ಅಲ್ಲಿಂದ ಮುಂದೆ ಎಷ್ಟು ವರ್ಷ ಚಟುವಟಿಕೆ ಸ್ಥಗಿತ ಆಗಿದ್ದವು?

ಐದಾರು ವರ್ಷ ಆತ್‌ರೀ ಅದು. ಆ ಮ್ಯಾಲೆ ಪುನಃ ಧಾರವಾಡದ ಮಟ್ಟಿಗೆ ಹೇಳ್ಬೇಕು ಅಂತಂದ್ರೆ ನಾವು ಪ್ರಾರಂಭಿಸಿದ್ದು ನಾನು ಚುನಾವಣೇಲಿ ಗೆದ್ದನಂತರ. ನಾನ್‌ ಗೆದ್ದಿದ್ದೂ ಆಕಸ್ಮಿಕ. ಜನ ಓಟ ಹಾಕಿದ್ದು ನಾನು ಸೋಷಲಿಸ್ಟ್‌ ಅಂತಾ ಅಲ್ಲ. ರೋಣ ತಾಲ್ಲೂಕಿನ್ಯಾಗ ಒಂದ್ಸಲ ನಾವು ಪ್ರವಾಸ ಮಾಡಿದ್ದು ಅಷ್ಟೇನಾ ಹೊರತಾಗಿ ಭಾರಿ ಸಂಘಟನೆ ನಮ್ದೇನೂ ಇದ್ದಿದ್ದಿಲ್ಲ. ನಮ್ಮ ಕೇಡರ್ಸು ಇರ್ಲಿಲ್ಲ.

ಅಂಥಾದ್ರಲ್ಲಿ ನೀವು ಚುನಾವಣೆಗೆ ನಿಲ್ಲೋಕೆ ನಿರ್ಧರಿಸಿದ್ದು ಗೆದ್ದಿದ್ದು ಇದೆಲ್ಲ ಹೇಗಾಯ್ತು?

ಅಲ್ಲಿ ರೋಣ ಕ್ಷೇತ್ರದೊಳಗೆ ವಿಶೇಷ ಪ್ರಸಂಗಗಳಾದ್ವು… ಕಾಂಗ್ರೆಸ್ಸು ಸರಿಯಾದ ಹುರಿಯಾಳನ್ನ ನಿಲ್ಲಿಸಿರಲಿಲ್ಲ. ಕಾಂಗ್ರೆಸ್ಸಿನ ಹುರಿಯಾಳು ಆಗಿದ್ದೋರು ಆ ಮುಂಚೆ ಕಾಂಗ್ರೆಸ್‌ ಚಳವಳಿಯನ್ನ ವಿರೋಧಿಸಿದವ್ರು.. ಗಾಂಧೀ ಟೊಪ್ಪಿಗಿಗಳನ್ನ ಸುಟ್ಟವ್ರು ಹಿಂಗೆಲ್ಲಾ ಅವ್ರ ಚಾರಿತ್ರ್ಯ ಸರಿ ಇರಲಿಲ್ಲ. ಅದ್ರಿಂದ ನೊಂದುಕಂಡ ಕಾಂಗ್ರೆಸ್‌ ಕಾರ್ಯಕರ್ತರೆಲ್ಲ ನನ್ನ ಬೆನ್ನಹಿಂದೆ ನಿಂತು ‘ಹೆದರಬ್ಯಾಡ್ರೀ. ನೀವು ನಿಲ್ರೀ, ಮುಂದೆ ನೋಡಾನಾ’ ಅಂತಂದು ನಿಲ್ಸಿದ್ರು. ಹಿಂಗಾಗಿ ಈ ಇಂಥಾ ಒಂದು ಸಂದರ್ಭದಾಗ, ಇವರಿಗ್ಯಾರ್ಗೂ ತಾವು ನಿಲ್ಲಾಕ ಧೈರ್ಯಾ ಸಾಲ್‌ಲಿಲ್ಲ. ಯಾಕಂದ್ರ ಅವ್ರು ಒಂದೀಸು ಪ್ರಬಲ ಇದ್ರು.

ಯಾರ್ ಸಾರ್ಅವ್ರು? ಅವರ ಹೆಸರೇನು?

ಇನಾಮತಿ ಅಂತಾ. ತಾಲೂಕಿನಲ್ಲಿ ಭಾಳಾ ಪ್ರಬಲರು. ಶ್ರೀಮಂತರು ಮತ್ತು ಜಮೀನ್ದಾರ್ರು. ಕೆ.ಸಿ.ಸಿ ಬ್ಯಾಂಕ್‌ ಮೂಲಕ ಪ್ರತೀಗ್ರಾಮ ಸಹಕಾರೀ ಸಂಘಗಳ ಮೇಲೆ ಹಿಡಿತ ಇದ್ದವ್ರು. ಅವ್ರು ಹಿಂದಕ್ಕ ಸ್ವಾತಂತ್ರ್ಯ ಹೋರಾಟ ಮಾಡವ್ರನ್ನ ಬಡಿಸಿಯೂ ಬಡಿಸಿದ್ರು.

ಸ್ವಾತಂತ್ರ್ಯ ಹೋರಾಟಗಾರರನ್ನ?

ಹೌದು. ಅವ್ರು ಗಾಂಧೀ ಟೊಪ್ಪಿಗಿಗಳನ್ನ ಕಸ್ಕಂಡಿದ್ರು. ಸುಟ್ಟಿದ್ರು. ಕಾಂಗ್ರೆಸ್ಸಿನ ತ್ರಿವರ್ಣ ಧ್ವಜಾನ್ನ ಸುಡಿಸಿದ್ರು, ಇನಾಮತಿಯವ್ರು. ಗಾಂಧೀ ಮಾರಾಜ್‌ಕೀ ಜೈ ಅಂತಾ ಕೂಗಿದ್ರೆ, ಲೇ ಮಕ್ಳಾ ಗಾಂಧೀಗೆ ಹುಟ್ಟೀರೇನ್‌ ನೀವು ಅಂತಾ ಅಂದವು. ಈ ಹಿನ್ನೆಲೆಯೊಳಗ ಅವ್ರು ವಿರುದ್ಧ ನಿಲ್ಲಾಕ ಯಾರಿಗೂ ಧೈರ್ಯ ಸಾಲದ ನನಗ ನಿಲ್ಲಿಸಿದ್ದರು. ನಾನ್‌ ನಿಂತೆ. ಕಾಂಗ್ರೆಸಿಗ್ರೂ ಸಾಮೂಹಿಕವಾಗಿ ನನಗ ಬೆಂಬಲಿಸಿದ್ರು. ಈ ಕರ್ನಾಟಕದ ಏಕೀಕರಣದ ಚಳವಳೀನೂ ಪ್ರಬಲ ಇತ್ತು ಇಲ್ಲಿ ಈ ಏಕೀಕರಣ ಸಮಿತಿಯವ್ರದೂ ಬೆಂಬಲ ಸಿಗ್ತು.

ಯಾವ ವರ್ಷ ಸಾರ್ಅದು?

೧೯೫೩. ಉಪಚುನಾವಣೆ ಅದು. ಮುಂಬೈ ಪ್ರಾಂತದ್ದು. ಒಂದು ವರ್ಷದ ವರೆಗೆ ದೊಡ್ಡಮೇಟಿ ಅಂದಾನಪ್ಪನವರು ಇದ್ರು. ಅವ್ರು ಕರ್ನಾಟಕ ಏಕೀಕರಣದ ಸಲುವಾಗಿ ಭಾಳಷ್ಟು ತ್ಯಾಗ ಮಾಡಿದವ್ರು. ಭಾಳಾ ದೊಡ್ಡ ಮನುಷ್ಯಾ ಅವ್ರು. ಅವ್ರು ಯಾವ ಕಾರಣಕ್ಕಾಗೋ ರಾಜಿನಾಮೆ ಕೊಟ್ರು. ಹೀಗಾಗಿ ನಾನು ಗೆದಿಯೋ ಪ್ರಸಂಗ ಬಂತು. ಇಲ್ಲದಿದ್ರೆ ನಾನು ಯಾರು ಗೆದಿಯೋದಕ್ಕ?

ದೊಡ್ಡ ಮೇಟಿ ಅಂದಾನಪ್ಪನವರು ರಾಜೀನಾಮೆ ಕೊಡೋಕೆ ಕಾರಣ ಏನು?

ಅದನ್ನಾ ಕೊನೆವರೆಗೂ ಅವ್ರು ಬಿಚ್ಚಲಿಲ್ಲ. ನಾನ್ ತಿಳ್ಕೊಂಡಿದ್ದಪ್ಪಾ ಅಂದ್ರೆ ಕರ್ನಾಟಕ ಏಕೀಕರಣ ಚಳವಳೀನಾ ಪ್ರಬಲಗೊಳಿಸೋದಕ್ಕ ಅಂತಾ ಊಹಿಸ್ತೀನಿ. ಅದಕ್ಕ ಬೇರೆ ಬೇರೆ ಕಾರಣಾಗಳೂ ಇರಬಹ್ದು.

ಏನವು?

ಏನೋ… ಮುರಾರ್ಜಿ ದೇಸಾಯಿಯವರು ಅವರಿಗೆ ಹಾಸ್ಯ ಮಾಡಿದ್ರು. ಅವರಿಗೆ ಛೇಡಿಸಿದ್ರು ಏನೋ ಮಾಡಿದ್ರು.. ಅದಕ್ಕೆ ಬೇಸತ್ತು ಅವರು ರಾಜಿನಾಮೆ ಕೊಟ್ರು ಅಂತಾ ಕೆಲವರು ಹೇಳ್ತಾರ.

ಆಮ್ಯಾಲೆ ನೀವೆಷ್ಟು ವರ್ಷ ಇದ್ರೀ?

ನಾಲ್ಕು ವರ್ಷ.

ನೀವು ಸ್ಪರ್ಧಿಸಿದ್ದು ಸ್ವತಂತ್ರ ಅಭ್ಯರ್ಥಿ ಅಂತಾನಾ, ಸೋಷಲಿಸ್ಟ್ ಪಕ್ಷದ ಅಭ್ಯರ್ಥಿ ಅಂತಾನಾ?

ಸೋಷಲಿಸ್ಟ್ ಪಕ್ಷದ ಅಭ್ಯರ್ಥಿ ಅಂತ.

ಅಷ್ಟೊತ್ತಿಗಾಗ್ಲೇ ಕಾಗೋಡು ಸತ್ಯಾಗ್ರಹ ಆಗಿ ಹೋಗಿತ್ತಲ್ಲ. ಅದರ ಪ್ರಭಾವ ಏನಾದ್ರೂ ಆಯ್ತಾ ಭಾಗದಾಗ?

ಏನೇನೂ ಇಲ್ಲ… ಏನೂ ಇದ್ದಿದ್ದಿಲ್ಲ. ಕಾಗೋಡು ಚಳವಳಿ ನಡೆದಾಗ ನಾವು ಲಾ ಕಾಲೇಜ್ ಸ್ಟುಡೆಂಟ್ಸ್‌, ಬೆಳಗಾವಿಯಲ್ಲಿ.

ನೀವು ಪಟೇಲ್ರು ಎಲ್ಲರೂ ಒಂದೇ ಹೊತ್ತಿಗೆ ಇದ್ದವರಂತೆ ಬೆಳಗಾವಿಯಲ್ಲಿ?

ಹೌದು, ಹೌದು, ಎರಡು ವರ್ಷ ಒಂದೇ ಕಾಲೇಜಿನಲ್ಲಿ ಕೂಡಿ ಓದಿದವ್ರು. ಬೆಂಗಳೂರಿನಲ್ಲಿ ಲಾ ಕಾಲೇಜ್‌ ಇರ್ಲೇ ಇಲ್ಲ. ಮದ್ರಾಸ್‌ನಲ್ಲಿ ಒಂದಿತ್ತು.

ಬೆಳಗಾವಿಯಲ್ಲಿ ಸಮಾಜವಾದಿ ವಾತಾವರಣ ಇರಲಿಲ್ವಾ?

ಇಲ್ಲ, ಅಲ್ಲೇನಿರ್ಲಿಲ್ಲ. ಕಾಗೋಡ್‌ ಸತ್ಯಾಗ್ರಹದ ಸುದ್ದಿಗಳು ಬರ್ತಿದ್ವು ಪೇಪರಿನ್ಯಾಗ. ಅದಷ್ಟು ಓದ್ತಿದ್ವಿ.

ಹೆಬ್ಬಳ್ಳಿ ಹೋರಾಟ ಮಾಡಿದ್ರಲ್ಲ, ಅದರ ಹಿನ್ನೆಲೆ ಏನು?

ಹೆಬ್ಬಳ್ಳಿ ಹೋರಾಟಕ್ಕೆ ಹಿನ್ನೆಲೆ ಅಂತಂದ್ರೆ ನಾನು ಎಂ.ಎಲ್‌.ಎ ಆಗಿದ್ದೆ. ಪಕ್ಷದ ಸಂಘಟನೇನೂ ಕೈಗೊಳ್ಳಬೇಕಾಗಿತ್ತು. ನನ್ನ ಪ್ರಶ್ನೆ ಅಂದ್ರೆ, ರೋಣ ತಾಲೂಕಿನ್ಯಾಗ ನಾನು ಸಂಘಟನೆ ಕೈಗೊಳ್ಳೋ ಪರಿಸ್ಥಿತೀಲಿ ಇರ್ಲಿಲ್ಲ. ಯಾಕಂದ್ರ ನನ್ನ ಚುನಾವಣೇಯೊಳಗ, ಸೋಷಲಿಸ್ಟ್ರು ಅಲ್ಲದವರು ಇದ್ರು. ಕಾಂಗ್ರೆಸ್‌ನವರೂ ಏಕೀಕರಣ ಚಳವಳಿಯವ್ರೂ ಇದ್ರು. ಇವ್ರೆಲ್ಲ ಇರುವಾಗ ನನಗ ಅಲ್ಲಿ ಸರಿ ಕಾಣಲಿಲ್ಲ. ನಾನು ಧಾರವಾಡದಾಗ ನೆಲೆಸಿ, ಧಾರವಾಡದಾಗ ಸೋಷಲಿಸ್ಟ್‌ ಪಾರ್ಟಿನಾ ಕಟ್ಟಲಿಕ್ಕೆ ಶುರು ಮಾಡೋಣ, ಆಮ್ಯಾಲೆ ತಾನಾ ಬೆಳೀತದೆ ಅಂತನ್ಕೊಂಡು ಧಾರವಾಡಾನ ಕೇಂದ್ರ ಮಾಡ್ಕೊಂಡೆ. ಇಲ್ಲಿ ಸಾಧಾರಣವಾಗಿ ಹಳ್ಳಿಯೊಳಗ ಸಮಾಜವಾದಿ ಚಳವಳೀದು ಪ್ರಭಾವ ಮೂಡಿಸಿದ್ವಿ. ಕೆಲವು ಹಳ್ಳೀಯೊಳಾಗಂತೂ ನೂರಕ್ಕ ನೂರರಷ್ಟು ನಾವು ಮತ ತಗೋಬಹುದು ಅನ್ನೋ ಹಂಗ ಇತ್ತು. ಆವಾಗ ಗರಗ, ಮುಮ್ಮಿಗಟ್ಟಿ, ಉಪ್ಪಿನ ಬೆಟಗೇರಿ, ಸತ್ತೂರು ನಮ್ಮ ಸೋಷಲಿಸ್ಟ್‌ ಚಳವಳಿಯ ಕೇಂದ್ರಗಳು, ಆಮ್ಯಾಲೆ ನಾನು ಎಂ.ಎಲ್‌.ಎ ಇದ್ದಾಗ, ಭಾವುಸಾಹೇಬ್‌ ಹೀರೇ ಅವ್ರು ಮುಖ್ಯಮಂತ್ರಿಗಳಾಗಬೇಕಿತ್ತು. ಕಾಂಗ್ರೆಸ್‌ ಹೈಕಮ್ಯಾಂಡಿನವ್ರು ಮುರಾರ್ಜಿ ದೇಸಾಯಿಯವ್ರನ್ನ ತಂದು ಮುಖ್ಯ ಮಂತ್ರಿ ಮಾಡಿದ್ರು. ೧೯೫೨ನೇ ಮೊದಲನೇ ಅಸೆಂಬ್ಲೀ ಚುನಾವಣೆಯೊಳಗೆ ಮುರಾರ್ಜಿ ದೇಸಾಯಿ ಸೋತಿದ್ರು.

ಅಂದ್ರೆಚುನಾವಣೆಯಲ್ಲಿ ಸೋತವರನ್ನ ಕರ್ಕೊಂಡು ಬಂದು ಮುಖ್ಯಮಂತ್ರಿ ಮಾಡಿದ್ರಾ?

ಹೌದೂ… ಇಲ್ದಿದ್ರೆ ಹೀರೆಯವರು ಮುಖ್ಯಮಂತ್ರಿ ಆಗಬೇಕಾಗಿದ್ದವ್ರು. ಹೀರೆಯವ್ರಿಗೆ ನನ್ನ ಬಗ್ಗೆ ಸ್ಪಲ್ಪ ಅಭಿಮಾನ. ಬಹಳಷ್ಟು ನಾವು ಮಾತಾಡೋರು. ಅದಕ್ಕ ಕಾರಣ ಏನಪ್ಪಾ ಅಂತಂದ್ರೆ, ಆವಾಗ ರಾಜ್ಯ ಪುನರ್‌ ಘಟನೆ ನಡೀಬೇಕಿತ್ತಲ್ಲ. ಅವಾಗ ಬೆಳಗಾವಿ ಕರ್ನಾಟಕದ್ದು ಅನ್ನೋ ವಾದನ್ನ ಅವ್ರು ಒಪ್ತಿದ್ರು. ನನ್ ಪ್ರಕಾರ ಬೆಳಗಾವಿ ಬಗ್ಗೆ ಮಹರಾಷ್ಟ್ರದವ್ರಿಗೆ ಆಸಕ್ತಿ ಇದ್ದಿದ್ದಿಲ್ಲ ಅಂದ್ರೆ ಇದ್ದಿದ್ದಿಲ್ಲ. ಆದ್ರೆ ಬೆಳಗಾವಿಯಿಂದ ಆರಿಸಿ ಹೋದ ಶಾಸಕರು ಏನು ಇದ್ರು ಅವರೆಲ್ಲ ಕಾಂಗ್ರೆಸ್ಸೇತರರು. ಮೂರು ಜನ ಬರ್ತಿದ್ರು ಅವ್ರು. ಮೂರೂ ಜನ ಕಾಂಗ್ರೆಸ್ಸೇತರರು. ಬೆಳಗಾವೀ ಕರ್ನಾಟಕಕ್ಕ ಸೇರಿಸಬೇಕು ಅಂತಾ ಅವರಿಗಷ್ಟು ಆಸಕ್ತಿ ಇರಾದು. ಇವ್ರು ಏನೇನೋ ನಕಾಶೆಗಳನ್ನು ತಯಾರು ಮಾಡ್ಕಂಡು ಹೋಗಿರತಿದ್ರು. ಹೀರೆಯವರಿಗಾತು, ಮಹಾರಾಷ್ಟ್ರದವರಿಗಾತು ವಿಚಾರ ಇದ್ದದ್ದು, ನಾವು ಬೆಳಗಾವಿ ಮುಟ್ಟಬೇಕಾದ್ರೆ, ಘಟಪ್ರಭಾ, ಹುಕ್ಕೇರಿ ಇಂತಾವೆಲ್ಲ ದಾಟಿ ಬೆಳಗಾವಿ ಮುಟ್ತೀವಿ. ಇವ್ರು ಬೆಳಗಾವೀನಾ ಯಾಕ ಕೇಳ್ತಾರ ಅಂತಾ ಅವ್ರಿಗೆ. ಅವ್ರ ತಲಿಯಾಗ ಇದ್ದದ್ದಪ್ಪ ಅಂದ್ರೆ, ಮುಂಬೈ, ಮಹಾರಾಷ್ಟ್ರಕ್ಕೆ ರಾಜಧಾನಿ ಆಗ್ಬೇಕು ಅನ್ನಾದು. ಈ ಕಾಂಗ್ರೆಸ್ಸಿನೊಳಾಗ ಎಸ್‌.ಕೆ.ಪಾಟೀಲ್ರು ಮತ್ತು ಮುರಾರ್ಜಿ ದೇಸಾಯಿ ಪ್ರಬಲ್ರು. ಆಗ ಮುರಾರ್ಜಿ ದೇಸಾಯಿ, ಎಸ್‌.ಕೆ. ಪಾಟೀಲ್ರು ಮುಂಬೈನ ಮಹಾರಾಷ್ಟ್ರಕ್ಕ ಸೇರಿಸಬಾರ್ದು ಅನ್ನೋ ಸಂಚಿತ್ತು. ಅದಕ್ಕಾಗಿ ರಾಜ್ಯ ಪುನರ್ಘಟನಾ ಆಯೋಗ ಫಜಲ್‌ ಅಲಿ ಆಯೋಗದೊಳಗೆ ಮುಂಬೈಗೆ ಕೇಂದ್ರಾಡಳಿತ ಪ್ರದೇಶ ಅಂತ ಇಟ್ಟಿರ್ಬೇಕು. ಇಲ್ಲಾ ಸೆಪರೇಟ್‌ ಸಿಟೀಸ್ಟೇಟ್‌ ಮಾಡ್ಬೇಕದನ್ನಾ ಅಂತ ಹೇಳ್ತಿದ್ರು. ಸಿಟೀಸ್ಟೇಟ್‌ ಅನ್ನಾದ್ಕಿಂತ ಕೇಂದ್ರಾಡಳಿತ ಪ್ರದೇಶ ಮಾಡ್ಬೇಕು ಅನ್ನಾ ವಿಚಾರಾನಾ ಹೆಚ್ಚಿತ್ತು. ಗೋವಾ, ಪಾಂಡಿಚೇರಿ ಇದ್ವಲ್ಲ ಆ ರೀತಿ. ಹಿಂದಿನಿಂದ ಇವೂ ಸ್ಟೇಟ್‌ ಆದ್ವು ಬಿಡ್ರಿ. ಮುಂಬೈ ಸಹಜವಾಗಿ ಮಹಾರಾಷ್ಟ್ರದ ಹೃದಯ ಭಾಗದೊಳಗೆ ಅದಾ. ಅದಕ್ಕ ಅದು ರಾಜಧಾನಿ ಆಗ್ಲಿ ಅಂತಾ ನಾನ್‌ ಹೇಳ್ತಿದ್ದೆ. ನಮ್ಮ ಕರ್ನಾಟಕದ ನಾಯಕರು ಏನಿದ್ರು, ಕಾಂಗ್ರೆಸ್ಸಿನವರು ಇಡೀಯಾಗೇ ಮುರಾರ್ಜಿ ದೇಸಾಯಿಯವ್ರನ್ನ ಅವಲಂಬಿತರಾಗಿದ್ರು. ಭಾಳಾ ಅಂದ್ರೇ… ನನಗೆ ನಾಚ್ಕೇ ಬರೋವಷ್ಟು ನಿಷ್ಠೇ ವ್ಯಕ್ತಪಡಿಸ್ತಿದ್ರು ಬಿಡ್ರೀ. ರಾಷ್ಟ್ರ ಪುನರ್ರಚನಾ ಆಯೋಗದ ವರದಿ ಚರ್ಚೆಗೆ ಬಂದಾಗ ನಾನು ಹೇಳ್ದೆ. ‘ಬೆಳಗಾವಿ ವಿಷಯಕ್ಕೆ ಬಂದ್ರೆ ಮಹಾರಾಷ್ಟ್ರದವ್ರಿಗೇನೂ ಹಕ್ಕಿಲ್ಲ. ಮೊದಲಿನಿಂದ ಅದನ್ನ ಎಲ್ಲಾರೂ ಒಪ್ಕೋತಾ ಬಂದಾರ. ಬೆಳಗಾವಿಯಲ್ಲಿ ಕಾಂಗ್ರೆಸ್‌ ಅಧೀವೇಶನ ಆಗ್ಬೇಕಾದ್ರಾ ಕರ್ನಾಟಕದವರಾ ಮಾಡಿದ್ದು ಅದು. ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು, ಆ ಅಧಿವೇಶನದೊಳಾಗ ಹಾಡಿದ್ದಂತ ಹಾಡು ಅದು. ಇಲ್ಲೀತನಕ ಆಗಿತ್ತು. ಮಹಾರಾಷ್ಟ್ರದ ದೊಡ್ಡ ದೊಡ್ಡ ನಾಯಕರೆಲ್ಲ ಕೇಳ್ಕರ್ ನಂಥವ್ರು ಬೆಳಗಾವಿ ಕರ್ನಾಟಕದ ಪ್ರದೇಶ ಅಂತಿದ್ರು. ಆ ಪ್ರಶ್ನೆ ಮುಗಿದು ಹೋದ ಪ್ರಶ್ನೆ ಆಗಿತ್ತು.’

ಮುಂಬೈ ವಿಷ್ಯದೊಳಗೆ ಹೇಳ್ಬೇಕಪಾ ಅಂದ್ರ, ಮುಂಬೈ ಮಹಾರಾಷ್ಟ್ರದ ರಾಜಧಾನಿ ಆಗ್ಲೇಬೇಕು. ಅದರ ಮ್ಯಾಲೆ ನಾವು ಕರ್ನಾಟಕದವ್ರು. ಗುಜರಾತಿಯವ್ರು ಅದನ್ನ ಬೆಳಿಸ್ಲಿಕ್ಕೆ ನಮ್ದೂ ಪಾಲೈತಿ ಅಂತಿಳ್ಕೊಂಡ್ರಪ್ಪಾ ಅಂತಂದ್ರೆ ಆ ಮಾತು ಬಿಟ್ಬಿಡ್ರೀ ಅಂತಿದ್ದೆ. ನಮ್ಮ ಕರ್ನಾಟಕದಿಂದ ಹೋದ ಎಂ. ಎಲ್ಲೆಗಳು, ಪ್ರತಿಯೊಬ್ರೂ ಎದ್ದು ನಿಂತು ಮಾತಾಡೋರಾ ಮಾತಾಡೋರು. ಬೆಳಗಾವಿ ವಿಷಯ ಮಾತಾಡ್ತಿದ್ದಿಲ್ಲ, ಇವ್ರು ಹೇಳ್ತಿದ್ದದ್ದು. ಅಂದ್ರಾ ಮುಂಬೈ ಮಹಾರಾಷ್ಟ್ರಕ್ಕ ಸೇರಬಾರ್ದು ಅಂತನ್ನೋದು. ಮುಂಬೈ ಮಹಾರಾಷ್ಟ್ರಕ್ಕ ಸೇರ್ಬೇಕು ಅಂತಾ ಹೇಳೋನು ನಾನು ಒಬ್ಬಾಂವ ಆಗಿದ್ದೆ. ಹೀಗಾಗಿ ನಾನಂದ್ರ ಸ್ಪಲ್ಪ ಅಭಿಮಾನದ ಹೀರೆ ಅವ್ರಿಗೆ. ನಾನು ಭಾಷಣ ಮಾಡಿ ಹೊರಾಗ ಬಂದಾಗ ಅನಾಮತ್ತಾಗಿ ನನ್ನನ್ನ ಎತ್ತಿಕೊಂಡ, ಹೀರೆಯವ್ರು. ಭಾಳಾ ಚಲೋ ಮಾತಾಡ್ತೀ ನೀನು ಅಂತಂದು.

ಆ ಚರ್ಚೆ ಮಾಡೋ ಕಾಲಕ್ಕ ಹೀರೆಯವ್ರು ಪೀಸೆಂಟ್ಸ್‌ ಅಂಡ್‌ ವರ್ಕರ್ಸ್‌ ವಿಷಯದೊಳಾಗ ಹೆಚ್ಚು ಸಹಾನೂಭೂತಿ ಇದ್ರು. ಭೂಮಿ ಉಳುವವನ್ದೇ ಒಡೆತನ ಆಗ್ಬೇಕು ಅನ್ನೋದು ಅವ್ರುದ್ದು. ಅದಕ್ಕಾಂತಾನೇ ಒಂದು ಲೆಜಿಸ್ಲೇಶನ್ನೂ ತಂದಿದ್ರು. ಮುರಾರ್ಜಿ ದೇಸಾಯಿಯವ್ರು ಅದಕ್ಕ ವಿರೋಧ ಇದ್ರು. ಆದ್ರ ಮಹಾರಾಷ್ಟ್ರದ ಪ್ರತಿನಿಧಿಗಳೇನಿದ್ರು ಅವ್ರು ಸ್ವಲ್ಪ ಪ್ರಗತಿಶೀಲರಿದ್ರು. ಹೀಗಾಗಿ ಅವಾಗ ಹೀರೆಯವರು ಹೇಳಿದ್ರು. ಪೂಜಾರ್ ನಿಮಗೆ ಗೊತ್ತಿರಲಿಕ್ಕಿಲ್ಲ, ನಿಮ್ಮ ಧಾರವಾಡದೊಳಗೆ ಎರಡು ಜಾಗೀರ್‌ ಅದಾವ, ನನ್ನ ಕ್ಷೇತ್ರದೊಳಾಗ ಒಬ್ಬಾ ಜಾಗೀರ್‌ದಾರ ಅದಾನ. ನನ್ನ ವಿರುದ್ಧ ಹುರಿಯಾಳ್‌ ಆಗಿ ನಿಂತಿದ್ದ ಅಂವ, ಸರ್ದಾರ್‌ ವಿಂಚೂರ್‌ಕರ್‌ ಅಂತಂದು. ಅವನ್ದಾ ಒಂದು ದೊಡ್ಡ ಜಾಗೀರು ಇತ್ತು. ಚುನಾವಣೆಯೊಳಗ. ಅಂವಾ.ಇಂವಾ ಏನು ನನ್ನ ಕ್ಷೇತ್ರದ ಹಜಾಮ ಅಂದಿದ್ದ.

ಯಾರಿಗೆ?

ಹೀರೆಯವ್ರಿಗೆ ಬಾರ್ಬರ್ಸ್‌ ಅವ್ರು. ನಾಸಿಕ ಕ್ಷೇತ್ರದೊಳಗ ಹಜಾಮತಿ ಮಾಡೋ ಹಜಾಮ ನನ್ನ ವಿರುದ್ಧ ನಿಂತಾನ ಅಂತ ಛೇಡಿಸ್ತಿದ್ದನಂತ. ಆಮೇಲೆ ಇವ್ರು ಆರಿಸಿ ಬಂದು, ರೆವಿನ್ಯೂ ಮಿನಿಸ್ಟ್ರು ಆದ್ರಲ್ಲ, ಅವಾಗ ಇವರು ಕೈಕೊಂಡಿದ್ದು ಮೊದಲನೇ ಕ್ರಮ ಏನಪ್ಪಾ ಅಂತಂದ್ರ ಮುಂಬೈ ರಾಜ್ಯದೊಳಾಗೇನು ಆಗ ಜಾಗೀರು ಇದ್ವು, ಆ ಜಾಗೀರುಗಳನ್ನು ಒಟ್ಟಾರೆ ಸರ್ಕಾರ ವಶಪಡಿಸಿಕೊಳ್ಳೋದು. ಲೆಜಿಸ್ಲೇಶನ್‌ ಇಲ್ಲೇ ಇಲ್ಲ. ಬರೇ ಒಂದು ಅಡ್ಮೀನಿಸ್ಟ್ರೇಶನ್ ರೂಲ್ಸ್‌ ಮಾಡಿದ್ರು. ರೂಲ್ಸ್‌ ಮಾಡಿ ರಿಸ್ಯೂಮ್‌ ಮಾಡ್ಕಂಡ್‌ ಬಿಟ್ರು ಗೌರ್ಮೆಂಟಿಗೆ.

ಬರೀ ಒಂದು ಕಾನೂನು ಮೂಲಕ ಮುಟ್ಟುಗೋಲು ಹಾಕ್ಕೊಂಡ್ರಾ ಶಾಸನವಿಲ್ಲದೇ?

ಹೌದು ಮುಟ್ಟುಗೋಲಾ ಅದು. ಇದಕ್ಕ ಲೆಜೆಸ್ಲೇಶನ್‌ ಬೇಕಾಗಿರ್ಲಿಲ್ಲ. ಜಾಗಿರ್‌ ಅಂತಂದ್ರ ಮಹಾರಾಜರ ದರ್ಬಾರ್‌ದೊಳಗೆ ಡ್ರೆಸ್‌ ಹಾಕ್ಕೊಂಡು ಹೋಗಿ ಸರದಾರರಾಗಿ ನಿಂತಿರ್ತಿದ್ದ ಸೈನಿಕರು. ಅವರಿಗೆ ಕೊಟ್ಟ ಉಂಬಳಿ ಅದು. ಹಾಗಾಗಿ ರಾಜಕೀಯವಾಗಿ ನಾವದನ್ನ ತಗೋಳ್ಲಿಕ್ಕೆ ಬಂದ್‌ ಬಿಡ್ತದ. ಲಾ ಮಾಡಾದಾ ಬೇಕಾಗಿಲ್ಲ ಅಂತಂದು ಅಡ್ಮಿನಿಸ್ಟ್ರೇಟಿವ್‌ ಆರ್ಡರ್‌ ಮೂಲಕಾನಾ ತಗಂಡ್ರು ಹೀರೆಯವರು. ನನಗ ನಿಮ್ಮ ತಾಲೂಕಿನೊಳಗೆ ಎರಡು ಜಾಗೀರವ ಒಂದು ಹೆಬ್ಬಳ್ಳಿ, ಇನ್ನೊಂದು ಗಜೇಂದ್ರಘಡ ಅಂತಂದು, ಗೊತ್ತಿತ್ತು ಅವರಿಗೆ. ಅವ್ರಿಗೆ ಆ ವಿಂಚೂರ್‌ಕರ್‌ನ ಆಸ್ತಿ ಮುಟ್ಟುಗೋಲು ಹಾಕ್ಕೊಳ್ಳೋದು ಬೇಕಾಗಿತ್ತು. ಆ ಒಂದ್‌ ಹಾಕ್ಕೋಬೇಕ್‌ ಅಂದ್ರೆ ಸಾಮಾನ್ಯವಾಗಿ ಎಲ್ಲಕ್ಕೂ ಅನ್ವಯ ಆಗ್ತದಲ್ಲ ಅಂತಂದ್ರು, ನನ್ ಕೂಡ ಮಾತಾಡಿ ಧಾರವಾಡದ ಬಗ್ಗೆ ಹೇಳಿದ್ರು. ಅವ್ರು ಅಡ್ಮಿನಿಸ್ಟ್ರೇಟಿವ್‌ ಆರ್ಡರ್ಸ್‌ ಮಾಡಿದ್ರು ಬಿಡ್ರೀ, ಆರ್ಡರ್ಸ್‌ ಇಲ್ಲೆಲ್ಲಾ ಬಂದ್ದು. ಆಮ್ಯಾಲೆ ಆ ಭೂ ಹಂಚಿಕೆ ಬಗ್ಗೆ ಏನೂ ಕಾನೂನು ಇರ್ಲಿಲ್ಲ.

ಅವಾಗೆಲ್ಲ ಭೂಮಿ ಸರ್ಕಾರದ್ದು ಅಂತಾ ರೆಕಾರ್ಡ್‌ ಅಷ್ಟಾ ಆತು. ಜಾಗೀರ್‌ದಾರ್ರು ಭೂಮಿನ ತಮ್ಮ ಅಧೀನದಾಗ ಇಟ್ಕಂಡು ರೈತರಿಂದ ಉಳುಮೆ ಮಾಡ್ಸಿ ಅವರಿಂದ ಗೇಣಿ, ಅದೂ ಇದೂ ವಸೂಲಿ ಮಾಡ್ತಿದ್ರು. ತಿರುಗಿ ನಾನು ಇಲ್ಲಿಗೆ ಬಂದ ನಂತರ ರೈತ ಸಂಘಟನೆ ಮತ್ತು ಭೂ ರಹಿತ ರೈತ ಕಾರ್ಮಿಕರ ಸಂಘಟನೆ ಮಾಡಿ ಚಳವಳಿ ಮಾಡಿದ್ದು. ಅಷ್ಟೊತ್ತಿಗೆ ರಾಜ್ಯ ಪುನರ್ರಚನೆ ಆಗಿತ್ತು. ಇಲ್ಲಿಯವ್ರಿಗೆ ಅಡ್ಮಿನಿಸ್ಟ್ರೇಟಿವ್‌ ಆರ್ಡರನ ಕಲ್ಪನೇನಾ ಇದ್ದಿದ್ದಿಲ್ಲ.

ನಿಜಲಿಂಗಪ್ಪನವರು ಧಾರವಾಡಕ್ಕ ಬಂದಾಗ ರೈತರನ್ನೆಲ್ಲ ಕರ್ಕೊಂಡು ಬಂದು ಭಿನ್ನವತ್ತಳೆ ಒಪ್ಪಿಸಿದ್ವಿ. ಅವಾಗ ನಿಜಲಿಂಗಪ್ಪನವ್ರು ಏನ್‌ ಪೂಜಾರ್‌ ಇದ್ನೆಲ್ಲ ಏನ್‌ ಹೇಳ್ತೀರಿ ನಾನೂ ಹೊಸಬ. ಆರ್‌ ತಿಂಗ್ಳು ಆಗಿಲ್ಲ ನಾನು ಮುಖ್ಯಮಂತ್ರಿಯಾಗಿ. ಸ್ವಲ್ಪ ಸಮಯ ಬೇಕಾಗತ್ತ ಇದನ್ನೆಲ್ಲಾ ನೋಡ್ಲಿಕ್ಕೆ ಅಂದ್ರು. ನನಗೇನನ್ನಿಸ್ತೋ ಏನೋ… ನಾನಂದೆ : ‘ನಿಜಲಿಂಗಪ್ಪನವ್ರೇ, ನಿಮ್ಮ ಮಾತನ್ನ ನಾನು ನಂಬ್ತೀನಿ, ನಿಮಗ ಅವಕಾಶ ಕೊಡ್ತೀನಿ. ಆದ್ರೆ ನನಗ ನೀವೂ ಒಂದು ವಚನಾ ಕೊಡ್ರೀ. ಆರ್‌ ತಿಂಗಳವರೆಗೂ ನಾನು ಈ ರಾಜ್ಯದ ಮುಖ್ಯಮಂತ್ರಿ ಆಗಿ ಇರ್ತೀನಿ ಅಂತಾ’

ಅಂದಾ ಬಿಟ್ರೀ …?

ಅಂದಾ ಬಿಟ್ಟೆ. ಅದು ಏನ್‌ ಕರ್ಮಾನೋ ಏನೋ ಅದಕ್ಕವರು ಹ್ಞೂಂ ಅನ್ಲಿಲ್ಲ, ಹ್ಞಾಂ ಅನಲಿಲ್ಲ, ಹೋಗಿಬಿಟ್ರು. ನಾವು ಕಡೀಗೆ ಚಳವಳಿ ಮಾಡೋ ಸಂದರ್ಭ ಬಂತು. ಸತ್ಯಾಗ್ರಹ ಹೂಡಿದ್ವಿ ನಮ್ಮ ಸತ್ಯಾಗ್ರಹದ ತಂತ್ರ ಅಂದ್ರೆ ದಿನಾಲೂ ಹೆಬ್ಬಳ್ಳಿಯಿಂದ ಹತ್‌ ಜನ್ರದ್ದೋ, ಹದಿನೈದು ಜನ್ರದ್ದೋ ಒಂದು ಬ್ಯಾಚ್‌. ಮೊದಲು ಊರೊಳಗೆ ಒಂದು ಮೆರವಣಿಗೆ ಮಾಡೋದು, ಆ ಸತ್ಯಾಗ್ರಹಿಗಳನ್ನ ಊರ ಅಗಸೀಯೊಳಗ ಬೀಳ್ಕೊಡೋದು. ಅವರು ಧಾರವಾಡದ ಜಿಲ್ಲಾಧಿಕಾರಿಗಳ ಕಛೇರಿ ಎದುರಿಗೆ ಪಿಕೆಟಿಂಗ್‌ ಮಾಡೋದು.

ಭೂಮಾಲಿಕರ ಜಹಗೀರು ಜಮೀನು ಕೊಡ್ರೀ ಅಂತಲ್ಲ. ಯಾಕಂದ್ರ ಭೂಮಾಲಕರಿಂದ ಸರಕಾರ ಜಮೀನು ಕಸ್ಕೊಂಡಿತ್ತು ಅಗ್ಲೇ?

ಕಸ್ಕೊಂಡಿತ್ತು. ಹೌದು. ಅಷ್ಟೊತ್ತಿಗಾಗ್ಲೆ ಬಾಂಬೆ ಟಿನೆನ್ಸಿ ಅಂಡ್‌ ಅಗ್ರಿಕಲ್ಚರ್‌ ಆಕ್ಟ್‌ ಅಂತ ಇತ್ತು. ಅದರ ಪ್ರಕಾರ ಹೀರೆಯವ್ರು ಅಲ್ಲಿ ಸಿಲಿಂಗ್‌ ಫಾರ್ಟಿ ಎಯ್ಟ್‌ ಎಕರ್ಸ್‌ ಅಂತಂದು ಫಿಕ್ಸ್‌ ಮಾಡಿದ್ರು. ಅದನ್ನ ಇಟ್ಕಂಡು ಫಾರ್ಟಿ ಎಯ್ಟ್‌ ಎಕರ್ಸ್‌ ವರೀಗೂ ಸೀಲಿಂಗು ರೈತರಿಗೆ ಕೊಡ್ರೀ. ಹೆಚ್ಚುವರಿ ಏನ್‌ ಉಳೀತದೆ. ಅದನ್ನ ಲ್ಯಾಂಡ್‌ಲೆಸ್‌ ಲೇಬರ್ಸಿಗೆ ಹಂಚ್‌ರೀ. ಈ ಬೇಡಿಕೆ ಇಟ್ಕೊಂಡು ನಮ್ಮ ಹೋರಾಟ ಪ್ರಾರಂಭ ಆತು. ಇಲ್ಲಿ ಒಂದು ಹತ್‌ – ಹದಿನೈದು ದಿವ್ಸ ನಡೀತು. ಕಡೀಕ ಹತ್ತನೇ ತಾರೀಖಿನ ದಿವ್ಸ ಶುಕ್ರವಾರ ಬಂತು ಕಾಣಿಸ್ತದ. ಮುಂದ ಶನಿವಾರ ಮತ್ತ ಆದಿತ್ಯವಾರ ಎರಡು ದಿವ್ಸ ಸೂಟಿ ಇತ್ತು. ಸತ್ಯಾಗ್ರಹಿಗಳನ್ನು ಬೀಳ್ಕೊಡೋ ಮುಂದೆ ಹೇಳ್ದೆ. ಇವತ್ತು ನಿಮ್ಮ ಬ್ಯಾಚ್‌ ಏನ್‌ ಹೋಗ್ತದೆ. ಬಹುಶಃ ಇದಕ್ಕಾ ಕೊನೆ ಆಗ್ತದೆ. ಮುಂದ ಸೋಮವಾರಕ್ಕ ನಾವೇನು ಮಾಡ್ಲಿಕ್ಕಿಲ್ಲ ಅಂದನ್ನಿಸ್ತು. ಅದಾ ಹೊತ್ನಾಗ ನಿಜಲಿಂಗಪ್ಪನವರ ಸರಕಾರ ಉರುಳಿ ಹೋತು.

ಎರಡು ದಿನದೊಳಗಾನಾ?

ಹೌದು. ಅದನ್ನ ನೋಡಾ ನಾನಂದಿದ್ದು. ಮುಂದ ನಡೀಲಿಕ್ಕಿಲ್ಲ ಅಂತ ಜತ್ತಿಯವ್ರು ಮುಖ್ಯಮಂತ್ರಿ ಆದ್ರು. ಜತ್ತಿಯವ್ರು ತಾವು ಚಾರ್ಜ್‌ತಗಂಡ್‌ ಕೂಡ್ಲೆ. ಲಾ ಅಂಡ್‌ ಆರ್ಡರ್‌ ಸಿಚ್ಯುವೇಶನ್‌ ಡಿಸ್ಕಸ್‌ ಮಾಡೋವಾಗ, ಇಡೀ ರಾಜ್ಯದೊಳಗ ಒಂದು ಹೋರಾಟ ನಡದದ ಅಂದ್ರ ಹೆಬ್ಬಳ್ಳೀದು ಅಂತಂದು ಯಾರದು ನಡಸಾದು. ಎಂ.ಬಿ.ಪೂಜಾರ್‌ ಅಂತಂದು. ಏ ಪೂಜಾರ್ ಅಂತಂದ್ರೆ ನಮ್ಮ ಹುಡುಗಾ ಅಂವಾ ಅಂತಂದು ಡಿ.ಸಿ.ಗೆ ಪೋನ್‌ ಮಾಡಿದ್ರು. ಪೋನ್‌ ಮಾಡಿ ಆ ಪೂಜಾರ್‌ನ ಕರೆಸ್ರಿ ಅಂದ್ರು. ನಾನ್‌ ಹೆಬ್ಬಳ್ಳಿಯೊಳಗ ಇದ್ದೆ. ಸತ್ಯಾಗ್ರಹಿಗಳ ಶಿಬಿರಾನಾ ಮಾಡತಿದ್ವಿ. ಅಲ್ಲಿಂದ ಪೋಲೀಸ್‌ ಅಧಿಕಾರಿಗಳು ಬಂದ್ರು. ಬಂದು ಡಿ.ಸಿ. ಯವ್ರು ನಿಮ್ಮನ್ನು ಕರೀತಾರ ಅಂದ್ರು. ಯಾಕ ಅಂತಂದೆ. ಇಲ್ಲಾ ಚೀಫ್‌ ಮಿನಿಸ್ಟ್ರು ಏನಾ ಹೇಳ್ಯಾರಂತೆ ಅಂದ್ರು. ನಾನು ಹೋಬ್ಬೇಕು ಅಂತಂದ್ರೆ ಜನಾ ಬಿಡ್ಲಿಲ್ಲ. ಸುಮಾರು ನಾಕೈದು ಸಾವಿರ ಜನ ಕೂಡಿಬಿಟ್ತು. ಏ. ವಕೀಲರನ್ನ ಅರೆಸ್ಟ್‌ ಮಾಡಿ ಒಯ್ಯಾಕ ಬಂದ್‌ ಬಿಟ್ಟಾರ ಅಂತಂದು. ಬಿಡಾಕಾ ತಯಾರಾಗ್ಲಿಲ್ಲ. ಕೊನೀಗೆ ಎಸ್ಪೀನಾ ಬಂದ್ರು. ಬಂದು. ಬಂದು ‘ಇಲ್ಲಾ ಆ ಮಾತಿಲ್ಲ. ಯಾವ್ದೋ ಒಂದು ವಿಷಯಕ್ಕ ಕರಿತಾರ. ನಿಮ್ದು ಬಗೀಹರೀಯೋ ಲಕ್ಷಣ ಕಾಣಿಸ್ತದ’ ಅಂದ್ರು. ಅಮ್ಯಾಕ ಬಂದೆ. ಬಂದೆ, ಡಿ.ಸಿ. ಜತ್ತಿಯವ್ರಿಗೆ ಪೋನ್‌ ಹಚ್ಚಿಕೊಟ್ರು ‘ಯಾಕ್ಪಾ ಸ್ವಾಮೀ ಏನೇನೋ ನಡ್ಸೀದಂತಲ್ಲೋ ಹೆಬ್ಬಳ್ಳಿಯೊಳಗಾ’ ಅಂತಾ. ನಾನ್‌ ಹೇಳ್ದೆ ಇದೆಲ್ಲಾ ಪ್ರಸಕ್ತೀನಾ. ಬರೇ ಅಡ್ಮಿನಿಸ್ಟ್ರೇಟಿವ್‌ ಎಫರ್ಟ್‌ ಮ್ಯಾಲಾ ಅವರೊಂದು ಆರ್ಡರ್‌ ಮಾಡ್ಯಾರ. ಆ ಭೂಮಿ ಹಂಚಿಕೆ ಬಗ್ಗೆ ಒಂದ್‌ ಆರ್ಡರ್‌ ಇಲ್ಲ. ಇವತ್ತಿಗೂ ರೆಂಟ್‌ ರಿಕವರಿ ಮಾಡ್ಕೋತಾ ಇದ್ದಾರವ್ರು. ಯಾರ್‌ ಭೂಮಿ ಸಾಗ್‌ ಮಾಡ್ಬೇಕೋ ಅವ್ರು ಮಾಡ್ಕೋತಾ ಇದ್ದಾರಾ. ಆದ್ರ ಭೂಮಿ ಹಂಚಿಕೆ ಬಗ್ಗೆ ಏನೂ ಇಲ್ಲ ಅಂದೆ.

ಮತ್ತೇನ್ ಮಾಡ್ಬೇಕಂತಿದ್ದೀ ಅಂದ್ರು?

ಇಲ್ಲಾ ಬಾಂಬೆ ಟೆನೆನ್ಸಿ ಅಂಡ್‌ ಅಗ್ರಿಕಲ್ಚರ್‌ ಆಕ್ಟ್‌ ಅಂತಾ ಅದಾ. ಅದ್ರ ಪ್ರಕಾರ ಫಾರ್ಟಿಎಯ್ಟ್ ಎಕರ್ಸ್‌ ಸೀಲಿಂಗ್‌ ಅದಾ. ಫಾರ್ಟಿ ಎಯ್ಟ್‌ ಎಕರ್ಸ್‌ ಸೀಲಿಂಗ್‌ ಹಾಕಿ ಉಳಿದ ಹೆಚ್ಚುವರಿ ಲ್ಯಾಂಡ್‌ ಏನದಾ ಅದನ್ನ ಭೂರಹಿತ ಕಾರ್ಮಿಕರಿಗೆ ಹಂಚೋಣ ಅಂತಂದೆ. ಹನ್ನೊಂದು ಸಾವಿರ ಎಕ್ರೆ ಅದು. ಇದನ್ನ ಹ್ಯಾಂಗ ಮಾಡ್ಲಿಕ್ಕೆ ಬರ್ತದೋ…ಹ್ಯಾಂಗ ಮಾಡಾದ ಇದನ್ನ ಅಂದ್ರು?

ನಾಹೇಳ್ದೆ, ಅಲ್ರೀ ‘ಸ್ಟ್ಯಾಂಡಿಂಗ್‌ ಆರ್ಡರ್ಸ್‌ ಅದಾವ, ಗೌರ್ಮೆಂಟ್‌ ಲ್ಯಾಂಡ್‌ ರೂಲ್ಸ್‌ ಪ್ರಕಾರ ಅದನ್ನಾ ಅಪ್ಲೇ ಮಾಡಿ ಮಾಡಾಕ ಬರ್ತದೆ’ ಅಂತಂದೆ.

‘ಹಂಗಾರ ಕೇಳಿ ಮಾಡ್ತೀನಿ’ ಅಂತಂದು ‘ಮಾಡಾನಂತೆ ನಿಮ್ಮ ಸತ್ಯಾಗ್ರಹ ನಿಲ್ಲಿಸಿ ಬಿಡ್ರೆಪ್ಪಾ’… ಅಂತಾ ಹೇಳಿದ್ರು. ಹೇಳಿದ ನಂತ್ರ, ಸೋಮವಾರ ದಿವ್ಸ ಸತ್ಯಾಗ್ರಹ ಮಾಡ್ಲೇಇಲ್ಲ. ಹಿಂಗ ಅದನ್ನ ಇಂಪ್ಲೀಮೆಂಟ್‌ ಮಾಡಿದ್ರು. ಫಾರ್ಟಿ ಎಯ್ಟ್‌ ಎಕರ್ಸ್‌, ಆಕ್ಚುವಲ್‌ ಕಲ್ಟಿವೇಟರ್ಸ್‌ ಯಾರದಾರಾ ಅವ್ರಿಗೆ. ಮಾಲ್ಕಿ ಜಮೀನಾ ಯಾರಿಗೂ ಇದ್ದಿದ್ದಿಲ್ಲ.

ನಲವತ್ತೆಂಟು ಎಕ್ರೇ, ಅವರಿಗೆ ಕೊಟ್ಟು ಸರಪ್ಲಸ್‌ ಲ್ಯಾಂಡನ್ನು ಲ್ಯಾಂಡ್‌ ಲೆಸ್‌, ಲೇಬರ್ಸ್‌ಗೆ ಹಂಚಿದ್ವಿ.

ನೀವು ಹಿಂಗ ಸತ್ಯಾಗ್ರಹ ಮಾಡೋ ಹೊತ್ತಿಗಾಗ್ಲೀ, ಭೂ ಹಂಚಿಕೆ ಹೊತ್ತಿಗಾಗ್ಲೀ ಭೂಮಾಲಕರಿಂದ ಪ್ರತಿರೋಧಗಳೇನಾದ್ರೂ ಬಂದ್ವಾ?

ಬಂದ್ವು… ಆದ್ರಾ ಅಷ್ಟು ಪ್ರಬಲ್ರು ಇದ್ದಿದ್ದಿಲ್ಲ. ಊರ ಜನಾ ಎಲ್ಲಾ ನಮ್ಮ ಕಡೀಗಾ ಇದ್ದಿದ್ರಿಂದ ಅವರಿಗೇನೂ ಮಾಡ್ಲಿಕ್‌ ಆಗ್ಗಿಲ್ಲ.

ರಾಜಕೀಯವಾಗಿ ಅವರು ಪ್ರಬಲರಾಗಿರ್ಲಿಲ್ಲ ಅನ್ಸುತ್ತೆ?

ರಾಜಕೀಯವಾಗಿ ಏನೂ ಪ್ರಬಲ ಇರ್ಲಿಲ್ರೀ ಅವ್ರು, ಬ್ರಾಹ್ಮಣ್ರು ಅವ್ರು, ಊರಿನ ಜನ್ರೀಗೂ ಅವ್ರೀಗೂ ಸರೀನೂ ಬರ್ತಿದ್ದಿಲ್ಲ.

ಆದ್ರೆ ಅಷ್ಟೊಂದು ಜಮೀನಿನ ಗೇಣಿ ಆದಾಯ, ಸಂಪತ್ತು ಅವರತ್ರ ಇತ್ತಲ್ಲ. ಅದರ ಬಲದಿಂದ…?

ಇಲ್ಲ… ಇದ್ದಿದ್ದಿಲ್ಲ, ಇದ್ದಿದ್ದಿಲ್ಲ. ಸುಮಾರು ಆರೆಂಟು ತಿಂಗಳು ಅಲ್ಲಿದ್ದು, ಸಂಘಟನೆ ಮಾಡಬೇಕಾಗಿ ಬಂದಾಗ್ಲೂ ಅಷ್ಟೇನು ಅವರಿಂದ ಪ್ರಬಲ ವಿರೋಧ ಏನು ಬರ್ಲಿಲ್ಲ. ಯಾವನಾ ಒಬ್ಬಾಂವ ಪೂಜಾರಿ ಅಂತಾ ಬಂದಾನಂತಾ, ಅಂವಾ ನಮ್ಮ ಜಮೀನು ಕಸ್ಕೋತಾನಂತ ಅಂತ ಹಿಂಗ ಸಾಮಾನ್ಯವಾಗಿ ಕೂಡಿದ ಜನ್ರ ನಡುವೆ ಏನಾ ಮಾತಾಡ್ತಿದ್ರಂತ ಕಾಣಿಸ್ತದ. ಆದ್ರ ಬಹಿರಂಗವಾಗಿ ಏನೂ ಮಾಡ್ಲಿಲ್ಲ…ಸಾಧಾರಣ ಮುನ್ನೂರ ಇಪ್ಪತ್ತು ಜನ ರೈತ ಕುಟುಂಬಗಳಿಗೆ ನಲವತ್ತೆಂಟು ಎಕ್ರೆಗಳಂತೆ ಅದು, ಎರಡು ಸಾವಿರದ ಎರಡು ನೂರು ಎಕ್ರೆ ಸರ್‌ಪ್ಲಸ್‌ ಲ್ಯಾಂಡ್‌ ಉಳೀತು.

ಒಟ್ಟು ಹನ್ನೊಂದು ಸಾವಿರ ಎಕ್ರೆ ಅಲ್ವಾ?

ಹೌದು, ಹನ್ನೊಂದು ಸಾವಿರ ಎಕ್ರೆ. ಏಳು ಏಳೂವರಿ ಸಾವಿರ ಎಕ್ರೆ ಭೂಮಿ ರೈತರಿಗೆ ಹೋಗಿ, ಸರ್‌ಪ್ಲಸ್‌ ಭೂಮಿ ಭೂರಹಿತ ಕಾರ್ಮಿಕರಿಗೆ ಹಂಚಿದ್ವಿ. ಅಲ್ಲಿಗೂ ಕೆಲವು ಕುಟುಂಬಗಳು ಉಳಿದ್ವು. ಎಲ್ಲರಿಗೂ ಆಗ್ಗಿಲ್ಲ ಅದು. ಅವ್ರು ಒಂದು ನೂರಾ ಹನ್ನೆರಡು ಕುಟುಂಬಗಳು. ಪ್ರತಿಯೊಬ್ಬರಿಗೂ ಹದಿನಾರು ಎಕ್ರೆಯಂತೆ. ಹದಿನಾರು ಎಕ್ರೆ ಯಾಕ ಮಾಡಿದ್ವಪ್ಪಾ

ಅಂದ್ರೆ ಎರಡೆತ್ತಿನ ಕಮ್ತಕ್ಕೆ ಆಗ್ಲಿ ಅಂತಾ ಹದಿನಾರು ಎಕ್ರೆ ಗೊತ್ತು ಪಡಿಸಿದ್ವಿ ಅವ್ರಿಗೆ. ಹೀಗಾಗಿ ಇನ್ನೂ ಉಳ್ಕೊಂಡು ಬಿಟ್ರು ಜನ. ಇದು ಸಾಧಾರಣವಾಗಿ, ನನಗನ್ನಿಸ್ತದೆ ಸರಕಾರ ಯಾವುದಾದ್ರೂ ಭೂಮೀನಾ ಸರಿಯಾಗಿ ಹಂಚಿದೆಯಪ್ಪಾ ಅಂತಂದ್ರ ಹೆಬ್ಬಳ್ಳೀದಾ.

ಹೋರಾಟಕ್ಕೆ ಸಂದರ್ಭಕ್ಕೆ ಬೇರೆ ಯಾರಾದ್ರೂ ಸಮಾಜವಾದಿ ಮುಖಂಡರು ಬಂದಿದ್ರಾ?

ಯಾರಿದ್ರು, ಯಾರೂ ಇಲ್ಲ, ನಾನೂ ಮತ್ತ ಜಿ.ಟಿ. ಪದಕೀ ಅಂತಾ ವಕೀಲ್ರು. ಇಬ್ರಾ. ನಮಗ ಪ್ರಚಾರದ ಮಹತ್ವನಾ ಗೊತ್ತಿದ್ದಿಲ್ಲ. ನಮಗ ನಮ್ಮ ಕಾರ್ಯ ಮುಗಿದ್ರೆ ಸಾಕು ಅಂತಿದ್ವಿ. ಒಂದು ದಿವ್ಸನೂ ನಾವು ಪತ್ರಿಕೆಗೆ ಒಂದು ವರದಿ ಕಳಿಸ್ಲಿಲ್ಲ. ಪ್ರಚಾರದ ಬಗ್ಗೆ ನಮಗ ಎಷ್ಟೂ ಆಸಕ್ತಿ ಇರ್ತಿದ್ದಿಲ್ಲ.

ಕಾಗೋಡು ಚಳವಳಿಯಲ್ಲಿ ಗೇಣೇ ಪ್ರಶ್ನೆಯನ್ನು ಇಟ್ಕೊಂಡು ಒಂದು ರಾಜಕಾರಣ ಸೃಷ್ಟಿಸೋಕ್ಕೇ ಆತು. ಆದ್ರೆ ಹನ್ನೊಂದು ಸಾವಿರ ಎಕ್ರೆಗಳಷ್ಟು ದೊಡ್ಡ ಪ್ರಮಾಣದ ಭೂಮಿಯನ್ನ ರೈತ ಸಮುದಾಯಕ್ಕೆ ಹಂಚಿ, ಯಶಸ್ವಿ ಹೋರಾಟ ಮಾಡಿದ್ರೂ, ಮೂಲಕ ಭಾಗದಲ್ಲಿ ಒಂದು ಸಮಾಜವಾದಿ ರಾಜಕಾರಣ ಕಟ್ಟೋಕೆ ಆಗ್ಲಿಲ್ಲ, ಯಾಕೆ?

ಆಗ್ಲಿಲ್ಲ, ಯಾಕಂದ್ರೆ…ನಾವು ಯಾರ ಕಡೀಂದ್ಲೋ ಹಣ ಸಂಗ್ರಹಿಸಬೇಕು ಯಾರಿಗೋ ಕೊಡಬೇಕು ಅನ್ನೋರಲ್ಲ. ನಮ್ಮ ಕೀಸೇದಿಂದಾನಾ ಹಾಕಬೇಕು. ಅಡ್ಡಾಡಬೇಕು. ಇಡೀ ಹತ್ತೋ ಹನ್ನೆರಡು ದಿವ್ಸ ಈ ಹೆಬ್ಬಳ್ಳಿ ಹೋರಾಟ ನಡೀತು. ಅದಕ್ಕ ಒಟ್ಟು ಖರ್ಚಾಗಿದ್ದದ್ದು ಅಂದ್ರ ಎಂಬತ್ತು ರೂಪಾಯಿಗಳು ಮಾತ್ರ.

ಅದ್ಹೆಂಹ ಅಷ್ಟು ಕಡಿಮೀ ರೊಕ್ಕದಾಗ ಮಾಡಿದ್ರೀ?

ಏನ್‌ ಮಾಡ್ತಿದ್ವಿ ನಾವು, ಸತ್ಯಾಗ್ರಹ ಶಿಬಿರಕ್ಕ ಊರಿನಲ್ಲಿ ರೊಟ್ಟೀ ಭಿಕ್ಷೆ ಮಾಡಿಸ್ಬೇಕು. ನಮ್ಮ ಸ್ವಯಂ ಸೇವಕರಿಂದ. ತಗಂಡು ಬರ್ಬೇಕು. ಇಲ್ಲಿ ಶಿಬಿರದಲ್ಲಿ ಕೂತ್ಕೊಂಡು ಊಟ ಮಾಡ್ಬೇಕು. ಭಾಳಾ ನಾವು ಆವಾಗ, ಲಕ್ಸರೀ ಅಂತಂದ್ರೆ… ಮೆಣಸಿನ ಖಾರಕ್ಕ ಒಂದಿಷ್ಟು ಎಣ್ಣಿ ತರಿಸ್ಕೊಂತಿದ್ವಿ (ನಗು).

ಅದಾ ಲಗ್ಸುರಿ?

ಹ್ಞೂಂ (ನಗು) ಎಣ್ಣೀ ತರಿಸ್ಕೋತಿದ್ವೀ. ಚಾ…ಗೀ….ಏನೂ ಇರ್ಲಿಲ್ಲ. ನಂದು ಸ್ವಭಾವ ಏನಂದ್ರೆ ಒಂದು ನಯಾಪೈಸೆ ಯಾರಿಗೂ ಏನೂ ಕೇಳಿದವನಲ್ಲ. ರಾಜಕೀಯವಾಗಿ ಕಟ್ಟಬೇಕಂದ್ರೆ ಹಣ ಬೇಕಲ್ರೀ. ನಂದು ದೊಡ್ಡ ಡ್ರಾಬ್ಯಾಕ್‌ ಅಂದ್ರ ಹಣಾನಾ ಇಲ್ಲದ್ದು. ನಿಮಗ ಹೇಳ್ತೀನಿ ಹತ್ತೊಂಬತ್ತು ನೂರಾ ಐವತ್ತಾರರಲ್ಲಿ ಪಿ.ಎಸ್‌.ಪಿ.ಸ್ಪ್ಲಿಟ್‌ ಆತು. ಹೈದ್ರಾಬಾದ್‌ ಕನ್‌ವೆನ್‌ಶನ್‌ ಮೊದಲ್ನೇದು. ನಮ್ಮದೊಂದು ಬೇರೇನೇ ಸೋಷಲಿಸ್ಟ್‌ ಪಾರ್ಟಿ ಮಾಡಕೊಂಡ್ವೆಲ್ಲ. ಆ ಕನ್‌ವೆನ್‌ಶನ್‌ಗೆ ಬರಲಿಕ್ಕಂತ ಲೋಹಿಯಾ ಭಾಳಾ ಆಗ್ರಹ ಪಡಿಸಿದ್ರು. ಲೋಹಿಯಾ ಅವರಿಗೆ ಭಾಳಾ ಅಭಿಮಾನ ಏನಿತ್ತಂದ್ರೆ ಇಡೀ ಮುಂಬೈ ಅಸೆಂಬ್ಲಿಯೊಳಗ ಹನ್ನೆರಡು ಮಂದೀ ಏನಾ ಇದ್ವಿ. ಪಿ.ಎಸ್‌.ಪಿ. ಗುಂಪಿತ್ತು ಬಿಡ್ರೀ ಜೋಷಿಯವರು ಅವರೆಲ್ಲ ನಾಯಕರು ನಮಗ. ಗುಜರಾತಿಂದ ಒಂದ್‌ನಾಕಾರು ಜನ, ಕರ್ನಾಟಕದಿಂದ ಹೋದವನು ನಾನಾ. ಅವಾಗ ಪಿ.ಎಸ್‌.ಪಿ. ಆಗಿ ಸ್ಪ್ಲಿಟ್‌ ಆದಾಗ, ಲೋಹಿಯಾವಾದಿ ಆಗಿ ಹೊರಗ ಬಂದವನು ಮುಂಬೈ ಅಸೆಂಬ್ಲಿಯೊಳಾಗ ನಾನಾ. ಮಧುಲಿಮಯೆ ಸೆಕ್ರಟರಿ ಏನಾ ಇದ್ರು. ಇವ್ರು ಛೇರ್ಮನ್ನರು.

ಯಾಕ ಹೊರಾಗ್ಹಾಕಿದ್ರು?

ಇದಾ ಐಡಿಯಾಲಜಿಕಲ್‌ ಡಿಫರೆನ್ಸಸ್ಸು.

ಏನದು ಡಿಫರೆನ್ಸು?

ಅಂತಂದ್ರೆ… ಆ ಹೊತ್ನಲ್ಲಿ ಒಂದು ಪ್ರಸಂಗ ಏನಿತ್ತಲ್ಲ ಕೆಲವರಿಗೆ ಜವಹರಲಾಲ್‌ ನೆಹರು ಎಂದಾರ ಒಂದ್‌ ದಿನ ನಮ್ಮ ಕಡೆ ಬರ್ಬಹ್ದು. ಸೋಷಲಿಸ್ಟ್‌ ಅಂತಂದು ವಿಶ್ವಾಸವಿತ್ತು. ಅದಕ್ಕಾಗಿ ಅಶೋಕ್‌ ಮೆಹ್ತಾ ಒಂದು ಥೀಸೀಸ್‌ ಶುರು ಮಾಡಿದ್ರು. ‘ಏರಿಯಾಜ್‌ ಆಫ್‌ ಅಗ್ರಿಮೆಂಟ್‌ ‘ ಅಂತಿಳ್ಕೊಂಡು. ಅಂದ್ರೆ ನಮ್ಮ ಫಸ್ಟ್‌ ನ್ಯಾಷನಲ್‌ ಗೌರ್ಮೆಂಟ್‌ ಆಗಿರಾದ್ರಿಂದ ಅವರ ಜೊತೆ ಒಂದು ಸ್ವಲ್ಪ ಸಹಕರಿಸಬೇಕಾಗ್ತದೆ ಅಂತಂದು. ಲೋಹಿಯಾ ಅದಕ್ಕ ಸಂಪೂರ್ಣ ವಿರೋಧಿ. ಆ ಮ್ಯಾಲ ಮಾರ್ಕ್ಸ್ ವಾದಕ್ಕಂತೂ ಬದ್ದ ವಿರೋಧಿಗಳಾ ನಾವು. ಇದು ವಿರೋಧಿ. ಆ ಮ್ಯಾಲ ಮಾರ್ಕ್ಸ್‌ ವಾದಕ್ಕಂತೂ ಬದ್ದ ವಿರೋಧಿಗಳಾ ನಾವು. ಇದು ಮಧ್ಯಪ್ರದೇಶದ ಪಚಮಾಡಿಯೊಳಾಗ ಈ ಅಧಿವೇಶನ ನಡೆದಾಗ ಈ ತಿಕ್ಕಾಟ ಬಂದ್‌ಬಿಡ್ತು. ಅಷ್ಟೊತ್ತಿನ್ಯಾಗ ನಮ್ಮ ನಡುವ ಹಿರಿಯ ಸಮಾಜವಾದಿ ಅಂತಂದ್ರಪ್ಪಾ ಅಂದ್ರಾ ಆಚಾರ್ಯ ನರೇಂದ್ರ ದೇವ್ರು. ಹಿವಾಸ್‌ ಇನ್‌ ಸಿಕ್‌ ಬೆಡ್‌. ಡೆತ್‌ ಬೆಡ್‌ ಅಂದ್ರೂ ಅಡ್ಡೀ ಇಲ್ಲದು.ಈ ಅಶೋಕ್‌ ಮೆಹ್ತಾ ಮತ್ತು ಈ ಲೋಹಿಯಾರ ತಿಕ್ಕಾಟಾನ ಪರಿಹರಿಸ್ಲಿಕ್ಕೆ ಜೆ.ಪಿ. ಅವರಿಗೆ ಕೂಡ ಆಗ್ಲಿಲ್ಲ. ಹೀಗಾಗಿ ಅದ್ರಿಂದ ನಾವು ಬಿಟ್‌ ಬರೋ ಪ್ರಸಂಗ ಬಂದ್‌ ಬಿಟ್ತು. ಮುಖ್ಯ ಪ್ರಶ್ನೆ ಅಂತಂದ್ರೆ ಕೇರಳದಲ್ಲಿ ಮುಖ್ಯ ಮಂತ್ರಿ ಪಟ್ಟಂಥಾನ್‌ ಪಿಳ್ಳೇ, ಸಮಾಜವಾದೀ ಸರಕಾರ ಇತ್ತು. ಜನತೆಯ ಮೇಲೆ ಗೋಲಿಬಾರ್‌ ಆಗ್ಬಾರ್ದು ಅಂತಾ ನಮ್ಮದೊಂದು ಥೇರಿ. ಒಂದ್ವೇಳೆ ಗೋಲಿಬಾರ್‌ ಆತು ಅಂದ್ರೆ ಸರಕಾರ ರಾಜೀನಾಮೆ ಕೊಡ್ಬೇಕು. ಜ್ಯುಡಿಷಿಯಲ್‌ ಎನ್‌ಕ್ಟೈರಿ ಆಗ್ಬೇಕು. ಜ್ಯುಡಿಷಿಯಲ್‌ ಎನ್‌ಕ್ವೈರಿಯೊಳಾಗ ಅದು ಅನಿವಾರ್ಯವಾಗಿತ್ತು ಅಂತಾ ಆತು ಅಂತಂದ್ರಪಾ ಅಂದ್ರೆ ಮತ್ತ ಇವ್ರು ಬರ್ಬೇಕು. ಅದಕ್ಕಾಗಿ ಪಟ್ಟಂಥಾನ್‌ ಪಿಳ್ಳೆ ರಾಜೀನಾಂಎ ಕೊಡ್ಬೇಕು ಅಂತಾ ನಮ್ಮದು. ಪಿಟ್ಟಂಥಾನ್‌ ಮುಖ್ಯಮಂತ್ರಿಯಾಗಿ ಉಳೀಲೇ ಬೇಕು ಅಂತಾ ಅವ್ರುದ್ದು.

ಯಾರ್ದು?

ಅಶೋಕ್‌ ಮೆಹ್ತಾ, ಅವ್ರ ಗುಂಪಿಂದು. ಆ ಪ್ರಶ್ನೆದ ಮ್ಯಾಲೆ ನ್ಯಾಷನಲ್‌ ಎಕ್ಸಿಕ್ಯುಟಿವ್‌ ಒಳಾಗ ಮೆಚಾರಿಟಿ ಆತು ಅಂತಾ ಕಾಣಿಸ್ತದ. ಗೋಲಿಬಾರ್‌ ಮಾಡಿದ್ದನ್ನ ಪ್ರತಿಭಟಿಸಿದ್ದಕ್ಕ ಮಧುಲಿಮಯೆಯನ್ನ ಎಕ್ಸ್‌ಪೆಲ್‌ ಮಾಡಿದ್ರು. ಆಮ್ಯಾಲ ಅದಾ ಕಾರಣದ ಮ್ಯಾಲ ಲೋಹಿಯಾ ಪಾರ್ಟಿಗೇ ರಾಜಿನಾಮೆ ಕೊಟ್ರು. ನಾವು ಒಂದು ಬ್ಯಾರೆ ಗುಂಪು ಮಾಡೋಣಾಂತ ತಿಳ್ಕೊಂಡಾನ ಹೈದ್ರಾಬಾದ್‌ ದಾಗ ಕನ್‌ವೆನ್‌ಶನ್‌ ಕರೆದದ್ದು. ಅವಾಗ ಪಿ.ಎಸ್‌.ಪಿ. ಇದ್ದದ್ದು ಎಸ್‌.ಪಿ. ಆತು ಮತ್ತ ಮುಂದ ಪಿ.ಎಸ್‌.ಪಿ.ಯವ್ರು, ಎಸ್‌.ಪಿ. ಕೂಡ್ಕೊಂಡು ಎಸ್‌.ಎಸ್‌.ಪಿ. ಆತದು.ಅದೂ ಭಾಳಾ ದಿವ್ಸ ನಡೀಲಿಲ್ಲ.

ನೀವು ಯಾವ ಪಾರ್ಟಿಲೀ ಇದ್ರೀ…?

ಹೈದ್ರಾಬಾದ್‌ದಾಗ ಲೋಹಿಯಾವಾದಿಗಳದ್ದ ಒಂದು ಕನ್‌ವೆನ್ಷೆನ್‌ ಮಾಡಿ ನಾವಂದು ಪಾರ್ಟಿ ಮಾಡ್ಕಂಡ್ವಿ. ಅವಾಗ ಪಿ.ಎಸ್‌.ಪಿಗೆ ರಾಜಿನಾಮೆ ಕೊಟ್ಟು ನಾನು ಎಸ್‌.ಪಿ ಆಗಿಬಿಟ್ಟೆ. ಮುಂಬೈ ಅಸೆಂಬ್ಲಿಯೊಳಾಗ ನಾನಾ ಒಬ್ಬಾಂವ ಎಸ್ಪಿ ಅವ್ರು ಉಳಿದವರು, ಜೋಶಿ ಅವರೆಲ್ಲ ಪಿ.ಎಸ್‌.ಪೀನ. ಹೀಗಾಗಿ ಲೋಹಿಯಾಗ ನನ್ಮ್ಯಾಲ ಒಂದಿಷ್ಟು ಅಭಿಮಾನ.

ನಂತರದ ದಿನಗಳಲ್ಲಿ ನೀವು ಲೋಹಿಯಾನ ಕೆಲ ನಿರ್ಧಾರಗಳನ್ನ ಕಟುವಾಗಿ ವಿಮರ್ಶಿಸಿದ್ರಿ ಅಲ್ವಾ?

ವಿಮರ್ಶೆ ಮಾಡಾದೇನು ಪ್ರತಿಭಟಿಸೇಬಿಟ್ಟೆ.

ಪೂಜಾರೀ ಭಿ ಪಾಗಲ್ಹೋಗಯಾ ಕ್ಯಾಅಂತಾ ಲೋಹಿಯಾರವರು ಹೇಳಿದ ಪ್ರಸಂಗವನ್ನೂ ನೀವು ಒಂದು ಕಡೆ ದಾಖಲಿಸಿದ್ದೀರಿ?

ಹೌದೌದು. ಅದು ನಾನ್‌ ಕಾಂಗ್ರೆಸ್ಸಿಸಮ್‌ ಕಾಂಟೆಕ್ಸ್ವಿನೊಳಗೆ.ಲೋಹಿಯಾರವರು ಈ ಕಾಂಗ್ರೆಸಿನ ಮೊನಾಪಲಿ ಏನದ ಅದಕ್ಕ, ನಾನ್‌ ಕಾಂಗ್ರೆಸ್‌ ಎಲಿಮೆಂಟ್ಸ್‌ ಏನವ ಅವೆಲ್ಲಾ ಕೂಡ್ಸಿ ಎಂಥದಾ ಒಂದು ಕಾಂಬಿನೇಷನ್‌ ಮಾಡಿದ್ರು. ಭಾರತೀಯ ಜನಸಂಘ, ಸ್ವತಂತ್ರ ಪಕ್ಷ, ಲೋಕದಳಾನೂ ಇತ್ತು ಕಾಣ್ತದ. ಅವೆಲ್ಲಾನೂ ಕೂಡ್ಸಿ ಅದೇನಾ ಒಂದು ಮಾಡಿದ್ರು ಮಹಾ ಮೈತ್ರಿಕೂಟ ಅಂತ. ಅವಾಗ ನಾನು ಹೇಳ್ದೆ, ಬಾಕೀದೆಲ್ಲಾ ಸರಿ…ಮುಖ್ಯಪ್ಪಾ ದೊಡ್ಡ ಎಲಿಮೆಂಟು ಅಂತಂದ್ರ ಭಾರತೀಯ ಜನಸಂಘ. ಹೋರಾಟಗಾರರು ನಾವ್‌ ಆಕ್ತೀವಿ. ನಮ್ಮ ಹೋರಾಟದ ಸಲುವಾಗಿ ಫಲ ಏನಾದ್ರೂ ಸಿಗ್ತಪ್ಪ ಅಂದ್ರ ಅವರಾಗ್ತಾರ. ಅವರನ್ನ ಬಿಟ್ಟು ನಾವ್‌ ಮಾಡ್ಬೇಕು ಅವರ ಕೂಡ ಎಂದೆಂದೂ ನಾವಿರಬಾರ್ದು.

ಅವರ ಜೊತೆ ಹೋಗ್ಲೇಬಾರ್ದು ಅನ್ನೋದು ಯಾವ ಕಾರಣಕ್ಕಾಗಿ?

ಮೊದಲಿಂದ್ಲೇ ಆ ಮನೋವೃತ್ತೀನಾ ಬೆಳಿಸಿಕೊಂಡು ಬಂದೋನ್‌ ನಾನು. ನಾನ್‌ ಹೇಳಿದ್ನೆಲ್ಲ. ಗಾಂಧೀಜೀನಾ ಮರ್ಡರ್‌ ಮಾಡಿದಾಂವ ಆರ್‌.ಎಸ್‌.ಎಸ್‌ನವ ಅಂತ. ಅವರೊಂದಿಗೆ ಎಂದೆಂದಿಗೂ ಸಾಧ್ಯವಿಲ್ಲ ನಮಗ, ಏನ್ಮಾಡಾದಿದ್ರೂ ಅವನ್ನ ಬಿಟ್‌ ಮಾಡ್ಬೇಕು. ಇಲ್ಲದಿದ್ರೆ ನಾನ್‌ ಒಲ್ಲೆ ಅಂತಾ ಅವಾಗ ಪ್ರತಿಭಟಿಸಿ ನಾನು ರಾಜಿನಾಮೇನಾ ಕೊಟ್ಟು ಬಿಟ್ಟೆ.

ಯಾವಾಗದು?

ಗ್ರೆಟರ್‌ ಅಲಾಯನ್ಸ್‌ ಏನಾತಲ್ಲ. ೧೯೬೭ ಎಲೆಕ್ಷನ್‌ದಾಗ. ಆ ಹೊತ್ನ್ಯಾಗ ನಾನು ಅವರೊಂದಿಗೆ ಹೊಂದಾಣಿಕೆ ಆಗದ ಬ್ಯಾಡಂತಾನ ರಾಜಿನಾಮೆ ಕೊಟ್ಟೆ. ಆಗ ಎಲೆಕ್ಷನ್‌ದಾಗ ಥಿನ್‌ ಮೆಜಾರಿಟಿ ಬಂತು ಕಾಂಗ್ರೆಸ್ಸಿಗೆ. ಕಮ್ಮುನಿಸ್ಟ್ರು ಬೆಂಬಲ ಕೊಟ್ರು ಅಂತಂದು ಇಂದಿರಾಗಾಂಧಿ ಪ್ರಧಾನಿಯಾಗಿ ಉಳೀಲಿಕ್ಕೆ ಸಾದ್ಯ ಆತು. ಇಲ್ಲದಿದ್ರೆ ಹೋಗಿದ್ಲಾಕಿ ಇವ್ರು ಐವತ್ತೆರಡು ಸೀಟೇನಾ ಬಂದ್ವು. ಜನಸಂಘದ್ವು. ಗ್ವಾಲಿಯರ್‌ ಮಹಾರಾಣಿಯಂತೂ ಆಕಿ ತನ್ನ ಇಡೀ ಸಂಸ್ಥಾನದೊಳಗಾನಾ ತಂದುಬಿಟ್ಲು. ಆ ರಾಣಿ ಸಂಸ್ಥಾನದ ಗ್ವಾಲಿಯರ್‌ನಿಂದಾನಾ ಆರಿಸಿ ವಾಜಪೇಯಿ ಬಂದಿದ್ದು. ಏನ್ರೀ.