ಮುಚ್ಚಿದ ಮತ್ತು ತೆರೆದ ಸಮುದಾಯಗಳು

ನಮ್ಮವರು ಮತ್ತು ಹೊರಗಿನವರು ಎನ್ನುವ ಕಲ್ಪನೆಗಳನ್ನು ಮುರಿಯಲು ಸಂಶೋಧನಾ ಮಾಹಿತಿ ಸಂಗ್ರಹ ವಿಧಾನದಲ್ಲಿ ಹೊಸ ತಂತ್ರಗಳನ್ನು ಹುಡುಕಲಾಗಿದೆ. ಅಬ್ಸರ್‌ವೇಶನ್ (ಅವಲೋಕನ) ಮತ್ತು ಪಾರ್ಟಿಸಿಪೆಂಟ್ ಅಬ್ಸರ್‌ವೇಶನ್ (ಸಹಭಾಗಿತ್ವ ಅವಲೋಕನ)ಗಳ ಮೂಲಕ ನಮ್ಮವರು ಮತ್ತು ಹೊರಗಿನವರು ಪರಿಕ್ಪನೆಯ ಹಿಡಿತದಿಂದ ಪಾರಾಗಲು ಸಂಶೋಧಕರು ಪ್ರಯತ್ನಿಸಿದ್ದಾರೆ. ಆದರೆ ಈ ಹೊಸ ಮಾಹಿತಿ ಸಂಗ್ರಹದ ವಿಧಾನಗಳು ಕೂಡ ನಮ್ಮವರು ಮತ್ತು ಹೊರಗಿನವರು ಎನ್ನುವ ಪರಿಕ್ಪನೆಯ ರಭಾವವನ್ನು ಗಣನೀವಾಗಿ ಕುಗ್ಗಿಸುತ್ತವೆ ಎನ್ನಲಾಗುವುದಿಲ್ಲ. ಈ ಪರಿಕಲ್ಪನೆಯ ಪ್ರಭಾವದಿಂದ ಹೊರಬರುವುದೆಷ್ಟು ಕಷ್ಟವೆಂದು ಬುಡಕಟ್ಟು ಜನರ ಅಥವಾ ಗ್ರಾಮೀಣ ಜನರ ಬದುಕನ್ನು ಅಧ್ಯಯನ ಮಾಡುವವರಿಗೆ ಅರ್ಥವಾದೀತು. ಮುಖ್ಯವಾಹಿನಿಯಿಂದ ದೂರದಲ್ಲಿ ಬದುಕುತ್ತಿರುವ ಬುಡಕಟ್ಟುಗಳಲ್ಲಿ ಸಂಬಂಧಗಳು ಸ್ಪಷ್ಟವಾಗಿ ನಿರ್ಧರಿತವಾಗಿರುತ್ತವೆ. ಬುಡಕಟ್ಟಿಗೆ ಸೇರಿದ ಪ್ರತಿಯೊಬ್ಬರೂ ಆ ಸಮುದಾಯದ ಮತ್ತೊಬ್ಬರೊಂದಿಗೆ ಯಾವುದೋ ಒಂದು ಸಂಬಂಧ ಹೊಂದಿರುತ್ತಾರೆ. ತಂದೆ, ತಾಯಿ, ಅಣ್ಣ, ತಮ್ಮಂದಿರಿಂದ ಹಿಡಿದು, ಮಾವ, ಅತ್ತೆ ಹೀಗೆ ಎಲ್ಲರೂ ಯಾವುದೋ ಒಂದು ಸಂಬಂಧದಿಂದ ಬಂಧಿತರಾಗಿರುತ್ತಾರೆ. ಹೊರಗಿನವರಾದ ಸಂಶೋಧಕರಿಗೆ ಬುಡಕಟ್ಟು ಸಮುದಾಯದೊಳಗಿನ ಸಂಬಂಧಗಳೊಳಗೆ ಅವಕಾಶ ಪಡೆಯುವ ಸಾಧ್ಯತೆಗಳು ಕಡಿಮೆ.[1] ಸಂಶೋಧಕರು  ಬುಡಕಟ್ಟು ಸಮುದಾಯದ ‘ನಮ್ಮವರ’ ಪರಿಕಲ್ಪನೆಯಲ್ಲಿ ಸೇರಿಕೊಳ್ಳಲು ಒಂದೇ ಒಂದು ದಾರಿಯಿದೆ. ವೆರಿಯರ್ ಎಲ್ವಿನ್‌ರಂತೆ ಬುಡಕಟ್ಟು ಜನರೊಂದಿಗೆ ವೈವಾಹಿಕ ಸಂಬಂಧ ಬೆಳೆಸುವುದು ಮಾತ್ರ ಅವರೊಂದಿಗೆ ನಿಜವಾದ ಅರ್ಥದಲ್ಲಿ ಅವರ ನಮ್ಮವರ ಪರಿಕಲ್ಪನೆಯಲ್ಲಿ ಸೇರಿಕೊಳ್ಳುವ ದಾರಿ. ಸಂಶೋಧಕರು ಎಷ್ಟೇ ಪ್ರಯತ್ನ ಪಟ್ಟರೂ ನಿಜವಾದ ಅರ್ಥದಲ್ಲಿ ಸಂಸೋಧನೆ ಮಾಡುವ ಪ್ರಪಂಚದ ಒಳಗಿನವರಾಗಲು ಸಾಧ್ಯವಿಲ್ಲ ಎನ್ನುವುದು ಕೇವಲ ಬುಡಕಟ್ಟು ಸಮುದಾಯಕ್ಕೆ ಸೀಮಿತವಾದ ಉದಾಹರಣೆಯಲ್ಲ. ಗ್ರಾಮ ಬದುಕನ್ನು ಅಧ್ಯಯನ ಮಾಡುವ ಸಂಶೋಧಕರ ಅನುಭವ ಕೂಡ ಹೆಚ್ಚು ಕಡಿಮೆ ಬುಡಕಟ್ಟು ಸಮುದಾಯ ಅಧ್ಯಯನ ಮಾಡುವ ಸಂಶೋಧಕರಂತೆ ಇದೆ. ಇಲ್ಲೂ ಹೊರಗಿನ ಸಂಶೋಧಕರು ನಿಜವಾದ ಅರ್ಥದಲ್ಲಿ ಗ್ರಾಮೀಣ ಸಮುದಾಯದ ಒಬ್ಬ ಸದಸ್ಯರಾಗಿ ಅಲ್ಲಿನ ಆಗುಹೋಗುಗಳನ್ನು ಅಧ್ಯಯನ ಮಾಡಲು ಸಾಧ್ಯವಾಗುವುದಿಲ್ಲ.

ಸಂಶೋಧಕರು ಅಧ್ಯಯನ ಮಾಡಲು ಇಚ್ಛಿಸುವ ಗ್ರಾಮೀಣ ಬದುಕಿನ ಎಲ್ಲ ಸಂಬಂಧಗಳು ತುಂಬಾ ಸ್ಪಷ್ಟವಾಗಿ ನಿರ್ಧರಿತವಾಗಿರುತ್ತದೆ. ಹಲವಾರು ಕುಟುಂಬಗಳು, ಕುಟುಂಬಗಳು ಸೇರಿ ಜಾತಿಗಳು, ಜಾತಿಗಳ ಶ್ರೇಣೀಕೃತ ಇರುವಿಕೆ, ಹುಟ್ಟಿನಿಂದ ಪ್ರಾಪ್ತವಾಗುವ ಜಾತಿಗಳ ಸದಸ್ಯತ್ವ ಇತ್ಯಾದಿ ಸಂಗತಿಗಳು ಗ್ರಾಮೀಣ ಬದುಕಿನ ಸಾಮಾಜಿಕ ಸಂಬಂಧಗಳ ಗಡಿಗಳನ್ನು ನಿರ್ಧರಿಸುತ್ತವೆ. ಅಷ್ಟು ಮಾತ್ರವಲ್ಲ, ಅಲ್ಲಿನ ಆರ್ಥಿಕ, ರಾಜಕೀಯ ಹಾಗೂ ಸಾಂಸ್ಕೃತಿಕ ಸಂಬಂಧಗಳ ಗಡಿಗಳು ಕುಡ ಅಚ್ಚುಕಟ್ಟಾಗಿ ತೀರ್ಮಾನಗೊಂಡಿರುತ್ತವೆ. ಇಂತಹ ಪರಿಸರದಲ್ಲಿ ಹೊರಗಿನ ಸಂಶೋಧಕರು ಯಾವ ಸಂಬಂಧದ ಆಧಾರದಲ್ಲಿ ಗ್ರಾಮೀಣ ಪ್ರಪಂಚವನ್ನು ಪ್ರವೇಶಿಸಬೇಕು? ಗ್ರಾಮದಲ್ಲಿರುವ ಯಾವುದೋ ಒಂದು ಕುಟುಂಬದ ಸ್ನೇಹಿತರಾಗಿಯೋ ಅಥವಾ ಸಂಬಂಧಿಕರಾಗಿಯೋ ಅಥವಾ ಪರಿಚಿತರಾಗಿಯೋ ಸಂಶೋಧಕ ಗ್ರಾಮೀಣ ಬದುಕಿಗೆ ಪ್ರವೇಶ ಪಡೆಯಬಹುದು. ಆದರೆ ಆ ಪ್ರವೇಶ ಗ್ರಾಮೀಣ ಬದುಕಿನ ಸಮಸ್ತ ಕ್ಷೇತ್ರಗಳಲ್ಲಿ ನಡೆಯುವ ಎಲ್ಲ ವ್ಯವಹಾರಗಳ ಪರಿಶೀಲನೆಗೆ ಅವಕಾಶ ಮಾಡಿಕೊಡುತ್ತದೆ ಎನ್ನಲಾಗುವುದಿಲ್ಲ. ಸಂಶೋಧಕರಿಗೆ ವಿವಿಧ ಕ್ಷೇತ್ರಗಳಿಗೆ ಸಿಗಬಹುದಾದ ಪ್ರವೇಶ ಮತ್ತು ಅವರು (ಸಂಶೋಧಕರು) ಗ್ರಾಮೀಣ ಬದುಕನ್ನು ಪ್ರವೇಶಿಸಲು ಉಪಯೋಗಿಸಿದ ಕುಟುಂಬ ಅಥವಾ ವ್ಯಕ್ತಿಗೆ ಗ್ರಾಮೀನ ಏಣಿಶ್ರೇಣಿಯಲ್ಲಿರುವ ಸ್ಥಾನಮಾನಗಳ ನಡುವೆ ತಕ್ಕಮಟ್ಟಿನ ಸಂಬಂಧ ಇದೆ. ಒಂದು ವೇಳೆ ಸಂಶೋಧಕರು ಯಾವುದೋ ಒಂದು ದಲಿತ ಕುಟುಂಬದ ಸದಸ್ಯರ ಸಂಬಂಧದೊಂದಿಗೆ ಗ್ರಾಮ ಸಂಬಂಧವನ್ನು ಪ್ರವೇಶಿಸಿದರೆ ಆ ದಲಿತರಿಗೆ ಇರುವ ಸ್ಥಾನಮಾನ ಮಾತ್ರ ಸಂಶೋಧಕರಿಗೆ ಲಭ್ಯವಾಗಬಹುದು. ಈ ಸಂಬಂಧದಿಂದ ಹಳ್ಳಿಗಳಲ್ಲಿ ಬದುಕುತ್ತಿರುವ ದಲಿತರ ಸ್ಥಿತಿಗತಿ ಬಗ್ಗೆ ಸಾಕಷ್ಟು ಮಾಹಿತಿ ಸಂಗ್ರಹಿಸಬಹುದು. ಆದರೆ ಹಳ್ಳಿಯಲ್ಲಿರುವ ಮೇಲ್ಜಾತಿಗಳ ಸಾಮಾಜಿಕ, ರಾಜಕೀಯ ಅಥವಾ ಇನ್ನಿತರ ಬದುಕಿನ ಬಗ್ಗೆ ವಾಸ್ತವಕ್ಕೆ ಹತ್ತಿರವಾದ ಮಾಹಿತಿ ಲಭ್ಯವಾಗುವುದು ಕಷ್ಟ. ಅದೇ ರೀತಿಯಲ್ಲಿ ಮೇಲ್ಜಾತಿಗಳ ಸಂಪರ್ಕ ಅದೇ ಹಳ್ಳಿಯ ಕೆಳಜಾತಿ ಜನರ ಬದುಕಿನ ವಾಸ್ತವಕ್ಕೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸಲು ತಡೆಯಾಗಬಹುದು.[2] ಸಂಶೋಧಕರು ಮತ್ತು ಅವರು ಹಳ್ಳಿಯಲ್ಲಿ ಹೊಂದಿರುವ ಸಂಬಂಧಗಳು ಅವರಿಗೆ ಸಿಗುವ ಮಾಹಿತಿಯನ್ನು ಪ್ರಭಾವಿಸಲು ಎರಡು ಕಾರಣಗಳಿವೆ. ಒಂದು, ಹಳ್ಳಿಯಲ್ಲಿರುವ ಏಣಿಶ್ರೇಣಿಗಳು. ಸಾಮಾಜಿಕ, ಆರ್ಥಿಕ, ರಾಜಕೀಯ ಏಣಿಶ್ರೇಣಿಗಳು ಸಂಬಂಧದ ಹಲವಾರು ಪದರಗಳನ್ನು ರೂಪಿಸಿವೆ. ಒಂದು ಪದರದ ಸಂಪರ್ಕ ಎಲ್ಲ ಪದರಗಳ ಸಂಪರ್ಕಕ್ಕೆ ದಾರಿ ಅಲ್ಲ. ಎರಡು, ಹಳ್ಳಿಯಲ್ಲಿನ ಯಜಮಾನಿಕೆ ವರ್ಗ. ಯಾರನ್ನು ಸಂಪರ್ಕಿಸಬೇಕು, ಯಾರನ್ನು ಮಾತಾಡಿಸಬಾರದು, ಎಲ್ಲಿ ಹೋಗಬೇಕು, ಎಲ್ಲಿ ಹೋಗಬಾರದೆಂದು ಹಳ್ಳಿಯಲ್ಲಿನ ಯಜಮಾನಿಕೆ ವರ್ಗ ಸಂಶೋಧಕರಿಗೆ ಮಾರ್ಗದರ್ಶನ ನೀಡುತ್ತಿರುತ್ತದೆ. ಇವರ ಮಾರ್ಗದರ್ಶನದ ಪ್ರಕಾರ ಸಂಶೋಧಕರು ವ್ಯವಹರಿಸಬೇಕು. ಒಂದು ವೇಳೆ ಸಂಶೋಧಕರು ಅದಕ್ಕೆ ವಿರುದ್ಧವಾಗಿ ನಡೆದುಕೊಂಡರೆ ಅವರಿಗೆ ಯಜಮಾನಿಕೆ ವರ್ಗ ಮಾತ್ರ ಅಸಹಕಾರ ನೀಡುವುದಿಲ್ಲ; ಹಳ್ಳಿಯ ಇತರರು ಕೂಡ ಸಹಕಾರ ನೀಡದಂತಹ ಪರಿಸರ ಸೃಷ್ಟಿಸುವ ಸಾಧ್ಯತೆ ಇದೆ.[3]

ಬುಡಕಟ್ಟು ಮತ್ತು ಗ್ರಾಮ ಸಮುದಾಯಗಳ ಅಧ್ಯಯನಕ್ಕೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸುವುದು ಎಷ್ಟು ಕಷ್ಟವೆಂದು ಮೇಲಿನ ಉದಾಹರಣೆಗಳು ವಿವರಿಸುತ್ತವೆ. ಈ ಎರಡೂ ಸಮುದಾಯಗಳು ಸಾಂಪ್ರದಾಯಿಕ ಹಾಗೂ ಮುಚ್ಚಿದ ಸಮುದಾಯಗಳಾಗಿರುವುದರಿಂದ ಮಾಹಿತಿ ಸಂಗ್ರಹ ಕಷ್ಟ ಎನ್ನುವ ಒಂದು ಸಾಮಾನ್ಯ ತೀರ್ಮಾನಕ್ಕೆ ಬರಬಹುದು. ಈ ತೀರ್ಮಾನದ ಪ್ರಕಾರ ಆಧುನಿಕ ವ್ಯವಸ್ಥೆಗಳಲ್ಲಿ – ಬ್ಯಾಂಕ್, ಫ್ಯಾಕ್ಟರಿ, ಸರಕಾರಿ ಕಚೇರಿ ಇತ್ಯಾದಿಗಳಲ್ಲಿ – ಸಂಶೋಧಕರು ಪರಕೀಯರಾಗುವ ಸಾಧ್ಯತೆ ಇಲ್ಲ ಎಂದಾಯಿತು. ಆದರೆ ಇದು ಸರಿಯಾದ ತೀರ್ಮಾನವೇ? ಖಂಡಿತವಾಗಿಯೂ ಸರಿಯಲ್ಲ. ಬುಡಕಟ್ಟು ಸಮುದಾಯ ಅಥವಾ ಗ್ರಾಮೀಣ ಸಮುದಾಯಗಳಿಗಿಂತ ಹೆಚ್ಚಿನ ಮಟ್ಟದಲ್ಲಿ ಇಲ್ಲಿನ ಸಂಬಂಧಗಳು ಖಂಡಿತವಾಗಿ ಮತ್ತು ಅಚ್ಚುಕಟ್ಟಾಗಿ ನಿರ್ವಚಿಸಲ್ಪಟ್ಟಿವೆ. ಸಂಶೋಧಕರು ಬುಡಕಟ್ಟು ಅಥವಾ ಗ್ರಾಮೀಣ ಸಮುದಾಯಗಳೊಂದಿಗೆ ವ್ಯವಹರಿಸುವಾಗ ಅನುಭವಿಸಿದ ಪರಕೀಯತೆಗಿಂತ ಹೆಚ್ಚಿನ ಪರಕೀಯತೆಯನ್ನು ಇಲ್ಲಿ ಅನುಭವಿಸಬೇಕಾಗುತ್ತದೆ. ಈ ವ್ಯವಸ್ಥೆಗಳಲ್ಲಿ ಪ್ರತಿಯೊಂದರ ಸ್ಥಾನ ಮತ್ತು ಆ ಸ್ಥಾನಕ್ಕೆ ಇರುವ ಅಧಿಕಾರದ ಖಚಿತ ಚಿತ್ರಣ ಇರುತ್ತದೆ. ಆದುದರಿಂದ ಸಂಶೋಧಕರು ಓಡಾಡಲು, ಕುಳಿತುಕೊಳ್ಳಲು, ಮಾತಾಡಿಸಲು ಇತ್ಯಾದಿಗಳಿಗೆ ಅವಕಾಶ ಪಡೆಯುವುದು ಕೂಡ ಈ ವ್ಯವಸ್ಥೆಗಳಲ್ಲಿ ತ್ರಾಸದಾಯಕವಾಗಿರುತ್ತದೆ.[4] ಹೀಗೆ ಮಾಹಿತಿ ಸಂಗ್ರಹಿಸುವ ಕೆಲಸದಲ್ಲಿ ಸಂಶೋಧಕರು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮಾಹಿತಿ ಸಂಗ್ರಹದ ಸಮಸ್ಯೆಯಲ್ಲಿ ಸಂಶೋಧಕರ ದೃಷ್ಟಿಕೋನದ ಪಾಲು ಎಷ್ಟಿದೆಯೋ ಅಷ್ಟೇ ಅಥವಾ ಅದಕ್ಕಿಂತ ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ಕ್ಷೇತ್ರ ಅಥವಾ ಅಧ್ಯಯನಕ್ಕೆ ಒಳಗಾಗುವ ಸಮಾಜ/ಸಮುದಾಯದ ಪಾತ್ರವೂ ಇದೆ. ಸ್ಥಳೀಯ-ಪರಕೀಯ, ನಮ್ಮವರು-ಹೊರಗಿನವರು ಇತ್ಯಾದಿ ಪರಿಕಲ್ಪನೆಗಳು ಸಂಶೋಧಕರು ಮತ್ತು ಅಧ್ಯಯನ ಕ್ಷೇತ್ರದ ನಡುವೆ ದೊಡ್ಡ ಗಡಿಗಳನ್ನು ನಿರ್ಮಿಸುತ್ತವೆ. ಅವುಗಳನ್ನು ದಾಟಲು ಅವರು ಆಯಾಯ ಪರಿಧಿಯೊಳಗೆ ಬರುವ ಸಂಬಂಧಗಳನ್ನು ಬಳಸಬೇಕು. ಪರಿಧಿಯೊಳಗಿನ ಸಂಬಂಧಗಳ ಭಾಗವಾಗುವುದು ಅಥವಾ ಬುಡಕಟ್ಟು ಅಥವಾ ಗ್ರಾಮ ಸಮಾಜದವರೇ ಸಂಶೋಧನೆ ಕೈಗೊಳ್ಳುವುದು ಸಂಶೋಧನಾ ಕ್ಷೇತ್ರ ಹೇರುವ ಮಿತಿಯನ್ನು ಮೀರಲು ಸಹಕಾರಿಯಾಗಬಹುದು.

ಬುಡಕಟ್ಟು ಅಥವಾ ಗ್ರಾಮ ಸಮಾಜಕ್ಕೆ ಸೇರಿದವರು ಅವರವರ ಸಮಸ್ಯೆಗಳನ್ನು ಸಂಶೋಧನೆ ಮಾಡುವುದು ಮಾಹಿತಿ ಸಂಗ್ರಹದ ದೃಷ್ಟಿಯಿಂದ ಉತ್ತಮ ಎನ್ನುವ ಅಭಿಪ್ರಾಯ ಇಂದು ಹೆಚ್ಚು ಪ್ರಚಲಿತದಲ್ಲಿದೆ.[5] ಆಯಾಯ ಸಮುದಾಯಕ್ಕೆ/ಸಂಸ್ಕೃತಿ/ಲಿಂಗ ಇತ್ಯಾದಿಗಳಿಗೆ ಸೇರಿದವರು ತಮ್ಮ ತಮ್ಮ ಸಮುದಾಯ/ಸಂಸ್ಕೃತಿ/ಲಿಂಗ ಇತ್ಯಾದಿಗಳನ್ನು ಸಂಶೋಧನೆ ಮಾಡುವುದು ವಾಸ್ತವಕ್ಕೆ ಹತ್ತಿರವಾದ ಚಿತ್ರಣ ಪಡೆಯಲು ಅಗತ್ಯ ಎನ್ನುವುದು ಈಗ ಹೆಚ್ಚು ಕಡಿಮೆ ಎಲ್ಲರೂ ಒಪ್ಪಿದ ವಿಚಾರ. ಈ ವಾದದಲ್ಲಿ ಸಾಕಷ್ಟು ಶಕ್ತಿ ಇದೆ. ಮಹಿಳೆಯರ ಸಮಸ್ಯೆಯನ್ನು ಮತ್ತೊಬ್ಬ ಮಹಿಳೆ ಅರ್ಥ ಮಾಡಿಕೊಂಡಷ್ಟು ಸುಲಭದಲ್ಲಿ ಮತ್ತು ಚೆನ್ನಾಗಿ ಪುರುಷನೊಬ್ಬ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಅದೇ ರೀತಿ ದಲಿತ ಸಮುದಾಯದ ಸಮಸ್ಯೆಗಳನ್ನು, ನೋವುಗಳನ್ನು, ಶೋಷಣೆಯನ್ನು ಅದೆ ಪರಿಸರದಲ್ಲಿ ಹುಟ್ಟಿ ಬೆಳೆದ ದಲಿತನಷ್ಟು ಪರಿಣಾಮಕಾರಿಯಾಗಿ ಹಿಡಿದಿಡಲು ದಲಿತೇತರರಿಗೆ ಸಾಧ್ಯವಾಗುವುದಿಲ್ಲ. ಇಲ್ಲಿಯವರೆಗೆ ಈ ವಾದ ವಿಶೇಷ ಸಮಸ್ಯೆ ಇಲ್ಲದೆ ಮುಂದುವರಿಯುತ್ತದೆ. ಆದರೆ ಇಲ್ಲಿಂದ ಮುಂದೆ ಅಷ್ಟೊಂದು ಸರಾಗವಾಗಿ ಮುಂದುವರಿಯುವುದಿಲ್ಲ. ಯಾಕೆಂದರೆ ಈ ವಾದದಲ್ಲೂ ಸಾಕಷ್ಟು ಸಮಸ್ಯೆಗಳಿವೆ. ಒಂದು, ಈ ದಲಿತ ಅಥವಾ ಮಹಿಳಾ ಪರಿಕಲ್ಪನೆಯು ರೂಪುಗೊಳ್ಳುವಿಕೆಯ ಪ್ರಶ್ನೆ. ದಲಿತ ಅಥವಾ ಮಹಿಳೆ ಚಾರಿತ್ರಿಕವಾಗಿ ರೂಪುಗೊಂಡ ಸಂದರ್ಭದಲ್ಲಿ ದಲಿತ ಅಥವಾ ಮಹಿಳೆಗೆ ಮಾತ್ರ ಆಯಾಯ ಸಮುದಾಯದ ನೋವು ನಲಿವುಗಳನ್ನು ಹಿಡಿದಿಡಲು ಸಾಧ್ಯವೇ ಎನ್ನುವ ವಾದ ಸರಿ ಇರಬಹುದು. ಆದರೆ ಇಂದು ಚಾಲ್ತಿಯಲ್ಲಿರುವ ದಲಿತ ಅಥವಾ ಮಹಿಳೆ ಅಥವಾ ಇನ್ಯಾವುದೇ ಸಮುದಾಯ ಕಲ್ಪನೆ ಚಾರಿತ್ರಿಕವಾಗಿ ರೂಪುಗೊಂಡವಲ್ಲ; ಅವು ಸಂಕಥನದ ಸೃಷ್ಟಿ. ಅಂದರೆ ದಲಿತ ಎನ್ನುವ ಪರಿಕಲ್ಪನೆಯೊಂಗೆ ಬರುವವರೆಲ್ಲ ರಕ್ತ ಸಂಬಂಧ ಹೊಂದಿದವರಲ್ಲ. ಹಲವಾರು ತಳಸ್ತರದ ಜಾತಿಗಳು ಸೇರಿ ದಲಿತ ಪರಿಕಲ್ಪನೆ ರೂಪುಗೊಂಡಿದೆ. ಅಂದರೆ ಕೆಲವೊಂದು ಸಾಂಸ್ಕೃತಿಕ ಗುರುತಿನ ಆಧಾರದಲ್ಲಿ ಅವೆಲ್ಲ ಒಂದು ಎನ್ನುವ ಕಲ್ಪನೆಯನ್ನು ಕಟ್ಟಿಕೊಡಲಾಗಿದೆ. ಅದರೊಳಗೆ ಸಾಕಷ್ಟು ಸಂಖ್ಯೆಯ ಸಣ್ಣಪುಟ್ಟ ಗುರುತುಗಳು ತಮ್ಮ ಅಸ್ತಿತ್ವಕ್ಕೆ ಹೋರಾಡುತ್ತಿವೆ. ಉದಾಹರಣೆಗೆ ಕರ್ನಾಟಕ ಮತ್ತು ಆಂಧ್ರದಲ್ಲಿ ನಡೆಯುತ್ತಿರುವ ಎಡ ಮತ್ತು ಬಲ ದಲಿತ ಗುಂಪುಗಳ ನಡುವಿನ ಘರ್ಷಣೆಗಳು. ದಲಿತರೊಳಗಿನ ವರ್ಗ ಪ್ರಶ್ನೆ ಬೇರೆಯದೇ ರೀತಿಯಲ್ಲಿ ದಲಿತ ಗುರುತನ್ನು ಮಸುಕಾಗಿಸುತ್ತಿದೆ. ಹಳೇ ಮೈಸೂರು ಪ್ರದೇಶಗಳಲ್ಲಿ ಆಧುನಿಕ ಶಿಕ್ಷಣ ಪಡೆದ ಸಾಕಷ್ಟು ಸಂಖ್ಯೆಯ ದಲಿತರಿದ್ದಾರೆ. ಕೆಲವೊಂದು ಹುದ್ದೆಗಳಿಗೆ ದಲಿತರೊಳಗೆ ಸಾಕಷ್ಟು ಪೈಪೋಟಿ ನಡೆಯುತ್ತಿದೆ. ಈ ರೀತಿಯಲ್ಲಿ ಆಧುನಿಕತೆಯನ್ನು ಮೈಗೂಡಿಸಿಕೊಳ್ಳಲು ಸಾಕಷ್ಟು ತಯಾರಿ ಇರುವ ದಲಿತರು ಸರಕಾರಿ ನೌಕರಿ ಪಡೆದು ದಲಿತರೊಳಗೆ ಪ್ರತ್ಯೇಕ ವರ್ಗವಾಗಿ ರೂಪುಗೊಂಡಿದ್ದಾರೆ. ಹೀಗೆ ದಲಿತ ಎನ್ನುವುದು ಇಂದು ಯಾವುದೇ ಭಿನ್ನತೆ ಇಲ್ಲದ ಸಮುದಾಯವಲ್ಲ. ಅಲ್ಲೂ ಸಾಕಷ್ಟು ಪ್ರತ್ಯೇಕ ಸಮುದಾಯಗಳಿವೆ ಮತ್ತು ಅವು ತಮ್ಮ ಅಸ್ತಿತ್ವಕ್ಕಾಗಿ ಹೋರಾಡುತ್ತಿವೆ. ಆದುದರಿಂದ ದಲಿತ ಸಂಶೋಧಕರೊಬ್ಬರು ಎಲ್ಲ ದಲಿತರ ನೋವು ನಲಿವುಗಳನ್ನು ಅರ್ಥ ಮಾಡಿಕೊಳ್ಳಬಲ್ಲರು ಎನ್ನುವುದು ಸರಿಯಲ್ಲ.

ಇದೇ ರೀತಿ ಮಹಿಳೆ ಕೂಡ. ಎಲ್ಲ ಜಾತಿ, ಧರ್ಮ, ವರ್ಗ, ಪ್ರದೇಶ, ಭಾಷೆ ಇತ್ಯಾದಿ ಗುರುತುಗಳನ್ನು ಬದಿಗಿಟ್ಟು ಮಹಿಳಾ ಸಮುದಾಯದ ಕಲ್ಪನೆ ರೂಪುಗೊಂಡಿವೆ. ಪಶ್ಚಿಮ ಅಥವಾ ಶ್ರೀಮಂತ ದೇಶಗಳ ಮಹಿಳಾ ಪ್ರಶ್ನೆಗಳಿಗೂ ಭಾರತದಂತಹ ಬಡದೇಶಗಳ ಮಹಿಳಾ ಪ್ರಶ್ನೆಗಳಿಗೂ ಸಾಕಷ್ಟು ವ್ಯತ್ಯಾಸವಿದೆ. ಭಾರತದೊಳಗೆ ಬಂದರೆ ಉತ್ತರ ದಕ್ಷಿಣದ ಭಿನ್ನತೆ, ಧರ್ಮ ಅಥವಾ ಜಾತಿ ನೆಲೆಯಲ್ಲಿ ಹುಟ್ಟಿಕೊಳ್ಳುವ ಭಿನ್ನತೆ ಇತ್ಯಾದಿಗಳು ಮಹಿಳೆಯನ್ನು ಹಲವು ವೈರುಧ್ಯಗಳ ಗೂಡಾಗಿಸಿವೆ. ಇದಕ್ಕೆ ಉತ್ತಮ ನಿದರ್ಶನವೆಂದರೆ ಪಾರ್ಲಿಮೆಂಟ್ ಸೀಟುಗಳಲ್ಲಿ ಮಹಿಳಾ ಸದಸ್ಯರಿಗೆ ಸೀಟು ಕಾದಿರಿಸುವ ಕಾಯಿದೆ. ಕೆಲವು ಗುಂಪುಗಳ ಪ್ರಕಾರ ಮಹಿಳೆಯರೊಳಗೆ ದಲಿತ ಮಹಿಳೆ, ಹಿಂದುಳಿದ ವರ್ಗದ ಮಹಿಳೆ ಇತ್ಯಾದಿ ಭೇದಭಾವ ಬೇಡ. ಎಲ್ಲರನ್ನು ಒಟ್ಟು ಸೇರಿಸಿ ಮೂರನೇ ಒಮದರಷ್ಟು ಸೀಟುಗಳನ್ನು ಮಹಿಳೆಯರಿಗೆ ಕಾಯ್ದಿರಿಸಿದರೆ ಸಾಕು. ಆದರೆ ಮತ್ತೆ ಕೆಲವು ಗುಂಪುಗಳ ಪ್ರಕಾರ ಈ ರೀತಿಯಲ್ಲಿ ಎಲ್ಲ ಮಹಿಳೆಯರನ್ನು ಒಂದೇ ಎಂದು ಪರಿಗಣಿಸಿ ಸೀಟು ಕಾಯ್ದಿರಿಸಿದರೆ ಎಲ್ಲ ಸೀಟುಗಳನ್ನು  ಮೇಲ್ಜಾತಿಯ ಮಹಿಳೆಯರು ತಮ್ಮದಾಗಿಸಿಕೊಳ್ಳಬಹುದು. ಆದುದರಿಂದ ಮಹಿಳೆಯರೊಳಗೆ ದಲಿತ, ಹಿಂದುಳಿದ ವರ್ಗ ಇತ್ಯಾದಿ ಮಹಿಳೆಯರಿಗೆ ಪ್ರತ್ಯೇಕ ಸೀಟುಗಳನ್ನು ಕಾಯ್ದಿರಿಸಬೇಕು. ಈ ಎಲ್ಲ ಚರ್ಚೆಗಳು ಮಹಿಳೆ ಎನ್ನುವ ಪರಿಕಲ್ಪನೆಯೊಳಗಿರುವ ಭಿನ್ನತೆಗಳನ್ನು ಗುರುತಿಸಿವೆ. ಮಹಿಳಾ ಪರಿಕಲ್ಪನೆಯೊಳಗಿನ ವರ್ಗ ಪ್ರಶ್ನೆಯಂತೂ ದಲಿತ ಗುರುತಿನೊಳಗಿನ ವರ್ಗ ಪ್ರಶ್ನೆಗಿಂತ ಭೀಕರವಾಗಿದೆ. ದಿನನಿತ್ಯ ಪಂಚತಾರಾ ಜೀವನ ನಡೆಸುವ ಮಹಿಳೆ ಮತ್ತು ಉತ್ತರ ಕರ್ನಾಟಕದ ಹೊಲಗಳಲ್ಲಿ ಮೂರು ಹೊತ್ತಿನ ಊಟಕ್ಕೆ ಪರದಾಡುವ ಮಹಿಳೆಯ ಆಸಕ್ತಿಗಳು ಒಂದೇ ಇರಬಹುದೇ? ಇದೊಂದು ಅತಿಯಾದ ಭಿನ್ನತೆಗಳನ್ನು ಸೂಚಿಸುವ ಉದಾಹರಣೆ ಎಂದಿಟ್ಟುಕೊಳ್ಳೋಣ. ಹಳ್ಳಿಯ ಶ್ರೀಮಂತ ಮಹಿಳೆ ಮತ್ತು ದಲಿತ ಮಹಿಳೆಯೊಬ್ಬಳ ಆಸಕ್ತಿಗಳು ಒಮದೇ ಆಗಲು ಸಾಧ್ಯವೇ? ಹೀಗೆ ಮಹಿಳೆ ಎನ್ನುವುದು ಕೂಡ ಸಾಕಷ್ಟು ಭಿನ್ನತೆಗಳನ್ನು ಹೊಂದಿರುವ ಪರಿಕಲ್ಪನೆ. ಆದುದರಿಂದ ಮಹಿಳೆ ಎನ್ನುವ ಕಾರಣಕ್ಕಾಗಿ ಸಂಶೋಧಕಿಯೊಬ್ಬಳು ಎಲ್ಲ ಮಹಿಳೆಯರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ ಎನ್ನುವುದು ಸರಿಯಲ್ಲ. ಅದೇ ರೀತಿಯಲ್ಲಿ ಮಹಿಳೆ ಎನ್ನುವ ಕಾರಣಕ್ಕಾಗಿ ಸಂಶೋಧಕಿಗೆ ಎಲ್ಲ ಮಹಿಳಾ ಲೋಕದಲ್ಲೂ ಪ್ರವೇಶ ಸಾಧ್ಯ ಎನ್ನಲಾಗುವುದಲ್ಲ.

ಎರಡು, ದಲಿತ ಅಥವಾ ಮಹಿಳೆ ಆಗಿರುವುದು ಬೇರೆ, ಅವರ ಕುರಿತ ಅಧ್ಯಯನ ಮಾಡುವುದು ಬೇರೆ. ಅಧ್ಯಯನ ಮಾಡಲು ಹಲವಾರು ಸಂಗತಿಗಳ ಇರುವಿಕೆ ಅಗತ್ಯ. ಒಂದು, ಪೂರ್ವ ತಯಾರಿಯ ಪ್ರಶ್ನೆ. ಎರಡು ಕಾಳಜಿಯ ಪ್ರಶ್ನೆ. ಮೂರು, ತಾತ್ವಿಕ ಹಿನ್ನೆಲೆಯ ಪ್ರಶ್ನೆ. ಅಧ್ಯಯನ ಅದರಲ್ಲೂ ಸಂಶೋಧನೆ ತಕ್ಕಮಟ್ಟಿನ ಪೂರ್ವ ತಯಾರಿಯನ್ನು ಬಯಸುತ್ತದೆ. ಈ ಪೂರ್ವ ತಯಾರಿ ಶಿಕಷಣ ಅಥವಾ ತರಬೇತಿಯ ರೂಪದಲ್ಲಿ ಇರಬಹುದು ಅಥವಾ ಬೌದ್ಧಿಕ ತಯಾರಿಯ ರೂಫದಲ್ಲಿ ಇರಬಹುದು ಅಥವಾ ಭೌತಿಕ ರೂಪದಲ್ಲಿ ಇರಬಹುದು. ಬೌದ್ಧಿಕ ರೂಪದ ಬಹುದೊಡ್ಡ ತಯಾರಿ ತಕ್ಕಮಟ್ಟಿನ ಶಿಕ್ಷಣ ಮತ್ತು ತರಬೇತಿ. ಈ ಎರಡು ಕೂಡ ಸಾಕಷ್ಟು ಪ್ರಮಾಣದ ಹಣ ಮತ್ತು ಸಮಯದ ವಿನಿಯೋಜನೆಯನ್ನು ಬಯಸುತ್ತವೆ. ದಲಿತರು ಮತ್ತು ಮಹಿಳೆಯರು ಇಂದು ಸಂಶೋಧನೆಯ ಮುಖ್ಯ ವಸ್ತು ಆಗಿರುವುದೇ ಅವರ ಶೋಷಿತ ಮತ್ತು ಡಿಪ್ರವೈಡ್ ಸ್ಥಿತಿಗಾಗಿ. ಅವರಲ್ಲಿ ಬಹುತೇಕರು ತಮ್ಮ ಮೂರು ಹೊತ್ತಿನ ಊಟಕ್ಕೆ ಮತ್ತು ದಿನನಿತ್ಯದ ಸಾಮಾಜಿಕ ಮತ್ತು ರಾಜಕೀಯ ಅಸ್ತಿತ್ವಕ್ಕಾಗಿ ಹೋರಾಟ ನಡೆಸಬೇಕಾಗಿದೆ. ಆದುದರಿಂದ ತಮ್ಮನ್ನು ಬಂಧಿಸಿರುವ ಸಾಮಾಜಿಕ-ರಾಜಕೀ ಸಂಕೋಲೆಗಳ ಬಗ್ಗೆ ಆಲೋಚನೆ ಮಾಡಲು ಅವಕಾಶವೇ ಇಲ್ಲದಿರಬಹುದು. ಆದರೆ ಈ ವಾದ ಅಷ್ಟೊಂದು ಗಟ್ಟಿಯಾಗಿ ನಿಲ್ಲಲು ಸಾಧ್ಯವಿಲ್ಲ. ಯಾಕೆಂದರೆ ಯಾವುದೇ ಸಮುದಾಯದಲ್ಲೂ ಆ ಸಮುದಾಯಕ್ಕೆ ಸೇರಿದ ಎಲ್ಲರೂ ಸಂಶೋಧನೆ ಮಾಡುತ್ತಾರೆಂದು ತಿಳಿಯಬೇಕಾಗಿಲ್ಲ. ಪ್ರತಿಯೊಂದು ಸಮುದಾಯದಲ್ಲೂ ಕೆಲವೇ ಕೆಲವು ಜನ ಮಾತ್ರ ಅಧ್ಯಯನದಲ್ಲಿ ತೊಡಗಿರುತ್ತಾರೆ. ಆದುದರಿಂದ ಎಲ್ಲ ದಲಿತರು ಮತ್ತು ಮಹಿಳೆಯರು ಸಂಶೋಧನೆ ಮಾಡಬೇಕೆಂದು ಗ್ರಹಿಸುವ ಅಗತ್ಯ ಇಲ್ಲ. ದಲಿತರಲ್ಲಿ ಅಥವಾ ಮಹಿಳೆಯರಲ್ಲಿ ಸಾಕಷ್ಟು ಮಂದಿ ಶಿಕ್ಷಣ ಪಡೆದವರು ಅಥವಾ ಸಂಶೋಧನೆ ಮಾಡುವಷ್ಟು ಸಮಯ ಮತ್ತು ಸಂಪನ್ಮೂಲ ಹೊಂದಿದವರು ಇದ್ದಾರೆ. ಅವರು ಅಧ್ಯಯನ ಮಾಡಬಹುದು. ಈ ಸಂದರ್ಭದಲ್ಲಿ ಕಾಳಜಿಯ ಪ್ರಶ್ನೆ ಎದುರಾಗುತ್ತದೆ. ವಂಚಿತರ ಅಥವಾ ಶೋಷಿತರ ಹಿನ್ನೆಲೆಯಿಂದ ಬಂದವರಿಗೆ ಶಿಕ್ಷಣ (ಶಿಕ್ಷಣದಿಂದ ದೊರೆಯುವ ಉದ್ಯೋಗ ಅಥವಾ ಸಂಪಾದನೆಯ ಮಾರ್ಗ) ತಮ್ಮ ವಂಚನೆಯ ಅಥವಾ ಶೋಷಣೆಯ ತಕ್ಷಣದ ನೆಲೆಗಳನ್ನು ಸರಿಪಡಿಸಿಕೊಳ್ಳಲು ಬಳಕೆಯಾಗಬಹುದು. ಶೋಷಣೆಯ ತಕ್ಷಣದ ನೆಲೆಗಳಲ್ಲಿ ದಿನನಿತ್ಯ ಬದುಕುವ ಪರಿಸರ, ಅಲ್ಲಿನ ಸಾಮಾಜಿಕ ಸಂಬಂಧಗಳು, ನೆನಪುಗಳು ಇತ್ಯಾದಿಗಳನ್ನು ಬದಲಾಯಿಸಿಕೊಳ್ಳುವುದು ಶೋಷಿತನೊಬ್ಬನ ಪ್ರಥಮ ಆದ್ಯತೆ ಆಗಬಹುದು. ಆತ ತನಗೆ ದೊರೆತ ಶಿಕ್ಷಣ ಮತ್ತು ಅದರಿಂದ ಪ್ರಾಪ್ತವಾಗುವ ಹಣಕಾಸನ್ನು ಮತ್ತು ಸಮಯವನ್ನು ಶೋಷಣೆಯ ಈ ತಕ್ಷಣದ ನೆಲೆಗಳನ್ನು ಸರಿಪಡಿಸಲು ಬಳಸಬಹುದು. ಉದಾಹರಣೆಗೆ ಮೇಲ್‌ಸ್ತರದವರು ವಾಸವಾಗುವ ಪರಿಸರದಲ್ಲಿ ವಸತಿ, ವಸತಿಯಲ್ಲಿ ತನ್ನ ಹೊಸ ಗುರುತಿಗೆ ಪೂರಕವಾಗುವ ಪರಿಕರಗಳು (ಟೀವಿ, ಪ್ರಿಜ್, ಕಾರು ಇತ್ಯಾದಿ), ಮಕ್ಕಳಿಗೆ ಉತ್ತಮ ಶಾಲೆಯಲ್ಲಿ ಶಿಕ್ಷಣ, ಹೊಸ ಆರೋಗ್ಯದ ಕಲ್ಪನೆಗಳು ಇತ್ಯಾದಿಗಳು ವಂಚಿತ ಹಿನ್ನೆಲೆಯಿಂದ ಬಂದ ಯಾವುದೇ ವ್ಯಕ್ತಿಯ ಪ್ರಥಮ ಆದ್ಯತೆಗಳು. ಈ ಎಲ್ಲವನ್ನು ಪೂರೈಸಿ ಮಿಕ್ಕಿ ಉಳಿದ ಸಂಪಾದನೆ ಮತ್ತು ಸಮಯವನ್ನು ಅಧ್ಯಯನದಲ್ಲಿ ತೊಡಗಿಸಬೇಕಾಗುತ್ತದೆ. ಆದುದರಿಂದ ವಂಚಿತ ಹಿನ್ನೆಲೆಯಿಂದ ಬಂದವರಿಗೆ ವಂಚನೆಯ ಅಥವಾ ಶೋಷಣೆಯ ತಕ್ಷಣದ ನೆಲೆಗಳನ್ನು ಸರಿಪಡಿಸಿಕೊಳ್ಳುವ ಭರದಲ್ಲಿ ಶೋಷಣೆಯ ಪರೋಕ್ಷ ಅಥವಾ ಮೇಲ್ನೋಟಕ್ಕೆ ಕಾಣದ ಸಂಗತಿಗಳತ್ತ ಗಮನ ಹರಿಸಲು ಸಾಧ್ಯವಾಗದಿರಬಹುದು.

ಈ ವಾದವನ್ನು ಕೂಡ ಎಲ್ಲ ಸಂದರ್ಭಗಳಲ್ಲೂ ಮತ್ತು ಸಮಯದಲ್ಲೂ ಅನ್ವಯವಾಗುತ್ತದೆ ಎಂದು ತಿಳಿಯಬೇಕಾಗಿಲ್ಲ. ಒಂದು ವೇಳೆ ವಂಚಿತ ಹಿನ್ನೆಲೆಯಿಂದ ಬಂದ ವ್ಯಕ್ತಿಗೆ ಸಂಶೋಧನಾ ಸಂಸ್ಥೆಯಲ್ಲೇ ಉದ್ಯೋಗ ದೊರೆತರೆ ಅಥವಾ ಕೆಲಸವೇ ಸಂಶೋಧನೆ ಮಾಡುವುದಾದರೆ ಮೇಲಿನ ಗ್ರಹಿಕೆ ಸರಿಹೋಗಲಿಕ್ಕಿಲ್ಲ. ಇಂತಹ ಸಂದರ್ಭದಲ್ಲಿ ಮೇಲಿನ ಗ್ರಹಿಕೆಯಲ್ಲಿ ಸಣ್ಣ ಬದಲಾವಣೆ ಮಾಡಿಕೊಳ್ಳಬೇಕಗುತ್ತದೆ. ಸಂಶೋಧನಾ ಸಂಸ್ಥೆಯಲ್ಲಿ ಸಂಶೋಧನೆ ಮಾಡುವುದು ಅಥವಾ ಇತರ ಸಂದರ್ಭದಲ್ಲಿ ಅಧ್ಯಯನ ಮಾಡುವ ಅವಕಾಶ ಮತ್ತು ವಿನಿಯೋಜನೆ ಮಾಡುವಷ್ಟು ಸಂಪನ್ಮೂಲ ಇದ್ದ ಕೂಡಲೇ ಸಂಶೋಧಕರು ತಾವು ಬಂದ ವರ್ಗ ಅಥವಾ ಸಮುದಾಯದ ಆಸಕ್ತಿಯನ್ನು ಪ್ರತಿನಿಧಿಸುವ ಅಧ್ಯಯನವನ್ನೇ ಮಾಡಬಹುದೆಂದು ನಂಬುವುದು ಕಷ್ಟ. ಯಾಕೆಂದರೆ ಸಂಶೋಧಕರ ದೃಷ್ಟಿಕೋನಗಳು ಮತ್ತು ಕ್ಷೇತ್ರ ಸಂಶೋಧನೆಯನ್ನು ಹೇಗೆ ಪ್ರಭಾವಿಸುತ್ತವೆ ಎಂದು ಈಗಾಗಲೇ ನೋಡಿದ್ದೇವೆ. ಥಿಯರಿ ಅಥವಾ ಐಡಿಯಾಲಜಿಗಳು ಸಂಶೋಧಕರ ದೃಷ್ಟಿಕೋನವನ್ನು ಸಾಕಷ್ಟು ಪ್ರಭಾವಿಸುತ್ತವೆ. ಏಕಕಾಲದಲ್ಲಿ ಹಲವಾರು ಐಡಿಯಾಲಜಿಗಳು ಪ್ರಚಲಿತದಲ್ಲಿರಬಹುದು. ಸಂಶೋಧಕರು ಎಲ್ಲ ಐಡಿಯಾಲಜಿಗಳನ್ನು ಪರಿಚಯ ಮಾಡಿಕೊಂಡು (ಅಂದರೆ ಅವುಗಳ ಪೂರ್ವಾಪರ ಅಥವಾ ಹಿನ್ನೆಲೆಗಳನ್ನು ತಿಳಿದುಕೊಂಡು) ಯಾವುದೋ ಒಂದರ ಮೂಲಕ ಪ್ರಪಂಚವನ್ನು ನೋಡಲು ಪ್ರಯತ್ನಿಸುತ್ತಾರೆಂದು ತಿಳಿಯುವುದು ಸರಿಯಲ್ಲ. ಬಹುತೇಕ ಸಂದರ್ಭದಲ್ಲಿ ಮೇಲ್ನೋಟಕ್ಕೆ ಕ್ರಾಂತಿಕಾರವಾಗಿ ಕಾಣುವ ಐಡಿಯಾಲಜಿಗಳಿಂದ ಪ್ರಭಾವಿತರಾಗಿ ಮೂಲಭೂತ ಪರಿವರ್ತನೆಗಳನ್ನು ಪ್ರೇರೇಪಿಸುವ ಐಡಿಯಾಲಜಿಗಳಿಂದ ದೂರ ಇರಬಹುದು. ಉದಾಹರಣೆಗೆ ವಂಚನೆಯನ್ನು ಅಥವಾ ಶೋಷಣೆಯನ್ನು ಪ್ರದರ್ಶನ ನೆಲೆಗಳಲ್ಲಿ ಮಾತ್ರ ಗ್ರಹಿಸಲು ಸಾಧ್ಯವಾಗುವ ದೃಷ್ಟಿಕೋನಗಳನ್ನು ನೀಡುವ ಐಡಿಯಾಲಜಿಗಳು. ಕೆಲವೊಂದು ಥಿಯರಿಗಳು ಒಟ್ಟು ಸಾಮಾಜಿಕ ಪರಿಸರವನ್ನು ಬಿಡಿಬಿಡಿಯಾಗಿ (ಸಾಮಾಜಿಕ, ಆರ್ಥಿಕ, ರಾಜಕೀಯ, ಸಾಂಸ್ಕೃತಿಕ ಇತ್ಯಾದಿ) ಮಂಡಿಸುತ್ತವೆ. ಸಮಾಜದ ಒಂದು ಪರಿಸರಕ್ಕೂ ಮತ್ತೊಂದು ಪರಿಸರಕ್ಕೂ ಇರುವ ಸಂಬಂಧದ ಬಗ್ಗೆ ಇಂತಹ ಥಿಯರಿಗಳು ಮೌನವಾಗಿರುತ್ತವೆ. ಉದಾಹರಣೆಗೆ ಸಾಮಾಜಿಕ ಪರಿಸರಕ್ಕೂ ಆರ್ಥಿಕ ಅಥವಾ ರಾಜಕೀಯ ಪರಿಸರಕ್ಕೂ ಇರುವ ಸಂಬಂಧದ ಬಗ್ಗೆ ಈ ಬಗೆಯ ತಿಳುವಳಿಕೆ ವಿಶೇಷ ಮಾಹಿತಿ ನೀಡದಿರಬಹುದು. ಇಂತಹ ಥಿಯರಿಗಳ ತಿಳುವಳಿಕೆ ಸಂಶೋಧಕರ ದೃಷ್ಟಿಕೋನವನ್ನು ಸಾಕಷ್ಟು ಪ್ರಭಾವಿಸಬಹುದು. ಇದು ಸಹಜವಾಗಿಯೇ ಸಂಶೋಧಕರ ಅಧ್ಯಯನವನ್ನು ಪ್ರಭಾವಿಸುತ್ತದೆ. ವಿವಿಧ ಪರಿಸರಗಳ ಸಂಬಂಧ ಮತ್ತು ಒಂದು ಮತ್ತೊಂದನ್ನು ಪ್ರಭಾವಿಸುವ ಪ್ರಕ್ರಿಯೆಯ ತಿಳುವಳಿಕೆ ಸೂಕ್ಷ್ಮ ಅಧ್ಯಯನಗಳಿಂದ ಮಾತ್ರ ಸಾಧ್ಯ. ಇದಕ್ಕೆ ಸಾಕಷ್ಟು ಪರಿಶ್ರಮದ ಜತೆಗೆ ಹಲವಾರು ತಾತ್ವಿಕ ನಿಲುವುಗಳ ತಕ್ಕಮಟ್ಟಿನ ಪರಿಚಯ ಕೂಡ ಅಗತ್ಯ.

ಈ ಎಲ್ಲವನ್ನು ಸಾಧಿಸಬೇಕಾದರೆ ಸಂಶೋಧಕರು ಹಲವಾರು ವರ್ಷ ಈ ಕ್ಷೇತ್ರದಲ್ಲಿ ದುಡಿಯಬೇಕಾಗುತ್ತದೆ. ಈ ಎಲ್ಲವನ್ನು ಸಾಧಿಸಿದ ನಂತರವು ಕೆಳವರ್ಗದ ಆಸಕ್ತಿಗಳನ್ನು ಕಾಪಾಡುವ ಸಂಶೋಧನೆ ಬಂದೇ ಬರುತ್ತದೆ ಎಂದು ತಿಳಿಯುವುದು ಸರಿಯಲ್ಲ. ಇಂದು ಸಂಶೋಧನೆ ಯಾವುದೋ ಸಂಸ್ಥೆಗಳಲ್ಲಿ ಅಥವಾ ವಿಶ್ವವಿದ್ಯಾಲಯಗಳಲ್ಲಿ ನಡೆಯುತ್ತಿದೆ. ಖಾಸಗೀಕರಣ ನೀತಿಯ ದಿಶೆಯಿಂದ ಇಂದು ಯಾವುದೂ ಪುಕ್ಕಟೆಯಾಗಿ ಸಿಗುತ್ತಿಲ್ಲ. ಪ್ರತಿಯೊಂದು ಮಾರುಕಟ್ಟೆ ನಿಯಮ ಪ್ರಕಾರ ನಡೆಯಬೇಕಾಗಿದೆ. ಆದುದರಿಂದ ಸಂಶೋಧನೆಗೆ ಸಿಗುವ ಧನಸಹಾಯ ಕೂಡ ನೇರವಾಗಿ ಅಥವಾ ಪರೋಕ್ಷವಾಗಿ ಮಾರುಕಟ್ಟೆ ನಿಯಮದಿಂದ ಪ್ರೇರಿತವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಸಂಶೋಧಕರ ವರ್ಗ ಅಥವಾ ಹಿನ್ನೆಲೆಯ ಆಸಕ್ತಿಗಳಿಗಿಂತ ಧನಸಹಾಯ ನೀಡುವವರ ಆಸಕ್ತಿಗಳಿಗೆ ಅನುಗುಣವಾಗಿ ಸಂಶೋಧನೆ ಮಡುವುದು ಅನಿವಾರ್ಯವಾಗುತ್ತದೆ. ಹೀಗೆ ಸತತ ಕೊರತೆಯ ಹಿನ್ನೆಲೆಯಿಂದ ಬಂದಂತಹ ಅಧ್ಯಯನಕಾರರು ತಮ್ಮ ಜನರ ಆಸಕ್ತಿಯನ್ನು ಕಾಪಡುವ ಸಂಶೋಧನೆಯಲ್ಲಿ ಒಮ್ಮಿಂದೊಮ್ಮೆಗೆ ತೊಡಗಿಸಿಕೊಳ್ಳುವುದು ಸ್ವಲ್ಪ ಕಷ್ಟದ ಕೆಲಸ. ಇಷ್ಟೆಲ್ಲಾ ಅಂಶಗಳನ್ನು ಚರ್ಚಿಸುವ ಮೂಲಕ ಮಹಿಳೆ ಅಥವಾ ದಲಿತ ವಿಷಯಗಳನ್ನು ಅಧ್ಯಯನ ಮಾಡಲು ಮಹಿಳೆ ಅಥವಾ ದಲಿತರಿಗಿರುವ ಹಕ್ಕುಗಳನ್ನು ಮೊಟಕುಗೊಳಿಸುವ ಉದ್ದೇಶವಲ್ಲ. ದಲಿತ ಅಥವಾ ಮಹಿಳಾ ವಿಷಯಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ದಲಿತ ಅಥವಾ ಮಹಿಳಾ ಸಂಶೋಧಕರಿಗೆ ಇರುವ ಅಡೆತಡೆಗಳನ್ನು ಗುರುತಿಸುವ ಉದ್ದೇಶ ಇಲ್ಲಿದೆ. ಇದು ಕೇವಲ ದಲಿತ ಅಥವಾ ಮಹಿಳಾ ಪ್ರಶ್ನೆಗಳಿಗೆ ಮತ್ರ ಅನ್ವಯಿಸುವುದಲ್ಲ; ವಂಚಿತ ಹಿನ್ನೆಲೆಯಿಂದ ಬಂದ ಎಲ್ಲ ಜನರಿಗೆ ಅನ್ವಯಿಸುತ್ತದೆ. ಜತೆಗೆ ಸಂಕಥನದಿಂದ ರೂಪಿಸಿಕೊಂಡ ಎಲ್ಲ ಗುರುತುಗಳಿಗೂ ಈ ವಾದ ಅನ್ವಯಿಸಬಹುದು. ಸಂಕಥನದಿಂದ ರೂಪಿಸಿಕೊಂಡ ಸಮುದಾಯಗಳ, ಗುರುತುಗಳ ಅಧ್ಯಯನ ಆಯಾಯ ಸಮುದಾಯಗಳ ಸದಸ್ಯರಿಂದ ಹೆಚ್ಚು ಪರಿಣಾಮಕಾರಿ ಎನ್ನುವುದು ಸರಿಯಲ್ಲ ಎಂಬುದನ್ನು ಇದರಿಂದ ತಿಳಿಯಬಹುದು. ಯಾಕೆಂದರೆ ಇಲ್ಲೂ ಹಲವಾರು ಸಣ್ಣಪುಟ್ಟ ಚಾರಿತ್ರಿಕ ಸಮುದಾಯಗಳು ಸೇರಿ ದೊಡ್ಡ ಸಮುದಾಯ ರೂಪಿತಗೊಂಡಿದೆ. ಸಣ್ಣಪುಟ್ಟ ಸಮುದಾಯಗಳು ತಮ್ಮದೇ ಆದ ಹೊರಗಿನವರು ಮತ್ತು ನಮ್ಮವರು ಎನ್ನುವ ಕಲ್ಪನೆಯನ್ನು ಜೀವಂತ ಇರಿಸಿಕೊಂಡಿರುತ್ತವೆ. ದಲಿತ ಅಥವಾ ಮಹಿಳಾ ಸಂಶೋಧಕರನ್ನು ಕೂಡ ದಲಿತ ಅಥವಾ ಮಹಿಳಾ ಪರಿಕಲ್ಪನೆಯೊಳಗೆ ಬರುವ ಚಾರಿತ್ರಿಕವಾಗಿ ರೂಪುಗೊಂಡ ಸಣ್ಣಪುಟ್ಟ ಸಮುದಾಯಗಳು ತಮ್ಮ ಹೊರಗಿನವರು ಮತ್ತು ನಮ್ಮವರು ಎನ್ನುವ ಪರಿಕಲ್ಪನೆಗಳ ಮೂಲಕವೇ ಅಳೆಯುತ್ತವೆ. ಅದುದರಿಂದ ದಲಿತ ಮತ್ತು ಮಹಿಳೆ ಎನ್ನುವ ಕಾರಣಕ್ಕಾಗಿ ಸಂಶೋಧಕರಿಗೆ ದಲಿತ ಅಥವಾ ಮಹಿಳಾ ಲೋಕದೊಳಗೆ ಬರುವ ಎಲ್ಲ ವಾಸ್ತವಕ್ಕೆ ಪ್ರವೇಶ ಇದೆ ಎಂದು ತಿಳಿಯುವುದು ಸರಿಯಲ್ಲ. ಇದೇ ರೀತಿ ವರ್ಗ ಪ್ರಶ್ನೆ ಕೂಡ ಸಂಶೋಧಕರಿಗೆ ಕೆಲವೊಂದು ವಾಸ್ತವಗಳಿಗೆ ಪ್ರವೇಶ ಇಲ್ಲದಂತೆ ಮಾಡುತ್ತವೆ.

ಮಾನವತಾ ಯಜಮಾನಿಕೆ ಗುಣಗಳು ಸಮಾಜ ಸಂಶೋಧಕರ ಗುಣಗಳ ಭಾಗವಾಗುವುದರಲ್ಲಿ ವಸಾಹತು ಸಂದರ್ಭದ ಅಧಿಕಾರ ಸಂಬಂಧಗಳು ಮತ್ತು ಸಾಂಸ್ಕೃತಿಕ ಭಿನ್ನತೆಗಳು ದೊಡ್ಡ ಪಾತ್ರ ವಹಿಸಿವೆ. ಸ್ಥಳೀಯ ಸಂಶೋಧಕರು ತಮ್ಮದೇ ಸಮಾಜದ ಬಗ್ಗೆ ವಸಾಹತು ಸಂದರ್ಭದ ಮಾನವತಾ ಯಜಮಾನಿಕೆ ಪ್ರವೃತ್ತಿಯನ್ನು ರೂಢಿಸಿಕೊಳ್ಳುವುದಕ್ಕೆ ಎರಡು ಸಂಗತಿಗಳು ಕಾರಣವಾಗಿವೆ. ಒಂದು, ಸಂಶೋಧಕರ ಓದು ಮತ್ತೊಂದು ಅವರ ಪರಿಸರ. ತನ್ನದಲ್ಲದ ಪರಿಸರದಲ್ಲಿ ರೂಪುಗೊಂಡ ಥಿಯರಿಗಳು ಸಂಶೋಧಕರ ದೃಷ್ಟಿಕೋನವನ್ನು ಮತ್ತು ಆ ಮೂಲಕ ಅವರು ಸೃಷ್ಟಿಸುವ ಜ್ಞಾನವನ್ನು ಹೇಗೆ ಪ್ರಭಾವಿಸುತ್ತವೆ ಎನ್ನುವುದನ್ನು ಮೇಲಿನ ಚರ್ಚೆ ಸ್ಪಷ್ಟಪಡಿಸಲು ಪ್ರಯತ್ನಿಸಿದೆ. ಇದೇ ಸಂದರ್ಭದಲ್ಲಿ ಈ ಪ್ರಕ್ರಿಯೆಯ ಒಟ್ಟು ಪರಿಣಾಮದ ಬಗ್ಗೆ ಕೂಡ ಗಮನ ಹರಿಸುವ ಅಗತ್ಯ ಇದೆ. ಪರಕೀಯ  ಥಿಯರಿಗಳಿಂದ ರೂಪಿತವಾದ ದೃಷ್ಟಿಕೋನ ಎರಡು ರೀತಿಯ ಪರಿಣಾಮಗಳನ್ನು ಮಾಡುತ್ತದೆ. ಒಂದು, ತನ್ನದರ ಬಗ್ಗೆ ಕೀಳರಿಮೆ ಬೆಳೆಸಿಕೊಳ್ಳುವುದು. ಈ ಬಗೆಯ ಜ್ಞಾನಕ್ಕೆ ತೆರೆದುಕೊಂಡ ವ್ಯಕ್ತಿ ತನ್ನದರ ಬಗ್ಗೆ (ತಾನು ಬದುಕುವ ಪರಿಸರ, ಸಂಬಂಧ ಇತ್ಯಾದಿಗಳ ಬಗ್ಗೆ) ಒಂದು ಬಗೆಯ ಕೀಳರಿಮೆಯನ್ನು ಬೆಳೆಸಿಕೊಳ್ಳುವಂತೆ ಮಾಡುತ್ತದೆ. ಎರಡು, ಈ ಬಗೆಯ ಜ್ಞಾನಕ್ಕೆ ಸೀಮಿತ ಆನ್ವಯಿಕತೆ ಇರುತ್ತದೆ. ತಾನು ಹುಟ್ಟಿ ಬೆಳೆದ ಮತ್ತು ಬದುಕುವ ಪರಿಸರದ ಸಮಸ್ಯೆಗಳ ಪರಿಹಾರ ಈ ಬಗೆಯ ಜ್ಞಾನದಿಂದ ಸಾಧ್ಯವಿಲ್ಲ ಅಥವಾ ವ್ಯಕ್ತಿಯೊಬ್ಬ ತಾನು ಹುಟ್ಟಿ ಬೆಳೆದ ಪರಿಸರದ ಸಮಸ್ಯೆಗಳ ಪರಿಹಾರಕ್ಕೆ ಈ ಬಗೆಯ ಜ್ಞಾನವನ್ನು ಅನ್ವಯಿಸಲು ಸಾಧ್ಯವಾಗುವುದಿಲ್ಲ. ಅಧ್ಯಾಯದ ಆರಂಭದಲ್ಲಿ ಪರಕೀಯ ಜ್ಞಾನ ಎನ್ನುವಾಗ ಪಶ್ಚಿಮದ ಥಿಯರಿಗಳಿಂದ ರೂಪಿತ ಜ್ಞಾನ ಎನ್ನುವ ಅಂಶ ಹೆಚ್ಚು ಪ್ರಖರವಾಗಿ ಗೋಚರವಾಗುತ್ತದೆ. ಆದರೆ ಅಧ್ಯಾಯದ ಮುಂದಿನ ಭಾಗದಲ್ಲಿ ಪರಕೀಯತೆಗೆ ಕೇವಲ ಪಶ್ಚಿಮದ ತಿಯರಿಗಳು ಮಾತ್ರ ಕಾರಣವಲ್ಲ, ತಮ್ಮದೇ ಸಮಾಜದ ಏಣಿಶ್ರೇಣಿಗಳು ಕೂಡ ಕಾರಣ ಎನ್ನುವ ಅಂಶ ಮುಂಚೂಣಿಗೆ ಬಂದಿದೆ. ಸಂಸ್ಕೃತಿ, ಕ್ಲಾಸ್, ರಾಜಕೀಯ, ಲಿಂಗ, ಭಾಷೆ, ಧರ್ಮ, ಪ್ರದೇಶ ಇತ್ಯಾದಿ ನೆಲೆಯಲ್ಲಿ ಏಣಿಶ್ರೇಣಿಗಳು ರೂಪುಗೊಂಡಿವೆ. ಈ ಏಣಿಶ್ರೇಣಿಯ ನೆಲೆಗಳು ‘ನಮ್ಮವರು’ ಮತ್ತು ‘ಹೊರಗಿನವರು ಅಥವಾ ಪರಕೀಯರು’ ಎನ್ನುವ ನಮ್ಮ ಪರಿಕಲ್ಪನೆಗಳನ್ನು ನಿರ್ವಚಿಸುತ್ತವೆ. ಸಂಶೋಧನೆ ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ ಸಂಶೋಧಕರ ಸ್ಥಾನ (ಹೊರಗಿನವರು ಅಥವಾ ನಮ್ಮವರು) ಅವರಿಗೆ ಸಿಗುವ ಮಾಹಿತಿಯನ್ನು ಸಾಕಷ್ಟು ಪ್ರಭಾವಿಸುತ್ತದೆ. ಅಂದರೆ ಕ್ಷೇತ್ರ ಸಂಶೋಧಕರು ಪಡೆಯಬಹುದಾದ ಜ್ಞಾನವನ್ನು ಪ್ರಭಾವಿಸುವುದು. ಅಷ್ಟು ಮಾತ್ರವಲ್ಲ, ಅವರ ಈ ಹಿನ್ನೆಲೆ ಅವರ ದೃಷ್ಟಿಕೋನವನ್ನು ಕೂಡ ಸಾಕಷ್ಟು ಪ್ರಭಾವಿಸುತ್ತದೆ. ಇದು ಸಹಜವಾಗಿಯೇ ಅವರು ಸೃಷ್ಟಿಸುವ ಜ್ಞಾನವನ್ನು ಕೂಡ ಪ್ರಭಾವಿಸುತ್ತದೆ. ಪಶ್ಚಿಮದ ಥಿಯರಿ ಹಾಗೂ ವಿಧಾನಗಳು ಸಮಾಜ ವಿಜ್ಞಾನವನ್ನು ಪ್ರಭಾವಿಸಿದಷ್ಟೇ ಪ್ರಮಾಣದಲ್ಲಿ ನಮ್ಮ ಸಮಾಜದಲ್ಲಿನ ಏಣಿಶ್ರೇಣಿಗಳು ಮತ್ತು ಅಧಿಕಾರ ಸಂಬಂಧಗಳು ಕೂಡ ಸಮಾಜವಿಜ್ಞಾನದ ಹೆಸರಲ್ಲಿ ಸಂಶೋಧಕರು ಸೃಷ್ಟಿಸುವ ಜ್ಞಾನವನ್ನು ಪ್ರಭಾವಿಸುತ್ತವೆ.

* * *

[1] ಈ ಅನುಭವಗಳನ್ನು ಹಂಚಿಕೊಳ್ಳುವ ಮಾನವಶಾಶ್ತ್ರ ಮತ್ತು ಸಮಾಜಶಾಸ್ತ್ರ ಸಂಶೋಧಕರ ಹಲವಾರು ಬರಹಗಳಿವೆ. ಅವುಗಳಲ್ಲಿ ಕೆಲವನ್ನು ಇಲ್ಲಿ ಕೊಟ್ಟಿದ್ದೇನೆ. ೧. ಆಂಡ್ರೆ ಬಿಟೆ ಮತ್ತು ಟಿ.ಎನ್. ಮದನ್ (ಸಂ), ಎನ್ಕೌಂಟರ್ ಆಂಡ್ ಎಕ್ಸ್ಪೀರಿಯನ್ಸ್, ಡೆಲ್ಲಿ: ವಿಕಾಸ್ ಪಬ್ಲಿಷಿಂಗ್‌ಹೌಸ್, ೧೯೭೫, ೨. ಸಿ.ಜಿ. ಹುಸೇನ್ ಖಾನ್, ‘ಆಂಥ್ರಾಪಾಲಜಿಸ್ ಕಮಿಂಗ್ ಹೋಮ್ ರಿಕನ್‌ಸಿಡರ‍್ಡ್’, ಮೇನ್ ಇನ್ ಇಂಡಿಯಾ, ೭೩(೧),೧೯೯೩, ಪು. ೬೫-೭೭.

[2] ಎಂ.ಎನ್. ಶ್ರೀನಿವಾಸ್ ಊರ ಗೌಡರ ಮನೆಯಲ್ಲಿದ್ದುಕೊಂಡು ಸಂಶೋಧನೆ ಮಾಡುವಾಗ ದಲಿತರ ಸಂದರ್ಶನಕ್ಕೆ ಕೇರಿಗೆ ಹೋಗಿರುವುದೇ ಹೇಗೆ ಹಳ್ಳಿಯಲ್ಲಿ ಒಂದು ದೊಡ್ಡ ಸುದ್ದಿಯಾಯಿತೆಂದು ವಿವರಿಸಿದಾರೆ. ವಿವರಗಳಿಗೆ ಅವರ ‘ರಿಮೆಂಬರ‍್ಡ್ ವಿಲೇಜ್’ ಪುಸ್ತಕ ನೋಡಬಹುದು.

[3] ಎಂ.ಎನ್. ಶ್ರೀನಿವಾಸ್ ಅವರ, ‘ದಿ ಫೀಲ್ಡ್ ವರ್ಕರ್ ಆಂಡ್ ದಿ ಫೀಲ್ಡ್, – ಎ ವಿಲೇಜ್ ಕರ್ನಾಟಕ’ ಎನ್ನುವ ಲೇಖನ, ಎಂ.ಎನ್. ಶ್ರೀನಿವಾಸ್, ಎ.ಎಂ.ಶಾ, ಎ.ಎಂ.ಶಾ, ಇ.ಎ. ರಾಮಸ್ವಾಮಿ (ಸಂ), ದಿ ಫೀಲ್ಡ್ವರ್ಕರ್ ಆಂಡ್ ದಿ ಫೀಲ್ಡ್, (ನ್ಯೂಡೆಲ್ಲಿ: ಆಕ್ಸ್‌ಫರ್ಡ್‌ಯೂನಿವರ್ಸಿಟಿ ಪ್ರೆಸ್, ೨೦೦೨) ಪುಸ್ತಕದಲ್ಲಿ ನೋಡಬಹುದು.

[4] ಅನಿತಾ ಎ. ಮಿನೋಚ ಅವರು ಆಸ್ಪತ್ರೆಯಲ್ಲಿ ಕ್ಷೇತ್ರಕಾರ್ಯ ಮಾಡಿದಾಗ ಆದ ಅನುಭವವನ್ನು ತಮ್ಮ ಲೇಖನ, ‘ವೇರಿಡ್ ರೋಲ್ಸ್ ಇನ್ ದಿ ಫೀಲ್ಡ್ – ಎ ಹಾಸ್ಪಿಟಲ್ ಇನ್‌ಡೆಲ್ಲಿ’ದಲ್ಲಿ ಸಂಶೋಧಕಳಾಗಿ ಆಸ್ಪತ್ರೆಯಲ್ಲಿ ಓಡಾಡಲು ಕುಳಿತುಕೊಳ್ಳಲು, ಮಾತಾಡಲು ಪಟ್ಟಿ ಪಾಡನ್ನು ವಿವರಿಸಿದ್ದಾರೆ. ಆಸ್ಪತ್ರೆ ಎನ್ನುವ ಸಂಸ್ಥೆಯೊಳಗೆ ಎಲ್ಲ ಪಾತ್ರಗಳು ಪೂರ್ವ ನಿರ್ಧರಿತ. ಅದರೊಳಗೆ ಸಂಶೋಧಕರನ್ನು ಎಲ್ಲಿ ಫಿಕ್ಸ್ ಮಾಡಬೇಕೆನ್ನುವುದು ಸಂಸ್ಥೆಯೊಳಗಿನವರಿಗೆ ಮತ್ತು ಸಂಶೋಧಕರಿಗೆ ಇಬ್ಬರಿಗೂ ದೊಡ್ಡ ಸಮಸ್ಯೆ ಎಂದು ಲೇಖಕಿ ಅಭಿಪ್ರಾಯ ಪಡುತ್ತಾರೆ. ಈ ಲೇಖನ ಎಂ.ಎನ್. ಶ್ರೀನಿವಾಸ್, ಎ.ಎಂ.ಶಾ, ಇ.ಎ. ರಾಮಸ್ವಾಮಿ (ಸಂ), ದಿ ಫೀಲ್ಡ್ವರ್ಕರ್ಆಂಡ್ ದಿ ಫೀಲ್ಡ್, ನ್ಯೂಡೆಲ್ಲಿ: ಆಕ್ಸ್‌ಫರ್ಡ್‌ಯುನಿವರ್ಸಿಟಿ ಪ್ರೆಸ್, ೨೦೦೨, ಪುಸ್ತಕದಲ್ಲಿ ಪ್ರಕಟವಾಗಿದೆ.

[5] ಈ ವಾದ ಚಾಲ್ತಿಗೆ ಬರಲು ಹಲವಾರು ಕಾರಣಗಳಿವೆ. ಅವುಗಳಲ್ಲಿ ಪ್ರಮುಖವಾದುದು ಮೇಲೆ ವಿವರಿಸಿದ ವಿಜ್ಞಾನದ ವಿಧಾನದ ದೋಷಗಳು. ಅವುಗಳ ಜತೆಗೆ ಪಶ್ಚಿಮದ ಯಜಮಾನಿಕೆ ಪ್ರವೃತ್ತಿ. ತನ್ನ ಚರಿತ್ರೆ, ತನ್ನ ಸಂಸ್ಕೃತಿ ಮಾತ್ರ ಉತ್ಕೃಷ್ಟ, ಇತರ ಸಂಸ್ಕೃತಿಗಳು ತಮ್ಮ ಮಾದರಿಯನ್ನು ಅನುಸರಿಸುವ ಮೂಲಕ ಮೋಕ್ಷ ಸಾಧ್ಯ ಎನ್ನುವ ಪಶ್ಚಿಮದ ನಿಲುವು ಕೂಡ (ಆಯಾಯ ಸಂಸ್ಕೃತಿಯನ್ನು ಆಯಾಯ ಸಂಸ್ಕೃತಿಯಲ್ಲಿ ಹುಟ್ಟಿ ಬೆಳೆದವರು ಮಾತ್ರ ಅರ್ಥ ಮಾಡಿಕೊಳ್ಳಲು ಸಾಧ್ಯ ಎನ್ನುವ ನಿಲುವನ್ನು) ಬಲಗೊಳ್ಳಲು ಕಾರಣವಾಗಿದೆ. ಆಧುನಿಕೋತ್ತರ ಚಿಂತನೆಗಳ ಯಜಮಾನಿಕೆಯೊಂದಿಗೆ ಈ ನಿಲುವು ಬಲಗೊಂಡಿತು. ಆದರೆ ಇದು ಆಧುನಿಕೋತ್ತರ ಚಿಂತನೆಯ ಕೊಡುಗೆಯೆಂದು ತಿಳಿಯುವುದು ಸರಿಯಲ್ಲ. ಮಾನವಶಾಸ್ತ್ರಜ್ಞರು ಈ ನಿಲುವಿಗೆ ಪೂರಕವಾಗುವ ಹಲವಾರು ಅಂಶಗಳನ್ನು ಆದಿಯಿಂದಲೇ ಹೇಳುತ್ತಾ ಬಂದಿದ್ದಾರೆ. ಪ್ರತಿಯೊಂದು ಸಂಸ್ಕೃತಿಗೂ ಕೂಡ ಅದರದ್ದೇ ಆದ ರಾಜಕೀಯ, ಆರ್ಥಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಬದುಕಿನ ಕಲ್ಪನೆಗಳಿವೆ ಮತ್ತು ಅದನ್ನು ಅರ್ಥ ಮಾಡಿಕೊಳ್ಳಬೇಕಾದರೆ ಅದೇ ಪರಿಸರದಲ್ಲಿ ಬದುಕಬೇಕೆನ್ನುವುದು ಅವುಗಳಲ್ಲಿ ಪ್ರಮುಖ ಅಂಶ.