ಯಾವ ಅಧಿಕಾರವನ್ನು ಪಡೆಯದೆ, ದೇಹದಲ್ಲಿ ಶಕ್ತಿ ಇರುವವರೆಗೂ ಹೋರಾಟಗಳನ್ನು ಮಾಡಿ, ಪುಟ್ಟ ಕೋಣೆಯಲ್ಲಿ ಒಂಟಿ ಜೀವನ ಕಳೆಯುತ್ತಿರುವ ಕ್ರಿಯಾಶೀಲ ಸಮಾಜವಾದಿ, ಕಾಶಿನಾಥ ಬೇಲೂರೆಯವರು. ರಾಜ್ಯದ ಉತ್ತರದ ತುದಿಯಲ್ಲಿ ಸಮಾಜವಾದಿ ಚಳವಳಿಯನ್ನು ವಿಸ್ತರಿಸಿದ ಬೇಲೂರೆ ಅವರು ವಕೀಲರಾಗಿ, ಸಕ್ರಿಯ ರಾಜಕಾರಣಿಯಾಗಿ, ತಮ್ಮ ಮುಪ್ಪಿನ ದಿನಗಳಲ್ಲೂ ಜನರೊಟ್ಟಿಗೆ ಸಂಪರ್ಕವಿಟ್ಟುಕೊಂಡ ಹೋರಾಟಗಾರರು. ಎರಡು ಬಾರಿ ಚುನಾವಣೆಯಲ್ಲಿ ಸೋತರೂ, ತಾವು ಕಟ್ಟಿದ ಶಿಕ್ಷಣ ಸಂಸ್ಥೆಯಿಂದ ತಾವೇ ದೂರಾಗುವಂತಹ ಸಂದರ್ಭ ಬಂದರೂ ನಿರಾಶರಾಗದೆ, ಸಿನಿಕರಾಗದೆ, ವಿಶಿಷ್ಟ ವ್ಯಕ್ತಿತ್ವದ ಬೇಲೂರೆ ಅವಿವಾಹಿತರಾಗಿಯೇ ಬದುಕಿರುವವರು.

ಮಧ್ಯಮವರ್ಗದ ಕುಟುಂಬದಲ್ಲಿ ೧೯೩೨ರಂದು ಜನಿಸಿದ ಕಾಶಿನಾಥ ಬೇಲೂರೆ, ಶಾಲೆಯೇ ಇಲ್ಲದ ಪರಿಸರದಲ್ಲಿ ಮರಾಠಿ ಅಕ್ಷರಾಭ್ಯಾಸ ಮಾಡಿದರು. ೧೯೪೯ರಲ್ಲಿ ಹೈದ್ರಾಬಾದ್‌ನಲ್ಲಿ ಹೈಯರ್‌ ಸೆಕೆಂಡರಿ ಮುಗಿಸಿ, ವಿಜ್ಞಾನ ವಿಭಾಗದಲ್ಲಿ ಸೀಟು ಸಿಗದಿದ್ದಕ್ಕಾಗಿ ಬಿ.ಕಾಂ. ಮಾಡಿದರು. ಹೈದ್ರಾಬಾದ್‌ನಲ್ಲಿ ವಿದ್ಯಾಭ್ಯಾಸ ಮಾಡುವ ಹೊತ್ತಿಗೆ ಆರ್ಯ ಸಮಾಜದ ಚಟುವಟಿಕೆಗಳಿಂದ ಪ್ರೇರಣೆ ಪಡೆದು ಸಾಮಾಜಿಕ ಚಿಂತನೆ ರೂಢಿಸಿಕೊಂಡರು. ಹೈದ್ರಾಬಾದ್‌ ರಾಜ್ಯ ಗ್ರಂಥಾಲಯದಲ್ಲಿ ಸತತ ಅಧ್ಯಯನ ಮಾಡಿದರು. ಜೀವಿತದ ಅಗತ್ಯಕ್ಕಾಗಿ ಟೈಪಿಂಗ್‌ ಕೆಲಸಕ್ಕೆ ಸೇರಿ ಸ್ವಾವಲಂಬಿ ಬದುಕಿನ ಪ್ರಥಮ ಪಾಠ ಕಲಿತರು.

ಬಿ.ಕಾಂ. ಹೊತ್ತಿಗೆ ಕಾಣಿಸಿಕೊಂಡ ದೈಹಿಕ ಅನಾರೋಗ್ಯ ಇವರನ್ನು ಕೊನೆವರೆಗೂ ಕಾಡಿತು. ೧೯೫೨ – ೫೩ರಲ್ಲಿ ಪದವಿ ಶಿಕ್ಷಣವನ್ನು, ೧೯೬೫ರಲ್ಲಿ ಕಾನೂನು ವಿದ್ಯಾಭ್ಯಾಸವನ್ನೂ ಮುಗಿಸಿ ವಕೀಲ ವೃತ್ತಿಯನ್ನು ಆರಂಭಿಸಿದರು. ಈ ಹೊತ್ತಿಗೆ ಹಿರಿಯ ಸಮಾಜವಾದಿ ಆರ್‌.ವಿ. ಬೀಡಪ್ಪ ಅವರ ಸಂಪರ್ಕ ಲಭಿಸಿತು. ಕೋಟಗ್ಯಾಳ ಗ್ರಾಮದಲ್ಲಿ ಬಾವಿ ನೀರಿನ ಬಳಕೆಗೆ, ದಲಿತರು ವಾರ್ಷಿಕ ಶುಲ್ಕ ಒಪ್ಪಿಸಬೇಕಿದ್ದ ಸ್ಥಿತಿಕಂಡು, ತಾವೇ ದಲಿತರಿಗೆ ಬಾವಿತೋಡಿಸಿ ಕೊಡುವ ಮೂಲಕ, ಸಮಾಜ ಸುಧಾರಣಾ ಕಾರ್ಯಗಳಿಗೆ ಮುಂದಾದರು. ಬೀಡಪ್ಪ ಅವರ ಪ್ರೇರಣೆಯಿಂದ ೧೯೬೭ರಲ್ಲಿ ಸಂಯುಕ್ತ ಸಮಾಜವಾದಿ ಪಕ್ಷವನ್ನು ಸೇರಿ, ಸಂಘಟಿಸಿದರು.

ತುರ್ತುಪರಿಸ್ಥಿತಿಯನ್ನು ವಿರೋಧಿಸಿ ಜೈಲು ಸೇರಿದ ಬೇಲೂರೆ ಈ ದೀರ್ಘ ಬಂಧನದ ಅವಧಿಯಲ್ಲಿ ಜಾಗತಿಕ ಇತಿಹಾಸದ ೧೦ ಸಂಪುಟಗಳನ್ನು ಅಭ್ಯಸಿಸಿದರು. ಭೂರಹಿತ ರೈತರ ಭೂಮಿಯ ಹಕ್ಕಿಗಾಗಿ ೧೯೭೭ರಲ್ಲಿ ಭೂ ಗ್ರಹಣ ಹೋರಾಟ ಮಾಡಿ ಸರಕಾರಿ ಜಮೀನನ್ನು ಆಕ್ರಮಿಸಿ ೧೫೦ ರೈತರೊಂದಿಗೆ ಮತ್ತೊಮ್ಮೆ ಬಂಧಿತರಾದರು. ಬಂಧನದ ಅವಧಿಯಲ್ಲಿ ಹರ್ನಿಯಾ ಸಮಸ್ಯೆ ಉಲ್ಬಣಿಸಿದ್ದರಿಂದ ಜೈಲಿನಲ್ಲಿಯೇ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಬೇಕಾಯಿತು. ೧೯೭೩ರಲ್ಲಿ ನಡೆದ ಸಂಡೂರು ಹೋರಾಟದಲ್ಲಿಯೂ ಇವರು ಭಾಗವಹಿಸಿದ್ದರು.

೧೯೭೮ರಲ್ಲಿ ಜನತಾ ಪಕ್ಷದ ಜಿಲ್ಲಾಧ್ಯಕ್ಷರಾಗಿ, ೧೯೭೮ ಮತ್ತು ೧೯೮೩ರ ವಿಧಾನಸಭಾ ಚುನಾವಣೆಗಳಲ್ಲಿ ಔರಾದ್‌ ಕ್ಷೇತ್ರದಿಂದ ಸ್ಪರ್ಧಿಸಿ ಎರಡು ಬಾರಿಯೂ ಸೋತರೂ. ೧೯೮೦ರಲ್ಲಿ ಇಡಿಯಾ ಚೀನಾ ಫ್ರೆಂಡ್‌ಶಿಪ್‌ ಅಸೋಷಿಯೇಷನ್‌ನಿಂದ ಚೀನಾಕ್ಕೆ ಹೋಗಿ ಒಂದು ತಿಂಗಳು ಇದ್ದು ಬಂದರು.

ನಾರಂಜ ಸಕ್ಕರೆ ಸಹಕಾರಿ ಕಾರ್ಖಾನೆಯ ಸ್ಥಾಪನೆಗಾಗಿ ಶ್ರಮಿಸಿ ಅದರ ನಿರ್ದೇಶಕರಾಗಿ ಕಾರ್ಯನಿರ್ವಹಿಸಿ, ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕಗಿ, ಕಬ್ಬು ಬೆಳೆಗೆ ನ್ಯಾಯದ ಬೆಲೆಗಾಗಿ, ಹಾವನೂರು ವರದಿ ಜಾರಿಗಾಗಿ ಹೋರಾಟಗಳನ್ನು ಸಂಘಟಿಸಿದ ಕಾಶಿನಾಥ ಬೇಲೂರೆಯವರು, ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬೆಳೆಸಿ ದೂರ ಉಳಿದರು. ರಾಮಕೃಷ್ಣ ಹೆಗೆಡೆಯವರ ಸರಕಾರದಲ್ಲಿ ವಿಧಾನ ಪರಿಷತ್‌ ಸದಸ್ಯ ಸ್ಥಾನಕ್ಕೆ ಬಂದ ಅವಕಾಶವನ್ನು ನಿರಾಕರಿಸಿದರು.

ಜನರ ಬಾಯಲ್ಲಿ ಗೌರವದಿಂದ ಕಾಶಿನಾಥರಾವ್‌ ಆಗಿರುವ ಬೇಲೂರೆ ವಕೀಲರು, ಈಗಲೂ ಆಗಾಗ ತಮ್ಮ ಕೇಸುಗಳ ಮೇಲೆ ಕಣ್ಣಾಡಿಸುತ್ತಾರೆ… ಈಗಷ್ಟೇ ತಮ್ಮ ಕಪ್ಪು ಕೋಟನ್ನು ಪಕ್ಕಕ್ಕೆ ನೇತು ಹಾಕಿದ್ದಾರೆ.

*

ನಿಮ್ಮ ನೆನಪೀಲೆ ಭಾಗಾದಾಗ ರಮಾನಂದ ತೀರ್ಥರ ಕ್ಯಾಂಪುಗಳು ಇದ್ವಾ?

ಇಲ್ಲ, ಅವಾಗ ಇರ್ಲಿಲ್ಲ. ಅಷ್ಟೊತ್ತಿಗೆ ಇದ್ವೋ, ಆಗಲೇ ಹೋಗಿದ್ವೋ ಅವಾಗ ಉಮ್ಮೀ ಬ್ಯಾಂಕ್‌ ಅಂತಾ ಇತ್ತು. ಅದನ್ನ ರಮಾನಂದ ತೀರ್ಥ ಅವರ ಕಡೇ ಜನ ಮೂಮೆಂಟ್ ನಡೆಸ್ಲಾಕ ಅಂತ ಲೂಟಿ ಮಾಡಿದ್ರು. ರೊಕ್ಕದ ಪ್ರಶ್ನಾ ಬರ್ತಾದ ನೋಡ್ರೀ. ಉಮ್ರೀ ಬ್ಯಾಂಕ್‌ ಜಗಲೂರು ಆಚೇಕ್‌ ಅದಾ. ರೊಕ್ಕದಾಗ ಇವ್ರೆಲ್ಲಾ ಸೋಲಾಪುರ, ಬಾರ್ಸಿ, ಅಲ್ಲೆಲ್ಲಾ ಹಳ್ಳೀ ಮ್ಯಾಲ ಕ್ಯಾಂಪ್‌ ಮಾಡ್ತಿದ್ರು. ಅಲ್ಲೆಲ್ಲಾ ಹೋಗಿ ಜನಾ ಟ್ರೈನಿಂಗ್‌ ಆಗ್ತಿದ್ರು. ಇದೆಲ್ಲಾ ಐದಾರು ತಿಂಗಳು ಒಳಗೆ ನಡೀತು.

ಐದಾರು ತಿಂಗಳು ಆದಮ್ಯಾಲೆ ಏನೇನಾತು?

ಆಮ್ಯಾಲ ಈ ಜನ್ರ ಅಟ್ರಾಸಿಟೀನೂ ಹೆಚ್ಚಾತು, ಮುಸ್ಲೀಂರ್ದು ಮತ್ತಾ ಜರಾ ಮುಸ್ಲೀಂರ್ದು ದುರುಪಯೋಗನೂ ಮಾಡ್ಕಂಡ್ರು. ಎಲ್ಲಿ ಕಳ್ಳತನ ಮಾಡ್ಸಿದ್ರು, ಎಲ್ಲಿ ರೊಕ್ಕಾ ಲೂಟ್‌ ಮಾಡ್ಸಿದ್ರು, ಎಲ್ಲಿ ಹೆಣ್ಮಕ್ಳಿಗೆ ಇದು ಮಾಡಿಸಿದ್ರು, ಎಲ್ಲಾ ಖರೆ, ಅಂದ್ರಾ ರಜಾಕಾರರ ಎಲ್ಲಾ ಮಾಡ್ಲಿಲ್ಲ. ಅವ್ರ ಹೆಸರ್ನ್ಯಾಗ ಯಾರ್ಯಾರ ಮಾಡಿದ್ರು. ಈ ಕಾಶೀಂ ರಜ್ವಿ ಅವ್ನು ಇರಾದು ಹೈದ್ರಾಬಾದಕ್ಕಾ. ಮೂವ್‌ಮೆಂಟ್‌ ಆತು. ಮೂವ್‌ಮೆಂಟ್‌ ಆಗಾಣ, ಪೋಲೀಸ್‌ ಯ್ಯಾಕ್ಷನ್‌ ಆತು. ಪೋಲೀಸ್‌ ಯ್ಯಾಕ್ಷನ್‌ ಆಗಾಣ ಕಮ್ಯಾಂಡ್‌ ಕೊಟ್‌ ಬಿಟ್ಟಿದ್ರಂತ. ಕಮ್ಯಾಂಡ್‌ ಆಗಾಣ ಕಂಟ್ರೋಲ್‌ ತಗಂಡ ಮ್ಯಾಲ ಹೈದ್ರಾಬಾದನ್ನ ಪೂರಾ ಇಂಡಿಯನ್ ಯೂನಿಯನ್ನ್ಯಾಗ ಡಿಕ್ಲೇರ್‌ ಆತು. ಡಿಕ್ಲೇರ್ ಆದ ಮ್ಯಾಲ ಅಂವ ಓಡಿ ಹೋದ.

ರಜಾಕಾರದ ಅಟ್ರಾಸಿಟಿ ಆತಲ್ಲ. ಹಿಂಗಾಗ್ಬಾರ್ದು ಅಂತಾ ಹೇಳಾ ಮುಸಲ್ಮಾನ್ರು ಯಾರೂ ಇರಲಿಲ್ಲವೇನು?

ಇದ್ರಲ್ಲ. ಇದ್ರು. ಅವಂಗ ಹೊಡ್ಡು ಹಾಕಿದ್ರಲ್ಲ. ಅವ್ನು ಇಮ್ರೋಜ್‌ ಅಂತಾ ಪೇಪರ್‌ ಬರೀತಿದ್ದ. ಅವನಿಗೆ ರಾತ್ರಿ ಹನ್ನೊಂದು ಗಂಟೀಕಾ ಖೂನ್‌ ಮಾಡಿದ್ರು. ಹಂಗಾ ಜನಾ ಥೋಡೆ ಇದ್ರು. ಆದ್ರ ಇವ್ನು ಪೇಪರ್ನ್ಯಾಗ ಬರದಿದ್ದಕ್ಕ ಹೊಡದು ಹಾಕಿ ಬಿಟ್ರು. ಗುಡ್‌ ರೈಟರ್ರು.

ಸ್ವಾತಂತ್ರ್ಯ ಬಂತಲ್ಲ, ಅವತ್ತು ನೀವದನ್ನು ಹೆಂಗ ಆಚರಿಸಿದ್ರೀ, ಜನರಿಗೆ ಅದೆಲ್ಲಾ ಅರ್ಥಾ ಆಯ್ತಾ?

ಅರ್ಥಾ ಏನು ಬಂತು? ಆ ಕಡೀಂದ ಮಿಲ್ಟ್ರೀ ಬಂತು. “ಆ ರಹೇ ಹೈ” ಅಂತಾ ಜನಾ ಹಳ್ಳೀ ಗುಂಟಾ ಎಲ್ಲಾ ಎತ್ತುಗಳ ಮ್ಯಾಲ ಜನ ಕೂಡ್ತಿದ್ದಿಲ್ಲ. ಅವಾಗ ನಂದೀಮ್ಯಾಲ ಸವಾರಿ ಮಾಡ್ತಿದ್ದಿಲ್ಲ ನಂದೀಮ್ಯಾಲ ಸವಾರಿ ಮಾಡಕಾ ಶುರು ಆತು. ಇನ್ನು ನಿಜಾಮ ಸರಕಾರ ಹೊಂಟೋಯ್ತು ಇನ್ನು ಇಂಡಿಯಾ ಸರ್ಕಾರ ಅಂತ ಜನ ತಿಳ್ಕೊಂಡ್ರು. ಆಗಿನ್ನೂ ಟೆನ್ತ್‌ (೧೦)ನ್ಯಾಕ ಇದ್ದೆ ನಾನು. ಜನ್ರಿಗೆಲ್ಲಾ ಭಾಳಾ ಖುಷಿ ಆಗಿತ್ತು. ನಾವು ಹಳ್ಳಿ ಹಳ್ಯಾಗೆಲ್ಲ ತಿರಂಗ ಝಂಡಾ ಹಾರಿಸಿದೆವು. ಭಾಷಣ ಮಾಡಿದೆವು. ಬಲ್ಲೂರು, ಕಮಾಲನಗರ, ನಮ್ಮೂರು ಸುತ್ತುಮುತ್ತಾ, ಎಲ್ಲಾ ನಾವು ಹೋಗಿದ್ವಿ. ಪ್ರಭಾತ್‌ ಪೇರಿ ಹೋಗ್ತಿದ್ವಿ. ಜನ್ರೂ ಬರ್ತಿದ್ರು. ಮತ್ತ ಎಲ್ಲಾ ಊರ ಪಂಚಾಯತಿಯವ್ರು ಎಲ್ಲಾ ಆಕ್ಟ್ಯಿವ್‌ ಇದ್ರು. ಜನ್ರೀಗೆಲ್ಲಾ ಖರೇ ಖುಷಿ ಆಗಿತ್ತು.

೪೮ರಾಗ ಗಾಂಧೀ ಕೊಲೆ ಆತಲ್ಲ. ಅವಾಗೆಲ್ಲ ಜನ ಹೆಂಗ ಪ್ರತಿಕ್ರಿಯಿಸಿದ್ರು?

ಗಾಂಧೀ ಕೊಲೆ ಆತು. ಆವಾಗೆಲ್ಲ ಕಲ್ಕತ್ತಾ, ದಿಲ್ಲೀ, ಪೂನಾ, ಆ ಕಡೀಗೆಲ್ಲಾ ಗದ್ಲ ಆತು. ಇಲ್ಲೆಲ್ಲಾ ಗಾಂಧಿ ಬಗ್ಗೆ ಪ್ರೇಮ ಇತ್ತು. ಅವಂಗ ಕೊಂದಂವ ಆರ್.ಎಸ್‌.ಎಸ್‌ನವ. ನಾವೆಲ್ಲಾ ಆರ್‌.ಎಸ್.ಎಸ್‌ಗೆ ವಿರೋಧ ಇದ್ವೀ.

ಅವಾಗೆಲ್ಲ ಅದು ಇತ್ತಾ ಇಲ್ಲಿ?

ಇತ್ತಲ್ಲ. ಇಲ್ಲೆಲ್ಲಾ ಅವ್ರು ಕ್ಲಾಸ್‌ ನಡಿಸ್ತಿದ್ರು. ಅದೇನೋ ಶಾಖಾ ಇತ್ತು. ಶಾಖಾ ಇರಾಣ ಹತ್ತೂ ಇಪ್ಪತ್ತು ಹುಡುಗ್ರು ಬಡಗಿ (ದಂಡ) ತಗಂಡು ವ್ಯಾಯಾಮ ಮಾಡ್ತಿದ್ರು. ಆ ಶಾಖಾ ಇರೋ ಕಡೀಂದ್ಲೆ ಎಲ್ಲಾ ಕಡೆ ಆಗಿದ್ದು. ನಾವೂ ಅವ್ರ ಬಗ್ಗೆ ಭಾಳಾ ಸ್ಟಡೀ ಮಾಡಿದ್ವಿ. ಅವ್ರ ಜೋಡಿ ಭಾಳಾ ಚರ್ಚಾ ಮಾಡಿದ್ವಿ. ಅವ್ರು ಶಾಖಾದಾಗ ಎಸ್ಸೀ ಮಂದಿ ಇರ್ತಿರ್ಲಿಲ್ಲ. ಆ ಶಾಖಾದಾಗ ಎಸ್ಸೀ, ಎಸ್ಟೀ, ಮಂದಿ ಯಾಕಿಲ್ಲ ಅಂತಾ ಕೇಳಿದ್ರೆ ಯಾರೂ ಉತ್ರಾ ಕೊಡ್ತಿದ್ದಿಲ್ಲ. ಅಲ್ಲಿ ಬ್ರಾಂಬ್ರು ಇರಾರು. ಅಲ್ಲೀ ವ್ಯಾಪಾರೀ ಜನಾ ಇರಾರು. ಆ ಶಾಖಾ ದಾಗನೂ ಮುಸ್ಲೀಂ ಮನ್ಪ್ಯಾ ಲೇಬರ್‌ ಕ್ಲಾಸ್‌ ಮನ್ಪ್ಯಾ ಬ್ಯಾಕ್‌ವರ್ಡ್‌ ಕ್ಲಾಸ್‌ ಮನ್ಪ್ಯಾ ಯಾರೂ ಇತ್ತಿದ್ದಿಲ್ಲ. ಹಿಂಗದಾ.

ಬೇಲೂರೆಯವರೇ ನಿಮ್ಮ ಕುಟುಂಬದ ಹಿನ್ನೆಲೆಯನ್ನು ಸ್ವಲ್ಪ ಹೇಳ್ತಿರಾ?

ನಾವೆಲ್ಲ ಒಕ್ಕಲುತನ ಮಾಡ್ತಿದ್ವಿ. ನಮ್ಮ ತಂದೆಯವರು ಒಕ್ಕಲುತನ ಮಾಡ್ತಿದ್ರು. ಹೊಲಾ ಇತ್ತು. ಹಿಂಗಾ ಕಲೀತಾ ಕಲೀತಾ ಪಿ.ಯು.ಸಿ ಮಾಡ್ದೆ. ಹಂಗಾ ಮುಂದೆ ಹೋದೆ.

ಒಕ್ಕಲುತನಾ ಭಾಳಾ ಇತ್ತೇನ್ರಿ?

ಭಾಳಾ ಏನೂ ಇದ್ದಿಲ್ಲ. ಥೋಡೆ ಇತ್ತು. ಒಂದು ಹತ್ತಿಪ್ಪತ್ತು ಎಕ್ರೇ ಇತ್ತು. ಅದ್ರಾಗ ಎಲ್ಲಾ ಅಗ್ತಿತ್ತು.

ಕಾಶಿನಾಥರಾವ್‌’ ಅಂತೈತಿ. ನಿಮ್ಮ ಹೆಸರ ಮುಂದ್ಯಾಕರಾವ್‌’ ಅಂತಾ ಬಂತು?

ಏ… ನನಗ ಕಾಶಿನಾಥ ಅಂತ್ಲೇ ಅಂತಿದ್ರು, ಹಿಂಗಾ ವಕಾಲತ್ತು. ಗಿಕಾಲತ್ತು ಮಾಡಿದ ಮ್ಯಾಲ ‘ರಾವ್‌’ ಅಂತಾ ಕರಿಯಾಕ ಶುರು ಮಾಡಿದ್ರು, ನನ್ನ ಹೆಸರು ಕಾಶಿನಾಥ ಬೇಲೂರೆ ಅಂತಾ.

ಈಗ ನಿಮಗ ಹೇಳ್ತೀನಿ. ಐ ಡೊಂಟ್‌ ಬಿಲೀವ್‌ ಇನ್‌ ಕ್ಯಾಸ್ಟ್‌. ಲಿಂಗಾತ್ರು ಇದ್ವಿ ನಾವು. ನಾನು ಎಲ್ಲೂ ಬರೆಸಲ್ನೂ, ಹೇಳಲ್ನೂ, ಸಪೋರ್ಟೂನ್ನೂ ಮಾಡಲ್ಲ. ಜನ್ರು ಬಂದು ರಾವ್‌, ರಾವ್‌ ಅಂತಾರ ಈಗೆಲ್ಲಾ ದೇಶದಾಗ ಬಿ.ಜೆ.ಪಿ.ದು ಜಾತೀವಾದದ ಜನಾ ಹೆಚ್ಚದಾರಾ. ಸರ್ಕಾರಾಭೀ ನಡೆಸ್ಯಾರ, ಎಲ್ಲಾ ಜಾತೀವಾದದ ಆಧಾರದಾಗ ನಡಸ್ತದಾರ. ಸರ್ಕಾರ ನಡೀತಲ್ಲ, ವಾಜಪೇಯಿ ಸರ್ಕಾರ ನಡಿಯಾತನಾ ಹೆಚ್ಚಾತು ಇಲ್ಲಾಂದ್ರ ಆಗ್ತಿರ್ಲಿಲ್ಲ. ಆ ಮೊದ್ಲು ಎಲ್ಡಾ ಎಲ್ದಾ ಎಂಪೀ ಬರ್ತಿರಾದು. ಆ ಮ್ಯಾಲ ಬಾಕೀ ಮಂದೀ ತಪ್ಪೇನ್‌ ಮಾಡಿದ್ರು, ಅದಕ್ಕ ಅವ್ರು ಎಯ್ಟೀ (೮೦) ಮಂದೀ ಬಂದ್ ಬಿಟ್ರು. ಅಲ್ಲಿಂದೆಲ್ಲಾ ಹಾಳಾಗಿ ಬಿಡ್ತು.

ಯಾರಿಂದ ಹಂಗಾತು?

ರಾಜ ನಾರಾಯಣ ಒಬ್ಬ ಇದ್ದ ಮತ್ತೊಬ್ಬ ಯಾರೊ…ಇದ್ದ…

ಲೋಹಿಯಾ ಏನ್ಹೇಳತಿದ್ರು ಅದಕ್ಕ?

ಲೋಹಿಯಾ ಅವ್ರೇನು ಅದಕ್ಕ ಒಪ್ಗೀನಾ ಕೊಡ್ಲಿಲ್ಲ. ಇದೆಲ್ಲಾ ಯಾಕ? ಸ್ಟ್ರಗಲ್‌ ಮಾಡ್ಬೇಕು ಅಂತಿದ್ರು. ಈ ಚುನಾವ ಬಂತು. ಚುನಾವ್ ಬಂದಿದ್ದಕ್ಕೆ ಎಲ್ಲಾ ಹಾಳಾಗಿ ಹೋತು. ಪಾರ್ಲಿಮೆಂಟದಾಗ ಅಲ್ಲಿ ಲೋಹಿಯಾ ಫಸ್ಟ್‌ ಎಲೆಕ್ಟ್‌ ಆಗಿ ಹೋಗಿದ್ಮ್ಯಾಕ ಅಲ್ಲಿ ಕಾಂಗ್ರೆಸ್‌ನೋರು ಏನ್ಮಾಡಿದ್ರು ಎಷ್ಟು ಓಟ್‌ನಿಂದಾ ಬಂದೀ ಅಂತಾ ಅವನಿಗಂದ್ರು. ಅವನು ಇಂಟಲಿಜೆಂಟ್‌ ಮನ್ಪ್ಯಾನಾ ಇದ್ದ ಲೋಹಿಯಾ. ಅಂವಾ “ತುಮ್‌ ಜಿತನೇ ಹೈ ಉತನೇ ಓಟ್‌ಸೇ ಆಯಾ ಹ್ಞೂಂ.” ಅಂದಾ. ನೀವೆಷ್ಟು ಮಂದೀ ಅದೀರಿ ಅಷ್ಟು ಓಟೀಲೆ ಗೆದ್ದು ಬಂದೀನಿ ಅಂದಾ. ಏನ್‌ ತೀನ್‌ಸೇ (೩೦೦) ಚಾರ್‌ಸೇ (೪೦೦) ಮಂದೀ ಇದ್ರು ಅವ್ರು, ಪಾರ್ಲಿಮೆಂಟ್‌ದಾಗ, ಇವ್ರೂನೂ ಚಾರ್‌ಸೇ ಓಟ್‌ನ್ಯಾಗ ಗೆದ್‌ ಬಂದಿದ್ರು. ಅದಕ್ಕಾ ಅವರ‍್ನಾ ಕಡೆಗಣಿಸ್ಬೇಕು ಅಂತಾ ಕೇಳಿದ್ರು ಕಾಂಗ್ರೆಸ್‌ನೋರು. ನೀನೆಷ್ಟು ಓಟೀಲೆ ಬಂದೀ ಅಂತಾ.

ಇನ್ನು ನಿಮ್ಮ ಸಮಾಜವಾದಿ ಪಕ್ಷದ ವಿಷಯಕ್ಕಾ ಬರೋಣ. ನೀವು ಅಂದುಕೊಂಡಮಟ್ಟಕ್ಕ ಜನರ ನಡುವೆ ಸಮಾಜವಾದಿ ವಿಚಾರಗಳ್ನ ಒಯ್ಯಾಕ ಆಯ್ತಾ?

ಇಲ್ಲ ಇಲ್ಲ ಆಗಿಲ್ಲ. ಜಾತೀವಾದಿ ಮಂದೀ, ಪಟೇಲ್ ಪಟವಾರೀ ಮಂದಿ, ಇವಕ್ಕೆಲ್ಲ ಸಮಾಜವಾದಿ ವಿಚಾರ ಗೊತ್ತಾ ಇಲ್ಲ. ಎಲ್ಲಿ ಹೋದ್ರೂ ಅದಾ ಪಟವಾರೀ ಮಂದೀ, ಅದೇ ಪಾಂಡೆ, ಅದೇ ಗೌಡ್ರು ಶ್ಯಾನುಭೋಗರು, ಇವ್ರಾ ಹಾಳು ಮಾಡಿದ್ರು. ಅವರು ಸಮಾಜವಾದ ಅಂದ್ರೇನಂತಾನೇ ಜನರಿಗೆ ತಿಳಿಸಿಲ್ಲ.

ಅಂದ್ರೆ ವರ್ಗಾನೆ ಸಮಾಜವಾದ ಜನರ ನಡುವೆ ಪ್ರವೇಶಿಸುವದಕ್ಕ ಅಡ್ಡಿಯಾತು ಅಂತೀರಾ?

ಆಯ್ತು, ಆಯ್ತು, ಫ್ಯೂಡಲ್ ಸಿಸ್ಟಮ್ಮೇ ಸಮಾಜವಾದಕ್ಕ ಅಡ್ಡೀ ಆತು. ಇವತ್ತಿಗೂ ಅದಾ ಅಡ್ಡೀ ಆಗಿರೋದು. ಸೋಷಲಿಸ್ಟ್ ಪ್ಯಾಟರ್ನ್‌ ಆಫ್‌ ಸೊಸೈಟಿ ಅಂದ್ರಾ ಎಷ್ಟು ಮಂದೀ ತಿಳೀತಾರ?

ಪ್ರಜಾಪ್ರಭುತ್ವ ಅನ್ನೋ ವ್ಯವಸ್ಥಾ ಬಂದ ಮ್ಯಾಗನೂ ಫ್ಯೂಡಲ್ಸೆಟ್ಅಪ್ಛೇಂಜ್ಆಗೇ ಇಲ್ಲ ಅಂತೀರಿ?

ಆಗಿಲ್ಲ. ಆಗಿಲ್ಲ. ಅದೇ ಪಟವಾರೀ, ಅದೇ ಪಾಂಡೇ, ಹಳ್ಳಿಯಾಗೀನ ಈ ಸಿಸ್ಟಂ ಮಾಡ್ಯಾರ. ಚುನಾವ್ ಪದ್ಧತಿ ಆದಮ್ಯಾಲ ಅದ್ರಾಗ ಸ್ವಲ್ಪ ಛೇಂಜ್‌ ಆಗೇತಿ. ಈಗೇನದಾ ಆ ಕಾಸ್ಟ್‌ ಹಿಡ್ಕೊಂಡೀ ಬ್ಯಾಕ್‌ ವರ್ಡ್‌ ಆದ್ರ ಬ್ಯಾಕ್‌ ವರ್ಡಾ ಬರ್ಬೇಕು, ಎಸ್ಸೀ ಆದ್ರಾ ಎಸ್ಸೀನಾ ಬರ್ಬೇಕು. ಹಿಂಗಾ ಏನ್ ಐದ್‌ ಕೆಟಗರೀ ಮಾಡ್ಯಾರ ಈ ಕೆಟಗರೀ ಪ್ರಕಾರ ಗರೀಬ್‌ ಮನ್ಪ್ಯಾಗ ರಿಸರ್ವೇಶನ್‌ ಮಾಡ್ಯಾರೆ. ಅದರಿಂದ ಈ ಜನರಿಗೆ ಸ್ವಲ್ಪ ಅರಿವು ಬಂದದ.

ಮತ್ತು ಫ್ಯೂಡಲ್ಸಿಸ್ಟಂ ನಾಶ ಆಗ್ಬೇಕಂದ್ರ ಯಾವ ಥರದ ಹೋರಾಟ ಆಗ್ಬೇಕು?

ಅದು ನಾಶ ಆಗ್ಬೇಕಾದ್ರೆ… ಲ್ಯಾಂಡ್‌ ರಿಫಾರ್ಮ್‌ ಆಗಬೇಕು. ಲ್ಯಾಂಡ್‌ ರಿಫಾರ್ಮ್‌ ಇಲ್ಲಾ, ಏನಿಲ್ಲ, ಮತ್ತೆಂಗಾಗಬೇಕು. ಮತ್ತಾ ಈ ಅರ್ಬನ್ ಪ್ರಾಪರ್ಟಿ ಏನದಾ ಅದು ಡಿಸ್ಟ್ರಿಬ್ಯೂಟ್‌ ಆಗ್ಬೇಕು. “ಜಮೀನ್ ಬಾಟೋ ಚಾಯ್‌ದಾತ್‌ ಬಾಟೋ” ಇವ್ಯಾನಿಲ್ಲ. ತಕ್ಸೀಮ್‌ (ಉಪದೇಶ) ಮಾಡಾದು. ಮ್ಯಾಲರೇ ಮ್ಯಾಲ ನೀವು ಅದುಮಾಡ್ರಿ, ಸರಕಾರೀ ನೌಕ್ರೀ ಹಚ್ಚೋಳ್ರೀ ಇಷ್ಟಾ ಆಗ್ಲಿಕ್ಕತ್ತೇತಿ. ಖರೇ…. ಅಂದ್ರಾ ಇವತ್ನೂ ಒಬ್ಬೊಬ್ಬ ಮ್ಯಾಲೂ ಒಂದೊಂದು ಸಾವಿರ ಎಕ್ರೀ ಜಮೀನ್ ಅದಾ. ಇವತ್ನೂ ಅದಾ ನಾ ತೋರಿಸ್ತೀನಿ. ಇವತ್ತ ನಮ್ಮಲ್ಲಿ ಇಲ್ಲೀ ಬೊಂತೀನಾಯಕ ಅಂತವನಾ. ಅವನ್ಹ ಎರಡು ಸಾವಿರ ಎಕ್ರೀ ಅದಾ. ಅಂವಾ ಹೆಂಗ ಮಾಡ್ಯಾನ. ಒಂದು ನಾಯಿ ಹೆಸ್ರಮ್ಯಾಲ ಮಾಡ್ಯಾನ. ಒಂದು ಕುರೀ ಹೆಸರ ಮ್ಯಾಲ ಮಾಡ್ಯಾನ. ಒಂದು ದನದ ಹೆಸರ ಮ್ಯಾಲ… ಹಿಂಗಾ ಆ ಜನ ಎಲ್ಲಾ ಅವನ ಕೆಳಾಗ ಇರ್ಬೇಕು. ಉಳುವವನಿಗೆ ಭೂಮಿ ಅನ್ನಾದು ಆಗ್ಲೇ ಕೊಟ್ಟಿಲ್ಲ. ಈ ಸಮಾವಾದೀ ಮೂವ್‌ಮೆಂಟ್‌ ಮಾಡಾ ಮಂದೀನೂ ಎಲ್ಲಾ ಅವ್ರ ಶಿಷ್ಯರೇ. ನಾಯಕರೂ ಅವ್ರಾ ಶಿಷ್ಯರೂ…

ದೇವರಜ ಅರಸು ಜಾರಿಗೆ ತಂದ್ರಲ್ಲ. ಅದ್ರ ಪರಿಣಾಮ ಏನೂ ಆಗಿಲ್ಲೇನು?

ಪರಿಣಾಮ ಆತು. ಚಂದ ಎಫೆಕ್ಟ್‌ ಆಗೇತಿ. ಆದ್ರ ಅಂವ ನೈನ್ತ್‌ ಶೆಡ್ಯೂಲ್‌ ಹಾಕಿಸ್ದಾ. ಜಮೀನು ಯಾರದಾರಾ ಕೊಟ್ರು, ಆ ಮ್ಯಾಲ ಅವ್ರೂ ಅದನ್ನ ಸಡ್ಲು ಮಾಡಿಬಿಟ್ರು. ಕಾನೂನೇನಿತ್ತು ಕ್ಲಾಜ್‌, ಸಬ್‌ಕ್ಲಾಜ್‌ ಹಾಕೀ ಅದನ್ನ ಕಮ್‌ಜೋರ್‌ ಮಾಡಿದ್ರು. ಗೇಣೀದಾರಗ ಏನ್‌ ಮೂಲಕ ಮಾಡಿದ್ರು. ಆ ಮನ್ಷ್ಯಾನ ಹೋಗಿ ಕಬ್ಜಾ ತಗೋತಿದ್ದಾ, ಒಂದೀಸ್‌ ದಿನಾ ಅವಂಗ ಪೋಲೀಸ್‌ ಪ್ರೊಟೆಕ್ಷನ್ ಸಿಗ್ತಿತ್ತು. ಆ ಮ್ಯಾಲೇನದಾ ಪ್ರೊಟೆಕ್ಷನ್ ವಾಪಾಸ್ ತಕ್ಕೊಂಡ್ರು. ನಾನೂ ಎಲ್ಡು ಮೂರು ಕೇಸ್‌ ನೋಡೀನಿ. ಭೂಮೀ ತಗಂಡವ್ರು ಆ ಮ್ಯಾಲ ಆ ಕಡೀ ಹೋಗೇ ಇಲ್ಲ. ಈಗಿಲ್ಲೇ ಅಶೋಕ ಖೇಣಿ ಅಂತದಾನ ನೋಡ್ರೀ, ಇಲ್ಲೀ ಅವ್ರೆಲ್ಲಾ ನಮಗೆಲ್ಲಾ ಕ್ಲೈಂಟ್‌ಗಳು. ಇವ್ರೆಲ್ಲಾ ಏನರಾ ಜಮಾನಾದಿಂದ ಸಮಾಜಕ್ನೂ ಶೋಷಣಾ ಮಾಡಿ ಮಾಡಿ ಶ್ರೀಮಂತ ಆಗಿ ಮುಂದೆಲ್ಲಾ ರೊಕ್ಕ ಮಾಡಿಕೊಂಡು ಶಹರಕ್ಕ ಹೋದ್ರು.

ಅಂದ್ರದು ದೊಡ್ಡ ಶೋಷಕ ಮನೆತನ?

ಶೋಷಕ ಮಂದೀನಾ ಅವ್ರು. ಏನದಾ, ಬಡ್ಡೀ ವ್ಯವಹಾರಾ ಮಾಡಾದು. ಬಡ್ಡೀ ವ್ಯವಹಾರ ಅಲ್ದಾ ಮತ್ತೇನು ವ್ಯವಹಾರ ಅದಾ ಅವರ್ದು? ಬರೇ ಬಡ್ಡೀ ವ್ಯವಹಾರಾನ. ಈಗ ಅದ್ರೊಳಗ ಈ ವೀರಶೈವ ಲಿಂಗಾಯಿತರಿಂದ ಅವ್ರಿಗೆ ಪ್ರೊಟೆಕ್ಷನ್ನು. ಆ ದೃಷ್ಟಿಯಿಂದ ಅವ್ರೆಲ್ಲಾ ಮಾಡಾದು. ಆ ಊರಾಗ ರಂಜೋಳ ಖೇಣಿ ಏನದಾ ಸುತ್ತಾಮುತ್ತಾ ಅವರದಾಭೂಮಿ. ಎಲ್ಲಾ ಫರ್ಟೈಲ್ ಭೂಮಿ ಅವರದಾ ಕಬ್ಜಾದಾಗ ಇರಾಭೂಮಿ. ಜನಾ ಕಲ್ಟಿವೇಟ್‌ ಮಾಡ್ಬೇಕು. ಪುನಃ ಒಯ್ದು ಅವನಿಗಾ ಕೊಡ್ಬೇಕು. ಅದ್ರಿಂದ ಲಾಖೋಂ (ಲಕ್ಷಾಂತರ) ಖಂಡಿಗಳು ಅವರಬಲೇ ಎಲ್ಲಾ. ಧಾನ್ಯ ಅವರಬಲೇ ಹೋಗೋದು, ಜ್ವಾಳಾ ಅವರ ಬಲೆ ಹೋಗೋದು, ಬಡ್ಡೀ ವ್ಯವಹಾರ ಮಾಡಿದ ರೊಕ್ಕಾ ಅವರ ಬಲೇ ಹೋಗೋದು, ಆ ಪ್ರಕಾರ ಅವರ ಮನಿತನ ನಡೀತು. ಅವರ ಕಡೇಗಾ ಎಲ್ಲಾ ನಮ್ಮ ದೋಸ್ತಗಳಾ ಇದ್ರು. ನರೇಂದ್ರ ಖೇಣಿ ಅಂತಿದ್ದಾ, ಮತ್ತಾ… ಯಾರು ಯಾರೋ ಇದ್ರು.

ಅಂದಾಜು ಎಷ್ಟಿರಬಹುದು ಅವರ ಆಸ್ತೀ?

ಈಗೆಲ್ಲಾ ಕಮ್‌ (ಕಡಿಮೆ) ಮಾಡ್ಯಾರ ಅವ್ರು.

ಅವಾಗ, ನಿಮಗ ಗೊತ್ತಿದ್ದಂಗ ಅಂದಾಜು…?

ಅಂದಾಜು ಒಂದೈದು ಸಾವಿರ ಎಕ್ರೀ ಇತ್ತು.

ಅಂಥಾ ಭೂಮಾಲಿಕರ ವಿರುದ್ಧ ನೀವೊಂದು ಹೋರಾಟ ಮಾಡ್ಬೇಕು ಅಂತಾ ಅನ್ನಿಸ್ಲಿಲ್ಲೇನು?

ಮಾಡಿದ್ವೆಲ್ಲ. ಮಾಡಿದ್ವಿ. ಭೂಮಿಮುಕ್ತಿ ಆಂದೋಲನ ಅಂತಾ ೧೯೭೪ – ೭೫ ಆಗ ಅದೆಲ್ಲಾ ಮಾಡಿದ್ಮ್ಯಾಕೇ ಅವ್ರೆಲ್ಲಾ ಬಿಟ್ಟು ಕೊಟ್ರು. ಮಾಡಿಲ್ಲಂತಿಲ್ಲ. ಆ ಮ್ಯಾಲ ಹಿಂದಿನಿಂದ ಏನು ಮಾಡಿದ್ರು ನರೇಂದ್ರ ಖೇಣಿ ಸ್ವತಃ ಅವರೇ ಎಂ.ಎಲ್ಸಿ. ಆದ್ರು. ಅವರೇ ಬಂದು ಕುಂತ್ರು. ಭಾಳಾ ಜಮೀನು ಮಾರ್ಕೊಂಡು, ರೊಕ್ಕ ಇಟ್ಕೊಂಡ್ರು. ಆಮ್ಯಾಲ ಟ್ರಿಬ್ಯೂನಲ್‌ ಬಂತು. ಆದ್ರೂನೂ ಅವ್ರದ್ದು ಇನ್ನೂ ಅದಾ. ಆ ಬೆಂಗಳೂರು – ಮೈಸರೂ ಕಾರಿಡಾರ್‌ ಏನದಾ ಅವರಪ್ಪನ ರೊಕ್ಕಲೇ ಇವ್ನು ಇದನ್ನೆಲ್ಲಾ ಮಾಡ್ಲಿಕ್ಕತ್ಯಾನು.

ಭೂಮಿ ಮುಕ್ತಿ ಆಂದೋಲನ ಎಲ್ಲೆಲ್ಲೆ ನಡೀತು?

ಬೀದರ್‌ ಜಿಲ್ಲಾ ಅಂತಿತ್ತು. ಅದೇ ಹಳ್ಳಿಗಳು. ಅಂದ್ರ ನೆಲವಾಡ, ಅಂತಾ ಊರದ, ಅಲ್ಲಿ ಹರಿಜನರಿಗೆ ಭೂಮಿ ಕೊಡಿಸಿದ್ವೀ ಇವತ್ತಿಗೂ ಅಲ್ಲಿದರಾ ಆ ಜನಾ… ಮುಂದೆ ಥೋಡೆ ಮರಾಠ ಮಂದೀ ಸಿಕ್ತು. ಅಲ್ಲಿಂದು ಥೋಡೇ ಜಾಗ ಅವ್ರೂ ಕಬ್ಜಾ ಮಾಡ್ಕಂಡ್ರು. ಹಿಂಗೆಲ್ಲಾ ಫಾಯದಾ ಆಗೆದಾ, ಫಾಯೆದ ಆಗಿಲ್ಲ ಅಂತಿಲ್ಲ. ಆದ್ರ ಅದು ಏನ್‌ ಪ್ರಕಾರ ಎಷ್ಟು ಎಫೆಕ್ಟಿವ್‌ ಆಗ್ಬೇಕಿತ್ತು ಅಷ್ಟು ಆಗಿಲ್ಲ.

ಅಂದಾಜು ಎಷ್ಟು ಎಕರೆ ಭೂಮಿ ನಿಮ್ ಹೋರಾಟದಿಂದ ರೈತರಿಗೆ ಸಿಕ್ಕಿರಬಹುದು?

ಹಂಡ್ರಡ್‌ ಅಂಡ್‌ ಫಿಪ್ಟೀ ಎಕರ್ಸ್. ಅಷ್ಟೇ ಅದಕ್ಕೂ ಹೆಚ್ಚೇನಾಗಿಲ್ಲ.

ಅಂದ್ರೆ ಅರಸು ಬಂದು, ಸಮಾಜವಾದಿಗಳ ಆಶಯ ಈಡೇರಿಸಿದ. ಹೀಗಾಗಿ ಜನ ಅವನ ಹಿಂದ ಹೋದರು ಅಂತೀರಾ?

ಹೋದ್ರಲ್ಲ ಜನಾ ಏನು. ಈ ನಮ್ಮ ಜನಾನೂ ಹೋದ್ರಲ್ಲ. ಎಲ್ಲಾ ಕಾಂಗ್ರೆಸ್ಸಿಗೆ ನಮ್ಮ ಲೀಡರ್ಸೆಲ್ಲಾ ಹೋದ್ರು.

ಯಾರ್ಯಾರು ಹೋದ್ರು?

ಹೋದ್ರಲ್ಲ, ಮೂವ್‌ಮೆಂಟ್‌ ಮಾಡೋರು ಹೋದ್ರು, ಅಶೋಕ್‌ ಮೆಹ್ತಾ ಹೋದ್ರು, ಅವನ ಜೋತೇಲಿ ಎಷ್ಟೊಂದು ಮಂದೀ ಹೋದ್ರು. ಅದ್ರಿಂದ್ಲೇ ಎಲ್ಲಾ ಹಾಳಯ್ತು. ಮತ್ತಾ ಇಲ್ಲಿ ಒಬ್ಬಾ ಇದ್ದ. ಭೀಮಣ್ಣ ಖಂಡ್ರೆ ಅಂತಾ ಭಾಳಾ ದೊಡ್ಡ ಸಮಾಜವಾದಿ ಇದ್ದ. ಆ ಹೊತ್ತೀಗೆಲ್ಲ ಅವ್ನೂ ಹೋದ. ಆ ಮ್ಯಾಲ ಈ ಖೇಣಿ ಅವ್ರೆಲ್ಲ ಕಾಂಗ್ರೆಸ್ಸಿಗೆ ಕಂಟೆಸ್ಟ್‌ ಮಾಡಿದ್ರು, ಅಲ್ಲಿಂದು ನೋಡ್ರೀ ಹೈದ್ರಾಬಾದ್‌ನ್ಯಾಗ ಭಾಳಾ ದೊಡ್ಡ ಲೀಡರ್‌ ಇದ್ದ. ಅವ್ನೂ ಹೋದ ಹಿಂಗೆಲ್ಲಾ

ಯಾಕೆ ಅವ್ರೆಲ್ಲಾ ಸಮಾಜವಾದಿ ಪಾರ್ಟಿ ಮ್ಯಾಲ ವಿಶ್ವಾಸ ಕಳ್ಕೊಂಡ್ರು?

ಅದೇ, ಸಕ್ಸಸ್‌ ಆಗಲ್ಲ ಅಂತಾ ಹೋದ್ರು. ಜನ್ರು ಓಟೇ ಕೊಡ್ತಿದ್ದಿಲ್ಲ. ಇವ್ರಿಗೆ.

ಅಂದ್ರೆ ಓಟ್ಪಾಟಿಟಿಕ್ಸ್ಮುಖ್ಯ ಅನ್ನಂಗಾತಲ್ಲ?

ಹಂಗೇ ಆತಲ್ಲ ಮತ್ತಾ.

ಆದ್ರೆ ಲೋಹಿಯಾ ಯಾವತ್ತರ ಹಂಗ ಅಂದ್ಕೊಂಡಿದ್ರಾ?

ಲೋಹಿಯಾನ ಮಾತು ಖರೇ. ಆದ್ರ ಸ್ವಾತಂತ್ರ್ಯ ಬಂದಿದ್ಮ್ಯಿಕ ವೋಟ್‌ ಪಾಲಿಟಿಕ್ಸ್‌ ಹೆಚ್ಚಾತ. ಯಾರು ಹೆಚ್ಚು ಓಟ್‌ ತಗಂತಿದ್ರು ಅವ್ರಾ ಮುಂದ ಪಾರ್ಲಿಮೆಂಟಿನ್ಯಾಗ, ಅಸೆಂಬ್ಲಿಯಾಗ ಸೀಟ್‌ ತಗಂತಿದ್ರು, ಅವರ್ದೇ ಎಲ್ಲಾ ವಿಧಾನಮಂಡಲ ನಡೀತಿದ್ವು. ಇಲ್ಲಂದ್ರ ಅವರ ವ್ಯವಹಾರ ಎಲ್ಲ ಹ್ಯಾಂಗೆ ನಡೀಬೇಕು… ಹಿಂಗೆಲ್ಲಾ.

ಅನುಭವ ನೋಡಿದ್ರೆ ಓಟು ಪಾಲಿಟಿಕ್ಸು, ನಾವು ಅಂದ್ಕೊಂಡ ಸಮಾಜವಾದೀ ಸಮಾಜ ತರೋದಕ್ಕ ಅಡ್ಡೀ ಆಗ್ತದೆ. ಅಂತಾ ಅನಿಸೋದಿಲ್ವಾ?

ಬಿಲ್‌ ಕುಲ್‌ (ಖಂಡಿತ) ಅಡ್ಡೀ ಆಗ್ತದೆ. ಈ ಪಾಲಿಟಿಕ್ಸ್ ನ್ಯಾಗ ಸಮಾನ ವ್ಯವಸ್ಥೆ ಬರಾದಿಲ್ಲ. ಯಾಕಂದ್ರ ಈ ಓಟ್‌ ಪಾಲಿಟಿಕ್ಸ್‌ ನ್ಯಾಗ, ಈ ಜಾತಿ ಬರೋದು, ಶ್ರೀಮಂತಿಕೆ ಬರಾದು, ಹಿಂಗೆಲ್ಲ ಶ್ರೀಮಂತಿಕೆ ಇದ್ರೇನಾ ಮುಂದೆ ಹೋಗಿ ಮತ್ತ ರೊಕ್ಕ ಮಾಡಾದು. ಹಿಂಗೆಲ್ಲಾ ಆಗೇದಲ್ಲ.

ಹಿಂಗಂದ್ರೆ ಮತ್ತ ಪಾರ್ಲಿಮೆಂಟರಿ ಸಿಸ್ಟಂನ್ಯಾಗ ವಿಶ್ವಾಸ ಕಳ್ಕೋಬೇಕಾ?

ಪಾರ್ಲಿಮೆಂಟರಿ ಸಿಸ್ಟಂದಾಗ ಎಲ್ಲಾದೂ ಸರಿ ಅದಾ ಅಂತಾ ಹೇಳಾನಿಲ್ಲ. ಆದ್ರ ಅದಕ್ಕ ಬೆಟರ್ಸಿಸ್ಟಂ ಯಾವ್ದೂ ಇಲ್ಲ ಈಗ. ಅದಕ್ಕಾ ಒಂದು ಬೆಟರ್‌ ಸಿಸ್ಟಂ ಇದ್ರ ತಗೊಳ್ತಿದ್ವಿ. ಅದಕ್ಕಾ ಈ ಸಿಸ್ಟಂಕಾ ಬೆಟರ್‌ ಮಾಡೋನು ಅಂತಾ ಇದನ್ನ ತಗೋಂಡಿದ್ದು.

 

 

ಇನ್ನು ಕೆಲವು ವಾದ ಅದಾವು. ಪಾರ್ಲಿಮೆಂಟರಿ ಸಿಸ್ಟಂ, ಫ್ಯೂಡಲ್ಸ್ಮತ್ತು ಕ್ಯಾಪಿಟಲಿಸ್ಟಗಳ ಫೋರಂ ಆಗ್ತದೆ. ಹಂಗಾಗಿ ಸಿಸ್ಟಂ ಸ್ಟ್ರಗಲ್ನಿಂದ ಸೋಶಿಯಲ್ಛೇಂಜ್ಮಾಡ್ಬೇಕು. ಅಂತಾ…?

ಹೌದು… ಸೋಶಿಯಲ್‌ ಛೇಂಜ್‌ ಮಾಡಾನಂತ ಮೂವ್‌ಮೆಂಟ್‌ನಡಿಸ್ತೀರಿ. ಛೇಂಜ್‌ ಮಾಡ್ತೀರಿ ಖರೆ, ಮುಂದೆ ಹೋಗಾಣ ಏನಾಗತ್ತ? ನೀವು ಪಾರ್ಲಿಮೆಂಟರಿ ಇದಕ್ಕಾ ಬರ್ಬೇಕಲ್ಲ.

ಪಾರ್ಲಿಮೆಂಟರಿ ಬ್ಯಾಡ ಅಂತಾಮಾವೋವಾದಿಗಳು ಅನ್ನಾಕತ್ಯಾರಲ್ಲ ಅದನ್ನ?

ಠೀಕ್‌ (ಸರಿ) ಅದಾ. ಆದ್ರಾ ಅದರ ಪರಿಣಾಮ ಏನದಾ, ನೀವು ನಕ್ಸಲ್ ವಿಚಾರ ಹೋರಾಟದ ಬಗ್ಗೆ ಏನ್ಹೇಳ್ತೀರಿ ಅದರ ಸಿಸ್ಟಮ್ಮೇ ಇಷ್ಟದ. ಅದು ಒಬ್ಬನಿಗೆ ವೈಪ್‌ಔಟ್‌ ಮಾಡೋದು.

ವೈಪ್ ಔಟ್ಹೌದು. ಆದ್ರ ಯಾರಿಗೆ?

ಯಾವನು ವಿರೋಧ ಅದಾನಾ ಅವನಿಗೆ.

ಅಂದ್ರ ಎನಿಮಿಗೆ, ಫ್ಯೂಡಲ್ಗೆ?

ಹಿಂಗ ಎನಿಮೀ ಯಾರ್ಯರ ಆಗಬಹ್ದು, ಫ್ಯೂಡಲ್‌ಗೆ ಅಷ್ಟಾ ವೈಪ್‌ಔಟ್‌ ಮಾಡ್ತಾರ ಅಂತಾ ಏನದ. ಯಾವನು ವಿರೋಧ ಅದಾನ ಅವನಿಗೂ ಮಾಡ್ತಾರ. ಮಾಡಲ್ಲ ಅಂತಾ ಏನದ? ಇದ್ರಿಂದ ಮುಂದೇನು ಪರಿಣಾಮ ಆಗ್ತದ. ಇದರಲ್ಲಿ ‘ಸಲ್ಯೂಶನ್‌’ ಏನದೆ ಅದು ಆಗಾದಿಲ್ಲ. ಈ ಕಡೇಂದ ನಾವೂ ನಕ್ಸಲೈಟ್‌ ಆಗ್ತಿದ್ವಿ. ಆಗಲ್ಲ ಅಂತಾ ಏನಲ್ಲ. ನಾವು ಆಗ್ಲಿಲ್ಲ. ಬ್ಲಡ್‌ ರೆವಲ್ಯೂಷನ್‌ ಕಾ ನಾವ್ಯಾಕ ವಿಶ್ವಾಸ ಮಾಡ್ಲಿಲ್ಲಂದ್ರ ಮುಂದ ಹೋಗ್ತಾ… ಏನಾಗ್ತದ ಒಬ್ಬನಿಗೊಬ್ಬನಿಗೆ ಕುತ್ಗೀ ಹೊಡೆಯೋದು ಬಿಟ್ರೆ ಮತ್ತೇನಾಗಾ ನಿಲ್ಲ. ಅದಕ್ಕ ನಾವು ಅದ್ರಮ್ಯಾಲ ವಿಶ್ವಾಸ ಮಾಡಿಲ್ಲ. ಖರೇನಂದ್ರ ನಿಮ್ಮ ಮುಂದೆ ನಾಳೆ ಯಾಂವ ಅನಾ? ಯಾಂವ ಅಪೋನೆಂಟ್‌ ಅನಾ ಅವನಿಗೂ ನೀವು ಹೊಡೀಬಹ್ದು. ಅದ್ರೊಳಗ ಇದಕ್ಕ ಜಸ್ಟಿಫಿಕೇಶನ್‌ ಏನ್‌ ಮಾಡ್ತೀರಿ? ಹಿಂಗಾ ಜಸ್ಟಿಫಿಕೇಶನ್‌ ಪ್ರಶ್ನೀ ಬರ್ತದ. ಖರೇ ವಾಯಲೆನ್ಸಿ ನ್ಯಾಗ ಜಸ್ಟೀಸ್‌ ನೀತಿ ಏನಿಲ್ಲಲ್ಲ. ಅದ್ರಿಂದ ಯಾವಾಗ ಹೆಂಗ ಆಗ್ತದೆ ಹೇಳಾಕಾಗಾನಿಲ್ಲ. ಮುಂದೆ ನಕ್ಸಲಿಸಂ ಬೆಳೀತಾ ಬೇಳಿತಾ ತಮ್ಮ ತಮ್ಮೊಳಗಾ ಹೊಡ್ಕಾಳಾಕ ಶುರು ಆಗ್ತಾರ.

ಅಂಥಾ ವಾಯಲೆನ್ಸ್ಬಿಟ್ಟು, ಪಾರ್ಲಿಮೆಂಟರಿ ಸಿಸ್ಟಂನೊಳಗಾ ಕಮ್ಯುನಿಸಂ ತರ್ಬೇಕು ಅನ್ನೋ ಪಾರ್ಟಿಗಳದಾವಲ್ಲ. ಅವುಗಳ ಬಗ್ಗೆ ಏನೇಳ್ತೀರಿ?

ಅದ್ರಾಗ ಏನ್‌ ಆಗ್ಲಿಕತ್ತ್ಯಾದ. ಸಿ.ಪಿ.ಐ., ಸಿ.ಪಿ.ಎಂ. ಇದ್ರಾಗ, ಯಾವನು ಅಧಿಕಾರದಾಗ ಬರ್ತಾನ, ಅವಂಗ ಫೆಸಿಲಿಟಿ ಸಿಗ್ತಾವ. ನೌಕರಿಗೋಳು ಅವಂಗ ಬರ್ತಾವ. ರೇಷನ್‌ಗಳು ಏನವ ಪಹಲೆ ಅವನಿಗೆ ಹೋಗ್ತದ.

ಅಂಥಾ ಉದಾಹರಣೇ ಇದ್ದಾವ?

ಅವಾ, ಅವಾ, ಮತ್ತಾ ರಷ್ಯಾದಾ ಸರ್ಕಾರ ಯಾಕ ಬಿತ್ತು? ರಷ್ಯಾದಾಗ ಸರ್ಕಾರ ಭೀಳಾಕ ಹೆಚ್ಚು ಕಡಿಮೆ ಕಾರಣಾನಾ ಇದು.

ಅಂದ್ರೆ ಪವರ್ಸಿಕ್ರೆ ಕರಪ್ಟ್ಆಗ್ತಾನ ಅಂತೀರಾ?

ಕರಪ್ಟ್‌ ಆಗ್ತಾನ, ಫೆಸಿಲಿಟೀಸ್‌ ಎಲ್ಲಾ ಅವನವು ಆಗ್ತಾವ.

ಹಂಗೇನರಾ ಆಗಿದ್ರಾ, ವೆಸ್ಟ್ಬೆಂಗಾಲದಾಗ ೨೯ ವರ್ಷ ಕಂಟಿನ್ಯೂ ಆಗಿ ಸರ್ಕಾರ ಇರಾಕ ಆಗ್ತಿರಲಿಲ್ಲೇನೂ ಅನಿಸ್ತದೆ?

ಬಸು ಏನಿದ್ದ, ಅಂವ ಒಂದು ಪ್ರಕಾರ ಸಿಸ್ಟಮೆಟಿಕ್‌ ಆಗಿ ಇಟ್ಕಂಡು ನಡಸ್ಯಾನ. ಆದರ ಅವನ ಮಗಾನಾ ಕ್ಯಾಪಿಟಲಿಸ್ಟ್‌ ಅದಾನ. ಒಪ್ಪಲ್ಲಾ ಅಂತಾಲ್ಲ. ಒಪ್ತೀನಿ ಅದನ್ನಾ. ಆದ್ರ ಪೂರ್ಣಲ್ಲ. ಅಲ್ಲಿ ಪೈಂತೀಸ್‌ ವರ್ಷಾ ಸರಕಾರ ಇರಲಾಗೀನೂ ಅಲ್ಲಿ ಪಾವರ್ಟಿ ಹೋಗಿಲ್ಲ.

ಪಾವರ್ಟಿ ಹೋಗೇ ಇಲ್ಲ ಅಂತೀರಾ?

ಎಲ್ಲದ ಬಡತನ ಅದಾ ಬಿಕ್ಷಾ ಬೇಡ್ತೀರತಾವ ಮಂದೀ. ಇದೆಲ್ಲಾ ಹೋಗಬೇಕಿತ್ತಲ್ಲಾ.

ಆದ್ರೆ ಬೇರೆ ರಾಜಕೀಯ ಸಿದ್ಧಾಂತಗಳಿಗೆ ಹೋಲಿಸಿದ್ರೆ ಏನನ್ನಿಸ್ತದೆ?

ಅದಕ್ಕ ನಾವು ಒಪ್ತೀವಲ್ಲ. ಕಮ್ಯುನಿಸಂ ಬಂದ್ರೆನು ತಪ್ಪಿಲ್ಲ ಅಂತಾ.

ನೀವುಸಮಾಜವಾದಚಟುವಟಿಕೆಗಳನ್ನು ಮಾಡೋವಾಗ ಸ್ಥಳೀಯ ಕಮ್ಯುನಿಸ್ಟರ ಜೊತೆ ನಿಮ್ಮ ಸಂಬಂಧ ಹ್ಯಾಗಿತ್ತು?

ಚೆನ್ನಾಗಿತ್ತು. ಹೋಯಿತ್ತಿದ್ದೆವು. ಬರ್ತಿದ್ದೆವು. ಮೂವ್‌ಮೆಂಟ್‌ ಮಾಡ್ತಿದ್ದೆವು. ಸುಂದರ ರಾಜ್‌ ಅಂತಾ ಇದ್ರು, ಸಂಗ್ರಾಮ ಅಂತ ತಿಳ್ಕೊಂಡು ಬರ್ತಿದ್ರು, ಅದೆಲ್ಲಾ ಛಂದಿತ್ತು. ನಮ್ಗೆಲ್ಲ ಇದು ಇತ್ತು. ಆದ್ರೂ ಮುಂದ್ಹೋಗಿ ಅನೇಕ್ರು ಈಗ ಅವ್ರಿಗೂ ರಿವಿಸನಿಸಂ ಶುರು ಆಯ್ತು. ಹಾಗಾಗಿ ಅಂತೇ ಒಡೆದು ಹೋಯ್ತು. ಕಮ್ಯುನಿಸ್ಟ್‌ ಪಕ್ಷ ಕಡಿ ಮುಟ್ಟಿದೆ ಅವ್ರೂನೂ.

ಅದನ್ನ ಐಡಿಯಾಲಜಿಕಲ್ಪ್ರಾಬ್ಲಂ ಅಂತ ಗುರ್ತಿಸ್ತೀರೋ ಅಥವಾ ಫಂಕ್ಷನಿಂಗ್ ಪ್ರಾಬ್ಲಂ ಅಂತಾ ಗುರ್ತಿಸ್ತೀರೋ?

ಐಡಿಯಾಲಿಸ್ಟಿಕ್‌ ಆದದ್ರೆ ಏನೂ ಪ್ರಶ್ನೆ ಇದ್ದಿಲ್ಲ. ಫಂಕ್ಷನಿಂಗ್‌ದ್ರಾಗ ಬಂದು ಇದಾಯ್ತು. ಈಗ ಅವರೇನ್ಮಾಡಿದ್ರು ಫಂಕ್ಷನಿಂಗ್‌ದ್ರಾಗ ಊರಾಗ್ಬಂದು, ಒಂದಕ್ಕೊಂದು ತಗಲ್ಮಾಡಿದ್ರು. ಹಳ್ಳಿ ಒಳಗ, ಒಂದು ಸ್ಮಾಲ್‌ ಊರು, ಯಾವುದು ಈ ಜೌರಾದ್‌ ಹತ್ರ. ಅಲ್ಲಿ ಒಂದ್ನಾಕೈದು ಹಳ್ಳಿ, ಅವಾರಿ, ಮರಾಠ ಊರು ವಗೈರ. ಅಲ್ಲಿ ಅದೇ ಆಗಿ ಝಗಡ (ಜಗಳ) ಶುರುವಾಯ್ತು. ಆಗಿ ಅದು ಒಬ್ರಿಗೊಬ್ರು ಕೊಲೆ ಆಯ್ತು.

ಯಾರ್ಯಾರ ನಡುವೆ ಅದು ಜಗಳ ಆಗಿದ್ದು?

ಅದೇ ಇವರು ಕಾರ್ಯಕರ್ತರ ನಡುವೆ, ಅಲ್ಲಿಂದು ಸುಂದಾಳಂತ ಊರ ಅದೆ. ಅಲ್ಲಿ ಜನರ ತಗಿಯಾರು. ಮುಂದ ಹೋಗಿ ಸುಂದಾಳದಾಗಲಾನೂ ಥೋಡಿ (ಕೆಲವು) ದಿವ್ಸ ಕೆಲ್ಸ ಮಾಡಿದ್ರು. ಥೋಡಿ ಮೂವ್‌ಮೆಂಟ್‌ ನಡೀತು. ಈ ಪ್ರಕಾರ ಆಯಿತು.

ಬೀದರ್ಜಿಲ್ಲೆಯಲ್ಲಿ ಹೇಳಿಕೊಳ್ಳುವಷ್ಟು ಕಮ್ಯುನಿಸ್ಟ್ಮೂವ್ಮೆಂಟ್ಬಂತಾ?

ಅಷ್ಟು ಬಂದಿಲ್ರೀ ಎಲೆಕ್ಷನ್‌ ಬರಾನ ಓಟಿಂಗ್‌ ಅಷ್ಟು ಮಾಡ್ತಿದ್ರು. ಆದ್ರೇನ್‌ ಅವರ್ದು ಇಲ್ಲಿ ಲ್ಯಾಂಡೆಡ್‌ ಪೀಸಂಟ್ರೀ ಇತ್ತು. ಜನ ದೊಡ್ಡೋರು ಎಲ್ಲ ಅವರ್ಜೊತೆ ಇರ್ತಿದ್ರು. ಹುಮ್ನಾಬಾದ್‌ ಪಟೇಲ್‌ ಇದ್ದಾಗ ಓಟಲ್ಲೇ ಹಾಕಿಸ್ತಿದ್ರು. ಇವರೆಲ್ಲಾ ಮಾಡೇ ಅಷ್ಟು ಓಟಿಂಗ್‌ ಮಾಡಿದ್ರು. ಒಂದು ಮೂಮೆಂಟರಿಯಾಗಿ ಮಾಡ್ಲಿಲ್ಲ.

ಯಾಕೆ ಇಲ್ಲಿ ನಿಮ್ಮಂಥವರಿದ್ದೂ ಸೋಷಲಿಸ್ಟ್ಮೂವ್ಮೆಂಟ್ಕಟ್ಟಾಕ್ಕಗ್ಲಿಲ್ಲ. ಮತ್ತು ಅವ್ರಿಗೂ ಕಮ್ಯುನಿಸ್ಟ್ಮೂವ್ಮೆಂಟ್ಕಟ್ಟಾಕಾಗ್ಲಿಲ್ಲ. ಯಾಕೆಐಡಿಯಾಲಜಿಬೇಸ್ಡ್ಪಾರ್ಟಿಗಳನ್ನ ಕಟ್ಟಾಕ್ಕಾಗ್ಲಿಲ್ಲ?

ಹೇಸಿ ಏನೈತಿ ಇಲ್ಲಿ. ಕಾಸ್ಟ್‌ ವೀರಶೈವ ಲಿಂಗಾಯಿತರು. ನಾವಾದ್ರೂ ವೀರಶೈವದಿಂದ ಬಂದವರಿದ್ದೀವಿ. ಇವರು ವಿ.ಎನ್‌. ಪಾಟೀಲ್‌ ಆದ್ರೂನೂ ಲಿಂಗಾಯ್ತರೇ. ಮತ್ತು ಲಿಂಗಾಯ್ತು ಜನ ಅವ್ರಿಗೆ ಓಟು ಕೊಟ್ಟಿರೋದು. ಎಲ್ಲಿ ಆಮೂಲಾಗ್ರ ಛೇಂಜ್‌ ಮಾಡ್ಲಿಕ್ಕಾಗಿಲ್ಲ.

ಸಿದ್ಧಾಂತ ಅನ್ನೋದು ಜಾತಿವ್ಯವಸ್ಥೆ ಮನಸ್ಥಿತಿಯನ್ನ ಹೋಗಲಾಡಿಸುವಾ ಕೆಲಸ ಮಾಡ್ಬೇಕಿತ್ತು?

ಮಾಡ್ಬೇಕಿತ್ತು. ಮಾಡಿಲ್ಲದು. ಮಾಡಿಲ್ಲ ಅವರ್ಯಾರೂ. ತತ್ಪೂರ್ತಿಕ ಅಷ್ಟು ಪೂರ್ತೆಕ ನೋಡಿದ್ರು. ಈ ಕ್ಯಾಸ್ಟ್ ದು ಅಷ್ಟು ಸೀವಿಯರ್‌ ಅದೆ. ಎಲ್ಲ ಹಾಳ್ಮಾಡಿದ್ರು.

ಕ್ಲಾಸ್ಸಿಸ್ಟಂ ಛೇಂಜ್ಆದ್ರೆ ಅದರ ಗುಂಟ ಕ್ಯಾಸ್ಟ್ಸಿಸ್ಟಮ್ಛೇಂಜ್ಆಗ್ತದೆ ಅನ್ನೋ ವಾದಕ್ಕ ಏನಂತೀರಿ?

ಕ್ಲಾಸ್ ಛೇಂಜ್‌ ಆಗಬಹುದು. ಕ್ಯಾಸ್ಟ್‌ ಆಗಲ್ಲ. ಕ್ಲಾಸ್‌ ಏನದೆ, ಇಟ್‌ ಈಸ್‌ ಕ್ವಶ್ಯನ್‌ ಆಫ್‌ ದಿ ಡಿಗ್ರೀ. ಥೋಡೆ ಗ್ರೂಪ್‌ ಇದಾಗಿ ಕ್ಲಾಸ್‌ ಆಗಿ ಈಗ ಶ್ರೀಮಂತ ಆಗಿ ಈ ಕ್ಯಾಸ್ಟ್‌ ಹೋಗಬೇಕಂದ್ರೆ ಅದು ಭಾಳಾ ದಿವ್ಸ ಬೇಕು. ಅದು ಮೋರ್‌ ಸೀವಿಯರ್ ದ್ಯಾನ್‌ ಕ್ಲಾಸ್‌.

ಭಾಗದಲ್ಲಿ ಭೂಮಾಲಕಶಾಹಿ ಇರೋದು ಯಾವ್ ಜಾತಿಯಲ್ಲಿ?

ಲಿಂಗಾಯಿಟ್ಸ್‌ ಕಮ್ಯೂನಿಟೀನೇ ಲ್ಯಾಂಡ್‌ ಲಾರ್ಡ್‌ ಕಮ್ಯುನಿಟಿ.

ಹಾಗೆ ನೋಡಿದ್ರೆ, ಬಸವ ಚಳವಳಿ ನಡೆದ ಪ್ರದೇಶ ಇದು, ಉತ್ತರ ಕರ್ನಾಟಕ, ಬಸವಣ್ಣನವರ ವಿಚಾರಗಳು ಪೂರ್ಣ ಪ್ರಮಾಣದಲಿಂಗಾಯಿತರಮೇಲೆ ಪ್ರಭಾವ ಬೀರಲಿಲ್ವಾ?

ಈಗ ನೋಡ್ರೀ ಅವರು ಬಸವಣ್ಣ ಅಂದ್ರು ಹೊಂಟೋದ್ರು, ಮುಂದೇನಾಗ್ಯದೇ… ಅದೇ ಪುನಃ ಜಾತಿವಾದಿ ಆಗದಾಗ್ಲೀ ವೋಟಿಂಗ್‌ ಈ ಎಲ್ಲ ಅದ್ರಿಂದೇನ್‌ ಛೇಂಜ್‌ ಆಗಿಲ್ಲ. ಪರಿಸ್ಥಿತಿ ಈಗ ಅಪಾಯಿಂಟ್‌ಮೆಂಟ್‌ ಆಗಾದೂ ಅದರ್ಮೇಲೇ ಐತಿ, ನೌಕರಿ ಸಿಗಾದೂ ಅದರ್ಮೇಲೇ ಐತಿ, ಈ ಪ್ರಕಾರ ಕ್ಯಾಸ್ಟ್‌ ಸಿಸ್ಟಂ ಆಗ್ಯದ.

ಬೀದರ್‌, ಬಸವ ಕಲ್ಯಾಣ ಇವೆಲ್ಲಾ ಬರೀ ಲಿಂಗಾಯತ ಏನಲ್ಲ?

ಮರಾಠಾನೂ ಸ್ಟ್ರಾಂಗ್‌ ಅದಾ ಇಲ್ಲಿ. ಆ ಪ್ರಕಾರ ಒಂದೇ ಇದರ್ಮ್ಯಾಲೆ ಹೋಗೋವಂಥ ಜನ ಇಲ್ಲ. ಬಸವೇಶ್ವರನ ಎಷ್ಟು ಮಂದಿ ಫಾಲೋಯರ್ಸ್‌ ಅದಾರ. ಅಷ್ಟೇ ಈ ಮರಾಠದಾರು. ಸಂತ ತುಕಾರಾಂ, ನಾಮದೇವ, ಎಲ್ಲ ಅವರು ಅದನ್ನ ಫಾಲೋ ಮಾಡ್ತಾರ.

ಮರಾಠ ಇದ್ದ್ರಿಂದ ಬಾಂಡೆಡ್‌ ಪೆಸೆಂಟ್ರೀ ಇದೆ ಇಲ್ಲಿ. ಇಲ್ಲಿ ಭಾಷಾವರು ಪ್ರಾಂತ ರಚನೆ ಮೂವ್‌ಮೆಂಟ್‌ ನಡೀತು. ಹಾಗಾಗಿ ಅವರು ಏನ್ಮಾಡಿದ್ರು ಈ ಮಂದಿ ನಾವ್‌ ಮಹಾರಾಷ್ಟ್ರದಾಗ ಹೋಗ್ತೀವಂತ ಥೋಡೆ ಮಂದಿ ಇದು ಮಾಡಿದ್ರು. ಎಷ್ಟು ಬಸವೇಶ್ವರನ ಫಾಲೋಯರ್ಸ್‌ ಇದ್ರು ಅವರು ಅಷ್ಟೇನೂ ರಿಜಿಡ್‌ ಇರ್ಲಿಲ್ಲ. ಆದ್ರೆ ಈ ಮರಾಠ ಮಂದಿ ಏನದ ಹೆಚ್ಚು ರಿಜಿಡ್‌. ಎಲ್ಲಕ್ಕಿಂತ ಹೆಚ್ಚು ಭೂಮಿ ಅವರ ಬಳಿ ಇತ್ತು. ಮರಾಠ ಮಂದಿ ಬಲ್ಲಿ.

ಹೆಚ್ಚು ಭೂಮಿ ಇರಾದು ಮರಾಠಿ ಸಮುದಾಯದಲ್ಲಿನಾ?

ಹಾಂ. ಅವರ ವಿರುದ್ಧ ಯಾರೂ ಮೂವ್‌ಮೆಂಟ್‌ ಮಾಡ್ಲಿಲ್ಲ ಇಲ್ಲಿ. ಅವರ ಮ್ಯಾಲೆ ಯಾವ ಪರಿಣಾಮಗಳೂ ಆಗಿಲ್ಲ. ಲ್ಯಾಂಡ್‌ ರಿಫಾರ್ಮ್‌ನ ಮೂವ್‌ಮೆಂಟ್‌ದಾಗ ಭೂಮಿನ್ನೂ ಹಂಚಿಕೆ ಆಗಿಲ್ಲ.

ಒಟ್ಟಾರೆ ಸಮಾಜವಾದ ಜಾರಿಗೆ ಏನಡ್ಡಿ ಇದೆ ಅಂತೀರಿ ಇಂಡಿಯಾದಲ್ಲಿ?

ಕ್ಯಾಸ್ಟೇ. ಸಮಾಜವಾದ ಫೇಲ್‌ ಆಗೋದಿಕ್ಕೂ ಅದೇ ಕಾರಣ. ಇದು ಎಲ್ಲಿ ಎಂಟ್ರೀ ಆಗ್ತದೋ ಐಡಿಯಾಲಜಿ ಬಿದ್ದೋಗ್ಬಿಡ್ತದೆ. ಜನರೂ ಇದು ಮಾಡ್ಕೊಂಡಿಲ್ಲ ಡ್ಯೂಟು ದಿಸ್‌ ಕ್ಯಾಸ್ಟ್‌

ಜಾತಿ ಅಡ್ಡ ಗೋಡೆ ಒಡೆಯೋದು ಹೇಗಂತೀರಿ?

ಇದಕ್ಯಾನಿಲ್ಲ. ಸ್ಟ್ಯಾಂಡರ್ಡ್‌ ಆಫ್‌ ಎಜುಕೇಷನ್‌ ಆಗ್ಬೇಕು. ಜನರ ಎಕಾನಮಿ ಛೇಂಜ್‌ ಆಗ್ಬೇಕು. ಅಲ್ಲಿಂದು ಇದು ಹೋಗುತ್ತೆ.

ಎಕಾನಮಿ ಛೇಂಜ್ಆದ್ರೆ ಕ್ಯಾಸ್ಟ್ಹೋಗ್ಬಿಡುತ್ತಾ?

ಜನ್ರುದ್ರು ಸ್ಟ್ಯಾಂಡರ್ಡ್‌ ಆಫ್‌ ಲಿವಿಂಗ್‌ ಬೆಳೀಬೇಕು. ವಿಚಾರಧಾರೆ, ಸಿಸ್ಟಂ, ಇಂಟರ್‌ ಕ್ಯಾಸ್ಟ್‌ ಮ್ಯಾರೇಜ್‌ ಆಗ್ಬೇಕು.

ವರ್ಗ ಹೋರಾಟದಿಂದ?

ವರ್ಗ ಹೋರಾಟದಿಂದ ಆಗಲ್ಲ, ಮತ್ತ ಇದೇನ ಬಸವೇಶ್ವರ ಅಷ್ಟು ಇದು ಮಾಡ್ದ. ಅವ್ನು ಹೋದ ಖರೆ ಕ್ಯಾಸ್ಟ್‌ ಹೋಗ್ಲಿಲ್ಲ.

ಬಸವಣ್ಣನ ತತ್ವಗಳಿಂದಲಿಂಗಾಯಿತಸಮುದಾಯ ಅತ್ಯಂತ ಪ್ರಗತಿಪರ ಸಮುದಾಯ ಆಗ್ಬೇಕಿತ್ತು?

ಆಗ್ಬೇಕಿತ್ತು. ಬಡದಾಡಿದ್ರು ಅದಕ್ಕೂನೂ ಥೋಡೆ ಜನ. ಲಿಂಗಾಯಿತ್‌ಸಂ ಅಂತ. ಅವರೇನು ಕ್ಯಾಸ್ಟ್‌ ಲೆಸ್ ಸೊಟೈಟಿ ಮಾಡ್ಲಿಲ್ಲ. ಈಗ ಅವರೇ ಕ್ಯಾಸ್ಟ್‌ ಬೆಳೆಸ್ತಾಯಿದ್ದಾರೆ. ಯಾಕಂದ್ರೆ ಅವನು ಏನ್ಮಾಡ್ಯಾನ ಅದರ ಬೆನಿಫಿಟ್ಟು ಇವರು ತಗಂಡ್ರು.

ನಿಮಗ ಲೋಹಿಯಾವಾದದ ಪ್ರಭಾವ ಆಗಿದ್ದು ಹೆಂಗ್ಸಾರ್‌?

ನಾ ಹೈದ್ರಾಬಾದ್ಕಿದ್ದೆ ಮೊದ್ಲಿಂದ. ಅವಾಗ ನಾ ಹೈದ್ರಾಬಾದ್‌ ಆಸ್ಟ್ರೀಯಾ ಲೈಬ್ರರಿ ಅಂತ ಇತ್ತು. ಅಲ್ಲಿ ಎಲ್ಲಾ ನಮೂನಿ ಪುಸ್ತಕ ಸಿಗ್ತಾ ಇದ್ವು.ಲೈಬ್ರರಿಯಲ್ಲಿ ಓದ್ತಾ ಇದ್ದೆ.

ಅಂದ್ರೆ ಪುಸ್ತಕ ಓದ್ತಾನೆ ಸಮಾಜವಾದಿಗಳಾದಿರೋ, ಇಲ್ಲಾ ಅಲ್ಲಿ ಚಟುವಟಿಕೆಗಳ ಸಂಪರ್ಕ ಏನಾರ ಬಂತೋ?

ಆಕ್ಯ್ಟಿವಿಟೀಸ್‌ ಇತ್ತು. ಕಿಸಾನ್‌ ಮೂಮೆಂಟ್ಸ್‌ ಇತ್ತು. ಅವ್ರು ಅಷ್ಟು ಇದು ಇದ್ದಿಲ್ಲ. ಭಾಳಾ ಡಿಫರೆಂಟ್‌ ಕೈಂಡ್‌ ಆಫ್‌ ಲೋಹಿಯಾ ಅವರು ಬರ್ತಿದ್ರು. ಭಾಷಣ ಮಾಡ್ತಿದ್ರು.

ಲೋಹಿಯಾ ಅವರ ಭಾಷಣ ಕೇಳಿಸಿಕೊಂಡಿದ್ದಿರೇನು?

ಕೇಳಿಸಿಕೊಂಡೀವಿ, ಹೈದ್ರಾಬಾದ್‌ನಲ್ಲಿ. “ಅರೌಂಡ್‌ ದಿ ವರ್ಲ್ಡ್‌” ಅಂತಾ ಅವರು ನಿಜಾಂ ಕಾಲೇಜಿನಲ್ಲಿ ಭಾಷಣಾ ಮಾಡಿದ್ರು. ಏಳುದಿವಸ ಲೆಕ್ಚರ್‌ ಆಗಿತ್ತು. ಅವರ್ದು. ಅವರು ವರ್ಲ್ಡ್‌ ಎಲ್ಲ ತಿರುಗ್ಯಾಡಿ ಬಂದಿದ್ರು.

ನೀವು ವಿದ್ಯಾರ್ಥಿ ಆಗಿದ್ರೇನು ಅವಾಗ ಹೈದ್ರಾಬಾದ್ನಲ್ಲಿ?

ಹೂಂ. ಇಂಟರ್‌ ಮೀಡಿಯೇಟ್‌. ನಮ್ಮ ಜೊತೇಲಿ ಥೋಡೆ ಜನ ಬಂದ್ರು. ರೆಡ್ಡಿ ಜನ, ಈ ಜನ. ಹೈದ್ರಾಬಾದ್‌ ಆಲ್‌ರೆಡೀ ಕಮ್ಯುನಿಸ್ಟ್‌ ಮೂವ್‌ಮೆಂಟ್‌ ಭಾಳ ಸ್ಟ್ರಾಂಗ್‌ ಇತ್ತು.

ನೀವು ಭಾಗವಹಿಸಿದ್ರೇನು ಅದರಾಗ?

ಹಾಂ. ಕಮ್ಯುನಿಸ್ಟ್‌ ಸಾಹಿತ್ಯ ಓದಿದೆ. ಮಾವೋ ಓದಿದೆ, ಲೆನಿನ್‌ ಓದಿದೆ.