ಸಂಶೋಧನೆಗೆ ಒಳಪಡುವ ಸಂಗತಿ, ವ್ಯಕ್ತಿ, ಕುಟುಂಬ, ಸಮುದಾಯ ಇತ್ಯಾದಿ ಗಳಿಗೆ ಸಂಬಂಧಿಸಿದ ಮಾಹಿತಿಯನ್ನು ನೇರವಾಗಿ ವ್ಯಕ್ತಿ, ಕುಟುಂಬ, ಸಮುದಾಯಗಳಿಂದಲೇ ಪಡೆದರೆ ಅವುಗಳನ್ನು ಪ್ರಾಥಮಿಕ ಮಾಹಿತಿಯೆಂದು ಪರಿಗಣಿಸಲಾಗುವುದು. ಪ್ರಾಥಮಿಕ ಮಾಹಿತಿ ಸಿದ್ಧರೂಪದಲ್ಲಿ ಇರುವುದಿಲ್ಲ. ಅಷ್ಟು ಮಾತ್ರವಲ್ಲ, ದಿನನಿತ್ಯ ಪ್ರಪಂಚವನ್ನು ಗ್ರಹಿಸುವ ನಮ್ಮ ವಿಧಾನಗಳು ಸಂಶೋಧನೆಗೆ ಬೇಕಾದ ಮಾಹಿತಿ ಸಂಗ್ರಹಿಸಲು ಸಾಕಾಗುವುದಿಲ್ಲ. ಆದುದರಿಂದಲೇ ಸಂಶೋಧನೆಗೆ ಬೇಕಾಗಿರುವ ಪ್ರಾಥಮಿಕ ಮಾಹಿತಿ ಸಂಗ್ರಹಕ್ಕೆ ಹಲವಾರು ವಿಧಾನಗಳು ರೂಪುಗೊಂಡಿವೆ. ಪ್ರತಿಯೊಂದು ವಿಧಾನಕ್ಕೂ ಅದರದ್ದೇ ಆದ ಅನುಕೂಲ ಮತ್ತು ಅನನುಕೂಲತೆಗಳಿವೆ ಜತೆಗೆ ಸಂಶೋಧನಾ ವಿಷಯಗಳು ಕೂಡ ಮಾಹಿತಿ ಸಂಗ್ರಹ ವಿಧಾನದ ಆಯ್ಕೆಯನ್ನು ಪ್ರಭಾವಿಸುತ್ತದೆ. ಉದಾಹರಣೆಗೆ ಇಡೀ ರಾಜ್ಯವ್ಯಾಪಿ ಅಥವಾ ಹಲವಾರು ರಾಜ್ಯಗಳ ರೈತರ ಸಮಸ್ಯೆಗಳನ್ನು ಅಧ್ಯಯನ ಮಾಡುವ ಉದ್ದೇಶ ಇಟ್ಟುಕೊಂಡಿರುವ ಸಂಶೋಧನೆಯಲ್ಲಿ ಬಳಸಬೇಕಾದ ಮಾಹಿತಿ ಸಂಗ್ರಹ ವಿಧಾನ ಯಾವುದೋ ಒಂದು ಹಳ್ಳಿಗೆ ಸೀಮಿತಗೊಂಡಿರುವ ಸಂಶೋಧನೆಯ ಮಾಹಿತಿ ಸಂಗ್ರಹ ವಿಧಾನಕ್ಕಿಂತ ಭಿನ್ನ ಇರಲೇಬೇಕು. ಆದರೂ ಬಹುತೇಕ ಸಂಶೋಧನಾ ವಿದ್ಯಾರ್ಥಿಗಳು ಮತ್ತು ಮಾರ್ಗದರ್ಶಕರು ಮಾಹಿತಿ ಸಂಗ್ರಹದ ವಿವಿಧ ವಿಧಾನಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ವಿಷಯ ಆಯ್ಕೆ ಮಾಡಿದ ನಂತರ ಪ್ರಶ್ನಾವಳಿ ತಯಾರು ಮಾಡಿ ಕ್ಷೇತ್ರಕಾರ್ಯಕ್ಕೆ ಹೊರಟೇ ಬಿಡುವುದು ಸಂಶೋಧಕರ ಕ್ರಮ. ಪ್ರಶ್ನೆ ಪತ್ರಿಕೆ ಏಕೆ ಎನ್ನುವ ಪ್ರಶ್ನೆಯನ್ನೇ ಬಹುತೇಕ ಸಂದರ್ಭದಲ್ಲಿ ಕೇಳುವ ಗೋಜಿಗೆ ಹೋಗುವುದಿಲ್ಲ. ಪ್ರಶ್ನೆ ತಯಾರು ಮಾಡಿ ಕ್ಷೇತ್ರಕಾರ್ಯ ಮಾಡಿ ಅಂಕಿಅಂಶ ಸಂಗ್ರಹಿಸುವ ಕ್ರಮ ವಿಜ್ಞಾನದ ಕೊಡುಗೆ. ವಿಜ್ಞಾನದ ವಿಧಾನದಲ್ಲಿ ಅಧ್ಯಯನಕ್ಕೆ ಒಳಗಾಗುವ ವಸ್ತು ಅಥವಾ ಸಂಗತಿ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತದೆ. ಆ ಮಾಹಿತಿಯನ್ನು ವಿಶ್ಲೇಷಿಸಿ ಆ ವಸ್ತು ಅಥವಾ ಸಂಗತಿ ಕುರಿತು ತೀರ್ಮಾನಕ್ಕೆ ಬರಲಾಗುತ್ತದೆ. ಈ  ತೀರ್ಮಾನ ಪರೀಕ್ಷೆಗೆ ಒಳಗಾಗುವ ವಸ್ತು ಅಥವಾ ಸಂಗತಿಗಳಿಗೆ ಮಾತ್ರ ಅನ್ವಯಿಸುವುದಲ್ಲ; ಆ ವಸ್ತು ಅಥವಾ ಸಂಗತಿಗೆ ಸೇರಿದ ಇತರ ವಸ್ತು ಅಥವಾ ಸಂಗತಿಗಳಿಗೂ ಅನ್ವಯಿಸುತ್ತದೆ. ಇದೇ ಕ್ರಮವನ್ನು ಸಮಾಜವಿಜ್ಞಾನದಲ್ಲಿ ಅಳವಡಿಸಿಕೊಳ್ಳಲಾಗಿದೆ. ಒಂದು ಕಾಲದಲ್ಲಿ ವಿಜ್ಞಾನದ ವಿಧಾನ ಪ್ರಕಾರ ಅಧ್ಯಯನ ಮಾಡುವುದೆಂದರೆ ಸತ್ಯವನ್ನು ಹೇಳುವ ಅತಿ ಸೂಕ್ತ ಮತ್ತು ಏಕಮಾತ್ರ ವಿಧಾನ ಎಂದು ತಿಳಿಯಲಾಗಿತ್ತು. ಆದರೆ ಈಗ ಸ್ಥಿತಿ ಬದಲಾಗಿದೆ. ವಿಜ್ಞಾನದ ವಿಧಾನ ವಿಮರ್ಶೆಗೆ ಗುರಿಯಾಗಿದೆ. ಅದರ ವಿರುದ್ಧ ಹಲವಾರು ಟೀಕೆಗಳಿವೆ. ಅವುಗಳ ಚರ್ಚೆಯನ್ನು ಹಿಂದಿನ ಅಧ್ಯಾಯಗಳಲ್ಲಿ ನೋಡಿದ್ದೇವೆ. ಈ ಹಿನ್ನೆಲೆಯಲ್ಲಿ ಮಾಹಿತಿ ಸಂಗ್ರಹಕ್ಕೆ ಇರುವ ವಿವಿಧ ವಿಧಾನಗಳನ್ನು ವಿಮರ್ಶಾತ್ಮಕವಾಗಿ ನೋಡುವ ಅಗತ್ಯ ಇದೆ. ಈ ಅಧ್ಯಾಯದಲ್ಲಿ ಅಂತಹ ಒಂದು ಪ್ರಯತ್ನವನ್ನು ಮಾಡಲಾಗಿದೆ. ನಾಲ್ಕು ಮಾಹಿತಿ ಸಂಗ್ರಹ ವಿಧಾನಗಳನ್ನು – ಪ್ರಶ್ನಾವಳಿ, ಸಂದರ್ಶನ, ಅವಲೋಕನೆ ಮತ್ತು ಗುಂಪು ಚರ್ಚೆ – ಈ ಅಧ್ಯಾಯದಲ್ಲಿ ವಿಮರ್ಶಾತ್ಮಕವಾಗಿ ಪರಿಶೀಲಿಸಲಾಗಿದೆ.

ಪ್ರಶ್ನಾವಳಿ

ಮೊದಲಿಗೆ ಪ್ರಶ್ನಾವಳಿಯ ಮೂಲಕ ಮಾಹಿತಿ ಸಂಗ್ರಹಿಸುವ ಸಂಶೋಧನೆಯನ್ನು ಪರಿಶೀಲಿಸಬಹುದು. ಈ ವಿಧಾನವನ್ನು ಎಲ್ಲ ಅಧ್ಯಯನ ವಿಧಾನಗಳಲ್ಲೂ ಬಳಸಬಹುದು. ಆದರೂ ಕೆಲವೊಂದು ಸಂದರ್ಭದಲ್ಲಿ ಈ ವಿಧಾನ ನಾವು ಬಯಸಿದ ರೂಪದಲ್ಲಿ ಮಾಹಿತಿಯನ್ನು ಒದಗಿಸಲು ವಿಫಲವಾಗಬಹುದು. ಅಂದರೆ ಈ ವಿಧಾನಕ್ಕೆ ಅದರದ್ದೇ ಆದ ಇತಿಮಿತಿಗಳಿವೆ. ಪ್ರಶ್ನಾವಳಿಗಳು ವಿವಿಧ ಮಾದರಿಗಳನ್ನು ವಿವರಿಸಿದ ನಂತರ ಈ ವಿಧಾನದ ಇತಿಮಿತಿಗಳನ್ನು ವಿವರಿಸಲಾಗುವುದು.[1] ಪ್ರಶ್ನಾವಳಿಯಲ್ಲಿ ಯಾವ ಪ್ರಶ್ನೆಗಳನ್ನು ಕೇಳಬೇಕೆನ್ನುವುದನ್ನು ನಮ್ಮ ಅಧ್ಯಯನದ ಉದ್ದೇಶ ನಿರ್ಧರಿಸುತ್ತದೆ. ನಮ್ಮ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಕೆಲಸವನ್ನು ಸಂಶೋಧನೆಯಲ್ಲಿ ಮಾಡುತ್ತಿರುತ್ತೇವೆ. ಆದರೆ ಈ ಉತ್ತರಗಳು ಸಂಪೂರ್ಣವಾಗಿ ನಾವು ಸಂಗ್ರಹಿಸುವ ಮಾಹಿತಿಯಲ್ಲಿ ನಿಂತಿದೆ ಎನ್ನುವುದು ಸರಿಯಲ್ಲ. ಯಾಕೆಂದರೆ ನಾವು ಯಾವ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದೆವೋ ಆ ಪ್ರಶ್ನೆಗಳಿಗೆ ಈಗಾಗಲೇ ಬೇರೆ ಪ್ರದೇಶಗಳಲ್ಲಿ ಮತ್ತು ಕಾಲಮಾನಗಳಲ್ಲಿ ಉತ್ತರ ಕಂಡುಕೊಂಡಿರಬಹುದು. ಅಂದರೆ ನಾವು ಸಂಶೋಧನೆಗೆ ಎತ್ತಿಕೊಂಡ ವಿಚಾರದ ಬಗ್ಗೆ ಅಥವಾ ಪ್ರಶ್ನೆಗಳ ಬಗ್ಗೆ ಈಗಾಗಲೇ ಕೆಲವೊಂದು ತೀರ್ಮಾನಗಳು ರೂಪಿತಗೊಂಡಿವೆ. ನಮ್ಮ ಕೆಲಸ ಈಗಾಗಲೇ ರೂಪಿತಗೊಂಡ ತೀರ್ಮಾನಗಳನ್ನು ಮತ್ತೊಂದು ದೇಶ ಮತ್ತು ಕಾಲದಲ್ಲಿ ಪರೀಕ್ಷಿಸುವುದು ಅಥವಾ ಈಗಾಗಲೇ ರೂಪಿತಗೊಂಡ ಉತ್ತರಗಳಿಗಿಂತ ಹೆಚ್ಚಿನ ವಿವರಣೆಗೆ ಪ್ರಯತ್ನಿಸುವುದು. ಆದುದರಿಂದ ಯಾವುದೋ ಒಂದು ಸಂಶೋಧನಾ ಪ್ರಶ್ನೆಗೆ ಸಂಬಂಧಿಸಿದ ಕ್ಷೇತ್ರಕಾರ್ಯ ಆರಂಭಿಸುವ ಮುನ್ನ ಸಂಶೋಧಕ ಖಾಲಿ ಹಾಳೆಯಾಗಿರುವುದಿಲ್ಲ. ಸಂಶೋಧಕರಿಗೆ ತಾವು ಪರೀಕ್ಷಿಸಲು ಹೊರಟಿರುವ ವಿಚಾರಗಳ ಬಗ್ಗೆ ಸ್ವಲ್ಪ ಮಟ್ಟಿನ ತಿಳುವಳಿಕೆ ಅಥವ ಕೆಲವೊಂದು ಗ್ರಹಿಕೆಗಳಿರುತ್ತವೆ. ಈ ತಿಳುವಳಿಕೆ ಅಥವಾ ಗ್ರಹಿಕೆಗಳು ಅವರು ತಮ್ಮ ಪ್ರಶ್ನಾವಳಿಯಲ್ಲಿ ಕೇಳಬೇಕಾದ ಪ್ರಶ್ನೆಗಳನ್ನು ರೂಪಿಸಲು ನೆರವಾಗುತ್ತದೆ.[2] ಉದಾಹರಣೆಗೆ ರೈತರ ಆತ್ಮಹತ್ಯೆಯ ಕಾರಣಗಳನ್ನು ಅಧ್ಯಯನ ಮಾಡುವುದು ನಮ್ಮ ಸಂಶೋಧನೆಯ ಉದ್ದೇಶವೆಂದು ತಿಳಿಯೋಣ. ಈಗಾಗಲೇ ಆದ ಅಧ್ಯಯನಗಳು ಮತ್ತು ವರ್ತಮಾನದಲ್ಲಿ ವಿವಿಧ ಮಾಧ್ಯಮಗಳಲ್ಲಿ ನಡೆಯುವ ಚರ್ಚೆಯ ಆಧಾರದಲ್ಲಿ ರೈತರ ಆತ್ಮಹತ್ಯೆ ಕಾರಣಗಳನ್ನು ಪಟ್ಟಿ ಮಾಡಬಹುದು. ಈಗಾಗಲೇ ಆದ ಅಧ್ಯಯನ ಮತ್ತು ಮಾಧ್ಯಮಗಳ ಚರ್ಚೆಯ ಹಿನ್ನೆಲೆಯಲ್ಲಿ ರೈತರ ಆತ್ಮಹತ್ಯೆಗೆ ಈ ಕೆಳಗಿನ ಕಾರಣಗಳನ್ನು ಪಟ್ಟಿ ಮಾಡಲಾಗಿದೆ. ಒಂದು, ಜಾಗತೀಕರಣ ಅಥವಾ ಕೆಳವರ್ಗದ ಪರ ಮಾರುಕಟ್ಟೆಯಲ್ಲಿ ಪ್ರವೇಶಿಸುವ ತನ್ನ ಹಿಂದಿನ ಪಾತ್ರವನ್ನು ಪ್ರಭುತ್ವ ನಿರ್ವಹಿಸಲು ವಿಫಲವಾಗಿರುವುದು. ಎರಡು, ರೈತನ ಲೋಕದೃಷ್ಟಿ ಮತ್ತು ಆತ ವ್ಯವಹರಿಸಬೇಕಾದ ವ್ಯಾಪಾರಿಯ ಲೋಕದೃಷ್ಟಿಯ ನಡುವಿನ ವ್ಯತ್ಯಾಸ. ಮೂರು, ಹಣಕಾಸು, ಸಾರಿಗೆ, ಸಂಪರ್ಕ ಇತ್ಯಾದಿಗಳ ಕೊರತೆ. ನಾಲ್ಕು, ರೈತ ಬದುಕುವ ಒಟ್ಟು ಪರಿಸರ. ಹೀಗೆ ಹಲವಾರು ಕಾರಣಗಳನ್ನು ರೈತನ ಆತ್ಮಹತ್ಯೆಗೆ ಸಂಬಂಧಿಸಿದಂತೆ ಪಟ್ಟಿ ಮಾಡಬಹುದು. ನಾವು ಪ್ರಶ್ನಾವಳಿಯಲ್ಲಿ ಕೇಳಬೇಕಾದ ಪ್ರಶ್ನೆಗಳನ್ನು ರೂಪಿಸುವಲ್ಲಿ ಈ ಅಂಶಗಳು ಸಹಕಾರಿಯಾಗುತ್ತವೆ.

ಸಾಮಾನ್ಯವಾಗಿ ಮೂರು ವಿಧದ ಪ್ರಶ್ನೆಗಳನ್ನು ಪ್ರಶ್ನೆ ಪತ್ರಿಕೆಯಲ್ಲಿ ಕಾಣಬಹುದು.[3] ಒಂದು, ಮುಕ್ತ ಉತ್ತರಕ್ಕೆ ಅವಕಾಶ ನೀಡುವ ಪ್ರಶ್ನೆಗಳು. ಎರಡು, ಮುಕ್ತ ಉತ್ತರಕ್ಕೆ ಅವಕಾಶ ನೀಡದ ಪ್ರಶ್ನೆಗಳು. ಮೂರು, ಸಂಕೇತಗಳನ್ನು ಹೊಂದಿರುವ ಪ್ರಶ್ನೆಗಳು. ಮುಕ್ತ ಉತ್ತರಕ್ಕೆ ಅವಕಾಶ ನೀಡುವ ಪ್ರಶ್ನೆಗಳನ್ನು ಇಂಗ್ಲಿಷಿನಲ್ಲಿ ಓಪನ್ ಎಂಡೆಡ್‌ ಪ್ರಶ್ನೆಗಳೆಂದು ಕರೆಯುತ್ತಾರೆ. ಅಧ್ಯಯನಕ್ಕೆ ಒಳಗಾಗುವವರು ನೀಡುವ ಎಲ್ಲ ಬಗೆಯ ಉತ್ತರಗಳನ್ನು ಒಳಗೊಳ್ಳುವಂತಹ ಅವಕಾಶ ಇಲ್ಲಿದೆ. ಇನ್ನೊಂದು ರೀತಿಯಲ್ಲಿ ಹೇಳುವಾದರೆ ಕ್ಷೇತ್ರದಿಂದ ಬರಬಹುದಾದ ಉತ್ತರಗಳ ಬಗ್ಗೆ ಯಾವುದೇ ಪೂರ್ವ ನಿರ್ಧಾರಗಳು ಇಲ್ಲಿಲ್ಲ. ಸಂಶೋಧನೆಗೆ ಒಳಪಡುವ ಪರಿಸರದ ಬಗ್ಗೆ ಹೆಚ್ಚಿನ ಮತ್ತು ಪರಿಸರನಿಷ್ಠ ಮಾಹಿತಿ ಪಡೆಯುವ ದೃಷ್ಟಿಯಿಂದ ಇದು ಉತ್ತಮ ವಿಧಾನ. ಈ ಅನುಕೂಲದ ಜತೆಗೆ ಒಂದು ಅನನುಕೂಲವೂ ಈ ವಿಧದ ಪ್ರಶ್ನೆಯ ಭಾಗವಾಗಿದೆ. ಹಲವು ಬಗೆಯ ಉತ್ತರಗಳು ಕ್ಷೇತ್ರ ಕಾರ್ಯದಿಂದ ಬರುವುದರಿಂದ ಅವುಗಳನ್ನು ಕ್ರೋಢೀಕರಿಸುವ ಕೆಲಸ ಸ್ವಲ್ಪ ತ್ರಾಸದಾಯಕವಾಗುತ್ತದೆ. ಉದಾಹರಣೆಗೆ ಒಂದು ಸಾವಿರ ವ್ಯಕ್ತಿಗಳನ್ನು ಸಂದರ್ಶಿಸಿ ಮಾಹಿತಿ ಸಂಗ್ರಹಿಸಲು ಮುಕ್ತ ಉತ್ತರಕ್ಕೆ ಅವಕಾಶ ನೀಡುವ ಪ್ರಶ್ನೆಗಳನ್ನು ಬಳಸಲಾಗಿದೆ ಎಂದಿಟ್ಟುಕೊಳ್ಳೋಣ. ಯಾವುದೋ ಒಂದು ಪ್ರಶ್ನೆಗೆ ಸಾವಿರ ವ್ಯಕ್ತಿಗಳಿಂದ ಸಾವಿರ ಉತ್ತರ ಬರುತ್ತದೆ ಎಂದು ಊಹಿಸಿಕೊಳ್ಳೋಣ. ಈ ಉತ್ತರಗಳನ್ನು ಹೇಗೆ ಕ್ರೋಢೀಕರಿಸುವುದು? ಕ್ರೋಢೀಕರಿಸದಿದ್ದರೆ ಸಂಶೋಧನಾ ವಿಚಾರದ ಬಗ್ಗೆ ಯಾವುದೇ ತೀರ್ಮಾನಕ್ಕೆ ಬರುವುದು ಕಷ್ಟವಾಗುತ್ತದೆ. ಈ ಸಮಸ್ಯೆಯನ್ನು ಪರಿಹರಿಸುವ ದೃಷ್ಟಿಯಿಂದ ಮುಕ್ತ ಉತ್ತರಗಳಿಗೆ ಅವಕಾಶ ನೀಡದ ಪ್ರಶ್ನೆಗಳು ಹೆಚ್ಚು ಸೂಕ್ತ. ಈ ಮಾದರಿಯ ಪ್ರಶ್ನಾವಳಿಗಳಲ್ಲಿ ಪ್ರಶ್ನೆಗಳ ಜತೆ ಉತ್ತರವೂ ಇರುತ್ತದೆ. ಉದಾಹರಣೆಗೆ ಅಧ್ಯಯನಕ್ಕೆ ಒಳಗಾಗುವ ಕುಟುಂಬಗಳ ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಪ್ರಶ್ನೆಗಳ ಜತೆ ಈ ಕೆಳಗಿನಂತೆ ಉತ್ತರಗಳನ್ನು ಕೊಡಬಹುದು. ಕುಟುಂಬದ ಮುಖ್ಯಸ್ಥರ ಲಿಂಗ ಎನ್ನುವ ಪ್ರಶ್ನೆಗೆ ಪುರುಷ/ಮಹಿಳೆ ಎನ್ನುವ ಆಯ್ಕೆಗಳನ್ನು ಕೊಡಬಹುದು. ಅದೇ ರೀತಿ ಕುಟುಂಬದ ಸದಸ್ಯರ ಶಿಕ್ಷಣದ ಮಟ್ಟ ಗುರುತಿಸುವ ಪ್ರಶ್ನೆ ಮುಂದೆ ಅನಕ್ಷರಸ್ಥರು, ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ, ಕಾಲೇಜು ಹೀಗೆ ಹಲವಾರು ಹಂತಗಳನ್ನು ಕೊಡಬಹುದು. ಉತ್ತರಿಸುವವರ ಕೆಲಸ ಪ್ರಶ್ನಾವಳಿಯಲ್ಲಿರುವ ಉತ್ತರಗಳಲ್ಲಿ ತಮಗೆ ಸಂಬಂಧಿಸಿದ್ದನ್ನು ಆಯ್ಕೆ ಮಾಡುವುದು ಮಾತ್ರ.

ಪ್ರಶ್ನೆಗಳ ಜತೆಗೆ ಉತ್ತರ ಮತ್ತು ಉತ್ತರ ಜತೆಗೆ ಸಂಕೇತಗಳನ್ನು ನೀಡುವುದು ಮೂರನೇ ವಿಧದ ಪ್ರಶ್ನೆ ಪತ್ರಿಕೆಯ ಕ್ರಮ. ಹಾಗೆ ನೋಡಿದರೆ ಎರಡು ಮತ್ತು ಮೂರನೇ ವಿಧದ ಪ್ರಶ್ನೆಗಳ ನಡುವೆ ವಿಶೇಷ ವ್ಯತ್ಯಾಸವಿಲ್ಲ. ಇಲ್ಲೂ ಪ್ರಶ್ನೆಯೊಂದಿಗೆ ಉತ್ತರವಿರುತ್ತದೆ. ಆದರೆ ಇಲ್ಲೊಂದು ಸಣ್ಣ ವ್ಯತ್ಯಾಸವಿದೆ. ಅದೇನೆಂದರೆ ಉತ್ತರದ ಜತೆಗೆ ಸಂಕೇತ (ಕೋಡ್) ಕೂಡ ಇರುತ್ತದೆ. ಸಂಕೇತವನ್ನು ಸಂಖ್ಯಾ ರೂಪದಲ್ಲಿ ಅಥವಾ ಅಕ್ಷರಗಳ ರೂಪದಲ್ಲಿ ನೀಡುವ ಕ್ರಮ ಇದೆ. ಉದಾಹರಣೆಗೆ ವ್ಯಕ್ತಿಯೊಬ್ಬನ ವಾರ್ಷಿಕ ಆದಾಯವನ್ನು ಅಳೆಯುವ ಪ್ರಶ್ನೆಯನ್ನು ಸಂಕೇತ ಸಮೇತ ಈ ಕೆಳಗಿನಂತೆ ರೂಪಿಸಬಹುದು. ಪ್ರಶ್ನೆ – ‘ಎಲ್ಲ ಮೂಲಗಳಿಂದ ಬರುವ ನಿಮ್ಮ ವಾರ್ಷಿಕ ಆದಾಯ ಎಷ್ಟು?’ ‘ಉತ್ತರ-೧, ‘೧೦ ಸಾವಿರಗಳಿಂದ ಕಡಿಮೆ – ಅ’, ೧೦ ರಿಂದ ೨೦ ಸಾವಿರ – ಆ’, ೩.೨೦ ರಿಂದ ೩೦ ಸಾವಿರ- ಇ’. ಇಲ್ಲಿ ಆ, ಆ , ಇಗಳು ಸಂಕೇತಗಳಾಗಿ ಕೆಲಸ ಮಾಡುತ್ತವೆ. ಪ್ರಶ್ನಾವಳಿಯನ್ನು ತುಂಬುವವರು ತಮ್ಮ ವಾರ್ಷಿಕ ಆದಾಯಕ್ಕೆ ಸಮ ಅಥವಾ ಹತ್ತಿರ ಇರುವ ಉತ್ತರದ ಎದುರು ಇರುವ ಸಂಕೇತದ ಮೇಲೆ ಸರಿ ಚಿಹ್ನೆಯನ್ನು (ಟಿಕ್) ಗುರುತು ಮಾಡಿದರೆ ಸಾಕು. ಇದೇ ರೀತಿಯಲ್ಲಿ ಪ್ರಶ್ನಾವಳಿಯಲ್ಲಿ ಇರುವ ಎಲ್ಲ ಅಥವಾ ಬಹುತೇಕ ಪ್ರಶ್ನೆಗಳನ್ನು ಮತ್ತು ಅವುಗಳಿಗೆ ನೀಡಬೇಕಾದ ಉತ್ತರಗಳನ್ನು ಸಂಕೇತ ಸಮೇತ ನೀಡಲಾಗಿದೆ. ಪ್ರಶ್ನಾವಳಿಗಳನ್ನು ಕ್ರೋಢೀಕರಿಸುವ ಸಂದರ್ಭದಲ್ಲಿ ಉತ್ತರದ ಜತೆ ಸಂಕೇತಗಳನ್ನು ನೀಡುವ ಕ್ರಮ ಉಪಯೋಗಕ್ಕೆ ಬರುತ್ತದೆ. ತಾಂತ್ರಿಕ ಅನುಕೂಲತೆಯ ದೃಷ್ಟಿಯಿಂದ ಇದೊಂದು ಉತ್ತಮ ವಿಧಾನ ಮಾಹಿತಿ ಸಂಗ್ರಹಿಸಲು ಬೇಕಾಗುವ ಸಮಯ ಮತ್ತು ಸಂಪನ್ಮೂಲಗಳ ದೃಷ್ಟಿಯಿಂದ ಮುಚ್ಚಿದ ಮತ್ತು ಸಂಕೇತಗಳನ್ನು ಹೊಂದಿರುವ ಪ್ರಶ್ನೆಗಳು ಅನುಕೂಲ. ಮಾಹಿತಿ ಸಂಗ್ರಹಿಸಲು ಹೆಚ್ಚು ಸಮಯ ವಿನಿಯೋಗಿಸಿದಷ್ಟು ಸಂಶೋಧನಾ ವೆಚ್ಚ ಹೆಚ್ಚಾಗುವುದು. ಆದುದರಿಂದ ಇಲ್ಲಿ ಸಂಪನ್ಮೂಲದ ಉಳಿತಾಯವೂ ಆಗುವುದೆಂದು ತಿಳಿಯಲಾಗಿದೆ. ಆದರೆ ಇವು ಅಧ್ಯಯನ ಕ್ಷೇತ್ರದ ವಾಸ್ತವಿಕತೆಯನ್ನು ಹಿಡಿದಿಡುವಲ್ಲಿ ವಿಶೇಷ ಸಹಕಾರಿಯಲ್ಲ.

ಹಾಗೆ ನೋಡಿದರೆ ಯಾವುದೇ ಪ್ರಶ್ನಾವಳಿ (ಮುಚ್ಚಿದ ಅಥವಾ ತೆರೆದ ಅಥವಾ ಸಂಕೇತ ಇರುವ ಪ್ರಶ್ನೆಗಳನ್ನು ಹೊಂದಿರುವ) ಕ್ಷೇತ್ರದ ವಾಸ್ತವಿಕತೆಯನ್ನು ಸಂಗ್ರಹಿಸಲು ಉತ್ತಮ ಅಸ್ತ್ರವಲ್ಲ. ಪ್ರಶ್ನಾವಳಿಯ ಬಹುದೊಡ್ಡ ಕೊರತೆಯೆಂದರೆ ಅದು ಯಾವುತ್ತೂ ಕ್ಷೇತ್ರದ ವಾಸ್ತವತೆಯಿಂದ ಕೆಲವು ಹೆಜ್ಜೆ ಹಿಂದಿರುತ್ತದೆ. ಮಾಹಿತಿ ಸಂಗ್ರಹಿಸಲು ಹೊರಟಿರುವ ಕ್ಷೇತ್ರದ ಬಗ್ಗೆ ಪ್ರಶ್ನಾವಳಿ ರೂಪಿಸುವವರಿಗೆ ಸಾಕಷ್ಟು ಜ್ಞಾನ ಇರಬೇಕಾಗುತ್ತದೆ. ಒಂದು ವೇಳೆ ಜ್ಞಾನ ಇರದಿದ್ದರೆ ಪ್ರಶ್ನಾವಳಿಯಲ್ಲಿ ಇರುವ ಪ್ರಶ್ನೆಗಳಿಗೂ ಕ್ಷೇತ್ರದಲ್ಲಿ ಸಿಗುವ ಉತ್ತರಗಳಿಗೂ ಅಜಗಜಾಂತರ ವ್ಯತ್ಯಾಸವಾಗಬಹುದು. ಉದಾಹರಣೆಗೆ ನನ್ನ ಸ್ನೇಹಿತರೊಬ್ಬರು ಗ್ರಾಮೀಣ ಸಾಂಪ್ರದಾಯಿಕ ಕಸುಬುಗಳ ಮೇಲೆ ಪಿಎಚ್.ಡಿ. ಅಧ್ಯಯನ ಮಾಡುತ್ತಿದ್ದರು. ಅವರು ಮಾಹಿತಿ ಸಂಗ್ರಹಕ್ಕಾಗಿ ಒಂದು ಪ್ರಶ್ನಾವಳಿ ರೂಪಿಸಿದ್ದರು. ಅದರಲ್ಲಿ ಗ್ರಾಮೀಣ ಕಸುಬನ್ನು ಯಾವುದೋ ಒಂದು ಆಧುನಿಕ ಕೈಗಾರಿಕಾ ಉತ್ಪಾದನೆಯಂತೆ ಪರಿಭಾವಿಸಿ ಪ್ರಶ್ನಾವಳಿಯನ್ನು ರೂಪಿಸಿದ್ದರು. ಅವರ ಪ್ರಶ್ನಾವಳಿಯಲ್ಲಿದ್ದ ಕೆಲವೊಂದು ಪ್ರಶ್ನೆಗಳ ಮಾದರಿ ಇಂತಿವೆ. ಸಾಂಪ್ರದಾಯಿಕ ಉದ್ಯೋಗಕ್ಕೆ (ಬುಟ್ಟಿ ಹೆಣೆಯುವುದು, ಚಾಪೆ ನೇಯುವುದು, ಕುಂಬಾರಿಕೆ ಇತ್ಯಾದಿ ಕಸುಬುಗಳಿಗೆ) ವಿನಿಯೋಜನೆ ಆಗುವ ಸ್ಥಿರ ಮತ್ತು ಚರ ಬಂಡವಾಳ ಎಷ್ಟು? ಸ್ಥಿರ ಬಂಡವಾಳದ ಮೂಲ ಏನು? ಉತ್ಪಾದನೆಯ ಮಾರುಕಟ್ಟೆ ಎಲ್ಲಿ? ಒಟ್ಟು ವ್ಯವಹಾರದಿಂದ ಗಳಿಸುವ ಲಾಭ ಎಷ್ಟು? ಈ ರೀತಿಯಲ್ಲಿ ಹಲವಾರು ಪ್ರಶ್ನೆಗಳಿದ್ದವು. ಕ್ಷೇತ್ರಕಾರ್ಯ ಸಂದರ್ಭದಲ್ಲಿ ಅವರ ಪ್ರಶ್ನಾವಳಿಯಲ್ಲಿದ್ದ ಬಹುತೇಕ ಪ್ರಶ್ನೆಗಳಿಗೆ ಉತ್ತರ ಸಿಗಲಿಲ್ಲ. ಯಾಕೆಂದರೆ ಅವು ಯಾವುವೂ ಕೂಡ ಸಾಂಪ್ರದಾಯಿಕ ಕಸುಬುಗಾರಿಕೆಯ ವಾಸ್ತವಿಕತೆಯನ್ನು ಹಿಡಿದುಕೊಡಲು ಶಕ್ತವಾಗಿರಲಿಲ್ಲ. ಹಾಗೆಂದು ಅವರು ಪ್ರತ್ಯೇಕ ಪ್ರಶ್ನಾವಳಿ ಮಾಡಿ ಮಾಹಿತಿ ಸಂಗ್ರಹ ಮಾಡಿಲ್ಲ. ಸಾಂಪ್ರದಾಯಿಕ ಕಸುಬುದಾರರು ನೀಡಿದ ಉತ್ತರವನ್ನು ತಾವು ಈಗಾಗಲೇ ಸಿದ್ಧಪಡಿಸಿದ ಪ್ರಶ್ನೆಗಳಿಗೆ ಹೊಂದಾಣಿಕೆ ಮಾಡಲು ಪ್ರಯತ್ನಿಸಿದರು. ಉದಾಹರಣೆಗೆ ಬುಟ್ಟಿ ಹೆಣೆಯುವವರಲ್ಲಿ ನಿಮ್ಮ ಸ್ಥಿರ ಬಂಡವಾಳ ಏನೆಂದು ಕೇಳಿದರೆ, ‘ಬಂಡವಾಳ ಗಿಂಡವಾಳ ನಮಗೆ ಅರ್ಥವಾಗುವುದಿಲ್ಲ ಸ್ವಾಮಿ. ನಮ್ಮ ಕೈಗೊಂದು ಕತ್ತಿ ತಲೆಗೊಂದು ಮುಟ್ಟಪಾಲೆ (ಭಾರ ಹೊರುವಾಗ ತಲೆಗೆ ನೋವಾಗದಿರಲೆಂದು ಅಡಿಕೆ ಸೋಗೆಯಿಂದ ತಯಾರಿಸಿದ ತಲೆ ಮೇಲೆ ಇರಿಸಿಕೊಳ್ಳುವ ಒಂದು ವಸ್ತು) ಇದ್ದರೆ ಸಾಕು. ನಾವು ಕಾಡಿಗೆ ಹೋಗಿ ಬಳ್ಳಿಗಳನ್ನು ತರುತ್ತೇವೆ. ಅವುಗಳನ್ನು ಒಣಗಿಸಿ ಬುಟ್ಟಿ ತಯಾರಿಸುತ್ತೇವೆ’ ಎಂದು ಉತ್ತರಿಸುತ್ತಿದ್ದರು. ಅವರ ಈ ಉತ್ತರದಲ್ಲಿ ಸಂಶೋಧಕರು ತಮ್ಮ ಸ್ಥಿರ ಮತ್ತು ಚರ ಬಂಡವಾಳದ ಕಲ್ಪನೆಗೆ ಬೇಕಾದ ಮಾಹಿತಿಯನ್ನು ಸೋಸಿ ತೆಗೆಯುತ್ತಿದ್ದರು. ಕತ್ತಿ ಮತ್ತು ಮುಟ್ಟಪಾಲೆಯ ಬೆಲೆ ಸ್ಥಿರ ಬಂಡವಾಳವಾದರೆ ಕಾಡಿಂದ ತರುವ ಬಳ್ಳಿಗಳ ಬೆಲೆ ಚರ ಬಂಡವಾಳವಾಗುತ್ತಿತ್ತು.

ಇದು ಸಂಶೋಧನೆಯ ಕ್ಷೇತ್ರದ ವಾಸ್ತವತೆಯನ್ನು ಸಂಶೋಧಕರ ಪ್ರಶ್ನಾವಳಿಗೆ ಇಳಿಸುವ ಕ್ರಮ. ಅಂದರೆ ಪ್ರಶ್ನಾವಳಿಯಲ್ಲಿದ್ದ ವಾಸ್ತವಕ್ಕೆ (ಕ್ಷೇತ್ರಕಾರ್ಯ ಮಾಡುವ ಮುನ್ನ ವಾಸ್ತವದ ಬಗ್ಗೆ ಸಂಶೋಧಕರಲ್ಲಿರುವ ಚಿತ್ರಣ) ಕ್ಷೇತ್ರದಲ್ಲಿರುವ ವಾಸ್ತವತೆಯನ್ನು ಹೊಂದಾಣಿಕೆ ಮಾಡುವುದು. ಕ್ಷೇತ್ರದಲ್ಲಿರುವ ವಾಸ್ತವ ಪ್ರಶ್ನಾವಳಿಯಲ್ಲಿದ್ದ ವಾಸ್ತವದೊಂದಿಗೆ ತಾಳೆ ಹೊಂದಿದ್ದರೆ ಪ್ರಶ್ನಾವಳಿಯನ್ನು ಬದಲಾಯಿಸುವ ಪ್ರಶ್ನೆ ಇಲ್ಲ. ಕ್ಷೇತ್ರದಲ್ಲಿನ ವಾಸ್ತವತೆಯನ್ನು ಪ್ರಶ್ನಾವಳಿಯಲ್ಲಿನ ವಾಸ್ತವತೆಯೊಂದಿಗೆ ಹೇಗಾದರೂ ಮಾಡಿ ಹೊಂದಾಣಿಕೆ ಮಾಡುವುದು ಬಹುತೇಕ ಸಂಶೋಧನೆಗಳ ಕ್ರಮ. ಈ ಕ್ರಮದಲ್ಲಿ ಸಂಗ್ರಹಿಸಿದ ಮಾಹಿತಿಯಿಂದ ಚರಿತ್ರೆ ಅಥವಾ ಆರ್ಥಿಕ ಅಥವಾ ರಾಜಕೀಯ ಬದುಕಿನ ಬಗ್ಗೆ ಯಾವ ಚಿತ್ರಣ ಸಾಧ್ಯ? ಇದರ ಜತೆಗೆ ನಮ್ಮಲ್ಲಿನ ಅನಕ್ಷರತೆ ಪ್ರಶ್ನಾವಳಿಯ ಸೀಮಿತ ಆನ್ವಯಿಕೆಗೆ ಕಾರಣವಾಗಿದೆ. ಮಾಹಿತಿ ಸಂಗ್ರಹಕ್ಕಾಗಿ ನಿಜವಾದ ಅರ್ಥದಲ್ಲಿ ಪ್ರಶ್ನಾವಳಿ ಬಳಸುವುದೆಂದರೆ ಕೇವಲ ಪ್ರಶ್ನಾವಳಿ ಮಾತ್ರ ಕ್ಷೇತ್ರಕಾರ್ಯ ಮಾಡುವುದು. ಅಂದರೆ ಪ್ರಶ್ನಾವಳಿಯನ್ನು ನೇರವಾಗಿ ಅಥವಾ ಅಂಚೆ ಮೂಲಕ ಸಂದರ್ಶಿನಿಗೆ ಕಳುಹಿಸಿ ಮಾಹಿತಿ ಸಂಗ್ರಹ ಮಾಡುವುದು. ಅಂತಹ ಪ್ರಶ್ನಾವಳಿಯನ್ನು ತಯಾರಿಸಬೇಕಾದರೆ ಸಂಶೋಧಕರಿಗೆ ತಾವು ಸಂಶೋಧನೆ ಮಾಡುವ ಕ್ಷೇತ್ರದ ಆಳವಾದ ಅರಿವು ಬೇಕು. ಜತೆಗೆ ಪ್ರಶ್ನಾವಳಿಯನ್ನು ತುಂಬುವವರಿಗೆ ಯಾವುದೇ ರೀತಿಯ ಸಂದೇಹಕ್ಕೂ ಎಡೆಗೊಡದಂತೆ ಪ್ರಶ್ನೆಗಳನ್ನು ರೂಪಿಸಬೇಕಾಗುತ್ತದೆ. ಈ ಎಲ್ಲದರ ಜತೆಗೆ ಅಧ್ಯಯನ ಕ್ಷೇತ್ರದಲ್ಲಿ ಸಾಕಷ್ಟು ಓದಿದ ಕುಟುಂಬಗಳಿರುವುದು ಕೂಡ ಪ್ರಶ್ನಾವಳಿ ಮೂಲಕ ಮಾಹಿತಿ ಸಂಗ್ರಹಿಸಲು ಅನಿವಾರ್ಯ. ಆದರೆ ಭಾರತದಂತಹ ಬಡ ಮತ್ತು ಸಾಕಷ್ಟು ಪ್ರಮಾಣದಲ್ಲಿ ಅಕ್ಷರ ಜ್ಞಾನ ಇಲ್ಲದಿರುವ ಕಡೆ ಪ್ರಶ್ನಾವಳಿ ಮೂಲಕ ಮಾಹಿತಿ ಸಂಗ್ರಹಿಸುವುದು ಸಾಧ್ಯವಿಲ್ಲದ ಕೆಲಸ. ಆದರೂ ಇಲ್ಲಿ ಪ್ರಶ್ನಾವಳಿ ಮೂಲಕ ಮಾಹಿತಿ ಸಂಗ್ರಹಿಸುವ ಕ್ರಮ ಇದೆ. ಆದರೆ ಅದು ಮೇಲೆ ವಿವರಿಸಿದ ರೀತಿಯಲ್ಲಿ ಅಲ್ಲ. ಇಲ್ಲಿ ಪ್ರಶ್ನಾವಳಿಯಲ್ಲಿರುವ ಪ್ರಶ್ನೆಗಳನ್ನು ಜನರಿಗೆ ಕೇಳಿ ಅವರಿಂದ ಬಂದ ಉತ್ತರವನ್ನು ಪ್ರಶ್ನಾವಳಿಯಲ್ಲಿ ದಾಖಲಿಸುವುದನ್ನು ಪ್ರಶ್ನಾವಳಿ ಮೂಲಕ ಮಾಹಿತಿ ಸಂಗ್ರಹಿಸುವುದೆಂದು ತಿಳಿಯಲಾಗಿದೆ. ಇದನ್ನು ಸಂಶೋಧನಾ ಭಾಷೆಯಲ್ಲಿ ಅನುಸೂಚಿ ಬಳಕೆ ಎಂದು ವ್ಯಾಖ್ಯಾನಿಸಿಕೊಳ್ಳಲಾಗಿದೆ. ಅನುಸೂಚಿಯು ‘ಪ್ರಶ್ನಾವಳಿಯಾಗಿದ್ದು ಸಂದರ್ಶಕರು ಸಂದರ್ಶಿನಿಯಿಂದ ಮುಖಾಮುಖಿ ಪ್ರಶ್ನೆಗಳನ್ನು ಕೇಳಿ ಉತ್ತರವನ್ನು ದಾಖಲಿಸಿಕೊಳ್ಳುವ ವಿಧಾನ.’[4]

ನಮ್ಮಲ್ಲಿನ ಪ್ರಶ್ನಾವಳಿಯ ಬಳಕೆಯನ್ನು ಚೌಕಟ್ಟುಳ್ಳ ಸಂದರ್ಶನವೆಂದರು ತಪ್ಪಾಗಲಾರದು. ಅಧ್ಯಾಯದ ಮುಂದಿನ ಭಾಗದಲ್ಲಿ ಸಂದರ್ಶನ ಕುರಿತ ವಿವರಣೆ ಇದೆ. ಆ ಸಂದರ್ಭದಲ್ಲಿ ಚೌಕಟ್ಟುಳ್ಳ ಸಂದರ್ಶನದ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಾಗಿದೆ.

ಸಂದರ್ಶನ

ಅಧ್ಯಯನಕ್ಕೆ ಒಳಗಾಗುವ ವ್ಯಕ್ತಿ ಅಥವಾ ಕುಟುಂಬವನ್ನು ಸಂಶೋಧಕರು ಭೇಟಿಯಾಗಿ ಅಥವಾ ದೂರವಾಣಿ ಮೂಲ ಮಾತಾಡಿಸಿ ಮಾಹಿತಿ ಸಂಗ್ರಹಿಸುವುದನ್ನು ಸಂದರ್ಶನದ ಮೂಲಕ ಮಾಹಿತಿ ಸಂಗ್ರಹಿಸುವುದೆನ್ನಬಹುದು. ಸಂದರ್ಶನವನ್ನು ಎರಡು ದೃಷ್ಟಿಕೋನದಿಂದ ನೋಡುವ ಕ್ರಮ ಇದೆ. ಒಂದು, ಸಂದರ್ಶನದಿಂದ ಒದಗುವ ಮಾಹಿತಿಯನ್ನು ವಾಸ್ತವದ ವಿವರಣೆಯೆಂದು ಪರಿಗಣಿಸುವ ದೃಷ್ಟಿಕೋನ. ಎರಡು, ಸಂದರ್ಶನವನ್ನು ಒಂದು ಅಧ್ಯಯನ ವಿಷಯವೆಂದು ಪರಿಗಣಿಸುವ ದೃಷ್ಟಿಕೋನ. ಎರಡನೇ ದೃಷ್ಟಿಕೋನದಲ್ಲಿ ಸಂದರ್ಶನದಿಂದ ಒದಗುವ ಮಾಹಿತಿಯನ್ನು ವಾಸ್ತವದ ವಿವರಣೆಯೆಂದು ಪರಿಗಣಿಸಲಾಗುವುದಿಲ್ಲ.[5] ವಿಷಯವೆಂದು ಪರಿಗಣಿಸಿದ ಸಂದರ್ಶನವನ್ನು ವಿಶ್ಲೇಷಿಸುವ ಮೂಲಕ ಮಾಹಿತಿ ಸಂಗ್ರಹಿಸಲಾಗುವುದು. ಮೊದಲನೇ ದೃಷ್ಟಿಕೋನ ಸಾಂಪ್ರದಾಯಿಕ ಸಂದರ್ಶನದ ವಿಧಾನವನ್ನು ವಿವರಿಸುತ್ತದೆ. ಸಾಂಪ್ರದಾಯಿಕ ಸಂದರ್ಶನದ ವಿಧಾನವನ್ನು ಅನುಸರಿಸುತ್ತದೆ. ಅವುಗಳ ಪ್ರಮುಖ ಲಕ್ಷಣಗಳು ಇಂತಿವೆ. ಒಂದು, ಸಂದರ್ಶನ ಮಾಡುವವರು (ಸಂಶೋಧಕರು ಅಥವಾ ಸಂದರ್ಶಕರು) ಮತ್ತು ಸಂದರ್ಶನ ನೀಡುವವರ (ಅಧ್ಯಯನಕ್ಕೆ ಒಳಗಾಗುವವರ ಅಥವಾ ಸಂದರ್ಶಿನಿ) ನಡುವೆ ಅಂತರವಿರುತ್ತದೆ. ಎರಡು, ಸಂದರ್ಶಕರು ಮತ್ತು ಸಂದರ್ಶಿನಿ ನಡುವೆ ಭಾವನಾತ್ಮಕ ಸಂಬಂಧಗಳಿಗೆ ಅವಕಾಶವಿಲ್ಲ. ಮೂರು, ಸಂದರ್ಶನ ಸಂದರ್ಭದಲ್ಲಿ ಸಂದರ್ಶಕರು ಮತ್ತು ಸಂದರ್ಶಿನಿ ನಡುವೆ ಅಧ್ಯಯನದ ಉದ್ದೇಶಗಳಿಗೆ ಸಂಬಂಧಿಸಿದ ಮಾತುಕತೆ ಮಾತ್ರ ನಡೆಯಬೇಕು. ಬಹುತೇಕ ಸಂಶೋಧಕರು ಈ ಬಗೆಯ ಸಂದರ್ಶನವನ್ನು ಮಾಡುತ್ತಿರುತ್ತಾರೆ. ಹಲವು ವಿಧಗಳ ಸಂದರ್ಶನಗಳಿವೆ. ಚಾಲ್ತಿಯಲ್ಲಿರುವ ಕೆಲವು ಸಂದರ್ಶನಗಳು ಇಂತಿವೆ. ಒಂದು, ಚೌಕಟ್ಟುಳ್ಳ (ಸ್ಟ್ರಕ್ಚರ್ಡ್) ಸಂದರ್ಶನ. ಎರಡು, ಚೌಕಟ್ಟಿಲ್ಲದ (ಅನ್‌ಸ್ಟ್ರಕ್ಚರ್ಡ್) ಸಂದರ್ಶನ. ಮೂರು, ಮೇಲುಸ್ತರದ ಸಂದರ್ಶನ, ನಾಲ್ಕು, ಆಳವಾದ ಸಂದರ್ಶನ. ಚೌಕಟ್ಟುಳ್ಳ ಅಥವಾ ಸ್ಟ್ರೆಕ್ಚರ್ಡ್ ಸಂದರ್ಶನದಲ್ಲಿ ಏನು ಪ್ರಶ್ನೆಗಳನ್ನು ಕೇಳಬೇಕೆಂದು ಗುರುತು ಮಾಡಿಕೊಂಡಿರುತ್ತಾರೆ. ಸಂಶೋಧಕರ ಸಂದರ್ಶನ ‘ಅವರು ಸಿದ್ಧಪಡಿಸಿಕೊಂಡ ಪ್ರಶ್ನೆಗಳಿಗೆ ಸೀಮಿತವಾಗಿರುತ್ತದೆ ಅಥವಾ ಅವರು ಹಾಕಿಕೊಂಡ ಚೌಕಟ್ಟಿಗೆ ಸೀಮಿತವಾಗಿರುತ್ತದೆ. ಈ ಚೌಕಟ್ಟನ್ನು ಮೀರಿ ಸಂಶೋಧಕರು ಪ್ರಶ್ನೆಗಳನ್ನು ಕೇಳುವುದಿಲ್ಲ. ಆದುದರಿಂದಲೇ ಇದಕ್ಕೆ ಸ್ಟ್ರಕ್ಚರ್ಡ್ ಅಥವಾ ಚೌಕಟ್ಟುಳ್ಳ ಸಂದರ್ಶನವೆಂದು ಕರೆಯಲಾಗಿದೆ. ಪ್ರಶ್ನಾವಳಿ ಮತ್ತು ಸಂದರ್ಶನವನ್ನು ಬೆರೆಸಿ ಪಡೆಯುವ ಮಾಹಿತಿ ಸಂಗ್ರಹದ ಒಂದು ಮಿಶ್ರತಳಿ ಈ ಚೌಕಟ್ಟುಳ್ಳ ಸಂದರ್ಶನ. ಅನಕ್ಷರಸ್ಥರ ಸಂಖ್ಯೆ ಹೆಚ್ಚಿರುವ ನಮ್ಮಂತಹ ಸಮಾಜದಲ್ಲಿ ಈ ಬಗೆಯ ಸಂದರ್ಶನ ಹೆಚ್ಚು ವ್ಯಾಪಕವಾಗಿ ನಡೆಯುತ್ತದೆ.

ಅನ್‌ಸ್ಟ್ರಕ್ಚರ್ಡ್ ಅಥವಾ ಚೌಕಟ್ಟಿಲ್ಲದ ಸಂದರ್ಶನ ಸ್ಟ್ರಕ್ಚರ್ಡ್ ಅಥವಾ ಚೌಕಟ್ಟುಳ್ಳ ಸಂದರ್ಶನಕ್ಕೆ ವಿರುದ್ಧ ಎಂದು ತಿಳಿಯಲಾಗುತ್ತದೆ. ಅಂದರೆ ಸಂದರ್ಶನ ಸಂದರ್ಭದಲ್ಲಿ ಕೇಳಬೇಕಾದ ಪ್ರಶ್ನೆಗಳ ಬಗ್ಗೆ ಯಾವುದೇ ಬಗೆಯ ಪೂರ್ವ ತಯಾರಿ ಇಲ್ಲ ಎನ್ನಲಾಗುವುದಿಲ್ಲ. ಇಲ್ಲೂ ಸಾಕಷ್ಟು ಪೂರ್ವ ತಯಾರಿಗಳಿರುತ್ತವೆ. ಆದರೆ ಇಲ್ಲಿನ ಪೂರ್ವ ತಯಾರಿಗೂ ಚೌಕಟ್ಟುಳ್ಳ ಸಂದರ್ಶನದ ಪೂರ್ವ ತಯಾರಿಗೂ ವ್ಯತ್ಯಾಸವಿದೆ. ಚೌಕಟ್ಟುಳ್ಳ ಸಂದರ್ಶನದಲ್ಲಿ ಕೇಳಬೇಕಾದ ಎಲ್ಲ ಪ್ರಶ್ನೆಗಳನ್ನು ಕ್ರಮಪ್ರಕಾರ ಜೋಡಿಸಿಕೊಳ್ಳಲಾಗುತ್ತದೆ. ಸಂದರ್ಶಕರು ಆ ಜೋಡಿಸಲ್ಪಟ್ಟ ಪ್ರಶ್ನಾವಳಿಗನುಸಾರ ಪ್ರಶ್ನೆಗಳನ್ನು ಕೇಳುತ್ತಾ ಹೋಗುತ್ತಾರೆ. ಸಿದ್ಧಪಡಿಸಿದ ಪ್ರಶ್ನೆಗಳನ್ನು ಬಿಟ್ಟು ಬೇರೇನನ್ನೂ ಸಂದರ್ಶಕರು ಕೇಳುವುದಿಲ್ಲ. ಆದರೆ ಚೌಕಟ್ಟಿಲ್ಲದ ಸಂದರ್ಶನದಲ್ಲಿ ಕ್ರಮಪ್ರಕಾರ ಜೋಡಸಲ್ಪಟ್ಟ ಪ್ರಶ್ನಾವಳಿ ಇರುವುದಿಲ್ಲ. ಹಾಗೆಂದು ಸಂದರ್ಶಕರು ಬರಿಗೈಲಿ ಸಂದರ್ಶನ ಮಾಡುತ್ತಾರೆಂದಲ್ಲ. ಇಲ್ಲೂ ಅವರು ಸಂಗ್ರಹಿಸಬೇಕಾದ ಮಾಹಿತಿಯ ಒಂದು ಸ್ಥೂಲ ಚಿತ್ರಣವನ್ನು ಹೊಂದಿರುತ್ತಾರೆ. ಯಾವೆಲ್ಲ ಕ್ಷೇತ್ರದ ಬಗ್ಗೆ ಮಾಹಿತಿ ಸಂಗ್ರಹಿಸಬೇಕು, ಯಾವ ಕ್ಷೇತ್ರದಿಂದ ಶುರು ಮಾಢಬೇಕು, ಪ್ರತಿಯೊಂದು ಕ್ಷೇತ್ರದ ಮಾಹಿತಿ ಸಂಗ್ರಹಕ್ಕೆ ಎಷ್ಟು ಸಮಯ ವಿನಿಯೋಗಿಸಬೇಕು, ವಿವಿಧ ವಿಚಾರಗಳನ್ನು ಯಾವ ಕ್ರಮದಲ್ಲಿ ಕೇಳುತ್ತಾ ಬರಬೇಕು ಇತ್ಯಾದಿ ಪೂರ್ವ ತಯಾರಿಯನ್ನು ಸಂದರ್ಶಕರು ಇಲ್ಲೂ ಮಾಡಿಕೊಂಡಿರುತ್ತಾರೆ. ಕನಿಷ್ಠ ಇಷ್ಟು ಪೂರ್ವ ತಯಾರಿ ಇಲ್ಲದಿದ್ದರೆ ಗಂಟೆಗಟ್ಟಲೆ ಮಾತಾಡಿಯೂ ಅಧ್ಯಯನ ವಿಷಯಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿ ಸಂಗ್ರಹವಾಗದಿರುವ ಸಾಧ್ಯತೆ ಇದೆ.

ಈ ಬಗೆಯ ಸಾಂಪ್ರದಾಯಿಕ ಸಂದರ್ಶನಗಳ ಬಗ್ಗೆ ಮಹಿಳಾವಾದಿಗಳು ಮತ್ತು ಗುಣಾತ್ಮಕ (ಕ್ವಾಲಿಟೇಟಿವ್) ಸಂಶೋಧನೆಗೆ ಮಹತ್ವ ನೀಡುವವರು ಹಲವಾರು ಆಕ್ಷೇಪಗಳನ್ನು ಎತ್ತಿದ್ದಾರೆ. ಅವು ಇಂತಿವೆ. ಒಂದು, ಈ ಬಗೆಯ ಸಂದರ್ಶನದಲ್ಲಿ ಒಂದು ಬಗೆಯ ಯಜಮಾನಿಕೆಯ ಪ್ರದರ್ಶನವಿದೆ. ಈ ಅಧ್ಯಾಯದ ಮೊದಲ ಭಾಗದಲ್ಲಿ ವಿವರಿಸಿದಂತೆ ಸಂದರ್ಶಕರು ಎಲ್ಲವನ್ನು ಬಲ್ಲ ಸರ್ವಜ್ಞರಂತೆ ಕಂಡರೆ ಸಂದರ್ಶಿನಿ ಏನನ್ನು ಅರಿಯದ ಅಜ್ಞಾನಿಗಳಂತೆ ಕಾಣುತ್ತಾರೆ. ಎರಡು, ಅಧಿಕಾರಕ್ಕೆ ಸಂಬಂಧಿಸಿದ್ದು – ಸಂದರ್ಶಕರ ಮತ್ತು ಸಂದರ್ಶಿನಿಯರ ನಡುವಿನ ಅಸಮಾನ ಅಧಿಕಾರ ಸ್ಥಾನಮಾನ. ಸಂದರ್ಶಕರು ಅಧಿಕಾರವನ್ನೆಲ್ಲ ಮೈಗೂಡಿಸಿಕೊಂಡ ಸರ್ವಾಧಿಕಾರಿಯಂತೆ ಕಂಡರೆ ಸಂದರ್ಶಿನಿ ಅಧಿಕಾರವೇ ಇಲ್ಲದ ಬಲಿಪಶುವಿನಂತಿರಬೇಕಾಗುತ್ತದೆ. ಸಂದರ್ಶಕರು ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಡುವ ಕೆಲಸ ಮಾತ್ರ ಸಂದರ್ಶಿನಿಯದ್ದಾಗಿರುತ್ತದೆ. ಇದೊಂದು ಬಗೆಯ ಕೈದಿಗಳ ವಿಚಾರಣೆಯಂತಾಗುತ್ತದೆ ಎನ್ನುವ ಅಭಿಪ್ರಾಯವೂ ಇದೆ. ಮೂರು, ಸಂದರ್ಶಕರು ಮತ್ತು ಸಂದರ್ಶಿನಿಯರ ನಡುವೆ ಭಾವನಾತ್ಮಕ ಸಂಬಂಧಗಳಿಗೆ ಅವಕಾಸ ಇಲ್ಲದಿರುವುದರಿಂದ ಅವರಿಬ್ಬರ ನಡುವೆ ಯಾವುದೇ ಬಗೆಯ ಸಂಬಂಧವೇ ಏರ್ಪಡುವುದಿಲ್ಲ. ಸಂಬಂಧವೇ ಏರ್ಪಡದಿದ್ದರೆ ಸಂಭಾಷಣೆ ಕಷ್ಟ. ಒಂದು ವೇಳೆ ಸಂಭಾಷಣೆ ನಡೆದರೂ ಅದು ವಾಸ್ತವಕ್ಕೆ ಹತ್ತಿರವಾದ ಮಾಹಿತಿ ನೀಡಬಹುದೆಂದು ನಂಬುವುದು ಇನ್ನೂ ಕಷ್ಟ. ನಾಲ್ಕು, ಸಂದರ್ಶನದ ಇಡೀ ಸಂದರ್ಭವನ್ನು ಅಧ್ಯಯನ ಉದ್ದೇಶಗಳಿಗೆ ಸಂಬಂಧಿಸಿದ ಮಾಹಿತಿ ಸಂಗ್ರಹಕ್ಕೆ ಮಾತ್ರ ಬಳಸಬೇಕೆನ್ನುವುದು ಸಂದರ್ಶಕರು ಮತ್ತು ಸಂದರ್ಶಿನಿಗಳನ್ನು ಸಂದರ್ಶನ ಮಾಡುವ ಯಂತ್ರಗಳಂತೆ ಮತ್ತು ಸಂದರ್ಶನವನ್ನು ಒಂದು ಬಗೆಯ ಯಾಂತ್ರಿಕ ಪ್ರಕ್ರಿಯೆಯೆಂದು ತಿಳಿದಂತಾಗುತ್ತದೆ.[6]

ಈ ಎಲ್ಲ ಆಕ್ಷೇಪಗಳ ಹಿನ್ನೆಲೆಯಲ್ಲಿ ಮಹಿಳಾವಾದಿಗಳು ಮತ್ತು ಗುಣಾತ್ಮಕ ಸಂಶೋಧನೆಗೆ ಮಹತ್ವ ನೀಡುವವರು ಸಾಂಪ್ರದಾಯಿಕ ಸಂದರ್ಶನ ವಿಧಾನದಲ್ಲೇ ಹಲವಾರು ಮಾರ್ಪಾಟುಗಳನ್ನು ಸೂಚಿಸಿದ್ದಾರೆ. ಅವರು ಸೂಚಿಸಿದ ಬದಲಾವಣೆಗಳು ಸಾಂಪ್ರದಾಯಿಕ ಸಂದರ್ಶನ ವಿಧಾನದಲ್ಲಿ ಗುರುತಿಸಿರುವ ಲೋಪದೋಷಗಳನ್ನು ದೂರ ಮಾಡುವಂತಿವೆ. ಒಂದು, ಸಂದರ್ಶಕರು ಮತ್ತು ಸಂದರ್ಶಿನಿಯರ ನಡುವೆ ಅಂತರ ಏರ್ಪಡಲು ಬಹುಮುಖ್ಯ ಕಾರಣ ಸಂದರ್ಶಿನಿಯರನ್ನು ಮಾನವರಂತೆ ಕಾಣದೆ ಅಧ್ಯಯನಕ್ಕೆ ಒಳಪಡುವ ವಸ್ತುವಿನಂತೆ ನೋಡುವ ದೃಷ್ಟಿಕೋನ. ಎರಡು ಕಾರಣಗಳಿಂದ ಈ ದೃಷ್ಟಿಕೋನ ಪ್ರಾಪ್ತವಾಗುತ್ತದೆ. ಒಂದು, ವಿಜ್ಞಾನದ ವಿಧಾನವನ್ನು ಯಥಾ ಪ್ರಕಾರ ಅನುಸರಿಸುವುದರಿಂದ ಮತ್ತು ಎರಡು, ಜ್ಞಾನದ ಹರಿಕಾರರೆನ್ನುವ ಸಂಶೋಧಕರ ಯಜಮಾನಿಕೆ ಪ್ರವೃತ್ತಿಯಿಂದ. ನಿಜವಾದ ಸಂದರ್ಶನ ನಡೆಯಬೇಕಾದರೆ ಈ ಎರಡೂ ದೃಷ್ಟಿಕೋನಗಳನ್ನು ಸಂದರ್ಶಕರು ಬಿಡಬೇಕು. ಎರಡು, ಸಂದರ್ಶಕರು ಮತ್ತು ಸಂದರ್ಶಿನಿಯರ ನಡುವೆ ಅಂತರವಿರಬೇಕೆನ್ನುವ ಸಾಂಪ್ರದಾಯಕ ಸಂದರ್ಶನದ ಲಕ್ಷಣವನ್ನು ತಿರಸ್ಕರಿಸಿ ಅವರಿಬ್ಬರ ನಡುವೆ ಅಂತರವಿರಬೇಕಾಗಿಲ್ಲವೆಂದು ವಾದಿಸುತ್ತಾರೆ. ಅಂತರವಿಟ್ಟುಕೊಂಡರೆ ಅವರಿಬ್ಬರ ನಡುವೆ ಯಾವುದೇ ಸಂಬಂಧ ಏರ್ಪಡಲು ಸಾಧ್ಯವಿಲ್ಲ. ಸಂಬಂಧವೇ ಏರ್ಪಡದಿದ್ರೆ ಅರ್ಥಪೂರ್ಣ ಸಂಭಾಷಣೆಯೇ ಸಾಧ್ಯವಿಲ್ಲ. ಅರ್ಥಪೂರ್ಣ ಸಂಭಾಷಣೆಯೇ ನಡೆಯದಿದ್ದರೆ ಮಾಹಿತಿ ಸಂಗ್ರಹಿಸುವ ಕೆಲಸ ನಡೆಯಲು ಸಾಧ್ಯವಿಲ್ಲ. ಮೂರು, ಸಂದರ್ಶನ ಸಂದರ್ಭದಲ್ಲಿ ಕೇವಲ ಅಧ್ಯಯನ ಉದ್ದೇಶಗಳಿಗೆ ಸೀಮಿತಗೊಂಡಂತೆ ಮಾತುಕತೆ ನಡೆಯಬೇಕೆನ್ನುವುದು ಸರಿಯಲ್ಲ. ಸಂದರ್ಶಿನಿಯರ ನಂಬಿಕೆ ಗಳಿಸುವುದು, ಆತ್ಮೀಯ ಸಂಬಂಧ ಬೆಳೆಸಿಕೊಳ್ಳುವುದು ಇತ್ಯಾದಿಗಳು ಮುಕ್ತ ಸಂಭಾಷಣೆಗೆ ಪೀಠಿಕೆ ರೂಪದಲ್ಲಿ ಕೆಲಸ ಮಾಡುತ್ತವೆ. ಮುಕ್ತ ಸಂಭಾಷಣೆ ನಡೆಯದಿದ್ದರೆ ವಾಸ್ತವಕ್ಕೆ ಹತ್ತಿರವಾದ ಮಾಹಿತಿ ಸಂಗ್ರಹಿಸಲು ಸಾಧ್ಯವಿಲ್ಲ.

ಮೇಲೆ ಸೂಚಿಸಿದ ಬದಲಾವಣೆಗಳನ್ನು ಅಳವಡಿಸಿಕೊಂಡ ಸಂದರ್ಶನದಿಂದ ವಾಸ್ತವಕ್ಕೆ ಹತ್ತಿರವಾದ ಮಾಹಿತಿ ಪಡೆಯಬಹುದೆನ್ನುವ ನಂಬಿಕೆ ಇದೆ. ಆದರೆ ಇಲ್ಲೂ ಕೆಲವು ಸಮಸ್ಯೆಗಳಿವೆ.[7] ಒಂದು, ಕೇವಲ ಗುಣಾತ್ಮಕ ಸಂಶೋಧನೆ ಮಾತ್ರ ಮಹಿಳಾ ಅಥವಾ ಶೋಷಿತರ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ಶಕ್ತ ಎನ್ನುವ ಗೃಹೀತವಿದೆ. ಮಹಿಳಾ ವಾದಿಗಳ ಮತ್ತು ಗುಣಾತ್ಮಕ ಸಂಶೋಧನಾವಾದಿಗಳ ಈ ನಿಲುವನ್ನು ಪರಿಮಾಣಾತ್ಮಕ (ಕ್ವಾಂಟೇಟಿವ್) ಸಂಶೋಧಕರು ಒಪ್ಪುವುದಿಲ್ಲ. ಪರಿಮಾಣಾತ್ಮಕ ಸಂಶೋಧಕರ ಪ್ರಕಾರ ಪರಿಮಾಣಾತ್ಮಕ ಸಂಶೋಧನೆಯ ಮೂಲಕ ಕೂಡ ಮಹಿಳಾ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಬಹುದು. ಉದಾಹರಣೆಗೆ ಮಹಿಳಾ ಜನಗಣತಿ, ಲಿಂಗ ಅನುಪಾತ, ಗಂಡು ಮಕ್ಕಳಿಗೆ ಹೋಲಿಸಿ ಹೆಣ್ಣು ಮಕ್ಕಳ ಜನನ ಮತ್ತು ಮರಣ ಸಂಖ್ಯೆ, ಗರ್ಭಿಣಿ ಸ್ತ್ರೀಯ ಸ್ಥಿತಿಗತಿ, ಪುರುಷರಿಗೆ ಹೋಲಿಸಿ ಮಹಿಳಾ ಕಾರ್ಮಿಕರ ಸ್ಥಿತಿಗತಿ ಇತ್ಯಾದಿ ಸಂಗತಿಗಳು ಪ್ರಾಪ್ತವಾಗುವುದು ಪರಿಮಾಣಾತ್ಮಕ ಸಂಶೋಧನೆಗಳಿಂದ. ಈ ಅಂಕಿಅಂಶಗಳು ಮಹಿಳೆಯರ ಭೌತಿಕ ಬದುಕನ್ನು ಸುಧಾರಿಸಲು ಅಗತ್ಯವಿರುವ ಪಾಲಿಸಿಗಳನ್ನು ರೂಪುಗೊಳಿಸಲು ನೆರವಾಗುತ್ತವೆ. ಇಲ್ಲೆಲ್ಲ  ಸಾಂಪ್ರದಾಯಿಕ ಸಂದರ್ಶನದ ಬಳಕೆ ಸಾಧ್ಯ. ಆದುದರಿಂದ ಸಾಂಪ್ರದಾಯಿಕ ಸಂದರ್ಶನವನ್ನು ಸಾರಾಸಗಟಾಗಿ ತಿರಸ್ಕರಿಸುವ ಅಗತ್ಯವಿಲ್ಲ. ಜತೆಗೆ ಎಲ್ಲ ವಿಧದ ಸಂಶೋಧನೆಗೂ ಗುಣಾತ್ಮಕ ಸಂಶೋಧಕರು ಸೂಚಿಸಿದ ಸಂದರ್ಶನ ಉಪಯೋಗವಾಗುತ್ತದೆ ಎನ್ನುವ ತೀರ್ಮಾನವೂ ಸರಿಯಲ್ಲ. ಎರಡು, ಸಾಂಪ್ರದಾಯಿಕ ಸಂದರ್ಶನದ ವಿರುದ್ಧ ಅವರ ಈ ವಾದಕ್ಕೆ ವಿಶೇಷ ಬಲವಿಲ್ಲ. ಯಾಕೆಂದರೆ ಅವರ ಈ ಆರೋಪ ನಿಂತಿರುವುದು ಸಂಶೋಧನೆಯ ಸಾಂಪ್ರದಾಯಿಕ ವ್ಯಾಖ್ಯಾನದ ಮೇಲೆ. ಸಂಶೋಧನೆಯನ್ನು ವಾಸ್ತವದ ಒಂದು ಹುಡುಕಾಟವೆಂದು ಸಂಶೋಧನೆಯ ಸಾಂಪ್ರದಾಯಿಕ ವ್ಯಾಖ್ಯಾನ ಹೇಳುತ್ತದೆ. ಆದರೆ ಸಂಶೋಧನೆಯ ಈ ವ್ಯಾಖ್ಯಾನ ಎಂದೋ ತನ್ನ ಮೌಲ್ಯ ಕಳಕೊಂಡಿದೆ. ಇಂದು ಸಂಶೋಧನೆಯ ವ್ಯಾಖ್ಯಾನವನ್ನು ವಾಸ್ತವದ ಹುಡುಕಾಟಕ್ಕೆ ಸೀಮಿತಗೊಳಿಸುವುದು ಕಷ್ಟ. ಸಂಶೋಧನೆಯನ್ನು ಕಲ್ಪಿತ ಅಥವಾ ರಚಿತ ಸತ್ಯಗಳು ರೂಪುಗೊಳ್ಳುವ ಬಗೆಯನ್ನು ಅರ್ಥ ಮಾಡಿಕೊಳ್ಳುವ ಪ್ರಕ್ರಿಯೆಯೆಂದು ವ್ಯಾಖ್ಯಾನಿಸುವುದು ಕೂಡ ಸೇರಿದೆ. ಹೀಗೆ ಸಂಶೋಧನೆಯ ಸಾಂಪ್ರದಾಯಿಕ ವ್ಯಾಖ್ಯಾನವನ್ನು ಇಟ್ಟುಕೊಂಡು ಮಾಹಿತಿ ಸಂಗ್ರಹಿಸುವ ವಿಧಾನದ ಬಗ್ಗೆ ಎಷ್ಟೇ ಕ್ರಾಂತಿಕಾರಕ ನಿಲುವನ್ನು ತಳೆದರೂ ಪ್ರಯೋಜನವಿಲ್ಲ ಎನ್ನುವ ನಿಲುವೂ ಇದೆ.

ಸಂಶೋಧನೆಯ ಹೊಸ ವ್ಯಾಖ್ಯಾನದ ಹಿನ್ನೆಲೆಯಲ್ಲಿ ಸಂದರ್ಶನ ಕೂಡ ಹೊಸ ಬಗೆಯಲ್ಲಿ ನಿರ್ವಚಿತವಾಗಿದೆ. ಸಂದರ್ಶನದ ಹೊಸ ರೂಪದಲ್ಲಿ ಅದನ್ನು ವಾಸ್ತವದ ಬಗ್ಗೆ ಮಾಹಿತಿ ಸಂಗ್ರಹಿಸುವ ವಿಧಾನವೆಂದು ತಿಳಿಯಲಾಗಿಲ್ಲ. ಸಂದರ್ಶನ ಕೂಡ ಒಂದು ವಿಷಯವಾಗಿ ಅಥವಾ ಅಧ್ಯಯನದ ವಸ್ತುವಾಗಿ ಮಾರ್ಪಾಟುಗೊಂಡಿದೆ. ಈ ವಿಷಯವನ್ನು ಅಥವಾ ವಸ್ತುವನ್ನು ವಿಶ್ಲೇಷಿಸುವ ಮೂಲಕ ಸಂಶೋಧನೆಯ ಉದ್ದೇಶಕ್ಕೆ ಪೂರಕವಾದ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ಸಂದರ್ಶನವನ್ನು ಈ ದೃಷ್ಟಿಯಲ್ಲಿ ನೋಡಲು ಬಹುಮುಖ್ಯ ಕಾರಣ ಸಂದರ್ಶಿನಿಗಳು ವಾಸ್ತವವನ್ನು ಯಥಾರೀತಿಯಲ್ಲಿ ಮಂಡಿಸುವುದಿಲ್ಲ ಎನ್ನುವ ಗ್ರಹಿಕೆ. ಸಂದರ್ಶಿನಿಗಳು ವಾಸ್ತವಕ್ಕೆ ಹತ್ತಿರವಾದ ಮಾಹಿತಿಯನ್ನು ಕೊಡದಿರಲು ಹಲವು ಕಾರಣಗಳಿರಬಹುದು. ಅವುಗಳಲ್ಲಿ ಮುಖ್ಯವಾದ ಕೆಲವನ್ನು ಇಲ್ಲಿ ಚರ್ಚಿಸಲಾಗಿದೆ. ಒಂದು, ವಾಸ್ತವವನ್ನು ಮರೆಮಾಚುವ ಅಥವಾ ತಿರುಚುವ ಮಾಹಿತಿಗಳನ್ನು ನೀಡುವುದು. ಎರಡು, ತಮ್ಮ ವೈಯಕ್ತಿಕ ಲೋಪಗಳನ್ನು ಮುಚ್ಚಿಕೊಳ್ಳಲು ಪೂರಕವಾಗುವ ಮಾಹಿತಿಗಳನ್ನು ನೀಡುವುದು. ಮೂರು, ಬಹುಮಾಹಿತಿಗಳನ್ನು ನೀಡುವುದು ಅಥವಾ ಸಂದರ್ಶಕರಿಗೊಂದು ಮಾಹಿತಿ ಮತ್ತು ಇತರ ಗ್ರಾಹಕರಿಗೆ ಮತ್ತೊಂದು ಮಾಹಿತಿ ನೀಡುವುದು. ವಾಸ್ತವವನ್ನು ಮರೆಮಾಚುವ ಮಾಹಿತಿ ನೀಡುವುದನ್ನು ನಾವು ದಿನನಿತ್ಯ ಮಾಧ್ಯಮಗಳಲ್ಲಿ (ಟಿವಿ, ದಿನಪತ್ರಿಕೆ, ವಾರಪತ್ರಿಕೆ ಇತ್ಯಾದಿಗಳಲ್ಲಿ) ಕಾಣುತ್ತೇವೆ. ಎರಡು ರಾಷ್ಟ್ರಗಳ ನಡುವೆ ಯುದ್ಧದ ಸಂದರ್ಭದಲ್ಲಿ ಪ್ರತಿ ದೇಶ ಕೂಡ ತನ್ನ ಸೈನಿಕರ ನಷ್ಟವನ್ನು ಕಡಿಮೆ ಪ್ರಮಾಣದಲ್ಲಿ ಬಿಂಬಿಸಿ ವಿರೋಧಿ ರಾಷ್ಟ್ರದ ಸೈನಿಕರ ಸಾವಿನ ಸಂಖ್ಯೆಯನ್ನು ದ್ವಿಗುಣಗೊಳಿಸಿ ಹೇಳುವ ಕ್ರಮವನ್ನು ನಾವು ನೋಡುತ್ತಲೇ ಬಂದಿದ್ದೇವೆ. ಅದೇ ರೀತಿಯಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳು ಮಾಡುವ ಆರೋಪ ಮತ್ತು ಪ್ರತ್ಯಾರೋಪಗಳು. ಸರಕಾರದ ಯಾವುದೇ ನೀತಿ ಬಗ್ಗೆ ಆಡಳಿತ ಪಕ್ಷದ ರಾಜಕಾರಣಿಯನ್ನು ಸಂದರ್ಶನ ಮಾಡಿದರೆ ಅದರಿಂದ ದೇಶಕ್ಕೆ ಮತ್ತು ಜನರಿಗೆ ಖಂಡಿತವಾಗಿಯೂ ಒಳಿತಾಗುತ್ತದೆ ಎನ್ನುವ ಮಾಹಿತಿ ದೊರಕಿದರೆ ವಿರೋಧ ಪಕ್ಷದ ರಾಜಕಾರಣಿ ಪ್ರಚಾರ ಸರಕಾರದ ಯಾವ ನೀತಿ ಕೂಡ ದೇಶ ಅಥವಾ ಜನರ ಉದ್ಧಾರಕ್ಕೆ ಪೂರಕವಾಗಿರುವುದಿಲ್ಲ.

ಈ ರೀತಿಯಲ್ಲಿ ವಾಸ್ತವವನ್ನು ಯಾವುದೇ ರೀತಿಯಲ್ಲಿ ಬಿಂಬಿಸದ ಮಾಹಿತಿಯನ್ನು ನೀಡುವುದು ಕೇವಲ ರಾಜಕಾರಣಿಗಳ ಗುಣವೆಂದು ತಿಳಿಯಬೇಕಾಗಿಲ್ಲ.  ಸಾಮಾನ್ಯ ಜನರು ಕೂಡ ಈ ಕೆಲಸ ಮಾಡುತ್ತಾರೆ. ಪಂಚಾಯತ್ ಯೋಜನೆ ತಯಾರಿಸುವ ಸಂದರ್ಭದಲ್ಲಿ ಹಳ್ಳಿಯಲ್ಲಿದ್ದ ಅಂಗನವಾಡಿಗಳ ಕೆಲಸಕಾರ್ಯಗಳನ್ನು ತಿಳಿಯಲು ಕಾರ್ಯಕರ್ತೆಯರನ್ನು ಮಾತಾಡಿಸಲಾಯಿತು. ಅಂಗನವಾಡಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಹತ್ತರಿಂದ ಹದಿನೈದು ಮಕ್ಕಳಿದ್ದರು. ಎಷ್ಟು ಮಕ್ಕಳು ದಾಖಲಾಗಿದ್ದಾರೆ ಎಂದು ಕೇಳಲಾಯಿತು? ನಲ್ವತ್ತು ಮಕ್ಕಳು ಎಂದರು ಕಾರ್ಯಕರ್ತೆ. ದಿನನಿತ್ಯ ಎಷ್ಟು ಹಾಜರಾಗುತ್ತಾರೆ ಎಂದರೆ ಎಲ್ಲ ಮಕ್ಕಳು ಹಾಜರಾಗುತ್ತಾರೆ ಎಂದರು. ಇವತ್ತು ಯಾಕೆ ಇಷ್ಟು ಕಡಿಮೆ ಸಂಖ್ಯೆಯಲ್ಲಿದ್ದಾರೆ ಎಂದು ಕೇಳಿದರೆ ಊರ ಜಾತ್ರೆ ಇದೆ ಆದುದರಿಂದ ಮಕ್ಕಳು ಬಂದಿಲ್ಲ ಎಂದರು. ಊರವರನ್ನು ಕೇಳಿದರೆ ಇಪ್ಪತ್ತರಿಂದ ಹೆಚ್ಚು ಮಕ್ಕಳು ಅಂಗನವಾಡಿಯಲ್ಲಿ ಹಾಜರಿರುವುದಿಲ್ಲ ಎನ್ನುತ್ತಾರೆ. ಊರವರ ಮತ್ತು ಕಾರ್ಯಕರ್ತೆಯರ ಲೆಕ್ಕಾಚಾರದಲ್ಲಿ ಇಷ್ಟೊಂದು ವ್ಯತ್ಯಾಸ ಏಕಿದೆ ಎಂದು ತಿಳಿಯಲು ಮತ್ತೊಮ್ಮೆ ಅಂಗನವಾಡಿಗೆ ಭೇಟಿ ನೀಡಲಾಯಿತು. ಆಗಲೂ ಹದಿನೈದರಿಂದ ಇಪ್ಪತ್ತು ಮಕ್ಕಳಿದ್ದರು. ಕಾರ್ಯಕರ್ತೆಯರಲ್ಲಿ ಕೇಳಿದರೆ ಜಾಸ್ತಿ ಮಕ್ಕಳಿದ್ದಾರೆ ಆದರೆ ಆ ಹೊತ್ತು ಮತ್ಯಾವುದೋ ಕಾರಣಕ್ಕಾಗಿ ಅಂಗನವಾಡಿಗೆ ಬಂದಿಲ್ಲ ಎಂದರು. ಬೇರೆ ಬೇರೆ ಮೂಲಗಳನ್ನು ವಿಚಾರಿಸಿದ ನಂತರ ತಿಳಿದುಬಂದ ಸಂಗತಿ ಹೀಗಿತ್ತು. ಒಂದು ನಿರ್ದಿಷ್ಟ ಸಂಖ್ಯೆಯಲ್ಲಿ ಮಕ್ಕಳಿದ್ದರೆ ಮಾತ್ರ ಅಂಗನವಾಡಿ ತೆರೆಯಲು ಅವಕಾಶ ಇದೆ. ಮಕ್ಕಳ ಸಂಖ್ಯೆ ಇಲಾಖೆ ನಿಗದಿಪಡಿಸಿದ ಸಂಖ್ಯೆಗಿಂತ ಕಡಿಮೆ ಇದ್ದರೆ ಅಂಗನವಾಡಿ ತೆರೆಯಲು ಅವಕಾಶ ಇರುವುದಿಲ್ಲ. ಅಂಗನವಾಡಿ ಮುಚ್ಚಿದರೆ ತಾನು ಉದ್ಯೋಗ ಕಳೆದುಕೊಳ್ಳಬೇಕೆಂಬ ಭಯದಿಂದ ಮತ್ತು ತನ್ನ ಉದ್ಯೋಗವನ್ನು ರಕ್ಷಿಸುವ ಉದ್ದೇಶದಿಂದ ಕಾರ್ಯಕರ್ತೆ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಿದ್ದಾರೆ. ಇದು ಕೇವಲ ಅಂಗನವಾಡಿ ಮತ್ತು ಅಲ್ಲಿನ ಕಾರ್ಯಕರ್ತೆಯರ ಸಮಸ್ಯೆ ಅಲ್ಲ. ಎಲ್ಲೆಲ್ಲಿ ಕೆಲವೊಂದು ಸಂಗತಿಗಳ ಇರುವಿಕೆ ಮತ್ತು ಉದ್ಯೋಗದ ಸ್ಥಿರತೆ ನಡುವೆ ಸಂಬಂಧ ಇದೆಯೋ ಅಲ್ಲೆಲ್ಲ ಹೆಚ್ಚು ಕಡಿಮೆ ಇದೇ ಸ್ಥಿತಿ ಇರಬಹುದು. ಅಂತಹ ಸಂದರ್ಭದಲ್ಲಿ ಸಂದರ್ಶನವನ್ನು ಮಾಹಿತಿಯ ಮೂಲವೆಂದು ತಿಳಿಯುವ ಬದಲು ಏಕೆ ಜನರು ತಮ್ಮದೇ ಮಾಹಿತಿಯನ್ನು ಸೃಷ್ಟಿಸುತ್ತಾರೆ ಎನ್ನುವುದರ ಮೇಲೆ ಸಂಶೋಧನೆಯನ್ನು ಕೇಂದ್ರೀಕರಿಸಿದರೆ ಹೊಸ ವಿಚಾರಗಳು ಬೆಳಕಿಗೆ ಬರಬಹುದು.

ಆತನೊಬ್ಬ ಮಧ್ಯಮ ವರ್ಗಕ್ಕೆ ಸೆರಿದ ಯುವಕ. ಸಾಧಾರಣ ಓದು ಮತ್ತು ಉದ್ಯೋಗ ಇತ್ತು. ಮದುವೆ ಆಯಿತು. ಒಂದೆರಡು ಮಕ್ಕಳಾದವು. ಸಂಸಾರದ ಖರ್ಚು ಮತ್ತು ಆತನ ಸಂಬಳದ ನಡುವೆ ಸಂಬಂಧ ಇಲ್ಲದಾಯಿತು. ಸಂಸಾರ ಭಾರವಾಗಲು ಆರಂಭವಾಯಿತು. ಭಾರ ಕಡಿಮೆ ಮಾಡಲು ಕುಡಿತ ಶುರುವಾಯಿತು. ಆರಂಭದಲ್ಲಿ ವಾರಕ್ಕೊಮ್ಮೆ ಸಣ್ಣ ಪ್ರಮಾಣದಲ್ಲಿ ಶುರುವಾಯಿತು. ಬರಬರುತ್ತಾ ಕುಡಿತದ ದಿನಗಳು ಹೆಚ್ಚಾದವು. ಪ್ರಮಾಣವೂ ಹೆಚ್ಚಾಯಿತು. ಕುಡಿತದ ಆರಂಭದ ದಿನಗಳಲ್ಲಿ ತಾನು ಮಾಡುವುದು ಸರಿಯಲ್ಲ ಎನ್ನುವ ಪ್ರಜ್ಞೆಯಿಂದ ಹೆಂಡತಿ ಮಕ್ಕಳ ಜತೆ ದೀನನವಾಗಿ ವರ್ತಿಸಿದ. ಆದರೆ ಬರಬರುತ್ತಾ ತನ್ನ ದಾರಿ ವಿಶೇಷ ಅನೈತಿಕವಾದುದೇನಲ್ಲ ಎಂದಾಯಿತು. ಕುಡಿತ ಹಕ್ಕಾಯಿತು. ಅದಕ್ಕೆ ಹೊಂದಾಣಿಕೆ ಮಾಡಿಕೊಳ್ಳುವುದು ಹೆಂಡತಿ ಮಕ್ಕಳ ಕರ್ತವ್ಯವಾಯಿತು. ದಿನಾ ತಡವಾಗಿ ಬರುವುದು, ಹೆಂಡತಿಯನ್ನು ದನಕ್ಕೆ ಬಡಿದಂತೆ ಬಡಿಯುವುದು, ಹೆಂಡತಿ ಕೂಡಿಟ್ಟ ಪುಡಿಕಾಸನ್ನು ಕುಡಿತಕ್ಕೆ ಬಳಸುವುದು ಇತ್ಯಾದಿಗಳು ದಿನಾ ಘಟಿಸಲು ಶುರುವಾಯಿತು. ಇವನ ಈ ಚಟವನ್ನು ಕೆಲವು ದಿನ ಸಹಿಸಿದ ಹೆಂಡತಿ ಒಂದು ದಿನ ಮನೆಬಿಟ್ಟು ತನ್ನ ತವರು ಮನೆಗೆ ಹೋದಳು. ಹೆಂಡತಿ ಹೋದ ನಂತರ ಕೆಲವು ದಿನ ಖಾಲಿ ಇದ್ದು ನಂತರದ ಬೇರೊಬ್ಬ ಹೆಂಗಸಿನೊಂದಿಗೆ ಬದುಕುತ್ತಿದ್ದಾನೆ. ಆತನೊಂದಿಗೆ ತನ್ನ ಹಿಂದಿನ ವೈವಾಹಿಕ ಬದುಕಿನ ಬಗ್ಗೆ ವಿಚಾರಿಸಿದರೆ, ‘ನಾನು ನನ್ನ ಹೆಂಡತಿಯನ್ನು ತುಂಬಾ ಪ್ರೀತಿಸುತ್ತಿದ್ದೆ. ಅವಳು ನನ್ನನ್ನು ತುಂಬಾ ಪ್ರೀತಿಸುತ್ತಿದ್ದಳು. ಕೆಲಸ ಬಿಟ್ಟು ಮನೆಗೆ ಬರುವಾಗ ಅವಳಿಗಗಿ ಹೂ ಮತ್ತು ಏನಾದರೂ ತಿನಿಸು ಕಟ್ಟಿಸಿಕೊಂಡು ಬರದ ದಿನಗಳಿರಲಿಲ್ಲ. ನಾನು ಮನೆಗೆ ಬರುವುದನ್ನೇ ಆಕೆ ಕಾದು ಕುಳಿತಿರುತ್ತಿದ್ದಳು. ದೇವರಿಗೆ ನಮ್ಮ ನೆಮ್ಮದಿಯ ಬದುಕು ಹಿಡಿಸಲಿಲ್ಲ ಎಂದು ಕಾಣುತ್ತದೆ. ದಿನಗಳು ಉರುಳಿದಂತೆ ನನ್ನ ಹೆಂಡತಿಯ ಪ್ರೀತಿ ಕಡಿಮೆ ಆಗುತ್ತಾ ಬಂತು. ಕಾರಣವೇನೆಂದು ನನಗೆ ಇಂದೂ ತಿಳಿದಿಲ್ಲ. ನನ್ನ ಬರುವಿಗಾಗಿ ಕಾದಿರುವಾಕೆ ನಾನು ಮನೆಯೊಳಗೆ ಬಂದರು ಗಮನಿಸದಂತಿರುತ್ತಿದ್ದಳು. ಮಕ್ಕಳಾದ ನಂತರ ಸಂಸಾರದ ಕಷ್ಟಗಳು ಜಾಸ್ತಿಯಾದವು. ಅವುಗಳನ್ನು ಅವಳು ಹಂಚಿಕೊಳ್ಳಬೇಕೆಂದು ನಾನೆಂದೂ ಒತ್ತಾಯಿಸಲಿಲ್ಲ. ನನಗೆ ತಿಳಿದಿತ್ತು ಅವಳು ಹೊರಗೆ ದುಡಿದು ತರುವುದು ನನಗೆ ಶೋಭೆ ಅಲ್ಲವೆಂದು. ನಾನೆಂದೂ ಅವಳನ್ನು ಸಂಸಾರದ ಖರ್ಚು ಭರಿಸಲು ದುಡಿ ಎಂದು ಒತ್ತಾಯಿಸಿಲ್ಲ.’ ಹೀಗೆ ಸಾಗಿತ್ತು ಆತನ ವೈವಾಹಿಕ ಜೀವನದ ವಿವರಣೆ. ಅಲ್ಲಿ ತನ್ನ ಹಲವಾರು ವೈಫಲ್ಯಗಳನ್ನು (ಕುಡಿತ, ಹೆಂಡತಿ ಮಕ್ಕಳನ್ನು ಪ್ರೀತಿಯಿಂದ ಸಾಕದಿರುವುದು, ಸಂಸಾರ ತೂಗಿಸಲು ಬೇಕಾದ ಆದಾಯ ಗಳಿಸಲು ವಿಫಲನಾದುದು) ಮುಚ್ಚಿಕೊಳ್ಳುವ ಎಲ್ಲ ಮಾಹಿತಿಗಳಿದ್ದವು.

ಇನ್ನು ಕೆಲವು ಸಂದರ್ಭಗಳಲ್ಲಿ ಸಂದರ್ಶಿನಿಗಳು ಒಂದೇ ವಿಚಾರದ ಬಗ್ಗೆ ಬೇರೆ ಬೇರೆ ಮೂಲಗಳಿಗೆ ಬೇರೆ ಮಾಹಿತಿ ನೀಡುತ್ತಾರೆ. ಉತ್ತರ ಕರ್ನಾಟಕದ ಒಂದು ಹಳ್ಳಿಯಲ್ಲಿ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳ ಮೇಲಿನ ಅಧ್ಯಯನಕ್ಕೆ ಸಂದರ್ಶನ ಸಂದರ್ಭದಲ್ಲಿ ಕುಟುಂಬದ ಭೂ ಹಿಡುವಳಿ ಬಗ್ಗೆ ಪ್ರಶ್ನೆ ಇತ್ತು. ಭೂಮಿ ಇಲ್ಲದವರು ಮತ್ತು ಕಡಿಮೆ ಇದ್ದವರು ತಮ್ಮ ಯಥಾಸ್ಥಿತಿಯನ್ನು ಹೇಳಿಕೊಂಡರು. ಆದರೆ ಸಾವಿರ ಎಕರೆಗಿಂತಲೂ ಹೆಚ್ಚು ಭೂಮಿ ಇದ್ದವರು ಸರಿಯಾದ ಮಾಹಿತಿ ನೀಡಲೇ ಇಲ್ಲ. ಅಂತಹ ಒಂದು ಉದಾಹರಣೆ ನೋಡಬಹುದು. ಹಳ್ಳಿಯಲ್ಲಿ ಸಾವಿರ ಎಕರೆಗಿಂತ ಹೆಚ್ಚು ಭೂಮಿ ಇರುವ ಐದು ಕುಟುಂಬಗಳಲ್ಲಿ ಆತನದ್ದು ಒಂದು. ‘ಯಜಮಾನ್ರೆ ತಮಗೆ ಎಷ್ಟು ಎಕರೆ ಭೂಮಿ ಇದೆ?’ ಎಂದು ಸಂದರ್ಶಕರು ಕೇಳಿದರು. ‘ಸುಮಾರು ಐವತ್ತರಿಂದ ಆರುವತ್ತು ಎಕರೆ  ಇರಬಹುದು’ ಎಂದರು ಭೂಮಾಲೀಕರು. ‘ತಮಗೆ ಸಾವಿರ ಎಕರೆಗಿಂತಲೂ ಹೆಚ್ಚು ಭೂಮಿ ಇದೆ ಎಂದು ಸುದ್ದಿ ಇದೆ’ ಎಂದು ಸಂದರ್ಶಕರು ಹೇಳಿದರು. ‘ಈ ಮಾಹಿತಿ ಯಾವ ಉದ್ದೇಶಕ್ಕೆ ಬೇಕು ನಿಮಗೆ?’ ಎಂದು ಮರುಪ್ರಶ್ನೆ ಹಾಕಿದರು ಭೂಮಾಲಿಕರು. ಮಾಹಿತಿ ಸಂಗ್ರಹಿಸುವ ಉದ್ದೇಶವನ್ನು ಸಂದರ್ಶಕರು ಹೇಳಿದರು. ‘ನೋಡಿ ಸ್ವಾಮಿ ನಿಮ್ಮ ಉದ್ದೇಶಕ್ಕೆ ಬೇಕಾದರೆ ನನಗೆ ನೂರಾರು ಎಕರೆ ಭೂಮಿ ಇದೆ ಎಂದು ಬರೆದುಕೊಳ್ಳಿ’ ಎಂದರು. ‘ಹಾಗೆ ಖುಶಿ ಬಂದಂತೆ ಬರೆದುಕೊಳ್ಳಲು ಆಗುವುದಿಲ್ಲ. ನೀವು ಸರಿಯಾದ ಮಾಹಿತಿ ನೀಡಬೇಕು’ ಎಂದರು ಸಂದರ್ಶಕರು. ‘ನಾನು ಹೇಳಿದ್ದು ಸರಿಯಾದ ಮಾಹಿತಿಯೇ. ಭೂದಾಖಲೆ ಪತ್ರಗಳಲ್ಲಿ ನಮೂದಿಸಿರುವ ಎಕರೆಗಳನ್ನೇ ಹೇಳಿದ್ದು’ ಎಂದರು. ‘ನಿಮಗೆ ಸಾವಿರಾರು ಎಕರೆ ಭೂಮಿ ಇದೆ ಎಂದು ಸುದ್ದಿ ಇದೆಯಲ್ಲ, ಅದರ ಬಗ್ಗೆ ಏನು ಹೇಳುತ್ತೀರಿ? ಎಂದು ಸಂದರ್ಶಕರು ಪ್ರಶ್ನಿಸಿದರು. ‘ನಿಮ್ಮ ದಾಖಲೆಗೆ ಏನು ಬೇಕೋ ಆ ಮಾಹಿತಿ ನಾನು ನೀಡಿದ್ದೇನೆ. ನಾನು ಇನ್ನು ಮುಂದೆ ಹೇಳಲಿರುವುದನ್ನು ನೀವು ದಾಖಲಿಸಬಾರದು. ನನಗೆ ಸಾವಿರ ಎಕರೆಗಿಂತಲೂ ಹೆಚ್ಚು ಭೂಮಿ ಇದೆ. ನಿಜ. ಎಪ್ಪತ್ತರ ಭೂಮಸೂದೆಯ ಹಾವಳಿಯನ್ನು ತಪ್ಪಿಸಿಕೊಳ್ಳಲು ದಾಖಲೆಯಲ್ಲಿ ಭೂ ಹಿಡುವಳಿಯನ್ನು ಕಡಿಮೆಗೊಳಿಸಲಾಗಿದೆ. ಭೂಮಿಯೆಲ್ಲಾ ನನ್ನ ಸ್ವಾಧೀನ ಇರುವುದಾದರೂ ದಾಖಲೆ ಪ್ರಕಾರ ಅವೆಲ್ಲ ನಮ್ಮ ಮಕ್ಕಳು ಮತ್ತು ಕುಟುಂಬದ ಸದಸ್ಯರ ಹೆಸರಿಲ್ಲಿದೆ’ ಎಂದರು ಹೀಗೆ ಭೂಮಾಲೀಕರು ತಮ್ಮ ಸಂದರ್ಶಕರ ಹಿನ್ನೆಲೆಯನ್ನು ವಿಚಾರಿಸಿ ಮಾಹಿತಿ ನೀಡುತ್ತಾರೆ. ಸಂಶೋಧನಾ ಉದ್ದೇಶಕ್ಕೆ ಎಷ್ಟು ಮಾಹಿತಿ ಬೇಕೋ ಅಷ್ಟನ್ನು ಮಾತ್ರ ನೀಡುವುದು. ಕಚೇರಿ ವ್ಯವಹಾರಕ್ಕಾದರೆ ಬೇರೆಯದೇ ಮಾಹಿತಿ ನೀಡುವುದು. ಹೀಗೆ ಬೇರೆ ಬೇರೆ ಮೂಲಗಳಿಗೆ ಬೇರೆ ಬೇರೆ ಮಾಹಿತಿ ನೀಡುವುದು ಕ್ರಮ. ಇವುಗಳಲ್ಲಿ ಯಾವುದು ವಾಸ್ತವಕ್ಕೆ ಹತ್ತಿರವಾದುದು ಅಥವಾ ದೂರವಾದುದು ಎಂದು ತೀರ್ಮಾನಕ್ಕೆ ಬರುವುದು ಕಷ್ಟ.[8]

[1] ಪ್ರಶ್ನಾವಳಿಗೆ ಸಂಬಂಧಿಸಿದ ಚರ್ಚೆಯನ್ನು ಸಮಾಜ ಸಂಶೋಧನೆಯ ಬಹುತೇಕ ಪುಸ್ತಕಗಳಲ್ಲಿ ನೋಡಬಹುದು. ಕೆಲವೊಂದು ಪುಸ್ತಕಗಳಲ್ಲಿ ಪ್ರಶ್ನಾವಳಿ ಸಿದ್ಧಪಡಿಸುವ ಹಂತದಿಂದ ಅವುಗಳ ಬಳಕೆ ತನಕದ ವಿವರಣೆಗಳಿವೆ. ಆದರೆ ನಾನು ಇಲ್ಲಿನ ವಿವರಣೆಗಳನ್ನು ನೀಡುವಾಗ ಪುಸ್ತಕಗಳಲ್ಲಿನ ವಿವರಗಳಿಗಿಂತ ಹೆಚ್ಚಾಗಿ ಸುಮಾರು ಹದಿನೈದು ವರ್ಷಗಳಲ್ಲಿ ಪ್ರಶ್ನಾವಳಿ ಬಳಕೆ ಮಾಡುವಾಗ ಆದ ಅನುಭವದ ಆಧಾರದಲ್ಲಿ ನೀಡಿದ್ದೇನೆ. ಆದುದರಿಂದ ಇಲ್ಲಿನ ವಿವರಣೆಗಳಿಗೆ ವಿಸ್ತಾರವಾದ ಅನ್ವಯಿಕತೆಯಿದೆಯೆಂದು ನಾನು ತಿಳಿಯುವುದಿಲ್ಲ.

[2] ತಿಳುವಳಿಕೆಗಳು ಪ್ರಶ್ನಾವಳಿಗಳನ್ನು ರೂಪಿಸಲು ಸಹಕಾರಿಯಾಗಿವೆ. ಆದರೆ ಅದೇ ಸಂದರ್ಭದಲ್ಲಿ ಈ ಬಗೆಯ ತಿಳುವಳಿಕೆ ಪ್ರಶ್ನಾವಳಿಗಳನ್ನು ತುಂಬುವ ಸಂದರ್ಭದಲ್ಲಿ ಅನನುಕೂಲವೂ ಆಗಬಹುದು. ಅದು ಹೇಗೆಂದರೆ ನಮ್ಮ ತಿಳುವಳಿಕೆ ಯಾವುದೋ ಒಂದು ಬಗೆಯ ಉತ್ತರವನ್ನು ಅಧ್ಯಯನಕ್ಕೆ ಒಳಗಾಗುವವರಿಂದ ಬಯಸುತ್ತದೆ. ಒಂದು ವೇಳೆ ನಾವು ಬಯಸಿದ ರೀತಿಯಲ್ಲಿ ಉತ್ತರ ಬರದಿದ್ದರೆ ಯಾವುದೋ ಒಂದು ಬಗೆಯಲ್ಲಿ ನಮ್ಮ ನಿರೀಕ್ಷಿತ ಉತ್ತರಗಳಿಗೆ ಪ್ರಯತ್ನಿಸುವ ಸಾಧ್ಯತೆ ಇದೆ.

[3] ಮೂರಕ್ಕಿಂತಲೂ ಹೆಚ್ಚು ವಿಧದ ಪ್ರಶ್ನೆಗಳಿವೆ – ಉದಾಹರಣೆಗೆ ಸ್ಕೇಲ್ ಬಳಸುವ ಪ್ರಶ್ನೆಗಳು. ನಮ್ಮ ಪರಿಸರದಲ್ಲಿ ಹೆಚ್ಚು ಬಳಕೆಯಲ್ಲಿರುವ ಪ್ರಶ್ನೆಗಳ ವಿಧಗಳನ್ನು ಮಾತ್ರ ನೀಡಿದ್ದೇನೆ. ನಮ್ಮಲ್ಲಿ ಪ್ರಶ್ನಾವಳಿಯನ್ನು ಅಧ್ಯಯನಕಾರರು ತುಂಬುವ ಕ್ರಮ ಇದೆ. ಶಾಸ್ತ್ರೀಯವಾಗಿ ಇದನ್ನು ಪ್ರಶ್ನಾವಳಿ ವಿಧಾನದಲ್ಲಿ ಮಾಹಿತಿ ಸಂಗ್ರಹ ಎನ್ನಲಾಗುವುದಿಲ್ಲ. ಇದನ್ನು ಅನುಸೂಚಿಯೆನ್ನುತ್ತಾರೆ.

[4] ವಿವರಗಳಿಗೆ ಗೂಡೆ ಮತ್ತು ಹ್ಯಾಟ್, ಮೇಥಡ್ಸ್ ಇನ್ಸೋಶಿಯಲ್ ರಿಸರ್ಚ್, ಸಿಂಗಪೂರ್: ಮೆಕ್‌ಗ್ರೋ ಹಿಲ್‌ಬುಕ್ಸ್ ಕಂಪೆನಿ, ೧೯೫೨ ಅವರ ಪುಸ್ತಕ ನೋಡಬಹುದು.

[5] ಸಂದರ್ಶನವನ್ನು ಈ ರೀತಿಯಲ್ಲಿ ನೋಡುವುದಕ್ಕೆ ಸಂಬಂಧಿಸಿದ ಮಾಹಿತಿಯನ್ನು ನಾನು ಕ್ಲೈವ್‌ಸೀಲ್ ಅವರ ಲೇಖನ, ‘ಕ್ವಾಲಿಟೇಟಿವ್ ಇಂಟರ್‌ವ್ಯೂ’, ಎನ್ನುವ ಲೇಖನದಿಂದ ಪಡೆದಿದ್ದೇನೆ. ಈ ಲೇಖನ ಕ್ಲೈವ್ ಸೀಲ್ ಸಂಪಾದಿಸಿದ, ರಿಸರ್ಚಿಂಗ್ ಸೊಸೈಟಿ ಆಂಡ್ ಕಲ್ಚರ್, ನ್ಯೂಡೆಲ್ಲಿ: ಸೇಜ್ ಪಬ್ಲಿಕೇಶನ್ಸ್, ೧೯೯೮, ಪು. ೨೦೨-೨೧೬, ಪುಸ್ತಕದಲ್ಲಿದೆ.

[6] ಈ ಬಗೆಯ ಚರ್ಚೆಯ ವಿವರಗಳನ್ನು ನೀಡುವ ಸಾಕಷ್ಟು ಪುಸ್ತಕಗಳಿವೆ. ನಾನು ಇಲ್ಲಿ ಮಾಡಿರುವ ವಾದಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಈ ಕೆಳಗಿನ ಪುಸ್ತಕಗಳಿಂದ ಪಡೆದಿದ್ದೇನೆ – ಪಯರ್ಬೆಂಡ್, ಎಗೈನೆಸ್ಟ್ ಮೆಥಡ್, ಲಂಡನ್: ನ್ಯೂಲೆಫ್ಟ್ ರಿವ್ಯೂ,೧೯೭೫, ವಿಲ್‌ಮೆನ್ ಎಂ. ಆಂಡ್ ಕಾಂಟರ್ ಆರ್.ಎ. (ಸಂ), ಅನದರ್ ವಾಯ್ಸ್ಫೆಮಿನಿಸ್ಟ್ ಪರ್ಸ್ಪೆಕ್ಟೀವ್ಸ್ ಆನ್ ಸೋಶಿಯಲ್ ಲೈಫ್ ಆಂಡ್ ಸೋಶಿಯಲ್ ಸೈನ್ಸ್, ನ್ಯೂಯಾರ್ಕ್: ಆಂಕರ್ ಪಬ್ಲಿಕೇಶನ್ಸ್, ೧೯೭೪, ಪಾರ್ಥನಾಥ ಮುಖರ್ಜಿ (ಸಂ), ಮೆಥಡ್ ಇನ್‌ಸೋಶಿಯಲ್ ರಿಸರ್ಚ್- ಡೈಲೆಮಾಸ್ ಆಂಡ್ ಪರ‍್ಸ್‌ಪೆಕ್ಟೀವ್ಸ್, ನ್ಯೂಡೆಲ್ಲಿ: ಸೇಜ್ ಪಬ್ಲಿಕೇಶನ್ಸ್, ೨೦೦೦ ಮತ್ತು ಇಮಾನ್ಯುಲ್ ವೆಲೆರಿಸ್ಟೇಯಿನ್ (ಸಂ), ಓಪನ್ ದಿ ಸೋಶಿಯಲ್ ಸೈನ್ಸಸ್, ನ್ಯೂಡೆಲ್ಲಿ: ವಿಸ್ತಾರ್ ಪಬ್ಲಿಕೇಶನ್ಸ್, ೧೯೯೮.

[7] ವಿವರಗಳನ್ನು ಮೇಲೆ ಉಲ್ಲೇಖಿಸಿದ ಕ್ಲೈವ್ ಸೀಲ್ ಅವರ ಲೇಖನ ‘ಕ್ವಾಲಿಟೇಟಿವ್ ಇಂಟರ್‌ವ್ಯೂ’ ಎನ್ನುವ ಲೇಖನದಿಂದ ಪಡೆದಿದ್ದೇನೆ. ಈ ಲೇಖನ ಕಲ್‌ಐವ್ ಸೀಲ್ ಸಂಪಾದಿಸಿದ, ರಿಸರ್ಚಿಂಗ್ ಸೊಸೈಟಿ ಆಂಡ್ ಕಲ್ಚರ್, ಪುಸ್ತಕದ ಪು. ೨೦೨-೨೧೬ ಗಳಲ್ಲಿವೆ.

[8] ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಯರೆಹಂಚಿನಾಳ ಪಂಚಾಯತ್‌ಗೆ ಸೇರಿದ ಯರೆಹಂಚಿನಾಳ ಗ್ರಾಮದಲ್ಲಿ ಪಂಚಾಯತ್ ಯೋಜನೆ ಸಿದ್ಧಪಡಿಸಲು ಮಾಹಿತಿ ಸಂಗ್ರಹಿಸುವ ಸಂದರ್ಭದಲ್ಲಿ ಮೇಲಿನ ಅನುಭವ ಆಯಿತು. ಈ ಹಳ್ಳಿಯ ಸಾಮಾಜಿಕ ಹಾಗೂ ಆರ್ಥಿಕ ವಿವರಗಳನ್ನು ಚಂದ್ರ ಪೂಜಾರಿಯವರ ಜನಾಯೋಜನೆಹೈದರಾಬಾದ್ ಕರ್ನಾಟಕದ ಅನುಭವಗಳು ಪುಸ್ತಕದಲ್ಲಿ (ಪು. ೫೬-೧೦೦) ನೋಡಬಹುದು.