ಅಬ್ಬಿಗೇರಿ ವಿರೂಪಾಕ್ಷಪ್ಪ ಮಾತಿಗೆ ಶುರುವಿಟ್ಟುಕೊಂಡರೆ ಕೇಳುಗರೇ ಸೋಲಬೇಕು ಹೊರತು ಅವರು ದಣಿಯುವದಿಲ್ಲ. ಅಪಾರ ಓದಿನ ಹರವು ಮತ್ತು ವಾಕ್ಪಟುತ್ವಗಳ ಸಮಸಾಮರ್ಥ್ಯ ಹೊಂದಿರುವ ಇವರು ಕರ್ನಾಟಕದ ಸೈದ್ಧಾಂತಿಕ ಸಮಾಜವಾದಿಗಳಲ್ಲಿ ಒಬ್ಬರು. ವೃತ್ತಿಯಲ್ಲಿ ಶಿಕ್ಷಕರಾಗಿದ್ದುಕೊಂಡೇ ಸೇವಾವಧಿಯುದ್ದಕ್ಕೂ ಸಮಾಜವಾದಿ ಚಳವಳಿಯ ವಿದ್ಯಮಾನಗಳನ್ನು ಗಮನಿಸುತ್ತಾ ತಮ್ಮ ಮಿತಿಯಲ್ಲಿಯೇ ಸ್ಪಂದಿಸಿದವರು. ಲೇಖನಗಳು ಮತ್ತು ರೇಡಿಯೋ ಭಾಷಣಗಳ ಮೂಲಕ ಸಮಾಜವಾದಿ ದೃಷ್ಟಿಕೋನವನ್ನು ಪ್ರಸ್ತುತ ಪಡಿಸಿದವರು.

ಸಾಮಾನ್ಯ ಕೃಷಿ ಕುಟುಂಬದಲ್ಲಿ ಹುಟ್ಟಿದ ವಿರೂಪಾಕ್ಷಪ್ಪ ವಿದ್ಯಾರ್ಥಿದೆಸೆಯಲ್ಲಿ ಕ್ವಿಟ್‌ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿ ಬಂಧಿತರಾಗಿದ್ದರು. ೪೦ರ ದಶಕದ ಕೊನೆಯಲ್ಲಿ ಸಮಾಜವಾದಿ ಚಿಂತನೆಗಳತ್ತ ಆಕರ್ಷಿತರಾಗಿ ಕೆಲಕಾಲ ಸಮಾಜವಾದಿ ಪಕ್ಷದ ರೋಣ ತಾಲೂಕಿಇನ ಕಾರ್ಯದರ್ಶಿಯೂ ಆಗಿದ್ದರು. ಕಿಸಾನ್‌ ಪಂಚಾಯತ್‌ ಕಾರ್ಯಕರ್ತರಾಗಿ ಸಂಘಟನೆಯಲ್ಲಿ ತೊಡಗಿಸಿಕೊಂಡು ೧೯೫೦ರಲ್ಲಿ ಲೋಹಿಯಾ ಅವರನ್ನು ಅವರ ಕರ್ನಾಟಕ ಪ್ರವಾಸ ಕಾರ್ಯಕ್ರಮಗಳ ಭಾಗವಾಗಿ ರೋಣಕ್ಕೆ ಕರೆ ತಂದರು. ಮುಂಬೈ ವಿಶ್ವವಿದ್ಯಾಲಯದಿಂದ ಮೆಟ್ರಿಕ್ಯುಲೇಷನ್‌ ಪಡೆದು ಕೆಲಕಾಲ ಗೃಹರಕ್ಷಕದಳದ ಕಾರ್ಯಕರ್ತರಾಗಿಯೂ ಕೆಲಸ ಮಾಡಿ ೧೯೫೨ರಲ್ಲಿ ವೃತ್ತಿಯನ್ನು ಆರಂಭಿಸಿದರು.

ಲುಮಾಂಬಾ ಕೊಲೆ ಪ್ರತಿಭಟಿಸಿ. ಕಾರ್ಯಕ್ರಮವನ್ನು ಸಂಘಟಿಸಿ ಸ್ಥಳೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅಲ್ಲಿನ ಕಾಂಗ್ರೆಸ್‌ ಕಾರ್ಯಕರ್ತರಿಂದ ಹಲ್ಲೆ ಪ್ರಯತ್ನಗಳನ್ನು ಎದುರಿಸಿದರು. ಈ ಕುರಿತು ರಾಷ್ಟ್ರಮಟ್ಟದ ಗಮನಸೆಳೆದು ಇ.ಎಂ.ಎಸ್‌. ಭೂಪೇಶ ಗುಪ್ತಾ, ಮುಖ್ಯೂಮ್‌ ಮೊಹಿದ್ದೀನ್‌ ಮೊದಲಾದವರಿಂದ ಬೆಂಬಲದ ಸಂದೇಶಗಳನ್ನು ಪಡೆದರು.

೧೯೮೦ರಲ್ಲಿ ಶಿಕ್ಷಕ ವೃತ್ತಿಯಿಂದ ನಿವೃತ್ತರಾಗಿ ಪೂರ್ಣ ಪ್ರಮಾಣದಲ್ಲಿ ಅಧ್ಯಯನ ಮತ್ತು ಬರಹಗಳಲ್ಲಿ ತೊಡಿಗಿಸಿಕೊಂಡರು. ಆಳವಾದ ಇಂಗ್ಲಿಷ್‌ ಭಾಷಾಜ್ಞಾನವನ್ನು ಹೊಂದಿರುವ ಅಬ್ಬಿಗೇರಿ ವಿರೂಪಾಕ್ಷಪ್ಪ ತಮ್ಮ ವೃದ್ದಾಪ್ಯದ ದಿನಗಳಲ್ಲೂ ನಿರಂತರ ಅಧ್ಯಯನದಲ್ಲಿ ತೊಡಗಿಸಿಕೊಂಡಿದ್ದಾರೆ. ರಾಜ್ಯ ಸರ್ಕಾರವು ಇವರಿಗೆ ಸುವರ್ಣ ಕರ್ನಾಟಕ ಏಕೀಕರಣ ಪುರಸ್ಕಾರ ಪ್ರಶಸ್ತಿ ನೀಡಿ ಗೌರವಿಸಿದೆ.

*

ಲೋಹಿಯಾವಾದ ಅನ್ನೋದು ಗಾಂಧೀವಾದದ ಮುಂದುವರಿಕೆ ಅಂತನ್ನಿಸೋದಿಲ್ವಾ?

ಲೋಹಿಯಾ ಮೊದಲಿಂದಾ ಗಾಂಧಿಯನ್‌, ಗಾಂಧೀ ನಿಂತಿಲ್ಲ, ನಿರಂತರ ಸಾತತ್ಯ ಅದ. ಆದ್ರ ಅದನ್ನ ಮುಂದುವರಿಸಿಕೊಂಡು ಹೇಗೆ ಹೋಗಬೇಕು ಅನ್ನೋ ದಾರಿ ಲೋಹಿಯಾ ತೋರಿಸಿದ್ರು.

ಅಂದ್ರೆ ಗಾಂಧೀವಾದವನ್ನ ಲೋಹಿಯಾ ವಿಸ್ತಿರಿಸಿದ್ರು, ಸಮಕಾಲೀನಗೊಳಿಸಿದ್ರು ಅಂತನ್ನಬಹುದಾ?

ಹಾಂ, ಹಾಂ ಸರಿ ಇದೆ. ಅದ್ರೆ ಇದನ್ನ ಗಾಂಧೀವಾದಿಗಳೂ ತಿಳ್ಕೊಳ್ಳಿಲ್ಲ, ಲೋಹಿಯಾವಾದಿಗಳೂ ತಿಳ್ಕೊಂಡಿಲ್ಲ ಭಾಳಾ ಮಟ್ಟಿಗೆ.

ಲೋಹಿಯಾ ಮಾರ್ಕ್ಸ್ ವಾದಿ ದೃಷ್ಟಿಕೋನದ ಸಹಾಯವನ್ನೂ ತಗೊಂಡಿದ್ರು ಅಲ್ವಾ?

ಹಾಂ, ಹಿ ವಾಸ್ ನಾಟ್‌ ಆಯಂಟಿ ಮಾರ್ಕ್ಸಿಸ್ಟ್‌, ನಾಟ್‌ ಈವನ್ ಮಾರ್ಕ್ಸಿಸ್ಟ್‌. ಲೋಹಿಯಾರಲ್ಲಿ, ಸ್ವಂತಿಕೆ ಭಾಳ. ಭಾರತದ ರಾಜಕಾರಣಿಗಳಲ್ಲಿಯೇ ಅತ್ಯಂತ ವಿಭನ್ನ ರಾಜಕೀಯ ಚೈತನ್ಯ ಅಂತಂದ್ರೆ ಲೋಹಿಯಾ ಏನಂತೀರಿ? ಈ ನೋಡೀ ಈ ರಾಜಕಾರಣದಲ್ಲಿ ಜಾತೀಯತೆಯ ವಿರುದ್ಧ ಹೋರಾಟ ಸಾಗ್ಬೇಕು ಅಂತ ಮೊಟ್ಟಮೊದಲು ಪಟ್ಟುಹಿಡಿದು ಪ್ರತಿಪಾದನೆ ಮಾಡಿದಂಥ ಧೀಮಂತ ಲೋಹಿಯಾ.

ಆದ್ರೆ ಲೋಹಿಯಾವಾದೀ ಸೈದ್ಧಾಂತಿಕ ರಾಜಕಾರಣದ ಗತಿಯ ಬದಲಾವಣೆಗೆ ಕಾರಣ ಏನಂತೀರಿ?

ಅದಕ್ಕೆ ಕಾರಣ ಅಂತಂದ್ರೆ ಈ ಸಂಧಿಸಾಧಕ ರಾಜಕಾರಣಿಗಳು. ಯಾಕಂದ್ರೆ ಲೋಹಿಯಾರ ಜತೆಗಿದ್ದವರು, ಲೋಹಿಯಾರ ಹೆಗಲಿಗೆ ಹೆಗಲು ಹಚ್ಚಿ ಕೆಲಸ ಮಾಡಿದಂಥವರು, ಲೋಹಿಯಾರ ಹೆಜ್ಜೆಗಳಲ್ಲಿ ಹೆಜ್ಜೆಯಿಟ್ಟು ಸಾಗಿದಂಥವರು ಮುಂದೆ ಬರ್ಲಿಲ್ಲ ಅದು ಭಾಳ ದುರಂತ. ಎಂಥಾ ಕ್ರಾಂತಿಕಾರಿಗಳೂ ಎಂಥಾ ಲೋಹಿಯಾವಾದಿಗಳೂ ಇವತ್ತು ಏನಾಗ್ಬಿಟ್ಟರಲ್ಲ ಅಂತಾ ಅನ್ನಿಸ್ತದೆ. ಉದಾಹರಣೆಗೆ ಫರ್ನಾಂಡೀಸ್‌. ಫರ್ನಾಂಡೀಸ್‌ ತುಂಬಾ ದೊಡ್ಡ ಮನುಷ್ಯ. ಆ ಮಾತು ಬೇರೆ. ಆದರೆ ಏನ್‌ ಮಾಡಿಬಿಟ್ರು. ಇವ್ರು, ಏನ್‌ ದಾರಿ ತಪ್ಪಿ ಬಿಟ್ರು ಏನ್‌ ಹೇಳ್‌ಬಿಟ್ರು ನಾನ್‌ ಮಾಡಿದ್ದಾ ಸರಿ, ನಾನ್‌ ವಾಜಪೇಯಿ ಹಿಂದ ಹೋಗಿದ್ದ ಸರಿ, ಬಿಜೆಪೀನೂ ಸರಿ ಅಂತಿದ್ದಾರೆ. ಅವ್ರೇನು ಒಂಥರದ ಬುದ್ಧಿವಂತಿಕೆ ಇದೆ, ತಮ್ಮ ನಿಲುವನ್ನು ತಾವು ಸಮರ್ಥಿಸಿಕೊಂಡುಬಿಡ್ತಾರೆ. ಜನ್ರನ್ನ ಮರಳು ಮಾಡಿ ಬಿಡ್ತಾರೆ. ಜನ್ರಲ್ಲಿ ವಿಮರ್ಶಕ ದೃಷ್ಟಿಯಿಂದ ನೋಡೋ ಬುದ್ಧಿ ಇಲ್ಲ, ಅದಕ್ಕೆ ಜನ್ರನ್ನ ದಾರಿ ತಪ್ಪಿಸ್ತಾರೆ ಇವ್ರು. ಅದಕ್ಕೆ ಈ ಸಮಾಜವಾದಿ ಪಕ್ಷ ಭಿನ್ನ, ವಿಭನ್ನ ಆಯ್ತು ಏನಂತೀರಾ. ಇದು ಸಮಾಜವಾದಿ ಪಕ್ಷದ ದುರಂತ ಅಂತ ಹೇಳ್ಬೇಕು.

ದುರಂತ ಬೇರುಗಳು ಇರೋದೆಲ್ಲಿ? ‘ಸಿದ್ಧಾಂತದೊಳಗೇನಾ ಅಥವಾ ಅದನ್ನ ಅರ್ಥೈಸಿಕೊಳ್ಳುವ, ಅನ್ವಯಿಸುವ ಕ್ರಮದಲ್ಲಿನಾ?

ಇಲ್ಲ. ಸಿದ್ಧಾಂತದೊಳಗ ಏನೂ ಲೋಪ ಇಲ್ಲ. ಸಿದ್ಧಾಂತದ ಮೂಲ ನೆಲೆ ಏನದೆ ಅದನ್ನ ತಿಳಿದುಕೊಳ್ಳೋದಕ್ಕೆ ಸಮಾಜವಾದಿಗಳು ತಪ್ಪಿದ್ರು. ಸೋಷಲಿಸಂ ಶುಡ್‌ ನಾಟ್‌ ಬಿ ಎ ಬಾರೋಡ್‌ ಥಿಂಗ್‌, ಅದೊಂದು ಜೀವಂತ ತತ್ವವಾಗಿ ಬೆಳೆದು ಬರ್ಬೇಕು. ಅದರ ಡೈನಮಿಕ್‌ ಇಂಟರ್‌ ಪ್ರಿಟೇಶನ್‌ ಮಾಡೋದ್ರಲ್ಲಿ ತಪ್ಪಿಬಿಟ್ರು. ಈ ದೃಷ್ಟಿಯಿಂದ ಸಮಾಜವಾದದ ಸಿದ್ಧಾಂತದೊಳಗಾ ಲೋಪ ಇದೆ ಅನ್ನೋದನ್ನ ಒಪ್ಲಿಕ್ಕೆ ಆಗೋದಿಲ್ಲ. ಸಮಾಜವಾದದ ಮೂಲ ತಾತ್ವಿಕ ಜೀವ ಸೆಲೆ ಏನಿದೆ ಅದನ್ನ ಕಂಡುಕೊಳ್ಳಲಿಕ್ಕೆ ಈ ಸಮಾಜವಾದಿಗಳು ತಪ್ಪಿದ್ರು ಅನ್ನಿಸ್ತದೆ. ಇದೂ ಒಂದು. ಸಮಾಜವಾದವನ್ನ ಸರಿಯಾಗಿ ಅರ್ಥೈಸಿಕೊಂಡು ಅದನ್ನ ಈ ಭಾರತ ಸಂದರ್ಭದೊಳಗ ಅವಳವಡಿಸಿಕೊಂಡು ರಾಜಕೀಯದೊಳಗ ಸಾಗಬೇಕು, ಅಂಥಾ ಸಮರ್ಥರಿದ್ದರು. ಉದಾಹರಣೆ ಜೆ.ಪಿ. ಯವರಿದ್ರು, ನರೇಂದ್ರ ದೇವ ಇದ್ರು, ಅಚ್ಯುತ ಪಟವರ್ಧನ್‌ ಇದ್ರು, ಅರುಣಾ ಅಸಫ್‌ ಅಲಿ ಇವರೆಲ್ಲ ಸ್ವಲ್ಪ ಭಿನ್ನತೆ ಇದ್ದು ಬೇರೆ ಬೇರೆ ಆಗಿಬಿಟ್ರು. ಹೇಳ್ಬೇಕಂದ್ರೆ ಸಮಾಜವಾದಿ ಪಕ್ಷವನ್ನು ಇಂಡಿಯಾದೊಳಗೆ ಕಟ್ಟಿದಂಥ ಮೊಟ್ಟ ಮೊದಲ ಧೀಮಂತ ಕ್ರಾಂತಿ ವಿಭೂತಿ ಅಂತಂದ್ರೆ ಜೆ.ಪಿ. ಆದ್ರೆ ಜೆ.ಪಿ.ಗೆ ಏನಾತು ಮುಂದೆ ಹೇಳ್ರಿ? ೧೯೫೨ರೊಳಗೆ ಬೋಧಗಯಾದೊಳಗೆ ವಿನೋಭಾಜಿಯವರ ಪ್ರವಚನ ಕೇಳಿ ಈ ರಾಜಕೀಯ ಬೇಡ ಅಂತಿಳ್ಕೊಂಡು ಸರ್ವೋದಯಕ್ಕೆ ಹೋದ್ರು. ಅಲ್ಲಾ…ಎಂಥಾ ರಾಜಕಾರಣಿ ಏನಾಗ್ಬಿಟ್ನಲ್ಲ ಅಂತಾ.

ಅದೊಂದು ತಪ್ಪು ಹೆಜ್ಜೆ ಅಂತಾ ವಿಷಾದಿಸ್ತೀರಾ?

ಅದು ತಪ್ಪು ಹೆಜ್ಜೆ ಅಂತಾ ಅವಸರದಲ್ಲಿ ನಿರ್ಣಯಿಸೋಕೆ ಆಗೋದಿಲ್ಲ ಭಾಷಾರವರೆ. ಅದನ್ನ ‘ಸಮಾಜವಾದದಿಂದ ಸರ್ವೋದಯದ ಕಡೆಗೆ’ ಅಂತಾ ಒಂದು ಪುಸ್ತಕ ಬರೆದಿದ್ದಾರೆ ಜೆ.ಪಿ..ಅದನ್ನ ನೋಡಿದ್ರೆ ಗೊತ್ತಾಗ್ತದೆ. ಏನೋ ಒಂದು ಅತ್ಯಂತ ಗೂಢವಾದ ಆಧ್ಯಾತ್ಮಿಕ ಸತ್ಯದ ಅವಿಷ್ಕಾರ ಅವ್ರಿಗೆ ಆಗೇದ ಅಂತಾ ಗಾಂಧೀಜಿ ಹೇಳ್ತಾರ.

ಯಾರಿಗೆ?

ಜೆ.ಪಿ.ಯವರಿಗೆ. ಯಾಕಂದ್ರೆ ಆ ಸಾಕ್ಷಾತ್ಕಾರ ಮತ್ತು ಜೀವನದ ಪರಾತ್ಪರ ಸತ್ಯದ ಮಾತೇನಿದೆಯಲ್ಲ ಅದನ್ನ ತಿಳ್ಕೋಳ್ಳಿಕ್ಕೆ ಬರೋದಿಲ್ಲ. ಇಟ್‌ ಈಸ್‌ ಟುಬಿ ರಿಯಲೈಸ್ಡ್‌. ಅದನ್ನ ಅನುಭವಿಸಬೇಕಾಗ್ತದೆ. ಸಕ್ಕರೆ ಎಷ್ಟು ಸಿಹಿಯಾಗಿದೆ ಅಂತಿಳ್ಕೊಂಡು ಅದನ್ನ ಡಿಗ್ರಿಯೊಳಗೆ ಹೇಳ್ಲಿಕ್ಕೆ ಬರೋದಿಲ್ಲ. ಹಿಂಗ, ಆ ಸರ್ವೋದಯದ ಸಾಕ್ಷಾತ್ಕಾರದ ವಿಚಾರ ಅವ್ರು ಹೇಳ್ತಾರ.

ಲೌಕಿಕತೆಯಿಂದ ಆಧ್ಯಾತ್ಮಿಕದೆಡೆಗಿನ ಪಯಣ ಒಂದು ರೀತಿ?

ಅಂದ್ರೆ ಸರ್ವೋದಯದೊಳಗೆ ವಿನೋಬಾ ಹಂಗೆ ಹೇಳ್ತಾರೆ. ಸ್ಥಿತಿ ಪ್ರಜ್ಞಾವಸ್ಥೆ ವಗೈರೆ ಇದನ್ನೆಲ್ಲ. ಆದ್ರೆ ಇದು ಏನದೆ ಕಲಬೆರಕೆ ಆಗಿಬಿಡ್ತು. ಈ ಜೆ.ಪಿ.ಯವರು ಆಧ್ಯಾತ್ಮಕ್ಕೆ ಮಾರುಹೋಗಿ ಸರ್ವೋದಯಕ್ಕೆ ಹೋಗೋದು ತಪ್ಪು ಅಂತಾ ಕಾಣಿಸ್ತದೆ. ಆದ್ರೆ ಅವ್ರ ದೃಷ್ಟಿಯೊಳಗೆ ಹಾಗಿರ್ಲಿಲ್ಲ. ಇದೇ ರೀತಿಯಿಂದ ಮತ್ತೊಂದು ತಪ್ಪು ಮಾಡಿದ್ರು ಅಚ್ಯುತ್‌ ಪಟವರ್ಧನ್‌. ೧೯೪೨ರ ಕ್ವಿಟ್‌ ಇಂಡಿಯಾ ಕ್ರಾಂತಿಯೊಳಗೆ ಅದಕ್ಕೊಂದು ಚಾರಿತ್ರಿಕ ಕೀರ್ತಿ ಬರ್ಬೇಕಾದ್ರೆ ಸಮಾಜವಾದಿ ಪಕ್ಷದ ಮುಖಂಡ್ರು ಮಾಡಿದ ಕೆಲಸ ಭಾಳ ದೊಡ್ಡದು. ಹೌದಲ್ರೀ. ಜೆ.ಪಿ.ಯವರು ಹಜಾರಿಬಾಗ್‌ ಜೈಲ್ ಒಡೆದು ಹೊರಗ ಬಂದಿದ್ರು. ಅವರ ಜೊತೆಗಿದ್ದವರು ಬಿಹಾರದ ಬಹುದೊಡ್ಡ ಕೃಷಿಕ ನೇತಾರ ರಮಾನಂದನ ಮಿಶ್ರ. ಅರುಣಾ ಅಸಫ್ ಅಲಿಯಂತೂ ಬಾಂಬ್‌ ತಯಾರ ಮಾಡ್ದಾಕಿ. ಗೊತ್ತಿರಬೇಕಲ್ಲ. ಅಚ್ಯತ್ ಪಟವರ್ಧನ್‌ ಭಾಳ ಬುದ್ಧಿವಂತ ಮನುಷ್ಯ. ಅವರಿಗೇನಾಯ್ತೋ ಏನೋ ಮಾರಾಯ್ರಿಗೆ ಆತ ಜಿಡ್ಡು ಕೃಷ್ಣಮೂರ್ತಿಯವರ ಭಕ್ತನಾದ. ಅಲ್ಲಿ ಅವರು ವಾರಣಾಸಿಗೆ ಹೋಗಿ ಆಶ್ರಮದಾಗೋ ಏನೋ ಹೋಗಿ ಬಿಟ್ರು. ಆ ಮೇಲೆ ರಮಾನಂದನ ಮಿಶ್ರ ಅವರೂ ಸರ್ವೋದಯಕ್ಕ ಹೋಗಿಬಿಟ್ರು. ಏನಾತ್ರೀ… ಇಂಥಿಂಥಿ ಧೀರ ಸಮಾಜವಾದಿ ನೇತಾರರು ಪಕ್ಷ ಬಿಟ್ಬಿಟ್ರು. ಆಚಾರ್ಯ ನರೇಂದ್ರದೇ ದೇವ್ರಿಗೆ ಮುಪ್ಪುನೂ ಭಾಳಾ ಆಗಿತ್ತು. ಅವ್ರಿಗೂ ಆಮೇಲೆ ಏನೂ ಮಾಡ್ಲಿಕ್ಕಾಗ್ಲಿಲ್ಲ. ಅವ್ರಲ್ಲಿ ಏಕೈಕ ವೀರನಾಗಿ ಹೋರಾಟ ಮಾಡ್ಲಿಕ್ಕೆ ಭಾರತೀಯ ರಾಜಕಾರಣದೊಳಗೆ, ಒಬ್ಬ ಶಕ್ತಿವಂತ ವ್ಯಕ್ತಿಯಾಗಿದ್ದವರಪ್ಪಾ ಅಂದ್ರೆ ನಮ್ಮ ಲೋಹಿಯಾ ಏನಂತೀರಾ?

ಅವ್ರು ಆಧ್ಯಾತ್ಮಕ ಪ್ರಭಾವಕ್ಕೆ ಸಿಲುಕಲಿಲ್ಲ?

ಆಧ್ಯಾತ್ಮದ ಪ್ರಭಾವಕ್ಕೆ ಸಿಲುಕಿಲಿಲ್ಲ… ಆದ್ರೆ ಕೊನೆ ಕೊನೆಗೆ ಏನಿದೆಯಲ್ಲ ಒಂದು ಸ್ಪಿರಿಚ್ಯುವಲ್‌ ಈಕ್ವಾಲಿಟಿ ಅಂತಮ ಬರ್ತದೆ. ಆಧ್ಯಾತ್ಮಿಕ ಸಮತಾಭಾವ ಬರ್ತದೆ, ಲೋಹಿಯಾರೊಳಗೆ. ಅದನ್ನ ನೋಡ್ಬೇಕು. ಆದ್ರೆ ಸಾಂಪ್ರದಾಯಿಕವಾಗಿ ಆಧ್ಯಾತ್ಮ ಆಧ್ಯಾತ್ಮ ಅಂತಾ ಏನಂತಾರ, ಅಂತಾ ಆಧ್ಯಾತ್ಮವಾದಿ ಯಾಗಿರ್ಲಿಲ್ಲ. ಅಷ್ಟೇ ಅಲ್ಲ ಆಧ್ಯಾತ್ಮ, ವೇದಾಂತ ಮತ್ತು ಪಾರಮಾರ್ಥಿಕ ವಿಚಾರಗಳಿಗೆ ಛಲೋ ವೈಚಾರಿಕ ಪೆಟ್ಟು ಕೊಟ್ಟವರಪ್ಪಾ ಅಂತಂದ್ರೆ ಲೋಹಿಯಾರವರು.

ಸಮಾಜವಾದ ಅನ್ನೋದು ಭೌತಿಕ ವಾಸ್ತವವಾದಿ ಚಿಂತನಾಕ್ರಮವಾಗಿ ಬಂತು. ಆದ್ರೆ ಭಾರತದ ಸಂದರ್ಭ ಅದರ ಒಳಗೆ ಸೂಕ್ಷ್ಮಸ್ತರದಲ್ಲಿ ಭಾವನಾವಾದೀ…’ ಅಂಶಗಳು ಉದಾಹರಣೆಗೆಸ್ಪಿರಿಚುವೆಲ್ಈಕ್ವಾಲಿಟಿ’, ಜೆ.ಪಿ. ಮನಗಂಡಸರ್ವೋದಯವಾಗಲಿ…. ಇಂಥವೆಲ್ಲ ಅಂತರ್ಗತವಾಗಿದ್ದವು. ಅಚ್ಯುತ ಪಟವರ್ಧನ್ ಜಿಡ್ಡು ಕೃಷ್ಣಮೂರ್ತಿ ಅವರ ಹಿಂದೆ ಹೋಗಿದ್ದು ಒಂದು ಉದಾಹರಣೆ ಅನ್ಬೇಕು. ಹೀಗೆ ಭಾರತೀಯ ಸಮಾಜವಾದ ತನ್ನೊಳಗಿನ ವೈರುಧ್ಯಗಳಿಗೆ ಉತ್ತರ ಕಂಡುಕೊಳ್ತಾ?

ಸರಿ, ಸರೀ, ಈಗೇನದೆ ಈ ವಾಸನೆ ಮತ್ತು ವಿಕಾರದಿಂದ ಮನುಷ್ಯನ ಚಾರಿತ್ರ್ಯದೊಳಗೆ ವ್ಯತ್ಯಾಸವಾಗ್ತದೆ, ಅಂತಂದು ಭಾರತೀಯ ಪಾರಮಾರ್ಥಿಕ ವಿಚಾರಧಾರೆ ಹೇಳ್ತದೆ. ಆದ್ರೆ ಈ ಭೌತವಾದದೊಳಗೆ ಮಾರ್ಕ್ಸ್‌ ಹಾಗೆ ಹೇಳ್ಲಿಲ್ಲ ಅದಕ್ಕೆ ಲೋಹಿಯಾ, ಉಪನಿಷತ್ತಿನ ಒಂದು ಶ್ಲೋಕವನ್ನು ಉದಾಹರಿಸಿ, ಈ ವಿಷಮತೆಗೆ ಮೂಲಕಾರಣ ಏನಿದೆಯಲ್ಲ ಅದು ವಾಸನಾ ಭಾವ. ಈ ವಾಸನಾ ಭಾವವನ್ನ ಮೀರ್ಬೇಕು ಅಂತ ಅಂದ್ರು. ವಾಸನೆಗಳು ಅಂತಂದ್ರೆ ಏನು? ರಾಗ, ರತಿ, ಮೋಹ, ಮಾಯೆ, ಆಸೆ, ಆಮಿಷಗಳು ಕೂಡಿದ ಭ್ರಾಮಕ ಮನೋಭಾವ ಏನಿದೆಯಲ್ಲ, ಈ ವಾಸನೇಗಳೇ ಹೋಗೋ ಹಂಗೆ ಆಗ್ಬೇಕು. ಅದಕ್ಕೆ ಮನುಷ್ಯನಿಗೆ ಅವನ ಪ್ರಾಣಕ್ಕೆ ಒಳ್ಳೇ ಸಂಸ್ಕಾರ ಸಿಗಬೇಕು ಅಂತಿಳ್ಕೊಂಡು ಹೀಗೂನು ಒಂದು ಕಡೆ ಪ್ರತಿಪಾದನೇ ಮಾಡ್ತಾರೆ ಲೋಹಿಯಾರವರು. ಮಾರ್ಕ್ಸ್ ಏನಿದ್ದಾನಲ್ಲ, ಮನುಷ್ಯನ ಸ್ವಭಾವ ತಿದ್ದಲಿಕ್ಕೆ ಆಗದಂಥ ಕೆಟ್ಟದ್ದದೆ ಅಂತಾ ಹೇಳ್ತಾನೆ. ಈ ದೃಷ್ಟಿಯಿಂದ ನೋಡಿದ್ರೆ ಆಧುನಿಕ ಯುರೋಪಿನ ನಾಗರಿಕತೆ ಅಭಿವೃದ್ಧಿ ಒಂದು ರೀತಿ ಭ್ರಮಾಲೋಕದಲ್ಲಿ ಅಂತಾ. ಒಂದು ಶಾಂತಿ, ಒಂದು ತೃಪ್ತಿ, ಇಲ್ಲ ಅಂತಂದು. ಲೋಹಿಯಾ ನಮ್ಮನೇಗೆ ಬಂದಿದ್ರು. ಒಳ್ಳೇ ಮಾನವೀಯ ಅಂತಃಕರಣ, ಕರುಣಾಭಾವ ಭಾಳ ಇತ್ತು ಹೇಳ್ಬೇಕಂತಂದ್ರೆ. ಭಾಳಾತನ ಕುಂತಿದ್ರು ಲೋಹಿಯಾ.

ಲೋಹಿಯಾ ಅವರೊಂದಿಗೆ ಒಂಬತ್ತು ತಾಸು ಅಂತಾ ನೀವು ಒಂದುಕಡೆ ಬರೆದ್ರೀ?

ಹೌದೌದು, ಬರ್ದೆ, ಆಮೇಲೆ ‘ಸಂಕ್ರಮಣ’ದಲ್ಲಿ, ಲೋಹಿಯಾ ವ್ಯಕ್ತಿ ಮತ್ತು ವಿಚಾರ ಕುರಿತು ವಿಶೇಷಾಂಕ ತರ್ತೀನಿ ಕಳಿಸ್ರೀ ಅಂತಾ ಚಂಪಾ ಬರ್ದಾಗ, ಅದೇ ಲೇಖನ ಹಿಗ್ಗಿಸಿ ಬರ್ದೆ. ‘ಲೋಹಿಯಾ, ನಾನು ಕಂಡಂತೆ…’ ಹೀಗೆ ಬರ್ದೆ. ಲೋಹಿಯಾ ಅವರ ನೋಟ, ಮಾಟ, ನಡೆ ನುಡಿ ಇವನ್ನೆಲ್ಲ. ಅವರ ವೈಚಾರಿಕ ನಿಲುವಿನ ಬಗ್ಗೆ ಒಂದೆರಡು ರೇಡಿಯೋ ಟಾಕ್‌ ಕೂಡ ಕೊಟ್ಟೆ ಆದ್ರೆ ಇವತ್ತು ಭಾಳಾಮಟ್ಟಿಗೆ ಆ ವಿಚಾರ ಸಾಕಾರ ಆಗವಲ್ದಲ್ಲಾ ವಿಶೇಷವಾಗಿ ಯುವ ಪೀಳಿಗೆ ಮನಸ್ಸು ಮಾಡ್ಬೇಕು. ಹೇಳ್ಬೇಕಂತಂದ್ರೆ.

ಯುವ ಪೀಳಿಗೆ ಇವತ್ತು. ‘ಬಹುಮುಖಆಕರ್ಷಣೆಗಳಲ್ಲಿ ಸಿಕ್ಕಿ ಹಾಕಿಕೊಂಡಿದೆ ಅನ್ಸುತ್ತೆ?

ಯಾಕಾ ಇರ್ಲೀ. ಯಾಕಾಗವಲ್ದು ಅವರಿಗೆ ಇವತ್ತು ಅವರಿಗೆ ಎಷ್ಟು ಅವಕಾಶಗಳು ಇದ್ದಾವಲ್ಲ, ನಾವೆಲ್ಲ ನೋಡ್ರೀ ಕಿತ್ತು ತಿನ್ನೋ ಬಡತನದೊಳಗ ಇದ್ರೂ ಚಳವಳಿಯೊಳಗ ಬಂದ್ವೀ ನಾನೊಬ್ಬ ಸ್ವಾತಂತ್ರ್ಯ ಯೋಧ…ಗೊತ್ತಲ್ಲಾ?

ಗೊತ್ತು, ಗೊತ್ತು ಸಾರ್‌. ನೀವು ಕ್ವಿಟ್ಇಂಡಿಯಾ ಮೂವ್ಮೆಂಟ್ನಲ್ಲಿ ಭಾಗವಹಿಸಿ ಜೈಲಿನಲ್ಲಿದ್ದದ್ದು, ಅಲ್ಲಿ ಬಸವರಾಜ ಕಟ್ಟೀಮನಿಯವರ ಸಂಪರ್ಕಕ್ಕೆ ಬಂದಿದ್ದು, ಕಟ್ಟೀಮನಿಯವರೇ ತಮ್ಮ ಆತ್ಮ ಚರಿತ್ರೆಯಲ್ಲಿ ನಿಮ್ಮನ್ನು ಪ್ರಸ್ತಾಪಿಸಿದ್ದಾರ?

ಹಾಂ, ಹೌದೌದು ನಿಮಗೆ ಹ್ಯಾಗೆ ಗೊತ್ತಾಯ್ತು? ಬಸವರಾಜ ಕಟ್ಟೀಮನಿ ನಮಗ ಭಾಳ ಇದುರಿ. ಜೈಲಿನೊಳಗೆ ನಾವು ಜೊತೆಗೇ ಇದ್ವಿ. ಕಟ್ಟೀಮನಿಯವರ ‌ಪ್ರೇರಣೆ ಭಾಳ ಆಯ್ತು ನನಗೆ. ಇಲ್ಲಿಗೆ ಬಂದಿದ್ರು ಅವ್ರೆಲ್ಲ. ಭಾಳಾ ದೊಡ್ಡಮನುಷ್ಯ. ಕನ್ನಡ ಸಾಹಿತ್ಯದೊಳಗ ಮೊಟ್ಟ ಮೊದಲು ಬಂಡಾಯದ ಬಾವುಟವನ್ನು ಎತ್ತಿದಂಥ ಧೀಮಂತ ಬಸವರಾಜ ಕಟ್ಟೀಮನಿ. ಅವರೇನದಲ್ಲ ಬರೇ ಬರೀಲಿಲ್ಲ. ಬರ್ಕೋತ ಭಾಳಾ ಹೋರಾಟ ಮಾಡಿದ್ರು. ಧಾರವಾಡದಾಗ ಇರೋ ಹೊತ್ನ್ಯಾಗ “ಸೆರೆಯಿಂದ ಹೊರಗೆ” ಅಂತಾ ಒಂದು ಕಥೆ ಬರೆದು, ಪತ್ರಿಕೆಯೊಳಾಗ ಪ್ರಕಟಣೆಗೆ ಕೊಟ್ಟಾಗ ಹಾವೇರಿ ಪೇಟೆಯೇನಿದೆಯಲ್ಲ, ಅಲ್ಲಿ ಮೃತ್ಯುಂಜಯ ಸ್ವಾಮಿಗಳ ಭಕ್ತರೆಲ್ಲ ಅವರನ್ನ ಹೊಡಿಯಾಕ ಬಂದ್ರು. ಯಾಕಂದ್ರೆ… ‘ಸೆರೆಯಿಂದ ಹೊರೆ’ ಅಂದ್ರೆ ಮುರುಘಾಜೇಂದ್ರ ಸ್ವಾಮಿಗಳ ಬೋರ್ಡಿಂಗ್ ನೊಳಗೆ ಒಬ್ಬ ಹುಡಗ ಇತ್ತಾನೆ. ಆಚಾರ ಕಟ್ಟು ನಿಟ್ಟಿನಲ್ಲಿ ಬಂಧಿಯಾಗಿರ್ತಾನೆ. ಬೋರ್ಡಿಂಗ್ ಒಳಗಿನ ಕರಾಳ ದೌರ್ಜನ್ಯವನ್ನು ಆ ಹುಡುಗ ಹೇಳ್ತಾನೆ. ಆ ಕತೆ, ‘ಜಯಂತಿ’ ಪತ್ರಿಕೆಯಲ್ಲಿ ಪ್ರಕಟವಾಯ್ತು. ಬೆಟಗೇರಿ ಕೃಷ್ಣಶರ್ಮ ಸಂಪಾದಕರು. ಆಮೇಲೆ… “ಜರತಾರಿ ಜಗದ್ಗುರು”, ಉರವಕೊಂಡು ಸ್ವಾಮಿಗಳ ಬಗ್ಗೆ ಬರೆದ್ರು, ಏನವಾಗ ಉರವಕೊಂಡ ಸ್ವಾಮೀನ ಆಧುನಿಕ ವಿದ್ಯಾರಣ್ಯ ಅಂತಾ ಮೆರೆಸಿ ಬಿಟ್ರು.

ಜೆ.ಹೆಚ್‌. ಪಟೇಲರು ಅವರ ಶಿಷ್ಯರಾಗಿದ್ರು ಅಲ್ವಾ?

ಇವರೆಲ್ಲ ಲಿಂಗವಂತ್ರು ಕೂಡ್ಕಂಡು ಒಂದ್‌ನಮೂನಿ ಅವರನ್ನ ಮೆರೆಸಿದ್ರು, ಸ್ವಾಮೀನ. ಇವರ ಬಗ್ಗೆ ಕಟ್ಟೀಮನಿ ‘ಜರತಾರೀ ಜಗದ್ಗುರು’ ಬರೆದ್ರು, ಇವರ ಪ್ರೇಯಸಿಯವರ ಬಗೆಗೆಲ್ಲಾ ಬರೆದು ಬಿಟ್ಟಿದ್ರು. ಅವಾಗ ಗುಂಡು ಹಾಕೋಕೆ ಹೋಗಿದ್ರು ಕಟ್ಟೀಮನಿಯವರಿಗೆ. ಎ ರೈಟರ್‌ ಶುಡ್‌ ಬಿ ಫೈಟರ್‌ ಅಂತಾರಲ್ಲ, ಹಂಗೆ ಅವ್ರು ಕ್ವಿಟ್‌ ಇಂಡಿಯಾ ಚಳವಳಿಯೊಳಗ ಭಾಳಾ ಕೆಲಸ ಮಾಡಿದ್ರು.

ಸಾರ್‌, ನಿಮ್ಮ ಮನಿತನದ ಹಿನ್ನೆಲೆ ಹೇಳ್ರೀ?

ಹಾ…. ಕೇಳ್ರೀ… ನಮ್ಮ ತಂದೆ ಒಬ್ಬ ಒಕ್ಕಲಿಗ. ಕೃಷಿಕರು ಅನ್ನೋದಕ್ಕಿಂತ ಕೃಷಿ ಕಾರ್ಮಿಕ ಮನೆತನದವರು. ನಂದು ಪ್ರಾಥಮಿಕ ಶಿಕ್ಷಣ ಇಲ್ಲೇ ಆತು ಬಿಡ್ರೀ. ಆಮ್ಯಾಲೆ ನಾನಿನ್ನೂ ಪ್ರಾಥಮಿಕ ಶಾಲೆಯೊಳಗೆ ಓದ್ತಿದ್ದಾಗೇನೆ ಕೆಲವು ರಾಷ್ಟ್ರೀಯ ಮುಖಂಡ್ರು ಈ ಕಡೆಗೆ ಬರ್ತಿದ್ರು ಏನ್ರೀ. ಸ್ವಾತಂತ್ರ್ಯ ಹೋರಾಟದ ನೇತಾರರು. ಮುಖ್ಯವಾಗಿ ದೊಡ್ಡಮೇಟಿ ಅಂದಾನಪ್ಪ ನಮ್ಮ ತಾಲೂಕಿನವರು. ಅಂದಾನಪ್ಪ ದೊಡ್ಡ ಮೇಟಿಯವರು ರೋಣ ತಾಲ್ಲೂಕಿನವರು ಅಂತ ಮಾತ್ರ ಅಲ್ಲ, ಆಧುನಿಕ ಕರ್ನಾಟಕದ ನಿರ್ಮಾಪಕರಲ್ಲಿ ಒಬ್ಬರು. ಕರ್ನಾಟಕ ಏಕೀಕರಣಕ್ಕಾಗಿ ಹೋರಾಟ ಮಾಡಿದ ಧೀಮಂತ ಪುರುಷ. ಅವಾಗ ಅವರ ಭಾಷಣ ಕೇಳ್ತಿದ್ದೆ. ಅವರ ಭಾಷಣ ಮತ್ತೆ ಹೊಸಮನಿ ಸಿದ್ದಪ್ಪ ಅವರ ಭಾಷಣ, ಇಂಥವ್ರೆಲ್ಲರ ಭಾಷಣ ಕೇಳಿದ ಮ್ಯಾಲೆ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕುವ ಪ್ರೇರಣೆಯಾಗ್ತಿತ್ತು.

ನನ್ನ ಪ್ರಾಥಮಿಕ ಶಿಕ್ಷಣ ಮುಗಿಸ್ಕೊಂಡು ಮಾಧ್ಯಮಿಕ ಶಿಕ್ಷಣಕ್ಕಂತ ಗದಗಿಗೆ ಹೋದೆ. ಅಲ್ಲಿಂದ, ನವಲುಗುಂದಕ್ಕ ಹೋದ್ಮೇಲೆ ೪೨ರ ಕ್ವಿಟ್‌ ಇಂಡಿಯಾ ಚಳವಳಿ ಪ್ರಾರಂಭ ಆತು. ಆವಾಗ್ಲೆ ನಮಗೆ, ಬಡ ಮಕ್ಕಳಿಗೆ ವಿದ್ಯಾಭ್ಯಾಸಕ್ಕಂತ ಅನುಕೂಲತೆಗಳಿರ್ಲಿಲ್ಲ. ಇಡೀ ರೋಣ ತಾಲೂಕಿನ್ಯಾಗ ಯಾವೊಂದು ಊರಿನ್ಯಾಗೂ ಮಾಧ್ಯಮಿಕ ಇಂಗ್ಲೀಷ್‌ ಸ್ಕೂಲು ಇರ್ಲಿಲ್ಲ. ಅವಾಗ ನವಲುಗುಂದದಾಗ ಬೋರ್ಡಿಂಗು ವಗೈರೆ ಇರ್ಲಿಲ್ಲ. ನಾನು ರೋಣದಾಗ ಓದ್ತಿರಬೇಕಾದ್ರೆ ವಾರಾನ್ನದ ಮನೆಯಲ್ಲಿ ಊಟ ಮಾಡಿದೆ ಇರ್ಲೀ, ಅಲ್ಲಿಂದ ನವಲುಗುಂದಕ್ಕೆ ಹೋದಮ್ಯಾಲೆ ಅಲ್ಲಿ ನವಲುಗುಂದದ ಬಸವಲಿಂಗಮಠದಲ್ಲಿ ಊಟದ ವ್ಯವಸ್ಥೆ ಇತ್ತು. ಅವ್ರು ರಾವ್‌ಸಾಹೇಬ್‌, ರಾವ್‌ಬಹದ್ದೂರ್‌ ಅವ್ರಿಗೆ ಸನ್ಮಾನ ಮಾಡುವ ಸ್ವಾಮಿ ಆತ, ಗೊತ್ತಾ ತೇನ್ರಿ. ನಾವು ಚಳವಳಿ ಅಂತ ಮಾಡ್ತಿರಬೇಕಾದ್ರೆ ಅವ್ರು ಭಾಳ ಸಿಟ್ಟಿಗೇಳ್ತಿದ್ರು. “ಹಂಗ್ಮಾಡ ಬ್ಯಾಡ, ಹಾಂಗ್ಮಾಡಿದ್ರೆ ನೀನು ಮಠದಾಗ ಇರಬ್ಯಾಡ. ನೀನು ಚಲೋತಂಗ ಅಭ್ಯಾಸ ಮಾಡು” ಅಂತಿಳ್ಕೊಂಡು. ನಾನೂ ಬಿಡ್ಲಿಲ್ಲ, ಏನ್‌ ತಿಳೀತಾ ಏನೋ ೪೨ರ ಚಳವಳಿಯೊಳಗ ಆಗಸ್ಟ್‌ ೮ಕ್ಕೆ ಕ್ವಿಟ್‌ ಇಂಡಿಯಾ ಘೋಷಣೆ ಆತಲ್ಲ. ೯ನೇ ತಾರೀಖು ದೇಶಾದ್ಯಂತ ಶುರು ಆತು. ೧೦ನೇ ತಾರೀಖಿನ ಪತ್ರಿಕೆಗಳಲ್ಲಿ ಅದು ಬಂತು. ಪತ್ರಿಕೆ ನೋಡಿದಾಗ ದೇಶದ ಮುಖಂಡ್ರು ಕೈದು ಆಗಿ ಬಿಟ್ಟಿದ್ರು. ಮಹಾತ್ಮ ಗಾಂಧೀಜೀದು ಭಾಷಣದ್ದು ಪೂರ್ತಿ ಪಾಠ ಪ್ರಕಟ ಆಗಿತ್ತು. ಅದನ್ನ ಓದಿ ನಾವೂ ಪಿಕೆಟಿಂಗ್‌ ಮಾಡ್ಬೇಕು ಅಂತಂದೆ. ಅವಾಗ ಶಿಕ್ಷಕರೆಲ್ಲ, ನೋಡು ವಿರುಪಾಕ್ಷಪ್ಪ ಹಿಂಗೆಲ್ಲಾ ಗಲಾಟೆ ಮಾಡ್ಬೇಡ ಅಂತಂದ್ರು. ಅವಾಗ ಅವಾಗ ಒಂದು ಮೆರವಣಿಗೆ ತೆಗೆದ್ವಿ ನಾವು ನವಲುಗುಂದದ ರಾಜಮಾರ್ಗದ ಗುಂಟ.

ಅವಾಗೇನಾತು ಸಬ್‌ ಇನ್‌ಸ್ಪೆಕ್ಟ್ರು ಮತ್ತು ಪೋಲೀಸ್‌ ಸಿಬ್ಬಂದಿ ಕೂಡ್ಕೊಂಡು ಅಗ್ದೀ ಲಾಠಿ ಎಲ್ಲಾ ತಗಂಡು ಬಂದುಬಿಟ್ರು. ಶ್ರೀಮಂತ ಮಕ್ಕೂ ಬಂದಿದ್ರು. ಅವರ ಹಿರಿಯರಿಗೆ ಕರೆಸಿದ್ರು. ಅವರೆಲ್ಲ ಕ್ಷಮಾಪಣೆ ಕೇಳ್ಕೊಂಡು ಹೋಗಿಬಿಟ್ರು. ಕೊನೆಗೆ ಉಳಿದವರೆಂದರೆ ನಾವು ಮೂವರು. ನಾನು, ಅರಳೀಕಟ್ಟಿ ಬಸವರಾಜ, ಶಿವು ಮಡಿವಾಳರ ಅಂತಂದು.

ಅವಾಗ ನಮ್ಮ ಕೈಯಾಗ ನಿಶಾನೆ ಇತ್ತು. ಅದನ್ನ ಕಸ್ಕೊಂಡಿದ್ರು. ಆ ನಿಶಾನೆ ಕೊಡ್ದಾ ಹೊರತು ಹೋಗೋದಿಲ್ಲ ಅಂತಂದು ಕಛೇರಿಯ ಮಹಾದ್ವಾರದೊಳಗ ಕೂತುಬಿಟ್ಟಿ. ೯ ಗಂಟೆ ತನಕ ಕುಂತ್ರೂ ಕೊಡ್ಲಿಲ್ಲ ಅವ್ರು. ಇಲ್ಲ ನೀವು ಕ್ಷಮೆ ಕೇಳಬೇಕು, ಅವಾಗ ಧ್ವಜ ಕೊಡ್ತೀವಿ ಅಂತಂದ್ರು, ತಿರಂಗೀ ಝಂಡಾ. ಆಮ್ಯಾಲೆ ಯಾರೋ ಒಬ್ರು ಮಹನೀಯರು ಬಂದ್ರು. ಅವರು ತಹಶೀಲ್‌ಗ ಹೋಗಿ ಕೊಟ್ಬಿಡ್ರೀ ಅಂತಾ ಹೇಳಿ ಕೊಡಿಸಿ, ಇನ್ನೊಮ್ಮೆ ಹಿಂಗ ಮಾಡ್ಬ್ಯಾಡ್ರೀ ಅಂತಾ ಹೇಳಿ ಕಳಿಸ್ಬಿಟ್ರು.

ಅವಾಗ ನೋಡ್ರೀ… ಅವತ್ತಿನ ದಿವ್ಸಾ ನಾವು ಪಂಥಾ ಮಾಡಿದ್ವಿ. ಈ ಚಳವಳಿಯೊಳಗ ನಾನು ಧುಮುಕಬೇಕು. ಬೇಕಾದ್ದಾಗ್ಲೀ ನಾವು ಸಹಿಸ್ಕೋಬೇಕು ಅಂತಾ. ಆಮ್ಯಾಲೆ ವಿಧ್ವಂಸಕ ಚಟುವಟಿಕೆ ಅಂತ, ಅದನ್ನ ಮಾಡಿದ್ವಿ. ಕಲ್ಹಾಳ್‌ ಗೋವಿಂದರೆಡ್ಡಿ, ಮಾಸ್ತಿ ವೆಂಕಟೇಶರೆಡ್ಡಿ… ಕೆಲವರು ಲೀಡರ್ಸು ಇದ್ರು. ಅವರನ್ನ ಕೂಡಿಕೊಂಡು ಭೂಗತರಾಗಿ ಕೆಲಸ ಮಾಡಿದ್ವಿ. ಒಂದು ತಿಂಗಳ ತನಕ ನಾವು ಬಿಟ್ಟೂ ಬಿಡದೆ ಕುರಿಗಾರರ ವೇಷ ಹಾಕ್ಕೊಂಡು, ಭಿಕ್ಷುಕರ ವೇಷ ಹಾಕ್ಕೊಂಡು, ಎಲ್ಲಾ ಮಾಡೀವಿ. ತಾರು ಕಂಬಾನ್ನ ಕೀಳೋದು, ತಂತಿ ಕತ್ತರಿಸೋದು, ಸ್ಟೇಷನ್ ಸುಡೋದು, ಇವನ್ನೆಲ್ಲ. ಆಮ್ಯಾಲೆ ನಮ್ಮ ಬಂಧನ ಆಯ್ತು. ಮತ್ತು ಬುಲೆಟಿನ್ಸ್‌ ಮಾಡ್ತಿದ್ವಿ. ನಮಗೆ ಬೇರೆ ಕಡೆಯಿಂದ ಬರ್ತಿದ್ವು. ನಾವು ಅದನ್ನ ಪ್ರತಿ ಮಾಡ್ತಿದ್ವಿ. ಹಂಚ್‌ತಿದ್ವಿ.

ಬಂಧನ ಆದಮ್ಯಾಲೆ, ನಮ್ಮನ್ನ ನವಲುಗುಂದದ ಲಾಕಪ್ಪಿನಲ್ಲಿ ಹಾಕಿದ್ರು. ಆಮ್ಯಾಲೆ ಅಲ್ಲೊಂದು ಎಂಟ್ಹತ್ತು ದಿವ್ಸಾ ಇಟ್ರು. ನಂತರ ನಮ್ಮನ್ನೆಲ್ಲ ಮ್ಯಾಜಿಸ್ಟ್ರೇಟ್‌ ಕೋರ್ಟಿಗೆ ಒಯ್ದ್ರು. ಸಾಲ್ಡಾನ ಅಂತಾ ನ್ಯಾಯಾಧೀಶ. ಬಹಳ ದೊಡ್ಡ ಮನುಷ್ಯ ಆಂಗ್ಲೋ ಇಂಡಿಯನ್‌. ನಮ್ಮನ್ನು ಕೋರ್ಟಿನ್ಯಾಗ ಹಾಜರು ಪಡಿಸಿದ್ರು. ಹಿಂಗಾದಾಗ…

ಒಳ್ಳೇದು, ಒಳ್ಳೇದು… ಅಂತ ವಿಚಾರಣೆ ಸ್ವಲ್ಪ ನಿಲ್ಲಿಸಿ. ‘ಸರಿ, ನೀವು ಎಲ್ಲದಕ್ಕೂ ಸಿದ್ಧರೇ?”

“ಹೌದು, ಸಾರ್‌, ಎಲ್ಲದಕ್ಕೂ ಸಿದ್ಧ”.

ಓ… ಯೂ… ಬೋಲ್ಡ್‌ ಚಾಪ್ಸ್‌ ಅಂತಾ ಅಂದು, ನೀವು ಭಾರತದ ಕಾಯ್ದೆಗೆ ವಿರುದ್ಧವಾಗಿ ವರ್ತಿಸಿದ್ದೀರಿ. ನಿಮಗೆ ಇಷ್ಟು ಶಿಕ್ಷೆ ಅಂತ ಹೇಳಿ ಅವಾಗ ನನಗೆ ಬಂಧೀವಾಸದ ಶಿಕ್ಷೆ, ಮತ್ತು ಮೇಲೆ ದಂಡ ಅಂತಾ ನಾನಂದೆ, ಸಾರ್‌, ನಾವು ತುಂಬಾ ಬಡವರು ದಂಡ ಕೊಡ್ಲಿಕ್ಕೆ ಆಗಾದಿಲ್ಲ. ಇನ್ನು ಜೈಲುವಾಸದ ಶಿಕ್ಷೇನಾ ಹೆಚ್ಚು ಮಾಡ್ರೀ ಅಂತ. ಅವಾಗ ಅವ್ರು ಹೇಳಿದ್ರು ಹಾಗೆ ಮಾಡ್ಲಿಕ್ಕೆ ಬರಾದಿಲ್ಲ. ನೀವು ಮಾಡಿದ ಅಪರಾಧಕ್ಕೆ ಹೀಗೇನೇ ಶಿಕ್ಷೆ ನೀಡಬೇಕಾಗಿದೆ ಅಂದ. ನಾವು ಬಡವರಿದ್ದೀವಿ. ಕೊಡಲಿಕ್ಕೆ ಆಗೋದೇ ಇಲ್ಲಾ ಅಂದ್ವಿ. ಆಗ ಆತ ಹಿಂಗಾ ಕಣ್ಣು ಮುಚ್ಚಿಕಂಡು ಕೂತ ಮೆಲ್ಲಗೆ ಕಣ್ಣು ತೆಗೆದು ಸಮ್‌ ಡಿವೈನ್‌ ಲಾ ವಿಲ್‌ ಹೆಲ್ಪ್‌ ಯೂ ಅಂತ. ಆಮ್ಯಾಲೆ ನಮಗೆ ಆ ಮಾತಿನ ಅರ್ಥಾ ಆಯ್ತು. ಇರ್ಲೀ….

ಜೈಲಿಗೆ ಹೋದ್ವಿ. ಹಿಂಡಲಗಾ ಜೈಲಿಗೆ. ಅಲ್ಲಿ ಶಿಕ್ಷೆಯನ್ನ ಅನುಭವಿಸಿದ್ವಿ. ಹೇಳ್ಬೇಕಂದ್ರೇ ಅಲ್ಲಿ ಎಲ್ಲಾ ಥರದ ಜನ ಬಂದಿದ್ರು, ಅದು ಒಂದು ವಿಶ್ವವಿದ್ಯಾಲಯ ತರಾ ಇತ್ತು ಅಂತ ಹೇಳಬಹ್ದು. ನಮಗೆ, ಭಾಷಾ ಅವರೇ, ನಮ್ಮ ಬೆಳೆಗಾಂವ್‌ ಕಡೆಯವರು, ಪೂನಾ ಕಡೆಯವರು, ಮರಾಠ ಕಡೆಯವರೆಲ್ಲಾ ಬಂದಿದ್ರು ಸಮಾಜವಾದಿ ವಿಚಾರವಾದಿಗಳು ಬಂದಿದ್ರು, ಕಮ್ಯುನಿಸ್ಟ್ರು ಬಂದಿದ್ರು ಭಾಳಾ ಬುದ್ಧಿವಂತರು ಬಂದಿದ್ರು. ಅಲ್ಲಿ ನನ್ನ ರಾಷ್ಟ್ರೀಯ ಭಾವನೆ ಮತ್ತಷ್ಟು ಪ್ರಜ್ವಲಗೊಳಿಸ್ತು. ಹಾಗೆ ನಮ್ಮ ಜೈಲುವಾಸ ಮುಂದುವರೀತು. ಇರ್ಲೀ ಪಠ್ಯ ಪುಸ್ತಕಗಳಿಗೆ ಸೀಮಿತವಾದ ಶಿಕ್ಷಣಾ ಅಲ್ಲ. ಬಾಹ್ಯಜಗತ್ತಿನ ಪ್ರಜ್ಞೆ ಬೆಳೀತು. ಲೋಕಮುಖದ ಒಂದು ಪರಿಚಯ ನನಗೆ ಆತು. ಹೀಗಾಗಿ ನಾನೊಬ್ಬ ಶಕ್ತಿವಂತ ಯುವಕನಾಗಿ ಹೊರಗೆ ಬಂದೆ.

ಎಷ್ಟು ತಿಂಗಳು ಇದ್ರೀ. ಜೈಲಿನಲ್ಲಿ?

ಆರು ತಿಂಗಳು.

ಅಲ್ಲೇ ನಿಮಗೆ ಕಟ್ಟಿಮನಿಯವರ ಸಂಪರ್ಕ ಆತು ಅಂತಕೇಳೀನಿ. ಕಟ್ಟೀಮನಿಯವರ ಸಂಪರ್ಕದಲ್ಲಿ ಏನ್ಚರ್ಚಿಸ್ತಿದ್ರೀ…?

ಹಾಂ. ಕಟ್ಟೀಮನಿ. ಹೇಳ್ತೀನಿ. ಹೇಳ್ತೀನಿ, ನಮಗೆ ಒಂದೊಂದು ಬ್ಯಾರಕ್‌ಗೆ ಒಂದೊಂದು ಪತ್ರಿಕೆ ಬರ್ತಿತ್ತು. ಅದನ್ನ ಓದಿ ಹೇಳ್ತಿದ್ವಿ ಒಬೊಬ್ರು. ಏನೋ ಜೈಲಿಂದು ಒಂದು ಲೈಬ್ರರಿ ಇತ್ತಂತೆ. ಅಲ್ಲಿ ಯಾರು ಪುಸ್ತಕ ಓದ್ತಿದ್ರೋ ಗೊತ್ತಿಲ್ಲ. ನನಗೆ ಓದೋ ಕುತೂಹಲ ಇತ್ತಲ್ಲ ಇಟ್ಕೊಂಡು ಸುತ್ತಾಡ್ತಿದ್ದೆ. ಕಟ್ಟೀಮನಿಯವರ ಬ್ಯಾರಕ್‌ ಬ್ಯಾರೆ. ಆ ಬ್ಯಾರಕ್ಕಿಗೆ ಹೋದ್ಮೇಲೆ ಅವ್ರು ತಲೆ ಹಿಂದೆ ಒಂದು ಪುಸ್ತಕ ಇಟ್ಕೊಂಡು ಮಕ್ಕೊಂಡಿದ್ರು. ಅದು ಇಂಗ್ಲೀಷ್‌ ಪುಸ್ತಕ. ನಿಮಗೊತ್ತಿರ್ಲಿಕ್ಕಿಲ್ಲ. ಅವ್ರು ಕಿವುಡರು, ಏನ್ರೀ ಈ ಪುಸ್ತಕ ನಿಮ್ದಾ ಏನು ಅಂತಾ ಕೇಳ್ದೆ. ಅವ್ರು ಏನು? ಪುಸ್ತಕಾ ಓದ್ತೀರಾ? ಇಂಗ್ಲೀಷ್‌ ಬರ್ತದೇನು ಅಂತಾ ಕೇಳಿದ್ರು. ಹೂಂ, ಬರ್ತದೆ ಅಂದೆ. ಪುಸ್ತಕ ಕೊಟ್ರು. ಆಮ್ಯಾಲೆ ಎಲ್ಲಾ ಮಾತಾಡಿದ್ರು, ಹೆಂಗ ಹೋರಾಟ ಮಾಡಿದ್ರೀ…

ಏನು…ಎಂತೆಲ್ಲ. ಅವಾಗ ಕಟ್ಟೀಮನಿ ಒಬ್ಬ ಉದಯೋನ್ಮುಖ ಲೇಖಕರು. ಅವರು ರಾಮಕೃಷ್ಣ ಪರಮಹಂಸರಿಗಿಂತ ವಿವೇಕಾನಂದರ ಸಾಹಿತ್ಯ ಓದ್ರೀ ಅಂತಿದ್ರು, ಹೀಗೆ ನನಗೆ ಸೇವೆ ಮಾಡ್ಲಿಕ್ಕೆ, ಮತ್ತು ಕ್ರಾಂತಿಕಾರಕವಾಗಿ ಬದುಕಲಿಕ್ಕೆ ಬರೀಲಿಕ್ಕೆ ಪ್ರೇರಣೆ ನೀಡಿದವರಂದ್ರೆ ಕಟ್ಟೀಮನಿಯವರು. ಅದು ಅಷ್ಟಕ್ಕಾ ಆಗ್ಲಿಲ್ಲಾ ಜೈಲಿನಿಂದ ಹೊರಗೆ ಬಂದಮ್ಯಾಲೂ ಕಟ್ಟೀಮನಿಯವರ ಸಂಪರ್ಕ ಮುಂದುವರೀತು. ಆಮ್ಯಾಲೆ ಬಂದೆ. ಬಂದ ಮ್ಯಾಲೆ ಜನ ಭಾಳಾ ಮೆಚ್ಚೊಂಡ್ರು. ಆಮ್ಯಾಲೆ ೪೩ರಲ್ಲಿ ವೈಯಕ್ತಿಕ ಸತ್ಯಾಗ್ರಹ ಮಾಡಿದವರು ಈ ಊರಿನಲ್ಲಿ ೧೫ ಜನ ಇದ್ರು.

ಹೈದಿನೈದು ಜನಾನೂ ಜೈಲಿಗೆ ಹೋಗಿ ಬಂದ್ರಾ?

ಹಾಂ, ಹೌದು, ಎಲ್ಲರೂ ಜೈಲಿಗೆ ಹೋಗಿ ಬಂದ್ರು. ೪ ತಿಂಗಳಾ, ೬ ತಿಂಗಳಾ, ಹೀಗೆ. ನಾನಿನ್ನೂ ಆವಾಗ ಪ್ರಾಥಮಿಕ ಶಾಲೆಯಲ್ಲಿ ೪ನೇ ತರಗತಿ ೫ನೇ ತರಗತಿ ಓದುತ್ತಿದ್ದ ಒಬ್ಬ ವಿದ್ಯಾರ್ಥಿ. ಅವಾಗ ಗಾಂಧೀಯವರ ಘೋಷಣಾ ಇತ್ತು. ಹಿಂದೀಯೊಳಗ. ನಾನಿಂಗ ವೈಯಕ್ತಿಕ ಸತ್ಯಾಗ್ರಹ ಮಾಡ್ತೀನಿ ಅಂತಾ ಪೋಲೀಸರಿಗೆ ಮೊದಲೇ ತಿಳಿಸ್ತಿದ್ರು. ಗಾಂಧಿ ಘೋಷಣಾ ಕೂಗ್ತಿದ್ರು. ಪೊಲೀಸ್ರು ಬಂದು ಹಿಡ್ಕಂಡು ಹೋಗ್ತಿದ್ರು. ಕೆಲವರಿಗೆ ಈ ಘೋಷಣೆ ಅರ್ಥಾ ಏನೂ ಆಗ್ತಿರಲಿಲ್ಲ. ಅವಾಗ ನನಗೆ ಸ್ವಲ್ಪ ಭಾಷಣ ಮಾಡಲಿಕ್ಕೆ ಬರ್ತಿತ್ತು. ನಮಗೆ ಇಲ್ಲಿ ಬಾಗೂರು ವೀರಯ್ಯ ಅಂತ ಪಾಪ ಭಾಳಾ ಚಲೋ ಮನ್ಷ್ಯಾ ಇದ್ರು. ಪಾಪ ಅವರ ಹೆಸರೂ ಇರ್ಲೀ, ಈ ಊರೊಳಗೆ ಏನಿದೆಯಲ್ಲ, ಹುಡುಗರಿಗೆ ಒಂದು ರಾಷ್ಟ್ರೀಯತೆಯ ಭಾವನೆ ಮೂಡಿ ಬರುವಂತೆ ದುಡಿದ ಪುಣ್ಯಪುರುಷ ಆತ. ಈ ಹದಿನೈದು ಜನರೂ ಒಕ್ಕಲಿಗ(ರೈತ)ರ ಮಕ್ಕಳು, ಕೂಲಿಕಾರ್ರು, ಬಡವರು, ಅಂಥವರಿಗೆ ಒಂದು ರಾಷ್ಟ್ರೀಯತೆಯ ದೀಕ್ಷೆಯನ್ನು ಕೊಟ್ಟು ಅವ್ರೂ ಜೈಲಿಗೆ ಹೋಗಿ ಬಂದವ್ರು.

ಅವ್ರು ನನಗೆ ಭಾಷಣ ಮಾಡ್ಲಿಕ್ಕೆ ಹೇಳ್ತಿದ್ರು. ನಾನು ವೈಯಕ್ತಿಕ ಸತ್ಯಾಗ್ರಹದ ಬಗ್ಗೆ, ಗಾಂಧೀಜಿಯವರು ಕೊಟ್ಟ ಘೋಷಣೆ ಬಗ್ಗೆ ಭಾಷಣ ಮಾಡ್ತಿದ್ದೆ. ಅದೇನು ಘೋಷಣ ಅಂದ್ರೆ; ಈ ಯುದ್ಧದೊಳಗ ಜನರಿಂದಾಗ್ಲೀ ಧನದಿಂದಾಗ್ಲೀ ಸಹಾಯ ಮಾಡೋದು ಅಪರಾಧ. ಎಲ್ಲ ಯುದ್ಧಗಳನ್ನು ಅಹಿಂಸೆಯಿಂದಲೇ ಎದುರಿಸಬೇಕು.

ಈ ಮಧ್ಯೆ ಅದೊಂದು ಮಾತು ಹೇಳಿ ಬಿಡ್ತೀನಿ. ನನಗೆ ನ್ಯಾಯಾಧೀಶರು ಜೈಲುವಾಸದ ಜೊತೆಗೆ ‘ದಂಡ’ವನ್ನೂ ವಿಧಿಸಿದರಲ್ಲ ಆಮ್ಯಾಲೆ ಗಜೇಂದ್ರಗಢದ ಠಾಣೆಯಿಂದ ಪೋಲೀಸರು ಫೋಜುದಾರ ತಮ್ಮ ಸಿಬ್ಬಂದಿ ಕರ್ಕೊಂಡು ಬಂದಾರ. ಫೌಜುದಾರ್ರು ಬಂದ್ರು, ಮಲ್ಲಪ್ಪ ಅಂದ್ರಾ ನೀನಾ ಏನು ಅಂತಾ ನಮ್ಮಪ್ಪಗ ಕೇಳ್ಯಾರ. ‘ದನಗಿನಾ ಎಲ್ಲಿ ಕಟ್ಟೀ’ ಅಂದಾರ. ಇಲ್ರೀ ಸಾಹೇಬ್ರ ಈ ವರ್ಷ ಹೊಟ್ಟು ಮೇವು ಬರ್ಲಿಲ್ಲ ದನಾ ಗಿನ ಎಲ್ಲಾ ಕೊಟ್ಟು ಬಿಟ್ಟೆ ಅಂದಾನ. ಮತ್ತ, ಕಾಳ್ ಕಡೀ ಎಲ್ಲಾ ಎಲ್ಲದವ ಅಂದಾರ. ಕಾಳ ಕಡೀ ಏನೂ ಇಲ್ರೀ. ಆಗಾ ಸಂತೀಯಿಂದ ತಂದು ಜೀವನ ಮಾಡ್ತೀವಿ. ಇಲ್ರೀ ಸಾರ ನಾವು ಬಡುವ್ರು ಅಂತಾ ದೈನೇಸಿಯಿಂದ ಹೇಳ್ಯಾರ. ಅವಾಗ ಇಲ್ಲ ಚಿಂತಿ ಮಾಡಬ್ಯಾಡ ಮ್ಯಾಲಿಂದ ಆದೇಶ ಬಂದದೆ. ಅದಕ್ಕಾ ನಾವು ಬಂದೀವಿ. ಅಂತಾ ವಾಪಸ್‌ ಹೋಗ್ಯಾರ. ಅಂದ್ರೆ ದಂಡ ವಸೂಲು ಆಗಿಲ್ಲ ತಿಳೀತೇನ್ರೀ. ಇದು ೪೨ರ್ದು.

ಆಮೇಲೆ ೪೬ಕ್ಕ ನಾನು ಗಜೇಂದ್ರಗಢಕ್ಕ ಹೋದೆ. ಅಲ್ಲಿ ರಾಷ್ಟ್ರ ಸೇವಾದಳದ ಸಂಘಟನ ಮಾಡಿದ್ವಿ. ಯಾಕಪ್ಪ ಅಂದ್ರಾ ಅಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘಾ ಅಂತಾ ಇತ್ತು. ಗಜೇಂದ್ರಗಡ ದಮನಿತ ಜನ, ಶೋಷಿತಜನ, ಕಾರ್ಮಿಕ ಜನರಿದ್ದ ಊರು. ಅಲ್ಲಿಂದ ಈ ಕೋಮುವಾದಿ ಪ್ರತಿಗಾಮಿ ಆರ್.ಎಸ್‌.ಎಸ್‌. ಬೇಳೀತಿತ್ತಪ್ಪಾ ಅಂದ್ರ ನನಗೆ ಭಾಳಾ ಸಿಟ್ಟು ಬರ್ತಿತ್ತು. ಏನ್ರೀ. ಇಷ್ಟೇ ಅಲ್ಲಿ ಮುಂಜಾನೆ ಮತ್ತು ಸಂಜೆಗೆ ಅವ್ರು ಲಾಠಿ ಹಿಡ್ಕೊಂಡು ಅಭ್ಯಾಸ ಮಾಡ್ತಿದ್ರು. ನಮಿಗೂ ಅವ್ರಿಗೂ ವಾಗ್ವಾದ ಆಗ್ತಿತ್ತು. ಕೊನೆಗೆ ನಾವು ಅಲ್ಲೇ ರಾಷ್ಟ್ರಸೇವಾ ದಳ ಸ್ಥಾಪನೆ ಮಾಡಿದ್ವಿ. ಆಗ ನಾವು ರಾಷ್ಟ್ರ ಸೇವಾದಳ ಸ್ಥಾಪನೆ ಮಾಡಿದಾಗ ಬಂದವರು ಅಂತಂದ್ರೆ ಕುಮುಚಗಿ ಶಿವಣ್ಣ ಜ. ರಾಜಬಹದ್ದೂರ್‌, ನಾಲಬಂದ್‌ ನಜೀರ ಸಾಹೇಬ, ಚೆಂಗಳಯಲ್ಲಪ್ಪ, ಬಸವಲಿಂಗಪ್ಪ ವಾಲೀ, ಹೀಗೆಲ್ಲಾ ಇನ್ನೂ ನಾಲ್ಕಾರು ಜನ. ಇದೆಲ್ಲಾ ಬಂತು.

೪೭ರ ಸ್ವಾತಂತ್ರ್ಯ ದಿನದ ಅನುಭವ ಏನು ಅಂತಾ ಹೇಳ್ರಿ?

ಈ ಸ್ವಾತಂತ್ರ್ಯ ಏನು ಬಂತು, ಇದೂ ನಿಜವಾಗಿ ಸ್ವಾತಂತ್ರ್ಯ ಹೋರಾಟಗಾರರು ಏನು ಅಂದುಕೊಂಡಿದ್ರು ಅವರ ಕನಸಿನ ಸ್ವಾತಂತ್ರ್ಯ ಅಲ್ಲ. ೨೮ ದಿವ್ಸ, ಪಾಕಿಸ್ತಾನದ ವಿಚಾರ ಬಿಟ್ಬಿಡಬೇಕು ಅಂತಾ ಜಿನ್ನಾ ಸಾಹೇಬರ ‘ದಿಲ್‌ಖುಷ್‌’ ಬಂಗಲೆಗೆ ಹೋದ್ರು ಗಾಂಧೀಜಿ. ಅವು ಕೊನೆಗೂ ಮಾತುಕತೆಗಳು ವಿಫಲಗೊಂಡ್ವು. ರಾಜಿಯಾಗ್ಲಿಲ್ಲ, ಗಾಂಧೀ ಮತ್ತು ಜಿನ್ನಾ. ಅವಾಗ ವರ್ಕಿಂಗ್‌ ಕಮಿಟಿ ಕಾಂಗ್ರೆಸ್ಸಿಂದು ಮೀಟಿಂಗ್ ಮಾಡ್ತು. ಅವಾಗ, ಗಾಂಧೀ ಇನ್ನೂ ಭಾರತ ಅಖಂಡ ಭಾರತಾನ ಆಗ್ಬೇಕು ಅಂತಿದ್ರು. ಆದ್ರೆ ಈ ವಲ್ಲಭಭಾಯಿ ಪಟೇಲ್ರು ಏನದಾರ ಇಲ್ಲೀ ಪಾಕಿಸ್ತಾನದ್ದು ಮುಗಿಸಿಬಿಡ್ಬೇಕು ಅಂತಾ ಕುಂತಿದ್ರು. ಲೋಹಿಯಾ ಆ ಸಭೆಗೆ ವಿಶೇಷ ಆಮಂತ್ರಿತರಾಗಿ ಹೋಗಿದ್ರು. ಲೋಹಿಯಾರಿಗೆ ಗಾಂಧಿ ಬಹಳ ಮಹತ್ವ. ಕೊಡ್ತಾ ಇದ್ರು, ವಯಸ್ಸಿನಲ್ಲಿ ಭಾಳಾ ಸಣ್ಣವರಿದ್ರು ಕೂಡ. ಅವಾಗೆಲ್ಲ ಲೋಹಿಯಾ ಮತ್ತು ವಲ್ಲಭಬಾಯಿ ಅವರ ನಡುವೆ ಸಣ್ಣ ಮಾತಿನ ಚಕಮಕಿಗಳೇ ಆಗಿದ್ದವು. ಸ್ವಲ್ಪ ಈ ವಲ್ಲಭಭಾಯಿ ಈ ಸಮಾಜವಾದಿಗಳ ತಲೀಗೆ ಬಡೀತಿದ್ರು.

ಕೊನೆಗೆ ದೇಶಾ ಒಡೀತು. ಸರೀ ಸ್ವಾತಂತ್ರ್ಯ ಬಂತು. ನಾವೂ ಕೂಡ ಈ ಪ್ರಥಮ ಸ್ವಾತಂತ್ರ್ಯ ಸಂಭ್ರಮದಾಗ ಪಾಲ್ಗೊಂಡಿದ್ವಿ. ಇಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಗೆ ಸನ್ಮಾನ ಆತು.