ಸಾಮಾನ್ಯವಾಗಿ ಕೊನೆಯ ಅಧ್ಯಾಯದಲ್ಲಿ ಹಿಂದಿನ ಅಧ್ಯಾಯಗಳಲ್ಲಿ ಮಾಡಿದ ವಾದಗಳ ಸಾರಾಂಶವನ್ನು ಕೊಡುವುದು ಕ್ರಮ. ಆದರೆ ನಾನು ಇಲ್ಲಿ ಆ ಕೆಲಸಕ್ಕಾಗಿ ಈ ಅಧ್ಯಾಯವನ್ನು ಬಳಸುತ್ತಿಲ್ಲ. ಯಾಕೆಂದರೆ ಈ ಪುಸ್ತಕದಲ್ಲಿ ಬರುವ ಅಧ್ಯಾಯಗಳು ಸಮಾಜ ಸಂಶೋಧನೆ ಮೇಲೆ ಇವೆಯಾದರೂ ಸಂಶೋಧನೆಯ ಯಾವುದೋ ಒಂದು ವಿಚಾರದ ಮೇಲೆ ಕೇಂದ್ರೀಕೃತವಾಗಿಲ್ಲ. ಸಂಶೋಧನೆಗೆ ಸಂಬಂಧಿಸಿದ ಹಲವಾರು ವಿಚಾರಗಳ ಮೇಲೆ ಇಲ್ಲಿನ ಅಧ್ಯಾಯಗಳು ಬೆಳಕು ಚೆಲ್ಲುತ್ತವೆ. ಜತೆಗೆ ಒಂದು ಅಧ್ಯಾಯ ಮತ್ತೊಂದು ಅಧ್ಯಾಯದ ಮುಂದುವರಿಕೆಯೂ ಅಲ್ಲ. ಈ ಎಲ್ಲ ವಿಚಾರಗಳ ಹಿನ್ನೆಲೆಯಲ್ಲಿ ಹಿಂದಿನ ಅಧ್ಯಾಯಗಳಲ್ಲಿ ಅಸ್ಪಷ್ಟವಾಗಿ ಮಂಡಿತವಾದ ಆದರೆ ಆ ಅಧ್ಯಾಯದಲ್ಲಿ ಒಳಗೊಂಡಿರುವ ಕೆಲವೊಂದು ತಾತ್ವಿಕ ನಿಲುವುಗಳನ್ನು ಸ್ಪಷ್ಟಪಡಿಸುವ ಕೆಲಸವನ್ನು ಈ ಅಧ್ಯಾಯದಲ್ಲಿ ಮಾಡಲಾಗಿದೆ. ಒಂದನೇ ಅಧ್ಯಾಯದಿಂದ ಆರಂಭಿಸೋಣ. ಸಮಾಜ ಥಿಯರಿಯೊಂದರ ಯೂನಿವರ್ಸಾಲಿಟಿಯನ್ನು ವಿಶ್ಲೇಷಿಸುವ ಪ್ರಯತ್ನವನ್ನು ಆ ಅಧ್ಯಾಯದಲ್ಲಿ ಮಾಡಲಾಗಿದೆ. ಥಿಯರಿಯೊಂದು ಕೇವಲ ಅದರ ವಿವರಿಸುವ ಶಕ್ತಿಯಿಂದ ಯೂನಿವರ್ಸಲ್ ಆನ್ವಯಿಕೆಯನ್ನು ಪಡೆದುಕೊಳ್ಳುವುದಿಲ್ಲ, ಅಂತಾರಾಷ್ಟ್ರೀಯ ವ್ಯವಸ್ಥೆಯಲ್ಲಿನ ಅಧಿಕಾರ ಸಂಬಂಧಗಳಿಂದ ಥಿಯರಿ ಆ ಶಕ್ತಿಯನ್ನು ಪಡೆದುಕೊಳ್ಳುತ್ತದೆ ಎನ್ನುವ ವಾದ ಇದೆ. ಈ ವಾದ ಬಹುಮುಖ್ಯವಾದ ಎರಡು ನಕಾರಾತ್ಮಕ ಗ್ರಹಿಕೆಗಳಿಗೆ ಎಡೆ ಮಾಡಿಕೊಡಬಹುದು. ಒಂದು, ಯೂನಿವರ್ಸಾಲಿಟಿಯ ನಿರಾಕರಣೆ ಮತ್ತು ಎರಡು, ಅಧಿಕಾರ ಸರ್ವವ್ಯಾಪಿಯಾಗಿ ಥಿಯರಿ ನಗಣ್ಯವಾಗಿರುವ ಚಿತ್ರಣ. ಅಧ್ಯಾಯ ಒಂದು ಮತ್ತು ಎರಡರಲ್ಲಿ ಚರ್ಚಿತವಾದ ಅಂಶಗಳು ಯೂನಿವರ್ಸಾಲಿಟಿಯ ನಿರಾಕರಣೆಯತ್ತ ಬೊಟ್ಟು ಮಾಡಬಹುದು. ಯೂನಿವರ್ಸಾಲಿಟಿ ಕಡೆಗೆ ಚಲಿಸಬೇಕಾದರೆ ನಿರ್ದಿಷ್ಟತೆಗಳಲ್ಲಿ ಇರುವ ಸಾಮಾನ್ಯ ಅಂಶಗಳು ಗುರುತಿಸಲ್ಪಡಬೇಕು. ಇಂದು ಚಾಲ್ತಿಯಲ್ಲಿರುವ ವಿಧಾನದ ಮೇಲಿನ ಚರ್ಚೆ ಮತ್ತು ಸಮಾಜದ ವ್ಯಾಖ್ಯಾನ ಎರಡೂ ಕೂಡ ಸಾಮಾನ್ಯ ಅಂಶಗಳನ್ನು ಗುರುತಿಸುವುದಕ್ಕೆ ಮಹತ್ವ ನೀಡುತ್ತಿಲ್ಲ. ಪ್ರತಿಯೊಂದು ಸಂಸ್ಕೃತಿ ಕೂಡ ಸತ್ಯವನ್ನು ಅರಿಯುವ ಅದರದ್ದೇ ಆದ ವಿಧಾನವನ್ನು ಹೊಂದಿದೆ ಮತ್ತು ಆ ಮೂಲಕ ಕಂಡುಕೊಳ್ಳುವ ಸತ್ಯ ವಿಜ್ಞಾನದ ವಿಧಾನದಿಂದ ಸಾಧ್ಯವಾಗುವ ಸತ್ಯದಷ್ಟೇ ಸತ್ಯ ಎನ್ನುವ ಮೂಲಕ ಯೂನಿವರ್ಸಾಲಿಟಿಯನ್ನು ಪ್ರತಿಪಾದಿಸುವ ವಿಜ್ಞಾನದ ವಿಧಾನವನ್ನು ಪ್ರಶ್ನಿಸಲಾಗಿದೆ. ಜತೆಗೆ ಸಮಾಜ ಸಂಶೋಧನೆಯಲ್ಲಿ ಮಾನವಿಕದ ಗೃಹೀತಗಳ ಪ್ರಭಾವ ಹೆಚ್ಚಾದಂತೆ ಸಾಮಾಜಿಕ ವಾಸ್ತವಿಕತೆಯ ಅಸ್ತಿತ್ವದ ಬಗ್ಗೆ ಸಂದೇಹಗಳು ಬಲಗೊಂಡವು. ಸಾಮಾಜಿಕ ವಾಸ್ತವತೆ ಎನ್ನುವುದೊಂದು ಅರ್ಥಪೂರ್ಣ ಸಾಮಾಜಿಕ ಕಟ್ಟುವಿಕೆ, ನಮ್ಮ ಆಲೋಚನೆಗಳಿಂದ ಪ್ರತ್ಯೇಕವಾದ ಪ್ರಪಂಚವೊಂದಿಲ್ಲ, ನಾವು ಇದೆ ಎಂದು ಗ್ರಹಿಸುತ್ತೇವೆ, ಆದುದರಿಂದ ಇದೆ ಇತ್ಯಾದಿ ಗ್ರಹಿಕೆಗಳು ಬಲಗೊಂಡವು. ಹೀಗೆ ಸಮಾಜ ಸಂಶೋಧನೆಯಲ್ಲಿ ಸಾಮಾಜಿಕ ಅಂಶಗಳ ಅಸ್ತಿತ್ವ ಸ್ವತಂತ್ರ ಮತ್ತು ಖಚಿತವಾದ ನೆಲೆಗಳ ಕಲ್ಪಿತ ಅಸ್ತಿತ್ವದ ಕಡೆಗೆ ಚಲಿಸಿವೆ. ಸಂಶೋಧಕರ ಕೆಲಸ ಹಲವಾರು ಕಲ್ಪಿತ ಅಸ್ತಿತ್ವಗಳ ನಡುವೆ ಇರುವ ಸಾಮಾನ್ಯ ಅಂಶಗಳನ್ನು ಗುರುತಿಸುವುದಲ್ಲ; ಅವು ರೂಪಿತವಾಗುವ ಪ್ರಕ್ರಿಯೆಯನ್ನು ಅರ್ಥ ಮಾಡಿಕೊಳ್ಳುವುದು ಮತ್ತು ಅವುಗಳ ನಡುವೆ ಇರುವ ಭಿನ್ನತೆಗಳನ್ನು ಗುರುತಿಸುವುದು. ಈ ಕೆಲಸವನ್ನು ಕೂಡ ಸಂಶೋಧಕರು ತೃಪ್ತಿಕರವಾಗಿ ಮಾಡುತ್ತಾರೆನ್ನುವ ಗ್ಯಾರಂಟಿ ಇಲ್ಲವೆಂದು ಅಧ್ಯಾಯ ಮೂರರಲ್ಲಿನ ವಿವರಗಳು ತಿಳಿಸುತ್ತವೆ. ಹೀಗೆ ಯೂನಿವರ್ಸಾಲಿಟಿಯನ್ನು ನಿರಾಕರಿಸುವ ಹಲವಾರು ಅಂಶಗಳು ಮೂರು ಅಧ್ಯಾಯಗಳಲ್ಲಿ (ಒಂದು, ಎರಡು ಮತ್ತು ಮೂರು) ಹೆಚ್ಚು ಪ್ರಖರವಾಗಿ ಮೂಡಿರುವ ಸಾಧ್ಯತೆ ಇದೆ.

ಆದರೆ ಪುಸ್ತಕದ ಉದ್ದೇಶ ಯೂನಿವರ್ಸಾಲಿಟಿಯನ್ನು ನಿರಾಕರಿಸುವುದಲ್ಲ; ಯೂನಿವರ್ಸಾಲಿಟಿಯನ್ನು ಸಮಸ್ಯೀಕರಿಸುವುದು. ಹಲವು ಬಗೆಯಲ್ಲಿ ಯೂನಿವರ್ಸಾಲಿಟಿ ರೂಪುಗೊಳ್ಳಬಹುದು. ಅವುಗಳಲ್ಲಿ ಯಾವುದೋ ಒಂದು ಅಥವಾ ಕೆಲವು ಬಲಾಢ್ಯರ ಅನುಭವಗಳ ನೆಲೆಯಲ್ಲಿ ರೂಪುಗೊಳ್ಳುವ ಯೂನಿವರ್ಸಾಲಿಟಿಯನ್ನು ತಿರಸ್ಕರಿಸುವುದು ಅಲ್ಲಿನ ವಾದದ ಉದ್ದೇಶ. ಅದೇ ಸಂದರ್ಭದಲ್ಲಿ ಯೂನಿವರ್ಸಾಲಿಟಯ ವ್ಯಾಪ್ತಿಯೊಳಗೆ ಬರುವ ಬಿಡಿ ಭಾಗಗಳು ತಮ್ಮ ನಿರ್ದಿಷ್ಟತೆಯನ್ನು ಸೇರಿಸಿ ರೂಪಿಸುವ ಯೂನಿವರ್ಸಾಲಿಟಿಯನ್ನು ಪುರಸ್ಕರಿಸುವ ಉದ್ದೇಶವೂ ಇತ್ತು. ಅಧ್ಯಾಯ ನಾಲ್ಕರಲ್ಲಿ ಈ ಅಂಶ (ಯೂನಿವರ್ಸಾಲಿಟಯ ಅನಿವಾರ್ಯತೆ ಬಗ್ಗೆ) ಚರ್ಚಿತವಾಗಿದೆ. ಚಾರಿತ್ರಿಕವಾಗಿ ರೂಪುಗೊಂಡ ಸಮುದಾಯಗಳ ಆಶಯಗಳಿಗೆ ಅನುಗುಣವಾಗಿ ಅವು ಬದುಕುವ ಸಾಧ್ಯತೆ ಇಂದಿಲ್ಲ. ಯಾಕೆಂದರೆ ಯಾವುದೇ ಸಮುದಾಯ ಕೂಡ ಒಂದು ದ್ವೀಪದ ರೀತಿಯಲ್ಲಿ ಬದುಕುತ್ತಿಲ್ಲ; ಅವುಗಳಿಗೆ ಕಷ್ಟ ಇರಲಿ ಇಲ್ಲದಿರಲಿ ಕಲೆತು ಬದುಕುವುದು ಅನಿವಾರ್ಯವಾಗಿದೆ. ಇಂತಹ ಸಂದರ್ಭದಲ್ಲಿ ಸಾರ್ವಜನಿಕ ಸ್ಪೇಸ್‌ಗಳಲ್ಲಿ (ಮಾರುಕಟ್ಟೆ, ಆಧುನಿಕ ಸಂಸ್ಥೆಗಳು, ಸಮುದಾಯ ಸಂಪನ್ಮೂಲಗಳ ಬಳಕೆ ನಿರ್ಧರಿಸುವಲ್ಲಿ) ಯಾವ ಸಮುದಾಯದ ಮೌಲ್ಯ ಪ್ರಕಾರ ವ್ಯವಹಾರ ನಡೆಯಬೇಕು. ಮೇಲಿನ ಎಲ್ಲ ಸ್ಪೇಸ್‌ಗಳಲ್ಲಿ ಇಂದು (ಆಧುನೀಕರಣ ಪ್ರಕ್ರಿಯೆ ಆರಂಭಿಸಿದ ಐದು ದಶಕಗಳ ನಂತರ) ಕೂಡ ಸ್ಥಳೀಯವಾಗಿ ಯಜಮಾನಿಕೆಯಲ್ಲಿರುವ ಸಮುದಾಯಗಳ ಮೌಲ್ಯಗಳು ವ್ಯವಹಾರಗಳನ್ನು ಪ್ರಭಾವಿಸುತ್ತಿರುವುದನ್ನು ನಾವು ನೋಡಿದ್ದೇವೆ. ಇಂತಹ ಸಂದರ್ಭದಲ್ಲಿ ನಾವು ಸಮುದಾಯ ಮೌಲ್ಯಗಳನ್ನು ಎತ್ತಿ ಹಿಡಿಯಲು ಹೊರಟರೆ ಇದರಿಂದ ಅತೀ ಹೆಚ್ಚಿನ ನಷ್ಟ ಅನುಭವಿಸುವವರು ಸಮಾಜದ ಅಂಚಿನಲ್ಲಿರುವವರು. ಏಕೆಂದರೆ ಪ್ರತಿ ಸಮುದಾಯದ ಒಳಿತಿನ ಕಲ್ಪನೆಗಳು ಅನ್ವಯವಾಗುವುದು ಆಯಾಯ ಸಮುದಾಯದ ಸದಸ್ಯರಿಗೆ ಮಾತ್ರ. ಸಮುದಾಯದಿಂದ ಹೊರಗಿನವರು ಇಲ್ಲಿ ಅನ್ಯರಾಗುತ್ತಾರೆ ಮತ್ತು ಅನ್ಯರಿಗೆ ಅನ್ಯಾಯವಾಗುವುದು ಅನೈತಿಕ ಅಲ್ಲ. ಹೀಗೆ ಸಮುದಾಯದ ಹಿನ್ನೆಲೆಯಲ್ಲಿ ರೂಪುಗೊಳ್ಳುವ ಸುಖದ ಕಲ್ಪನೆ ಅಥವಾ ಒಳಿತಿನ ಕಲ್ಪನೆಗೆ ಒಂದು ಸೀಮಿತಿ ಆನ್ವಯಿಕ ಇರುತ್ತದೆ. ಈ ಬಗೆಯಲ್ಲಿ ರೂಪಿತವಾದ ಸಾಮಾಜಿಕ ನ್ಯಾಯದ ಕಲ್ಪನೆಯಲ್ಲಿ ಒಂದು ಮಾನದಂಡದತ್ತ ಚಲಿಸುವ ಅವಕಾಶವೇ ಇರುವುದಿಲ್ಲ. ಅವರವರ ಯೋಗ್ಯತೆಗನುಸಾರ ಸವಲತ್ತುಗಳನ್ನು ಒದಗಿಸುವುದು ಸಾಮಾಜಿಕ ನ್ಯಾಯ ಆಗುತ್ತದೆ. ಈಗಾಗಲೇ ಇರುವ ವರ್ಗ ಸ್ಥಾನಮಾನಗಳನ್ನು ಯಥಾ ಸ್ಥಿತಿಯಲ್ಲಿಡುವ ಎಲ್ಲ ಸಾಧ್ಯತೆಗಳು ಈ ಬಹುಸುಖದ ಕಲ್ಪನೆಯಲ್ಲಿ ಅಡಗಿದೆ. ಈ ಸಮಸ್ಯೆಯಿಂದ ಹೊರಬರಬೇಕಾದರೆ ಕುಟುಂಬವೊಂದು ತಕ್ಕಮಟ್ಟಿನ ಸುಖದ ಬಾಳ್ವೆ ಮಾಡಲು ಅಗತ್ಯವಿರುವ ಕನಿಷ್ಠ ಸವಲತ್ತುಗಳು ತೀರ್ಮಾನ ಆಗಬೇಕು. ಅಂದರೆ ಒಂದು ಯೂನಿವರ್ಸಲ್ ಅಥವಾ ಎಲ್ಲರಿಗೂ ಅನ್ವಯವಾಗುವ ಮಾನದಂಡ ತೀರ್ಮಾನವಾಗಬೇಕು. ಈ ಎಲ್ಲ ವಾದಗಳು ಪರ್ಟಿಕ್ಯುಲರ್‌ಗಳ ಅಂಶಗಳನ್ನು ಸೇರಿಸಿ ರೂಪುಗೊಳ್ಳುವ ಯೂನಿವರ್ಸಲ್‌ಗೆ ಮಹತ್ವ ನೀಡುತ್ತವೆ. ಹೀಗೆ ಮಾಡುವುದರಿಂದ ಗ್ಲೋಬಲ್ ಮತ್ತು ಲೋಕಲ್ ನಡುವಿನ ಸಂಘರ್ಷ, ಸತ್ಯದ ಹುಡುಕಾಟ ಮತ್ತು ನೈತಿಕ ಮೌಲ್ಯಗಳ ತಿಕ್ಕಾಟ, ವ್ಯಕ್ತಿ ಮತ್ತು ಸಮಾಜದ ನಡುವಿನ ಸಂಘರ್ಷ ಇತ್ಯಾದಿಗಳು ಕಡಿಮೆ ಆಗಬಹುದು.

ಥಿಯರಿಯೊಂದು ಯೂನಿವರ್ಸಾಲಿಟಿಯ ಗುಣವನ್ನು ಮೈಗೂಡಿಸಿಕೊಂಡ ಕೂಡಲೇ ಯಜಮಾನಿಕೆಯ ಸ್ಥಾನಕ್ಕೆ ಏರುವುದಿಲ್ಲ. ಅಧಿಕಾರ ಥಿಯರಿಯನ್ನು ಪ್ರಾಮುಖ್ಯತೆಗೊಳಿಸುವ ಮುಲಕ ಥಿಯರಿಯೊಂದು ಯಜಮಾನಿಕೆ ಸ್ಥಾನಕ್ಕೆ ಏರುತ್ತದೆಂದು ವಾದಿಸಲಾಗಿದೆ. ಈ ವಾದದ ಪ್ರಕಾರ ಎಲ್ಲವೂ ಅಧಿಕಾರಮಯವಾಗಿ ಥಿಯರಿಯ ಪಾತ್ರ ನಗಣ್ಯವಾದ ಚಿತ್ರಣವಿದೆ. ಅಧಿಕರ ಮತ್ತು ಥಿಯರು ನಡುವಿನ ಸಂಬಂಧದ ಪ್ರಶ್ನೆ ಇಷ್ಟೊಂದು ಸರಳವೇ? ಖಂಡಿತವಾಗಿಯೂ ಸರಳವಲ್ಲ. ತುಂಬಾ ಸಂಕೀರ್ಣವಾಗಿದೆ. ಈ ಸಂಕೀರ್ಣತೆಯನ್ನು ಅರ್ಥ ಮಾಡಿಕೊಳ್ಳಬೇಕಾದರೆ ಸಮಾಜವಿಜ್ಞಾನ ಥಿಯರಿಗಳು ಅಧಿಕಾರವನ್ನು ವ್ಯಾಖ್ಯಾನಿಸಿದ ಬಗೆಯನ್ನು ಅರ್ಥ ಮಾಡಿಕೊಳ್ಳಬೇಕು. ಬಹುತೇಕ ಸಮಾಜ ಥಿಯರಿಗಳು ಅಧಿಕಾರಕ್ಕೆ ವಿಶೇಷ ಸ್ಥಾನಮಾನ ನೀಡಿಲ್ಲ. ಇದಕ್ಕೆ ಬಹುಮುಖ್ಯ ಕಾರಣ ಆಧುನೀಕರಣ ಪ್ರಕ್ರಿಯೆಗಳು ಮತ್ತು ಆಧುನೀಕರಣ ಥಿಯರಿಗಳು. ಆಧುನೀಕರಣ ಪ್ರಕ್ರಿಯೆಯಲ್ಲಿ ಆರ್ಥಿಕ ಪರಿವರ್ತನೆಗೆ ಪ್ರಾಮುಖ್ಯತೆ ಸಿಗುವುದರೊಂದಿಗೆ ಅರ್ಥಶಾಸ್ತ್ರ ಅಗ್ರಮಾನ್ಯ ಸ್ಥಾನವನ್ನು ಪಡೆಯಿತು. ವಸಾಹತುಗಳು ಸ್ವತಂತ್ರಗೊಂಡು ತಮ್ಮ ಸಮಾಜಗಳಲ್ಲಿ ಆಧುನೀಕರಣ ಪ್ರಕ್ರಿಯೆ ಆರಂಭಿಸುವುದರೊಂದಿಗೆ ಅರ್ಥಶಾಸ್ತ್ರದ ಸ್ಥಾನಮಾನ ಇನ್ನೂ ಹೆಚ್ಚಿತು. ಅರ್ಥಶಾಸ್ತ್ರದ ಥಿಯರಿಗಳು ಮತ್ತು ಪಾರಿಭಾಷಿಕ ಪದಗಳು ಇತರ ಸಮಾಜವಿಜ್ಞಾನಗಳಲ್ಲಿ (ಮುಖ್ಯವಾಗಿ ಸಮಾಜಶಾಸ್ತ್ರಮತ್ತು ರಾಜಕೀಯ ಶಾಸ್ತ್ರಗಳಲ್ಲಿ) ಬಳಕೆಯಾಗಲು ಶುರುವಾದವು. ವಿನಿಮಯ, ರೇಶನಲ್ ಚಾಯ್ಸ್ ಮುಂತಾದ ಪದಗಳ ಬಳಕೆ ಮತ್ತು ಪಬ್ಲಿಕ್ ಚಾಯ್ಸ್ ಥಿಯರಿ, ರೇಶನಲ್ ಚಾಯ್ಸ್ ಥಿಯರಿ, ಎಕ್ಸ್‌ಚೇಂಜ್ ಥಿಯರಿ ಮುಂತಾದ ಥಿಯರಿಗಳ ಸಮಾಜ ಮತ್ತು ರಾಜಕೀಯ ಶಾಸ್ತ್ರಗಳಲ್ಲಿ ಹೆಚ್ಚು ಹೆಚ್ಚು ಬಳಕೆ ಬಂದವು. ಹೀಗೆ ಅರ್ಥಶಾಸ್ತ್ರೀಯ ಸಮಾಜ ಥಿಯರಿಗಳು ಸರ್ವವ್ಯಾಪ್ತಿಯಾಗಿವೆ. ಅರ್ಥಶಾಸ್ತ್ರದ ಜ್ಞಾನ ಪರಂಪರೆಯ ಬಹುಮುಖ್ಯ ಲಕ್ಷಣವೆಂದರೆ ಮೆಥಡಾಲಜಿಕಲ್ ಇನ್‌ಡಿವಿಜಲಿಸಂ. ಸಮಾಜವನ್ನು ವ್ಯಕ್ತಿಗಳ ಸಮೂಹವೆಂದು ಗ್ರಹಿಸುವುದು ಈ ಪರಂಪರೆಯ ಮುಖ್ಯ ಗುಣ. ಜತೆಗೆ ವಿಜ್ಞಾನದ ವಿಧಾನವನ್ನು ಯಥಾ ರೂಪದಲ್ಲಿ ಬಳಸಲು ಅರ್ಥಶಾಸ್ತ್ರದಲ್ಲಿ ಮಾಡಿದಷ್ಟು ಪ್ರಯತ್ನವನ್ನು ಇನ್ಯಾವುದೇ ಸಮಾಜವಿಜ್ಞಾನದಲ್ಲಿ ಮಾಡಿಲ್ಲ. ಆದುದರಿಂದಲೇ ವ್ಯಕ್ತಿಗಳನ್ನು ಅಧ್ಯಯನ ಮಾಡುವ ಮೂಲಕ ಸಮಾಜದ ಬಗ್ಗೆ ತೀರ್ಮಾನಕ್ಕೆ ಬರಬಹುದೆನ್ನುವುದು ವಿಜ್ಞಾನ ವಿಧಾನದ ಮತ್ತೊಂದು ಗ್ರಹಿಕೆ ಕೂಡ ಇಲ್ಲಿ ಸಾಕಷ್ಟು ಕೆಲಸ ಮಾಡಿದೆ. ಇದರ ಇತರ ಗೃಹೀತಗಳು ಇಂತಿವೆ. ಪ್ರತಿಯೊಬ್ಬ ವ್ಯಕ್ತಿ ಕೂಡ ತನ್ನ ಸ್ವಂತ ಆಸಕ್ತಿಗಳನ್ನು ಪೂರೈಸುವ ದೃಷ್ಟಿಯಿಂದ ಕಾರ್ಯ ಪ್ರವೃತ್ತನಾಗುತ್ತಾನೆ. ದರ್ಜಿಯೊಬ್ಬ ಅಂಗಿ ಹೊಲಿಯುವುದು ಅಥವಾ ಕಟುಕನೊಬ್ಬ ಮಾಂಸ ಮಾರುವುದು ಇತರರ ಬಯಕೆಗಳನ್ನು ಪೂರೈಸುವುದಕ್ಕಲ್ಲ; ತಮ್ಮ ಸ್ವಾರ್ಥ ಸಾಧನೆಗಾಗಿ ಎನ್ನುವ ಆಡಮ್‌ಸ್ಮಿತ್‌ನ ಮಾತುಗಳು ಈ ಅಂಶವನ್ನು ಸ್ಪಷ್ಟಪಡಿಸುತ್ತದೆ. ತಮ್ಮ ಸ್ವಾರ್ಥ ಸಾಧನೆಗಾಗಿ ವ್ಯಕ್ತಿಗಳು ಪರಸ್ಪರ ವಿನಿಮಯದ ಸಂಬಂಧವನ್ನು ಇಟ್ಟುಕೊಳ್ಳುವುದು ಅನಿವಾರ್ಯ.

ಈ ಬಗೆಯ ಮಾರುಕಟ್ಟೆಯ ಮಾದರಿ ಮತ್ತು ವಾಸ್ತವ ಸಮಾಜದ ನಡುವೆ ಸಾಕಷ್ಟು ಅಂತರವಿದೆ. ಏಣಿಶ್ರೇಣಿಗಳು ಮತ್ತು ಅಸಮಾನತೆಗಳು ಯಾವುದೇ ಸಮಾಜದ ಬಹುಮುಖ್ಯ ಲಕ್ಷಣ. ಇಂತಹ ಅಸಮಾನ ಸಾಮಾಜಿಕ ಪರಿಸರದಲ್ಲಿ ವ್ಯಕ್ತಿ ವ್ಯಕ್ತಿಗಳ ನಡುವಿನ ಭಿನ್ನಾಭಿಪ್ರಾಯಗಳ ತೀರ್ಮಾನ ಕೇವಲ ವಿವೇಚನೆಯ (ರೇಶನಾಲಿಟಿ) ಆನ್ವಯಿಕೆಯಿಂದ ಸಾಧ್ಯವಾಗುವುದಿಲ್ಲ. ಇದನ್ನೇ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ವಿವೇಚನೆ (ರೇಶನಾಲಿಟಿ) ನೆಲೆಯಲ್ಲಿ ಸಾಮಾಜಿಕ ವ್ಯವಸ್ಥೆ ಮುಂದುವರಿಯುವುದಕ್ಕೆ ಅಸಮಾನತೆ ಬಹುದೊಡ್ಡ ತೊಡಕಾಗುತ್ತದೆ. ಈ ಅಸಮಾನತೆಯನ್ನು ನಿವಾರಿಸಿ ಮಾರುಕಟ್ಟೆ ವ್ಯವಸ್ಥೆ ವಿವೇಚನೆ (ರೇಶನಾಲಿಟಿ) ಪ್ರಕಾರ ನಡೆಯುವಂತೆ ನೋಡಿಕೊಳ್ಳುವುದು ಅಧಿಕಾರ (ಪ್ರಭುತ್ವದ) ಜವಾಬ್ದಾರಿಯಾಗುತ್ತದೆ. ಇಲ್ಲಿ ಅಧಿಕಾರ (ಪ್ರಭುತ್ವ) ಒಂದು ಬಗೆಯ ನ್ಯೂಟ್ರಲ್ ಅಂಪೇಯರ್‌ನ ಪಾತ್ರವನ್ನು ವಹಿಸಿ ವ್ಯಕ್ತಿಗಳ ನಡುವೆ ಮುಕ್ತ ಸ್ಪರ್ಧೆಗೆ ಅವಕಾಶ ಮಾಡಿಕೊಡಬೇಕು. ಹೀಗೆ ಅರ್ಥಶಾಸ್ತ್ರೀಯ ಸಮಾಜ ಥಿಯರಿಗಳಲ್ಲಿ ಅಧಿಕಾರಕ್ಕೆ ತುಂಬಾ ಸೀಮಿತ ಸ್ಥಾನ ನೀಡಲಾಗಿದೆ. ಅಷ್ಟು ಮಾತ್ರವಲ್ಲ ಈ ಬಗೆಯ ಯುಟಿಲಿಟೇರಿಯನ್ ಸಾಮಾಜಿಕ ವ್ಯವಸ್ತೆಯಲ್ಲಿ ಸ್ವಾತಂತ್ರ್ಯ ಮತ್ತು ಸಮಾನತೆಗಳು ತುಂಬಾ ಸೀಮಿತ ನೆಲೆಯಲ್ಲಿ ವ್ಯಾಖ್ಯಾನಿಸಲ್ಪಟ್ಟಿವೆ. ಮಾರುಕಟ್ಟೆಯಲ್ಲಿ ವ್ಯವಹರಿಸುವ ಅವಕಾಶವನ್ನು ಸಮಾನತೆಯೆಂದು ವ್ಯಾಖ್ಯಾನಿಸಿಕೊಂಡರೆ ಒತ್ತಡ ಇಲ್ಲದಿರುವಿಕೆಯನ್ನು ಸ್ವಾತಂತ್ರ್ಯವೆಂದು ವ್ಯಾಖ್ಯಾನಿಸಿಕೊಳ್ಳಲಾಗಿದೆ. ಇಲ್ಲಿ ಪ್ರಾಮುಖ್ಯತೆ ಪಡೆಯುವ ಸಮಾನತೆ ಮಾರುಕಟ್ಟೆಯಲ್ಲಿ ವ್ಯವಹರಿಸುವ ಅವಕಾಶದ ಬಗ್ಗೆ ಮಾತ್ರ ಗಮನಹರಿಸುತ್ತದೆ. ಮಾರುಕಟ್ಟೆಯಲ್ಲಿ ವ್ಯವಹರಿಸಲು ಅಗತ್ಯವಿರುವ ಪೂರ್ವ ತಯಾರಿಗಳ ಬಗ್ಗೆ ಇದು ಗಮನ ಹರಿಸುವುದಿಲ್ಲ. ಸಂಪನ್ಮೂಲಗಳಲ್ಲಿ ಅಸಮಾನ ಇರುವಿಕೆ ವಿವಿಧ ವರ್ಗಗಳಿಗೆ ಸೇರಿದ ವ್ಯಕ್ತಿಗಳ (ಮಾರುಕಟ್ಟೆಯಲ್ಲಿ ವ್ಯವಹರಿಸಲು ನೆರವಾಗುವ) ಪೂರ್ವತಯಾರಿಕೆಯನ್ನು ಪ್ರಭಾವಿಸುತ್ತದೆ. ಈ ಪ್ರಭಾವಿತ ಪೂರ್ವತಯಾರಿ ವ್ಯಕ್ತಿಯೊಬ್ಬನ ಮಾರುಕಟ್ಟೆಯ ವ್ಯವಹಾರದ ಮೇಲೇ ಗಣನೀಯ ಪರಿಣಾಮ ಬೀರುತ್ತದೆ. ಆದರೆ ಈ ಥಿಯರಿ ಪ್ರಕಾರ ಸಂಪನ್ಮೂಲಗಳ ಇರುವಿಕೆ ಬಗ್ಗೆ ಪ್ರಭುತ್ವ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ವಿವಿಧ ಸಂಪನ್ಮೂಲಗಳ ಹಿನ್ನೆಲೆಯಿಂದ ಬಂದಿರುವವರನ್ನು ತರಬೇತಿ ಅಥವಾ ಇತರ ಸ್ಕಿಲ್ ಫಾರ್ಮೇಶನ್ ಪ್ರಕ್ರಿಯೆಗಳಿಂದ ಮಾರುಕಟ್ಟೆಯಲ್ಲಿ ಉತ್ಪಾದಕರಾಗಿಯೋ ಅಥವಾ ಗ್ರಾಹಕರಾಗಿಯೋ ಭಾಗವಹಿಸಲು ನೆರವಾಗುವುದು ಪ್ರಭುತ್ವದ ಜವಾಬ್ದಾರಿ. ಇಷ್ಟು ಮಾಡಿದರೆ ಅಸಮಾನತೆಯ ಪ್ರಶ್ನೆ ತನ್ನಿಂದ ತಾನೇ ಪರಿಹಾರವಾಗುವುದು. ಇಷ್ಟು ಮಾಡಿದ ನಂತರವೂ ಅಸಮಾನತೆ ಮುಂದುವರಿದರೆ ಅದಕ್ಕೆ ಸಾಮಾಜಿಕ ವ್ಯವಸ್ಥೆ (ಅಧಿಕಾರದ ಅಸಮಾನತೆ) ಕಾರಣವಲ್ಲ; ವ್ಯಕ್ತಿ ವ್ಯಕ್ತಿಗಳ ನಡುವಿನ ಸಾಮರ್ಥ್ಯ (ಮೆರಿಟ್) ಕಾರಣ ಎಂದು ಗ್ರಹಿಸಲಾಗಿದೆ. ಜತೆಗೆ ರಾಜಕೀಯ ಪ್ರಕ್ರಿಯೆಯಲ್ಲಿ ಸಣ್ಣ ಪ್ರಮಾಣದ ಒತ್ತಡ ಅನಿವಾರ್ಯವೆಂದು ಗ್ರಹಿಸಲಾಗಿದೆ. ಆ ಸಣ್ಣ ಪ್ರಮಾಣದ ಒತ್ತಡವನ್ನು ವ್ಯಕ್ತಿಗಳು ಸಹಿಸುತ್ತಾರೆ. ಯಾಕೆಂದರೆ ಅವರು ತಮ್ಮ ದಿನನಿತ್ಯ ಬದುಕಿನಲ್ಲಿ ಸ್ವತಂತ್ರರಾಗಿರಬೇಕಾದರೆ ಸಣ್ಣ ಪ್ರಮಾಣದ ಸ್ವತಂತ್ರವನ್ನು ಪ್ರಭುತ್ವದೊಂದಿಗೆ ವಿನಿಮಯ ಮಾಡಿಕೊಳ್ಳಬೇಕು. ಇಂದು ನಮ್ಮಲ್ಲಿ ಚಾಲ್ತಿಯಲ್ಲಿರುವ ಉದಾರೀಕರಣ ನೀತಿಯ ಅಡಿಪಾಯವಾಗಿ ಈ ಎಲ್ಲ ಅಂಶಗಳು ಕೆಲಸ ಮಾಡುತ್ತಿವೆ.

ಅಕಾಡೆಮಿಕ್ ಚರ್ಚೆಗಳಲ್ಲಿ ಮಾತ್ರ ಅಧಿಕಾರಕ್ಕೆ ವಿಶೇಷ ಮಹತ್ವ ಇಲ್ಲದಿರುವುದಲ್ಲ, ದಿನನಿತ್ಯದ ಬದುಕಲ್ಲೂ ಥಿಯರಿಗೆ ಹೋಲಿಸಿದರೆ ಅಧಿಕಾರಕ್ಕೆ ಎರಡನೇ ಸ್ಥಾನಮಾನ ಇದೆ. ಸೂಕ್ಷ್ಮಸ್ತರದಲ್ಲಿ (ದಿನನಿತ್ಯದ ಬದುಕಲ್ಲಿ) ಅಧಿಕಾರ ಮತ್ತು ಜ್ಞಾನಗಳಿಗೆ ಸಂಬಂಧಿಸಿದಂತೆ ಚಾಲ್ತಿಯಲ್ಲಿರುವ ಕೆಲವೊಂದು ಮೌಲಿಕ ತೀರ್ಮಾನಗಳನ್ನು ಪರಿಶೀಲಿಸಿದರೆ ಅಧಿಕಾರದ ಎರಡನೇ ಸ್ಥಾನಮಾನದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಸಿಗಬಹುದು. ಸೂಕ್ಷ್ಮ ಸ್ತರದಲ್ಲಿ ಅಧಿಕಾರ ಮತ್ತು ಥಿಯರಿಯ ಸಂಬಂಧವನ್ನು ವಿಶ್ಲೇಷಿಸುವಾಗ ಥಿಯರಿಯನ್ನು ಜ್ಞಾನಕ್ಕೆ ಸಮಾನಾರ್ಥದಲ್ಲಿ ಬಳಸಲಾಗುವುದು. ಅಧಿಕಾರ ಎಂದು ನಕಾರಾತ್ಮಕ ಪ್ರಕ್ರಿಯೆಯಾಗಿ ಮತ್ತು ಜ್ಞಾನ ಎಂದು ಸಕಾರಾತ್ಮಕ ಪ್ರಕ್ರಿಯೆಯಾಗಿ ಸೂಕ್ಷ್ಮ ಸ್ತರದಲ್ಲಿ ಚಿತ್ರಿತವಾಗಿವೆ. ಅಧಿಕಾರ ಇದ್ದಲ್ಲಿ ಜ್ಞಾನ ಇರಲು ಸಾಧ್ಯವಿಲ್ಲ ಅಥವಾ ಜ್ಞಾನ ಇದ್ದಲ್ಲಿ ಅಧಿಕಾರ ಇರಲು ಸಾಧ್ಯವಿಲ್ಲ. ಜ್ಞಾನದ ಆಶೆ, ಅದರ ಸಾಧನೆಗಾಗಿ ಮಾಡುವ ಪ್ರಯತ್ನ ಇವೆಲ್ಲ ಉತ್ತಮರು ಮಾಡುವ ಕೆಲಸಗಳು. ಆದರೆ ಅಧಿಕಾರದ ಆಸೆ, ಅದಕ್ಕಾಗಿ ಮಾಡುವ ಹೋರಾಟ ಇತ್ಯಾದಿಗಳು ಉತ್ತಮರು ಮಾಡುವ ಕೆಲಸ ಅಲ್ಲ. ಈ ಎಲ್ಲ ಲಕ್ಷಣಗಳಿಂದ ನಮ್ಮ ಮೌಲ್ಯ ವ್ಯವಸ್ಥೆಯಲ್ಲಿ ಜ್ಞಾನಕ್ಕೆ ಅಧಿಕಾರಕ್ಕಿಂತ ಮೇಲಿನ ಸ್ಥಾನ ಅಥವಾ ಅಧಿಕಾರಕ್ಕೆ ಜ್ಞಾನಕ್ಕಿಂತ ಬಹಳ ಕೆಳಗಿನ ಸ್ಥಾನ ಇದೆ. ಅಧಿಕಾರದ ಈ ಬಗೆಯ ಚಿತ್ರಣಕ್ಕೆ ಒಂದು ಕಾರಣ ನಮ್ಮಲ್ಲಿ ಪ್ರಚಾರದಲ್ಲಿರುವ ಅಧಿಕಾರದ ವ್ಯಾಖ್ಯಾನ. ತಂತ್ರಗಾರಿಕೆ, ಒತ್ತಡ, ಒಡೆದು ಆಳುವುದು, ಯಜಮಾನಿಕೆ ಇತ್ಯಾದಿ ವಿಶೇಷಗಳಿಂದ ಅಧಿಕಾರ ನಮ್ಮಲ್ಲಿ ಗುರುತಿಸಲ್ಪಡುತ್ತಿವೆ. ಅಧಿಕಾರಕ್ಕೆ ಈ ಎಲ್ಲ ಮುಖಗಳು ಇವೆ. ಆದರೆ ಇವೇ ಅಧಿಕಾರ ಎನ್ನುವುದು ಸರಿಯಲ್ಲ. ಅಧಿಕಾರಕ್ಕೆ ಅದರದ್ದೇ ಆದ ಸಕಾರಾತ್ಮಕ ಗುಣಗಳಿವೆಯೆಂದು ಅಧಿಕಾರದ ಆಧುನೀಕೋತ್ತರ ಚಿಂತನೆಗಳಲ್ಲಿ ಕಾಣಬಹುದು. ಅಧಿಕಾರದಿಂದ ಪರಿವರ್ತನೆ ಸಾಧ್ಯ, ಅಧಿಕಾರದಿಂದ ಸುಖ ಸಂತೋಷ ಸಾಧ್ಯ, ಅಧಿಕಾರದಿಂದ ಜ್ಞಾನ ಉತ್ಪಾದನೆ ಸಾಧ್ಯ. ಆದರೆ ಅಧಿಕಾರದ ಈ ಎಲ್ಲ ಮುಖಗಳು ಪ್ರಚಾರ ಪಡೆದಿಲ್ಲ. ತಂತ್ರಗಾರಿಕೆ ಅಥವಾ ಒಡೆದು ಆಳುವ ಅಥವಾ ಇಷ್ಟ ಇಲ್ಲದೆಯೂ ಯಜಮಾನಿಕೆ ನಡೆಸುವ ಇತ್ಯಾದಿಗಳು ಅಧಿಕಾರ ಅಭಿವ್ಯಕ್ತವಾಗುವ ಕೆಲವೊಂದು ಕ್ರಮಗಳು. ಹಾಗೆಂದು ಅವುಗಳ ಮಧ್ಯೆ ವ್ಯತ್ಯಾಸ ಇಲ್ಲ ಎನ್ನಲಾಗುವುದಿಲ್ಲ.

ತಂತ್ರಗಾರಿಕೆ ಅಥವಾ ಒತ್ತಡದ ಮೂಲಕ ಒಬ್ಬ ಅಥವಾ ಒಂದು ಗುಂಪು ಮತ್ತೊಬ್ಬ ಅಥವಾ ಮತ್ತೊಂದು ಗುಂಪನ್ನು ತಾನು ಇಚ್ಚಿಸಿದ ರೀತಿಯಲ್ಲಿ ವರ್ತಿಸುವಂತೆ ಮಾಡಬಹುದು. ಆದರೆ ಇದು ಹೆಚ್ಚು ಸಮಯ ಸಾಧ್ಯವಾಗುವುದಿಲ್ಲ. ಅಧಿಕಾರಕ್ಕೆ ಒಳಗಾಗುವ ವ್ಯಕ್ತಿ ಅಥವಾ ಗುಂಪಿಗೆ ತಾನು ಒತ್ತಡ ಅಥವಾ ತಂತ್ರಗಾರಿಕೆಗೆ ಒಳಗಾಗಿದ್ದೇನೆ ಎಂದು ಅರಿವಾದ ಕೂಡಲೇ ಆತ ಅಥವಾ ಆ ಗುಂಪು ಒತ್ತಡ ಅಥವಾ ತಂತ್ರಗಾರಿಕೆಯಿಂದ ಹೊರಬರಲು ಪ್ರಯತ್ನಿಸುತ್ತದೆ. ಆದುದರಿಂದ ಅಧಿಕಾರ ಯಾವಾಗಲೂ ಅದರ ನಕರಾತ್ಮಕ ಗುಣಗಳಿಂದಲೇ ನಡೆಯುತ್ತದೆ ಎಂದು ತಿಳಿಯುವುದು ಸರಿಯಲ್ಲ. ದೀರ್ಘಕಾಲದ ಅಧಿಕಾರಕ್ಕೆ ಒಂದು ವಿಧದ ಸಹಜತೆಯ ಸೋಗು ಅಗತ್ಯ ಇದೆ. ಈ ಸಹಜತೆ ಮೌಲ್ಯಾಧಾರಿತ ಅಧಿಕಾರದಿಂದ ಮಾತ್ರ ಬರಲು ಸಾಧ್ಯ. ಅಂದರೆ ಅಧಿಕಾರಕ್ಕೋಸ್ಕರ ಅಧಿಕಾರ ಎನ್ನುವ ರೂಪದಲ್ಲಿ ಅಧಿಕಾರ ಅಲ್ಲ ಎನ್ನುವುದು ಸ್ಥಾಪಿತವಾಗಬೇಕಾಗಿದೆ. ಯಾವುದೋ ಒಂದು ಉತ್ತಮ ಉದ್ದೇಶಕ್ಕಾಗಿ ಅಧಿಕಾರ ಬಳಕೆ ಆಗುತ್ತದೆ ಎಂದು ಸಾಧಿತವಾಗದಿದ್ದರೆ ಅಧಿಕಾರ ಸಹಜ ಆಗುವುದಿಲ್ಲ. ಧರ್ಮ ಮತ್ತು ರಾಜಕಾರಣ ಬೆರೆತಿರುವ ಸಂದರ್ಭದಲ್ಲಿ ಅಲೌಕಿಕ ಲೋಕದ ಪ್ರಭಾವಳಿ ಅಧಿಕಾರವನ್ನು ಸಹಜಗೊಳಿಸಿತ್ತು. ಆದರೆ ನಂತರದ ದಿನಗಳಲ್ಲಿ ಅದರಲ್ಲೂ ವಸಾಹತು ಸರಕಾರದ ಸಂದರ್ಭದಲ್ಲಿ ಧರ್ಮ ಮತ್ತು ರಾಜಕಾರಣ ಬೇರೆ ಬೇರೆ ಆದವು. ವಸಾಹತು ಸರಕಾರದ ಉದ್ದೇಶ ಭಾರತದ ಸಂಪತ್ತನ್ನು ಬ್ರಿಟನ್‌ನ ಅಭಿವೃದ್ಧಿಗೆ ಬಳಸಿಕೊಳ್ಳುವುದು. ಆದರೆ ಅದು ಅಧಿಕಾರ ನಡೆಸುವಾಗ ನಮ್ಮನ್ನು ಉದ್ಧಾರ ಮಾಡುವ ಉದಾತ್ತ ಧ್ಯೇಯವನ್ನು ನಮ್ಮ ಮುಂದೆ ಇಟ್ಟಿತ್ತು. ಪಶ್ಚಿಮದ ರಾಷ್ಟ್ರಗಳಿಗೆ ಹೋಲಿಸಿ ಭಾರತ ಎಲ್ಲ ರೀತಿಯಿಂದಲೂ ಹಿಂದೆ ಇದೆ, ಈ ಸ್ಥಿತಿಯಿಂದ ಭಾರತ ಹೊರಬರಲು ಉತ್ತಮ ಶಿಕ್ಷಣ, ಪ್ರಜಾಪ್ರಭುತ್ವ ಆಡಳಿತ, ಆಧುನಿಕ ತಂತ್ರಜ್ಞಾನ ಬಳಕೆ ಇತ್ಯಾದಿಗಳ ಅಗತ್ಯ ಇದೆ ಎಂದು ಮನವರಿಕೆ ಮಾಡಿದೆ. ಬ್ರಿಟನ್‌ನ ಈ ನೀತಿಯನ್ನು ಒಪ್ಪಿಕೊಂಡ ಬಹುದೊಡ್ಡ ವರ್ಗ ನಮ್ಮಲ್ಲಿ ಇದ್ದುದರಿಂದ ವಸಾಹತು ಸರಕಾರ ವಿಶೇಷ ಸಮಸ್ಯೆ ಇಲ್ಲದ ಕೆಲವು ಶತಮಾನಗಳ ಕಾಲ ಅಧಿಕಾರ ನಡೆಸಲು ಸಾಧ್ಯವಾಯಿತು. ನಂತರದ ಕಾಂಗ್ರೆಸ್ ಸರಕಾರ ಆಧುನಿಕ ಸಮಾಜ ನಿರ್ಮಾಣದ ಬಹುದೊಡ್ಡ ಕನಸನ್ನು ಜನರ ಮುಂದೆ ಇಟ್ಟಿತ್ತು. ಹಲವಾರು ಜಾತಿ, ಧರ್ಮ, ಭಾಷೆ, ಇತ್ಯಾದಿಗಳಿಂದ ಬೇರೆ ಬೇರೆಯಾಗಿರುವವರನ್ನು ಒಂದು ಸೇರಿಸುವ ಮತ್ತು ಎಲ್ಲರಿಗೂ ಕನಿಷ್ಠ ಬದುಕನ್ನು ನೀಡುವ ಭರವಸೆ ನೆಹರೂ ಅವರ ಆಧುನೀಕರಣದಲ್ಲಿ ಇತ್ತು. ಆದುದರಿಂದಲೇ ಕಾಂಗ್ರೆಸ್ ಹಲವಾರು ದಶಕಗಳ ಕಾಲ ದೇಶದಲ್ಲಿ ಆಡಳಿತ ನಡೆಸಲು ಸಾಧ್ಯವಾಯಿತು. ಹೀಗೆ ಅಧಿಕಾರಕ್ಕೋಸ್ಕರ ಅಧಿಕಾರ ಅಲ್ಲ ಎನ್ನುವುದು ಸಾಬೀತಾದರೆ ಅಧಿಕಾರ ಸಹಜ ಆಗುತ್ತದೆ. ಸಹಜ ಅಧಿಕಾರ ಹೆಚ್ಚು ಕಾಲ ಇರುತ್ತದೆ. ತಂತ್ರಗಾರಿಕೆ ಅಥವಾ ಒಡೆದು ಆಳುವ ನೀತಿಯಿಂದಲೂ ಅಧಿಕಾರ ಸಾಧ್ಯ ಆಗುತ್ತದೆ. ಆದರೆ ಅದು ಹೆಚ್ಚು ಕಾಲ ಇರುವುದಿಲ್ಲ. ಆದರೆ ಅಧಿಕಾರದ ಪ್ರಶ್ನೆ ಬಂದ ಕೂಡಲೇ ನಮ್ಮ ಮನಸ್ಸಿಗೆ ಬರುವುದು ಅಧಿಕಾರದ ಈ ನಕಾರಾತ್ಮಕ ಮುಖವೇ.

ಆಧುನಿಕ ಸಮಾಜದಲ್ಲಿ ಜ್ಞಾನ ಮತ್ತು ಅಧಿಕಾರ ಸಂಬಂಧ ಬದಲಾಗಿದೆ. ಇಲ್ಲಿ ಕೂಡ ಅಧಿಕಾರವನ್ನು ಸಹಜಗೊಳಿಸಲು ಜ್ಞಾನದ ಬಳಕೆ ಇದೆ. ಆದರೆ ಇಲ್ಲೂ ಶುದ್ಧ ಜ್ಞಾನದ ಸಾಧನೆಗೆ ತಕ್ಕಮಟ್ಟಿನ ಏಕಾಂಗಿತನದ ಅಗತ್ಯ ಇದೆ. ಆಧುನಿಕ ಸಮಾಜದಲ್ಲಿ ಜ್ಞಾನ ಸಂಪಾದನೆಯ ಕಾರ್ಯದಲ್ಲಿ ತೊಡಗಿದವರು ವಿವಿಧ ಸಮುದಾಯ ಹಾಗೂ ವರ್ಗಗಳ ಹಿನ್ನೆಲೆಯಿಂದ ಬಂದಿರುತ್ತಾರೆ. ಅವರು ತಮ್ಮ ಸಮುದಾಯ ಅಥವಾ ವರ್ಗ ಆಸಕ್ತಿಯನ್ನು ಪಕ್ಷಪಾತಿಯಾದ ಜ್ಞಾನ ಸಮಗ್ರತೆಯ ಒಳಿತಿನ ದೃಷ್ಟಿಯಿಂದ ಉಪಯೋಗವಿಲ್ಲ. ಆ ಕಾರಣಕ್ಕಾಗಿ ಜ್ಞಾನ ಸಂಪಾದನೆಗೆ ಒಂದು ವಿಧದ ಐಸೋಲೇಶನ್ ಅಗತ್ಯ ಇದೆ ಎನ್ನುವ ವಾದ ಆಧುನಿಕ ಸಂದರ್ಭದಲ್ಲೂ ಮಹತ್ವ ಪಡೆದಿದೆ. ಇದನ್ನು ಸ್ಪಿನೋಜನ ಮಾತುಗಳು ತುಂಬಾ ಪರಿಣಾಮಕಾರಿಯಾಗಿ ಸೂಚಿಸಿವೆ. ಆತನ ಪ್ರಕಾರ ಯಾವುದೇ ವಸ್ತು ಅಥವಾ ವಿಷಯದ ಬಗ್ಗೆ ಜ್ಞಾನ ಬೇಕಾದರೆ ಅದರ ಬಗ್ಗೆ ವಿಶೇಷ ಮಮಕಾರ, ವ್ಯಾಮೋಹ ಅಥವಾ ತಿರಸ್ಕಾರ ಇರಬಾರದು. ಅಂದರೆ ಒಂದು ವಿಧದ ನಿರ್ಲಿಪ್ತ ಮನಸ್ಸಿನಿಂದ ಜ್ಞಾನ ಗಳಿಸುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಬೇಕು. ಇದು ವೈಜ್ಞಾನಿಕ ವಿಧಾನದಿಂದ ಜ್ಞಾನ ಗಳಿಸುವ ಮಾನಸಿಕ ಸ್ಥಿತಿಯನ್ನೇ ಸೂಚಿಸುತ್ತದೆ. ಅಲ್ಲೂ ಮೌಲ್ಯ ನಿರಪೇಕ್ಷತೆ, ಅಧ್ಯಯನಕ್ಕೆ ಒಳಗಾಗುವ ವಿಷಯ ಮತ್ತು ಅಧ್ಯಯನ ಮಾಡುವವರ ನಡುವಿನ ಅಂತರ ಇತ್ಯಾದಿಗಳು ವಸ್ತು ಅಥವಾ ಪ್ರಪಂಚದಿಂದ ದೂರ ನಿಂತು ನೋಡುವ ಪ್ರಕ್ರಿಯೆ ಜ್ಞಾನ ಗಳಿಸುವ ಪ್ರಕ್ರಿಯೆ ಆಗಿದೆ. ನಮ್ಮಲ್ಲಿ ಇರುವಂತೆ ಅಲ್ಲೂ ಜ್ಞಾನ ಸಂಪಾದನೆ ಮತ್ತು ಇತರ ಕ್ರಿಯೆಗಳ ಸ್ಥಾನಮಾನ ಬೇರೆ ಬೇರೆ. ಸ್ಟ್ರಕ್ಚರಲ್ ಫಂಕ್ಷನಲಿಸಂ ಇಡೀ ಸಮಾಜವನ್ನು ಮನುಷ್ಯ ದೇಹಕ್ಕೆ ಹೋಲಿಸುತ್ತದೆ. ದೇಹದ ವಿವಿಧ ಅಂಗಗಳಿಗೆ ಬೇರೆ ಬೇರೆ ಕ್ರಿಯೆಗಳಿವೆ. ತಲೆಗೆ ಆಲೋಚನೆ ಮಾಡುವ ಕೆಲಸ. ಅದೇ ರೀತಿಯಲ್ಲಿ ಆಲೋಚನೆ ಮಾಡುವ ಕೆಲಸದಲ್ಲಿ ತೊಡಗಿಸಿಕೊಂಡವರು ಸಮಾಜದ ಮೇಲುಸ್ತರದಲ್ಲಿ ಇರುತ್ತಾರೆ. ಹೀಗೆ ಆಧುನಿಕ ಚಿಂತನೆ ಈ ಎರಡು (ಅಧಿಕಾರ ಮತ್ತು ಜ್ಞಾನ) ವಿಚಾರಗಳ ಕುರಿತು ಹೆಚ್ಚು ಕಡಿಮೆ ನಮ್ಮ ಸಂಸ್ಕೃತಿ ಹೊಂದಿದ ನಿಲುವನ್ನೇ ಹೊಂದಿದೆ.

ಆದರೆ ಎಡಪಂಥೀಯ ಆಲೋಚನೆಗಳಲ್ಲಿ ಮತ್ತು ಆಧುನಿಕೋತ್ತರ ಚಿಂತನೆಯಲ್ಲಿ ಇವೆಲ್ಲಕ್ಕಿಂತ ಭಿನ್ನ ಆಲೋಚನೆಗಳಿವೆ. ಮೂಲಭೂತ ಅವಶ್ಯಕತೆಗಳನ್ನು ಪೂರೈಸುವ ಪ್ರಕ್ರಿಯೆಯಲ್ಲಿ ಜ್ಞಾನ ಹುಟ್ಟಿಕೊಳ್ಳುತ್ತದೆ ಎಂದು ಎಡಪಂಥೀಯರು ವಾದಿಸುತ್ತಾರೆ. ಆದುದರಿಂದ ಜ್ಞಾನದ ಸಂಪಾದನೆಗಾಗಿ ಸಂಸಾರದಿಂದ ದೂರ ಇರುವ ಅಥವಾ ಅಧಿಕಾರದಿಂದ ದೂರ ಇರುವ ಪ್ರಶ್ನೆಯೇ ಇಲ್ಲ ಎನ್ನುವುದು ಎಡಪಂಥೀಯ ನಿಲುವು. ಆದುದರಿಂದಲೇ ಎಡಪಂಥೀಯ ಚಿಂತಕರಿಗೆ ಪಕ್ಷ ರಾಜಕೀಯದಲ್ಲಿ ತೊಡಗಿಸಿಕೊಳ್ಳುವುದು ಒಂದು ಅವಶ್ಯ ಜವಾಬ್ದಾರಿ. ರಶ್ಯಾ ಕ್ರಾಂತಿಯ ನಂತರ ಲೆನಿನ್ ಅಧಿಕರಾವಧಿಯಲ್ಲಿ ಬುದ್ಧಿಜೀವಿಗಳು ಮತ್ತು ಪಕ್ಷದ ನಡುವೆ ಉತ್ತಮ ಅಲ್ಲದಿದ್ದರೂ ತಕ್ಕಮಟ್ಟಿನ ಸಂಬಂಧ ಇತ್ತು. ಆದರೆ ಬರಬರುತ್ತಾ ಆ ಸಂಬಂಧ ಹದಗೆಡುತ್ತಾ ಬಂತು. ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿ ಕೊಂಡವರು ಮತ್ತು ಚಿಂತನೆಗಳಲ್ಲಿ ತೊಡಗಿಸಿಕೊಂಡವರ ನಡುವೆ ಕಂದರ ಹೆಚ್ಚುತ್ತಾ ಹೋಯಿತು. ಸ್ಟಾಲಿನ್ ಅಧಿಕಾರ ಸಂದರ್ಭದಲ್ಲಿ ಈ ಸಂಬಂಧ ಸಂಪೂರ್ಣ ಕಡಿದೇ ಹೋಯಿತು. ರಶ್ಯಾದ ಕಮ್ಯುನಿಸ್ಟ್ ಅಧಿಕಾರದ ಪತನಕ್ಕೆ ಇದೂ ಒಂದು ಕಾರಣವಾಗಿರಬಹುದು. ಆಧುನಿಕೋತ್ತರ ಚಿಂತನೆಯಲ್ಲಿ ಜ್ಞಾನ ಮತ್ತು ಅಧಿಕಾರ ಸಂಬಂಧ ಕುರಿತು ಇನ್ನೂ ಸ್ಪಷ್ಟವಾದ ಚಿತ್ರಣ ಇದೆ. ಈ ಎರಡರ ಸಂಬಂಧವನ್ನು ವಿವರಿಸಲು ನಾನು ಮೈಕೆಲ್ ಫುಕೋನ ಆಲೋಚನೆಗಳನ್ನು ಎರವಲು ಪಡೆದುಕೊಂಡಿದ್ದೇನೆ. ಆತನ ಪ್ರಕಾರ ಮನುಷ್ಯನಿಗೆ ಹಲವಾರು ಮೂಲಭೂತ ಅವಶ್ಯಕತೆಗಳಿವೆ. ಅವುಗಳಲ್ಲಿ ಮುಖ್ಯವಾದುದು ಹಸಿವು, ಬಾಯಾರಿಕೆ, ಕಾಮ, ರಕ್ಷಣೆ ಇತ್ಯಾದಿಗಳು. ಆದರೆ ಈ ಮೂಲಭೂತ ಅವಶ್ಯಕತೆಗಳ ಪಟ್ಟಿಯಲ್ಲಿ ಜ್ಞಾನದ ಹಸಿವು ಇಲ್ಲ. ಅಂದರೆ ಜ್ಞಾನ ನಮ್ಮ (ಮಾನವನ) ಮೂಲಭೂತ ಲಕ್ಷಣ ಅಲ್ಲ. ಹಾಗಾದರೆ ಜ್ಞಾನ ಎನ್ನುವುದು ಇಲ್ಲವೇ? ಇದೆ. ಆದರೆ ಅದು ರೂಪುಗೊಳ್ಳುವ ವಿಧಾನ ಆಧುನಿಕ ಚಿಂತನೆ ಮತ್ತು ನಮ್ಮ ಸಂಸ್ಕೃತಿಯ ಚಿಂತನೆಗಿಂತ ಭಿನ್ನ. ಮನುಷ್ಯ ತನ್ನ ಮೂಲಭೂತ ಆವಶ್ಯಕತೆಗಳನ್ನು ಪೂರೈಸಿಕೊಳ್ಳುವ ಪ್ರಕ್ರಿಯೆಯಲ್ಲಿ ಘರ್ಷಣೆಗೆ ಇಳಿಯುವುದು ಅನಿವಾರ್ಯ. ಈ ಘರ್ಷಣೆ ತನ್ನೊಳಗೆ ಇರುವ ವಿವಿಧ ಅವಶ್ಯಕತೆಗಳ ನಡುವೆ ಮತ್ತು ಹೊರಗಿನ ಪರಿಸರದೊಂದಿಗೆ ನಡೆಯುತ್ತದೆ. ಈ ಘರ್ಷಣೆಯ ಸಂದರ್ಭದಲ್ಲಿ ಜ್ಞಾನ ರೂಪುಗೊಳ್ಳುತ್ತದೆ ಎಂದು ಫುಕೋ ವಾದಿಸುತ್ತಾನೆ. ಆರಂಭದಲ್ಲಿ ಈ ರೀತಿ ರೂಪುಗೊಂಡ ಜ್ಞಾನ ನಂತರದ ದಿನಗಳಲ್ಲಿ ಮನುಷ್ಯನ ಜ್ಞಾನದ ಉತ್ಪಾದನೆಯ ಪ್ರಕ್ರಿಯೆಯನ್ನು ಮತ್ತು ವ್ಯಾಖ್ಯಾನವನ್ನು ಸಾಕಷ್ಟು ಬದಲಾಯಿಸಿದೆ. ಆದರೆ ನಾವೆಲ್ಲ ತಿಳಿದುಕೊಳ್ಳುವಂತೆ ಜ್ಞಾನ ಮತ್ತು ಜ್ಞಾನದ ಗಳಿಕೆ ಒಂದು ಸ್ವತಂತ್ರ ಪ್ರಕ್ರಿಯೆ ಎಂದು ತಿಳಿಯುವುದು ಸರಿಯಲ್ಲ. ಆದುದರಿಂದಲೇ ಜ್ಞಾನ ಗಳಿಕೆಗೆ ಒಂದು ವಿಧದ ನಿರ್ಲಿಪ್ತತೆ ಬೇಕು ಎನ್ನುವ ಸ್ಪಿನೋಜನ ಮಾತನ್ನು ಫುಕೋ ಖಂಡತುಂಡವಾಗಿ ತಿರಸ್ಕರಿಸುತ್ತಾನೆ. ಜ್ಞಾನ ಗಳಿಕೆ ಸಾಧ್ಯವಾಗುವುದೇ ಮಮಕಾರ, ವ್ಯಾಮೋಹ, ತಿರಸ್ಕಾರ ಇತ್ಯಾದಿಗಳಿಂದ ಎಂದು ವಾದಿಸುತ್ತಾನೆ. ಜ್ಞಾನದ ಇರುವಿಕೆ ಮತ್ತು ಮನುಷ್ಯ ಮೂಲಭೂತ ಅವಶ್ಯಕತೆಗಳ ನಡುವೆ ಇಷ್ಟೊಂದು ಆಗಾಧವಾದ ಸಂಬಂಧ ಇದೆ ಎನ್ನುವ ಮೂಲಕ ಜ್ಞಾನ ಮತ್ತು ಅಧಿಕಾರದ ಸಂಬಂಧವನ್ನು ಫುಕೋ ಪುರಸ್ಕರಿಸುತ್ತಾನೆ. ಆತನ ಪ್ರಕಾರ ಅಧಿಕಾರ ಇದೆ. ಆದುದರಿಂದ ಜ್ಞಾನ ಇದೆ. ಜ್ಞಾನವೇ ಅಧಿಕಾರ ಅಲ್ಲ. ಅಧಿಕಾರ ಜ್ಞಾನವನ್ನು ಉತ್ಪಾದಿಸುತ್ತದೆ. ಆದುದರಿಂದ ಜ್ಞಾನ ಮತ್ತು ಅಧಿಕಾರ ಪರಸ್ಪರ ವಿರುದ್ಧ ಎನ್ನುವುದು ಸರಿಯಲ್ಲ. ಹೆಚ್ಚು ಕಡಿಮೆ ಆಧುನಿಕೋತ್ತರ ಚಿಂತಕರು ಮುಂದಿಡುವ ಅಧಿಕಾರದ ವ್ಯಾಖ್ಯಾನ ಒಟ್ಟು ವ್ಯವಸ್ಥೆಯಲ್ಲಿನ ಅಧಿಕಾರ ಸ್ಥಾನವನ್ನು ಅರ್ಥ ಮಾಡಿಕೊಳ್ಳಲು ಸಹಕಾರಿಯಾಗಿದೆ. ಆಧುನೀಕರಣ ಥಿಯರಿ ಅಧಿಕಾರಕ್ಕೆ ವಿಶೇಷ ಮಹತ್ವ ನೀಡಲಿಲ್ಲವೆಂದು ಅಧಿಕಾರದ ಮೇಲಿನ ಚರ್ಚೆಯಿಂದ ತಿಳಿದು ಬರುತ್ತದೆ. ಆದರೆ ಇದೆ ಸಂದರ್ಭದಲ್ಲಿ ಆಧುನೀಕರಣ ಥಿಯರಿ ಹೇಳುವ ಆಧುನೀಕರಣ ಪ್ರಕ್ರಿಯೆ ಆರಂಭಿಸಬೇಕೆಂಬ ನಿಲುವು ಅಧಿಕಾರದ್ದು. ಐವತ್ತರ ದಶಕದಲ್ಲೂ ಉತ್ತಮ ಸಮಾಜದ ಕಲ್ಪನೆಗಳನ್ನು ಮುಂದಿಡುವ ಹಲವಾರು ಥಿಯರಿಗಳಿದ್ದವು. ಅವುಗಳಲ್ಲಿ ಆಧುನೀಕರಣ ಥಿಯರಿಯೇ ಪ್ರಾಮುಖ್ಯತೆ ಪಡೆಯಲು ಅಂದು ಚಾಲ್ತಿಯಲ್ಲಿದ್ದ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಅಧಿಕಾರ ಸಂಬಂಧಗಳು ಹೇಗೆ ಕಾರಣವಾದವೆಂದು ಒಂದನೇ ಅಧ್ಯಾಯದಲ್ಲಿ ನೋಡಿದ್ದೇವೆ. ವರ್ತಮಾನದಲ್ಲೂ ಅಂತಾರಾಷ್ಟ್ರೀಯ ಅಧಿಕಾರ ಸಂಬಂಧಗಳು ಕೆಲವೇ ಶ್ರೀಮಂತ ದೇಶಗಳ ಆಸಕ್ತಿಗಳಿಗೆ ಅನುಗುಣವಾಗಿ ನಡೆಯುತ್ತಿದೆ. ಪಶ್ಚಿಮದ ಶ್ರೀಮಂತ ದೇಶಗಳು ಸಮಾಜವಿಜ್ಞಾನಗಳ ದಿಕ್ಕು ದಿಶೆಗಳನ್ನು ನಿರ್ಧರಿಸುವಲ್ಲಿ ಮಹತ್ತರವಾದ ಪಾತ್ರ ವಹಿಸುತ್ತಿವೆ. ಹೀಗೆ ಥಿಯರಿಯೊಂದನ್ನು ಪ್ರಾಮುಖ್ಯತೆಗೊಳಿಸುವಲ್ಲಿ ಅಧಿಕಾರದ ಪಾತ್ರ ಇದ್ದೇ ಇದೆ. ಹಾಗೆಂದು ಥಿಯರಿಗೆ ಅಧಿಕಾರವನ್ನು ಪ್ರಭಾವಿಸುವ ಸಾಧ್ಯತೆಯೇ ಇಲ್ಲವೆಂದಲ್ಲ. ಅಧಿಕಾರ ಆಚರಣೆಗೆ ತರಲು ಪ್ರಯತ್ನಿಸುವ ಸಮಾಜದ ಕಲ್ಪನೆಯನ್ನು ವಿಮರ್ಶಿಸುವ ಮೂಲಕ ಥಿಯರಿ ಅಧಿಕಾರವನ್ನು ಪ್ರಭಾವಿಸುತ್ತದೆ. ಈ ದೃಷ್ಟಿಯಿಂದ (ಸ್ಥಾಪಿತ ಅಧಿಕಾರ ಸ್ಥಾನಮಾನಗಳನ್ನು ಪ್ರಶ್ನಿಸುವ ದೃಷ್ಟಿಯಿಂದ) ಗುರುತಿನ ರಾಜಕೀಯಕ್ಕೆ (ಮಹಿಳೆ, ದಲಿತ ಇತ್ಯಾದಿ) ಅದರದ್ದೇ ಆದ ಮಹತ್ವವಿದೆ.

ಇದೇ ಸಂದರ್ಭದಲ್ಲಿ ಥಿಯರಿಯನ್ನು ಎತ್ತಿ ಹಿಡಿಯುವ ಪ್ರಕ್ರಿಯೆಯನ್ನು ಪಶ್ಚಿಮ ಮತ್ತು ಪೂರ್ವದ ನೆಲೆಯಲ್ಲಿ ನಿರ್ವಚಿಸಿಕೊಳ್ಳುವುದು ಸರಿಯಲ್ಲ; ಇದೊಂದು ಯೂನಿವರ್ಸಲ್ ಗುಣ. ಎಲ್ಲ ಸಮಾಜಗಳಲ್ಲೂ ಆಯಾಯ ಸಮಾಜದ ಬಲಾಢ್ಯರ ಆಸಕ್ತಿಗಳು, ಚರಿತ್ರೆಗಳು, ಭವಿಷ್ಯಗಳು ಇಡೀ ಸಮಾಜದ ಆಸಕ್ತಿಗಳಾಗಿ, ಚರಿತ್ರೆಗಳಾಗಿ, ಭವಿಷ್ಯಗಳಾಗಿ ಮುಂಚೂಣಿಗೆ ಬರುತ್ತವೆ. ಬಲಾಢ್ಯರು ತಮ್ಮ ಆಸಕ್ತಿಗಳನ್ನು ಸಮಾಜದ ಆಸಕ್ತಿಗಳೆಂದು ಬಿಂಬಿಸಲು ಬಹುಮುಖ್ಯ ಕಾರಣ ವಿವಿಧ ಚಾರಿತ್ರಿಕ ಸಂದರ್ಭಗಳಲ್ಲಿ ಉತ್ಪಾದನಾ ಸಂಬಂಧಗಳಲ್ಲಿ ಆಗುವ ಬದಲಾವಣೆಗಳು. ಎಡಪಂಥೀಯ ವಿಚಾರಧಾರೆಯನ್ನು ಗಮನದಲ್ಲಿಟ್ಟುಕೊಂಡು ಹೇಳುವುದಾದರೆ ಗುಲಾಮ ಪದ್ಧತಿಯಲ್ಲಿ ಗುಲಾಮರು ಮತ್ತು ಯಜಮಾನರು ಇದ್ದರೆ, ಊಳಿಗಮಾನ್ಯ ಪದ್ಧತಿಯಲ್ಲಿ ಭೂಮಾಲೀಕರು ಮತ್ತು ಒಕ್ಕಲುಗಳು ಇದ್ದರು. ನಂತರದ ಆಧುನಿಕ ಅಥವಾ ಬಂಡವಾಳ ವ್ಯವಸ್ಥೆಯಲ್ಲಿ ಬಂಡವಾಳಶಾಹಿಗಳು ಮತ್ತು ಶ್ರಮಿಕರು ಇದ್ದಾರೆ. ಈ ವರ್ಗೀಕರಣದ ಬಗ್ಗೆ ಸಾಕಷ್ಟು ಟೀಕೆಗಳಿವೆ. ಉದಾಹರಣೆಗೆ ಆಧುನಿಕ ಅಥವಾ ಬಂಡವಾಳ ವ್ಯವಸ್ಥೆಯಲ್ಲಿ ಕೇವಲ ಈ ಎರಡೇ ವರ್ಗಗಳಿರುವುದಲ್ಲ; ಮ್ಯಮ ವರ್ಗ ಕೂಡ ಇದೆ ಎನ್ನುವ ವಾದವೂ ಇದೆ. ಇಲ್ಲಿ ನನ್ನ ಉದ್ದೇಶ ವಿವಿಧ ಚಾರಿತ್ರಿಕ ಸಂದರ್ಭದಲ್ಲಿ ಇದ್ದ ಸಾಮಜಿಕ ಸಂಬಂಧಗಳ ಬಗ್ಗೆ ಗಮನ ಸೆಳೆಯುವುದು ಮಾತ್ರ. ಉತ್ಪಾದನೆಯ ಈ ಸಾಮಾಜಿಕ ಸಂಬಂಧಗಳು ಪರಸ್ಪರ ವಿರುದ್ಧ ಆಸಕ್ತಿಗಳನ್ನು ರೂಪಿಸುತ್ತವೆ. ಶ್ರಮಿಕರ ಮತ್ತು ಬಂಡವಾಳಿಗರ ಆಸಕ್ತಿಗಳು ಪರಸ್ಪರ ವಿರುದ್ಧ. ಅದೇ ರೀತಿಯಲ್ಲಿ ಭೂಮಾಲೀಕ ಮತ್ತು ಒಕ್ಕಲುಗಳ ಆಸಕ್ತಿಗಳು ವಿರುದ್ಧ. ಆದರೂ ಇವರೆಲ್ಲ ಸೇರಿ ಬದುಕಬೇಕಾಗಿದೆ. ಶ್ರಮಿಕರು ತಮ್ಮ ಶ್ರಮ ನೀಡಿದರೆ ಮಾತ್ರ ಬಂಡವಾಳಿಗರು ತನ್ನ ಬಂಡವಾಳವನ್ನು ಹೆಚ್ಚಿಸಿಕೊಳ್ಳಲು ಸಾಧ್ಯ. ಶ್ರಮಿಕರು ತಮ್ಮ ಶ್ರಮವನ್ನು ನೀಡುವಂತೆ ಮಾಡುವ ವಿವಿಧ ವಿಧಾನಗಳಿವೆ. ಶ್ರಮಿಕರ ಶ್ರಮಕ್ಕೆ ಅನುಗುಣವಾದ ಪ್ರತಿಫಲ ನೀಡುವುದು ಒಂದು ಆದರ್ಶ ವಿಧಾನ. ಆದರೆ ಶ್ರಮದ ನಿಜವಾದ ಪ್ರತಿಫಲ ಏನು ಎಂದು ತೀರ್ಮಾನಿಸುವುದು ಹೇಗೆ ಮತ್ತು ಯಾರು? ಜತೆಗೆ ಶ್ರಮಿಕರ ಶ್ರಮಕ್ಕೆ ಅನುಗುಣವಾದ ಪ್ರತಿಫಲ ನೀಡುವುದರಿಂದ ಬಂಡವಾಳ ಸಂಗ್ರಹ ಸಾಧ್ಯವಾಗದಿದ್ದರೆ ಬಂಡವಾಳಿಗರು ಪ್ರತಿಫಲ ನೀಡದೆ ಬೇರೆ ವಿಧಾನದಿಂದ ಶ್ರಮ ಪಡೆಯಲು ಪ್ರಯತ್ನಿಸಬಹುದು. ಬೇರೆ ವಿಧಾನಗಳ ಸಾಲಿನಲ್ಲಿ ಸಾಮಾಜಿಕ ಹಾಗೂ ಸಾಂಸ್ಕೃತಿಕ ಮೌಲ್ಯಗಳು, ರಾಜಕೀಯ ಅಧಿಕಾರಗಳು ಪ್ರಮುಖ ಪಾತ್ರ ವಹಿಸುತ್ವೆ. ಉದಾಹರಣೆಗೆ ನಮ್ಮ ಸಮಾಜದಲ್ಲಿರುವ ಜಾತಿಪದ್ಧತಿ ಅಥವಾ ಮಹಿಳೆಯರ ಎರಡನೇ ದರ್ಜೆ ಸ್ಥಾನಮಾನ ಅಥವಾ ದಲಿತರನ್ನು ಅಂಚಿನಲ್ಲಿಡುವ ಕ್ರಮ ಇತ್ಯಾದಿಗಳು. ಇವೆಲ್ಲವು ಶತಮಾನಗಳಿಂದ ನಮ್ಮಲ್ಲಿ ಆಚರಣೆಯಲ್ಲಿವೆ. ಶತಮಾನಗಳಿಂದ ಆಚರಣೆಯಲ್ಲಿರುವ ಕಾರಣಕ್ಕಾಗಿ ಇವೆಲ್ಲ ಸಹಜ ಆಗಿವೆ. ಹೀಗೆ ಒಮ್ಮೆ ಸಹಜ ಎಂದು ಒಪ್ಪಿಕೊಂಡ ವಿಚಾರಗಳ ಬಗ್ಗೆ ಮನುಷ್ಯ ವಿಶೇಷ ಚಿಂತೆ ಮಾಡಲು ಹೋಗುವುದಿಲ್ಲ. ಸಹಜ ಅಸಹಜ ಆದಾಗ ಮಾತ್ರ ಪ್ರಶ್ನೆಗಳು ಮೂಡುವುದು. ಸಹಜತೆಯಲ್ಲಿರುವ ಅಸಹಜತೆಯನ್ನು ಸಮಸ್ಯೀಕರಿಸುವ ಕೆಲಸ ಸಮಾಜ ಸಂಶೋಧನೆಯಲ್ಲಿ ನಡೆಯಬೇಕಾಗಿದೆ.

* * *