ಬಹುಸತ್ಯದ ಕಲ್ಪನೆ

ಮೇಲಿನ ವಾದಗಳನ್ನು ಮುಂದಿಟ್ಟು ಸಂಶೋಧನೆಯ ಒಟ್ಟು ಆಶಯ ಸಾಮಾಜಿಕ ಪರಿವರ್ತನೆ ಆಗಬೇಕೆಂದು ಎಷ್ಟು ವಾದಿಸಿದರೂ ಸಮಸ್ಯೆ ಪರಿಹಾರವಾಗುವುದಿಲ್ಲ ಯಾಕೆಂದರೆ ಪರಿವರ್ತನೆ ಬಯಸುವವರು ಎರಡು ಲೋಕಗಳನ್ನು ಮುಂದಿಡಬೇಕು ಮತ್ತು ಒಂದು ಮತ್ತೊಂದಕ್ಕಿಂತ ಉತ್ತಮ ಎಂದು ವಾದಿಸಬೇಕು. ಆದರೆ ನಾವು ಮಾಡುವ ವಾದವೇ ಸತ್ಯ ಎಂದು ಹೇಗೆ ಹೇಳುತ್ತೀರಿ ಎಂದು ಕೇಳಬಹುದು? ನಾವು ಮಾಡುವ ವಾದ ಒಂದು ಸತ್ಯ ಆಗಿರಬಹುದು. ಆದರೆ ಅದುವೇ ಸತ್ಯ ಮತ್ತು ಅದು ಏಕ ಮಾತ್ರ ಸತ್ಯ ಎಂದು ಯಾಕೆ ತಿಳಿಯಬೇಕು? ಸತ್ಯದ ಹಲವಾರು ರೂಪಗಳಿರಬಹುದು; ಅದರಲ್ಲಿ ಯಾವುದೋ ಒಂದು ವಿಧಾನದಲ್ಲಿ ಸಂಶೋಧಕರು ಕಂಡುಕೊಳ್ಳುವ ಸತ್ಯ ಒಂದು ಅಷ್ಟೇ. ಹಾಗಿರುವಾಗ ನಾವು ಹೇಳಿದ ರೀತಿಯಲ್ಲಿ ಸಾಮಾಜಿಕ ಪರಿವರ್ತನೆ ಆಗಬೇಕೆಂದು ಯಾಕೆ ಬಯಸುತ್ತೀರಿ ಎಂದು ಕೇಳಬಹುದು. ಹೀಗೆ ಇಂದು ಬಹುಸತ್ಯದ ವಾದ ತುಂಬಾ ಶಕ್ತಿಶಾಲಿಯಾಗಿ ಸಾಮಾಜಿಕ ಪರಿವರ್ತನೆಯ ಉದ್ದೇಶವನ್ನು ಕಾಡುತ್ತಿದೆ.[1] ಹಾಗೆಂದು ಬಹುಸತ್ಯದ ವಾದವನ್ನು ಸರಳವಾಗಿ ತಳ್ಳಿ ಹಾಕುವಂತಿಲ್ಲ. ಅದರಲ್ಲೂ ಸಾಕಷ್ಟು ಉತ್ತಮ ಅಂಶಗಳಿವೆ. ಅದಕ್ಕಿಂತಲೂ ಹೆಚ್ಚು ಅದು ಏಕಸತ್ಯದ ವಾರಸುದಾರರ ವಿರುದ್ಧ ಮಾಡುವ ಆಪಾದನೆಗಳ ಬಗ್ಗೆ ಅಸಡ್ಡೆ ಸರಿ ಅಲ್ಲ. ಅದಕ್ಕೆ ಕೆಲವು ಕಾರಣಗಳಿವೆ. ಬಹುಸತ್ಯದ ವಾದ ಮುಂದಿಡುವವರು ಏಕಸತ್ಯದ ಕಲ್ಪನೆಯಿಂದ ಆಗುವ ಮತ್ತು ಆಗುತ್ತಿರುವ ಅನಾಹುತಳ ಬಗ್ಗೆ ಕೆಲವು ಗಂಭೀರವಾದ ಆರೋಪಗಳನ್ನು ಮಾಡಿದ್ದಾರೆ. ಅವುಗಳನ್ನು ಸುಲಭವಾಗಿ ತಳ್ಳಿ ಹಾಕುವಂತಿಲ್ಲ. ಅವುಗಳೇನೆಂದು ತಿಳಿದುಕೊಂಡರೆ ಮುಂದುವರಿಯುವ ಅಗತ್ಯ ಇದೆ. ಏಕಸತ್ಯ ಕಲ್ಪನೆ ವಿಜ್ಞಾನ ವಿಧಾನದ ಕೊಡುಗೆ. ಏಕಸತ್ಯ ಅಥವಾ ವಿಜ್ಞಾನದ ವಿಧಾನದಿಂದ ಕಂಡುಕೊಳ್ಳುವ ಸತ್ಯ ಎರಡು ಕಾರಣಕ್ಕಾಗಿ ಇಂದು ದ್ವೇಷಿಸಲ್ಪಡುತ್ತಿದೆ. ಒಂದು, ಜ್ಞಾನದ ಉತ್ಪಾದನೆಯಲ್ಲಿ ಅದರ ಯಜಮಾನಿಕ ಪ್ರವೃತ್ತಿಗೆ. ಮತ್ತೊಂದು ಕಾರಣ ಅದರ ಆನ್ವಯಿಕೆಗೆ ಸಂಬಂಧಿಸಿದಂತೆ ಅಥವಾ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ. ಅಂದರೆ ಎರಡನೇ ಕಾರಣ ನೇರವಾಗಿ ವಿಜ್ಞಾನದ ವಿಧಾನಕ್ಕೆ ಸಂಬಂಧಿಸಿರಬಹುದು. ಆದರೆ ವಿಜ್ಞಾನದೊಂದಿಗೆ ಪರೋಕ್ಷ ಸಂಬಂಧ ಇದೆ. ಒಂದು ವಿಧದಲ್ಲಿ ಈ ಎರಡು ಕಾರಣಗಳು ಪರಸ್ಪರ ಸಂಬಂಧಿಸಿವೆ ಅಥವಾ ಒಂದೇ ನಾಣ್ಯದ ಎರಡು ಮುಖಗಳಂತಿವೆ. ಈ ಬೆಳವಣಿಗೆಯನ್ನು ತಮ್ಮ ವಾದವನ್ನು ಮಂಡಿಸಲು ಆಧುನಿಕೋತ್ತರ ಚಿಂತಕರು ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದಾರೆ. ಇದು ಹೇಗೆಂದು ಸ್ವಲ್ಪ ವಿವರವಾಗಿ ಹೇಳುವ ಅಗತ್ಯ ಇದೆ. ಜ್ಞಾನ ಉತ್ಪಾದನೆಯ ಯಜಮಾನಿಕೆಗಾಗಿ ಮಾನವಿಕ ಮತ್ತು ವಿಜ್ಞಾನದ ನಡುವೆ ನಡೆಯುತ್ತಿರುವ ಪೈಪೋಟಿಯ ವಿವರಣೆಯೊಂದಿಗೆ ಆರಂಭಿಸಬಹುದು.

ಒಂದು ಕಾಲದಲ್ಲಿ ಮಾನವಿಕ ಜ್ಞಾನದ ಉತ್ಪಾದನೆಯ ಏಕಮಾತ್ರ ಯಜಮಾನಿಕೆ ನಡೆಸುತ್ತಿತ್ತು. ಅದರ ಏಕಾಧಿಪತ್ಯವನ್ನು ವಿಜ್ಞಾನ ಹಂತ ಹಂತವಾಗಿ ಪ್ರಶ್ನಿಸಿತು ಮತ್ತು ಕಾಲಕ್ರಮೇಣ ಜ್ಞಾನ ಉತ್ಪಾದನೆಯ ಸ್ವಾಮ್ಯತೆಯನ್ನು ತನ್ನದಾಗಿಸಿಕೊಂಡಿತು. ಹಾಗೆಂದು ಮಾನವಿಕ ಸುಮ್ಮನೆ ಕುಳಿತಿಲ್ಲ. ಅದು ವಿಜ್ಞಾನದ ಏಕಾಧಿಪತ್ಯವನ್ನು ಪ್ರಶ್ನಿಸುತ್ತಲೇ ಇದೆ. ಈ ಎರಡರ ಮಧ್ಯೆ ತಿಕ್ಕಾಟ ಸತತವಾಗಿ ನಡೆಯುತ್ತಲೇ ಇದೆ. ಈ ಎರಡರ ತಿಕ್ಕಾಟದ ಪರಿಣಾಮವನ್ನು ಸಮಾಜವಿಜ್ಞಾನದಲ್ಲೂ ಕಾಣಬಹುದು. ಯಾಕೆಂದರೆ ಸಮಾಜವಿಜ್ಞಾನಕ್ಕೆ ಅದರದ್ದೇ ಆದ ಸಂಶೋಧನಾ ವಿಧಾನ ಇರಲಿಲ್ಲ, ವಿಜ್ಞಾನದ ಜತೆಗೆ ಒಂದು ಶಿಸ್ತುಬದ್ಧ ಶಾಸ್ತ್ರವಾಗಿ ಸಮಾಜವಿಜ್ಞಾನ ರೂಪುಗೊಂಡಿದೆ. ಹಾಗಾಗಿ ಸಮಾಜವಿಜ್ಞಾನ ಸಹಜವಾಗಿಯೇ ವಿಜ್ಞಾನದ ಯಜಮಾನಿಕೆ ಪ್ರಶ್ನಾತೀತವಾಗಿದ್ದಾಗ ಸಮಾಜವಿಜ್ಞಾನದ ವಿಧಾನದಲ್ಲಿ ವಿಜ್ಞಾನದ ವಿಧಾನ ಸಂಪೂರ್ಣವಾಗಿತ್ತು. ಆ ಸಂದರ್ಭಗಳಲ್ಲಿ ಸಮಾಜವಿಜ್ಞಾನ ಬರಹಗಳು ಸೈಂಟಿಫಿಕ್‌ಬರಹಗಳೆಂದು ಹೇಳಿಕೊಂಡರೆ ಮಾತ್ರ ಅವು ಸತ್ಯಕ್ಕೆ ಹತ್ತಿರ ಎನ್ನುವ ನಂಬಿಕೆ ಇತ್ತು. ಆದರೆ ಆ ಸಂದರ್ಭ ಯಥಾ ರೀತಿಯಲ್ಲಿ ಮುಂದುವರಿಯಲಿಲ್ಲ. ನಾನು ಮೇಲೆ ಹೇಳಿದ ಹಾಗೆ ಜ್ಞಾನ ಉತ್ಪಾದನೆಯಲ್ಲಿ ವಿಜ್ಞಾನದ ಈ ಬಗೆಯ ಏಕಾಧಿಪತ್ಯವನ್ನು ಮಾನವಿಕ ಇಷ್ಟ ಪಡಲಿಲ್ಲ. ಇದು ಕೇವಲ ಇಷ್ಟಪಡುವ ಅಥವಾ ಬಿಡುವ ಪ್ರಶ್ನೆಗಳಲ್ಲ. ಜ್ಞಾನ ಉತ್ಪಾದನೆಯ ಏಕಸ್ವಾಮ್ಯತೆ ಆ ಕ್ಷೇತ್ರಕ್ಕೆ ಸಮಾಜ ಕೊಡುವ ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ಸ್ಥಾನಮಾನವನ್ನು ಪ್ರಭಾವಿಸುತ್ತದೆ. ವಿಜ್ಞಾನ ಯಜಮಾನಿಕೆಗೆ ಬಂದಿದೆ ಎಂದರೆ ಅದು ಸಹಜವಾಗಿಯೇ ಮೇಲಿನ ಎಲ್ಲ ಸ್ತರಗಳಲ್ಲೂ ಮಾನ್ಯತೆಯನ್ನು ಪಡೆಯುತ್ತದೆ ಎಂದರ್ಥ. ಅಷ್ಟು ಮಾತ್ರವಲ್ಲ, ಇತರ ಶಿಸ್ತುಗಳು ವಿಜ್ಞಾನದಿಂದ ಎಷ್ಟು ದೂರ ಅಥವಾ ಹತ್ತಿರ ಇದೆ ಎನ್ನುವ ನೆಲೆಯಲ್ಲಿ ಅವುಗಳ ಸ್ಥಾನಮಾನ ನಿರ್ಧಾರವಾಗುತ್ತದೆ. ಆ ಕಾರಣಕ್ಕಾಗಿಯೇ ವಿಜ್ಞಾನದ ವಿಧಾನವನ್ನು ಅನುಸರಿಸುತ್ತಲೇ ಆರಂಭವಾದ ಸಮಾಜವಿಜ್ಞಾನಕ್ಕೆ ವಿಜ್ಞಾನದ ಯಜಮಾನಿಕೆ ಅಷ್ಟೇನು ಕಿರಿ ಕಿರಿ ಅನ್ನಿಸಲಿಲ್ಲ. ಆದರೆ ಒಂದು ಕಾಲದಲ್ಲಿ ವಿಜ್ಞಾನದ ಹಾಗೆ ಜ್ಞಾನ ಉತ್ಪಾದನೆಯ ಏಕಸ್ವಾಮ್ಯತೆಯನ್ನು ಹೊಂದಿದ್ದ ಮಾನವಿಕಕ್ಕೆ ವಿಜ್ಞಾನದ ಯಜಮಾನಿಕೆಯನ್ನು ಜೀರ್ಣಿಸಿಕೊಳ್ಳುವುದು ಕಷ್ಟವಾಯಿತು. ಜ್ಞಾನ ಉತ್ಪಾದನೆಯಲ್ಲಿ ತನ್ನ ಸ್ಥಾನವನ್ನು ಕಳಕೊಂಡ ಪರಿಣಾಮವಾಗಿ ಆ ಶಿಸ್ತಿಗೆ ಸಿಗುವ ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ಪ್ರಭಾವವೂ ಕಡಿಮೆ ಆಗುತ್ತಾ ಬರತೊಡಗಿತು. ಇದು ಆ ಶಿಸ್ತಿನ ಅಸ್ತಿತ್ವದ ಪ್ರಶ್ನೆ. ಅದು ಉಳಿಯಬೇಕಾದರೆ ತನ್ನ ಯಜಮಾನಿಕೆಯನ್ನು ಪುನರ್ ಸ್ಥಾಪಿಸಬೇಕು. ಪುನರ್ ಸ್ಥಾಪಿಸಬೇಕಾದರೆ ಈಗಾಗಲೇ ಯಜಮಾನಿಕೆಯಲ್ಲಿರುವ ವಿಜ್ಞಾನದ ವಿಧಾನವನ್ನು ಪ್ರಶ್ನಿಸಲೇಬೇಕು.[2]

ಎರಡನೇ ಕಾರಣ ವಿಜ್ಞಾನದ ಆನ್ವಯಿಕೆಗೆ ಅಥವಾ ತಂತ್ರಜ್ಞಾನಕ್ಕೆ ಸಂಬಂಧಿಸಿದ್ದು. ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ಪಶ್ಚಿಮದ ದೇಶಗಳು ಆಧುನೀಕರಣ ಗೊಂಡವು ಅಥವಾ ಅಭಿವೃದ್ಧಿ ಹೊಂದಿದವು. ಆ ಕಾರಣದಿಂದಲೇ ಆಧುನಿಕ ತಂತ್ರಜ್ಞಾನಗಳನ್ನು ಯಾವುದೇ ಸಾಮಾಜಿಕ ಪರಿಸರದಲ್ಲಿ ಅಳವಡಿಸುವ ಮೂಲಕ ಆ ಸಮಾಜಗಳನ್ನು ಮೂಲಭೂತವಾಗಿ ಪರಿವರ್ತಿಸಬಹುದು ಅಥವಾ ಈಗಾಗಲೇ ಆ ದಾರಿಯನ್ನು ತುಳಿದು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಪಡಿಯಚ್ಚು ಆಗಬಹುದು ಎನ್ನುವ ಗ್ರಹಿಕೆ ಆಧುನೀಕರಣ ಚಿಂತನೆಯಲ್ಲಿ ಕೆಲಸ ಮಾಡಿದೆ. ಆ ಕಾರಣಕ್ಕಾಗಿಯೇ ಪ್ರಪಂಚದ ಬಹುತೇಕ ರಾಷ್ಟ್ರಗಳು ಈ ಬಗೆಯ ಆಧುನೀಕರಣ ಪ್ರಕ್ರಿಯೆಯಲ್ಲಿ ಪಾಲುಗೊಂಡವು. ಈ ಬಗೆಯ ಆಧುನೀಕರಣದ ಹಿಂದಿರುವ ಎರಡು ಮೂಲಭೂತ ಗುಣದ ಬಗ್ಗೆ ಯಾರೂ ವಿಶೇಷ ತಲೆಕೆಡಿಸಿಕೊಳ್ಳಲಿಲ್ಲ. ಒಂದು, ಏನನ್ನು ನಾವು ಆಧುನೀಕರಣವೆಂದು ಮತ್ತು ನಮ್ಮನ್ನು ಉದ್ಧಾರ ಮಾಡುವ ಮಾರ್ಗವೆಂದು ತುಂಬಾ ನಂಬಿಕೆಯಿಂದ ಅಪ್ಪಿಕೊಂಡೆವೋ ಅದು  ಅಂತರ್‌ಗತದಲ್ಲಿ ಬಂಡವಾಳಶಾಹಿ ವ್ಯಸ್ಥೆಯೇ ಆಗಿತ್ತು.[3] ಆದುದರಿಂದ ಆಧುನೀಕರಣ ಅಥವಾ ಅಭಿವೃದ್ಧಿ ಎಂದರೆ ನಿಸ್ಸಂದೇಹವಾಗಿ ಬಂಡವಾಳದ ವಿಸ್ತರಣೆ. ಇಂತಹ ಬಂಡವಾಳದ ಅಂತಃಸತ್ವವಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಕೆಲಸ ಮಾಡುತ್ತಿದೆ.[4] ಇಂದು ಸಾಮಾಜಿಕ ಪರಿವರ್ತನೆ ಮಾಡುವ ನೆಪದಲ್ಲಿ ಅಥವಾ ಆಧುನೀಕರಣದ ನೆನಪದಲ್ಲಿ ಬಂಡವಾಳಶಾಹಿ ವ್ಯವಸ್ಥೆ ಪ್ರಪಂಚದ ಮೂಲೆಮೂಲೆಗೂ ಹಬ್ಬಿದೆ. ಈ ಪ್ರಕ್ರಿಯೆ ಒಂದು ಕಡೆಯಿಂದ ವಿವಿಧ ಸಂಸ್ಕೃತಿಗಳ ಜೀವನ ಕ್ರಮಗಳನ್ನು ಪಲ್ಲಟ ಮಾಡಿದರೆ ಮತ್ತೊಂದು ಕಡೆಯಿಂದ ನಿಜವಾದ ಅರ್ಥದ ಆಧುನಿಕ ಬದುಕನ್ನು ಅಥವಾ ಬದಲಿ ಬದುಕನ್ನು ಆ ಜನರಿಗೆ ಕೊಡಲಿಲ್ಲ. ಎರಡು, ಕನಿಷ್ಠ ಭೌತಿಕ ಪರಿಸರ ಆರೋಗ್ಯವಂತ ಪ್ರಜ್ಞೆಯ ಬೆಳವಣಿಗೆಗೆ ಅಗತ್ಯ ಎನ್ನುವ ಧೋರಣೆ ಇಲ್ಲಿ ಕೆಲಸ ಮಾಡಿದೆ. ಅಂದರೆ ಕನಿಷ್ಠ ಭೌತಿಕ ಪರಿಸರ ನೀಡಿ ಮನುಷ್ಯನ ಪ್ರಜ್ಞೆಯನ್ನು ಸುಧಾರಿಸಿದರೆ, ಸುಧಾರಿತ ಪ್ರಜ್ಞೆ ಆತನ ಭೌತಿಕ ಪರಿಸರವನ್ನು ಪುನರ್ ಸುಧಾರಿಸಲು ನೆರವಾಗುತ್ತದೆ ಎನ್ನುವ ಗೃಹೀತದಿಂದ ಈ ಬಗೆಯ ಪರಿವರ್ತನಾ ಕ್ರಮ ಹಮ್ಮಿಕೊಳ್ಳಲಾಗಿದೆ.

ಆದರೆ ಈ ಗುರಿ ಸಾಧಿತವಾಗಿಲ್ಲ. ಅದಕ್ಕೆ ಹಲವಾರು ಕಾರಣಗಳಿವೆ. ಅವುಗಳಲ್ಲಿ ತುಂಬಾ ಚರ್ಚೆಯಲ್ಲಿದ್ದ ಅಂಶವೆಂದರೆ ಇಂದಿನ ಅಭಿವೃದ್ಧಿ ನೀತಿ ಮುಗಿದು ಹೋಗಬಹುದಾದ ಸಂಪನ್ಮೂಲಗಳ ಮೇಲೆ ನಿಂತಿವೆ. ಈ ಮಾದರಿಯನ್ನು ಮುಂದುವರಿಸಿದರೆ ನಮ್ಮ ಮುಂದಿನ ಪೀಳಿಗೆಗೆ ಏನೇನೂ ಪ್ರಾಕೃತಿಕ ಸಂಪನ್ಮೂಲಗಳು ಉಳಿಯುವುದಿಲ್ಲ. ಆದುದರಿಂದ ನಮ್ಮ ಅಭಿವೃದ್ಧಿ ನೀತಿಯನ್ನು ಬದಲಾಯಿಸಿಕೊಳ್ಳಬೇಕಾಗಿದೆ. ಅದು ಹೇಗಿರಬೇಕೆಂದರೆ ನಮ್ಮ ಮುಂದಿನ ಪೀಳಿಗೆಗೂ ಸ್ವಲ್ಪ ಸಂಪನ್ಮೂಲಗಳನ್ನು ಉಳಿಸುವ ರೀತಿ ಇರಬೇಕು ಎನ್ನುವುದು ಒಂದು ವಾದ.[5] ಎಡಪಂಥೀಯರ ಪ್ರಕಾರ ಇದು ಸಂಪನ್ಮೂಲದ ಅತಿಯಾದ ಬಳಕೆಯ ಪ್ರಶ್ನೆಯಲ್ಲ, ಸಂಪನ್ಮೂಲವನ್ನು ಸಮಾಜದ ಮೇಲ್ವರ್ಗ ತನ್ನ ಸ್ವಾರ್ಥಕ್ಕಾಗಿ ಅತಿಯಾಗಿ ಬಳಸಿದ್ದರ ಪರಿಣಾಮ ಎಂದು ವಾದಿಸಿದೆ. ಆದುದರಿಂದ ಸಂಪನ್ಮೂಲ ಬಳಕೆ ಕಡಿಮೆ ಮಾಡುವುದರ ಜತೆಗೆ ಉತ್ಪಾದನೆಯ ಸಾಮಾಜಿಕ ಸಂಬಂಧಗಳ ಬಗ್ಗೆಯೂ ಗಮನಹರಿಸಬೇಕೆಂಬ ವಾದ ಮುಂದೆ ಇಟ್ಟಿದೆ.[6]

ಈ ಎಲ್ಲಕ್ಕಿಂತಲೂ ಹೆಚ್ಚು ಗಮನ ಸೆಳೆಯುವ ಬೆಳವಣಿಗೆಯೊಂದು ಆಧುನೀಕರಣ ಪ್ರಕ್ರಿಯೆಯ ವಿಫಲತೆಯಿಂದ ಬೆಳಕಿಗೆ ಬಂದಿದೆ. ಅದೇನೆಂದರೆ ಪರಿಸರದಿಂದ ಪ್ರಜ್ಞೆ ಪ್ರಭಾವಿತ ಆಗುವುದಾದರೆ ಪ್ರಜ್ಞೆಯಿಂದ ಯಾಕೆ ಪರಿಸರ ಪ್ರಭಾವಿತ ಆಗಬಾರದು ಎನ್ನುವ ಪ್ರಶ್ನೆ. ಯಾವುದೇ ಪರಿಸರದಲ್ಲಿ ಇರಲಿ ತನ್ನ ಪ್ರಜ್ಞೆಯನ್ನು ಸುಧಾರಿಸಿಕೊಳ್ಳುವ ಮೂಲಕ ತಾನು ಬದುಕುವ ಪರಿಸರವನ್ನು ಸುಧಾರಿಸಿಕೊಳ್ಳಬಹುದು. ಇದು ವ್ಯಕ್ತಿಯ ಪರಿವರ್ತನೆಗೆ ಮಹತ್ವ ನೀಡುತ್ತದೆ. ವ್ಯಕ್ತಿ ಪರಿವರ್ತನೆಗೊಂಡರೆ ತಾನು ಬದುಕುವ ಪರಿಸರವನ್ನು ಬದಲಾಯಿಸಿಕೊಳ್ಳುತ್ತಾನೆ ಎನ್ನುವ ಗೃಹೀತವಿದೆ. ಈ ವಾದಕ್ಕೆ ಪೂರಕವಾಗುವ ಅಂಶಗಳನ್ನು ಆಧುನೀಕರಣದ ಉದಾರತಾವಾದಿ ನಿಲುವುಗಳಲ್ಲಿ ಕೂಡ ಕಾಣಬಹುದು. ಇದಕ್ಕೆ ಉತ್ತಮ ಉದಾಹರಣೆಯೆಂದರೆ ಬಂಡವಾಳಶಾಹಿ ವ್ಯವಸ್ಥೆಯ ಉಗಮದ ಮೇಲೆ ವೆಬರ್‌ನ ವಾದಗಳು. ಆತನ ಪ್ರಕಾರ ಪಶ್ಚಿಮ ಯುರೋಪಿನ ಆಧುನಿಕ ಅಥವಾ ಬಂಡವಾಳಶಾಹಿ ವ್ಯವಸ್ಥೆಯ ಉಗಮವನ್ನು ಅಥವಾ ಸಾಂಪ್ರದಾಯಿಕ ಬದುಕಿನಿಂದ ಆಧುನಿಕ ಬದುಕಿಗೆ ಆದ ಪರಿವರ್ತನೆಯನ್ನು ಎಡಪಂಥೀಯರು ಭೌತಿಕ ಪರಿಸರದಲ್ಲಾದ ಬದಲಾವಣೆಗಳಿಗೆ ಸೀಮಿತಗೊಳಿಸಿ ವಿವರಿಸಲು ಪ್ರಯತ್ನಿಸಿದ್ದಾರೆ. ಇದು ಸರಿಯಾದ ಕ್ರಮವಲ್ಲ. ಸಾಮಾಜಿಕ ಪರಿವರ್ತನೆಯಲ್ಲಿ ಸಾಂಸ್ಕೃತಿಕ ಅಂಶಗಳ ಪಾತ್ರವೂ ಇದೆ. ಈ ಅಂಶಗಳನ್ನು ವೆಬರ್‌ ತನ್ನ ಪುಸ್ತಕ ಪ್ರೊಟೆಸ್ಟೆಂಟ್ ಎಥಿಕ್ ಎಂಡ್ ಸ್ಪಿರಿಟ್ ಆಫ್ ಕ್ಯಾಪಿಟಲಿಸಂನಲ್ಲಿ ಧಾರ್ಮಿಕ ನಂಬಿಕೆಗಳಲ್ಲಿನ ಪರಿವರ್ತನೆಗೆ ಹೇಗೆ ಬಂಡವಾಳಶಾಹಿ ವ್ಯವಸ್ಥೆಯ ಉಗಮಕ್ಕೆ ನಾಂದಿ ಹಾಡಿತ್ತು ಎಂದು ವಾದಿಸುವ ಮೂಲಕ ದೃಢಪಡಿಸಲು ಪ್ರಯತ್ನಿಸಿದ್ದಾನೆ.[7] ಇದೇ ಸಂದರ್ಭದಲ್ಲಿ ಪ್ರಜ್ಞೆಗೆ ಮಹತ್ವ ನೀಡುವ ಅಭಿವೃದ್ಧಿ ವ್ಯಾಖ್ಯಾನ ಬಲಗೊಳ್ಳುವಲ್ಲಿ ಸಮುದಾಯವಾದದ ಕಾಣಿಕೆಯನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಪ್ರತಿ ಸಮುದಾಯಕ್ಕೂ ಅದರದ್ದೇ ಆದ ಅಭಿವೃದ್ಧಿಯ ಕಲ್ಪನೆ ಇದೆ. ನಿಜವಾದ ಅಭಿವೃದ್ಧಿ ಆಗಬೇಕಾದರೆ ಆಯಾಯ ಸಮುದಾಯದಲ್ಲಿ ಚಾರಿತ್ರಿಕವಾಗಿ ರೂಪುಗೊಂಡ ಅಭಿವೃದ್ಧಿ ಕಲ್ಪನೆಗೆ ಕಾಯಕಲ್ಪ ನೀಡಬೇಕು ಎನ್ನುವ ನಿಲುವು ಮನ್ನಣೆ ಗಳಿಸಲು ಆರಂಭವಾಯಿತು. ಸಮುದಾಯಗಳ ಈ ಅಭಿವೃದ್ಧಿಯ ಕಲ್ಪನೆ ಮತ್ತು ಅವುಗಳ ಆಲೋಚನಾ ಕ್ರಮ ಅಥವಾ ಲೋಕದೃಷ್ಟಿ ನಡುವೆ ತಕ್ಕಮಟ್ಟಿನ ಸಂಬಂಧ ಇದೆ. ಆದುದರಿಂದ ಯಾವುದೋ ಸಂಸ್ಕೃತಿಯ ಭೌತಿಕ ಸವಲತ್ತುಗಳನ್ನು ಕೊಟ್ಟು ಕೆಳವರ್ಗದ ಜನರ ಪ್ರಜ್ಞೆಯನ್ನು ಸುಧಾರಿಸಲು ಪ್ರಯತ್ನಿಸುವುದು ವ್ಯರ್ಥ. ಅದರ ಬದಲು ಅವರ ಪ್ರಜ್ಞೆಯನ್ನು ಪ್ರಭಾವಿಸುವುದರಿಂದ ಅವರ ಅಭಿವೃದ್ಧಿಯ ಕಲ್ಪನೆಗೆ ಪೂರಕವಾಗುವ ಭೌತಿಕ ಸವಲತ್ತನ್ನು ಅವರೇ ಪಡೆಯುವಂತೆ ಮಾಡುವುದು ಸರಿಯಾದ ಮಾರ್ಗ ಎನ್ನುವ ವಾದ ಬಲಗೊಳ್ಳುತ್ತಿದೆ.

ಅದಕ್ಕಿಂತಲೂ ಮುಖ್ಯವಾಗಿ ಆಗಬೇಕಾಗಿರುವುದು ಸಂಶೋಧನೆಗೆ ಸಂಬಂಧಿಸಿದ ವಿಚಾರದಲ್ಲಿ. ಯಾವುದೋ ಮಾದರಿ ಪ್ರಚಾರ ಪಡೆಯುವುದರ ಹಿಂದೆ ಅದನ್ನೊಂದು ಯೂನಿವರ್ಸಲ್ ಆಗಿ ಅನ್ವಯವಾಗುವ ಮಾದರಿ ಎಂದು ಚಾಲ್ತಿಗೆ ಬರಬೇಕು. ಚಾಲ್ತಿಗೆ ಬರಬೇಕಾದರೆ ಯೂನಿವರ್ಸಲ್ ಅಥವಾ ವಿರಾಟ್ ಥಿಯರಿಗಳು ಇರಬೇಕು. ಅವೆಲ್ಲ ಸಾಧ್ಯವಾದುದು ವಿಜ್ಞಾನ ಮತ್ತು ಅದರ ವಿಧಾನದಿಂದ. ಆದುದರಿಂದ ಮೊದಲಿಗೆ ಈ ಯೂನಿವರ್ಸಲ್ ಆದುದನ್ನು ತಿರಸ್ಕರಿಸಬೇಕು. ಆ ಪ್ರಕ್ರಿಯೆ ಸಾಗಿ ಬಂದ ದಾರಿಯ ಕಿರು ಪರಿಚಯ ಮುಂದಿನ ವಿಶ್ಲೇಷಣೆಗೆ ಅಗತ್ಯ. ಆಧುನೀಕರಣದ ಒಟ್ಟು ಫಲಿತಾಂಶವೆಂದರೆ ಬಂಡವಾಳಶಾಹಿ ವ್ಯವಸ್ಥೆಯ ಎಗ್ಗಿಲ್ಲದ ಮುಂದುವರಿಕೆ ಎಂದು ನಾವು ಈಗಾಗಲೇ ತಿಳಿದು ಕೊಂಡಿದ್ದೇವೆ. ಇದರ ವಿರುದ್ಧ ಹೋರಾಟವೆಂದರೆ ಬಡ ದೇಶಗಳು ಯೂನಿವರ್ಸಲ್ ಪರಿಕಲ್ಪನೆಗಳನ್ನೇ ಅಲ್ಲಗಳೆಯಬೇಕು. ಯಾಕೆಂದರೆ ಈ ಯೂನಿವರ್ಸಲ್ ಕಲ್ಪನೆಯೇ ನಮ್ಮನ್ನು ಮೋಸ ಮಾಡಿದ್ದು. ಯೂನಿವರ್ಸಲ್ ಕಲ್ಪನೆಯನ್ನು ನಂಬಿ ನಾವು ಆಧುನೀಕರಣ ಪ್ರಕ್ರಿಯೆ ಆರಂಭಿಸಿದೆವು. ಆದರೆ ಇಂದಿನ ನಮ್ಮ ಸಮಾಜ ಅತ್ತ ಆಧುನಿಕವೂ ಅಲ್ಲ ಇತ್ತ ಸಾಂಪ್ರದಾಯಕವೂ ಅಲ್ಲ. ಅಂದರೆ ವರ್ತಮಾನದ ನಮ್ಮ ಸಮಾಜ ಪ್ರಪಂಚದ ಇತರ ಯಾವುದೇ ಸಮಾಜದ ಪಡಿಯಚ್ಚು ಅಲ್ಲ. ಆದುದರಿಂದ ಬಡ ದೇಶಗಳ ಸಾಮಾಜಿಕ ವಾಸ್ತವತೆಗಳನ್ನು ಅರ್ಥ ಮಾಡಿಕೊಳ್ಳಲು ಯೂನಿವರ್ಸಲ್ ವಿಧಾನಗಳು ಮತ್ತು ಪರಿಕಲ್ಪನೆಗಳು ಸಾಕಾಗುವುದಿಲ್ಲ. ಜತೆಗೆ ಇಷ್ಟೆಲ್ಲಾ ಅನಾಹುತಗಳಿಗೆ ಕಾರಣವನ್ನು ಆಧುನೀಕರಣ ಪ್ರಕ್ರಿಯೆಯಲ್ಲಿ ಗುರುತಿಸಲಾಗುತ್ತಿದೆ. ಆಧುನೀಕರಣ ಪ್ರಕ್ರಿಯೆ ಬಂಡವಾಳಶಾಹಿ ವ್ಯವಸ್ಥೆಯ ಎಲ್ಲ ಗುಣಗಳನ್ನು ಹೊಂದಿದೆ. ಇದನ್ನು (ಬಂಡವಾಳದ ಶೋಷಣೆಯನ್ನು) ತಡೆಯುವ ಅಗತ್ಯ ಇದೆ. ಅದಕ್ಕೂ ಮುನ್ನ ವಿಜ್ಞಾನ ಮತ್ತು ತಂತ್ರಜ್ಞಾನದ ಯಜಮಾನಿಕೆಯನ್ನು ಪ್ರಶ್ನಿಸಬೇಕು. ಯಾಕೆಂದರೆ ಬಂಡವಾಳದ ಅಂತಃಸತ್ವವಾಗಿ ವಿಜ್ಞಾನ ಮತ್ತು ತಂತ್ರಜ್ಞಾನದ ಕೆಲಸ ಮಾಡುತ್ತಿದೆ.[8] ಹೀಗೆ ಬಂಡವಾಳವನ್ನು ಬೆಳೆಸುವ ಆಧುನೀಕರಣದ ವಿರುದ್ಧದ ಹೋರಾಟದಲ್ಲಿ ಪ್ರಥಮ ವೈರಿಯಾಗಿ ವಿಜ್ಞಾನ ಮತ್ತು ಅದರ ವಿಧಾನವನ್ನು ಗುರುತಿಸಲಾಗಿದೆ. ಆದುದರಿಂದ ಪ್ರಥಮ ಆದ್ಯತೆ ಬಂಡವಾಳದ ಅಂತಃಸತ್ವವನ್ನು ಮೌಲ್ಯಹೀನ ಗೊಳಿಸುವುದು. ಯಾವ ಕಾರಣಗಳಿಗಾಗಿ ವೈಜ್ಞಾನಿಕ ವಿಧಾನ ತನ್ನ ಶ್ರೇಷ್ಠತೆಯನ್ನು ಸಾಧಿಸಿತ್ತೋ ಆ ಎಲ್ಲ ಕಾರಣಗಳನ್ನು ಅಲ್ಲಗಳೆಯಲಾಯಿತು. ಉದಾಹರಣೆಗೆ ವೈಜ್ಞಾನಿಕ ವಿಧಾನದಿಂದ ಕಂಡುಕೊಳ್ಳುವ ಸತ್ಯ ಮಾತ್ರ ಪರಮ ಸತ್ಯ ಅಲ್ಲ; ಬೇರೆ ವಿಧಾನಗಳಿಂದ ಸತ್ಯದ ದರ್ಶನ ಸಾಧ್ಯ ಎನ್ನುವ ವಾದ ಮುಂದಕ್ಕೆ ಬಂತು.

ಈ ಬೆಳವಣಿಗೆ ಪರಿಸರದಿಂದ ಪ್ರಜ್ಞೆ ಎನ್ನುವ ಎಡಪಂಥೀಯ ವಿಚಾರಧಾರೆಗೂ ಹತ್ತಿವಾಗಿದೆ. ಸಮಾಜ ಒಂದು ಸಮತಟ್ಟಾದ ವ್ಯವಸ್ಥೆ ಅಲ್ಲ. ಅಲ್ಲಿ ಏಣಿಶ್ರೇಣಿ ಇದೆ. ವಿವಿಧ ಶ್ರೇಣಿಗೆ ಸೇರಿದ ಜನ ವಿವಿಧ ಭೌತಿಕ ಮತ್ತು ಸಾಂಸ್ಕೃತಿಕ ಲೋಕದಲ್ಲಿ ಬದುಕುತ್ತಿರುತ್ತಾರೆ. ಅವರ ಪರಿಸರ ಅವರ ಪ್ರಜ್ಞೆಯನ್ನು ಪ್ರಭಾವಿಸುತ್ತಿರುತ್ತದೆ. ಆದುದರಿಂದ ಯಾವುದೋ ವರ್ಗದಕ್ಕೆ ಸೇರಿದವರು ತಮ್ಮ ಸಮಾಜದ ಅಥವಾ ಒಟ್ಟು ಸಮಾಜದ ಬಗ್ಗೆ ಹೇಳುವುದು ಒಂದು ಏಕಮಾತ್ರ ಸತ್ಯ ಅಲ್ಲ. ಯಾಕೆಂದರೆ ಮತ್ತೊಂದು ವರ್ಗಕ್ಕೆ ಸೇರಿದವರಿಗೆ ಅವರ ಅನುಭವ ಪ್ರಕಾರ ಬೇರೆಯದೇ ಪ್ರಪಂಚ ಕಾಣಬಹುದು. ಈ ರೀತಿಯಲ್ಲಿ ಒಂದೇ ಸಂದರ್ಭದಲ್ಲಿ ಒಂದೇ ಘಟನೆ ಕುರಿತು ಹಲವು ವಿವರಣೆಗಳು ಸಾಧ್ಯ. ಉದಾಹರಣೆಗೆ ಇತ್ತೀಚಿನ ಅಯೋಧ್ಯೆ ವಿಚಾರ ತೆಗೆದುಕೊಳ್ಳಬಹುದು. ಅಯೋಧ್ಯೆಯಲ್ಲಿ ರಾಮ ಮಂದಿರ ಇತ್ತೇ ಎನ್ನುವುದನ್ನು ತಿಳಿಯಲು ಆ ಜಾಗದಲ್ಲಿ ಎಕ್ಸಕವೇಶನ್ ಮಾಡಲು ಪುರಾತತ್ವ ವಿಭಾಗಕ್ಕೆ ಸೂಚಿಸಿದೆ. ಈ ಘಟನೆಯನ್ನು ವಿವಿಧ ರಾಜಕೀಯ ಗುಂಪಿಗೆ ಸೇರಿದವರು ವಿವಿಧ ರೀತಿಯಲ್ಲಿ ನೋಡಬಹುದು, ವಿವರಿಸಬಹುದು. ಈ ಇಡೀ ಘಟನೆಯ ಫಲಿತಾಂಶದ ನಿರೀಕ್ಷೆಯ ನೆಲೆಯಲ್ಲಿ ಈ ವಿಧಾನಕ್ಕೆ ವ್ಯತಿರಿಕ್ತವಾಗಿರಲಾರದು ಎನ್ನುವ ನಂಬಿಕೆ ಇರುವ ಗುಂಪು ಇದನ್ನು ಒಂದು ಉತ್ತಮ ವಿಧಾನ ಎಂದು ಬಣ್ಣಿಸಬಹುದು. ಮತ್ತೊಂದು ಗುಂಪು ಇದನ್ನು ಉತ್ತಮ ವಿಧಾನ ಅಲ್ಲವೆಂದು ತಿಳಿಯಬಹುದು. ಇಲ್ಲಿ ವಿಧಾನಕ್ಕಿಂತಲೂ ಆಯಾಯ ವರ್ಗದ ಹಿತಾಸಕ್ತಿ ಪ್ರಶ್ನೆಗಳು ಸತ್ಯವನ್ನು ಕಂಡುಕೊಳ್ಳುವ ವಿಧಾನವನ್ನು ಮೌಲ್ಯಮಾಪನ ಮಾಡಲು ಬಳಕೆ ಆಗುತ್ತಿದೆ. ಇದೆಲ್ಲ ಸಾಧ್ಯವಾಗುವುದು ನಾವು ಹಲವು ಸತ್ಯದ ಇರುವಿಕೆಯನ್ನು ಒಪ್ಪಿಕೊಂಡಾಗ. ಇದರ ಅಂತಿಮ ಫಲ ಏನೆಂದರೆ ಸತ್ಯ ಮತ್ತು ಅದನ್ನು ಕಂಡುಕೊಳ್ಳುವ ವಿಧಾನ ಎರಡು ಕೂಡ ರಾಜಕೀಯ ಶಕ್ತಿಗೆ ಸಂಬಂಧಿಸಿದ ವಿಚಾರಗಳಾಗಿ ಬಿಡುತ್ತವೆ. ಯಾರಿಗೆ ಹೆಚ್ಚು ಬಲ ಇದೆಯೋ ಅವರು ಇದನ್ನು ನಿರ್ಧರಿಸುತ್ತಾರೆ. ಅದು ಹೇಗೆಂದರೆ ಅವರ ಆಸಕ್ತಿ ವಿರುದ್ಧವಾದುದನ್ನು ಸತ್ಯವೇ ಅಲ್ಲವೆಂದು ತಿರಸ್ಕರಿಸುವ ಮೂಲಕ. ಆ ತಿರಸ್ಕರಿಸುವ ಸಾಧ್ಯತೆ ಎಲ್ಲರಿಗೂ ಇದೆ ಎಂದು ತಿಳಿಯುವುದು ತಪ್ಪು; ಅದು ಕೇವಲ ಬಲಯುತರಾಗಿ ಮಾತ್ರ ಇರುವುದು. ಅಂದರೆ ಬಹುಸತ್ಯದ ಲಾಭ ವರ್ಗಶಕ್ತಿಯ ಮೇಲೆ ನಿಂತಿದೆ. ಇಂದಿನ ನಮ್ಮ ಸಂದರ್ಭದಲ್ಲಿ ಅಂತಹ ವರ್ಗಶಕ್ತಿ ಯಾರ ಪರ ಇದೆ ಎನ್ನುವುದು ನಮಗೆ ಖಾತ್ರಿ ಇದೆ. ಇದು ಎಲ್ಲ ವಿಧದ ಬಂಡವಾಳ ಇರುವ ಸಮಾಜ ಮೇಲ್ವರ್ಗಕ್ಕೆ ಪೂರಕವಾಗಿದೆ. ಆದುದರಿಂದ ಇದರಿಂದ ಹೆಚ್ಚು ಲಾಭ ಅವರಿಗಿದೆಯೇ ಹೊರತು ಸಮಾಜದ ಕೆಳ ವರ್ಗಕ್ಕೆ ಅಲ್ಲ.

ಹಿಂದೆ ಹೇಳಿದಂತೆ ಸತ್ಯವನ್ನು ಕಂಡುಕೊಳ್ಳುವ ಏಕಮಾತ್ರ ವಿಧಾನವಿಲ್ಲ ಮತ್ತು ಏಕಮಾತ್ರ ಸತ್ಯವೂ ಇಲ್ಲ ಎಂದಾದರೆ ಆಯಾಯ ವರ್ಗಕ್ಕೆ ಆಸಕ್ತಿಗೆ ಅನುಗುಣವಾಗಿ ಯಾವುದೇ ವಿಚಾರದ ಬಗ್ಗೆಯೂ ತೀರ್ಮಾನಕ್ಕೆ ಬರಬಹುದು. ಈ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಆದರೆ ಅದು ತುಂಬಾ ಪರಿಣಾಮಕಾರಿಯಾಗಿ ಮತ್ತು ಲಾಭದಾಯಕವಾಗಿ ಕೆಲಸ ಮಾಡುವುದು ಸಮಾಜದ ಮೇಲ್ವರ್ಗದವರ ಆಸಕ್ತಿಗೆ ಪೂರಕವಾಗಿ ಎಂದು ಮೇಲೆ ವಾದಿಸಿದ್ದೇನೆ. ಅಲ್ಲಿ ರಾಜಕೀಯ ಪ್ರಶ್ನೆಗಳು ಸಮುದಾಯ ದೃಷ್ಟಿಯಿಂದ ತೀರ್ಮಾನವಾದರೆ ಹೇಗೆ ಮೇಲ್ವರ್ಗದ ಪರ ಕೆಲಸ ಮಾಡುತ್ತದೆ ಎಂದು ಹೇಳಲಾಗಿದೆ. ಈ ವಾದಕ್ಕೆ ಹಲವಾರು ಅಪವಾದಗಳನ್ನು ನೀಡಬಹುದು. ಉದಾಹರಣೆಗೆ ಬಹುಜನ ಸಮಾಜವಾದಿ ಪಕ್ಷದ (ಬಿ.ಎಸ್.ಪಿ.) ರಾಜಕೀಯ. ಬಿ.ಎಸ್.ಪಿ. ಸಮಾಜದ ಕೆಳಸ್ತರದ ಜನರ ಒಂದು ಪಕ್ಷ. ಅದು ಒಂದು ರಾಜಕೀಯ ಶಕ್ತಿಯಾಗಿ ಬೆಳೆಯುವಲ್ಲಿ ಇತರ ವಿಚಾರಗಳೊಂದಿಗೆ ಸಮುದಾಯ ಪ್ರಜ್ಞೆ ಕೆಲಸ ಮಾಡಿದೆ. ಅದೂ ಕೆಳಸ್ತರಕ್ಕೆ ಸೇರಿದ ಜನರ ಸಮುದಾಯ ಪ್ರಜ್ಞೆಯನ್ನು ಬಳಸಿಕೊಂಡು ಪಕ್ಷ ಅಧಿಕಾರಕ್ಕೆ ಬಂದಿದೆ. ಇಂದು ಯಾವ ಪಕ್ಷ ಕೂಡ ಸಂಪತ್ತಿನ ಮರುವಿತರಣೆ ಮಾಡಿ ಸಾಮಾಜಿಕ ಪರಿವರ್ತನೆ ತರುವ ಕೆಲಸ ಮಾಡುತ್ತಿಲ್ಲ. ಆ ವಿಚಾರದಲ್ಲಿ ಬಿ.ಎಸ್.ಪಿ. ಕೂಡ ಹೊರತಲ್ಲ. ಆದರೆ ರಾಜಕೀಯ ಅಧಿಕಾರ ಕೇವಲ ರಾಜಕೀಯವಾಗಿ ಇರುತ್ತದೆ; ಯಾವುದೇ ಆರ್ಥಿಕ ಅಥವಾ ಇತರ ಲಾಭಗಳು ಇಂದು ಇಲ್ಲವೇ ಇಲ್ಲ ಎನ್ನಲಾಗುವುದಿಲ್ಲ. ರಾಜಕೀಯ ಅಧಿಕಾರ ಅನಿವಾರ್ಯವಾಗಿ ಹಲವಾರು ಸಂಪನ್ಮೂಲಗಳ ವಿಲೇವಾರಿಯ ಪ್ರಶ್ನೆಗಳನ್ನು ನಿರ್ಧರಿಸುತ್ತದೆ. ಆದುದರಿಂದ ಪರೋಕ್ಷವಾಗಿ ಪಕ್ಷದ ಬೆಂಬಲಿಗರು ಕೇವಲ ಮಾನಸಿಕವಾಗಿ ಸಬಲೀಕರಣಗೊಳ್ಳುವುದಲ್ಲ; ಮೆಟೀರಿಯಲ್ ಸ್ತರದಲ್ಲೂ ಸಬಲೀಕರಣಗೊಳ್ಳುತ್ತಾರೆ. ಪ್ರಜ್ಞೆಯಿಂದ ಪರಿಸರ ಅಥವಾ ಬಹುಸತ್ಯದ ಕಲ್ಪನೆ ಕೆಳವರ್ಗದವರ ಪರ ಕೆಲಸ ಮಾಡುವ ಸಾಧ್ಯತೆ ಇದೆ ಎನ್ನುವ ಅಂಶದತ್ತ ಈ ಉದಾಹರಣೆ ನಮ್ಮ ಗಮನ ಸೆಳೆಯುತ್ತದೆ. ಆದರೆ ಇದು ಸಾಧ್ಯ ಆಗಬೇಕಾದರೆ ಅಥವಾ ಕೆಳಸ್ತರದ ಜನರಿಗೆ ಲಾಭ ಆಗಬೇಕಾದರೆ ಒಂದು ಬಹುದೊಡ್ಡ ಬದಲಾವಣೆ ಆಗಬೇಕು. ಲೋಕಲ್ ಮತ್ತು ಗ್ಲೋಬಲ್ ಎರಡೂ ಸ್ತರದಲ್ಲೂ ಬಹುಸತ್ಯದ ಕಲ್ಪನೆ ಕೆಲಸ ಮಾಡಿದಾಗ ಇದು ಕೆಳಸ್ತರದ ಪರ ಕೆಲಸ ಮಾಡಬಹುದು. ರಾಜ್ಯದ ನಾಯಕತ್ವ ಬಿ.ಎಸ್.ಪಿ. ಪಕ್ಷದಲ್ಲಿ ಇರುವಾಗ ಪಂಚಾಯತ್‌ನ ದಲಿತ ಅಧ್ಯಕ್ಷ ಪರಿಣಾಮಕಾರಿಯಾಗಿ ತನ್ನ ಅಧಿಕಾರ ಚಲಾಯಿಸಬಹುದು. ಅದಕ್ಕೆ ಬದಲು ಮೇಲುಸ್ತರದಲ್ಲಿ ಇರುವವರ ಆಶಯ ಮತ್ತು ಕೆಳಸ್ತರದಲ್ಲಿರುವವರ ಆಶಯದ ನಡುವೆ ಹೊಂದಾಣಿಕೆ ಇಲ್ಲದಿದ್ದರೆ ಬಹುಸತ್ಯದ ನೆಲೆಯಿಂದ ನಡೆಯುವ ತೀರ್ಮಾನಗಳು ಕೆಳಸ್ತರದ ಪರ ಇರಲು ಸಾಧ್ಯ ಇಲ್ಲ.

ಇದನ್ನು ಸ್ಪಷ್ಟಪಡಿಸಲು ಇನ್ನೂ ಒಂದು ಉದಾಹರಣೆಯನ್ನು ನೋಡಬಹುದು. ಇತ್ತೀಚಿನ ದಿನಗಳಲ್ಲಿ ಪಂಚಾಯತ್ ಮಟ್ಟದಲ್ಲಿ ಸಹಭಾಗಿತ್ವ ಯೋಜನೆ ಆಗಬೇಕೆಂಬ ಕೂಗು ಜೋರಾಗುತ್ತಿದೆ. ಜನರ ಆಶಯಗಳನ್ನು ಒಳಗೊಳಿಸಲು ತಳಮಟ್ಟದ ಜನರ ಸಹಭಾಗಿತ್ವದೊಂದಿಗೆ ಯೋಜನೆ ತಯಾರಿಸುವುದು ಸಹಭಾಗಿತ್ವ ಯೋಜನೆಯ ಮುಖ್ಯ ಲಕ್ಷಣ. ತಮ್ಮ ಬೇಕು ಬೇಡಗಳಿಗೆ ಅನುಗುಣವಾದ ಯೋಜನೆ ತಯಾರಿಸಲು ಜನರು ಉತ್ಸಾಹ ತೋರಿಸುತ್ತಾರೆ. ಆ ಉತ್ಸಾಹ ಯೋಜನೆಯಾಗಿ ಪರಿವರ್ತನೆಗೊಳ್ಳಬೇಕಾದರೆ ಅವರು ತಯಾರಿಸುವ ಯೋಜನೆ ಕಾರ್ಯರೂಪಕ್ಕೆ ಬರಬೇಕು. ಅದು ಕಾರ್ಯರೂಪಕ್ಕೆ ಬರಬೇಕಾದರೆ ಸಾಕಷ್ಟು ದುಡ್ಡಿನ ವಿನಿಯೋಜನೆ ಆಗಬೇಕು. ಅವರ ಸ್ಥಳೀಯ ಸಂಪನ್ಮೂಲಗಳಿಂದ ಅವರ ಯೋಜನೆಯ ಎಲ್ಲ ಕಾರ್ಯಕ್ರಮಗಳನ್ನು ಜಾರಿ ತರಲು ಸಾಧ್ಯವಿಲ್ಲ. ಆದುದರಿಂದ ಯೋಜನೆ ಕಾರ್ಯರೂಪಕ್ಕೆ ಬರಬೇಕಾದರೆ ಪಂಚಾಯತ್‌ಗೆ ನೀಡುವ ಹಣದ ಮೊತ್ತ ಹೆಚ್ಚಾಗಬೇಕು. ಆದರೆ ಆ ನಿರ್ಧಾರ ತಳೆಯುವುದು ಮೇಲುಸ್ತರದ ಪ್ರತಿನಿಧಿಗಳು. ಆದರೆ ಮೇಲುಸ್ತರದ ಪ್ರತಿನಿಧಿಗಳಿಗೆ ಹಣಕಾಸು ಮತ್ತು ಅಧಿಕಾರ ಈ ಎರಡರ ವಿಕೇಂದ್ರೀಕರಣದ ಬಗ್ಗೆಯೂ ಅಲರ್ಜಿ ಇದೆ. ಕೆಲವೊಂದು ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೆ ತರುವುದು ಮಾತ್ರ ಪಂಚಾಯತ್‌ಕೆಲಸವಾಗಬೇಕೆನ್ನುವುದು ಮೇಲುಸ್ತರದ ಪ್ರತಿನಿಧಿಗಳ ಆಶಯ. ಹಾಗಾಗಿ ಇಡೀ ಜನರ ಯೋಜನೆಯ ಕಾರ್ಯಕ್ರಮವನ್ನು ಒಂದು ತಂತ್ರವಾಗಿ ಬಳಸಲಾಗುತ್ತಿದೆ. ಅಲ್ಲಿ ಜನರನ್ನು ಸೇರಿಸಿ ಅವರ ಒಪ್ಪಿಗೆ ಪಡೆದಿದ್ದೇವೆ ಎನ್ನುವ ಒಂದು ಶಾಸ್ತ್ರ ಪೂರೈಸುವುದು ಮುಖ್ಯವೇ ಹೊರತು ಜನರಿಂದ ಯೋಜನೆ ತಯಾರಿ ಆಗಿ ಅದು ಕಾರ್ಯರೂಪಕ್ಕೆ ಬರುವುದು ಮುಖ್ಯವಲ್ಲ. ಇಲ್ಲಿ ವಿವಿಧ ಸ್ತರಗಳಲ್ಲಿನ ಆಶಯಗಳು ಸಂಪೂರ್ಣ ಭಿನ್ನವಾಗಿದೆ. ವಿವಿಧ ಸ್ತರಗಳಲ್ಲಿನ ಆಶಯಗಳ ನಡುವೆ ಹೊಂದಾಣಿಕೆ ಇದ್ದರೆ ಮಾತ್ರ ಜನರು ಸಕ್ರಿಯವಾಗಿ ಯೋಜನೆ ತಯಾರಿಯಲ್ಲಿ ಭಾಗವಹಿಸಲು ಸಾಧ್ಯ ಅಥವಾ ಕೆಳಸ್ತರದ ಜನರ ಅಭಿವೃದ್ಧಿ ಕಲ್ಪನೆ ಒಟ್ಟು ಸಮಾಜದ ಅಭಿವೃದ್ಧಿ ಕಲ್ಪನೆ ಆದರೆ ಮಾತ್ರ ಇದು ಸಾಧ್ಯ. ಆದರೆ ಕೆಳಸ್ತರ ಹಲವಾರು ಸಮುದಾಯಗಳ ವಿಂಗಡಣೆಯಾಗಿರುವಾಗ ಮತ್ತು ಪ್ರತಿ ಸಮುದಾಯ ಕೂಡ ತನ್ನದೇ ಅಭಿವೃದ್ಧಿಯ ಕಲ್ಪನೆಯನ್ನು ಹೊಂದಿರುವಾಗಿ ಇದು ಹೇಗೆ ಸಾಧ್ಯ?

ಸಾಮಾಜಿಕ ಪರಿಸರವನ್ನು ಬದಲಾಯಿಸುವ ಉದ್ದೇಶದಿಂದ ಅದನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ಸಂಶೋಧನೆ ಎನ್ನುವ ವಾದದೊಂದಿಗೆ ಈ ಲೇಖನ ಆರಂಭವಾಗಿದೆ. ಈ ವಾದದ ವಿರುದ್ಧ ಇರುವ ಹಲವಾರು ತಕರಾರುಗಳನ್ನು ನೋಡಿದ್ದೇವೆ. ಕೆಲವೊಂದು ಸಣ್ಣಪುಟ್ಟ ಟೀಕೆಗಳ ಜತೆ ಕೆಲವು ಗಂಭೀರ ಸಂದೇಹಗಳು ಕೂಡ ಸಂಶೋಧನೆಯ ಈ ಉದ್ದೇಶದ ವಿರುದ್ಧ ಇವೆ. ಅವುಗಳಲ್ಲಿ ಸುಖದ ಕಲ್ಪನೆ, ಅರ್ಥ ಮಾಡಿಕೊಳ್ಳುವ ಸಾಧ್ಯತೆ, ಸತ್ಯದ ಪ್ರಶ್ನೆ ಇತ್ಯಾದಿಗಳನ್ನು ವಿಸ್ತಾರವಾಗಿ ಚರ್ಚಿಸಲಾಗಿದೆ. ಸಮುದಾಯವಾದದ ಹಿನ್ನೆಲೆಯಲ್ಲಿ ಹುಟ್ಟಿಕೊಂಡಿರುವ ವಾದಗಳನ್ನು ಅಸಡ್ಡೆಯಿಂದ ನೋಡಬಾರದು; ಗಂಭೀರವಾಗಿ ಪರಿಗಣಿಸಬೇಕೆಂಬ ನಿಲುವನ್ನು ಈ ಅಧ್ಯಾಯ ಹೇಳಲು ಪ್ರಯತ್ನಿಸಿದೆ. ಇದೇ ಸಂದರ್ಭದಲ್ಲಿ ಇವುಗಳನ್ನು ಯಥಾ ರೀತಿಯಲ್ಲಿ  ಒಪ್ಪಿಕೊಳ್ಳುವಾಗ ಇರುವ ತೊಡಕುಗಳ ಮೇಲೆ ಕೂಡ ಈ ಅಧ್ಯಾಯ ಬೆಳಕು ಚೆಲಲ್ಲು ಪ್ರಯತ್ನಿಸಿದೆ. ಚಾರಿತ್ರಿಕವಾಗಿ ರೂಪುಗೊಂಡ ಸಮುದಾಯಗಳ ಆಶಯಗಳಿಗೆ ಅನುಗುಣವಾಗಿ ಅವುಗಳನ್ನು ಬದುಕಲು ಬಿಡುವುದು ಒಂದು ಉತ್ತಮ ನಿರ್ಧಾರ ಆಗಬಹುದು. ಆದರೆ ಆ ರೀತಿ ಬದುಕುವ ಸಾಧ್ಯತೆ ಇದೆಯೇ? ಇಂದು ಯಾವ ಸಮುದಾಯ ಕೂಡ ಒಂದು ದ್ವೀಪದ ರೀತಿಯಲ್ಲಿ ಬದುಕುತ್ತಿಲ್ಲ; ಅವುಗಳಿಗೆ ಇಷ್ಟ ಇರಲಿ ಇಲ್ಲದಿರಲಿ ಕಲೆತು ಬದುಕುತ್ತಿಲ್ಲ; ಅವುಗಳಿಗೆ ಇಷ್ಟ ಇರಲಿ ಇಲ್ಲದಿರಲಿ ಕಲೆ ಬದುಕುವುದು ಅನಿವಾರ್ಯವಾಗಿದೆ. ಇಂತಹ ಸಂದರ್ಭದಲ್ಲಿ ಸಾರ್ವಜನಿಕ ಸ್ಪೇಸ್‌ಗಳಲ್ಲಿ (ಮಾರುಕಟ್ಟೆ, ಆಧುನಿಕ ಸಂಸ್ಥೆಗಳು, ಸಮುದಾಯ ಸಂಪನ್ಮೂಲಗಳ ಬಳಕೆ ನಿರ್ಧರಿಸುವಲ್ಲಿ) ಯಾವ ಸಮುದಾಯದ ಮೌಲ್ಯ ಪ್ರಕಾರ ವ್ಯವಹಾರ ನಡೆಯಬೇಕು. ಮೇಲಿನ ಎಲ್ಲ ಸ್ಪೇಸ್‌ಗಳಲ್ಲಿ ಇಂದು (ಆಧುನೀಕರಣ ಪ್ರಕ್ರಿಯೆ ಆರಂಭಿಸಿದ ಐದು ದಶಕಗಳ ನಂತರ) ಕೂಡ ಸ್ಥಳೀಯವಾಗಿ ಯಜಮಾನಿಕೆಯಲ್ಲಿರುವ ಸಮುದಾಯಗಳ ಮೌಲ್ಯಗಳು ವ್ಯವಹಾರಗಳನ್ನು ಪ್ರಭಾವಿಸುತ್ತಿರುವುದನ್ನು ನಾವು ನೋಡಿದ್ದೇವೆ. ಇಂತಹ ಸಂದರ್ಭದಲ್ಲಿ ನಾವು ಸಮುದಾಯ ಮೌಲ್ಯಗಳನ್ನು ಎತ್ತಿ ಹಿಡಿಯಲು ಹೊರಟರೆ ಇದರಿಂದ ಅತೀ ಹೆಚ್ಚಿನ ನಷ್ಟ ಅನುಭವಿಸುವವರು ಸಮಾಜದ ಅಂಚಿನಲ್ಲಿರುವವರು. ಯಾಕೆಂದರೆ ಪ್ರತೀ ಸಮುದಾಯಕ್ಕೂ ಅದರದೇ ಆದ ಒಳಿತಿನ ಕಲ್ಪನೆ ಇದೆ. ನಿಜ. ಆದರೆ ಪ್ರತಿ ಸಮುದಾಯದ ಒಳಿತಿನ ಕಲ್ಪನೆಗಳು ಅನ್ವಯವಾಗುವುದು ಆಯಾಯ ಸಮುದಾಯದ ಸದಸ್ಯರಿಗೆ ಮಾತ್ರ. ಸಮುದಾಯದಿಂದ ಹೊರಗಿನವರು ಇಲ್ಲಿ ಅನ್ಯರಾಗುತ್ತಾರೆ ಮತ್ತು ಅನ್ಯರಿಗೆ ಅನ್ಯಾಯವಾಗುವುದು ಅನೈತಿಕ ಅಲ್ಲ. ಹೀಗೆ ಸಮುದಾಯದ ಹಿನ್ನೆಲೆಯಲ್ಲಿ ರೂಪುಗೊಳ್ಳುವ ಸುಖದ ಕಲ್ಪನೆ ಅಥವಾ ಒಳಿತಿನ ಕಲ್ಪನೆಗೆ ಒಂದು ಸೀಮಿತ ಆನ್ವಯಿಕೆ ಇರುತ್ತದೆ. ಈ ಸೀಮಿತ ಆನ್ವಯಿಕೆಯನ್ನು ಮೀರಿದಾಗ ಮಾತ್ರ ಅದು ಬಹುಸಂಖ್ಯಾತರ ಆಶಯವಾಗುತ್ತದೆ. ಆದರೆ ಆಗ ಅದು ತನ್ನ ಹಿಂದಿನ ಸಮುದಾಯದ ಸದಸ್ಯರಿಗೆ ಮಾತ್ರ ಅನ್ವಯವಾಗುವ ಗುಣವನ್ನು ಕಳೆದುಕೊಳ್ಳುತ್ತದೆ. ಆದುದರಿಂದ ಸಮುದಾಯದ ನೆಲೆಯಲ್ಲಿ ರೂಪುಗೊಳ್ಳುವ ತಿಳುವಳಿಕೆಗಳು ತಾತ್ಕಾಲಿಕವಾಗಿ ಎಷ್ಟೇ ಕ್ರಾಂತಿಕಾರಿ ಎನಿಸಿದರೂ ದೂರಗಾಮಿ ಸಾಮಾಜಿಕ ಪರಿವರ್ತನೆಯ ದೃಷ್ಟಿಯಿಂದ ಸಹಕಾರಿಯಲ್ಲ.

* * *

[1] ಬಹುಸತ್ಯದ ನಿಲುವನ್ನು ಮುಂಚೂಣಿಗೆ ತರುವಲ್ಲಿ ಆಧುನೀಕೋತ್ತರ ಚಿಂತಕರ ಪಾತ್ರ ಮಹತ್ತರವಾದುದು. ವಿರಾಟ್ ಥಿಯರಿಗಳನ್ನು ಅಲ್ಲಗಳೆಯುವ ಮೂಲಕ ಮತ್ತು ಪ್ರತಿ ಸಂಸ್ಕೃತಿಗೂ ಸತ್ಯವನ್ನು ಕಂಡುಕೊಳ್ಳುವ ಅದರದ್ದೇ ಆದ ವಿಧಾನಗಳಿವೆ ಎಂದು ವಾದಿಸುವ ಮೂಲಕ ಬಹುಸತ್ಯದ ನಿಲುವುಗಳು ಬಲಗೊಂಡವು.

[2] ವಿಜ್ಞಾನದ ಯಜಮಾನಿಕೆ ಕುರಿತು ವಿವರಗಳಿಗೆ ಈ ಕೆಳಗಿನ ಲೇಖನಗಳನ್ನು ನೋಡಬಹುದು- ಇಮಾನ್ಯುಲ್ ವೆಲ್‌ಸ್ಟೆಯಿನ್, “ಫಾರ್‌ ಸೈನ್ಸ್, ಎಗೈನ್ಸ್ಟ್ ಸೈಂಟಿಸಿಸಂ: ದಿ ಡಯಲೆಮಸ್ ಆಫ್ ಕಾಂಟೆಂಪರಂ ನಾಲೆಡ್ಜ್ ಪ್ರೊಡಕ್ಷನ್”, ಇನ್ ಪಾರ್ಥನಾರ್ಥ ಮುಖರ್ಜಿ, ಮೆಥಡಾಲಜಿ ಇನ್ ಸೋಶಿಯಲ್ ರಿಸರ್ಚ್, ನ್ಯೂಡೆಲ್ಲಿ ಸೇಜ್‌ ಪಬ್ಲಿಕೇಶನ್ಸ್, ೨೦೦೦. ಇಮ್ಯಾನ್ಯುಲ್ ವೆಲ್‌ಸ್ಟೆಯಿನ್ ಎಟ್ ಆಲ್, ಓಪನ್ ದಿ ಸೋಶಿಯಲ್ ಸೈನ್ಸಸ್: ರಿಪೋರ್ಟ್ ಆಫ್ ದಿ ಗುಲ್ಬೆಕಿಯನ್ ಕಮಿಶನ್ ಆನ್ ದಿ ರಿಸ್ಟ್ರಕ್ಚರಿಂಗ್ ಆಫ್ ದಿ ಸೋಶಿಯಲ್ ಸೈನ್ಸಸ್, ನ್ಯೂಡೆಲ್ಲಿ: ವಿಸ್ತಾರ್ ಪಬ್ಲಿಕೇಶನ್ಸ್, ೧೯೯೮, ಚಂದ್ರ ಪೂಜಾರಿಯವರ, ‘ಸಮಾಜವಿಜ್ಞಾನದಲ್ಲಿನ ವಿಜ್ಞಾನ ಕುರಿತು ಕೆಲವು ಟಿಪ್ಪಣಿಗಳು’, (ಬುಡಕಟ್ಟು ಅಧ್ಯಯನ, ಸಂಪುಟ ೧, ಸಂಚಿಕೆ ೧, ೨೦೦೩, ಪುಟ. ೮೨-೧೦೪).

[3] ಈ ಬಗೆಯ ವಾದವನ್ನು ಮುಂದಿಡುವವರಲ್ಲಿ ಡಿಪೆಂಡೆನ್ಸಿ ಥಿಯರಿಸ್ಟರು ಪ್ರಮುಖರು. ಭಾರತದ ಸಂದರ್ಭದಲ್ಲಿ ಸಮುದಾಯವಾದಿಗಳು ಕೂಡ ಇದೇ ವಾದವನ್ನು ಮುಂದಿಡುತ್ತಾರೆ. ಇವರ ಬರಹಗಳ ವಿವರಗಳನ್ನು ಅಧ್ಯಾಯ ಒಂದರಲ್ಲಿ ನೀಡಲಾಗಿದೆ.

[4] ವಿವರಗಳಿಗೆ ಆಶಿಶ್ ನಂದಿ (ಸಂ) ಸೈನ್ಸ್ ಹೆಜಮೊನಿ ಆಂಡ್ ವೈಲೆನ್ಸ್ ರಿಕ್ವೆಯಂ ಫಾರ್ ಮಾಡರ್ನಿಟಿ, (ಡೆಲ್ಲಿ: ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್, ೧೯೯೦) ಪುಸ್ತಕ ನೋಡಬಹುದು.

[5] ಸಸ್ಟೆಯಿನೆಬಲ್ ಡೆವಲಪ್‌ಮೆಂಟ್ ಎನ್ನುವ ಹೆಸರಲ್ಲಿ ಈ ಚರ್ಚೆ ಗಮನ ಸೆಳೆದಿದೆ. ಪ್ರಾಕೃತಿಕ ಸಂಪನ್ಮೂಲಗಳ ಮೇಲೆ ಅತಿಯಾಗಿ ಅವಲಂಬಿತವಾಗಿರುವ ಮುಖ್ಯವಾಹಿನಿಯ ಅಭಿವೃದ್ಧಿ ಕ್ರಮಗಳನ್ನು ಪ್ರಶ್ನಿಸುವ ಕೆಲಸವನ್ನು ಸಸ್ಟೆಯಿನೆಬಲ್ ಡೆವಲಪ್‌ಮೆಂಟ್ ಚಿಂತಕರು ಮಾಡಿದ್ದಾರೆ. ಅವರಲ್ಲಿ ಕೆಲವರ ಬರಹಗಳನ್ನು ಮುಂದೆ ನೀಡಲಾಗಿದೆ. ಇ. ಎಫ್. ಶೂಮಾಕರ್, ಸ್ಮಾಲ್ ಈಸ್ ಬ್ಯೂಟಿಫುಲ್ ಸ್ಟಡಿ ಆಫ್ ಎಕಾನಮಿಕ್ಸ್ ಆಸ್ ಇಫ್ ಪೀಪ್‌ಲ್‌ ಮ್ಯಾಟರ‍್ಡ್, ಕಲ್ಕತ್ತಾ: ರೂಪ ಆಂಡ್ ಕಂಪೆನಿ, ೧೯೯೦, ಇರ್ಮಾ ಅಡಲ್‌ಮೇನ್ ಆಂಡ್ ಎಡ್ವರ್ಡ್‌ ಟೇಲರ್, ದಿ ಡಿಸೈನ್ ಆಫ್ ಆಲ್ಟರ್ನೇಟಿವ್ ಡೆವಲಪ್ಮೆಂಟ್ ಸ್ಟ್ರ್ಯಾಟಿಜೀಸ್, ರೋಥಕ್: ಜಾನ್ ಟಿಂಬರ‍್ಗ್‌ರ್‌ ಇನ್‌ಸ್ಟಿಟ್ಯೂಟ್ ಆಫ್ ಡೆವಲಪ್‌ಮೆಂಟ್, ೧೯೮೬.

[6] ಎಡಪಂಥೀಯ ಅಭಿವೃದ್ಧಿ ಚಿಂತನೆಗಳಿಗೆ ಎ. ಆರ್. ದೇಸಾಯಿ, ಇಂಡಿಯಾಸ್ ಪಾಥ್ ಆಫ್ ಡೆವಲಪ್ಮೆಂಟ್ ಮಾರ್ಕ್ಸಿಸ್ಟ್ ಎಪ್ರೋಚ್, ಬಾಂಬೆ: ಪಾಪ್ಯುಲರ್‌ ಪ್ರಕಾಶನ್‌, ೧೯೮೪, ಜಾನ್ ಜಿ. ಟೇಲರ್ ಫ್ರಮ್ ಮಾಡರ್ನೈಸೇಶನ್ ಟು ಮೋಡ್ ಆಫ್ ಪ್ರೊಡಕ್ಷನ್, ಲಂಡನ್. ದಿ ಮ್ಯಾಕ್‌ಮಿಲನ್ ಪ್ರೆಸ್, ೧೯೭೯, ಪ್ರಣಬ್ ಬರ್ಧನ್, ದಿ ಪೊಲಿಟಿಕಲ್ ಎಕಾನಮಿ ಆಫ್ ಡೆವಲಪ್ಮೆಂಟ್ ಇನ್ ಇಂಡಿಯಾ, ಡೆಲ್ಲಿ: ಆಕ್ಸ್‌ಫರ್ಡ್‌ ಯೂನಿವರ್ಸಿಟಿ ಪ್ರೆಸ್, ೧೯೮೪, ಅಮಿಯಾ ಕುಮಾರ್ ಬಾಗ್ಚಿ, ದಿ ಪೊಲಿಟಿಕಲ್ ಎಕಾನಮಿ ಆಫ್ ಅಂಡರ್‌ ಡೆವಲಪ್‌ಮೆಂಟ್, ಕೇಂಬ್ರಿಡ್ಜ್‌: ಕೇಂಬ್ರಿಡ್ಜ್ ಯೂನಿವರ್ಸಿಟಿ ಪ್ರೆಸ್, ೧೯೮೨ ಮುಂತಾದ ಬರಹಗಳನ್ನು ನೋಡಬಹುದು.

[7] ಮ್ಯಾಕ್ಸ್ ವೆಬರ್, ಪ್ರೊಟೆಸ್ಟೆಂಟ್ ಎಥಿಕ್ ಆಂಡ್ ಸ್ಪಿರಿಟ್ ಆಫ್ ಕ್ಯಾಪಿಟಲಿಸಂ, ನ್ಯೂಯಾರ್ಕ್: ಸ್ಕ್ರೈಬರ‍್ಸ್, ೧೯೫೮.

[8] ಬೆಂಜಮಿನ್ ಜಸರಯ್ಯ, “ಯೂಸ್ ಆಫ್ ಸೈಂಟಿಪಿಕ್ ಆರ್‌ಗ್ಯುಮೆಂಟ್ – ದಿ ಕೇಸ್ ಆಫ್‌ ಡೆವಲಪ್‌ಮೆಂಟ್ ಇನ್ ಇಂಡಿಯಾ ೧೯೩೦-೧೯೫೦”, ಎಕಾನಮಿಕ್ ಆಂಡ್ ಪೊಲಿಟಿಕಲ್ ವೀಕ್ಲಿ, ವಾ. ೩೬, ನಂ. ೩೯, ಸೆಪ್ಟೆಂಬರ್ ೨೦೦೧, ಪು. ೩೬೮೯-೩೭೦೨, ಮೀರಾ ನಂದ, “ರಿಕ್ಲೆಯಿಮಿಂಗ್ ಮಾಡರ್ನ್ ಸೈನ್ಸ್ ಫಾರ್ ಥರ್ಡ್ ವರ್ಲ್ಡ್ ಪ್ರೊಗ್ರೆಸಿವ್ ಸೋಶಿಯಲ್ ಮೂವ್‌ಮೆಂಟ್ಸ್”, ಎಕಾನಮಿಕ್ ಆಂಡ್ ಪೊಲಿಟಿಕಲ್ ವೀಕ್ಲಿ, ವಾ. ೩೩, ನಂ. ೧೬, ಏಪ್ರಿಲ್ ೧೯೯೮, ಪು. ೯೧೫-೨೨, ಹಿಮಾನಿ ಬೆನರ್ಜಿ, “ಪ್ರೊಜೆಕ್ಟ್ಸ್ ಆಫ್ ಹೆಜಮೊನಿ – ಸಬಾಲ್ಟರ್ನ್ ಸ್ಟಡೀಸ್ ರೆಸೆಲ್ಯೂಸನ್ ಆಫ್ ದಿ ವಿಮೆನ್ಸ್ ಕ್ವಸ್ಚನ್”, ಎಕಾನಮಿಕ್ ಆಂಡ್ ಪೊಲಿಟಿಕಲ್ ವೀಕ್ಲಿ, ವಾ. ೩೫, ನಂ.೧೧, ಮಾರ್ಚ್ ೨೦೦೦, ಪು. ೯೦೨-೨೧ ಮುಂತಾದವರ ಬರಹಗಳನ್ನು ಗಮನಿಸಬಹುದು.