ಜಾನಪದ ಅಧ್ಯಯನ ವಿಭಾಗದ ಮುಖ್ಯಸ್ಥರೂ, ಕರ್ನಾಟಕ ವಿಶ್ವವಿದ್ಯಾಲಯದ ಕಲಾನಿಕಾಯದ ಡೀನರೂ, ಸಿಂಡಿಕೇಟ್ ಸದಸ್ಯರು ಹಾಗೂ ಆತ್ಮೀಯರೂ ಆದ ಪ್ರೊ.ಸೋಮಶೇಖರ ಇಮ್ರಾಪೂರ ಅವರೇ, ಈ ಸಮಾರಂಭದ ಮುಖ್ಯ ಅತಿಥಿಗಳೂ ಆತ್ಮೀಯರೂ ಆದ ಡಾ.ಬಿ.ಆರ್.ಹಿರೇಮಠ ಅವರೇ, ಡಾ.ಎ.ಮುರಿಗೆಪ್ಪ ಅವರೇ, ಡಾ.ಎಚ್.ಎಂ.ಮಹೇಶ್ವರಯ್ಯ ಅವರೇ, ಜಾನಪದ ಅಧ್ಯಯನ ವಿಭಾಗದ ಅಧ್ಯಾಪಕ ಮಿತ್ರತೇ ಪ್ರೀತಿಯ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಹಾಗೂ ಆಹ್ವಾನಿತ ಜಾನಪದಾಸಕ್ತರೆ.

ಬೆಳಗಿನಿಂದ ಇಲ್ಲಿಯವರೆಗೆ ಜಾನಪದದ ರಸದೌತಣವನ್ನು ನೀವೆಲ್ಲ ಅನುಭವಿಸಿದ್ದೀರಿ. ಪ್ರಬಂಧ ಮಂಡಿಸಿದ ಎಲ್ಲ ವಿದ್ವಾಂಸರೂ ತಮ್ಮ ತಮ್ಮ ವಿಷಯದ ಬಗೆಗೆ ಅಚ್ಚುಕಟ್ಟಾಗಿ ವಿಚಾರ ಮಂಡನೆ ಮಾಡಿ ನಮ್ಮ ನಿಮ್ಮೆಲ್ಲರನ್ನೂ ವಿಚಾರದಿಂದ ಬಾಗಿ ಬೀಗುವಂತೆ ಮಾಡಿದ್ದಾರೆ. ಇದಕ್ಕಾಗಿ ಪ್ರಥಮತಃ ಅವರೆಲ್ಲರನ್ನೂ ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ.

ಕರ್ನಾಟಕದಲ್ಲಿ ಜಾನಪದ ಅಧ್ಯಯನ ವೈಜ್ಞಾನಿಕ ತಳಹದಿಯ ಮೇಲೆ ಆರಂಭಗೊಂಡದ್ದು ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಮೂಲಕವಾದರೂ, ಅದು ಸಮ್ಮೇಳನದ ವಿಚಾರ ಸಂಕೀರ್ಣಗಳ ಮೂಲಕ ಪುಷ್ಠಿಗೊಂಡದ್ದು ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದಲ್ಲಿ ಎಂಬುದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಏಕೆಂದರೆ ಈವರೆಗೆ ಇಲ್ಲಿ ಇಪ್ಪತ್ತನಾಲ್ಕು ಇಂತಹ ಸಮ್ಮೇಳನಗಳು ಅದ್ದೂರಿಯಾಗಿ ನಡೆದು, ಆ ಸಂಬಂಧವಾದ ವಿಚಾರಗೋಷ್ಠಿಗಳು ನಡೆದಿದ್ದು ದಾಖಲೆಯನ್ನೇ ಸ್ಥಾಪಿಸಿದೆ ಎಂದು ಹೇಳಬಹುದು. ವಿಚಾರ ಸಂಕೀರ್ಣಕ್ಕೆ ಅದು ಆಯ್ಕೆ ಮಡಿಕೊಂಡಿರುವ ಒಂದೊಂದು ವಿಷಯವೂ ಆ ಕ್ಷೇತ್ರದಲ್ಲಿ ಪ್ರಥಮ ಬಾರಿಗೆ ಆ ವ್ಯಾಪ್ತಿಯಲ್ಲಿ ಚರ್ಚೆಗೆ ಒಳಗಾಗುತ್ತಿರುವುದಷ್ಟೇ ಅಲ್ಲ, ಸಾಮಾನ್ಯರ ಹಾಗೂ ಜಾನಪದ ವಿದ್ವಾಂಸರ ಗಮನವನ್ನು ಸೆಳೆದು ಜಾನಪದ ಜಗತ್ತಿನ ಬೃಹತ್ತು ಮಹತ್ತುಗಳ ಕಡೆಗೆ ಕಣ್ಣರಳಿಸಿ ನೋಡುವಂತೆ ಮಾಡಿತು. ಆಕಾಶ ಜಾನಪದ……………. ಮುಂತಾದ ವಿಷಯಗಳಂತೆ ಈ ಸಾರಿಯೂ ಅದು “ಪರಿಸರ ಮತ್ತು ಜನಪದ ಸಂಸ್ಕೃತಿ”ಯಂತಹ ವಿಷಯವನ್ನು ವಿಚಾರ ಸಂಕೀರ್ಣದಿಂದ ವಸ್ತುವನ್ನಾಗಿಸುವುದರ ಮೂಲಕ ತನ್ನ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿದೆ.

ಈಗ ವ್ಯಾವಹರಿಕವಾಗಿ ‘ಜಾನಪದ ವಿಭಾಗ’ ಕನ್ನಡ ಅಧ್ಯಯನ ಪೀಠದಿಂದ ಹೊರ ಬಂದಿದ್ದು, ಜಾನಪದ ಅಧ್ಯಯನ ವಿಭಾಗ ಎಂದು ಪ್ರತ್ಯೇಕಗೊಂಡಿದ್ದು ತನ್ನ ಚಟುವಟಿಕೆಗಳನ್ನು ಹೆಚ್ಚು ಸ್ವತಂತ್ರವಾಗಿ ಹಾಗೂ ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಅಭಿವ್ಯಕ್ತಿಸುವ ಹಕ್ಕನ್ನೂ ಅದು ಪಡೆದುಕೊಂಡಿದೆ. ಆದರೆ ವಾಸ್ತವವಾಗಿ ಕನ್ನಡ ಮತ್ತು ಜಾನಪದ ಬೇರೆ ಬೇರೆ ಅಲ್ಲವೇ ಅಲ್ಲ. ಅಷ್ಟೇ ಅಲ್ಲ ಸಮಾಜಶಾಸ್ತ್ರವಾಗಲಿ, ಮನಃಶಾಸ್ತ್ರವಾಗಲಿ, ಇತಿಹಾಸ ಭಾಷಾ ಶಾಸ್ತ್ರಗಳಾಗಲಿ ಅಥವಾ ಮಾನವಶಾಸ್ತ್ರ ಸಂಬಂಧವಾದ ಯಾವುದೊಂದು ವಿಷಯವೂ ಜಾನಪದದಿಂದ ಬೇರೆಯಾದದ್ದಲ್ಲ. ಅವೆಲ್ಲ ಪರಸ್ಪರ ಪೂರಕ ಪೋಷಕ. ಒಂದರ ಹೊರತು ನಿಜವಾದ ಅರ್ಥದಲ್ಲಿ ಮತ್ತೊಂದು ಪೂರ್ಣಗೊಳ್ಳಲು ಸಾಧ್ಯವಿಲ್ಲ. ಒಂದರ ನೆರವು ಮತ್ತೊಂದಕ್ಕೆ ಬೇಕಾಗುತ್ತದೆ. ಅನಿವಾರ್ಯ ಎನಿಸಲೂಬಹುದು. ಹೀಗಿರುವಾಗ ಎಲ್ಲ ಕೂಡಿ ಕೆಲಸ ಮಾಡಿದಾಗ ಅದರಿಂದ ದೊರೆಯುವ ಫಲ ನಿಜಕ್ಕೂ ಪೂರ್ಣ ಪ್ರಮಾಣದ್ದಾಗಿರಲು ಸಾಧ್ಯ. ಹೆಚ್ಚು ಪ್ರಯೋಜನವನ್ನುಂಟು ಮಾಡಲು ಸಾಧ್ಯ.

ವಿಚಾರಗೋಷ್ಠಿಗಳಲ್ಲಿ ಚರ್ಚೆ ಬೇಕಾಗುತ್ತದೆ. ಅದು ಬೆಳೆಯುತ್ತಿರುವ ವಿಷಯದ ಹಾಗೂ ವಿದ್ವತ್ತಿನ ಲಕ್ಷಣ. ಯಾರೋ ಎಂದೋ ಹೇಳಿದ ಮಾತೇ ಕೊನೆಯಾಗಲು ಸಾಧ್ಯವಿಲ್ಲ. ಆಗ ಆ ವಿಷಯ ಕೊನೆಗೊಂಡಂತೆ ವಿಚಾರಗೋಷ್ಠಿಗಳು ಅನಿವಾರ್ಯವೆನಿಸುವುದು. ಈ ಬಗೆಯಾದ ಪ್ರತಿಫಲವನ್ನು ಪಡೆಯುವುದಕ್ಕಾಗಿಯೇ ಡಾ.ಸೋಮಶೇಖರ ಇಮ್ರಾಪೂರ ಅವರು ಮಾತನಾಡುತ್ತ ಒಂದು ಮಾತನ್ನು ಹೇಳಿದರು. “ಒಬ್ಬರ ಚಿಂತನೆ ಸಾಲದು” ಎಂದು ಅದು ನಿಜವಾದ ಮಾತು. ನಮ್ಮ ಕಾವ್ಯ ಮೀಮಾಂಸೆಯಾಗಲಿ, ಕಾವ್ಯ ವಿಮರ್ಶೆಯಾಗಲಿ ಅಥವಾ ತತ್ವ ವಿಚಾರಗಳು ಯಾವುದೇ ಆಗಲಿ ಹಲವು ಚಿಂತಕರ ಫಲ. ಕಾಲದಿಂದ ಕಾಲಕ್ಕೆ ಬದಲಾದ ಚಿಂತನೆಗಳು ಆಯಾ ಪರಿಸರದ ಹಿನ್ನೆಲೆಯಲ್ಲಿ ಸೇರ್ಪಡೆಯಾಗಿ ಕೂಡಿಕೊಂಡೇ ಬಂದಿವೆ. ಜಾನಪದವೂ ಇದರಿಂದ ಹೊರತಾದದ್ದಲ್ಲ. ಎಲ್ಲಿಯೋ ಯಾರಿಂದಲೋ ಆರಂಭವಾದ ಚಿಂತನೆಯ ಎಳೆ ಹಲವು ಸಿದ್ಧಾಂತಗಳ ರೂಪದಲ್ಲಿ ಇನ್ನೂ ಬೆಳೆಯುತ್ತಲೇ ಇದೆ. ‘ಇಂಡೋ ಯುರೋಪಿಯನ್’, ಸಿದ್ಧಾಂತದ ಮೂಲಕ ಆರಂಭವಾಗಿ ಇತ್ತೀಚಿನ ರಾಚನಿಕ ಸಿದ್ಧಾಂತ, ಸಾಂದರ್ಭಿಕ ಸಿದ್ಧಾಂತ, ಪ್ರದರ್ಶಕ ಸಿದ್ಧಾಂತಗಳಂತಹ ಸಿದ್ಧಾಂತಗಳನ್ನು ಜಾನಪದ ಅಧ್ಯಯನ ಕ್ಷೇತ್ರಕ್ಕೆ ಕೊಡುತ್ತಲೇ ಬಂದಿದೆ.

ಪರಿಸರಕ್ಕೂ ಜನಪದಕ್ಕೂ ಜನಪದ ಸಂಸ್ಕೃತಿಗೂ ಇರುವ ಸಂಬಂಧ ಬಿಡಿಸಲಾಗದ್ದು ಅಳಿಸಲಗದ್ದು, ಪರಿಸರದ ಸೃಷ್ಟಿ ಜನಪದ ಹಾಗೂ ಜನಪದ ಸಂಸ್ಕೃತಿ, ಅದರ ಹೊರತಾಗಿ ಅವೆರಡರ ನಿರ್ಮಾಣ ಅಸಾಧ್ಯ. ಪರಿಸರಕ್ಕನುಗುಣವಾಗಿ ಪರಿಸರದ ಪ್ರಭಾವಕ್ಕನುಗುಣವಾಗಿ ಅದು ರೂಪುಗೊಳ್ಳುತ್ತದೆ ಹಾಗೂ ಪರಿವರ್ತನೆಗೊಳ್ಳುತ್ತದೆ. ಪರಿಸರದ ಪ್ರಭಾವಕ್ಕನುಗುಣವಾಗಿ ಪರಿವರ್ತನೆಯ ಪರಿಣಾಮವಿರುತ್ತದೆ. ಅದನ್ನು ಯಾರೂ ತಳ್ಳಿ ಹಾಕುವಂತಿಲ್ಲ, ತಿರಸ್ಕರಿಸುವಂತಿಲ್ಲ. ಪರಿಸರ ಬದಲಾವಣೆ ಕಾಲದ ಅಂತರದಲ್ಲಿ ಆಗುವಂತಹುದು. ಆದ್ದರಿಂದ ಸಾಂಸ್ಕೃತಿಕ ಬದಲಾವಣೆಯನ್ನು ಹಾಗೂ ಪರಿಸರದ ಪ್ರಭಾವನ್ನು ಯಾರೂ ನಿರ್ಲಕ್ಷಿಸುವಂತಿಲ್ಲ. ಪರಿಸರಾಧಾರಿತವಾಗಿಯೇ ಬುಡಕಟ್ಟೂ ಸಂಸ್ಕೃತಿ, ಗ್ರಾಮೀಣ ಸಂಸ್ಕೃತಿ ಹಾಗೂ ನಾಗರೀಕ ಸಂಸ್ಕೃತಿ ಮುಂತಾದವು ತಲೆ ಎತ್ತುವುದು. ಬುಡಕಟ್ಟು ಸಂಸ್ಕೃತಿ ತೀರ ಮುಗ್ಧ ಸಂಸ್ಕೃತಿ. ನೋಡುವುದಕ್ಕೆ ಒರಟಾಗಿ ಕಂಡರೂ ಶುದ್ಧ ಸಂಸ್ಕೃತಿ ನಂತರದ ಗ್ರಾಮೀಣ ಸಂಸ್ಕೃತಿ. ಸ್ವಲ್ಪ ಅದಕ್ಕಿಂತ ಭಿನ್ನವಾದ ಬದಲಾದ ಸಂಸ್ಕೃತಿ ಗ್ರಾಮೀಣ ಸಂಸ್ಕೃತಿ ಬುಡಕಟ್ಟು ಸಂಸ್ಕೃತಿಗೆ ದೂರವಾದ. ಆದರೆ ವ್ಯಾಪಾರಿ ಸಂಸ್ಕೃತಿಗೆ ಹತ್ತಿರವಾದ ಸಂಬಂಧವುಳ್ಳದ್ದು ಬುಡಕಟ್ಟು ಸಂಸ್ಕೃತಿಯ ಅಧ್ಯಯನದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದ ವೆರಿಯರ್ ಎಲ್ವಿನ್ ಅವರು ಹೇಳುತ್ತಿದ್ದರಂತೆ ಸತ್ತಾಗ ಸ್ವರ್ಗ ಇದೆಯೋ ಇಲ್ಲವೋ ನನಗೆ ತಿಳಿಯದು, ಆದರೆ ಬದುಕಿದ್ದಾಗ ಆದಿವಾಸಿ ಬದುಕಿನಲ್ಲಿ ಅದನ್ನು ಕಂಡೆ, ಇದರ ನಿಜವಾದ ಅರ್ಥ ಬದುಕಿದ್ದಾಗ ಬುಡಕಟ್ಟು ಜನರ ಪ್ರಕೃತಿ ನಡುವಣ ನೈಜ ಬದುಕು, ಸಂಸ್ಕೃತಿ ಅವರ ಮನಸ್ಸನ್ನು ಸೂರೆಗೊಂಡಿರಬೇಕು. ಪ್ರಕೃತಿ ಸಹಜವಾದ ಕೃತಕ ರಹಿತವಾದ ಅವರೊಂದಿಗಿನ ಬದುಕು ಅವರಿಗೆ ಪ್ರಿಯವೆನಿಸಿರಬೇಕು.

ಪರಿಸರ, ಬದುಕು ಹಾಗೂ ಸಂಸ್ಕೃತಿ ಈ ಮೂರು ಚಲನಶೀಲವಾದವುಗಳೇ. ಅದು ಒಂದನ್ನೊಂದು ಅವಲಂಬಿಸಿ ಉಂಟಾಗುವಂತಹುದು. ಒಂದರ ಕಾರಣದಿಂದ ಮತ್ತೊಂದರಲ್ಲಿ ಬದಲಾವಣೆಯನ್ನು ಕಾಣುತ್ತೇವೆ. ಅದು ಪ್ರಜ್ಞಾಪೂರ್ವಕವಾಗಿಯೂ ಸಂಭವಿಸಬಹುದು. ಇಲ್ಲವೇ ಅಪ್ರಜ್ಞಾಪೂರ್ವಕವಾಗಿಯೂ ಉಂಟಾಗಬಹುದು. ಕಾಲದ ಅಂತರದಲ್ಲಿ ಉಂಟಾಗುವ ಈ ಬಗೆಯ ಸ್ಥಿತ್ಯಂತರ ಅನಿವಾರ್ಯವಾದದ್ದೆಂದೇ ಹೇಳಬಹುದು. ಪ್ರಕೃತಿಯ ಕಾರಣದಿಂದಲೇ ಉಂಟಾಗುವ ಪರಿಸರ ಬದಲಾವಣೆ ಎಂದಿನ ಬದುಕನ್ನು ಬದಲಾಯಿಸಿ ಹೊಸ ಬದುಕಿಗೆ ದಾರಿಮಾಡಿ ಕೊಡಬಹುದು. ಪ್ರಕೃತಿಯ ವಿಕೋಪವೋ ಅಥವಾ ಮತ್ತೊಂದೋ ಅವರ ಜೀವನ ಕ್ರಮವನ್ನೋ ಬದಲಾಯಿಸಲು ಕಾರಣವಾಗಬಹುದು. ಆಗ ಸಂಸ್ಕೃತಿ ಎಂದಿನಂತೆಯೇ ಸ್ಥಿರವಾಗಿ ಉಳಿದಿರಲು ಸಾಧ್ಯವಾಗುವುದಿಲ್ಲ. ಸ್ವಲ್ಪವಾದರೂ ತನ್ನ ಸ್ಥಿತಿಯನ್ನು ಬದಲಾಯಿಸಿಕೊಳ್ಳುತ್ತದೆ. ಕಾಡು ಕುರುಬರಾಗಲಿ, ಜೇನು ಕುರುಬರಾಗಲಿ ಅವರುಗಳು ತಮ್ಮ ಮೂಲ ಸಂಸ್ಕೃತಿಯನ್ನು ಜೀವನ ಕ್ರಮವನ್ನು ಎಷ್ಟೇ ಪ್ರೀತಿಸಿದರೂ, ಗೌರವಿಸಿದರೂ ಬದಲಾದ ಪರಿಸರದಲ್ಲಿ ಅವುಗಳನ್ನು ಬಿಗಿ ಹಿಡದು ಉಳಿಸಿಕೊಳ್ಳುವುದು ಕಷ್ಟವಾಗುತ್ತದೆ.

‘ಪರಿಸರ ಸಂಸ್ಕೃತಿ’ ಸಂದರ್ಭದ ಹಾಗೂ ಅನಿವಾರ್ಯತೆಯ ಹಿನ್ನೆಲೆಯಲ್ಲಿ ಹುಟ್ಟಿಕೊಂಡದ್ದು, ಮಾನವ ಸಹಜವಾಗಿ ಪ್ರಕೃತಿ ಪ್ರೇಮಿ, ಅಲ್ಲಿಯ ಒಡನಾಟದಲ್ಲಿಯೇ ಅವನು ತನ್ನ ಬದುಕನ್ನು ಹಾಗೂ ಸಂಸ್ಕೃತಿಯನ್ನು ರೂಪಿಸಿಕೊಂಡದ್ದನ್ನು ನಾವು ಕಾಣುತ್ತೇವೆ. ಸಂಸ್ಕೃತಿ ಸಮಾಜ ರೂಪುಗೊಳ್ಳುವುದೇ ಪರಿಸರದ ಕಾರಣದಿಂದ ಹಾಗೂ ಪ್ರಭಾವದಿಂದ ಅವುಗಳಿಗನುಗುಣವಾಗಿಯೇ ಅವುಗಳ ಸ್ವರೂಪ ಬದಲಾಗಿರುತ್ತದೆ. ಅವರವರ ದೇವರ ಕಲ್ಪನೆಯಾಗಲಿ, ಸಂಸ್ಕೃತಿಯ ಆಚರಣೆಗಳಾಗಲಿ, ಬದುಕಿನ ನಂಬಿಕೆಗಳಾಗಲಿ ಊಟೋಪಚಾರಗಳು, ಉಡುಗೆ ತೊಡುಗೆಗಳು, ಹಾಡು ಕುಣಿತಗಳು ಪ್ರತಿಯೊಂದು ಪರಿಸರದಿಂದ ಪ್ರೇರಿತವಾದವುಗಳೇ. ಸಂಸ್ಕೃತಿಯ ಭಿನ್ನತೆಗೆ ಪರಿಸರವೇ ಮುಖ್ಯ ಕಾರಣ, ಸಂಸ್ಕೃತಿಯ ಮಾದರಿಗಳು ಸೃಷ್ಟಿಯಾಗುವುದು ಈ ಕಾರಣದಿಂದಲೇ. ಸಂಸ್ಕೃತಿಯ ಒಳರಚನೆಯಲ್ಲಿ ನಾವು ಕಾಣುವುದೂ ಆಯಾ ಪರಿಸರದ ಹಿನ್ನೆಲೆಯಲ್ಲಿ ಸೃಷ್ಟಿಯಾಗಿ ಸ್ಥಾನ ಪಡೆದ ಅಂಶಗಳನ್ನೇ ವಸ್ತುಗಳನ್ನೇ ಅವುಗಳು ಅಲ್ಲೇ ಗಟ್ಟಿಯಾಗಿ ಸ್ಥಾನ ಪಡೆದಿದ್ದಷ್ಟು ಕಾಲವೂ ಆ ಸಂಸ್ಕೃತಿ, ಅವರ ಬದುಕು ಅಷ್ಟೇ ಗಟ್ಟಿಯಾದದ್ದಾಗಿರುತ್ತದೆ, ಅಚಲವಾಗಿರುತ್ತದೆ. ಅವುಗಳ ಮೇಲೆ ಪರಿಸರದ ಒಡೆತನಗಳು ಬೀಳಲಾರಂಬಿಸಿದಂತೆ ಇಲ್ಲವೆ ಪರಿಸರದ ಮೇಲೆ ಹೊರದಾಳಿಯ ಒಡೆತ ಹೆಚ್ಚಾದಂತೆ ಇವೆಲ್ಲವೂ ಅಸ್ಥಿರಗೊಳ್ಳುತ್ತವೆ.

ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಲಿ
ಎಳ್ಳು ಜೀರಿಗೆ ಬೆಳೆಯೋ ಭೂತಾಯ
ಎದ್ದೊಂದು ಗಳಿಗೆ ನೆನೆದೇನು

ಎಂದು ಅದಕ್ಕೆ ತನ್ನನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡಿದ್ದ ರೈತ ಇಂದು ಅದನ್ನೇ ಸಂಪೂರ್ಣವಾಗಿ ಮುಂದುವರೆಸಿಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ.

ತೋಟಕ್ಕೆ ಹೋದಣ್ಣ ಊಟಕ್ಕೆ ಬರಲಿಲ್ಲ
ತೋಟದ ಹೂವು ತಲೆತುಂಬ ಮುಡಕೊಂದು
ಊಟದಂಬಲವ ಮರೆತಾನೊ

ಈ ಬಗೆಯ ದೃಶ್ಯಗಳನ್ನು ನಾವಿಂದು ಕಾಣುವುದು ಸಾಧ್ಯವಿಲ್ಲ.

ಭೌತಿಕ ಪರಿಸರದ ನಾಶ ಇಂದು ಜನಜೀವನದ ಮೇಲೆ ಹೆಚ್ಚು ಪ್ರಭಾವ ಬೀರಿದೆ. ಪರಿಣಾಮವನ್ನು ಉಂಟು ಮಾಡಿದೆ. ಪರಿಸರದಿಂದ ಬದುಕನ್ನು ರೂಪಿಸಿಕೊಳ್ಳುವ ಕೃತಕ ವಾತಾವರಣ ಇಂದು ಆಧುನಿಕತೆಯ ಪ್ರಭಾವದಿಂದ ಉಂಟಾಗುತ್ತಿದೆ. ಕಾಡಿನ ನಾಶದೊಂದಿಗೆ ಅಪೂರ್ವ ಸಂಸ್ಕೃತಿಯೊಂದು ನಾಶವಾಗುತ್ತಿದೆ. ಅದನ್ನು ಉಳಿಸಿಕೊಳ್ಳುವ ಪ್ರಯತ್ನವನ್ನು ಯರೂ ಮಾಡಿದಂತೆ ತೋರುತ್ತಿಲ್ಲ. ಆಧುನಿಕತೆಯ ಹೆಸರಿನಲ್ಲಿ ಕಾಡನ್ನೆಲ್ಲ ಕಡಿದು ನಾಡನ್ನು ಮಾಡುತ್ತಿರುವಂತೆ, ಮರಗಳನ್ನು ಕಡಿದು ಸೌಧಗಳನ್ನು ಕಟ್ಟುತ್ತಿರುವಂತೆಯೇ ಆ ಪರಿಸರದ ನಡುವೆಯೇ ಬದುಕುತ್ತಿರುವ ಸಂಸ್ಕೃತಿಯೊಂದನ್ನು ಬಲಿ ತೆಗೆದುಕೊಳ್ಳುತ್ತಿರುವುದನ್ನು ಯಾರೋ ಗಮನಿಸುತ್ತಿಲ್ಲ. ಇದು ಬುಡಕಟ್ಟು ಸಂಸ್ಕೃತಿಗಷ್ಟೇ ಅನ್ವಯಿಸುವ ಮಾತಲ್ಲ. ಗ್ರಾಮೀಣ ಸಂಸ್ಕೃತಿಯೂ ಆ ಹಲ್ಲೆಗೆ ಒಳಗಾಗುತ್ತಿದೆ. ನಗರಾಕರ್ಷಣೆ ಅವರನ್ನು ಅತ್ತ ಕಳೆದುಕೊಳ್ಳುತ್ತಿದೆ. ಈಗ ಪ್ರಾಧ್ಯಾನ್ಯತೆ ಪಡೆದುಕೊಳ್ಳುತ್ತಿರುವುದು ನಗರ ಸಂಸ್ಕೃತಿ ಅಥವಾ ವ್ಯಾಪಾರಿ ಸಂಸ್ಕೃತಿ ಒಂದೇ ಅದು ಸ್ಥಿರವೆಂದೇನೂ ಅಲ್ಲ, ಏಕೆಂದರೆ ಅಸ್ಥಿರತೆಯೇ ಬದುಕಿನ ಮುಖ್ಯ ಲಕ್ಷಣ.

ಬಾಗಾದಿ ಬಲಕಿರಲಿ ವೈರಿತಾನೆಡಕಿರಲಿ
ಅಪ್ಪ ನಿನ ಗುಡಿ ಎದುರಿರಲಿ ನನ್ನಪ್ಪ
ತಪ್ಪದೆ ಬರುವೇನು ನಿನ ಗುಡಿಗೆ

ಈ ಭಾವನೆಗಳು, ಆಚರಣೆಗಳು ವ್ಯಾಪಾರೀ ಸಂಸ್ಕೃತಿಯಲ್ಲಿ ಕಾಣಲು ಸಾಧ್ಯವಿಲ್ಲ. ಕಲ್ಲು ಕೊಟ್ಟವ್ವನಿಗೆ ಎಲ್ಲ ಭಾಗ್ಯವು ಬರಲಿ,ಪಲ್ಲಕ್ಕಿ ಮೇಲೆ ಮಗ ಬರಲಿ, ಮನೆಯಾನ ಮಲ್ಲಿಗೆ ಮುಡಿದ ಸೊಸೆ ಇರಲಿ, ಇಂತಹ ಮುಗ್ಧ ಮುಕ್ತ ನಿಷ್ಕಲ್ಮಷ ಹೃದಯಗಳು ಹೊಸ ಪರಿಸರದಲ್ಲಿ ಸೃಷ್ಟಿಯಾಗಲಾರವು. ಬೆಳೆದು ಉಳಿಯರಾವು. ಅವಕ್ಕೆಲ್ಲ ಬೇಕಾದದ್ದು ಅಷ್ಟೇ ಪ್ರಕೃತಿ ಸಹಜವಾದ ನಿರ್ಮಲ ವಾತಾವರಣ.

ಇವೆಲ್ಲದವರ ಅರ್ಥ ಬದಲಾವಣೇ ಬೇಕಿಲ್ಲ ಎಂದಲ್ಲ. ಪ್ರಗತಿ ವಿರೋಧಿ ಎಂದೂ ಅಲ್ಲ, ಸಹಜ ಬದಲಾವಣೆ, ವಿವೇಕಯುತ ಬದಲಾವಣೆಯ ಅನಿವಾರ್ಯತೆ ಇದೆ ಎಂಬುದು ಯಾವುದೇ ಪರಿಸರವನ್ನು ಇದ್ದಕ್ಕಿದ್ದಂತೆಯೇ ಸಂಪೂರ್ಣವಾಗಿ ತಿರುವುಮುರುವು ಮಾಡುವುದರ ಜೊತೆಯಲ್ಲಿಯೇ ಪರಂಪರೆಯಿಂದ ಬಂದ ಅಪೂರ್ವ ಸಂಸ್ಕೃತಿ ವಿನಾಶಕ್ಕೂ ನಾವು ಕಾರಣವಾಗುತ್ತಿದ್ದೇವೆ ಎಂಬುದನ್ನು ಮರೆಯಬಾರದು. ಅಂತಹ ಸಂಸ್ಕೃತಿಗಳ ನಾಶದಿಂದ ಅವರಲ್ಲಿದ್ದ ಸಹಬಾಳ್ವೆಯ, ಸಾಮರಸ್ಯದ ಬದುಕಿನ ಅಪೂರ್ವ ಶಕ್ತಿಯೊಂದನ್ನು ನಾವು ಕಳೆದುಕೊಳ್ಳುತ್ತಿದ್ದೇವೆ. ಜನಪದ ಕತೆಗಳಲ್ಲಿ ಬರುವ ಪ್ರತಿಯೊಂದು ಸಂದರ್ಭವೂ ನಮಗೆ ಎಚ್ಚರಿಕೆಯ, ಅದರ ಅರಿವಿನ ಘಟನೆಗಳು ಎಂಬುದನ್ನು ನಾವು ಮರೆತಿದ್ದೇವೆ. ಜನಪದ ಕತೆಗಳಲ್ಲಿ ಕಷ್ಟದಲ್ಲಿದ್ದ ಒಬ್ಬ ವ್ಯಕ್ತಿಗೆ ಸಹಾಯಕವಾಗಿ ಬರುವ ಪ್ರತಿಯೊಂದು ಪ್ರಾಣಿಯೂ, ಪಕ್ಷಿಯೂ ಮೊದಲು ಅವನಿಂದ ಸಣ್ಣ ಸಹಾಯವೊಂದನ್ನು ಪಡೆದದ್ದೇ ಆಗಿರುತ್ತದೆ. ನಂತರ ಮುಂದೆಂದೋ ಆ ವ್ಯಕ್ತಿ ಕ್ಲಿಷ್ಟ ಪರಿಸ್ಥಿತಿಯಲ್ಲಿ ಜೀವ ಭಯದಲ್ಲಿದ್ದಾಗ ಅಲ್ಲಿಯ ಇರುವೆಯೋ ಅಥವಾ ಮತ್ತಿನ್ನಾವ ಪಕ್ಷಿಯೋ ಅವನಿಗೆ ನೆರವಗಿ ಹಸನಾದ ಬದುಕಿಗೆ ಕಾರಣವಾಗುತ್ತದೆ. ಅವೆಲ್ಲ ಬರಿಯ ಬುರುಡೆಯ ಕತೆಗಳಲ್ಲ. ಕೂಡಿ ಬಾಳುವ, ಕೂಡಿ ಕಟ್ಟುವ, ಕೂಡೂ ಬದುಕುವ ಆಶಯವನ್ನು ಹೊತ್ತವುಗಳು. ಜನಪದ ಸಂಸ್ಕೃತಿಯ ಮೂಲ ತಿರುಳೇ ಇದು. ಒಂದರ್ಥದಲ್ಲಿ ಪರಿಸರ ವಿನಾಶ. ಸಾಮರಸ್ಯದ ಬದುಕಿನ ವಿನಾಶವೇ ಆಗಿದೆ. ಇಲ್ಲಿ ಎಸ್ಟೇಟ್ ಸಂಸ್ಕೃತಿ ಯಜಮಾನ ಸಂಸ್ಕೃತಿ, ಹೈಟೆಕ್ ಸಂಸ್ಕೃತಿ ಮುಂತಾದ ಮಾತುಗಳು ಬಂದವು. ಇವೆಲ್ಲವೂ ಪರಿಸರ ಬದಲಾವಣೆಯ ಕಾರಣದಿಂದ ಹುಟ್ಟಿಕೊಂಡವುಗಳು ಎಂಬುದು ನಿಜ. ಸ್ವಲ್ಪ ಮಟ್ಟಿಗೆ ಅವೆಲ್ಲವೂ ಅನಿವಾರ್ಯ ಎಂಬುದು ನಿಜ.

ಆದರೆ ಅವುಗಳ ಪರಿಣಾಮಗಳ ಬಗ್ಗೆ ನಾವಿಂದು ಹೆಚ್ಚು ಆಲೋಚಿಸಬೇಕಾಗಿದೆ. ಎಚ್ಚರ ವಹಿಸಬೇಕಾಗಿದೆ. ಹಾಗಿಲ್ಲದೆ ಹೋದರೆ, ಅಲ್ಪ ಕಾಲದಲ್ಲಿಯೇ ಎಲ್ಲ ಸಂಸ್ಕೃತಿಗಳು ಆಟಂಬಾಂಬ್ ಸೃಷ್ಟಿಸುವ ಸಂಸ್ಕೃತಿಗಳಾಗಿ ಬೆಳೆದು ಇಡೀ ವಿಶ್ವದ ವಿನಾಶಕ್ಕೆ ಕಾರಣವಾಗಿ ಮತ್ತೆ ಹೊಸ ಸಂಸ್ಕೃತಿಯ ಹುಟ್ಟಿಗೆ ವೇದಿಕೆಯನ್ನು ನಿರ್ಮಿಸುವಂತಾಗುತ್ತದೆ. ಅದಕ್ಕೆ ಅವಕಾಶವಾಗದಿರಲಿ ಎಂಬುದಷ್ಟೇ ನಮ್ಮ ನಿಮ್ಮೆಲ್ಲ ಪ್ರಾರ್ಥನೆ ಹಾಗೂ ಪ್ರಯತ್ನ ಆಗಬೇಕು.

ಇಂತಹ ವಿಚಾರ ಸಂಕಿರಣಗಳು ಅದಕ್ಕೆ ನೆರವಾಗುತ್ತವೆ. ಆ ಎಚ್ಚರವನ್ನು ಉಂಟುಮಾಡುತ್ತವೆ ಎಂಬುದು ನನ್ನ ನಂಬಿಕೆ. ಅತ್ಯುಪಯುಕ್ತವಾದ ಈ ವಿಚಾರಸಂಕಿರಣವನ್ನು ಯೋಜಿಸಿದ ಆತ್ಮೀಯರಾದ ಪ್ರೊ.ಸೋಮಶೇಖರ ಇಮ್ರಾಪೂರ ಅವರನ್ನು ಹಾಗೂ ಅದಕ್ಕೆ ಕೈಜೋಡಿಸಿ ನೆರವಾದ ಎಲ್ಲರನ್ನೂ ಈ ಸಂದರ್ಭದಲ್ಲಿ ಮತ್ತೊಮ್ಮೆ ಹೃತ್ಪೂರ್ವಕವಾಗಿ ಅಭಿನಂದಿಸಿ ನನ್ನ ಮಾತುಗಳನ್ನು ಮುಗಿಸುತ್ತೇನೆ ನಮಸ್ಕಾರ.