ಸಮಾಜವಿಜ್ಞಾನಕ್ಕೆ ಅದರದ್ದೇ ಆದ ಅಧ್ಯಯನ ವಿಧಾನ ಇರಲಿಲ್ಲ. ವಿಜ್ಞಾನದ ವಿಧಾನವನ್ನು ಬಳಸಿಕೊಂಡು ಸಮಾಜವಿಜ್ಞಾನ ಒಂದು ಶಿಸ್ತುಬದ್ಧ ಶಾಸ್ತ್ರವಾಗಿ ರೂಪುಗೊಂಡಿದೆ. ಸಮಾಜವಿಜ್ಞಾನದ ಈ ಬಗೆಯ ಬೆಳವಣಿಗೆಯಿಂದಾಗಿ ವಿಜ್ಞಾನದ ವಿಧಾನದ ಹಲವಾರು ಗುಣಗಳು ಸಮಾಜ ಥಿಯರಿಗಳಲ್ಲಿ ಅಂತರ್ಗತವಾಗಿವೆ.[1] ಸಮಾಜ ಥಿಯರಿಗಳಲ್ಲೂ ಯೂನಿವರ್ಸಾಲಿಟಿ ಗುಣವನ್ನು ಬಯಸುವುದು, ವಿಶ್ವಕ್ಕೇ ಅನ್ವಯವಾಗುವ ಗುಣ ಸಮಾಜ ಥಿಯರಿಗಳಿಗೂ ಇದೆಯೆಂದು ಗ್ರಹಿಸುವುದು, ಸತ್ಯದ ಹುಡುಕಾಟವನ್ನು ನೈತಿಕ ಮೌಲ್ಯಗಳಿಂದ ಪ್ರತ್ಯೇಕಿಸಿ ನೋಡಬೇಕೆನ್ನುವ ಧೋರಣೆ ಇತ್ಯಾದಿಗಳು ಸಮಾಜ ಥಿಯರಿಗಳಲ್ಲಿ ಅಂತರ್ಗತವಾಗಿರುವ ಕೆಲವೊಂದು ವಿಜ್ಞಾನದ ಗುಣಗಳು.[2] ಸಮಾಜ ಥಿಯರಿಗಳಲ್ಲಿ ಅಂತರ್ಗತವಾಗಿರುವ ಮೇಲಿನ ವಿಜ್ಞಾನದ ಗುಣಗಳ ಜತೆಗೆ ಸಮಾಜ ಥಿಯರಿಗಳ ಹುಟ್ಟಿನ ಪ್ರಶ್ನೆ ಕೂಡ ಬೆಸೆದುಕೊಂಡಿದೆ. ಸಮಾಜವಿಜ್ಞಾನದ ಬಹುತೇಕ ಥಿಯರಿಗಳು ಪಶ್ಚಿಮದ ಸಮಾಜಗಳ ಅನುಭವಗಳನ್ನು ಆಧರಿಸಿ ರೂಪುಗೊಂಡಿವೆ. ಅಷ್ಟು ಮಾತ್ರವಲ್ಲ, ಸಮಾಜವಿಜ್ಞಾನದಲ್ಲಿ ಬಳಕೆಯಾಗುವ ಹಲವಾರು ಪಾರಿಭಾಷಿಕ ಪದಗಳು (ಕೆಟಗರಿಗಳು) ಪಶ್ಚಿಮದ ಸಾಮಾಜಿಕ ಬೆಳವಣಿಗೆಯನ್ನು ಆಧರಿಸಿವೆ. ನಮ್ಮ ಅಥವಾ ಪೂರ್ವದ ಅಥವಾ ಪಶ್ಚಿಮೇತರ ಸಮಾಜಗಳ ವಾಸ್ತವತೆಯನ್ನು ಹಿಡಿದುಕೊಡುವಲ್ಲಿ ಪಶ್ಚಿಮದಲ್ಲಿ ಹುಟ್ಟಿ ಬೆಳೆದ ಥಿಯರಿಗಳು ಮತ್ತು ಪಾರಿಭಾಷಿಕ ಪದಗಳು ಶಕ್ತವಾಗಿಲ್ಲ. ಆದರೂ ಈ ಥಿಯರಿಗಳು ವಸಾಹತೋತ್ತರ ನಮ್ಮ ಬದುಕನ್ನು ಆವರಿಸಿಕೊಂಡಿವೆ. ಇಂದು ಕೂಡ ನಾವು ನಮ್ಮನ್ನು ಪಶ್ಚಿಮದ ಈ ಥಿಯರಿಗಳ ಮೂಲಕ ನೋಡುವ ಮತ್ತು ಅರ್ಥ ಮಾಡಿಕೊಳ್ಳುವ ಪರಿಪಾಟ ಇಟ್ಟುಕೊಂಡಿರುವುದು ನಮ್ಮ ಹಿಂದಿನ ದಾಸ್ಯ ಮನೋಭಾವನೆಯನ್ನು ಯಾವುದೋ ಒಂದು ವಿಧದಲ್ಲಿ ಮುಂದುವರಿಸುವಂತೆ ಮಾಡುತ್ತಿದೆ. ಅಥವಾ ಪಶ್ಚಿಮದ ಶ್ರೀಮಂತ ರಾಷ್ಟ್ರಗಳು ಇಂದು ದೂರ ಇದ್ದುಕೊಂಡೇ ಈ ಥಿಯರಿಗಳ ಮೂಲಕ ನಮ್ಮ ಮೇಲೆ ಹಿಡಿತ ಸಾಧಿಸಿದ್ದಾರೆ. ಅವರ ಈ ಹಿಡಿತದಿಂದ ಪಾರಾಗಲು ಮತ್ತು ನಮ್ಮ ಸಮಾಜದ ವಾಸ್ತವತೆಯನ್ನು ಅರ್ಥ ಮಾಡಿಕೊಳ್ಳಲು ನಮ್ಮದೇ ಥಿಯರಿ ಹಾಗೂ ಪಾರಿಭಾಷಿಕ ಪದಗಳ ಅಗತ್ಯವಿದೆ ಎಂದು ಸಮಾಜವಿಜ್ಞಾನದ ಹುಟ್ಟಿಗೆ ಸಂಬಂಧಿಸಿದ ಚರ್ಚೆ ತಿಳಿಸುತ್ತದೆ.[3]

ಈ ವಾದವನ್ನು ಅಲ್ಲಗಳೆಯುವ ಹಲವಾರು ಪ್ರತಿವಾದಗಳಿವೆ. ಅವುಗಳಲ್ಲಿ ಪ್ರಮುಖ ವಾದುದು ಸಮಾಜ ಥಿಯರಿಗಳಲ್ಲಿ ಒಂದು ಕಾಲದಲ್ಲಿದ್ದ ಯುರೋಸೆಟ್ರಿಸಂ ಇಂದಿಲ್ಲ ಎನ್ನುವ ವಾದ.[4] ಐವತ್ತು ಅಥವಾ ಎಪ್ಪತ್ತರ ದಶಕಗಳಲ್ಲಿ ಪಶ್ಚಿಮದ ತಾತ್ವಿಕ ಚೌಕಟ್ಟಿನಲ್ಲಿ ತೃತೀಯ ಜಗತ್ತನ್ನು ವಿವರಿಸಲು ಸಂಶೋಧಕರು ಪ್ರಯತ್ನಿಸುತ್ತಿದ್ದರು. ನಿಜ, ಹಾಗೆಂದು ಇಂದು ಕೂಡ ಸಂಶೋಧಕರು ಅದೇ ಕಲ್ಪನೆಯಲ್ಲಿದ್ದಾರೆಂದು ತಿಳಿಯುವುದು ಸರಿಯಲ್ಲ. ಯಾಕೆಂದರೆ ತೃತೀಯ ಜಗತ್ತಿನ ಸಾಮಾಜಿಕ ವಾಸ್ತವಗಳನ್ನು ಹಿಡಿದಿಡಲು ಪಶ್ಚಿಮದ ಥಿಯರಿಗಳು ಶಕ್ತವಾಗಿಲ್ಲವೆಂದು ಬಹು ಹಿಂದೆಯೇ ಸಂಶೋಧಕರಿಗೆ ಅರ್ಥವಾಗಿದೆ. ಆ ಕಾರಣಕ್ಕಾಗಿಯೇ ತೃತೀಯ ಜಗತ್ತಿನ ವಾಸ್ತವಗಳನ್ನು ಗಮನದಲ್ಲಿಟ್ಟುಕೊಂಡು ಸುಧಾರಿತ ಸಮಾಜ ಥಿಯರಿಗಳನ್ನು ರಚಿಸಲಾಗಿದೆ ಎನ್ನುವ ವಾದವಿದೆ. ತೃತೀಯ ಜಗತ್ತಿನ ಸಾಮಾಜಿಕ ಸಂಗತಿಗಳು ಒಳಗೊಂಡ ಕೂಡಲೇ ಯೂನಿವರ್ಸಲ್ ಮತ್ತು ಲೋಕಲ್‌ನಡುವೆ ಇರುವ ಘರ್ಷಣೆ ಇಲ್ಲದಾಗುತ್ತದೆಯೇ? ಯೂನಿವರ್ಸಾಲಿಟಿಯನ್ನು ರೂಪಿಸುವ ವಿಧಾನ ಕೂಡ ಮಹತ್ವದ್ದಲ್ಲವೇ? ಯಾವುದೇ ಥಿಯರಿ ಯಜಮಾನಿಕಾ ಸ್ಥಾನಕ್ಕೆ ಏರಲು ಥಿಯರಿಯಲ್ಲಿ ಅಂತರ್‌ಗತವಾಗಿರುವ ಬಲ ಸಾಕೆ? ಅಥವಾ ವೈಜ್ಞಾನಿಕ ಅಂಶಗಳಿಂದಲೇ ಥಿಯರಿಯೊಂದು ಯೂನಿವರ್ಸಾಲಿಟಿಯನ್ನು ಪಡೆದುಕೊಳ್ಳುತ್ತದೆಯೇ? ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ವ್ಯವಸ್ಥೆಯಲ್ಲಿನ ಅಧಿಕಾರದ ಹಂಚಿಕೆ ಮತ್ತು ವಿವಿಧ ಸಮಾಜಗಳ ಸ್ಥಾನಮಾನ ಥಿಯರಿಯೊಂದರ ಸ್ಥಾನಮಾನವನ್ನು ಪ್ರಭಾವಿಸುವುದಿಲ್ಲವೇ? ಇತ್ಯಾದಿ ಪ್ರಶ್ನೆಗಳು ಸಂಶೋಧನೆ ಮತ್ತು ಸಮಾಜ ಥಿಯರಿಗಳ ನಡುವಿನ ಸಂಬಂಧದ ಚರ್ಚೆಯಲ್ಲಿ ಪ್ರಮುಖ ಪಾತ್ರ ವಹಿಸಿವೆ. ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಮತ್ತು ಆ ಮೂಲಕ ಚರ್ಚೆಯಲ್ಲಿ ಭಾಗವಹಿಸುವ ಒಂದು ಕಿರುಪ್ರಯತ್ನವನ್ನು ಈ ಅಧ್ಯಾಯದಲ್ಲಿ ಮಾಡಲಾಗಿದೆ. ಅಧ್ಯಾಯದ ವಿವರಗಳನ್ನು ಎರಡು ಭಾಗಗಳಲ್ಲಿ ನೀಡಲಾಗಿದೆ. ಯೂನಿವರ್ಸಲ್ ಥಿಯರಿಗಳು ರೂಪುಗೊಳ್ಳುವ ಬಗೆಯನ್ನು ಭಾಗ ಒಂದರಲ್ಲಿ ವಿವರಿಸಲಾಗಿದೆ. ವಿಜ್ಞಾನದ ವಿಧಾನವನ್ನು ಅನುಸರಿಸುವ ಮೂಲಕ ಸಮಾಜವಿಜ್ಞಾನ ಹೇಗೆ ತನ್ನ ವಿಧಾನ, ಕ್ಷೇತ್ರ, ವ್ಯಾಪ್ತಿ ಇತ್ಯಾದಿಗಳನ್ನು ನಿರ್ವಚಿಸಿಕೊಂಡಿತ್ತು ಮತ್ತು ಇದು ಹೇಗೆ ಐವತ್ತರ ದಶಕದ ಸಮಾಜ ಥಿಯರಿಗಳನ್ನು ಪ್ರಭಾವಿಸಿತು ಎನ್ನುವ ವಿವರ ಕೂಡ ಇದೇ ಭಾಗದಲ್ಲಿದೆ. ಅಂತಾರಾಷ್ಟ್ರೀಯ ಅಧಿಕಾರ ಸಂಬಂಧಗಳು ಮತ್ತು ಇವು ಹೇಗೆ ತಮ್ಮ ಆಸಕ್ತಿಗೆ ಪೂರಕವಾದ ಥಿಯರಿಗಳನ್ನು ಯೂನಿವರ್ಸಲ್ ಥಿಯರಿಗಳೆಂದು ಮುಂಚೂಣಿಗೆ ತರುತ್ತವೆ ಎನ್ನುವುದರ ವಿವರಣೆ ಭಾಗ ಎರಡರಲ್ಲಿದೆ.

ಭಾಗ

ಜ್ಞಾನದ ಉತ್ಪಾದನೆಯಲ್ಲಿ ಪಶ್ಚಿಮದ ಎನ್‌ಲೈಟನ್‌ಮೆಂಟ್‌ ಮೂವ್‌ಮೆಂಟ್‌ ಮಹತ್ತರವಾದ ಘಟ್ಟ. ಸತ್ಯದ ಹುಡುಕಾಟ ಮತ್ತು ನೈತಿಕ ಪ್ರಶ್ನೆಗಳ ನಡುವೆ ವಿಶೇಷ ಅಂತರವಿಲ್ಲದ ಸಮಯ ಅದು. ಎರಡೂ ಕೆಲಸವನ್ನು ಧಾರ್ಮಿಕ ಸ್ಥಾನದಲ್ಲಿದ್ದವರು ನಿಭಾಯಿಸುತ್ತಿದ್ದರು. ಅವರು ನೈತಿಕ ಪ್ರಶ್ನೆಗಳನ್ನು ಪರಿಹರಿಸಿದಂತೆ ಪ್ರಪಂಚ, ಸಮಾಜ, ಕುಟುಂಬ, ಬದುಕು ಇತ್ಯಾದಿಗಳ ಬಗ್ಗೆ ವಿವರಣೆಗಳನ್ನು ನೀಡುತ್ತಿದ್ದರು. ಎನ್‌ಲೈಟನ್ ಮೆಂಟ್ ಚಳವಳಿ ನಂತರ ಸತ್ಯವನ್ನು ವಿವರಿಸುವ ಕೆಲಸದಿಂದ ಧಾರ್ಮಿಕ ಸ್ಥಾನದಲ್ಲಿದ್ದವರು ಹಿಂದಕ್ಕೆ ಸರಿಯಬೇಕಾಯಿತು. ಪ್ರತಿಯೊಬ್ಬರೂ ತಮ್ಮ ಸ್ವಂತ ಪ್ರಯತ್ನದಿಂದ ಸತ್ಯ ಏನು ಮತ್ತು ತಮಗೆ ಏನು ಒಳ್ಳೆಯದು ಎನ್ನುವುದರ ಬಗ್ಗೆ ತೀರ್ಮಾನ ತಳೆಯಲು ಶಕ್ತ ಎನ್ನುವ ಗೃಹೀತ ಬಲಗೊಂಡಿತು.[5] ಧಾರ್ಮಿಕ ಸ್ಥಾನದಲ್ಲಿದ್ದವರು ತೆರವುಗೊಳಿಸಿದ ಜಾಗವನ್ನು ತುಂಬಲು ತತ್ವಜ್ಞಾನಿಗಳು ಸಿದ್ಧರಿದ್ದರು. ಸತ್ಯ ಅಥವಾ ಒಳ್ಳೆಯತನವನ್ನು ವ್ಯಾಖ್ಯಾನಿಸುವ ಜವಾಬ್ದಾರಿಯನ್ನು ತತ್ವಜ್ಞಾನಿಗಳಿಗೆ ಬಿಡಬೇಕು ಎಂದು ಇಮಾನ್ಯುಲ್ ಕಾಂಟ್ ವಾದಿಸಿದ. ಆದರೆ ಆ ಎರಡೂ ಕೆಲಸಗಳನ್ನು (ಸತ್ಯ ಮತ್ತು ಒಳ್ಳೆಯತನ) ತತ್ವಜ್ಞಾನಿ ಒಬ್ಬನೇ ಮಾಡುವುದು ಕಷ್ಟ. ಸತ್ಯವನ್ನು ಹುಡುಕಿದಷ್ಟು ಸುಲಭದಲ್ಲಿ ನೈತಿಕತೆಯನ್ನು ವ್ಯಾಖ್ಯಾನಿಸಲು ಸಾಧ್ಯವಿಲ್ಲ ಎಂದು ಕಾಂಟ್ ಅಭಿಪ್ರಾಯ ಪಟ್ಟ. ಆದುದರಿಂದ ಸತ್ಯವನ್ನು ಹುಡುಕುವ ಕೆಲಸಕ್ಕೆ ಮಾತ್ರ ತತ್ವಜ್ಞಾನಿಗಳು ತಮ್ಮ ಜವಾಬ್ದಾರಿಯನ್ನು ಸೀಮಿತಗೊಳಿಸಿದರೆ ಒಳಿತೆಂದು ಕಾಂಟ್ ಅಭಿಪ್ರಾಯ ಪಡುತ್ತಾನೆ.[6] ಆದರೆ ಕಾಂಟ್‌ನ ಅಭಿಪ್ರಾಯವನ್ನು ಒಪ್ಪಲು ವಿಜ್ಞಾನಿಗಳು ಸಿದ್ಧರಿರಲಿಲ್ಲ. ಅವರ ಪ್ರಕಾರ ಕೇವಲ ವಿಜ್ಞಾನಿಗಳು ಮಾತ್ರ ಸತ್ಯದ ಹರಿಕಾರರಾಗಲು ಸಾಧ್ಯ. ತತ್ವಜ್ಞಾನಿಗಳು ಏನಿದ್ದರೂ ಮೌಲ್ಯಗಳು, ಮನುಷ್ಯತ್ವ, ನೈತಿಕತೆ ಇತ್ಯಾದಿ ಮಾನವಿಕದ ವಿಚಾರಗಳಿಗೆ ತಮ್ಮ ಜ್ಞಾನವನ್ನು ಸೀಮಿತಗೊಳಿಸಬೇಕು. ಯಾಕೆಂದರೆ ವಿಜ್ಞಾನಿಗಳ ಪ್ರಕಾರ ತತ್ವಜ್ಞಾನಿಗಳಿಗೂ ಧಾರ್ಮಿಕ ಗುರುಗಳಿಗೂ ವಿಶೇಷ ವ್ಯತ್ಯಾಸವಿಲ್ಲ ಅಥವಾ ತತ್ವಜ್ಞಾನಿಗಳು ಮಾರುವೇಷದಲ್ಲಿರುವ ಧಾರ್ಮಿಕ ಗುರುಗಳು.[7] ಊಳಿಗಮಾನ್ಯ ವ್ಯವಸ್ಥೆಯ ಶೋಷಣೆ, ಅಸಮಾನತೆ, ಮೇಲು, ಕೀಳು, ಇತ್ಯಾದಿಗಳಿಂದ ಬೇಸತ್ತ ಸಮಾಜಕ್ಕೆ ಬದಲಿ ವ್ಯವಸ್ಥೆಯ ಕನಸೊಂದು ಬೇಕಗುತ್ತು. ಪ್ರಪಂಚ, ಭೂಮಿ, ನೀರು, ಗಾಳಿ ಇತ್ಯಾದಿಗಳ ಬಗ್ಗೆ ವಿಜ್ಞಾನಿಗಳು ನೀಡುವ ವಿವರಣೆಗಳು ಧಾರ್ಮಿಕ ಸ್ಥಾನಗಳು ನೀಡುವ ವಿವರಣೆಗಳಿಗಿಂತ ಭಿನ್ನವಾಗಿದ್ದವು. ಮಾತ್ರವಲ್ಲ, ಹೆಚ್ಚು ನಿಖರ ಮತ್ತು ವಾಸ್ತವಕ್ಕೆ ಹತ್ತಿರವಾಗಿದ್ದವು. ವಿಜ್ಞಾನ ಉತ್ಪಾದಿಸಿದ ಜ್ಞಾನವನ್ನು ಬಳಸಿಕೊಂಡು ಹಲವಾರು ತಂತ್ರಜ್ಞನಗಳ ಆವಿಷ್ಕಾರವಾಯಿತು. ತಂತ್ರಜ್ಞಾನಗಳು ಅಂದಿನ ಸಾಮಾಜಿಕ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರಿದವು. ಈ ಎಲ್ಲ ಬೆಳವಣಿಗೆಗಳು ಸತ್ಯದ ಹುಡುಕಾಟದಲ್ಲಿ ಧಾರ್ಮಿಕ ಗುರುಗಳ/ತತ್ವಜ್ಞಾನಿಗಳಿಗಿದ್ದ ಸ್ಥಾನವನ್ನು ಪಲ್ಲಟಗೊಳಿಸಿ ವಿಜ್ಞಾನಿಗಳ ಸ್ಥಾನವನ್ನು ಭದ್ರಗೊಳಿಸಿದವು. ಹೀಗೆ ಸತ್ಯದ ಹುಡುಕಾಟವನ್ನು ವಿಜ್ಞಾನಿಗಳು ಮಾತ್ರ ಮಾಡಲು ಸಾಧ್ಯ ಎನ್ನುವ ನಿಲುವನ್ನು ಅಂದಿನ ಸಮಾಜ ಕೂಡ ಒಪ್ಪಿಕೊಂಡಿತು.

ಹೆಚ್ಚು ಕಡಿಮೆ ಇದೇ ಸಂದರ್ಭದಲ್ಲಿ ಸಮಾಜವಿಜ್ಞಾನ ರೂಪು ಪಡೆಯುತ್ತಿತ್ತು. ಸತ್ಯದ ಹುಡುಕಾಟ ಮತ್ತು ನೈತಿಕತೆ/ಮೌಲ್ಯಗಳ ಪ್ರಶ್ನೆಗಳನ್ನು ಬೆಸೆದು ಹೊಸತೊಂದು ಬಗೆಯ ಜ್ಞಾನಶಾಖೆಯನ್ನು ತೆರೆಯುವ ಎಲ್ಲ ಸಾಧ್ಯತೆಗಳು ಸಮಾಜವಿಜ್ಞಾನಕ್ಕೆ ಇತ್ತು. ಆದರೆ ಸಮಾಜವಿಜ್ಞಾನ ಅಂತಹ ಕಷ್ಟದ ದಾರಿ ತುಳಿಯಲಿಲ್ಲ. ಅದರ ಬದಲು ಅದು ಆಗತಾನೇ ಪ್ರಸಿದ್ಧಿ ಪಡೆಯುತ್ತಿದ್ದ ವಿಜ್ಞಾನ ಹಾದಿ ತುಳಿಯಿತು. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಚರಿತ್ರೆಯ ವ್ಯಾಖ್ಯಾನ. ಭೂತಕಾಲದ ಬಗ್ಗೆ ಸರಿಯಾದ ಮತ್ತು ತಪ್ಪು ಹೇಳಿಕೆಗಳಿವೆ. ಅವುಗಳನ್ನೆಲ್ಲ ಚರಿತ್ರೆ ಎನ್ನಲು ಸಾಧ್ಯವಿಲ್ಲ. ಹಿಂದೆ ಏನು ನಡೆದಿದೆಯೋ ಅದನ್ನು ಯಥಾ ರೀತಿಯಲ್ಲಿ ದಾಖಲಿಸಿದರೆ ಮಾತ್ರ ಚರಿತ್ರೆ ಲಭ್ಯವಾಗುವುದು ಮತ್ತು ಆ ಕೆಲಸವನ್ನು ಚರಿತ್ರಕಾರರು ಮಾಡಬೇಕು. ಚರಿತ್ರೆಕಾರರು ತಮ್ಮ ರಾಗದ್ವೇಷಗಳನ್ನು ಭೂತಕಾಲದ ಮಾಹಿತಿಯಲ್ಲಿ ಅಥವಾ ವಿಶ್ಲೇಷಣೆಯಲ್ಲಿ ತುಂಬಲು ಪ್ರಯತ್ನಿಸಬಾರದೆನ್ನುವ ನಿಲುವುಗಳು ಬಲಗೊಂಡವು.[8] ಹೀಗೆ ವಿಜ್ಞಾನದ ವಿಧಾನ ಮುಂಚೂಣಿಗೆ ತಂದ ಆಬ್ಜೆಕ್ಟಿವಿಟಿ, ವ್ಯಾಲ್ಯೂ ನ್ಯೂಟ್ರಾಲಿಟಿ ಇತ್ಯಾದಿಗಳ ಚೌಕಟ್ಟಿನೊಳಗೆ ಚರಿತ್ರಕಾರರು ತಮ್ಮೆಲ್ಲ ಸೃಜನಶೀಲೆಯನ್ನು ಕಟ್ಟಿಡಬೇಕಾಯಿತು. ತಾವು ಸಂಗ್ರಹಿಸಿದ ಮಾಹಿತಿಯ ಆಧಾರದಲ್ಲಿ ಸಣ್ಣಪುಟ್ಟ ತಾತ್ವಿಕ ನಿಲುವುಗಳನ್ನು ತಾಳುವುದು ಕೂಡ ಚರಿತ್ರಕಾರರಿಗೆ ಸಾಧ್ಯವಿಲ್ಲದಾಯಿತು. ಅರ್ಥ, ಸಮಾಜ ಮತ್ತು ರಾಜಕೀಯ ಶಾಸ್ತ್ರಗಳು ಚರಿತ್ರೆಯ ನಂತರ ಬೆಳೆದ ಸಮಾಜ ವಿಜ್ಞಾನಿಗಳು. ಅವುಗಳು ರೂಪುಗೊಳ್ಳುವ ಸಂದರ್ಭದಲ್ಲಿ ಜ್ಞಾನದ ಉತ್ಪಾದನೆಯಲ್ಲಿ ವಿಜ್ಞಾನದ ಏಕಸ್ವಾಮ್ಯತೆ ಗಟ್ಟಿಯಾಗಿತ್ತು. ಜ್ಞಾನದ ಉತ್ಪಾದನೆಯ ಏಕಸ್ವಾಮ್ಯತೆ ಆ ಕ್ಷೇತ್ರಕ್ಕೆ ಸಮಾಜ ಕೊಡುವ ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ಸ್ಥಾನಮಾನಗಳನ್ನು ಪ್ರಭಾವಿಸುತ್ತದೆ. ವಿಜ್ಞಾನ ಯಜಮಾನಿಕೆಗೆ ಬಂದಿದೆ ಎಂದರೆ ಅದು ಸಹಜವಾಗಿಯೇ ಮೇಲಿನ ಎಲ್ಲ ಸ್ತರಗಳಲ್ಲೂ ಮಾನ್ಯತೆಯನ್ನು ಪಡೆಯುತ್ತದೆ ಎಂದರ್ಥ. ವಿಜ್ಞಾನಕ್ಕೆ ಎಷ್ಟು ಹತ್ತಿರ ಅಥವಾ ದೂರ ಎನ್ನುವುದರ ಮೇಲೆ ಒಂದು ಅಧ್ಯಯನ ಶಿಸ್ತಿನ ಸ್ಥಾನ ನಿರ್ಧಾರವಾಗುತ್ತಿತ್ತು.[9] ಆ ಎಲ್ಲ ಕಾರಣಗಳಿಗಾಗಿಯೇ ವಿಜ್ಞಾನದ ವಿಧಾನವನ್ನು ಅನುಸರಿಸುವುದು ಸಮಾಜವಿಜ್ಞಾನಗಳಿಗೆ ಅನಿವಾರ್ಯವಾಯಿತು. ವಿಜ್ಞಾನದ ವಿಧಾನವನ್ನು ಅನುಸರಿಸುವುದರಿಂದ ಸಿಗುವ ಸ್ಥಾನಮಾನ ವಿಜ್ಞಾನದ ಯಜಮಾನಿಕೆಯನ್ನು ಸಹಿಸಲು ನೆರವಾಯಿತು. ಹೀಗೆ ವಿಜ್ಞಾನದ ಯಜಮಾನಿಕೆ ಪ್ರಶ್ನಾತೀತವಾಗಿದ್ದ ಸಂದರ್ಭದಲ್ಲಿ ಸಮಾಜ ಸಂಶೋಧನೆ ಸಂಪೂರ್ಣವಾಗಿ ವಿಜ್ಞಾನದ ವಿಧಾನವನ್ನು ಅನುಸರಿಸುತ್ತಿತ್ತು.

ಆ ಸಂದರ್ಭಗಳಲ್ಲಿ ಸಮಾಜವಿಜ್ಞಾನ ಬರಹಗಳು ಸೈಂಟಿಫಿಕ್ ಬರಹಗಳೆಂದು ಹೇಳಿಕೊಂಡರೆ ಮಾತ್ರ ಅವು ಸತ್ಯಕ್ಕೆ ಹತ್ತಿರ ಎನ್ನುವ ನಂಬಿಕೆ ಇತ್ತು. ಈ ಎಲ್ಲ ಸಂಗತಿಗಳು ಸಮಾಜವಿಜ್ಞಾನದ ಅಧ್ಯಯನ ಸಮಸ್ಯೆ, ವ್ಯಾಪ್ತಿ, ಫಲಿತ ಇತ್ಯಾದಿಗಳನ್ನು ಗಾಢವಾಗಿ ಪ್ರಭಾವಿಸಿವೆ. ವಿಜ್ಞಾನದ ಬಹುದೊಡ್ಡ ಸಾಧನೆ ಪ್ರಕೃತಿ ನಿಯಮಗಳನ್ನು ಅರ್ಥ ಮಾಡಿ ಕೊಳ್ಳುವುದು ಮತ್ತು ಅವುಗಳನ್ನು ಬಳಸಿಕೊಂಡು ತಂತ್ರಜ್ಞಾನಗಳನ್ನು ಸೃಷ್ಟಿಸುವುದು. ವಿಜ್ಞಾನ ವಿಧಾನದಲ್ಲಿ ಕಂಡುಕೊಂಡ ಈ ಸತ್ಯ (ಪ್ರಕೃತಿಗೆ ಸಂಬಂಧಿಸಿದ  ಸತ್ಯ) ಪ್ರಯೋಗಕ್ಕಾಗಿ ಆಯ್ಕೆ ಮಾಡಿಕೊಂಡ ಮಾದರಿಗಳಿಗೆ ಮಾತ್ರ ಅನ್ವಯವಾಗುವುದಷ್ಟೇ ಅಲ್ಲ; ಇಡೀ ವಿಶ್ವಕ್ಕೆ ಅನ್ವಯವಾಗುತ್ತದೆ. ಇಡೀ ವಿಶ್ವಕ್ಕೆ ಅನ್ವಯವಾಗುವ ಪ್ರಕೃತಿ ನಿಯಮವನ್ನು ಕಂಡುಕೊಳ್ಳುವುದು ವಿಜ್ಞಾನಿಗಳ ಕಾಯಕವಾದರೆ ವಿಶ್ವದ ಎಲ್ಲ ಸಮಾಜಗಳಿಗೂ ಅನ್ವಯವಾಗುವ ಅಥವಾ ಸಮಾಜಗಳನ್ನು ಅರ್ಥ ಮಾಡಿಕೊಳ್ಳಲು ಸಹಕರಿಸು ಯೂನಿವರ್ಸಲ್ ನಿಯಮಗಳನ್ನು ಕಂಡುಕೊಳ್ಳುವುದು ಸಮಾಜವಿಜ್ಞಾನಿಗಳ ಕಾಯಕವೆಂದು ತಿಳಿಯಲಾಯಿತು.[10] ಸಮಾಜಶಾಸ್ತ್ರಗಳು ತಮ್ಮ ಮೇಲೆ ಹೇರಿಕೊಂಡ ಯೂನಿವರ್ಸಲ್ ನಿಯಮಗಳನ್ನು ಸಂಶೋಧಿಸುವ ಜವಾಬ್ದಾರಿ ಅವುಗಳ (ಸಮಾಜ ಶಾಸ್ತ್ರಗಳ) ಅಧ್ಯಯನ ವಸ್ತುಗಳನ್ನು ಹಾಗೂ ವಿಧಾನಗಳನ್ನು ಕೂಡ ಪ್ರಭಾವಿಸಿದವು. ಅವು ವಿಸ್ತಾರವಾದ ಕ್ಷೇತ್ರಗಳನ್ನು ತಮ್ಮ ಅಧ್ಯಯನ ಕ್ಷೇತ್ರಗಳನ್ನಾಗಿ ಮಾಡಿಕೊಂಡವು. ಉದಾಹರಣೆಗೆ ಜಾಗತಿಕ ಚರಿತ್ರೆ ಅಥವಾ ಜಾಗತಿಕ ಅರ್ಥ ವ್ಯವಸ್ಥೆ ಅಥವಾ ಜಾಗತಿಕ ರಾಜಕೀಯ ವ್ಯವಸ್ಥೆ ಇತ್ಯಾದಿಗಳು ಅವುಗಳ ಅಧ್ಯಯನ ವಿಷಯಗಳಾದವು. ಇಡೀ ಪ್ರಪಂಚದ ಎಲ್ಲ ವ್ಯವಹಾರಗಳನ್ನು ವಿವರಿಸುವ ಕಾಯಕವನ್ನು ಸಮಾಜ ವಿಜ್ಞಾನಗಳು ಹಮ್ಮಿಕೊಂಡವು. ಈ ಕಾಯಕಕ್ಕೆ ವಿಜ್ಞಾನದ ವೈಧಾನಿಕ ಅಂಶಗಳನ್ನು-ಅಂಕಿ ಅಂಶಗಳು, ಹೈಪೋಥಿಸೀಸ್‌ಗಳು, ಪರೀಕ್ಷೆಗಳು ಇತ್ಯಾದಿಗಳನ್ನು – ಸಮಾಜ ವಿಜ್ಞಾನಗಳು ಅನುಸರಿಸಲಾರಂಭಿಸಿದವು. ಹದಿನೆಂಟನೇ ಶತಮಾನದ ಕೊನೆಯವರೆಗೆ ಅಥವಾ ಹತ್ತೊಂಬತ್ತನೇ ಶತಮಾನದ ಆರಂಭದವರೆಗೆ ನಾಗರಿಕ ಸಮಾಜದ ಅರ್ಥ, ಚರಿತ್ರೆ, ಸಮಾಜ ಮತ್ತು ರಾಜಕೀಯವನ್ನು ನಾಗರಿಕ ಸಮಾಜಕ್ಕೆ ಸೇರಿದವರೇ ಕಟ್ಟಿಕೊಡುವ ಕೆಲಸವನ್ನು ಈ ನಾಲ್ಕು ಸಮಾಜವಿಜ್ಞಾನಗಳು (ಚರಿತ್ರೆ, ಅರ್ಥ, ಸಮಾಜ ರಾಜಕೀಯ ಶಾಸ್ತ್ರಗಳು) ಮಾಡಿದವು. ಇದೇ ಸಂದರ್ಭದಲ್ಲಿ ಪಶ್ಚಿಮದ ಬಹುತೇಕ ರಾಷ್ಟ್ರಗಳು ಆಫ್ರಿಕಾ, ಏಷ್ಯಾ ಮುಂತಾದ ಖಂಡಗಳಲ್ಲಿ ವಸಾಹತುಗಳನ್ನು ಹೊಂದಿದ್ದವು. ವಸಾಹತುಗಳಲ್ಲಿನ ಅನಾಗರಿಕ ಜನರ ಸಮಾಜವನ್ನು ಅಧ್ಯಯನ ಮಾಡಲು ಮಾನವಶಾಸ್ತ್ರ ಎನ್ನುವ ಪ್ರತ್ಯೇಕ ಶಾಸ್ತ್ರವನ್ನು ಹುಟ್ಟುಹಾಕಲಾಯಿತು. ಇದನ್ನೇ ಮತ್ತೊಂದು ರೀತಿಯಲ್ಲಿ ಹೇಳುವುದಾದರೆ ಮಾನವಶಾಸ್ತ್ರ ಪಶ್ಚಿಮದ ಸಾಮ್ರಾಜ್ಯ ಶಾಹಿಯ ಒಂದು ಕೂಸು. ಇದರ ಬೇರುಗಳು ಯುರೋಪಿನ ಎನ್‌ಲೈಟನ್‌ಮೆಂಟ್ ಚಳವಳಿಯ ಫಲವಾದ ಉದಾರ ಮಾನವತಾವಾದಿ ಚಿಂತನೆಗಳಲ್ಲಿವೆ.[11]

ಮಾನವಶಾಸ್ತ್ರವು ಒಂದು ಆಧುನಿಕ ಸಮಾಜವಿಜ್ಞಾನವಾಗಿ ಹಾಗೂ ವಿಶ್ವವಿದ್ಯಾಲಯಗಳ ಶೈಕ್ಷಣಿಕ ಶಿಸ್ತಾಗಿ ೧೯ನೇ ಶತಮಾನದ ಕೊನೆಯಲ್ಲಿ ಬೆಳೆಯಿತು. ಹಿಂದೆ ತಿಳಿಸಿದಂತೆ ಇದು ಪಶ್ಚಿಮದ ದೇಶಗಳು ಬಂಡವಾಳಪೂರ್ವ (ಸಾಂಪ್ರದಾಯಿಕ) ಸಮಾಜಗಳನ್ನು ತಮ್ಮ ಅಧೀನಕ್ಕೆ ತೆಗೆದುಕೊಳ್ಳುತ್ತಿದ್ದ ಕಾಲಘಟ್ಟವಾಗಿತ್ತು. ಹೀಗಾಗಿ ಮಾನವಶಾಸ್ತ್ರದ ಬಹುತೇಕ ಕ್ಷೇತ್ರಕಾರ್ಯಗಳು (ಸಾಮ್ರಾಜ್ಯಶಾಹಿ ದೇಶಗಳಿಗೆ ಸೇರಿದ ವಿದ್ವಾಂಸರಿಂದ) ವಸಾಹತುಗಳಲ್ಲಿಯೇ ನಡೆದವು. ವಸಾಹತುಗಳ ಚಿಂತಾಜನಕ ಸ್ಥಿತಿಗತಿಗಳು ಆ ವಿದ್ವಾಂಸರನ್ನು ಕಾಡಿವೆ. ಅಷ್ಟು ಮಾತ್ರವಲ್ಲ, ಬಹುತೇಕ ಮಾನವಶಾಸ್ತ್ರಜ್ಞರು ಅನಾಗರಿಕ ಸಮಾಜಗಳನ್ನು ನಾಗರಿಕಗೊಳಿಸುವ ಉದಾತ್ತ ಧ್ಯೇಯದೊಂದಿಗೆ ಕೆಲಸ ಮಾಡಿದರು. ಆದರೆ ಆ ವಿದ್ವಾಂಸರು ಸಾಮ್ರಾಜ್ಯಶಾಹಿ ದೇಶಗಳು ಕೊಡಮಾಡಿದ ಅಧ್ಯಯನ ಚೌಕಟ್ಟುಗಳನ್ನು ಪ್ರಶ್ನಿಸುವ ಗೋಜಿಗೆ ಹೋಗಲೇ ಇಲ್ಲ.[12] ಎರಡನೇ ಮಹಾಯುದ್ಧದ ನಂತರ ಒಂದು ಹೊಸ ಸ್ಥಿತಿ ನಿರ್ಮಾಣವಾಯಿತು. ವಸಾಹತುಗಳೆಲ್ಲ ಒಂದೊಂದಾಗಿ ಸ್ವತಂತ್ರಗೊಂಡವು. ನಂತರದ ದಿನಗಳಲ್ಲಿ ಮಾನವಶಾಸ್ತ್ರಜ್ಞರು ತಮ್ಮ ಹಿಂದಿನ ಬಿಳಿಯ ಉದ್ಧಾರಕರ ಪಾತ್ರವನ್ನು ಕಳಚಬೇಕಾಯಿತು. ಆದರೆ ಅವರಿಗೆ ಹೊಸತೊಂದು ಪಾತ್ರವು ಸಿದ್ಧವಾಗಿತ್ತು. ಹೊಸತಾಗಿ ಸ್ವತಂತ್ರಗೊಂಡ ದೇಶಗಳು ಅಭಿವೃದ್ಧಿಯ ಹೆಸರಿನಲ್ಲಿ ತಮ್ಮನ್ನಾಳಿದ ಶ್ರೀಮಂತ ರಾಷ್ಟ್ರಗಳ  ಪಡಿಯಚ್ಚಾಗಲು ಪ್ರಯತ್ನಿಸುತ್ತಿದ್ದವು. ಪಶ್ಚಿಮದ ತಂತ್ರಜ್ಞಾನದ ಆಧುನಿಕತೆಯನ್ನು ತಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಅಳವಡಿಸಿಕೊಳ್ಳುವ ಮೂಲಕ ಪರಿವರ್ತನೆಗೆ ಪ್ರಯತ್ನಿಸುತ್ತಿದ್ದವು. ಇವರ ಪ್ರಯತ್ನದ ಹಿಂದೆ ಸ್ಟ್ರಕ್ಚರಲ್ ಫಂಕ್ಷನಲಿಸಂನ ಪ್ರಭಾವ ಇತ್ತು. ಪಶ್ಚಿಮದ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ಸಾಮಾಜಿಕ ಪರಿವರ್ತನೆ ಸಾಧ್ಯ ಎನ್ನುವುದು ಸ್ಟ್ರಕ್ಚರಲ್ ಫಂಕ್ಷನಲಿಸಂನ ಒಂದು ಮುಖ್ಯ ಗ್ರಹಿಕೆಯೇ ಆಗಿತ್ತು. ಅಂದರೆ ಪಶ್ಚಿಮದ ವಿಜ್ಞಾನ ತಂತ್ರಜ್ಞಾನಗಳನ್ನು ತಮ್ಮ ಉತ್ಪಾದನಾ ವ್ಯವಸ್ಥೆಯಲ್ಲಿ ಅಳವಡಿಸಿಕೊಂಡರೆ ಸಮಾಜ, ರಾಜಕೀಯ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲೂ ಪರಿವರ್ತನೆ ಸಾಧ್ಯ ಎನ್ನುವ ನಿಲುವು ಈ ವಿಧಾನದ ಕೊಡುಗೆ. ಹೀಗೆ ಹಿಂದುಳಿದ ದೇಶಗಳು ತಮ್ಮ ಪರಿವರ್ತನೆಗಾಗಿ ಶ್ರೀಮಂತ ರಾಷ್ಟ್ರಗಳ ಮಾದರಿಗಳನ್ನು ಅನುಸರಿಸಲು ಆರಂಭಿಸಿದವು. ಪರಿಣಾಮವಾಗಿ ಈ ಪರಿವರ್ತನೆಯನ್ನು ಅಧ್ಯಯನ ಮಾಡುವ ಹೊಸತೊಂದು ಕಾಯಕ ಮಾನವಶಾಸ್ತ್ರಜ್ಞರಿಗೆ ದೊರಕಿತು. ಈ ಬದಲಾದ ಪರಿಸರದಲ್ಲಿ ಸಾಂಸ್ಕೃತಿಕ ಸಂಪರ್ಕ, ಸಾಮಾಜಿಕ ಪರಿವರ್ತನೆ, ಆಧುನೀಕರಣ, ನಗರೀಕರಣ, ಪಾಶ್ಚಿಮಾತ್ಯೀಕರಣ ಇತ್ಯಾದಿ ಪರಿಕಲ್ಪನೆಗಳು ಸಮಾಜಶಾಸ್ತ್ರದಲ್ಲಿ ರಾರಾಜಿಸತೊಡಗಿದವು.[13]

ಇದೇ ಸಂದರ್ಭದಲ್ಲಿ ಚೈನಾ, ಭಾರತ ಅರಬ್ ಇತ್ಯಾದಿಗಳು ನಾಗರಿಕತೆಗಳು ವಿದ್ವಾಂಸರಿಗೆ ದೊಡ್ಡ ಕಗ್ಗಂಟಾದ್ದವು. ಅವುಗಳಲ್ಲಿನ ಜನಜೀವನ ಅತ್ತ ಅನಾಗರಿಕತೆಯೂ ಅಲ್ಲ ಇತ್ತ ಪಶ್ಚಿಮದ ನಾಗರಿಕತೆಗಳ ಜತೆಗೆ ಹೋಲಿಕೆಯೂ ಇರಲಿಲ್ಲ. ಇವುಗಳನ್ನು ಎಲ್ಲಿ ಲೊಕೇಟ್  ಮಾಡಬೇಕೆನ್ನುವ ಗೊಂದಲ ವಿದ್ವಾಂಸರನ್ನು ಕಾಡಿದೆ. ಇವುಗಳನ್ನು ಪುರಾತನ ನಾಗರಿಕತೆಗಳೆಂದು ವರ್ಗೀಕರಿಸಲಾಯಿತು. ಇವುಗಳ ಅಧ್ಯಯನಕ್ಕೆ ಓರಿಯಂಟಲ್ ಸ್ಟಡಿ ಎನ್ನುವ ಮತ್ತೊಂದು ಶಾಸ್ತ್ರ ಜನ್ಮ ತಾಳಿತು. ಈ ಶಾಸ್ತ್ರಗಳು ಪಶ್ಚಿಮದ ಸಮಾಜಕ್ಕಿಂತ ಭಿನ್ನವಾಗಿದ್ದ ಸಮಾಜಗಳನ್ನು ಅಧ್ಯಯನ ಮಾಡುವ ಜವಾಬ್ದಾರಿ ಹೊತ್ತುಕೊಂಡಿದ್ದರಿಂದ ಇವುಗಳಿಗೂ (ಮಾನವಶಾಸ್ತ್ರದಂತೆ) ಯೂನಿವರ್ಸಲ್ ನಿಯಮಗಳನ್ನು ಹುಡುಕುವ ಅಥವಾ ಸಂಶೋಧಿಸುವ ಜವಾಬ್ದಾರಿ ಇರಲಿಲ್ಲ. ಇದನ್ನೇ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಮಾನವಶಾಸ್ತ್ರ ಅಥವಾ ಓರಿಯಂಟಲ್ ಶಾಸ್ತ್ರಗಳ ಸಂಶೋಧನೆಗಳಿಂದ ಹೊರಹೊಮ್ಮುವ ಸತ್ಯಗಳು ಇಡೀ ಪ್ರಪಂಚಕ್ಕೆ ಅನ್ವಯವಾಗಬೇಕೆಂಬ ಅಗತ್ಯ ಇರಲಿಲ್ಲ.[14] ಯಾಕೆಂದರೆ ಅವು ವಸಾಹತುಗಳ ಏನೂ ಉಪಯೋಗವಿಲ್ಲದ ಅಥವಾ ತುಂಬಾ ಹಿಂದುಳಿದ ನಾಗರಿಕತೆಗಳನ್ನು ಅಧ್ಯಯನ ಮಾಡುತ್ತಿದ್ದವು. ಅವುಗಳ ಅನುಭವವನ್ನು ಕಟ್ಟಿಕೊಂಡು ಯಾರಿಗೆ ಏನಾಗಬೇಕಾಗಿದೆ? ಹೆಚ್ಚೆಂದರೆ ಅಲ್ಲಿನ ಜನರನ್ನು ಹತೋಟಿಯಲ್ಲಿಡಲು ಅಥವಾ ಉದ್ಧಾರ ಮಾಡಲು ಆ ಜ್ಞಾನ ಬಳಸಬಹುದಾಗಿತ್ತು. ಆ ಎರಡೂ ಸಮಾಜವಿಜ್ಞಾನಗಳ ಅಧ್ಯಯನಗಳು (ಚರಿತ್ರೆ, ಸಮಾಜ, ಅರ್ಥ, ರಾಜಕೀಯ ಶಾಸ್ತ್ರಗಳಂತೆ) ಆಬ್ಜೆಕ್ಟಿಟಿವ್ ಆಗಿರುವ ಅಗತ್ಯವಿತ್ತು. ಆದರೆ ಅವುಗಳ ವಿಧಾನ ಮಾತ್ರ ವಿಭಿನ್ನವಾಗಿದ್ದವು. ಶಾಸ್ತ್ರೀಯ ಅಥವಾ ಯೂನಿವರ್ಸಲ್ ನಿಯಮಗಳನ್ನು ಶೋಧಿಸಲು ಹೊರಟ ಸಮಾಜವಿಜ್ಞಾನಗಳು (ಚರಿತ್ರೆ, ಸಮಾಜ, ಅರ್ಥ ಮತ್ತು ರಾಜಕೀಯ ಶಾಸ್ತ್ರಗಳು) ವಿಜ್ಞಾನದ ವಿಧಾನಗಳನ್ನು ಹೆಚ್ಚು ಹೆಚ್ಚು ಅವಲಂಬಿಸಿದರೆ ಮಾನವಶಾಸ್ತ್ರ ಹರ್ಮೆನೆಟಿಕ್ಸ್‌ನ್ನು ಹೆಚ್ಚು ಹೆಚ್ಚು ಅವಲಂಬಿಸಿತು. ಅದಕ್ಕೆ ಬಹುಮುಖ್ಯ ಕಾರಣ ಮಾನವಶಾಸ್ತ್ರದ ಅಧ್ಯಯನ ವಿಷಯಗಳು. ಸಂಶೋಧಕರ ಸಂಸ್ಕೃತಿಯಿಂದ ಎಲ್ಲ ರೀತಿಯಿಂದಲೂ ಭಿನ್ನವಾಗಿರುವ ಸಂಸ್ಕೃತಿಯನ್ನು (ಭಾಷೆ, ಆಚಾರ, ವಿಚಾರ, ಇತ್ಯಾದಿಗಳಲ್ಲಿ) ಅಧ್ಯಯನ ಮಾಡುವುದು ಮಾನವಶಾಸ್ತ್ರದ ಒಂದು ನಿಯಮ. ಸಂಶೋಧಕರು ತಮ್ಮದಲ್ಲದ ಸಂಸ್ಕೃತಿಯ ಭಾಷೆ ಮತ್ತು ಜೀವನ ಕ್ರಮಗಳ ನಿಕಟ ಪರಿಚಯ ಮಾಡಿಕೊಳ್ಳುವುದು ಅನಿವಾರ್ಯವಾಗಿತ್ತು. ಆದುದರಿಂದಲೇ ಅವಲೋಕನ ವಿಧಾನ (ಸಹಭಾಗಿತ್ವ ಆವಲೋಕನ ವಿಧಾನ) ಮಾನವಶಾಸ್ತ್ರದ ಬಹುಮುಖ್ಯ ವಿಧಾನವಾಯಿತು. ಅಧ್ಯಯನ ಮಾಡುವ ಸಂಸ್ಕೃತಿಯೊಂದಿಗೆ ಸಂಶೋಧಕರು ಬೆರೆತುಕೊಳ್ಳುವ ಅನಿವಾರ್ಯತೆ ಇತ್ತು.[15]

ಮಾನವಶಾಸ್ತ್ರಕ್ಕೆ ಹೋಲಿಸಿದರೆ ಇತರ ಸಮಾಜವಿಜ್ಞಾನಗಳಿಗೆ (ಯೂನಿವರ್ಸಲ್ ನಿಯಮಗಳನ್ನು ಹುಡುಕುವ ಸಮಾಜಶಾಸ್ತ್ರಗಳಿಗೆ) ತಾವು ಅಧ್ಯಯನ ಮಾಡುವ ಸಾಮಾಜಿಕ ಸಂಗತಿಗಳಿಂದ ಅಂತರವನ್ನು ಕಾಪಾಡಿಕೊಳ್ಳುವ ಅನಿವಾರ್ಯತೆ ಇತ್ತು. ಚರಿತ್ರಕಾರರು ಈ ಅಂತರವನ್ನು ಕಾಲದ ಮೂಲಕ ಕಾಪಾಡಿಕೊಂಡರು; ವರ್ತಮಾನ ಚರಿತ್ರೆಯ ವಸ್ತುವಾಗಬಾರದೆಂಬ ನಿಯಮದಿಂದ. ವರ್ತಮಾನ ಸಮಸ್ಯೆಯನ್ನು ಅಧ್ಯಯನಕ್ಕೆ ಆಯ್ಕೆ ಮಾಡಿ ಕೊಂಡರೆ ಸಂಶೋಧಕರು ಅದರೊಂದಿಗೆ ಯಾವುದೋ ಒಂದು ಬಗೆಯ ಸಂಬಂಧ ಹೊಂದಿರುವ ಸಾಧ್ಯತೆ ಇದೆ. ಆ ಸಂಬಂಧ ಅಧ್ಯಯನ ವಸ್ತುವಿನ ಬಗ್ಗೆ ಸಂಶೋಧಕರಲ್ಲಿ ರಾಗದ್ವೇಷಗಳನ್ನು ಹುಟ್ಟು ಹಾಕಬಹುದು. ಆ ರಾಗದ್ವೇಷಗಳು ಸಂಶೋಧನೆಯ ವಸ್ತುನಿಷ್ಠತೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಅದಕ್ಕಾಗಿ ಭೂತಕಾಲಕ್ಕೆ ಸೇರಿದ ಸಮಸ್ಯೆಗಳ ಮೇಲೆ ಮಾತ್ರ ಸಂಶೋಧನೆ ಮಾಡಬೇಕೆಂಬ ನಿಯಮವನ್ನು ಚರಿತ್ರಕಾರರು ತಮ್ಮ ಮೇಲೆ ತಾವೇ ಹೇರಿಕೊಂಡರು.[16] ಸಂಶೋಧಕರು ಮತ್ತು ಅಧ್ಯಯನಕ್ಕೆ ಒಳಗಾಗುವ ಸಂಗತಿಯ ನಡುವಿನ ಅಂತರದ ಸಮಸ್ಯೆಯನ್ನು ಓರಿಯಂಟಲ್‌ ಅಧ್ಯಯನ ಕಾರರು ಬೇರೆಯದೇ ರೀತಿಯಲ್ಲಿ ಪರಿಹರಿಸಿಕೊಂಡರು. ತಾವು ಅಧ್ಯಯನ ಮಾಡುವ ನಾಗರಿಕ ಸಮಾಜದೊಂದಿಗೆ ಯಾವುದೇ ಸಂಬಂಧ ಇಟ್ಟುಕೊಳ್ಳದೆ ಈ ಅಂತರವನ್ನು ಕಾಪಾಡಿಕೊಂಡರು. ಧಾರ್ಮಿಕ ಗ್ರಂಥಗಳು ಅಥವಾ ಇತರ ಪ್ರಾಚೀನ ಗ್ರಂಥಗಳು ಅವರ ಮುಖ್ಯ ಆಕರಗಳಾಗಿದ್ದವು. ಗ್ರಂಥಾಲಯದ ಯಾವುದೋ ಮೂಲೆಯಲ್ಲಿ ಕುಳಿತು (ಸಮಾಜ/ಸಂಸ್ಕೃತಿಯ ಸಂಪರ್ಕ ಇಲ್ಲದೆ) ಅಧ್ಯಯನ ಮಾಡುವುದು ಅವರ ಮತ್ತು ಸಂಶೋಧನಾ ವಸ್ತುವಿನ ನಡುವಿನ ಅಂತರವನ್ನು ಕಾಪಾಡಲು ಸಹಕಾರಿಯಾಯಿತು.[17] ರಾಜಕೀಯ, ಸಮಾಜ ಮತ್ತು ಅರ್ಥಶಾಸ್ತ್ರಗಳು ಸಬ್ಜೆಕ್ಟ್ ಆಬ್ಜೆಕ್ಟ್ ಪ್ರಶ್ನೆಯನ್ನು ಬೇರೆಯದೇ ರೀತಿಯಲ್ಲಿ ಪರಿಹರಿಸಿಕೊಂಡಿವೆ. ಸಂಶೋಧನಾ ವಿಷಯದ ವಸ್ತುನಿಷ್ಠ ಚಿತ್ರಣ ಸಿಗಬೇಕಾದರೆ ಕಾಲ ಮತ್ತು ಪ್ರದೇಶಗಳ ದೃಷ್ಟಿಯಿಂದ ದೂರ ಇರುವ ಸಮಸ್ಯೆಗಳನ್ನು ಅಧ್ಯಯನ ಮಾಡುವುದಲ್ಲ; ವರ್ತಮಾನದ ಸಮಸ್ಯೆಗಳನ್ನು ಅಧ್ಯಯನ ಮಾಡಬೇಕೆನ್ನುವುದು ಈ ಶಾಸ್ತ್ರಗಳ ದೃಷ್ಟಿಕೋನವಾಯಿತು. ಗುಣಾತ್ಮಕ ಮಾಹಿತಿಗಿಂತ ಸಂಖ್ಯಾತ್ಮಕ ಮಾಹಿತಿಗಳು ಹೆಚ್ಚು ನಿಖರ ಮತ್ತು ಅವುಗಳಿಂದ ದೊರೆಯುವ ಫಲಿತಾಂಶಗಳು ಸಾಮಾಜಿಕ ಸಂಬಂಧಗಳನ್ನು ಅರ್ಥ ಮಾಡಿಕೊಳ್ಳಲು ಹೆಚ್ಚು ಸಹಕಾರಿಯೆಂದು ಗ್ರಹಿಸಲಾಯಿತು. ಭೂತಕಾಲಕ್ಕೆ ಸೇರಿದ ಅಥವಾ ತುಂಬಾ ದೂರದಲ್ಲಿರುವ ಅಂಕಿಅಂಶಗಳು ನಂಬಲರ್ಹವಲ್ಲ. ವರ್ತಮಾನಕ್ಕೆ ಸೇರಿದ ಸಂಗತಿಗಳು ನಂಬಲರ್ಹ ಅಂಕಿಅಂಶಗಳನ್ನು ನೀಡಲು ಸಾಧ್ಯ ಎಂದಾಯಿತು. ಹೀಗೆ ಸಮಾಜ ಸಂಶೋಧನೆಯಲ್ಲಿ ವಿಜ್ಞಾನದ ಯೂನಿವರ್ಸಾಲಿಟಿಯ ಗುಣ ಅಂತರ್ಗತವಾಯಿತು.[18]

ಕೆಲವೊಂದು ಉದಾಹರಣೆಗಳ ಮೂಲಕ ಸಮಾಜ ಥಿಯರಿಯಲ್ಲಿ ಅಂತರ್ಗತಗೊಂಡಿರುವ ಯೂನಿವರ್ಸಾಲಿಟಿಯ ಗುಣವನ್ನು ಪರೀಕ್ಷಿಸಬಹುದು. ತುಂಬಾ ಪ್ರಚಾರ ಪಡೆದ ಮತ್ತು ಬಹುತೇಕ ವಿದ್ವಾಂಸರಿಗೆ ಪರಿಚಯವಿರುವ ಒಂದು ಸಮಾಜ ಥಿಯರಿಯೆಂದರೆ ಆಧುನೀಕರಣ ಥಿಯರಿ. ಹದಿನೇಳು ಮತ್ತು ಹದಿನೆಂಟನೇ ಶತಮಾನದಲ್ಲಿ ಪಶ್ಚಿಮ ಯುರೋಪಿನಲ್ಲಿ ನಡೆದ ಸಾಮಾಜಿಕ ಪರಿವರ್ತನೆಗಳು ಈ ಥಿಯರಿಯ ಮೂಲ. ಅಲ್ಲಿನ ಊಳಿಗಮಾನ್ಯ (ಸಾಂಪ್ರದಾಯಿಕ) ವ್ಯವಸ್ಥೆ ಪುನರುತ್ಪತ್ತಿಯಾಗದೆ ಹೊಸತೊಂದು (ಆಧುನಿಕ) ಸಾಮಾಜಿಕ ವ್ಯವಸ್ಥೆ ರೂಪುಗೊಳ್ಳುವ ಕಥನ ಆಧುನೀಕರಣ ಥಿಯರಿಯ ಮುಖ್ಯ ವಸ್ತು. ಊಳಿಗಮಾನ್ಯ ವ್ಯವಸ್ಥೆ ಪುನರುತ್ಪತ್ತಿಯಾಗದಿರಲು ಕಾರಣಗಳು, ಆಧುನಿಕ ಸಮಾಜ ರೂಪುಗೊಳ್ಳಲು ಸಹಕಾರಿಯಾದ ಅಂಶಗಳು, ಈ ಅನುಭವಗಳು ಪ್ರಪಂಚದ ಇತರ ಸಾಮಾಜಿಕ ವ್ಯವಸ್ಥೆಗಳಲ್ಲಿ ಘಟಿಸುವ ಸಾಧ್ಯತೆಗಳು ಇತ್ಯಾದಿಗಳು ಈ ಕಥನದೊಳಗೆ ಬರುವ ಬಹುಮುಖ್ಯ ಅಂಶಗಳು.[19] ಇದು ಇಂಗ್ಲಿಶ್ ಬರಹಗಳಲ್ಲಿ ಟ್ರಾನ್ಸಿಷನ್ ಡಿಬೇಟ್ (ಪರಿವರ್ತನಾ ಚರ್ಚೆ) ಎಂದೇ ಪ್ರಖ್ಯಾತವಾಗಿದೆ. ಎಲ್ಲ ಐಡಿಯಾಲಜಿಗೆ ಬದ್ಧರಾದವರು (ಮುಖ್ಯವಾಗಿ ಎಡ ಮತ್ತು ಬಲ ಐಡಿಯಾಲಜಿಗೆ ಸೇರಿದವರು) ಈ ಚರ್ಚೆಯಲ್ಲಿ ಪಾಲುಗೊಂಡಿದ್ದಾರೆ. ವಿವಿಧ ಐಡಿಯಾಲಜಿಗೆ ಸೇರಿದವರು ಈ ಕಥನದಲ್ಲಿ ಬರುವ ವಿವಿಧ ಬೆಳವಣಿಗೆಗಳನ್ನು ತಮ್ಮದೇ ಕ್ರಮದಲ್ಲಿ ವ್ಯಾಖ್ಯಾನಿಸಿಕೊಂಡಿದ್ದಾರೆ. ಎಡಪಂಥೀಯರಲ್ಲಿ ಕೆಲವರು ಊಳಿಗಮಾನ್ಯ ವ್ಯವಸ್ಥೆಯ ಆಂತರಿಕ ಬಿಕ್ಕಟ್ಟು ಆ ವ್ಯವಸ್ಥೆ ಪುನರುತ್ಪತ್ತಿಯಾಗದಿರಲು ಕಾರಣ ಎಂದರೆ ಮತ್ತೆ ಕೆಲವರು ವಸಾಹತು ಮತ್ತು ಅಲ್ಲಿಂದ ಸಂಗ್ರಹವಾದ ಸಂಪತ್ತು ಊಳಿಗಮಾನ್ಯ ವ್ಯವಸ್ಥೆ ಮಾರ್ಪಾಟುಗೊಂಡು ಆಧುನಿಕ ಸಮಾಜ ನಿರ್ಮಾಣವಾಗಲು ಸಹಕಾರಿಯಾದ ಅಂಶಗಳೆಂದು ವಾದಿಸಿದರು. ಕಟ್ಟಾ ಮಾರ್ಕ್ಸ್‌‌ವಾದಿಗಳೆಂದು ಗುರುತಿಸಬಹುದಾದ ಕಾರ್ಲ್‌ಪೋಲಾಯಿನಿ, ಮೌರಿಸ್ ಡಾಬ್ ಮುಂತಾದವರು ಊಳಿಗಮಾನ್ಯ ವ್ಯವಸ್ಥೆಯ ಅವನತಿಯಲ್ಲಿ ವ್ಯಾಪಾರದ ಪಾತ್ರವನ್ನು ಅಲ್ಲಗಳೆಯುವುದಿಲ್ಲ. ಆದರೆ ಅದೇ ಪ್ರಮುಖ ಪಾತ್ರ ವಹಿಸಿದೆ ಎಂಬ ವಾದವನ್ನು ಅವರು ವಿರೋಧಿಸುತ್ತಾರೆ. ಯಾಕೆಂದರೆ ಯುರೋಪಿನ ಹಲವಾರು ದೇಶಗಳಲ್ಲಿ ಪಶ್ಚಿಮ ಯುರೋಪಿನಲ್ಲಿ ಇದ್ದುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ವ್ಯಾಪಾರ ವಹಿವಾಟುಗಳಿದ್ದವು.  ಆದರೆ ಆ ದೇಶಗಳಲ್ಲಿ ಊಳಿಗ ಮಾನ್ಯ ವ್ಯವಸ್ಥೆ ಅವನತಿಯೂ ಆಗಲಿಲ್ಲ; ಆಧುನಿಕ ವ್ಯವಸ್ಥೆರೂಪುಗೊಳ್ಳಲೂ ಇಲ್ಲ. ಅವರ ಪ್ರಕಾರ ಯಾವುದೇ ವ್ಯವಸ್ಥೆಯ ಪರಿವರ್ತನೆಯಲ್ಲಿ ಆ ವ್ಯವಸ್ಥೆಯ ಒಳಗಿನ ವೈರುಧ್ಯಗಳೇ ಪ್ರಮುಖ ಪಾತ್ರ ವಹಿಸುತ್ತವೆ. ಹಾಗೆಂದು ಹೊರಗಿನ ಪ್ರಭಾವವನ್ನು ಅವರು ಸಂಪೂರ್ಣವಾಗಿ ನಿರಾಕರಿಸುವುದಿಲ್ಲ. ಊಳಿಗಮಾನ್ಯ ವ್ಯವಸ್ಥೆ ಪರಿವರ್ತನೆಗೊಂಡು ಆಧುನಿಕ ಸಮಾಜ ನಿರ್ಮಾಣವಾಗಲು ವಸಾಹತು ಮತ್ತು ಅಲ್ಲಿಂದ ಸಂಗ್ರಹವಾದ ಸಂಪತ್ತು ಸಹಕಾರಿಯಾಗಿವೆ ಎಂದು ವಾದಿಸುವ ಎಡಪಂಥೀಯ ಚಿಂತಕರನ್ನು ಡಿಪೆಂಡೆನ್ಸ್ ಥಿಯರಿಸ್ಟರೆಂದು ಗುರುತಿಸಲಾಯಿತು.

ಎಡಪಂಥೀಯರು ಇಡೀ ಪರಿವರ್ತನೆಯನ್ನು ಆರ್ಥಿಕ ಕ್ಷೇತ್ರಕ್ಕೆ ಸೀಮಿತಗೊಳಿಸಿ ನೋಡುತ್ತಿದ್ದಾರೆ; ಅದು ಸರಿಯಲ್ಲ, ಆರ್ಥಿಕೇತರ ಅಂಶಗಳು ಕೂಡ ಈ ಪರಿವರ್ತನೆಯಲ್ಲಿ ಮಹತ್ತರವಾದ ಆತ್ರ ವಹಿಸಿವೆ ಎಂದು ಬಲಪಂಥೀಯರು ವಾದಿಸಿದರು. ಈ ರೀತಿಯ ವಾದವನ್ನು ಮುಂದಿಡುವುದರಲ್ಲಿ ಮ್ಯಾಕ್ಸ್‌ವೆಬರ್ ಅಗ್ರಗಣ್ಯ. ಈತನ ಪ್ರೊಟೆಸ್ಟಂಟ್ ಎಥಿಕ್ಸ್ ಆಂಡ್ ಸ್ಪಿರಿಟ್ ಆಫ್ ಕ್ಯಾಪಿಟಲಿಸಂ ಎನ್ನುವ ಪುಸ್ತಕ ಈ ಕ್ರಮದ ವಾದಕ್ಕೆ ಉತ್ತಮ ಉದಾಹರಣೆ.[20] ಇತರ ಬರಹಗಳಲ್ಲಿ ಈತ ಧಾರ್ಮಿಕ ವಿಚಾರಗಳ ಜತೆಗೆ ಲೆಕ್ಕಶಾಸ್ತ್ರದ ಬೆಳವಣಿಗೆ, ಶ್ರಮಿಕ ವರ್ಗದ ರೂಪುಗೊಳ್ಳುವಿಕೆ, ಆಡಳಿತಶಾಹಿಯ ಉಪಯೋಗ ಇವೇ ಮುಂತಾದ ವಿಚಾರಗಳು ಕೂಡ ಹೊಸ ವ್ಯವಸ್ಥೆಯ ರೂಪುಗೊಳ್ಳುವಿಕೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿವೆ ಎಂದು ಅಭಿಪ್ರಾಯಪಡುತ್ತಾನೆ.[21] ಪರಿವರ್ತನೆಗೆ ಕಾರಣವಾದ ಅಂಶಗಳನ್ನು ಗುರುತಿಸುವ ದೃಷ್ಟಿಯಿಂದ ಈ ಎಲ್ಲ ವಿಚಾರಗಳನ್ನು ಚರ್ಚಿಸಿಲ್ಲ; ಸಮಾಜಶಾಸ್ತ್ರಜ್ಞರು ಹೇಗೆ ಯಾವುದೋ ಒಂದು ಸಮಾಜದ ಅನುಭವವನ್ನು ಬಳಸಿಕೊಂಡು ಯೂನಿವರ್ಸಲ್ ಥಿಯರಿಗಳನ್ನು ಕಟ್ಟಲು ಪ್ರಯತ್ನಿಸಿದ್ದಾರೆ ಎನ್ನುವ ಅಂಶದ ಮೇಲೆ ಬೆಳಕು ಚೆಲ್ಲುವುದು ಇಲ್ಲಿನ ಉದ್ದೇಶವಾಗಿದೆ. ಸಮಾಜಶಾಸ್ತ್ರಜ್ಞರು ಕೇವಲ ಪರಿವರ್ತನೆಯ ಕಾರಣಗಳನ್ನು ಮಾತ್ರ ಗುರುತಿಸಿದ್ದಲ್ಲ; ಈ ಅನುಭವಗಳು ಬೇರೆ ಸಮಾಜಗಳಲ್ಲಿ ಪುನರಾವರ್ತನೆ ಆಗಬಹುದೇ ಎನ್ನುವ ವಿಚಾರದ ಮೇಲೂ ಗಮನ ಹರಿಸಿದ್ದಾರೆ. ಮ್ಯಾಕ್ಸ್ ವೆಬರ್ ಗುರುತಿಸಿದ ಆರ್ಥಿಕೇತರ ಅಂಶಗಳನ್ನು ಬಳಸಿಕೊಂಡು ಪರಿವರ್ತಿತ ಸಮಾಜದ ಗುಣಗಳನ್ನು ಅದರ ಹಿಂದಿನ ಸಮಾಜದ ಗುಣಗಳೊಂದಿಗೆ ಹೋಲಿಸಿ ಪರಿವರ್ತನೆಯ ಥಿಯರಿಯನ್ನು ಆರಂಭಿಸಿದವರಲ್ಲಿ ಟಾಲ್‌ಕಾಟ್ ಪಾರ್ಸನ್‌ಪ್ರಮುಖ.[22] ಈತನ ಪ್ರಕಾರ ಸಾಂಪ್ರದಾಯಿಕ ಸಮಾಜವೊಂದು ಸಂಬಂಧ ಆಧಾರಿತ ವ್ಯವಹಾರದ ಬದಲು ಒಪ್ಪಂದ ಆಧಾರಿತ ವ್ಯವಹಾರ, ವ್ಯವಹಾರದಲ್ಲಿ ಹಣದ ಬಳಕೆ, ಅವಿಭಕ್ತ ಕುಟುಂಬಗಳು ಸಡಿಲಗೊಂಡು ವಿಭಕ್ತ ಕುಟುಂಬಗಳು ರೂಪುಗೊಳ್ಳುವುದು, ಸಹಬಾಳ್ವೆಗಿಂತ ಸ್ಪರ್ಧಾತ್ಮಕ ಬದುಕಿನತ್ತ ಚಲಿಸುವುದು, ಸಮುದಾಯಕ್ಕಿಂತ ವ್ಯಕ್ತಿಪ್ರಧಾನ ವ್ಯವಸ್ಥೆಗೆ ಪ್ರಾಧ್ಯಾನತೆ ಇವೇ ಮುಂತಾದ ಪರಿವರ್ತನೆಗಳೊಂದಿಗೆ ಆಧುನಿಕಗೊಳ್ಳುತ್ತದೆ.[23] ಉತ್ಪಾದನಾ ಕ್ಷೇತ್ರಗಳಲ್ಲಿ (ಸರಕು ಮತ್ತು ಸೇವೆಗಳ) ವಿಜ್ಞಾನ ಮತ್ತು ತಂತ್ರಜ್ಞಾನದ ಬಳಕೆಯೇ ಪರಿವರ್ತನೆಗೆ ಮುಖ್ಯ ಕಾರಣವೆಂದು ಬಣ್ಣಿಸಲಾಯಿತು. ಯಾವುದೇ ಸಮಾಜದಲ್ಲೂ ಪಶ್ಚಿಮದ ಈ ವಿಜ್ಞಾನ ತಂತ್ರಜ್ಞಾನಗಳನ್ನು ಅಳವಿಡಿಸುವ ಮೂಲಕ ಆ ಸಮಾಜವನ್ನು ಆಧುನೀಕರಣ ಗೊಳಿಸಬಹುದೆನ್ನುವ ಆಧುನೀಕರಣ ಥಿಯರಿ ರೂಪುಗೊಂಡಿತು. ಪರಿವರ್ತಿತ ಸಮಾಜವನ್ನು ‘ಆಧುನಿಕ’, ‘ಮುಂದುವರಿದ’, ‘ಪ್ರಗತಿಪರ’ ಇತ್ಯಾದಿ ವಿಶೇಷಣಗಳಿಮದ ಗುರುತಿಸಿದರೆ ಇತರ ಸಮಾಜವನ್ನು ‘ಸಾಂಪ್ರದಾಯಕ’, ‘ಹಿಂದುಳಿದ’, ಸಮಾಜಗಳೆಂದು ವರ್ಗೀಕರಿಸಲಾಯಿತು. ಪಶ್ಚಿಮದ ವಿಜ್ಞಾನ ತಂತ್ರಜ್ಞಾನಗಳನ್ನು ತಮ್ಮ ವ್ಯವಸ್ಥೆಯಲ್ಲಿ ಅಳವಡಿಸಿಕೊಂಡು ಇತರರು ಕೂಡ ತಮ್ಮ ಸಮಾಜವನ್ನು ಪಶ್ಚಿಮದಂತೆ ಪರಿವರ್ತಿಸಿಕೊಳ್ಳಬಹುದೆನ್ನುವ ಪರೋಕ್ಷ ಸೂಚನೆಯನ್ನು ಈ ಗುಣಾತ್ಮಕ ವಿಂಗಡನೆ ಒಳಗೊಂಡಿದೆ. ಸಮಾಜಶಾಸ್ತ್ರಜ್ಞರು ಸಮಾಜ ಪರಿವರ್ತನೆಯ ಮಾದರಿಯನ್ನು ಮುಂದಿಟ್ಟ ಕೂಡಲೇ ಪ್ರಪಂಚದ ರಾಷ್ಟ್ರಗಳು ಆ ಮಾದರಿಯನ್ನು ಅನುಸರಿಸಲು ಮುಂದಾಗಲಿಲ್ಲ. ಯಾಕೆ ಮುಂದಾಗಲಿಲ್ಲ ಎನ್ನುವ ವಿಚಾರವನ್ನು ಮುಂದೆ ವಿವರಿಸಲಾಗಿದೆ. ಆ ವಿವರಣೆ ಮಾದರಿಗಳು ಹೇಗೆ ಪರಿಕೀಯವಾಗಿವೆ ಎನ್ನುವುದರ ಮೇಲೆ ಬೆಳಕು ಚೆಲ್ಲುವುದರೊಂದಿಗೆ ಯಾವುದೋ ಒಂದು ಸಮಾಜದ ಅನುಭವ ಆಧರಿಸಿ ರೂಪುಗೊಂಡ ಮಾದರಿ ಎಲ್ಲರ ಮಾದರಿ ಯಾಕಾಗುತ್ತದೆ ಎನ್ನುವ ವಿಚಾರದ ಮೇಲೂ ಗಮನ ಹರಿಸುತ್ತದೆ. ಸಮಾಜ ಥಿಯರಿಯೊಂದು ಯೂನಿವರ್ಸಾಲಿಟಿಯನ್ನು ವೈಜ್ಞಾನಿಕವಾಗಿ ಸಾಧಿಸಿದ ಕೂಡಲೇ ಅದು ಯೂನಿವರ್ಸಲ್ ಥಿಯರಿ ಆಗುತ್ತದೆ ಎನ್ನುವುದು ಸರಿಯಲ್ಲ. ಅದರ ಬದಲು ಆ ಥಿಯರಿ ಎಲ್ಲಿ ರೂಪುಗೊಳ್ಳುತ್ತದೆ ಮತ್ತು ಆ ಸಮಾಜದ ಬಲ (ಆರ್ಥಿಕ ಮತ್ತು ರಾಜಕೀಯ ಬಲ) ಏನು ಎನ್ನುವುದು ಕೂಡ ಥಿಯರಿಯೊಂದರ ಯೂನಿವರ್ಸಾಲಿಟಿಯನ್ನು ನಿರ್ಧರಿಸುತ್ತದೆ ಎನ್ನುವ ಅಂಶಗಳ ಮೇಲೆ ಮುಂದೆ ಗಮನ ಹರಿಸಲಾಗಿದೆ.

ಸಮಾಜ ಥಿಯರಿಗಳನ್ನು ಪ್ರಭಾವಿಸಿದ ಪಶ್ಚಿಮದ ಇತರ ಕಥನಗಳನ್ನು ಗಮನಿಸಬಹುದು. ಈ ಉದ್ದೇಶಕ್ಕೆ ಪೂರಕವಾದ ಮಾಹಿತಿಯನ್ನು ಈಡಿಪಸ್ ಕಾಂಪ್ಲೆಕ್ಸ್‌ ಕಥನದಿಂದ ಪಡೆಯಬಹುದು. ಇದೊಂದು ಗ್ರೀಕ್ ಮಿಥ್. ಈ ಮಿತ್ ಸಿಗ್‌ಮಂಡ್ ಫ್ರಾಯ್ಡ್‌ನ ಮನಶ್ಶಾಸ್ತ್ರದ ಥಿಯರಿಗೆ ಸಾಮಗ್ರಿ ಒದಗಿಸಿದೆ.[24] ನಂತರ ರಚನಾವಾದದ ಪರೀಕ್ಷೆಗೂ ಇದೇ ಸಾಮಗ್ರಿ ಬಳಕೆಯಾಗಿದೆ.[25] ಇತ್ತೀಚೆಗೆ ಚಾಲ್ತಿಗೆ ಬಂದ ಆಧುನಿಕೋತ್ತರ ಚಿಂತನೆಯ ಅಡಿಪಯ ಇರುವ ಡಿಸ್ಕೋರ್ಸ್‌ ವಿಶ್ಲೇಷಣೆಗೂ ಇದೇ ಗ್ರೀಕ್ ಮಿಥಾಲಜಿ ಮಾಹಿತಿ ಒದಗಿಸಿದೆ.[26] ಹೀಗೆ ಪ್ರಪಂಚವನ್ನು ಆಳುವ ಹಲವಾರು ಥಿಯರಿಗಳಿಗೆ ಗ್ರೀಕ್ ಮಿಥಾಲಜಿಯ ಈ ಒಂದು ಘಟನೆ ಮಾಹಿತಿ ಒದಗಿಸಿದೆ. ಗ್ರೀಕರಿಗೆ ಮಾತ್ರ ಮಿಥಾಲಜಿ ಇರುವುದೇ? ಪ್ರಪಂಚದ ಇತರ ಸಂಸ್ಕೃತಿಗಳಿಗೆ ಮಿಥಾಲಜಿ ಇಲ್ಲವೇ? ಅವುಗಳಲ್ಲಿ ಬರುವ ಕಥನಗಳು ಯಾಕೆ ಥಿಯರಿಯಗಳ ಪರೀಕ್ಷೆಗೆ ಸಾಮಗ್ರಿ ಒದಗಿಸುವುದಿಲ್ಲ. ಇಷ್ಟಾಗಿಯೂ ಈ ಈಡಿಪಸ್ ಕಾಂಪ್ಲೆಕ್ಸ್‌ಏನು ಹೇಳುತ್ತದೆ. ಮಗನಿಗೆ ತಾಯಿಯ ಅಥವಾ ತಾಯಿಗೆ ಮಗನ ಸೆಳೆತ ಇರುತ್ತದೆ ಎನ್ನುವ ವಿಚಾರದ ಸುತ್ತ ಇಡೀ ಕಥನ ಸೃಷ್ಟಿಯಾಗಿದೆ. ಪಶ್ಚಿಮದ ಕೆಲವು ಸಂಸ್ಕೃತಿಗಳಲ್ಲಿ, ಅದರಲ್ಲೂ ಆಗ ತಾನೇ ಕೈಗಾರಿಕೀಕರಣಕ್ಕೆ ದಾಪುಗಾಲಿಕ್ಕುವ ಪಶ್ಚಿಮ ಯುರೋಪಿನ ಕೆಲವು ಸಮಾಜಗಳಲ್ಲಿ, ಆಧುನೀಕರಣ ಅಥವಾ ಬಂಡವಾಳದ ವಿಸ್ತರಣೆಯಿಂದಾಗಿ ಕುಟುಂಬ ಬದುಕಿನಲ್ಲಿ ಸಾಕಷ್ಟು ಪಲ್ಲಟಗಳಾಗುತ್ತಿದ್ದ ಸಂದರ್ಭ. ಕುಟುಂಬದಲ್ಲಿ ತಂದೆ ಮತ್ತು ತಾಯಿಯ ಪಾತ್ರಗಳು ಗಟ್ಟಿಗೊಳ್ಳುವ ಸಂದರ್ಭ. ತಂದೆ ಹೊರಗಿನ ಜಗತ್ತಲ್ಲಿ ದುಡಿದು ಸಂಸಾರದ ಖರ್ಚನ್ನು ಬರಿಸುವ ಜವಾಬ್ದಾರಿ ಹೊತ್ತರೆ ತಾಯಿ ಮನೆಯೊಳಗಿನ ಕೆಲಸ ಕಾರ್ಯಗಳಿಗೆ ತನ್ನ ಬದುಕನ್ನು ಮೀಸಲಿಡಬೇಕಿತ್ತು. ಮಕ್ಕಳನ್ನು ಹೆರುವುದು, ಆರೈಕೆ ಮಾಡುವುದು, ಮನೆಯೊಳಗಿನ ವ್ಯವಹಾರಗಳನ್ನು ಅಚ್ಚುಕಟ್ಟುಗೊಳಿಸುವುದು ತಾಯಿಯ ಜವಬ್ದಾರಿ. ಹೀಗೆ ಮಕ್ಕಳಿಗೆ ತಾಯಿಯೇ ತುಂಬಾ ಹತ್ತಿರದ ಸಂಬಂಧಿ ಮತ್ತು ತಮ್ಮೆಲ್ಲ ಸುಖ ದುಃಖಗಳನ್ನು ಹಂಚಿಕೊಳ್ಳಲು ಸಾಧ್ಯವಿರುವ ಸಂಗಾತಿ. ತಾಯಿಗೆ ಹೋಲಿಸಿದರೆ ತಂದೆ ಹೊರಗಿನ ಪ್ರಪಂಚದ ಶಿಸ್ತನ್ನು ಮಕ್ಕಳಿಗೆ ಮನೆಯಲ್ಲಿ ರೂಢಿಸಿಕೊಡಲು ಪ್ರಯತ್ನಿಸಬೇಕಿತ್ತು. ಮನೆಯಲ್ಲಿ ಮಕ್ಕಳನ್ನು ತಿದ್ದದಿದ್ದರೆ ಹೊರಗಿನ ಪ್ರಪಂಚದಲ್ಲಿ ಮಕ್ಕಳು ವ್ಯವಹರಿಸಲು ಕಷ್ಟಪಡಬೇಕಿತ್ತು. ಅದಕ್ಕಾಗಿ ತಂದೆ ಹೊರಗಿನ ಪ್ರಪಂಚದ ನಿಷ್ಠುರತೆಯನ್ನು ಮನೆಯಲ್ಲಿಯೇ ಮಕ್ಕಳಿಗೆ ಉಣಬಡಿಸಬೇಕಿತ್ತು. ಹೀಗೆ ಕಠಿಣ ಹೃದಯಿ, ನಿಷ್ಠುರ ನಡವಳಿಕೆಯ ತಂದೆ ಒಂದು ಕಡೆಯಾದರೆ ಮೃದು ಹೃದಯ ಮತ್ತು ಮಕ್ಕಳ ಎಲ್ಲ ತಪ್ಪುಗಳನ್ನು ಸಹಿಸುವ ತಾಯಿ ಮತ್ತೊಂದು ಕಡೆ. ಇದು ಸಹಜವಾಗಿಯೇ ಮಕ್ಕಳನ್ನು ತಾಯಿಯ ಕಡೆಗೆ ಹೆಚ್ಚು ಆಕರ್ಷಿಸಿತ್ತು. ಇದನ್ನೇ ಈಡಿಪಸ್ ಕಾಂಪ್ಲೆಕ್ಸ್‌ಎಂದು ಥಿಯರೈಸ್ ಮಾಡಲಾಯಿತು. ಫ್ರಾಯ್ಡ್‌ನ ಈಡಿಪಸ್ ಕಾಂಪ್ಲೆಕ್ಸ್‌ಪ್ರಪಂಚದ ಎಲ್ಲ ಸಮುದಾಯಗಳಲ್ಲಿನ ತಾಯಿ ಮತ್ತು ಮಕ್ಕಳ ಸಂಬಂಧವನ್ನು ಪರೀಕ್ಷಿಸಿ ರೂಪುಗೊಂಡದ್ದಲ್ಲ. ಮೆಲಿನೋವಿಸ್ಕಿ ಕೆಲವೊಂದು ಬುಡಕಟ್ಟು ಸಮುದಾಯಗಳನ್ನು ಅಧ್ಯಯನ ಮಾಡಿ ಫ್ರಾಯ್ಡ್‌ನ ಥಿಯರಿ ಎಷ್ಟೊಂದು ದೋಷಪೂರಿತ ಎಂದು ಹೇಳಲು ಬಹು ಹಿಂದೆಯೇ ಪ್ರಯತ್ನಿಸಿದ್ದ. ಆತನ ಪ್ರಕಾರ ಬುಡಕಟ್ಟು ಸಮುದಾಯಗಳಲ್ಲಿ ಮಕ್ಕಳು ತಾಯಿ ಮತ್ತು ತಂದೆಯನ್ನು ಹೆಚ್ಚು ಕಡಿಮೆ ಒಂದೇ ಪ್ರಮಾಣದಲ್ಲಿ ಪ್ರೀತಿಸುತ್ತಾರೆ. ಇನ್ನು ಕೆಲವು ಸಮುದಾಯಗಳಲ್ಲಿ ಗಂಡು ಮಕ್ಕಳಿಗೆ ತಾಯಿಗಿಂತ ತಂದೆ ಮೇಲೆ ಹೆಚ್ಚು ಪ್ರೀತಿ. ಮಾತೃಪ್ರಧಾನ ಸಮುದಾಯಗಳಲ್ಲಿ ತಾಯಿ ಆಸ್ತಿಯ ವಾರಸುದಾರಳು. ತಂದೆ ಬಂದು ಹೋಗುವ ಅತಿಥಿ. ದಿನಾ ಹದ್ದುಬಸ್ತಿನಲ್ಲಿಡುವ ತಾಯಿಗಿಂತ ಅಪರೂಪಕ್ಕೆ ಬಂದು ಅಕ್ಕರೆ ತೋರುವ ತಂದೆಯೇ ಹೆಚ್ಚು ಆಪ್ತನಾಗುತ್ತಾನೆ. ಹೀಗೆ ಫ್ರಾಯ್ಡ್‌ನ ಸಿದ್ಧಾಂತ ಎಷ್ಟು ಸೀಮಿತ ಅನ್ವಯಿಕೆಯುಳ್ಳದ್ದೆಂದು ಸಾಬೀತಾಗುತ್ತದೆ. ಹಾಗೆಂದು ಅದು ತನ್ನ ಶಕ್ತಿ ಕಳೆದುಕೊಂಡಿಲ್ಲ. ಇಂದು ಕೂಡ ಅದನ್ನು ಹೇಳಿ ಮುಮದುವರಿಯುವುದು ವಿದ್ವಾಂಸರ ತಿಳುವಳಿಕೆಯ ಮಟ್ಟವನ್ನು ಅಳೆಯುವಲ್ಲಿ ಬಹುದೊಡ್ಡ ಪಾತ್ರ ವಹಿಸುತ್ತದೆ.[27]

[1] ಸಾಮಾಜಿಕ ಸಂಬಂಧಗಳ (ವ್ಯಕ್ತಿ, ಸಂಸ್ಥೆ, ಮೌಲ್ಯ ಇತ್ಯಾದಿಗಳ) ಸ್ವರೂಪವನ್ನು ವಿವರಿಸುವ ಪ್ರಯತ್ನವೇ ಥಿಯರಿಯೆಂದು ವ್ಯಾಖ್ಯಾನಿಸಬಹುದು. ಲಿಬರಲ್ ದೃಷ್ಟಿಕೋನವು ಸಾಮಾಜಿಕ ವ್ಯವಸ್ಥೆಯೊಳಗೆ ಬರುವ ವ್ಯಕ್ತಿ, ಸಂಸ್ಥೆ, ಮೌಲ್ಯ ಇತ್ಯಾದಿಗಳ ಸಂಬಂಧಗಳ ಸ್ವರೂಪ ಹೇಗಿದೆ ಮತ್ತು ಯಾವ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎನ್ನುವ ಅಂಶಗಳ ಮೇಲೆ ಗಮನ ಹರಿಸುತ್ತದೆ. ಎಡಪಂಥೀಯ ದೃಷ್ಟಿಕೋನಗಳು ಸಾಮಾಜಿಕ ವ್ಯವಸ್ಥೆಯೊಂದು ಹೇಗಿದೆಯೆಂದು ವಿವರಿಸುವುದರ ಜತೆಗೆ ಯಾಕೆ ಹೀಗಿದೆ, ವ್ಯವಸ್ಥೆಯಲ್ಲಿರುವ ದೋಷಗಳೇನು, ಈ ದೋಷಗಳನ್ನು ಸರಿಪಡಿಸಿ ರೂಪಿಸಬಹುದಾದ ಹೊಸ ಸಮಾಜದ ಚಿತ್ರಣ ಇತ್ಯಾದಿಗಳ ಮೇಲೂ ಗಮನ ಹರಿಸುತ್ತವೆ. ಸಾಮಾಜಿಕ ವ್ಯವಸ್ಥೆಯೊಂದು ಹೇಗಿದೆ ಎನ್ನುವುದರ ಜತೆಗೆ ಯಾಕೆ ಹೀಗಿದೆ. ಚಾಲ್ತಿಯಲ್ಲಿರುವ ವ್ಯವಸ್ಥೆಯ ದೋಷಗಳೇನು ಮತ್ತು ಸುಧಾರಿತ ವ್ಯವಸ್ಥೆ ಏನು ಇತ್ಯಾದಿ ಅಂಶಗಳನ್ನು ಒಳಗೊಳ್ಳುವ ಥಿಯರಿಯ ವ್ಯಾಖ್ಯಾನವನ್ನು ಈ ಅಧ್ಯಾಯದಲ್ಲಿ ಬಳಸಲಾಗಿದೆ.

[2] ಸಮಾಜವಿಜ್ಞಾನದ ಸಂಶೋಧನೆಯಲ್ಲಿ ಪ್ರಭಾವ ಬೀರುವ ವಿಜ್ಞಾನ ವಿಧಾನದ ಬಹುಮುಖಿ ತಾತ್ವಿಕ ಅಂಶಗಳು ಇಂತಿವೆ – ಒಂದು, ಆಬ್ಜೆಕ್ಟಿವಿಟಿ ಅಥವಾ ಅಲ್ಟಿಮೇಟ್ ಸತ್ಯದ ಕಲ್ಪನೆ, ಎರಡು, ವ್ಯಾಲ್ಯೂ ನ್ಯೂಟ್ರಾಲಿಟಿಯ ಪ್ರಶ್ನೆ, ಮೂರು, ಸಬ್ಜೆಕ್ಟ್ ಆಬ್ಜೆಕ್ಟ್ ಮಧ್ಯೆ ಅಂತರ ಇರಬೇಕು ಎನ್ನುವ ಅಂಶ.

[3] ಥಿಯರಿಗಳ ಹುಟ್ಟಿಗೆ ಸಂಬಂಧಿಸಿದ ಚರ್ಚೆಯ ವಿವರಗಳನ್ನು ನಾನು ಈ ಕೆಳಗಿನ ಪುಸ್ತಕಗಳಿಂದ ಪಡೆದಿದ್ದೇನೆ -೧, ಯೋಗೇಶ್ ಅಟಲ್, ಸೋಶಿಯಲ್ ಸೈನ್ಸಸ್ ಇನ್ ಏಶಿಯಾ, ನ್ಯೂಡೆಲ್ಲಿ: ಅಭಿನವ ಪಬ್ಲಿಕೇಶನ್ಸ್, ೧೯೭೪, ೨. ಎನ್. ಪಾರ್ಥ ಮುಖರ್ಜಿ, ಇಂಡಿಯನ್ ಸೋಶಿಯಾಲಜಿ – ರಿಫ್ಲೆಕ್ಷನ್ಸ್‌ಆಂಡ್ ಇನ್‌ಟ್ರಾಸ್ಪೆಕ್ಷನ್ಸ್‌, ಬಾಂಬೆ: ಪಾಪ್ಯೂಲರ್‌ಪ್ರಕಾಶನ್, ೧೯೮೬, ೩. ಪಾರ್ಥನಾಥ ಮುಖರ್ಜಿ ಆಂಡ್ ಚಂದ್ರ ಸೇನ್‌ಗುಪ್ತ (ಸಂ), ಇಂಡಿಜೀನಿಟ್ ಆಂಡ್ ಯೂನಿರ್ವಸಾಲಿಟಿ ಇನ್ ಸೋಶಿಯಲ್ ಸೈನ್ಸ್, ನ್ಯೂಡೆಲ್ಲಿ: ಸೇಜ್ ಪಬ್ಲಿಕೇಶನ್ಸ್, ೨೦೦೪ ಮತ್ತು ೪. ಇಮ್ಯಾನ್ಯುಲ್ ವೆಲ್‌ಸ್ಟೇಯಿನ್, ಓಪನ್ ಸೋಶಿಯಲ್ ಸೈನ್ಸಸ್, ನ್ಯೂಡೆಲ್ಲಿ: ವಿಸ್ತಾರ್ ಪಬ್ಲಿಕೇಶನ್ಸ್, ೧೯೯೬.

[4] ಯೂರೋಪಸೆಂಟ್ರಿಸಂ ಇಂದಿಲ್ಲ ಎನ್ನುವ ವಾದ ಅಥವಾ ಸುಧಾರಿತ ಸಮಾಜ ಥಿಯರಿಗಳ ವಾದವನ್ನು ಮುಂದಿಡುವ ಕ್ರಮ ಹಿಂದಿನಿಂದಲೇ ಇತ್ತು. ಆದರೆ ಇದು ಸುಮಾರು ಎಪ್ಪತ್ತರ ದಶಕದ ನಂತರ ವಿವಿಧ ಕ್ಷೇತ್ರಗಳಲ್ಲಿ (ಸಮಾಜ, ಅರ್ಥ, ರಾಜಕೀಯ ಕ್ಷೇತ್ರಗಳಲ್ಲಿ) ಯೂರೋಸೆಂಟ್ರಿಸಂನ ಬದಲು ದೇಶಿ ಚಿಂತನೆಗಳು ಬರಬೇಕೆನ್ನುವ ವಾದ ಬಲಗೊಂಡ ಸಂದರ್ಭದಲ್ಲಿ ಮುಂಚೂಣಿಗೆ ಬಂತು.

[5] ಲೆಸ್ಸಿ ಸ್ಟೀವನ್‌ಸನ್ ಅಂಡ್‌ಡೆವಿಡ್ ಸಿ. ಹಾಬ್‌ಮೇನ್, ಟೆನ್ ಥಿಯರಿಸ್ ಆಫ್‌ಹ್ಯೂಮನ್ ನೇಚರ್, ನ್ಯೂಯಾರ್ಕ್‌: ಆಕ್ಸ್‌ಫರ್ಡ್‌ಯೂನಿವರ್ಸಿಟಿ ಪ್ರೆಸ್, ೧೯೯೮.

[6] ಇಮ್ಯಾನ್ಯುವಲ್ ಕಾಂಟ್, ದಿ ಗ್ರೌಂಡ್ವರ್ಕ್ಆಫ್ದಿ ಮೆಟಾಫಿಸಿಕ್ಸ್ ಆಫ್ಮಾರಲ್ಸ್, ಇದನ್ನು ಹೆಚ್‌.ಜೆ. ಪಟನ್ ಅವರು ದಿ ಮಾರಲ್ (ಲಂಡನ್: ಹಚಿಸನ್, ೧೯೫೩) ಎನ್ನುವ ಹೆಸರಲ್ಲಿ ಭಾಷಾಂತರ ಮಾಡಿದ್ದಾರೆ. ಈ ವಿವರಗಳನ್ನು ಮಾರ್ಟಿನ್‌ ಹೊಲಿಸ್ ಅವರ, ದಿ ಫಿಲಾಸಫಿ ಅಫ್ ಸೋಶಿಯಲ್ ಸೈನ್ಸ್ (ಕೇಂಬ್ರಿಡ್ಸ್: ಕೇಂಬ್ರಿಡ್ಜ್ ಯೂನಿವರ್ಸಿಟಿ ಪ್ರೆಸ್‌, ೨೦೦೦) ಪುಸ್ತಕದಲ್ಲಿ ನೋಡಬಹುದು.

[7] ಇಮ್ಯಾನ್ಯುಲ್‌ ವೆಲ್‌ ಸ್ಟೇಯಿನ್, ‘ಸೋಶಿಯಲ್ ಸೈನ್ಸ್‌ ಅಂಡ್ ದಿ ಕ್ವೆಸ್ಟ್ ಫಾರ್ ಎ ಜಸ್ಟ್‌ ಸೊಸೈಟಿ’, ಇನ್ ಪಾರ್ಥನಾಥ ಮುಖರ್ಜಿ ಆಂಡ್ ಚಂದ್ರಸೇನ್ ಗುಪ್ತ (ಸಂ), ಇಂಡಿಜೀನಿಟಿ ಅಂಡ್ ಯೂನಿವರ್ಸಾಲಿಟಿ, ೨೦೦೪, ಪು. ೬೬-೮೨.

[8] ಆರ್.ಜಿ. ಕಾಲಿಂಗ್‌ವುಡ್, ದಿ ಐಡಿಯಾ ಆಫ್ ಹಿಸ್ಟರಿ, ನ್ಯೂಯಾರ್ಕ್‌: ಆಕ್ಸ್‌ಫರ್ಡ್‌ ಯೂನಿವರ್ಸಿಟಿ ಪ್ರೆಸ್, ೧೯೯೪.

[9] ಥಿಯಾಲಜಿ ಮತ್ತು ಮೆಟಾಫಿಸಿಕ್ಸ್‌ಗಳ ಪ್ರಭಾವ ಕುಗ್ಗಿ ವಿಜ್ಞಾನದ ಪ್ರಭಾವ ವಿಸ್ತರಿಸಿದ ಕುರಿತು ಅಗಸ್ಟ್‌ಕ್ಯಾಮ್ಟೆಯ ವಿವರಣೆಗಳನ್ನು ಆರ್.ಪ್ಲೆಚರ್ ಅವರ, ದಿ ಕ್ರೈಸೀಸ್ ಆಫ್ ಇಂಡಸ್ಟ್ರಿಯಲ್ ಸಿವಿಲೈಜೇಶನ್, (ಹೆನ್‌ಮೆನ್ ಎಜುಕೇಶನಲ್ ಬುಕ್ಸ್, ೧೯೭೪), ಪುಸ್ತಕದಲ್ಲಿ ನೋಡಬಹುದು. ಹರ್ಬಟ್ ಸ್ಪೆನ್ಸರ್ ಸಮಾಜವನ್ನು ಬಯಲಾಜಿಕಲ್‌ಆರ್ಗನಿಸಂಗೆ ಹೋಲಿಸಿ ಸಂಶೋಧನೆ ಮಾಡಬಹುದೆನ್ನುವ ವಿವರಗಳನ್ನು ಅವರ ದಿ ಇವೋಲ್ಯುಶನ್ಆಫ್ ಸೊಸೈಟಿ, (ಚಿಕಾಗೋ: ಚಿಕಾಗೋ ಯೂನಿವರ್ಸಿಟಿ ಪ್ರೆಸ್, ೧೯೭೬) ಪುಸ್ತಕದಲ್ಲಿ ನೋಡಬಹುದು. ಈ ಎಲ್ಲ ವಿಚಾರಗಳನ್ನು ಸಾರಾಂಶ ರೂಪದಲ್ಲಿ ಎಂ. ಚಂದ್ರ ಪೂಜಾರಿಯವರ, ‘ಸಮಾಜ ವಿಜ್ಞಾನದಲ್ಲಿನ ವಿಜ್ಞಾನ ಕುರಿತು ಕೆಲವು ಟಿಪ್ಪಣಿಗಳು’, (ಬುಡಕಟ್ಟು ಅಧ್ಯಯನ, ಸಂಪುಟ ೧, ಸಂಚಿಕೆ ೧, ೨೦೦೩, ಪುಟ. ೯೨-೧೦೪) ಎನ್ನುವ ಲೇಖನದಲ್ಲೂ ಕಾಣಬಹುದು.

[10] ವಿಜ್ಞಾನದ ವಿಧಾನವನ್ನು ಸಮಾಜ ಸಂಶೋಧನೆಗೆ ಅನ್ವಯಿಸುವ ಅಗತ್ಯದ ನಿಲುವುಗಳನ್ನು ಅಗಸ್ಟ್‌ಕಾಮ್ಟೆ ( ಬ್ರೀಫ್ ಎಪ್ರೈಸೈಲ್ ಆಫ್ ಮಾಡರ್ನ್ಹಿಸ್ಟರಿ), ಡರ್ಕ್‌‌ಹೇಮ್, (ದಿ ರೂಲ್ಸ್ಆಫ್ಸೋಶಿಯಲಾಜಿಕಲ್ ಮೆಥಡ್ಸ್, ನ್ಯೂಯಾರ್ಕ್‌: ದಿ ಪ್ರಿಪ್ರೆಸ್, ೧೯೩೩), ಹರ್ಬಟ್ ಸ್ಪೆನ್ಸರ್ (ದಿ ಇವೋಲ್ಯೂಶನ್ ಆಫ್ ಸೊಸೈಟಿ) ಬರಹಗಳಲ್ಲಿ ವ್ಯಕ್ತಪಡಿಸಿದ್ದಾರೆ. ನಾನು ಡರ್ಕ್‌‌ಹೋಮ್‌ನ ನಿಲುವಿನ ವಿವರಗಳನ್ನು ಟೋನಿ ಬಾರ್‌ನೆಟ್ ಅವರ, ಸೋಶಿಯಾಲಜಿ ಆಂಡ್‌ಡೆವಲಪ್‌ಮೆಂಟ್ (ಲಂಡನ್: ರೌಟ್‌ಲೆಡ್ಜ್‌, ೧೯೮೮) ಪುಸ್ತಕದಿಂದ ಮತ್ತು ಕಾಮ್ಟೆಯ ಅಭಿಪ್ರಾಯಗಳನ್ನು ಆರ್.ಪ್ಲೆಚರ್ ಅವರ, ದಿ ಕ್ರೈಸೀಸ್ ಆಫ್ ಇಂಡಸ್ಟ್ರಿಯಲ್ ಸಿವಿಲೈಜೇಶನ್ ಪುಸ್ತಕದಿಂದ ಪಡೆದಿದ್ದೇನೆ. ಹಿಂದಿನ ಸಮಾಜಶಾಸ್ತ್ರಜ್ಞರ ವಿಜ್ಞಾನ ವಿಧಾನದ ಪರ ಧೋರಣೆಯನ್ನು ಇಮ್ಯಾನ್ಯುಲ್ ವೆಲ್‌ಸ್ಟೇಯಿನ್, ‘ಸೋಶಿಯಲ್ ಸೈನ್ಸ್ ಆಂಡ್ ದಿ ಕ್ವೆಸ್ಟ್ ಫಾರ್‌ಎ ಜಸ್ಟ್‌ಸೊಸೈಟಿ’, ಇನ್‌ಪಾರ್ಥನಾಥ ಮುಖರ್ಚಿ ಆಂಡ್ ಚಂದ್ರಸೇನ್‌ಗುಪ್ತ (ಸಂ) ಇಂಡಿಜೀನಿಟ್ ಆಂಡ್ ಯೂನಿವರ್ಸಿಟಿ, ಪುಟ ೬೬-೯೨ ಲೇಖನದಲ್ಲಿ ವಿವರಿಸಿದ್ದಾರೆ.

[11] ಕಥ್ಲಿನ್ ಗಪ್, ‘ಆಂಥ್ರೋಪಾಲಜಿ ಆಂಡ್ ಇಂಪಿರಿಯಲಿಸಂ, ‘ಇನ್‌ಬಾಬ್ಬಿ ಎಸ್ ಆರ್ಟಿಜ್‌ಆಂಡ್ ತಿಲಕ್ ಡಿ. ಗುಪ್ತಾ (ಸಂ), ಹಿಸ್ಟರಿ ಆಸ್ ಇಟ್ ಹ್ಯಾಪನ್ಡ್‌. ಸೆಲೆಕ್ಟೆಡ್ ಆರ‍್ಟಿಕಲ್ಸ್‌ಫ್ರಮ್ ಮಂಥ್ಲಿ, ರಿವೀವ್, ೧೯೪೯-೧೯೯೮, ಕಲ್ಕತ್ತಾ: ಕಾರ್ನರ್ ಸ್ಟೋನ್ ಪಬ್ಲಿಕೇಶನ್ಸ್‌, ೧೯೯೮, ಪು. ೮೮-೮೯.

[12] ಕಥ್ಲಿನ್‌ಗಪ್, ‘ಆಂಥ್ರೋಪಾಲಜಿ ಆಂಡ್ ಇಂಪಿರಿಯಲಿಸಂ’, ಪು. ೮೮-೯೮.

[13] ವಸಾಹತೋತ್ತರ ಸಂದರ್ಭದಲ್ಲಿ ಮಾನವಶಾಸ್ತ್ರ ಸಂಶೋಧನೆ ಮೇಲೆ ಬ್ರಿಟಿಷ್, ಡಚ್, ಫ್ರೆಂಚ್ ಚಿಂತನೆಗಳ ಪ್ರಭಾವ ಕಡಿಮೆ ಆಯಿತು. ಆದರೆ ಅಮೆರಿಕದ ಪ್ರಭಾವ ಹೆಚ್ಚಾಯಿತು. ಸೋಲ್‌ಟೇಕ್ಸ್ ಮತ್ತು ಇತರರು ಸಂಪಾದಿಸಿ ಫಿಫ್ತ್ ಇಂಟರ್‌ನೇಶನಲ್ ಡೈರೆಕ್ಟರಿ ಆಫ್ ಆಂಥ್ರೋಪಾಲಜಿಸ್ಟ್ಸ್‌(ಚಿಕಾಗೋ: ಚಿಕಾಗೋ ಯೂನಿವರ್ಸಿಟಿ ಪ್ರೆಸ್, ೧೯೭೫). (ಈ ವಿವರಗಳನ್ನು ಎಲ್‌.ಪಿ. ವಿದ್ಯಾರ್ಥಿಯವರ, ಟ್ರೆಂಡ್ಸ್‌ ಇನ್ ವರ್ಲ್ಡ್‌ ಆಂಥ್ರೋ ಪಾಲಜಿ, ಡೆಲ್ಲಿ: ಕಾನ್‌ಸೆಪ್ಟ್‌ಪಬ್ಲಿಕೇಶನ್ ಕಂಪೆನಿ ೧೯೭೯ ಪುಸ್ತಕದಿಂದ ಪಡೆಯಲಾಗಿದೆ)ಯಲ್ಲಿ ನೋಂದಾಯಿಸಿ ಒಟ್ಟು ೪೭೬೫ ಮಾನವಶಾಸ್ತ್ರಜ್ಞರಲ್ಲಿ ಸುಮಾರು ಅರ್ಧದಷ್ಟು ಮಾನವಶಾಸ್ತ್ರಜ್ಞರು ಅಮೆರಿಕ ಮತ್ತು ಕೆನಡಾದವರಾದರೆ ಕಾಲು ಭಾಗ ಯುರೋಪಿಯನ್‌ರಾಗಿದ್ದರು. ಬಹುತೇಕ ಮಾನವಶಾಸ್ತ್ರ ಸಂಶೋಧನೆಗಳಿಗೆ ಮಾಹಿತಿ ಒದಗಿಸುವ ಅಥವಾ ಕ್ಷೇತ್ರವಾಗಿ ಕೆಲಸ ಮಾಡಿದ ಏಷ್ಯಾ, ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕಗಳಿಂದ ಕೆಲವೇ ಕೆಲವು ಮಾನವಶಾಸ್ತ್ರಜ್ಞರಿದ್ದರು (ಶೇ. ೨೫ರಷ್ಟು). ಅಮೆರಿಕ ಆಧುನೀಕರಣ ಥಿಯರಿ ಬಹುದೊಡ್ಡ ಪ್ರತಿಪಾದಿಯಾಗಿತ್ತು. ಆದುದರಿಂದ ಮಾನವಶಾಸ್ತ್ರ ಕೂಡ ಆಧುನೀಕರಣ ಥಿಯರಿ ಅಂಶಗಳನ್ನೇ ಹೆಚ್ಚು ಹೆಚ್ಚಾಗಿ ಬಿಂಬಿಸುತ್ತಿತ್ತು.

[14] ಇಮ್ಯಾನ್ಯುಲ್‌ ವೆಲ್‌ಸ್ಟೇಯಿನ್, “ಸೋಶಿಯಲ್ ಸೈನ್ಸ್ ಆಂಡ್ ದಿ ಕ್ವೆಸ್ಟ್ ಫಾರ್ ಎ ಜಸ್ಟ್‌ಸೊಸೈಟಿ”, ಪು.೬೭-೮೨.

[15] ವಿವರಗಳಿಗೆ ಈ ಕೆಳಗಿನ ಪುಸ್ತಕಗಳನ್ನು ನೋಡಬಹುದು. ೧. ಇ. ಇ. ಇವಾನ್ಸ್‌ಪಿಚರ್ಡ್‌, ಸೋಶಿಯಲ್ ಆಂಥ್ರೋಪಾಲಜಿ, ನ್ಯೂಡೆಲ್ಲಿ: ಯೂನಿವರ್ಸಲ್ ಬುಕ್‌ಸ್ಟಾಲ್, ೧೯೯೧, ೨. ಮಾರ್ಗರೇಟ್ ಮೀಡ್, ಆಂಥ್ರೋಪಾಲಜಿ – ಎ ಹ್ಯೂಮನ್‌ಸೈನ್ಸ್‌, ಸೆಲೆಕ್ಟೆಡ್ ಪೇಪರ‍್ಸ್ ೧೯೩೯-೧೯೬೦, ಟೊರೆಂಟೋ: ವೇನ್‌ನಸ್ಟ್ರೇಂಡ್‌ ಕಂಪೆನಿ, ೧೯೬೪.

[16] ಮಾರ್ಟಿನ್‌ ಹೊಲಿಸ್, ದಿ ಫಿಲಾಸಫಿ ಆಫ್ ಸೋಶಿಯಲ್ ಸೈನ್ಸ್ಆನ್‌ ಇಂಟ್ರೊಡಕ್ಷನ್‌, ಕೇಂಬ್ರಿಡ್ಜ್‌: ಕೇಂಬ್ರಿಡ್ಜ್‌ಯೂನಿವರ್ಸಟಿ ಪ್ರೆಸ್, ೨೦೦೦.

[17] ವಿವರಗಳಿಗೆ ಇಮ್ಯಾನ್ಯುಲ್ ವೆಲ್‌ಸ್ಟೇಯಿನ್ ಮತ್ತು ಇತರರು, ಓಪನ್ ದಿ ಸೋಶಿಯಲ್ ಸೈನ್ಸ್ರಿಪೋರ್ಟ್ಆಫ್ ದಿ ಗುಲ್ಬೆಕಿಯನ್ ಕಮಿಶನ್ಆನ್ ದಿ ರೀಸ್ಟ್ರಕ್ಚರಿಂಗ್ ಆಫ್ ದಿ ಸೋಶಿಯಲ್ ಸೈನ್ಸನ್, ನ್ಯೂಡೆಲ್ಲಿ: ವಿಸ್ತಾರ್ ಪಬ್ಲಿಕೇಶನ್ಸ್, ೧೯೯೮.

[18] ಇಮ್ಯಾನ್ಯುಲ್‌ ವೆಲ್‌ಸ್ಟೇಯಿನ್, ‘ಸೋಶಿಯಲ್ಸೈನ್ಸ್ಅಂಡ್ ದಿ ಕ್ವೆಸ್ಟ್ ಫಾರ್ ಜಸ್ಟ್ ಸೊಸೈಟಿ’, ಪು. ೬೬-೮೨

[19] ಈ ಕುರಿತು ಸಾಕಷ್ಟು ಬರಹಗಳಿವೆ. ಅವುಗಳಲ್ಲಿ ಮುಖ್ಯವಾದ ಕೆಲವು ಇಂತಿವೆ. ೧. ರಾಡ್ನಿ ಹಿಲ್ಟನ್(ಸಂ), ದಿ ಟ್ರಾಶಿನ್ ಫ್ರಮ್ ಫ್ಯೂಡಲಿಸಂ ಟು ಕ್ಯಾಪಿಟಲಿಸಂ, ಲಂಡನ್‌: ಆನ್‌ವಿನ್ ಬ್ರದರ‍್ಸ್, ೧೯೭೮, ೨. ಮೌರಿಸ್ ಡಾಬ್‌, ಸ್ಟಡೀಸ್ ಇನ್ ದಿ ಡೆವಲಪ್‌ಮೆಂಟ್‌ ಆಫ್ ಕ್ಯಾಪಿಟಲಿಸಂ, ಲಂಡನ್: ರೌಟ್‌ಲೆಡ್ಜ್‌ ಆಂಡ್ ಕೆಗನ್ ಪೌಲ್‌, ೧೯೬೩, ಲೆನ್ ಮೆಸಿನ್ಸ್‌ವುಡ್, ದಿ ಆರಿಜನ್‌ ಆಫ್ ಕ್ಯಾಪಿಟಲಿಸಂ, ನ್ಯೂಯಾರ್ಕ್‌: ಮಂಥ್ಲಿ ರಿವೀವ್ ಪ್ರೆಸ್, ೧೯೯೯, ಲಿಯೋ ಹ್ಯೂಬರ್‌ಮೇನ್, ಮೇನ್ಸ್‌ ವರ್ಡ್ಡ್‌‌ಲಿ ಗೂಡ್ಸ್, ನ್ಯೂಡೆಲ್ಲಿ: ಪೀಪಲ್ಸ್ ಪಬ್ಲಿಶಿಂಗ್ ಹೌಸ್, ೧೯೮೯, ಕಾರ್ಲ್‌ಪೊಲಾನಿಯ, ದಿ ಗ್ರೇಟ್ ಟ್ರಾನ್ಸ್‌ಫಾರ‍್ಮೇಷನ್, ಬೋಸ್ಟನ್: ಬೆಕನ್ ಪ್ರೆಸ್, ೧೯೫೭ ಮತ್ತು ಪೌಲ್ ಸ್ವೀಜಿ, ದಿ ಥಿಯರಿ ಆಫ್ ಕ್ಯಾಪಿಟಲಿಸ್ಟ್‌ಡೆವಲಪ್‌ಮೆಂಟ್, ಕಲ್ಕತ್ತಾ: ಕೆ.ಪಿ. ಬಾಗ್ಚಿ ಆಂಡ್ ಕಂಪೆನಿ, ೧೯೯೧.

[20] ಮ್ಯಾಕ್ಸ್‌ವೆಬರ್, ದಿ ಪ್ರೊಟೆಸ್ಟೆಂಟ್ ಎಥಿಕ್, ಆಂಡ್ ಸ್ಪಿರಿಟ್ ಆಫ್ ಕ್ಯಾಪಿಟಲಿಸಂ, ನ್ಯೂಯಾರ್ಕ್‌: ಸ್ಕ್ರೈಬ್ನರ‍್ಸ್, ೧೯೫೮.

[21] ಮ್ಯಾಕ್ಸ್‌ವೆಬರ್‌ನ ಈ ಅಭಿಪ್ರಾಯಗಳನ್ನು ಆರ್.ಹೆಚ್. ಟೋನಿಯ, ಹಿಸ್ಟರಿ ಆಂಡ್ ಸೊಸೈಟಿ (ಲಂಡ್ನ: ರೊಟ್‌ಲೆಡ್ಜ್ ಆಂಡ್ ಕೆಗನ್ ಪೌಲ್, (೧೯೭೮) ಪುಸ್ತಕದಿಂದ ಪಡೆದಿದ್ದೇನೆ.

[22] ಮ್ಯಾಕ್ಸ್‌ವೆಬರ್ ಪಶ್ಚಿಮ ಯುರೋಪಿನ ಈ ಅನುಭವ ಪ್ರಪಂಚ ಇತರ ಸಮಾಜಗಳಲ್ಲಿ ಪುನರಾವರ್ತನೆ ಆಗುವುದರ ಬಗ್ಗೆ ಸಂದೇಹ ವ್ಯಕ್ತಪಡಿಸಿದ್ದಾನೆ. ಈ ಕುರಿತ ವಿವರಗಳನ್ನು ಆಂಡ್ರೆ ಗುಂಥರ್ ಫ್ರಾಂಕ್ ಅವರ ಡಿಪೆಂಡೆಂಟ್ಎಕ್ಯುಮ್ಯುಲೇಶನ್ಆಂಡ್ ಅಂಡರ್ಡೆವಲಪ್ಮೆಂಟ್ (ಲಂಡನ್: ಮ್ಯಾಕ್‌ಮಿಲನ್‌ಪ್ರೆಸ್ ಲಿಮಿಟೆಡ್, ೧೯೮೨) ಪುಸ್ತಕದಲ್ಲಿ ನೋಡಬಹುದು. ಆದರೆ ಆತನ ಶಿಷ್ಯಂದಿರು; ಮುಖ್ಯವಾಗಿ ಟಾಲ್ಕಾಟ್ ಪಾರ್ಸನ್, ಬರ್ಟ್‌ಹೊಸಲಿಡ್ಜ್‌ ಮುಂತಾದವರು, ಇದರ ಪುನರಾವರ್ತನೆ ಖಚಿತ ಎನ್ನುವ ಧೋರಣೆ ತಾಳಿದರು. ವಿವರಗಳಿಗೆ ಟಾಲ್ಕಾಟ್ ಪಾರ್ಸನ್‌ ಅವರ, ಟುವರ್ಡ್ಸ್‌ ಜನರಲ್ ಥಿಯರಿ ಆಫ್ ಆಕ್ಷನ್, (ನ್ಯೂಯಾರ್ಕ್‌: ಹಾರ್ಪರ್ ಆಂಡ್ ರೋ, ೧೯೫೧) ಮತ್ತು ಬರ್ಟ್ಎಫ್ ಹೊಸಲಿಡ್ಜ್ ಅವರ, ಸೋಶಿಯಲಾಜಿಕಲ್ ಆಸ್ಪೆಕ್ಟ್ಸ್ ಆಫ್ ಎಕನಾಮಿಕ್ ಗ್ರೋಥ್, (ನ್ಯೂಯಾರ್ಕ್‌: ದಿ ಪ್ರಿ ಪ್ರೆಸ್, ೧೯೬೬) ಪುಸ್ತಕಗಳನ್ನು ನೋಡಬಹುದು.

[23] ಟಾಲ್ಕಾಫ್‌ಪಾರ್ಸನ್, ಟುವರ್ಡ್ಸ್‌ ಎ ಜನರಲ್ ಥಿಯರಿ ಆಫ್‌ ಆಕ್ಷನ್‌, ನ್ಯೂಯಾರ್ಕ್: ಹಾರ್ಪರ್ ಆಂಡ್‌ ರೋ, ೧೯೫೧.

[24] ಗಾರ್ಡ್‌ನರ್‌ಮರ‍್ಪಿ ಆಂಡ್ ಜೋಸೆಫ್ ಕವಾಶ್, ಹಿಸ್ಟಾರಿಕಲ್ ಇನ್ಟ್ರೊಡಕ್ಷನ್ ಟು ಮಾಡರ್ನ್ ಸೈಕಾಲಜಿ, ಲಂಡನ್ : ರೌಟ್‌ಲೆಡ್ಜ್ ಆಂಡ್ ಕೆಗನ್ ಪೌಲ್, ೧೯೯೪.

[25] ಮಿಥ್‌ಗಳ ವಿಶ್ಲೇಷಣೆಗಳ ರಚನಾವಾದವನ್ನು ಬಳಸಿರುವುದರಲ್ಲಿ ಲೆವಿಸ್ಟ್ರಾಸ್ ಪ್ರಮುಖ. ಹಾಗೆಂದು ಆತ ತನ್ನ ವಿಶ್ಲೇಷಣೆಗೆ ಇದೊಂದೆ ಮಿಥ್ ಅನ್ನು ಬಳಸಿದ್ದಾನೆಂದಲ್ಲ. ಹಲವಾರು ಬುಡಕಟ್ಟು ಸಮುದಾಯಗಳ ಮಿಥ್‌ಗಳನ್ನು ಆತ ರಚನಾವಾದದ ಮೂಲಕ ವಿಶ್ಲೇಷಿಸಿದ್ದಾನೆ. ಇವುಗಳ ಸಂಕ್ಷಿಪ್ತ ಪರಿಚಯಕ್ಕೆ ಲೆವಿಸ್ಟ್ರಾಸ್‌ನ, ಮಿಥ್‌ ಆಂಡ್  ಮೀನಿಂಗ್, (ಲಂಡನ್: ರೌಟ್‌ಲೆಡ್ಜ್, ೨೦೦೧) ಪುಸ್ತಕವನ್ನು ನೋಡಬಹುದು.

[26] ಈಡಿಪಸ್ ರಾಜನ ನ್ಯಾಯ ತೀರ್ಮಾನ ಕ್ರಮವನ್ನು ಫುಕೋ ತನ್ನ ಡಿಸ್ಕೋರ್ಸ್‌ವಿಶ್ಲೇಷಣೆಯ ಪರೀಕ್ಷೆಗೆ ಬಳಸಿಕೊಂಡಿದ್ದಾನೆ. ವಿವರಗಳಿಗೆ ಜೇಮ್ಸ್‌ಡಿ. ಫೇಬಿಯನ್ (ಸಂ), ಮೈಕೆಲ್ ಫುಕೋ – ಎಸೆನ್ಷಿಯಲ್ ವರ್ಕ್ಸ್ ಆಫ್‌ಫುಕೋ ೧೯೫೪-೧೯೮೪ (ಲಂಡನ್ : ಪೆಂಗ್ವಿನ್ ಬುಕ್ಸ್, ೧೯೯೪).

[27] ಈ ವಿವರಗಳನ್ನು ನಾನು ಹುಸೇನ್‌ಖಾನ್ ಅವರ, ‘ಮಾನವಶಾಸ್ತ್ರದ ಸಂಶೋಧನಾ ವಿಧಾನಗಳು – ಥಿಯರಿ ಮತ್ತು ಆಚರಣೆ” ಎನ್ನುವ ಉಪನ್ಯಾಸದಿಂದ ಪಡೆದಿದ್ದೇನೆ. ಅವರು ಈ ಉಪನ್ಯಾಸವನ್ನು ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗ ಸಂಘಟಿಸಿದ ಸಮಾಜವಿಜ್ಞಾನ ಸಂಶೋಧನಾ ವಿಧಾನಗಳು – ಉಪನ್ಯಾಸ ಮಾಲೆ, ೨೦೦೫ ರಲ್ಲಿ ನೀಡಿದ್ದರು.