ಹಳಗನ್ನಡದ ನವರತ್ನಗಳಲ್ಲಿ ಒಂದೆನಿಸಿರುವ ರಾಘವಾಂಕನ ‘ಹರಿಶ್ಚಂದ್ರ ಕಾವ್ಯ’ದ ಪೀಠಿಕಾ ಭಾಗದಲ್ಲಿ ಒಂದು ಪದ್ಯ ಹೀಗಿದೆ :

ರಸಜೀವ ಭಾವವೊಡಲರ್ಥವವಯವ ಶಬ್ದ
ವಿಸರವೇ ನುಡಿಯಲಂಕಾರವೇ ತೊಡಿಗೆಯು
ವೆಸುಲಕ್ಷಣವೆ ಲಕ್ಷಣ ವಿಮಳಪದವಿನ್ಯಾಸ ನಡೆ ರೀತಿ ಸುಕುಮಾರತೆ |

ರಸಿಕತನ ಸುಳಿ ಸುಖಂನಿಳಯವಂತಪ್ಪ ಯೂ
ಪೊಸ ಕಾವ್ಯಕನ್ನಿಕೆಯ ಪಡೆದು ಪಂಪಾಬಿಕೆಯ
ರಸ ವಿರೂಪಾಕ್ಷಂಗೆ ಕೊಟ್ಟ ಹಂಪೆಯ ರಾಘವಾಂಕನೇ ಕೃತ ಕೃತ್ಯನೋ ||

ತನ್ನ ಕಾವ್ಯ ವಿಚಾರದಲ್ಲಿ ಕವಿಗಿರುವ ಪ್ರೀತಿ, ಆರಾಧ್ಯ ದೈವ ವಿರೂಪಾಕ್ಷನಲ್ಲಿರುವ ಭಕ್ತಿಗಳು ಈ ಪದ್ಯದಲ್ಲಿ ವ್ಯಕ್ತವಾಗಿರುವ ರೀತಿ ವಿಶಿಷ್ಟವಾಗಿದೆ. ಅದರೊಂದಿಗೆ ಸತ್ಕಾವ್ಯದ ಲಕ್ಷಣಗಳು ಯಾವುವು ಎಂಬುದನ್ನು ಅವನು ಹೇಳಿರುವ ರೀತಿಯೂ ವಿನೂತನವಾಗಿದೆ. ಸಲ್ಲಕ್ಷಣಸಹಿತವಾದ ಒಂದು ಕಾವ್ಯವನ್ನೂ ಒಬ್ಬ ಕನ್ನಿಕೆಯನ್ನೂ ಅಭೇದ ಭಾವದಿಂದ ವರ್ಣಿಸಿರುವ ರೀತಿಯೂ ವಿಶಿಷ್ಟವಾಗಿದೆ. ಒಂದು ಕಾವ್ಯವನ್ನು ಜನ ಮೆಚ್ಚಿದರೆ ಸಾಲದು, ಜಗನ್ನಾಥನೂ ಒಪ್ಪಬೇಕು. ಜಗದೀಶ್ವರನಿಗೆ ಅದು ಸಮ್ಮತವಾಗಬೇಕಿದ್ದರೆ ಕಾವ್ಯಕನ್ನಿಕೆಯಲ್ಲಿ ಅಪೇಕ್ಷಣೀಯ ಸದ್ಗುಣಗಳಿರಬೇಕು. ಆಗ ಆ ಕಾವ್ಯ ಹಂಪೆಯರಸ ಎಂದರೆ ಹಂಪೆಯ ಅರಸ ವಿರೂಪಾಕ್ಷನಿಂದ ಮಾತ್ರವಲ್ಲ ‘ರಸ+ವಿರೂಪಾಕ್ಷ’ ಎಂದರೆ, ಜಗನ್ನಾಥ ಪಂಡಿತನು ಹೇಳಿದ ‘ರಸಗಂಗಾಧರ’ನಿಂದಲೂ ಸ್ವೀಕೃತವಾಗುತ್ತದೆ!

ಆಧುನಿಕರು ಯಾವ ವಾಙ್ಮಯ ವಿಶೇಷವನ್ನು ಸಾಹಿತ್ಯವೆಂದು ಹೇಳುತ್ತಾರೋ ಅದನ್ನೇ ಪ್ರಾಚೀನರು ಕಾವ್ಯವೆಂದು ಕರೆಯುತ್ತಿದ್ದರು. ಎರಡರ ಅರ್ಥವೂ ಪರಿಣಾಮವೂ ಒಂದೇ: ಅದೆಂದರೆ ಹಿತಕಾರಕವಾದ ಬಗೆಬಗೆಯ ಬರವಣಿಗೆಗಳು ಮತ್ತು ವಿಷಯ ವಸ್ತುಗಳನ್ನು ಬಣ್ಣಿಸಿ ಆನಂದಾನುಭವ ಮತ್ತು ಆತ್ಮಸಂಸ್ಕಾರವನ್ನು ಉಂಟುಮಾಡುವುದು. ಒಂದು ಕಾವ್ಯ ಅಥವಾ ಸಾಹಿತ್ಯಕೃತಿ ಪದ್ಯದಲ್ಲಿರಬಹುದು ಅಥವಾ ಗದ್ಯವಾಗಿರಬಹುದು-ಎರಡೂ ತಮ್ಮ ವಸ್ತು ಅಥವಾ ವಿಷಯಗಳ ಸರಸತೆಯಿಂದ ಸಹೃದಯವಾಚಕ ಅಥವಾ ಶ್ರಾವಕನ ಹೃದಯ ಪ್ರವೇಶ ಮಾಡಿ ಉದ್ದಿಷ್ಟ ಪರಿಣಾಮವನ್ನು ಉಂಟು ಮಾಡುತ್ತವೆ. ಹೀಗೆ ಒಂದು ಕಾವ್ಯ ಸರಸವೆನಿಸಿ, ಪರಿಣಾಮ ರಮಣೀಯವೆನಿಸಬೇಕಾದರೆ ಅದರ ವಸ್ತು ಅಥವಾ ವಿಷಯದೊಂದಿಗೆ ಇನ್ನೂ ಕೆಲವು ಕಾರಕ ಪೂರಕ ಪರಿಕರಗಳೂ ಅವಶ್ಯಕ. ಅವುಗಳಲ್ಲಿ ಪ್ರಮುಖವಾದದ್ದು ಯುಕ್ತವಾದ ಭಾಷಾಶೈಲಿ ಮತ್ತು ಸಮುಚಿತವಾದ ಅಲಂಕಾರ ವರ್ಣನೆ. ಹೀಗೆ ಕಾವ್ಯ ಪರಿಕರಗಳಲ್ಲಿ ಅಲಂಕಾರವನ್ನು ಮಿತಾವಕಾಶದಲ್ಲಿ ಸ್ವಲ್ಪ ವಿವರಣೆ ಮತ್ತು ಉದಾಹರಣೆಗಳೊಂದಿಗೆ ಹೇಳುವ ಪ್ರಯತ್ನ ಈ ಉಪನ್ಯಾಸವಾಗಿದೆ.

ಶಾಸ್ತ್ರಕಾರರು ವಾಙ್ಮಯದಲ್ಲಿ ಮೂರು ಮುಖ್ಯ ಘಟಕಗಳನ್ನು ಹೇಳುತ್ತಾರೆ: ಅವುಗಳೆಂದರೆ ವ್ಯಾಕರಣ, ಛಂದಸ್ಸು ಮತ್ತು ಅಲಂಕಾರ. ಅವುಗಳಲ್ಲಿ ವ್ಯಾಕರಣ ಭಾಷಾಸಾಮಾನ್ಯಕ್ಕೆ ಸಂಬಂಧಿಸಿದ್ದಾದರೆ ಅಲಂಕಾರವೆಂಬುದು ಗದ್ಯ ಅಥವಾ ಪದ್ಯಗಳಲ್ಲಿರುವ ಎಲ್ಲಾ ಸಾಹಿತ್ಯ ಪ್ರಕಾರಗಳಿಗೂ ಸಮಾನವಾದದ್ದು. ಛಂದಸ್ಸು ಪದ್ಯ ಕೃತಿಗಳಿಗೆ ಮಾತ್ರ ಸೀಮಿತ. ಅರ್ವಾಚೀನರು ರಸಶಾಸ್ತ್ರ ಅಥವಾ ಸೌಂದರ್ಯತತ್ವ (Aesthetics) ಎಂದು ಹೇಳುವುದನ್ನೇ ಪ್ರಾಚೀನರು ಅಲಂಕಾರ ಶಾಸ್ತ್ರವೆಂದು ನಿರ್ದೇಶಿಸುತ್ತಿದ್ದರು. ‘ಅಲಂಕಾರ’ವನ್ನು ‘ಅಲಂಕರಣ’ ಎನ್ನುವುದೂ ಇದೆ. ‘ಅಲಂ ಕರೋತಿ ಇತಿ – ಅಲಂಕಾರ’, ಇದು ಸೂತ್ರ. ‘ಅಲಂ’ ಎಂದರೆ ಸಾಲುವಂತೆ ಮಾಡುವುದು. ಎಲ್ಲಿ ಯಾವುದರಲ್ಲಿ ಅರೆಕೊರೆಗಳಿರುತ್ತದೆಯೋ ಅದನ್ನು ಪೂರೈಸುವುದು ಅಲಂಕಾರದ ಉದ್ದೇಶ. ನಾವು ರೂಢಿಯಲ್ಲಿ ಅಲಂಕರಿಸುವುದು, ಅಲಂಕಾರ ಮಾಡುವುದು ಎನ್ನುತ್ತೇವೆ. ಒಂದು ವ್ಯಕ್ತಿ ತಾನು ಚೆನ್ನಾಗಿ ಕಾಣಬೇಕು, ಕುಂದು ಕೊರತೆಗಳಿದ್ದರೆ ಅದನ್ನು ಮುಚ್ಚಬೇಕು ಎಂಬ ಉದ್ದೇಶದಿಂದ ಕೆಲವು ಬಾಹ್ಯ ಅಥವಾ ಕೃತಕ ವಸ್ತುಗಳನ್ನು ಬಳಸಿಕೊಳ್ಳುವುದುಂಟು. ಉದಾ: ಸುಂದರ ವಸ್ತ್ರ, ಸ್ವರ್ಣಾಭಾರಣ, ಪುಷ್ಪಹಾರ, ಸುಗಂಧದ್ರವ್ಯ ಇತ್ಯಾದಿ. ಕಾವ್ಯಾಲಂಕಾರವೆಂಬುದೂ ಹೀಗೆಯೇ. ಕವಿ ಅಥವಾ ಸಾಹಿತಿ ತಾನು ಹೇಳಬೇಕಾದುದನ್ನು ಶ್ರೋತ್ವ ಅಥವಾ ವಾಚಕನ ಮನಸ್ಸಿಗೆ ಉದ್ದಿಷ್ವಾರ್ಥದಲ್ಲಿ ಪರಿಣಾಮಕಾರಿಯಾಗಿ ತಲಪಿಸುವುದಕ್ಕಾಗಿ ಮಾಡುವ ಪ್ರಯತ್ನವನ್ನೇ, ವಿಶಿಷ್ಟವಾದ ಪದ ಸಮುಚ್ಚಯಗಳ ಪ್ರಯೋಗವನ್ನೇ ‘ಅಲಂಕಾರ’ ಎನ್ನಬಹುದು. ‘ಬಿಸಿಲು ಬಿರುಸಾಗಿದೆ’ ಎನ್ನುವುದಕ್ಕಿಂತ ‘ಬಿಸಿಲು ಸುಡುತ್ತದೆ’ ಎನ್ನುವುದೂ ‘ಬೆಳದಿಂಗಳು ಹರಡಿದೆ’ ಎನ್ನುವುದರ ಬದಲು ‘ಬೆಳದಿಂಗಳಿನ ಹಾಲು ಚೆಲ್ಲಿದೆ’ ಎಂದು ಹೇಳುವುದೂ ಈ ಬಗೆಯ ಪ್ರಯತ್ನವಾಗಿದೆ. ಇದರಿಂದ ಬಿಸಿಲಿನ ಬಿರುಸು, ಬೆಳದಿಂಗಳಿನ ಸೊಗಸು ಮನಸ್ಸನ್ನು ಹೆಚ್ಚು ತಟ್ಟುತ್ತದೆ. ‘ಸುಡುವುದು ಬೆಂಕಿಯ ಗುಣ’. ‘ಬಿಸಿಲು ಸುಡುತ್ತದೆ’ ಎಂಬಲ್ಲಿ ಬೆಂಕಿ ಇಲ್ಲದಿದ್ದರೂ ಅರ್ಥವು ಅಧ್ಯಾಹಾರವಾಗಿದೆ. ಹಾಲಿನ ಬಣ್ಣ ಬಿಳಿ; ಅದು ನಾಲಗೆಗೆ ಸವಿ. ಬೆಳುದಿಂಗಳನ್ನು ಕೈಯಿಂದ  ಮುಟ್ಟಲಾಗದಿದ್ದರೂ ಅದು ಕಣ್ಣಿಗೆ ಬಿಳಿಯಾಗಿ ಕಾಣುತ್ತದೆ. ದೇಹ ಮನಸ್ಸು ಎರಡಕ್ಕೂ ಅದು ಹಿತಕರವಾಗಿರುತ್ತದೆ. ಹಾಲಿನ ಗುಣವನ್ನು ಸಾಮಾನ್ಯರೂ ಬಲ್ಲರು. ಆದುದರಿಂದ ‘ಬೆಳದಿಂಗಳಿನ ಹಾಲು’ ಎಂದರೆ ಹಾಲಿನಂತಹ ಬೆಳದಿಂಗಳು. ಹಾಗೆ ಹೇಳುವಾಗ ಬೆಳುದಿಂಗಳಿನ ಅತಿಶಯತೆ ಚೆನ್ನಾಗಿ ಮನವರಿಕೆಯಾಗುತ್ತದೆ. ಇಂತಹದ್ದನ್ನೇ ಕಾವ್ಯದಲ್ಲಿ ಅಲಂಕಾರವೆಂದು ಹೇಳುವುದಾಗಿದೆ.

ಕಾವ್ಯಾಲಂಕಾರಗಳಲ್ಲಿ ‘ಶಬ್ದಾಲಂಕಾರ’ ಮತ್ತು ‘ಅರ್ಥಾಲಂಕಾರ’ ಎಂದು ಎರಡು ವಿಧ. ಮನುಷ್ಯ ದೇಹದಲ್ಲಿ ಹೇಗೆಯೋ ಹಾಗೆಯೇ ಕಾವ್ಯಶರೀರದಲ್ಲೂ ಅಲಂಕಾರಗಳ ಕಾರ್ಯ. ಬಹಿರಂಗದವುಗಳೇ ಆಗಿದ್ದರೂ ಕೆಲವು ಅಲಂಕಾರಗಳು ಒಡಲಿಗೆ ಚೆನ್ನಾಗಿ ಒಪ್ಪಿ ಅದರ ಸೊಗಸನ್ನು ಇಮ್ಮಡಿಸುತ್ತವೆ. ಇನ್ನೂ ಕೆಲವು ಕೇವಲ ಆಭೂಷಣ ಮಾತ್ರ – ಇದ್ದರೆ ಹೆಚ್ಚಲ್ಲ, ಇಲ್ಲದಿದ್ದರೆ ಕಡಿಮೆಯಲ್ಲ. ಹೇಗೆಂದರೆ ಹೆಣ್ಣುಮಗಳ ಹಣೆಯ ಕುಂಕುಮ, ಮುಡಿಯ ಮಲ್ಲಿಗೆ, ಕೊರಳಿನ ಕರಿಮಣಿ, ಕೈಯ ಬಳೆ, ಕಾಲ ಉಂಗುರಗಳ ಹಾಗೆ ಅವು ಅರ್ಥಾಲಂಕಾರಗಳು. ಇನ್ನೂ ಕೆಲವು ಒಡ್ಯಾನ. ಕಿರುಗೆಜ್ಜೆಗಳ ಹಾಗೆ ಸದ್ದಿಗಷ್ಟೇ ಸರಿ. ಅವು ಶಬ್ದಾಲಂಕಾರ. ಭಾರತೀಯ ಸಾಹಿತ್ಯದಲ್ಲಿ ಅಲಂಕಾರಗಳ ಪ್ರಪ್ರಥಮ ಉಲ್ಲೇಖವನ್ನು ನಾವು ಅ ಪ್ರಕಾರದ ಆದಿಮ ಪ್ರಮಾನ ಗ್ರಂಥವೆನಿಸಿರುವ ಭರತನ ‘ನಾಟ್ಯಶಾಸ್ತ್ರ’ದಲ್ಲಿ ಕಾಣುತ್ತೇವೆ. ಭರತ ಮುನಿಯ ಅಭಿಮತದಂತೆ ಅಲಂಕಾರಗಳು ಕೇವಲ ನಾಲ್ಕು ಮಾತ್ರ. ಅವುಗಳೆಂದರೆ ಉಪಮಾ, ದೀಪಕ, ರೂಪಕ ಮತ್ತು ಯಮಕ. ಕಾಲಾಂತರದಲ್ಲಿ ಇತರ ಶಾಸ್ತ್ರಕಾರರು ಅಲಂಕಾರಗಳನ್ನು ಸೂಕ್ಷ್ಮವಾಗಿ ವಿಭಾಗಿಸಿ, ಅವುಗಳಿಗೆ ಪ್ರತ್ಯೇಕ ನಾಮಕರಣ ಮಾಡಿ ಸಂಖ್ಯೆಯನ್ನು ನೂರಿಪ್ಪತ್ತಕ್ಕೆ ಏರಿಸಿದರು! ಅವೆಲ್ಲವನ್ನೂ ಹೆಸರಿಸುವುದಕ್ಕೂ ವಿವರಿಸುವುದಕ್ಕೂ ಇಲ್ಲಿ ಅವಕಾಶವಿಲ್ಲ.

ಶಾಸ್ತ್ರಕಾರರು ಹೇಳುವಂತೆ ಶಬ್ದಾಲಂಕಾರಗಳು ಹೆಚ್ಚಿಲ್ಲ, – ಅವು ಮೂರು ಮಾತ್ರ – ಅನುಪ್ರಾಸ, ಯಮಕ ಮತ್ತು ಚಿತ್ರಕವಿತ್ವ. ಅಕ್ಷರಗಳ ಪುನರಾವರ್ತನೆಯೇ ಅನುಪ್ರಾಸ. ‘ಎತ್ತಿ ಒಹ ಸತ್ತಿಗೆಯ ಮೊತ್ತಂಗಳೆತ್ತಲುಂ ಕತ್ತಲಿಸೆ…..’ ಎಂಬ ಹಾಗೆ. ಮೂರು ಅಥವಾ ಅದಕ್ಕಿಂತ ಹೆಚ್ಚಿನ ಅಕ್ಷರಗಳಿಗಿರುವ ಪದ ಅಥವಾ ಪದಭಾಗಗಳು ಪದ್ಯದ ಆದಿ, ಮಧ್ಯ, ಅಂತ್ಯಗಳಲ್ಲಿ ಪುನಃ ಪುನಃ ಬರುವುದೇ ಯಮಕ. ಉದಾ. ‘ಅಮಳ್ಗಳ್ ನಯ ವಿಕ್ರಮ ಗುಣದಮಳ್ಗಳ್….’ ಇತ್ಯಾದಿ ಅಕ್ಷರ ಅಥವಾ ಪದಗಳನ್ನು ಕುಶಲತೆಯಿಂದ ಆರಿಸಿ, ಪೋಣಿಸುವ ವೈಚಿತ್ರಕ್ಕೆ ‘ಚಿತ್ರ ಕವಿತ್ವ’ವೆಂದು ಹೆಸರು. ‘ನಂದನ ನಂದನ ನಿನ್ನೊಂದದಮೆಯ್ ಮುಂದೆ ನಿಂದುದು….’ ಎಂಬ ಹಾಗೆ, – ಅದೊಂದು ಬಗೆಯ ಶಬ್ದ ಚಮತ್ಕಾರ, ಅಷ್ಟೆ.

ಮುಖ್ಯವಾದದ್ದು ಅರ್ಥಾಲಂಕಾರ. ಆಲಂಕಾರಿಕರ ಅಭಿಮತದಂತೆ ಮಾಧುರ್ಯ, ಓಜಸ್ಸು, ಪ್ರಸಾದ ಮೊದಲಾದವು ಕಾವ್ಯ ಗುಣಗಳು. ಈ ಗುಣಗಳನ್ನು ವೃದ್ಧಿಸುವುದೇ ಅಲಂಕಾರಗಳ ಕಾರ್ಯ ಮತ್ತು ಪ್ರಯೋಜನ. ಅರ್ಥಾಲಂಕಾರಗಳಲ್ಲೂ ಔಪಮ್ಯ ಮೂಲ, ವಿರೋಧ ಮೂಲ, ಶ್ವಂಖಲಾ ಮೂಲ, ತರ್ಕನ್ಯಾಯ ಮೂಲ, ಗೂಢಾರ್ಥ ಪ್ರತೀತ ಮೂಲವೆಂಬ ವಿಭಾಗಗಳೂ ಅವುಗಳಲ್ಲಿ ಪುನಃ ಉಪವಭಾವವಗಳೂ ಇವೆ. ಅವುಗಳಲ್ಲಿ ಉಪಮೆ. ದೃಷ್ಟಾಂತ, ರೂಪಕ, ಶ್ಲೇಷೆ, ಸಂದೇಹ, ಸ್ವಭಾವೋಕ್ತಿಗಳು ಕೆಲವಾಗಿವೆ. ರೂಢಿಯಲ್ಲಿ ಅಲಂಕಾರವೆಂದರೆ ಉಪಮೆ, ಉಪಮೆಯೆಂದರೆ ಅಲಂಕಾರ ಎಂದು ಸಮೀಕರಿಸುವುದುಂಟು. ಉಪಮೆಯೇ ಅಲಂಕಾರಗಳಿಗೆಲ್ಲ ಮಾತ್ವಸದ್ವಶವಾದದ್ದು. ಉಪಮೆಯೆಂದರೆ ಸರಳಾರ್ಥದಲ್ಲಿ ಹೋಲಿಕೆ. ಒಂದು ವಸ್ತುವನ್ನು ಇನ್ನೊದಕ್ಕೆ ಅಥವಾ ಎರಡು ವಸ್ತುಗಳ ಸಾದೃಶ್ಯವನ್ನು ಹೇಳುವುದೇ ಉಪಮಾಲಂಕಾರ. ಉಪಮಾನ (ಎಂದರೆ ಹೋಲಿಕೆ) ಮತ್ತು ಉಪಮೇಯ (ಹೋಲಿಸಲ್ಪಡುವ ವಸ್ತು)ಗಳಲ್ಲಿ ಏನಾದರೊಂದು ಸಮಾನತೆಯೂ ವಿಶೇಷತೆಯೂ ಇರಬೇಕು. ‘ಕತ್ತೆ ಕುದುರೆಯ ಹಾಗಿದೆ’ ಎಂಬುದರಲ್ಲಿ ವಿಶೇಷತೆಯಿಲ್ಲ. ಆದರೆ ‘ಮುಖ ಚಂದ್ರನ ಹಾಗಿದೆ’ ಎಂಬುವುದರಲ್ಲಿ ಏನೋ ಒಂದು ಅತಿಶಯತೆ ಭಾಸವಾಗುತ್ತದೆ. ಎಂದರೆ ಮುಖಕ್ಕೆ ಚಂದ್ರನ ಉಪಮಾನ. ನಮ್ಮ ಕಾವ್ಯಗಳಲ್ಲಿ ಉಪಮಾಲಂಕಾರಗಳದ್ದೇ ವಿಫುಲತೆ ಎನ್ನಬಹುದು.

ಭಾರತೀಯಸಾಹಿತ್ಯಕ್ಕೆಲ್ಲ ಆದಿಕವಿಯೆನಿಸಿರುವ ವಾಲ್ಮೀಕಿಯ ‘ರಾಮಾಯಣ’ ಅಕ್ಲಿಷ್ಟ ಮನೋಹರವೆಂಬುದು ಅಭಿಜ್ಞರ ಅಭಿಮತ. ವಾಲಮೀಕಿ ತನ್ನ ಕಾವ್ಯದಲ್ಲಿ ಅಲ್ಲಲ್ಲಿ ಬಹುಸುಂದರವಾದ ಉಪಮೆಗಳನ್ನು ಬಳಸಿದ್ದಾನೆ. ಇದೊಂದು ಉದಾಹರಣೆ- ಸಂದರ್ಭ ಆಂಜನೇಯನ ಸಾಗರೋಲ್ಲಂಘನ –

ತಸ್ಯಲಾಂಗೂಲಂ ಆವಿದ್ಧಂ ಆತ್ತವೇಗಸ್ಯ ಪೃಷ್ಠಿತಿಃ
ದದೃಶೇ ಗರುಡೇನೇವ ಹ್ರಿಯ ಮಾಣೋ ಮಹೋರಗಃ ||

‘ತನ್ನ ವೇಗವನ್ನು ಹೆಚ್ಚಿಸಿಕೊಂಡು ಎತ್ತರದಲ್ಲಿ ಹಾರುತ್ತಿದ್ದ ಹನುಮಂತನ ಬಾಲ ಗರುಡನು ಎತ್ತಿಕೊಂಡು ಹೋಗುವ ಮಹಾಸರ್ಪದಂತೆ ಕಾಣಿಸಿತು’. ಸರಳವಾದರೂ ಉಚಿತವಾದ ಉಪಮಾಲಂಕಾರದಿಮದ ಕವಿ ವಾಲ್ಮೀಕಿ ಸನ್ನಿವೇಶವನ್ನು ಸೊಗಸಾಗಿ ಮನಸ್ಸಿಗೆ ಮುಟ್ಟಿಸುತ್ತಾನೆ.

ಅಪವಾದವೇ ಇಲ್ಲದಂತೆ ಕವಿಗಳೆಲ್ಲ ಅಲಂಕಾರ ಪ್ರಿಯರಾಗಿದ್ದರೂ ಕೆಲವರಿಗೆ ಕೆಲವು ಅಲಂಕಾರಗಳಲ್ಲಿ ಅತಿಪ್ರೀತಿ ಮತ್ತು ಅತಿಶಯ ಪ್ರಭುತ್ವ. ಮಹಾಕವಿ ಕಾಳಿದಾಸ ಉಪಮಾಲಂಕಾರ ಪ್ರೀತಿಯಿಂದಾಗಿ, ‘ಉಪಮಾಕಾಳಿದಾಸಸ್ಯ’ ಎಂದೇ ಖ್ಯಾತನಾಗಿದ್ದಾನೆ. ‘ರಘುವಂಶ’ದಲ್ಲಿ ಇಂದುಮತೀ ಸ್ವಯಂವರವನ್ನು ವರ್ಣಿಸುವಾಗ ಕಾಳಿದಾಸನು ಪ್ರಯೋಗಿಸಿದ ಒಂದು ಅಲಂಕಾರ ಉಪಮೆಗಳಿಗೆಲ್ಲ ತಲೆಮಣಿ ಎನಿಸಿಕೊಂಡಿದೆ:

ಸಂಚಾರಿಣೀ ದೀಪ ಶಿಖೇವ ರಾತ್ರೌ
ಯಂ ಯಂ ವ್ಯತೀಯಾಯ ಪತಿಂವರಾಸಾ |
ನರೇಂದ್ರ ಮಾರ್ಗಾಟ್ಟ ಇವ ಪ್ರಪೇದೇ
ವಿವರ್ಣಭಾವಂ ಭೂಮಿಪಾಲಃ ||

‘ಎತ್ತಿ ಹಿಡಿದ ಹಿಲಾಲು ದಾರಿಬದಿಯ ಅಂಗಡಿ ಮನೆಗಳನ್ನೆಲ್ಲ ಬೆಳಗಿದರೂ ಅದು ಮುಂದು ಮುಂದಕ್ಕೆ ಸರಿದಾಗ ಹಿಂದುಗಡೆಯೆಲ್ಲ ಕತ್ತಲು ಆವಿರಿಸಿಕೊಳ್ಳುವಂತೆ ‘ವರಣಮಾಲೆಯನ್ನು ಹಿಡಿದುಕೊಂಡ ಇಂದುಮತಿ ಸ್ವಯಂವರ ಮಂಟಪವನ್ನು ಪ್ರವೇಶಿಸಿ, ಆಸೀನರಾದ ರಾಜಮಹಾರಾಜ ಹತ್ತಿರ ಬರುತ್ತಿದ್ದಂತೆ ಬೆಳಗಿದ ಅವರ ಮುಖಗಳೆಲ್ಲವೂ, ತಮ್ಮ ಕೊರಳಿಗೆ ಅವಳು ಮಾಲೆ ತೊಡಿಸಿದೆ ಮುನ್ನಡೆದಾಗ ಕತ್ತಲಾದುವು!’ ಕಾಳಿದಾಸನ ಈ ಕಾವ್ಯಪಂಕ್ತಿಗಳ ಸೊಗಸನ್ನು ಗದ್ಯಕ್ಕೆ ಅನುವಾದಿಸುವುದಾಗಲೀ ಗದ್ಯದಲ್ಲಿ ಹಿಡಿದಿಡುದಾಗಲೀ ಕಷ್ಟಸಾಧ್ಯ. ಈ ಉಪಮಾಲಂಕಾರದಿಂದಾಗಿ ಅವನು ‘ದೀಪಶಿಖಾ ಕಾಳೀದಾಸ’ನೆಂದೂ ಪ್ರಸಿದ್ಧನಾಗಿದ್ದಾನೆ!

ಇತರ ಅಲಂಕಾರಗಳಿಗೆ ಕನ್ನಡದ ಕವಿಶ್ರೇಷ್ಠರಿಂದ ಕೆಲವು ಉದಾಹರಣೆಗಳನ್ನು ಎತ್ತಿಕೊಳ್ಳೋಣ :

‘ಒಂದು ವಸ್ತು ಇನ್ನೊದರಂತೆ ಇದೆ’ ಎಂಬುದು ಉಪಮೆಯಾದರೆ ‘ಆ ವಸ್ತು ಇದೇ ಆಗಿದೆ – ಮುಖ ಚಂದ್ರನಂತೆ ಇರುವುದಲ್ಲ, ಮುಖವೇ ಚಂದ್ರಬಿಂಬವಾಗಿದೆ’ ಎಂಬುದು ರೂಪಕಾಲಂಕಾರ. ರೂಪಕಾಲಂಕಾರ ಕವಿ ಪ್ರತಿಭೆಗೊಂದು ಕನ್ನಡಿ ಎಂದೂ ಹೇಳುವುದುಂಟು. ನಮ್ಮ ಗದುಗಿನ ನಾರಣಪ್ಪನನ್ನು ‘ರೂಪಕ ಸಾಮ್ರಾಜ್ಯ ಚಕ್ರವರ್ತಿ’ ಎಂದು ವಿಮರ್ಶಕರು ಕರೆದಿದ್ದಾರೆ. ಅವನ ಭಾರತದಲ್ಲಿ ಅರ್ಥವತ್ತಾದ, ಸಂದರ್ಭೋಚಿತನಾದ, ಉಲ್ಲೇಖನೀಯವಾದ ಅನೇಕಾನೇಕ ರೂಪಕಗಳು ಒಂದರ ಹಿಂದೆ ಒಂದರಂತೆ ಮಿಂಚುತ್ತವೆ, ಓದುಗನ ಒಳಗನ್ನು ಬೆಳಗುತ್ತವೆ.

ಅಭಿಮನ್ಯುವಿನ ದುರ್ಮರಣದ ಪರಿಣಾಮವೇನೆಂಬುದನ್ನು ನಾರಣಪ್ಪನು ಹೇಗೆ ಚಿತ್ರಿಸಿದ್ದಾನೆ ಎಂಬುದನ್ನು ಕೇಳಿ –

ಸುರನಗರಿ ನಡುಗಿತ್ತು, ಸುರಪತಿ
ಹರನ ನೆನೆದನು, ಯಮನ ಪಟ್ಟಣ
ಸರಕು ದೆಗೆಯಿತು, ಮೃತ್ಯು ಮರೆಹೊಕ್ಕಳು ಮಹೇಶ್ವರನ
ಬಿರುದರಂಜಿತು ದೇಶ ದೇಶದ
ಧರಣಿ ಪತಿಗಳಪಾಯವಾಯ್ತೆನೆ
ನರನ ಕಡುದುಮ್ಮಾನ ಬೆದರಿಸಿತು ಮೂರ್ಜವ

ಸುಪುತ್ರನ ದುರ್ಮರಣ ದುರ್ವಾತೆಯನ್ನು ಕೇಳಿದಾಗ –

ಉಕ್ಕಿ ಶೋಕದ ಕಡಲು ಪಾರ್ಥನ
ಮುಕ್ಕುಳಿಸಿತಾ ಶೋಕಶರಧಿಯ
ಹೊಕ್ಕು ಬೆಳೆದುದು ಕೋಪಶಿಖಿವಡಬಾಗ್ನಿಯಂದದಲಿ

ಹೀಗೆ ತನ್ನ ರಸಾಗ್ರ ಲೇಖನಿಯಿಂದ ಒಂದೊಂದಾಗಿ ರೂಪಕಗಳನ್ನು ಹೊಸೆಯಬಲ್ಲ, ಎಸೆಯಬಲ್ಲ ಅಗ್ಗಳಿಕೆ ನಾರಣಪ್ಪನದು. ‘ಮುಗಿಲ ಬೆನಕೆಗೆ ಲಡ್ಡುಗೆಗಳಾದುವು ಸಮಸ್ತ ಗ್ರಹಿಸುತಾರೆಗಳು’, ‘ಕಾರಿರುಳ ಪಟ್ಟಣಕೆ ಚಂದ್ರನ ತೋರಣವ ಬಿಗಿದಂತೆ’ ‘ತತ್ತಕೋಪಾ ಯುಧವ ಮಸೆದಳು ಧಾರೆಗಂಗಳಲಿ’, ‘ಅಪಕೀರ್ತಿನಾರಿಯ ಸೆರಗ ಹಿಡಿದರು’, ‘ಸಿಡಿಲ ಪೊಟ್ಟಣಗಟ್ಟಿ ಶಾಖವೇ ಕೊಡುವರೇ’ – ಇಂತಹ ಎಷ್ಟೋ ಅನರ್ಘ್ಯ ರೂಪಕ ರತ್ನಗಳು ನಾರಣಪ್ಪನ ಪ್ರತಿಭಾ ಭಂಡಾರದಲ್ಲಿವೆ.

ಸಂದೇಹಲಂಕಾರ ಎಂಬುದೊಂದಿಗೆ ಅದಕ್ಕೂ ಉಪಮಾಲಂಕಾರಕ್ಕೂ ಸಮೀಪ ಸಂಬಂಧ. ಹಾಗೋ ಹೀಗೋ, ಅದೋ ಇದೋ ಎಂಬ ಸಂದೇಹಾತ್ಮಕ ಪ್ರಶ್ನೆಗಳನ್ನೆತ್ತಿ ವಿಷಯವನ್ನು ಸಮರ್ಥಿಸಿಕೊಳ್ಳುವ ರೀತಿ ಅದಾಗಿದೆ. ‘ಉಪಮಾಲೋಲ’ನೆಂದು ಹೆಸರಾದ ಲಕ್ಷ್ಮೀಶನ ‘ಜೈಮಿನಿ ಭಾರತ’ದಿಂದ ಆಯ್ದದ್ದು ಸಂದೇಹಲಂಕಾರದ ಈ ಉದಾಹರಣೆ –

ರಂಜಿಸುವ ಪಶ್ಚಿಮಾಚಲ ಕಿರಾತಂ ತೊಟ್ಟ
ಗುಂಜಾಭರಣಮೋ ಮೇಣ್ಣಗನಾಂಬುಧಿಯ ತಡಿಯ
ಮಂಜುಮಿದ್ರುಮಲತೆಯೋ ಮೇಣಪರ ದಿಗ್ವಧುವಿನಂಗ ಕುಂಕುಮಲೇಪವೋ|
ಅಂಜನೇಭದ ಸಿಂಧುರವೋ ಶಿವನ ಮಸ್ತಕದ
ಕೆಂಜೆಡೆಯೋ ವಿಷ್ಣುಪದ ಪಂಕರುಹದರುಣತೆಯೋ
ಸಂಜೆವೆಣ್ಣುಟ್ಟ ರಕ್ತಾಂಬರವೋ ಪೇಳೆನಲ್ಕಾ ಬೈಗುಗೆಂಪೆಸೆದುದು ||

ಸಂಜೆಗೆಂಪನ್ನು ಕವಿ ವರ್ಣಿಸುವ ಈ ರೀತಿ ಅತ್ಯಂತ ಚೇತೋಪಹಾರಿಯಾಗಿದೆ.

ವಾಕ್ಯಗಳು ಭಿನ್ನವಾಗಿದ್ದರೂ ಅರ್ಥ ಸಾದೃಶ್ಯವೂ ವಸ್ತುಗಳು ಪ್ರತ್ಯೇಕವಾಗಿದ್ದರೂ ಸಮಾನಧರ್ಮವೂ ಇರುವಂತೆ ತೋರಿಸುವುದನ್ನು ದೃಷ್ಟಾಂತಾಲಂಕಾರ ಎನ್ನುತ್ತಾರೆ. ‘ಚರಿಪಾರಣ್ಯದೊಳ್ ಒಂದು ತರು ಗೊಡ್ಡಾಗಲ್ ಫಲು ತೀವಿದಾ ವೃಕ್ಷಂಗಳ್ ಪುಟ್ಟವೇ?’ ‘ಜಗದೊಳುಪಕಾರಿಯಾದವಂ ತನ್ನ ನೋವಂ ನೋಳ್ವನೇ?’ ‘ಕಾಲವಶದಿಂ ಅಬ್ಧಿಯುಂ ಒಮ್ಮೆ ಮರ್ಯಾದೆಯು ದಾಂಟದೇ?’ – ಮುಂತಾದವು ಈ ಬಗೆಯ ಅಲಂಕಾರಗಳು.

ಪದಗಳಿಗೆ ದ್ವಂದ್ವಾರ್ಥ ಬರುವಂತೆ ಪ್ರಯೋಗಿಸುವುದು ಶ್ಲೇಷಾಲಂಕಾರವಾದರೆ ವಸ್ತು, ವಿಷಯ, ಸಂದರ್ಭಗಳನ್ನು ಯಥಾವತ್ತಾಗಿ ವರ್ಣಿಸುವುದು ಸ್ವಭಾವೋಕ್ತಿಯೆನಿಸುತ್ತದೆ. ಇರುವುದನ್ನು ಇರುವ ಹಾಗೆಯೇ ಹೇಳುವುದು ಅಲಂಕಾರವಲ್ಲ. ಆದರೆ ಆಭರಣ ಸೌಂದರ್ಯವಿರುವಂತೆಯೇ ನಿರಾಭರಣ ಸೌಂದರ್ಯವೆಂಬುದೂ ಇದೆಯೆಂಬುದು ಕವಿಗಳ ಭಾವನೆ:

ತಿಳಿಗೊಳನ ಬಲಬಳಸಿ ನಳನಳಿಸಿ ಬೆಳೆದಳ ಮಾವು
ಗಳ ತಳದ ಮಲ್ಲಿಕಾಮಂಟಪದ ತಣ್ಣೆಳಲ
ತೆಳುಗಾಳಿಯೊಳು ಪುಣ್ಯವಪ್ಪ ಪುಳಿನಸ್ಥಳದ ಮೇಲಶೋಕೆಯ ತರುವಿನ

ಇದು ‘ಹರಿಶ್ಚಂದ್ರ ಕಾವ್ಯ’ದಲ್ಲಿ ವಸಿಷ್ಠಾಶ್ರಮವನ್ನು ರಾಘವಾಂಕನು ಚಿತ್ರಿಸಿದ ರೀತಿ. ಇದು ಎಷ್ಟು ಸಹಜವೋ ಅಷ್ಟೇ ಸುಂದರ. ಕವಿ ಕುವೆಂಪು  ವರ್ಣಿಸಿದಂತೆ ಇಂತಹ ಪದ್ಯಗಳನ್ನು ಓದುವಾಗ ‘ಹಸುರೆಲೆಯ ಮೇಲೆ ಮಲಗಿರುವ ಶಿಶಿರ ಬಿಂದುವನ್ನು ಮುಟ್ಟಿದಂತೆ ಆಗುತ್ತದೆ’!

ಅರ್ಥ, ಭಾವ, ರಸಗಳೆಲ್ಲ ಕಾವ್ಯದ ಪ್ರಾಣಗಳಾದರೆ ‘ಧ್ವನಿ’ಯೆಂಬುದು ಅದರ ಆತ್ಮ. ‘ಕಾವ್ಯಾಸ್ಯಾತ್ಮಾ ಧ್ವನಿ’ ಎಂಬ ಮಾತೇ ಇದೆ. ‘ಧ್ವನಿ’ಯೆಂದರೆ ಒಂದು ಪದದ ಒಳಗಿನ, ಆಳದ ಅರ್ಥ. ಅಂತಹ ‘ಧ್ವನಿ’ಯನ್ನು ಲಾಕ್ಷಣಿಕರು ‘ಅಲಂಕಾರ’ವೆಂದು ಹೇಳಿದ್ದಾರೆ. ಅದಕ್ಕೆ ಸಮರ್ಥನೆಯಾಗಿ ರನ್ನನ ‘ಗದಾಯುದ್ಧ’ದಲ್ಲಿ ಬರುವ ‘ನೀರೊಳಗಿರ್ದುಂಬೆಮರ್ತನುರಗಪತಾಕಂ’ ಎಂಬಂತಹ ಪ್ರಯೋಗಗಳನ್ನು ಉದಾಹರಿಸಬಹುದಾಗಿದೆ.

ಅಲಂಕಾರಗಳು ಕೇವಲ ಪದ್ಯ ಕಾವ್ಯಗಳಲ್ಲೇ ಇರಬೇಕೆಂದಲ್ಲ. ಗದ್ಯಕೃತಿಗಳಲ್ಲೂ ಅದನ್ನು ಕಾಣಬಹುದು. ಲೇಖಕನ ಆಸಕ್ತಿ ಮತ್ತು ಅವನು ಆರಿಸಿಕೊಂಡ ವಿಷಯಗಳನ್ನು ಅವು ಹೊಂದಿರುತ್ತವೆ. ‘ಕಬ್ಬಿಗರ ಬಲ್ಲಹ’ ಮುದ್ದಣನ ‘ಶ್ರೀ ರಾಮಾಶ್ವಮೇಧ’ದಲ್ಲಿ, ‘ಆ ಪೊಳ್ತಿಂಗೆ ವೇದಪುರುಷನೇ ಮುದುಪಿನೊಂದು ಪರಿಜಿಂ ಮೆಯ್ಗೊಂಡು ನಡೆತಂದನೋ…….’ ಎಂದು ಮೊದಲಾಗುವ ವಾಲ್ಮೀಕಿ ಚಿತ್ರಣ, ಮಹಾಕವಿ ಕುವೆಂಪು ಅವರ ‘ಕಾನೂರು ಹೆಗ್ಗಡತಿ’ಯಲ್ಲಿ, “ಚೈತ್ರಮಾಸದ ವಿಪಿನರಾಜಿ, ಪರ್ವತ ಶ್ರೇಣಿ, ಪ್ರಾತಃಸಮಯ, ಸುಖಶೀತಲ ವಾಯು ಮಂಡಲ…..” ಹೀಗೆ ಮೊದಲಾಗುವ ಸೂರ್ಯೋದಯ ವರ್ಣನಗಳೂ ಅಲಂಕಾರಯುಕ್ತವಾಗಿ ಆಪ್ಯಾಯನವೆನಿಸುತ್ತವೆ. ‘ಕಾವ್ಯ’ದ ಮೂಲಾರ್ಥವೇ ‘ವರ್ಣಿಸು’ ಎಂದಿರುವಾಗ ಕಾವ್ಯ ಪದ್ಯದಲ್ಲಿರುವ, ಗದ್ಯವೇ ಆಗಿರಲಿ ಅಲಂಕಾರ ವರ್ಣನೆಗಳ ಅವಶ್ಯಕ, ಅಪೇಕ್ಷಣೀಯ.

ಈ ಉಪನ್ಯಾಸದ ಮಿತಿಯಲ್ಲಿ ಆಧುನಿಕ ಕವಿಕೃತಿಗಳಿಂದ ಅಲಂಕಾರಗಳನ್ನು ಉದ್ಧರಿಸಲಾಗಿಲ್ಲ. ಹೊಸಗನ್ನಡದ ಕವಿಶ್ರೇಷ್ಠರೆಲ್ಲರೂ ಹಾಳತವಾದ, ಒಳಿತಾದ ಅಲಂಕಾರಗಳನ್ನು ಆಯ್ದು ತಮ್ಮ ಕಾವ್ಯಕನ್ನಿಕೆಗೆ ಅಲ್ಲಲ್ಲಿ ತೊಡಿಸಿ, ಆಕೆ ಮನೋಹಾರಿಣಿಯೂ, ಅನನ್ಯೆಯೂ, ಚಿರನೂತನೆಯೂ ಆಗುವಂತೆ ಪ್ರಯತ್ನಿಸಿದ್ದಾರೆ ಎಂದಷ್ಟೇ ಹೇಳಬಹುದಾಗಿದೆ.