ಗಂಗಾಧರಯ್ಯ ಯಾವ ಪಾರ್ಟಿಯಿಂದ ನಿಂತಿದ್ರು?

ದೇವೇಗೌಡ ಒಂದು ಪಾರ್ಟಿ ಮಾಡಿದ್ದ ನೋಡ್ರಿ ಅವಾಗ ಅದು. ನನಿಗೆ ಸೋಲಿಸಬೇಕೆಂತಾನ ಹಂಗ ಮಾಡಿದ್ರು. ಇವ್ನು ಸಮಾಜವಾದ ಅಂತಾ ಹೋಗ್ಯಾನ ಮಠಕ್ಕ ಬರಾದಿಲ್ಲ ಅಂತಾ. ನಮ್ಮ ಸಂಘಟನೆ ಪರಿಸ್ಥಿತಿ ಭಾಳಾ ಕಷ್ಟ ಇತ್ತು. ಒಂದು ಆಫೀಸ್ ನಡಸಾದು ಕಷ್ಟ ಇತ್ತು. ಆಫೀಸಿನ ಸಾಮಾನೆಲ್ಲ ಹೋರಾಗ್ಹಾಕಿದ್ರು, ಬೆಂಗಳೂರಿನ್ಯಾಗ.

ಅದ್ಯಾಕೆ ಸಾರ್? ಅಂಥಾದ್ದು ಏನಾಗಿತ್ತು?

ಅಲ್ಲಿ ತುಳಸೀತೋಟ ಅಂತಿದೆಯಲ್ಲಿ ಬೆಂಗಳೂರಿನಲ್ಲಿ. ಅಲ್ಲಿ ಪಾರ್ಟಿ ಆಫೀಸ್ ಇತ್ತು. ಗೋಪಾಲಗೌಡ್ರು. ಅಲ್ಲೇ ಇರ್ತಿದ್ರು. ಮಲಗ್ತಿದ್ರು. ಅದರ ಬಾಡಿಗೆ ಕೊಟ್ಟಿದ್ದಿಲ್ಲ. ಅಲ್ಲಿ ಕಣ್ಣನ್ ಅಂತಾ ಮೊದ್ಲು ಇದ್ರು. ಅವ್ರು ಸತ್ಹೋದ ಮೇಲೆ ಕಷ್ಟಾಗಿತ್ತು. ಬಾಡಿಗೆ ಯಾರೂ ಕೊಡ್ತಿರಲಿಲ್ಲ. ಪಟೇಲರು ತಮ್ಮ ಊರಾಗ ಇರ್ತಿದ್ರು. ಬಾಡಿಗಿ ಏನೂ ಕೊಡ್ತಿರಲಿಲ್ಲ. ಪಾಪ ವೆಂಕಟರಾಮ್ ಟ್ರೇಡ್ ಯೂನಿಯ್ ಲೀಡ್ರು. ಎಷ್ಟಂತ ಕೊಡಾರು. ಸೋಷಲಿಸ್ಟ್ ಪಾರ್ಟಿ ಎಕ್ಸಿಕ್ಯೂಟಿವ್ ಮೀಟಿಂಗ್ ಕರೆದ್ರೆ ಮೂರು ಜನ, ನಾಲ್ಕು ಜನ ಅದೇ ಗೋಪಾಲಗೌಡ್ರು, ಪಟೇಲ್ರು, ನಾನು, ಎಸ್. ವೆಂಕಟರಾಮ್. ಅವಾಗ ಬಾಡಿಗೆ ಕೊಡಾಕ ಆಗಲಾರದ್ದಕ್ಕೆ ಓನರ್ ಸಾಮಾನು ಹೊರಾಗ ಹಾಕಿದ್ದ.

ಅವಾಗ ಸುಪಟೂರು ಕೃಷ್ಣಮೂರ್ತಿ ಅಂತಾ ಒಬ್ರು ಹಳೇ ಕಾರ್ಯಕರ್ತು ಅವ್ರು ಒಂದು ಕೈಗಾಡಿ ತಗಂಡು ಬಂದು, ಹೊರಾಗ ಬೀಸಾಕಿದ್ದನ್ನೆಲ್ಲಾ ಹೇರ್ಕಂತು, ಇಲ್ಲಿ ಸುಬೇದಾರ್ ಛತ್ರಂ ರೋಡ್, ಅಣ್ಣಮ್ಮ ದೇವಸ್ಥಾನದ ಎದುರಿಗೆ ತಂದು ಅಲ್ಲಿ ಎರಡೂ ರೂಮು ನನ್ನ ಹೆಸರಿಗೆ ತಗಂಡೆ. ಪಾರ್ಟಿ ಹೆಸರಿಗೆ ಕೊಡಾದಿಲ್ಲಪ್ಪ ನಿಮ್ಮ ಹೆಸರಿಗೆ ತಗಳ್ರೀ ಅಂದ್ರು. ಅವಾಗ ಒಂದು ನನ್ನ ಆಫೀಸು, ಪಕ್ಕದಾಗ ಸೋಷಲಿಸ್ಟ್ ಪಾರ್ಟಿ ಆಫೀಸ್ ಮಾಡಿದ್ವಿ.

ನಿಮ್ಮ ‘ಕಾಡಜ್ಜಿ ಕೆರೆ ಭೂಮಿ’ ಹೋರಾಟದ ಬಗ್ಗೆ ಹೇಳ್ರೀ… ಶುರುವಾಗಿದ್ದು ಯಾವಾಗ?

ಅದು ಪಾರ್ಟಿ ಕಾರ್ಯಕ್ರಮ. ಬಡವರಿಗೆ ಭೂಮಿ ಕೊಡೋದು. ವೇಸ್ಟ್ ಲ್ಯಾಂಡ್ ಆಗಿರ‍್ಬಹ್ದು. ಸರಕಾರಿ ಜಮೀನನ್ನು ಭೂಹೀನರಿಗೆ ಕೊಡತಕ್ಕಂಥದ್ದು.

ಫಸ್ಟು, ಇಲ್ಲಿ ಕಾಡಜ್ಜಿ ಅಂತಾ ಒಂದು ಹಳ್ಳಿ ಇದೆ. ಆರೇಳು ಮೈಲಿ ಇಲ್ಲಿಂದ. ಅಲ್ಲಿ ಕೆರೆ ಅಂಗಳ ವೇಸ್ಟ್ ಲ್ಯಾಂಡ್ ಅದು. ಅಲ್ಲೇನು ನೀರು ನಿಲ್ತಾ ಇರ್ಲಿಲ್ಲ. ಅಲ್ಲಿಗೆ ರೈತರ‍್ನೆಲ್ಲ ಕರ್ಕೊಂಡೋಹಿ, ನಾವೇ ಅಳತೆಮಾಡಿ ಒಂದೊಂದೆಕ್ರೆ, ಎರಡೆರಡೆಕ್ರೆ ಕೊಟ್ವಿ.

ಯಾವ ವರ್ಷ ಸಾರ್ ಅದು?

ನನಗೆ ಜ್ಞಾಪಕ ಶಕ್ತಿ ಹೋಗ್ಬಿಟ್ಟಿದೆ. ಆವಾಗ ಸೋಷಲಿಸ್ಟ್ ಪಾರ್ಟೀದು ಬಡವರಿಗೆ ಭೂಮಿಕೊಡೋ ಪ್ರೋಗ್ರಾಮ್ಮೇ ಇತ್ತು. ಅದರಂಗವಾಗಿ ಈ ಹೋರಾಟ ಮಾಡಿದ್ವಿ.

ಇದಕ್ಕೇನಂತ ಹೆಸರಿಟ್ಟಿದ್ರೀ?

ಭೂ ಆಕ್ರಮ ಚಳವಳಿ. ಕಾಡಜ್ಜಿ ಕೆರೆ ಭೂ ಆಕ್ರಮ ಚಳವಳಿ.

ಎಷ್ಟು ಎಕರೆ ಭೂಮಿ ವಶಪಡಿಸಿಕೊಂಡ್ರೀ?

ಅದು ನೂರಾರು ಎಕ್ರೆ, ಕೆರೆ ಅಂಗಳ ಪೂರ್ತಿ. ಒಂದು ಅರವತ್ತು ಎಪ್ಪತ್ತು ಎಕ್ರೆ ಆಗ್ಬಹ್ದು.

ಯಾವ ವರ್ಗದ ರೈತರು ಭೂಮಿ ಪಡೆದದ್ದು?

ಭೂಮಿ ಇಲ್ಲದವರು, ಬಡವರು, ಅದ್ರಲ್ಲೂ ಶೆಡ್ಯೂಲ್ಡ್ ಕ್ಯಾಸ್ಟನವರು ಜಾಸ್ತಿ. ನಾವೇ ನಿಂತ್ಕೊಂಡು ಹಂಚಿದ್ವಿ. ಭಾಳಾಜನ ಅರೆಸ್ಟಾಗಿದ್ವಿ.

ಅಂದಾಜು ಎಷ್ಟು ಮಂದಿ?

ನೂರಾರು ಜನ ಅರೆಷ್ಟು ಆದ್ರು. ಸತತ ಎರಡು – ಮೂರು ಸರ್ತಿ ನಡೀತು ಅದು. ಅಲ್ಲಿ ಊರ್ನಲ್ಲಿ ಬಹಿರಂಗ ಅಭೆಗಳನ್ನು ಮಾಡ್ತಿದ್ವಿ. ಊರಿನ ಜನ ಎಲ್ಲ ಸಹಕಾರ ಕೊಟ್ಟಿದ್ರು. ಊರ್ನಲ್ಲಿ ಅರೆಸ್ಟ್ ಮಾಡ್ಕೊಂಡು ನಮ್ಮನ್ನು ತಗಂಡು ಹೋಗಿ ಪೋಲೀಸ್ನೋರು ದಾವಣಗೆರೆ ಜೈಲ್ ನಲ್ಲಿ ಹಾಕಿದ್ರು.

ಎಷ್ಟು ದಿನ ಜೈಲಿನಲ್ಲಿದ್ರಿ, ನಿಮ್ಮ ಜೊತೆಗೆ ಮತ್ತ್ಯಾರ್ಯಾರಿದ್ರು?

ಒಂದು ವಾರ ಅಂತಾ ಕಾಣ್ತೈದೆ. ಅಲ್ಲಿ ಅವಾಗ ಎಸ್. ಹೆಚ್. ಪಟೇಲ್ ಇದ್ದಾ. ಜೆ. ಹೆಚ್. ಪಟೇಲ್ ತಮ್ಮಾ. ಬಾಗಳಿ ಶಿವಾನಂದ ಸ್ವಾಮಿ ಅಂತಾ ಇದ್ರು. ಆಮ್ಯಾಲೆ ವಕೀಲ ಬಸವನಗೌಡ, ರೇವಣಸಿದ್ದಪ್ಪ ವಕೀಲ ಇನ್ನೂ ಅನೇಕ ಪಾರ್ಟಿ ಕಾರ್ಯಕರ್ತರು. ಊರಿನ ಬಹಳಷ್ಟು ಜನ. ಇಡೀ ಊರಿನಲ್ಲಿ ದೊಡ್ಡ ಮೆರವಣಿಗೆ ಮಾಡಿದ್ವಿ. ಆಮ್ಯಾಲೆ, ಇಲ್ಲಿ ಬಾವಿಹಾಳ್ ಅಂತಿದೆ. ಅಲ್ಲಿ ಜಮೀನೆಲ್ಲ ಅಳತೆ ಮಾಡ್ಸಿ ಕೊಟ್ವಿ. ಅಲ್ಲಿ ಗೋಮಾಳ ಜಮೀನನ್ನು ಅಳತೆ ಮಾಡ್ಸಿ ಭೂಹೀನರಿಗೆ ಕೊಟ್ವಿ. ಆಮ್ಯಾಲೆ ಒಂದು ಲಂಬಾಣಿ ತಾಂಡ ಇತ್ತು. ಜಂಪಣ್ಣನ ಹಳ್ಳಿ ಅಂತ. ಅಲ್ಲಿ ಬರೀ ಲಂಬಾಣೀಸೇ ಇದ್ರು. ಅಲ್ಲಿನೂ ಗೋಮಾಳಾನ ಹಂಚಿದ್ವಿ. ಭೂ ಆಕ್ರಮಣ ಚಳವಳಿಯ ಅಂಗವಾಗಿ ಈ ಮೂರು ಕಡೆ ನನ್ನ ಲೀಡರ್ ಶಿಪ್ ನಲ್ಲಿ ಚಳವಳಿ ನಡೀತು. ಇವೆಲ್ಲ ಒಂದೇ ಸಲಕ್ಕೆ ಪಕ್ಷದ ಕರೆ ಪ್ರಕಾರ ನಮ್ಮ ಭಾಗದಲ್ಲಿ ನಾವು ನಡೆಸಿದ್ದು. ಬೇರೆ ಬೇರೆ ಯೂನಿಟ್ ನವರು ಬೇರೆ ಬೇರೆ ಕಡೆ ಮಾಡಿದ್ರು.

ಬಾವಿಹಾಳ್ದು ಎಷ್ಟು ಎಕರೆ ರೈತರು ಪಡೆದದ್ದು?

ಅದೊಂದು ೫೦ ಎಕ್ರೆ ಇರಬಹ್ದು. ಅದು ಭೂಮಿ ರೈತರಿಗೆ ಸಿಕ್ತು. ಆದ್ರೆ ಕಾಡಜ್ಜಿ ಕೇರೇದು ಅಮ್ಯಾಲ ಸರ್ಕಾರ ಅಲ್ಲಿ ರೆಸಿಡೆನ್ಷಿಯಲ್ ಸ್ಕೂಲೋ, ಆಗ್ರಿಕಲ್ಚರಲ್ ಸ್ಕೂಲ್ ಥರಾ ಮಾಡಿ ಭೂಮಿ ರೈತರಿಗ್ಯಾಕ ಕೊಡಬೇಕು ಅಂತಾ ಬಹುಪಾಲು ಮತ್ತೆ ವಶಪಡಿಸಿಕೊಂಡ್ರು. ಕೆಲವ್ರು ಅದೇನೋ ಅಗ್ರಿಕಲ್ಚರ್ ರಿಸರ್ಚ್ ಸೆಂಟರೋ ಏನೋ ಮಾಡಿದ್ರು.

ಜಂಪಣ್ಣನ ಹಳ್ಳಿಯಲ್ಲಿ ಎಷ್ಟು ಎಕರೆ ಭೂಮಿ ಸಾರ್?     

ಅದೊಂದು ಐವತ್ತು ಎಕ್ರೆ ಗೋಮಾಳ. ಅದು ಲಂಬಾಣೀಸ್ ಗೆ ಸಿಕ್ತು. ಲ್ಯಾಂಡ್ ಎಷ್ಟು ಅಂತ ಸರಿಯಾಗಿ ನೆನಪಿಲ್ಲ. ಆದ್ರೆ ಮೂವ್ ಮೆಂಟ್ ಇಂಪಾರ್ಟೆಂಟ್. ಕೆಲವರಿಗೆ ಸಿಕ್ತು. ಕೆಲವರಿಗೆ ಸಿಗಲಿಲ್ಲ. ಗೌರ್ನಮೆಂಟು ಭಾಳ ರೂತ್ ಲೆಸ್ ಆಗಿ ಇದನ್ನ ಮಾಡಿದ್ರು. ಲ್ಯಾಂಡ್ ಗ್ರ್ಯಾಬ್ ಮೂಮೆಂಟ್ ಅಂತ್ಲೇ ಅದು ರಾಜ್ಯಾದ್ಯಂತ ನಡೀತು. ಆಯಾಯ ಏರಿಯಾನಲ್ಲಿ. ಬೆಂಗಳೂರಿನಲ್ಲಿದ್ದಾಗ ಪೌರಸಮಿತಿ ಅಂತಾ ಮಾಡಿದ್ರು, ಕೆ. ಎಂ. ನಾಗಣ್ಣ, ಟಿ. ಸುಬ್ರಮಣ್ಯಂ,, ಅನಂತಕೃಷ್ಣ, ಎಸ್. ವೆಂಕಟರಾಮ್, ನಾನು ಎಲ್ಲ ಸೇರ್ಕಂಡು ಸೈಕಲ್ ತೆರಿಗೆ, ನೀರಿನ ತೆರಿಗೆ ವಿರುದ್ಧ ಇಡೀ ಬೆಂಗಳೂರಿನಲ್ಲಿ ಹೋರಾಟ ಮಾಡಿದ್ವಿ. ಸಂಡೂರಿಂದಂತೂ ನಿಮಗ ಗೊತ್ತಿದ್ದಿದ್ದಾ ಐತಿ.

ಎಲ್ಲ ಹೋರಾಟಗಳ ನಂತರ ನಿಮಗೆ ಈಗ ಅನಿಸೋದೇನು? ಒಬ್ಬ ಸಮಾಜವಾದಿಯಾಗಿ ಹೋರಾಟಗಳನ್ನ ಹೇಗೆ ವಿಶ್ಲೇಷಿಸ್ತೀರಿ?

ಅನಿಸೋದೇನು, ಹಿಂಗೆಲ್ಲಾ ಮಾಡೀವಿ, ಬಡಜನರಿಗಾಗಿ ಅಂತಾ ತೃಪ್ತಿ ಅನ್ನೋದಕ್ಕಿಂತ್ಲೂ ಜಾಗೃತಿ ಮೂಡ್ತು ಜನರಲ್ಲಿ. ಅದ್ರಲ್ಲೂ ಶೆಡ್ಯುಲ್ಡ್ ಕ್ಯಾಸ್ಟ್, ಬ್ಯಾಕ್ ವರ್ಡ್ಸ್, ಭೂ ಹೀನಗರಿಗೆ, ಒಂದೆಕ್ರೆ, ಎರಡೆಕ್ರೆ ಸಿಕ್ರೆ ಅದ್ರಲ್ಲೇ ಜೀವನ ಮಾಡೋಕೆ ಆಸರೆಯಾಯ್ತು. ಇಂಥಾ ಹೋರಾಟಗಳ ಮೂಲಕ ಜಾಗೃತಿ ಮಾಡೋಕೆ ಸಾಧ್ಯಾ ಆಯ್ತು.

ಹೋರಾಟಗಳನ್ನು ಸಂಘಟಿಸುವಾಗ ನೀವು ಎದುರಿಸಿದ ಸವಾಲುಗಳೇನು? ಸಂಘರ್ಷದ ಅನುಭವ ಎಂಥಾದ್ದು?

ಸವಾಲುಗಳೇನು? ಯಾರೂ ವಿರೋಧ ಮಾಡ್ಲಿಲ್ಲ ನಮಿಗೆ ಆವಾಗ. ಸಂಘರ್ಷ ಏನು? ಸರಕಾರಾನ ಈ ಕ್ರೆಡಿಟ್ಟನ್ನ ಸೋಷಲಿಸ್ಟ್ ಪಾರ್ಟಿಗೆ ಯಾಕೆ ಕೊಡ್ಬೇಕು. ಈ ಮೂವ್ ಮೆಂಟ್ ಫೇಲ್ ಮಾಡ್ಬೇಕು ಅಂತಾ ಅರೆಸ್ಟ್ ಮಾಡೋದು. ಅಲ್ಲೀತನಾ ಹಂಗಾ ಬೀಳ್ ಬಿಟ್ಟವ್ರು. ಅವಾಗ ಜಾಗೃತಿ ಆತು ಸರಕಾರಕ್ಕೆ, ಮತ್ತಾವುದಕ್ಕೋ ಬೇಕು ಅಂತಾ ಕಿತ್ತುಕೊಳ್ಳೋಕೆ ಶುರುಮಾಡಿದ್ರು, ಕಾಡಜ್ಜಿ ಕೆರೆ ಭೂಮಿ. ನಾವಾಗ್ಲೆ ರೈತರಿಗೆ ಭೂಮಿ ಹಂಚಿ ಕೊಟ್ಟಿದ್ವಿ. ಇವ್ರು ರೀಸರ್ಚ್‌ಗೆ ಅಂತಾ ಕಿತ್ತುಕೊಂಡ್ರು. ಇವ್ರೇನು ಭಾರೀ ರೀಸರ್ಚ್ ಮಾಡಿದ್ದು ಅಷ್ಟರಾಗ ಐತಿ.

ಇವೆಲ್ಲವೂ ನಾನು ಬ್ಯುಸಿ. ಪ್ರ್ಯಾಕ್ಟೀಸಿಂಗ್ ಅಡ್ವಕೇಟ್ ಆಗಿ ಬೆಂಗಳೂರಿನಲ್ಲಿ ಇದ್ದು ಅದರ ನಡುವೇನೇ ಮಾಡಿದ್ದು.

ಅದಕ್ಕ ನನ್ನ ಹೆಸರಿಗೆ ತಗಂಡು, ಪಾರ್ಟಿಗೆ ಆಫೀಸ್ ಮಾಡಿದ್ದೆ. ಆಮ್ಯಾಲ್ ಬಾಪು ಹೆದ್ದೂರ ಶೆಟ್ಟಿ ಬಂದು ತಾನು ಲಾಯರ್ ಗಿರಿ ಮಾಡ್ತೀನಿ ಅಂದಾ, ಬಿಟ್ಟು ಕೊಟ್ಟೆ. ಅಣ್ಣಮ್ಮ ದೇವಸ್ಥಾನ ಎದುರಿಗೆ ಇನ್ನೂ ನನ್ನ ಹೆಸರಿನ ಬೋರ್ಡ್ ಇದೆ. ಈಗಲ್ಲಿ ಯಾರ್ಯಾರೋ ಇರ್ತಾರ. ಈಗ ನಾನು ಹೋದ್ರೆ, ನನಗೇ ‘ಯಾರು ಬೇಕಿತ್ತು’ ಅಂತಾ ಕೇಳ್ತಾರ. ಆವಾಗ್ಲೇ ನಾನು ಬೇರೆಯಾರಿಗಾರ ಬಿಟ್ಟು ಕೊಟ್ಟಿದ್ರೆ ೨೫ – ೩೦ ಸಾವಿರ ಕೊಡ್ತಿದ್ರು. ನಾನು ಜ್ಯೂನಿಯರ್ಸ್ ಗೆ ಬಿಟ್ಟು ಬಂದೆ. ಮೂವ್ ಮೆಂಟ್ ನಡೆಸಿದ್ದು ಒಂದು ಪಿರಿಯಡ್ ಅದು. ಆಮ್ಯಾಲೆ ನನ್ನ ಫ್ಯಾಮಿಲಿನಾ ಬೆಂಗಳೂರಾಗ ಸೆಟ್ ಆಪ್ ಮಾಡ್ದೆ. ಅದಕ್ಕೆ ಅರ್ನಿಂಗ್ ಮಾಡ್ಬೇಕಾಯ್ತು. ಭಾಳಾ ಜೋರಾಗಿ ಪ್ರ್ಯಾಕ್ಟಿಸ್ಟ್ ಮಾಡ್ದೆ. ಅತ್ಯಂತ ಯಶಸ್ವಿಯಾಗಿ ನಾನು ವಕೀಲಿ ವೃತ್ತಿ ಮಾಡ್ದೆ, ಹೈಕೋರ್ಟ್ ನಲ್ಲಿ. ಈ ವನ್ ಸುಪ್ರೀಂಕೋರ್ಟ್‌ನಲ್ಲಿ. ಅಷ್ಟೋತ್ತಿಗೆ ಬಳ್ಳಾರಿ ಜಿಲ್ಲೆ ಎಲ್ಲ ಬಸ್ ನ್ಯಾಶನಲೈಜೇಶನ್ ಮಾಡಿದ್ರು. ಅದನ್ನ ಛಾಲೆಂಜ್ ಮಾಡಿ ನಾನು ಸುಪ್ರೀಂ ಕೋರ್ಟ್‌ಗೆ ಹೋಗಿ ಪುರುಷೋತ್ತಮದಾಸ್ ಅಂತ ಸೀನಿಯರ್ ಅಡ್ವಕೇಟ್ ಅವರ ಮುಖಾಂತರ ನಡೆಸಿದೆ. ನ್ಯಾಷನಲೈಜ್ ಮಾಡಿದ್ರೆ ಬಡವರಿಗೆ ತ್ರಾಸ್ ಆಗ್ತೈತಿ ಅಂತಾ.

ಬಸ್ ನ್ಯಾಷನಲೈಜೇಷನ್ ಬಗ್ಗೆ ನಿಮ್ಮ ಪಾರ್ಟೀ ಧೋರಣೆ ಏನಿತ್ತು?

ನಾನು ವಿರೋಧ ಮಾಡಿದ್ದು ಪಾರ್ಟಿ ಪ್ರೋಗ್ರಾಂ ಅಲ್ಲದು. ಲ್ಯಾಂಡ್ ಬಗ್ಗೆ ಅಷ್ಟೇ ಅದು ಪಾರ್ಟಿ ಹೋರಾಟ. ಸುಪ್ರೀಂಕೋರ್ಟ್‌ನಲ್ಲಿ ನಾನು ಛಾಲೆಂಜ್ ಮಾಡಿದ್ದು ಮೋಟಾರ್ ವೆಹಿಕಲ್ಸ್ ನ್ಯಾಶನಲೈಜೇಶನ್ ಅನ್ನ. ಅದರ ಬಗ್ಗೆ ಏನೂ ಪಾರ್ಟಿ ತೀರ್ಮಾನ ಇರಲಿಲ್ಲ. ಆವಾಗ ನಾನು ಅಲ್ಲಿ ಬಳ್ಳಾರಿ ಡಿಸ್ಟ್ರಿಕ್ಟ್ ಮೋಟಾರ್ ಆಪರೇಟರ್ಸ್ ಏನಿದ್ರು ಎಂ.ಜಿ. ಬ್ರದರ್ಸ್ ಮತ್ತು ದೊಡ್ಡ ದೊಡ್ಡವರೆಲ್ಲ ನನಗೆ ಈ ಕೇಸ್ ಕೊಟ್ಟಿದ್ರು.

ಮೋಟಾರ್ ವೆಹಿಕಲ್ ಗಳ ಪ್ರೈವೇಟ್ ಓನರ್ಸ್ ಗಳ ವಕೀಲರಾಗಿ ನೀವು ನ್ಯಾಶನಲೈಜೇಶನನ್ನು ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸಿದ್ರೀ….?

ಹೌದು. ಅವಾಗ ನಾನು ಮೋಟಾರ್ ವೆಹಿಕಲ್ಸ್ ಸ್ಪೆಶಲಿಸ್ಟ್ ಅಡ್ವಕೇಟ್ ಆಗಿ ನಾನು ಅಷ್ಟು ಹೊತ್ತಿಗೆ ಫೇಮಸ್ ಆಗಿದ್ದೆ. ಓನರ್ಸ್ ಅವಾಗ ಇದನ್ನ ನನಗೆ ಎಂಟ್ರಸ್ಟ್ ಮಾಡಿದ್ರು.

ಸುಪ್ರೀಂ ಕೋರ್ಟ್ನಲ್ಲಿ ಏನಾತದು ತೀರ್ಪು?

ನಮ್ಮಂತೇ ಆಯ್ತುದು ಫಸ್ಟು. ಆಮ್ಯಾಲೆ ಮತ್ತದು ರಿಫಾರ್ಮ್ ಆಗಿ ಏನೇನೋ ಆತು. ಆವಾಗ ಸುಪ್ರೀಂ ಕೋರ್ಟ್‌ನಲ್ಲಿ ಪುರುಷೊತ್ತಮದಾಸ್ ಅಂತಾ ಸೀನಿಯರ್ ಅಡ್ವಕೇಟನ್ನು ಎಂಗೇಜ್ ಮಾಡಿದ್ದೆ. ಅವರ ಜೊತೀಗೇ ನಾನು ಪಕ್ಕದಲ್ಲಿ ಕುತ್ಕೊಂಡು ಇನ್ ಸ್ಟ್ರಕ್ಷನ್ಸ್ ಕೊಡ್ತಾ ಇದ್ದೆ. ಆವಾಗ ಗಜೇಂದ್ರಗಡಕರ್ ಚೀಫ್ ಜಸ್ಟೀಸ್ ಇದ್ರು, ಆವಾಗ ಪುರುಷೋತ್ತಮದಾಸ್ ನನಗೆ, ನೀನು ಚೆನ್ನಾಗಿ ಇನ್ ಸ್ಟ್ರಕ್ಷನ್ಸ್ ಕೊಡ್ತೀಯಾ, ಬ್ರೀಫ್ ಮಾಡಿ ಕೊಡೋಕಂತ ಬಾ ಅಂತಾ ನನ್ನನ್ನು ಇಂಥದೇ ಕೇಸ್ ಸಂಬಂಧ ಚಂಡೀಗಡಕ್ಕೆ ಕರ್ಕೊಂಡು ಹೋಗಿದ್ರು. ಅವರ ಜೊತೆ ಚಂಡೀಗಡದಲ್ಲಿ ಎರಡು ದಿವ್ಸ ಇದ್ದೆ…. ಅಲ್ಲಿ ಕೋರ್ಟ್‌ನಲ್ಲಿ. ಪುರುಷೋತ್ತಮದಾಸ್ ಅವ್ರಿಗೆ, ಆರ್ಗ್ಯುಮೆಂಟ್ ಟೈಮ್ನಲ್ಲಿ ನಾನು ನಡುನಡುವೆ ಇನ್ ಸ್ಟ್ರಕ್ಷನ್ಸ್ ಕೊಡ್ತಾ ಇರೋದನ್ನ ನೋಡಿ ಗಜೇಂದ್ರಗಡಕರ್ “ಮಿ. ಪುರುಷೋತ್ತಮದಾಸ್, ಯುವರ್ ಯಂಗ್ ಅಸಿಸ್ಟೆಂಟ್ ಅಪಿಯರ್ಸ್ ಟು ನೋ ಬೆಟರ್ ದ್ಯಾನ್ ಯೂ, ಲೆಟ್ ಹಿಮ್ ಆರ್ಗ್ಯೂ” ಅಂದಿದ್ರು, ಗಜೇಂದ್ರಗಡಕರ್, ಚೀಫ್ ಜಸ್ಟೀಸ್ ಆಫ್ ದಿ ಸುಪ್ರೀಂ ಕೋರ್ಟು.

ಇದೆಲ್ಲಾ ಪಾರ್ಟಿ ನೀತಿಗನುಗುಣವಾಗಿ ಇತ್ತೋ ಇಲ್ವೋ ಅದು ಬೇರೆ ಮಾತು. ಯ್ಯಾಸ್ ಯ್ಯಾನ್ ಅಡ್ವಕೇಟ್ ಸಕ್ಸಸ್ ಫುಲ್ ಆಗಿ ಪ್ರತೀ ತಿಂಗಳು ಬಳ್ಳಾರಿ, ಶಿವಮೊಗ್ಗ, ಬೆಂಗಳೂರು, ಚಿತ್ರದುರ್ಗಗಳಿಗೆಲ್ಲ ಒಂದು ರೌಂಡ್ ಹೋಗಿ ಅಷ್ಟೊಂದು ದುಡ್ಡು ಆರ್ನ್ ಮಾಡ್ತಿದ್ದೆ.

ನಿಮ್ಮ ವೈಯಕ್ತಿಕ ಜೀವನದಲ್ಲಿಸಮಾಜವಾದಿಆದರ್ಶಗಳನ್ನು ಅಳವಡಿಸಿಕೊಳ್ಳೋಕೆ ಸಾಧ್ಯಾ ಆಯ್ತಾ?

ಅದೇ ಜಾಸ್ತಿಯಾಗಿದ್ದು. ನಾನು ಲಾ ಆದಕೋಡ್ಲೇ…. ಯಾರ ಹತ್ರಾನೂ ಜ್ಯೂನಿಯರ್ ಆಗಿ ಕೆಲ್ಸ ಮಾಡ್ಲಿಲ್ಲ. ಮೈಸೆಲ್ಫ್ ಬೆಂಗಳೂರಿಗೆ ಹೋಗಿ, ಆಫೀಸ್ ಓಪನ್ ಮಾಡಿ, ಪ್ರೊಫೆಶನ್ ಶುರುಮಾಡೀನಿ, ಇವ್ರೆಲ್ಲ ಆರಾಮಾಗಿ ಇದ್ದಾಗ್ಲೂ ನಾನು ಯ್ಯಾಕ್ಟಿವ್ ಆಗಿ ಸೋಷಲಿಸ್ಟ್ ಮೂಮೆಂಟ್ ನ್ಯಾಗ ಕೆಲಸ ಮಾಡೀನಿ.

ಅದಲ್ಲ ಸಾರ್, ನೀವು ವೈಯಕ್ತಿಕವಾಗಿ ಸಮಾಜವಾದಿ ಚಿಂತನೆಗಳಿಗೆ ಎಷ್ಟು ಬದ್ಧರಾಗಿದ್ರೀ ಅಂತಾ?

ಅದರ್ ವೈಸ್….. ನನಗೆ ಭಾಳಾ ಜನ ನೀನು ಕಾಂಗ್ರೆಸ್ ಗೆ ಬಂದ್ಬಿಡು. ನಿನಗೆ ಕಾಂಗ್ರೆಸ್ ಎಂ.ಪಿ. ಟಿಕೇಟ್ ಕೊಡ್ತೀವಿ ಅಂದ್ರು. ನಾನು ಬೆಂಗಳೂರಿನಿಂದ ಇಲ್ಲಿಗೆ ಬಂದ್ಬಿಟ್ಟೆ. ನನಗೊಂದಿವ್ಸ ಇವ್ರು ಏನೋ ಮಾಡಿಬಿಡ್ತಾರ ಅಂತಾ ಹೋಗ್ಲಿಲ್ಲ ನಾನು.

ನಿಮಗೆ ಯಾವಾಗ್ಲೂ ಕಾಂಗ್ರೆಸ್ ಪಾರ್ಟಿ ಸೇರ್ಬೇಕು ಅಂತಾ ಅನ್ನಿಸಿಲ್ವಾ?

ಛೇ ಛೇ… ನಾನು ಒಂದೇ ಒಂದು ಎಂ.ಎಲ್.ಎ. ಇಲ್ಲದ ಕಾಲ್ದಾಗ ಸೋಷಲಿಸ್ಟ್ ಪಾರ್ಟಿ ಸೇರ‍್ದೋನು. ಅವಾಗ ಗೋಪಾಲಗೌಡ್ರು ಇದ್ರು. ರಾಮಮನೋಹರ್ ಲೋಹಿಯಾ ಅವರ ಭಾಳಾ ಇನ್ ಪ್ಲೂಯೆನ್ಸ್ ಇತ್ತು ನನಮ್ಯಾಗ. ಗೋಪಾಲಗೌಡ್ರು ಸೋತಿದ್ರು ಆವಾಗ. ಪೊಜಿಶನ್ ಬಗ್ಗೆ ಆಸೆ ಪಟ್ಟಿದ್ರೆ ನಾನು ಯಾವತ್ತೋ ಏನೋ ಆಗಿರ್ತಿದ್ದೆ. ಅದರ ಬಗ್ಗೆ ನನಗೆ ರಿಪೆಂಟೆನ್ಸ್ ಏನಿಲ್ಲ. ನನಗೆ ಐಡಿಯಾಲಜಿಕಲ್ ಕಮಿಟ್ ಮೆಂಟ್ ಇತ್ತು. ಐವಾಸ್ ಮೆಂಬರ್ ಆಫ್ ದಿ ಸೋಸಲಿಸ್ಟ್ ಪಾರ್ಟಿ, ಐ ವಾಸ್ ಸ್ಟೇಟ್ ಪ್ರಸಿಡೆಂಟ್ ಆಫ್ ದಿ ಸೋಷಲಿಸ್ಟ್ ಪಾರ್ಟಿ, ಐ ವಾಸ್ ಪಾರ್ಲಿಮೆಂಟರಿ ಛೇರ್ಮನ್ ಆಫ್ ದಿ ಸೋಷಲಿಸ್ಟ್ ಪಾರ್ಟಿ. ಎಲ್ಲದೂ ನನಗೆ. ಏನರ ಅಧಿಕಾರ ಇದ್ರೆ ಎಲ್ಲದು ನನಗೆ. ಪಾರ್ಟಿ ರನ್ ಮಾಡಾದು, ಪಾರ್ಟಿಗೆ ಫೈನಾನ್ಸ್ ಮಾಡಾದು ಎವೆರಿಥಿಂಗ್, ಎಂಥೆಂಥೋರು ನನಗೆ, ಮಧುಲಿಮಯೆ ನನಗೆ ಭಾಳಾ ಕ್ಲೋಸು. ಲೋಹಿಯಾ ಪರ್ಸನಲಿ ಹಿ ಲೈಕ್ಡ್ ಮಿ.

ಅಂದ್ರೆ….. ಕಾಂಗ್ರೆಸ್ ಗೆ ಹೋಗಿದ್ರೆ ಇಷ್ಟೆಲ್ಲಾ ಪೊಜಿಶನ್ ಸಿಗ್ತಿರಲಿಲ್ಲ?

ಬೇಕಾದಂಗ ಸಿಗ್ತಿತ್ತು. ಇದೆಲ್ಲ ಏನು ನಾನು ಮನಸ್ಸು ಮಾಡಿದ್ರೆ ಪಾರ್ಲಿಮೆಂಟರಿ ಮೆಂಬರ್ ಆಗಿರ್ತಿದ್ದೆ. ಕೊಂಡಜ್ಜಿ ಬಸಪ್ಪ ನನಿಗೆ ಬ್ರದರ್ ಇನ್ ಲಾ ಅಗ್ಬೇಕು. ಅವ್ರು ಒಂದ್ಸಲ ಇದೇ ದಾವಣಗೆರೆ ಟಿ.ಬಿ.ಯಲ್ಲಿ ಕರೆಸಿ, ನೀವು ಬಂದ್ಬಿಡಪ್ಪ ನಿನಗೇ ಪಾರ್ಲಿಮೆಂಟ್ ಸೀಟು ಕೊಡ್ತೀವಿ ಅಂದ್ರು. ಅವಾಗ ಕಾಂಗ್ರೆಸ್ ಕ್ಯಾಂಡಿಡೇಟ್ಸ್ ಎಲ್ಲಾ ಗೆದ್ ಬಿಡ್ತಿದ್ರಲ್ಲ. ಸೀಟ್ ಸಿಕ್ರೆ ಗೆದ್ದಂಗ, ಅವಾಗ ನಾನು ರೆಫ್ಯೂಜ್ ಮಾಡ್ದೆ. ಸೋಷಲಿಸ್ಟ್ ಪಾಟಿಯಿಂದ ಕಂಟೆಸ್ಟ್ ಮಾಡ್ದೆ. ಅದೇ ಕೊಂಡಜ್ಜಿ ಬಸಪ್ಪ ಕಾಂಗ್ರೆಸ್ ಕ್ಯಾಂಡಿಡೇಟ್ ಆಗಿದ್ರು. ಅವಾಗ ನಾನು ಬೆಂಗಳೂರಾಗ ಇರ್ತಿದ್ದೆ. ಇವ್ರೆಲ್ಲಾ ಬೇರೆ ಬೇರೆ ಊರಾಗ ಇರ್ತಿದ್ರು. ಪಟೇಲ್ರು ಕಾರಿಗನೂರಾಗ, ವೆಂಕಟರಾಮನ್ ಬೆಂಗಳೂರಾಗ ಇದ್ರು. ಅವರು ಲೇಬರ್ ಲೀಡ್ರು. ಅವಾಗ ಪಾರ್ಟಿದೆಲ್ಲ ಜವಾಬ್ದಾರಿ ನನಗೆ. ಯಾಕಂದ್ರೆ ನನಗೆ ಅವಾಗ ಅರ್ನಿಂಗ ಭಾಳಾ ಚೆನ್ನಾಗಿತ್ತು. ಲೀಡಿಂಗ್ ಅಡ್ವಕೇಟ್ ಆಗಿದ್ದೆ. ಪಾರ್ಟಿಗೆ ಯಥೇಚ್ಛವಾಗಿ ಖರ್ಚು ಮಾಡ್ತಿದ್ದೆ.

ನೀವು ಮೊದಲು ಸೇರಿದ್ದು ಯಾವ ಪಾರ್ಟಿಗೆ ಎಸ್. ಪಿ. ಗೋ., ಪಿ.ಎಸ್.ಪಿ.ಗೋ?

ಎಸ್ಟೀಗೆ. ಪಿ.ಎಸ್.ಪಿ.ಗೆ ನಾವು ವಿರೋಧಾನೇ.

ಪಿ.ಎಸ್.ಪಿ.ಗೆ ಯಾರಿದ್ರು ಆವಾಗ?

ಪಿ.ಎಸ್.ಪಿ.ಗೆ ಗುರುಪಾದಸ್ವಾಮಿ, ಅನಂತಕೃಷ್ಣ, ಇದ್ರು, ಅಧ್ಯಕ್ಷ ಆಗಿದ್ದಾಗ, ಶಿವಪ್ಪ ಪಿ.ಎಸ್.ಪಿ. ಅಧ್ಯಕ್ಷ.

ಎಸ್.ಪಿ.ಗೂ, ಪಿ.ಎಸ್.ಪಿ.ಗೂ ಏನು ಅಭಿಪ್ರಾಯಗಳಿದ್ವು?

ಭಿನ್ನಾಭಿಪ್ರಾಯಗಳೇನು ಅಂಥಾವಲ್ಲ. ಅವ್ರು ಪಿ.ಎಸ್. ಪಿನವ್ರು. ಲೋಹಿಯಾ ಅಂದ್ರೆ ಅಲರ್ಜಿ. ಅವ್ರುದ್ದೇ ಒಂಥರಾ.

ಲೋಹಿಯಾ ಅಂದರೆ ಅವರಿಗ್ಯಾಕೆ ಅಲರ್ಜಿ?

ಅವ್ರು ತೀವ್ರ ಕಾರ್ಯಕ್ರಮ ಹಾಕ್ಕೋಳ್ಳೋದು, ಸ್ಟಗಲ್ಸ್ ಸತ್ಯಾಗ್ರಹ, ಭಾಳಾ ಪ್ರೋಗ್ರೆಸ್ಸಿವ್ ಥಿಂಕಿಂಗ್ ಅವ್ರವು….

ಆದ್ರೆ ಐಡಿಯಾಲಜಿಕಲ್ ಡಿಫರನ್ಸಸ್ ಏನಾಗಿದ್ದವು

ಅಂಥಾವು ಏನಿಲ್ಲ. ಅವೆಲ್ಲ ಮರ್ಜ್ ಆಗಿ ಸಂಯುಕ್ತ ಸೋಷಲಿಸ್ಟ ಪಾರ್ಟಿ ಆಯ್ತಲ್ಲ.

ಆಮ್ಯಾಲ ಯಾರು ಅಧ್ಯಕ್ಷರಾದ್ರು?

ನಾನಾ

ಅಂದ್ರೆ ನೀವು ಎಸ್. ಪಿ. ಗೂ ಅಧ್ಯಕ್ಷರಾಗಿದ್ರೀಎಸ್. ಎಸ್. ಪಿ. ಆದಾಗ್ಲೂ ನೀವಾ ಇದ್ರೀ

ಹೌದು.

ಎಲ್ಲೀವರೀಗೂ ಇದ್ರೀ?

ನೆನಪಿಲ್ಲ…. ಅವಾಗ ಗೆದ್ದಿದ್ದು ಪಟೇಲ್ರು, ಎಸ್. ಎಸ್. ಪಿ. ಆದಾಗ ಶಿವಮೊಗ್ಗದಾಗ ಅವಾಗ ಮೂವ್ ಮೆಂಟ್ ಸ್ಟ್ರಾಂಗಿತ್ತು. ಕಾಗೋಡು ಸತ್ಯಾಗ್ರಹದ ಹಿನ್ನೆಲೆ ಇತ್ತಲ್ಲ.

ಶಿವಮೊಗ್ಗ ಬಿಟ್ರೆ ಬೇರೆ ಯಾವ ಜಿಲ್ಲೆಯಲ್ಲಿ ಸ್ಟ್ರಾಂಗ್ ಇತ್ತು?

ಶಿವಮೊಗ್ಗ ಬಿಟ್ರೆ, ಹೈದ್ರಾಬಾದ್ ಕರ್ನಾಟಕದಾಗ ಬೀದರ್…. ರಾಯಚೂರು. ಅಲ್ಲಿ ನಾಗಪ್ಪ ಅಂತಾ ಇದ್ರು, ಮೈಸೂರು ಚೆನ್ನಾಗಿತ್ತು. ಶ್ರೀಕಂಠಶರ್ಮ ಅಂತ ಇದ್ರು. ಆಮ್ಯಾಲೆ ಬಳ್ಳಾರಿನಲ್ಲೂ ಕೆಲವು ಕಡೆ ಇತ್ತು. ಅಲ್ಲಲ್ಲಿ ಎಲ್ಲ ಕಡೆ ಇತ್ತು.

ಬಳ್ಳಾರಿಯಲ್ಲಿದಾಸನ್ ಸಾಲೋಮನ್ಇದ್ರಲ್ಲ ಅವರ್ಯಾಕೆ ಮುಂಚೂಣಿಗೆ ಬರ್ಲಿಲ್ಲ.

ಒಳ್ಳೇ ಲೇಬರ್ ಲೀಡರದ ಅವ್ರು. ಆಂಡ್ ಕಮ್ಯುನಿಟಿ ಡಿಸ್ ಅಡ್ವವಂಟೇಜ್ ಇರ್ತದೆ. ಬಿಕಾಸ್ ಹಿ ವಾಸ್ ಎ ಕ್ರಿಶ್ಚಿಯನ್. ಬಟ್ ಹಿವಾಸ್ ಎ ವೆರಿಗುಡ್ ಲೀಡರ್. ಅವ್ರು ಭಾಳಾ ವರ್ಷ ಟ್ರೇಡ್ ಯೂನಿಯನ್ ನ್ಯಾಗ ಇದ್ರು. ಹಿಂದ್ ಮಜ್ದೂರ್ ಪಂಚಾಯತ್ ಗೆ ಜಿಲ್ಲಾ ಅಧ್ಯಕ್ಷರಾಗಿದ್ರು. ಬಳ್ಳಾರಿಯಲ್ಲಿ ಭಾಳಾ ಹೋರಾಟ ಮಾಡ್ಯಾರ ಅವ್ರು. ಒಳ್ಳೇ ಲೀಡರ್. ನಮ್ಮ ಸ್ಟೇಟ್ ನ ಟಾಪ್ ಮೋಸ್ಟ್ ಟ್ರೇಡ್ ಯೂನಿಯನ್ ಲೀಡರ್ ಅವ್ರು. ವೈಜನಾಥ್ ಪಾಟೀಲೂ ಒಳ್ಳೇ ಲೀಡರ‍್ರು. ರಾಯಚೂರಿನ ನಾಗಪ್ಪ ಲೀಡಿಂಗ್ ಅಡ್ವಕೇಟ್ ಆಗಿದ್ರು ಅವ್ರೂ ನಮ್ಮ ಪಾರ್ಟಿಯವ್ರು. ಎಂ. ಎಲ್. ಎ. ಆಗಿದ್ರು.

ಸಾರ್, ನಿಮ್ಮ ಕಬ್ಬು ಬೆಳಗಾರರ ಸಂಘ ಸ್ಥಾಪನೆ ಹೋರಾಟದ ಬಗ್ಗೆ ಹೇಳ್ರೀ?

ಅದು ಸ್ಥಾಪನೆಯಾದದ್ದು ೩೦ ವರ್ಷಗಳ ಹಿಂದೆ ದಾವಣಗೆರೆ ಸಕ್ಕರೆ ಕಂಪನಿ ಪ್ರಾರಂಭವಾದ ವರ್ಷವೇ ನಾನು ಇಲ್ಲಿ ರೈತರ ಮೀಟಿಂಗ್ ಮಾಡಿ ಕಬ್ಬು ಬೆಳೆಗಾರರ ಸಂಘ ಸ್ಥಾಪನೆ ಮಾಡಿದೆ. ಅವತ್ತಿನಿಂದ ಇವತ್ತಿನವರೆಗೂ ನಾನು ಅಧ್ಯಕ್ಷ ಅಲ್ಲಿ. ಪ್ರತೀವರ್ಷನೂ ಕ್ರಶಿಂಗ್ ಶುರುವಾಗೋಕಿನ ಮೊದ್ಲು ಬೆಲೆ ವಿಚಾರದ ಬಗ್ಗೆ, ಮ್ಯಾನೇಜ್ ಮೆಂಟ್ ಯಾರೇ ಇರ್ಲಿ, ಮೊದ್ಲು ಐ.ಎ.ಎಸ್. ಆಫೀಸರ್ಸು ಜಾಯಿಂಟ್ ಸೆಕ್ಟರ್ ನಲ್ಲಿತ್ತು ಅದು. ಕುಕ್ಕವಾಡ ಸಕ್ಕರೆ ಕಾರ್ಖಾನೆ. ಆಮ್ಯಾಲೆ ಬೇರೆ ಅಧಿಕಾರಿಗಳು ಬಂದ್ರು. ಕೊನೆ ಕೊನೆಗೆ ಈಗ ಶ್ಯಾಮನೂರು ಶಿವಶಂಕರಪ್ಪ ಅಂಥವರು ಅದಾರ. ಅವತ್ತಿನಿಂದ ಇವತ್ತಿನವರಿಗೂ ಕಬ್ಬ ಬೆಳೆಗಾರರ ಸಂಘಕ್ಕೆ ನಾನ್ ಅಧ್ಯಕ್ಷ.

ರೈತರ ಪರವಾಗಿ ಅಲ್ಲೇನು ಮಾಡೋಕಾಗಿದೆ ಸಾರ್?

ಬೆಲೆ, ಬೆಲೆ ನಿಗದಿ ಮಾಡೋದಕ್ಕೆ ಅಗ್ರೀಮೆಂಟ್ ಆಗೋವರಿಗೂ ಹೋರಾಟ ಮಾಡ್ತೀವಿ.ಈ ಕಬ್ಬಿನ ವಿಷಯದಲ್ಲಿ, ಸಕ್ಕರೆ ಕಾರ್ಖಾನೆ ಬಂದ್ ಮಾಡಿಸಿ ಹೋರಾಟ ಮಾಡೋದ್ರಲ್ಲಿ ಅರ್ಥವಿಲ್ಲ. ಯಾಕಂದ್ರೆ ರೈತರು ಹೊಲದಲ್ಲಿ ಕಬ್ಬು ಇಟಗೊಂಡು ಒಣಗಿಸಿಕೊಳ್ಳೋಕೂ ಆಗಲ್ಲ. ಕಬ್ಬಿನ ಮ್ಯಾನೇಜ್ ಮೆಂಟ್ ಕೂಡ, ಕಬ್ಬು ಇಲ್ಲದೇ ಕಾರ್ಖಾನೆ ನಡೆಸೋಕ್ಕೂ ಆಗಾದಿಲ್ಲ. ಅದರಿಂದ ಯಾವುದೋ ಒಂದು ಘಟ್ಟದಲ್ಲಿ ಅಂಡರ್ ಸ್ಟ್ಯಾಂಡಿಂಗ್ ನಲ್ಲಿ ಕಬ್ಬಿಗೆ ಒಂದು ರೀಜನಬಲ್ ಬೆಲೆ ಕೊಡಿಸೋದಿಕ್ಕೆ ಹೋರಾಟ ಮಾಡ್ಬೇಕು. ನಾನು ಆಮರಣಾಂತ ಉಪವಾಸ ಕುಂತಿದ್ದೆ. ಇವ್ರು ಒಪ್ಪಿದ್ದಿಲ್ಲ ಮ್ಯಾನೇಜ್ ಮೆಂಟು. ಈಗ ಮ್ಯಾನೇಜ್ ಮೆಂಟು ಶಿವಶಂಕರಪ್ಪ ಅವ್ರು ತಗೊಂಡಿರಬಹ್ದು. ಅವರ ಗುಂಪು, ಮೊದ್ಲು ಜಂಟಿವಲಯದಲ್ಲಿತ್ತು. ಆಗ್ರೋ ಇಂಡಸ್ಟ್ರೀಜ್ ಕಾರ್ಪೋರೇಷನ್ ಮೆಜಾರಿಟಿ ಇತ್ತು. ಗೌರ್ಮೆಂಟ್ ಷೇರ್ಸ್ ಇದ್ವು. ಆ ಫ್ಯಾಕ್ಟರಿ ಇರೋದು ಪಟೇಲರ ಊರಿಗೆ ಪಕ್ಕದಲ್ಲೇ. ಮೊದ್ಲು ನಾನು ಒಂದು ಟನ್ ಗೆ ೧೦ ಪೈಸೆ ವಸೂಲ್ ಮಾಡ್ತಿದ್ವೆ ಸಂಘಕ್ಕೆ ಈಗೀಗ ೨೫ ಪೈಸೆಗೆ ಬಂದಿದೆ. ಅದರಲ್ಲಿ ಕರ್ನಾಟಕದ ಯಾವ ಕಬ್ಬಿನ ಬೆಳೆಗಾರರ ಸಂಘವೂ ಕಟ್ಟಿದೇ ಇರುವ ಭವ್ಯವಾದ ಕಟ್ಟಡವನ್ನು ಕಟ್ಟಿದ್ದೀನಿ. ಅದೇ ೨೫ ಪೈಸೆಯಲ್ಲಿ, ಸ್ಥಾಪನೆಯಾದ ೩೦ ವರ್ಷದಲ್ಲಿ ನಾನು ನಯಾಪೈಸೆ ರೆಮ್ಯುನಿರೇಷನ್ ತಗಂಡಿಲ್ಲ. ಇವತ್ತಿನ ದಿವಸದವರೆಗೂ. ಇವತ್ತಿಗೂ ಬೆಳೆಗಾರರ ಸಂಘ ಮತ್ತು ಆಡಳಿತ ಮಂಡಳಿ ಜೊತೇಗೆ ಮಾತುಕತೆ ನಡೆಸಿ, ಒಪ್ಪಂದ ಆಗಿ ಎರಡೂ ಕಡೆಯವ್ರು ಸಹಿ ಮಾಡಿದ ಮೇಲೆ ಕ್ರಶಿಂಗ್ ಶುರು ಆಗ್ತದೆ. ಒಂದ್ಸಾರಿ ಭಾಳ ಹಟ ಮಾಡಿದ್ರು ಅವ್ರು. ಆಡಳಿತ ಮಂಡಳಿಯವ್ರು. ಆವಾಗ ಸ್ಟ್ರೈಕ್ ಮಾಡ್ಬೇಕು ಅಂದ್ರು ರೈತರು. ನಾನು, ಬೇಡ ಸ್ಟ್ರೈಕ್ ಮಾಡಿದ್ರೆ ನಮ್ಮ ಕಬ್ಬು ಹೊಲದಾಗ ಒಣಗಿದ್ರೆ ಏನೂ ಪ್ರಯೋಜನ ಆಗಾದಿಲ್ಲ. ಅದಕ್ಕ ನಾನು ಅಮರಣಾಂತ ಉಪವಾಸ ಕೂಡ್ತೀನಿ ಅಂತಾ ಕೂತು ಬಿಟ್ಟೆ. ಇದು ಇಷ್ಟು ಎಕ್ಸ್ ಟ್ರೀಂ ಸ್ಟೆಪ್ ತಗಳ್ತಾರ ಅಂತಾ ಅವ್ರು ಅಂದ್ಕಂಡದ್ದಿಲ್ಲ. ಆಮ್ಯಾಲೆ ರಾತ್ರೋರಾತ್ರಿ ಶಿವಶಂಕರಪ್ಪರ ಮಗ ಮನಿಗೆ ಬಂದು ಇಲ್ಲಾ ನೀವು ಹೇಳಿದ್ದಕ್ಕೆ ಒಪ್ಕೊಂತೀನಿ ಅಂತ್ಹೇಳಿ ಬೆಲೆ ನಿಗದಿ ಮಾಡಿದ್ರು… ಹಿಂಗಾ ಹೇಳ್ಕಂತ ಹೋದ್ರಾ….. ಇಷ್ಟು ಸಾಕ್ರಿ.