ಧ್ವಜಾರೋಹಣ ಇಲ್ಲಿ ಯಾರೂ ಮಾಡಿದ್ರು ಸಾರ್‌?

ಇಲ್ಲೇನದಲ್ಲ…ವೀರಯ್ಯಾ ಬಾಗೂರು ಇದ್ರಲ್ಲ ಅವರು ಮಾಡಿದ್ರು.

ಅವಾಗ ಗಾಂಧೀಯವರು ಒಂದು ಸಂದೇಶ ಕೊಟ್ರು. ನೆನಪು ಮಾಡ್ಕೋಬೇಕು ಅದನ್ನೆಲ್ಲ ಫ್ರಂ ಟುಡೇ ಯು ವೇರ್‌ ದಿ ಕ್ರೌನ್‌ ಆಫ್‌ ಥಾರ್ನ್‌. ಪವರ್‌ ಮೇಕ್ಸ್‌ ಮ್ಯಾನ್‌ ಕರಪ್ಟ್‌. ಬಿವೇರ್‌ ಆಫ್‌ ಪವರ್‌ ಇದು ಗಾಂಧಿ ಕೊಟ್ಟ ಸಂದೇಶ. ಇಂದಿನಿಂದ ನೀವು ನಿಮ್ಮ ತಲೆಯ ಮೇಲೆ ಮುಳ್ಳಿನ ಕಿರೀಟ ಧರಿಸಿದ್ದೀರಿ. ಅಧಿಕಾರ ಕೆಟ್ಟದ್ದು ಅಧಿಕಾರದ ಮಾಯೆಗೊಳಗಾಗಬೇಡಿರಿ. ಎಚ್ಚರವಾಗಿರಿ. ಈ ದೇಶದ ಹಳ್ಳಿಗಾಡಿನ ಜನರ ಸೇವೆ ಮಾಡಲು ಅಧಿಕಾರವನ್ನು ವಹಿಸಿಕೊಳ್ತಾ ಅದೀರಿ. ಅನ್ನೋವಂಥ ಮಾತನ್ನ ಹೇಳಿದ್ರು. ಆದ್ರೆ….ದುರಂತ ಏನಾತು? ಅವಾಗ ಇನ್ನೂ ಗಾಂಧಿ ಬದುಕಿದ್ರು. ಮದ್ರಾಸ್‌ನೊಳಗ ಪ್ರಾರ್ಥನಾ ಸಭೆಯಲ್ಲಿ ಭಾಷಣ ಮಾಡುವಾಗ ಕೊಂಡ ವೆಂಕಟಪ್ಪ ಒಂದು ಚೀಟಿ ಕಳಿಸಿದ್ರು. ಆಡಳಿತ ಯಂತ್ರದಾಗ ವ್ಯತ್ಯಾಸ ಆಗ್ಲಿಕ್ಹತ್ತಿದೆ. ಭ್ರಷ್ಟಾಚಾರ ಕಾಣಿಸಿಕೊಂಡಿದೆ ಅಂತಾ. ಅವಾಗ ಗಾಂಧಿ ನಿಟ್ಟುಸಿರು ಬಿಟ್ಟು…ಕಾಂಗ್ರೆಸ್‌ ಇನ್ನು ರಾಜಕೀಯ ಪಕ್ಷವಾಗಿ ಮುಂದುವರಿಯಬಾರದು ಅಂತಾ ಹೇಳ್ತಾರೆ.

ಮುಂದೆ ೪೮, ಜನವರಿ ೨೯ನೇ ತಾರೀಖಿನ ಮಧ್ಯರಾತ್ರಿ ಯಾವ ಗಾಂಧಿ ನಿದ್ದೀಗೆದ್ದಿದ್ದ, ಆ ಗಾಂದೀ ನಿದ್ದಿ ಹಾರಿಬಿಡ್ತು. ಅವತ್ತು ಅಪರಾತ್ರಿ ಒಳಗಾ ಗಾಂಧಿಗೆ ನಿದ್ರಾಭಂಗ ಆತು. ಫಕ್ಕನ ಎದ್ದು ಕೂತ್ರು. ಎಡಕ್ಕ ಬಲಕ್ಕ, ಮನು ಮತ್ತು ಅಭಾ ಇದ್ರು. ಈ ಎಪಿಸೋಡೂ ತಿಳ್ಕಾಬೇಕು. ಯಾಕೆ ಬಾಪು ಹಿಂಗಾ ಎದ್ದು ಕುಂತ್ರೀ ಅಂದ್ರ ಹೇಳ್ತಾರ ಗಾಂಧಿ…“ನೋಡು ಮನು, ಅಭಾ…ನನ್ನ ಮಾತನ್ನ ಇನ್ನು ಯಾರು ಕೇಳ್ತಾರ? ಭೀಕರವಾದ ದಂಗೆ ಅಗ್ಲಿಕ್ಕೇ ಹತ್ತೇದ. ನಾನು ೧೨೫ ವರ್ಷ ಬಾಳ್ಬೇಕು ಅಂತಿದ್ದೆ. ನಾನಿನ್ನು ಇರೋದಿಲ್ಲ ಸಾಕು. ನನ್ನ ಜೀವನ ಯಾತ್ರೇನಾ ಮುಗಿಸ್ತೀನಿ” ಅಂತಿಳ್ಕೊಂಡು ಮರುದಿನಾನೇ ಗೋಡ್ಸೆ ಗಾಂಧೀನ್ನ ಮುಗಿಸ್ದಾ.

ಅವಾಗ ನಾನು ಕಣ್ಣಾರೆ ಕಂಡೆ, ಭಾಷಾ ಅವರೇ… ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರು, ಅವ್ರು ಬರೋಬ್ಬರೀ ಪೇಡೆ ತಿಂದ್ರು, ಹಾಲುಕುಡಿದ್ರು… ಅದೇ ಗಜೇಂದ್ರಗಢದಾಗ. ನರೇಗಲ್‌ದಾಗ ಒಬ್ಬ ಭಟ್ಟ ತುಪ್ಪದ ದೀಪ ಹಚ್ಚಿದ್ದ. ಅದೆಲ್ಲಾ ಇರ್ಲಿ. ಇಲ್ಲೀ ನಾವು ಗಜೇಂದ್ರಗಢದಾಗ ಪ್ರತ್ಯಕ್ಷ ಕಂಡೀವಿ. ಕುಲಕರ್ಣಿ ಅಂತಾ, ಉಮಚಗಿ ಡಾಕ್ಟರ್‌ ಅಂತಾ, ಅಂವ ಆರ್‌.ಎಸ್‌.ಎಸ್ಸಿನ ಸಂಘಚಾಲಕ ಇದ್ದ. ಇಂಥಾ ಒಂದು ಈ ಘೋರವಾದ ಕೋಮುವಾದಿ ಸಂಸ್ಥೆ ಅಲ್ಲಿ ಗಜೇಂದ್ರಗಢದಾಗ ಇತ್ತು. ಇವ್ರು ಗಾಂಧಿಯನ್ನು ಬಲಿತಗೊಂಡ್ರು. ಗಾಂಧೀಯಿಂದ ಭಾರತೀಯ ಸಂಸ್ಕೃತಿಗೆ ಕೇಡ್‌ ಆಗ್ತದೆ ಅಂತಾ ಈ ಮಂದಿ ಹೇಳ್ತಿದ್ರು.

ಗಾಂಧಿ ಕೊಲೆ ಹಿಂದೆ ದೊಡ್ಡ ಷಡ್ಯಂತ್ರ ಇದೆ. ಅದರ ಹಿಂದೆ ದೊಡ್ಡ ದೊಡ್ಡ ಸಂಸ್ಥಾನಿಕರು ಇದ್ರು. ಜಹಗೀರುದಾರ್ರು, ಜಮೀನುದಾರ್ರು, ಶ್ರೀಮಂತರು ಇದ್ರು. ಪಟಿಯಾಲದಾಗ ಹೇಳಿದ್ರಂತೆ ಅವರು…“ಏ ಗಾಂಧಿ ಕುತ್ತಾ ತೋ ಮರ್‌ಗಯಾ, ಭಗವಾ ಝಂಡಾ ಜಿಂದಾಬಾದ್‌” ಅಂತ. ಇದೇ ಧಾರವಾಡದಾಗ ಮಿಷನ್‌ ಹೈಸ್ಕೂಲ್‌ನ್ಯಾಗ ಒಬ್ಬ ವಿದ್ಯಾರ್ಥಿ ೪ ಗಂಟೆಗೆ, ಗಾಂಧೀ ಕೊಲೆ ಆಗ್ತೈತಿ ಅಂತಾ ಮುಂಚೇನೇ ಹೇಳಿದ್ದ. ಆ ಪ್ರಕಾರಾನೇ ಆತು. ಇದೆಲ್ಲ ನಾನು ಕಲ್ಪಿಸಿಕೊಂಡು ಹೇಳ್ತಾ ಇಲ್ಲ. ಇಷ್ಟು ದೇಶೋವಿಶಾಲವಾಗಿ ಈ ಕೋಮುವಾದೀ ರಕ್ಕಸರ ಜಾಲ ಈಗೀಗಂತೂ  ಭಾಳಾ ಬೆಳೀಲಿಕ್ಕೆ ಹತ್ತಿದೆ ಏನ್ರೀ.

ಅವಾಗ ಬಸವರಾಜ ಕಟ್ಟೀಮನಿಯವರು ಸಮಾಜ ಪತ್ರಿಕೆಯೊಳಗ “ಕಾಳಿಂಗ ಮತ್ತೆ ಹೆಡೆ ಎತ್ತುತಿದೆ” ಅಂತೆಲ್ಲಾ ಬರ್ದಿದ್ರು.

ಹೀಗಾಗುವಾಗ ಯಾವ ಸಮಾಜವಾದಿ ಪಕ್ಷ ಕಾಂಗ್ರೆಸ್ಸಿನೊಳಗಾ ಇತ್ತಲ್ಲ, ಇನ್ನು ನಾವು ಕಾಂಗ್ರೆಸ್ಸಿನ ಭಾಗವಾಗಿರಾದು ಬ್ಯಾಡ ಅಂತಾ, ಒಂದು ನಿರ್ಣಯ ತಗೊಂಡು, ನಾಸಿಕ್‌ದಾಗ ೧೯೪೮ ದಾಗ ಒಂದು ಅಧಿವೇಶನ ಸೇರ್ತು. ನರೇಂದ್ರದೇವ, ಜೆ.ಪಿ. ಇವರೆಲ್ಲ ಸೇರ್ಕೊಂಡು ಸಮಾಜವಾದಿ ಪಕ್ಷ ಕಾಂಗ್ರೆಸ್ಸಿನಿಂದ ಹೊರಗೆ ಬರಬೇಕೆಂದು ನಿರ್ಣಯ ತಗಂಡ್ರು. ಹೊರಗ ಬಂದ್ರು. ಅಷ್ಟೊತ್ತಿಗೆ ನನಗೆ ಸಮಾಜವಾದದ ಕಡೆಗೆ ಒಲವು ಇತ್ತು. ನನಗ ಹಿಮದಿ ಬರ್ತಿತ್ತು. ಆಮ್ಯಾಲೆ ಕಾಂಗ್ರೆಸ್ಸಿನಿಂದ ಹೊರ ಬಂದ ಮೇಲೆ ಸಮಾಜವಾದಿ ಪಕ್ಷದ ಸಂಘಟನೆ ಶುರುವಾಯ್ತಲ್ಲ, ಆವಾಗ ‘ಸಮಾಜವಾದ ಏಕೆ’ ಅಂತ ಜಯಪ್ರಕಾಶರ ಪುಸ್ತಕ, ಅದನ್ನ ಓದ್ಕೊಂಡೆ, ಅದನ್ನ ಓದಿ ನಾನು ಲೋಹಿಯಾರ ಸೆಳೆತಕ್ಕ ಓಳಗಾದೆ. ಯಾಕಂತಂದ್ರೆ ೪೨ರ ಚಳವಳಿಯೊಳಗೆ ಲಾಹೋರ ತುರಂಗದೊಳಗಿದ್ರು. “ಆಯನ್‌ ಎಪಿಸೋಡ್‌ ಇನ್ ಯೋಗ” ಅಂತಾ ಒಂದು ಬರ್ದಾರ. ಅದನ್ನ ಓದಿದೆ. ಆಮೇಲೆ ಮುಂದೆ ನಮ್ಮ ತಾಲೂಕಿನೊಳಗೆ ಈ ಪಕ್ಷ ಶುರು ಮಾಡ್ಬೇಕು ಅನ್ಕಂಡು ೧೯೫೦ ಬಂತು. ಅವಾಗ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರು ಬನಾರಸ್‌ನೊಳಗ ಗಂಗಾನದಿ ತೀರದೊಳಗ ೨೦೦ ಬ್ರಾಹ್ಮಣರ ಪಾದ ತೊಳೆದಿದ್ರು. ಇದು ಭಾಳಾ ತಪ್ಪು ರಾಷ್ಟ್ರಪತಿಯಾಗಿ ಹಿಂಗ ಮಾಡಿದ್ದು ಅಂತಾ ಸ್ಪಷ್ಟನುಡಿಗಳಲ್ಲಿ ಖಂಡಿಸಿದವರು ಲೋಹಿಯಾ, ಅದೆಲ್ಲಾ ಪತ್ರಿಕೆಗಳಲ್ಲಿ ಬಂತು. ಆಮೇಲೆ….

ನಮ್ಮ ತಾಲೂಕಿನಲ್ಲಿ ಸಮಾಜವಾದಿ ಪಕ್ಷ ಸಂಘಸೋದಕ್ಕೆ ಮೊಟ್ಟ ಮೊದಲು ಶುರು ಮಾಡ್ದೋನೇ ನಾನು. ನನಗೆ ಭಾಳ ಹೆಮ್ಮೆ ಅನ್ನಿಸ್ತದೆ. ಅವಾಗ ಭಾಳಾ ಕಠಿಣ ಇತ್ತು. ಭಾಷಾ ಅವರೆ ಭಾಳಾ ಕೆಟ್ಟ ಕಣ್ಣಿನಿಂದ ನೋಡ್ತಾ ಇದ್ರು. ಈಗೇನ್ರಿ ಎಲ್ಲರೂ ಸಮಾಜವಾದಿಗಳು ಅಂತಾ ಭಾಷಣ ಮಾಡ್ತಾರೆ. ಅವಾನ ನಾನೇ ಒಬ್ಬ. ನಾನು ರೋಣದಾಗ ಇದ್ದೆ. ಅವಾಗೆಲ್ಲ ನೀಲಗಂಗಯ್ಯ ಪೂಜಾರ, ರಂಗನಾಥ ಕುಲಕರ್ಣಿ ಅವರೆಲ್ಲ ಧಾರವಾಡದಾಗ ಇದ್ರು. ಅವರಷ್ಟೇ ಅಲ್ಲಿ ಅದೂ ಇದು ಮಾಡ್ತಿದ್ರು. ಖಾದ್ರಿ ಶಾಮಣ್ಣ, ಗರುಡ ಶರ್ಮ, ಭಾಸ್ಕರ ಗೋಖಲೆ ವಕೀಲ್ರು ಅವರೆಲ್ಲಾ ಇದ್ರು. ಅಲ್ಲಿ ಮಾಡೋದು ದೊಡ್ಡಮಾತಲ್ಲ. ಇಲ್ಲಿ ಮಾಡೋದು ಕಷ್ಟ ಇತ್ತು. ಅವಾಗ ನಾನು ಸಭೆ ಮಾಡ್ಲಿಕ್ಕೆ ಹತ್ತಿದೆ. ಮೊಟ್ಟ ಮಾತಲ್ಲ. ಇಲ್ಲಿ ಮಾಡೋದು ಕಷ್ಟ ಇತ್ತು. ಹೀಂಗಾಗಿ ಅವರಿಗೆ ನಮ್ಮ ಮೇಲೆ ಅಭಿಮಾನ ಇತ್ತು, ಅವಾಗ ಕೆಲವೊಂದು ಕಡೆಗೆ ಗಲಾಟೀನೂ ಆಗ್ತಿತ್ತು ಆ ಮಾತು ಬೇರೆ.

ಅವಾಗ ನಾವು, ಕಿಸಾನ್‌ ಪಂಚಾಯತ್‌ ಮಾಡಿದ್ವಿ. ಸಮಾಜವಾದಿ ಪಕ್ಷದ ಕೃಷಿ ವಿಭಾಗ. ಕೊನೆಗೆ ಧಾರವಾಡ ಜಿಲ್ಲೆಯೊಳಗೆ ಲೋಹಿಯಾರವರ ಸಂಚಾರ ಕಾರ್ಯಕ್ರಮ ಏರ್ಪಡಿಸಿದ್ರು. ಅವಾಗ ನಾವು ಹೋಗಿ, ನಮ್ಮ ತಾಲೂಕಿನ್ಯಾಗ ಸಮಾಜವಾದಿ ಪಕ್ಷ ಚಲೋ ಸಂಘಟಿಸೀವಿ ಬರ್ಲೇ ಬೇಕು ಅಂತಂದು ಕರ್ದಿದ್ದಿ. ಧಾರವಾಡ ಜಿಲ್ಲೆಯೊಳಗೆ ಮೂರು ಕಡೆಗೆ ಪಕ್ಷ ಚಲೋ ಸಂಘಟನೆಯಾಗಿತ್ತು. ಧಾರವಾಡದ್ಹತ್ರ ಗರಗದೊಳಗ, ಆಮ್ಯಾಲೆ ಧಾರವಾಡ ನಗರದೊಳಗಿತ್ತು. ಆಮ್ಯಾಲೆ ಮೂಟೆಬೆನ್ನೂರಿನೊಳಗೆ ಮೂಟೆಪ್ಪ ಮೈಲಾರ ಅಂತ ಮತ್ತ ಹಾವೇರಿಯೊಳಗ ಕ್ಷೌರದ ರಾಮಣ್ಣ ವಗೈರೆ ಅವರೆಲ್ಲ. ಮತ್ತು ನಮ್ಮ ತಾಲೂಕಿನೊಳಗ, ಗಜೇಂದ್ರಗಢ ಅವಾಗ ಚಟುವಟಿಕೆಗಳ ಕೇಂದ್ರ. ಅವಾಗ ಲೋಹಿಯಾ ಅವರ ಸಂಚಾರ ಕಾರ್ಯಕ್ರಮವನ್ನು ಏರ್ಪಡಿಸಿದೆವು. ಭಾಳಾ ಖುಷಿಗೊಂಡ್ರು ಲೋಹಿಯಾ ಅವರು, ಮೊದಲನೆಯದಾಗಿ ಗಜೇಂದ್ರಗಢ, ಆಮೇಲೆ ಸೂಡಿ, ಆಮೇಲೆ ರೋಣ. ಅವರ ಸಂಚಾರ ಕಾರ್ಯಕ್ರಮದೊಳಗ ನಾನು ಅನುಭವಿಸಿದಂತಹ ರಸನಿಮಿಷಗಳನ್ನ ಹೇಳ್ಬೇಕಂತ ಅನ್ನಿಸ್ತದೆ.

ಹೇಳ್ರೀಹೇಳ್ರೀ…?

ಲೋಹಿಯಾ ಬಂದು ಚೆಂಗಲಲಿ ಅಡಿವೆಪ್ಪನ ಮನಿಯಾಗ ಕುಂತಿದ್ರು. ಇಲ್ಲಿಂದ ಹೋಗಿದ್ವಿ. ಅವಾಗ ರೋಣ ಮತ್ತು ಸೂಡಿ ರೇಷಾಮಾರ್ಗ ಇರಲಿಲ್ಲ. (ಮೋಟಾರ್‌ ಮಾರ್ಗ) ಲೋಹಿಯಾ ಅವರ ದರ್ಶನ, ಅಂದ್ರೆ ದೇವರ ದರ್ಶನಕ್ಕ ಭಕ್ತಿ ಭಾವದಿಂದ ಭಕ್ತ ಹೇಗೆ ತವಕಪಡ್ತಾನೋ ಹಾಗೆ ಹೋದ್ವಿ. ಅಲ್ಲಿ ಚೆಂಗಲಿ ಅಡೆವೆಪ್ಪ ಅಂತಾ, ಅವರ ಮನಿಯ ಪಡಸಾಲಿಯಲ್ಲಿ ಗಜೇಂದ್ರಗಢದಾಗ ಕೂತಿದ್ರು, ನಾವು ಇಲ್ಲಿಂದ ೩-೪ ಜನ ಹೋಗಿದ್ವಿ. ಭಾಸ್ಕರ ಗೋಖಲೆ, ಅವರೂ, ಇವರೂ ಭಾಳಾ ಜನ ಕೂತಿದ್ರು.ನಾನು ಲೋಹಿಯಾ ಮುಖವನ್ನು ದಿಟ್ಟಿಸಿ ಕಣ್ತುಂಬ ನೋಡ್ದೆ. ಪ್ರತಿಯಾಗಿ ಲೋಹಿಯಾ ನನ್ನನ್ನು ನೋಡಿದ್ರು. ‘ಏ ಕೌನ್‌ ಹೈ’ ಅಂತಾ ಪಕ್ಕದಲ್ಲಿರೋರ್ನ ಕೇಳಿದ್ರು. ನನ್ನ ಪರಿಚಯ ಅಲ್ಲಿರೋರ್ಗೂ ಗೊತ್ತಿರಲಿಲ್ಲ. ನನಗೆ ಮಾತಾಡಲಿಕ್ಕೆ ‘ರಸಗವಳ’ ಸಿಕ್ಕಂಗಾತು. ‘ಮೈ ಬಿ ಏಕ್‌ ಸಮಾಜವಾದಿ ಕಾರ್ಯಕರ್ತ ಹೂಂ’ ಅಂದೆ. ಹಿಂಗೇ ಮಾತಾಡಿದೆ. ನಾನು ಪುಟಪುಟ ಹಿಂದಿ ಮಾತಾಡಿದ್ದು ಲೋಹಿಯಾ ಅವರಿಗೆ ಒಳ್ಳೇ ಇಂಪ್ರೆಶನ್‌ ಆತು. ಆಮೇಲೆ ಅಲ್ಲಿ ಲೋಹಿಯಾ ಅವರಿಗೆ ಸ್ವಾಗತ ಮಾಡ್ಲಿಕ್ಕೆ ಒಂದು ಸ್ವಾಗತ ಗೀತೆ ಬರೀರಿ ಅಂತಾ ಅಲ್ಲಿಯವರು ನನಗೆ ಹೇಳಿದ್ರು. ಅವಾಗ ಹಿಂದೀಯೊಳಗ ಬರೀಲಿಕ್ಕೆ. ‘ವಜೀರ್‌ ಸಾಬ್‌ ನಾಲಬಂದ್‌’ ಅಂತಾ ಒಬ್ಬಾ ಕಾರ್ಯಕರ್ತ, ಆಗ್ದೀ ಚಲೋ ಹಾಡ್ತಿದ್ದ. ಆತ ಹಾಡಿದ್ದ.

ಆಮೇಲೆ ಸಂಕನೂರು ಹತ್ರ ಹಳ್ಳಕ್ಕೆ ಸೇತುವೆ ಆಗಿರ್ಲಿಲ್ಲ. ಆ ಉಸುಕಿನ ಮ್ಯಾಲೆ ಕಾರು ಹೋಗಂರಗಿರ್ಲಿಲ್ಲ. ಎಲ್ಲರೂ ಇಳೀಬೇಕಾಯ್ತು. ಲೋಹಿಯಾ ಇಳಿದು ಉಸುಕಿನ ಮ್ಯಾಲೆ ಕೂತ್ರು. ಕಾರನ್ನ ಒತ್ತಬೇಕಿತ್ತು. ಒತ್ತಾಕ ಹತ್ತಿದ್ವಿ. ಲೋಹಿಯಾ ಸುಮ್ನ ಕುಂದುರ್ಲಿಲ್ರೀ, ತಾವೂ ಕೈ ಹಚ್ಚಿದ್ರ. ಹಿಂಗ ಬಂದ್ರು, ಬಿದರಿ ಬಸಪ್ಪನ ಬಾವಿ ಹತ್ರ ಬಂದುನಿಂತ್ರು, ಅಲ್ಲಿ ಸೇವಾದಳದ ಕಾರ್ಯಕರ್ತರು ಲಾಠಿ ಗೌರವರಕ್ಷೆ ಕೊಟ್ರು. ಹಿಂಗಾ ಘೋಷಣೆ ಮಾಡ್ಕಂತಾ ಬಂದು ಬಜಾರದ ಬಸಣ್ಣನ ಗುಡಿ ಮುಂದೆ ಪೆಂಡಾಲ್‌ ಹಾಕಿಸಿದ್ವಿ. ಅದು ಚೆಂಡ ಪ್ರಚಂಡ ಸಭೆಯಾಗಿತ್ತು.

ಆವಾಗ ನಮಗೆ ಆಡಳಿತ ಪಕ್ಷದವರು ತೊಂದ್ರೆ ಕೊಟ್ತಿದ್ರು.ಲೋಹಿಯಾ ಅರು ನಮಗೆ ಕೇಳಿದ್ರು ಏನು ನಿಮ್ಮ ತೊಂದ್ರೆ ಅಂದಾಗ ಹೇಳಿದ್ವಿ. ಅವರು ಬಹಿರಂಗ ಭಾಷಣದಾಗ ಅದನ್ನು ಪ್ರಸ್ತಾಪಿಸಿ ಖಂಡಿಸಿದರು. ಒಂದೂವರೆ ತಾಸು ಅದ್ಬುತ ಭಾಷಣ ಮಾಡಿ ಮುಗಿಸಿದ್ರು. ಅವರ ಭಾಷಣದ ಸಾರಾಂಶವನ್ನು ಗೋಖಲೆ ವಕೀಲ್ರು ಕನ್ನಡದಾಗ ಹೇಳ್ತಿದ್ರು. ಹಿಂಗಾಗಿ ಸಭೆ ಮುಗೀತು. ಅಷ್ಟು ಮುಗಿಯೋ ಹೊತ್ತಿಗೆ ಒಂದು ಯುದ್ಧ ಗೆದ್ದಂಗ ಆಗಿತ್ತು. ಲೋಹಿಯಾರ ಜೊತೆಗೆ ಶಾಂತಿನಾಯಕ ಅಂತಾ ಮಹಾರಾಷ್ಟ್ರದ ಕಾರ್ಯಕರ್ತರೂ ಬಂದಿದ್ರು. ಇಲ್ಲೇ ನಮ್ಮನಿಗೆ ಬಂದು ಎಲ್ಲರೂ ಒಂದು ಕಂಬಳಿ ಮ್ಯಾಲೆ ಕುಂತಿದ್ರು. ಹಿಂಗಾ ಮಾತಾಡ್ತಾ ಕುಂತಿದ್ವಿ.

ಅವಾಗ ನೆಹರೂ ಅವರಿಗೆ ೬೦ ವರ್ಷ ತುಂಬಿದ್ವು. ೬೦ ವರ್ಷ ತುಂಬಿದ ಸಂದರ್ಭದೊಳಗ, ‘ಬ್ಲಿಟ್ಜ್’ ಪತ್ರಿಕೆಯ ಸಂಪಾದಕ ಕರಂಜಿಯಾ ಜವಹರಲಾಲ್‌ ನೆಹರು ಗೆಳೆಯ, ಒಂದು ವಿಶೇಷ ಸಂಚಿಕೆ ಪ್ರಕಟಿಸಿದ್ರು. ‘ಸಿಕ್ಸ್ ಟೀ ಗ್ಲೋರಿಯರ್ಸ್‌ ಇಯರ‍್ಸ್‌’ ಅಂತ ಮುಖಪುಟಕ್ಕೆ ನೆಹರೂ ರೇಖಾಚಿತ್ರ ಬಂದಿತ್ತು. ಅದನ್ನ ಕತ್ತರಿಸಿ ನಮ್ಮ ಮನೆ ಗೋಡೆಗೆ ಹಾಕಿದ್ದೆ. ಲೋಹಿಯಾ ಅದನ್ನು ದಿಟ್ಟಿಸಿ ನೋಡಿ “ಓ…ಯಹಾಂ ಭೀ ನೆಹರೂ ಆಯಾ, ಏಕ್‌ ಸಮಾಜವಾದಿಕೇ ಘರ್‌ ಮೇ ನೆಹರೂ ಆಯಾ…” ಹೀಗೆ ಉದ್ಗರಿಸಿದ್ರು. ಹಿಂಗ ಎಲ್ಲಾ ಮಾತಾಡಿ…ನಮ್ಮ ಅಡಿಗೆ ಮನ್ಯಾಗ ಕುತ್ಕಂಡು ಊಟ ಮಾಡಿದ್ರು. ಹಿಂಗಾ ಊಟ ಮುಗಿಸಿ ಹೊರಟ್ವಿ ಕಾರಿನ್ಯಾಗಾಸಿ. ಇಲ್ಲಿ ಕೆಲವು ಆರ್ಕಿಯಾಲಜಿಕಲ್‌ ಮಾನುಮೆಂಟ್ಸ್‌ ಅದಾವು. ಅಲ್ಲಿ ಮಲ್ಲಿಕಾರ್ಜುನ ದೇವಸ್ಥಾನ ಅಂತಾ ಐತಿ ಊರು ಸ್ವಲ್ಪ ದಾಟಿದ ಮೇಲೆ…ಅದನ್ನ ಗೋಪುರ ನೋಡಿ ಏನದು ಅಂತಾ ಕೇಳಿದ್ರು. ನಾನು ಹೇಳಿದೆ. ಅದಕ್ಕವರು “ವೆದರ್‌ ಹಿ ನಾನು ಗಾಡ್‌ ಆರ್‌ ಶಿ ಗಾಡ್‌” ಅಂತಾ ಕೇಳಿದ್ರು ಎಂಥಾ ಸೂಕ್ಷ್ಮತೆ ನೋಡಿ. ಅದಕ್ಕ ನಾನು ‘ಗಾಡ್‌ ಕಮ್‌ ಗಾಡೆಸ್ಸೆಸ್‌’ ಅಂದೆ ಮುಂದೆ ರೋಣಕ್ಕ ಹೋದ್ವಿ. ಅಲ್ಲಿ ಕೆಲವು ಕಾಂಗ್ರೆಸ್ಸಿಗರು ಲೋಹಿಯಾರು ಕಾರ್ಯಕ್ರಮಕ್ಕೆ ವಿರೋಧ ಮಾಡ್ತಿದ್ರು. ಅಲ್ಲಿ ಮಾಡಾಗೊಡಬಾರ‍್ದು ಅಂತಾ ಪಟ್ಟು. ಅಲ್‌ಇಲ ನಿಷ್ಠಾವಂತ ಕಾರ್ಯಕರ್ತರೇನು ಇರ‍್ಲಿಲ್ಲ. ಕೆಲವು ಅಭಿಮಾನಿಗಳು ಇದ್ರು. ವೀರನಗೌಡ ಅವರೆಲ್ಲ ಇದ್ರು. ಕೆಲವರೆಲ್ಲ ನೋಡಾಣ ಬಿಡು ವಿರುಪಾಕ್ಷಪ್ಪ ಯಾರದರಾ, ನೋಡೇಬಿಡಾನು ಅಂತಂದ್ರು. ನಮ್ಮ ಸಭೇನಾ ಕೆಡಿಸೇ ಬಿಡೋಣ ಅಂತಂದ್ರು, ಹತ್ತಾರು ಕಾಂಗ್ರೆಸ್‌ ಕಾರ್ಯಕರ್ತರು ನಮ್ಮ ಸಭೆ ನಡೆಯೋ ಎದಿರು ಒಂದು ದೇಸ್ಥಾನದ ಮಾಳಿಗೆಯ ಮೇಲೆ ಕೂತಿದ್ದರು. ಲೋಹಿಯಾರವರ ಭಾಷಣ ಶುರುವಾಯ್ತು. ಎಲ್ಲಿ ಗದ್ಲ ಆದೀತೋ ಅನ್ನೋ ಭಯ ನಮಗಿದ್ದೇ ಇತ್ತು. ಅವಾಗ ಅವರ ಭಾಷಣ ಶುರು ಆಗಿ ೧೫-೨೦ ನಿಮಿಷ ಆಗಿರ‍್ಬಹ್ದು. ಆವಾಗ ಏಕದಂ ಒಬ್ಬ ಮನುಷ್ಯ ಎದ್ದು ನಿಂತು “ತುಮ್‌ ಝೂಟ್‌ ಬೋಲ್ತಾ ಹೈ” ಅಂದ. ಇದು ಅಶುದ್ಧ ಹಿಂದಿ. ಅವಾಗ ಲೋಹಿಯಾರಿಗೆ ಸಿಟ್ಟು ಬಂತು. “ಅರೆ ಮಾಮೂಲಿ ಔರ್ ಜಂಗಲ್ ಆದ್ಮೀ, ಕ್ಯುಂ ಬಖ್‌ ತಾ ಹೈ, ಬಖವಾಸ್‌ ಕರ್‌ತಾಹೈ…ಕ್ಯಾ ಮೈ ಝೂಟ್‌ ಬೋಲ್ತಾ ಹೂಂ. ಆವೋ ಉತರ್‌ಕರ್‌ ಸಾಬೀತ್‌ ಕರೋ…ಕೀ ಮೈ ಝೂಟ್‌ ಬೋಲ್ತಾ ಹೂಂ ತೋ ಮೈ ರಾಜಕಾರಣ ಛೋಡ್‌ ದೂಂಗಾ…” ಹಿಂಗ ಪುಟುಪುಟು ಸಿಟ್ಟಿನ್ಯಾಗ ಮಾತಾಡಿ ಬಿಟ್ರು. ಹೀಂಗಂದು ಕುಂತು ಬಿಟ್ರೀ. ಅರೆರೆ…ಇದೇನಿದು ಅವರ ಮುಖ ನೋಡ್ತೀವಿ ಕಾಯಿಸಿದ ತಂಬ್ಗೀಹಂಗದ ಅವರ ಮುಖ,ಕೋಪದಿಂದ ಕುದೀತಾ ಇದೆ. ನಮಗೆಲ್ಲಾ ಹೆದ್ರಿಕೀ ಬಂತು. ಎರಡು ನಿಮಿಷ ಮೂರುನಿಮಿಷ ಕಾರ್ಯಕ್ರಮ ಸ್ಥಗಿತ ಆಯ್ತು. ನಾನು ವಿನಂತಿಸಿಕೊಂಡೆ ಮಾತಾಡ್ರೀ ಅಂತ. ಆದ್ರೆ ಲೋಹಿಯಾ ಒಪ್ಪಲೇ ಇಲ್ಲ. ನನ್ನ ಮುಂದಿನ ಗದಗ ಕೊಪ್ಪಳದ ಕಾರ್ಯಕ್ರಮ ರದ್ದು ಮಾಡ್ರೀ ನಾನು ಆ ಮನುಷ್ಯ ನಾನು ಸುಳ್ಳು ಹೇಳ್ತೀನಿ ಅನ್ನೋದನ್ನ ಸಾಬೀತು ಮಾಡೋವರಿಗೂ ಇಲ್ಲೇ ಕೂಡ್ತೀನಿ ಅಂದುಬಿಟ್ರು.

ಆಮೇಲೆ ಒಂದು ಕ್ಷಣ ಎದ್ದು ನಿಂತು ಮತ್ತೆ ಮುಂದುವರಿಸಿದ್ರು ಏನು, ನಿಮ್ಮ ಕಾಂಗ್ರೆಸ್‌ ಪಕ್ಷ ಸರಕಾರದ ಖಜಾನೆಯಿಂದ ನಾಸಿಕ್‌ ಅಧಿವೇಶನಕ್ಕೆ ೧೫ ಲಕ್ಷ ಕೊಟ್ಟಿರೋದು ಸುಳ್ಳಾ? ಹಿಂಗ ಸವಾಲ ಮೇಲೆ ಸವಾಲು ಹಾಕಿದ ಮೇಲೆ ಆ ಮನುಷ್ಯ ಮೋಟು ಮರದಂಗ ನಿಂತಾ ಇದ್ದ. ಅವನಿಗೆ ಏನೂ ತಿಳೀಲಾರದ ಕಡೀಕ ‘ನೆಹರೂ ಹಮಾರಾ ನೇತಾ ಹೈ’ ಅಂತಾ ಘೋಷಣೆ ಹಾಕಿಬಿಟ್ಟ. ಅವಾಗಾ ಲೋಹಿಯಾ ಮುಗುಳ್ನಕ್ಕು… “ನಹೀಂ, ನಹೀಂ,  ಹಿಂದುಸ್ತಾನ್‌ ಕೇ ನೇತಾ ಏಕೀ ಹೈ, ವೊ ಮಹಾತ್ಮಾಗಾಂಧೀ” ಅಂದುಬಿಟ್ರು. ಮುಂದೇ ಅದ್ಬುತವಾಗಿ ಭಾಷಣ ಮಾಡಿಬಿಟ್ರು. ಅವಾಗ ಅವರ ಬಾಯಿಂದ ಇಂಗ್ಲೀಷ್‌ ಮಾತು ಬರ‍್ತಿರ‍್ಲಿಲ್ಲ. ಕಟ್‌ಸೆಂಟೆನ್ಸ್ ಅಂತೀವಲ್ಲ ಹಂಗ ಇಂಗ್ಲೀಷ್‌ ಯಾವಾಗಾದ್ರೂ ಬರ್ತಿತ್ತು. ಆಮೇಲೆ ಕಾರ್ಯಕ್ರಮ ಮುಗೀತು ನನ್ನ ಹೆಗಲಮೇಲೆ ಕೈ ಇಟ್ವು “ವಿರುಪಾಕ್ಷಪ್ಪ ತುಮ್‌ ಅಪನೀ ಮಂಜಿಲ್‌ ಕೀ ತರಫ್‌ ಅಪನೀ ಕದಂ ಬಡಾಕೇ ರಖನಾ” ಅಂದು ಮುಂದೆ ಹೋದ್ರು.

ಸಾರ್‌, ನೀಲಗಂಗಯ್ಯ ಪೂಜಾರ್ಅವರು ಹೊತ್ತಿನ್ಯಾಗ ರೋಣ ಭಾಗದಾಗ ಸಮಾಜವಾದಿ ಚಟುವಟಿಕೆ ಮಾಡ್ತಿದ್ರಲ್ಲ?

ಅವಾಗ ಇದ್ರು… ಕೇಳ್ರೀ ಹೇಳ್ತೀನಿ. ಅವಾಗ ಧಾರವಾಡದಾಗ ಇದ್ರು. ಈ ರೋಣ ತಾಲೂಕಿನ್ಯಾಗ ಸಮಾಜವಾದಿ ಚಟುವಟಿಕೆ ಆರಂಭಿಸುವಂತಹ ಒಂದೇ ಒಂದು ಸಭೆಯೊಳಗೆ ನೀಲಗಂಗಯ್ಯ ಇದ್ರು. ಆಮ್ಯಾಲೆ ಉಳಿದದ್ದೆಲ್ಲ ನಾನೇ ಮಾಡೀನಿ ಹೇಳ್ಬೇಕಂದ್ರೆ. ಮುಂದೆ ಅವ್ರು  ಹೆಬ್ಬಳ್ಳಿ ಮತ್ತು ಅಮ್ಮಿನಬಾವಿ ಅಲ್ಲಿ ಕೆಲಸ ಮಾಡಿದ್ರು. ಇಲ್ಲಿ ರಂಗರಾಜ ಕುಲಕರ್ಣಿ ಮತ್ತು ನಾವು ಪಾದಯಾತ್ರೆ ಮಾಡಿದ್ವಿ ಇಲ್ಲಿ.

ಲೋಹಿಯಾ ಅವರು ಬಂದಾಗ ನೀಲಗಂಗಯ್ಯ ಇದ್ರೋಇಲ್ವೋ?

ಇಲ್ಲ, ಇಲ್ಲ, ಅವಾಗ ಇರ‍್ಲಿಲ್ಲ. ಬಸವರಾಜ ಕಟ್ಟೀಮನಿ ಮತ್ತು ಚನ್ನವೀರ ಕಣವಿ ಅವರನ್ನೂ ಕರೆಸಿಕೊಂಡಿದ್ವಿ. ಕಟ್ಟೀಮನಿ ಸಮಾಜವಾದೀನೂ ಆಗಿದ್ರು. ಆ ಸಂದರ್ಭದಾಗೂ ನೀಲಗಂಗಯ್ಯ ಪೂಜಾರ್‌ ಇರ‍್ಲಿಲ್ಲ. ಯಾಕೀ ಮಾತು ಹೇಳ್ತೀನಿ ಅಂದ್ರೆ, ಕಟ್ಟಿಮನಿಯವರ ಮೇಲೆ ಕೆಲವು ಟೀಕಾಪರ ಲೇಖನಗಳು ಬಂದ್ವು. ಇಂಡಿಕೇಟ್‌, ಸಿಂಡಿಕೇಟ್‌ ಆದ್ಮೇಲೆ. ಅವಾಗೇನದಲ್ಲ. ನೀಲಗಂಗಯ್ಯ ಪೂಜಾರ‍್ರು ಒಂದು ಟೀಕಾಪರ ಲೇಖನ ಕಟ್ಟೀಮನಿಯವರ ಮೇಲೆ ಬರದ್ರು, ಏನಂತ ತಿಳ್ಕೊಂಡು ಅಂದ್ರ. “ಹಿಂದಕ್ಕ ರೋಣದ ಸಭೆಯೊಳಗ ಸಮಾಜವಾದಿ ಪಕ್ಷ ಅಂತ ಘೋಷಣಾ ಮಾಡಿದವ್ರು ಈಗ ಇಂದಿರಾ ಪಕ್ಷಕ್ಕ ಹೋಗ್ಯಾರು” ಅನ್ನೋ ಅರ್ಥದಲ್ಲಿ. ಆದ್ರೆ ನಿಜವಾಗ್ಲೂ ಹಂಗ ಇರ‍್ಲಿಲ್ಲ, ಅವಾಗ ಅಲ್ಲಿ ನವನಿರ್ಮಾಣ ಕ್ರಾಂತಿ ಅಂತಾ ಇತ್ತಲ್ಲ ಚಂದ್ರಶೇಖರ ಪಾಟೀಲ್‌ ಜೊತೀ ಕೂಡ್ಕೊಂಡು ಅವಾಗಿನ್ನೂ ಕಟ್ಟೀಮನಿಯವರು ‘ಇಂಡಿಕೇಟ್‌’ ಪಕ್ಷದೊಳಗಾ ಇದ್ರು. ಅದು ಇವರಿಗೆ ಭಾಳಾ ಅಪ್ರಿಯ ಅನ್ಸಿತ್ತು. ಚಂದ್ರಶೇಖರ ಪಾಟೀಲರಂತೂ ಅವರಿಗೆ ಭಾಳಾ ತೊದರೇನೂ ಕೊಟ್ರು ಬಿಡ್ರೀ. ಅವರ ಮನೀತನಕ ಹೋಗಿ ಗಲಾಟೆ ಮಾಡಾದು ಹಾಗೆಲ್ಲ ಮಾಡಿದ್ರು.

ಅವಾಗ ಪಾಟೀಲ ಪುಟ್ಟಪ್ಪನ ‘ಪ್ರಪಂಚ’ದೊಳಗೂ ಕಲ್ಲೆ ಶಿವೋತ್ತಮರಾವ್‌ ಅವರ ‘ಜನ ಪ್ರಗತಿ’ ಪತ್ರಿಕೆಗಳಲ್ಲಿನೂ ಲೇಖನ ಬಂದ್ವು. ಹೀಗೆ ರೋಣದ ಸಭೆಯೊಳಗ ನೀಲಗಂಗಯ್ಯ ಪೂಜಾರ್ ಹೀಗೆ ವರ್ತಿಸಿದ್ರು ಅಂತ. ಕೊನೆಗೆ ಇಂದಿರಾ ಅವರ ಕಾಂಗ್ರೆಸ್ಸಿಗೆ ಜಯಕಾರ ಹಾಕಾಕತ್ಯಾರ ಅನ್ನೋ ಅರ್ಥದ ಲೇಖನ ಕಲ್ಲೇಶಿವೋತ್ತಮರಾವ್‌ ಅವರ ಪತ್ರಿಕೆಯೊಳಗ ಬಂದಿತ್ತು. ಅವಾಗ ಕಟ್ಟೀಮನಿಯವರನ್ನ ಎತ್ತಿ ಹಿಡಿಯೋರು ಯಾರೂ ಇರಲಿಲ್ಲ. ಎತ್ತೀನೂ ಹಿಡೀಬೇಕಾಗಿರ‍್ಲಿಲ್ಲ. ಆದ್ರ ನಿಜವಾಗಿ ರೋಣದ ಸಭೆಯಲ್ಲಿ ಏನು ನಡೀತು, ಅದರ ಸರಿಯಾದ ವೃತ್ತಾಂತವನ್ನ ಯಾರೂ ಬರೀಲಿಲ್ಲ, ಅಂತ ಅವರಿಗೆ ನೋವಾಗಿತ್ತು. ಕಟ್ಟೀಮನಿಯವರ ವಿರುದ್ಧ ಏನು ಲೇಖನ ಬರ‍್ತಾವು ಅದನ್ನ ಪುಟ್ಟಪ್ಪ ಪ್ರಕಟ ಮಾಡ್ಲಿಕ್ಕೆ ಹತ್ತಿಬಿಟ್ಟ. ಅವಾಗಾ ನನಗೊಂದು ಪತ್ರ ಬರೆದ್ರು, ಕಟ್ಟೀಮನಿಯವರು. ವಿರುಪಾಕ್ಷಪ್ಪ ನಾನು ರೋಣದ ಸಭೆಯೊಳಗ ಬಂದಿದ್ದೆ, ನೀವು ಕರಿದಿದ್ರೀ. ಆದ್ರೆ ಸಭೆಯೊಳಗ ಏನಾತು ಅನ್ನೋದ್ರ ಬಗ್ಗೆ ಕೆಲವು ವಿಪರೀತ ಟೀಕಾ ಮಾಡಿದಾರ. ಆದ್ರೆ ಏನಾತು ಅಂತ ನಿಜವಾದದ್ದನ್ನ ನೀವು ಮಾತ್ರ ಹೇಳಬಲ್ಲಿರಿ ಅಂತ. ಅವಾಗ ನಾನು ಬರ‍್ದೆ. ಅದನ್ನ ಪುಟ್ಟಪ್ಪನ ‘ಪ್ರಪಂಚ’ ಕ್ಕೆ ಕಳಿಸಿದೆ. ಅವಾಗ ಅದನ್ನ ಪುಟ್ಟಪ್ಪ ಪ್ರಕಟ ಮಾಡ್ಲಿಲ್ಲ. ಯಾವ ಪತ್ರಿಕೆಯೊಳಗ ಪ್ರಕಟ ಆತು. ಎರಡು ಕಂತುಗಳಲ್ಲಿ. ಆಮೇಲೆ ಕಟ್ಟೀಮನಿಯವರು ಪತ್ರ ಬರೆದ್ರು ಪಾಪ. ಈ ಹೊತ್ತಿನ್ಯಾಗ ನೀನು ಆಸರ ಆದಿ ವಿರುಪಾಕ್ಷಪ್ಪ. ನಿನ್ನನ್ನ ಕಲ್ಲು ತೂರಿ ಅಂತಾ ಹುಚ್ಚಾಟ ಮಾಡ್ತಾರ. ಮಾಡ್ಲಿ ನೋಡೋಣ ಅಂತ. ಈ ಮಾತನ್ನ ಯಾಕ ಹೇಳಿದೆ ಅಂತಂದ್ರ….ನೀಲಗಂಗಯ್ಯ ಹಂಗ ಮಾಡಿದ್ರು.

ನಮ್ಮ ತಾಲೂಕಿನ ಪರಿಮಿತಿಯಾದಂತಹ ಕ್ಷೇತ್ರದೊಳಗ ಸಮಾಜವಾದಿ ಪಕ್ಷವನ್ನು ಸಂಘಟಿಸಬೇಕು ಅಂತ ತೀವ್ರ ಹಂಬಲ ನನಗಿತ್ತು. ಆದ್ರೆ ಒಳ್ಳೊಳ್ಳೆ ನಿಷ್ಠಾವಂತ ಕಾರ್ಯಕರ್ತರು ನನಗೆ ಸಿಗಲಿಲ್ಲ. ಇದ್ದವರಲ್ಲಿ ಎಷ್ಟೋ ಜನ ಹೋಗಿಬಿಟ್ರು. ನನಗೆ ಗಜೇಂದ್ರಗಢದ್ದು ಮತ್ತೆ ಮತ್ತೆ ನೆನಪಾಗ್ತದೆ. ಇಂವ, ರಾಜೇಸಾಹೇಬ, ನೂಲ್ವಿ ವೀರಭದ್ರಪ್ಪ ಅಂತಾ ಇದ್ರು. ಗಜೇಂದ್ರಗಢದಲ್ಲಿ ವ್ಯಾಪಾರಿ ಮಿಲ್‌ಗಳಿಗೆ ಹಾನಿಯಾದ ನಂತರ, ಅನಿರೀಕ್ಷಿತವಾಗಿ ನಮ್ಮ ಪಕ್ಷಕ್ಕೆ ಬಂದ್ರು.ನೂಲ್ವಿ ವೀರಭದ್ರಪ್ಪ ಗಜೇಂದ್ರಗಢದಾಗ ನಮ್ಮ ಪಕ್ಷದ ನಡುಗಂಬಂದಂಗಿದ್ರು. ಅದೇನಾ ಇರ‍್ಲೀ ಸಮಾಜವಾದಿ ಮುಖಂಡ್ರು ಎಲ್ಲಾ ಚದುರಿ ಹೋಗಿ ಬಿಟ್ರು.

ಲೋಹಿಯಾ ಅವರು ಇದ್ದಾಗ್ಲೇ ಬಿರುಕು ಬಂತು. ಲೋಹಿಯಾರನ್ನು ಪಕ್ಷದಿಂದ ಸಸ್ಪೆಂಡ್‌ ಮಾಡಿದ್ರಲ್ಲಾ. ಆಮೇಲೆ ಇವರ‍್ಗೆ ಕೂಡಿ ನಡೀಲಿಲ್ಲ. ಸಂಯುಕ್ತ ಸಮಾಜವಾದಿ ಪಕ್ಷ ಮಾಡಿದ್ರು ಲೋಹಿಯಾರವರು. ಅವಾಗ ಅದರ ಜೊತೀಲಿದ್ದಂಥ ಮಧುಲಿಮಯೆ, ಫರ್ನಾಂಡೀಸ್‌, ಎಸ್‌.ಎಮ್‌.ಜೋಶಿ ಅವರೆಲ್ಲ ಆಮೇಲೆ ಬಿಟ್ಟು. ಕೊನೆಗೆ ಕಾಂಗ್ರೆಸ್‌ ಅಗ್ದಿ ಬಲಾಢ್ಯಪಕ್ಷಕ್ಕೆ ಪರ್ಯಾಯ ಕಟ್ಟಬೇಕಂತಂದು, ಪಕ್ಷಗಳ ಧೃವೀಕರಣ ಮಾಡಿದ್ರು. ಏನಾಯ್ತು ಜನಸಂಘವನ್ನೂ ಇದ್ರಾಗ ಕೂಡಿಸಿಕೊಳ್ಳಬೇಕೆಂಬ ಪ್ರಯತ್ನ ಮಾಡಿದ್ರು. ಇದು ಲೋಹಿಯಾರವರು ಮಾಡಿದ ದೊಡ್ಡ ತಪ್ಪು ಅಂತಾ ಹೇಳೋರು ಇವಾಗ್ಲೂ ಇದ್ದಾರೆ.

ಲೋಹಿಯಾರವರ ಧೋರಣೆ ಬಗ್ಗೆ ನಿಮಗೆ ಏನನ್ನಿಸ್ತು?

ನನಗೂ ಕೂಡ ಲೋಹಿಯಾ ಹಿಂಗ್ಯಾಕ ಮಾಡಿದ್ರು ಅಂತನ್ಸುತ್ತೆ. ಅಲ್ಲಾ ಹಿಂದೆ ಕಿಶನ್‌ ಪಟ್ನಾಯಕ್‌ ಕೂಡ ಮಾತಾಡ್ಡೆ ನಾನು. ಇಲ್ಲ, ಆ ಮಟ್ಟಿಗೆ ಅದು ಸರೀನೇ ಇತ್ತು ಅದು ಅಂತಂದ್ರು. ಅದಕ್ಕೆ ವಿವರವಾಗಿ ಉತ್ರ ಕೊಡ್ಲಿಲ್ಲ ಅವ್ರು. ತೇಲಿಸಿ ಉತ್ರ ಕೊಟ್ರು. ಒಮ್ಮೊಮ್ಮೆ ಏನದಲ್ಲ, ಆರ್‌.ಎಸ್‌.ಎಸ್‌.ನ ಸಮಾವೇಶಕ್ಕೂ ಲೋಹಿಯ ಹೋಗಿದ್ರು. ಯಾಕ ಹೋಗಿದ್ರೋ ಹೋಗಿದ್ರು. ಯಾಕ ಹೋಗಿದ್ರೋ ಹೋಗಿದ್ರು.

ಯಾವ ಸಂದರ್ಭ ಅದು?

ಅದು ನನಗೆ ನಿಕ್ಕಿ ಗೊತ್ತಿಲ್ಲ. ಆದ್ರೆ ಲೋಹಿಯಾರವರು ಆರ್‌.ಎಸ್‌.ಎಸ್‌.ನ ಸಮಾವೇಶಕ್ಕ ಹೋಗಿದ್ರು. ಅಂದ್ರೆ ಅಗ್ದೀ ಸರ್‌ ಪ್ರೈಜ್ ವಿಸಿಟ್‌. ಹೋಗಿ ಇದ್ದು, ‘ಪರವಾ ಇಲ್ಲ’ ಅಂತಾ ಹೇಳಿ ಬಂದ್ರು ಅಂತಾ ಪತ್ರಿಕಾದೊಳಗಾ ಬಂದಿತ್ತು. ಆರ್.ಎಸ್‌.ಎಸ್‌ ನವರು ಪಂಜಾಬಿನ ಅಂಬಾಲದೊಳಗ ಅವರು ಭಾಷಣ ಮಾಡೋವಾಗ ಲೋಹಿಯಾ ಅವ್ರಿಗೆ ಕಲ್ಲು ಹೊಡೆದ್ರು. ರಕ್ತ ಕೂಡಾ ಬಂತು. ಇಂಥ ಆರ್‌.ಎಸ್‌.ಎಸ್‌ನ ಸಮಾವೇಶಕ್ಕೆ ಲೋಹಿಯಾ ಯಾಕ ಹೋಗಿದ್ರು… ಅವರಿಗೆ ಆ ಸೇಡಿನ ಮನೋಭಾವ ಆ ಹ್ಯಾವ ಅನ್ನೋದು ಇರ‍್ಲಿಲ್ಲ, ಅಂತಾನೂ ನಾನು ಅನ್ನಬೇಕಾಗಿಲ್ಲ. ಆದ್ರೆ ಇಂಥಾ ಒಂದು ಕೋಮುವಾದಿ ಪಕ್ಷದೊಳಗೆ ಏನ್‌ ಚಲೋ ಕಂಡ್ರು ಲೋಹಿಯಾ…ಇದು ಒಂದು ಗೂಢ, ಒಡೆಯಲಾಗದ ಒಗಟು. ಆದ್ರೆ ಅದೇನೋ ಪಾಸಿಂಗ್ ಮೂಡ್‌ನೊಳಗ ಆತು ಅಂತಾನಾ ತಿಳ್ಕೋಳ್ಳೋಣ.

ಅದರ ಪರಿಣಾಮ ಮುಂದಿನ ಸಮಾಜವಾದೀ ರಾಜಕಾರಣದ ಮೇಲೆ ಯಾವ ಪರಿಣಾಮ ಬೀರ್ತು?

ಆಯ್ತ್ರೀ. ಮತ್ತು ಈ ಥರಾದ ತಪ್ಪುಗಳನ್ನ ಜೆ.ಪಿ. ಯವರೂ ಮಾಡಿದ್ರು. ಲೋಹಿಯಾ ಅವರಿಗಿಂತಲೂ ತಪ್ಪು ಮಾಡಿದ್ರು…ತಪ್ಪು (ಯೋಚಿಸಿ) ತಪ್ಪು ಅಂತ ಅನ್ನೋದು ಬ್ಯಾಡ ವ್ಯತ್ಯಾಸ ಅಂತಾ ಅನ್ನೋಣು. ಇದು ಹೆಂಗಾಯ್ತಪ್ಪ ಅಂತಂದ್ರೆ, ೧೯೭೨ ರೊಳಗೆ ಏನದೇ ಬಿಹಾರದೊಳಗ ಅಬ್ದುಲ್ ಗಫೂರ್‌ ಸರ್ಕಾರ, ಭಾಳಾ ಭ್ರಷ್ಟಾಚಾರದಲ್ಲಿ ತೊಡಗಿತ್ತು. ಅವಾಗ ಇಂದಿರಾ ಸರ್ಕಾರ ಇತ್ತು. ಅವಾಗ ಹುಚ್ಚೆದ್ದು ಬತ್ತಲೆ ಕುಣಿಯಾಕ ಹತ್ತಿತ್ತು ಭ್ರಷ್ಟಾಚಾರ. ಇದೆಲ್ಲಾ ಸಿಂಡಿಕೇಟ್‌ ಇದು. ಚರಣಸಿಂಗರದು ಭಾರತೀಯ ದಳ ಆಯ್ತು. ರಾಜಾಜಿಯ ಸ್ವತಂತ್ರ ಪಕ್ಷ ಇತ್ತು ಮತ್ತು ಜನಸಂಘ ಇತ್ತು.  ಇಷ್ಟೆಲ್ಲಾ ರಾಜಕೀಯ ಪಕ್ಷಗಳಿದ್ರೂ ಇಂದಿರಾ ಗಾಂಧಿ ಎದುರು ತರಗೆಲೆಗಳಂಗೆ ಆಗಿಬಿಟ್ಟಿದ್ರು. ಇಂಥಾ ಪ್ರಸಂಗದೊಳಗ ಜೆ.ಪಿ. ಬಂದ್ರು. ಸರ್ವೋದಯಕ್ಕ ಹೋಗಿದ್ರು ರಾಜಕೀಯ ಬೇಡ ಅಂತ, ವಿರಕ್ತರಾಗಿಬಿಟ್ಟಿದ್ದ ಜೆ.ಪಿ.ಬಂದ್ರು. ಪಾಟ್ನಾನಗರದ ಬೀದಿಯಲ್ಲಿ ನಿತ್ಕೊಂಡು ಈ ಭ್ರಷ್ಟಾಚಾರ ತಡೀಬೇಕು ಅಂತಂದು ಘೋಷಣಾ ಮಾಡಿದ್ರು. ಅವಾಗ ಲೋಹಿಯಾರವರು ಏನು ಸಪ್ತಕ್ರಾಂತಿ ಬಹಿಷ್ಕರಿಸೋದಕ್ಕೆ ಕರೆ ನೀಡಿದ್ರು ಅವಾಗ ಈ ಎಲ್ಲ ರಾಜಕಾರಣಿಗಳು ಅವರನ್ನ ಸುತ್ತುವರೆದ್ರು. ಬ್ಯಾಕ್‌, ಅಂದ್ರು. ನಂದು ಪಾರ್ಟಿಲೆಸ್‌ ಡೆಮಾಕ್ರಸಿ. ಪಕ್ಷಾರಹಿತ ಪ್ರಜಾಪ್ರಭುತ್ವ ಅಂದ್ರು. ಅವಾಗ ಈ ವಾಜಪೇಯಿ ಅವರೆಲ್ಲ….ಶಾಂತಂ ಪಾಪಂ ಹೇಳಿ, ಆದದ್ದೆಲ್ಲ ಆತು ಇನ್ನು ತಮ್ಮ ಮಾರ್ಗದರ್ಶನದಲ್ಲಿ ಸಾಗ್ತೀವಿ ಅಂತ್ಹೇಳಿ.

ಸಾರ್‌, ನಡುವೆ ತುರ್ತು ಪರಿಸ್ಥಿತಿ ಘೋಷಣೆ ಆಯ್ತು. ಅದ್ರಲ್ಲಿ ನಿಮ್ಮ ಅನುಭವವೇನು?

ಅದಕ್ಕೇನೂ ಮಾಡಂಗಿರ‍್ಲಿಲ್ಲ. ಪತ್ರಿಕಾದೊಳಗ ಲೇಖನ ಬರೆಯೋವಂಗಿರ‍್ಲಿಲ್ಲ. ಎಲ್ಲರೂ ಏನೂ ಮಾಡ್ಲಿಲ್ಲ ಹೇಳೋಕಂದ್ರೆ. ಯಾವಾಗ ಪತ್ರಿಕೆಗಳಿಗೆ ಬ್ಯಾನ್‌ ಹಾಕಿದ್ರು ಆವಾಗ ಪತ್ರಿಕೆಗಳು ಸ್ವರವನ್ನೇ ಬದ್ಲಿ ಮಾಡಿಬಿಟ್ವವು. ಅವಾಗ ಜಾರ್ಜ್‌ ಫರ್ನಾಂಡೀಸ್‌ “ಹೇಡಿತನಕ್ಕಾಗಿ ಬಹುಮಾನವನ್ನೇನಾದ್ರೂ ಕೊಡಬೇಕಾದ್ರೆ ಅದು ಭಾರತದ ಪತ್ರಿಕೆಗಳಿಗೆ ಕೊಡಬೇಕು” ಅಂತಾ ಹೇಳ್ದ. ಅವಾಗ ಯಾರ‍್ಗೂ ಏನೂ ಮಾಡ್ಲಿಕ್ಕಾಗ್ಲಿಲ್ಲ.

ಅಲ್ಲ, ಧಾರವಾಡದಾಗ ಗುಪ್ತ ಚಟುವಟಿಕೆಗಳು ನಡೀತಿದ್ವು, ಕಾರ್ಯಕರ್ತರು ನಾಯಕರು ಭೂಗತರಾದ್ರುಸಮಾಜವಾದಿಗಳು ತೀವ್ರವಾಗಿ ಪ್ರತಿಭಟಿಸಿದ್ರು?

ಅಲ್ಲಿ ಕೆಲವರು ಮಾಡಿದ್ರು ಬಿಡ್ರೀ. ಅಲ್ಲಿ ಕೆಲವರು ನವ ನಿರ್ಮಾಣ ಕ್ರಾಂತಿ ಮಾಡ್ಬೇಕಂತಂದು ಚಂಪಾ, ಸಿದ್ದಲಿಂಗ ಪಟ್ಟಣಶೆಟ್ಟಿ ಅವರೆಲ್ಲ ಅರೆಸ್ಟಾದ್ರು ಬಿಡ್ರೀ. ಪಟ್ಟಣಶೆಟ್ಟಿ ತಪ್ಪಾತು ಅಂತ್ಹೇಳಿ ಬರ‍್ದು ಕೊಟ್ಟು ಬಂದ. ಅದೆಲ್ಲ ಆತು ಬಿಡ್ರೀ. ಆದ್ರೆ ಅದೆಲ್ಲಾ ವ್ಯಾಪಕವಾಗಿ ಏನೂ ಆಗ್ಲಿಲ್ಲ. ಧಾರವಾಡದ ಮಟ್ಟಿಗೆ. ಉಳಿದ ಕಡೆಗೆ ಏನೇನಾತೋ ಅದರ ಪರಿಣಾಮ ನನಗೇನು ಕಂಡು ಬರ‍್ಲಿಲ್ಲ. ಉತ್ತರ ಭಾರತದಾಗ ವಗೈರೆ ಆಗಿರ‍್ಬೇಕು ಅದು.

ಸಾರ್‌, ನಿಮ್ಮ ಮಟ್ಟಿಗೆ ಅಂತಹ ಪ್ರತಿರೋಧ ಚಟುವಟಿಕೆಗಳನ್ನು ಮಾಡ್ಲಿಕ್ಕಾಯ್ತಾ ಅಂತಾ…?

ಮಾಡ್ಲಿಕ್ಕಾಗ್ಲಿಲ್ಲ. ಯಾಕಂದ್ರೆ ಮಾಡೋವಂಥ ಸಂದರ್ಭ ಭಾಳಾ ಬಿಗಿಯಿತ್ತು. ಹೇಳ್ಬೇಕಂತಂದ್ರೆ. ಯಾರೂ ಮಾಡ್ಲಿಲ್ಲ ಧಾರವಾಡದಾಗಾನೂ ಕೆಲವರು ಒಬ್ಬಿಬ್ರು ಮಾಡಿದ್ರು ಬಿಡ್ರೀ ಬೆಂಗಳೂರು ವಗೈರೆ ಆಯ್ತು.

ತುರ್ತುಪರಿಸ್ಥಿತಿ ಬಗ್ಗೆ ನಿಮ್ಮ ವಿಶ್ಲೇಷಣೆ ಏನು?

ಇಂದಿರಾ ಗಾಂಧಿ ತುರ್ತುಪರಿಸ್ಥಿತಿ ಹೇರಿದ್ದು ಸರಿಯೋ ತಪ್ಪೋ ಅನ್ನೋದರ ಬಗ್ಗೆನೂ ಹೇಳ್ಬೇಕಾಗ್ತದೆ. ಆಕೀ ನನ್ನನ್ನು ಕೇಳಿದ್ರೆ ಕೇವಲ ಅಧಿಕಾರಕ್ಕಾಗಿ ತುರ್ತುಪರಿಸ್ಥಿತಿ ಹೇರಿದ್ಲು ಅಂದ್ರೆ ಅದು ಭಾಳಾ ತಪ್ಪು. ಪ್ರಜಾತಂತ್ರದ ತತ್ವ, ಸಿದ್ಧಾಂತ, ಮೌಲ್ಯಗಳನ್ನು ತುಳಿದಲ್ಲಿ, ಇದೂ ಒಂದು ಮಾತು. ಆದರೆ ಇನ್ನೊಂದು ಮಗ್ಗಲನ್ನು ನಾವು ನೋಡಿದ್ರೆ ಆಕಿ ಈ ದೇಶದ ಜನಸಾಮಾನ್ಯರ ಹಿತ ಕಲ್ಯಾಣ ಸಾಧಿಸ್ತೀನಿ ಅಂತಿಳ್ಕೊಂಡು ‘ಗರೀಬಿ ಹಟಾವೋ’ ಅಂಥಾ ಸ್ಲೋಗನ್‌ ಕೊಟ್ಲು. ಅವರಪ್ಪ ಕೂಡ ಮಾಡಲಾರದಂಥ ಕೆಲಸ ಆಕಿ ಮಾಡಿದ್ಲು. ೨೦ ಅಂಶದ ಕಾರ್ಯಕ್ರಮಗಳನ್ನು ನಾವು ನೋಡ್ಬೇಕಾಗ್ತದೆ. ಯಾವ ಕಾಂಗ್ರೆಸ್‌ನೊಳಗ, ಈ ಬಂಡವಾಳಶಾಹಿ ಮತ್ತು ಪಟ್ಟಭದ್ರ ಶಕ್ತಿಗಳ ಕೈಗೆ ಕಾಂಗ್ರೆಸ್‌ ಹೋಗ್ತದೆ ಅಂತಿಳ್ಕೊಂಡು, ಅದನ್ನ ತಪ್ಪಿಸ್ಬೇಕು ಅಂತಾ ಪ್ರಯತ್ನ ಮಾಡಿದ್ಲು. ಅವಾಗ ಇಂದಿರಾಗಾಂಧಿ ಮಾಡಿದ ಈ ಕೆಲಸ ದೊಡ್ಡದು ಅಂತಿಳ್ಕೊಂಡು ಮುಲ್ಕಾ ಗೋವಿಂದರೆಡ್ಡಿ ಅಂಥ ಸಮಾಜವಾದಿಗಳು ಕಾಂಗ್ರೆಸ್ಸಿಗೆ ಹೋದ್ರು. ಅಲಹಾಬಾದ್‌ ಹೈಕೋರ್ಟ್‌ನ ತೀರ್ಪಿನ ಪ್ರಕಾರ ಆಕಿ ತನ್ನ ಅಧಿಕಾರದಿಂದ ಇಳೀಲಿಕ್ಕೆ ಮನ್ಸು ಮಾಡ್ಲಿಲ್ಲ. ಆಕಿ ಪ್ರಧಾನಮಂತ್ರೀನಾ ಆಗ್ಬೇಕಂತಾ ಕೂತ್ಲಲ್ಲ, ಮತ್ತಾ ರೇ ವಗೈರೆ ಸುಪ್ರೀಂ ಕೋರ್ಟಿನ ಚೀಫ್‌ ಜಸ್ಟೀಸ್‌ ಅವರೆಲ್ಲಾ ಅಕೀ ಹಂಗಾ ಕುಣಿದ್ರು. ಏನಾ ಆಗ್ಲೀ ಆಕೀ ಈ ನ್ಯಾಯಾಂಗ ವ್ಯವಸ್ಥೆನಾ ಘಾತ ಮಾಡಿದ್ಲು ಅಂತಾ ಹೇಳ್ಬೇಕಾಗ್ತದೆ.

ನೋಡ್ರೀ… ೨೦ ಅಂಶದ ಕಾರ್ಯಕ್ರಮ ಏನದೆಯಲ್ಲ, ಬಹಳ ಮಹತ್ವದ್ದು. ಅಗ್ರಿಕಲ್ಚರಲ್‌ ಕಮೀಷನ್, ಈ ಭೂ ಸುಧಾರಣೆ, ಇವೆಲ್ಲ ಏನಾಗ್ಬೇಕು ಅಂತ ಆಕೀ ಮಾರ್ಗದರ್ಶನ ಸೂತ್ರ ಹಾಕಿಕೊಟ್ಲು. ಅದೇ ಪ್ರಕಾರ ನಮ್ಮ ಕರ್ನಾಟಕ ರಾಜ್ಯದೊಳಗ ನಮ್ಮ ದೇವರಾಜ ಅರಸು ಮಾಡ್ದ. ಇದನ್ನ ನಾವು ನೋಡ್ಬೇಕ್ಕಾಗ್ತದೆ. ಎಲ್ಲವನ್ನೂ ಅಲ್ಲಗಳಿಯೋದಕ್ಕೆ ಆಗೋದಿಲ್ಲ. ಗುಲಾಬಿಗೆ ಮುಳ್ಳದಾವು ಅಂತಾ ಹೇಳೋದಕ್ಕಿಂತಲೂ ಅದರ ಮಕರಂದ, ಸೌಂದರ್ಯ ನೋಡ್ಬೇಕಾಗುತ್ತೆ. ಇಂದಿರಾ ಗಾಂಧಿ ಮಾಡಿದ್ದು ಕೆಲವೊಂದು ಒಳ್ಳೆಯದನ್ನೂ ನೋಡ್ಬೇಕಾಗ್ತದೆ. ನೀಲಗಂಗಯ್ಯ ಪೂಜಾರ್‌ ಅವರೆಲ್ಲ ಇಂದಿರಾ ಕಾಂಗ್ರೆಸ್‌ಗೆ ಹೋಗಿದ್ರು. ಇಂಡಿಕೇಟ್‌ಗೆ ಹೋಗಿದ್ರು, ಅವರೆಲ್ಲ ಮೊದ್ಲು ಸಮಾಜವಾದಿ ಪಕ್ಷದೊಳಗೆ ಇದ್ದವರು. ಆಮೇಲೆ ಟಿಕೇಟ್‌ ಸಿಗಲಿಲ್ಲ ಅಂತ ಬಿಟ್ರು. ಅವನ್ನೆಲ್ಲ ಬಿಡಿಸಿ ಹೇಳೋಕೂ ಆಗಲ್ಲ. ಅಂದಾನಪ್ಪ ದೊಡ್ಡ ಮೇಟಿಯವರು ತೀರ‍್ಕೊಂಡ ನಂತರ ರೋಣ ತಾಲೂಕಿನಿಂದ ಸ್ಪರ್ಧಿಸಲು ಯಾರೂ ಸಿಗದೇ ಇದ್ದಾಗ ನೀಲಗಂಗಯ್ಯ ಪೂಜಾರ್‌ರಿಗೆ ಇದನ್ನ ಮಾಡಿದ್ರು. ಆ ಮಾತು ಬೇರೆ ಬಿಡ್ರಿ. ಅದಕ್ಕಿಂತ ಮೊದ್ಲು ಕಾಂಗ್ರೆಸ್‌ ಟಿಕೇಟ್‌ ಅವರು ಬೇಡಿದ್ರು. ಇಂಡಿಕೇಟ್ ಟಿಕೇಟು, ಅದು ಸಿಗಲಿಲ್ಲ. ಕೆ.ಎಚ್‌.ಪಾಟೀಲ ಅವರೆಲ್ಲ ಸೇರ‍್ಕೊಂಡು ತಪ್ಪಿಸಿದ್ರು.

ದೇವರಾಜ ಅರಸ ಭೂ ಸುಧಾರಣೆ ಕಾಯ್ದೆ ತಂದು ೧೯೭೩ ರೊಳಗ ಮೈಸೂರು ಲ್ಯಾಂಡ್‌ ರಿಫಾರ್ಮ್‌‌ನ ಆಕ್ಟ್‌ ಏನು ಮಾಡಿದ, ಅದನ್ನು ಯಾವ ಕಮ್ಯುನಿಸ್ಟ್ ಸರಕಾರ ಕೂಡ ಮಾಡ್ಲಿಕ್ಕೆ ಸಾಧ್ಯವಿಲ್ಲ. ಅಂವ ಇಂಡಿಕೇಟ್‌ದಾಗ ಇದ್ದ. ದೇವರಾಜ ಅರಸ್‌, ದೊಡ್ಡ ಕೆಲಸ ಮಾಡ್ದ. ಮತ್ತೆ ಹಿಂದುಳಿದ ವರ್ಗದವರಿಗೆ, ಅಲ್ಪ ಸಂಖ್ಯಾತರಿಗೆ ಚಲೋ ಸ್ಥಾನಮಾನ ಕೊಟ್ಟಿದ್ದ. ಹಾವನೂರು ವರದಿ ಅವರ ಕಾಲದಲ್ಲೇ ಬಂತು. ಇಟ್‌ ಈಸ್‌ ದಿ ಬೈಬಲ್‌ ಆಫ್‌ ದಿ ಬ್ಯಾಕ್‌ ವರ್ಡ್ಸ್‌. ಕೆಲವಂದು ಒಳ್ಳೆಯವನ್ನೆಲ್ಲ ಮೆಚ್ಚಲೇಬೇಕಾಗ್ತದೆ. ಆದರೇ ದೇವರಾಜ ಅರಸ್‌ರ ಅವಧಿಯಲ್ಲಿ ಭ್ರಷ್ಟಾಚಾರ ಹೆಚ್ಚಾಯ್ತು ಅಂತ ಅದನ್ನೇ ನಾವು ಎತಿ ತೋರಿಸೋದಕ್ಕಿಂತಲೂ ಮಾಡಿದಂಥ ದೊಡ್ಡ ಕೆಲಸಾನ ನೋಡ್ಬೇಕಾಗ್ತದೆ.

ಇಂದಿರಾಗಾಂಧಿ ಗರೀಬಿ ಹಟಾವೋ ಮತ್ತು ೨೦ ಅಂಶದ ಕಾರ್ಯಕ್ರಮಗಳನ್ನು ಜಾರಿಗೆ ತಂದದ್ದು ತುರ್ತು ಪರಿಸ್ಥಿಯ…?

ಹೌದೌದು ಪ್ಲಸ್‌ ಪಾಯಿಂಟ್‌. ಭಾಳ ಕೆಲಸ ಮಾಡಿದ್ಲು. ಆದ್ರೆ ಅಧಿಕಾರಿಗಳು ಭಾಳಾ ಘಾತ ಮಾಡಿದ್ರು. ಇಂದಿರಾಗಾಂಧಿ ಆಕೆಯ ಕಾನೂನು, ಯೋಜನೆ, ಉಪಕ್ರಮ ಇವನ್ನೆಲ್ಲ ಕಾರ್ಯಗತ ಮಾಡ್ಬೇಕಂದ್ರೆ ಅಧಿಕಾರಿ ವರ್ಗ ಘಾತ ಮಾಡಿದ್ರು. ಉದಾಹರಣೆಗೆ ಕುಟುಂಬ ನಿಯಂತ್ರಣ. ಅವಾಗೆಲ್ಲ ಇವರೆಲ್ಲ ವೈದ್ಯರು ಮನಸ್ಸಿಗೆ ಬಂದಂಗ ಮಾಡಿಬಿಟ್ರು. ಹಿಂಗಾಗಿ ಅತಿರೇಕ ಆಗಿ ಬಿಡ್ತು. ಹಿಂಗಾದಾಗ ಏನಾತು ಇದೆಲ್ಲ ಇಂದಿರಾ ಗಾಂಧೀದ ಕಾರುಬಾರು ಅನ್ನಂಗಾತು. ಆಮೇಲೆ ಇಂದಿರಾಗಾಂಧೀನೂ ಕ್ಷಮೆ ಕೇಳಿದ್ಲು, ತುರ್ತು ಪರಿಸ್ಥಿತಿ ಹೇರಿದ್ದಕ್ಕ ಅಂತಾ ಕೆಲವರು ಹೇಳ್ತಾರ. ಗೊತ್ತಿಲ್ಲ ಅದು ಅವ್ರಿಗೆ. ಹಾಗಂದವ್ರಿಗೆ ನಾನು ಹೇಳಿದೆ, ಇಂದಿರಾಗಾಂಧಿ ತುರ್ತುಪರಿಸ್ಥಿತಿ ಸಾರಿದ್ದು ತಪ್ಪು ಅಂತಾ ಒಪ್ಕೊಂಡಿಲ್ಲ, ನಾನು ತುರ್ತು ಪರಿಸ್ಥಿತಿ ಸಾರಿದ ಕಾಲಕ್ಕೆ ಕೆಲವೊಂದು ಅತಿರೇಕಗಳು ಆದ್ವು ಅದಕ್ಕಾಗಿ ನಾ ಕ್ಷಮೆ ಕೇಳ್ತೀನಿ ಅಂತಂದ್ಲು. ಅಂತ ನಾ ಹೇಳ್ತೀನಿ. ಆದ್ರೆ ಒಂದೇ ಒಂದು ದೊಡ್ಡ ತಪ್ಪು ಅಂದ್ರೆ ಆಕಿ ಪ್ರಜಾಪ್ರಭುತ್ವದ ಪರಮೋಚ್ಛ ಸಿದ್ಧಾಂತದಂಗೆ ನಡಕ್ಕೊಳ್ಳಿಲ್ಲ. ಅದು ಆಕೀದು ನೈತಿಕವಾಗಿ ದೊಡ್ಡ ಅಧಃಪತನ. ಎಲ್ಲದನ್ನೂ ಸಿನಿಕತನದಿಂದ ಮಾತಾಡ್ಬಾರ‍್ದು.

ಇನ್ನು ಜನತಾಪಕ್ಷದ್ದು ತಗಳ್ಳೋಣ. ಜನತಾ ಪಕ್ಷ ಆಗೋವರಿಗೂ ಸಾಧಾರಣ ೨೭ ವರ್ಷ ಕೇಂದ್ರದೊಳಗೂ ಮತ್ತು ರಾಜ್ಯಗಳಲ್ಲೂ ಇಡೀ ಇಂಡಿಯಾದೊಳಗ ಕಾಂಗ್ರೆಸ್‌ ಸರಕಾರ ಇತ್ತು. ಆಮೇಲೆ ಜನತಾ ಪಕ್ಷ ಉದಯವಾಗಿ ಅಧಿಕಾರಕ್ಕೆ ಬಂದದ್ದು ದೊಡ್ಡ ಐತಿಹಾಸಿಕ ಸಂದರ್ಭ. ಅವಾಗ ಮುರಾರ್ಜಿ ದೇಸಾಯಿ ಮುಖ್ಯಮಂತ್ರಿ ಆದರು. ಅವಾಗ ಮುರಾರ್ಜಿ ದೇಸಾಯಿ ಬಗ್ಗೆ ಗೊತ್ತಿದ್ದವರೆಲ್ಲ ತಕರಾರು ಮಾಡಿದ್ರು. ಮುರಾರ್ಜಿ ದೇಸಾಯಿ ಯಾಕೆ? ಎಲೆಕ್ಷನ್‌ ಆಗಲಿ, ಧುರೀಣತ್ವಕ್ಕ ಅಂತ, ಮಧುಲಿಮಯೆ ಅವರೆಲ್ಲ ಪಟ್ಟು ಹಿಡಿದ್ರು, ಫರ್ನಾಂಡೀಸ್‌ ಅವರೆಲ್ಲ, ಮುರಾರ್ಜಿ ಪ್ರಧಾನಮಂತ್ರಿ ಆಗಲಿಕ್ಕೆ ಅವರಿಗೆ ಮನಸ್ಸು ಇರಲಿಲ್ಲ. ಸ್ವಲ್ಪ ಬೂರ್ಝ್ವಾ, ಕ್ಯಾಪಿಟಲಿಸ್ಟ್‌ ಮನುಷ್ಯ, ಸಮಜವಾದಿತನ ಇಲ್ಲ, ಅವಾಗ ಜೆ.ಪಿ. ಮತ್ತು ಕೃಪಲಾನಿ ಇವರೆಲ್ಲ…ಸೇರಿ ಒಪ್ಪಿಸಿದ್ರು. ಮಹತ್ಮಾಗಾಂಧಿ ಸಮಾಧಿ ಬಳಿ, ರಾಜಘಾಟನಲ್ಲಿ ಪ್ರತಿಜ್ಞೆ ಸ್ವೀಕಾರ ಮಾಡಿದ್ರು, ಮುಂದೆ ಆಳ್ವಿಕೆ ಸಾಗ್ತು. ನಮಗೆ ಪಕ್ಷ ನಿಷ್ಠೆ ಬಹಳ ಮಹತ್ವದ್ದಲ್ಲ ಹೇಳ್ಬೇಕಂದ್ರೆ. ಕೊನೆಗೆ ಜಗಜೀವನರಾಂ, ಮುರಾರ್ಜಿ, ಚರಣಸಿಂಗ್‌ ಪ್ರಧಾನಮಂತ್ರಿ ಸ್ಥಾನಕ್ಕಾಗಿ ಕಚ್ಚಾಡಲಿಕ್ಕೆ ಹತ್ತಿದ್ರು, ಕೊನೆ ಕೊನೆಗೆ ಭಾಳಾ ಹದಗೆಡ್ಲಿಕ್ಕೆ ಹತ್ತತ್ತು. ಕೊನೆಕೊನೆಗೆ ಜೆ.ಪಿ. ನನ್ನ ಕಣ್ಣಮುಂದೆ ನಾನು ಕಸಿ ಮಾಡಿದ ತೋಟ ಹಾಳಾಯ್ತು ಅಂತಾ ನೊಂದುಕೊಂಡ್ರು.