ಸಮಸ್ಯೆ ಮತ್ತು ಸಮಸ್ಯೀಕರಣ ಎನ್ನುವ ಈ ಅಧ್ಯಾಯದಲ್ಲಿ ಸಂಶೋಧನಾ ಸಮಸ್ಯೆ ಬಗ್ಗೆ ಚರ್ಚಿಸಲಾಗಿದೆ. ಸಮಸ್ಯೆ ಅಥವಾ ಸಮಸ್ಯೀಕರಿಸುವ ಪ್ರಕ್ರಿಯೆ ಸಂಶೋಧನ ಪ್ರಸ್ತಾವಕ್ಕೆ ಬುನಾದಿಯಾಗಿ ಕೆಲಸ ಮಾಡುತ್ತದೆ ಎನ್ನುವ ನಂಬಿಕೆ ಇದೆ. ಸಂಶೋಧನಾ ಸಮಸ್ಯೆ ಸಂಶೋಧನೆಯ ಉದ್ದೇಶವನ್ನು ನಿರ್ಧರಿಸಿದರೆ, ಸಂಶೋಧನೆಯ ಉದ್ದೇಶಗಳು ಸಂಶೋಧನೆಯ ವಿಧಾನವನ್ನು ಪ್ರಭಾವಿಸುತ್ತವೆ ಎಂದು ಗ್ರಹಿಸಲಾಗಿದೆ. ಈ ಮೂರು ಸಂಗತಿಗಳು ಪರಸ್ಪರ ಸಂಬಂಧಿಸಿವೆ ಮತ್ತು ಒಂದು ಸರಪಣಿಯ ಕೊಂಡಿಯಂತೆ ಕೆಲಸ ಮಾಡುತ್ತವೆಂದು ತಿಳಿಯಲಾಗಿದೆ. ಇವು ಯಾವುದೇ ಸಂಶೋಧನಾ ಪ್ರಸ್ತಾವದ ಮೂಲಭೂತ ಸಂಗತಿಗಳು. ಇವು ಸರಿಯಾಗಿದ್ದರೆ ಸಂಶೋಧನೆ ಸರಿದಾರಿಯಲ್ಲಿ ಸಾಗುವ ಸಾಧ್ಯತೆಗಳು ಹೆಚ್ಚು ಇವೆ. ಹೀಗೆ ಸಮಸ್ಯೆ ಅಥವಾ ಸಮಸ್ಯೀಕರಿಸುವುದರ ಕುರಿತು ಹಲವಾರು ಗ್ರಹಿಕೆಗಳಿವೆ. ಇವೆಲ್ಲವನ್ನು ವಿಶ್ಲೇಷಿಸುವ ದೃಷ್ಟಿಯಿಂದ ಸಮಸ್ಯೆ ಅಥವಾ ಸಮಸ್ಯೀಕರಣ ಕುರಿತು ಈ ಕೆಳಗಿನ ಪ್ರಶ್ನೆಗಳನ್ನು ರೂಪಿಸಿಕೊಳ್ಳಲಾಗಿದೆಮತ್ತು ಅವುಗಳಿಗೆ ಉತ್ತರ ಕಂಡುಕೊಳ್ಳುವ ಒಂದು ಕಿರು ಪ್ರಯತ್ನವನ್ನು ಈ ಅಧ್ಯಾಯದಲ್ಲಿ ಮಾಡಲಾಗಿದೆ. ಸಮಸ್ಯೆ ಅಥವಾ ಸಮಸ್ಯೀಕರಣವೆಂದರೇನು? ಯಾಕೆ ಸಮಸ್ಯೀಕರಿಸಬೇಕು? ಹೇಗೆ ಸಮಸ್ಯೀಕರಿಸಬೇಕು? ಸಮಸ್ಯೆ ಹಾಗೂ ಅಧ್ಯಯನದ ಉದ್ದೇಶಗಳ ನಡುವಿನ ಸಂಬಂಧವೇನು? ಸಮಸ್ಯೆ ಹಾಗೂ ಅಧ್ಯಯನ ವಿಧಾನ ನಡುವಿನ ಸಂಬಂಧವೇನು? ಇತ್ಯಾದಿ ಪ್ರಶ್ನೆಗಳಿಗೆ ಉತ್ತರಿಸಲು ಈ ಅಧ್ಯಾಯದಲ್ಲಿ ಪ್ರಯತ್ನಿಸಲಾಗಿದೆ. ಇಲ್ಲಿ ಸಮಸ್ಯೀಕರಿಸುವುದನ್ನು ಒಂದು ತಾಂತ್ರಿಕ ಅವಶ್ಯಕತೆಯ ದೃಷ್ಟಿಯಿಂದ ನೋಡಲಾಗಿದೆ. ಅಂದರೆ ಸಂಶೋಧನಾ ಪ್ರಸ್ತಾವ ಸಿದ್ಧಪಡಿಸುವಲ್ಲಿ ಸಮಸ್ಯೀಕರಿಸುವುದರ ಪಾತ್ರವನ್ನು ಅರ್ಥ ಮಾಡಿಕೊಳ್ಳುವ ದೃಷ್ಟಿಯಿಂದ ಸಮಸ್ಯೆಯನ್ನು ನೋಡಲಾಗಿದೆ. ಆದುದರಿಂದ ಈ ಅಧ್ಯಾಯದಲ್ಲಿ ಸಮಸ್ಯೆ ಅಥವಾ ಸಮಸ್ಯೀಕರಿಸುವುದರ ಕುರಿತು ಯಾವುದೇ ತಾತ್ವಿಕ ಚರ್ಚೆಗಳು ಇರುವುದಿಲ್ಲ.

ಸಮಸ್ಯೆಯನ್ನು ಅಥವಾ ಸಮಸ್ಯೀಕರಿಸುವುದನ್ನು ಸರಳವಾಗಿ ಪ್ರಶ್ನೆ ಅಥವಾ ಪ್ರಶ್ನೆಗಳನ್ನು ಕೇಳುವುದೆಂದು ವ್ಯಾಖ್ಯಾನಿಸಿಕೊಳ್ಳಲಾಗಿದೆ. ಒಂದು ಅಥವಾ ಕೆಲವು ಮೂಲ ಪ್ರಶ್ನೆಗಳು ಮತ್ತು ಆ ಮೂಲ ಪ್ರಶ್ನೆಗಳಿಗೆ ಪೂರಕವಾಗಿರುವ ಇತರೆ ಪ್ರಶ್ನೆಗಳು ಸಮಸ್ಯೆಯ ಭಾಗವಾಗಿರುತ್ತವೆ. ಮನುಷ್ಯ ಆಲೋಚನೆ ಮಾಡುವಲ್ಲಿಂದ ಪ್ರಶ್ನೆ ಕೇಳುವ ಅಥವಾ ಪ್ರಶ್ನಿಸುವ ಕ್ರಿಯೆ ನಡೆದಿದೆ. ಹಾಗೆಂದು ಪ್ರಶ್ನಿಸುವುದು ಹಸಿವು, ನೀರಡಿಕೆ, ಭಯ ಇತ್ಯಾದಿಗಳಂತೆ ಮಾನವನ ಒಂದು ಮೂಲಭೂತ ಗುಣ ಅಲ್ಲ. ತನ್ನ ಮೂಲಭೂತ ಅಗತ್ಯಗಳನ್ನು ಪೂರೈಸಿಕೊಳ್ಳುವ ಸಂದರ್ಭದಲ್ಲಿ ಎದುರಾಗುವ ಅಡ್ಡಿ ಆತಂಕಗಳನ್ನು ನಿವಾರಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಶ್ನಿಸುವ ಪ್ರವೃತ್ತಿ ಆರಂಭವಾಗಿದೆ. ಇದನ್ನೇ ಇನ್ನೊಂದು ವಿಧದಲ್ಲಿ ಹೇಳುವುದಾದರೆ ಮಾನವ ತನ್ನ ಅಸ್ತಿತ್ವದ ಉಳಿವು ಮತ್ತು ಪುನರುತ್ಪತ್ತಿಗಾಗಿ ತಾನು ಬದುಕುವ ಪರಿಸರದೊಂದಿಗೆ (ಮಾನವ/ಪ್ರಾಣಿ ಮತ್ತು ಇತರ ಪರಿಸರದೊಂದಿಗೆ) ಸಂವಾದ ನಡೆಸುವುದು ಅನಿವಾರ್ಯ. ಆ ಸಂದರ್ಭದಲ್ಲಿ ಎದುರಾಗುವ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಪ್ರಶ್ನಿಸುವ ಪ್ರವೃತ್ತಿ ರೂಪುಗೊಂಡಿದೆ.[1] ಮೇಲಿನ ವಿವರಣೆ ಪ್ರಕಾರ ಮಾನವ ತಾನು ಬದುಕುವ ಪರಿಸರದೊಂದಿಗೆ ವ್ಯವಹರಿಸುವ ಸಂದರ್ಭದಲ್ಲಿ ಮಾತ್ರ ಪ್ರಶ್ನೆಗಳು ಉದ್ಭವಿಸುತ್ತವೆ ಎನ್ನುವ ಚಿತ್ರಣ ಇದೆ. ಆದರೆ, ಇದು ಸರಿಯಲ್ಲ. ಅವಶ್ಯಕತೆಗಳನ್ನು ಪೂರೈಸಿಕೊಳ್ಳುವ ಸಂದರ್ಭದಲ್ಲಿ ಮಾನವನೊಳಗೆ ಘರ್ಷಣೆ ಅಥವಾ ತಿಕ್ಕಾಟಗಳು ನಡೆಯಬಹುದು. ತನ್ನ ಹಲವಾರು ಅಗತ್ಯಗಳು, ಅವುಗಳ ಆದ್ಯತೆ, ಅವುಗಳನ್ನು ಪೂರೈಸಿಕೊಳ್ಳುವ ಮಾರ್ಗ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಮಾನವನೊಳಗೆ ತಿಕ್ಕಾಟ ನಡೆಯಬಹುದು. ಈ ಆಂತರಿಕ ಅಥವಾ ವ್ಯಕ್ತಿ ತನ್ನೊಳಗೇ ನಡೆಸುವ ತಿಕ್ಕಾಟಗಳು ಕೂಡ ಹಲವಾರು ಪ್ರಶ್ನೆಗಳಿಗೆ ಎಡೆ ಮಾಡಿಕೊಡಬಹುದು.[2]

ಸಮಸ್ಯೀಕರಿಸುವುದನ್ನು ಮತ್ತೊಂದು ವಿಧದಲ್ಲಿ ಕೂಡ ವ್ಯಾಖ್ಯಾನಿಸಿಕೊಳ್ಳಬಹುದು. ನಮ್ಮಲ್ಲಿ ಹಲವಾರು ಸಾಮಾಜಿಕ ಸಂಗತಿಗಳು ಒಂದು ವಿಧದ ಪ್ರಾಕೃತಿಕ ಸತ್ಯದಂತೆ ನಡೆದುಕೊಂಡು ಬಂದಿವೆ. ಉದಾಹರಣೆಗೆ ನಮ್ಮ ಸಮಾಜದಲ್ಲಿರುವ ಜಾತಿ ಪದ್ಧತಿ ಅಥವಾ ಮಹಿಳೆಯರ ಎರಡನೇ ದರ್ಜೆ ಸ್ಥಾನಮಾನ ಅಥವಾ ದಲಿತರನ್ನು ಅಂಚಿನಲ್ಲಿಡುವ ಕ್ರಮ ಇತ್ಯಾದಿಗಳು. ಇವೆಲ್ಲವು ಶತಮಾನಗಳಿಂದ ನಮ್ಮಲ್ಲಿ ಆಚರಣೆಯಲ್ಲಿವೆ. ಈ ಕಾರಣಕ್ಕಾಗಿ ಇವೆಲ್ಲವು ನಮಗೆ ಸಹಜ ಆಗಿವೆ. ಸೂರ್ಯ ಪೂರ್ವದಲ್ಲಿ ಹುಟ್ಟಿ ಪಶ್ಚಿಮದಲ್ಲಿ ಮುಳುಗುವುದು ಹೇಗೋ ಅಥವಾ ನೀರು ಮೇಲಿನಿಂದ ಕೆಳಕ್ಕೆ ಹರಿಯುವುದು ಹೇಗೋ ಅದೇ ರೀತಿಯಲ್ಲಿ ಅಸ್ಪೃಶ್ಯರನ್ನು ಸಮಾಜದ ಅಂಚಿನಲ್ಲಿಡುವುದು ಅಥವಾ ಮಹಿಳೆಯರಿಗೆ ಎರಡನೇ ದರ್ಜೆ ಸ್ಥಾನಮಾನ ನೀಡುವುದು ಒಂದು ಸಾಮಾನ್ಯ ಸಂಗತಿ. ಅವು ಸಹಜವಾಗಿರುವುದರಿಂದ ಅವುಗಳ ಬಗ್ಗೆ ವಿಶೇಷ ತಲೆಕೆಡಿಸಿಕೊಳ್ಳುವ ಅಗತ್ಯವಾದರೂ ಏನಿದೆ? ಒಂದು ವೇಳೆ ತಲೆಕೆಡಿಸಿಕೊಂಡರೂ ಏನಾಗಬಹುದು? ಅವುಗಳ ಸ್ಥಾನಮಾನದಲ್ಲಿ ವಿಶೇಷ ಬದಲಾವಣೆ ಸಾಧ್ಯವಿಲ್ಲ. ಯಾವುದೇ ಸಂಶೋಧನೆ ಮಾಡಿ ಸೂರ್ಯ ಹುಟ್ಟುವ ಅಥವಾ ಸೂರ್ಯಾಸ್ತದ ದಿಕ್ಕುಗಳನ್ನು ಬದಲಾಯಿಸಲು ಸಾಧ್ಯವೇ? ಅದೇ ರೀತಿ ಮನುಷ್ಯನ ಮಧ್ಯ ಪ್ರವೇಶಿಕೆ ಇಲ್ಲದೆ ಕೆಳಕ್ಕೆ ಇಳಿಯುವ ನೀರನ್ನು ಮೇಲಕ್ಕೆ ಹತ್ತುವಂತೆ ಮಾಡಲು ಸಾಧ್ಯವೇ? ಇವೆಲ್ಲವನ್ನು ಮಾನವರು ಸಹಜ ಸಂಗತಿಗಳೆಂದು ಒಪ್ಪಿಕೊಂಡಿದ್ದಾರೆ. ಅದೇ ರೀತಿಯಲ್ಲಿ ಶತಮಾನಗಳಿಂದ ಆಚರಣೆಯಲ್ಲಿದೆ ಎನ್ನುವ ಕಾರಣಕ್ಕೆ ಹಲವಾರು ಸಾಮಾಜಿಕ ಕಟ್ಟುಪಾಡುಗಳು ಸಹಜವಾಗಿವೆ. ಹೀಗೆ ಒಮ್ಮೆ ಸಹಜ ಎಂದು ಒಪ್ಪಿಕೊಂಡ ವಿಚಾರಗಳ ಬಗ್ಗೆ ಮನುಷ್ಯ ವಿಶೇಷ ಚಿಂತನೆ ಮಾಡಲು ಹೋಗುವುದಿಲ್ಲ. ಯಾವುದರ ಬಗ್ಗೆ ನಾವು ಚಿಂತಿಸಲು ಆರಂಭಿಸುತ್ತೇವೆ? ನಾವು ಬದುಕುವ ಪರಿಸರದಲ್ಲಿನ ಅಸಹಜತೆಗಳು ಅಥವಾ ನಮ್ಮೊಳಗಿನ ಅಸಹಜತೆಗಳು ನಮ್ಮನ್ನು ಚಿಂತನೆ ಅಥವಾ ಆಲೋಚನೆಗೆ ಹಚ್ಚುತ್ತವೆ. ನಮ್ಮ ಒಳಗಿನ ಮತ್ತು ಹೊರಗಿನ ಪರಿಸರಗಳು ಪರಸ್ಪರ ಸಂಬಂಧಿಸಿವೆ. ಯಾವುದೋ ಒಂದು ಪರಿಸರದಲ್ಲಿನ ಅಸಹಜತೆ (ಒಳಗಿನ ಅಥವಾ ಹೊರಗಿನ) ನಮ್ಮನ್ನು (ಮಾನವನನ್ನು) ಆಲೋಚನೆಗೆ ಹಚ್ಚಬಹುದು. ಎಲ್ಲ ರೀತಿಯಲ್ಲೂ ನಮ್ಮ ಹಾಗೆ ಇರುವ ದಲಿತರನ್ನು ಯಾಕೆ ಅಂಚಿನಲ್ಲಿಡಲಾಗುತ್ತಿದೆ? ಎಲ್ಲ ವಿಚಾರಗಳಲ್ಲೂ ಪುರುಷನಿಗೆ ಸರಿಸಮಾನಾಗಿ ಇರುವ ಮಹಿಳೆಗೆ ಯಾಕೆ ಎರಡನೇ ದರ್ಜೆ ಸ್ಥಾನಮಾನ? ಇತ್ಯಾದಿ ಪ್ರಶ್ನೆಗಳು ಮೂಡಬಹುದು. ಸಹಜ ಅಸಹಜ ಆದಾಗ ಮಾತ್ರ ಈ ಎಲ್ಲ ಪ್ರಶ್ನೆಗಳು ಮೂಡುವುದು. ಹೀಗೆ ಸಹಜತೆಯಲ್ಲಿರುವ ಅಸಹಜತೆಯನ್ನು ಗುರುತಿಸುವ ಕೆಲಸವನ್ನು ಕೂಡ ಸಮಸ್ಯೀಕರಿಸುವ ಪ್ರಕ್ರಿಯೆಯೆಂದು ವ್ಯಾಖ್ಯಾನಿಸಿಕೊಳ್ಳಬಹುದು.

ಸಂಶೋಧನೆಯನ್ನು ಹಲವಾರು ವಿಧಗಳಲ್ಲಿ ವಿಂಗಡಿಸಿಕೊಳ್ಳಲಾಗಿದೆ. ಉದಾಹರಣೆಗೆ ಗುಣಾತ್ಮಕ (ಕ್ವಾಲಿಟೇಟಿವ್) ಸಂಶೋಧನೆ, ಪರಿಮಾಣಾತ್ಮಕ (ಕ್ಯಾಂಟಿಟೇಟಿವ್) ಸಂಶೋಧನೆ, ಮೂಲಭೂತ ಸಂಶೋಧನೆ, ಆನ್ವಯಿಕ ಸಂಶೋಧನೆ ಇತ್ಯಾದಿ ವಿಂಗಡನೆಗಳನ್ನು ನೋಡಬಹುದು. ಈ ಎಲ್ಲ ಸಂಶೋಧನೆಗಳಲ್ಲೂ ಒಂದಲ್ಲ ಒಂದು ವಿಧದ ವಿಚಾರ ಅಥವಾ ಸಮಸ್ಯೆಯನ್ನು ಕೇಂದ್ರೀಕರಿಸಿ ಸಂಶೋಧನೆ ನಡೆಯುತ್ತದೆ. ಆದರೆ ಸಮಸ್ಯೆ ಎನ್ನುವ ಪದ ಹೆಚ್ಚು ಬಳಕೆ ಆಗುತ್ತಿರುವುದು ಆನ್ವಯಿಕ ಸಂಶೋಧನೆಗೆ ಸಂಬಂಧಿಸಿದಂತೆ. ಅದು ಏಕೆಂದರೆ ಮೂಲಭೂತ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನವನ್ನು ಮೂಲಭೂತ ಅಥವಾ ತಾತ್ವಿಕ ಸಂಶೋಧನೆಗಳು ಮಾಡುತ್ತವೆ. ಉದಾಹರಣೆಗೆ ವಿಜ್ಞಾನದಲ್ಲಿ ನಡೆದ ಗ್ರೇವಿಟೇಶನ್ ಥಿಯಿರಿ ಅಥವಾ ಕ್ವಾಂಟಂ ಮೆಕಾನಿಸಂ ಇತ್ಯಾದಿಗಳನ್ನು ಮೂಲಭೂತ ಸಂಶೋಧನೆಗಳೆಂದು ಕರೆಯಬಹುದು. ಸಮಾಜವಿಜ್ಞಾನದಲ್ಲಿ ಮೂಲಭೂತ ಮತ್ತು ಆನ್ವಯಿಕ ಸಂಶೋಧನೆಗಳಿವೆ. ಇಲ್ಲೂ ಸಮಾಜದ – ಆರ್ಥಿಕ, ರಾಜಕೀಯ, ಚಾರಿತ್ರಿಕ ಇತ್ಯಾದಿಗಳ ಬಗ್ಗೆ – ಮೂಲಭೂತ ಪ್ರಶ್ನೆಗಳನ್ನು ಕೆದಕುವ ಸಂಶೋಧನೆಗಳನ್ನು ಮೂಲಭೂತ ಸಂಶೋಧನೆಗಳೆಂದು ಕರೆಯುತ್ತಾರೆ. ಅವುಗಳು ವರ್ತಮಾನದ ಅಥವಾ ದಿನನಿತ್ಯದ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಕೆಲಸವಲ್ಲ. ಮೂಲಭೂತ ಸಂಶೋಧನೆಗಳು ಹೊರಗೆಡಹಿದ ಅಂಶಗಳನ್ನು ಬಳಸಿಕೊಂಡು ತಂತ್ರಜ್ಞಾನಗಳನ್ನು ರೂಪಿಸುವ ಅಥವಾ ನಮ್ಮ ದಿನನಿತ್ಯದ ಸಮಸ್ಯೆಗೆ ಪರಿಹಾರ ಹುಡುಕುವ ಪ್ರಯತ್ನವನ್ನು ನಾವು ಆನ್ವಯಿಕ ಸಂಶೋಧನೆ ಎನ್ನಬಹುದು. ಆನ್ವಯಿಕ ಸಂಶೋಧನೆ ಬಹುತೇಕಸ ಸಂದರ್ಭದಲ್ಲಿ ವರ್ತಮಾನದ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ರೂಪು ಪಡೆಯುತ್ತವೆ. ಹೀಗೆ ಸಂಶೋಧನೆಯಲ್ಲಿ ಸಮಸ್ಯೆ ಎನ್ನುವ ಪದ ಆನ್ವಯಿಕ ಸಂಶೋಧನೆಯ ಕೊಡುಗೆ ಅಥವಾ ಆನ್ವಯಿಕ ಸಂಶೋಧನೆ ಸಮಸ್ಯೆಯ ಕೊಡುಗೆಯಾಗಿದೆ. ಸಮಸ್ಯೆ ಪ್ರಶ್ನೆಗೆ ಕಾರಣವಾದರೆ ಪ್ರಶ್ನೆಗೆ ಸಿಗುವ ಉತ್ತರ ಸಮಸ್ಯೆಗೆ ಪರಿಹಾರವಾಗುತ್ತದೆ. ದಿನನಿತ್ಯದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಆನ್ವಯಿಕ ಸಂಶೋಧನೆ ಎಂದಾದರೆ ಇಷ್ಟೊಂದು ಸಂಶೋಧನೆಗಳು ನಡೆಯುತ್ತಿದ್ದರೂ ಜನಸಾಮಾನ್ಯರ ದಿನನಿತ್ಯದ ಸಮಸ್ಯೆಗಳು ಏಕೆ ಇನ್ನೂ ಪರಿಹಾರವಾಗಿಲ್ಲ ಎನ್ನುವ ಪ್ರಶ್ನೆ ಮೂಡಬಹುದು. ಒಂದು ಸಮಸ್ಯೆ ಪರಿಹಾರವಾದಂತೆ ಮತ್ತಮೊಂದು ಸಮಸ್ಯೆ ಉದ್ಭವಿಸುವುದರಿಂದ ಜನ ಸಾಮಾನ್ಯರ ದಿನನಿತ್ಯದ ಸಮಸ್ಯೆಗಳು ಪರಿಹಾರವಾಗಿಲ್ಲ ಎನ್ನುವ ಒಂದು ಹಾರಿಕೆಯ ಉತ್ತರವನ್ನು ಮೇಲಿನ ಪ್ರಶ್ನೆಗೆ ನೀಡಬಹುದು. ಆದರೆ ಈ ಉತ್ತರ ಮೇಲಿನ ಪ್ರಶ್ನೆ ಎತ್ತಿದ ಬಹುಮುಖ್ಯ ಅಂಶವೊಂದನ್ನು ಸಮಾಧಾನಪಡಿಸಲು ಸಾಕಾಗುವುದಿಲ್ಲ. ಅದೇನೆಂದರೆ ನಮ್ಮ ಸಂಶೋಧನೆಗಳು ನಿಜವಾಗಿಯೂ ಜನಸಾಮಾನ್ಯರ ದಿನನಿತ್ಯದ ಸಮಸ್ಯೆಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಎತ್ತಿಕೊಳ್ಳುತ್ತವೆಯೇ ಅಥವಾ ಸಮಾಜದ ಮೇಲ್ವರ್ಗದ ಆಸಕ್ತಿಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಎತ್ತಿಕೊಳ್ಳುತ್ತವೆಯೇ ಎನ್ನುವ ಸಂದೇಹವನ್ನು ಸಮಾಧಾನಪಡಿಸಲು ಸಾಕಾಗುವುದಿಲ್ಲ.

ಈ ಸಂದೇಹಕ್ಕೆ ಕೆಲವು ನೇರ ಉತ್ತರಗಳಿವೆ. ಒಂದು, ಜನರ ದಿನನಿತ್ಯದ ಬದುಕಿನ ಸಮಸ್ಯೆಗೂ ಸಂಶೋಧನಾ ಸಮಸ್ಯೆಗೂ ವ್ಯತ್ಯಾಸ ಇದೆ ಎಂದು ಒಪ್ಪಿಕೊಳ್ಳುವುದು. ವ್ಯತ್ಯಸ ಇದೆ ಎನ್ನುವಾಗ ನಮ್ಮ ಮುಂದೆ ಒಂದು ವರ್ಗೀಕೃತ (ಏಣಿಶ್ರೇಣಿ ಇರುವ) ಸಮಾಜದ ಕಲ್ಪನೆ ಇರುತ್ತದೆ. ವರ್ಗೀಕೃತ ಸಮಾಜದಲ್ಲಿ ಎಲ್ಲಾ ವರ್ಗಗಳ ಸಮಸ್ಯೆಗಳು ಸಂಶೋಧನಾ ಸಮಸ್ಯೆಗಳಾಗುವುದಿಲ್ಲ. ಸಮಾಜದ ಮೇಲ್ವರ್ಗಗಳ ಸಮಸ್ಯೆಗಳು ಬಹುತೇಕ ಸಂಶೋಧನೆಗಳ ವಸ್ತುಗಳಾಗಿರುತ್ತವೆ. ವರ್ಗೀಕೃತ ಸಮಾಜದಲ್ಲಿ ಕೆಳವರ್ಗದ ಜನರ ಸಮಸ್ಯೆಗಳು ಸಂಶೋಧನಾ ವಸ್ತುಗಳಾಗುವ ಸಾಧ್ಯತೆಯೇ ಇಲ್ಲ ಎನ್ನಲಾಗುವುದಿಲ್ಲ. ನಿರ್ದಿಷ್ಟ ಸಂಶೋಧನಾ ಫಲಿತವನ್ನು ನಿರೀಕ್ಷಿಸದೆ ಹಣಕಾಸು ನೆರವು ನೀಡುವ ಪ್ರಭುತ್ವ ಅಥವಾ ಸಾರ್ವಜನಿಕ ಸಮಸ್ಯೆಗಳಾಗಬಹುದು. ಎರಡು, ಜನ ಸಾಮಾನ್ಯರ ಸಮಸ್ಯೆಗಳು ಮತ್ತು ಸಂಶೋಧನಾ ಸಮಸ್ಯೆಗಳ ನಡುವೆ ವ್ಯತ್ಯಾಸ ಇಲ್ಲ ಎಂದು ವಾದಿಸುವುದು. ವರ್ಗರಹಿತ ಸಮಾಜದ ಕಲ್ಪನೆ ಮತ್ತು ಎಲ್ಲ ಜನರ ಸಮಸ್ಯೆಗಳು ಸಂಶೋಧನಾ ಸಮಸ್ಯೆಗೊಳಗಾಗುವ ವಾದದ ನಡುವೆ ಸಂಬಂಧ ಇದೆ. ಆದರೆ ಇದು ಅವಾಸ್ತವ. ಜನ ಸಾಮಾನ್ಯರ ಸಮಸ್ಯೆಗಳು ಬಹುತೇಕ ಸಂಶೋಧನೆಗಳ ಸಮಸ್ಯೆಗಳಾಗುವ ಸಾಧ್ಯತೆ ಇಲ್ಲ. ಆದರೂ ಕೆಲವೊಂದು ಕಾರಣಗಳಿಂದಾಗಿ ಜನಸಾಮಾನ್ಯರನ್ನು ತೊಡಗಿಸಿಕೊಳ್ಳುವ ಸಹಭಾಗಿತ್ವ ಸಂಶೋಧನಾ ವಿಧಾನಗಳು ಪ್ರಾಮುಖ್ಯತೆ ಪಡೆದಿವೆ. ಒಂದು, ವರ್ಗರಹಿತ ಸಮಾಜ ನಿರ್ಮಾಣದ ಮೊದಲ ಹೆಜ್ಜೆಯಾಗಿ ಜನಸಾಮಾನ್ಯರ ಸಮಸ್ಯೆಯನ್ನು ಸಂಶೋಧನ ಸಮಸ್ಯೆಯನ್ನಾಗಿಸಬಹುದೆಂದು ತೋರಿಸುವುದು. ಎರಡು, ವರ್ಗಪ್ರಶ್ನೆಗಳನ್ನು ನೇರವಾಗಿ ಪ್ರಶ್ನಿಸುವ ಬದಲು ಈ ಬಗೆಯ ಪರೋಕ್ಷ ಕ್ರಮಗಳನ್ನು ಅನುಸರಿಸುವುದು ಜನಸಾಮಾನ್ಯರಲ್ಲಿ ವರ್ಗರಹಿತ ಸಮಾಜದ ಪ್ರಜ್ಞೆಯನ್ನು ಮೂಡಿಸಲು ಅಥವಾ ವರ್ಗ ಪ್ರಜ್ಞೆಯನ್ನು ಹೇಗೆ ಜೀವಂತ ಇಡಲಾಗುತ್ತದೆ ಎಂದು ತೋರಿಸುವುದು.

ಸಂಶೋಧನೆ ಮತ್ತು ಆನ್ವಯಿಕತೆ ಅಥವಾ ಸಮಸ್ಯೆ ಪರಿಹಾರದ ಪ್ರಶ್ನೆ ಹೆಚ್ಚು ಬೆಳಕಿಗೆ ಬಂದಿರುವುದು ವಿಜ್ಞಾನದ ವಿಧಾನದ ಬೆಳವಣಿಗೆಯೊಂದಿಗೆ. ವಿಜ್ಞಾನ ವಿಧಾನದ ಮೂಲಕ ಹಲವಾರು ಪ್ರಾಕೃತಿಕ ನಿಯಮಗಳನ್ನು ಅರ್ಥ ಮಾಡಿಕೊಳ್ಳಲಾಯಿತು. ಗ್ರೇವಿಟೇಶನ್ ತತ್ವದ ತಿಳುವಳಿಎಕ ಹಲವಾರು ವಿವಿಧ ಆನ್ವಯಿಕ ಸಂಶೋಧನೆಗೆ ಕಾರಣವಾಗಿದೆ. ಚರ ಮತ್ತು ಸ್ಥಿರ ಸಂಗತಿಗಳ ಚಲನೆಯನ್ನು ಅರ್ಥ ಮಡಿಕೊಳ್ಳಲು ಗ್ರೇವಿಟೇಶನ್‌ಸಿದ್ಧಾಂತ ಮತ್ತು ಸಹಕರಿಸಿದೆ. ಇದರ ಆಧಾರದಲ್ಲಿ ಹಲವಾರು ಆನ್ವಯಿಕ ಸಂಶೋಧನೆಗಳು ಬೆಳಕಿಗೆ ಬಂದವು. ನಂತರದ ಸಾಪೇಕ್ಷ ಸಿದ್ಧಾಂತ ಕೂಡ ಹಲವಾರು ಆನ್ವಯಿಕ ಸಂಶೋಧನೆಗಳಿಗೆ ದಾರಿ ಮಾಡಿಕೊಟ್ಟಿದೆ. ವಿಜ್ಞಾನದ ಸಿದ್ಧಾಂತಗಳು ಕೇವಲ ವಸ್ತು ಅಥವಾ ಪ್ರಕೃತಿಯ ನಿಯಮಗಳನ್ನು ಮಾತ್ರ ಅರ್ಥ ಮಾಡಿಕೊಳ್ಳಲು ಮತ್ತು ಆ ಕ್ಷೇತ್ರದಲ್ಲಿನ ಆನ್ವಯಿಕ ಸಂಶೋಧನೆಗಳಿಗೆ ಬಳಕೆ ಆಗಿಲ್ಲ. ಮಾನವ ಸಮಾಜವನ್ನು ಅರ್ಥ ಮಾಡಿಕೊಳ್ಳಲು ಮತ್ತು ಅಲ್ಲಿನ ಸಮಸ್ಯೆಗಳ ಪರಿಹಾರಕ್ಕೂ ಬಳಕೆ ಆಗಿದೆ. ಉದಾಹರಣೆಗೆ ಡಾರ್ವಿನ್‌ನ ವಿಕಾಸ ವಾದ. ಇದು ಪ್ರಾಣಿ ಪ್ರಪಂಚದ ಇತಿಹಾಸವನ್ನು ಪರೀಕ್ಷಿಸಿ ರೂಪಿಸಿದ ಸಿದ್ಧಾಂತ. ಇದರ ಪ್ರಕಾರ ಮಾನವ ತನ್ನ ಇಂದಿನ ರೂಪ ಪಡೆಯುವ ಮುನ್ನ ಹಲವಾರು ಹಂತಗಳನ್ನು ದಾಟಿ ಬಂದಿದ್ದಾನೆ. ಈ ನಿಯಮದ ಪ್ರಕಾರ ಯಾವುದೋ ಒಂದು ಪ್ರಾಣಿ ಅಥವಾ ಸಮುದಾಯ ಪರಿಪೂರ್ಣ (ಎಂದು ತಿಳಿದುಕೊಳ್ಳುವ) ಸ್ಥಿತಿ ತಲುಪುವ ಮುನ್ನ ಹಲವಾರು ಅಪರಿಪೂರ್ಣ ಸ್ಥಿತಿಗಳನ್ನು ದಾಟಿ ಬರಬೇಕು. ಈ ನಿಯಮವನ್ನು ಬಳಸಿಕೊಂಡು ಅಭಿವೃದ್ಧಿ ಸಿದ್ಧಾಂತಗಳು ಮತ್ತು ಸಮಾಜ ಸಿದ್ಧಾಂತಗಳು ರೂಪುಗೊಂಡವು.[3] ಒಂದು ದೇಶ ಅಭಿವೃದ್ಧಿಯ ಕೊನೆಯ ಹಂತ ತಲುಪುವ ಮುನ್ನ ಹಲವಾರು ಕೆಳಗಿನ ಹಂತಗಳನ್ನು ದಾಟಿ ಬರಬೇಕು. ಈ ಹಂತಗಳನ್ನು ವಿಕಾಸದ ಹಂತಗಳೆಂದು ಗುರುತಿಸಲಾಗಿತ್ತು. ಲಿಬರಲ್ ಹಾಗೂ ಎಡಪಂಥೀಯ ಚಿಂತಕರು ವಿಕಾಸವಾದದ ಹಿನ್ನೆಲೆಯಲ್ಲಿ ತಮ್ಮ ಅಭಿವೃದ್ಧಿ ಥಿಯರಿಗಳನ್ನು ರೂಪಿಸಿಕೊಂಡಿದ್ದರು. ಎಡಪಂಥೀಯರು ಅಭಿವೃದ್ಧಿಯ ನಾಲ್ಕು ಹಂತಗಳನ್ನು ಗುರುತಿಸಿದ್ದರು – ಪ್ರಿಮಿಟಿವ್ ಎಕ್ಯುಮಿಲೇಶನ್, ಫ್ಯೂಡಲ್ ಸೊಸೈಟಿ, ಕ್ಯಾಪಿಟಲಿಸ್ಟ್ ಸೊಸೈಟಿ ಮತ್ತು ಕಮ್ಯುನಿಸ್ಟ್‌ ಸೊಸೈಟಿ.[4] ಲಿಬರಲ್ಸ್ ಕೂಡ ಅಭಿವೃದ್ಧಿಯ ವಿವಿಧ ಹಂತಗಳನ್ನು ಗುರುತಿಸಿದ್ದರು. ಇವುಗಳನ್ನು ರುಸ್ತೋನ ಸ್ಟೇಜಸ್ ಆಫ್ ಎಕಾನಮಿಕ್ ಗ್ರೋಥ್‌ನಲ್ಲಿ ಸ್ಪಷ್ಟವಾಗಿ ಕಾಣಬಹುದು.[5] ಆತ ಅಭಿವೃದ್ಧಿಯ ಐದು ಹಂತಗಳನ್ನು ಗುರುತಿಸಿದ್ದ. ಲಿಬರಲ್ಸ್ ಮತ್ತು ಎಡಪಂಥೀಯರು ಗುರುತಿಸಿದ ಅಭಿವೃದ್ಧಿಯ ಹಂತದ ಅಡಿಪಾಯವಾಗಿ ಡಾರ್ವಿನ್‌ನ ವಿಕಾಸವಾದ ಕೆಲಸ ಮಾಡಿದೆ. ಮೇಲಿನ ಸಂದರ್ಭಗಳಲ್ಲಿ ಕೇಳುವ ಪ್ರಶ್ನೆಗಳು ಮತ್ತು ಅವುಗಳ ಉತ್ತರಗಳು ಮಾನವನ ದಿನನಿಯದ ಸಮಸ್ಯೆಗಳಿಗೆ ನೇರ ಪರಿಹಾರವಾಗಿ ಕೆಲಸ ಮಾಡುವುದಿಲ್ಲ. ಆದುದರಿಂದ ಇವುಗಳನ್ನು ಮೂಲಭೂತ ಸಂಶೋಧನೆಗಳಿಂದ ಗುರುತಿಸಲಾಗಿದೆ. ಇದೇ ವಿಚಾರಗಳ ಹಿನ್ನೆಲೆಯಲ್ಲಿ ಒಂದು ದೇಶದ ಅಥವಾ ಒಂದು ಸಮುದಾಯದ ಅಭಿವೃದ್ಧಿ ಬಗ್ಗೆ ಕೇಳುವ ಪ್ರಶ್ನೆಗಳು ಆನ್ವಯಿಕ ಸಂಶೋಧನೆ ಆಗಬಹುದು. ಉದಾಹರಣೆಗೆ ಯಾವುದೋ ಒಂದು ದೇಶ ಅಥವಾ ಸಮುದಾಯ ಮೇಲಿನ ಹಂತಗಳನ್ನು ದಾಟಿ ಅಭಿವೃದ್ಧಿ ಹೊಂದಿದೆ ಎಂದಾದರೆ ಅದೇ ರೀತಿ ಇರುವ ಮತ್ತೊಂದು ದೇಶ ಅಥವಾ ಸಮುದಾಯ ಅದೇ ವಿಧಾನ ಅನುಸರಿಸಿ ಯಾಕೆ ಅಭಿವೃದ್ಧಿ ಹೊಂದಬಾರದು? ಎನ್ನುವ ಪ್ರಶ್ನೆ ಆನ್ವಯಿಕ ಸಂಶೋಧನೆಗೆ ಎಡೆಮಾಡಿ ಕೊಡುತ್ತದೆ.

ಸಮಸ್ಯೀಕರಿಸುವುದು ಯಾಕೆ?

ಯಾವುದೋ ಒಂದು ಸಂಶೋಧನಾ ಕಮ್ಮಟದಲ್ಲಿ ಖ್ಯಾತ ಸಂಶೋಧಕರೊಬ್ಬರು ಸಂಶೋಧನಾ ಸಮಸ್ಯೆ ಬಗ್ಗೆ ನೀಡಿದ ಉದಾಹರಣೆಯೊಂದಿಗೆ ಸಮಸ್ಯೀಕರಿಸುವುದು ಯಾಕೆ ಎನ್ನುವ ಚರ್ಚೆಯನ್ನು ಆರಂಭಿಸೋಣ.[6] ಒಬ್ಬ ಸಮಾಜವಿಜ್ಞಾನಿ ದಾರಿಯಲ್ಲಿ ಹೋಗುತ್ತಿದ್ದಾಗ ಒಬ್ಬ ಕುರಿ ಕಾಯುವವನು ತನ್ನ ಕುರಿ ಮಂದೆಯೊಂದಿಗೆ ಎದುರಾದ. ಸಮಾಜ ವಿಜ್ಞಾನಿಯ ಜತೆಗೆ ಇದ್ದವನು ಸಂಶೋಧಕನನ್ನು ಮಂದೆಯಲ್ಲಿ ಎಷ್ಟುಗಳಿರಬಹುದೆಂದು ಕೇಳಿದನಂತೆ. ತಕ್ಷಣವೇ ಸಂಶೋಧಕ ತನ್ನಲ್ಲಿದ್ದ ಲ್ಯಾಪ್‌ಟಾಪ್‌ತೆಗೆದು ರಿಮೋಟ್ ಗ್ರಾಫಿಂಗ್ ಮೂಲಕ ಮಂದೆಯಲ್ಲಿ ಎಷ್ಟು ಕುರಿಗಳಿವೆ ಎಂದು ಹೇಳಿದ. ನಂತರ ಆ ಅಂಕೆಯನ್ನು ಪರೀಕ್ಷಿಸುವ ದೃಷ್ಟಿಯಿಂದ ಕುರಿ ಕಾಯುವವನಿಗೆ ನೇರವಾಗಿ ಎಷ್ಟು ಕುರಿಗಳಿವೆ ಎಂದು ಕೇಳಿದರು. ಆತ ತಕ್ಷಣವೇ ಮಂದೆಯಲ್ಲಿದ್ದ ಒಟ್ಟು ಕುರಿಗಳ ಸಂಖ್ಯೆಯನ್ನು ಹೇಳಿಬಿಟ್ಟ. ಅವನು ಹೇಳಿದ ಸಂಖ್ಯೆ ಮತ್ತು ಸಂಶೋಧಕ ಅಷ್ಟೊಂದು ಕಸರತ್ತು ಮಾಡಿ ಪಡೆದ ಸಂಖ್ಯೆ ಸ್ವಲ್ಪ ಹೆಚ್ಚು ಕಡಿಮೆ ಆಗಿತ್ತು ಅಥವಾ ಸಂಶೋಧಕರು ಹೇಳಿದ ಸಂಕ್ಯೆಗಿಂತ ಒಂದು ಕುರಿ ಹೆಚ್ಚಿತ್ತು. ಅದು ಹೇಗೆಂದು ವಿಚಾರಿಸಿದರೆ ತನ್ನ ಕಂಕುಳಲ್ಲಿದ್ದ ಕುರಿಯನ್ನು ನೀವು ಲೆಕ್ಕ ಮಾಡಿಲ್ಲ ಆದುದರಿಂದ ನಿಮ್ಮ ಮತ್ತು ನನ್ನ ಲೆಕ್ಕಾಚಾರದ ನಡುವೆ ವ್ಯತ್ಯಾಸ ಆಯಿತೆಂದು ಕುರಿ ಕಾಯುವವ ಹೇಳಿದ. ಇದಿಷ್ಟು ಸಮಸ್ಯೆ ಬಗ್ಗೆ ಇರುವ ವಿಡಂಬನೆ. ಈ ಉದಾಹರಣೆಯ ಮೂಲಕ ಕೆಲವೊಂದು ಸಂಶೋಧನೆಗಳಲ್ಲಿ ಸಮಸ್ಯೀಕರಿಸುವುದು ಎಷ್ಟೊಂದು ಅವಾಸ್ತವವಾಗಿದೆ ಎಂದು ವಿವರಿಸಲು ತಜ್ಞರು ಪ್ರಯತ್ನಿಸಿದ್ದಾರೆ. ನನಗೂ ಆಗ ಅದು ಸರಿ ಎಂದು ತೋರಿತು. ಇತ್ತೀಚಿನ ದಿನಗಳಲ್ಲಿ ಶಾಲಾ ಉಸ್ತುವಾರಿ ಸಮಿತಿ ಸದಸ್ಯರಿಗೆ ನಾವು ವಿಶ್ವವಿದ್ಯಾಲಯದಲ್ಲಿ ಎರಡು ದಿನಗಳ ಕಮ್ಮಟ ಏರ್ಪಡಿಸಿದ್ದೆವು.[7] ಆ ಸಂದರ್ಭದಲ್ಲಿ ಶಾಲಾ ಉಸ್ತುವಾರಿ ಸಮಿತಿ ಸದಸ್ಯರಿಗೆ ತಾವು ಕಾರ್ಯ ನಿರ್ವಹಿಸುವ ಸಾಮಾಜಿಕ ಪರಿಸರದ ಬಗ್ಗೆ ಚರ್ಚಿಸುವ ಸಂದರ್ಭ ಬಂತು. ಸಾಮಾಜಿಕ ಪರಿಸರದ ಚರ್ಚೆ ಅನಿವಾರ್ಯವಾಗಿ ಜಾತಿಗಳ ಇರುವಿಕೆ ಮತ್ತು ಅವು ಹೇಗೆ ಸದಸ್ಯರ ನಿರ್ವಹಣೆಯನ್ನು ಪ್ರಭಾವಿಸುತ್ತವೆ ಎನ್ನುವುದರತ್ತ ಸಾಗಿತು. ಚರ್ಚೆಯನ್ನು ಆರಂಭಿಸುವಾಗ ಸದಸ್ಯರೊಂದಿಗೆ ಇದ್ದ ಶಾಲಾ ಮುಖ್ಯೋಪಾಧ್ಯಾಯರು ಹಳ್ಳಿಯಲ್ಲಿ ಜಾತಿ ಸಮಸ್ಯೆ ಏನೇನೂ ಇಲ್ಲ. ಹಾಗೆ ನೋಡಿದರೆ ಇಂದು ಸರಕಾರವೇ ಜಾತಿ ವ್ಯವಸ್ಥೆಯನ್ನು ಜೀವಂತ ಇಡಲು ಕಾರಣ ಎಂದು ಶಾಲೆಯಲ್ಲಿ ನೀಡುವ ಕೆಲವೊಂದು ಸವಲತ್ತುಗಳ ಉದಾಹರಣೆ ನೀಡಿದರು. ಅವರ ಪ್ರಕಾರ ಸರಕಾರ ಇಂದು ಕೆಲವೊಂದು ಸವಲತ್ತುಗಳನ್ನು ಬಡ ವಿದ್ಯಾರ್ಥಿಗಳನ್ನು ಶಾಲೆಯತ್ತ ಆಕರ್ಷಿಸಲು ನೀಡುತ್ತಿವೆ. ಅವುಗಳಲ್ಲಿ ಕೆಲವನ್ನು ಜಾತಿ  ಆಧಾರದಲ್ಲಿ ನೀಡಲಾಗುತ್ತಿದೆ. ಅಂದರೆ ಕೇವಲ ಹರಿಜನ ಗಿರಿಜನ ಮಕ್ಕಳಿಗೆ ಮಾತ್ರ ನೀಡಲಾಗುತ್ತಿದೆ. ಇದು ಸಹಜವಾಗಿಯೇ ಉಳಿದ ಮಕ್ಕಳಲ್ಲಿ ಕುತೂಹಲವನ್ನು ಮತ್ತು ಒಂದು ಬಗೆಯ ಅಸಹನೆಯನ್ನು ಬೆಳೆಸಲು ಕಾರಣವಾಗುತ್ತದೆ ಎನ್ನುವುದು ಟೀಚರ್‌ಗಳ ವಾದ. ಜತೆಗೆ ಮಕ್ಕಳಲ್ಲಿ ಜಾತಿಪ್ರಜ್ಞೆಯನ್ನು ಬೆಳೆಸಲು ಕಾರಣವಾಗುತ್ತದೆ ಎನ್ನುವ ತೀರ್ಮಾನವನ್ನು ನೀಡಿದರು. ಒಬ್ಬರು ಈ ರೀತಿ ವಾದ ಮಂಡಿಸಿದ ಕೂಡಲೇ ಉಳಿದ ಸದಸ್ಯರು ಕೂಡ ಇದೇ ವಾದವನ್ನು ಮುಂದಿಡಲು ಆರಂಭಿಸಿದರು. ಜಾತಿ ನಮ್ಮ ಸಮಾಜದ ಸೃಷ್ಟಿ ಅಲ್ಲ ಅಥವಾ ಊರು ಸೃಷ್ಟಿಸಿದ ಸಮಸ್ಯೆ ಅಲ್ಲ; ಸರಕಾರ ಸೃಷ್ಟಿಸಿದ ಸಮಸ್ಯೆ ಎನ್ನುವ ಒಂದು ಸರ್ವಸಮ್ಮತ ಅಭಿಪ್ರಾಯ ಸಭೆಯಲ್ಲಿ ಹೊಮ್ಮಿತು. ಜಾತಿ ಇದೆ ಮತ್ತು ಅದರಿಂದ ಸಮಸ್ಯೆಯೂ ಇದೆ. ಆದರೆ ಸೇರಿದವರು ಅದನ್ನು ಒಪ್ಪಲು ಸಿದ್ಧರಿಲ್ಲ. ಆದರೆ ಇರುವಿಕೆಯನ್ನು ಅಲ್ಲಗಳೆಯುವುದರಿಂದ ಅದರಿಂದ ಉಂಟಾಗುವ ಸಮಸ್ಯೆಗಳು ಸಮಸ್ಯೆಗಳಾಗುವುದಿಲ್ಲ. ಒಂದು ವಿಷಯ ಸಮಸ್ಯೆ ಆಗದಿದ್ದರೆ ಅದರ ಪರಿಹಾರದ ಬಗ್ಗೆ ಆಲೋಚನೆ ಮಾಡುವ ಅವಶ್ಯಕತೆಯೂ ಬರುವುದಿಲ್ಲ.

ಇಂತಹದೇ ಮತ್ತೊಂದು ಉದಾಹರಣೆ ನೀಡುತ್ತೇನೆ. ಯರೆಹಂಚಿನಾಳ ಪಂಚಾಯತ್ ಯೋಜನೆ ತಯಾರಿಸುವ ಸಂದರ್ಭದಲ್ಲಿ ಅಲ್ಲಿನ ಹೋಟೆಲುಗಳಲ್ಲಿ ಹರಿಜನರಿಗೆ ಪ್ರತ್ಯೇಕ ಸ್ಥಳ ಹಾಗೂ ಗ್ಲಾಸ್ ಇಟ್ಟಿರುವುದನ್ನು ಅಲ್ಲಿನ ಪಂಚಾಯತ್ ಸದಸ್ಯರಲ್ಲಿ ವಿಚಾರಿಸಲಾಯಿತು. ಸರಕಾರಿ ನಿಯಮ ಪ್ರಕಾರ ಈ ಕ್ರಮದ ಅಸ್ಪೃಶ್ಯತೆ ಅನುಸರಿಸಬಾರದು, ಪಂಚಾಯತ್‌ಸದಸ್ಯರಾಗಿ ನೀವು ಯಾಕೆ ಈ ಆಚರಣೆ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಕೇಳಲಾಯಿತು. ಅದಕ್ಕೆ ಅವರು ನೀಡಿದ ಉತ್ತರ – ‘ಊರಲ್ಲಿ ಯಾರು ಕೂಡ ಈ ಕುರಿತು ನಮಗೆ ದೂರು ನೀಡಿಲ್ಲ. ದೂರು ನೀಡದಿದ್ದರೆ ನಾವು ಹೇಗೆ ಅದನ್ನೊಂದು ಸಮಸ್ಯೆ ಎಂದು ಪರಿಗಣಿಸುವುದು?’ ಎಂದು ನಮ್ಮನ್ನೇ ಕೇಳಿದರು. ಅಷ್ಟು ಮಾತ್ರವಲ್ಲ ಹೋಟೆಲುಗಳಲ್ಲಿ ಪ್ರತ್ಯೇಕ ಸ್ಥಾನ ಮತ್ತು ಗ್ಲಾಸ್ ತೊಳೆದಿಡುವುದು ಹಳ್ಳಿಯ ಹರಿಜನರ ಹಿರಿಯ ತಲೆಮಾರಿನವರಿಗೆ ಸಮಸ್ಯೆ ಆಗಿಲ್ಲ. ಅವರ ಪ್ರಕಾರ ಇದೇನು ಹೊಸ ಆಚರಣೆ ಅಲ್ಲ. ಶತಮಾನಗಳಿಂದ ಅಥವಾ ಅವರಿಗೆ ತಿಳುವಳಿಕೆ ಬಂದಲ್ಲಿಂದ ಈ ಕ್ರಮ ಇದೆ. ಈ ಕ್ರಮ (ಪ್ರತ್ಯೇಕತೆ) ಕೇವಲ ಅವರ ಹಳ್ಳಿಯ ವಿಶೇಷತೆ ಅಲ್ಲ. ಎಲ್ಲ ಹಳ್ಳಿಗಳಲ್ಲೂ ಇದೇ ಕ್ರಮ ಇರುವುದು. ಆದುದರಿಂದ ಅದನ್ನು ಒಂದು ಸಮಸ್ಯೆ ಎಂದು ತಿಳಿಯುವ ಅಗತ್ಯ ಇಲ್ಲ ಎನ್ನುವ ತಾತ್ಪರ್ಯ ಅವರ ಮಾತಲ್ಲಿತ್ತು. ಆದರೆ ಅದೇ ಹಳ್ಳಿಯ ಕಿರಿಯರಿಗೆ (ಪೇಟೆಗೆ ಹೋಗಿ ಓದು ಬರಹ ಕಲಿತವರಿಗೆ) ಇದೊಂದು ದೊಡ್ಡ ಸಮಸ್ಯೆ ಆಗಿದೆ. ಹಲವಾರು ಬಾರಿ ಈ ಸಮಸ್ಯೆ ವಿರುದ್ಧ ಪ್ರತಿಭಟಿಸಲು ತಮ್ಮ ಹಿರಿಯರ ಮನವೊಲಿಸಲು ಪ್ರಯತ್ನಿಸಿದ್ದಾರೆ. ಆದರೆ ತಮ್ಮ ಪ್ರಯತ್ನದಲ್ಲಿ ಯಶಸ್ಸು ಕಂಡಿಲ್ಲ. ಹಾಗೆಂದು ಅವರು ಸುಮ್ಮನೆ ಕುಳಿತಿಲ್ಲ. ಮದುವೆ, ಮುಂಜಿ ಇತ್ಯಾದಿ ಆಚರಣೆಗಳ ಸಂದರ್ಭದಲ್ಲಿ ಹಳ್ಳಿಯ ಹೊರಗಿನಿಂದ ಬರುವ ತಮ್ಮ ಸಂಬಂಧಿಕರು ಮತ್ತು ಸ್ನೇಹಿತರ ಬೆಂಬಲದಿಂದ ಈ ಕ್ರಮದ ವಿರುದ್ಧ ಪ್ರತಿಭಟಿಸುವ ಪ್ರಯತ್ನವನ್ನೂ ಮಾಡಿದ್ದಾರೆ. ಆದರೆ ಇವರ ಪ್ರತಿಭಟನೆಯ ವಿಚಾರ ಹೇಗೋ (ಕೆಲವರ ಪ್ರಕಾರ ಅವರ ಹಿರಿಯರೇ ಊರ ಪ್ರಮುಖರಿಗೆ ತಿಳಿಸುತ್ತಾರೆ) ಊರವರಿಗೆ ತಿಳಿಯುತ್ತದೆ ಮತ್ತು ಅಂದು ಊರ ಹೋಟೆಲುಗಳೆಲ್ಲ ಬಂದ್ ಆಗುತ್ತವೆ. ಹೀಗೆ ಅವರ ಪ್ರತಿಭಟನೆ ಯಶಸ್ಸು ಕಂಡಿಲ್ಲ.[8] ಹರಿಜನ ಯುವಕರಿಗೆ ಹಳ್ಳಿಯಿಂದ ಹೊರಗಿನ ಸಂಪರ್ಕ ಮತ್ತು ಓದು ಹೊಸ ಲೋಕವೊಂದನ್ನು ಪರಿಚಯಿಸಿದೆ. ಆ ಲೋಕದೊಂದಿಗೆ ತಮ್ಮ ಹಳ್ಳಿಯನ್ನು ಹೋಲಿಸಿ ನೋಡಿದಾಗ ಹಲವಾರು ಸಮಸ್ಯೆಗಳು ಅವರ ಗಮನಕ್ಕೆ ಬಂದಿವೆ. ಆದುದರಿಂದ ಅವುಗಳನ್ನು ಪರಿಹರಿಸುವ ಪ್ರಯತ್ನ ಮಾಡಿದ್ದಾರೆ. ಹೀಗೆ ಸಮಸ್ಯೀಕರಿಸುವುದು ಎಷ್ಟು ಮುಖ್ಯ ಎಂದು ನಮಗೆ ಅರ್ಥವಾದೀತು. ಮೇಲಿನ ಎಲ್ಲ ಸಂದರ್ಭಗಳಲ್ಲೂ ಮನುಷ್ಯ ಮನುಷ್ಯರ ನಡುವೆ ಇರುವ ಕಂದರಗಳು ಸಮಸ್ಯೆ ಆಗಲಿಲ್ಲ. ಹಲವಾರು ಶತಮಾನಗಳಿಂದ ಅವುಗಳನ್ನು ಮಾಡುತ್ತ ಬಂದಿರುವುದರಿಂದ ಕೆಲವೊಂದು ವಿಚಾರಗಳು ನಮಗೆ ಪ್ರಕೃತಿ ನಿಯಮದಷ್ಟೇ ಸಹಜ ಆಗಿದೆ. ಸಹಜ ಆಗಿರುವುದರಿಂದ ಅದರ ಬಗ್ಗೆ ವಿಶೇಷವಾಗಿ ತಲೆಕೆಡಿಸಿಕೊಳ್ಳುವ ಅವಶ್ಯಕತೆಯಾದರೂ ಏನಿದೆ?

ಇದು ಕೇವಲ ಉತ್ತರ ಕರ್ನಾಟಕದ ಗ್ರಾಮೀಣ ಜನರಿಗೆ ಮಾತ್ರ ಅನ್ವಯವಾಗುತ್ತದೆ ಎಂದು ತಿಳಿಯಬಾರದು. ಕರ್ನಾಟಕದಲ್ಲೇ ತುಂಬಾ ಬುದ್ಧಿವಂತರ ನಾಡೆಂದು ತಿಳಿದಿರುವ ದಕ್ಷಿಣ ಕನ್ನಡದಲ್ಲಿ ಹೇಗೆ ಹಲವಾರು ವಿಚಾರಗಳನ್ನು ಪ್ರಶ್ನಿಸದೆ ಮುಂದುವರಿಸುತ್ತಿರುವ ಮತ್ತೊಂದು ಉದಾಹರಣೆ ಕೊಡುತ್ತೇನೆ. ದಕ್ಷಿಣ ಕನ್ನಡದಲ್ಲಿ ಜನಪ್ರಿಯ ಮಾಧ್ಯಮದಲ್ಲಿ ಬರೆಯುವ ಮತ್ತು ಭಾಷಣ ಮಾಡುವ ವಿದ್ವಾಂಸರು ಬಹುತೇಕ ಸಂದರ್ಭಗಳಲ್ಲಿ ಒಂದು ವಾಕ್ಯವನ್ನು ಉಚ್ಚರಿಸಿಯೇ ತಮ್ಮ ಭಾಷಣ ಅಥವಾ ಬರಹವನ್ನು ಆರಂಭಿಸುತ್ತಾರೆ. ‘ಪರಶುರಾಮ ಸೃಷ್ಟಿಯಾದ ಈ ನಾಡಲ್ಲಿ’ ಎಂದು ಬಹುತೇಕ ವಿದ್ವಾಂಸರು ಹೇಳಿಯೇ ಮುಂದುವರಿಯುತ್ತಾರೆ. ಆ ರೀತಿ ಹೇಳುವವರು ಯಾರೂ ಕೂಡ ಈ ವಾಕ್ಯದಲ್ಲಿ ಅಡಗಿರುವ ಸತ್ಯ ಮತ್ತು ಸಮಸ್ಯೆ ಬಗ್ಗೆ ವಿಶೇಷ ಆಲೋಚನೆ ಮಾಡಿದಂತಿಲ್ಲ. ಪರಶುರಾಮ ಸೃಷ್ಟಿಯ ಈ ಕಥನ ಯಾವಾಗ? ಯಾಕೆ ಹುಟ್ಟಿಕೊಂಡಿತು? ಶತಮಾನಗಳಿಂದ ಸತತವಾಗಿ ಹೇಳುತ್ತಾ ಬಂದಿರುವುದರಿಂದ ಅದು ಇಂದು ಸಾರ್ವತ್ರಿಕ ಸತ್ಯದ ರೂಪದಲ್ಲಿ ಜನಸಾಮಾನ್ಯರ ಪ್ರಜ್ಞೆಯ ಭಾಗವಾಗಿದೆ. ಜನಸಾಮಾನ್ಯರ ಪ್ರಜ್ಞೆಯ ಭಾಗವಾಗಿರುವ ಇಂತಹ ಪ್ರಶ್ನೆಗಳನ್ನು ಕೆದಕದೇ ಒಪ್ಪಿಕೊಂಡಿರುವುದು ಆ ಹೇಳಿಕೆಯ ಮುಂದುವರಿಕೆಗೆ ಕಾರಣ ಆಗಿರಬಹುದು. ಪರಶುರಾಮ ಸೃಷ್ಟಿ ಎನ್ನುವುದು ಒಂದು ಪುರಾಣ ಅಥವಾ ಐತಿಹ್ಯ ಅಥವಾ ಕಟ್ಟುಕತೆಯಾಗಿರಬಹುದು. ದಕ್ಷಿಣ ಕನ್ನಡದ ಚರಿತ್ರೆಯ ಪ್ರಕಾರ ಬ್ರಾಹ್ಮಣರು ದಕ್ಷಿಣ ಕನ್ನಡದ ಮೂಲ ನಿವಾಸಿಗಳಲ್ಲ. ಸುಮಾರು ಐದನೇ ಶತಮಾನದ ಸಂದರ್ಭದಲ್ಲಿ ಮಯೂರವರ್ಮನ ಕಾಲದಲ್ಲಿ ಉತ್ತರ ರಾಜ್ಯಗಳಿಂದ ವಲಸೆ ಬಂದವರು ಅಥವಾ ರಾಜನೇ ತಂದು ಕೆಲವೊಂದು ಗ್ರಾಮಗಳನ್ನು ದತ್ತಿ ನೀಡಿ ಇರಿಸಿದವರು. ಅಂದರೆ ಇದೊಂದು ರೀತಿ ಭಾರತದಲ್ಲಿ ಆರ್ಯರು ಮತ್ತು ದ್ರಾವಿಡರ ಪ್ರಶ್ನೆ ಇದ್ದಂತೆ. ಆರ್ಯರು ಹೊರಗಿನಿಂದ ಬಂದವರು ಮತ್ತು ದ್ರಾವಿಡರು ಇಲ್ಲಿನ ಮೂಲ ನಿವಾಸಿಗಳು ಎನ್ನುವ ವಾದ ಇದ್ದಂತೆ. ಈ ವಾದವನ್ನು ಸಮಸ್ಯೀಕರಿಸುವ ನಿಟ್ಟಿನಲ್ಲಿ ಆರ್ಯರು ಹೊರಗಿನಿಂದ ಬಂದವರಲ್ಲ ಇಲ್ಲಿನ ಮೂಲ ನಿವಾಸಿಗಳೇ ಎನ್ನುವ ವಾದಗಳು ಇವೆ. ಆ ಚರ್ಚೆ ಇಲ್ಲಿ ಪ್ರಸ್ತುತವಲ್ಲ. ದಕ್ಷಿಣ ಕನ್ನಡ ಮಾತೃಪ್ರಧಾನ ವ್ಯವಸ್ಥೆ ಇರುವ ಒಂದು ಪ್ರದೇಶ. ಅಲ್ಲಿ ಬ್ರಾಹ್ಮಣರನ್ನು ಹೊರತುಪಡಿಸಿದರೆ ಉಳಿದೆಲ್ಲ ಜನರು ಮಾತೃಪ್ರಧಾನ ಮೂಲದವರು. ಹೆಚ್ಚು ಕಡಿಮೆ ಶೇಕಡಾ ತೊಂಬತ್ತರಷ್ಟು ಜನ ಅಲ್ಲಿ ಮಾತೃಪ್ರಧಾನ ವ್ಯವಸ್ಥೆಯಲ್ಲಿ ಇರುವವರು. ಇಂತಹ ಪ್ರದೇಶದಲ್ಲಿ ಸಹಜವಾಗಿಯೇ ಬ್ರಾಹ್ಮಣರು ದಕ್ಷಿಣ ಕನ್ನಡದವರಲ್ಲ ಎನ್ನುವ ತಿಳುವಳಿಕೆ ಜನಸಾಮಾನ್ಯರ ಪ್ರಜ್ಞೆ ಆಗುವುದು ಕಷ್ಟವಾಗಲಿಲ್ಲ. ಇಂತಹ ಒಂದು ಪ್ರಜ್ಞೆಯನ್ನು ಅಳಿಸಿ ಅಲ್ಲಿ ಮತ್ತೊಂದು ಸತ್ಯವನ್ನು ಸ್ಥಾಪಿಸುವ ಉದ್ದೇಶದಿಂದ ಪರಶುರಾಮ ಸೃಷ್ಟಿಯಾಗಿದೆ. ಈ ಕಥನ ಪ್ರಕಾರ ದಕ್ಷಿಣ ಕನ್ನಡ ಎನ್ನುವ ಭೂ ಪ್ರದೇಶವೇ ಇರಲಿಲ್ಲ. ಪರಶುರಾಮ ತನ್ನ ಕೊಡಲಿಯನ್ನು ಬೀಸಿ ಸಮುದ್ರಕ್ಕೆ ಎಸೆಯುತ್ತಾನೆ. ಆ ಕೊಡಲಿ ಬಿದ್ದ ಜಾಗದಿಂದ ಇತ್ತ ಕಡೆಗೆ ಸಮುದ್ರದ ನೀರು ಖಾಲಿಯಾಗಿ ಭೂಮಿ ಸೃಷ್ಟಿಯಾಗುತ್ತದೆ. ಆ ಭೂಮಿಯನ್ನು ಆತ ಬ್ರಾಹ್ಮಣರಿಗೆ ದಾನವಾಗಿ ಕೊಡುತ್ತಾನೆ. ಹೀಗೆ ಈ ಒಂದು ಕಥನ ಬ್ರಾಹ್ಮಣರ ವಲಸೆ ಸ್ಥಿತಿಯನ್ನು ಬದಲಾಯಿಸಿ ಅವರನ್ನು ದಕ್ಷಿಣ ಕನ್ನಡದ ಮೂಲನಿವಾಸಿಗಳನ್ನಾಗಿಸುತ್ತದೆ. ಅಷ್ಟು ಮಾತ್ರವಲ್ಲ, ಇಷ್ಟರವರೆಗೆ ತಾವೇ ಮೂಲನಿವಾಸಿಗಳೆಂದು ವಿಶ್ವಾಸದಿಂದ ಇದ್ದವರು ಪರಶುರಾಮ ನಾಡಿನಲ್ಲಿ ಅಥವಾ ಬ್ರಾಹ್ಮಣರಿಗಾಗಿ ಸೃಷ್ಟಿಸಿದ ನಾಡಲ್ಲಿ ವಲಸಿಗರಾಗಬೇಕಾಗಿದೆ. ಈ ಕಥನವನ್ನು ಸಮಸ್ಯೀಕರಿಸದೇ ಒಪ್ಪಿಕೊಂಡರೆ ಆಗುವ ಅನಾಹುತ ಏನೆಂದು ತಿಳಿಯಬಹುದು.

ಕೊಡಗಿನ ಮತ್ತೊಂದು ಉದಾಹರಣೆ ನೋಡೋಣ. ಕಳೆದ ಕೆಲವು ವರ್ಷಗಳಿಂದ ಅಲ್ಲಿ ಪ್ರತ್ಯೇಕ ಕೊಡಗಿನ ಬೇಡಿಕೆ ಬಲಗೊಳ್ಳುತ್ತಿದೆ. ಚಳವಳಿಯ ಆರಂಭದ ದಿನಗಳಲ್ಲಿ ಕುಂಠಿತ ಅಭಿವೃದ್ಧಿಯ ಕಾರಣಕ್ಕಾಗಿ ಪ್ರತ್ಯೇಕ ರಾಜ್ಯದ ಬೇಡಿಕೆ ಮುಂದಿಡಲಾಗಿತ್ತು. ಆದರೆ ಬರಬರುತ್ತಾ ಪ್ರತ್ಯೇಕತೆಯನ್ನು ಕೇಳುವ ಕಾರಣಗಳು ಬದಲಾಗುತ್ತಾ ಬಂದವು. ಅಲ್ಲೂ ಮೂಲನಿವಾಸಿಗರ ಮತ್ತು ವಲಸಿಗರ ಪ್ರತ್ಯೇಕತೆಯ ಪ್ರಶ್ನೆಗಳು ಮುಂದಕ್ಕೆ ಬಂದವು. ಆ ಚರ್ಚೆಯ ಪ್ರಕಾರ ಕೊಡಗಿನಲ್ಲಿ ಕೊಡವರು ಅಲ್ಲಿನ ಮೂಲನಿವಾಸಿಗಳು. ಉಳಿದವರು ಬೇರೆ ಕಡೆಯಿಂದ ಬಂದು ಅಲ್ಲಿ ವಾಸಿಸುವವರು ಅಥವಾ ವಲಸಿಗರು. ಕೊಡಗು ಕೊಡವರದ್ದು ಮತ್ತು ಕೊಡವರು ಒಂದು ಪ್ರತ್ಯೇಕ ಸಮುದಾಯವಾಗಿದೆ. ತನ್ನ ಪ್ರತ್ಯೇಕತೆಯನ್ನು ಉಳಿಸಿ ಕೊಳ್ಳುವ ನಿಟ್ಟಿನಲ್ಲಿ ಪ್ರತ್ಯೇಕ ರಾಜ್ಯದ ಅವಶ್ಯಕತೆ ಇದೆ ಎನ್ನುವ ವಾದಗಳು ಹುಟ್ಟಿಕೊಂಡವು. ಅಲ್ಲಿನ ಬಹುತೇಕ ಕೊಡವರಲ್ಲದವರ ಪ್ರಕಾರ ಕೊಡವರ ಈ ವಾದ ವಿಶೇಷ ಅಲ್ಲ. ಕೊಡಗಿನಲ್ಲಿ ಕೊಡವರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಆದುದರಿಂದ ಅವರೇ ಕೊಡಗಿನ ನಿಜವಾದ ಹಕ್ಕುದಾರರು ಎಂದು ಹೇಳುವ ಅಗತ್ಯವೇ ಇಲ್ಲ. ಅದು ಸೂರ್ಯ ಚಂದ್ರರಷ್ಟೇ ಸತ್ಯ. ಅದನ್ನು ಪ್ರಶ್ನಿಸುವ ಅಥವಾ ಸಮಸ್ಯೀಕರಿಸುವ ಅಗತ್ಯ ಏನಿದೆ? ಅವರು ಅಲ್ಲಿನ ಮೂಲನಿವಾಸಿಗಳು. ಆದುದರಿಂದ ಅವರಿಗೆ ಆ ನೆಲದ ಮೇಲೆ ಇತರರಿಗಿಂತ ಹೆಚ್ಚಿನ ಹಕ್ಕು ಇದೆ ಎನ್ನುವುದು ಅಲ್ಲಿನ ಜನಸಾಮಾನ್ಯರ ಕಲ್ಪನೆ. ಅದನ್ನು ಪ್ರಶ್ನಿಸುವ ಕೆಲಸವನ್ನು ಕೆಲವು ವಿದ್ವಾಂಸರು ಮಾಡಿದ್ದಾರೆ.[9] ಕೊಡಗರು ಮಾತ್ರ ಕೊಡಗಿನ ಮೂಲ ನಿವಾಸಿಗಳೇ? ಇತರ ಜಾತಿ ಜನರು ಅಲ್ಲಿನ ಮೂಲನಿವಾಸಿಗಳಲ್ಲವೇ? ನಾವು ಮಾತ್ರ ಇಲ್ಲಿನ ಮೂಲನಿವಾಸಿಗಳೆಂದು ಕೊಡವರು ಘೋಷಣೆ ಮಾಡಿ ಕೊಡಗಿನ ಪ್ರತ್ಯೇಕತೆಯನ್ನು ಬಯಸಿದರೆ ಉಳಿದ ಸಮುದಾಯಗಳ ಸ್ಥಿತಿ ಏನಾಗುತ್ತದೆ? ಇತ್ಯಾದಿ ಪ್ರಶ್ನೆಗಳು ಹುಟ್ಟಿಕೊಳ್ಳುವುದೇ ಕೊಡಗರ ಮೂಲನಿವಾಸಿ ವಾದವನ್ನು ಸಮಸ್ಯೀಕರಿಸುವುದರಿಂದ. ಹೀಗೆ ಸಮಸ್ಯೀಕರಿಸುವುದು ಹಲವಾರು ಸ್ಥಾಪಿತ ಸತ್ಯಗಳನ್ನು (ರಚಿತ ಅಥವಾ ಕಟ್ಟಿಕೊಂಡ ಸತ್ಯಗಳನ್ನು) ಪ್ರಶ್ನಿಸಲು ಅಗತ್ಯ. ಈ ಸ್ಥಾಪಿತ ಅಥವಾ ರಚಿತ ಸತ್ಯಗಳು ಸಮುದಾಯಗಳನ್ನು ಒಂದು ವಿಧದ ಏಣಿಶ್ರೇಣಿಯೊಳಗಿಡಲು ಮಾನದಂಡವಾಗಿ ಕೆಲಸ ಮಾಡುತ್ತವೆ. ಕೆಲವನ್ನು ಮೇಲೆ ಮತ್ತೆ ಕೆಲವನ್ನು ಮಧ್ಯ ಭಾಗದಲ್ಲಿ ಮತ್ತು ಕೆಲವನ್ನು ಪಿರಾಮಿಡ್‌ನ ಕೆಳಭಾಗದಲ್ಲಿ ಫಿಕ್ಸ್‌ ಮಾಡುವ ಕೆಲಸಕ್ಕೆ ಈ ರಚಿತ ಸತ್ಯಗಳು ಸಹಕರಿಸುತ್ತವೆ. ಈ ರಚಿತ ಸತ್ಯಗಳು ಮನುಷ್ಯ ಮನುಷ್ಯರ ಮಧ್ಯ ಕಂದಕಗಳನ್ನು ಸೃಷ್ಟಿಸಿವೆ. ಹಲವಾರು ಸಾಮಾಜಿಕ ಮತ್ತು ಸಾಂಸ್ಕೃತಿಕ ಆಚರಣೆಗಳ ಮೂಲಕ ಈ ಕಂದರಗಳು ಮನುಷ್ಯನ ದಿನನಿತ್ಯದ ಬದುಕಿನಲ್ಲಿ ಕೆಲಸ ಮಾಡುತ್ತವೆ.

[1] ಪ್ರಶ್ನಿಸುವುದು ಮಾನವನ ಮೂಲಭೂತ ಗುಣವಲ್ಲ ಎನ್ನುವ ವಾದವನ್ನು ನಾನು ಮೈಕೆಲ್ ಫುಕೋನ ಅಧಿಕಾರ ಮತ್ತು ಜ್ಞಾನದ ಸಂಬಂಧ ಕುರಿತ ವಿವರಣೆಯನ್ನು ಆಧರಿಸಿ ಮಾಡಿದ್ದೇನೆ. ಆತ ಜ್ಞಾನ ಮಾನವ ಮೂಲಭೂತ ಗುಣ ಅಲ್ಲ. ಮಾನವ ತನ್ನ ಮೂಲಭೂತ ಅಗತ್ಯಗಳನ್ನು (ಹಸಿವು, ನೀರಡಿಕೆ, ಭಯ, ಕಾಮ ಇತ್ಯಾದಿಗಳನ್ನು) ಪೂರೈಸಿಕೊಳ್ಳುವ ಸಂದರ್ಭದಲ್ಲಿ ಜ್ಞಾನ ಉತ್ಪತ್ತಿಯಾಗುತ್ತದೆ ಎಂದು ವಾದಿಸುತ್ತಾನೆ. ಆತನ ಈ ವಾದವನ್ನು ಈ ಕೆಳಗಿನ ಪುಸ್ತಕದಿಂದ ಪಡೆಯಲಾಗಿದೆ. ಜೇಮ್ಸ್‌ ಡಿ. ಪಾಬಿಯನ್ (ಸಂ), ಮೈಕೆಲ್ ಫುಕೋಎಸೆನ್ಷಿಯಲ್ ವರ್ಕ್ಸ್ ಆಫ್ ಫುಕೋ ೧೯೫೪೧೯೮೪, ಲಂಡನ್: ಪೆಂಗ್ವಿನ್ ಬುಕ್ಸ್, ೧೯೯೪.

[2] ಸಂಶೋಧನೆ ಮತ್ತು ಅದರ ಫಲಾಫಲ ಕುರಿತ ಈ ವಾದವನ್ನು ಎಡಪಂಥೀಯ ವಿಚಾರಧಾಎಗಳ ಆಧಾರದಲ್ಲಿ ಮಾಡಲಾಗಿದೆ. ಎಲ್ಲವು ಪ್ರಜ್ಞೆ ನಿರ್ಧಾರಿತ ಎನ್ನುವ ಲಿಬರಲ್ ವಾದವನ್ನು ಅಲ್ಲಗಳೆಯುವ ದೃಷ್ಟಿಯಿಂದ ಮಾರ್ಕ್ಸ್ ಹಿಸ್ಟೋರಿಕಲ್ ಮೆಟಿರಿಯಲಿಸಂನ್ನು ಮುಂದಿಡುತ್ತಾನೆ. ಅಲ್ಲಿ ಪ್ರಜ್ಞೆಗಿಂತ ಹೆಚ್ಚಿನ ಆದ್ಯತೆಯನ್ನು ಪರಿಸರಕ್ಕೆ ಮತ್ತು ಅದರೊಂದಿಗಿನ ಮಾನವನ ಸಂಘರ್ಷ ದಿಂದ ಪ್ರಜ್ಞೆ ರೂಪುಗೊಳ್ಳುತ್ತದೆ ಎನ್ನುವ ವಾದಕ್ಕೆ ಹೆಚ್ಚಿನ ಮನ್ನಣೆ ಸಿಗುವಂತೆ ಮಾರ್ಕ್ಸ್‌ವಾದ ಮಾಡುತ್ತದೆ. ಹೀಗೆ ಜ್ಞಾನದ ಉತ್ಪಾದನೆಯಲ್ಲಿ ಸಂಘರ್ಷ ಬಹುದೊಡ್ಡ ಪಾತ್ರ ವಹಿಸುತ್ತದೆ. ಈ ಸಂಘರ್ಷವನ್ನು ಮಾನವ ತನ್ನೊಳಗೆ, ತಾನು ಬದುಕುವ ಪ್ರಾಕೃತಿಕ ಪರಿಸರದೊಂದಿಗೆ ಮತ್ತು ಸಮಾಜದ ವಿವಿಧ ಸ್ತರದಲ್ಲಿರುವವರೊಂದಿಗೆ ನಡೆಸುತ್ತಾನೆ. ಈ ಸಂಘರ್ಷವನ್ನು ಕಟ್ಟಿಕೊಳ್ಳಲು ಮತ್ತು ನಡೆಸಲು ಅವನಿಗೆ ಸಂಶೋಧನೆಯ ಅಗತ್ಯವಿದೆ. ಹೀಗೆ ಇಲ್ಲಿ ಸಂಶೋಧನೆ ಅನಿವಾರ್ಯವಾಗಿ ವರ್ಗಾಸಕ್ತಿಯನ್ನು ಸಾಧಿಸುವ ಮತ್ತು ಕಾಪಾಡುವ ಒಂದು ಸಾಧನವಾಗುತ್ತದೆ.

[3] ಬರ್ಟ್‌ ಎಫ್ ಹೊಸಲಿಡ್ಜ್‌, ಸೋಶಿಯಾಲಜಿಕಲ್ ಆಸ್ಪೆಕ್ಟಸ್ ಆಫ್ ಎಕಾನಿಮಿಕ್ ಗ್ರೋತ್, ನ್ಯೂಯಾರ್ಕ್: ದಿ ಪ್ರಿ ಪ್ರೆಸ್, ೧೯೬೬, ಎಸ್. ಕೂಜ್‌ನೆಟ್ಸ್, ಎಕಾನಮಿಕ್ ಗ್ರೋತ್ ಆಂಡ್ ಮೈಚುರೇಶನ್ ಆಫ್ ಮಾಡರ್ನ್ ಸೊಸೈಟಿ, ಲಂಡನ್: ರೌಟ್ಲೆಡ್ಜ್ ಆಂಡ್ ಕೆಗನ್ ಪೌಲ್, ೧೯೮೧, ಎಸ್. ಕೂಜ್‌ನೆಟ್ಸ್, ಎಕಾನಮಿಕ್ ಗ್ರೋತ್ ಆಂಡ್ ಸ್ಟ್ರಕ್ಚರ್, ಲಂಡನ್: ಹೇನ್‌ಮನ್, ೧೯೬೫ ಇತ್ಯಾದಿ ಬರಹಗಳು. ನಮ್ಮಲ್ಲೂ ಕಾಲ ಮತ್ತು ಸಮಾಜದ ವಿವಿಧ ಬೆಳವಣಿಗೆಯ ಹಂತಗಳನ್ನು ಗುರುತಿಸುವ ಕ್ರಮವಿತ್ತು. ತ್ರೇತಾಯುಗ, ದ್ವಾಪರಯುಗ ಮತ್ತು ಕಲಿಯುಗ ಎಂದು ವಿವಿಧ ಹಂತಗಳ ಬೆಳವಣಿಗೆಗಳನ್ನು ಗುರುತಿಸಲಾಗಿತ್ತು. ಇದು ಮೇಲೆ ತಿಳಿಸಿದ ವಿಧಾನಕ್ಕಿಂತ ಭಿನ್ನ. ಪಶ್ಚಿಮದ ಆಲೋಚನೆ ಪ್ರಕಾರ ಹಲವಾರು ಹಂತಗಳನ್ನು ದಾಟಿ ಒಂದು ಪರಿಪೂರ್ಣ ಸ್ಥಿತಿ ತಲುಪುವ ವಿವರಣೆ ಇದ್ದರೆ ನಮ್ಮ ಆಲೋಚನೆ ಪ್ರಕಾರ ಮಾನವ ಅಭಿವೃದ್ಧಿ ಉತ್ತಮ ಸ್ಥಿತಿಯಿಂದ ಕೆಳಸ್ಥಿತಿಗೆ ಇಳಿಮುಖ ಕಾಣುವ ವಿವರಣೆ ಇದೆ.

[4] ಕಾರ್ಲ್‌‌ಮಾರ್ಕ್ಸ್ ಮತ್ತು ಫೆಡ್ರಿಕ್ ಏಂಗೆಲ್, ದಿ ಕಮ್ಯುನಿಸ್ಟ್ ಮ್ಯಾನಿಫೆಸ್ಟೋ, ಲಂಡನ್: ಪಿಯೋನಿಕ್ಸ್, ೧೯೯೬, ಮೌರೀಸ್ ಡಾಬ್, ಸ್ಟಡೀಸ್ ಇನ್ ದಿ ಡೆವಲಪ್ಮೆಂಟ್ ಆಫ್ ಕ್ಯಾಪಿಟಲಿಸಂ, ಲಂಡನ್: ರೌಟ್ಲೆಡ್ಜ್ ಆಂಡ್ ಕೆಗನ್ ಪೌಲ್, ೧೯೪೬.

[5] ಡಬ್ಲ್ಯು ಡಬ್ಲ್ಯು ರುಸ್ತೋ, ದಿ ಸ್ಟೇಜಸ್ ಆಫ್ ಎಕಾನಮಿಕ್ ಗ್ರೋತ್, ಕೇಂಬ್ರಿಡ್ಜ್; ಕೇಂಬ್ರಿಡ್ಜ್ ಯುನಿವಸಿರ್ಕಟಿ ಪ್ರೆಸ್, ೧೯೭೭.

[6] ಎರಡು ಮೂರು ವರ್ಷಗಳ ಹಿಂದೆ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿಧಾನಗಳ ಬಗ್ಗೆ ಚರ್ಚಿಸಲು ಒಂದು ಕಮ್ಮಟ ಏರ್ಪಡಿಸಲಾಗಿತ್ತು. ಸಮಾಜವಿಜ್ಞಾನ ಸಂಶೋಧನಾ ಪ್ರಸ್ತಾವಗಳಲ್ಲಿ ಸಮಸ್ಯೆ ಮತ್ತು ಸಮಸ್ಯೀಕರಿಸುವುದು ಎಷ್ಟೊಂದು ಕೃತಕ ಆಗುತ್ತಿದೆ ಎನ್ನುವುದನ್ನು ವಿವರಿಸಲು ಅಬ್ದುಲ್ ಆಜೀಜ್ ಅವರು (ನಿವೃತ್ತ ಪ್ರಾಧ್ಯಾಪಕರು, ಐಸಾಕ್, ಬೆಂಗಳೂರು) ಮೇಲಿನ ಘಟನೆಯನ್ನು ವಿವರಿಸಿದರು.

[7] ೨೦೦೪ ರಲ್ಲಿ ಅಭಿವೃದ್ಧಿ ಅಧ್ಯಯನ ವಿಭಾಗ ಶಾಲಾ ಉಸ್ತುವಾರಿ ಸಮಿತಿ ಸದಸ್ಯರಿಗೆ ವಿಶ್ವವಿದ್ಯಾಲಯ ದಲ್ಲೊಂದು ಕಮ್ಮಟ ಏರ್ಪಡಿಸಿತ್ತು. ಆ ಕಮ್ಮಟದಲ್ಲಿ ಶಾಲಾ ಉಸ್ತುವಾರಿ ಸಮಿತಿ ಸದಸ್ಯರ ಜತೆ ಪ್ರಾಥಮಿಕ ಶಾಲಾ ಮುಖ್ಯ ಗುರುಗಳು ಕೂಡ ಭಾಗವಹಿಸಿದ್ದರು. ಗುಂಪು ಚರ್ಚೆಯ ಸಂದರ್ಭದಲ್ಲಿ ಮೇಲಿನ ಅಭಿಪ್ರಾಯಗಳನ್ನು ಶಾಲಾ ಮುಖ್ಯ ಗುರುಗಳು ವ್ಯಕ್ತಪಡಿಸಿದ್ದಾರೆ.

[8] ವಿವರಗಳಿಗೆ ಚಂದ್ರ ಪೂಜಾರ, ಜನಾಯೋಜನೆಹೈದರಾಬಾದ್ ಕರ್ನಾಟಕದ ಅನುಭವಗಳು (ವಿದ್ಯಾರಣ್ಯ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ೨೦೦೪) ಪುಸ್ತಕ ನೋಡಬಹುದು.

[9] ಡಾ. ಟಿ.ಪಿ. ವಿಜಯ್ ಅವರು ಕೊಡಗಿನ ಪ್ರತ್ಯೇಕತಾ ವಾದವನ್ನು ಸಮಸ್ಯೀಕರಿಸಿದವರಲ್ಲಿ ಪ್ರಮುಖರು. ಅವರು ಕೊಡವರ ಪ್ರತ್ಯೇಕತಾ ವಾದವನ್ನು ವಿಶ್ಲೇಷಿಸುವ ಹಲವಾರು ಲೇಖನಗಳನ್ನು ಮತ್ತು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಕೆಲವನ್ನು ಇಲ್ಲಿ ಕೊಟ್ಟಿದ್ದೇನೆ. ಟಿ.ಪಿ. ವಿಜಯ್, ‘ಕೊಡಗಿನ ಚರಿತ್ರೆಯ ಮೇಲೆ ಕೆಲವು ಟಿಪ್ಪಣಿಗಳು’ ಅರಿವು ಬರಹ, ಸಂಚಿಕೆ ೧, ೧೯೯೨, ಟಿ.ಪಿ. ವಿಜಯ್, ಆಧುನಿಕ ಕೊಡಗು, ವಿದ್ಯಾರಣ್ಯ: ಪ್ರಸಾರಾಂಗ, ಹಂಪಿ ಕನ್ನಡ ವಿಶ್ವವಿದ್ಯಾಲಯ, ೨೦೦೦, ಟಿ.ಪಿ. ವಿಜಯ್, ಕಾನ್ಫ್ಲಿಕ್ಟಿಂಗ್ ಐಡೆಂಟೀಟಿಸ್ ಇನ್ ಕರ್ನಾಟಕಸಪರೇಟ್ ಸ್ಟೇಟ್ ಆಂಡ್ ಆಂಟಿ ಸಪರೇಟ್ ಸ್ಟೇಟ್ ಮೂವ್ಮೆಂಟ್ಸ್ ಇನ್ ಕೂರ್ಗ್, ವಿದ್ಯಾರಣ್ಯ : ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ೨೦೦೪.