ಸಂಸ್ಕೃತಿವಂತನಾದ ಇವತ್ತಿನ ಮನುಷ್ಯ ಬೌದ್ಧಿಕವಾಗಿ ಏನಾದರೂ ಬೆಳೆದಿದ್ದಾನೆಂದರೆ ಇವನ ಅಭಿವೃದ್ಧಿಯ ಬೇರು ಪ್ರಾಚೀನ ಕಾಲದ ಮಾನವ ಅಲ್ಪಸ್ವಲ್ಪ ಯೋಚನೆಗಳ-ಕಲ್ಪನೆಗಳ-ಆಚರಣೆ ಮತ್ತು ಸಂಪ್ರದಾಯಗಳವರೆಗೆ ವ್ಯಾಪಿಸಿದೆ ಎಂಬುದೇ ನನ್ನ ಭಾವನೆ. ಅಂದರೆ ಆದಿಮಾನವನ ಬುದ್ಧಿ ಪ್ರಬುದ್ಧಾವಸ್ಥೆಯಲ್ಲಿತ್ತು ಎಂದರ್ಥವಲ್ಲ. ಕಾಲದ ಅಂತರದಿಂದ ಹೇಳಿದ ಮಾತಿದು ಅಷ್ಟೆ. ಅಂದಿನ ಮನುಷ್ಯ ಬೌದ್ಧಿಕವಾಗಿ ಸಮರ್ಥನಲ್ಲದಿದ್ದರೂ ಅವನು ಪ್ರಕೃತಿಯಲ್ಲಿ ತನ್ನಿಷ್ಟದಂತೆ ನಡೆಯುವ ಸ್ವಾತಂತ್ರ್ಯವನ್ನು ಗಳಿಸಿಕೊಂಡಿದ್ದ. ಪ್ರಕೃತಿಯಲ್ಲಿ ಗಿಡ-ಮರ=ಬಳ್ಳಿ-ಪ್ರಾಣಿಗಳೊಂದಿಗೆ ತನ್ನ ಗೆಳೆತನವನ್ನು ಬೆಳೆಸಿಕೊಂಡಿದ್ದ. ಪ್ರಕೃತಿದತ್ತವಾದ- ಕೌಟುಂಬಿಕವಾದ ಇಂಥ ಹೊಂದಾಣಿಕೆ ಆರಂಭದಲ್ಲಿ ಅವನಿಗೆ ಸಾಧ್ಯವಾದುದರಿಂದಲೇ ಪ್ರಕೃತಿಯಲ್ಲಿ ನಡೆಯುವ ಪ್ರತಿಯೊಂದು ಕಾರ‍್ಯಚರಣೆಗಳನ್ನು  ಕಂಡುಕೊಳ್ಳಲು ಸಾಧ್ಯವಾಯಿತು. ಇಲ್ಲದಿದ್ದರೆ ಆಗಿನ ಮನುಷ್ಯ ಆದಿಮಾನವನಾಗಿಯೇ ಉಳಿಯುತ್ತಿದ್ದ. ಪರಿಸರ ಪ್ರಜ್ಞೆಯಿಲ್ಲದೆ-ಬುದ್ಧಿ ವಿಕಾಸವಿಲ್ಲದ ಆದಿಮಾನವ ಇಂದಿನ ಮನುಷ್ಯನ ಮಟ್ಟವನ್ನು ಮುಟ್ಟಲು ಕಷ್ಟವಾಗುತ್ತಿತ್ತು. ತನ್ನ ಸುತ್ತ ಮುತ್ತ ಸಂಚರಿಸುವ ಪ್ರಾಣಿಗಳ, ಹಾರಾಡುವ-ಕೂಗುವ  ಪಕ್ಷಿಗಳ ವರ್ತನೆಗಳು ಆದಿಮಾನವನಿಗೆ ಆಶ್ಚರ‍್ಯಕರವಾಗಿ ಕಂಡವು. ಇವನ ಬುದ್ಧಿ ವಿಕಾಸದ ಕಸರತ್ತಿಗೆ ಅವು ಕಾರಣವಾದುವು. ಹೀಗೆ ಪ್ರಪಂಚದ ಅನೇಕ ವಿಷಯಗಳು ಅವನಿಗೆ ಆಶ್ಚರ್ಯವನ್ನು ತಂದೊಡ್ಡಿದವು. ಕಣ್ಣಿಗೆ ಕಾಣುವ ಸೂರ್ಯ, ಚಂದ್ರ, ಗ್ರಹ, ನಕ್ಷತ್ರ, ಮೋಡ, ಗಾಳಿ, ಕಾಮನಬಿಲ್ಲು – ಮೊದಲಾದವುಗಳ ಬಗೆಗೆ ತನ್ನ ಕುತೂಹಲ ವ್ಯಕ್ತಪಡಿಸುತ್ತ ಬಂದ. ಇವುಗಳನ್ನು ಕಂಡ ಮೇಲೆ ತನ್ನಲ್ಲಿ ಉದ್ಭವವಾದ ಒಂದು ನಮೂನೆಯ ಚೇತನದಿಂದ ಅವುಗಳಿಗೂ ತನಗೂ ಯಾವುದೋ ಸಂಬಂಧವಿರಬೇಕು ಎಂದು ಭಾವಿಸಿಬಿಟ್ಟ. ಜೊತೆಗೆ ಅವುಗಳಿಂದ ತನಗೇನೋ ಪ್ರಯೋಜನವಿರಬೇಕು ಎಂದೂ ನಂಬಿದ. ಇಂಥ ನಂಬಿಕೆ-ಕಲ್ಪನೆಗಳ ಹಿನ್ನೆಲೆಯಲ್ಲಿ ಅವನಲ್ಲಿ ಒಂದು ರೀತಿಯ ಶೋಧನಾತ್ಮಕ ಪ್ರವೃತ್ತಿ ಸ್ಫೋಟವಾಯಿತು. ಆಗ ಮನಸ್ಸಿಗೆ ಬಂದಂತೆ ಚಿಂತಿಸಿದ. ಸಕಾಲಕ್ಕೆ ಸರಿಯಾದ ಉತ್ತರ ಬುದ್ಧಿಗೆ ಹೊಳೆಯದಿದ್ದಾಗ ಕಲ್ಪನೆಗಳ ಬೆನ್ನು ಹತ್ತಿದ. ಹಾಗಾಗಿ ಪ್ರಕೃತಿಯಲ್ಲಿನ ಪ್ರತಿಯೊಂದು ವಿಷಯವೂ ಅವನ ಶಾಲೆ-ಕಾಲೇಜು -ವಿಶ್ವವಿದ್ಯಾಲಯ ಗತಿ, ಮತಿ, ಆಯ ಎಲ್ಲವೂ ಆಯಿತು. ಪ್ರಪಂಚ ಎಲ್ಲ ಆಗುಹೋಗುಗಳಿಗೆ ಉತ್ತರ ಕಂಡುಕೊಳ್ಳಲು ಪ್ರಕೃತಿಯೇ ಸಾಂಸ್ಕೃತಿಕ ಕೇಂದ್ರವೂ ಆಗಿಬಿಟ್ಟಿತು. ಭಯಂಕರ ಬಿರುಗಾಳಿ ಒತ್ತಡಕ್ಕೆ ಸಿಲುಕಿ ಅದರ ಅನುಭವವನ್ನು ಪಡೆದ. ಸೂರ‍್ಯ-ಚಂದ್ರ, ಗ್ರಹಣ, ನಕ್ಷತ್ರ ಪುಂಜ, ಆಕಾಶಗಂಗೆ- ಇವುಗಳನ್ನು ಕಂಡು ಕಣ್‌ಮನ ಸೆಳೆಯುವ ಪ್ರಾಕೃತಿಕ ಸಂಗತಿಗಳಿಗೆ ತನ್ನದೇ ಆದ ರೀತಿಯಲ್ಲಿ ಕಾರಣಗಳನ್ನು ಹುಡುಕಿ ತನಗಿಷ್ಟ ಬಂದಂತೆ ತನ್ನ ಸಮೀಪವರ್ತಿಗಳಿಗೆ ವರ್ಣಿಸುತ್ತ ಬಂದ. ಕೇಳಿದ ಜನ ಅವುಗಳನ್ನೆಲ್ಲ ನಿಜವೆಂದೇ ಭಾವಿಸಿದರು. ಜನರ ಬಾಯಿಂದ ಬಾಯಿಗೆ ಹರಡಿದ ಈ ಜನಪದ ನಂಬಿಕೆ, ಆಚರಣೆ, ಸಂಪ್ರದಾಯಗಳು ಇಂದಿಗೂ ಭದ್ರವಾದವು. ಮನುಷ್ಯನ ಬದುಕಿನ ಬೆನ್ನೆಲುಬುಗಳಾದವು.

ಮನುಷ್ಯನಿಗೆ ಆಶ್ಚರ್ಯಕರವಾಗಿ ಕಂಡ ಆಕಾಶ ಕಾಯಗಳಂತೂ ಹಲವಾರು ಕಥೆ ಕಾದಂಬರಿಗಳಿಗೆ ವಸ್ತುವಾಗಿ ಬಿಟ್ಟಿವೆ. ಸಪ್ತರ್ಷಿ ಮಂಡಲ, ಕೃತಿಕಾ ಪುಂಜ, ರಾಶಿ ಚಕ್ರ, ಮಳೆ ನಕ್ಷತ್ರಗಳು, ಧ್ರವ ನಕ್ಷತ್ರಗಳು, ನವಗ್ರಹಗಳು, ರಾಹುಕೇತುಗಳು, ಚಂದ್ರ, ಸೂರ‍್ಯ-ಇತ್ಯಾದಿಗಳು ಸುತ್ತ ಒಂದಕ್ಕೊಂದು ಒಂದೊಂದು ರೀತಿಯ ವೈವಿಧ್ಯಮಯವಾದ ಪುರಾಣಗಳು ಹುಟ್ಟಿಕೊಂಡಿರುವುದುಂಟು. ಪುರಾಣದ ಮುಸುಕನ್ನು ಹೊದ್ದ ಈ ಆಕಾಶಕಾಯಗಳೆಲ್ಲವೂ ಮಾನವ ಕಷ್ಟ, ಸುಖ, ದುಃಖ ದುಮ್ಮಾನಗಳನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿರುತ್ತವೆಂದು ಮನುಷ್ಯ ಭಾವಿಸಿದ್ದೂ ಉಂಟು. ನಮ್ಮ ನಾಡಿನಲ್ಲಿ ಮದುವೆಯ ಗಂಡು ಹೆಣ್ಣುಗಳಿಗೆ ಅರುಂಧತಿ ನಕ್ಷತ್ರವನ್ನು ತೋರಿಸುವ ಪದ್ಧತಿ ಈ ಮಾತಿಗೆ ಉದಾಹರಣೆಯಾಗಿದೆ ಎಂದು ಭಾವಿಸಿರುವೆ. ಇಂಥ ಎಷ್ಟೋ ಆಚರಣೆಗಳು ನಮ್ಮ ಸುತ್ತಮುತ್ತ ಇವೆ. ಧೂಮಕೇತು ಹಾರಿ ಹೋದ ವರ್ಷ ಪ್ರಪಂಚದ ಯಾವುದೋ ಭಾಗಕ್ಕೆ ಕ್ಷಾಮ ಬರುತ್ತದೆಂದೂ ಪ್ರಮುಖ ವ್ಯಕ್ತಿಯೊಬ್ಬ ಸಾಯುತ್ತಾನೆಂದೂ ಜನ ಭಾವಿಸಿರುವುದುಂಟು. ಹೀಗೆ ತಾನು ಜೀವಿಸುತ್ತಿರುವ ಪ್ರದೇಶಕ್ಕಿಂತ ತನ್ನಿಂದ ದೂರವಿರುವ ಕಣ್ಣಿಗೆ ಗೋಚರವಾಗದ ಮತ್ತೊಂದು ಪ್ರಪಂಚದ ಬಗೆಗೆ ಅಲ್ಲಿಯ ಬದುಕಿನ ಬಗೆಗೆ ನಾನಾ ರೀತಿಯಲ್ಲಿ ಕಲ್ಪಿಸಿಕೊಂಡು ಆ ಕಲ್ಪನಾ ಪ್ರಪಂಚದಲ್ಲಿ ವಿಹರಿಸಿ ಖುಷಿಪಟ್ಟಿರುವುದುಂಟು. ಅಂಥ ಕಲ್ಪನಾ ಲೋಕದಲ್ಲಿ ಕಾಮಧೇನು ಕಲ್ಪವೃಕ್ಷಗಳನ್ನು ಕಂಡಿದ್ದಾನೆ. ಜನತೆಯನ್ನು ಆಳುವ, ಕಷ್ಟಸುಖಗಳನ್ನು ವಿಚಾರಿಸುವ, ಮಳೆಯನ್ನು  ಬರಿಸುವ, ಪಾಪಿಷ್ಠರಿಗೆ ಶಿಕ್ಷೆ ವಿಧಿಸುವ ಮತ್ತು ಇಡೀ ವಿಶ್ವವನ್ನು ಸೃಷ್ಟಿಸುವ ದೇವಾನುದೇವತೆಗಳನ್ನು ಕಂಡಿದ್ದಾನೆ. ಈ ವರ್ಗದವರಿಗೇ ಆದ ಒಂದು ಸ್ವರ್ಗವಿದೆ ಎಂದೂ ಭಾವಿಸಿದ್ದಾನೆ.

ಮಧ್ಯ ಭಾರತದ ಬುಡಕಟ್ಟು ಜನಾಂಗಗಳಲ್ಲಿ ಸೂರ‍್ಯ ಚಂದ್ರರಿಗೆ ಸಂಬಂಧಿಸಿದಂತೆ ಹಲವಾರು ಕಥೆಗಳಿವೆ. ಅಣ್ಣ ತಂಗಿಯರಾದ ಸೂರ‍್ಯ ಚಂದ್ರರು ಒಂದು ಮದುವೆಗೆ ಹೋದರಂತೆ. ಅಲ್ಲಿ ಇಬ್ಬರಿಗೂ ತಿಂಡಿ ಕೊಟ್ಟರಂತೆ. ಸೂರ‍್ಯ ತನ್ನ ಪಾಲಿನ ತಿಂಡಿಯನ್ನೆಲ್ಲಾ ಅಲ್ಲಿಯೇ ತಿಂದನಂತೆ. ತನಗೆ ಕೊಟ್ಟಿದ್ದ ತಿಂಡಿಯನ್ನೆಲ್ಲಾ ಚಂದ್ರ ತನ್ನ ತಾಯಿಗೆ ತಂದುಕೊಂಟ್ಟಳಂತೆ. ತನಗೆ ತಿಂಡಿಯನ್ನು ಕೊಡದೇ ಇದ್ದುದಕ್ಕಾಗಿ ಕೋಪಿಸಿ ಕೊಂಡ ತಾಯಿ ಯಾವಾಗಲೂ ಉರಿಯುತ್ತಿರುವಂತೆ ಸೂರ‍್ಯನಿಗೆ ಶಾಪ ಕೊಟ್ಟಳಂತೆ. ತನ್ನ ಮನಸ್ಸನ್ನು ತೃಪ್ತಿ ಪಡಿಸಿದ ಮಗಳಿಗೆ ಸದಾ ತಣ್ಣಗಿರುವಂತೆ ಆಶೀರ್ವಾದ ಮಾಡಿದಳಂತೆ. ಕನ್ನಡದ ಒಂದು ಕತೆಯಲ್ಲಿ ಸೂರ‍್ಯನ ವಿಷಯವಿದೆ. ಸೂರ‍್ಯನಿಂದ ಒಬ್ಬ ಹೆಂಗಸು ಹಂದಿಯನ್ನು ಮಗುವಾಗಿ ಪಡೆಯುತ್ತಾಳೆ. ರಾಜಕುಮಾರಿಯೊಂದಿಗೆ ಹಂದಿಯ ಮದುವೆ ನಡೆಯುತ್ತದೆ. ರಾಜಕುಮಾರಿ ಹಾರ ಹಾಕಿದ ಕೂಡಲೇ ಆ ಹಂದಿ ಸುಂದರ ರಾಜಕುಮಾರನಾಗಿ ರೂಪ ತಳೆಯಿತಂತೆ.

’ಸೂರ‍್ಯ ಸೋದರಿ ಮತ್ತು ಚಂದ್ರ’ ಎಂಬುದು ಇನ್ನೊಂದು ಕಥೆ ಈ ಕಥೆ ಸಾಮಾನ್ಯವಾಗಿ ಎಲ್ಲ ಎಸ್ಕಿಮೊ ಗುಂಪುಗಳಲ್ಲಿ ಮೆಕೆನ್ಜಿ, ಪ್ರದೇಶದ ಅನೇಕ ಇಂಡಿಯನ್ನ ಗುಂಪುಗಳಲ್ಲಿ ಆಗ್ನೇಯ ಭಾಗದ ಕಡ್ಡೊಗಳಲ್ಲಿ ಪ್ರಚಲಿತವಿದೆ. ಈ ಕಥೆಗೆ ಸಂಬಂಧಿಸಿದ ರೂಪಗಳು ಮಧ್ಯ ಮತ್ತು ದಕ್ಷಿಣಾ ಅಮೇರಿಕಾಗಳಲ್ಲಿ ದೊರೆತಿವೆ. ಕಥೆ ಹೀಗಿದೆ.: ಅಪರಿಚಿತ ಕನ್ಯಾರ್ಥಿಯೊಬ್ಬ ಒಬ್ಬ ಸ್ತ್ರೀಯನ್ನು ರಾತ್ರಿ ರಹಸ್ಯವಾಗಿ ಕಾಣುತ್ತಾನೆ. ಆಕೆ ತನ್ನ ಕೈಗಳಿಗೆ ಕಪ್ಪು ಹಚ್ಚಿಕೊಂಡು ಆತನ ಬೆನ್ನಿಗೆ ಹಚ್ಚುತ್ತಾಳೆ. ಅನಂತರ ಆತ ತನ್ನ ಸೋದರನೇ ಎಂಬುದು ಅವಳಿಗೆ ತಿಳಿಯುತ್ತದೆ. ಅವಳು ಓಡುತ್ತಾಳೆ. ಪ್ರಿಯಕರ ಅವಳನ್ನು ಹಿಂಬಾಲಿಸುತ್ತಾನೆ. ಅವರಿಬ್ಬರೂ ಆಕಾಶಕ್ಕೆ ಏರುತ್ತಾರೆ. ಅಲ್ಲಿ ಆಕೆ ಸೂರ‍್ಯ ಆಗುತ್ತಾಳೆ, ಆತ ಚಂದ್ರನಾಗುತ್ತಾನೆ. ಸೂರ‍್ಯ ಚಂದ್ರರ ಉಗಮವನ್ನು ವಿವರಿಸುವ ಇತರ ಕಥೆಗಳು ಬುಡಕಟ್ಟಿನ ಉಗಮ ಪುರಾಣಗಳ ಪ್ರಾಸಂಗಿಕ ಘಟನೆಗಳು ಅಥವಾ ಘಟನಾ ಸರಣಿಗಳು ಆಗಿವೆ. ಉದಾಹರಣೆಗೆ ಕ್ಯಾಲಿಫೋರ್ನಿಯಾದ ಮೆಯ್ಡು ಇಂಡಿಯನ್ನರು ತಮ್ಮ ಸೃಷ್ಟಿಕರ್ತನಾದ ಭೂ-ಉಪಕ್ರಮಿಯು ತನ್ನ ಸೂರ‍್ಯ ಸೋದರಿ ಹಾಗೂ ಚಂದ್ರ ಸೋದರರನ್ನು ಮೊದಲು ಉಗಮಿಸುವಂತೆ ಮಾಡಿದ ಎಂದು ಹೇಳುವರು. ಪವಿತ್ರ ಹುಡುಗನು ಸೂರ‍್ಯ ಹಾಗೂ ಚಂದ್ರರಿಬ್ಬರನ್ನೂ ಚಿಕ್ಕ ವಸ್ತುಗಳನ್ನಾಗಿ ಪಡೆದುಕೊಂಡ ಎಂದು ಚಿಕಾರಿಲ್ಲಿ ಅಪಾಜೆಗಳು ಹೇಳುತ್ತಾರೆ.

ಸೂರ‍್ಯನನ್ನು ಮತ್ತು ಅವನ ಜೀವದಾಯಕ ಶಕ್ತಿಗಳನ್ನು ಸಂಬೋಧಿಸುವ ಒಂದು ವಿಧಿವತ್ತಾದ ಕುಣಿತವನ್ನು ’ಸೂರ‍್ಯನೃತ್ಯ’ ಎಂದು ಕರೆಯುವುದುಂಟು. ಸಾರ್ವತ್ರಿಕವಾಗಿ – ಬೆಳೆಗಳಿಗಾಗಿ ಹಾಗೂ ಆಹಾರಗಳಿಗಾಗಿ ಸೂರ‍್ಯವೃತ್ತದ ಮಹತ್ವವನ್ನು ಆಯನ ಸಂಕ್ರಾಂತಿ ನೃತ್ಯಗಳಲ್ಲಿ ನೆನಪಿಸಿಕೊಳ್ಳಲಾಗುವುದು. ಅಮೇರಿಕಾದ ಮೂಲ ನಿವಾಸಿಗಳಲ್ಲಿ ಅನೇಕ ಆಚರಣೆಗಳ ಮೂಲಕ ಸೂರ‍್ಯನಿಗೆ ಗೌರವ ಸಲ್ಲಿಸಲಾಗುತ್ತದೆ. ಬೇಸಿಗೆಯ ಪ್ರಾರಂಭಕ್ಕೆ ಸಾಮಾನ್ಯವಾಗಿ ಜುಲೈನಲ್ಲಿ ಇರಾಕ್ವಾಯಿಸ್ ಇಂಡಿಯನ್ನರು ತಮ್ಮ ಬೆಳೆಗಾಗಿ ಸೂರ್ಯಾಚಾರಣೆಯ ನೃತ್ಯವನ್ನು ಏರ್ಪಡಿಸುತ್ತಾರೆ. ಉಡಿಗೆ ತೊಡಿಗೆಗಳಲ್ಲಿ, ಮದ್ದಳೆ ಮತ್ತು ಬುಡುಬೂಡಿಕೆಯ ಸದ್ದುಗಳೊಂದಿಗೆ ಪುರುಷರು ಎರಡು ಸಾಲುಗಳಲ್ಲಿ ಒಬ್ಬರತ್ತ ಒಬ್ಬರು ಸಾಗುತ್ತ ಒಬ್ಬರನ್ನೊಬ್ಬರು ದಾಟಿ ಹಿಂದಕ್ಕೆ ಹೋಗುತ್ತಾರೆ. ತುಂಬ ಪ್ರಖ್ಯಾತವಾದ ಮತ್ತು ರಮಣೀಯವಾದ ಸೂರ‍್ಯನೃತ್ಯ ಎಂದರೆ ಗ್ರೇಟ್ ಪ್ಲೈನ್ಸ್ ಜನರದ್ದು. ಇದು ಪವಿತ್ರವಾದ ಎತ್ತರ ಕಂಬದ ಸುತ್ತ ನಡೆಯುವ ಒಂದು ಹರಕೆಯ ಆಚರಣೆ. ಇದು ಸೂರ‍್ಯಬಲಿ ಮತ್ತು ಎಮ್ಮೆ ಆಚರಣೆಗಳ ಒಂದು ಸಂಯುಕ್ತ ಕ್ರಿಯೆಯಾಗಿದೆ ಮತ್ತು ತನ್ನ ಸಾಧನೆ ಸಲಕರಣೆಗಳಲ್ಲಿ ಅದು ಎಮ್ಮೆಯ ಸಹಯೋಗವನ್ನು ಉಳಿಸಿಕೊಮಡಿದೆ. ಇದು ಟಿಟೋನ್ ಸೂಯಿಕ್ಸ್‌ಗಳಲ್ಲಿ ತನ್ನ ಸಂಪೂರ್ಣ ಬೆಳವಣಿಗೆಯನ್ನು ಸಾಧಿಸಿತು. ಇವರು ಸೂರ‍್ಯನನ್ನು ರಹಸ್ಯಗರ್ಭಿತವಾದ ಎಲ್ಲ ಕಡೆಗೂ ವ್ಯಾಪಿಸುವ ಶಕ್ತಿ ಎಂದು ಭಾವಿಸುತ್ತಾರೆ. ಮಹತ್ವದ ಕ್ಷಣಗಳಲ್ಲಿ ದಂಡಯಾತ್ರೆಯ ಅಪಾಯವಾದ ಸಂದರ್ಭಗಳಲ್ಲಿ ಯೋಧರು ಕೆಲಸಲ ದೊಡ್ಡ ಸಂಖ್ಯೆಯಲ್ಲೇ ಇದರಲ್ಲಿ ಪಾಲ್ಗೊಳ್ಳುವುದಾಗಿ ಹರಕೆ ಹೊರುತ್ತಾರೆ. ಮತ್ತು ಈ ಮೂಲಕ ದೈವೀಚೇತನಕ್ಕೆ ತಮ್ಮ ದೇಹವನ್ನು ನಿವೇದಿಸುತ್ತಾರೆ. ಸಾಮಾನ್ಯವಾಗಿ ಈ ಆಚರಣೆಯು ಬೇಸಿಗೆಯ ಕರ್ಕ ಸಂಕ್ರಾಂತಿಯ ಸಮಯದಲ್ಲಿ, ಪ್ರಕೃತಿಯೆಲ್ಲ ಸಂಭ್ರಮದಲ್ಲಿರುವಾಗ ಮತ್ತು ಕರ್ಪೂರದ ಗಿಡವು ರಸಭರಿತವಾದಾಗ ಈ ಉತ್ಸವವನ್ನು ನಡೆಸುತ್ತಾರೆ.

ಚಂದ್ರ ಹಾಗೂ ಆತನ ಸೋದರಿಯ (ಸಾಮಾನ್ಯವಾಗಿ ಸೂರ‍್ಯನೇ ಈ ಸೋದರಿ) ನಡುವಿನ ಅಗಮ್ಯಗಮನ ಸಂಬಂಧವೇ ಚಂದ್ರನ ಮೇಲಿನ ಕಲೆಗಳಿಗೆ ಕಾರಣವಾಯಿತು ಎಂದು ದಕ್ಷಿಣ ಅಮೇರಿಕನ್ ಇಂಡಿಯನ್ನರು ವಿವರಿಸುತ್ತಾರೆ. ತನ್ನ ನಿಗೂಢವಾದ ಪ್ರಿಯಕರ ಯಾರು ಎಂಬುದನ್ನು ತಿಳಿಯದ ಹೆಂಗಸು ಆತನ ಮೇಲೆ ಜೆನಿಪಾ, ಬೂದಿ ಅಥವಾ ಮುಟ್ಟಿನ ರಕ್ತದಿಂದ ಗುರುತು ಮಾಡುತ್ತಾಳೆ. ಚಂದ್ರ ನಾಚಿಕೆಯಿಂದ ಹಾಗೂ ಹೆದರಿಕೆಯಿಂದ ಆಕಾಶಕ್ಕೆ ಓಡಿಹೋದ ಎಂದು ಹೇಳುವುದುಂಟು. ಯಹ್‌ಗನ್ ಹಾಗೂ ಓನಾಗಳ ಪ್ಯಕಾರ ದೀಕ್ಷಾವಿಧಿಗಳ ರಹಸ್ಯಗಳನ್ನು ಪತ್ತೆ ಮಾಡಿದ ಸೂರ‍್ಯನಿಂದ ಚಂದ್ರನು ಪಡೆದ ಹೊಡೆತಗಳ ಗುರುತುಗಳೇ ಆತನ ಮೇಲಿರುವ ಕಲೆಗಳು. ಚಂದ್ರನು ಬಾತುಕೋಳಿ ಅಥವಾ ಉಷ್ಟ್ರಪಕ್ಷಿಗಳನ್ನು ಹಿಡಿಯಲು ಹೋದಾಗ, ಅವು  ಚಂದ್ರನನ್ನು ತುಂಡು ತುಂಡಾಗಿ ಕತ್ತರಿಸಿದಾಗ ಹೊರಬಂದ ಕರಳುಗಳೇ ಚಂದ್ರನ ಮೇಲೆ ಕಾಣುವ ಕಲೆಗಳು ಎಂದು ಮೊಟಕೊ ಹಾಗೂ ಚಮಕೊಕೋಗಳು ವಿವರಿಸಿದ್ದಾರೆ. ಆಕಾಶಕ್ಕೆ ತಪ್ಪಿಸಿಕೊಂಡು ಹೋದ ನಾಲ್ಕು ಕಣ್ಣಿನ ಒಂದು ಜಾತಿಯ ಚಿರತೆಯೇ ಚಂದ್ರನ ಮೇಲಿರುವ ಕಲೆಗಳು ಎಂದು ಯುರಾಕಾರೆಗಳು ವಿಶ್ಲೇಷಿಸಿದ್ದಾರೆ. ಚಂದನಲ್ಲಿ ಕೆಲವರು ಮನುಷ್ಯನನ್ನು ಕಂಡರೆ ಮತ್ತೆ ಕೆಲವರು ಜಿಗಿಯುತ್ತಿರುವ ನಾಯಿಯನ್ನು ಕಂಡಿದ್ದಾರೆ. ಚಂದ್ರ ಸೌದೆಯ ಹೊರೆಯನ್ನು ಬೆನ್ನಿನ ಮೇಲೆ ಹೊರುತ್ತಿರುವ ಶಿಕ್ಷೆಯನ್ನು ಅನುಭವಿಸುತ್ತಿರುವನೆಂದು ಈಜಿಫ್ಟ್ ಜನರು ನಂಬಿದ್ದಾರೆ.  ಚಂದ್ರ ಅಹಲ್ಯೆಯನ್ನು ಮೋಹಿಸಿದ್ದಕ್ಕಾಗಿ ಆಕೆಯನ್ನು ಕಲ್ಲಾಗುವಂತೆ ಶಾಪ ಹಾಕಿದ ಗೌತಮ ತನ್ನ ಪಾದರಕ್ಷೆಗಳನ್ನು ಚಂದ್ರನ ಮೇಲೆ ಎಸೆದನೆಂದೂ ಅದೇ ಚಂದ್ರನ ಮೇಲೆ ಕಾಣುವ ಗುರುತೆಂದೂ ಒಂದು ಕತೆಯಿಂದ ತಿಳಿದುಬರುತ್ತದೆ. ಜಗತ್ತಿನ ಜನಪದ ನಂಬಿಕೆ ಮತ್ತು ಪದ್ಧತಿಗಳ ಮೇಲೆ ಅದ್ವಿತೀಯವಾದ ಪ್ರಭಾವವನ್ನು ಬೀರಿರುವ ಚಂದ್ರ ಮುಖ್ಯವಾದ ಎರಡು ಅಂಶಗಳಿಂದ ಪ್ರಾಮುಖ್ಯತೆ ಪಡೆದಿದೆ. ಅದರ ಮುಖ ಮತ್ತು ಅದರ ಕಲೆಗಳು. ಚಂದ್ರನ ಸಮತಲದ ಮೇಲೆ ಮನುಷ್ಯನ ಮುಖವು ಕಾಣುತ್ತದೆಂದು ಯೂರೋಪಿನಲ್ಲಿ ಹೇಳಲಾಗುತ್ತಿದೆ. ಕೆಲವರು ಆ ಮುಖ ಶಿಕ್ಷೆಗಾಗಿ ಚಂದ್ರನಲ್ಲಿಗೆ ಕಳುಹಿಸಲ್ಪಟ್ಟ ಜುದಾಸನದು ಎಂದು ಹೇಳುವರು. ಪನಾಮಾದಲ್ಲಿ ಅಕ್ರಮ ಅನೈತಿಕ ಸಂಬಂಧದ ಫಲವಾಗಿ ಶಿಕ್ಷೆ ಅನುಭವಿಸಲು ಮನುಷ್ಯನನ್ನು ಚಂದ್ರನಲ್ಲಿಗೆ ಕಳುಹಿಸಲಾಗಿದೆ ಎಂದು ನಂಬುತ್ತಾರೆ. ಜಗತ್ತಿನ ಉಳಿದ ಎಲ್ಲ ಕಡೆ ಚಂದ್ರನ ಮೇಲೆ ಮೊಲ ಅಥವಾ ಕಪ್ಪೆಯು ಇದೆ ಎನ್ನುತ್ತಾರೆ. ಜುಲುಲ್ಯಾಂಡ್, ಟಿಬೆಟ್, ಮೆಕ್ಸಿಕೊ ಹಾಗೂ ಭಾರತದಲ್ಲಿ ಚಂದ್ರನ ಮೇಲಿನ ಗುರುತು ಮೊಲ ಎಂದು ಹೇಳುತ್ತಾರೆ. ಬುದ್ಧನು ತನ್ನ ಪೂರ್ವದ ಒಂದು ಅವತಾರವೊಂದರಲ್ಲಿ ಮುಖ್ಯ ದೇವತೆಯಾದ ಶುಕ್ರನಿಗೆ ತನ್ನನ್ನೇ ಆಹುತಿಯನ್ನಾಗಿ ಅರ್ಪಿಸಿಕೊಂಡದ್ದರ ಫಲವಾಗಿ ಈ ಬಲಿಯ ಶಾಶ್ವತ ನೆನಪಿಗಾಗಿ ಶುಕ್ರನು ಚಂದ್ರನ ಮೇಲೆ ಮೊಲದ ಗುರುತನ್ನು ಚಿತ್ರಿಸಿದನಂತೆ. ಹೀಗೆ ಚಂದ್ರನ ಕಲೆಗಳ ಬಗೆಗೆ ನಾನಾ ಕಲ್ಪನೆಗಳಿವೆ.

ಚಂದ್ರನ ವರ್ಣನೆ ಕಾವ್ಯಗಳಲ್ಲಿ ಹಾಗೂ ಅಷ್ಟಾದಶವರ್ಣನೆಗಳಲ್ಲೂ ಬಂದಿದೆ. ಬಹುಪಾಲು ಕವಿಗಳು ಕಾವ್ಯಗಳಲ್ಲಿ ಮುಖವನ್ನು ಚಂದ್ರನಿಗೆ ಹೋಲಿಸಿರುವುದುಂಟು. ಬೆಳದಿಂಗಳನ್ನೇ ಹಾಲು ಎಂದುಕೊಂಡು ಬೆಕ್ಕು ತನ್ನ ಕೆನ್ನೆಯನ್ನೇ ನೆಕ್ಕಿಕೊಂಡಿತೆಂದು ಭಾಸಕವಿ ವರ್ಣಿಸಿದ್ದಾನೆ. ’ಚಂದಮಾಮ’ ಮಕ್ಕಳಲ್ಲಿ ಜನಪ್ರಿಯನಾಗಿದ್ದಾನೆ. ರಾಮ ಮಗುವಾಗಿದ್ದಾಗ ಚಂದ್ರನನ್ನು ಕಾಡಿ ಬೇಡಿದ ಕಥೆ ನಮ್ಮಲ್ಲಿದೆ. ಒಮ್ಮೆ ಗಣೇಶ ಎಡವಿಬಿದ್ದು ಹೊಟ್ಟೆ ಒಡೆದುಕೊಂಡದ್ದನ್ನು ಚಂದ್ರನು ನೋಡಿ ನಕ್ಕಿದ್ದಕ್ಕೆ ಗಣೇಶ ಶಾಪ ಹಾಕಿದನೆಂದೂ ಅದಕ್ಕಾಗಿ ಗಣೇಶ ಚೌತಿಯಂದೂ ಚಂದ್ರನನ್ನು ನೋಡಬಾರದೆಂದೂ ಜನ ಈಗಲೂ ನಂಬಿದ್ದಾರೆ. ಕರ್ನಾಟಕದ ಹಟ್ಟಿಕಾರರು ಮತ್ತು ಹಾಲು ಮತದವರ ಮೂಲ ಚಂದ್ರನೆಂದು ಕೆಲವರು ಹೇಳುವುದುಂಟು. ಪ್ರಪಂಚವನ್ನು ಬಿಟ್ಟವರೆಲ್ಲ ನೇರವಾಗಿ ಚಂದ್ರನಲ್ಲಿಗೆ ಹೋಗುತ್ತಾರೆಂದು ಉಪನಿಷತ್ತುಗಳಲ್ಲಿ ಹೇಳಿದೆ. ಆತನೇ ಸ್ವರ್ಗದ ಬಾಗಿಲೆಂದೂ ಆತನು  ಕೇಳಿದ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿದವರನ್ನು ಸ್ವರ್ಗಕ್ಕೂ ಉತ್ತರಿಸದಿದ್ದವರನ್ನು ಮಳೆಯನ್ನಾಗಿಯೂ ಪರಿವರ್ತಿಸಿ ಭೂಮಿಗೂ ಕಳಿಸುತ್ತಾನೆಂದೂ ಚಂದ್ರ ಬೆಳೆಯುತ್ತಿರುವ ಕಾಲದಲ್ಲಿ ವ್ಯಪಾರ, ಮದುವೆಗಳನ್ನು ಮಾಡಿಕೊಂಡರೆ ಒಳ್ಳೆಯದೆಂದೂ ಹುಚ್ಚು, ಕುರುಡು ಅಥವಾ ಮುಕದ ವಿಕಾರತೆಗೆ ಚಂದ್ರನ ಕಿರಣವೇ ಕಾರಣವೆಂದೂ ನಂಬಿಕೆಗಳಿವೆ. ಈಗಲೂ ಹುಚ್ಚು ಹಿಡಿದವರು ಅಮಾವಾಸ್ಯೆ, ಹುಣ್ಣಿಮೆಗಳಲ್ಲಿ ರೇಗುತ್ತಾರೆಂದು ಹೇಳುವುದುಂಟು. ಚಂದ್ರನ ಸುತ್ತ ಗೂಡು ಕಟ್ಟಿದರೆ ಮಳೆ ಬರುವುದಿಲ್ಲವೆಂದೂ ಮನುಷ್ಯನ ಮನಸ್ಸಿನ ಮೇಲೆ ಚಂದ್ರ ಪ್ರಭಾವ ಬೀರುತ್ತಾನೆಂದೂ ಸಸ್ಯಗಳ ಬೆಳವಣಿಗೆಗೆ ಚಂದ್ರ ಉತ್ತೇಜನಕಾರಿ ಎಂದೂ ನಂಬಿಕೆಗಳಿವೆ. ನಮ್ಮ ನಾಡಿನ ಬಹುಭಾಗಗಳಲ್ಲಿ ಚಂದ್ರನನ್ನು ಬೆಳುದಿಂಗಳ ರೂಪದಲ್ಲಿ ಪೂಜಿಸುವ ಪದ್ಧತಿ ಇದೆ. ಉತ್ತರ ಕರ್ನಾಟಕದ ಕಡೆ ರೂಢಿಯಲ್ಲಿರುವ ’ಗುಡಿಯ ಹುಣ್ಣಿಮೆ’ ಬೆಳುದಿಂಗಳ ಆರಾಧನೆಗೆ ಸಂಬಂಧಿಸಿದ್ದು. ಚಂದ್ರನ ಬಗೆಗೆ ಸಾಕಷ್ಟು ಗಾದೆ ಒಗಟುಗಳೂ ಇವೆ.

ಭಾರತೀಯ ಸಾಹಿತ್ಯ ಮತ್ತು ಜನಜೀವನದಲ್ಲಿ ನಕ್ಷತ್ರಗಳು ಅವುಗಳಿಗೆ ಸಂಬಂಧಿಸಿದ ಕಲ್ಪನೆ-ನಂಬಿಕೆಗಳು ಹೇರಳವಾಗಿವೆ. ಅವು ಸತ್ತವರ ಚೇತನಗಳೆಂದು ಕಲ್ಪನೆ ಇದೆ. ನಕ್ಷತ್ರಗಳನ್ನೇ ಆಧಾರವಾಗಿ ಉಳ್ಳ ಜ್ಯೋತಿಷ್ಯ ಶಾಸ್ತ್ರವೇ ಇದೆ. ಕನಸಿನಲ್ಲಿ ನಕ್ಷತ್ರಗಳ ನೋಟವನ್ನು ವಿವರಿಸುವ ಸ್ವಪ್ನ ಫಲ ಶಾಸ್ತ್ರವಿದೆ. ಉದಾಹರಣೆಗೆ ನಕ್ಷತ್ರಗಳು ಉದುರಿದಂತೆ ಕನಸು ಕಂಡರೆ ಆ ವ್ಯಕ್ತಿ ಸ್ವೇಚ್ಛಾ ಪ್ರವರ್ತನೆಯುಳ್ಳವನಾಗಿರುತ್ತಾನೆ. ನಿರ್ಮಲವಾಗಿ ಪ್ರಕಾಶಿಸುವಂತೆ ಕಂಡರೆ ಆತನಿಗೆ ಸರ್ವವಿಧದಲ್ಲಿ, ಸುಖವುಂಟಾಗುತ್ತದೆ. ನಕ್ಷತ್ರಗಳು ಮನೆಯ ಮೇಲೆ ಬಿದ್ದಂತೆ ಕನಸು ಕಂಡರೆ ದೇಶ ಭ್ರಷ್ಟತೆ-ರೋಗಪ್ರಾಪ್ತಿ ಮತ್ತು ಗೃಹ ನಾಶವುಂಟಾಗುತ್ತದೆ. ಧೂಮಕೇತು ಇತ್ಯಾದಿ ಬಾಲಚುಕ್ಕೆಗಳು ಹುಟ್ಟಿದಂತೆ ಕಂಡರೆ ಕ್ಷಾಮ-ವಿಪತ್ತು-ಮಹಾಮಾರಿಗಳು ದೇಶಕ್ಕೆ ಕೇಡನ್ನುಂಟುಮಾಡುತ್ತವೆ. ಆಕಾಶದಲ್ಲಿ ಮಬ್ಬು ಕವಿದುಕೊಂಡಾಗಲಿ, ಕವಿಯದೇ ಆಗಲಿ ನಕ್ಷತ್ರಗಳು ಒಂದೊಂದಾಗಿ ಕಾಣಿಸಿಕೊಂಡಂತಾದರೆ ದುಃಖವುಂಟಾಗುತ್ತದೆ. ನಕ್ಷತ್ರಗಳು ಇರುತ್ತವೋ ಇಲ್ಲವೋ ಎಂಬುದಾಗಿ ಸಂಶಯಾಸ್ಪದವಾದ ಸ್ವಪ್ನವನ್ನು ಕಂಡರೆ ಶ್ರೀಮಂತರಿಗೆ ಬಡತನವೂ ಬಡವರಿಗೆ ರೋಗಗಳೂ ಉಂಟಾಗುತ್ತವೆ. ಮೂಲಾ ನಕ್ಷತ್ರದಲ್ಲಿ ಹುಟ್ಟಿದ ಮಕ್ಕಳು ತಂದೆ ತಾಯಿಗಳಲ್ಲಿ ಯಾರಿಗಾದರೊಬ್ಬರಿಗೆ ಸಾವನ್ನು ತರುತ್ತವೆ. ನಕ್ಷತ್ರಗಳು ಬಿದ್ದಾಗ ಯಾರಾದರೂ ಮಹಾತ್ಮರು ಸಾಯುತ್ತಾರೆ – ಮೊದಲಾದ ನಂಬಿಕೆಗಳು ಕನ್ನಡದಲ್ಲಿ ಹೇರಳವಾಗಿವೆ. ಪ್ರತಿಯೊಂದು ನಕ್ಷತ್ರದ ಮೇಲೂ ಅಥವಾ ಆಯಾ ನಕ್ಷತ್ರದ ದಿನದಂದು ದಾನಧರ್ಮಗಳನ್ನು ಮಾಡುವವರು ವಿಶಿಷ್ಟ ಸಿದ್ಧಿಯನ್ನು ಪಡೆಯುವರು ಎಂದು ಪುರಾಣಗಳು ಹೇಳುತ್ತವೆ. ಇದನ್ನೇ ನಾವು ನಕ್ಷತ್ರ ಯೋಗ ಎಂದು ಕರೆಯುವುದು.

ಉತ್ತರ ಅಮೆರಿಕನ್ ಇಂಡಿಯನ್‌ರಲ್ಲಿ ನಕ್ಷತ್ರಗಳನ್ನು ಕುರಿತಂತೆ ಅನೇಕ ನಂಬಿಕೆಗಳಿವೆ. ನಕ್ಷತ್ರ ಮನುಷ್ಯನೇ ಮುಖ್ಯ ಪ್ರಕಾರವಾಗಿರುವ ಕೆಲವು ಕಥೆಗಳೂ ಅವರಲ್ಲಿ ರೂಢಿಯಲ್ಲಿವೆ. ಪ್ರಾಚೀನ ಮನುಷ್ಯರಲ್ಲಿಯ ನಕ್ಷತ್ರಗಳ ಪ್ರಾಮುಖ್ಯತೆಯನ್ನು ಕುರಿತು ೧೨ನೇ ಶತಮಾನದ ಸಿದ್ಧಾಂತಕಾರರು ಬಹಳಷ್ಟು ಒತ್ತು ಕೊಟ್ಟರಾದರೂ ಇಂಡಿಯನ್‌ರ ಮುಖ್ಯ ಆಸಕ್ತಿ ಆಕಾಶಗಂಗೆ, ಸಪ್ತರ್ಷಿ ಮಂಡಲಗಳಿಗೆ ಸೀಮಿತವಾಗಿತ್ತು ಎಂದು ಹೇಳಬಹುದು. ಇಂಡಿಯನ್‌ರಲ್ಲಿ ನಕ್ಷತ್ರಗಳನ್ನು ಕುರಿತಂತೆ ಅನೇಕ ಕಥೆಗಳೂ ನಂಬಿಕೆಗಳೂ ಪ್ರಚಾರದಲ್ಲಿದ್ದವು. ಕೆಲವು ಕಥೆಗಳಲ್ಲಿ ಬೆಳಗಿನ ಮತ್ತು ಸಂಜೆಯ ನಕ್ಷತ್ರಗಳೇ ಪಾತ್ರಧಾರಿಗಳಾಗಿ ಚಿತ್ರಿತವಾಗಿವೆ.

ಪೌನೀ ಮತ್ತು ಜೆರೋಕಿ ಬುಡಕಟ್ಟುಗಳ ನಕ್ಷತ್ರ ಜಾನಪದ ಮೊದಲ ವಿದ್ವಾಂಸರ ವಿಶ್ಲೇಷಣೆಗೆ ಒಳಗಾಯಿತು. ಇದು ಉತ್ತರ ಅಮೇರಿಕದ ಇಂಡಿಯನ್ ಗುಂಪುಗಳಿಗೂ ವಿಸ್ತರಿಸಿದೆ ಎಂಬುದನ್ನು ಕಂಡುಕೊಳ್ಳಲಾಯಿತು. ಸ್ಕಿಡಿಪೌನೀಯಲ್ಲಿ ಬೆಳಗಿನ ಮತ್ತು ಸಂಜೆಯ ನಕ್ಷತ್ರಗಳು ಪುರುಷ ಮತ್ತು ಸ್ತ್ರೀ ಅಂಶಗಳನ್ನು ಪ್ರತಿನಿಧಿಸುವಂಥವಾಗಿದ್ದವು ಮತ್ತು ಅವು ಭೂಮಿಯ ಮೇಲೆ ಎಲ್ಲ ಜೀವ ಜಾತಿಗಳ ಅವತರಣ ಹಾಗೂ ನಿರಂತರತೆಗೆ ಸಂಬಂಧಿಸಿದ್ದವು.

ಆಕಾಶದ ತುಂಬ ಮಂಡಲ ರಚಿಸಿರುವ – ಬೆಳಗುವ ಕೋಟ್ಯಾನುಕೋಟಿ ದೂರದ ನಕ್ಷತ್ರ ಕೂಟಗಳು ಮತ್ತು ನೀಹಾರಿಕೆಗಳೂ ಆಶ್ಚರ‍್ಯವನ್ನು ಹುಟ್ಟಿಸುತ್ತವೆ. ಮತ್ತು ತಾವು ಕಾಣುವ ಎಲ್ಲ ಕಡೆಗಳಲ್ಲೂ ಮನುಷ್ಯ ಕಲ್ಪನೆಯನ್ನು ಕೆಣಕುತ್ತವೆ. ಪ್ರಾಚೀನ ಕಾಲದಲ್ಲಿ ಬಹುಷಃ ಎಲ್ಲ ಕಡೆಗೂ ಇದನ್ನು ನದಿ, ಆಕಾಶಗಂಗೆ, ಬೆಳಕಿನ ನದಿ-ಎಂದೆಲ್ಲ ತಿಳಿದಿದ್ದರು. ಕ್ರಿ.ಪೂ ೫೫೦ ರಲ್ಲಿ ಅನಕ್ಸಾಗೋರರು ಇದನ್ನು ’ಬೆಳಗುವ ಚಕ್ರ’ ಎಂದು ಕರೆದಿದ್ದರು. ಪುರಾತನ ಅಕ್ಕೆಡಿಯನ್ನರು ಮತ್ತು ಸಿರಿಯನ್ನರು ಇದನ್ನು ಸರ್ಪನದಿ ಎಂತಲೂ ಮಹಾಪ್ರವಾಹ ಅಥವಾ ದೇವರ ರಜ್ಜುವಿನ ಮಹಾನದಿ ಇಲ್ಲವೇ ಪಾತಾಳಲೋ ಲೋಕದ ಮಹಾನದಿ ಎಂತಲೂ ಹೇಳಿದ್ದರು.

ಆಕಾಶದ ಕಡೆಯಿಂದ ಕೇಳಿಬರುವ ಮಾತುಗಳಿಗೆ ಅಶರೀರವಾಣಿ (ಆಕಾಶವಾಣಿ) ಎಂದು ಹೆಸರಿದೆ. ನಾಟಕಗಳಲ್ಲಿ ದೇವದೂತರು ಅಥವಾ ದೇವತೆಗಳು ಈ ಮಾತುಗಳನ್ನು ಹೇಳುವುದುಂಟು. ಇವರ ಮಾತುಗಳು ಕೇಳಿಸುತ್ತವೆಯೇ ಹೊರತು ಯಾರಿಗೂ ಇವರ ರೂಪ ಕಾಣಿಸುವುದಿಲ್ಲ. ಮುಂದೊದಗಲಿರುವ ಮಹತ್ವ ಪೂರ್ಣವಾದ ಘಟನೆಯೊಂದನ್ನು ಆಕಾಶವಾಣಿ ನುಡಿಯುತ್ತಿರುತ್ತದೆ. ಅವು ಭವಿಷ್ಯದಲ್ಲಿ ಖಂಡಿತವಾಗಿಯೂ ನಡೆಯುತ್ತವೆಂಬ ಮಾತೂ ರೂಢಿಯಲ್ಲಿದೆ. ಕಾಳಿದಾಸನ ಶಾಕುಂತಲ ನಾಟಕದಲ್ಲಿ ಶಕುಂತಲೆ ದುಷ್ಯಂತನೆದುರು ತನ್ನ ಪರಿಚಯವನ್ನು ನಾನಾ ರೀತಿಯಲ್ಲಿ ಮಾಡಿಕೊಟ್ಟಿರುವ ಆತನಿಗೆ ನೆನಪೇ ಬಾರದಿದ್ದಾಗ ಅಂತರಿಕ್ಷದಲ್ಲಿನ ವಾಣಿಯೊಂದು ’ಶಕುಂತಲೆ ಹೇಳಿದುದೆಲ್ಲ ಸತ್ಯ’ ಎಂದು ನುಡಿದಾಗ ಮಾತ್ರ ಆತ ನಂಬುತ್ತಾನೆ. ಸಂಸ್ಕೃತದ ಬಾಣಕವಿಯ ರೂಪಕಗಳಲ್ಲಿಯೂ ಆಕಾಶವಾಣಿಯ ಪಾತ್ರವಿದೆ.

ಮನುಷ್ಯ ಗಾಳಿಯ ಬಗೆಗೂ ಹಲವಾರು ಕಥೆಗಳನ್ನು ಹುಟ್ಟಿಸಿದ್ದಾನೆ. ರಾಕ್ಷಸನೊಬ್ಬ ಗವಿಯಲ್ಲಿ ಗಾಳಿಯನ್ನು ಕೂಡಿಹಾಕಿ ಇದ್ದಕ್ಕಿದ್ದಂತೆ ಹೊರಗೆ ಬಿಟ್ಟನಂತೆ. ಆಗ ಬಿರುಗಾಳಿ ರಭಸವಾಗಿ ಹೊರಬಿತ್ತಂತೆ. ರಾಕ್ಷಸ ಪಕ್ಷಿಯ ರೆಕ್ಕೆಗಳ ಬಡಿತದಿಂದ ಗಾಳಿಯ ವೇಗ ಹೆಚ್ಚಾಯಿತಂತೆ. ಗಾಳಿಯು ಈ ರೀತಿ ಹೆಚ್ಚಾದಾಗ ಪರಾಕ್ರಮಿಯೊಬ್ಬ ಪಕ್ಷಿಯ ರೆಕ್ಕೆಗಳನ್ನು ಕಡಿದನಂತೆ. ಆಗ ಗಾಳಿಯ ವೇಗ ಕಡಿಮೆಯಾಯಿತೆಂದು ಹೇಳುವವರು. ಉತ್ತರ ಕರ್ನಾಟಕದ ರೈತರು ಹಂತಿ ಮುಗಿದ ಮೇಲೆ ಸುಂಕರಾಶಿಯನ್ನು ತೂರುವಾಗ ಗಾಳಿದೇವನ್ನು ಆಹ್ವಾನಿಸುತ್ತಾರೆ; ಆಗ ಅವರು “ಹುಲಿಗ್ಯೊ ಹುಲಿಗ್ಯೊ, ಹುಲ್ಲುಲಿಗೊ, ಹುಲಸಿಗೊ” ಎಂದು ಕೂಗುವರು. ಇದರ ಬಗೆಗೆ ಒಂದುಕಥೆ ಇದೆ: ಬಹಳ ಹಿಂದೆ ಹುಲಿಗೆ ಎಂಬ ರೈತನೊಬ್ಬ ತನ್ನ ಹೊಲದಲ್ಲಿ ರಾಶಿ ಮಾಡಿದ ಕಾಳನ್ನು ತೂರುವಾಗ ಗಾಳಿ ಬೀಸದಿದ್ದುದನ್ನು ಕಂಡು ಮುಷ್ಕರ ಹೂಡಿದನು. ಮೂರು ನಾಲ್ಕು ದಿನವಾದರೂ ಅವನು ಅದೇ ರೀತಿ ಕುಳಿತುಕೊಂಡಿದ್ದನ್ನು ಕಂಡು ಅವನ ಜೊತೆಗಾರರಲ್ಲೊಬ್ಬ ಅವನನ್ನೇ ಅದರಿಂದ ಪಾರುಮಾಡಲು “ಎ ಹುಲಿಗೊ” ಎಂದು ಕೂಗಿದ. ತಕ್ಷಣ ಗಾಳಿ ಬೀಸಲಾರಂಭಿಸಿತು. ಆದ್ದರಿಂದ ಈಗಲೂ ರೈತರು ಕಣಗಳಲ್ಲಿ ಕಾಳು ತೂರುವಾಗ ಗಾಳಿದೇವನನ್ನು ಸ್ವಾಗತಿಸುವುದುಂಟು. ತುಮಕೂರು ಜಿಲ್ಲೆಯ ಅನೇಕ ಭಾಗಗಳಲ್ಲಿ ಧಾನ್ಯಗಳನ್ನು ತೂರುವಾಗ “ಒಲಗ್ಗ ಸ್ವಾಮಿ ’ಒಲಿಗಾ’ ಎಂದು ಗಾಳಿ ಬರುವ ತನಕ ಕೂಗುವುದುಂಟು. ಆರಿದ್ರಾ ಮಳೆಯ ಸಂದರ್ಭದಲ್ಲಿ ಬೀಸುವ ಗಾಳಿ ತುಂಬ ಶೀತದಿಂದ ಕೂಡಿರುವುದರಿಂದ ಗಾಳಿಯ ಹೊಡೆತಕ್ಕೆ ಸಿಕ್ಕಿದ ಗಂಡಸರು ಆ ಚಳಿಗೆ ತಾಳಲಾರದೆ ನಾವು ಹೆಣ್ಣಾಗಾದ್ರೂ ಹುಟ್ಟಬಾರದಿತ್ತೆ ಎಂದು ಕೊರಗುವುದುಂಟು.

ಮಳೆಯು ಮನುಷ್ಯ, ಪ್ರಾಣಿ, ಸಸ್ಯ ಸಂಪತ್ತಿಗೆ ಜೀವನಾಧಾರವಾಗಿರುವಂಥದ್ದು ಪ್ರಪಂಚದ ಎಲ್ಲ ಕಡೆಗಳಲ್ಲೂ ಮಲೆಯನ್ನು ಉಪಕಾರಿ ಎಂದೇ ಭಾವಿಸಲಾಗಿದೆ. ಅದಕ್ಕೆ ದೈವತ್ವ ಕಲ್ಪಿಸಿ ಆರಾಧಿಸಲಾಗುತ್ತಿದೆ. ಪ್ರಾಚೀನ ಯೂರೋಪಿನ ಒಗಟಿನಲ್ಲಿ ಮಳೆಯ ಬೆಲೆಯನ್ನು ಹೀಗೆ ವಿವರಿಸಲಾಗಿದೆ: ಒಂದು ಬಂಗಾರದ ನೇಗಿಲಿನ ಬೆಲೆಯೆಷ್ಟು; ಅದಕ್ಕೆ ಉತ್ತರವೆಂದರೆ-ಮೇ ತಿಂಗಳ ಒಂದು ಮಳೆ. ಪ್ರಾಚೀನ ಗ್ರೀಸ್ ಹಾಗೂ ರೋಮನ್‌ರಲ್ಲಿ ಆಕಾಶದೇವತೆ ಮಳೆಯೇ ಆಗಿದೆ. ಪ್ರಾಚೀನ ಗ್ರೀಕ್‌ನ ಮಳೆ ಬರಿಸುವ ವ್ಯಕ್ತಿಗಳು ಮಳೆಯನ್ನು ಪ್ರೇರೇಪಿಸುವುದಕ್ಕಾಗಿ ’ಒಕ್ ಮರದ ಒಂದು ಕೊಂಬೆಯನ್ನು (ಅದು ಜ್ಯೂಸ್‌ನ ಪವಿತ್ರ ಮರ) ನೀರಿನಲ್ಲಿ ಅದ್ದಿ ಪ್ರಾರ್ಥನೆಯ ಮೂಲಕ ದೇವರಿಗೆ ನಿವೇದಿಸಿಕೊಳ್ಳುತ್ತಿದ್ದರು. ರೋಮ್‌ನಲ್ಲಿ ಮಳೆಯನ್ನು ತರಿಸುವುದಕ್ಕಾಗಿ ಪುಟ್ಟ ಪ್ರತಿಮೆಗಳನ್ನು ಟೈಬರ್ ನದಿಗೆ ಎಸೆಯಲಾಗುತ್ತಿತ್ತು. ಪ್ರಾಚೀನ ಟ್ಯೂಟನರು ಮಳೆ ತರಿಸಲು ಬೆತ್ತಲೆಯಾದ ಹುಡುಗಿಯ ಮೇಲೆ ನೀರನ್ನು ಸುರಿಯುವ ವಿಧಿಯೊಂದನ್ನು ಆಚರಿಸುಸುತ್ತಿದ್ದರು. ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿ ಮಳೆ ಬರಿಸಲು ನಾನಾ ವಿಧಿಗಳಿರುವಂತೆ ಕರ್ನಾಟಕದಲ್ಲೂ ಹಲವು ಆಚರಣೆಗಳಿವೆ. ಉತ್ತರ ಕರ್ನಾಟಕದ ’ಗುರ್ಜಿ’ ಬೆಳ್ದಿಂಗ್ಳಪ್ಪನ ಪೂಜೆ, ಕುಂಡುಚಿತ್ತೆ ಹಬ್ಬ, ತೊಗಲುಗೊಂಬೆ ಪ್ರದರ್ಶನ, ಗ್ರಾಮ ದೇವತಾರಾಧನೆ, ಜಾತ್ರೆಗಳ ಪ್ರದರ್ಶನ, ಜೋಕುಮಾರನ  ಪೂಜೆ-ಮೊದಲಾದ ಆಚರಣೆಗಳನ್ನ ನೆರವೇರಿಸುವುದರಿಂದ ಮಳೆ ಬರುತ್ತದೆಂಬ ಭಾವನೆ ಇದೆ. ಮಳೆಗೆ ಹೆದರಿ ಹೊಳೇಲಿ ಹಾರಿದ ಹಾಗೆ, ಮಳೆ ಜೋಯಿಸನ ಮಿಂಡ, ಕತ್ತೆ ಗುಡಿಗಾರನ ಮಿಂಡ, ಮಳೆಮಾರು ಮರಣ ಯಾರೂ ಅರಿಯರು, ಮಳೆಯಾದರೆ ಕೇಡಿಲ್ಲ ಮಗನುಂಡರೆ ಕೇಡಿಲ್ಲ, ಮಳೆಗಾಲದ ಬಿಸಿಲು ನಂಬಬಾರದು ನಗೆಗಾರನ ಮಾತು ನಂಬಬಾರದು, ಮಳೆನೀರು ಬಿಟ್ಟು ಮಂಜಿನ ನೀರಿಗೆ ಕೈಯೊಡ್ಡಿದ ಹಾಗೆ, ಮಳೆ ಹನಿ ಬಿಟ್ಟರೂ ಮರದ ಹನಿ ಬಿಡಲಿಲ್ಲ-ಇತ್ಯಾದಿ ಗಾದೆಗಳೂ ಮಳೆಯ ಬಗೆಗಿವೆ. ಸಾಕಷ್ಟು ಹಾಡುಗಳೂ ಕಥೆಗಳೂ ಮಳೆಯ ಬಗೆಗಿವೆ.

ಪ್ರತಿಯೊಂದು ಸಾಂಸ್ಕೃತಿಕ ರಂಗದಲ್ಲೂ ಮಿಂಚನ್ನು ದೇವತೆಎಂದು ಭಾವಿಸಲಾಗಿದೆ. ಅಥವಾ ದೇವರು ಪ್ರಕಟವಾಗುವ ರೀತಿ ಎಂದೇ ತಿಳಿದಿದ್ದಾರೆ. ಸಿಡಿಲಿನ ಬಗೆಗೆ ಜನ ಹೆದರುತ್ತಾರೆ. ಉದಾಹರಣೆಗೆ ಕ್ಯಾಲಿಫೋರ್ನಿಯಾದ ಈಶಾನ್ಯ ಭಾಗದ ಅಖೊಮಾವಿಗಳು ಹೇಳುವ ಕಥೆಯಲ್ಲಿ ಗುಡುಗು ಹಾಗೂ ರಣಹದ್ದು ಇವುಗಳ ನಡುವೆ ನಡೆದ ಸ್ಪರ್ಧೆಯಲ್ಲಿ ಗುಡುಗು ಹೇಗೆ ವಿಧಿಸುತ್ತದೆ. ವಸಂತ ಕಾಲದಲ್ಲಿ ಪ್ರಸವಿಸಲಿರುವ ಹೆಂಗಸು ಸಿಡಲು ಬಡಿದಂತೆ ಕನಸು ಕಂಡರೆ ಆಕೆ ಸತ್ತುಹೋಗುತ್ತಾಳೆ. ಈ ಸಿಡಿಲನ್ನು ಹುಟ್ಟಿಸಿದ ಮೋಡವನ್ನು ಖಂಡಿಸುವ ರೀತಿಯನ್ನು ತಿಳಿದ ಮಾಂತ್ರಿಕ ಪುರೋಹಿತನಿಂದ ಚಿಕಿತ್ಸೆ ಪಡೆದರೆ ಮಾತ್ರ ಆಕೆ ಬದುಕುವುದು ಸಾಧ್ಯ. ಸಿಡಿಲಿನಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಜನರು ಸುಟ್ಟ ಮರ ಕೊರಡುಗಳ ಕೆಳಗೆ ತೆವಳುತ್ತರಾರೆ. ಬಯಲು ಜಾಗಗಳಿಗೆ ಓಡುತ್ತಾರೆ. ನೀರಿಗೆ ಹಾರುತ್ತಾರೆ. ತಲೆಯನ್ನು ಮುಚ್ಚಿಕೊಳ್ಳುತ್ತಾರೆ. ರ್ಯಾಕೂನ ಚರ್ಮವನ್ನು ಎತ್ತಿಹಿಡಿದುಕೊಳ್ಳುತ್ತಾರೆ ಮತ್ತು ಎಷ್ಟೋ ವೇಳೆ ಸಿಡಿಲಿನೊಂದಿಗೆ ಮಾತನಾಡಿ ಬೇರೆಲ್ಲಾದರೂ ಹೋಗುವಂತೆ ಆಕೆ ಅಥವಾ ಆತನಿಗೆ ಹೇಳುತ್ತಾರೆ.

ಹರಿಶ್ಚಂದ್ರ ಕಾವ್ಯದಲ್ಲಿ ’ಸಿಡಿಲು ಹೊಡೆವಡೆಹಿಡಿದ ಕೊಡೆ ಕಾವುದೆ, ಸಿಡಿಲ ಪೊಟ್ಟತಾಗಟ್ಟಿ ಸೇಕವ ಕೊಡುವರೆ’ ಎಂಬ ಮಾತು ಬಂದಿದೆ. ಕಾಲು ಮುಂದು ಮಾಡಿಕೊಂಡು ಮಗು ಹುಟ್ಟಿದರೆ ಸಿಡಿಲು ಬಡಿಯುತ್ತದೆ. ಮಿಂಚು ಸಿಡಿಲು, ಗುಡುಗು ಎದ್ದಾಗ ಕಂಚಿನ ಸಾಮಾನುಗಳನ್ನು ಹೊರಕ್ಕೆ ತೆಗೆದುಕೊಂಡು ಹೋಗಬಾರದು ಎಂಬ ನಂಬಿಕೆಗಳೂ ನಮ್ಮಲ್ಲಿವೆ. ಅರ್ಜುನ ತನ್ನ ಚಾವಟಿಯಿಂದ ಕುದುರೆಗಳಿಗೆ ಹೊಡೆಯುವುದೇ ಗುಡುಗು, ಸಿಡಿಲು, ಮಿಂಚು, ಈ ವೇಳೆಯಲ್ಲಿ ದೇವೇಂದ್ರ ತನ್ನ ಮಗನನ್ನು ಸಮಾಧಾನ ಪಡಿಸುತ್ತ ಭೂಲೋಕದಲ್ಲಿ ಬಸರಿಯರು, ಬಾಣಂತಿಯರು, ಮಕ್ಕಳು ಮರಿ ಇದ್ದು ಅವರು ಹೆದರಿಕೊಳ್ಳುತ್ತಾರೆ. ಆದ್ದರಿಂದ ನೀನು ಜೋರಾಗಿ ಹೊಡೆಯಬೇಡ ಎಂದು ಹೇಳುತ್ತಿರುತ್ತಾನಂತೆ. ಆದರೂ ಒಮ್ಮೊಮ್ಮೆ ಅರ್ಜುನ ಜೋರಾಗಿ ಚಾವಟಿಯಿಂದ ಹೊಡೆದಾಗ ಸಿಡಿಲು ಉಂಟಾಗುತ್ತದೆಂದು ಹೇಳುತ್ತಾರೆ. ಆಮೆ ಚಿಪ್ಪು, ನಾಗರಹಾವು ಇದ್ದ ಜಾಗಕ್ಕೆ ಸಿಡಿಲು ಹೊಡೆಯುತ್ತದೆ. ಸಿಡಿಲು ಹೊಡೆದು ಬದುಕಿಕೊಂಡವರು ಶ್ರೀಮಂತರಾಗುತ್ತಾರೆ. ಸಿಡಿಲು ಹೊಡೆದಾಗ ತೊಟ್ಟಿಲಿಗೆ ಕೊಡ್ಲಿಯನ್ನು ಹಾಕಬೇಕು ಮತ್ತು ಕಂಚಿನ ವಸ್ತುಗಳನ್ನು ಹೊರಗೆ ಇಡಬಾರದು, ಸಿಡಿಲುಂಟಾದಾಗ ಚೊಚ್ಚಿಲು ಮಕ್ಕಳು ಹೊರಗೆ ಇರಬಾರದು (ಅವರಿಗೆ ಹೊಡೆಯುತ್ತದಂತೆ)-ಇತ್ಯಾದಿ ನಂಬಿಕೆಗಳೂ ನಮ್ಮಲ್ಲಿ ಯತೇಚ್ಚವಾಗಿವೆ.

ಇದುವರೆಗೂ ನಡೆದಿರುವ ಎರಡು ದಿನದ ವಿಚಾರ ಸಂಕಿರಣದಲ್ಲಿ ಸೂರ‍್ಯ, ಚಂದ್ಳ ಆಕಾಶ, ಮೋಡ-ಮಳೆ, ಗಾಳಿ, ಗ್ರಹ, ನಕ್ಷತ್ರ ಹಾಗೂ ಆಫ್ರಿಕಾ ಬುಡಕಟ್ಟು ಜನಾಂಗ, ಅಮೆರಿಖಾ ಬುಡಕಟ್ಟು ಜನಾಂಗ, ಭಾರತದ ಬುಡಕಟ್ಟು ಜನಾಂಗಗಳಲ್ಲಿರುವ ಆಕಾಶ ಜಾನಪದದ ಬಗೆಗೆ ವಿದ್ವತ್ಪೂರ್ಣವಾದ ಪ್ರಬಂಧಗಳನ್ನು ಪ್ರಬಂಧಕಾರರು ವಂಡಿಸಿದ್ದಾರೆ. ಒಂದೊಂದು ಪ್ರಬಂಧವೂ ಆ ನಿಟ್ಟಿನಲ್ಲಿ ದೀರ್ಘವಾಗಿ ಯೋಚಿಸುವಂತೆ ಮಾಡಿವೆ. ಲಿಖಿತ ಜಾನಪದ, ನಗರ ಜಾನಪದ, ಖನಿಜ ಜಾನಪದ, ಸಸ್ಯ ಜಾನಪದ, ವಿಶಿಷ್ಟ ಜಾನಪದ-ಜಾತ್ರೆ, ಜಾನಪದ-ಎಂದು ಕನ್ನಡ ಜಾನಪದದ ಕ್ಷಿತಿಜ ಹೊಸ ಹೊಸ ಶಾಖೆಗಳ ಉದ್ಘಾಟನೆಯ ಕಡೆಗೆ ನಾಗಾಲೋಟದಿಂದ ಹಾರುತ್ತಿರುವ ಸಂದರ್ಭದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠವು ’ಆಕಾಶ ಜಾನಪದ’ ಎಂಬ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳುವುದರ ಮೂಲಕ ಕನ್ನಡ ಜಾನಪದದಲ್ಲಿ ಹೊಸ ಶಾಖೆಯೊಂದನ್ನು ಉದ್ಘಾಟಿಸಿದ ಕೀರ್ತಿಗೆ ಪಾತ್ರವಾಗಿದೆ ಎಂದು ನಾನು ಭಾವಿಸಿದ್ದೇನೆ. ಈ ಸಂದರ್ಭದಲ್ಲಿ ಈ ಒಂದು ಹೊಸ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ನನಗೆ ತಿಳಿದ ಕೆಲವು ಮಾತುಗಳನ್ನು ಹೇಳಲು ಅವಕಾಶ ಕಲ್ಪಿಸಿಕೊಟ್ಟ ಕನ್ನಡ ಅಧ್ಯಯನ ಪೀಠದ ಮುಖ್ಯಸ್ಥರಿಗೆ ನನ್ನ ವಂದನೆಗಳು. ಇಂಥ ಹೊಸ ಹೊಸ ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳುವರ ಮೂಲಕ ಕನ್ನಡ ಅಧ್ಯಯನ ಪೀಠವು ಕನ್ನಡದ ಕಾರ್ಯಕ್ರಮಗಳಲ್ಲಿ ಚಾರಿತ್ರಿಕ ದಾಖಲೆ ಸ್ಥಾಪಿಸಲೆಂದು ಆಶಿಸುತ್ತಾ ನನ್ನ ಮಾತುಗಳನ್ನು ಮುಗಿಸುತ್ತೇನೆ.

* * *