ಭಾಷೆಯಲ್ಲಿ ಧ್ವನಿಗಳಿವೆ, ಪದಗಳಿವೆ, ವಾಕ್ಯ ಮಾದರಿಗಳಿವೆ. ನಾವು ಬಳಸುವ ಭಾಷೆಯಲ್ಲಿ ಈ ಎಲ್ಲವನ್ನೂ ಸಮಪ್ರಮಾಣದಲ್ಲಿ ಬಳಸುವುದಿಲ್ಲ. ಉದಾಹರಣೆಗೆ ಝ ಎಂಬೊಂದು ಧ್ವನಿ ಕನ್ನಡದಲ್ಲಿ ಇದೆಯಾದರೂ ನಾವು ಗಂಟೆಗಟ್ಟಲೆ ಕನ್ನಡ ಮಾತಾಡಿದರೂ ಅಥವಾ ಪುಟಗಟ್ಟಲೆ ಕನ್ನಡದಲ್ಲಿ ಬರೆದರೂ ‘ಝ’ ಧ್ವನಿಯುಕ್ತ ಪದವೊಂದನ್ನು ಬಳಸದೆಯೇ ಇರಬಹುದು. ಕೆಲವು ಧ್ವನಿಗಳು ಮತ್ತೆ ಮತ್ತೆ – ಉದಾಹರಣೆಗೆ ಸ್ವರಗಳು – ಬಳಕೆಯಾಗುತ್ತವೆ. ಅವುಗಳ ಬಳಕೆಯ ಪ್ರಮಾಣ ಅತ್ಯಧಿಕವಾಗಿರುತ್ತದೆ. ಹಾಗೆಯೇ ನಾವು ಬಲ್ಲ ಪದಗಳೆಲ್ಲವನ್ನೂ ಬರೆಯುವಾಗ ಇಲ್ಲವೇ ಮಾತಾಡುವಾಗ ಒಂದೇ ಪ್ರಮಾಣದಲ್ಲಿ ಬಳಸುವುದಿಲ್ಲ. ಕೆಲವು ಪದಗಳು ಮೊದಲಿಂದ ಕೊನೆಯವರೆಗೆ ಮತ್ತೆ ಮತ್ತೆ ಬಳಕೆಯಾದರೆ ಮತ್ತೆ ಕೆಲವು ಎಲ್ಲೋ ಆಗಾಗ ಸುಳಿದು ಹೋಗುತ್ತವೆ. ನಿಘಂಟುಗಳಲ್ಲಿ ಎಲ್ಲ ಪದಗಳೂ ಪಟ್ಟಿಯಾಗಿದ್ದರೂ ಅವು ಬೇರೆ ಬೇರೆ ಪ್ರಮಾಣಕ್ಕೆ ಅನುಗುಣವಾಗಿ ಬಳಕೆಯಾಗುತ್ತಿರುತ್ತವೆ.

ಭಾಷಾಧ್ಯಯನಕಾರರು ಹೀಗೆ ಭಾಷೆಯ ಘಟಕಗಳು ಬಳಕೆಯಲ್ಲಿ ಆವರ್ತನಗೊಳ್ಳುವಾಗ ಯಾವುದಾದರೂ ಕ್ರಮಬದ್ಧತೆ ಇದೆಯೋ ಎಂಬುದನ್ನು ಅರಿಯಲು ಯತ್ನಿಸಿದ್ದಾರೆ. ಈ ಅಧ್ಯಯನಗಳು ಭಾಷೆಯ ವಿವಿಧ ಘಟಕಗಳು ಬಹುಮಟ್ಟಿಗೆ ನಿರ್ದಿಷ್ಟವಾದ ಆವರ್ತನ ಕ್ರಮದಲ್ಲಿ ಬಳಕೆಯಾಗುವುದನ್ನು ತೋರಿಸಿಕೊಟ್ಟಿವೆ. ಭಾಷಿಕರು ಭಾಷೆಯನ್ನು ಬಳಸುವಾಗ ವ್ಯಕ್ತಿಯಿಂದ ವ್ಯಕ್ತಿಗೆ ಹಲವು ವ್ಯತ್ಯಾಸಗಳು ಕಂಡು ಬರುತ್ತವೆಯಾದರೂ ಭಾಷಾ ಘಟಕಗಳ ಆವರ್ತನ ಕ್ರಮದಲ್ಲಿ ಗಣನೀಯ ವ್ಯತ್ಯಾಸಗಳು ಕಾಣಸಿಗುವುದಿಲ್ಲ. ಅಂದರೆ ಕನ್ನಡ ಧ್ವನಿಗಳಲ್ಲಿ ಝ ಅಥವಾ ಘ ಅತಿ ಕಡಿಮೆ ಬಳಕೆಯ ಆವರ್ತನವನ್ನು ಪಡೆದಿವೆ ಎನ್ನೋಣ. ಕನ್ನಡಿಗರು ಯಾರೇ ಆಗಿರಲಿ ಅವರ ಬಳಕೆಯಲ್ಲಿ ಈ ಧ್ವನಿಗಳು ತಮ್ಮ ಆವರ್ತನವನ್ನು ಹೆಚ್ಚಿಸಿಕೊಳ್ಳಲಾರವು. ಈ ಮಾತು ಪದ ಗಳಿಗೂ ಅನ್ವಯಿಸುತ್ತದೆ. ಅಂದರೆ ಭಾಷೆಯ ಘಟಕಗಳು ಬಳಕೆಯಲ್ಲಿ ಪ್ರಯುಕ್ತವಾಗುವಾಗ, ಸಂಯೋಜಿತ ರೂಪವನ್ನು ಪಡೆಯುವಾಗ ಗೊತ್ತಾದ ಪ್ರಮಾಣಬದ್ಧತೆಯನ್ನು ಹೊಂದಿರುತ್ತವೆ.

ಇಂಗ್ಲಿಶ್ ಭಾಷೆಯ ಬಳಕೆಯನ್ನು ಆಧರಿಸಿ ಭಾಷಾ ಘಟಕಗಳ ಆವರ್ತನ ವನ್ನು ಲೆಕ್ಕಹಾಕುವ ಯತ್ನಗಳು ನಡೆದಿವೆ. ಆ ಭಾಷೆಯ ಬಳಕೆಯಲ್ಲಿ ಪ್ರತಿಶತ ಅರವತ್ತು ಭಾಗ ವ್ಯಂಜನ ಧ್ವನಿಗಳಿದ್ದರೆ ಉಳಿದ ಪ್ರತಿಶತ ನಲವತ್ತರಷ್ಟು ಸ್ವರಗಳು ಕಾಣ/ಕೇಳಸಿಗುತ್ತವೆ. ಬಳಕೆಯಾಗುವ ಪದಗಳಲ್ಲೂ ಏಕಾಕ್ಷರಿಗಳ ಪ್ರಮಾಣ ಅಧಿಕ. ಏಕಾಕ್ಷರಿಗಳೆಂದರೆ ವ್ಯಂಜನ, ಸ್ವರ ಮತ್ತು ವ್ಯಂಜನಗಳಿರುವ ರೂಪಗಳು. ಆ ಭಾಷೆಯ ಆಯ್ದ ಐವತ್ತು ಪದಗಳು, ಆ ಭಾಷೆಯ ಯಾವುದೇ ಬಳಕೆಯಲ್ಲಿ ಪ್ರತಿಶತ ನಲವತ್ತೈದರಷ್ಟು ಪ್ರಮಾಣದಲ್ಲಿರುತ್ತವೆ.

ಹೀಗೆ ಯಾವುದೇ ಭಾಷಾಘಟಕವನ್ನು ಆಯ್ದು ಅದರ ಬಳಕೆಯ ಪ್ರಮಾಣವನ್ನು ನಿಯಂತ್ರಿಸುವುದು ದಿನಬಳಕೆಯಲ್ಲಿ ಅಸಾಧ್ಯ. ಅದಕ್ಕಾಗಿ ವಿಶೇಷ ಪ್ರಯತ್ನಗಳನ್ನು ಮಾಡುವುದು ಭಾಷಿಕರಿಗೆ ಆಗದ ಮಾತು. ಕೆಲವೊಮ್ಮೆ ಹಾಗೆ ವ್ಯವಸ್ಥಿತವಾಗಿ ಪ್ರಯತ್ನಿಸಿದರೂ ಅದು ಅಲ್ಪ ಕಾಲಾವಧಿಗೆ ಮಾತ್ರ ಸೀಮಿತವಾಗಿರುವುದು. ಉದಾಹರಣೆಗೆ ಸಂಸ್ಕೃತ ಭಾಷಾ ಪರಂಪರೆಯಲ್ಲಿ ಕೆಲವು ಬಗೆಯ ಜಾಣತನದ ಪದ್ಯರಚನೆಗಳಿವೆ. ‘ಅತಾಲವ್ಯ’ ಎಂದರೆ ಚವರ್ಗದ ವ್ಯಂಜನಗಳನ್ನು (ಚ, ಛ, ಜ, ಝ, ಞ, ಶ) ಬಳಸದೆ ಒಂದು ಪದ್ಯವನ್ನು ರಚಿಸುವುದು. ಹೀಗೆಯೇ ನಿರೋಷ್ಠ್ಯ (ಪ ವರ್ಗದ ಧ್ವನಿಗಳನ್ನು ಬಳಸದಿರುವುದು) ಎಂಬ ಬಗೆಯೂ ಉಂಟು. ಸೀಮಿತ ಉದ್ದೇಶ ಹಾಗೂ ವ್ಯಾಪ್ತಿಯ ಇಂಥ ಪ್ರಯತ್ನಗಳನ್ನು ಬಿಟ್ಟರೆ ಧ್ವನಿಘಟಕಗಳ ಆವರ್ತನೆಯನ್ನು ಗಮನವಿಟ್ಟು ನಿಯಂತ್ರಿಸುವ ಇನ್ನೊಂದು ನೆಲೆಯೆಂದರೆ ಪ್ರಾಸ, ಅನುಪ್ರಾಸಗಳ ಅಳವಡಿಕೆ. ಇದೂ ಕೂಡ ದೀರ್ಘ ರಚನೆಗಳಲ್ಲಿ ಹಲವು ರೀತಿಯಲ್ಲಿ ಕಾಣಸಿಗುವುದೇ ಹೊರತು, ಒಂದೇ ಧ್ವನಿಯನ್ನು ಇಡೀ ರಚನೆಯ ಪ್ರಾಸಸ್ಥಾನದಲ್ಲಿ ಬಳಸುವುದಿಲ್ಲ.

ಈ ಮೇಲಿನ ನಿದರ್ಶನಗಳನ್ನು ಹೊರತುಪಡಿಸಿದರೆ ಬಹುಮಟ್ಟಿಗೆ ಭಾಷಾ ಘಟಕಗಳ ಬಳಕೆಯಲ್ಲಿ ಪ್ರತಿ ಘಟಕದ ಆವರ್ತನ ಸಾಧ್ಯತೆ ನಿಯಂತ್ರಿತ ವಾಗಿರುತ್ತದೆ. ಇದು ಬೇರೆ ಬೇರೆ ಕಾಲಮಾನಗಳಲ್ಲಿ ಬದಲಾಗಬಹುದೇ ಎಂಬುದು ಪರಿಶೀಲನೆಗೆ ಒಳಗಾಗಬೇಕಾಗಿದೆ. ಉದಾಹರಣೆಗೆ ಧ್ವನಿ ವ್ಯತ್ಯಾಸಗಳು ನಡೆದಂತೆ ಸಹಜವಾಗಿಯೇ ಪ್ರತಿ ಧ್ವನಿಯ ಆವರ್ತನ ಸಾಧ್ಯತೆ ಬದಲಾಗುತ್ತದೆ. ಹಳಗನ್ನಡದಲ್ಲಿ ೞದ ಬದಲು ಳ ಬಳಕೆಯಾಗತೊಡಗಿತು. ಆಗ ಸಹಜವಾಗಿ ಧ್ವನಿ ಆವರ್ತನ ಸಂಖ್ಯೆ ಕೂಡ ಬದಲಾಗಿರಬೇಕು.

ಭಾಷಾ ಘಟಕಗಳ ಆವರ್ತನ ಕ್ರಮವು ಆಡುಭಾಷೆ ಮತ್ತು ಬರೆಹ ಭಾಷೆಗಳಲ್ಲಿ ಬೇರೆಬೇರೆಯಾಗಿರುತ್ತದೆ. ಆಡುಭಾಷೆಯಲ್ಲಿ ಹೆಚ್ಚಿನ ಆವರ್ತನ ಶೀಲತೆಯನ್ನು ಪಡೆದಿರುವ ಭಾಷಾಘಟಕವು ಬರೆಹ ಭಾಷೆಯಲ್ಲಿ ಅದಕ್ಕಿಂತ ಕಡಿಮೆ ಪ್ರಮಾಣದಲ್ಲಿ ಬಳಕೆಯಾಗುತ್ತಿರುವುದನ್ನು ಗಮನಿಸಬಹುದು. ಮಹಾಪ್ರಾಣ ಧ್ವನಿಗಳಿಗೆ ಕನ್ನಡದ ಬರೆಹದ ಭಾಷೆಯಲ್ಲಿರುವ ಆವರ್ತನ ಶೀಲತೆಯು ಆಡುಮಾತಿನಲ್ಲಿ ಇಲ್ಲ. ಕನ್ನಡ ಪದಕೋಶದ ಬಳಕೆಯಲ್ಲಿ ಸಂಸ್ಕೃತ ಭಾಷೆಯ ಪದಗಳು ಆಡುಮಾತಿಗಿಂತ ಬರೆಹದ ಭಾಷೆಯಲ್ಲಿ ಹೆಚ್ಚು ಪ್ರಮಾಣದಲ್ಲಿ ಆವರ್ತಗೊಳ್ಳುತ್ತವೆ.

ಆವರ್ತನಶೀಲತೆಯನ್ನು ಸೂತ್ರಬದ್ಧವಾಗಿ ವಿವರಿಸಲು ಯತ್ನಿಸಿದ ವ್ಯಕ್ತಿ ಜಾರ್ಜ್ ಕಿಂಗ್‌ಸ್ಲೆ ಜಿಫ್ (1902‘50). ಆತನ ಪ್ರಯತ್ನವನ್ನು ಹೀಗೆ ವಿವರಿಸಬಹುದು. ಒಂದು ಭಾಷಿಕ ರಚನೆಯಲ್ಲಿ ಇರುವ ಪದಗಳನ್ನು ಲೆಕ್ಕಹಾಕಿ, ಪ್ರತಿಯೊಂದು ಪದವೂ ಎಷ್ಟು ಬಾರಿ ಬಳಕೆಯಾಗಿದೆಯೆಂದು ಗುರುತಿಸುವುದು. ಹೆಚ್ಚು ಬಳಕೆಯಾಗಿರುವ ಪದವನ್ನು ಮೊದಲಲ್ಲಿ ಇರಿಸಿ ಉಳಿದ ಪದಗಳನ್ನು ಅನುಕ್ರಮವಾಗಿ ಇಳಿಕೆಯ ಶ್ರೇಣಿಯಲ್ಲಿ ಇರಿಸಿ ಒಂದು ಪಟ್ಟಿಯನ್ನು ರೂಪಿಸುವುದು. ಈ ಪಟ್ಟಿಯಲ್ಲಿ ಒಂದು ಪದ ಎಷ್ಟನೇ ಸ್ಥಾನದಲ್ಲಿರುವುದೋ ಆ ಸಂಖ್ಯೆಯನ್ನು, ಅದು ಎಷ್ಟು ಬಾರಿ ಬಳಕೆಯಾಗಿದೆಯೋ ಆ ಸಂಖ್ಯೆಯೊಡನೆ ಗುಣಿಸುವುದು. ಹೀಗೆ ಲಭಿಸುವ ಗುಣಲಬ್ಧವು ಒಂದು ನಿಯತಾಂಕವಾಗಿರುತ್ತದೆ. ಅಂದರೆ ಈ ಸಂಖ್ಯೆಯೂ ಬಹುಮಟ್ಟಿಗೆ ಎಲ್ಲ ಪದಗಳಿಗೂ ಸಮಾನವಾಗಿರುತ್ತದೆ. ಒಂದು ನಿದರ್ಶನವನ್ನು ಮುಂದೆ ಉಲ್ಲೇಖಿಸಲಾಗಿದೆ. ಮಾತುಕತೆಯೊಂದನ್ನು ಧ್ವನಿಮುದ್ರಿಸಿ ಅದರಲ್ಲಿ, ಮೇಲೆ ಹೇಳಿದಂತೆ ಪದಗಳ ಬಳಕೆಯ ಪ್ರಮಾಣವನ್ನು ಲೆಕ್ಕ ಹಾಕಿ ಇಳಿಕೆಯ ಶ್ರೇಣಿಯೊಂದನ್ನು ರೂಪಿಸಲಾಯಿತು. Very, see, which, get, out ಎಂಬ ಐದು ಪದಗಳು ಈ ಶ್ರೇಣಿಯಲ್ಲಿ ಕ್ರಮವಾಗಿ 35, 45, 55, 65 ಮತ್ತು 75ನೇ ಸ್ಥಾನದಲ್ಲಿದ್ದವು. ಅವು ಬಳಕೆಯಾದ ಸಂಖ್ಯೆಗಳು ಕ್ರಮವಾಗಿ 836, 674, 563, 469 ಮತ್ತು 422 ಗುಣಲಬ್ಧಗಳು ಕನಿಷ್ಟ 29, 260 ರಿಂದ 31, 650 ಅಂದರೆ ನಿಯತಾಂಕವು ಬಹುಮಟ್ಟಿಗೆ ಒಂದೇ ಆಗಿದೆಯೆನ್ನಬಹುದು. (ಸುಮಾರು 30,000) ಈ ಸೂತ್ರವನ್ನು ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಒಂದು ಪದದ ಬಳಕೆಯ ಪ್ರಮಾಣವು ಅದು ಪಡೆಯುವ ಶ್ರೇಣಿ ಸಂಖ್ಯೆಯೊಡನೆ ವಿಲೋಮ ಸಂಬಂಧವನ್ನು ಹೊಂದಿರುತ್ತದೆ ಎನ್ನಬಹುದು ಅಥವಾ ಬಳಕೆಯ ಪ್ರಮಾಣ ಕಡಿಮೆಯಾದಂತೆಲ್ಲ ಶ್ರೇಣಿಯ ಕ್ರಮಾಂಕ ಹೆಚ್ಚಾಗುತ್ತಾ ಹೋಗುತ್ತದೆ.

ಜಿಫ್ ನಿರೂಪಿಸಿದ ಈ ಸೂತ್ರವನ್ನು ಮತ್ತೆ ಮತ್ತೆ ತಾಳೆ ನೋಡಲಾಗಿದೆ. ಅನಂತರದ ಪರಿಶೀಲನೆಗಳಿಂದ, ಬಳಕೆಯ ಪ್ರಮಾಣದ ಶ್ರೇಣಿಯಲ್ಲಿ ಅತಿ ಮೊದಲಿನ ಮತ್ತು ಅತಿ ಕೊನೆಯ ಸಂಖ್ಯೆಗಳಿಗೆ ಈ ಸೂತ್ರವನ್ನು ಅನ್ವಯಿಸಲು ಸಾಧ್ಯವಾಗುವುದಿಲ್ಲವೆಂದು ಗೊತ್ತಾಗಿದೆ. ಶ್ರೇಣಿಯ ನಡುವೆ ಬರುವ ಪದಗಳ ಮಟ್ಟಿಗೆ ಈ ನಿಯತಾಂಕ ಸೂತ್ರ ಬಹುಮಟ್ಟಿಗೆ ಸರಿಯಾಗಿರುತ್ತದೆ.

ಪದಗಳ ಬಳಕೆಯನ್ನು ಲೆಕ್ಕಿಸಿ ಜಿಫ್ ಇನ್ನೊಂದು ಸೂತ್ರವನ್ನು ಹೇಳಿದ್ದಾನೆ. ಪದಗಳ ದೀರ್ಘತೆ ಮತ್ತು ಅವುಗಳ ಬಳಕೆಯ ಪ್ರಮಾಣಗಳ ನಡುವೆ ವಿಲೋಮ ಸಂಬಂಧವಿದೆಯೆಂಬುದು ಆ ಸೂತ್ರ. ಅಂದರೆ ಹ್ರಸ್ವಪದಗಳ ಬಳಕೆ ಅಧಿಕ, ದೀರ್ಘ ಪದಗಳ ಬಳಕೆ ಕಡಿಮೆ. ಹ್ರಸ್ವ ಮತ್ತು ದೀರ್ಘತೆಯನ್ನು ಆಯಾ ಪದಗಳಲ್ಲಿರುವ ಅಕ್ಷರಗಳ ಸಂಖ್ಯೆಯಿಂದ ಗುರುತಿಸಲಾಗುತ್ತದೆ. ಈ ಸೂತ್ರವನ್ನು ಯುರೋಪಿನ ಭಾಷೆಗಳಿಗೆ ಅನ್ವಯಿಸಿ ತಾಳೆ ನೋಡಲಾಗಿದೆ.

ಜಿಫ್ ನಿರೂಪಿಸಿದ ಈ ಸಾಂಖ್ಯಿಕ ಸಂಗತಿಗಳು ಕುತೂಹಲಕಾರಿಯಾಗಿವೆ. ಆದರೆ ಈ ಮಾಹಿತಿಯ ಉಪಯುಕ್ತತೆ ಏನು? ಭಾಷೆಯ ಬಳಕೆಯಲ್ಲಿ ಬೇರೆ ಬೇರೆ ಘಟಕಗಳು ಆವರ್ತಗೊಳ್ಳುವ ಬಗೆ ಮತ್ತು ಈ ಆವರ್ತನ ಸ್ವರೂಪವನ್ನು ಬಹುಮಟ್ಟಿಗೆ ಲೆಕ್ಕಹಾಕಿ ಹೇಳಬಹುದಾದ ಸಾಧ್ಯತೆ ಇವೆರಡೂ ಜಿಫ್‌ಗೆ ಮುಖ್ಯವೆನಿಸಿದ್ದವು. ಏಕೆಂದರೆ ಒಂದು ಭಾಷಾರಚನೆ ಸಂವಹನಶೀಲವಾಗಲು, ಓದಿದ/ಕೇಳಿದವರಿಗೆ ಸುಲಭವಾಗಿ ಅರ್ಥವಾಗಲು, ಆ ಭಾಷೆಯಲ್ಲಿರುವ ವೈವಿಧ್ಯ ಮತ್ತು ಬಳಕೆಯಲ್ಲಿನ ಸಮರೂಪತೆಗಳ ನಡುವೆ ಸಮತೋಲನ ಸ್ಥಾಪಿತವಾಗಬೇಕು. ಅಂದರೆ ಭಾಷೆಯ ಎಲ್ಲ ಘಟಕಗಳೂ ಸಮಪ್ರಮಾಣದಲ್ಲಿ ಬಳಕೆಯಾಗುವುದು ಒಂದು ಅತಿಯಾದರೆ ಭಾಷೆಯ ರಚನೆಯಲ್ಲಿ ಕೆಲವು ಘಟಕಗಳು ಮಾತ್ರ ಅತ್ಯಧಿಕ ಪ್ರಮಾಣದಲ್ಲಿ ಬಳಕೆಯಾಗುವುದು ಇನ್ನೊಂದು ಅತಿ. ಇವೆರಡೂ ಉತ್ತಮ ಸಂವಹನಕ್ಕೆ ಅಡ್ಡಿ. ಜೀಫ್‌ನನ್ನು ಪ್ರೇರೇಪಿಸಿದ ಈ ಪ್ರಮೇಯವನ್ನು ಈಗ ಎಲ್ಲ ಭಾಷೆಗಳಿಗೆ ಮತ್ತು ವಿವಿಧ ಭಾಷಾ ಬಳಕೆಗಳ ಸಂದರ್ಭಗಳಿಗೆ ಅನ್ವಯಿಸಿ ನೋಡಬೇಕಾಗಿದೆ.