ಅವಲೋಕನಾ ವಿಧಾನ

ಪ್ರಶ್ನಾವಳಿ, ಸಂದರ್ಶನ ಇತ್ಯಾದಿಗಳು ವಿಜ್ಞಾನದ ವಿಧಾನಗಳೆಂದು ಈಗಾಗಲೇ ಅವಹೇಳನಕ್ಕೆ ಗುರಿಯಾಗಿದೆ. ಸಮಾಜವಿಜ್ಞಾನದಲ್ಲಿ ಅವುಗಳಿಗೆ ಹಿಂದಿನ ಮಾನ್ಯತೆ ಇಲ್ಲ. ಇಂದು ಸಮಾಜವಿಜ್ಞಾನದಲ್ಲಿ ತುಂಬಾ ಪ್ರಚಾರದಲ್ಲಿರುವ ಕೆಲವು ವಿಧಾನಗಳಲ್ಲಿ ಅವಲೋಕನಾ ವಿಧಾನ ಕೂಡ ಒಂದು. ಅವಲೋಕನ ವಿಧಾನದ ಮಹತ್ವದ ಹಿಂದೆ ಕೆಲವು ವಿಚಾರಗಳು ಕೆಲಸ ಮಾಡಿವೆ. ಪ್ರಶ್ನಾವಳಿ ಅಥವಾ ಸಂದರ್ಶನಗಳಂತೆ ಅವಲೋಕನಾ ವಿಧಾನ ವಿಜ್ಞಾನದ ವಿಧಾನದ ನಕಲು ಪ್ರತಿ ಅಲ್ಲ ಎನ್ನುವುದು ಅವುಗಳಲ್ಲಿ ಪ್ರಮುಖ ಅಂಶ. ಅವಲೋಕನಾ ವಿಧಾನಕ್ಕೆ ಈ ಹೆಚ್ಚುಗಾರಿಕೆ ಬಂದಿರುವುದು ಅದರ ಮಾನವಶಾಶ್ತ್ರದ ಹಿನ್ನೆಲೆಯಿಂದ. ಪಶ್ಚಿಮದ ಏಕಮಾದರಿಯ ಅಭಿವೃದ್ಧಿ, ಸಂಸ್ಕೃತಿ ಇತ್ಯಾದಿಗಳಿಗಿಂತ ಭಿನ್ನವಾದ ಬಹುಸಂಸ್ಕೃತಿಗಳ ಇರುವಿಕೆ ಬಗ್ಗೆ ಮತ್ತು ಅವು ಕೂಡ ಪಶ್ಚಿಮದ ಮಾದರಿಗಳಂತೆ ಶಕ್ತಿಶಾಲಿಯಾದ ಮಾದರಿಗಳೆಂದು ತೋರಿಸುವಲ್ಲಿ ಮಾನವಶಾಸ್ತ್ರ ಅದರ ವಸಾಹತು ಹಿನ್ನೆಲೆಯ ಕಪ್ಪು ಚುಕ್ಕೆಯ ನಡುವೆ ಕೂಡ ಪ್ರಯತ್ನಿಸಿದೆ. ಆ ಕೆಲಸವನ್ನು ಅದು ಮಾಡಿರುವುದು ಅವಲೋಕನಾ ವಿಧಾನದಲ್ಲಿ ಪ್ರಪಂಚದಲ್ಲಿ ಇರುವ ಸಣ್ಣ ಸಣ್ಣ ಸಮುದಾಯಗಳನ್ನು ಅಧ್ಯಯನ ಮಾಡುವ ಮೂಲಕ. ಹೀಗೆ ಅವಲೋಕನಾ ವಿಧಾನಕ್ಕೆ ಪಶ್ಚಿಮದ ಏಕಮಾದರಿಗಳಿಂದ ಬಿಡಿಸಿಕೊಡುವ ಶಕ್ತಿಯಿದೆಯೆಂದು ಬಗೆಯಲಾಗಿದೆ. ಜತೆಗೆ ಅದರಲ್ಲಿ ವಿಜ್ಞಾನದ ವಿಧಾನದ ಪ್ರಭಾವ ಅತಿಯಾಗಿ ಇಲ್ಲ ಎನ್ನುವ ಗ್ರಹಿಕೆಯೂ ಇದೆ. ಅವಲೋಕನಾ ವಿಧನವನ್ನು ವಿವರಿಸುವ ಈ ಭಾಗದಲ್ಲಿ ಅವಲೋಕನ ವಿಧಾನ ಕುರಿತ ಈ ಗ್ರಹಿಕೆ ಎಷ್ಟು ಸರಿ ಎನ್ನುವ ವಿಶ್ಲೇಷಣೆಯೂ ಇದೆ.

ಅವಲೋಕನೆ ಮಾನವನ ಒಂದು ಸಹಜ ಕ್ರಿಯೆ. ಪ್ರತಿಯೊಬ್ಬರೂ ತಮ್ಮ ದಿನನಿತ್ಯ ಬದುಕಲ್ಲಿ ಹಲವಾರು ವಿಚಾರಗಳನ್ನು ಅವಲೋಕಿಸುತ್ತಿರುತ್ತಾರೆ. ತಮ್ಮ ಮಕ್ಕಳ ನಡುವಳಿಕೆ ಇರಬಹುದು ಅಥವಾ ಸಂಬಂಧಿಕರ ವರ್ತನೆ ಇರಬಹುದು ಅಥವ ತೋಟದಲ್ಲಿ ಬೆಳೆಯುವ ಗಿಡಗಳ ಬೆಳವಣಿಗೆ ಇರಬಹುದು. ಹೀಗೆ ಒಂದಲ್ಲ ಒಂದು ವಿಚಾರವನ್ನು ಅವಲೋಕಿಸುವುದು ಮಾನವನ ಸಹಜ ಕ್ರಿಯೆ. ಮೇಲಿನ ಅವಲೋಕನೆಗಳಿಂದ ಅವಲೋಕನಕ್ಕೆ ಒಳಗಾದ ವಿಷಯಗಳ ಬಗ್ಗೆ (ಮಕ್ಕಳ ನಡವಳಿಕೆ, ಸಂಬಂಧಿಕರ ವರ್ತನೆ, ತೆಂಗಿನ ಮರದ ಬೆಳವಣಿಗೆ) ಜ್ಞಾನ ಸಂಪಾದನೆಯಾಗುತ್ತದೆ. ಆ ಜ್ಞಾನ ಅವಲೋಕನಕ್ಕೆ ಒಲಗಾದ ವಿಷಯಗಳ ಕುರಿತ ನಮ್ಮ ಸಂಬಂಧವನ್ನು ಪ್ರಭಾವಿಸಬಹುದು. ಶಾಲೆಯಿಂದ ದಿನಾ ತಡವಾಗಿ ಬರುವ ಮಗನ ನಡವಳಿಕೆಯನ್ನು ಅವಲೋಕಿಸಿ ಮಗನೊಂದಿಗೆ ಕಟ್ಟುನಿಟ್ಟಿನಿಂದ ವ್ಯವಹರಿಸಲು ಆರಂಭಿಸಿಬಹುದು. ಅವಲೋಕನದಿಂದ ತೆಂಗಿನ ಸಸಿ ದಿನದಿಂದ ದಿನ ಸೊರಗಲು ಕಾರಣವೇನೆಂದು ತಿಳಿಯಬಹುದು ಮತ್ತು ಅದರ ಪರಿಹಾರಕ್ಕೆ ಪ್ರಯತ್ನಿಸಬಹುದು. ಹೀಗೆ ಅವಲೋಕನ ಎಂದ ಕೂಡಲೇ ಅದು ಕೇವಲ ಸಂಶೋಧನೆಯಲ್ಲಿ ಬಳಕೆಯಾಗುವ ವಿಧಾನವೆಂದು ತೀಮಾನಿಸುವುದು ಸರಿಯಲ್ಲ. ಅವಲೋಕನಕ್ಕೆ ಸಂಬಂಧಿಸಿದಂತೆ ಮತ್ತೊಂದು ಕಲ್ಪನೆ ಕೂಡ ತುಂಬಾಪ್ರಚಾರದಲ್ಲಿದೆ. ಅದೇನೆಂದರೆ ಅವಲೋಕನಾ ವಿಧಾನ ಮಾನವಶಾಸ್ತ್ರದ ಕೊಡುಗೆ ಆದುದರಿಂದ ಅದರ ಬಳಕೆ ಬುಡಕಟ್ಟು ಅಥವಾ ಮುಖ್ಯ ವಾಹಿನಿಯಿಂದ ದೂರ ಇರುವ ಸಣ್ಣ ಸಣ್ಣ ಸಮುದಾಯಗಳ ಅಧ್ಯಯನಕ್ಕೆ ಮಾತ್ರ ಬಳಕೆ ಆಗುತ್ತಿದೆ ಎನ್ನುವ ತಿಳುವಳಿಕೆ. ಅವಲೋಕನವನ್ನು ಹೆಚ್ಚು ಪ್ರಚಾರಪಡಿಸಿದವರು ಮತ್ತು ಸತತವಾಗಿ ಮತ್ತು ವಿಸ್ತಾರವಾಗಿ ಬಳಸುವವರು ಮಾನವಶಾಸ್ತ್ರಜ್ಞರು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಇದು ಇಲ್ಲಿ ಮಾತ್ರ ಬಳಕೆ ಆಗುತ್ತಿದೆ ಅಥವಾ ಈ ವಿಧಾನವನ್ನು ಬೆಳೆಸಿದುದರಲ್ಲಿ ಕೇವಲ ಮಾನವಶಾಸ್ತ್ರಜ್ಞರ ಪಾತ್ರವಿದೆ ಎಂದು ತಿಳಿಯುವುದು ಸರಿಯಲ್ಲ. ಮಾನವಶಾಸ್ತ್ರಜ್ಞರಷ್ಟೇ ಪ್ರಮಾಣದಲ್ಲಿ ಅಥವಾ ಅವರಿಗಿಂತ ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ಅವಲೋಕನಾ ವಿಧಾನವನ್ನು ಬೆಳೆಸಿದವರೆಂದರೆ ವಿವಿಧ ಕ್ಷೇತ್ರಗಳ (ಕೈಗಾರಿಕೆ, ಶಿಕ್ಷಣ, ಆರೋಗ್ಯ ಇತ್ಯಾದಿ ಕ್ಷೇತ್ರಗಳ) ಮನಶಾಸ್ತ್ರಜ್ಞರು.

ಕೈಗಾರಿಕೆಗಳ ಬೆಳವಣಿಗೆಯೊಂದಿಗೆ ಉತ್ಪಾದನಾ ವೆಚ್ಚದ ಮೇಲೆ ಹಿಡಿತ ಸಾಧಿಸಲು ಶ್ರಮಿಕರ ಶ್ರಮದ ಮೇಲೆ ಹಿಡಿತ ಸಾಧಿಸುವುದು ಅನಿವಾರ್ಯವಾಯಿತು. ಶ್ರಮಿಕರ ಶ್ರಮದ ಮೇಲೆ ಹಿಡಿತ ಸಾಧಿಸಲು ಮೊದಲಿಗೆ ಅವರ ದೇಹದ ಮೇಲೆ ಹಿಡಿತ ಸಾಧಿಸುವುದು ಅಗತ್ಯವೆನಿಸಿತು. ನಂತರದ ದಿನಗಳಲ್ಲಿ ಶ್ರಮಿಕರ ಮನಸ್ಸಿನ ಮೇಲೆ ಹಿಡಿತ ಸಾಧಿಸುವುದು ಶ್ರಮಿಕ ಉತ್ಪಾದನೆ ಹೆಚ್ಚಿಸಲು ಸುಲಭ ಅಥವಾ ಕಡಿಮೆ ವೆಚ್ಚದ ದಾರಿ ಎಂದು ನಿರ್ಧರಿಸಲಾಯಿತು. ಈ ಎಲ್ಲ ತಿಳುವಳಿಕೆ ರೂಪಗೊಳ್ಳುವಲ್ಲಿ ಅವಲೋಕನಾ ವಿಧಾನದಲ್ಲಿ ನಡೆಸಿದ ಅಧ್ಯಯನಗಳ ಪಾಲಿದೆ. ಹಥೋರ್ನ್ ಪ್ರಯೋಗ ಅವಲೋಕನಾ ವಿಧಾನ ಕುರಿತ ಕೈಗಾರಿಕಾ ಮನಶ್ಶಾಸ್ತ್ರದಲ್ಲಿ ತುಂಬಾ ಪ್ರಚಾರದಲ್ಲಿರುವ ಒಂದು ಉದಾಹರಣೆ.[1] ಬೆಳಕು ಮತ್ತು ಶ್ರಮಿಕರ ಕಾರ್ಯಕ್ಷಮತೆ ನಡುವೆ ಇರುವ ಸಂಬಂಧವನ್ನು ಪರೀಕ್ಷಿಸಲು ಈ ಪ್ರಯೋಗ ನಡೆದಿದೆ. ಕೆಲಸಗಾರರ ಒಂದು ಗುಂಪನ್ನು ಈ ಪ್ರಯೋಗಕ್ಕಾಗಿ ಆಯ್ಕೆ ಮಾಡಲಾಯಿತು ಮತ್ತು ಅವರಿಗೆ ಅವಲೋಕನಾ ವಿಧಾನದಲ್ಲಿ ಬೆಳಕು ಮತ್ತು ಕೆಲಸಗಾರರ ಕಾರ್ಯಕ್ಷಮತೆಯ ನಡುವಿರುವ ಸಂಬಂಧವನ್ನು ಅಧ್ಯಯನ ಮಾಡುವ ಅಧ್ಯಯನಕಾರರ ಉದ್ದೇಶವನ್ನು ತಿಳಿಸಲಾಯಿತು. ಅದರಂತೆ ಆರಂಭದಲ್ಲಿ ಸಾಮಾನ್ಯ ಪ್ರಮಾಣದ ಬೆಳಕಿನಲ್ಲಿ ಅವರಿಗೆ ಕೆಲಸ ಮಾಡಲು ಸೂಚಿಸಲಾಯಿತು. ಕಾಲಕ್ರಮೇಣ ಬೆಳಕಿನ ಪ್ರಮಾಣವನ್ನು ಹೆಚ್ಚಿಸಲಾಯಿತು. ಬೆಳಕಿನ ಪ್ರಮಾಣದಲ್ಲಿ ಆದ ಬದಲಾವಣೆಗೆ ಅನುಗುಣವಾಗಿ ಅವರ ಉತ್ಪಾದನಾ ಪ್ರಮಾಣದಲ್ಲಿ ಬದಲಾವಣೆ ಆಗಲಿಲ್ಲ. ನಂತರ ಬೆಳಕಿನ ಪ್ರಮಾಣವನ್ನು ಹಂತ ಹಂತವಾಗಿ ಕಡಿಮೆ ಮಾಡಲಾಯಿತು. ಕಡಿಮೆ ಮಾಡುತ್ತಾ ಮಾಡುತ್ತಾ ಬೆಳದಿಂಗಳ ಬೆಳಕಿನಷ್ಟಕ್ಕೆ ನಿಲ್ಲಿಸಲಾಯಿತು. ಆಶ್ಚರ್ಯವೆಂದರೆ ಬೆಳಕಿನ ಪ್ರಮಾಣ ಕಡಿಮೆ ಆಗುತ್ತಿದಂತೆ ಶ್ರಮಿಕರ ಉತ್ಪಾದನಾ ಪ್ರಮಾಣ ಕಡಿಮೆ ಆಗುವ ಬದಲು ಹೆಚ್ಚುತ್ತಾ ಹೋಯಿತು. ಅಂದರೆ ಬೆಳಕಿನ ಪ್ರಮಾಣಕ್ಕೂ ಕೆಲಸಗಾರರ ಕಾರ್ಯಕ್ಷಮತೆಗೂ ಸಂಬಂಧವಿಲ್ಲವೆಂದಾಯಿತು. ಇದು ಅಧ್ಯಯನಕಾರರ ಮೂಲ ಗೃಹೀತವನ್ನೇ ಅಡಿಮೇಲು ಮಾಡಿತು. ಆದರೆ ಬೆಳಕು ಕಡಿಮೆ ಆದಾಗಲೂ ಹೆಚ್ಚಿನ ಉತ್ಪಾದನೆಯನ್ನು ವಿವರಿಸುವುದು ಹೇಗೆ? ಅಧ್ಯಯನಕಾರರ ಪ್ರಕಾರ ಕೆಲಸಗಾರರನ್ನು ಅಧ್ಯಯನಕ್ಕೆ ಒಳಪಡಿಸಿರುವ ಅಂಶವೇ ಈ ಗುಂಪಿನ ಉತ್ಪಾದನೆ ಹೆಚ್ಚಲು ಕಾರಣ. ತಮ್ಮನ್ನು ಅವಲೋಕಿಸುತ್ತಿದ್ದಾರೆ ಎನ್ನುವ ಅಂಶ ಕೆಲಸಗಾರರಲ್ಲಿ ತಾವು ಪ್ರಾಮುಖ್ಯರು ಅಥವಾ ಗುರುತಿಸಲ್ಪಟ್ಟವರು ಎನ್ನುವ ಭಾವನೆಯನ್ನು ಮೂಡಿಸಿತು. ಈ ಭಾವನೆ ಅವರ ಕಾರ್ಯಕ್ಷಮತೆಯನ್ನು ಹೆಚ್ಚಿಸಿದೆ ಎನ್ನುವ ತೀರ್ಮಾನಕ್ಕೆ ಬರಲಾಯಿತು. ಅವಲೋಕನಾ ವಿಧಾನದಿಂದ ಪಡೆದ ಈ ತೀರ್ಮಾನ ನಂತರ ಕೆಲಸಗಾರರ ಕಾರ್ಯಕ್ಷಮತೆ ಮತ್ತು ಅವರಿಗೆ ನೀಡಬೇಕಾದ ಸವಲತ್ತುಗಳ ಥಿಯರಿಗಳನ್ನು ಸಾಕಷ್ಟು ಪ್ರಭಾವಿಸಿದೆ.

ಅವಲೋಕನದಲ್ಲಿ ಎರಡು ಬಗೆಗಳಿವೆ. ಒಂದು, ಸರಳ ಅವಲೋಕನ. ಈ ವಿಧಾನದಲ್ಲಿ ಅವಲೋಕಿಸುವವರು ಮತ್ತು ಅವಲೋಕನಕ್ಕೆ ಒಳಗಾಗುವವರ ಮೇಲೆ ಯಾವುದೇ ನಿರ್ಬಂಧ ಇಲ್ಲ. ಎರಡು, ಶಿಸ್ತುಬದ್ಧ ಅವಲೋಕನ. ಈ ವಿಧಾನದಲ್ಲಿ ಅವಲೋಕಿಸುವವರು ಮತ್ತು ಅವಲೋಕನಕ್ಕೆ ಒಳಗಾಗುವವರು ಕೆಲವೊಂದು ನೀತಿ ನಿಯಮ ಅನುಸಾರ ವ್ಯವಹರಿಸಬೇಕಾಗುತ್ತದೆ.[2] ಸರಳ ಅವಲೋಕನವನ್ನು ಎರಡು ವಿಧಗಳಾಗಿ ವಿಂಗಡಿಸಬಹುದು. ಒಂದು ಸಹಭಾಗಿತ್ವ ಅವಲೋಕನ ಮತ್ತು ಎರಡು ಸಹಭಾಗಿತ್ವರಹಿತ ಅವಲೋಕನ. ಸಹಭಾಗಿತ್ವ ಅವಲೋಕನದಲ್ಲಿ ಅಧ್ಯಯನಕಾರರು ತಾವು ಅಧ್ಯಯನ ಮಾಡುವ ಸಮುದಾಯದಲ್ಲಿ ಒಬ್ಬ ಸದಸ್ಯರಾಗಿ ಸೇರಿಕೊಂಡು ಅವಲೋಕನೆ ಮಾಡುತ್ತಾರೆ. ಯಾವುದೋ ಒಂದು ಬುಡಕಟ್ಟು ಅಧ್ಯಯನ ಮಾಡುವವರು ಬುಡಕಟ್ಟು ಸಮುದಾಯದೊಂದಿಗೆ ಬೆರೆತು (ಅವರ ದಿನನಿತ್ಯದ ವ್ಯವಹಾರದಲ್ಲಿ ಯಾವುದೋ ಒಂದು ರೂಪದಲ್ಲಿ ಪಾಲುಗೊಂಡು) ಅಧ್ಯಯನ ಮಾಡುವುದು ಅಥವಾ ಫ್ಯಾಕ್ಟರಿಯಲ್ಲಿ ಶ್ರಮಿಕರಂತೆ ಇದ್ದುಕೊಂಡು ಅಧ್ಯಯನ ಮಾಡುವುದು ಸಹಭಾಗಿತ್ವ ಅವಲೋಕನದ ಮುಖ್ಯ ಲಕ್ಷಣ. ಅಧ್ಯಯನ ಮಾಡಬೇಕಾದ ಸಮುದಾಯದೊಂದಿಗೆ ಎರಡು ರೀತಿಯಲ್ಲಿ ಬೆರೆಯುವ ಕ್ರಮ ಇದೆ. ಒಂದು ಅಧ್ಯಯನಕ್ಕೆ ಒಳಗಾಗುವ ಸಮುದಾಯದ ಗಮನಕ್ಕೆ ತಂದು ಅವರ ಒಪ್ಪಿಗೆ ಪಡೆದು ಸಮುದಾಯದ ವ್ಯವಹಾರಗಳಲ್ಲಿ ಪಾಲುಗೊಳ್ಳುವುದು. ಎರಡು, ಅಧ್ಯಯನಕ್ಕೆ ಒಳಗಾಗುವ ಸಮುದಾಯದ ಗಮನಕ್ಕೆ ಬಾರದೆ ಅಥವಾ ಒಪ್ಪಿಗೆ ಪಡೆಯದೆ ಅವಲೋಕನ ಮಾಡುವುದು. ಉದಾಹರಣೆಗೆ ಅಸಂಘಟಿತ ಕಾರ್ಮಿಕರ ಸ್ಥಿತಿಗತಿ ಅರಿಯಲು ಅವಲೋಕನ ವಿಧಾನದಲ್ಲಿ ಅಧ್ಯಯನ ಮಾಡಲು ಅವಕಾಶ ಕೊಡಿ ಎಂದರೆ ಫ್ಯಾಕ್ಟರಿ ಮಾಲಿಕರು ಒಪ್ಪಿಗೆ ಕೊಡುವ ಸಾಧ್ಯತೆಗಳು ಕಡಿಮೆ ಇದೆ. ಅಂತಹ ಸಂದರ್ಭದಲ್ಲಿ ಅಸಂಘಟಿತ ಕಾರ್ಮಿಕರಾಗಿ ಅಲ್ಲಿ ಕೆಲಸಕ್ಕೆ ಸೇರಿಕೊಂಡು ಕಾರ್ಮಿಕರ ಸ್ಥಿತಿಗತಿ ಅಧ್ಯಯನ ಮಾಡುವುದು ಸೂಕ್ತ ಕ್ರಮ ಆಗುತ್ತದೆ. ಹಾಗೆಂದು ಇದು ಎಲ್ಲ ಸಂದರ್ಭಗಳಲ್ಲಿ ಅನುಸರಿಸಬಹುದಾದ ಕ್ರಮವಲ್ಲ. ಉದಾಹರಣೆಗೆ ರೆಡ್‌ಲೈಟ್ ಪ್ರದೇಶದ ಮಹಿಳೆಯರ ಸ್ಥಿತಿಗತಿ ಅರಿಯಲು ಬೆಲೆವೆಣ್ಣಾಗಿ ಅಧ್ಯಯನಕಾರರು ಹೋಗಲು ಸಾಧ್ಯವಿಲ್ಲ.

ಸರಳ ಅವಲೋಕನದಲ್ಲಿ ಸಮುದಾಯಗಳ, ಶ್ರಮಿಕರ ಮುಂತಾದವರ ಸಾಮಾಜಿಕ, ರಾಜಕೀಯ, ಆರ್ಥಿಕ, ಸಾಂಸ್ಕೃತಿಕ ಬದುಕನ್ನು ಯಥಾರೂಪದಲ್ಲಿ ಗ್ರಹಿಸಲಾಗುವುದು. ಅಂದರೆ ಸಮುದಾಯಗಳಿಗೆ ತಾವು ಅಧ್ಯಯನಕ್ಕೆ ಒಳಗಾಗಿದ್ದೇವೆ ಎನ್ನುವ ಅರಿವನ್ನು ಮೂಡಿಸದೆ ಅವರ ಬದುಕನ್ನು ಹಿಡಿದಿಡುವುದು ಅಧ್ಯಯನಕಾರರ ಕೆಲಸ. ಮೇಲ್ನೋಟಕ್ಕೆ ಇಲ್ಲಿ ಎರಡೂ ಪಕ್ಷ ಕೂಡ (ಅಧ್ಯಯನ ಮಾಡುವವರು ಮತ್ತು ಅಧ್ಯಯನಕ್ಕೆ ಒಳಗಾಗುವವರು) ಅಧ್ಯಯನದ ಯಾವುದೇ ಶಿಸ್ತಿಗೆ ಒಳಪಟ್ಟಂತೆ ಕಾಣುವುದಿಲ್ಲ. ಇದು ನಿಜವಲ್ಲ. ಅಧ್ಯಯನಕ್ಕೆ ಒಳಗಾಗುವವರ ಮೇಲೆ ಯಾವುದೇ ನಿರ್ಬಂಧವಿಲ್ಲ. ನಿಜ. ಆದರೆ ಅಧ್ಯಯನಕಾರರು ಯಾವುದೇ ಇತಿಮಿತಿ ಇಲ್ಲದೆ ಕ್ಷೇತ್ರದಲ್ಲಿ ಇರುವುದನ್ನೆಲ್ಲ ದಾಖಲಿಸುವುದು ಅವಲೋಕನೆ ಆಗುವುದಿಲ್ಲ. ಅವಲೋಕನಾ ವಿಧಾನದಲ್ಲಿ ಮಾಹಿತಿ ಸಂಗ್ರಹಿಸುವ ಮೊದಲು ಅಧ್ಯಯನಕಾರರು ತಮಗೆ ಬೇಕಾಗಿರುವ ಮಾಹಿತಿಯ ಪಟ್ಟಿ ಮತ್ತು ಅದಕ್ಕೆ ಅವಲೋಕಿಸಬೇಕಾದ ಅಂಶಗಳ ಪಟ್ಟಿಯನ್ನು ಮಾಡಿಕೊಳ್ಳಬೇಕಾಗುತ್ತದೆ. ಜಾತ್ರೆಯ ಸಾಂಸ್ಕೃತಿಕ ಅಧ್ಯಯನವನ್ನು ಉದಾಹರಣೆಯಾಗಿ ತೆಗೆದುಕೊಳ್ಳೋಣ. ಜಾತ್ರೆಯ ಸಾಂಸ್ಕೃತಿಕ ಅಧ್ಯಯನದಲ್ಲಿ ಜಾತ್ರೆಗೆ ಸಂಬಂಧಿಸಿದ ಹಲವಾರು ಪ್ರಶ್ನೆಗಳು ಜೋಡಿಸಲ್ಪಟ್ಟಿವೆ. ಜಾತ್ರೆಯ ಸಾಂಸ್ಕೃತಿಕ ಆಚರಣೆಗಳೇನು? ಅವುಗಳಲ್ಲಿ ಪಾಲುಗೊಳ್ಳುವವರು ಯಾರು?ಜಾತ್ರೆಗೆ ಬರುವ ಭಕ್ತಾದಿಗಳ ಹಿನ್ನೆಲೆಯೇನು? ಜಾತ್ರೆಯಲ್ಲಿ ಭಕ್ತಾದಿಗಳು ನಂಬುಗೆಯ ಜತೆ ಪೂರೈಸಿಕೊಳ್ಳುವ ಇತರ ಕೆಲಸಗಳೇನು? ಇತ್ಯಾದಿ ಪ್ರಶ್ನೆಗಳನ್ನು ಜಾತ್ರೆಯ ಸಾಂಸ್ಕೃತಿಕ ಅಧ್ಯಯನದಲ್ಲಿ ಸೇರಿಸಬಹುದು. ಜಾತ್ರೆಯ ವಿವಿಧ ಆಯಾಮಗಳನ್ನು ಅಧ್ಯಯನ ಮಾಡುವವರು ಮಾಹಿತಿ ಸಂಗ್ರಹಕ್ಕಾಗಿ ಅವಲೋಕನ ವಿಧಾನವನ್ನು ಬಳಸುವ ಮುನ್ನ ಮೇಲಿನ ಪ್ರಶ್ನೆಗಳಿಗೆ ಉತ್ತರ ಪಡೆಯಲು ಅವಲೋಕನೆ ಮಾಡಬೇಕಾದ ಜಾತ್ರೆಯ ವಿವಿಧ ಮಜಲುಗಳನ್ನು ಗುರುತಿಸಬೇಕಾಗುತ್ತದೆ. ಉದಾಹರಣೆಗೆ ನಂಬುಗೆಯ ಜತೆ ಜಾತ್ರೆಯಿಂದ ಪೂರೈಸಿಕೊಳ್ಳುವ ಇತರ ಕೆಲಸಗಳ ಬಗ್ಗೆ ಮಾಹಿತಿ ಬೇಕಾದರೆ ಭಕ್ತಾದಿಗಳನ್ನು ಮುಖ್ಯ ಆಚರಣೆಯಿಂದ ಹೊರತು ಪಡಿಸಿದ ಸ್ಥಳಗಳಲ್ಲಿ ಅವಲೋಕನೆ ಮಾಡಬೇಕು. ಜಾತ್ರಾ ಸ್ಥಳದಲ್ಲಿ ಹಾಕಿರುವ ಅಂಗಡಿಗಳಲ್ಲಿ, ಟೆಂಟ್ ಟಾಕೀಸುಗಳಲ್ಲಿ, ನಾಟಕದ ಕಂಪನಿಗಳ ಟೆಂಟ್‌ಗಳಲ್ಲಿ, ಚಕ್ಕಡಿ ಪಕ್ಕ ಕಲ್ಲು ಪೇರಿಸಿ ಅಡುಗೆ ಮಾಡುವಲ್ಲಿ ಹೀಗೆ ಹಲವಾರು ಸ್ಥಳಗಳಲ್ಲಿ ಅವಲೋಕನೆ ಮಾಡಬೇಕಾಗುತ್ತದೆ. ಈ ಅವಲೋಕನೆಗಳಿಂದ ಜಾತ್ರೆಯ ನಂಬುಗೇತರ ಮುಖಗಳ ಪರಿಚಯ ಸಾಧ್ಯ.

ಶಿಸ್ತುಬದ್ಧ ಅವಲೋಕನದಲ್ಲಿ ಸ್ಥೂಲ ಚಿತ್ರಣಕ್ಕಿಂತ ನಿಖರ ಚಿತ್ರಣಕ್ಕೆ ಮಹತ್ವ ನೀಡಲಾಗಿದೆ. ಸಂಖ್ಯೆ, ದೂರ, ಗಾತ್ರ, ಪ್ರಮಾಣ ಇತ್ಯಾದಿಗಳ ಬಗ್ಗೆ ಸರಳ ಅವಲೋಕನದಲ್ಲಿ ಒಂದು ಸ್ಥೂಲ ಚಿತ್ರಣಕ್ಕೆ ಪ್ರಯತ್ನಿಸಿದರೆ, ಶಿಸ್ತುಬದ್ಧ ಅವಲೋಕನದಲ್ಲಿ ನಿಖರತೆಗೆ ಪ್ರಯತ್ನಿಸಲಾಗುವುದು. ಜಾತ್ರೆಯಲ್ಲಿ ಸೇರಿದ ಒಟ್ಟು ಜನಸಂಖ್ಯೆಯ ಬಗ್ಗೆ ನಿಖರ ಮಾಹಿತಿ, ವಿವಿಧ ಆಚರಣೆಗಳು ನಡೆಯುವ ಸ್ಥಳಗಳ ಚಿತ್ರಣವನ್ನು (ನಕ್ಷೆ, ಸ್ಕೇಲ್ ಇತ್ಯಾದಿಗಳನ್ನು ಬಳಸಿ) ನಿಖರವಾಗಿ ನೀಡುವುದು, ಹೀಗೆ ಎಲ್ಲ ಮಾಹಿತಿಯಲ್ಲೂ ಹೆಚ್ಚು ಹೆಚ್ಚು ನಿಖರತೆಯನ್ನು ಶಿಸ್ತುಬದ್ಧ ಅವಲೋಕನೆ ಬಯಸುತ್ತದೆ. ಜತೆಗೆ ಶಿಸ್ತುಬದ್ಧ ಅವಲೋಕನದಲ್ಲಿ ಸಂಶೋಧಕರು ಮತ್ತು ಸಂಶೋಧನೆಗೆ ಒಳಗಾಗುವ ಸಂಗತಿಗಳು ವಿವಿಧ ಪ್ರಮಾಣದ ನಿರ್ಬಂಧಕ್ಕೆ ಒಳಗಾಗಬೇಕಾಗುತ್ತದೆ. ಇಲ್ಲೂ ಕೆಲವೊಂದು ಬಾರಿ ಅವಲೋಕನೆಗೆ ಒಳಗಾಗುವ ಸಂಗತಿಗಳು ಅವುಗಳ ಗಮನಕ್ಕೆ ಬಾರದೆ ಅವಲೋಕನೆಗೆ ಒಳಗಾಗಬಹುದು. ಉದಾಹರಣೆಗೆ ಶಾಲಾ ಮಕ್ಕಳ ನಡವಳಿಕೆ ಬಗ್ಗೆ ಅವರ ಗಮನಕ್ಕೆ ಬಾರದೆ ಅವಲೋಕನೆ ನಡೆಯಬಹುದು. ಅದೇ ರೀತಿ ಕೆಲಸಗಾರರ ಫ್ಯಾಕ್ಟರಿಯೊಳಗಿನ ನಡವಳಿಕೆಯನ್ನು ಅವರ ಗಮನಕ್ಕೆ ಬಾರದೆ ಅವಲೋಕನೆ ನಡೆಸಬಹುದು. ಶಿಸ್ತುಬದ್ಧ ಅವಲೋಕನದಲ್ಲಿ ಪ್ರಯೋಗಾಲಯದಲ್ಲಿ ನಡೆಸುವ ಪ್ರಯೋಗಾಲಯದ ಅಂಶಗಳು ತುಂಬಿವೆ. ಅವಲೋಕನೆಗೆ ಒಳಗಾಗುವವರಿಗೆ (ಪರೀಕ್ಷೆಗೆ ಒಳಗಾಗುವವರಿಗೆ) ತಮ್ಮನ್ನು ಅಧ್ಯಯನ ಮಾಡುವುದು ಗಮನಕ್ಕೆ ಬರುವುದೇ ಇಲ್ಲ. ಒಂದು ವ್ಯವಸ್ಥೆಯ ಅಧಿಕೃತ ಸಂಬಂಧದ ವ್ಯಾಪ್ತಿಯೊಳಗೆ ಇರುವುದರಿಂದ (ತರಗತಿ, ಕಚೇರಿ, ಫ್ಯಾಕ್ಟರಿ, ಬಂದಿಖಾನೆ ಇತ್ಯಾದಿಗಳ) ಅಧ್ಯಯನಕ್ಕೆ ಒಳಗಾಗುವವರ ವ್ಯವಹಾರ ಆಯಾಯ ವ್ಯವಸ್ಥೆಗಳ ನೀತಿ ನಿಯಮಕ್ಕೆ ಅನುಸಾರ ಇರುತ್ತದೆ. ಒಂದು ವಿಧದಲ್ಲಿ ಅವರು ಕೆಲಸ ಮಾಡುವ ಅಥವಾ ವ್ಯವಹರಿಸುವ ಇಡೀ ಪರಿಸರ ಒಂದು ಪ್ರಯೋಗಾಲಯದಂತೆ ಬಳಕೆ ಆಗುತ್ತದೆ. ಮಾಹಿತಿ ಸಂಗ್ರಹಿಸುವ ವಿಜ್ಞಾನದ ವಿಧಾನಗಳಿಗಿಂತ ಸಂಪೂರ್ಣ ಭಿನ್ನ ಎನ್ನುವ ಅವಲೋಕನಾ ವಿಧಾನದ ಹೆಚ್ಚುಗಾರಿಕೆ ಎಷ್ಟು ಪೊಳ್ಳೆಂದು ಮೇಲಿನ ವಿವರಗಳಿಂದ ಮನವರಿಕೆ ಆಗಿರಬಹುದು.

ಗುಂಪು ಚರ್ಚೆ

ಗುಂಪುಚರ್ಚೆ ಅಥವಾ ಕೇಂದ್ರೀಕೃತ ಗುಂಪುಚರ್ಚೆ (ಫೋಕಸ್ಡ್‌ಗ್ರೂಫ್ ಡಿಸ್ಕಶನ್) ಎನ್ನುವುದು ಕೂಡ ಮಾಹಿತಿ ಸಂಗ್ರಹ ವಿಧಾನಕ್ಕೆ ಹೊಸ ಸೇರ್ಪಡೆ. ಅವಲೋಕನದಂತೆ ಸಾಂಪ್ರದಾಯಿಕ ವಿಧಾನಗಳ (ಪ್ರಶ್ನಾವಳಿ, ಸಂದರ್ಶನ ಇತ್ಯಾದಿಗಳ) ಲೋಪದೋಷಗಳನ್ನು ದೂರ ಮಾಡುವ ದೃಷ್ಟಿಯಿಂದ ಈ ವಿಧಾನ ಬೆಳಕಿಗೆ ಬಂದಿದೆ. ಒಂದು ಸಮುದಾಯಕ್ಕೆ ಅಥವಾ ಹಳ್ಳಿಗೆ ಸೇರಿದ ಜನರನ್ನು ಕೆಲವು ಗುಂಪುಗಳಾಗಿ ವಿಂಗಡಿಸಿ ಆ ಗುಂಪಿನೊಂದಿಗೆ ಚರ್ಚಿಸಿ ಮಾಹಿತಿ ಸಂಗ್ರಹಿಸುವುದು ಈ ವಿಧಾನದ ಲಕ್ಷಣ. ಈ ವಿಧಾನ ಚಾಲ್ತಿಗೆ ಬರಲು ಹಲವು ಕಾರಣಗಳಿವೆ. ಅವುಗಳಲ್ಲಿ ಪ್ರಮುಖವಾದ ಒಂದು ಕಾರಣವನ್ನು ಚರ್ಚಿಸಿದ ನಂತರ ಗುಂಪುಚರ್ಚೆಯ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನಿಸೋಣ. ಗುಂಪುಚರ್ಚೆ ಮಾಹಿತಿ ಸಂಗ್ರಹ ವಿಧಾನವಾಗಿ ಚಾಲ್ತಿಗೆ ಬರಲು ಬಹುಮುಖ್ಯ ಕಾರಣ ಅಭಿವೃದ್ಧಿ ಚಿಂತನೆ ಹಾಗೂ ಪ್ರಾಕ್ಟೀಸಲ್ಲಿ ಆದ ಬದಲಾವಣೆ.[3]

ಸಾಂಪ್ರದಾಯಿಕ ಅಭಿವೃದ್ಧಿ ಚಿಂತನೆಯಲ್ಲಿ ಅಭಿವೃದ್ಧಿಗೊಳ್ಳಬೇಕಾದವರು ಅಥವಾ ಸ್ಥಳೀಯ ಸಮುದಾಯಗಳು (ಲೋಕಲ್ ಸಿವಿಲ್ ಸೊಸೈಟಿ) ಪೇಸೀವ್ ಎಂಟಿಟಿಯಾಗಿ ಗುರುತಿಸಲ್ಪಡುತ್ತಿತ್ತು. ಅದರ ಕೆಲಸ ಅಭಿವೃದ್ಧಿ ಪ್ರಕ್ರಿಯೆಗೆ ತನ್ನನ್ನು ಒಡ್ಡಿಕೊಳ್ಳುವುದು ಮಾತ್ರ ಆಗಿತ್ತು. ಅಭಿವೃದ್ಧಿ ಎಂದರೇನು? ಅದನ್ನು ಹೇಗೆ ಸಾಧಿಸಬಹುದು? ಯಾವ ಯೋಜನೆಗಳು ಯಾರಿಗೆ ಸೂಕ್ತ? ಆ ಯೋಜನೆಗಳಲ್ಲಿ ವಿನಿಯೋಜಿಸಬೇಕಾದ ಸಂಪನ್ಮೂಲವೆಷ್ಟು? ಇತ್ಯಾದಿ ನಿರ್ಧಾರಗಳನ್ನು ಅಭಿವೃದ್ಧಿ ಮಾಡುವವರು ಅಭಿವೃದ್ಧಿ ಅಗಬೇಕಾದವರ ಪರವಾಗಿ ತೆಗೆದುಕೊಳ್ಳುತ್ತಾರೆ. ಇಲ್ಲಿ ಅಭಿವೃದ್ಧಿ ಆಗಬೇಕಾದ ಸ್ಥಳೀಯ ಸಮುದಾಯಗಳು ಒಂದು ಟಾರ್ಗೆಟ್ ಸ್ಪೇಸ್ ಆಗಿ ಪರಿಗಣಿಸಲ್ಪಡುತ್ತವೆ. ಅಭಿವೃದ್ಧಿಯನ್ನು ವ್ಯಾಖ್ಯಾನಿಸುವಲ್ಲಿ ಅಥವಾ ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಸ್ಥಳೀಯ ಸಮುದಾಯಗಳು ಸಕ್ರಿಯವಾಗಿ ಭಾಗವಹಿಸುವ ಕ್ರಮ ಇರಲಿಲ್ಲ. ಇವೆಲ್ಲ ಕಾರಣದಿಂದಲೇ ಬಡದೇಶಗಳು ಉದ್ಧಾರವಾಗಿಲ್ಲ; ಆದುದರಿಂದ ಸ್ಥಳೀಯ ಸಮುದಾಯಗಳಿಗೆ (ಸಿವಿಲ್ ಸೊಸೈಟಿಗೆ) ಪ್ರಾಧಾನ್ಯತೆ ಕೊಡಬೇಕೆಂಬ ಅಂಶ ಪ್ರಾಮುಖ್ಯತೆಯನ್ನು ಪಡೆದಿದೆ. ಸ್ಥಳೀಯ ಸಮುದಾಯಗಳು ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಪಾಲುಗೊಳ್ಳುವುದು ಈ ಸಮಸ್ಯೆಯ ಪರಿಹಾರಕ್ಕೆ ಸೂಕ್ತ ಮಾರ್ಗವೆಂದು ಇಂದು ಯಜಮಾನಿಕೆಯಲ್ಲಿರುವ ಅಭಿವೃದ್ಧಿ ಚಿಂತನೆ ಸೂಚಿಸುತ್ತದೆ. ಸ್ಥಳೀಯ ಸಮುದಾಯಗಳ ಬಹುತೇಕರ ಬೇಕು ಬೇಡಗಳನ್ನು ಅರ್ಥಮಾಡಿಕೊಳ್ಳಲು ಹಿಂದಿನ ಮಾಹಿತಿ ಸಂಗ್ರಹ ವಿಧಾನಗಳು (ಪ್ರಶ್ನಾವಳಿ ಅಥವಾ ಸಂದರ್ಶನ) ಸಾಕಾಗುವುದಿಲ್ಲ ಎನ್ನುವ ಕಾರಣಕ್ಕೆ ಗುಂಪು ಚರ್ಚೆ ಬೆಳಕಿಗೆ ಬಂದಿದೆ. ಸಾಂಪ್ರದಾಯಿಕ ವಿಧಾನಗಳಲ್ಲಿ ಒಂದು ಸಮುದಾಯದ ಕೆಲವರನ್ನು ಭೇಟಿಯಾಗಿ ಸಂದರ್ಶನ ಅಥವಾ ಪ್ರಶ್ನಾವಳಿ ಮೂಲಕ ಸಮುದಾಯದ ಸಮಸ್ಯೆಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ಸಂಗ್ರಹಿಸಲಾಗುವುದು. ಕೆಲವರು ನೀಡುವ ಮಾಹಿತಿ ಆಧಾರದಲ್ಲಿ ಇಡೀ ಸಮುದಾಯದ ಸಮಸ್ಯೆಗಳ ಬಗ್ಗೆ ತೀಮಾನಕ್ಕೆ ಬರಲಾಗುವುದು. ಸಮುದಾಯದ ಸಮಸ್ಯೆಗಳ ನೈಜ ಚಿತ್ರಣವನ್ನು ಒದಗಿಸಲು ಈ ವಿಧಾನ ವಿಫಲವಾಗಿದೆ ಎಂದಾಗಿದೆ. ಈ ಹಿನ್ನೆಲೆಯಲ್ಲಿ ಸಮುದಾಯದ ಬಹುತೇಕರ ಅಭಿಪ್ರಾಯವನ್ನು ಸಂಗ್ರಹಿಸುವ ಹೊಸ ವಿಧಾನದ ಆವಶ್ಯಕತೆಯನ್ನು ಮನಗಾಣಲಾಗಿದೆ. ಹೀಗೆ ಮಾಹಿತಿ ಸಂಗ್ರಹದ ಹೊಸ ವಿಧಾನವಾಗಿ ಗುಂಪುಚರ್ಚೆ ಚಾಲ್ತಿಗೆ ಬಂದಿದೆ.

ಜನರ ಸಹಭಾಗಿತ್ವದೊಂದಿಗೆ ಪಂಚಾಯತ್ ಯೋಜೆ ತಯಾರಿಸುವ ಸಂದರ್ಭದಲ್ಲಿ ಅನುಸರಿಸಿದ ಗುಂಪುಚರ್ಚೆಯ ಉದಾಹರಣೆಯೊಂದಿಗೆ ಗುಂಪುಚರ್ಚೆಯನ್ನು ಹೇಗೆ ಕಾರ್ಯರೂಪಕ್ಕೆ ತರಲಾಗುತ್ತದೆ ಎನ್ನುವುದನ್ನು ನೋಡೋಣ. ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ಕೃಷ್ಣನಗರ ಪಂಚಾಯತ್ ಮತ್ತು ಕೊಪ್ಪಳ ಜಿಲ್ಲೆಯ ಯಲಬುರ್ಗಾ  ತಾಲ್ಲೂಕಿನ ಯರೆಹಂಚಿನಾಳ ಪಂಚಾಯತ್‌ಗಳಿಗೆ ಜನರನ್ನು ತೊಡಗಿಸಿಕೊಂಡು ಯೋಜನೆ ತಯಾರಿಸಲಾಗಿದೆ. ಆ ಸಂದರ್ಭದಲ್ಲಿ ಗುಂಪುಚರ್ಚೆಯ ಮೂಲಕ ಮಾಹಿತಿ ಸಂಗ್ರಹಿಸಲಾಗಿದೆ. ಗ್ರಾಮಸ್ಥರ ಅಭಿಪ್ರಾಯಗಳನ್ನು ತಿಳಿದುಕೊಳ್ಳಲು ಈಗ ಇರುವ ವ್ಯವಸ್ಥೆ ಗ್ರಾಮಸಭೆ. ಹಳ್ಳಿಗೊಂದು ಗ್ರಾಮಸಭೆ ಮಾಡಿ ಅದರಲ್ಲಿ ಗ್ರಾಮಸ್ಥರ ಆದ್ಯತೆಗಳನ್ನು ತಿಳಿದುಕೊಳ್ಳುವುದು ಕಷ್ಟ. ಅದಕ್ಕಾಗಿಯೇ ಪಂಚಾಯತ್ ಕಾಯಿದೆಗೆ ಇತ್ತೀಚೆಗೆ ಆದ ತಿದ್ದುಪಡಿಯಲ್ಲಿ ವಾರ್ಡ್‌‌ಗೊಂದು ಗ್ರಾಮಸಭೆ ಮಾಡುವ ಅವಕಾಶ ಕಲ್ಪಿಸಲಾಗಿದೆ. ವಾರ್ಡ್‌ಗೊಂದು ಗ್ರಾಮಸಭೆ ನಡೆಸಿದರೂ ಯೋಜನೆಯ ದೃಷ್ಟಿಯಿಂದ ಅನುಕೂಲವಾಗುವುದಿಲ್ಲ. ಯಾಕೆಂದರೆ ಒಂದು ವಾರ್ಡ್‌ನಲ್ಲಿ ಕಡಿಮೆ ಅಂದರೆ ನೂರರಿಂದ ಇನ್ನೂರು ಮನೆಗಳು ಇರುವ ಸಾಧ್ಯತೆ ಇದೆ. ಇಷ್ಟೊಂದು ಜನರನ್ನು ಒಂದು ಕಡೆ ಸೇರಿಸಿ ಚರ್ಚಿಸಿ ಆದ್ಯತೆಗಳ ಬಗ್ಗೆ ಒಂದು ತೀರ್ಮಾನಕ್ಕೆ ಬರುವುದು ಕಷ್ಟ. ಆದುದರಿಂದ ವಾರ್ಡ್‌ಗೊಂದು ಸಭೆ ಬದಲು ೭೫ ಮನೆಗಳಿಗೊಂದು ಗ್ರಾಮಸಭೆ ನಡೆಸಲಾಯಿತು. ಯರೆಹಂಚಿನಾಳದಲ್ಲಿ ವಾರ್ಡ್‌ಕಲ್ಪನೆಯನ್ನು ಇನ್ನೂ ಬದಲಾಯಿಸಿಕೊಳ್ಳಲಾಯಿತು. ವಾರ್ಡ್ ಒಂದರಲ್ಲಿ ಇರುವ ಕುಟುಂಬಗಳನ್ನು ವಿಂಗಡಿಸಿ ಸಣ್ಣ ಗುಂಪುಗಳನ್ನು ಮಾಡುವ ಬದಲು ಓಣಿಗೊಂದು ಸಭೆ ಸೇರಿಸಲಾಯಿತು. ಈ ವಸತಿ ಅಥವಾ ಮಿನಿ ಗ್ರಾಮಸಭೆಯಲ್ಲಿ ಗ್ರಾಮಸ್ಥರ ಬೇಕು ಬೇಡಗಳು, ಸಮಸ್ಯೆಗಳು, ಪರಿಹಾರಗಳು, ಸಂಪನ್ಮೂಲ ಹೊಂದಾಣಿಕೆ ಇತ್ಯಾದಿಗಳು ಚರ್ಚೆಯಾಗಬೇಕು ಹಾಗೂ ತೀರ್ಮಾನವಾಗಬೇಕು.[4]

ಮೂರು ಹಂತಗಳಲ್ಲಿ ಜನರನ್ನು ಯೋಜನೆ ತಯಾರಿಯ ಕೆಲಸದಲ್ಲಿ ಭಾಗವಹಿಸಲು ವ್ಯವಸ್ಥೆ ಮಾಡಲಾಯಿತು. ಪ್ರಥಮ ಹಂತದಲ್ಲಿ ತಮ್ಮ ವಾರ್ಡಿನ ಸಮಸ್ಯೆಗಳನ್ನು ಜನರು ಪಟ್ಟಿ ಮಾಡಬೇಕು. ಅಲ್ಲಿ ಕೇವಲ ಸಮಸ್ಯೆಗಳನ್ನು ಗುರುತಿಸುವ ಕೆಲಸ ಮಾತ್ರ. ಪಟ್ಟಿ ಮಾಡುವಾಗ ಸಂಖ್ಯೆಯ ಮಿತಿಗಳನ್ನು ಹೇರಿಲ್ಲ. ಅವರಿಗೆ ಮನಸ್ಸಿಗೆ ಬಂದ ಎಲ್ಲ ಸಮಸ್ಯೆಗಳನ್ನು ಪಟ್ಟಿ ಮಾಡಲು ಸೂಚಿಸಲಾಯಿತು. ಎರಡನೇ ಹಂತದಲ್ಲಿ ಪಟ್ಟಿಮಾಡಿದ ಸಮಸ್ಯೆಗಳನ್ನು ಪರಿಹರಿಸುವ ಆದ್ಯತಾ ಪಟ್ಟಿಯನ್ನು ತಯಾರಿಸಲು ಸೂಚಿಸಲಾಯಿತು. ಈ ಹಂತದಲ್ಲಿ ಸೇರಿದ ಜನರಲ್ಲಿ ಒಮ್ಮತ ಇರದಿದ್ದರೆ ಕೈ ಎತ್ತು ಮೂಲಕ ಆದ್ಯತೆಯನ್ನು ಸೂಚಿಸಲು ತಿಳಿಸಲಾಯಿತು. ಬೆಂಬಲದ ಆಧಾರದಲ್ಲಿ ಸಮಸ್ಯೆ ಪರಿಹಾರ ಆದ್ಯತೆಯನ್ನು ನಿರ್ಣಯಿಸಲಾಯಿತು. ಮೂರನೇ ಹಂತದಲ್ಲಿ ಪಟ್ಟಿ ಮಾಡಿದ ಸಮಸ್ಯೆಯ ವಿಶ್ಲೇಷಣೆ. ಇಲ್ಲಿ ಒಂದೊಂದು ಸಮಸ್ಯೆಯನ್ನು ಪ್ರತ್ಯೇಕವಾಗಿ ವಿಶ್ಲೇಷಿಸಲಾಯಿತು. ವಿಶ್ಲೇಷಣೆಯಲ್ಲಿ ಈ ಕೆಳಗಿನ ಅಂಶಗಳು ಒಳಗೊಳ್ಳುವಂತೆ ನೋಡಿಕೊಳ್ಳಲಾಯಿತು. ಒಂದು, ಸಮಸ್ಯೆ ಹಿಂದಿರುವ ಕಾರಣ. ಎರಡು, ಜನರ ಪ್ರಕಾರ ಸಮಸ್ಯೆಗೆ ಪರಿಹಾರ, ಮೂರು ಸಮಸ್ಯೆ ಪರಿಹಾರಕ್ಕೆ ಅಗತ್ಯವಿರುವ ಬಜೆಟ್ ಅಥವಾ ಸಂಪನ್ಮೂಲ ಮತ್ತು ಸಮಸ್ಯೆ ಪರಿಹಾರದಲ್ಲಿ ಜನರ ಪಾಲುಗೊಳ್ಳುವಿಕೆಯ ಸಾಧ್ಯತೆ. ಪಾಲುಗೊಳ್ಳುವಿಕೆಯನ್ನು ಎರಡು ರೂಪದಲ್ಲಿ ಸೂಚಿಸಲು ತಿಳಿಸಲಾಯಿತು. ಒಂದು ಹಣದ ರೂಪದಲ್ಲಿ ಎರಡು, ಶ್ರಮದಾನದ ರೂಪದಲ್ಲಿ. ವಿವಿಧ ಮಿನಿ ಗ್ರಾಮಸಭೆಗಳಲ್ಲಿ ಸಂಗ್ರಹಿಸಿದ ಮಾಹಿತಿ ಆಧಾರದಲ್ಲಿ ಮುಖ್ಯ ವಲಯಗಳ ಇಂದಿನ ಸ್ಥಿತಿ, ಅಗತ್ಯ ಮತ್ತು ಕೊರತೆಯ ಪಟ್ಟಿಯನ್ನು ತಯಾರಿಸಲಾಗಿದೆ. ಆ ಪಟ್ಟಿಯ ಆಧಾರದಲ್ಲಿ ಕೊರತೆಯನ್ನು ತುಂಬಿಸಲು ಅವಶ್ಯವಿರುವ ಯೋಜನೆಗಳನ್ನು ತಯಾರಿಸಬಹುದು.[5]

ಗ್ರಾಮಸ್ಥರ ಬೇಕು ಬೇಡಗಳನ್ನು ತಿಳಿಯಲು ಇದೊಂದು ಉತ್ತಮ ವಿಧಾನ. ಗ್ರಾಮದ ಎಲ್ಲ ಸದಸ್ಯರು ಇದರಲ್ಲಿ ಪಾಲುಗೊಳ್ಳುವುದಿಲ್ಲ. ಹಾಗೆಂದು ಈ ವಿಧಾನದಿಂದ ಸಂಗ್ರಹಿಸಿದ ಮಾಹಿತಿ ಸಮಸ್ತ ಗ್ರಾಮಸ್ಥರ ಅಭಿಪ್ರಾಯವನ್ನು ಪ್ರತಿನಿಧೀಕರಿಸುವುದಿಲ್ಲ ಎನ್ನುವ ತೀರ್ಮಾನಕ್ಕೆ ಬರಬೇಕಾಗಿಲ್ಲ. ಒಂದು ಹಳ್ಳಿಯಲ್ಲಿ ಈ ವಿಧಾನದಲ್ಲಿ ಮಾಹಿತಿ ಸಂಗ್ರಹಿಸುವ ಜತೆ ಎಲ್ಲ ಗ್ರಾಮಸ್ಥರನ್ನು ಪ್ರಶ್ನಾವಳಿಯ ಮೂಲಕ ಸಂದರ್ಶನ ಮಾಡಿ ಮಾಹಿತಿ ಸಂಗ್ರಹಿಸಲಾಗಿದೆ. ಎರಡೂ ಮೂಲಗಳಿಂದ ಪಡೆದ ಮಾಹಿತಿ ಹೆಚ್ಚು ಕಡಿಮೆ ಒಂದೇ ಫಲಿತಾಂಶವನ್ನು ನೀಡಿವೆ. ಆದುದರಿಂದ ಗುಂಪುಚರ್ಚೆ ಸಮಸ್ತ ಗ್ರಾಮಸ್ಥರ ಅಭಿಪ್ರಾಯವನ್ನು ಸಂಗ್ರಹಿಸಲು ಒಂದು ಸುಧಾರಿತ ವಿಧಾನ ಎನ್ನುವುದರಲ್ಲಿ ಸಂದೇಹವಿಲ್ಲ. ಆದರೆ ಇಲ್ಲೂ ಸಾಕಷ್ಟು ಸಮಸ್ಯೆಗಳಿವೆ. ಬಹುಮುಖ್ಯ ಸಮಸ್ಯೆಯೆಂದರೆ ಜನರನ್ನು ಒಟ್ಟು ಸೇರಿಸುವುದು. ಬಹುತೇಕ ಸಂದರ್ಭದಲ್ಲಿ ಗ್ರಾಮಸ್ಥರ ಶೇಕಡಾ ೨೫ ರಷ್ಟು ಗ್ರಾಮಸ್ಥರನ್ನು ಸೇರಿಸುವುದು ದೊಡ್ಡ ಸಾಹಸವಾಗುತ್ತದೆ. ಸೇರಿಸಿದ ಜನರೆಲ್ಲ ಚರ್ಚೆಯಲ್ಲಿ ಪಾಲುಗೊಳ್ಳುವಂತೆ ಮಾಡುವುದು ಮತ್ತೊಂದು ಸಮಸ್ಯೆ. ತಮ್ಮ ಮೂಲಭೂತ ಸಮಸ್ಯೆಗಳಾದ ನೀರು, ನಿರುದ್ಯೋಗ ಇತ್ಯಾದಿ ಸಮಸ್ಯೆಗಳನ್ನು ಜನರು ಆಸಕ್ತಿಯಿಂದ ಪಟ್ಟಿ ಮಾಡುತ್ತಾರೆ. ಆದರೆ ಚರ್ಚೆ ಹೆಚ್ಚು ಹೆಚ್ಚು ಸಂಕೀರ್ಣಗೊಂಡಂತೆ ಜನರು ಚರ್ಚೆಯಲ್ಲಿ ಪಾಲುಗೊಳ್ಳುವುದಿಲ್ಲ ಜತೆಗೆ ಚರ್ಚೆಯ ಸಮಯ ಹೆಚ್ಚಾದಂತೆ ಜನರು ಗುಂಪನ್ನು ಬಿಟ್ಟು ಹೋಗುವುದು ಹೆಚ್ಚಾಗುತ್ತದೆ. ಜನರನ್ನು ಚರ್ಚೆ ಮುಗಿಯುವವರೆಗೆ ಹಿಡಿದಿಡುವುದು ದೊಡ್ಡ ಸಾಹಸದ ಕೆಲಸ. ಚರ್ಚೆಯಲ್ಲಿ ಪಾಲುಗೊಳ್ಳುವಾಗ ಗುಂಪಲ್ಲಿ ಸೇರಿದ ಎಲ್ಲರೂ ಭಾಗವಹಿಸುತ್ತಾರೆ ಎನ್ನಲಾಗುವುದಿಲ್ಲ. ಪ್ರತೀ ಗುಂಪಲ್ಲೂ ಸಮಸ್ಯೆಗಳನ್ನು ಅಥವಾ ವಿಚಾರಗಳನ್ನು ಗುಂಪಿನ ಇತರರಿಗಿಂತ ಪರಿಣಾಮಕಾರಿಯಾಗಿ ಮಂಡಿಸುವ ಕೆಲವರಿರುತ್ತಾರೆ. ಅವರನ್ನು ತಡೆಯದೆ ಬಿಟ್ಟರೆ ಇಡೀ ಗುಂಪಿನ ಎಲ್ಲ ತೀರ್ಮಾನಗಳನ್ನು ಅವರೇ ಕೊಡುವ ಸಾಧ್ಯತೆ ಇರುತ್ತದೆ. ಕೆಲವೊಂದು ಬಾರಿ ತಮಗೆ ವಿಚಾರಗಳನ್ನು ಚೆನ್ನಾಗಿ ಮಂಡಿಸಲು ಆಗುವುದಿಲ್ಲ ಎಂದು ತಿಳಿದುಕೊಂಡವರು ಚೆನ್ನಾಗಿ ಮಂಡಿಸುವವರನ್ನು ತಮ್ಮ ವಿಚಾರಗಳನ್ನು ಮಂಡಿಸಲು ಮುಂದೆ ಬಿಡುತ್ತಾರೆ. ಇನ್ನು ಕೆಲವು ಕಡೆ ಸ್ಥಳೀಯ ಸಮುದಾಯಗಳಲ್ಲಿ ನಾಯಕರೆಂದು ಗುರುತಿಸಿಕೊಂಡವರು ಹಳ್ಳಿಯಲ್ಲಿ ನಡೆಯುವ ಎಲ್ಲ ಗುಂಪುಚರ್ಚೆಗಳಲ್ಲಿ ಭಾಗವಹಿಸುವ ಸಾಧ್ಯತೆಗಳಿರುತ್ತವೆ. ಅಷ್ಟು ಮಾತ್ರವಲ್ಲ, ಅವರು ತಮ್ಮ ಕೆಲವೊಂದು ಪೆಟ್ ಬೇಡಿಕೆಗಳನ್ನು ಅಥವಾ ಸಮಸ್ಯೆಗಳನ್ನು ಇಡೀ ಊರಿನ ಸಮಸ್ಯೆಯೆಂದು ಎಲ್ಲ ಗುಂಪುಗಳಲ್ಲೂ ಮಂಡಿಸುತ್ತಾರೆ. ಗುಂಪುಚರ್ಚೆಯ ಅನುಭವ ಇಲ್ಲದ ಗ್ರಾಮಸ್ಥರು ಏನು ಹೇಳಬೇಕೆಂದು ಆಲೋಚಿಸುತ್ತಿರುವಾಗ ಸ್ಥಳೀಯ ನಾಯಕರ ಈ ಬಗೆಯ ಮುನ್ನುಗುವಿಕೆ ಇಡೀ ಗುಂಪಿನ ಚರ್ಚೆಯನ್ನೇ ಪ್ರಭಾವಿಸುವ ಸಾಧ್ಯತೆ ಇರುತ್ತದೆ. ಇಂತಹ ಸಂಗತಿಗಳನ್ನು ಗುಂಪುಚರ್ಚೆ ನಡೆಸುವವರು ನಿಭಾಯಿಸಬೇಕಾಗುತ್ತದೆ. ಹೀಗೆ ಗುಂಪುಚರ್ಚೆ ಯಾವುದೇ ದೋಷಗಳಿಲ್ಲದ ಒಂದು ವಿಧಾನವೆಂದು ತಿಳಿಯಲಾಗುವುದಿಲ್ಲ. ಆದುದರಿಂದ ಮಾಹಿತಿ ಸಂಗ್ರಹದ ಇತರ ವಿಧಾನಗಳ ಜತೆ ಇದನ್ನು ಬಳಸುವುದು ಹೆಚ್ಚು ಸೂಕ್ತ.

ಈ ಅಧ್ಯಾಯದಲ್ಲಿ ಮಾಹಿತಿ ಸಂಗ್ರಹಿಸುವ ವಿಧಾನಗಳಿಗೆ ಸಂಬಂಧಿಸಿದ ಪ್ರಮುಖವಾದ ಎರಡು ಸಂಗತಿಗಳನ್ನು ಚರ್ಚಿಸಲಾಗಿದೆ. ಮಾಹಿತಿ ಸಂಗ್ರಹ ವಿಧಾನಗಳ ತಾತ್ವಿಕ ಹಿನ್ನೆಲೆ ಹಾಗೂ ವಿಧಾನಗಳ ಅನುಕೂಲತೆಗಳು ಮತ್ತು ಅನನುಕೂಲತೆಗಳ ಕುರಿತ ಚರ್ಚೆ ಈ ಅಧ್ಯಾಯದ ಮುಖ್ಯ ವಸ್ತು. ಪ್ರತಿಯೊಂದು ಮಾಹಿತಿ ಸಂಗ್ರಹ ವಿಧಾನಕ್ಕೂ ಅದರದ್ದೇ ತಾತ್ವಿಕ ಹಿನ್ನೆಲೆ ಇದೆ. ತಾವು ಬಳಸುವ ವಿಧಾನದ ತಾತ್ವಿಕ ಹಿನ್ನೆಲೆಯ ಅರಿವು ಇದ್ದು ಒಂದು ವಿಧಾನವನ್ನು ಬಳಸಿದರೆ ಸಂಶೋಧಕರು ತಮ್ಮ ತಾತ್ವಿಕ ನಿಲುವಿಗೆ ಅನುಸಾರ ಆ ವಿಧಾನವನ್ನು ಬಳಸಿಕೊಳ್ಳಬಹುದು. ಒಂದು ವೇಳೆ ಸಂಶೋಧಕರು ತಾವು ಬಳಸುವ ವಿಧಾನದ ತಾತ್ವಿಕ ಹಿನ್ನೆಲೆಯ ಅರಿವಿಲ್ಲದೆ ಬಳಸಿದರೆ ಸಂಶೋಧಕರು ತಮಗೆ ಅರಿವಿಲ್ಲದೆಯೇ ಆ ವಿಧಾನದಲ್ಲಿ ಅಂತರ್ಗತಗೊಂಡಿರುವ ತಾತ್ವಿಕ ಹಿನ್ನೆಲೆಯಿಂದ ಪ್ರಭಾವಿತರಾಗಬೇಕಾಗುತ್ತದೆ. ಆದರೆ ಬಹುತೇಕ ಸಂಶೋಧನಾ ವಿದ್ಯಾರ್ಥಿಗಳು ಮಾಹಿತಿ ಸಂಗ್ರಹಿಸುವ ವಿವಿಧ ವಿಧಾನಗಳ ಹಿಂದಿರುವ ತಾತ್ವಿಕ ಪ್ರಶ್ನೆಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ವಿಷಯ ಆಯ್ಕೆ ಮಾಡಿದ ನಂತರ ಪ್ರಶ್ನಾವಳಿ ತಯಾರು ಮಾಡಿ ಕ್ಷೇತ್ರಕಾರ್ಯಕ್ಕೆ ಹೊರಟೇ ಬಿಡುವುದು ಬಹುತೇಕ ಸಂಶೋಧಕರ ಕ್ರಮ. ಪ್ರಶ್ನೆ ಪತ್ರಿಕೆ ಯಾಕೆ? ಪ್ರಶ್ನಾವಳಿ ಅಥವಾ ಸಂದರ್ಶನ ಮೂಲಕ ಮಾಹಿತಿ ಸಂಗ್ರಹಿಸುವುದರ ತಾತ್ವಿಕ ಹಿನ್ನೆಲೆ ಏನು? ಅವು ಎಲ್ಲ ವಿಧದ ಅಧ್ಯಯನಗಳಲ್ಲೂ ಮಾಹಿತಿ ಸಂಗ್ರಹಕ್ಕೆ ಸಹಕಾರಿಯೇ? ಇತ್ಯಾದಿ ಪ್ರಶ್ನೆಗಳಿಗೆ ಉತ್ತರಿಸಲು ಈ ಲೇಖನ ಪ್ರಯತ್ನಿಸಿದೆ. ಒಂದು ಕಾಲದಲ್ಲಿ ಯಾವುದಾದರೂ ಒಂದು ವಿಧಾನದಲ್ಲಿ ಮಾಹಿತಿ ಸಂಗ್ರಹಿಸುವುದು ಮತ್ತು ವಿಶ್ಲೇಷಿಸುವುದು ಸಾಮಾನ್ಯವಾಗಿತ್ತು. ಆದರೆ ಇಂದು ಸಮಾಜ ಸಂಶೋಧನಾ ವಿಷಯಕ್ಕೆ ಸಂಬಂಧಿಸಿದ ಮಾಹಿತಿ ಸಂಗ್ರಹಕ್ಕೆ ಯಾವುದಾದರೂ ಒಂದು ವಿಧಾನಕ್ಕೆ ಅಂಟಿಕೊಳ್ಳಲು ಸಾಧ್ಯವಿಲ್ಲ. ಎರಡು ಅಥವಾ ಹೆಚ್ಚಿನ ವಿಧಾನಗಳ ಮೂಲಕ ಸಂಶೋಧನಾ ಉದ್ದೇಶಕ್ಕೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸಬೇಕಾಗುತ್ತದೆ. ಹೀಗೆ ಇಂದು ಸಂಶೋಧಕರಿಗೆ ಒಂದಕ್ಕಿಂತ ಹೆಚ್ಚು ವಿಧಾನಗಳ ಬಗ್ಗೆ ಕನಿಷ್ಠ ಪರಿಚಯ ಅಗತ್ಯ.

* * *

[1] ಅಮೆರಿಕದ ಬೆಲ್ ಟೆಲಿಫೋನ್ ಕಂಪೆನಿಗೆ ಟೆಲಿಫೋನ್‌ಗಳನ್ನು ತಯಾರಿಸುವ ಕೆಲಸವನ್ನು ವೆಸ್ಟರ್ನ್ ಇಲೆಕ್ಟ್ರಿಕ್ ಕಂಪೆನಿ ಮಾಡುತ್ತಿತ್ತು. ಇದು ಚಿಕಾಗೋದ ಹಥೋರ್ನ್ ಎನ್ನುವಲ್ಲಿತ್ತು. ಈ ಕಂಪೆನಿಯಲ್ಲಿ ಸುಮಾರು ೩೦೦೦೦ ಮಂದಿ ಕೆಲಸ ಮಾಡುತ್ತಿದ್ದರು. ಅಂದಿನ ಕಾಲದಲ್ಲಿ (ಹತ್ತೊಂಬತ್ತನೇ ಶತಮಾನದ ಆರಂಭದಲ್ಲಿ) ಉತ್ತಮ ಸವಲತ್ತುಗಳನ್ನು ನೀಡುತ್ತಿದ್ದ ಕಂಪೆನಿ ಇದಾಗಿತ್ತು. ಆದರೂ ಕಂಪೆನಿಯ ಕೆಲಸಗಾರರಲ್ಲಿ ಸಾಕಷ್ಟು ಅಸಮಾಧಾನ ಮತ್ತು ಅತೃಪ್ತಿ ಇತ್ತು ಮತ್ತು ಅವು ಅವರ ಕಾರ್ಯಕ್ಷಮತೆಯನ್ನು ಪ್ರಭಾವಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಈ ಪ್ರಯೋಗ ನಡೆದಿದೆ. ಹೆಚ್ಚು ಕಡಿಮೆ ಒಂದೇ ರೀತಿಯ ಕೆಲಸಗಾರರ ಎರಡು ಗುಂಪುಗಳನ್ನು ಮಾಡಿ ಒಂದನ್ನಿ ನಿಯಂತ್ರಿತ ಗುಂಪೆಂದು ಅಥವಾ ಕಂಟ್ರೋಲ್ಡ್ ಗುಂಪೆಂದು ಮತ್ತೊಂದನ್ನು ಪರೀಕ್ಷಾ ಗುಂಪೆಂಗು ಪರಿಗಣಿಸಿ ಅವಲೋಕನ ನಡೆದಿದೆ. ನಿಯಂತ್ರಿತ ಗುಂಪಿನ ಮೇಲೆ ಬೆಳಕನ್ನು ಏರುಪೇರು ಮಾಡುವ ಪ್ರಯೋಗ ನಡೆಯುವುದಿಲ್ಲ: ಪರೀಕ್ಷಾ ಗುಂಪಿನ ಮೇಲೆ ಮಾತ್ರ ನಡೆಯುತ್ತದೆ. ಈ ಎಲ್ಲ ವಿವರಗಳನ್ನು ನಾನು ಜೆ.ಎ.ಸಿ. ಬ್ರೌನ್ ಅವರ ದಿ ಸೋಶಿಯಲ್ ಸೈಕಾಲಜಿ ಆಫ್ ಇಂಡಸ್ಟ್ರೀಸ್, ಗ್ರೇಟ್ ಬ್ರಿಟನ್: ಪೆಂಗ್ವಿನ್ ಬುಕ್ಸ್, ೧೯೭೪, ಪು. ೬೯-೯೬ ಎನ್ನುವ ಪುಸ್ತಕದಿಂದ ಪಡೆದಿದ್ದೇನೆ.

[2] ಅವಲೋಕನ ವಿಧಾನ ಕುರಿತ ವಿವರಗಳನ್ನು ಗುಣಾತ್ಮಕ ಸಂಶೋಧನೆಯನ್ನು ವಿವರಿಸುವ ಪುಸ್ತಕಗಳಲ್ಲಿ ನೋಡಬಹುದು. ಕೆಲವು ಪುಸ್ತಕಗಳಲ್ಲಿ ಇದನ್ನು ಸಂಕ್ಷಿಪ್ತವಾಗಿ ಪರಿಚಯಿಸುವಷ್ಟು ವಿವರಣೆ ಇದೆ. ಇನ್ನು ಕೆಲವು ಪುಸ್ತಕಗಳಲ್ಲಿ ವಿಸ್ತಾರವಾದ ವಿವರಣೆಗಳಿವೆ. ಮೇಲಿನ ವಿವರಗಳನ್ನು ನಾನು ವಿಲಿಯಂ ಜೆ. ಗುಡೇ ಮತ್ತು ಪೌಲ್ ಕೆ. ಹ್ಯಾಟ್, ಮೆಥಡ್ಸ್ ಇನ್ಸೋಶಿಯಲ್ ರಿಸರ್ಚ್, ಸಿಂಗಪೂರ್: ಮೆಕ್‌ಗ್ರೋ ಹಿಲ್ ಬುಕ್ ಕಂಪೆನಿ, ೧೯೫೨, ಪು. ೧೧೯-೧೩೧ ಪುಸ್ತಕದಿಂದ ಪಡೆದಿದ್ದೇನೆ. ಈ ವಿವರಗಳನ್ನು ನೀಡುವ ಇತರ ಕೆಲವು ಪುಸ್ತಕಗಳು ಇಂತಿವೆ. ವಾಲ್ಟರ್ ಫರ್ನಾಂಡೀಸ್ ಮತ್ತು ಫಿಲಿಪ್ ವೇಗಾಸ್, ಪಾರ್ಟಿಸಿಪೇಟರಿ ಆಂಡ್ ಕನ್ವೆನ್ಶನಲ್ ರಿಸರ್ಚ್ ಮೆಥಡಾಲಜೀಸ್, ನ್ಯೂಡೆಲ್ಲಿ: ಇಂಡಿಯನ್ ಸೋಶಿಯಲ್ ಇನ್ಸಿಟ್ಯೂಟ್, ೧೯೮೫, ಪಾರ್ಥನಾಥ ಮುಖರ್ಜಿ (ಸಂ), ಮೆಥಡಾಲಜಿ ಇನ್ ಸೋಶಿಯಲ್ ರಿಸರ್ಚ್, ನ್ಯೂಡೆಲ್ಲಿ: ಸೇಜ್, ೨೦೦೦.

[3] ಸಹಭಾಗಿತ್ವ ಅಭಿವೃದ್ಧಿ ಇತ್ತೀಚಿಗೆ ಚಾಲ್ತಿಗೆ ಬಂದ ಅಭಿವೃದ್ಧಿ ಮಾದರಿ. ಇದು ಬೆಳಕಿಗೆ ಬರಲು ಅಭಿವೃದ್ಧಿ ಚಿಂತನೆ ಮತ್ತು ಪ್ರಾಕ್ಟೀಸುಗಳಲ್ಲಿ ಆದ ಬದಲಾವಣೆಯ ಜತೆಗೆ ಸಮಾಜ ಸಂಶೋಧನೆಯ್ಲೂ ಆದ ಬದಲಾವಣೆಗಳ ಪಾತ್ರ ಕೂಡ ಇದೆ. ವಿರಾಟ್ ಥಿಯರಿಗಳನ್ನು ಅಲ್ಲಗಳೆಯುವ ಆಧುನಿಕೋತ್ತರ ಚಿಂತನೆ ಪ್ರಚಾರ ಪಡೆಯುವುದರೊಂದಿಗೆ ಆರ್ಥಿಕವಾಗಿ ಹಿಂದುಳಿದ ಸಂಸ್ಕೃತಿಗಳಲ್ಲೂ ಅಭಿವೃದ್ಧಿಯ ಕಲ್ಪನೆಗಳಿವೆ ಮತ್ತು ಅವು ಪಶ್ಚಿಮದ ಶ್ರೀಮಂತ ಸಂಸ್ಕೃತಿಗಳು ಕೊಡುವ ಮಾದರಿಯಷ್ಟೇ ಉತ್ತಮವಾಗಿವೆ ಎನ್ನುವ ಆಲೋಚನೆಗಳು ಬಲಗೊಳ್ಳಲು ಆರಂಭವಾದವು. ಜತೆಗೆ ಗ್ರಾಮೀನ ಜನರ ಬೇಕು ಬೇಡಗಳನ್ನು ಅರ್ಥ ಮಾಡಿಕೊಳ್ಳಲು ಪಾರ್ಟಿಸಿಪೇಟರಿ ರೂರಲ್ ಎಪ್ರೈಸಲ್ ಮಾಹಿತಿ ಸಂಗ್ರಹ ವಿಧಾನ ಕೂಡ ಮಹತ್ವ ಪಡೆಯಿತು. ಗ್ರಾಮೀಣ ಜನರ ಭಾಷೆ ಮತ್ತು ಆಕರಗಳ ಮೂಲಕ ಮಾಹಿತಿ ಸಂಗ್ರಹಿಸುವುದು ಈ ವಿಧಾನದ ವಿಶೇಷತೆ.

[4] ಚಂದ್ರ ಪೂಜಾರಿ, ಜನಾಯೋಜನೆ, ಪು. ೧೫-೧೯.

[5] ಚಂದ್ರ ಪೂಜಾರಿ, ಜನಾಯೋಜನೆ, ಪು. ೧೫-೧೯.