ಚಾರಿತ್ರಿಕ ವಿಶ್ಲೇಷಣೆ

ಚಾರಿತ್ರಿಕ ವಿಶ್ಲೇಷಣೆ ಹಲವಾರು ಕಾರಣಗಳಿಗೆ ಮಹತ್ವ ಪಡೆದಿದೆ. ಒಂದು ವರ್ತಮಾನವನ್ನು ಗಟ್ಟಿಗೊಳಿಸಲು, ಎರಡು, ಸತ್ಯವೆಂದು ನಂಬಿಕೊಂಡು ಬಂದಿರುವ ಸಂಗತಿಗಳ ನಿಜ ಸ್ವರೂಪ ತಿಳಿಯಲು, ಮೂರು, ಒಂದು ಸಾಮಾಜಿಕ ವಾಸ್ತವತೆಯ ಯೂನಿವರ್ಸಲ್ ಆನ್ವಯಿಕತೆಯ ಸಾಧ್ಯತೆಯನ್ನು ಒರೆಹಚ್ಚಲು ಹಾಗೂ ನಾಲ್ಕು, ನಾವು ಎಲ್ಲಿಗೆ ಹೋಗಬೇಕೆನ್ನುವುದನ್ನು ನಿರ್ಧರಿಸಲು ನಾವು ಎಲ್ಲಿಂದ ಬಂದಿದ್ದೇವೆ ಎನ್ನುವುದರ ತಿಳುವಳಿಕೆ ಅಗತ್ಯ. ಈ ಎಲ್ಲ ಉದ್ದೇಶಗಳನ್ನು ಚಾರಿತ್ರಿಕ ವಿಶ್ಲೇಷಣೆಯಿಂದ ಮಾತ್ರ ಪೂರೈಸಲು ಸಾಧ್ಯ. ಚಾರಿತ್ರಿಕ ವಿಶ್ಲೇಷಣೆ ಮೇಲೆ ಮಾಹಿತಿ ನೀಡುವಾಗ ಒಂದಂಶವನ್ನು ಸ್ಪಷ್ಟಪಡಿಸುವ ಅಗತ್ಯ ಇದೆ. ಇಲ್ಲಿ ನೀಡುವ ಚಾರಿತ್ರಿಕ ವಿಶ್ಲೇಷಣೆಯ ವಿವರಣೆ ಚರಿತ್ರೆಯ ಸಂಶೋಧನೆಯನ್ನು ಗಮನದಲ್ಲಿಟ್ಟುಕೊಂಡು ಮಾಡಿಲ್ಲ. ಚರಿತ್ರೇತರ ಸಂಶೋಧನೆಗಳ ಸಂದರ್ಭದಲ್ಲಿ ಬಳಕೆಯಾಗುವ ಚಾರಿತ್ರಿಕ ಮಾಹಿತಿಗಳ ವಿಶ್ಲೇಷಣೆಯನ್ನು ಗಮನದಲ್ಲಿಟ್ಟುಕೊಂಡು ಇಲ್ಲಿನ ವಿವರಣೆಗಳಿವೆ.[1] ಕಾರ್ಯಕಾರಣ ವಿಶ್ಲೇಷಣೆಯನ್ನು ಎಲ್ಲ ಸಂದರ್ಭಗಳಲ್ಲಿ ಮಾಡಲಾಗುವುದಿಲ್ಲ ಎಂದು ಪ್ರವಾಸೋದ್ಯಮ ಮತ್ತು ಸಾಮಾಜಿಕ ಪರಿವರ್ತನೆಯನ್ನು ಅಧ್ಯಯನದ ಉದಾಹರಣೆಯಲ್ಲಿ ಕಂಡುಕೊಂಡಿದ್ದೇವೆ. ಆ ಸಂದರ್ಭದಲ್ಲಿ ತುಲನಾತ್ಮಕ ವಿಶ್ಲೇಷಣೆ ಅಥವಾ ಚಾರಿತ್ರಿಕ ವಿಶ್ಲೇಷಣಾ ವಿಧಾನವನ್ನು ಬಳಸಬಹುದೆಂದು ಹೇಳಲಾಗಿದೆ. ತುಲನಾತ್ಮಕ ವಿಶ್ಲೇಷಣಾ ವಿಧಾನದಿಂದ ಪ್ರವಾಸೋದ್ಯಮ ಮತ್ತು ಸಾಮಾಜಿಕ ಪರಿವರ್ತನೆ ನಡುವಿನ ಸಂಬಂಧವನ್ನು ಅಧ್ಯಯನ ಹೇಗೆ ಮಾಡಬಹುದೆನ್ನುವುದನ್ನು ಮೇಲಿನ ಪ್ಯಾರಾದಲ್ಲಿ ನೋಡಿದ್ದೇವೆ. ಇಲ್ಲಿ ಚಾರಿತ್ರಿಕ ವಿಶ್ಲೇಷಣಾ ವಿಧಾನವನ್ನು ಬಳಸುವ ಕ್ರಮವನ್ನು ತಿಳಿದುಕೊಳ್ಳಲು ಪ್ರಯತ್ನಿಸೋಣ. ಪುನಃ ಅದೇ ಪ್ರವಾಸೋದ್ಯಮದ ಉದಾಹರಣೆಯನ್ನು ತೆಗೆದುಕೊಳ್ಳೋಣ. ಪ್ರವಾಸೋದ್ಯಮದಿಂದಾಗುವ ಸಾಮಾಜಿಕ ಪರಿವರ್ತನೆಯನ್ನು ಮಾಪನ ಮಾಡಲು ಕುಟುಂಬ ವ್ಯವಸ್ಥೆಯೊಳಗಿನ ಪರಿವರ್ತನೆ (ಅವಿಭಕ್ತ ಕುಟುಂಬದಿಂದ ವಿಭಕ್ತ ಕುಟುಂಬದ ಕಡೆಗೆ ಚಲಿಸುವುದು), ಮಹಿಳೆಯ ಸ್ಥಾನಮಾನ, ಲಿಂಗಾನುಪಾತ, ಶಿಕ್ಷಣದ ಮಟ್ಟ, ಆರೋಗ್ಯದ ಮಟ್ಟ, ಸಾಮಾಜಿಕ ಏಣಿಶ್ರೇಣಿಯಲ್ಲಿನ ಪರಿವರ್ತನೆ ಇತ್ಯಾದಿ ಸೂಚ್ಯಂಕಗಳನ್ನು ಬಳಸಲಾಗಿದೆ. ಪ್ರವಾಸೋದ್ಯಮ ಹಳ್ಳಿಯಲ್ಲಿ ಶುರುವಾಗುವ ಮುನ್ನ ಈ ಸೂಚ್ಯಂಕಗಳ ಸ್ಥಿತಿಗತಿ ಏನೆಂದು ತಿಳಿದರೆ ಪ್ರವಾಸೋದ್ಯಮದಿಂದಾಗುವ ಪರಿವರ್ತನೆಯನ್ನು ಅರಿತುಕೊಳ್ಳಬಹುದು. ಹಂಪೆಯ ಉದಾಹರಣೆಯನ್ನು ತೆಗೆದುಕೊಳ್ಳೋಣ. ತೊಂಬತ್ತರ ದಶಕದಲ್ಲಿ ಇದು ವರ್ಲ್ಡ್ ಹೆರಿಟೇಜ್ ಪಟ್ಟಿಗೆ ಸೇರಿತು. ನಂತರದ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆ, ಅದರಲ್ಲೂ ಪರದೇಶಿ ಪ್ರವಾಸಿಗರ ಸಂಖ್ಯೆ ಹೆಚ್ಚಿದೆ. ಹಂಪೆಯನ್ನು ನೋಡಲು ಬರುವ ಪ್ರವಾಸಿಗರಲ್ಲಿ ಕೆಲವರು ಹಂಪೆಯಲ್ಲೇ ಉಳಿದರೆ ಇನ್ನು ಕೆಲವರು ಹೊಸಪೇಟೆ ಹೋಟೆಲುಗಳಲ್ಲಿ ಮತ್ತು ಕಮಲಾಪುರದಲ್ಲಿರುವ ಪ್ರವಾಸೋದ್ಯಮ ಇಲಾಖೆಯವರ ವಸತಿ ನಿಲಯಗಳಲ್ಲಿ ಉಳಿಯುತ್ತಾರೆ. ಆರ್ಥಿಕವಾಗಿ ಕೆಳಸ್ಥಿತಿಯಲ್ಲಿರುವ ಪರದೇಶಿ ಪ್ರವಾಸಿಗರು ಹಂಪೆಯಲ್ಲೇ ಉಳಿಯುತ್ತಾರೆ. ಇವರ ಸೇವೆಗಾಗಿ ನೂರಕ್ಕಿಂತಲೂ ಹೆಚ್ಚಿನ ಸಂಖ್ಯೆಯ ಅತಿಥಿ ಗೃಹಗಳು ಹಂಪೆಯಲ್ಲಿ ಆರಂಭವಾಗಿವೆ. ಜತೆಗೆ ಪ್ರವಾಸಿಗರ ಇತರ ಬೇಡಿಕೆಗಳನ್ನು ಪೂರೈಸಲು ಹೋಟೇಲುಗಳು, ಅಂಗಡಿಗಳು, ಮಸಾಜ್ ಶಾಪ್‌ಗಳು ಇತ್ಯಾದಿಗಳು ಹಂಪೆಯಲ್ಲಿ ಆರಂಭವಾಗಿವೆ. ಹಲವಾರು ತಲೆಮಾರುಗಳಿಂದ ಹಂಪೆಯಲ್ಲಿಯೇ ವಾಸವಿರುವ ಕುಟುಂಗಳ ಜತೆಗೆ ನೆರೆಯ ಹಳ್ಳಿಗಳಿಂದ ವಲಸೆ ಬಂದ ಕುಟುಂಬಗಳು ಈ ಉದ್ಯಮಗಳನ್ನು ಆರಂಭಿಸಿವೆ.[2] ಪ್ರವಾಸೋದ್ಯಮ ಆರಂಭವಾಗುವ ಮುನ್ನ ಹಂಪೆಯಲ್ಲಿನ ಕುಟುಂಬಗಳ ಸಾಮಾಜಿಕ ಸ್ಥಿತಿಗತಿಗಳನ್ನು ಆರಂಭವಾದ ನಂತರದ ಸ್ಥಿತಿಗತಿಗಳಿಗೆ ಹೋಲಿಸುವ ಮೂಲಕ ಪ್ರವಾಸೋದ್ಯಮದಿಂದ ಸಾಮಾಜಿಕ ಬದಲಾವಣೆಗಳನ್ನು ಅರ್ಥ ಮಾಡಿಕೊಳ್ಳಬಹುದು. ಹೀಗೆ ಚಾರಿತ್ರಿಕ ವಿಶ್ಲೇಷಣೆ ಕೂಡ ಒಂದು ಬಗೆಯ ತುಲನಾತ್ಮಕ ವಿಶ್ಲೇಷಣೆಯೇ ಆಗಿದೆ. ಇಲ್ಲಿ ಭೂತವನ್ನು ವರ್ತಮಾನಕ್ಕೆ ಹೋಲಿಸಲಾಗುತ್ತದೆ. ಆ ಮೂಲಕ ವರ್ತಮಾನವನ್ನು ಗಟ್ಟಿಗೊಳಿಸುವ ಅಥವಾ ಪ್ರಶ್ನಿಸುವ ಕೆಲಸ ನಡೆಯುತ್ತದೆ.

ಚಾರಿತ್ರಿಕ ವಿಶ್ಲೇಷಣೆಯನ್ನು ಕೇವಲ ವರ್ತಮಾನವನ್ನು ಗಟ್ಟಿಗೊಳಿಸಲು ಅಥವಾ ಪ್ರಶ್ನಿಸಲು ಬಳಸುವುದಲ್ಲ; ವರ್ತಮಾನದಲ್ಲಿ ಸತ್ಯವೆಂದು ನಂಬಿರುವ ಸಂಗತಿಗಳ ನಿಜ ಸ್ವರೂಪ ತಿಳಿಯಲು ಕೂಡ ಬಳಕೆಯಾಗುತ್ತಿದೆ. ಒಂದು ಪ್ರದೇಶದ ಅಭಿವೃದ್ಧಿಯನ್ನು ಅಳೆಯಲು ಲಿಂಗಾನುಪಾತವನ್ನು (ಪ್ರತಿ ಸಾವಿರ ಪುರುಷರಿಗೆ ಇರುವ ಮಹಿಳೆಯರ ಸಂಖ್ಯೆ) ಬಳಸುವುದು ಸಾಮಾನ್ಯ. ಒಂದು ಪ್ರದೇಶದಲ್ಲಿ ಪ್ರತಿ ಸಾವಿರ ಪುರುಷರ ಸಂಖ್ಯೆಗೆ ಸಮ ಅಥವಾ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರಿದ್ದರೆ ಆ ಪ್ರದೇಶವನ್ನು ಲಿಂಗಾನುಪಾತದ ದೃಷ್ಟಿಯಿಂದ ಅಭಿವೃದ್ಧಿ ಹೊಂದಿದ ಪ್ರದೇಶವೆಂದು ತೀರ್ಮಾನಿಸಲಾಗುವುದು. ನನ್ನ ಪಿಎಚ್.ಡಿ ಅಧ್ಯಯನ ಸಂದರ್ಭದಲ್ಲಿ (ತೊಂಬತ್ತರ ದಶಕದಲ್ಲಿ) ದಕ್ಷಿಣ ಕನ್ನಡ ಜಿಲ್ಲೆಯ ಲಿಂಗಾನುಪಾತವನ್ನು ಪರೀಕ್ಷಿಸುತ್ತಿದ್ದೆ. ಆ ಸಂದರ್ಭದಲ್ಲಿ ಜಿಲ್ಲೆಯ ಲಿಂಗಾನುಪಾತ ಸಕಾರಾತ್ಮಕ ಚಿತ್ರಣವನ್ನು ನೀಡುತ್ತಿತ್ತು. ಜತೆಗೆ ಅಭಿವೃದ್ಧಿಯ ಇತರ ಮಾನದಂಡಗಳ ಪ್ರಕಾರ ಕೂಡ ಜಿಲ್ಲೆ ಎರಡು ಅಥವಾ ಮೂರನೇ ಸ್ಥಾನದಲ್ಲಿ (ರಾಜ್ಯದ ಸರಾಸರಿಗಳಿಗೆ ಹೋಲಿಸಿ) ಇತ್ತು.[3] ಎಪ್ಪತ್ತರ ದಶಕದಲ್ಲಿ ಬಂದ ಅಭಿವೃದ್ಧಿಯ ಕೆಲವೊಂದು ಕಾರ್ಯಕ್ರಮಗಳು (ಭೂಸುಧಾರಣೆ, ಬ್ಯಾಂಕ್‌ ರಾಷ್ಟ್ರೀಕರಣ, ಕಡಿಮೆ ವೆಚ್ಚದ ಶಿಕ್ಷಣ ಇತ್ಯಾದಿ ಕ್ರಮಗಳು) ಜಿಲ್ಲೆಯ ಅಭಿವೃದ್ಧಿಯಲ್ಲಿ ಗಣನೀಯವಾದ ಪಾತ್ರ ವಹಿಸಿವೆ. ಎಪ್ಪತ್ತರ ದಶಕದ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿ ಮಟ್ಟ ರಾಜ್ಯದ ಇತರ ಜಿಲ್ಲೆಗಳಿಗಿಂತ ವಿಶೇಷ ಭಿನ್ನತೆ ಇರಲಿಲ್ಲ. ಅಂದರೆ ಎಪ್ಪತ್ತರ ಹಿಂದಿನ ದಶಕಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಲಿಂಗಾನುಪಾತ ನಕಾರಾತ್ಮಕ ಚಿತ್ರಣ ನೀಡಬೇಕು. ಅದನ್ನು ಪರಿಶೀಲಿಸಲು ನಾನು ಎಪ್ಪತ್ತರ ಹಿಂದಿನ ದಶಕಗಳ ದಕ್ಷಿಣ ಕನ್ನಡ ಜಿಲ್ಲೆಯ ಲಿಂಗಾನುಪಾತವನ್ನು ಪರೀಕ್ಷಿಸಿದೆ. ಪರಿಶೀಲನೆಯಿಂದ ದೊರಕಿದ ಮಾಹಿತಿ ನನ್ನ ಇಡೀ ಗ್ರಹಿಕೆಯನ್ನೇ ಬುಡಮೇಲು ಗೊಳಿಸಿತು. ಸ್ವಾತಂತ್ರ್ಯ ನಂತರದ ಎಲ್ಲ ದಶಕಗಳಲ್ಲೂ ಜಿಲ್ಲೆ ಲಿಂಗಾನುಪಾತದ ಸಕಾರಾತ್ಮಕ ಚಿತ್ರಣವನ್ನು ನೀಡುತ್ತಿತ್ತು; ಅಷ್ಟು ಮಾತ್ರವಲ್ಲ ಸ್ವಾತಂತ್ರ್ಯ ಪೂರ್ವದಲ್ಲಿ ಜಿಲ್ಲೆಯ ಲಿಂಗಾನುಪಾತ ಸಕಾರಾತ್ಮಕವಾಗಿತ್ತು. ಅಂದರೆ ಎಲ್ಲ ಕಾಲ ಮತ್ತು ಪ್ರದೇಶಗಳಲ್ಲೂ ಲಿಂಗಾನುಪಾತಕ್ಕೂ ಮುಖ್ಯವಾಹಿನಿಯ ಅಭಿವೃದ್ಧಿ ಮಾಪಕಗಳಿಗೂ ಸಂಬಂಧ ಬೆಸೆಯುವುದು ಸರಿಯಲ್ಲವೆಂದಾಯಿತು. ಹೀಗೆ ವರ್ತಮಾನದಲ್ಲಿ ಸತ್ಯವೆಂದು ನಂಬಿಕೊಂಡಿರುವ ಹಲವಾರು ವಿಚಾರಗಳ ಭೂತವನ್ನು ಕೆದಕುತ್ತಾ ಹೋದರೆ ದೊರಕುವ ಸಂಗತಿಗಳು ಅವುಗಳ ನಿಜ ಸ್ವರೂಪವನ್ನು ಬಯಲು ಮಾಡುತ್ತವೆ.

ಆಧುನೀಕರಣ ಪೂರ್ವದ ಸಾಮಾಜಿಕ ಸ್ಥಿತಿಗತಿಯನ್ನು ವರ್ತಮಾನದ ಸಂಗತಿಗಳಿಗೆ ಹೋಲಿಸಿ ಆಧುನಿಕದ (ವರ್ತಮಾನದ) ಬಗ್ಗೆ ತೀರ್ಮಾನಕ್ಕೆ ಬರುವುದು ಒಂದು ಸಾಮಾನ್ಯ ವಿಧಾನ. ಈ ಕೆಲಸವನ್ನು ಕೇವಲ ಸಂಶೋಧಕರು ಮಾತ್ರ ಮಾಡುತ್ತಾರೆ ಎನ್ನಲಾಗುವುದಿಲ್ಲ; ಜನಸಾಮಾನ್ಯರು ಕೂಡ ಮಾಡುತ್ತಾರೆ. ಯಾವುದೇ ವಿಚಾರ (ಸಾಮಾಜಿಕ ಮೌಲ್ಯಗಳಿರಬಹುದು ಅಥವಾ ಸಂಸ್ಥೆಗಳಿರಬಹುದು ಅಥವಾ ಜೀವನಮಟ್ಟ ಇರಬಹುದು) ತೆಗೆದುಕೊಳ್ಳಿ, ಹಿಂದೆ ಒಳ್ಳೆಯದಿತ್ತು ಎನ್ನುವ ಮಾತನ್ನು ಹೇಳುವ ಕೆಲವು ಮಂದಿಯಾದರೂ ಸಿಗುತ್ತಾರೆ. ಗ್ರಾಮ ಪಂಚಾಯತ್ ಬಗ್ಗೆ ಅಧ್ಯಯನ ಮಾಡುವ ಸಂದರ್ಭದಲ್ಲಿ ಊರಿನ ಹಿರಿಯರಲ್ಲಿ ಹಿಂದಿನ ಪಂಚಾಯತ್ ವ್ಯವಸ್ಥೆ (ಸ್ವಾತಂತ್ರ್ಯಪೂರ್ವ ಮತ್ತು ಸುಮಾರು ಎಂಬತ್ತರ ದಶಕಗಳವರೆಗಿನ) ಉತ್ತಮವಾಗಿತ್ತೋ ಅಥವಾ ವರ್ತಮಾನದಲ್ಲಿರುವ ಪಂಚಾಯತ್ ವ್ಯವಸ್ಥೆ ಉತ್ತಮವೇ? ಎಂದು ಕೇಳಲಾಯಿತು.[4] ಹಳ್ಳಿಯ ಮೇಲ್ವರ್ಗಕ್ಕೆ ಸೇರಿದ ವ್ಯಕ್ತಿಗಳು ಮತ್ತು ಕೆಳವರ್ಗದ ಹಿರಿಯರು ವರ್ತಮಾನದ ಪಂಚಾಯಿತಿಗೆ ಹೋಲಿಸಿದರೆ ಹಿಂದಿನ ಪಂಚಾಯತ್ ವ್ಯವಸ್ಥೆ ಉತ್ತಮವಾಗಿತ್ತು. ಎನ್ನುವ ಅಭಿಪ್ರಾಯ ನೀಡಿದರು. ಹಿಂದಿನ ಪಂಚಾಯತನ್ನು ವರ್ತಮಾನದ ಪಂಚಾಯತ್‌ಗೆ ಹೋಲಿಸಿ ಉತ್ತಮವಾಗಿತ್ತು ಎನ್ನುವ ತೀಮಾನಕ್ಕೆ ಬರಲು ಅವರು ನೀಡಿದ ಮುಖ್ಯ ಕಾರಣಗಳು ಇಂತಿವೆ. ಒಂದು, ಹಿಂದಿನ ಪಂಚಾಯತ್ ಚುನಾವಣೆಗಳ ಸಂದರ್ಭದಲ್ಲಿ ಪಂಚಾಯತ್ ಅಧಿಕಾರಕ್ಕಾಗಿ ಗ್ರಾಮಸ್ಥರ ಮಧ್ಯೆ ಜಗಳಗಳಿರಲಿಲ್ಲ. ಎರಡು, ಪಂಚಾಯತ್ ಅಧ್ಯಕ್ಷರಿಗೆ ಊರಲ್ಲಿ ನಡೆಯುವ ಬಹುತೇಕ ವ್ಯವಹಾರಗಳ ಮೇಲೆ ಹಿಡಿತವಿತ್ತು. ಮೂರು, ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ಹಳ್ಳಿಯ ಬಹುತೇಕ ತಂಟೆ ತಕರಾರುಗಳನ್ನು ಊರಿನ ಪ್ರಮುಖರು ತೀರ್ಮಾನಿಸುತ್ತಿದ್ದರು. ಹಳ್ಳಿಯೊಳಗಿನ ತಕರಾರುಗಳನ್ನು ತೀರ್ಮಾನಿಸಲು ಕೋರ್ಟ್, ಕಚೇರಿ, ಪೊಲೀಸ್ ಠಾಣೆಗಳಿಗೆ ಹೋಗುವ ಅಗತ್ಯವಿರಲಿಲ್ಲ. ನಾಲ್ಕು, ಪಂಚಾಯತ್ ಅಧ್ಯಕ್ಷರ ನಡವಳಿಕೆ ಉತ್ತಮವಾಗಿತ್ತು. ನಾಲ್ಕು, ಹಿಂದೆ ಪಂಚಾಯತ್‌ಗೆ ಯಾವುದೇ ಧನಸಹಾಯವಿರಲಿಲ್ಲ. ಆದಾಗ್ಯೂ ಊರಿನ ಅಭಿವೃದ್ಧಿಗೆ ಅಗತ್ಯವಿರುವ ಜವಾಬ್ದಾರಿಗಳನ್ನು ಪಂಚಾಯತ್ ನಿರ್ವಹಿಸುತ್ತಿತ್ತು. ಹಿಂದಿನ ವ್ಯವಸ್ಥೆಗಳ ಉತ್ತಮ ಗುಣಗಳನ್ನು ಪಟ್ಟಿ ಮಾಡುವ ಪ್ರಕ್ರಿಯೆಯಲ್ಲಿ ಇಂದಿನ ಪಂಚಾಯತ್‌ನ ಲೋಪದೋಷಗಳು ಅಡಗಿವೆ. ಹಿಂದಿನ ಪಂಚಾಯತ್ ವ್ಯವಸ್ಥೆ ಬಗ್ಗೆ ಗ್ರಾಮಸ್ಥರು ಹೊಂದಿರುವ ಅಭಿಪ್ರಾಯಗಳ ನಿಜ ಸ್ವರೂಪ ಅರ್ಥವಾಗಬೇಕಾದರೆ ಚಾರಿತ್ರಿಕ ವಿಶ್ಲೇಷಣೆ ಮಾಡಬೇಕಾಗುತ್ತದೆ.

ಇದೇ ಬಗೆಯ ಅಭಿಪ್ರಾಯವನ್ನು ಇತರ ವಿಚಾರಗಳಲ್ಲೂ ಕಾಣಬಹುದು. ವಸಾಹತು ಪೂರ್ವದಲ್ಲಿ ನೆಲ, ಜಲ, ಅರಣ್ಯ ಇತ್ಯಾದಿಗಳ ನಿರ್ವಹಣೆ ಕುರಿತು ನಮ್ಮದೇ ವ್ಯವಸ್ಥೆಗಳು ಇದ್ದವು. ಸಾಂಪ್ರದಾಯಿಕ ಸಮಾಜದಲ್ಲಿನ ನಿಕಟ ಮತ್ತು ಪರಸ್ಪರ ಅರಿತಿರುವ ಸಂದರ್ಭದಲ್ಲಿ ಸಮುದಾಯದ ಸಂಪನ್ಮೂಲ ಬಳಕೆ ಮತ್ತು ನಿರ್ವಹಣೆ ಕುರಿತಂತೆ ಸ್ವಯಂಪ್ರೇರಿತ ನಿಬಂಧನೆಗಳಿದ್ದವು. ಸ್ಥಳೀಯ ಸಂಪನ್ಮೂಲಗಳನ್ನು ಆಧರಿಸಿ ಬದುಕುತ್ತಿದ್ದ ಸಮುದಾಯಗಳಿಗೆ ಆ ಸಂಪನ್ಮೂಲಗಳ ಬಳಕೆ ಮತ್ತು ಸಂರಕ್ಷಣೆ ಕುರಿತು ತಿಳುವಳಿಕೆಯಿತ್ತು, ಜವಾಬ್ದಾರಿಯಿತ್ತು.[5] ಆದರೆ ಆಧನಿಕತೆ ಮುಚ್ಚಿಕೊಂಡಿದ್ದ ಸಮುದಾಯದ ಬದುಕನ್ನು ತೆರೆದು ಇತರ ಸಮುದಾಯಗಳೊಂದಿಗೆ ಸಂಪರ್ಕ ಮತ್ತು ವಿನಿಮಯವನ್ನು ಕಲಿಸಿತು. ಈ ಸಂಪರ್ಕ ಮತ್ತು ವಿನಿಮಯ ಇಂದು ಸ್ಥಳೀಯ ಸಂಪನ್ಮೂಲಗಳ ಬಳಕೆ ಕುರಿತಂತೆ ನಿರ್ಧಾರಗಳು ಇಂದು ಸ್ಥಳೀಯ ಅವಶ್ಯಕತೆಗಳಿಗೆ ಅನುಗುಣವಾಗಿ ರೂಪಿತವಾಗುವುದಿಲ್ಲ. ಬದಲಿಗೆ ಮಾರುಕಟ್ಟೆಗಳ ಅಗತ್ಯಗಳಿಗೆ ಅನುಗುಣವಾಗಿ ಅಮೂರ್ತ ರೂಪದಲ್ಲಿ ಆಗುತ್ತಿವೆ. ಇದು ಎರಡು ರೀತಿಯ ದುಷ್ಪರಿಣಾಮಗಳಿಗೆ ಕಾರಣವಾಗಿದೆ. ಒಂದು, ಸಂಪನ್ಮೂಲಗಳ ಎಗ್ಗಿಲ್ಲದ ನಾಶ ಮತ್ತು ಎರಡು, ಸ್ಥಳೀಯ ಸಮುದಾಯಗಳು ಕೂಡ ಅವುಗಳ ಸಂರಕ್ಷಣೆ ಬಗ್ಗೆ ದಿವ್ಯ ನಿರ್ಲಕ್ಷ ತೋರುವುದು. ಈ ಸಮಸ್ಯೆಗಳಿಂದ ಹೊರಬರಲು ಒಂದೇ ದಾರಿ- ಸಂಪನ್ಮೂಲಗಳ ನಿರ್ವಹಣೆಯಲ್ಲಿ ಸ್ಥಳೀಯ ಸಮುದಾಯಗಳು ಭಾಗವಹಿಸುವುದು. ತಮ್ಮ ಪರಿಸರದಲ್ಲಿನ ನೆಲ, ಜಲ, ಅರಣ್ಯ ಇತ್ಯಾದಿಗಳ ನಿರ್ವಹಣೆ ಮತ್ತು ಸಂರಕ್ಷಣೆಯ ಜವಾಬ್ದಾರಿಗಳನ್ನು ಸ್ಥಳೀಯ ಸಮುದಾಯಗಳು ವಹಿಸಿಕೊಳ್ಳಬೇಕೆಂದು ಪರಿಸರವಾದಿಗಳು ಮತ್ತು ಸಮುದಾಯವಾದಿಗಳು ವಾದಿಸುತ್ತಾರೆ. ಇದೇನು ಹೊಸ ಪ್ರಯೋಗವಲ್ಲ. ಕೆರೆ ಮತ್ತು ಇತರ ಜಲ ಸಂಪನ್ಮೂಲಗಳ ನಿರ್ವಹಣೆ ಕುರಿತು ಧಾರಾಳ ಮಾಹಿತಿ ನಮ್ಮ ಚರಿತ್ರೆಯಲ್ಲಿ ಸಿಗುತ್ತದೆ. ಕೆರೆ ಕಟ್ಟಿಸುವುದರಲ್ಲಿ ಊರಿನ ಧನಿಕರ, ವ್ಯಾಪಾರಿಗಳ, ದೇವಸ್ಥಾನಗಳ ಮತ್ತು ರಾಜರ ಪಾತ್ರ ಮಹತ್ವದ್ದು. ಆದರೆ ಅವುಗಳ ನಿರ್ವಹಣೆ ಮತ್ತು ಸಂರಕ್ಷಣೆಯಲ್ಲಿ ರೈತಾಪಿ ಜನರ ಪಾತ್ರ ಅಲ್ಲಗಳೆಯುವಂತಿರಲಿಲ್ಲ. ನಮ್ಮ ಹಿರಿಯರು ಮಾಡಿದ ಪ್ರಯೋಗಗಳಿಂದ ಇಂದಿನ ನಮ್ಮ ಸಮಸ್ಯೆಗಳಿಗೆ ಕೆಲವು ಪರಿಹಾರಗಳಾದರೂ ಸಿಗಬಹುದು. ಆ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಅಗತ್ಯವೆನ್ನುವ ವಾದಗಳಿವೆ. ಈ ನಿಲುವಿನ ನಿಜ ಸ್ವರೂಪ ತಿಳಿಯಬೇಕಾದರೆ ಚಾರಿತ್ರಿಕ ವಿಶ್ಲೇಷಣೆ ಮಾಡಬೇಕಾಗಿದೆ. ಸ್ಥಳೀಯ ಸಂಪನ್ಮೂಲಗಳ ನಿರ್ವಹಣೆಗೆ ವಸಾಹತುಪೂರ್ವದಲ್ಲಿದ್ದ ವ್ಯವಸ್ಥೆ ಮೇಲಿನ ಮಾಹಿತಿ ಬೇಕು. ವಸಾಹತುಪೂರ್ವದಲ್ಲಿನ ಸಾಮಾಜಿಕ ಏಣಿಶ್ರೇಣಿಗಳು, ಭೂಮಿಯ ಒಡೆತನ, ಸಂಪನ್ಮೂಲಗಳ ಬಳಕೆ, ಸಂಪನ್ಮೂಲಗಳ ನಿರ್ವಹಣೆಗೆ ಇದ್ದ ಸಾಂಸ್ಥಿಕ ವ್ಯವಸ್ಥೆ, ಆ ವ್ಯವಸ್ಥೆಯಲ್ಲಿನ ಸದಸ್ಯತ್ವ, ನಿರ್ಧಾರ ತಳೆಯುವ ವಿಧಾನಗಳು, ನಿರ್ಧಾರ ತಳೆಯುವಲ್ಲಿ ಸಮಾಜ ವಿವಿಧ ಜಾತಿ ಅಥವಾ ಗುಂಪುಗಳ ಪಾತ್ರ ಇತ್ಯಾದಿಗಳು ವಸಾಹತುಪೂರ್ವದ ನಿರ್ವಹಣಾ ವ್ಯವಸ್ಥೆ ಮೇಲೆ ಬೆಳಕು ಚೆಲ್ಲುತ್ತವೆ.

ವಿಷಯ ವಿಶ್ಲೇಷಣೆ (ಕಂಟೆಂಟ್ ಎನಾಲಿಸಿಸ್)

ವಿಷಯ ವಿಶ್ಲೇಷಣೆ ಸಾಂಪ್ರದಾಯಿಕ ಸಮಾಜ ಸಂಶೋಧನಾ ವಿಧಾನದ ಕೊಡುಗೆ. ಇಲ್ಲೂ ಒಟ್ಟು ಸಂಖ್ಯೆಯಿಂದ ಅಧ್ಯಯನಕ್ಕೆ ಒಳಪಡಿಸಬೇಕಾಗಿರುವ ಮಾದರಿ ಸಂಖ್ಯೆಯನ್ನು (ಸ್ಯಾಂಪ್ಲಿಂಗ್ ವಿಧಾನ ಬಳಸಿ) ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಆಯ್ಕೆ ಮಾಡಿಕೊಂಡು ಮಾದರಿಗಳಿಂದ (ಸ್ಯಾಂಪಲ್‌ಗಳಿಂದ) ಅಧ್ಯಯನದ ಉದ್ದೇಶಗಳಿಗೆ ಸಂಬಂಧಿಸಿದ ಮಾಹಿತಿಯನ್ನು (ಮಾಹಿತಿ ಸಂಗ್ರಹದ ವಿವಿಧ ವಿಧಾನಗಳನ್ನು ಬಳಸಿಕೊಂಡು) ಸಂಗ್ರಹಿಸಲಾಗುತ್ತದೆ. ಸಂಗ್ರಹಿಸಿದ ಮಾಹಿತಿಯನ್ನು ವಿಷಯ ವಿಶ್ಲೇಷಣಾ ವಿಧಾನ ಮೂಲಕ ವಿಶ್ಲೇಷಿಸುವುದು ಈ ವಿಧಾನದ ಮುಖ್ಯ ಲಕ್ಷಣಗಳು. ಸಾಂಪ್ರದಾಯಿಕ ವಿಧಾನದಲ್ಲಿ ವ್ಯಕ್ತಿ, ಕುಟುಂಬ, ವಿಷಯಗಳ ಮಾದರಿಯನ್ನು (ಸ್ಯಾಂಪಲ್) ಅಧ್ಯಯನಕ್ಕೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ವಿಷಯ ವಿಶ್ಲೇಷಣೆಯಲ್ಲಿ ವ್ಯಕ್ತಿ, ಕುಟುಂಬಗಳ ಬದಲು ಪಠ್ಯಗಳನ್ನು, ಅರ್ಥಗಳನ್ನು, ರೂಪಕಗಳನ್ನು (ಟೆಕ್ಸ್ಟ್, ಮೀನಿಂಗ್ಸ್, ಇಮೇಜಸ್) ಅಧ್ಯಯನಕ್ಕೆ ಒಳಪಡಿಸಲಾಗುವುದು. ಉದಾಹರಣೆಗೆ ಕಾರಂತರ ಕಾದಂಬರಿಗಳಲ್ಲಿ ಪರಿಸರ ಎನ್ನುವ ಸಂಶೋಧನಾ ಸಮಸ್ಯೆ. ಈ ಸಮಸ್ಯೆಯ ಅಧ್ಯಯನಕ್ಕೆ ಕಾರಂತರ ಎಲ್ಲ ಅಥವಾ ಕೆಲವು ಕಾದಂಬರಿಗಳನ್ನು ಅಧ್ಯಯನಕ್ಕೆ ಒಳಪಡಿಸಬಹುದು. ಸರ್ವೇ ವಿಧಾನದಲ್ಲಿ ವ್ಯಕ್ತಿ, ಕುಟುಂಬ, ವಿಷಯ ಇತ್ಯಾದಿಗಳ ಮಾದರಿ ಸಂಖ್ಯೆಯನ್ನು ನಿರ್ಧರಿಸಬೇಕಾಗುತ್ತದೆ. ಇದೇ ರೀತಿಯಲ್ಲಿ ಅಧ್ಯಯನಕ್ಕೆ ಒಳಗಾಗುವ ಪಠ್ಯಗಳ ಮಾದರಿ ಸಂಖ್ಯೆಯನ್ನು ನಿರ್ಧರಿಸಬೇಕಾಗುತ್ತದೆ. ಅಧ್ಯಯನಕ್ಕೆ ಒಳಗಾಗುವ ವ್ಯಕ್ತಿ, ಕುಟುಂಬಗಳ ಒಟ್ಟು ಸಂಖ್ಯೆಯ ಶೇಕಡಾ ಐದರಿಂದ ಹತ್ತರಷ್ಟು ಸಂಖ್ಯೆಯ ವ್ಯಕ್ತಿ, ಕುಟುಂಬಗಳನ್ನು ಅಧ್ಯಯನಕ್ಕೆ ಮಾದರಿಯಾಗಿ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಹಾಗೆಂದು ಅಧ್ಯಯನಕ್ಕೆ ಒಳಪಡಿಸಬೇಕಾದ ಟೆಕ್ಸ್ಟ್, ರೂಪಕಗಳ ಮಾದರಿ ಸಂಖ್ಯೆ ಬಗ್ಗೆ ಖಚಿತ ನಿಲುವು ತಾಳುವುದು ಕಷ್ಟದ ಕೆಲಸ.[6] ಮಾದರಿ ಆಯ್ಕೆ ಆದ ನಂತರ ಕಾದಂಬರಿಗಳಲ್ಲಿ ಪರಿಸರದ ಉಲ್ಲೇಖ ಎಷ್ಟು ಬಾರಿ ಆಗಿದೆ. ಅಷ್ಟು ಮಾತ್ರವಲ್ಲ ಪರಿಸರದ ಮಹತ್ವ, ಪರಿಸರದ ವ್ಯಾಖ್ಯಾನ, ಆಚರಣೆ, ಪರಿಸರ ಮತ್ತು ಇತರ ಪಾತ್ರಗಳ ನಡುವಿನ ಸಂಬಂಧ, ಪರಿಸರದ ಬಗ್ಗೆ ಕಾದಂಬರಿಕಾರರ ನಿಲುವು ಇತ್ಯಾದಿಗಳನ್ನು ವಿಷಯ ವಿಶ್ಲೇಷಣೆಯ ಮೂಲಕ ತಿಳಿದುಕೊಳ್ಳಬಹುದು.

ಮೇಲಿನ ಉದಾಹರಣೆಯಲ್ಲಿ ಸಾಹಿತ್ಯ ಕೃತಿಗಳ ವಿಶ್ಲೇಷಣೆಗೆ ವಿಷಯ ವಿಶ್ಲೇಷಣಾ ವಿಧಾನ ಅನ್ವಯಿಸುವುದನ್ನು ನೋಡಿದ್ದೇವೆ. ಪಠ್ಯಗಳು ಹೊರಗೆಡಹುವ ಅರ್ಥವನ್ನು ತಿಳಿಯಲು ವಿಷಯ ವಿಶ್ಲೇಷಣಾ ವಿಧಾನವನ್ನು ಬಳಸಲಾಗಿದೆ. ಹಾಗೆಂದು ಈ ವಿಧಾನ ಕೇವಲ ಪಠ್ಯಗಳ ವಿಶ್ಲೇಷಣೆಗೆ ಸೀಮಿತ ಎಂದು ತಿಳಿಯಲಾಗುವುದಿಲ್ಲ. ಪಠ್ಯದ ವ್ಯಾಖ್ಯಾನ ಈ ವಿಧಾನದ ಬಹು ಉಪಯೋಗವನ್ನು ಪ್ರಭಾವಿಸುತ್ತದೆ. ಉದಾಹರಣೆಗೆ ವಾಣಿಜ್ಯಲೋಕದ ಜಾಹಿರಾತನ್ನು ಅಥವಾ ಸಾಂಸ್ಕೃತಿಕ ಲೋಕದ ಆಚರಣೆಗಳನ್ನು ಪಠ್ಯದ ರೂಪದಲ್ಲಿ ನೋಡಬಹುದು.[7] ಜಾಹಿರಾತು ಅಥವಾ ಭೂತಾರಾಧನೆಯಂತಹ ಸಾಂಸ್ಕೃತಿಕ ಚಟುವಟಿಕೆಗಳ ವಿಶ್ಲೇಷಣೆಗೆ ವಿಷಯ ವಿಶ್ಲೇಷಣಾ ವಿಧಾನವನ್ನು ಬಳಸುವುದರ ಬಗ್ಗೆ ತಿಳಿದುಕೊಳ್ಳೋಣ. ಜಾಹೀರಾತು ಬಿಂಬಿಸುವ ಮಹಿಳೆ ಎನ್ನುವ ಸಂಶೋಧನಾ ವಿಷಯವನ್ನು ಉದಾಹರಣೆಯನ್ನಾಗಿ ತೆಗೆದುಕೊಳ್ಳೋಣ. ಪರಿಶೀಲಿಸಬೇಕಾದ ಜಾಹಿರಾತುಗಳ ಸಂಖ್ಯೆಯನ್ನು ಮೊದಲಿಗೆ ನಿರ್ಧರಿಸಿಕೊಳ್ಳಬೇಕು. ನಂತರ ಯಾವ ಜಾಹೀರಾತುಗಳನ್ನು – ಸರಕು ಅಥವಾ ಸೇವೆ ಮಾರಾಟಗಳಿಗೆ ಸಂಬಂಧಿಸಿದ ಜಾಹಿರಾತುಗಳೇ ಅಥವಾ ಸರಕಾರಿ ಕಾರ್ಯಗಳನ್ನು ಪ್ರಚಾರ ಪಡಿಸುವ ಜಾಹಿರಾತುಗಳೇ ಎನ್ನುವ ನಿರ್ಧಾರವಾಗಬೇಕು. ಜತೆಗೆ ಯಾವ ಕಾಲದಿಂದ ಯಾವ ಕಾಲದವರೆಗಿನ ಜಾಹಿರಾತುಗಳು? ಯಾವ ಮಾಧ್ಯಮಗಳಲ್ಲಿ ಪ್ರಸಾರವಾಗುವ ಜಾಹಿರಾತುಗಳು? ಇತ್ಯಾದಿ ಪ್ರಶ್ನೆಗಳಿಗೆ ಉತ್ತರಿಸಿಕೊಳ್ಳಬೇಕಾಗುತ್ತದೆ. ಸುಮಾರು ಹತ್ತು ವರ್ಷಗಳಲ್ಲಿ ಟಿವಿ ಮಾಧ್ಯಮದಲ್ಲಿ ಸರಕಿನ ಮಾರಾಟಕ್ಕಾಗಿ ಬಳಸುವ ಜಾಹಿರಾತುಗಳಲ್ಲಿ ಮಹಿಳೆಯನ್ನು ಬಿಂಬಿಸುವ ಕ್ರಮವನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ಎಂದು ಊಹಿಸೋಣ. ಜಾಹಿರಾತುಗಳಲ್ಲಿ ಮಹಿಳೆಯನ್ನು ಯಾವ ಪಾತ್ರದಲ್ಲಿ ತೋರಿಸುತ್ತಾರೆ? ಉಡುಗೆ ತೊಡುಗೆ ಮತ್ತು ಇತರೆ ಹಾವಭಾವ ಇತ್ಯಾದಿ ವಿಚಾರಗಳಲ್ಲಿ ಜಾಹೀರಾತು ಮಹಿಳೆಯನ್ನು ಯಾವ ರೂಪದಲ್ಲಿ ಬಿಂಬಿಸುತ್ತದೆ? ಜಾಹಿರಾತುಗಳಲ್ಲಿ ಮಹಿಳೆಯ ಜತೆ ಬರುವ ಇತರ ಪಾತ್ರಗಳು ಮತ್ತು ಮಹಿಳೆ ಮತ್ತು ಆ ಪಾತ್ರಗಳ ನಡುವಿನ ಸಂಬಂಧವೇನು? ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕು. ಮಹಿಳೆಯನ್ನು ತಾಯಿಯಾಗಿ, ತಂಗಿಯಾಗಿ, ಪತ್ನಿಯಾಗಿ, ದುಡಿಯುವ ಮಹಿಳೆಯಾಗಿ ಹೀಗೆ ಹಲವಾರು ರೂಪಗಳಲ್ಲಿ ಬಿಂಬಿಸಬಹುದು. ಗೌರವಾನ್ವಿತ ಮಹಿಳೆಯಾಗಿ ತೋರಿಸಬಹುದು ಅಥವಾ ಮಹಿಳೆಯನ್ನು ಕಾಮದ ಚಿಹ್ನೆಯಾಗಿ ಬಿಂಬಿಸಬಹುದು. ಜಾಹಿರಾತಿನಲ್ಲಿ ಬರುವ ಇತರ ಪಾತ್ರಗಳೊಂದಿಗೆ ಮಹಿಳೆಯ ಸಂಬಂಧವನ್ನು ವಿವಿಧ ರೀತಿಯಲ್ಲಿ ತೋರಿಸಬಹುದು. ಸಾಂಪ್ರದಾಯಿಕ ಮಹಿಳೆಯಾಗಿ ಅಂದರೆ ಹಿರಿಯರ ನಿರ್ಧಾರಗಳನ್ನು ಪ್ರಶ್ನಿಸದೆ ಒಪ್ಪಿಕೊಳ್ಳುವ ಮಹಿಳೆಯ ರೂಪದಲ್ಲಿ ಅಥವಾ ಮಹಿಳೆಗೂ ಒಂದು ಸ್ವತಂತ್ರ ವ್ಯಕ್ತಿ ಇದೆ ಎನ್ನುವ ರೂಫದಲ್ಲಿ ತೋರಿಸಬಹುದು. ಈ ಎಲ್ಲ ಅಂಶಗಳ ಮೇಲಿನ ವಿಶ್ಲೇಷಣೆ ಸಮಾಜದಲ್ಲಿನ ಮಹಿಳೆಯ ಸ್ಥಾನಮಾನವನ್ನು ಅರ್ಥ ಮಾಡಿಕೊಳ್ಳಲು ಸಹಕರಿಸುತ್ತವೆ.

ವಿಷಯ ವಿಶ್ಲೇಷಣಾ ವಿಧಾನವನ್ನು ಬಳಸಿಕೊಂಡು ಸಾಂಸ್ಕೃತಿಕ ಲೋಕದ ಪಠ್ಯಗಳನ್ನು ಅಧ್ಯಯನ ಮಾಡುವ ಕ್ರಮವನ್ನು ಅರ್ಥ ಮಾಡಿಕೊಳ್ಳಲು ದಕ್ಷಿಣ ಕನ್ನಡ ಜಿಲ್ಲೆಯ ಭೂತಾರಾಧನೆಯ ಉದಾಹರಣೆಯೊಂದಿಗೆ ಪ್ರಯತ್ನಿಸೋಣ. ಜಿಲ್ಲೆಯಲ್ಲಿ ಹಲವಾರು ವಿಧದ ಭೂತಾರಾಧನೆಗಳಿವೆ. ಅವುಗಳಲ್ಲಿ ಯಾವುದಾದರೂ ಒಂದು ಭೂತಾರಾಧನೆಯನ್ನು ಮಾದರಿಯಾಗಿ ಆಯ್ಕೆ ಮಾಡಿಕೊಳ್ಳಬಹುದು. ಆಯ್ಕೆ ಮಾಡಿದ ಭೂತಾರಾಧನೆಯ ಆಚರಣೆಯನ್ನು ಆರಂಭದಿಂದ ಅಂತ್ಯದವರೆಗೆ ಅವಲೋಕಿಸಿ ಆಚರಣೆಯ ಸಂದರ್ಭದಲ್ಲಿ ನಡೆಯುವ ಎಲ್ಲ ಸಂಗತಿಗಳನ್ನು ದಾಖಲಿಸಿಕೊಳ್ಳಬೇಕು. ಆಚರಣಾಪೂರ್ವ ತಯಾರಿ, ಭೂತಾರಾಧನೆ ನಡೆಯುವ ಸ್ಥಳ, ಆಚರಣೆಯನ್ನು ನಡೆಸುವವರು, ಆಚರಣೆಯಲ್ಲಿ ಪಾಲುಗೊಳ್ಳುವ ಗ್ರಾಮಸ್ಥರು ಮತ್ತು ಅವರ ಪಾತ್ರ, ಭೂತದ ಪಾತ್ರಿಗಳು, ಪಾತ್ರಿಯ ಜತೆಗಿರುವ ಸದಸ್ಯರು ಮತ್ತು ಆಚರಣೆಯಲ್ಲಿ ಅವರ ಪಾತ್ರ, ಆಚರಣೆ ಸಂದರ್ಭದಲ್ಲಿ ಭೂತದ ಪಾತ್ರಿ ಹೇಳುವ ನುಡಿಗಟ್ಟುಗಳು, ಭೂತ ಮಾಡುವ ನ್ಯಾಯ ತೀರ್ಮಾನಗಳು, ಸೇರಿದ ಗ್ರಾಮಸ್ಥರನ್ನು ಭೂತ ನಡೆಸಿಕೊಳ್ಳುವ ಕ್ರಮ ಇತ್ಯಾದಿಗಳನ್ನು ಪಠ್ಯದೊಳಗೆ ಬರುವ ಅಧ್ಯಾಯಗಳಂತೆ ಪರಿಗಣಿಸಬಹುದು. ಇವುಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಅವಲೋಕನಾ ವಿಧಾನದಿಂದ ಸಂಗ್ರಹಿಸಬಹುದು. ವಿಷಯ ವಿಶ್ಲೇಷಣಾ ವಿಧಾನದ ಮೂಲಕ ಈ ಎಲ್ಲ ಅಧ್ಯಾಯಗಳನ್ನು ವಿಶ್ಲೇಷಿಸಬಹುದು. ಉದಾಹರಣೆಗೆ ಆಚರಣಾಪೂರ್ವ ತಯಾರಿಯನ್ನು ಪರಿಶೀಲಿಸೋಣ. ಇಡೀ ಊರಿಗೆ ಸಂಬಂಧಿಸಿದ ಭೂತದ ಆರಾಧನೆ ಊರಿನ ಗೌಡರ ಅಥವಾ ಪಟೇಲರ ಅಥವಾ ಗುತ್ತಿನ ಮನೆಯಲ್ಲಿ ನಡೆಯುತ್ತದೆ. ಊರಿನ ಸಮಸ್ತರು ಒಂದಲ್ಲ ಒಂದು ರೂಪದಲ್ಲಿ ಆಚರಣೆಯಲ್ಲಿ ಪಾಲುಗೊಳ್ಳಬೇಕಾಗುತ್ತದೆ.[8] ಕೆಲವರು ಹಣ್ಣು ಹಂಪಲು ಪೂರೈಸಿದರೆ, ಇನ್ನು ಕೆಲವರು ಕೋಳಿ, ಕುರಿ, ಮೇಕೆ ಇತ್ಯಾದಿಗಳನ್ನು ಪೂರೈಸಬೇಕು, ಮಡಿವಾಳರು ಮಡಿ ಬಟ್ಟೆ ಒದಗಿಸಿದರೆ, ಗಾಣಿಗರು ಎಣ್ಣೆ ಪೂರೈಸಬೇಕು. ಆಚರಣೆಯಲ್ಲಿ ಪಾಲುಗೊಳ್ಳುವುದು ಕಡ್ಡಾಯ; ಊರವರಿಗೆ ಈ ವಿಚಾರದಲ್ಲಿ ಆಯ್ಕೆ ಇಲ್ಲ. ಊರಿನ ಸಾಮಾಜಿಕ ಏಣಿಶ್ರೇಣಿ ಪ್ರಕಾರ ಭೂತ ಗ್ರಾಮಸ್ಥರನ್ನು ಸಂಬೋಧಿಸಬಹುದು. ಮೇಲುಜಾತಿ ಜನರನ್ನು ಬಹುವಚನದಲ್ಲಿ ಸಂಬೋಧಿಸಿದರೆ ಕೆಳಜಾತಿ ಜನರನ್ನು ಏಕವಚನದಲ್ಲಿ ಭೂತ ಸಂಬೋಧಿಸಬಹುದು. ಪ್ರಸಾದ ಕೊಡುವಾಗಲೂ ದಿನನಿತ್ಯದ ಬದುಕಿನಲ್ಲಿನ ಏಣಿಶ್ರೇಣಿಗಳನ್ನು ಅನುಸರಿಸಬಹುದು – ಮೇಲುಜಾತಿ ಜನರಿಗೆ ಮೊದಲು ಪ್ರಸಾದ ನೀಡಿ ನಂತರ ಕೆಳಜಾತಿ ಜನರಿಗೆ ನೀಡಬಹುದು. ಹೀಗೆ ವಿಷಯ ವಿಶ್ಲೆಷಣೆಯ ಮೂಲಕ ಭೂತಾರಾಧನೆಯ ಹಲವು ಆಯಾಮಗಳನ್ನು ಅರ್ಥ ಮಾಡಿಕೊಳ್ಳಬಹುದು.[9]

ಮಾಹಿತಿ ವಿಶ್ಲೇಷಣೆ ಎನ್ನುವ ಈ ಅಧ್ಯಾಯದಲ್ಲಿ ಚಾಲ್ತಿಯಲ್ಲಿರುವ ಕೆಲವೊಂದು ವಿಶ್ಲೇಷಣಾ ವಿಧಾನಗಳ ವಿವರಗಳನ್ನು ನೀಡಲು ಪ್ರಯತ್ನಿಸಲಾಗಿದೆ. ಅವುಗಳಲ್ಲಿ ಏಕಾಂಶ ವಿಶ್ಲೇಷಣೆಯನ್ನು ಪರಿಮಾಣಾತ್ಮಕ ವಿಶ್ಲೇಷಣೆಯೆಂದು ವಿಂಗಡಿಸಿಕೊಂಡರೆ ಉಳಿದ ಮೂರನ್ನು (ತುಲನಾತ್ಮಕ, ಚಾರಿತ್ರಿಕ ಮತ್ತು ವಿಷಯ ವಿಶ್ಲೇಷಣೆಗಳನ್ನು) ಸಂಶೋಧನೆಯ ತಾತ್ವಿಕ ಹಿನ್ನೆಲೆಗನುಸಾರ ಎರಡೂ ಬಗೆಯಲ್ಲೂ (ಗುಣಾತ್ಮಕ ಅಥವಾ ಪರಿಮಾಣಾತ್ಮಕ ವಿಶ್ಲೇಷಣೆಗಳ ರೂಪದಲ್ಲಿ) ಬಳಸಿಕೊಳ್ಳಬಹುದು. ಏಕಾಂಶ ವಿಶ್ಲೇಷಣೆಯಲ್ಲಿ ಒಂದೇ ಅಂಶದ ವಿವಿಧ ಆಯಾಮಗಳನ್ನು ವಿಶ್ಲೇಷಿಸುವುದರ ಕುರಿತು ಚರ್ಚಿಸಲಾಗಿದೆ. ಈ ಸಂದರ್ಭದಲ್ಲಿ ಬಳಕೆಯಾಗುವ ಕೆಲವೊಂದು ಅಂಕಿಅಂಶ ಮಾಪಕಗಳನ್ನು ಕೂಡ ಸಂಕ್ಷಿಪ್ತವಾಗಿ ಪರಿಚಯಿಸಲಾಗಿದೆ. ಏಕಾಂಶ ವಿಶ್ಲೇಷಣೆಯಲ್ಲಿ ಸಂಶೋಧನೆಗೆ ಒಳಪಡುವ ಸಂಗತಿ ಹೇಗಿದೆ. ಅಥವಾ ಯಾವ ರೂಪದಲ್ಲಿದೆ ಎನ್ನುವುದನ್ನು ವಿವರಿಸುವುದಕ್ಕೆ ಹೆಚ್ಚಿನ ಮಹತ್ವ ಇದೆ. ಒಂದು ಅಂಶ ಮತ್ತೊಂದು ಅಂಶದ ನಡುವಿನ ಸಂಬಂಧವನ್ನು ವಿಶ್ಲೇಷಿಸುವ ಗೋಜಿಗೆ ಏಕಾಂಶ ವಿಶ್ಲೇಷಣೆ ಹೋಗುವುದಿಲ್ಲ. ಆ ಕೆಲಸವನ್ನು ತುಲನಾತ್ಮಕ ವಿಶ್ಲೇಷಣೆ ಮಾಡುತ್ತದೆ. ಇಲ್ಲಿ ಸಂಶೋಧನೆಗೆ ಒಳಪಡುವ ಸಂಗತಿಯ ರೂಪವನ್ನು ತಿಳಿದುಕೊಳ್ಳುವುದರ ಜತೆಗೆ ಆ ಸಂಗತಿಯನ್ನು ಮತ್ತೊಂದು ಸಂಗತಿಯ ಜತೆಗೆ ಹೋಲಿಸಿ ಅಧ್ಯಯನಕ್ಕೆ ಒಳಪಡುವ ಸಂಗತಿ ಯಾಕೆ ಹೀಗಿದೆ ಎನ್ನುವ ಪ್ರಶ್ನೆಗೆ ಉತ್ತರಿಸಲು ಪ್ರಯತ್ನಿಸಲಾಗುವುದು. ಎರಡು ವಿಧದ ತುಲನೆ ಚಾಲ್ತಿಯಲ್ಲಿದೆ. ಒಂದು, ಪ್ರದೇಶವಾರು ಮತ್ತೊಂದು ಕಾಲವಾರು. ಒಂದು ಪ್ರದೇಶದಲ್ಲಿನ ಸಂಗತಿಗಳನ್ನು ಮತ್ತೊಂದು ಪ್ರದೇಶದಲ್ಲಿನ ಸಂಗತಿಗಳಿಗೆ ಹೋಲಿಸಿ ತೀರ್ಮಾನಕ್ಕೆ ಬರುವ ತುಲನಾತ್ಮಕ ವಿಶ್ಲೇಷಣೆ ಸಮಾಜ ಸಂಶೋಧನೆಯಲ್ಲಿ ತುಂಬಾ ಬಳಕೆಯಲ್ಲಿದೆ. ಚಾರಿತ್ರಿಕ ವಿಶ್ಲೇಷಣೆಯ ಮೂಲಕ ಒಂದು ಕಾಲದ ಸಂಗತಿಯನ್ನು ಮತ್ತೊಂದು ಕಾಲದ ಸಂಗತಿಗೆ ಹೋಲಿಸಿ ತೀರ್ಮಾನಕ್ಕೆ ಬರಲಾಗುವುದು. ವಿಷಯ ವಿಶ್ಲೇಷಣೆ ಎಂದ ಕೂಡಲೇ ಅದು ಸಂಸ್ಕೃತಿ ಅಧ್ಯಯನದ ವಿಧಾನ ಎನ್ನುವ ಅಭಿಪ್ರಾಯವಿದೆ. ಅದಕ್ಕೆ ಕಾರಣ ಬಹುತೇಕ ಸಂಶೋಧಕರು ಈ ವಿಧಾನವನ್ನು ಉಲ್ಲೇಖಿಸಿದೆ ಬಳಸುವುದು. ಸಮಾಜ ಸಂಶೋಧನೆಯಲ್ಲೂ ವಿಷಯ ವಿಶ್ಲೇಷಣೆಗೆ ವಿಶೇಷ ಮಹತ್ವ ಇದೆ. ಹೆಚ್ಚು ಕಡಿಮೆ ಎಲ್ಲ ಸಂಶೋಧಕರು ಒಂದಲ್ಲ ಒಂದು ರೂಪದಲ್ಲಿ ವಿಷಯ ವಿಶ್ಲೇಷಣೆ ಮಾಡುತ್ತಿರುತ್ತಾರೆ. ಅಧ್ಯಾಯದ ಆರಂಭದಲ್ಲಿ ತಿಳಿಸಿದಂತೆ ಇಂದು ಒಂದೇ ಸಂಶೋಧನಾ ವಿಧಾನದ ಬಗ್ಗೆ ಚರ್ಚಿಸಲು ಸಾಧ್ಯವಿಲ್ಲ. ಮಾಹಿತಿ ಸಂಗ್ರಹಿಸಲು ಹಲವಾರು ವಿಧಾನಗಳನ್ನು ಬಳಸುವುದು ಸಾಮಾನ್ಯವಾಗಿದೆ. ಅದೇ ರೀತಿಯಲ್ಲಿ ಒಂದೇ ವಿಶ್ಲೇಷಣಾ ವಿಧಾನಕ್ಕೆ ಅಂಟಿಕೊಳ್ಳಲು ಸಾಧ್ಯವಿಲ್ಲ. ಎರಡು ಅಥವಾ ಎರಡಕ್ಕಿಂತ ಹೆಚ್ಚಿನ ವಿಶ್ಲೇಷಣಾ ವಿಧಾನಗಳನ್ನು ಬಳಸುವುದು ಸಂಶೋಧನೆಯ ಮಹತ್ವ ಹೆಚ್ಚಿಸುವ ದೃಷ್ಟಿಯಿಂದ ಅಗತ್ಯವಿದೆ.

* * *

[1] ಚರಿತ್ರೇತರ ಅಧ್ಯಯನಗಳಲ್ಲಿ ಚಾರಿತ್ರಿಕ ವಿಶ್ಲೇಷಣೆಯ ಮಹತ್ವಕ್ಕೆ ಸಂಬಂಧಿಸಿದ ವಿವರಗಳಿಗೆ ಕಾರ್ಟ್‌ರೈಟ್ ಅವರ ದಿ ಸೋಶಿಯಾಲಜಿಕಲ್ ಇಮೇಜಿನೇಶನ್, ಹೇಮಂಡ್ಸ್‌ವರ್ತ್: ಪೆಂಗ್ವಿನ್ ಬುಕ್ಸ್, ೧೯೭೦ ಪುಸ್ತಕ ನೋಡಬಹುದು.

[2] ಕೆ. ಸಿದ್ದಪ್ಪ, ಪ್ರವಾಸೋದ್ಯಮ ಮತ್ತು ಅಭಿವೃದ್ಧಿ – ಹಂಪಿಯ ಒಂದು ಅಧ್ಯಯನ, ೨೦೦೨.

[3] ೧೯೯೯ರ ಕರ್ನಾಟಕದ ಮಾನವ ಅಭಿವೃದ್ಧಿ ವರದಿ ಪ್ರಕಾರ ಜಿಲ್ಲೆ ಮೂರನೇ ಸ್ಥಾನದಲ್ಲಿದೆ. ಶಿಕ್ಷಣ, ಆರೋಗ್ಯ ಮತ್ತು ಆದಾಯ ಈ ಮೂರು ಸೂಚ್ಯಂಕಗಳ ಆಧಾರದಲ್ಲಿ ಮಾನವ ಅಭಿವೃದ್ಧಿ ಇಂಡೆಕ್ಸ್‌ನ್ನು ಸಿದ್ಧಪಡಿಸಲಾಗುವುದು. ವಿವರಗಳಿಗೆ ಕರ್ನಾಟಕ ಸರಕಾರ, ಮಾನವ ಅಭಿವೃದ್ದಿ, ೧೯೯೯, ಬೆಂಗಳೂರು: ಯೋಜನೆ ಇಲಾಖೆ, ೧೯೯೯ ನೋಡಬಹುದು.

[4] ವಿವರಗಳಿಗೆ ಚಂದ್ರ ಪೂಜಾರಿಯವರ, ದೇಶೀಯತೆಯ ನೆರಳಲ್ಲಿ ವಿಕೇಂದ್ರೀಕರಣ, ವಿದ್ಯಾರಣ್ಯ; ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ೨೦೦೦ ಪುಸ್ತಕ ನೋಡಬಹುದು.

[5] ಈ ಬಗೆಯ ವಾದಗಳಿಗೆ ಈ ಕೆಳಗಿನ ಪುಸ್ತಕಗಳನ್ನು ನೋಡಬಹುದು – ಮಾಧವ ಗಾಡ್ಗೀಳ್ ಆಂಡ್ ರಾಮಚಂದ್ರ ಗುಹ, ಇಕಾಲಜಿ ಆಂಡ್ ಈಕ್ವಿಟಿ : ದಿ ಯೂಸ್ ಆಂಡ್ ಅಬ್ಯೂಸ್ ಆಫ್ ನೇಚರ್ ಇನ್ ಕಾಂಟೆಂಪರರಿ ಇಂಡಿಯಾ, ನ್ಯೂಡೆಲ್ಲಿ: ಪೆಂಗ್ವಿನ್ ಬುಕ್ಸ್, ೧೯೯೫, ಜೋದ ಎಸ್.ಎಸ್., “ಕಾಮನ್ ಪ್ರೊಪರ್ಟಿ ರಿಸೊರ‍್ಸ್‌ಸ್” ಇನ್ ರಾಮಚಂದ್ರ ಗುಹ (ಎಡಿಟೆಡ್), ಸೋಶಿಯಲ್ ಇಕಾಲಜಿ, ಡೆಲ್ಲಿ : ಆಕ್ಸ್‌ಫರ್ಡ್‌ಯೂನಿವರ್ಸಿಟಿ ಪ್ರೆಸ್, ೧೯೯೪ ಮತ್ತು ಆಶಿಸ್ ಕೊಥಾರಿ ಮತ್ತು ಇತರರು, ಕಮ್ಯುನಿಟೀಸ್ ಆಂಡ್ ಕನ್ಸರ್ವೇಶನ್ : ನೇಚುರಲ್ ರಿಸೋರ್ಸ್ ಮೆನೇಜ್ಮೆಂಟ್ ಇನ್ ಸೌತ್ ಆಂಡ್ ಸೆಂಟ್ರಲ್ ಏಷ್ಯಾ, ನ್ಯೂಡೆಲ್ಲಿ: ಸೇಜ್ ಪಬ್ಲಿಕೇಶನ್ಸ್, ೧೯೯೮.

[6] ಸಂಶೋಧನಾ ವಿದ್ಯಾರ್ಥಿಗಳಲ್ಲಿ ಈ ಕುರಿತು (ಮಾದರಿ ಆಯ್ಕೆ ಕುರಿತು) ಸ್ವಾರಸ್ಯಕರ ನಿಲುವುಗಳಿವೆ. ಕೆಲವರ ಪ್ರಕಾರ ಮಾದರಿ ಸಂಖ್ಯೆಯನ್ನು ಡಿಗ್ರಿ ನಿರ್ಧರಿಸುತ್ತದೆ. ಸಿದ್ಧಪಡಿಸುವ ಪ್ರಬಂಧ ಎಂಫಿಲ್ ಡಿಗ್ರಿಗಾದರೆ ಹತ್ತರಿಂದ ಹದಿನೈದು ಕಾದಂಬರಿಗಳನ್ನು ಮಾದರಿಯಾಗಿ ಆಯ್ಕೆ ಮಾಡಿಕೊಳ್ಳುವುದು. ಪಿಎಚ್.ಡಿ. ಡಿಗ್ರಿಗಾದರೆ ಕನಿಷ್ಠ ಇಪ್ಪತ್ತೈದು ಕಾದಂಬರಿ ಗಳನ್ನಾದರೂ ಅಧ್ಯಯನಕ್ಕೆ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.

[7] ಬಹುತೇಕ ಸಮಾಜ ಸಂಶೋಧಕರು ವಿಷಯ ವಿಶ್ಲೇಷಣೆಯನ್ನು ಮಾಡುತ್ತಿರುತ್ತಾರೆ. ಉದಾಹರಣೆಗೆ ಈಗಾಗಲೇ ಆದ ಅಧ್ಯಯನಗಳ ಸಮೀಕ್ಷೆ ಸಂದರ್ಭದಲ್ಲಿ ವಿಷಯ ವಿಶ್ಲೇಷಣೆ ನಡೆಯುತ್ತಿರುತ್ತದೆ. ಅದೇ ರೀತಿಯಲ್ಲಿ ಯಾವುದೋ ಒಂದು ಕ್ಷೇತ್ರದ ಅಭಿವೃದ್ಧಿ ನೀತಿಯ ಕುರಿತ ಸುಮಾರು ಹತ್ತು ವರ್ಷದ ಬೆಳವಣಿಗೆ ಕೂಡ ವಿಷಯ ವಿಶ್ಲೇಷಣೆಯನ್ನು ಬೇಡುತ್ತದೆ. ಆದರೆ ಇಲ್ಲೆಲ್ಲೂ ವಿಷಯ ವಿಶ್ಲೇಷಣಾ ವಿಧಾನವನ್ನು ಅನುಸರಿಸಲಾಗಿದೆ ಎಂದು ಘೋಷಿಸುವುದಿಲ್ಲ.

[8] ಭೂತಾರಾಧನೆಗೆ ಸಂಬಂಧಿಸಿದ ವಿವರಗಳಿಗೆ ಚಿನ್ನಪ್ಪ ಗೌಡರ, ಭೂತಾರಾಧನೆಜಾನಪದೀಯ ಅಧ್ಯಯನ, ಮಂಗಳ ಗಂಗೋತ್ರಿ: ಮದಿಪು ಪ್ರಕಾಶನ, ೧೯೯೦, ಪುಸ್ತಕ ನೋಡಬಹುದು.

[9] ವಿವರಗಳಿಗೆ ಚಂದ್ರ ಪೂಜಾರಿಯವರ, ‘ಫಾರ್ಮ್ಡ್‌ನ್‌/ಕನ್‌ಸ್ಟ್ರಕ್ಟಡ್ ಕಮ್ಯುನಿಟಿಸ್ ಆಂಡ್ ಕಮ್ಯುನಲಿಸಂ – ಎ ಸ್ಟಡಿ ಆಫ್ ಗ್ರೋಥ್ ಆಫ್ ಕಮ್ಯುನಲಿಸಂ ಇನ್ ಕೋಸ್ಟಲ್ ಕರ್ನಾಟಕ’ ಇಂಡಿಯನ್ ಜರ್ನಲ್ ಆಫ್ ಸೆಕ್ಯುಲರಿಸಂ, ವಾಲ್ಯೂಂ. ೪, ನಂ.೧, ಏಪ್ರಿಲ್ – ಜೂನ್ ೨೦೦೦, ಪು. ೧-೨೭, ಲೇಖನ ನೋಡಬಹುದು.