ಸುಮಾರು ಐದಾರು ವರ್ಷಗಳಿಂದ ಸಮಾಜ ಸಂಶೋಧನೆಯ ಮೇಲೆ ಬರೆದ ಲೇಖನಗಳ ಸಂಗ್ರಹ ಈ ಪುಸ್ತಕ. ಹಾಗೆಂದು ಇಲ್ಲಿ ಬರುವ ಎಲ್ಲ ಅಧ್ಯಾಯಗಳು ಲೇಖನ ರೂಪದಲ್ಲಿ ಹಿಂದೆ ಪ್ರಕಟವಾಗಿಲ್ಲ. ಜತೆಗೆ ಲೇಖನಗಳನ್ನು ಅವುಗಳ ಹಿಂದಿನ ರೂಪದಲ್ಲೇ ನೀಡಿಲ್ಲ. ಅಧ್ಯಾಯಗಳ ನಡುವೆ ಸಂಬಂಧ ಕಲ್ಪಿಸುವ ದೃಷ್ಟಿಯಿಂದ ಲೇಖನಗಳನ್ನು ಸಾಕಷ್ಟು ಪರಿಷ್ಕರಿಸಲಾಗಿದೆ. ಪುಸ್ತಕದಲ್ಲಿರುವ ಅಧ್ಯಾಯಗಳು ಮತ್ತು ಪ್ರತಿ ಅಧ್ಯಾಯ ನೀಡುವ ವಿವರಗಳನ್ನು ಸಂಕ್ಷಿಪ್ತವಾಗಿ ಪ್ರಸ್ತಾವನೆಯಲ್ಲಿ ಪರಿಚಯಿಸಲಾಗಿದೆ. ಪ್ರಸ್ತಾವನೆ ಮತ್ತು ಕೊನೆಯ ಮಾತುಗಳನ್ನು ಹೊರತುಪಡಿಸಿ ಪುಸ್ತಕದಲ್ಲಿ ಒಟ್ಟು ಎಂಟು ಅಧ್ಯಾಯಗಳಿವೆ. ಮೊದಲ ನಾಲ್ಕು ಅಧ್ಯಾಯಗಳಲ್ಲಿ ಸಮಾಜ ಸಂಶೋಧನೆಯ ತಾತ್ವಿಕಾಂಶಗಳನ್ನು ವಿವರಿಸಲಾಗಿದೆ. ಸಮಾಜ ಥಿಯರಿಗಳು ಮತ್ತು ಸಂಶೋಧನೆ ಎನ್ನುವ ಮೊದಲ ಅಧ್ಯಾಯದಲ್ಲಿ ಯೂನಿವರ್ಸಲ್ ಥಿಯರಿಗಳು ರೂಪುಗೊಳ್ಳುವ ಬಗೆಯನ್ನು ವಿವರಿಸಲಾಗಿದೆ.[1] ಸಮಾಜ ವಿಜ್ಞಾನಕ್ಕೆ ಅದರದ್ದೇ ಆದ ಅಧ್ಯಯನ ವಿಧಾನ ಇರಲಿಲ್ಲ. ವಿಜ್ಞಾನದ ವಿಧಾನವನ್ನು ಬಳಸಿಕೊಂಡು ಸಮಾಜವಿಜ್ಞಾನ ಒಂದು ಶಿಸ್ತುಬದ್ಧ ಶಾಸ್ತ್ರವಾಗಿ ರೂಪುಗೊಂಡಿದೆ. ಸಮಾಜವಿಜ್ಞಾನದ ಈ ಬಗೆಯ ಬೆಳವಣಿಗೆಯಿಂದಾಗಿ ವಿಜ್ಞಾನದ ವಿಧಾನದ ಹಲವಾರು ಗುಣಗಳು ಸಮಾಜ ಥಿಯರಿಗಳಲ್ಲಿ ಅಂತರ್ಗತವಾಗಿವೆ. ಸಮಾಜ ಥಿಯರಿಗಳಲ್ಲೂ ಯೂನಿವರ್ಸಾಲಿಟಿ ಗುಣವನ್ನು ಬಯಸುವುದು, ವಿಶ್ವಕ್ಕೇ ಅನ್ವಯವಾಗುವ ಗುಣ ಸಮಾಜ ಥಿಯರಿಗಳಿಗೂ ಇದೆಯೆಂದು ಗ್ರಹಿಸುವುದು, ಸತ್ಯದ ಹುಡುಕಾಟವನ್ನು ನೈತಿಕ ಮೌಲ್ಯಗಳಿಂದ ಪ್ರತ್ಯೇಕಿಸಿ ನೋಡಬೇಕೆನ್ನುವ ಧೋರಣೆ ಇಯಾದಿಗಳು ಸಮಾಜ ಥಿಯರಿಗಳಲ್ಲಿ ಅಂತರ್ಗತವಾಗಿರುವ ಕೆಲವೊಂದು ವಿಜ್ಞಾನದ ಗುಣಗಳು. ವಿಜ್ಞಾನದ ವಿಧಾನವನ್ನು ಅನುಸರಿಸುವ ಮೂಲಕ ಸಮಾಜವಿಜ್ಞಾನ ಹೇಗೆ ತನ್ನ ವಿಧಾನ, ಕ್ಷೇತ್ರ, ವ್ಯಾಪ್ತಿ ಇತ್ಯಾದಿಗಳನ್ನು ನಿರ್ವಚಿಸಿಕೊಂಡಿತ್ತು ಮತ್ತು ಇದು ಹೇಗೆ ಐವತ್ತರ ದರ್ಶಕದ ಸಮಾಜ ಥಿಯರಿಗಳನ್ನು ಪ್ರಭಾವಿಸಿತು ಎನ್ನುವ ವಿವರ ಕೂಡ ಇದೇ ಅಧ್ಯಾಯದಲ್ಲಿದೆ. ಅಂತಾರಾಷ್ಟ್ರೀಯ ಅಧಿಕಾರ ಸಂಬಂಧಗಳು ಮತ್ತು ಇವು ಹೇಗೆ ತಮ್ಮ ಆಸಕ್ತಿಗೆ ಪೂರಕವಾದ ಥಿಯರಿಗಳನ್ನು ಯೂನಿವರ್ಸಲ್ ಥಿಯರಿಗಳೆಂದು ಮುಂಚೂಣಿಗೆ ತರುತ್ತವೆ ಎನ್ನುವುದರ ವಿವರಣೆ ಮೊದಲ ಅಧ್ಯಾಯದ ಎರಡನೇ ಭಾಗದಲ್ಲಿದೆ. ಸಮಾಜ ಸಂಶೋಧನೆಯಲ್ಲಿ ಸಂಶೋಧಕರು ಮತ್ತು ಅಧ್ಯಯನಕ್ಕೆ ಒಳಗಾಗುವ ಸಂಗತಿಯ (ಸಮಾಜದ) ವ್ಯಾಖ್ಯಾನ ಕುರಿತಂತೆ ಹಿಂದಿನಿಂದಲೇ ಗಂಭೀರ ಚರ್ಚೆ ನಡೆಯುತ್ತಿದೆ. ಸಮಾಜವಿಜ್ಞಾನ ರೂಪುಗೊಳ್ಳುವ ಸಂದರ್ಭದಲ್ಲಿ ಈ ಎರಡರ ಬಗ್ಗೆ (ಸಂಶೋಧಕರು ಮತ್ತು ಅಧ್ಯಯನಕ್ಕೆ ಒಳಗಾಗುವ ಸಂಗತಿಗಳ ಬಗ್ಗೆ) ಖಚಿತ ನಿಲುವುಗಳಿದ್ದವು. ಅಂದರೆ ಸಂಶೋಧಕರು ಮತ್ತು ಅಧ್ಯಯನಕ್ಕೆ ಒಳಗಾಗುವ ಸಂಗತಿಗಳ ಸ್ವತಂತ್ರ ಹಾಗೂ ಖಚಿತ ಅಸ್ತಿತ್ವದ ಬಗ್ಗೆ ಯಾವುದೇ ಸಂದೇಹಗಳಿರಲಿಲ್ಲ.

ಬರುಬರುತ್ತಾ ಅಧ್ಯಯನಕ್ಕೆ ಒಳಗಾಗುವ ಸಂಗತಿಗಳ ಬಗ್ಗೆ ಮತ್ತು ಅವುಗಳನ್ನು ವಿವರಿಸಲು ಹೊರಟ ಸಂಶೋಧಕರ ಸಾಮರ್ಥ್ಯ ಮತ್ತು ಉದ್ದೇಶಗಳ ಬಗ್ಗೆ ಗುಮಾನಿಗಳು ಹುಟ್ಟಿಕೊಂಡವು. ಆಬ್ಜೆಕ್ಟಿವ್ ವರ್ಲ್ಡ್‌(ಸಮಾಜ) ಒಂದು ಇದೆ, ಅದು ನಮ್ಮ ಆಲೋಚನೆ ಅಥವಾ ಮನಸ್ಸಿನ ಸೃಷ್ಟಿಯಲ್ಲ, ನಮ್ಮ ಆಲೋಚನೆಯನ್ನು ಹೊರತುಪಡಿಸಿ ಕೂಡ ಅದು ಇದೆ, ಅದನ್ನು ಎಂಪಿರಿಕಲ್ ಆಗಿ ಅಥವಾ ಇತರ ವಿಧಾನಗಳಿಂದ ನಾವು ಭಾಗಶಃ ಗ್ರಹಿಸಬಹುದು ಇತ್ಯಾದಿ ಗ್ರಹಿಕೆಗಳು ಪ್ರಶ್ನಿಸಲ್ಪಟ್ಟವು. ಈ ಗ್ರಹಿಕೆಗಳ ಸ್ಥಾನದಲ್ಲಿ ವಾಸ್ತವಿಕತೆ ಎನ್ನುವುದು ಅರ್ಥಪೂರ್ಣ ಸಾಮಾಜಿಕ ಕಟ್ಟುವಿಕೆ, ನಮ್ಮ ಆಲೋಚನೆಗಳಿಂದ ಪ್ರತ್ಯೇಕವಾದ ಪ್ರಪಂಚವೊಂದಿಲ್ಲ, ನಾವು ಇದೆ ಎಂದು ಗ್ರಹಿಸುತ್ತೇವೆ, ಆದುದರಿಂದ ಇದೆ ಇತ್ಯಾದಿ ಗ್ರಹಿಕೆಗಳು ಬಲಗೊಂಡವು. ಆದುದರಿಂದ ಮಾನವ ಸಮಾಜ ಮತ್ತು ಪ್ರಕೃತಿಗಳನ್ನು ಅಧ್ಯಯನ ಮಾಡಲು ಒಂದೇ ವಿಧಾನವನ್ನು ಅನುಸರಿಸುವುದು ಸರಿಯಲ್ಲ ಎನ್ನುವ ಅಭಿಪ್ರಾಯಗಳು ಮುಂಚೂಣಿಗೆ ಬಂದವು. ಈ ಎರಡೂ ನಿಲುವುಗಳು (ಆಬ್ಜೆಕ್ಟಿವಿಟಿ ಮತ್ತು ಸಬ್ಜೆಕ್ಟಿವಿಟಿ ಮೇಲಿನ ನಿಲುವುಗಳು) ಸಂಶೋಧನೆಗೆ ಒಳಗಾಗುವ ಸಂಗತಿಗಳನ್ನು ಹೇಗೆ ಪರಿಭಾವಿಸಬೇಕೆಂದು ತಿಳಿಸುತ್ತವೆ. ಸಂಶೋಧಕರ ಅಸ್ತಿತ್ವದ ಬಗ್ಗೆ ಈ ಚರ್ಚೆಗಳು ಯಾವುದೇ ಸಂದೇಹವನ್ನು ವ್ಯಕ್ತಪಡಿಸುವುದಿಲ್ಲ. ಸಂಶೋಧಕರು ಇದ್ದಾರೆ, ಅವರು ಸಂಶೋಧನೆ ಮಾಡಿ ಹೊರಗಿನ ಪ್ರಪಂಚವನ್ನು ವಿವರಿಸುತ್ತಾರೆ ಅಥವಾ ಅರ್ಥ ಮಾಡಿ ಕೊಳ್ಳುತ್ತಾರೆ ಇತ್ಯಾದಿ ನಿಲುವುಗಳ ಬಗ್ಗೆ ಮೇಲಿನ ಚರ್ಚೆಗಳಲ್ಲಿ ಎಲ್ಲೂ ಸಂದೇಹ ವ್ಯಕ್ತವಾಗುವುದಿಲ್ಲ. ನಿಜವಾಗಿಯೂ ಸಂಶೋಧಕರಿಗೆ ಅವರು ವಿವರಿಸುವ ಅಥವಾ ಅರ್ಥ ಮಾಡಿಕೊಳ್ಳುವ ಪ್ರಪಂಚದೊಂದಿಗೆ ಯಾವುದೇ ಸಂಬಂಧವಿಲ್ಲದ ಅಸ್ತಿತ್ವ (ಗುರುತು) ಇದೆಯೇ? ಒಂದು ವೇಳೆ ಸಂಶೋಧಕರ ಗುರುತು ಮತ್ತು ಅವರು ವಿವರಿಸುವ ಪ್ರಪಂಚದ ನಡುವೆ ಸಂಬಂಧ ಇದ್ದರೆ, ಅದು ಯಾವ ಬಗೆಯ ಸಂಬಂಧ? ಇತ್ಯಾದಿ ಪ್ರಶ್ನೆಗಳು ಅಧ್ಯಯನಕಾರರು ಮತ್ತು ಅಧ್ಯಯನಕ್ಕೆ ಒಳಗಾಗುವ ಸಂಗತಿಗಳಿಗೆ ಸಂಬಂಧಿಸಿದಂತೆ ಪ್ರಾಮುಖ್ಯತೆಯನ್ನು ಪಡೆಯುತ್ತವೆ. ಈ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಲು ಎರಡನೇ ಅಧ್ಯಾಯದಲ್ಲಿ ಪ್ರಯತ್ನಿಸಲಾಗಿದೆ.[2]

ಹಾಗೆಂದು ಸಂಶೋಧಕರ ದೃಷ್ಟಿಕೋನವನ್ನು ಮತ್ತು ಸಂಶೋಧನೆಯನ್ನು ಸಂಶೋಧನಾ ವಿಧಾನಕ್ಕೆ ಸಂಬಂಧಿಸಿದ ತಾತ್ವಿಕ ಹಿನ್ನೆಲೆಗಳು ಮಾತ್ರ ಪ್ರಭಾವಿಸುವುದಷ್ಟೇ ಅಲ್ಲ; ಅವುಗಳನ್ನು ಹೊರತುಪಡಿಸಿದ ಸಂಗತಿಗಳು ಕೂಡ ಪ್ರಭಾವಿಸುತ್ತವೆ. ಸಂಶೋಧನೆ ನಿರ್ವಾತದಲ್ಲಿ ನಡೆಯುವ ಪ್ರಕ್ರಿಯೆಯಲ್ಲ; ಯಾವುದೋ ಒಂದು ಚಾರಿತ್ರಿಕ ಘಟ್ಟದಲ್ಲಿನ ಸಾಮಾಜಿಕ ಪರಿಸರದಲ್ಲಿ ನಡೆಯುವ ಪ್ರಕ್ರಿಯೆ. ಆ ಸಾಮಾಜಿಕ ಪರಿಸರದಲ್ಲಿ ಒಳ್ಳೆಯ ಸಮಾಜದ ಕಲ್ಪನೆಗಳನ್ನು ಕಟ್ಟಿಕೊಡುವ ಹಲವಾರು ತಾತ್ವಿಕ ನಿಲುವುಗಳು, ಸಾಮಾಜಿಕ ಏಣಿಶ್ರೇಣಿಗಳು, ಅಧಿಕಾರ ಸಂಬಂಧಗಳು, ಆರ್ಥಿಕ ಸ್ಥಾನಮಾನಗಳು ಇತ್ಯಾದಿಗಳು ಇವೆ. ಅಷ್ಟು ಮಾತ್ರವಲ್ಲ, ಇವೆಲ್ಲ ತಮ್ಮದೇ ರೀತಿಯಲ್ಲಿ ಸಂಶೋಧನೆಯನ್ನು ಪ್ರಭಾವಿಸಬಹುದು. ಈ ಎಲ್ಲ ಸಂಗತಿಗಳು ಸಂಶೋಧಕರ ದೃಷ್ಟಿಕೋನವನ್ನು ಮತ್ತು ಆ ಮೂಲಕ ಸಂಶೋಧನೆಯನ್ನು ಹೇಗೆ ಪ್ರಭಾವಿಸುತ್ತವೆ ಎನ್ನುವುದರ ವಿಶ್ಲೇಷಣೆಯನ್ನು ಮೂರನೇ ಅಧ್ಯಾಯದಲ್ಲಿ ಮಾಡಲಾಗಿದೆ.[3] ಸಮಾಜವನ್ನು ಬದಲಾಯಿಸುವ ಉದ್ದೇಶದಿಂದ ಸಮಾಜವನ್ನು ಅರ್ಥ ಮಾಡಿಕೊಳ್ಳುವ ಪ್ರಕ್ರಿಯೆ ಸಂಶೋಧನೆ ಎನ್ನುವುದು ಸಂಶೋಧನೆಯ ಒಂದು ವ್ಯಾಖ್ಯಾನ. ಆದರೆ ಇಂದು ಸಂಶೋಧನೆಯ ಈ ವ್ಯಾಖ್ಯಾನವನ್ನು ಅಥವಾ ಸಮಾಜವನ್ನು ಬದಲಾಯಿಸುವ ಸಂಶೋಧನೆಯ ಗುಣವನ್ನು ನಿರಾಕರಿಸುವ ಹಲವಾರು ವಾದಗಳು ಪ್ರಚಾರದಲ್ಲಿವೆ. ಅವುಗಳಲ್ಲಿ ತುಂಬಾ ಪ್ರಚಾರದಲ್ಲಿರುವ ಕೆಲವು ವಾದಗಳು ಇಂತಿವೆ. ಸಂಶೋಧನೆಯ ವ್ಯಾಖ್ಯಾನವನ್ನು ಜ್ಞಾನದ ಉತ್ಪಾದನೆ ಎಂದು ಬದಲಾಯಿಸಿಕೊಳ್ಳುವುದು, ಬಹುತ್ಯ ಮತ್ತು ಬಹುಸುಖದ ಕಲ್ಪನೆಗಳನ್ನು ಮುಂದಿಡುವುದು, ಬದಲಾವಣೆ ಬೇಕೆಂದು ವಾದಿಸುವವರ ಹಿನ್ನೆಲೆಯನ್ನು ಪ್ರಶ್ನಿಸುವುದು ಇತ್ಯಾದಿಗಳು. ಇವುಗಳಲ್ಲಿ ತುಂಬಾ ಪ್ರಚಾರದಲ್ಲಿರುವ ಎರಡು ವಾದಗಳನ್ನು (ಬಹುಸುಖ ಮತ್ತು ಬಹುಸತ್ಯದ ಕಲ್ಪನೆಗಳನ್ನು) ವಿಶ್ಲೇಷಿಸುವ ಪ್ರಯತ್ನವನ್ನು ಅಧ್ಯಾಯ ನಾಲ್ಕರಲ್ಲಿ ಮಾಡಲಾಗಿದೆ.[4]

ಸಮಸ್ಯೆ ಅಥವಾ ಸಮಸ್ಯೀಕರಣ ಎನ್ನುವ ಐದನೇ ಅಧ್ಯಾಯದಲ್ಲಿ ಸಂಶೋಧನಾ ಸಮಸ್ಯೆಯ ಬಗ್ಗೆ ಚರ್ಚಿಸಲಾಗಿದೆ.[5] ಸಮಸ್ಯೆ ಅಥವಾ ಸಮಸ್ಯೀಕರಿಸುವ ಪ್ರಕ್ರಿಯೆ ಸಂಶೋಧನಾ ಪ್ರಸ್ತಾವಕ್ಕೆ ಬುನಾದಿಯಾಗಿ ಕೆಲಸ ಮಾಡುತ್ತದೆ ಎನ್ನುವ ನಂಬಿಕೆ ಇದೆ. ಸಂಶೋಧನಾ ಸಮಸ್ಯೆ ಸಂಶೋಧನೆಯ ಉದ್ದೇಶವನ್ನು ನಿರ್ಧರಿಸಿದರೆ ಸಂಶೋಧನೆಯ ಉದ್ದೇಶಗಳು ಸಂಶೋಧನೆಯ ವಿಧಾನವನ್ನು ಪ್ರಭಾವಿಸುತ್ತವೆ ಎಂದು ಗ್ರಹಿಸಲಾಗಿದೆ. ಈ ಮೂರು ಸಂಗತಿಗಳು ಪರಸ್ಪರ ಸಂಬಂಧಿಸಿವೆ ಮತ್ತು ಒಂದು ಸರಪಣಿಯ ಕೊಂಡಿಯಂತೆ ಕೆಲಸ ಮಾಡುತ್ತವೆಂದು ತಿಳಿಯಲಾಗಿದೆ. ಇವು ಯಾವುದೇ ಸಂಶೋಧನಾ ಪ್ರಸ್ತಾವದ ಮೂಲಭೂತ ಸಂಗತಿಗಳು. ಇವು ಸರಿಯಾಗಿದ್ದರೆ ಸಂಶೋಧನೆ ಸರಿ ದಾರಿಯಲ್ಲಿ ಸಾಗುವ ಸಾಧ್ಯತೆಗಳು ಹೆಚ್ಚು ಇವೆ. ಹೀಗೆ ಸಮಸ್ಯೆ ಅಥವಾ ಸಮಸ್ಯೀಕರಣದ ಕುರಿತು ಹಲವಾರು ಗ್ರಹಿಕೆಗಳಿವೆ. ಇವೆಲ್ಲವನ್ನು ವಿಶ್ಲೇಷಿಸುವ ಪ್ರಯತ್ನವನ್ನು ಈ ಅಧ್ಯಾಯದಲ್ಲಿ ಮಾಡಲಾಗಿದೆ. ಸಂಶೋಧನೆಯ ಸಮಸ್ಯೆಯನ್ನು ಸಮಸ್ಯೀಕರಿಸುವುದರಿಂದ, ಅಧ್ಯಯನದ ಉದ್ದೇಶ, ವಿಧಾನ ಇತ್ಯಾದಿಗಳನ್ನು ನಿರ್ಣಯಿಸುವವರೆಗೆ ಆನುಷಂಗಿಕ ಮಾಹಿತಿಯ ಪಾತ್ರವನ್ನು ಅಲ್ಲಗಳೆಯಲು ಸಾಧ್ಯವಿಲ್ಲ.

ಸಮಾಜ ಸಂಶೋಧನೆಯಲ್ಲಿ ಬಳಕೆಯಾಗುವ ಆನುಷಂಗಿಕ ಮಾಹಿತಿಗಳ ಮೂಲ, ಅವುಗಳನ್ನು ಬಳಸುವ ವಿಧಾನ ಮತ್ತು ಬಳಕೆ ಕುರಿತು ವರ್ತಮಾನದಲ್ಲಿ ನಡೆಯುತ್ತಿರುವ ಚರ್ಚೆಗಳನ್ನು ಆರನೇ ಅಧ್ಯಾಯದಲ್ಲಿ ಪರಿಚಯಿಸಲಾಗಿದೆ.[6] ಸಂಶೋಧನೆಗೆ ಒಳಪಡುವ ಸಂಗತಿಗಳಿಗ ಸಂಬಂಧಿಸಿದ ಮಾಹಿತಿಯನ್ನು ಅವುಗಳ ಎರಡನೇ ಮೂಲದಿಂದ ಪಡೆಯುವುದು ಎನ್ನುವ ಅರ್ಥದಲ್ಲಿ ಆನುಷಂಗಿಕ ಮಾಹಿತಿ ಎನ್ನುವ ಪದ ಬಳಕೆ ಆಗುತ್ತಿದೆ. ಸಂಶೋಧನೆಗೆ ಒಳಪಡುವ ಸಂಗತಿ-ಕುಟುಂಬ-ಸಮುದಾಯ ಇತ್ಯಾದಿಗಳಿಗೆ ಸಂಬಂಧಿಸಿದ ಮಾಹಿತಿಯನ್ನು ನೇರವಾಗಿ ಆ ಮೂಲಗಳಿಂದಲೇ ಪಡೆದರೆ ಅವುಗಳನ್ನು ಪ್ರಾಥಮಿಕ ಮಾಹಿತಿಯೆಂದು ಪರಿಗಣಿಸಲಾಗುವುದು. ಒಂದು ಕಾಲದಲ್ಲಿ ಮಾಹಿತಿಯ ಈ ಬಗೆಯ ವಿಂಗಡನೆಯ (ಮಾಹಿತಿಯ ಹಿನ್ನೆಲೆಯ ಆಧಾರದಲ್ಲಿ ಪ್ರಾಥಮಿಕ ಮತ್ತು ಆನುಷಂಗಿಕ ಎನ್ನುವ ವಿಂಗಡನೆ) ಬಗ್ಗೆ ಯಾವುದೇ ತಕರಾರು ಇರಲಿಲ್ಲ. ಇಂದು ಕೂಡ ಸಮಾಜವಿಜ್ಞಾನದ ಸಾಂಪ್ರದಾಯಿಕ ಶಿಸ್ತುಗಳಿಗೆ (ಸಮಾಜ, ರಾಜಕೀಯ, ಅರ್ಥಶಾಸ್ತ್ರ, ವ್ಯವಹಾರ, ಆಡಳಿತ ಶಾಸ್ತ್ರ ಇತ್ಯಾದಿಗಳಿಗೆ) ಈ ಬಗೆಯ ವಿಂಗಡನೆ ವಿಶೇಷ ಸಮಸ್ಯೆ ಇಲ್ಲದೆ ಅನ್ವಯವಾಗಬಹುದೋ ಏನೋ. ಜತೆಗೆ ಚರಿತ್ರೆ ಸಂಶೋಧನೆಯಲ್ಲೂ ಮಾಹಿತಿ ವಿಂಗಡನೆಯ ಸಾಂಪ್ರದಾಯಿಕ ವಿಂಗಡನೆ ಸಣ್ಣಪುಟ್ಟ ಬದಲಾವಣೆಯೊಂದಿಗೆ ಮುಂದುವರಿಯಬಹುದು. ಯಾಕೆಂದರೆ ಚರಿತ್ರೆ ಹಿಂದಿನಿಂದಲೂ ಮಾಹಿತಿಯ ಮೂಲಗಳ ವಿಂಗಡನೆಯನ್ನು ಸಮಾಜ ವಿಜ್ಞಾನದ ಇತರ ಶಿಸ್ತುಗಳಿಗಿಂತ ಭಿನ್ನವಾಗಿ ವ್ಯಾಖ್ಯಾನಿಸಿಕೊಂಡಿದೆ.

ಹೊಸ ಸಂಶೋಧನಾ ಸಮಸ್ಯೆಗಳ ದೃಷ್ಟಿಯಿಂದ ಮಾಹಿತಿಯ ಸಾಂಪ್ರದಾಯಿಕ ವಿಂಗಡನೆ (ಪ್ರಾಥಮಿಕ ಮತ್ತು ಆನುಷಂಗಿಕ) ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ಬುಡಕಟ್ಟು ಅಧ್ಯಯನ, ಜಾನಪದ ಅಧ್ಯಯನ, ಮಹಿಳಾ ಅಧ್ಯಯನ ಇತ್ಯಾದಿಗಳು ಹೊಸ ಹೊಸ ಸಂಶೋಧನಾ ಸಮಸ್ಯೆಗಳನ್ನು ಮುಂಚೂಣಿಗೆ ತಂದಿವೆ. ಈ ಕ್ಷೇತ್ರಗಳಲ್ಲಿ ಮೇಲಿನ ಪ್ರಾಥಮಿಕ ಮತ್ತು ಆನುಷಂಗಿಕ ಮಾಹಿತಿಯ ವ್ಯಾಖ್ಯಾನ ಯಥಾ ರೀತಿಯಲ್ಲಿ ಅನ್ವಯವಾಗುತ್ತದೆ ಎನ್ನಲಾಗುವುದಿಲ್ಲ. ಹಳೇ ವಿಂಗಡನೆಗಳು (ಪ್ರಾಥಮಿಕ ಮತ್ತು ಆನುಷಂಗಿಕ) ವಿಮರ್ಶೆಗೆ ಒಳಗಾಗುತ್ತಿವೆ. ಜ್ಞಾನ ಅಥವಾ ಸಂಶೋಧನಾ ಪ್ರಬಂಧ ಸಮುದಾಯದ ಆಸ್ತಿ. ಸಂಶೋಧಕರು ಅಥವಾ ಲೇಖಕರು ಬಳಸುವ ಭಾಷೆ, ವಿಚಾರ, ಆಲೋಚನೆ ಇತ್ಯಾದಿಗಳು ಖಾಸಗಿ ಅಲ್ಲ. ಶತಮಾನಗಳಿಂದ ಸಮುದಾಯಗಳು ಬಳಸಿ ಬೆಳೆಸಿದ ಭಾಷೆ, ವಿಚಾರ ಇತ್ಯಾದಿಗಳನ್ನು ಬಳಸಿಕೊಂಡು ಒಂದು ಸಂಶೋಧನೆ ಅಥವಾ ಲೇಖನ ಬರುತ್ತದೆ. ಅದನ್ನು ಆನುಷಂಗಿಕ ಮಾಹಿತಿಯೆಂದು ಪರಿಗಣಿಸದೆ (ಉಲ್ಲೇಖಿಸದೆ) ಬಳಸಿದರೆ ತಪ್ಪೇನಿಲ್ಲ ಎನ್ನುವ ವಾದವನ್ನು ಜನಪದ ಮೂಲಗಳನ್ನು ಉಲ್ಲೇಖಿಸುವ ಸಂದರ್ಭದಲ್ಲಿ ಮಾಡಲಾಗುತ್ತಿದೆ. ಆನುಷಂಗಿಕ ಮಾಹಿತಿಗೆ (ಉಲ್ಲೇಖಿಸುವುದಕ್ಕೆ) ಸಂಬಂಧಿಸಿದಂತೆ ಹೆಚ್ಚು ಕಡಿಮೆ ಇದೇ ಅರ್ಥ ಬರುವ ವಾದವನ್ನು ಕನ್ನಡದಲ್ಲಿ ನಡೆಯುವ ಇತರ ಸಂಶೋಧನೆಗಳ ಸಂದರ್ಭದಲ್ಲೂ ಕಾಣಬಹುದು. ಮಾಹಿತಿಯ ಈ ಬಗೆಯ (ಪ್ರಾಥಮಿಕ/ಆನುಷಂಗಿಕ ಎನ್ನುವ) ವಿಂಗಡನೆ ಎಷ್ಟು ಸರಿ? ಸಮಾಜ ವಿಜ್ಞಾನದ ಎಲ್ಲ ಶಿಸ್ತುಗಳಿಗೆ ಈ ಬಗೆಯ ವಿಂಗಡನೆಯನ್ನು ಅನ್ವಯಿಸಬಹುದೆ? ಆನುಷಂಗಿಕ ಮಾಹಿತಿ (ಉಲ್ಲೇಖಿಸುವುದರ) ಬಗ್ಗೆ ಇರುವ ಈ ನಿಲುವುಗಳು ಎಷ್ಟು ಸರಿ? ಇತ್ಯಾದಿ ಪ್ರಶ್ನೆಗಳಿಗೆ ಉತ್ತರಿಸಲು ಈ ಅಧ್ಯಾಯದಲ್ಲಿ ಪ್ರಯತ್ನಿಸಲಾಗಿದೆ. ಇದೇ ಅಧ್ಯಾಯದಲ್ಲಿ ಆನುಷಂಗಿಕ ಮಾಹಿತಿಗೆ ಸಂಬಂಧಿಸಿದ ಇನ್ನೆರಡು ಅಂಶಗಳ ಮೇಲೂ ಗಮನ ಹರಿಸಲಾಗಿದೆ. ಒಂದು, ದಾಖಲೆಯ ಗುಣದ ಆಧಾರದಲ್ಲಿ ದಾಖಲೆಗಳನ್ನು ಶ್ರೇಣೀಕರಿಸುವುದು. ಅಂದರೆ ಕೆಲವೊಂದು ದಾಖಲೆಗಳನ್ನು ಪ್ರಗತಿಪರ ಮತ್ತು ಕೆಲವನ್ನು ಪ್ರಗತಿಪರ ಅಲ್ಲವೆಂದು ವಿಂಗಡಿಸುವುದು. ಈ ಬಗೆ ವರ್ಗೀಕರಣ ಸರಿಯೇ? ಎರಡು, ಆನುಷಂಗಿಕ ಮಾಹಿತಿಯಲ್ಲಿನ ಲೋಪದೋಷಗಳು. ಆನುಷಂಗಿಕ ಮಾಹಿತಿಗಳನ್ನು (ಅದರಲ್ಲೂ ಸರಕಾರಿ ಅಥವಾ ಸಾರ್ವಜನಿಕ ಸಮಸ್ಯೆಗಳು ಬಿಡುಗಡೆ ಮಾಡುವ ಅಂಕಿ ಅಂಶಗಳು) ಬಳಸುವಾಗ ಅವುಗಳ ಹಿನ್ನೆಲೆಯನ್ನು ಪರೀಕ್ಷಿಸದೆ ಬಳಸುವುದು ಸರ್ವೇ ಸಾಮಾನ್ಯ. ಸಂಘ ಸಂಸ್ಥೆಗಳು ಪ್ರಕಟಿಸುವ ಅಂಕಿಅಂಶಗಳನ್ನು ಯಥಾ ರೀತಿಯಲ್ಲಿ ಬಳಸಬಹುದೇ? ಅವುಗಳಲ್ಲಿ ದೋಷವಿರುವ ಸಾಧ್ಯತೆಗಳಿಲ್ಲವೇ? ಇತ್ಯಾದಿ ಪ್ರಶ್ನೆಗಳು ಆನುಷಂಗಿಕ ಮಾಹಿತಿ ಸಂಗ್ರಹಕ್ಕೆ ಸಂಬಂಧಿಸಿದಂತೆ ಮುಂಚೂಣಿಗೆ ಬಂದಿವೆ.[7] ಇವೆಲ್ಲವನ್ನು ಇದೇ ಅಧ್ಯಾಯದಲ್ಲಿ ವಿಶ್ಲೇಷಿಸಲಾಗಿದೆ.

ಸಂಶೋಧನೆಗೆ ಒಳಪಡುವ ಸಂಗತಿ, ವ್ಯಕ್ತಿ, ಕುಟುಂಬ, ಸಮುದಾಯ ಇತ್ಯಾದಿಗಳಿಗೆ ಸಂಬಂಧಿಸಿದ ಮಾಹಿತಿಯನ್ನು ನೇರವಾಗಿ ವ್ಯಕ್ತಿ, ಕುಟುಂಬ, ಸಮುದಾಯಗಳಿಂದಲೇ ಪಡೆದರೆ ಅವುಗಳನ್ನು ಪ್ರಾಥಮಿಕ ಮಾಹಿತಿಯೆಂದು ಪರಿಗಣಿಸಲಾಗುವುದು. ಪ್ರಾಥಮಿಕ ಮಾಹಿತಿ ಸಿದ್ಧರೂಪದಲ್ಲಿ ಇರುವುದಿಲ್ಲ. ಅಷ್ಟು ಮಾತ್ರವಲ್ಲ, ದಿನನಿತ್ಯ ಪ್ರಪಂಚವನ್ನು ಗ್ರಹಿಸುವ ಮತ್ತು ವಿಧಾನಗಳು ಸಂಶೋಧನೆಗೆ ಬೇಕಾದ ಮಾಹಿತಿ ಸಂಗ್ರಹಿಸಲು ಸಾಕಾಗುವುದಿಲ್ಲ. ಆದುದರಿಂದಲೇ ಸಂಶೋಧನೆಗೆ ಬೇಕಾಗಿರುವ ಪ್ರಾಥಮಿಕ ಮಾಹಿತಿ ಸಂಗ್ರಹಕ್ಕೆ ಹಲವಾರು ವಿಧಾನಗಳು ರೂಪುಗೊಂಡಿವೆ. ಪ್ರತೀ ವಿಧಾನಕ್ಕೂ ಅದರದ್ದೇ ಆದ ಅನುಕೂಲ ಮತ್ತು ಅನಾನುಕೂಲತೆಗಳಿವೆ. ಜತೆಗೆ ಸಂಶೋಧನಾ ವಿಷಯಗಳು ಕೂಡ ಮಾಹಿತಿ ಸಂಗ್ರಹ ವಿಧಾನದ ಆಯ್ಕೆಯನ್ನು ಪ್ರಭಾವಿಸುತ್ತವೆ. ಆದರೂ ಬಹುತೇಕ ಸಂಶೋಧನಾ ವಿದ್ಯಾರ್ಥಿಗಳು ಮತ್ತು ಮಾರ್ಗದರ್ಶಕರು ಮಾಹಿತಿ ಸಂಗ್ರಹದ ವಿವಿಧ ವಿಧಾನಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ವಿಷಯ ಆಯ್ಕೆ ಮಾಡಿದ ನಂತರ ಪ್ರಶ್ನಾವಳಿ ತಯಾರು ಮಾಡಿ ಕ್ಷೇತ್ರಕಾರ್ಯಕ್ಕೆ ಹೊರಟೇ ಬಿಡುವುದು ಸಂಶೋಧಕರ ಕ್ರಮ. ಪ್ರಶ್ನಾವಳಿ ಯಾಕೆ ಎನ್ನುವ ಪ್ರಶ್ನೆಯನ್ನೇ ಬಹುತೇಕ ಸಂದರ್ಭದಲ್ಲಿ ಕೇಳುವ ಗೋಜಿಗೆ ಹೋಗುವುದಿಲ್ಲ. ಪ್ರಶ್ನಾವಳಿಯ ಮೂಲಕ, ಕ್ಷೇತ್ರಕಾರ್ಯ ಮಾಡಿ ಅಂಕಿ ಅಂಶ ಸಂಗ್ರಹಿಸುವ ಕ್ರಮ ವಿಜ್ಞಾನದ ಕೊಡುಗೆ. ವಿಜ್ಞಾನದ ವಿಧಾನದಲ್ಲಿ ಅಧ್ಯಯನಕ್ಕೆ ಒಳಗಾಗುವ ವಸ್ತು ಅಥವಾ ಸಂಗತಿಯನ್ನು ಪ್ರಯೋಗಾಲಯಕ್ಕೆ ತಂದು ಅದನ್ನು ಬಿಡಿ ಬಿಡಿಯಾಗಿ ಪರೀಕ್ಷಿಸಲಾಗುತ್ತದೆ. ಆ ಮೂಲಕ ಆ ವಸ್ತು ಅಥವಾ ಸಂಗತಿ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತದೆ. ಆ ಮಾಹಿತಿಯನ್ನು ವಿಶ್ಲೇಷಿಸಿ ಆ ವಸ್ತು ಅಥವಾ ಸಂಗತಿ ಕುರಿತು ಒಂದು ತೀರ್ಮಾನಕ್ಕೆ ಬರಲಾಗುತ್ತದೆ. ಈ ತೀರ್ಮಾನ ಪರೀಕ್ಷೆಗೆ ಒಳಗಾಗುವ ವಸ್ತು ಅಥವಾ ಸಂಗತಿಗೆ ಮಾತ್ರ ಅನ್ವಯಿಸುವುದಿಲ್ಲ ಆ ವಸ್ತು ಅಥವಾ ಸಂಗತಿಗೆ ಸೇರಿದ ಇತರ ವಸ್ತು ಅಥವಾ ಸಂಗತಿಗಳಿಗೂ ಅನ್ವಯಿಸುತ್ತದೆ. ಇದೇ ಕ್ರಮವನ್ನು ಸಮಾಜ ವಿಜ್ಞಾನದಲ್ಲಿ ಅಳವಡಿಸಿಕೊಳ್ಳಲಾಗಿದೆ. ಒಂದು ಕಾಲದಲ್ಲಿ ವಿಜ್ಞಾನದ ವಿಧಾನ ಪ್ರಕಾರ ಅಧ್ಯಯನ ಮಾಡುವುದೆಂದರೆ ಸತ್ಯವನ್ನು ಹೇಳುವ ಅತಿ ಸೂಕ್ತ ಮತ್ತು ಏಕ ಮಾತ್ರ ವಿಧಾನ ಎಂದು ತಿಳಿಯಲಾಗಿತ್ತು. ಆದರೆ ಈಗ ಸ್ಥಿತಿ ಬದಲಾಗಿದೆ. ವಿಜ್ಞಾನದ ವಿಧಾನ ವಿಮರ್ಶೆಗೆ ಗುರಿಯಾಗಿದೆ. ಅದರ ವಿರುದ್ಧ ಹಲವಾರು ಟೀಕೆಗಳಿವೆ. ಈ ಹಿನ್ನೆಲೆಯಲ್ಲಿ ಮಾಹಿತಿ ಸಂಗ್ರಹಕ್ಕೆ ಇರುವ ವಿವಿಧ ವಿಧಾನಗಳನ್ನು ವಿಮರ್ಶಾತ್ಮಕವಾಗಿ ನೋಡುವ ಅಗತ್ಯ ಇದೆ. ಈ ಅಧ್ಯಾಯದಲ್ಲಿ ಅಂತಹ ಒಂದು ಪ್ರಯತ್ನವನ್ನು ಮಾಡಲಾಗಿದೆ. ನಾಲ್ಕು ಮಾಹಿತಿ ಸಂಗ್ರಹ ವಿಧಾನಗಳನ್ನು ಈ ಅಧ್ಯಾಯದಲ್ಲಿ ವಿಮರ್ಶಾತ್ಮಕವಾಗಿ ಪರಿಶೀಲಿಸಲಾಗಿದೆ.[8]

ಮಾಹಿತಿ ವಿಶ್ಲೇಷಣೆಯ ಕೆಲವೊಂದು ವಿಧಾನಗಳನ್ನು ಎಂಟನೇ ಅಧ್ಯಾಯದಲ್ಲಿ ಪರಿಚಯಿಸಲಾಗಿದೆ.[9] ವಿಶ್ಲೇಷಣೆ ಸಮಾಜ ಸಂಶೋಧನೆಯಲ್ಲಿ ತುಂಬಾ ಮಹತ್ವದ ಹಂತ. ಇದೊಂದು (ವಿಶ್ಲೇಷಣೆ) ಬಗೆಯಲ್ಲಿ ಮರದೊಳಗಿನ ತಿರುಳಿನಂತೆ ಕೆಲಸ ಮಾಡುತ್ತದೆ. ತಿರುಳು ಗಟ್ಟಿಯಾಗಿದ್ದರೆ ಮರ ಗಟ್ಟಿಯಾಗಿದೆ ಎನ್ನುವ ತೀರ್ಮಾನಕ್ಕೆ ಬರಬಹುದು. ಇದೇ ರೀತಿಯಲ್ಲಿ ವಿಶ್ಲೇಷಣೆ ಪರಿಪೂರ್ಣವಾಗಿದ್ದರೆ ಪ್ರಬಂಧ ಗಟ್ಟಿಯಾಗಿದೆ ಎನ್ನುವ ತೀರ್ಮಾನಕ್ಕೆ ಬರಬಹುದು. ಸಮಾಜವಿಜ್ಞಾನದಲ್ಲಿ ಹಲವಾರು ಶಿಸ್ತುಗಳು ಸೇರಿವೆ. ಈ ಎಲ್ಲವುಗಳಿಗೂ ಒಂದೇ ವಿಶ್ಲೇಷಣಾ ಕ್ರಮ ಇದೆ ಎಂದು ತಿಳಿಯುವುದು ಸರಿಯಲ್ಲ. ಶಿಸ್ತಿಗನುಸಾರ ವಿಶ್ಲೇಷಣಾ ಕ್ರಮದಲ್ಲೂ ಬದಲಾವಣೆಗಳಿವೆ. ಹಾಗೆಂದು ಸಮಾಜವಿಜ್ಞಾನದಲ್ಲಿ ಬರುವ ಶಿಸ್ತುಗಳ ನಡುವೆ ಯಾವುದೇ ಸಂಬಂಧ ಇಲ್ಲ ಎನ್ನಲಾಗುವುದಿಲ್ಲ. ಹೆಚ್ಚು ಕಡಿಮೆ ಈ ಎಲ್ಲ ಶಿಸ್ತುಗಳು ಆರಂಭದಲ್ಲಿ ಕೆಲವೊಂದು ಮೂಲಸೂತ್ರಗಳನ್ನು ಅನುಸರಿಸಿಕೊಂಡು ಬೆಳೆದಿವೆ. ಈ ಎಲ್ಲ ಶಿಸ್ತುಗಳ ಸಂಶೋಧನೆಯ ತಾತ್ವಿಕ ಹಿನ್ನೆಲೆ, ಮಾಹಿತಿ ಸಂಗ್ರಹ ವಿಧಾನ ಇತ್ಯಾದಿಗಳಲ್ಲೂ ತಕ್ಕಮಟ್ಟಿನ ಹೋಲಿಕೆ ಇದೆ. ಅದೇ ರೀತಿಯಲ್ಲಿ ಸಂಗ್ರಹಿಸಿದ ಮಾಹಿತಿಯನ್ನು ವಿಶ್ಲೇಷಿಸುವಾಗ ಅನುಸರಿಸಬೇಕಾದ ನಿಯಮದಲ್ಲೂ ಸಾಕಷ್ಟು ಸಾಮ್ಯತೆ ಇದೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಈ ಅಧ್ಯಾಯದಲ್ಲಿ ವಿಶ್ಲೇಷಣೆಯ ಮೂಲ ತತ್ವಗಳು, ವಿವಿಧ ವಿಶ್ಲೇಷಣಾ ವಿಧಾನಗಳು ಇತ್ಯಾದಿಗಳನ್ನು ವಿವರಿಸಲಾಗಿದೆ. ಎಂಟು ಅಧ್ಯಾಯಗಳಲ್ಲಿ ಅಸ್ಪಷ್ಟವಾಗಿ ಮಂಡಿತವಾದ ಆದರೆ ಆ ಅಧ್ಯಾಯಗಳಲ್ಲಿ ಒಳಗೊಂಡಿರುವ ಕೆಲವೊಂದು ತಾತ್ವಿಕ ನಿಲುವುಗಳನ್ನು ಸ್ಪಷ್ಟಪಡಿಸುವ ಪ್ರಯತ್ನವನ್ನು ಕೊನೆಯ ಅಧ್ಯಾಯದಲ್ಲಿ ಮಾಡಲಾಗಿದೆ.

ಸಂಬಂಧಿಸಿದ ಇತರ ವಿಚಾರಗಳು

ಸಮಾಜ ಸಂಶೋಧನೆಯ ಕುರಿತು ಈಗಾಗಲೇ ಕನ್ನಡದಲ್ಲಿ ಸಾಕಷ್ಟು ಬರಹಗಳು  ಬಂದಿವೆ. ಅವುಗಳನ್ನೆಲ್ಲ ಗಮನದಲ್ಲಿಟ್ಟುಕೊಂಡು ಇಲ್ಲಿನ ಅಧ್ಯಾಯಗಳು ರಚಿತವಾಗಿಲ್ಲ. ಆ ರೀತಿ ಮಾಡದಿರುವುದಕ್ಕೆ ಕೆಲವೊಂದು ಕಾರಣಗಳಿವೆ. ವಿಧಾನದ ಕುರಿತು ಕನ್ನಡದಲ್ಲಿ ಮಾನವಿಕ ಮತ್ತು ಸಮಾಜಶಾಸ್ತ್ರದ ಹಿನ್ನೆಲೆಯ ವಿದ್ವಾಂಸರು ಬರೆದಿದ್ದಾರೆ. ಈ ವಿದ್ವಾಂಸರು ಎಂಪಿರಿಕಲ್ ವಿಧಾನಕ್ಕೆ ಮಹತ್ವ ನೀಡಿದ್ದಾರೆ. ಮಾನವಿಕದ ತಾತ್ವಿಕ ಹಿನ್ನೆಲೆ ಮೇಲಿನ ಮುಖ್ಯ ಚರ್ಚೆಗಳನ್ನು ಗಮನದಲ್ಲಿಟ್ಟುಕೊಂಡು ತಮ್ಮ ಚರ್ಚೆಗಳನ್ನು ಬೆಳೆಸಿಲ್ಲ.[10] ಸಮಾಜಶಾಸ್ತ್ರದ ಹಿನ್ನೆಲೆಯಿಂದ ಬಂದ ವಿಧಾನದ ಮೇಲಿನ ಪುಸ್ತಕಗಳು ವಿಧಾನದ ಮೇಲಿನ ಇಂಗ್ಲಿಶ್ ಬರಹಗಳ ಭಾಷಾಂತರದಂತಿವೆ.[11] ಎಲ್ಲೂ ಕೂಡ ಸ್ಥಳೀಯ ಪರಿಸರದಲ್ಲಿ ವಿಧಾನವನ್ನು ಅನ್ವಯಿಸುವಾಗ ಆಗುವ ತೊಂದರೆಗಳ ಕುರಿತಾಗಲಿ ಅಥವಾ ವಿಧಾನದಲ್ಲಿ ಮಾಡಿಕೊಳ್ಳಬೇಕಾದ ಮಾರ್ಪಾಟು ಬಗೆಗಾಗಲಿ ಈ ಬರಹಗಳು ವಿಶೇಷ ಮಹತ್ವ ನೀಡುವುದಿಲ್ಲ. ಇದನ್ನೊಂದು (ವಿಧಾನದ ಮೇಲೆ ಕನ್ನಡದಲ್ಲಿ ಈಗಾಗಲೇ ಬಂದಿರುವ ಬರಹಗಳನ್ನು ಗಮನದಲ್ಲಿಟ್ಟುಕೊಂಡು ಇಲ್ಲಿನ ಅಧ್ಯಾಯಗಳನ್ನು ರಚಿಸದಿರುವುದನ್ನು) ಪುಸ್ತಕದ ಮಿತಿಯೆಂದು ಪರಿಗಣಿಸಿದರೆ ತಪ್ಪಾಗಲಾರದು. ಪುಸ್ತಕದ ಇತರ ಮಿತಿಗಳನ್ನು ಪುಸ್ತಕದ ಕೊನೆಯಲ್ಲಿ ನೀಡಲಾಗಿದೆ.[12] ಪುಸ್ತಕಕ್ಕೆ ಸಂಬಂಧಿಸಿದ ಇತರ ವಿಚಾರಗಳು ಇಂತಿವೆ. ಒಂದು, ಸಮಾಜ ವಿಜ್ಞಾನ ತುಂಬಾ ವಿಸ್ತಾರವಾದ ಕ್ಷೇತ್ರ. ಇಲ್ಲಿ ಸಮಾಜಶಾಶ್ತ್ರ, ರಾಜಕೀಯ ಶಾಸ್ತ್ರ, ಅರ್ಥಶಾಸ್ತ್ರ ಹೀಗೆ ಹಲವಾರು ಅಧ್ಯಯನ ಶಿಸ್ತುಗಳು ಇವೆ. ಪ್ರತಿ ಶಾಸ್ತ್ರಕ್ಕೂ ಅದರದ್ದೇ ಆದ ಸಂಶೋಧನೆಯ ಕಲ್ಪನೆ ಮತ್ತು ವಿಧಾನ ಇದೆ. ಆದುದರಿಂದ ಅವುಗಳೆಲ್ಲವನ್ನು ಸೇರಿಸಿ ವಿಧಾನ ಕುರಿತು ಮಾತಡುವುದು ಬಹು ದೊಡ್ಡ ಕೆಲಸ. ಇಲ್ಲಿ ಅಷ್ಟು ದೊಡ್ಡ ಪ್ರಯತ್ನಕ್ಕೆ ಇಳಿದಿಲ್ಲ. ಹಾಗೆ ನೋಡಿದರೆ ಇಲ್ಲಿನ ಅಧ್ಯಾಯಗಳು ಒಂದು ನಿರ್ದಿಷ್ಟ ಸಮಾಜ ಶಿಸ್ತಿನ ಸಂಶೋಧನಾ ವಿಧಾನ ಕುರಿತ ಚರ್ಚೆಯೊಂದಿಗೆ ನೇರ ಸಂಬಂಧ ಹೊಂದಿಲ್ಲ. ಹೆಚ್ಚೆಂದರೆ ಮೇಲಿನ ಎಲ್ಲ ಶಿಸ್ತುಗಳ ವಿಧಾನದೊಂದಿಗೆ ದೂರದ ಸಂವಾದ ನಡೆಸಬಹುದು. ಎರಡು, ಸಂಶೋಧನಾ ವಿಧಾನದ ಚರ್ಚೆ ಮೂರು ಅಂಶಗಳನ್ನು ಒಳಗೊಂಡಿರುತ್ತದೆ – ವಿಧಾನದ ಹಿಂದಿರುವ ತತ್ವ, ಮಾಹಿತಿ ಸಂಗ್ರಹ ವಿಧಾನ ಮತ್ತು ಮಾಹಿತಿ ವಿಶ್ಲೇಷಣಾ ವಿಧಾನ. ವಿಧಾನದ ತಾತ್ವಿಕಾಂಶಗಳನ್ನು ಪುಸ್ತಕದ ಮೊದಲ ನಾಲ್ಕು ಅಧ್ಯಾಯಗಳಲ್ಲಿ ಚರ್ಚಿಸಲಾಗಿದೆ. ತತ್ತ್ವ ಎನ್ನುವಾಗ ಒಂದು ಬೃಹತ್ ಫಿಲಾಸೊಫಿಕಲ್ ಅಥವಾ ಎಪಿಸ್ಟಮಲೋಜಿಕಲ್ ಡಿಬೇಟ್ ನಡೆಯಲಿದೆ ಎಂದು ತಿಳಿಯಬೇಡಿ. ಇಲ್ಲಿ ತತ್ವ ಎನ್ನುವುದಕ್ಕಿಂತ ನೀತಿ, ನಿಯಮ ಎಂದರೂ ಸರಿಯಾಗಬಹುದು. ಮಾಹಿತಿ ಸಂಗ್ರಹ ವಿಧಾನಗಳ ಬಗ್ಗೆ ಚರ್ಚಿಸುವಾಗ ವಿಧಾನಗಳನ್ನು ಯಥಾರೂಪದಲ್ಲಿ ಮಂಡಿಸುವುದಕ್ಕಿಂತ ಸ್ಥಳೀಯ ಅನ್ವಯಿಕೆ ಸಂದರ್ಭದಲ್ಲಿ ಅವುಗಳು ಪಡೆದುಕೊಳ್ಳುವ ಸ್ವರೂಪಗಳ ಮೇಲೆ ಗಮನಹರಿಸಲಾಗಿದೆ.

ಮೂರು, ವಿಜ್ಞಾನ ಎನ್ನುವ ಪದವನ್ನು ಅದರ ಮೂಲ ಅರ್ಥದಲ್ಲಿ ಬಳಸುತ್ತಿಲ್ಲ. ಅಂದರೆ ವಿಜ್ಞಾನದ ಸಂಶೋಧನಾ ವಿಧಾನ ಮತ್ತು ಚರಿತ್ರೆಯೊಂದಿಗೆ ಆರಂಭಿಸಿ ಅದರ ಇಂದಿನ ಸ್ಥಿತಿಗತಿ ಬಗ್ಗೆ ವಿವರಿಸುವ ಪ್ರಯತ್ನ ಇದಲ್ಲ. ಇಲ್ಲಿ ವಿಜ್ಞಾನ ಎನ್ನುವಾಗ ನನ್ನ ಮುಂದೆ ಇರುವುದು ಒಂದು ಕನಿಷ್ಠ ಶಿಸ್ತುಬದ್ಧ ಅಧ್ಯಯನದ ಚಿತ್ರಣ. ಇದನ್ನು ಇನ್ನೂ ಸರಳವಾಗಿ ಹೇಳುವುದಾದರೆ ನಮ್ಮ ಊಹೆಯನ್ನು ಬಲಪಡಿಸುವ ಅಂಶಗಳನ್ನು ನೀಡುವುದರ ಜತೆಗೆ ಅಧ್ಯಯನ ಮುಖ್ಯ ಥೀಸಿಸ್ಸನ್ನು ಪ್ರಶ್ನಿಸುವ ದಾಖಲೆಗಳನ್ನು ಹುಡುಕುವುದು ಕೂಡ ಅಧ್ಯಯನ ಭಾಗವಾಗಬೇಕು ಎನ್ನುವ ದೃಷ್ಟಿಕೋನ. ಈ ಅರ್ಥದಲ್ಲಿ ಇಲ್ಲಿ ವೈಜ್ಞಾನಿಕ ವಿಧಾನ ಪದವನ್ನು ಬಳಸಿದ್ದೇನೆ. ನಾಲ್ಕು, ಇಲ್ಲಿ ಸಂಶೋಧನಾ ವಿಧಾನಗಳನ್ನು ಒಟ್ಟು ಪರಿಸರದಿಂದ ಪ್ರತ್ಯೇಕಿಸಿ ವಿಶ್ಲೇಷಿಸುವುದಕ್ಕಿಂತ ಒಟ್ಟು ಪರಿಸರದಲ್ಲಿಟ್ಟು ವಿಶ್ಲೇಷಿಸುವುದಕ್ಕೆ ಮಹತ್ವ ನೀಡಲಾಗಿದೆ. ಇಲ್ಲಿ ಎರಡು ಬಗೆಯ ಪರಿಸರಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ. ಒಂದು, ಸಂಶೋಧನೆಯೊಂದಿಗೆ ನೇರ ಸಂಬಂಧವಿರುವ ಪರಿಸರ ಮತ್ತು ಎರಡು, ಸಂಶೋಧನಾ ಚಟುವಟಿಕೆಯೊಂದಿಗೆ ಪರೋಕ್ಷ ಸಂಬಂಧ ಇರುವ ಪರಿಸರ, ಮೊದಲನೆಯದರ ಸಾಲಿನಲ್ಲಿ ಸಂಶೋಧನಾ ವಿಧಾನಗಳು, ವಿಧಾನದ ತಾತ್ವಿಕತೆಗಳು, ಸಂಶೋಧನೆಯ ಸಾಂಸ್ಥಿಕ ಸ್ವರೂಪ ಇತ್ಯಾದಿಗಳು ಬರುತ್ತವೆ.[13] ಸಂಶೋಧನಾ ಚಟುವಟಿಕೆಯೊಂದಿಗೆ ಪರೋಕ್ಷ ಸಂಬಂಧವಿರುವ ಪರಿಸರದಲ್ಲಿ ಯಜಮಾನಿಕೆಯಲ್ಲಿರುವ ಥಿಯರಿಗಳು, ಸಂಶೋಧನೆ ನಡೆಯುವ ಸಮಾಜೋರಾಜಕೀಯ ಪರಿಸರ ಇತ್ಯಾದಿಗಳನ್ನು ಪರಿಗಣಿಸಲಾಗಿದೆ.

* * *

[1] ಈ ಅಧ್ಯಾಯ ಲೇಖನ ರೂಪದಲ್ಲಿ ಹಿಂದೆ ಪ್ರಕಟವಾಗಿಲ್ಲ. ಲೇಖನಗಳ ಸಂಗ್ರಹಕ್ಕೊಂದು ಪುಸ್ತಕ ರೂಪ ಕೊಡುವಲ್ಲಿ ಸಮಾಜ ಥಿಯರಿಗಳು ಮತ್ತು ಅವುಗಳ ಹಿನ್ನೆಲೆಯನ್ನು ಪರಿಚಯಿಸುವ ದೃಷ್ಟಿಯಿಂದ ಈ ಅಧ್ಯಾಯವನ್ನು ರಚಿಸಲಾಗಿದೆ.

[2] ೨೦೦೧ ರಲ್ಲಿ ಕನ್ನಡ ವಿಶ್ವವಿದ್ಯಾಲಯದ ಅಧ್ಯಯನಾಂಗ ಮತ್ತು ಶಂಭಾ ಅಧ್ಯಯನ ಪೀಠ ಸಂಘಟಿಸಿದ ಸಂಶೋಧನಾ ಕಮ್ಮಟದಲ್ಲಿ ‘ಸಮಾಜ ವಿಜ್ಞಾನದಲ್ಲಿನ ವಿಜ್ಞಾನ ಕುರಿತು ಕೆಲವು ಟಿಪ್ಪಣಿಗಳು’, ಎನ್ನುವ ಪ್ರಬಂಧ ಮಂಡಿಸಿದ್ದೆ. ಅದೇ ಪ್ರಬಂಧ ಹಿ.ಚಿ. ಬೋರಲಿಂಗಯ್ಯ ಮತ್ತು ಎಸ್. ಪ್ರಭಾಕರ ಸಂಪಾದಿಸಿದ ಬುಡಕಟ್ಟು ಅಧ್ಯಯನ ಪತ್ರಿಕೆಯಲ್ಲಿ (ಸಂಪುಟ ೧, ಸಂಚಿಕೆ ೧, ೨೦೦೩, ಪು. ೮೨-೧೦೪) ಪ್ರಕಟವಾಗಿದೆ. ಈ ಅಧ್ಯಾಯ ಆ ಲೇಖನದ ಪರಿಷ್ಕೃತ ರೂಪ. ಆ ಲೇಖನದಲ್ಲಿ ತಳೆದ ತೀರ್ಮಾನಕ್ಕೂ ಈ ಅಧ್ಯಾಯದಲ್ಲಿ ತಳೆಯುವ ತೀರ್ಮಾನಕ್ಕೂ ಸಾಕಷ್ಟು ಅಂತರವಿದೆ. ಲೇಖನದಲ್ಲಿ ವಿಜ್ಞಾನದ ವಿಧಾನಕ್ಕೆ ಮತ್ತೊಂದು ಅವಕಾಶ ಕೊಡುವ ಅಗತ್ಯದ ಕುರಿತು ವಾದಿಸಿದ್ದೇನೆ. ಆದರೆ ಇಲ್ಲಿ ವಿಜ್ಞಾನದ ವಿಧಾನವನ್ನು ಹರ್ಮೆನೆಟಿಕ್ಸ್ ಮತ್ತು ಆಧುನಿಕೋತ್ತರ ಚಿಂತನೆಗಳೊಂದಿಗೆ ಹೋಲಿಸಿ ಸಮಾಜ ಸಂಶೋಧನೆಯಲ್ಲಿ ವಿಜ್ಞಾನದ ವಿಧಾನದ ಸಮಸ್ಯೆಗಳನ್ನು ಗುರುತಿಸಲು ಪ್ರಯತ್ನಿಸಿದ್ದೇನೆ.

[3] ಈ ಅಧ್ಯಾಯದಲ್ಲಿ ಬರುವ ಕೆಲವು ವಿಚಾರಗಳು ಎ. ಶ್ರೀಧರ ಮತ್ತು ಸಿದ್ಧಗಂಗಮ್ಮ ಸಂಪಾದಿಸಿದ ಅಭಿವೃದ್ಧಿ ಅಧ್ಯಯನ (ಸಂಪುಟ ೪, ಸಂಚಿಕೆ, ೧, ೨೦೦೫, ಪು. ೫-೩೫) ಪತ್ರಿಕೆಯಲ್ಲಿ ‘ಸಂಶೋಧಕರು ಮತ್ತು ಸಮಾಜ’ ಎನ್ನುವ ಲೇಖನದಲ್ಲಿ ಪ್ರಕಟವಾಗಿದೆ.

[4] ಕನ್ನಡ ವಿಶ್ವವಿದ್ಯಾಲಯದ ಸಂಶೋಧನಾ ಕಮ್ಮಟಗಳಲ್ಲಿ ತುಂಬಾ ಚರ್ಚೆಯಾಗುವ ತಾತ್ವಿಕ ಅಂಶಗಳೆಂದರೆ ಬಹುಸುಖ ಮತ್ತು ಬಹುಸತ್ಯದ ಕಲ್ಪನೆಗಳು. ಬಹುಸತ್ಯ ಅಥವಾ ಬಹುಸುಖದ ಕಲ್ಪನೆಗಳ ಮೂಲಕ ಬಹುತ್ವವನ್ನು ಗಟ್ಟಿಗೊಳಿಸುವ ಮತ್ತು ಅದನ್ನೊಂದು ಆದರ್ಶವೆಂದು ಎಲ್ಲರೂ ಒಪ್ಪಬೇಕೆನ್ನುವ ಆಶಯ ಈ ಬಗೆಯ ಪುನರಪಿ ಚರ್ಚೆಯಲ್ಲಿ ಅಡಗಿದೆ ಎಂದು ನನ್ನ ಗ್ರಹಿಕೆ. ಆದರೆ ಆ ಬಹುಸುಖ ಅಥವಾ ಸತ್ಯದ ಕಲ್ಪನೆಗಳನ್ನು ಅತಿಯಾಗಿ ಜಗ್ಗಿದರೆ ಏನಾದಿತೆಂದು ನೋಡುವ ಒಂದು ಕಿರು ಪ್ರಯತ್ನವನ್ನು ನಾನು ‘ಸಂಶೋಧನೆ ಮತ್ತು ಸಾಮಾಜಿಕ ಪರಿವರ್ತನೆ’, ಲೇಖನದಲ್ಲಿ ಮಾಡಿದ್ದೆ. ಆ ಲೇಖನ ಚಂದ್ರ ಪೂಜಾರಿ ಮತ್ತು ಟಿ.ಆರ್. ಚಂದ್ರಶೇಖರ ಸಂಪಾದಿಸಿದ ಅಭಿವೃದ್ಧಿ ಅಧ್ಯಯನ (ಸಂಪುಟ ೨, ಸಂಚಿಕೆ ೨, ೨೦೦೩, ಪು. ೪೭-೬೬) ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಈ ಅಧ್ಯಾಯ ಆ ಲೇಖನದ ಪರಿಷ್ಕೃತ ರೂಪ.

[5] ಕನ್ನಡ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಗಳಿಗೆ ಪ್ರತಿವರ್ಷ ಆಯಾಯ ವಿಭಾಗಗಳಲ್ಲಿ ಒಂದು ವಾರದ ಸಂಶೋಧನಾ ಕಮ್ಮಟ ನಡೆಸುವ ಕ್ರಮ ಜಾರಿಯಲ್ಲಿದೆ. ೨೦೦೩-೪ನೇ ಶೈಕ್ಷಣಿಕ ವರ್ಷದಲ್ಲಿ ವಿಭಾಗದ ಸಂಶೋಧನಾ ವಿದ್ಯಾರ್ಥಿಗಳಿಗೆ ‘ಸಮಸ್ಯೆ ಮತ್ತು ಸಮಸ್ಯೀಕರಿಸುವುದು’ ಎನ್ನುವ ವಿಚಾರದ ಮೇಲೆ ಉಪನ್ಯಾಸ ನೀಡಿದ್ದೆ. ಅದೇ ಉಪನ್ಯಾಸ ಟಿ.ಆರ್. ಚಂದ್ರಶೇಖರ, ಸಿದ್ಧಗಂಗಮ್ಮ ಮತ್ತು ಎ. ಶ್ರೀಧರ ಸಂಪಾದಿಸಿದ ಅಭಿವೃದ್ಧಿ ಅಧ್ಯಯನ (ಸಂಪುಟ ೩, ಸಂಚಿಕೆ ೨, ೨೦೦೫, ಪು. ೭-೨೯) ಪತ್ರಿಕೆಯಲ್ಲಿ ಲೇಖನ ರೂಪದಲ್ಲಿ ಪರಕಟವಾಗಿದೆ. ಈ ಅಧ್ಯಾಯ ಈ ಲೇಖನದ ಯಥಾರೂಪ.

[6] ಕನ್ನಡದಲ್ಲಿ ಸಮಾಜ ಸಂಗತಿಗಳ ಮೇಲೆ ಸಂಶೋಧನೆ ಮಾಡುವ ವಿದ್ಯಾರ್ಥಿಗಳನ್ನು ಗಮನದಲ್ಲಿರಿಸಿಕೊಂಡು ಇಲ್ಲಿನ ಅಧ್ಯಾಯಗಳನ್ನು ರಚಿಸಲಾಗಿದೆ. ಸಂಶೋಧನೆ ಮೇಲಿನ ಚರ್ಚೆ ಕೇವಲ ತಾತ್ವಿಕ ಸಂಗತಿಗಳಿಗೆ ಮಾತ್ರ ಸೀಮಿತವಾಗಬಾರದು; ಮಾಹಿತಿಗಳ ಸಂಗ್ರಹ ಮತ್ತು ವಿಶ್ಲೇಷಣೆಗೂ ಮಹತ್ವ ನೀಡಬೇಕೆನ್ನುವ ಉದ್ದೇಶದಿಂದ ಈ ಅಧ್ಯಾಯವನ್ನು ರಚಿಸಲಾಗಿದೆ. ಅಸಂಪ್ರದಾಯ ಮಾಹಿತಿ ಮೂಲಗಳ ಚರ್ಚೆ ಮತ್ತು ವಿಧಾನಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕನ್ನಡ ವಿಶ್ವವಿದ್ಯಾಲಯ ಜನಪದ ಸಂಶೋಧಕರಿಂದ ಪಡೆದಿದ್ದೇನೆ. ವಿಶ್ವವಿದ್ಯಾಲಯದಲ್ಲಿ ನಡೆಯುವ ವಿಚಾರ ಸಂಕಿರಣಗಳ ಜತೆಗೆ ಡಾ. ಹಿ.ಚಿ. ಬೋರಲಿಂಗಯ್ಯ, ಡಾ. ವೆಂಕಟೇಶ್‌ ಇಂದ್ವಾಡಿ, ಡಾ. ಎ.ವಿ. ನಾವಡ ಇವರೊಂದಿಗಿನ ಚರ್ಚೆ ಜನಪದ ಸಂಶೋಧನೆಯ ಮಾಹಿತಿ ಸಂಗ್ರಹದ ಸಮಸ್ಯೆಗಳನ್ನು ಪರಿಚಯಿಸಲು ನೆರವಾಗಿದೆ.

[7] ಅಂಕಿಅಂಶಗಳ ದೋಷ ಕುರಿತು ನಾನು ಹೆಚ್ಚು ಮಾಹಿತಿ ಪಡೆದಿರುವುದು ನಮ್ಮ ವಿಭಾಗ ನಡೆಸಿದ ಕಮ್ಮಟಗಳ ಸಂದರ್ಭದಲ್ಲಿ ಮತ್ತು ಪಂಚಾಯತ್ ಯೋಜನೆ ಸಂದರ್ಭದಲ್ಲಿ. ಇವುಗಳ ಕುರಿತು ನಾನು ಜನಾಯೋಜನೆ – ಹೈದರಾಬಾದ್ ಕರ್ನಾಟಕದ ಅನುಭವಗಳು (ವಿದ್ಯಾರಣ್ಯ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ೨೦೦೫) ಪುಸ್ತಕದಲ್ಲಿ ಚರ್ಚಿಸಿದ್ದೇನೆ. ಹೆಚ್ಚುಕಡಿಮೆ ಅದೇ ಮಾಹಿತಿಯನ್ನು ಈ ಪುಸ್ತಕದಲ್ಲೂ ಬಳಸಿದ್ದೇನೆ.

[8] ಪ್ರತಿ ಯೋಜನೆ ಶುರು ಮಾಡುವ ಮೊದಲು ವಿಭಾಗದಲ್ಲಿ ಮಾಹಿತಿ ಸಂಗ್ರಹ ವಿಧಾನಗಳ ಕುರಿತು ಚರ್ಚಿಸಲಾಗುತ್ತಿತ್ತು. ಆ ಚರ್ಚೆಯ ಸಂದರ್ಭದಲ್ಲಿ ರೂಪಿಸಿಕೊಂಡ ನೋಟ್ಸ್‌ಗಳನ್ನು ಬಳಸಿಕೊಂಡು ಕ್ಷೇತ್ರಕಾರ್ಯದ ಸಮಸ್ಯೆಗಳನ್ನು ಗುರುತಿಸುವ ಲೇಖನ ಬರೆದಿದ್ದೆ. ಅದನ್ನು ‘ಸಂಶೋಧಕರು ಮತ್ತು ಕ್ಷೇತ್ರಕಾರ್ಯ’ (ವಿದ್ಯಾರಣ್ಯ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ೨೦೦೫) ಮಂಟಪಮಾಲೆ ರೂಪದಲ್ಲಿ ಪ್ರಕಟಿಸಲಾಗಿದೆ. ಕ್ಷೇತ್ರಕಾರ್ಯದ ವಿಧಾನಗಳ ಮೇಲಿನ ಚರ್ಚೆಯನ್ನು ಮಾತ್ರ ಈ ಅಧ್ಯಾಯಲದ್ಲಿ ಬಳಸಿಕೊಳ್ಳಲಾಗಿದೆ.

[9] ಸಂಶೋಧನಾ ವಿಧಾನದ ಮೇಲಿನ ಚರ್ಚೆ ಮೂರು ಸಂಗತಿಗಳನ್ನು ಒಳಗೊಂಡಿರುತ್ತದೆ. ವಿಧಾನದ ತಾತ್ವಿಕತೆ, ಮಾಹಿತಿ ಸಂಗ್ರಹ ವಿಧಾನಗಳು ಮತ್ತು ಮಾಹಿತಿ ವಿಶ್ಲೇಷಣಾ ವಿಧಾನಗಳು. ಕನ್ನಡದ ಸಂದರ್ಭದಲ್ಲಿ ವಿಧಾನದ ಮೇಲಿನ ಬಹುತೇಕ ಚರ್ಚೆಗಳು ತಾತ್ವಿಕತೆಗೆ ಹೆಚ್ಚು ಒತ್ತು ನೀಡುವುದನ್ನು ನೋಡಿದ್ದೇನೆ. ಮಾಹಿತಿ ಸಂಗ್ರಹ ವಿಧಾನ ಅಥವಾ ವಿಶ್ಲೇಷಣಾ ವಿಧಾನಕ್ಕೆ ವಿಶೇಷ ಮಹತ್ವ ಇಲ್ಲದಾಗಿದೆ. ಇದರಿಂದಾಗಿ ಎಂಪಿರಿಕಲ್ ವಿಧಾನವನ್ನು ಟೀಕಿಸುತ್ತಾ ಎಂಪಿರಿಕಲ್ ವಿಧಾನದಲ್ಲೇ ಸಂಶೋಧನೆ ನಡೆಸುವ ವಿದ್ಯಾರ್ಥಿಗಳನ್ನು ನೋಡುವಂತಾಗಿದೆ. ಪುಟಗಟ್ಟಲೆ ಬರೆಯುವುದು ವಿಶ್ಲೇಷಣೆ ಎಂದಾಗಿದೆ. ಹಂತ ಹಂತವಾಗಿ ಥೀಸಿಸನ್ನು ಬೆಳೆಸುವಲ್ಲಿ ವಿಶ್ಲೇಷಣಾ ವಿಧಾನಗಳ ಮಹತ್ವವನ್ನು ಪರಿಚಯಿಸುವ ಉದ್ದೇಶದಿಂದ ಈ ಅಧ್ಯಾಯವನ್ನು ರಚಿಸಲಾಗಿದೆ.

[10] ಮಾನವಿಕದವರು ಎಂಪಿರಿಕಲ್ ವಿಧಾನದ ಬಗ್ಗೆ ಹೆಚ್ಚು ಒತ್ತು ನೀಡುತ್ತಾರೆ ಎನ್ನುವಾಗ ನನ್ನ ಗಮನದಲ್ಲಿರುವ ಇಬ್ಬರೂ ಪ್ರಮುಖ ಸಂಶೋಧಕರೆಂದರೆ ಚಿದಾನಂದಮೂರ್ತಿ ಮತ್ತು ಎಂ.ಎಂ. ಕಲಬುರ್ಗಿಯವರು. ವಿವರಗಳಿಗೆ ಕಲಬುರ್ಗಿಯವರ ಲೇಖನ ಮತ್ತು ‘ಸಂಶೋಧನೆಯ ಸ್ವರೂಪ’ ಸದಾನಂದ ಕನವಳ್ಳಿ ಮತ್ತು ವೀರಣ್ಣ ರಾಜೂರ (ಸಂ), ಮಹಾಮಾರ್ಗಡಾ. ಎಂ.ಎಂ. ಕಲಬುರ್ಗಿ ಅಭಿನಂದನ ಗ್ರಂಥ, ವೀರಶೈವ ಅಧ್ಯಯನ ಸಂಸ್ಥೆ, ಗದಗ ಮತ್ತು ವೀರಶೈವ ಅಧ್ಯಯನ ಅಕಾಡೆಮಿ, ಬೆಳಗಾಂ, ೧೯೯೮, ಪು. ೩-೬ ಮತ್ತು ಕಲಬುರ್ಗಿಯವರ ಪುಸ್ತಕ, ಕನ್ನಡ ಸಂಶೋಧನ ಶಾಸ್ತ್ರ, ಬೆಂಗಳೂರು : ಸಪ್ನ ಬುಕ್‌ ಹೌಸ್, ೧೯೯೨ ಗಳನ್ನು ನೋಡಬಹುದು. ಚಿದಾನಂದಮೂರ್ತಿಯವರ ಪಾಂಡಿತ್ಯರಸ, ವಿದ್ಯಾರಣ್ಯ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಯ, ೨೦೦೦. ಮಾನವಿಕ ಹಿನ್ನೆಲೆಯಲ್ಲಿದ್ದುಕೊಂಡು ಸಂಸ್ಕೃತಿ ಅಧ್ಯಯನಗಳ ತಾತ್ವಿಕ ನಿಲುವನ್ನು ಪ್ರತಿಪಾದಿಸುವವರೆಂದರೆ ಡಾ. ಕೆ.ವಿ.ನಾರಾಯಣ. ವಿವರಗಳಿಗೆ ಡಾ. ಕೆ.ವಿ. ನಾರಾಯಣ ಅವರ ಲೇಖನ ‘ಸಂಶೋಧನೆ ಪರಿಕಲ್ಪನೆ’, ಸದಾನಂದ ಕನವಳ್ಳಿ ಮತ್ತು ವೀರಣ್ಣ ರಾಜೂರ (ಸಂ), ಮಹಾಮಾರ್ಗಡಾ. ಎಂ.ಎಂ. ಕಲಬುರ್ಗಿ ಅಭಿನಂದನ ಗ್ರಂಥ, ವೀರಶೈವ ಅಧ್ಯಯನ ಸಂಸ್ಥೆ, ಗದಗ ಮತ್ತು ವೀರಶೈವ ಅಧ್ಯಯನ ಅಕಾಡೆಮಿ, ಬೆಳಗಾಂ, ೧೯೯೮, ಪು.೭-೧೫ ಯನ್ನು ನೋಡಬಹುದು.

[11] ಈ ತೀರ್ಮಾನವನ್ನು ಅಂತಿಮವೆಂದು ತಿಳಿಯುವ ಅಗತ್ಯವಿಲ್ಲ. ಯಾಕೆಂದರೆ ಸಮಾಜ ಸಂಶೋಧನೆ ಮೇಲಿರುವ ಎಲ್ಲ ಕನ್ನಡ ಬರಹಗಳನ್ನು ಪರಿಗಣಿಸಿ ನಾನು ಈ ತೀರ್ಮಾನಕ್ಕೆ ಬಂದಿಲ್ಲ. ನಾನು ಪರಿಗಣಿಸಿರುವ ಪುಸ್ತಕಗಳು ಇಂತಿವೆ. ೧. ಬಿ.ಎಸ್. ಚಂದ್ರಶೇಖರ್‌, ಸಮಾಜವಿಜ್ಞಾನಗಳಲ್ಲಿ ಸಂಶೋಧನ ವಿಧಾನಗಳು, ವಿದ್ಯಾರಣ್ಯ : ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ೨೦೦೧, ೨. ಎಂ. ನಾರಾಯಣ, ಸಾಮಾಜಿಕ ಸಂಶೋಧನಾ ವಿಧಾನ, ಮೈಸೂರು: ಚೇತನಾ ಬುಕ್ ಹೌಸ್, ೧೯೯೬, ಎಸ್.ರಾಜಶೇಖರ್, ಸಾಮಾಜಿಕ ಸಂಶೋಧನೆ, ಮೈಸೂರು: ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾಲಯ, ೧೯೮೮, ಮಹಾಬಲೇಶ್ವರ ರಾವ್, ಸಂಶೋಧನ ಮಾರ್ಗ, ಬೆಂಗಳೂರು: ನವಕರ್ನಾಟಕ ಪ್ರಕಾಶನ ೧೯೯೬.

[12] ಪುಸ್ತಕವನ್ನು ಓದಿ ಅಭಿಪ್ರಾಯ ನೀಡಲು ಮೂವರು ಪ್ರಮುಖ ವಿದ್ವಾಂಸರನ್ನು (ಡಾ. ವೆಲೇರಿಯನ್ ರಾಡ್ರಿಗಸ್, ಪ್ರಾಧ್ಯಾಪಕರು, ರಾಜಕೀಯ ಶಾಸ್ತ್ರ ಅಧ್ಯಯನ ಕೇಂದ್ರ ಜವಹರಲಾಲ್ ನೆಹರು ವಿಶ್ವವಿದ್ಯಾಲಯ, ದೆಹಲಿ, ಡಾ. ಕೆ.ವಿ. ನಾರಾಯಣ, ಪ್ರಧ್ಯಾಪಕರು, ಭಾಷಾಧ್ಯಯನ ವಿಭಾಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ ಮತ್ತು ಡಾ. ಸುರೇಂದ್ರ ರಾವ್, ಪ್ರಾಧ್ಯಾಪಕರು, ಚರಿತ್ರೆ ವಿಭಾಗ, ಮಂಗಳೂರು ವಿಶ್ವವಿದ್ಯಾಲಯ, ಕೋಣಾಜೆ) ಕೋರಲಾಗಿತ್ತು. ಮೂವರು ವಿದ್ವಾಂಸರು ಪುಸ್ತಕದ ಸಮಸ್ಯೆಗಳನ್ನು ಮತ್ತು ಉತ್ತಮ ಅಂಶಗಳನ್ನು ಪಟ್ಟಿ ಮಾಡಿದ್ದಾರೆ. ಹಲವಾರು ಕಾರಣಗಳಿಂದ ಅವರು ಗುರುತಿಸಿದ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗಿಲ್ಲ. ಪುಸ್ತಕದ ಮಿತಿಗಳ ಬಗ್ಗೆ ಓದುಗರ ಗಮನ ಸೆಳೆಯುವ ದೃಷ್ಟಿಯಿಂದ ಅವರ ವರದಿಗಳನ್ನು ಪುಸ್ತಕದ ಕೊನೆಯಲ್ಲಿ ನೀಡಲಾಗಿದೆ.

[13] ಸಂಶೋಧನೆ ಒಂದು ನಿರ್ವಾತದಲ್ಲಿ ನಡೆಯುತ್ತಿಲ್ಲ. ಅದು ಯಾವುದೋ ಒಂದು ವಿಶ್ವವಿದ್ಯಾಲಯದಲ್ಲಿ ಅಥವಾ ಸಂಶೋಧನಾ ಕೇಂದ್ರದಲ್ಲಿ ನಡೆಯುತ್ತದೆ. ಆ ಸಂಶೋಧನಾ ಕೇಂದ್ರ ಸರಕಾರದ ಅಥವಾ ಸರಕಾರೇತರ ಮೂಲಗಳಿಂದ ತನ್ನ ಸಂಶೋಧನೆಗಳಿಗೆ ಸಂಪನ್ಮೂಲ ಪಡೆಯುತ್ತದೆ. ಗ್ರಾಹಕರಿಗಾಗಿ ಮಾಡುವ ಸಂಶೋಧನೆ ಅವರ ಆಶಯಗಳಿಗೆ ಪೂರಕವಾಗಿಯೇ ಇರಬೇಕಾಗುತ್ತದೆ. ಸರಕಾರದ ಸಂಪನ್ಮೂಲಗಳಿಂದ ನಡೆಯುವ ಸಂಶೋಧನೆ ಮೇಲ್ನೋಟಕ್ಕಾದರೂ ಸರಕಾರದ ಪರ ಇರಬೇಕಾಗುತ್ತದೆ. ಹಾಗೆಂದು ಎಲ್ಲ ರೀತಿಯಿಂದಲೂ ಅದು ಸರಕಾರದ ಐಡಿಯಾಲಜಿಗೆ ಪರ ಇರಬೇಕೆಂದು ಯಾರೂ ಒತ್ತಾಯ ಮಾಡುವುದಿಲ್ಲ. ಜತೆಗೆ ಸರಕಾರದಿಂದ ಸಹಾಯಧನ ಪಡೆದು ಆಗುತ್ತಿರುವ ಅಧ್ಯಯನಗಳ ಫಲಿತವನ್ನು ಅವುಗಳ ಐಡಿಯಾಲಜಿಕಲ್ ಒಲವುಗಳ ಬಗ್ಗೆ ಪರಿಶೀಲನೆ ನಡೆಸುವ ಕ್ರಮ ನಮ್ಮಲ್ಲಿ ಸದ್ಯಕ್ಕೆ ಇಲ್ಲ. ಹಾಗೆಂದು ತುಂಬಾ ಪ್ರಖರವಾಗಿ ತಮ್ಮ ಐಡಿಯಾಲಜಿ ಒಲವನ್ನು ತೋರಿಸಿಕೊಂಡ ಅಥವಾ ತೋರಿಸಿಕೊಳ್ಳುತ್ತಿರುವ ಘನ ವಿದ್ವಾಂಸರು ತಮ್ಮ ಐಡಿಯಾಲಜಿಗೆ ಭಿನ್ನವಾದ ಸರಕಾರದಿಂದ ಸಹಾಯಧನ ಪಡೆಯುವುದು ಕಷ್ಟವೂ ಆಗಬಹುದು. ಜತೆಗೆ ಸರಕಾರಕ್ಕಿಂತ ಹೆಚ್ಚು ಖಾಸಗಿ ಏಜನ್ಸಿಗಳು ಇಂದು ಸಂಶೋಧನೆಗೆ ಸಹಾಯ ಧನ ನೀಡುತ್ತಿವೆ. ಅವಂತೂ ಅವುಗಳ ಐಡಿಯಾಲಜಿಗೆ ಪೂರಕವಾಗುವ ಸಂಶೋಧನೆಗಳಿಗೆ ಮಾತ್ರ ಸಹಾಯಧನ ನೀಡುತ್ತಿವೆ. ಹೀಗೆ ಸಂಶೋಧನೆ ಒಂದಲ್ಲ ಒಂದು ರೀತಿಯ ಚೌಕಟ್ಟಿನೊಳಗೆ ನಡೆಯಬೇಕಾಗಿದೆ.