ಲೋಹಿಯಾ ಯಾವತ್ತು ಹೋದರೋ, ಸಮಾಜವಾದಿ ಚಳವಳಿಯೂ ಅವತ್ತೇ ತೀರಿತು ಎನ್ನುವ ಕೆ. ಸದಾಶಿವ ಕಾರಂತರದು ಅಪ್ಪಟ ಬೌದ್ಧಿಕ ವ್ಯಕ್ತಿತ್ವ. ಲೋಹಿಯಾರ ಕೊನೆಯ ದಿನಗಳಲ್ಲಿ ಅವರ ಆಪ್ತ ಸಹಾಯಕರಾಗಿದ್ದು, ಅವರ ನಿಧನಾನಂತರ ಮುಂಬೈ ಸೇರಿ ಮುಂಬೈ ನನ್ನ ತಾಯಿ ಎಂದೇ ಅಪ್ಪಿಕೊಂಡ ಕಾರಂತರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಕೋಣೆ ಗ್ರಾಮದವರು.

ಗಾಂಧಿವಾಧಿಯಾಗಿದ್ದ ಚಿಕ್ಕಪ್ಪ ಅಣ್ಣಪ್ಪ ಕಾರಂತರ ಪ್ರಭಾವದಿಂದ ‘ರಾಷ್ಟ್ರೀಯ ಚಳವಳಿಗೆ’ ಆಕರ್ಷಿತರಾದ ಕಾರಂತರು ಹೈಸ್ಕೂಲ್‌ ದಿನಗಳಲ್ಲೇ ‘ಕ್ವಿಟ್‌ ಇಂಡಿಯಾ’ದಲ್ಲಿ ಭಾಗವಹಿಸಿ ೬ ತಿಂಗಳು ಬಂಧನಕ್ಕೊಳಗಾದರು. ಕಾಲೇಜು ವ್ಯಾಸಂಗದ ಹೊತ್ತಿಗೆ ಕಮಲಾದೇವಿ ಯವರ ಸಂಪರ್ಕ ಲಭಿಸಿ ೧೯೪೬ರಲ್ಲಿ ‘ಕಾಂಗ್ರೆಸ್‌ ಸೋಷಲಿಸ್ಟ್‌’ ಯ ಪ್ರಾಂತೀಯ ಕಾರ್ಯದರ್ಶಿಯಾಗಿ ಕರ್ನಾಟಕದ ಹುಬ್ಬಳ್ಳಿ ಭಾಗದಲ್ಲಿ ಸಮಾಜವಾದಿ ಚಟುವಟಿಕೆ ಆರಂಭಿಸಿದರು. ನೀಲಗಂಗಯ್ಯ ಪೂಜಾರ್, ಅಮ್ಮೆಂಬಳ ಆನಂದ ಅವರೊಂದಿಗೆ ಸೇರಿ ಧಾರವಾಡ ಜಿಲ್ಲೆಯ ಗರಗದಲ್ಲಿ ರೈತ ಸಮಾವೇಶ, ಗದಗದಲ್ಲಿ ಎಡಪಂಥಿಯ ಸಮಾವೇಶ, ಜೆ.ಪಿ. ಪ್ರವಾಸ ಕಾರ್ಯಕ್ರಮಗಳನ್ನು ಸಂಘಟಿಸಿದರು. ಜೆ.ಪಿ. ಹಮ್ಮಿಣಿಯಲ್ಲಿ ‘ಜಾಗೃತಿ’ ಪತ್ರಿಕೆಯನ್ನು ಆರಂಭಿಸಿದರು.

‘ಜಾಗೃತಿ’ ಪತ್ರಿಕೆಯಿಂದ ಪಕ್ಷದ ಸಂಗಾತಿಗಳಲ್ಲಿ ಭಿನ್ನಾಭಿಪ್ರಾಯ ಕಾಣಿಸಿಕೊಂಡು ಪಕ್ಷದ ಹೊಸಪೇಟೆ ಸಮಾವೇಶದ ನಂತರ ತಟಸ್ಥವಾಗಿ ಉಳಿದ ನಿಲುವು ತಾಳಿ ೧೯೪೯ರಲ್ಲಿ ಕರ್ನಾಟಕಕ್ಕೆ ವಿದಾಯ ಹೇಳಿ ಮುಂಬೈನಲ್ಲಿ ಶಿಕ್ಷಣ ಮುಂದುವರಿಸಿದರು.

ಖ್ಯಾತ ಸಮಾಜವಾದಿ ಚಿಂತಕ ಎಂ.ಎಲ್. ದಾಂತವಾಲರ ಮಾರ್ಗದರ್ಶನದಲ್ಲಿ ಪಿಹೆಚ್‌.ಡಿ. ಪಡೆದ ಕಾರಂತರು, ವಿದ್ಯಾರ್ಥಿ ದೆಸೆಯಲ್ಲಿಯೇ ಗುಜರಾತೀ ಸ್ನೇಹಿತೆ ನಿರ್ಮಲಾರನ್ನು ಮದುವೆಯಾದರು. ಜೀವನ ನಿರ್ವಹಣೆಯ ಅಗತ್ಯಕ್ಕೆಂದು ೧೯೬೪ರಲ್ಲಿ ದೆಹಲಿಯ ಪಂಜಾಬ್‌ ನ್ಯಾಷನಲ್‌ ಬ್ಯಾಂಕಿನಲ್ಲಿ ಅರ್ಥಶಾಸ್ತ್ರಜ್ಞರಾಗಿ ದುಡಿದರು. ಈ ಅವಧಿಯಲ್ಲಿಯೇ ರಾಮಮನೋಹರ ಲೋಹಿಯಾ ಅವರ ಆಪ್ತ ಸಹಾಯಕರಾಗಿದ್ದು, ದೇಶ ಮಟ್ಟದ ಸಮಾಜವಾದಿ ಧುರೀಣರೊಂದಿಗೆ ಬೌದ್ಧಿಕ ಸಂಬಂಧವನ್ನಿಟ್ಟುಕೊಂಡರು.

ಪತ್ರಿಕೆಗಳಿಗೆ ಹಲವಾರು ಲೇಖನಗಳನ್ನು ಬರೆದಿರುವ ಕಾರಂತರು ಮೂರು ಪುಸ್ತಕಗಳನ್ನೂ ಬರೆದು ಪ್ರಕಟಿಸಿದ್ದಾರೆ. ಮುಂಬೈನ ಸಿಂಧು ಪ್ರಕಾಶನ ಲೋಹಿಯಾ ಮಾಲಿಕೆಯ ಸಂಪಾದಕರಾಗಿಯೂ ಕೆಲಸ ನಿರ್ವಹಿಸಿದ್ದಾರೆ. ೧೯೮೪ರಲ್ಲಿ ಅನಾರೋಗ್ಯದಿಂದಾಗಿ ನೌಕರಿಗೆ ರಾಜೀನಾಮೆ ಸಲ್ಲಿಸಿದ ಕಾರಂತರು ಮುಂಬೈಯಲ್ಲಿಯೇ ನೆಲೆಸಿದ್ದಾರೆ. ನವದೆಹಲಿಯ ‘ಇಂಡಿಯಾ ಇಂಟರ್‌ನ್ಯಾಷನಲ್‌ ಫ್ರೆಂಡ್‌ಶಿಪ್‌ ಸೊಸೈಟಿ’ಯು ಇವರಿಗೆ ೨೦೦೭ರ ‘ರಾಷ್ಟ್ರೀಯ ಗೌರವ ಪ್ರಶಸ್ತಿ’ಯನ್ನು ನೀಡಿ ಗೌರವಿಸಿದೆ.

ಮುವ್ವತ್ತೆರಡರ ಹರೆಯದ ಇದ್ದೊಬ್ಬ ಮಗನ ಅಕಾಲಿಕ ಸಾವು ಈ ದಂಪತಿಗಳನ್ನು ಕೆಲವರ್ಷ ವಿಚಲಿತರನ್ನಾಗಿಸಿದರೂ ಮುಂಬೈ ಮಹಾನಗರದ ಅಪಾರ್ಟ್‌ಮೆಂಟ್‌ ಒಂದರಲ್ಲಿ ಕರ್ನಾಟಕದ ಕಾರಂತ, ಗುಜರಾತಿನ ನಿರ್ಮಲಾ ದಂಪತಿಗಳು ತಮ್ಮ ವೃದ್ಧ ಸ್ಥಿತಿಯಲ್ಲಿ ಸಂಗಾತಿಗಳಾಗಿ ಬಾಳುತ್ತಿದ್ದಾರೆ. ಕಾರಂತರಿಗೆ ‘ಕರ್ನಾಟಕ ಈಗ ನೆನಪು, ಸಮಾಜವಾದ ಈಗ ಚರಿತ್ರೆ ಮಾತ್ರ. ಬಿಡುವಾದಾಗ ಶ್ಲೋಕ ಪಠಿಸುತ್ತೇನೆ, ಪ್ರಾರ್ಥಿಸುತ್ತೇನೆ’ ಎನ್ನುವ ವರ್ತಮಾನದ ಕಾರಂತರು ಸಮಾಜವಾದದ ಸೈದ್ಧಾಂತಿಕ ಆಯಾಮಗಳ ಬಗ್ಗೆ ಈಗಲೂ ಖಚಿತವಾಗಿ ಮಾತನಾಡಬಲ್ಲರು.

*

ಸಾರ್‌, ನಿಮ್ಮ ಶಿಕ್ಷಣ, ಚಳವಳಿಯ ದಿನಗಳು, ಬದುಕಿನ ಅನುಭವಗಳು ಇವುಗಳ ಬಗ್ಗೆ ಹೇಳಿ?

ನೋಡಿ, ನಾನು ಹುಟ್ಟಿದ್ದು ಕೋಣಿ ಎನ್ನುವ ಒಂದು ಹಳ್ಳಿಯಲ್ಲಿ. ಇದು ಮಂಗಳೂರಿನಿಂದ ೬೦ – ೭೦ ಮೈಲು ದೂರದಲ್ಲಿದೆ. ನಾನು ಓದಿದ್ದು ಕುಂದಾಪುರ ಹೈಸ್ಕೂಲಿನಲ್ಲಿ. ನಂತರ ಎಲ್‌.ಎಸ್‌.ಎಸ್‌. ಕಾಲೇಜಿನಲ್ಲಿ. ಆ ನಂತರ ಓದಿನಲ್ಲಿ ತಡೆಯಾಯ್ತು. ಜೈಲಿಗೆ ಹೋದೆ. ಒಬ್ಬರು ಶೇಷಣ್ಣ ಬುರ್ಲಿ ಅಂತಿದ್ರು ಅವರು ಜೈಲಿನ ನನ್ನ ಸಂಗಡಿಗ, ಅವರು ನನಗೆ, ನೀನು ರಾಜಕೀಯ ಚಟುವಟಿಕೆ ಮಾಡಬೇಕು ಅನ್ನೋ ಹಾಗಿದ್ರೆ ಧಾರವಾಡಕ್ಕೆ ಹೋಗು ಅಂದ್ರು. ಆಗ ಧಾರವಾಡಕ್ಕೆ ಹೋಗಿ, ಕಾಲೇಜು ಸೇರಿದೆ.

ಯಾವ ವರ್ಷ ಅದು?

೧೯೪೫ – ೪೬ ‍ಇರ್ಬೇಕು.

ನಂತರದ ನಿಮ್ಮ ಕಾಲೇಜ್ದಿನಗಳ ಅನುಭವವೇನು?

ಕೈಲಿ ದುಡ್ಡು ಇರ್ಲಿಲ್ಲ. ಬಿಟ್ಟಿಟ್ಟೆ. ಆಗ ಗಂಗಾಧರ ಕುಲಕರ್ಣಿಯವರ ಹತ್ರ ಹೇಳ್ಕೊಂಡೆ. ಅವರು ತಮ್ಮ ತಂದೆಯವರ್ಹತ್ರ ಕರ್ಕೊಂಡು ಹೋದ್ರು. ಅವರು, ನೀನು ಮುಂಬೈಗೆ ಹೋಗೋದಾದ್ರೆ ನನಗೆ ಹೇಳು ಅಂದಿದ್ರು. ಅವರ ಸಹಾಯದಿಂದ ಹೋದೆ. ವಿದ್ಯಾಭ್ಯಾಸಕ್ಕೆ ಹಣ ಇರಲಿಲ್ಲ. ಆಗ ಅವರೇ ಅಪ್ಲಿಕೇಷನ್‌ ಫಾರಂ ತುಂಬಿ ಕಾಲೇಜಿನ ವೈಸ್ ಪ್ರಿನ್ಸಿಪಾಲ್ ಎ.ಎನ್.ಮೂರ್ತಿರಾವ್ ಅವರ ಬಳಿ ಕಳಿಸಿದರು. ಅವರು ಸೇರಿಸಿಕೊಂಡರು. ಎಂ.ಎ. ಮುಗಿದ ಮೇಲೆ ನಾನು ಕೆಲಸ ಹುಡುಕಿಕೊಳ್ಳಬೇಕಿತ್ತು. ಟಿ.ಎಂ. ನಾಯಕ ಅಂತಾ ಇದ್ರು. ಅವರು ಒಂದು ಸಂಸ್ಥೆಯಲ್ಲಿ ನನಗೆ ಕೆಲಸ ಕೊಡಿಸಿದರು. ನಾನಲ್ಲಿ ಕೆಲಸ ಮಾಡುತ್ತಿರುವಾಗ ನನ್ನ ಹೆಂಡತಿಯ ಪರಿಚಯವಾಯ್ತು. ಆಕೆಯೂ ಅರ್ಥಶಾಸ್ತ್ರದಲ್ಲಿ ಎಂ.ಎ.ಮಾಡಿದ್ದಳು. ಪರಸ್ಪರ ಇಷ್ಟಪಟ್ಟು ೧೯೫೮ರಲ್ಲಿ ಮದುವೆ ಆದೆವು.

ನಿಮ್ಮ ಕುಟುಂಬದ ಹಿನ್ನೆಲೆ ಏನು?

ನಾವು ಸಣ್ಣ ರೈತರು.

ಸ್ವಂತದ ಜಮೀನು ಇತ್ತಾ?

ಸ್ವಲ್ಪ ಇತ್ತು. ದೇವರಾಜ ಅರಸು ಅವರ ಭೂಸುಧಾರಣಾ ನೀತಿ ಜಾರಿಯಾದಾಗ ಅದೂ ಹೋಯ್ತು. ನಮ್ಮದು ಒಂದು ಸಣ್ಣ ಬಡ ಬ್ರಾಹ್ಮಣ ಕುಟುಂಬ.

ಕುಟುಂಬದ ಪರಿಸರ ಸಾಂಪ್ರದಾಯಿಕವಾಗಿತ್ತೋ, ಅಥವಾ ನಿಮ್ಮ ಮೇಲೆ ವೈಚಾರಿಕ ಪ್ರಭಾವ ಬೀರುವಂತಹ ಹಿನ್ನೆಲೆ ಇತ್ತೋ?

ನಮ್ಮ ಚಿಕ್ಕಪ್ಪ ಅಣ್ಣಪ್ಪ ಕಾರಂತ ಅಂತಾ. ಅವರು ಮಹಾತ್ಮಾ ಗಾಂಧಿಯವರ ಪ್ರಭಾವಕ್ಕೆ ಒಳಗಾಗಿದ್ದರು. ಅವರು ಹರಿಜನರಿಗೆ ವಿದ್ಯಾಭ್ಯಾಸ ಹೇಳಿಕೊಡುತ್ತಿದ್ದರು.

ಅವರ ಪ್ರಭಾವ ನಿಮ್ಮ ಮೇಲೆ ತಕ್ಕಮಟ್ಟಿಗೆ ಆಗಿರಬೇಕು?

ಹಾಂ. ಅವರ ಪ್ರಭಾವ ನನ್ನ ಮೇಲೆ ಬಹಳಷ್ಟಾಗಿದೆ. ಅವರು ೧೯೩೦ರ ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು. ಅವರೇ ನನ್ನನ್ನು ಪ್ರೋತ್ಸಾಹಿಸಿ ಕಾಲೇಜು ಶಿಕ್ಷಣಕ್ಕೆ ಕಳಿಸಿದ್ದು. ಆದರೆ ಇಲ್ಲಿಗೆ ಬರುತ್ತಲೇ ಆರು ತಿಂಗಳು ಜೈಲು ಸೇರಿದೆ. ೧೯೪೨ರಲ್ಲಿ ‘ಭಾರತ ಬಿಟ್ಟು ತೊಲಗಿ’ ಸಂದರ್ಭ.

ಭಾರತಬಿಟ್ಟು ತೊಲಗಿಹೋರಾಟದಲ್ಲಿನ ನಿಮ್ಮ ಅನುಭವ ಹೇಳಿ?

ಹೋರಾಟ ಏನೂ ಇಲ್ಲ. ನಾನಾವಾಗ ವಿದ್ಯಾರ್ಥಿ. ಕೋರ್ಟ್‌ ಪಿಕೆಟಿಂಗ್‌ನಲ್ಲಿ ಭಾಗವಹಿಸಿದ್ದೆ. ಅರೆಸ್ಟ್‌ ಆದೆ. ಆರು ತಿಂಗಳು ಬಳ್ಳಾರಿ ಜೈಲಿನಲ್ಲಿದ್ದೆ. ನನ್ನೊಟ್ಟಿಗೆ ಬಹುತೇಕ ವಿದ್ಯಾರ್ಥಿಗಳಿದ್ದರು. ಸತ್ಯೇಂದ್ರನಾಥ, ರೋಹಿದಾಸ್‌ ಪೈ, ಟೈಲರ್ ಭೋಜಾ, ರಾಮಚಂದ್ರ ಭಟ್‌, ಮುಕುಂದ ಭಟ್‌ ಇವರೆಲ್ಲ ಇದ್ದರು.

ಸಮಾಜವಾದಿ ಚಿಂತನೆ ನಿಮ್ಮಲ್ಲಿ ಮೂಡಿದ್ದು ಹೇಗೆ?

ನೋಡಿ, ನಾನು ೨೪ – ೨೫ ವರ್ಷದವನಾಗಿದ್ದಾಗ ಪಿ.ಎಸ್.ಪಿ. ಸೇರಿದೆ. ಆಗ ಗೋವಾ ವಿಮೋಚನಾ ಚಳವಳಿ ನಡೀತಾ ಇತ್ತು.

ಪಿ.ಎಸ್‌.ಪಿ ಸಂಪರ್ಕ ಸಾಧ್ಯವಾಗಿದ್ದು ಹೇಗೆ?

ಹೇಳೋದು ಕಷ್ಟ. ನನಗೆ ಬಾಲ್ಯದಿಂದಲೇ ಅಂತಹ ತುಡಿತಗಳಿದ್ದವು. ನಾವು ಹುಡುಗರು ಮಾವಿನ ಮರಗಳ ತೋಪಿನಲ್ಲಿ ಆಡಲು ಹೋದಾಗಲೂ ಸಿಕ್ಕ ಹಣ್ಣುಗಳನ್ನು ಸಮಾನವಾಗಿ ಹಂಚಿ ತಿನ್ನಬೇಕೆಂದು ನಾನು ಬಯಸ್ತಿದ್ದೆ.

ಪಿ.ಎಸ್‌.ಪಿ. ಸೇರುವಾಗಲೂ ಗೆಳೆಯರು, ಪರಿಸರ ಕಾರಣವಾಗಲಿಲ್ವ?

ಇಲ್ಲ, ಅಂತಹ ಗೆಳೆಯರ್ಯಾರೂ ನನಗಿರ್ಲಿಲ್ಲ. ಆಗ ವಿದ್ಯಾರ್ಥಿ ಚಳವಳಿ ಕಡೆ ಆಕರ್ಷಿತನಾಗಿದ್ದೆ. ಬಿ.ಶ್ರೀಕಂಠಪ್ಪ ಒಂದು ವಿದ್ಯಾರ್ಥಿ ಸಮ್ಮೇಳನ ಸಂಘಟಿಸಿದ್ದರು. ಅದರಲ್ಲಿ ನಾನು ಭಾಗವಹಿಸಿದ್ದೆ.

ಯಾವುದಕ್ಕಾಗಿ ವಿದ್ಯಾರ್ಥಿ ಸಮ್ಮೇಳನ?

ದೇಶದ ಸ್ವಾತಂತ್ರ್ಯಕ್ಕಾಗಿ. ನಾನಿನ್ನೂ ಎಸ್‌.ಎಸ್‌.ಎಲ್‌.ಸಿ. ಯಲ್ಲಿದ್ದಾಗಲೇ ಒಂದು ಸ್ಟುಪಿಡ್‌ ಕೆಲಸ ಮಾಡಿದ್ದೆ. ಗಾಂಧೀಜಿಗೆ ಪತ್ರ ಬರ್ದಿದ್ದೆ. (ನಗು) ಸ್ಟುಪಿಡ್‌, ಸ್ಟುಪಿಡ್‌ ಕೆಲಸ ಅದು. “ಸ್ವಾತಂತ್ರ್ಯ ಚಳವಳಿಯಲ್ಲಿ ವಿದ್ಯಾರ್ಥಿಗಳ ಪಾತ್ರ” ಅಂತ. ನನ್ನ ಒಬ್ಬ ವಿಜ್ಞಾನ ಶಿಕ್ಷಕರು ಕೆ.ಎಲ್‌.ಕಾರಂತರು (ಕೋಟ ಲಕ್ಷ್ಮೀನಾರಾಯಣ ಕಾರಂತ). ಅವರು ಖಾದಿ ಧರಿಸುತ್ತಿದ್ದರು. ಆ ದಿನಗಳಲ್ಲಿ ಧಾರವಾಡದ ‘ಮಿಂಚುಳ್ಳಿ’ ಪ್ರಕಾಶನದ ಬಿಂದುಮಾಧವ ಬುರ್ಲಿಯವರು ತಾವು ಬರೆದಿದ್ದ ‘ಸಮಾಜವಾದ’ ಅಂತ ಒಂದು ಪುಸ್ತಕ ಪ್ರಕಟಿಸಿದ್ದರು. ಅವರೂ ಸ್ವಾತಂತ್ರ್ಯ ಹೋರಾಟಗಾರರು.

ಅವರು ಪಿ.ಎಸ್‌.ಪಿ.ಯಲ್ಲಿದ್ರಾ?

ಇಲ್ಲ, ಅವರು ಸ್ವಾತಂತ್ರ್ಯ ಹೋರಾಟಗಾರರಷ್ಟೇ. ಪ್ರಗತಿಪರರಾಗಿದ್ದರು. ಆಗಲೇ ಬಿಂದು ಮಾಧವ ಅವರ ಸಂಗಡಿಗರಾದ ಬಿ.ಶ್ರೀಕಂಠಪ್ಪ ಮೈಸೂರಿನಲ್ಲಿರಬೇಕು, ಅಲ್ಲಿ ವಿದ್ಯಾರ್ಥಿ ಸಮ್ಮೇಳನ ಸಂಘಟಿಸಿದ್ದರು.

ಅದಾದ ಕೆಲದಿನಗಳ ನಂತರ ಜಯಪ್ರಕಾಶ ನಾರಾಯಣ ಅವರ ವೈ ‘ಸೋಷಲಿಸಂ’ ಅನ್ನು ಓದಿದೆ. ‘ಸಾಮ್ಯವಾದ ಏಕೆ’ ಅಂತ ಅದನ್ನು ಮುಳಿಯ ಗೋವರ್ಧನರಾವ್‌ ಕನ್ನಡಕ್ಕೆ ಅನುವಾದಿಸಿದ್ದರು. ಅವರು ದಕ್ಷಿಣ ಕನ್ನಡ ಜಿಲ್ಲೆಯವರು, ಮುಳಿಯ ತಿಮ್ಮಪ್ಪಯ್ಯನವರ ಬಂಧುಗಳು. ಬಹುಶಃ ಕಮಲಾದೇವಿ ಚಟ್ಟೋಪಾಧ್ಯಾಯ ಅವರು ಇದನ್ನು ಕನ್ನಡಕ್ಕೆ ಅನುವಾದಿಸಲು ಅವರಿಗೆ ಹೇಳಿರಬೇಕು.

ಇವೆಲ್ಲ ನಿಮ್ಮ ಹೈಸ್ಕೂಲ್ದಿನಗಳಲ್ಲಿನ ಸಂಗತಿಗಳು?

ಹೌದು ಈ ‘ಸಾಮ್ಯವಾದ’ ಇದೆಲ್ಲ ಹೈಸ್ಕೂಲ್‌ ದಿನಗಳದ್ದು. ಹಾಂ, ನನ್ನ ಹೈಸ್ಕೂಲಿನಲ್ಲಿ ‘ಭಟ್ಟ’ ಅಂತ ಒಬ್ಬ ಶಿಕ್ಷಕರಿದ್ದರು. ಅವರ ಪೈಕಿ ಒಬ್ಬರು ಬೆಂಗಳೂರಿನಲ್ಲಿ ಹೋಟೆಲ್‌ ಮಾಡಿದ್ರು. ಅಲ್ಲಿ ಅವರು ಆ ಪುಸ್ತಕವನ್ನು ಖರೀದಿಸಿ ಕುಂದಾಪುರಕ್ಕೆ ತಂದಿರು. ಬಹುಶಃ ಕೋಟೇಶ್ವರದಿಂದ ಕುಂದಾಪುರಕ್ಕೆ ಬಂದಿರಬೇಕು. ಅದನ್ನು ತಗೊಂಡು ಓದಿದ್ದೆ ನಾನು.

ಜೆ.ಪಿ.ಯವರ ನಿಷೇಧಿತ ಪತ್ರವನ್ನು ನೀವು ಓದಿದ ಸಂದರ್ಭ ಯಾವುದು?

ಆಗ ನಾನು ಬೆಳಗಾವಿಯಲ್ಲಿದ್ದೆ ೧೯೪೪ರಲ್ಲಿ. ನನ್ನ ಗೆಳೆಯರು ಆಗ ಆ ಪತ್ರದ ಒಂದು ಪ್ರತಿಯನ್ನು ತಂದಿದ್ದರು. ಅದನ್ನು ನಾವು ಭೂಗತ ಕೋಣೆಯ ಮಂದಬೆಳಕಿನಲ್ಲಿ ಓದಿ ‘ಥ್ರೀಲ್‌’ ಆಗಿದ್ವಿ. ಅದು ಎರಡನೇ ಮಹಾಯುದ್ಧದ ಸಂದರ್ಭ. ಆ ಪತ್ರದ ಕೆಲವು ಸಾಲುಗಳು “…ನಾವಿಂದು ಸಾಮ್ರಾಜ್ಯಶಾಹಿಯನ್ನು ಸಂಪೂರ್ಣವಾಗಿ ಕಿತ್ತೊಗೆಯಬೇಕು. ರಾಜಿಯ ಮಾತೇ ಇಲ್ಲ…” ಇವು ನಮ್ಮನ್ನು ಬಹುವಾಗಿ ಪ್ರಭಾವಿಸಿದವು.

ಸಿ.ಎಸ್‌.ಪಿ.ಗೆ ನೀವು ಬಂದಾಗ ನಿಮ್ಮ ವಿದ್ಯಾಭ್ಯಾಸ ಹೇಗೆ ನಡೀತಿತ್ತು?

ನಾನವಾಗ ಏನೂ ವಿದ್ಯಾಭ್ಯಾಸ ಮಾಡ್ತಿರಲಿಲ್ಲ. ಹಣವಿಲ್ಲದ್ದರಿಂದ ಓದು ನಿಲ್ಲಿಸಿದ್ದೆ.

ಹುಬ್ಬಳ್ಳಿಗೆ ಬಂದಿದ್ದಾದರೂ ಯಾಕೆ?

ನಾನಾವಾಗ ಏನಾದ್ರೂ ಮಾಡಲೇ ಬೇಕಿತ್ತು. ಆ ಹೊತ್ತು ‘ಸಮಾಜವಾದ ಏಕೆ’… ಇದೆಲ್ಲ ಓದಿದ್ದೆ. ಪಿ.ಎಸ್‌.ಪಿ. ಸೇರಿದೆ. ಪಿ.ಎಸ್‌.ಪಿ.ಯ ಕರ್ನಾಟಕ ಸಮಿತಿಗೆ ಕಾರ್ಯದರ್ಶಿಯೂ ಆದೆ. ಕಮಲಾದೇವಿ ನನಗೆ ಮಾರ್ಗದರ್ಶಕರು.

ಕಮಲಾದೇವಿಯವರ ಪರಿಚಯವಾದದ್ದು ಹೇಗೆ?

ಸಿಟಿಜನ್‌ಶಿಪ್‌ ಕಾಲೇಜ್‌ ಅಂತಾ ಇತ್ತು. ಅಲ್ಲಿಗೆ ನಾನು ಬಂದೆ. ರಾಮಕೃಷ್ಣ ಪಣಜಿಗ ಅಂತಾ ಸಾರಸ್ವತ ಕುಟುಂಬದವರು. ಅವರು ನನಗೆ ಇಲ್ಲಿಗೆ ಬರೋದಕ್ಕೆ ಹಣ ನೀಡಿದ್ದರು. ಆಗ ನನಗೆ ಕಮಲಾದೇವಿಯವರ ಪರಿಚಯವಾಯ್ತು. ಅವರು ನನ್ನ ಹೆಸರು ‘ಕಾರಂತ’ ಅಂತಾ ಕೇಳಿದ ಕೂಡಲೇ ನೀವು ದಕ್ಷಿಣ ಕನ್ನಡ ಜಿಲ್ಲೆಯವರಾ ಅಂದ್ರು. ಹೌದು ಎಂದೆ. ಹಾಗೆ ಪರಿಚಯವಾಯ್ತು. ನಂತರ ಗದಗದಲ್ಲಿ ಕರ್ನಾಟಕದ ‘ಎಡಪಂಥೀಯವರ ಸಮ್ಮೇಳನದ ಅಧ್ಯಕ್ಷತೆ’ ವಹಿಸೋದಕ್ಕೆ ಕಮಲಾದೇವಿಯವರನ್ನು ನಾನು ಆಹ್ವಾನಿಸಿದೆ.

ಹೊತ್ತು ಅಮ್ಮೆಂಬಳ ಬಾಳಪ್ಪನವರೂ ಪಕ್ಷದಲ್ಲಿ ಗಂಭೀರವಾಗಿ ತೊಡಗಿಸಿಕೊಂಡಿದ್ರು ಅಲ್ವಾ?

ಅವರು ಸಿ.ಎಸ್‌.ಪಿ.ಯ ಕಾರ್ಯಕಾರಿ ಸಮಿತಿ ಸಭೆಗೆ ಹುಬ್ಬಳ್ಳಿಗೆ ಬರುತ್ತಿದ್ದರು. ಅಲ್ಲಿ ನಾನೂ ಅವರೂ ಭೇಟಿಯಾಗಿದ್ದು. ಅವರೂ ೧೯೪೨ರ ಚಳವಳಿಯಲ್ಲಿ ಭಾಗವಹಿಸಿದ್ರು. ನಿಮಗೆ ರಾಮಕೃಷ್ಣ ಕಾರಂತ ಗೊತ್ತಾ? ಅವರು ನಂತರ ಮಂತ್ರಿಯಾದರು. ಅವರೂ ಜೈಲಿನಲ್ಲಿದ್ದರು. ಅವರು ಬಾಳಪ್ಪನವರಿಗೆ ಇಂಗ್ಲೀಷ್‌ ಮತ್ತು ಹಿರಿಯ ಕಲಿಸಿದರು.

ಹುಬ್ಬಳ್ಳಿಯಲ್ಲಿ ನಿಮ್ಮ ಆರಂಭದ ಚಟುವಟಿಕೆಗಳೇನಾಗಿದ್ದವು?

ಹುಬ್ಬಳ್ಳಿಯಲ್ಲಿ ಕೆಲಸಕ್ಕೆ ಹುಡುಕಾಡ್ತ ಇದ್ದೆ. ಒಬ್ಬರು ಎಲಿಗಾರ ಅಂತಿದ್ರು, ಅವರು ನನಗೆ ‘ಕಾನ್ಪುರ ಸಮ್ಮೇಳನ’ದ ಪಾಲಿಸಿ ಸ್ಟೇಟಮೆಂಟನ್ನು ಅನುವಾದ ಮಾಡೋಕೆ ಕೊಟ್ರು. ಅದ ಪಾಟೀಲ ಪುಟ್ಟಪ್ಪನವರು ‘ವಿಶಾಲ ಕರ್ನಾಟಕ’ ಪತ್ರಿಕೆಯಲ್ಲಿ ಪ್ರಕಟವಾಯ್ತು. ಆ ಮುಖಾಂತರ ಸಮಾಜವಾದಿ ವಿಚಾರಗಳು ನಿಧಾನಕ್ಕೆ ಅಲ್ಲಿ ಹರಡಲಾರಂಭಿಸಿದವು. ಆಗ ನನ್ನ ನೆರವಿಗೆ ಎಂಬಂತೆ ಅಮ್ಮೆಂಬಳ ಆನಂದ ಹುಬ್ಬಳ್ಳಿಗೆ ಬಂದರು. ಅದೃಷ್ಟವಶಾತ್‌ ನನಗೆ ಎನ್‌.ಬಿ.ಚಳಗೇರಿಯವರ ಪರಿಚಯವಾಯ್ತು. ಅವರು ಮಾಜಿ ರೈಲ್ವೆ ಉದ್ಯೋಗಿ ಮತ್ತು ರೈಲ್ವೆ ಯೂನಿಯನ್‌ನ ಕಾರ್ಯದರ್ಶಿಯಾಗಿದ್ದರು. ಅವರು ಆನಂದ ಅವರಿಗೆ ರೈಲ್ವೆ ಯೂನಿಯನ್‌ ಕಛೇರಿಯಲ್ಲಿ ಟೈಪಿಸ್ಟ್‌ ಕೆಲಸ ಕೊಡಿಸಿದರು. ಸಣ್ಣಸಂಬಳ. ನನಗೆ ಕಮಲಾದೇವಿಯವರು ಪಕ್ಷದ ಪೂರ್ಣಾವಧಿ ಕಾರ್ಯಕರ್ತ ಅಂತ ಹಣ ನೀಡುತ್ತಿದ್ದರು.

ಜಾಗೃತಿಪತ್ರಿಕೆ ಆರಂಭವಾಗಿದ್ದು ಆಗ್ಲೇನಾ?

ಅದರ ಕತೆ ಬೇರೇನೆ ಇದೆ. ಜೆ.ಪಿ.ಮಂಗಳೂರಿಗೆ ಬಂದಿದ್ರು. ಆಗ ಒಂದಿಷ್ಟು ಹಣ ಸಂಗ್ರಹ ಮಾಡಿದ್ರು, ಶ್ರೀನಿವಾಸ ಮಲ್ಯ ಆಗ ಇಪ್ಪತ್ತೈದು ಸಾವಿರ ರೂಪಾಯಿಗಳನ್ನು ಸಂಗ್ರಹಿಸಿ ಜೆ.ಪಿ.ಗೆ ಕೊಟ್ಟರು. ಜೆ.ಪಿ. ಅದನ್ನು ಕಮಲಾದೇವಿಯವರಿಗೆ ನೀಡಿದರು. ಕಮಲಾದೇವಿ ಆ ಹಣವನ್ನು ‘ಜಾಗೃತಿ’ ಪತ್ರಿಕೆ ಪ್ರಾರಂಭಿಸಲು ತೊಡಗಿಸಿದರು.

ಹಣವನ್ನುಜಾಗೃತಿಪ್ರಾರಂಭಿಸಲೆಂದೇ ಸಂಗ್ರಹಿಸಿದ್ದಲ್ಲ?

ಅಲ್ಲ, ಆಗ ಜೆ.ಪಿ. ಚಳವಳಿಗೆಂದು ಸಂಗ್ರಹಿಸಿದ ಹಣ.

೨೫ ಸಾವಿರ ರೂಗಳನ್ನು ಶ್ರೀನಿವಾಸಮಲ್ಯ ಒಬ್ಬರೇ ಕೊಟ್ಟಿದ್ದರೋ, ಅಥವಾ ಸಂಗ್ರಹಿಸಿದ್ದರೋ?

ಸಾರ್ವಜನಿಕರಿಂದ ಸಂಗ್ರಹಿಸಿದ ಒಟ್ಟು ಮೊತ್ತ ಅದು.

ಜಾಗೃತಿಮುಂದೇನಾಯ್ತು?

ನಿಂತು ಹೋಯ್ತು.

ಯಾಕೆ?

ದುಡ್ಡಿಲ್ಲ.

೨೫ ಸಾವಿರ ಇತ್ತಿಲ್ಲ?

ಖರ್ಚಾಯ್ತು.

ಜಾಗೃತಿಗೆ ಖಾದ್ರಿ ಶಾಮಣ್ಣ ಇದ್ರಂತೆ ಅವಾಗ?

ಹಾಂ. ಅವರೇ ಸಂಪಾದಕರು

ಒಟ್ಟು ಎಷ್ಟುದಿನ ನಡೀತು?

ಮೂರ್ನಾಲ್ಕು ತಿಂಗಳೋ, ಅಥವಾ ಆರು ತಿಂಗಳೋ. ದುಡ್ಡು ಖಾಲಿ.

ನಾನೊಂದು ಮಾತು ಕೇಳಿದ್ದೆ. ಹಣ ಸರಿಯಾಗಿ ಬಳಕೆಯಾಗ್ಲಿಲ್ಲ ಅಂತ?

ಅದೇನೋ….ಆ ಹಣ ಸಂಬಳ ಕೊಡೋಕ್ಕೆ, ಇತರೆ ಖರ್ಚಿಗಂತ ಖಾಲಿಯಾಯ್ತು.

ಸಂಬಳ, ಯಾರಿಗೆ?

ಸಂಪಾದಕರಿಗೆ, ಖಾದ್ರಿಶಾಮಣ್ಣ ಸಂಬಳ ತಗೊಳ್ತಿದ್ರು.

ಜೆ.ಪಿ.ಯವರ ಪ್ರವಾಸ ಕಾರ್ಯಕ್ರಮಗಳ ಸ್ವರೂಪವೇನಾಗಿತ್ತು?

‘ಕಾನ್ಪುರ ಸಮ್ಮೇಳನ’ದ ನಂತರ ಜೆ.ಪಿ. ದಕ್ಷಿಣ ಭಾರತದಲ್ಲಿ ಪಕ್ಷವನ್ನು ಬಲಪಡಿಸಲು ಬಯಸಿದ್ದರು. ರಾಷ್ಟ್ರೀಯ ಕಾರ್ಯಕಾರಿ ಈ ಜವಾಬ್ದಾರಿಯನ್ನು ಕಮಲಾದೇವಿಯವರಿಗೆ ವಹಿಸಿತ್ತು. ಪಕ್ಷದ ಬಲವರ್ಧನೆಗಾಗಿ ಜೆ.ಪಿ. ಹಮ್ಮಿಕೊಂಡ ಪ್ರವಾಸ ಕಾರ್ಯಕ್ರಮದ ಭಾಗವಾಗಿ ಕರ್ನಾಟಕದಲ್ಲಿ ಕಾರ್ಯಕ್ರಮಗಳಿದ್ದವು. ಆಗ ನಾವು ಮಂಗಳೂರಿನಲ್ಲಿ ‘ವಿಭಾಗೀಯ ಸಮ್ಮೇಳನ’ವನ್ನು ಸಂಘಟಿಸಿದ್ದೆವು. ಈ ಸಮ್ಮೇಳನದ ಅಂತರಿಕ ಸಭೆಯಲ್ಲಿ ಜೆ.ಪಿ.ಯವರು ಆಗಿನ ರಾಜಕೀಯದ ಸೂಕ್ಷ್ಮ ಬೆಳವಣಿಗೆಗಳ ಹಾಗೂ ಕಾಂಗ್ರೆಸ್‌ನ ಒಳಗಿದ್ದೇ ಮಾಡಬೇಕಾದ ಪಕ್ಷದ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಿದ್ದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆ.ಕೆ.ಶೆಟ್ಟಿ ಪಕ್ಷದ ಹಿರಿಯ ಸದಸ್ಯರು. ಅವರು ನೆಹರೂ ಅವರ ಪ್ರವಾಸ ಕಾರ್ಯಕ್ರಮಗಳಂತೆ, ಜೆ.ಪಿ.ಯವರ ಕಾರ್ಯಕ್ರಮಗಳನ್ನು ರೂಪಿಸಿ ಬಿಟ್ಟಿದ್ದರು. ದಿನಕ್ಕೆ ಅನೇಕ ಸಭೆಗಳು. ಒಂದೊಂದುಕಡೆ ೨ – ೩ ನಿಮಿಷ ಭಾಷಣ. ಈ ಸ್ವರೂಪ ಕೇಳುತ್ತಲೇ ಜೆ.ಪಿ. ‘ನಾನು ಜನರಿಗೆ ದರ್ಶನ ಕೋಡೋಕೆ ಬಂದಿಲ್ಲ’ ಎಂದು ಸಿಟ್ಟಿಗೆದ್ದು ಹೇಳಿಬಿಟ್ಟಿದ್ದರು. ಭಾಷಣಗಳಲ್ಲಿ ವಿಚಾರಗಳನ್ನು ಚರ್ಚಿಸಬೇಕೆಂದು ಅವರು ಬಯಸುತ್ತಿದ್ದರು.

ಹೊತ್ತಿಗೆ ನೀಲಗಂಗಯ್ಯ ಪೂಜಾರ್ಪ್ರವಾಸಗಳಲ್ಲಿ ಇದ್ದರೇನೋ?

ಜೆ.ಪಿ.ಯವರ ಭಾಷಣವನ್ನು ಅವರೇ ದಾಖಲಿಸಿಕೊಳ್ಳುತ್ತಿದ್ದರು. ಭಾಷಣ ಮುಗಿದ ಮೇಲೆ ಅವರ ದಾಖಲೆ ಆಧಾರದಲ್ಲಿ ನಾನು ಸಾರಾಂಶ ಸಿದ್ಧಪಡಿಸಿ, ಜೆ.ಪಿ. ಅವರಿಗೆ ತೋರಿಸುತ್ತಿದ್ದೆ. ಅವರು ಇದನ್ನು ಬಹುವಾಗಿ ಮೆಚ್ಚಿ, ಸಣ್ಣಪುಟ್ಟ ಬದಲಾವಣೆಗಳನ್ನು ಸೂಚಿಸಿ, ಇದನ್ನು ಪಕ್ಷದ ಸದಸ್ಯರಿಗೆ ವಿತರಿಸಲು ಹೇಳುತ್ತಿದ್ದರು. ಎನ್‌.ಜಿ. ಗೋರೆಯವರು ಇದನ್ನು ಮರಾಠಿಗೆ ಅನುವಾದಿಸಿ ಮಹಾರಾಷ್ಟ್ರದ ಪಕ್ಷದ ಪತ್ರಿಕೆ ‘ಜನವಾಣಿ’ ಯಲ್ಲಿ ಪ್ರಕಟಿಸಿದ್ದರು.

ಕಾರ್ಮಿಕ ಹೋರಾಟವನ್ನು ಸಂಘಟಿಸುವ ಅಗತ್ಯವನ್ನು ನಿಮ್ಮ ಹೊತ್ತಿನ ಸಮಾಜವಾದಿ ಪಕ್ಷ ಮನಗಂಡಿತ್ತಾ?

ಗೋವಾ ವಿಮೋಚನಾ ಚಳವಳಿಗೆಂದು ಡಾಕ್ಟರ್‌ ಸಾಬ್‌ (ಲೋಹಿಯಾ) ಆಗ ಬೆಳಗಾವಿಗೆ ಬಂದಿದ್ದರು. ಆ ಸಂದರ್ಭದಲ್ಲಿ ಅವರು ಗೋವಾದಲ್ಲಿ ಕಾರ್ಮಿಕರ ಸಂಘಟನೆ ಮಾಡುವ ಅಗತ್ಯದ ಬಗ್ಗೆ ಹೇಳಿದ್ದರು.

ಕಾರ್ಮಿಕ ಸಂಘಟನೆ ಕಟ್ಟಲು ನಿಮಗೆ ಸಾಧ್ಯವಾಯ್ತೇ?

ಮುಂಬೈಗೆ ಬಂದಾಗ ರೈಲ್ವೆ ಯೂನಿಯನ್‌ ಕಾರ್ಮಿಕರ ಜೊತೆ ಒಂದಿಷ್ಟು ಕೆಲಸ ಮಾಡಿದೆ. ಹುಬ್ಬಳ್ಳಿಯಲ್ಲಿ ಎನ್‌.ಬಿ. ಚೆಳಗೇರಿಯವರು ಸಂಘಟಿಸಿದ್ದರು.

ಹುಬ್ಬಳ್ಳಿಯಲ್ಲಿ ಆಗಕಮ್ಯುನಿಸ್ಟ್‌’ ಕಾರ್ಮಿಕ ಸಂಘಟನೆಗಳ ಚಟುವಟಿಕೆಗಳು ನಡೆಯತ್ತಿದ್ದವೇ?

ಹುಬ್ಬಳ್ಳಿಯಲ್ಲಿ ಅವರು ಪ್ರಬಲರಿದ್ದಿಲ್ಲ. ಅಲ್ಲಿ ಆಗಲೇ ಚೆಳಗೇರಿ ಸಂಘಟಿಸಿದ್ದರು.

ಚೆಳಗೇರಿ ಸಮಾಜವಾದಿಗಳಾಗಿದ್ದರೇ?

ಚೆಳಗೇರಿ ಸಮಾಜವಾದಿಗಳಲ್ಲ. ಆದರೆ ಆಧುನಿಕ ಚಿಂತನೆಗಳು ಅವರಲ್ಲಿದ್ದವು. ಅವರೊಬ್ಬ ಸಮಾಜ ಸುಧಾರಕರಾಗಿದ್ದರು. ಆಗ ಎಂಥದೋ… ಪ್ರಸಾದ್ ಅನ್ನುವರೊಬ್ಬರಿದ್ದರು. ಎನ್‌.ಎಂ. ಜೋಷಿ ಇದ್ದರು. ಹಾಗೆ ಚೆಳಗೇರಿ.

ರೈತರ ಸಂಘಟನೆ ಕಟ್ಟುವ ಪ್ರಯತ್ನಗಳು ನಡೆದವಾ?

ಹಾಂ. ನಾನು ಹುಬ್ಬಳ್ಳಿಯಲ್ಲಿದ್ದಾಗ ಕೃಷಿ ಕಾರ್ಮಿಕರನ್ನು ಸಂಘಟಿಸುವ ಪ್ರಯತ್ನ ಮಾಡಿದೆವು. ಗರಗದಲ್ಲಿ ಒಂದು ಸಮ್ಮೇಳನವನ್ನೂ ಮಾಡಿದೆವು. ಸರ್ದಾರ್‌ ವೀರನಗೌಡ ಅವರಿದ್ದರು. ಅವರು ನನ್ನನ್ನು ‘ಕರ್ನಾಟಕ ಕಾಂಗ್ರೆಸ್ ಕಮಿಟಿ’ಯ ಉಪಾಧ್ಯಕ್ಷರನ್ನಾಗಿಸುವ ಬಗ್ಗೆಯೂ ಮಾತನಾಡಿದ್ದರು! ಕಮಲಾದೇವಿಯವರೂ ಗರಗಕ್ಕೆ ಬಂದಿದ್ದರು.

ಗರಗದ ರೈತ ಸಮ್ಮೇಳನದಲ್ಲಿ ಅಂದಾಜು ಎಷ್ಟು ಜನ ರೈತರಿದ್ದರು?

೫೦ – ೬೦ ಜನ ಇದ್ದರು.

ಗೋವಾ ವಿಮೋಚನಾ ಹೋರಾಟದಲ್ಲಿ ನೀವು ಭಾಗವಹಿಸಿದ್ದಿರಾ?

ಇಲ್ಲ.

ಲೋಹಿಯಾ ಅವರನ್ನು ನೀವು ಮೊದಲು ಭೇಟಿ ಮಾಡಿದ್ದು ಎಲ್ಲಿ?

ಕಾನ್ಪುರ ಸಮ್ಮೇಳನದಲ್ಲಿ. ನಾನಾಗ ಕರ್ನಾಟಕ ಪಿ.ಎಸ್‌.ಪಿ. ಕಾರ್ಯದರ್ಶಿಯಾಗಿದ್ದೆ. ಲೋಹಿಯಾ ಕಾನ್ಪುರ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಕಮಲಾದೇವಿ ನನ್ನನ್ನು ಲೋಹಿಯಾರಿಗೆ ಪರಿಚಯಿಸಿದ್ದರು. ಆಗ ಒಂದೇ ಒಂದು ಮಾತು ಅವರಾಡಿದ್ದು. ನಂತರ ನಾನು ಸಂಪರ್ಕಕ್ಕೆ ಬಂದದ್ದು ೧೯೬೪ರಲ್ಲಿ. ನನಗಾಗ ಉದ್ಯೋಗವಿರಲಿಲ್ಲ. ಆಗ ಲೋಹಿಯಾ ಅವರಿಗೆ ಒಂದು ಪತ್ರ ಬರೆದು ಭೇಟಿ ಮಾಡಿದೆ. ೧೯೬೪ರಿಂದ ಅವರ ಜೊತೆಗೇ ಇದ್ದೆ. ೧೯೬೭ರಲ್ಲಿ ಅವರು ನಿಧನರಾದರು. ಅವರು ಸಂಸತ್‌ ಸದಸ್ಯರಾಗಿದ್ದಾಗ ನಾನು ದೆಹಲಿಯಲ್ಲಿ ಅವರಿಗೆ ಸಹಾಯಕನಾಗಿದ್ದೆ. ಬಂದ ಪತ್ರಗಳಿಗೆ ಉತ್ತರಿಸುವುದು, ಕಡತಗಳನ್ನು ನೋಡಿ ಕೊಳ್ಳುವುದು ನನ್ನ ಕೆಲಸವಾಗಿತ್ತು. ಒಂದು ಸಲ ನಾನು ಡಾಕ್ಟರ್‌ ಸಾಬಾ ಅವರಿಗೆ, ‘ಕಮ್ಯುನಿಸ್ಟರ ಶಸ್ತ್ರಾಸ್ತ್ರಗಳು ವಿರುದ್ಧ ಇವೆ. ಪ್ರಜಾಪ್ರಭುತ್ವವಾದಿಗಳ ಶಸ್ತ್ರಾಸ್ತ್ರಗಳು ಪ್ರಜಾಪ್ರಭುತ್ವದ ವಿರುದ್ಧ ಇವೆ’ ಎಂದಿದ್ದೆ. ಇಂಡೋನೇಷಿಯಾ, ಪಾಕಿಸ್ತಾನ ಮತ್ತು ಭಾರತಗಳ ಉದಾಹರಣೆಯನ್ನಿಟ್ಟುಕೊಂಡು ಈ ಮಾತನ್ನು ಹೇಳಿದ್ದೆ. ಆಗ ಡಾಕ್ಟರ್‌ ಸಾಬ್‌ ನನಗೆ, ‘ನೀನೇ ಯಾಕೆ ಲೇಖನಗಳನ್ನು ಬರೆಯಬಾರದು’ ಎಂದಿದ್ದರು. ಆ ನಂತರ ಪತ್ರಿಕೆಗಳಿಗೆ ಲೇಖನ ಬರೆಯಲು ಆರಂಭಿಸಿದೆ. ಎಂ. ಆರ್‌. ಮಸಾನಿಯವರು ಮಿಶ್ರ ಆರ್ಥಿಕ ವ್ಯವಸ್ಥೆ ಬಗ್ಗೆ ಒಂದು ಪುಸ್ತಕ ಬರೆದಿದ್ದರು. ಆ ಪುಸ್ತಕವನ್ನು ನಾನು ‘ರಿವ್ಯೂ’ ಮಾಡಿದೆ. ಅದನ್ನು ಮೆಚ್ಚಿ ಕೊಂಡ ಡಾಕ್ಟರ್‌ ಅವರು ಪುಸ್ತಕಗಳಿಗೆ ರಿವ್ಯೂ ಮಾಡಲು ಹಚ್ಚಿದರು. ಮುಂದೆ ನಾನು ‘ಸಮಾಜವಾದಿ ಚಿಂತನೆಯ ಬೆಳವಣಿಗೆ’ ಎಂಬ ಧೀರ್ಘ ಲೇಖನವನ್ನು ಬರೆದೆ. ಇದರಲ್ಲಿ ‘ಭಾರತದಲ್ಲಿ ಸಮಾಜವಾದಿ ಪಕ್ಷದ ದುರಂತ’ದ ಬಗ್ಗೆ ಚರ್ಚಿಸಿದ್ದೇನೆ.

ತುರ್ತು ಪರಿಸ್ಥಿತಿಯಲ್ಲಿ ನಿಮ್ಮ ಅನುಭವವೇನು?

ತುರ್ತು ಪರಿಸ್ಥಿತಿಯಲ್ಲಿ ನಾನು ಜೈಲಿಗೇನೂ ಹೋಗಲಿಲ್ಲ. ಆಗ ನಾನು ಕೆಲಸ ಮಾಡಿ ಕೊಂಡು ಬಾಂಬೆಯಲ್ಲೇ ಇದ್ದೆ.

ತುರ್ತು ಪರಿಸ್ಥಿತಿ ವಿರೋಧಿಸಿ ಚಳವಳಿಗೆ ಇಳಿಯಬೇಕು ಅನ್ನಿಸಲಿಲ್ವಾ?

ತುರ್ತು ಪರಿಸ್ಥಿತಿ ವಿರೋಧಿಸಿ ನಾನೊಂದು ಪುಸ್ತಕವನ್ನೇ ಬರೆದಿದ್ದೇನೆ. ಆದರೆ ಜೈಲಿಗೆ ಹೋಗಲಿಲ್ಲ ಅಷ್ಟೇ. ಆಗ ನಾನು ನನ್ನ ಕುಟುಂಬದ ಕಡೆ ಲಕ್ಷ್ಯ ವಹಿಸಬೇಕಿತ್ತು. ನನ್ನ ಪತ್ನಿ ಬ್ಯಾಂಕ್‌ ಉದ್ಯೋಗಿಯಾಗಿದ್ದಳು. ನನ್ನ ಪುಸ್ತಕವನ್ನು ಗುರುಗಳಲ್ಲೊಬ್ಬರಾದ ಜೆ.ಡಿ. ಪಾರೀಖ್‌ ಅವರಿಗೆ ತೋರಿಸಿದ್ದೆ. ತುರ್ತು ಪರಿಸ್ಥಿತಿ ಕಾಲಕ್ಕೆ ಜೆ.ಪಿ.ಯವರು ಭಾಷಣಗಳು ಹರಿತವಾಗಿರುತ್ತಿದ್ದವು. ಅವರು ಇಂದಿರಾ ಗಾಂಧಿಯನ್ನು ಭ್ರಷ್ಟಾಚಾರದ ಗಂಗೋತ್ರಿ ಎಂದು ಕರೆದರು. ಇಂದಿರಾ ಸಂಪುಟದಲ್ಲಿ ರಕ್ಷಣಾ ಸಚಿವರಾಗಿದ್ದ ಬನ್ಸಿಲಾಲ್‌ರನ್ನು ‘ಇಂದಿರಾ ಗಾಂಧಿಯವರ ಹೊಲದಲ್ಲಿ ಬೆಳೆದ ಮೂಲಂಗಿ’ ಎಂದು ಲೇವಡಿ ಮಾಡುತ್ತಿದ್ದರು.