ಈ ಬಗೆಯ ಕಲ್ಪಿತ ಅಥವಾ ರಚಿತ ಸತ್ಯಗಳು ಕೇವಲ ಸಾಮಾಜಿಕ ಅಥವಾ ಸಾಂಸ್ಕೃತಿಕ ಲೋಕಕ್ಕೆ ಸೀಮಿತಗೊಳ್ಳುತ್ತಿದ್ದರೆ ಸಮಸ್ಯೆ ಇಲ್ಲ. ಆದರೆ ಇವು ತಮ್ಮ ಪ್ರಭಾವವನ್ನು ರಾಜಕೀಯ ಹಾಗೂ ಆರ್ಥಿಕ ಲೋಕಕ್ಕೂ ವಿಸ್ತರಿಸುತ್ತವೆ. ಇದು ಹೇಗೆಂದು ಮುಂದೆ ವಿವರಿಸಲಾಗಿದೆ. ನಮ್ಮ ಸುತ್ತಮುತ್ತ ದಿನನಿತ್ಯ ಆಚರಣೆಯಲ್ಲಿರುವ ಕೆಲವೊಂದು ಸಂಗತಿಗಳನ್ನು ಗಮನಿಸೋಣ. ಕರ್ನಾಟಕ ಸರಕಾರ ಇತ್ತೀಚಿನ ದಿನಗಳಲ್ಲಿ ಪ್ರಾಥಮಿಕ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮವನ್ನು ಆರಂಭಿಸಿದೆ. ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಬಡತನದ ಕಾರಣಕ್ಕೆ ಮಧ್ಯದಲ್ಲಿ ಶಾಲೆ ಬಿಡುವ ಮಕ್ಕಳ ಸಂಖ್ಯೆಯನ್ನು ಕಡಿಮೆ ಮಾಡುವುದು. ಈ ಬಿಸಿಯೂಟ ಕಾರ್ಯಕ್ರಮದ ಪ್ರಕಾರ ಶಾಲೆಯಲ್ಲಿ ಮಧ್ಯಾಹ್ನ ಊಟವನ್ನು ಸಿದ್ಧಪಡಿಸಿ ಮಕ್ಕಳಿಗೆ ನೀಡಬೇಕು. ಊಟ ಸಿದ್ಧಪಡಿಸಲು ಸ್ಥಳೀಯ ಹೆಂಗಸರನ್ನು ನೇಮಕ ಮಾಡಿಕೊಳ್ಳಲಾಯಿತು. ಹಾಗೆ ನೇಮಕ ಮಾಡುವಾಗ ಕೆಲವು ಹಳ್ಳಿಗಳಲ್ಲಿ ಹರಿಜನ ಮಹಿಳೆಯರನ್ನು ಅಡುಗೆ ಕೆಲಸಕ್ಕೆ ನೇಮಕ ಮಡಿಕೊಂಡರು. ಹರಿಜನ ಹೆಂಗಸರು ಅಡುಗೆ ಕೆಲಸಕ್ಕೆ ಸೇರಿಕೊಂಡ ಕೆಲವು ಶಾಲೆಗಳಲ್ಲಿ ಮೇಲುಜಾತಿಗೆ ಸೇರಿದ ಮಕ್ಕಳು ಊಟ ಮಾಡಲು ನಿರಾಕರಿಸಿದರು. ಅ ಕಾರಣಕ್ಕಾಗಿ ಹರಿಜನ ಜಾತಿ ಹೆಂಗಸರನ್ನು ಅಡುಗೆ ಕೆಲಸದಿಂದ ಬಿಡಿಸಿ ಬೇರೆ ಜಾತಿ ಹೆಂಗಸರನ್ನು ನೇಮಕ ಮಾಡಿಕೊಳ್ಳಲಾಯಿತು. ನಂತರ ಹುಡುಗರು ಊಟ ಮಾಡಿದರೋ ಬಿಟ್ಟರೋ ಎನ್ನುವ ಪ್ರಶ್ನೆಗಿಂತ ಕೇವಲ ಸಾಮಾಜಿಕ (ಜಾತಿ) ಕಾರಣಕ್ಕಾಗಿ ಕೆಲಸ ಕಳೆದುಕೊಂಡ ಹರಿಜನ ಮಹಿಳೆಯ ಸ್ಥಿತಿ ಏನಾಯಿತೆಂದು ನೋಡೋಣ. ಬಿಸಿಯೂಟ ಸಿದ್ಧಪಡಿಸುವ ಕೆಲಸಕ್ಕೆ ವಿಶೇಷ ಸಂಬಳ ಇರಲಿಕ್ಕಿಲ್ಲ. ಒಂದು ವೇಳೆ ತಿಂಗಳಿಗೆ ರೂ. ೩೦೦ ಇದೆ ಎಂದು ತಿಳಿಯೋಣ. ಈ ಮುನ್ನೂರು ರೂಪಾಯಿಗಳು ಸಾವಿರಾರು ರೂಪಾಯಿ ಸಂಬಳ ಪಡೆಯುವವರಿಗೆ ಏನೂ ಅಲ್ಲ. ಆದರೆ ಉತ್ತರ ಕರ್ನಾಟಕದ ಕೆಲವು ಹಳ್ಳಿಗಳಲ್ಲಿ ತಿಂಗಳಿಗೆ ಮುನ್ನೂರು ರೂಪಾಯಿ ಬಹು ದೊಡ್ಡ ಆದಾಯ. ಯಾಕೆಂದರೆ ಈ ಹಳ್ಳಿಗಳಲ್ಲಿ ಇಂದು ಕೂಡ ಕೃಷಿ ಅಥವಾ ಕೃಷಿಗೆ ಸಂಬಂಧಿಸಿದ ಇತರ ಕೆಲಸಗಳಲ್ಲಿ ದುಡಿಯುವವರಿಗೆ ದಿನಕ್ಕೆ ಹತ್ತರಿಂದ ಹದಿನೈದು ರೂಪಾಯಿ ಸಂಬಳ ಸಿಗುವುದು ಕಷ್ಟ. ಇಂತಹ ಸಂದರ್ಭದಲ್ಲಿ ದಿನನಿತ್ಯ ಹತ್ತು ರೂಪಾಯಿ ಸಂಬಳ ಸಿಗುವ ಬಿಸಿಯೂಟದ ಅಡುಗೆ ಕೆಲಸ ಬಹುದೊಡ್ಡ ಆದಾಯ. ಈ ಆದಾಯ ಪಡೆದ ಮಹಿಳೆ ತನ್ನ ಹಲವಾರು ಅವಶ್ಯಕತೆಗಳನ್ನು ಪೂರೈಸಿಕೊಳ್ಳಬಹುದು. ತನ್ನ ಮಕ್ಕಳ ಶಿಕ್ಷಣ, ತನ್ನ ಅಥವಾ ತನ್ನ ಕುಟುಂಬದವರ ಆರೋಗ್ಯ ಇತ್ಯಾದಿಗಳಿಗೆ ಅವಳ ಸಂಬಳ ಉಪಯೋಗಕ್ಕೆ ಬರುತ್ತಿತ್ತು. ಆದರೆ ಅವಳ ಜಾತಿ ಅವಳನ್ನು ಆ ಆದಾಯದಿಂದ ತಪ್ಪಿಸಿದೆ. ಅಷ್ಟು ಮಾತ್ರವಲ್ಲ, ತಪ್ಪಿದ ಆದಾಯ ಅವಳ ಇತರ ಹಲವಾರು ಬೆಳವಣಿಗೆಗಳನ್ನು (ಆರೋಗ್ಯ, ಶಿಕ್ಷಣ ಇತ್ಯಾದಿ) ಕುಂಠಿತಗೊಳಿಸಿದೆ. ಕುಂಠಿತ ಆರೋಗ್ಯ ಮತ್ತು ಶಿಕ್ಷಣ ಅವಳು ಮತ್ತು ಅವಳ ಮಕ್ಕಳು ತಮ್ಮ ಬದುಕನ್ನು ಪ್ರಭಾವಿಸುವ ನಿರ್ಧಾರಗಳಲ್ಲಿ ಪಾಲುಗೊಳ್ಳುವ ಸಾಧ್ಯತೆಗಳಿಂದ ದೂರ ಇಡುತ್ತದೆ. ಅಷ್ಟು ಮಾತ್ರವಲ್ಲ, ಅವಳ ಮತ್ತು ಮಕ್ಕಳ ಮುಂದಿನ ಬೆಳವಣಿಗೆಗಳನ್ನು ಕಾಡುತ್ತವೆ. ಹೀಗೆ ಇದೊಂದು ಬಗೆಯ ವಿಷ ವರ್ತುಲ ಇದ್ದಂತೆ. ಈ ವಿಷ ವರ್ತುಲದಿಂದ ಬಿಡುಗಡೆ ಪಡೆಯಬೇಕಾದರೆ ಅವಳ ಬದುಕುವ ಅವಕಾಶಗಳನ್ನು ವಂಚಿಸಿದ ಕಲ್ಪಿತ ಅಥವಾ ರಚಿತ ಸಾಮಾಜಿಕ ಮೌಲ್ಯಗಳು ಬದಲಾಗಬೇಕು.

ಮೇಲಿನ ಉದಾಹರಣೆ ಜಾತಿ ಎನ್ನುವ ಸಾಮಾಜಿಕ ಸಂಸ್ಥೆ ಕೆಳಜಾತಿಗೆ ಸೇರಿದ ಮಹಿಳೆಯ ಬದುಕನ್ನು ಹೇಗೆ ಕಾಡುತ್ತದೆ ಎಂದು ವಿವರಿಸುತ್ತದೆ. ಇಂತಹ ಮೌಲ್ಯಗಳು ಒಂದು ದೇಶದ ರಾಜಕಾರಣವನ್ನೇ ಪ್ರಭಾವಿಸಿದರೆ ಏನಾದೀತು? ಉದಾಹರಣೆಗೆ ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಬಲಗೊಳ್ಳುತ್ತಿರುವ ಹಿಂದುತ್ವ. ಹಿಂದುತ್ವ ನಮ್ಮ ರಾಷ್ಟ್ರೀಯತೆಯನ್ನು ಹಿಂದೂ ಧರ್ಮದ ದೃಷ್ಟಿಯಿಂದ ವ್ಯಾಖ್ಯಾನಿಸಲು ಪ್ರಯತ್ನಿಸುತ್ತದೆ. ಇದು ಮೂಲತಃ ಹಿಂದುಗಳಿಗೆ ಸೇರಿದ ದೇಶ. ಆದುದರಿಂದ ಇಲ್ಲಿನ ಪ್ರಜೆಗಳು ಹಿಂದುಗಳಾಗಿರಬೇಕು. ಒಂದು ವೇಳೆ ಹಿಂದುಗಳಲ್ಲದಿದ್ದರೆ ಹಿಂದುಗಳ ಧಾರ್ಮಿಕ ಮೌಲ್ಯಗಳನ್ನು ಒಪ್ಪಿಕೊಂಡು ಎರಡನೇ ದರ್ಜೆ ಪ್ರಜೆಗಳ ಸ್ಥಾನಮಾನದಲ್ಲಿ ಬದುಕಲು ಪ್ರಯತ್ನಿಸಬೇಕು. ಇಂತಹ ಒಂದು ತಾತ್ವಿಕ ಹಿನ್ನೆಲೆ ಇರುವ ಪಕ್ಷ ಅಧಿಕಾರಕ್ಕೆ ಬಂದರೆ ಏನಾಗುತ್ತದೆ? ಸಹಜವಾಗಿಯೇ ಪಕ್ಷ ವ್ಯಾಖ್ಯಾನಿಸಿಕೊಂಡ ಹಿಂದುತ್ವದ ಬೆಳವಣಿಗೆಗೆ ಅದು ಪ್ರಯತ್ನಿಸುತ್ತದೆ. ಆ ರೀತಿ ಮಡುವುದರಿಂದ ಎರಡು ರೀತಿಯ ಹಾನಿ ಆಗಬಹುದು. ಒಂದು ಹಿಂದು ಅಲ್ಲದವರಿಗೆ ಹಾನಿ, ಎರಡು ಹಿಂದುಗಳೊಳಗೆ ಬರುವ ಹಲವಾರು ಸಮುದಾಯಗಳಿಗೆ ಆಗುವ ಹಾನಿ. ಹಿಂದು ಅಲ್ಲದವರು ಎಲ್ಲ ಕ್ಷೇತ್ರಗಳಲ್ಲೂ ಎರಡನೇ ದರ್ಜೆಯ ಬದುಕನ್ನು ಬಾಳಬೇಕು. ಸಾರ್ವಜನಿಕ ಸ್ಥಳಗಳಲ್ಲಿ ವ್ಯವಹರಿಸುವಾಗ ಅವರು ಇತರರಿಗಿಂತ ಎರಡು ಪಟ್ಟು ಜಾಗೃತರಾಗಿರಬೇಕು. ಉದಾಹರಣೆಗೆ ಬಸ್ಸುಗಳಲ್ಲಿ ಪ್ರಯಾಣಿಸುವಾಗ ಹಿಂದು ಹೆಂಗಸರ ಪಕ್ಕ ಕುಳಿತುಕೊಳ್ಳುವುದು ಅಥವಾ ಹಿಂದು ಹೆಂಗಸಿಗೆ ತಾಗಿಕೊಂಡು ನಿಂತುಕೊಳ್ಳುವುದು ಇತ್ಯಾದಿಗಳೂ ಕೂಡ ಬಹು ದೊಡ್ಡ ಕೋಮು ಗಲಭೆಗೆ ಕಾರಣವಾಗಬಹುದು. ಯಾವುದೋ ಕಾರಣಕ್ಕಾಗಿ (ಭೂಮಿ ಅಥವಾ ವ್ಯಾಪಾರಕ್ಕೆ ಸಂಬಂಧಿಸಿದ) ಒಬ್ಬ ಹಿಂದು ಮತ್ತೊಬ್ಬ ಮತೀಯನಿಗೆ ಆಗುವ ಜಗಳ ಬಹುದೊಡ್ಡ ಕೋಮು ಗಲಭೆಯಾಗಿ ಮಾರ್ಪಟ್ಟು ಇಡೀ ಪ್ರಕರಣಕ್ಕೆ ಯಾವುದೇ ರೀತಿಯಲ್ಲೂ ಸಂಬಂಧಿಸದ ಇತರ ಹಲವಾರು ಮಂದಿ (ಆ ಸಮುದಾಯಕ್ಕೆ ಸೇರಿದ್ದಾರೆ ಎನ್ನುವ ಕಾರಣಕ್ಕೆ) ಸಾವು ನೋವು ಅನುಭವಿಸಬೇಕಾಗಬಹುದು.[1] ಈ ಬಗೆಯ ಕೋಮು ಗಲಭೆಗಳು ಮತ್ತು ಅದರಿಂದ ಕಾಡುವ ಅರಕ್ಷಿತ ಪ್ರಜ್ಞೆ ಎಲ್ಲ ಸಂದರ್ಭಗಳಲ್ಲಿ ನಡೆಯುವಂತಹ ಸಂಗತಿಗಳಲ್ಲ ಎಂದು ತಿಳಿಯೋಣ. ಅದಕ್ಕಿಂತಲೂ ಹೆಚ್ಚು ಈ ಪಕ್ಷ ತಳೆಯುವ ನಿರ್ಧಾರಗಳು ಮೈನಾರಿಟಿ ಸಮುದಾಯಗಳ ಆರ್ಥಿಕ ಮತ್ತು ರಾಜಕೀಯ ಬದುಕನ್ನು ಹೇಗೆ ಪ್ರಭಾವಿಸಬಹುದು ಎನ್ನುವುದರತ್ತ ಗಮನ ಹರಿಸಬೇಕಾಗಿದೆ. ಶಿಕ್ಷಣ ಮತ್ತು ಇತರ ಕ್ಷೇತ್ರಗಳಲ್ಲಿ ಈ ಸಮುದಾಯಗಳು ಹಿಂದುಳಿದಿದ್ದಲ್ಲಿ ಪ್ರತ್ಯೇಕ ನೀತಿ ಮೂಲಕ ಅವುಗಳ ಅಭಿವೃದ್ಧಿಗೆ ಪ್ರಯತ್ನಿಸಬೇಕು. ಆದರೆ ಹಿಂದುತ್ವ ಎಲ್ಲರಿಗೂ ಸಮಾನ ನೀತಿಗೆ ಒತ್ತು ಕೊಡುವ ಮೂಲಕ ಇನ್ನೂ ಹೆಚ್ಚಿನ ಅಸಮಾನತೆಗೆ ಕಾರಣವಾಗಬಹುದು. ಇದು ಯಾಕೆಂದರೆ ಅಸಮಾನ ವ್ಯವಸ್ಥೆಯಲ್ಲಿ ಮೆಕಾನಿಕಲ್ ದೃಷ್ಟಿಯಿಂದ ಸಮಾನತೆಯನ್ನು ಊಹಿಸಿಕೊಳ್ಳುವುದು ಇನ್ನೂ ಹೆಚ್ಚಿನ ಅಸಮಾನತೆಗೆ ಕಾರಣವಾಗುತ್ತದೆ.[2] ಉದಾಹರಣೆಗೆ ಎಲ್ಲ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ ಮೂಲಕ ಸಮಾನತೆ ಸಾಧ್ಯವಿಲ್ಲ. ಯಾಕೆಂದರೆ ಎಲ್ಲ ವಿದ್ಯಾರ್ಥಿಗಳ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿ ಒಂದೇ ಆಗಿರುವುದಿಲ್ಲ. ಅಂತಹ ಸಂದರ್ಭದಲ್ಲಿ ಎಲ್ಲರಿಗೂ ಒಂದೇ ಪ್ರಮಾಣದ ಸವಲತ್ತನ್ನು ನೀಡಿದರೆ ಈಗಾಗಲೇ ಅನುಕೂಲ ಸ್ಥಿತಿಯಲ್ಲಿರುವವರ ಸ್ಥಿತಿ ಇನ್ನೂ ಉತ್ತಮವಾಗುತ್ತದೆ ಮತ್ತು ಕೆಳಸ್ತರದಲ್ಲಿರುವವರ ಸ್ಥಿತಿ ವಿಶೇಷ ಸುಧಾರಿಸುವುದಿಲ್ಲ. ಇಂತಹ ಸಂದರ್ಭದಲ್ಲಿ ಅಸಮಾನತೆಯನ್ನು ಹೋಗಲಾಡಿಸಬೇಕಾದರೆ ಅಸಮಾನ ನೀತಿ ಅನುಸರಿಸಬೇಕು. ಹೀಗೆ ಧಾರ್ಮಿಕ ಮೌಲ್ಯಾಧಾರಿತ ರಾಜಕೀಯ ಎಲ್ಲ ಧಾರ್ಮಿಕರನ್ನು ಸಾಮಾಜಿಕ ಅಥವಾ ಸಾಂಸ್ಕೃತಿಕವಾಗಿ ಸಮನಾಗಿ ಕಾಣುವುದಿಲ್ಲ. ಆದರೆ ಆರ್ಥಿಕ ಮತ್ತು ರಾಜಕೀಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಮಾನತೆಯನ್ನು ಪ್ರದರ್ಶಿಸುತ್ತದೆ. ಇದು ಸಹಜವಾಗಿಯೇ ಇತರ ಧರ್ಮೀಯರನ್ನು (ಮೈನಾರಿಟಿಗಳನ್ನು) ಇನ್ನೂ ಹೆಚ್ಚಿನ ಕಷ್ಟಕ್ಕೆ ತಳ್ಳುತ್ತದೆ.

ಈ ಬಗೆಯ ರಾಜಕೀಯದಿಂದ ಹಿಂದೂಗಳ ಒಳಗೆ ಬರುವ ಹಲವಾರು ಸಮುದಾಯಗಳು ಅಥವಾ ಜಾತಿಗಳ ಸ್ಥಿತಿ ಏನಾಗುತ್ತದೆ? ಹಿಂದು ಎನ್ನುವ ಪರಿಕಲ್ಪನೆ ಒಂದು ಫೆಡರಲ್ ಸೆಟಪ್ ಇದ್ದಂತೆ. ಹಲವಾರು ಜಾತಿಗಳು ಸೇರಿ ಹಿಂದುತ್ವದ ಪರಿಕಲ್ಪನೆ ರೂಪು ಪಡೆದಿದೆ. ಈ ಜಾತಿಗಳು ಒಂದು ಸಮಾನಾಂತರ ರೇಖೆಯಲ್ಲಿ ಇಲ್ಲ. ಅವು ಪಿರಾಮಿಡ್ ಆಕೃತಿಯಲ್ಲಿ ಜೋಡಿಸಲ್ಪಟ್ಟಿವೆ. ಪಿರಾಮಿಡ್‌ನ ತುದಿಯಲ್ಲಿ ಕೆಲವೇ ಜಾತಿಗಳಿದ್ದು ಕೆಳ ಬಂದಂತೆ ಜಾತಿಗಳ ಮತ್ತು ಅವುಗಳಲ್ಲಿ ಬರುವ ಜನರ ಸಂಖ್ಯೆ ಹೆಚ್ಚುತ್ತಾ ಹೋಗುತ್ತದೆ. ಪಿರಾಮಿಡ್‌ನ ತುದಿಯಲ್ಲಿರುವವರು ಎಲ್ಲ ಬಗೆಯ ಅಧಿಕಾರವನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುವಾಗ ಕೆಳ ಬಂದಂತೆ ಎಲ್ಲ ಬಗೆಯ ಅಧಿಕಾರದ ಪ್ರಮಾಣ ಕಡಿಮೆ ಆಗುತ್ತಾ ಹೋಗುತ್ತದೆ. ಜಾತಿಗಳ ಈ ಬಗೆಯ ಸ್ಥಾನಮಾನವನ್ನು ಹಿಂದುತ್ವ ಪ್ರಶ್ನಿಸುವುದಿಲ್ಲ. ಹಿಂದುಗಳೆಲ್ಲ ಒಂದೇ ಎನ್ನುವ ಸ್ಲೋಗನ್‌ನಡಿಯಲ್ಲಿ ವಿವಿಧ ಜಾತಿಗಳ ನಡುವೆ ಇರುವ ಎಲ್ಲ ಬಗೆಯ ಅಸಮಾನ ಸ್ಥಿತಿಯನ್ನು ಅದು ಅಲ್ಲಗಳೆಯುತ್ತದೆ. ತನ್ನ ಕಾರ್ಯಕ್ರಮಗಳಲ್ಲೂ ಕೂಡ ಅದು ಹಿಂದುಗಳ ಒಳಗಿನ ವೈರುಧ್ಯಗಳನ್ನು ಪರಿಗಣಿಸುವುದಿಲ್ಲ. ಇದರಿಂದ ಈಗಾಗಲೇ ಮೇಲುಸ್ತರದಲ್ಲಿರುವ ಸಮುದಾಯಗಳು ಹಿಂದು ಹೆಸರಲ್ಲಿ ಅತೀ ಹೆಚ್ಚಿನ ಲಾಭ ಪಡೆಯುವ ಸ್ಥಿತಿ ಮುಂದುವರಿಯುತ್ತದೆ. ಕೆಳಸ್ತರದ ಜನರು ಯಾವುದೇ ಪ್ರತ್ಯೇಕ ಸ್ಥಾನಮಾನ ಇಲ್ಲದೆ ಶತಮಾನಗಳ ತಮ್ಮ ಹೀನ ಸ್ಥಿತಿಯೊಂದಿಗೆ ಬದುಕುವ ಒಂದು ದುರ್ಭರ ಸ್ಥಿತಿ ಮುಂದುವರಿಯುತ್ತದೆ. ಇದೆಲ್ಲ ಸಾಧ್ಯವಾಗುವುದು ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರದ ಕಲ್ಪಿತ ಅಥವಾ ರಚಿತ ಸತ್ಯಗಳ ಕಾರಣದಿಂದ. ಆದುದರಿಂದ ಅವುಗಳನ್ನು ಪ್ರಶ್ನಿಸುವ ಅಥವಾ ಸಮಸ್ಯೀಕರಿಸುವ ಅಗತ್ಯ ಇದೆ.

ಸಮಸ್ಯೀಕರಿಸುವುದು ಹೇಗೆ?

ಇನ್ನು ಸಮಸ್ಯೀಕರಿಸುವುದು ಹೇಗೆ ಎನ್ನುವ ಪ್ರಶ್ನೆ? ಹಾಗೆ ನೋಡಿದರೆ ಸಮಸ್ಯೀಕರಿಸುವುದು ಹೇಗೆ ಎನ್ನುವ ಪ್ರಶ್ನೆಗೆ ಪ್ರತ್ಯೇಕ ಉತ್ತರ ಇಲ್ಲ. ಯಾಕೆಂದರೆ ಸಮಸ್ಯೀಕರಿಸುವುದು ಏಕೆ ಎನ್ನುವ ಪ್ರಶ್ನೆಗೆ ನೀಡಿದ ಉತ್ತರ ಹೇಗೆ ಎನ್ನುವ ಉತ್ತರವನ್ನು ಒಳಗೊಂಡಿದೆ. ಹಲವಾರು ಸಮಸ್ಯೆಗಳನ್ನು ಹಿಂದಿನ ಪುಟಗಳಲ್ಲಿ ನೀಡಲಾಗಿದೆ. ಅವುಗಳನ್ನು ಬಳಸಿಕೊಂಡು ಸಂಶೋಧನಾ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸೋಣ. ಸಮಸ್ಯೆ ಅಥವಾ ಸಮಸ್ಯೀಕರಿಸುವುದೆಂದರೆ ಪ್ರಶ್ನೆಗಳನ್ನು ರೂಪಿಸುವುದು ಅಥವಾ ಕೇಳುವುದೆಂದು ವ್ಯಾಖ್ಯಾನಿಸಿಕೊಂಡಿದ್ದೇವೆ. ಒಂದು ಅಥವಾ ಕೆಲವು ಮೂಲ ಪ್ರಶ್ನೆಗಳು ಮತ್ತು ಆ ಮೂಲ ಪ್ರಶ್ನೆಗಳಿಗೆ ಪೂರಕವಾಗಿರುವ ಇತರ ಪ್ರಶ್ನೆಗಳು ಸಮಸ್ಯೆಯ ಭಾಗವಾಗಿರುತ್ತವೆ. ದಕ್ಷಿಣ ಕನ್ನಡದ ಪರಶುರಾಮ ಸೃಷ್ಟಿಯ ಉದಾಹರಣೆಯೊಂದಿಗೆ ಸಮಸ್ಯೀಕರಿಸುವ ಕೆಲಸವನ್ನು ಆರಂಭಿಸೋಣ. ಈ ಕೆಳಗಿನ ಸಂಗತಿಗಳನ್ನು ಈ ಉದಾಹರಣೆಯಲ್ಲಿ ತುಂಬಾ ಸ್ಪಷ್ಟವಾಗಿ ಕಾಣಬಹುದು. ಒಂದು, ವಲಸಿಗರು ಮತ್ತು ಮುಲನಿವಾಸಿಗರ ಪ್ರಶ್ನೆ. ಎರಡು, ವಲಸಿಗರು ಮತ್ತು ಮೂಲನಿವಾಸಿಗರು ರೂಪುಗೊಳ್ಳುವ ಬಗೆ. ಮೂರು, ಈ ಸ್ಥಾನಮಾನ (ವಲಸಿಗ ಮತ್ತು ಮೂಲನಿವಾಸಿಗ ಸ್ಥಿತಿ) ಮತ್ತು ಸಮಾಜೋ ಆರ್ಥಿಕ ಸಂಗತಿಗಳ ನಡುವೆ ಇರುವ ಸಂಬಂಧ. ಈ ಮೂರು ವಿಚಾರಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಮೂರು ಮುಖ್ಯ ಪ್ರಶ್ನೆಗಳನ್ನು ಕೇಳಬಹುದು. ಒಂದು, ವಲಸಿಗರು ಅಥವಾ ಮೂಲನಿವಾಸಿಗರನ್ನು ಗುರುತಿಸುವ ಮಾನದಂಡವೇನು? ಎರಡು, ವಲಸಿಗರು ಮತ್ತು ಮೂಲನಿವಾಸಿಗರು ರೂಪುಗೊಳ್ಳುವ ಬಗೆ ಏನು? ಅಥವಾ ವಲಸಿಗರು ಮತ್ತು ಮೂಲನಿವಾಸಿಗರು ಚಾರಿತ್ರಿಕ ರೂಪುಗೊಳ್ಳುವಿಕೆಯೇ ಅಥವಾ ಒಂದು ಸಂಕಥನದ ಫಲವೇ? ಮೂರು, ವಲಸಿಗರು ಮತ್ತು ಮೂಲನಿವಾಸಿಗರ ಸ್ಥಿತಿ ಮತ್ತು ಅವರ ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಗತಿಗಳ ನಡುವೆ ಸಂಬಂಧ ಇದೆಯೇ? ಈ ಮೂರು ಮುಖ್ಯ ಪ್ರಶ್ನೆಗಳಿಗೆ ಪೂರಕವಾಗಿರುವ ಇತರ ಹಲವು ಪ್ರಶ್ನೆಗಳಿವೆ. ಒಂದನೇ ಪ್ರಶ್ನೆಗೆ ಸಂಬಂಧಿಸಿದಂತೆ ಹುಟ್ಟಿಕೊಳ್ಳುವ ಪೂರಕ ಪ್ರಶ್ನೆಗಳು ಇಂತಿವೆ. ವಲಸಿಗರು ಮತ್ತು ಮೂಲನಿವಾಸಿಗಳನ್ನು ಗುರುತಿಸುವ ಮಾನದಂಡ ಬೇರೆ ಬೇರೆ ಪ್ರದೇಶ ಮತ್ತು ಕಾಲದಲ್ಲಿ ಏನಾಗಿರುತ್ತದೆ. ಉದಾಹರಣೆಗೆ ದಕ್ಷಿಣ ಕನ್ನಡದ ನೆರೆಯ ಜಿಲ್ಲೆಯಾದ ಕೊಡಗಿನಲ್ಲಿ ವಲಸಿಗರು ಮತ್ತು ಮೂಲನಿವಾಸಿಗರ ಪ್ರಶ್ನೆ ಬೇರೆಯದೇ ರೂಪದಲ್ಲಿ ಕೇಳಲ್ಪಟ್ಟಿದೆ. ಅಲ್ಲಿ ಕೊಡವರು ಅಲ್ಲಿನ ಮೂಲನಿವಾಸಿಗಳಾಗಿದ್ದು ವಲಸಿಗರಿಂದ ಅವರ ಅಸ್ತಿತ್ವಕ್ಕೆ ಹಾನಿಯಾಗುತ್ತದೆ. ಆದುದರಿಂದ ಕೊಡುವರನ್ನು ಕೊಡಗಿನ ಮೂಲನಿವಾಸಿಗರೆಂದು ಘೋಷಿಸುವ ಪ್ರತ್ಯೇಕ ವ್ಯವಸ್ಥೆಯನ್ನು ಕೇಳುತ್ತಿದ್ದಾರೆ. ಅದೇ ರೀತಿಯಲ್ಲಿ ಆರ್ಯರು ಮತ್ತು ದ್ರಾವಿಡರ ಪ್ರಶ್ನೆ ಕೂಡ ಉತ್ತರ ಮತ್ತು ದಕ್ಷಿಣ ಭಾರತದ ನಡುವೆ ಅಧಿಕಾರ ಹಂಚಿಕೆಯ ಪ್ರಶ್ನೆಯನ್ನು ಎತ್ತುತ್ತಿದೆ. ಹೀಗೆ ಬೇರೆ ಬೇರೆ ಪ್ರದೇಶ ಮತ್ತು ಸಂದರ್ಭಗಳಲ್ಲಿ ವಲಸಿಗರು ಮತ್ತು ಮೂಲನಿವಾಸಿಗರನ್ನು ಗುರುತಿಸುವ ಮಾನದಂಡಗಳು ಬೇರೆ ಬೇರೆ ಆಗಿದೆ. ಈ ಹಿನ್ನೆಲೆಯಲ್ಲಿ ಮೊದಲಿನ ಪ್ರಶ್ನೆಯೊಂದಿಗೆ ಬೇರೆ ಬೇರೆ ಕಾಲ ಮತ್ತು ಪ್ರದೇಶಗಳಲ್ಲಿ ವಲಸಿಗರು ಮತ್ತು ಮೂಲನಿವಾಸಿಗರನ್ನು ಗುರುತಿಸಲು ಇರುವ ಮಾನದಂಡಗಳೇನು ಎನ್ನುವ ಪೂರಕ ಪ್ರಶ್ನೆ ಕೇಳಬಹುದು. ಅದೇ ರೀತಿಯಲ್ಲಿ ವಲಸಿಗರು ಮತ್ತು ಮೂಲನಿವಾಸಿಗರ ರೂಪುಗೊಳ್ಳುವಿಕೆಯಲ್ಲಿ ಚಾರಿತ್ರಿಕ ರೂಪುಗೊಳ್ಳುವಿಕೆಯ ಮತ್ತು ಸಂಕಥನದ ಪಾತ್ರ ಕುರಿತು ಕೆಲವೊಂದು ಪೂರಕ ಪ್ರಶ್ನೆಗಳನ್ನು ಕೇಳಬಹುದು. ವಲಸಿಗರು ಮತ್ತು ಮೂಲನಿವಾಸಿಗರ ರೂಪುಗೊಳ್ಳುವಿಕೆಯಲ್ಲಿ ಈ ಎರಡರ ಪಾತ್ರವನ್ನು (ಚಾರಿತ್ರಿಕ ರೂಪುಗೊಳ್ಳುವಿಕೆ ಹಾಗೂ ಸಂಕಥನದ) ಹೊರತುಪಡಿಸಿದ ಸಂಗತಿಗಳಾವುವು? ಅವುಗಳನ್ನು ಗುರುತಿಸುವ ಬಗೆ ಏನು? ಇತ್ಯಾದಿ ಪ್ರಶ್ನೆಗಳು ಪೂರಕ ಪ್ರಶ್ನೆಗಳಾಗಿ ಬರಬಹುದು.

ಸಮಸ್ಯೀಕರಿಸುವ ಅಥವಾ ಪ್ರಶ್ನಿಸುವ ಕೆಲಸ ಪರಿಣಾಮಕಾರಿಯಾಗಿ ನಡೆಯಬೇಕಾದರೆ ಸಂಶೋಧನಾ ವಿಷಯ ಕುರಿತು ನಮಗೆ ಸಾಕಷ್ಟು ಪರಿಚಯ ಇರಬೇಕು. ಪ್ರಶ್ನೆಗಳು ಹುಟ್ಟುವಲ್ಲಿ ಹಲವಾರು ಅಂಶಗಳು ಕೆಲಸ ಮಡುತ್ತವೆ. ಯರೆಹಂಚಿನಾಳದ ಚಹಾ ಹೋಟೆಲಿನ ಉದಾಹರಣೆಯಲ್ಲಿ ಅಲ್ಲಿನ ಹಿರಿಯ ತಲೆಮಾರಿನ ಹರಿಜನರಿಗೆ ಚಹಾ ಹೋಟೆಲಲ್ಲಿ ಪ್ರತ್ಯೇಕ ಕುಳಿತುಕೊಳ್ಳುವುದು ಅಥವಾ ಪ್ರತ್ಯೇಕ ಗ್ಲಾಸ್ ಇಡುವ ವಿಚಾರಗಳು ಒಂದು ಸಮಸ್ಯೆ ಆಗಿಯೇ ಇಲ್ಲ. ಆದರೆ ಅದೇ ಹಿರಿಯರ ಮಕ್ಕಳಲ್ಲಿ ಕೆಲವರಿಗೆ ಅದು ಸಮಸ್ಯೆ ಆಗಿದೆ. ಹಳ್ಳಿಯಿಂದ ಹೊರಗಿನ ಲೋಕದ ಪರಿಚಯ ಮತ್ತು ಓದು ಅವರಿಗೆ ಆ ಪದ್ಧತಿ ಸಮಸ್ಯೆ ಆಗುವಲ್ಲಿ ಬಹುದೊಡ್ಡ ಪಾತ್ರ ವಹಿಸಿವೆ. ಅಂದರೆ ಒಂದು ವಿಚಾರವನ್ನು ಸಮಸ್ಯೀಕರಿಸುವಲ್ಲಿ ಆ ವಿಚಾರದ ಬಗೆಗಿನ ಹೆಚ್ಚಿನ ತಿಳುವಳಿಕೆ ಮಹತ್ವದ ಪಾತ್ರ ವಹಿಸುತ್ತದೆ. ಅಂದರೆ ಇತರ ಪ್ರದೇಶಗಳಲ್ಲಿ ಇರುವ ಹೋಟೆಲುಗಳಲ್ಲಿ ಹರಿಜನರ ಸ್ಥಾನಮಾನದ ತಿಳುವಳಿಕೆ ಹರಿಜನರ ಕಿರಿಯರನ್ನು ತಮ್ಮ ಊರಿನ ಆಚಾರವನ್ನು ಪ್ರಶ್ನಿಸುವಂತೆ ಮಾಡಿದೆ. ಇದೇ ರೀತಿಯಲ್ಲಿ ವಲಸೆ ಮತ್ತು ಮೂಲನಿವಾಸಿಗಳಿಗೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ರೂಪಿಸಿಕೊಳ್ಳಲು ಹಲವಾರು ವಿಚಾರಗಳ ಬಗ್ಗೆ ಹೆಚ್ಚಿನ ಓದು ಅಥವಾ ತಿಳುವಳಿಕೆ ಅಗತ್ಯ. ಬೇರೆ ಬೇರೆ ಕಾಲ ಮತ್ತು ಪ್ರದೇಶಗಳಲ್ಲಿ ಮೂಲನಿವಾಸಿಗರು ಮತ್ತು ವಲಸಿಗರ ವ್ಯಾಖ್ಯಾನ, ವಲಸಿಗರು ಮತ್ತು ಮೂಲನಿವಾಸಿಗರು ರೂಪುಗೊಳ್ಳುವಲ್ಲಿ ಸಂಕಥನ ಮತ್ತು ಚಾರಿತ್ರಿಕ ರೂಪುಗೊಳ್ಳುವಿಕೆಯ ಪಾತ್ರ, ಬೇರೆ ಬೇರೆ ಪ್ರದೇಶ ಮತ್ತು ಕಾಲಗಳಲ್ಲಿ ಈ ಸ್ಥಾನಮಾನ (ವಲಸಿಗ ಮತ್ತು ಮೂಲನಿವಾಸಿಗ) ಮತ್ತು ಆರ್ಥಿಕ ಹಾಗೂ ರಾಜಕೀಯ ಬದುಕಿನ ನಡುವೆ ಇರುವ ಸಂಬಂಧ ಇತ್ಯಾದಿಗಳ ಬಗ್ಗೆ ಹೆಚ್ಚಿನ ತಿಳುವಳಿಕೆ ಬೇಕು. ಅಂದರೆ ಉತ್ತಮ ಪ್ರಶ್ನೆಗಳನ್ನು ರೂಪಿಸಲು ಬೇಕಾಗಿರುವ ಬಹುದೊಡ್ಡ ತಯಾರಿಯೆಂದರೆ ಈಗಾಗಲೇ ಆಗಿರುವ ಅಧ್ಯಯನಗಳ ಕನಿಷ್ಠ ಪರಿಚಯ. ಇಂದು ಸಂಸೋಧನೆಗೆ ಆಗದಿರುವ ಯಾವುದೇ ಒಂದು ವಿಷಯ ಇದೆ ಎಂದು ತಿಳಿಯುವುದು ಸರಿಯಲ್ಲ. ನಮ್ಮ ಸುತ್ತಮುತ್ತ ಅಲ್ಲದಿದ್ದರೂ ಬೇರೆ ಕಡೆಗಳಲ್ಲಿ ಅಧ್ಯಯನಗಳಾಗಿರಬಹುದು. ಯಾವುದೇ ವಿಷಯದ ಬಗ್ಗೆ ಸಾಕಷ್ಟು ಸಂಶೋಧನಾ ಪ್ರಬಂಧಗಳು ಮಂಡಿತವಾಗಿರಬಹುದು ಅಥವಾ ಲೇಖನಗಳು ಪ್ರಕಟವಾಗಿರಬಹುದು ಅಥವಾ ಪುಸ್ತಕಗಳು ಬಂದಿರಬಹುದು ಅಥವಾ ಇನ್ಯಾವುದೋ ರೂಪದಲ್ಲಿ ಕೆಲಸಗಳು ಆಗಿರಬಹುದು. ಅವುಗಳ ಬಗ್ಗೆ ಕನಿಷ್ಠ ಮಾಹಿತಿ ಇಲ್ಲದಿದ್ದರೆ ನಾವು ಸಂಶೋಧನೆ ಮಾಡಲು ಹೊರಟಿರುವ ವಿಚಾರದ ಬಗ್ಗೆ ಉತ್ತಮ ಪ್ರಶ್ನೆಗಳನ್ನು ರೂಪಿಸಿಕೊಳ್ಳಲು ಸಾಧ್ಯವಿಲ್ಲ. ಈ ಅಧ್ಯಾಯದ ಪ್ರಸ್ತಾವನೆಯಲ್ಲಿ ಹೇಳಿದಂತೆ ಸಮಸ್ಯೆ ಅಥವಾ ಪ್ರಶ್ನೆಗಳು ಪ್ರಸ್ತಾವದ ಉದ್ದೇಶಗಳನ್ನು ಪ್ರಭಾವಿಸುತ್ತವೆ ಮತ್ತು ಉದ್ದೇಶಗಳು ಅಧ್ಯಯನದ ವಿಧಾನವನ್ನು ಪ್ರಭಾವಿಸುತ್ತವೆ. ಉತ್ತಮ ಪ್ರಶ್ನೆಗಳನ್ನು ರೂಪಿಸಲು ಸಾಕಷ್ಟು ಪ್ರಮಾಣದ ಲಿಟರೇಚರ್ ಸರ್ವೇ ಅಥವಾ ಈಗಾಗಲೇ ಆಗಿರುವ ಅಧ್ಯಯನಗಳ ಸಮೀಕ್ಷೆ ಮಾಡಬೇಕಾಗುತ್ತದೆ.

ನಾವು ಮಾಡುವ ಸಂಶೋಧನಾ ವಿಷಯದ ಕುರಿತು ಈಗಾಗಲೇ ಏನೆಲ್ಲ ಪ್ರಶ್ನೆಗಳನ್ನು ಕೇಳಲಾಗಿದೆ ಎನ್ನುವುದರ ಬಗ್ಗೆ ಈಗಾಗಲೇ ಆಗಿರುವ ಅಧ್ಯಯನಗಳ ಸಮೀಕ್ಷೆ ನಮಗೆ ಮಾಹಿತಿ ನೀಡುತ್ತದೆ. ಈ ಮಾಹಿತಿ ಆಧಾರದಲ್ಲಿ ನಾವು ಯಾವ ಪ್ರಶ್ನೆಗಳನ್ನು ಕೇಳಬಹುದು ಎನ್ನುವ ತೀರ್ಮಾನ ಕೈಗೊಳ್ಳಬಹುದು. ನಾವು ಕೇಳುವ ಪ್ರಶ್ನೆಗಳು ಒಂದೋ ಎಂಪಿರಿಕಲ್ ಸಂಶೋಧನೆಗೆ ಪೂರಕವಾಗಬಹುದು ಅಥವಾ ತಾತ್ವಿಕ ಅಥವಾ ಥಿಯರಿಟಿಕಲ್ ಸಂಶೋಧನೆಗೆ ಪೂರಕವಾಗಬಹುದು. ಹಾಗೆ ನೋಡಿದರೆ ಸಂಶೋಧನೆಯ ಈ ಬಗೆಯ ವರ್ಗೀಕರಣ – ಎಂಪಿರಿಕಲ್ ಮತ್ತು ಥಿಯರಿಟಿಕಲ್ – ಸರಿಯಲ್ಲ. ಎಂಪಿರಿಕಲ್ ಸಂಶೋಧನೆ ಅಂದರೆ ಅಲ್ಲಿ ತಾತ್ವಿಕ ವಿಚಾರಗಳೇ ಇಲ್ಲ ಅಥವಾ ತಾತ್ವಿಕ ಅಂದರೆ ಅಲ್ಲಿ ಎಂಪಿರಿಕಲ್ ಅಂಶವೇ ಇಲ್ಲ ಎಂದು ಪರಿಭಾವಿಸುವುದು ಸರಿಯಲ್ಲ. ಸಮಾಜವಿಜ್ಞಾನ ಸಂಶೋಧನೆಯಲ್ಲಿ ಈ ಎರಡೂ-ತಾತ್ವಿಕ ಮತ್ತು ಎಂಪಿರಿಕಲ್ – ಅಂಶಗಳು ಜತೆ ಜತೆಗೆ ಹೋಗುವುದು ಅಗತ್ಯ. ಥಿಯರಿಯನ್ನು ಅಥವಾ ತಾತ್ವಿಕತೆಯನ್ನು ನಾವು ಬದುಕುವ ಸಮಾಜವನ್ನು ವಿವರಿಸುವ ಒಂದು ಪ್ರಯತ್ನವೆಂದು ಸಮಾಜವಿಜ್ಞಾನದಲ್ಲಿ ಸರಳವಾಗಿ ವ್ಯಾಖ್ಯಾನಿಸಿಕೊಳ್ಳಲಾಗಿದೆ. ಈ ಥಿಯರಿ ಪ್ರಕಾರ ವಾಸ್ತವಿಕತೆ ಇದೆಯೇ ಇಲ್ಲವೇ ಎನ್ನುವ ಅಂಶವನ್ನು ಎಂಪಿರಿಕಲ್ ಮಾಹಿತಿಗಳು ತೋರಿಸುತ್ತವೆ. ಒಂದು ವೇಳೆ ಸಾಮಾಜಿಕ ವಾಸ್ತವಿಕತೆ ಥಿಯರಿ ವಿವರಿಸಿದಂತೆ ಇಲ್ಲದಿದ್ದರೆ ಥಿಯರಿ ಮಾರ್ಪಾಟುಗೊಳ್ಳಬೇಕಾಗುತ್ತದೆ. ಆದುದರಿಂದ ಈಗಾಗಲೇ ಆಗಿರುವ ಅಧ್ಯಯನಗಳನ್ನು ಸಮೀಕ್ಷೆ ಮಾಡುವಾಗ ನಾವು ಮಾಡುವ ಸಂಶೋಧನಾ ವಿಷಯಕ್ಕೆ ಸಂಬಂಧಿಸಿದ ಥಿಯರಿಟಿಕಲ್ ಚರ್ಚೆಯ ತಕ್ಕಮಟ್ಟಿನ ಅರಿವನ್ನು ಕೂಡ ರೂಢಿಸಿಕೊಳ್ಳ ಬೇಕಾಗುತ್ತದೆ. ಥಿಯರಿಟಿಕಲ್ ಚರ್ಚೆ ಕುರಿತ ತಿಳುವಳಿಕೆ ಇಲ್ಲದಿದ್ದರೆ ನಾವು ರೂಪಿಸುವ ಪ್ರಶ್ನೆಗಳು ತುಂಬಾ ಸರಳ ಪ್ರಶ್ನೆಗಳಾಗಬಹುದು. ಆ ಪ್ರಶ್ನೆಗಳಿಗೆ ಕಂಡುಕೊಳ್ಳುವ ಉತ್ತರ ನಮ್ಮ ಸಾಮಾಜಿಕ ಪರಿಸರದ ಬಗ್ಗೆ ಹೆಚ್ಚಿನ ತಿಳುವಳಿಕೆ ಮೂಡಿಸಲು ವಿಫಲವಾಗಬಹುದು. ಮೂಲನಿವಾಸಿಗಳು ಮತ್ತು ವಲಸಿಗರ ಉದಾಹರಣೆಯಲ್ಲಿ ಅವರು ರೂಪುಗೊಳ್ಳುವ ಬಗೆಗಿನ ಪ್ರಶ್ನೆಗಳನ್ನು ರೂಪಿಸಿಕೊಳ್ಳಲು ನಮಗೆ ಎರಡು ಥಿಯರಿಟಿಕಲ್ ಚರ್ಚೆಯ (ಚಾರಿತ್ರಿಕ ರೂಪುಗೊಳ್ಳುವಿಕೆ ಮತ್ತು ಸಂಕಥನದ ಸೃಷ್ಟಿ ಪರಿಚಯ ಅಗತ್ಯ ಎನ್ನುವುದನ್ನು ನಾವು ಕಂಡುಕೊಂಡಿದ್ದೇವೆ. ಅದೇ ರೀತಿಯಲ್ಲಿ ಯಾಕೆ ಸಮಸ್ಯೀಕರಿಸಬೇಕು ಎನ್ನುವ ಪ್ರಶ್ನೆಗೆ ಉತ್ತರಿಸಲು ನಾನು ಇಲ್ಲಿ  ಬಳಸಿಕೊಂಡ ಎಲ್ಲ ಉದಾಹರಣೆಗಳು ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಿಗೆ ಸಂಬಂಧಿಸಿವೆ. ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದ ಕಲ್ಪಿತ ಸತ್ಯಗಳು ಹೇಗೆ ಆರ್ಥಿಕ ಅಥವಾ ರಾಜಕೀಯ ಬದುಕನ್ನು ಪ್ರಭಾವಿಸುತ್ತವೆ ಎಂದು ವಿಶ್ಲೇಷಿಸಿದ್ದೇನೆ. ಎಪ್ಪತ್ತು ಅಥವಾ ಎಂಬತ್ತರ ದಶಕದ ಅಭಿವೃದ್ಧಿ ಚರ್ಚೆ ಬಗ್ಗೆ ಮಾಹಿತಿ ಇರುವವರಿಗೆ ಈ ಬಗೆಯ ಚರ್ಚೆ) ಸಾಮಾಜಿಕ, ಸಾಂಸ್ಕೃತಿಕ ಅಂಶಗಳಿಂದ ಆರ್ಥಿಕ, ರಾಜಕೀಯದ ಕಡೆಗೆ ಬರುವುದು) ಸ್ವಲ್ಪ ಅಸಂಗತ ಅನ್ನಿಸಬಹುದು. ಆದರೆ ಅಭಿವೃದ್ಧಿ ಕ್ಷೇತ್ರದಲ್ಲಿ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ  ಥಿಯರಿಟಿಕಲ್ ಚರ್ಚೆ ಬಗ್ಗೆ ಪರಿಚಯ ಇದ್ದರೆ ಸಾಮಾಜಿಕ, ಸಾಂಸ್ಕೃತಿಕದಿಂದ ಆರ್ಥಿಕ, ರಾಜಕೀಯದ ಕಡೆಗೆ ಬರುವುದು ಅಸಹಜವಾಗುವುದಿಲ್ಲ. ಹಿಂದೆ ಆರ್ಥಿಕ ಪ್ರಗತಿ ಸಾಮಾಜಿಕ ಪರಿವರ್ತನೆಗೆ ಕಾರಣವಾಗುತ್ತವೆ ಎನ್ನುವ ಥಿಯರಿಟಿಕಲ್ ಪೊಸಿಷನ್ ಯಜಮಾನಿಕೆ ಮಾಡುತ್ತಿತ್ತು. ಆದರೆ ಹಲವಾರು ಬಡ ದೇಶಗಳ ಅನುಭವ ಪ್ರಕಾರ ಆರ್ಥಿಕ ಪ್ರಗತಿಯಿಂದ ಸಾಮಾಜಿಕ ಪರಿವರ್ತನೆ ಸಾಧ್ಯವಾಗುವುದಿಲ್ಲ ಎನ್ನುವುದು ಸ್ಪಷ್ಟವಾಯಿತು. ಆ ಹಿನ್ನೆಲೆಯಲ್ಲಿ ಸಾಮಾಜಿಕ, ಸಾಂಸ್ಕೃತಿಕ ಅಂಶಗಳು ಹೇಗೆ ಆರ್ಥಿಕ ರಾಜಕೀಯ ಸ್ಥಾನಮಾನಗಳನ್ನು ಪ್ರಭಾವಿಸುತ್ತವೆ ಎನ್ನುವ ಥಿಯರಿಗಳು ಮುಂಚೂಣಿಗೆ ಬಂದಿವೆ.[3]

ಈ ಎಲ್ಲ ತಾತ್ವಿಕ ಚರ್ಚೆಗಳ ಕನಿಷ್ಠ ಪರಿಚಯ ಇದ್ದರೆ ಮಾತ್ರ ಇಂದಿನ ಸಂದರ್ಭಕ್ಕೆ ಪ್ರಸ್ತುತವಾದ ಪ್ರಶ್ನೆಗಳನ್ನು ಕೇಳಲು ಸಾಧ್ಯ. ಹೀಗೆ ಯಾವ ಬಗೆಯ ಪ್ರಶ್ನೆಗಳನ್ನು  ಕೇಳಬೇಕು ಎನ್ನುವುದನ್ನು ಸಂಶೋಧಕರ ಥಿಯರಿಟಿಕಲ್ ತಿಳುವಳಿಕೆ ಕೂಡ ಪ್ರಭಾವಿಸುತ್ತದೆ.

ಅಧ್ಯಯನದ ಉದ್ದೇಶ ಮತ್ತು ವಿಧಾನ

ಸಂಶೋಧನೆಯ ಉದ್ದೇಶಗಳು ಒಂದು ನಿರ್ದಿಷ್ಟ ಸಂಶೋಧನಾ ಯೋಜನೆಯಡಿಯಲ್ಲಿ ಬರುವ ಒಟ್ಟು ಕೆಲಸಗಳ ಒಂದು ಸ್ಥೂಲ ಚಿತ್ರಣವನ್ನು ಕೊಡುತ್ತವೆ. ಸಮಸ್ಯೆ ರೂಪದಲ್ಲಿ ಎತ್ತಿದ ಪ್ರಶ್ನೆಗಳಿಗೆ ಉತ್ತರ ಹುಡುಕುವ ಕೆಲಸವನ್ನು ಉದ್ದಶ ಸೂಚಿಸುತ್ತದೆ. ಇದನ್ನೇ ಇನ್ನೊಂದು ವಿಧದಲ್ಲಿ ಹೇಳುವುದಾದರೆ ಯೋಜನೆ ಏನನ್ನು ಶೋಧಿಸಲು ಅಥವಾ ಪರೀಕ್ಷಿಸಲು ಅಥವಾ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಿದೆ ಎನ್ನುವುದನ್ನು ಉದ್ದೇಶ ಹೇಳುತ್ತದೆ. ಅಧ್ಯಯನದ ಉದ್ದೇಶಗಳು ಸಂಶೋಧನಾ ಕೆಲಸಕ್ಕೆ ಒಂದು ಮಾರ್ಗ ಸೂಚಿಯಂತೆ ಕೆಲಸ ಮಾಡುತ್ತವೆ. ಅಧ್ಯಯನದ ದಿಕ್ಕುದಿಶೆಗಳನ್ನು ಅಚ್ಚುಕಟ್ಟಾಗಿ ರೂಪಿಸಲು ಕೇವಲ ಅಧ್ಯಯನ ಉದ್ದೇಶಗಳು ಇದ್ದರೆ ಸಾಲದು, ಅಧ್ಯಯನದ ಪ್ರಮೇಯಗಳು ಅಥವಾ ಪೂರ್ವ ತೀರ್ಮಾನಗಳು ಬೇಕು ಎನ್ನುವ ವಾದಗಳು ಇವೆ. ಅಧ್ಯಯನದ ಪ್ರಮೇಯಗಳನ್ನು ರೂಪಿಸುವುದು ಕಷ್ಟದ ಕೆಲಸವೇನಲ್ಲ. ಅಚ್ಚುಕಟ್ಟಾದ ಅಧ್ಯಯನದ ಉದ್ದೇಶಗಳು ರೂಪಿತವಾದರೆ ಅಷ್ಟೇ ಅಚ್ಚುಕಟ್ಟಾದ ಪ್ರಮೇಯಗಳನ್ನು ರೂಪಿಸಿದಂತೆ. ಯಾಕೆಂದರೆ ಅಧ್ಯಯನ ಉದ್ದೇಶಗಳು ಅಧ್ಯಯನದ ಪ್ರಮೇಯಗಳನ್ನು ಅಥವಾ ಪೂರ್ವ ತೀರ್ಮಾನಗಳನ್ನು ನಿರ್ಧರಿಸುತ್ತವೆ. ಈ ರೀತಿಯಲ್ಲಿ ರೂಪುಗೊಂಡ ಪ್ರಮೇಯಗಳು ಅಥವಾ ಪೂರ್ವ ತೀರ್ಮಾನಗಳು ಅಧ್ಯಯನದ ದಿಕ್ಕುದಿಶೆಗಳನ್ನು ತೀರ್ಮಾನಿಸಲು ಸಹಕಾರಿಯಾಗುತ್ತವೆ. ಅದು ಹೇಗೆಂದರೆ ಅಧ್ಯಯನ ಉದ್ದೇಶಗಳು ಸಂಶೋಧನೆಯಡಿಯಲ್ಲಿ ಕೈಗೊಳ್ಳಲಿರುವ ಒಟ್ಟು ಕೆಲಸಗಳ ಒಂದು ಸ್ಥೂಲ ಚಿತ್ರಣವನ್ನು ನೀಡಿದರೆ ಪೂರ್ವ ತೀರ್ಮಾನಗಳು ಅಧ್ಯಯನ ಸಾಗಬೇಕಾದ ದಾರಿಯ ಒಂದು ಸ್ಪಷ್ಟ ಚಿತ್ರಣವನ್ನು ನೀಡುತ್ತವೆ. ಹಾಗೆಂದು ಪೂರ್ವ ತೀರ್ಮಾನಗಳು ಅಧ್ಯಯನ ಉದ್ದೇಶಗಳಂತೆ ಸಂಶೋಧನಾ ಪ್ರಸ್ತಾವದ ಭಾಗವಾಗಲೇಬೇಕೆಂದಿಲ್ಲ. ಇದನ್ನೇ ಮತ್ತೊಂದು ರೀತಿಯಲ್ಲಿ ಹೇಳುವುದಾದರೆ ಅಧ್ಯಯನ ಉದ್ದೇಶಗಳನ್ನು ತಿಳಿಸದ ಪ್ರಸ್ತಾವ ಇರಲು ಸಾಧ್ಯವಿಲ್ಲ. ಆದರೆ ಪೂರ್ವ ತೀರ್ಮಾನಗಳನ್ನು ನೀಡದ ಅಧ್ಯಯನ ಪ್ರಸ್ತಾವ ಸಾಧ್ಯ. ಹೀಗೆ ಪ್ರಮೇಯಗಳು ಅಥವಾ ಪೂರ್ವ ತೀರ್ಮಾನಗಳು ಅಧ್ಯಯನದ ಉದ್ದೇಶಗಳನ್ನು ಇನ್ನೂ ಸ್ಪಷ್ಟಪಡಿಸುವ ಕೆಲಸವನ್ನು ಮಾಡುತ್ತವೆಯಾದರೂ ಅವು ಅಧ್ಯಯನ ಪ್ರಸ್ತಾವಕ್ಕೆ ಅನಿವಾರ್ಯವಲ್ಲ.

ಸಮಸ್ಯೆ ಸಂಶೋಧನೆಯ ಉದ್ದೇಶವನ್ನು ನಿರ್ಧರಿಸುತ್ತದೆ ಅಥವಾ ಪ್ರಭಾವಿಸುತ್ತದೆ ಎಂದು ಪ್ರಸ್ಥಾವನೆಯಲ್ಲಿ ಹೇಳಿದ್ದೇನೆ. ಅದು ಹೇಗೆ ಅಧ್ಯಯನ ಉದ್ದೇಶವನ್ನು ಪ್ರಭಾವಿಸುತ್ತದೆ ಎಂದು ನೋಡೋಣ. ಸಮಸ್ಯೀಕರಿಸುವುದು ಏಕೆಂದು ವಿವರಿಸಲು ಹಲವಾರು ಉದಾಹರಣೆಗಳನ್ನು ನಾವು ಹಿಂದಿನ ಪುಟಗಳಲ್ಲಿ ನೋಡಿದ್ದೇವೆ. ಅವುಗಳಲ್ಲಿ ಒಂದನ್ನು ಬಳಸಿಕೊಂಡು ಸಮಸ್ಯೆ ಮತ್ತು ಉದ್ದೇಶಗಳ ನಡುವೆ ಇರುವ ಸಂಬಂಧವನ್ನು ಪರೀಕ್ಷಿಸೋಣ. ದಕ್ಷಿಣ ಕನ್ನಡ ಜಿಲ್ಲೆಯ ಪರಶುರಾಮ ಸೃಷ್ಟಿಯ ಐತಿಹ್ಯದ ಉದಾಹರಣೆಯಲ್ಲಿ ಎತ್ತಿದ ಸಮಸ್ಯೆಗಳ ಅಥವಾ ಪ್ರಶ್ನೆಗಳ ಹಿನ್ನೆಲೆಯಲ್ಲಿ ಯಾವೆಲ್ಲ ಉದ್ದೇಶಗಳನ್ನು ರೂಪಿಸಬಹುದೆಂದು ನೋಡೋಣ. ಅಲ್ಲಿ ಈ ಕೆಳಗಿನ ಮೂರು ಮುಖ್ಯ ಪ್ರಶ್ನೆಗಳನ್ನು ಎತ್ತಲಾಗಿದೆ. ಒಂದು, ವಲಸಿಗರು ಅಥವಾ ಮೂಲನಿವಾಸಿಗರನ್ನು ಗುರುತಿಸುವ ಮಾನದಂಡವೇನು? ಎರಡು, ವಲಸಿಗರು ಮತ್ತು ಮೂಲನಿವಾಸಿಗರು ರೂಪುಗೊಳ್ಳುವ ಬಗೆ ಏನು? ಅಥವಾ ವಲಸಿಗರು ಮತ್ತು ಮೂಲನಿವಾಸಿಗಳು ಚಾರಿತ್ರಿಕ ರೂಪುಗೊಳ್ಳುವಿಕೆಯೇ ಅಥವಾ ಒಂದು ಸಂಕಥನದ ಸೃಷ್ಟಿಯೇ? ಮೂರು, ವಲಸಿಗರು ಮತ್ತು ಮೂಲನಿವಾಸಿಗರ ಸ್ಥಿತಿ ಮತ್ತು ಅವರ ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಗತಿಗಳ ನಡುವೆ ಸಂಬಂಧ ಇದೆಯೇ? ಪರಶುರಾಮ ಸೃಷ್ಟಿಯ ಐತಿಹ್ಯವನ್ನು ಸಮಸ್ಯೀಕರಿಸುವುದು ಈ ಅಧ್ಯಯನದ ಮುಖ್ಯ ಉದ್ದೇಶ. ಈ ಮುಖ್ಯ ಉದ್ದೇಶಕ್ಕೆ ಪೂರಕವಾಗಿ, ಮೇಲೆ ಎತ್ತಿದ ಪ್ರಶ್ನೆಗಳ ಹಿನ್ನೆಲೆಯಲ್ಲಿ ಈ ಕೆಳಗಿನ ನಿರ್ದಿಷ್ಟ ಉದ್ದೇಶಗಳನ್ನು ರೂಪಿಸಿಕೊಳ್ಳಬಹುದು. ಒಂದು, ವಲಸಿಗರು ಮತ್ತು ಮೂಲ ನಿವಾಸಿಗರನ್ನು ಗುರುತಿಸುವ ಮಾನದಂಡಗಳನ್ನು ಪರೀಕ್ಷಿಸುವುದು. ಎರಡು, ವಲಸಿಗರು ಮತ್ತು ಮೂಲನಿವಾಸಿಗರು ರೂಪುಗೊಳ್ಳುವಿಕೆಯ ಬಗೆಯನ್ನು ಅರ್ಥ ಮಾಡಿಕೊಳ್ಳುವುದು. ಮೂರು, ವಲಸಿಗರು ಮತ್ತು ಮೂಲನಿವಾಸಿಗರ ರೂಪುಗೊಳ್ಳುವಿಕೆಯಲ್ಲಿ ಚಾರಿತ್ರಿಕ ರೂಪುಗೊಳ್ಳುವಿಕೆ ಮತ್ತು ಸಂಕಥನದ ಪಾತ್ರವನ್ನು ವಿಶ್ಲೇಷಿಸುವುದು. ನಾಲ್ಕು, ವಲಸಿಗ ಮತ್ತು ಮೂಲನಿವಾಸಿಗರ ಸ್ಥಿತಿ ಮತ್ತು ಸಾಮಾಜಿಕ, ಆರ್ಥಿಕ ಸ್ಥಿತಿಗತಿ ನಡುವೆ ಇರುವ ಸಂಬಂಧವನ್ನು ಅಳೆಯುವುದು. ಈ ಉದ್ದೇಶಗಳನ್ನು ಗಮನದಲ್ಲಿಟ್ಟುಕೊಂಡು ಕನಿಷ್ಠ ಎರಡು ಪೂರ್ವ ತೀರ್ಮನಗಳನ್ನು ಅಥವಾ ಪ್ರಮೇಯಗಳನ್ನು ರೂಪಿಸಬಹುದು. ವಲಸಿಗರು ಮತ್ತು ಮೂಲನಿವಾಸಿಗರ ರೂಪುಗೊಳ್ಳುವಿಕೆಯಲ್ಲಿ ಚಾರಿತ್ರಿಕ ರೂಪುಗೊಳ್ಳುವಿಕೆಯಿಂದ ಸಂಕಥನದ ಪಾತ್ರ ಹೆಚ್ಚಿದೆ ಎನ್ನುವುದು ಮೊದಲ ಪ್ರಮೇಯ. ಈ ಸ್ಥಾನಮಾನ (ವಲಸಿಗ ಅಥವಾ ಮೂಲನಿವಾಸಿಗ ಸ್ಥಾನಮಾನ) ಮತ್ತು ಆರ್ಥಿಕ ಹಾಗೂ ರಾಜಕೀಯ ಸ್ಥಾನಮಾನದ ನಡುವೆ ನೇರ ಸಂಬಂಧ ಇದೆ ಎನ್ನುವುದು ಎರಡನೆಯ ಪ್ರಮೇಯ.

ಅಧ್ಯಯನದ ಸಮಸ್ಯೆ ಉದ್ದೇಶವನ್ನು ನಿರ್ಧರಿಸಿದರೆ ಉದ್ದೇಶಗಳು ಅಧ್ಯಯನದ ವಿಧಾನವನ್ನು ನಿರ್ಧರಿಸುತ್ತದೆ ಅಥವಾ ಪ್ರಭಾವಿಸುತ್ತದೆ. ಸಂಶೋಧನಾ ಉದ್ದೇಶಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಯಾವ ಮೂಲದಿಂದ ಮತ್ತು ಹೇಗೆ ಸಂಗ್ರಹಿಸಲಾಗುವುದು ಎನ್ನುವ ವಿವರಗಳನ್ನು ಸಂಶೋಧನಾ ವಿಧಾನದಲ್ಲಿ ನೀಡಲಾಗುವುದು. ವಿವಿಧ ವಿಧಾನಗಳ ಮೂಲಕ ಸಂಗ್ರಹಿಸಿದ ಮಾಹಿತಿಯನ್ನು ಹೇಗೆ ವಿಶ್ಲೇಷಿಸಲಾಗಿದೆ ಎನ್ನುವ ಅಂಶ ಕೂಡ ವಿಧಾನದ ವಿವರಣೆ ಜತೆ ಸೇರಿರುತ್ತದೆ. ಹಲವಾರು ಸಂಶೋಧನಾ ವಿಧಾನಗಳಿವೆ. ಮಾಹಿತಿ ಸಂಗ್ರಹಿಸುವ ಮತ್ತು ವಿಶ್ಲೇಷಿಸುವ ಕ್ರಮಗಳು ನಾವು ಆಯ್ಕೆ ಮಾಡಿಕೊಳ್ಳುವ ವಿಧಾನದ ಮೇಲೆ ನಿಂತಿದೆ. ಒಂದು ಕಾಲದಲ್ಲಿ ಯಾವುದಾದರೂ ಒಂದು ವಿಧಾನದಲ್ಲಿ ಮಾಹಿತಿ ಸಂಗ್ರಹಿಸುವುದು ಮತ್ತು ವಿಶ್ಲೇಷಿಸುವುದು ಸಾಮಾನ್ಯವಾಗಿತ್ತು. ಆದರೆ ಇಂದು ಸಮಾಜ ವಿಜ್ಞಾನ ಸಂಶೋಧನೆ  ಯಾವುದಾದರೂ ಒಂದು ವಿಧಾನಕ್ಕೆ ಅಂಟಿಕೊಳ್ಳುವುದು ಸಾಧ್ಯವಿಲ್ಲ. ಒಂದು ಅಥವಾ ಹಲವು ವಿಧಾನಗಳ ಮೂಲಕ ಸಂಶೋಧನಾ ಉದ್ದೇಶಕ್ಕೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸಬೇಕಾಗುತ್ತದೆ ಮತ್ತು ವಿಶ್ಲೇಷಿಸಬೇಕಾಗುತ್ತದೆ. ಪ್ರತಿ ವಿಧಾನಕ್ಕೂ ಅದರದ್ದೇ ಆದ ತಾತ್ವಿಕ ಹಿನ್ನೆಲೆ ಇದೆ. ತಾವು ಬಳಸುವ ವಿಧಾನದ ತಾತ್ವಿಕ ಹಿನ್ನೆಲೆಯ ಅರಿವು ಇದ್ದು ಒಂದು ವಿಧಾನವನ್ನು  ಬಳಸಿದರೆ ಸಂಶೋಧಕರು ತಮ್ಮ ತಾತ್ವಿಕ ನಿಲುವಿಗೆ ಅನುಸಾರ ಆ ವಿಧಾನವನ್ನು ಬಳಸಿಕೊಳ್ಳಬಹುದು. ಒಂದು ವೇಳೆ ಸಂಶೋಧಕರು ತಾವು ಬಳಸುವ ವಿಧಾನದ ತಾತ್ವಿಕ ಹಿನ್ನೆಲೆಯ ಅರಿವಿಲ್ಲದೆ ಬಳಸಿದರೆ ಸಂಶೋಧಕರು ತಮಗೆ ಅರಿವಿಲ್ಲದೆಯೇ ಆ ವಿಧಾನದಲ್ಲಿ ಅಂತರ್ಗತಗೊಂಡಿರುವ ತಾತ್ವಿಕ ಹಿನ್ನೆಲೆಯಿಂದ ಪ್ರಭಾವಿತರಾಗಬೇಕಾಗುತ್ತದೆ. ಕೇಸ್ ಸ್ಟಡಿ, ಅವಲೋಕನ, ಸಹಭಾಗಿತ್ವ ಅವಲೋಕನ, ಪ್ರಶ್ನಾವಳಿ, ಸಂದರ್ಶನ, ಗುಂಪು ಚರ್ಚೆ, ಸಹಭಾಗಿತ್ವ ಮಾಹಿತಿ ಸಂಗ್ರಹ ಇತ್ಯಾದಿ ವಿಧಾನಗಳಿಂದ ಮಾಹಿತಿ ಸಂಗ್ರಹಿಸಬಹುದು. ಯಾವ ವಿಧಾನದಿಂದ ಮಾಹಿತಿ ಸಂಗ್ರಹಿಸಬೇಕೆನ್ನುವುದನ್ನು ಹಲವಾರು ವಿಚಾರಗಳು ನಿರ್ಧರಿಸುತ್ತವೆ. ಅಧ್ಯಯನ ಉದ್ದೇಶಗಳು, ಸಂಶೋಧನೆಯನ್ನು ಮುಗಿಸಲು ಇರುವ ಅವಧಿ, ಸಂಸೋಧಕರ ಸಂಪನ್ಮೂಲದ ಸ್ಥಿತಿಗತಿ ಇತ್ಯಾದಿಗಳು ಮಾಹಿತಿ ಸಂಗ್ರಹಿಸಲು ಬಳಸುವ ವಿದಾನವನ್ನು ಪ್ರಭಾವಿಸುತ್ತವೆ.

ಸಂಶೋಧನಾ ಸಮಸ್ಯೆ ಮತ್ತು ವಿಧಾನದ ನಡುವೆ ಇರುವ ಸಂಬಂಧವನ್ನು ಅರ್ಥ ಮಾಡಿಕೊಳ್ಳುವ ಕೆಲಸ ಆಗಬೇಕಾಗಿದೆ. ಯಾವ ಮೂಲದಿಂದ ಮತ್ತು ಯಾವ ವಿಧಾನದಲ್ಲಿ ಅಧ್ಯಯನದ ಉದ್ದೇಶಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತದೆ ಎನ್ನುವ ವಿವರಗಳನ್ನು ವಿಧಾನ ತಿಳಿಸುತ್ತದೆ. ಸಂಶೋಧನೆಗೆ ಎತ್ತಿಕೊಂಡ ವಿಷಯಕ್ಕೆ ಸಂಬಂಧಿಸಿದ ಮುಖ್ಯ ಮಾಹಿತಿಗಳೇನು ಎನ್ನುವುದು ಮೊದಲಿಗೆ ನಿರ್ಣಯವಾಗಬೇಕು. ಸಂಶೋಧನಾ ಸಮಸ್ಯೆ ಅಥವಾ ಪ್ರಶ್ನೆಗಳಿಗೆ ಉತ್ತರಿಸಲು ಅಗತ್ಯವಿರುವ ಮಾಹಿತಿಗಳನ್ನು ಸಂಶೋಧನೆಯ ಉದ್ದೇಶಗಳು ನಿರ್ಣಯಿಸುತ್ತವೆ. ನಾವು ಮೇಲೆ ಚರ್ಚೆ ಮಾಡಿದ ಪರಶುರಾಮ ಸೃಷ್ಟಿಯ ಉದಾಹರಣೆಯೊಂದಿಗೆ ಸಂಶೋಧನೆಗೆ ಅಗತ್ಯವಿರುವ ಮಾಹಿತಿಗಳ ಪಟ್ಟಿಯನ್ನು ಮಾಡೋಣ. ಈ ಉದಾಹರಣೆಯಲ್ಲಿ ಹಲವು ಉದ್ದೇಶಗಳಿವೆ. ಒಂದು, ಬೇರೆ ಬೇರೆ ಕಾಲ ಮತ್ತು ಪ್ರದೇಶಗಳಲ್ಲಿ ಯಾರನ್ನು ವಲಸಿಗರು ಮತ್ತು ಯಾರನ್ನು ಮೂಲನಿವಾಸಿಗರೆಂದು ತೀರ್ಮಾನಿಬೇಲಾಗಿದೆ? ಯಾವ ಕಾರಣಕ್ಕಾಗಿ ಅತವಾ ಯಾವ ಮಾನದಂಡ ಬಳಿಸಿ ಆ ತೀರ್ಮಾನಕ್ಕೆ ಬರಲಾಗಿದೆ? ಎರಡು, ವಲಸಿಗರು ಮತ್ತು ಮೂಲನಿವಾಸಿಗರ ರೂಪುಗೊಳ್ಳುವಿಕೆಯಲ್ಲಿ ಚಾರಿತ್ರಿಕ ರೂಪುಗೊಳ್ಳುವಿಕೆ ಮತ್ತು ಸಂಕಥನದ ಪಾತ್ರವನ್ನು ವಿಶ್ಲೇಷಿಸಬೇಕಾಗಿದೆ. ಚಾರತ್ರಿಕ ಮಾಹಿತಿ ಮತ್ತು ಅಂಕಿ ಅಂಶಗಳನ್ನು ಮೇಲಿನ ಎರಡು ವಿಚಾರಗಳಿಗೆ ಸಂಬಂಧಿಸಿದಂತೆ ಸಂಗ್ರಹಿಸಬೇಕಾಗುತ್ತದೆ. ಎರಡು ರೀತಿಯ ಚಾರಿತ್ರಿಕ ಮಾಹಿತಿಗಳಿವೆ. ಒಂದು ಪ್ರಾಥಮಿಕ ಮತ್ತು ಎರಡು ಆನುಷಂಗಿಕ. ಪ್ರಾಥಮಿಕ ಮಾಹಿತಿ ಮೂಲಗಳು – ಸಂದರ್ಶನ, ಅವಲೋಕನ, ಚಾರಿತ್ರಿಕ ದಾಖಲೆಗಳ ಅವಲೋಕನ. ಡೈರಿಗಳು, ಕ್ರೋನಿಕಲ್ಸ್, ಕಚೇರಿ ಕಡತಗಳು, ಶಾಸನಗಳು, ಪತ್ರಗಳು ಇತ್ಯಾದಿಗಳು ಮುಖ್ಯವಾಗಿರುವ ಚಾರಿತ್ರಿಕ ದಾಖಲೆಗಳು. ಆನುಷಂಗಿಕ ಮಾಹಿತಿ ಮೂಲಗಳು ಪ್ರಕಟಿತ ಮತ್ತು ಅಪ್ರಕಟಿತ ಲೇಖನಗಳು, ಪ್ರಬಂಧಗಳು, ಮಹಾ ಪ್ರಬಂಧಗಳು ಮತ್ತು ಪುಸ್ತಕಗಳು. ಇಲ್ಲೂ ಪರಿಮಾಣಾತ್ಮಕ (ಕ್ವಾಂಟಿಟೇಟಿವ್) ಹಾಗೂ ಗುಣಾತ್ಮಕ (ಕ್ವಾಲಿಟೇಟಿವ್) ಅಂಶಗಳಿವೆ. ಉದಾಹರಣೆಗೆ ಯಾವುದೋ ಒಂದು ನಿರ್ದಿಷ್ಟ ಚಾರಿತ್ರಿಕ ಸಂದರ್ಭದಲ್ಲಿ ಆದ ಜನಸಂಖ್ಯಾ ಬದಲಾವಣೆಯನ್ನು ಗುರುತಿಸಲು ಅಂಕಿ ಅಂಶಗಳು ಬೇಕಾಗುತ್ತವೆ. ಅವುಗಳನ್ನು ಆ ಚಾರಿತ್ರಿಕ ಸಂದರ್ಭದ ಜನಗಣತಿಯಿಂದ (ಜನಗಣತಿ ಇದ್ದರೆ) ಅಥವಾ ಸಂಬಂಧಪಟ್ಟ ಇತರ ಮೂಲಗಳಿಂದ ಸಂಗ್ರಹಿಸಬೇಕಾಗುತ್ತದೆ. ಇನ್ನು ವಲಸಿಗ ಮತ್ತು ಮೂಲನಿವಾಸಿಗ ಸ್ಥಿತಿ ಮತ್ತು ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿ ನಡುವೆ ಇರುವ ಸಂಬಂಧವನ್ನು ಅಳೆಯಲು ಕೆಲವೊಂದು ಸೂಚ್ಯಂಕಗಳನ್ನು ರೂಪಿಸಿಕೊಳ್ಳಬೇಕಾಗುತ್ತದೆ. ಆ ಸೂಚ್ಯಂಕಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಪ್ರಾಥಮಿಕ ಮತ್ತು ಆನುಷಂಗಿಕ ಮೂಲಗಳಿಂದ ಪಡೆಯಬಹುದು. ಆ ಮೂಲಗಳು ಯಾವುವು ಮತ್ತು ಅವುಗಳನ್ನು ಯಾವ ವಿಧಾನದಿಂದ ಸಂಗ್ರಹಿಸಲಾಗುವುದು ಎನ್ನುವ ವಿವರಗಳನ್ನು ನೀಡಬೇಕಾಗುತ್ತದೆ. ಸಂಗ್ರಹಿಸಿದ ಮಾಹಿತಿಯನ್ನು ವಿಶ್ಲೇಷಿಸುವ ವಿಧಾನವನ್ನು ಕೂಡ ವಿಧಾನದಲ್ಲಿ ತಿಳಿಸಬೇಕಾಗುತ್ತದೆ.

ಈ ಅಧ್ಯಾಯದಲ್ಲಿ ಸಮಸ್ಯೆ ಮತ್ತು ಸಮಸ್ಯೀಕರಿಸುವುದು ಅಂದರೇನು? ಯಾಕೆ ಸಮಸ್ಯೀಕರಿಸಬೇಕು? ಮತ್ತು ಹೇಗೆ ಸಮಸ್ಯೀಕರಿಸಬೇಕು? ಇತ್ಯಾದಿ ವಿಚಾರಗಳನ್ನು ಚರ್ಚಿಸಲಾಯಿತು. ಸಮಸ್ಯೆಯನ್ನು ಪ್ರಶ್ನೆ ಕೇಳುವುದೆಂದು ವ್ಯಾಖ್ಯಾನಿಸಿಕೊಳ್ಳಲಾಯಿತು. ಸಂಶೋಧನೆಯಲ್ಲಿ ಒಂದು ಅಥವಾ ಹಲವು ಮುಖ್ಯ ಪ್ರಶ್ನೆಗಳು ಮತ್ತು ಹಲವು ಪೂರಕ ಪ್ರಶ್ನೆಗಳು ಪ್ರಸ್ತಾವದ ಭಾಗವಾಗಿರುತ್ತವೆ ಎನ್ನಲಾಗಿದೆ. ಸಂಶೋಧನಾ ಸಮಸ್ಯೆಗಳು ಮತ್ತು ದಿನನಿತ್ಯದ ಸಮಸ್ಯೆಗಳ ನಡುವಿನ ವ್ಯತ್ಯಾಸವನ್ನು ಸಮಾಜದಲ್ಲಿನ ವರ್ಗ ಪ್ರಶ್ನೆಯೊಂದಿಗೆ ಸಮೀಕರಿಸಿ ನೋಡಲಾಗಿದೆ. ವರ್ಗಸಹಿತ ಸಮಾಜದಲ್ಲಿ ಸಂಶೋಧನಾ ಸಮಸ್ಯೆಗೂ ವಿವಿಧ ವರ್ಗಕ್ಕೆ ಸೇರಿದ ಜನರ ಅಥವಾ ಜನಸಾಮಾನ್ಯರ ಸಮಸ್ಯೆ ನಡುವೆ ವ್ಯತ್ಯಾಸ ಇದೆ. ನಿಜವಾದ ವರ್ಗರಹಿತ ಸಮಾಜದಲ್ಲಿ ಈ ಬಗೆಯ ವ್ಯತ್ಯಾಸ ಇರಲಿಕ್ಕಿಲ್ಲ ಅಥವಾ ವರ್ಗರಹಿತ ಸಮಾಜದ ಲಕ್ಷಣದಲ್ಲಿ ಈ ಬಗೆಯ ವ್ಯತ್ಯಾಸಗಳು ಕಡಿಮೆ ಆಗುವುದು ಎಂದು ವಾದಿಸಲಾಗಿದೆ. ಯಾಕೆ ಸಮಸ್ಯೀಕರಿಸಬೇಕು ಎನ್ನುವ ವಿಚಾರವನ್ನು ವಿವರಿಸಲು ಈ ಅಧ್ಯಾಯ ಹೆಚ್ಚಿನ ಮುತುವರ್ಜಿ ವಹಿಸಿದೆ. ಹಲವಾರು ಕಲ್ಪಿತ ಅಥವಾ ರಚಿತ ಸಿದ್ಧಾಂತಗಳು ಮತ್ತು ನಂಬಿಕೆಗಳು ಮಾನವರ ನಡುವೆ ಕಂದರಗಳನ್ನು ಸೃಷ್ಟಿಸಿವೆ. ಹಲವಾರು ಶತಮಾನಗಳಿಂದ ಅವುಗಳನ್ನು ನಂಬಿಕೊಂಡು ಬಂದಿರುವುದರಿಂದ ಅಥವಾ ಪ್ರಶ್ನಿಸದೆ ಆಚರಿಸಿಕೊಂಡು ಬಂದಿರುವುದರಿಂದ ಅವು ಒಂದು ಬಗೆಯ ಪ್ರಾಕೃತಿಕ ಸತ್ಯದ ಸ್ಥಾನವನ್ನು ಪಡೆದಿವೆ. ಪ್ರಾಕೃತಿಕ ಸತ್ಯಗಳನ್ನು ಒಪ್ಪಿಕೊಳ್ಳುವುದು ಬಿಟ್ಟರೆ ಬೇರೆ ದಾರಿಯೇ ಇಲ್ಲ. ಸೂರ್ಯ ಪೂರ್ವದಲ್ಲಿ ಉದಯಿಸುವುದು ಅಥವಾ ಭೂಮಿ ಸೂರ್ಯನ ಸುತ್ತು ಬರುವುದು ಇತ್ಯಾದಿಗಳನ್ನು ಒಪ್ಪಿಕೊಳ್ಳದೆ ಬೇರೆ ದಾರಿಯೇ ಇಲ್ಲ. ಹಲವಾರು ಸಾಮಾಜಿಕ ಮತ್ತು ಸಾಂಸ್ಕೃತಿಕ ಆಚರಣೆಗಳು ಮತ್ತು ನಂಬಿಕೆಗಳು ಹೆಚ್ಚು ಕಡಿಮೆ ಇದೇ ಸ್ಥಾನವನ್ನು ಪಡೆದಿವೆ. ಮಹಿಳೆ ಪುರುಷನಿಗಿಂತ ಕೆಳಗಿನ ಸ್ಥಾನದಲ್ಲಿರುತ್ತಾಳೆ. ದಲಿತರು ಸಮಾಜದ ಅಂಚಿನಲ್ಲಿರಬೇಕಾದವರು, ಸಮಾಜದಲ್ಲಿ ಏಣಿಶ್ರೇಣಿ ಇರುವುದು ಸಹಜ ಇತ್ಯಾದಿ ವಿಚಾರಗಳು ಒಂದು ಬಗೆಯ ಸರ್ವಸತ್ಯದ ರೂಪು ಪಡೆದಿವೆ. ಆದುದರಿಂದ ಆ ನಂಬಿಕೆಗಳಿಗೆ ಅನುಸಾರ ಸಾಮಾಜಿಕ ವ್ಯವಹಾರ ನಡೆಯುವುದು ಸಹಜವಾಗುತ್ತದೆ. ಇದೊಂದು ಪ್ರಶ್ನಿಸಬೇಕಾದ ಅಥವಾ ಸಮಸ್ಯೀಕರಿಸಬೇಕಾದ ವಿಚಾರಗಳೆಂದು ಅನ್ನಿಸುವುದೇ ಇಲ್ಲ. ಇವು ಸಹಜ ಅಲ್ಲ, ಇವು ಪ್ರಾಕೃತಿಕ ಸತ್ಯಗಳಲ್ಲ ಎಂದಾಗಬೇಕಾದರೆ ಈ ಎಲ್ಲವನ್ನು ಪ್ರಶ್ನಿಸಬೇಕಾಗುತ್ತದೆ. ಈ ಕೆಲಸವನ್ನು ಸಮಸ್ಯೆ ಅಥವಾ ಸಮಸ್ಯೀಕರಿಸುವುದು ಯಾಕೆ ಎನ್ನುವ ಭಾಗದಲ್ಲಿ ಹೇಳಲಾಗಿದೆ. ಸಮಸ್ಯೀಕರಿಸುವುದು ಹೇಗೆ ಎನ್ನುವುದನ್ನು ದಕ್ಷಿಣ ಕನ್ನಡ ಜಿಲ್ಲೆಯ ಪರಶುರಾಮ ಸೃಷ್ಟಿಯ ಉದಾಹರಣೆಯೊಂದಿಗೆ ವಿವರಿಸಲಾಗಿದೆ. ಮುಖ್ಯ ಪ್ರಶ್ನೆಗಳು ಮತ್ತು ಪೂರಕ ಪ್ರಶ್ನೆಗಳನ್ನು ರೂಪಿಸುವ ಕ್ರಮವನ್ನು ಈ ಭಾಗದಲ್ಲಿ ನೋಡಿದ್ದೇವೆ. ಸಮಸ್ಯೆ ಮತ್ತು ಅಧ್ಯಯನದ ಉದ್ದೇಶ ನಡುವೆ ಇರುವ ಸಂಬಂಧ ಮತ್ತು ಉದ್ದೇಶ ಮತ್ತು ಅಧ್ಯಯನದ ವಿಧಾನ ಇರುವ ಸಂಬಂಧವನ್ನು ನಂತರದ ಭಾಗದಲ್ಲಿ ವಿವರಿಸಲಾಗಿದೆ.

* * *

[1] ಕೋಮು ಗಲಭೆಗಳು ಮತ್ತು ಅವುಗಳಿಂದ ಆಗುವ ಪರಿಣಾಮಗಳ ಬಗ್ಗೆ ಸಾಕಷ್ಟು ಅಧ್ಯಯನಗಳಿವೆ. ಅವುಗಳನ್ನೆಲ್ಲ ಪರಾಮರ್ಶಿಸಿ ಮೇಲಿನ ವಿವರಗಳನ್ನು ನೀಡಿಲ್ಲ. ಮೇಲಿನ ವಿವರಣೆ ಕೊಡುವಾಗ ನನ್ನ ಕಣ್ಣ ಮುಂದೆ ಇದ್ದುದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಕೋಮು ಗಲಭೆಗಳು ಮತ್ತು ಅಲ್ಲಿ ಎರಡು ಕೋಮಿನ ನಡುವೆ ಸೃಷ್ಟಿಯಾದ ಕಂದಕ. ಈ ಕುರಿತು ನಾನು ಒಂದು ಲೇಖನವನ್ನು ಬರೆದಿದ್ದೇನೆ. ಆ ಲೇಖನವನ್ನು ಆಧರಿಸಿ ನಾನು ಮೇಲಿನ ವಿವರಗಳನ್ನು ಕೊಟ್ಟಿದ್ದೇನೆ. ಆ ಲೇಖನದ ವಿವರ ಇಂತಿದೆ. ಎಂ. ಚಂದ್ರ ಪೂಜಾರಿ, ‘ಪೋರ‍್ಮೆಡ್/ ಕನ್‌ಸ್ಟ್ರಕ್ಟಡ್ ಕಮ್ಯುನಿಟಿಸ್ ಆಂಡ್ ಕಮ್ಯುನಲಿಸಂ – ಎ ಕೇಸ್ ಸ್ಟಡಿ ಆಫ್‌ ಗ್ರೋತ್ ಆಫ್ ಕಮ್ಯುನಲಿಸಂ ಇನ್ ಕೋಸ್ಟಲ್ ಕರ್ನಾಟಕ,’ ಇಂಡಿಯನ್ ಜರ್ನಲ್ ಆಫ್ ಸೆಕ್ಯುಲರಿಸಂ, ವಾ. ೧, ನಂ.೧, ೨೦೦೦, ಪು. ೧-೨೮.

[2] ಅಸಮಾನ ಸಮಾಜದಲ್ಲಿ ಮೆಕಾನಿಕಲ್ ದೃಷ್ಟಿಯಿಂದ ಸಮಾನತೆಯನ್ನು ಊಹಿಸಿಕೊಂಡರೆ ಅಸಮಾನತೆ ಹೆಚ್ಚಾಗುತ್ತದೆ ಎನ್ನುವ ವಾದವನ್ನು ಸಮಾನತೆ ಮೇಲಿನ ರಾವ್‌ಲಿಶಿಯನ್ ಥಿಯರಿಯನ್ನು ಆಧರಿಸಿ ಮಾಡಿದ್ದೇನೆ. ಈ ಕುರಿತ ಚರ್ಚೆಯನ್ನು (ಭಾರತಕ್ಕೆ ಸಂಬಂಧಿಸಿದ) ನೀರಾ ಚಂದೋಕೆಯವರ, ಬಿಯಾಂಡ್ ಸೆಕ್ಯುಲರಿಸಂ ದಿ ರೈಟ್ಸ್ ಆಫ್ ರೀಲಿಜಿಯಸ್ ಮೈನಾರಿಟೀಸ್, ನ್ಯೂಡೆಲ್ಲಿ: ಆಕ್ಸ್‌ಫರ್ಡ್‌ ಯೂನಿವರ್ಸಿಟಿ ಪ್ರೆಸ್, ೧೯೯೧, ಪುಸ್ತಕದಲ್ಲಿ ನೋಡಬಹುದು.

[3] ಐವತ್ತರ ದಶಕದಲ್ಲಿ ಆರ್ಥಿಕ ಅಸಮಾನತೆ, ನಿರುದ್ಯೋಗ, ಸಂಪತ್ತಿನ ಮರು ವಿತರಣೆ ಇತ್ಯಾದಿಗಳು ಸಂಶೋಧನೆಯ ಬಹುಮುಖ್ಯ ವಿಚಾರಗಳಾಗಿದ್ದವು. ಅವುಗಳನ್ನು ಸಮಸ್ಯೀಕರಿಸುವ ಅಗತ್ಯವೇ ಇಲ್ಲ. ಆದರೆ ಆರ್ಥಿಕ ಅಸಮಾನತೆಗೂ ಸಾಮಾಜಿಕ ಅಥವಾ ಸಾಂಸ್ಕೃತಿಕ ಅಸಮಾನತೆಗೂ ಇರುವ ಸಂಬಂಧ ಬಗ್ಗೆ ಸಂಶೋಧನೆ ನಡೆಸುವುದಾದರೆ ದೊಡ್ಡ ವಾದವನ್ನೇ ಮಂಡಿಸಬೇಕಿತ್ತು. ಯಾಕೆಂದರೆ ಆ ಚಾರಿತ್ರಿಕ ಸಂದರ್ಭದಲ್ಲಿ ಆರ್ಥಿಕ ಅಂಶಗಳು ಅಥವಾ ಪರಿಸರ ಮನುಷ್ಯರ ಇತರ ಎಲ್ಲ ಸಂಗತಿಗಳನ್ನು (ಸಾಮಾಜಿಕ/ಸಾಂಸ್ಕೃತಿಕ ಇತ್ಯಾದಿಗಳನ್ನು) ನಿರ್ಧರಿಸುತ್ತವೆ ಎಂದು ನಂಬಲಾಗಿತ್ತು. ಅಂತಹ ಸಂದರ್ಭದಲ್ಲಿ ಸಾಮಾಜಿಕ/ಸಾಂಸ್ಕೃತಿಕ ಸಂಗತಿಗಳು ಮತ್ತು ಆರ್ಥಿಕ ಸ್ಥಾನಮಾನದ ಸಂಬಂಧವನ್ನು ಕಲ್ಪಿಸುವ ಎಲ್ಲ ಪುರಾವೆಗಳನ್ನು ಒದಗಿಸಬೇಕಾಗುತ್ತದೆ. ಈ ಕುರಿತಂತೆ ಈಗಾಗಲೇ ನಡೆದಿರುವ ತಾತ್ವಿಕ ಚರ್ಚೆಗಳು ಮತ್ತು ಬೇರೆ ಕಾಲ ಮತ್ತು ಪ್ರದೇಶದಲ್ಲಿ ನಡೆದ ಅಧ್ಯಯನಗಳ ಫಲಿತಗಳನ್ನು ಬಳಸಿಕೊಂಡು ಇದೊಂದು ಸಂಶೋಧನೆ ನಡೆಸಲೇಬೇಕಾದ ಸಮಸ್ಯೆ ಎಂದು ವಾದಿಸಬೇಕಾಗುತ್ತಿತ್ತು.