ಆದ್ರೆ ಅವ್ರು ಕಮಿಟೆಡ್ಅಲ್ಲ, ಬ್ಯಾಡ ಅಂತಾ ಲೋಹಿಯಾ ಕೂಡ ಅಂದಿದ್ರಂತೆ ಹೌದಾ?

ಕಮಿಟೆಡ್‌ ಅಲ್ಲ ಅಂತಾ ಅದು ಯಾವಾಗೋ ಇತ್ತು ಬಿಡ್ರೀ. ಆದ್ರ ಅಂವ ಚುನಾವಣೆಗೆ ನಿಂತಾ ನಿಲ್ತೀನಿ ಅಂತಾ ಹಟ ಹಿಡಿದುಬಿಟ್ಟಿದ್ದ.

ಹಾಗಾದ್ರೆ ಪಕ್ಷಕ್ಕೆ ಸಿದ್ಧಾಂತಕ್ಕಿಂತ ರಾಜಕೀಯ ಅಧಿಕಾರವೇ ಮುಖ್ಯ ಎಂಬಂತಾಗಲಿಲ್ಲವೇ?

ಅದೂ ಆಯ್ತು. ಅದೂ ಖರೆ ಆಯ್ತು ರೀ.

ಸಾರ್ನಿವೇಶನ ರಹಿತರ ಆಂದೋಲನ ರೂಪುಗೊಳ್ಳಲು ಕಾರಣವಾದ ಅಂಶಗಳನ್ನು ವಿವರಿಸ್ತೀರಾ?

ನಮ್ಮ, ಮೂರ್‌ಸಾವಿರಪ್ಪ ಕೊರ್ವಿ. ಅವರು, ಟೌನ್‌ಪ್ಲಾನಿಂಗ್‌ ಕಮಿಟಿ ಛೇರ್ಮನ್‌ ಇದ್ರು. ಅವ್ರು ಅಲ್ಲಿ ೧೪೦ ಎಕರೆ ಖಾಲಿ ಬಿದ್ದಿದೆ ಅದನ್ನ ಏನಾರ ಅಭಿವೃದ್ಧಿ ಪಡಿಸಬೇಕು ಅಂತಾ ಮಾತಾಡಿದ್ರು. ಬೊಮ್ಮಾಯಿ ರೆವಿನ್ಯೂ ಮಿನಿಸ್ಟ್ರು ಇದ್ರು ರಾಮಕೃಷ್ಣ ಹೆಗಡೆಯವರ ಮಂತ್ರಿ ಮಂಡಲದಲ್ಲಿ. ಅವರು ತಾವಾ, ಖಾಸಗಿಯಾಗೇ ಅಭಿವೃದ್ಧಿಪಡಿಸಬೇಕು ಅಂದ್ಕೊಂಡಿದ್ರೋ ಏನೋ, ರಾಮಕೃಷ್ಣ ಹೆಗಡೆಯವರನ್ನ ಕರೆಸಿ, ಅಲ್ಲೇ ಹುಬ್ಬಳ್ಳಿಯೊಳಗ ಫಂಕ್ಷನ್‌ ಮಾಡಿ ಅಲ್ಲಿ ನಗರಕ್ಕ ಕೋನಶಿಲೆ ಸ್ಥಾಪನೆ ಮಾಡಿದ್ರು. ಅವತ್ತಿನ ದಿವಸ ನಮ್ಮ ರಾಷ್ಟ್ರಪತಿ ಜೈಲ್‌ಸಿಂಗ್‌ ಅವ್ರೂ ಬಂದಿದ್ರು. ರಾಜೀವ್‌ ಗಾಂಧೀನಾ ಕೆಳಾಗಿಳಿಸ್ಬೇಕು ಅಂತನ್ನೋ ದುರಾಲೋಚನೆ ಮಾಡಾಕ್ಹತ್ತಿದ್ರು. ಇಲ್ಲೇ ಹುಬ್ಬಳ್ಳಿಯೊಳಾಗ ಮಾತಾಡ್ಲಿಕ್ಹತ್ತಿದ್ರು. ಮುಂದೆ ಅದನ್ನ ಪೂರಾ ನಾವು ದುರ್ಬಲವರ್ಗದ ನಿವೇಶನ ರಹಿತರಿಗೇ ನಿವೇಶಗಳನ್ನ ಮಾಡಿ ನಿವೇಶನ ಹಂಚಬೇಕು ಅಂತಾ ಹೋರಾಟ ಪ್ರಾರಂಭಿಸಿದಾಗ ಅನಿವಾರ್ಯ ಆಯ್ತೋ ಏನೋ ಅವರಿಗೆ, ಅದು ರಿಸರ್ವ್‌ ಫಾರೆಸ್ಟ್‌ ಲ್ಯಾಂಡು ಯಾರಿಗೂ ಕೊಡಾಕ ಬರಾದಿಲ್ಲ ಅಂತಾ ರಿಸರ್ವ್‌ ಫಾರೆಸ್ಟ್‌ ಅಂತಾ ದಾಖಲು ಮಾಡಿಸಿಬಿಟ್ರು. ಹೀಗಾಗಿ ಅದನ್ನ ಡೀ ಫಾರೆಸ್ಟ್‌ ಮಾಡಿಸ್ಲಾಕಾ ಭಾಳಾ ಹೋರಾಟ ಮಾಡಬೇಕಾತು. ಕೊನೆಗೆ ಅವರ್ನ ಸೋಲಿಸಿ ತಿರುಗಿ ಪಡೀಬೇಕಾತು. ಆದ್ರೆ ನಮ್ಹತ್ರ ಎಲ್ಲಾ ದಾಖಲೆ ಇದ್ವು. ಕುಂದಗೋಳ್‌ ತಾಲೂಕಿನಲ್ಲಿ ಮೂರು ಜಮೀನ್ದಾರಿ ಗ್ರಾಮಗಳಿದ್ದುವು. ಬೆನಕಹಳ್ಳಿ, ಇನಾಮುಕೊಪ್ಪ, ಮತ್ತು ಹಂಚಿನಾಳ್‌ಗಳಂತ. ಆ ರೈತರನ್ನ ಸಂಘಟನೆ ಮಾಡಿದ್ವಿ ನಾವು. ಸಾಧಾರಣ ಆ ಮೂರು ಹಳ್ಳಿಗಳಲ್ಲಂತೂ ಜಮೀನ್ದಾರ ಅಧೀನ ತಪ್ಪಿಸಾಬಿಟ್ಟಿ. ಆ ರೈತರು ಗೇಣೀ ಹಣ ಏನೂ ಕೊಡಲಾರದಂಗ ಸಂಘಟನೆ ಮಾಡಿದ್ದೆ ನಾನು. ಬೊಮ್ಮಾಯಿ ಕಾನ್ಟ್ಸುಯೆನ್ಸಿ ಅದು ಮೊದಲು. ಸೆವೆಂಟೀ ಟೂ ಎಲೆಕ್ಷನ್‌ ಒಳಾಗ ಬೊಮ್ಮಾಯಿ ಸಂಸ್ಥಾ ಕಾಂಗ್ರೆಸ್‌ ಪರವಾಗಿ ಚುನಾವಣೆಗೆ ನಿಂತ. ಆ ಮೂರು ಹಳ್ಳಿಗಳ ರೈತರಿಗೆ ಬೊಮ್ಮಾಯಿಗೆ ಮತ ಕೊಡ್ರೀ ಅಂತ ನಾ ಹೇಳಿದ್ದು ನಿಜಾ. ಆದ್ರೆ ಬೊಮ್ಮಾಯಿ ಆ ರೈತರ ಕೆಲಸ ಮಾಡ್ಲಿಲ್ಲ. ಮುಂದೆ ನಾ ಸಂಘಟೇನ್ನಾ ನನ್ನ ಕೈಯಾಗ ತಗಂಡು ಪೂರ್ತಿ ಮಾಡಿ ಮುಗಿಸಿದೆ ನಾನದನ್ನ. ಮೂರು ಹಳ್ಳಿಗಳು ಪೂರಾ ಜಮೀನ್ದಾರುವಶ ಇದ್ವು. ಈಗ ಲ್ಯಾಂಡ್‌ ರಿಫಾರ್ಮು ಆಕ್ಟ್‌ ಬಂದು ಅದು ಮುಗಿದಾ ಹೋತಲ್ರೀ.

ಆ ಪ್ರಸಂಗದೊಳಗ ಧರ್ಮಸ್ಥಳದ ಹೆಗಡೆಯವರ ಕೂಡ ಜಗಳ ಮಾಡ್ಬೇಕಾಯ್ತು. ಏನಾತು, ಬೆನಕಹಳ್ಳಿ ಜಮೀನ್ದಾರರು ನಾಡಗೀರರು ಅಂತಾ ಇದ್ರು. ಅವ್ರು ರೈತರಿಗೆ ಆ ಜಮೀನು ಸಿಗಬಾರ್ದು ಅನ್ನಾ ಉದ್ದೇಶದಿಂದ ಎರಡು ನೂರಾ ಐವತ್ತೆರಡರಷ್ಟು ಎಕರೆ ಭೂಮಿಯನ್ನು ಧರ್ಮಸ್ಥಳದ ಹೆಗಡೆಯವರು ಬರೋದಕ್ಕಿಂತ ಮುಂಚೆ ಇಲ್ಲಿ ಅವ್ರದು ಜನತಾ ಶಿಕ್ಷಣ ಸಮಿತಿ ಅಂತಾ ಇತ್ತು. ಅವ್ರಿಗೆ. ಆಮೇಲೆ ಕೆ.ಎಲ್‌.ಇ. ಸೊಸೈಟಿಯವರಿಗೆ ದಾನಪತ್ರ ಮಾಡಿ ಕೊಟ್ರು. ನಂತರ ಜನತಾ ಶಿಕ್ಷಣ ಸಮಿತಿ ವೀರೇಂದ್ರ ಹೆಗ್ಗಡೆಯವರ ವಶಆತು. ವೀರೇಂದ್ರ ಹೆಗ್ಗಡೆಯವ್ರು. ನನ್ನ ಕರೆಸಿಕೊಂಡು ಏನಾರ ಮಾಡ್ಬೇಕು ಅಂತಾ ಕರೆಸಿದ್ರು. ನಾನು ಮೂರ್ನಾಲ್ಕು ಸಲ ತಪ್ಪಿಸ್ದೆ. ಅವರ ಕೂಡ ಭೆಟ್ಟಿಯಾಗೋದು ಬ್ಯಾಡ ಅಂತಾ. ಕಡೀಗೂ ಒತ್ತಾಯದಿಂದ ಕಾರು ಕಳಿಸಿ ಕರಸ್ಕೊಂಡ್ರು. ಕರಸ್ಕೊಂಡು ಏನ್ರೀ ಪೂಜಾರ್‌ ನಮ್ಮವು ಜಮೀನದಾವ ಅಂದ್ರು. ನಿಮ್ಮವು ಎಲ್ಲದಾವ ಜಮೀನು ಅಂದೆ. ಇಲ್ಲಾ ಕುಂದಗೋಳ ನಾಡಿಗೇರ್ರು ಬರ್ದು ಕೊಟ್ಟಾರ ನಮ್ಗೆ ಅಲ್ಲಿ ಭೂಮಿ ಅದಾವ, ಆರ ರೈತರ ಕಡಿಂದ ಹಣ ಕೊಡಿಸಿ ಬಿಡ್ರೀ. ನಾನು ಅವರಿಗೆ ಭೂಮಿ ಕೊಟ್ಟ ಬಿಡ್ತೀನಿ ಅಂದ್ರು. ಇದೆಲ್ಲಾ ಆಗೋದಿಲ್ಲ ಅಂತಂದೆ. ಏ…ಆಗೋದಿಲ್ಲ ಅಂತಂದ್ರೆ. ಹ್ಯಾಗೆ ಮಾಡ್ಬೇಕು ಅಂತಾ ಗೊತ್ತದೆ ಅಂದ್ರು. ನಿಮಗೆ ಗೊತ್ತದಲ್ಲ. ಹಂಗಾರ ಅದೇ ರೀತಿ ಮಾಡ್ಕಳ್ರೀ ಅಂತ್ಹೇಳಿ ಎದ್ದು ಬಂದೆ.

ಮುಂದೇನಾತದು?

ಮುಂದೆಲ್ಲಾ ಲ್ಯಾಂಡ್‌ ರಿಫಾರ್ಮ್ ಆಕ್ಟ್ ನೊಳಗ ನಿಖಾಲಿ ಆದ್ವು ಬಿಡ್ರೀ.

ಅಂದ್ರೆ ರೈತರಿಗೆ ಉಳೀತಾ ಭೂಮಿ?

ಹೌದು … ಉಳೀತು

ಹಂಗ ನೋಡಿದ್ರೆ ದೇವರಾಜ ಅರಸರು ನಿಮ್ಮ ಸಮಾಜವಾದಿಗಳ ಆಶಯಾನ ಈಡೇರಿಸಿದ್ರು?

ಹೌದೌದು. ಆದ್ರೆ ಇಂಪ್ಲಿಮೆಂಟೇಶನ್‌ನೊಳಗ ಅಧಿಕಾರಿಗಳು ಬಾಳಷ್ಟು ಉಳಿಸ್ಕಂಡು ಬಿಟ್ರು. ಇನ್ನೂ ದೊಡ್ಡ ದೊಡ್ಡ ಜಮೀನ್‌ದ್ದಾರ್ರು. ಅದಾರ್ರೀ. ಐನೂರು ಎಕ್ರೀ, ಆರ್‌ನೂರು ಎಕ್ರೀ ಜಮೀನು ಇರೋರು ಈಗ್ಲೂ ಇದ್ದಾರ.

ಭೂಸುಧಾರಣೆಯಲ್ಲಿ ಕಾಂಗ್ರೆಸ್ಪ್ರಾಮಾಣಿಕ ಆಸಕ್ತಿ ವಹಿಸಿತ್ತೂ ಅಂತಾ ಹೇಳ್ಲಿಕ್ಕಾಗ್ತದ?

ಅರಸು ಅವರು ಪ್ರಾಮಾಣಿಕ ಆಸಕ್ತಿ ಇತ್ತು. ಅವ್ರು ಕೆಲವು ಕಡೆಗೆ ಜಮೀನ್‌ದಾರಿ ಹಿತಾಸಕ್ತಿ ಇರೋವಂಥ ಜನ್ರನ್ನ ತಮ್ಮ ಕಡೆ ಇಟ್ಟಕೊಂಡೂ ಇಟ್ಕೊಂಡಿದ್ರು. ಉದಾಹರಣೆಗೆ ಯಡಿಹಳ್ಳಿ ದೇಸಾಯಿಯವ್ರು ಅಂತಿದ್ರು. ಅವ್ರು ದೇವರಾಜ ಅರಸು ಅವರಿಗೆ ಭಾಳಾ ಬೇಕಾದವರು. ಅವರನ್ನ ತಮ್ಮ ಬಲಗೈಯಾಗಾ.. ಇದ್ರು. ಅಂಥವರೆಲ್ಲ ಜಮೀನ್ದಾರೀ ಉಳ್ಕಂಡಾವ ನಮ್ಮಲ್ಲೇ ರೋಣದ ಗೌಡ್ರು….

ಭೂ ಹೋರಾಟಗಳ ಮೂಲಕ ಬೆಳೀತಾ ಇದ್ದ ಸಮಾಜವಾದದ ಪ್ರಭಾವವನ್ನ ದುರ್ಬಲಗೊಳಿಸೋದಕ್ಕೆ ಏನಾದ್ರೂ ಕಾಂಗ್ರೆಸ್ ಬಗೆಯ ರಾಜನೀತಿಯನ್ನು ಜಾರಿಗೆ ತಂದಿರಬಹುದಾ?

ಏ … ಅದು ಏನಿಲ್ಲ. ಆ ರೀತಿ ಇದ್ದಿದ್ದಿಲ್ಲ ಅದು. ದೇವರಾಜು ಅರಸರ ಕಾಳಜಿಯನ್ನು ನಾನು ಪ್ರಶ್ನೆ ಮಾಡ್ಲಾರೆ. ಪ್ರಾಮಾಣಿಕರು ಅವ್ರು. ಅದ್ರಲ್ಲೂ ಹುಚ್ಚು ಮಾಸ್ತಿಗೌಡ್ರು ಅವಾಗ ರೆವಿನ್ಯೂ ಮಿನಿಸ್ಟ್ರಲ್ಲ. ಹುಚ್ಚಮಾಸ್ತಿ ಗೌಡ್ರೂ ಆಗಾಗ ನನ್ನೊಂದಿಗೆ ಸಮಾಲೋಚನೆ ಮಾಡ್ತಿದ್ರು. ಸ್ವಲ್ಪ ಸ್ನೇಹ ಇತ್ತು. ಹುಚ್ಚುಮಾಸ್ತಿಗೌಡರ ಕೂಡ ನಂದು. ಅವ್ರೆಲ್ಲಾ ಪ್ರಾಮಾಣಿಕರಿದ್ರು ಬಿಡ್ರೀ.

ಆದ್ರೆ ಒಂದಂತೂ ಖರೆ. ಭೂ ಸುಧಾರಣೆ ಜಾರಿಯಾದ ಮೇಲೆ ಸಮಾಜವಾದಿಗಳಿಗೆ ಹೋರಾಟ ಮಾಡೋಕೆ ಗಟ್ಟಿ ಇಶ್ಯೂನೇ ಇರ್ಲಿಲ್ಲ?

(ನಗು…) ಅದೂ ಖರೆ. ಆದ್ರೆ ಇನ್ನಷ್ಟು ಭೂಮಿ ಇವ್ರಿಗೆ ಭೂರಹಿತರಿಗೆ ದೊರಕಿಸಿ ಕೊಡೋದಿಕ್ಕೆ ಸಾಧ್ಯ ಇತ್ತು. ಬಹಳಷ್ಟು ಜಮೀನುದಾರ್ರು ಕಳವಿನ ಮೂಲಕ, ಹೆಂಗೆಂಗೋ ಮಾಡಿ ಭೂಮಿನ್ನ ಉಳಿಸ್ಕೊಂಡು ಬಿಟ್ರು. ನನ್ಹತ್ರ ಬಹಳಷ್ಟು ಪ್ರಕರಣಗಳು ಬಂದಿದ್ವು ಏನ್ ಮಾಡೋದು….

ಕರ್ನಾಟಕದಲ್ಲಿ ಸಮಾಜವಾದಿಗಳು ಅಸ್ಪೃಶ್ಯತೆ ವಿರುದ್ಧ, ದಲಿತರ ಮೇಲಾದ ಹಲ್ಲೆಗಳ ವಿರುದ್ಧ ಇಂತಹ ವಿಷಯಗಳನ್ನು ಇಟ್ಕೊಂಡು ಹೋರಾಟ ಮಾಡಿದ್ದು ತೀರಾ ಕಡಿಮೆ ಅನ್ನಿಸಲ್ವಾ?

ಹೌದು.

ಒಂದು ಕಾಲದ ಸಮಾಜವಾದಿಗಳ ವಿರುದ್ಧಾನೇ ದಲಿತರ ಹೋರಾಟ ಮಾಡಬೇಕಾದ ಸಂದರ್ಭ ಬಂತು. ನಂತರದಲ್ಲಿ?

ಹೌದೌದು.

ಪೊನ್ನಮ್ಮಾಳ್ ಅಂಥವರನ್ನು ಹೊರತುಪಡಿಸಿದರೆ ಮಹಿಳೆಯರ ಭಾಗಿದಾರಿಕೆ ಕೂಡ ತೀರಾ ಕಡಿಮೆ ಇತ್ತು ಅನ್ನಿಸುತ್ತದೆ ಒಟ್ಟಾರೆಯಾಗಿ…?

ನಿವೇಶನ ರಹಿತರ ಹೋರಾಟ ಮಾತ್ರ ಬರೇ ಸ್ತ್ರೀಯರದ್ದೇ ಆಗಿತ್ರೀ. ನಮ್ದಂತೂ…(ನಗು). ಆದ್ರೆ ರೈತ ಹೋರಾಟದೊಳಗ ತೀರಾ ಕಡಿಮೆ. ನಮ್ಮಲ್ಲಿ ಒಬ್ಬರು ಕಾರ್ಯಕರ್ತರು ಇದ್ದರ‍್ರೀ. ಧಾರಾವಾಡ ಜಿಲ್ಲಾದೊಳಗೆ ಈಗೇನು ಇದ್ದಾಳೋ ಗೊತ್ತಿಲ್ಲ. ಗಂಗವ್ವ ಕುಂಬಾರಗೇರಿ ಅಂತ ಪಾರ್ಟಿ ಟಿಕೇಟಿನಿಂದಾನ ಆಕೀನ ಟಿ.ಡಿ.ಬಿ. ಮೆಂಬರ್ ಮಾಡಿದ್ವಿ.

ಯಾವ ಊರಿನಲ್ಲಿ?

ಗರಗದಾಗ….

ಆ ಎಲ್ಲಾ ದಾಖಲೆಗಳನ್ನು ಖರ್ಗೆಯವರ ಮುಂದಿಟ್ಟು, ನೊಡ್ರೀ ಇದು ಫಾರೆಸ್ಟ್ ಲ್ಯಾಂಡ್ ಅಲ್ಲೇ ಅಲ್ಲ, ರೆವಿನ್ಯೂ ಲ್ಯಾಂಡ್ ಅದಾ, ಅಂತಾ ಖಾತ್ರೀ ಪಡಿಸಿದ ನಂತರ ಅವ್ರು ಡಿ.ಸಿ.ಗೆ ಹೇಳಿದ್ರು, ಅದಕ್ಕೊಂದು ಕ್ಯಾಬಿನೆಟ್ ನೋಟ್ ತಯಾರ್ ಮಾಡ್ಲಕ್ಕ ಹೇಳಿ, ಇವರಿಗದನ್ನ ಹಂಚಿ ಬಿಡಾಣ ಅಂತ ಮಾಡಿದ್ರು. ಮೊದ್ಲು ನನಗ ಗೊತ್ತಾಗಿದ್ದು ಮೂರು ಸಾವಿರಪ್ಪ ಕೊರ‍್ವಿ, ಟೌನ್ ಪ್ಲಾನಿಂಗ್ ಛೇರ್ಮನ್‌ರಿಂದ, ಇವರ್ದು ಏನೋ ಯೋಜನೆ ಇತ್ತು. ಅದು ಅದನ್ನ ಸಾರ್ವತ್ರಿಕವಾಗಿ ಉಪಯೋಗ ಮಾಡೋ ಇಚ್ಛೆ ಇದ್ದಿಲ್ಲ ಅವರಿಗೆ ತಮಗೆ ಬೇಕಾದವರಿಗೆ ಹಂಚ್ಚೋಬೇಕು ಅಂತಾ ಯೋಚನಾ ಇತ್ತು.

ನಿವೇಶನರಹಿತರ ಆಂದೋಲನ ಮೂಲಕ ಮೂರ್ನಾಲ್ಕು ಸಾವಿರ ಜನರ ನಡುವೆ ಸತತ ೧೦ ವರ್ಷ ಸಂಪರ್ಕ ಇಟ್ಕೊಂಡು ನಂತರವೂ ನಿರ್ದಿಷ್ಟ ರಾಜಕ್ತ್ರೀಃಯ ಪ್ರಜ್ಞೆಯನ್ನು ಅವರ ನಡುವೆ ಮೂಡಿಸೋಕೆ ಆಯ್ತಾ?

ಮೂಡಿಸೋಕೆ ಆಗಿಲ್ಲ, ನಾವ್ ಮಾಡಿಲ್ಲ (ನಗು.) ಆದ್ರೆ ನಾವು ಲೋಹಿಯಾ ಮತ್ತು ಗಾಂಧೀ ಅವರ ಪೋಟೋ ಇಟ್ಕಂಡಾ ನಾವು, ಇವರಾ ನಮ್ಮ ಆದರ್ಶ ಅಂತ ಜನರ ನಡುವಾ.

ಯಾಕೋ ನೀವು ಅಷ್ಟು ಹೊತ್ತಿಗೆ ಆಸಕ್ತಿ ಕಡೀಮೆ ಮಾಡಿಕೊಂಡ್ರೀ ಅನಿಸ್ತದೆ?

ಹೌದು ಆಸಕ್ತಿ ಸ್ವಲ್ಪ ಕಡಿಮೆ ಆಯ್ತು.

ಪಕ್ಷ ಅಥವಾ ಸಂಘಟನೆಗಿಂತ ನಿಮ್ಮ ವೈಯಕ್ತಿಕ ಆಸಕ್ತಿಯಿಂದ ನಿಮ್ಮ ನಾಯಕತ್ವದಲ್ಲಿ ನಡೆದ ಹೋರಾಟ ಅದು ಅನ್ನಿಸೋದಿಲ್ವಾ?

ಹೌದು.

 

ಅದರ ಹಿಂದೆಪಾರ್ಟಿ ಇಂಟ್ರೆಸ್ಟ್ ಸ್ವ ಸ್ವಲ್ಪಾದ್ರೂ ಇತ್ತಾ?

ಇಲ್ಲಾ, ಇಲ್ಲಾ, ನಾನವಾಗ ಯಾವ ಪಾರ್ಟಿಯಲ್ಲೂ ಆಸಕ್ತಿ ಇಟ್ಕೊಂಡಿರ್ಲಿಲ್ಲ. ಸೋಷಲಿಸ್ಟ್ರು ಹೊರಟೂ ಆಗಿ ಹೋಗಿಬಿಟ್ಟಿದೆ. ನಮಗೇನು ಪಕ್ಷಕಟ್ಟೋಕೆ ಆಗಾದಿಲ್ಲ. ಜನತಾ ಪಕ್ಷದಾಗ ನಾಲ್ಕು ಜನ, ನಾಲ್ಕು ಪಕ್ಷ ಸೇರಿ ಜನತಾ ಪಕ್ಷ ಆಗಿದ್ದು. ಸ್ವತಂತ್ರಪಕ್ಷ ಇತ್ತು. ಈ ಭಾರತೀಯ ಜನಸಂಘದವ್ರೂ, ಸೋಷಲಿಸ್ಟ್ರು, ಸಂಸ್ಥಾ ಕಾಂಗ್ರೆಸ್ಸು ಎಲ್ಲಾ ಇವರ ಮಧ್ಯೆ ಇದ್ಕೊಂಡು ಇನ್ನೇನು ಸಮಾಜವಾದ ಸಾಧಿಸ್ಲಿಕ್ಕೆ ಆಗ್ತದ. ಆಯ್ತದು. ಅಂತಾ ನಾನು ಬಿಟ್ಟಿದ್ದು. ಅಷ್ಟೊತ್ತಿಗೆ ಲೋಹಿಯಾನೂ ಹೋಗಿಬಿಟ್ಟಿದ್ರು. ಏನಾ ಇನ್ನೊಬ್ಬ ನಾಯಕ ಅಂತಾ ನಾ ವಿಶ್ವಾಸ ಇಟ್ಟಿದ್ದು ಅಂದ್ರಾ ಮಧುಲಿಮಯೆ ಅವರು.ಅವ್ರೂ ನನ್ನ ಮ್ಯಾಲೆ ಅಷ್ಟಾ ವಿಶ್ವಾಸ ಇಟ್ಟಿದ್ರು.

ಸಂಪರ್ಕದಾಗ ಇದ್ರಾಕೊನೆವರೆಗೂ?

ಭಾಳಾ ಸಂಪರ್ಕ ಇತ್ತು. ಹೋಗ್ತಿದ್ದೆ. ಮಾತಾಡ್ತಿದ್ದೆ. ಅವರಿಗೂ ಆಗ್ಲೇ ನಿರಾಶೆಯಾಗಿತ್ತು. ಯಾಕಂದ್ರೆ ಜನತಾ ಪಾರ್ಟಿ ಜನರಲ್ ಸೆಕ್ರೆಟರಿ ಆದ ನಂತರ, ಪಾರ್ಟಿಯೊಳಗ ಬೇರೆ ಬೇರೆ ಹಿತಸಾಧನೆ ಗುಂಪುಗಳು ಅದ್ರೊಳಗ ಇರಬಾರ್ದು ಅವ್ರು ಅಂದಾಗ ಪಕ್ಷ ಒಡದು ಹೋಯ್ತು. ಆರ್‌.ಎಸ್‌.ಎಸ್‌. ನವ್ರು ಐಡೆಂಟಿಟಿ ಇಟ್ಕೊಂಡೇ ತೀರ್ಬೇಕು ಅನ್ನೋವ್ರು. ಆ ವಿಷಯಕ್ಕ ಬಂದಾಗ ಪಕ್ಷ ಒಡದೂನೂ ಹೋತು.

ಜನಸಂಘದ ಜೊತೀಗೆ ಸೇರ್ಕಂಡು ಜನತಾ ಪಕ್ಷ ಕಟ್ಟಬೇಕು ಅನ್ನೋ ವಿಚಾರ ಬಂದಾಗ, ನಿಮ್ಮ ಅಭಿಪ್ರಾಯ ಏನಾಗಿತ್ತು?

ಜಯಪ್ರಕಾಶರ ವಿಚಾರ ಅದು. ಅದರ ಬಗ್ಗೆ ಭಾಳಾ ವಿಚಾರ ಮಾಡಾಕ ಅವಕಾಶಾನೂ ಇರಲಿಲ್ಲ. ಸಮಯಾನೂ ಇರಲಿಲ್ಲ. ಯಾಕಂದ್ರ ಎಲ್ಲಾ ನಾಯಕರದೂ ಈ ಎಮರ್ಜೆನ್ಸಿಯೊಳಗ ಅರೆಸ್ಟ್ ಆದವ್ರು ಬಿಡಗುಗಡೆ ಆತು, ಬಿಡುಗಡೆ ಆದ ಕೂಡ್ಲೆ ಚುನಾವಣೆಗಳನ್ನ ಡಿಕ್ಲೇರ್ ಮಾಡಿಬಿಟ್ರು. ಚುನಾವಣೆ ಬಂದಕೂಡ್ಲೆ ಈ ನಾಲ್ಕು ಪಕ್ಷಗಳನ್ನ ಮರ್ಜ್‌ ಮಾಡಿ, ಜನತಾ ಪಾರ್ಟಿ ಮಾಡೋನು ಅಂತಿಳ್ಕೊಂಡು ನಿರ್ಣಯ ಮಾಡಿದ್ರು. ಆಗ ವಿಚಾರ ಮಾಡ್ಲಿಕ್ಕೆ ಅವಕಾಶನೇ ಇರಲಿಲ್ಲ. ಜಯಪ್ರಕಾಶರು ಹೇಳಿದ್ರು, ಎಲ್ಲರೂ ಕೂಡಿದ್ರು ಮಾಡ್ಬಿಟ್ರು. ತಾವಾ ಮಾತಾಡ್ಕಂಡು ನಿರ್ಣಯ ಮಾಡಿದ್ರು.

ಅವಾಗ ಏನನ್ನಿಸ್ತು ನಿಮಗ?

ಎಮರ್ಜೆನ್ಸಿಯೊಳಗ ರಾಜಕೀಯ ಸ್ವಾತಂತ್ರಯ ಕಳ್ಕೊಂಡಿದ್ವಿ. ರಾಜಕೀಯ ಸ್ವಾತಂತ್ರಯ ಪಡದಂಗಾತು. ಭಾರತೀಯ ಜನಸಂಘದೊಂದಿಗೆ ನಾವು ಭಾಳಷ್ಟು ದಿನ ಕೂಡಿ ನಡೆಯೋಕ್ಕಾಗೋದಿಲ್ಲ ಅಂತ ಅನಿಸಿತ್ತು. ನಮಗೀಗಾಗಲೇ ಸಂಘಟನೆಯೊಳಗ ನಮ್ಮ ಜನಾನ ಬ್ಯಾರೆ ಇರಾದು. ಅವ್ರು ಬ್ಯಾರೇನ ಮಾಡ್ತಿದ್ರು. ನಾವು ಬ್ಯಾರೇನ ಮಾಡ್ತಿದ್ವಿ. ಕೂಡಿ ಕೆಲ್ಸ ಮಾಡ್ತಿದ್ದಾ ಇಲ್ಲ.

ನಿವೇಶಗಳನ್ನು ಮಾಡಿದ್ರೀ, ಸಂಘ ಕಟ್ಟಿದ್ರೀ, ಯಶಸ್ವೀ ಆದ್ರಲ್ಲ, ಸಮೂಹದಿಂದ ನಾಯಕತ್ವವನ್ನು ತರೋಕೆ ಆಯ್ತಾ ಸಾರ್?

ಏ.. ನನ್ನಿಂದಾಗ್ಲಿಲ್ಲ..(ನಗು.) ನಾ ಆ ಬಗ್ಗೆ ಪ್ರಯತ್ನಾನೂ ಮಾಡ್ಲಿಲ್ಲ. ನಾಯಕತ್ವಾನೂ ಬರ್ಲಿಲ್ಲ. ಇಲ್ಲ. ಸಿಕ್ಕಿದ್ದು ಅಂದ್ರೆ ನಾಗರಾಜ ಗುರಿಕಾರ್‌ ಒಬ್ರೇ. ಬಿಟ್ರೇ ಬ್ಯಾರೆ ಯಾರಿಲ್ಲ. ಶಿಕ್ಷಣ ಪಡೆದವರು. ರಾಜಕೀಯದೊಳಗೆ ಆಸಕ್ತಿ ಇದ್ದೋರು ಯಾರೂ ಇದ್ದಿದ್ದಿಲ್ಲ ಅದ್ರೊಳಗ.

ನಾನು ಲೋಹಿಯಾ ನಗರದಲ್ಲಿ ಸಮವಸ್ತ್ರಧಾರಿ ಆರ್.ಎಸ್.ಎಸ್. ಕಾರ್ಯಕರ್ತರನ್ನ ಕಂಡೆ. ಮೊದಲಿಂದನಾ ಅವರು ನಿಮ್ಮ ಹೋರಾಟದೊಳಗೆ ಇದ್ರಾ, ಅಥವಾ ಈಗ ಪ್ರವೇಶಿಸಿದ್ದಾರಾ?

ನಮ್ಮ ಹೋರಾಟದೊಳಗ ಈ ಖಾಕಿ ನಿಕ್ಕರ್ ಹಾಕ್ಕಂಡ ಜನ ಇರ್ಲಿದ್ದಿಲ್ಲ. ನಮ್ಮ ನಡುವೆ ಇರ್ತಿದ್ದೋರು ಬಡವರು, ನಿವೇಶನ ರಹಿತರು ನಿಷ್ಪಾಪಿ ಜನ ಇರ್ತಿದ್ರು ಅವ್ರು. ಆದ್ರೆ ಅದ್ರೊಳಗೆ ನನಗೆ ಸಂದೇಹ ಬರ್ತಿತ್ತು.. ಒಂದು ಒಂದಿಷ್ಟು ಜಾತಿಯ ಜನ್ರನ್ನ. ಕಂಡಾಗ ಒಂದಿಲ್ಲ ಒಂದಿವ್ಸ ಇವ್ರು ಆರ್.ಎಸ್. ಎಸ್. ಕೂಡ ಹೋಗೋರು ಅಂತ ಅನ್ನಿಸಿತ್ತು. ಈಗ ಆ ಜನ ಬಂದ್ ಬಿಟ್ಟಾರ, ಆದ್ರೆ ಭಾಳಾದಿನ ಅವರು ಅಲ್ಲಿ ಇರ್ಲಿಕ್ಕಿಲ್ಲ. ನಮಗ ಇನ್ನಿತರೆ ಸಾಮಾಜಿಕ ಚಟುವಟಿಕೆಗಳನ್ನ ಅಲ್ಲಿ ಹಮ್ಮಿಕೊಳ್ಳೋ ಯೋಚನೆ ಇದೆ. ಹೀಗಿರುವಾಗ ಅವ್ರು ಭಾಳಾ ದಿವ್ಸ ನಿಲ್ಲಿಕ್ಕಿಲ್ಲ. ಏನೋ ಕೆಲವರಿಗೆ ಆತುರತೆ ಇರ್ಬೇಕು ಬಂದಾರ.

ನಿವೇಶನ ಹೋರಾಟ ಸಂದರ್ಭಕ್ಕೆ ಬೊಮ್ಮಾಯಾಯಿಯವರಿಗೂ ನಿಮಗೂ ಭಾಳಾ ಸಂಘರ್ಷ ಕಾಣಿಸ್ತದೆ. ಅದಕ್ಕೆ ವ್ಯಕ್ತಿಗತ ಹಿನ್ನೆಲೆಗಳಿದ್ದಾವ?

ವ್ಯಕ್ತಿಗತವಾಗಿ, ಪ್ರಾರಂಭದಲ್ಲೇನು ಇರ್ಲಿಲ್ಲ. ಆದ್ರೆ ನಿವೇಶಕ್ಕಾಗಿ ಹೋರಾಟ ಮಾಡೋವಾಗ್ಲೇ ವೈಷಮ್ಯ ಹುಟ್ಟಿದ್ದು.

ನಿವೇಶನ ಹೋರಾಟ ಮಾಡಿದ್ರೆ ವೈಷಮ್ಯ ಯಾಕ ಹುಟ್ಬೇಕು?

ಅಷ್ಟೊತ್ತಿಗೆ ಆನಂದ ನಗರದಲ್ಲಿ ಹೋರಾಟ ಮಾಡಿದ್ವಿ. ಆ ಕಾಲಕ್ಕ ಅವ್ರು ದೊಡ್ಡ ನಿವೇಶಗಳನ್ನ ಮಾಡಿದ್ರು. ಹಣವಂತರಿಗೆ ಹಂಚಬೇಕಂತಾನಾ ಮಾಡಿದ್ರು ಮುನ್ಸಿಪಾಲ್ಟಿ ಕಾರ್ಪೋರೇಷನ್ ನವ್ರು. ಅಲ್ಲಿ ಜನರಿಗೆ ಜಾಗೃತಗೊಳಿಸಿ ನಾವು ಅದನ್ನು ಹೋರಾಟ ಮಾಡಿ, ಅದೇ ನಿವೇಶಗಳನ್ನ ತುಂಡು ಮಾಡಿ ನಮ್ಮ ಜನರಿಗೆ ಹಂಚಿಸಿದ್ದೆ. ಅದೇ ಬಗೆಯ ಹೋರಾಟವನ್ನ ಇಲ್ಲಿ ಮಾಡ್ತಾರ ಅನ್ನೋ ಹೆದ್ರಿಕೆ ಇಲ್ಲಿ ಬೊಮ್ಮಾಯಿ ಅವ್ರಿಗೆ ಇತ್ತು ಅಂತಾ ಕಾಣಿಸ್ತದೆ.

ಹಂಗಾಗಿ ಅವ್ರು ಜಲ್ದೀ ಆಗಗೊಡ್ಲಿಲ್ಲ?

ಜಲ್ದೀ ಆಗಗೊಡ್ಲಿಲ್ಲ ಅನ್ನಾದೇನು ಪೂರ್ಣಭೂಮಿನಾ ಫಾರೆಸ್ಟ್ ಲ್ಯಾಂಡ್ ಅಂತಾ ಮಾಡಿದ್ರು. ವ್ಯತಿರಿಕ್ತವಾಗದೇ ಇದ್ರು.

ಹಂಗ ನೋಡಿದ್ರೆ ನೀವಿಬ್ರೂ ಒಂದೇ ಪಕ್ಷದಲ್ಲಿದ್ದೋರು. ಜನತಾ ಪಕ್ಷದಲ್ಲಿ…?

ಎಲ್ಲಿ ಜನತಾ ಪಕ್ಷ? ಅಷ್ಟು ಬಾಂಧವ್ಯ ಬೆಳೆಸೋ ಪಕ್ಷ ಏನೂ ಆಗಿರ್ಲಿಲ್ರೀ ಅದು. ಆಗಿದ್ದಿದ್ದಿಲ್ಲ. ಯಾಕಂದ್ರ ಐಡಿಯಾಲಜೀಸ್ ಸಂಸ್ಥಾ ಕಾಂಗ್ರೆಸ್ಸಿನವ ಬ್ಯಾರೆ ಇರೋವು. ನಮ್ಮವಾ ಬ್ಯಾರೆ ಇರೋವು. ಭಾರತೀಯ ಜನಸಂಘದವ್ರುದೊಂದು ಬ್ಯಾರೇನೇ ಇರೋದು. ಇವ್ರು ಬಂದದ್ದು ಮಾತ್ರ ಸಂಸ್ಥಾ ಕಾಂಗ್ರೆಸ್ಸಿನಿಂದ ಬೊಮ್ಮಾಯಿಯವ್ರು. ಸಂಸ್ಥಾ ಕಾಂಗ್ರೆಸ್ಸಿನ ಜಿಲ್ಲಾ ಅಧ್ಯಕ್ಷ ಆಗಿದ್ರು ಕಾಣಿಸ್ತದ ಎಮರ್ಜೆನ್ಸಿ ಕಾಲಕ್ಕ. ಯಾಕಂದ್ರ ತಾತ್ಪೂರ್ತಿಕವಾಗಿ ಅದು ಆಗಿದ್ದು. ಹಳ್ಳಿಕೇರಿಯವರು ಆಗಿದ್ದಷ್ಟು ದಿನ ಇವರ್ನ ಬರಗೊಟ್ಟಿರಲಿಲ್ಲ. ಹಳ್ಳಿಕೇರಿ ಗುದ್ಲೆಪ್ಪ ಜಿಲ್ಲಾ ಮುಖಂಡ್ರು ಆಗಿರೋವಾಗ ಬೇಕಾದವರ್ನ ಮಾಡ್ಕೋತಾ ಬಂದಿದ್ರು. ಅಷ್ಟೊತ್ತಿಗೆ ಹಳ್ಳಿಕೇರಿಯವರು ತೀರ್ಕೊಂಡು ಬಿಟ್ಟಿದ್ರು. ಆ ಕಾಂಗ್ರೆಸ್ ಪಕ್ಷವನ್ನ ಜಿಲ್ಲೆಯೊಳಗ ನಡೆಸ್ಕೊಂಡು ಹೋಗುವಂಥವ್ರೂ ಇಲ್ಲಿ ಯಾರೂ ಇರಲಿಲ್ಲ. ಅದಕ್ಕಾಗಿ ಇವ್ರು ಕಾಂಗ್ರೆಸ್ ಸೇರಿ ಬಿಟ್ಟಿದ್ರು. ರಾಯಿಸ್ಟ್ ಅಂತಾ ಹೇಳ್ಕೋತಿದ್ರು. ಎಂ. ಎನ್. ರಾಯ್ ಆದ್ರೆ ಅವರದೇನು ಅಂಶ ಇವರತ್ರ ಕಾಣಿಸ್ತಿದ್ದಿಲ್ಲ. ಅದಕ್ಕೊಂದು ದೃಷ್ಟಿಕೋನ ಇರ್ತಎ ನೋಡ್ರೀ. ಇತಿಹಾಸದ ಘಟನೆಗಳನ್ನು ನೋಡೋವಂತ ದೃಷ್ಟಿಕೋನ. ಅದು ಇದ್ದಿದ್ದಿಲ್ಲ ಬೊಮ್ಮಾಯಿ ಅವರತ್ರ. ಅವರು ರೋಟರಿ ಕ್ಲಬ್ ಗೆ ಹೋಗ್ತಿದ್ರು. ಅದರ ಅಧ್ಯಕ್ಷರೂ ಆಗಿದ್ರು. ಆಮೇಲೆ ಛೇಂಬರ್ ಆಫ್ ಕಾಮರ್ಸ ಅವರೊಂದಿಗೆ ಸಂಬಂಧ ಇತ್ತು. ಅವರ ಗೆಳೆಯರು ಗಂಗಪ್ಪವಾಲಿ ಅಂತಿದ್ರು, ಆಮೇಲೆ ಜೆ.ಪಿ. ಜವಳಿ ಅಂತಿದ್ರು ಅವರೆಲ್ಲಾ ವ್ಯಾಪಾರಸ್ಥರು ಮತ್ತು ಛೇಂಬರ್ ಆಫ್ ಕಾಮರ್ಸ್‌ನಲ್ಲಿರ್ತಿದ್ರು. ಅವರ ಜೊತೆ ಇವ್ರಿರ್ತಿದ್ರು. ಇಲ್ಲಿ ಅವರನ್ನ ರಾಜಕಾರಣಿ ಅಂತ ಯಾರೂ ಗಂಭೀರವಾಗಿ ಪರಿಗಣಿಸ್ಲಿಲ್ಲ. ಪರಿಗಣಿಸಿದ್ದಿಲ್ಲ. ಜನತಾ ಪಕ್ಷ ಅಧಿಕಾರಕ್ಕೆ ಬಂದ ಮ್ಯಾಲಿನ, ರಾಜಕೀಯ ವ್ಯಕ್ತಿ ಅಂತಾ ಅವರಿಗೆ ಐಡೆಂಟಿಟಿ ಬಂದಿದ್ದು.

ನಿಮಗೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳ ಸಮಾಜವಾದಿಗಳ ಜೊತೆ ಸಂಬಂಧ ಹೇಗಿತ್ತು?

ವೈಯಕ್ತಿಕವಾಗಿ ಹೇಳ್ಬೇಕಂದ್ರೆ ನನಗೆ ಭಾಳಷ್ಟು ಅಡ್ಡಾಡ್ಲಿಕ್ಕೆ ಆಗ್ತಿರಲಿಲ್ಲ. ಪ್ರವಾಸ ಮಾಡ್ಲಿಕ್ಕೆ ಆಗ್ತಿರಲಿಲ್ಲ. ಮೀಟಿಂಗ್ ಕರೆದ್ರೆ ಯಾವಾಗ್ಲೋ ವರ್ಷಕ್ಕ, ಎರಡು ವರ್ಷಕ್ಕೊಂದ್ಸಲ ಮೀಟಿಂಗ್ ಹೋಗ್ತಿದ್ದೆ ಅಷ್ಟೇ. ಅವರಾಗೀ ಬಂದಾಗ ಅವರಿಗಾಗಿ ಇಲ್ಲಿ ಕಾರ್ಯಕ್ರಮಗಳನ್ನು ಏರ್ಪಡಿಸ್ತಿದ್ದೆ. ಹೆಚ್ಚಾಗಿ ನಾನು ಇಲ್ಲೇ ಧಾರವಾಡ ಜಿಲ್ಲೆಯೊಳಗೇನಾ ಜಮೀನ್ದಾರಿಕೆ ವಿರುದ್ಧ ರೈತರನ್ನ ಸಂಘಟಿಸೋದ್ರಾಗ ಹೆಚ್ಚು ಶ್ರಮ ಹೋಗ್ತಿತ್ತು. ಹೀಗಾಗಿ ಅವರೆಲ್ಲಾ ಮೀಟಿಂಗ್ ಕರೆದ್ರು ಅಂದ್ರ ಅಲ್ಲಿ ಹೋರಾಟನೂ ಇರ್ತಿದ್ದಿಲ್ಲ. ಸಂಘಟನೇನೂ ಇರ್ತಿದ್ದಿಲ್ಲ. ಹರಟೆಗೋಷ್ಠಿ ನಡೀತದೆ. ಅಲ್ಲಿ ಹೋಗೋ ಅಗತ್ಯಾನೇ ಇಲ್ಲ ಅಂತ ಹೋಗ್ತೀದ್ದಿಲ್ಲ.

ಸಭೆಗಳಲ್ಲಿ ಪಕ್ಷದ ಸೈದ್ಧಾಂತಿಕ ಪ್ರಶ್ನೆ ಧೋರಣೆಗಳ ಬಗ್ಗೆ ಚರ್ಚೆಯಾಗಿತ್ತುರಲಿಲ್ವ?

ಸೈದ್ಧಾಂತಿಕತೆ, ಧೋರಣೆ ಅನ್ನೋದೆಲ್ಲ ವ್ಯರ್ಥ ಅನ್ನಿಸ್ತದೆ. ಯಾಕಂದ್ರೆ ಆಚರಣೆಯೊಳಗಂತೂ ಇಲ್ವೇ ಇಲ್ಲ. ಸಂಘಟನೆ ಮಾಡ್ಬೇಕು, ವರ್ಗ ಸಂಘಟನೆ ಮಾಡ್ಬೇಕು ಅನ್ನೋದಿಲ್ಲ. ಆಮ್ಯಾಲ ಯಾವ್ದಾದ್ರೂ ಹೋರಾಟ ಮಾಡ್ಬೇಕು ಅಂದ್ರೆ ಹೋರಾಟದ ಕಾರ್ಯಕ್ರಮಾನೂ ಇರ್ತಿದ್ದಿಲ್ಲ. ಮತ್ತ ಸಾಧಾರಣವಾಗಿ ನನಗ, ನನ್ನ ಇಂಪ್ರೆಶನ್ ಆದ್ ದಪ್ಪಾ ಅಂದ್ರೆ ಈ ಶಿವವೊಗ್ಗಾದ ಸೋಷಲಿಸ್ಟರು ಅಂತಂದ್ರಾ ಕುಡಿತಾ, ಜೂಜುಗಾರಿಕೆ ಇವುಗಳಲ್ಲಿ ಆಸಕ್ತರಾಗಿದ್ದಂಥ ಜನ ಅಂತಾ, ನನಗ ಆಗ್ತಿರಲಿಲ್ಲ. ಹಾಗೆ ಆಗಿತ್ತು ವಾತಾವರಣ. ಇಸ್ಪೀಟ್ ಕ್ಲಬ್ಬು. ಕುಡಿತ…ಇವಾ ಇದನ್ನ ನಾವು ಬೇರೆ ಕಡೆ ಕಾಣ್ಲಿಕ್ಕಾಗಲ್ಲ. ಗುಲ್ಬರ್ಗಾ ಜಿಲ್ಲೆಯೊಳಗ, ಮತ್ತ ಬೇರೆ ಜಿಲ್ಲೆಗಳಲ್ಲೂ ಈ ಶಿವವೊಗ್ಗಾದವರು ಯಾಕ ಹಂಗಾದ್ರೋ ಗೊತ್ತಿಲ್ಲ. ಇವ್ರನ್ನ ಕಾಣಬೇಕಾಗಿತ್ತಪ್ಪ ಅಂದ್ರಾ ಇಸ್ಫೀಟ್ ಕ್ಲಬ್ಬಿಗೆ ಹೋಗೇ ಕಾಣ್ಭೇಕು. ಈ ಸ್ಥಿತಿ ಗೋಪಾಲಗೌಡ್ರೀಗೂನೂ ಒಮ್ಮೊಮ್ಮೆ ಬಂದು ಬಿಡ್ತಿತ್ತು. ನಾನು ಸ್ಪಷ್ಟವಾಗಿ ಹೇಳಿದೆ. ಕುಡಿತದಿಂದ್ಲೇ ಸತ್ತಿದ್ದು ಅವ್ರು.

ಅದು ೧೯೬೫ ಅಕ್ಟೋಬರ್ ೩ ಅಂತಾ ಕಾಣಿಸ್ತದೆ. ಮೈಸೂರಿನ ಹೊಸ ಭೂ ಸುಧಾರಣೆ ಕಾನೂನನ್ನು ಜಾರಿಗೆ ತಂದ ದಿವ್ಸ ಅದು. ವೀರೇಂದ್ರ ಪಾಟೀಲರ ಮಂತ್ರಿ ಮಂಡಲ ಇತ್ತು. ಅಲ್ಲಿ ಒಂದು ಸಂಭ್ರಮ ಹಮ್ಮಿಕೊಂಡ್ರು. ಏ…ನಮ್ಮ ಕಾಗೋಡು ಹೋರಾಟಕ್ಕ ಜಯ ಆತು ಅಂತಂದು. ಅದಕ್ಕ ನನ್ನ ಅಧ್ಯಕ್ಷನ್ನ ಮಾಡಿ ಅವ್ರು ಆಹ್ವಾನಿಸಿದ್ರು. ಹೋಗಿದ್ವಿವಿ. ಅದಾ ಸಂದರ್ಭದೊಳಗನಾ ಬಂಗಾರಪ್ಪನವರನ್ನ ಪಕ್ಷದೊಳಗೆ ತಗೋಬೇಕೋ ಬ್ಯಾಡವೋ ಅನ್ನೋ ವಿಚಾರಾನೂ ಬಂತು. ಸ್ಟೇಟ್ ಎಕ್ಸಿಕ್ಯುಟಿವ್ ಒಳಾಗ. ಬಂದಾಗ ಗೋಪಾಲಗೌಡ್ರು, ಪಟೇಲ್ರು, ಕಾಗೋಡು ತಿಮ್ಮಪ್ಪ ವಿರೋಧಿಸಿದ್ರು ಅವಾಗ. ಅಂವ ನಂಬಿಕಸ್ಥ ಅಲ್ಲ. ಅವನ ನಿಷ್ಠೆ ಭಾಳಾ ಪ್ರಶ್ನಾರ್ಹ. ಅಂವ ಒಂದು ಕಡೆ ನಿಲ್ಲೋನಲ್ಲ. ತಗೊಳ್ಳೋದು ಬೇಡ ಅಂತ. ಬಂಗಾರಪ್ಪನವ್ರು ನನ ಕಡೆ ಬಂದಿದ್ರು. ಅವ್ರೆಲ್ಲ ನನ್ನನ್ನ ವಿರೋಧಿಸ್ತಿದ್ದಾರ, ಅವರೇನೇ ಮಾಡಿದ್ರೂ ನಾನು ಚುನಾವಣೆಗೆ ನಿಲ್ಲಂವ. ಚುನಾವಣೆಗೆ ನಿಂತ್ರೆ ನಾನು ಗೆಲ್ತೀನಿ. ಒಂದು ಪಕ್ಷ ನಾನು ಗೆಲ್ಲದಿದ್ರೂ ಸೋಷಲಿಸ್ಟ್ ಕ್ಯಾಂಡಿಡೇಟ್ ಅಂತೂ ಗೆಲ್ಲಾದಿಲ್ಲ, ಕುಪ್ಪಗಡ್ಡೆ ಮರಿಯಪ್ಪನವರು. ಒಂದು ವೇಳೆ ಕಾಂಗ್ರೆಸ್ ಬರಬಹ್ದು, ಇಲ್ಲಾ ನಾನು ಬರಬಹ್ದು, ಈ ಸ್ಥಿತಿ ಅದಾ. ನೀವು ಹೇಳ್ರೀ ಅವ್ರಿಗೆ ನನ್ನನ್ನ ಪಕ್ಷದೊಳಗೆ ಎನ್ರೋಲ್ ಮಾಡ್ರೀ ಅಂತ. ನಾನು ಪಕ್ಷದೊಳಗೆ ಪ್ರಸ್ತಾಪ ಮಾಡಿದೆ. ಬಾಳಷ್ಟು ವಾ ವಿವಾದ ನಡೆದ ನಂತರ ತಗೊಳ್ಳೋದಿಕ್ಕೆ ಒಪ್ಪಿದ್ರು. ಕಾರಣ ಏನಪ್ಪಾ ಅಂತಂದ್ರೆ ಹ್ಯಾಗಿದ್ರೂ ನಾವು ಸೋಲ್ತೀವಿ ಈ ಒಂದು ಕಾನ್ ಸ್ಟ್ಯಎನ್ಸಿಯೊಳಗ. ಬಂಗಾರಪ್ಪ ಆರಿಸಿ ಬರ್ತಾನ ಅಂದ್ರ ಪಕ್ಷಕ್ಕ ತಗೊಳ್ಳಾನ ಅಂತ ಅವತ್ತ ನಾನು ಬಂಗಾರಪ್ಪಗ ಹೇಳಿ ಕಳಿಸಿದೆ. ನೀವು ಸೊರಬಕ್ಕ ಹೋಗ್ರೀ ಇವ್ರೆಲ್ಲರ್ನ ಕರ್ಕೋಂಡು ಬರ್ತೀನಿ ಸಾಯಂಕಾಲ ಅಲ್ಲಿ ಒಂದು ಮೀಟಿಂಗ್ ಅರೇಂಜ್ ಮಾಡ್ರೀ. ಆ ಮೀಟಿಂಗ್ ನೊಳಗಾ ನಾವು ಡಿಕ್ಲೇರ್ ಮಾಡಿಬಿಡೋನು, ಬಂಗಾರಪ್ಪ ನಮ್ಮ ಪಕ್ಷ ಸೇರಿದ್ರು ಅಂತಾ. ಅಂತ್ಹೇಳಿ ಕಳಿಸ್ದೆ. ಆ ನಂತ್ರ ಇಲ್ಲಿಂದ ಒಂದು ಕಾರು ತಗೊಂಡು ಹೋದ್ವಿ.

ಅಲ್ಲಿ ಮೀಟಿಂಗ್ ನಡಿಯೋದಕ್ಕ ಸ್ವಲ್ಪ ತಡಾ ಇತ್ತು. ಅಲ್ಲಿ ಸೊರಬದೊಳಗ ಒಬ್ಬ ಅಮ್ಮ ಆಕಿ. ಬ್ರಾಹ್ಮಣ ಹೆಣ್ಮಗಳು. ವಿಧವೆ. ಆಕೀ ಮನೀಯೊಳಗೆ ಹೋಗಿ ಕುಂತ್ವಿ ನಾವು. ಆಕೀ ನಮಗೆ ಬಿಸಿಬಿಸಿ ದೋಸೆ ಗೀಸೆ ಮಾಡಿ ತಿನಿಸಿದ್ಲು. ತಿನಿಸಿ ಕಡೀಕೆ ನಾವು ಬರೋವಾಗ, ಗೋಪಾಲಗೌಡ್ರಿಗೆ ಆ ಅಮ್ಮಾ ಏನು ಹೇಳಿದ್ಲಪ್ಪಾ ಅಂದ್ರೆ, ಆಕೀ, ಇಷ್ಟೊಂದು ಇವರೊಂದಿಗೆ ತಾದ್ಯತ್ಮ ಹೊಂದಿದ ಹೆಣ್ಮಗಳು. ‘ಗೋಪಾಲಗೌಡ್ರೇ ಇದೆಲ್ಲಾ ಸೋಷಲಿಸ್ಟ್ ಪಾರ್ಟಿ….ಆ ಪಾರ್ಟಿ ಇದೆಲ್ಲಾ ಯಾಕ. ನೀವು ಭಾರತೀಯ ಜನಸಂಘಕ್ಕ ಯಾಕ ಸೇರಬಾರ್ದು. ಅದಾ ಒಳ್ಳೇದು’ ಅಂತಿಳ್ಕೊಂಡು ಹೇಳಿ ಬಿಟ್ಲು. ಅಂಥಾ ಜನಾನೂ ಇವ್ರ ಹೋರಾಟದೊಳಗ ಇದ್ರು ಅಂತಾ ಕಾಣಿಸ್ತದ ಆ ಮನೋವೃತ್ತಿ ಜನ.

ನಾ ಕೇಳ್ದೆ ಏನ್ರೀ. ಇಂಥಾ ಜನ ಅದಾರನಿಮ್ಮ ಜೋತೀಗೆ ಅಂತಾ. ಅವರು, ಹೋರಾಟದಾಗ ಎಂಥೆಂಥಾ ಜನ ಎಲ್ಲ ಬರ್ತಿರ್ತಾರ ಅಂದ್ರು. ಲಘವಾಗಿ.

ನಿಮ್ಮ ಹೋರಾಟಗಳಲ್ಲಿ ದಲಿತರ ಭಾಗಿದಾರಿಕೆಯ ಸ್ವರೂಪವೇನು?

ನಮ್ಮ ಹೆಬ್ಬಳ್ಳೀ ಕೃಷಿ ಕಾರ್ಮಿಕರ ಹೋರಾಟದೊಳಗ, ದಿನ ನಾವು ಮರೆವಣಿಗೆ ಮಾಡ್ತಿದ್ದೆವಲ್ಲ. ನಮ್ಮ ಮೆರಣಿಗೆಯೊಳಾಗ ಹರಿಜನ್ರನ್ನಾ ಮುಂದಿಟ್ಟುಕೊಂಡು ಮೆರವಣಿಗೆ ಮಾಡ್ತಿದ್ವಿ. ಅವ್ರನ್ನ ಬಿಡ್ತಿದ್ದಿಲ್ಲ ಅವ್ರು ನಮ್ಮನ ಭಾಳಾ ನಂಬಿದ್ರು. ಇದು ಉಳಿದ ಕಡೆ ಅವ್ರು ಮಾಡಿದ್ರೋ ಇಲ್ಲೋ ನನಗೊತ್ತಿಲ್ಲ ನಾನು ಮನಃ ಪೂರ್ವಕವಾಗಿ ಅವರನ್ನ ವಿಶ್ವಾಸಕ್ಕೆ ತಗೊಂಡು, ಅವರನ್ನಾ ಮುಂದಿಟ್ಕೊಂಡು ನಾವು ಆಗಾಗ ಬೇಡಿಕೆ ಮಂಡಿಸಲಿಕ್ಕೆ, ಮನವಿ ಅರ್ಪಿಸಲಿಕ್ಕೆ, ಜಿಲ್ಲಾಧಿಕಾರಿ ಕಛೇರಿಗೆ ಬರಬೇಕಾದ್ರೆ ಅವರನ್ನ ಮುಂದಿಟ್ಟಿರ್ತಿದ್ವಿ.

ನಿಮ್ಮದೇ ಆದ ವಿಶಿಷ್ಟ ಹೋರಾಟಗಳ ಅನುಭವದ ಹಿನ್ನೆಲೆಯಲ್ಲಿ ನೀವು ಕಾಗೋಡು ಸತ್ಯಾಗ್ರಹವನ್ನು ಹೇಗೆ ವಿಶ್ಲೇಷಿಸ್ತೀರಿ?

ಕಾಗೋಡು ಹೋರಾಟ ಮುಂಚೆ ಪ್ರಾರಂಭ ಮಾಡಿದವ ಗಣಪತಿಯಪ್ಪ ಅವ್ರು ಕೈಸೋತು ನಿಂತ್ರು. ಅವಾಗ ಇವ್ರು ಅವರನ್ನ ಹುರಿದುಂಬಿಸ್ಲಿಕ್ಕೆ ಅಂತ ಹೋದವ್ರು ಆ ಹೋರಾಟನ್ನ ತಮ್ಮದನ್ನಾಗಿ ಮಾಡ್ಕೊಂಡ್ರು. ಮೊದಮೊದಲು ಹೋರಾಟ ಪ್ರಾರಂಭಿಸಿದವ ಗಣಪತಿಯಪ್ಪ, ಆತ ಕಾಂಗ್ರೆಸ್ಸಿಗ. ಕಡಿದಾಳ ಮಂಜಪ್ಪನವರೂ ಕಾಂಗ್ರೆಸ್ಸಿನವ್ರು. ಕಡಿದಾಳ ಮಂಜಪ್ಪನವರನ್ನ ಗಣಪತಿಯಪ್ಪ ಇದನ್ನ ಮಾಡ್ತಿದ್ರು. ಹೀಗೆ ಗಣಪತಿಯೊಬ್ಬನಿಗೆ ಇದ್ದದ್ದು ತಮಿಗೆ ಜಾತಿಯಿಂದ ಕೀಳು ಅಂತಾ ಮಾಡ್ತಾರೆ. ಅವರ ಮನೀಗೆ ಹೋದ್ರೆ ನಮಗ ಹಾಸಿಗೆ ಹಾಸಿ ಕೂಡು ಅನ್ನಾದಿಲ್ಲ. ಕೂಡ್ಸಾದಿಲ್ಲ. ಕೆಳಗೆ ನಿಲ್ಲಿಸ್ತಾರೆ. ಹೀಗಾಗಿ ಕಾಗೋಡನಲ್ಲಿ ನೆಲೆನಿಂತು ಮಾಡಿದ್ರು.

ಅಂದ್ರೆ ಗಣಪತಿಯಪ್ಪ ಜಾತೀಯ ಅಪಮಾನದ ನೆಲೆಯಿಂದ ಆರ್ಥಿಕ ಹೋರಾಟವನ್ನ ಸಂಘಟಿಸಿದ್ರು?

ಹೌದೌದು. ಹಂಗಂತಾನಾ ಅವ್ರು ಹೋರಾಟ ಪ್ರಾರಂಭ ಮಾಡಿದ್ದು. ಅವರ ಕೈ ಸೋತು ನಿಂತಾಗ ಇವ್ರು ಸೇರ್ಕಂಡು ಹೋರಾಟ ಮಾಡಿದ್ರು. ಮೂಲತಃ ಅದರ ಸಾಧನೇನೂ ಭಾಳಾ ಏನ್ ಆಗ್ಲಿಲ್ಲ. ಲೋಹಿಯಾರವರು ಬಂದು ಭೂಮಿ ಊಳಲಿಕ್ಕೆ ಹೋಗಿ, ಬಂಧಿತರಾದ್ರೂ…ಅದು ಹೋರಾಟ ಅಂಥ ಯಶಸ್ಸಿನಲ್ಲೇನೂ ಮುಕ್ತಾಯವಾಗಲಿಲ್ಲ.

ಯಶಸ್ವಿ ಅಲ್ಲ ಅಂತಾ ತೀರ್ಮಾನಕ್ಕೆ ಬರೋದಾದ್ರೆಅಲ್ಲಿಂದ ಒಂದು ರಾಜಕೀಯ ಮೂಡಿ ಬರೋದಕ್ಕೆ ಸಾಧ್ಯ ಆಯ್ತಲ್ಲ. ಒಂದು ಕಡೀಗೆ ಹೆಬ್ಬಳ್ಳಿ ನೂರಾರು ಕುಟುಂಬಗಳಿಗೆ ಶಾಶ್ವತವಾಗಿ ಭೂಮಿಕೊಟ್ಟ ಹೋರಾಟ. ಸಾವಿರಾರು ಜನರಿಗೆ ಬದುಕಿನ ಅನ್ನ ಕೊಟ್ಟ ಹೋರಾಟ ಅದು. ಯಶಸ್ವೀ ಹೋರಾಟಕ್ಕೆ ಆಗ್ದೇ ಇರೋ ರಾಜಕೀಯ ಪರಿಣಾಮ ಒಂದು ವಿಫಲ ಹೋರಾಟಕ್ಕೆ ಸಾಧ್ಯವಾಗಿದ್ದು ಹೇಗೆ ಅಂತಾ?

ಇದು…ಇದು ನನಗೆ ಹೇಳ್ಲಿಕ್ಕೆ ಆಗಲ್ಲ. ನನಗೂ ಈ ಪ್ರಶ್ನೆ ಬಗೆಹರಿಸ್ಲಿಕ್ಕೆ ಆಗವಲ್ದು.

ಕಾಗೋಡನ್ನ ಕೇಂದ್ರವಾಗಿಟ್ಟುಕೊಂಡು ಹೊಮ್ಮಿದ ರಾಜಕಾರಣ ಅದು ಸಮಾಜವಾದಿ ರಾಜಕಾರಣ ಅಂತಾ ಅನ್ನಿಸ್ತದ ನಿಮಗ?

ಆ ನಂತರ ಆ ಕೇಂದ್ರದಿಂದ, ಅಲ್ಲ ಅದಾ ಸಾಗರದಿಂದ ನಮ್ಮ ಈ ಬದರಿನಾರಾಯಣ ಅಯ್ಯಂಗಾರ್ ರದು, ಕಾಗೋಡಿನ ಜಮೀನ್ದಾರರಿಗಿಂತ ದೊಡ್ಡ ಜಮೀನ್ದಾರು. ಆದ್ರೆ ಅಲ್ಲಿ ಸಂಘಟನೆ ಮಾಡ್ಲಿಲ್ಲ ಈ ಜನ.

ಕೆ.ಜಿ. ಒಡೆಯರ್ ಜಮೀನ್ದಾರಿಕೆ ವಿರುದ್ಧ ಮಾಡಿದ್ರು?

ಹೌದು. ಬದ್ರಿ ನಾರಾಯಣ ಅಯ್ಯಂಗಾರರ ಜಮೀನ್ದಾರಿಕೆ ವಿರುದ್ಧ ಮಾಡ್ಲಿಲ್ಲ ಯಾಕ?

ಇವುಗಳ ಹಿಂದಿನ ಹಿತಾಸಕ್ತಿಗಳನ್ನ ಗುರುತಿಸ್ತೀರಾ?

ಇಲ್ಲ. ನನಗೂ ಅದೇ ಪ್ರಶ್ನೆ ಇರೋದು. ಯಾಕೆ ಮಾಡ್ಲಿಲ್ಲ ಅಂತಾ?

ಸಂಡೂರು ಹೋರಾಟದ ಬಗ್ಗೆ ನಿಮ್ಮ ವಿಶ್ಲೇಷಣೆ ಏನು?

ಎಸ್. ವೆಂಕಟರಾಮ್‌ ಅಂತಾ ಇದ್ರು. ಬುದ್ಧಿಶೀಲ ಸಮಾಜವಾದಿ ನಾಯಕರು. ಅವರು ನನ್ನ ಕೂಡ ಒಮ್ಮೆ ಚರ್ಚೆ ಮಾಡಿದ್ರು. ಹ್ಯಾಗೆ ಮಾಡ್ಬೇಕು, ಏನು ಅನ್ನೋದನ್ನ. ಆಮ್ಯಾಳೆ ಹೋರಾಟ ಹ್ಯಾಗ ಮುಂದುವರಿಸಿದ್ರು ಅನ್ನೋದು ನನಗ ಗೊತ್ತಿಲ್ಲ. ಅಲ್ಲಿ ಎಲಿಗಾರ್ ತಿಮ್ಮಪ್ಪ ಅಂತಾ ಒಬ್ರು, ರೈತ ನಾಯಕರು. ಘೋರ್ಪಡೆ ವಿರುದ್ಧ ನಿಖರವಾಗಿ ಹೋರಾಟ ಮಾಡ್ತಿದ್ದವ್ರು. ಅವರ್ನ ಮುಂದಿಟ್ಕೊಂಡು ಇವ್ರು ಹೋರಾಟ ಹಮ್ಮಿಕೊಳ್ಳೋದಿಕ್ಕೆ ಎಸ್. ವೆಂಕಟರಾಮ್‌ ಚರ್ಚಿಸಿದ್ರು. ಮುಂದೇನಾತೋ ನನಗ್ಗೋತ್ತಿಲ್ಲ.

ಹೋರಾಟ ಆಯ್ತು. ಭೂಮಿ ರೈತರಿಗೆ ಸಿಕ್ತು. ಫರ್ನಾಂಡೀಸ್ ಕೂಡ ಬಂದಿದ್ರು. ಅದೆಲ್ಲಾ ಆಯ್ತು.

ಹೌದಾ…?

ಹೋರಾಟದ ಮಾಹಿತಿ ನಿಮಗಿರ್ಲಿಲ್ವಾ?

ಇಲ್ಲ. ಅದು ಹೆಚ್ಚಿಗೆ ಗೊತ್ತಿಲ್ಲ.

ನಿಖರವಾಗಿ ಹೇಳೋದಾದ್ರೆ ನೀವು ಸಮಾಜವಾದಿ ಸಂಘಟನೆಯಿಂದ ಹಿಂದೆ ಸರಿದದ್ದು ಯಾವಾಗಿನಿಂದ?

ಮುಂಚೀನಿಂದ್ಲೂ ಹಾಗೇ ಇದ್ದೆ ಬಿಡ್ರೀ…(ನಗು)

ಗೋಪಾಲಗೌಡ್ರು ಬಗ್ಗೆ ಹೇಳ್ತಾ ನೀವುನನ್ನ ಮತ್ತು ಗೋಪಾಲಗೌಡ್ರನಡುವೆ ಒಳ್ಳೇಗೆಳೆತನ ಇದ್ರೂ ಅದ್ರಿಂದ ರಾಜಕೀಯವಾಗಿ ಏನೂ ಪ್ರಯೋಜನ ಆಗ್ಲಿಲ್ಲ ಅಂತೀರಲ್ಲ ಹೇಗೆ?

ಅವರ ಜೀವನ ರೀತಿಗಳೇ ಬೇರೆ, ನನ್ನ ಜೀವನ ರೀತಿಗಳೇ ಬೇರೆ, ಬಿಡ್ರೀ ಅವ್ರು ಈ ಕಡೆ ಬಂದಾಗ ಸಾಮಾನ್ಯವಾಗಿ… ನಾನು ಇದ್ರು. ಮತ್ತಾ ನಮ್ಮ ಕಾರ್ಯಕರ್ತರು ಹೆಬ್ಬಳ್ಳೀ ಹೋರಾಟದೊಳಗ ನನ್ನ ಜೊತೆಗಾರರಾಗಿದ್ದಂಥ ಕಾರ್ಯಕರ್ತರು ಗೋಪಾಲಗೌಡ್ರು ಬಂದಾರ ಅಂತಾ ಬಂದ್ರೆ ಅವರ್ನ ಸರಿಯಾಗೀನು ಅವ್ರು ಗುರ್ತಿಸ್ಲಿಲ್ಲ. ಅವರಿಗೆ ಬೇಕಾಗಿದ್ದಂಥ ಜನ ಆಗಿರ್ಲಿಲ್ಲೋ ಏನೋ ಅವ್ರು. ಅವ್ರು ಸ್ವಲ್ಪು ವಿದ್ಯಾವಂತ್ರು, ಮತ್ತು ಈ ಬೀಳೀಕಾಲರ್ ನ ಜನ ಇರ್ಬೇಕು ಅಂತಾ ಬಯಸ್ತಿದ್ರೋ ಏನೋ. ನಮ್ಮ ಜನರನ್ನ ಸರಿಯಾಗಿ ಗುರ್ತಿಸ್ತಿದ್ದಿಲ್ಲ. ಹಾಗೇ ನಾನು…

ಅಲ್ಲಿಯಾದ್ರೂ ಕೂಡಾನೂ. ಬೆಂಗಳೂರಿನಲ್ಲಿ ಮಿನರ್ವಾ ಮಿಲ್ಲಿನ ಕಾರ್ಮಿಕರು ನಮ್ಮ ಪಕ್ಷದ ಜೊತೆಗಿದ್ರು. ಮೊದ್ಲು ಸೋಗಲ್ ನಾಗಭೂಷಣ್ ಅಂತಿದ್ರು, ಭಾಳಾ ಒಳ್ಳೇ ಸಂಘಟಕ. ಅವನ ಜೊತೆಯಾಗಿ ದೊಡ್ಡ ಒಂದು ಗುಂಪೂನೂ ಇತ್ತು. ಸೊಗಲ್ ನಾಗಭೂಷಣ್ ಸತ್‌ಬಿಟ್ಟ ಬಿಡ್ರೀ. ಸತ್ತ ನಂತರ ಕೆ. ಕಣ್ಣನ್ ಅಲ್ಲಿ ಕಾರ್ಮಿಕರ ಸಂಘಟನೆ ನಡಿಸ್ತಿದ್ರು. ಹೋರಾಟಗಾರರೂ ಹೌದು ಕೆ. ಕಣ್ಣನ್. ಆದ್ರ ಅವ್ರನ್ ಇವ್ರು ಸಮೀಪಕ್ಕ ಬರಗೊಡಲಿಲ್ಲ. ಯಾಕೋ ಏನೋ. ಹಿಂಗಾಗಿ ಅಲ್ಲಿ ಕಾರ್ಮಿಕರು ಇದ್ರು ಕೂಡಾನೂ ಇವ್ರು ಕಳ್ಕೋಬೇಕಾತು. ಸೋಗಲ್ ನಾಗಭೂಷಣ ಮತ್ತು ಕೆ. ಕಣ್ಣನ್ ಕಟ್ಟಿದಂತಹ ಕಾರ್ಮಿಕರ ಸಂಘಟನೇನಾ ಕಳ್ಕೊಂಡ್ ಬಿಟ್ರು ಅವ್ರು ಅಲ್ಲಿ.

ಶಿವಮೊಗ್ಗಾದಲ್ಲಿ ಪೊನ್ನಮ್ಮಾಳ್ ಅವರ ಪರಿಚಯ, ಒಡನಾಟ, ನಿಮಗಿದೆಯಾ?

ಇಲ್ರೀ ಕೇಳೀನಿ ಅಷ್ಟಾ. ಆಕೀನ್ನ ನೋಡಿಲ್ಲ.

ಕಾಶಿನಾಥ ಬೇಲೂರೆಯವ್ರು ಗೊತ್ತಾ?

ಇವ್ರೆಲ್ಲಾ ಗೊತ್ತು. ಬೀದರ್ ಗುಲ್ಬರ್ಗಾ ಜಿಲ್ಲೆಯವ್ರು.

ಗುಲ್ಬರ್ಗಾ ಜಿಲ್ಲೆಯಿಂದ ಯಾವ ನಾಯಕತ್ವ ಬಂತು?

ಇವ್ರೆ ವೈಜನಾಥ ಪಾಟೀಲ್ರು, ಎಸ್.ಕೆ. ಕಾಂತಾ. ಆನಂತರ ನಮ್ಮ ವಕೀಲರೊಬ್ರು ನಮ್ಮ ಬೀಚಯವರ ತಂಗೀ ಗಂಡ ಇದ್ದ…. ವಕೀಲ್ರು ಅವರ ಹೆಸರು ನೆನಪಾಗವಲ್ದು ನನಗ.