ಕರ್ನಾಟಕ ರಾಜ್ಯೋದಯದ ಸುವರ್ಣ ವರ್ಷಾಚರಣೆಯ ನಿಮಿತ್ತ ಹಂಪಿ ಕನ್ನಡ ವಿಶ್ವವಿದ್ಯಾಲಯವು ಕಟ್ಟಿರುವ ಹೊನ್ನಾರು ಮಾಲೆಯಲ್ಲಿ ನನ್ನದೊಂದು ಪುಸ್ತಕವನ್ನು ಸೇರಿಸಿದುದಕ್ಕಾಗಿ ನಾನು ವಿಶ್ವವಿದ್ಯಾಲಯದ ಮಾನ್ಯ ಕುಲಪತಿ ಡಾ. ಬಿ. ಎ. ವಿವೇಕ ರೈಯವರಿಗೂ ಪ್ರಸಾರಾಂಗ ನಿರ್ದೇಶಕ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶರಿಗೂ ಅತ್ಯಂತ ಕೃತಜ್ಞನಾಗಿದ್ದೇನೆ.

ಈ ಪುಸ್ತಕದಲ್ಲಿ ಎಲ್ಲ ಹದಿನಾರು ಲೇಖನಗಳೂ ಈ ಮೊದಲು ಅಲ್ಲಲ್ಲಿ ಪ್ರಕಟವಾಗಿವೆ, ಪ್ರಸಾರವಾಗಿವೆ ಅಥವಾ ಉಪನ್ಯಸ್ತವಾಗಿವೆ. ‘ಪಂಜೆ ಮತ್ತು ಪಡುಕೋಣೆಯವರ ಪ್ರಬಂಧ ಸಾಹಿತ್ಯ’ವು ಡಾ. ರಾ.ಯ. ಧಾರವಾಡಕರರಿಗೆ ಅರ್ಪಿತವಾದ ‘ಪ್ರಬಂಧ ಪ್ರಪಂಚ’ದಲ್ಲಿ ಸೇರಿದೆ. ‘ಗುಣಕ್ಕೆ ಕೈಮುಗಿದ ಕವಿ ನಿಸಾರ್’ ಎಂಬುದು ಪ್ರೊ. ಕೆ.ಎಸ್. ನಿಸಾರ್ ಅಹಮ್ಮದ್ ಅಭಿನಂದನ ಸಂಪುಟ ‘ನಿಸಾರ್ ನಿಮಗಿದೋ ನಮನ’ಕ್ಕಾಗಿ ಬರೆದದ್ದು. ಅದನ್ನು ಸ್ವಲ್ಪ ವಿಸ್ತರಿಸಿ ಈ  ಲೇಖನ ಸಂಚಯದಲ್ಲಿ ಸೇರಿಸಿದೆ. ಕಾರಂತರ ‘ಚೋಮನ ದುಡಿ’ಯೂ ಒಂದು ಸಂಮಾನ ಸಂಪುಟಕ್ಕಾಗಿ ರಚಿತವಾದದ್ದು (ಆ ಸಂಪುಟವು ಪ್ರಕಟವಾಗಿಲ್ಲ). ‘ಬೇಂದ್ರೆ ಕಾವ್ಯದಲ್ಲಿ ಹಾಸ್ಯ’, ‘ನೆಹರೂಜಿಯವರ ಬರವಣಿಗೆ’,  ‘ಮಹಾಭಾರತದಲ್ಲಿ ಪರಿಭ್ರಮಣ’ ಮತ್ತು ‘ಕಾವ್ಯಕನ್ನಿಕೆಯ ಅಲಂಕಾರ’ ಈ ನಾಲ್ಕು ಮಂಗಳೂರು ಆಕಾಶವಾಣಿಯಲ್ಲಿ ಪ್ರಸಾರವಾಗಿವೆ. ಇವುಗಳಲ್ಲಿ ‘ನೆಹರೂಜಿಯವರ ಬರವಣಿಗೆ’ಯನ್ನು ಮುಂಬಯಿಯ ‘ತಾಯ್ನುಡಿ’ ಪತ್ರಿಕೆಗಾಗಿ ಕೊಂಚ ಹಿಗ್ಗಿಸಿ ಮತ್ತೆ ಬರೆದಿದ್ದೆ. ‘ಎಸ್ಸೆ’ ಎಂಬುದಕ್ಕೆ ‘ಪ್ರತಿಶಬ್ಧ’ವೆಂಬ ಲೇಖನ ಮೈಸೂರಿನಿಂದ ಪ್ರಕಟವಾಗುತ್ತಿದ್ದ ಮಾಸಿಕ ‘ನಿರ್ಮಲ’ದಲ್ಲಿ ಅಚ್ಚಾಗಿತ್ತು. ‘ದೀಪಾವಳಿ : ಕನ್ನಡ ಕವಿಗಳ ಕಣ್ಣಲ್ಲಿ’ ಹಾಗೂ ‘ಕಬ್ಬು ಮತ್ತು ಕಬ್ಬಿಗ’ ಎಂಬವು ಉದಯವಾಣಿ ದೈನಿಕದ ಸಾಪ್ತಾಹಿಕ ಸಂಪುಟದಲ್ಲಿ ಮುದ್ರಿತವಾಗಿವೆ. ಮಿಕ್ಕ ಆರು ಭಾಷಣಗಳು : ‘ಗೋವಿಂದ ಪೈಯವರ ಕಾವ್ಯಲೋಕ’ ಬೆಂಗಳೂರಿನ ಸುರಾನಾ ಕಾಲೇಜಿನಲ್ಲಿ ಪೈಯವರ ನೆನಪಿನಲ್ಲಿ ನೆರವೇರಿಸಿದ ಉತ್ಸವ ಕಾರ್ಯಕ್ರಮದಲ್ಲಿ ಒಂದು ಗೋಷ್ಠಿಯ ಅಧ್ಯಕ್ಷ ಭಾಷಣ. ‘ಡಿ.ವಿ.ಜಿ ವಾಙ್ಮಯ : ಧರ್ಮ, ತತ್ವ’ ಕಾಸರಗೋಡಿನ ಸರಕಾರೀ ಕಾಲೇಜಿನಲ್ಲಿ ಜರುಗಿದ ಡಿ.ವಿ.ಜಿ ಶತಮಾನೋತ್ಸವ ಸಂದರ್ಭದ ಒಂದು ಉಪನ್ಯಾಸ. ‘ವಿ.ಸೀ : ಎರಡು ಸ್ಮೃತಿ ಚಿತ್ರಗಳು’ ಬೆಂಗಳೂರಿನ ಬಿ.ಎಂ.ಶ್ರೀ ಪ್ರತಿಷ್ಠಾನದಲ್ಲಿ ಮಾಡಿದ ಭಾಷಣ. ಕರ್ನಾಟಕ ಸಾಹಿತ್ಯ ಅಕಾಡೆಮಿಯು ಪುತ್ತೂರಿನ, ವಿವೇಕಾನಂದ ಕಾಲೇಜಿನಲ್ಲಿ ‘ದಕ್ಷಿಣ ಕನ್ನಡದ ನವೋದಯ ಕಾವ್ಯ’ವನ್ನು ಕುರಿತು ಏರ್ಪಡಿಸಿದ್ದ ವಿಚಾರ ಸಂಕೀರಣದಲ್ಲಿ ಓದಿದ ಉಪನ್ಯಾಸ ‘ಕೊಳಂಬೆಯವರ ಕಾವ್ಯ’ವಾದರೆ, ಬೆಂಗಳೂರಿನ ‘ಸ್ನೇಹ ವಲಯ’ವು ವಿ. ಎಂ. ಇನಾಂದಾರರ ಕೃತಿಗಳನ್ನು ಕುರಿತು ಆಯೋಜಿಸಿದ್ದ ವಿಚಾರ ಸಂಕೀರಣದಲ್ಲಿ ನೀಡಿದ ಉಪನ್ಯಾಸ ‘ಇನಾಂದಾರರ ಕಾದಂಬರಿಗಳು : ಜೀವನದೃಷ್ಟಿ’. ‘ದೇಶೀ ಸಾಹಿತ್ಯದಲ್ಲಿ ವಿನೋದ’ವೆಂಬುದು ಕರ್ನಾಟಕ ಸಾಹಿತ್ಯ ಅಕಾಡೆಮಿಯಯ ಮಂಡ್ಯದಲ್ಲಿ ಸಂಘಟಿಸಿದ್ದ ‘ಕನ್ನಡದಲ್ಲಿ ವಿನೋದ ಸಾಹಿತ್ಯ’ವೆಂಬ ವಿಚಾರ ಗೋಷ್ಠಿಯಲ್ಲಿ ಓದಿದ ಭಾಷಣ. ಈ ಸಂದರ್ಭದಲ್ಲಿ ಲೇಖನಗಳನ್ನು ಪ್ರಕಟಿಸಿದ ಗ್ರಂಥ ಮತ್ತು ಪತ್ರಿಕೆಗಳ ಸಂಪಾದಕರನ್ನೂ ಭಾಷಣಗಳಿಗೆ ಅವಕಾಶ ನೀಡಿದ ಆಕಾಶವಾಣಿ ಅಧಿಕಾರಿಗಳು ಹಾಗೂ ಕಾರ್ಯಕ್ರಮಗಳ ವ್ಯವಸ್ಥಾಪಕರನ್ನೂ ಕೃತಜ್ಞತೆಯಿಂದ ಸ್ಮರಿಸುತ್ತಿದ್ದೇನೆ.

ಇಲ್ಲಿರುವ ಲೇಖನಗಳಲ್ಲಿ ಮುಖ್ಯವಾಗಿ ಉಪನ್ಯಾಸ ಭಾಷಣಗಳಲ್ಲಿ – ಅಲ್ಲಲ್ಲಿ ‘ನಾನು’ ‘ನನ್ನ’ ಮೊದಲಾದ ಪದಪ್ರಯೋಗವಿದೆ. ಅವು ಕೇವಲ ಸರ್ವನಾಮಗಳಲ್ಲದೆ ‘ಅಹಂ’ ಸೂಚಕವಲ್ಲವೆಂದು ವಿನಮ್ರವಾಗಿ ವಿಜ್ಞಾಪಿಸುತ್ತೇನೆ. ಭಾಷಣ-ಉಪನ್ಯಾಸಗಳ ಧಾಟಿಯನ್ನು ಹೆಚ್ಚು ಕಮ್ಮಿ ಮೂಲದಲ್ಲಿದ್ದಂತೆಯೇ ಉಳಿಸಿಕೊಳ್ಳಬೇಕೆಂದು ನನ್ನ ಉದ್ದೇಶ. ಹಾಗಾಗಿ ಅಂತಹ  ಹಾಗಾಗಿ ಅಂತಹ ಸರ್ವನಾಮ ಪ್ರಯೋಗ ಅನಿವಾರ್ಯವಾಯಿತು. ಸಹೃದಯರು ಇದನ್ನು ಪರಿಭಾವಿಸುವರೆಂಬ ವಿಶ್ವಾಸ ನನ್ನಲ್ಲಿದೆ.

ನನ್ನದೇ ಒಂದು ನೆಲೆಯಲ್ಲಿ-ನೆಲದಲ್ಲಿ ಒಂದಿಷ್ಟು ಸಾಹಿತ್ಯ ಪರಿಚಾರಿಕೆ ಮತ್ತು ಒಂದಿಷ್ಟು ಸಾಹಿತ್ಯ ಕೃಷಿ ಮಾಡುತ್ತಿರುವ ನಾನು ಹಂಪಿ ವಿಶ್ವವಿದ್ಯಾಲಯದ ವಿಶಾಲ ದೃಷ್ಟಿಪಥದಲ್ಲಿ ಕಾಣಿಸಿಕೊಳ್ಳುವಂತಾದದ್ದು ನಿಜವಾಗಿಯೂ ಒಂದು ದೈವಕೃಪೆ, ಭಾಗ್ಯ ವಿಶೇಷ. ಆ ಅನುಗ್ರಹಕ್ಕಾಗಿ ದೇವರನ್ನು ನಾನು ಭಕ್ತಿಯಿಂದ ವಂದಿಸುತ್ತೇನೆ. ಸೌಭಾಗ್ಯಕ್ಕಾಗಿ ವಿಶ್ವವಿದ್ಯಾಲಯದ ವರಿಷ್ಠರನ್ನು ಮತ್ತೊಮ್ಮೆ ನಮಸ್ಕರಿಸುತ್ತೇನೆ.

ಎಮ್. ರಾಮಚಂದ್ರ
ಕಾರ್ಕಳ (ಉಡುಪಿ ಜಿಲ್ಲೆ)