ನಿರಂತರ ಸಂಪರ್ಕದಲ್ಲಿದ್ದು ಡೈನಮೇಟ್ ಸಂಗ್ರಹಿಸಿ ವಿದ್ವಂಸಕ ಕೃತ್ಯಗಳಿಗೆ ಹೊರ ರಾಜ್ಯಗಳಿಗೆ ಸಾಗಿಸಿದ ಖ್ಯಾತಿಯಲ್ಲಿ ಪಾಲುದಾರರು. ಸಕ್ರಿಯ ವಕೀಲರಾಗಿದ್ದ ಕಾರಣದಿಂದ ಬಂಧಿತರಾಗದೆ ರಾಜ್ಯದ ಸಮಾಜವಾದಿಗಳ ಕೊಂಡಿಯಾಗಿ ಕಾರ್ಯನಿರ್ವಹಿಸಿದವರು.

ಕಾಗೋಡು ಸತ್ಯಾಗ್ರಹದ ನಂತರದ ದಿನಗಳಲ್ಲಿ ಸಮಾಜವಾದಿ ಪಕ್ಷ ಸೇರಿದ ಇವರು ನಂತರದ ಭೂಗ್ರಹಣ ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ರಾಜ್ಯಾದ್ಯಂತ ಸಂಚರಿಸಿ ಪಕ್ಷ ಸಂಘಟಿಸಿದರು. ವಿಧಾನ ಸಭಾ ಸದಸ್ಯರಾಗಿದ್ದ ಇವರು ರಾಮಕೃಷ್ಣ ಹೆಗಡೆ ಅವರ ಮಂತ್ರಿಮಂಡಲದಲ್ಲಿ ಪಕ್ಷದ ಚೀಫ್ ವಿಪ್ ಆಗಿ, ಕೆಲವರ್ಷ ಪಕ್ಷದ ಸಂಸದೀಯ ಸಮಿತಿಯ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದರು.

ಸಂಡೂರು ಹೋರಾಟದ ಬಗ್ಗೆ ಈವರೆಗೆ ಹೆಚ್ಚು ಮಾಹಿತಿಗಳಿಲ್ಲ. ಹೋರಾಟವನ್ನು ಸ್ವಲ್ಪ ವಿವರಿಸ್ತೀರಾ ಸಾರ್?

ಅದು ಕಾಗೋಡಿಗಿಂತ ದೊಡ್ಡ ಹೋರಾಟ. ಅಲ್ಲೀದು ಪ್ರೈವೇಟ್ ಲ್ಯಾಂಡ್ ಲಾರ್ಡ್ ವಿರುದ್ಧ, ಗೇಣಿ ವಸೂಲಿ ವಿರುದ್ಧ ಮಾಡಿದ್ದು. ಇಲ್ಲಿ ಸಾವಿರಾರು ಎಕರೆ ಭೂಮಿ ದೇವರ ಹೆಸರ್ಲೆ ರಾಜರು ಬಳಸಿಕೊಂಡಿದ್ರು. ಅದರ ಲಾಭವೆಲ್ಲ ರಾಜರಿಗೆ. ಇನ್ ದ ನೇಮ್ ಆಫ್ ಟೆಂಪಲ್. ದೆನ್ ಐ ವಾಸ್ ಬೆಂಗಳೂರಿನಲ್ಲಿ ಲೀಡಿಂಗ್ ಅಡ್ವಕೇಟ್. ಅದನ್ನು ಬಿಟ್ಟು ನಾನೂ ಕುಮಟಾ (ಸಮಾಜವಾದಿ ಎಸ್. ಎಸ್. ಕುಮಟಾ) ಅಲ್ಲಿ ಹೋಗಿ ಟೆಂಟ್ ಹಾಕ್ಕೊಂಡು, ಪ್ರತಿದಿನ ನೂರು – ಐವತ್ತು ಮಂದೀನ ಸೇರ್ಸಿ, ತಾಲ್ಲೂಕು ಆಫೀಸ್ ಮುಂದೆ ಸ್ಟ್ರೈಕ್ ಮಾಡ್ತಿದ್ವಿ. ನಮ್ಮನ್ನು ಅರೆಸ್ಟು ಮಾಡಿ, ಕೂಡ್ಲಿಗಿ ಜೈಲಿಗೆ ಕಳಿಸ್ತಿದ್ರು. ಮ್ಯಾಜಿಸ್ಟ್ರೇಟ್ ಮುಂದೆ ಪ್ರೊಡ್ರೂಸ್ ಮಾಡಿದಾಗ ಅವರು ಕೇಳಿದ್ರು; ಎನ್ ಹಿಂಗೆಲ್ಲ ಮಾಡಿದ್ರಂತಲ್ಲಾ, ಅಂತ. ಹೌದು ಮಾಡಿದ್ದು ನಿಜ. ರೈತರ ಭೂಮಿ ರಾಜರು ಬಳಸಿಕೊಂಡಿದ್ದಕ್ಕೆ ಹೀಗೆ ಮಾಡಿದ್ವಿ ಅಂದ್ವಿ. ಅವಾಗ ಕೂಡ್ಲಿಗಿ ಜೈಲು ಹೆಂಗಿತ್ತಂದ್ರೆ ಕಕ್ಕಸಿಗೆ ಹ್ವಾಗಾ ಸ್ವಾರ್ಯಾಗ, ಕುಡಿಯೋಕೂ ಬಳಸ್ಬೇಕಿತ್ತು. ಅವಾಗ ಘೋರ್ಪಡೆಯವರು ನನಗ ಭಾಳಾ ಟೆಂಪ್ಟ್ ಮಾಡಿದ್ರು. ಅವಾಗ ಹಿ ವಾಸ್ ಎ ಮಿನಿಸ್ಟರ್. ಅವ್ರು: ‘ನೋಡ್ರೀ, ನೀವು ಬೆಂಗಳೂರಿನ್ಯಾಗ ಲೀಡಿಂಗ್ ಅಡ್ವಕೇಟ್, ಬೆಂಗಳೂರಿನಲ್ಲಿ ಪ್ರ್ಯಾಕ್ಟೀಸು ಮಾಡೋದು ಬಿಟ್ಟು ಇಲ್ಲಿಗೆ ಬಂದಿದೀರಿ. ಸರ್ಕಾರ ನೀವು ಏನು ಕೇಳಿದ್ರೂ ಇಲ್ಲಾ ಅನ್ನಾದಿಲ್ಲ, ಕೇಳ್ರೀ ಅಂದ್ರು.

ಸಂಡೂರು ಹೋರಾಟಾನ ಜಾರ್ಜ್ ಫರ್ನಾಂಡೀಸ್ ಅವರೇ ಉದ್ಘಾಟನೆ ಮಾಡಿದ್ರು. ಅದೂ ಸಂಡೂರಿನಲ್ಲೇ ಫಸ್ಟ್ ಪಬ್ಲಿಕ್ ಮೀಟಿಂಗ್ ಬಸ್ ಸ್ಟ್ಯಾಂಡಿನಲ್ಲಿ. ಆವಾಗ ಯಾರೂ ಮಾತಾಡ್ತಿರಲಿಲ್ಲ. ಮಹಾರಾಜರ ಹೆದ್ರಿಕಿ ಇತ್ತು. ಆವಾಗ ಸೋಷಲಿಸ್ಟ್ ಪಾರ್ಟಿಗೆ ನಾನು ಅಧ್ಯಕ್ಷ ಆಗಿದ್ದೆ, ಉಳಿದ ಲೀಡರ್ ಗಳು ಒಂದೊಂದು ದಿನ ಬಂದು ಮೀಟಿಂಗ್ ಮಾಡಿ ಹೋಗೋದು. ಆದ್ರೆ ಅಲ್ಲಿ ಪೂರ್ತಿ ಸಕ್ಸಸ್ ಆಗೋವರ‍್ಗೂ ಇದ್ದದ್ದು ನಾನೂ, ಕುಮುಟಾ. ಒಂದೊಂದ್ ದಿವ್ಸ್ ಒಂದೊಂದು ಬ್ಯಾಚ್ ಬಂದು ಸತ್ಯಾಗ್ರಹ ಮಾಡಿ ಹೋಗ್ತಿತ್ತು.

ಬ್ಯಾಚ್ ಅಂದ್ರೆ ಯಾವುವು?

ಅಲ್ಲಿನ ರೈತರವು. ಒಂದೊಂದು ಹಳ್ಳೀವು. ಅಲ್ಲಿ ತಿಮ್ಮಪ್ಪ ಇದ್ನಲ್ಲ. ಸಂಡೂರು ತಿಮ್ಮಪ್ಪ.

ಎಲಿಗಾರ್ ತಿಮ್ಮಪ್ಪ?

ಹೂಂ ಎಲಿಗಾರ್ ತಿಮ್ಮಪ್ಪ ಅವನಾ ನಮ್ಮನ್ನು ಕರ್ಕೊಂಡು ಹೋಗಿದ್ದು. ಹಿಂಗೆಲ್ಲಾ ಅದೆ, ಭಾಳಾ ಅನ್ಯಾಯ ಆಗಿದೆ. ಕುಮಾರಸ್ವಾಮಿ ಪ್ರಾಪರ್ಟೀನೆಲ್ಲ ಹಿಂಗೆಲ್ಲಾ ಮಾಡಿದ್ದಾರೆ. ಅಂತಾ ಹೇಳಿ, ಆವಾಗ ಘೋರ್ಪಡೆ ಫೈನಾನ್ಸ್ ಮಿನಿಸ್ಟರು ಆಗಿದ್ರು, ದೇವರಾಜ ಅರಸು ಗೌರ್ಮೆಂಟ್ ಇತ್ತು.

ನೀವು ಹೋಗೋದಿಕ್ಕೂ ಮುಂಚೆ ಎಲಿಗಾರ್ ತಿಮ್ಮಪ್ಪ ಹೋರಾಟ ಮಾಡ್ತಾ ಇದ್ರಾ?

ಪ್ರಯತ್ನ ಮಾಡ್ತಿದ್ದ. ಜನರನ್ನ ಸಂಘಟನೆ ಮಾಡಿ, ಹೋರಾಟ ಮಾಡೋದು ಕಷ್ಟ ಆಗ್ತಿತ್ತು. ಆವಾಗ ನಮ್ಮ ಹತ್ರ ಬಂದ. ನಾವು, ಇದಕ್ಕಿಂತ ಐಡಿಯಲ್ ಹೋರಾಟ ಯಾವ್ದೂ ಇಲ್ಲ ಅಂತಂದು ಇಲ್ಲಿಗೆ ಬಂದ್ವಿ. ಪ್ರತಿ ದಿವ್ಸಾ ತಿಮ್ಮಪ್ಪ ನೂರು, ಐವತ್ತು ಜನ್ರನ್ನ ಕರ್ಕೊಂಡು ಹಳ್ಳಿಗಳಿಗೆ ಹೋಗ್ಬೇಕು ಮತ್ತು ಬಂದು ಮುಂದೆ ಕುತ್ಕಾಬೇಕು. ಅವರೆಲ್ಲರನ್ನೂ ಅರೆಸ್ಟ್ ಮಾಡೋದು. ಪ್ರತೀ ಬ್ಯಾಚನ್ನೂ ನಾನು ಕರ್ಕೊಂಡು ಹೋಗ್ತಿದ್ದೆ.

ಹೋರಾಟದಲ್ಲಿ ಪಕ್ಷ ಆಸಕ್ತಿ ವಹಿಸಿತ್ತಾ ಅಥವಾ ನೀವೂ ಕುಮಟಾತಿಮ್ಮಪ್ಪ ಮಾಡ್ತಿದ್ರಾ?

ನಾನವಾಗ ಪಾರ್ಟಿ ಸ್ಟೇಟ್ ಅಧ್ಯಕ್ಷ ಆಗಿದ್ದೆ. ಅವ್ರು ಬಂದು, ಕೇಳಿದಾಗ ನಾನು ಬರೀ ಪಾರ್ಟಿ ಅಂತಲ್ಲ, ದಾಸನ್ ಸಾಲೋಮನ್ ಅಂತಾ ಲೇಬರ್ ಯೂನಿಯನ್ ಲೀಡ್ರ್ ಇದ್ದ. ಬಳ್ಳಾರ್ಯಾಗ, ಅವನೂ ಬಂದ ಇದಕ್ಕೆಲ್ಲ.

ಹೋರಾಟದಲ್ಲಿ ನಿಮ್ಮ ಪಾರ್ಟಿ ಸ್ಟೇಟ್ ಕಮಿಟಿಯಿಂದ ಯಾರ್ಯಾರು ಇದ್ರು ಹೋರಾಟದಲ್ಲಿ?

ಗೋಪಾಲ್ ಗೌಡ್ರು ಇದ್ರು. ವೆಂಕಟರಾಮ್ ಇದ್ರು, ಜೆ. ಹೆಚ್. ಪಟೇಲ್ರು ಇದ್ರು. ಆಮ್ಯಾಲೆ… ಅಲ್ಲಿ ಬೆಂಗಳೂರಿನವರು ಮತ್ತೆ ಮೈಸೂರಿನವರು ಇದ್ರು, ಇನ್ನು ಹಿಂಗ ಸ್ಟೇಟ್ ಕಮಿಟಿ ಡಿಸ್ಕಷನ್ ಮಾಡಿ, ಡಿಸೈಡ್ ಮಾಡಿದ್ವಿ. ಆದ್ರೆ ಬೇರೆಯವರಿಗೆ ಇಲ್ಲಿಗೆ ಬರ್ಬೇಕು, ಸಂಘಟನೆ ಮಾಡ್ಬೇಕು, ಇಲ್ಲೇ ಇರ್ಬೇಕು ಅನ್ನೋದೆಲ್ಲಾ ಆಗ್ತಿರಲಿಲ್ಲ.

ಆವಾಗ ಜಾರ್ಜ್ ಫರ್ನಾಂಡಿಸ್ ಪಕ್ಷದಲ್ಲಿ ಏನಾಗಿದ್ರು?

ಅವ್ರು ಆಲ್ ಇಂಡಿಯಾ ಜಾಯಿಂಟ್ ಸೆಕ್ರಟರಿ ಆಗಿದ್ರು. ಅವರಿಗೆ ನಾನು ಈ ಹೋರಾಟದ ಬಗ್ಗೆ ಹೇಳ್ದೆ. ಅವ್ರು ಇದಕ್ಕಿಂತ್ಲೂ ಒಳ್ಳೇ ಹೋರಾಟ ಬೇರ್ಯಾವ್ದೂ ಇಲ್ಲ, ಮಾಡ್ರೀ ಅಂದ್ರು. ಅದು ಫಸ್ಟ್ ಪಬ್ಲಿಕ್ ಮೀಟಿಂಗ್ ನಲ್ಲಿ ಬಂದು ಭಾಷಣ ಕೂಡ ಮಾಡಿದ್ರು. ಅಲ್ಲಿ ಘೋರ್ಪಡೆ ಅಂದ್ರೆ ಸಂಡೂರು. ಎಲ್ಲಾ ಅವ್ರು ಹೇಳಿದಂಗೆ ನಡೀಬೇಕಿತ್ತು. ರಾಜಕೀಯ ಆಗ್ಲೀ, ಇನ್ನೇನರಾ ಆಗ್ಲೀ. ಆ ಮ್ಯಾಲೆ ಕುಮಾರಸ್ವಾಮಿ ದೇವಸ್ಥಾನ, ಫಾರೆಸ್ಟ್ ಲ್ಯಾಂಡ್ ಎಲ್ಲಾ ಕಂಟ್ರೋಲ್ ನ್ಯಾಗಾ ಇತ್ತು. ಅವರಂದಂಗ ನಡೀತಿತ್ತು.

ನಿಮ್ಮ ಸ್ಟೇಟ್ ಕಮಿಟಿಯಾಗ ಬಗ್ಗೆ ಏನಂತ ಚರ್ಚೆ ಆಯ್ತು?

ಪಾರ್ಟಿ ಎಕ್ಸಿಕ್ಯುಟಿವ್ ಮೀಟಿಂಗ್ ನ್ಯಾಗ ಡಿಸ್ಕಸ್ ಆಗಿ, ಐವಾಸ್ ಅಪಾಯಿಂಟೆಡ್ ಯ್ಯಾಸ್ ಡಿಕ್ಟೇಟರ್ ಆಫ್ ದಿ ಸಂಡೂರ್ ಸ್ಟ್ರಗಲ್. ಈವನ್ ಕಾಗೋಡು ಸತ್ಯಾಗ್ರಹ ಒಬ್ಬ ಜಮೀನ್ದಾರನ ವಿರುದ್ಧದ ಸಣ್ಣ ಹೋರಾಟ. ಆದ್ರಿಲ್ಲಿ ಸಾವಿರಾರು ಎಕ್ರೆ ದೇವಸ್ಥಾನದ ಜಮೀನು ಅಕ್ಯುಪೈ ಮಾಡಿಕೊಡಿದ್ದ ರಾಜಮನೆತನದ ವಿರುದ್ಧ ಹೋರಾಟ. ಆಮ್ಯಾಲೆ ಬಳ್ಳಾರಿಯಲ್ಲಿ ಶಾಂತರುದ್ರಪ್ಪ ಅಂತಾ ಇದ್ರು. ಅವ್ರೂ ಮತ್ತು ತಿಮ್ಮಪ್ಪ ಭಾಳಾ ಇಂಟ್ರೆಸ್ಟ್ ತಗೋಂಡಿದ್ರು. ಅವರಿಬ್ಬರೇ ನನಗೆ ಪ್ರೇರಣೆ. ಶಾಂತರುದ್ರಪ್ಪ ಆಗ್ಲೇ ವೈಯಕ್ತಿಕವಾಗಿ ಪೆಟೆಶನ್ ಕೊಡ್ತಾ ಇದ್ರು. ಅವರಿಬ್ರೂ ಡಿಸೈಡ್ ಮಾಡ್ಕಂಡು ಕಾಗೋಡು ಸತ್ಯಾಗ್ರಹದ ಹಿನ್ನೆಲೆ ಇತ್ತಲ್ಲ. ಆ ಸೋಷಿಯಲಿಸ್ಟ್ ಪಾರ್ಟಿನಾ ಕೇಳ್ಕಬೇಕು ಅಂತಾ ಡಿಸೈಡ್ ಮಾಡಿ ಬಂದಿದ್ರು.

ಆವಾಗ್ಲೂ ಅಸೆಂಬ್ಲಿ ಎಲೆಕ್ಷನ್ ನಡೀತಿದ್ವಲ್ಲ. ಆವಾಗ ಘೋರ್ಪಡೆ ವಿರುದ್ಧ ಎಲೆಕ್ಷನ್ನಿಗೆ ಯಾರು ನಿಲ್ತಿದ್ರು?

ಎಲಿಗಾರ್ ತಿಮ್ಮಪ್ಪ ಇದ್ರು, ಇವ್ರೆ ನಿಂತು ಸೋತಿದ್ರು. ಎಲಿಗಾರ ತಿಮ್ಮಪ್ಪ ೫೭ – ೫೮ ರಲ್ಲಿ ಘೋರ್ಪಡೆಯವರ ಜೊತೆಗೇ ಇದ್ರು. ಅವ್ರ ಪರವಾಗಿ ರಾಜಕೀಯ ಮಾಡ್ತಿದ್ರು. ೬೦ ರ ನಂತರ ವಿರುದ್ಧ ಆದ್ರು. ಸಂಸ್ಥಾ ಕಾಂಗ್ರೆಸ್ ಗೆ ಬಂದು ಫೈಟ್ ಮಾಡಿದ್ರು, ಸೋತ್ರು. ಒಳ್ಳೇ ಮನುಷ್ಯ. ಆದ್ರೆ ಪೈನಾನ್ಷಿಯಲಿ ಸೌಂಡ್ ಇರ್ಲಿಲ್ಲ. ಮತ್ತ ಆ ಹೋರಾಟಕ್ಕೆ ಹಿನ್ನೆಲೆಯಾಗಿದ್ದೋರು, ಆ ದೇವಸ್ಥಾನದ ದಾಖಲೆಗಳು, ಘೋರ್ಪಡೆಯವರ ಇತಿಹಾಸವನ್ನೇ ಬಲ್ಲೋರು, ಎಲ್ಲಾ ಡಾಕ್ಯುಮೆಂಟ್ಸ್ ಇಟ್ಕೊಂಡು ಹಿಂದಿನಿಂದ ಫೈಟ್ ಮಾಡ್ತಾ ಇದ್ದೋರು ಆ ಓಲ್ಡ್ ಮ್ಯಾನ್ ಶಾಂತರುದ್ರಪ್ಪನವರು. ೮೨ರಲ್ಲಿ ತೀರ್ಕೊಂಡ್ರು. ಒಂದು ದೊಡ್ಡ ಬಂಡಲ್ ಅನ್ನೇ ಇಟ್ಕೊಂಡಿದ್ರು. ಈ ಘೋರ್ಪಡೆ ಮನೆತನದ ಅತ್ಯಾಚಾರ, ಇವ್ರು ಅನುಭವಿಸಿದ ಪ್ರಾಪರ್ಟಿ, ಅವ್ರು ಏನೇನು ಅನ್ಯಾಯ ಮಾಡಿದ್ರು, ಇದನ್ನೆಲ್ಲ ಥ್ರೀ – ಫೋರ್ ಹವರ್ಸ್ ನನಗೆ ಅವ್ರು ಗೈಡ್ ಮಾಡಿದ್ರು. ಅವ್ರು ಬಳ್ಳಾರಿಯವ್ರು. ಬ್ಯಿಸಿನೆಸ್ ಕಮ್ಯುನಿಟಿ ಮ್ಯಾನ್. ಹಿ ವಾಸ್ ಎ ಓಲ್ಡ್ ಮ್ಯಾನ ಆಫ್ ಎಯ್ಟೀ ಇಯರ್ಸ್, ಸೋ ಮಚ್ ಆಫ್ ಇಂಟ್ರೆಸ್ಟ್. ಅವರಾಗಲಿ, ತಿಮ್ಮಪ್ಪ ಆಗಲಿ ಅವರೇ ಹೋರಾಟಕ್ಕೆ ಮುಖ್ಯ ಕಾರಣ. ನಮ್ಮನ್ನು ಇನ್ ಸ್ಪ್ಯೆಯರ್ ಮಾಡಿದ್ದೇ ಅವ್ರು.

ಶಾಂತರುದ್ರಪ್ಪ ಅವ್ರ ಹಿನ್ನೆಲೆ ಏನು? ಅವರ್ಯಾಕೆ ಇಲ್ಲಿ ಆಸಕ್ತಿ ತಗೊಂಡಿದ್ರು?

ಅವ್ರು ಆ ಕಾಲಕ್ಕೇ ಒಳ್ಳೇ ವ್ಯಾಪಾರಸ್ಥರು. ಪ್ರಿಂಟಿಂಗ್ ಪ್ರೆಸ್ ಇಟ್ಕೊಂಡಿದ್ರು. ಅವ್ರು ಸಂಡೂರು ಬಗ್ಗೆ ಇಂಟ್ರೆಸ್ಟ್ ತಗೊಂಡಿದ್ರು. ನನಗನ್ನಿಸ್ತದೆ. ಇವ್ರು ಶಾಂತರುದ್ರಪ್ಪ ಅವರಾಗಲಿ, ಕಾಶಿನಾಥ ಬೇಲೂರೆ ಬೀದರಿನವರು. ಅವರಾಗಲೀ, ಎಸ್. ಎಸ್. ಕುಮಟಾ ಅವರಾಗಲಿ, ನಮ್ಮ ತಿಮ್ಮಪ್ಪ ಆಗಲಿ ಇವ್ರು ಹೋರಾಟ ಮಾಡಿದ ದಿನಗಳು ಏನದಾವಲ್ಲ ಅವು ಕರ್ನಾಟಕದ ಯಾವ್ದೇ ರಾಜಕೀಯ ಪಕ್ಷ ಹೋರಾಟ ಮಾಡಿದ್ದಕ್ಕಿಂತ ಹೆಚ್ಚಿನವು. ಅದಕ್ಕಿಂತ ಮುಖ್ಯವಾಗಿ ಒಂದು ತಾತ್ವಿಕ ನೆಲೆಯವು. ಅವಾಗ ಏನ್ರೀ ಕೂಡ್ಲೀಗಿ ಜೈಲು ಭಾಳಾ ಸಣ್ಣದು. ಈಗ ಜೈಲಿಗೆ ಹೋಗೋದು ಸುಖ.

ಸಾರ್ ಹೋರಾಟದ ಹಿಂದಿನ ಪ್ರಕ್ರಿಯೆ ಬಗ್ಗೆ ಹೇಳ್ರೀ?

೧೯೭೧ರಾಗ ಒಂದು ಮೀಟಿಂಗ್ ಆಗಿತ್ತು. ಆ ಮೀಟಿಂಗ್ ನ್ಯಾಗ ಗೋಪಾಲಗೌಡ್ರು ಇದ್ರು. ಅದ್ರಾಗ ಈ ಹೋರಾಟಾನ ಕೈಗೆತ್ತಿಕೋ ಬೇಕು ಅಂತಾ ಡಿಸೈಡ್ ಆಗಿತ್ತು ಆಗ. ಗೋಪಾಲಗೌಡ್ರು ಇನ್ನೂ ಬದುಕಿದ್ರು. ೭೨ರಲ್ಲಿ ತೀರ್ಕೊಂಡ್ರು. ಅವಾಗ ಕುಮಟಾ ಅವರು ೩೦ ದಿನಗಳವರೆಗೆ ಮನೆಗೆ ಹೋಗಿರಲಿಲ್ಲ. ಅವರ ಮಕ್ಕಳ ಶಾಲೆ ಫೀಸ್ ಗೆ ತೊಂದರೆಯಾಗಿತ್ತು. ಕೊನೆಗೆ ಅನಂತಮೂರ್ತಿಯವರು ಲೆಟರ್ ಕೊಟ್ಟು, ಜೆ. ಹೆಚ್. ಪಟೇಲ್ರು ಫೀಸ್ ಕೊಟ್ಟಿದ್ರು. ಆ ದಿನಗಳಲ್ಲಿ ತೀರಾ ಬಡತನದಲ್ಲಿದ್ದು ಹೋರಾಡಿದವರೆಂದರೆ ಎಸ್. ಎಸ್. ಕುಮಟಾ ಅವರು. ಆವಾಗ ದೇವರಾಜ ಅರಸು ಚೀಫ್ ಮಿನಿಸ್ಟ್ರು. ಅವರು ಗೇಣಿದಾರರ ಪರವಾಗಿದ್ರು. ಅದೂ ಘೋರ್ಪಡೆ ಅವರಿಗೆ ಭಾಳಾ ಸಂಕಟ ಕೊಟ್ಟಿತ್ತು. ಹಂಗಾಗಿ ನನ್ಹತ್ರ ಬಂದಿದ್ರು. ಏನೋ ಮಾಡಿ ಸೆಟ್ಲ್ ಮಾಡಿ ಬಿಡಾನ ಅಂತಾ. ಆವಾಗ ನಾನು “ನೀನೇನು ಕೊಡ್ತೀಯಾ ನನಗೆ. ನನಗೆ ಟೆಮ್ಟ್ ಮಾಡಾಕ ಬಂದೀಯಾ. ಇದೆಲ್ಲಾ ಬಿಟ್ಟಿಡು ಅಂತ್ಹೇಳಿ ಕಳಿಸಿದೆ.

ನಿಮ್ಮ ಮೇಲೆ ಸಮಾಜವಾದೀ ಪ್ರಭಾವ ಆದದ್ದು ಹೇಗೆ?

ನಾನು ಲೋಹಿಯಾ, ಜಾರ್ಜ್, ಮಧುಲಿವಯೆ, ಜೆ. ಪಿ. ಅವರ ಬಗ್ಗೆ ಕಾಲೇಜಿನ್ಯಾಗ ಇರೋವಾಗ್ಲೇ ತಿಳ್ಕೊಂಡಿದ್ದೆ. ನಾನು ಸಣ್ಣವನಿರುವಾಗ್ಲೇ ಸ್ಕೂಲ್ ನ್ಯಾಗ ಇದ್ದಾಗ್ಲೇ ೪೨ರ ಮೂವ್ ಮೆಂಟ್ ನ್ಯಾಗ ಇದ್ದೆ.

ಆವಾಗ ನೀವು ಹೈಸ್ಕೂಲ್ ಸ್ಟೂಡೆಂಟ್ ಆಗಿದ್ರಾ?

ಅಲ್ಲಾ, ಮಿಡ್ಲ್ ಸ್ಕೂಲ್ ಸ್ಟುಡೆಂಟ್. ಆವಾಗ ಈ ಸತ್ಯಾಗ್ರಹಗಳಿಗೆಲ್ಲ ಊಟಸಪ್ಲೆ ಮಾಡ್ತಿದ್ವಿ. ಈ ತಂತಿ ಕತ್ತರಿಸೋದು, ಹಳಿ ಕೀಳೋದು ಮಾಡ್ತಿದ್ವಿ. ಸತ್ಯಾಗ್ರಹಿಗಳು ನಮ್ಮೂರಿಗೆಲ್ಲ ಬಂದಿದ್ರು.

ಯಾವೂರು ಸಾರ್?

ಕುಕ್ಕೆ ಅಂತ. ದಾವಣಗೆರೆ ತಾಲ್ಲೂಕು. ಆ ಹಿನ್ನೆಲೆಯಲ್ಲಿ ವಕೀಲ ಆಗೋ ಟೈಮಿಗೆ ಅಧಿಕಾರದಾಗ ಇರೋ ಪಾರ್ಟೀಗೆ ಅಂತಾಗ್ಲೀ, ಸ್ಥಾನ ಸಿಗತೈತಿ ಅಂತಾಗ್ಲೀ ಬಿಟ್ಟು ಒಂದು ತತ್ವ ಸಿದ್ಧಾಂತ ಇಟ್ಕೊಂಡು ಹೋರಾಟ ಮಾಡೋ ನಾಯಕರು ಇರೋ ಪಾರ್ಟಿಗೆ ಹೋಗ್ಬೇಕು ಅಂತಾ….. ಯಾಕೋ ತೀರ್ಮಾನ ತಗೊಂಡೆ. ಲೋಹಿಯಾ ನನಗೆ ಜೆ.ಪಿ.ಗಿನ ಹತ್ರಾ. ಒಂದ್ಸಲ ಉಡ್ ಲ್ಯಾಂಡ್ ಹೋಟೇಲ್ ನಲ್ಲಿ ಅವರಿಗೆ ಒಂದು ಸಣ್ಣ ಸತ್ಕಾರ ಇತ್ತು. ಅಲ್ಲಿ ಪಟೇಲ್ರು, ಗೋಪಾಲಗೌಡ್ರು, ನಾನು ಇದ್ದೆ. ಲೋಹಿಯಾ ಅವರೇ ನಾನು ಪಕ್ಷ ಸೇರೋದಿಕ್ಕೆ ಕಾರಣ. ಮಧುಲಿಮಯೆ ಕೂಡ ಬರ್ತಾ ಇದ್ರು ಆವಾಗ. ಅವರಿಗೂ ನಮ್ಮ ಮೇಲೆ ಭಾಳಾ ವಿಶ್ವಾಸ.

ಮೊದ್ಲು ನಿಮ್ಗೆ ಅವರೆಲ್ಲರ ಸಂಪರ್ಕ ಆಗಿದ್ದು ಹೇಗೆ?

ಅಯ್ಯೋ ಆಗ ಸೋಷಲಿಸ್ಟ್ರು ಲೀಡರ‍್ರು ಬಂದ್ರೆ ಕರ್ಕೊಂಡು ಹೋಗೋರು, ಅಕಾಮಡೇಷನ್ ಮಾಡೋರು ಯಾರಿದ್ರು ಆವಾಗ? ಯಾರೂ ದಿಕ್ಕಿರ್ಲಿಲ್ಲ. ಪಟೇಲ್ರು ಶಿವಮೊಗ್ಗ ದಾಗಿರೋರು. ಗೋಪಾ ಗೌಡ್ರ ಕೈಯಾಗ ರೊಕ್ಕಿರಲಿಲ್ಲ. ಎಸ್. ವೆಂಕಟರಾಮು ಲೇಬರ್ ಲೀಡ್ರು. ಆವಾಗ ಸೋಷಲಿಸ್ಟ್ ಪಾರ್ಟಿ ಅಂದ್ರೆ ನಾನೇ. ಸೋಷಲಿಸ್ಟ ಪಾರ್ಟಿ ಅಂತಾ ಬೆಂಗಳೂರಾಗ ಆದ್ಮೇಲೇ ಪಾರ್ಟಿ ಆಫೀಸಿಗೆ ಸುಬೇದಾರ್ ಛತ್ರ ರೋಡ್ ನ್ಯಾಗ ಎರಡು ರೂಂ ತಗಂಡು, ಪಾರ್ಟಿ ಆಫೀಸ್ ಅಂತಾ ಮಾಡ್ದೆ. ಆಮೇಲೆ ಎಷ್ಟೋ ಮಂದಿ ಪಾರ್ಟಿಯವರಿಗೆ ಮಂತ್ಲೀ ಪೇಮೆಂಟ್ ಅಂತಾ ಕೊಡ್ತೀದ್ದೆ. ಐ ವಾಸ್ ಎ ಲೀಡಿಂಗ್ ಅಡ್ವಕೇಟ್ ಆವಾಗ.

ಲೋಹಿಯಾ ಎಂಟೈರ್ ಹಿಸ್ ಲೈಫ್ ಅವರು ಜೇಬಿನ್ಯಾಗ ದುಡ್ಡು ಇಟ್ಕಂಡಿರ್ಲಿಲ್ಲ. ಹೈಯರ್ ಕ್ಲಾಸನಲ್ಲಿ ಪ್ರಯಾಣ ಮಾಡಿದವರಲ್ಲ. ಒಂದ್ಸಾರಿ ಲೋಹಿಯಾರ ಜೊತೆಗೆ ಸೆಕೆಂಡ್ ಕ್ಲಾಸ್ ಟ್ರೈನ್ ನ್ಯಾಗ ಬೆಂಗಳೂರಿಗೆ ಬರ್ಬೇಕಾದ್ರೆ ಚಿಕ್ಕ ಜಾಜೂರಿನಲ್ಲಿ ರೈಲು ಕೆಟ್ಟೋಗಿತ್ತು. ಅಲ್ಲಿ ಕೆಳಾಗ ಇಳ್ದು, ಅಲ್ಲೊಂದು ಮೆ, ಪ್ಲಾಟ್ ಫಾರ್ಮ್‌ನ್ಯಾಗ ಬಗ್ಗಿತ್ತು. ಆಮ್ಯಾಲೆ ಲೋಹಿಯಾ ನನಗೊಂದ್ಸಲ ಗುದ್ದಿ ‘ಆ ಮರಾನ್ನ ಕೈಮುಟ್ಟಲಾರದಂಗ ಹತ್ತಬೇಕು’ ನೀನು, ಅಂದ್ರು. ಕೈಲೆ ಮುಟ್ಟಲಾರದಂಗ ಹೆಂಗ ಹತ್ತಾಕಾಗ್ತೈತಿ ಸಾರ್ ಅಂದೆ. ಏನೂ ಆಗಲ್ಲ ಹತ್ತು, ನೀನು ಮನುಸು ಮಾಡಿದ್ರೆ ಏನ್ ಬೇಕಾದ್ರೂ ಮಾಡ್ತೀ ಅಂದ್ರು, ಅದ್ಹೆಂಗೆ ಹತ್ತಿದ್ನೋ… ಹತ್ತಿದೆ. ದೀಸ್ ಆರ್ ಥಿಂಗ್ಸ್ ನನ್ನನ್ನು ಇನ್ ಸ್ಪೈಯರ್ ಮಾಡಿದ್ದು. ಲೋಹಿಯಾನಂತೋರು, ಜೆ. ಪಿ. ನಂತೋರು, ಮಧುಲಿಮಯೆ, ಜಾಜ್ ಫರ್ನಾಂಡೀಸ್ ನಂಥವರು ಅವರ ಸಂಪರ್ಕ ಭಾಳಾ ಕ್ಲೋಸ್ ನನಗೆ. ಜೆ.ಹೆಚ್. ಪಟೇಲ್ರು ಆಲ್ ಇಂಡಿಯಾದಾಗ ಎಲ್ಲಿ ಹೋದ್ರೂ ನನ್ನ ಬಿಟ್ಟು ಹೋಗ್ತಿದ್ದಿಲ್ಲ. ಅವರ ಜತೀಗೆ ಹೋಗಿಬಿಡ್ತಿದ್ದೆ.

ಅವರೆಲ್ಲ ಪವರ್ ಪಾಲಿಟಿಕ್ಸ್ ನಲ್ಲಿ ಮ್ಯಾಲೆ ಬಂದುಬಿಟ್ರು. ನೀವ್ಯಾಕ ಹಿಂದ ಉಳ್ಕಂಡ್ರೀ?

ನನಗ ಪ್ರಚಾರಕ್ಕ ಮುಜುಗರ ಆಗಿಬಿಡ್ತು. ಅವ್ರು ಎಂ. ಎಲ್. ಎ. ಆದ್ರು, ಆವಾಗ ಪಾರ್ಲಿಮೆಂಟ್ ಎಲೆಕ್ಷನ್ನಿಗೆ ನನಗೆ ನಿಲ್ಲು ಅಂತಂದ್ರು. ಆವಾಗ ತಾನೇ ನಮ್ಮ ಫಾದರ್ ಸತ್ತು ಹೋಗಿದ್ರು. ಅವಾಗ ತಾನೇ ಮದವಿ ಮಾಡ್ಕಂಡು ಬೆಂಗಳೂರಿಗೆ ಹೋಗಿ ಒಂದು ಮನಿ ಮಾಡಿದ್ದೆ. ಆ ಟೈಮಲ್ಲಿ ನನಗೆ ಚಿತ್ರದುರ್ಗದಿಂದ ಟಿಕೇಟ್ ಕೊಡ್ತೀನಿ ಅಂದ್ರು. ಆದ್ರೆ ಅವತ್ತಿನ ಪರಿಸ್ಥಿತೀಲಿ ನನಗೆ ನಿಲ್ಲಾಕೆ ಆಗ್ಲಿಲ್ಲ. ಜೆ. ಹೆಚ್. ಪಟೇಲ್ರು ನಿಂತ್ರು. ಆಮೇಲೆ ಎಂ. ಎಲ್. ಎ. ಎಲೆಕ್ಷನ್ನಿಗೆ ಮಾಯಾಕೊಂಡ ಕಾನ್ ಸ್ಟ್ಯುಯೆನ್ಸಿಗೆ ನಿಂತೆ. ಅಲ್ಲಿ ಸೋಷಲಿಸ್ಟ್ ಪಾರ್ಟಿ ಎಂದ್ರೆ ಯಾರಿಗೂ ಗೊತ್ತಿರಲಿಲ್ಲ. ಸೋತೆ. ಮತ್ತೆ ಆಮ್ಯಾಲೆ ಮಾಯಾಕೊಂಡದಾಗ ಗೆದ್ದೆ.

ಯಾವ ವರ್ಷ ಸಾರ್ ಅದು?

ಅದು ನೆನಪಾಗವಲ್ದು. ಅದು ಜನತಾ ಪಾರ್ಟಿ ಆದ್ಮೇಲೆ. ರಾಮಕೃಷ್ಣ ಹೆಗಡೆ ಗೌರ್ಮೆಂಟ್ ನಲ್ಲಿ. ಆವಾಗ ಯಾರ್ಯಾರ ಬಂದು ಕೇಳ್ಕೊಂಡು ಮಿನಿಸ್ಟ್ರು ಅದ್ರು. ಆಮ್ಯಾಲೆ ಅಸೆಂಬ್ಲಿ ಫುಲ್ ಪೀರೀಡ್ ಇರ್ಲಿಲ್ಲ. ಎರಡು ವರ್ಷಕ್ಕೂ ಡಿಸಾಲ್ವ್ ಆತು.

ಪಾರ್ಲಿಮೆಂಟ್ ನಲ್ಲಿ ನಿಂತು ನ್ಯಾರೋಲೀ ಐ ಲಾಸ್ಟ್. ಆಮ್ಯಾಲೆ ನನಗೆ ಮಾಯಕೊಂಡಕ್ಕ ನಿಂತ್ಕಳ್ರೀ ಅಂದ್ರು. ನಾನು, ಪಾರ್ಲಿಮೆಂಟಿಗೆ ಜನ ನನಗ ರಿಜೆಕ್ಟ್ ಮಾಡ್ಯಾರ. ಬ್ಯಾಡ ಅಂದೆ. ನಿಂತ್ಯ ಅಂದ್ರು, ನಿಂತೆ ಗೆದ್ದೆ.

ನೀವು ಎಂ. ಎಲ್. . ಆಗಿದ್ದಾಗ್ಲೇ ಎಂ. ಪಿ. ಪ್ರಕಾಶರು ಮಿನಿಸ್ಟ್ರೂ ಆಗಿದ್ರು, ಅಲ್ಲಾ?

ಹೌದು, ಅವ್ರೇನು ಅಲ್ಲಿ, ಇಲ್ಲಿ, ನಾಟ್ಯ ಗೀಟ್ಕ ಆಡಿಸ್ಕೆಂಡ್ ಇದ್ದರು. ನಾನು ಕರ್ಕಂಡು ಬಂದು, ಪಟೇಲ್ರ ಹತ್ರ ಹೋಗಿ ಸೀಟ್ ಕೊಡಿಸಿದೆ.

ಸೀಟ್, ನೀವ್ ಕೊಡಿಸಿದ್ರಾ?

ಹೌದು, ಐ ವಾಸ್ ದಿ ಪಾರ್ಲಿಮೆಂಟರಿ ಬೋರ್ಡ್ ಛೇರ್ಮನ್. ಅದೂ ಪಟೇಲ್ರು ಟುಕ್ಸ್ ಇಂಟ್ರೆಸ್ಟ್. ಹಡಗಲಿಯಾಗ ಒಂದು ಪಾರ್ಟಿವರ್ಕರ್ಸ್ ಮೀಟಿಂಗ್ ಅಂತಾ ಮಾಡಿದ್ವಿ. ಅದೊಂದು ನಾಟಕದ್ದೋ ಸಿನಿಮಾದ್ದೋ ಒಂದು ಶೆಡ್ ಇತ್ತು. ಅದ್ರಾಗ ಕಾನಫರೆನ್ಸು ಮಾಡಿಸಿದ್ರು ಇವ್ರು. ಆವಾಗ ನಾವೆಲ್ಲ ಅಲ್ಲಿ ಹೋಗಿ, ಐ ಮೇಡ್ ಹಿಮ್ ಎ ಡಿಸ್ಟ್ರಿಕ್ಟ್ ಪ್ರೆಸಿಡೆಂಟ್ ಆಫ್ ದಿ ಸೋಷಲಿಸ್ಟ್ ಪಾರ್ಟಿ. ಐ ವಾಸ್ ದಿ ಸ್ಟೇಟ್ ಪ್ರಸಿಡೆಂಟ್ ಆವಾಗ. ಅವ್ರು ಬರೀ ವಕಾಲತ್ತು ಮಾಡಾದು ಅದೂ ಇದೂ ಮಾಡ್ತಿದ್ರು. ಸಂಡೂರು ಹೋರಾಟದಾಗೂ ಸತ್ಯಾಗ್ರಹಕ್ಕ ಒಂದು ದಿವ್ಸ ಒತ್ತಾಯ ಮಾಡಿ ಕರ್ಕಂಡು ಬಂದೆ. ಪ್ರತೀ ದಿವಸ ಹೋರಾಟ ಆರ್ಗನೈಸ್ ಮಾಡ್ತಿದ್ದವನು ನಾನು. ಆವಾಗ ಇವ್ರು ಇನ್ನೂ ವಕಾಲತ್ ಮಾಡ್ಕೆಂತ ಕೋರ್ಟಿಗೆ ಹೋಗಿದ್ದಾತ ಹಂಗೇ ಕರೇಕೋಟ್ ಹಾಕ್ಕೊಂಡು ಸತ್ಯಾಗ್ರಹಕ್ಕೆ ಒಂದು ದಿನ ಬಂದ್ರು. ಅದೂ ಇವ್ರು ತಾವಾ ಎಲ್ಲಾ ಮುಂಚೂಣಿಯಾಗ ನಿತ್ಕಂಡು ಮಾಡಿದ್ವಿ, ಅಂತೆಲ್ಲಾ ಹೇಳ್ಕಳ್ತಾರ. ಆವಾಗ ನಾನು, ನಮ್ಮ ಪಾರ್ಟಿಯವರು ಎಲ್ಲರೂ ಒಂದೊಂದು ದಿವ್ಸ ಬರ್ಲೇ ಬೇಕು ಅಂತ ಕಂಪಲ್ಸರಿ ಮಾಡಿದ್ದಕ್ಕ ಬಂದ್ರು. ಬಂದ್ರೂ ಅರೆಸ್ಟ್ ಆಗ್ಲಿಲ್ಲ. ಹಿವಾಸ್ ಮೋರ್ ಇಂಟ್ರೆಸ್ಟೆಡ್ ಇನ್ ಡ್ರಾಮಾ ಅದೂ ಇದೂ ಅಂತ. ಪೊಲಿಟಿಕಲ್ ಅದೂ ಇದೂ ಇರ್ಲಿಲ್ಲ. ಅಡ್ವಕೇಟ್, ಡ್ರಾಮಾಟಿಸ್ಟ್ ಅಷ್ಟೇ. ಅಲ್ಲೇ ಹಡಗಲಿಯಾಗ ಅಷ್ಟಾ. ಆ ಮೇಲೆ ಪಟೇಲ್ರು ಅವ್ರೂ, ಇವ್ರು ಸೇರಿ ಟಿಕೇಟ್ ಕೊಟ್ವಿ. ಅಲ್ಲಿ ಹಡಗಲಿ ತುಂಬಾ ಬ್ಯಾಕ್ ವರ್ಡ್ ಇತ್ತು. ಆ ಮ್ಯಾಲ ಇವರ ಕಮ್ಯುನಿಟಿಗೆ ಬೆಂಬಲ ಇತ್ತು. ಆ ಮ್ಯಾಲ ಭಾಳಾ ವಾಚಾಳಿತನ ಇತ್ತು….

ಅಷ್ಟೋತ್ತಿಗಾಗ್ಲೇ ಅವರ ತಂದೆ ಎಂ. ಎಲ್. . ಆಗಿದ್ರಲ್ಲ, ಬ್ಯಾಕ್‌ಗ್ರೌಂಡ್ ಇತ್ತು?

ಆಗಿದ್ರು. ಕಾಂಗ್ರೆಸ್ ಎಂ. ಎಲ್ಲೆ ಆಗಿದ್ರು. ನನಗೊಂದ್ಸಲ ನಮ್ಮ ಬ್ರದರ್ ಇನ್ ಲಾ, ಕೊಂಡಜ್ಜಿ ಬಸಪ್ಪಾ ಅಂತಾ ಅವ್ರೂ ಇವ್ರೂ ಸೇರಿ ಕಾಂಗ್ರೆಸ್ ಟಿಕೆಟ್ ಕೊಡಿಸ್ತೀವಿ ನಿಂತುಬಿಡು ಪಾರ್ಲಿಮೆಂಟ್ ಎಲೆಕ್ಷನ್ ಗೆ ಅಂತಾ ಒತ್ತಾಯ ಮಾಡಿದ್ರು. ನನಗೆ ಆವಾಗ ಒಂಥರಾ ಹುಚ್ಚು ಆದರ್ಶ. ಪಕ್ಷ ಸಿದ್ಧಾಂತಕ್ಕೆ ಹೋರಾಟ ಮಾಡ್ಬೇಕು. ಸಮಾಜವಾದಾನೇ ಆಗ್ಬೇಕು. ಸುಮ್ನೆ ಎಲೆಕ್ಷನ್ ಗೆ ನಿಲ್ಲಬಾರ್ದು. ಅಂತೆಲ್ಲಾ ಏನೋ ಒಂಥರಾ.

ನಿಮ್ಗೆ ಸಮಾಜವಾದದ ಸಂಪರ್ಕ ಬಂದ ಮೊದಲ ದಿನಗಳ ಬಗ್ಗೆ ಹೇಳ್ರಿ?

ನಾನು ಸಣ್ಣವನಿದ್ದಾಗ ನಮ್ಮೂರಾಗ ಸ್ವಾತಂತ್ರ ಹೋರಾಟ ಮಾಡಾಕ ಬರ್ತಿದ್ದವರಿಗೆ ಕರ್ಕೊಂಡು ಹೋಗಿ ಊಟ ಮಾಡಿಸ್ತಿದ್ದೆ.

ಅವ್ರ ಹೆಸರುಗಳೇನಾದ್ರೂ ನೆನಪದಾವ?

ಕೊಟ್ರನಂಜಪ್ಪಾ ಅಂತಾ, ಇದ್ರು ಅವ್ರು, ಇಟಗಿ ವೇದಮೂರ್ತಿಯವರು ಅಂತ, ಚಿದಾನಂದಯ್ಯ ಅಂತಾ, ಕೊಟ್ಟಿಗಿ ಸಿದ್ಧಲಿಂಗಪ್ಪ, ಬಳ್ಳಾರಿ ಸಿದ್ದಮ್ಮ, ಆಮ್ಯಾಲ ಗಾಂಜೀ ವೀರಪ್ಪ… ಆವಾಗ ನಾನಿನ್ನೂ ಸಣ್ಣ ಹುಡುಗ, ಆವಾಗ ನಾನು ಚಳವಳಿ ಸೇರ್ದೆ.

ಸ್ವಾತಂತ್ರ್ಯ ಬಂದಾಗ ನಿಮಗೆಷ್ಟು ವರ್ಷ ಸಾರ್?

೧೯೪೨ದಾಗ ಆ ಮೂವ್ ಮೆಂಟ್ ದಾಗ ನಾನು ಮಿಡ್ಲ್ ಸ್ಕೂಲ್ ನ್ಯಾಗ ಓದ್ತಿದ್ದೆ. ಆವಾಗಿನ್ನೂ ನಮಗೆ ನೀರಾವರಿ ಬಂದಿರ್ಲಿಲ್ಲ. ಆವಾಗ ನಮ್ಮ ಬ್ರದರ‍್ಸೂ ಜೀವನಾ ಮಾಡಾದು ಭಾಳಾ ಕಷ್ಟ ಇತ್ತು. ಹಂಗಾಗಿ ಅವ್ರೂ ನನಗೆ ಸಪೋರ್ಟ್ ಮಾಡಾಕ್ಕಾಗ್ಲಿಲ್ಲ. ಆದ್ರೂ ಎಜುಕೇಷನ್ ಮಾಡ್ಸಿದ್ರು. ನಮ್ಮಪ್ಪ ಭಾಳಾ ಮಹತ್ವಕಾಂಕ್ಷಿಯಾಗಿದ್ರು. ಆವಾಗಿನ ಮೈಸೂರು ಮಹಾರಾಜರ ಕಾಲ್ದಾಗ ನಮ್ಮಪ್ಪ ಎಂ. ಆರ್. ಎ. (ಮೆಂಬರ್ ಆಫ್ ದಿ ರೆಪ್ರೆಸೆಂಟಿಟಿವ್ ಅಸೆಂಬ್ಲಿ) ಆಗಿದ್ರು, ಲಿಮಿಟೆಡ್ ಓಟ್ ನ್ಯಾಗ ಗೆದ್ದಿದ್ರು. ನಾನು ಹುಟ್ಟಿದಾಗ, ಸಣ್ಣ ಮಗುವಾಗಿದ್ದಾಗ ಆಗಿದ್ರು ಅವ್ರು.

ನಿಮ್ಮ ಮನೆತನದ ಹಿನ್ನೆಲೆ ಏನ್ಸಾರ್?

ಪಟೇಲ್ರು ನಾವೂ ಊರಿಗೆ. ನಮ್ಮಪ್ಪ ವೆರಿ ಪವರ್ ಫುಲ್ ಮ್ಯಾನ್. ಅವಾಗಿನ ಕಾಲದ ಗೌಡ್ರು. ಆವಾಗ ಲಿಮಿಟೆಡ್ ಫ್ರಾಂಚೈಸ್ ಇತ್ತು. ಎಲೆಕ್ಷನ್ನಿಗೆ ಗೆಲ್ಲಾಕ ಆವಾಗ ಯಾರೂ ಇರ್ಲಿಲ್ಲ. ಗೆಲ್ಲೋರು. ಗೌಡ್ರಿಗೆ ಹಿಡ್ಕಂಡ್ ಬಿಡಾರು. ದಿವಾನರ ಆಡಳಿತ ಆವಾಗೆಲ್ಲ. ಮಿರ್ಜಾ ಅವರೆಲ್ಲ ಇವರಿಗೆ ಕ್ಲೋಸ್ ಇದ್ರು. ಇವ್ರು ಎಂ.ಆರ್.ಎ. ಮಾಡಿ, ಲೋಕಲ್ ನ್ಯಾಗ ಕಾಂಗ್ರೆಸ್ ಬೇಳಿಲಾರ‍್ದಂಗ, ಯಾವ್ದುನೂ ಬೇಳೀಲಾರ‍್ದಂಗ ಇವ್ರನ್ನ ಉಪಯೋಗಿಸ್ತಿದ್ರು. ಒಂದಿವ್ಸ, ಒಂದೀಸ್ ಮಂದಿ ಕಾಶೀ ಶ್ರೀನಿವಾಸಶೆಟ್ರು ಅಂತಾ ಅವ್ರು. ಒಂದು ಪಬ್ಲಿಕ್ ಮೀಟಿಂಗ್ ಮಾಡಿದ್ರು ಗಾಂಧಿ ಮೈದಾನದಾಗ. ಆವಾಗ ಅಲ್ಲೊಂದು ಬಾಂಬೆ ಕಂಪನಿ ಇತ್ತು. ಇದೆಲ್ಲ ನನ ಮ್ಯಾಲ ಪ್ರಭಾವ ಬೀರ್ದು.

ಫಸ್ಟ್ ಇಂಡಿಪೆಂಡೆನ್ಸ್ ಡೇದ್ದು ನೆನಪು ಐತಾ ಸಾರ್? ಹೆಂಗ ಮಾಡಿದ್ರೀ ಅಂತಾ?

ಫಾರ್ಟಿಸೆವೆನ್ ಅದು ಅದೂ ಆವಾಗ ನಾನಿನ್ನೂ ಮೈಸೂರು ಮಹಾರಾಜ ಕಾಲೇಜಿನ್ಯಾಗ ಇದ್ದೆ. ಆವಾಗಿನ್ನೂ ಫಾರ್ಟಿಟೂ ಮೂವ್ ಮೆಂಟೇ ನನಗೆ ಪರಿಣಾಮ ಬೀರಿದ್ದು. ಆ ಮ್ಯಾಲೆ ಓದಿನ ಕಡೆ ಲಕ್ಷ್ಯಾ ಕೊಟ್ಟೆ. ಏನಾರ ಮಾಡಿ ನಾನು ವಕೀಲ ಆಗ್ಬೇಕು ಅನ್ನೋದಿತ್ತು. ಮೈಸೂರು ಮಹಾರಾಜ ಕಾಲೇಜ್ ನ್ಯಾಗ ಕಾನೂನು ಓದಾ ಟೈಮಿಗೆ ಜೆ. ಹೆಚ್. ಪಟೇಲರ ಸಂಪರ್ಕ ಬಂತು. ಅವ್ರು ಒಂದ್ವರ್ಷ ಜ್ಯೂನಿಯರ್ ನನಗೆ. ಆವಾಗ ನಾನು ಓದಾದು ಮುಗಿಸಿ ಬೆಂಗಳೂರಿಗೆ ಬಂದು, ಅಣ್ಣಮ್ಮ ದೇವಸ್ಥಾನದ ಎದುರು ಎರಡು ರೂಮು ಮಾಡಿ ಪಾರ್ಟಿಗೆ ಆಫೀಸಂತ ಮಾಡಿದ್ದೆ.

ನಿಮಗೆ ಪಕ್ಷಕ್ಕೆ ಸೇರಿಸಿದವ್ರು ಯಾರು?

ಅವಾಗೆಲ್ಲ ಮಧುಲಿಮಯೆ, ಜಾರ್ಜ್, ಲೋಹಿಯಾ, ಓಡಾಟ ನೋಡಿ. ಗೋಪಾಲಗೌಡ್ರು ಎಂ. ಎಲ್. ಎ. ಆಗಿದ್ರು, ಅವರ ಹೋರಾಟದ ಆಕರ್ಷಣೆ ಇತ್ತು. ಆವಾಗ ಅವರ ಎಲೆಕ್ಷನ್ನಿಗೆ ಹೋಗಿ, ತೀರ್ಥಹಳ್ಳಿಗೆ ಹೋಗಿ, ಅವರ ಎಲೆಕ್ಷನ್ ಜವಾಬ್ದಾರೀನೆಲ್ಲ ನಾನ್ ತಗಂತಿದ್ದೆ. ಅವರತ್ರ ಏನು ಇಪ್ಪತ್ತೈದು ರೂಪಾಯಿ ಜೇಬಿನ್ಯಾಗ ಇರ್ತಿರಿಲ್ಲ. ನಾನು ವಕೀಲ್ರು, ಎಲ್ಲರತ್ರ ಕಲೆಕ್ಟ್ ಮಾಡಿ ಎಲೆಕ್ಷನ್ನಿಗೆ ಒಯ್ತಿದ್ದೆ. ದಟ್ಸ್ ವೈ ಐ ಬಿಕೇಮ್ ವೆರೀ ಕ್ಲೋಸ್ ಟು ಗೋಪಾಲಗೌಡ, ಫಿಫ್ಟೀವನ್ ನಲ್ಲೇ ನಾನು ವಕಾಲತ್ತು ಶುರು ಮಾಡಿದ್ದು.

ಅಷ್ಟೊತ್ತಿಗೆ ಜೆ. ಹೆಚ್. ಪಟೇಲ್ರು ವಕೀಲ್ಕಿ ಶುರುಮಾಡಿದ್ರೇನೋ?

ಬೋರ್ಡ್ ಹಾಕಿದ್ರು ಒಂದ್ಸಲ ಬೆಂಗಳೂರಿನ್ಯಾಗ. ಆದ್ರೆ ಅವ್ರ ಇಂಟ್ರೆಸ್ಟು ಭಾಳಾ ಪಾಲಿಟೆಕ್ಸ್ ಕಡೀಗೆ ಇತ್ತು. ಅವರು ದೊಡ್ಡ ಗೌಡ್ರು. ಅವರಪ್ಪನ ಪ್ರೀತಿ ಮಗ ಇವ್ರು. ನಮ್ದು ನೂರು ಎಕ್ರೆ ಇರಬಹ್ದು ನಮ್ಮಪ್ಪಗೆ, ಡ್ರೈಲ್ಯಾಂಡ್ ಅದು. ಅವಾಗ ನೀರಾವರಿ ಇರ್ಲಿಲ್ಲ.

ಗೋಪಾಲಗೌಡ್ರ ಎಲೆಕ್ಷನ್ನಿಗೆ ಎಷ್ಟು ಖರ್ಚು ಬಂತು?

ಏ…. ಅವಾಗೆಲ್ಲ ಎಲ್ಲಿ? ಜಾಸ್ತಿ ಖರ್ಚಾಗ್ತಿರಲಿಲ್ಲ.

ಆದ್ರೂ ಮ್ಯಾಕ್ಸಿಮಂ ಅಂದ್ರೆ?

ಒಂದೈದ್ ಸಾವಿರ ಬರ್ತಿತ್ತು. ಅವರಿಗೆಲ್ಲಿ ದುಡ್ಡು. ನಮ್ಮಂಥವರು ಯಾರಾದ್ರೂ ಕೊಡಬೇಕು.

ಗೋಪಾಲಗೌಡ್ರ ಪ್ರಭಾವ ಶಿವಮೊಗ್ಗದ ಸುತ್ತಮುತ್ತಾನೇ ಬೆಳೀತು. ಸಮಾಜವಾದಿ ಪಕ್ಷ ರಾಜ್ಯದ ತುಂಬಾ ವ್ಯಾಪಿಸಲಿಲ್ಲ ಯಾಕಿಂಗಾತು?

ಆವಾಗ ಪಕ್ಷ ಅಷ್ಟು ಬೆಳ್ದಿರಲಿಲ್ಲ. ಗೋಪಾಲಗೌಡ್ರು ಅವ್ರ ಕಾನ್ ಸ್ಟುಯೆನ್ಸಿಗೆ ಹೆಚ್ಚು ಲಕ್ಷ್ಯಾ ಕೊಡೋರು. ಬೆಂಗಳೂರಿನ್ಯಾಗ ಸೆಟ್ಸ್ ಆಗಿದ್ರು, ಭಾಳಾ ಬಡತನ ಇತ್ತು.

ಪಾರ್ಟಿ ಇತ್ತಲ್ಲ?

ಪಾರ್ಟಿ ಇದ್ರೂ ಭಾಳಾ ರೊಕ್ಕ ಇರ್ಲಿಲ್ಲ. ಹುಬ್ಬಳ್ಳಿಗೋ ಬಳ್ಳಾರಿಗೋ ಹೋಗ್ಬೇಕಂತ್ರಂದ್ರೆ ನಾನು ಕರ್ಕೊಂಡು ಹೋಗ್ತಿದ್ದೆ. ಅವಾಗ ನಾನೊಬ್ನೇ ಕಾರಿಟ್ಟಿದ್ದು. ಅದೇನೋ ಫಾರ್ಚುನೇಟ್ಲಿ ಅವಾಗೇನು ಟ್ರಾನ್ಸ್ ಪೋರ್ಟ್ ಕೇಸುಗಳು, ಮೋಟಾರ್ ವೆಹಿಕಲ್ಸ್ ಕೇಸ್ ಗಳು ಅವಾಗ ಸಿದ್ದವೀರಪ್ಪ ಟ್ರಾನ್ಸ್ ಪೋರ್ಟ್ ಮಿನಿಸ್ಟ್ರು ‘ಆಗಿದ್ರ’. ಅವಾಗ ಒಳ್ಳೇ ಪ್ರ್ಯಾಕ್ಟ್ರೀಸು ಡೆವಲಪ್ ಮಾಡ್ದೆ. ಅವಾಗ ಮೂರ‍್ನಾಲ್ಕು ಮಂದಿ ಪ್ರಮುಖ ವಕೀಲರಲ್ಲಿ ನಾನೂ ಒಬ್ಬನಾಗಿದ್ದೆ. ಟ್ರಾನ್ಸ್ ಪೋರ್ಟ್ ಕೇಸ್ ಗಳಲ್ಲಿ ಐ ಅರ್ನಡ್ ಎ ಲಾಟ್ ಯ್ಯಾಸ್ ಯ್ಯಾನ್ ಅಡ್ವಕೇಟ್.

ಧಾರವಾಡದಾಗ ಅಷ್ಟೋತ್ತಿಗೆ ಪಾರ್ಟೀ ಇತ್ತಲ್ಲ?

ಬಾಳಷ್ಟು ಸಪೋರ್ಟ್ ಇರ್ಲಿಲ್ಲ. ನೀಲಗಂಗಯ್ಯ ಪೂಜಾರ್ ಅಂತಿದ್ರು. ಆಮ್ಯಾಲೆ ಅಲ್ಲಿ ಇಲ್ಲೀ ಹಳೇ ಸಮಾಜವಾದಿಗಳು ಇದ್ರು. ಅಲ್ಲೇ ಕಾಗೋಡಿನಲ್ಲಿ ಒಂದಿಷ್ಟು ಇತ್ತು. ಅದು ಬಿಟ್ರೆ ಸ್ಟೇಟ್ ನಲ್ಲಿ ಎಲ್ಲಿತ್ತು? ಆಮ್ಯಾಲೆ ಗೋಪಾಲಗೌಡ್ರು, ಪಟೇಲ್ರು, ಆಮ್ಯಾಲೆ ನಮ್ಮ ಆಲ್ ಇಂಡಿಯಾ ಲೀಡರ್ಸು ಸ್ವಲ್ಪ ಇಂಟ್ರೆಸ್ಟ್ ತಗೊಂಡ್ರು.

ಕಾಗೋಡು ತಿಮ್ಮಪ್ಪ ಅಷ್ಟೊತ್ತಿಗೆ ಕೆಲ್ಸ ಮಾಡ್ತಿದ್ರು ಪಾರ್ಟಿದು?

ಅವ್ರು ಇನ್ನೂ ಯಂಗ್ ಸ್ಟರ್. ಅವರು ಎಂ.ಎಲ್.ಎ. ಆದ್ರಲ್ಲ ಒಂದ್ಸಲ.

ಬಂಗಾರಪ್ಪ ಇದ್ರು?

ಅವರನ್ನ ನಾನು ಅಧ್ಯಕ್ಷ ಆಗಿದ್ದಾಗ ಸೇರಿಸಿಕಂಡಿದ್ದೆ. ಅವಾಗೆಲ್ಲ ಭಾಳಾಜನ ಗೋಪಾಲ ಗೌಡ್ರು ಅವರೆಲ್ಲ ವಿರೋಧ ಮಾಡ್ತಿದ್ರು.

ಯಾರಿಗೆ, ಬಂಗಾರಪ್ಪನವರಿಗಾ?

ಹೂಂ. ಬಂಗಾರಪ್ಪ ಅವ್ನು ಈಗ ಬಂದಾನ, ಸ್ಟಂಟ್ ಮಾಸ್ಟರ್ ಇದ್ದಂಗದಾನ ಅಂತಿದ್ರು. ಆಮ್ಯಾಲೆ ಕುಪ್ಪಗಡ್ಡೆ ಮರಿಯಪ್ಪ ಅಂತಿದ್ರು. ಹಳೇ ಸಮಾಜವಾದಿಗಳು. ಅವರಿಗೆ ಎಲೆಕ್ಷನ್ ಟಿಕೇಟ್ ಕೊಡಬೇಕು ಅಂತಾಗಿತ್ತು. ಸೊರಬದಾಗೆ. ಆದ್ರೆ ಕಾಗೋಡು ತಿಮ್ಮಪ್ಪ ಬಂಗಾರಪ್ಪಗೆ ಭಾಳಾ ಸಪೋರ್ಟ್ ಮಾಡಿದ್ದು. ಇಲ್ಲಾ, ದೀವರ ಕಮ್ಯುನಿಟಿಯವನು ಈಗ ವಕಾಲತ್ತು ಶುರು ಮಾಡ್ಯಾನ, ಭಾಳಾ ಚಾಲಾಕ್ ಅದಾನ ಅವನಿಗೇ ಟಿಕೇಟ್ ಕೊಡಬೇಕು ಅಂದ್ರು. ಪಟೇಲ್ರೂ ಸಪೋರ್ಟ್ ಮಾಡಿದ್ರು. ಆಮೇಲೆ ಲೋಹಿಯಾ ಬಂದ್ರು “ಏ… ಐ ಡೋಂಟ್ ಲೈಕ್ ದಟ್ ಫೆಲೋ, ಕುಪ್ಪಗಡ್ಡೆ ಮರಿಯಪ್ಪಗೇ ಕೊಡ್ಬೇಕು” ಅಂದ್ರು. ಅವಾಗ ಲೋಹಿಯಾ ಹೋದ್ಮೇಲೆ, ನಾನೂ ಪಟೇಲ್ರೂ ಸೇರಿ, ಮರಿಯಪ್ಪಗೆ ಕಷ್ಟ ಆಗ್ತೈತಿ, ಗೆಲ್ಲಾಕ. ಯಂಗ್ ಸ್ಟಾರ್ಸ್ ಮೇಲೆ ಬರ‍್ಲೀ. ಅಲ್ಲಿ ಬೇರೆ ಮುರಹರಿರಾಯರು ಅಂತಾ ಇದ್ರು. ನಮ್ಮ ಪಾರ್ಟಿ ಸೀನಿಯರ‍್ರು. ಅವರನ್ನ ಬಿಟ್ಟು ಕುಪ್ಪಗಡ್ಡೆ ಮರಿಯಪ್ಪಗೆ ಟಿಕೇಟ್ ಕೊಡ್ಬೇಕು ಅಂತಾ ಡಿಸೈಡ್ ಮಾಡಿ ಅದನ್ನ ರಿಪೋರ್ಟ್ ಮಾಡ್ಬೇಕು ಅಂತಾ ಅಂದು ಬಿಟ್ಟಿದ್ರು ಲೋಹಿಯಾ. ಆದ್ರೆ ನಾನೂ, ತಿಮ್ಮಪ್ಪ, ಪಟೇಲ್ರು ಸೇರಿ ಯಂಗ ಸ್ಟಾರ್ ಇವನು ಗೆಲ್ಲಲೀ ಅಂತಾ ಇವನಿಗೆ ಟಿಕೇಟ್ ಕೊಟ್ವಿ.

ಕಾಗೋಡ್ ಹೋರಾಟದ ನಂತರ ಭಾಗದ ನಾಯಕತ್ವ ಬಂತು, ಪಾರ್ಟೀ ಬೆಳೀತು. ಹಂಗೆ ಇಲ್ಲಿ ಸಂಡೂರಿನ ಹೋರಾಟದಿಂದ ಯಾಕ ಆಗ್ಲಿಲ್ಲ?

ಆಫ್ಟರ್ ಆಲ್ ಲ್ಯಾಂಡ್ ಲಾರ್ಡ್ ಗಳು ಮತ್ತು ಗೇಣಿದಾರರ ಹೋರಾಟ ಅದು. ಅಷ್ಟೇ ಆದ್ರೂ ಲೋಹಿಯಾ ಬಂದು ಅರೆಸ್ಟ್ ಆದ್ರು. ಇನ್ ಸ್ಪಯರ್ ಮಾಡಿದ್ರು. ಆಮೇಲೆ ಗೋಪಾಲ ಗೌಡ್ರು ಭಾಳಾ ಮುಖ್ಯ, ಅವರು ನಾಯಕತ್ವ ಕೊಟ್ರು. ಸಾಮಾನ್ಯ ಜನರ ಕಣ್ಮಣೀಯಾಗಿದ್ದವರು ಅವರು, ಬಡವ. ಅವರ ತಾಯಿ ಒಬ್ರೇ ಇದ್ರು. ಇಷ್ಟಿದ್ದೂ ಅವ್ರು ಹೋರಾಟ ಮಾಡ್ತಿದ್ರು ಹಂಗಾಗಿ ಅಲ್ಲಿ ಪಾರ್ಟಿ ಪ್ರಭಾವ ಬಿಟ್ಟಿತ್ತು.