ಡಾ. ವೆಲೇರಿಯನ್ ರೋಡ್ರಿಗಸ್

ಈ ಕೃತಿಯಲ್ಲಿ ಚರ್ಚಿತವಾಗಿರುವ ಅನೇಕ ಸಂಗತಿಗಳ ಬಗ್ಗೆ ನನ್ನ ಪ್ರಥಮ ಪ್ರತಿಕ್ರಿಯೆಯೆಂದರೆ ಅಭಿನಂದನೆಗಳು. ಆ ಕೃತಿಯ ವ್ಯಾಪ್ತಿ ತುಂಬಾ ದೊಡ್ಡದು ಮತ್ತು ಅಲ್ಲಿ ಒಂದು ಸಮಗ್ರ ಚಿತ್ರಣವನ್ನು ನೀಡಲು ಪ್ರಯತ್ನಿಸಲಾಗಿದೆ. ಈ ಬಗೆಯ ಅಧ್ಯಯನಗಳಲ್ಲಿ ತುಂಬಾ ಅಪರೂಪವಾಗುತ್ತಿರುವ ಖಚಿತತೆಗೆ ಇಲ್ಲಿ ಹೆಚ್ಚಿನ ಗಮನ ನೀಡಲಾಗಿದೆ. ಇಲ್ಲಿನ ನಿದರ್ಶನಗಳು ಅದಕ್ಕೆ ಸಂಬಂಧಿಸಿದ ಭಾಷಾ ಸಮುದಾಯದ ಅಂತರ್ಗತ ಭಾಗವೇ ಆಗಿವೆ. ಇಡೀ ಕೃತಿಯಲ್ಲಿ ಅದ್ಭುತವಾದ ಭಾಷಾ ಪ್ರೌಢಿಮೆ ಎದ್ದು ಕಾಣುತ್ತದೆ.

ಈ ಕೃತಿಯ ಎರಡನೆಯ ಭಾಗದಲ್ಲಿನ ಅಧ್ಯಯನ ಸಮಸ್ಯೆಗಳು ಮತ್ತು ಅವುಗಳ ನಿರ್ವಹಣೆ ಕುರಿತಂತೆ ನಡೆಸಿರುವ ಚರ್ಚೆಯು ಅನೇಕರಿಗೆ ಇಷ್ಟವಾಗಬಹುದು. ಸಮಾಜವಿಜ್ಞಾನಗಳಿಗೆ ಸಂಬಂಧಿಸಿದ ಅಧ್ಯಯನ ವೈಧಾನಿಕತೆಯು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಘರ್ಷಣೆಗಳ ಮೂಲದಲ್ಲಿರುವ ಸೈದ್ಧಾಂತಿಕತೆ ಬಗ್ಗೆ ಕೃತಿಯ ಮೊದಲ ಭಾಗದಲ್ಲಿ ಮಾಡಿರುವ ಚರ್ಚೆಯು ನನಗೆ ವೈಯಕ್ತಿಕವಾಗಿ ಇಷ್ಟವಾಗಿದೆ.

ಈ ಕೃತಿಯ ಪ್ರತಿಯೊಂದು ಅಧ್ಯಾಯದ ಕೊನೆಗೆ ನೀಡಿರುವ ಟಿಪ್ಪಣಿ ಹಾಗೂ ಪರಾಮರ್ಶನ ಗ್ರಂಥಸೂಚಿ ಅತ್ಯಂತ ಸೂಕ್ತವಾಗಿದೆ ಮತ್ತು ಸಮಕಾಲೀನವಾಗಿದೆ. ಸಂಶೋಧಕರು ಚರ್ಚಿಸಿರುವ ಸಂಕೀರ್ಣ ಸಂಗತಿಗಳ ಬಗ್ಗೆ ಸ್ಥೂಲ ನೋಟವನ್ನು ಅವು ನೀಡುತ್ತವೆ.

ಈ ಪಠ್ಯದಲ್ಲಿ ನನ್ನ ಗಮನಕ್ಕೆ ಬಂದ ಕೆಲವು ಸಮಸ್ಯೆಗಳು ಹೀಗಿವೆ.

೧. ಸಮಾಜವಿಜ್ಞಾನಗಳಿಗೆ ವೈಧಾನಿಕೆಯೊಂದನ್ನು ವಿನ್ಯಾಸಗೊಳಿಸುವಲ್ಲಿ ಎದುರಾಗುವ ಸಂಕೀರ್ಣ ಸಮಸ್ಯೆಗಳನ್ನು ಆರಂಭದ ಕೆಲವು ಅಧ್ಯಾಯಗಳಲ್ಲಿ ಚರ್ಚಿಸಲಾಗಿದೆ. ಆದರೆ ಈ ಸಂಕೀರ್ಣತೆಯು ಕೃತಿಯ ಎರಡನೆಯ ಭಾಗದಲ್ಲಿ ಪೂರ್ಣವಾಗಿ ಪ್ರತಿಫಲಿತವಾಗಿಲ್ಲ. ಮೊದಲನೆಯ ಭಾಗದಿಂದ ಎತ್ತಿಕೊಂಡಿರುವ ಒಂದೆರಡು ಸಂಗತಿಗಳನ್ನು ಬಿಟ್ಟರೆ ಎರಡನೆಯ ಭಾಗದಲ್ಲಿ ಸಮಾಜ ಸಂಶೋಧನೆ ಕುರಿತಂತೆ ವಾಡಿಕೆಯ ಪಠ್ಯಗಳಲ್ಲಿ ಒಳಗೊಂಡಿರುವ ಸಂಗತಿಗಳನ್ನೇ ಚರ್ಚಿಸಲಾಗಿದೆ.

೨. ಈ ಅಧ್ಯಯನ ಮೊದಲ ಭಾಗದಲ್ಲಿನ ನಿರೂಪಣೆ ತುಂಬಾ ಸ್ಥೂಲವಾಗಿದೆ. ಕನ್ನಡದಲ್ಲಿ ಪ್ರಥಮ ಬಾರಿಗೆ ಇಂತಹ ಸಂಗತಿಗಳನ್ನು ಓದುತ್ತಿರುವ ಓದುಗರ ಸಂದರ್ಭದಲ್ಲಿ ಇಲ್ಲಿ ಎತ್ತಿಕೊಂಡಿರುವ ಸಂಗತಿಗಳ ಬಗ್ಗೆ ವಿಸ್ತೃತವಾದ ವಿವರಣೆ ಅಗತ್ಯವಿತ್ತೆಂದು ಕಾಣುತ್ತದೆ.

೩. ವೈಧಾನಿಕತೆ ಕುರಿತ ಚರ್ಚೆಯ ಬೇರು ತತ್ವಶಾಶ್ತ್ರಕ್ಕೆ ಸಂಬಂಧಿಸಿದ ಸಿದ್ಧಾಂತಗಳಲ್ಲಿ ಮತ್ತು ಧೋರಣೆಗಳಲ್ಲಿ ನೆಲೆಗೊಂಡಿರುತ್ತದೆ. ವೈಧಾನಿಕತೆಗೆ ಸಂಬಂಧಿಸಿದ ಯಾವುದೇ ಕೃತಿಯು ತತ್ವಶಾಸ್ತ್ರಕ್ಕೆ ಸಂಬಂಧಿಸಿದ ಸಿದ್ಧಾಂತಗಳನ್ನೆಲ್ಲ ಚರ್ಚಿಸುವುದು ಸಾಧ್ಯವಿಲ್ಲವೆಂದುಕೊಂಡರೂ ಇಲ್ಲಿನ ವಿಷಯಕ್ಕೆ ಸಂಬಂಧಿಸಿದ ಅನೇಕ ಪರಾಮರ್ಶನ ಕೃತಿಗಳನ್ನು ನೀಡಬಹುದಾಗಿತ್ತು.

೪. ಈ ಕೃತಿಯಲ್ಲಿ ವ್ಯಾಪಕವಾಗಿ ಬಳಸಿರುವ ‘ಎಂಪಿರಿಕಲ್’ ಎಂಬ ಪರಿಭಾಷೆಯನ್ನು ತುಂಬಾ ಸಡಿಲವಾಗಿ ಬಳಸಿದಂತೆ ಕಾಣುತ್ತದೆ. ಅಧ್ಯಯನದ ವಸ್ತುವಿನಿಂದ ಸ್ವತಂತ್ರವಾಗಿ ನೆಲೆಗೊಂಡಿರುವ ವಾಸ್ತವತೆಯನ್ನು ಎಂಪಿರಿಕಲ್ ಎಂಬುದು ಸೂಚಿಸಬಲ್ಲದಾದರೂ ಅಧ್ಯಯನ ವಸ್ತುವು ಸ್ವತಂತ್ರ ಅಸ್ತಿತ್ವ ಪಡೆದಿರುತ್ತದೆಂಬ ನಿರ್ವಚನವನ್ನೇ ಅದನ್ನು ಕುರಿತ ಎಲ್ಲ ಸಿದ್ಧಾಂತಗಳಿಗೂ ಅನ್ವಯಿಸಲು ಬರುವುದಿಲ್ಲ.

೫. ಸಾರ್ವತ್ರಿಕತೆಯನ್ನು ಕುರಿತ ಅನ್ವೇಷಣೆಯು ಜೈವಿಕ ವಿಜ್ಞಾನಗಳ ವೈಲಕ್ಷಣವೇನಲ್ಲ. ಪೌರಾತ್ಯದಲ್ಲಿದ್ದಂತೆ ಪಾಶ್ಚಿಮಾತ್ಯ ತತ್ವಶಾಸ್ತ್ರದಲ್ಲೂ ಸಾರ್ವತ್ರಿಕತೆಯ ಮತ್ತು ದೇಶ ಕಾಲ ಸಂದರ್ಭಗಳ ನಡುವಣ ಸಂಬಂಧವನ್ನು ಕುರಿತ ಚರ್ಚೆಯ ಮೂಲವನ್ನು ಆಧುನಿಕ ಜೈವಿಕ ವಿಜ್ಞಾನಗಳಿಗಿಂತ ಪೂರ್ವ ಕಾಲಕ್ಕೆ ಒಯ್ಯಬಹುದಾಗಿದೆ. ಜೈವಿಕ ವಿಜ್ಞಾನಗಳು ಪ್ರತಿಪಾದಿಸುವ ನಿರ್ದಿಷ್ಟ ಸಾರ್ವತ್ರಿಕತೆಯನ್ನು ಮೇಲೆ ತಿಳಿಸಿದ ಸಾರ್ವತ್ರಿಕತೆಯಿಂದ ಬೇರ್ಪಡಿಸಿ ನೋಡಬೇಕಾಗುತ್ತದೆ. ಜೈವಿಕ ವಿಜ್ಞಾನಗಳು ಪ್ರತಿಪಾದಿಸುವ ಸಾರ್ವತ್ರಿಕತೆಗೆ ತೀವ್ರ ಪ್ರತಿರೋಧ ಉಂಟಾಗಿದೆ (ನೋಡಿ: ಹಾಕಿನ್ಸ್: ದಿ ಸ್ಟೋರಿ ಆಫ್ ಟೈಮ್) ಪ್ರಸ್ತುತ ಕೃತಿಯ ಲೇಖಕರು ಕೃತಿಯ ಸಮಾರೋಪ ಭಾಗದಲ್ಲಿ ಇಂತಹ ಭಿನ್ನತೆ ಬಗ್ಗೆ ಗಮನ ಸೆಳೆದಿದ್ದಾರೆ. ಆದರೆ ಅವರು ತಮ್ಮ ಆರಂಭದ ತೀಮಾನಗಳನ್ನು ಮಾತ್ರ ಬದಲಾಯಿಸಿಕೊಳ್ಳುವುದಿಲ್ಲ.

೬. ಈ ಸಂಶೋಧಕರು ಸಾಂಸ್ಕೃತಿಕ ಬಹುತ್ವಕ್ಕೆ ಪ್ರತಿಯಾಗಿ ನೈತಿಕ ಬಹುತ್ವವನ್ನು ಪ್ರತಿಪಾದಿಸುತ್ತಿರುವಂತೆ ಕಾಣುತ್ತದೆ. ಸಾಂಸ್ಕೃತಿಕ ಬಹುತ್ವವನ್ನು ಒಪ್ಪಿಕೊಂಡೇ ಅನೇಕರು ನೈತಿಕ ಬಹುತ್ವದ ಸಾಧ್ಯತೆಯನ್ನು ಎತ್ತಿ ಹಿಡಿದಿದ್ದಾರೆ. (ನೋಡಿ: ಹೇಬರ್ ಮಸ್, ಕಮುಯನಿಕೇಟಿವ್ ರ್ಯಾಶನಾಲಿಟಿ). ಇದರ ಸಮರ್ಥನೆಗೆ ಗಾಡಮರ್‌ನ ಪ್ರತಿಪಾದನೆಯೊಂದೇ ಸಾಕಾಗುವುದಿಲ್ಲ. ಏಕೆಂದರೆ ಅವನ ಗಮನವೆಲ್ಲ ಎಪಿಸ್ಟಮಾಲಜಿಯ ಕಡೆಗಿದೆ.

೭. ಎರಡು-ಮೂರು ವಿಚಾರಗಳನ್ನು ಪಠ್ಯದಲ್ಲಿ ಮತ್ತೆ ಮತ್ತೆ ಪುನಾವರ್ತಿಸಲಾಗಿದೆ ಹಾಗೂ ಒಂದೇ ಪರಿಭಾಷೆಯಲ್ಲಿ ಚರ್ಚೆಯನ್ನು ನಡೆಸಲಾಗಿದೆ.

* * *

ಡಾ. ಕೆ.ವಿ. ನಾರಾಯಣ

ಸಮಾಜಶಾಸ್ತ್ರಗಳನ್ನು ಸಮಾಜವಿಜ್ಞಾನಗಳೆಂದು ಕರೆಯುವುದು ರೂಢಿಯಲ್ಲಿದೆ. ಈ ಸಮೀಕ್ಷಾ ಟಿಪ್ಪಣಿಯ ಮಟ್ಟಿಗೆ ಶಾಸ್ತ್ರ ಎನ್ನುವ ಮಾತನ್ನೇ ಉಳಿಸಿಕೊಂಡಿದ್ದೇನೆ. ಅದು ಹೆಚ್ಚು ಸೂಕ್ತವೆಂದೇ ನನ್ನ ತಿಳುವಳಿಕೆ. ಕರ್ನಾಟಕದ ಹಲವು ವಿಶ್ವವಿದ್ಯಾಲಯಗಳಲ್ಲಿ ಮತ್ತು ಅಧ್ಯಯನ ಸಂಸ್ಥೆಗಳಲ್ಲಿ ಸಮಾಜಶಾಸ್ತ್ರಗಳಿಗೆ ಸಂಬಂಧಿಸಿದ, ವ್ಯಕ್ತಿಗತವಾದ ಮತ್ತು ಸಾಂಸ್ಥಿಕವಾದ ಸಂಶೋಧನೆಗಳು ನಡೆಯುತ್ತಿವೆ. ಬಹುಮಟ್ಟಿಗೆ ಇವುಗಳ ವೈಧಾನಿಕತೆಯ ಬಗೆಗೆ ಎಲ್ಲರಿಗೂ ಒಪ್ಪಿತವಾದ ಮಾದರಿಯೊಂದು ಜಾರಿಯಲ್ಲಿದೆ. ಅಥವಾ ಹಲವು ಮಾದರಿಗಳಿದ್ದಾಗ ತಮ್ಮ ಅಧ್ಯಯನಕ್ಕೆ ಯಾವ ಮಾದರಿಯನ್ನು ಆಯ್ದುಕೊಳ್ಳಬೇಕು ಎಂಬುದನ್ನು ಆಯಾ ಸಂಶೋಧಕರು ಬಲ್ಲರು; ತಮ್ಮ ಆಯ್ಕೆಯನ್ನು ಸೂಕ್ತವಾಗಿ ಸಮರ್ಥಿಸಿಕೊಳ್ಳಬಲ್ಲರು. ಆದರೆ ಈ ವೈಧಾನಿಕತೆಯನ್ನು ರೂಪಿಸಿರುವ ತಾತ್ವಿಕತೆಗೆ ಸಂಬಂಧಿಸಿದ ಪ್ರಶ್ನೆ ಹೆಚ್ಚು ಜನರನ್ನು ಕಾಡಿಸುವುದಿಲ್ಲ. ಸತ್ಯದ ಶೋಧನೆಯೇ ಎಲ್ಲ ಅಧ್ಯಯನಗಳ ಗುರಿ ಎನ್ನುವ ತೀರಾ ಸರಳವಾದ ನಿರ್ಣಯವೊಂದನ್ನು ಆಧರಿಸಿ ಎಲ್ಲ ವೈಧಾನಿಕತೆಗಳನ್ನು ರೂಪಿಸಲಾಗಿದೆ; ಅಲ್ಲದೆ ತಕ್ಕ ಸಮರ್ಥನೆಗಳನ್ನೂ ಕೂಡಾ ಕೊಡಲಾಗಿದೆ.

ಈಗ ನಮ್ಮ ಸಮಸ್ಯೆ ಇರುವುದು ವೈಧಾನಿಕತೆಯಲ್ಲಿ ಅಲ್ಲ; ತಾತ್ವಿಕತೆಯ ಬಗೆಗಿನ ಅರಿವಿನ ಕೊರತೆಯಲ್ಲಿ. ಸತ್ಯ ಶೋಧನೆಯ ಹಣೆಪಟ್ಟಿ ಈಗ ಹುಂಬತನದ್ದಾಗಿ ಕಾಣತೊಡಗಿದೆ. ಹಾಗಾಗಿ ಸಂಶೋಧನೆಗಳನ್ನು ಉತ್ತೇಜಿಸುವ ಚಿಂತನಾಕ್ರಮಗಳು ಯಾವುವು, ಅವುಗಳ ಸಾಂಸ್ಕೃತಿಕ ಮತ್ತು ಚಾರಿತ್ರಿಕ ಆಕರಗಳು ಯಾವುವು ಎಂಬುದು ನಮ್ಮನ್ನು ಈಗ ಹೆಚ್ಚು ಕಾಡಬೇಕಾದ ಪ್ರಶ್ನೆಗಳಾಗತೊಡಗಿವೆ. ಈ ನಿಟ್ಟಿನಲ್ಲಿ ಡಾ. ಚಂದ್ರ ಪೂಜಾರಿಯವರ ‘ಸಮಾಜ ಸಂಶೋಧನೆ’ ಎನ್ನುವ ಮೆಟಾ ಅಧ್ಯಯನವು ಅತ್ಯಂತ ಮುಖ್ಯವಾದುದಾಗಿದೆ. ಇದು ಇಂತಹ ಸಮಸ್ಯೆಯೊಂದನ್ನು ದಿಟ್ಟವಾಗಿ ಮೈಮೇಲೆ ಎಳೆದುಕೊಂಡಿದೆ ಎನ್ನುವ ಕಾರಣಕ್ಕಾಗಿ ಮತ್ತು ಹಾಗೆ ಎಳೆದುಕೊಂಡ ಸಮಸ್ಯೆಯನ್ನು ವಿಶ್ಲೇಷಿಸುವಾಗ ಅಗತ್ಯವಾದ ಪ್ರಬುದ್ಧತೆಯನ್ನು ಮೈಗೂಡಿಸಿಕೊಂಡಿದೆ ಎನ್ನುವ ಕಾರಣಕ್ಕಾಗಿ ಮುಖ್ಯವಾಗಿದೆ.

ಈ ಅಧ್ಯಯನದಲ್ಲಿ ಡಾ. ಪೂಜಾರಿಯವರ ಸಂಶೋಧಕರಿಗೆ ಕೈಪಿಡಿಯೊಂದನ್ನು ರೂಪಿಸುವ ಉದ್ದೇಶವನ್ನು ಹೊಂದಿಲ್ಲ ಅಥವಾ ಕನ್ನಡದಲ್ಲಿ ನಡೆಯುತ್ತಿರುವ ಸಾಮಾಜಿಕ ಸಂಶೋಧನೆಗಳ ವೈಧಾನಿಕತೆಗಳ ಸಮೀಕ್ಷೆಯನ್ನು ಮಾಡುವ ಉ‌ದ್ದೇಶವನ್ನೂ ಹೊಂದಿಲ್ಲ. ಅದು ಬೇರೆಯ ಒಂದು ಅಧ್ಯಯನಕ್ಕೆ ಅವಕಾಶವನ್ನು ಕಲ್ಪಿಸುತ್ತದೆ. ಆದರೆ ಇಲ್ಲಿ ಸಮಾಜಶಾಸ್ತ್ರಗಳಲ್ಲಿ ನಡೆಯುವ ಸಂಶೋಧನೆಗಳು ಯಾವ ತಾತ್ವಿಕತೆಯನ್ನು ಹೊಂದಿವೆ, ಆ ತಾತ್ವಿಕತೆಗಳು ಚಾರಿತ್ರಿಕವಾಗಿ ವಿಕಾಸ ಹೊಂದಿದ ಬಗೆಗಳು ಯಾವುವು, ಅವುಗಳಲ್ಲಿ ರೂಪುಗೊಂಡ ಆಂತರಿಕ ಸಂವಾದದ ಸ್ವರೂಪವೇನು ಎಂಬಿತ್ಯಾದಿ ಪ್ರಶ್ನೆಗಳನ್ನು ಮುಂದಿರಿಸಿಕೊಂಡು ಚರ್ಚೆಯೊಂದನ್ನು ಬೆಳೆಸಲಾಗಿದೆ. ಈ ಪ್ರಶ್ನೆಗಳನ್ನು ರೂಪಿಸಿಕೊಳ್ಳುವುದೂ ಕೂಡ ಒಂದು ಮುಖ್ಯ ಹೊಣೆಗಾರಿಕೆ. ಹಾಗೆ ರೂಪಿಸಿಕೊಂಡ ಪ್ರಶ್ನೆಗಳನ್ನು ಚರ್ಚಿಸಲು ಅನುಕೂಲವಾದ ಪರಿಭಾಷೆ ಮತ್ತು ವಿಧಾನವನ್ನು ರೂಪಿಸುವುದು ಮತ್ತೊಂದು ಹೊಣೆಗಾರಿಕೆ. ಈ ಎರಡನ್ನೂ ಡಾ. ಪೂಜಾರಿಯವರು ಸಮರ್ಥವಾಗಿ ನಿರ್ವಹಿಸಿದ್ದಾರೆ.

ಸಮಾಜಶಾಸ್ತ್ರಗಳ ಆವಿರ್ಭಾವ ಮತ್ತು ವಿಜ್ಞಾನದೊಡನೆ ಅವು ಹೊಂದಿದ್ದ ಸಖ್ಯಭಾವಗಳು ಹೇಗೆ ಅಧ್ಯಯನಗಳ ತಾತ್ವಿಕತೆ ಮತ್ತು ವೈಧಾನಿಕತೆಗಳನ್ನು ರೂಪಿಸಿದವು ಎಂಬುದನ್ನು ಇಲ್ಲಿ ವಿವರಿಸಲಾಗಿದೆ. ಅನಂತರದಲ್ಲಿ ಮುಖ್ಯವಾಗಿ ಇಪ್ಪತ್ತನೆಯ ಶತಮಾನದ ಉತ್ತರಾರ್ಧದಲ್ಲಿ ಮೈ ತಳೆದ ಹಲವಾರು ಪ್ರಶ್ನೆಗಳು ಸಮಾಜಶಾಸ್ತ್ರಗಳ ಅಸ್ತಿತ್ವವನ್ನು ಮತ್ತು ಅವು ನಿರೂಪಿಸುತ್ತಿರುವ ‘ಸತ್ಯ’ದ ಬುಡವನ್ನು ಅಲುಗಾಡಿಸತೊಡಗಿದ್ದನ್ನೂ ಇಲ್ಲಿ ವಿವರಿಸಲಾಗಿದೆ. ಅದರಿಂದ ಉಂಟಾದ ಕ್ರೈಸಿಸ್ ಕೇವಲ ಅಕೆಡಮಿಕ್ ಆದುದಾಗಿರಲಿಲ್ಲ. ಅದು ನಮ್ಮ ಗ್ರಹಿಕೆಯ ನೆಲೆಗಳನ್ನು ಮರುರೂಪಿಸಿಕೊಳ್ಳಬೇಕಾದ ಅಗತ್ಯವನ್ನು ತೋರಿಸಿಕೊಟ್ಟಿತ್ತು. ಆದ್ದರಿಂದ ಹಳೆಯ ವೈಧಾನಿಕತೆಗಳಿಗೆ ಕುರುಡಾಗಿ ಕಟ್ಟು ಬೀಳುವುದು ಹೆಚ್ಚು ಸುಲಭದ ದಾರಿಯಾದರೂ ಅದನ್ನು ಹಿಡಿದು ಹೊರಟವರು ಎಲ್ಲಿಗೂ ತಲುಪುವುದು ಸಾಧ್ಯವಿಲ್ಲ. ಅಥವಾ ಅವು ಕ್ರಮಿಸುವ, ತೋರಿಸುವ ದಾರಿಗಳು ನಿರುಪಯುಕ್ತವಾಗಿರುತ್ತವೆ. ಆದ್ದರಿಂದ ಸಂಶೋಧನೆಯ ಹಿಂದಿನ ನಿಜ ತುಡಿತಗಳನ್ನು ಆಧರಿಸಿಯೇ ಹೊಸ ವೈಧಾನಿಕತೆಯನ್ನು ರೂಪಿಸಿಕೊಳ್ಳಬೇಕಾದ ಅಗತ್ಯ ಈಗ ಉಂಟಾಗಿದೆ. ಈ ಎಲ್ಲ ಅಂಶಗಳು ಈ ಅಧ್ಯಯನದಲ್ಲಿ ಆಕಾರ ಪಡೆದಿವೆ.

ಅಧ್ಯಯನದಲ್ಲಿ ದೇಶಿಯತೆ, ದೇಶಿಯ ತಿಳುವಳಿಕೆಯನ್ನು ಆಧರಿಸಿ ಅಧ್ಯಯನಗಳನ್ನು ಮಾಡುವುದು ಎಂಬ ಮಾತು ಭಾರತದ ಸಂದರ್ಭದಲ್ಲಿ ಕೇಳತೊಡಗಿ ಸುಮಾರು ಕಾಲು ಶತಮಾನಗಳು ಕಳೆದಿವೆ. ಹಾಗಿದ್ದರೂ ಈ ಕಾಳಜಿಗಳು ನಿರ್ದಿಷ್ಟ ಆಕಾರವನ್ನು ಪಡೆದಿವೆ ಎಂದು ದಿಟ್ಟವಾಗಿ ಹೇಳುವಂತಿಲ್ಲ. ಅದಕ್ಕಿಂತ ಮುಖ್ಯವಾಗಿ ಹೀಗೆ ಅಧ್ಯಯನದಲ್ಲಿ ದೇಶೀಯತೆ ಎನ್ನುವ ತಹತಹ ಮೂಡಲು ಇರುವ ಕಾರಣಗಳನ್ನೇ ಗುರಿಯಾಗಿಸಿಕೊಂಡು ಈಗ ವಿಶ್ಲೇಷಿಸಲಾಗುತ್ತಿದೆ. ಈ ಒತ್ತಾಯಗಳು ಯಾವ ಯಾವ ಒಳಸುಳಿಗಳನ್ನು ಹೊಂದಿರಬಹುದು ಎಂಬುದನ್ನೂ ಗುರುತಿಸಲಾಗುತ್ತಿದೆ. ಸಾರ್ವತ್ರಿಕ (ಯೂನಿವರ್ಸಲ್ ಎನ್ನುವ ಅರ್ಥದಲ್ಲಿ) ತತ್ವಗಳು ಏಕೆ ನಿರಾಕರಣೆಗೊಳ್ಳಬೇಕು, ಸ್ಥಳೀಯವಾದ ಅಗತ್ಯಗಳನ್ನು ಆಧರಿಸಿದ ಪ್ರಶ್ನೆಗಳನ್ನು ಹೊಸದಾಗಿ ಕೇಳಿಕೊಳ್ಳಬೇಕಾದ ಕ್ರಮಗಳೇನು ಎಂಬ ಚರ್ಚೆ ಕೂಡ ಮೊದಲಾಗಿದೆ. ನಿಯಮ ಮತ್ತು ವಿಕಲ್ಪಗಳ (ಪ್ರಿನ್ಸಿಪಲ್ಸ್ ಆಂಡ್ ಪ್ಯಾರಾಮೀಟರ್ಸ್ ಎನ್ನುವ ಅರ್ಥದಲ್ಲಿ) ನೆಲೆಯಲ್ಲಿ ಈ ವಿರೋಧವನ್ನು ಗ್ರಹಿಸಬಹುದೇ ಅಥವಾ ಹಾಗೆಯೇ ಗ್ರಹಿಸಬೇಕೇ ಎನ್ನುವ ಮಾತುಗಳು ಕೇಳಿಬರುತ್ತಿವೆ. ಡಾ. ಪೂಜಾರಿಯವರು ಈ ಎಲ್ಲ ಪ್ರಶ್ನೆಗಳನ್ನು ಈಗ ಹೇಗೆ ಕೇಳಿಕೊಳ್ಳಬೇಕು ಮತ್ತು ಯಾಕೆ ಕೇಳಿಕೊಳ್ಳಬೇಕು ಎನ್ನುವುದನ್ನು ವಿವರಿಸಿದ್ದಾರೆ.

ಈ ಅಧ್ಯಾಯನದಲ್ಲಿ ಸಂಶೋಧಕರಿಗೆ ಉಪಯೋಗವಾಗುವಂತೆ ಕೊನೆಯ ಅಧ್ಯಾಯಗಳಲ್ಲಿ ವೈಧಾನಿಕತೆಯ ಪ್ರಶ್ನೆಗಳನ್ನು ತಮ್ಮ ಚರ್ಚೆಯ ಪರಿಪ್ರೇಕ್ಷ್ಯಕ್ಕೆ ತಂದುಕೊಂಡಿದ್ದಾರೆ. ಅವು ಮಾರ್ಗದರ್ಶಿಗಳಾಗಿವೆ ಎನ್ನುವುದಕ್ಕಿಂತ ಈವರೆಗೆ ಉಳಿದ ಅಧ್ಯಯಗಳಲ್ಲಿ ಚರ್ಚಿಸಿದ ಸಂಗತಿಗಳ ಹಿನ್ನೆಲೆಯಲ್ಲಿ ವೈಧಾನಿಕತೆಗೆ ಯಾವ ಹೊಸ ತಿರುವುಗಳು ಬರಬಹುದು ಎನ್ನುವುದನ್ನು ಅಲ್ಲಿ ಗುರುತಿಸಲಾಗಿದೆ. ಈ ಎಲ್ಲ ವಿವರಣೆಯನ್ನೂ ಈ ಟಿಪ್ಪಣಿಯಲ್ಲಿ ನೀಡಿದ್ದರ ಉದ್ದೇಶವಿಷ್ಟೆ; ಈ ಬಗೆಯ ಅಧ್ಯಯನಗಳು ನಮ್ಮ ಚರ್ಚೆಗಳಿಗೆ ಹೊಸ ತೇಜಸ್ಸನ್ನು ತಂದುಕೊಡಬಲ್ಲವು ಎನ್ನುವ ನನ್ನ ದೃಢವಾದ ನಂಬಿಕೆ. ಜಡಗೊಂಡ ನಮ್ಮ ಅಕೆಡೆಮಿಕ್ ವಲಯವನ್ನು ಚುಚ್ಚಿ ಹೊಸ ದಿಕ್ಕಿನತ್ತ ಚಿಂತಿಸಲು ಹೊಸ ತಲೆಮಾರಿನವರನ್ನು ಪ್ರೇರೇಪಿಸಲು ಈ ಬರೆವಣಿಗೆ ಶಕ್ತವಾಗಿದೆ ಎಂದು ನಾನು ತಿಳಿದಿದ್ದೇನೆ.

* * *

ಡಾ. ಬಿ. ಸುರೇಂದ್ರರಾವ್

೧. ಸಮಾಜ ಅಧ್ಯಯನವನ್ನು ವಿಜ್ಞನವೆಂದು ಪರಿಗಣಿಸಿ ಅದಕ್ಕೆ ವೈಜ್ಞಾನಿಕತೆಯ ರಕ್ಷೆ, ಮರ್ಯಾದೆಯನ್ನು ನೀಡಿದ್ದು ಆಗಸ್ಟ್ ಕಾಮ್ಟ್ ಮತ್ತು ಆತನ ಪಾಸಿಟಿವಿಸಮ್. ಸೈಂಟಿಫಿಕ್ ರೆವೆಲ್ಯೂಶನ್ ಬಳಿಕ ವಿಜ್ಞಾನ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಬಲ್ಲುದು ಎಂಬ ಸಂಪೂರ್ಣ ವಿಶ್ವಾಸ ಹುಟ್ಟಿತು. ಇದನ್ನು ಎಲ್ಲಾ ಅಧ್ಯಯನಗಳು ಒಪ್ಪಿ, ಅಪ್ಪಿಕೊಂಡವು. ಮಾನವನ ಅಧ್ಯಯನಗಳೂ ವಿಜ್ಞಾನವಾದದ್ದು ಹಾಗೆಯೇ.

೨. ಸಂಶೋಧನೆ ಸಮಾಜದ ಬಗ್ಗೆ, ಸಮಾಜ ಜೀವಿಗಳೇ ಸಮಾಜಕ್ಕೋಸ್ಕರ ನಡೆಸುವ ಕ್ರಿಯೆ. ಆಬ್ಜೆಕ್ಟಿವ್ – ಸಬ್ಜೆಕ್ಟಿವ್ ಎಂಬ ಡಿಬೇಟ್ ಈ ಕಾಂಟೆಕ್ಸ್ಟ್‌ನ್ನು ಮರೆಯಲಾಗುವುದಿಲ್ಲ. ಆಬ್ಜೆಕ್ಟಿವ್ ಎಂಬುದು ಪ್ರಾಮಾಣಿಕತೆಯನ್ನು ಪ್ರತಿಪಾದಿಸಬಹುದೇ ಹೊರತು ವೈಜ್ಞಾನಿಕತೆಯ ವಸ್ತುನಿಷ್ಠತೆಯನ್ನು ಪಡೆಯಲು ಸಾಧ್ಯವಿಲ್ಲ. ವಿಜ್ಞಾನವೂ ಹಳೆಯ ವಸ್ತುನಿಷ್ಠತೆಯನ್ನು ಈಗ ಹೇಳುತ್ತಿಲ್ಲ. ಥಾಮಸ್ ಕನ್ ಬಳಿಕ ಅದು ಕಳಚಿಕೊಂಡಿದೆ. ಮನುಷ್ಯ, ಸಮಾಜ ಹಾಗೂ ಅಲ್ಲಿ ವಿವರಿಸುವ ಸಂಬಂಧಗಳು ಅನೇಕ ಸತ್ಯಗಳನ್ನೂ ಸೃಷ್ಟಿಸುತ್ತವೆ. ಅವು ಸಾರ್ವಕಾಲಿಕವೇ, ಹಂಗಾಮಿಯೇ ಎಂಬುದು ಪ್ರಶ್ನೆ. ಈ ಎರಡು ಸ್ತರಗಳಲ್ಲೂ ಅಪೂರ್ಣತೆಯನ್ನು ಕಂಡುಕೊಳ್ಳುವುದೇ ನಮ್ಮ ಅವಸ್ಥೆ. ಅದನ್ನು ಒಪ್ಪಿದಾಗಲೇ ಸತ್ಯಾನ್ವೇಷಣೆಯ ಕಾಯಕ ನಡೆಯುತ್ತದೆ. ಸಮಾಜ ಅಧ್ಯಯನ ಅಥವಾ ಸಂಶೋಧನೆಯನ್ನು ಪೋಟೋಗ್ರಾಫ್ ಕ್ಲಿಕ್ಕಿಸ್ಸಿದಂತೆ ನಡೆಸಬೇಕೇ ಎಂಬ ಪ್ರಶ್ನೆ ಎದುರಾಗುತ್ತದೆ. ಮೊದಲನೆಯದು ನಡೆಯಲು ಸಾಧ್ಯವಾದರೆ ಸಂಶೋಧನೆ ಆಬ್ಜೆಕ್ಟಿವ್ ಆಗಲು ಸಾಧ್ಯ. ಅಲ್ಲೂ ಹಂಗಾಮಿತನ ಇದ್ದೇ ಇರುತ್ತದೆ. ಸಮಾಜದ ಎಲ್ಲಾ ರೂಪ, ಅನುಭವ, ಆಯಾಮಗಳನ್ನು ಕ್ಲಿಕ್ಕಿಸಲು ಸಾಧ್ಯವಿಲ್ಲ. ಅದಕ್ಕೆ ಸ್ಪೇಶಿಯೋ ಟೆಂಪೊರಲ್ ಲಿಮಿಟ್ಸ್ ಇರಬೇಕಾಗುತ್ತದೆ. ಯಾವುದು ನಮ್ಮ ಅಧ್ಯಯನ? ಯಾಕಾಗಿ? ಯಾರಿಗಾಗಿ? ಸಂಶೋದಕರಿಗೆ ಅದರ ಬಗ್ಗೆ ಕಾಳಜಿ ಯಾಕೆ? ಅದರಿಂದ ಹುಟ್ಟುವ ಜ್ಞಾನ ಯಾರಿಗೆ ಉಪಯುಕ್ತ? ಈ ಎಲ್ಲಾ ಪ್ರಶ್ನೆಗಳು ಸಂಶೋಧನೆಯನ್ನು ಪರ್‌ಪೋಸಿವ್ ಆಗಿರಿಸುತ್ತವೆ. ಅದಲ್ಲದಿದ್ದರೆ ಸಂಶೋಧನೆಗೆ ಅರ್ಥವೇ ಇಲ್ಲ. ಇಂಟೆಲೆಕ್ಚುವಲ್ ಕ್ಯೂರಿಯಾಸಿಟಿ ಕೂಡ ಆಬ್ಜೆಕ್ಟಿವ್ ಅಲ್ಲ. ಅದು ಬರೇ ತುರಿಕೆ ಅಲ್ಲ. ಅಲ್ಲಿ ಕಾಳಜಿ, ಸಂಬಂಧಗಳು ಅವಿತುಕೊಂಡಿವೆ.

೩. ಹಾಗೆಯೇ ಸಮಾಜದ ಸ್ಥಿತಿ-ಗತಿಗಳ ಬಗ್ಗೆ ನಡೆಸುವ ಅಧ್ಯಯನಗಳಲ್ಲಿ ಭವಿಷ್ಯದ ಬಗ್ಗೆ ಆಲೋಚನೆಗಳು, ಆಶಯಗಳು, ಊಹೆಗಳು, ನಡುಕಗಳು, ಆಕ್ರೋಶಗಳು ಹುದುಗಿಕೊಂಡಿವೆ. ಭೂತ, ವರ್ತಮಾನ, ಭವಿಷ್ಯತ್‌ಗಳು ಬೇರೆ ಬೇರೆಯಲ್ಲ. ಒಂದನೆಯದು ಅನ್ವೇಷಣೆ, ಎರಡನೆಯದು ಅನುಭವ, ಮೂರನೆಯದು ಆಶಯ. ಅವುಗಳು ಪರಸ್ಪರ ಮೇಳೈಸಿಯೇ ಸಮಾಜದ ಅಸ್ತಿತ್ವವು ನಿರ್ಮಾಣವಾಗುವುದು. ಇವುಗಳಲ್ಲಿ ಯೂನಿವರ್ಸಲ್ ಎಷ್ಟು? ಕಾಂಟೆಕ್ಶುವಲ್ ಎಷ್ಟು? ಕಾಂಟೆಕ್ಶುವಲ್ ಎಂಬುದು ಯೂನಿವರ್ಸಲ್ ಕ್ಯಾಟಗೆರಿಯನ್ನು ಊಹಿಸಿದಾಗ ಮಾತ್ರ ಅರ್ಥೈಸುವಂಥದ್ದು ಹಾಗೆಯೇ, ಯೂನಿವರ್ಸಲ್ ಊಹಿಸಲು ಲಬ್ಧವಷ್ಟೇ; ಅನುಭವಿಸಲು ಅಲ್ಲ.

೪. ಸಂಶೋಧನೆಯ ವಸ್ತು ಸಂಶೋಧಕನು ಸಾಮಾಜಿಕ ನೆಲೆಯಲ್ಲಿ ಕಂಡುಕೊಳ್ಳುವಂಥದ್ದು. ಅಲ್ಲಿ ಯಾವುದನ್ನು ಯಥಾರ್ಥವೆಂದು ಕಂಡುಕೊಳ್ಳುತ್ತಾನೋ ಅದು ಬದಲಾವಣೆಯ ರೂಪ, ದಿಕ್ಕುಗಳನ್ನೂ ನಿರ್ಧರಿಸುತ್ತದೆ. ಜಾತಿವ್ಯವಸ್ಥೆ, ಆರ್ಥಿಕ ಅಸಮಾನತೆ, ಲಿಂಗ ಭೇದ, ಉಳ್ಳವರು  – ಇಲ್ಲದವರ ಬಗ್ಗೆ ಚರ್ಚೆ – ಇವೆಲ್ಲಾ ಟ್ರಾನ್ಸ್‌ಫರ್‌ಮೇಟಿವ್ ಪ್ರಾಜೆಕ್ಟ್ ಇಲ್ಲದೆ ಅಧ್ಯಯನ ವಸ್ತುವಾಗಲು ಸಾಧ್ಯವಿಲ್ಲ. ಫೆಮಿನಿಜಂ ಬಗ್ಗೆ ಚರ್ಚೆ ವ್ಯವಸ್ಥೆ – ಅವಸ್ಥೆಗಳ ಬಗ್ಗೆ ಮಾತ್ರವಲ್ಲ; ಅದಕ್ಕೆ ಬದಲಾವಣೆಯ ಗುರಿಯಿದೆ.

೫. ಪ್ರಾಥಮಿಕ – ಆನುಷಂಗಿಕ ಡಿವಿಜನ್ ಆಬ್ಸಲ್ಯೂಟ್‌ಅಲ್ಲ; ಅವುಗಳ ರಿಲೆಯಬಿಲಿಟಿ ಕೂಡ ಅಲ್ಲ; ಅವುಗಳನ್ನು ನಂಬುವುದು ಕಷ್ಟ ಎಂದು ಅನ್ನಿಸುವುದು. ಅವುಗಳ ಅನ್‌ರಿಯಾಲಿಟಿಯನ್ನು ಮಾತ್ರ ಅವಲಂಬಿಸಿಲ್ಲ. ಅವು ನಮಗೆ ಬೇಕಾದ ಉತ್ತರಗಳನ್ನು ನೀಡಲು ಶಕ್ತವಾಗಿಲ್ಲ ಎಂಬ ಕಾರಣಕ್ಕಾಗಿ. ಇದು ಸಂಶೋಧನೆಯ ಸಬ್ಜೆಕ್ಟಿವ್‌ ಅಥವಾ ಪರ್‌ಪೋಸಿವ್ ಕ್ಯಾರೆಕ್ಟರ್‌ನ್ನು ತೋರಿಸುತ್ತದೆ.

೬. ಸಮಸ್ಯೀಕರಣವು ಸಂಶೋಧಕರ ಅಥವಾ ಅವರ ಮಾಧ್ಯಮದ ಮೂಲಕ ಸಮಾಜದ ಆಶಯಗಳ ರೂಪ. ಒಂದು ಕಾಲಕ್ಕೆ ಒಂದು ವಿಷಯ ಸಮಸ್ಯೆಯಾಗಿರದೆ, ಮತ್ತೊಂದು ಕಾಲದಲ್ಲಿ ಅದು ಆ ರೂಪವನ್ನು ಪಡೆಯಬಹುದು. ಇದು ಸಮಸ್ಯೆಯ awarenessಗೆ ಸೇರಿದ ವಿಷಯ. Awareness ಇಲ್ಲದಿದ್ದರೆ ಸಮಸ್ಯೆ ಸಮಸ್ಯೆಯಾಗುವುದಿಲ್ಲ. ಅದನ್ನು ಪರಿಹರಿಸುವ, ಅದರೊಡನೆ ಹೋರಾಡುವ ಪ್ರಸಂಗವೇ ಇರುವುದಿಲ್ಲ. ಹಾಗೆಯೇ ಇದು ಸಮಾಜದ ಬೇರೆ ಬೇರೆ ಘಟಕಗಳಲ್ಲಿ ಬೇರೆ ಬೇರೆಯಾಗಿ ಪ್ರಕಟವಾಗಬಹುದು.

೭. ಅನೇಕ ಬಾರಿ ಸಂಶೋಧಕರು ಎದುರಿಸುವ ತೊಡಕು – ಫಿಸಿಕಲ್ ಲೆವೆಲ್ ಬಿಟ್ಟು ತಮ್ಮ ಸಮಸ್ಯೀಕರಣ, ಅದರ ಗುರಿ, ಪ್ರಖರತೆ, ಇತ್ಯಾದಿಗಳು ತಾವು ಕಂಡ ಟಾರ್ಗೆಟ್‌ಗಳು ಮೈಗೂಡಿಸದೇ ಇರುವುದು. ಸಮಸ್ಯೆಯ ಬಗ್ಗೆ ಸಂಶೋಧಕರ ದೃಷ್ಟಿ, ಅದನ್ನು ಅನುಭವಿಸುವ ಸಮಾಜದ ಘಟಕದ ದೃಷ್ಟಿ, ಬೇರೆ ಬೇರೆಯಾಗಬಹುದು. ಬಡತನದ ಬಗ್ಗೆ ಕಾಲಕಾಲಕ್ಕೆ ಅಫಿಶಿಯಲ್ ವರ್ಶನ್ ಎಂಬುದು ಇದೆ. ಇದು ಬೇರೆ ಬೇರೆ ಅಂಶಗಳಿಂದ ನಿರ್ಧಾರವಾಗುತ್ತದೆ. ಆದರೆ ಬಡವರು ಅದನ್ನು ಅನುಭವಿಸುವ ರೀತಿ ಬೇರೆ. ಅದನ್ನು ಮಾರುವ ಆಶಯವೂ ಬೇರೆ. ಬಡತನ ನಿವಾರಣಾ ಕಾರ್ಯಕ್ರಮಗಳಲ್ಲಿ ಹೊರಗಿನ ನೋಶನ್ ಹಾಗೂ ಪ್ರಾಜೆಕ್ಟ್ ಪಾತ್ರ ವಹಿಸುತ್ತವೆ. ಇದು ಸೈದ್ಧಾಂತಿಕ ನೆಲೆಯಲ್ಲಿ ಸತ್ಯ. ಇಂಪ್ಲಮೆಂಟೇಶನ್ ನೆಲೆಯಲ್ಲೂ ಸತ್ಯ. ಸಮಾಜದ ಬದಲಾವಣೆಯ ನಿರ್ಧಾರ, ನೀಲಿ ನಕ್ಷೆ ಇಂಪ್ಲಮೆಂಟೇಶನ್ – ಇವೆಲ್ಲಾ ಸಮಾಜ ಘಟಕದೊಳಗಿನಿಂದಲೇ ಬರಬೇಕೆಂದಿಲ್ಲ, ಬರುತ್ತಿಲ್ಲ. ಸಾಮಾಜಿಕ ಬದಲಾವಣೆಗೆ ಪ್ರೇರಕಶಕ್ತಿ ಎಷ್ಟೋ ಬಾರಿ ಬಾಹ್ಯ ಮೂಲಗಳಿಂದಲೂ ಬರಲು ಸಾಧ್ಯ. ಸೈದ್ಧಾಂತಿಕತೆಯ ಪರದೇಶಿ ಅಥವಾ ದೇಸಿ ಎಂಬ ಚರ್ಚೆ ಈ ವಾಸ್ತವತೆಯನ್ನು ಪರಿಗಣಿಸಬೇಕು. ದೇಸಿ ಪರದೇಶಿ ಎನ್ನುವುದಕ್ಕಿಂತಲೂ ಯಾವುದೇ ಸಿದ್ಧಾಂತವನ್ನು ವಿಮರ್ಶಿಸಿ ಬಳಸುವ ಕ್ರಮವನ್ನು ಬೆಳೆಸಿಕೊಳ್ಳುವುದು ಅನಿವಾರ‍್ಯ.

ನಿಮ್ಮ ಹೊತ್ತಗೆ ಬಹಳ ಉಪಯುಕ್ತವಾಗುವುದು ಖಂಡಿತ. ಓದು ಮಾತ್ರವಲ್ಲ; ಕ್ಷೇತ್ರಕಾರ್ಯದ ಅನುಭವದ ಕೂಡ ಇದರ ರಚನೆಯಲ್ಲಿ ಮಾತ್ರ ವಹಿಸಿದೆ. ಸಂಶೋಧನೆಗೆ ಬರೇ ಕೈಪಿಡಿಯಾಗದೆ ಇದು ಕೆಲವು ಮಹತ್ವದ ವಿಚಾರಗಳನ್ನು ಚರ್ಚಿಸಿರುವುದು ಸಂತೋಷದ ಸಂಗತಿ. ನಿಮ್ಮ ಸಾಮಾಜಿಕ ಕಳಕಳಿ ಸ್ಫುಟವಾಗಿ ಬಂದಿದೆ. ಅದಿಲ್ಲದೆ ಸಂಶೋಧನೆ ಲುಪ್ತ, ಅರ್ಥಹೀನ, ನಿರುಪಯುಕ್ತ. ಸಂಶೋಧನೆಯು ಸಾಮಾಜಿಕ ಕಳಕಳಿಯಿಂದ ಹುಟ್ಟಿದರೆ, ಅದು ಸಾಮಾಜಿಕ ಕಳಕಳಿಯನ್ನು ಸೃಷ್ಟಿಸುತ್ತದೆ. ಈ ಬಗೆಯ ಸಾಮಾಜಿಕ ಕಾಳಜಿಯನ್ನು ಈ ಪುಸ್ತಕ ಹೊಂದಿದೆ.

* * *