ದೇವೇಗೌಡರು ಸಮಾಜವಾದೀನಾ?

ಅಲ್ಲ, ಆಗಿರ್ಲಿಲ್ಲ ಆದ್ರೆ ಜೆ.ಹೆಚ್‌.ಪಟೇಲ್‌ ವಗೈರೆ ಇವರೆಲ್ಲ, ಇವರ ಜೊತೆ ಕೂಡ್ಕೊಂಡು ಜನತಾ ರಾಜಕಾರಣ ಮಾಡಿದ್ರಲ್ಲ. ಇವ್ರ ಹಿರಿತನದೊಳಗ ಮಾಡಿದ್ರಲ್ಲ. ಇವ್ರು ಸಮಾಜವಾದಿ ಇದ್ದಾನ ಅಂತ ಮಾಡಿದ್ದು ಇದು ಇಲ್ಲೀಗೆ ಬಂತು. ಒಟ್ಟಿನಲ್ಲಿ ಕರ್ನಾಟಕದಲ್ಲಿ ಯಾವ ಮಟ್ಟದಲ್ಲಿ ಸಮಾಜವಾದ ಬೆಳೀಬೇಕಿತ್ತೋ ಅದು ಅಷ್ಟು ಬೆಳೀಲಿಲ್ಲ. ಭಾರತದ ಯಾವ ರಾಜ್ಯದಲ್ಲೂ ಬೆಳೀಲಿಲ್ಲ. ಪ್ರತಿಯಾಗಿ ಬಿ.ಜೆ.ಪಿ. ಅಧಿಕಾರ ಪಡೀತು. ಗಟ್ಟಿಯಾತು.

ಅಹಿಂದ ಹೆಸರಿನಲ್ಲಿ ಏನು ಪ್ರಯತ್ನ ನಡೀತಿದೆ, ಅದನ್ ಏನಂತೀರಿ?

ಇವತ್ತಿನ ಮಟ್ಟಿಗೆ ಅದು ಸರೀನಾ ಅದೆ. ಆದ್ರೆ ಅಂವ (ಸಿದ್ದರಾಮಯ್ಯ) ಈ ಕಾಂಗ್ರೆಸ್‌ ಪಾರ್ಟಿಗೆ ಬರೋದರ ಬದಲಾಗಿ ದೇವನೂರು ಮಹಾದೇವ ವಗೈರೆ ಅವರ ಕರ್ನಾಟಕದ ಸರ್ವೋದಯ ಪಕ್ಷ ಏನದೆಯಲ್ಲ ಅದ್ರಾಗ ಹೋಗ್ಬೇಕಾಗಿತ್ತು. ಇದು ನನಗೇನು ಹಂಗನ್ನಿಸ್ತದೆ. ಇವರೇನಂತಾರೆ ಒಂದು ವೈಯಕ್ತಿಕ ಮಹತ್ವಾಕಾಂಕ್ಷೆ ಇಟ್ಕಂಡು ಒಂದು ದೊಡ್ಡ ಪ್ರಬಲ ರಾಜಕೀಯ ಕೊಟ್ಟರೂ ಬೇಡ, ನಾನು ‘ಅಹಿಂದ ಚಳವಳಿ’ ಕಟ್ತೀನಿ ಅನ್ನೋ ಛಲ ಬೇಕಾಗಿತ್ತು. ಮತ್ತ ಇವರ ಕೂಡ ಕೂಡ್ಕೊಂಡ. ಇವರ್ದು ‘ಗೋದಲಿ ಒಳಗ ನಾಯಿ ನಿಂತೈತೆ’. ಹುಲ್ಲನ್ನು ತಾನೂ ತಿನ್ನಲ್ಲ, ತಿನ್ನೋದನಕ್ಕೂ ತಿನ್ನಾಕ ಬಿಡಲ್ಲ’ ಅಂತಾ ಪಾಲಸಿ. ಇವ್ರ ಮೇಲೆಲ್ಲ ಪ್ರಭಾವ ತಿನ್ನಲ್ಲ, ತಿನ್ನೋದನಕ್ಕೂ ತಿನ್ನಾಕ ಬಿಡಲ್ಲ’ ಅಂತಾ ಪಾಲಸಿ. ಇವ್ರ ಮೇಲೆಲ್ಲ ಪ್ರಭಾವ ಬೀರಿ ಪಕ್ಷದ ನಾಯಕತ್ವ ತಗೊಳ್ಳೋ ಸಾಮರ್ಥ್ಯ ಸಿದ್ದರಾಮಯ್ಯನವರಿಗೆ ಅದಾನೋ, ಇಲ್ಲೋ  ಹೆಂಗೆ ಹೇಳ್ಬೆಕು ಹಿಂಗ ಭಾಳಾ ಮಂದಿ ದಾರಿ ತಪ್ಕೋತ ಬಂದ್ರು… ಏನ್ಮಾಡೋದು.

ನಂಜುಂಡಸ್ವಾಮಿಯವರು ಒಂದು ಮಟ್ಟಕ್ಕೆ ಸಮಾಜವಾದಿ ತಾತ್ವಿಕತೆಯ ಹಿನ್ನೆಲೆಯಲ್ಲಿ  ರಾಜ್ಯದಲ್ಲಿರೈತಸಂಘಕಟ್ಟೋಕೆ ಸಾಧ್ಯ ಆಯ್ತು ಅನ್ನಿಸ್ತದೆ?

ಭಾಳ ಸಂಘಟನೆ ಮಾಡಿದ್ರು. ರೈತರಿಗೆ ಒಂದು ಜಾಗತಿಕ ವೇದಿಕೆಯನ್ನು ತಂದುಕೊಟ್ಟ ದೊಡ್ಡ ಮನುಷ್ಯ ಆತ. ಆಮೇಲೆ ಅದ್ರಲ್ಲೂ ನಂಜುಂಡಸ್ವಾಮಿ ಭಾಳಾ ಸರ್ವಾಧಿಕಾರಿ ಅದಾನ, ಅಂತೆಲ್ಲ ಏನೆಲ್ಲ ಆತು. ಪುಟ್ಟಣ್ಣಯ್ಯ ಅವ್ರೆಲ್ಲ. ಒಬ್ಬ ಸಮರ್ಥ ವ್ಯಕ್ತಿಯ ನೇತ್ರತ್ವವನ್ನು ಒಪ್ಲಿಕ್ಕೆ ಈ ಜನ ತಯಾರು ಆಗೋದಿಲ್ಲೇನೋ ಅನ್ನಿಸ್ತದೆ ಒಮ್ಮೊಮ್ಮೆ.

ಆದ್ರೆ ನಂಜುಂಡ ಸ್ವಾಮಿಯವರರೈತಸಂಘಕ್ಕೆ ಜಮೀನುದಾರ ರೈತರ ಹಿತಾಸಕ್ತಿ ಮುಖ್ಯವಾಯ್ತೋ ಹೊರತು ಜಮೀನು ಇಲ್ಲದ ರೈತರ, ಅಥವಾ ಕೃಷಿ ಕಾರ್ಮಿಕರ ಹಿತಾಸಕ್ತಿಯನ್ನು ಅವರ ಕಾರ್ಯಕ್ರಮ ಒಳಗೊಂಡಿರಲಿಲ್ಲ ಅಂತ ವಿಮರ್ಶೆ ಇದೆ?

ಅಲ್ಲ, ಈಗ ಅವೆಲ್ಲ ವಿಮರ್ಶೆ ಬಂದವು ನಿಜ. ಆದ್ರೆ ಕರ್ನಾಟಕದಲ್ಲಿ ಅಷ್ಟೊಂದು ವ್ಯಾಪಕವಾಗಿ ರಾಜ್ಯದ ಹಳ್ಳಿಯ ರೈತರಿಗೆ ಒಂದು ಸ್ವಾಭಿಮಾನ ತಂದುಕೊಟ್ನಲ್ಲ. ರೈತರು ಒಂದು ಶಕ್ತಿ ಅಂತಾ ತೋರಿಸ್ದ. ಹಳ್ಳಿನಾಗೆಲ್ಲ ಬೋರ್ಡ್‌ ಹಾಕಿಸ್ದ ರೈತರನ್ನ ಭೇಟಿ ಮಾಡೋ ಸಮಯ ಇಂತಿಂತಾದ್ದು ಅಂತಾ. ಇವೆಲ್ಲಾ ಏನದೆ ಬರೀ ದೊಡ್ಡ ರೈತರು, ಕುಲಕ್ಸ್‌ ಅಂತಾ ಅವರಿಗಷ್ಟೇ ಅಲ್ಲ ಸಾಮಾನ್ಯ ರೈತರೂ ಅಧಿಕಾರಿಗಳ ಮುಂದೆ ಧೈರ್ಯದಿಂದ ಮಾತಾಡೋಹಂಗೆ ಮಾಡ್ದ. ಅಲ್ಲ…ಬಹಳಷ್ಟು ಎಲ್ಲಾ ಮಾಡ್ಲಿಕ್ಕಾತು ಅಂತ ಅಲ್ಲ. ಆದ್ರೆ ಅಷ್ಟರೊಳಗಾ ಏನಾತು, ನಂಜುಂಡಸ್ವಾಮಿ ಸರ್ವಾಧಿಕಾರಿ, ಹಿಟ್ಲರ್ ಮಾಡ್ದಂಗ ಮಾಡ್ತಾನ ಅಂತಾ ಅದ್ರಗೂ ಎರಡು ಗುಂಪು ಆದ್ವು. ರಾಮಚಂದ್ರೇಗೌಡ, ಪುಟ್ಟಣ್ಣಯ್ಯ. ಲಂಕೇಶ್‌ ಅವ್ರೆಲ್ಲಾ ಆರೋಪ ಮಾಡಿದ್ರು. ಅಲ್ಲ ಒಂದಿಷ್ಟು ಲೋಪದೋಷಗಳು ಇದ್ದಿರ್ಬೇಕು. ಅದನ್ನಾ ಬೆಳೆಸಾಕ ಹೋಗಬಾರ್ದು. ಗುಲಾಬಿಗೆ ಮುಳ್ಳದಾವು ಅನ್ನಾದ ಮುಖ್ಯ ಅಲ್ಲ. ಆದರೆ ಆತ ಚಾರಿತ್ರಿಕ ಕಳಂಕ ಇರೋ ಮನ್ಷ್ಯಾ ಅಲ್ವೇ ಅಲ್ಲ. ಮಾನವೀಯ ಗುಣ ಭಾಳಾ ದೊಡ್ಡದಿತ್ತು. ಕೊನೆಗಾತ ಉಳೀಲಿಲ್ಲ ಪಾಪ, ಪುಪ್ಪುಸದ ಕ್ಯಾನ್ಸ್‌ರ್‌ ಆತು. ಆತ ಬರೀ ಕರ್ನಾಟಕದಾಗ ಅಲ್ಲ, ಭಾರತದಾಗ ಯಾರೂ ಮಾಡ್ಲಾರದಂತ ಕೆಲಸಮಾಡಿದ. ಗ್ಲೋಬಲ್‌ ಲೆವೆಲ್‌ನ್ಯಾಗ ರೈತರ  ಸಂಘಟನೆ ಮಾಡ್ದ. ಆತ ಲೋಹಿಯಾ ಅವರಿಗೆ ಭಾಳ ಸಮೀಪದಾಗ ಇದ್ದ. ಸಮಾಜವಾದಿ ಪಕ್ಷದಾಗೂ ಇದ್ದ. ಅವಾಗೆಲ್ಲಾ ಈತನ್ನ ಸೇರ್ತಿದ್ದಿಲ್ಲ. ‘ಮಾನವಂತ’ ಅಂತಾ ಪತ್ರಿಕೆ ತೆಗೀತಿದ್ದ ಕೆಲವು ಸಂಚಿಕೆಗಳ ಒಳಾಗೆ… ಕರ್ನಾಟಕದ ಸಮಾಜವಾದಿಗಳ ಬಗ್ಗೇ ಬರ್ದಿದ್ದ. ತುಂಬಾ ನಿಷ್ಠುರಿ ಮನುಷ್ಯ. ಈ ಬ್ರಾಹ್ಮಣಿಕೆ ವಿರುದ್ಧ ಜೋರ್ದಾರ್ ಮಾಡಿದ ಮನುಷ್ಯ. ಈ ವೈದಿಕ ಪುರೋಹಿತಶಾಹಿ ನಮ್ಮ ದೇಶದೊಳಗ ಎಂದಿನಿಂದಲೂ ಈ ದೇಶದ ಕೋಟಿಕೋಟಿ ಜನರಿಗೆ ಅರಿಯದಂತೆ ತುರ್ತುಪರಿಸ್ಥಿತಿ ಹೇರಿದೆ ಅಂತ್ಹೇಳ್ತಿದ್ರು. ಕಾಣದಂತ ತುರ್ತುಪರಿಸ್ಥಿತಿ ಅದು. ಹಾವನೂರು ವರದಿ ಆಗ್ಬೇಕಾದ್ರೆ ಅವರ ಪಾತ್ರ ಭಾಳಾ ದೊಡ್ಡದಿದೆ. ಇದನ್ನೆಲ್ಲ  ನಾವು ತಿಳ್ಕಾ ಬೇಕು ಪಾಪ ಭಾಳಾ ಲಗೂ ತೀರ್ಕೊಂಡ. ಭಾಳಾ ದೊಡ್ಡ ಮನ್ಷ್ಯಾ.

ನನಗೆ ಅಲಿ ಸರ್ದಾರ ಜಾಫ್ರಿ ಅವರ ಈ ಕವಿತೆ ಭಾಳಾ ಇಷ್ಟ. ನಾನಿದನ್ನ ಹಾಡಬೇಕಂತ ಅನ್ಕಂಡಿದ್ದೀನಿ. ಸ್ವಲ್ಪ ಹಾಡನ್ನೂ ಕೇಳಬಹುದು, ಅಲ್ವಾ ಬಾಷಾ ಅವರೇ. ಕೇಳ್ರೀ,

ಮೈನೇ ಲಾಖೋಂ ಬಹಾರೇ ದೇಖೀ ಹೈ
ಆಗ್ಕೇ ಫೂಲ್‌, ಆಗ್ಕೇ ಗುಲ್ಜಾರ್
ಅಂಖಡಿಯೊಂಕೇ ದಡಕತೆ ಅಂಗಾರೇ
ಆಂಖೇ ಶೋಲೇ, ಆಂಸೂವೋಂಕೇ ಗುಲ್ಜಾರ್

ರೂಮ್ಯುನಾನ್ಕೇ ಗುಲಾಮ್ಉಠೇ
ಜೈಸೆ ಪಿಂಜರೋಂಸೇ ಛೂಟ್ಗಯೇ
ಜಾಲಿಮೌಂಕೆ ಮಹಲ್ಅರ್ಜನೇ ಲಗೇ
ಹಾತ್ತರ್ರಾಯೆ ಜಾಮ್ಟೂಟ್ಗಯೇ

ಜಿನ್ಕೋ ಕುಚಲಾಗಯಾ ಹೈ ಸದಿಯೊಂಸೆ
ಆಜಬೀ ಉನ್ಕೆ ದಿಲ್ಧಡಕತೇ ಹೈ
ಜುಲ್ಮ್ ಔರ್ಜಬ್ರಂಕೆ ಅಂಧೇರೇಮೆ
ಶೇಕಡೌಂ ಬಿಜಲಿಯಾ ಚಮಕತೀ ಹೈಂ

ಫಸಲಕೀ ಸಾತ್ಸಾತ್‌, ಉಗ್ರಹೇ ಹೈ
ಬಗಾವತೌಂಕೀ ಸಿಪಾಹತ್
ಮಿಲ್ಸಕೇಗೀ ಜಾಲಿಮೌಂಕೋ ನಪನಾಹ
ಮೈನೆ ಲಾಖೋಂ ಬಹಾರೀ ದೇಖಿ ಹೈ
ಆಗ್ಕೆ ಫೂಲ್ಆಗ್ಕೇ ಗುಲ್ಜಾರ್

ಉರ್ದು ಶಾಹಿರಿಗಳನ್ನು ಧ್ವನಿಪೂರ್ಣವಾಗೇನೇ ಹಾಡಬೇಕು. ಅಲಿ ಸರ್ದಾರ್ ಜಾಫ್ರಿಯವರ ‘ಏಶಿಯಾ ಜಾಗ್‌ ಉಠಾ’ ಅದ್ರಾಗಿನ ಕೆಲವೊಂದು ಸಾಲುಗಳು ಇವು. ಇದು ನನ್ನ ಅತ್ಯಂತ ಪ್ರೀತಿಯ ಕವನ ಅಂತ ನಾನು ನೆನಪಿಟ್ಟೀನಿ.

ಕೆಲ ಗೀತೆಗಳ ಐತಿಹಾಸಿಕ ಪಠ್ಯಗಳನ್ನು ವರ್ತಮಾನದಲ್ಲಿ ಬಳಸಿಕೊಳ್ಳುವಾಗ ಅದರ ಸಮಕಾಲೀನ ಹಿತಾಸಕ್ತಿಯ ಪ್ರಶ್ನೆಯೂ ಮುಖ್ಯವಾಗ್ತದೆ. ಇವತ್ತಿನವಂದೇ ಮಾತರಂಅನ್ನ ಇಟ್ಕಂಡು ಇದನ್ನ ಹೇಗೆ ವಿಶ್ಲೇಷಿಸಬಹುದು?

ವಂದೇ ಮಾತರಂ, ಬಂಕಿಮಚಂದ್ರ ಚಟರ್ಜಿಯವರ ‘ಆನಂದಮಠ’ ಕಾದಂಬರಿಯಲ್ಲಿ ಬರ್ತದೆ. ಅದ್ರಲ್ಲಿ ಸನ್ಯಾಸಿ ಆಂದೋಲನ, ವಹಾಬಿ ಆಂದೋಲನ, ಇದೂ ಬರ್ತದೆ. ಇದ್ರಲ್ಲಿ ಏನದೆ ಭಾರತದ ಭೌಗೋಳಿಕ ವರ್ಣನೆ ಬರ್ತದೆ. ಮುಸಲ್ಮಾನ್ರು ಏನಂತಾರೆ ‘ಅಲ್ಲಾಹನ ಹೊರತಾಗಿ ಬೇರೆ ಯಾವುದರ ಎದಿರೂ ತಲೆ ಬಾಗಿಸಬಾರ್ದು’ ಅಂತಾರೆ. ಹಿಂದೆ ಬಾಂಬೆ ಮುನ್ಸಿಪಲ್‌ ಕಾರ್ಪೋರೇಶನ್‌ದಾಗ ಈ ಗೀತೆ ಹಾಡೋವಾಗ ಕೆಲವೊಂದು ಮುಸ್ಲೀಂ ಸದಸ್ಯರು ಈ ಆಕ್ಷೇಪ ತೆಗೆದ್ರು.

ನನಗೆ ಕೇಳಿದ್ರೆ ಇದು ಭಾರತೀಯರಿಗೆಲ್ಲ ಸ್ಫೂರ್ತಿ ಕೊಟ್ಟಿದೆ. ಇದ್ರಲ್ಲಿ ಮತೀಯ ಭಾವನೆಗೆ ಅವಕಾಶ ಇಲ್ಲ. ಸುಮ್ನೆ ಇದ್ರಲ್ಲಿ ಓವರ್‌ ಎಸ್ಟೀಮೇಶನ್‌ ಅಂಡರ್‌ ಎಸ್ಟೀಮೇಶನ್‌ ಇದು ಬರ್ಲಿಕ್ಕೆ ಹತ್ಯಾದ. ಕೋಮುವಾದಿಗಳು ಇದನ್ನ ‘ರಾಷ್ಟ್ರಗೀತೆ’ ಅನ್ನೋಮಟ್ಟಿಗೆ ಹೆಚ್ಚು ವೈಭವೀಕರಿಸ್ಲಿಕ್ಕೆ ಹತ್ತಿದ್ರು. ಅವಾಗ ಇನ್ನೊಂದು ಕಡೆಗೆ ಇವ್ರು ಅಂಡರ್‌ ಎಸ್ಟೀಮೇಟ್‌ ಮಾಡ್ಲಿಕ್ಕೆ ಹತ್ಯಾರೆ ಅಂತ ನನ್ನ ಅಭಿಪ್ರಾಯ. ಹಂಗಾಗಿ ವಂದೇ ಮಾತರಂ ಅನ್ನ ಆಕ್ಷೇಪ ಮಾಡೋದು ನನಗೇನು ಅಷ್ಟು ಸರಿ ಅಲ್ಲ ಅಂತ ಅನ್ನಿಸ್ತದೆ.

ನೀವಂದಂಗೆ ಎರಡು ಅತಿಗಳು ಇವೆ. ‘ಹಾಡ್ಲೇಬಾರ್ದುಅನ್ನೋದು ಒಂದು ಅತಿಯಾದ್ರೆ…‘ಹಾಡ್ಲೇಬೇಕುಅನ್ನೋದು ಇನ್ನೊಂದು. ಕಡ್ಡಾಯದಅಹಂಗೆ ಜಗಳಕಾಯುವ ಗುಣ ಇದೆ ಅಲ್ವ?

ಅದನ್ನ ಸಂವಿಧಾನ (ಘಟನಾ) ಸಮಿತಿ ಅದನ್ನ ಕಡ್ಡಾಯ ಮಾಡೇ ಇಲ್ಲ. ರಾಷ್ಟ್ರಗೀತಿ ಅಂತ ಮಾಡಿದ್ದು ‘ಜನಗಣಮನ’ವನ್ನ. ವಂದೇ ಮಾತರಂ ಗೀತೆಗಿಂತ ವ್ಯಾಪಕ ರಾಷ್ಟ್ರೀಯ ಭಾವನೆ ಜನಗಣಮನದೊಳಗೆ ಇದೆ. ಆದ್ದರಿಂದ ‘ವಂದೇ ಮಾತರಂ’ ಅನ್ನಾ ರಾಷ್ಟ್ರಗೀತೆ ಆಗ್ಬೇಕು ಅನ್ನೋ ವಿಚಾರಾನೂ ಸರಿ ಅಲ್ಲ. ಅದು ಭಾರತೀಯರಿಗೆ ಸ್ಫೂರ್ತಿಯಾಗಿದ್ದ ಗೀತೆ ಹೌದು. ಆದ್ರೆ ‘ಏಕಸಾರ್ವಭೌಮ’ ಗೀತೆಯಾಗ್ಬೇಕು ಅನ್ನೋ ಪ್ರತಿಪಾದನೆ ‘ಓವರ್‌ ಎಸ್ಟೀಮೇಶನ್‌’ ಮಾಡಿದಂತೆ ಆಗ್ತದೆ. ಹೈದ್ರಾಬಾದ್‌ ವಿಮೋಚನಾ ಹೋರಾಟದಾಗ ‘ವಂದೇ ಮಾತರಂ’ ಚಳವಳೀನೇ ಸಾಗ್ತು ಅದು. ಅದನ್ನ ಶುರು ಮಾಡ್ದವರು ಆರ್ಯ ಸಮಾಜದವರು. ಆರ್ಯಸಮಾಜದವರು ಕೋಮುವಾದಿಗಳು ಅನ್ನೋ ಮಾತನ್ನ ನಾನು ಒಪ್ತೀನಿ. ಆದ್ರೆ ವಂದೇ ಮಾತರಂ ಭಾರತೀಯರಿಗೆ ಸ್ಫೂರ್ತಿ ಮತ್ತು ಪ್ರೇರಣೆ ನೀಡಿದ ಒಂದು ಮಹತ್ವದ ಗೀತೆ ಅಂತಾ ಹೇಳಬಹ್ದು.

ಆರ್ಯ ಸಮಾಜ ಸ್ಥಾಪಕ ದಯಾನಂದ ಸರಸ್ವತಿಯವರು ಸಂಪ್ರದಾಯನಿಷ್ಠತೆ ಮತ್ತು ಜಾತಿವಾದವನ್ನು ನಿರಾಕರಿಸಿರಲಿಲ್ವೆ?

ಹೌದು ಅವರು ಈ ಸಂಪ್ರದಾಯನಿಷ್ಠ ಹಿಂದೂವಾದವನ್ನ ಅಲ್ಲಗಳೆದ್ರು. ಅವರು ‘ಸತ್ಯಾರ್ಥ ಪ್ರಕಾಶ’ ಅಂತ ವೇದಗಳಿಗೆ ತಮ್ಮದೇ ಆದ ಕಾಮೆಂಟರಿ ಬರ್ದಾರ. ಅದ್ರೊಳಗೆ ಅವರು ವರ್ಣ ಪದ್ಧತಿ ಜಾತಿ ಪದ್ಧತಿಯನ್ನು ಅವರೊ ಒಪ್ಪಾದಿಲ್ಲ. ಆದ್ರೆ ಇದನ್ನ ಸಂಪೂರ್ಣ ಆರ್ಯಾವರ್ತ ಮಾಡಬೇಕೆಂದು ಅವರು ಪ್ರತಿಪಾದನೆ ಮಾಡ್ತಾರ. ಆರ್ಯ ಸಂಸ್ಕೃತೀನೇ ಆರ್ಯಾವರ್ತ ಅಂದ್ರಲ್ಲ. ಅದರೊಡನೆ ಈ ಸಾವರ್ಕರ್‌ ಅವರೆಲ್ಲ ಹುಟ್ಟಿ ಬಂದ್ರು. ಆ ವೈಭವೀಕರಣ ಏನದೆ ಇವರಿಗೆ ಪ್ರೇರಣೆ ಆಯ್ತು.

ಆರ್ಯಸಮಾಜ ಹೈದ್ರಾಬಾದ್ವಿಮೋಚನಾ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿತ್ತಲ್ವ?

ಹೌದು, ಪ್ರಮುಖ ಪಾತ್ರ ವಹಿಸಿತ್ತು. ಆದ್ರೆ ಹೈದ್ರಾಬಾದ್ ಸಂಸ್ಥಾನಿಕರ ನಿರಂಕುಶ ಪ್ರಭುತ್ವದ ವಿರುದ್ಧ ಹೋರಾಡೋದಕ್ಕಿಂತಲೂ ಅಲ್ಲೇನು ಮತಾಂತರ ನಡೀತಿತ್ತಲ್ಲ, ಆ ಮತಾಂತರ ತಪ್ಪಿಸುವುದಕ್ಕಾಗಿ ಹಿಂದೂಗಳಲ್ಲಿ ಜಾಗೃತಿ ಮೂಡಿಸೋದೇ ಇವರಿಗೆ ಮುಖ್ಯವಾಗಿತ್ತು. ಆರ್ಯಸಮಾಜದ್ದು. ಇದನ್ನು ತಪ್ಪಿಸಲಿಕ್ಕೆ ಮುಂದಾದವರು ಸ್ವಾಮಿ ರಮಾನಂದ ತೀರ್ಥರು. ಇವರು ಆ ವಿಮೋಚನಾ ಹೋರಾಟಕ್ಕೆ ವ್ಯಾಪಕತೆಯನ್ನು ತಂದು ಕೊಟ್ರು. ಆರ್ಯ ಸಮಾಜದವರು ‘ಮುಸ್ಲಿಂ ಪ್ರಭುತ್ವ’ ಬೆಳೀತದೆ ಅಂತಂದು ಹಿಂದೂ ಸಂಘಟನೆ, ಹಿಂದೂ ಜಾಗೃತಿ ಮಾಡ್ಲಿಕ್ಕೆ ಹತ್ತಿದ್ರು. ಇದರಿಂದಾಗಿ ಮತೀಯ ಭಾವನೆ ಬೆಳೀತದೆ ಅಂತಂದು, ಸ್ವಾಮಿ ರಮಾನಂದ ತೀರ್ಥರು ಅದನ್ನು ತಪ್ಪಿಸಿದ್ರು.

ಹೈದ್ರಾಬಾದ್‌ ನಿಜಾಮರ ಆಳ್ವಿಕೆ ಕಾಲಕ್ಕೆ ಶಾಲೆ ಪಾಠಶಾಲೆ ಕಾಲೇಜು ವಿದ್ಯಾಲಯಗಳಲ್ಲಿ ನಿಜಾಮರನ್ನ ಸ್ತುತಿಸುವ ಗೀತೆಯನ್ನ ಹಾಡ್ತಿದ್ರಂತೆ. ಕೆಲವೊಂದರ ರಾಷ್ಟ್ರೀಯ ಮನೋಭಾವದ ವಿದ್ಯಾರ್ಥಿಗಳು ಈ ಗೀತೆಯನ್ನು ಹಾಡೋದಿಲ್ಲಂತ ಬಾಯ್ಕಟ್‌ ಮಾಡಿದ್ರು. ಅವಾಗ ವಂದೇ ಮಾತರಂ ಹಾಡ್ಲಿಕ್ಕೆ ಹತ್ತಿದ್ರು. ಇದಕ್ಕ ಆರ್ಯ ಸಮಾಜದ ಪ್ರೇರಣೆ ಇತ್ತು. ಆದ್ರೆ ಅವರು ವಿಮೋಚನಾ ಚಳವಳಿಯನ್ನು ಸಂಘಟಿಸಲಿಲ್ಲ. ಆದ್ರೆ ಅದಕ್ಕೆ ನಿರ್ದಿಷ್ಟ ವ್ಯಾಪಕ ಸ್ವರೂಪ ಕೊಟ್ಟವರಂದ್ರೆ ಸ್ವಾಮಿ ರಮಾನಂದ ತೀರ್ಥರು ಮತ್ತು ಕೆಲ ಹೋರಾಟಗಾರರು. ರಮಾನಂದ ತೀರ್ಥರು, ಕಾರ್ಮಿಕ ಚಳವಳಿಯನ್ನು ಕಟ್ಟಿದ ಎಸ್‌.ಎಂ. ಜೋಶಿಯವರ ಜೊತೆ ಕೆಲಸ  ಮಾಡಿದಂಥವರು. ಎಸ್‌.ಎಂ.ಜೋಶಿ. ಎಡಪಂಥೀಯರು. ಅವರ ಪ್ರಭಾವಕ್ಕೆ ಒಳಗಾದವರು ರಮಾನಂದ ತೀರ್ಥರು. ಸ್ವಾಮಿ ಅಂದ್ರೆ ಹೆಸರಿನಲ್ಲಷ್ಟೇ. ಅವರು ಅವಿವಾಹಿತರು. ಇಲ್ಲೇ ಬಿಜಾಪುರ ಜಿಲ್ಲಾ ಸಿಂಧಗಿ ತಾಲೂಕಿನವರು. ದೊಡ್ಡ ಜಮೀನ್ದಾರ ಮನೆತನದವ್ರು. ಭಾಳಾ ದೊಡ್ಡ ತ್ಯಾಗ ಮಾಡಿದವರು. ಅವರು ಎಂ.ಎ. ಪದವೀಧರರು. ಮರಾಠದೊಳಗ, ನಾಂದೇಡ್ಲ್‌ ದೊಳಗ ಸ್ವಾಮಿ ರಮಾನಂದ ತೀರ್ಥ ಯೂನಿವರ್ಸಿಟಿ ಅಂತದ. ಇವರಿಗ್ಯಾಕ ಸ್ವಾಮಿ ಅಂತ ಬಂತಂದ್ರು, ಅವರ ಪೂರ್ವಾಶ್ರಮದ ಹೆಸರು ಖೇಡಗೀಕರ ವೆಂಕಟರಾಯರು. ವೆಂಕಟರಾಯ ಅಂತ. ಖೇಡಗೀಕರ್, ಮನೆತನದ ಹೆಸರು ಮುಂದೆ ಅವರು ಪಾರಮಾರ್ಥಿಕ ವಿಚಾರಕ್ಕೆ ಹೋದ್ರು ವೈರಾಗ್ಯಕ್ಕ ಹೋದ್ರು ಅಂತಲ್ಲ. ಸ್ವಾಮಿ ರಾಮತೀರ್ಥರ ಫಿಲಾಸಫಿ ಅಭ್ಯಾಸ ಮಾಡಿದ್ರು. ಹಾಗಾಗಿ ಸ್ವಾಮಿ ರಾಮತೀರ್ಥರ ಹೆಸರಿಟ್ಟಕೊಂಡ್ರು.

ಸಮಾಜವಾದದ ರಾಜಕಾರಣದ ಸಂದರ್ಭದಲ್ಲಿ ಅನೇಕ ಬಾರಿ ಉದಾರಧೋರಣೆಗಳು ಕಾಣಿಸಿಕೊಂಡವು. ಇವು ಮೂಲ ಸಿದ್ಧಾಂತಕ್ಕೆ ಧಕ್ಕೆ ಕೂಡ ತಂದವು ಅಂತಾ ಅನಿಸೋದಿಲ್ವಾ?

ಸಿದ್ಧಾಂತ ಪ್ರತಿಪಾದನೆ ಅವರಿಗೆ ಮುಖ್ಯವಾಗಿರ್ಲಿಲ್ಲ, ಲೋಹಿಯಾವಗೈರೆ ಅವರಿಗೆ. ಬದ್ಲೂ ಆಗ್ಬೇಕಾಗ್ತದೆ. ಡಾಗ್ಮ್ಯಟಿಕ್ ಆಗ್ಬಾರ್ದು. ಸಿದ್ಧಾಂತ ಕೂಡ ಬದಲಾಗಬೇಕಾಗ್ತದೆ. ಎಲಿಮೆಂಟ್ ಈಸ್‌ ಒನ್‌. ಬಟ್‌ ದಿ ಕಂಡೀಷನ್ ಶುಡ್‌ ಬಿ ಚೇಂಜಿಂಗ್ ಅಕಾರ್ಡಿಂಗ್ ಟು ಮೂವ್‌ಮೆಂಟ್‌ ಆಫ್‌ ಟೈಮ್‌. ಮೂಲ ಇಂಡಿಯಾ ಐಡಿಯಾಲಜಿ ವಿಸಂಗತ ಆಗ್ಬಾರ್ದು. ದೇಶ, ಕಾಲ, ಪರಿಸ್ಥಿತಿಗೆ ತಕ್ಕಂತೆ ಇರ್ಬೇಕಾಗ್ತದೆ. ಮಧುಲಿಮಯೆ ದ್ವಿಸದಸ್ಯತ್ವ ಬೇಡ ಅಂದ್ರು. ಜನಸಂಘ ಜನತಾಪಕ್ಷದೊಳಗೆ ವಿಲೀನ ಆಗೋ ಹೊತ್ತಿಗೆ ದ್ವಿಸದಸ್ಯತ್ವದ ಬಗ್ಗೆ ಭಾಳಾ ವಿರೋಧ ಬಂತು. ಒಮ್ಮೊಮ್ಮೆ ಸಮಯದ ಒತ್ತಡ ಬಂದಾಗ ಸಿದ್ಧಾಂತ ಸ್ವಲ್ಪತೊಂದ್ರೆ ಆತು. ಬರೀ ಅದನ್ನೇ ಹಿಡ್ಕಂಡು ಕುಂದ್ರುಬಾರ್ದು. ಲೆನಿನ್‌ ಕೂಡ ರೆವಲ್ಯೂಷನಿಸ್ಟ್‌ ಸ್ಟ್ರೆಟಜಿ ಅಂತಾ ಹೇಳ್ದ. ದೇಶ, ಕಾಲ, ಪರಿಸ್ಥಿತಿಗೆ ತಕ್ಕಂತೆ ಕ್ರಾಂತಿಯ ವಿಧಾನಗಳೂ ಬದಲಾಗ್ಬೇಕಾಗ್ತದೆ. ಒನ್‌ಸ್ಟೆಪ್‌ ಫಾರ್ವ್‌ರ್ಡ್‌, ಟು ಸ್ಟೆಪ್‌ ಬ್ಯಾಕ್‌ವರ್ಡ್‌ ಅಂತಾ ಕೂಡ ಹೇಳ್ತಾನ.

ಡಾಗ್ಮ್ಯಟಿಕ್ಆಗ್ಬಾರ್ದು, ಸ್ಟ್ರೆಟಜಿ ಇರ್ಬೇಕು ಸರಿ. ಆದ್ರೆ ಲೋಹಿಯಾ ಬದುಕಿರುವ ಕಾಲಕ್ಕೇನೆ, ತಮ್ಮ ಪ್ರತಿಪಾದನೆಯ ವಿರುದ್ಧ ದಿಕ್ಕಿನ ಕಡೆ ಚಲನೆ ಕಂಡುಕೊಳ್ಳೋವಂಗೆ ಆಯ್ತಾ ಅಂತ?

ಅವಾಗ ಭಾರತದ ಸಂದರ್ಭ ಹಂಗಿತ್ತು. ಕಾಂಗ್ರೆಸ್ ಮಲೆತು ನಿಂತ ಒಂದು ದೊಡ್ಡ ಪಕ್ಷವಾಗಿತ್ತು. ಆ ಪಕ್ಷದ ವಿರುದ್ಧ ಭಾರತದ ಎಲ್ಲ ಪಕ್ಷಗಳೂ ತಮ್ಮ ಮತಭೇದ ಮೀರಿ ಅದಕ್ಕೊಂದು ಪೆಟ್ಟು ಕೊಡಬೇಕಾಗಿತ್ತು. ಆವಾಗ ಜನಸಂಘದಂತಹ ಪಕ್ಷದ ಜೊತೆಗೆ ಮೈತ್ರಿ ಮಾಡಕೋಬೇಕಾಯ್ತು. ಇದರಿಂದ ಸಿದ್ಧಾಂತಕ್ಕೇನೂ ಚ್ಯುತಿ ಬರ್ಲಿಲ್ಲ. ಇದು ಒಂದು ತಂತ್ರ ಮಾತ್ರ ಆಗಿತ್ತು. ಹೊರ್ತು ಲೋಹಿಯಾ ಎಡವಿದ್ರು ಅನ್ನೋಕಾಗಲ್ಲ.

ಒಮ್ಮೊಮ್ಮೆ ತಂತ್ರಗಳೇ ಸೈದ್ಧಾಂತಿಕ ಹಿನ್ನೆಡೆಗೆ ಕಾರಣವಾಗ್ತದೆ. ಸಿದ್ಧಾಂತಕ ಭಾಗವಾಗಿ, ಅದನ್ನು ಮುನ್ನಡೆಸಿಕೊಂಡು ಹೋಗುವಂತೆ ತಂತ್ರಗಳಿರ್ಬೇಕೋ, ಅಥವಾ ತಂತ್ರಗಳೇ ಸಿದ್ಧಾಂತದ ಅಸ್ತಿತ್ವ ನಿರ್ಧರಿಸಬೇಕೋ?

ಸಿದ್ಧಾಂತವನ್ನು ಪ್ರಯೋಗದೊಳಗೆ ತರ್ಬೇಕಾಗ್ತದೆ. ಆ ಕಾಲಕ್ಕೆ ವ್ಯತ್ಯಾಸ ಆಗ್ತದೆ. ಲೋಹಿಯಾ ಪ್ರಯೋಗ ಮಾಡಿದ್ರು, ಯಶಸ್ವಿ ಯಾಗ್ಲಿಲ್ಲ ಅಂತ ಹೇಳ್ಬೇಕಾಗ್ತದೆ. ಅದಕ್ಕೆ ಆ ವಿಧಾನ ಸರಿಯಾಗಿರ್ಲಿಲ್ಲ ಅಂತ ಹೇಳ್ಬಹ್ದು. ಸಿದ್ಧಾಂತ ಸರಿಯಾಗಿರ್ಲಿಲ್ಲ ಅನ್ನಕ್ಕಾಗಲ್ಲ. ಒಟ್ಟಾರೆ ನೋಡಿ ಕಾಂಗ್ರೆಸ್ಸು ಮಲೆತು ನಿಂತ ರಾಕ್ಷಸೀ ಶಕ್ತಿ ಅಂತಿಳ್ಕೊಂಡು ಅದರ ವಿರುದ್ಧ ಜನಸಂಘದವರನ್ನೂ ಕೂಡಿಸ್ಕೊಂಡು ಒಂದು ಶಕ್ತಿ ಕಟ್ಟುವ ಅವಸರದ ನಿರ್ಣಯಕ್ಕೆ ಬಂದ್ರು ಅಂತನ್ನಬಹ್ದು. ಒಂದೊಂದ್ಸಲ ಪಾಸಿಂಗ್‌ ಮೂಡ್‌ನಲ್ಲಿ ಹಿಂಗಾಗ್ತದೆ.

ಭೂದಾನಯಥಾಸ್ಥಿತಿ ವಾದೀ ರಾಜಕಾರಣದಲ್ಲಿ ಜೆ.ಪಿ. ಕೂಡ ಕಳೆದುಹೋದ್ರು ಹೀಗೆ ಸಮಾಜವಾದಿ ಚಳವಳಿಯ ನಿರ್ಮಾಪಕರೇ ಅವನತಿಗೆ ನಾಂದಿ ಹಾಡಿದ್ರು ಅನಿಸಲ್ವಾ?

ವಿನೋಭಾರ ಭೂದಾನ ಚಳವಳಿ ಮೊದ್ಲು ಆಂಧ್ರದ ಪೋಚಂಪಲ್ಲಿಯೊಳಗ ಶುರುವಾಯ್ತು. ‘ರಾಮಚಂದ್ರರೆಡ್ಡಿ’ ಮೊದಲು ಭೂದಾನ ಮಾಡಿದ. ಅವಾಗೇನದೆ ‘ತೆಲಂಗಾಣ’ದೊಳಗ ಸಶಸ್ತ್ರ ಹೋರಾಟ ನಡೆದಿತ್ತು. ಹಿಂಗಾಗಿ ಆ ಹೊತ್ತು ಶುರುವಾದ ಭೂದಾನದ ಹಿಂದೆ ಇಂದಿರಾಗಾಂಧಿಯ ಒಂದು ಜಾಣತನ ಇತ್ತಾ ಅಂತಾ ಅನ್ನಿಸಬಹ್ದು. ಆದ್ರೆ ನನಗನ್ನಿಸೋದು ಅಂಥಾದ್ದೇನೂ ಇರ್ಲಿಲ್ಲ. ಆದ್ರೆ ವಿನೋಬಾಜಿಯವರದು ಒಂದು ಪಾರಮಾರ್ಥಿಕ ಯೋಚನೆ ಇತ್ತು. ಇದು ಕಮ್ಯುನಿಸ್ಟರ ಕೈಗೆ ಸಿಗ್ತದಾ ಅಂದ್ರ ದೇಶೋವಿಶಾಲವಾಗಿ ಹಬ್ಬತದೆ ಅಂತಿಳ್ಕೊಂಡು ಆತ ಗಾಂಧೀಜಿಯ ಅಹಿಂಸಾತತ್ವದ ಹಿನ್ನೆಲೆಯಲ್ಲಿ ಈ ಚಳವಳಿಯನ್ನು ಹೂಡಿದ. ಆಮೇಲೆ  ನೆಹರೂ ಮತ್ತು ವಲ್ಲಭಾಯಿಯಂಥವರಿಗೂ ಇದಾ ಬೇಕಾಗಿತ್ತು. ಅವರು ಆಂಧ್ರದ ಸಶಸ್ತ್ರ ರೈತ ಹೋರಾಟವನ್ನು ಸದೆಬಡೆಯಬೇಕಾಗಿತ್ತು. ಅವರು ರಾಜಕೀಯ ಉದ್ದೇಶ ಇತ್ತು. ಆದ್ರೆ ಆ ಹೊತ್ತು ಜಯಪ್ರಕಾಶರು ತ್ಮ ಸಮಾಜವಾದೀ ಪಾರ್ಟಿ ಕಟ್ಟೋ ರೀತಿಯಲ್ಲಿ ಇದರಲ್ಲಿ ಮಧ್ಯ ಪ್ರವೇಶ ಮಾಡಬಹುದಿತ್ತು. ಆದರೆ ಹಂಗೆ ಮಾಡ್ಲಿಲ್ಲ…ಜಯಪ್ರಕಾಶ ಒಂಥರಾ ‘ಹೇಪ್ಲ್ಯಾ’ ಕೆಲಸ ಮಾಡಿದ್ರು ಅಂತಾನೂ ಅನ್ನಿಸ್ತದೆ. ವಿನೋಬಾನ ಸರ್ವೋದಯಕ್ಕ ಹೋಗಿಬಿಟ್ರು. ಕ್ರಾಂತಿಯ ಒಂದು ಪರಿಪಕ್ವ ಹಂತದಲ್ಲಿ ಇವರು ಮುಂಚೂಣಿಯಿಂದ ಹಿಂದಕ್ಕ ಸರಿದು ಸರ್ವೋದಯಕ್ಕ ಹೋಗಿಬಿಟ್ರು. ಎಂಥಾ ಕ್ರಾಂತಿಕಾರಿ ಏನಾಗ್ಬಿಟ್ಟನಲ್ಲ. ಕಮ್ಯುನಿಸ್ಟರ ಕ್ರಾಂತಿಗಿಂತ, ತಮ್ಮ ಶಾಂತಿ ಅಹಿಂಸೆಯ ಭೂದಾನದ ಮೂಲಕ ಕ್ರಾಂತಿ ಮಾಡ್ತೀನಿ ಅಂತಾ ಹೋದ ವಿನೋಬಾರ ಪ್ರಯತ್ನಗಳೂ ಯಶಸ್ವಿಯಾಗ್ಲಿಲ್ಲ. ಉದ್ದೇಶ ಈಡೇರ್ಲಿಲ್ಲ.

ವಿನೋಬಾ ಅವರಿಗೆ  ‘ಕಮ್ಯುನಿಸ್ಟರು ಮತ್ತು ಸಮಾಜವಾದಿಗಳಭೂ ಹೋರಾಟಗಳನ್ನು ದಮನಿಸುವ ಉದ್ದೇಶ ಇತ್ತಾ?

ವಿನೋಬಾ ಅವರಿಗೆ ಆ ಉದ್ದೇಶ ಇತ್ತು ಅಂತಾ ಅನ್ನಿಸಲ್ಲ. ಆದ್ರೆ ಅದರ ಪರಿಣಾಮ ಮಾತ್ರ ಹಾಗಾಯ್ತು.

ಭೂಮಾಲಕರನ್ನು ಮನವೋಲಿಸಿ ಶಾಂತಿಯುತವಾಗಿ ಭೂಮಿ ಪಡೆಯುವುದು ಸಾಧ್ಯನಾ?

ಹಂಗಂತ ವಿನೋಬಾಗೆ ನಂಬಿಕೆ ಇತ್ತು. ಅವಾಗ ಎಲ್ಲ ರಾಜಕೀಯ ಪಕ್ಷಗಳ ಜೊತೆಗೆ ‘ಯಳವಾಲ’ ಸಮ್ಮೇಳನದಾಗ ಚರ್ಚೆ ಆತದು. ಅದಕ್ಕ ಡಾಂಗೆ ಹೋಗಿದ್ರು, ಎಸ್‌.ಎಂ. ಜೋಶಿ ಹೋಗಿದ್ರು, ಆ ಸಮ್ಮೇಳನವನ್ನ ವಿನೋಬಾನೇ ಕರ್ದಿದ್ರು. ಎಲ್ಲ ಕಮ್ಯುನಿಸ್ಟರೂ ಹೋಗಿದ್ರು. ಅಲ್ಲಿ ತಮ್ಮ ಮತ ಭೇದಗಳನ್ನ ಜಾಹಿರು ಮಾಡಿದ್ರು. ಆದ್ರೆ ಉದ್ದೇಶದಲ್ಲಿ ತಪ್ಪಿದೆ ಅಂತ ಯಾರೂ ಹೇಳ್ಳಿಲ್ಲ.

ಇಂಡಿಯಾದ ವ್ಯವಸ್ಥೆಯಲ್ಲಿ ಇನ್ನೂ ಜೀವಂತವಿರುವಊಳಿಗಮಾನ್ಯ ಅಂಶಗಳನ್ನು ಕಿತ್ತು ಹಾಕುವ ಕುರಿತಾಗಿ ಲೋಹಿಯಾರ ಸಮಾಜವಾದ ಮನಗಂಡಿತು. ಆದರೆ ಅದನ್ನು ಸಾಧಿಸುವಕಾರ್ಯ ಯೋಜನೆಇತ್ತಾ?

ಆಪೇಕ್ಷಿತ ರೀತಿಯಲ್ಲಿ ಇರ್ಲಿಲ್ಲ ಅಂತ ಒಪ್ಟೋಳ್ಳಬಹ್ದು. ಕಿಸಾಸ್‌ ಸಭಾದವರು ಕಮ್ಯುನಿಸ್ಟ್ರು ಅದನ್ನ ಮಾಡ್ಕೋತ ಬಂದ್ರು. ಅಂಥಾ ದೊಡ್ಡ ಸಂಘಟನೆಯನ್ನು ಇವ್ರು ಸಮಾಜವಾದಿಗಳು ಕಟ್ಟಲಿಲ್ಲ. ಊಳಿಗಮಾನ್ಯ ವ್ಯವಸ್ಥೆಯ ನಾಶವನ್ನು ಗಂಭೀರವಾಗಿ ಪರಿಗಣಿಸಿದ್ರು ಅಂತನ್ನಿಸ್ತದೆ. ಯಾಕಂದ್ರೆ ಬಿಹಾರದ ಚಂಪಾರಣ್‌ ಬಗ್ಗೆ ಅವರ ವರದಿ ಏನಿತ್ತು ಅದನ್ನ ಚರ್ಚಿಸ್ತದೆ. ಭೂಮಾಲಿಕರ ಪದ್ಧತಿ ನಾಶವಾಗ್ಬೇಕು ಅಂತಾ ಅವರಿಗೆ ಸ್ಪಷ್ಟವಿತ್ತು. ಆದರೆ ಅದನ್ನು ಹೇಗೆ ತೊಲಗಿಸ್ಬೇಕು ಅನ್ನೋ ಆ ತಂತ್ರ, ಪ್ರೋಗ್ರಾಂ ಹಾಕಿಕೊಳ್ಳಲಿಲ್ಲವೇನೋ ಅನ್ನಿಸ್ತದೆ. ಅದು ಆಗ್ತಿತ್ತೇನೋ.ಆದ್ರೆ ಒಡೆದು ಒಡೆದು ಹೋಗ್ಬಿಟ್ರು ನೋಡ್ರಿ. ಅದಕ್ಕೆ ಆಗ್ಲಿಲ್ಲ ಅನ್ನಿಸ್ತದೆ. ಜೆ.ಪಿ.ಯವರು ಸರ್ವೋದಯಕ್ಕೆ ಹೋದ್ರು. ಅಚ್ಯುತ್ ಪಟವರ್ಧನ್‌ ರಮಣ ಮಹರ್ಷಿ ಶಿಷ್ಯಾ ಆದ್ರು, ಹಿಂಗಾ…ಏನೆಲ್ಲಾ ಆತು ನೋಡ್ರಿ.

ಅಂದ್ರೆ ಲೋಹಿಯಾರವರುಕಟ್ಟುತ್ತಿದ್ದ ಸಮಾಜವಾದಅದಕ್ಕಿನ್ನೂ ಸ್ಪಷ್ಟ ರೂಪ ಬರುವ ಮೊದಲೇ ಸಡಿಲಾಗ್ತಾ ಹೋಯ್ತು ಅನ್ನಬಹ್ದಾ?

ಹಂಗೇ ದಾರಿ ತಪ್ತಾ ಬಂತು. ಅಷ್ಟರಲ್ಲಿ ಲೋಹಿಯಾ ನಿಧನಹೊಂದಿಬಿಟ್ರು. ಅದೊಂದು ಪಕ್ವ ಸಿದ್ಧಾಂತವಗಿ ರೂಪುಗೊಳ್ಳಕ್ಕ ಹತ್ತಿತ್ತು. ಮೊಳಕೆ ಒಡೀಲಿಕ್ಕೆ ಹತ್ತಿತ್ತು. ಅದನ್ನ ಬೆಳೆಸಿ ಕಸಿ ಮಾಡೋ ಕೆಲಸ ಜೊತೆಗಿದ್ದವರು, ಕಾರ್ಯಕರ್ತರು ಮಾಡ್ಲಿಲ್ಲ. ಫರ್ನಾಂಡೀಸ್‌ನಂತಹ ಮನುಷ್ಯ ಹಿಂಗೆಲ್ಲ ಆಗಿಬಿಟ್ಟಾ. ಲೋಹಿಯಾರನ್ನ ಅವರ ಅಪ್ಪಟ ಶಿಷ್ಯರೇ ಅರ್ಥ ಮಾಡ್ಕೊಳ್ಳಿಲ್ಲ. ಇದೊಂದು ದುರಂತ.

ನೀವು ಕೆಲವು ಸಾರಿ ಕಮ್ಯುನಿಸಂ ಕಡೆ ಒಲವು ತೋರಿಸಿದವರು, ಅಂತಾ ಕೇಳಿದ್ದೀನಿಹೌದಾ?

ಕೆಲವೊಂದು ಸಂದರ್ಭದೊಳಗ, ದೇಶದಲ್ಲಿ ರಾಜಕೀಯ ಜನಜಾಗೃತಿ ಮಡೋ ಕಾರ್ಯದೊಳಗ ಸಮಾಜವಾದಿಗಳಿಗಿಂತ ಕಮ್ಯುನಿಸ್ಟರು ಮುಂದೆ ಇದ್ದಾರೆ ಅಂತ ಅನ್ನಿಸಿತ್ತು. ಸಮಾಜವಾದಿ ಕ್ರಾಂತಿ ಹೋಳು ಹೋಳು ಆಗಿ, ಪಕ್ಷ ಒಡೆದು, ಕೆಲ ನಾಯಕ ಧೋರಣೆ ಕೆಲವೊಮ್ಮೆ ಪ್ರತಿಗಾಮಿ ಅನ್ನಿಸ್ತಿತ್ತು. ಅವಾಗ ಕಮ್ಯುನಿಸ್ಟರು ಮಾಡ್ತಿದ್ದ ಹೋರಾಟ, ಬದ್ಧತೆ, ಸಂಘಟನೆಗಳನ್ನ ನೋಡಿ ‘ಕಮ್ಯುನಿಸ್ಟ್ರೇ ಚೊಲೋ’ ಅಂತ ಒಮ್ಮೊಮ್ಮೆ ನನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದೆ. ನನಗೆ ಕೆಲವೊಮ್ಮೆ ‘ಕಮ್ಯುನಿಸ್ಟ್‌’ ಅಂತ ಕರೆದದ್ದೂ ಉಂಟು.

ನಾವು ಲುಮಾಂಬ (ಬೆಲ್ಜಿಯಂ ಸಾಮ್ರಾಜ್ಯಶಾಹಿ ವಿರುದ್ಧ ಹೋರಾಟಗಾರ)ನ ಕೊಲೆ ಆದಾಗ ಸಾರ್ವಜನಿಕವಾಗಿ ಶ್ರದ್ದಾಂಜಲಿ ಆಚರಿಸಿದ್ವಿ. ಅವಾಗ ಸ್ಥಳೀಯವಾಗಿ ಗಲಾಟೆ ಆಯ್ತು. ಅದಕ್ಕೆ ಕಾರಣ ಬೇರೇನೆ ಇತ್ತು. ಸ್ಥಳೀಯ ಕಾಂಗ್ರೆಸ್ಸಿನವರು ಅವರಿಗೆ ‘ಲುಮಾಂಬ’ ಬಗ್ಗೆ ಏನೂ ಗೊತ್ತಿರಲಿಲ್ಲ. ಅದಕ್ಕೆ ಸಂಬಂಧವೇ ಇರಲಿಲ್ಲ. ಅವಾಗ ನಾನು ಗೋಪಾಲ ಹಲ್ದಾರ್‌, ನಂಬೂದ್ರಿಪಾದ್‌, ಹಿರೇನ್‌ ಮುಖರ್ಜಿ, ಅವರಿಗೆಲ್ಲಾ ಪತ್ರ ಬರ್ದು ಹಿಂಗೆಲ್ಲಾ ‘ಲುಮಾಂಬಾ ಶ್ರದ್ಧಾಂಜಲಿ ಮಾಡೋಕಾಲಕ್ಕೆ  ಹಿಂಗೆಲ್ಲ ಆತು ನಿಮ್ಮ ಸಂದೇಶ ಕಳಿಸ್ರೀ’ ಅಂತಾ ಬರ್ದಿದ್ದೆ. ಅವ್ರೆಲ್ಲ ಸಂದೇಶ ಕಳ್ಸಿದ್ರು. ಅವಾಗ ಇವ್ರು ನನ್ನನ್ನ ಕಮ್ಯುನಿಸ್ಟ್‌ ಅದಾನ ಅಂತ ಅಂದ್ಕೊಂಡ್ರು. ಇಲ್ಲೆಲ್ಲಾ ಕಾಂಗ್ರೆಸ್ಸಿನವರಿಗೆ ಕಮ್ಯುನಿಸ್ಟರ ಬಗ್ಗೆ ಭಾಳಾ ಹೆದರಿಕೇರಿ, ಸೋಷಲಿಸ್ಟರ ಬಗ್ಗೆ ಇಲ್ಲ. ದೊಡ್ಡ ಮೇಟಿ ಅಂದಾನಪ್ಪರ ಹೇಳ್ತಿದ್ರು, “ಏನಾದ್ರ ಗದ್ಲ ಮಾಡ್ಬೇಕಂದ್ರೆ ಕಮ್ಯುನಿಸ್ಟ್ರು” ಅಂತಾ.

ನನಗೆ ಕಮ್ಯುನಿಸ್ಟರ ಬಗ್ಗೆ ಒಲವು ಇತ್ತು. ಆದ್ರೆ ಸೈದ್ಧಾಂತಿಕವಾಗಿ ನಾನು ಕಮ್ಯುನಿಸ್ಟಲ್ಲ. ಲುಮಾಂಬನ ಬಗ್ಗೆ ಸಂದೇಶ ಕೇಳಿ ಕಮ್ಯುನಿಸ್ಟ್‌ ಲೀಡರ್ಸ್‌ಗೆ ನಾನು ಪತ್ರ ಬರ್ದಾಗ ನನ್ನ ಮನಿಗೆ ಎರಡು ಸಲ ಸೆಂಟ್ರಲ್‌ ಸಿ.ಐ.ಡಿ.ಗಳು ಬಂದಿದ್ರು. ಯಾಕಂದ್ರೆ ಅವಾಗ ಚೀನಾ ಭಾರತ ಯುದ್ಧ ನಡೀತಿತ್ತಲ್ಲ. ಆಗ ಕಮ್ಯುನಿಸ್ಟರ ಜೊತೆ ಸಂಪರ್ಕ ಇಟ್ಟುಕೊಂಡವರ ಬಗ್ಗೆ ಸರಕಾರ ಬೇಹುಗಾರಿಕೆ ಮಾಡ್ತಿತ್ತು. ಇಲ್ಲಿಯವರೆಲ್ಲ ಏನೇನೋ ಹೇಳಿ ಗಜೇಂದ್ರಗಢದ ಪೋಲಿಸ್‌ ಸ್ಟೇಷನ್ನಿನ್ಯಾಗ ನನ್ನ ಹೆಸರಿತ್ತು. ದೇಶಪಾಂಡೆ ಸೆಂಟ್ರಲ್‌ ಸಿ.ಐ.ಡಿ. ಇನ್‌ಸ್ಪೆಕ್ಟ್ರು ಮನಿಗೆ ಬಂದು ಎಲ್ಲಾ ವಿಚಾರಿಸಿ ನನ್ನೆಲ್ಲ ಕರೆಸ್ಪಾಂಡೆನ್ಸು ನೋಡಿದ್ದ. ಅಂವ ಚಲೋ ತಿಳ್ಕಂಡಿದ್ದು. ಇಂಡಿಯಾದ ಸಮಾಜದೊಳಗ ಹೆಂಗ ಕಮ್ಯುನಿಸ್ಟ್‌ ಕ್ರಾಂತಿ ಮಾಡ್ಬೇಕು ಅಂತಾ ಕಮ್ಯುನಿಸ್ಟ್ರು ತಪ್ಪಿದ್ರು. ಹಂಗಾಗಿ ಇವತ್ತು ನಿರೀಕ್ಷಿತ ಮಟ್ಟದಲ್ಲಿ ಕಮ್ಯುನಿಸ್ಟ್‌ ಕ್ರಾಂತಿ ಈ ದೇಶದಲ್ಲಿ ಆಗ್ಲಿಲ್ಲ.

ಪಶ್ಚಿಮ ಬಂಗಾಳದಲ್ಲಿ ಕಮ್ಯುನಿಸ್ಟರ ಸರಕಾರ ಭೂಸುಧಾರಣೆ  ಮತ್ತು ಒಟ್ಟಾರೆ ಅಭಿವೃದ್ಧಿ ಸ್ವರೂಪದ ಬಗ್ಗೆ ನೀವೇನಂತೀರಿ?

ಅಲ್ಲೀನೂ ಏನದೆ, ಇನ್ನೂ ಸಂಪೂರ್ಣವಾಗಿ ಭೂಕ್ರಾಂತಿ ಆಗಿಲ್ಲ. ಅಲ್ಲಿ ಒಳಗಿಂದೇನು ಇನ್ನೂ ಸರಿಯಾಗಿ ಹೊರಗ ಬಂದಿಲ್ಲ. ಆದ್ರೆ ಒಂದೇನು ಅಲ್ಲಿ ಕಮ್ಯುನಿಸ್ಟರ ಪ್ರಭಾವಕ್ಕೆ ಬಂಗಾಳ ಒಳಗಾಗಿ ಬಿಟ್ಟಿದೆ. ಅಲ್ಲೀ ಜನರಿಗೆ ಕಮ್ಯುನಿಸಂ ಬಹುತೇಕ ಒಗ್ಗಿದೆ ಅಂತನ್ನಿಸ್ತದೆ. ‘ವರ್ಗಭೇದ’ ವನ್ನ ಹೇಗೆ ನಿರ್ಮೂಲನ ಮಾಡ್ಬೇಕು ಅನ್ನೋದ್ರ ಬಗ್ಗೆ ಅವ್ರು ವಿಫಲಾನೂ ಆಗ್ಯಾರ. ಭೂಮಿ ಹಂಚಿಕೇನೂ ಸರಿಯಾಗಿ ಆಗಿಲ್ಲ. ಈಗೀಗ ‘ಮಾವೋವಾದಿಗಳು’ ಸಶಸ್ತ್ರ ಕ್ರಾಂತಿ ಮಾಡ್ಬೇಕು ಅಂತಾರಲ್ಲ. ಅದೂ ಭಾಳಮಟ್ಟಿಗೆ ಯಶಸ್ಟಿ ಆಗ್ತದೆ ಅಂತ ನನಗನ್ನಿಸೋದಿಲ್ಲ. ಯಾಕಂದ್ರೆ ಏನ್ಮಾಡಬೇಕಂದ್ರೂ ಜನ ಮಾಡ್ಬೇಕ್ಕಾಗ್ತದೆ. ಆದ್ರೆ ಈ ದೇಶದ ಜನರಿಗೆ ಈ ರೀತಿ ಕ್ರಾಂತಿಯಲ್ಲಿ ನಂಬಿಕೆಯಿಲ್ಲ. ನಾವು ಈ ಹೊತ್ತಿಗೆ ‘ಮಧ್ಯಮ ಮಾರ್ಗ’ವನ್ನ ಅನುಸರಿಸಿ ಸಮಾಜವಾದಿ ಕ್ರಾಂತಿ ಮಾಡ್ಬೇಕಾಗ್ತದೆ.

ಅಂದ್ರೆ ಹ್ಯಾಗದು. ಬರೇ ಚುನಾವಣದ ರಾಜಕಾರಣದ ಮೂಲಕನೋ ಹೋರಾಟಗಳ ಮೂಲಕಾನೊ?

ಹಂಗಲ್ಲ, ಒಮ್ಮೊಮ್ಮೆ ಬೀದಿಯಲ್ಲಿ ನಿಂತೂ ಹೋರಾಟ ಮಾಡ್ಬೇಕಾಗ್ತದೆ. ಲೋಹಿಯಾ ಹೇಳ್ತಿದ್ರು. ನಾವು ಬರೀ ಪಾರ್ಲಿಮೆಂಟಿನಲ್ಲಿ ಅಷ್ಟೇ ಅಲ್ಲ ಬೀದಿ ಕಾಳಗವನ್ನೂ ಮಾಡ್ಬೇಕಾಗ್ತದೆ ಅಂತ. ಅವಾಗ ಪಾಟೀಲ ಪುಟ್ಟಪ್ಪ, “ಲೋಹಿಯಾ, ಲೋಕಸಭೆಯನ್ನು ಬಜಾರಕ್ಕ ತಂದ್ರು” ಅಂತಾ ಟೀಕೆ ಮಾಡಿದ್ದು ನನಗೆ ನೆನಪಿದೆ. ಮಾರ್ಕ್ಸ್ ವಾದಿಗಳು ಸೆಲೆಕ್ಟೆಡ್‌ ಏರಿಯಾಸ್‌ ಅನ್ನ ಹಿಡ್ಡಾರ. ಕೆಲವು ಕಡೆ ಅವರ ಹೆಸರೂ ಇಲ್ಲ. ಕಮ್ಯುನಿಸ್ಟರು ಅಂದ್ರೆ. ‘ಹಿಂಸಾವಾದಿ’ಗಳು ಅಂತಾ ಅಪಪ್ರಚಾರ ಭಾರೀ ಆಗಿದೆ.

ಇಷ್ಟಾದ್ರೂ, ನಕ್ಸಲ್ವಾದಿಗಳು ಕರ್ನಾಟಕದಲ್ಲಿ ಸಕ್ರಿಯವಾಗಿರುವಂತಹ ವರ್ತಮಾನ ಇದೆ. ಸಮಾಜವಾದಿಗಳ ಭಾಳಾ ಪ್ರಭಾವವಿದ್ದ ರಾಜ್ಯದಲ್ಲಿ ನಕ್ಸಲ್ವಾದ ಚಿಗಿರೋದಕ್ಕೆ ಯಾವ ಅಂಶಗಳು ಕಾರಣವಾಗಿರಬಹ್ದು, ಅಂತೀರಿ?

ಈಗ, ಈ ಎಲ್ಲ ರಾಜಕೀಯ ಪಕ್ಷಗಳು ಜನರಿಗೆ ದ್ರೋಹ ಮಾಡ್ಕೊಂತ ಬಂದ್ವು. ನಿಜವಾದ ರಾಜಕೀಯ ಪ್ರಜ್ಞೆ ಈ ನಮ್ಮ ಜನ್ರಿಗೆ ಇಲ್ಲ. ರಾಜಕೀಯ ಪ್ರಜ್ಞೆ ಮೂಡಿಸೋದಕ್ಕೆ ಈ ರಾಜಕೀಯ ಪಕ್ಷಗಳು ಏನೂ ಕೆಲಸ ಮಾಡ್ಲಿಲ್ಲ. ಹೀಗಾಗಿ ಘೋರವಾದ ನಿರಾಶೆ ನಮ್ಮ ಜನ್ರನ್ನ ಕಾಡ್ಲಿಕ್ಕೆ ಹತ್ತದೆ. ಇಂತಹ ಪರಿಸ್ಥಿತಿಯಲ್ಲಿ ಜನಪರವಾದ ವಿಷಯಗಳನ್ನ ಎತ್ತಿಕೊಂಡು ಜನರ ಮಧ್ಯೆ ನಕ್ಸಲವಾದಿಗಳು ನಿಲ್ಲೋದಕ್ಕೆ ಕಾರಣವಾಗಿದೆ ಅಂತಾ ಅನ್ನಿಸ್ತದೆ. ಈಗೇನದ ಕ್ರಾಂತಿಗೆ ಹದವಾದ ಹೊತ್ತು ಅವರಿಗೆ ಬಂದದೆ. ಇದು ಪೂರ್ತಿ ಯಶಸ್ವಿ ಆಗ್ತದೆ ಅಂತಾನೂ ಅಲ್ಲ. ಇದು ಹದವಾದ ಹೊತ್ತು ಅವರಿಗೆ ಅನಿಸಿ ಪ್ರಯೋಗಮಾಡ್ಲಿಕ್ಕೆ ಹತ್ತ್ಯಾರ ಅನ್ನಿಸ್ತದೆ. ಇದರ ಪರಿಣಾಮ ಏನಾಗ್ತದೆ ಅಂತಾ ಸ್ವಲ್ಪ ಕಾದು ನೋಡ್ಬೇಕು ಅನ್ನಿಸ್ತದೆ.

ಲೋಹಿಯಾವಾದ ರಾಜಕೀಯ ಮತ್ತು ಸಾಮಾಜಿಕ ಚಿಂತನೆಯ ಮೇಲೆ ಮೂಡಿಸಿದ ಪ್ರಭಾವ ಮತ್ತು ಅದರಿಂದಾದ ಇತ್ಯಾತ್ಮಕ ಪರಿಣಾಮಗಳನ್ನ ಹೇಗೆ ಗುರುತಿಸಬಹುದು?

ಲೋಹಿಯಾ ಈ ದೇಶದ ಸಾಮಾಜಿಕ ವ್ಯವಸ್ಥೆಯ ದೋಷ ಮತ್ತು ಲೋಪಗಳು ಏನೇನು ಎಂಬುದನ್ನು ಕಂಡುಹಿಡಿದರು. ಈ ದೇಶದ ಶ್ರೇಣಿ ವಿಭಜನೆ ಯಾಕಾಯ್ತು, ಇದನ್ನ ತೊಲಗಿಸ್ಲಿಕ್ಕೆ ಏನೇನು ಉಪಾಯಗಳು ಅನ್ನೋದರ ಬಗ್ಗೆ ಕೆಲವೊಂದು  ಕಾರ್ಯಕ್ರಮಗಳನ್ನು ಹಾಕಿಕೊಟ್ರು. ಆದ್ರೆ ಆ ಕಾರ್ಯಕ್ರಮದ ಪ್ರಕಾರ ಕೆಲಸ ಸಾಗ್ಲಿಲ್ಲ. ಅವರು ಹೇಳಿದ ಗುದ್ದಲಿ, ಚುನಾವಣೆ ಪೆಟ್ಟಿಗೆ ಮತ್ತು ಜೈಲು ಇವು ಅತ್ಯಂತ ಪರಿಣಾಮಕಾರಿ ವಿಧಾನಗಳು, ಈ ದೇಶದಲ್ಲಿ ಸಮಾಜವಾದಿ ಕ್ರಾಂತಿ ಮಾಡೋದಿಕ್ಕೆ. ಆದ್ರೀಗ ಈ ಚುನಾವಣೆಗಳು ಭಾಳಾ ಹದಗೆಟ್ಟಿಬಿಟ್ಟಿವೆ. ಕಂಡಾಬಟ್ಟೆ ಹಣದ ಸೂರೆ ಆಗ್ತಾಯಿದೆ. ಮತದಾನ ಸರಿಯಾಗಿ ಆಗ್ತಾಯಿಲ್ಲ. ಅದಕ್ಕೆ ‘ಎಲೆಕ್ಷನಿಸಂ’ ಕೂಡ ಸರಿಯಾದುದಲ್ಲ ಅಂತ ಲೋಹಿಯಾ ಕೊನೆಕೊನೆಗೆ ಹೇಳಿದ್ರು. ಒಂದು ಕಾಲಕ್ಕೆ ಸಂಯುಕ್ತ ವಿಧಾಯಕ ದಳ ಅಂತ ಮಾಡಿ, ಯು.ಪಿ. ಮತ್ತು ಬಿಹಾರದೊಳಗ ಏನು ಸಮಾಜವಾದಿಗಳು ಅಧಿಕಾರಕ್ಕೆ ಬಂದ್ರಲ್ಲ, ಅವ್ರು ಲೋಹಿಯಾರವರು ಹಾಕಿಕೊಟ್ಟು ಕಾರ್ಯಕ್ರಮ ಜಾರಿ ಮಾಡೋದಕ್ಕೆ ಇವ್ರೇ ತಪ್ಪಿದ್ರು. ಅವ್ರು ಅತ್ಯಂತ ಸಮರ್ಪಕ ಹಾಗೂ ಪರಿಣಾಮಕಾರಿ ಕಾರ್ಯಕ್ರಮ ಹಾಕಿಕೊಟ್ಟಿದ್ರು. ಆದ್ರೆ ಅವನ್ನ ಜಾರಿಗೊಳಿಸುವಲ್ಲಿ ಇವರೇ ವಿಫಲರಾದ್ರು.

ನಮ್ಮ ಕರ್ನಾಟಕದ ಮಟ್ಟಿಗೆ, ಇಲ್ಲಿನ ಸಮಾಜವಾದಿಗಳು ಮಾಡಿದ ಯಶಸ್ವಿ ಹೋರಾಟಗಳನ್ನ ನೆನಪಿಸಿಕೊಳ್ಳೋದಾದ್ರೆ ಯಾವುವು ಅನ್ನಬಹ್ದು?

ಕಾಗೋಡ್ದು.

ಅಧಿಕಾರಕ್ಕೆ ಬಂದ ಸಮಾಜವಾದಿಗಳು ಜಾರಿಗೊಳಿಸಿದ ನೀತಿಗಳ ಬಗ್ಗೆ ಹೇಳೋದಾದ್ರೆ?

ಆ… ಹಾಂ… ಈ ಅಧಿಕಾರಕ್ಕೆ ಬಂದಮೇಲೆ ಇವ್ರು ಯಾರೂ ಅಷ್ಟು ಸರಿಯಾಗಿ ಕೆಲಸ ಮಾಡ್ಲಿಲ್ಲ ಅಂತ ಅನ್ಸುತ್ತೆ. ಬಂಗಾರಪ್ಪಂತೂ ಭಾಳಾ ಇದಾಗಿಬಿಟ್ಟಿ. ಒಂದು ಕಾಲಕ್ಕೆ ಸಮಾಜವಾದೀನೋ, ಲೋಹಿಯಾ ವಾದೀನೋ ಏನೇನೋ ಆಗಿದ್ದ. ಅಧಿಕಾರಕ್ಕೆ ಬಂದಮೇಲೆ ಸಮಾಜವಾದಿ ನೀತಿಗಳನ್ನೇನೂ ಮಾಡ್ಲಿಲ್ಲ. ಪಟೇಲ್ರು, ಅವ್ರು ಮಾಡುವಷ್ಟು ಮುತ್ಸದ್ಧಿಗಳಾಗಿದ್ರು. ಆದ್ರೆ ಅವರು ಅಷ್ಟೇನೂ ಮಾಡ್ಲಿಲ್ಲ. ಅವ್ರು ಒಂದಿಷ್ಟು ಈ ಲೋಹಿಯಾವಾದಿ ಸಾಹಿತ್ಯ ಬೆಳೀಬೇಕು ಹಾಗೆ, ಹೀಗೆ ಅಂತಂದು ಕೆಲವೊಂದು ಯೋಜನೆ ಹಾಕ್ಕೊಂಡ್ರು. ಆದ್ರೆ ಸಮಗ್ರವಾಗಿ ಜನಪರ ನೀತಿಗಳಾಗಿ ಏನೂ ಮಾಡ್ಲಿಲ್ಲ. ನನಗೆ ಕೇಳಿದ್ರೆ ಸಮಾಜವಾದಿ ಪಕ್ಷದ ಮನುಷ್ಯ ಅಲ್ದೇ ಇದ್ರೂ ಕೂಡ, ನಮ್ಮ ಕರ್ನಾಟಕ ರಾಜ್ಯದೊಳಗ ಒಂದು ಚಳವಳಿಯ ಪರಿಣಾಮ ಮೂಡಿಸ್ಲಿಕ್ಕೆ, ಅಥವಾ ಸಮಾಜವಾದಿ ಕಾರ್ಯಕ್ರಮದ ಜಾರಿಗೆ ರಾಜಕೀಯವಾಗಿ ಕೆಲಸ ಮಾಡಿದ ಮನುಷ್ಯ ಅಂದ್ರೆ ದೇವರಾಜ ಅರಸ. ಆತ ಸಮಾಜವಾದಿ ಆಗಿರ್ಲಿಕ್ಕಿಲ್ಲ. ಆದ್ರೆ ಭಾಳಾ ದೊಡ್ಡ ಕೆಲ್ಸ ಮಾಡ್ದ. ಮತ್ತ, ನಿಮಗ ಗೊತ್ತಿರಬೇಕಲ್ಲ, ಹಿಂದೆ ಒಂದ್ಸಲ ಈ ಜೆ.ಹೆಚ್‌.ಪಟೇಲ್ರು ಅವರೆಲ್ಲ ಅರಸು ಪಕ್ಷಕ್ಕೆ ಹೋಗಿದ್ರು. ಒಬ್ಬ ಮುಖ್ಯಮಂತ್ರಿಯಾಗಿ ಈ ರಾಜ್ಯದೊಳಗೆ ‘ಸಮಾಜವಾದಿ ಕ್ರಾಂತಿ’ಯನ್ನು ಅಥವಾ ಸಮಾಜವಾದಿ ಕಾರ್ಯ ಮತ್ತು ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದಕ್ಕೆ ಪ್ರಯತ್ನ ಮಾಡಿದವರು ಅಂದ್ರೆ, ಆತ ಸಮಾಜವಾದಿ ಆಗ್ಲಿ, ಆಗ್ದೇ ಇರ್ಲೀ, ಆದ್ರೆ ಸಮಾಜವಾದಿ ಕ್ರಾಂತಿ ಮಾಡಿದವರು ಅಂದ್ರೆ ದೇವರಾಜ ಅರಸ.