ಭಾಗ

ಸಮಾಜ, ಅರ್ಥ, ರಾಜಕೀಯಶಾಸ್ತ್ರ ಥಿಯರಿಗಳಲ್ಲಿ ಯೂನಿವರ್ಸಾಲಿಟಿಯ ಗುಣ ಹೇಗೆ ಅಂತರ್ಗತಗೊಂಡಿತು ಮತ್ತು ಪಶ್ಚಿಮದ ಅನುಭವಗಳು ಹೇಗೆ ಸಮಾಜ ಥಿಯರಿಗಳಿಗೆ ಸಾಮಗ್ರಿ ಒದಗಿಸಿವೆ ಎನ್ನುವ ವಿವರಣೆಯನ್ನು ಮೇಲಿನ ಪುಟಗಳಲ್ಲಿ ನೋಡಿದ್ದೇವೆ. ಸಮಾಜ ಥಿಯರಿಗಳ ಮೇಲಿರುವ ಈ ಗಂಭೀರ ಆರೋಪಗಳನ್ನು ಅಲ್ಲಗಳೆಯುವ ದೃಷ್ಟಿಯಿಂದ ಸುಧಾರಿತ ಸಮಾಜವಿಜ್ಞಾನ ಥಿಯರಿಗಳ ವಾದವನ್ನು ಮುಂದಿಡಲಾಗಿದೆ. ಈ ವಾದದ ಸಾರಾಂಶ ಇಂತಿದೆ. ಸಮಾಜವಿಜ್ಞಾನ ಥಿಯರಿಗಳು ಪಶ್ಚಿಮದ ಅನುಭವಗಳನ್ನು ಆಧರಿಸಿವೆ ಎನ್ನುವುದು ತುಂಬಾ ಹಳೆಯ ವಾದ. ಇದನ್ನು ಯುರೋಸೆಟ್ರಿಸಂ ಎಂದು ಬಹು ಹಿಂದೆಯೇ ತಿರಸ್ಕರಿಸಲಾಗಿದೆ. ಈ ಥಿಯರಿಗಳ ಚೌಕಟ್ಟಲ್ಲಿ ತೃತೀಯ ಜಗತ್ತಿನ ರಾಷ್ಟ್ರಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲವೆಂದು ಸಮಾಜ ಸಂಶೋಧಕರು ಬಹು ಹಿಂದೆಯೇ ಕಂಡುಕೊಂಡಿದ್ದಾರೆ. ಪ್ರಪಂಚದ ಬಹುತೇಕ ಸಮಾಜಗಳ (ಮುಖ್ಯವಾಗಿ ತೃತೀಯ ಜಗತ್ತಿನ ಸಮಾಜಗಳನ್ನು) ಅನುಭವಗಳನ್ನೊಳಗೊಂಡ ಸಮಾಜ ಥಿಯರಿಗಳನ್ನು ರೂಪಿಸಲು ಹಿಂದಿನಿಂದಲೇ ಪ್ರಯತ್ನಗಳು ನಡೆದಿವೆ. ಆದುದರಿಂದ ಇಂದು ಚಾಲ್ತಿಯಲ್ಲಿರುವ ಥಿಯರಿಗಳನ್ನು ಪಶ್ಚಿಮದ ಅನುಭವದ ನೆಲೆಯಲ್ಲಿ ರೂಪುಗೊಂಡವೆಂದು ವರ್ಗೀಕರಿಸುವುದು ಸರಿಯಲ್ಲವೆನ್ನುವ ವಾದ. ಇದಕ್ಕೆ ಉತ್ತಮ ಉದಾಹರಣೆಯೆಂದರೆ ಜಾನಪದ ಮತ್ತು ಮಹಿಳಾ ಅಧ್ಯಯನಗಳು. ಆರಂಭದಲ್ಲಿ ಜಾನಪದ ಅಧ್ಯಯನ ವಿಧಾನ ಮತ್ತು ಥಿಯರಿ  ಪಶ್ಚಿಮದ ಅನುಭವಗಳಿಂದ ತುಂಬಾ ಪ್ರಭಾವಿತವಾಗಿತ್ತು. ಪಶ್ಚಿಮದಲ್ಲಿ ಜಾನಪದ ಅಧ್ಯಯನದ ಆರಂಭದ ದಿನಗಳಲ್ಲಿ ಜನಪದ ಹಾಡುಗಳು, ಜನಪದ ಗಾದೆಗಳು, ಜನಪದ ಸಾಮಗ್ರಿಗಳ ಸಂಗ್ರಹ ಇತ್ಯಾದಿಗಳು ಅಧ್ಯಯನ ಸಂಗತಿಗಳಾಗಿದ್ದವು. ಜನಪದರ ಅಥವಾ ಜನಪದ ಹಾಡುಗಳನ್ನು ಹಾಡುವವರು ಅಥವಾ ಸಾಮಗ್ರಿಗಳನ್ನು ಉಪಯೋಗಿಸುವವರು ಅಧ್ಯಯನಕಾರರ ಗಮನದಲ್ಲಿರಲಿಲ್ಲ.[1] ಅದಕ್ಕೆ ಮುಖ್ಯ ಕಾರಣ ಜಾನಪದ ಅಧ್ಯಯನವನ್ನು ಮುಂಚೂಣಿಗೆ ತಂದ ಕೆಲವು ದೇಶಗಳಲ್ಲಿ ನಾವು ಅಂದುಕೊಂಡ ರೀತಿಯ ಜನಪದರು ಇರಲಿಲ್ಲ. ಉದಾಹರಣೆಗೆ ಅಮೆರಿಕದಂತಹ ರಾಷ್ಟ್ರದಲ್ಲಿ ಅತಿಯಾದ ಕೈಗಾರೀಕರಣದಿಂದಾಗಿ ಸಾಂಪ್ರದಾಯಿಕ ಕೃಷಿಯಲ್ಲಿ ತೊಡಗಿಸಿಕೊಂಡ ಕೃಷಿಕರು ಮತ್ತು ಗ್ರಾಮೀಣ ಬದುಕು ತೀವ್ರವಾಗಿ ಕಣ್ಮರೆಯಾಗುತ್ತಿತ್ತು. ಆ ಸಂದರ್ಭದಲ್ಲಿ ಜನಪದರನ್ನು ಅಧ್ಯಯನ ಮಾಡುವುದಕ್ಕಿಂತ ಕಣ್ಣೆದುರೇ ಕಣ್ಮರೆಯಾಗುತ್ತಿರುವ ಕೃಷಿಕರ ಬದುಕನ್ನು ಮ್ಯೂಸಿಯಂಗಳಲ್ಲಿ ರಕ್ಷಿಸಿಡುವ ಅಗತ್ಯ ಅಮೆರಿಕದ ಜನಪದರಿಗೆ ಇತ್ತು. ಹೀಗೆ ಜನಪದ ಅಧ್ಯಯನದ ಆರಂಭದ ದಿನಗಳಲ್ಲಿ ಜನಪದರ ಸಾಹಿತ್ಯಗಳು, ಸಾಮಗ್ರಿಗಳು ಜಾನಪದ ಅಧ್ಯಯನದ ಮುಖ್ಯ ಸಂಶೋಧನಾ ವಸ್ತುಗಳಾದವು. ಜನಪದರು ಅಧ್ಯಯನದ ಕೇಂದ್ರಬಿಂದುಗಳಾಗಲಿಲ್ಲ. ಅಮೆರಿಕದ ಈ ಪ್ರವೃತ್ತಿಯನ್ನು ಆಸ್ಟ್ರಿಯದ ಲಾರಿ ಹ್ಯಾಂಕೋ ಪ್ರಶ್ನಿಸಿದರು.[2] ಅವರ ಪ್ರಕಾರ ಅಮೆರಿಕದ ಅನುಭವ ಪ್ರಪಂಚದ ಎಲ್ಲ ದೇಶಗಳ ಅನುಭವ ಅಲ್ಲ, ಬಹುತೇಕ ದೇಶಗಳು ಇಂದು ಕೂಡ ಕೃಷಿ ಪ್ರಧಾನ ಅರ್ಥ ವ್ಯವಸ್ಥೆಯನ್ನು ಹೊಂದಿವೆ. ಅವರಲ್ಲಿ ಜನಪದರು ಜೀವಂತ ಇದ್ದಾರೆ. ಆದುದರಿಂದ ಜನಪದರ ಗೀತೆಗಳನ್ನು ಅಥವಾ ಸಾಮಗ್ರಿಗಳನ್ನು ಸಂಗ್ರಹಿಸುವ ಮೂಲಕ ನಾವು ಜನಪದರನ್ನು ಅಧ್ಯಯನ ಮಾಡಬೇಕಾಗಿಲ್ಲ. ಜನಪದರನ್ನೇ ನೇರ ಅಧ್ಯಯನ ಮಾಡುವ ಮೂಲಕ ನಾವು ಜನಪದ ಲೋಕವನ್ನು ಅರ್ಥ ಮಾಡಿಕೊಳ್ಳಬಹುದು ಎನ್ನುವ ಅಭಿಪ್ರಾಯ ನೀಡಿದರು. ಹೀಗೆ ಕ್ರಮೇಣ ಲೋರ್ ಬದಲು ಫೋಕ್ ಅಧ್ಯಯನದ ಕೇಂದ್ರ ಬಿಂದುವಾಯಿತು.[3]

ಮಹಿಳಾ ಅಧ್ಯಯನದಲ್ಲೂ ಆರಂಭದಲ್ಲಿ ಬಿಳಿಮಹಿಳೆಯರು ತಮ್ಮ ಸಮಾಜದ ಬಿಳಿಪುರುಷರಿಗೆ ಹೋಲಿಸಿಕೊಂಡು ಮಹಿಳಾ ಪ್ರಶ್ನೆಗಳನ್ನು ರೂಪಿಸಿಕೊಂಡರು. ಮಹಿಳಾ ಅಧ್ಯಯನ ಆರಂಭವಾದ ದಿನಗಳಲ್ಲಿ ಅದರ ಬಹುಮುಖ್ಯ ಪ್ರಶ್ನೆ ಮಹಿಳಾ ಅನುಭವಗಳನ್ನು ದಾಖಲಿಸುವುದು. ಹಾಗೆಂದು ಎಲ್ಲ ಮಹಿಳೆಯರು ಮಹಿಳಾ ಅಧ್ಯಯನದ ವಸ್ತುವಾಗಲಿಲ್ಲ. ಸಂಶೋಧನೆಯಲ್ಲಿ ಯಜಮಾನಿಕೆ ನಡೆಸುತ್ತಿದ್ದ ಬಿಳಿಯ ಪುರುಷರನ್ನು ಪ್ರಶ್ನಿಸುತ್ತಾ ಮಹಿಳಾ ಪ್ರಶ್ನೆಗಳು ಮುಂಚೂಣಿಗೆ ಬಂದಿವೆ. ಆದುದರಿಂದ ಸಹಜವಾಗಿಯೇ ಮಹಿಳಾ ಅಧ್ಯಯನದ ಆರಂಭದ ದಿನಗಳಲ್ಲಿ ಬಿಳಿಯ ಮಹಿಳೆಯರ ಪ್ರಶ್ನೆಗಳೇ ಮಹಿಳಾ ಸಂಶೋಧನೆಯ ಪ್ರಶ್ನೆಗಳಾಗಿದ್ದವು (ಫೆಮಿನಿಸ್ಟ್ ಎಂಪಿರಿಸಿಸಂ).[4] ಆದರೆ ಇದು ಹೆಚ್ಚು ದಿನ ನಡೆಯಲಿಲ್ಲ. ಮಹಿಳೆಯರೆಂದರೆ ಕೇವಲ ಬಿಳಿಯ ಮಹಿಳೆಯರಲ್ಲ, ಅಲ್ಲಿ ಕಪ್ಪು, ಬ್ರೌನ್ ಮುಂತಾದ ಮಹಿಳೆಯರು ಕೂಡ ಇದ್ದಾರೆ. ಅವರ ಪ್ರಶ್ನೆಗಳು ಕೂಡ ಮಹಿಳಾ ಸಂಶೋಧನೆಯ ಪ್ರಶ್ನೆಗಳಾಗಬೇಕೆಂದಾಯಿತು (ವುಮೆನ್ಸ್ ಸ್ಟೆಂಡ್ ಪಾಯಿಂಟ್).[5] ನಂತರದ ದಿನಗಳಲ್ಲಿ ಶ್ರೀಮಂತ ದಿನಗಳ ಮಹಿಳಾ ಪ್ರಶ್ನೆಗಳು ಬಡದೇಶಗಳ ಮಹಿಳಾ ಪ್ರಶ್ನೆಗಳಿಗಿಂತ ಸಂಪೂರ್ಣ ಭಿನ್ನ. ಶ್ರೀಮಂತ ದೇಶಗಳ ಮಹಿಳಾ ಸಮಸ್ಯೆಗಳನ್ನು ಆಧರಿಸಿ ಬೆಳೆದ ಮಹಿಳಾ ಸಂಶೋಧನೆಗಳು ಬಡದೇಶಗಳ ಮಹಿಳೆಯರ ಅನುಭವಗಳನ್ನು ಪ್ರತಿನಿಧೀಕರಿಸುವುದಿಲ್ಲ ಎಂದಾಯಿತು. ಬಡದೇಶಗಳ ಮಹಿಳಾ ಪ್ರಶ್ನೆಗಳನ್ನು ಒಳಗೊಂಡ ಅಧ್ಯಯನಗಳು ಬರಲು ಆರಂಭವಾಯಿತು. ನಮ್ಮಲ್ಲಿ ಮಹಿಳಾ ಅಧ್ಯಯನಕ್ಕೆ ತೊಡಗಿಸಿಕೊಂಡವರು ಮಧ್ಯಮ ವರ್ಗದ ಮೇಲ್‌ಜಾತಿ ಮಹಿಳೆಯರು. ಸಹಜವಾಗಿಯೇ ಅವರು ತಮ್ಮ ಆಸಕ್ತಿಗಳನ್ನೇ ಮಹಿಳಾ ಆಸಕ್ತಿಗಳೆಂದು ಪ್ರತಿಬಿಂಬಿಸುವ ಕೆಲಸವನ್ನು ಮಾಡಿದರು. ಅಲ್ಲಿ ಸಮಾಜದ ಕೆಳಸ್ತರದ ಮಹಿಳೆಯರ ಸ್ಥಿತಿಗತಿಗಳ ಮಾಹಿತಿ ಇಲ್ಲ. ನಂತರದ ದಿನಗಳಲ್ಲಿ ಅದು ಕೂಡ ಪ್ರಶ್ನೆಗೊಂಡಿತು. ಬಡದೇಶಗಳ ಎಲ್ಲ ಮಹಿಳೆಯರ ಸ್ಥಿತಿ ಒಂದೇ ಅಲ್ಲ. ಬಡದೇಶದ ಶ್ರೀಮಂತ ಮತ್ತು ಮಧ್ಯಮ ವರ್ಗದ ಮಹಿಳಾ ಸಮಸ್ಯೆಗಳೇ ಬೇರೆ, ಬಡ ಮಹಿಳೆಯರ ಸಮಸ್ಯೆಗಳೇ ಬೇರೆ. ಬಡದೇಶದ ಬಡಮಹಿಳೆ ಕೇವಲ ಮಹಿಳೆ ಎನ್ನುವ ಕಾರಣಕ್ಕಾಗಿ ಶೋಷಣೆಗೆ ಒಳಪಡುವುದಲ್ಲ. ಜಾತಿ, ಧರ್ಮ, ವರ್ಗ, ಪ್ರದೇಶ, ಭಾಷೆ, ಇತ್ಯಾದಿಗಳೆಲ್ಲ ಅವಳ ಶೋಷಣೆಯನ್ನು ಇನ್ನೂ ಸಂಕೀರ್ಣಗೊಳಿಸಿವೆ. ಆದುದರಿಂದ ಮಹಿಳಾ ಅಧ್ಯಯನಗಳು ಅವಳ ಅನುಭವಗಳನ್ನು ಒಳಗೊಳ್ಳುವುದು ಅತೀ ಅಗತ್ಯ ಎಂದಾಯಿತು (ಆಧುನಿಕೋತ್ತರ ಚಿಂತನೆಗಳು).[6]

ಇಂದಿನ ಸಮಾಜ ಥಿಯರಿಗಳು ಐವತ್ತರ ದಶಕದ ಸಮಾಜ ಥಿಯರಿಗಳಂತೆ ಪಶ್ಚಿಮದ ಅನುಭವ ಆಧರಿತ ಅಲ್ಲ. ಪಶ್ಚಿಮೇತರ ಸಮಾಜಗಳ ಅನುಭವ ಇಂದಿನ ಸಮಾಜ ಥಿಯರಿಗಳ ಅಡಿಪಾಯ ಎನ್ನುವ ತಾತ್ಪರ್ಯ ಮೇಲಿನ ವಾದಗಳಲ್ಲಿದೆ. ಆದರೆ ಈ ವಾದವನ್ನು ಒಪ್ಪಲು ಎರಡು ಸಮಸ್ಯೆಗಳಿವೆ. ಒಂದು, ಸುಧಾರಿತ ಸಮಾಜ ಥಿಯರಿಗಳು ರೂಪುಗೊಳ್ಳುವ ವಿಧಾನ. ಎರಡು, ಅಧಿಕಾರ ಮತ್ತು ಥಿಯರಿ ನಡುವಿನ ಸಂಬಂಧ. ಮೊದಲಿಗೆ ಸುಧಾರಿತ ಸಮಾಜ ಥಿಯರಿಗಳು ರೂಪುಗೊಳ್ಳುವ ಬಗೆಯನ್ನು ಅರ್ಥಮಾಡಿಕೊಳ್ಳಬಹುದು. ಒಂದು, ಯಾವುದೋ ಒಂದು ಅಥವಾ ಕೆಲವು ಸಮಾಜದ ಅಥವಾ ಸಂಸ್ಕೃತಿಯ ಅನುಭವಗಳು ಯೂನಿವರ್ಸಾಲಿಟಿಯನ್ನು ಪ್ರತಿಪಾದಿಸುವ ಥಿಯರಿಗೆ ಸಾಮಗ್ರಿ ಒದಗಿಸುವುದು. ಎರಡು, ಯೂನಿವರ್ಸಲ್‌‌ನ ವ್ಯಾಪ್ತಿಯಲ್ಲಿ ಬರುವ ಎಲ್ಲ ಬಿಡಿ ಭಾಗಗಳು ತಮ್ಮ ನಿರ್ದಿಷ್ಟತೆಯನ್ನು ಸಂಗ್ರಹಿಸಿ ಯೂನಿವರ್ಸಲನ್ನು ರೂಪಿಸಿಕೊಳ್ಳುವುದು. ಮೂರು, ಮೇಲಿನ ಎರಡರ ಮಿಶ್ರಣ; ಅಂದರೆ ಕೆಲವು ಸಮಾಜಗಳ ಕೊಡುಗೆಗಳ ಜತೆಗೆ ಇತರ ಸಮಾಜಗಳು ಕೂಡ ತಮ್ಮ ಅಂಶವನ್ನು ಸೇರಿಸಿ ಯೂನಿವರ್ಸಲನ್ನು ರೂಪಿಸಿಕೊಳ್ಳುವುದು. ಹೀಗೆ ಹಲವಾರು ವಿಧಗಳಿಂದ ಯೂನಿವರ್ಸಲ್ ರೂಪಿತಗೊಳ್ಳಬಹುದು. ಯೂನಿವರ್ಸಲ್ ಪರ್ಟಿಕ್ಯುಲರ್‌ಅಂಶಗಳಿಂದ ರೂಪಿತವಾಗಿದ್ದರೆ ಯೂನಿವರ್ಸಲ್ ಕಡೆಗೆ ಹೋಗುವುದು ಸಮಸ್ಯೆ ಅಲ್ಲ. ಆದರೆ ಸುಧಾರಿತ ಸಮಾಜ ಥಿಯರಿಗಳು ಕೂಡ ಪ್ರಪಂಚದ ಎಲ್ಲ ಸಮಾಜಗಳ ಅನುಭವಗಳನ್ನು ಆಧರಿಸಿ ರೂಪುಗೊಂಡಿವೆ ಎನ್ನಲಾಗುವುದಿಲ್ಲ. ಈ ಸಂದೇಹಕ್ಕೆ ಕೆಲವೊಂದು ಕಾರಣಗಳನ್ನು ನೀಡಬಹುದು. ಇಂದು ಕೂಡ ಬಡ ಸಾಮಾಜಿಕ ವ್ಯವಸ್ಥೆಗಳ ಬಹುತೇಕ ಸಮಾಜ ಸಂಶೋಧಕರ ಕೆಲಸ ಶ್ರೀಮಂತ ದೇಶಗಳ ಸಮಾಜವಿಜ್ಞಾನಿಗಳು ನೇಯುವ ಸಮಾಜ ಥಿಯರಿಗಳಿಗೆ ಅಂಕಿಅಂಶಗಳನ್ನು ಪೂರೈಕೆ ಮಾಡುವುದು. ಜತೆಗೆ ತೃತೀಯ ಜಗತ್ತಿನ ಸಾಮಾಜಿಕ ಸಂಗತಿಗಳು ಯಜಮಾನಿಕೆಯಲ್ಲಿರುವ ಸಮಾಜ ಥಿಯರಿಗಳನ್ನು ಪರೀಕ್ಷಿಸುವುದಕ್ಕೆ ಸೀಮಿತವಾಗಿವೆ. ಇಂದು ಕೂಡ ಸಮಾಜ ಸಂಶೋಧನೆಯಲ್ಲಿ ಡಿಡಕ್ಟೀವ್ ಮತ್ತು ಇಂಡಕ್ಟೀವ್ ವಿಧಾನಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿವೆ. ಡಿಡಕ್ಟೀವ್‌ವಿಧಾನದಿಂದ ಹೈಪಾಥೀಸಿಸ್‌ಗಳನ್ನು ರೂಪಿಸಿ ಅವುಗಳನ್ನು ತೃತೀಯ ಜಗತ್ತಿನ ಸಾಮಾಜಿಕ ಸಂಗತಿಗಳೊಂದಿಗೆ ಹೋಲಿಸಿ ಇಲ್ಲಿನ ವಾಸ್ತವತೆ ಥಿಯರಿ ಕಟ್ಟಿಕೊಡುವ ವಾಸ್ತವತೆಗಿಂತ ಎಷ್ಟು ದೂರ ಅಥವಾ ಎಷ್ಟು ಹತ್ತಿರ ಇದೆ ಎನ್ನುವ ತೀರ್ಮಾನಕ್ಕೆ ಬರಲಾಗುತ್ತದೆ. ಒಂದು ವೇಳೆ ಇಂಡಕ್ಟೀವ್ ವಿಧಾನದಿಂದ ಎಂಪಿರಿಕಲ್ ಎವಿಡೆನ್ಸ್ ಸಂಗ್ರಹಿಸಿ ಜನರಲೈಸ್ ಮಾಡಲು ಪ್ರಯತ್ನಿಸಿದರೆ ಅದನ್ನು ಈಗಾಗಲೇ ಯಜಮಾನಿಕೆಯಲ್ಲಿರುವ ಥಿಯರಿಗಳೊಂದಿಗೆ ಇಟ್ಟು ಪರೀಕ್ಷಿಸಬೇಕಾಗುತ್ತದೆ. ಅಂದರೆ ಇಂಡಕ್ಟೀವ್ ವಿಧಾನದಿಂದ ಕಂಡುಕೊಂಡ ವಾಸ್ತವತೆ ಈಗಾಗಲೇ ಯಜಮಾನಿಕೆಯಲ್ಲಿರುವ ಥಿಯರಿ ಹೇಳುವ ವಾಸ್ತವತೆಗಳಿಗೆ ಹತ್ತಿರ ಇದೆಯೇ ಅಥವಾ ದೂರ ಇದೆಯೇ ಎಂದು ತೋರಿಸಬೇಕಾಗುತ್ತದೆ. ಎರಡೂ ವಿಧಾನದಲ್ಲೂ ಯಜಮಾನಿಕೆಯಲ್ಲಿರುವ ಥಿಯರಿ ಕಡೆಗೆ ಹೋಗುವ ಪ್ರಯತ್ನ.[7] ಆದುದರಿಂದ ಸುಧಾರಿತ ಸಮಾಜ ಥಿಯರಿಗಳು ನಿಜವಾದ ಅರ್ಥದಲ್ಲಿ ಅಂಚಿನಲ್ಲಿರುವ ಸಮಾಜಗಳ ಅನುಭವ ಆಧರಿತ ಅಲ್ಲ. ಬಲಾಢ್ಯ ಸಮಾಜಗಳು ತಮ್ಮ ಯಜಮಾನಿಕೆಯನ್ನು ಮುಂದುವರಿಸಲು ಅಂಚಿನಲ್ಲಿರುವ ಸಾಮಾಜಿಕ ವಾಸ್ತವತೆಗಳನ್ನು ತಮ್ಮ ಆಸಕ್ತಿಗಳಿಗೆ ಧಕ್ಕೆಯಾಗದ ರೀತಿಯಲ್ಲಿ ಒಳಗೊಳಿಸುವ ಪ್ರಯತ್ನ ಇದು. ಈ ಸುಧಾರಿತ ರೂಪ ಹಿಂದಿನ ಕ್ರೂಡ್ ಯುರೋ ಸೆಂಟ್ರಿಸಂಗಿಂತಲೂ ಅಪಾಯಕಾರಿಯಾಗಬಹುದು.

ಸುಧಾರಿತ ಸಮಾಜ ಥಿಯರಿಗಳನ್ನು ಒಪ್ಪಿಕೊಳ್ಳುವಲ್ಲಿ ತೊಡಕಾಗುವ ಮತ್ತೊಂದು ಅಂಶವೆಂದರೆ ಥಿಯರಿ ಮತ್ತು ಅಧಿಕಾರದ ನಡುವಿನ ಸಂಬಂಧದ ಪ್ರಶ್ನೆ. ಥಿಯರಿಒಂದು ಅದರ ಸ್ವಂತ ಬಲದಿಂದ ಅಥವಾ ಜಗತ್ತಿನ ಎಲ್ಲ ಸಮಾಜಗಳನ್ನು ವಿವರಿಸುವ ಅದರ ಸಾಮರ್ಥ್ಯದಿಂದ ಯೂನಿವರ್ಸಲ್ ಆನ್ವಯಿಕೆಯುಳ್ಳ ಥಿಯರಿಯಾಗುತ್ತದೆ ಅಥವಾ ಪ್ರಪಂಚದ ಎಲ್ಲ ಸಮಜಗಳನ್ನು ವಿವರಿಸುವ ಶಕ್ತಿಯನ್ನು ಪಡೆಯುತ್ತದೆ ಎನ್ನುವ ಒಂದು ಮುಗ್ಧ ತಿಳುವಳಿಕೆ ನಮ್ಮ ಪ್ರಜ್ಞೆಯ ಭಾಗವಾಗಿದೆ. ಆದರೆ ಈ ತಿಳುವಳಿಕೆ ಎಷ್ಟು ಸರಿ? ಥಿಯರಿಯಲ್ಲಿ ಅಂತರ್ಗತವಾಗಿರುವ ಸಾಮರ್ಥ್ಯದಿಂದಲೇ ಥಿಯರಿಯೊಂದು ಯೂನಿವರ್ಸಲ್ ಆನ್ವಯಿಕೆಯ ಸ್ಥಾನಕ್ಕೆ ಏರುತ್ತದೆಯೇ? ಥಿಯರಿಯನ್ನು ಕಟ್ಟಿಕೊಡುವ ಸಮಾಜದ ಅಧಿಕಾರ ಸ್ಥಾನಮಾನ ಥಿಯರಿಯ ಸ್ಥನಮಾನವನ್ನು ಪ್ರಭಾವಿಸುವುದಿಲ್ಲವೇ? ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡರೆ ಥಿಯರಿ ಮತ್ತು ಅಧಿಕಾರ ಸಂಬಂಧಗಳು ಸ್ಪಷ್ಟವಾಗಬಹುದು. ಯಾವುದು ಚರಿತ್ರೆ ಆಗುತ್ತದೆ ಯಾವುದು ಚರಿತ್ರೆ ಆಗುವುದಿಲ್ಲ ಎನ್ನುವ ವಿಶ್ಲೇಷಣೆ ಥಿಯರಿ ಮತ್ತು ಅಧಿಕಾರದ ನಡುವಿನ ಸಂಬಂಧವನ್ನು ಅರ್ಥ ಮಾಡಿಕೊಳ್ಳಲು ಸಹಕಾರಿಯಾಗಬಹುದು. ಚರಿತ್ರೆ ಅಂದರೆ ಭೂತಕಾಲದಲ್ಲಿ ನಡೆದಿದೆ ಎನ್ನುವುದರ ಒಂದು ವಿವರಣೆ. ಹಾಗೆಂದು ಭೂತಕಾಲದಲ್ಲಿ ನಡೆದವೆಲ್ಲ ಚರಿತ್ರೆ ಆಗುತ್ತದೆಯೇ? ಭೂತಕಾಲದ ಎಲ್ಲ ಸಂಗತಿಗಳು ಚರಿತ್ರೆ ಆಗುವುದಿಲ್ಲ. ಕೆಲವು ಸಂಗತಿಗಳು ದಾಖಲಾಗುತ್ತವೆ; ಇನ್ನು ಕೆಲವು ದಾಖಲಾಗುವುದಿಲ್ಲ. ಯಾಕೆ ಹೀಗಾಗುತ್ತದೆ? ಇದಕ್ಕೆ ಬಹುಮುಖ್ಯ ಕಾರಣ ಆಯಾ ಸಂದರ್ಭದ ಅಧಿಕಾರ ಸಂಬಂಧಗಳು. ಯಾವುದು ದಾಖಲಾಗಬೇಕು ಎನ್ನುವುದನ್ನು ಅಧಿಕಾರ ನಿರ್ಧರಿಸುತ್ತದೆ. ನಾವು ಚರಿತ್ರೆ ಎಂದು ಓದಿಕೊಂಡು ಬಂದಿರುವುದರಲ್ಲಿ ರಾಜಮಹಾರಾಜರ ಕಥನ ಬಿಟ್ಟರೆ ಬೇರೆ ಯಾರೂ ಕಾಣುವುದೇ ಇಲ್ಲ. ಇದಕ್ಕೆ ಕಾರಣ ಆ ಚರಿತ್ರೆಯನ್ನು ಬರೆಸಿದವರು ರಾಜ ಮಹಾರಾಜರೇ. ಪ್ರಜಾಪ್ರಭುತ್ವ ಬರುವುದರೊಂದಿಗೆ ಅಧಿಕಾರ ಸಂಬಂಧಗಳು ಬದಲಾವಣೆ ಆಗಿವೆ. ಪ್ರತಿಯೊಬ್ಬ ವ್ಯಕ್ತಿ ಕೂಡ (ತಾತ್ವಿಕವಾಗಿ) ಪ್ರಜಾಪ್ರಭುತ್ವದಲ್ಲಿ ಅಧಿಕಾರವನ್ನು ಯಾವುದೋ ಒಂದು ಬಗೆಯಲ್ಲಿ ಪ್ರಭಾವಿಸಲು ಶಕ್ತ ಎನ್ನುವ ಗೃಹೀತವಿದೆ. ಆ ಕಾರಣಕ್ಕಾಗಿ ಇಂದು ಹಲವು ಚರಿತ್ರೆಗಳು ರೂಪುಗೊಳ್ಳಲು ಆರಂಭವಾಗಿವೆ – ದಲಿತ ಚರಿತ್ರೆ, ಮಹಿಳಾ ಚರಿತ್ರೆ ಇತ್ಯಾದಿಗಳು.[8] ಹೀಗೆ ಅಧಿಕಾರ ಸಂಬಂಧಗಳು ಯಾವುದು ಮಹತ್ವ ಯಾವುದು ಮಹತ್ವ ಅಲ್ಲ ಎನ್ನುವುದನ್ನು ತೀರ್ಮಾನಿಸುತ್ತವೆ. ಅಂತಾರಾಷ್ಟ್ರೀಯ ಅಧಿಕಾರ ಸಂಬಂಧಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಾವುದು ಮಹತ್ವ ಅಲ್ಲ ಯಾವುದು ಮಹತ್ವ ಎನ್ನುವುದನ್ನು ತೀರ್ಮಾನಿಸುತ್ತವೆ.

ಅಂತಾರಾಷ್ಟ್ರೀಯ ವ್ಯವಸ್ಥೆಯ ಸಂಕ್ಷಿಪ್ತ ಪರಿಚಯ ಅಂತಾರಾಷ್ಟ್ರೀಯ ಅಧಿಕಾರ ಸಂಬಂಧಗಳನ್ನು ಅರ್ಥ ಮಾಡಿಕೊಳ್ಳಲು ಅಗತ್ಯ. ಹಲವಾರು ದೇಶಗಳ ಸಮುದಾಯವೇ ಅಂತಾರಾಷ್ಟ್ರೀಯ ವ್ಯವಸ್ಥೆ. ಅಂತಾರಾಷ್ಟ್ರೀಯ ಸಂಬಂಧಗಳನ್ನು ಮತ್ತು ವ್ಯವಹಾರಗಳನ್ನು ನಿರ್ವಹಿಸಲು ಹಲವಾರು ಸಂಸ್ಥೆಗಳಿವೆ. ಇವುಗಳಲ್ಲಿ ತಾಂತ್ರಿಕವಾಗಿ ಎಲ್ಲ ದೇಶಗಳ ಪ್ರತಿನಿಧಿತ್ವ ಇದೆ. ಆದರೆ ಕಾರ್ಯರೂಪದಲ್ಲಿ ಶ್ರೀಮಂತ ದೇಶಗಳು ಮಾತ್ರ ಈ ಸಂಸ್ಥೆಗಳನ್ನು ಸಂಪೂರ್ಣವಾಗಿ ಆವರಿಸಿಕೊಂಡಿವೆ. ಆದುದರಿಂದ ಇಲ್ಲಿನ ನಿರ್ಣಯಗಳು ಶ್ರೀಮಂತ ದೇಶಗಳ ಆಸಕ್ತಿಗಳಿಗೆ ಪೂರಕವಾಗಿಯೇ ಇರಬೇಕಾದ ಅನಿವಾರ್ಯತೆ ಹಿಂದಿನಿಂದಲೂ ಇದೆ. ಶ್ರೀಮಂತ ದೇಶಗಳು ತಮ್ಮ ಆಸಕ್ತಿಗಳನ್ನು ಕಾಪಾಡಲು ವಿವಿಧ ಮಾರ್ಗಗಳನ್ನು ಅನುಸರಿಸುತ್ತಿವೆ. ತಮ್ಮ ಆಸಕ್ತಿಗಳನ್ನು ಕಾಪಾಡಲು ಐವತ್ತರ ದಶಕದಲ್ಲಿ ಅನುಸರಿಸಿದ ಮಾರ್ಗವನ್ನು ನೋಡೋಣ. ಐವತ್ತರ ದಶಕದಲ್ಲಿ ಅಮೆರಿಕ ಮತ್ತು ರಷ್ಯಾ ಎರಡೂ ಪರಸ್ಪರ ವಿರುದ್ಧ ಧೋರಣೆಗಳನ್ನು ಅನುಸರಿಸುತ್ತಿದ್ದ ಬಲಿಷ್ಠ ರಾಷ್ಟ್ರಗಳಾಗಿದ್ದವು. ಒಂದು ಲಿಬರಲಿಸಂ ಮತ್ತು ಮುಕ್ತ ಮಾರುಕಟ್ಟೆ ಆಧರಿತ ಅಭಿವೃದ್ಧಿ ಮಾದರಿಯನ್ನು ಪ್ರಚಾರ ಪಡಿಸಿದರೆ ಮತ್ತೊಂದು ಕಮ್ಯುನಿಸಂ ಮತ್ತು ಯೋಜಿತ ಅಥವಾ ಪ್ರಭುತ್ವ ನೇತೃತ್ವದ ಅಭಿವೃದ್ಧಿ ಮಾದರಿಯನ್ನು ಪ್ರತಿಪಾದಿಸುತ್ತಿತ್ತು. ಅಂತರರಾಷ್ಟ್ರೀಯ ವ್ಯವಸ್ಥೆಯಲ್ಲಿ ತಮ್ಮ ಪ್ರಭಾವವನ್ನು ಹೆಚ್ಚಿಸಿಕೊಳ್ಳಬೇಕಾದರೆ ತಮ್ಮ ಮಾದರಿಗಳನ್ನು ಅನುಸರಿಸುವ ದೇಶಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವ ಅಗತ್ಯ ಇತ್ತು. ಬಲ ಪ್ರಯೋಗದಿಂದ ತಮ್ಮ ತಮ್ಮ ಮಾದರಿಗಳನ್ನು ಇತರ ದೇಶಗಳ ಮೇಲೆ ಹೇರುವ ಸ್ಥಿತಿಯಲ್ಲಿ ಎರಡೂ ದೇಶಗಳು ಇರಲಿಲ್ಲ.[9] ತಮ್ಮ ತಮ್ಮ ಮಾದರಿಗಳನ್ನು ವಿಶ್ವಮಾದರಿಗಳನ್ನಾಗಿಸಲು ಇತರ ಮಾರ್ಗಗಳನ್ನು ಅನುಸರಿಸುವುದು ಅನಿವಾರ್ಯವಾಯಿತು. ಅವುಗಳಲ್ಲಿ ಸಮಾಜ ಸಂಶೋಧನೆ ಅಥವಾ ಯೂನಿವರ್ಸಲ್ ಥಿಯರಿ ಕೂಡ ಒಂದು. ಎರಿಕ್ ಹಾಬ್ಸ್‌ವಾಮ್‌ನಂತಹ ಚರಿತ್ರಕಾರು ರಷ್ಯಾದ ಮಾದರಿ ಕುರಿತಂತೆ ‘ಹಲವಾರು ಇತಿಮಿತಿಗಳ ನಡುವೆಯೂ (ಸಾಮೂಹಿಕ ಕೃಷಿಯಲ್ಲಿನ ಬಲಾತ್ಕಾರ, ಬೃಹತ್ ಯೋಜನೆಗಳು ಬಯಸುವ ನರಬಲಿ ಇತ್ಯಾದಿಗಳ ನಡುವೆಯೂ) ಅತಿ ಕಡಿಮೆ ಅವಧಿಯಲ್ಲಿ ಯೋಜಿತ ಅಭಿವೃದ್ಧಿಯಿಂದ ಗಣನೀಯ ಪ್ರಮಾಣದ ಸಾಮಾಜಿಕ ಹಾಗೂ ಆರ್ಥಿಕ ಪರಿವರ್ತನೆ ಸಾಧ್ಯವಾಯಿತೆಂದು ಅಭಿಪ್ರಾಯಪಡುತ್ತಾನೆ.[10] ಹೊಸ ಸಮಾಜ ಸೃಷ್ಟಿಸ ಹೊರಟ ನವರಾಷ್ಟ್ರಗಳಿಗೆ ಈ ಮಾದರಿ ತುಂಬಾ ಆಕರ್ಷಣೀಯವಾಗಿತ್ತು. ಇದಕ್ಕಾಗಿಯೇ ಡಬ್ಲ್ಯೂ, ಡಬ್ಲ್ಯೂ. ರಸ್ತೋ ರಷ್ಯಾದ ಯೋಜಿತ ಅಭಿವೃದ್ಧಿಯ ಮಾದರಿಯನ್ನು “ಪರಿವರ್ತನೆಯ ರೋಗ” ಎಂದು ಕರೆದಿದ್ದ ಮತ್ತು ಆರ್ಥಿಕ ಅಭಿವೃದ್ಧಿ ಮೇಲಿನ ತನ್ನ ಪುಸ್ತಕವನ್ನು “ಎ ನಾನ್ ಕಮ್ಯುನಿಸ್ಟ್ ಮೆನಿಫೆಸ್ಟೋ” ಎಂದು ಹೆಸರಿಸಿದ್ದ.[11] ರಸ್ತೋನ ಪುಸ್ತಕ ಬಿಡುಗಡೆಯಾದ ಎಂಟು ವರ್ಷಗಳ ನಂತರ ಸ್ಯಾಮ್‌ವೆಲ್ ಹಟ್ಟಿಂಗ್‌ಟನ್, ‘ಅಭಿವೃದ್ಧಿಯ ಬದಲೀ ಮಾದರಿಯೊಂದನ್ನು ಕೊಡದಿದ್ದರೆ ಪಶ್ಚಿಮದ ರಾಷ್ಟ್ರಗಳು ತೃತೀಯ ಜಗತ್ತಿನಲ್ಲಿ ಲೆನಿನಿಸಂನೊಂದಿಗೆ ಸ್ಪರ್ಧಿಸುವುದು ಕಷ್ಟವಾಗಬಹುದು’ ಎಂದು ಎಚ್ಚರಿಸಿದ್ದಾನೆ.[12] ಹೀಗೆ ಪ್ರಪಂಚದ ಎರಡು ಬಲಿಷ್ಠ ರಾಷ್ಟ್ರಗಳು (ಅಮೆರಿಕ ಮತ್ತು ರಷ್ಯಾ) ತಮ್ಮ ಅಭಿವೃದ್ಧಿ ಮಾದರಿಗಳನ್ನು ಪ್ರಪಂಚದ ಇತರ ರಾಷ್ಟ್ರಗಳ ಮುಂದಿಟ್ಟವು. ಆಗ ತಾನೇ ಸ್ವತಂತ್ರಗೊಂಡ ರಾಷ್ಟ್ರಗಳಿಗೆ ಹಲವಾರು ಇತಿಮಿತಿಗಳಿದ್ದವು. ಅವು ಎಲ್ಲ ಕ್ಷೇತ್ರಗಳಲ್ಲೂ ಬಲಹೀನವಾಗಿದ್ದವು. ಅಂತಾರಾಷ್ಟ್ರೀಯ ಪ್ರಭಾವದಿಂದ ಬಿಡಿಸಿಕೊಂಡು ತಮ್ಮದೇ ಮಾದರಿಯನ್ನು ರೂಪಿಸಿಕೊಂಡು ಪ್ರತ್ಯೇಕವಾಗಿ ಇರುವ ಸಾಧ್ಯತೆ ಇರಲಿಲ್ಲ. ಯಾವುದೋ ಒಂದು ಬಲದೊಂದಿಗೆ ಗುರುತಿಸಿಕೊಳ್ಳುವುದು ಎಲ್ಲರಿಗೂ ಅನಿವಾರ್ಯವಾಗಿತ್ತು. ಒಂದೋ ಅಮೆರಿಕದ ಮುಕ್ತ ಮಾರುಕಟ್ಟೆ ಮಾದರಿಯನ್ನು ಅನುಸರಿಸುವುದು ಅಥವಾ ರಷ್ಯಾದ ಯೋಜಿತ ಅಭಿವೃದ್ಧಿ ಮಾದರಿಯನ್ನು ಅನುಸರಿಸುವುದು ಅಥವಾ ಈ ಎರಡರ ಮಿಶ್ರಣವನ್ನು ಪ್ರಯೋಗಿಸುವುದು ಅವುಗಳ ಮುಂದಿದ್ದ ದಾರಿ. ಹೀಗೆ ಪಶ್ಚಿಮದ ಥಿಯರಿಗಳು ಪ್ರಪಂಚದ ಬಹುತೇಕ ರಾಷ್ಟ್ರಗಳಲ್ಲಿ ನೆಲೆಯೂರಲು ಸಾಧ್ಯವಾಯಿತು. ಹೀಗೆ ಸಮಾಜ ಥಿಯರಿಗಳಲ್ಲಿ ಯೂನಿವರ್ಸಾಲಿಟಿ ನೆಲೆ ಕಂಡುಕೊಳ್ಳುವಲ್ಲಿ ವಿಜ್ಞಾನದ ವಿಧಾನದ ಪ್ರಭಾವದ ಜತೆಗೆ ಶ್ರೀಮಂತ ರಾಷ್ಟ್ರಗಳ ಬಲದ (ಆರ್ಥಿಕ, ರಾಜಕೀಯ, ಮಿಲಿಟರಿ ಬಲಗಳು) ಪಾತ್ರವೂ ಇದೆ.

ಈಗಲೂ ಅಂತಾರಾಷ್ಟ್ರೀಯ ಅಧಿಕಾರ ಸಂಬಂಧಗಳು ಕೆಲವೇ ಕೆಲವು ಶ್ರೀಮಂತ ದೇಶಗಳ ಆಸಕ್ತಿಗಳಿಗನುಗುಣವಾಗಿ ತೀರ್ಮಾನಗೊಳ್ಳುತ್ತಿವೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಅಂತಾರಾಷ್ಟ್ರೀಯ ಅಧಿಕಾರ ಸಂಬಂಧಗಳಲ್ಲಿ ಇಂದು ಕೂಡ ಪ್ರಜಾಪ್ರಭುತ್ವದ ಗಂಧ ಗಾಳಿಯೂ ಇಲ್ಲ. ಅಂತಾರಾಷ್ಟ್ರೀಯ ಸಂಬಂಧಗಳನ್ನು ನಿರ್ಧರಿಸುವ ಹಲವಾರು ಸಂಸ್ಥೆಗಳು (ವರ್ಲ್ಡ್‌ಬ್ಯಾಂಕ್, ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ, ಯುಎನ್‌ಓ ಇತ್ಯಾದಿಗಳು) ಶ್ರೀಮಂತ ರಾಷ್ಟ್ರಗಳ ಆಸಕ್ತಿಗಳಿಗೆ ಪೂರಕವಾಗಿ ಕೆಲಸ ಮಾಡುತ್ತಿವೆ. ಅಲ್ಲಿ ಬಡ ದೇಶಗಳಿಗೆ ಪ್ರತಿನಿಧೀಕರಣ ಇದೆ. ಆದರೆ ಅದೊಂದು ರೀತಿಯ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವ ಪ್ರತಿನಿಧಿತ್ವ.[13] ಆದುದರಿಂದ ಇಂದು ಕೂಡ ಪಶ್ಚಿಮದ ಶ್ರೀಮಂತ ದೇಶಗಳು ಸಮಾಜವಿಜ್ಞಾನಗಳ ದಿಕ್ಕು ದಿಶೆಗಳನ್ನು ನಿರ್ಧರಿಸುವಲ್ಲಿ ಮಹತ್ತರವಾದ ಪಾತ್ರ ವಹಿಸುತ್ತಿವೆ. ಇದಕ್ಕೆ ಉತ್ತಮ ಉದಾಹರಣೆಗಳೆಂದರೆ ಇತ್ತೀಚಿನ ದಿನಗಳಲ್ಲಿ ಪ್ರಪಂಚದ ಎಲ್ಲ ಕಡೆಗಳಲ್ಲೂ ಆಚರಣೆಯಲ್ಲಿರುವ ಉದಾರೀಕರಣದ ನೀತಿ. ಉದಾರೀಕರಣ ಪರ ವಾದಗಳು ಈ ಕೆಳಗಿನ ಗೃಹೀತಗಳ ಮೇಲೆ ನಿಂತಿವೆ. ಒಂದು, ಎಲ್ಲ ಕ್ಷೇತ್ರಗಳಲ್ಲಿ ಅದರಲ್ಲೂ ಆರ್ಥಿಕ ಕ್ಷೇತ್ರದಲ್ಲಿ ಪ್ರಭುತ್ವದ ಅತಿಯಾದ ಮೂಗು ತೂರಿಸುವಿಕೆ ಸಲ್ಲದು. ಎರಡು, ಮಾರುಕಟ್ಟೆ ಪಾತ್ರವನ್ನು ಅಲ್ಲಗಳೆದಿರುವುದು ಅಥವಾ ಎರಡನೇ ಸ್ಥಾನ ನೀಡಿರುವುದು ಸರಿಯಲ್ಲ. ಮೂರು, ಮಾರುಕಟ್ಟೆಗೆ ಪ್ರಾಧಾನ್ಯತೆ ನೀಡುವುದು ಮಾತ್ರ ಈ ಸಮಸ್ಯೆಯಿಂದ ಹೊರಬರಲಿರುವ ಏಕಮಾತ್ರ ದಾರಿ. ಈ ಎಲ್ಲ ತೀರ್ಮಾನಗಳು ಪ್ರಪಂಚದ ಎಲ್ಲ ದೇಶಗಳಲ್ಲಿನ ಅರ್ಥ ವ್ಯವಸ್ಥೆಗಳನ್ನು ಅಧ್ಯಯನ ಮಾಡಿ ರೂಪುಗೊಂಡಿರುವುದಲ್ಲ. ಬಹುತೇಕ ಸಂದರ್ಭದಲ್ಲಿ ಶ್ರೀಮಂತ ದೇಶಗಳ ಅನುಭವಗಳೇ ಈ ತೀರ್ಮಾನಗಳಿಗೆ ಪುರಾವೆಗಳನ್ನು ಒದಗಿಸಿದರೆ ಇನ್ನು ಕೆಲವು ಸಂದರ್ಭಗಳಲ್ಲಿ ಪೂರ್ವದ ಸಣ್ಣಪುಟ್ಟ ದೇಶಗಳಲ್ಲಿ ನಡೆದ ಕಲ್ಪಿತ (ಕಲ್ಪಿತ ಯಾಕೆಂದರೆ ಆ ದೇಶಗಳಲ್ಲಿ ಇಂದು ಚರ್ಚಿಸುತ್ತಿರುವ ಉದಾರೀಕರಣ ನಡೆದೇ ಇಲ್ಲ) ಉದಾರೀಕರಣದ ಪ್ರಯೋಗಗಳನ್ನು ಬಳಸಿಕೊಳ್ಳಲಾಗಿದೆ. ಈ ಬಗೆಯ ಆರ್ಥಿಕ ನೀತಿ ಹಿಂದಿರುವ ಗೃಹೀತಗಳು ಮತ್ತು ಸಂಶೋಧನೆಗಳು ಎಷ್ಟು ಪಕ್ಷಪಾತಿಯೆಂದು ತಿಳಿಸುವ ಸಾಕಷ್ಟು ಸಂಶೋಧನೆಗಳಿವೆ.[14] ಹಲವಾರು ದೇಶಗಳಲ್ಲಿ ಈ ನೀತಿ ವಿಫಲವಾದ ನಂತರ ಹೊಸ ಬಗೆಯ ಆಲೋಚನೆಗಳು ಮುಂಚೂಣಿಗೆ ಬಂದವು. ಅವುಗಳಲ್ಲಿ ಪ್ರಮುಖವಾದವು. ಸಿವಿಲ್ ಸೊಸೈಟಿ ಮತ್ತು ಸೋಶಿಯಲ್ ಕ್ಯಾಪಿಟಲ್‌ನ ಪರಿಕಲ್ಪನೆಗಳು. ಪುನಃ ಇವು ಕೂಡು ಪ್ರಪಂಚದ ಎಲ್ಲ ದೇಶಗಳ ಅನುಭವ ಅಲ್ಲ. ಬದಲಿಗೆ ಕೆಲವೇ ಕೆಲವು ದೇಶಗಳಲ್ಲಿ ನಡೆದ ಸಂಶೋಧನೆಯ ಫಲ.[15] ಆದಾಗ್ಯೂ ಈ ಎಲ್ಲ ಅಂಸಗಳು ಅಭಿವೃದ್ಧಿಯ ಹೊಸ ಮಾದರಿಗಳ ರೂಪದಲ್ಲಿ ವಿಶ್ವವ್ಯಾಪಿಯಾಗಿವೆ.

ಪಶ್ಚಿಮದ ಅನುಭವ ಆಧರಿತ ಸಮಾಜ ಥಿಯರಿಗಳ ಯಜಮಾನಿಕೆಯನ್ನು ಪ್ರಶ್ನಿಸುವ ಕೆಲಸ ಹಿಂದಿನಿಂದಲೇ ನಡೆದಿದೆ. ಅವುಗಳನ್ನು ಸ್ಥೂಲವಾಗಿ ದೇಶಿ ಥಿಯರಿಗಳನ್ನು ಕಟ್ಟುವ ಪ್ರಯತ್ನವೆಂದು ಪರಿಗಣಿಸಬಹುದು. ಈ ಪ್ರಕ್ರಿಯೆ ಭಾರತಕ್ಕೆ ಮಾತ್ರ ಅನ್ಯವಾಗಿದೆ ಎನ್ನಲು ಸಾಧ್ಯವಿಲ್ಲ. ಪ್ರಪಂಚದ ಎಲ್ಲ ಕಡೆ ಈ ಪ್ರಯತ್ನ ನಡೆದಿದೆ. ಪಶ್ಚಿಮದಲ್ಲಿ ಲಿಬರಲಿಸಂನ ವ್ಯಕ್ತಿವಾದವನ್ನು ಅಲ್ಲಗಳೆಯಲು ಈ ಪ್ರಯತ್ನ ನಡೆದರೆ ತೃತೀಯ ಜಗತ್ತಿನಲ್ಲಿ ಪಶ್ಚಿಮದ ಅನುಭವದ ನೆಲೆಯಲ್ಲಿ ಪಶ್ಚಿಮೇತರ ಸಮಾಜಗಳನ್ನು ರೂಪಿಸುವ ಪ್ರಯತ್ನದ ವಿರುದ್ಧ ಈ ಪ್ರಕ್ರಿಯೆ ನಡೆದಿದೆ. ಇದನ್ನು ಸ್ಥಳೀಯವಾದ, ದೇಶಿವಾದ, ಸಮುದಾಯವಾದ  ಇತ್ಯಾದಿ ಹೆಸರುಗಳಿಂದ ಗುರುತಿಸಬಹುದು. ಇವುಗಳ ನಡುವೆ ಸಾಕಷ್ಟು ಅಂತರವಿದೆ. ಆದರೆ ಅವೆಲ್ಲವೂ ಆಧುನೀಕರಣದ ವಿರುದ್ಧ ಹೆಚ್ಚು ಕಡಿಮೆ ಒಂದೇ ಬಗೆಯ ಟೀಕೆಯನ್ನು ಮಾಡುತ್ತವೆ. ಆ ಟೀಕೆಯ ಸಾರಾಂಶವಿಷ್ಟು. ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ಪಶ್ಚಿಮದ ದೇಶಗಳು ಆಧುನೀಕರಣಗೊಂಡವು ಅಥವಾ ಅಭಿವೃದ್ಧಿ ಹೊಂದಿದವು. ಆ ಕಾರಣದಿಂದಲೇ ಆಧುನಿಕ ತಂತ್ರಜ್ಞಾನಗಳನ್ನು ಯಾವುದೇ ಸಾಮಾಜಿಕ ಪರಿಸರದಲ್ಲಿ ಅಳವಡಿಸುವ ಮೂಲಕ ಆ ಸಮಾಜಗಳನ್ನು ಮೂಲಭೂತವಾಗಿ ಪರಿವರ್ತಿಸಬಹುದು ಅಥವಾ ಈಗಾಗಲೇ ಆ ದಾರಿಯನ್ನು ತುಳಿದು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಪಡಿಯಚ್ಚು ಆಗಬಹುದು ಎನ್ನುವ ಗ್ರಹಿಕೆ ಆಧುನೀಕರಣ ಚಿಂತನೆಯಲ್ಲಿ ಕೆಲಸ ಮಾಡಿದೆ. ಆ ಕಾರಣಕ್ಕಾಗಿಯೇ ಪ್ರಪಂಚದ ಬಹುತೇಕ ರಾಷ್ಟ್ರಗಳು ಈ ಬಗೆಯ ಆಧುನೀಕರಣ ಪ್ರಕ್ರಿಯೆಯಲ್ಲಿ ಪಾಲುಗೊಂಡವು. ಈ ಬಗೆಯ ಆಧುನೀಕರಣದ ಹಿಂದಿರುವ ಒಂದು ಮೂಲಭೂತ ಗುಣದ ಬಗ್ಗೆ ಯಾರೂ ವಿಶೇಷ ತಲೆ ಕೆಡಿಸಿಕೊಳ್ಳಲಿಲ್ಲ. ಅದೇನೆಂದರೆ ಏನನ್ನು ನಾವು ಆಧುನೀಕರಣವೆಂದು ಮತ್ತು ನಮ್ಮನ್ನು ಉದ್ಧಾರ ಮಾಡುವ ಮಾರ್ಗವೆಂದು ತುಂಬಾ ನಂಬಿಕೆಯಿಂದ ಅಪ್ಪಿಕೊಂಡೆವೋ ಅದು ಅಂತರ್ಗತದಲ್ಲಿ ಬಂಡವಾಳಶಾಹಿ ವ್ಯವಸ್ಥೆಯೇ ಆಗಿತ್ತು. ಆದುದರಿಂದ ಆಧುನೀಕರಣ ಅಥವಾ ಅಭಿವೃದ್ಧಿ ಎಂದರೆ ನಿಸ್ಸಂದೇಹವಾಗಿ ಬಂಡವಾಳದ ವಿಸ್ತರಣೆ. ಈ ಕ್ರಮದ ಅಭಿವೃದ್ಧಿ ಮಾರುಕಟ್ಟೆ, ಲಾಭ, ಇತ್ಯಾದಿ ಬಂಡವಾಳಶಾಹಿ ವ್ಯವಸ್ಥೆಯ ಅಂಶಗಳಿಗೆ ಮಹತ್ವ ಕೊಡುತ್ತಿದೆ. ಸಾಂಪ್ರದಾಯಿಕ ಸಮಾಜವನ್ನು ಆಧುನಿಕಗೊಳಿಸುವುದು ಅಥವಾ ಬಂಡವಾಳಶಾಹಿಗೊಳಿಸುವುದೇ ಇವರ ಮುಖ್ಯ ಗುರಿ. ಅದಕ್ಕಾಗಿ ಆಧುನಿಕವಲ್ಲದ ಪ್ರತಿಯೊಂದು ನಿರುಪಯೋಗಿ ಮತ್ತು ಆದಷ್ಟು ಬೇಗ ನಾಶ ಹೊಂದಬೇಕಾಗಿರುವುದು ಎನ್ನುವ ನಂಬಿಕೆ ವರಿಗಿದೆ.[16] ಇಂತಹ ಆಧುನೀಕರಣಕ್ಕೆ ನಿಜವಾಗಿಯೂ ಮಾನವ ನಿರ್ಮಿತ ಬಂಧನಗಳಿಂದ ಬಿಡಿಸುವ ಶಕ್ತಿಯಿಲ್ಲ. ಯಾಕೆಂದರೆ ಇದು ಅಂತರ್‌ಗತವಾಗಿಯೇ ಮೇಲು; ಕೀಳು, ಹಿಂದುಳಿದ; ಮುಂದುವರಿದ ಇತ್ಯಾದಿ ವಿಂಗಡನೆಗಳನ್ನು ಒಳಗೊಂಡಿದೆ. ನಾನು ಮತ್ತು ಇತರರು, ವ್ಯಕ್ತಿ ಮತ್ತು ವಸ್ತು, ಬರಹ ಮತ್ತು ಮಾತು, ಆಧುನಿಕ ಮತ್ತು ಸಂಪ್ರದಾಯ, ಸತ್ಯ ಮತ್ತು ಭ್ರಮೆ ಇತ್ಯಾದಿ ವಿರೋಧಾಭಾಸಗಳು ಎಲ್‌ಲೈಟನ್‌ಮೆಂಟ್ ಕೂಸಾದ ಆಧುನೀಕರಣದ ಭಾಗಗಳೇ. ಇದರಲ್ಲಿ ಪ್ರಥಮ ಭಾಗ ಸರಿ, ಪ್ರಗತಿಪರ, ವಿಶೇಷ ಎನ್ನುವ ಅರ್ಥವನ್ನು ಕೊಡುತ್ತವೆ. ಆದುದರಿಂದ ಅವು ಉಳಿಯಬೇಕು ಮತ್ತು ಬೆಳೆಯಬೇಕು. ಇದಕ್ಕೆ ವಿರುದ್ಧವಾದ ಅರ್ಥವನ್ನು ಎರಡನೇ ಭಾಗ ಕೊಡುತ್ತದೆ. ಆದುದರಿಂದ ಅದಕ್ಕೆ ಉಳಿಯುವ ಮತ್ತು ಬೆಳೆಯುವ ಹಕ್ಕಿಲ್ಲ. ಹೀಗೆ ಕೆಳವರ್ಗವನ್ನು ಮತ್ತು ಪ್ರಕೃತಿಯನ್ನು ಶೋಷಿಸುವ ಗುಣ ಆಧುನೀಕರಣದಲ್ಲಿ ಅಂತರ್ಗತವಾಗಿಯೇ ಇದೆ.[17]

ಇವರ ಪ್ರಕಾರ ಆಧುನಿಕ ವಿಜ್ಞಾನ ತಂತ್ರಜ್ಞಾನ ಮತ್ತು ಸಾಂಘಿಕ ರಚನೆಗಳನ್ನು ನಮ್ಮಲ್ಲಿ ಅಳವಡಿಸುವ ಮುಲಕ ಸಾಮಾಜಿಕ ಪರಿವರ್ತನೆ ಸಾಧ್ಯ ಎಂದು ನಂಬುವುದು ತುಂಬಾ ಸೀಮಿತ ದೃಷ್ಟಿಕೋನ. ಯಾಕೆಂದರೆ ಈ ದೃಷ್ಟಿಕೋನ ನಮ್ಮ ಸಂಸ್ಕೃತಿಯಲ್ಲಿ ಚಾರಿತ್ರಿಕವಾಗಿ ರೂಪುಗೊಂಡ ಸಂಸ್ಥೆಗಳನ್ನು ಗಣನೆಗೆ ತೆಗೆದುಕೊಂಡಿಲ್ಲ.[18] ಜತೆಗೆ ವಸಾಹತು ಪೂರ್ವದಲ್ಲಿ ನೆಲ, ಜಲ, ಅರಣ್ಯ ಇತ್ಯಾದಿಗಳ ನಿರ್ವಹಣೆ ಕುರಿತು ಸ್ಥಳೀಯ ವ್ಯವಸ್ಥೆಗಳಿದ್ದವು. ಸಾಂಪ್ರದಾಯಿಕ ಸಮಾಜದಲ್ಲಿನ ನಿಕಟ ಮತ್ತು ಪರಸ್ಪರ ಅರಿತಿರುವ ಸಂದರ್ಭದಲ್ಲಿ ಸಮುದಾಯದ ಸಂಪನ್ಮೂಲ ಬಳಕೆ ಮತ್ತು ನಿರ್ವಹಣೆ ಕುರಿತಂತೆ ಸ್ವಯಂ ಪ್ರೇರಿತ ನಿಬಂಧನೆಗಳಿದ್ದವು. ಸ್ಥಳೀಯ ಸಂಪನ್ಮೂಲಗಳನ್ನು ಆಧರಿಸಿ ಬದುಕುತ್ತಿದ್ದ ಸಮುದಾಯಗಳಿಗೆ ಆ ಸಂಪನ್ಮೂಲಗಳ ಬಳಕೆ ಮತ್ತು ಸಂರಕ್ಷಣೆ ಕುರಿತು ತಿಳುವಳಿಕೆಯಿತ್ತು, ಜವಾಬ್ದಾರಿಯಿತ್ತು.[19] ಆದರೆ ಆಧುನಿಕ ಮುಚ್ಚಿಕೊಂಡಿದ್ದ ಸಮುದಾಯ ಬದುಕನ್ನು ತೆರೆದು ಇತರ ಸಮುದಾಯಗಳೊಂದಿಗೆ ಸಂಪರ್ಕ ಮತ್ತು ವಿನಿಮಯವನ್ನು ಕಲಿಸಿತು. ಈ ಸಂಪರ್ಕ ಮತ್ತು ವಿನಿಮಯ ಇಂದು ಸ್ಥಳೀಯ ಸಂಪನ್ಮೂಲಗಳ ಬಳಕೆಯನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯೊಂದಿಗೆ ಜೋಡಿಸಿದೆ. ಹಾಗಾಗಿ ಸಂಪನ್ಮೂಲಗಳ ಬಳಕೆ ಕುರಿತಂತೆ ನಿರ್ಧಾರಗಳು ಇಂದು ಸ್ಥಳೀಯ ಅವಶ್ಯಕತೆಗಳಿಗೆ ಅನುಗುಣವಾಗಿ ರೂಪಿತವಾಗುವುದಿಲ್ಲ. ಬದಲಿಗೆ ಮಾರುಕಟ್ಟೆಗೆ ಅಗತ್ಯಗಳಿಗೆ ಅನುಗುಣವಾಗಿ ಅಮೂರ್ತ ರೂಪದಲ್ಲಿ ಆಗುತ್ತಿವೆ. ಇದು ಎರಡು ರೀತಿಯ ದುಷ್ಪರಿಣಾಮಗಳಿಗೆ ಕಾರಣವಾಗಿದೆ. ಒಂದು, ಸಂಪನ್ಮೂಲಗಳ ಎಗ್ಗಿಲ್ಲದ ನಾಶ ಮತ್ತು ಎರಡು, ಸ್ಥಳೀಯ ಸಮುದಾಯಗಳು ಕೂಡ ಅವುಗಳ ಸಂರಕ್ಷಣೆ ಬಗ್ಗೆ ದಿವ್ಯ ನಿರ್ಲಕ್ಷ ತೋರುವುದು. ನಮ್ಮ ಸಮಾಜದಲ್ಲಿ ಚಾರಿತ್ರಿಕವಾಗಿ ರೂಪುಗೊಂಡ ಸಂಸ್ಥೆಗಳು ಮತ್ತು ಮೌಲ್ಯಗಳ ಮೂಲಕ ಅಭಿವೃದ್ಧಿಯನ್ನು ನಿರ್ವಚಿಸಿ ಕೊಳ್ಳುವುದು ಮತ್ತು ಆಚರಣೆಗೆ ತರುವುದು ಈ ಎಲ್ಲ ಸಮಸ್ಯೆಗಳಿಗೆ ಪರಿಹಾರವೆಂದು ದೇಶಿ ಥಿಯರಿಸ್ಟರು ಅಭಿಪ್ರಾಯ ಪಡುತ್ತಾರೆ. ಹೀಗೆ ನಮ್ಮಲ್ಲೂ ದೇಶಿ ಸಮಾಜ ಥಿಯರಿಗಳನ್ನು ರೂಪಿಸುವ ಪ್ರಯತ್ನ ಹಿಂದಿನಿಂದಲೂ ನಡೆದಿದೆ. ನಮ್ಮದೇ ಥಿಯರಿಗಳನ್ನು ರೂಪಿಸಿದ ಕೂಡಲೇ ಸಮಸ್ಯೆ ಪರಿಹಾರವಾಗುವುದಿಲ್ಲ. ಯಾಕೆಂದರೆ ಥಿಯರಿ ಮತ್ತು ಅಧಿಕಾರ ನಡುವಿನ ಸಂಬಂಧ ಇಲ್ಲೂ ಕೆಲಸ ಮಾಡುತ್ತಿದೆ. ಪರದೇಶಿ ಇರುವವರೆಗೆ ದೇಶಿ ಇರುತ್ತದೆ. ಯಾವಾಗ ಪರದೇಶಿ ವಿಶ್ಲೇಷಣೆಯ ವ್ಯಾಪ್ತಿಯಿಂದ ಮಾಯವಾಗುತ್ತದೋ ಆಗ ದೇಶಿಯೊಳಗಿನ ಭಿನ್ನತೆಗಳು ಗರಿಗೆದರಿ ಕುಣಿಯಲು ಆರಂಭಿಸುತ್ತವೆ. ಪ್ರಾದೇಶಿಕ ನೆಲೆಯಲ್ಲಿ, ಭಾಷಾ ನೆಲೆಯಲ್ಲಿ, ಧಾರ್ಮಿಕ ನೆಲೆಯಲ್ಲಿ, ಜಾತಿ ನೆಲೆಯಲ್ಲಿ ಹೀಗೆ ಹತ್ತು ಹಲವು ನೆಲೆಗಳಲ್ಲಿ ನಮ್ಮತನ ಮುಂಚೂಣಿಗೆ ಬರುತ್ತವೆ. ಈ ಹಲವು ಗುರುತುಗಳಲ್ಲಿ ಯಾವುದನ್ನು ಇಡೀ ಭಾರತದ ಗುರುತೆಂದು ಎತ್ತಿ ಹಿಡಿಯವುದು ಮತ್ತು ಆ ಕೆಲಸವನ್ನು ಯಾರು ಮಾಡುವುದು. ಇವೆಲ್ಲ ಚರ್ಚೆಯಿಂದ ನಿರ್ಣಯವಾಗುವ ಸಂಗತಿಗಳಲ್ಲ; ಬಲ ಅಥವಾ ಅಧಿಕಾರದಿಂದ ನಿರ್ಧಾರವಾಗುವ ವಿಚಾರಗಳು. ಭಾರತದ ರಾಷ್ಟ್ರೀಯತೆಯನ್ನು ವ್ಯಾಖ್ಯಾನಿಸಿಕೊಳ್ಳುವಾಗ ನಾವು ಕಟ್ಟಿಕೊಂಡ ಭಾರತದಲ್ಲಿ ಈ ಬಗೆಯ ಬಲವಂತದ ಭಾರತದ ಸಾಕಷ್ಟು ಉದಾಹರಣೆಗಳಿವೆ. ನಮ್ಮ ಸಂಸ್ಕೃತಿಯೆಂದು, ನಮ್ಮ ಚರಿತ್ರೆಯೆಂದು, ನಮ್ಮ ಭವಿಷ್ಯವೆಂದು ಸ್ಥಳೀಯ ಬಲಾಢ್ಯ ವರ್ಗಗಳ ಸಂಸ್ಕೃತಿಗಳು, ಚರಿತ್ರೆಗಳು, ಭವಿಷ್ಯಗಳು ಮುಂಚೂಣಿಗೆ ಬಂದಿವೆ. ಈ ವಾದದ ತಾತ್ಪರ್ಯ ಇಷ್ಟೇ; ಸಮಾಜ ಥಿಯರಿಗಳ ವಿಶ್ಲೇಷಣೆಯಲ್ಲಿ ಪೂರ್ವ ಪಶ್ಚಿಮವೆನ್ನುವ ವಿರೋಧಿ ನೆಲೆಗಳ ಜತೆಗೆ ಸಂಪನ್ಮೂಲದ ಸ್ಥಾನಮಾನ ಮತ್ತು ಅಧಿಕಾರದ ಸ್ಥಾನಮಾನದ ಪ್ರಶ್ನೆಗಳು ಕೂಡ ಮುಖ್ಯವಾಗಬೇಕು.

ಸಮಾಜ ವಿಜ್ಞಾನ ಥಿಯರಿಗಳ ಹುಟ್ಟು ಮತ್ತು ಅವುಗಳ ಯೂನಿವರ್ಸಲ್ ಆನ್ವಯಿಕೆಗೆ ಸಂಬಂಧಿಸಿದ ಚರ್ಚೆಯನ್ನು ಮೇಲಿನ ಪುಟಗಳಲ್ಲಿ ನೋಡಿದ್ದೇವೆ. ಸಮಾಜವಿಜ್ಞಾನ ವಿಜ್ಞಾನದ ವಿಧಾನದಿಂದ ಪ್ರಭಾವಿತಗೊಂಡು ಪ್ರಪಂಚದ ಎಲ್ಲ ಸಮಾಜಗಳಿಗೆ ಅನ್ವಯವಾಗುವ ಥಿಯರಿಯ ಹುಡುಕಾಟದಲ್ಲಿ ತೊಡಗಿತು. ಥಿಯರಿ ಕಟ್ಟಿಕೊಡುವ ಸಮಾಜಕ್ಕಿಂತ ಭಿನ್ನವಾಗಿರುವ ಸಮಾಜಗಳ ಬಗ್ಗೆ ಪುರಾವೆಗಳು ಹೆಚ್ಚಿದ ಹಾಗೆ ಥಿಯರಿಯನ್ನು ಸುಧಾರಿಸಿ ಕೊಳ್ಳುವುದು ಸಮಾಜ ಸಂಶೋಧನೆಯ ನಿಯಮ. ಆದರೆ ಸಮಾಜವಿಜ್ಞಾನದಲ್ಲಿ ಆ ರೀತಿ ಆಗಲಿಲ್ಲ. ಅದಕ್ಕೆ ಬಹುಮುಖ್ಯ ಕಾರಣ ಆಧುನಿಕ ಸಮಾಜದ ವ್ಯಾಖ್ಯಾನ ಮತ್ತು ಅದರ ನಿರ್ಮಾಣದ ಕನಸು. ಥಿಯರಿ ಕಟ್ಟಿಕೊಡುವ ಸಮಾಜವನ್ನು ಸ್ಥಳೀಯ ಸಮಾಜದೊಂದಿಗೆ ಹೋಲಿಸಿ ಅಂತರವನ್ನು ಗುರುತಿಸುವುದು ಬಹುತೇಕ ಸಮಾಜ ಸಂಶೋಧನೆಯ ಉದ್ದೇಶವಾಗಿತ್ತು. ಅಷ್ಟು ಮಾತ್ರವಲ್ಲ ಆ ಅಂತರವನ್ನು ತುಂಬುವುದನ್ನು ಆಧುನೀಕರಣದ ಮುಖ್ಯ ಉದ್ದೇಶವೆಂದು ತಿಳಿಯಲಾಗಿತ್ತು. ಆದುದರಿಂದ ಥಿಯರಿ ಮತ್ತು ವಾಸ್ತವದ ನಡುವಿನ ಅಂತರ ಥಿಯರಿಯ ಸುಧಾರಣೆಯಲ್ಲಿ ಪರ್ಯಾಪ್ತಗೊಳ್ಳುವ ಬದಲು ಸ್ಥಳೀಯ ಸಮಾಜಗಳ ಪರಿವರ್ತನೆಯಲ್ಲಿ ಕೊನೆಗೊಂಡಿತು. ಆದರೆ ಬರಬರುತ್ತಾ ಈ ಕ್ರಮವನ್ನು ಪ್ರಶ್ನಿಸಲಯಿತು. ಪಶ್ಚಿಮದ ತಾತ್ವಿಕ ಚೌಕಟ್ಟಿನಿಂದ ನೋಡುವುದರಿಂದ ಏನೇನೂ ಪ್ರಯೋಜನವಿಲ್ಲವೆಂದಾಯಿತು ತೃತೀಯ ಜಗತ್ತಿನ ಸಾಮಾಜಿಕ ಸಂಗತಿಗಳನ್ನು ಸಮಾಜ ಥಿಯರಿಗಳಲ್ಲಿ ಸೇರಿಸಿಕೊಳ್ಳಬೇಕೆಂದಾಯಿತು. ಹೀಗೆ ಇಂದಿನ ಸಮಾಜ ಥಿಯರಿಗಳನ್ನು ಪಶ್ಚಿಮದ ಥಿಯರಿಗಳೆಂದು ಹೇಳಲು ಸಾಧ್ಯವಿಲ್ಲ. ಯಾಕೆಂದರೆ ಅದರಲ್ಲಿ ಪಶ್ಚಿಮೇತರ ಸಮಾಜಗಳ ಅಂಶವೂ ಸೇರಿದೆ. ಯಜಮಾನಿಕೆಯಲ್ಲಿರುವ ಥಿಯರಿಯಲ್ಲಿ ತೃತೀಯ ಜಗತ್ತಿನ ಸಾಮಾಜಿಕ ಅಂಶಗಳು ಸೇರಿದ ಕೂಡಲೇ ಯೂನಿವರ್ಸಲ್ ಮತ್ತು ಲೋಕಲ್ ನಡುವಿನ ಘರ್ಷಣೆ ಇಲ್ಲವಾಗುವುದಿಲ್ಲ. ಇದಕ್ಕೆ ಬಹುಮುಖ್ಯವಾದ ಎರಡು ಕಾರಣಗಳಿವೆ. ಒಂದು, ಯೂನಿವರ್ಸಲ್ ರೂಪುಗೊಳ್ಳುವ ಕ್ರಮ ಮತ್ತೊಂದು ಥಿಯರಿ ಮತ್ತು ಅಧಿಕಾಋದ ಸಂಬಂಧ. ಹಲವಾರು ಕ್ರಮಗಳಲ್ಲಿ ಯೂನಿವರ್ಸಲ್ ರೂಪುಗೊಳ್ಳಬಹುದು. ಒಂದು, ಯಾವುದೋ ಒಂದು ಅಥವಾ ಕೆಲವು ಸಮಾಜದ ಅಥವಾ ಸಂಸ್ಕೃತಿಯ ಅನುಭವಗಳು ಯೂನಿವರ್ಸಲನ್ನು ರೂಪಿಸುವಲ್ಲಿ ಮಹತ್ತರವಾದ ಪಾತ್ರ ವಹಿಸುವುದು. ಎರಡು, ಯೂನಿವರ್ಸಲ್‌ನ ವ್ಯಾಪ್ತಿಯಲ್ಲಿ ಬರುವ ಎಲ್ಲ ಬಿಡಿ ಭಾಗಗಳು ತಮ್ಮ ನಿರ್ದಿಷ್ಟತೆಯನ್ನು ಸೇರಿಸಿ ಯೂನಿವರ್ಸಲನ್ನು ರೂಪಿಸಿಕೊಳ್ಳುವುದು. ಮೂರು, ಮೇಲಿನ ಎರಡರ ಮಿಶ್ರಣ; ಅಂದರೆ ಬಲಾಢ್ಯ ಸಮಾಜಗಳ ಕೊಡುಗೆಗಳ ಜತೆಗೆ ಬಲಹೀನ ಸಮಾಜಗಳ ಅಂಶವನ್ನು ಸೇರಿಸಿ ಯೂನಿವರ್ಸಲ್ ರೂಪಿತಗೊಳ್ಳುವುದು. ಹೀಗೆ ಹಲವಾರು ವಿಧಗಳಿಂದ ಯೂನಿವರ್ಸಲ್ ರೂಪಿತಗೊಳ್ಳಬಹುದು.

ಯೂನಿವರ್ಸಲ್ ಪರ್ಟಿಕ್ಯುಲರ್‌ ಅಂಶಗಳಿಂದ ರೂಪಿತವಾಗಿದ್ದರೆ ಅಂತಹ ಯೂನಿವರ್ಸಲ್ ನಮ್ಮ ಯೂನಿವರ್ಸಲ್ ಅಲ್ಲವೆಂದು ಅಲ್ಲಗಳೆಯುವ ಅಗತ್ಯವಿಲ್ಲ. ಆದರೆ ಸಮಸ್ಯ ಆಗುವುದು ಯಾರದೋ ಅನುಭವ ಅಥವಾ ಚರಿತ್ರೆ ಯೂನಿವರ್ಸಲ್ ಎಂದು ಮುಂಚೂಣಿಗೆ ಬಂದಾಗ. ಆಧುನೀಕರಣ, ಸೋಶಿಯಲಿಸಂ, ಫಂಕ್ಷನಲಿಸಂ, ಲಿಬರಲಿಸಂ ಇತ್ಯಾದಿ ಥಿಯರಿಗಳು ಮತ್ತು ಸಂಶೋಧನಾ ಚೌಕಟ್ಟುಗಳು ಭಾರತದ ಅನುಭವಗಳನ್ನು ಬಳಸಿಕೊಂಡು ಬೆಳೆದವಲ್ಲ. ಆದಾಗ್ಯೂ ಈ ಥಿಯರಿಗಳು ಮತ್ತು ಸಂಶೋಧನಾ ಚೌಕಟ್ಟುಗಳು ಇಲ್ಲಿನ ಜ್ಞಾನದ ಉತ್ಪಾದನೆಯನ್ನು ಪ್ರಭಾವಿಸಿವೆ – ಬಹುತೇಕ ಸಂಶೋಧನೆಗಳು ಥಿಯರಿಗಳ ಪರೀಕ್ಷೆಗೆ ಆಹಾರ ಒದಗಿಸಿವೆ. ಡಿಡಕ್ಟಿವ್‌ ವಿಧಾನದಿಂದ ಹೈಪಾಥೀಸಿಸ್‌ಗಳನ್ನು ರೂಪಿಸಿ ಅವುಗಳನ್ನು ಭಾರತದ ಎಂಪಿರಿಕಲ್ ಎವಿಡೆನ್ಸ್‌ಗಳೊಂದಿಗೆ ಹೋಲಿಸಿ ಇಲ್ಲಿನ ವಾಸ್ತವತೆ ಥಿಯರಿ ಕಟ್ಟಿ ಕೊಡುವ ವಾಸ್ತವತೆಗಿಂತ ಎಷ್ಟು ದೂರ ಅಥವಾ ಎಷ್ಟು ಹತ್ತಿರ ಇದೆ ಎನ್ನುವ ತೀರ್ಮಾನಕ್ಕೆ ಬರಲಾಗುತ್ತದೆ. ಒಂದು ವೇಳೆ ಇಂಡಕ್ಟೀವ್ ವಿಧಾನದಿಂದ ಎಂಪಿರಿಕಲ್ ಎವಿಡೆನ್ಸ್ ಸಂಗ್ರಹಿಸಿ ಜನರಲೈಸ್ ಮಾಡಲು ಪ್ರಯತ್ನಿಸಿದರೆ ಅದನ್ನು ಈಗಾಗಲೇ ಚಾಲ್ತಿಯಲ್ಲಿರುವ ಥಿಯರಿಗಳೊಂದಿಗೆ ಇಟ್ಟು ಪರೀಕ್ಷಿಸಬೇಕಾಗುತ್ತದೆ. ಅಂದರೆ ಇಂಡಕ್ಟಿವ್ ವಿಧಾನದಿಂದ ಕಂಡುಕೊಂಡ ಚಿತ್ರಣವನ್ನು ಈಗಾಗಲೇ ಯಜಮಾನಿಕೆಯಲ್ಲಿರುವ ಸಮಾಜ ಥಿಯರಿಗಳು ಕಟ್ಟಿಕೊಡುವ ಚಿತ್ರಣದೊಂದಿಗೆ ಹೋಲಿಸಿ ನೋಡಬೇಕಾಗುತ್ತದೆ. ಒಂದು ವೇಳೆ ಈ ಎರಡರ ನಡುವೆ ವ್ಯತ್ಯಾಸವಿದ್ದರೆ ತಾತ್ವಿಕವಾಗಿ ಥಿಯರಿ ಬದಲಾಗಬೇಕು. ಆದರೆ ವಾಸ್ತವದಲ್ಲಿ ಯಜಮಾನಿಕೆಯಲ್ಲಿರುವ ಒಂದು ಥಿಯರಿ ಬದಲಾಗಬೇಕಾದರೆ ಅದು ಸರಿಯಿಲ್ಲವೆಂದು ಸಾರುವ ಬೆಟ್ಟದಷ್ಟು ಗಾತ್ರದ ಎಂಪಿರಿಕಲ್ ಪುರಾವೆಗಳು ಬೇಕು. ಅಷ್ಟೊಂದು ಗಾತ್ರದ ಪುರಾವೆಗಳು ಸಂಗ್ರಹವಾಗುವವರೆಗೂ ಸರಿಯಿಲ್ಲದ ಥಿಯರಿ ಕೂಡ ಚಲಾವಣೆಯಲ್ಲಿರುತ್ತದೆ. ಎರಡು, ಅಧಿಕಾರ ಮತ್ತು ಥಿಯರಿ ನಡುವಿನ ಸಂಬಂಧದ ಪ್ರಶ್ನೆ. ಯಾವುದೇ ಥಿಯರಿ ಯಜಮಾನಿಕೆ ಸ್ಥಾನಕ್ಕೆ ಏರಲು ಥಿಯರಿಯಲ್ಲಿ ಅಂತರ್ಗತವಾಗಿರುವ ಬಲ ಸಾಕೆನ್ನುವ ಮುಗ್ಧ ತಿಳುವಳಿಕೆ ಕೆಲಸ ಮಾಡುತ್ತಿದೆ. ಆದರೆ ವಾಸ್ತವದಲ್ಲಿ ಥಿಯರಿಯೊಂದು ತನ್ನ ಸ್ವಂತ ಬಲದಿಂದ ಅಥವಾ ಶಕ್ತಿಯಿಂದ ಯೂನಿವರ್ಸಲ್ ಥಿಯರಿಯಾಗಬೇಕೆಂದಿಲ್ಲ. ಅದರ ಬದಲು ಅಂತಾರಾಷ್ಟ್ರೀಯ ವ್ಯವಸ್ಥೆಯಲ್ಲಿನ ಅಧಿಕಾರದ ಹಂಚಿಕೆ ಮತ್ತು ವಿವಿಧ ಸಮಾಜಗಳ (ದೇಶಗಳ) ಸ್ಥಾನಮಾನ ಥಿಯರಿಯ ಸ್ಥಾನಮಾನವನ್ನು ಪ್ರಭಾವಿಸುತ್ತದೆ. ಇಂದು ಕೂಡ ಅಂತಾರಾಷ್ಟ್ರೀಯ ವ್ಯವಸ್ಥೆ ಒಂದು ಪ್ರಜಾಪ್ರಭುತ್ವ ವ್ಯವಸ್ಥೆ ಅಲ್ಲ. ಅದು ಕೆಲವೇ ಕೆಲವು ದೇಶಗಳ ಯಜಮಾನಿಕೆಯಿಂದ ನಡೆಯುವ ವ್ಯವಸ್ಥೆ. ಅಲ್ಲಿ ಹಲವಾರು ಅಂತಾರಾಷ್ಟ್ರೀಯ ಸಂಸ್ಥೆಗಳಿವೆ. ಅವುಗಳಲ್ಲಿ ಬಡದೇಶಗಳ ಪ್ರತಿನಿಧೀಕರಣ ಇದೆ. ಹಾಗೆಂದ ಕೂಡಲೇ ಅವರ ಅಭಿಪ್ರಾಯಕ್ಕೆ ಬೆಲೆ ಇದೆ ಎಂದಲ್ಲ. ಕೆಲವೇ ಕೆಲವು ಶ್ರೀಮಂತ ದೇಶಗಳ ಆಸಕ್ತಿಗೆ ಅನುಗುಣವಾಗಿ ಬಹುತೇಕ ಅಂತಾರಾಷ್ಟ್ರೀಯ ಸಂಸ್ಥೆಗಳು ಬಳಕೆಯಾಗುತ್ತಿವೆ. ಹೀಗೆ ಅಂತಾರಾಷ್ಟ್ರೀಯ ವ್ಯವಸ್ಥೆಯಲ್ಲಿ ಅಧಿಕಾರ ತುಂಬಾ ಅಸಮಾನವಾಗಿ ಹಂಚಲ್ಪಟ್ಟಿದೆ. ಬಲಿಷ್ಠ ಅಧಿಕಾರ ಕೇಂದ್ರಗಳು ತಮ್ಮ ಆಸಕ್ತಿಗೆ ಪೂರಕವಾದ ಥಿಯರಿಗಳನ್ನು ಯೂನಿರ್ವಸಲ್ ಥಿಯರಿಗಳೆಂದು ಮಾನ್ಯತೆ ನೀಡುವುದು ಬಹು ಹಿಂದಿನಿಂದಲೇ ನಡೆದು ಬಂದ ಕ್ರಮ. ಆದುದರಿಂದ ಯಜಮಾನಿಕೆಯಲ್ಲಿರುವ ಸಮಾಜ ಥಿಯರಿಗಳು ಯುನಿವರ್ಸಲ್ ವಾಸ್ತವತೆಗಳನ್ನು ಬಿಂಬಿಸುವುದಕ್ಕಿಂತ ಹೆಚ್ಚು ಯಾರದೋ ಅನುಭವಗಳನ್ನು (ಚಾರಿತ್ರಿಕ ಅಥವಾ ಕಲ್ಪಿತ) ಕಟ್ಟಿಕೊಡುವ ಕೆಲಸ ಮಾಡುತ್ತಿವೆ ಎನ್ನುವ ವಾದ ಇಂದು ಕೂಡ ನಿಜ. ಅಧಿಕಾರ ಥಿಯರಿಯನ್ನು ಎತ್ತಿ ಹಿಡಿಯುವ ಪ್ರಕ್ರಿಯೆಯನ್ನು ಪ್ರಾದೇಶಿಕ (ಪಶ್ಚಿಮ ಮತ್ತು ಪೂರ್ವದ) ನೆಲೆಯಲ್ಲಿ ನಿರ್ವಚಿಸಿಕೊಳ್ಳುವುದು ಸರಿಯಲ್ಲ. ಯಾಕೆಂದರೆ ಇದೊಂದು ಯೂನಿವರ್ಸಲ್ ಗುಣ. ಎಲ್ಲ ಸಮಾಜಗಳಲ್ಲೂ ಆಯಾಮ ಸಮಾಜದ ಮೇಲ್ವರ್ಗಗಳ ಆಸಕ್ತಿಗಳು, ಅಭಿಪ್ರಾಯಗಳು, ಚರಿತ್ರೆಗಳು ಇಡೀ ಸಮಾಜದ ಆಸಕ್ತಿಗಳಾಗಿ, ಅಭಿಪ್ರಾಯಗಳಾಗಿ, ಚರಿತ್ರೆಗಳಾಗಿ ಮಂಡಿತವಾಗುವುದು ಸಾಮಾನ್ಯ. ಆದುದರಿಂದ ಸಮಾಜ ಥಿಯರಿಗಳನ್ನು ವಿಶ್ಲೇಷಿಸುವಾಗ ಪೂರ್ವ ಪಶ್ಚಿಮವೆನ್ನುವ ವಿರೋಧಿ ನೆಲೆಗಳ ಜತೆಗೆ ಸಂಪನ್ಮೂಲದ ಸ್ಥಾನಮಾನ ಅಥವಾ ಅಧಿಕಾರದ ಸ್ಥಾನಮಾನದ ಪ್ರಶ್ನೆಗಳು ಕೂಡ ಮುಖ್ಯವಾಗಬೇಕು.

* * *

[1] ಈ ವಿವರಗಳನ್ನು ನಾನು ವಿವೇಕ ರೈ ಅವರ, ‘ಜನಪದಶಾಸ್ತ್ರದ ಸಂಶೋಧನಾ ವಿಧಾನಗಳು. ಥಿಯರಿ ಮತ್ತು ಆಚರಣೆ’ ಎನ್ನುವ ಉಪನ್ಯಾಸದಿಂದ ಪಡೆದಿದ್ದೇನೆ. ಅವರು ಈ ಉಪನ್ಯಾಸವನ್ನು ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗ ಸಂಘಟಿಸಿದ ಸಮಾಜ ವಿಜ್ಞಾನ ಸಂಶೋಧನಾ ವಿಧಾನಗಳು – ಉಪನ್ಯಾಸ ಮಾಲೆ, ೨೦೦೫ ರಲ್ಲಿ ನೀಡಿದ್ದರು.

[2] ವಿವೇಕ ರೈ, ಜನಪದಶಾಶ್ತ್ರದ ಸಂಶೋಧನಾ ವಿಧಾನಗಳು – ಥಿಯರಿ ಮತ್ತು ಆಚರಣೆ ೨೦೦೫.

[3] ವಿವೇಕ ರೈ, ಜನಪದಶಾಶ್ತ್ರದ ಸಂಶೋಧನಾ ವಿಧಾನಗಳು – ಥಿಯರಿ ಮತ್ತು ಆಚರಣೆ ೨೦೦೫.

[4] ಈ ವಿವರಗಳನ್ನು ಲಿಜ್‌ಸ್ಟೇನ್ಲ್ ಅವರ ನೋಯಿಂಗ್ ಫೆಮಿನಿಸಂ – ಆನ್ ಅಕಾಡೆಮಿಕ್‌ಬಾರ್ಡರ‍್ಸ್, ಟೆರಿಟರೀಸ್ ಆಂಡ್ ಟ್ರೈಬ್ಸ್, ನ್ಯೂಡೆಲ್ಲಿ: ಸೇಜ್ ಪಬ್ಲಿಕೇಶನ್ಸ್, ೧೯೯೭ ಮತ್ತು ವನಜ ಧ್ರುವರಜನ್ ಅವರ, ‘ಮಹಿಳಾ ವಿಚಾರಗಳ ಸಂಶೋಧನಾ ವಿಧಾನಗಳು. ಥಿಯರಿ ಮತ್ತು ಆಚರಣೆ’ ಎನ್ನುವ ಉಪನ್ಯಾಸದಿಂದ ಪಡೆದಿದ್ದೇನೆ. ಅವರು ಈ ಉಪನ್ಯಾಸವನ್ನು ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗ ಸಂಘಟಿಸಿದ ಸಮಾಜವಿಜ್ಞಾನ ಸಂಶೋಧನಾ ವಿಧಾನಗಳು – ಉಪನ್ಯಾಸ ಮಾಲೆ, ೨೦೦೫ ರಲ್ಲಿ ನೀಡಿದ್ದರು.

[5] ವನಜ ಧ್ರುವರಾಜನ್, ಮಹಿಳಾ ವಿಚಾರಗಳ ಸಂಶೋಧನಾ ವಿಧಾನಗಳು – ಥಿಯರಿ ಮತ್ತು ಆಚರಣೆ, ೨೦೦೫.

[6] ವನಜ ಧ್ರುವರಾಜನ್, ಮಹಿಳಾ ವಿಚಾರಗಳ ಸಂಶೋಧನಾ ವಿಧಾನಗಳು – ಥಿಯರಿ ಮತ್ತು ಆಚರಣೆ, ೨೦೦೫.

[7] ಗ್ರೌಂಡೆಡ್ ಥಿಯರಿ, ಫೆಮಿನಿಸ್ಟ್ ಥಿಯರಿ ಇತ್ಯಾದಿಗಳು ಕ್ಷೇತ್ರದಲ್ಲಿನ ಸಂಗತಿಗಳನ್ನು ಸ್ಥಾಪಿತ ತಾತ್ವಿಕ ಚೌಕಟ್ಟಿನೊಂದಿಗೆ ಹೋಲಿಸಿ ನೋಡುವುದನ್ನು ವಿರೋಧಿಸುತ್ತವೆ. ಅಷ್ಟು ಮಾತ್ರವಲ್ಲ; ಕ್ಷೇತ್ರದಲ್ಲಿನ ಸಂಗತಿಗಳ ಆಧಾರದಲ್ಲೇ ಥಿಯರಿಗಳನ್ನು ರೂಪಿಸಬೇಕೆನ್ನುವ ನಿಲುವನ್ನು ಪ್ರತಿಪಾದಿಸುತ್ತವೆ.

[8] ಈ ವಿವರಗಳನ್ನು ಕೀತ್ ಜೆಂಕಿನ್ಸ್ ಅವರ ರಿ ಥಿಂಕಿಂಗ್ ಹಿಸ್ಟರಿ (ಲಂಡನ್ : ರೌಡ್‌ಲೆಡ್ಜ್‌, ೨೦೦೩) ಪುಸ್ತಕದಿಂದ ಮತ್ತು ಸುರೇಂದ್ರರಾವ್ ಅವರ, ‘ಚರಿತ್ರೆಯ ಸಂಶೋಧನಾ ವಿಧಾನ – ತತ್ತ್ವ ಮತ್ತು ಆಚರಣೆ’ ಎನ್ನುವ ಉಪನ್ಯಾಸದಿಂದ ಪಡೆಯಲಾಗಿದೆ. ಅವರು ಈ ಉಪನ್ಯಾಸವನ್ನು ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗ ಸಂಘಟಿಸಿದ ಸಮಾಜವಿಜ್ಞಾನ ಸಂಶೋಧನಾ ವಿಧಾನಗಳು – ಉಪನ್ಯಾಸ ಮಾಲೆ, ೨೦೦೫ ರಲ್ಲಿ ನೀಡಿದ್ದರು.

[9] ಎರಡನೇ ವಿಶ್ವಯುದ್ಧ, ಜರ್ಜರಿತವಾದ ಅರ್ಥ ವ್ಯವಸ್ಥೆ ಇತ್ಯಾದಿ ಕಾರಣಗಳಿಂದ ಬಲಾಢ್ಯ ರಾಷ್ಟ್ರಗಳು ತಮ್ಮ ಮಾದರಿಯನ್ನು ಇತರರ ಮೇಲೆ ಬಲ ಪ್ರಯೋಗಿದಂದ ಹೇರುವ ಸ್ಥಿತಿಯಲ್ಲಿರಲಿಲ್ಲ. ಈ ಕುರಿತ ವಿವರಗಳಿಗೆ ಎರಿಕ್ ಹಾಬ್ಸ್‌ಹಾಮ್, ದಿ ಏಜ್‌ ಆಫ್  ಕ್ಯಾಪಿಟಲ್, ಗ್ರೇಟ್ ಬ್ರಿಟನ್: ಸ್ಪಿಯರ್ ಬುಕ್ಸ್, ೧೯೭೫.

[10] ಎರಿಕ್ ಹಾಬ್ಸ್‌ವಾಮ್‌, ದಿ ಏಜ್ ಆಫ್ ಕ್ಯಾಪಿಟಲಿಸಂ, ೧೯೭೫.

[11] ಡಬ್ಲ್ಯೂ ಡಬ್ಲ್ಯೂ ರಸ್ತೋನ, ಸ್ಟೇಜಸ್ ಆಫ್‌ಎಕನಾಮಿಕ್ ಗ್ರೋಥ್, (ಕೇಂಬ್ರಿಡ್ಜ್: ಕೇಂಬ್ರಿಡ್ಜ್ ಯೂನಿವರ್ಸಿಟಿ ಪ್ರೆಸ್, ೧೯೬೦) ಪುಸ್ತಕದ ಐಡಿಯಲಾಜಿಕಲ್ ಉದ್ದೇಶವನ್ನು ಟಿ.ಬಿ. ಬಾಟಮ್‌ಮೋರ್ ತನ್ನ ಪುಸ್ತಕ, ಸೋಶಿಯಾಲಜಿ ಆಸ್ ಸೋಶಿಯಲ್ ಕ್ರಿಟಿಸಿಸಂ ನಲ್ಲಿ (ನ್ಯೂಡೆಲ್ಲಿ: ಚಾಂದ್ ಆಂಡ್ ಕಂಪನಿ, ೧೯೭೯) ವಿವರಿಸಿದ್ದಾನೆ.

[12] ಹಟ್ಟಿಂಗ್ಟನ್ ಎಸ್.ಪಿ., ಪೊಲಿಟಿಕಲ್ ಆರ್ಡರ್‌ ಇನ್  ಚೇಂಜಿಂಗ್ ಸೊಸೈಟೀಸ್, ಲಂಡನ್: ಯೇಲ್ ಯೂನಿವರ್ಸಿಟಿ ಪ್ರೆಸ್, ೧೯೬೮.

[13] ಅಂತಾರಾಷ್ಟ್ರೀಯ ವ್ಯವಸ್ಥೆಯಲ್ಲಿ ವಿವಿಧ ದೇಶಗಳ ಸ್ಥಾನಮಾನದ ಕುರಿತ ಥಿಯರಿಟಿಕಲ್ ಚರ್ಚೆಯ ಪರಿಚಯಕ್ಕೆ ಡಿಪೆಂಡೆನ್ಸ್‌ಥಿಯರಿಸ್ಟರ ಬರಹಗಳು ಉಪಯುಕ್ತ – ಇಮ್ಯಾನ್ಯುಲ್ ವೆಲ್‌ಸ್ಟೇಯಿನ್, ದಿ ಕ್ಯಾಪಿಟಲಿಸ್ಟ್ ವರ್ಲ್ಡ್ ಎಕಾನಮಿ, ಕೇಂಬ್ರಿಡ್ಜ್‌: ಕೇಂಬ್ರಿಡ್ಜ್ ಯೂನಿವರ್ಸಿಟಿ ಪ್ರೆಸ್, ೧೯೭೯, ಎ.ಜೆ. ಪ್ರಾಂಕ್, ಡಿಪೆಂಡೆಂಟ್ ಎಕ್ಯುಮ್ಯುಲೇಶನ್ ಆಂಡ್ ಅಂಡರ್ ಡೆವಲಪ್ಮೆಂಟ್, ಲಂಡನ್ : ದಿ ಮ್ಯಾಕ್‌ಮಿಲನ್ ಪ್ರೆಸ್, ೧೯೭೮ ಮುಂತಾದವು. ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳಾದ ವರ್ಲ್ಡ್‌ಬ್ಯಾಂಕ್ ಮತ್ತು ಇಂಟರ್‌ನೇಶನಲ್ ಮಾನಿಟರಿ ಫಂಡ್‌ಗಳನ್ನು ತಮ್ಮ ಹತೋಟಿಯಲ್ಲಿಕೊಳ್ಳುವಷ್ಟು ಪ್ರಮಾಣದ ಶೇರುಗಳನ್ನು ಬ್ರಿಟನ್ ಮತ್ತು ಅಮೆರಿಕ ದೇಶಗಳು ಹೊಂದಿವೆ. ಆದುದರಿಂದ ಈ ಸಂಸ್ಥೆಗಳ ಪಾಲಿಸಿಯನ್ನು ಈ ಎರಡು ದೇಶಗಳು ಗಣನೀಯವಾಗಿ ಪ್ರಭಾವಿಸುತ್ತಿವೆ. ವಿವರಗಳಿಗೆ ಸಪರಿನ್, ದಿ ಪಾಲಿಸಿ ರೂಟ್ಸ್ಆಫ್ ಎಕಾನಮಿಕ್ಕ್ರೈಸಿಸ್, ಪಾವರ್ಟಿ ಆಂಡ್ ಇನಿಕ್ವಾಲಿಟಿ, ಲಂಡನ್ : ಜೆಡ್ ಬುಕ್ಸ್, ೨೦೦೪ ಮತ್ತು ಚಾಂಗ್ ಆಂಡ್ ಗ್ರಾಬೆಲ್, ರಿಕ್ಲೈಮಿಂಗ್ ಡೆವಲಪ್ಮೆಂಟ್ಎನ್ ಆಲ್ಟರ್ನೇಟಿವ್ಎಕಾನಮಿಕ್ ಪಾಲಿಸಿ ಮೇನ್ವಲ್ ಬೆಂಗಳೂರು: ಬುಕ್ಸ್ ಫಾರ್ ಚೇಂಜ್, ೨೦೦೪.

[14] ಎಸ್‌. ಜಾರ್ಜ್‌, ಪೇಟ್ ವರ್ಸ್ದೇನ್ಡೆಟ್ದಿ ವರ್ಲ್ಡ್ಫೈನಾನ್ಶಿಯಲ್ ಕ್ರೈಸೀಸ್ ಆಂಡ್ ದಿ ಪೂವರ್, ಲಂಡನ್: ಪ್ಲುಟೋ ಪ್ರೆಸ್, ೧೯೯೦, ಎಸ್.ಗುಹನ್, ‘ವರ್ಲ್ಡ್ ಬ್ಯಾಂಕ್ ಆನ್ ಗವರ್‌ನೆನ್ಸ್ – ಎ ಕ್ರಿಟಿಕ್’, ಎಕನಾಮಿಕ್ ಆಂಡ್ ಪೊಲಿಟಿಕಲ್ ವೀಕ್ಲಿ, ವಾಲ್ಯೂಮ್‌೩೩, ನಂ. ೪, ಜನವರಿ ೧೯೯೮, ಪು. ೧೮೫-೧೮೯, ಎಲೆನ್ ಮೆಸಿನ್ಸ್‌ವುಡ್, ‘ಆನ್‌ಹ್ಯಾಪಿ ಫ್ಯಾಮಿಲೀಸ್ – ಗ್ಲೋಬಲ್ ಕ್ಯಾಪಿಟಲಿಸಂ ಇನ್ ಎ ವರ್ಲ್ಡ್‌ ಆಫ್ ನೇಶನ್‌ ಸ್ಟೇಟ್ಸ್‌’, ಮಂಥ್ಲೀ ರಿವೀವ್, ವಾಲ್ಯೂಮ್ ೫೧, ನಂ.೩, ಜುಲೈ/ಆಗಸ್ಟ್‌೧೯೯೯, ಪು. ೧-೧೩, ಮಿಗಲ್ ಎ ಆತೇರಿ, ‘ಇಕಲೋಜಿಕಲ್ ಇಂಪ್ಯಾಕ್ಟ್‌ ಆಫ್ ಇಂಡಸ್ಟ್ರಿಯಲ್ ಅಗ್ನಿಕಲ್ಚರ್ ಆಂಡ್ ದಿ ಪಾಸಿಬಿಲಿಟಿಸ್ ಫಾರ್ ಟ್ರೂಲಿ ಸಸ್ಟೈನೆಬಲ್ ಫಾರ್‌ಮಿಂಗ್‌’, ಮಂಘ್ಲೀ ರಿವೀವ್, ವಾಲ್ಯೂಮ್ ೫೦, ನಂ.೩, ಜುಲೈ-ಆಗಸ್ಟ್‌೧೯೯೮, ಪು. ೬೦-೭೧, ಜಾನೆಟ್ ಪೊಪ್ಪೆಂಡಿಕ್‌, ‘ವಾಂಟ್ ಆಂಡ್‌ಪ್ಲೆಂಟಿ – ಫ್ರಮ್‌ಹಂಗರ್ ಟು ಇನಿಕ್ವಾಲಿಟಿ’, ಮಂಥ್ಲೀ ರಿವೀವ್, ವಾಲ್ಯೂಮ್ ೫೦, ನಂ.೩. ಜುಲೈ‌ಆಗಸ್ಟ್‌೧೯೯೮, ಪು. ೬೦-೭೧. ಪು. ೧೫೮-೧೩೬, ಎಲೆನ್‌ಮೆಸಿನ್ಸ್ ವುಡ್, ಲೇಬರ್, ‘ದಿ ಸ್ಟೇಟ್ ಆಂಡ್ ದಿ ಕ್ಲಾಸ್‌ಸ್ಟ್ರಗಲ್’, ಮಂಥ್ಲೀ ರಿವೀವ್, ವಾಲ್ಯೂಮ್‌೪೯, ನಂ. ೩, ಜುಲೈ, ಆಗಸ್ಟ್ ೧೯೯೭, ಪು. ೧-೧೭.

[15] ಅಮೇರಿಕದ ರಾಜಕೀಯಶಾಸ್ತ್ರಜ್ಞ ರಾಬರ್ಟ್ ಪುನಮ್ ತನ್ನ ಮೇಕಿಂಗ್ ಡೆಮಾಕ್ರಸಿ ವರ್ಕ್ಸಿವಿಕ್ ಟ್ರೆಡಿಶನ್ಸ್ ಇನ್‌ಮಾಡರ್ನ್‌ ಇಟಲಿ (ಪ್ರಿನ್ಸ್‌ಟನ್: ಪ್ರನ್ಸ್‌ಟನ್‌ಯೂನಿವರ್ಸಿಟಿ ಪ್ರೆಸ್‌, ೧೯೯೩) ಎನ್ನುವ ಪುಸ್ತಕದಲ್ಲಿ ಇಟಲಿಯ ಅನುಭವದ ನೆಲೆಯಲ್ಲಿ ಸಂಘಟಿತ ಬದುಕು ಅಥವಾ ಸಿವಿಲ್ ಸೊಸೈಟಿ ಮತ್ತು ಪ್ರಜಾಪ್ರಭುತ್ವದ ನಡುವೆ ಸಂಬಂಧ ಹೆಣೆಯುವ ಪ್ರಯತ್ನ ಮಾಡಿದ್ದಾನೆ. ಸಿವಿಲ್ ಸೊಸೈಟಿ ಮತ್ತು ಪ್ರಜಾಪ್ರಭುತ್ವ ನಡುವೆ ಸಂಬಂಧ ಹೆಣೆಯುವ ಪ್ರಯತ್ನಗಳು ಹಿಂದೆಯೂ ಇದ್ದವು. ಅವು ಕೂಡ ಪಶ್ಚಿಮದ ದೇಶಗಳ ಅನುಭವಗಳ ಹಿನ್ನೆಲೆಯಲ್ಲೇ ತಾತ್ವಿಕ ನಿಲುವುಗಳನ್ನು ತಾಳಿದ್ದವು. ಈ ಸಾಲಿನಲ್ಲಿ ಅಲೆಕ್ಸಿಡಿ ತೊವಿಲ್ಲೆಯ ಡೆಮಾಕ್ರಸಿ ಇನ್ ಅಮೆರಿಕ, (ನ್ಯೂಯಾರ್ಕ್‌: ಹ್ಯಾಂಕರ್ ಬುಕ್ಸ್, ೧೯೬೯), ಜೇಮ್ಸ್‌ಎಸ್‌ಕೊಲ್‌ಮೆನ್‌ಯ, ಫೌಂಡೇಶನ್ಸ್‌ಆಫ್ ಸೋಶಿಯಲ್ ಥಿಯರಿ, (ಕೇಂಬ್ರಿಡ್ಜ್: ಹಾರ್‌ವರ್ಡ್‌ಯೂನಿವವರ್ಸಿಟಿ ಪ್ರೆಸ್, ೧೯೯೦) ಬರಹಗಳನ್ನು ಗುರುತಿಸಬಹುದು. ಅವರು ಅಮೆರಿಕದ ಪ್ರಜಾಪ್ರಭುತ್ವದಲ್ಲಿ ಸಿವಿಲ್ ಸೊಸೈಟಿಯ ಪಾತ್ರ ಕುರಿತು ಚರ್ಚಿಸಿದ್ದಾರೆ. ಅವರ ಥಿಯರಿಗಳು ಸಿವಿಲ್ ಸೊಸೈಟಿ ಮತ್ತು ಒಳ್ಳೆಯ ಆಡಳಿತದ ಸಂಬಂಧವನ್ನು ವಿವರಿಸುತ್ತವೆ. ನಾಗರಿಕ ಸಂಘಟನೆ ಅಥವಾ ಸಿವಿಲ್ ಸೊಸೈಟಿ ಪ್ರಜಾಪ್ರಭುತ್ವ ಮಾದರಿಯಲ್ಲಿ ಸಮಸ್ಯೆ ಪರಿಹಾರದ ಮೂಲಭೂತ ಪಾಠವನ್ನು ಹೇಳಿಕೊಡುತ್ತವೆ ಎಂದು ಇವರು ಅಭಿಪ್ರಾಯ ಪಡುತ್ತಾರೆ.

[16] ರಜನಿ ಕೊಥಾರಿ, ಸ್ಟೇಟ್ ಎಗೆಯಿನ್ಸ್ಟ್‌ಡೆಮಾಕ್ರಸಿ: ಇನ್‌ ಸರ್ಚ್‌ ಆಫ್ ಹ್ಯೂಮಮನ್ ಗವರ್ನೆನ್ಸ್, ಡೆಲ್ಲಿ: ಅಜಂತಾ ಪಬ್ಲಿಷರ‍್ಸ್, ೧೯೮೮, ಆಶಿಸ್ ನಂದಿ, “ಕಲ್ಚರ್‌, ಸ್ಟೇಟ್ ಆಂಡ್ ರೀಡಿಸ್ಕವರಿ ಆಫ್ ಇಂಡಿಯನ್ ಪಾಲಿಟಿಕ್ಸ್‌”, ಎಕಾನಮಿಕ್ ಆಂಡ್ ಪೊಲಿಟಿಕಲ್ ವೀಕ್ಲಿ, ವಾ. ೧೯, ೧೯೮೪, ಪು. ೨೦೭೮-೮೩, ಡಿ.ಎಲ್. ಸೇತ್ ಆಂಡ್ ಆಶಿಸ್ ನಂದಿ (ಸಂ), ಮಲ್ಟಿವರ್ಸ್ಆಫ್ ಡೆಮಾಕ್ರಸಿ, ನ್ಯೂಡೆಲ್ಲಿ: ಸೇಜ್ ಪಬ್ಲಿಕೇಶನ್ಸ್, ೧೯೯೬ ಮುಂತಾದವರ ಬರಹಗಳಲ್ಲಿ ಈ ಬಗೆಯ ಚಿಂತನೆಗಳನ್ನು ಕಾಣಬಹುದು.

[17] ಉಪೇಂದ್ರ ಭಕ್ಷಿ ಅಂಡ್ ಭಿಕು ಪರೇಕ್ (ಸಂ), ಕ್ರೈಸೀಸ್ ಆಂಡ್ ಚೇಂಜ್, ನ್ಯೂಡೆಲ್ಲಿ: ಸೇಜ್ ಪಬ್ಲಿಕೇಶನ್ಸ್, ೧೯೯೫.

[18] ಆಶಿಸ್ ನಂದಿ, ಕಲ್ಚರ್‌, “ಸ್ಟೇಟ್ ಆಂಡ್ ರೀಡಿಸ್ಕವರಿ ಆಫ್ ಇಂಡಿಯನ್ ಫಾಲಿಟಿಕ್ಸ್”, ಎಕನಾಮಿಕ್ ಆಂಡ್ ಪೊಲಿಟಿಕಲ್ ವೀಕ್ಲಿ, ಪು. ೨೦೭೮-೮೩.

[19] ಮಾಧವ ಗಾಡ್ಗೀಲ್ ಆಂಡ್ ರಾಮಚಂದ್ರ ಗುಹ, ಇಕಾಲಜಿ ಆಂಡ್ ಕ್ವಿಟಿ: ದಿ ಯೂಸ್ ಆಂಡ್ ಅಬ್ಯೂಸ್ ಆಫ್ ನೇಚರ್ ಇನ್ ಕಾಂಟೆಂಪರರಿ ಇಂಡಿಯಾ, ನ್ಯೂಡೆಲ್ಲಿ: ಪೆಂಗ್ವಿನ್ ಬುಕ್ಸ್, ೧೯೯೫.