ಹಿಂದಿನ ಎರಡು ಅಧ್ಯಾಯಗಳಲ್ಲಿ ಸಂಶೋಧನಾ ವಿಷಯಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ವಿವಿಧ ಮೂಲಗಳಿಂದ ಮತ್ತು ವಿಧಾನಗಳಿಂದ ಸಂಗ್ರಹಿಸುವುದರ ಬಗ್ಗೆ ಚರ್ಚಿಸಲಾಗಿದೆ. ಈ ಅಧ್ಯಾಯದಲ್ಲಿ ಸಂಗ್ರಹಿಸಿದ ಮಾಹಿತಿಯನ್ನು ವಿಶ್ಲೇಷಿಸುವ ಕುರಿತು ಚರ್ಚಿಸಲಾಗುವುದು. ವಿಶ್ಲೇಷಣೆ ಸಮಾಜ ಸಂಶೋಧನೆಯಲ್ಲಿ ತುಂಬಾ ಮಹತ್ವದ ಹಂತ. ಇದೊಂದು (ವಿಶ್ಲೇಷಣೆ) ಬಗೆಯಲ್ಲಿ ಮರದೊಳಗಿನ ತಿರುಳಿನಂತೆ ಕೆಲಸ ಮಾಡುತ್ತದೆ. ತಿರುಳು ಗಟ್ಟಿಯಾಗಿದ್ದರೆ ಮರ ಗಟ್ಟಿಯಾಗಿದೆ ಎನ್ನುವ ತೀಮಾನಕ್ಕೆ ಬರಬಹುದು. ಇದೇ ರೀತಿಯಲ್ಲಿ ವಿಶ್ಲೇಷಣೆ ಪರಿಪೂರ್ಣವಾಗಿದ್ದರೆ ಪ್ರಬಂಧ ಗಟ್ಟಿಯಾಗಿದೆ ಎನ್ನುವ ತೀರ್ಮಾನಕ್ಕೆ ಬರಬಹುದು. ಸಮಾಜವಿಜ್ಞಾನದಲ್ಲಿ ಹಲವಾರು ಶಿಸ್ತುಗಳು ಸೇರಿವೆ. ಈ ಎಲ್ಲವಕ್ಕೂ ಒಂದೇ ವಿಶ್ಲೇಷಣಾ ಕ್ರಮ ಇದೆ ಎಂದು ತಿಳಿಯುವುದು ಸರಿಯಲ್ಲ. ಶಿಸ್ತಿಗನುಸಾರ ವಿಶ್ಲೇಷಣಾ ಕ್ರಮದಲ್ಲೂ ಬದಲಾವಣೆಗಳಿವೆ. ಹಾಗೆಂದು ಸಮಾಜವಿಜ್ಞಾನದಲ್ಲಿ ಬರುವ ಶಿಸ್ತುಗಳ ನಡುವೆ ಯಾವುದೇ ಸಂಬಂಧ ಇಲ್ಲ ಎನ್ನಲಾಗುವುದಿಲ್ಲ. ಹೆಚ್ಚು ಕಡಿಮೆ ಈ ಎಲ್ಲ ಶಿಸ್ತುಗಳು ಆರಂಭದಲ್ಲಿ ಕೆಲವೊಂದು ಮೂಲ ಸೂತ್ರಗಳನ್ನು ಅನುಸರಿಸಿ ಕೊಂಡು ಬೆಳದಿವೆ. ಈ ಎಲ್ಲ ಶಿಸ್ತುಗಳ ಸಂಶೋಧನೆಯ ತಾತ್ವಿಕ ಹಿನ್ನೆಲೆ, ಮಾಹಿತಿ ಸಂಗ್ರಹ ವಿಧಾನ ಇತ್ಯಾದಿಗಳಲ್ಲಿ ತಕ್ಕಮಟ್ಟಿನ ಹೋಲಿಕೆ ಇದೆ. ಅದೇ ರೀತಿಯಲ್ಲಿ ಸಂಗ್ರಹಿಸಿದ ಮಾಹಿತಿಯನ್ನು ವಿಶ್ಲೇಷಿಸುವಾಗ ಅನುಸರಿಸಬೇಕಾದ ನಿಯಮದಲ್ಲೂ ಸಾಕಷ್ಟು ಸಾಮ್ಯತೆ ಇದೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಈ ಅಧ್ಯಾಯದಲ್ಲಿ ವಿಶ್ಲೇಷಣೆಯ ಮೂಲ ತತ್ತ್ವಗಳು, ವಿವಿಧ ವಿಶ್ಲೇಷಣಾ ವಿಧಾನಗಳು ಇತ್ಯಾದಿಗಳನ್ನು ವಿವರಿಸಲಾಗಿದೆ. ಅಧ್ಯಾಯವನ್ನು ಆರಂಭಿಸುವ ಮುನ್ನ ವಿಶ್ಲೇಷಣಾ ಸಂದರ್ಭದಲ್ಲಿ ಸಾಮಾನ್ಯವಾಗಿ ಬಳಕೆ ಆಗುವ ಎರಡು ಪದಗಳನ್ನು ಸ್ಥೂಲವಾಗಿ ವಿವರಿಸಬೇಕಾಗಿದೆ. ವಿಶ್ಲೇಷಣಾ ವಿಧಾನಗಳನ್ನು ಗುಣಾತ್ಮಕ ಮತ್ತು ಪರಿಮಾಣಾತ್ಮಕ ವಿಶ್ಲೇಷಣಾ ಗುಣಾತ್ಮಕ ವಿಶ್ಲೇಷಣೆಯೆಂದು ಮತ್ತು ಅಂಕಿಅಂಶಗಳನ್ನು ಬಳಸಿಕೊಂಡು ಮಾಡುವ ವಿಶ್ಲೇಷಣೆಯನ್ನು ಪರಿಮಾಣಾತ್ಮಕ ವಿಶ್ಲೇಷಣೆಯೆಂದು ವ್ಯಾಖ್ಯಾನಿಸಿಕೊಳ್ಳುವ ಒಂದು ಸಾಮಾನ್ಯ ತಿಳುವಳಿಕೆ ಇದೆ. ಇದು ಸರಿಯಲ್ಲ. ಗುಣಾತ್ಮಕ ವಿಶ್ಲೇಷಣೆಯಲ್ಲೂ ಅಂಕಿ ಅಂಶಗಳ ಬಳಕೆ ಸಾಧ್ಯ. ಅಂಕಿ ಅಂಶಗಳ ಬಳಕೆಯ ನೆಲೆಯಲ್ಲಿ ಈ ಎರಡರ ನಡುವೆ (ಗುಣಾತ್ಮಕ ಮತ್ತು ಪರಿಮಾಣಾತ್ಮಕ) ವ್ಯತ್ಯಾಸಗಳಿರುವುದಲ್ಲ. ಕೆಲವೊಂದು ತಾತ್ವಿಕ ನಿಲುವುಗಳ ಕಾರಣಕ್ಕಾಗಿ ಈ ಎರಡು ವಿಶ್ಲೇಷಣೆಗಳ ನಡುವೆ ವ್ಯತ್ಯಾಸಗಳಿವೆ.

ಪರಿಮಾಣಾತ್ಮಕ ವಿಶ್ಲೇಷಣೆ ಮೂಲತಃ ಎಂಪಿರಿಕಲ್ ವಿಧಾನದ ಕೊಡುಗೆ. ಎಂಪಿರಿಕಲ್ ವಿಧಾನ ಆಬ್ಜೆಕ್ಟಿವಿಟಿಯನ್ನು ಪ್ರತಿಪಾದಿಸುತ್ತದೆ. ಆಬ್ಜೆಕ್ಟಿವ್ ವರ್ಲ್ಡ್ ಒಂದು ಇದೆ. ಅದು ನಮ್ಮ ಆಲೋಚನೆ ಅಥವಾ ಮನಸ್ಸಿನ ಸೃಷ್ಟಿಯಲ್ಲ. ನಮ್ಮ ಆಲೋಚನೆಯನ್ನು ಹೊರತು ಪಡಿಸಿ ಕೂಡ ಅದು ಇದೆ. ಅದನ್ನು ಎಂಪಿರಿಕಲ್ ಆಗಿ ಅಥವಾ ಇತರ ವಿಧಾನಗಳಿಂದ ನಾವು ಭಾಗಶಃ ಗ್ರಹಿಸಬಹುದು ಎನ್ನುವುದೇ ಆಬ್ಜೆಕ್ಟಿವಿಟಿ. ಸಮಾಜ ಸಂಶೋಧನೆಯಲ್ಲಿ ಇದೇ ತತ್ತ್ವ ಈ ಕೆಳಗಿನಂತೆ ಕೆಲಸ ಮಾಡುತ್ತಿದೆ. ವಿವಿಧ ಸಂಸ್ಕೃತಿಗೆ ಸೇರಿದ ಜನರು ಮೇಲ್ನೋಟಕ್ಕೆ ಭಿನ್ನವಾಗಿ ಕಾಣಬಹುದು. ಆದರೆ ಆಳದಲ್ಲಿ ಅವರೆಲ್ಲರ ಗುಣಗಳು ಒಂದೇ ಆಗಿದೆ. ಇಂತಹ ಗುಣಗಳನ್ನು ಎಂಪಿಕರಿಲ್ ಅಥವಾ ಇತರ ವಿಧಾನಗಳಿಂದ ಅಧಯ್ಯನ ಮಾಡಿ ಇವರೆಲ್ಲರ ವ್ಯವಹಾರಗಳನ್ನು ಪ್ರಭಾವಿಸುವ ನಿಯಮಗಳನ್ನು ಕಂಡುಕೊಳ್ಳಬಹುದು ಎನ್ನುವ ಗೃಹೀತ ಪರಿಮಾಣಾತ್ಮಕ ಸಂಶೋಧನೆ ಮತ್ತು ವಿಶ್ಲೇಷಣೆಯ ಹಿಂದೆ ಕೆಲಸ ಮಾಡುತ್ತಿದೆ. ಇಲ್ಲಿ ಜನರಲೈಜೇಶನ್ ಸಾಧ್ಯ ಇದೆ. ಅಂದರೆ ಯಾವುದೇ ಒಂದು ಸಾಮಾಜಿಕ ಸಂಗತಿಯ ಇರುವಿಕೆಯ ಬಗ್ಗೆ ತೀರ್ಮಾನಕ್ಕೆ ಬರಲು ಪ್ರಪಂಚದ ಎಲ್ಲಾ ಸಂಸ್ಕೃತಿಗಳನ್ನು ಅಧ್ಯಯನ ಮಾಡುವ ಅಗತ್ಯವಿಲ್ಲ. ಯಾವುದೋ ಒಂದು ಅಥವಾ ಕೆಲವು ಸಂಸ್ಕೃತಿಗಳನ್ನು ಅಧ್ಯಯನ ಮಾಡುವ ಮೂಲಕ ಇತರ ಸಂಸ್ಕೃತಿಗಳ ಗುಣಗಳನ್ನು ಕೂಡ ವಿವರಿಸಬಹುದೆಂದು ಪರಿಮಾಣಾತ್ಮಕ ವಿಶ್ಲೇಷಣೆ ಗ್ರಹಿಸುತ್ತದೆ.[1] ಸಮಾಜವನ್ನು ಈ ಬಗೆಯಲ್ಲಿ ಕಲ್ಪಿಸಿಕೊಳ್ಳುವುದರ ಬಗ್ಗೆ ಬಹು ಹಿಂದಿನಿಂದಲೇ ಆಕ್ಷೇಪಗಳಿದ್ದವು ಎಂದು ಹಿಂದಿನ ಅಧ್ಯಾಯಗಳಲ್ಲಿ ನೋಡಿದ್ದೇವೆ. ಸಮಾಜವಿಜ್ಞಾನ ಸಂಶೋಧನೆಯಲ್ಲಿ ಸಬ್ಜೆಕ್ಟಿವ್ ವರ್ಲ್ಡ್ ಹಾಗು ಸಬ್ಜೆಕ್ಟಿವಿಟಿಯ ಪ್ರಾಮುಖ್ಯತೆಯನ್ನು ಬಹು ಹಿಂದಿನಿಂದಲೇ ಗುರುತಿಸಬಹುದು. ಇದನ್ನು ಸ್ಥೂಲವಾಗಿ ಹರ್‌ಮೆನೆಟಿಕ್ಸ್ ಸಂಪ್ರದಾಯವೆನ್ನಬಹುದು. ಇದರ ಪ್ರಕಾರ ವಾಸ್ತವಿಕತೆ ಎನ್ನುವುದು ಅರ್ಥಪೂರ್ಣ ಸಾಮಾಜಿಕ ಕಟ್ಟುವಿಕೆ. ನಮ್ಮ ಆಲೋಚನೆಗಳಿಂದ ಪ್ರತ್ಯೇಕವಾದ ಪ್ರಪಂಚವೊಂದಿಲ್ಲ. ನಾವು ಇದೆ ಎಂದು ಗ್ರಹಿಸುತ್ತೇವೆ. ಆದುದರಿಂದ ಇದೆ. ವಿವಿಧ ಸಂಸ್ಕೃತಿಗೆ ಸೇರಿದ ಜನರು ಕೇವಲ ಮೇಲ್ನೋಟಕ್ಕೆ ಭಿನ್ನ ಅಲ್ಲ; ಆಳದಲ್ಲೂ ಭಿನ್ನವಾಗಿದ್ದಾರೆ. ಆದುದರಿಂದ ಯಾವುದೋ ಒಂದು ಅಥವಾ ಕೆಲವು ಸಂಸ್ಕೃತಿಗಳನ್ನು ಅಧ್ಯಯನ ಮಾಡಿ ಪ್ರಪಂಚದಲ್ಲಿರುವ ಎಲ್ಲ ಸಂಸ್ಕೃತಿಗಳ ಬಗ್ಗೆ ತೀರ್ಮಾನಕ್ಕೆ ಬರಲಾಗುವುದಿಲ್ಲವೆಂದು ಗುಣಾತ್ಮಕ ಸಂಶೋಧನೆ ಮತ್ತು ವಿಶ್ಲೇಷಣೆಗೆ ಬದ್ಧರಾದವರು ಗ್ರಹಿಸುತ್ತಾರೆ.[2] ಈ ಅಧ್ಯಾಯದಲ್ಲಿ ಒಟ್ಟು ನಾಲ್ಕು ಬಗೆಯ ವಿಶ್ಲೇಷಣಾ ವಿಧಾನಗಳನ್ನು ವಿವರಿಸಲಾಗಿದೆ. ಸಂಶೋಧನೆಯ ತಾತ್ವಿಕ ಹಿನ್ನೆಲೆಗನುಸಾರ ಅವುಗಳನ್ನು ಗುಣಾತ್ಮಕ ಅಥವಾ ಪರಿಮಾಣಾತ್ಮಕ ವಿಶ್ಲೇಷಣೆಗಳೆಂದು ವಿಂಗಡಿಸಿಕೊಳ್ಳಬಹುದು.

ಏಕಾಂತ ವಿಶ್ಲೇಷಣೆ

ಒಂದೇ ಅಂಶದ ವಿವಿಧ ಆಯಾಮಗಳನ್ನು ವಿಶ್ಲೇಷಿಸುವ ಕ್ರಮವನ್ನು ಏಕಾಂತ ವಿಶ್ಲೇಷಣೆ ಎನ್ನಬಹುದು. ಇಲ್ಲಿ ಅಧ್ಯಯನಕ್ಕೆ ಒಳಗಾಗುವ ಅಂಶವನ್ನು ಮತ್ಯಾವುದೋ ಅಂಶಕ್ಕೆ ಹೋಲಿಸಿ ನೋಡುವ ಅಥವಾ ಅಧ್ಯಯನಕ್ಕೆ ಒಳಗಾಗುವ ಅಂಶ ಮತ್ತು ಇತರ ವಿಚಾರಗಳ ನಡುವಿನ ಸಂಬಂಧವನ್ನು ವಿಶ್ಲೇಷಿಸುವ ಪ್ರಯತ್ನ ಇಲ್ಲ.[3] ಸರಕಾರಿ ಕಾರ್ಯಕ್ರಮಗಳ ಪರಿಣಾಮವನ್ನು ಅಧ್ಯಯನ ಮಾಡುವ ಬಹುತೇಕ ಸಂಶೋಧನೆಗಳು ಏಕಾಂತ ವಿಶ್ಲೇಷಣೆ ಆಧರಿತವಾಗಿವೆ. ಅಣೆಕಟ್ಟೊಂದನ್ನು ನಿರ್ಮಿಸಿವುದುರಿಂದ ಮುಳುಗಡೆಯಾಗುವ ಪ್ರದೇಶ ಮತ್ತು ಕೊಡಬೇಕಾದ ಪರಿಹಾರ ಧನವನ್ನು ಲೆಕ್ಕಹಾಕುವ ಅಧ್ಯಯನ ಏಕಾಂಶ ವಿಶ್ಲೇಷಣೆಗೆ ಉತ್ತಮ ಉದಾಹರಣೆ. ಇಲ್ಲಿ ಮುಳುಗಡೆಯಾಗುವ ಒಟ್ಟು ಭೂ ಪ್ರದೇಶ, ಅಲ್ಲಿ ಬರುವ ಒಟ್ಟು ಹಳ್ಳಿಗಳು, ಹಳ್ಳಿಯಲ್ಲಿರುವ ಒಟ್ಟು ಕುಟುಂಬಗಳು, ಪ್ರತಿ ಕುಟುಂಬದಲ್ಲಿರುವ ಸದಸ್ಯರು ಮತ್ತು ಒಟ್ಟು ಸದಸ್ಯರ ಸಂಖ್ಯೆ, ಕುಟುಂಬಗಳ ಒಟ್ಟು ಕೃಷಿ ಭೂಮಿ, ಒಟ್ಟು ಕೃಷಿ ಭೂಮಿಯ ವಿಂಗಡನೆ (ನೀರಾವರಿ ಕೃಷಿ ಭೂಮಿ ಮತ್ತು ಒಣ ಕೃಷಿ ಭೂಮಿ), ಹಳ್ಳಿಯಲ್ಲಿರುವ ಸಾರ್ವಜನಿಕ ಕಟ್ಟಡಗಳು (ಸೊಸೈಟಿ, ಶಾಲೆ, ಆಸ್ಪತ್ರೆ, ಪಂಚಾಯತ್ ಕಚೇರಿ, ಗುಡಿಗೋಪುರಗಳು ಇತ್ಯಾದಿಗಳು) ಇತ್ಯಾದಿಗಳ ಲೆಕ್ಕಾಚಾರ ಏಕಾಂಶ ವಿಶ್ಲೇಷಣೆಯ ಮುಖ್ಯ ವಸ್ತುಗಳು. ಅಣೆಕಟ್ಟು ನಿರ್ಮಿಸುವುದರ ಬಗ್ಗೆ ಹಳ್ಳಿ ಜನರ ಅಭಿಪ್ರಾಯ ಅಥವಾ ಹಳ್ಳಿ ಜನರನ್ನು ಬೇರೆ ಪ್ರದೇಶಕ್ಕೆ ಎತ್ತಂಗಡಿ ಮಾಡುವುದರ ಬಗ್ಗೆ ಅವರ ಅಭಿಪ್ರಾಯ ಅಥವಾ ಹೊಸ ಜಾಗದಲ್ಲಿ ಹಳ್ಳಿ ಜನರು ಬದುಕು ಆರಂಭಿಸಲು ಪಡಬೇಕಾದ ಬವಣೆಗಳು ಇತ್ಯಾದಿಗಳ ವಿಶ್ಲೇಷಣೆಗೆ ಏಕಾಂಶ ವಿಶ್ಲೇಷಣೆಯಲ್ಲಿ ಅವಕಾಶವಿಲ್ಲ. ಅದೇ ರೀತಿಯಲ್ಲಿ ಮುಳುಗಡೆಯಾಗುವ ಪ್ರದೇಶದಲ್ಲಿ ಭೂಮಿ ಕಳೆದುಕೊಳ್ಳುವ ಕುಟುಂಬಗಳು ಮತ್ತು ನೀರಾವರಿಯಿಂದ ಲಾಭ ಪಡೆಯುವ ಕುಟುಂಬಗಳ ನಡುವಿನ ಹೋಲಿಕೆಯೂ ಇಲ್ಲಿ ನಡೆಯುವುದಿಲ್ಲ. ಏಕಾಂಶ ವಿಶ್ಲೇಷಣೆ ಕೇವಲ ಸರಕಾರಿ ಕಾರ್ಯಕ್ರಮಗಳ ಅಧ್ಯಯನ ಸಂದರ್ಭದಲ್ಲಿ ಮಾತ್ರ ಬಳಕೆ ಆಗುತ್ತದೆ ಎಂದು ತಿಳಿಯುವುದು ಸರಿಯಲ್ಲ. ವಿಶ್ವವಿದ್ಯಾಲಯಗಳಲ್ಲಿ, ಸರಕಾರೇತರ ಸಂಸ್ಥೆಗಳಲ್ಲಿ, ಸರಕಾರದ ಸಂಶೋಧನಾ ಸಂಸ್ಥೆಗಳಲ್ಲಿ ನಡೆಯುವ ಸಂಶೋಧನೆಗಳಲ್ಲಿ ಬಹುಪಾಲು ಏಕಾಂಶ ವಿಶ್ಲೇಷಣೆಗೆ ತಮ್ಮ ವಿಶ್ಲೇಷಣೆಯನ್ನು ಸೀಮಿತಗೊಳಿಸುತ್ತವೆ. ಉದಾಹರಣೆಗೆ ಕರ್ನಾಟಕದ ದೇವಾಲಯಗಳ ಅಧ್ಯಯನ ಎನ್ನುವ ಸಂಶೋಧನೆ ಒಟ್ಟು ದೇವಾಲಯಗಳು, ಅವುಗಳ ಸ್ಥಿತಿಗತಿ, ಅವುಗಳ ವಿಂಗಡನೆ (ಶೈವ, ವೈಷ್ಣವ ಇತ್ಯಾದಿ), ಅವು ಇರುವ ಊರು ಇತ್ಯಾದಿಗಳ ಮೇಲೆ ಮಾತ್ರ ಗಮನ ಹರಿಸಿದರೆ ಅವುಗಳನ್ನು ಏಕಾಂಶ ವಿಶ್ಲೇಷಣೆ ಆಧರಿತ ಎಂದು ವರ್ಗೀಕರಿಸಬಹುದು. ಅದೇ ರೀತಿಯಲ್ಲಿ ಕರ್ನಾಟಕದ ಬುಡಕಟ್ಟುಗಳ ಆರ್ಥಿಕ ಸ್ಥಿತಿಗತಿಗಳ ಅಧ್ಯಯನ ಎನ್ನುವ ಯೋಜನೆ ಬುಡಕಟ್ಟುಗಳ ಆರ್ಥಿಕ ಸ್ಥಿತಿ ಹೇಗಿದೆ ಎನ್ನುವುದನ್ನು ವಿವರಿಸುವುದಕ್ಕೆ ಸೀಮಿತಗೊಂಡರೆ ಯೋಜನೆ ಏಕಾಂಶ ವಿಶ್ಲೇಷಣೆ ಆಧರಿತ ಎನ್ನಬಹುದು.

ಏಕಾಂಶ ವಿಶ್ಲೇಷಣೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮಂಡಿಸುವ ದೃಷ್ಟಿಯಿಂದ ಅಂಕಿಅಂಶಗಳ ಕೆಲವೊಂದು ಮಾಪಕಗಳನ್ನು ಬಳಸುವ ರೂಢಿಯಿದೆ. ತುಂಬಾ ಸಾಮಾನ್ಯವಾಗಿ ಬಳಕೆಯಲ್ಲಿರುವ ಮಾಪಕಗಳೆಂದರೆ ಪುನರಾವರ್ತನಾ ಲೆಕ್ಕಾಚಾರ (ಫ್ರಿಕ್ವೆನ್ಸಿಡಿಸ್ಟ್ರಿಬ್ಯೂಶನ್). ಸರಾಸರಿ ಲೆಕ್ಕಾಚಾರ (ಎವರೇಜ್) ಮತ್ತು ಸ್ಟ್ಯಾಂಡರ್ಡ್ ಡೀವಿಯೇಶನ್. ಒಂದು ಅಧ್ಯಯನದಲ್ಲಿ ಯಾವುದೋ ಒಂದು ನಿರ್ದಿಷ್ಟ ಗುಣವನ್ನು ಹೊಂದಿರುವ ಅಂಶ ಹಲವು ಬಾರಿ ಪುನರಾವರ್ತನೆ ಆಗಬಹುದು. ಅಂತವುಗಳನ್ನು ಲೆಕ್ಕ ಮಾಡಲು ಪುನರಾವರ್ತನಾ ಅಥವಾ ಫ್ರೀಕ್ವೆನ್ಸಿ ಡಿಸ್ಟ್ರಿಬ್ಯೂಶನ್ ಟೇಬಲ್ ಬಳಸುವಕ್ರಮ ಇದೆ. ಉದಾಹರಣೆಗೆ ಕರ್ನಾಟಕದಲ್ಲಿನ ಬುಡಕಟ್ಟುಗಳ ಆರ್ಥಿಕ ಸ್ಥಿತಿಗತಿ ಎನ್ನುವ ಅಧ್ಯಯನದಲ್ಲಿ ವಿವಿಧ ಬುಡಕಟ್ಟುಗಳ ಆರ್ಥಿಕ ಸ್ಥಿತಿಯನ್ನು ಮಾಪನ ಮಾಡಲು ಪುನರಾವರ್ತನಾ ಟೇಬಲ್ ಬಳಸಬಹುದು. ಸುಮಾರು ಹತ್ತು ಬುಡಕಟ್ಟುಗಳಿವೆ ಮತ್ತು ಅವುಗಳ ತಲಾ ವಾರ್ಷಿಕ ಆದಾಯ ಈ ಕೆಳಗಿನಂತಿದೆಯೆಂದು ಗ್ರಹಿಸೋಣ. ರೂ. ೧೫೪೫೦, ರೂ. ೨೩೦೦೦, ರೂ. ೩೪೦೦೦, ರೂ. ೧೨೦೪೫, ರೂ. ೨೫೫೬೦, ರೂ. ೪೫೮೭೦, ರೂ. ೨೬೭೮೯, ರೂ. ೧೭೬೮೦, ರೂ. ೯೮೭೦ ಮತ್ತು ರೂ. ೮೯೭೦. ಈ ಅಂಕಿಗಳನ್ನು ಬಿಡಿಬಿಡಿಯಾಗಿ ಮಂಡಿಸಬಹುದು ಅಥವಾ ಪುನರಾವರ್ತನಾ ಟೇಬಲ್ ರೂಪದಲ್ಲಿ ಮಂಡಿಸಬಹುದು. ಕಡಿಮೆ ಅಂಕಿಗಳಿರುವ ಸಂದರ್ಭದಲ್ಲಿ ಬಿಡಿಬಿಡಿಯಾಗಿ ಮಂಡಿಸುವುದು ಸಮಸ್ಯೆಯಲ್ಲ. ಆದರೆ ಹೆಚ್ಚು ಅಂಕಿಗಳಿರುವ ಸಂದರ್ಭದಲ್ಲಿ ಪುನರಾವರ್ತನಾ ಟೇಬಲ್ ರೂಪದಲ್ಲಿ ಮಂಡಿಸುವ ಕ್ರಮ ಇದೆ. ಮೇಲಿನ ಆದಾಯಗಳಲ್ಲಿ ಅತೀ ಕಡಿಮೆ ಮತ್ತು ಅತೀ ಹೆಚ್ಚು ಇರುವ ಸಂಖ್ಯೆಗಳನ್ನು ಮಿತಿಗಳಾಗಿ ತೆಗೆದುಕೊಂಡು ನಾಲ್ಕು ಅಥವಾ ಐದು ಆದಾಯ ವರ್ಗಗಳನ್ನು ರೂಪಿಸಿಕೊಳ್ಳಬಹುದು. ಹತ್ತು ಸಾವಿರಕ್ಕಿಂತ ಕಡಿಮೆ ವಾರ್ಷಿಕ ಆದಾಯವುಳ್ಳ ವರ್ಗ, ಮೂವತ್ತರಿಂದ ನಲ್ವತ್ತು ಸಾವಿರ ಆದಾಯವುಳ್ಳ ವರ್ಗ ಮತ್ತು ನಲ್ವತ್ತರಿಂದ ಐವತ್ತು ಸಾವಿರ ಆದಾಯವುಳ್ಳ ವರ್ಗ. ಈ ಆದಾಯ ಮಿತಿಯೊಳಗೆ ಬರುವ ಬುಡಕಟ್ಟುಗಳ ಸಂಖ್ಯೆ ಇಂತಿವೆ. ಹತ್ತು ಸಾವಿರದೊಳಗೆ ಬರುವ ಬುಡಕಟ್ಟುಗಳು ಎರಡು, ಮೂರು ಬುಡಕಟ್ಟುಗಳು ಹತ್ತರಿಂದ ಇಪ್ಪತ್ತು ಸಾವಿರ ಆದಾಯ ಮಿತಿಯೊಳಗೆ ಬರುತ್ತವೆ, ಮೂರು ಬುಡಕಟ್ಟುಗಳು ಇಪ್ಪತ್ತರಿಂದ ಮೂವತ್ತು ಸಾವಿರ ಆದಾಯ ವರ್ಗಕ್ಕೆ ಸೇರುತ್ತವೆ, ಒಂದು ಬುಡಕಟ್ಟು ಮೂವತ್ತರಿಂದ ನಲ್ವತ್ತು ಮತ್ತು ಮತ್ತೊಂದು ಬುಡಕಟ್ಟು ನಲ್ವತ್ತರಿಂದ ಐವತ್ತು ಸಾವಿರ ಆದಾಯ ಮಿತಿಯೊಳಗೆ ಬರುತ್ತವೆ. ಆದಷ್ಟು ಕಡಿಮೆ ಪ್ರಯತ್ನದಲ್ಲಿ ಹೆಚ್ಚು ಫಲ ಪಡೆಯುವುದು ಗುಣಾತ್ಮಕ ವಿಶ್ಲೇಷಣೆಯ ಬಹುಮುಖ್ಯ ಗುಣ. ಮೇಲಿನ ಉದಾಹರಣೆಯಲ್ಲಿ ಪುನರಾವರ್ತನಾ ಟೇಬಲ್ ಬಳಸುವ ಮೂಲಕ ಹತ್ತು ಸಂಖ್ಯೆಗಳನ್ನು ಐದಕ್ಕೆ ಇಳಿಸಲಾಯಿತು. ಸರಾಸರಿ ಲೆಕ್ಕಾಚಾರ ಬಳಸಿ ಕೇವಲ ಒಂದೇ ಅಂಕಿಯ ಮೂಲಕ ಹತ್ತು ಬುಡಕಟ್ಟುಗಳ ಆರ್ಥಿಕ ಸ್ಥಿತಿಯನ್ನು ಮಂಡಿಸಲಾಗುವುದು. ಮೇಲಿನ ಉದಾಹರಣೆಯಲ್ಲಿ ಹತ್ತು ಬುಡಕಟ್ಟುಗಳ ಆದಾಯವನ್ನು ಕೂಡಿಸಿ ಹತ್ತರಿಂದ ಭಾಗಿಸಿದರೆ ಬುಡಕಟ್ಟುಗಳ ಆದಾಯದ ಸರಾಸರಿ ಅಂಕಿ ರೂ. ೨೧೯೨೩ ಸಿಗುತ್ತದೆ. ಈ ಒಂದು ಅಂಕಿಯನ್ನು ಹತ್ತು ಬುಡಕಟ್ಟುಗಳ ಆರ್ಥಿಕ ಸ್ಥಿತಿಯನ್ನು ತಿಳಿಸಲು ಬಳಸಲಾಗುತ್ತದೆ. ಈ ಸರಾಸರಿ ಸಂಖ್ಯೆ ನಿಜವಾಗಿಯೂ ಪ್ರತಿಯೊಂದು ಬುಡಕಟ್ಟು ಸಮುದಾಯದ ಆರ್ಥಿಕ ಸ್ಥಿತಿಯನ್ನು ಸೂಚಿಸುತ್ತದೋ ಎಂದು ಪರೀಕ್ಷಿಸಲು ಸ್ಟ್ಯಾಂಡರ್ಡ್ ಡೀವಿಯೇಶನ್ ಲೆಕ್ಕಾಚಾರವನ್ನು ಬಳಸಲಾಗುತ್ತದೆ. ಸರಾಸರಿ ಸಂಖ್ಯೆಗಿಂತ ಮಾದರಿ ಕುಟುಂಬಗಳ ಆದಾಯ ಎಷ್ಟು ದೂರದಲ್ಲಿದೆ ಎಂದು ತೋರಿಸಲು ಸ್ಟ್ಯಾಂಡರ್ಡ್ ಡೀವಿಯೇಶನ್ ಲೆಕ್ಕಚಾರವನ್ನು ಬಳಸಲಾಗುತ್ತದೆ. ಬಹುತೇಕ ಬುಡಕಟ್ಟುಗಳ ಆದಾಯ ಸರಾಸರಿ ಸಂಖ್ಯೆಗೆ ಹತ್ತಿರವಾಗಿದ್ದಾರೆ ಸ್ಟ್ಯಾಂಡರ್ಡ್ ಡೀವಿಯೇಶನ್ ಕಡಿಮೆ ಇರುತ್ತದೆ, ಬುಡಕಟ್ಟುಗಳ ಆದಾಯ ಸರಾಸರಿ ಸಂಖ್ಯೆಗೆ ದೂರವಾದಂತೆ ಸ್ಟ್ಯಾಂಡರ್ಡ್ ಡೀವಿಯೇಶನ್ ಹೆಚ್ಚಾಗುತ್ತದೆ. ಮೇಲಿನ ಉದಾಹರಣೆಯಲ್ಲಿ ಬುಡಕಟ್ಟುಗಳ ಸರಾಸರಿ ಆದಾಯ ರೂ. ೨೧೯೨೩ ಇದೆ. ಆದರೆ ಕೆಲವು ಬುಡಕಟ್ಟುಗಳ ಆದಾಯ ಈ ಸರಾಸರಿ ಸಂಖ್ಯೆಗಿಂತ ತುಂಬಾ ದೂರ ಇವೆ. ಆದುದರಿಂದ ಈ ಉದಾಹರಣೆಯಲ್ಲಿ ಸ್ಟ್ಯಾಂಡರ್ಡ್‌ ಡೀವಿಯೇಶನ್ ಹೆಚ್ಚಿರಲೇಬೇಕು.

ವಿಶ್ಲೇಷಣೆಯಲ್ಲಿ ಪರಿಮಾಣಾತ್ಮಕ ಅಂಶಗಳನ್ನು ಬಳಸುವುದರಿಂದ ಆಗುವ ಪ್ರಯೋಜನವನ್ನು ಮೇಲಿನ ವಿವರಣೆಗಳಲ್ಲಿ ನೋಡಿದ್ದೇವೆ. ಪರಿಮಾಣಾತ್ಮಕ ವಿವರಣೆಯಿಂದ ಆಗುವ ಪ್ರಯೋಜನದಷ್ಟೇ ನಷ್ಟವೂ ಇದೆ. ಅಂಕಿಅಂಶಗಳನ್ನು ಬಳಸಿ ಸಾಮಾಜಿಕ ಸಂಗತಿಗಳನ್ನು ವಿವರಿಸಲು ಪ್ರಯತ್ನಿಸುವುದರಿಂದ ಹಲವಾರು ಉಪಯುಕ್ತ ವಿವರಗಳು ಅಧ್ಯಯನದ ವಿವರಣೆಯಿಂದ ಹೊರಗುಳಿಯುವ ಸಾಧ್ಯತೆಗಳಿವೆ.[4] ಶಿಕ್ಷಣ ಮಟ್ಟವನ್ನು ಅಳೆಯಲು ಶಿಕ್ಷಣಕ್ಕಾಗಿ ವ್ಯಯಿಸಿದ ವರ್ಷಗಳನ್ನು ಲೆಕ್ಕಾಚಾರ ಮಾಡುವ ಕ್ರಮವಿದೆ. ಉದಾಹರಣೆಗೆ ಪ್ರಾಥಮಿಕ ಶಿಕ್ಷಣಕ್ಕೆ ಏಳು ವರ್ಷ, ಪ್ರೌಢ ಶಿಕ್ಷಣಕ್ಕೆ ಹತ್ತು ವರ್ಷ, ಡಿಗ್ರಿಗೆ ಹದಿನೈದು ವರ್ಷ ಇತ್ಯಾದಿ. ಹದಿನೈದು ವರ್ಷ ವ್ಯಯಿಸಿದವರನ್ನು ಪದವೀದರರು ಎಂದು ವರ್ಗೀಕರಿಸಬಹುದು. ಆದರೆ ಇಲ್ಲಿ ವಿವಿಧ ಪದವಿಗಳ (ಬಿಎ, ಬಿಎಸ್‌ಸಿ, ಬಿಕಾಂಗಳ) ನಡುವೆ ಇರುವ ಗುಣಾತ್ಮಕ ವ್ಯತ್ಯಾಸದ ವಿವರಗಳು ಕಣ್ಮರೆಯಾಗುತ್ತವೆ. ಅದೇ ರೀತಿಯಲ್ಲಿ ವಾರ್ಷಿಕ ಆದಾಯ ಅಥವಾ ಶಿಕ್ಷಣ ಅಥವಾ ಇನ್ಯಾವುದೋ ಸೂಚ್ಯಂಕವನ್ನು ಲೆಕ್ಕ ಹಾಕುವಾಗ ಕ್ಲಾಸ್ ಇಂಟರ್‌ವಲ್ಸ್‌ಗಳನ್ನು ಬಳಸುವುದು ಸಾಮಾನ್ಯ. ಉದಾಹರಣೆಗೆ ವಾರ್ಷಿಕ ಆದಾಯವನ್ನು ಹತ್ತು ಸಾವಿರಕ್ಕಿಂತ ಕಡಿಮೆ ಇರುವ, ಹತ್ತಕ್ಕಿಂತ ಹೆಚ್ಚು. ಆದರೆ ಇಪ್ಪತ್ತು ಸಾವಿರದೊಳಗಿರುವ, ಇಪ್ಪತ್ತಕ್ಕಿಂತ ಹೆಚ್ಚು ಆದರೆ ಮೂವತ್ತು ಸಾವಿರದೊಳಗಿರುವ ಹೀಗೆ ಕ್ಲಾಸ್ ಇಂಟರ್‌ವಲ್ಸ್‌ಗಳನ್ನು ಬಳಸಿಕೊಂಡು ಅಧ್ಯಯನಕ್ಕೆ ಒಳಪಡುವ ಕುಟುಂಬಗಳ ಅಥವಾ ವ್ಯಕ್ತಿಗಳ ಆದಾಯವನ್ನು ಲೆಕ್ಕ ಹಾಕಲಾಗುವುದು. ಈ ರೀತಿ ಲೆಕ್ಕ ಹಾಕುವಾಗ ಒಂದು ಸಾವಿರ ಅಥವಾ ಎರಡು ಸಾವಿರ ಅಥವಾ ಒಂಬತ್ತು ಸಾವಿರ ಆದಾಯವಿರುವವರು ಒಂದು ಗುಂಪಿನಲ್ಲಿ ಬರುತ್ತಾರೆ. ಅದೇ ರೀತಿ ಹತ್ತು ಸಾವಿರದ ನಂತರ ಹತ್ತೊಂಬತ್ತು ಸಾವಿರ ಒಂಬೈನೂರ ತೊಂಬತ್ತೊಂಬತ್ತು ರೂಪಾಯಿ ಆದಾಯ ಇರುವವರು ಕೂಡ ಒಂದೇ ಗುಂಪಿಗೆ ಸೇರುತ್ತಾರೆ. ಹೀಗೆ ಅಧ್ಯಯನಕ್ಕೆ ಒಳಗಾಗುವ ಕುಟುಂಬಗಳ ಅಥವಾ ವ್ಯಕ್ತಿಗಳ ನಡುವಿನ ಅಗಾಧ ಪ್ರಮಾಣದ ವ್ಯತ್ಯಾಸ ಈ ಬಗೆಯ ಲೆಕ್ಕಾಚಾರದಲ್ಲಿ ಕಣ್ಮರೆಯಾಗುತ್ತದೆ.

ತುಲನಾತ್ಮಕ ವಿಶ್ಲೇಷಣೆ

ಸಾಮಾಜಿಕ ಸಂಬಂಧಗಳನ್ನು ಅರ್ಥ ಮಾಡಿಕೊಳ್ಳುವುದು ಸಮಾಜ ಸಂಶೋಧನೆಯ ಬಹುಮುಖ್ಯ ಉದ್ದೇಶ. ಸಮಾಜ ಸಂಶೋಧನೆಯ ಈ ಉದ್ದೇಶವನ್ನು ಈಡೇರಿಸುವಲ್ಲಿ ತುಲನಾತ್ಮಕ ವಿಶ್ಲೇಷಣೆ ಹಿಂದಿನಿಂದಲೂ ಮುಖ್ಯ ಪಾತ್ರವಹಿಸಿದೆ. ತುಲನಾತ್ಮಕ ವಿಶ್ಲೇಷಣೆಯ ವಿವರಗಳನ್ನು ಅರ್ಥ ಮಾಡಿಕೊಳ್ಳಲು ಕಾರ್ಯಕಾರಣ ವಿಶ್ಲೇಷಣೆಯ ಮೂಲತತ್ತ್ವಗಳನ್ನು ಅರ್ಥ ಮಾಡಿಕೊಳ್ಳುವುದು ಅಗತ್ಯ. ಒಂದು ಸಂಗತಿಯಲ್ಲಿನ ಬದಲಾಣೆ, ಬೆಳವಣಿಗೆ, ಪರಿವರ್ತನೆಯಲ್ಲಿ ಮತ್ತೊಂದು ಸಂಗತಿಯ ಪಾತ್ರವನ್ನು ಗುರಿತಿಸಲು ಕಾರ್ಯಕಾರಣ ವಿಶ್ಲೇಷಣೆಯನ್ನು ಬಳಸಲಾಗುತ್ತದೆ. ಪ್ರಪಂಚದಲ್ಲಿನ ಯಾವುದೇ ವಸ್ತು ಕೂಡ ಕಾರಣವಿಲ್ಲದೆ ತನ್ನ ಸ್ಥಿತಿಯ ಬದಲಾವಣೆಗೆ ಒಳಗಾಗುವುದಿಲ್ಲ ಎನ್ನುವ ಭೌತವಿಜ್ಞಾನ ತತ್ತ್ವ ಕಾರ್ಯಕಾರಣ ತತ್ತ್ವದ ಹಿಂದೆ ಕೆಲಸ ಮಾಡುತ್ತಿದೆ. ಸಮಾಜವಿಜ್ಞನದಲ್ಲಿ ಇದು ಹಲವಾರು ರೀತಿಯಲ್ಲಿ ಉಪಯೋಗವಾಗುತ್ತಿದೆ. ಉದಾಹರಣೆಗೆ ವಿಜ್ಞಾನ, ತಂತ್ರಜ್ಞಾನ ಮತ್ತು ಅಭಿವೃದ್ಧಿ ನಡುವಿನ ಸಂಬಂಧ. ಪಶ್ಚಿಮದ ಅಭಿವೃದ್ಧಿಯಲ್ಲಿ ವಿಜ್ಞಾನ ತಂತ್ರಜ್ಞಾನಗಳು ಸಕ್ರಿಯವಾದ ಪಾತ್ರ ವಹಿಸಿವೆ ಎನ್ನುವ ತೀರ್ಮಾನ ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಅಭಿವೃದ್ಧಿ ನಡುವೆ ಸಂಬಂಧ ಕಲ್ಪಿಸಲು ಆಧಾರವಾಗಿದೆ. ಅಂದರೆ ಯಾವುದೇ ಸಮಾಜದಲ್ಲೂ ವಿಜ್ಞಾನ ಮತ್ತು ತಂತ್ರಜ್ಞಾನಗಳನ್ನು ಅಳವಡಿಸುವ ಮೂಲಕ ಅಭಿವೃದ್ಧಿ ಸಾಧ್ಯ ಎನ್ನುವ ನಿಲುವಿಗೆ ಬರಲಾಗುವುದು. ಇದೇ ಪ್ರಮೇಯದ ಸಣ್ಣ ರೂಪಗಳೆಂದರೆ ನೀರಾವರಿ ಮತ್ತು ಗ್ರಾಮೀಣಾಭಿವೃದ್ಧಿ ಸಂಬಂಧ, ಮಾಹಿತಿ ತಂತ್ರಜ್ಞಾನ ಮತ್ತು ಬಡತನ ನಿವಾರಣೆ, ಸಾರಿಗೆ ಸಂಪರ್ಕ ಮತ್ತು ನಿರುದ್ಯೋಗ ನಿವಾರಣೆ ಇತ್ಯಾದಿಗಳು. ಕಾರ್ಯಕಾರಣ ವಿಶ್ಲೇಷಣೆಯ ಮೂಲ ತತ್ತ್ವಗಳು ಇಂತಿವೆ.[5] ಒಂದು, ಬದಲಾವಣೆ ಪ್ರೇರಕ (ಕಾರಣ) ಪರಿಣಾಮಕ್ಕಿಂತ (ಆಗುವ ಬದಲಾವಣೆಗಿಂತ) ಕಾಲದಲ್ಲಿ ಹಿಂದಿರಬೇಕು. ಎರಡು, ಕಾರಣಕ್ಕೆ ಮತ್ತು ಕಾರ್ಯಕ್ಕೆ ನೇರ ಸಂಬಂಧ ಇರಬೇಕು. ಮೂರು, ಕಾರಣ ಮತ್ತು ಕಾರ್ಯದ ನಡುವಿನ ಸಂಬಂಧದಲ್ಲಿ ಮೂರನೇ ಅಂಶದ ಪಾತ್ರ ಇರಬಾರದು. ನೀರಾವರಿ ಮತ್ತು ಗ್ರಾಮೀಣಾಭಿವೃದ್ಧಿ ಸಂಬಂಧದ ಉದಾಹರಣೆಯೊಂದಿಗೆ ಮೇಲಿನ ಮೂರು ತತ್ತ್ವಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸೋಣ. ನೀರಾವರಿಯ ನಂತರವೇ (ಕೆರೆ, ಕಾಲುವೆ ಇತ್ಯಾದಿಗಳ ಮೂಲಕ ನೀರಾವರಿ) ಅಧ್ಯಯನಕ್ಕೆ ಒಳಪಡಿಸಿದ ಹಳ್ಳಿಯ ಕೃಷಿ ಮತ್ತು ಕೃಷಿ ಸಂಬಂಧಿ ಚಟುವಟಿಕೆಗಳ ಸ್ಥಿತಿಗತಿ ಸುಧಾರಿಸಿರಬೇಕು. ನೀರಾವರಿ ಇರುವ ಹಳ್ಳಿಯ ಕೃಷಿ ಮತ್ತು ಕೃಷಿ ಸಂಬಂಧಿ ಚಟುವಟಿಕೆಗಳ ಪ್ರಮಾಣ ನೀರಾವರಿ ಇಲ್ಲದ ಹಳ್ಳಿಯ ಸ್ಥಿತಿಗೆ ಹೋಲಿಸಿದರೆ ಹೆಚ್ಚಿರಬೇಕು. ಕೃಷಿ ಮತ್ತು ಕೃಷಿ ಚಟುವಟಿಕೆಗಳ ಪ್ರಮಾಣದಲ್ಲಿನ ಏರಿಕೆ ಮತ್ತು ನೀರಾವರಿ ನಡುವಿನ ಸಂಬಂಧ ಸ್ಪಷ್ಟವಾಗಿರಬೇಕು ಅಥವಾ ಚಟುವಟಿಕೆಗಳಲ್ಲಿನ ಏರಿಕೆಯಲ್ಲಿ ನೀರಾವರಿಯೇತರ ಅಂಶಗಳ ಪಾತ್ರ ಇರಬಾರದು. ಈ ಎಲ್ಲ ಶರತ್ತುಗಳು ಈಡೇರಿದರೆ ಮಾತ್ರ ನೀರಾವರಿಯಿಂದ ಗ್ರಾಮೀಣಾಭಿವೃದ್ಧಿ ಎನ್ನುವ ಪ್ರಮೇಯ ಸರಿ. ಉದಾಹರಣೆಗೆ ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳ ಏರಿಕೆಯಲ್ಲಿ ನೀರಾವರಿ ಜತೆಗೆ ಕಡಿಮೆ ಕೂಲಿ, ಉತ್ತಮ ಕೃಷಿ ಯಂತ್ರೋಪಕರಣಗಳ ಬಳಕೆ, ಉತ್ತಮ ಹಣಕಾಸು ಸೌಲಭ್ಯ ಇತ್ಯಾದಿಗಳು ಕೂಡ ಪಾತ್ರ ವಹಿಸುವ ಸಾಧ್ಯತೆ ಇದೆ. ಒಂದು ವೇಳೆ ಇವು ಕೂಡ ಪಾತ್ರ ವಹಿಸಿದ್ದರೆ ನೀರಾವರಿಯಿಂದ ಗ್ರಾಮೀಣಾಭಿವೃದ್ಧಿ ಎನ್ನುವ ಪ್ರಮೇಯ ಸರಿ ಹೊಂದುವುದಿಲ್ಲ.

ಕಾರ್ಯಕಾರಣ ಸಂಬಂಧ ವಿವರಿಸಲು ಮತ್ತೊಂದು ಉದಾಹರಣೆಯನ್ನು ಬಳಸೋಣ. ಉನ್ನತ ಶಿಕ್ಷಣ ಮತ್ತು ಉತ್ತಮ ಆದಾಯ ನಡುವಿನ ಸಂಬಂಧ ಅಳೆಯುವಾಗ ಈ ಕೆಳಗಿನ ಅಂಶಗಳನ್ನು ಪರಿಗಣಿಸಬೇಕಾಗುತ್ತದೆ. ಒಂದು, ಉನ್ನತ ಶಿಕ್ಷಣದ ನಂತರವೇ ಉತ್ತಮ ಆದಾಯ ಗಳಿಸಿರಬೇಕು. ಒಂದು ವೇಳೆ ಉನ್ನತ ಶಿಕ್ಷಣ ಪಡೆಯುವ ಮುನ್ನವೇ ಉತ್ತಮ ಆದಾಯ ಗಳಿಸುತ್ತಿದ್ದರೆ ಉನ್ನತ ಶಿಕ್ಷಣದಿಂದ ಆದಾಯ ಸುಧಾರಿಸಿದ್ದಲ್ಲ ಎಂದಾಗುತ್ತದೆ. ಎರಡು, ಉನ್ನತ ಶಿಕ್ಷಣವುಳ್ಳವರ ಆದಾಯ ಕಡಿಮೆ ಶಿಕ್ಷಣವುಳ್ಳವರ ಆದಾಯಕ್ಕಿಂತ ಹೆಚ್ಚಿರಬೇಕು. ಒಂದು ವೇಳೆ ಕಡಿಮೆ ಶಿಕ್ಷಣ ಇದ್ದವರ ಆದಾಯ ಮತ್ತು ಉನ್ನತ ಶಿಕ್ಷಣವುಳ್ಳವರ ಆದಾಯದ ನಡುವೆ ವ್ಯತ್ಯಾಸ ಇಲ್ಲದಿದ್ದರೆ ಉನ್ನತ ಶಿಕ್ಷಣದಿಂದ ಆದಾಯ ಹೆಚ್ಚುತ್ತದೆ ಅಥವಾ ಉನ್ನತ ಶಿಕ್ಷಣ ಹೆಚ್ಚಿನ ಆದಾಯಕ್ಕೆ ದಾರಿ ಎನ್ನುವ ಪ್ರಮೇಯ ಸರಿಯಲ್ಲ ಎಂದಾಗುತ್ತದೆ. ಮೂರು, ಉನ್ನತ ಶಿಕ್ಷಣ ಮತ್ತು ಉತ್ತಮ ಆದಾಯ ನಡುವೆ ಸಂಬಂಧವನ್ನು ಕಲ್ಪಿಸುವಾಗ ಮೂರನೇ ಅಂಶದ ಪಾತ್ರ ಇದೆಯೇ ಎಂದು ಪರಿಗಣಿಸಬೇಕಾಗುತ್ತದೆ. ಉದಾಹರಣೆಗೆ ಪೋಷಕರ ಆರ್ಥಿಕ ಸ್ಥಿತಿಗತಿ. ಪೋಷಕರ ಉತ್ತಮ ಆರ್ಥಿಕ ಸ್ಥಿತಿ ಮಕ್ಕಳ ಶಿಕ್ಷಣ ಮಟ್ಟವನ್ನು ಮತ್ತು ಸಂಪನ್ಮೂಲದ ಸ್ಥಿತಿ ಎರಡನ್ನೂ ಪ್ರಭಾವಿಸಬಹುದು. ಉತ್ತಮ ಆರ್ಥಿಕ ಸ್ಥಿತಿ ಇರುವ ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದರ ಜತೆಗೆ ತಮ್ಮ ಆಸ್ತಿಯಲ್ಲಿ ಪಾಲನ್ನು ಕೊಟ್ಟು ಮಕ್ಕಳ ಆರ್ಥಿಕ ಸ್ಥಿತಿಯನ್ನು ಸುಧಾರಿಸಬಹುದು. ಈ ಸಂದರ್ಭಗಳಲ್ಲಿ ಉನ್ನತ ಶಿಕ್ಷಣ ಮತ್ತು ಉತ್ತಮ ಆದಾಯದ ನಡುವಿನ ಸಂಬಂಧ ಸಂದೇಹಾರ್ಹ.

ವಿಜ್ಞಾನದಲ್ಲಿ ಕಾರ್ಯಕಾರಣ ಸಂಬಂಧ ಪರೀಕ್ಷಿಸಲು ಪ್ರಯೋಗಗಳನ್ನು ನಡೆಸಲಾಗುತ್ತದೆ. ಉದಾಹರಣೆಗೆ ಯಾವುದೋ ಒಂದು ಬಗೆಯ ಚುಚ್ಚುಮದ್ದಿನ ಪರಿಣಾಮವನ್ನು ಮಾಪನ ಮಾಡಲು ಪ್ರಾಣಿಗಳ ಮೇಲೆ ಪ್ರಯೋಗ ಮಾಡಲಾಗುವುದು. ಪ್ರಯೋಗ ಮಾಡುವಾಗ ಒಂದೇ ಜಾತಿಗೆ ಸೇರಿದ ಪ್ರಾಣಿಗಳ (ಇಲಿ, ಕೋತಿ, ಇತ್ಯಾದಿಗಳ) ಎರಡು ಗುಂಪುಗಳನ್ನು ಮಾಡಲಾಗುವುದು. ಒಂದು ಗುಂಪನ್ನು ಪರೀಕ್ಷಾ ಅಥವಾ ಪ್ರಯೋಗ ಗುಂಪೆಂದು ಮತ್ತೊಂದನ್ನು ನಿಯಂತ್ರಿತ ಗುಂಪೆಂದು ಗುರುತಿಸಲಾಗುವುದು. ಪರೀಕ್ಷಾ ಅಥವಾ ಪ್ರಯೋಗ ಗುಂಪಿಗೆ ಪರೀಕ್ಷಿಸಬೇಕಾಗಿರುವ ಚುಚ್ಚುಮದ್ದನ್ನು ನೀಡಲಾಗುವುದು. ನಿಯಂತ್ರಿತ ಗುಂಪಿಗೆ ಚುಚ್ಚುಮದ್ದನ್ನು ನೀಡಲಾಗುವುದಿಲ್ಲ. ಪರೀಕ್ಷಾ ಗುಂಪಿನ ಪ್ರಾಣಿಗಳಲ್ಲಿ ಆಗುವ ಬದಲಾವಣೆಯ ಆಧಾರದಲ್ಲಿ ಚುಚ್ಚುಮದ್ದಿನ ಪರಿಣಾಮವನ್ನು ಮಾಪನ ಮಾಡಲಾಗುವುದು. ಇತ್ತೀಚಿನ ದಿನಗಳಲ್ಲಿ ಕೆಲವೊಂದು ಔಷಧಿಗಳನ್ನು ನೇರವಾಗಿ ಮನುಷ್ಯರ ಮೇಲೆ ಪ್ರಯೋಗಿಸಿ ಪರೀಕ್ಷಿಸಲಾಗುತ್ತಿದೆ. ಉದಾಹರಣೆಗೆ ಏಡ್ಸ್ ಕಾಯಿಲೆಯನ್ನು ಗುಣಪಡಿಸಲು ಆವಿಷ್ಕರಿಸುವ ಮದ್ದಿನ ಪರಿಣಾಮವನ್ನು ಮನುಷ್ಯರ ಮೇಲೆ ಪ್ರಯೋಗಿಸಿ ನಿರ್ಧರಿಸಲಾಗುವುದು. ಇದಕ್ಕಾಗಿ ಏಡ್ಸ್ ಕಾಯಿಲೆ ಇರುವ ಸುಮಾರು ಐವತ್ತು ಜನರ ಎರಡು ಗುಂಪುಗಳನ್ನು ಕರೆಯಲಾಗುವುದು. ಪರೀಕ್ಷಾ ಅಥವಾ ಪ್ರಯೋಗಾ ಗುಂಪಿಗೆ ಏಡ್ಸ್ ನಿವಾರಣ ಮದ್ದನ್ನು ನೀಡಲಾಗುವುದು. ಮತ್ತೊಂದು ಗುಂಪಿಗೆ (ನಿಯಂತ್ರಿತ ಗುಂಪಿಗೆ) ಏಡ್ಸ್ ನಿವಾರಣ ಮದ್ದನ್ನು ನೀಡಲಾಗುವುದಿಲ್ಲ. ಪ್ರಯೋಗ ಅಥವಾ ಪರೀಕ್ಷಾ ಗುಂಪಿನಲ್ಲಿ ಆಗುವ ಬದಲಾವಣೆ ಆಧಾರದಲ್ಲಿ ಮದ್ದಿನ ಪರಿಣಾಮವನ್ನು ಲೆಕ್ಕ ಹಾಕಲಾಗುವುದು. ಸಮಾಜ ಸಂಶೋಧನೆಯಲ್ಲೂ ಈ ವಿಧಾನದ ಬಳಕೆ ಇದೆ. ಮೇಲಿನ ಎರಡು ಉದಾಹರಣೆಗಳಲ್ಲೂ ಹೆಚ್ಚು ಕಡಿಮೆ ಈ ಪರೀಕ್ಷಾ ಮತ್ತು ನಿಯಂತ್ರಿತ ಗುಂಪುಗಳ ಬಳಕೆ ಆಗಿದೆ. ಗ್ರಾಮವೊಂದರ ಅಭಿವೃದ್ಧಿಯಲ್ಲಿ ನೀರಾವರಿ ಪಾತ್ರ ಅಳೆಯಲು ಹೆಚ್ಚು ಕಡಿಮೆ ಒಂದೇ ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಪರಿಸರವುಳ್ಳ ಎರಡು ಹಳ್ಳಿಗಳನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಅದರಲ್ಲಿ ಒಂದಕ್ಕೆ ನೀರಾವರಿ ವ್ಯವಸ್ಥೆ ಇದ್ದು ಮತ್ತೊಂದು ಹಳ್ಳಿಯಲ್ಲಿ ನೀರಾವರಿ ವ್ಯವಸ್ಥೆ ಇಲ್ಲ ಎನ್ನುವ ವ್ಯತ್ಯಾಸ ಮಾತ್ರ ಇರಬೇಕು. ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳನ್ನು ಪ್ರಭಾವಿಸುವ ಇತರ ಅಂಶಗಳಿರುವ ಹಳ್ಳಿಗಳು ಅಧ್ಯಯನಕ್ಕೆ ಯೋಗ್ಯವಾಗುವುದಿಲ್ಲ.

ಇಲ್ಲಿ ಎರಡು ಅಂಶಗಳು ಅಧ್ಯಯನದ ವ್ಯಾಪ್ತಿಗೆ ಬರುತ್ತವೆ. ಒಂದು, ಬದಲಾವಣೆಗೆ ಅಥವಾ ಪರಿವರ್ತನೆಗೆ ಕಾರಣವಾಗುವ ಅಂಶ. ಇದನ್ನು ಸಮಾಜ ಸಂಶೋಧನಾ ಭಾಷೆಯಲ್ಲಿ ಸ್ವತಂತ್ರ ಪರಿವರ್ತಿತ (ಇಂಡಿಪೆಂಡೆಂಟ್ ವೆರಿಯೆಬಲ್) ಎಂದು ಕರೆಯುತ್ತಾರೆ. ಎರಡು, ಬದಲಾವಣೆ ಅಥವಾ ಪರಿವರ್ತನೆ ವ್ಯಕ್ತವಾಗುವ ಅಂಶ. ಇದನ್ನು ಅವಲಂಬಿತ ಪರಿವರ್ತಿತ (ಡಿಪೆಂಡೆಂಟ್ ವೆರಿಯೆಬಲ್) ಎಂದು ಗುರುತಿಸುತ್ತಾರೆ. ಮೇಲಿನ ಉದಾಹರಣೆಗಳಲ್ಲಿ ನೀರಾವರಿ ಮತ್ತು ಶಿಕ್ಷಣ ಸ್ವತಂತ್ರ ಪರಿವರ್ತಿತಗಳಾದರೆ ಗ್ರಾಮೀಣಾಭಿವೃದ್ಧಿ ಮತ್ತು ಆದಾಯಗಳು ಅವಲಂಬಿತ ಪರಿವರ್ತಿತಗಳಾಗುತ್ತವೆ. ಒಂದು ಅಂಶ ಸ್ವತಂತ್ರ ಅಥವಾ ಅವಲಂಬಿತ ಪರಿವರ್ತಿತವಾಗಿದೆಯೇ ಎಂದು ನಿರ್ಧರಿಸುವುದು ಸುಲಭದ ಕೆಲಸವಲ್ಲ. ಒಂದೇ ಅಂಶ ಏಕಕಾಲದಲ್ಲಿ ಸ್ವತಂತ್ರ ಪರಿವರ್ತಿತವೂ ಆಗಬಹುದು ಅಥವಾ ಅವಲಂಬಿತ ಪರಿವರ್ತಿತವೂ ಆಗಬಹುದು. ಉದಾಹರಣೆಗೆ ಉನ್ನತ ಶಕ್ಷಣ ಮತ್ತು ಆದಾಯದ ನಡುವಿನ ಅಧ್ಯಯನದಲ್ಲಿ ಆದಾಯ ಎರಡೂ ಗುಣಗಳನ್ನು ಹೊಂದಿದೆ. ಮಧ್ಯ ವಯಸ್ಕನೊಬ್ಬನ ಶಿಕ್ಷಣ ಮತ್ತು ಆದಾಯದ ನಡುವಿನ ಸಂಬಂಧವನ್ನು ಪರೀಕ್ಷಿಸುವ ಸಂದರ್ಭದಲ್ಲಿ ಆದಾಯವನ್ನು ಡಿಪೆಂಡೆಂಟ್ ಪರಿವರ್ತಿತವಾಗಿ ಪರಿಗಣಿಸುವುದರಲ್ಲಿ ವಿಶೇಷ ಸಮಸ್ಯೆ ಇಲ್ಲ. ಆದರೆ ಈ ಎರಡರ (ಶಿಕ್ಷಣ ಮತ್ತು ಆದಾಯ) ಸಂಬಂಧವನ್ನು ಪರೀಕ್ಷಿಸುವಾಗ ಕುಟುಂಬದ ಆದಾಯವನ್ನು ಪರಿಗಣಿಸಿದರೆ ಆದಾಯ ಸ್ವತಂತ್ರ ಪರಿವರ್ತಿತವಾಗಿ ಕಂಡುಬರಬಹುದು. ಯಾಕೆಂದರೆ ಕುಟುಂಬವೊಂದರ ಆರ್ಥಿಕ ಸ್ಥಿತಿ (ಆದಾಯ) ವ್ಯಕ್ತಿಯ ಶಿಕ್ಷಣದ ಮಟ್ಟವನ್ನು ಪ್ರಭಾವಿಸಬಹುದು. ಹೀಗೆ ಸಮಾಜವಿಜ್ಞಾನದಲ್ಲಿ ಸ್ವತಂತ್ರ ಮತ್ತು ಡಿಪೆಂಡೆಂಟ್ ಪರಿವರ್ತಿತಗಳನ್ನು ರೂಪಿಸಿಕೊಳ್ಳುವುದು ಸ್ವಲ್ಪ ಕಷ್ಟದ ಕೆಲಸ. ಇದೇ ರೀತಿಯಲ್ಲಿ ಪ್ರಯೋಗ ಅಥವಾ ಪರೀಕ್ಷಾ ಗುಂಪು ಮತ್ತು ನಿಯಂತ್ರಿತ ಗುಂಪುಗಳನ್ನು ಆಯ್ಕೆ ಮಾಡಿಕೊಳ್ಳುವುದು ಕೂಡ ಕಷ್ಟ ಕೆಲಸ. ಸಮಾಜವಿಜ್ಞಾನದಲ್ಲಿ ಅಧ್ಯಯನಕ್ಕೆ ಒಳಗಾಗುವ ಸಂಗತಿಗಳು ವಿಜ್ಞಾನದ ಅಧ್ಯಯನದ ವಸ್ತುಗಳಂತೆ ಹಿಡಿತಕ್ಕೆ ಬರುವಂತವಲ್ಲ. ಸತತ ಚಲನಶೀಲವಾಗಿರುವ ಸಾಮಾಜಿಕ ಸಂಗತಿಗಳು ಸಮಾಜವಿಜ್ಞಾನದ ಅಧ್ಯಯನ ಸಂಗತಿಗಳು. ಪರೀಕ್ಷಾ ಗುಂಪುಗಳದ್ದೇ ಗುಣವುಳ್ಳ ನಿಯಂತ್ರಿತ ಗುಂಪುಗಳನ್ನು ಹುಡುಕುವುದು ಸಮಾಜ ಸಂಶೋಧನೆಯಲ್ಲಿ ಸಾಧ್ಯವಾಗಲಿಕ್ಕಿಲ್ಲ.

ಇಂತಹ ಸಂದರ್ಭಗಳಲ್ಲಿ ಪರೀಕ್ಷಾ ಗುಂಪಿನ ಅಥವಾ ಅಧ್ಯಯನಕ್ಕೆ ಒಳಗಾದ ಸಂಗತಿಗಳಲ್ಲಾಗುವ ಪರಿವರ್ತನೆಗಳನ್ನು ಒಟ್ಟಾರೆಯಲ್ಲಾಗುವ ಪರಿವರ್ತನೆಯೊಂದಿಗೆ ಹೋಲಿಸಿ ಸಾಮಾಜಿಕ ಪರಿವರ್ತನೆ ಬಗ್ಗೆ ತೀರ್ಮಾನಕ್ಕೆ ಬರಲಾಗುವುದು. ಉದಾಹರಣೆಗೆ ಪ್ರವಾಸೋದ್ಯಮ ಮತ್ತು ಸಾಮಾಜಿಕ ಪರಿವರ್ತನೆ ನಡುವಿನ ಸಂಬಂಧವನ್ನು ಅಧ್ಯಯನ ಮಾಡಲು ಪ್ರವಾಸೋದ್ಯಮ ಇರುವ ಹಳ್ಳಿಯನ್ನು ಅಥವಾ ಊರನ್ನು ಪ್ರವಾಸೋದ್ಯಮ ಇಲ್ಲದ ಹಳ್ಳಿ ಅಥವಾ ಊರಿನೊಂದಿಗೆ ಹೋಲಿಸಬೇಕಾಗುತ್ತದೆ.[6] ಪ್ರವಾಸೋದ್ಯಮ ಇರುವ ಊರನ್ನು ಆಯ್ಕೆ ಮಾಡುವುದು ಸಮಸ್ಯೆ ಅಲ್ಲ. ಆದರೆ ಪ್ರವಾಸೋದ್ಯಮ ಇರುವ ಹಳ್ಳಿಯ ಎಲ್ಲಾ ಲಕ್ಷಣಗಳಿರುವ (ಪ್ರವಾಸೋದ್ಯಮವನ್ನು ಹೊರತುಪಡಿಸಿ) ಮತ್ತೊಂದು ಹಳ್ಳಿಯನ್ನು ಆಯ್ಕೆ ಮಾಡುವುದು ಕಷ್ಟದ ಕೆಲಸ. ಇಂತಹ ಸಂದರ್ಭದಲ್ಲಿ ಪ್ರವಾಸೋದ್ಯಮದಿಂದ ಆದ ಸಾಮಾಜಿಕ ಪರಿವರ್ತನೆಗಳನ್ನು ಅಧ್ಯಯನ ಮಾಡಲು ಈ ಕೆಳಗಿನ ವಿಧಾನಗಳನ್ನು ಅನುಸರಿಸಬಹುದು. ಒಂದು, ತುಲನಾತ್ಮಕ ವಿಶ್ಲೇಷಣಾ ವಿಧಾನ, ಮತ್ತೊಂದು ಚಾರಿತ್ರಿಕ ವಿಶ್ಲೇಷಣಾ ವಿಧಾನ. ಕಾರ್ಯಕಾರಣ ಸಂಬಂಧ ವಿಶ್ಲೇಷಣೆ ಮತ್ತು ತುಲನಾತ್ಮಕ ವಿಶ್ಲೇಷಣೆ ನಡುವೆ ಸಾಕಷ್ಟು ಸಾಮ್ಯತೆಗಳಿವೆ. ಜತೆಗೆ ಕೆಲವೊಂದು ಸಣ್ಣಪುಟ್ಟ ವ್ಯತ್ಯಾಸಗಳಿವೆ. ಅವುಗಳಲ್ಲಿ ಪ್ರಮುಖ ಪರೀಕ್ಷಾ ಮತ್ತು ನಿಯಂತ್ರಿತ ಗುಂಪುಗಳ ಆಯ್ಕೆಗೆ ಸಂಬಂಧಿಸಿದ ಭಿನ್ನತೆ. ಕಾರ್ಯಕಾರಣ ವಿಶ್ಲೇಷಣೆಯಲ್ಲಿ ಎರಡು ಗುಂಪುಗಳನ್ನು (ಪರೀಕ್ಷಾ ಮತ್ತು ನಿಯಂತ್ರಿತ) ಆಯ್ಕೆ ಮಾಡಿಕೊಳ್ಳುವುದು ಅನಿವಾರ್ಯ. ತುಲನಾತ್ಮಕ ವಿಶ್ಲೇಷಣೆ ಒಟ್ಟಾರೆ ಪರಿಸರದಲ್ಲಿನ ಸಂಗತಿಗಳಿಗೆ ಅಧ್ಯಯನಕ್ಕೆ ಒಳಗಾಗುವ ಸಂಗತಿಗಳನ್ನು ಹೋಲಿಸಿ ತೀರ್ಮಾನಕ್ಕೆ ಅವಕಾಶ ಮಾಡಿಕೊಡುವ ಮೂಲಕ ಕಾರ್ಯಕಾರಣ ವಿಶ್ಲೇಷಣೆಯ ಮಿತಿಯನ್ನು ಮೀರಲು ಸಹಕರಿಸುತ್ತದೆ. ಪ್ರವಾಸೋದ್ಯಮ ಮತ್ತು ಸಾಮಾಜಿಕ ಪರಿವರ್ತನೆಯ ಉದಾಹರಣೆಯನ್ನು ಬಳಸಿಕೊಂಡು ಮುಂದುವರಿಯೋಣ. ಪ್ರವಾಸೋದ್ಯಮದಿಂದ ಆಗುವ ಸಾಮಾಜಿಕ ಪರಿವರ್ತನೆಗಳನ್ನು ಮಾಪನ ಮಾಡಲು ಕೆಲವೊಂದು ಸೂಚ್ಯಂಕಗಳನ್ನು ಗುರುತಿಸಿಕೊಳ್ಳಬೇಕು. ಕುಟುಂಬ ವ್ಯವಸ್ಥೆಯೊಳಗಿನ ಪರಿವರ್ತನೆ (ಅವಿಭಕ್ತ ಕುಟುಂಬದಿಂದ ವಿಭಕ್ತ ಕುಟುಂಬದ ಕಡೆಗೆ ಚಲಿಸುವುದು), ಮಹಿಳೆಯ ಸ್ಥಾನಮಾನ, ಲಿಂಗಾನುಪಾತ, ಶಿಕ್ಷಣದ ಮಟ್ಟ, ಆರೋಗ್ಯದ ಮಟ್ಟ, ಸಾಮಾಜಿಕ ಏಣಿಶ್ರೇಣಿಯಲ್ಲಿನ ಪರಿವರ್ತನೆ ಇತ್ಯಾದಿಗಳು ಸಾಮಾಜಿಕ ಪರಿವರ್ತನೆಯನ್ನು ಮಾಪನ ಮಾಡಲು ಬಳಸುವ ಸಾಮಾನ್ಯ ಸೂಚ್ಯಂಕಗಳು. ಈ ಸೂಚ್ಯಂಕಗಳ ಮೇಲೆ ಪ್ರವಾಸೋದ್ಯಮ ಇರುವ ಹಳ್ಳಿಯ್ಲಿ ದೊರೆತ ಮಾಹಿತಿಯನ್ನು ಆ ಹಳ್ಳಿ ಇರುವ ತಾಲ್ಲೂಕು, ಜಿಲ್ಲೆ, ರಾಜ್ಯ, ದೇಶದಲ್ಲಿನ ಮಾಹಿತಿಯೊಂದಿಗೆ (ಸೂಚ್ಯಂಕಗಳ ಮೇಲಿನ ಮಾಹಿತಿಯೊಂದಿಗೆ) ಹೋಲಿಸಬಹುದು. ಉದಾಹರಣೆಗೆ ಪ್ರವಾಸೋದ್ಯಮ ಇರುವ ಹಳ್ಳಿಯಲ್ಲಿನ ಲಿಂಗಾನುಪಾತ ಮತ್ತು ಮಹಿಳಾ ಶಿಕ್ಷಣ ಮಟ್ಟ ತಾಲ್ಲೂಕು, ಜಿಲ್ಲೆ, ರಾಜ್ಯ ಮತ್ತು ದೇಶದ ಲಿಂಗಾನುಪಾತ ಮತ್ತು ಮಹಿಳಾ ಶಿಕ್ಷಣ ಮಟ್ಟಕ್ಕಿಂತ ಹೆಚ್ಚಿದ್ದರೆ ಪ್ರವಾಸೋದ್ಯಮ ಮತ್ತು ಸಾಮಾಜಿಕ ಪರಿವರ್ತನೆ ನಡುವೆ ತಕ್ಕಮಟ್ಟಿನ ಸಂಬಂಧ ಇದೆ ಎಂದು ತೀರ್ಮಾನಕ್ಕೆ ಬರಬಹುದು. ಅಂತಿಮ ತೀರ್ಮಾನಕ್ಕೆ ಬರುವ ಮುನ್ನ ಪ್ರವಾಸೋದ್ಯಮವನ್ನು ಹೊರತುಪಡಿಸಿದ ಇತರ ಸಂಗತಿಗಳೇನಾದರೂ ಮೇಲಿನ ಸಾಮಾಜಿಕ ಪರಿವರ್ತನೆಗೆ ಕಾರಣವಾಗಿದೆಯೇ ಎಂದು ಪರೀಕ್ಷಿಸಬೇಕಾಗುತ್ತದೆ. ಒಂದು ವೇಳೆ ಪ್ರವಾಸೋದ್ಯಮವನ್ನು ಹೊರತುಪಡಿಸಿದ ಯಾವುದೇ ಕಾರಣ ಕೂಡ ಮೇಲಿನ ಪರಿವರ್ತನೆಯಲ್ಲಿ ಪಾತ್ರ ವಹಿಸಿಲ್ಲ ಎಂದಾದರೆ ಪ್ರವಾಸೋದ್ಯಮ ಮತ್ತು ಸಾಮಾಜಿಕ ಪರಿವರ್ತನೆ ನಡುವೆ ಸಂಬಂಧ ಇದೆ ಎಂದು ತೀರ್ಮಾನಿಸಬಹುದು.

ಮೇಲಿನ ಎಲ್ಲ ಉದಾಹರಣೆಗಳಲ್ಲೂ ಒಂದು ಸ್ವತಂತ್ರ ಪರಿವರ್ತಿತ (ಇಂಡಿಪೆಂಡೆಂಟ್ ವೆರಿಯೆಬಲ್) ಮತ್ತು ಡಿಪೆಂಡೆಂಟ್‌ ಪರಿವರ್ತಿತ ನಡುವಿನ ಸಂಬಂಧದ ವಿಶ್ಲೇಷಣೆ ಇದೆ. ವಾಸ್ತವದಲ್ಲಿ ಯಾವುದೇ ಒಂದು ಸಾಮಾಜಿಕ ಆಗುಹೋಗುಗಳು ಈ ಬಗೆಯಲ್ಲಿ ಕೇವಲ ಎರಡು ಸಂಗತಿಗಳಿಗೆ ಸೀಮಿತವಾಗಿರುವುದಿಲ್ಲ. ಹಲವಾರು ಸಂಗತಿಗಳು ಏಕಕಾಲದಲ್ಲಿ ಒಂದು ಘಟನೆಯ ಸುತ್ತ ಸಂಬಂಧ ಹೊಂದಿರಬಹುದು. ಉದಾಹರಣೆಗೆ ಉದ್ಯಮಿಯೊಬ್ಬನ ಕಾರ್ಯಕ್ಷಮತೆ ಮತ್ತು ಕಾರ್ಯಕ್ಷಮತೆಯನ್ನು ಪ್ರಭಾವಿಸುವ ಸಂಗತಿಗಳ ಮೇಲಿನ ಸಂಶೋಧನೆಯನ್ನು ಪರಿಶೀಲಿಸೋಣ. ಉದ್ಯಮಿಯ ಕಾರ್ಯಕ್ಷಮತೆಯನ್ನು ಆತನ ವ್ಯಾಪಾರ ಅಥವಾ ವಹಿವಾಟುಗಳು ಗಳಿಸುವ ಲಾಭದಿಂದ ಅಳೆಯಬಹುದು. ಹಲವಾರು ಸಂಗತಿಗಳು ಉದ್ಯಮಿಯ ಕಾರ್ಯಕ್ಷಮತೆಯನ್ನು ಪ್ರಭಾವಿಸಬಹುದು. ಉದ್ಯಮಿಯ ಶಿಕ್ಷಣ, ವ್ಯಾಪಾರದ ಅನುಭವ, ಸ್ವಂತ ಉಳಿತಾಯದ ಪ್ರಮಾಣ, ಕುಟುಂಬದ ಆರ್ಥಿಕ ಸ್ಥಿತಿ, ಆತನ ಅಥವಾ ಕುಟುಂಬದ ರಾಜಕೀಯ ಸಂಬಂಧಗಳು ಇತ್ಯಾದಿಗಳು. ಉದ್ಯಮಿಯ ಲಾಭ ನಷ್ಟಗಳು ನಿಂತಿರುವುದು ಸಮಯ ಸಂದರ್ಭಕ್ಕನುಸಾರ ವ್ಯವಹರಿಸುವ ಉದ್ಯಮಿಯ ಶಕ್ತಿಯ ಮೇಲೆ. ಉದಾಹರಣೆಗೆ ಉದ್ಯಮಿಯ ಸರಕಿಗೆ ಉತ್ತಮ ಬೇಡಿಕೆ ಇರುವ ಸಂದರ್ಭದಲ್ಲಿ ಸರಕುಗಳನ್ನು ತಕ್ಷಣದಲ್ಲಿ ಪೂರೈಸಲು ಸಾಧ್ಯವಾದರೆ ಮಾತ್ರ ಉದ್ಯಮಿ ಲಾಭ ಗಳಿಸಲು ಸಾಧ್ಯ. ಆ ಅವಕಾಶವನ್ನು ಕಳೆದುಕೊಂಡರೆ ಮತ್ತೊಂದು ಅವಕಾಶಕ್ಕಾಗಿ ಕಾಯಬೇಕು. ಮತ್ತೊಂದು ಅವಕಾಶ ಬಂದರೆ ಬಂತು ಇಲ್ಲದಿದ್ದರೆ ಇಲ್ಲ ಅಥವಾ ಅವಕಾಶ ಬರುವ ಸಂದರ್ಭದಲ್ಲಿ ಮಾರುಕಟ್ಟೆ ಸ್ಥಿತಿಯೇ ಬದಲಾಗಿರಬಹುದು. ಆದುದರಿಂದ ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವುದು ಉದ್ಯಮಿಯ ಅಸ್ತಿತ್ವಕ್ಕೆ ತುಂಬಾ ಅಗತ್ಯ. ಅವಕಾಶವನ್ನು ಬಳಸಿಕೊಳ್ಳಲು ಉದ್ಯಮಿಗೆ ನೆರವಾಗುವ ಮಹತ್ತರವಾದ ಅಂಶವೆಂದರೆ ಹಣಕಾಸು ಪೂರೈಕೆ. ಹಣಕಾಸು ಪೂರೈಕೆಗೆ ಬ್ಯಾಂಕ್ ಮತ್ತು ಇತರ ಅಧಿಕೃತ ಸಂಘಸಂಸ್ಥೆಗಳಿವೆ. ಆದರೆ ಅವುಗಳಿಂದ ಉದ್ಯಮಿಯ ತಕ್ಷಣದ ಹಣಕಾಸಿನ ಬೇಡಿಕೆಗಳನ್ನು ಪೂರೈಸಲು ಸಾಧ್ಯವಾಗುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಉದ್ಯಮಿಯ ಸ್ವಂತ ಉಳಿತಾಯ ಅಥವಾ ಕುಟುಂಬದ ಸದಸ್ಯರಿಂದ ಸಿಗುವ ಹಣಕಾಸಿನ ನೆರವು ಉದ್ಯಮಿಯ ಯಶಸ್ಸನ್ನು ಗಣನೀಯವಾಗಿ ಪ್ರಭಾವಿಸುತ್ತದೆ.[7] ಹೀಗೆ ಇಲ್ಲಿ ಉದ್ಯಮಿಯ ಕಾರ್ಯಕ್ಷಮತೆ ಡಿಪೆಂಡೆಂಟ್ ವೆರಿಯಬಲ್ ಆಗುತ್ತದೆ. ಕಾರ್ಯಕ್ಷಮತೆಯನ್ನು ಪ್ರಭಾವಿಸುವ ಮೇಲೆ ತಿಳಿಸಿದ ಅಂಶಗಳು ಸ್ವತಂತ್ರ ಪರಿವರ್ತಿತಗಳಾಗುತ್ತವೆ. ಈ ಎಲ್ಲವೂ ಉದ್ಯಮಿಯ ಕಾರ್ಯಕ್ಷಮತೆಯನ್ನು ಹೇಗೆ ಪ್ರಭಾವಿಸುತ್ತವೆ ಮತ್ತು ಪ್ರತಿಯೊಂದರ ಪಾತ್ರ ಏನೆಂದು ಅರ್ಥ ಮಾಡಿಕೊಳ್ಳಬೇಕಾದರೆ ಮಲ್ಟಿಪಲ್ ರಿಗ್ರೆಶನ್ ವಿಶ್ಲೇಷಣೆ ಮಾಡಬೇಕಾಗುತ್ತದೆ.

[1] ಈ ಕುರಿತು ಹೆಚ್ಚಿನ ವಿವರಗಳಿಗೆ ಲೆಸ್ಲಿ ಸ್ಟೀವನ್‌ಸನ್ ಆಂಡ್ ಡೇವಿಡ್ ಸಿ. ಹಾಬ್‌ಮೇನ್ ಅವರ ಟೆನ್ಥಿಯರೀಸ್ ಆಫ್ ಹ್ಯೂಮನ್ ನೇಚರ್, ನ್ಯೂಯಾರ್ಕ್: ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೈಸ್, ೧೯೯೮, ಪುಸ್ತಕ ನೋಡಬಹುದು.

[2] ಸಂಸ್ಕೃತಿಗಳ ಪ್ರತ್ಯೇಕತೆಯ ಬಗ್ಗೆ ವಿಶೇಷ ಒತ್ತು ನೀಡಿದವರೆಂದರೆ ಮಾನವಶಾಸ್ತ್ರಜ್ಞರು. ಆದರೆ ಇದೊಂದು ಬಗೆಯಲ್ಲಿ ಪ್ರತ್ಯೇಕತೆ ಮತ್ತು ಯೂನಿವರ್ಸಾಲಿಟಿಯ (ವಿಜ್ಞಾನದ ಕೊಡುಗೆ) ಹೆಸರಲ್ಲಿ ಎಂದೆಂದೂ ಸೇರದ ಎರಡು  ವಿಭಿನ್ನ ಸಂಶೋಧನಾ ನಿಲುವುಗಳಿಗೂ ಕಾರಣವಾಯಿತು. ಆದರೆ ಇತ್ತೀಚಿನ ದಿನಗಳಲ್ಲಿ ಮಾನವಿಕದಲ್ಲಿ ಮಹತ್ವ ಪಡೆಯುತ್ತಿರುವ ಸಂಸ್ಕೃತಿ ಅಧ್ಯಯನ ಮತ್ತು ವಿಜ್ಞಾನದಲ್ಲಿ ಮಹತ್ವ ಪಡೆಯುತ್ತಿರುವ ಸಂಕೀರ್ಣತೆ ಅಧ್ಯಯನಗಳನ್ನು ಬಳಸಿಕೊಂಡು ಮೇಲೆ ತಿಳಿಸಿದ ಪ್ರತ್ಯೇಕತೆ ಮತ್ತು ಯೂನಿವರ್ಸಾಲಿಟಿ ಭಿನ್ನತೆಗಳನ್ನು ಮೀರಬಹುದೆನ್ನುವ ವಾದಗಳು ಇವೆ. ಇವುಗಳ ಸಂಕ್ಷಿಪ್ತ ಪರಿಚಯಕ್ಕೆ ಇಮ್ಯಾನ್ಯುಲ್ ವೆಲ್‌ಸ್ಟೇಯಿನ್ ಅವರ, ‘ಸೋಶಿಯಲ್ ಸೈನ್ಸಸ್ ಆಂಡ್‌ಕ್ವೆಸ್ಟ್ ಫಾರ್ ಎ ಜಸ್ಟ್ ಸೊಸೈಟಿ’, ಲೇಖನವನ್ನು ನೋಡಬಹುದು. ಈ ಲೇಖನ ಪಾರ್ಥನಾಥ ಮೂಖರ್ಜಿ ಆಂಡ್ ಚಂದನ್ ಸೇನ್‌ಗುಪ್ತಾ ಅವರ, ಇಂಡಿಜೀನಿಟಿ ಆಂಡ್ ಯೂನಿವರ್ಸಾಲಿಟಿ ಇನ್ ಸೋಶಿಯಲ್ ಸೈನ್ಸ್ ಸೌತ್ ಏಶಿಯನ್ ರೆಸ್ಪಾನ್ಸ್, ನ್ಯೂಡೆಲ್ಲಿ: ಸೇಜ್ ಪಬ್ಲಿಕೆಶನ್ಸ್, ೨೦೦೪, ಪು. ೬೬-೮೨ ಪುಸ್ತಕದಲ್ಲಿದೆ.

[3] ಇದನ್ನು ಇಂಗ್ಲಿಷಲ್ಲಿ ಯೂನಿವೇರಿಯೆಟ್ ಎನಾಲೀಸ್ ಎನ್ನುತ್ತಾರೆ. ಅಂದರೆ ಒಂದೇ ಪರಿವರ್ತಕದ ಬೇರೆ ಬೇರೆ ಆಯಾಮಗಳನ್ನು ಪರಿಚಯಿಸುವುದು. ಅಂಕಿಅಂಶಗಳನ್ನು ವಿಶ್ಲೇಷಣೆಯ ಮೊದಲ ಹೆಜ್ಜೆ ಏಕಾಂಶ ವಿಶ್ಲೇಷಣೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಗೆ ರೋಸ್ ಡಿ. ಆಂಡ್ ಸಲ್ಲಿವಾನ್ ಓ ಅವರ, ಇನ್ಟ್ರಡ್ಯುಸಿಂಗ್ ಡಾಟಾ ಎನಾಲಿಸೀಸ್ ಫಾರ್ ಸೋಶಿಯಲ್ ಸೈಂಟಿಸ್ಟ್, ಬಕಿಂಗ್ ಹೇಮ್: ಓಪನ್ ಯೂನಿವರ್ಸಿಟಿ ಪ್ರೆಸ್, ೧೯೯೩, ಪುಸ್ತಕ ನೋಡಬಹುದು.

[4] ಅಂಕಿಅಂಶಗಳನ್ನು ಚೂರಿಗೆ ಹೋಲಿಸುವುದು ಸಾಮಾನ್ಯ. ಚೂರಿ ಅದರಷ್ಟಕ್ಕೇ ಅದು ಒಳ್ಳೆಯದೂ ಅಲ್ಲ ಕೆಟ್ಟದೂ ಅಲ್ಲ. ಅದರ ಬಳಕೆ ಮೇಲೆ ಅದರ ಒಳ್ಳೆತನ ಅಥವಾ ಕೆಟ್ಟತನ ನಿರ್ಧಾರವಾಗುತ್ತದೆ. ಸಮಾಜ ಸಂಶೋಧನೆಯಲ್ಲಿ ಅಂಕಿಅಂಶಗಳ ಬಳಕೆಯ ಬಗ್ಗೆ ಸಂದೇಹ ಇರುವುದು ಅಂಕಿಅಂಶಗಳ ಮೇಲಿನ ಕಾರಣಗಳಿಗಾಗಿ ಮಾತ್ರವಲ್ಲ ಸಾಮಾಜಿಕ ಸಂಗತಿಗಳನ್ನು ಕಟ್ಟಿಕೊಡುವ ಅಂಕಿಅಂಶಗಳ ಸಾಮರ್ಥ್ಯದ ದೃಷ್ಟಿಯಿಂದಲೂ ಸಮಾಜ ಸಂಶೋಧನೆಯಲ್ಲಿ ಅಂಕಿಅಂಶಗಳನ್ನು ಗುಮಾನಿಯಿಂದ ನೋಡಲಾಗುತ್ತಿದೆ. ಕ್ವಾಲಿಟೇಟಿವ್ ಸಂಶೋಧನೆಗೆ ಮಹತ್ವ ನೀಡುವ ಬಹುತೇಕ ಪುಸ್ತಕಗಳಲ್ಲಿ ಅಂಕಿಅಂಶಗಳ ಈ ಅಸಾಮರ್ಥ್ಯದ ಬಗ್ಗೆ ಮಾಹಿತಿ ಇದೆ.

[5] ಮೂಲತತ್ತ್ವಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಕ್ಲೈವ್ ಸೀಲ್ ಅವರ, ‘ಸ್ಟೆಟಿಸ್ಟಿಕಲ್ ರೀಸನಿಂಗ್ – ಕಾಸಲ್ ಆರ್‌ಗ್ಯುಮೆಂಟ್ಸ್ ಆಂಡ್ ಮಲ್ಟಿವೇರಿಯೆಟ್ ಎನಾಲಿಸಿಸ್’ ದಿಂದ ಪಡೆದಿದ್ದೇನೆ. ಅವರ ಈ ಲೇಖನ ಕ್ಲೈವ್ ಸೀಲ್ (ಸಂ), ರಿಸರ್ಚಿಂಗ್ ಸೊಸೈಟಿ ಆಂಡ್ ಕಲ್ಚರ್, ನ್ಯೂಡೆಲ್ಲಿ: ಸೇಜ್ ಪಬ್ಲಿಕೇಶನ್ಸ್, ೧೯೯೯, ಪು. ೧೮೦-೧೯೧, ಪುಸ್ತಕದಲ್ಲಿದೆ.

[6] ಈ ಉದಾಹರಣೆಯನ್ನು ಕೆ. ಸಿದ್ದಪ್ಪ ಅವರ, ‘ಪ್ರವಾಸೋದ್ಯಮ ಮತ್ತು ಅಭಿವೃದ್ಧಿ – ಹಂಪಿಯ ಒಂದು ಅಧ್ಯಯನ’ ಎನ್ನುವ ಅಪ್ರಕಟಿತ ಮಹಾಪ್ರಬಂಧದಿಂದ ಪಡೆಯಲಾಗಿದೆ. ಈ ಮಹಾಪ್ರಬಂಧವನ್ನು ಅವರು ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗಕ್ಕೆ ೨೦೦೨ ರಲ್ಲಿ ಸಲ್ಲಿಸಿದ್ದಾರೆ.

[7] ಉದ್ಯಮತ್ವ ಮತ್ತು ಅದನ್ನು ಪ್ರಭಾವಿಸುವ ಪರಿವರ್ತಿಕಗಳ ಸಂಬಂಧದ ವಿವರಗಳಿಗೆ ಚಂದ್ರ ಪೂಜಾರಿಯವರ, ಟ್ರೆಂಡ್ಸ್ ಇನ್ ಎಂಟರ್‌ಪ್ರನರ್‌ಶಿಪ್ ಆಂಡ್ ರೀಜನಲ್ ಡೆವಲಪ್‌ಮೆಂಟ್ – ಎ ಸ್ಟಡಿ ಆಫ್ ಸ್ಮಾಲ್ ಎಂಟರ್‌ಪ್ರನರ‍್ಸ್ ಆಫ್ ಸೌತ್ ಕೆನರಾ’ ಅಪ್ರಕಟಿತ ಮಹಾಪ್ರಬಂಧವನ್ನು ನೋಡಬಹುದು. ಈ ಮಹಾಪ್ರಬಂಧವನ್ನು ಅವರು ಮಂಗಳೂರು ವಿಶ್ವವಿದ್ಯಾಲಯದ ಬುಸಿನೆಸ್ ಆಡ್ಮಿಮಿನಿಸ್ಟ್ರೇಷನ್ ವಿಭಾಗಕ್ಕೆ ೧೯೯೬ ರಲ್ಲಿ ಸಲ್ಲಿಸಿದ್ದಾರೆ.