ಈ ಪುಸ್ತಕ ರೂಪು ಪಡೆಯುವಲ್ಲಿ ಹಲವು ವ್ಯಕ್ತಿಗಳ, ಸಂಸ್ಥೆಗಳ ನೇರ ಹಾಗೂ ಪರೋಕ್ಷ ಸಹಕಾರವಿದೆ. ಅವುಗಳನ್ನು ಈ ಸಂದರ್ಭದಲ್ಲಿ ಸ್ಮರಿಸುವುದು ನನ್ನ ಕರ್ತವ್ಯ. ಸಂಶೋಧನಾ ವಿಧಾನದ ಕುರಿತು ಆಲೋಚನೆ ಸಾಧ್ಯವಾದುದೇ ನಾನು ಪಿಎಚ್.ಡಿ. ವಿದ್ಯಾರ್ಥಿಯಾಗಿ ನೋಂದಾಯಿಸಿದ ನಂತರ. ಬಹುತೇಕ ಸಮಾಜ ಅಥವಾ ಮಾನವಿಕ ವಿದ್ಯಾರ್ಥಿಗಳಂತೆ ನಾನು ಪಿಎಚ್.ಡಿ. ಅಧ್ಯಯನಕ್ಕೆ ಮನಸ್ಸು ಮಾಡಿದ್ದು ಈ ಡಿಗ್ರಿಯಿಂದಲಾದರೂ (ಪಿಎಚ್.ಡಿ.ಯಿಂದಲಾದರೂ) ಕೆಲಸ ಸಿಗಬಹುದೆಂಬ ದೃಷ್ಟಿಯಿಂದ. ಪಿಎಚ್.ಡಿ. ನೋಂದಾವಣಿ ಆಗಬೇಕಾದರೆ ಮಾರ್ಗದರ್ಶಕರು ಬೇಕು. ನನಗೆ ಪಾಠ ಮಾಡಿದ ಮೇಷ್ಟರುಗಳು ಯಾರು ಕೂಡ ಮಾರ್ಗದರ್ಶಕರಾಗಲು ಸಿದ್ಧರಿರಲಿಲ್ಲ. ಅದಕ್ಕೆ ಮೇಷ್ಟರುಗಳು ಕಾರಣವಲ್ಲ; ನಾನೇ ಕಾರಣನಾಗಿದ್ದೆ. ವಿದ್ಯಾರ್ಥಿ ಜೀವನದಲ್ಲಿ (ಅದರಲ್ಲೂ ಸ್ನಾತಕೋತ್ತರ ಅಧ್ಯಯನ ಸಂದರ್ಭದಲ್ಲಿ) ನಾನು ನನ್ನ ಓದು ಬರಹಗಳಿಗಾಗಿ ಮೇಷ್ಟರುಗಳಿಗೆ ಪರಿಚಿತ ನಾಗಿರಲಿಲ್ಲ; ವಿದ್ಯಾರ್ಥಿ ನಾಯಕನಾಗಿ ಆಗಾಗ ಮಾಡುವ ಗಲಾಟೆಗಳಿಗಾಗಿ ಮೇಷ್ಟರುಗಳಿಗೆ ಪರಿಚಿತನಾಗಿದ್ದೆ. ಅಂತಹ ಸಂದರ್ಭದಲ್ಲಿ ನನ್ನನ್ನು ಪಿಎಚ್‌.ಡಿ. ವಿದ್ಯಾರ್ಥಿಯಾಗಿ ತೆಗೆದು ಕೊಳ್ಳಲು ಮನಸ್ಸು ಮಾಡಿದವರು ಮಂಗಳೂರು ವಿಶ್ವವಿದ್ಯಾಲಯದ ಬ್ಯುಸಿನೆಸ್ ಆಡ್ಮಿನಿಸ್ಟ್ರೇಶನ್ ವಿಭಾಗದ ಅಧ್ಯಾಪಕರಾದ ಡಾ. ಟಿ.ಎನ್.ಶ್ರೀಧರ. ಇದೇ ಸಂದರ್ಭದಲ್ಲಿ ಮಂಗಳೂರು ವಿಶ್ವವಿದ್ಯಾಲಯದಲ್ಲಿ ‘ಅರಿವು ಬರಹ’ದ ಗೆಳೆಯರು ಸಕ್ರಿಯರಾಗಿದ್ದರು. ಅರಿವು ಬರಹ ಬಳಗ ತಮ್ಮದೇ ಸ್ಟಡಿ ಸರ್ಕಲ್ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಸಮಾಜ ಮತ್ತು ಮಾನವಿಕಗಳ ಥಿಯರಿಗಳನ್ನು ಪರಿಚಯಿಸಲು ಪ್ರಯತ್ನಿಸುತ್ತಿದ್ದರು. ಅಂತಹ ಸ್ಟಡಿ ಸರ್ಕಲ್‌ಗಳಲ್ಲಿ ಭಾಗವಹಿಸುವ ಮೂಲಕ ಮತ್ತು ಡಾ. ವೆಲೇರಿಯನ್ ರಾಡ್ರಿಗಸ್, ಪ್ರಾಧ್ಯಾಪಕರು, ರಾಜಕೀಯಶಾಸ್ತ್ರ ವಿಭಾಗ (ಈಗ ಇವರು ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ ರಾಜಕೀಯ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿದ್ದಾರೆ) ಮತ್ತು ಡಾ. ಶಶಿಧರ್, ಪ್ರಾಧ್ಯಾಪಕರು, ಇಂಗ್ಲಿಷ್ ವಿಭಾಗ ಇವರೊಂದಿಗಿನ ಸಂಪರ್ಕ ನನಗೆ ಸಮಾಜ ಥಿಯರಿಗಳ ಬಗ್ಗೆ ವಿಶೇಷ ಗೀಳು ಬೆಳೆಸಿಕೊಳ್ಳಲು ಕಾರಣವಾಯಿತು.

೧೯೯೭ ರಲ್ಲಿ ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗದಲ್ಲಿ ಪ್ರವಾಚಕನಾಗಿ ಕೆಲಸಕ್ಕೆ ಸೇರಿದೆ. ಕನ್ನಡ ವಿಶ್ವವಿದ್ಯಾಲಯಕ್ಕೆ ಬರುವವರೆಗೂ (ಬಂದ ನಂತರವೂ) ಪಾಸಿಟಿವ್ ಸೈನ್ಸ್‌ನ ಸಂಶೋಧನಾ ವಿಧಾನಕ್ಕೆ ಅಂಟಿಕೊಂಡಿದ್ದೆ. ಕನ್ನಡ ವಿಶ್ವವಿದ್ಯಾಲಯದಲ್ಲಿ ಮಾನವಿಕದ ಪ್ರಭಾವ ಹೆಚ್ಚಿದೆ. ಇಲ್ಲಿ ನಡೆಯುವ ಬಹುತೇಕ ವಿಚಾರ ಸಂಕಿರಣಗಳಲ್ಲಿ, ಕಮ್ಮಟಗಳಲ್ಲಿ ಹರ್ಮೆನೆಟಿಕ್ಸ್‌, ಸಂಕಥನ, ಆಧುನಿಕೋತ್ತರ ಚಿಂತನೆ ಇತ್ಯಾದಿಗಳ ತುಣುಕುಗಳು ಪುಕ್ಕಟೆಯಾಗಿ ಸಿಗುತ್ತವೆ. ಇವೆಲ್ಲವು ನನ್ನನ್ನು ಕ್ವಾಲಿಟೇಟಿವ್ ಸಂಶೋಧನೆ ಕಡೆಗೆ ಹೆಚ್ಚು ಹೆಚ್ಚು ಸೆಳೆದವು. ಡಾ. ಕೆ.ವಿ. ನಾರಾಯಣ, ಪ್ರಾಧ್ಯಾಪಕರು, ಭಾಷಾಧ್ಯಯನ ವಿಭಾಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ ಇವರ ಸಂಶೋಧನಾ ವಿಧಾನದ ಮೇಲಿನ ಉಪನ್ಯಾಸಗಳು ಮತ್ತು ಇವರೊಂದಿಗಿನ ಚರ್ಚೆಗಳು ಮಾನವಿಕದ ಹಿನ್ನೆಲೆಯಿಂದ ಗುಣಾತ್ಕ ಸಂಶೋಧನೆಯ ಸಾರವನ್ನು ಅರ್ಥ ಮಾಡಿಕೊಳ್ಳಲು ಸಹಕಾರಿಯಾಗಿವೆ. ಡಾ. ವಿವೇಕ ರೈಯವರು ಕುಲಪತಿಗಳಾಗಿ ಬಂದ ನಂತರ ಜನಪದ ಸಂಶೋಧನಾ ವಿಧಾನಗಳ ಶಾಸ್ತ್ರೀಯ ಅಧ್ಯಯನಗಳಿಗೆ ಮಹತ್ವ ನೀಡಲಾರಂಭಿಸಿದ್ದಾರೆ. ಜನಪದ ಸಂಶೋಧನಾ ವಿಧಾನಗಳ ಮೇಲಿನ ಇವರ ಉಪನ್ಯಾಸಗಳು ಮತ್ತು ಇತರ ಕಾರ್ಯಕ್ರಮಗಳು ಸಮಾಜ ಸಂಶೋಧನೆಯ ಅಂಚಿನಲ್ಲಿರುವ ಆಯಾಮಗಳನ್ನು ಅರ್ಥ ಮಾಡಿಕೊಳ್ಳಲು ತುಂಬಾ ಸಹಕಾರಿಯಾಗಿವೆ. ಡಾ. ಹಿ.ಚಿ. ಬೋರಲಿಂಗಯ್ಯ, ಡಾ. ಟಿ.ಆರ್. ಚಂದ್ರಶೇಖರ್‌, ಡಾ. ರಹಮತ್ ತರೀಕೆರೆ, ಡಾ. ಟಿ.ಪಿ. ವಿಜಯ್, ಡಾ. ವೆಂಕಟೇಶ್ ಇಂದ್ವಾಡಿ, ಡಾ. ವಿ.ಬಿ. ತಾರಕೇಶ್ವರ್, ಡಾ. ಮಾಧವ ಪೆರಾಜೆ ಮತ್ತು ಕನ್ನಡ ವಿಶ್ವವಿದ್ಯಾಲಯದ ಇತರ ಸಂಶೋಧಕರೊಂದಿಗಿನ ಚರ್ಚೆಗಳು ಕೂಡ ಈ ಪುಸ್ತಕದ ರಚನೆಯಲ್ಲಿ ಸಹಕಾರಿಯಾಗಿವೆ. ಸಮಾಜ ಸಂಶೋಧನೆಯ ಮೇಲಿನ ಹಿಂದೆ ಪ್ರಕಟವಾದ ಲೇಖನಗಳ ಜತೆಗೆ ನಾಲ್ಕು ಹೊಸ ಅಧ್ಯಾಯಗಳನ್ನು ಸೇರಿಸಿ ಈ ಪುಸ್ತಕವನ್ನು ರಚಿಸಿರುವುದರಿಂದ ಪುಸ್ತಕದ ಕರಡು ಪ್ರತಿಯನ್ನು ಪರಿಶೀಲಿಸುವ ಅಗತ್ಯ ಬಂತು. ಇದಕ್ಕಾಗಿ ಡಾ. ವೆಲೇರಿಯನ್ ರಾಡ್ರಿಗಸ್, ಪ್ರಾಧ್ಯಾಪಕರು, ರಾಜಕೀಯ ಅಧ್ಯಯನ ಕೇಂದ್ರ, ಜವರಹಲಾಲ್ ನೆಹರೂ ವಿಶ್ವವಿದ್ಯಾಲಯ, ದೆಹಲಿ, ಡಾ. ಕೆ.ವಿ. ನಾರಾಯಣ, ಪ್ರಾಧ್ಯಾಪಕರು, ಭಾಷಾಧ್ಯಯನ ವಿಭಾಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ ಮತ್ತು ಡಾ. ಸುರೇಂದ್ರರಾವ್, ಪ್ರಾಧ್ಯಾಪಕರು, ಚರಿತ್ರೆ ವಿಭಾಗ, ಮಂಗಳೂರು ವಿಶ್ವವಿದ್ಯಾಲಯ, ಕೋಣಾಜೆ ಇವರನ್ನು ಕೋರಲಾಗಿತ್ತು. ಇವರು ಗಣಕ ಪ್ರತಿಯನ್ನು ಓದಿ ತಮ್ಮ ಅಭಿಪ್ರಾಯಗಳನ್ನು ನೀಡಿದ್ದಾರೆ; ಪುಸ್ತಕದಲ್ಲಿರುವ ಕೆಲವೊಂದು ದೋಷಗಳನ್ನು ಪಟ್ಟಿ ಮಾಡಿದ್ದಾರೆ. ಹಲವಾರು ಕಾರಣಗಳಿಂದ ಅವರು ಪಟ್ಟಿ ಮಾಡಿರುವ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗಿಲ್ಲ. ಓದುಗರಿಗೆ ಈ ಕುರಿತು (ಸಮಸ್ಯೆಗಳಿಗೆ) ಮಾಹಿತಿ ಇರಲಿ ಎನ್ನುವ ದೃಷ್ಟಿಯಿಂದ ಅವರ ಅಭಿಪ್ರಾಯಗಳನ್ನು ಪುಸ್ತಕದ ಕೊನೆಯಲ್ಲಿ ನೀಡಿದ್ದೇನೆ.

ಪುಸ್ತಕದಲ್ಲಿ ಕ್ಷೇತ್ರಕಾರ್ಯದ ಹಲವಾರು ಅನುಭವಗಳನ್ನು ನೀಡಿದ್ದೇನೆ. ಈ ಎಲ್ಲ ಅನುಭವಗಳು ನನ್ನ ವೈಯಕ್ತಿಕ ಯೋಜನೆಗಳಿಂದಲೇ ಬಂದವಲ್ಲ; ವಿಭಾಗದ ಯೋಜನೆ ಸಂದರ್ಭದಲ್ಲಿ ಗಳಿಸಿದ ಅನುಭವಗಳನ್ನು ಕೂಡ ಪುಸ್ತಕದಲ್ಲಿ ಬಳಸಿಕೊಳ್ಳಲಾಗಿದೆ. ವಿಭಾಗದ ಯೋಜನೆಯಲ್ಲಿ ಭಾಗವಹಿಸಿದ ನನ್ನ ಸಹೋದ್ಯೋಗಿಗಳಾದ ಡಾ. ಟಿ.ಆರ್. ಚಂದ್ರಶೇಖರ, ಎ.ಶ್ರೀಧರ, ಡಾ. ಸಿದ್ಧಗಂಗಮ್ಮ, ಡಾ. ಎಚ್.ಡಿ. ಪ್ರಶಾಂತ್, ಜನಾರ್ಧನ ಮತ್ತು ಸಂಶೋಧನ ವಿದ್ಯಾರ್ಥಿಗಳ ಪಾತ್ರವನ್ನು ಸ್ಮರಿಸಿಕೊಳ್ಳಲೇಬೇಕು. ಡಾ. ಹಿ.ಚಿ. ಬೋರಲಿಂಗಯ್ಯನವರು, ಪ್ರಸಾರಾಂಗದ ನಿರ್ದೇಶಕರಾಗಿದ್ದ ಸಂದರ್ಭದಲ್ಲಿ ಪುಸ್ತಕದ ಪ್ರಕಟನೆಗಾಗಿ ಸಾಕಷ್ಟು ಮುತುವರ್ಜಿ ವಹಿಸಿದ್ದಾರೆ. ಪುಸ್ತಕದ ಪ್ರಕಟನೆಗಾಗಿ ಶ್ರಮವಹಿಸಿದ ಮತ್ತೊಬ್ಬ ವ್ಯಕ್ತಿ ಶ್ರೀ ಬಿ. ಸುಜ್ಞಾನಮೂರ್ತಿ, ಸಹಾಯಕ ನಿರ್ದೇಶಕ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ. ಪುಸ್ತಕದಲ್ಲಿನ ಅಧ್ಯಾಯಗಳನ್ನು ಹಲವಾರು ಬಾರಿ ಓದಿ ಕನ್ನಡದ ದೋಷಗಳನ್ನು ತಿದ್ದಿ ಪುಸ್ತಕ ಅಚ್ಚುಕಟ್ಟಾಗಿ ಪ್ರಕಟಿಸುವಲ್ಲಿ ಇವರ ಶ್ರಮ ತುಂಬಾ ಇದೆ.

ಪ್ರಸಾರಾಂಗದ ನಿರ್ದೇಶಕರಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರು ಪುಸ್ತಕವನ್ನು ಉತ್ತಮವಾಗಿ ಪ್ರಕಟಿಸಲು ನೆರವಾಗಿದ್ದಾರೆ. ಶ್ರೀ ಕೆ.ಕೆ. ಮಕಾಳಿ ಅವರು ಅಂದವಾದ ಮುಖಪುಟವನ್ನು ವಿನ್ಯಾಸಗೊಳಿಸಿದ್ದಾರೆ. ಶ್ರೀ ಜೆ. ಬಸವರಾಜ ಅವರು ಅಕ್ಷರ ಸಂಯೋಜಿಸಿದ್ದಾರೆ. ಇವರಿಗೆಲ್ಲ ನನ್ನ ಹೃತ್ಪೂರ್ವಕ ಕೃತಜ್ಞತೆಗಳು.

* * *

ಈ ಪುಸ್ತಕ ಮರುಮುದ್ರಣಗೊಳ್ಳಲು ಪ್ರೋತ್ಸಾಹಿಸಿದ ಮಾನ್ಯ ಕುಲಪತಿಗಳಾದ ಡಾ. ಎಂ. ಮುರಿಗೆಪ್ಪ ಅವರಿಗೆ, ಕುಲಸಚಿವರಾದ ಡಾ. ಮಂಜುನಾಥ ಬೇವಿನಕಟ್ಟಿ ಅವರಿಗೆ, ಪ್ರಸಾರಾಂಗದ ನಿರ್ದೇಶಕರಾದ ಡಾ. ಎ. ಸುಬ್ಬಣ್ಣ ರೈ ಅವರಿಗೆ, ಪುಸ್ತಕ ವಿನ್ಯಾಸ ಮಾಡಿ ಅಚ್ಚುಕಟ್ಟಾಗಿ ಪ್ರಕಟವಾಗಲು ಸಹಕರಿಸಿದ ಶ್ರೀ ಬಿ. ಸುಜ್ಞಾನಮೂರ್ತಿ ಅವರಿಗೆ, ಮುಖಪುಟ ರೂಪಿಸಿದ ಶ್ರೀ ಕೆ.ಕೆ. ಮಕಾಳಿ ಅವರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳು.

ಎಂ. ಚಂದ್ರ ಪೂಜಾರಿ