ಸಮಾಜ ಸಂಶೋಧನೆಯಲ್ಲಿ ಆನುಷಂಗಿಕ ಮಾಹಿತಿ ಸಂಗ್ರಹ ತುಂಬಾ ಮಹತ್ವದ ಘಟ್ಟ. ಸಂಶೋಧನೆಯ ಸಮಸ್ಯೆಯನ್ನು ಸಮಸ್ಯೀಕರಿಸುವ ಹಂತದಿಂದ, ಅಧ್ಯಯನದ ಉದ್ದೇಶ, ವಿಧಾನ ಇತ್ಯಾದಿಗಳನ್ನು ನಿರ್ಣಯಿಸುವಲ್ಲಿ ಆನುಷಂಗಿಕ ಮಾಹಿತಿಯ ಪಾತ್ರವನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಸಮಸ್ಯೆ ಮತ್ತು ಸಮಸ್ಯೀಕರಿಸುವುದು ಅಧ್ಯಾಯದಲ್ಲಿ ಈ ಕುರಿತು ವಿಸ್ತಾರವಾಗಿ ಚರ್ಚಿಸಲಾಗಿದೆ. ಸಮಾಜ ಸಂಶೋಧನೆಯಲ್ಲಿ ಬಳಕೆಯಾಗುವ ಆನುಷಂಗಿಕ ಮಾಹಿತಿಗಳ ಮೂಲ, ಅವುಗಳನ್ನು ಬಳಸುವ ವಿಧಾನ ಮತ್ತು ಬಳಕೆ ಕುರಿತು ವರ್ತಮಾನದಲ್ಲಿ ಎದುರಿಸಬೇಕಾದ ಕೆಲವೊಂದು ಸಮಸ್ಯೆಗಳನ್ನು ಈ ಅಧ್ಯಾಯದಲ್ಲಿ ಚರ್ಚಿಸಲಾಗಿದೆ. ಸಂಸೋಧನಾ ಮಾಹಿತಿಯನ್ನು ಎರಡು ರೀತಿಯಲ್ಲಿ ಪರಿಭಾವಿಸಿ ಕೊಳ್ಳುವುದು ರೂಢಿಯಾಗಿದೆ. ಒಂದು, ಪ್ರಾಥಮಿಕ ಮಾಹಿತಿ ಮತ್ತು ಎರಡು, ಆನುಷಂಗಿಕ ಮಾಹಿತಿ. ಮಾಹಿತಿಯ ಹಿನ್ನೆಲೆ ಅಥವಾ ಮೂಲ ಮಾಹಿತಿಯ ಈ ವರ್ಗೀಕರಣಕ್ಕೆ ಮುಖ್ಯ ಆಧಾರ. ಸಂಶೋಧನೆಗೆ ಒಳಪಡುವ ಸಂಗತಿ/ಕುಟುಂಬ/ಸಮುದಾಯ ಇತ್ಯಾದಿಗಳಿಗೆ ಸಂಬಂಧಿಸಿದ ಮಾಹಿತಿಯನ್ನು ನೇರವಾಗಿ ಆ ಮೂಲಗಳಿಂದಲೇ ಪಡೆದರೆ ಅವುಗಳನ್ನು ಪ್ರಾಥಮಿಕ ಮಾಹಿತಿಯೆಂದು ಪರಿಗಣಿಸಲಾಗುವುದು. ಪ್ರಾಥಮಿಕ ಮಾಹಿತಿ ಸಂಗ್ರಹಕ್ಕೆ ಸಂಬಂಧಿಸಿದ ವಿಚಾರಗಳನ್ನು ಮುಂದಿನ ಅಧ್ಯಾಯದಲ್ಲಿ ಚರ್ಚಿಸಲಾಗಿದೆ. ಸಂಶೋಧನೆಗೆ ಒಳಪಡುವ ಸಂಗತಿಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಅವುಗಳ ಎರಡನೇ ಮೂಲದಿಂದ ಪಡೆಯುವುದು ಎನ್ನುವ ಅರ್ಥದಲ್ಲಿ ಆನುಷಂಗಿಕ ಮಾಹಿತಿ ಎನ್ನುವ ಪದ ಬಳಕೆ ಆಗುತ್ತಿದೆ. ಅಂದರೆ ಈ ಮಾಹಿತಿ ಯಾವುದೋ ರೂಪದಲ್ಲಿ ಈಗಾಗಲೇ ಬಳಕೆ ಆಗಿದೆ. ಸಂಶೋಧಕರು ಅವುಗಳನ್ನು ಅವುಗಳ ಪ್ರಥಮ ಮೂಲದಿಂದ ಪಡೆಯುತ್ತಿಲ್ಲ; ಬದಲಿಗೆ ಎರಡನೇ ಅಥವಾ ಇನ್ಯಾವುದೋ ಮೂಲದಿಂದ ಪಡೆಯುತ್ತಾರೆ. ಒಂದು ಕಾಲದಲ್ಲಿ ಮಾಹಿತಿಯ ಈ ಬಗೆಯ ವಿಂಗಡನೆಯ (ಪ್ರಾಥಮಿಕ ಮತ್ತು ಅನುಷಂಗಿಕ ಎನ್ನುವ ವಿಂಗಡನೆ) ಬಗ್ಗೆ ಯಾವುದೇ ತಕರಾರು ಇರಲಿಲ್ಲ. ಇಂದು ಕೂಡ ಸಮಾಜವಿಜ್ಞಾನದ ಸಾಂಪ್ರದಾಯಿಕ ಶಿಸ್ತುಗಳಿಗೆ (ಸಮಾಜಶಾಸ್ತ್ರ, ರಾಜಕೀಯಶಾಸ್ತ್ರ, ಅರ್ಥಶಾಸ್ತ್ರ, ವ್ಯವಹಾರ, ಆಡಳಿತಶಾಸ್ತ್ರ ಇತ್ಯಾದಿಗಳಿಗೆ) ಈ ಬಗೆಯ ವಿಂಗಡನೆ ವಿಶೇಷ ಸಮಸ್ಯೆ ಇಲ್ಲದೆ ಅನ್ವಯವಾಗಬಹುದೋ ಏನೋ. ಜತೆಗೆ ಚರಿತ್ರೆ ಸಂಶೋಧನೆಯಲ್ಲೂ ಮಾಹಿತಿ ವಿಂಗಡನೆಯ ಸಾಂಪ್ರದಾಯಿಕ ವಿಂಗಡನೆ ಸಣ್ಣಪುಟ್ಟ ಬದಲಾವಣೆಯೊಂದಿಗೆ ಮುಂದುವರಿಯಬಹುದು. ಯಾಕೆಂದರೆ ಚರಿತ್ರೆ ಹಿಂದಿನಿಂದಲೂ ಮಾಹಿತಿಯ ಮೂಲಗಳ ವಿಂಗಡನೆಯನ್ನು ಸಮಾಜವಿಜ್ಞಾನದ ಇತರ ಶಿಸ್ತುಗಳಿಗಿಂತ ಭಿನ್ನವಾಗಿ ವ್ಯಾಖ್ಯಾನಿಸಿಕೊಂಡಿದೆ. ಚರಿತ್ರೆಯಲ್ಲೂ ಮಾಹಿತಿಯ ಎರಡು ಮೂಲಗಳನ್ನು ಕಾಣಬಹುದು. ಒಂದು ಪ್ರಾಥಮಿಕ ಮತ್ತು ಎರಡು ಆನುಷಂಗಿಕ. ವಿಚಿತ್ರವೆಂದರೆ ಸಮಾಜವಿಜ್ಞಾನದ ಇತರ ಶಾಸ್ತ್ರಗಳಲ್ಲಿ ಆನುಷಂಗಿಕ ಎಂದು ವರ್ಗೀಕರಿಸಲ್ಪಡುವ ಮಾಹಿತಿ ಮೂಲಗಳು ಚರಿತ್ರೆಯಲ್ಲಿ ಪ್ರಾಥಮಿಕ ಮಾಹಿತಿ ಮೂಲಗಳಾಗಿವೆ. ಉದಾಹರಣೆಗೆ ಡೈರಿಗಳು, ಕ್ರೋನಿಕಲ್ಸ್, ಕಚೇರಿ ಕಡತಗಳು, ಶಾಸನಗಳು, ದಾಖಲೆಗಳು, ಪತ್ರಗಳು ಇತ್ಯಾದಿ ಚಾರಿತ್ರಿಕ ದಾಖಲೆಗಳು ಚರಿತ್ರೆ ಸಂಶೋಧನೆಯಲ್ಲಿ ಪ್ರಾಥಮಿಕ ಮಾಹಿತಿ ಮೂಲಗಳಾಗಿವೆ. ಆನುಷಂಗಿಕ ಮಾಹಿತಿ ಮೂಲಗಳು ಪ್ರಕಟಿತ ಮತ್ತು ಅಪ್ರಕಟಿತ ಲೇಖನಗಳು, ಪ್ರಬಂಧಗಳು, ಮಹಾ ಪ್ರಬಂಧಗಳು ಮತ್ತು ಅಪ್ರಕಟಿತ ಲೇಖನಗಳು, ಪ್ರಬಂಧಗಳು, ಮಹಾ ಪ್ರಬಂಧಗಳು ಮತ್ತು ಪುಸ್ತಕಗಳು.

ಆದರೆ ಹೊಸ ಸಂಶೋಧನಾ ದೃಷ್ಟಿಯಿಂದ ಮಾಹಿತಿಯ ಸಾಂಪ್ರದಾಯಿಕ ವಿಂಗಡನೆ (ಪ್ರಾಥಮಿಕ ಮತ್ತು ಆನುಷಂಗಿಕ) ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ಬುಡಕಟ್ಟು ಅಧ್ಯಯನ, ಜಾನಪದ ಅಧ್ಯಯನ, ಮಹಿಳಾ ಅಧ್ಯಯನ ಇತ್ಯಾದಿಗಳು ಹೊಸ ಹೊಸ ಸಂಶೋಧನಾ ಸಮಸ್ಯೆಗಳನ್ನು ಮುಂಚೂಣಿಗೆ ತಂದಿವೆ. ಈ ಕ್ಷೇತ್ರಗಳಲ್ಲಿ ಮೇಲಿನ ಪ್ರಾಥಮಿಕ ಮತ್ತು ಆನುಷಂಗಿಕ ಮಾಹಿತಿಯ ವ್ಯಾಖ್ಯಾನ ಯಥಾ ರೀತಿಯಲ್ಲಿ ಅನ್ವಯವಾಗುತ್ತದೆ ಎನ್ನಲಾಗುವುದಿಲ್ಲ. ಹಳೇ ವಿಂಗಡನೆಗಳು (ಪ್ರಾಥಮಿಕ ಮತ್ತು ಆನುಷಂಗಿಕ) ಪ್ರಶ್ನಿಸಲ್ಪಡುತ್ತಿವೆ. ಜ್ಞಾನ ಅಥವಾ ಸಂಶೋಧನ ಪ್ರಬಂಧ ಸಮುದಾಯ ಆಸ್ತಿ. ಸಂಶೋಧಕರು ಅಥವಾ ಲೇಖಕರು ಬಳಸುವ ಭಾಷೆ, ವಿಚಾರ, ಆಲೋಚನೆ ಇತ್ಯಾದಿಗಳನ್ನು ಬಳಸಿಕೊಂಡು ಒಂದು ಸಂಶೋಧನೆ ಅಥವಾ ಲೇಖನ ಬರುತ್ತದೆ. ಅದನ್ನು ಆನುಷಂಗಿಕ ಮಾಹಿತಿಯೆಂದು ಪರಿಗಣಿಸದೆ (ಉಲ್ಲೇಖಿಸದೆ) ಬಳಸಿದರೆ ತಪ್ಪೇನಿಲ್ಲ ಎನ್ನುವ ವಾದವನ್ನು ಜನಪದ ಮೂಲಗಳನ್ನು ಉಲ್ಲೇಖಿಸುವ ಸಂದರ್ಭದಲ್ಲಿ ಮಾಡಲಾಗುತ್ತಿದೆ. ಆನುಷಂಗಿಕ ಮಾಹಿತಿಗೆ (ಉಲ್ಲೇಖಿಸುವುದಕ್ಕೆ) ಸಂಬಂಧಿಸಿದಂತೆ ಹೆಚ್ಚು ಕಡಿಮೆ ಇದೇ ಅರ್ಥ ಬರುವ ವಾದವನ್ನು ಕನ್ನಡದಲ್ಲಿ ನಡೆಯುವ ಇತರ ಸಂಶೋಧನೆಗಳ ಸಂದರ್ಭದಲ್ಲೂ ಕಾಣಬಹುದು. ಮಾಹಿತಿಯ ಈ ಬಗೆಯ (ಪ್ರಾಥಮಿಕ/ಆನುಷಂಗಿಕ ಎನ್ನುವ) ವಿಂಗಡನೆ ಎಷ್ಟು ಸರಿ? ಸಮಾಜವಿಜ್ಞಾನದ ಎಲ್ಲ ಶಿಸ್ತುಗಳಿಗೆ ಈ ಬಗೆಯ ವಿಂಗಡನೆಯನ್ನು ಅನ್ವಯಿಸಬಹುದೆ? ಆನುಷಂಗಿಕ ಮಾಹಿತಿ (ಉಲ್ಲೇಖಿಸುವುದರ) ಬಗ್ಗೆ ಇರುವ ಈ ನಿಲುವುಗಳು ಎಷ್ಟು ಸರಿ? ಇತ್ಯಾದಿ ಪ್ರಶ್ನೆಗಳು ಮಾಹಿತಿಯ ವಿಂಗಡನೆ ಕುರಿತು ಕೇಳಿ ಬರುತ್ತಿವೆ. ಇದೇ ಸಂದರ್ಭದಲ್ಲಿ ಮಾಹಿತಿಗೆ ಸಂಬಂಧಿಸಿದ ಇನ್ನೆರಡು ಅಂಶಗಳ ಮೇಲೂ ಗಮನ ಹರಿಸುವ ಅಗತ್ಯ ಇದೆ. ಒಂದು, ಮಾಹಿತಿಯ ಗುಣದ ಆಧಾರದಲ್ಲಿ ದಾಖಲೆಗಳನ್ನೂ ಶ್ರೇಣೀಕರಿಸುವುದು. ಅಂದರೆ ಕೆಲವೊಂದು ದಾಖಲೆಗಳನ್ನು ಪ್ರಗತಿಪರ ಮತ್ತು ಕೆಲವನ್ನು ಪ್ರಗತಿಪರ ಅಲ್ಲವೆಂದು ವಿಂಗಡಿಸುವುದು. ಈ ಬಗೆಯ ವರ್ಗೀಕರಣ ಸರಿಯೇ? ಎರಡು, ಆನುಷಂಗಿಕ ಮಾಹಿತಿಯಲ್ಲಿನ ಲೋಪದೋಷಗಳು. ಆನುಷಂಗಿಕ ಮಾಹಿತಿಗಳನ್ನು (ಅದರಲ್ಲೂ ಸರಕಾರಿ ಅಥವಾ ಸಾರ್ವಜನಿಕ ಸಂಸ್ಥೆಗಳು ಬಿಡುಗಡೆ ಮಾಡುವ ಅಂಕಿಅಂಶಗಳು) ಬಳಸುವಾಗ ಅವುಗಳ ಹಿನ್ನೆಲೆಯನ್ನು ಪರೀಕ್ಷಿಸದೆ ಬಳಸುವುದು ಸರ್ವೇ ಸಾಮಾನ್ಯ. ಸಂಘ ಸಂಸ್ಥೆಗಳು ಪ್ರಕಟಿಸುವ ಅಂಕಿಅಂಶಗಳನ್ನು ಯಥಾರೀತಿಯಲ್ಲಿ ಬಳಸಬಹುದೇ? ಅವುಗಳಲ್ಲಿ ದೊಷವಿರುವ ಸಾಧ್ಯತೆಗಳಿಲ್ಲವೇ? ಇತ್ಯಾದಿ ಪ್ರಶ್ನೆಗಳು ಕೂಡ ಆನುಷಂಗಿಕ ಮಾಹಿತಿ ಸಂಗ್ರಹಕ್ಕೆ ಸಂಬಂಧಿಸಿದಂತೆ ಮುಂಚೂಣಿಗೆ ಬಂದಿವೆ. ಈ ಅಧ್ಯಾಯದಲ್ಲಿ ಆನುಷಂಗಿಕ ಮಾಹಿತಿಗೆ ಸಂಬಂಧಿಸಿದ ಈ ಎಲ್ಲ ಸಮಸ್ಯೆಗಳನ್ನು ವಿಶ್ಲೇಷಿಸಲು ಪ್ರಯತ್ನಿಸಲಾಗಿದೆ.

ವರ್ಗೀಕರಣದ ಸಮಸ್ಯೆಗಳು

ಜಾನಪದ ಮತ್ತು ಮಹಿಳಾ ಅಧ್ಯಯನ ಸಂಶೋಧನಾ ಸಂದರ್ಭಗಳಲ್ಲಿ ಮಾಹಿತಿಯ ಹಿನ್ನೆಲೆಯ ಆಧಾರದಲ್ಲಿ ಪ್ರಾಥಮಿಕ ಆನುಷಂಗಿಕ ಎಂದು ವಿಂಗಡಿಸುವುದು ಸಮಸ್ಯಾತ್ಮಕವಾಗಿದೆ ಎಂದು ಗ್ರಹಿಸಲಾಗಿದೆ. ಯಾಕೆ ಸಮಸ್ಯೆಯಾಗುತ್ತದೆ ಎಂದು ಅಧ್ಯಾಯದ ಈ ಭಾಗದಲ್ಲಿ ವಿವರಿಸಲಾಗಿದೆ. ಮೌಖಿಕ ಮೂಲದ ಮಾಹಿತಿಯನ್ನು ಬಳಸುವಾಗ ಮಾಹಿತಿಯನ್ನು ಪ್ರಾಥಮಿಕ/ಆನುಷಂಗಿಕ ಎಂದು ವರ್ಗೀಕರಿಸುವುದು ಹೆಚ್ಚು ಸಮಸ್ಯೆಯಾಗಿ ಮುಂಚೂಣಿಗೆ ಬಂದಿದೆ. ಉದಾಹರಣೆಗೆ ಜನಪದ ಅಧ್ಯಯನದಲ್ಲಿ ಬಳಸುವ ಪಾಡ್ಡನಗಳನ್ನು ಮತ್ತು ಪಾಡ್ದನ ಹಾಡುವವರನ್ನು ಹೇಗೆಂದು ಪರಿಭಾವಿಸಬೇಕು? ಪ್ರಾಥಮಿಕ ಮಾಹಿತಿಯೆಂದೇ ಅಥವಾ ಆನುಷಂಗಿಕ ಮಾಹಿತಿಯೆಂದೇ? ಅದೇ ರೀತಿಯಲ್ಲಿ ಬುಡಕಟ್ಟು ಅಧ್ಯಯನದಲ್ಲೂ ಬುಡಕಟ್ಟು ರಾಮಾಯಣ ಹೇಳುವವರನ್ನು ಎಲ್ಲಿ ಸೇರಿಸಬೇಕು ಎನ್ನುವ ಪ್ರಶ್ನೆ. ಇದೇ ಬುಡಕಟ್ಟು ರಾಮಾಯಣವನ್ನು ಅಥವಾ ಜಾನಪದ ಪಾಡ್ದನವನ್ನು ಸಂಶೋಧಕರೊಬ್ಬರು ತಮ್ಮ ಸಂಶೋಧನೆಯಲ್ಲಿ ಬಳಸಿಕೊಂಡಿದ್ದಾರೆ ಎಂದಿಟ್ಟುಕೊಳ್ಳೋಣ. ಅಂತಹ ಸಂಶೋಧನೆಗಳಿಂದ ಅಥವಾ ಬರಹಗಳಿಂದ ಮಾಹಿತಿ ಪಡೆಯುವಾಗ ಅವುಗಳ ಮೂಲ ಹೇಳುಗರು ಯಾರೆಂದು ಗುರುತಿಸಬೇಕು? ಈ ಕುರಿತು ಜಾನಪದ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯಗಳಿವೆ. ಕೆಲವರು ಜಾನಪದ ಪಾಡ್ದನ ಅಥವಾ ಬುಡಕಟ್ಟು ಕಾವ್ಯಗಳನ್ನು ಹಾಡುವವರು ಪ್ರಾಥಮಿಕ ಮಾಹಿತಿದಾರರೆಂದು ಪರಿಗಣಿಸಬೇಕೆಂದು ಅಭಿಪ್ರಾಯಪಟ್ಟರೆ ಇನ್ನೂ ಕೆಲವರು ಅವರನ್ನು ಆನುಷಂಗಿಕ ಮೂಲಗಳೆಂದು ಪರಿಗಣಿಸಬೇಕೆಂದು ವಾದಿಸುತ್ತಾರೆ. ಪ್ರಾಥಮಿಕ ಮಾಹಿತಿ ಮೂಲವೆಂದು ಪರಿಗಣಿಸಬೇಕೆನ್ನುವವರ ಪ್ರಕಾರ ಜಾನಪದ ಪಾಡ್ದನ ಹಾಡುವವರು ಅಥವಾ ಬುಡಕಟ್ಟು ಕಾವ್ಯ ಹಾಡುವವರು ತಮ್ಮ ಸಮುದಾಯದಲ್ಲಿ ಶತಮಾನಗಳಿಂದ ಮೌಖಿಕವಾಗಿ ಹರಿದು ಬಂದ ಪಾಡ್ದನ ಅಥವಾ ಕಾವ್ಯಗಳನ್ನು ಹೇಳುತ್ತಾರೆ. ಆ ಹಾಡುಗಾರರು ತಾವೇ ಪಾಡ್ದನಗಳನ್ನು ಅಥವಾ ಕಾವ್ಯಗಳನ್ನು ರಚಿಸಿಲ್ಲ. ಆದುದರಿಂದ ಅವರನ್ನು ಅಥವಾ ಅವರು ಹೇಳುವ ಸಂಗತಿಗಳನ್ನು ಆನುಷಂಗಿಕ ಮೂಲದಿಂದ ಪಡೆಯಲಾಗಿದೆ ಎಂದು ತೀರ್ಮಾನಿಸಲಾಗುವುದಿಲ್ಲ.[1] ಆನುಷಂಗಿಕ ಮೂಲಗಳೆಂದು ಪರಿಗಣಿಸಬೇಕೆಂದು ವಾದಿಸುವವರ ಪ್ರಕಾರ ಪಾಡ್ದನ ಅಥವಾ ಬುಡಕಟ್ಟು ಕಾವ್ಯಗಳನ್ನು ಅದರ ಮೂಲ ರೂಪದಲ್ಲೇ ಇಂದಿನ ಹಾಡುಗಾರರು ಹಾಡುತ್ತಾರೆಂದು ತಿಳಿಯುವುದು ಸರಿಯಲ್ಲ. ಹಲವಾರು ಹಾಡುಗಾರರನ್ನು ಪರಿಶೀಲಿಸಿ ಪ್ರತಿ ಹಾಡುಗಾರರ ಶೈಲಿ, ಕಂಟೆಂಟ್‌ಗಳಲ್ಲಿ ಸಾಕಷ್ಟು ಭಿನ್ನತೆ ಎಂದು ಗುರುತಿಸಿದ್ದಾರೆ. ಆದುದರಿಂದ ಜನಪದ ಅಥವಾ ಬುಡಕಟ್ಟು ಕಾವ್ಯಗಳಲ್ಲಿ ಹಾಡುವವರ ಕೊಡುಗೆ ಏನಿಲ್ಲ ಅಥವಾ ಹಿಂದಿನದ್ದು ಯಥಾ ರೂಪದಲ್ಲಿ ದಾಟಿಸುತ್ತಾರೆ ಎಂದು ತಿಳಿಯಲಾಗುವುದಿಲ್ಲ ಎನ್ನುತ್ತಾರೆ.[2]

ಮೌಖಿಕ ಮಾಹಿತಿ ಮೇಲಿನ ಎರಡು ದೃಷ್ಟಿಕೋನಗಳನ್ನು ಸ್ಪಷ್ಟಪಡಿಸಲು ಉತ್ತಮ ಉದಾಹರಣೆಯೆಂದರೆ ಇತ್ತೀಚೆಗೆ ‘ಸಂಗ್ಯಾ ಬಾಳ್ಯಾ’ ನಾಟಕದ ಮೇಲೆ ನಡೆದ ಚರ್ಚೆ. ಕೆಲವರ ಪ್ರಕಾರ ‘ಸಂಗ್ಯಾ ಬಾಳ್ಯಾ’ ಎನ್ನುವುದು ಜನಪದ ಕಥನ. ಅದನ್ನು ಪತ್ತಾರ ಮಾಸ್ತರ ಎನ್ನುವವರು ಸಣ್ಣಾಟವಾಗಿ ಪರಿವರ್ತಿಸಿದರು. ನಂತರ ಚಂದ್ರಶೇಖರ ಕಂಬಾರರು ಮಾಸ್ತರರ ಸಣ್ಣಾಟವನ್ನು ಪರಿಷ್ಕರಿಸಿ ಆಧುನಿಕ ರಂಗಭೂಮಿಗೆ ಹೊಂದುವಂತೆ ನಾಟಕ ರಚಿಸಿದರು. ಇತ್ತೀಚೆಗೆ ಎಂ.ಎಂ. ಕಲಬುರ್ಗಿಯವರು ಇದೇ ಕಥಾ ವಸ್ತುವನ್ನು ಇಟ್ಟುಕೊಂಡು ‘ಖರೆ ಖರೆ ಸಂಗ್ಯಾ ಬಾಳ್ಯಾ’ ನಾಟಕ ರಚಿಸಿದ್ದಾರೆ. ಆದರೆ ಕಲಬುರ್ಗಿಯವರ ನಾಟಕದಲ್ಲಿ ಹಿಂದಿನ ಕಥಾ ವಸ್ತು ಮಾರ್ಪಾಟುಗೊಂಡಿದೆ. ಪತ್ತಾರ ಮಾಸ್ತರರ ಸಣ್ಣಾಟದಲ್ಲಿ ಮತ್ತು ಚಂದ್ರಶೇಖರ ಕಂಬಾರರ ನಾಟಕದಲ್ಲಿ ನಾಟಕದ ಮುಖ್ಯ ಪಾತ್ರದಾರಿಗಳ ನಡುವೆ (ಗಂಗಿ ಮತ್ತು ಸಂಗ್ಯಾ) ಅನೈತಿಕ ಸಂಬಂಧ ಇತ್ತು. ಈ ಸಂಬಂಧ ಗಂಗಿಯ ಗಂಡನ ಗಮನಕ್ಕೆ ಬಂದು ಆತ ಸಂಗ್ಯಾನನ್ನು ಕೊಲೆ ಮಾಡುತ್ತಾನೆ. ಆದರೆ ಕಲಬುರ್ಗಿಯವರ ನಾಟಕದ ಪ್ರಕಾರ ಗಂಗಿ ಮತ್ತು ಸಂಗ್ಯಾ ನಡುವೆ ಅನೈತಿಕ ಸಂಬಂಧ ಇರಲಿಲ್ಲ. ಪತ್ತಾರ ಮಾಸ್ತರ (ಸಂಗ್ಯಾ ಬಾಳ್ಯಾ ಸಣ್ಣಾಟದ ಕರ್ತೃ) ಗಂಗಿಯ ಮೇಲೆ ಮನಸ್ಸು ಮಾಡಿದ್ದ. ಅವನ ಆಪೇಕ್ಷೆಯನ್ನು ಗಂಗಿ ತಿರಸ್ಕರಿಸಿದ್ದರಿಂದ ಸಿಟ್ಟಿಗೆದ್ದು ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಸಂಗ್ಯಾನೊಂದಿಗೆ ಅನೈತಿಕ ಸಂಬಂಧ ಕಲ್ಪಿಸಿ ಮಾನ ಕಳೆದ. ಅವಳ ಗಂಡ ಈರ್ಯಾನಲ್ಲಿ ಸಂಶಯದ ವಿಷ ಬೀಜ ಬಿತ್ತಿದ್ದರಿಂದ ಸಂಗ್ಯಾನ ಕೊಲೆ ಸಂಭವಿಸಿತು ಇತ್ಯಾದಿ ವಿಚಾರಗಳನ್ನು ಕಲಬುರ್ಗಿಯವರು ‘ಖರೆ ಖರೆ ಸಂಗ್ಯಾ ಬಾಳ್ಯಾ’ ನಾಟಕ ಒಳಗೊಂಡಿದೆ. ಹೀಗೆ ಇಲ್ಲಿ ಒಂದೇ ಕಥಾವಸ್ತು ವಿವಿಧ ರೀತಿಯಲ್ಲಿ ಬಳಸಲ್ಪಟ್ಟಿದೆ. ಸಂಗ್ಯಾಬಾಳ್ಯಾ ನಾಟಕದಲ್ಲಿ ಬರುವ ಪಾತ್ರಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ಈ ರೀತಿಯಲ್ಲಿ ಬಳಸುವುದು ಸರಿಯೇ? ಎನ್ನುವ ಜಿಜ್ಞಾಸೆ ನಡೆದಿದೆ. ಕೆಲವರ ಪ್ರಕಾರ ಇದೊಂದು ಜನಪದ ವಸ್ತು. ಕಥಾವಸ್ತು ಜನಪದವಾಗಿರುವುದರಿಂದ ಅದನ್ನು ವಿವಿಧ ರೀತಿಯಲ್ಲಿ ಬಳಸುವುದಕ್ಕೆ ಆಕ್ಷೇಪ ಸಲ್ಲ. ಆದರೆ ಅದನ್ನು ತಮ್ಮ ಕಲಾಕರತಿಯಲ್ಲಿ ಬಳಸಿಕೊಂಡು ತಮ್ಮ ಕೃತಿಯೆಂದು ಖಾಸಗೀಕರಣಗೊಳಿಸಿರುವುದು ಸರಿಯಲ್ಲ ಎನ್ನುವ ವಾದವನ್ನು ಕೆಲವರು ಮುಂದಿಡುತ್ತಾರೆ. ಇನ್ನು ಕೆಲವರ ಪ್ರಕಾರ ಇದೊಂದು ನಿಜ ಜೀವನದಲ್ಲಿ ನಡೆದ ಘಟನೆ. ವಸಾಹತು ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎನ್ನುವುದನ್ನು ಸಾಧಿಸಲು ಬೇಕಾಗಿರುವ ಎಲ್ಲ ದಾಖಲೆಗಳು ಅಥವಾ ಪುರಾವೆಗಳು ಲಭ್ಯ. ಇದನ್ನೇ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಇದೊಂದು ಚಾರಿತ್ರಿಕ ಘಟನೆ. ಚಾರಿತ್ರಿಕ ಮಾಹಿತಿಯನ್ನು ವಿಶ್ಲೇಷಿಸುವಾಗ ಬಳಸುವ ಕ್ರಮವನ್ನು ಇಲ್ಲೂ ಅನುಸರಿಸಬೇಕೆಂಬ ಪರೋಕ್ಷ ವಾದವೂ ಇದೆ. ಚಾರಿತ್ರಿಕ ಘಟನೆ ಎನ್ನುವ ವಾದ ಇದಕ್ಕೆ ಪ್ರಾಥಮಿಕ ಮಾಹಿತಿಯ ಸ್ವರೂಪವನ್ನು ಕೊಡುತ್ತದೆ. ಹೀಗೆ ಸಂಶೋಧನಾ ಕ್ಷೇತ್ರಗಳು ವಿಸ್ತಾರಗೊಂಡಂತೆ ಮೂಲಗಳ ನೆಲೆಯಲ್ಲಿ ಮಾಹಿತಿಯನ್ನು ವಿಂಗಡಿಸುವ ಹಳೇ ವಿಧಾನ ಶಕ್ತಿ ಕಳೆದುಕೊಳ್ಳುತ್ತದೆ. ಅಂದರೆ ಯಾವುದೋ ಚಾರಿತ್ರಿಕ ಸಂದರ್ಭದಲ್ಲಿ ರೂಪುಗೊಂಡ ಮಾಹಿತಿಯ ಮೂಲಗಳ ಈ ಬಗೆಯ ವಿಂಗಡನೆ ಎಲ್ಲ ಬಗೆಯ ಎಲ್ಲ ಸಂಶೋಧನಾ ಕ್ಷೇತ್ರಗಳಿಗೂ ಅನ್ವಯವಾಗುತ್ತದೆ ಎನ್ನಲಾಗುವುದಿಲ್ಲ.[3]

ಜನಪದ ಅಧ್ಯಯನದಂತೆ ಮಹಿಳಾ ಅಧ್ಯಯನ ಕೂಡ ಸಾಂಪ್ರದಾಯಿಕ ಮಾಹಿತಿ ವಿಂಗಡನೆಯನ್ನು ಪ್ರಶ್ನಿಸುತ್ತಿದೆ. ಸಾಂಪ್ರದಾಯಿಕ ಸಮಾಜವಿಜ್ಞಾನಗಳಲ್ಲಿ ಸಂದರ್ಶನವನ್ನು ಪ್ರಾಥಮಿಕ ಮಾಹಿತಿ ಮೂಲಗಳೆಂದು ತಿಳಿಯಲಾಗುತ್ತದೆ. ಆದರೆ ಮಹಿಳಾ ಅಧ್ಯಯನದಲ್ಲಿ ಸಂದರ್ಶನವನ್ನು ಪ್ರಾಥಮಿಕ ಮಾಹಿತಿಯ ಮೂಲವೆಂದು ತಿಳಿಯಲಾಗುವುದಿಲ್ಲ. ಅದನ್ನು ಆನುಷಂಗಿಕ ಮೂಲವೆಂದು ತಿಳಿಯಲಾಗುತ್ತದೆ.[4] ಸಂದರ್ಶನದ ಹೊಸ ರೂಪದಲ್ಲಿ ಅದನ್ನು ವಾಸ್ತವದ ಬಗ್ಗೆ ಮಾಹಿತಿ ಸಂಗ್ರಹಿಸುವ ವಿಧಾನವೆಂದು ತಿಳಿಯಲಾಗಿಲ್ಲ. ಸಂದರ್ಶನ ಕೂಡ ಒಂದು ವಿಷಯವಾಗಿ ಅಥವಾ ಅಧ್ಯಯನದ ವಸ್ತುವಾಗಿ ಮಾರ್ಪಾಟುಗೊಂಡಿದೆ. ಈ ವಿಷಯವನ್ನು ಅಥವಾ ವಸ್ತುವನ್ನು ವಿಶ್ಲೇಷಿಸುವ ಮೂಲ ಸಂಶೋಧನೆಯ ಉದ್ದೇಶಕ್ಕೆ ಪೂರಕವಾದ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ಸಂದರ್ಶನವನ್ನು ಈ ದೃಷ್ಟಿಯಲ್ಲಿ ನೋಡಲು ಬಹುಮುಖ್ಯ ಕಾರಣ ಸಂದರ್ಶಕರು ವಾಸ್ತವವನ್ನು ಯಥಾರೀತಿಯಲ್ಲಿ ಮಂಡಿಸುವದಿಲ್ಲ ಎನ್ನುವ ಗ್ರಹಿಕೆ. ಸಂದರ್ಶಕರು ವಾಸ್ತವಕ್ಕೆ ಹತ್ತಿರವಾದ ಮಾಹಿತಿಯನ್ನು ಕೊಡದಿರಲು ಹಲವು ಕಾರಣಗಳಿರಬಹುದು. ಅವುಗಳಲ್ಲಿ ಮುಖ್ಯವಾದ ಕೆಲವು ಇಂತಿವೆ. ಒಂದು, ವಾಸ್ತವವನ್ನು ಮರೆಮಾಚುವ ಅಥವಾ ತಿರುಚುವ ಮಾಹಿತಿಗಳನ್ನು ನೀಡುವುದು. ಎರಡು, ತಮ್ಮ ವೈಯಕ್ತಿಕ ಲೋಪಗಳನ್ನು ಮುಚ್ಚಿಕೊಳ್ಳಲು ಪೂರಕವಾಗುವ ಮಾಹಿತಿಗಳನ್ನು ನೀಡುವುದು. ಮೂರು, ಬಹು ಮಾಹಿತಿಗಳನ್ನು ನೀಡುವುದು ಅಥವಾ ಸಂದರ್ಶಕನಿಗೊಂದು ಮಾಹಿತಿ ಮತ್ತು ಇತರ ಗ್ರಾಹಕರಿಗೆ ಮತ್ತೊಂದು ಮಾಹಿತಿ ನೀಡುವುದು. ವಾಸ್ತವವನ್ನು ಮರೆಮಾಚುವ ಮಾಹಿತಿ ನೀಡುವುದನ್ನು ನಾವು ದಿನನಿತ್ಯ ಮಾಧ್ಯಮಗಳಲ್ಲಿ (ಟೀವಿ, ದಿನಪತ್ರಿಕೆ, ವಾರಪತ್ರಿಕೆ ಇತ್ಯಾದಿಗಳಲ್ಲಿ) ಕಾಣುತ್ತೇವೆ. ಸಂಶೋಧನೆಯನ್ನು ಕಲ್ಪಿತ ಅಥವಾ ರಚಿತ ಸತ್ಯಗಳು ರೂಪುಗೊಳ್ಳುವ ಬಗೆಯನ್ನು ಅರ್ಥ ಮಾಡಿಕೊಳ್ಳುವ ಪ್ರಕ್ರಿಯೆಯೆಂದು ವ್ಯಾಖ್ಯಾನಿಸುವುದು ಕೂಡ ಸೇರಿದೆ. ಹೀಗೆ ಸಂಶೋಧನೆಯ ಸಾಂಪ್ರದಾಯಿಕ ವ್ಯಾಖ್ಯಾನವನ್ನು ಇಟ್ಟುಕೊಂಡು ಮಾಹಿತಿ ಸಂಗ್ರಹಿಸುವ ವಿಧಾನದ ಬಗ್ಗೆ ಎಷ್ಟೇ ಕ್ರಾಂತಿಕಾರಕ ನಿಲುವನ್ನು ತಳೆದರೂ ಪ್ರಯೋಜನವಿಲ್ಲ ಎನ್ನುವ ನಿಲುವೂ ಇದೆ.

ಉಲ್ಲೇಖಿಸುವುದು

ಇಂದು ನಾವು ಸಂಶೋಧನೆ ಮಾಡಲು ಹೊರಟಿರುವ ವಿಚಾರದ ಬಗ್ಗೆ ಯಾವುದೇ ಸಂಶೋಧನೆ ಅಥವಾ ದಾಖಲೆಗಳು ಆಗಿಯೇ ಇಲ್ಲ ಎಂದು ಊಹಿಸಿಕೊಂಡು ಹೊರಡುವುದು ಸರಿಯಲ್ಲ. ಶಿಸ್ತುಬದ್ಧ ಸಂಶೋಧನೆ ಅಲ್ಲದಿದ್ದರೂ ನಾವು ಸಂಶೋಧನೆ ಮಾಡಲಿಚ್ಚಿಸುವ ವಿಚಾರಕ್ಕೆ ನೇರವಾಗಿ ಅಥವಾ ಪರೋಕ್ಷವಾಗಿ ಸಂಬಂಧಿಸಿದ ಸಾಕಷ್ಟು ಬರಹಗಳು ಅಥವಾ ದಾಖಲೆಗಳಿವೆ. ಈ ಬರಹಗಳ ಅಥವಾ ದಾಖಲೆಗಳ ಅರಿವು ನಮ್ಮ ಸಂಶೋಧನಾ ಪ್ರಶ್ನೆಗಳನ್ನು ರೂಪಿಸಿಕೊಳ್ಳುವಲ್ಲಿ ಎಷ್ಟು ಅವಶ್ಯ ಎಂದು ಹಿಂದಿನ ಅಧ್ಯಾಯದಲ್ಲಿ ನೋಡಿದ್ದೇವೆ. ಉತ್ತಮ ಸಂಶೋಧನಾ ಪ್ರಶ್ನೆಗಳು ಅಧ್ಯಯನದ ಉದ್ದೇಶಗಳನ್ನು ಮತ್ತು ಅಧ್ಯಯನದ ವಿಧಾನಗಳನ್ನು ಹೇಗೆ ಪ್ರಭಾವಿಸುತ್ತವೆ ಎಂದು ಹಿಂದಿನ ಅಧ್ಯಾಯದಲ್ಲಿ ವಿವರಿಸಲಾಗಿದೆ. ಆದುದರಿಂದ ನಾವು ಸಂಶೋಧನೆ ಮಾಡಲು ಹೊರಟಿರುವ ವಿಚಾರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಂಪೂರ್ಣ ಅಲ್ಲದಿದ್ದರು ಸಾಕಷ್ಟು ಪ್ರಮಾಣದಲ್ಲಿ ಪರಿಚಯ ಮಾಡಿಕೊಳ್ಳುವುದು ಸಂಶೋಧಕರ ಆದ್ಯ ಕರ್ತವ್ಯ. ಆನುಷಂಗಿಕ ದಾಖಲೆಗಳ ಪಟ್ಟಿಯಲ್ಲಿ ಬರುವ ಮುಖ್ಯ ದಾಖಲೆಗಳು ಇಂತಿವೆ. ಈಗಾಗಲೇ ಮಂಡಿತವಾದ ಸಂಶೋಧನಾ ಪ್ರಬಂಧಗಳು, ಅಚ್ಚಾದ ಸಂಶೋಧನಾ ಪ್ರಬಂಧಗಳು, ವಿಚಾರ ಸಂಕಿರಣಗಳಲ್ಲಿ ಮಂಡಿತವಾದ ಸಂಶೋಧನಾ ಲೇಖನಗಳು, ಪತ್ರಿಕೆಗಳಲ್ಲಿ ಅಚ್ಚಾದ ಸಂಶೋಧನಾ ಲೇಖನಗಳು, ಈಗಾಗಲೇ ಯಾವುದೋ ಒಂದು ರೂಪದಲ್ಲಿ ದಾಖಲಾಗಿರುವ ಮೌಖಿಕ ಆಕರಗಳು ಇತ್ಯಾದಿಗಳನ್ನು ಪ್ರಮುಖ ಆನುಷಂಗಿಕ ಮಾಹಿತಿಗಳೆಂದು ಗುರುತಿಸಲಾಗಿದೆ. ಒಂದು ಮಾಹಿತಿ ಆನುಷಂಗಿಕ ಅಥವಾ ಪ್ರಾಥಮಿಕವೇ ಎನ್ನುವ ನಿರ್ಧಾರ ಅಧ್ಯಯನ ಕ್ಷೇತ್ರ ಮತ್ತು ಅಧ್ಯಯನ ವಿಧಾನಗಳ ಆಧಾರದಲ್ಲಿ ಮಾಡಬೇಕಾಗಿದೆ. ಉದಾಹರಣೆಗೆ ಚರಿತ್ರೆ ಅಧ್ಯಯನಗಳಲ್ಲಿ ಡೈರಿಗಳು, ಕ್ರೋನಿಕಲ್ಸ್, ಕಚೇರಿ ಕಡತಗಳು, ಶಾಸನಗಳು, ದಾಖಲೆಗಳು, ಪತ್ರಗಳು ಇತ್ಯಾದಿಗಳು ಪ್ರಾಥಮಿಕ ದಾಖಲೆಗಳು. ಪ್ರಕಟಿತ ಮತ್ತು ಅಪ್ರಕಟಿತ ಲೇಖನಗಳು, ಪ್ರಬಂಧಗಳು ಮತ್ತು ಮಹಾಪ್ರಬಂಧಗಳು, ಪುಸ್ತಕಗಳು ಆನುಷಂಗಿಕ ಮಾಹಿತಿ ಮೂಲಗಳೆಂದು ಪರಿಗಣಿಸುವ ಕ್ರಮ ಇದೆ. ಹೆಚ್ಚು ಕಡಿಮೆ ಸಮಾಜವಿಜ್ಞಾನದ ಎಲ್ಲ ಶಿಸ್ತುಗಳ (ಚರಿತ್ರೆಯನ್ನು ಹೊರತುಪಡಿಸಿ) ಆನುಷಂಗಿಕ ಮೂಲಗಳು ಒಂದೇ ಆಗಿರುತ್ತವೆ.

ಆನುಷಂಗಿಕ ಮೂಲಗಳಿಂದ ಮಾಹಿತಿಯನ್ನು ದಾಖಲಿಸಿಕೊಳ್ಳುವ ಹಲವಾರು ಕ್ರಮಗಳಿವೆ. ಈ ಎಲ್ಲ ಕ್ರಮಗಳ ಹಿಂದಿರುವ ನೀತಿ ಒಂದೇ. ಪ್ರಬಂಧದ ಆರಂಭದಿಂದ ಅಂತ್ಯದವರೆಗೆ ಒಂದೇ ಕ್ರಮವನ್ನು ಅನುಸರಿಸಬೇಕೆನ್ನುವುದು ಮಾಹಿತಿ ಮೂಲಗಳನ್ನು ನೀಡುವಲ್ಲಿ ಅನುಸರಿಸಬೇಕಾದ ನಿಯಮ. ಮಾಹಿತಿ ಮೂಲವನ್ನು ನೀಡುವ ಹಲವಾರು ಕ್ರಮಗಳಿವೆ. ಸಂಶೋಧರಕಿಗೆ ಅನುಕೂಲವಾಗುವ ಯಾವುದಾದರೂ ಒಂದು ನೀತಿಯನ್ನು ಅನುಸರಿಸಬಹುಉದ. ಈ ಕುರಿತು ಮಾಹಿತಿ ನೀಡುವ ಪುಸ್ತಕಗಳಿವೆ. ಇಲ್ಲಿ ನಾನು ಎಲ್ಲ ಕ್ರಮಗಳನ್ನು ವಿವರಿಸುವುದಿಲ್ಲ. ನಾನು ಅನುಸರಿಸುವ ಕ್ರಮವನ್ನು ವಿವರಿಸಿದ್ದೇನೆ.[5]

ಸಂಶೋಧಕರು ಈ ಕ್ರಮವನ್ನು ಅನುಸರಿಸಬಹುದು ಅಥವಾ ಇತರ ಪುಸ್ತಕಗಳಲ್ಲಿ ಸೂಚಿಸಿದ ಕ್ರಮವನ್ನು ಅನುಸರಿಸಬಹುದು. ಮಾಹಿತಿಯ ಮೂಲವನ್ನು ದಾಖಲಿಸಿಕೊಳ್ಳುವುದು ಆನುಷಂಗಿಕ ಮಾಹಿತಿ ಸಂಗ್ರಹಿಸುವಾಗ ಅನುಸರಿಸಬೇಕಾದ ಪ್ರಥಮ ಹೆಜ್ಜೆ. ಮಾಹಿತಿಯ ಮೂಲವನ್ನು ದಾಖಲಿಸುವ ಕ್ರಮವನ್ನು ಮಾಹಿತಿಯ ಮೂಲ ನಿರ್ಧರಿಸುತ್ತದೆ. ಉದಾಹರಣೆಗೆ ಅಚ್ಚಾಗದ ಪ್ರಬಂಧದಿಂದ ಮಾಹಿತಿಯನ್ನು ಪಡೆಯುವಾಗ ಮೂಲವನ್ನು ಅಚ್ಚಾದ ಪ್ರಬಂಧದಿಂದ ದಾಖಲಿಸುವುದಕ್ಕಿಂತ ಭಿನ್ನ. ಅದೇ ರೀತಿಯಲ್ಲಿ ಪತ್ರಿಕೆಗಳಿಂದ ಮತ್ತು ಪುಸ್ತಕಗಳಿಂದ ಮಾಹಿತಿ ಪಡೆಯುವಾಗ ಮೂಲವನ್ನು ಬೇರೆ ಬೇರೆ ರೀತಿಯಲ್ಲಿ ದಾಖಲಿಸಲಾಗುವುದು.

೧. ಪ್ರಕಟಿತ ಪುಸ್ತಕಗಳಿಂದ ಮಾಹಿತಿ ಪಡೆದರೆ ಈ ಕೆಳಗಿನಂತೆ ಮೂಲವನ್ನು ದಾಖಲಿಸುವ ಕ್ರಮ ಇದೆ. ಲೇಖಕರ ಹೆಸರು, ಪುಸ್ತಕದ ಶೀಷಿಕೆ (ಇಟಾಲಿಕ್‌ನಲ್ಲಿ), ಪ್ರಕಟನೆಯ ಸ್ಥಳ: ಪ್ರಕಾಶಕರ ವಿಳಾಸ, ಪ್ರಕಟನೆಯ ವರ್ಷ, ಪುಟ ಸಂಖ್ಯೆ.

ಸುರಾ ಜೋಸೆಫ್, ಪೊಲಿಟಿಕಲ್ ಥಿಯರಿ ಆಂಡ್ ಪವರ್, ನ್ಯೂಡೆಲ್ಲಿ: ಫೌಂಡೇಶನ್ ಬುಕ್ಸ್, ೨೦೦೪, ಪು. ೨೩-೨೬.

೨. ಸಂಪಾದಿತ ಪುಸ್ತಕದಿಂದ ಮಾಹಿತಿ ಪಡೆಯುವಾಗ ಈ ಕೆಳಗಿನಂತೆ ಮೂಲವನ್ನು ದಾಖಲಿಸಬಹುದು. ಲೇಖಕರ ಹೆಸರು, “ಲೇಖನದ ಶೀರ್ಷಿಕೆ”, ಸಂಪಾದಕರ ಹೆಸರು, ಪುಸ್ತಕದ ಶೀರ್ಷಿಕೆ (ಇಟಾಲಿಕ್‌ನಲ್ಲಿ), ಪ್ರಕಟನೆಯ ಸ್ಥಳ: ಪ್ರಕಾಶಕರ ವಿಳಾಸ, ಪ್ರಕಟನೆಯ ವರ್ಷ, ಪುಟ ಸಂಖ್ಯೆ.

ರಾಜಾರಾಮ ಹೆಗಡೆ, “ಕೆರೆ ನೀರಾವರಿ ವ್ಯವಸ್ಥೆ : ಒಂದು ಚಾರಿತ್ರಿಕ ವಿಶ್ಲೇಷಣೆ”, ಎಂ. ಚಂದ್ರ ಪೂಜಾರಿ (ಸಂಪಾದಿಸಿದ), ಸಮುದಾಯ ಮತ್ತು ಸಹಭಾಗಿತ್ವ – ಕೆರೆ ನೀರಾವರಿ ನಿರ್ವಹಣೆಯಲ್ಲಿ ಸಹಭಾಗಿತ್ವ, ಹಂಪಿ: ಕನ್ನಡ ವಿಶ್ವವಿದ್ಯಾಲಯ, ೨೦೦೨, ಪು. ೨೭-೪೯.

೩. ಯಾವುದೋ ಪುಸ್ತಕದಲ್ಲಿ ಉಲ್ಲೇಖಿಸಿದ ಮಾಹಿತಿಯನ್ನು ಬಳಸುವಾಗ ಮೂಲವನ್ನು ಈ ಕೆಳಗಿನಂತೆ ದಾಖಲಿಸಬಹುದು. ಉಲ್ಲೇಖಿತ ಅಥವಾ ಮೂಲ ಲೇಖಕರ ಹೆಸರು, ಪುಸ್ತಕದ ಹೆಸರು, ಪ್ರಕಟನೆಯ ಸ್ಥಳ: ಪ್ರಕಾಶಕರ ವಿಳಾಸ, ಪ್ರಕಟನೆಯ ವರ್ಷ, ಪುಟ ಸಂಖ್ಯೆ ಮತ್ತು ಮಾಹಿತಿ ಪಡೆದ ಪುಸ್ತಕದ ಲೇಖಕರ ಹೆಸರು, ಪುಸ್ತಕದ ಶೀರ್ಷಿಕೆ, ಪ್ರಕಟನೆಯ ಸ್ಥಳ: ಪ್ರಕಾಶಕರ ವಿಳಾಸ, ಪ್ರಕಟನೆಯ ವರ್ಷ, ಪುಟ ಸಂಖ್ಯೆ.

ಇ.ಪಿ. ಥಾಮ್ಸ್‌ನ್, ದಿ ಪಾವರ್ಟಿ ಆಫ್ ಥಿಯರಿ ಆಂಡ್ ಅದರ ಎಸ್ಸೇಸ್, ಲಂಡನ್: ಮರ್ಲಿನ್ ಪ್ರೆಸ್, ೧೯೭೯, ಪು.೧೨ ಅಭಿಪ್ರಾಯಗಳನ್ನು ಸಾರಾ ಜೋಸೆಫ್‌, ಪೊಲಿಟಿಕಲ್ ಥಿಯರಿ ಆಂಡ್ ಪವರ್, ನ್ಯೂಡೆಲ್ಲಿ: ಪೌಂಡೇಶನ್ ಬುಕ್ಸ್, ೨೦೦೪, ಪು. ೨೩-೨೬ ಯಲ್ಲಿದಂತೆ ಬಳಸಲಾಗಿದೆ.

೪. ಒಬ್ಬ ಲೇಖಕರ ಎರಡು ಅಥವಾ ಅದಕ್ಕಿಂತ ಹೆಚ್ಚಿನ ಪುಸ್ತಕ ಅಥವಾ ಬರಹಗಳಿಂದ ಮಾಹಿತಿ ಸಂಗ್ರಹಿಸುವಾಗ ಅಥವಾ ಉಲ್ಲೇಖಿಸುವಾಗ ಈ ಕೆಳಗಿನ ವಿಧಾನ ಅನುಸರಿಸಬಹುದು. ಒಮ್ಮೆ ಮಾತ್ರ ಲೇಖಕರ ಹೆಸರನ್ನು ನೀಡಿ ಉಳಿದ ಸಂದರ್ಭದಲ್ಲಿ ಲೇಖಕರ ಹೆಸರಿನ ಜಾಗದಲ್ಲಿ ಗೆರೆ ಎಳೆದು ಪುಸ್ತಕ ಅಥವಾ ಪತ್ರಿಕೆಯ ಇತರ ವಿವರಗಳನ್ನು ನೀಡಿದರೆ ಸಾಕು. ಉದಾಹರಣೆಗೆ ಆಂಡ್ರೆ ಬಿಟೆಯ ಮೂರು ಬರಹಗಳನ್ನು ಉಲ್ಲೇಖಿಸುವ ಸಂದರ್ಭದಲ್ಲಿ ಈ ಕೆಳಗಿನಂತೆ ದಾಖಲಿಸಬಹುದು.

ಆಂಡ್ರೆ ಬಿಟೆ, “ಇನ್‌ಡಿವಿಜುವಲಿಸಂ ಆಂಡ್ ಈಕ್ವಾಲಿಟಿ”, ಕರೆಂಟ್ ಎಂಥ್ರಾಪಲಜಿ, ವಾಲ್ಯೂಮ ೨೮,  ನಂ.೨, ಪು. ೧೨೧-೩೪.

– “ಆನ್ಇಡಿವಿಜುವಲಿಸಂ ಆಂಡ್ ಈಕ್ವಾಲಿಟಿರಿಪ್ಲೈ”, ಕರೆಂಟ್ ಎಂಥ್ರಾಪಲಜಿ, ವಾಲ್ಯೂಂ ೨೮, ನಂ. ೫, ಪು. ೬೭೨-೫.

ಆಂಟಿನೊಮಿಸ್ ಆಫ್ ಸೊಸೈಟಿಎಸ್ಸೇಸ್ಆನ್ ಐಡಿಯಾಲಜಿ ಆಂಡ್ ಇನ್ಸ್ಟಿಟ್ಯೂಶನ್ಸ್, ನ್ಯೂಡೆಲ್ಲಿ:

೫. ಒಂದು ಪುಸ್ತಕ ಅಥವಾ ಲೇಖನದ ಲೇಖಕರಾಗಿ ಮೂರಕ್ಕಿಂತ ಹೆಚ್ಚಿನ ಲೇಖಕರು ಇದ್ದ ಸಂದರ್ಭದಲ್ಲಿ ಈ ಕೆಳಗಿನ ವಿಧಾನ ಅನುಸರಿಸಬಹುದು. ಎರಡು ಅಥವಾ ಮೂರು ಲೇಖಕರು ಇದ್ದ ಸಂದರ್ಭದಲ್ಲಿ ಎಲ್ಲ ಲೇಖಕರ ಹೆಸರುಗಳನ್ನು ನೀಡಿ ಪುಸ್ತಕ ಅಥವಾ ಲೇಖನದ ಇತರ ಮಾಹಿತಿಗಳನ್ನು ನೀಡಬೇಕು. ಮೂರಕ್ಕಿಂತ ಹೆಚ್ಚು ಲೇಖಕರಿದ್ದ ಸಂದರ್ಭದಲ್ಲಿ ಲೇಖಕರಲ್ಲಿ ಮೊದಲಿನವರ ಹೆಸರನ್ನು ಮಾತ್ರ ನೀಡಿ ಪುಸ್ತಕ ಅಥವಾ ಲೇಖನದ ಇತರ ಮಾಹಿತಿಗಳನ್ನು ನೀಡುವುದು.

ಕಪೂರ್, ರತ್ನ ಆಂಡ್ ಬ್ರಿಂದಾ, ಸಬ್ವರ್ಸ್ಸೀವ್ ಸೈಟ್ಸ್ಫೆಮಿನಿಸ್ಟ್ ಎಂಗೇಜ್ಮೆಂಟ್ವಿತ್ಲಾ ಇನ್ ಇಂಡಿಯಾ, ನ್ಯೂಡೆಲ್ಲಿ: ಸೇಜ್ ಪಬ್ಲಿಕೇಶನ್ಸ್, ೧೯೯೬. ಲೀಲಾ ದುಬೆ ಮತ್ತು ಇತರರು, ಮಹಿಳೆ  ಮತ್ತು ದುಡಿಮೆ, ಬಾಂಬೆ: ಇಂಡಿಯಾ ಪಬ್ಲಿಶಿಂಗ್ ಹೌಸ್, ೧೯೯೮.

೬. ಹಲವಾರು ವಾಲ್ಯೂಮ್‌ಗಳಲ್ಲಿ ಪ್ರಕಟಿತವಾದ ಮೂಲಗಳಿಂದ ಮಾಹಿತಿ ಪಡೆಯುವ ಸಂದರ್ಭದಲ್ಲಿ ಮಾಹಿತಿ ಪಡೆದ ವಾಲ್ಯೂಂನ್ನು ಗುರುತಿಸುವ ಜತೆಗೆ ಪ್ರಕಟಿತವಾದ ಒಟ್ಟು ವಾಲ್ಯೂಂಗಳನ್ನು ತಿಳಿಸುವ ಅಗತ್ಯ ಇದೆ. ಅದನ್ನು ಈ ಕೆಳಗಿನಂತೆ ದಾಖಲಿಸಬಹುದು –

ಜೇಮ್ಸ್ ಡಿ. ಪೆಬೀಯನ್, ಮೈಕೆಲ್ ಫುಕೋ – ಎಸ್ಸೆನ್ಷಿಯಲ್ ವರ್ಕ್ಸ್ ಆಫ್ ಮೈಕೆಲ್ ಫುಕೋವಾಲ್ಯೂಂ (೩ ವಾಲ್ಯೂಮ್ಸ್), ನ್ಯೂಡೆಲ್ಲಿ: ಪೆಂಗ್ವಿನ್ ಬುಕ್ಸ್, ೧೯೯೪.

೭. ಲೇಖಕರ ಸ್ಥಾನದಲ್ಲಿ ಸಂಖ್ಯೆ ಅಥವಾ ಸರಕಾರ ಅಥವಾ ಸಮಿತಿಗಳಿದ್ದಾಗ ಈ ಕೆಳಗಿನ ವಿಧಾನ ಅನುಸರಿಸಬೇಕಾಗುತ್ತದೆ. ಸಂಸ್ಥೆ ಅಥವಾ ಸರಕಾರ ಅಥವಾ ಸಮಿತಿಗಳಿಗೆ ಲೇಖಕರ ಸ್ಥಾನ ನೀಡಿ ಉಳಿದ ಮಾಹಿತಿಗಳನ್ನು ಮೇಲೆ ವಿವರಿಸಿದಂತೆ ದಾಖಲಿಸಬೇಕು. ಪುಸ್ತಕ ಅಥವಾ ರಿಪೋರ್ಟ್‌‌ನ ಹೆಸರನ್ನು ಇಟಾಲಿಕ್ ಮಾಡುವ ಅಗತ್ಯ ಇಲ್ಲ.

ಕರ್ನಾಟಕ ಸರ್ಕಾರ, ರಿಪೋರ್ಟ್ ಆಫ್ ದಿ ವರ್ಕಿಂಗ್ ಗ್ರೂಪ್ ಆನ್ ಡಿಸೆಂಟ್ರ ಲೈಸೇಶನ್, ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ೨೦೦೦.

೮. ಪತ್ರಿಕೆಗಳಲ್ಲಿ ಪ್ರಕಟವಾದ ಲೇಖನಗಳಿಂದ ಮಾಹಿತಿ ಪಡೆಯುವಾಗ ಈ ಕೆಳಗಿನಂತೆ ಮೂಲವನ್ನು ದಾಖಲಿಸಬಹುದು. ಲೇಖಕರ ಹೆಸರು, “ಲೇಖನದ ಶೀರ್ಷಿಕೆ”, ಪತ್ರಿಕೆಯ ಹೆಸರು (ಇಟಾಲಿಕ್‌ನಲ್ಲಿ), ಸಂಪುಟ ಸಂಖ್ಯೆ, ಸಂಚಿಕೆ ಸಂಖ್ಯೆ, ಪ್ರಕಟಿತ ತಿಂಗಳು ಮತ್ತು ವರ್ಷ, ಪುಟ ಸಂಖ್ಯೆ.

ಎಸ್. ಇರುದಯಾ ರಾಜನ್, “ಡಿಸ್ಟ್ರಿಕ್ಟ್ ಲೆವಲ್ ಫರ್ಟಿಲಿಟಿ ಎಸ್ಟಿಮೇಟ್ಸ್ ಫಾರ್‌ಹಿಂದೂಸ್ ಆಂಡ್ ಮುಸ್ಲಿಂಸ್”, ಎಕಾನಮಿಕ್ ಆಂಡ್ ಪೊಲಿಟಿಕಲ್ ವೀಕ್ಲಿ, ಸಂಪುಟ ಸಂಖ್ಯೆ ೧೬, ಸಂಚಿಕೆ ಸಂಖ್ಯೆ ೫, ಜನವರಿ – ಫೆಬ್ರವರಿ, ೨೦೦೫, ಪು. ೪೩೭-೪೪೬.

೯. ಪ್ರಕಟವಾಗದ ಪ್ರಬಂಧದಿಂದ ಮಾಹಿತಿ ಪಡೆಯುವಾಗ ಮೂಲವನ್ನು ಈ ಕೆಳಗಿನಂತೆ ದಾಖಲಿಸಿಕೊಳ್ಳಬಹುದು. ಸಂಶೋಧಕರ ಹೆಸರು, “ಮಹಾ ಪ್ರಬಂಧದ ಶೀರ್ಷಿಕೆ”, ಪ್ರಬಂಧವನ್ನು ಸಲ್ಲಿಸಿದ ವಿಭಾಗ ಮತ್ತು ವಿಶ್ವವಿದ್ಯಾಲಯದ ಹೆಸರು, ಸಲ್ಲಿಸಿದ ವರ್ಷ.

ಎಂ. ಚಂದ್ರಪೂಜಾರಿ, “ಟ್ರೆಂಡ್ಸ್ ಇನ್ ಎಂಟರ್‌ಪ್ರನರ್‌ಶಿಪ್ ಅಂಡ್ ರೀಜನಲ್ ಡೆವಲಪ್‌ಮೆಂಟ್ – ಎ ಸ್ಟಡಿ ಆಫ್ ಸ್ಮಾಲ್ ಎಂಟರ್‌ಪ್ರನರ‍್ಸ್ ಆಫ್ ಸೌತ್‌ಕೆನರಾ”, ಅನ್‌ಪಬ್ಲಿಷ್ಡ್ ಪಿಎಚ್.ಡಿ. ಥೀಸಿಸ್ ಸಬ್‌ಮಿಟೆಡ್ ಟು ಡಿಪಾರ್ಟ್‌‌ಮೆಂಟ್ ಆಫ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್, ಮಂಗಳೂರು ಯೂನಿವರ್ಸಿಟಿ, ೧೯೯೬.

೧೦. ಸರಕಾರಿ ದಾಖಲೆಗಳನ್ನು ಉಲ್ಲೇಖಿಸುವಾಗ ಈ ಕೆಳಗಿನ ನಿಯಮ ಅನುಸರಿಸಬಹುದು. ಕಮಿಟಿ ಅಥವಾ ಕಮಿಶನ್ ಹೆಸರು, ರಿಪೋರ್ಟ್‌ಹೆಸರು, ಸ್ಥಳ: ಕಮಿಟಿ ನೇಮಕ ಮಾಡಿದ ಇಲಾಖೆ/ಸರಕಾರದ ಹೆಸರು, ವರ್ಷ.

ಕರ್ನಾಟಕ ಸರ್ಕಾರ, ಡಿಪೋರ್ಟ್ ಆಫ್ ದಿ ವರ್ಕಿಂಗ್ ಗ್ರೂಪ್ ಆನ್ ಡಿಸೆಂಟ್ರ ಲೈಸೇಶನ್, ಬೆಂಗಳೂರು: ರೂರಲ್ ಡೆವಲಪ್‌ಮೆಂಟ್ ಆಂಡ್ ಪಂಚಾಯತ್ ರಾಜ್‌ ಡಿಪಾರ್ಟ್‌ಮೆಂಟ್, ೨೦೦೨.

ಕನ್ನಡದಲ್ಲಿ ಬರುವ ಸಂಶೋಧನಾ ಪ್ರಬಂಧಗಳಲ್ಲಿ ನಾನು ಗುರುತಿಸಿದ ಬಹುದೊಡ್ಡ ದೋಷ ಅಂದರೆ ಆನುಷಂಗಿಕ ಮಾಹಿತಿಗಳ ಮೂಲಗಳನ್ನು ಸ್ಪಷ್ಪಪಡಿಸದಿರುವುದು. ಪ್ರಬಂಧ ಅಥವಾ ಲೇಖನಗಳನ್ನು ಓದುವಾಗ ಅದರಲ್ಲಿ ಸಂಶೋಧಕರ ಅಥವಾ ಲೇಖಕರ ಅಭಿಪ್ರಾಯ ಯಾವುದು ಮತ್ತು ಅವರು ಆನುಷಂಗಿಕ ಮೂಲದಿಂದ ಪಡೆದ ಮಾಹಿತಿ ಯಾವುದು ಎನ್ನುವ ವ್ಯತ್ಯಾಸವೇ ಗೊತ್ತಾಗುವುದಿಲ್ಲ. ಎಲ್ಲವನ್ನು ತನ್ನ ಸ್ವಂತದ್ದೇ ಎನ್ನುವ ರೀತಿಯಲ್ಲಿ ಸಂಸೋದಕರು ಬಳಸಿರುತ್ತಾರೆ. ಈ ಕುರಿತು ಸಂಶೋಧಕರ ಜತೆ ಚರ್ಚಿಸಿದರೆ ಉಲ್ಲೇಖಿಸಬೇಕೆನ್ನುವ ಪರಿಜ್ಞಾನದ ಕೊರತೆಯನ್ನು ಕೆಲವರು ತೋಡಿಕೊಂಡರೆ ಕೆಲವರು ಉಲ್ಲೇಖಿಸದಿರುವುದನ್ನು ಥಿಯರೈಸ್ ಮಾಡಲು ಆರಂಭಿಸುತ್ತಾರೆ. ಬರಹ ಅಥವಾ ಸಂಶೋಧನ ಪ್ರಬಂಧ ಸಾರ್ವಜನಿಕ ಆಸ್ತಿ. ಸಂಶೋಧಕರು ಅಥವಾ ಲೇಖಕರು ಬಳಸಿದ ಭಾಷೆ, ವಿಚಾರ, ಆಲೋಚನೆ ಇತ್ಯಾದಿಗಳು ಖಾಸಗಿ ಅಲ್ಲ. ಶತಮಾನಗಳಿಂದ ಸಮುದಾಯಗಳು ಬೆಳೆಸಿದ ಭಾಷೆ, ವಿಚಾರ ಇತ್ಯಾದಿಗಳನ್ನು ಬಳಸಿಕೊಂಡು ಒಂದು ಸಂಶೋಧನೆ ಅಥವಾ ಲೇಖನ ಬರುತ್ತದೆ. ಅದನ್ನು ಉಲ್ಲೇಖಿಸದೆ ಬಳಸಿದರೆ ತಪ್ಪೇನಿಲ್ಲ ಎನ್ನುವ ವಾದವನ್ನು ಮುಂದಿಡುವವರು ಇದ್ದಾರೆ.[6] ಬರಹ, ಭಾಷೆ, ವಿಚಾರ ಇತ್ಯಾದಿಗಳು ಸಾರ್ವಜನಿಕ ಅಥವಾ ಶತಮಾನಗಳಿಂದ ಹರಿದುಬಂದ ಸಂಗತಿಗಳು. ಇದೊಂದು ಬಗೆಯಲ್ಲಿ ಜನಪದ ಅಥವಾ ಮೌಖಿಕ ಮೂಲದ ಮಾಹಿತಿಗಳನ್ನು ಬಳಸುವಾಗ ಎದುರಿಸಬೇಕಾದ ಸಮಸ್ಯೆಯಂತಿದೆ. ಅಲ್ಲೂ ಕೆಲವರು ಜನಪದ ಪಾಡ್ದನ ಅಥವಾ ಬುಡಕಟ್ಟು ಕಾವ್ಯಗಳನ್ನು ಹಾಡುವವರು ಪ್ರಾಥಮಿಕ ಮಾಹಿತಿದಾರರೆಂದು ಪರಿಗಣಿಸಬೇಕೆಂದು ಅಭಿಪ್ರಾಯಪಟ್ಟರೆ ಇನ್ನು ಕೆಲವರು ಅವರನ್ನು ಆನುಷಂಗಿಕ ಮೂಲಗಳೆಂದು ಪರಿಗಣಿಸಬೇಕೆಂದು ವಾದಿಸುತ್ತಾರೆ. ಆನುಷಂಗಿಕ ಮೂಲಗಳೆಂದು ಪರಿಗಣಿಸಿದರೆ ಮಾತ್ರ ಉಲ್ಲೇಖಿಸುವ ಸಾಧ್ಯತೆಗಳಿರುತ್ತವೆ. ಇಲ್ಲದಿದ್ದರೆ ಉಲ್ಲೇಖಿಸುವ ಅಗತ್ಯವಿಲ್ಲ ಎನ್ನುವ ನಿಲುವು ಆ ವಾದಗಳ ಹಿಂದಿದೆ. ಜನಪದ ಅಧ್ಯಯನ ಸಂದರ್ಭದಲ್ಲಿ ಆ ನಿಲುವುಗಳನ್ನು ಹೊಂದಿರುವುದರ ಬಗ್ಗೆ ವಿಶೇಷ ತಕರಾರು ಇಲ್ಲದಿರಬಹುದು. ಆದರೆ ಸಮಾಜ ಸಂಶೋಧನೆಯ ಇತರ ಸಂದರ್ಭಗಳಲ್ಲಿ ಆ ನಿಲುವನ್ನು ಮುಂದುವರಿಸುವುದು ಸರಿಯೇ?

ವಿಚಾರಗಳನ್ನು ಪೇಟೆಂಟ್ ಮಾಡುವುದನ್ನು ವಿರೋಧಿಸಲೇಬೇಕು. ಹಾಗೆಂದು ಅದನ್ನು ಬಳಸುವ ವಿಧಾನದಲ್ಲಿ ಇರುವ ಭಿನ್ನತೆಗಳನ್ನು ಯಾಕೆ ಗುರುತಿಸಬಾರದು? ಇದು ವ್ಯಕ್ತಿ ಯೊಬ್ಬನ ಸೃಜನಶೀಲತೆಯ ಪ್ರಶ್ನೆ. ಒಂದೇ ವಿಚಾರವನ್ನು, ಭಾಷೆಯನ್ನು ಎಲ್ಲರೂ ಒಂದೇ ರೀತಿಯಲ್ಲಿ ಬಳಸುವುದಿಲ್ಲ. ಬಳಕೆಯಲ್ಲಿರುವ ಈ ವಿವಿಧತೆಗಳನ್ನು ಗುರುತಿಸುವ ದೃಷ್ಟಿಯಿಂದ ಲೇಖಕರನ್ನು ಗುರುತಿಸಲಾಗುತ್ತದೆ. ಅದು ಭಾಷೆ, ವಿಚಾರ, ಆಲೋಚನೆಗಳ ಬಳಕೆಯಲ್ಲಿನ ವಿವಿಧತೆಗಳನ್ನು ಹೆಚ್ಚಿಸಲು ಪೂರಕ. ಈ ದೃಷ್ಟಿಯಿಂದ ಸಂಶೋಧಕರ/ ಲೇಖಕರ ಹೆಸರನ್ನು ಉಲ್ಲೇಖಿಸುವ ಅಗತ್ಯವಿದೆ. ಹಾಗೆಂದು ಮನಬಂದಂತೆ ಆನುಷಂಗಿಕ ಮಾಹಿತಿಯನ್ನು ದಾಖಲಿಸಲಾಗುವುದಿಲ್ಲ; ದಾಖಲಿಸುವಾಗ ಕೆಲವೊಂದು ನಿಯಮಗಳನ್ನು ಅನುಸರಿಸಬೇಕಗಿದೆ. ನಿಯಮ ಒಂದು, ಮತ್ತೊಬ್ಬ ಸಂಶೋಧಕರ ಅಥವಾ ಬರಹಗಾರರ ವಿಚಾರಗಳನ್ನು ಅಥವಾ ಮಾತುಗಳನ್ನು ಬಳಸುವಾಗ ಕಡ್ಡಾಯವಾಗಿ ಅವರ ಹೆಸರನ್ನು ಉಲ್ಲೇಖಿಸಬೇಕು. ನಿಯಮ ಎರಡು, ವಿಷಯವನ್ನು ಅದರ ಮೂಲ ಗ್ರಂಥದಿಂದಲೇ ಸಂಗ್ರಹಿಸಬೇಕು. ಕೆಲವು ಸಂದರ್ಭಗಳಲ್ಲಿ ಈ ನಿಯಮಕ್ಕೆ ತಿದ್ದುಪಡಿ ಸಾಧ್ಯ. ಒಂದು ವೇಳೆ ಮೂಲಗ್ರಂಥ ತುಂಬಾ ಹೆಳಯದ್ದಾಗಿದ್ದು ಅದು ಇಂದು ಲಭ್ಯವಿಲ್ಲದ ಸಂದರ್ಭದಲ್ಲಿ ಮೂಲಗ್ರಂಥದ ವಿಚಾರಗಳನ್ನು ಅವುಗಳು ಉಲ್ಲೇಖಸಿಲ್ಪಟ್ಟ ಗ್ರಂಥಗಳಿಂದಲೂ ಸಂಗ್ರಹಿಸಬಹುದು. ನಿಯಮ ಮೂರು, ಮೂರು ವಾಕ್ಯಗಳಿಗಿಂತ ಕಡಿಮೆ ಪ್ರಮಾಣದಲ್ಲಿ ವಿಷಯ ಸಂಗ್ರಹಿಸುವ ಸಂದರ್ಭದಲ್ಲಿ ಅದನ್ನು ಸಂಶೋಧಕರ ಮಾತಲ್ಲಿ ಹೇಳಬಹುದು. (ಮೂಲ ಗ್ರಂಥಕರ್ತರ ಹೆಸರನ್ನು ಸೂಚಿಸಿದರೆ ಸಾಕು, ಅವರ ಮಾತಲ್ಲೇ ಹೇಳುವ ಅಗತ್ಯವಿಲ್ಲ). ಆದರೆ ಮೂರು ವಾಕ್ಯಗಳಿಗಿಂತ ಹೆಚ್ಚು ಮಾಹಿತಿಯನ್ನು ಬಳಸುವಾಗ ಅವುಗಳನ್ನು ಮೂಲ ಗ್ರಂಥಕರ್ತರ ಹೆಸರನ್ನು ಸೂಚಿಸುವ ಜತೆಗೆ ಅವರ ಮತಲ್ಲೇ ಹೇಳಬೇಕು. ತಾತ್ವಿಕ ತೀರ್ಮಾನಗಳ ಬಗ್ಗೆ ಚರ್ಚಿಸುವಾಗ ಯಾವುದೋ ಒಂದು ತಾತ್ವಿಕ ನಿಲುವನ್ನು ತಳೆಯುವ ಹಲವಾರು ಅಧ್ಯಯನಗಳಿರಬಹುದು. ಪರ ವಿರೋಧ ಇರುವ ತಾತ್ವಿಕ ನಿಲುವುಗಳನ್ನು ಸ್ಪಷ್ಟಪಡಿಸುವುದರ ಜತೆಗೆ ಆಯಾಯ ನಿಲುವನ್ನು ಗಟ್ಟಿಗೊಳಿಸುವ ಸಂಶೋಧನೆಗಳನ್ನು ಸ್ಪಷ್ಟಪಡಿಸಬೇಕು. ಆ ಸಂದರ್ಭದಲ್ಲಿ ಸಂಶೋಧಕರು ಮತ್ತು ಅವರ ಪ್ರಮುಖ ಬರಹಗಳ ಪಟ್ಟಿಯನ್ನು ನೀಡಬೇಕು. ಉದಾಹರಣೆಗೆ ಸ್ಥಳೀಯ ಜ್ಞಾನ ಪರಂಪರೆಯನ್ನು ಭಾರತದ ಸಂದರ್ಭದಲ್ಲಿ ಮಂಡಿಸುವ ಪ್ರಮುಖ ಸಂಶೋಧಕರ ಪಟ್ಟಿಯಲ್ಲಿ ಪಾರ್ಥ ಚಟರ್ಜಿ, ಆಶೀಸ್ ನಂದಿ, ಗಾಯತ್ರಿ ಸ್ಪಿವಾಕ್, ದಿಪೇಶ್ ಚಕ್ರವರ್ತಿ ಮುಂತಾದವರನ್ನು ಕಾಣಬಹುದು. ಇವರ ವಾದಗಳನ್ನು ಮತ್ತು ಆ ವಾದಗಳನ್ನು ಒಳಗೊಂಡಿರುವ ಇವರ ಬರಹಗಳ ವಿವರಗಳನ್ನು ನೀಡಬೇಕು. ಇದೇ ಸಂದರ್ಭದಲ್ಲಿ ಇವರ ವಾದಗಳನ್ನು ಪ್ರಶ್ನಿಸುವ ಹಲವಾರು ನಿಲುವುಗಳಿವೆ. ಅವುಗಳನ್ನು ಮಂಡಿಸುವವರ‍್ಲಿ ಪ್ರಮುಖರು ದೀಪಾಂಕರ್ ಗುಪ್ತಾ, ಮೀರಾ ನಂದ, ಸುಮಿತ್ ಸರ್ಕಾರ್, ಇರ್ರಾ‍ಪಾನ್ ಹಬೀಬ್ ಮುಂತಾದವರು. ಇವರ ವಾದಗಳನ್ನು ಒಳಗೊಂಡ ಬರಹಗಳ ವಿವರಗಳನ್ನು ನೀಡಬೇಕು.

[1] ಕನ್ನಡ ವಿಶ್ವವಿದ್ಯಾಲಯದಲ್ಲಿ ಈ ಕುರಿತು ಸಾಕಷ್ಟು ಬಾರಿ ಚರ್ಚೆ ನಡೆದಿದೆ. ಜಾನಪದ ವಿದ್ವಾಂಸರಾದ ಹಿ.ಚಿ. ಬೋರಲಿಂಗಯ್ಯ, ವೆಂಕಟೇಶ್ ಇಂದ್ವಾಡಿ ಮುಂತಾದವರು ಈ ಬಗೆಯಲ್ಲಿ ಸಂಗ್ರಹ ಮಾಡುವ ಮಾಹಿತಿಯನ್ನು ಪ್ರಾಥಮಿಕ ಮಾಹಿತಿಯೆಂದು ಪರಿಗಣಿಸಬೇಕೆಂದು ವಾದಿಸುತ್ತಾರೆ.

[2] ಜನಪದ ವಿದ್ವಾಂಸರಾದ ನಾವಡ ಅವರು ಈ ಬಗೆಯಲ್ಲಿ ಸಂಗ್ರಹವಾಗುವ ಮಾಹಿತಿಯನ್ನು ಆನುಷಂಗಿಕ ಮಾಹಿತಿಯೆಂದು ಪರಿಗಣಿಸಬೇಕೆಂದು (ಅಭಿಪ್ರಾಯಪಡುತ್ತಾರೆ.)

[3] ಜನಪದ ಮಾಹಿತಿಯ ಮೂಲಕ್ಕೆ ಸಂಬಂಧಿಸಿದಂತೆ ನಡೆದ ಮೇಲಿನ ಉದಾಹರಣೆಗೆ ಸಂಬಂಧಿಸಿದ ಮಾಹಿತಿಯನ್ನು ಈ ಕೆಳಗಿನ ಲೇಖನಗಳಿಂದ ಪಡೆದಿದ್ದೇನೆ.- ಡಾ. ಬಸವರಾಜ ಮಲಶೆಟ್ಟಿ, ‘ಸಂಗ್ಯಾ ಬಾಳ್ಯಾದ ಸುತ್ತ’, ಪ್ರಜಾವಾಣಿಸಾಪ್ತಾಹಿಕ ಪುರವಣಿ, ೧೦ನೇ ಜುಲೈ ೨೦೦೫, ಪು. ೩, ಡಾ. ಎಚ್. ಚಂದ್ರಶೇಖರ, ‘ಸಂಗ್ಯಾ ಬಾಳ್ಯಾ ವರ್ಸಸ್ ಖರೆ ಖರೆ ಸಂಗ್ಯಾ ಬಾಳ್ಯಾ – ಕೆಲ ವಿಚಾರಗಳು, ಪ್ರಜಾವಾಣಿಸಾಪ್ತಾಹಿಕ ಪುರವಣಿ, ೩೧ನೇ ಜುಲೈ ೨೦೦೫, ಪು.೩, ಕೆ.ವಿ. ಅಕ್ಷರ, ‘ಸಂಗ್ಯಾ ಬಾಳ್ಯಾದ ಸಂಶೋಧನೆಗಳು’, ಪ್ರಜಾವಾಣಿಸಾಪ್ತಾಹಿಕ ಪುರವಣಿ, ೧೭ನೇ ಜುಲೈ, ೨೦೦೫, ಪು.೩.

[4] ಈ ಕುರಿತು ಹೆಚ್ಚಿನ ಮಾಹಿತಿಗೆ ಹೀಥರ್ ಬ್ರನ್‌ಸೆಲ್ ಅವರ ಲೇಖನ, ‘ಫೆಮಿನಿಸ್ಟ್‌ಮೆಥಡಾಲಜಿ’, ‘ಕ್ಲೈವ್ ಸೀಲ್ (ಸಂ), ರಿಸರ್ಚಿಂಗ್ ಸೊಸೈಟಿ ಆಂಡ್ ಕಲ್ಚರ್, (ನ್ಯೂಡೆಲ್ಲಿ: ಸೇಜ್ ಪಬ್ಲಿಕೇಶನ್ಸ್, ೧೯೯೮, ಪು. ೩೭-೪೭), ಅದೇ ಪುಸ್ತಕದಲ್ಲಿರುವ ಕ್ಲೈವ್ ಸೀಲ್, ‘ಕ್ವಾಲಿಟೇಟಿವ್ ಇಂಟರ್‌ವ್ಯೂ’, ಲೇಖನಗಳನ್ನು ನೋಡಬಹುದು. ಜತೆಗೆ ಚಂದ್ರ ಪೂಜಾರಿಯವರ, ಸಂಶೋಧಕರು ಮತ್ತು ಕ್ಷೇತ್ರಕಾರ್ಯ (ವಿದ್ಯಾರಣ್ಯ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ – ಹಂಪಿ, ೨೦೦೫) ಪುಸ್ತಕದಲ್ಲೂ ಸಂದರ್ಶನದ ಹಲವು ಮುಖಗಳ ಬಗ್ಗೆ ವಿವರಗಳಿವೆ.

[5] ನಾನು ಪಿಎಚ್.ಡಿ. ಅಧ್ಯಯನ ನಡೆಸುವಾಗ ಜೋಸೆಫ್ ಗಿಬಾಲಿ ಮತ್ತು ವಾಲ್ಟರ್‌ಎಸ್ ಎಶರ‍್ಟ್ ಅವರ, ಎಂಎಲ್‌ಎ ಹ್ಯಾಂಡ್ ಬುಕ್ ಫಾರ್ ರೈಟರ‍್ಸ್ ಆಫ್ ರಿಸರ್ಚ್ ಪೇಪರ‍್ಸ್, (ಬೆಂಗಳೂರು: ಎಪಿಲಿಯೇಟೆಡ್ ಈಸ್ಟ್‌ವೆಸ್ಟ್ ಪ್ರೆಸ್ ಪ್ರೈವೇಟ್ ಲಿಮಿಟೆಡ್, ೧೯೮೮) ಪುಸ್ತಕ ಸೂಚಿಸಿದ ವಿಧಾನಗಳನ್ನು ಉಲ್ಲೇಖಿಸುವಾಗ ಬಳಸಿದ್ದೇನೆ.

[6] ಸಮಾಜವಿಜ್ಞಾನದ ಮೇಲಿನ ಕನ್ನಡ ಲೇಖನಗಳಲ್ಲಿ ಉಲ್ಲೇಖದ ಬಗ್ಗೆ ಈ ಕ್ರಮ ರೂಢಿಯಲ್ಲಿರುವುದಕ್ಕೆ ಹಲವಾರು ಕಾರಣಗಳನ್ನು ಗುರುತಿಸಬಹುದು. ಕನ್ನಡದಲ್ಲಿ ಸಮಾಜವಿಜ್ಞಾನದ ಮೇಲೆ ಬರಹ ಮಾಡುವ ಬಹುತೇಕ ವಿದ್ವಾಂಸರು ಮಾನವಿಕ ಹಿನ್ನೆಲೆಯಿಂದ ಬಂದವರು. ಮಾನವಿಕದವರು ಉಲ್ಲೇಖದ ಬಗ್ಗೆ ವಿಶೇಷ ಮಹತ್ವ ನೀಡುವುದಿಲ್ಲ. ಸಮಾಜವಿಜ್ಞಾನ ಹಿನ್ನೆಲೆಯಿಂದ ಬಂದು ಕನ್ನಡದಲ್ಲಿ ಬರೆಯುವ ವಿದ್ವಾಂಸರು ಸಮಾಜವಿಜ್ಞಾನದ ವಿಧಾನವನ್ನು ಅನುಸರಿಸುವ ಕಷ್ಟದ ಕೆಲಸಕ್ಕಿಂತ ಮಾನವಿಕದವರು ಹಾಕಿಕೊಟ್ಟ ಹಾದಿಯಲ್ಲಿ ನಡೆಯುವುದೇ ಸುಲಭ ಎಂದು ನಂಬಿದ್ದಾರೆ. ಜತೆಗೆ ಮಾನವಿಕದವರು ಹಲವಾರು ಸಂಘ ಸಂಸ್ಥೆಗಳ ಮೂಲಕ ಪ್ರಶಸ್ತಿಗಳನ್ನು ನೀಡಿ ತಮ್ಮ ವಿದ್ವಾಂಸರನ್ನು ಗೌರಿಸುವ ಸಂಪ್ರದಾಯವನ್ನು ಇಟ್ಟುಕೊಂಡಿದ್ದಾರೆ. ಮಾನವಿಕೇತರ ಹಿನ್ನೆಲೆಯಿಂದ ಬಂದ ಆದರೆ ಮಾನವಿಕದವರ ವಿಧಾನದಲ್ಲೇ ಅನುಸಂಧಾನ ನಡೆಸಿದರೆ ಮಾನವಿಕದವರಿಗೆ ಸಿಗುವ ಗೌರವ ಇವರಿಗೂ ಸಿಗುವ ಸಾಧ್ಯತೆ ಹೆಚ್ಚಿದೆ. ಆದುದರಿಂದ ಕನ್ಡನದಲ್ಲಿ ಸಮಾಜವಿಜ್ಞಾನದ ವಿಧಾನ ಬಳಕೆ ಕಡಿಮೆ ಇದೆ.