ಮಾಹಿತಿಯ ಮೌಲ್ಯನಿರ್ಣಯ

ಇದೇ ಸಂದರ್ಭದಲ್ಲಿ ದಾಖಲೆಗೆ ಸಂಬಂಧಿಸಿದ ಇನ್ನೊಂದು ಕಲ್ಪನೆ ಬಗ್ಗೆಯೂ ತಿಳಿದುಕೊಳ್ಳುವ ಅಗತ್ಯವಿದೆ. ದಾಖಲೆಯ ಗುಣದ ಆಧಾರದಲ್ಲಿ ದಾಖಲೆಗಳನ್ನು ಶ್ರೇಣೀಕರಿಸುವುದು. ಅಂದರೆ ಕೆಲವೊಂದು ದಾಖಲೆಗಳನ್ನು ಪ್ರಗತಿಪರ ಮತ್ತು ಕೆಲವನ್ನು ಪ್ರಗತಿಪರ ಅಲ್ಲವೆಂದು ವಿಂಗಡಿಸುವುದು. ಈ ವರ್ಗೀಕರಣದಲ್ಲಿ ತುಂಬಾ ಪ್ರಖರವಾಗಿ ಕಾಣುವುದು ಮೌಖಿಕ ಮತ್ತು ಲಿಖಿತ ಮಾಹಿತಿಗಳು ಅಥವಾ ದಾಖಲೆಗಳು. ಮೌಖಿಕ ದಾಖಲೆ ಅದರಷ್ಟಕ್ಕೆ ಅದು ಪ್ರಗತಿಪರ ಆಗುತ್ತದೆ ಎನ್ನುವ ಭ್ರಮೆ ಕೆಲವೊಂದು ಸಂಶೋಧಕರಿಗೆ ಇದ್ದಂತಿದೆ. ಅದೇ ರೀತಿಯಲ್ಲಿ ಲಿಖಿತ ಅಂದ ಕೂಡಲೇ ಅದು ಪ್ರಗತಿಪರ ಅಲ್ಲ ಅಥವಾ ಯಜಮಾನಿಕೆ ಸ್ವರೂಪದ್ದೆಂದು ತಿಳಿಯುವ ಕ್ರಮ ಚಾಲ್ತಿಯಲ್ಲಿದೆ. ಈ ಬಗೆಯ ತಿಳುವಳಿಕೆ ಸರಿಯಲ್ಲ. ಮಾಹಿತಿ ಅದರಷ್ಟಕ್ಕೇ ಅದು ಪ್ರಗತಿಪರವೂ ಅಲ್ಲ, ಪ್ರಗತಿ ವಿರೋಧಿಯೂ ಅಲ್ಲ. ಮಾಹಿತಿಯ ಬಳಕೆ ಈ ಎಲ್ಲವನ್ನು ಪ್ರಭಾವಿಸುವ ಅಂಶ. ಇದಕ್ಕೆ ಉತ್ತಮ ಉದಾಹರಣೆಯೆಂದರೆ ಸಂಗ್ಯಾ ಬಾಳ್ಯಾ ಕಥಾವಸ್ತು ಸುತ್ತ ನಡೆದ ಚರ್ಚೆ. ಇಡೀ ಕಥಾವಸ್ತುವನ್ನು ಜನಪದ ಹಿನ್ನೆಲೆಯಿಂದ ನೋಡಿದರೆ ಅದು ವಿವಿಧ ರೀತಿಯಲ್ಲಿ ಬಳಕೆಯಾಗಿದೆ. ಒಂದೇ ಮಾಹಿತಿ ಮೂಲ ಜನಪದ ಕತೆಯಾಗಿ, ಸಣ್ಣಾಟವಾಗಿ, ನಾಟಕವಾಗಿ ಹೀಗೆ ಹಲವಾರು ರೂಪಗಳನ್ನು ಪಡೆದಿದೆ. ವಿವಿಧ ವರ್ಗಾಸಕ್ತಿಗಳನ್ನು ಪ್ರತಿನಿಧಿಸಲು ಪ್ರಯತ್ನಿಸಿದೆ ಎನ್ನುವ ವಾದವೂ ಇದೆ. ಪತ್ತಾರ ಮಾಸ್ತರರ ಸಂಗ್ಯಾ ಬಾಳ್ಯಾದಲ್ಲಿ ಮೇಲುವರ್ಗದ ಮಹಿಳೆಯೊಂದಿಗೆ ಕೆಳವರ್ಗದ ಪುರುಷನ ಅನೈತಿಕ ಸಂಬಂಧವನ್ನು ಮೇಲ್ವರ್ಗದ ದಬ್ಬಾಳಿಕೆಗೆ ಪ್ರತಿಭಟನೆಯ ನೆಲೆಯಲ್ಲಿ ನೋಡಲಾಗುತ್ತದೆ. ‘ಅಂಚಿನಲ್ಲಿರುವ ಸಮುದಾಯಗಳು ಅವಮಾನದಿಂದ ನೊಂದು ಬೆಂದು ಅದನ್ನು ಪ್ರಕಟಿಸಲು ಅವಕಾಶಕ್ಕಾಗಿ ಕಾಯುವುದು ಸಂಸ್ಕೃತಿಯಲ್ಲಿ ಹೊಸದೇನಲ್ಲ. ಶ್ರೀಮಂತರ ದಬ್ಬಾಳಿಕೆಯಿಂದ ನೊಂದ ಪತ್ತಾರ ಮಾಸ್ತರ ಸಂಗ್ಯಾನ ಗಂಗಿ ಭ್ರಷ್ಟಳಾದ ಸನ್ನಿವೇಶವನ್ನು ಯುಕ್ತಿಯಿಂದ ತನ್ನ ಆಟಕ್ಕೆ ಬಳಸಿಕೊಂಡಿದ್ದಾನೆ.’[1]

ಕಲಬುರ್ಗಿಯವರ ಖರೆ ಖರೆ ಸಂಗ್ಯಾ ಬಾಳ್ಯಾ ನಾಟಕದಲ್ಲಿ ಗಂಗಿ ಜತೆಗೆ ಸಂಗ್ಯಾನ ಅನೈತಿಕ ಸಂಬಂಧ ಇರುವುದಿಲ್ಲ. ಅದಕ್ಕೆ ಕಾರಣ ‘ಗಂಗಿ ಲಿಂಗಾಯತರವಳು. ಲಿಂಗಾಯತರ ಮೇಲೆ ಕೆಸರು ಎರಚಲು ಪತ್ತಾರ ಜಾತಿಯವರು ರಚಿಸಿದ ಸಣ್ಣಾಟವಿದು. ಈರ್ಯಾ ಬಣಜಿಗನಾದುದರಿಂದ ಬಣಜಿಗ ಲಿಂಗಾಯತರ ಅಪಮಾನವನ್ನು ಗುರುತಿಸಿದ ಸೂಕ್ಷ್ಮ ಬುದ್ಧಿಜೀವಿಗಳು ಮೂರು ದಶಕಗಳಷ್ಟು ಹಳೆಯದಾದ ಹಳಸಲು ವಿಚಾರವನ್ನು’ ಎತ್ತಿಕೊಂಡು ತಮ್ಮ ಸಮುದಾಯಕ್ಕೆ ಆಗಿರುವ ಕಲ್ಪಿತ ಅವಮಾನವನ್ನು ಸರಿಪಡಿಸಲು ಪ್ರಯತ್ನಿಸಿದ್ದಾರೆ ಎನ್ನುವ ವಾದವೂ ಇದೆ.[2] ಇಲ್ಲಿ ಒಂದೇ ಕಥನವನ್ನು ವಿವಿಧ ಉದ್ದೇಶಗಳಿಗೆ ಬಳಸಲಾಗಿದೆ.

ಮಾಹಿತಿಯ ಹಿನ್ನೆಲೆಯ ಆಧಾರದಲ್ಲಿ ಪ್ರಗತಿಪರ ಅಥವಾ ಅಲ್ಲ ಎಂದು ವಿಂಗಡಿಸುವುದು ಮಾಹಿತಿಗೊಂದು ಬಗೆಯ ಸ್ವತಂತ್ರ ಅಸ್ತಿತ್ವ ನೀಡಿದಂತೆ. ಇದೊಂದು ರೀತಿಯಲ್ಲಿ ಐಡಿಯಾ ಅಥವಾ ವಿಚಾರಕ್ಕೆ ಸ್ವತಂತ್ರವಾದ ಶಕ್ತಿ ಇದೆಯೆಂದು ತಿಳಿದಂತೆ. ಯಾವುದೇ ಐಡಿಯಾ ಅಥವಾ ವಿಚಾರ ಅದರಷ್ಟಕ್ಕೆ ಅದು ಚಲಿಸಿ ಜನರಿಗೆ ತಲುಪುವುದಿಲ್ಲ. ಐಡಿಯಾ ಅಥವಾ ವಿಚಾರವೊಂದು ಜನರ ತಿಳುವಳಿಕೆಯ ಭಾಗವಾಗುವಲ್ಲಿ ಹಲವಾರು ಸಂಗತಿಗಳ ಪಾತ್ರ ಇದೆ. ಅವುಗಳಲ್ಲಿ ಪ್ರಮುಖವಾದುದು ಅಧಿಕಾರದ ಪಾತ್ರ. ಇಲ್ಲಿ ಎಲ್ಲ ಬಗೆಯ ಅಧಿಕಾರಗಳ (ರಾಜಕೀಯ, ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ) ಪಾತ್ರ ಇದೆ. ಇದಕ್ಕೊಂದು ಉತ್ತಮ ಉದಾಹರಣೆಯೆಂದರೆ ಇತ್ತೀಚೆಗೆ ನಡೆದ ಕುವೆಂಪು ಅವರ ನಾಡಗೀತೆಯ ಚರ್ಚೆ. ಕುವೆಂಪು ಅವರು ಆ ಗೀತೆ ಬರೆದು ದಶಕಗಳೇ ಆದವು. ಆ ಗೀತೆಯ ಶಕ್ತಿಯಿಂದಲೇ ಅದು ನಾಡಗೀತೆ ಆಗುತ್ತಿದ್ದರೆ ಇಷ್ಟರವರೆಗೆ ಕಾಯುವ ಅಗತ್ಯವೇನಿದೆ. ಒಕ್ಕಲಿಗರಿಗೆ ರಾಜ್ಯದ ರಾಜಕೀಯದಲ್ಲಿ ಒಂದು ಬಗೆಯ ಹಿಡಿತ ಬಂದ ಸಂದರ್ಭದಲ್ಲೇ ಕುವೆಂಪು ಅವರ ಗೀತೆ ನಾಡಗೀತೆ ಆಗಿದೆ. ಇದು ಕೇವಲ ಕುವೆಂಪು ಅವರ ನಾಡಗೀತೆಗೆ ಸಂಬಂಧಿಸಿದ ವಿಚಾರವಲ್ಲ. ನಮ್ಮ ರಾಜ್ಯದ ಸಾಂಸ್ಕೃತಿಕ ಚಿಂತನೆಯ ಎಲ್ಲ ಮಜಲುಗಳಲ್ಲಿ ಇದರ ನೇರ ಅಥವಾ ಪರೋಕ್ಷ ಪಾತ್ರ ಇದೆ. ಎಲ್ಲ ಸಮಾಜದಲ್ಲೂ ಬಹುತೇಕ ಸಾಂಸ್ಕೃತಿಕ ಚಿಂತಕರು ಆಯಾಯ ಸಮಾಜದ ಮೇಲ್ವರ್ಗದವರೇ ಆಗಿರುತ್ತಾರೆ. ಅದಕ್ಕೆ ಅಪವಾದ ಇದ್ದರೆ ಅದು ಇತ್ತೀಚಿನ ದಿನಗಳಲ್ಲಿ ಬೆಳಕಿಗೆ ಬರುವ ಕೆಲವು ದಲಿತ ಚಿಂತಕರು. ಆದರೆ ಇಲ್ಲಿ ಆಧುನೀಕರಣದೊಂದಿಗೆ ಬಂದ ಸಾಮಾಜಿಕ ನ್ಯಾಯದ ಕಲ್ಪನೆಯ ಪಾತ್ರವನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಹೀಗೆ ಐಡಿಯಾಕ್ಕೆ ಈ ರೀತಿಯ ಆಸರೆಯ ಅಗತ್ಯವಿರುವಾಗ ಮಾಹಿತಿಯೊಂದು ಅದರಷ್ಟಕ್ಕೆ ಅದು ಪ್ರಗತಿಪರ ಅಥವಾ ಪ್ರಗತಿ ವಿರೋಧ ಆಗುವುದು ಹೇಗೆ? ಮೌಖಿಕ ಮಾಹಿತಿಯನ್ನು ಪ್ರಗತಿಪರರು ಉಪಯೋಗಿಸಿದಂತೆ ಇತರರು ಉಪಯೋಗಿಸಬಹುದು.

ಮಾಹಿತಿಯ ಇತಿಮಿತಿಗಳು

ಆನುಷಂಗಿಕ ಮಾಹಿತಿ ಸಂಗ್ರಹ ಮಾಡುವಾಗ ಈಗಾಗಲೇ ಪ್ರಕಟವಾದ ಅಥವಾ ಸರಕಾರಿ ಕಚೇರಿಗಳು ಕ್ರೋಡೀಕರಿಸಿದ ಮಾಹಿತಿಗಳನ್ನು ಯಥಾ ರೂಪದಲ್ಲಿ ಬಳಸುವುದು ರೂಢಿ. ಸರಕಾರದ ಕಚೇರಿಗಳಲ್ಲಿ ಸಿಗುವ ಅಂಕಿ ಅಂಶಗಳನ್ನು ಪರೀಕ್ಷಿಸುವಷ್ಟು ಸಮಯ ಮತ್ತು ಸಂಪನ್ಮೂಲ ಸಂಶೋಧಕರ ಬಳಿ ಇರುವುದಿಲ್ಲ. ಅಂತಹ ಸಂದರ್ಭದಲ್ಲಿ ಸಿಗುವ ಅಂಕಿಅಂಶಗಳನ್ನು ಯಥಾರೂಪದಲ್ಲಿ ಬಳಸುವುದು ಸಾಮಾನ್ಯವಾಗಿದೆ. ಆದರೆ ಇಂತಹ ಮಾಹಿತಿಗಳಲ್ಲೂ ಸಾಕಷ್ಟು ದೋಷಗಳಿವೆ. ಪಂಚಾಯತ್ ಯೋಜನೆ ತಯಾರಿಸುವ ಸಂದರ್ಭದಲ್ಲಿ ಸರಕಾರಿ ಕಚೇರಿಗಳಲ್ಲಿ ದೊರೆಯುವ ಮಾಹಿತಿಯ ದೋಷಗಳನ್ನು ಪಟ್ಟಿ ಮಾಡಲಾಗಿದೆ. ಪ್ರತಿ ಪಂಚಾಯತ್‌ಕೂಡ ಸಾಮಾನ್ಯ ಮಾಹಿತಿ ಎನ್ನುವ ಒಂದು ರಿಜಿಸ್ಟರನ್ನು ಇಟ್ಟಿರುತ್ತದೆ. ಇದು ಸುಮಾರು ೧೮ ಸೂಚ್ಯಂಕಗಳ ಬಗ್ಗೆ ಅಂಕಿ ಅಂಶಗಳನ್ನು ನೀಡುವ ಒಂದು ದಾಖಲೆ. ಇದು ಪಂಚಾಯತ್ ಯೋಜನೆಯ ಆಧಾರಸ್ತಂಭವೆಂದು ಪರಿಗಣಿಸಲಾಗಿದೆ. ಆದರೆ ಸಾಮಾನ್ಯ ಮಾಹಿತಿ ಪುಸ್ತಕದಲ್ಲಿ ದಾಖಲಾಗಿರುವ ಅಂಕಿಅಂಶಗಳಲ್ಲಿ ಸಾಕಷ್ಟು ದೋಷಗಳಿವೆ ಎನ್ನುವ ದೂರಿದೆ. ಸಾಮಾನ್ಯ ಮಾಹಿತಿ ಪುಸ್ತಕದಲ್ಲಿ ಇರುವ ಮಾಹಿತಿಯನ್ನು ಯಾರು ಕೂಡ ಗಂಭೀರವಾಗಿ ಪರಿಗಣಿಸಲು ಸಾಧ್ಯವಿಲ್ಲದಷ್ಟು ತಪ್ಪುಗಳು ಇವೆ ಎನ್ನುವ ಮಾತಿದೆ. ಈ ಎಲ್ಲ ಅಂಶಗಳನ್ನು ಪರಿಶೀಲಿಸುವ ದೃಷ್ಟಿಯಿಂದ ಕೃಷ್ಣನಗರ ಪಂಚಾಯತ್‌ಗೆ ಯೋಜನೆ ತಯಾರಿಸುವ ಸಂದರ್ಭದಲ್ಲಿ ಸಾಮಾನ್ಯ ಮಾಹಿತಿ ಪುಸ್ತಕವನ್ನು ಕೂಲಂಕಷವಾಗಿ ಪರೀಕ್ಷಿಸಿದೆವು. ಕೃಷ್ಣನಗರ ಗ್ರಾಮಪಂಚಾಯತ್ ಕಾರ್ಯದರ್ಶಿಗಳು ಬರೆದ ಸಾಮಾನ್ಯ ಮಾಹಿತಿ ಪುಸ್ತಕದಲ್ಲಿ ಈ ಕೆಳಗಿನ ದೋಷಗಳನ್ನು ಗುರುತಿಸಲಾಗಿದೆ. ೨೦೦೦-೦೧ ರಲ್ಲಿ ಕೃಷ್ಣನಗರದ ಭೌಗೋಳಿಕ ವಿಸ್ತೀರ್ಣ ಸಾಮಾನ್ಯ ಮಾಹಿತಿ ಪುಸ್ತಕ ಪ್ರಕಾರ ೧೭೪೦.೨೦ ಹೆಕ್ಟೇರುಗಳು. ೨೦೦೧-೦೨ ರಲ್ಲಿ ಹಳ್ಳಿಯ ವಿಸ್ತೀರ್ಣ ೧೮೯೨.೯೦ ಹೆಕ್ಟೇರುಗಳಾಗಿವೆ. ಅದೇ ರೀತಿ ದೌಲತಪುರದ ಭೌಗೋಳಿಕ ವಿಸ್ತೀರ್ಣ ೨೦೦೦.೦೧ ರಲ್ಲಿ ೨೨೨೮.೫೩ ಹೆಕ್ಟೇರುಗಳು. ೨೦೦೧-೦೨ ರಲ್ಲಿ ದೌಲತಪುರದ ವಿಸ್ತೀರ್ಣ ೨೦೩೦.೪೦ ಹೆಕ್ಟೇರುಗಳಾಗಿವೆ. ಅಂದರೆ ಒಂದೇ ವರ್ಷದಲ್ಲಿ ಎರಡೂ ಹಳ್ಳಿಯ ಭೌಗೋಳಿಕ ವಿಸ್ತೀರ್ಣದಲ್ಲಿ ಇಷ್ಟೊಂದು ಬದಲಾವಣೆ ಹೇಗೆ ಸಾಧ್ಯ. ಸಾಮಾನ್ಯ ಮಾಹಿತಿ ಪುಸ್ತಕದ ದಾಖಲೆಗೆ ಸಂಬಂಧಿಸಿದ ಮತ್ತೊಂದು ಉದಾಹರಣೆಯನ್ನು ಗಮನಿಸಬಹುದು. ಸಾಮಾನ್ಯ ಮಾಹಿತಿ ಪ್ರಕಾರ ೨೦೦೦-೦೧ ರಲ್ಲಿ ಕೃಷ್ಣನಗರದ ಜನಸಂಖ್ಯೆ ೩೦೭೨. ಆದರೆ ಆ ಗ್ರಾಮದ ಮತದಾರರ ಸಂಖ್ಯೆ ಅದೇ ಅವಧಿಯಲ್ಲಿ ೩೨೫೦. ಪ್ರಪಂಚದ ಯಾವ ಹಳ್ಳಿಯಲ್ಲಿ ಹೀಗಿರಲು ಸಾಧ್ಯ. ಇವು ಮೇಲ್ನೋಟಕ್ಕೆ ಕಾಣುವ ತಪ್ಪುಗಳ ಕೆಲವೊಂದು ಮಾದರಿಗಳು. ಸಾಮಾನ್ಯ ಮಾಹಿತಿ ಪುಸ್ತಕವನ್ನು ಕೂಲಂಕಷವಾಗಿ ಪರೀಕ್ಷಿಸಿದರೆ ಬೇಕಾದಷ್ಟು ದೋಷಗಳನ್ನು ಪಟ್ಟಿ ಮಾಡಬಹುದು. ಈ ಅಂಕಿಅಂಶಗಳ ಆಧಾರದಲ್ಲಿ ಯೋಜನೆ ರೂಪಿಸಿದರೆ ಏನಾದೀತೆಂದು ವಿವರಿಸುವ ಅಗತ್ಯ ಇಲ್ಲ.[3]

ಸಾಮಾನ್ಯ ಮಾಹಿತಿ ಪುಸ್ತಕದ ದಾಖಲೆಗಳ ನಿಖರತೆ ಪಂಚಾಯತ್‌ಕಾರ್ಯದರ್ಶಿಗಳನ್ನು ಜವಾಬ್ದಾರಿಗೊಳಿಸಲಾಗಿದೆ. ಈ ಕುರಿತು ಕಾರ್ಯದರ್ಶಿಗಳನ್ನು ಪ್ರಶ್ನಿಸಿದರೆ, ಅವರು ‘ನಾವೇ ಕ್ಷೇತ್ರ ಕಾರ್ಯ ಮಾಡಿ ಅಂಕಿಅಂಶಗಳನ್ನು ಸಾಮಾನ್ಯ ಮಾಹಿತಿ ಪುಸ್ತಕದಲ್ಲಿ ದಾಖಲಿಸುವುದಿಲ್ಲ. ವಿವಿಧ ಇಲಾಖೆಗಳಿಂದ ಸಂಗ್ರಹಿಸಿದ ಅಂಕಿ ಅಂಶಗಳನ್ನು ನಾವು ಸಾಮಾನ್ಯ ಮಾಹಿತಿ ಪುಸ್ತಕದಲ್ಲಿ ದಾಖಲಿಸುತ್ತೇವೆ. ಒಂದು ವೇಳೆ ಮೂಲ ದಾಖಲೆಗಳಲ್ಲಿಯೇ ದೋಷವಿದ್ದರೆ ನಾವೇನು ಮಾಡಲು ಸಾಧ್ಯ? ಎಂದು ಕಾರ್ಯದರ್ಶಿಗಳು ಮರುಪ್ರಶ್ನೆ ಕೇಳುತ್ತಾರೆ.’ ಮಾಹಿತಿಗಳ ಮೂಲದಲ್ಲಿ ದೋಷ ಇರಲು ಹೇಗೆ ಸಾಧ್ಯ? ಎಂದು ಅವರನ್ನು ವಿಚಾರಿಸಲಾಯಿತು. ಈ ಕೆಳಗಿನ ಕಾರಣಗಳಿಂದ ಮಾಹಿತಿಗಳ ಮೂಲದಲ್ಲೇ ದೋಷ ಇರುವ ಸಾಧ್ಯತೆ ಇದೆ ಎಂದು ಕಾರ್ಯದರ್ಶಿಗಳು ತಿಳಿಸುತ್ತಾರೆ. ಒಂದು, ಮಳೆ ಬಗೆಗಿನ ಅಂಕಿಅಂಶಗಳು ಸರಿ ಇರಲು ಸಾಧ್ಯವೇ ಇಲ್ಲ. ಯಾಕೆಂದರೆ ಮಳೆ ಮಾಪಕವನ್ನು ತಾಲ್ಲೂಕು ಅಥವಾ ಹೋಬಳಿಗಳಲ್ಲಿ ಇಟ್ಟಿರುತ್ತಾರೆ. ಮಾಪಕ ಇರುವಲ್ಲಿ ಮಳೆ ಆದರೆ ಆ ತಾಲ್ಲೂಕಿಗೆ ಅಥವಾ ಹೋಬಳಿಗೆ ಮಳೆ ಆಗಿದೆ ಎಂದು ದಾಖಲಾಗುತ್ತದೆ. ಇದರಿಂದಾಗಿ ಬರ ಇರುವ ಜಾಗ ಬರ ಇಲ್ಲ ಎಂದೋ ಅಥವಾ ಬರ ಇಲ್ಲದ ಪ್ರದೇಶ ಬರ ಇದೆ ಎಂಓ ದಾಖಲಾಗುವ ಸಾಧ್ಯತೆಗಳಿರುತ್ತವೆ. ಎರಡು, ವಿವಿಧ ಬೆಳೆಗಳ ಬಿತ್ತನೆ ಪ್ರದೇಶವನ್ನು ದಾಖಲಿಸುವ ವಿಧಾನ ಕೂಡ ಅಂಕಿಅಂಶಗಳ ಮೂಲದಲ್ಲೇ ದೋಷನ್ನುಂಟು ಮಾಡುವ ರೀತಿಯಲ್ಲಿದೆ. ರೈತರ ಪಹಣಿಯಲ್ಲಿ ಅವರು ಬೆಳೆಯುವ ಬೆಳೆಯನ್ನು ಸ್ಥೂಲವಾಗಿ ದಾಖಲಿಸಲಾಗುತ್ತದೆ. ತಾಲ್ಲೂಕು ಮಟ್ಟದ ಕೃಷಿ ಇಲಾಖೆಯವರು ರೈತರ ಪಹಣೆ ನೋಡಿ ವಿವಿಧ ಬೆಳೆಗಳ ಬಿತ್ತನೆ ಪ್ರದೇಶವನ್ನು ನಿರ್ಧರಿಸುತ್ತಾರೆ. ಆದರೆ ವಾಸ್ತವದಲ್ಲಿ ಒಬ್ಬ ರೈತ ತನ್ನ ಪಹಣಿಯಲ್ಲಿ ದಾಖಲಿಸಿದ ಬೆಳೆಯನ್ನೇ ಬೆಳೆಯುತ್ತೇನೆ ಎನ್ನುವ ಖಾತರಿ ಇಲ್ಲ. ಕೆಲವು ಬಾರಿ ತಾಲ್ಲೂಕು ಮಟ್ಟದ ಕೃಷಿ ಅಧಿಕಾರಿಗಳು ಅವರ ಮೇಲಧಿಕಾರಿಗಳ ಒತ್ತಡಕ್ಕೆ ಒಂದು ನಿರ್ದಿಷ್ಟ ಬಿತ್ತನೆ ಪ್ರದೇಶಗಳನ್ನು ತಮ್ಮ ಮೇಲಧಿಕಾರಿಗಳಿಗೆ ಕಳುಹಿಸುತ್ತಾರೆ. ಅದೇ ಅಂಕಿಅಂಶಗಳನ್ನು ತನ್ನ ಕೆಳಗಿನ ಅಧಿಕಾರಿಗೆ ಕಳುಹಿಸಿ ಸ್ಥಳೀಯ ಅಂಕಿಅಂಶವನ್ನು ತಾನು ಕಳುಹಿಸಿದ ಅಂಕಿಅಂಶಗಳಿಗೆ ಸರಿಹೊಂದುವಂತೆ ಬರೆದುಕೊಳ್ಳಲು ಸೂಚಿಸಲಾಗುತ್ತದೆ. ಈ ಸಂದರ್ಭದಲ್ಲಿ ಕೆಳಗಿನ ಅಧಿಕಾರಿಗಳು ತಮ್ಮ ಮೇಲಧಿಕಾರಿ ಕಳುಹಿಸಿದ ಅಂಕಿ ಅಂಶಕ್ಕೆ ತನ್ನ ಅಂಕಿ ಅಂಶಗಳನ್ನು ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ.

ಒಂದು ವೇಳೆ ಮೂಲ ದಾಖಲೆಯಲ್ಲಿ ಅಂಕಿ ಅಂಶಗಳು ಸರಿ ಇದ್ದು ಸಾಮಾನ್ಯ ಮಾಹಿತಿಯಲ್ಲಿ ದೋಷಗಳಿದ್ದರೆ ಅದಕ್ಕೆ ಕಾರ್ಯದರ್ಶಿಗಳೇ ಜವಾಬ್ದಾರರಲ್ಲವೇ? ಎಂದು ಕಾರ್ಯದರ್ಶಿಗಳನ್ನು ಕೇಳಲಾಯಿತು. ಈ ಪ್ರಶ್ನೆಗೆ ಕಾರ್ಯದರ್ಶಿಗಳು ಹೌದು ಎಂದು ಒಪ್ಪಿಕೊಳ್ಳುತ್ತಾರೆ. ಆ ತಪ್ಪುಗಳು ಯಾಕೆ ಆಗುತ್ತವೆ? ಎಂದರೆ ಅವರ ಅನುಭವಕ್ಕೆ ಬಂದ ಈ ಕೆಳಗಿನ ಕಾರಣಗಳನ್ನು ಪಟ್ಟಿ ಮಾಡುತ್ತಾರೆ. ಒಂದು, ಕಡಿಮೆ ಕಾಲಾವಕಾಶದ ಸಮಸ್ಯೆ ಅಂಕಿ ಅಂಶಗಳನ್ನು ಸಂಗ್ರಹಿಸಿ ಸಾಮಾನ್ಯ ಮಾಹಿತಿಯಲ್ಲಿ ದಾಖಲಿಸಲು ಕಾಲಾವಕಾಶ ಕಡಿಮೆ ಇದೆ. ಮೇಲುಸ್ತರದ ಅಧಿಕಾರಿಗಳು ತುರ್ತು ನೋಟೀಸು ಜಾರಿ ಮಾಡಿ ಮಾಹಿತಿ ಕೇಳುತ್ತಾರೆ. ಮೇಲಧಿಕಾರಿಗಳ ಆದೇಶವನ್ನು ಪಾಲಿಸುವ ಭರದಲ್ಲಿ ಕೈಗೆ ಸಿಕ್ಕಿದ ಮಾಹಿತಿಗಳನ್ನು ತುಂಬಿಸಿ ಕಳುಹಿಸಲಾಗುವುದು. ಎರಡು, ಸಾಮಾನ್ಯ ಮಾಹಿತಿ ಪುಸ್ತಕದಲ್ಲಿ ದಾಖಲಾಗುವ ಅಂಕಿಅಂಶಗಳ ಮಹತ್ವದ ಬಗ್ಗೆ ಕಾರ್ಯದರ್ಶಿಗಳಿಗೆ ತಿಳುವಳಿಕೆ ಇಲ್ಲ. ಈ ಮಾಹಿತಿಯನ್ನು ಆಧರಿಸಿ ತಳೆಯುವ ನಿರ್ಧಾರಗಳು, ಅದರಿಂದ ಆಗಬಹುದಾದ ಅನಾಹುತಗಳು, ಇತ್ಯಾದಿಗಳ ಬಗ್ಗೆ ಕಾರ್ಯದರ್ಶಿಗಳಿಗೆ ಅರಿವಿಲ್ಲ. ಮೂರು, ಮಾಹಿತಿ ಸಂಗ್ರಹ ಮತ್ತು ದಾಖಲಿಸುವುದರ ಬಗ್ಗೆ ಕಾರ್ಯದಶಿಗಳಿಗೆ ತರಬೇತು ಇಲ್ಲ. ನಾಲ್ಕು, ಕಾರ್ಯದರ್ಶಿಗಳು ಕಳುಹಿಸಿದ ಅಂಕಿಅಂಶಗಳನ್ನು ತಾಲ್ಲೂಕು ಮಟ್ಟದ ಅಧಿಕಾರಿಗಳು ಪರಿಶೀಲಿಸುವುದಿಲ್ಲ. ಐದು, ವಿವಿಧ ಇಲಾಖೆಗಳು ಹಲವಾರು ಬಾರಿ ಅವರ ಕಚೇರಿಗೆ ಸುತ್ತಾಡಿದರೂ ಮಾಹಿತಿ ಒದಗಿಸುವುದಿಲ್ಲ. ಹಾಗೆಂದು ವಿವಿಧ ಇಲಾಖೆಗಳ ಕಚೇರಿಗೆ ಹಲವಾರು ಬಾರಿ ಸುತ್ತಾಡುವಷ್ಟು ಕಾಲಾವಕಾಶವೂ ಇಲ್ಲ.

ಬಡತನ ರೇಖೆಗಿಂತ ಕೆಳಗಿನವರನ್ನು (ಬಿಪಿಎಲ್) ಗುರುತಿಸಲು ಆದಾಯ ಮುಖ್ಯ ಲಕ್ಷಣ. ಯಾವ ಕುಟುಂಬದ ವಾರ್ಷಿಕ ಆದಾಯ ೧೧೪೦೦ ರೂಪಾಯಿಗಳಿಂದ ಕಡಿಮೆ ಇರುತ್ತದೋ ಆ ಕುಟುಂಬ ಬಡತನ ರೇಖೆಗಿಂತ ಕಡಿಮೆ ಆದಾಯವನ್ನು ಹೊಂದಿದೆ ಎನ್ನುವ ತೀರ್ಮಾನಕ್ಕೆ ಬರಲಾಗುತ್ತದೆ. ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಶೇ. ೩೫ ರಷ್ಟು ಕುಟುಂಬಗಳು ಬಡತನ ರೇಖೆಗಿಂತ ಕೆಳಗೆ ಇವೆ. ಆದರೆ ಈ ಎರಡೂ ಜಿಲ್ಲೆಗಳಲ್ಲೂ ಕೋಟಿಗಟ್ಟಲೆ ರೂಪಾಯಿಗಳನ್ನು ಗ್ರಾಮೀಣ ಅಭಿವೃದ್ಧಿಗಾಗಿ ವಿನಿಯೋಜಿಸಲಾಗಿದೆ. ಹಲವಾರು ವರ್ಷಗಳ ಗ್ರಾಮೀಣ ಅಭಿವೃದ್ದಿ ಕಾರ್ಯಕ್ರಮಗಳ ನಂತರವೂ ಇಷ್ಟೊಂದು ಅಗಾಧ ಪ್ರಮಾಣದ ಕುಟುಂಬಗಳು ಬಡತನ ರೇಖೆಗಿಂತ ಕೆಳಗೆ ಇರಲು ಸಾಧ್ಯವಿಲ್ಲ. ಆದರೂ ಅಂಕಿಅಂಶಗಳು ಇವೆ ಎಂದು ತೋರಿಸುತ್ತವೆ. ಇದು ಹೇಗೆ ಎಂದು ಕಾರ್ಯದರ್ಶಿಗಳನ್ನು ವಿಚಾರಿಸಲಾಯಿತು. ಅವರ ಪ್ರಕಾರ ಈ ಕೆಳಗಿನ ಕಾರಣಗಳಿಂದ ಬಡತನ ರೇಖೆಗಿಂತ ಕೆಳಗೆ ಇರುವ ಕುಟುಂಬಗಳು ಹೆಚ್ಚು ಇರುವ ಸಾಧ್ಯತೆಗಳಿವೆ. ಒಂದು, ಬಹುಮುಖ್ಯ ಕಾರಣ ಬಡತನ ರೇಖೆ ಮತ್ತು ಸರಕಾರದಿಂದ ಸಿಗುವ ಸವಲತ್ತುಗಳ ನಡುವೆ ಸಂಬಂಧ ಇರುವುದು. ಹಳ್ಳಿಯಲ್ಲಿರುವ ಎಲ್ಲರಿಗೂ ಈ ಸತ್ಯ ಗೊತ್ತಿದೆ. ಸರಕಾರದ ಸವಲತ್ತು ಸಿಗಬೇಕಾದರೆ ಸರಕಾರದ ದಾಖಲೆಗಳಲ್ಲಿ ಬಡವರೆಂದು ದಾಖಲಾಗಬೇಕು. ಆದುದರಿಂದ ಸರಕಾರದ ಕಡೆಯವರು ಸಮೀಕ್ಷೆ ಮಾಡಲು ಬಂದಾಗ ಸುಳ್ಳು ಆದಾಯವನ್ನು ಹೇಳುವುದು ಮತ್ತು ಸುಳ್ಳು ದಾಖಲೆಗಳನ್ನು ಸೃಷ್ಟಿಸುವುದು ಸಾಮಾನ್ಯ. ಎರಡು, ಅವಿಭಕ್ತ ಕುಟುಂಬಗಳಲ್ಲಿ ಎಲ್ಲ ಭೂಮಿ ಹಿರಿಯರ ಹೆಸರಲ್ಲಿ ಇರುತ್ತದೆ; ಮಕ್ಕಳ ಹೆಸರಲ್ಲಿ ಇರುವುದಿಲ್ಲ. ವಾಸ್ತವದಲ್ಲಿ ಮಕ್ಕಳು ತಮ್ಮ ಹೆಂಡತಿ ಮಕ್ಕಳೊಂದಿಗೆ ಆ ಭೂಮಿಯನ್ನು ಅನುಭವಿಸುತ್ತಿರುತ್ತಾರೆ. ಆದರೆ ಸರಕಾರದ ಸಮೀಕ್ಷೆ ಸಂದರ್ಭದಲ್ಲಿ ಮಕ್ಕಳು ನಮ್ಮ ಹೆಸರಲ್ಲಿ ಭೂಮಿಯೇ ಇಲ್ಲ ಆದುದರಿಂದ ತಾವು ಬಡತನ ರೇಖೆಗಿಂತ ಕೆಳಗೆ ಆದಾಯವುಳ್ಳವರೆಂದು ಬರೆದುಕೊಳ್ಳಲು ಒತ್ತಾಯಿಸುತ್ತಾರೆ. ಹೀಗೆ ಎಕರೆಗಟ್ಟಲೆ ಭೂಮಿ ಇದ್ದವರು ಕೂಡ ಬಡತನ ರೇಖೆಗಿಂತ ಕೆಳಗೆ ಆದಾಯವುಳ್ಳವರೆಂದು ಸಮೀಕ್ಷೆ ನಡೆಸುವ ಸಂದರ್ಭದಲ್ಲಿ ದಾಖಲಾಗುತ್ತಾರೆ. ಎರಡು, ವಾರ್ಷಿಕ ಆದಾಯದ ಬಗ್ಗೆ ಸುಳ್ಳು ಹೇಳುವದು. ಮೂರು, ಅನುಕೂಲಸ್ಥ ಕುಟುಂಬವೊಂದರ ವಾರ್ಷಿಕ ಆದಾಯ ಬಿಪಿಎಲ್ ಸಮೀಕ್ಷೆ ನಡೆಸುವ ವರ್ಷ ಬರದಿಂದಲೋ ಅಥವಾ ಇನ್ಯಾವುದೋ ಕಾರಣದಿಂದಲೋ ಬಡತನ ರೇಖೆಗಿಂತ ಕೆಳಗೆ ಬಂದಿರುತ್ತದೆ. ಆ ಸಂದರ್ಭದಲ್ಲಿ ಅದು ಬಡತನ ರೇಖೆಗಿಂತ ಕೆಳಗೆ ಇರುವ ಕುಟುಂಬ ಎಂದು ದಾಖಲಾಗುತ್ತದೆ. ಆದರೆ ವಾಸ್ತವದಲ್ಲಿ ಅದು ಅನುಕೂಲಸ್ಥ ಕುಟುಂಬ. ಹಾಗೆಂದು ತಿದ್ದುಪಡಿ ಮಾಡಲು ಆ ಕುಟುಂಬ ಅಥವಾ ತಳಮಟ್ಟದ ಅಧಿಕಾರಿಗಳು ಪ್ರಯತ್ನಿಸುವುದಿಲ್ಲ. ಹೀಗೆ ಬಿಪಿಎಲ್ ಪಟ್ಟಿಯಲ್ಲಿರುವ ಅನರ್ಹ ಕುಟುಂಬಗಳ ಹೆಸರುಗಳನ್ನು ಗ್ರಾಮಸಭೆ ಕರೆದು ಪಟ್ಟಿಯಿಂದ ತೆಗೆಯಲು ಕಾರ್ಯದರ್ಶಿಗಳಿಗೆ ಸೂಚಿಸಲಾಯಿತು. ಸಾರ್ವಜನಿಕವಾಗಿ ಯಾರೂ ಸುಳ್ಳು ಹೇಳಲು ಸಾಧ್ಯವಿಲ್ಲ ಎಂದು ಗ್ರಾಮಸಭೆ ಕರೆದು ತಿದ್ದುಪಡಿ ಮಾಡಲು ಸೂಚಿಸಲಾಯಿತು. ಅದರಂತೆ ಕಾರ್ಯದರ್ಶಿಗಳು ಗ್ರಾಮಸಭೆ ಕರೆದು ಬಿಪಿಎಲ್ ಪಟ್ಟಿಯಲ್ಲಿರುವ ಅನುಕೂಲಸ್ಥರ ಹೆಸರುಗಳನ್ನು ಸೂಚಿಸಲು ಗ್ರಾಮಸ್ಥರಿಗೆ ತಿಳಿಸಿದರು. ಬಿಪಿಎಲ್ ಪಟ್ಟಿಯಲ್ಲಿರುವ ಅನರ್ಹ ಕುಟುಂಬಗಳ ಒಂದೂ ಹೆಸರನ್ನು ಗ್ರಾಮಸ್ಥರು ಸೂಚಿಸಲಿಲ್ಲ. ಅಷ್ಟ ಮಾತ್ರವಲ್ಲ; ಈಗಾಗಲೇ ಇರುವ ಹೆಸರುಗಳು ಇರಲಿ ನಿಮ್ಮ ಗಂಟೇನು ಹೋಗುತ್ತದೆ ಎಂದು ಕಾರ್ಯದರ್ಶಿಯನ್ನೇ ದಬಾಯಿಸಿದ ಉದಾಹರಣೆಗಳೂ ಇವೆ.

ವಸತಿಹೀನರ ಪಟ್ಟಿ ಮಾಡುವಾಗಲೂ ಕೆಲವು ಬಾರಿ ಇದೇ ಸ್ಥಿತಿ ಇರುತ್ತದೆ. ಒಂದೇ ಕುಟುಂಬದ ಎರಡು ಮೂರು ಅಣ್ಣ ತಮ್ಮಂದಿರು ತಮ್ಮ ತಮ್ಮ ಸಂಸಾರದೊಂದಿಗೆ ಒಂದೇ ಸೂರಿನ ಕೆಳಗೆ ಜತೆಗೆ ಇರುತ್ತಾರೆ. ಹಿರಿಯ ಅಣ್ಣನ ಅಥವಾ ತಂದೆಯ ಹೆಸರಲ್ಲಿ ಮನೆ ಇರುತ್ತದೆ. ಆಸ್ತಿ ಪಾಲು ಆದ ನಂತರ ಉಳಿದವರಿಗೆ ಮನೆ ಕಟ್ಟಿಸಿಕೊಳ್ಳಲು ಅನುಕೂಲ ಇರುತ್ತದೆ. ಆದರೆ ವಸತಿಹೀನರ ಸಮೀಕ್ಷೆ ಮಾಡುವ ಸಂದರ್ಭದಲ್ಲಿ ತಮ್ಮಂದಿರು ಮನೆ ಇಲ್ಲ ಎಂದು ದಾಖಲಿಸುತ್ತಾರೆ. ಕೆಲವು ಬಾರಿ ಮದುವೆ ಮಾಡಿಕೊಟ್ಟ ಮಗಳು ಗಂಡ ತೀರಿಕೊಂಡೋ ಅಥವಾ ಗಂಡನ ಮನೆಯಲ್ಲಿ ಜಗಳ ಮಾಡಿಕೊಂಡೋ ತವರು ಮನೆಗೆ ಬಂದಿರುತ್ತಾಳೆ. ಅವಳಿಗೆ ಕುಟುಂಬದ ಭೂಮಿಯಲ್ಲಿ ಅವಕಾಶಕೊಟ್ಟು ಗಂಡು ಮಕ್ಕಳ ಪಾಲು ಕಡಿಮೆ ಮಾಡಬಾರದೆಂಬ ಉದ್ದೇಶದಿಂದ ಅವಳನ್ನು ವಸತಿಹೀನಳೆಂದು ದಾಖಲಿಸುತ್ತಾರೆ. ಹೀಗೆ ತಮ್ಮ ಆದಾಯದಿಂದ ವಸತಿ ನಿರ್ಮಿಸಿಕೊಳ್ಳಲು ಸಾಧ್ಯವಿರುವ ಹಲವಾರು ಕುಟುಂಬಗಳು ವಸತಿಹೀನರ ಪಟ್ಟಿಯಲ್ಲಿ ಸೇರುತ್ತವೆ. ವಸತಿಹೀನರೆಂದು ನೋಂದಾಯಿಸುವ ಕ್ರಮ ಕೂಡ ಕೆಲವು ಬಾರಿ ನಿಜವಾದ ವಸತಿಹೀನರನ್ನು ಆ ಸವಲತ್ತಿನಿಂದ ದೂರ ಇರಿಸುತ್ತವೆ. ಒಂದು ಕುಟುಂಬವನ್ನು ಸರಕಾರ ವಸತಿಹೀನವೆಂದು ಗುರುತಿಸಬೇಕಾದರೆ ಕೆಲವು ದಾಖಲೆಗಳು ಬೇಕು. ಆ ದಾಖಲೆಗಳನ್ನು ಪಡೆಯಲು ಸಮಯ ಹಾಗೂ ದುಡ್ಡು ಖರ್ಚು ಮಾಡಬೇಕು. ಆ ಎರಡೂ ಕೆಲಸಗಳು ನಿಜವಾದ ವಸತಿಹೀನರ ಶಕ್ತಿಗೆ ಮೀರಿದ್ದು. ಆದುದರಿಂದ ಅವರು ಆ ಸವಲತ್ತಿನಿಂದ ಹೊರಗುಳಿಯುತ್ತಾರೆ. ಸಾಮಾನ್ಯ ಮಾಹಿತಿ, ಬಿಪಿಎಲ್ ಪಟ್ಟಿ ವಸತಿಹೀನರ ಪಟ್ಟಿ, ನಿವೇಶನರಹಿತರ ಪಟ್ಟಿ ಇತ್ಯಾದಿಗಳು ಪಂಚಾಯತ್‌ಯೋಜನೆಯ ಆಧಾರ ಸ್ತಂಭಗಳು. ಈ ದಾಖಲೆಗಳನ್ನು ಸಮೀಕ್ಷೆ ಮಾಡುವ ಮತ್ತು ದಾಖಲಿಸುವ ಅಭ್ಯಾಸ ರೂಢಿಯಾಗದೆ ಪಂಚಾಯತ್ ವ್ಯವಸ್ಥೆ ಸುಧಾರಿಸಲು ಸಾಧ್ಯವಿಲ್ಲ. ಇವುಗಳನ್ನು ಸಮೀಕ್ಷೆ ಮಾಡುವ ಮತ್ತು ದಾಖಲಿಸುವ ಜವಾಬ್ದಾರಿ ಕಾರ್ಯದರ್ಶಿಯದ್ದು. ಆದರೆ ಆತನಿಗೆ ಇವುಗಳ ಮಹತ್ವದ ಅರಿವೂ ಇಲ್ಲ, ಸಮೀಕ್ಷೆ ಮಾಡುವ ಮತ್ತು ದಾಖಲಿಸುವ ಕ್ರಮವು ಸರಿಯಾಗಿ ತಿಳಿದಿಲ್ಲ. ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳನ್ನು ಗುರುತಿಸಲು ಸರಕಾರ ಮುಂದಿಟ್ಟಿರುವ ಹೊಸ ವಿಧಾನ ಕಾರ್ಯದರ್ಶಿಗಳ ತಲೆನೋವನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡಬಹುದು. ಹೊಸ ವಿಧಾನ ಪ್ರಕಾರ ಹಿಂದಿನ ಏಕ ಮಾನದಂಡದ (ಆದಾಯ) ನೆಲೆಯಲ್ಲಿ ಬಡತನವನ್ನು ನಿರ್ಧರಿಸುವುದಿಲ್ಲ; ಹಲವಾರು ಸೂಚ್ಯಂಕಗಳನ್ನು ಬಳಸಿ ಬಡತನವನ್ನು ನಿರ್ಧರಿಸಬೇಕು. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಗಣತಿ ಅನುಸೂಚಿಯನ್ನು ‘ಎ’ ಮತ್ತು ‘ಬಿ’ ಎನ್ನುವ ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಭಾಗ ‘ಎ’ದಲ್ಲಿ ಐದು ಸೂಚ್ಯಂಕಗಳಿವೆ. ಆ ಸೂಚ್ಯಂಕಗಳು ಇಂತಿವೆ – ೨ ಹೆಕ್ಟೇರ್‌ಗಿಂತ ಹೆಚ್ಚಿನ ಭೂಮಿ, ಪಕ್ಕಾ ಮನೆ, ರೂ. ೨೦೦೦೦ಕ್ಕಿಂತ ಹೆಚ್ಚಿನ ವಾರ್ಷಿಕ ಆದಾಯ, ಟೀವಿ; ರೆಫ್ರಿಜರೇಟರ್; ಸೀಲಿಂಗ್ ಪ್ಯನ್; ಮೋಟರ್ ಸೈಕಲ್/ಸ್ಕೂಟ್; ಮೂರು ಚಕ್ರದ ವಾಹನ ಇತ್ಯಾದಿಗಳಲ್ಲಿ ಯಾವುದಾದರೂ ಒಂದನ್ನು ಹೊಂದಿರುವುದು ಮತ್ತು ಟ್ರಾಕ್ಟರ್; ಪವರ್ ಟಿಲ್ಲರ್; ಹಾರ್‌ವೆಸ್ಟರ್ ಇತ್ಯಾದಿ ಕೃಷಿ ಉಪಕರಣಗಳಲ್ಲಿ ಯಾವುದಾದರೂ ಒಂದನ್ನು ಹೊಂದಿರುವುದು. ಅನುಸೂಚಿಯ ‘ಎ’ ಭಾಗದಲ್ಲಿರುವ ಯಾವುದೇ ಒಂದು ಸೂಚ್ಯಂಕವನ್ನು ಕುಟುಂಬ ಹೊಂದಿದ್ದರೆ ಅಂತಹ ಕುಟುಂಬವನ್ನು ಬಡತನ ರೇಖೆಗಿಂತ ಹೊರಗಿಡಲಾಗುವುದು ಮತ್ತು ಅಂತಹ ಕುಟುಂಬಗಳಿಗೆ ಅನುಸೂಚಿಯ ‘ಬಿ’ ಭಾಗವನ್ನು ಭರ್ತಿ ಮಾಡುವ ಅಗತ್ಯವಿರುವುದಿಲ್ಲ. ಭಾಗ ‘ಬಿ’ಯಲ್ಲಿ ಕುಟುಂಬದ ಸಾಮಾಜಿಕ ಆರ್ಥಿಕ ವಿವರಗಳ ಜತೆಗೆ ಎಲ್ಲ ಮೂಲಗಳಿಂದ ಕುಟುಂಬದ ಆದಾಯ ಮತ್ತು ಖರ್ಚಿನ ವಿವರಗಳಿಗೆ. ಒಂದು ವೇಳೆ ಕುಟುಂಬದ ಒಟ್ಟು ಖರ್ಚು ಬಡತನ ರೇಖೆಗಿಂತ ಹೆಚ್ಚಿದ್ದಲ್ಲಿ ಅಂತಹ ಕುಟುಂಬವನ್ನು ಕೂಡ ಬಡತನರೇಖೆಗಿಂತ ಹೆಚ್ಚಿನ ಆದಾಯ ಹೊಂದಿರುವ ಕುಟುಂಬವೆಂದು ಪರಿಗಣಿಸಲಾಗುವುದು.[4]

ಆನುಷಂಗಿಕ ಮಾಹಿತಿ ಸಂದರ್ಭದಲ್ಲಿ ಸಂಶೋಧಕರು ಎದುರಿಸಬೇಕಾದ ಸಮಸ್ಯೆಗಳ ಕಿರುಪರಿಚಯ ಮಾಡಿಸಿಕೊಡಲು ಈ ಅಧ್ಯಾಯದಲ್ಲಿ ಪ್ರಯತ್ನಿಸಲಾಗಿದೆ. ಜನಪದ ಮತ್ತು ಮಹಿಳಾ ಅಧ್ಯಯನಗಳ ಉದಾಹರಣೆಗಳನ್ನು ಬಳಸಿಕೊಂಡು ಮಾಹಿತಿಯ ವರ್ಗೀಕರಣಕ್ಕೆ ಸಂಬಂಧಿಸಿದಂತೆ ಸಾಂಪ್ರದಾಯಿಕ ನಿಯಮಗಳು ಅನ್ವಯವಾಗುವುದಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಲಾಗಿದೆ. ಕೆಲವೊಂದು ತಾತ್ವಿಕ ಕಾರಣಗಳಿಗಾಗಿ ಜನಪದ ಅಧ್ಯಯನಗಳಲ್ಲಿ ಉಲ್ಲೇಖಿಸುವುದರ ಬಗ್ಗೆ ಗೊಂದಲಗಳಿವೆ. ಉಲ್ಲೇಖಿಸುವುದಕ್ಕೆ ಸಂಬಂಧಿಸಿದಂತೆ ಇದೇ ಗೊಂದಲವನ್ನು ಕನ್ನಡದಲ್ಲಿ ನಡೆಯುವ ಇತರ ಸಂಶೋಧನೆಗಳಲ್ಲೂ ಕಾಣಬಹುದು. ಜಾನಪದ ಅಧ್ಯಯನದ ಸಂದರ್ಭದಲ್ಲಿ ನೀಡಿರುವ ಕಾರಣಗಳ ಸುಧಾರಿತ ರೂಪವನ್ನು ಇತರ ಸಂಶೋಧನೆಗಳಲ್ಲೂ ಉಲ್ಲೇಖಿಸದಿರುವುದಕ್ಕೆ ನೀಡಲಾಗುತ್ತಿದೆ. ಕನ್ನಡದಲ್ಲಿ ಸಮಾಜ ಸಂಶೋಧನೆ ತನ್ನದೇ ಆದ ನೆಲೆ ಕಂಡುಕೊಳ್ಳದಿರಲು ಉಲ್ಲೇಖಿಸುವುದರ ಬಗೆಗಿನ ಈ ಬಗೆಯ ನಿಲುವ ಕೂಡ ಒಂದು (ಇತರ ಕಾರಣಗಳ ಜತೆಗೆ) ಕಾರಣವಾಗಿರಬಹುದು. ಮಾಹಿತಿಯನ್ನು ಅದರ ಹಿನ್ನೆಲೆಯ ನೆಲೆಯಲ್ಲಿ ಪ್ರಗತಿಪರ ಅಥವಾ ಪ್ರಗತಿಪರ ಅಲ್ಲವೆಂದು ನಿರ್ಧರಿಸುವುದು ಸರಿಯಲ್ಲವೆಂದು ವಾದಿಸಲಾಗಿದೆ. ಮೌಲಿಕ ತೀರ್ಮಾನಕ್ಕೆ ಮಾಹಿತಿಯ ಹಿನ್ನೆಲೆಗಿಂತ ಮಾಹಿತಿಯ ಬಳಕೆ ಮುಖ್ಯವಾಗಬೇಕೆಂದು ತಿಳಿಸಲಾಗಿದೆ. ಒಂದೇ ಮಾಹಿತಿಯನ್ನು ಪ್ರಗತಿಪರ ಅಥವಾ ಪ್ರಗತಿ ವಿರೋಧಿ ನೆಲೆಯಲ್ಲಿ ಬಳಸಬಹುದೆಂದು ಕೆಲವೊಂದು ಉದಾಹರಣೆಗಳ ಮೂಲಕ ತೋರಿಸಿಕೊಡಲಾಗಿದೆ. ಗ್ರಾಮೀಣಾಭಿವೃದ್ಧಿ ಸಂದರ್ಭದಲ್ಲಿ ಬಳಕೆಯಾಗುವ ಮಾಹಿತಿಗಳ ಉದಾಹರಣೆಯೊಂದಿಗೆ ಮಾಹಿತಿಯೊಂದರ ಸತ್ಯಾಸತ್ಯಗಳ ಬಗ್ಗೆ ಗಮನಹರಿಸುವ ಅಗತ್ಯವಿದೆಯೆಂದು ವಾದಿಸಲಾಗಿದೆ. ಗ್ರಾಮೀಣಾಭಿವೃದ್ಧಿ ಪಾಲಿಸಿ ರೂಪಿಸುವಲ್ಲಿ ಬಳಕೆಯಾಗುವ ಕೆಲವೊಂದು ಅಂಕಿಅಂಶಗಳ (ಬರ ಪರಿಹಾರ, ಬೆಂಬಲ ಬೆಲೆ ನಿಗದಿ ಇತ್ಯಾದಿ ಪಾಲಸಿಗಳ) ಮೂಲವನ್ನು ಕೆದಕುತ್ತಾ ಹೋದರೆ ಸಿಗುವ ಚಿತ್ರಣ ಇಡೀ ಗ್ರಾಮೀಣಾಭಿವೃದ್ಧಿ ನಿಂತಿರುವ ನೆಲಗಟ್ಟನ್ನೇ ಪ್ರಶ್ನಿಸುವಂತಿವೆ. ಆದುದರಿಂದ ಮಾಹಿತಿಯ ಹಿನ್ನೆಲೆಯನ್ನು ಸರಿಯಾಗಿ ತಿಳಿದುಕೊಂಡು ಬಳಸುವುದು ಉತ್ತಮ ಸಂಶೋಧನೆಯ ಒಂದು ಪ್ರಮುಖ ಲಕ್ಷಣವಾಗುತ್ತದೆ.

* * *

[1] ಡಾ. ವಿರೇಶ ಬಡಿಗೇರ, “ಸಂಶೋಧನೆಯೂ ಅಲ್ಲದ ಸೃಜನಸೃಷ್ಟಿಯೂ ಅಲ್ಲದ ಖರೆ ಖರೆ ಸಂಗ್ಯಾ ಬಾಳ್ಯಾ”, ಪ್ರಜಾವಾಣಿಸಾಪ್ರಾಹಿಕ ಪುರವಣಿ, ಭಾನುವಾರ ೭ನೇ ಆಗಸ್ಟ್ ೨೦೦೫, ಪು.೩.

[2] ಡಾ. ಬಸವರಾಜ ಮಲಶೆಟ್ಟಿ, “ಸಂಗ್ಯಾ ಬಾಳ್ಯಾದ ಸುತ್ತ”, ಪ್ರಜಾವಾಣಿ-ಸಾಪ್ತಾಹಿಕ ಪುರವಣಿ, ಭಾನುವಾರ ೧೦ನೇ ಜುಲೈ, ೨೦೦೫, ಪು.೩.

[3] ಟಿ.ಆರ್. ಚಂದ್ರಶೇಖರ ಮತ್ತು ಎಂ. ಚಂದ್ರಪೂಜಾರಿ, ಕೃಷ್ಣನಗರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಯೋಜನೆ, ವಿದ್ಯಾರಣ್ಯ: ಅಭಿವೃದ್ಧಿ ಅಧ್ಯಯನ ವಿಭಾಗ, ೨೦೦೨, ಜಿಲ್ಲಾ ಪಂಚಾಯತ್ ಬಳ್ಳಾರಿ, ಎ ನೋಟ್ ಆನ್ ಆನ್ಯುಲ್ ಡ್ರಾಫ್ಟ್ ಪ್ಲಾನ್ – ೨೦೦೨-೦೩, ಬಳ್ಳಾರಿ: ಜಿಲ್ಲಾ ಪಂಚಾಯತ್, ೨೦೦೨ ಮತ್ತು ಜಿಲ್ಲಾ ಪಂಚಾಯತ್ ಕೊಪ್ಪಳ, ಕೊಪ್ಪಳ ಜಿಲ್ಲೆಯ ಅಂಕಿ ಅಂಶಗಳ ಒಂದು ನೋಟ – ೨೦೦೦-೦೧, ಕೊಪ್ಪಳ: ಜಿಲ್ಲಾ ಪಂಚಾಯತ್, ೨೦೦೦.

[4] ಕರ್ನಾಟಕ ಸರಕಾರ, ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಕುಟುಂಬಗಳ ಆರ್ಥಿಕ ಸ್ಥಿತಿಗತಿ ಸಮೀಕ್ಷೆ, ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ, ೨೦೦೨.