ಋಗ್ವೇದ ಐತರೇಯ ಬ್ರಾಹ್ಮಣದ ಹರಿಶ್ಚಂದ್ರ ಉಪಾಖ್ಯಾನದಲ್ಲಿ ಒಂದು ಮಂತ್ರ ಹೀಗಿದೆ:

ಕಲಿಃ ಶಯಾನೋ ಭವತಿ | ಸಂಜಿಹಾನಸ್ತು ದ್ವಾಪರಃ
ಉತ್ತಿಷ್ಠಿನ್ ತ್ರೇತಾಭವತಿ | ಕೃತಂ ಸಂಪದ್ಯತೇ ಚರನ್ ||

ಆ ಮುಂದಿನ ಮಂತ್ರಗಳು ಚರೈವೇತಿ, ಚರೈವೇತಿ, ಚರೈವೇತಿ ಎಂದು ಅಂತ್ಯವಾಗುತ್ತವೆ. ‘ಮಲಗಿದರೆ ಕಲಿಯು, ಕುಳ್ಳಿರೆ ದ್ವಾಪರ, ನಿಂತರೆ ತ್ರೇತಾ, ನಡೆವುದೆ ಕೃತವು – ನಡೆದೇ ನಡೆವುದು, ನಡೆಯುತ ಇರುವುದು’ ಎಂಬುದು ಅದರ ತಾತ್ಪರ್ಯ. ಚತುರ್ಯುಗಗಳಲ್ಲಿ ಕೃತವೆಂಬುದು ಪ್ರಥಮ ಮತ್ತು ಪರಮಶ್ರೇಷ್ಠ ಎನ್ನುತ್ತೇವೆ. ‘ಕೃತ’ವೆಂಬ ಹೆಸರೇ ಅದರ ಹಿರಿಮೆಯನ್ನು ಹೇಳುತ್ತದೆ. ಕೃತವೆಂದರೆ ದುಡಿಮೆ, ದುಡಿಮೆಯಿಂದ ಗಳಿಕೆ, ಗಳಿಕೆಯಿಂದ ಹಿರಿತನ. ‘ನಡೆವುದೇ ಕೃತವು’ ಎಂದರೆ ಒಂದಲ್ಲೊಂದು ಕೆಲಸವನ್ನು ಹಿಡಿದು ದುಡಿಯುವುದು ಎಂದೇ ಅರ್ಥ. ಆದುದರಿಂದ ಕೃತ ಅಥವಾ ಕೃತಯುಗವೆಂಬುದು ಉತ್ಕರ್ಷದ, ಊರ್ಧ್ವಗತಿಯ, ಸಾಹಸ ಮನೋವೃತ್ತಿಯ ಸಂಕೇತ..

ಮನುಷ್ಯ ಮಾತ್ರನೇ ಅಲ್ಲ. ತರುಗುಲ್ಮಲತೆಯೇ ಮೊದಲಾದ ಸ್ಥಾವರಗಳನ್ನು ಬಿಟ್ಟು, ಮಿಕ್ಕ ಎಲ್ಲ ಜೀವಿಳೂ ಚರಿಸುತ್ತವೆ, ಚರಿಸುತ್ತಲೇ ಇರುತ್ತವೆ. ಈ ಚರಣ ಅಥವಾ ಚಲನ ಪಾದಗಳಿಂದ ಇರಬಹುದು. ಹೊಟ್ಟೆ ಹೊಸೆಯುವುದರಿಂದ ಇರಬಹುದು, ತೆವಳುವುದರಿಂದ ಇರಬಹುದು, ರೆಕ್ಕೆ ಬೀಸುವುದರಿಂದ ಇರಬಹುದು ಅಥವಾ ಪಕ್ಕೆಗಳನ್ನು ಬಡಿದು ಈಜುವುದೂ ಆಗಬಹುದು. ಹಾಗಾಗಿ ಮನುಷ್ಯ ಸಹಿತವಾಗಿ ಎಲ್ಲ ಜೀವಿಗಳದೂ, ‘ಚಾರಣ ಸಂಸ್ಕೃತಿ’ ಎನ್ನಬಹುದು. ಮನುಷ್ಯೇತರವಾದ ಜೀವಿಗಳಲ್ಲಿ ಚಾರಣವು ಮುಖ್ಯವಾಗಿ ಉದರಂಭರಣಕ್ಕಾಗಿ ಅಥವಾ ಜೀವರಕ್ಷಣಕ್ಕಾಗಿ ಆದರೆ ಮನುಷ್ಯನಲ್ಲಿ ಅದು ಅನ್ನಸಂಪಾದನೆಯೊಂದಿಗೆ ಉತ್ಕರ್ಷದ, ವಿಕಾಸ, ಸಾಹಸದ ಪಥಕ್ರಮಣವೂ ಆಗುತ್ತದೆ. ಚಾರಣಕ್ಕೆ ಪರ್ಯಾಯಪದ ‘ಪರಿಭ್ರಮಣ’. ಚಾರಣವೆಂದರೆ ನಡೆಯುವುದು, ಪರಿಭ್ರಮಣವೆಂದರೆ ಸುತ್ತುವುದು. ಈ ಎರಡೂ ನಡಿಗೆಯ ವಿಭಿನ್ನರೂಪಗಳು, ಅಷ್ಟೆ.

ಕವಿವರ್ಯ ಕುವೆಂಪು ಅವರು ತಮ್ಮ ‘ಮಹಾಶ್ವೇತೆಯ ತಪಸ್ಸು’ ಎಂಬ ಪ್ರಬಂಧವನ್ನು ಹೀಗೆ ಪ್ರಾರಂಭಿಸುತ್ತಾರೆ: “ಮನುಷ್ಯನ ಮನಸ್ಸು ಊರ್ಧ್ವಮುಖಿ. ಅವನ ಕನಸು ಗಗನಗಾಮಿ. ಅವನ ಕಲ್ಪನೆ ನಕ್ಷತ್ರ ಯಾತ್ರಿ….. ಇಂದಿಲ್ಲದಿದದರೂ ಮುಂದೆ ಕೈಗೂಡಬಹುದೆಂದು ನಂಬಿರುವ ಸುಖಶಾಂತಿಗಳ ಸಂಪಾದನೆಯೆ ಮಾನವ ಸಾಹಸಕ್ಕೆ  ಪರಮಗಂತವ್ಯ…..” ಸುಖ ಶಾಂತಿಗಳನ್ನು ಸಂಪಾದಿಸಬಲ್ಲ ಮಾನವನ ಸಾಹಸ ಪ್ರೀತಿ ಕಲಾ ಪ್ರಕಾರವಾದ ಕಾವ್ಯ ಅಥವಾ ಸಾಹಿತ್ಯ ಸೃಷ್ಟಿಯಲ್ಲೂ ಪ್ರಕಟವಾಗುತ್ತದೆ. ಭರತ ವರ್ಷದ ಆದಿ ಮಹಾಕಾವ್ಯಗಳೆನಿಸಿರುವ ವಾಲ್ಮೀಕಿ ರಾಮಾಯಣ, ಮತ್ತು ವ್ಯಾಸ ಮಹಾಭಾರತ, ಕಾಳಿದಾಸನ ಶಾಕುಂತಲ ಮತ್ತು ರಘುವಂಶ, ಬಾಣಭಟ್ಟನ ಕಾದಂಬರಿ, ಗ್ರೀಕ್ ಕವಿ ಹೋಮರನ ಈಲಿಯೆಡ್ ಮತ್ತು ಒಡಿಸ್ಸಿ, ಇಟೆಲಿಯನ್ ಕವಿ ವರ್ಜಿಲನ ಈನಿಯಡ್ ಮತ್ತು ಡಾಂಟೆಯ ಡಿವೈನ್ ಕಾಮಿಡಿ, ಆಂಗ್ಲೇಯ ಮಿಲ್ಟನ್ನನ ‘ಪ್ಯಾರಲಾಸ್ ವೇಸ್ಟ್’ ಈಯೆಲ್ಲ ಮಹಾಕಾವ್ಯಗಳೂ ಮಾನವನಿಗೆ ಸುಖಶಾಂತಿಗಳನ್ನು ಊಡುತ್ತಿರುವ ಬತ್ತದ ರಸ ಸಮುದ್ರಗಳೇ ಆಗಿವೆ. ಈ ಕಾವ್ಯಪ್ರಬಂಧಗಳಲ್ಲಿ, ಅವುಗಳಲ್ಲಿ ಚಿತ್ರಿತವಾದ ಕಾವ್ಯ ಪಾತ್ರಗಳಲ್ಲಿ ಕೆಲವು ಅಥವಾ ಹಲವು ಒಂದಲ್ಲೊಂದು ಸಂದರ್ಭದಲ್ಲಿ ಯಾನ, ಚಾರಣ, ಪ್ರಸ್ಥಾನ, ಅಥವಾ ಪರಿಭ್ರಮಣ ನಿರತವಾದುದನ್ನು ಕಾಣುತ್ತೇವೆ. ಅದಕ್ಕೆ ಕಾರಣ ಕೇವಲವಾದ ವಿಹಾರ, ವ್ಯಸನಗಳಿರಬಹುದು, ದಂಡಯಾತ್ರೆ ಚೈತ್ರ ಯಾತ್ರೆಗಳಿರಬಹುದು, ರಾಜ್ಯತ್ಯಾಗ ಅಧಿಕಾರ ನಷ್ಟಗಳಿರಬಹುದು, ತೀರ್ಥಯಾತ್ರೆ ಪುಣ್ಯಸಂಪಾದನೆಯೇ ಆಗಿರಬಹುದು. ವಾಲ್ಮೀಕಿಯ ರಾಮಾಯಣದಲ್ಲಿ ಹೆಸರೇ ಸೂಚಿಸುವಂತೆ ವನಪ್ರದೇಶದಲ್ಲಿ ರಾಮನ ಅಯನವೇ ಪ್ರಧಾನ. ಹೋಮರನ ‘ಒಡೆಸ್ಸಿ’ಯಲ್ಲಿ ಒಡಿನ್ಯೂಸ್ ಅಥವಾ ಯೂರಿಪಿಡಸ್ಸನ ಸುದೀರ್ಘ ಸಾಗರ ಸಂಚಾರಕ್ಕೆ ಪ್ರಾಶಸ್ತ್ಯ. ಅದರಿಂದಾಗಿ ‘ಒಡಿಸ್ಸಿ’ ಎಂಬುದು ಈಗ ‘ಮಹಾಯಾನ’ ಎಂಬ ಅರ್ಥದಲ್ಲೂ ಪ್ರಯುಕ್ತವಾಗುತ್ತಿದೆ. ಆಂಗ್ಲ ಲೇಖಕ ಜಾನ್ ಬುನಿಯನ್ನನ ಸುಪ್ರಸಿದ್ಧ ಕಥೆ ‘The Pilgrims Progess”ನಲ್ಲಿ ಕ್ರಿಶ್ಚಿಯನ್ ಎಂಬ ವ್ಯಕ್ತಿಯ ಊರ್ಧ್ವಗಾಮಿಯಾದ ಪರಿಭ್ರಮಣವು ಸಾಂಕೇತಿಕವಾಗಿ ವರ್ಣಿತವಾಗಿದೆ.

ನಮ್ಮ ಭರತ ವರ್ಷದ ಎರಡನೆಯ ರಾಷ್ಟ್ರೀಯ ಕಾವ್ಯವಾಗಿರುವ-ಅದನ್ನು ಇತಿಹಾಸವೆಂದೂ ಕರೆಯುವುದುಂಟು. ‘ಮಹಾಭಾರತ’ದಲ್ಲಿ ಆಖ್ಯಾನ ಉಪಾಖ್ಯಾನಗಳು ಅನೇಕವಿದ್ದರೂ ಆಧಿಕಾರಿಕವಾದ ವಸ್ತು ಪಾಂಡವ-ಕೌರವದ್ದೇ ಕಥೆ. ದಾಯಾದ ಮಾತ್ಸರ್ಯ, ಯುದ್ಧ, ಜಯಾಪಜಯ, ಪಟ್ಟಾಭಿಷೇಕ ಇಂತಹ ಪ್ರಮುಖ ಪ್ರಸಂಗಗಳಿಗೆ ಹೊಂದಿಕೊಂಡು ಪಾಂಡವರ, ಕೌರವರ, ಅವರ ಬಂಧುಗಳ, ಸಹಚರಿಗಳ ಅನೇಕ ಪರಿಭ್ರಮಣ ಸನ್ನಿವೇಶಗಳೂ ವರ್ಣಿತವಾಗಿವೆ. ಅಂತಹ ಪರಿಭ್ರಮಣ ಸ್ವರೂಪ, ಅವಧಿ, ಪರಿಣಾಮ ಹೇಗೆ, ಎಷ್ಟು, ಏನು ಎಂಬುದನ್ನು ತಕ್ಕಮಟ್ಟಿಗೆ ಉದಾಹರಿಸುವ, ವಿವರಿಸುವ, ವಿವೇಚಿಸುವ ಪ್ರಯತ್ನ ಈ ಉಪನ್ಯಾಸ.

ನಮ್ಮ ದೇಶ ಭರತ ವರ್ಷ, ಭರತಖಂಡ ಅಥವಾ ಭಾರತವೆಂದು ಹೆಸರಾಗುವುದಕ್ಕೂ ವ್ಯಾಸಮಹಾಕಾವ್ಯವನ್ನು ‘ಮಹಾಭಾರತ’ವೆಂದು ಕರೆಯುವುದಕ್ಕೂ ಮೂಲಬೀಜವೆನಿಸಿದ್ದು ಹಸ್ತಿನಪುರಾಧೀಶ ದುಷ್ಯಂತನ ಮೃಗಯಾವ್ಯಸನ, ಆ ಕಾರಣವಾದ ಪರಿಭ್ರಮಣ. ಜಿಂಕೆಯನ್ನು ಬೆನ್ನಟ್ಟಿ ವನಪ್ರದೇಶಕ್ಕೆ ನುಗ್ಗಿದ ದುಷ್ಯಂತ ಆಕಸ್ಮಾತ್ ಕಣ್ವಾಶ್ರಮವನ್ನು ಹೊಕ್ಕು ಅಲ್ಲಿ ಶಕುಂತಲೆಯನ್ನು ಕಂಡು, ಅವಳನ್ನು ಒಲಿದು, ಆಕೆಯ ಕೈ ಹಿಡಿದು ಅವಳಿಂದ ಪಡೆದ ಪುತ್ರರತ್ನ ಸರ್ವದಮನವೇ ಭರತನೆಂದು ಹೆಸರಾದ; ಆರ್ಯಾವರ್ತನ ಪ್ರಥಮ ಚಕ್ರವರ್ತಿಯೆನಿಸಿದ. ಅವನ ಹೆಸರಿಂದಲೇ ಈ ದೇಶವೂ ಪ್ರಸಿದ್ಧವಾಯಿತು. ಚಂದ್ರವಂಶದ ಪ್ರಬಲ ಪ್ರಭುವಾದ ಆಖ್ಯಾನವೂ ಅಂತರ್ಗತವಾದುದರಿಂದ ವ್ಯಾಸಕೃತಿ ‘ಮಹಾಭಾರತ’ವೆಂದು ಜನಮಾನ್ಯವಾಯಿತು. ವ್ಯಾಸೋದಧಿಯಿಂದ ಒಂದು ಕಥಾಬಿಂದುವನ್ನು ಎತ್ತಿಕೊಂಡ ಮಹಾಕವಿ ಕಾಳಿದಾಸ ಅದನ್ನು ಸರಸ ನಾಟಕವಾಗಿ ಬಿತ್ತರಿಸಿದ. ದುಷ್ಯಂತ ಶಕುಂತಲೆಯರ ಪ್ರಣಯ ಪರಿಣಯ ವಿರಹ ಸಮಾಗಮಗಳಲ್ಲಿ ಅವರಿಬ್ಬರ ಜೀವ ಭಾವಗಳು ಹೇಗೆ ಕಾಮದ ಕಳಿಕೆಯನ್ನು ಕಳೆದು ಪರಿಶುದ್ಧವಾದುವು ಎಂಬುದನ್ನು ಸರಸವಾಗಿ ನಿರೂಪಿಸಿ, ‘ವಸಂತ ಋತುವಿನ ಪುಷ್ಪ ಸೌಂದರ್ಯವೂ ಮಾಘುಮಾಸದ ಫಲ ಸಮೃದ್ಧಿಯೂ ಶಾಕುಂತಲ ನಾಟಕದಲ್ಲಿ ಏಕೀಭವಿಸಿವೆ’ಯೆಂದು ಜರ್ಮನ್ ಮಹಾಕವಿ ಗಯಥೆಯಿಂದ ಕೊಂಡಾಟದ ಮನ್ನಣೆಯನ್ನೂ ಕಾಳಿದಾಸ ಪಡೆದ.

ಪಾಂಡು ಮಹಾರಾಜ ತನ್ನ ಪತ್ನೀ ದ್ವಯದೊಂದಿಗೆ ವನಪರಿಭ್ರಮಣ ನಿರತನಾಗಿದ್ದಾಗ ಮೃಗರೂಪದಲ್ಲಿ ಸುರತ ನಿಮಗ್ನವಾದ ಋಷಿದಂಪತಿಗಳನ್ನು ನೋಡಿದ. ಅನುಚಿತ-ಅನೈತಿಕವೆಂದೇ ಹೇಳಬಹುದಾದ-ಚಪಲತೆಯನ್ನು ತಡೆಯಲಾಗದೆ ಮೃಗ ಮಿಥನದ ಮೇಲೆ ಬಾಣ ಪ್ರಯೋಗ ಮಾಡಿದ. ಹರಿಣವಾಗಿದ್ದ ಋಷಿ ಕಿಂದಮ ಸಾಯುವ ಮೊದಲು ನಿಜ ರೂಪವನ್ನು ತಾಳಿ, “ರತಿಕ್ರೀಡಾಸಕ್ತರಾಗಿದ್ದ ನಮ್ಮ ಮೇಲೆ ವಿನಾಕಾರಣ ಬಾಣ ಪ್ರಯೋಗ ಮಾಡಿ, ಪಾಪವನ್ನು ಕಟ್ಟಿಕೊಂಡೆ; ನಿನಗೂ ಹೀಗೆಯೇ ಸುರತ ಸಂದರ್ಭದಲ್ಲಿ ಸಾವು ಸನ್ನಿಹಿತವಾಗಲಿ” ಎಂದು ಶಪಿಸಿದ. ಮುಂದೆ ಆದದ್ದೂ ಹಾಗೆಯೇ-ಪಶ್ಚಾತಾಪ ದಗ್ಧನಾದ ಪಾಂಡು ರಾಜ್ಯತ್ಯಾಗ ಮಾಡಿ, ಕುಂತಿ ಮಾದ್ರಿಯರೊಂದಿಗೆ ಶತಶೃಂಗ ಪರ್ವತದಲ್ಲಿ ಆಶ್ರಮ ವಾಸಿಯಾದ. ದುರ್ವಾಸ ಮಂತ್ರ ಬಲದಿಂದ ಕುಂತಿ ಮಾದ್ರಿಯವರು ಪಂಚಪಾಂಡವರನ್ನು ಪಡೆದದ್ದು ಅಲ್ಲಿಯೇ. ಕ್ರಮೇಣ ಪಾಂಡು ರಾಜನಿಗೆ ಋಷಿ ಶಾಪದ ದುರ್ವಾರತೆ ಮರೆತು ಹೋಯಿತು. ವಸಂತ ಋತುವಿನ ಒಂದು ಸುಂದರ ದಿನ, ಕಾಮವಶನಾದ ಪಾಂಡು ಮಾದ್ರಿಯನ್ನು ಸಮೀಪಿಸಿದ, ಸ್ಪರ್ಶಿಸಿದ. ಅವನ ಹೆಡತಲೆಯಲ್ಲೇ ಕುಳಿತು ಹೊಂಚುತ್ತಿದ್ದ ಸಾವು ಅವನ ಗಂಟಲನ್ನು ಒತ್ತಿಹಿಡಿಯಿತು. ಉಸಿರನ್ನು ಹೀರಿತು. “ನಿಯತಿ ಕೇನ ಲಂಘ್ಯತೇ” ಎಂಬುದು ಸೂಕ್ತಿ. ಪಾಂಡು ಮಾದ್ರಿ ಪ್ರಕರಣದಿಂದ ವಿಧಿನಿಯಮ ಅನುಲಂಘ್ಯ ಎಂಬುದು ಸ್ಥಾಪಿತವಾಯಿತು.

ಪಾಂಡವ-ಕೌರವರು ಬೆಳೆಯುತ್ತಿದ್ದಂತೆ, ಅವರೊಂದಿಗೆ ದಾಯಾದ ಮಾತ್ಸರ್ಯದ ವಿಷಬೀಜವೂ ಮೊಳಕೆಯೊಡೆದು, ಹುಲುಸಾಗಿ ಬೆಳೆದು ಹೆಮ್ಮೆರವಾಯಿತು. ಒಂದೇ ಒರೆಯಲ್ಲಿ ಎರಡು ಖಡ್ಗಗಳನ್ನು ಸೇರಿಸಿ ಇಡಲಾಗದು ಎಂಬುವುದರಿಂದ ಮಗ ದುರ್ಯೋಧನನ ಒತ್ತಾಯಕ್ಕೆ ಮಣಿದ ಧೃತರಾಷ್ಟ್ರ ಪಾಂಡವರನ್ನು ವಾರಣಾವತಕ್ಕೆ ಹೋಗುವಂತೆ ಒಲಿಸಿದ. ತಮ್ಮ ಯೋಗಕ್ಷೇಮದ ಭಾರವನ್ನು ಭಗವಂತನ ಹೆಗಲಿಗೆ ಹೇರಿದ ಪಾಂಡವರು ತಾಯಿ ಕುಂತಿಯೊಂದಿಗೆ ವಾರಣಾವತಕ್ಕೆ ಹೋಗಿ ನೆಲಸಿದರು. ವಿದುರ ಮೊದಲೇ ಎಚ್ಚರಿಸಿದ್ದರಿಂದ ಪಾಂಡವರು ಕಣ್ತೆರೆದುಕೊಂಡೇ ಇದ್ದರು. ಒಂದಿರುಳು ಅವರಿದ್ದ ಅರಮನೆಗೆ ಅಲ್ಲ, ಅರಗಿನ ಮನೆಗೆ ಬೆಂಕಿ ಬಿತ್ತು; ಎಲ್ಲವೂ ಸುಟ್ಟು ಬೂದಿಯಾಯಿತು. ಆದರೆ ಪಾಂಡವರು ಬದುಕಿ ಉಳಿದರು; ವಿಪ್ರವೇಷದಲ್ಲಿ ಏಕಚಕ್ರಪುರವನ್ನು ಸೇರಿದರು. ಅಲ್ಲಿ ಲೋಕಕಂಟಕನಾದ ಬಕಾಸುರನನ್ನು ಭೀಮ ವಧಿಸಿದ. ಅಲ್ಲಿದ್ದಾಗಲೇ ರಾಜಕುಮಾರಿ ದ್ರೌಪದೀ ಸ್ವಯಂವರದ ವಾರ್ತೆಯನ್ನು ಕೇಳಿದ ಪಾಂಡವರು ಪಾಂಚಾಲನಗರಿಗೆ ಹೋದರು. ಗಡ್ಡದುಪಾಧ್ಯರಲ್ಲಿ ಒಬ್ಬನಾಗಿ ಕುಳಿತಿದ್ದ ಅರ್ಜುನ ದ್ರುಪದ ರಾಜ ಪಣವಾಗಿರಿಸಿದ್ದ ಮತ್ಸ್ಯಲಾಂಛನವನ್ನು ಭೇದಿಸಿ, ದ್ರೌಪದಿಯನ್ನು ಗೆದ್ದ. ಅದೇ ವಿವಾಹ ಮಂಟಪದಲ್ಲಿ ಅವರಿಗೆ ಶ್ರೀಕೃಷ್ಣನ ಪ್ರಥಮ ದರ್ಶನವೂ ಆಯಿತು. ಭಗವತ್ಕ್ರಪೆಯಿದ್ದರೆ ವಿಷವೂ ಯ್ವತವಾಗುತ್ತದೆ, ಅಗ್ನಿಯೂ ಪುಷ್ಪವೃಷ್ಟಿಯೆನಿಸುತ್ತದೆ ಎಂಬುದನ್ನು ಪಾಂಡವರ ಈ ಪರಿಭ್ರಮಣ ಪ್ರಕರಣ ನಿರೂಪಿಸುತ್ತದೆ.

ದ್ರೌಪದೀವಿವಾಹದ ಅನಂತರ ಪಾಂಡವರು ಸ್ವಲ್ಪಕಾಲ ಖಾಂಡವ ಪ್ರಸ್ಥದಲ್ಲಿ ವಾಸವಾಗಿದ್ದರು. ಆ ಸಂದರ್ಭ ಪಂಚವಲ್ಲಬೆ ದ್ರೌಪದಿಯನ್ನು ಕುರಿತಂತೆ ಒಂದು ನಿಯಮವನ್ನು ಮಾಡಿಕೊಂಡಿದ್ದರು. ಒಂದು ವಿಶಿಷ್ಟ ಸಂದರ್ಭದಲ್ಲಿ ಅರ್ಜುನ ಆ ನಿಯಮವನ್ನು ಅತಿಕ್ರಮಿಸಬೇಕಾಯಿತು ಮತ್ತು ಪ್ರಾಯಶ್ಚಿತ್ತವಾಗಿ ಹನ್ನೆರಡು ವರ್ಷ ದೇಶಾಂತರವಾಸ ಮಾಡಬೇಕಾಯಿತು. ಆ ಅವಧಿಯಲ್ಲೇ ಅವನು ಗಂಗಾದ್ವಾರದಲ್ಲಿ ಉಲೂಪಿಯೆಂಬ ನಾಗಕನ್ನಿಕೆಯನ್ನೂ ಮಣಿಪುರದ ರಾಜಕುಮಾರಿ ಚಿತ್ರಾಂಗದೆಯನ್ನೂ ದ್ವಾರಾವತಿಯಲ್ಲಿ ಬಲರಾಮ ಶ್ರೀಕೃಷ್ಣರ ಪ್ರಿಯಸೋದರಿ ಸುಭದ್ರೆಯನ್ನೂ ವರಿಸಿದುದು. ನಮ್ಮ ಕನ್ನಡದ ಆದಿಕವಿ ಪಂಪ ಆ  ಸಂದರ್ಭದಲ್ಲಿ ಅರ್ಜುನನನ್ನು ಕರ್ನಾಟಕದ ಬನವಾಸಿಗೂ ಕರೆತಂದು “ಆರಂಕುಸ ಮೊಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ” ಎಂದು ಮುಂತಾಗಿ ಅವನ ಬಾಯಿಂದ ಬಣ್ಣಿಸಿದನಾದರೆ ಅದೇ ನಾಲ್ಕಗ್ಗಳಿಕೆಯ ನಾರಣಪ್ಪ, ಅರ್ಜುನನ್ನು “ಕೇರಳ ತೌಳವ ಕೊಂಕಣಗಳ ವಿಷಮ ವೀಧಿಯಲಿ” ಸುತ್ತಾಡಿಸಿ ಅಲ್ಲಿಯ ಕಾರ್ಗಾಲದ ಉರವಣಿಯನ್ನು ಆತನಿಗೆ ಕಾಣಿಸುತ್ತಾನೆ!.

ರಾಜಸೂಯಯಾಗ ನಿಮಿತ್ತವಾಗಿ ಮತ್ತೆ ಪಾಂಡವರಿಗೆ ಪರಿಭ್ರಮಣ ಯೋಗಪ್ರಾಪ್ತಿಯಾಗುತ್ತದೆ. ಆ ಸಂದರ್ಭದ ಘಟನಾವಿಶೇಷಗಳಲ್ಲಿ ಕೆಲವೆಂದರೆ ಭೀಮಾರ್ಜುನುರು ವಿಪ್ರವೇಷದಲ್ಲಿ ಮಗಧ ದೇಶಕ್ಕೆ ಹೋಗಿ ಜರಾಸಂಧನನ್ನು ವಧಿಸಿದ್ದು, ಭೀಮಸೇನಯಾಗಕ್ಕಾಗಿ ಕೃಷ್ಣ ಮೃಗವನ್ನು ತಂದದ್ದು ಇತ್ಯಾದಿ. ವೈಭವೋಪೇತವಾಗಿ ಜರಗಿದ ರಾಜಸೂಯಯಾಗದ ಅಂತ್ಯದಲ್ಲೇ ನಡೆದ ಕಪಟದ್ಯೂತದಲ್ಲಿ ಪಾಂಡವರು ಸಂಪೂರ್ಣ ಪರಾಜಿತರಾಗಿ, ದ್ಯೂಪದ ಶರತ್ತದಂತೆ ಪತ್ನೀ ಸಹಿತ ವನವಾಸಕ್ಕೆ ಹೊರಡುತ್ತಾರೆ. ವನವಾಸವೆಂದರೆ ಮತ್ತೆ ಪರಿಭ್ರಮಣ-ಕಾವ್ಯಕವನ, ದ್ವೈತವನ ಹೀಗಿರುತ್ತದೆ ಅವರ ಪರ್ಯಟನ. ತನ್ಮಧ್ಯೇ ಅರ್ಜುನ ಇಂದ್ರ ಕೇಲಕ ಪರ್ವತಕ್ಕೂ ತೆರಳಿ ತಶ್ಚರ್ಯೆಯಿಂದ ಪರಶಿವನನ್ನು ಒಲಿಸಿ ಪಾಶುಪತವನ್ನು ಪಡೆಯುತ್ತಾನೆ. ಮತ್ತೆ, ಇಂದ್ರನ ಆಮಂತ್ರಣದಂತೆ ಸ್ವರ್ಗಲೋಕಕ್ಕೂ ಏರಿ ಕಂಟಕಪ್ರಾಯರಾಗಿದ್ದ ನಿವಾತಕವಚರನ್ನು ವಧಿಸಿ ಇಂದ್ರನಿಂದ ದಿವ್ಯಾಸ್ತ್ರಗಳನ್ನು ಪಡೆದು, ಊರ್ವಶಿಯ ಪ್ರೇಮಭಿಕ್ಷೆಯನ್ನು ನಿರಾಕರಿಸಿದುದಕ್ಕೆ ಆಕೆಯಿಂದ ಶಾಪವನ್ನೂ ಪಡೆದು, ಇಂದ್ರ ಕೃಪೆಯಿಂದ ಅ ಶಾಪವನ್ನೇ ವರವಾಗಿಸಿಕೊಂಡು ಭೂಮಂಡಲಕ್ಕೆ ಇಳಿದು ಬರುತ್ತಾನೆ. ದ್ರೌಪದಿಯ ಆಸೆಯನ್ನು ಪೂರೈಸುವುದಕ್ಕಾಗಿ ಸೌಗಂಧಿಕಾ ಪುಷ್ಪವನ್ನು ತರಲು ಹೊರಟ ಭೀಮನಿಗೆ ತನ್ನ ಅಗ್ರಜನೇ ಆದ ಪವನಪುತ್ರ ಹನುಮಂತನ ದರ್ಶನ ಲಾಭವಾಗುತ್ತದೆ. ವಿಪ್ರನೊಬ್ಬನ ಅರಣಿಯನ್ನು ಸಂಪಾದಿಸುವ ನಿಮಿತ್ತವಾಗಿ ಹೊರಟಿದ್ದ ಪಾಂಡವರನ್ನು ವ್ಯಾಸ ಯಕ್ಷಪ್ರಶ್ನೆಗಳ ನಿಕಷಕ್ಕೆ ಒಡ್ಡುತ್ತಾನೆ. ಆ ಪರೀಕ್ಷೆಯಲ್ಲಿ ಧರ್ಮರಾಜ ಉತ್ತೀರ್ಣನಾದುದಲ್ಲದೆ ಪ್ರಶ್ನೆಗಳನ್ನು ಉತ್ತರಿಸಲಾಗದೆ ಸೋತಿದ್ದ ಮತ್ತು ಸತ್ತಿದ್ದ ಸೋದರರನ್ನು ಉಜ್ಜೀವಿಸುತ್ತಾನೆ. ಹೀಗೆ ವನವಾಸದ ಅವಧಿಯಲ್ಲಿ ಪಾಂಡವರು ಮಾಡಿದ ಪರಿಭ್ರಮಣದ ಪರಮ ಫಲಗಳು ಒಂದೆರಡಲ್ಲ, ಹತ್ತು ಹಲವು.

ವನವಾಸ ಅಜ್ಞಾನಗಳ ಅನಂತರ, ಅನಿವಾರ್ಯವಾದ ಕುರುಕ್ಷೇತ್ರ ಯುದ್ಧದಲ್ಲಿ ಪಾಂಡವರು ವಿಜಯಿಗಳಾದರೇನೋ ನಿಜ. ಆದರೆ ಗುರುಜನ ಮತ್ತು ಬಂಧು ವರ್ಗದ ಹತ್ಯೆಯ ಮಹಾಪಾಪ ತಮ್ಮ ತಲೆಯನ್ನು ಸುತ್ತಿಕೊಂಡಿದೆಯೆಂದು ಚಿಂತಿತರಾದರು. ಆ ಪಾಪನಿವಾರಣಾರ್ಥ ಅಶ್ವಮೇಧವನ್ನು ಕೈಗೊಂಡರು. ಅಶ್ವಮೇಧವೆಂದರೆ ಯಾಗಾಶ್ವದ ಲೋಕಸಂಚಾರ, ಅದರ ರಕ್ಷಣಾರ್ಥವಾಗಿ ಮಧ್ಯಮ ಪಾಂಡವನ ಪರಿಭ್ರಮಣ. ಆ ಸಂಚಾರ ಸಂದರ್ಭದಲ್ಲಿ ದೇಹಬಲ ಚಾಪಾಗಮ ಕೃಷ್ಣ ಭಕ್ತಿಗಳಲ್ಲಿ ತನಗೆ ಸಮಾನರೂ ಸಮಧಿಕರೂ ಇದ್ದಾರೆಂಬ ತಥ್ಯವೂ ಅರ್ಜುನನ ಬುದ್ಧಿಗೋಚರವಾಗುತ್ತದೆ. ಸುಧನ್ವ, ಚಂದ್ರಹಾಸಾದಿಗಳಿಂದ ಸೋತು ಗೆಲ್ಲುವ, ಮಗ ಬಭ್ರುವಾಹನ ಸತ್ತು ಬದುಕುವ ಸಂದರ್ಭಗಳಲ್ಲಿ ಮನುಷ್ಯ ಶಕ್ತಿಗೆ ಅತೀತವಾದದ್ದು ಒಂದಿದೆ. ಅದೇ ದೈವಚಿತ್ತ, ಭಗವತ್ಕೃಷೆ ಎಂಬ ಸತ್ಯವು ಪ್ರಕಟವಾಗುತ್ತದೆ.

ಮಹಾಭಾರತದಲ್ಲಿ ವರ್ಣಿತವಾಗಿರುವ ಪರಿಭ್ರಮಣಗಳಲ್ಲಿ ಅಂತಿಮವಾದದ್ದು ಪಾಂಡವರ ಮಹಾಪ್ರಸ್ಥಾನ ಮತ್ತು ಸ್ವರ್ಗಾರೋಹಣ. ಕಾಲಮಹಿಮೆಯಿಂದ ಧರ್ಮಕ್ಷಯವಾಗಿ ಪಾಪಭಾರ ಹೆಚ್ಚುತ್ತ ಬಂದಂತೆ ಇಹಲೋಕದಲ್ಲಿ ತನ್ನ ಕರ್ತವ್ಯ ಭಾಗ ಮುಗಿಯಿತೆಂದು ಲೀಲಾಮಾನುಷವಿಗ್ರಹನಾದ ಶ್ರೀಕೃಷ್ಣನ ಜರಾವ್ಯಾಧನ ಬಾನಪ್ರಯೋಗವೇ ನಿಮಿತ್ತವಾಗಿ ಶರೀರ ತ್ಯಾಗ ಮಾಡಿದ, ಸ್ವಸ್ಥಾನವನ್ನು ಸೇರಿದ. ಪಾಂಡವರಿಗೂ ರಾಜ್ಯಭೋಗ ಸಾಕು, ಪರಗತಿ ಬೇಕು ಎಂದು ತೋರಿ ದ್ರೌಪದೀಸಹಿತರಾಗಿ ಹಸ್ತಿನಾವತಿಯಿಂದ ಮಹಾಯಾತ್ರೆಗೆ ಹೊರಟರು. ನಗರ ಖೇಟವನ್ನು ಕಳೆದು, ನದೀ ನದಗಳನ್ನು ದಾಟಿ, ಮೇರುಪರ್ವತವನ್ನು ಮುಟ್ಟಿ, ಅದನ್ನು ಏರುತ್ತಿರುವಂತೆಯೇ ದಾರಿಯಲ್ಲಿ ದ್ರೌಪದಿ, ಆಮೇಲೆ ಸಹದೇವ, ಮತ್ತೆ ನಕುಲ, ಬಳಿಕ ಅರ್ಜುನ, ಮುಂದೆ ಭೀಮ ಹೀಗೆ ಒಬ್ಬೊಬ್ಬರಾಗಿ ನೆಲಕ್ಕೆ ಬಿದ್ದರು, ಸತ್ತರು. ಸಶರೀರಿಯಾಗಿ ಸ್ವರ್ಗ ಸೇರಿದವನು ಧರ್ಮರಾಜ ಮತ್ತು ಶ್ವಾನರೂಪದಲ್ಲಿ ಅವನನ್ನು ಅನುಸರಿಸಿದ ಧರ್ಮದೇವತೆ ಮಾತ್ರ. ಇದು ಸಾಂಕೇತಿಕವೆಂದೇ ತೋರುತ್ತದೆ: ಪಾಂಡವಾಗ್ರಜ ಯುಧಿಷ್ಠರ ಧರ್ಮಪರವಾದ ಜೀವಾತ್ಮ. ಪತ್ನಿ ದ್ರೌಪದಿ ಮತ್ತು ನಾಲ್ವರು ಸೋದರರು. ಜೀವಾತ್ಮಕ್ಕೆ ಆವರಣವಾಗಿದ್ದ ಅಗ್ನಿಯೇ ಮೊದಲಾದ ಪಾಂಚ ಭೌತಿಕವಾದ ಶರೀರ. ನಾಯಿಯೆಂಬುದು ಯುಧಿಷ್ಠಿರನ ಆತ್ಮಸಾಕ್ಷಿ, ಧರ್ಮಪ್ರಜ್ಞೆಯ ಮೂರ್ತರೂಪ. ಮಹಾಪರಿ ಭ್ರಮಣದ ಅಂತ್ಯದಲ್ಲಿ ಪಂಚಭೂತಗಳು ಒಂದೊಂದಾಗಿ ಸಿಪ್ಪೆ, ತೊಗಟೆಗಳಂತೆ ಕಳಚಿದಾಗ ಜೀವಾತ್ಮ ಪರಿಶುದ್ಧವಾಯಿತು, ಪ್ರಜ್ವಲಿಸಿತು, ಪುಣ್ಯಭಾಜನವೆನಿಸಿತು.

ಮಹಾಭಾರತದಲ್ಲಿ ಪರಿಭ್ರಮಣ ಪ್ರಸಂಗಗಳು ಇನ್ನು ಎಷ್ಟೋ ಇವೆ. ಉದಾಹರಣೆಗೆ ವನವಾಸಿಗಳಾದ ಪಾಂಡವರ ತೀರ್ಥಯಾತ್ರೆ ಮತ್ತು ಅವರನ್ನು ಅಪಮಾನಿಸುವುದಕ್ಕಾಗಿ ಕೌರವರು ಮಾಡುವ ಘೋಷಯಾತ್ರೆ. ಯಾತ್ರೆಯೆಂದರೆ ಪರಿಭ್ರಮಣ ತಾನೇ? ಅಲ್ಲದೆ ಉಪಾಖ್ಯಾನಗಳಾಗಿ ಬರುವ ರಾಮಕಥೆ, ಸಾವಿತ್ರೀ ಸತ್ಯವಾನರ ಕಥೆ, ನಳದಮಯಂತೀ ಕಥೆಗಳಲ್ಲೂ ಪರಿಭ್ರಮಣಗಳನ್ನು ಕಾಣುತ್ತೇವೆ. ಈ ಪರಿಭ್ರಮಣಗಳ ಕಾರಣಗಳು ವಿಭಿನ್ನ, ಪರಿಣಾಮಗಳು ಪ್ರತ್ಯೇಕ. ಮಹಾಭಾರತದಲ್ಲಿ ವರ್ಣಿತವಾಗಿರುವ ಪರಿಭ್ರಮಣಗಳೆಲ್ಲವೂ ಸಾಂಕೇತಿಕ ಎನ್ನಲಾಗದು. ಕೆಲವು ಸಾಂಕೇತಿಕ, ಮತ್ತೆ ಕೆಲವು ಸಾಂದರ್ಭಿಕ. ಎಲ್ಲವಕ್ಕೂ ವಿಶಿಷ್ಟ ಉದ್ದೇಶ, ಸಮುಚಿತವಾದ ಫಲ ಇದ್ದೇ ಇರುತ್ತದೆ.

ಮಹಾಭಾರತದ ಪಾರಮ್ಯವನ್ನು ವರ್ಣಿಸುವಾಗ ಈಯೊಂದು ಉಕ್ತಿಯನ್ನು ಉದ್ಧರಿಸುವುದು ಸಾಮಾನ್ಯ: ‘ಯದಿ ಹಾಸ್ತಿ ತದನ್ಯತ್ರ ಯನ್ನೇಹಾಸ್ತಿನ ಕುತ್ರಚಿತ್’ ಎಂಬುದೇ ಅದು.ಇದು ಶ್ಲೋಕದ ಉತ್ತರಾರ್ಧ. ಪೂರ್ವಾರ್ಧ ಹೀಗಿದೆ. ‘ಧರ್ಮೇಚಾರ್ಥೇ ಚ ಕಾಮೇಚ ಮೋಕ್ಷೇಚ ಭವತರ್ಷಭ’ ಶ್ಲೋಕ ಪಾದಗಳನ್ನು ಓದಿಕೊಂಡರೆ ಅರ್ಥವೂ ಪೂರ್ಣವಾಗುತ್ತದೆ. – ಧರ್ಮ, ಅರ್ಥ, ಕಾಮ, ಮೋಕ್ಷ ವಿಚಾರಗಳಲ್ಲಿ ಏನು ಬೇಕೋ ಅವೆಲ್ಲವೂ ಮಹಾಭಾರತದಲ್ಲಿವೆ. ಅಲ್ಲಿ ಇಲ್ಲದುದು ಇನ್ನೇಲ್ಲೂ ಇರಲಾರದು ಎಂಬುದೇ ಅದು. ಮಹಾಭಾರತದಲ್ಲಿ ವರ್ಣಿತವಾಗಿರುವ ಪರಿಭ್ರಮಣಗಳು, ಪರಿಭ್ರಮಣ ನಿರತವಾದ ವ್ಯಕ್ತಿಗಳು ಚತುರ್ವಿಧ ಪುರುಷಾರ್ಥಗಳಲ್ಲಿ ಧರ್ಮಮೋಕ್ಷಗಳನ್ನೂ ಇಲ್ಲವೇ ಅರ್ಥಕಾಮಗಳನ್ನು ಅಥವಾ ನಾಲ್ಕನ್ನೂ ಲಕ್ಷಿಸಿ ಇರತಕ್ಕವು. ಅವುಗಳನ್ನು ‘ಕವೀನಾಂ ಕವಿ’ಯಾಗಿರುವ ಮಹರ್ಷಿ ವ್ಯಾಸರು ವರ್ಣಿಸಿದ್ದಾರೆ. ಚೌಕಟ್ಟಿನಲ್ಲಿ ದೊಡ್ಡದು, ಹದವಾದದ್ದು, ಸಣ್ಣದಾದದ್ದೂ ಇರಬಹುದು. ಆದರೆ ಅಡಕವಾಗಿರುವ ಚಿತ್ರಗಳೆಲ್ಲ ಸ್ಪಷ್ಟ, ಸಮಗ್ರ ಮತ್ತು ಸುಂದರ.