ಕಾಗೋಡಿನ ವಿದ್ಯಮಾನಗಳ ಜೊತೆ ನೀವು ಸಂಬಂಧವನ್ನಿಟ್ಟುಕೊಂಡಿದ್ರಾ?

ಭಾಳಾ ಇತ್ತು. ನಾನ್‌ ಹೋಗ್ತಿದ್ದಿಲ್ಲ. ಗೋಪಾಲ್‌ ಗೌಡ್ರು ನಮ್ಮಲ್ಲೇ ಬರ್ತಿದ್ರು. ಅವ್ರು ಲಗ್ನ ಕೂಡ ನಾನಾ ಮಾಡ್ಬೇಕಾತು.

ನೀವು ಒಂದು ಕಡೆ ಹೇಳ್ತೀರಿ ಗೋಪಾಲಗೌಡ್ರು ಮತ್ತು ನನ್ನ ಸ್ನೇಹದಿಂದ ರಾಜಕೀಯವಾಗಿ ಏನೂ ಕೊಡೋಕಾಗ್ಲಿಲ್ಲ ಅಂತಾ?

ಹೌದೌದು…

ಯಾವ ರೀತಿ?

ಗೋಪಾಲಗೌಡ್ರು ಪಕ್ಷದ ಸಂಘಟನ ಸಲುವಾಗಿ ಭಾಳಾ ಕಷ್ಟ ಪಡತಿದ್ರು ಬಿಡ್ರೀ. ನನಗೆ ಅಸಮಾಧಾನ ಇದ್ದದ್‌ ಅಂದ್ರೆ ಬರೀ ತಿರುಗಾಟದಾಗಾ ಇರ್ತಿದ್ರು. ತಮ್ಮ ಕ್ಷೇತ್ರದಲ್ಲೇ ಆತು, ಶಿವಮೊಗ್ಗಾ ಜಿಲ್ಲೇದಾಗಾನಾ ಆಯ್ತು, ಹೊರಗಡೆ ಎಲ್ಲೇ ಆಯ್ತು ಒಂದು ಹೋರಾಟ ಸಂಘಟನೆ ಮಾಡ್ಲಿಲ್ಲ. ರೈತರ ಸಂಘಟನೆ ಮಾಡ್ಬೇಕಾಗಿತ್ತು. ಅವ್ರು. ಕಾಗೋಡಿಂದು ಒಂದಾ ಹೇಳ್ತಾ ಬರ್ತಿದ್ರು ಹೊರ್ತಾಗಿ ಮತ್ತೊಂದು ಎಲ್ಲೂ ಮಾಡ್ಲೇ ಇಲ್ಲ. ಜಮೀನ್ದಾರಿ ವಿರುದ್ಧ ಎಲ್ಲೂ ಹೋರಾಟ ಮಾಡ್ಲಿಲ್ಲ. ಇದು ನನಗ ಅಸಮಾಧಾನ ಇದ್ದದ್ದು. ನಾನು ಎಲ್ಲೇ ಜಮೀನ್ದಾರಿ ಇರ್ಲಿ ಅದರ ವಿರುದ್ಧ ರೈತರ ಹೋರಾಟ ಮಾಡ್ಬೇಕಂತಿಳ್ಕೊಂಡು ಅದರ ಬಗ್ಗೆ ಆಸಕ್ತಿ ವಹಿಸ್ತಿದ್ದೆ. ನಾವು ಧಾರವಾಡ ತಾಲೂಕಿನೊಳಾಗ ಆ ವಾತಾವರಣ ಬೆಳೆಸಿದ್ವಿ. ರೈತರನ ಪ್ರಚೋದಿಸ್ತಿದ್ವಿ. ಅವ್ರಿಗೆ ಗೇಣಿ ಕೊಡಬ್ಯಾಡ್ರಿ ಅಂತಿದ್ವಿ. ಸರಕಾರ ನಿಷ್ಕರ್ಷೆ ಮಾಡಿದ ಅಂದ್ರೆ ಭೂಕಂದಾಯದ ಆರುಪಟ್ಟು, ಅದನ್ನ ನೀವು ಸರ್ಕಾರಕ್ಕ ಕೊಡ್ರೀ ಹೊರತಾಗಿ ಅವ್ರೇ ಬೇಡಿದ್ರೂ ಕೊಡಬ್ಯಾಡ್ರೀ, ಬೆಳಿಯೊಳಾಗ ಪಾಲ್‌ ಕೊಡಬ್ಯಾಡ್ರೀ ಇಂಥಾದ್ದೆಲ್ಲ ಹೇಳ್ತಿದ್ವಿ. ಇವ್ರು ಇಂಥಾದ್ದನ್ನೆಲ್ಲ ಯಾಕ ಮರೆತ್ರು ಅಂತಾ ನನಗ ಅಸಮಾಧಾನ ಇತ್ತು.

ಬಹುಶಃ ಗೋಪಾಲಗೌಡ್ರು ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡ ನಂತರ ರಾಜ್ಯಾದ್ಯಂತ ಒಂದು ಪ್ರಬಲ ರೈತ ಚಳವಳಿ ಕಟ್ಟಬೇಕು ಅನ್ನೋ ಇಚ್ಛೆ ಕುಸೀತು ಅಂತ ಅರ್ಥ ಇದೆಯಾ?

ಹೌಹೌದು. ಬರೇ ಸ್ನೇಹಿತ್ರನ್ನ ಕೂಡಿಸ್ತಿದ್ರು ಬಿಡ್ರೀ. ಇವ್ರು ಹೋಗ್ತಿದ್ರು, ಅವ್ರು ಕೂಡ್ತಿದ್ರು. ಅಷ್ಟರ ಹೊರತಾಗಿ ಸಂಘಟನೆಯ ತಳಹದಿ ಇರ್ತಿದ್ದಿಲ್ಲ. ಕಾರ್ಮಿಕರ ಸಂಘಟನೆ ಕೆಲವು ದಿವ್ಸ ಆತು ಬೆಂಗಳೂರಿನೊಳಗೆ ಮಿನರ್ವ ಮಿಲ್‌ ಕಾರ್ಮಿಕರ ಸಂಘ ಸೋಷಲಿಸ್ಟರ ಕೈಯಾಗ ಇತ್ತು. ಅದನ್ನು ಕಳ್ಕೊಂಡು ಬಿಟ್ರು.

ಅವರು ರೈತ ಕಾರ್ಮಿಕರ ಸಂಘಟನೆಗಿಂತ ಪಕ್ಷದ ಕಾರ್ಯಕರ್ತರನ್ನ ಸಂಘಟಿಸ ಬೇಕಂತ ಹೊರಟ್ರು ಅಂತಾ ಕಾಣಿಸ್ತದೆ. ಅಧಿಕಾರ ರಾಜಕಾರಣದ ಪ್ರಭಾವ ಇರಬಹುದಾ?

ಹೌದೌದು ಒಂದು ವೈಟ್‌ ಕಾಲರ್ಡ್‌ ಈ ಮುಖಾಂತರ ಹೊರಟು ಬಿಟ್ರು ಅವ್ರು.

ನನಗ ಈ ವೈಟ್‌ ಕಾಲರ್ಡ್‌ ಇವ್ರು ಅಂದ್ರ ನನಗ ಸೇರ್ಕಿ ಇರ್ತಿರ್ಲಿಲ್ಲ.

ನೀವು ಹೆಬ್ಬಳ್ಳಿ ಹೋರಾಟದ ನಂತರ ಬೇರೆ ಯಾವ ಹೋರಾಟ ಮಾಡಿದ್ರೀ?

ನನಗ ಇಸ್ವೀ ಗಿಸ್ವೀ ನೆನಪಿಲ್ಲ ಗೋಡೌನ್‌ ಅಂತಾ ಇತ್ತು ಈ ಆಹಾರ ಧಾನ್ಯಗಳ ಕೊರತೆ ಬಿದ್ದಾಗ, ಸರಿಯಾಗಿ ವಿತರಣ ಆಗ್ಲಿ ಅಂತ ಹುಬ್ಬಳ್ಳಿಯೊಳಾಗ ಸೆಂಟ್ರಲ್‌ ಗೋಡೌನ್‌ ಮೇಲೆ ದಾಳಿ ಮಾಡಿ ಗೋಡೌನ್‌ ಲೂಟ್‌ ಮಾಡ್ಬೇಕು ಅಂತಿಳ್ಕೊಂಡು ಒಂದು ಸಂಘಟನಾ ಮಾಡಿದ್ವಿ. ಅದ್ರೊಳಗೆ ಕಮ್ಯುನಿಸ್ಟ್ರು ಸಹಕಾರಾನೂ ತಗೊಂಡಿದ್ದೆ ನಾನು. ಮುಧೋಳ್‌ ಅಂತಾ ಇದ್ರು.

.ಜೆ. ಮುಧೋಳ್‌?

ಹೌದು. ಅವರ ಜೊತೀಗ ದೊಡ್ಡ ಸಂಘಟನೆ ಮಾಡಿ ಒಂದು ಮೂರು ತಿಂಗಳ ಹುಬ್ಬಳ್ಳಿಯೊಳಗ ಪ್ರತೀ ಆದಿತ್ಯವಾರ ಮೀಟಿಂಗ್‌ ಮಾಡೋದು. ಜನ್ರನ್ನ ಕೂಡಿಸ್ಕೊಂತ ಹೋಗೋದು. ಅಂತ್ಯದೊಳಗೆ ಗೋಡೌನ್‌ ಮ್ಯಾಲ ದಾಳಿ ಮಾಡಿ ಲೂಟಿ ಮಾಡ್ಬೇಕು ಅನ್ನೋ ಕಾರ್ಯಕ್ರಮ. ಹಾಗ ಮಾಡಬೇಕಾದ್ದ ಹಿಂದಿನ ದಿವ್ಸನೇ ಪೋಲೀಸ್ರಿಗೆ ತಿಳ್ದು ಮುಧೋಳ್ರನ್ನ ಅರೆಸ್ಟ್‌ ಮಾಡಿದ್ರು. ನಾನ್‌ ಮರುದಿವ್ಸ ಯಥಾ ಪ್ರಕಾರ ಜನಾ ಇತ್ತು. ಕರ್ಕೊಂಡು ಹೋದೆ. ಟೈಮಿಗೆ ಪೋಲೀಸ್ರು ಬಂದು ನಮ್ಮನ್ನೆಲ್ಲ ಅರೆಸ್ಟ್‌ ಮಾಡಿದ್ರು ಒಂದಾ ಕಡೀಗೆ ಇಡ್ಲಿಲ್ಲ ಎಲ್ಲೆಲ್ಲೋ ಇಟ್ರು. ಮ್ಯಾಜಿಸ್ಟ್ರೇಟರ ಎದುರ್ಗೆ ಹಾಜರಾನೂ ಮಾಡಿದ್ರು ನಮ್ಮನ್ನ.

ಎಷ್ಟು ದಿನ ಅರೆಸ್ಟು ಆಗಿದ್ರಿ ಅವಾಗ?

ಸುಮಾರು… ಒಂದು ವಾರ. ಅದು ಆಮ್ಯಾಲೆ, ಮುಮ್ಮಿಗಟ್ಟಿ ರೈತ ಸಂಘಟನೆಯನ್ನಾ ಬಲವಾಗಿ ಸಂಘಟನೆ ಮಾಡಿದ್ವಿ. ಸಾಧಾರಣ ನಾನಿದ್ದ ಐದಾರು ವರ್ಷ ಗೇಣಿ ಕೊಡಸೇ ಕೊಟ್ಟಿದ್ದಿಲ್ಲ. ಅಷ್ಟೇ ಅಲ್ಲ ನಮಗವಾಗ ಮುಂಬೈ ಟೆನೆನ್ಸಿ ಅಂಡ್‌ ಅಗ್ರಿಕಲ್ಚರ್‌ ಲ್ಯಾಂಡ್ಸ್‌ ಆಕ್ಟ್‌ ಏನಿತ್ತು. ಅದ್ರಾಗ ಸೆಕ್ಷನ್‌ ೨೫ ಅಂತ. ಒಂದು ಪ್ರಾವಿಜನ್‌ ಇತ್ತು. ಆ ಪ್ರಾವಿಜನ್‌ ಪ್ರಕಾರ, ಯಾರಾದ್ರೂ ಭೂಮಾಲಕ ಎರಡು ವರ್ಷದ ತನಕ ಭೂಮಿ ಸಾಗುವಳಿ ಮಾಡ್ಲಿಲ್ಲ ಅಂತಂದ್ರ ಆ ಭೂಮೀನಾ ಸರ್ಕಾರ ವಶಪಡಿಸ್ಕೊಂಡು ಭೂಮಿ ಇಲ್ಲದವ್ರಿಗೆ ಸಾಗುವಳಿ ಕೊಡಬೇಕು ಅಂತಾ ಇತ್ತು. ಆ ಪ್ರಕಾರ ಮುಮ್ಮಿಗಟ್ಟಿಯೊಳಾಗ ಹೋರಾಟನ್ನ ಮಾಡಿದ್ವಿ. ಅಲ್ಲಿ ಮುಮ್ಮಿಗಟ್ಟಿ ದೇಸಾಯಿಯವ್ರು ಐನೂರು ಎಕ್ರೆ ಭೂಮಿ ಸರ್ಕಾರಕ್ಕ ಕೊಡಿಸಿ, ಅದನ್ನ ಭೂರಹಿತ ಕಾರ್ಮಿಕರಿಗೆ ಹಂಚಿಕೆ ಮಾಡ್ಸಿದ್ವಿ. ಅದ್ರಲ್ಲೂನೂ ಪರಿಶಿಷ್ಟ ವರ್ಗದವರಿಗೆ ಪ್ರಾಮುಖ್ಯ ಕೊಟ್ಟು, ಅವರಿಗೆ ಭೂಮಿ ಕೊಡಿಸಿದ್ವಿ. ಈ ಕೆಲವು ದಿವಸದ ಹಿಂದಿನವರಿಗೂ ಮುಮ್ಮಿ ಗಟ್ಟಿ ಭೂಮಿ ಹರಿಜನರ ಸ್ವಾಧೀನದಲ್ಲೇ ಇತ್ತು. ಮುಂದೆ ಯಾವ ಯಾವುದೋ ಕಾರಣಕ್ಕ ನನಗ ಸಂಪರ್ಕ ಇಲ್ಲದಂಗಾತು. ಈಗ ಈ ಭೂಮಿ ಅವರ ವಶದಲ್ಲಿ ಐತೋ ಏನಾಗೇತೋ ಗೊತ್ತಿಲ್ಲ ನನಗ.

೧೯೪೬ರಲ್ಲಿ ಧಾರವಾಡದಾಗ ಬೀಡಿ ಕಾರ್ಮಿಕರ ಯೂನಿಯನ್‌, ಮುನ್ಸಿಪಲ್ವರ್ಕರ್ಸ್ಯೂನಿಯನ್ಗಳನ್ನ ಕಟ್ಟಿದ್ರೀ. ಕಾರ್ಮಿಕರ ಸಂಘಟನೆಗಳನ್ನು ಕಟ್ಟಿ ಹೋರಾಟಗಳನ್ನು ಮಾಡುವ ಉತ್ಸಾಹ ೬೦೭೦ರ ನಿಮ್ಮ ಪ್ರವರ್ಧಮಾನದ ದಿನಗಳಲ್ಲೇ ಇರಲಿಲ್ಲ ಯಾಕೆ?

ಕಾರಣ ಏನಂದ್ರೆ ಈ ಕಾರ್ಮಿಕರು ಏನದಾರ. ಅವ್ರು A.I.T.U.C ಬಿಟ್ಟು ಇಂಟಕ್‌ ಕಡೆ ಹೊಂಟಿದ್ರು. ಏನ್‌ ಕಾರಣ ಅಂದ್ರೆ, ಅವರಿಗೆ ಒಂದ್‌ ಹತ್‌ ರೂಪಾಯಿ ಭತ್ತೆ ಹೆಚ್ಚು ಮಾಡಿದ್ರೆ ಅವರ ಹಿಂದೇನೇ ಹೋಗ್ಬಿಡೋದು ಕಾರ್ಮಿಕರ ಗುಣ. ಹಿಂಗ ಇವ್ರ ಲಾಯಲ್ಟಿ ನಂಬ್ಲಿಕ್ಕೆ ಆಗೋದಿಲ್ಲ ಅಂತಾ ನನ್ನ ಅನುಭವ. ಕಾರ್ಮಿಕರು ಹೋರಾಟಕ್ಕೆ ಲಾಯಲ್‌ ಆಗಿ ಇರೋದಿಲ್ಲ ಇವರಿಂದ ಕ್ರಾಂತಿ ಸಾಧ್ಯ ಆಗೋದಿಲ್ಲ. ಏನಾದ್ರೂ ಕ್ರಾಂತಿ ಆಗೋದಿತ್ತಂದ್ರೆ ರೈತ ಸಂಘದಿಂದ ಆಗ್ತದೆ. ರೈತರೇ ಕ್ರಾಂತಿ ಮಾಡೋರು.

ಕಾರ್ಮಿಕರಲ್ಲಿ ಹೋರಾಟದ ಗುಣ ಕಮ್ಮಿ ಇರ್ತದೆ. ಆದ್ರ ರೈತರಲ್ಲಿ ಹೆಚ್ಚರ್ತದ. ಮತ್ತ ಅವ್ರು ಹೋರಾಟಕ್ಕ ಫರ್ಮ್‌ ಇರ್ತಾರ. ಲಾಯಲ್‌ ಆಗಿ ಇರ್ತಾರ.

ಹಂಗನ್ನಂಗಿದ್ರೆ ಹೆಬ್ಬಳ್ಳಿ ಮೂಲಕ ಇದು ಸಾಬೀತಾಗಬೇಕಾಗಿತ್ತು. ರೈತರಿಗೆ ಹೋರಾಟ ಮಾಡಿ ಜಮೀನು ಕೊಡಿಸಿದ್ರಿ. ಆದ್ರೆ ಮುಂದೆ ಅವರು ಭೂಮಿ ಪಡೆದ ಮೇಲೆ ದೂರವಾದ್ರು. ಅಲ್ಲವಾ?

ಇಲ್ಲ ಹಾಗೇನಾಗಿಲ್ಲ. ಇಂದಿನವರೆಗೂ ಅವರು ಲಾಯಲ್‌ ಆಗೇ ಇದ್ದಾರೆ. ಹಿಂದಿನವ್ರು ಸತ್ತು ಹೋಗ್ಯಾರ ಬಿಡ್ರೀ. ಗರಗ, ಮಮ್ಮಿಗಟ್ಟಿ, ಹೆಬ್ಬಳ್ಳಿ ರೈತರು ಕೊನೀವರೆಗೂ ನಮಗ ಲಾಯಲ್‌ ಆಗೇ ಇದ್ರು.

ನಮಗ ಅಂದ್ರ ನಿಮ್ಮ ಪಾರ್ಟಿ ಐಡಿಯಾಲಜಿಗೋ ಇಂಡ್ಯುವಿಶಲ್ಆಗಿ ನಿಮಗೋ?

(ನಗು) ಇಂಡ್ಯುವಿಶ್ಯುಯಲ್‌ ಆಗಿ ಇದ್ರು.

ನಿಮ್ಮ ಮೇಲಿನ ಅಭಿಮಾನ, ಗೌರವಗಳ ಕಾರಣ?

ಹೌದು. ರಾಜಕಾರಣದೊಳಗೂ ಹಿಂಗಿಂಗ ಅಂತ ನಾನ್ಹೇಳಿದ್ರೆ ಆಗ್ತಿತ್ತು.

ರೈತರಲ್ಲಿ ಹೋರಾಟದ ಮನೋಭಾವ ಬೆಳೆಸುವ ಅಥವಾ ಸಮಾಜವಾದಿ ವಿಚಾರಗಳನ್ನ ತಿಳಿಸುವ ಕೆಲಸ ಆಯಿತಾ?

ನಮಗಾ ಮೀನ್ಸ್‌ ಇದ್ದಿದ್ದಿಲ್ಲ ನೋಡ್ರೀ….ಅದಾ ಕೊರತೆ ಆಗಿದ್ದು.

ಹೋರಾಟದ ನಿರಂತರತೆಯಲ್ಲಿ ಆಗೋ ಕೆಲಸ ಅದು. ದುಡ್ಡಿನಿಂದಲೇ ಹೋರಾಟದ ಆಗ್ತದೆ ಅನ್ನಾಕಾಗಲ್ಲ. ಮೀನ್ಸ್ ಅಂದ್ರೆ ದುಡ್ಡೆ ಅಂತೇನಲ್ಲಲ್ಲ. ಜನರ ನಡುವೆ ಹೋದ್ರೆಎಲ್ಲ ಲಭ್ಯವಾಗ್ತವೆ ಅಲ್ವಾ?

ಹೌದು… ಅದು ಆಗ್ಲಿಲ್ಲ

ಹೆಬ್ಬಳ್ಳಿ, ಮಮ್ಮುಗಟ್ಟಿಗಳಲ್ಲಿ ಜಮೀನ್ ದಾರರ ಭೂಮಿಯನ್ನ ಭೂರಹಿತರಿಗೆ ಹಂಚುವ ಹೋರಾಟಗಳು, ಕೃಷಿಕ್ಷೇತ್ರದಲ್ಲಿ ನೀವು ಮಾಡಿದ ಮಹತ್ವದ ಹೋರಾಟಗಳು. ಹಾಗೇನೆ ಹುಬ್ಬಳ್ಳಿ ಧಾರವಾಡದಂತಹ ಮಹಾನಗರಗಳಲ್ಲಿ ನೀವು ನಗರದ ಬಡವರಿಗೆ ನಿವೇಶನ ಕೊಡಿಸಲು ನಡೆಸಿದ ಆಂದೋಲನ ಕೂಡ ಅಷ್ಟೇ ಮಹತ್ವದ್ದು. ಹೋರಾಟದ ಬಗ್ಗೆ ವಿವರಿಸ್ತೀರಾ?

ನಾನು, ಇಲ್ಲಿ, ರೈತ ಸಂಘಟನೆಗೆ ಭಾಳಷ್ಟು ಅಡ್ದಾಡಲಿಕ್ಕೆ ಆಗ್ಲಿಲ್ಲ. ಆಮ್ಯಾಲೆ ಪಟ್ಟಣ ಪ್ರದೇಶದಲ್ಲಿ ನಾನು ಏನಾರ ಮಾಡ್ಬೇಕಲ್ಲ ಅಂತಿಳ್ಕೊಂಡು ಇಲ್ಲಿ ನಿವೇಶನ ರಹಿತರ ಸಂಘನೆಯನ್ನು ಹುಟ್ಟುಹಾಕಿದೆ. ಇದು ೧೯೭೮ರಲ್ಲಿ ನಿವೇಶನ ರಹಿತರನ್ನ ಸಂಘನೆ ಮಾಡ್ಲಿಕ್ಕೆ ಮೊದ್ಲು ಹುಬ್ಬಳ್ಳಿಯೊಳಗೆ ಶುರುಮಾಡಿದ್ದು. ಸಂಘನೆ ಭಾಳಾ ಬಲವಾಗಿ ಆತು. ಮೊದಲನೇ ಹಂತದೊಳಗ ಹತ್ತುಸಾವಿರ ನಿರಾಶ್ರಿತರಿಗೆ ಒಂದು ಕಾಲೋನಿ ಮಾಡಿ ಕೊಡಬೇಕು ಅಂತಿಳ್ಕಂಡು ಮುನ್ಸಿಪಲ್ ಕಾರ್ಪೋರೇಷನ್ ನವರ ಕೂಡ ಹೋರಾಟದ ಪ್ರಾರಂಭದ ಆದದ್ದು. ಮುನ್ಸಿಪಲ್ ಕಾರ್ಪೋರೇಷನ್ ಖಾಲಿ ಜಾಗ ಎಲ್ಲದಾವು ಅವುಗಳನ್ನ ಆಕ್ರಮಿಸಿಕೊಂಡು ನಾವು ವಸಾಹತುಗಳನ್ನು ಸ್ಥಾಪಿಸಿದ್ವಿ. ಕಾರ್ಪೋರೇಷನ್ ಅಧೀನದೊಳಗೆ ದೊಡ್ಡದೊಡ್ಡ ಸೈಟುಗಳನ್ನೇ ಮಾಡಿ ಹಂಚಲಿಕ್ಕೆ ತಯಾರಿ ಮಾಡಿಟ್ಟಿದ್ರು. ಅವನ್ನ ನಾವು ಆಕ್ರಮಿಸಿಕೊಂಡು ಬಿಟ್ಟಿ. ಸಾಧಾರಣ ಐದಾರು ಸಾವಿರ ಜನ ನಾವು ಅಲ್ಲಿ ಇದ್ರು, ಆದ್ರೆ ಅಧಿಕೃತವಾಗಿ ಅವು ನಮ್ಮವು ಆಗಬೇಕಲ್ಲ. ಪಟ್ಟಕೊಡ್ರೀ ಅಂತಾ ಹೋರಾಟದ ಶುರುಮಾಡಿದ್ವೀ… ಜನವರಿ ೨೬ನೇ ತಾರೀಖು ರಿಪಬ್ಲಿಕ್ ಡೇ ಅನ್ನ ಭಾಳಾ ಸಂಭ್ರಮದಿಂದ ಆಚರಿಸಿದ್ವಿ. ಆಚರಿಸಿ ನಾನು ಧಾರವಾಡಕ್ಕ ರಾತ್ರಿ ಬಂದೆ. ಅಲ್ಲಿ ಬರೇ ಜೋಪಡೀ ಹಾಕಿಕೊಂಡಂತಹ ಜನ ಉಳ್ಕಂಡು ಬಿಟ್ರು. ರಾತ್ರಿ ಕಾರ್ಪೋರೇಷನ್ ದವ್ರು, ಪೋಲಿಸರ ಸಹಾಯದಿಂದ ಕಿತ್ತೊಗಿಯಲಿಕ್ಕೆ ಶುರು ಮಾಡಿಬಿಟ್ರು. ಕೆಲವಕ್ಕ ಬೆಂಕೀನೂ ಹಚ್ಚಿ ಬಿಟ್ರು. ಅವಾಗ ಫೋನ್ ನ್ಯಾಗ ನನಗ ಸಂಪರ್ಕ ಮಾಡಿ ಹೀಗೀಗ ಆಗೇದ ಅಂತಾ ತಿಳಿಸಿದ್ರು. ನಾನು ಆಗ್ಗಾ ಹೋದೆ. ಪೋಲೀಸ್ರು ನನ್ನನ್ನ ೨೫ – ೩೦ ಜನ ಕಾರ್ಯಕರ್ತರ ಸಮೇತ ಅರೆಸ್ಟ್ ಮಾಡಿದ್ರು. ನಾನು ನೀವು ನಮ್ಮನ್ನ ಅರೆಸ್ಟ್ ಮಾಡಿದ್ರೀ, ಅಥವಾ ಏನಾರ ಡಿಸ್ಟರ್ಬ್ ಮಾಡಿದ್ರೀ ಅಂತಂದ್ರ ನಾನು ಅಮರಣ ಉಪವಾಸ ಕೈಕೊಳ್ತೀನಿ, ಏನಾದ್ರೂ ಬಗೆಹರಿಯೋದು ಇತ್ತಪ್ಪಾ ಅಂದ್ರ ಮಾತುಕತೀ ಮೂಲಕ ಬಗೆ ಹರಿಸ್ರೀ ಅಂತ ಮುಂಚೇನ ಹೇಳಿದ್ದೆ. ಅರೆಸ್ಟು ಮಾಡಿದ್ರು, ಮಾಡಿ ಕಸ್ಟಡಿಯೊಳಗಾನಾ ಉಪವಾಸ ಪ್ರಾರಂಭ ಮಾಡಿಬಿಟ್ಟೆ. ಮಾಡಿದ ೪ನೇ ದಿವ್ಸಕ್ಕ ನನ್ನ ಆಸ್ಪತ್ರೆಗೆ ಅಡ್ಮಿಟ್ ಮಾಡಿದ್ರು, ಆಸ್ಪತ್ರೆಗೆ ಅಡ್ಮಿಟ್ ಮಾಡಿದ ಮೇಲೇ…. ಅದೇನು ಸರಕಾರದ ಗಮನಕ್ಕೆ ಹೋತೋ ಏನೋ ಒಪ್ಪಂದಕ್ಕ ಬಂದರ್ ರೀ. ಒಪ್ಪಂದಕ್ಕ ಬಂದು ನಿವೇಶಗಳ್ದು ಜಾಗ ಎಪ್ಪತ್ತು ಎಕ್ರೆ ಇತ್ತೆನೋ ಕಾಣಿಸ್ತದ. ಅವನ್ನ ನಾವು ರೆವಿನ್ಯೂ ಮ್ಯಾಪ್ ನೋಡಿ ರೀ ಡ್ರಾ ಮಾಡ್ತೀವಿ. ನಿಮಗ ೨೦ – ೩೦, ರಂಗ ನಿವೇಶಗಳನ್ನ ಮಾಡಿ ಹಂಚ್ತೀವಿ. ನೀವು ಉಪವಾಸ ಕೈಬಿಡ್ರೀ ಅಂದ್ರು. ಗುಂಡುರಾವ್ ಚೀಫ್ ಮಿನಿಸ್ಟ್ರು. ಅಂದಾ ನನ್ನ ಕೂಡ ಸಂಪರ್ಕ ಮಾಡಿ ನಿವೇಶನ ಕೊಡ್ತೀವಿ. ಉಪವಾಸ ಕೈಬಿಡ್ರೀ ಅಂದ. ಮೊದ್ಲು ೧೨೦೦ ಜನಕ್ಕ ಮಾಡಿದ್ರು. ಅದ್ರ ಮುಂದ ಅದನ್ನ ಬೆಳೆಸ್ಕೋತ, ಬೆಳೆಸ್ಕೋತ ಬಂದು ಎರಡು ಸಾವಿರ ಜನ ಆತು. ಈಗ ಆನಂದ ನಗರ ಅಂತಿಳ್ಕೊಂಡು ಹುಬ್ಬಳ್ಳಿಯೊಳಗ, ಒಂದು ಕಾಲೋನಿ ಆಗ್ಯಾದ.

ನಂದು ಹತ್ತು ಸಾವಿರ ಜನ್ರದು ಗುರಿ ಐತಿ. ನಾನು ಬಿಡೋದಿಲ್ಲ. ಮುಂದೆ ಹೋರಾಟ ಮಾಡ್ತೀನಿ ಅಂತಾ ಇದ್ದೆ. ಆಮ್ಯಾಲೆ ಹುಬ್ಬಳ್ಳಿಯೊಳಗೆ ಒಂದು ಫಾರೆಸ್ಟ್ ಲ್ಯಾಂಡು ಅಂತಾ ಅವರಂದ್ರು. ನಾನೆಲ್ಲ ರೆಕಾರ್ಡ್ಸು ತೆಗೆಸಿದನಂತರ ಅದು ಫಾರೆಸ್ಟ್ ಅಲ್ಲ, ಗೌರ್ಮೆಂಟ್ ಲ್ಯಾಂಡು ಅಂತಾ ಸಿಗ್ತು. ಸಿಕ್ಕ ಮ್ಯಾಲೆ ಅದರ ಮ್ಯಾಲೆ ಹೋರಾಟ ಮಾಡ್ಬೇಕಲ್ಲ, ಆ ಪ್ರದೇಶ ನಮಗ ಬೇಕು ಅಂತಾ ಅದೂ ಒಂದು ಮೂರು ವರ್ಷಾನಾ ನಡೀತು. ಕೊನೆಗೆ ಬಂಗಾರಪ್ಪ ಚೀಫ್ ಮಿನಿಸ್ಟ್ರು ಆದಾಗ ಅವ್ರು ಕನ್ ಸಿಡರ್ ಮಾಡಿದ್ರು. ಇಲ್ಲಾ ಪೂಜಾರಿ ಯವ್ರು ಹೇಳೋದು ಖರೇ ಐತಿ. ಅವ್ರು ರೆಕಾರ್ಡ್ಸ್ ತಂದು ತೋರಿಸಿದ್ರು ನನಗ ಫಾರೆಸ್ಟ್ ಲ್ಯಾಂಡ್ ಅಲ್ಲ ಅದು. ಗೌರ್ಮೆಂಟ್ ಫೆಲೋ ಲ್ಯಾಂಡ್ ಅದು. ಒಂದು ನೂರ ನಲವತ್ ಎಕ್ರೀ ಅದು. ಅದನ್ನ ನಗರಾಭಿವೃದ್ಧಿ ಪ್ರಾಧಿಕಾರಕ್ಕ ಕೊಟ್ರು ಅವ್ರು. ಅವನ್ನ ಡೆವಲಪ್ ಮಾಡಿ ನಿವೇಶನ ರಹಿತರಿಗೆ ಹಂಚ್ರೀ ಅಂತಾ. ಅಲ್ಲೊಂದು ಮೂರ್ ಸಾವಿರ ಜನರಿಗೆ ಫ್ರೀಯಾಗಿ ನಿವೇಶನ ಸಿಗ್ತು. ಈಗದಾ ಅದು. ನೀವು ನೋಡುವಂತಾ ನಗರ, ಕಾಲೋನಿ ಅಂದ್ರಾ ಎಲ್ಲಾ ಸ್ಲಮ್ ಗಿಮ್ ನಂಗ ಏನಿಲ್ಲ. ಭಾರೀ ಚಂದ ಅದಾ ಅದು.

ನಿವೇಶನಸಿಕ್ಕಿತು. ಆಮೇಲೆ ಮನೆಗಳನ್ನೂ ಅವರೇ ಕಟ್ಟಿಕೊಂಡರೋ ಅಥವಾ ಸರಕಾರ ಕಟ್ಟಿಸಿ ಕೊಟ್ಟಿತೋ ?

ಸರಕಾರ ಮನಿ ಕಟ್ಟಿಸಿ ಕೊಟ್ತು. ಮೊದ್ಲು ಹತ್ ಸಾವಿರ ತುಂಬ್ರಿ ಮನೀ ಕಟ್ಟಿಸಿ ಕೊಡ್ತೀವಿ. ಆ ಮ್ಯಾಲೆ ಉಳಿದದ್ದು ಕಟ್ಟರೀ ಅಂತ.

ನಾವದಕ್ಕ ಡಾ. ರಾಮಮನೋಹರ ಲೋಹಿಯಾ ನಗರ ಅಂತ ಹೆಸರಿಟ್ಟೀವಿ. ನೋಡುವಂತ ನಗರ ಆಗೈತದು. ಅದಾದ ನಂತರ ಈಗ ಎರಡು ವರ್ಷದಿಂದ ಧಾರವಾಡದಾಗ ನಡೇಸೀವಿ. ಭೂಮಿ ಮಂಜೂರು ಆಗಿ ಪ್ಲಾಟ್ ತಯಾರ್ ಆಗ್ಯಾವ. ಅಪ್ಲಿಕೇಶನ್ಸ್ ಕರದಾರ. ಜನ ಅಪ್ಲಿಕೇಶನ್ ಹಾಕ್ಯಾರ. ಪ್ರತೀ ಆದಿತ್ಯವಾರ ನಾವು ಮೀಟಿಂಗ್ ಮಾಡ್ತೀವಿ.

ಈಗಲೂ ಮೀಟಿಂಗ್ ಮಾಡ್ತಿದ್ದೀರೀ ?

ಹೌದು ಈಗ್ಲೂ ನಡದದ. ಇವತ್ತು ಆದಿತ್ಯವರಲ್ಲ. ಇವತ್ತು ಸಾಯಂಕಾಲ ಐದು ಗಂಟೆಕ್ಕ ಮೀಟಿಂಗ್ ಅದಾ. ಅವತ್ತೀನಿಂದ ಒಂದ್ ಏನ್ ಇಟ್ಟೀವಿ ಅಂದ್ರೆ ಪ್ರತೀ ಆದಿತ್ಯವಾರ ಮೀಟಿಂಗ್ ಮಾಡೋದು.

ಸಂಘಟನೆಯ ಹೆಸರೇನಿಟ್ಟೀರಿ ?

ನಿವೇಶನ ರಹಿತರ ಆಂದೋಲನ ಅಂತಾ. ಹುಬ್ಬಳ್ಳೀದು, ಹುಬ್ಬಳ್ಳಿ ನಿವೇಶನ ರಹಿತರ ಆಂದೋಲನ; ಧಾರವಾಡದ್ದು ಧಾರವಾಡ ನಿವೇಶನ ರಹಿತರ ಆಂದೋಲನ ಏನ್ರೀ. ಅಲ್ಲೀವು ಎರಡು ಮುಗಿದ್ವು. ಮೊದಲ್ನೇದು ಗುಂಡೂರಾಯರ ಕಾಲಕ್ಕಾದದ್ದು ಆನಂದ ನಗರ ಅಂತಾ ಆಯ್ತು. ಮತ್ತ ನಂತ್ರದ್ದು ರಾಮಮನೋಹರ ನಗರ. ಈಗ ಇದು ಧಾರವಾಡದ್ದು. ಅಪ್ಲಿಕೇಶನ್ಸು, ಸ್ಕ್ರೂಟಿನಿ ಎಲ್ಲ ಆಗಬೇಕಾಗೆದ ಈಗ.

ರೀತಿಯಾಗಿ ವಸತಿ ಹೀನರ ವಸತಿಗಾಗಿ ರಾಜ್ಯಾದ್ಯಾಂತ ಒಂದು ಆಂದೋಲನ, ಮಾಡೋದಕ್ಕೆ ಸಮಾಜವಾದಿ ರಾಜ್ಯ ಸಂಘಟನೆ ಯಾವತ್ತಾದ್ರೂ ಚರ್ಚಿಸಿದ್ದು, ಚಿಂತಿಸಿದ್ದು ಇದೆಯಾ?

ಇಲ್ರೀ… ಇಲ್ಲ. ಆಗಿಲ್ಲ. ನಾನು ಎಲ್ಲಾ ಪಾರ್ಟಿಯಿಂದ ಸೆವೆಂಟಿ ಎಯ್ಟ್ ಕ್ಕ ನಿವೃತ್ತ ನಾಗೀನಿ. ಅಲ್ಲಿವರೆಗೆ ಜನತಾ ಪಾರ್ಟಿಅಂತಾ ಇತ್ತು. ಏನೋ ಜಯಪ್ರಕಾಶ್ ನಾರಾಯಣರು ಮಾಡಿದ್ದಾರ, ಸಮಾಜವಾದಿಗಳು ಎಲ್ಲಾ ಅದಾರ ಅಂತಿಳ್ಕಂಡು ಇದ್ದೆ. ೧೯೭೮ರೊಳಗೆ ನಮ್ಮ ಹೆಗಡೆಯವ್ರು ಏನೋ ಕನ್ ವೆನ್ಷನ್ ಮಾಡಿ ದಳ ಮಾಡಿಬಿಟ್ರು. ನೋಡ್ರೀ ನಮಗೀಗ, ರಾಜಕೀಯಾನಾ ಬ್ಯಾಡಪ್ಪಾ ಅಂತಾ ಬಿಟ್ಟಿಟ್ಟೆ. ಮೊದ್ಲು ಸಿ.ಎಸ್.ಪಿ ಆದ್ವಿ. ಆಮ್ಯಾಲ ಎಸ್.ಪಿ ಆದ್ವಿ. ಆಮ್ಯಾಲ ಪಿ.ಎಸ್.ಪಿ ಆದ್ವಿ. ಮತ್ತ ಎಸ್.ಎಸ್.ಪಿ .ಆದ್ವೀ ಏನೇನೋ ಆಗಿ ಕಡೀಗೆ ಜನತಾ ಆದ್ವಿ ಇಲ್ಲಿ. ಇನ್ನ ಜನತಾದಾಳ ಆಗೋದು ನಮ್ ಕೈಯಾಗ ಆಗೋದಿಲ್ಲ. ಸಾಕಿಲ್ಲೀಗೆ ಅಂತಾ ಸೆವೆಂಟೀ ಎಯ್ಟೀನಿಂದ ನಾನು ಇಲ್ಲೆ ಇಲ್ಲ. ಇಲ್ಲ, ನಮಗ ಐಡಿಯಾಲಜಿಕಲ್ ಫೌಂಡೇನ್ ಕೊಟ್ಟೋರು ಲೋಹಿಯಾ. ಹೊಸ ಸಮಾಜವಾದಾನ ಅದು. ಕಮ್ಯುನಿಸ್ಟ್ ಸಿದ್ದಾಂತಕ್ಕೆ ಏನೂ ಸಂಬಂಧ ಇಲ್ಲದ ಹೊಸ ಸಮಾಜ ರಚನೆ, ಹೊಸ ನಾಗರೀಕತೇನಾ ದೃಷ್ಟಿಯೊಳಗಿಟ್ಕಂಡು ಒಂದು ಡಾಕ್ಟ್ರಿನ್ ನಮಗ ಕೊಟ್ಟೋರು ಅಂತಂದ್ರೆ ಲೋಹಿಯಾ. ಅವರ್ನ ಬಿಟ್ಟು ನಾನು ಯಾರನ್ನೂ ನಂಬಲ್ಲ. ಲೋಹಿಯಾ ಅವರಿಗೆ ಈ ಎಸ್.ಎಂ.ಜೋಶೀ ಎಂ.ಜಿ.ಗೋರೆ ನಾಥ ಪೈ ಇವರೆಲ್ಲರ ನಡುವೆ… ಒಂದು ಡಿಫರೆನ್ಸ್ ಬರೋದು ಏನಪಾ ಅಂದ್ರೆ, ಈ ಬ್ಯಾಕ್‌ವರ್ಡ್‌ನಸ್ ಏನದಾ ಇಲ್ಲಿ ಪ್ರಿಫರೆನ್ಸಿಯಲ್ ಟ್ರೀಟ್ ಮೆಂಟ್ ಕೊಡಬೇಕು ಅಂತಂದು. ಈಕ್ವಲ್ ಆಪರ್ಚುನಿಟೀಸ್ ಅಂತಂದು ಅವರ್ದು.

ಯಾರೂ…?

ಮೆಹತಾನ ಗುಂಪು ಆತು, ಎನ್.ಜಿ ಗೋರೆ, ಜೋಶಿ, ನಾಥ ಪೈ ಅವರೆಲ್ಲ ಈಕ್ಟಲ್ ಆಪರ್ಚುನಿಟೀಸ್ ಅಂತಿದ್ರು. ಲೋಹಿಯಾ ವಿರೋಧಿಸೋರು ಅದನ್ನ. ಇಲ್ಲಿ ಈಕ್ಟಲ್ ಆಪರ್ಚುನಿಟೀಸ್ ಅಂದ್ರೆ ಸಾವಿರಾರು ವರ್ಷಗಳಿಂದ ವಿದ್ಯಾ ಮತ್ತು ಸಂಸ್ಕಾರ ಏನದ ಅದ್ರಿಂದ ಮುಂದುವರಿದೋರು. ಈಕ್ಟಲ್ ಆಪರ್ಚುನಿಟೀಸ್ ಅಂತಾ ಬಂದಾಗ, ಎಲ್ಲಾ ಆಪರ್ಚುನಿಟೀಸ್ ಯಾರು ಸಾಂಸ್ಕತಿಕವಾಗಿ, ಆರ್ಥಿಕವಾಗಿ ಮುಂದದಾರ. ಅವರಿಗೆ ಹೋಗಿ ಬಿಡ್ತಾವ, ಅದಕ್ಕಾಗಿ ಪ್ರಿಫರೆನ್ಸಿಯಲ್ ಆಪರ್ಚುನಿಟೀಸ್ ಕೊಡಬೇಕು ಬ್ಯಾಕ್ ವರ್ಡ್ ಇದ್ದವರಿಗೆ ಅಂತಾ ಲೋಹಿಯಾ ಅವರ ವಿಚಾರ. ಇಂಥಾವು ಬಂದಾ ಬಿಡ್ತಾವ. ಏನ್ ಮಾಡ್ಬೇಕು ಹೇಳ್ರೀ. ಸ್ಪ್ಲಿಟ್ ಆಗೇ ಬಿಡ್ತಾದ.

ಲೋಹಿಯಾ ಒಬ್ಬಂವ ಪ್ರಿಫರೆನ್ಸಿಯಲ್ ಟ್ರೀಟ್ ಮೆಂಟ್ ಅಂದಿದ್ದಕ್ಕಾಗಿ ಬ್ಯಾಕ್ ವರ್ಡ್ ಕ್ಲಾಸ್ ನಿಂದ ಎದ್ದು ಬಂದ ಕರ್ಪೂರಿ ಠಾಕೂರ್ ಮುಖಂಡರಾದ್ರು. ಎಲ್ಲರಿಗೂ ಈಕ್ಟಲ್ ಆಪರ್ಚುನಿಟೀಸ್ ಅಂದ್ರ ಅವರು ಬರ್ಲಿಕ್ಕೆ ಆಗ್ತಿದ್ದಿಲ್ಲ. ಬಿಹಾರದಲ್ಲಿ ಲಾಲೂ ನಂಥವರು ಬರ್ಲಿಕ್ಕೆ ಆಗ್ತಿದ್ದಿಲ್ಲ.

ಈಗ್ಲೂ ಮೀಸಲಾತಿ ಕುರಿತು ಚರ್ಚೆ ನಡೆದೇ ಇದೆ. ಅದರ ಪ್ರಮಾಣದ ಬಗ್ಗೆ, ಖಾಸಗೀ ಕ್ಷೇತ್ರದ ಮೀಸಲಾತಿ ಬಗ್ಗೆ, ಮೀಸಲಾತಿಯ ಕೆನೆಪದರು ವರ್ಗಇತ್ಯಾದಿ ಚರ್ಚೆಗಳಿವೆ. ಅಂಶಗಳ ಬಗ್ಗೆ ನಿಮ್ಮ ವಿಚಾರವೇನು?

ಆಗಾಬೇಕು ಬಿಡ್ರೀ. ಪ್ರಿಫರೆನ್ಸಿಯಲ್ ಕೊಡಾಕಬೇಕು. ನೀವೇನು ಆ ಕ್ರಿಮೀ ಲೇಯರ್ ಅಂತಾ ಹೇಳ್ತೀರಿ. ಇವ್ರನ್ನ ಮೇಲಿನ ವರ್ಗಕ್ಕಾ ಸೇರಿಸ್ಬೇಕು. ಇಡೀ ತಲೆಮಾರುಗಟ್ಟಲೇ ಅವ್ರೇ ಆದ್ರಪ್ಪಾ ಅಂದ್ರೆ ವೆಸ್ಟ್ ಡ್ ಆಗಿಬಿಡ್ತಾರಲ್ರೀ. ಆರ್ಥಿಕವಾಗಿ ಅವ್ರು ಸಬಲರಾದ್ರೆ ಅವರಿಗೆ ಕೊಡಬಾರದು.

ಆದ್ರೆ ಸಾಮಾಜಿಕವಾಗಿ ಅವರು ಹಿಂದೇನೆ ಉಳಿದಿರ್ತಾರ. ಸಾಂಸ್ಕ್ರತಿಕ ಶೋಷಣೆಗೆ ಒಳಗಾಗಿರ್ತಾರ?

ಅವರಿಗೆ ತಮ್ಮ ಸಮಾಜದೊಂದಿಗೇ ಸಂಪರ್ಕ ಇರೋದಿಲ್ಲ. ಮ್ಯಾಲ ನೋಡ್ತೀರ್ತಾರ ಅವ್ರು, ಕೆಳಾಗ ನೋಡ್ತೀರದಿಲ್ಲ. ಅವರಿಗೆ ಮೀಸಲಾತಿ ನಿಲ್ಲಿಸಬೇಕು.

ಇಂಥ ಪ್ರಶ್ನೆಗಳನ್ನ ಇಟ್ಕೊಂಡಾ ಅಹಿಂದಾ ಚಳವಳಿ ನಡೀತಿದೆಯಲ್ಲ ಅಹಿಂದಾ ಬಗ್ಗೆ ಏನಂತೀರಿ?

ಅಹಿಂದಾ… (ನಗು.) ಸಿದ್ರಾಮಯ್ಯನವರಿಗೆ ಮೊದಲಿಂದ್ಲೇ ಮೈಸೂರಿನಲ್ಲಿ ಗೆಳೆಯರ ಗುಂಪುಗಳದಾವ. ಎಲ್ಲಾ ಇಂಟಲೆಕ್ಯುವಲ್ಸ್ ಅವ್ರು. ಮೊದಲು ಸಮಾಜವಾದಿ ಯುವಜನ ಸಭಾ ಏನಿತ್ತು ಅಲ್ಲಿ ಬೆಳೆದು ಬಂದವ್ರು. ರಾಮದಾಸ್, ಮಲ್ಲೇಶ್ ಇವ್ರು ಗುಂಪಿನಿಂದ ಬೆಳೆದು ಬಂದಂವ ಅಂವ. ಅಂವಗೊಂದು ದೃಷ್ಟಿಕೋನ ಅದಾ. ಅವ್ರಿಗೆ ಡೆಫಿನೆಟ್ ಆಗಿ ಇದರ ಪ್ರಭಾವ ಇರ್ತದ. ಅವ್ರು ಪ್ರಭಾವ ಸಿದ್ದರಾಮಯ್ಯನವರ ಮೇಲೆ ಭಾಳಾ ಅದೆ ಅವ್ರು ಗುಂಪಿನ್ಯಾಗ ಇದ್ದವ್ರ ಇವ್ರು.

ಅಹಿಂದದ ಮೂಲಕ ಸಿದ್ದ ರಾಮಯ್ಯನವರ ರಾಜಕೀಯ ಹಿತಾಸಕ್ತಿ?

ರಾಜಕೀಯ ಸ್ವಾರ್ಥ ಕೂಡ ಇರ್ತದ ಬಿಡ್ರೀ… (ನಗು.) ಇರ್ತದ. ಆದ್ರ ಅಹಿಂದ ಅದು ಜೆನ್ಯೂನ್ ಮೂವ್ ಮೆಂಟ್ ಅಂತಾ ಅನ್ನಿಸ್ತದ ನನಗ ಏನ್ರೀ…. ಕಾಲಾನಂತರದಲ್ಲಿ ಇದರ ಮೂಲಕ ನಾವು ಏನಾದ್ರೂ ಸಾಧಿಸಬಹ್ದು ಬಿಡ್ರೀ ಆಗ್ತದ.

ಚುನವಣಾ ರಾಜಕಾರಣದ ಹಿನ್ನಲೆಯಲ್ಲಿ ಹೇಳೋದದ್ರೇ, ಕೆಳವರ್ಗಗಳ ಮತಗಳನ್ನ ಸಮಾಜವಾದೀ ಪಕ್ಷಗಳಿಗಿಂತ ಹೆಚ್ಚಾಗಿ ಕಾಂಗ್ರೆಸ್ ಹಿಡಿದಿಟ್ಟುಕೊಂಡಿದೆ, ಅಲ್ಲವಾ?

ಹೌದು… (ನಗು)

ಕರ್ನಾಟಕದಲ್ಲಿ ಸಮಾಜವಾದಿ ಪಕ್ಷಗಳಿದ್ದಾಗ, ನಂತರ ಜನತಾಪಕ್ಷ, ಜನತಾದಳ, ಆದಾಗ ಕೂಡ ಪರಿಶಿಷ್ಟಜಾತಿ, ಪಂಗಡ, ಮತ್ತು ಅಲ್ಪಸಂಖ್ಯಾತರು ಕಾಂಗ್ರೆಸ್ಸನ್ನು ಬೆಂಬಲಿಸಿದರು. ಸಮಾಜವಾದದ ಹಿನ್ನಲೆಯಲ್ಲಿ ಸಾಮಾಜಿಕ ನ್ಯಾಯದ ಭರವಸೆ ನೀಡಿದರೂ ಸಮಾಜವಾದಿಗಳು ವರ್ಗಗಳ ವಿಶ್ವಾಸಗಳಿಸಿಕೊಳ್ಳೋಕೆ ಯಾಕೆ ಸಾಧ್ಯವಾಗಲಿಲ್ಲ?

ನನಗನ್ನಿಸೋದು ಏನಪಾ ಅಂತಂದ್ರೆ. ಗಾಂಧೀಜಿ ಹಿನ್ನಲೆ ಇದ್ದಿದ್ರಿಂದ ಹಿಂಗಾಗೇತೇನೋ ಅನ್ನಿಸ್ತದೆ. ಇಲ್ಲಪ್ಪ ಅಂದ್ರೆ ಬೇರೆ ಕಾರಣಾನಾ ಇಲ್ಲ. ಗಾಂಧೀಜೀ ಬಿಟ್ರೆ ಬೇರೆ ಕಾರಣ ಇಲ್ಲ.

ಇಂಡಿಯಾದ ಜನತೆ ಮೇಲೆ ಗಾಂಧೀಜಿಯ ಪ್ರಭಾವ, ಸಮಾಜವಾದೀ ಚಳವಳಿ ಕಟ್ಟೋಕೆ ಅಡ್ಡಿ ಆಯ್ತು ಅಂದಂಗಾತು?

(ನಗು…) ಅಡ್ಡಿ ಆದ್ರೂ ಆಗಿರ್ಬಹ್ದು… ಇದಕ್ಕ ಅಡ್ಡಿ ಆಗ್ಲೀ ಅಂತೇನೊ ಗಾಂಧೀಜಿ ಮಾಡಿರ್ಲಿಲ್ಲ. ಆದ್ರೆ … ಆಯ್ತು… ಆಯ್ತು.

ಯಾಕೆ ಸಮಾಜವಾದೀ ಚಳವಳಿ ದಲಿತರನ್ನ,ಅಲ್ಪಸಂಖ್ಯಾತರನ್ನ ಹೆಚ್ಚಿನ ಪ್ರಮಾಣದಲ್ಲಿ ಒಳಗೊಳಲಿಲ್ಲ?

ಅದೂ… ಹಿಂದುಳಿದ ವರ್ಗಗಳನ್ನ ಜಾಗೃತಗೊಳಿಸುವಾಗ ಮಧ್ಯಮ ಜಾತೀ ಅಂತಾ ಏನದಾವ ಅವರ ಕಡಿಗೆ ಮುಖಂಡತ್ವ ಹೋಯ್ತು. ಗ್ರಾಮೀಣ ಪರಿಸ್ಥಿತಿಯೊಳಗೆ ದಿನನಿತ್ಯದ ಸಂಪರ್ಕ ಬರೋದು ಅವೆರಡಕ್ಕ ಅಲ್ಲಿ ತಿಕ್ಕಾಟ ಇದ್ದೇ ಅದ. ದಲಿತರಿಗೂ ಮತ್ತು ಮಧ್ಯಮ ವರ್ಗದವರಿಗೂ, ಬ್ರಾಹ್ಮಣರು ದೂರ ಉಳೀತಾರಾ? ದಿನನಿತ್ಯದ ಸಂಘರ್ಷ ಈ ಇಬ್ಬರ ನಡುವೆ ಬಂದು ಬಿಡ್ತದ. ನಮ್ಮ ಹಿಂದುಳಿದ ವರ್ಗದ ಹೋರಾಟ ಇಲ್ಲಿ ಸಿಕ್ಕೊಂಡು ಬಿಟ್ಟದ. ದಲಿತ ವರ್ಗವನ್ನ ಒಳಗೊಳ್ಳಾಕ ಸಾಧ್ಯ ಆಗೋದಿಲ್ಲ ಅದು. ಯಾಕಂದ್ರೆ ಇವ್ರು ಅವರನ್ನ ತಮ್ಮ ಸೇವಕರು ಅಂತಾನಾ ನೋಡಾರು. ತಮ್ಮ ಸರಿ ಅಂತಾ ಯಾವತ್ತೂ ಭಾವಿಸೋದಿಲ್ಲ ಅವ್ರು. ಇವತ್ತು ಕುರುಬ್ರು ಅದಾರ. ಕುರುಬ ಆತು, ತಳವಾರ ಆತು, ದಲಿತ್ರನ್ನ ತಮ್ಮ ಸರಿಸಮಾನವಾಗಿ ನೋಡೋಕೆ ಸಾಧ್ಯಾನೇ ಆಗೋದಿಲ್ಲ. ದಿನನಿತ್ಯದ ಬಳಕೆ, ಕೊಡೋಕೊಳ್ಳೋ ವ್ಯವಹಾರ ಇದ್ರಲ್ಲಿ ಅವರ ನಡುವೆ ಸಂಘರ್ಷ ಇದ್ದೇ ಅದಾ. ಬ್ರಾಹ್ಮಣ ಮಾತ್ರ ನಿರ್ಲಿಪ್ತ ಅದಾನಾ. ಬೇಕು ಅಂತಂದ್ರ ಮಾಯವತಿ ಕೂಡಾ ಜೋಡ್‌ ಆಗಿ ಬಿಡ್ತಾರ ಅವ್ರು. ಅದನ್ನ ಮುಲಾಯಂಸಿಗ್‌ ಕೂಡಾ ಆಗು ಅಂದ್ರೆ, ಆಗೋದಿಲ್ಲ. ಬ್ರಾಹ್ಮಣ ಆಗ್ತಾನ. ಹೀಗೆ ಬಿ.ಜೆ.ಪಿ ಆಗ್ತದೆ.

ನಿಮಗೆ ಹೇಳ್ತೀನಿ ಬಿ.ಪಿ.ಮಂಡಲ್‌ ಸೋಷಲಿಸ್ಟ್‌ ಇದ್ದವ್ರು. ಅವರಿಗಿದು ಸರಿಬರಲಿಲ್ಲ. ಕಾಂಗ್ರೆಸ್ಸಿಗೆ ಹೋಗಿ ಬಿಟ್ರು.

ಭೂಸುಧಾರಣೆ ಬಂದಾಗ ಪಟೇಲ್ರು ತಮ್ಮ ಭೂಮಿನೇನು ಕಳ್ಕೊಂಡ್ರಾ? ಯಾಕಂದ್ರೆ ಅವರ್ದೂ ಭೂ ಮಾಲಕ ಕುಟುಂಬ ಅಂತಾ ಕೇಳೀನಿ?

ಏನೋ ನನಗ ಗೊತ್ತಿಲ್ಲ. ದೇವರಾಜ ಅರಸರ ಲ್ಯಾಂಡ್‌ ರಿಫಾರ್ಮ್‌ ಆಕ್ಟ್‌ ಬರೋವಾಗ ಪಟೇಲ್ರು ಆಗ್ಲೆ ದೂರ ಇದ್ರು ಬಿಡ್ರೀ. ಅವ್ರು… ಉರವಕೊಂಡ ಜಗದ್ಗುರು ಅಂತಾ ಇದ್ರು ಅವ್ರು ಶಿಷ್ಯ (ನಗು) ಅವ್ರು ಒಂದು ಸ್ಪಿರಿಚ್ಯುವೆಲ್‌ ಸೆಂಟರ್‌ ಅಂತಾ ಮಾಡಿದ್ರು. ಇವ್ರು ಆ ಸ್ಪಿರಿಚ್ಯುವೆಲ್‌ ಸೆಂಟರ್‌ ನಿವಾಸಿಗಳಾಗಿ ಬಿಟ್ಟಿದ್ರು.

ಯಾವಾಗ ಅದು?

ದೇವರಾಜು ಅರಸು ಅವರ ಮಂತ್ರಿಮಂಡಲ ಇದ್ದಾಗಿರ್ಬೇಕು. ಕುಮಾರ ಪಾರ್ಕ್‌ವೆಸ್ಟ್‌ ಏನಾ ಇರ್ಬೇಕು. ಅಲ್ಲಿತ್ತು ಆ ಸೆಂಟರ್‌.

ಹಾಗೆ ನೋಡಿದ್ರೆ ಪಟೇಲ್ರು ಧರ್ಮ, ಆಧ್ಯಾತ್ಮ ಇವುಗಳ ಕಡೆ ಅಷ್ಟು ಒಲವು ತೋರಿಸಿದವರಲ್ಲ?

ಆದ್ರ ಆಧ್ಯಾತ್ಮ ಅಲ್ಲಿ ಬ್ಯಾರೆ ನಡೀತಿತ್ರೀ. ಉರವಕೊಂಡ ಜಗದ್ಗುರುಗಳ್ದು. ಇವ್ರು ಆ ಹಾದಿಯೊಳಗ ಇದ್ದವ್ರು.

ಅಲ್ಲಿ ಭಾಳಾ ಆಸಕ್ತರಾಗಿದ್ರು ಆಗ.

ಉರವಕೊಂಡ ಜಗದ್ಗುರು ಮೊದಲ ಭಾಳಾ ಪ್ರಖ್ಯಾತರಾಗಿದ್ದವರು ಕರ್ನಾಟಕದ ಹೊಸ ವಿದ್ಯಾರಣ್ಯ ಅಂತಿಳ್ಕೊಂಡು ಗುಡ್‌ ಆರೇಟರ್‌ ಇದ್ದ. ರಾಜೇಂದ್ರ ಪ್ರಸಾದ್‌ ಅವರೆಲ್ಲರ ಮೆಚ್ಚುಗೆ ಗಳಿಸಿದ್ದ. ರಾಜಕೀಯ ಎಲ್ಲಾ ತಿಳ್ಕೊಂಡಿದ್ದ ಅಂಥಾವ ದೌರ್ಬಲ್ಯಕ್ಕೀಡಾಗಿ ಅಧಃ ಪತನಕ್ಕಾ ಈಡಾಗಿಬಿಟ್ಟ ಅಂವ.

ಪಟೇಲ್ರು ಜೊತೆಗೆ ಸೇರ್ಕೊಂಡ ನಂತರಾನ?

ಇಲ್ಲಾ… ಇಲ್ಲ. ನಮ್ಮ ಬಸವರಾಜ ಕಟ್ಟೀಮನಿ ಮಾಡಿದ್ದು ಇದನ್ನ. ‘ಜರತಾರೀ ಜಗದ್ಗುರು’ ಅಂತಂದು ಒಂದು ಕಾದಂಬರೀನಾ, ಬೆಳಗಾವೀದು ಒಂದು ದಿನಪತ್ರಿಕೆಯೊಳಾಗ ಸೀರಿಯಲ್ಲಾಗಿ ಬರ್ಕೋತಾ ಬಂದ್ರು. ಆ ಸೀರಿಯಲ್ಲು ಬಂದಾಗೆಲ್ಲ ಈ ಸ್ವಾಮೀ ಹಂಗಾ ಅಧಃಪತನಕ್ಕ ಹೋಗಿಬಿಟ್ಟ.

ಕಟ್ಟೀಮನಿಯವರು ಸಿ.ಪಿ.. ಜೊತೇಗೆ ಇದ್ರು ಕಾಣಿಸ್ತದ. ಒಂದಿಷ್ಟು ದಿವ್ಸ?

ಇಲ್ರೀ. ಇಲ್ಲ. ಇಲ್ಲಿ ಕುಳಕಂದ ಶಿವರಾಯ ಅಂತಾ ಇದ್ರು. ನೀವು ನಿರಂಜನ ಅಂತೀರಲ್ಲ ಅವ್ರು. ಅವ್ರು ಕಮ್ಯುನಿಸ್ಟ್‌ ಕಾರ್ಯಕರ್ತರಾಗಿ ಇದ್ರು ಇಲ್ಲಿ ಕೆಲವು ಕಾಲಕ್ಕ. ಅವ್ರಿಗೆ ಒಂದಿಷ್ಟು ಮೆತ್ತನ ಕೆಲ್ಸಾನ ಕೊಟ್ಟಿರತಿದ್ರು. ಲಿಟರೇಚರ್‌ ಬರೆಯೋದು, ಹಂಚೋದು… ಇಂಥಾದ್ದು ಸ್ವಭಾವಕ್ಕನುಸರಿಸಿ. ಅವ್ರೂ, ಇವ್ರೂ ಸ್ನೇಹಿತ್ರು. ಕೂಡಿದ್ದು ಏನಪ ಅಂದ್ರ ಪ್ರಗತಿಶೀಲ ಲೇಖಕರ ಸಂಘದೊಳಗ ಇದ್ರು ಹೊರತಾಗಿ ಸಾಧಾರಣ ಪೊಲಿಟಿಕಲ್‌ ಅಫಿಲಿಯೇಷನ್‌ ಅಂತಂದ್ರೆ ಸೋಷಲಿಸ್ಟ್‌ ಕಡಿಗೇ ಇತ್ತು. ನಮ್ಕೂಡೆ ಹೆಚ್ಚಿರತಿದ್ರು. ಕುಳಕುಂದ ಶಿವರಾಯರು ಆ ಕಡೆಗೆ ಇರತಿದ್ರು. ಇವ್ರು ಈ ಕಡಿಗೆ ಇರ್ತಿದ್ರು. ಪ್ರಗತಿಶೀಲ ಲೇಖಕರ ಸಂಘದಾಗ ಕೂಡಿರತಿದ್ರು.

ಧಾರವಾಡದಲ್ಲಿ ಕಮ್ಯೂನಿಸ್ಟ್ಪಾರ್ಟಿ ಬೆಳವಣಿಗೆ ಹೇಗಿತ್ತು?

ಇಲ್ಲಿರ್ಲಿಲ್ಲ. ಹುಬ್ಬಳ್ಳಿಯೊಳಾಗ ಇತ್ತು. ಅಲ್ಲಿ ಮುಧೋಳ್‌ ಒಬ್ರು ಇದ್ರು.

ಮುಧೋಳ್ಜೊತೆಗೆ ನಿಮ್ಮ ಸಂಪರ್ಕ ಇತ್ತಾ?

ಭಾಳಾ ಸ್ನೇಹಿತ್ರು ಆಗಿದ್ವಿ ನಾವು. ಆದ್ರ ಇವರು ಕಮ್ಯುನಿಸ್ಟ್ರು. ನಾನು ಸೋಷಲಿಸ್ಟು. ಒಮ್ಮೆ ಗೋಪಾಲಗೌಡ ಕೂಡ ಹೇಳಿದ್ರು. ಅವರ ಕೂಡ ನೀವು ಕೂಡಿಕಂಡು ಕೆಲಸ ಮಾಡಿದ್ರೆಪ್ಪಾ ಅಂದ್ರ ನೀವು ಮಾಡಿದ ಕೆಲಸಾನ ಎಲ್ಲಾ ಅವ್ರ ತಿಂದಬಿಡ್ತಾರ್ರೀ. ಅದ್ರ ಪ್ರಯೋಜನ ಪಡೆಯವ್ರು ಅವ್ರು. ನೀವು ಅವರ ಕೂಡ ಹೋಗಬ್ಯಾಡ್ರೀ ಅಂತಾ ಗೋಪಾಲಗೌಡ್ರು ನನ್ನನ್ನು ಎಚ್ಚರಿಸಿದ್ರು.

ವಾಸ್ತವದಲ್ಲಿ ಅದು ಸತ್ಯಾನ?

ಸತ್ಯಾ ಒಂದೊದ್ಸಲ ಆಗ್ತಿತ್ತು. ಕೆಲವು ಸಲ ನಾವು ಮೆರವಣಿಗೆ ಹೊರಡಿಸ್ತಿದ್ವಿ. ಅವ್ರು ಏನು ವಿಚಾರ ಮಾಡ್ತೀದ್ರೋ, ನಮ್ಮವು ಎಲ್ಲೋ ಒಂದು ಕಡೀಗೆ ಧ್ವಜಾ ಇರಾವು. ಇಡೀ ಮೆರವಣಿಗೆ ತುಂಬಾ ಧ್ವಜ ಅವ್ರವು ಕಾಣಾವು. ಸಂಘಟನೆ ನಮ್ದು. ಮ್ಯಾಲೆ ಎತ್ತರಂದೂ ತಮ್ಮದು ಧ್ವಜ ಇರ್ತಿತ್ತು. ಹಂಗ ನಮ್ಮ ಹೋರಾಟ ನುಂಗತಿದ್ರು.

ಕಮ್ಯುನಿಸ್ಟರು ಭೂ ಹೋರಾಟಗಳನ್ನು ಮಾಡ್ಲಿಲ್ಲವಾ?

ಇಲ್ಲ, ಮಾಡ್ಲಿಲ್ಲ. ಟ್ರೇಡ್‌ ಯೂನಿಯನ್‌ ಅಂದ್ರ ಅವರ್ದು ಬೀಡಿ ವರ್ಕರ್ಸ್‌ ಒಂದಿತ್ತು. ಹುಬ್ಬಳ್ಳಿಯಾಗ ಅಲ್ಲಿ ಪೌರ ಕಾರ್ಮಿಕರ್ದು ನಮ್ಮ ಕಡೀಗೇ ಇತ್ತು. ನಾನಾ ಅಧ್ಯಕ್ಷ ಆಗಿದ್ದೆ.

ರೈಲ್ವೇ ಕಾರ್ಮಿಕರ ಸಂಘಟನೆ?

ರೈಲ್ವೆ ಕಾರ್ಮಿಕರ್ದು ಇಂಟಕ್‌ದವ್ರ ಕೈಯಾಗಿತ್ತು. ರೈಲ್ವೆ ಕಾರ್ಮಿಕರು ಎಂದೂ ಕಮ್ಯುನಿಸ್ಟ್ರು ಆಗ್ಲಿಲ್ಲ ಅಲ್ಲಿ. ಆನಂತರ ಜಾರ್ಜ್‌ ಫರ್ನಾಂಡೀಸ್‌ ರೈಲ್ವೆ ಎಂಪ್ಲಾಯೀಸ್‌ ಫೆಡರೇಷನ್‌ ಅಧ್ಯಕ್ಷರಾದ್ರಲ್ಲ. ಆವಾಗ ಸೋಷಲಿಸ್ಟ್ರು ಆದ್ರು ಅವ್ರು.

ಜಾರ್ಜ್ ಭಾಳಾ ಬರ್ತಿದ್ರು. ಇಲ್ಲಿ ಪ್ರತೀ ತಿಂಗಳು ಬಂದು ಹೋಗ್ತಿದ್ರು. ಒಂದು ವರ್ಷ ನಡೆಸಿದ್ವಿ ಅದನ್ನ.

ಎಮರ್ಜೆನ್ಸಿ ಸಂದರ್ಭದ ನಿಮ್ಮ ಅನುಭವವೇನು?

ನಾನ್‌ ಭಾಳಷ್ಟು ಆದ್ರಾಗ ಭಾಗವಹಿಸಲಿಲ್ಲ. ಅಲ್ಲಿ ಬಂದವರಿಗೆ ಆಶ್ರಯ ಕೊಡೋದು. ಬಳ್ಳಾರಿ ಕಡೀಂದ ದಾಸನ್‌ ಅಂತಂದು ಬರ್ತಿದ್ರು.

ದಾಸನ್ಸಾಲೋಮನ್‌?

ಹ್ಞಾಂ ಅವ್ರೂ, ಇವ್ರೂ, ಫರ್ನಾಂಡೀಸ್‌ ಯಾರ್ನರ ಕಳಿಸಿಕೊಡೋದು, ಅವರ್ನ ಜೋಪಾನ ಮಾಡಾದು. ಮತ್ತೇ…ಇಲ್ಲಿ ಡಿಫೆನ್ಸ್‌ ಆಫ್‌ ಇಂಡಿಯಾ ಆಕ್ಟ್‌ ಪ್ರಕಾರ ಯಾರ್ನಾರ ಅರೆಸ್ಟ್‌ ಮಾಡಿದ್ರು, ಜೈಲಿನ್ಯಾಗ ಇಟ್ರು ಅಂತಂದ್ರ ಅವ್ರಿಗ ವಕಾಲತ್‌ ಹಾಕೋದು, ಅವರಿಗೆ ಬಿಡಿಸೋದು…ಹಿಂಗಾ ಚಂಪಾ ಅವ್ರಿಗೆ ನಾನು ಬಿಡಿಸ್ಕೊಂಡು ಬಂದೀನಿ. ಚಂಪಾ ಅವ್ರು ಏನೇನೂ ಮಾಡಿದ್ದಿಲ್ಲ. ಅವ್ರುನ್ನ ಹಿಡೀಬೇಕು ಅಂತಾ ಏನಿತ್ತೋ ಏನೋ ಪೋಲೀಸ್ರಿಗೆ ಹಿಡಿದ್‌ಬಿಟ್ರು. ಅವರಮನ್ಯಾಗ ಏನೋ ಲಿಟರೇಚರ್‌ ಸಿಕ್ತು ಅಂತಿಳ್ಕೊಂಡು. ಆಮ್ಯಾಲ ನಾನಾ ವಕಾಲತ್‌ ವಹಿಸಿಕೊಂಡ ಒಂದ್‌ ಹದಿನೈದು ದಿವಸದಾಗ ಅವರ್ನ ಬಿಡಿಸ್ಕೊಂಡು ಬಂದೆ. ಪ್ರತೀನಿತ್ಯ ಅವರ ಮನಿಯವ್ರನ್ನ ಅವ್ರಿಗೆ ಭೆಟ್ಟಿ ಮಾಡ್ಸೋದು ಎಲ್ಲಾ. ಸಿದ್ದಲಿಂಗ ಪಟ್ಟಶೆಟ್ಟಿದೂ ಇತ್ತು. ಹೋಗಿ ಹೇಳ್ದೆ, ಮನ್ಯಾಗ ಏನೂ ಇಟ್ಕೊಳ್‌ಬ್ಯಾಡ. ಮನ್ಯಾಗ ಏನಾರ ಇತ್ತಪಾ ಅಂದ್ರ ಅವನ್ನ ಸುಟ್ಟುಬಿಡು. ನಿನ್ನ ಮ್ಯಾಲೆ ಕಣ್ಣೈತಿ ಅಂತ್ಹೇಳಿ. ಬರೇ ಬರೆಯೋರು. ಇಲ್ಲೇನಿತ್ತು. ಇಲ್ಲೊಬ್ಬ ಇಂಟಲಿಜೆನ್ಸಿ ಇನಸ್ಪೆಕ್ಟರ್‌ ಇದ್ದ. ಅಂವ ನನಿಗೆಲ್ಲಾ ಮಾಹಿತಿ ಕೊಡ್ತಿದ್ದ. ನಿಮ್ಮಲ್ಲಿ ಇವ್ರದ್ದು ಹಿಂಗಾಗ್ತದೆ. ಅವ್ರುದ್ದು ಹಿಂಗಾ ಅಂತೆಲ್ಲಾ. ನನ್ನ ವಿರುದ್ಧ ಏನೂ ರಿಪೋರ್ಟ್‌ ಕಳಿಸ್ಲೇ ಇಲ್ಲ ಅಂವಾ.

ಹಂಗಾಗಿ ನೀವು ಅರೆಸ್ಟ್ಆಗ್ಲಿಲ್ಲ?

ನಾನ್‌ ಅರೆಸ್ಟ್‌ ಆಗ ಪ್ರಸಂಗಾನಾ ಬರ್ಲಿಲ್ಲ. ಅಷ್ಟ.

ಸಮಾಜವಾದಿ ಯುವ ಜನಾ ಸಭಾವ ಚಟುವಟಿಕೆಗಳು ಅವಾಗ ಜೋರಿದ್ವು ಕಾಣಿಸ್ತದ?

ಬರ್ತಿದ್ರು…ಬರ್ತಿದ್ರು. ಸಾಗರದಿಂದ ಯಾವ್ದೋ ಒಂದು ಹುಡಗ ಒಂದು ಹುಡುಗಿ ಓಡಿ ಬಂದಿದ್ರು. ಲಗ್ನ ಮಾಡಿ ಕಳಿಸಿದ್ವಿ ಅವರ್ನ ಇಲ್ಲೇ.

ಪಕ್ಷದ ಕಾರ್ಯಕರ್ತರಾ ಅವ್ರು?

ಹೌದು, ಬಂಗಾರಪ್ಪಗ ಸಂಬಂಧ ಇದ್ರವ್ರು ಅವ್ರು. ಚಿನ್ನೂರು ಬಂಗಾರಪ್ಪ ಅಂತೇನೋ ಇತ್ತು. ಅವನ್ಮಗ, ಮತ್ತ ಗಾಯತ್ರೀ ಅಂತಾ ಇತ್ತು ಹುಡುಗಿ. ಇಲ್ಲಿ ಬಂದು ಕೆಲವು ದಿವ್ಸ ಇಟ್ಕಂಡು, ಮದ್ವಿ ಮಾಡಿ ಕಳ್ಸಿದ್ವಿ.

ಕುಪ್ಪಗಡ್ಡೆಮರಿಯಪ್ಪ ಮತ್ತು ಬಂಗಾರಪ್ಪ ಇವರಿಬ್ಬರ ನಡುವೆ, ಸಮಾಜವಾದಿ ಪಕ್ಷದ ಟೀಕೆಟ್ಗಾಗಿ ಸ್ಪರ್ಧೆ ಇದ್ದಾಗ ಬಂಗಾರಪ್ಪನವರ ಪರವಾಗಿ ನೀವು ನಿಲುವು ತಾಳಿ, ಟಿಕೆಟ್ಕೊಡಿಸಬೇಕಾದ ಸಂದರ್ಭದ ಬಗ್ಗೆ ಹೇಳ್ರೀ?

ಗೋಪಾಲಗೌಡ್ರು ವಿರುದ್ಧ ಇದ್ರು ಇವ್ರಿಗೆ. ನಾನ್‌ ಹೇಳ್ದೆ ಬಂಗಾರಪ್ಪ ನಿಲ್ಲೋದಂತೂ ನಿಂತೇ ನಿಲ್ತಾನ ಚುನಾಣೆಗೆ. ಅಂವ ಏನ್‌ ಬಿಡಾದಿಲ್ಲ. ಅಂವ ದೀವರಾಂವ. ಕುಪ್ಪಗಡ್ಡೆ ಮರಿಯಪ್ಪ ನಿಮ್ಮ ಕ್ಯಾಂಡಿಡೇಟ್‌. ಆರ್ಥಿಕವಾಗಿ ದುರ್ಬಲ ಆಗ್ತಾನ. ಅವ್ರು ಆಗ್ಲೇ ತಾಲೂಕ ಬೋರ್ಡ್‌ ಪ್ರೆಸಿಡೆಂಟ್‌ ಏನಾ ಇದ್ರು ಕಾಣಿಸ್ತದ ಕುಪ್ಪಗಡ್ಡೆ ಮರಿಯಪ್ಪ. ನೀವೆಷ್ಟೇ ಪ್ರಯತ್ನ ಮಾಡಿದ್ರೂ ಮರಿಯಪ್ಪಾ ಗೆಲ್ಲಾದಿಲ್ಲ. ಬಂಗಾರಪ್ಪಾನೂ ನಿಂತ್ರ ಅವರಿಬ್ಬರ ನಡುವೆ ಕಾಂಗ್ರೆಸ್‌ ಕ್ಯಾಂಡಿಡೇಟ್‌ ಆರಿಸಿ ಬರ್ತಾನ. ಹಟವಾದಿ ಅದಾನ ಅಂವಾ. ಅವಂಗ ಕೊಟ್ಟ್‌ ಬಿಡ್ರೀ. ಅಂತ್ಹೇಳಿ ಕೊಡಿಸಿದೆ, ಬಂಗಾರಪ್ಪಂಗೆ.