ಸಮಾಜ ಸಂಶೋಧನಾ ವಿಧಾನಗಳು ಸಂಶೋಧಕರು ಮತ್ತು ಸಂಶೋಧನೆಗೆ ಒಳಪಡುವ ಸಂಗತಿಗಳನ್ನು ಗ್ರಹಿಸಿಕೊಂಡ ವಿಧಗಳನ್ನು ಅರ್ಥ ಮಾಡಿಕೊಳ್ಳಲು ಈ ಅಧ್ಯಾಯದಲ್ಲಿ ಪ್ರಯತ್ನಿಸಿದ್ದೇನೆ. ಸಮಾಜ ಸಂಶೋಧನೆಯಲ್ಲಿ ಸಂಶೋಧಕರು ಮತ್ತು ಅಧ್ಯಯನಕ್ಕೆ ಒಳಗಾಗುವ ಸಂಗತಿಯ (ಸಮಾಜದ) ವ್ಯಾಖ್ಯಾನ ಕುರಿತಂತೆ ಹಿಂದಿನಿಂದಲೇ ಗಂಭೀರ ಚರ್ಚೆ ನಡೆಯುತ್ತಿದೆ. ಸಮಾಜ ವಿಜ್ಞಾನ ರೂಪುಗೊಳ್ಳು ವಸಂದರ್ಭದಲ್ಲಿ ಈ ಎರಡರ ಬಗ್ಗೆ (ಸಂಶೋಧಕರು ಮತ್ತು ಅಧ್ಯಯನಕ್ಕೆ ಒಳಗಾಗುವ ಸಂಗತಿಗಳ ಬಗ್ಗೆ) ಖಚಿತ ನಿಲುವುಗಳಿದ್ದವು. ಅಂದರೆ ಸಂಶೋಧಕರು ಮತ್ತು ಅಧ್ಯಯನಕ್ಕೆ ಒಳಗಾಗುವ ಸಂಗತಿಗಳ ಸ್ವತಂತ್ರ ಹಾಗೂ ಖಚಿತ ಅಸ್ತಿತ್ವದ ಬಗ್ಗೆ ಯಾವುದೇ ಸಂದೇಹಗಳಿರಲಿಲ್ಲ. ಆದರೆ ಬರಬರುತ್ತಾ ಅಧ್ಯಯನಕ್ಕೆ ಒಳಗಾಗುವ ಸಂಗತಿಗಳ ಬಗ್ಗೆ ಮತ್ತು ಅವುಗಳನ್ನು ವಿವರಿಸ ಹೊರಟ ಸಂಶೋಧಕರ ಸಾಮರ್ಥ್ಯ ಮತ್ತು ಉದ್ದೇಶಗಳ ಬಗ್ಗೆ ಗುಮಾನಿಗಳು ಹುಟ್ಟಿಕೊಂಡವು. ಆಬ್ಜೆಕ್ಟಿವ್ ವರ್ಲ್ಡ್‌(ಸಮಾಜ) ಒಂದು ಇದೆ, ಅದನ್ನು ಎಂಪಿರಿಕಲ್ ಆಗಿ ಅಥವಾ ಇತರ ವಿಧಾನಗಳಿಂದ ನಾವು ಭಾಗಶಃ ಗ್ರಹಿಸಬಹುದು ಇತ್ಯಾದಿ ಗ್ರಹಿಕೆಗಳು ಪ್ರಶ್ನಿಸಲ್ಪಟ್ಟವು. ಈ ಗ್ರಹಿಕೆಗಳ ಸ್ಥಾನದಲ್ಲಿ ವಾಸ್ತವಿಕತೆ ಎನ್ನುವುದು ಅರ್ಥಪೂರ್ಣ ಸಾಮಾಜಿಕ ಕಟ್ಟುವಿಕೆ, ನಮ್ಮ ಆಲೋಚನೆಗಳಿಂದ ಪ್ರತ್ಯೇಕವಾದ ಪ್ರಪಂಚವೊಂದಿಲ್ಲ, ನಾವು ಇದೆ ಎಂದು ಗ್ರಹಿಸುತ್ತೇವೆ, ಆದುದರಿಂದ ಇದೆ ಇತ್ಯಾದಿ ಗ್ರಹಿಕೆಗಳು ಬಲಗೊಂಡವು. ಆದುದರಿಂದ ಮಾನವ ಸಮಾಜ ಮತ್ತು ಪ್ರಕೃತಿಯನ್ನು ಅಧ್ಯಯನ ಮಾಡಲು ಒಂದೇ ವಿಧಾನವನ್ನು ಅನುಸರಿಸುವುದು ಸರಿಯಲ್ಲ ಎನ್ನುವ ಅಭಿಪ್ರಾಯಗಳು ಮುಂಚೂಣಿಗೆ ಬಂದವು. ಈ ಎರಡೂ ನಿಲುವುಗಳು (ಆಬ್ಜೆಕ್ಟಿವಿಟಿ ಮತ್ತು ಸಬ್ಜೆಕ್ಟಿವಿಟಿ ಮೇಲಿನ ನಿಲುವುಗಳು) ಸಂಶೋಧನೆಗೆ ಒಳಗಾಗುವ ಸಂಗತಿಗಳನ್ನು ಹೇಗೆ ಪರಿಭಾವಿಸಬೇಕೆಂದು ತಿಳಿಸುತ್ತವೆ. ಸಂಶೋಧಕರ ಅಸ್ತಿತ್ವದ ಬಗ್ಗೆ ಈ ಚರ್ಚೆಗಳು ಯಾವುದೇ ಸಂದೇಹವನ್ನು ವ್ಯಕ್ತಪಡಿಸುವುದಿಲ್ಲ. ಸಂಶೋಧಕರು ಇದ್ದಾರೆ, ಅವರು ಸಂಶೋಧನೆ ಮಾಡಿ ಹೊರಗಿನ ಪ್ರಪಂಚವನ್ನು ವಿವರಿಸುತ್ತಾರೆ ಅಥವಾ ಅರ್ಥ ಮಾಡಿಕೊಳ್ಳುತ್ತಾರೆ ಇತ್ಯಾದಿ ನಿಲುವುಗಳ ಬಗ್ಗೆ ಮೇಲಿನ ಚರ್ಚೆಗಳಲ್ಲಿ ಎಲ್ಲೂ ಸಂದೇಹ ವ್ಯಕ್ತವಾಗುವುದಿಲ್ಲ. ನಿಜವಾಗಿಯೂ ಸಂಶೋಧಕರಿಗೆ ಅವರು ವಿವರಿಸುವ ಅಥವಾ ಅರ್ಥ ಮಾಡಿಕೊಳ್ಳುವ ಪ್ರಪಂಚದೊಂದಿಗೆ ಯಾವುದೇ ಸಂಬಂಧವಿಲ್ಲದ ಅಸ್ತಿತ್ವ (ಗುರುತು) ಇದೆಯೇ? ಒಂದು ವೇಳೆ ಸಂಶೋಧಕರ ಗುರುತು ಮತ್ತು ಅವರು ವಿವರಿಸುವ ಪ್ರಪಂಚದ ನಡುವೆ ಸಂಬಂಧ ಇದ್ದರೆ, ಅದು ಯಾವ ಬಗೆಯ ಸಂಬಂಧ? ಇತ್ಯಾದಿ ಪ್ರಶ್ನೆಗಳು ಅಧ್ಯಯನಕಾರರು ಮತ್ತು ಅಧ್ಯಯನಕ್ಕೆ ಒಳಗಾಗುವ ಸಂಗತಿಗಳಿಗೆ ಸಂಬಂಧಿಸಿದಂತೆ ಪ್ರಾಮುಖ್ಯತೆಯನ್ನು ಪಡೆಯುತ್ತವೆ. ಈ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಲು ಈ ಅಧ್ಯಾಯದಲ್ಲ ಪ್ರಯತ್ನಿಸಲಾಗಿದೆ. ಅಧ್ಯಾಯದ ವಿವರಗಳನ್ನು ಎರಡು ಭಾಗದಲ್ಲಿ ನೀಡಿದ್ದೇನೆ. ಮೊದಲ ಭಾಗದಲ್ಲಿ ಅಧ್ಯಯನಕ್ಕೆ ಒಳಗಾಗುವ ಸಂಗತಿಗಳು ಮತ್ತು ಅಧ್ಯಯನಕಾರರ ಸ್ವತಂತ್ರ ಮತ್ತು ಖಚಿತ ಸಂಬಂಧಗಳಿಗೆ ಸಂಬಂಧಿಸಿದ ವಿವರಗಳನ್ನು ನೀಡಿದ್ದೇನೆ. ಸಂಶೋಧಕರು ಕಟ್ಟಿಕೊಡುವ ಪ್ರಪಂಚ ಮತ್ತು ಸಂಶೋಧಕರ ಗುರುತು ಇವುಗಳ ನಡುವಿನ ಸಂಬಂಧಕ್ಕೆ ಸಂಬಂಧಿಸಿದ ಚರ್ಚೆಯನ್ನು ಅಧ್ಯಾಯದ ಎರಡನೇ ಭಾಗದಲ್ಲಿ ನೀಡಿದ್ದೇನೆ.

ಭಾಗ

ಸಂಶೋಧನೆಯನ್ನು ಪ್ರಭಾವಿಸುವ ಬಹುಮುಖ್ಯ ಅಂಶವೆಂದರೆ ಸಂಶೋಧಕರ ದೃಷ್ಟಿಕೋನ. ಸಂಶೋಧಕರ ದೃಷ್ಟಿಕೋನವನ್ನು ಅವರ ತಾತ್ವಿಕ ಹಿನ್ನೆಲೆಗಳು ಪ್ರಭಾವಿಸುತ್ತವೆಯೆಂದು ತಿಳಿಯಲಾಗಿದೆ. ಸ್ಥೂಲವಾಗಿ ಎರಡು ಬಗೆಯ ತಾತ್ವಿಕ ಹಿನ್ನೆಲೆಗಳು ಸಂಶೋಧಕರ ದೃಷ್ಟಿಕೋನವನ್ನು ಪ್ರಭಾವಿಸುತ್ತವೆಯೆಂದು ಗ್ರಹಿಸಲಾಗಿದೆ. ಒಂದು, ಸಂಶೋಧಕರ ಸಾಮಾಜಿಕ ಪರಿಸರ ಮತ್ತು ಅಲ್ಲಿನ ತಾತ್ವಿಕ ಚಿಂತನೆಗಳು. ಸಂಶೋಧನೆ ನಿರ್ವಾತದಲ್ಲಿ ನಡೆಯುವ ಪ್ರಕ್ರಿಯೆಯಲ್ಲ; ಚಾರಿತ್ರಿಕವಾಗಿ ರೂಪುಗೊಂಡ ಯಾವುದೋ ಒಂದು ಸಾಮಾಜಿಕ ಪರಿಸರದಲ್ಲಿ ನಡೆಯುವ ಪ್ರಕ್ರಿಯೆ. ಇಂತಹ ಪರಿಸರದಲ್ಲಿ ಹಲವಾರು ತಾತ್ವಿಕ ಚಿಂತನೆಗಳು ಚಾಲ್ತಿಯಲ್ಲಿರಬಹುದು. ಇವುಗಳಲ್ಲಿ ಕೆಲವು ಯಜಮಾನಿಕೆ (ಮುಂಚೂಣಿಯಲ್ಲಿದ್ದು) ಸ್ಥಾನದಲ್ಲಿದ್ದು ಇನ್ನು ಕೆಲವು ಮುಖ್ಯವಾಹಿನಿಯ ಚಿಂತನೆಗಳಿಗೆ ಪ್ರತಿರೋಧಗಳನ್ನು ಕಟ್ಟಿಕೊಡುವ ಚಿಂತನಾ ಕ್ರಮಗಳಾಗಿ ಅಥವಾ ಇನ್ಯಾವುದೋ ಬಗೆಯ ಸಮಾಜ ಕಲ್ಪನೆಗಳನ್ನು ಕಟ್ಟಿಕೊಡುವ ಕೆಲಸ ಮಾಡಬಹುದು. ಸಂಶೋಧಕರು ತಮಗೆ ಅರಿವಿದ್ದೋ ಅಥವಾ ಅರಿವಿಲ್ಲದೆಯೋ, ಯಾವುದಾದರೂ ಒಂದು ಅಥವಾ ಕೆಲವು ಚಿಂತನಾಕ್ರಮಗಳಿಂದ ಪ್ರಭಾವಿತರಾಗಿರಬಹುದು. ಜತೆಗೆ ಸಂಶೋಧನೆ ನಡೆಯುವ ಸಾಮಾಜಿಕ ಪರಿಸರದಲ್ಲಿನ ಏಣಿಶ್ರೇಣಿಗಳು, ಅಧಿಕಾರ ಸಂಬಂಧಗಳು, ಆರ್ಥಿಕ ಸ್ಥಾನಮಾನಗಳು ಇತ್ಯಾದಿಗಳು ಕೂಡ ಸಂಶೋಧಕರ ದೃಷ್ಟಿಕೋನವನ್ನು ಮತ್ತು ಅವರ ಸಂಶೋಧನೆಯನ್ನು ಪ್ರಭಾವಿಸಬಹುದು. ಈ ಎಲ್ಲದರ ಬಗೆಗಿನ ಚರ್ಚೆಯನ್ನು ಮುಂದಿನ ಅಧ್ಯಾಯದಲ್ಲಿ ಮಾಡಲಾಗಿದೆ. ಎರಡು, ಸಂಶೋಧನಾ ವಿಧಾನಗಳಲ್ಲಿ ಅಡಕವಾಗಿರುವ ತಾತ್ವಿಕಾಂಶಗಳು. ಈ ತಾತ್ವಿಕಾಂಶಗಳು ಅಧ್ಯಯನ ಮಾಡುವವರು, ಅಧ್ಯಯನಕ್ಕೆ ಒಳಗಾಗುವವರು, ಸಂಶೋಧನೆ ಇತ್ಯಾದಿಗಳನ್ನು ವಿವರಿಸುತ್ತವೆ. ಈ ವಿವರಣೆಗಳು ಸಂಶೋಧಕರ ದೃಷ್ಟಿಕೋನವನ್ನು ಪ್ರಭಾವಿಸುತ್ತವೆ. ಈ ಬಗೆಯ ವಿವರಣೆ ಹಾಗು ಸಂಶೋಧನೆಯ ನಡುವಿನ ಸಂಬಂಧವನ್ನು ಈ ಅಧ್ಯಾಯದಲ್ಲಿ ವಿಶ್ಲೇಷಿಸಲಾಗಿದೆ.

ಸಮಾಜವಿಜ್ಞಾನಕ್ಕೆ ಅದರದ್ದೇ ಆದ ಸಂಶೋಧನಾ ವಿಧಾನ ಇರಲಿಲ್ಲ. ವಿಜ್ಞಾನದ ಜತೆಗೆ ಒಂದು ಶಿಸ್ತುಬದ್ಧ ಶಾಸ್ತ್ರವಾಗಿ ಸಮಾಜವಿಜ್ಞಾನ ರೂಪುಗೊಂಡಿದೆ. ಆದುದರಿಂದ ಸಮಾಜವಿಜ್ಞಾನ ಸಹಜವಾಗಿಯೇ ವಿಜ್ಞಾನದ ವಿಧಾನದಿಂದ ಹೆಚ್ಚು ಪ್ರಭಾವಿತಗೊಂಡಿದೆ. ಹಾಗೆಂದು ಸಮಾಜವಿಜ್ಞಾನದ ಸಂಶೋಧನೆಯಲ್ಲಿ ಕೇವಲ ವಿಜ್ಞಾನದ ವಿಧಾನ ಮಾತ್ರ ಪ್ರಭಾವ ಬೀರಿದೆ ಎಂದರೆ ತಪ್ಪಾಗುತ್ತದೆ; ಮಾನವಿಕ ಕೂಡ ಸಾಕಷ್ಟು ಪ್ರಭಾವ ಬೀರಿದೆ. ಒಂದು ವಿಧದಲ್ಲಿ ಸಮಾಜವಿಜ್ಞಾನ ಈ ಎರಡರ ಗುಣಗಳನ್ನು ಮೇಳೈಸಿಕೊಂಡಿರುವ ಒಂದು ಶಿಸ್ತು. ಅದು ಒಂದು ಕಡೆಯಿಂದ ವಿಜ್ಞಾನದ ವಿಧಾನವನ್ನು ಎರವಲು ಪಡೆದುಕೊಂಡರೆ ಮತ್ತೊಂದು ಕಡೆಯಿಂದ ಮಾವನಿಕದಿಂದಲೂ ಪ್ರಭಾವಿತಗೊಂಡಿದೆ. ವಿಜ್ಞಾನದ ಯಜಮಾನಿಕೆ ಪ್ರಶ್ನಾತೀತವಾಗಿದ್ದಾಗ ಸಮಾಜವಿಜ್ಞಾನದ ವಿಧಾನದಲ್ಲಿ ವಿಜ್ಞಾನದ ವಿಧಾನ ಸಂಪೂರ್ಣವಾಗಿತ್ತು.  ಸಂದರ್ಭಗಳಲ್ಲಿ ಸಮಾಜವಿಜ್ಞಾನ ಬರಹಗಳು ಸೈಂಟಿಫಿಕ್ ಬರಹಗಳೆಂದು ಹೇಳಿಕೊಂಡರೆ ಮಾತ್ರ ಅವು ಸತ್ಯಕ್ಕೆ ಹತ್ತಿ ಎನ್ನುವ ನಂಬಿಕೆ ಇತ್ತು. ಇಂದು ಕೂಡ (ಮಾನವಿಕ ಪ್ರಭಾವ ಇರುವ ಸಂದರ್ಭದಲ್ಲೂ) ಸಮಾಜವಿಜ್ಞಾನದ ಸಂಶೋಧನೆಯಲ್ಲಿ ವಿಜ್ಞಾನದ ವಿಧಾನ ಯಜಮಾನಿಕೆ ನಡೆಸುತ್ತಿದೆ. ವಿಜ್ಞಾನದ ವಿಧಾನದಲ್ಲಿ ಅಧ್ಯಯನ ಮಾಡುವವರು ಮತ್ತು ಅಧ್ಯಯನಕ್ಕೆ ಒಳಗಾಗುವವರು ಯಾವ ಸ್ಥಾನಮಾನವನ್ನು ಪಡೆದಿದ್ದಾರೆ ಎನ್ನುವ ವಿವರಣೆ ಸಮಾಜವಿಜ್ಞಾನದಲ್ಲಿ ಅವರ (ಅಧ್ಯಯನ ಮಾಡುವವರು ಮತ್ತು ಅಧ್ಯಯನಕ್ಕೆ ಒಳಗಾಗುವವರ) ಸ್ಥಾನಮಾನಗಳ ತೀರ್ಮಾನಕ್ಕೆ ಅಗತ್ಯ. ವಿಜ್ಞಾನದ ವಿಧಾನದಲ್ಲಿ ಅಧ್ಯಯನದ ವಸ್ತುಗಳ ಪರಿಕಲ್ಪನೆಯನ್ನು ಆಬ್ಜೆಕ್ಟಿವಿಟಿಗೆ ಸಂಬಂಧಿಸಿದ ಚರ್ಚೆಯಲ್ಲಿ ಕಾಣಬಹುದು.[1] ಅದರ ಮುಖ್ಯಾಂಶಗಳು ಇಂತಿವೆ. ಆಬ್ಜೆಕ್ಟಿವ್ ವರ್ಲ್ಡ್‌ ಒಂದು ಇದೆ. ಅದು ನಮ್ಮ ಆಲೋಚನೆ ಅಥವಾ ಮನಸ್ಸಿನ ಸೃಷ್ಟಿಯಲ್ಲ. ನಮ್ಮ ಆಲೋಚನೆಯನ್ನು ಹೊರತುಪಡಿಸಿ ಕೂಡ ಅದು ಇದೆ. ಅದನ್ನು ಎಂಪಿರಿಕಲ್ ಆಗಿ ಅಥವಾ ಇತರ ವಿಧಾನಗಳಿಂದ ನಾವು ಭಾಗಶಃ ಗ್ರಹಿಸಬಹುದು ಎನ್ನುವುದೇ ಆಬ್ಜೆಕ್ಟಿವಿಟಿ. ವಿಜ್ಞಾನದಲ್ಲಿ ಅಧ್ಯಯನಕ್ಕೆ ಒಳಗಾಗುವ ಸಂಗತಿಗಳನ್ನು ನೇಚುರಲ್ ಫ್ಯಾಕ್ಟ್ ಎಂದು ತಿಳಿದಂತೆ ಸಮಾಜವಿಜ್ಞಾನದಲ್ಲಿ ಅಧ್ಯಯನಕ್ಕೆ ಒಳಗಾಗುವ ಸಂಗತಿಗಳನ್ನು ಸೋಶಿಯಲ್ ಫ್ಯಾಕ್ಟ್‌ಎಂದು ಪರಿಗಣಿಸುತ್ತದೆ.[2] ಅಷ್ಟು ಮಾತ್ರವಲ್ಲ ಎಲ್ಲ ಸೋಶಿಯಲ್ ಫ್ಯಾಕ್ಟ್‌ಗಳ ಅಂತರಾಳದಲ್ಲಿ ಹೆಚ್ಚು ಕಡಿಮ ಒಂದೇ ಗುಣದ ಸಂಗತಿಗಳು ಕೆಲಸ ಮಾಡುತ್ತಿವೆ. ಆ ಗುಣಗಳನ್ನು ಅರ್ಥ ಮಾಡಿಕೊಂಡರೆ ಯಾವುದೇ ಸಮಾಜವನ್ನು, ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳುವುದು ಅಥವಾ ವಿವರಿಸುವುದು ಕಷ್ಟದ ಕೆಲಸವಲ್ಲ ಎನ್ನುವ ಗೃಹೀತ ಕೂಡ ಇಲ್ಲಿ ಕೆಲಸ ಮಾಡುತ್ತಿದೆ. ಈ ತಾತ್ವಿಕಾಂಶಗಳನ್ನು ಸ್ವಲ್ಪ ವಿವರವಾಗಿ ಅರ್ಥಮಾಡಿಕೊಳ್ಳುವ ಅವಶ್ಯಕತೆಯಿದೆ.

ವಿಜ್ಞಾನದ ಸಂಶೋಧನಾ ವಿಧಾನದಲ್ಲಿ ಅಧ್ಯಯನಕ್ಕೆ ಒಳಗಾಗುವ ವಸ್ತು ಅಥವಾ ಸಂಗತಿಯನ್ನು ಪ್ರಯೋಗಾಲಯಕ್ಕೆ ತಂದು ಬಿಡಿಬಿಡಿಯಾಗಿ ಪರೀಕ್ಷಿಸಲಾಗುತ್ತದೆ. ಆ ಮೂಲಕ ಆ ವಸ್ತು ಅಥವಾ ಸಂಗತಿ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತದೆ. ಆ ಮಾಹಿತಿಯನ್ನು ವಿಶ್ಲೇಷಿಸಿ ಆ ವಸ್ತು ಅಥವಾ ಸಂಗತಿ ಕುರಿತು ಒಂದು ತೀರ್ಮಾನಕ್ಕೆ ಬರಲಾಗುತ್ತದೆ. ಪರೀಕ್ಷೆಗೆ ಒಳಗಾಗುವ ವಸ್ತು ಅಥವಾ ಸಂಗತಿಯನ್ನು ವಿಶ್ಲೇಷಿಸುವ ಮೂಲಕ ಆ ವಸ್ತು ಅಥವಾ ಸಂಗತಿಗೆ ಸೇರಿದ ಇತರ ವಸ್ತು ಅಥವಾ ಸಂಗತಿಗಳ ಕುರಿತು ತೀರ್ಮಾನಕ್ಕೆ ಬರಲಾಗುತ್ತದೆ. ಇಲ್ಲಿ ಸಂಶೋಧನೆಗೆ ಒಳಗಾಗುವ ವಸ್ತು ಮತ್ತು ಸಂಶೋಧಕರ ನಡುವೆ ಸಾಕಷ್ಟು ಅಂತರವಿರುತ್ತದೆ. ಈ ಅಂತರ ಹೆಚ್ಚಿದಷ್ಟು ಸಂಶೋಧನೆಯ ಫಲಿತ ವಾಸ್ತವಕ್ಕೆ ಹೆಚ್ಚು ಹತ್ತಿರ ಎನ್ನುವ ಗೃಹೀತವಿದೆ. ಇದೇ ಕ್ರಮವನ್ನು ಸಮಾಜವಿಜ್ಞಾನದಲ್ಲಿ ಅಳವಡಿಸಿಕೊಳ್ಳಲಾಗಿದೆ. ಹಾಗಾಗಿ ಸಂಶೋಧನೆಯ ವಸ್ತು ಮತ್ತು ಸಂಶೋಧಕರ ನಡುವೆ ಭಾವನಾತ್ಮಕ ಸಂಬಂಧ ಇರುವುದು ಸರಿಯಲ್ಲ ಎನ್ನುವ ಧೋರಣೆ ಬಲಗೊಂಡಿದೆ. ಈ ವಿಧಾನವನ್ನು ಸಮಾಜವಿಜ್ಞಾನದಲ್ಲಿ ಅನುಸರಿಸುವಾಗ ಸಂಶೋದಕರು ಮತ್ತು ಅಧ್ಯಯನಕ್ಕೆ ಒಳಗಾಗುವವರ ನಡುವೆ ಯಾವ ಬಗೆಯ ಸಂಬಂಧ ಏರ್ಪಡುತ್ತದೆ ಎನ್ನುವುದನ್ನು ಗಮನಿಸೋಣ. ಸಮಾಜ ಸಂಶೋಧನೆಯಲ್ಲಿ ಸಂಶೋಧಕರು ಸಕ್ರಿಯ ಪಾತ್ರ ವಹಿಸಿದರೆ ಅಧ್ಯಯನಕ್ಕೆ ಒಳಗಾಗುವ ವ್ಯಕ್ತಿಗಳು, ಕುಟುಂಬಗಳು ಇತ್ಯಾದಿಗಳು ನಿಷ್ಕ್ರಿಯವಾಗಿ ಚಿತ್ರಿತವಾಗುತ್ತವೆ. ಅಧ್ಯಯನಕ್ಕೆ ಒಳಗಾಗುವವರ ಕೆಲಸ ಅಧ್ಯಯನಕ್ಕೆ ತಮ್ಮನ್ನು ಒಡ್ಡಿಕೊಳ್ಳುವುದು ಮಾತ್ರ. ಸಂಶೋಧಕರು ಕೇಳುವ ಮಾಹಿತಿಯನ್ನು ನೀಡುವುದು ಮಾತ್ರ ಅಧ್ಯಯನಕ್ಕೆ ಒಳಗಾಗುವವರ ಜವಾಬ್ದಾರಿ. ಯಾವ ಮಾಹಿತಿ? ಎಷ್ಟು ಪ್ರಮಾಣದಲ್ಲಿ? ಯಾವ ರೂಪದಲ್ಲಿ? ಯಾವ ಸಂದರ್ಭದಲ್ಲಿ? ಇತ್ಯಾದಿ ಪ್ರಶ್ನೆಗಳನ್ನು ಕೇಳುವ ಮತ್ತು ಉತ್ತರಿಸುವ ಹಕ್ಕು ಸಂಶೋಧಕರಿಗೆ ಮಾತ್ರ ಇರುತ್ತದೆ. ಸಂಶೋಧಕರು ಮತ್ತು ಸಂಶೋಧನೆಗೆ ಒಳಗಾಗುವವರ ಸ್ಥಾನಮಾನ ಪೂರ್ವನಿರ್ಧರಿತ. ಸಂಶೋಧನೆಯ ಸಂದರ್ಭದಲ್ಲಿ ಸಂಶೋಧಕರು ಸಂಶೋಧನೆಗೆ ಒಳಪಡುವವರಿಗೆ ಹೋಲಿಸಿಕೊಂಡು ಯಾವುದೋ ಒಂದು ಬಗೆಯ ಉಚ್ಚ ಸ್ಥಾನವನ್ನು ಸ್ವಘೋಷಿಸಿಕೊಂಡುಬಿಡುತ್ತಾರೆ.[3] ಅಷ್ಟು ಮಾತ್ರವಲ್ಲ ಇವರಿಬ್ಬರ ಸ್ಥಾನಮಾನ ಸಂಶೋಧನೆಯ ಇಡೀ ಸಂದರ್ಭದಲ್ಲಿ ಸ್ಥಿರೀಕರಣಗೊಂಡಿರುತ್ತದೆ. ಅಂದರೆ ಸಮಾಜದಲ್ಲಿರುವ ಸಹಜ ಚಲನಶೀಲತೆ ಮರೆಯಾಗಿ ಒಂದು ಬಗೆಯ ಸ್ಥಿರ ಚಿತ್ರಣ ಮೂಡುತ್ತದೆ.

ಸಮಾಜವನ್ನು ಈ ಬಗೆಯಲ್ಲಿ ಕಲ್ಪಿಸಿಕೊಳ್ಳುವುದರ ಬಗ್ಗೆ ಬಹು ಹಿಂದಿನಿಂದಲೇ ಆಕ್ಷೇಪಗಳಿದ್ದವು. ಅವುಗಳ ಕಿರುಪರಿಚಯ ಮಾಡಿಕೊಳ್ಳೋಣ. ಮಾನವ ಸಮಾಜ ಮತ್ತು ಪ್ರಕೃತಿಗಳನ್ನು ಅಧ್ಯಯನ ಮಾಡಲು ಒಂದೇ ವಿಧಾನವನ್ನು ಅನುಸರಿಸುವುದು ಸರಿಯಲ್ಲ ಎಂದು ಜರ್ಮನ್ ಸಮಾಜವಿಜ್ಞಾನಿ ವಿಲ್‌ಹೆಲ್ಮ್ ಡಿಲ್ತಿ ವಾದಿಸುತ್ತಾನೆ.[4] ಆತನ ಪ್ರಕಾರ ಪ್ರಯೋಗಾಲಯಕ್ಕೆ ತಂದು ಪರೀಕ್ಷಿಸುವ ಮೂಲಕ ಅಥವಾ ಇತರ ವಿಧಾನಗಳಿಂದ ಪ್ರಕೃತಿಯನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಲಾಗುತ್ತದೆ. ಆದರೆ ಇದೇ ವಿಧಾನವನ್ನು ಅನುಸರಿಸಿ ಮಾನವ ಸಮಾಜವನ್ನು ಅರ್ಥ ಮಾಡಿಕೊಳ್ಳಬಹುದೆಂದು ತಿಳಿಯುವುದು ಸರಿಯಲ್ಲ. ಮಾನವ ಸಮಾಜದ ಬಗ್ಗೆ ತಿಳುವಳಿಕೆ ಬೇಕಾದರೆ ಅದನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಕು ಎಂದು ಡಿಲ್ತಿ ವಾದಿಸುತ್ತಾನೆ. ಹೀಗೆ ಪ್ರಕೃತಿಯನ್ನು ಅರ್ಥ ಮಾಡಿಕೊಳ್ಳುವ ವಿಧಾನ ಮತ್ತು ಮಾನವ ಸಮಾಜವನ್ನು ಅರ್ಥ ಮಾಡಿಕೊಳ್ಳುವ ವಿಧಾನ ಬೇರೆ ಬೇರೆ ಇರಬೇಕೆನ್ನುವ ವಾದ ಬಲಗೊಳ್ಳುತ್ತದೆ. ವಿಜ್ಞಾನದ ವಿಧಾನವನ್ನು ಸಾರಾಸಗಟಾಗಿ ತಿರಸ್ಕರಿಸುವುದಕ್ಕೆ ಮ್ಯಾಕ್ಸ್ ವೆಬರ್ ಒಪ್ಪುವುದಿಲ್ಲ.[5] ಆದುದರಿಂದ ಆತ ಹರ್ಮನೆಟಿಕ್ಸ್‌ ಹಾಗೂ ಪಾಸಿಟಿವ್ ವಿಧಾನಗಳ ಅಂಶಗಳನ್ನು ಬಳಸಿಕೊಂಡು ಸಮಾಜವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುವುದು ಹೆಚ್ಚು ಸೂಕ್ತ ಎನ್ನುವ ವಾದವನ್ನು ಮುಂದಿಡುತ್ತಾನೆ. ಇದಕ್ಕಾಗಿ ಆತ ಒಂದು ಆದರ್ಶ ಸಮಾಜದ ಮಾದರಿಯ ವಿಧಾನವನ್ನು ಮುಂದಿಡುತ್ತಾನೆ. ಈ ವಿಧಾನಪ್ರಕಾರ ಒಂದು ಆದರ್ಶ ಸಾಮಾಜಿಕ ಮಾದರಿಯನ್ನು ರೂಪಿಸಿಕೊಳ್ಳಲಾಗುತ್ತದೆ. ಈ ಮಾದರಿಯನ್ನು ವಾಸ್ತವಿಕ ಸಾಮಾಜಿಕ ಸ್ಥಿತಿಗತಿ ಬಗ್ಗೆ ತೀರ್ಮಾನಕ್ಕೆ ಬರಲಾಗುತ್ತದೆ. ಈ ರೀತಿಯಲ್ಲಿ ವೆಬರ್ ವಾಸ್ತವ ಜಗತ್ತಿನಲ್ಲಿ ನಡೆಯುವ ವ್ಯವಹಾರಗಳನ್ನು ಅರ್ಥ ಮಾಡಿಕೊಳ್ಳುವ ಮೂಲಕ ಸಮಾಜವನ್ನು ಅರ್ಥ ಮಾಡಿಕೊಳ್ಳುವ ವಿಧಾನಕ್ಕೆ ಹೆಚ್ಚು ಮಹತ್ವ ಬರುವಂತೆ ಮಾಡುತ್ತಾನೆ. ವೆಬರ್‌ನ ಈ ನಿಲುವು ಡಿಲ್ತಿಯ ಹರ್ಮೆನೆಟಿಕ್ಸ್ ಅಥವಾ ಪುಸ್ತಕವನ್ನು ಇಂಟರ್ ಪ್ರಿಟ್ ಮಾಡುವ ವಿಧಾನ ಸಮಾಜವನ್ನು ಅರ್ಥ ಮಾಡಿಕೊಳ್ಳಲು ಸೂಕ್ತ ವಿಧಾನವೆನ್ನುವ ನಿಲುವನ್ನು ನಿರಾಕರಿಸುವುದಿಲ್ಲ. ಆದರೆ ಹರ್ಮೆನೆಟಿಕ್ಸ್ ಸಂಪೂರ್ಣವಾಗಿ ಸಮಾಜ ಸಂಶೋಧನೆಯನ್ನು ಆವರಿಸಿಕೊಳ್ಳುವುದನ್ನು ವೇಬರ್ ಇಷ್ಟಪಡಲಿಲ್ಲ. ಇವರಿಬ್ಬರಿಗಿಂತ ಭಿನ್ನವಾಗಿ ಸಿಗ್‌ಮಂಡ್ ಫ್ರಾಯ್ಡ್‌ಮನುಷ್ಯನ ಕನಸುಗಳನ್ನು ಬಿಡಿಸುವ ಮೂಲಕ ಸಮಾಜವನ್ನು ಅರ್ಥ ಮಾಡಿಕೊಳ್ಳಬಹುದೆಂದು ವಾದಿಸುತ್ತಾನೆ. ಆದರೆ ಈ ಮೂವರಲ್ಲೂ ಒಂದು ಸಾಮ್ಯತೆ ಇತ್ತು. ಅದೇನೆಂದರೆ ಮೂವರೂ ಆಬ್ಜೆಕ್ಟಿವಿಟಿಯನ್ನು ನಂಬಿದವರು.

ಹೀಗೆ ಸಮಾಜವಿಜ್ಞಾನ ಸಂಶೋಧನೆಯಲ್ಲಿ ಸಬ್ಜೆಕ್ಟಿವ್ ವಲ್ರ್ಡ್ ಹಾಗು ಸಬ್ಜೆಕ್ಟಿವಿಟಿಯ ಪ್ರಾಮುಖ್ಯತೆಯನ್ನು ಮ್ಯಾಕ್ಸ್ ವೆಬರ್‌ನ ಕಾಲದಿಂದಲೂ ಕಾಣಬಹುದು. ಇದನ್ನು ಸ್ಥೂಲವಾಗಿ ಹರ್ಮೆನೆಟಿಕ್ಸ್ ಸಂಪ್ರದಾಯವೆನ್ನಬಹುದು. ಇದರ ಪ್ರಕಾರ ವಾಸ್ತವಿಕತೆ ಎನ್ನುವುದು ಅರ್ಥಪೂರ್ಣ ಸಾಮಾಜಿಕ ಕಟ್ಟುವಿಕೆ. ನಮ್ಮ ಆಲೋಚನೆಗಳಿಂದ ಪ್ರತ್ಯೇಕವಾದ ಪ್ರಪಂಚವೊಂದಿಲ್ಲ. ನಾವು ಇದೆ ಎಂದು ಗ್ರಹಿಸುತ್ತೇವೆ, ಆದುದರಿಂದ ಇದೆ. ಹರ್ಮೆನೆಟಿಕ್ಸ್ ಹರ್ಮ್ಸ್ ಪದದೊಂದಿಗೆ ಸಂಬಂಧ ಹೊಂದಿದೆ.[6] ಹರ್ಮ್ಸ್‌ ಎನ್ನುವವನು ಗ್ರೀಕ್ ದೇವತೆಗಳ ಸಮಾಚಾರ ಒಯ್ಯವವನು ಮತ್ತು ಆ ಸುದ್ದಿಗಳನ್ನು ಅರ್ಥೈಸುವವನು. ಹರ್ಮೆನೆಟಿಕ್ಸ್‌ನ ಮೂಲವನ್ನು ಬೈಬಲ್‌ನ ಇಂಟರ್‌ಪ್ರಿಟೇಶನ್‌ನಲ್ಲಿ ಕಾಣಬಹುದು. ಪ್ರಾಟೆಸ್ಟೆಂಟ್ ಮತ್ತು ಕೆಥೋಲಿಕರು ಒಂದೇ ಬೈಬಲ್‌ನಲ್ಲಿನ ನಿಗೂಢ ಅರ್ಥಗಳನ್ನು ಬೇರೆ ಬೇರೆ ರೀತಿಯಲ್ಲಿ ಇಂಟರ್‌ಪ್ರಿಟ್ ಮಾಡಲು ಆರಂಭಿಸಿದರು. ಇದು ಕೂಡ ಹರ್ಮೆನೆಟಿಕ್ಸ್ ವಿಧಾನ ರೂಪುಗೊಂಡ ಒಂದು ಹಂತವಾಗಿದೆ. ಎನ್‌ಲೈಟನ್‌ಮೆಂಟ್ ನಂತರ ಹರ್ಮೆನೆಟಿಕ್ಸ್ ತನ್ನ ಹುಟ್ಟಿನೊಡನೆ ಇದ್ದ ಚರ್ಚಿನ ಸಂಬಂಧವನ್ನು ನಿಧಾನವಾಗಿ ಕಳಚಿಕೊಂಡು ಪಠ್ಯಗಳ ಅರ್ಥ ಬಿಡಿಸುವ ವಿಧಾನವಾಗಿ ರೂಪುಗೊಳ್ಳತೊಡಗಿತು. ಎನ್‌ಲೈಟನ್ ಮೂವ್‌ಮೆಂಟ್‌ನ ನಂತರ ರ್ಯಾಶನಾಲಿಟಿ ಯಜಮಾನಿಕೆ ಆರಂಭಿಸಿತು. ರ್ಯಾಶನಾಲಿಟಿಯಿಂದ ಎಲ್ಲವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಮಾನವನ ಬದುಕು ಸಂಪೂರ್ಣ ಲೆಕ್ಕಾಚಾರದ ಪ್ರಕಾರ ನಡೆಯುವುದಿಲ್ಲ. ನಾವು ಎಲ್ಲವನ್ನೂ ಆಲೋಚನೆ ಮಾಡಿ ಕ್ರಿಯೆಗೆ ಇಳಿಯುವುದಿಲ್ಲ. ಕೆಲವೊಂದು ವಿಚಾರಗಳಲ್ಲಿ ಕ್ರಿಯೆಯ ನಂತರ ಆಲೋಚನೆ ಬರುತ್ತದೆ. ಹೀಗೆ ಹರ್ಮೆನೆಟಿಕ್ಸ್ ವ್ಯಕ್ತಿಗೆ, ಭಾವನೆಗಳಿಗೆ, ಸಾಂಸ್ಕೃತಿಕ ಸತ್ವಕ್ಕೆ ಇತ್ಯಾದಿಗಳಿಗೆ ಮಹತ್ವ ಬರುವಂತೆ ಮಾಡಿದೆ.[7] ಹರ್ಮೆನೆಟಿಕ್ಸ್ ಒಳಗೆ ಎರಡು ವಿಧಗಳನ್ನು ಕಾಣಬಹುದು. ಒಂದು, ಹರ್ಮೆನೆಟಿಕ್ಸ್‌ಲ್ಲೂ ಆಬ್ಜೆಕ್ಟಿವಿಟಿ ಇರಬೇಕು ಎಂದು ವಾದಿಸುವ ಸಂಶೋಧಕರು. ಮ್ಯಾಕ್ಸ್‌ವೆಬರ್, ಕಾಂಟ್, ಫ್ರಾಯ್ಡ್ ಮುಂತಾದವರು ಈ ಸಾಲಿಗೆ ಸೇರುತ್ತಾರೆ. ಇನ್ನೊಂದು ಆಬ್ಜೆಕ್ಟಿವಿಟಿ ಸಾಧ್ಯವಿಲ್ಲ ಎನ್ನುವ ಸಂಶೋಧಕರು. ಇವರ ಪ್ರಕಾರ ಯಾವುದೇ ಸಂಶೋಧನೆಯಿಂದ ಕಂಡುಕೊಳ್ಳುವ ಸತ್ಯ ಸಾಂಸ್ಕೃತಿಕ ಸೀಮಿತತೆಯನ್ನು ಹೊಂದಿದೆ. ಅಂದರೆ ಅದು ನಿರ್ದಿಷ್ಟ ಸಂಸ್ಕೃತಿಯಲ್ಲಿ ಮಾತ್ರ ಸತ್ಯ ಆಗಲು ಸಾಧ್ಯ. ಪ್ರಪಂಚದಲ್ಲಿ ಇರುವ ಎಲ್ಲ ಸಂಸ್ಕೃತಿಗೆ ಸತ್ಯ ಆಗಲು ಸಾಧ್ಯವಿಲ್ಲ. ಮಾರ್ಟಿನ್ ಹೈಡೆಗರ್, ಹೇನ್ಸ್, ಜಾರ್ಜ್‌ಗಾಡಮರ್, ಪೀಟರ್ ವಿಂಚಿ ಮುಂತಾದವರು ಈ ಸಾಲಿಗೆ ಸೇರುತ್ತಾರೆ.

ಹೈಡೆಗರ್ ಮತ್ತು ವಿಟ್‌ಗೇನ್‌ಸ್ಟೇನ್ ಇವರ ಬರಹಗಳಿಂದ ಆಧುನಿಕ ಹರ್ಮೆನೆಟಿಕ್ಸ್ ಶಕ್ತಿ ಪಡೆಯುತ್ತದೆ. ಆಧುನಿಕ ಮತ್ತು ಸಾಂಪ್ರದಾಯಿಕ ಹರ್ಮೆನೆಟಿಕ್ಸ್ ನಡುವೆ ಒಂದು ಸಣ್ಣ ವ್ಯತ್ಯಾಸವಿದೆ. ಸಾಂಪ್ರದಾಯಿಕ ಹರ್ಮೆನೆಟಿಕ್ಸ್ ಪ್ರಜ್ಞೆ ಮತ್ತು ಅದು ರೂಪುಗೊಳ್ಳುವ ಬಗೆಗಳಿಗೆ ಮಹತ್ವ ನೀಡುವ ತಾತ್ವಿಕ ಚರ್ಚೆಗಳನ್ನು ಪರಿಗಣಿಸುತ್ತದೆ. ಭಾಷಾಶಾಸ್ತ್ರಕ್ಕೆ ಮಹತ್ವ ನೀಡುವ ತಾತ್ವಿಕ ಚರ್ಚೆಗಳನ್ನು ಪರಿಗಣಿಸಿರುವುದು ಆಧುನಿಕ ಹರ್ಮೆನೆಟಿಕ್ಸ್‌ನ ಮುಖ್ಯ ಲಕ್ಷಣ. ಸಾಮಾಜಿಕ ಸತ್ಯ ಅಥವಾ ವಾಸ್ತವಿಕತೆ ಎನ್ನುವುದು ಭಾಷೆಯ ಕಟ್ಟುವಿಕೆ ಮತ್ತು ಸಂದರ್ಭ ನಿರ್ಧರಿತ. ಆದುದರಿಂದ ಒಂದು ಯೂನಿವರ್ಸಲ್‌ಸತ್ಯ ಅಥವಾ ವಾಸ್ತವಿಕತೆಯ ಕಲ್ಪನೆಯನ್ನು ಇವರು ತಿರಸ್ಕರಿಸುತ್ತಾರೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಇವರು ಸಾಪೇಕ್ಷ ಸತ್ಯಗಳ ಅಥವಾ ರಿಲೇಟಿವ್ ಸತ್ಯಗಳ ಬಗ್ಗೆ ಮಾತಾಡುತ್ತಾರೆ. ಈ ಕುರಿತು ಗಾಡಮರ್ ನೀಡುವ ಹೇಳಿಕೆಗಳು ತುಂಬಾ ಮುಖ್ಯ. ಒಂದು, ಸಂಶೋಧಕರು (ವಿವರಿಸುವವರು) ಸಂಪೂರ್ಣವಾಗಿ ಅಧ್ಯಯನ ವಸ್ತುಗಳನ್ನು (ವಿವರಿಸಲ್ಪಡುವುದನ್ನು) ವಿವರಿಸಲು ಸಾಧ್ಯವಿಲ್ಲ. ಯಾಕೆಂದರೆ ಇವರಿಬ್ಬರ ಲೋಕಗಳು ಭಿನ್ನ. ಸಂಶೋಧಕರ (ವಿವರಿಸುವವರ) ಸಾಂಸ್ಕೃತಿಕ ಸಂದರ್ಭಗಳು ಅವರ ಆಲೋಚನಾ ವಿಧಾನ ಹಾಗೂ ಸಾಮಾಜಿಕ ವ್ಯವಹಾರಗಳನ್ನು ಗ್ರಹಿಸುವ ವಿಧಾನಗಳನ್ನು ರೂಪಿಸುತ್ತವೆ. ಈ ರೀತಿಯಲ್ಲಿ ರೂಪಿತವಾದ ಆಲೋಚನೆ ಹಾಗೂ ಗ್ರಹಿಸುವ ವಿಧಾನಗಳಿಂದ ಅವರು ಅಧ್ಯಯನಕ್ಕೆ ಒಳಗಾಗುವ ವಸ್ತು ಅಥವಾ ವ್ಯಕ್ತಿಯನ್ನು ಅರ್ಥಮಾಡಿಕೊಂಡು ವಿವರಿಸಲು ಪ್ರಯತ್ನಿಸುತ್ತಾರೆ. ಆದರೆ ಅಧ್ಯಯನಕ್ಕೆ ಒಳಗಾದ ವಿಷಯದ ಬಗೆಗಿನ ಅವರ ವಿವರಣೆ ಯಾವತ್ತೂ ಅಧ್ಯಯನ ವಸ್ತು ಅಥವಾ ವ್ಯಕ್ತಿ ಸ್ವತಃ ನೀಡಬಹುದಾದ ವಿವರಣೆಯಷ್ಟು ನಿಖರವಾಗಿ ಇರಲು ಸಾಧ್ಯವಿಲ್ಲ.[8] ಎರಡು, ಮೌಲ್ಯ ಮುಕ್ತತೆ ಅಥವಾ ಎಥಿಕಲ್ ನ್ಯೂಟ್ರಾಲಿಟಿಯ ಮೂಲಕ ತನ್ನ ಸಾಂಸ್ಕೃತಿಕ ಸಂದರ್ಭ ರೂಪಿಸಿದ ಆಲೋಚನಾ ವಿಧಾನಗಳನ್ನು ಮೀರಬಹುದೆನ್ನುವ ವೆಬರ್‌ನ ಹೇಳಿಕೆಯಲ್ಲಿ ಗಾಡಮರ್ ವಿಶ್ವಾಸ ತೋರಿಸುವುದಿಲ್ಲ. ಆದುದರಿಂದ ಅಧ್ಯಯನ ಮಾಡುವವರು ಅಧ್ಯಯನಕ್ಕೆ ಒಳಗಾದವರ ಸ್ಥಿತಿಗತಿಯನ್ನು ಅವರಿಗಿಂತ (ಅಧ್ಯಯನಕ್ಕೆ ಒಳಗಾದವರಿಗಿಂತ) ಚೆನ್ನಾಗಿ ವಿವರಿಸಲು ಸಾಧ್ಯ ಎನ್ನುವುದನ್ನು ಗಾಡಮರ್ ತಿರಸ್ಕರಿಸುತ್ತಾನೆ.

ಇತ್ತೀಚಿನ ದಿನಗಳಲ್ಲಿ ರಾಬರ್ಟ್‌ಮರ್ಟನ್ ಈ ಬಗೆಯ (ಸ್ಥಳೀಯರು-ಪರಕೀಯರು, ನಮ್ಮವರು ಹೊರಗಿನವರು ಇತ್ಯಾದಿ) ಪರಿಕಲ್ಪನೆಗಳಿಗೆ ಪುನರ್‌ಜೀವನ ನೀಡಿದ್ದಾನೆ.[9] ಆತನ ಪ್ರಕಾರ ಸಾಮಾಜಿಕ ಸಂಬಂಧಗಳು ಸಂಶೋಧಕರು ಮತ್ತು ಅಧ್ಯಯನಕ್ಕೆ ಒಳಗಾಗುವ ಸಂಗತಿಗಳ ನಡುವೆ ದೊಡ್ಡ ಗಡಿಗಳನ್ನು ನಿರ್ಮಿಸುತ್ತವೆ. ಅವುಗಳನ್ನು ದಾಟಲು ಸಂಶೋಧಕರು ಆಯಾಯ ಪರಿಧಿಯೊಳಗೆ ಬರುವ ಸಂಬಂಧಗಳನ್ನು ಬಳಸಿದರೆ ಮಾತ್ರ ಪರಿಣಾಮಕಾರಿ ಸಂಶೋಧನೆ ಸಾಧ್ಯ ಎನ್ನುವ ನಿಲುವನ್ನು ಮರ್ಟನ್ ಪುನರುಚ್ಚರಿಸುತ್ತಾನೆ. ಆಯಾಯ ಸಮುದಾಯಕ್ಕೆ, ಸಂಸ್ಕೃತಿ, ಲಿಂಗ ಇತ್ಯಾದಿಗಳಿಗೆ ಸೇರಿದವರು ತಮ್ಮ ತಮ್ಮ ಸಮುದಾಯ, ಸಂಸ್ಕೃತಿ, ಲಿಂಗ ಇತ್ಯಾದಿಗಳನ್ನು ಸಂಶೋಧನೆ ಮಾಡುವುದು ವಾಸ್ತವಕ್ಕೆ ಹತ್ತಿರವಾದ ಚಿತ್ರಣ ಪಡೆಯಲು ಅಗತ್ಯ ಎನ್ನುವುದು ಈಗ ಹೆಚ್ಚು ಕಡಿಮೆ ಎಲ್ಲರೂ ಒಪ್ಪಿದ ವಿಚಾರ.[10] ಈ ವಾದದಲ್ಲಿ ಸಾಕಷ್ಟು ಶಕ್ತಿ ಇದೆ. ಮಹಿಳೆಯರ ಸಮಸ್ಯೆಯನ್ನು ಮತ್ತೊಬ್ಬ ಮಹಿಳೆ ಅರ್ಥ ಮಾಡಿಕೊಂಡಷ್ಟು ಸುಲಭವಾಗಿ ಮತ್ತು ಚೆನ್ನಾಗಿ ಪುರುಷರು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಅದೇ ರೀತಿ ದಲಿತ ಸಮುದಾಯದ ಸಮಸ್ಯೆಗಳನ್ನು, ನೋವುಗಳನ್ನು, ಶೋಷಣೆಯನ್ನು ಅದೇ ಪರಿಸರದಲ್ಲಿ ಹುಟ್ಟಿ ಬೆಳೆದ ದಲಿತರಷ್ಟು ಪರಿಣಾಮಕಾರಿಯಾಗಿ ಹಿಡಿದಿಡಲು ದಲಿತೇತರರಿಗೆ ಸಾಧ್ಯವಾಗುವುದಿಲ್ಲ. ಇಲ್ಲಿಯವರೆಗೆ ಈ ವಾದ ವಿಶೇಷ ಸಮಸ್ಯೆ ಇಲ್ಲದೆ ಮುಂದುವರಿಯುತ್ತದೆ. ಆದರೆ ಇಲ್ಲಿಂದ ಮುಂದೆ ಅಷ್ಟೊಂದು ಸರಾಗವಾಗಿ ಮುಂದುವರಿಯುವುದಿಲ್ಲ. ಏಕೆಂದರೆ ಈ ವಾದದಲ್ಲೂ ಸಾಕಷ್ಟು ಸಮಸ್ಯೆಗಳಿವೆ. ಒಂದು, ಈ ದಲಿತ ಅಥವಾ ಮಹಿಳಾ ಪರಿಕಲ್ಪನೆಯ ರೂಪುಗೊಳ್ಳುವಿಕೆಯ ಪ್ರಶ್ನೆ. ದಲಿತ ಅಥವಾ ಮಹಿಳೆ ಚಾರಿತ್ರಿಕವಾಗಿ ರೂಪುಗೊಂಡ ಸಂದರ್ಭದಲ್ಲಿ ದಲಿತ ಅಥವಾ ಮಹಿಳೆಗೆ ಮಾತ್ರ ಆಯಾಯ ಸಮುದಾಯದ ನೋವು ನಲಿವುಗಳನ್ನು ಹಿಡಿದಿಡಲು ಸಾಧ್ಯವೇ ಎನ್ನುವ ವಾದ ಸರಿ ಇರುತ್ತದೆ. ಆದರೆ ಇಂದು ಚಾಲ್ತಿಯಲ್ಲಿರುವ ದಲಿತ ಅಥವಾ ಮಹಿಳೆ ಅಥವಾ ಇನ್ಯಾವುದೇ ಸಮುದಾಯ ಕಲ್ಪನೆ ಚಾರಿತ್ರಿಕವಾಗಿ ರೂಪುಗೊಂಡವಲ್ಲ; ಅವು ಸಂಕಥನದ ಸೃಷ್ಟಿ. ಅಂದರೆ ದಲಿತ ಎನ್ನುವ ಪರಿಕಲ್ಪನೆಯೊಳಗೆ ಬರುವವರೆಲ್ಲ ರಕ್ತ ಸಂಬಂಧ ಹೊಂದಿದವರಲ್ಲ. ಹಲವಾರು ತಳಸ್ತರದ ಜಾತಿಗಳು ಸೇರಿ ದಲಿತ ಪರಿಕಲ್ಪನೆ ರೂಪುಗೊಂಡಿದೆ. ಅಂದರೆ ಕೆಲವೊಂದು ಸಾಂಸ್ಕೃತಿಕ ಗುರುತಿನ ಆಧಾರದಲ್ಲಿ ಅವೆಲ್ಲ ಒಂದು ಎನ್ನುವ ಕಲ್ಪನೆಯನ್ನು ಕಟ್ಟಿಕೊಡಲಾಗಿದೆ. ದಲಿತರೊಳಗೆ ವರ್ಗ, ಜಾತಿ, ಮೇಲು, ಕೀಳು ಇತ್ಯಾದಿ ಪ್ರಶ್ನೆಗಳು ಜೀವಂತ ಇವೆ. ದಲಿತ ಎನ್ನುವುದು ಕೂಡ ಬಹುದೊಡ್ಡ ಪರಿಕಲ್ಪನೆ. ಅದರೊಳಗೆ ಸಾಕಷ್ಟು ಸಂಖ್ಯೆಯ ಸಣ್ಣಪುಟ್ಟ ಗುರುತುಗಳು ತಮ್ಮ ಅಸ್ತಿತ್ವಕ್ಕೆ ಹೋರಾಡುತ್ತಿವೆ. ಆದುದರಿಂದ ದಲಿತ ಸಂಶೋಧಕರೊಬ್ಬರು ಎಲ್ಲ ದಲಿತರ ನೋವು ನಲಿವುಗಳನ್ನು ಅರ್ಥ ಮಾಡಿಕೊಳ್ಳಬಲ್ಲರು ಎನ್ನುವುದು ಸರಿಯಲ್ಲ. ಈ ಎಲ್ಲ ಸಮಸ್ಯೆಗಳನ್ನು ಮುಂದಿನ ಅಧ್ಯಾಯದಲ್ಲಿ ವಿಸ್ತಾರವಾಗಿ ಚರ್ಚಿಸಲಾಗಿದೆ.

ಭಾಗ

ಆಬ್ಜೆಕ್ಟಿವಿಟಿ ಮತ್ತು ಸಬ್ಜೆಕ್ಟಿವಿಟಿ ಮೇಲಿನ ಚರ್ಚೆಗಳು ಸಂಶೋದನೆಗೆ ಒಳಗಾಗುವ ಸಂಗತಿಗಳನ್ನು ಹೇಗೆ ಪರಿಭಾವಿಸಬೇಕೆಂದು ತಿಳಿಸುತ್ತವೆ. ಸಂಶೋಧಕರ ಅಸ್ತಿತ್ವದ ಬಗ್ಗೆ ಈ ಚರ್ಚೆಗಳು ಯಾವುದೇ ಸಂದೇಹವನ್ನು ವ್ಯಕ್ತಪಡಿಸುವುದಿಲ್ಲ. ಸಂಶೋಧಕರು ಇದ್ದಾರೆ. ಆದುದರಿಂದ ಅವರು ಸಂಶೋಧನೆ ಮಾಡಿ ಹೊರಗಿನ ಪ್ರಪಂಚವನ್ನು ವಿವರಿಸುತ್ತಾರೆ ಅಥವಾ ಕಟ್ಟಿಕೊಡುತ್ತಾರೆ. ಮೇಲಿನ ಚರ್ಚೆಗಳಲ್ಲಿ ನಮಗೆಲ್ಲೂ ಸಂಶೋಧಕರ ಅಸ್ತಿತ್ವದ ಬಗ್ಗೆ ಸಂದೇಹ ಬರುವುದಿಲ್ಲ. ನಿಜವಾಗಿಯೂ ಸಂಶೋಧಕರಿಗೆ ಅವರು ವಿವರಿಸುವ ಅಥವಾ ಕಟ್ಟಿಕೊಡುವ ಪ್ರಪಂಚದೊಂದಿಗೆ ಯಾವುದೇ ಸಂಬಂಧವಿಲ್ಲದ ಅಸ್ತಿತ್ವ ಇದೆಯೇ? ಆಧುನಿಕೋತ್ತರ ಚಿಂತಕರ ಪ್ರಕಾರ ಇದು ಆಲೋಚಿಸಬೇಕಾದ ವಿಚಾರ.[11] ಕೆಲವೊಂದು ಉದಾಹರಣೆಗಳನ್ನು ಗಮನಿಸೋಣ. ಅದೊಂದು ಕಚೇರಿ. ಅಲ್ಲೊಬ್ಬ ಗುಮಾಸ್ತ ಇದ್ದ. ಆತನಿಗೆ ಹಲವಾರು ಚಟಗಳು ಮತ್ತು ಸಮಸ್ಯೆಗಳು. ಕುಡಿತ, ಸಿಗರೇಟ್, ಜೂಜು ಹೀಗೆ ಎಲ್ಲ ರೀತಿಯ ಚಟಗಳು. ಇವುಗಳಿಂದ ಕೌಟುಂಬಿಕ ಸಮಸ್ಯೆಗಳು. ಹೀಗೆ ಕಚೇರಿ ಕೆಲಸ ನಿರ್ವಹಿಸುವಲ್ಲಿ ಆತ ಯಾವತ್ತೂ ಸರಿ ಇದ್ದುದೇ ಇಲ್ಲ. ಕಚೇರಿಗೆ ಬರುವ ಮತ್ತು ಹೋಗುವ ಸಮಯದಿಂದ ಹಿಡಿದು ಕಡತ ಮ್ಯಾನೇಜ್ ಮಾಡುವವರೆಗೆ ಎಲ್ಲದರಲ್ಲೂ ಬೇಕಾಬಿಟ್ಟಿ ಕೆಲಸ. ಆದುದರಿಂದ ಆತ ದಿನನಿತ್ಯ ತನ್ನ ಮೇಲಧಿಕಾರಿಯಿಂದ ಛೀಮಾರಿಗೆ ಒಳಗಾಗುತ್ತಿದ್ದ. ಆದರೆ ತನ ಪ್ರಕಾರ ಆತನಲ್ಲಿ ಅಥವಾ ಆತನ ಕೆಲಸದಲ್ಲಿ ಏನೇನೂ ಸಮಸ್ಯೆ ಇಲ್ಲ. ಸಮಸ್ಯೆ ಇರುವುದು ಆತನ ಮೇಲಧಿಕಾರಿಯಲ್ಲಿ. ಯಾಕೆಂದರೆ ಮೇಲಧಿಕಾರಿಗೆ ಛೀಮಾರಿ ಹಾಕುವುದು ಒಂದು ಚಟ. ಆತ ಸರಿ ಇರಲಿ ಬಿಡಲಿ ಮೇಲಾಧಿಕಾರಿ ಛೀಮಾರಿ ಹಾಕಿಯೇ ಹಾಕುತ್ತಾನೆ. ಯಾಕೆಂದರೆ ಆತ ಅಧಿಕಾರಿ ಎಂದು ಸಾಧಿತವಾಗುವುದೇ ಇಂತಹ ಛೀಮಾರಿಗಳಿಂದ ಎಂದು ಗುಮಾಸ್ತನ ವಾದ. ಹೀಗೆ ಗುಮಾಸ್ತನ ಸಾಚಾತನ ನಿಂತಿರುವುದು ಮೇಲಧಿಕಾರಿಯ ಛೀಮಾರಿ ಹಾಕುವ ಅಥವಾ ಕಿರಿಕಿರಿ ಮಾಡುವ ಚಟ ಇದೆ ಎನ್ನುವ ವಿವರಣೆ ಮೇಲೆ. ಅಂದರೆ ವಿವರಿಸುವವರ ಅಥವಾ ಕಟ್ಟಿಕೊಡುವವರ ಅಸ್ತಿತ್ವ ಅವರು ವಿವರಿಸುವ ಅಥವಾ ಕಟ್ಟಿಕೊಡುವ ಪ್ರಪಂಚದ ಮೇಲೆ ನಿಂತಿದೆ ಎಂದಾಯಿತು. ಬೇರೆ ಉದಾಹರಣೆಗಳನ್ನು ನೋಡೋಣ. ಎಡ್ವರ್ಡ್ ಸೈದ್ ಪ್ರಕಾರ ಪಶ್ಚಿಮ ತನ್ನನ್ನು ರೂಪಿಸಿಕೊಂಡಿರುವುದೇ ಪೂರ್ವವನ್ನು ಒಂದು ಬಗೆಯಲ್ಲಿ ನಿರ್ವಚಿಸಿಕೊಂಡು.[12] ಪೂರ್ವಕ್ಕೆ ಚರಿತ್ರೆ ಇಲ್ಲ. ಪೂರ್ವದಲ್ಲಿ ವೈಜ್ಞಾನಿಕ ಚಿಂತನೆ ಇಲ್ಲ. ಪೂರ್ವದಲ್ಲಿ ರಾಷ್ಟ್ರೀಯತೆ ಇಲ್ಲ. ಹೀಗೆ ಪೂರ್ವದಲ್ಲಿ ಹಲವಾರು ಸಂಗತಿಗಳು ಇಲ್ಲ ಅಥವಾ ಅಪೂರ್ಣ ಸ್ಥಿತಿಯಲ್ಲಿ ಇವೆ ಎನ್ನುವ ವಿವರಣೆಗಳು ಪಶ್ಚಿಮದ ಅಸ್ತಿತ್ವವನ್ನು ರೂಪಿಸಿದೆ ಎಂದು ಸೈದ್ ವಾದಿಸುತ್ತಾನೆ. ಪೂರ್ವದಲ್ಲಿ ಇಲ್ಲ ಎನ್ನುವಾಗ ಪಶ್ಚಿಮದಲ್ಲಿ ಇದೆ ಎನ್ನುವ ವಿವರಣೆ ಅದರಲ್ಲಿ ಅಂತರ್ಗತವಾಗಿರುತ್ತದೆ.

ಈ ಎಲ್ಲ ಅಥವಾ ಇದೆ ಎನ್ನುವುದರಿಂದ ಏನಾಗುತ್ತದೆ ಎಂದು ಕೇಳಬಹುದು. ಇದನ್ನು ಅರ್ಥ ಮಾಡಿಕೊಳ್ಳಲು ಜನರ ಸಹಭಾಗಿತ್ವದೊಂದಿಗೆ ಪಂಚಾಯತ್‌ಯೋಜನೆ ಸಿದ್ಧಪಡಿಸುವಾಗ ಆದ ಒಂದು ಅನುಭವವನ್ನು ವಿವರಿಸುತ್ತೇನೆ.[13] ಗ್ರಾಮಸ್ಥರೊಂದಿಗೆ ಚರ್ಚಿಸಿ ಯೋಜೆನ ತಯಾರಿಸುವುದರ ಬಗ್ಗೆ ಪಂಚಾಯತ್ ಸದಸ್ಯರ ಮತ್ತು ಪಂಚಾಯತ್ ಪದಾಧಿಕಾರಿಗಳ ಅಭಿಪ್ರಯವನ್ನು ಕೇಳಲಾಯಿತು. ಗ್ರಾಮಸ್ಥರೊಂದಿಗೆ ಚರ್ಚಿಸಿ ಯೋಜನೆ ತಯಾರಿಸುವುದರ ಬಗ್ಗೆ ಪಂಚಾಯತ್ ಸದಸ್ಯರಿಗೆ ವಿಶೇಷ ಒಲವಿಲ್ಲ. ಪಂಚಾಯತ್‌ಗಳಲ್ಲಿ ಸಕ್ರಿಯ ಎಂದು ಗುರುತಿಸಿಕೊಂಡಿರುವ ಸದಸ್ಯರ ಪ್ರಕಾರ ಗ್ರಾಮಸ್ಥರೊಂದಿಗೆ ಚರ್ಚಿಸಿ ಯೋಜನೆ ತಯಾರಿಸಲು ಸಾಧ್ಯವಿಲ್ಲ. ಯಾಕೆಂದರೆ ಅವರಿಗೆ ಯೋಜನೆ ಬಗ್ಗೆ ಏನೇನೂ ತಿಳಿದಿಲ್ಲ. ಒಬ್ಬ ಸದಸ್ಯರ ಪ್ರಕಾರ, ‘ಗ್ರಾಮಸ್ಥರೊಂದಿಗೆ ಚರ್ಚಿಸಿ ಕಾಲ ವ್ಯರ್ಥ ಮಾಡಬಹುದೇ ಹೊರತು, ಯೋಜನೆ ಮಾಡಲು ಸಾಧ್ಯ ಇಲ್ಲ.’ ಇನ್ನೊಬ್ಬ ಸದಸ್ಯರ ಪ್ರಕಾರ, ‘ಗ್ರಾಮಸ್ಥರಿಗೆ ಯೋಜನೆ ಬಗ್ಗೆ ಹೇಗೆ ತಿಳಿಯಬೇಕು? ಅವರು ಹಳ್ಳಿ ಬಿಟ್ಟು ಓಡಾಡುವುದೇ ಇಲ್ಲ. ಊರೂರು ಸುತ್ತಾಡುವ ನಮಗೇ ನಿಮ್ಮ ಯೋಜನೆ ಅಂದರೇನು ಅಂದು ಅರ್ಥ ಆಗುವುದಿಲ್ಲ. ಇನ್ನು ಅವರಿಗೆಲ್ಲಿ ಅರ್ಥವಾಗುತ್ತದೆ.’ ಹೀಗೆ ಸದಸ್ಯರ ಪ್ರಕಾರ ಗ್ರಾಮಸ್ಥರೊಂದಿಗೆ ಯೋಜನೆ ಬಗ್ಗೆ ಚರ್ಚಿಸುವುದೇ ವ್ಯರ್ಥ. ಯಾಕೆಂದರೆ ಗ್ರಾಮಸ್ಥರಿಗೆ ಪಂಚಾಯತ್ ವ್ಯವಹಾರ ಅರ್ಥ ಆಗುವುದಿಲ್ಲ. ಪಂಚಾಯತ್‌ವ್ಯವಹಾರವೇ ಅರ್ಥವಾಗದಿರುವಾಗ ಯೋಜನೆ ಮಾಡುವುದು ಹೇಗೆ? ಇದು ಬಹುತೇಕ ಸದಸ್ಯರ ಅಭಿಪ್ರಾಯ. ಗ್ರಾಮಸ್ಥರಿಗೆ ಏನೂ ತಿಳಿದಿಲ್ಲ ಎಂದು ಕೇವಲ ಓದಿದವರು ಅಥವಾ ಪೇಟೆ ಜನರು ಮಾತ್ರ ತಿಳಿದುಕೊಂಡಿದ್ದಾರೆ ಎಂದು ತಿಳಿದುಕೊಂಡಿದ್ದೆ. ಇಲ್ಲಿ ನೋಡಿದರೆ ಗ್ರಾಮ ಪಂಚಾಯತ್‌ ಸದಸ್ಯರು ಕೂಡ ತಮ್ಮನ್ನು ಚುನಾಯಿಸಿದ ಜನರ ಬಗ್ಗೆ ಇದೇ ನಿಲುವನ್ನು ವ್ಯಕ್ತಪಡಿಸುತ್ತಿದ್ದಾರೆ. ಅಂದರೆ ಇದೊಂದು ವಿಷ ವರ್ತುಲ. ಶ್ರೀಮಂತ ದೇಶಗಳು ಬಡ ದೇಶಗಳ ಜನರಿಗೇನೂ ತಿಳಿದಿಲ್ಲ ಎಂದು ತಿಳಿದುಕೊಂಡಿದ್ದಾರೆ. ಬಡದೇಶದಲ್ಲಿನ ಪೇಟೆ ಜನ ತಮ್ಮದೇ ಹಳ್ಳಿ ಜನಕ್ಕೆ ಏನೇನೂ ಅರ್ಥವಾಗುವುದಿಲ್ಲ ಎಂದು ತಿಳಿದುಕೊಂಡಿದ್ದಾರೆ. ತಿಳಿದಿದೆ ಮತ್ತು ತಿಳಿದಿಲ್ಲ ಎನ್ನುವ ಎರಡು ಪದಗಳು ಸಾಮೂಹಿಕ ವರ್ಗ ಸಂಬಂಧಗಳನ್ನು ತುಂಬಾ ಚೆನ್ನಾಗಿ ವಿವರಿಸುತ್ತವೆ. ಮೇಲಿನ ಎಲ್ಲ ಹಂತಗಳಲ್ಲೂ ತಿಳಿದಿದೆ ಎನ್ನುವ ವರ್ಗಕ್ಕೆ ಸೇರಿದವರು ಯಜಮಾನಿಕೆ ವರ್ಗಕ್ಕೆ ಸೇರಿದರೆ ತಿಳಿದಿಲ್ಲದವರು ಕೆಳಸ್ತರಕ್ಕೆ ಸೇರುತ್ತಾರೆ. ಅಷ್ಟು ಮಾತ್ರವಲ್ಲ ತಿಳಿದವರಿಗ ಎಉಳಿದವರ ಪರ ನಿರ್ಧಾರ ತೆಗೆದುಕೊಳ್ಳುವ ಹಕ್ಕು ಕೂಡ ಬರುತ್ತದೆ. ಅಂದರೆ ಪೂರ್ವದಲ್ಲಿ ಚರಿತ್ರೆ ಇಲ್ಲ ಅಥವಾ ವಿಜ್ಞಾನ ಇಲ್ಲ ಎನ್ನುವ ಮೂಲಕ ಪಶ್ಚಿಮ ಅವುಗಳು ತನ್ನಲ್ಲಿ ಇವೇ ಎಂದು ಸಾಧಿಸುವುದು ಮಾತ್ರವಲ್ಲ; ಪೂರ್ವಕ್ಕೆ ಅವುಗಳನ್ನು ತಾನು ಕೊಡಬೇಕು ಅಥವಾ ಪೂರ್ವದಲ್ಲಿ ಅವುಗಳನ್ನು ಬೆಳೆಸುವುದು ತನ್ನ ಕರ್ತವ್ಯ ಎಂದು ತಿಳಿಯುತ್ತದೆ.

ಇವೆಲ್ಲ ಸಾಮಾಜಿಕ ಅಥವಾ ರಾಜಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಸಂಗತಿಗಳು. ಇಲ್ಲಿ ಕಲ್ಪಿತ ಸತ್ಯಗಳು ಸಾಮಾಜಿಕ ಅಥವಾ ರಾಜಕೀಯ ವಾಸ್ತವಗಳಾಗಿ ಕೆಲಸ ಮಾಡಬಹುದು. ಆದರೆ ಈ ವಾದ ಪ್ರಕೃತಿ ನಿಯಮಗಳಿಗೆ ಅನ್ವಯವಾಗುವುದಿಲ್ಲ. ಏಕೆಂದರೆ ಪ್ರಕೃತಿ ನಾವು ಇಷ್ಟಪಡಲಿ ಬಿಡಲಿ ಅಥವಾ ಯಾವುದೇ ಬಗೆಯಲ್ಲಿ ವಿವರಿಸಲು ಅದು ಅದರ ನಿಯಮಕ್ಕೆ ಅನುಸಾರ ನಡೆಯುತ್ತಿದೆ.[14] ಉದಾಹರಣೆಗೆ ಸೂರ್ಯ ಪೂರ್ವದಲ್ಲಿ ಉದಯವಾಗುವುದು ಅಥವಾ ಮೇಲೆ ಎಸೆದ ವಸ್ತುವೊಂದು ಕೆಳಕ್ಕೆ ಬೀಳುವುದು ಇತ್ಯಾದಿಗಳು ನಮ್ಮ ಅಥವಾ ಸಂಶೋಧಕರ ವಿವರಣೆಯಿಂದ ತನ್ನ ಅಸ್ತಿತ್ವವನ್ನು ಪಡೆದಿಲ್ಲ. ಅದೇ ರೀತಿಯಲ್ಲಿ ಸಂಶೋಧಕರು ಕೂಡ ತಮ್ಮ ಅಸ್ತಿತ್ವವನ್ನು ತಾವು ವಿವರಿಸುವ ವಸ್ತುವಿನಿಂದ ಪಡೆಯಬೇಕಾಗಿಲ್ಲ. ಯಾಕೆಂದರೆ ಇವರಿಬ್ಬರ ಅಸ್ತಿತ್ವ ಪರಸ್ಪರ ಸ್ವತಂತ್ರ ಎನ್ನುವ ಭಾವನೆ ಬರಬಹುದು. ಇದು ನಿಜವೇ? ಪ್ರಕೃತಿಯ ಬಗೆಗೆ ಪ್ರತಿ ಸಂಸ್ಕೃತಿಯಲ್ಲೂ ಅದರದೇ ಆದ ವಿವರಣೆ ಇದೆ. ನಮಗೆಲ್ಲ ತಿಳಿದಿರುವಂತೆ ಭೂಮಿ ಸುತ್ತ ಸೂರ್ಯ ಸುತ್ತುತ್ತಾನೆ ಎನ್ನುವ ಒಂದು ಸತ್ಯ ಹಲವಾರು ಸತಮಾನಗಳ ಕಾಲ ಮಾನವನ ತಿಳುವಳಿಕೆಯ ಭಾಗ ಆಗಿತ್ತು. ಆ ತಿಳುವಳಿಕೆ ಇರುವ ಸಂದರ್ಭದಲ್ಲಿ ಮಾನವ ತನ್ನ ಬದುಕನ್ನು ಆ  ಸತ್ಯದ ಅನುಸಾರ ರೂಪಿಸಿಕೊಂಡಿರುತ್ತಾನೆ. ಇಂದು ಕೂಡ ಹಲವಾರು ಸಂಸ್ಕೃತಿಗಳಲ್ಲಿ ಸೂರ್ಯ, ಚಂದ್ರ, ಭೂಮಿ, ಮಳೆ ಇತ್ಯಾದಿಗಳ ಬಗ್ಗೆ ಅವರದ್ದೇ ಆದ ವಿವರಣೆಗಳು ಇವೆ ಮತ್ತು ಆ ವಿವರಣೆಗಳು ಅಥವಾ ಅರ್ಥ ಮಾಡಿಕೊಂಡಿರುವುದು ಅವರ ದಿನನಿತ್ಯದ ಬದುಕನ್ನು ಗಾಢವಾಗಿ ಪ್ರಭಾವಿಸುತ್ತಿರುತ್ತವೆ. ಆದುದರಿಂದ ಪ್ರಕೃತಿ ಮತ್ತು ಅದರ ಬಗೆಗಿನ ತಿಳುವಳಿಕೆ ಪರಸ್ಪರ ಸ್ವತಂತ್ರ ಎನ್ನುವುದು ಸರಿಯಲ್ಲ. ಆದರೆ ಈ ವಾದಗಳನ್ನು ಅಷ್ಟು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ ಎನ್ನುವ ವಾದವೂ ಇದೆ. ಯಕೆಂದರೆ ಈ ವಾದಗಳನ್ನು ಮಾಡುವುದು ವಿವಿಧ ಸಂಸ್ಕೃತಿಗಳ ಪ್ರಕೃತಿಯ ಬಗೆಗಿನ ತಿಳುವಳಿಕೆಯ ಆಧಾರದಲ್ಲಿ. ಆದರೆ ಆಧುನಿಕ ವಿಜ್ಞಾನ ಮುಂಚೂಣಿಗೆ ಬಂದ ನಂತರ ಈ ವಾದಗಳೆಲ್ಲ ಕೇವಲ ಕಲ್ಪಿತ ಕತೆಗಳಾಗಿವೆ. ಪ್ರಕೃತಿ ನಿಯಮಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಮತ್ತು ಅವುಗಳನ್ನು ನಮ್ಮ ಅನುಕೂಲಕ್ಕೆ ಬಳಸಿಕೊಳ್ಳಲು ಆಧುನಿಕ ವಿಜ್ಞಾನದ ಜ್ಞಾನವೇ ಸರಿ ಎಂದಾಗಿದೆ. ಆದರೆ ಇಲ್ಲೂ ಸಾಕಷ್ಟು ಸಮಸ್ಯೆ ಇದೆ. ಈ ವಿಜ್ಞಾನದ ಚಿಂತಕರು ಎಲ್ಲೂ ಕೂಡ ನಾವು ಶಾಶ್ವತ ಸತ್ಯದ ಬಗ್ಗೆ ಮಾತಾಡುತ್ತೇವೆ ಎಂದು ಘೋಷಿಸುವುದಿಲ್ಲ.[15] ಒಂದು ನಿರ್ದಿಷ್ಟ ವಿಧಾನದಿಂದ ಕಂಡುಕೊಂಡ ಸತ್ಯ (ಅಥವಾ ಸತ್ಯ ಎಂದು ತಿಳಿಯಲಾಗುವ ಸಂಗತಿ) ಅದು ಸುಳ್ಳೆಂದು ಸಾಬೀತು ಆಗುವವರೆಗೆ ಮಾತ್ರ ಸತ್ಯವಾಗಿರುತ್ತದೆ. ಅಂದರೆ ಪ್ರಕೃತಿ ನಿಯಮವನ್ನು ಅರ್ಥ ಮಡಿಕೊಳ್ಳುವ ವಿಜ್ಞಾನಿಗಳು ಕೂಡ ಹೇಳುತ್ತಿರುವುದು ಒಂದು ತಾತ್ಕಾಲಿಕ ಸತ್ಯವನ್ನು. ಆ ತಾತ್ಕಾಲಿಕ ಸತ್ಯಕ್ಕೆ ವಿರುದ್ಧವಾದ ಸಂಗತಿ ದಾಖಲಾದ ಕೂಡಲೇ ಅದು ತನ್ನ ಹಿಂದಿನ ಸತ್ಯದ ಸ್ಥಾನವನ್ನು ಕಳೆದುಕೊಳ್ಳುತ್ತದೆ ಎಂದು ವಿಜ್ಞಾನಿಗಳು ವಾದಿಸುತ್ತಾರೆ. ಆದರೆ ವಾಸ್ತವವಗಿ ಒಮ್ಮೆ ಸತ್ಯವೆಂದು ಒಪ್ಪಿತವಾದ ಸಂಗತಿ ಅಥವಾ ಥಿಯರಿ ಸತ್ಯವಲ್ಲವೆಂದು ಸಾಬೀತು ಆಗಬೇಕಾದರೆ ಒಂದು ಅಥವಾ ಕೆಲವು ಪುರಾವೆಗಳು ಸಾಕಾಗುವುದಿಲ್ಲ. ಈಗಾಗಲೆ ಒಪ್ಪಿತ ಒಂದು ಸತ್ಯ ಅಥವಾ ಥಿಯರಿ ಸತ್ಯ ಅಲ್ಲವೆಂದು ಸಾಬೀತಾಗಬೇಕಾದರೆ ಬೆಟ್ಟದಷ್ಟು ಗಾತ್ರದ ಪುರಾವೆಗಳು ಬೇಕು. ಅಂದರೆ ಅಷ್ಟು ಪ್ರಮಾಣದ ಪುರಾವೆಗಳು ಸಂಗ್ರಹವಾಗುವವರೆಗೆ ಒಂದು ಸುಳ್ಳು ಅಥವಾ ಕಟ್ಟುಕತೆ ವಿಜ್ಞಾನದಲ್ಲೂ ಸತ್ಯವೆಂದು ಚಾಲ್ತಿಯಲ್ಲಿರುತ್ತದೆ. ಅಂದರೆ ಹೆಚ್ಚು ಕಡಿಮೆ ಸಾಮಾಜಿಕ ಅಥವಾ ರಾಜಕೀಯ ಪರಿಸರದಲ್ಲಿ ಕಂಡುಬರುವ ಕಲ್ಪಿತ ಸತ್ಯಗಳು ಇಲ್ಲೂ ಕೂಡ ಕೆಲಸ ಮಾಡುತ್ತವೆ ಎಂದಾಯಿತು. ಪ್ರಕೃತಿಯನ್ನು ಯಾವುದೋ ಒಂದು ಬಗೆಯಲ್ಲಿ ನಿರ್ವಚಿಸಿಕೊಳ್ಳುವ ಮುಲಕ ಮನುಷ್ಯ ತನ್ನ ಅಸ್ತಿತ್ವವನ್ನು ನಿರ್ವಚಿಸಿಕೊಳ್ಳುತ್ತಿದ್ದಾರೆ. ಪ್ರಕೃತಿಯ ವ್ಯವಹಾರಕ್ಕೆ ನಿಯಮವಿದೆ, ಅದನ್ನು ವೈಜ್ಞಾನಿಕ ವಿಧಾನದಲ್ಲಿ ಕಂಡುಕೊಳ್ಳಬಹುದು, ಆ ರೀತಿಯಲ್ಲಿ ಕಂಡುಕೊಂಡ ಜ್ಞಾನವನ್ನು ತಮ್ಮ ಏಳಿಗೆಗಾಗಿ ಬಳಸಬಹುದು ಇತ್ಯಾದಿ ವಿಚಾರಗಳನ್ನು ಪ್ರಕೃತಿಗೆ ಸಂಬಂಧಿಸಿದಂತೆ ನಾವು (ಆಧುನಿಕ ವಿಜ್ಞಾನದ ವಿವರಣೆಗಳನ್ನು ನಂಬುವ ನಾವು) ರೂಢಿಸಿಕೊಂಡಿದ್ದೇವೆ. ಮೇಲಿನ ಚರ್ಚೆಯಲ್ಲಿ ಸಮಾಜ ಅಥವಾ ಪ್ರಕೃತಿ ಬಗ್ಗೆ ಜ್ಞಾನ ರೂಪುಗೊಳ್ಳುವ ಕ್ರಮವನ್ನು ವಿವರಿಸಲಾಗಿದೆ. ಇದನ್ನು ಸಂಶೋಧನೆಯ ಪರಿಭಾಷೆಯಲ್ಲಿ ಸಂಕಥನವೆಂದು ನಿರ್ವಚಿಸಿಕೊಳ್ಳಲಾಗಿದೆ. ಸಂಶೋಧಕರ ಕೆಲಸ ಸಂಕಥನದಿಂದ ಜ್ಞಾನ ರೂಪುಗೊಳ್ಳುವ ಕ್ರಮವನ್ನು ಅರ್ಥ ಮಾಡಿಕೊಳ್ಳುವುದು ಅಥವಾ ವಿವರಿಸುವುದು.

ಸಂಶೋಧಕರು ಮತ್ತು ಸಂಶೋಧನೆಗೆ ಒಳಪಡುವ ಸಂಗತಿಗಳನ್ನು ಸಂಶೋಧನಾ ವಿಧಾನಗಳ ತಾತ್ವಿಕ ನೆಲೆಗಳು ಕಲ್ಪಿಸಿಕೊಂಡ ಬಗೆಯನ್ನು ಮೇಲಿನ ಪುಟಗಳಲ್ಲಿ ಚರ್ಚಿಸಲಾಗಿದೆ. ಸಮಾಜವಿಜ್ಞಾನದ ಆರಂಭದ ದಿನಗಳಲ್ಲಿ ವಿಜ್ಞಾನದ ವಿಧಾನಗಳ ಅತಿಯಾದ ಪ್ರಭಾವದಿಂದ ಸಾಮಾಜಿಕ ಅಂಸಗಳು ಮತ್ತು ಪ್ರಾಕೃತಿಕ ಅಂಶಗಳ ನಡುವೆ ವಿಶೇಷ ವ್ಯತ್ಯಾಸ ಮಾಡಲಾಗುತ್ತಿರಲಿಲ್ಲ. ಆದರೆ ಬರಬರುತ್ತಾ ಸಾಮಾಜಿಕ ಮತ್ತು ಪ್ರಾಕೃತಿಕ ಅಂಶಗಳ ನಡುವೆ ವ್ಯತ್ಯಾಸ ಇದೆ ಮತ್ತು ಅವುಗಳನ್ನು ಒಂದೇ ತಕ್ಕಡಿಯಲ್ಲಿಟ್ಟು ತೂಗುವುದು ಸರಿಯಲ್ಲ ಎನ್ನುವ ನಿಲುವು ಬಲಗೊಂಡಿತು. ಆದುದರಿಂದ ಸಮಾಜ ಸಂಸೋಧನೆಯಲ್ಲಿ ವಿಜ್ಞಾನದ ವಿಧಾನವನ್ನು ಯಥಾರೂಪದಲ್ಲಿ ಬಳಸುವುದು ಸರಿಯಲ್ಲ ಎನ್ನುವ ನಿಲುವು ಮುಂಚೂಣಿಗೆ ಬಂತು. ಪ್ರತ್ಯೇಕತೆಯ ಬಗ್ಗೆ ಮಾತಾಡುವಾಗ ಕೆಲವರು ಮಾನವಿಕ ಮತ್ತು ವಿಜ್ಞಾನದ ಮಿಶ್ರಣ ಪರ ಮಾತಾಡಿದರೆ ಇನ್ನು ಕೆಲವರು ಸಂಪೂರ್ಣವಾಗಿ ಮಾನವಿಕದ ಗೃಹೀತಗಳಿಂದ ಸಮಾಜವನ್ನು ಕಲ್ಪಿಸಿಕೊಳ್ಳುವುದರತ್ತ ಹೆಚ್ಚಿನ ಒಲವು ತೋರಿಸಿದರು. ಮಾನವಿಕದ ಗೃಹೀತಗಳ ಪ್ರಭಾವ ಹೆಚ್ಚಾದಂತೆ ಸಾಮಾಜಿಕ ವಾಸ್ತವಿಕತೆಯ ಅಸ್ತಿತ್ವದ ಬಗ್ಗೆ ಸಂದೇಹಗಳು ಬಲಗೊಂಡವು. ಸಾಮಾಜಿಕ ವಾಸ್ತವಿಕತೆ ಎನ್ನುವುದೊಂದು ಅರ್ಥಪೂರ್ಣ ಸಾಮಾಜಿಕ ಕಟ್ಟುವಿಕೆ, ನಮ್ಮ ಆಲೋಚನೆಗಳಿಂದ ಪ್ರತ್ಯೇಕವಾದ ಪ್ರಪಂಚವೊಂದಿಲ್ಲ, ನಾವು ಇದೆ ಎಂದು ಗ್ರಹಿಸುತ್ತೇವೆ, ಆದುದರಿಂದ ಇದೆ ಇತ್ಯಾದಿ ಗ್ರಹಿಕೆಗಳು ಬಲಗೊಂಡವು. ಹೀಗೆ ಸಮಾಜ ಸಂಶೋಧನೆಯಲ್ಲಿ ಸಾಮಾಜಿಕ ಅಂಶಗಳ ಅಸ್ತಿತ್ವ ಸ್ವತಂತ್ರ ಮತ್ತು ಖಚಿತವಾದ ನೆಲೆಗಳಿಂದ ಕಲ್ಪಿತ ಅಸ್ತಿತ್ವದ ಕಡೆಗೆ ಚಲಿಸಿದೆ. ಈ ಎಲ್ಲ ಚರ್ಚೆಗಳ ಸಂದರ್ಭಗಳಲ್ಲಿ ಸಂಶೋಧಕರ ಸ್ವತಂತ್ರ ಅಸ್ತಿತ್ವ ಮತ್ತು ಸಾಮಾಜಿಕ ವಾಸ್ತವಗಳನ್ನು ಅರ್ಥ ಮಾಡಿಕೊಳ್ಳುವ (ವಿವರಿಸುವ) ಪ್ರಕ್ರಿಯೆಯ ಬಗ್ಗೆ ವಿಶೇಷ ತಕರಾರು ಇರಲಿಲ್ಲ. ಆದರೆ ನಂತರದ ದಿನಗಳಲ್ಲಿ (ಆಧುನಿಕೋತ್ತರ ಸಂದರ್ಭದಲ್ಲಿ) ಸಂಶೋಧಕರ ಸ್ವತಂತ್ರ ಅಸ್ತಿತ್ವದ ಬಗ್ಗೆ ಮತ್ತು ಅರ್ಥ ಮಾಡಿಕೊಳ್ಳುವ (ವಿವರಿಸುವ) ಪ್ರಕ್ರಿಯೆಯ ಬಗ್ಗೆ ಹೊಸ ವಿಚಾರಗಳು ಬೆಳಕಿಗೆ ಬಂದವು. ಅವುಗಳ ಪ್ರಕಾರ ಸಂಶೋಧಕರು ಹೊರಗಿನ ಸಮಾಜವನ್ನು ವಿವರಿಸುವ (ಅರ್ಥ ಮಾಡಿಕೊಳ್ಳುವ) ಮೂಲಕ ತಮ್ಮ ಅಸ್ತಿತ್ವವನ್ನು (ಗುರುತನ್ನು) ಕೂಡ ನಿರ್ವಚಿಸಿಕೊಳ್ಳುತ್ತಿದ್ದಾರೆ. ಅಂದರೆ ಸಂಶೋಧನೆಗೆ ಒಳಪಡುವ ಸಾಮಾಜಿಕ ಸಂಗತಿಗಳು ಮತ್ತು ಸಂಶೋಧಕರು ಪರಸ್ಪರ ಸಂಬಂಧಿಸಿರುವ ಸಂಗತಿಗಳು.

* * *

[1] ವಿಜ್ಞಾನದ ಸಂಶೋಧನೆಯಲ್ಲಿ ಅಧ್ಯಯನಕ್ಕೆ ಒಳಗಾಗುವ ಸಂಗತಿಗಳು (ಪ್ರಾಕೃತಿಕ ಸಂಗತಿಗಳು) ಅಧ್ಯಯನಕಾರರಿಂದ ಸ್ವತಂತ್ರ ಇರುತ್ತವೆ. ಅಷ್ಟು ಮಾತ್ರವಲ್ಲ, ಅವುಗಳ ಚಲನವಲನಗಳನ್ನು ನಿಯಂತ್ರಿಸುವ ನಿಯಮಗಳು ಕೂಡ ಅಧ್ಯಯನಕಾರರಿಂದ ಸ್ವತಂತ್ರವಾಗಿರುತ್ತವೆ. ಅಧ್ಯಯನಕ್ಕೆ ಒಳಗಾಗುವ ಸಂಗತಿಗಳನ್ನು ನಿಯಂತ್ರಿಸುವ ನಿಯಮಗಳನ್ನು ಸಂಶೋಧಕರು ಬದಲಾಯಿಸಲು ಸಾಧ್ಯವಿಲ್ಲ; ಹೆಚ್ಚೆಂದರೆ ಈ ನಿಯಮಗಳು ಕಾರ್ಯ ನಿರ್ವಹಿಸುವ ಪರಿಸರವನ್ನು ಪ್ರಭಾವಿಸುವ ಮೂಲಕ ಪ್ರಕೃತಿಯ ಮೇಲೆ ಸಣ್ಣ ಮಟ್ಟಿನ ಹತೋಟಿ ಸಾಧಿಸಬಹುದು.

[2] ನ್ಯಾಚುರಲ್ ಫ್ಯಾಕ್ಸ್‌ಗೆ ಸಮನಾಗಿ ಸೋಶಿಯಲ್ ಫ್ಯಾಕ್ಸ್ ಎನ್ನುವ ಪದವನ್ನು ಎಮಿಲಿ ಡರ್ಕ್‌‌ಹ್ಯಾಮ್‌ಬಳಸಿದ್ದಾನೆ. ಆತನ ಪುಸ್ತಕ, ದಿ ರೂಲ್ಸ್ಆಫ್ ಸೋಶಿಯಲಾಜಿಕಲ್ ಮೆಥೆಡ್ಸ್ (ನ್ಯೂಯಾರ್ಕ್‌: ದಿ ಪ್ರಿ ಪ್ರೇಸ್‌, ೧೯೫೪) ಸಮಾಜ ಸಂಶೋಧನೆಯ ವಿಧಾನದ ಚರ್ಚೆ ಮೇಲೆ ಗಣನೀಯ ಪ್ರಭಾವ ಬೀರಿದೆ.

[3] ಇದನ್ನು ಸಂಶೋಧನಾ ಪರಿಭಾಷೆಯಲ್ಲಿ ಸಬ್ಜೆಕ್ಟ್‌ ಆಬ್ಜೆಕ್ಟ್ ಡೈಕಾಟಮಿ ಎನ್ನುತ್ತಾರೆ. ಅಂದರೆ ಸಂಶೋಧಕರು ಮತ್ತು ಸಂಶೋಧನೆಗೆ ಒಳಗಾಗುವ ಸಂಗತಿ ನಡುವೆ ಅಂತರ ಇರಬೇಕೆನ್ನುವ ನಿಲುವು. ಸಮಾಜ ಸಂಶೋಧನೆಯಲ್ಲಿ ಈ ನಿಲುವನ್ನು (ಸಂಶೋಧಕರು ಮತ್ತು ಸಂಶೋಧನೆಗೆ ಒಳಗಾಗುವ ಸಂಗತಿ ನಡುವಿನ ಅಂತರ ಇರಬೇಕೆನ್ನುವ ನಿಲುವನ್ನು) ಪ್ರಜ್ಞಾಪೂರ್ವಕವಾಗಿ ಬೆಳೆಸಿಕೊಳ್ಳಬೇಕಾಗಿದೆ. ಈ ಅಂತರವನ್ನು ಸಂಶೋಧಕರು ವ್ಯಾಲ್ಯೂ ನ್ಯೂಟ್ರಾಲಿಟಿ ಬೆಳೆಸಿಕೊಳ್ಳುವ ಮೂಲಕ ಸಾಧಿಸಬಹುದೆಂದು ಮ್ಯಾಕ್ಸ್‌ವೆಬರ್ ಅಭಿಪ್ರಾಯಪಡುತ್ತಾನೆ.

[4] ವಿಲಿಯಂ ಡಿಲ್ತಿ, ಸೆಲೆಕ್ಟೆಡ್ ರೈಟಿಂಗ್ಸ್, ಟ್ರಾನ್ಸ್‌ಲೇಟೆಡ್ ಆಂಡ್ ಎಡಿಟೆಡ್ ಬೈ ಹೆಚ್.ಪಿ.ರಿಕ್‌ಮೆನ್, ಕೇಂಬ್ರಿಡ್ಜ್: ಕೇಂಬ್ರಿಡ್ಜ್ ಯೂನಿವರ್ಸಿಟಿ ಪ್ರೆಸ್, ೧೯೭೬.

[5] ಇದಕ್ಕೆ ಉತ್ತಮ ಉದಾಹರಣೆಯೆಂದರೆ ಎಥಿಕಲಿ ನ್ಯೂಟ್ರಲ್ ಅಥವಾ ಮೌಲ್ಯಮುಕ್ತ ಸ್ವತಂತ್ರ ಸಮಾಜ ವಿಜ್ಞಾನದ ಬಗೆಗಿನ ವೆಬರ್‌ನ ನಿಲುವುಗಳು. ವಿಜ್ಞಾನ ವಿವರಿಸುವ ಮತ್ತು ಹರ್ಮನೆಟಿಕ್ಸ್‌ನ ಅರ್ಥ ಮಾಡಿಕೊಳ್ಳುವ ಪ್ರಯತ್ನಗಳನ್ನು ವಿರುದ್ಧ ನೆಲೆಯಲ್ಲಿ ನೋಡುವ ಬದಲು ಎರಡರ ಪ್ರಯೋಜನಗಳನ್ನು ಬಳಸಿಕೊಳ್ಳುವುದರ  ಪರ ವೆಬರ್ ವಾದಿಸುತ್ತಾನೆ. ಸಮಾಜ ಸಂಶೋಧನೆ ಮೇಲಿನ ವೆಬರ್‌ನ ನಿಲುವುಗಳನ್ನು ಮಾರ್ಟಿನ್ ಹೊಲಿಸ್ ಅವರ, ದಿ ಫಿಲಾಸಪಿ ಆಫ್ ಸೊಶಿಯಲ್ ಸೈನ್ಸ್(ಪುಟ.೧೮೩-೨೦೧) ಪುಸ್ತಕದಲ್ಲಿ ನೋಡಬಹುದು.

[6] ಹರ್ಮೆನೆಟಿಕ್ಸ್‌ಗೆ ಸಂಬಂಧಿಸಿದ ವಿವರಗಳನ್ನು ಪಾರ್ಥನಾಥ್ ಮುಖರ್ಜಿಯವರ, ಮೆಥಡಾಲಜಿ ಇನ್ ಸೋಶಿಯಲ್ ರಿಸರ್ಚ್ (ನ್ಯೂಡೆಲ್ಲಿ: ಸೇಜ್ ಪಬ್ಲಿಕೇಶನ್ಸ್‌, ೨೦೦೦) ಪುಸ್ತಕದಿಂದ ಪಡೆಯಲಾಗಿದೆ.

[7] ಗುರುಪ್ರೀತ್ ಮಹಾಜನ್, ಎಕ್ಸ್ಪ್ಲನೇಶನ್ ಆಂಡ್ ಅಂಡರ್ಸ್ಟ್ಯಾಂಡಿಂಗ್ ಇನ್ ದಿ ಹ್ಯೂಮನ್ ಸೈನ್ಸಸ್, ನ್ಯೂಡೆಲ್ಲಿ: ಆಕ್ಸ್‌ಫರ್ಡ್‌ಯೂನಿವರ್ಸಿಟಿ ಪ್ರೆಸ್‌, ೧೯೯೭.

[8] ಜರಾರ್ಡ್‌ಡಿಲೆಂತಿ, ಸೋಶಿಯಲ್ಸೈನ್ಸ್, ಬಿಯಾಂಡ್ ಕನ್ಸ್ಟ್ರಕ್ಟಿವಿಸಂ ಅಂಡ್ರಿಯಲಿಸಂ, ಬಕಿಂಗ್ ಹ್ಯಾಮ್: ಓಪನ್ ಯೂನಿವರ್ಸಿಟಿ ಪ್ರೆಸ್‌, ೧೯೯೭

[9] ಇನ್‌ಸೈಡರ್ ಆಂಡ್ ಔಟ್‌ಸೈಡರ್ ಎನ್ನುವ ಪರಿಭಾಷೆಯನ್ನು ರಾಬರ್ಟ್‌ಮರ್ಟನ್ ಬಳಕೆಗೆ ತಂದವನು (”ಇನ್‌ಸೈಡರ್ ಆಂಡ್ ಔಟ್‌ಸೈಡರ್-ಎ ಚಾಪ್ಪರ್ ಇನ್‌ದಿ ಸೋಶಿಯಲಾಜಿ ಆಫ್ ನಾಲೆಡ್ಜ್‌”, ಅಮೆರಿಕನ್ ಜರ್ನಲ್ ಆಫ್ ಸೋಶಿಯಾಲಜಿ, ವಾಲ್ಯೂಮ್‌೭೮, ನಂ.೧, ಜುಲೈ ೧೯೭೨, ಪು.೯-೪೭). ಅಧ್ಯಯನಕ್ಕೆ ಒಳಗಾಗುವ ಸಂಗತಿಗಳನ್ನು ಹತ್ತಿರದಿಂದ ಬಲ್ಲವರು ಮಾತ್ರ ಸರಿಯಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯ ಎನ್ನುವ ನಿಲುವನ್ನು ಮನದಟ್ಟು ಮಾಡಲು ಮರ್ಟನ್ ಈ ಪರಿಭಾಷೆಯನ್ನು ಬಳಸಿದ್ದಾನೆ.

[10] ಈ ವಾದ ಚಾಲ್ತಿಗೆ ಬರಲು ಹಲವಾರು ಕಾರಣಗಳಿವೆ. ಅವುಗಳಲ್ಲಿ ಪ್ರಮುಖವಾದುದು ಮೇಲೆ ವಿವರಿಸಿದ ವಿಜ್ಞಾನದ ವಿಧಾನದ ದೋಷಗಳು. ಅವುಗಳ ಜತೆಗೆ ಪಶ್ಚಿಮದ ಯಜಮಾನಿಕೆ ಪ್ರವೃತ್ತಿ. ತನ್ನ ಚರಿತ್ರೆ, ತನ್ನ ಸಂಸ್ಕೃತಿ ಮಾತ್ರ ಉತ್ಕೃಷ್ಟ, ಇತರ ಸಂಸ್ಕೃತಿಗಳು ತಮ್ಮ ಮಾದರಿಯನ್ನು ಅನುಸರಿಸುವ ಮೂಲಕ ಮೋಕ್ಷ ಸಾಧ್ಯ ಎನ್ನುವ ಪಶ್ಚಿಮದ ನಿಲುವು ಕೂಡ (ಆಯಾ ಸಂಸ್ಕೃತಿಯನ್ನು ಆ ಸಂಸ್ಕೃತಿಯಲ್ಲಿ ಹುಟ್ಟಿ ಬೆಳೆದವರು ಮಾತ್ರ ಅರ್ಥಮಾಡಿಕೊಳ್ಳಲು ಸಾಧ್ಯ ಎನ್ನುವ ನಿಲುವು) ಬಲಗೊಳ್ಳಲು ಕಾರಣವಾಗಿದೆ. ಆಧುನಿಕೋತ್ತರ ಚಿಂತನೆಗಳ ಯಜಮಾನಿಕೆಯೊಂದಿಗೆ ಈ ನಿಲುವು ಬಲಗೊಂಡಿತು. ಆದರೆ ಇದು ಆಧುನಿಕೋತ್ತರ ಚಿಂತನೆಯ ಕೊಡುಗೆಯೆಂದು ತಿಳಿಯುವುದು ಸರಿಯಲ್ಲ. ಮಾನವಶಾಸ್ತ್ರಜ್ಞರು ಈ ನಿಲುವಿಗೆ ಪೂರಕವಾಗುವ ಹಲವಾರು ಅಂಶಗಳನ್ನು ಆದಿಯಿಂದಲೇ ಹೇಳುತ್ತಾ ಬಂದಿದ್ದಾರೆ. ಪ್ರತಿಯೊಂದು ಸಂಸ್ಕೃತಿಗೆ ಕೂಡ ಅದರದ್ದೇ ಆದ ರಾಜಕೀಯ, ಆರ್ಥಿಕ ಸಾಂಸ್ಕೃತಿಕ ಹಾಗೂ ಸಾಮಾಜಿಕ ಬದುಕಿನ ಕಲ್ಪನೆಗಳಿವೆ ಮತ್ತು ಅದನ್ನು ಅರ್ಥ ಮಾಡಿಕೊಳ್ಳಬೇಕಾದರೆ ಅದೇ ಪರಿಸರದಲ್ಲಿ ಬದುಕಬೇಕೆನ್ನುವುದು ಅವುಗಳಲ್ಲಿ ಪ್ರಮುಖ ಅಂಶ.

[11] ಸಂಶೋಧನೆಯ ಮೂಲಕ ಅಧ್ಯಯನಕ್ಕೆ ಒಳಗಾಗುವ ವಿಚಾರಗಳ ಬಗ್ಗೆ ಜ್ಞಾನ ಸಂಪಾದನೆಯಾಗುತ್ತದೆ. ಆ ಜ್ಞಾನ ಅಧ್ಯಯನಕ್ಕೆ ಒಳಗಾದ ವಿಷಯಗಳೊಂದಿಗಿನ ನಮ್ಮ ಸಂಬಂಧವನ್ನು ಪ್ರಭಾವಿಸಬಹುದೆನ್ನುವ ತಿಳುವಳಿಕೆ ಹಿಂದಿನಿಂದಲೂ ಇತ್ತು. ಆದರೆ ಸಂಶೋಧಕರು ತಮ್ಮ ಗುರುತನ್ನು ತಾವು ನಿರ್ವಚಿಸುವ ಸಂಗತಿಯಿಂದ ಪಡೆಯುತ್ತಾರೆನ್ನುವುದು ಆಧುನಿಕೋತ್ತರ ಚಿಂತನೆಯ ಕೊಡುಗೆ. ಹಾಗೆ ನೋಡಿದರೆ ಸಂಶೋಧಕರ ಕೆಲಸ ಇಲ್ಲೂ ಸಂಕಥನದ ಮೂಲಕ ಮತ್ತೊಬ್ಬರನ್ನು ನಿರ್ವಚಿಸುವುದಲ್ಲ; ಮತ್ತೊಬ್ಬರ ನಿರ್ವಚನೆಯ ಮೂಲಕ ತಮ್ಮ ತನವನ್ನು ಕಂಡುಕೊಳ್ಳುವ ಪ್ರಕ್ರಿಯೆಯನ್ನು ಅರ್ಥ ಮಾಡಿಕೊಳ್ಳುವುದು. ಹಾಗೆಂದು ಸಂಶೋಧಕರು ಇಡೀ ಪ್ರಕ್ರಿಯೆಯೊಂದಿಗೆ ಏನೇನೂ ಸಂಬಂಧ ಇಲ್ಲದೆ ಇದ್ದಾರೆ ಎನ್ನಲಾಗುವುದಿಲ್ಲ. ಅವರು ಕೂಡ ಸಂಶೋಧನೆಯ ಮೂಲಕ (ಈ ನಿರ್ವಚನೆಯ ಮೂಲಕ) ತಮ್ಮ ತನವನ್ನು ಕಂಡುಕೊಳ್ಳುವ ಪ್ರಕ್ರಿಯೆಯಲ್ಲಿ ಪರೋಕ್ಷವಾಗಿ ಪಾಲುಗೊಳ್ಳುತ್ತಾರೆ.

[12] ಎಡ್ವರ್ಡ್‌ಸೈದ್, ಓರಿಯಂಟಲಿಸಂ-ವೆಸ್ಟನ್ಸ್‌ಕನ್‌ಸಪ್ಷನ್ಸ್ ಆಫ್ ದಿ ಓರಿಯಂಟ್, ನ್ಯೂಡೆಲ್ಲಿ: ಪೆಂಗ್ವಿನ್ ಬುಕ್ಸ್, ೨೦೦೧.

[13] ಈ ಅನುಭವಕ್ಕೆ ಸಂಬಂಧಿಸಿದ ವಿವರಗಳನ್ನು ಚಂದ್ರ ಪೂಜಾರಿಯವರ ಜನಾಯೋಜನೆಹೈದರಾಬಾದ್ ಕರ್ನಾಟಕದ ಅನುಭವಗಳನ್ನು, (ವಿದ್ಯಾರಣ್ಯ: ಕನ್ನಡ ವಿಶ್ವವಿದ್ಯಾಲಯ, ಪ್ರಸಾರಂಗ, ೨೦೦೪, ಪು. ೧೨೩-೧೫೫) ಪುಸ್ತಕದಿಂದ ಪಡೆಯಲಾಗಿದೆ.

[14] ಪ್ರಾಕೃತಿಕ ನಿಯಮಗಳ ಬಗ್ಗೆ ಇದೊಂದು ಸಾಂಪ್ರದಾಯಿಕ ನಿಲುವು. ವಿಜ್ಞಾನದಲ್ಲೂ ಸಂಶೋಧಕರ ಕೆಲಸ ಪ್ರಾಕೃತಿಕ ನಿಯಮಗಳನ್ನು ಅರ್ಥ ಮಾಡಿಕೊಳ್ಳುವುದು. ಎರಡು, ಪ್ರಾಕೃತಿಕ ನಿಯಮಗಳನ್ನು ಪ್ರಭಾವಿಸಲು ಪ್ರಯತ್ನಿಸುವುದು. ಬಹುತೇಕ ಸಂದರ್ಭದಲ್ಲಿ ಎರಡನೇ ಉದ್ದೇಶವೇ ಹೆಚ್ಚು ಪ್ರಚಾರಗೊಂಡು ಸಂಶೋಧನೆ ಎಂದರೆ ಪ್ರಕೃತಿಯ ಮೇಲೆ ಹತೋಟಿ ಸಾಧಿಸುವುದೆನ್ನುವುದಾಗಿದೆ.

[15] ಈ ಕುರಿತು ಕಾರ್ಲ್‌ಪೋಪರ್‌ನ ದೊಡ್ಡ ವಾದವೇ ಇದೆ. ಆತನ ಪ್ರಕಾರ ಇಂಡಕ್ಟೀವ್ ವಿಧಾನದಿಂದ ಜ್ಞಾನ ಸಾಧ್ಯವಿಲ್ಲ. ಯಾಕೆಂದರೆ ಯಾವುದೋ ಒಂದು ಪ್ರಾಕೃತಿಕ ಅಂಶಕ್ಕೆ ಸೇರಿದ ಎಲ್ಲವನ್ನು ಅವಲೋಕನೆ ಮಾಡಿ ನಿರ್ಣಯಕ್ಕೆ ಬರಲು ಸಾಧ್ಯವಿಲ್ಲ. ಹಾಗೆಂದಾದರೆ ಅವಲೋಕನೆ ಮಾಡಿ ತಳೆದ ನಿರ್ಣಯಕ್ಕೆ ಭಿನ್ನವಾದ ಸಂಗತಿ ಗೋಚರವಾದ ಕೂಡಲೇ ಈಗಾಗಲೇ ಅವಲೋಕನೆ ಮಾಡಿ ತಳೆದ ನಿರ್ಣಯ ಸುಳ್ಳಾಗುತ್ತದೆ. ಈ ಸಮಸ್ಯೆಯ ಪರಿಹಾರಕ್ಕಾಗಿ ಆತ ಡಿಡಕ್ಟೀವ್ ವಿಧಾನವನ್ನು ಸೂಚಿಸುತ್ತಾನೆ. ಡಿಡಕ್ಟೀವ್ ವಿಧಾನಗಳ ಮೂಲಕ ಊಹೆಗಳನ್ನು ರೂಪಿಸಿಕೊಂಡು, ಆ ಊಹೆಗಳನ್ನು ಪರೀಕ್ಷಿಸುವ ಮೂಲಕ ಥಿಯರಿಗಳ ಸತ್ಯಾಸತ್ಯತೆಗಳನ್ನು ಪರೀಕ್ಷಿಸಬಹುದೆಂದು ಹೇಳುತ್ತಾನೆ. ಥಿಯರಿಯೊಂದನ್ನು ಪರೀಕ್ಷಿಸಿ ತಿರಸ್ಕರಿಸಬಹುದಾದ ಸಾಧ್ಯತೆ ನಿಜವಾದ  ವಿಜ್ಞಾನವನ್ನು ಪೊಳ್ಳು ವಿಜ್ಞಾನದಿಂದ ಬೇರ್ಪಡಿಸುತ್ತದೆಂದು ಅಭಿಪ್ರಾಯಪಡುತ್ತಾನೆ. ಈ ವಿವರಗಳನ್ನು ಕಾರ್ಲ್‌ಪೋಪರ್‌ನ, ಕಂಜೆಕ್ಷರ್ಸ್ ಅಂಡ್ ರೆಪ್ಯುಟೇಶನ್, (ಲಂಡನ್: ರೌಟ್‌ಲೆಡ್ಜ್ ಆಂಡ್ ಕೆಗನ್ ಪೌಲ್, ೧೯೬೩.) ಪುಸ್ತಕದಲ್ಲಿ ನೋಡಬಹುದು.