ಸಂಶೋಧನಾ ವಿಧಾನಗಳ ತಾತ್ವಿಕ ನೆಲೆಗಳ ಸಂಶೋಧಕರನ್ನು ಹಾಗೂ ಸಂಶೋಧನೆಗೆ ಒಳಗಾಗುವ ಸಂಗತಿಗಳನ್ನು ಹೇಗೆ ಪರಿಭಾವಿಸಿಕೊಂಡಿವೆ ಎನ್ನುವುದರ ವಿಶ್ಲೇಷಣೆಯನ್ನು ಹಿಂದಿನ ಅಧ್ಯಾಯದಲ್ಲಿ ನೋಡಿದ್ದೇವೆ. ಹಾಗೆಂದು ಸಂಶೋಧಕರ ದೃಷ್ಟಿಕೋನವನ್ನು ಮತ್ತು ಸಂಶೋಧನೆಯನ್ನು ಸಂಶೋಧನಾ ವಿಧಾನಕ್ಕೆ ಸಂಬಂಧಿಸಿದ ತಾತ್ವಿಕ ಹಿನ್ನೆಲೆಗಳು ಮಾತ್ರ ಪ್ರಭಾವಿಸುವುದಷ್ಟೇ ಅಲ್ಲ; ಅವುಗಳನ್ನು ಹೊರತುಪಡಿಸಿದ ಸಂಗತಿಗಳು ಕೂಡ ಪ್ರಭಾವಿಸುತ್ತವೆ.[1] ಸಂಶೋಧನೆ ನಿರ್ವಾತದಲ್ಲಿ ನಡೆಯುವ ಪ್ರಕ್ರಿಯೆಯಲ್ಲ; ಯಾವುದೋ ಒಂದು ಚಾರಿತ್ರಿಕ ಘಟ್ಟದಲ್ಲಿನ ಸಾಮಾಜಿಕ ಪರಿಸರದಲ್ಲಿ ನಡೆಯುವ ಪ್ರಕ್ರಿಯೆ. ಆ ಸಾಮಾಜಿಕ ಪರಿಸರದಲ್ಲಿ ಒಳ್ಳೆಯ ಸಮಾಜದ ಕಲ್ಪನೆಗಳನ್ನು ಕಟ್ಟಿಕೊಡುವ ಹಲವಾರು ತಾತ್ವಿಕ ನಿಲುವುಗಳು, ಸಾಮಾಜಿಕ ಏಣಿಶ್ರೇಣಿಗಳು, ಅಧಿಕಾರ ಸಂಬಂಧಗಳು, ಆರ್ಥಿಕ ಸ್ಥಾನಮಾನಗಳು ಇತ್ಯಾದಿಗಳು ಇವೆ. ಅಷ್ಟು ಮಾತ್ರವಲ್ಲ, ಇವೆಲ್ಲ ತಮ್ಮದೇ ರೀತಿಯಲ್ಲಿ ಸಂಶೋಧನೆಯನ್ನು ಪ್ರಭಾವಿಸಬಹುದು.[2] ಹಿಂದಿನ ಅಧ್ಯಾಯದಲ್ಲಿ ಸಂಶೋಧಕರು ಮತ್ತು ಸಂಶೋಧನೆಗೆ ಒಳಪಡುವ ಸಂಗತಿಗಳ ಮೇಲೆ ಗಮನಹರಿಸುವ ಭರದಲ್ಲಿ ಸಂಶೋಧನಾ ಪ್ರಕ್ರಿಯೆ ನಡೆಯುವ ಸಮಾಜ, ಸಮುದಾಯ, ವಿಚಾರ ಇತ್ಯಾದಿಗಳ ಬಗ್ಗೆ ಗಮನಹರಿಸಿಯೇ ಇಲ್ಲ. ಈ ಎಲ್ಲ ಸಂಗತಿಗಳು ಸಂಶೋಧಕರ ದೃಷ್ಟಿಕೋನವನ್ನು ಮತ್ತು ಆ ಮೂಲಕ ಸಂಶೋಧನೆಯನ್ನು ಹೇಗೆ ಪ್ರಭಾವಿಸುತ್ತವೆ ಎನ್ನುವುದರ ವಿಶ್ಲೇಷಣೆಯನ್ನು ಈ ಅಧ್ಯಾಯದಲ್ಲಿ ಮಾಡಲಾಗಿದೆ. ಅಧ್ಯಾಯದ ವಿವರಗಳನ್ನು ಎರಡು ಭಾಗದಲ್ಲಿ ನೀಡಲಾಗಿದೆ. ಸಮಾಜ ಸಂಶೋಧನೆ ಭಾರತದಲ್ಲಿ ಆರಂಭವಾದ ಸಂದರ್ಭದಲ್ಲಿನ ಸ್ಥಿತಿಗತಿ ಮತ್ತು ಆ ಚಾರಿತ್ರಿಕ ಸಂದರ್ಭದಲ್ಲಿ ರೂಢಿಸಿಕೊಂಡ ಕೆಲವೊಂದು ಗುಣಗಳು ಇಂದು ಕೂಡ ಯಾಕೆ ಸಮಾಜ ಸಂಶೋಧನೆಯ ಭಾಗವಾಗಿವೆ ಎನ್ನುವ ವಿವರಗಳನ್ನು ಭಾಗ ಒಂದರಲ್ಲಿ ನೀಡಲಾಗಿದೆ. ಸಾಮಾಜಿಕ ಏಣಿಶ್ರೇಣಿಗಳು, ಅಧಿಕಾರ ಸಂಬಂಧಗಳು, ಆರ್ಥಿಕ ಸ್ಥಾನಮಾನಗಳು ಇತ್ಯಾದಿ ಮತ್ತು ಸಂಶೋಧನೆ ನಡುವೆ ಇರುವ ಸಂಬಂಧವನ್ನು ಭಾಗ ಎರಡರಲ್ಲಿ ವಿವರಿಸಲಾಗಿದೆ.

ಭಾಗ

ಇಂದು ವಿವಿಧ ಸಂಸ್ಥೆಗಳಲ್ಲಿ ಚಾಲ್ತಿಯಲ್ಲಿರುವ ಸಂಶೋಧನೆ ವಸಾಹತು ಸಂದರ್ಭದಲ್ಲಿ ಭಾರತಕ್ಕೆ ಬಂದ ಪಶ್ಚಿಮದ ಕೊಡುಗೆ. ಶಿಸ್ತು ಬದ್ಧ ಸಂಶೋಧಕರೆಂದು ಅಂದು ಭಾರತದಲ್ಲಿ ಕೆಲಸ ಮಾಡಿದವರೆಂದರೆ ಮಾನವಶಾಸ್ತ್ರಜ್ಞರು.[3] ತಮ್ಮದಲ್ಲದ ಸಂಸ್ಕೃತಿಯ ಅಧ್ಯಯನ ಮಾಡಬೇಕೆನ್ನುವುದು ಮಾನವಶಾಸ್ತ್ರಜ್ಞರಿಗೆ ಅವರ ಅಧ್ಯಯನ ವಿಧಾನದಲ್ಲೇ ಅಡಕವಾಗಿರುವ ಒಂದು ಶರತ್ತು.[4] ಆದುದರಿಂದ ಅವರು ಪರಕೀಯ ಸಂಸ್ಕೃತಿಯನ್ನು ಅಧ್ಯಯನ ಮಾಡುವುದು ಅನಿವಾರ್ಯವಾಗಿತ್ತು. ಪರಕೀಯ ಸಂಸ್ಕೃತಿಯ ಅಧ್ಯಯನಕಾರರಾಗಿ ಅವರು ನೆಲೆಗೊಳ್ಳುವ ಸಂದರ್ಭ ಮತ್ತು ಅವರ ಹಿನ್ನೆಲೆ ಅಧ್ಯಯನಕಾರರಾಗಿ ಅವರ ಸ್ಥಾನಮಾನವನ್ನು ಪ್ರಭಾವಿಸಿವೆ. ಅಧಿಕಾರ ಮತ್ತು ನೈತಿಕತೆಯ ದೃಷ್ಟಿಯಿಂದ ಪರಕೀಯ ಸಂಸ್ಕೃತಿಗಳ ಅಧ್ಯಯನಕಾರರು ಯಜಮಾನಿಕೆ ಸ್ಥಾನದಲ್ಲಿ ಇದ್ದರು. ವಸಾಹತು ಸರಕಾರ ಅವರ ಅಧಿಕಾರದ ಹಿನ್ನೆಲೆಯನ್ನು ಸಾರಿದರೆ, ಬಿಳಿಯರು ಎಲ್ಲ ರೀತಿಯಿಂದ ಮುಂದುವರಿದ ಸಂಸ್ಕೃತಿಗೆ ಸೇರಿದವರು ಎನ್ನುವುದು ಅವರ ನೈತಿಕ ಯಜಮಾನಿಕೆಯನ್ನು ಗಟ್ಟಿಗೊಳಿಸಿದ್ದವು. ಮೇಲಿನ ಹಿನ್ನೆಲೆ ಅವರಲ್ಲಿ ಕೆಲವೊಂದು ನಂಬಿಕೆಗಳನ್ನು ಬೆಳೆಸಿದ್ದವು. ಒಂದು, ತಾವು ಹುಟ್ಟಿ ಬೆಳೆದ ಸಂಸ್ಕೃತಿಗಿಂತ ತಾವು ಅಧ್ಯಯನ ಮಾಡುವ ಸಂಸ್ಕೃತಿಗಳು ಹಲವಾರು ವಿಚಾರಗಳಲ್ಲಿ (ವಿಜ್ಞಾನ, ತಂತ್ರಜ್ಞಾನ, ಸಂಪತ್ತು, ಕೆಲವೊಂದು ಮೌಲ್ಯಗಳು ಇತ್ಯಾದಿಗಳ ದೃಷ್ಟಿಯಿಂದ) ಶತಮಾನಗಳಷ್ಟು ಹಿಂದೆ ಇವೆ. ಎರಡು, ತಮ್ಮ ಅಧ್ಯಯನ ಉದ್ದೇಶ ಕೇವಲ ಆ ಸಂಸ್ಕೃತಿಗಳನ್ನು ಅರ್ಥ ಮಾಡಿಕೊಳ್ಳುವುದು ಮಾತ್ರ ಅಲ್ಲ; ಅವುಗಳನ್ನು ಉದ್ಧಾರ ಮಡುವುದು ಕೂಡ ಆಗಿದೆ ಎಂದು ನಂಬಿದ್ದರು. ಹೀಗೆ ಅಧ್ಯಯನಕಾರರು ಒಂದು ಬಗೆಯ ಮಾನವತಾ ಯಜಮಾನಿಕೆ ಪ್ರವೃತ್ತಿಯನ್ನು ರೂಢಿಸಿಕೊಳ್ಳುವುದ ಸಾಮಾನ್ಯವಾಯಿತು. ಇಂತಹ ಯಜಮಾನಿಕೆ ಪ್ರವೃತ್ತಿಯ ಮುಖ್ಯ ಲಕ್ಷಣವೆಂದರೆ ಅಧ್ಯಯನಕ್ಕೆ ಒಳಗಾಗುವ ಸಂಸ್ಕೃತಿ ಅಥವಾ ವ್ಯಕ್ತಿ ಅಥವಾ ಸಮುದಾಯ ಎಲ್ಲ ಬಗೆಯಲ್ಲೂ ಕೆಳಗಿನ ಸ್ಥಾನವನ್ನು ಪಡೆದು ಸಂಶೋಧಕರು ತಮಗೆ ಅರಿವಿಲ್ಲದೆ ಮೇಲಿನ ಸ್ಥಾನವನ್ನು ಆವರಿಸಿಕೊಂಡಿರುತ್ತಾರೆ.[5]

ವಸಾಹತುಗಳು ಬಂದು ಹೋದವು. ಆದರೆ ಅವು ಬಿಟ್ಟು ಹೋದ ಸಂಶೋಧನಾ ವಿಧಾನ ಮತ್ತು ಸಂಶೋಧಕರು ರೂಢಿಸಿಕೊಂಡ ಮಾನವತಾ ಯಜಮಾನಿಕೆ ಪ್ರವೃತ್ತಿ ನಮ್ಮನ್ನು ಬಿಟ್ಟು ಹೋಗಲಿಲ್ಲ.[6] ಅದಕ್ಕೆ ಎರಡು ಕಾರಣಗಳನ್ನು ಗುರುತಿಸಬಹುದು. ಒಂದು ಥಿಯರಿಯ ಸಮಸ್ಯೆ ಅಥವಾ ಸಮಾಜವಿಜ್ಞಾನದ ಹುಟ್ಟಿಗೆ ಸಂಬಂಧಿಸಿದ ಸಮಸ್ಯೆ. ಎರಡು, ಸ್ಥಳೀಯ ಸಂಶೋಧನಾ ವರ್ಗದ ಸಮಸ್ಯೆ. ಮೊದಲಿಗೆ ಥಿಯರಿ ಸಮಸ್ಯೆ ಏನೆಂದು ಪರಿಶೀಲಿಸುವ. ಸಮಾಜವಿಜ್ಞಾನ ಮೂಲತಃ ಪಶ್ಚಿಮದ ಕೊಡುಗೆ. ಸಮಾಜವಿಜ್ಞಾನದ ಬಹುತೇಕ ಥಿಯರಿಗಳು ಪಶ್ಚಿಮದ ಸಮಾಜಗಳನ್ನು ಆಧರಿಸಿ ರೂಪುಗೊಂಡಿವೆ. ಅಷ್ಟು ಮಾತ್ರವಲ್ಲ ಸಮಾಜವಿಜ್ಞಾನದಲ್ಲಿ ಬಳಕೆಯಾಗುವ ಹಲವಾರು ಪಾರಿಭಾಷಿಕ ಪದಗಳು (ಕೆಟಗರಿಗಳು) ಪಶ್ಚಿಮದ ಸಾಮಾಜಿಕ ಬೆಳವಣಿಗೆಯನ್ನು ಆಧರಿಸಿವೆ. ಸಮಾಜ, ಅರ್ಥ, ರಾಜಕೀಯ ಶಾಸ್ತ್ರಗಳಲ್ಲಿ ಯೂನಿವರ್ಸಾಲಿಟಿ ಹೇಗೆ ಅಂತರ್ಗತಗೊಂಡಿತು ಮತ್ತು ಪಶ್ಚಿಮದ ಅನುಭವಗಳು ಹೇಗೆ ಸಮಾಜ ಥಿಯರಿಗಳಿಗೆ ಸಾಮಗ್ರಿ ಒದಗಿಸಿವೆ ಇತ್ಯಾದಿ ವಿವರಗಳನ್ನು ಅಧ್ಯಾಯ ಒಂದರಲ್ಲಿ ನೀಡಲಾಗಿದೆ.[7] ವಸಾಹತು ಮತ್ತು ನಂತರದ ಆಧುನೀಕರಣ ಸಂದರ್ಭದಲ್ಲಿ ಪಶ್ಚಿಮದಲ್ಲಿ ಹುಟ್ಟಿ ಬೆಳೆದ ಸಮಾಜವಿಜ್ಞಾನ ಭಾರತ ಮತ್ತು ಇತರ ಅಭಿವೃದ್ಧೀಶೀಲ ದೇಶಗಳಲ್ಲಿ ಪಸರಿಸಿತು. ಆದರೆ ಇವು (ಪಶ್ಚಿಮದಲ್ಲಿ ಹುಟ್ಟಿ ಬೆಳದ ಥಿಯರಿಗಳು ಮತ್ತು ಪರಿಭಾಷಾ ಪದಗಳು) ನಮ್ಮ ಅಥವಾ ಪೂರ್ವದ ಅಥವಾ ಪಶ್ಚಿಮೇತರ ಸಮಾಜಗಳ ವಾಸ್ತವತೆಯನ್ನು ಹಿಡಿದುಕೊಡುವಲ್ಲಿ ಶಕ್ತವಾಗಿಲ್ಲ. ಆದರೂ ಈ ಥಿಯರಿಗಳು ವಸಾಹತೋತ್ತರ ನಮ್ಮ ಬದುಕನ್ನು ಆವರಿಸಿಕೊಂಡಿವೆ. ಇಂದು ಕೂಡ ನಾವು ನಮ್ಮನ್ನು ಪಶ್ಚಿಮದ ಈ ಥಿಯರಿಗಳ ಮೂಲಕ ನೋಡುವ ಮತ್ತು ಅರ್ಥ ಮಾಡಿಕೊಳ್ಳುವ ಪರಿಪಾಟ ಇಟ್ಟುಕೊಂಡಿರುವುದು ನಮ್ಮ ಹಿಂದಿನ ದಾಸ್ಯ ಮನೋಭಾವನೆಯನ್ನು ಯಾವುದೋ ಒಂದು ವಿಧದಲ್ಲಿ ಮುಂದುವರಿಸುವಂತೆ ಮಾಡುತ್ತಿದೆ ಅಥವಾ ಪಶ್ಚಿಮದ ಶ್ರೀಮಂತ ರಾಷ್ಟ್ರಗಳು ಇಂದು ದೂರ ಇದ್ದುಕೊಂಡೆ ಈ ಥಿಯರಿಗಳ ಮೂಲಕ ನಮ್ಮ ಮೇಲೆ ಹಿಡಿತ ಸಾಧಿಸಿದ್ದಾರೆ. ಅವರ ಈ ಹಿಡಿತದಿಂದ ಪಾರಾಗಲು ನಮಗೆ ನಮ್ಮದೇ ಥಿಯರಿಗಳು ಹಾಗೂ ವಿಧಾನಗಳು ಬೇಕೆನ್ನುವುದು ಸಮಾಜವಿಜ್ಞಾಣ ಥಿಯರಿಯ ಹುಟ್ಟಿಗೆ ಸಂಬಂಧಿಸಿದ ಚರ್ಚೆ ಹೇಳುತ್ತದೆಯೆಂದು ಅಧ್ಯಾಯ ಒಂದರಲ್ಲಿ ನೋಡಿದ್ದೇವೆ.[8]

ಸ್ಥಳೀಯ ಸಂಶೋಧನಾ ವರ್ಗ ರೂಪುಗೊಂಡ ಚಾರಿತ್ರಿಕ ಘಟ್ಟ ಎರಡನೇ ಕಾರಣದ ಹಿನ್ನೆಲೆಯಲ್ಲಿ ಒದಗಿಸುತ್ತದೆ. ಪಶ್ಚಿಮದ ವಿಜ್ಞಾನ ಮತ್ತು ತಂತ್ರಜ್ಞಾನಗಳನ್ನು ಬಳಸಿ ಆಧುನಿಕ ಭಾರತ ನಿರ್ಮಿಸಬಹುದೆನ್ನುವ ದೂರದ ಕನಸು ಸ್ವತಂತ್ರ ಭಾರತದ್ದು. ಅದಕ್ಕಾಗಿ ಎಲ್ಲ ಕ್ಷೇತ್ರಗಳಲ್ಲೂ ಆಧುನಿಕ ಜ್ಞಾನಕ್ಕೆ ವಿಶೇಷ ಮಹತ್ವ ನೀಡಲಾಯಿತು. ಎಲ್ಲ ಕ್ಷೇತ್ರಗಳಲ್ಲೂ  ತಕ್ಕಮಟ್ಟಿನ ಆಧುನಿಕ ಜ್ಞಾನ ರೂಢಿಸಿಕೊಂಡವರೆಂದರೆ ನಮ್ಮ ಸಮಾಜದ ಮೇಲ್ವರ್ಗದ ಜನರು. ಇದರರ್ಥ ಕೆಳವರ್ಗದಿಂದ ಯಾರೂ ಆಧುನಿಕ ಶಿಕ್ಷಣ ಪಡೆದು ಜ್ಞಾನ ರೂಢಿಸಿಕೊಂಡಿರಲಿಲ್ಲವೆಂದಲ್ಲ. ಅವರೂ ಇದ್ದರು. ಆದರೆ ಅವರ ಸಂಖ್ಯೆ ಗಣನೀಯವಾಗಿ ಕಡಿಮೆ ಇತ್ತು.[9]  ವಿವಿಧ ಕ್ಷೇತ್ರಗಳಲ್ಲಿ ಆಧುನಿಕ ಜ್ಞಾನ ರೂಢಿಸಿಕೊಂಡ ಮೇಲ್ವರ್ಗದ ಜನರು ಬಹುತೇಕ ಕ್ಷೇತ್ರಗಳಲ್ಲಿ ಸಂಶೋಧಕರಾಗಿ ಕೂಡ ಮುಂಚೂಣಿಗೆ ಬಂದರು. ಬಿಳಿಯ ಸಂಶೋಧಕರು ತಮ್ಮ ದಲ್ಲದ ಸಂಸ್ಕೃತಿಯ ಬಗ್ಗೆ ಏನಲ್ಲ ಕಲ್ಪನೆಗಳನ್ನು ರೂಢಿಸಿ ಕೊಂಡಿದ್ದರೋ ಹೆಚ್ಚು ಕಡಿಮೆ ಅವೆಲ್ಲವನ್ನು ಈ ಸ್ಥಳೀಯ ಸಂಶೋಧಕರು ತಮ್ಮದೇ ಸಂಸ್ಕೃತಿಯ ಬಗ್ಗೆ ರೂಢಿಸಿಕೊಂಡಿದ್ದರು. ಅದಕ್ಕೆ ಮುಖ್ಯ ಕಾರಣ ನಮ್ಮ ಜಾತಿಪದ್ಧತಿ ಅಥವಾ ನಮ್ಮ ಸಮಾಜದ ಸೆಗ್‌ಮೆಂಟರಿ ಸ್ವಭಾವ. ಇಡೀ ಭಾರತಕ್ಕೊಂದು ಸಂಸ್ಕೃತಿ ಎನ್ನುವ ಕಲ್ಪನೆ ಇಲ್ಲ. ಪ್ರತಿ ಜಾತಿ ಅಥವಾ ಸಮುದಾಯ ಕೂಡ ತನ್ನದೇ ಸಂಸ್ಕೃತಿಯ ಕಲ್ಪನೆಯನ್ನು ರೂಢಿಸಿಕೊಂಡಿತ್ತು. ಪ್ರತಿ ಸಮುದಾಯಕ್ಕೂ ಮತ್ತೊಂದು ಜಾತಿ ಅಥವಾ ಸಮುದಾಯ ಪರಕೀಯ ಆಗುತ್ತದೆ. ಅಲ್ಪಸಂಖ್ಯಾತ ಮೇಲ್ವರ್ಗಕ್ಕೆ ಸೇರಿದ ಸಂಶೋಧಕರಿಗೆ ಕೆಳವರ್ಗದ ಜನರು ಪರಕೀಯರಾಗುತ್ತಾರೆ ಮತ್ತು ಕೆಳವರ್ಗದ ಜನರ ಸಂಸ್ಕೃತಿ ಪರಕೀಯ ಸಂಸ್ಕೃತಿ ಆಗುತ್ತದೆ. ಅವುಗಳನ್ನು ಪಶ್ಚಿಮದ ಸಂಶೋಧಕರಂತೆ ಸಂಶೋಧನೆ ಮಾಡುವುದು ಸಮಸ್ಯೆ ಅನ್ನಿಸುವುದಿಲ್ಲ. ಅಷ್ಟು ಮಾತ್ರವಲ್ಲ, ಪಶ್ಚಿಮದ ಸಂಶೋಧಕರು ರೂಢಿಸಿಕೊಂಡ ಸಂಶೋಧಕರ ಎತ್ತರದ ಸ್ಥಾನದಲ್ಲಿ ನಿಂತು ನೋಡುವ ಪ್ರವೃತ್ತಿಯನ್ನು ರೂಢಿಸಿಕೊಳ್ಳುವುದು ಕೂಡ ಕಷ್ಟ ಆಗಲಿಲ್ಲ.[10] ಸಂಶೋಧಕರ ಈ ದೃಷ್ಟಿಕೋನ ಸಮಾಜವನ್ನು ಅರ್ಥ ಮಾಡಿಕೊಳ್ಳಲು ಸರಿಯಲ್ಲ ಎಂದು ಸಾಕಷ್ಟು ಅಧ್ಯಯನಗಳು ಸಾರಿವೆ. ಸಂಶೋಧಕರು ಎತ್ತರದಲ್ಲಿ ನಿಂತು ಕೆಳಗೆ ನೋಡುವ ಪ್ರವೃತ್ತಿಯಿಂದ ಎಲ್ಲವೂ ಕುಬ್ಜವಾಗಿ ಕಂಡುಬರುತ್ತದೆ. ತನ್ನ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳಲು ನೇರ ದೃಷ್ಟಿ ಅಗತ್ಯ ಅಥವಾ ಮೇಲೆ ಅಥವಾ ಕೆಳಗೆ ಇಟ್ಟು ನೋಡುವ ಪರಿ ಅಗತ್ಯ ಇಲ್ಲ ಎನ್ನುವ ಅಭಿಪ್ರಾಯಗಳು ದಶಕಗಳಿಂದ ಚಾಲ್ತಿಯಲ್ಲಿವೆ.[11]

ಭಾಗ

ಮೇಲಿನ ವಿವರಣೆ ಕೇವಲ ಕೆಲವೊಂದು ವಿಚಾರಗಳ ಮೇಲೆ ಕೇಂದ್ರೀಕೃತವಾಗಿದೆ. ಸಂಶೋಧಕರು, ಅವರು ಎರವಲು ಪಡೆದ ವಿಧಾನ, ಬಳುವಳಿ ಪಡೆದ ಮಾನವತಾ ಯಜಮಾನಿಕೆ ಪ್ರವೃತ್ತಿ ಇತ್ಯಾದಿಗಳ ಮೇಲೆ ಮಾತ್ರ ಮೇಲಿನ ವಿವರಣೆ ಬೆಳಕು ಚೆಲ್ಲುತ್ತದೆ. ಸಂಶೋಧಕರ ಚಾರಿತ್ರಿಕ ಹಿನ್ನೆಲೆಯ ಮೇಲೆ ಗಮನ ಹರಿಸುವ ಭರದಲ್ಲಿ ಅವರು ಸಂಶೋಧನೆ ನಡೆಸುವ ಸಮಾಜ, ಸಮುದಾಯ, ವಿಚಾರ ಇತ್ಯಾದಿಗಳ ಬಗ್ಗೆ ಗಮನ ಹರಿಸಿಯೇ ಇಲ್ಲ. ಸಾಮಾಜಿಕ ಏಣಿಶ್ರೇಣಿಗಳು, ಅಧಿಕಾರ ಸಂಬಂಧಗಳು, ಆರ್ಥಿಕ ಸ್ಥಾನಮಾನಗಳು ಇತ್ಯಾದಿಗಳು ಕೂಡ ಸಂಶೋಧನೆಯನ್ನು ಗಾಢವಾಗಿ ಪ್ರಭಾವಿಸಬಹುದು. ಇವು ಹೇಗೆ ಸಂಶೋಧನೆಯನ್ನು ಪ್ರಭಾವಿಸಬಹುದೆಂದು ನೋಡೋಣ. ಸಂಶೋಧನೆಗೆ ಒಳಪಡುವ ಸಮುದಾಯ, ಸಮಾಜದ ಬಗ್ಗೆ ವಾಸ್ತವಕ್ಕೆ ಹತ್ತಿರವಾದ ಚಿತ್ರಣ ಸಿಗಬೇಕಾದರೆ ವಾಸ್ತವಕ್ಕೆ ಹತ್ತಿರವಾದ ಮಾಹಿತಿ ಸಿಗಬೇಕು. ಸಂಶೋಧಕರ ಬಹುದೊಡ್ಡ ಕೆಲಸವೆಂದರೆ ವಾಸ್ತವಕ್ಕೆ ಹತ್ತಿರವಾದ ಮಾಹಿತಿ ಪಡೆಯುವುದು. ಈ ಸಂದರ್ಭದಲ್ಲೇ ಸಂಶೋಧನೆಗೆ ಒಳಪಡುವ ಸಮುದಾಯ, ಸಮಾಜದ ಪಾತ್ರದ ಬಗ್ಗೆ ಗಮನ ಹರಿಯುವುದು. ಯಾವುದೇ ವ್ಯಕ್ತಿ ಅಥವಾ ಸಮುದಾಯ ತನಗೆ ಮಹತ್ವವೆನ್ನಿಸುವ ಮಾಹಿತಿಯನ್ನು ಎಲ್ಲರೊಂದಿಗೂ ಹಂಚಿಕೊಳ್ಳಲು ಸಿದ್ಧರಿದ್ದಾರೆ ಎಂದು ತಿಳಿಯುವುದು ಸರಿಯಲ್ಲ. ಕೆಲವೊಂದು ಮಾಹಿತಿಗಳನ್ನು (ಮಾಹಿತಿಯ ಮಹತ್ವದ ಆಧಾರದಲ್ಲಿ) ಎಲ್ಲರೊಂದಿಗೆ ಹಂಚಿಕೊಂಡರೆ ಇನ್ನು ಕೇವಲ ತಮ್ಮ ಆಪ್ತ ವಲಯದಲ್ಲಿ ಅಥವಾ ತಮ್ಮವರೆಂದು ಗುರುತಿಸಿಕೊಂಡವರ ಜತೆ ಮಾತ್ರ ಹಂಚಿಕೊಳ್ಳಬಹುದು. ಆದುದರಿಂದ ಮಾಹಿತಿ ಸಂಗ್ರಹದಲ್ಲಿ ನಮ್ಮವರು ಮತ್ತು ಹೊರಗಿನವರು ಎನ್ನುವ ಪರಿಕಲ್ಪನೆ ಬಹುದೊಡ್ಡ ಪಾತ್ರ ವಹಿಸುತ್ತದೆ.

ನಮ್ಮದು ಏಣಿಶ್ರೇಣಿಗಳಿಂದ (ಸೆಗ್‌ಮೆಂಟರಿ ಸ್ವಭಾವದ) ಕೂಡಿದ ಸಮಾಜವೆನ್ನುವುದರ ಬಗ್ಗೆ ಯಾರಿಗೂ ಸಂದೇಹ ಇಲ್ಲ. ಸಂಸ್ಕೃತಿ (ಜಾತಿಗಳು), ಆರ್ಥಿಕ (ಕ್ಲಾಸ್), ರಾಜಕೀಯ (ಪಾರ್ಟಿ), ಲಿಂಗ, ಭಾಷೆ, ಧರ್ಮ, ಪ್ರದೇಶ ಇತ್ಯಾದಿ ನೆಲೆಯಲ್ಲಿ ಏಣಿಶ್ರೇಣಿಗಳು ರೂಪುಗೊಂಡಿವೆ. ಈ ಏಣಿಶ್ರೇಣಿಯ ನೆಲೆಗಳು ‘ನಮ್ಮವರು’ ಮತ್ತು ‘ಹೊರಗಿನವರು ಅಥವಾ ಪರಕೀಯರು’ ಎನ್ನುವ ನಮ್ಮ ಪರಿಕಲ್ಪನೆಗಳನ್ನು ನಿರ್ವಚಿಸುತ್ತವೆ. ಯಾವುದೋ ಒಂದು ಸಮುದಾಯಕ್ಕೆ ಸೇರಿದ ಮಠದ ಕುರಿತು ಸಂಶೋಧನೆ ಮಾಡುವಾಗ ಆ ಮಠದ ಎಲ್ಲ ಆಗುಹೋಗುಗಳ ಬಗ್ಗೆ ಎಲ್ಲ ಸಂಶೋಧಕರಿಗೆ ಮಾಹಿತಿ ಲಭ್ಯ ಎಂದು ತಿಳಿಯುವುದು ಕಷ್ಟ. ಮಠದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು ಅಥವಾ ಮಠದ ಸಮಾಜ ಸೇವಾ ಕಾರ್ಯಕ್ರಮಗಳ ಬಗ್ಗೆ ಮಠದ ಅಧಿಕಾರಿ ವರ್ಗ ಯಾವುದೇ ಅಡ್ಡಿ ಆತಂಕವಿಲ್ಲದೆ ಮಾಹಿತಿ ನೀಡಬಹುದು. ಆದರೆ ಮಠದ ಆಸ್ತಿ ಅಥವಾ ಮಠ ಜನಸಾಮಾನ್ಯರಿಂದ ದೂರ ಇಡಬೇಕೆಂದು ಬಯಸುವ ಅದರ ಚರಿತ್ರೆಯ ವಿವರಗಳು ಎಲ್ಲ ಸಂಶೋಧಕರಿಗೆ ಲಭ್ಯ ಎಂದು ತಿಳಿಯುವುದು ಕಷ್ಟ. ಉದಾಹರಣೆಗೆ ಶೃಂಗೇರಿ ಮಠ ಒಂದು ಕಾಲದಲ್ಲಿ ಕೆಳಜಾತಿಯ ಜೀತದಾಳುಗಳ ವ್ಯಾಪಾರ ಮಾಡುತ್ತಿತ್ತು ಅಥವಾ ವ್ಯಭಿಚಾರ ಮಾಡಿದ ಹೆಂಗಸರನ್ನು ವ್ಯಾಪಾರ ಮಾಡುತ್ತಿತ್ತು ಎನ್ನುವ ಮಾಹಿತಿ ಎಲ್ಲ ಸಂಶೋಧಕರಿಗೂ ಲಭ್ಯವಿರಲಾರದು. ಮಠದ ಆಡಳಿತ ವರ್ಗಕ್ಕೆ ಹತ್ತಿರವಿರುವ ಮತ್ತು ಅವರು ಸಂಶೋಧಕರನ್ನು ನಮ್ಮವರು ಎಂದು ತಿಳಿದಿರುವ ಸಂಶೋಧಕರಿಗೆ ಮಾತ್ರ ಈ ಮಾಹಿತಿ ಲಭ್ಯ.[12] ಇದು ಕೇವಲ ವೈದಿಕ ಮಠಕ್ಕೆ ಮಾತ್ರ ಅನ್ವಯವಾಗುವ ವಿಚಾರವಲ್ಲ. ಎಲ್ಲ ಧರ್ಮಗಳ ಮಠಗಳಿಗೂ ಈ ನಿಯಮ ಅನ್ವಯವಾಗಬಹುದು. ಆಯಾಯ ಧರ್ಮಗಳಿಗೆ ಅಥವಾ ಜಾತಿಗೆ ಸೇರಿದ ಸಂಶೋಧಕರಿಗೆ ಮಾತ್ರ ಆಯಾಯ ಮಠಕ್ಕೆ ಸಂಬಂಧಿಸಿದ ಮಹತ್ವದ ಮಾಹಿತಿಗಳು ಸಿಗಬಹುದು.

ಇದು ಕೇವಲ ಮಠಮಾನ್ಯಗಳಿಗೆ ಸಂಬಂಧಿಸಿದ ವಿಚಾರವಲ್ಲ. ನಮ್ಮವರು ಮತ್ತು ಹೊರಗಿನವರು ಎನ್ನುವ ಪರಿಕಲ್ಪನೆ ಯಾವ ಆಧಾರದಲ್ಲಿ ರೂಪಿತಗೊಂಡಿದೆ ಎನ್ನುವ ಅಂಶ ಇಲ್ಲಿ ಮುಖ್ಯ. ಮುಸ್ಲಿಂ ಸಮುದಾಯದ ಮಹಿಳಾ ಸಮಸ್ಯೆಗಳಿಗೆ ಸಂಬಂಧಿಸಿದ ವಿಷಯದ ಮೇಲಿನ ಸಂಶೋಧನೆಯ ಉದಾಹರಣೆಯನ್ನು ಗಮನಿಸಬಹುದು. ಮುಸ್ಲಿಂ ಸಮುದಾಯದ ಪುರುಷ ಸಂಶೋಧಕರಿಗೆ ಆ ಸಮುದಾಯದ ಮಹಿಳಾ ಸಮಸ್ಯೆಗಳಿಗೆ ಸಂಬಂಧಿಸಿದ ಎಲ್ಲ ಮಾಹಿತಿ ಸಿಗುತ್ತದೆ ಎಂದು ನಂಬುವುದು ಕಷ್ಟ. ಇನ್ನು ಮುಸ್ಲಿಮೇತರ ಪುರುಷ ಸಂಶೋಧಕರು ಮುಸ್ಲಿಂ ಮಹಿಳೆಯರ ಸಮಸ್ಯೆಗಳಿಗೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸುವುದನ್ನು ಊಹಿಸಲು ಸಾಧ್ಯವೇ ಇಲ್ಲ.[13] ಇಲ್ಲಿ ಮುಸ್ಲಿಂ ಮಹಿಳೆ ಎನ್ನುವುದಕ್ಕಿಂತ ಯಾವುದೇ ಜಾತಿ ಅಥವಾ ಧರ್ಮದ ಮಹಿಳಾ ವಿಚಾರಗಳನ್ನು ಸಂಶೋಧನೆ ಮಾಡುವಲ್ಲಿ ಪುರುಷ ಸಂಶೋಧಕರು ವಾಸ್ತವಕ್ಕೆ ಹತ್ತಿರವಾದ ಮಾಹಿತಿ ಸಂಗ್ರಹಿಸಲು ವಿಫಲರಾಗುತ್ತಾರೆ. ಇದು ಏಕೆಂದರೆ ಮೇಲೆ ವಿವರಿಸಿದ ವಿಧಾನದ ಸಮಸ್ಯೆಯ ಜತೆ ಹಲವಾರು ವಿಚಾರಗಳಲ್ಲಿ ಪುರುಷರು ಮಹಿಳಾಲೋಕದಿಂದ ಹೊರಗಿನವರು. ಆ ಕಾರಣಕ್ಕಾಗಿ ಮಹಿಳೆಯರು ತಮ್ಮ ಹಲವಾರು ಸಮಸ್ಯೆಗಳನ್ನು ಅಥವಾ ಅದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಪುರುಷ ಸಂಶೋಧಕರೊಂದಿಗೆ ಹಂಚಿಕೊಳ್ಳಲು ಇಷ್ಟಪಡುವುದಿಲ್ಲ. ಅವುಗಳನ್ನು ಸಂಗ್ರಹಿಸುವಲ್ಲಿ ಮಹಿಳಾ ಸಂಶೋಧಕರು ಪುರುಷ ಸಂಶೋಧಕರಿಗಿಂತ ಹೆಚ್ಚು ಶಕ್ತರು.

ಈ ಹೊರಗಿನವರು ಮತ್ತು ನಮ್ಮವರು ಎನ್ನುವ ಪರಿಕಲ್ಪನೆ ಜತೆಗೆ ಸಮುದಾಯ ಅಥವಾ ಕುಟುಂಬ ಅಥವಾ ವ್ಯಕ್ತಿಯ ಆರ್ಥಿಕ ಸ್ಥಿತಿಗತಿ ಕೂಡ ಮಾಹಿತಿ ಸಂಗ್ರಹಿಸುವ ಕೆಲಸವನ್ನು ಪ್ರಭಾವಿಸುತ್ತದೆ. ನಾನು ಉತ್ತರ ಕರ್ನಾಟಕದ ಹಲವಾರು ಹಳ್ಳಿಗಳಲ್ಲಿ ಜನರ ಮೂಲಭೂತ ಸಮಸ್ಯೆಗಳ ಬಗ್ಗೆ (ವಸತಿ, ನೀರು, ಶೌಚಾಲಯ, ವೈದ್ಯಕೀಯ ಇತ್ಯಾದಿಗಳ ಬಗ್ಗೆ) ಅಧ್ಯಯನ ಕೈಗೊಂಡಿದ್ದೆ. ಆ ಸಂದರ್ಭದಲ್ಲಿ ಆ ಸಮಸ್ಯೆಗಳ ಸ್ಥಿತಿಗತಿಗಳ ಜತೆಗೆ ಸಂದರ್ಶನಕ್ಕೆ ಒಳಗಾಗುವ ಕುಟುಂಬಗಳ ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿಗತಿಗಳನ್ನು ತಿಳಿದುಕೊಳ್ಳಲು ಪ್ರಶ್ನೆಗಳನ್ನು ಕೇಳಲಾಗುತ್ತಿತ್ತು. ಆರ್ಥಿಕವಾಗಿ ತುಂಬಾ ಕೆಳಸ್ಥಿತಿಯಲ್ಲಿರುವ ಬಹುತೇಕ ಕುಟುಂಬಗಳು ನಾ ಮುಂದು ತಾ ಮುಂದು ಎಂದು ಬಂದು ಮಾಹಿತಿ ನೀಡುತ್ತಿದ್ದರು. ಎಲ್ಲ ಕುಟುಂಬಗಳನ್ನು ಸಂದರ್ಶನ ಮಾಡಲು ಅವಕಾಶವಿರುತ್ತಿರಲಿಲ್ಲ. ಅಂತಹ ಸಂದರ್ಭದಲ್ಲಿ ಸಂದರ್ಶನಕ್ಕೆ ಒಳಗಾಗದ ಕುಟುಂಬಗಳು ನಮ್ಮನ್ನು ಯಾಕೆ ಸಂದರ್ಶನ ಮಾಡಲಿಲ್ಲ ಎಂದು ಪ್ರಶ್ನಿಸುತ್ತಿದ್ದರು. ಯಾವುದೋ ಒಂದು ಸಬೂಬು ನೀಡಿ ಅವರಿಂದ ಪಾರಾಗುವುದೇ ಕಷ್ಟವಾಗುತ್ತಿತ್ತು. ಬಡಜನರು ದಾಖಲಿಸಲು ದುಂಬಾಲು ಬೀಳುವುದರ ಹಿಂದೆ ಹಲವಾರು ಗೃಹೀತಗಳು ಕೆಲಸ ಮಾಡುತ್ತವೆ. ಒಂದು, ಪ್ರಭುತ್ವ ಸಮಾಜದ ಎಲ್ಲರನ್ನು ಉದ್ಧಾರ ಮಢುತ್ತದೆ ಎನ್ನುವ ಒಂದು ದೂರದ ನಂಬಿಕೆ. ಎರಡು, ಸಂಶೋಧಕರು ಸರಕಾರದ ಪ್ರತಿನಿಧಿಯಾಗಿ ಬಂದಿದ್ದಾರೆ. ಮೂರು, ಅವರಲ್ಲಿ ತಮ್ಮ ಬಡತನವನ್ನು ದಾಖಲಿಸಿದರೆ ಇಂದಲ್ಲ ನಾಳೆ ಅದರಿಂದ ಏನಾದರೂ ಲಾಭ ಆಗಬಹುದು. ಈ ರೀತಿಯಲ್ಲಿ ಬಡಜನರಿಗೆ ಸಂಶೋಧಕರು ತಮ್ಮವರಾಗುತ್ತಾರೆ ಮತ್ತು ಅವರಲ್ಲಿ ತಮ್ಮ ಬಡತನವನ್ನು ತೋಡಿಕೊಳ್ಳುವುದ ತಮ್ಮ ಹಕ್ಕು ಎಂದು ತಿಳಿಯುತ್ತಾರೆ.[14] ಇವರ ಈ ಆಶೆ ಅಥವಾ ನಂಬಿಕೆಗೆ ಆಧಾರವೇ ಇಲ್ಲ ಎನ್ನಲಾಗುವುದಿಲ್ಲ. ನಮ್ಮಲ್ಲಿ ದಾಖಲಿಸುವುದು ಆಧುನಿಕ ಸೌಲಭ್ಯಗಳಿಗೆ ಪಾಸ್‌ಪೋರ್ಟ್‌ ಇದ್ದಂತೆ. ಇದು ಆರಂಭವಾಗಿರುವುದು ವಸಾಹತು ಸರಕಾರದಿಂದ. ಅದಕ್ಕಿಂದ ಹಿಂದೆ ದಾಖಲಿಸುವ ಪ್ರಕ್ರಿಯೆ ಇರಲಿಲ್ಲ ಅಥವಾ ದಾಖಲಿಸುವುದಕ್ಕೂ ಸರಕಾರದಿಂದ ಬರುವ ಸೌಲಭ್ಯಕ್ಕೂ ಸಂಬಂಧ ಇರಲಿಲ್ಲವೆಂದಲ್ಲ. ಹಿಂದೆಯೂ ಇವತ್ತು. ಆದರೆ ಅದರ ಪ್ರಮಾಣ ಮತ್ತು ವ್ಯಾಪ್ತಿ ತುಂಬಾ ಸೀಮಿತವಾಗಿತ್ತು. ವಸಾಹತು ಮತ್ತು ನಂತರದ ದಿನಗಳಲ್ಲಿ ದಾಖಲಿಸುವುದು ಮತ್ತು ಅದರಿಂದ ಬರುವ ಲಾಭದ ಪ್ರಮಾಣ ಹೆಚ್ಚಿದೆ ಮತ್ತು ವ್ಯಾಪ್ತಿ ವಿಸ್ತರಿಸಿದೆ. ವಸಾಹತು ಸರಕಾರ ದಕ್ಷಿಣ ರಾಜ್ಯಗಳಲ್ಲಿ ರೈತವಾರಿ ಪದ್ಧತಿ ಜಾರಿಗೆ ತಂದಿತ್ತು. ಭೂಕಂದಾಯ ಕಟ್ಟಿ ಭೂಮಾಲಿಕನಾಗಬಹುದಿತ್ತು. ಆ ಸಂದರ್ಭದಲ್ಲಿ ಎಷ್ಟೋ ಪ್ರದೇಶಗಳಲ್ಲಿ ನಿಜವಾಗಿ ಕೃಷಿ ಮಾಡುವವರು ಯಾರೋ ಆಗಿದ್ದು ಭೂ ಕಂದಾಯ ಕಟ್ಟಿ ಭೂ ಮಾಲಿಕ ಇನ್ಯಾರೋ ಆಗಿದ್ದ ಉದಾಹರಣೆಗಳು ಸಾಕಷ್ಟಿವೆ.[15]

ನಂತರದ ದಿನಗಳಲ್ಲಿ ಸ್ವತಂತ್ರ ಭಾರತ ಜಾತಿ ಆಧಾರಿತ ಮೀಸಲಾತಿ ತಂದಿತು. ಅದರ ಲಾಭ ಪಡೆಯಲು ಎಷ್ಟೋ ಜನರು ಮೀಸಲಾತಿ ನೀಡುವ ಜಾತಿಗೆ ಸೇರಿದವರು ಎಂದು ದಾಖಲಿಸಲು ಆರಂಭಿಸಿದರು. ಹೀಗೆ ನಮ್ಮಲ್ಲಿ ದಾಖಲಿಸುವುದಕ್ಕೂ ಮತ್ತು ಸಿಗುವ ಲಾಭಕ್ಕೂ ನೇರ ಸಂಬಂಧ ಇದೆ. ಹಾಗೆಂದು ಎಲ್ಲರೂ ಎಲ್ಲ ಸಂದರ್ಭದಲ್ಲೂ ದಾಖಲಿಸಲು ನಾ ಮುಂದು ತಾ ಮುಂದೆಂದು ಬರುವುದಿಲ್ಲ. ಎಲ್ಲಿ ದಾಖಲೆ ಮತ್ತು ಸಿಗುವ ಲಾಭದ ನಡುವೆ ನೇರ ಸಂಬಂಧ ಇದೆಯೋ ಅಲ್ಲೆಲ್ಲ ದಾಖಲಿಸಲು ಜನರು, ಸಮುದಾಯಗಳು ಮುಂದೆ ಬರುತ್ತವೆ. ಇನ್ನು ಕೆಲವು ಸಂದರ್ಭಗಳಲ್ಲಿ ದಾಖಲಿಸುವುದರಿಂದ ಜನ ಹಿಂದಕ್ಕೆ ಸರಿಯುತ್ತಾರೆ. ಉದಾಹರಣೆಗೆ ಸಣ್ಣ ಉದ್ಯಮಿಗಳ ಅಧ್ಯಯನ ಮಾಡುವಾಗ ಅನುಕೂಲಸ್ಥ ಉದ್ಯಮಿಗಳು ಸಂದರ್ಶನ ನೀಡಲು ಮೀನಮೇಷ ಎಣಿಸುತ್ತಿದ್ದರು. ಅಂತವರ ಸಂದರ್ಶನ ಸಿಗಬೇಕಾದರೆ ಒಂದೋ ಅವರ ಸಂಬಂಧಿಕರ ಮೂಲಕ ಅಥವಾ ಅವರ ಹತ್ತಿರದ ಸ್ನೇಹಿತರ ಮೂಲಕ ಹೇಳಿಸಬೇಕು. ‘ಇವರು ನಮ್ಮವರೇ ಅಥವಾ ಇವರಿಂದ ಏನೇನೂ ಅಪಾಯವಿಲ್ಲ, ನೀವು ಸಂದರ್ಶನ ನೀಡಬಹುದೆಂದು, ಅವರ ಹತ್ತಿರದ ಸಂಬಂಧಿಕರು ಅಥವಾ ಸ್ನೇಹಿತರು ಹೇಳಿದ ನಂತರವೇ ಅವರನ್ನು ಸಂದರ್ಶನ ಮಾಡುವ ಭಾಗ್ಯ ದೊರೆಯುವುದು. ಸಂದರ್ಶನ ಮಾಡುವ ಅವಕಾಶ ಸಿಕ್ಕಿದ ಕೂಡಲೇ ಎಲ್ಲ ಮಾಹಿತಿ ಸಿಕ್ಕಿತೆಂದು ಖುಶಿ ಪಡುವ ಅಗತ್ಯವಿಲ್ಲ. ಹಣಕಾಸಿಗೆ ಸಂಬಂಧಿಸಿದಂತೆ ಅವರಿಂದ ನಿಖರವಾದ ಮಾಹಿತಿ ಪಡೆಯುವುದಂತು ಕನಸಿನ ಮಾತು. ಉದ್ಯಮಿಗಳಲ್ಲೂ ಸೋತು ಸುಣ್ಣಾದವರು ವಿಶೇಷ ತಕರಾರಿಲ್ಲದೆ ಮಾಹಿತಿ ನೀಡುತ್ತಿದ್ದರು. ಆದರೆ ಅವರು ಕೂಡ ತಮ್ಮ ಹಣಕಾಸು ಅಥವಾ ಆಸ್ತಿಪಾಸ್ತಿ ಬಗ್ಗೆ ಸರಿಯಾದ ಮಾಹಿತಿ ನೀಡುತ್ತಾರೆ ಎನ್ನಲಾಗುವುದಿಲ್ಲ. ಮಾಹಿತಿ ನೀಡುವುದರಿಂದ ತೊಂದರೆಯಾದೀತು ಅಥವಾ ದಾಖಲಿಸುವುದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂದಾದರೆ ಜನ ದಾಖಲಿಸಲು ಮುಂದೆ ಬರುವುದಿಲ್ಲ. ಆಗಸಂಶೋಧಕರು ಸಂಶೋಧನೆಗೆ ಒಳಗಾಗುವ ಸಮುದಾಯ ಅಥವಾ ಕುಟುಂಬ ನಿರ್ವಚಿಸಿಕೊಂಡಿರುವ ನಮ್ಮವರ ಪರಿಕಲ್ಪನೆಯೊಳಗೆ ಸೇರಿಕೊಳ್ಳಲು ಪ್ರಯತ್ನಿಸಬೇಕಾಗುತ್ತದೆ. ಸಮಾಜ, ಸಮುದಾಯದ ನಮ್ಮವರ ಪರಿಕಲ್ಪನೆಯೊಳಗೆ ಸಂಶೋಧಕರು ಸೇರಿಕೊಳ್ಳುವುದು ಅಷ್ಟು ಸುಲಭದ ಕೆಲಸವಲ್ಲ.[16]

[1] ಪ್ರತಿ ವಿಧಾನಕ್ಕೂ ಅದರದ್ದೇ ಆದ ತಾತ್ವಿಕ ಹಿನ್ನೆಲೆ, ಮಾಹಿತಿ ಸಂಗ್ರಹ ವಿಧಾನ ಮತ್ತು ಮಾಹಿತಿ ವಿಶ್ಲೇಷಣಾ ವಿಧಾನಗಳಿವೆಯೆಂದು ಗ್ರಹಿಸಲಾಗಿದೆ. ಸಾಮಾಜಿಕ ಸಂಬಂಧಗಳನ್ನು ಗ್ರಹಿಸುವ ಅಥವಾ ಅರ್ಥ ಮಾಡಿಕೊಳ್ಳುವ ಅಥವಾ ವಿವರಿಸುವ ಕ್ರಮದ ಬಗ್ಗೆ ಸಂಶೋಧನಾ ವಿಧಾನಕ್ಕೆ ಸಂಬಂಧಿಸಿದ ತಾತ್ವಿಕ ಚರ್ಚೆಗಳು ಹೆಚ್ಚು ಕೇಂದ್ರೀಕೃತವಾಗಿವೆ. ವ್ಯಾಪ್ತಿ ಹಾಗೂ ಅನ್ವಯಿಕೆಯ ದೃಷ್ಟಿಯಿಂದ ವಿಧಾನದ ಮೇಲಿನ ತಾತ್ವಿಕ ಚರ್ಚೆಗಳಿಗೆ ಹೋಲಿಸಿದರೆ ಇತರ ತಾತ್ವಿಕಚರ್ಚೆಗಳು ಹೆಚ್ಚು ವಿಸ್ತಾರವಾಗಿರುತ್ತವೆ. ಸ ಮಾಜವೆಂದರೇನು? ವಾಸ್ತವದಲ್ಲಿರುವ ದೋಷಗಳನ್ನು ಇಲ್ಲವಾಗಿಸಿ ಆದರ್ಶ ಸಮಾಜದತ್ತ ಹೇಗೆ ಚಲಿಸಬಹುದು ಇತ್ಯಾದಿಗಳ ಮೇಲೆ ಇತರ ತಾತ್ವಿಕ ಚರ್ಚೆಗಳು ಗಮನ ಹರಿಸುತ್ತವೆ.

[2] ವಿಜ್ಞಾನದ ವಿಧಾನವನ್ನು ಸಮಾಜ ಸಂಶೋಧನೆಗೆ ಅನ್ವಯಿಸಲಾಗುವುದಿಲ್ಲ ಎನ್ನುವ ವಾದವನ್ನು ಮುಂದಿಡುವಾಗ ಸಂಶೋಧನೆ ನಡೆಯುವ ಒಟ್ಟು ಪರಿಸರ ಮತ್ತು ಸಂಶೋಧನೆಯ ನಡುವಿನ ಸಂಬಂಧದ ವಿಚಾರಗಳು ಮುಂಚೂಣಿಗೆ ಬಂದಿವೆ. ಹಿಂದಿನ ಅಧ್ಯಾಯದಲ್ಲಿ ಹರ್ಮೆನೆಟಿಕ್ಸ್ ಹೇಗೆ ಮುಂಚೂಣಿಗೆ ಬಂತೆಂದು ನೋಡಿದ್ದೇವೆ. ಸಂಶೋಧಕರು ಮತ್ತು ಕ್ಷೇತ್ರ ಎರಡೂ ಕೂಡ ಸಂಶೋಧನೆಯನ್ನು ಪ್ರಭಾವಿಸುವುದರ ಬಗ್ಗೆ ಇಲ್ಲಿ ಗಮನಹರಿಸಲಾಗಿದೆ.

[3] ಈ ಮಾತನ್ನು ಯಾಕೆ ಹೇಳಲಾಗಿದೆಯೆಂದರೆ ಮಾನವಶಾಸ್ತ್ರಜ್ಞರನ್ನು ಹೊರತುಪಡಿಸಿದವರು ಕೂಡ ಅಧ್ಯಯನಗಳನ್ನು ಮಾಡಿದ್ದಾರೆ. ಆದರೆ ಅವರಲ್ಲಿ ಬಹುತೇಕರು ಬ್ರಿಟಿಷ್ ಅಧಿಕಾರಿಗಳು ಮತ್ತು ಸರಕಾರಿ ಪ್ರತಿನಿಧಿಗಳು. ಅವರು ತಮ್ಮ ಆಡಳಿತದ ಉದ್ದೇಶಕ್ಕೆ ಹಲವಾರು ಅಧ್ಯಯನಗಳನ್ನು ಕೈಗೊಂಡಿದ್ದರು. ಅವರದ್ದು ಶಿಸ್ತುಬದ್ಧ ಅಧ್ಯಯನವಲ್ಲವೆಂದು ಹೇಳುವುದಕ್ಕಿಂತ ಅವರನ್ನು ಸಂಶೋಧಕರೆಂದು ಗುರುತಿಸುವುದು ಕಷ್ಟ. ಅದೇ ರೀತಿಯಲ್ಲಿ ಮಾನವಶಾಸ್ತ್ರಜ್ಞರು ಮಾಡಿದ ಸಂಶೋಧನೆಗಳಿಗೆ ಆಡಳಿತದ ಉದ್ದೇಶವಿಲ್ಲವೆಂದು ಹೇಳುವುದು ಸರಿಯಲ್ಲ. ಇವರಿಬ್ಬರ ಅಧ್ಯಯನಗಳು ಮತ್ತು ಅವುಗಳ ಆಡಳಿತ ಸಂಬಂಧದ ಬಗ್ಗೆ ಒಂದು ಮಾತು ಮಾತ್ರ ಹೇಳಬಹುದು. ಅದೇನೆಂದರೆ ಸರಕಾರಿ ಅಧಿಕಾರಿಗಳ ಅಧ್ಯಯನ ಮತ್ತು ಆಡಳಿತ ಸಂಬಂಧ ನೇರ ಮತ್ತು ತಕ್ಷಣದಾಗಿದ್ದರೆ ಮಾನವಶಾಸ್ತ್ರಜ್ಞರ ಅಧ್ಯಯನ ಮತ್ತು ಆಡಳಿತ ಸಂಬಂಧ ಪರೋಕ್ಷ ಮತ್ತು ದೂರಗಾಮಿ ಆಗಿತ್ತು.

[4] ಈ ಕುರಿತ ವಿವರಗಳಿಗೆ ಎಂ.ಎನ್. ಶ್ರೀನಿವಾಸ್ ಅವರ, ದಿ ರಿಮೆಂಬರ್ಡ್ವಿಲೇಜ್, ನವದೆಹಲಿ: ಆಕ್ಸ್‌ಫರ್ಡ್‌‌ಯೂನಿವರ್ಸಿಟಿ ಪ್ರೆಸ್, ೧೯೯೧, ಪುಸ್ತಕ ನೋಡಿ.

[5] ಈ ವಿವರಗಳನ್ನು ಕಥ್ಲಿನ್ ಗಪ್ ಅವರ ಲೇಖನ, ‘ಆಂಥ್ರಾಪಾಲಜಿ ಆಂಡ್‌ಇಂಪಿರಿಯಲಿಸಂ’ ಎನ್ನುವ ಲೇಖನದಿಂದ ತೆಗೆದುಕೊಂಡಿದ್ದೇನೆ. ಅವರ ಈ ಲೇಖನ, ಬಾಬ್ಬಿ ಎಸ್. ಆರ‍್ಟೆಜ್ ಮತ್ತು ತಿಲಕ್ ಡಿ. ಗುಪ್ತಾ ಸಂಪಾದಿಸಿದ, ಹಿಸ್ಟರಿ ಆಸ್ ಇಟ್ ಹ್ಯಾಪನ್ಡ್ಸೆಲೆಕ್ಟೆಡ್ ಆರ್ಟಿಕಲ್ಸ್ ಫ್ರಮ್ ಮಂತ್ಲಿ ರಿವೀವ್ – ೧೯೪೯-೧೯೯೮, (ಕಲ್ಕತ್ತಾ: ಕಾರ್ನರ್‌ಸ್ಟೋನ್ ಪಬ್ಲಿಕೇಶನ್, ೧೯೯೮, ಪು. ೮೮-೯೮) ಪುಸ್ತಕದಲ್ಲಿ ಅಚ್ಚಾಗಿದೆ.

[6] ಪರಕೀಯ ಸಂಸ್ಕೃತಿಯನ್ನು ಅಧ್ಯಯನ ಮಾಡಬೇಕೆನ್ನುವ ಮಾನವಶಾಸ್ತ್ರ ವಿಧಾನದ ನಿಯಮ ತುಂಬಾ ಹಿಂದೆಯೇ ಸಡಿಲಗೊಂಡಿದೆ. ಎಂ.ಎನ್. ಶ್ರೀನಿವಾಸ್ ಅವರು ತಾವು ಹುಟ್ಟಿ ಬೆಳೆದ ಊರಿಗೆ ಸಮೀಪದ ಹಳ್ಳಿಗಳನ್ನು ಅಧ್ಯಯನ ಮಾಡುವ ಮೂಲಕ ಈ ಮಿತಿಯನ್ನು ಮೀರಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

[7] ಈ ವಿವರಗಳನ್ನು ನಾನು ಹುಸೇನ್ ಖಾನ್ ಅವರ, ‘ಮಾನವಶಾಸ್ತ್ರದ ಸಂಶೋಧನಾ ವಿಧಾನಗಳು – ಥಿಯರಿ ಮತ್ತು ಆಚರಣೆ’ ಎನ್ನುವ ಅಪ್ರಕಟಿತ ಉಪನ್ಯಾಸದಿಂದ ಪಡೆದಿದ್ದೇನೆ. ಅವರು ಈ ಉಪ್ಯಾಸವನ್ನು ಕಟ್ಟಡ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗ ಸಂಘಟಿಸಿದ ಸಮಾಜವಿಜ್ಞಾನ ಸಂಶೋಧನಾ ವಿಧಾನಗಳು – ಉಪನ್ಯಾಸ ಮಾಲೆ, ೨೦೦೫ ರಲ್ಲಿ ನೀಡಿದ್ದರು.

[8] ಈ ಚರ್ಚೆ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ವಸಾಹತು ಕಾಲದಿಂದಲೇ ನಡೆಯುತ್ತಿದೆ. ಆದರೆ ನಾನು ಆ ಹಿಂದಿನ ಚರ್ಚೆಯನ್ನೆಲ್ಲ ಪರಿಗಣಿಸಿ ಮೇಲಿನ ಅಭಿಪ್ರಾಯಗಳನ್ನು ನೀಡಿಲ್ಲ. ಮೇಲಿನ ಅಭಿಪ್ರಾಯ ನೀಡುವಾಗ ನನ್ನ ಕಣ್ಣ ಮುಂದೆ ಇದ್ದ ಬರಹಗಳು ಇಂತಿವೆ. ೧ ಆಂಡ್ರೆ ಬಿಟೆ, ‘ಸೋಶಿಯಾಲಜಿ ಆಂಡ್ ಕಾಮನ್ ಸೆನ್ಸ್’, ಎಕಾನಮಿಕ್ ಆಂಡ್ಪೊಲಿಟಿಕಲ್ ವೀಕ್ಲಿ, ಆನ್ಯುಯಲ್ ಇಶ್ಯೂ, ವಾ. ೩೧, ನಂ. ೩೫, ೩೬ ಆಂಡ್‌೩೭, ೧೯೯೬,  ೨. ಪಾರ್ಥ ಚಟರ್ಜಿ, ‘ಇನ್‌ಸ್ಟಿಟ್ಯೂಶನಲ್ ಕಾಂಟೆಕ್ಸ್ಟ್ ಆಫ್ ಸೋಶಿಯಲ್ ಸೈನ್ಸ್ ರಿಸರ್ಚ್ ಇನ್ ಸೌತ್ ಏಶಿಯಾ’, ಎಕಾನಮಿಕ್ ಆಂಡ್ ಪೊಲಿಟಿಕಲ್ ವೀಕ್ಲಿ, ವಾ. ೩೭, ನಂ. ೩೫, ೨೦೦೨, ೩. ರಾಮಕೃಷ್ಣ ಮುಖರ್ಜಿ, ಸೋಶಿಯಾಲಜಿ ಆಫ್ ಇಂಡಿಯನ್ ಸೋಶಿಯಾಲಜಿ, ಬಾಂಬೆ: ಎಲೈಡ್ ಪಬ್ಲಿಷರ್ಸ್, ೧೯೭೯, ೪. ಪಾರ್ಥನಾಥ ಮುಖರ್ಜಿ, ಇಂಡಿಯನ್ ಸೋಶಿಯಾಲಜಿರಿಫ್ಎಲಕ್ಷನ್ಸ್ ಆಂಡ್ ಇನ್ಟ್ರೋಸ್ಪೆಕ್ಷನ್ಸ್, ಬಾಂಬೆ: ಪಾಪ್ಯುಲರ್ ಪ್ರಕಾಶನ್, ೧೯೮೬ ಮತ್ತು ೫. ಪಾರ್ಥನಾಥ ಮುಖರ್ಜಿ ಮತ್ತು ಚಂದನ್ ಸೇನ್‌ಗುಪ್ತಾ (ಸಂ), ಇಂಡಿಜೀನಿಟಿ ಆಂಡ್ ಯೂನಿರ್ವಸಾಲಿಟಿ ಇನ್ ಸೋಶಿಯಲ್ ಸೈನ್ಸ್ ಸೌತ್ ಏಶಿಯನ್ ರೆಸ್ಪಾನ್ಸ್, ನ್ಯೂಡೆಲ್ಲಿ: ಸೇಜ್ ಪಬ್ಲಿಕೇಶನ್ಸ್, ೨೦೦೪.

[9] ಸರಕಾರದ ಪಾಲಿಸಿಯನ್ನು ನೇರವಾಗಿ ಪ್ರಭಾವಿಸುವ ಸಂಶೋಧನೆಯನ್ನು ಗಮನದಲ್ಲಿಟ್ಟುಕೊಂಡು ಈ ಮಾತನ್ನು ಹೇಳುತ್ತಿದ್ದೇನೆ. ಹಾಗೆ ನೋಡಿದರೆ ಇಂದು ಹಲವಾರು ವಿಶ್ವವಿದ್ಯಾಲಯಗಳ ಸಮಾಜವಿಜ್ಞಾನ ವಿಭಾಗಗಳಲ್ಲಿ ಕೆಳವರ್ಗದ ಜನರು ಸಂಶೋಧನೆ ನಡೆಸುತ್ತಿದ್ದಾರೆ. ಆದರೆ ಅವರ ಸಂಶೋಧನೆಗಳು ಸರಕಾರದ ನೀತಿ ನಿಯಮಗಳನ್ನು ಪ್ರಭಾವಿಸುವ ದೃಷ್ಟಿಯಿಂದ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವ ರೀತಿಯದ್ದು. ಸರಕಾರದ ನೀತಿಯನ್ನು ಪ್ರಭಾವಿಸುವ ಸಂಶೋಧನೆಗಳನ್ನು ಇಂದು ಕೂಡ ಕೆಲವೇ ಕೆಲವು ಸಂಪದ್ಭರಿತ ಸಂಸ್ಥೆಗಳ ಸಂಶೋಧನೆಗಳು ಪ್ರಭಾವಿಸುತ್ತವೆ. ಅವುಗಳಲ್ಲಿ ಬಹುತೇಕ ಕೇಂದ್ರ ಸರಕಾರದಿಂದ ಅನುದಾನ ಪಡೆಯುವ ಸಂಸ್ಥೆಗಳು. ಇಲ್ಲೆಲ್ಲ ಇಂದು ಕೂಡ ನಮ್ಮ ಮೇಲ್ವರ್ಗವೇ ಸಂಶೋಧಕರಾಗಿ ಮುಖ್ಯ ಭೂಮಿಕೆ ನಿರ್ವಹಿಸುತ್ತಿದ್ದಾರೆ.

[10] ಸಂಶೋಧಕರ ಸಾಮಾಜಿಕ ಹಿನ್ನೆಲೆಯನ್ನು ಶೋಧಿಸುವ ಬರಹಗಳು ಕಡಿಮೆ ಇವೆ. ರಾಮಕೃಷ್ಣ ಮುಖರ್ಜಿಯವರ ಸೋಶಿಯಾಲಜಿ ಆಫ್ ಇಂಡಿಯನ್ ಸೋಶಿಯಾಲಜಿ (ಬಾಂಬೆ: ಎಲೈಡ್ ಪಬ್ಲಿಷರ‍್ಸ್, ೧೯೭೯) ಪುಸ್ತಕದಲ್ಲಿ ಈ ಬಗೆಯ ಕೆಲವು ಅಂಶಗಳು ದೊರಕುತ್ತವೆ. ನಾನು ಈ ತೀರ್ಮಾನಕ್ಕೆ ಬರಲು ರಾಮಕೃಷ್ಣ ಮುಖರ್ಜಿಯವರ ಪುಸ್ತಕದ ಮಾಹಿತಿ ಮಾತ್ರ ಕಾರಣವಲ್ಲ. ಸಂಶೋಧಕರ ಹಿನ್ನೆಲೆಯನ್ನು ಗುರುತಿಸುವ ಸಂಶೋಧನೆಗಳು ಕಡಿಮೆ ಇರಬಹುದು. ಆದರೆ ಆಧುನಿಕ ಕ್ಷೇತ್ರದಲ್ಲಿ ಮುನ್ನುಗಿದವರ ಹಿನ್ನೆಲೆಯನ್ನು ಗುರುತಿಸುವ ಸಾಕಷ್ಟು ಸಂಶೋಧನೆಗಳಿವೆ. ಶಿಕ್ಷಣ, ಉದ್ದಿಮೆ, ತಂತ್ರಜ್ಞಾನ ಇತ್ಯಾದಿಗಳಲ್ಲಿ ಮುಂಚೂಣಿಗೆ ಬಂದವರ ವಿವರಗಳನ್ನು ನೀಡುವ ಸಾಕಷ್ಟು ಸಂಶೋಧನೆಗಳಿವೆ. ಅವುಗಳ ಪಟ್ಟಿ ನೀಡುವುದು ಕಷ್ಟದ ಕೆಲಸ. ಇಲ್ಲಿ ಕೆಲವು ಉದಾಹರಣೆಗಳನ್ನು ಮಾತ್ರ ನೀಡಿದ್ದೇನೆ. ಕರ್ನಾಟಕದಲ್ಲಿ ಆಧುನೀಕರಣದ ಆರಂಭದ ದಿನಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಮೇಲ್ವರ್ಗದವರು ಇದ್ದರು ಎನ್ನುವ ವಿವರಗಳನ್ನು ಚಿತ್ರಾ ಶಿವಕುಮಾರ್ ಅವರ ಎಜುಕೇಶನ್, ಸೋಶಿಯಲ್ ಇನಿಕ್ವಾಲಿಟಿ ಆಂಡ್ ಸೋಶಿಯಲ್ ಚೇಂಜ್‌ಇನ್ ಕರ್ನಾಟಕ (ಡೆಲ್ಲಿ: ಹಿಂದೂಸ್ತಾನ್ ಪಬ್ಲಿಷಿಂಗ್ ಕಾರ್ಪೋರೇಷನ್, ೧೯೮೨) ಪುಸ್ತಕದಿಂದ ಪಡೆಯಬಹುದು. ವಿವಿಧ ಕ್ಷೇತ್ರಗಳಲ್ಲಿ ಮುಂಚೂಣಿಗೆ ಬಂದವರ ವಿವರಗಳು ಸುರೆನ್ ನವ್‌ಲಖಾ ಅವರ ಎಲೈಟ್ ಆಂಡ್ ಸೋಶಿಯಲ್ ಚೇಂಜ್ (ನ್ಯೂಡೆಲ್ಲಿ: ಸೇಜ್, ೧೯೮೯) ಪುಸ್ತಕದಲ್ಲಿದೆ. ಉದ್ಯಮ ಕ್ಷೇತ್ರದಲ್ಲಿ ಮುಂಚೂಣಿಗೆ ಬಂದವರ ವಿವರವನ್ನು ಇ. ವೇನ್ ನಫೀಜರ್‌ ಅವರ ಕ್ಲಾಸ್, ಕಾಸ್ಟ್ ಆಂಡ್ ಎಂಟರ್ಪ್ರನರ್ಶಿಪ್, (ಹೊನಲುಲು: ಯೂನಿವರ್ಸಿಟಿ ಪ್ರೆಸ್ ಆಫ್ ಹವಾಯಿ, ೧೯೭೮) ಪುಸ್ತಕದಿಂದ ಪಡೆಯಬಹುದು.

[11] ವಿವರಗಳಿಗೆ ಎಂ..ಎನ್. ಶ್ರೀನಿವಾಸ್, ಎಂ.ಎಂ. ಶಾ. ಎ. ರಾಮಸ್ವಾಮಿ (ಸಂ), ದಿ ಫೀಲ್ಡ್ ವರ್ಕರ್ ಆಂಡ್ ದಿ ಫೀಲ್ಡ್, ನ್ಯೂಡೆಲ್ಲಿ: ಆಕ್ಸ್‌ಫರ್ಢ್‌ಯೂನಿವರ್ಸಿಟಿ ಪ್ರೆಸ್, ೨೦೦೨, ನೋಡಿ.

[12] ಈ ವಿವರಗಳನ್ನು ನಾನು ಎಂ. ಚಿದಾನಂದಮೂರ್ತಿಯವರ ಮಧ್ಯಕಾಲೀನ ಕನ್ನಡ ಸಾಹಿತ್ಯ ಮತ್ತು ಅಸ್ಪೃಶ್ಯತೆ (ಧಾರವಾಡ: ಪ್ರಸಾರಾಂಗ, ಕರ್ನಾಟಕ ವಿಶ್ವವಿದ್ಯಾಲಯ, ೧೯೮೫,  ಅನುಬಂಧ-೩, ಪು. ೧೭೯-೧೮೨) ಪುಸ್ತಕದಿಂದ ಪಡೆದಿದ್ದೇನೆ. ಚಿದಾನಂದಮೂರ್ತಿಯವರು ಈ ಮಾಹಿತಿಯನ್ನು ನೇರವಾಗಿ ಪಡೆದಿಲ್ಲ. ಅವರು ಡಾ. ಎಂ.ಕೆ.ಶಾಸ್ತ್ರಿಯವರ ಸೆಲೆಕ್ಷನ್ಸ್‌ಫ್ರಮ್ ದಿ ಕಡತಾಸ್ ಆಫ್ ಶೃಂಗೇರಿ ಮಠ (ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟಾರಿಕಲ್ ರಿಸರ್ಚ್ ಸಂಸ್ಥೆಗೆ ಸಿದ್ಧಪಡಿಸಿದ) ಎಂಬ ಅಪ್ರಕಟಿತ ಕೃತಿಯಿಂದ ಪಡೆದಿದ್ದಾರೆ.

[13] ಮುಸ್ಲಿಂ ಮಹಿಳೆಯರನ್ನು ಸಂದರ್ಶನ ಮಾಡಿ ಮಾಹಿತಿ ಸಂಗ್ರಹಿಸುವ ಸಮಸ್ಯೆಯನ್ನು ವಾಲ್ಟರ್ ಡಿಸೋಜ ತಮ್ಮ ಪ್ರಬಂಧದಲ್ಲಿ ಚರ್ಚಿಸಿದ್ದಾರೆ (ವಾಲ್ಟರ್ ಡಿ ಸೋಜ, “ಗಲ್ಫ್‌ಮೈಗ್ರೇಶನ್ ಆಂಡ್ ಇಟ್ಸ್ ಸೋಶಿಯೋ ಎಕನಾಮಿಕ್ ಇಂಪ್ಯಾಕ್ಟ್ – ಎ ಸ್ಟಡಿ ಆಫ್ ಸೌತ್ ಕೆನರಾ”, ಕನ್ನಡ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ ಅಪ್ರಕಟಿತ ಸಂಶೋಧನಾ ಪ್ರಬಂಧ, ೨೦೦೩). ದಕ್ಷಿಣ ಕನ್ನಡ ಜಿಲ್ಲೆಯಿಂದ ಗಲ್ಫ್‌ದೇಶಗಳಿಗೆ ವಲಸೆ ಹೋದವರಲ್ಲಿ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯಗಳ ಪುರುಷರ ಸಂಖ್ಯೆ ಹೆಚ್ಚಿದೆ. ಇವರು ತಮ್ಮ ಸಂಸಾರವನ್ನು ಊರಲ್ಲೇ ಬಿಟ್ಟು ವಲಸೆ ಹೋಗಿದ್ದಾರೆ. ಈ ರೀತಿ ವಲಸೆ ಹೋದವರ ಪತ್ನಿಯರ ಸ್ಥಿತಿಗತಿಗಳನ್ನು ಅರ್ಥಮಾಡಿಕೊಳ್ಳುವುದು ವಾಲ್ಟರ್ ಡಿಸೋಜರ ಅಧ್ಯಯನದ ಒಂದು ಉದ್ದೇಶವಾಗಿತ್ತು. ಅದಕ್ಕಾಗಿ ಅವರು ಮುಸ್ಲಿಂ ಮತ್ತು ಕ್ರಿಶ್ಚಿಯನ್ ಮಹಿಳೆಯರನ್ನು ಸಂದರ್ಶನ ಮಾಡಬೇಕಾಗಿತ್ತು. ಆ ಸಂದರ್ಭದಲ್ಲಿ ಮುಸ್ಲಿಂ ಮಹಿಳೆಯರನ್ನು ಭೇಟಿಯಾಗುವುದು ಮತ್ತು ಸಂದರ್ಶನ ಮಾಡಿ ಮಾಹಿತಿ ಸಂಗ್ರಹಿಸುವುದು ಎಷ್ಟು ಕಷ್ಟವಾಯಿತೆಂದು ತಮ್ಮ ಪ್ರಬಂಧದಲ್ಲಿ ವಿವರಿಸಿದ್ದಾರೆ.

[14] ವಿವರಗಳಿಗೆ, ಚಂದ್ರ ಪೂಜಾರಿ, ಜನಾಯೋಜನೆಹೈದರಾಬಾದ್ ಕರ್ನಾಟಕದ ಅನುಭವಗಳು, ವಿದ್ಯಾರಣ್ಯ; ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ೨೦೦೪ ಮತ್ತು ಚಂದ್ರ ಪೂಜಾರಿ, ದೇಶೀಯತೆಯ ನೆರಳಲ್ಲಿ ವಿಕೇಂದ್ರೀಕರಣ, ವಿದ್ಯಾರಣ್ಯ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ೨೦೦೦ಗಳನ್ನು ನೋಡಬಹುದು.

[15] ಭೂಮಿ ದಾಖಲೆಗಳನ್ನು ಸೃಷ್ಟಿಸುವ ಮತ್ತು ಆ ಮೂಲಕ ಭೂಮಾಲಿಕರಾಗುವ ಕ್ರಮ ಹಿಂದಿನಿಂದಲೇ ನಮ್ಮಲ್ಲಿ ಜಾತಿ ಇತ್ತು. ವಿ.ಐ. ಪವ್‌ಲೋವ್ ಅವರ ಹಿಸ್ಟಾರಿಕಲ್ ಪ್ರಿಮೈಸಸ್ ಫಾರ್ ಇಂಡಿಯಾಸ್ ಟ್ರಾನ್ಸಿಶನ್ ಟು ಕ್ಯಾಪಿಟಲಿಸಂ (ಮಾಸ್ಕೋ: ನೌಕ ಪಬ್ಲಿಷಿಂಗ್ ಹೌಸ್, ೧೯೭೯) ಪುಸ್ತಕದಲ್ಲಿ ಈ ಕುರಿತು ಸಾಕಷ್ಟು ವಿವರಣೆಗಳಿವೆ ದಕ್ಷಿಣ ಕನ್ನಡ ಜಿಲ್ಲೆಯ ಭೂ ಸಂಬಂಧ ಮತ್ತು ಭೂಸುಧಾರಣೆ ಮಸೂದೆ ಸಂದರ್ಭದಲ್ಲಿ ಭೂದಾಖಲೆಗಳಲ್ಲಿ ಆದ ತಿದ್ದುಪಡಿಗಳ ಕುರಿತ ವಿವರಗಳನ್ನು ಚಂದ್ರಶೇಖರ್ ದಾಮ್ಲೆ ಅವರ, ಇಂಪ್ಯಾಕ್ಟ್ ಆಫ್ ಟೆನೆನ್ಸಿ ಲೆಜಿಸ್ಲೇಷನ್ಸ್ ಆಂಡ್ ಚೇಂಜಿಂಗ್ ಅಗ್ರೇರಿಯನ್ ರಿಲೇಶನ್ಸ್ – ಎ ಕೇಸ್ ಸ್ಟಡಿ ಆಫ್ ದಕ್ಷಿಣ ಕನ್ನಡ ಡಿಸ್ಟ್ರಿಕ್ಟ್, (ಸೋಶಿಯಲ್ ಸೈಂಟಿಸ್ಟ್, ವಾ. ೧೭ (೧೧-೧೨), ನವೆಂಬರ್-ಡಿಸೆಂಬರ್, ೧೯೮೯, ಪು. ೮೩-೯೭) ಲೇಖನದಲ್ಲಿ ನೋಡಬಹುದು.

[16] ಚಂದ್ರ ಪೂಜಾರಿ, ‘ಟ್ರೆಂಡ್ಸ್ ಇನ್ ಇಂಟರ್‌ಪ್ರನರ್‌ಶಿಪ್ ಆಂಡ್ ರೀಜನಲ್ ಡೆವಲಫ್‌ಮೆಂಟ್ – ಎ ಸ್ಟಡಿ ಆಫ್ ಸ್ಮಾಲ್ ಎಂಟರ್‌ಪ್ರನರ್ಸ್‌ ಆಫ್ ಸೌತ್ ಕೆನರಾ’, ಮಂಗಳೂರು ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ ಅಪ್ರಕಟಿತ ಸಂಶೋಧನಾ ಪ್ರಬಂಧ, ೧೯೯೬.