ಸಮಾಜವನ್ನು ಬದಲಾಯಿಸುವ ಉದ್ದೇಶದಿಂದ ಸಮಾಜವನ್ನು ಅರ್ಥ ಮಾಡಿಕೊಳ್ಳುವ ಪ್ರಕ್ರಿಯೆ ಸಂಶೋಧನೆ ಎನ್ನುವ ಸಂಶೋಧನೆಯ ಒಂದು ವ್ಯಾಖ್ಯಾನ. ಆದರೆ ಇಂದು ಸಂಶೋಧನೆಯ ಈ ವ್ಯಾಖ್ಯಾನವನ್ನು ಅಥವಾ ಸಮಾಜವನ್ನು ಬದಲಾಯಿಸುವ ಸಂಶೋಧನೆಯ ಗುಣವನ್ನು ನಿರಾಕರಿಸುವ ಹಲವಾರು ವಾದಗಳು ಪ್ರಚಾರದಲ್ಲಿವೆ. ಅವುಗಳಲ್ಲಿ ತುಂಬಾ ಪ್ರಚಾರದಲ್ಲಿರುವ ಕೆಲವು ವಾದಗಳು ಇಂತಿವೆ. ಸಂಶೋಧನೆಯ ವ್ಯಾಖ್ಯಾನವನ್ನು ಜ್ಞಾನದ ಉತ್ಪಾದನೆ ಎಂದು ಬದಲಾಯಿಸಿಕೊಳ್ಳುವುದು, ಬಹುಸತ್ಯ ಮತ್ತು ಬಹುಸುಖದ ಕಲ್ಪನೆಗಳನ್ನು ಮುಂದಿಡುವುದು, ಬದಲಾವಣೆ ಬೇಕೆಂದು ವಾದಿಸುವವರ ಹಿನ್ನೆಲೆಯನ್ನು ಪ್ರಶ್ನಿಸುವುದು ಇತ್ಯಾದಿಗಳು. ಇವುಗಳಲ್ಲಿ ತುಂಬಾ ಪ್ರಚಾರದಲ್ಲಿರುವ ಎರಡು ಕಲ್ಪನೆಗಳನ್ನು (ಬಹುಸುಖ ಮತ್ತು ಬಹುಸತ್ಯದ ಕಲ್ಪನೆಗಳನ್ನು) ವಿಶ್ಲೇಷಿಸುವ ಪ್ರಯತ್ನವನ್ನು ಈ ಅಧ್ಯಾಯದಲ್ಲಿ ಮಾಡಲಾಗಿದೆ. ಅಧ್ಯಾಯದ ಮುಖ್ಯ ವಿಚಾರಕ್ಕೆ ಬರುವ ಮುನ್ನ ಕೆಲವೊಂದು ಪದಗಳನ್ನು ಈ ಅಧ್ಯಾಯದಲ್ಲಿ ಯಾವ ಅರ್ಥದಲ್ಲಿ ಬಳಸಿದ್ದೇನೆ ಎನ್ನುವುದನ್ನು ಸ್ಪಷ್ಟಪಡಿಸಬೇಕಾಗಿದೆ. ಸಾಮಾಜಿಕ ಸಂಬಂಧಗಳಲ್ಲಿ ಆಗುವ ಬದಲಾವಣೆಗಳನ್ನು ಅಥವಾ ಮಾರ್ಪಾಟುಗಳನ್ನು ಸಾಮಾಜಿಕ ಪರಿವರ್ತನೆಯೆಂದು ವ್ಯಾಖ್ಯಾನಿಸಿಕೊಂಡಿದ್ದೇನೆ. ಇಲ್ಲಿ ‘ಸಮಾಜ’ ಪದವನ್ನು ಅದರ ವಿಸ್ತಾರವಾದ ಅರ್ಥದಲ್ಲಿ ಬಳಸಿದ್ದೇನೆ. ಅಂದರೆ ಅದರ ಎಲ್ಲ ಆಯಾಮಗಳು – ರಾಜಕೀಯ, ಆರ್ಥಿಕ ಮತ್ತು ಸಂಸ್ಕೃತಿ ಒಳಗೊಂಡಿರುವಂತೆ ಬಳಸಿದ್ದೇನೆ. ಸಾಮಾಜಿಕ ಸಂಬಂಧಗಳಲ್ಲಿ ಬದಲಾವಣೆ ಏಕೆ ಆಗಬೇಕು ಅಥವಾ ವ್ಯಕ್ತಿಗಳು ಬದಲಾವಣೆಯನ್ನು ಯಾಕೆ ಬಯಸುತ್ತಾರೆ ಎನ್ನುವುದರ ಬಗ್ಗೆ ಈಗಾಗಲೇ ಪ್ರಚಲಿತದಲ್ಲಿರುವ ಕೆಲವೊಂದು ನಿಲುವುಗಳ ಮೂಲಕ ಸ್ಪಷ್ಟಪಡಿಸಲು ಪ್ರಯತ್ನಿಸಿದ್ದೇನೆ. ಅಸಮಾಧಾನ, ಅತೃಪ್ತಿಗಳು ಮನುಷ್ಯರನ್ನು ಕ್ರಿಯೆಗೆ ಪ್ರೇರೇಪಿಸುತ್ತವೆ. ತಾನು ಇರುವ ಸ್ಥಿತಿ ಅಥವಾ ಪರಿಸರದ ಬಗ್ಗೆ ಮನುಷ್ಯರಿಗೆ ಅತೃಪ್ತಿ, ಅಸಮಾಧಾನ, ಅಸಹನೆ ಇದ್ದಾಗ ಅವರು ಆ ಸ್ಥಿತಿಯಿಂದ ಹೊರಲು ಬರಲು ಅಥವಾ ಆ ಸ್ಥಿತಿ, ಪರಿಸರವನ್ನು ತಮಗೆ ಅನುಕೂಲವಾಗುವ ರೀತಿಯಲ್ಲಿ ಪರಿವರ್ತಿಸಿಕೊಳ್ಳಲು ಪ್ರಯತ್ನಿಸಬಹುದು.[1] ಎಲ್ಲ ಸಂದರ್ಭಗಳಲ್ಲೂ ಅಸಮಾಧಾನ, ಅತೃಪ್ತಿಗಳಿಗೆ ಸ್ಥಿತಿಯನ್ನು ಬದಲಾಯಿಸುವ ಅಥವಾ ಅದರಿಂದ ಹೊರಗೆ ಬರುವ ಕ್ರಿಯೆ ನಡೆದೇ ನಡೆಯುತ್ತದೆ ಎನ್ನುವುದು ಸರಿಯಲ್ಲ. ಎಷ್ಟೋ ಬಾರಿ ಸ್ಥಿತಿಯೊಂದಿಗೆ ರಾಜಿ ಮಾಡಿಕೊಂಡು ಅಥವಾ ಹೊಂದಾಣಿಕೆ ಮಾಡಿಕೊಂಡು ಬದುಕುವುದು ಕೂಡ ಅಸಮಾಧಾನಗಳಿಂದ ಹೊರಗೆ ಬರುವ ಒಂದು ದಾರಿ ಆಗಬಹುದು.

ಅಸಮಾಧಾನ, ಅತೃಪ್ತಿಗಳು ಪರಿವರ್ತನಾ ಕ್ರಿಯೆಗೆ ಪ್ರೇರಣೆಯಾಗಿ ಕೆಲಸ ಮಾಡಬೇಕಾದರೆ ಏನಾಗಬೇಕು? ತಾನು ಬದುಕುವ ಪರಿಸರದ ಬಗ್ಗೆ ಅಸಹನೆ ಅಥವಾ ಅತೃಪ್ತಿ ಹೊಂದುವಲ್ಲಿ ಮತ್ತು ಅದರಿಂದ ಹೊರಗೆ ಬರುವಲ್ಲಿ ಅಥವಾ ಅದನ್ನು ಪರಿವರ್ತಿಸಬೇಕೆಂಬ ಇಚ್ಚಾಶಕ್ತಿ ಬಲಗೊಳ್ಳುವಲ್ಲಿ ತನ್ನ ಪರಿಸರದ ಬಗೆಗಿನ ವ್ಯಕ್ತಿಯೊಬ್ಬನ ತಿಳುವಳಿಕೆ ಪ್ರಧಾನ ಪಾತ್ರ ವಹಿಸುತ್ತದೆ. ಸಂಶೋಧನೆ ತಿಳುವಳಿಕೆಯ ಅಡಿಪಾಯ.[2] ಆದರೆ ಎಲ್ಲ ರೀತಿಯ ಸಂಶೋಧನೆ ಸಾಮಾಜಿಕ ಪರಿವರ್ತನೆಗೆ ಪೂರಕವಾಗುವ ತಿಳುವಳಿಕೆಗೆ ಕಾರಣವಾಗುತ್ತದೆ ಎನ್ನುವುದು ಸರಿಯಲ್ಲ. ಯಾವ ಬಗೆಯ ತಿಳುವಳಿಕೆ ಪರಿವರ್ತನೆಗೆ ಕಾರಣವಾಗುತ್ತದೆ ಎನ್ನುವುದರ ಕಿರು ಪರಿಚಯ ಮಾಡಿಕೊಂಡು ಮುಂದುವರಿಯಬಹುದು. ಎಲ್ಲರಿಗೂ ತಮ್ಮ ಹಾಗೂ ತಾವು ಬದುಕುವ ಪರಿಸರದ ಬಗ್ಗೆ ಯಾವುದೋ ಒಂದು ವಿಧದ ಅರಿವು ಇದೆ ಎಂದು ಗ್ರಹಿಸಿದ್ದೇನೆ. ತಮ್ಮ ಹಾಗೂ ಪರಿಸರದ ಅರಿವಿನ ನೆಲೆಯಲ್ಲಿ ವ್ಯಕ್ತಿಗಳನ್ನು ಮೂರು ವಿಧಗಳಾಗಿ ವಿಂಗಡಿಸಬಹುದು. ಒಂದು, ತಮ್ಮ ಹಾಗೂ ತಾವು ಬದುಕುವ ಪರಿಸರದ ಬಗ್ಗೆ ತಕ್ಕಮಟ್ಟಿನ ತಿಳುವಳಿಕೆ ಇರುತ್ತದೆ. ಆದರೆ ತಮ್ಮ ಸ್ಥಿತಿ ಯಾಕೆ ಹೀಗಿದೆ ಎನ್ನುವುದರ ಬಗ್ಗೆ ತಿಳುವಳಿಕೆ ಇಲ್ಲದಿರುವುದು. ಎರಡು, ತಮ್ಮ ಹಾಗೂ ತಾವು ಬದುಕುವ ಪರಿಸರದ ಬಗ್ಗೆ ತಿಳುವಳಿಕೆ ಇರುತ್ತದೆ. ಜತೆಗೆ ತಮ್ಮ ಸ್ಥಿತಿ ಯಾಕೆ ಹೀಗಿದೆ ಎನ್ನುವುದರ ಬಗ್ಗೆ ತಿಳುವಳಿಕೆಯೂ ಇರುತ್ತದೆ. ಆದರೆ ಆ ತಿಳುವಳಿಕೆ ತಾವು ಇರುವ ಸ್ಥಿತಿಯನ್ನು ಸಮರ್ಥಿಸುವಂತಿರುತ್ತದೆ. ಮೂರು, ತಮ್ಮ ಹಾಗೂ ತಾವು ಬದುಕುವ ಪರಿಸರದ ಬಗ್ಗೆ ತಿಳುವಳಿಕೆ ಇರುತ್ತದೆ. ಜತೆಗೆ ತಮ್ಮ ಸ್ಥಿತಿ ಯಾಕೆ ಹೀಗಿದೆ ಎನ್ನುವುದರ ಬಗ್ಗೆ ತಿಳುವಳಿಕೆಯೂ ಇರುತ್ತದೆ. ಜತೆಗೆ ಆ ತಿಳುವಳಿಕೆ ತಾವು ಇರುವ ಸ್ಥಿತಿಯನ್ನು ಪ್ರಶ್ನಿಸುವಂತಿರುತ್ತದೆ. ಮೂರನೇ ವಿಧದ ತಿಳುವಳಿಕೆ ಪರಿವರ್ತನಾ ಕ್ರಿಯೆಗೆ ಪ್ರೇರಕವಾಗಿ ಕೆಲಸ ಮಾಡಬಹುದು. ಈ ಬಗೆಯ ತಿಳುವಳಿಕೆಯನ್ನು ಕೊಡುವ ಸಂಶೋಧನೆ ಸಾಮಾಜಿಕ ಪರಿವರ್ತನೆ ಪೂರಕವಾಗಬಹುದು.

ಮೇಲಿನ ಕಂಡಿಕೆಯಲ್ಲಿ ಪರಿವರ್ತನೆ ಯಾಕೆ ಎನ್ನುವುದನ್ನು ನೋಡಿದ್ದೇವೆ. ಒಂದು ವೇಳೆ ಪರಿವರ್ತನೆ ಆಗಬೇಕಾದರೆ ಅದನ್ನು ಹೇಗೆ ಮಾಡಬಹುದು ಎನ್ನುವುದು ನಂತರದ ಪ್ರಶ್ನೆ. ಪರಿವರ್ತನೆಗೆ ಮಾದರಿಯ ಅಗತ್ಯವಿದೆ. ಮಾದರಿಯನ್ನು ಎರಡು ರೀತಿಯಲ್ಲಿ ಬಳಸಿಕೊಳ್ಳಲಾಗಿದೆ. ಒಂದು, ಮಾದರಿಯಂತೆ ಪರಿವರ್ತನೆಗೊಳ್ಳುವುದು ಮತ್ತು ಎರಡು ಮಾದರಿಗಿಂತ ಭಿನ್ನವಾಗಿ ರೂಪಿಸಿಕೊಳ್ಳುವುದು.[3] ಇವುಗಳನ್ನು ಬಾಹ್ಯ ಮತ್ತು ಆಂತರಿಕ ಮಾದರಿಗಳೆಂದು ಕೂಡ ಹೆಸರಿಸಬಹುದು. ಆಧುನೀಕರಣ ಪ್ರಕ್ರಿಯೆಯಲ್ಲಿ ಬಾಹ್ಯ ಮಾದರಿ ಕೆಲಸ ಮಾಡಿದೆ. ಪಶ್ಚಿಮದ ಆಧುನಿಕ ತಂತ್ರಜ್ಞಾನ, ಸಾಂಘಿಕ ರಚನೆಗಳನ್ನು ಮತ್ತು ಮೌಲ್ಯಗಳನ್ನು ನಮ್ಮ ವ್ಯವಸ್ಥೆಯಲ್ಲಿ ಅಳವಡಿಸುವ ಮೂಲಕ ಸಾಮಾಜಿಕ ಪರಿವರ್ತನೆ ಸಾಧ್ಯ ಎನ್ನುವ ಗ್ರಹಿಕೆ ಆಧುನೀಕರಣದ ತಳಹದಿ.[4] ಸ್ಥಳೀಯವಾದ ಯಾವುದೂ ಕೂಡ ಭವಿಷ್ಯದ ಸಮಾಜ ನಿರ್ಮಾಣಲದ್ಲಿ ವಿಶೇಷ ಉಪಯೋಗವಿಲ್ಲ ಎನ್ನುವ ಧೋರಣೆಗಳು ಇಲ್ಲಿ ಕೆಲಸ ಮಾಡಿವೆ. ಇದೇ ಮಾದರಿಯ ಸುಧಾರಿತ ರೂಪ ಕೂಡ ಚಾಲ್ತಿಯಲ್ಲಿದೆ. ಇಲ್ಲಿ ತಂತ್ರಜ್ಞಾನದ ಜತೆಗೆ ಸುಧಾರಿತ ಸಾಮಾಜಿಕ ಹಾಗೂ ರಾಜಕೀಯ ಸಂಬಂಧಗಳಿಗೆ ಮಹತ್ವ ಇದೆ. ವರ್ತಮಾನದ ವ್ಯವಸ್ಥೆಯನ್ನು ಒಂದು ವರ್ಗ ಅಥವಾ ಸಂಘರ್ಷರಹಿತ ನೆಲೆಯಿಂದ ನೋಡುವುದರಿಂದ ಬದಲಾವಣೆ ಯಾಕೆ ಮತ್ತು ಅದನ್ನು ಯಾವುದಕ್ಕೆ ಹೋಲಿಸಿ ಬದಲಾವಣೆ ಎನ್ನುವ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಒಂದು ವೇಳೆ ನಮ್ಮ ವ್ಯವಸ್ಥೆಯನ್ನು ಹಲವಾರು ವರ್ಗ ಅಥವಾ ಜಾತಿ ನೆಲೆಯಲ್ಲಿ ರೂಪುಗೊಂಡ ವ್ಯವಸ್ಥೆಯೆಂದು ಮತ್ತು ಆ ಕಾರಣಗಳಿಂದಾಗಿಯೇ ಅಸಮಾನ ಸಾಮಾಜಿಕ ವ್ಯವಸ್ಥೆ ಇದೆ ಎಂದು ತಿಳಿದರೆ ಈ ಪ್ರಶ್ನೆಗಳು ಕರಗಿ ಹೋಗುತ್ತವೆ ಎನ್ನುವ ಗೃಹೀತ ಈ ಸುಧಾರಿತ ಆಧುನೀಕರಣದ ಹಿಂದೆ ಇದೆ. ಉದಾಹರಣೆಗೆ ಯಾವುದೋ ಹಳ್ಳಿಯಲ್ಲಿ ವಾಸಿಸುವ ಒಬ್ಬ ದಲಿತ ಅಥವಾ ಇನ್ಯಾವುದೋ ಕೆಳಜಾತಿಯ ವ್ಯಕ್ತಿಗೆ ತನ್ನ ಸ್ಥಿತಿ ಸರಿ ಇಲ್ಲ ಎನ್ನಲು ಭೂತ ಕಾಲಕ್ಕೆ ಅಥವಾ ಇನ್ಯಾವುದೋ ವ್ಯವಸ್ಥೆಗೆ ಹೋಲಿಸುವ ಅಗತ್ಯ ಇಲ್ಲ. ತನ್ನ ಸುತ್ತಲಿನ ಹಳ್ಳಿ ಮತ್ತು ಅಲ್ಲಿನ ಮೇಲ್‌ಜಾತಿಯವರ ಸ್ಥಾನಮಾನ ಕೆಳಜಾತಿಯವರಲ್ಲಿ ತಮ್ಮ ಸ್ಥಿತಿ ಸರಿ ಇಲ್ಲ ಎನ್ನುವ ತೀರ್ಮಾನಕ್ಕೆ ಎಡೆ ಮಾಡಿಕೊಡಬಹುದು. ಇಂತವರು ಒಂದು ವೇಳೆ ಸಂಶೋಧನೆಗೆ ಇಳಿದರೆ ಅವರಿಗೆ ತಮ್ಮ ದಿನನಿತ್ಯದ ಬದುಕು ಗಾಢವಾಗಿ ಕಾಡಬಹುದು ಮತ್ತು ಅವುಗಳಿಂದ ಮುಕ್ತಿಗಾಗಿ ಈಗಿನ ವ್ಯವಸ್ಥೆ ಬದಲಾಗಬೇಕು ಎಂದು ಅನ್ನಿಸಬಹುದು. ಉದಾಹರಣೆಗೆ ಅಂಬೇಡ್ಕರ್‌ ಬರಹಗಳು. ಸಾಮಾಜಿಕ ಪರಿವರ್ತನೆಗೆ ನೆಚ್ಚಿದ ಈ ಬಾಹ್ಯ ಮಾದರಿ ಹಲವಾರು ಪ್ರತಿರೋಧಗಳನ್ನು ಹುಟ್ಟು ಹಾಕಿದೆ. ಅವುಗಳನ್ನು ಆಂತರಿಕ ಮಾದರಿಗಳನ್ನು ಗುರುತಿಸುವ ವಾದಗಳೆಂದು ತಿಳಿದುಕೊಳ್ಳಬಹುದು. ಆಂತರಿಕ ಮದರಿಗಳನ್ನು ಮುಂದೊಡ್ಡುವ ಹಲವಾರು ವಾದಗಳಿವೆ. ಅವುಗಳಲ್ಲಿ ಮುಖ್ಯವಾದುದು ಸಮುದಾಯವಾದ.[5] ಇವರ ಪ್ರಕಾರ ಆಧುನಿಕ ವಿಜ್ಞಾನ, ತಂತ್ರಜ್ಞಾನ ಮತ್ತು ಸಾಂಘಿಕ ರಚನೆಗಳನ್ನು ನಮ್ಮಲ್ಲಿ ಅಳವಡಿಸುವ ಮೂಲಕ ಸಾಮಾಜಿಕ ಪರಿವರ್ತನೆ ಸಾಧ್ಯ ಎಂದು ನಂಬುವುದು. ಇದು ತುಂಬಾ ಸೀಮಿತ ದೃಷ್ಟಿಕೋನ. ಯಾಕೆಂದರೆ ಈ ದೃಷ್ಟಿಕೋನ ನಮ್ಮ ಸಂಸ್ಕೃತಿಯಲ್ಲಿ ಚಾರಿತ್ರಿಕವಾಗಿ ರೂಪುಗೊಂಡ ಸಂಸ್ಥೆಗಳನ್ನು ಗಣನೆಗೆ ತೆಗೆದುಕೊಂಡಿಲ್ಲ. ನಮ್ಮ ಸಂಸ್ಕೃತಿಯಲ್ಲೂ ಒಳ್ಳೆಯ ಅಂಶಗಳು ಇದ್ದವು ಮತ್ತು ಇವೆ; ಅವುಗಳನ್ನು ಪುನರ್ ಸ್ಥಾಪಿಸುವ ಮೂಲಕ ನಮ್ಮ ವರ್ತಮಾನದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದು ವಾದಿಸುತ್ತಾರೆ. ವರ್ತಮಾನವನ್ನು ಭೂತಕ್ಕೆ ಹೋಲಿಸಿ ತಿದ್ದುಕೊಳ್ಳುವ ಅಥವಾ ಪರಿವರ್ತನೆಗೆ ಪ್ರಯತ್ನಿಸುವ ವಿಧಾನ ಇದು.

ಬಹುಸುಖದ ಕಲ್ಪನೆ

ಮಾದರಿ ಇದ್ದ ಕೂಡಲೇ ಪರಿವರ್ತನೆಯ ಪ್ರಶ್ನೆ ಇತ್ಯರ್ಥಗೊಳ್ಳುವುದಿಲ್ಲ. ಮಾದರಿ ಗುರಿಯನ್ನು ಸೂಚಿಸುತ್ತದೆ. ಆ ಗುರಿಯತ್ತ ಅಥವಾ ಮಾದರಿಯತ್ತ ಚಲಿಸಬೇಕಾದ, ಈಗ ಇರುವುದು ಸರಿ ಇಲ್ಲ ಎನ್ನುವ ತೀರ್ಮಾನಕ್ಕೆ ಬರಬೇಕಾಗುತ್ತದೆ. ಈಗ ಇರುವುದು ಸರಿ ಇಲ್ಲ ಎನ್ನುವ ತೀರ್ಮಾನದ ಹಿಂದೆ ವರ್ತಮಾನದ ವ್ಯವಸ್ಥೆಯಲ್ಲಿ ಸುಖ ಇಲ್ಲ ಎನ್ನುವ ದೃಷ್ಟಿಕೋನ ಕೆಲಸ ಮಾಡುತ್ತದೆ. ಸುಖ ಇಲ್ಲ ಎಂದು ನಾವು ಹೇಗೆ ತೀರ್ಮಾನಕ್ಕೆ ಬರುವುದು? ಪ್ರಪಂಚದಲ್ಲಿ ಇರುವ ಎಲ್ಲರ ಸುಖದ ಕಲ್ಪನೆ ಒಂದೇ ಆಗಿದ್ದರೆ ಯಾವುದೋ ಒಂದು ಯೂನಿವರ್ಸಲ್ ಮಾನದಂಡದ ಮೂಲಕ ಅಳೆದು ತೀರ್ಮಾನಕ್ಕೆ ಬರಬಹುದು. ಯೂನಿವರ್ಸಲ್ ಮಾನದಂಡಗಳನ್ನು ರೂಪಿಸಿಕೊಳ್ಳಬೇಕಾದರೆ ಆಬ್ಜೆಕ್ಟಿವ್ ವರ್ಲ್ಡ್ (ಸಮಾಜ) ಒಂದು ಇದೆ, ಅದನ್ನು ಎಂಪಿರಿಕಲ್ ಆಗಿ ಗ್ರಹಿಸಬಹುದು ಅಥವಾ ಇತರ ವಿಧಾನಗಳಿಂದ ಅಥವಾ ಆರ್ಥ ಮಾಡಿಕೊಳ್ಳಬಹುದು ಇತ್ಯಾದಿಗಳು ಗೃಹೀತಗಳು ಆಲ್ತಿಯಲ್ಲಿರಬೇಕು. ಆದರೆ ಈ ಬಗೆಯ ಗ್ರಹಿಕೆಗಳು ಇಂದು ಅಲ್ಲಗಳೆಯಲ್ಪಟ್ಟಿವೆ ಎನ್ನುವ ವಿವರಣೆಯನ್ನು ಅಧ್ಯಾಯ ಎರಡರಲ್ಲಿ ನೋಡಿದ್ದೇವೆ.  ಈ ಗ್ರಹಿಕೆಗಳ ಸ್ಥಾನದಲ್ಲಿ ವಾಸ್ತವಿಕತೆ ಎನ್ನುವುದು ಅರ್ಥಪೂರ್ಣ ಸಾಮಾಜಿಕ ಕಟ್ಟುವಿಕೆ, ನಮ್ಮ ಆಲೋಚನೆಗಳಿಂದ ಪ್ರತ್ಯೇಕವಾದ ಪ್ರಪಂಚವೊಂದಿಲ್ಲ, ನಾವು ಇದೆ ಎಂದು ಗ್ರಹಿಸುತ್ತೇವೆ, ಆದುದರಿಂದ ಇದೆ ಇತ್ಯಾದಿ ಗ್ರಹಿಕೆಗಳು ಬಲಗೊಂಡಿವೆ. ಅಂದರೆ ಸಮಾಜವೊಂದರಲ್ಲಿರುವ ವಿವಿಧ ಸಮುದಾಯಗಳು ಕಟ್ಟಿಕೊಳ್ಳುವ ಸುಖದುಃಖದ ಕಲ್ಪನೆಗಳು ಕೂಡ ಭಿನ್ನವಾಗಿವೆ ಎಂದಾಯಿತು. ಒಂದು ಉದಾಹರಣೆಯ ಮೂಲಕ ಈ ಗ್ರಹಿಕೆಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬಹುದು, ಗ್ರಾಮೀಣ ಅಭಿವೃದ್ಧಿ ಅಧಿಕಾರಿಯೊಬ್ಬನ ಹತ್ತಿರ ಹಳ್ಳಿಯವರೆಲ್ಲ ಬ್ಯಾಂಕ್ ಸಾಲ ಕೊಡಿಸಿ ಎಂದು ದುಂಬಾಲು ಬೀಳುತ್ತಿದ್ದರು. ಆದರೆ ಒಬ್ಬ ರೈತ ಮಾತ್ರ ಅಧಿಕಾರಿಯ ಇರುವಿಕೆಯನ್ನು ಮರೆತು ತನ್ನ ಪಾಡಿಗೆ ತಾನಿದ್ದ. ಎಲ್ಲರ ಅಹವಾಲುಗಳನ್ನು ಕೇಳಿದ ನಂತರ ಅಧಿಕಾರಿಯ ಗಮನ ಆ ರೈತನ ಕಡೆ ಹರಿಯಿತು. ಅವನ ಹತ್ತಿರ ಹೋಗಿ, ‘ಅಲ್ಲಯ್ಯಾ ಎಲ್ಲರೂ ಬ್ಯಾಂಕ್‌ ಸಾಲ ಕೊಡಿಸಿ ಎಂದು ಒತ್ತಾಯ ಮಾಡುತ್ತಿದ್ದರೆ ನೀನು ಸುಮ್ಮನಿದ್ದೀಯಲ್ಲ. ನಿನಗೆ ಸಾಲ ಬೇಡವೇ?’ ಎಂದು ಕೇಳಿದ. ‘ಯಾಕೆ ಬುದ್ದಿ ಸಾಲ?’ ಎಂದು ಆ ರೈತ ಮರು ಸವಾಲು ಹಾಕಿದ. ‘ಥೂ ನಿನ್ನ; ಸಾಲ ಯಾಕೆ  ಅಂತ ಕೇಳುತ್ತೀಯಲ್ಲ. ಸಾಲದಿಂದ ಒಳ್ಳೆಯ ಬೀಜ, ಗೊಬ್ಬರ ಕೊಂಡುಕೊಳ್ಳಬಹುದು, ನಿನ್ನ ಬಾವಿಗೆ ಪಂಪ್ ಹಾಕಿಸಬಹುದು, ಈಗ ಇರುವ ಹಳೇ ಗಾಡಿ ಬದಲು ಹೊಸ ಗಾಡಿ ಮಾಡಿಸಬಹುದು’ ಹೀಗೆ ಅಧಿಕಾರಿ ಸಾಲದ ಅನುಕೂಲಗಳ ಒಂದು ದೊಡ್ಡ ಪಟ್ಟಿಯನ್ನೇ ಮಾಡಿದ. ‘ಅಲ್ಲಾ ಬುದ್ಧಿ ಇದನ್ನೆಲ್ಲಾ ಯಾಕೆ ಕೊಂಡುಕೊಳ್ಳಬೇಕು?’ ಎಂದು ರೈತನ ಮತ್ತೊಂದು ಪ್ರಶ್ನೆ. ‘ಇದನ್ನೆಲ್ಲ ಕೊಂಡು ನೀನು ಬೇಸಾಯ ಮಾಡಿದರೆ ನಿನ್ನ ಇಳುವರಿ ಹೆಚ್ಚುತ್ತೆ’ ಎಂದು ಅಧಿಕಾರಿಯ ಸಮಜಾಯಿಷಿಕೆ. ‘ಇಳುವರಿ ಹೆಚ್ಚಿಸುವುದು ಯಾಕೆ?’ ಎಂದು ರೈತ ಕೇಳಿದ. ‘ಇಳುವರಿ ಹೆಚ್ಚುವುದರಿಂದ ನಿನ್ನ ಸಂಪತ್ತು ಹೆಚ್ಚುತ್ತದೆ’ ಎಂದು ಈಗಲಾದರೂ ಈತನಿಗೆ ಅರ್ಥ ಆಗಿರಬಹುದು, ಇನ್ನು ಪ್ರಶ್ನೆಗಳು ಇರಲಿಕ್ಕಿಲ್ಲ ಎಂದು ಅಧಿಕಾರಿ ನಿಟ್ಟುಸಿರು ಬಿಟ್ಟ. ‘ಅದು ಸರಿ ಬುದ್ಧಿ, ಆದರೆ ಸಂಪತ್ತು ಹೆಚ್ಚಾದರೆ ಏನಾಗುತ್ತದೆ’ ಎಂದು ರೈತ ಕೇಳಿ ರೈತ ಇನ್ನು ಪ್ರಶ್ನೆ ಕೇಳುವುದಿಲ್ಲ ಎನ್ನುವ ಅಧಿಕಾರಿಯ ಊಹೆಯನ್ನೇ ಅಡಿಮೇಲು ಮಾಡಿದ. ಈ ಪ್ರಪಂಚದಲ್ಲಿ ಇಂತಹ ಮೂರ್ಖರೂ ಇದ್ದಾರೆಯೇ ಎಂದುಕೊಂಡು ಅಧಿಕಾರಿ, ‘ಸಂಪತ್ತು ಹೆಚ್ಚಿದರೆ ಸುಖ ಹೆಚ್ಚುತ್ತೆ’ ಎಂದ. ರೈತ ಮುಂದೆ ಪ್ರಶ್ನೆ ಕೇಳಿಲ್ಲ. ‘ಆದರೆ ನಾನು ಈಗ ಇರುವುದರಲ್ಲೇ ಸುಖದಿಂದ ಇದ್ದೇನೆ’ ಒಂದು ಸಣ್ಣ ಸ್ಟೇಟ್‌ಮೆಂಟ್ ಮಾಡಿದ. ವಿವಿಧ ಸಮುದಾಯಗಳ ಅಥವಾ ಜನರ ವಿವಿಧ ಸುಖದ ಕಲ್ಪನೆ ಬಗ್ಗೆ ಈ ಉದಾಹರಣೆ ಬೆಳಕು ಚೆಲ್ಲುತ್ತದೆ. ಹೀಗಿರುವಾಗ ಯಾವುದೋ ಸಮುದಾಯಕ್ಕೆ ಸೇರಿದ ಜನ ಸುಖದಿಂದ ಇಲ್ಲ ಎಂದು ಹೇಗೆ ತೀರ್ಮಾನಕ್ಕೆ ಬರುವುದು? ಸುಖದ ಕಲ್ಪನೆ ಬಗ್ಗೆ  ತೀರ್ಮಾನಕ್ಕೆ ಬರುವುದೇ ಕಷ್ಟದ ಕೆಲಸ ಆಗಿರುವಾಗ ಆ ಸಮುದಾಯಕ್ಕೆ ಸೇರಿದ ಜನ ತಮ್ಮ ಸ್ಥಿತಿ ಬಗ್ಗೆ ಅಸಮಾಧಾನ ಅಥವಾ ಅತೃಪ್ತಿ ಹೊಂದಿದ್ದಾರೆ. ಆದುದರಿಂದ ಅವರಿಗೆ ಬದಲಾವಣೆ ಬೇಕೆಂದು ಹೇಗೆ ಹೇಳಲು ಸಾಧ್ಯ?

ರೈತನ ಸುಖದ ಕಲ್ಪನೆ ಕೊಟ್ಟು ಬಹುಸುಖದ ಕಲ್ಪನೆಯನ್ನು ಸಾಬೀತುಪಡಿಸಲಾಗಿದೆ. ಇದೇ ವಾದವನ್ನು ಇನ್ನೂ ವಿಸ್ತರಿಸಿದರೆ ಏನಾಗಬಹುದು ನೋಡೋಣ. ನಮ್ಮ ಅಥವಾ ಪ್ರಪಂಚದ ಸಮಾಜಗಳ ಒಂದು ಸಾಮಾನ್ಯ ಗುಣವೆಂದರೆ ಸಮುದಾಯಗಳ ಶ್ರೇಣೀಕೃತ ಇರುವಿಕೆ. ಹೆಚ್ಚು ಕಡಿಮೆ ಒಂದು ಪಿರಾಮಿಡ್ ಆಕಾರದಲ್ಲಿ ವಿವಿಧ ಸಮುದಾಯಗಳು ಜೋಡಿಸಲ್ಪಟ್ಟಿವೆ. ಮೇಲಿನ ಚರ್ಚೆ ಪ್ರಕಾರ ಬೇರೆ ಬೇರೆ ಸಮುದಾಯಗಳ ಸುಖದ ಕಲ್ಪನೆ ಬೇರೆ ಬೇರೆ. ಯಾಕೆಂದರೆ ಇಡೀ ಪ್ರಪಂಚಕ್ಕೊಂದು ಸುಖದ ಕಲ್ಪನೆ ಇಲ್ಲ. ಜೋಪಡಿ ಪಟ್ಟಿಯಲ್ಲಿ ಮೂರು ಹೊತ್ತಿನ ಊಟಕ್ಕೆ ಪರದಾಡುವ ವ್ಯಕ್ತಿಯೊಬ್ಬನಿಗೆ ಒಂದಿಷ್ಟು ಗಂಜಿ ಸಿಕ್ಕಿದರೂ ಆತ ಸುಖದಲ್ಲಿ ಇರಬಹುದು. ಆ ಗಂಜಿ ಕೂಡ ಸಿಗದಾಗ ಆತ ದುಃಖಿಯಾಗಬಹುದು ಅಥವಾ ಆತನ ಸುಖದ ಕಲ್ಪನೆಗೆ ಧಕ್ಕೆಯಾಗಬಹುದು. ಮಧ್ಯಮ ವರ್ಗಕ್ಕೆ ಸೇರಿದ ವ್ಯಕ್ತಿ ಅಥವಾ ಕುಟುಂಬವೊಂದು ಸುಖದಲ್ಲಿ ಇರಬೇಕಾದರೆ ಅದಕ್ಕೆ ಕನಿಷ್ಠ ಒಂದು ಪಕ್ಕಾ ಮನೆ ಬೇಕು, ಟಿವಿ ಬೇಕು, ಓಡಾಡಲು ಕನಿಷ್ಠ ಒಂದು ದ್ವಿಚಕ್ರ ವಾಹನವಾದರೂ ಬೇಕು. ಇವೆಲ್ಲ ಇದ್ದರೆ ಆತ ತೃಪ್ತಿ. ಇವುಗಳಲ್ಲಿ ಕೊರತೆ ಉಂಟಾದಾಗ ಆತ ಅತೃಪ್ತಿ. ಇನ್ನೂ ಮುಂದೆ ಹೋದರೆ ಒಬ್ಬ ಶ್ರೀಮಂತ ವ್ಯಕ್ತಿಗೆ ಅಥವಾ ಕುಟುಂಬಕ್ಕೆ ದೊಡ್ಡ ಬಂಗಲೆ, ಓಡಾಡಲು ಕಾರು, ಕೈಗೊಂದು ಕಾಲಿಗೊಂದು ಆಳುಗಳು ಹೀಗೆ ಹಲವಾರು ಸವಲತ್ತುಗಳು ಇದ್ದರೆ ಮಾತ್ರ ಆತ ಸುಖದಿಂದ ಇರಲು ಸಾಧ್ಯ. ಈ ಸೌಲಭ್ಯಗಳಲ್ಲಿ ಕೊಂಚ ಏರುಪೇರಾದರೂ ಆತ ಸುಖದಿಂದ ಇರಲು ಸಾಧ್ಯವಿಲ್ಲ. ಹೀಗೆ ಬಹುಸುಖದ ಕಲ್ಪನೆ ನಮ್ಮ ಮುಂದೆ ವಿವಿಧ ಸಮುದಾಯಗಳ ಸುಖ ಮತ್ತು ಆ ಸುಖಕ್ಕೆ ಅವರಿಗೆ ಇರಬೇಕಾದ ಕನಿಷ್ಠ ಸೌಲಭ್ಯಗಳ ವಿವರವನ್ನು ನೀಡುತ್ತದೆ. ಆಯಾಯ ಸಮುದಾಯಗಳ ಸುಖಕ್ಕೆ ಅಗತ್ಯವಿರುವ ಸೌಲಭ್ಯಗಳು ಇಲ್ಲದಿದ್ದರೆ ಅಥವಾ ಸಮುದಾಯಗಳು ಅನುಭವಿಸುತ್ತಿರುವ ಸವಲತ್ತುಗಳಿಂದ ವಂಚಿತರಾದರೆ ಅವು ಅತೃಪ್ತವಾಗುತ್ತವೆ ಅಥವಾ ಒಂದು ಬಗೆಯ ಬಡತನವನ್ನು ಅನುಭವಿಸುತ್ತವೆ. ಜೋಪಡಿ ಪಟ್ಟಿಯಲ್ಲಿರುವವನಿಗೆ ಗಂಜಿ ಸಿಗದಿದ್ದರೆ ಎಷ್ಟು ನೋವಾಗುತ್ತದೋ ಅಷ್ಟೇ ನೋವು ಅಥವಾ ಅದಕ್ಕಿಂತಲೂ ಹೆಚ್ಚಿನ ನೋವು ಮೇಲ್‌ವರ್ಗಕ್ಕೆ ಸೇರಿದವರಿಗೆ ಕಾರು ಅಥವಾ ಒಂದು ದೊಡ್ಡ ಬಂಗಲೆ ಇಲ್ಲದಿದ್ದರೆ ಆಗಬಹುದು. ಇವರ ಬಡತನವನ್ನು ನಿವಾರಿಸಲು ಏನು ಮಾಡಬೇಕು? ಜೋಪಡಿ ಪಟ್ಟಿಯಲ್ಲಿರುವವನಿಗೆ ಗಂಜಿ ಕೊಟ್ಟರೆ ಆತನ ಬಡತನ ನಿವಾರಣೆ ಆಗುತ್ತದೆ. ಮೇಲ್ವರ್ಗಕ್ಕೆ ಸೇರಿದವನಿಗೆ ಕಾರು ಅಥವಾ ಬಂಗಲೆ ಹೊಂದುವ ಅವಕಾಶ ಮಾಡಿಕೊಟ್ಟರೆ ಆತನ ನೋವು, ಅತೃಪ್ತಿ, ಬಡತನ ನಿವಾರಣೆಯಾಗುತ್ತದೆ. ಹೀಗೆ ಬಹುಸುಖದ ನೆಲೆಯಲ್ಲಿ ರೂಪಿತವಾದ ಸಾಮಾಜಿಕ ನ್ಯಾಯದ ಕಲ್ಪನೆಯಲ್ಲಿ ಒಂದು ಮಾನದಂಡದತ್ತ ಚಲಿಸುವ ಅವಕಾಶವೇ ಇಲ್ಲ.[6] ಅವರವರ ಯೋಗ್ಯತೆಗನುಸಾರ ಸವಲತ್ತುಗಳನ್ನು ಒದಗಿಸುವುದು ಸಾಮಾಜಿಕ ನ್ಯಾಯ ಆಗುತ್ತದೆ. ಹೀಗೆ ಈಗಾಗಲೇ ಇರುವ ವರ್ಗ ಸ್ಥಾನಮಾನಗಳನ್ನು ಯಥಾಸ್ಥಿತಿಯಲ್ಲಿಡುವ ಎಲ್ಲ ಸಾಧ್ಯತೆಗಳು ಈ ಬಹುಸುಖದ ಕಲ್ಪನೆಯಲ್ಲಿ ಅಡಗಿದೆ. ಈ ಸಮಸ್ಯೆಯಿಂದ ಹೊರಬರಬೇಕಾದರೆ ಕುಟುಂಬವೊಂದು ತಕ್ಕಮಟ್ಟಿನ ಸುಖದ ಬಾಳ್ವೆ ಮಾಡಲು ಅಗತ್ಯವಿರುವ ಕನಿಷ್ಠ ಸವಲತ್ತುಗಳ ತೀರ್ಮಾನ ಆಗಬೇಕು. ಅಂದರೆ ಒಂದು ಯೂನಿವರ್ಸಲ್ ಅಥವಾ ಎಲ್ಲರಿಗೂ ಅನ್ವಯವಾಗುವ ಮಾನದಂಡ ತೀರ್ಮಾನವಾಗಬೇಕು. ಈ ಮಾನದಂಡ ಸೂಚಿಸುವ ಕನಿಷ್ಠ ಸವಲತ್ತುಗಳು ಸಮಾಜದ ಎಲ್ಲರಿಗೂ ಸಿಗುವಂತಾಗಬೇಕು.

ಬಹುಸುಖದ ವಾದದಲ್ಲಿ ಮೇಲೆ ಚರ್ಚಿಸಿದ ವಿಚಾರಗಳ ಜತೆ ಮತ್ತೆ ಕೆಲವು ಅಂಶಗಳು ಬೆಸೆದುಕೊಂಡಿವೆ. ಮುಖ್ಯವಾಗಿ ಸುಖ ಅಥವಾ ಅಸಮಾಧಾನ, ಅತೃಪ್ತಿಯ ಬಗ್ಗೆ ಯಾರು ತೀರ್ಮಾನಕ್ಕೆ ಬರಬಹುದು ಎನ್ನುವ ಅಂಶ ಕೂಡ ಇಲ್ಲಿ ಪ್ರಮುಖವಾಗುತ್ತದೆ. ಕೆಲವೊಂದು ಸಮುದಾಯಗಳ (ದಲಿತರು, ಆದಿವಾಸಿಗಳು ಮುಂತಾದವರ) ಕಷ್ಟದ ಬದುಕು ಮತ್ತು ಅವರಿಗೆ ಬದಲಾವಣೆ ಅಗತ್ಯ ಇದೆ ಎಂದು ವಾದಿಸುವ ಸಂದರ್ಭದಲ್ಲಿ ಸಂಶೋಧಕರು ಸತತವಾಗಿ ಒಂದು ಪ್ರಶ್ನೆ ಎದುರಿಸಬೇಕಾಗಿದೆ. ಅದೇನೆಂದರೆ ‘ಬದಲಾವಣೆ ಬೇಕೆಂದು ಆ ಸಮುದಾಯಕ್ಕೆ ಸೇರಿದ ಜನ ಹೇಳುತ್ತಾರೋ ಅಥವಾ ನೀವು (ಸಂಶೋಧಕರು) ಹೇಳುತ್ತೀರಾ’? ಎನ್ನುವ ಪ್ರಶ್ನೆ. ಆ ಸಮುದಾಯದ ಜನರೇ ಹೇಳುತ್ತಿದ್ದಾರೆ ಎಂದು ಸಾಧಿಸುವುದು ದೊಡ್ಡ ಕಷ್ಟದ ಕೆಲಸವೇನಲ್ಲ. ಆದರೆ ಅಂತಹ ಪುರಾವೆಗಳು ಈ ಪ್ರಶ್ನೆ ಹಿಂದಿರುವ ತಾತ್ವಿಕ ಸಂದೇಹವನ್ನು ಸಮಾಧಾನಪಡಿಸುವುದಿಲ್ಲ. ಸಮುದಾಯವೊಂದರ ಸುಖದ ಕಲ್ಪನೆ ಬಗ್ಗೆ ಆ ಸಮುದಾಯದಿಂದ ಹೊರಗಿರುವವರಿಗೆ ತೀರ್ಮಾನಕ್ಕೆ ಬರಲು ಸಾಧ್ಯ ಇಲ್ಲ ಎನ್ನುವುದೇ ಆ ಸಂದೇಹದ ಹಿಂದಿರುವ ತಾತ್ವಿಕ ನಿಲುವು.[7] ಹಾಗೆ ನೋಡಿದರೆ ಬಹುಸುಖದ ಕಲ್ಪನೆ ಮತ್ತು ಅದರ ಕುರಿತು ತೀರ್ಮಾನಕ್ಕೆ ಬರಲು ಇರುವ ಯೋಗ್ಯತೆ ಪ್ರಶ್ನೆಗಳು ಒಂದೇ ನಾಣ್ಯದ ಎರಡು ಮುಖಗಳಂತೆ ಇವೆ. ಅದೇನೆಂದರೆ ಸಮಾಜದಲ್ಲಿ ವಿವಿಧ ಸಮುದಾಯಗಳಿವೆ. ಪ್ರತಿ ಸಮುದಾಯಕ್ಕೂ ಅದರದ್ದೇ ಆದ ಭಾಷೆ, ಸಂಸ್ಕೃತಿ, ಜೀವನ ವಿಧಾನ, ಆಲೋಚನಾ ಕ್ರಮ, ಜೀವನ ಮೌಲ್ಯಗಳು ಇವೆ. ಪ್ರಪಂಚವನ್ನು ನೋಡುವ ದೃಷ್ಟಿಕೋನ, ಸುಖದ ಕಲ್ಪನೆ, ಇತ್ಯಾದಿಗಳು ಸಮುದಾಯದಿಂದ ಸಮುದಾಯಕ್ಕೆ ಭಿನ್ನ. ಅವುಗಳನ್ನು ಅನುಭವಿಸಿದವರು ಮಾತ್ರ ಅರ್ಥ ಮಾಡಿಕೊಳ್ಳಲು ಸಾಧ್ಯ. ಸಮುದಾಯದಿಂದ ಹೊರಗಿರುವರಿಗೆ ಅರ್ಥ ಮಾಡಿಕೊಳ್ಳಲು ಸಾಧ್ಯ ಇಲ್ಲ. ಏಕೆಂದರೆ ಅವರಿಗೆ ಆ ಬದುಕಿನ ಅನುಭವ ಇಲ್ಲ. ದಲಿತರ ಕಷ್ಟ ಸುಖ ಏನೆಂದು ಒಬ್ಬ ದಲಿತ ಹೇಳಬಲ್ಲನೇ ಹೊರತು ದಲಿತನಲ್ಲದವನು ಹೇಳಲು ಸಾಧ್ಯವಿಲ್ಲ. ಅದೇ ರೀತಿಯಲ್ಲಿ ಮಹಿಳೆಯ ನೋವುಗಳೇನೆಂದು ಮತ್ತೊಬ್ಬ ಮಹಿಳೆ ಹೇಳಬಲ್ಲಳೇ ಹೊರತು ಪುರುಷನಿಗೆ ಸಾಧ್ಯವಿಲ್ಲ. ಹೀಗೆ ಪ್ರತಿ ಸಮುದಾಯಕ್ಕೂ ಸೇರಿದವರ ಕಷ್ಟ ಸುಖಗಳನ್ನು ಅರ್ಥ ಮಾಡಿಕೊಳ್ಳಲು ಆಯಾಯ ಸಮುದಾಯಕ್ಕೆ ಸೇರಿದವರಿಗೆ ಮಾತ್ರ ಸಾಧ್ಯ; ಹೊರಗಿನವರಿಗೆ ಸಾಧ್ಯವಿಲ್ಲ ಎನ್ನುವ ಈ ವಾದ ನಿಜವಾಗಿಯೂ ತುಂಬಾ ಶಕ್ತಿಶಾಲಿಯಾದ ವಾದ. ಈ ವಾದದ ಅಂತಿಮ ಪರಿಣಾಮವನ್ನು ವಿಶ್ಲೇಷಿಸುವ ಮುನ್ನ ಈ ವಾದ ಯಾಕೆ ಹುಟ್ಟಿಕೊಂಡಿತು ಎನ್ನುವುದರ ಕಡೆ ಸ್ವಲ್ಪ ಗಮನಹರಿಸಬಹುದು. ಇದು ವಿಜ್ಞಾನದ ವಿಧಾನವನ್ನು ಪ್ರಶ್ನಿಸುತ್ತಾ ಬೆಳೆದ ವಾದ. ವಿಜ್ಞಾನದ ವಿಧಾನದಲ್ಲಿ ಸಂಶೋಧಕರು ಮತ್ತು ಸಂಶೋಧನೆಗೆ ಒಳಪಡುವ ಸಂಗತಿಗಳ ನಡುವೆ ಅಂತರವಿರಬೇಕೆನ್ನುವ ಅಂಶಕ್ಕೆ ಒತ್ತು ಕೊಡಲಾಗಿದೆ. ಸಬ್ಜೆಕ್ಟ್ ಮತ್ತು ಆಬ್ಜೆಕ್ಟ್ ನಡುವೆ ಅಂತರ ಹೆಚ್ಚಾದಷ್ಟು ಕಂಡುಕೊಳ್ಳುವ ಸತ್ಯ ಹೆಚ್ಚು ನಿಖರವಾಗುತ್ತದೆ ಎನ್ನುವ ಗೃಹೀತವಿದೆ. ವಿಜ್ಞಾನ ವಿಧಾನದ ಈ ನಿಲುವನ್ನು ಪ್ರಶ್ನಿಸುವ ನಿಟ್ಟಿನಲ್ಲಿ ಮೇಲಿನ ವಾದ ಹುಟ್ಟಿಕೊಂಡಿದೆ. ಅಂದರೆ ಸಾಮಾಜಿಕ ಸತ್ಯಗಳನ್ನು ಅರ್ಥ ಮಾಡಿಕೊಳ್ಳಬೇಕಾದರೆ ಸಂಶೋಧನೆ ಮಾಡುವವರು ಮತ್ತು ಸಂಶೋಧನೆಗೆ ಒಳಪಡುವವರ ನಡುವೆ ಅಂತರ ಹೆಚ್ಚಾಗಬೇಕಾದ್ದಿಲ್ಲ; ಕಡಿಮೆ ಆಗಬೇಕಾಗಿದೆ ಎನ್ನುವ ಅಂಶವನ್ನು ಈ ವಾದ ಮುಂದಿಡುತ್ತದೆ.

ಸಂಶೋಧನೆಗೆ ಸಂಬಂಧಿಸಿದಂತೆ ರೂಪುಗೊಂಡ ಈ ವಾದ ಮತ್ತು ರಾಜಕೀಯ ಪ್ರಕ್ರಿಯೆಯ ನಡುವಿನ ಸಂಬಂಧಗಳೇನು ಎನ್ನುವ ಕುತೂಹಲ ಸಹಜ. ಎಡಪಂಥೀಯ ವರ್ಗ (ಕ್ಲಾಸ್) ಎನ್ನುವ ಕೆಟಗರಿಯನ್ನು ಪ್ರಶ್ನಿಸುವ ನಿಟ್ಟಿನಲ್ಲಿ ಮೇಲಿನ ಸಮುದಾಯವಾದ ಕೆಲಸ ಮಾಡುತ್ತದೆ. ವರ್ಗ (ಕ್ಲಾಸ್) ಎನ್ನುವುದೊಂದು ಬಹುದೊಡ್ಡ ಕೆಟಗರಿ ಮತ್ತು ಆರ್ಥಿಕ ಮಾನದಂಡ ಅದರ ಅಡಿಪಾಯವಾಗಿ ಕೆಲಸ ಮಾಡುತ್ತಿದೆ. ಯಾವುದೋ ಒಂದು ನಿರ್ದಿಷ್ಟ ಆದಾಯದ ಮಿತಿಯನ್ನು ತೀರ್ಮಾನಿಸಿ ಅದರೊಳಗೆ ಬರುವವರನ್ನು ಬಡವರೆಂದು, ಹೊರಗುಳಿಯುವವರನ್ನು ಬಡವರಲ್ಲವೆಂದು ತೀರ್ಮಾನಿಸಲಾಗುತ್ತದೆ. ಆರ್ಥಿಕ ಮಾನದಂಡದಿಂಡ ಬಡವರೆಂದು ಗುರುತಿಸಲ್ಪಡುವವರೆಲ್ಲ ಒಂದೇಯೇ? ಉದಾಹರಣೆಗೆ ದಲಿತ ಬಡವ ಮತ್ತು ಬ್ರಾಹ್ಮಣ ಬಡವ ಅಥವಾ ಹಿಂದುಳಿದ ಜಾತಿಗೆ ಸೇರಿದ ಬಡವ ಒಂದೇಯೇ? ಆರ್ಥಿಕವಾಗಿ ಅವರೆಲ್ಲರೂ ಒಂದೇ ಮಾಸಿಕ, ವಾರ್ಷಿಕ ಆದಾಯವನ್ನು ಹೊಂದಿರಬಹುದು. ಆದರೆ ಅವರ ಸಾಮಾಜಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ಸ್ಥಾನಮಾನಗಳು ಭಿನ್ನವಲ್ಲವೇ? ಹೀಗಿರುವಾಗ ಕೇವಲ ಒಂದೇ ಪ್ರಮಾಣದ ಆದಾಯವುಳ್ಳವರು ಎನ್ನುವ ಕಾರಣಕ್ಕಾಗಿ ಅವರೆಲ್ಲರನ್ನು ಸಮಾನರೆಂದು ಪರಿಗಣಿಸಲು ಸಾಧ್ಯವೇ? ಅವರ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಸ್ಥಾನಮಾನಗಳು ಅವರ ಆರ್ಥಿಕ ಸ್ಥಾನಮಾನವನ್ನು ಪ್ರಭಾವಿಸಬಹುದು. ಈ ಎಲ್ಲದರ ಹಿನ್ನೆಲೆಯಲ್ಲಿ ಸಮಾನತೆಯ ಚರ್ಚೆಯಲ್ಲಿ ಈ ಭಿನ್ನತೆಗಳನ್ನು (ಸಾಮಾಜಿಕ, ಸಾಂಸ್ಕೃತಿಕ ನೆಲೆಯಲ್ಲಿ ರೂಪುಗೊಳ್ಳುವ ಭಿನ್ನತೆಗಳನ್ನು) ಪರಿಗಣಿಸಬೇಕೆನ್ನುವ ವಾದ ಬಲಗೊಂಡಿದೆ. ಜತೆಗೆ ಈ ಭಿನ್ನತೆಗಳ ನೆಲೆಯಲ್ಲಿ ಅವರು ತಮ್ಮ ಅಸ್ತಿತ್ವವನ್ನು ರೂಪಿಸಿಕೊಳ್ಳಬೇಕು ಎನ್ನುವ ವಾದವನ್ನು ಮೇಲಿನ ಚರ್ಚೆ ಮುಂದಿಡುತ್ತದೆ. ಇದನ್ನೇ ಇನ್ನೊಂದು ವಿಧದಲ್ಲಿ ಹೇಳುವುದಾದರೆ ವರ್ಗ ರಾಜಕೀಯದಿಂದ ಗುರುತಿನ ರಾಜಕೀಯದತ್ತ (ಐಡೆಂಟಿಟಿ ಪಾಲಿಟಿಕ್ಸ್) ಚಲಿಸಬೇಕೆಂಬ ಆಶಯವನ್ನು ಮೇಲಿನ ಚರ್ಚೆ ಸೂಚಿಸುತ್ತದೆ.

ವರ್ಗ (ಕ್ಲಾಸ್) ಎನ್ನುವ ಪದವನ್ನು ಸಮಸ್ಯೀಕರಿಸಿದ್ದು ತಪ್ಪಲ್ಲ.[8] ಯಾವುದೋ ಒಂದು ಚಾರಿತ್ರಿಕ ಸಂದರ್ಭದಲ್ಲಿ ಹುಟ್ಟಿಕೊಂಡ ಪದ ಎಲ್ಲ ಕಾಲ ಮತ್ತು ಸಂದರ್ಭದಲ್ಲೂ ಪರಿಣಾಮಕಾರಿಯಾಗಿ ಸಾಮಾಜಿಕ ವಾಸ್ತವಿಕತೆಯನ್ನು ಹಿಡಿದಿಡಲು ಶಕ್ತೆಂದು ತಿಳಿಯುವುದು ಸರಿಯಲ್ಲ. ಹಾಗೆಂದು ವರ್ಗ ಎನ್ನುವ ಪದವನ್ನು ಪದಚ್ಯುತಿಗೊಳಿಸಲು ಮಾಡಿದ ಎಲ್ಲ ಆರೋಪಗಳು ಸರಿಯೆಂದು ತಿಳಿಯುವುದು ಕಷ್ಟ. ವರ್ಗ ಒಂದು ಆರ್ಥಿಕ ಮಾನದಂಡ ಅಥವಾ ಕೇವಲ ಆರ್ಥಿಕ ಅಂಶ ಮಾತ್ರ ಅದರಲ್ಲಿ ಇದೆ ಎನ್ನುವ ಆರೋಪ ಎಡಪಂಥೀಯ ವಿಚಾರಧಾರೆಗಳ ತಪ್ಪು ಓದಿನ ಫಲ. ವರ್ಗ ಪದವು ಕೇವಲ ಆರ್ಥಿಕ ಅಂಶವನ್ನು ಒಳಗೊಂಡಿರುವುದಿಲ್ಲ; ಅದು ಆರ್ಥಿಕೇತರ ಅಂದರೆ ಸಾಮಾಜಿಕ, ರಾಜಕೀಯ ಹಾಗೂ ಸಾಂಸ್ಕೃತಿಕ ಅಂಶಗಳನ್ನು ಒಳಗೊಂಡಿದೆ. ಮಾರ್ಕ್ಸ್ ಸೂಚಿಸಿದ ಕ್ಲಾಸ್ ಇನ್ ಇಟ್‌ಸೆಲ್ಫ್‌ ಎನ್ನುವುದು ಒಂದು ಆಬ್ಜೆಕ್ಟಿವ್ ಸ್ಥಿತಿಯನ್ನು ಸೂಚಿಸಿದರೆ ಕ್ಲಾಸ್‌ ಫಾರ್ ಇಟ್‌ಸೆಲ್ಫ್‌ ಎನ್ನುವುದು ಆಬ್ಜೆಕ್ಟಿವ್ ಸ್ಥಿತಿಯ ಸಬ್ಜೆಕ್ಟಿವ್‌ ತಿಳುವಳಿಕೆಯನ್ನು ಸೂಚಿಸುತ್ತದೆ. ಅಂದರೆ ವ್ಯಕ್ತಿಯೊಬ್ಬನಿಗೆ ತನ್ನ ಸ್ಥಿತಿಯ ತಿಳುವಳಿಕೆ ಜತೆಗೆ ತನ್ನ ಹಾಗೆ ಇರುವವರೆಲ್ಲರೂ ಒಂದೇ ಎನ್ನುವ ತಿಳುವಳಿಕೆ ಮೂಡುವುದು. ವ್ಯಕ್ತಿಯೊಬ್ಬನ ಪ್ರಶ್ನೆಯನ್ನು ಆತನ ಪರಿಸರ ಪ್ರಭಾವಿಸುತ್ತದೆ ಎನ್ನುವ ನಿಲುವನ್ನು ಕ್ಲಾಸ್ ಕೆಟಗರಿ ಪ್ರತಿನಿಧಿಸುತ್ತದೆ. ಪರಿಸರ ಎಂದ ಕೂಡಲೇ ಅಲ್ಲಿ ಕೇವಲ ಭೌತಿಕ ಅಂಶಗಳು ಮಾತ್ರ ಇರುವುದಿಲ್ಲ. ಅಲ್ಲಿ ಸಾಂಸ್ಕೃತಿಕ ಅಂಶಗಳು ಕೂಡ ಇರುತ್ತವೆ. ಒಂದು ವೇಳೆ ಕ್ಲಾಸ್ ಎನ್ನುವ ಪದ ಸಾಂಸ್ಕೃತಿಕ ಅಂಶಗಳನ್ನು ಪರಿಗಣಿಸದಿದ್ದರೆ ಕ್ಲಾಸ್ ಫಾರ್‌ ಇಟ್‌ಸೆಲ್ಫ್‌ ಎನ್ನುವ ಸ್ಟೇಟ್‌ಮೆಂಟ್‌ಗೆ ಅವಕಾಶವೇ ಇರುತ್ತಿರಲಿಲ್ಲ. ವ್ಯಕ್ತಿಯೊಬ್ಬನ ತಿಳುವಳಿಕೆಯನ್ನು ಆತನ ಭೌತಿಕ ಪರಿಸರ ಪ್ರಭಾವಿಸಿದಂತೆ  ಸಾಂಸ್ಕೃತಿಕ ಪರಿಸರ ಕೂಡ ಪ್ರಭಾವಿಸುತ್ತದೆ. ಆದುದರಿಂದಲೇ ಒಂದೇ ವಿಚಾರ ಅಥವಾ ಬೆಳವಣಿಗೆ ಬೇರೆ ಬೇರೆ ವ್ಯಕ್ತಿಗಳಿಗೆ ಬೇರೆ ಬೇರೆ ರೀತಿಯಲ್ಲಿ ಕಾಣುವುದು. ಯಾವುದೇ ಒಂದು ಬೆಳವಣಿಗೆ ಸಾಂಸ್ಕೃತಿಕ ಪರಿಸರದ ಮೂಲಕ ಹಾದು ಬರುವಾಗ ಒಂದೇ ಆರ್ಥಿಕ ಸ್ಥಿತಿಯಲ್ಲಿ ಇರುವ ಆದರೆ ಬೇರೆ ಬೇರೆ ಸಾಂಸ್ಕೃತಿಕ ಪರಿಸರದಲ್ಲಿ ಇರುವವರಿಗೆ ಬೇರೆ ಬೇರೆ ರೀತಿಯಲ್ಲಿ ಕಾಣಬಹುದು. ಹೀಗೆ ಕ್ಲಾಸ್ ಎನ್ನುವ ಕೆಟಗರಿ ಕೇವಲ ಆರ್ಥಿಕ ಅಂಶವನ್ನು ಒಳಗೊಂಡಿರಲಿಲ್ಲ. ಅದೇನೆ ಇರಲಿ ಕ್ಲಾಸ್ ಎನ್ನುವ ಪದ ಸಾಮಾಜಿಕ, ಸಾಂಸ್ಕೃತಿಕ ಅಂಶವನ್ನು ಒಳಗೊಂಡಿಲ್ಲ ಎನ್ನುವ ಕಾರಣವನ್ನು ಮುಂದೊಡ್ಡಿ ಸಾಮಾಜಿಕ, ಸಾಂಸ್ಕೃತಿಕ ಅಂಶಗಳ ನೆಲೆಯಲ್ಲಿ ರೂಪುಗೊಳ್ಳುವ ಐಡೆಂಟಿಟಿ ಪ್ರಶ್ನೆ ಮುಂದೆ ಬಂದಿದೆ. ವಿಧಾನಕ್ಕೆ ಸಂಬಂಧಿಸಿದ ಮೇಲಿನ ಚರ್ಚೆ ಈ ಬಗೆಯ ಐಡೆಂಟಿಟಿ ರಾಜಕೀಯ ಮುಂಚೂಣಿಗೆ ಬಂದಿರುವುದನ್ನು ಕೂಡ ಸೂಚಿಸುತ್ತದೆ. ಐಡೆಂಟಿಟಿ ರಾಜಕೀಯ ಎಷ್ಟರಮಟ್ಟಿಗೆ ಸಮಾಜದ ಕೆಳಸ್ತರದ ಜನರ ಆಸಕ್ತಿಗಳನ್ನು ಪ್ರತಿನಿಧೀಕರಿಸುತ್ತದೆ ಎಂದು ತಿಳಿದುಕೊಳ್ಳುವ ಅಗತ್ಯವಿದೆ. ನಾವು ಈ ಹಿಂದೆ ನೋಡಿದಂತೆ ಸಾಮಾಜಿಕ, ಸಾಂಸ್ಕೃತಿಕ ಅಂಶಗಳ ನೆಲೆಯಲ್ಲಿ ಐಡೆಂಟಿಟಿಗಳು ರೂಪುಗೊಳ್ಳುತ್ತವೆ. ಇಲ್ಲಿ ಆರ್ಥಿಕ ಮಾನದಂಡದ ಪ್ರಶ್ನೆ ಇಲ್ಲ. ಒಂದೇ ಜಾತಿಗೆ ಸೇರಿರುವುದು ಅಥವಾ ಒಂದೇ ಧರ್ಮಕ್ಕೆ ಸೇರಿರುವುದು ಅಥವಾ ಒಂದೇ ಲಿಂಗಕ್ಕೆ ಸೇರಿರುವುದು ಇಲ್ಲಿ ನಿರ್ಣಾಯಕ ಅಂಶಗಳಾಗುತ್ತವೆ. ಊಟಕ್ಕಿಲ್ಲದ ಹಿಂದು ಮತ್ತು ಕೋಟ್ಯಾಧೀಶ ಹಿಂದು ಒಂದೇ ಆಗುತ್ತಾರೆ. ಅದೇ ರೀತಿ ಪಂಚತಾರಾ ಜೀವನ ನಡೆಸುವ ಮಹಿಳೆ ಮತ್ತು ಉತ್ತರ ಕರ್ನಾಟಕದ ಯಾವುದೋ ಮೂಲೆಯಲ್ಲಿ ಎರಡು ಹೊತ್ತಿನ ಊಟಕ್ಕೆ ಪರದಾಡುವ ಮಹಿಳೆಯ ಒಂದೇ. ಎಲ್ಲ ರೀತಿಯ ಸೌಲಭ್ಯಗಳನ್ನು ಹೊಂದಿರುವ ದಲಿತ ಮತ್ತು ಯಾವುದೇ ಸಂಪನ್ಮೂಲ ಇಲ್ಲದೆ ದಿನನಿತ್ಯದ ಜೀತದಾಳು ತರಹ ದುಡಿಯುವ ದಲಿತ ಒಂದೇ. ಹೀಗೆ ವಿವಿಧ ಆರ್ಥಿಕ ಗುಂಪುಗಳು ಮತ್ತು ಆಸಕ್ತಿಗಳನ್ನು ಹೊಂದಿರುವವರು ಒಂದೇ ಎನ್ನುವ ಭಾವನೆಯನ್ನು ರೂಪಿಸುವಲ್ಲಿ ಈ ಸಾಮಾಜಿಕ, ಸಾಂಸ್ಕೃತಿಕ ಐಡೆಂಟಿಟಿ ಸಹಾಯಕವಾಗುತ್ತದೆ. ಈ ರೂಪುಗೊಂಡ ಸಮುದಾಯಗಳ ಅಯಾಯ ಸಮುದಾಯದ ಕೆಳಸ್ತರದ ಆಸಕ್ತಿಗಳಿಗೆ ಪೂರಕವಾಗುವ ಕೆಲಸವನ್ನೇ ಮಾಡುತ್ತಾರೆ ಎಂದು ಹೇಗೆ ತಿಳಿಯುವುದು? ಈ ಬಗೆಯ ರಾಜಕೀಯವನ್ನು ಬಳಸಿಕೊಂಡು ಪ್ರತಿ ಸಮುದಾಯದಲ್ಲಿರುವ ಮೇಲ್‌ಸ್ತರದಲ್ಲಿರುವವರು ಅವರವರ ವರ್ಗ ಆಸಕ್ತಿಯನ್ನು ಕಾಪಾಡಲು ಪ್ರಯತ್ನಿಸುವುದಿಲ್ಲ ಎನ್ನುವ ಗ್ಯಾರಂಟಿ ಏನು?

ಮೇಲೆ ವಿವರಿಸಿದ ಐಡೆಂಟಿಟಿಯೊಳಗಿರುವ ವರ್ಗ ಪ್ರಶ್ನೆಯ ಜತೆಗೆ ಸಮುದಾಯ ರೂಪುಗೊಳ್ಳುವ ಪ್ರಶ್ನೆ ಮತ್ತು ಸಮುದಾಯಗಳ ಶ್ರೇಣೀಕೃತ ಇರುವಿಕೆ ಕೂಡ ಸಮಸ್ಯೆಯನ್ನು ಸಂಕೀರ್ಣಗೊಳಿಸುತ್ತಿವೆ. ಸಮುದಾಯಗಳು ಎರಡು ರೀತಿಯಲ್ಲು ರೂಪುಗೊಳ್ಳುತ್ತವೆಯೆಂದು ತಿಳಿಯಲಾಗಿದೆ.[9] ಒಂದೇ ಕೌಟುಂಬಿಕ ಹಿನ್ನೆಲೆ, ಭಾಷೆ, ಕಸುಬು ಇತ್ಯಾದಿಗಳನ್ನು ಹೊಂದಿರುವ ಸಮುದಾಯಗಳನ್ನು ಚಾರಿತ್ರಿಕವಾಗಿ ರೂಪುಗೊಂಡ ಸಮುದಾಯಗಳೆಂದು ವ್ಯಾಖ್ಯಾನಿಸಿಕೊಳ್ಳಬಹುದು. ಈ ಬಗೆಯಲ್ಲಿ ರೂಪುಗೊಂಡ ಸಮುದಾಯದ ಸದಸ್ಯರ ನಡುವೆ ವಿಶೇಷ ಭಿನ್ನತೆ ಇರುವುದಿಲ್ಲ ಎಂದು ಗ್ರಹಿಸಲಾಗಿದೆ. ನಾವೆಲ್ಲ ಒಂದೇ ಎನ್ನುವ ಸಂಕಥನದಿಂದ ರೂಪುಗೊಳ್ಳುವ ಸಮುದಾಯಗಳನ್ನು ಕಟ್ಟಿಕೊಂಡ ಸಮುದಾಯಗಳೆಂದು ಗುರುತಿಸಬಹುದು. ಇತರರನ್ನು ಗಮನದಲ್ಲಿಟ್ಟುಕೊಂಡು ತಮ್ಮತನವನ್ನು ಗುರುತಿಸಿಕೊಳ್ಳುವುದು ಸಂಕಥನದಿಂದ ರೂಪುಗೊಳ್ಳುವ ಸಮುದಾಯಗಳ ಮುಖ್ಯ ಲಕ್ಷಣ. ಇಂದು ಚಾಲ್ತಿಯಲ್ಲಿರುವ ಬಹುತೇಕ ಸಮುದಾಯಗಳು ಕಟ್ಟಿಕೊಂಡ ಅಥವಾ ಸಂಕಥನದಿಂದ ರೂಪುಗೊಂಡ ಸಮುದಾಯಗಳು. ಉದಾಹರಣೆಗೆ ಹಿಂದು ಎನ್ನುವ ಪರಿಕಲ್ಪನೆಯೊಳಗೆ ಬರುವವರೆಲ್ಲ ಚಾರಿತ್ರಿಕವಾಗಿ ರೂಪುಗೊಳ್ಳುವ ಸಮುದಾಯದಲ್ಲಿನ ಸಂಬಂಧ ಹೊಂದಿದವರಲ್ಲ. ಹಲವಾರು ಜಾತಿಗಳು ಸೇರಿ ಹಿಂದು ಪರಿಕಲ್ಪನೆ ರೂಪುಗೊಂಡಿದೆ. ಅಂದರೆ ಕೆಲವೊಂದು ಸಾಂಸ್ಕೃತಿಕ ಗುರುತಿನ ಆಧಾರದಲ್ಲಿ ನಾವೆಲ್ಲ ಒಂದು ಎನ್ನುವ ಕಲ್ಪನೆಯನ್ನು ಕಟ್ಟಿಕೊಡಲಾಗಿದೆ. ಹಿಂದು ಎನ್ನುವ ಪರಿಕಲ್ಪನೆಯೊಳಗೆ ವರ್ಗ, ಜಾತಿ, ಮೇಲು, ಕೀಳು ಇತ್ಯಾದಿ ಪ್ರಶ್ನೆಗಳು ಜೀವಂತ ಇವೆ. ಅದರೊಳಗೆ ಸಾಕಷ್ಟು ಸಂಖ್ಯೆಯ ದೊಡ್ಡ ಮತ್ತು ಸಣ್ಣಪುಟ್ಟ ಗುರುತುಗಳು ತಮ್ಮ ಅಸ್ತಿತ್ವಕ್ಕೆ ಹೋರಾಡುತ್ತಿವೆ. ಉದಾಹರಣೆಗೆ ಉತ್ತರ ಮತ್ತು ದಕ್ಷಿಣ ಭಾರತದ ಹಿಂದುಗಳ ನಡುವಿನ ತಿಕ್ಕಾಟ, ಹಿಂದುಗಳೊಳಗೆ ಬರುವ ವಿವಿಧ ಜಾತಿಗಳ ನಡುವಿನ ಘರ್ಷಣೆ, ಪ್ರತಿಯೊಂದು ಜಾತಿಯೊಳಗಿನ ವರ್ಗಗಳ ನಡುವಿನ ಭಿನ್ನತೆಗಳು ಇತ್ಯಾದಿಗಳು ತಮ್ಮ ತಮ್ಮ ಅಸ್ತಿತ್ವಕ್ಕಾಗಿ ಹೋರಾಟ ನಡೆಸುತ್ತಲೇ ಇವೆ. ಜತೆಗೆ ಹಿಂದೂ ಗುರುತನ್ನು ಗಟ್ಟಿಗೊಳಿಸಲು ಹಿಂದೂ ಅಲ್ಲದವರನ್ನು ನಿಕೃಷ್ಟವಾಗಿ ಕಲ್ಪಿಸಿಕೊಳ್ಳುವುದು ಅವರನ್ನು (ಹಿಂದು ಅಲ್ಲದವರನ್ನು) ಹಲವಾರು ಸಂಕಷ್ಟಗಳಿಗೆ ಗುರಿ ಮಾಡಬಹುದು.

ಐಡೆಂಟಿಟಿ ರಾಜಕೀಯವನ್ನು ಪ್ರಭಾವಿಸುವ ಮತ್ತೊಂದು ಅಂಶ ಸಮುದಾಯಗಳ ಶ್ರೇಣೀಕೃತ ಇರುವಿಕೆ. ಯಾವುದೇ ಸಮುದಾಯ ಹಿಂದೆ ಅಥವಾ ಇಂದು ಸಂಪೂರ್ಣವಾಗಿ ಒಂದು ದ್ವೀಪದ ರೀತಿಯಲ್ಲಿ ಬದುಕಿಲ್ಲ. ಒಂದಲ್ಲ ಒಂದು ರೀತಿಯ ಸಂಬಂಧ ವಿವಿಧ ಸಮುದಾಯಗಳ ನಡುವೆ ಇತ್ತು. ಆ ಸಂಬಂಧದ ಸ್ವರೂಪದ ಬಗ್ಗೆ ತಕರಾರು ಇರಬಹುದು. ಆದರೆ ಸಂಬಂಧ ಇತ್ತು ಎನ್ನುವುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಸಂಬಂಧ ಇದೆ ಎಂದ ಕೂಡಲೇ ಏನು ಸಾಧಿತವಾಗುತ್ತದೆ ಎನ್ನುವುದು ನಂತರದ ಪ್ರಶ್ನೆ. ಇಂತಹ ಸಂಬಂಧಗಳು ಪ್ರತಿ ಸಮುದಾಯದ ಜೀವನ ವಿಧಾನವನ್ನು, ಆಲೋಚನಾ ಕ್ರಮಗಳನ್ನು ಸುಖದ ಕಲ್ಪನೆಯನ್ನು ಪ್ರಭಾವಿಸುತ್ತವೆ. ಅದೊಂದು ಸಣ್ಣ ಹಳ್ಳಿ. ಪೇಟೆಯಿಂದ ಬಲು ದೂರ. ಹಳ್ಳಿಗೆ ಸರಿಯಾದ ರಸ್ತೆ ಇಲ್ಲ. ಹೊರ ಜಗತ್ತಿನೊಂದಿಗೆ ಹಳ್ಳಿಯ ಸಂಬಂಧ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಅರುವತ್ತರ ದಶಕದಲ್ಲಿ ಅಲ್ಲಿನ ರೈತರು ಮಳೆ ನೀರು ನಂಬಿ ಕೃಷಿ ಮಾಡುತ್ತಿದ್ದರು. ಊಟಕ್ಕಾಗಿ ಬೆಳೆಯುವುದು; ಮಾರುಕಟ್ಟೆಗಾಗಿ ಬೆಳೆಯುವ ಕ್ರಮ ಇರಲಿಲ್ಲ. ಕಾಲಕ್ರಮೇಣ ರಸ್ತೆ ಆಯಿತು. ಅಪರೂಪಕ್ಕೊಂದು ವಾಹನ ಓಡಾಡಲು ಆರಂಭವಾಯಿತು. ರೈತರು ಅಪರೂಪಕ್ಕೊಮ್ಮೆ ಪೇಟೆಗೆ ಹೋಗಲು ಆರಂಭಿಸಿದರು. ವಾಣಿಜ್ಯ ಬೆಳೆ ಬೆಳೆದರೆ ಲಾಭ ಎಂದು ಪೇಟೆ ಸಂಪರ್ಕದಿಂದ ರೈತರ ಗಮನಕ್ಕೆ ಬಂತು, ತೋಟ ಮಾಡಿದರು. ತಮ್ಮ ತೋಟಗಳಿಗೆ ಏತದ ಮೂಲಕ ನೀರು ಹರಿಸುತ್ತಿದ್ದರು. ಕೆಲವು ಕಾಲ ನಂತರ ಪೇಟೆ ಸಂಪರ್ಕ ಇರುವ ರೈತನೊಬ್ಬ ನೀರೆತ್ತುವ ಪಂಪ್‌ ತಂದ. ಕಾಲಕ್ರಮೇಣ ಹಲವಾರು ಪಂಪ್‌ಗಳು ಬಂದವು, ಕೃಷಿ ವಿಧಾನ ಬದಲಾದವು, ಜೀವನ ಕ್ರಮವೂ ಬದಲಾಗುತ್ತಾ ಬಂತು. ಹೀಗೆ ಮತ್ತೊಂದು ಲೋಕದ ಸಂಪರ್ಕ ಸಮುದಾಯಗಳು ಬದುಕಿನ ಕ್ರಮಗಳನ್ನೇ ಬದಲಾಯಿಸುತ್ತವೆ. ಇಷ್ಟೆಲ್ಲಾ ಬದಲಾವಣೆಗಳು ಆದುದು ಆ ಹಳ್ಳಿ ಬಯಸಿ ಅಲ್ಲದಿರಬಹುದು. ಆದರೆ ಆ ಹಳ್ಳಿಗೆ ಪ್ರತ್ಯೇಕವಾಗಿ ಇರಬೇಕೆಂದರೂ ಇರಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿತ್ತು. ಅಂದರೆ ದ್ವೀಪದಂತೆ ಬದುಕಬೇಕೆಂಬ ಆಶೆ ಇದ್ದರೂ ಬದುಕಲು ಸಾಧ್ಯವಿಲ್ಲದ ರೀತಿಯಲ್ಲಿ ಸಮುದಾಯಗಳು ಇಂದು ಸಂಪರ್ಕ ಹೊಂದಿವೆ. ಆದುದರಿಂದ ಸಂಪೂರ್ಣವಾಗಿ ಬೇರೆ ಇದ್ದು ತನ್ನದೇ ಪ್ರತ್ಯೇಕ ಎನ್ನುವ ರೀತಿಯಲ್ಲಿ ಜೀವನ ಕ್ರಮಗಳನ್ನು ರೂಢಿಸಿಕೊಳ್ಳಲು ಒಂದು ಸಮುದಾಯ ಬಯಸಿದರೂ ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣ ಆಗಿದೆ.

ಇತ್ತೀಚಿನ ರೈತರ ಆತ್ಮಹತ್ಯೆಯ ಪ್ರಕರಣ ಈ ಅಂಶವನ್ನು ಇನ್ನೂ ಸ್ಪಷ್ಟಪಡಿಸುತ್ತದೆ. ರೈತರ ಆತ್ಮಹತ್ಯೆಗೆ ಹಲವಾರು ಕಾರಣಗಳನ್ನು ಮುಂದೊಡ್ಡಲಾಗಿದೆ.[10] ಅದರಲ್ಲಿ ಇತ್ತೀಚಿನ ಉದಾರೀಕರಣ ನೀತಿ ಮತ್ತು ಅದರಿಂದಾಗಿ ಮಾರುಕಟ್ಟೆಗಾಗಿ ಬೆಳೆಯುವ ಅನಿವಾರ್ಯತೆ ರೈತರಿಗೆ ಉಂಟಾಗಿರುವುದು ಪ್ರಮುಖ ಅಂಶ. ಇದಕ್ಕಾಗಿ ರೈತರು ಬ್ಯಾಂಕ್ ಮತ್ತು ಇತರ ಮೂಲಗಳಿಂದ ಹಣ ಸಾಲ ಪಡೆದು ವಾಣಿಜ್ಯ ಬೆಳೆಗಳನ್ನು ಬೆಳದರು. ಅವರ ಬೆಳೆಗಳು ಮಾರುಕಟ್ಟೆಗೆ ತಲುಪುವ ಹೊತ್ತಿಗೆ ಅದಕ್ಕೆ ಸಿಗಬೇಕಾದ ಬೆಲೆ ಸಿಗಲಿಲ್ಲ. ರೈತರು ನಷ್ಟ ಅನುಭವಿಸಿದರು. ಪಡೆದ ಸಾಲವನ್ನು ಹಿಂತಿರುಗಿಸಲಾಗಲಿಲ್ಲ. ಆದುದರಿಂದ ಆತ್ಮಹತ್ಯೆ ಮಾಡಿಕೊಂಡರು. ಇದು ರೈತರ ಆತ್ಮಹತ್ಯೆಗೆ ಸಂಬಂಧಿಸಿದಂತೆ ತುಂಬಾ ಪ್ರಚಾರ ಪಡೆದ ಒಂದು ವಿವರಣೆ. ಇದೇ ರೈತರ ಆತ್ಮಹತ್ಯೆಯನ್ನು ಬೇರೆ ದೃಷ್ಟಿಕೋನದಿಂದಲೂ ನೋಡಬಹುದು. ಅದರಲ್ಲೂ ಮೇಲೆ ಚರ್ಚಿಸಿದ ಸಮುದಾಯವಾದದ ದೃಷ್ಟಿಯಿಂದ ನೋಡಿದರೆ ಇನ್ನೂ ಹೆಚ್ಚಿನ ಒಳನೋಟಗಳು ಸಿಗಬಹುದು. ರೈತರನ್ನು ಒಂದು ಸಮುದಾಯವಾಗಿ  ನೋಡೋಣ. ಅವರು ಬದುಕುವ ಪರಿಸರ ಅವರ ಲೋಕದೃಷ್ಟಿಯನ್ನು ನಿರ್ಧರಿಸುತ್ತದೆ ಎಂದು ಗ್ರಹಿಸೋಣ. ಆತ ವ್ಯವಹರಿಸುವ ಲೋಕದ ಒಂದು ಕನಿಷ್ಠ ಪರಿಚಯ ಮಾಡಿಕೊಳ್ಳೋಣ. ಮಳೆ ಬರಬಹುದು ಎಂದು ಬಿತ್ತನೆ ಮಾಡುತ್ತಾನೆ. ಆದರೆ ಮಳೆ ಬರುವುದು ಗ್ಯಾರಂಟಿ ಇಲ್ಲ. ಮಳೆ ಬಂದರೆ ಬೆಳೆ; ಇಲ್ಲದಿದ್ದರೆ ಇಲ್ಲ. ತನ್ನ ಹಳ್ಳಿಯಿಂದ ಪೇಟೆಗೆ ಹೋಗಲು ರಸ್ತೆ ಬದಿಗೆ ಬರುತ್ತಾನೆ. ಆದರೆ ಬಸ್ಸು ಒಂದು ನಿರ್ದಿಷ್ಟ ಸಮಯಕ್ಕೆ ಬಂದೇ ಬರುತ್ತದೆ ಎನ್ನುವ ಗ್ಯಾರಂಟಿ ಇಲ್ಲ. ಬಸ್ಸು ಬಂದರೆ ಪೇಟೆಗೆ ಹೋಗುವುದು; ಇಲ್ಲದಿದ್ದರೆ ವಾಪಸ್ಸು ಮನೆಗೆ ಹೋಗುವುದು. ಆತನ ಸ್ನೇಹಿತ ಎರಡು ದಿನ ಬಿಟ್ಟು ಕೊಡುತ್ತೇನೆ ಎಂದು ನೂರು ರೂಪಾಯಿ ಸಾಲ ತೆಗೆದುಕೊಂಡಿದ್ದಾನೆ. ರೈತನಿಗೆ ಗೊತ್ತಿದೆ, ಆ ಎರಡು ದಿನ ಎಂದರೆ ಎರಡು ದಿನ ಅಲ್ಲ ಎಂದು. ಹೀಗೆ ರೈತ ವ್ಯವಹರಿಸುವ ಲೋಕದಲ್ಲಿ ಎಲ್ಲೂ ನಿರ್ದಿಷ್ಟತೆ ಅಥವಾ ಖಚಿತತೆ ಇಲ್ಲ. ಇಂತಹ ರೈತ ಮಾರುಕಟ್ಟೆಯಲ್ಲಿ ವ್ಯವಹರಿಸಬೇಕು. ಅಲ್ಲಿ ಒಂದು ವ್ಯಾಪಾರಿ ಸಮುದಾಯ ವ್ಯವಹರಿಸುತ್ತದೆ. ಅದರ ಲೋಕದೃಷ್ಟಿ ರೈತನಿಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ. ಅಲ್ಲಿ ಪ್ರತಿಯೊಂದು ನಿರ್ದಿಷ್ಟ ಮತ್ತು ಖಚಿತವಾಗಿರಬೇಕು. ಪ್ರತಿಯೊಂದು ಲೆಕ್ಕಾಚಾರ ಪ್ರಕಾರ ನಡೆಯಬೇಕು. ಇಂತಹ ಎರಡು ಸಮುದಾಯಗಳು ವ್ಯವಹರಿಸಬೇಕು. ಇದು ಖಂಡಿತವಾಗಿಯೂ ಮಾರುಕಟ್ಟೆ ವ್ಯವಹಾರಕ್ಕೆ ಪೂರಕವಾದ ಮೌಲ್ಯಗಳನ್ನು ರೂಢಿಸಿಕೊಂಡವರ ಪರ ಮತ್ತು ರೂಢಿಸಿ ಕೊಳ್ಳದವರ ವಿರುದ್ಧ ಅಂದರೆ ರೈತರ ವಿರುದ್ಧ ಕೆಲಸ ಮಾಡಲೇಬೇಕು. ಹಾಗೆಂದು ನಷ್ಟ ಅನುಭವಿಸುವ ರೈತ ಈ ವ್ಯವಹಾರದಿಂದ ದೂರ ಇರಲು ಸಾಧ್ಯವಾಗುವುದಿಲ್ಲ. ಬಾಹ್ಯ ಮತ್ತು ಆಂತರಿಕ ಕಾರಣಗಳಿಂದ ರೈತನಿಗೆ ಇಷ್ಟ ಇರಲಿ ಇಲ್ಲದಿರಲಿ ಆತ ಮಾರುಕಟ್ಟೆಯಲ್ಲಿ ವ್ಯವಹರಿಸಲೇಬೇಕು. ಈ ವಿಚಾರದಲ್ಲಿ ಆತನಿಗೆ ಆಯ್ಕೆ ಇಲ್ಲ. ಆಧುನೀಕರಣ ಮತ್ತು ನಂತರದ ಜಾಗತೀಕರಣ ಎರಡೂ ಕೂಡ ಪ್ರತಿಯೊಬ್ಬರು ಬೇಕು ಬೇಡಗಳ ಮೇಲೆ ಆದುದಲ್ಲ. ಆಂತರಿಕ ಮತ್ತು ಬಾಹ್ಯ ಕಾರಣಗಳಿಂದ ಅವೆರಡು ಜಾರಿ ಬಂದವು. ಅದರಲ್ಲಿ ಹೊಂದಾಣಿಕೆ ಮಾಡಿಕೊಂಡು ಹೋಗುವುದು, ಕನಿಷ್ಠ ಅವುಗಳನ್ನು ಪರಿವರ್ತಿಸುವ ಪ್ರಯತ್ನ ಫಲ ಕಾಣುವ ತನಕ ಅನಿವಾರ್ಯ. ಹೀಗಿರುವಾಗ ಸಾರ್ವಜನಿಕ ವ್ಯವಹಾರದಲ್ಲಿ ಎಲ್ಲರಿಗೂ ಅನುಕೂಲವಾಗುವ ಮೌಲ್ಯಗಳನ್ನು ರೂಢಿಸಿಕೊಳ್ಳುವತ್ತ ಸಮಾಜ ಚಲಿಸಬೇಕೆ ಹೊರತು ಸಮುದಾಯ ಕೇಂದ್ರಿತ ಮೌಲ್ಯಗಳಿಗೆ ಆದ್ಯತೆ ಕೊಡುವುದು ಸಮಾಜದ ಕೆಳವರ್ಗದವರ ದೃಷ್ಟಿಯಿಂದ ಲಾಭದಾಯಕವಲ್ಲ.

ಜತೆಗೆ ಪ್ರತಿ ಸಮುದಾಯ ಕೂಡ ಅದರದ್ದೇ ಆದ ಜೀವನ ಮೌಲ್ಯಗಳನ್ನು ರೂಢಿಸಿಕೊಂಡಿದೆ. ಪ್ರತಿ ಸಮುದಾಯಕ್ಕೆ ಅದರದ್ದೇ ಆದ ಒಳಿತಿನ ಕಲ್ಪನೆಗಳಿವೆ. ಆದರೆ ಅವು ಅನ್ವಯವಾಗುವುದು ಆಯಾಯ ಸಮುದಾಯಕ್ಕೆ ಸೇರಿದ ಸದಸ್ಯರಿಗೆ ಮಾತ್ರ. ಈ ಸಮುದಾಯ ಕೇಂದ್ರಿತ ಒಳಿತಿನ ದೃಷ್ಟಿಯಿಂದ ನೋಡಿದಾಗ ವ್ಯಾಪಾರಿಯೊಬ್ಬನಿಗೆ ತನ್ನ ಸಮುದಾಯಕ್ಕೆ ಸೇರಿದವನಿಗೆ ಮೋಸ ಮಾಡುವುದು ಅನೈತಿಕ ಆಗಬಹುದು. ಆದರೆ ವ್ಯಾಪಾರಿ ಸಮುದಾಯದಿಂದ ಹೊರಗಿನವರಿಗೆ ಮೋಸ ಮಾಡುವುದು ಅನೈತಿಕ ಆಗುವುದಿಲ್ಲ. ಇದೇ ನೀತಿ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲೂ ಕೆಲಸ ಮಾಡುತ್ತದೆ. ಆಧುನಿಕ ಸಂಸ್ಥೆಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಈ ಪ್ರಕಾರದ ಸಮುದಾಯಪರ ಕಾಳಜಿ ಸಂಸ್ಥೆಗಳು ಪರಿಣಾಮಕಾರಿಯಾಗಿ ಕೆಲಸ ಮಾಡುವಲ್ಲಿ ದೊಡ್ಡ ತೊಡಕಾಗಿದೆ. ತನ್ನ ಸಂಬಂಧಿ ಅಥವಾ ಸಮುದಾಯಕ್ಕೆ ಸೇರಿದವನು ಎನ್ನುವ ಕಾರಣಕ್ಕಾಗಿ ಸಂಸ್ಥೆಯ ನೀತಿ ನಿಯಮಗಳನ್ನು ಗಾಳಿಗೆ ತೂರಿ ವ್ಯವಹರಿಸುವುದು ಸಾಮಾನ್ಯ ಸಂಗತಿ. ಇದರಿಂದಾಗಿ ಸಮಾಜ ಎರಡು ರೀತಿಯ ನಷ್ಟಗಳನ್ನು ಅನುಭವಿಸಬೇಕಾಗಿದೆ. ಒಂದು, ಯಾವುದೇ ಸಂಸ್ಥೆಯಾಗಲಿ ಅದಕ್ಕೊಂದು ಸಾಮಾಜಿಕ ಜವಾಬ್ದಾರಿ ಇದೆ. ಆ ಸಾಮಾಜಿಕ ಜವಾಬ್ದಾರಿಯನ್ನು ಸಂಸ್ಥೆ ಪರಿಣಾಮಕಾರಿಯಾಗಿ ಪೂರೈಸಬೇಕಾದರೆ ಅದು (ಸಂಸ್ಥೆ ಅಂದರೆ ಅದರಲ್ಲಿ ಕಾರ್ಯ ನಿರ್ವಹಿಸುವವರು) ನಿಯಮ ಪ್ರಕಾರ ಕಾರ್ಯ ನಿರ್ವಹಿಸಬೇಕು. ಆದರೆ ಉದ್ಯೋಗಿಗಳ ಸಮುದಾಯಪರ ಕಾಳಜಿಯಿಂದ ನಿಯಮಗಳನ್ನು ಗಾಳಿಗೆ ತೂರಿ ವ್ಯವಹರಿಸುವುದರಿಂದ ಸಂಸ್ಥೆ ಸಾಮಾಜಿಕ ಜವಾಬ್ದಾರಿ ಅಪೂರ್ಣವಾಗಿ ಬಿಡುತ್ತದೆ. ಇದರ ದೂರಗಾಮಿ ಪರಿಣಾಮ ಒಟ್ಟು ಸಮಾಜದ ಆರೋಗ್ಯದ ಮೇಲೆ ಆದರೆ, ತಕ್ಷಣದ ಪರಿಣಾಮ ಸಮಾಜದ ಕೆಳವರ್ಗದವರ ಮೇಲೆ ಆಗುತ್ತದೆ. ಎರಡು, ಸಮಾಜದ ಕೆಳವರ್ಗದ ಹಿತಾಸಕ್ತಿ ಯೂನಿವರ್ಸಲ್ ನೀತಿಯಿಂದ ಧಕ್ಕೆ ಆಗುತ್ತಿದೆ ಎನ್ನುವ ಕಾರಣಕ್ಕೆ ಸಮುದಾಯವಾದ ಬಲಗೊಂಡಿರುವುದು. ಆದರೆ ಇದರಿಂದ ನಿಜವಾದ ಲಾಭ ಪಡೆಯುತ್ತಿರುವುದು ಬಡ ವ್ಯವಸ್ಥೆಗಳ ಮೇಲ್ವರ್ಗಕ್ಕೆ ಸೇರಿದ ಸಮುದಾಯಗಳು. ಇದು ಯಾಕೆಂದರೆ ಇವರು (ಮೇಲ್ವರ್ಗ) ಈಗಾಗಲೇ ಸ್ಥಳೀಯ ಮತ್ತು ಗ್ಲೋಬಲ್ ಎರಡು ಲೋಕದಲ್ಲೂ ಸಾಕಷ್ಟು ಸಮಖ್ಯೆಯಲ್ಲಿ ಬೇರುಬಿಟ್ಟಿದ್ದಾರೆ; ಜತೆಗೆ ಎಲ್ಲ ಸಂಪನ್ಮೂಲಗಳ ಒಡೆತನದಲ್ಲೂ ಇವರು ಸಾಕಷ್ಟು ಮುಂದಿದ್ದಾರೆ. ಇವರ ಸಮುದಾಯದ ಕೊಂಡಿಗಳು ಸಮಾನಾಂತರ ಮತ್ತು ಮೇಲ್ಮುಖವಾದ ಸಂಪರ್ಕ ಹೊಂದಿದೆ. ಆದುದರಿಂದ ಇವರಿಗೆ ಕುಟುಂಬ ಮತ್ತು ಸಮುದಾಯದ ಸಂಬಂಧಗಳ ನೆಲೆಯಲ್ಲಿ ವ್ಯವಹರಿಸುವುದು ತುಂಬಾ ಲಾಭದಾಯಕವಾಗುತ್ತದೆ. ಇದು ಒಂದು ಕಡೆಯಿಂದ ಕೆಳವರ್ಗದ ಹೀನ ಸ್ಥಿತಿಗೆ ಆ ವರ್ಗವನ್ನೇ ಜವಾಬ್ದಾರಿ ಮಾಡಿದರೆ ಮತ್ತೊಂದು ಕಡೆಯಿಂದ ಒಟ್ಟು ಸಮಾಜದ ಬಗ್ಗೆ ಇರಬೇಕಾದ ನೈತಿಕ ಜವಾಬ್ದಾರಿಯಿಂದ ಮೇಲ್ವರ್ಗವನ್ನು ಪಾರು ಮಾಡುತ್ತದೆ. ಹಾಗೆಂದು ಯಾರೂ ಕೂಡ ತನ್ನ ಬೆಕ್ಕಿನ ಬಿಡಾರ ಬೇರೆ ಎಂದು ಪ್ರತ್ಯೇಕವಾಗಿ ಬದುಕಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣ ಆಗಿದೆ. ಸಮುದಾಯಗಳು ಕಲೆತು ಬದುಕುವುದು ಇಂದಿನ ಅನಿವಾರ್ಯತೆ. ಇದರಿಂದ ಯಾರೂ ತಪ್ಪಿಸಿಕೊಂಡು ಬದುಕಲು ಸಾಧ್ಯವಿಲ್ಲ. ಆದರೆ ಈ ರೀತಿಯ ಸಮುದಾಯ ಕೇಂದ್ರಿತ ಒಳಿತಿನ ಕಲ್ಪನೆಗಳು ಮತ್ತು ಮೌಲ್ಯಗಳು ಸಮುದಾಯಗಳು ಪರಸ್ಪರ ಕಲೆತು ವ್ಯವಹರಿಸುವಲ್ಲಿ ದೊಡ್ಡ ದೊಡಕಾಗಿವೆ.

[1] ಈ ಅಭಿಪ್ರಾಯಗಳನ್ನು ನೀಡುವಾಗ ನನ್ನ ಆಲೋಚನೆಗೆ ಬಂದಿರುವುದು ಪ್ರಜ್ಞೆ ಬಗ್ಗೆ ಮಾರ್ಕ್ಸ್‌ ಮತ್ತು ಹೆಗೆಲ್ ಆರಂಭಿಸಿದ ಎರಡು ವಾದಗಳು. ಆರಂಭದಲ್ಲಿ ಮಾರ್ಕ್ಸ್ ಪರಿಸರದಿಂದ ಪ್ರಜ್ಞೆ ಎನ್ನುವ ವಾದಕ್ಕೆ ಮಹತ್ವ ನೀಡಿದನು. ನಂತರದ ದಿನಗಳಲ್ಲಿ ಹೆಗೆಲ್‌ನ ಪ್ರಜ್ಞೆಯಿಂದ ಪರಿಸರ ವಾದವನ್ನು ಕೂಡ ಪರಿಗಣಿಸಿದ್ದಾನೆ. ಪ್ರತಿ ಚಾರಿತ್ರಿಕ ಸಂದರ್ಭಗಳು ಮಾನವ ಮೇಲೆ ಹೇರುವ ಮಿತಿಗಳನ್ನು ಮೀರುವ ಪ್ರಕ್ರಿಯೆಯಿಂದಾಗಿ ಚಾರಿತ್ರಿಕ ಬದಲಾವಣೆಗಳು ಸಾಧ್ಯವಾಗಿವೆ ಎಂದು ಹೆಗೆಲ್ ತನ್ನ ಫಿನಾಮಿನಾಲಜಿ ಆಫ್ ಸ್ಪಿರಿಟ್ ಪುಸ್ತಕದಲ್ಲಿ ಅಭಿಪ್ರಾಯ ಪಡುತ್ತಾನೆ. ಮೇಲಿನ ತಾತ್ವಿಕ ಚರ್ಚೆಗಳ ಜತೆಗೆ ಮನಶ್ಶಾಸ್ತ್ರದ ನೆಲೆಯಿಂದ ರೂಪಿತ ಮೋಟಿವೇಶನ್ ಥಿಯರಿಗಳು ಕೂಡ ಈ ಅಭಿಪ್ರಾಯಗಳನ್ನು ನೀಡಲು ಸಹಕಾರಿಯಾಗಿದೆ. ಕ್ರಿಯೆಗೆ ಪ್ರೇರಕವಾಗಿ ಕೆಲಸ ಮಾಡವ ಸಂಗತಿಗಳೇನೆಂದು ಮೋಟಿವೇಶನ್ ಥಿಯರಿಗಳು ತಿಳಿಸುತ್ತವೆ.

[2] ಇಲ್ಲಿ ಸಂಶೋಧನೆ ಎನ್ನುವ ಪದವನ್ನು ಅದರ ಫಾರ್ಮಲ್ ವ್ಯಾಖ್ಯಾನವನ್ನು ಗಮನದಲ್ಲಿಟ್ಟುಕೊಂಡು ಬಳಸಿಲ್ಲ. ಸಂಶೋಧನೆ ಎನ್ನುವಾಗ ಎಲ್ಲರೂ ಒಂದಲ್ಲ ಒಂದು ಬಗೆಯ ಪ್ರಯೋಗ, ಅವಲೋಕನ ಇತ್ಯಾದಿಗಳ ಮೂಲಕ ತಮ್ಮ ಸುತ್ತಮುತ್ತಲಿನ ಸಂಗತಿಗಳ ಬಗ್ಗೆ ತಿಳುವಳಿಕೆಗೆ ಪ್ರಯತ್ನಿಸುತ್ತಾರೆ. ಈ ಬಗೆಯ ಜ್ಞಾನಗಳಿಕೆ ನಿರಂತರವಾಗಿ ನಡೆಯುತ್ತಿದೆ. ಆದರೆ ನಮ್ಮಲ್ಲಿ ವಿಜ್ಞಾನ, ಸಂಶೊಧನೆ ಇತ್ಯಾದಿಗಳು ಕೆಲವೊಂದು ಸಂಗತಿಗಳ ಜತೆ ಮಾತ್ರ ಗುರುತಿಸಲ್ಪಡುತ್ತಿವೆ. ವಿಜ್ಞಾನ ಎಂದರೆ ಮಹಾನ್ ಆವಿಷ್ಕಾರಗಳು, ವಿಜ್ಞಾನಿಗಳು, ವಿಜ್ಞಾನ ಸಂಸ್ಥೆಗಳು, ಪ್ರಯೋಗಾಲಯ ಇತ್ಯಾದಿಗಳ ಮೂಲಕ ಮಾತ್ರ ಗುರುತಿಸಲ್ಪಡುತ್ತಿವೆ. ಆದುದರಿಂದ ಜನಸಾಮಾನ್ಯರು ದಿನನಿತ್ಯ ನಡೆಸುವ ಪ್ರಯೋಗಗಳು, ಅವಲೋಕನಗಳು ಮತ್ತು ಅವುಗಳ ಮೂಲಕ ಸಂಪಾದಿಸುವ ಜ್ಞಾನ ಸಂಶೋಧನೆಯ ವ್ಯಾಖ್ಯಾನದ ವ್ಯಾಪ್ತಿಯಿಂದ ಹೊರಗಿವೆ.

[3] ಮಾದರಿಯಂತೆ ರೂಪಿಸಿಕೊಳ್ಳುವುದಕ್ಕೆ ಉತ್ತಮ ಉದಾಹರಣೆಯೆಂದರೆ ಆಧುನೀಕರಣ ಪ್ರಕ್ರಿಯೆ. ಓರಿಯಂಟಲ್‌ನ ಭಿನ್ನರೂಪವಾಗಿ ಪಶ್ಚಿಮ ತನ್ನನ್ನು ರೂಪಿಸಿಕೊಂಡಿರುವುದು ಮಾದರಿಗಿಂತ ಭಿನ್ನವಾಗಿ ರೂಪಿಸಿಕೊಳ್ಳುವುದಕ್ಕೆ ಉದಾಹರಣೆಯಾಗಬಹುದು.

[4] ಆಧುನೀಕರಣದ ಈ ಗುಣಗಳನ್ನು ವಿವರಿಸುವ ಮತ್ತು ವಿಮರ್ಶಿಸುವ ಸಾಕಷ್ಟು ಪುಸ್ತಕಗಳಿವೆ. ಅವುಗಳಲ್ಲಿ ಕೆಲವನ್ನು ಇಲ್ಲಿ ಕೊಟ್ಟಿದ್ದೇನೆ. ೧ ಬರ್ಟ್‌ ಎಫ್ ಹೊಸ್‌ಲಿಡ್ಜ್, ಸೋಶಿಯಾಲಜಿಕಲ್ ಆಸ್ಪೆಕ್ಟ್ಸ್ ಆಫ್ ಎಕಾನಮಿಕ್ ಗ್ರೋಥ್, ನ್ಯೂಯಾರ್ಕ್: ದಿ ಪ್ರಿಪ್ರೆಸ್, ೧೯೬೬, ೨. ಇವಾ ಇಜನಿ – ಹೇಲಿ, ಸೋಶಿಯಲ್ ಚೇಂಜ್, ದಿ ಎಡ್ವಾಂಟ್ ಆಂಡ್ ಮೆಚುರೇಶನ್ ಆಫ್ ಮಾಡರ್ನ್ ಸೊಸೈಟಿ, ಲಂಡನ್: ದಿ ಮ್ಯಾಕ್‌ಮಿಲನ್ ಪ್ರೆಸ್, ೧೯೭೮, ೪. ಎಂಟೋನಿ ಡಿ ಸ್ಮಿಥ್, ದಿ ಕಾನ್ಸೆಪ್ಟ್ ಆಫ್ ಸೋಶಿಯಲ್ ಚೇಂ ಕ್ರಿಟಿಕ್ ಆಫ್ ದಿ ಫಂಕ್ಷನಲಿಸ್ಟ್ ಥಿಯರಿ ಆಫ್ ಸೋಶಿಯಲ್ ಚೇಂಜ್, ಲಂಡನ್: ರೌಟ್‌ಲೆಡ್ಜ್‌ ಆಂಡ್ ಕೆಗನ್ ಪೌಲ್, ೧೯೭೩ ಮುಂತಾದವು.

[5] ಭಾರತದಲ್ಲಿ ಸಮುದಾಯವಾದಿಗಳೆಂದು ಗುರುತಿಸಬಹುದಾದ ಕೆಲವು ಲೇಖಕರು ಮತ್ತು ಬರಹಗಳ ವಿವರಗಳು ಇಂತಿವೆ. ರಜನಿ ಕೊಥಾರಿ, ಸ್ಟೇಟ್ ಎಗೈನ್ಸ್ಟ್ ಡೆಮಾಕ್ರಸಿ: ಇನ್ ಸರ್ಚ್ ಆಫ್ ಹ್ಯೂಮನ್ ಗವರ್ನೆನ್ಸ್, ಡೆಲ್ಲಿ: ಅಜಂತಾ ಪಬ್ಲಿಕೇಶನ್ಸ್, ೧೯೮೮, ರಜನಿ ಕೊಥಾರಿ, ರೀಥಿಂಕಿಂಗ್ ಡೆವಲಪ್ಮೆಂಟ್ಇನ್ ಸರ್ಚ್ ಆಫ್ ಹ್ಯೂಮನ್ ಆಲ್ಟರ್ನೇಟೀವ್ಸ್, ಡೆಲ್ಲಿ: ಅಜಂತಾ ಪಬ್ಲಿಕೇಶನ್ಸ್, ೧೯೮೮, ಡಿ ಎಲ್ ಸೇತ್ ಆಂಡ್ ಆಶಿಶ್ ನಂದಿ (ಸಂ), ಮಲ್ಟಿವರ್ಸ್ ಆಫ್ ಡೆಮಾಕ್ರಸಿ, ನ್ಯೂಡೆಲ್ಲಿ: ಸೇಜ್ ಪಬ್ಲಿಕೇಶನ್ಸ್, ೧೯೯೬, ಆಶಿಶ್‌ ನಂದಿ (ಸಂ), ಸೈನ್ಸ್, ಹೆಜಮೊನಿ ಆಂಡ್ ವೈಲೆನ್ಸ್ ರಿಕ್ವಯಂ ಫಾರ್ ಮಾಡರ್ನಿಟಿ, ನ್ಯೂಡೆಲ್ಲಿ: ಆಕ್ಸ್‌ಫರ್ಡ್‌ ಯೂನಿವರ್ಸಿಟಿ ಪ್ರೆಸ್, ೧೯೮೮ ಮುಂತಾದವು.

[6] ಈ ವಾದವನ್ನು ಮುಂದಿಡುವಾಗ ಸಮಾನತೆ ಮೇಲಿನ ಅಮರ್ತ್ಯಸೇನ್ ಅವರ ವಾದಗಳನ್ನು ಬಳಸಿಕೊಂಡಿದ್ದೇನೆ. ಈ ವಾದದ ವಿವರಗಳಿಗೆ ಅಮರ್ತ್ಯಸೇನ್ ಅವರ, ಡೆವಲಪ್ಮೆಂಟ್ ಆಸ್ ಫ್ರೀಡಂ (ನ್ಯೂಡೆಲ್ಲಿ: ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್ ೨೦೦೦) ಮತ್ತು ರೀಸನ್ ಬಿಫೋರ್ ಐಡೆಂಟಿಟಿ, ನ್ಯೂಡೆಲ್ಲಿ : ಆಕ್ಸ್‌ಫಡ್ಸ್ ಯೂನಿವರ್ಸಿಟಿ ಪ್ರೆಸ್, ೧೯೯೯ ಪುಸ್ತಕಗಳನ್ನು ನೋಡಬಹುದು.

[7] ಈ ನಿಲುವಿಗೆ ಸಂಬಂಧಿಸಿದ ಚರ್ಚೆಯನ್ನು ಮೂರನೇ ಅಧ್ಯಾಯದಲ್ಲಿ ನೋಡಿದ್ದೇವೆ. ಅದರ ಸಾರಾಂಶ ಇಂತಿದೆ. ಸಾಮಾಜಿಕ ಏಣಿಶ್ರೇಣಿಗಳು ಮತ್ತು ಸಮುದಾಯಗಳ ಕಲ್ಪನೆಗಳು ‘ನಮ್ಮವರು’ ಮತ್ತು ‘ಹೊರಗಿನವರು ಅಥವಾ ಪರಕೀಯರು’ ಎನ್ನುವ ನಮ್ಮ ಪರಿಕಲ್ಪನೆಗಳನ್ನು ನಿರ್ವಚಿಸುತ್ತವೆ. ಸಂಶೋಧನೆ ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ ಸಂಶೋಧಕರ ಸ್ಥಾನ (ಹೊರಗಿನವರು ಅಥವಾ ನಮ್ಮವರು) ಅವರಿಗೆ ಸಿಗುವ ಮಾಹಿತಿಯನ್ನು ಸಾಕಷ್ಟು ಪ್ರಭಾವಿಸುತ್ತದೆ. ಅಂದರೆ ಕ್ಷೇತ್ರ ಸಂಶೋಧಕರು ಪಡೆಯಬಹುದಾದ ಜ್ಞಾನವನ್ನು ಕೂಡ ಪ್ರಭಾವಿಸುತ್ತದೆ ಎಂದು ಗ್ರಹಿಸಲಾಗಿದೆ. ಆ ಕಾರಣಕ್ಕಾಗಿ ಆಯಾ ಸಮುದಾಯಕ್ಕೆ ಸೇರಿದವರು ಆಯಾಯ ಸಮುದಾಯಗಳನ್ನು ಅಧ್ಯಯನ ಮಾಡುವುದು ಉಚಿತವೆಂದು ಮನಗಾಣಲಾಗಿದೆ.

[8] ಒಂದು ಕಾಲದಲ್ಲಿ ಆಕಾಡೆಮಿಕ್ ವಲಯದಲ್ಲಿ ಮತ್ತು ಸಕ್ರಿಯ ರಾಜಕಾರಣದಲ್ಲಿ ಸಾಕಷ್ಟು ಪ್ರಭಾವ ಬೀರಿದ ಒಂದು ಕೆಟಗಿರಿ ಇದ್ದರೆ ಅದು ‘ವರ್ಗ’. ಎಡಪಂಥೀಯ ವಿಚಾರಧಾರೆಗಳಲ್ಲಿ ವರ್ಗ ಪದದ ಬಳಕೆ ಇಲ್ಲದೆ ಮುಂದುವರಿಯುವುದೇ ಕಷ್ಟ ಎನ್ನುವ ಕಾಲವಿತ್ತು. ಆದರೆ ಈಗ ಕಾಲ ಬದಲಾಗಿದೆ. ಈ ಕೆಟಗರಿ ಸಾಮಾಜಿಕ ಸಂಬಂಧಗಳನ್ನು ವಿವರಿಸಲು ಶಕ್ತವಲ್ಲ ಎನ್ನುವ ನಿಲುವುಗಳು ಬಲಗೊಳ್ಳುತ್ತಿದೆ. ವರ್ಗ ಕೆಟಗರಿಯ ಏರಿಳಿತಗಳನ್ನು ಅರ್ಥ ಮಾಡಿಕೊಳ್ಳಲು ಈ ಕೆಳಗಿನ ಬರಹಗಳನ್ನು ನೋಡಬಹುದು – ವಿ.ಕೆಲ್ಲೆ ಆಂಡ್ ಎಮ್. ಕೊವಲ್‌ಸನ್, ಹಿಸ್ಟಾರಿಕಲ್ ಮೆಟಿರಿಯಲಿಸಂಆನ್ ಔಟ್ಲೈನ್ ಆಫ್ ಮಾರ್ಕ್ಸಿಸ್ಟ್ ಥಿಯರಿ ಆಫ್ ಸೊಸೈಟಿ, ಮಾಸ್ಕೋ: ಪ್ರೋಗ್ರೆಸ್ ಪಬ್ಲಿಷರ‍್ಸ್, ೧೯೭೩, ಕಾರ್ಲ್‌ಮಾರ್ಕ್ಸ್ ಆಂಡ್ ಫ್ರೆಡಿಕ್ ಎಂಗೆಲ್ಸ್, ದಿ ಕಮ್ಯುನಿಸ್ಟ್ ಮ್ಯಾನಿಫೆಸ್ಟೋ, ಲಂಡನ್: ಓರಿಯಂಟ್‌ ಬುಕ್ಸ್ ಲಿಮಿಟೆಡ್, ೧೯೯೬, ಟಿ.ಬಿ. ಬೋಟಮೋರ್, ಸೋಶಿಯಾಲಜಿ ಆಸ್ ಸೋಶಿಯಲ್ ಕ್ರಿಟಿಸಿಸಂ, ನ್ಯೂಡೆಲ್ಲಿ: ಚಾಂದ್ ಆಂಡ್ ಕಂಪೆನಿ, ೧೯೭೫.

[9] ವಿವರಗಳಿಗೆ ಕರೋಲ್‌ ಉಪಾಧ್ಯಾಯ ಅವರ ಲೇಖನ ‘ದಿ ಕಾನ್‌ಸೆಪ್ಟ್ ಆಫ್ ಕಮ್ಯುನಿಟಿ ಇನ್ ಇಂಡಿಯನ್ ಸೋಶಿಯಲ್‌ ಸೈನ್ಸ್ – ಆನ್ ಆಂಥ್ರೋಪಾಲಜಿಕಲ್ ಪರ್‌ಸ್ಪೆಕ್ಟೀವ್’, ಸುರಿಂದರ್‌ ಎಸ್ ಜೋದ್ಕ ಅವರು (ಸಂ), ಕಮ್ಯೂನಿಟಿ ಆಂಡ್ ಐಡೆಂಟಿಟೀಸ್, (ನ್ಯೂಡೆಲ್ಲಿ: ಸೇಜ್ ಪಬ್ಲಿಕೇಶನ್ಸ್, ೨೦೦೧, ಪು. ೧೩-೩೧) ಪುಸ್ತಕದಲ್ಲಿ ಪ್ರಕಟವಾಗಿದೆ.

[10] ರೈತರ ಆತ್ಮಹತ್ಯೆ ಕುರಿತು ಹಲವಾರು ವಾದಗಳಿವೆ. ಅವುಗಳಲ್ಲಿ ಸರಕಾರ ಮತ್ತು ರೈತ ಸಂಘದ ವಾದಗಳು ಹೆಚ್ಚು ಪ್ರಚಾರದಲ್ಲಿವೆ. ಸರಕಾರ ರೈತರ ಆತ್ಮಹತ್ಯೆಯನ್ನು ಒಂದು ವೈಯಕ್ತಿಕ ಸಮಸ್ಯೆಯೆಂದು ಪರಿಗಣಿಸುತ್ತದೆ ಮತ್ತು ಸತ್ತವರ ಕುಟುಂಬಕ್ಕೆ ಪರಿಹಾರ ನೀಡುವುದರ ಮೂಲಕ ತನ್ನ ಜವಾಬ್ದಾರಿಯನ್ನು ಪೂರೈಸಿದ ಚಿತ್ರಣ ನೀಡುತ್ತದೆ. ಉದಾರೀ ಕರಣ ಮತ್ತು ಎಲ್ಲ ಕ್ಷೇತ್ರಗಳಲ್ಲೂ ಮಾರುಕಟ್ಟೆ ಪ್ರವೇಶ ಮಾಡಿರುವುದು ರೈತರ ಆತ್ಮಹತ್ಯೆಗೆ ಕರಣವೆಂದು ರೈತ ಸಂಘಟನೆಗಳು ಅಭಿಪ್ರಾಯ ಪಡುತ್ತವೆ. ಈ ಸಮಸ್ಯೆಗೆ ಪರಿಹಾರವಾಗಿ ರೈತರ ಪರ ಪ್ರಭುತ್ವ ಕ್ರಮಕೈಗೊಳ್ಳಬೇಕೆಂದು ಸಂಘಟನೆಗಳು ಅಭಿಪ್ರಾಯ ಪಡುತ್ತವೆ.