ಪ್ರಪ್ರಥಮ ಜಾನಪದ ವಿದ್ವಾಂಸರೆಂದು ಖ್ಯಾತಿಪಡೆದ ಡಾ.ಬಿ.ಎಸ್‌.ಗದ್ದಗಿಮಠರು ಜಾನಪದ ಸಾಹಿತ್ಯದ ವಿಶ್ವಕೋಶದಂತಿದ್ದರು. ೬೩ ಕ್ಕೂ ಹೆಚ್ಚು ಕವನಗಳನ್ನು ರಚಿಸಿದವರು. ಸದಾಕಾಲ ಕೊರಳಲ್ಲಿ ಪೆನ್ನು ಮತ್ತು ಪೇಪರನ್ನು ಹಾಗೂ ಪ್ಯಾಡನ್ನು ಧರಿಸಿ ಸಾಹಿತ್ಯ ಸಂಗ್ರಹ ಕಾರ್ಯದಲ್ಲಿ ತಮ್ಮನ್ನು ತಾವು ಸತತವಾಗಿ ತೊಡಗಿಸಿಕೊಂಡವರಾಗಿದ್ದರು. ಕಂಚಿನ ಕಂಠವೂ ಅವರಿಗೆ ದೈವದತ್ತ ಕೊಡುಗೆಯಾಗಿತ್ತು.

ಪ್ರವಾಹದ ವಿರುದ್ಧ ದಿಕ್ಕಿಗೆ ಈಜುವವರಿಗೆ ಗಂಡಾಂತರಗಳು ನೂರಾರು. ವೀರನಾದವನು ಅವುಗಳನ್ನು ಮೆಟ್ಟಿ ದಿಟ್ಟತನದಿಂದ ಹೋರಾಡುವ ಹಾಗೆ ಡಾ.ಬಿ.ಎಸ್‌. ಗದ್ದಗಿಮಠ ಅವರು ಕೊನೆ ಉಸಿರು ಇರುವವರೆಗೂ ಸಾಹಿತ್ಯ ಸಂಗ್ರಹಕ್ಕಾಗಿ ಹೋರಾಡಿದವರು. ಹಾರ ಹಂಗು ಮುಲಾಜಿಗೆ ಒಳಗಾಗಾದೆ ಕಾಯಕದಲ್ಲಿ ಕೈಲಾಸವನ್ನು ಕಾಣುವದು ಅವರ ಜೀವನದ ಧ್ಯೇಯವಾಗಿತ್ತು. ಕ್ರಿ.ಶ.೧೯೫೭ ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ವ್ಯಾಸಂಗ ವಿಸ್ತರಣ ಹಾಗೂ ಪ್ರಕಟಣ ವಿಭಾಗದಲ್ಲಿ ಅಸಿಸ್ಟಂಟ್‌ನಿರ್ದೇಶಕರಾಗಿ ಅಮೂಲ್ಯ ಸೇವೆ ಸಲ್ಲಿಸಿರುವರು.

ಜಾನಪದ ಛಂದಸ್ಸನ್ನು ಪ್ರಪ್ರಥಮವಾಗಿ ಗುರುತಿಸಿ ರಚಿಸಿದ ಕೀರ್ತಿಶಾಲಿಗಳು. ಜಾನಪದ ಛಂದಸ್ಸಿನ ಹರಿಕಾರರು. ಡಾ.ಬಿ.ಎಸ್‌. ಗದ್ದಗಿಮಠರಂತ ವಿದ್ವನ್ಮಣಿಗಳು ಧೀರ್ಘಾವಧಿಯವರೆಗೆ ಬದುಕಿದ್ದರೆ ಅಂಥ ವಿದ್ವಾಂಸರ ಮಾರ್ಗದರ್ಶನದಲ್ಲಿ ಅದೆಷ್ಟು ಜನ ಸಂಶೋಧನೆ ಕಾರ್ಯದಲ್ಲಿ ನಿರತರಾಗಿ ಅವರಂತೆ ಜನಪದ ಸಾಹಿತ್ಯ ಭಂಡಾರವಾಗುತ್ತಿದ್ದರೇನೋ! ಅದು ಊಹಾತೀತವಾದುದು.

ಡಾ. ಗದ್ದಗಿಮಠ ಅವರು ಜನಪದ ಸಾಹಿತ್ಯದ ಮಹತ್ವವನ್ನು ಕೊಂಡಾಡಿ “ಅಪಾರವಾದ ನನ್ನ ಸಂಕಲನದಲ್ಲಿ ಮಾದರಿಗಾಗಿ ಅಲ್ಲೊಂದು ಇಲ್ಲೊಂದು ಹಾಡುಗಳನ್ನು ಎತ್ತಿಕೊಂಡು ಜನತಾಗೀತೆಗಳು ಎಂಬ ಕೃತಿಯಲ್ಲಿ ಸಂಗ್ರಹಿಸಿದ್ದೇನೆ, ಇನ್ನುಳಿದ ಸಂಕಲನವು ಎಂದು ಬೆಳಕು ಕಾಣುವದೋ ಏನೋ” ಎಂದು ನೊಂದು ನುಡಿದಿದ್ದಾರೆ.