ಸಾರ್, ಕರ್ನಾಟಕದಲ್ಲಿ ಸಮಾಜವಾದಿ ರಾಜಕೀಯ ಬೆಳವಣಿಗೆಯ ಸ್ವರೂಪ ಏನಾಗಿತ್ತು?

ಕರ್ನಾಟಕ ಏಕೀಕರಣ ಆಗೋಕ್ಕೂ ಮೊದ್ಲು ಹಳೇ ಮೈಸೂರು ರಾಜ್ಯದಲ್ಲಿ ಶಾಂತವೇರಿ ಗೋಪಾಲಗೌಡ್ರು, ಕೋಣಂದೂರು ಲಿಂಗಪ್ಪ, ಅವರೆಲ್ಲ ಒಳ್ಳೇ ಕೆಲಸ ಮಾಡಿದ್ರು, ಮಹೇಶ್ವರಪ್ಪ, ಜೆ.ಹೆಚ್‌.ಪಟೇಲ್ರು ಅವರೆಲ್ಲ. ಇನ್ನು ನಮ್ಮ ಭಾಗಕ್ಕೆ, ಧಾರವಾಡದ ಮಟ್ಟಿಗಂತೂ ಹೇಳಿಕೊಳ್ಳೋರು ಯಾರೂ ಇರ‍್ಲಿಲ್ಲ. ಖಾದ್ರಿ ಶಾಮಣ್ಣ ಮತ್ತು ಭಾಳಾ ಡೆಡಿಕೇಟೆಡ್‌ ಮನುಷ್ಯ ಗರುಡಶರ್ಮ ಇವ್ರೆಲ್ಲ ಕೆಲಸ ಮಾಡಿದ್ರು. ಆದ್ರೆ ಸಭೆ ಸಮಾರಂಭಗಳು ಆದ್ವು. ನಿಶ್ಚಿತವಾದ ಒಂದು ಕಾರ್ಯಕ್ಷೇತ್ರ ಆಯ್ದುಕೊಂಡು ಕೆಲಸ ಮಾಡ್ಲಿಕ್ಕೆ ಅವ್ರು ಮುಂದಾಲಿಲ್ಲ. ಗರಗದಲ್ಲಿ ಕೆಲವರು ಇದನ್ನು ಮಾಡಿದ್ರು. ಗರಗ, ಮೋಟೆಬೆನ್ನೂರು, ರೋಣ ತಾಲೂಕುಗಳಲ್ಲಿ ಇಲ್ಲಿ ಬೆರಳೆಣಿಕೆಯ ಕೆಲಸ ಆದ್ವು. ಇಲ್ಲಿ ಗಜೇಂದ್ರಗಢ ೨೭ ಹಳ್ಳಿಗಳ ಒಂದು ಜಹಗೀರು. ಅಲ್ಲಿ ಸಂಸ್ಥಾನಿಕರು ಇದ್ರು. ಕೊನೆಗೆ ೧೯೫೮ರಲ್ಲಿ ಜಾರಿಗೆ ಬಂತಲ್ಲ ನೂಲ್ವಿ ವೀರಭದ್ರಪ್ಪ ರೈತರಿಗೆ ಪಟ್ಟ ಕೊಡಿಸೋ ಭಾಳಾ ಒಳ್ಳೇ ಕೆಲಸ ಮಾಡಿದ್ರು.

ಜಹಗೀರುದಾರಿಕೆ ವಿರುದ್ಧ, ಭೂಮಿಗಾಗಿ ಹೋರಾಟ ಆಗಿರಬೇಕಲ್ಲ?

ಇಲ್ಲ ಹಾಗೇನೂ ಆಗ್ಲಿಲ್ಲ. ಮಾಡಲಿಕ್ಕೆ ಆಗ್ತಿತ್ತು. ಇಲ್ಲಿ ಭೂಮಾಲಿಕರು, ಜಹಗೀರುದಾರರ ಶೋಷಣೆ ಇತ್ತು. ಆದ್ರೆ ಮಾಡ್ಲಿಕ್ಕೆ ಆಗ್ಲಿಲ್ಲ.

ನಿಮಗೆ ಕಾಗೋಡಿನ ಚಳವಳಿಯ ಸಂಪರ್ಕ ಇತ್ತಾ?

ಇಲ್ಲಾ ಇಲ್ಲ. ಇರ್ಲಿಲ್ಲ.

ನಿಮಗೆ ರಾಜ್ಯದ ಯಾವ ಯಾವ ಸಮಾಜವಾದಿಗಳೊಂದಿಗೆ ಸಂಪರ್ಕ ಇತ್ತು?

ಅವರ ಜೊತೆ ಕೂಡಿ ಕೆಲಸ ಮಾಡೋ ಸಂದರ್ಭ ಬರಲಿಲ್ಲ. ಅವ್ರು ಮೈಸೂರು ಕಡೆಯವ್ರು. ನಾವು ಈ ಕಡೆಯವ್ರು. ನಮಗೆ ಸ್ಥಾನಿಕವಗಿ ಒಂದು ಪಕ್ಷವನ್ನು ಸಮರ್ಥವಾಗಿ ಸಂಘಟಿಸಲಿಕ್ಕೆ ಆಗ್ಲಿಲ್ಲ. ಅಂಥಾ ಪರಿಸ್ಥಿತಿ ಬರ‍್ಲಿಲ್ಲ. ಆದ್ರೆ ವೈಚಾರಿಕವಾಗಿ ಸಮಾಜವಾದಿಯಾಗಿ ಬದುಕಿದ್ದಂಥ ಮನುಷ್ಯ ನಾನೂ ಒಬ್ಬ ಅಂತ ಹೇಳ್ಬೇಕಾಗ್ತದೆ.

ಕರ್ನಾಟಕದಲ್ಲಿ ಸಮಾಜವಾದೀ ಚಳವಳಿ ವಿಸ್ತರಿಸೋಕೂ ಸಾಧ್ಯವಾಗ್ಲಿಲ್ಲ ಯಾಕೆ?

ಯಾಕೆ ಸಾಧ್ಯವಾಗ್ಲಿಲ್ಲ ಅಂದ್ರೆ ಸಮಾಜವಾದಿ ಪಕ್ಷವನ್ನು ಕಟ್ಟಿದ ನೇತಾರರೇ ಬಹಳದಿನ ಕೂಡಿ ಇರ‍್ಲಿಲ್ಲ. ಹರಿದು ಹಂಚಿ ಹೋಗ್ಬಿಟ್ರು. ಸಮಾಜವಾದವೇ ಛಿನ್ನ ವಿಚ್ಛಿನ್ನ ಆಗಿಬಿಡ್ತು. ಇದಕ್ಕೆ ಕಾರಣವೇನಂದ್ರೆ ಮುಖಂಡ್ರು.

ಸಮಾಜವಾದದ ವಿಭಿನ್ನ ವ್ಯಾಖ್ಯಾನಗಳಿಂದಾಗಿ ಒಂದು ಸಮಾಜವಾದವನ್ನು ಕಟ್ಟಿಕೊಳ್ಳೋಕೆ, ಮೂಲಕ ಒಂದು ವ್ಯಾಪಕ ಚಳವಳಿ ಕಟ್ಟೋಕೆ ಸಮಸ್ಯೆಗಳಾದವು ಅನಿಸ್ತದೆ ಅಲ್ವಾ?

ಸೋಷಲಿಸಂನ್ನು ಇಂಟರ್‌ ಪ್ರಿಟ್‌ ಮಾಡೋವಾಗ ವ್ಯತ್ಯಾಸಬರ‍್ತದೆ. ಗಾಂಧೀವಾದ ಮತ್ತು ಸಮಾಜವಾದದ ಸಮನ್ವಯ ಅಂತ ಜೆ.ಪಿ. ಹೇಳಿದ್ರು. ಆಚಾರ್ಯ ನರೇಂದ್ರದೇವ ‘ವರ್ಗ ಪ್ರಜ್ಞೆಯನ್ನು ಮುಖ್ಯವಾಗಿ ಪರಿಗಣಿಸಿದ್ರು. ಲೋಹಿಯಾ ಬರೇ ವರ್ಗಪ್ರಜ್ಞೆ ಅಲ್ಲ, ಬೇರೆದನ್ನೂ ನೋಡಬೇಕಾಗ್ತದೆ ಅಂದ್ರು. ಹೀಗೆ ಇವರಲ್ಲೇ ವೈಚಾರಿಕ ಮತಭೇದ ಇತ್ತು. ಇದೂ ಒಂದು ಕಾರಣ. ಹಾಗಾಗಿ ಪಾರ್ಟಿ ಹೋಗಿಬಿಡ್ತು. ಹಿಂಗಾಗಿ ಗಟ್ಟಿಯಾಗಿ ನೆಲೆ ನಿಂತು, ಪಾರ್ಟಿಯನ್ನು ಗಟ್ಟಿಗೊಳಿಸೋದಕ್ಕೆ ಇವರ್ಯಾರೂ ಪ್ರಯತ್ನ ಪಡಲಿಲ್ಲ.

ಲೋಹಿಯಾ ಅವರ್ದು ಒಂದು ಸಿದ್ಧಾಂತ ಆಗ್ಲಿಲ್ಲ. ಅದೇ ಹೇಳಿದ್ನೆಲ್ಲ, ಜೆ.ಪಿ.ಯವರು ಸಮಾಜವಾದವನ್ನ ಸರ್ವೋದಯದ ಕಡೆ ಒಯ್ದ್ರು. ಅರುಣಾ ಅಸಫ್‌ ಅಲಿ ಪಾರ್ಟಿಯನ್ನು ಬಿಟ್ರು. ಬಿಡೋವಾಗ ಒಂದು ಪುಸ್ತಕ ಬರಿದ್ಲು ಆಕೆ “ಇಂಡಿಯನ್ ಸೋಷಲಿಸ್ಟ್‌ ಪಾರ್ಟಿ ಇಟ್ಸ್‌ ರಿಜೆಕ್ಷನ್‌ ಮಾರ್ಕ್ಸಿಸಂ”, ಅಂತ. ಭಾಳಾ ಮಹತ್ವದ ಪುಸ್ತಕ ಅಂದ್ರೆ ಇವರು ‘ಮಾರ್ಕ್ಸ್ ವಾದವನ್ನು ಬಳಸಿಕೊಳ್ಳಲಿಲ್ಲ ಅಂತ ಆಕೀದು ಆಪಾದನೆ’.

ಮಾರ್ಕ್ಸ್ ವಾದವನ್ನ ಒಳಗೊಳ್ಳದೇ ಹೋದ್ರೆ ಸಮಾಜವಾದ ಅಪೂರ್ಣ ಅಂತಾ?

ಅಂತಾ ಅರುಣಾ ಅಸಿಫ್‌ ಅಲಿ ಪ್ರತಿಪಾದನೆ. ಆದ್ರೆ ಲೋಹಿಯಾ ಅಂದ್ರು ಮಾರ್ಕ್ಸ್ ವಾದದಲ್ಲೂ ಕೆಲವೊಂದು ದೋಷಗಳಿದ್ದಾವೆ. ಇದ್ದಕ್ಕಿದ್ದಂತೆ ನಾವು ಸ್ವೀಕಾರ ಮಾಡಬಾರ್ದು ಅಂತಂದ್ರು. ಮತ್ತು ಇಂಡಿಯಾದ ವರ್ಣ, ಜಾತಿ ಪದ್ಧತಿ ಇಲ್ಲಿಯ ಪರಂಪರೆ ಮಾರ್ಕ್ಸ್‌ ನಿಗೆ ಅರಿವಿರಲಿಲ್ಲ. ‘why marx failed in India’ ಅದಕ್ಕೆ ಅವ್ರು ಹೇಳ್ತಾರೆ. ಲೋಹಿಯಾ ಇಂಡಿಯಾದಲ್ಲಿ ಎಷ್ಟೋ ಚಳವಳಿಗಳ ಪ್ರವರ್ತಕ. ರೈತರ ಚಳವಳಿಗೆ ಭಾಳ ಮುಂದಾದ ಮನುಷ್ಯ. ೧೯೫೨ರೊಳಗ ಆಜಂಗಢದೊಳಗ ಉತ್ತರ ಪ್ರದೇಶದೊಳಗ ಒಂದು ಬೃಹತ್‌ ರೈತರ ಪ್ರತಿಭಟನಾ ನಡೆಸಿದ್ರು. ಉತ್ತರ ಪ್ರದೇಶ ಸರ್ಕಾರ ನೀರಾವರಿ ಕರವನ್ನು ಹೆಚ್ಚು ಮಾಡಿದ್ದಕ್ಕ. ೧೯೩೫ರೊಳಗ ಆಲ್‌ ಇಂಡಿಯಾ ಕಿಸಾನ್ ಸಭಾ ಕಟ್ಟೋದ್ರೋಳಗ ಕಮ್ಯುನಿಸ್ಟರಿಗಿಂತ ಸೋಷಲಿಸ್ಟ್ ರ ಪಾತ್ರ ಭಾಳ ದೊಡ್ಡದು. ಲೋಹಿಯಾ ವಾದವನ್ನ ಕೆಟ್ಟಲಿಕ್ಕೆ ಸಮರ್ಥ ನಾಯಕತ್ವ ಬರಲಿಲ್ಲ. ಮಾಸ್‌ ಲೀಡರ್‌, ನಂತರ ಯಾರೂ ಬರ್ಲಿಲ್ಲ. ಕಾರ್ಯಕರ್ತರು ಹೊಸಬರು ಹುಟ್ಟಿಕೊಳ್ಳಲಿಲ್ಲ. ಜನರ ನಡುವಿನಿಂದ್ಲೇ ಒಬ್ಬ ‘ಮಾಸ್‌ ಲೀಡರ್‌’ ಬರ್ಲಿಲ್ಲ.

ಮಾತಿನ ಇನ್ನೊಂದು ಬದಿಯನ್ನ ಸ್ಪರ್ಶಿಸೋದಾದ್ರೆ, ಲೋಹಿಯಾವಾದ ಮಾಸ್ಮೂಮೆಂಟ್ಕಟ್ಟೋದಕ್ಕಿಂತ ಪಾಲಿಟಿಕ್ಸ್ಅದ್ರಲೂ ಪವರ್ಪಾಲಿಟಿಕ್ಸ್ಕಡೆ ಹೆಚ್ಚು ಲಕ್ಷ್ಯ ವಹಿಸಿದ್ದು ಹಿನ್ನೆಡೆಗೆ ಕಾರಣವಾಯ್ತು. ಅನಿಸಲ್ವಾ?

ನೀವಂತೀರಿ, ಆದ್ರೆ ಲೋಹಿಯಾರಂತ ಅಗ್ದೀ ಪಾರ್ಲಿಮೆಂಟರೀ ಟ್ಯಾಲೆಂಟ್‌ ಇರೋ ಮನುಷ್ಯ ಚುನಾವಣೆ ಗೊಡವಿಗೆ ಹೋಗ್ಲಿಲ್ಲ, ತಿಳೀತೇನ್ರಿ. ಕೊನೆಗೆ ಅನಿವಾರ್ಯವಾಗಿ ೧೯೬೩ ರೊಳಗ ಉಪಚುನಾವಣೆಯೊಳಗ ಸ್ಪರ್ಧಿಸಿ ಆರಿಸಿ ಬಂದ್ರು ಆ ಮಾತು ಬೇರೆ. ನಾಲ್ಕೇ ವರ್ಷ ಅವ್ರು ಲೋಕಸಭಾ ಸದಸ್ಯರಾಗಿದ್ರೂ ಭಾಳಾ ಕೆಲ್ಸ ಮಾಡಿದ್ರು. ಆ ವಿಚಾರ ಇರ್ಲಿ. ಕೊನೆಕೊನೆಗೆ ಅವರೇನು ಹೇಳಿದ್ರು, ಈ ಚುನಾವಣಾ ಪದ್ಧತಿ ಏನದೆ ಇದು ಭಾಳಾ ತಪ್ಪದೆ. ಸಮಾಜವಾದಿಗಳು ಹಂಗ್ಮಾಡಬಾರ್ದು ಅಂತ್ಹೇಳಿದ್ರು. ಅಂವ ಸಾರ್ತ್ರೆ ಫ್ರೆಂಚ್‌ನ ಭಾಳಾ ದೊಡ್ಡ ವಿಚಾರವಾದಿ. ಈ ಕ್ಯಾಪಿಟಲಿಸ್ಟ್‌ ಸ್ಟೇಜ್‌ ಆಫ್‌ ಸೊಸೈಟಿ ಏನದೆಯಲ್ಲ, ಇಲ್ಲಿ ಬ್ಯಾಲೆಟ್‌ ಬಾಕ್ಸ್‌ ಈಜ್‌ ಎ ಹೋಕ್ಸ್‌ ಅಂತಾ ಹೇಳ್ತಾನೆ. ಮತಪೆಟ್ಟಿಗೆ ಒಂದು ಮಾಯಾಪೆಟ್ಟಿಗೆ ಅಂತ. ಅವನೂ ಮಾರ್ಕ್ಸಿ ಸ್ಟೇ ಹಂಗಾಗಿ ಚುನಾವಣೆ ಮುಖ್ಯ ಆಗಬಾರ್ದು ಅಂತಂದು ಲೋಹಿಯಾ, ಮತಪೆಟ್ಟಿಗೆ ಮತ್ತು ಜೈಲು ಇವು ಮೂರನ್ನೂ ಹೇಳಿದ್ರು. ಒಂದಕ್ಕಷ್ಟೇ ಕಟ್ಟು ಬೀಳ್ಲಿಲ್ಲ.

ಸಮಾಜವಾದ ಅಂದ್ರೆ ಏನು ಅಂತಾ ಅದರ ಕಾರ್ಯಕರ್ತರಿಗೆ ಮೂಲಭೂತ ತಿಳಿವಳಿಕೆ ಬೇಕು. ಕಾಲಕಾಲಕ್ಕೆ ಶಿಬಿರಗಳನ್ನು ಏರ್ಪಡಿಸುವುದು. ಈ ತರಹದ ಸಮಾಜವಾದಿ ಶೈಕ್ಷಣಿಕ ಆಂದೋಲನ ಬೇಕು. ಹಾಗೆ ಮಾಡ್ಲಿಲ್ಲ. ಅಶೋಕ ಮೆಹ್ತಾ ಅವ್ರೆಲ್ಲ ಹೀಗೆ ಮಾಡ್ಬೇಕು ಅಂತಂದ್ರು. ಆದ್ರೆ ಏನೂ ಆಗ್ಲೇ ಇಲ್ಲ. ಆದ್ರೆ ಕಮ್ಯುನಿಸ್ಟ್ರು ಈ ಕೆಲ್ಸ ಭಾಳಾ ಮಾಡಿದ್ರು. ಒಪ್ಕೋಬೇಕು ಅವ್ರನ್ನ. ಅವ್ರು, ಕಮುನಿಸ್ಟ್‌ ಆಗಿ ಬರ್ತೀನಂದ್ರ ಒಮ್ಮಿಂದೊಮ್ಮೆಗೆ ಸದಸ್ಯತ್ವ ಕೊಡ್ತಿದ್ದಿಲ್ಲ. ಆ ಪಾರ್ಟಿಸೆಲ್‌ನಿಂದ ಶಿಫಾರಸ್‌ ಬೇಕಾಗ್ತಿತ್ತು. ಹೀಗೆ ಸಮಾಜವಾದವಾಗ್ಲೀ, ಸಾಮ್ಯವಾದವೇ ಆಗ್ಲೀ, ಕ್ರಾಂತಿ ಬಗ್ಗೇನೇ ಆಗಲಿ, ಜನರೊಳಗಡೆ ಒಂದು ಪ್ರಜ್ಞೆಯನ್ನು ಬಿತ್ತುವಂತಹ ದೇಶೋವಿಶಾಲವಾದ ಒಂದು ಸಾಂಸ್ಕೃತಿಕ ಆಂದೋಲನ ಸಾಗ್ಬೇಕು. ಇದು ನನ್ನ ಅಭಿಪ್ರಾಯ. ಈಸಿ ಛೇರ್‌ ಮಾಡ್ತೀನಿ ಅಂದ್ರೆ ಅದೂ ಆಗೋದಿಲ್ಲ. ನಮ್ಮ ದೇಶದೊಳಗೆ ನಿರಕ್ಷರಿಗಳು ಬಹಳ ಜನ. ಶ್ರಮಿಕ ಜನರೇ ನಿರಕ್ಷರಿಗಳು. ಕ್ರಾಂತಿಕಾರಿ ಕಾವ್ಯ ಬರೆದ್ರೆ ಏನುಪಯೋಗ. ಆ ಜನರ ಮಧ್ಯೆ ಹೋಗ್ಬೇಕು. ಅದಕ್ಕ ನೇರವಾಗಿ ಕ್ರಾಂತಿಯ ಭೂಮಿಗೇ ಇಳೀಬೇಕಾಗ್ತದೆ.

ರಷ್ಯಾದೇಶದಲ್ಲಿ ಕ್ರಾಂತಿ ಆಗೋವಾಗ ಮಾಸ್ಕೋ ನಗರದ ಪದವೀಧರ ಯುವತಿಯರು ಹಳ್ಳಿಯ ಹುಂಬರನ್ನು ಮದವೆಯಾದ್ರು ತಾವಾಗೇ. ಅವರಿಕೆ ಕಮ್ಯುನಿಸಂನ ವಿಚಾರವನ್ನ ಅವರ ಅಂತಃಕರಣದೊಳಗ ಬಿತ್ತಬೇಕು ಅಂತಿಳ್ಕೊಂಡು. ಹಿಂಗಾ…ಈ ವೈಚಾರಿಕ ಜಾಗೃತಿ ಭಾಳಾ ಆಗ್ಬೇಕು. ಯಾಕಂದ್ರೆ ಸಮಾಜವಾದ ಅಂತಂದ್ರೆ ನಮ್ಮ ದೇಶಕ್ಕೆ ವಿಸಂಗತ ಅಂತಾ ಬಹಳ ಜನ ತಿಳ್ಕೊಂತಾರೆ. ಯಾರ ಸಲುವಾಗಿ ಸಮಾಜವಾದ ಬೇಕೋ, ಅವರಿಗೇ ಇದು ಗೊತ್ತಿಲ್ಲ. ಕಾಂಗ್ರೆಸ್‌ನವರೂ ಸಮಾಜವಾದ ಹೇಳ್ತಾರ. ಈಗಂತೂ ಸಮಾಜವಾದ ಅನ್ನೋದೇನಿದೆಯಲ್ಲ ಇದು ಇಂತ ಭ್ರಷ್ಟ ರಾಜಕಾರಣಿಗಳ ಹೊಲೆ ಬಳಕೆಗಿಳಿದು ಬಿಟ್ತು ನನಗೆ ಕೇಳಿದ್ರೆ.

ನಮ್ಮ ದೇಶದೊಳಗೆ ಈ ಧರ್ಮ ಅನ್ನೋದು ಅಡ್ಡಬರ್ತದೆ. ಶಾಸ್ತ್ರಗಳು ಅಡ್ಡಬರ್ತವೆ. ಸಂಪ್ರದಾಯ ಅವನ್ನೆಲ್ಲ ನಾವು ಮುರೀಬೇಕಾಗ್ತದೆ. ಅದಕ್ಕ ನಮ್ಮ ದೇಶದೊಳಗ ಕ್ರಾಂತಿಯಾಗೋದು ಭಾಳಾ ಕಠಿಣ. ಈ ಮಠಾಧೀಶರು ಪುರೋಹಿತಶಾಹಿಗಳು ಇದೆಲ್ಲಾ ಕರ್ಮ ಸಿದ್ಧಾಂತನಾ. ಅದು ಈ ಜನರಿಗೆ ಗೊತ್ತಾಗಬೇಕು. ಇದು ಜನರನ್ನು ಮರಳು ಮಾಡೊ ಗತ್ತಿನಾಟ, ಅಂತ. ಅದಕ್ಕ ಒಂದು ವೈಚಾರಿಕ ಆಂದೋಲನ ಆಗ್ಬೇಕಾಗ್ತದ.

ಬಸವಣ್ಣನ್ನೇ ತಗೊಳ್ರೀ, ಆತ ಕ್ರಾಂತಿಗೆ ಕಾರಣ ಪುರುಷ ನನಗೆ ಕೇಳಿದ್ರೆ. ಇವ್ರು ಭಕ್ತಿ ಭಂಡಾರಿ ಅಂತಾರೆ. ಭಕ್ತಿ ಭಂಡಾರಿ ಅನ್ನೋ ಹೆಸರು ಅಷ್ಟು ಒಪ್ಪೋದಿಲ್ಲ. ಬಸವಣ್ಣನ ಸಾಮಾಜಿಕ ಕ್ರಾಂತಿಯ ಮುಖವನ್ನ ನಾವು ಎತ್ತಿ ತೋರಿಸ್ಬೇಕಾಗ್ತದೆ. ಅಂವ ಸಾಮಾಜಿಕ ಕ್ರಾಂತಿಯ ಹರಿಕಾರ. ಹೀಗೆ ಅದರ ಡೈನಮಿಕ್‌ ಇಂಟರ್‌ ಪ್ರೆಟೇಶನ್‌ ಮಾಡ್ಬೇಕಾಗತ್ತೆ. ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಪಟ್ಟಭದ್ರ ಶಕ್ತಿಗಳು ಜನರ ಕ್ರಿಯಾ ಚೈತನ್ಯವನ್ನು ಅದುಮಿಡ್ತವೆ. ಅದಕ್ಕೆ ಮಾರ್ಕ್ಸ್ ಹೇಳಿದಂತೆ ಇಂಥ ವ್ಯವಸ್ಥೆಯಲ್ಲಿ ಧರ್ಮ ಅನ್ನೋದು ಬಡವರ ಪಾಲಿನ ಅಫೀಮು ಆಗ್ತದೆ. ಇವತ್ತಿನ ಇಂಡಿಯಾದ ಸಂದರ್ಭದೊಳಗೆ ಮಾರ್ಕ್ಸ್ ಹೇಳಿದ್ದು ಸರಿ ಅನ್ಸಾಕ ಹತ್ತೇದೆ. ಅದಕ್ಕ ವೈಚಾರಿಕ ಆಂದೋಲನ ಆಗ್ಬೇಕು ಭಾಷಾರವರೇ. ಅದು ಮಹಾರಾಷ್ಟ್ರದಲ್ಲಿ ನಡ್ಲಿಕ್ಕೆ ಹತ್ತೇದೆ.

ಈಗ ನೋಡ್ರೀ ನಿಜವಾದ ಲಿಂಗಾಯಿತ ಧರ್ಮದ ಸ್ಥಾಪಕರು ಯಾರು ಅಂತಾ ಶುರುಮಾಡ್ಕಂಡಾರ. ಪಂಚಾಚಾರ್ಯರು ಅಂತ, ಏನದು ‘ಪಂಚಾಚಾರ್ಯರು’ ಅವೈಜ್ಞಾನಿಕ. ಅವರು ಲಿಂಗದಿಂದ ಉದ್ಭವವಾದ್ರೂ ಹಾಗೆ, ಹೀಗೆ ಅಂತ. ಅದು ಹೋಗ್ಲೀ ಈಗ ಬಸವಣ್ಣನವರನ್ನೂ ಅಲ್ಲಗಳೆವಂಥ ಲಿಂಗಾಯಿತ್ರು ಇದ್ದಾರೆ. ಯಾರು ಈ ಮಠಾಧೀಶರು. ಈ ರಾಜಕಾರಣಿಗಳ ಜೊತೆ ಕೂಡ್ಕೊಂಡು ಇವ್ರೂ ಒಂದನಮೂನಿ ರಾಜಕೀಯ ಮಾಡ್ಲಿಕ್ಕತ್ಯಾರ. ಇವರಿನ್ನೂ ಸ್ವಾಮಿಗಳಾಗೇ ಇರ್ಬೇಕು. ಇನ್ನೂ ಮೆರೆದಾಡ್ಬೇಕು ಅನ್ನೋರು. ಹಿಂಗೆ ಬಸವಣ್ಣನ ಹಿಡ್ಕಂಡು ಹೋದ್ರೆ ತಮ್ಮ ಆಟ ನಡಿಯೋದಿಲ್ಲ ಅಂತನಕ್ಕಂಡು ಈ ಒಂದು ಗತ್ತಿನಾಟ ನಡಿಸ್ಯಾರ. ನನಗೆ ಕೇಳಿದ್ರೆ ಈ ಮಠಾಧೀಶರೇ ಇರ್ಬೇಕಾಗಿಲ್ಲ. ಇದು ಪುರೋಹಿತಶಾಹಿಯ ಒಂದು ಭಾಗ, ಒಂದು ರೂಪ ಇದು. ‘ರಿಲಿಜಿಯನ್ ಅಂಡ್ ದಿ ರೈಸ್ ಆಫ್‌ ಕ್ಯಾಪಿಟಲಿಸಂ’ ಅಂತ ಒಂದು ಒಳ್ಳೇ ಪುಸ್ತಕ. ಅದನ್ನ ನೋಡಿದ್ರೆ ಗೊತ್ತಾಗ್ತದೆ ನಿಮ್ಗೆ. ಧರ್ಮಕ್ಕ ಪೂರಕವಾಗಿ ಬಂಡವಾಳಶಾಹಿ ಹೆಂಗ ಬೆಳೀತು, ಬಂಡವಾಳಶಾಹಿ ಬೆಳೆದ ಮ್ಯಾಗ ಈ ಚರ್ಚೆ-ಗಿರ್ಚೆ ಎಲ್ಲಾ ಹೆಂಗ ಬದ್ಲಾತು ಅಂತ ಚೆನ್ನಾಗಿ ಬರ್ದಾನ.

ಯಾರ್ದು ಸಾರ್ ಪುಸ್ತಕ?

ಅದು ‘ಟಾನಿ’ ಬರ್ದದ್ದು. ಅದು ಬಹಳ ಹಿಂದಿನ ಪುಸ್ತಕ ಈಗ ನೋಡ್ರೀ ಹೇಳ್ತಾ ಎಲ್ಲದನ್ನೂ ಹೇಳ್ಬೇಕಾಗ್ತದೆ. ಹೆಚ್ಚಿಗೆ ಸಮಾನತೆಗೆ ಅವಕಾಶ ಕೊಡೋ ಧರ್ಮ ಅಂದ್ರೆ ಇಸ್ಲಾಂ ಧರ್ಮ, ಈಗ ಅಲ್ಲೇನಾಗಿಬಿಡ್ತು, ಅದ್ರೊಳಗೂ ವರ್ಗಗಳು ಆಗಿಬಿಟ್ಟಾವು. ಅಶ್ರಫ್‌, ಅಲ್ಜಾಫ್….ಹಿಂಗೆಲ್ಲ. ಅದಕ್ಕ ಇದ್ರೊಳಗೂ ಚಳವಳಿ ಸಾಗಬೇಕು ಅಂತಿಳ್ಕೊಂಡು ಹಮೀದ್ ದಲವಾಯಿ ಅಂತ ಮಹಾರಾಷ್ಟ್ರದೊಳಗ ಭಾಳಾ ದೊಡ್ಡ ಮನುಷ್ಯ. ಆತ ಮುಸ್ಲೀಂ ಪಾಲಿಟಿಕ್ಸ್‌ ಬಗ್ಗೆ ಬರ್ದಾರ. ಕೊನೆಗೆ ಆತ ತೀರಿಕೊಂಡ ನಂತರ ಸ್ಮಶಾನದೊಳಗೆ ಆತನ್ನ ಹುಗೀಲಿಕ್ಕೆ ಮುಸಲ್ಮಾನರು ಮುಲ್ಲಾಗಳು ಅವಕಾಶ ಮಾಡಿಕೊಡ್ಲಿಲ್ಲ. ಹಮೀದ್‌ ದಲವಾಯಿ ಅತ್ಯಂತ ಸಮಾಜವಾದಿ ಮನಷ್ಯ. ಮುಲ್ಲಾಗಳ ಪ್ರಭುತ್ವದ ವಿರುದ್ಧ ಹೋರಾಡಿದ ಮನುಷ್ಯ. ಈಗಲೂ ಅಸ್ಗರ್‌ ಅಲಿ ಇಂಜಿನಿಯರ್‌ ‘ಇಸ್ಲಾಮಿಕ್‌ ಸ್ಟಡೀ ಸೆಂಟರ್‌’ ಅಂತಂದು ಒಳ್ಳೇ ಕೆಲ್ಸ ಮಾಡ್ಲಿಕ್ಕೆ ಹತ್ಯಾರ. ಲೋಹಿಯಾ ಹೇಳ್ತಿದ್ರು. ಈ ನಮ್ಮ ಸ್ವಾಮಿಗಳು ಭಾರತ ಅಂದ್ರೆ ಧರ್ಮದ ನಾಡು ಅಂತಾ ಬಣ್ಣದ ಮಾತು ಮಾತಾಡ್ತಾರೆ. ಈಗ ಇಂಡಿಯಾದೊಳಗೆ ‘ಮಾರ್ಟಿನ್ ಲೂಥರ್‌’ ಬೇಕಿವತ್ತು. ಜರ್ಮನಿಯೊಳಗ ಕ್ರಾಂತಿ ಮಾಡಿದ್ನಲ್ರೀ. ಆತ ೯೨ ಸವಾಲುಗಳನ್ನು ಬರ್ದು ಇದಕ್ಕ ಉತ್ತರ ಕೊಡ್ರೀ ಅಂತಂದು ಚರ್ಚಿನ ಮಹಾದ್ವಾರಕ್ಕ ಅಂಟಿಸಿದ. ಆತನ್ನ ಗಡಿಪಾರು ಮಾಡಿದ್ದೂ ಆತು. ಕಡೀಗೆ ಆತ ರೋಮನ್‌ ಕ್ಯಾಥೋಲೀಕರ ವಿರುದ್ಧ ಶುರುಮಾಡ್ಬಿಟ್ಟ. ಕಡೀಕ್ಕ ಅವಂದಾ ಪ್ರೊಟೆಸ್ಟಂಟ್‌ ಪಂಥ ಶುರು ಆತು ಬಿಡ್ರೀ. ಕರ್ನಾಟಕದ ಸಂದರ್ಭದಲ್ಲಿ ೧೨ನೇ ಶತಮಾನದ ಜಂಗಮ ಪರಿಕಲ್ಪನೆ ೨೦ನೇ ಶತಮಾನದ ಹೊತ್ತಿಗೆ ಮಠಗಳಲ್ಲಿ ಪರ್ಯಾವಸಗೊಂಡಿದ್ದೂ ಹಿಂಗಾ ಅಂತಾ ಅನಿಸ್ತದೆ.

ಇದೆಲ್ಲಾ ನೋಡಿದ್ರೆ ಇನ್ನೂ ಭಾಳ ಕೆಲ್ಸ ಆಗ್ಬೇಕು ಅನ್ನಿಸ್ತದ. ಆದ್ರ ಈ ಸಂಘರ್ಷನೂ ಜೋರ್‌ದಾರ್‌ ನಡದದ ಅನ್ನಿಸ್ತದ. ಹಳತು ಮತ್ತು ಹೊಸತರ ನಡುವೆ, ಈ ಪ್ರತಿಗಾಮಿತನ ಮತ್ತು ಪ್ರಗತಿಗಾಮಿಗಳ ನಡುವೆ ನಮ್ಮ ಕಣ್ಣೆದುರು ಇರೋದನ್ನಾ ಮಾತಾಡೋಣ. ಈಗೇನದೆ ಈ ಸಂಘಪರಿವಾರದವರಂತೂ ಭಾಳಾ ಬೆಳೀಲಿಕ್ಕೆ ಹತ್ಯಾರ. ಇದು ಭಾಳಾ ತಪ್ಪು, ಅಂತಿಳ್ಕೊಂಡು ಪ್ರತಿಭಟನಾ ಮಾಡೋಕೆ ದೇಶಾದ್ಯಂತ ಪ್ರಗತಿಗಾಮಿ ಶಕ್ತಿಗಳೂ ತಯಾರಾಗ್ಲಿಕ್ಕೆ ಹತ್ತ್ಯಾವ. ಇದು ಜೋರ್ದಾರ್ ನಡದದ ಅಂತಳ್ದೀನಿ ನಾನು. ಗುಜರಾತ್‌ನಲ್ಲೇನು ನಡೀತು….ಆ ಕೋಮುವಾದಿ ಶಕ್ತಿಗಳನ್ನು ಬಗ್ಗುಬಡೀಲಿಕ್ಕೆ ಎಲ್ಲಾ ಪ್ರಗತಿಪರ ಮತ್ತು ಕ್ರಾಂತಿಕಾರಕ ಶಕ್ತಿಗಳು ಒಗ್ಗೂಡಬೇಕು, ಒಂದು ವೈಚಾರಿಕ ಯುದ್ಧ ನಡೀಬೇಕು. ಆಯನ್ ಐಡಿಯಾಲಜಿಕಲ್ ವಾರ್

ಅದಕ್ಕೆ ಕಮ್ಯುನಿಷ್ಟರೇ, ಮಾಡ್ಬೇಕು, ಸೋಷಲಿಸ್ಟರೇ ಮಾಡ್ಬೇಕು ಅಂತೇನಿಲ್ಲ. ಇವತ್ತು ಹೊಸಗಾಲದ ವಿಚಾರಗಳನ್ನು ಮಂಡಿಸ್ಬೇಕು. ಅದಕ್ಕ ಪಕ್ಷಾನ ಬೇಕಂತಾ ಏನು ನನಗನ್ನಿಸಾದಿಲ್ಲ.

ಕೋಮುವಾದ ಅಂತೀರಲ್ಲ, ಅದು ಯಾಕೆ ಕಾಲಘಟ್ಟದಲ್ಲಿ ತನ್ನ ಸಾಮರ್ಥ್ಯ ಹೆಚ್ಚಿಸಿಕೊಳ್ತಿದೆ. ಇದಕ್ಕೂ ಜಾಗತೀಕರಣದ ಪ್ರಕ್ರಿಯೆಗೂ ಬಂಡವಾಳಶಾಹಿ ಬೆಳವಣಿಗೆಗೂ ಒಳಸಂಬಂಧ ಇದೇನಾ?

ಇದು ಒಳ್ಳೇ ಅರ್ಥಪೂರ್ಣ ಪ್ರಶ್ನೆ. ಗೊತ್ತಾತು. ಈಗ ಈ ಕೋಮುವಾದಿ ಶಕ್ತಿಗಳು ಬೇಳೀಬೇಕಾದ್ರೆ ತನ್ನಿಂದತಾನೇ ಬೆಳೀಲಿಲ್ಲ.ಈ ಕೋಮುವಾದ ಅನ್ನೋದೇನಿದೆಯಲ್ಲ ಇದು ಮುಖವಾಡ. ಸಂಘಪರಿವಾರವನ್ನ ತಗೊಳ್ರಿ ೧೯೨೫ರಲ್ಲಿ. ಡಾ. ಹೆಡಗೆವಾರ ಇದನ್ನ ಹುಟ್ಟು ಹಾಕಿದ ..ಆರ್‌.ಎಸ್‌.ಎಸ್‌ನ ಶನಿ ಸಂತಾನ ಬಿಡ್ರೀ ಇವೆಲ್ಲ, ಇತ್ತೀಚಿನ ಈ ಕೋಮು ಸಂಘಟನೆಗಳೆಲ್ಲ. ಇದರ ಹಿಂದೆ ಏನಿದೆಯಲ್ಲ ಈ ದೇಶದ ಸಂಸ್ಥಾನಿಕರು, ಜಮೀನ್ದಾರ್ರು, ಭೂಮಾಲಿಕರು ದೊಡ್ಡ ದೊಡ್ಡ ಮಾರ್ವಾಡಿ ಬನಿಯಾಗಳು ಭಾಳಾ ಅವರಿಗೆ ಹಣ ಕೊಡ್ತಾರ. ಒಟ್ಟಾರೆ ಈ ಎಲ್ಲ ಪಟ್ಟಭದ್ರರು ಕೂಡಿಕೊಂಡು ಈ ಕಾಲದ ಜನತೆಯ ಕ್ರಾಂತಿ ಚೈತನ್ಯವನ್ನು ತಡೀಲಿಕ್ಕಾಗಿ ಇವರ ಹಿಂದೆ ಕೂತ್ಕೊಂಡು ಬಿಟ್ಟಿದ್ದಾರೆ. ಅವ್ರು ಹುಟ್ಟು ಹಾಕಿದ ಪರಿಣಾಮ ಇವ್ರು ಬೆಳೆದು ಬಿಟ್ಟಿದ್ದಾರ. ಆದ್ರೆ ಅದು ಹಂಗಾ ಬೆಳೀಲಿಕ್ಕೆ ಸಾಧ್ಯ ಆಗಾದಿಲ್ಲ. ಯಾಕಂದ್ರ ಅವರಿಗೆ ಅಂಥಾ ಜೋರ್ದಾರ್ ಪ್ರತಿಭಟನೆ ಆಳ್ವಿಕೆಯಿಂದ ಬೇಸತ್ತು ಜನಸಂಘದವರಿಗೂ ಛಾನ್ಸ್‌ ಕೊಡೋಣ ಅಂತಾ ಛಾನ್ಸ್ ಕೊಟ್ರು. ಅಂದ್ರೆ ಬಿ.ಜೆ.ಪಿ. ದವರಿಗೆ ಉತ್ತರ ಪ್ರದೇಶದೊಳಗೆ ಇವ್ರ ‘ಕಲ್ಯಾಣಸಿಂಗ್‌’ ಮುಖ್ಯಮಂತ್ರಿ ಸರ್ಕಾರ ಬಂದ ಮೇಲೆ ಬಾಬ್ರಿ ಮಸೀದಿ ಕೆಡವಿಬಿಟ್ರು. ಅವಾಗಿನಿಂದ ಗಮ್ಮತ್ತು. ಏನದೆ ಜನ ತಿಳ್ಕೊಂಡು ಬಿಟ್ರು. ಈಗಂತೂ ಕೋಮುವಾದಿಗಳ ವಿರುದ್ಧ ಶಕ್ತಿ ಜೋರ್‌ ಆಗ್ಲಿಕ್ಹತ್ತಿದೆ. ಇನ್ನೂ ಆಪೇಕ್ಷಿತ ಮಟ್ಟದಲ್ಲಿ ಇಲ್ಲ ಆ ಮಾತು ಬ್ಯಾರೆ. ಇನ್ನು ಗ್ರಾಮ ಗ್ರಾಮ ಮಟ್ಟದಲ್ಲೂ ಆಗ್ಬೇಕು.

ಈಗ ಏನ್‌ ಮಾಡ್ಯಾರ ಆರ್.ಎಸ್‌.ಎಸ್‌. ನವರು ಪೇಡ್‌ ಅಪ್‌ ವರ್ಕರ್ಸ್ ನ ತಯಾರು ಮಾಡ್ಯಾರ. ಇಲ್ಲಿಗೂ ಬಂದಿದ್ರು ಕೆಲವರು. ಈ ತಾಲ್ಲೂಕಿನಲ್ಲೂ ಕೆಲವೊಂದು ಹಳ್ಳಿಗಳಲ್ಲಿ ಆ ಹುಡುಗ್ರು ದಲಿತ್ರು. ಅವ್ರು ನನ್ನ ಕಡೆಗೆ ಬಂದಿದ್ರು. ಹಿಂಗ ಹೊಳೆಆಲೂರುನೊಳಗ ಆರ್‌.ಎಸ್‌.ಎಸ್‌. ಸಮಾವೇಶ ಅದ ದುಡ್ಡು ಕೊಡ್ರೀ ಅಂತಾ. ಅವಾಗ ಅವರ್ಗೆ ಚೋಲೋತಂಗ ನೀರಿಳಿಸಿ ಕಳ್ಸೀನಿ. ಅಲ್ಲಾ ನನಗ ಏನಂತ ತಿಳ್ಕಂಡೀರಿ ಅಂತಾ.

ಅವ್ರು ಏನಂತ ಹೇಳ್ಕಂತಾರ, ಹಿಂದು ಸಂಸ್ಕೃತಿ, ಭವ್ಯ ಸಂಸ್ಕೃತಿ, ನಮ್ಮ ಧರ್ಮ ಸಾಮ್ರಾಜ್ಯ ಕಟ್ಟಿದವರು ಶಿವಾಜಿ ಮಹಾರಾಜ…ಹಾಗೆ ಹೀಗೆ ಎಲ್ಲಾ ಹೇಳಿ ದಾಳಿಕೋರ ಮುಸಲ್ಮಾನ್ರು ನಮ್ಮ ದೇಶದ ಧರ್ಮ ಸಂಸ್ಕೃತೀನಾ ಹಾಳು ಮಾಡಿದ್ರು, ಹಿಂಗೆಲ್ಲಾ ಭಾಳಾ ರಮ್ಯವಾಗಿ ಹೇಳಿ ಸಂಘ ಕಟ್ತಾರೆ. ಅದೇ ಶಿವಾಜಿನೇ ಎಷ್ಟು ಘಾಥ ಮಾಡಿದ್ದು, ಗೊತ್ತಿದ್ದೋರಿಗೇ ಗೊತ್ತು.

ನೀವು ಗಮನಿಸಿದಂಗೆ ಕೋಮುವಾದ ಬೆಳವಣಿಗೆ ಹಿಂದೆ ಮೇಲ್ವರ್ಗದ ಹಿತಾಸಕ್ತಿ?

ಶೇಟ್‌ಜೀ, ಬಾಟ್‌ಜಿ(ನಗು).

ಹಾಂ, ಇವತ್ತಿನ ಕೋಮು ಶಕ್ತಿಗಳ ಜೊತೆ ಜಾಗತಿಕ ಬಂಡವಾಳಿಗ ಶಕ್ತಿಗಳು ಇದ್ದಾವೆ ಅಂತಾ ಅನ್ನಿಸಾದಿಲ್ವ?

ಹೌದು, ಇದ್ದಾವ ಹೌದು.

ಹಾಗನ್ನೋದಾದ್ರೆ ಜಾಗತೀಕರಣದ ಶಕ್ತಿಗಳು ಮತ್ತು ಕೋಮುವದಿ ಶಕ್ತಿಗಳ ವಿರೋಧ ಅದು ಒಂದೇ ಆಗಿರ್ತದೆ, ಅಥವಾ ಏಕಕಾಲದಲ್ಲಿ ನಡೀಬೇಕಾಗ್ತದೆ. ಇಂತಹ ಪ್ರತಿರೋಧ ಇವತ್ತುಗಾಂಧೀವಾದಮೂಲಕ ಸಾಧ್ಯವಾ?

ಇಲ್ಲ… ಇಲ್ಲ. ಹಾಗೆ ಆಗೋದಿಲ್ಲ, ಅವಾಗ ಗಾಂಧಿ ಬೋಧಿಸಿದ ಸತ್ಯಾಗ್ರಹದ ತಂತ್ರದಿಂದ ಈಗ ಮಾಡ್ಲಿಕ್ಕೆ ಆಗೋದಿಲ್ಲ. ಮಾಡಿದ್ರೆ ಸಫಲ  ಆಗೋದಿಲ್ಲ. ಅದಕ್ಕಿಂತ ಹೆಚ್ಚು ಕ್ರಾಂತಿಕಾರಕವಾಗ್ಬೇಕು. ಗಾಂಧೀ ಮಾದರಿಯಲ್ಲೇ ಸಾಗಿದ್ರೆ ಆಗೋದಿಲ್ಲ.

ಕ್ರಾಂತಿಕಾರಕ ಅನ್ನೋದಂದ್ರೇನು? ಅಹಿಂಸೆ ಅನ್ನೋದನ್ನ ಬಿಡೋದಾ?

ಇಲ್ಲ, ಅಹಿಂಸಾ ಅಂದ್ರೇನು? ಗಾಂಧಿ ಬೋಧಿಸಿದ ಅಹಿಂಸಾ ಏನಿದೆಯಲ್ಲಾ ಅದರ ಕ್ರಾಂತಿಕಾರಕ ಮುಖವನ್ನೂ ನಾವು ನೋಡ್ಬೇಕಾಗ್ತದೆ. ಹಿಟ್ಲರ್‌ ಎರಡನೇ ಮಹಾಯುದ್ಧದ ಕಾಲಕ್ಕ ಪೊಲೆಂಡ್‌ ದೇಶದ ಮೇಲೆ ದಾಳಿ ಮಾಡಿದಾಗ ಗಾಂಧೀಗೆ ಒಬ್ರು ಪತ್ರಕರ್ತರು ಕೇಳಿದ್ರು. ನೀವು ‘ಅಹಿಂಸಾ ಅಂತಿರ್ತೀರಿ. ಪೋಲೆಂಡ್‌ ಮೇಲೆ ಬಾಂಬ್‌ ದಾಳಿ ಆಗ್ಲಿಕ್ಕತ್ತದೆ. ಈ ಹೊತ್ನ್ಯಾಗ ಏನ್‌ ಮಾಡ್ಬೇಕು. ಶಾಂತಿ ಅಹಿಂಸೆ ಅಂತಾ ಕುಂತ್ರೆ ಹೆಂಗೆ, ಅಂತ ಕೇಳ್ದಾಗ, ಅವಾಗ ಗಾಂಧಿ ಹೇಳ್ತಾರ ‘ನಂದ ಅಹಿಂಸಾ ಹಂಗಿಲ್ಲ. ಇವತ್ತು ಫಾಸಿಸ್ಟ್‌ ಶಕ್ತಿಯ ದೌರ್ಜನ್ಯದ ವಿರುದ್ಧ ಹೋರಾಡಬೇಕು ಅನ್ನಂಗಿದ್ರೆ, ಪೋಲೆಂಡಿನ ಸ್ವಾತಂತ್ರ್ಯ ಕಾಪಾಡಬೇಕು ಅನ್ನಂಗಿದ್ರೆ ಎವರೆಇ ಪೋಲಿಸಷ್‌ ಶುಡ್‌ ಟೇಕ್‌ ಅಪ್‌ ಎ ಗನ್‌ ಅಂಡ್‌ ಫೈಟ್‌ ಅಗೆನೆಸ್ಟ್‌ ಫಾಸಿಸಂ’ ಅಂತಾರೆ. ಹಂಗೆ ಅದಕ್ಕೆ ಅಂಹಿಂಸೆಯ ದರ್ಶನ ಕೂಡ ಬದಲಾಗ್ಬೇಕಾಗ್ತದೆ. ಯುದ್ಧವನ್ನು ಯುದ್ಧದಿಂದಲೇ ಗೆಲ್ಲಬೇಕಾಗ್ತದೆ. ಶಸ್ತ್ರಾಸ್ತ್ರದಿಂದಲೇ ಅದು ಅನಿವಾರ್ಯ. ಅಹಿಂಸೆಯ ತಂತ್ರವನ್ನು ಸಂಪ್ರದಾಯದ ರೀತಿಯಲ್ಲಿ ಬಳಸಿಕೊಂಡ್ರೆ ಉಪಯೋಗ ಆಗಾದಿಲ್ಲ. ಇವತ್ತು ರಾಷ್ಟ್ರ ಸಂರಕ್ಷಣೆಗೆ ಯಾವ ರೀತಿ ಸೈನಿಕ ಶಕ್ತಿ ಬೇಕೋ ಅದನ್ನ ನಮ್ಮದೇ ಆದ ರೀತಿಯಲ್ಲಿ ನಾವು ಬಳಸ್ಕೋಬೇಕಾಗ್ತದೆ.

ನಿಮ್ಮ ಮಾತಿನ ಮುಂದುವರಿಕೆಯಾಗಿ ಕೇಳ್ತಿದ್ದೇನೆ. ಇವತ್ತು. ‘ನಕ್ಸಲೀಯರುಕೈಗೆತ್ತಿ ಕೊಂಡಿರೋದು ನಿಮ್ಮ ಅರ್ಥಕ್ಕಿಂತ ಹೇಗೆ ಭಿನ್ನವಾಗ್ತದೆ?

ಹಾಂ, ಕೇಳಿ ನನಗೆ ಕೇಳಿದ್ರೆ… ಈ ಪ್ರಜಾಪ್ರಭುತ್ವ, ಆ ಸಿದ್ಧಾಂತ, ಈ ಸಿದ್ಧಾಂತ, ಮಾರ್ಕ್ಸ್‌ ವಾದ ಗಾಂಧೀವಾದ ಇವನ್ನೆಲ್ಲ ತಿಳ್ಕೊಂಡು ಇವುಗಳಿಂದೀ ಬದಲಾವಣೆ ಮಾಡೋದಕ್ಕೆ ಸಾಧ್ಯವಿಲ್ಲ ಅಂತಾ ಅವರ ದೃಢವಾದ ನಂಬಿಕೆ. ಚಾರು ಮುಜುಂದಾರ್‌, ಕನು ಸನ್ಯಾಲ್‌ ಅವರೆಲ್ಲ ಭಾಳಾ ಬುದ್ಧಿವಂತ್ರು. ಈ ಪ್ರಜಾಪ್ರಭುತ್ವದ ಹೆಸರಿನಲ್ಲಿ ಈ ಫ್ಯೂಡಲ್‌ ಮತ್ತು ಕ್ಯಾಪಿಟಲಿಸ್ಟ್‌ ಏನದೆ ಅದರ ವಿರುದ್ಧ ಸಶಸ್ತ್ರ ಕ್ರಾಂತೀನೇ ಮಾಡಬೇಕು ಅಂತಾ ಅವರ ಬಲವಾದ ನಂಬಿಕೆ. ಒಂದು ವೇಳೆ ಅದರ ಬಗ್ಗೆ ನಿಮ್ಮ ಅಭಿಪ್ರಾಯ ಏನು ಅಂತ ಕೇಳಿದ್ರೆ ಅದಕ್ಕ ನಾ ಹೇಳ್ತೇನೆ ಒಂದು ವೇಳೆ ಅವರು ನಕ್ಸಲೈಟ್‌ ಯಾಕಾದ್ರು? ಮೂಲಭೂತ ಪ್ರಶ್ನೆ ಅಲ್ಲದೆ, ಅವರು ಯಾಕ ನಕ್ಸಲೈಟ್‌ ಆದ್ರು ಅದನ್ನ ತಿಳ್ಕಂಡು ಅದಕ್ಕ ಪರಿಹಾರ ಕಂಡುಕೊಳ್ಳೋಕೆ ಪ್ರಯತ್ನ ಮಾಡಬೇಕೋ ಹೊರತು ಬರೀ ನಕ್ಸಲೈಟ್ರು ಉಗ್ರವಾದಿಗಳಿದ್ದಾರೆ, ಹಿಂಸಾವಾದಿಗಳಿದ್ದಾರೆ ಅಂತ ಬರೀ ಅವ್ರನ್ನ ಸಪ್ರೆಸ್‌ ಮಾಡ್ಲಿಕ್ಕೆ ಹೋದ್ರೆ ಈ ಸಮಸ್ಯೆ ಮುಗಿಯೋದಿಲ್ಲ. ಅಂದ್ರೆ ನಕ್ಸಲೈಟರ ಚಟುವಟಿಕೆ ಸರಿ ಅಂತಾ ನಾನನ್ನೋದಿಲ್ಲ. ಅವ್ರು ನಂಬಿಕೆ ಹಾಗಿದೆ. ಅವ್ರು ಯಾಕ ಬಂದ್ರು ಆ ನಿರ್ಣಯಕ್ಕ ಅನ್ನೋದನ್ನ ನವು ತಟಸ್ಥ ಇರೋ ಜನ ಕಂಡ್ಕೋಬೇಕು.

ಈಗ ನೋಡ್ರಿ ಒಂದೆರಡು ವರ್ಷದ ಹಿಂದೆ ಒಬ್ಬ ಮನುಷ್ಯ ‘ಸಾಕೇತ ರಾಜನ್‌’ ಅಂತಾ. ಈ ಸಾಕೇತ್‌ ರಾಜನ್‌ ಅಂದ್ರೆಯಾರು ಅಂದ್ರೆ, ಸಾಕೀ ಅನ್ನೋದು ಆತನ ಕಾವ್ಯನಾಮ. ‘ಮೇಕಿಂಗ್‌ ಹಿಸ್ಟರಿ’ ಅಂತಾ ಆತನ ಕೃತಿಗಳು ಎರಡು ಭಾಗದಲ್ಲಿ ಬಂದಿವೆ. ಭಾಳ ಅಭ್ಯಾಸ ಮಾಡಿ ಬರೆದ ಪುಸ್ತಕಗಳು. ಅವಾಗ ಸಾಕಿ ಯಾರಂತ ಯಾರಿಗೂ ಗೊತ್ತಿದ್ದಿಲ್ಲ. ನಂತರ ಆತ ನಕ್ಸಲೈಟು ಅಂತಾ ಗೊತ್ತಾತು…. ಸರಿ. ಯಾಕೆ ಹೀಗೆ ಸಾಕೇತ ರಾಜನ್‌ನಂಥಾ ಬುದ್ಧಿವಂತ ಮನುಷ್ಯ ಸಶಸ್ತ್ರ ಕ್ರಾಂತಿಗೆ ಇಳಿದ್ನಪ್ಪಾ ಅಂದ್ರೆ ಅದು ಆತನ ವಿಶ್ವಾಸ. ಯಾಕ ಹಿಂಗಾದ ಅಂತ ನೋಡ್ಬೇಕಾಗ್ತದೆ. ಡಾಕ್ಟರ್‌ ಆಪರೇಷನ್‌ ಮಾಡೋವಾಗ ರಕ್ತ ಬರ್ತದೆ. ಅದು ಹಿಂಸೆಯ ಕೃತಿ ಅಂತಾ ಕಾಣಿಸ್ತದೆ. ಆಪರೇಷನ್‌ ಮಾಡೋವಂಥ ಪ್ರಸಂಗ ಯಾಕ ಬಂತು? ಎಲ್ಲಿ ದೋಷ ಅದೆ, ಎಲ್ಲಿ ರೋಗ ಅದೆ, ಈ  ತರಹದ ಪ್ರಾಕ್ಟಿಕಲ್‌ ಅಂಶವನ್ನು ನಾವು ಗುರುತಿಸಬೇಕಾಗ್ತದೆ ಹಿಂಗಾಗಿ ಈ ಹಿಂಸೆ ಅಗತ್ಯವೇನೋ ಅನಿಸ್ತದೆ.

ಅದಕ್ಕ ಅವರವರ ಪ್ರಯೋಗ ನಡದದೆ ಈಗ. ಇದು ತಪ್ಪು ಅದು ತಪ್ಪು ಅಂತ ನಾವಿಂಗೆ ವಿಮರ್ಶಾತ್ಮಕ ಅಭಿಪ್ರಾಯ ಪಡೋದಕ್ಕಿಂತಲೂ ಅವ್ರು ಮೊದಲು ಮೂಲಭೂತ ಯೋಚ್ನೆ ಮಾಡ್ತಾರೆ. ‘ನೀತಿ ಹೇಳೋದಕ್ಕಿನ ಮೊದ್ಲು ಹೊಟ್ಟೆಗೆ ಹಾಕು’ ಅಂತಾ. ಇದೆಲ್ಲ ಸರಿ ಹೀಗೆ ಮಾಡ್ದೀ, ಹಾಗೆ ಮಾಡ್ದೀ, ದಾರಿಬಿಟ್ಟೀ, ಇದು ಅನೀತಿ ಅನ್ನೋದಕ್ಕಿಂತಲೂ ಹಿಂಗೆ ಯಾಕಾದ? ಅದಕ್ಕೆ ಗಾಂಧೀ ಹೇಳ್ತಾರೆ, ಈವನ್‌ ಗಾಡ್‌ ಅಪಿಯರ್ಸ್‌ ಇನ್‌ದ ಫಾರ್ಮ್‌ ಆಫ್‌ ಬ್ರೆಡ್‌ ಫಾರ್‌ ಹಂಗ್ರಿ ಮ್ಯಾನ್‌. ಹಸಿದವನಿಗೆ ದೇವರು ರೊಟ್ಟಿಯ ತುತ್ತಿನ ರೂಪದಲ್ಲಿ ಕಾಣಿಸಿಕೊಳ್ತಾನೆ. ಅಂತ. ಆರೆಸ್ಸೆಸ್‌ನವರು ಹೇಳಿದ್ರು ಗಾಂಧೀ ದೇಶ ಒಡಿಸ್ದಾ ಅಂತಂದು. ದೇಶಾ ಒಡೀಲಿಕ್ಕೆ ಗಾಂಧೀ ಕಾರಣ ಅಂತ ಕೊಲೆ ಮಾಡಿದ್ರು. ಇವ್ರೆಲ್ಲ ಈ ದೇಶ ಗುಲಾಮಗಿರೀಲಿ ಬೀಳ್ತಿರಬೇಕಾದ್ರೆ ಗುಲಾಮಗಿರಿ ತೊಲಗಿಸ್ಲಿಕ್ಕೆ ಏನ್ಮಾಡಿದ್ರು? ಸರಿ ಕಾಂಗ್ರೆಸ್ಸಿನವರು ಗಾಂಧೀ ನೇತ್ರತ್ವದಾಗ ದೇಶ ಒಡಿದ್ರು ಅಂತಾರ ಹಂಗನ್ನಂಗಿದ್ರೆ ಇವ್ರು ಅದಕ್ಕ ಪ್ರತಿಭಟನೆಯನ್ನಾದ್ರೂ ಯಾಕ ಮಾಡ್ಲಿಲ್ಲ. ಏ…. ನಮ್ಮದು ಸಾಂಸ್ಕೃತಿಕ ಕ್ಷೇತ್ರ ರಾಜಕೀಯ ನಮಗೆ ಸಂಬಂಧ ಇಲ್ಲ ಅಂತಿಳ್ಕೊಂಡು ಸುಮ್ಮನಾ ಕುಂತಿದ್ರು, ಒಳಗೊಳಗಾ ಇಂಥಾ ಕಾರಸ್ಥಾನ ಮಾಡ್ತಿದ್ರು. ಏನಂತೀರಿ? ಏನ್ಮಾಡಿದ್ರು ಅವ್ರು? ಏನೇನೂ ಮಾಡ್ದವ್ರು ಅಲ್ಲ, ಈ ದೇಶದ ಸ್ವಾತಂತ್ರ್ಯದ ಸಲುವಾಗಿ.

ಲೋಹಿಯಾ, ಈ ದೇಶದ ೨೭ ಕೋಟಿ ಜನರ ಆದಾಯ ತಲಾ ೩ ಆಣೆಗಿಂತ ಕಡಿಮೆ ಅದಾ ಅಂತಾ ಲೋಕಸಭೆಯಲ್ಲಿ ಹೇಳ್ದಾಗ, ಲೋಕಸಭೆ ದಂಗು ಬಡೀತು. ಹೇಳ್ಬೇಕಂದ್ರೆ, ಗುಲ್ಜಾರಿಲಾಲ್‌ನಂದಾ, ನೆಹರು ಇವರು ದಿಕ್ಕು ತಪ್ಪಿದ್ರು. ಅಂಥಾ ವಿಚಾರವಂತ ಪಾರ್ಲಿಮೆಂಟೇರಿಯನ್‌. ಇನ್ನು ಈ ವಾಜಪೇಯಿ ಗೀಜಪೇಯಿ ಉತ್ತಮ ಸಂಸದೀಯ ಪಟು ಹಂಗೇ ಹೀಂಗೇ…ಅದ್ರೆ ಏನ್ಮಾಡಿದ್ರು ಇವ್ರೆಲ್ಲ? ಸುಮ್ನೆ ಭಾಳಾ ದೊಡ್ಡೋರು ಮಾಡ್ಬಿಟ್ರು ಇವ್ರನ್ನ. ಅಂವ ಸ್ವಾತಂತ್ರ್ಯ ಚಳವಳಿ ಕಾಲಕ್ಕ ಬ್ರಿಟೀಷರಿಗೆ ತಪ್ಪೊಪ್ಪಿಗೆ ಕೊಟ್ಟಿದ್ದು ನಿಜ. ಆತನ ಹಸ್ತಾಕ್ಷರದಾಗ ಪತ್ರಾನು ಐತಿ. ಅಂಥವನ್ನ ದೊಡ್ಡ ಹೀರೋನ್ನ ಮಾಡ್ಬಿಟ್ರು… ಆಂ, ಅವ್ರೇನು ಮಾಡ್ಯಾರ. ಏನೇನೂ ಮಾಡ್ದವರಲ್ಲ ಅವ್ರು ಈ ದೇಶಕ್ಕ. ಇನ್ನುಈ ಅದ್ವಾನಿ ಗಿದ್ವಾನಿ ಇವ್ರೆಲ್ಲಾ ಏನು, ಎತ್ತ ಭಾಳಾ ಘಾತ ಮಾಡ್ಕೊಂತ ಬಂದ್ರು. ಇತ್ತೀಚೆಗೆ ಗಾಂಧಿ ಬಗ್ಗೆ ಭಾಳ ಅಪಚಾರಾನೂ ನಡೀತನದ. ನಾಟ್ಕ ಮಾಡಿದ್ರು ಅದು ಮಾಡಿದ್ರು ಆದ್ರೆ ಸೂರ್ಯನ ಕಡೆ ಉಗುಳಿದ್ರೆ, ಆ ಮೂರ್ಖನ ಮುಖದ ಮೇಲೇ ಬೀಳ್ತದೆ ಬಿಡ್ರೀ ಇಂಥಾದ್ದು ಮಾಡ್ಕೋತ ಬಂದ್ರು. ಈಗೆಲ್ಲಾ ಅವು ಹೂರಣ ಬಯಲಿಗೆ ಬರ್ಲಿಕ್ಕೆ ಹತ್ತ್ಯಾದ. ಇನ್ನ ಅವ್ರುದು ಏನೂ ನಡಿಯಾದಿಲ್ಲ. ಈಗ ಕ್ರಾಂತಿಕಾರಿ ಶಕ್ತಿ ಕೋಮುವದಿ ಶಕ್ತಿನಾ ಎದುರಿಸಿ ನಿಂತು ಬಿಟ್ಟಿದೆ.

ಅಂಥಾ ಒಂದು ಕ್ರಾಂತಿಕಾರಿ ಶಕ್ತಿಯನ್ನು ಹೆಂಗ ಗುರ್ತಿಸ್ತಿರಿ ನೀವು? ಎಲ್ಲಿದೆ?

ಕ್ರಾಂತಿಕಾರಿ ಶಕ್ತಿಯನ್ನ ಪಕ್ಷದಲ್ಲೇ ಹುಡುಕಬೇಕಾಗಿಲ್ಲ ನೀವು. ಅನೇಕ ವ್ಯಕ್ತಿಗಳು, ಸಂಘಟನೆಗಳು…ಅವುಗಳಲ್ಲಿ ಒಂದು ಚೈತನ್ಯ ಕಾಣ್ಲಿಕ್ಕೆ ಹತ್ಯಾದ. ಈಗ ಬಾಬಾಬುಡನ್‌ಗಿರೀ ಒಳಾಗ ಏನ್‌ ನಡೀತದ ಅದಕ್ಕ ಒಂದು ಪಕ್ಷ ಮಾಡ್ಲಿಕ್ಕೆ ಹೋಗ್ಲಿಲ್ಲ. ಎಲ್ಲರೂ ಸೇರಿ ಪ್ರತಿಭಟನೆ ಮಾಡಿದ್ರು. ಕ್ರಾಂತಿಕಾರಿ ಶಕ್ತಿ ಬೆಳೀಲಿಕ್ಕೆ ಹತ್ತಿದೆ. ಇದು ಆಗ್ಬೇಕು. ಇಲ್ಲೇನಿದೆ ಒಂದೇ ಓಣಿಯೊಳಗ ಮುಸಲ್ಮಾನ್ರು, ಹಿಂದೂಗಳು ಅಣ್ಣತಮ್ಮಂದ್ರಂಗ ಜೀವನ ಮಾಡಾಕ ಹತ್ತ್ಯಾರ ಅವ್ರೊಳಗ ಭೇಧ ಹುಟ್ಟಿಸ್ಲಿಕ್ಕೆ ಹತ್ತ್ಯಾರ. ಯಾಕ ಮಾಡ್ಬೇಕದು.

ಕರ್ನಾಟಕದಲ್ಲಿ ಆರಂಭದಿಂದ ಈಗಿನವರೆಗೂ ಸಾಗಿ ಬಂದ ಲೋಹಿಯಾವಾದಿ ಸಮಾಜವಾದಿ ಪಕ್ಷಗಳಲ್ಲಿನ ನಾಯಕತ್ವವನ್ನು ಈವರೆಗೂ ಒಬ್ಬ ದಲಿತ ತಗೊಳ್ಳೋಕೆ ಆಗ್ಲಿಲ್ಲ. ದಲಿತರು ಗಮನಾರ್ಹ ಪ್ರವೇಶ ಪಡೆಯೋಕೇ ಸಾಧ್ಯ ಆಗಿಲ್ಲ. ಇವತ್ತಿಗೂ ಕರ್ನಾಟಕದ ಸೋಷಲಿಸ್ಟರು ಅಂದ್ರೆ ಲಿಂಗಾಯಿತರೇ ಹೆಚ್ಚು. ದಲಿತರು ಪ್ರಾತಿನಿಧಿಕವಾಗಿ ಇರಬಹ್ದು. ಆದರೆ ಗಣನೀಯ ಪ್ರಮಾಣದಲ್ಲಿ ಆಗಿಲ್ಲ ಅಂತ?

ಒಪ್ಪುವಂಥ ಮಾತೇ. ಆದ್ರೆ ಇಲ್ಲೇನಾತು, ಅಂಬೇಡ್ಕರ್‌ ದಲಿತರ ವಿಮೋಚನೆಯ ಸಲುವಾಗಿ ಮುಂದಾದಾಗ ಲೋಹಿಯಾರವರು ಏನ್‌ ಹೇಳಿದ್ರು ಅಂಬೇಡ್ಕರ್‌ ಮಹಾಬುದ್ಧಿವಂತ ನಿಜ. ಆದ್ರೆ ಬರೀ ಹರಿಜನ, ಅಸ್ಪೃಶ್ಯ ಸಮಾಜದ ಮುಂದಾಳಾಗ್ಬಾರ್ದು. ದಮನಿತ ಎಲ್ಲಾ ಶೋಷಿತ ಜನರ ನಾಯಕನಾಗ್ಬೇಕು ಅಂತಂದ್ರು. ಅಂಬೇಡ್ಕರ್‌ ಮತ್ತು ಗಾಂಧೀನ ಭೆಟ್ಟಿ ಮಾಡಿಸ್ಲಿಕ್ಕೆ ಲೋಹಿಯಾ ಭಾಳಾ ಪ್ರಯತ್ನ ಮಾಡಿದ್ರು.

ಏನಾತು ಅಂತಂದ್ರೆ, ಈ ಸಮಾಜವಾದಿ ಚಳವಳಿಗೆ ದಲಿತರು ಮತ್ತು ಇತರ ಹಿಂದುಳಿದ ವರ್ಗದ ಸಮಾಜದ ಜನ ಯಾಕೆ ಬರ್ಲಿಲ್ಲ ಅಂತಂದ್ರೆ ತಮ್ಮ ತಮ್ಮ ಸಮಾಜದ ಮುಖಂಡರ ನಾಯಕತ್ವದಲ್ಲಿದ್ರು. ಅದನ್ನೂ ಪೂರಾ ಆಗ್ಲಿಲ್ಲ ಬಿಡ್ರೀ. ಜಗಜೀವನರಾಂ, ಅವ್ರೂ…ಇದ್ದಂಗೆ ಬಹುತೇಕ ಕಾಂಗ್ರೆಸ್ಸಿನ ಪ್ರಭಾವದಲ್ಲೇ ಇದ್ರು. ನನಗೆ ತಿಳಿದಂಗೆ ಈ ಸಮಾಜವಾದಿಗಳು ದಲಿತರನ್ನ ತಗೊಳ್ಳೋಕೆ ವಿಶೇಷ ಪ್ರಯತ್ನ ಏನೇನೂ ಮಾಡ್ಲಿಲ್ಲ. ಮತ್ತು ಆ ವರ್ಗಗಳು ಅಂಬೇಡ್ಕರ ನಮ್ಮ ಮುಖಂಡ ಅಂತ ಹಿಡ್ಕೊಂಡ್ರು. ಹಿಂಗಾಗಿ ಈ ಜನ ಬರ್ಲಿಲ್ಲ ಸಮಾಜವಾದಿ ಚಳವಳಿಯೊಳಗೆ.

ನನಗನ್ನಿಸೋದು, ಕರ್ನಾಟಕದಲ್ಲಿ ಬಹುತೇಕ ಲಿಂಗಾಯಿತ ಸಮಾಜವಾದಿಗಳ ವರ್ಗ ಗುಣ ಕೂಡ ದಲಿತರು ಸಮಾಜವಾದಿ ಪಕ್ಷದಲ್ಲಿ ಬರದಂತೆ ತಡೀತು ಅಂತ. ಅವ್ರು ಬಸವತತ್ವದಂತೆಯೂ ನಡೀಲಿಲ್ಲ. ಜೆ.ಹೆಚ್‌.ಪಟೇಲ, ಮಹೇಶ್ವರಪ್ಪ, ಈಶ್ವರಪ್ಪ ಇವ್ರೆಲ್ಲ. ಇವ್ರು ಲೋಹಿಯಾರವರ ವ್ಯಾಪಕ ತಾತ್ವಿಕತೆಯನ್ನ ಅರ್ಥ ಮಾಡಿಕೊಳ್ಲಿಲ್ಲ. ಅವ್ರು ಹಂಗ ವಚನ ಹೇಳೋದು, ಸ್ವಾಮೀಜಿಗಳಿಗೆ ಅಡ್ಡ ಬೀಳೋದು ಹಿಂಗಾ. ಒಂದ್ಸಲ ಪೂರ್ಣಚಂದ್ರ ತೇಜಸ್ವಿ ಜೆ.ಹೆಚ್‌.ಪಟೇಲ್ರಿಗೆ ಭಾಳಾ ಟೀಕೆ ಮಾಡ್ಬಿಟ್ಟ. ನೀವು ಸಮಾಜವಾದಿಗಳು ಅಂತ ಹೇಳ್ತೀರಿ. ನೀವು ಚಿತ್ರದುರ್ಗದ ಸ್ವಾಮಿಗಳಿಗೆ ಅಡ್ಡಬೀಳ್ತೀರಲ್ಲ. ನಮಸ್ಕಾರ ಯಾಕ ಮಾಡ್ತೀರಿ ಅಂತ. ಅದಕ್ಕ ಪಟೇಲ್ರು “ಏನಾತು? ಒಬ್ಬ ಮನುಷ್ಯನ ದೇಹದ ಒಂದು ಅಂಗ, ಮತ್ತೊಬ್ಬ ಮನುಷ್ಯ ಒಂದು ಅಂಗಕ್ಕೆ ತಾಕಿದರೆ ಏನ್‌ ತಪ್ಪಾತು ಅಂತ. ಈತ ತರ್ಕಪಟು ಜೆ.ಹೆಚ್‌.ಪಟೇಲ್‌ ಅಂದ. ಅವಾಗ ಮತ್ತು ತೋಡಿಕೊಟ್ಟ ತೇಜಸ್ವೀ. ‘ಒಳ್ಳೇದು. ನಿಮ್ಮ ಹಣೆ ಮತ್ತೊಬ್ಬರ ಪಾದಕ್ಕೆ ಬಿದ್ರೆ ಏನೂ ತಪ್ಪಿಲ್ಲ ಅಂತೀರಿ. ಆದ್ರೆ ಒಬ್ಬ ತನ್ನ ಕಾಲಿನಿಂದ ಯಾವನ ಪಾದದ ಮೇಲೆ ಹಣೆ ಇಡ್ಬೇಕಾಗಿದೆಯೋ, ಅವನಿಗೆ ಒದ್ರೇನಾಗ್ತದೆ ಅಂತಾ’ ಕೇಳಿದ. ಅಂದ್ರೆ ಒಬ್ಬ ಭಕ್ತನ ಕಾಲು ಸ್ವಾಮಿಗೆ ಬಡಿದ್ರೆ ಏನಾಗ್ತದೆ ಅಂತಾ. ಹಿಂಗಾಗಿ ಈ ರಾಜಶೇಕರ ಮೂರ್ತಿ ಅವ್ರು ಇವ್ರು ಏನೇನೋ ಮಾಡ್ಬಿಟ್ರು. ಹಿಂಗಾಗಿ ಇವ್ರೆಲ್ಲ ನಿಷ್ಠಾವಂತ ಸಮಾಜವಾದಿಗಳು ಅಲ್ವೇ ಅಲ್ಲ.

ವಿಶ್ವನಾಥ ರೆಡ್ಡಿ ಮುದ್ನಾಳ್ಇವ್ರೆಲ್ಲ ಒಂದು ಕಾಲಕ್ಕೆ ಸಮಾಜವಾದದ ಜೊತೆಗೆ ಗುರುತಿಸಿ ಕೊಂಡವರು…?

ಅಯ್ಯೋ ವಿಶ್ವನಾಥರೆಡ್ಡಿ ಮುದ್ನಾಳ ಅವ್ರೆಲ್ಲಾ… ಛೇ… ಛೇ…. ಛೇ ಅವ್ರೆಲ್ಲಾ ಭಾದ್‌ ಮನ್‌ಷ್ಯಾರು ಅವ್ರೆಲ್ಲ. ತಮಿಗೆ ತಾವು ಸಮಾಜವಾದಿಗಳು ಅಂತಾ ಅಂದುಕೊಂಡ್ರೋ ಏನೋ… ಅವ್ರೆಲ್ಲಾ ಪಟ್ಟಭದ್ರರು…. ಮುದ್ನಾಳ ಗಿದ್ನಾಳ್ ಖಂಡ್ರೆ ಇವ್ರೆಲ್ಲ ಪ್ರಸಿದ್ಧಿಗಾಗಿ ಮಾಡೋ ಮನ್ಷ್ಯಾರು. ಬಸವಣ್ಣನವರ ವಿಚಾರ ಗಿಚಾರ ಏನೂ ಇಲ್ಲ. ಪಟೇಲ ಭಾಳಾ ಮುತ್ಸದ್ಧಿ ರಾಜಕಾರಣಿಯಾಗಿದ್ದ. ಆದ್ರೆ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದಾಗ ಒಬ್ಬ ಸಮಾಜವಾದಿಯಾಗಿ ಏನು ಮಾಡೋಕೆ ಸಾಧ್ಯ ಇತ್ತು ಅದನ್ನ ಮಾಡ್ಲಿಲ್ಲ. ಚಂದ್ರಶೇಖರ ಪ್ರಧಾನಮಂತ್ರಿಯಾಗಿದ್ದ ಮಾಡಬೇಕು ಅಂತಾ ಅಂದ್ಕೊಂಡಿದ್ದ ಆದ್ರೆ ಮಾಡೋಕೆ ಆಗ್ಲಿಲ್ಲ. ಜೆ.ಹೆಚ್‌.ಪಟೇಲ್‌ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದಾಗ, ಲೋಹಿಯಾರ ದಿನಾಚರಣೆ ಮಾಡೋಕೆ ಸಿ. ಚನ್ನಬಸವಣ್ಣ ಅವ್ರೆಲ್ಲ ಲಂಕೇಶರಿಗೆ ಕರೆಯೋಕೆ ಹೋದಾಗ ‘ಅದೇನು ಲೋಹಿಯಾ ದಿನ ಮಾಡ್ತೀರಿ ನೀವು, ಲೋಹಿಯಾವಾದಿ ಅಂದ್ಕೊಂಡು ಪಟೇಲ್ರು ಮುಖ್ಯಮಂತ್ರಿಯಾಗಿ ಅದೆಷ್ಟು ‘ಚಾರಿತ್ರ್ಯಭ್ರಷ್ಟ’ ನಾಗ್ಯಾನ ಅಂತಾ, ಬರಲ್ಲ ಅಂತ ಹೇಳಿ ಕಳ್ಸಿದ್ದ. ದೊಡ್ಡ ದೊಡ್ಡ ಸಮಾಜವಾದಿಗಳೆಲ್ಲ ಭ್ರಷ್ಟರಾಗಿ ಹೋಗ್ಯಾರ, ಲೋಹಿಯಾರ ಹೆಸರನ್ನ ಹಾಳ್‌ ಮಾಡಿಬಿಟ್ಟೀರಿ ಅಂತಾ ಬೈದು ಕಳಿಸಿದ್ದ. ಈಗಂತೂ ಭಾಳಾ ಹದಗೆಟ್ಟು ಹೋಗಿ ಬಿಟ್ಟೈತಿ.

ಕರ್ನಾಟಕದಲ್ಲಿನ ರಾಜಕಾರಣ, ಅಥವಾ ಚಳವಳಿ ನಿಜವಾಗಿ ಸಮಾಜವಾದಿ ಸ್ವರೂಪ ಪಡೀತಾ ಅಂತಾ?

ಈಗ, ಕರ್ನಾಟಕದೊಳಗ ‘ಸಮಾಜವಾದಿ’ ಶಕ್ತಿಯನ್ನು ಹಾಳು ಮಾಡ್ಲಿಕ್ಕೆ ಈ ಸಂಧಿಸಾಧಕ ರಾಜಕಾರಣಿಗಳೆಲ್ಲ ಕಾರಣರಾದ್ರು. ಇವತ್ತಿನ ಮಟ್ಟಿಗೆ ಈ ದೇವೇಗೌಡ ಅವ್ರೆಲ್ಲ ಬಿ.ಜೆ.ಪಿ. ಜೊತೆಗೆ ಸೇರ್ಕಂಡು ಸರಕಾರ ರಚನೆ ಮಾಡ್ತಾರಂದ್ರೆ ಏನದು?