‘ಜಗತ್ತಿನಲ್ಲಿ ಮನುಷ್ಯನೊಬ್ಬನೇ ನಗಬಲ್ಲ ಪ್ರಾಣಿ’ ಎಂಬ ಹ್ಯಾಜಲಿತ್ ಸೂಕ್ತಿಯನ್ನು ತಾವೆಲ್ಲ ಕೇಳಿರಬಹುದು. ಮನುಷ್ಯ ಸಾಮಾನ್ಯನಲ್ಲಿ ಹಾಸ್ಯಪ್ರಜ್ಞೆ ಸಹಜವೇ ಆದರೂ ಭಾರತೀಯ ಸಾಹಿತ್ಯದಲ್ಲಿ ಶುದ್ಧ ಹಾಸ್ಯ ಅಥವಾ ಹಾಸ್ಯ ಪ್ರಧಾನ ಕೃತಿಗಳು ಕಡಿಮೆಯೆಂಬ ದೋಷಾರೋಪಣವೂ ಇದೆ. ನಮ್ಮ ರಸವಾದಿಗಳು ನವರಸದಲ್ಲಿ ಹಾಸ್ಯಕ್ಕೂ ಪ್ರಶಸ್ತಸ್ಥಾನವನ್ನೇ ಒದಗಿಸಿದದರೂ ಏಕೆ ಹೀಗಾಯಿತೆಂದು ಹೇಳುವುದು ಕಷ್ಟ. ಅದಕ್ಕೆ ಕಾರಣವನ್ನು ಹುಡುಕುವುದು ಈ ಉಪನ್ಯಾಸದ ವ್ಯಾಪ್ತಿಯಲ್ಲಿಲ್ಲ. ಸಾಹಿತ್ಯದಲ್ಲಿ, ಎಂದರೆ ಪ್ರೌಢ ಸಾಹಿತ್ಯದಲ್ಲಿ ಹಾಸ್ಯ ಕಡಮೆಯಾಗಿರಬಹುದು; ಆದರೆ ಜೀವನದಲ್ಲೂ ಅದು ಇಲ್ಲವೆಂಬ ಅರ್ಥವಲ್ಲ. ಭಾರತೀಯ ಮುಖಕ್ಕೆ ಹಾಸ್ಯದ ಪರಿಚಯ ಚೆನ್ನಾಗಿಯೇ ಇದೆ ಎಂಬುದಕ್ಕೆ ನಮ್ಮ ಜಾನಪದ ಸಾಹಿತ್ಯವೇ ಉದಾಹರಣೆ. ತ್ರಿಪದಿಗಳಲ್ಲಿ, ಲಾವಣಿಗಳಲ್ಲಿ, ಒಗಟುಗಳಲ್ಲಿ, ಗಾದೆ ಮಾತುಗಳಲ್ಲಿ ನಗುವಿನ ಬುಗ್ಗೆ ಗುಳು ಗುಳಿಸುವುದನ್ನು ಕಂಡಾಗ ನಮ್ಮ ಮುಖ ಅರಳುತ್ತದೆ!

ಹತ್ತನೆಯ ಶತಮಾನದ ಆದಿಕವಿ ಪಂಪನಿಂದ ಹಿಡಿದು, ಹತ್ತೊಂಬತ್ತನೆಯ ಶತಕದ ಕವಿವಲ್ಲಭ ಮುದ್ದಣನವರೆಗಿನ ಒಂಬೈನೂರು ವರ್ಷಗಳ ಕಾಲ ಘಟ್ಟದಲ್ಲಿ ಕನ್ನಡ ಸಾಹಿತ್ಯ ವಾಹಿನಿ ನಾನಾ ಮುಖವಾಗಿ ಹರಿದಿದೆ, ಜನ ಜೀವನಕ್ಕೆ ಪುಷ್ಟಿ ತುಷ್ಟಿಗಳನ್ನು ನೀಡಿದೆ. ಚಂಪೂ, ವಚನ, ಷಟ್ಪದಿ, ತ್ರಿಪದಿ, ಸಾಂಗತ್ಯ ಈಯೆಲ್ಲ ಪ್ರಕಾರಗಳಲ್ಲಿ ಸರಸವೂ ಸಮೃದ್ಧವೂ ಆಗಿರುವ ಸಾಹಿತ್ಯ ರಚನೆಯಾಗಿದೆ, ‘ಭುವನದ ಭಾಗ್ಯ’ವೆನ್ನಬಹುದಾದ ಕೃತಿರತ್ನಗಳಿಂದ ಕನ್ನಡ ಶಾರದೆಯ ಕಂಠಹಾರವು ಕಂಗೊಳಿಸುವಂತಾಗಿದೆ. ಶೃಂಗಾರವೋ ವೀರವೋ, ಕರಣವೋ ಅಥವಾ ಶಾಂತವೋ ಈ ರಸಗಳು ನಮ್ಮ ಹಳೆಯ ಕಾವ್ಯಗಳಲ್ಲಿ ಪ್ರಧಾನವಾಗಿ ಪ್ರತಿಪಾದಿತವಾಗಿದ್ದರೂ ಮಿಕ್ಕ ರಸಗಳಿಗೂ ಯಥೋಚಿತ ಸ್ಥಾನ ಪ್ರಾಪ್ತಿಯಾಗಿದೆ. ಅವುಗಳಲ್ಲಿ ಹಾಸ್ಯಕ್ಕೂ ಸ್ಥಾನವಿದೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಇಂಗ್ಲಿಷಿನಲ್ಲಿರುವಂತೆ ಹಾಸ್ಯವೇ ಪ್ರಧಾನವಾಗಿರುವ ಕಾವ್ಯಗ್ರಂಥಗಳು ಹಳಗನ್ನಡದಲ್ಲಿ ವಿರಳವಾಗಿರಬಹುದಾದರೂ ಅನ್ನದ ರುಚಿ ಹೆಚ್ಚಿಸುವ ವ್ಯಂಜನಾದಿಗಳಂತೆ ಅದೂ ಸಹ ಉಚಿತಕ್ಕೆ ತಕ್ಕಂತೆ ವರ್ಣಿತವಾಗಿದೆ ಎಂಬುದನ್ನು ಕಡೆಗಣಿಸುವಂತಿಲ್ಲ. ರಸಪ್ರತಿಪಾದನೆವೆಂಬುದು ಕಾವ್ಯವಸ್ತು, ಕವಿಯ ಆಶಯ – ಆಸಕ್ತಿ ಹಾಗೂ ಔಚಿತ್ಯ ಇವನ್ನು ಹೊಂದಿಕೊಂಡಿರತಕ್ಕವುಗಳು. ಆದುದರಿಂದ ಯಾವುದೇ ಗ್ರಂಥದಲ್ಲೂ ‘ಹಾಸ್ಯಕ್ಕಾಗಿಯೇ ಹಾಸ್ಯ’ವು ವರ್ಣಿತವಾಗಿರದಿದ್ದರೆ ಅದನ್ನು ದೋಷವೆಂದು ಹೇಳಲಾಗದು. ಷಟ್ಪದಿ, ತ್ರಿಪದಿ, ಸಾಂಗತ್ಯಗಳಂತಹ ದೇಶೀಯ ಛಂದೋಬಂಧಗಳಲ್ಲಿ ನಮ್ಮ ಕವಿಗಳು ಹೇಗೆ ಹಾಸ್ಯರಸಸಿಂಚನ ಮಾಡಿದ್ದಾರೆ ಎಂಬುದನ್ನು ನಾಲ್ಕೈದು ಉದಾಹರಣೆಗಳಿಂದ ನಿರೂಪಿಸುವ ಪ್ರಯತ್ನವನ್ನಿಲ್ಲಿ ಮಾಡುತ್ತಿದ್ದೇನೆ.

೧. ಷಟ್ಪದಿಯಲ್ಲಿ

‘ಹರಿಶ್ಚಂದ್ರ ಕಾವ್ಯ’ದಂತಹ ಮನೋಜ್ಞ ಕರತಿಯನ್ನು ರಚಿಸಿ, ಷಟ್ಪದಿಗೆ ಕನ್ನಡಲ್ಲೊಂದು ಸಮ್ಮಾನಿತ ಸ್ಥಾನವನ್ನು ದೊರಕಿಸಿಕೊಟ್ಟವನು ರಾಘವಾಂಕ. ಮುಖ್ಯವಾಗಿ ವಾರ್ಧಕ ಷಟ್ಪದಿಯನ್ನೇ ತನ್ನ ಕಾವ್ಯ ಮಾಧ್ಯಮವನ್ನಾಗಿ ಮಾಡಿಕೊಂಡವನು ಅವನು. ರಾಘವಾಂಕನ ಕಾವ್ಯಗಳಲ್ಲಿ ಹಾಸ್ಯ ಸನ್ನಿವೇಶಗಳು ಹೆಚ್ಚಾಗಿ ಕಂಡುಬರುವುದಿಲ್ಲ. ವಸಿಷ್ಠ ವಿಶ್ವಾಮಿತ್ರ, ಅನಾಮಿಕಾ ಹರಿಶ್ಚಂದ್ರ, ವಿಶ್ವಾಮಿತ್ರ ಹರಿಶ್ಚಂದ್ರರ ನಡುವಿನ ಸಂವಾದಗಳೂ, ತೆರಕಾರನಾದ ನಕ್ಷತ್ರಿಕನು ಹರಿಶ್ಚಂದ್ರನ ಬೆಂಬತ್ತಿ ಭಂಗಿಸುವ ಸಂದರ್ಭವೂ ಸರಸವಾಗಿದ್ದರೂ ಅಲ್ಲಿ ಶುದ್ಧ ಹಾಸ್ಯವನ್ನು ಕಾಣಲಾರೆವು. ಆದರೂ ಅನಾಮಿಕ ಹರಿಶ್ಚಂದ್ರರ ಸಂಭಾಷಣೆಯಲ್ಲಿ ವ್ಯಂಗ್ಯ ವಿಡಂಬನೆಯನ್ನು ಕೆಲಮಟ್ಟಿಗೆ ಗುರುತಿಸಬಹುದು. ಊರಿಗೆ ನುಗ್ಗಿ ಹಾವಳಿ ಮಾಡುತ್ತಿದ್ದ ಮೃಗಗಳನ್ನು ಬೇಟೆಯಾಡುವುದಕ್ಕಾಗಿ ಬೇಡ ಪಡೆಯೊಂದಿಗೆ ಹರಿಶ್ಚಂದ್ರನು ಕಾಡನ್ನು ಸೋಹುತ್ತಿದ್ದಾಗ ಮನವರಾಹವೊಂದನ್ನು ಕಂಡು ಬೆಚ್ಚಿದ ಬೇಡನೊಬ್ಬನ ಪಾಡು ನಗು ತರಿಸುತ್ತವೆ :

ಬಟ್ಟತಲೆ ಗಿಡು ಹಿಡಿದು ಕಳೆದುಡಿಗೆ ಕಾಡಮುಳು
ನಟ್ಟು ಕುಂಟುವ ಪದಂ ಬೆನ್ನ ಬಿಗುಹಳಿದೆಳಲ್ವ
ಮೊಟ್ಟೆಗೂಳೆಡಹಿ ಕೆಡೆದೊಡೆದ ಮೊಳಕಾಲ್ ತೇಂಕುವಳ್ಳೆ ಗಳುವೆರಸೊರಲುತ |

ಕೆಟ್ಟೋಡುತಿರಲೊರ್ವನವನ ಕಂಡಿದಿರಡ್ಡ
ಗಟ್ಟಿ ಕೇಳಲು ಹು ಹು ಹುಲಿಯಲ್ಲ ಹಂದಿಯರೆ
ಯಟ್ಟಿ ಬರುತಿರ್ದುದೆನೆಯೆಲ್ಲಿ ತೋರೆನಲು ನೀನೇ ಅರಸಿಕೊಂಬುದೆಂದ ||

ಪುಕ್ಕಲು ಬೇಡನ ಚಿತ್ರಣ ಕಣ್ಣಿಗೆ ಕಟ್ಟುವಂತಿದೆ. ಅದರಲ್ಲೂ ಜತೆಗಾರನೊಬ್ಬ ಅವನನ್ನು ಅಡ್ಡಗಟ್ಟಿ ‘ಓಡುವುದೆಲ್ಲಿಗೆ, ಏಕೆ’ ಎಂದು ಕೇಳುವಾಗ, ಹೆದರಿಕೆಯಿಂದ ಏದುಸಿರು ಬಿಡುತ್ತಿದ್ದ ತೊದಲು ಮಾತಿನ ಬೇಡ ತಡೆತಡೆದು ಉತ್ತರಿಸುವ ರೀತಿಯಂತೂ ಅತ್ಯಂತ ಹಾಸ್ಯಪೂರ್ಣ: “ಹು… ಹು….ಹುಲಿಯಲ್ಲ ಹಂದಿ!” ಹುಲಿಯಂತಹ ಹಂದಿ, ಹುಲಿಯನ್ನು ಕಂಡಷ್ಟೇ ಭಯ; ಭಯದಿಂದ ಹುಲಿಯೋ ಹಂದಿಯೋ ಎಂದು ತಿಳಿಯಲಾಗದಷ್ಟು ಕಣ್ಣು ಕತ್ತಲೆ!

ಕನ್ನಡದಲ್ಲಿ ಷಟ್ಪದಿಕಾರರು ಅನೇಕರಿದ್ದಾರೆ. ಆದರೆ ನಾಲ್ಕಗ್ಗಳಿಕೆಯ ನಾರಣಪ್ಪನಿಗೆ ಭಾಮಿನಿಯೊಂದಿಗೆ ಅದ್ವಿತೀಯ ಸಂಬಂಧ. ಸಾಗರ ಸದೃಶವಾದ ಮಹಾಭಾರತದ ವಿಸ್ತಾರ ಗಂಭೀರ ಕಥನದಲ್ಲಿ ಕುಮಾರವ್ಯಾಸ ಅಲ್ಲಲ್ಲಿ ಹಾಸ್ಯದ ಅಲೆಗಳನ್ನು ಎಬ್ಬಿಸಿದ್ದಾನೆ. ವಾಚಕರ ಮುಖಗಳಲ್ಲಿ ನಗೆ ಹೂವನ್ನು ಅರಳಿಸಿದ್ದಾನೆ. ಗದುಗು ಭಾರತದ ಹಾಸ್ಯ ಪ್ರಸಂಗಗಳಲ್ಲಿ ಕೆಲವನ್ನು ಉದಾಹರಿಸುತ್ತಿದ್ದೇನೆ.

ಭೀಮ ದುರ್ಯೋಧನರಿಗೆ ಬಾಲ್ಯಾದಪಿ ವೈರ. ಆಟದ ಕಳದಲ್ಲಿ ಭೀಮ ತಾನೇ ಮುಂದಾಗಿ ಕೌರವರನ್ನು ಹಂಗಿಸಿ, ಭಂಗಿಸಿ, ಕಳುಹಿಸಿದರೂ ದೂರು ತನ್ನ ಮೇಲೆ ಬರಬಾರದೆಂದು ಮೈಮೇಲೆ ಅಲ್ಲಲ್ಲಿ ಗಾಯ ಮಾಡಿಕೊಂಡು, –

ಮುಳು ಮೊನೆಗಳಲಿ ಗೀರಿ ನೆತ್ತರ
ಗಳೆದು ಹುಡಿಯಲಿ ಹೊರಳಿ ತಾ ಬಂ
ದಳುತ ಧೃತರಾಷ್ಟ್ರಂಗೆ ಭೀಷ್ಮಗೆ ದೂರುವನು ಭೀಮ ||

ತುಂಟ ಹುಡುಗರಿಗೆ ತಕ್ಕುದಾದ ಜಾಣತನ ಇದು! ಮತ್ತೊಮ್ಮೆ ಕೌರವರು ಮರವೇರಿ (ಕೋತಿಯಾಟ?) ಆಡುತ್ತಿದ್ದಾಗ, ಭೀಮ ಅದರ ಬುಡ ಹಿಡಿದು ಆಲುಗಿಸುತ್ತಾನೆ. –

ಮರವ ಹಿಡಿದಲುಗಿದರೆ ಬಿದ್ದರು
ಭರತ ಕುಲಪಾಲಕರು ನೂರೈ
ವರು ಮಹಾವಾತದಲಿ ತರುಫಲ ನಿಕರ ಬೀಳ್ವಂತೆ ||

‘ಬಿದ್ದರು ಭರತಕುಲ ಪಾಲಕರು’ ಎಂಬಲ್ಲಿ ಹಾಸ್ಯವಿದೆ, ಭವಿಷ್ಯಾರ್ಥ ಸೂಚನೆಯಿದ್ದಂತೆಯೂ ಭಾಸವಾಗುತ್ತದೆ.

ಹಿಡಿಂಬ ಬಕಾಸುರವಧೆಗಳಂತಹ ವಿಷಯ ಪ್ರಸಂಗಗಳಲ್ಲೂ ಕುಮಾರ ವ್ಯಾಸನ ಹಾಸ್ಯಪ್ರಜ್ಞೆ ಪ್ರಕಟವಾಗುತ್ತದೆ. ವಾರಣಾವತದ ಅರಗಿನ ಮನೆಯಿಂದ ತಪ್ಪಿಸಿಕೊಂಡ ಪಾಂಡವರು ಹಿಡಿಂಬ ವನದಲ್ಲಿ ತಂಗುತ್ತಾರೆ. ರಾತ್ರಿ ಮಿಕ್ಕವರು ನಿದ್ದಿಸುತ್ತಿದ್ದಾಗ ಎಚ್ಚರದಿಂದ ಕಾಯುವ ಕೆಲಸ ಭೀಮನದು. ಆದರೆ, –

ಔಕುವುದು ಬಲುನಿದ್ರೆ ನಿದ್ರೆಯ
ನೂಕುವನು ಕಣ್ಣೆವೆಗಳಲಿ ನಸು
ತೂಕಡಿಕೆ ತೋರಿದೊಡೆ ಮೈಗೆದರುವನು ಕೈಯೊಡನೆ ||

(ಹೆತ್ತವರ ಒತ್ತಾಯಕ್ಕೆಂಬಂತೆ ಪರೀಕ್ಷೆಗೆ ಓದುವ ಎಳೆ ಹುಡುಗರ ಪಾಡನ್ನು ಊಹಿಸಿಕೊಳ್ಳಿ!) ಮುಂದೆ ಹಿಡಿಂಬನೊಂದಿಗೆ ಹೋರಾಡುವಾಗ, –

ಒರಲ ಬೇಡವೊ ಕುನ್ನಿ ಮೆಲ್ಲನೆ
ತರುಬಿಕಾದುವುದೆಲವೊ ಮೈಮರೆ
ದೊರಗಿದವರೇಳ್ವರು ಕಣಾ ಸತ್ತಂತೆ ಸಾರೆನುತ |
ತರುಬಿ ಹಿಡಿದಾ ಭೀಮ ಬೆನ್ನಿನೊ
ಳೆರಗಿದನು………………………

ಭೀಮನ ಗುದ್ದಿನಿಂದ ಮೈಯೆಲುಬುಗಳೆಲ್ಲ ನುಗ್ಗು ನುರಿಯಾದರೂ ಹಿಡಿಂಬ ನೋವಿನಿಂದ ಬಾಯ್ಬಿಟ್ಟು ಅರಚುವಂತೆಯೂ ಇಲ್ಲ – ತನ್ನವರ ನಿದ್ರಾಭಂಗವಾದೀತೆಂದು ಭೀಮನ ಝಂಕಣೆ!

ಏಕಚಕ್ರಪುರದಲ್ಲಿ ಬಕಾಸುರನಿಗೆ ಸಲ್ಲಬೇಕಾದ ಬಂಡಿಯನ್ನದೊಂದಿಗೆ ಭೀಮನನ್ನು ಕಳುಹಿಸುವುದಾಗಿ ಕುಂತಿ ಹೇಳಿದಾಗ, ಅಗ್ರಹಾರದ ಬ್ರಾಹ್ಮಣರಿಗೆಲ್ಲ ಆತಂಕ; ಆದರೆ ಭೀಮನಿಗೋ, –

ಮರಳುಗಳು ನೀವೆಂದವರ
ಪ್ಪರಿಸಿದನು ಕಲಿಭೀಮನಾ ನಡು
ವಿರಳು ತೊಡಗಿತು ವಿಪ್ರಭವನದ ಪಾಕಮಯ ರಭಸ |
ಹೊರೆದಳೆನ್ನನು ತಾಯಿ ಕುಂತಿಯ
ಹರಸುವೆನು ಪಾರಣೇಯ ಹೊತ್ತಿನೊ
ಳರಸು ನಾಳಿನೊಳಾನೆನುತ ಹಿಗ್ಗಿದನು ಕಲಿಭೀಮ ||

ಎಷ್ಟೋ ದಿನಗಳಿಂದ ಅರೆಹೊಟ್ಟೆಯಾಗಿದ್ದ ಭೀಮನಿಗೆ ಬಂಡಿಯನ್ನದ ಗ್ರಾಸ ಪ್ರಾಪ್ತಿಯಾದಾಗ ಅಮಿತಾನಂದ! ಅದನ್ನು ಒದಗಿಸಿಕೊಟ್ಟದ್ದಕ್ಕಾಗಿ ತಾಯಿ ಕುಂತಿಯಲ್ಲಿ ಎಂದಿಲ್ಲದೆ ಭಕ್ತಿ, ಕೃತಜ್ಞತೆ. ಅದು ಎಷ್ಟೆಂದರೆ, ತಾನು ಮಗನೆಂಬುದನ್ನೂ ಮರೆತು, ತಾಯಿಯನ್ನು  ಹರಸುವುದಕ್ಕೂ ಮುಂದಾಗುತ್ತಾನೆ! ಅವನ ಸ್ವಭಾವವನ್ನು ನಾರಣಪ್ಪ ಎಷ್ಟು ಸಹಜವಾಗಿ, ಎಷ್ಟು ಹಾಸ್ಯಪೂರ್ಣವಾಗಿ ಚಿತ್ರಿಸಿದ್ದಾನೆ!

ಶಾಲೆಯ ಮಕ್ಕಳು ಎಲ್ಲಿಗಾದರೂ ಪ್ರವಾಸ ಹೊರಡುವುದಿದ್ದರೆ ಹಿಂದಿನ ಇರುಳನ್ನೆಲ್ಲ ಪ್ರವಾಸದ ಸುಖವನ್ನು ಕಲ್ಪಿಸಿಕೊಳ್ಳುತ್ತಾ ಎಚ್ಚರದಲ್ಲೇ ಕಳೆಯುತ್ತಾರೆ. ಭೀಮನಿಗೂ ಹಾಗೆಯೇ ಆಯಿತು. ಬೆಳಗ್ಗಿನ ತಂಪು ಹೊತ್ತಿನಲ್ಲಿ ಕೊಂಚ ಎವೆ ಮುಚ್ಚಿದ್ದೇ ತಡ ಎಚ್ಚರವಾಯಿತು; ಎಚ್ಚರಕ್ಕೆ ಕಾರಣ “ಪರಿಪರಿಯ ಬಹು ಭಕ್ಷ್ಯ ಪಾಕದ ಪರಿಮಳದ ಶಾಕಾದಿಗಳ ವೊಗ್ಗರಣೆಗಳ ಸೌರಭಕೆ ತಿಳಿದುದು ನಿದ್ರೆ ಪವನಜನ!” ಒಗ್ಗರಣೆಯ ಸದ್ದಿಗೆ ಕಣ್ಣು ಕಿವಿಗಳು ತೆರೆದುವಾದರೆ, ತಂಗಾಳಿಯಲ್ಲಿ ತೇಲಿಬಂದ ಪರಿಮಳಕೆ ಮೂಗಿನ ಹೊಳ್ಳೆ ಅರಳಿತು! ಇಲ್ಲಿರುವುದು ವಿನೋದವೊಂದೇ ಅಲ್ಲ, ಮನುಷ್ಯ ಸ್ವಭಾವದ ಸೂಕ್ಷ್ಮ ವಿಶ್ಲೇಷಣೆ, ಇದು ನಾರಣಪ್ಪನಂತಹ ಪ್ರತಿಭಾಶಾಲಿಗೆ ಮಾತ್ರ ಸಾಧ್ಯ.

ದ್ರೌಪದೀ ಸ್ವಯಂವರ ಪ್ರಸಂಗದಲ್ಲಿ ಹೋಮಧೂಮದಂತೆ ನಗೆಯೂ ಅಲೆಅಲೆಯಾಗಿ ಹಬ್ಬುತ್ತದೆ. ದ್ರೌಪದಿ ವರಣಮಾಲೆಯನ್ನು ಹಿಡಿದು ವಿವಾಹ ಮಂಟಪವನ್ನು ಪ್ರವೇಶಿಸಿದಾಗ, ಸಾಲು ಸಾಲಾಗಿ ಆಸೀನರಾಗಿದ್ದ ರಾಜಪುರುಷರು ಮೈಮರೆತ ಪರಿಯನ್ನು ನಾರಣಪ್ಪ ಚಿತ್ರಿಸಿದ ಸೊಗಸೇ ಸೊಗಸು!-

ಮಡಿಸಿದೆಲೆ ಬೆರಳೊಳಗೆ ಬಾಯೊಳ
ಗಡಸಿದೆಲೆ ಬಾಯೊಳಗೆ ಸಚಿವರ
ನುಡಿಯ ಕೇಳರು ಸುಳಿಯ ಕಾಣರು ಲೋಚನಾಗ್ರದಲಿ ||

ನಮ್ಮ ತರುಣರನೇಕರು, ಸಿನೆಮಾ ನಟಿಯರ ಭಿತ್ತಿಪತ್ರಗಳನ್ನು ನೋಡುವುದರಲ್ಲಿ ಕಾಲ ದೇಶಗಳನ್ನೇ ಮರೆತು ಬಿಡುವುದುಂಟು – ಹಾಗಾಯಿತು ಮಕುಟಧಾರಿಗಳ ಪಾಡು!

ಕ್ಷತ್ರಿಯರೆಲ್ಲ ಸೋತು ಕೈಚೆಲ್ಲಿದಾಗ ವಿಪ್ರವೇಷದ ಅರ್ಜುನ ಮತ್ಸ್ಯ ಯಂತ್ರ ಛೇದನಕ್ಕೆಂದು ಎದ್ದು ನಿಲ್ಲುತ್ತಾನೆ; ಆಗ ಬ್ರಾಹ್ಮಣ ವೃಂದ,-

ಏನು ಗಡ್ಡದುಪಾದ್ಯರೆದ್ದಿರಿ
ದೇನು ಧನುವಿಂಗಲ್ಲಲೇ ತಾ
ನೇನು ಮನದಂಘವಣೆ ಬಯಸಿದರೇ ನಿತಂಬಿನಿಯ |

ಎಂದು ಪ್ರಶ್ನಿಸುತ್ತದೆ. ಹೊಟ್ಟೆ ತುಂಬ ಊಟ, ಮೈತುಂಬ ದಕ್ಷಿಣೆಗಳಿಗಾಗಿ ಬಂದ ಹಾರುವಯ್ಯನಿಗೇಕೆ ಈ ಅಧಿಕ ಪ್ರಸಂಗ ಎಂದು ಅವರಿಗೆ ಆತಂಕ!

ಇನ್ನು ಉತ್ತರ ಗೋಗ್ರಹಣ ಸಂದರ್ಭದಲ್ಲಂತೂ ಹಾಸ್ಯರಸ ಮಡುಗಟ್ಟಿ ನಿಂತಿದೆ; ಅಲ್ಲಿಯ ಪದ್ಯ-ಪದ್ಯಗಳೂ ಓದುಗರಿಗೆ ಕಚಗುಳಿಯಿಡುತ್ತದೆ; ನಕ್ಕೂ ನಕ್ಕೂ ಅವರ ಹೊಟ್ಟೆ ಹುಣ್ಣಾಗುತ್ತದೆ.

ಅಂತಃಪುರದಲ್ಲಿ ನಾರೀಜನರ ನಡುವೆ ಪೀಠಾರೂಢನಾಗಿದ್ದಾನೆ, ಉತ್ತರ ಕುಮಾರ. ಆಗ ಬರುತ್ತದೆ ಕೌರವರ ಪಡೆ ಗೋವುಗಳನ್ನು ಸೆರೆ ಹಿಡಿದಿದೆ ಎಂಬ ಸುದ್ದಿ. ಸುದ್ದಿ ತಂದ ಬಡ ಗೋಪಾಲನನ್ನು ಉತ್ತರಕುಮಾರ ಝಂಕಿಸುತ್ತಾನೆ,-

ನೂಕು ಕುನ್ನಿಯನಾಹವದ ಭೀ
ತಾಕುಳನನು ತಾನೀಗ ಹೆಂಡಿರ
ಸಾಕಿ ಬದುಕುವ ಲೌಲ್ಯತೆಯನೊಟ್ಟೈಸಿ ಬಂದನೆನೆ ||
ಕಾಕ ಬಳಸುವನಿವನು ತಾನು
ದ್ರೇಕಿಸಿಯೆ ಸಮರದಲಿ ನಿಲಲು ಪಿ
ನಾಕಧರನಿಗೆ ನೂಕದೆಂದನು ಸತಿಯರಿದಿರಿನಲಿ ||

ಗೋಪಾಲನಿಗೆ ಹೆಂಡತಿಯ ಮೇಲೆ ಪ್ರೀತಿ, ಜೀವದ ಮೇಲೆ ಆಸೆ ಎಂದು ಅಬ್ಬರಿಸುವ ಉತ್ತರ ಭೂಪ ಕೂತಿರುವುದಾದರೂ ಎಲ್ಲಿ? – ಕನ್ಯಾಂತಃ ಪುರದಲ್ಲಿ! ಅಲ್ಲಿ ಅವನೊಬ್ಬನೇ ಗಂಡು! ಮೀಸೆ ತಿರುವುತ್ತ ಗಳಪುವಾಗಲೆಲ್ಲ ಹೆಂಗಳೆಯರ ಮುಖ ನೋಡಲು ಮರೆಯುವುದಿಲ್ಲ. ಆ ಬಾಲೆಯರು, ‘ನೀನು ಧೀರ ರಾಜಕುಮಾರ, ಕೌರವರನ್ನು ಹಿಮ್ಮೆಟ್ಟಿಸಿ ಹಸುಗಳನ್ನು ಬಿಡಿಸಿ ತಾ’ ಎಂದು ಒತ್ತಾಯಿಸಿದಾಗ, –

ಎಂದೊಡಬ್ಬರಿಸಿದನು ತಾಕಲಿ
ಯೆಂದದೆ ಬಗೆದನು ಮೀಸೆಯನು ಬೆರಳಿಂದ
ತಿರುಹುತ ಮುಗುಳುನಗೆ ಹರುಷದಲಿ ಮೈ ಮರೆದ ||

ಆ ಬಡ ಕೌರವ ಮತ್ಸ್ಯದೇಶದ ಮೇಲೆ ನುಗ್ಗಿ ಬಂದದ್ದು ಹೇಗಾಯಿತೆಂದರೆ, –

ಜವನ ಮೀಸೆಯ ಮುರಿದನೋ ಭೈ
ರವನ ದಾಡೆಯ ನಲುಗಿದನೊ ಮೃ
ತ್ಯುವಿನ ಮೇಲುದ ಸೆಳೆದನೊ ಕೇಸರಿಯ ಕೆಣಕಿದನೊ |
……………………………………………..
……………………………………………..
ಯುವತಿಯರ ಮೊಗ ನೋಡುತ್ತುತ್ತರ ಬಿರುದ ಕೆದರಿದನು ||

ತಾನೇನೋ ನಿಂತ ನೆಲೆಯಿಂದಲೇ ಕೊಳುಗುಳಕ್ಕೆ ಹೊರಡಲು ಸಿದ್ಧ; ಆದರೆ ಕಾದುವುದಾದರೂ ಯಾರೊಂದಿಗೆ ? –

ಆರೊಡನೆ ಕಾದುವೆನು ಕೆಲಬರು
ಹಾರುವರು, ಕೆಲರಂತಕನ ನೆರೆ
ಯೂರವರು, ಕೆಲರಧಮ ಕುಲದಲಿ ಸಂದು ಬಂದವರು |

ವಿಪ್ರವರ ದ್ರೋಣ, ಪಿತಾಮಹ ಭೀಷ್ಣ, ಮಹಾರಥಿ ಕರ್ಣರನ್ನು ವಾಗ್ಭಟ ಉತ್ತರಕುಮಾರ ಅವಗಣಿಸುವ ರೀತಿ ಎಷ್ಟು ರೋಚಕ! ಅವನಿಗಿರುವುದೊಂದೇ ಕೊರತೆ ಸಾರಥಿಯದು –

ಸಾರಥಿಯ ಶಿವಕೊಟ್ಟನಾದರೆ
ಮಾರಿಗುಬ್ಬಸವಾಗದಂತಕ
ನೂರು ತುಂಬದೆ ಡೊಳ್ಳು ನೂಕದೆ ರಣ ಪಿಶಾಚರಿಗೆ |
ದೋರೆಗರುಳಲಿ ದಾನವರೊಡ
ಲೇರು ಹತ್ತದೆ ಹಬ್ಬವಾಗದೆ
ಭೂರಿ ಭೇತಾಳರಿಗೆ…………

ಬಾಯ್ಬಡುಕತನವೆಂದರೆ ಇದು! ಅಂತಹವರಿಗೆಲ್ಲ ಉತ್ತರ ಪ್ರಾತಃಸ್ಮರಣೀಯ ಪರಮಗುರು! ಉತ್ತರಕುಮಾರ ಇಮತಹ ಮುಕ್ತಾ ಫಲಗಳನ್ನು ಉದುರಿಸುವುದು ನಾರಿಯರ, ನೀರೆಯರ, ಸತಿಯರ, ಸುದತಿಯರ, ಹೆಂಗಳೆಯರ, ಹೆಂಡಂದಿರ ನಡುವಿನಲ್ಲಿ ಎಂಬುದನ್ನು ಕುಮಾರವ್ಯಾಸ ಮತ್ತೆ ಮತ್ತೆ ಜ್ಞಾಪಿಸುತ್ತಾನೆ.

ಕೊನೆಗೂ ಉತ್ತರಕುಮಾರ ಮಾನಿನಿಯರಿಂದ ಮಂಗಳಾರತಿ ಮಾಡಿಸಿಕೊಂಡು ಬೃಹನ್ನಳೆಯ ಸಾರಥ್ಯದಲ್ಲಿ ರಥವೇರಿ ಯುದ್ಧಕ್ಕೆ ಹೋರಡುತ್ತಾನೆ. ಆದರೆ ಕೌವರ ದಂಡನ್ನು ಕಾಣುತ್ತಿದ್ದಂತೆ, –

ಹಸಿದ ಮಾರಿಯ ಮಂದೆಯಲಿ ಕುರಿ
ನುಸುಳಿದಂತಾಯಿತು…………

ಅವನ ಪಾಡು! ಸಾರಥಿ ಕಾಲಿಗೆ ಬಿದ್ದು ತಪ್ಪೊಪ್ಪಿಕೊಂಡ, ‘ಕಾಪಾಡು’ ಎಂದು ಬೇಡಿಕೊಂಡ. ಸಾರಥಿ ಸಾಮಾನ್ಯನಲ್ಲ, ತ್ರಿಲೋಕದಲ್ಲಣ ಅರ್ಜುನ. ವಚನವೀರ ರಾಜಪುತ್ರನ ಈ ರಣಭೀರುತನವನ್ನು ಕಂಡು ಸಿಟ್ಟು ಬೆಂಕಿಯಾದ. ಆದರೂ ಅದನ್ನು ತೋರ್ಪಡಿಸದೆ, ಕೇಳಿಯೂ ಕೇಳದಂತೆ, “ನುಡಿಯ ಕೇಳದೆ ಮುಂದೆ ಹತ್ತೆಂಟಡಿಯನರ್ಜುನ ರಥವ ಹರಿಸಿದ……”, “ಎಂದೊಡರ್ಜುನ ನಗುತ ರಥವನು ಮುಂದೆ ನಾಲ್ಕೆಂಟಡಿಯ ನೂಕಿದ…..”! ರಥದ ಗಾಲಿಯ ಒಂದೊಂದು ಉರುಳಿಗೂ ಉತ್ತರನ ಕೊರಳು ಬಿಗಿಯುತ್ತ ಬಂತು. ಎದೆ ಬಡಿದು ಅತ್ತ, ಕಣ್ಣು ಮುಚ್ಚಿ ‘ಸತ್ತೇ’ ಎಂದು ಅರಚಿದ, ಹಲ್ಲು ಕಿರಿದ, ಬೆರಳನ್ನು ಬಾಯೊಳಗಿಟ್ಟ – ಹೀಗೆ ಏನೇನೋ ಮಾಡಿದ, ಬದುಕಗೊಡುವಂತೆ ಬೇಡಿದ. ಊಹುಂ, ಸಾರಥಿಯಲ್ಲಿ ಪ್ರಾಣಿ ದಯೆಯಿಲ್ಲ, ಅನ್ನಕಂಟಕ ಅವನು! ಉತ್ತರ ಒಳಗೊಳಗೇ ನಿರ್ಧರಿಸಿ ಕೊಂಡ : “ವ್ಯಥಾ ಸಾಯುವುದರಲ್ಲೇನು ಸುಖ? ಬದುಕಿ ಉಳಿದರೆ ಬೇಡಿ ತಿಂದೇನು. ನೋಡುವವರು ನೋಡುತ್ತಿರಲಿ, ಆಡುವವನು ಆಡುತ್ತಿರಲಿ”, ಹೀಗೆಂದುಕೊಂಡವನೇ, –

ನಿಂದು ಧುಮ್ಮಿಕ್ಕಿದನು ಬದುಕಿದೆ
ನೆಂದು ನಿಟ್ಟೊಟದಲಿ ಹಾಯ್ದನು ಬಿಟ್ಟ ಮಂಡೆಯಲಿ

ಉತ್ತರನ ಎದೆಯಲ್ಲಿ ಇಲ್ಲದ ಬಲ ಅವನ ಕಾಲುಗಳಿಗಿತ್ತು! ಓಡಿದ ರಭಸಕ್ಕೆ ಶೀರ್ಷಕ ಹಾರಿ ಹೋಯಿತು. ಮುಂಡಾಸು ಹೋದರೆ ಹೋಗಲಿ, ತಲೆ ಉಳಿದರೆ ಸಾಕು!

ಆಕಡೆ ನಿಂತು ನೋಡುತ್ತಿದ್ದಾರೆ ಕೌರವರು : ರಥಿಕ ಓಡುತ್ತಿದ್ದಾನೆ, ಸಾರಥಿ ಬೆನ್ನಟ್ಟುತ್ತಿದ್ದಾನೆ! “ನೋಡಿ ಕೌರವ ಸೇನೆ ಕೆಡೆದುದು ನಗೆಯ ಕಡಲೊಳಗೆ”. ದ್ವಾಪರದ ಕೌರವರಿಗೆ ಮಾತ್ರವಲ್ಲ! “ನೋಡಿ ಕೌರವ ಸೇನೆ ಕೆಡೆದುದು ನಗೆಯ ಕಡಲೊಳಗೆ”. ದ್ವಾಪರದ ಕೌರವರಿಗೆ ಮಾತ್ರವಲ್ಲ, ಆ ಘಟನೆಯನ್ನು ನೆನೆಯುವಾಗ ಕಲಿಯುಗದ ಕನ್ನಡಿಗರಾದ ನಮ್ಮ ತುಟಿಗಳ ಅಂಚಿನಲ್ಲೂ ನಗೆಯ ಬುಗ್ಗೆ ಚಿಮ್ಮುತ್ತದೆ. ಕುಮಾರವ್ಯಾಸನ ‘ಹಾಸ್ಯೇಂದ್ರಿಯ ಪಟುತ್ವ’ಕ್ಕೆ ಇವು ಒಂದೆರಡು ನಿದರ್ಶನಗಳು ಮಾತ್ರ. ಹಾಸ್ಯವು ಹರಳುಗಟ್ಟಿದೆ ಪ್ರಸಂಗಗಳು ಗದುಗಿನ ಭಾರತದಲ್ಲಿ ಇನ್ನೂ ಎಷ್ಟೋ ಇವೆ. ವಿಸ್ತಾರ ಭಯದಿಂದ ಅವುಗಳನ್ನು ನಿರೂಪಿಸಿಲ್ಲ. ಹಾಸ್ಯ ರಸಿಕರಿಗೆ ಈ ಉದಾಹರಣೆಗಳೇ ಸಾಕು, ಕುಮಾರವ್ಯಾಸನ ಅದೆಂತಹ ವಿನೋದ ಕುಶಲಿ ಎಂಬುದನ್ನು ಅರಿತು, ಮೆಚ್ಚಿ, ಸವಿಯುವುದಕ್ಕೆ!

ದಂತಕಥೆಯ ಪ್ರಕಾರ ನಾರಣಪ್ಪನ ಭಾವನಂಟನೂ ಪ್ರಬಲ ಪ್ರತಿಸ್ಪರ್ಧಿಯೂ ಆಗಿದ್ದ ಚಾಮರಸನ ‘ಪ್ರಭುಲಿಂಗ ಲೀಲೆ’ಯಲ್ಲೂ ಸರಸ ಹಾಸ್ಯದ ಸಂದರ್ಭಗಳಿವೆ. ಕಾವ್ಯಾರಂಭದಲ್ಲೇ ಚಾಮರಸ ಕವಿ ಅನ್ಯಥಾ ಗಂಭೀರ ಪ್ರಶಾಂತವಾಗಬಹುದಾದ ಕೈಲಾಸವಾಸಿ ಪಾರ್ವತೀ ಪರಮೇಶ್ವರರ ವರ್ಣನೆಯನ್ನು ಹಾಸ್ಯೋಲ್ಲೇಖಗಳಿಂದ ಆತ್ಮೀಯಗೊಳಿಸಿದ್ದಾನೆ. ಪಶುಪತಿ ಮಾತ್ರವಲ್ಲ ಪಾರ್ವತೀ ಪತಿಯೂ ಆಗಿರುವ ಪರಮಶಿವನದು ‘ಇಂದು ಮೌಳಿಯ ದರ ಹಸಿತ’ ಮುಖ ಮಂಡಲವಾದರೆ, ಅರ್ಧಾಂಗಿ ಪಾರ್ವತಿ ‘ವಿಸ್ತರ ವಿನೋದಂಗಳು….. ಕರ ಚೆಲುವ ಬಾಯ್ದರೆಯ ಪರಮೇಶ್ವರಿ’. ‘ಪ್ರಭುಲಿಂಗ ಲೀಲೆ’ಯ ಪ್ರಧಾನ ಭೂಮಿಕೆಗಳಾದ ಅಲ್ಲಮ ಮಾಯಾ ದೇವಿಯರ ಸಂಭಾಷಣೆಗಳಲ್ಲಿ ವಿನೋದವು ಅಲ್ಲಲ್ಲಿ ಹನಿ ಹನಿಯಾಗಿ ಜಿಜುಗುತ್ತದೆ, ಓದುಗರ ನಾಲಗೆಗೆ ರುಚಿಯೂಡುತ್ತದೆ. ‘ಮಾಯಾ ಕೋಲಾಹಲ’ ನೆನಿಸಿದ ಅಲ್ಲಮಫ್ರಭು, ಮದ್ದಳೆಗಾರನಾಗಿ ಮಧುಕೇಶ್ವರ ದೇವಾಲಯದಲ್ಲಿ ಕಾಣಿಸಿಕೊಂಡಾಗಿನ ಚಿತ್ರ ವಿನೋದ ಪೂರ್ಣವಾಗಿದೆ;

ತುರುಬ ಚಿಮ್ಮುರಿ ಚಿಂದಿಕಾಸೆಯ
ಸೆರಗ ನಸುಹೊದೆದೊಲ್ಲಿ ಮಿಂಚುವ
ಮಿರುಪ ಸುಲಿಪಲ್ಲಸಿಯ ಸೆಳ್ಳುಗುರುಲಿವ ಹೊಂದೊಡರು |
ಉರುವ ಗಂಧದ ಲೇಪ ಬೆನ್ನೊಳು
ಮೆರೆವ ಮದ್ದಳೆ ಸಹಿತ ಬಂದೀ
ತೆರನನಲ್ಲಮ ನಟಿಸಿ ನಿಂದನು ವಿಕೃತ ವೇಷದಲಿ ||

ಮತ್ತೊಬ್ಬ ಷಟ್ಪದಿಕಾರ ತೊರವೆಯ ನರಹರಿ – ಕುಮಾರವಾಲ್ಮೀಕಿಯ ‘ತೊರವೆ ರಾಮಾಯಣ’ದಲ್ಲೂ ನಾಲ್ಕಾರು ವಿನೋದ ಪ್ರಸಂಗಗಳಿವೆ. ಸೀತಾ ಸ್ವಯಂವರ, ಕುಂಭಕರ್ಣನ ವಿರಾಡ್ರೂಪ, ಹನುಮಂತನ ಲಾಂಗೂಲಕ್ಕೆ ಅಗ್ನಿಸ್ಪರ್ಶ ಮುಂತಾದ ಕಡೆಗಳಲ್ಲಿ ಹಾಸ್ಯವು ಹೊಮ್ಮಿ ಚಿಮ್ಮಿ ಹರಿಯುತ್ತದೆ, ಕಪಿಸೈನ್ಯದ ನಾನಾ ಚೇಷ್ಟೆಗಳಲ್ಲಿ ಅವುಗಳ ವರ್ಣನೆಯಲ್ಲಿ ಕವಿ ಹಾಸ್ಯಕ್ಕೆ ಉಚಿತ ಅವಕಾಶವನ್ನು ಕಲ್ಪಿಸಿದ್ದಾನೆ.

‘ಕವಿಚೂತವನ ಚೈತ್ರ’ ಲಕ್ಷ್ಮೀಶನ ‘ಜೈಮಿನಿ ಭಾರತ’ದಲ್ಲಿ ನಗೆಯ ಕಾರಂಜಿ ಬಣ್ಣ ಬಣ್ಣವಾಗಿ ಚಿಮ್ಮಿ ಓದುಗರ ಮುಖಕ್ಕೆ ರಂಗೇರಿಸುತ್ತದೆ. ಕಾವ್ಯಾರಂಭದ ಇಷ್ಟದೇವತಾ ಸ್ತುತಿಯಲ್ಲೇ ಲಕ್ಷ್ಮೀಶನ ಹಾಸ್ಯ ದೃಷ್ಟಿ ಸುಸ್ಪಷ್ಟವಾಗುತ್ತದೆ :

ಆವಗಂ ಸರಸ ಕರುಣಮೃತದ ಕಳೆಗಳಿಂ
ತೀವಿದಳನಗೆಯ ಬೆಳುದಿಂಗಳಂ ಪಸರಿಸುವ
ದೇವಪುರ ಲಕ್ಷ್ಮೀರಮಣನಾಸ್ಯಚಂದ್ರನಾನಂದಮಂ ನಮಗೀಯಲಿ |

ಮಹಾಭಾರತದ ಸೂತ್ರಧಾರ ಶ್ರೀಕೃಷ್ಣ ಸದಾ ಹಸನ್ಮುಖಿ; ‘ಸ್ಮಿತ ರುಚಿರವದನ’, ನಗುತ್ತ ನಗಿಸುತ್ತ ಬಾಳುವುದೂ ಬಾಳಿಸುವುದೂ ಅವನ ರೀತಿ, ಜೀವಿತ ರಹಸ್ಯ, ಭೋಜನ ಕಾಲಕ್ಕೆ ಶ್ರೀಕೃಷ್ಣ ಮತ್ತವನ ಸತೀಮಣಿಯರ ನಡುವೆ ನಡೆಯುವ ನಗೆಮಾತುಗಳಲ್ಲಿ ಒಂದು ಹೀಗಿದೆ:

ಕದ್ದು ಮನೆ ಮನೆವೊಕ್ಕು ಬೆಣ್ಣೆ ಪಾಲ್ಗೆನೆಗಳಂ
ಮೆದ್ದು ಗೋವಳರ ಮೇಳದಕಲ್ಲಿಗೂಳ ಕೈ
ಮುದ್ದೆಯಂ ತೆಗೆದುಂಡು ಕರುಗಾವ ಪಳ್ಳಿಯಂ ಬಿಟ್ಟು ಬಳಿಕೆರವಿಲ್ಲದೆ |
ಹೊದ್ದಿ ಪಾಂಡವರನೋಲೈಸಲಾದುದು ಭಾಗ್ಯ
ಮಿದ್ದಪುವು ರಾಜ್ಯಭೋಜ್ಯಂಗಳಿವು ಪಡೆದವಪ
ಮದ್ದು ಗೈದರ್ಮುರೂಟದೆಡೆಗಳೊಳ್ ಚೋದ್ಯಮೆಂದಳ್ ಸತ್ಯಭಾಮೆ ನಗುತೆ ||

ಶ್ರೀ ಕೃಷ್ಣ, ಸತ್ಯಭಾಮೆ, ರುಕ್ಮಿಣಿ ಅವರೊಂದಿಗೆ ತಾಯಿ ದೇವಕಿ ಎಲ್ಲರೂ ಸೇರಿ, ನಂಜಿನ ಮೊನೆಯಿಲ್ಲದ ನಗೆಯ ಹೂಬಾಣಗಳನ್ನು ತೂರುತ್ತ, ಹಾರಿಸುತ್ತ ಒಂದು ಸುಮಧುರ ಸಂಸಾರದ ರಸಚಿತ್ರವನ್ನು ಓದುಗರ ಕಣ್ಣೆದುರು ಮೂಡಿಸುತ್ತಾರೆ.

‘ಜೈಮಿನಿ ಭಾರತ’ದಲ್ಲಿ ಹಾಸ್ಯದ ಮತ್ತೊದು ಮುಖವಾದ ವ್ಯಂಗ್ಯ ವಿಡಂಬನೆಗಳಿಗೂ ಸಾಕಷ್ಟು ನಿದರ್ಶನಗಳಿವೆ. ಅಂತಹವುಗಳಲ್ಲಿ ಪ್ರಮುಖವಾದದ್ದು ಚಂಡಿಯ ಕಥೆ. ವಿಷಯ ದಾಂಪತ್ಯದ ಹೃದಯವೇಧಕ ಕತೆ ಅದಾಗಿದ್ದರೂ, ಓದುವಾಗ ನಗು ಬಂದೇ ಬರುತ್ತದೆ. ಚಂಡಿಯ ಸ್ವಭಾವವರ್ಣನೆ ಎಷ್ಟು ಪರಿಣಾಮಕಾರಿಯಾಗಿದೆ ಎಂದರೆ, ನಮ್ಮಲ್ಲಿ ಹಟಮಾರಿತನಕ್ಕೆ ‘ಚಂಡಿ’ಯೆಂಬುದು ಪ್ರತಿಪದವೆನಿಸಿಬಿಟ್ಟಿದೆ! ಇದೇ ರೀತಿ, ಮಣಿಪುರದ ಚಿತ್ರಾಂಗದೆ, ಸ್ತ್ರೀರಾಜ್ಯದ ಪ್ರಮಿಳೆಯರ ಕಥನದಲ್ಲೂ ವ್ಯಂಗ್ಯವಿನೋದವು ತನ್ನ ಮೂತಿಯನ್ನು ಚಾಚುತ್ತದೆ.

೨. ಸಾಂಗತ್ಯದಲ್ಲಿ

ಷಟ್ಪದಿಕಾರರಂತೆ ಸಾಂಗತ್ಯದ ಕವಿ ರತ್ನಾಕರನೂ ಹಾಸ್ಯದ ತುಷಾರ ಸಿಂಚನದಲ್ಲಿ ಕಡಿಮೆಯವನಲ್ಲ. ಕನ್ನಡದ ಇಬ್ಬರು ನಗೆಗಾರರಲ್ಲಿ ಅವನೂ ಒಬ್ಬನೆಂಬುದು (ಮತ್ತೊಬ್ಬ ‘ಕಬ್ಬಿಗರ ಬಲ್ಲಹ’ ಮುದ್ದಣ) ದಿ. ಜಿ.ಪಿ. ರಾಜರತ್ನಂ ಅವರ ಅಭಿಮತ. ಅವರಿಬ್ಬರನ್ನು ಕುರಿತು ಅವರು ‘ನಮ್ಮ ನಗೆಗಾರರು’ ಎಂಬ ಪುಸ್ತಕವನ್ನೇ ಬರೆದಿದ್ದಾರೆ. ರತ್ನಾಕರನು ‘ಭರತೇಶ ವೈಭವ’ದಲ್ಲಿ ಉದಾತ್ತೀಕರಿಸಿದ ಭರತ ಭಾಗವತದ ಶ್ರೀ ಕೃಷ್ಣನಂತೆ ಹೇಗೆ ಯೋಗಚಕ್ರೇಶನೋ ಹಾಗೆಯೇ ಶೃಂಗರ ರಸರಾಜನೂ ಹೌದು. ಶೃಂಗಾರಕ್ಕೂ ಹಾಸ್ಯಕ್ಕೂ ನಿಕಡ ಸಂಬಂಧ. ತನ್ನ ಅಂತಃಪುರದಲ್ಲಿರುವ ತೊಂಬತ್ತಾರು ಸಾವಿರ ಮಂದಿ ಮಾನಿನಿಯರ ಹೆಸರು ಹಿಡಿದು ಭರತನು ಕೊಂಡಾಟದಿಂದ ಕೂಗುವುದನ್ನು ಕೇಳುವುದೇ ಒಂದು ಆನಂದ. ಕುಸುಮಾಜಿ, ಸುಮನಾಜಿ, ಕಮಲಾಜಿ, ವಿಮಲಾಜಿ, ಮಧುರಾಜಿ, ಮಕರರಂದಾಜಿ; ವೀಣಾದೇವಿ, ವಿದ್ಯಾದೇವಿ, ಸುರದೇವಿ, ಶ್ರೀದೇವಿ; ಕನಕಲತೆ, ಕುಂದಲತೆ; ರತ್ನಮಾಲೆ, ಮಣಿಮಾಲೆ……. ಹೀಗೆ ಬಾಯ್ತುಂಬುವ, ಕಿವಿ ತುಂಬುವ ಹೆಸರುಗಳು!

ಅಂತಃಪುರದ ಸುಂದರ ಸುವಾಸಿನಿಯರೊಂದಿಗೂ ಮುದ್ದು ಮಕ್ಕಳೊಂದಿಗೂ ಭರತನು ಮಾಡುವ ಸರಸ ಸಲ್ಲಾಪಗಳನ್ನು ರತ್ನಾಕರನು ಎಡೆಯರಿತು ರಸ ರಸವಾಗಿ ವರ್ಣಿಸಿದ್ದಾನೆ. ಶೃಂಗಾರ ವರ್ಣನೆ ಸಂಸಾರ ಚಿತ್ರಣಗಳೇ ‘ಭರತೇಶ  ವೈಭವ’ದ ಹೆಚ್ಚಳವೆಂದು ಹೇಳುವವರೂ ಇದ್ದಾರೆ. ‘ಸರಸ ಸಂಧಿ’ಯೆಂಬುದು ಒಂದು ಅಧ್ಯಾಯ ಶೀರ್ಷಿಕೆ. ಅದರಲ್ಲಿ ವರ್ಣಿತವಾದ ಒಂದು ಪ್ರಸಂಗ ಹೀಗಿದೆ: ಭರತನ ಸಹಸ್ರಾವಧಿ ಪತ್ನಿಯರಲ್ಲಿ ಕುಸುಮಾಜಿ ಆತನ ಮನಃ ಪ್ರಿಯೆ. ಆಕೆಗೊಬ್ಬ ಸೋದರಿ ಸುಮದರಿ, ನವೋಢೆ-ಮಕರಂದಾಜಿ. ಭರತನಿಗೆ ಆಕೆಯನ್ನು ಒಲಿಸಿ, ವರಿಸಿಕೊಳ್ಳುವ ಆಸೆ. ಒಮ್ಮೆ ಭರತ ಕುಸುಮಾಜಿಯಂತಃಪುರಕ್ಕೆ ಬಂದಾಗ ಆಕೆಯೂ ಅಕ್ಕನ ಜತೆಗಿದ್ದಳು. ಅವಳು ಭಾವನೆಂಬ ಸಲುಗೆಯಿಂದ ಭರತನನ್ನು ಊಟಕ್ಕೆಬ್ಬಿಸುತ್ತಾಳೆ:

ಅನುಕೂಲವಾದುದಾರೋಗಣೆಗಿನ್ನೆಮ್ಮ
ಮನೆಗೇಳು ಭಾವಾಜಿಯೆಂದು
ತನುಮಧ್ಯೆ ನುಡಿದಳದಕೆ ರಾಯ ನಗುನಗುತ ನಾ
ದುನಿಯೊಳು ನುಡಿದನಿಂತು ||

ಇಂದಾನು ನಿನ್ನ ಮನೆಗೆ ಬಹುದುಚಿತವೆ
ಬಂದರೆ ವರುಷದ ಮೇಲೆ
ಬಂದು ಕರೆದರಾನು ಬಹೆನು ಹೋ
ಬಂದು ಕರೆದರಾನು ಬಹೆನು ಹೋ
ಗೆಂದಾನು ನೃಪತಿ ನಾದುನಿಯಾ ||

ಅಕ್ಕಾಜಿಯವರ ಮನೆಗೇಳೆಂದೆ ನೀನಿಂತು
ಠಕ್ಕಿನ ಮಾತನಾಡಿದೆಯ
ಠಕ್ಕುಕಾರೆಯ ನಿನ್ನ ಮನೆಗೆಂದೆಯೈಸೆ ನಿ
ನ್ನಕ್ಕನ ಹೆಸರು ಹೇಳಿದೆಯ ||

ಅಕ್ಕನ ಹೆಸರ ಹೇಳುವರಾಕೆ ಪಡೆದರೆ
ಮಕ್ಕಳು ಪೇಳ್ವೆವು ಮುಂದೆ
ದಿಕ್ಕಿನೊಳೆನಗೇನು ಸಂಬಂಧ ತಾಕೇಳು
ಸಿಕ್ಕಿನ ಮಾತನಾಡದಿರು ||

ಸಾಕೇಳು ಸಲಹೇಳು ನೀನೆಂದು ತಾನೆನ್ನ
ನಾಕರುಷನ ಮಾಡುತಹಳೆ
ಈಕೆ ತಾನೇನು ಕಾತರೆಯೊಯೆಂದನು ರಾಯ
ನಾ ಕಾಂತೆ ತಲೆಬಾಗಿ ನಗಲು ||

ಕಾತರ ಗೀತರವನು ನೀವು ನಿಮ್ಮಂಬು
ಜಾತಾಕ್ಷೆಯರು ಬಲ್ಲಿರೈಸೆ
ತಳ್ಳಿಬಳ್ಳಿಯ ನಾವೇನು ಬಲ್ಲೇವು
ಮಾತು ಸಾಕಿನ್ನೇಳು ಭಾವಾ ||

ಹೀಗೆ ಆಟವಾಡಿ, ಹಟಮಾಡಿ ಭರತನನ್ನು ಉಟಕ್ಕೆಬ್ಬಿಸುತ್ತಾಳೆ, ಅವನ ಕಣ್ಮನಗಳಿಗೆ ಹಬ್ಬವಾಗುತ್ತಾಳೆ. ಮುಗ್ಧ ಮಕರಂದಾಜಿಗೆ ಸೋಲುವುದರಲ್ಲೇ ಸುಖವಿದೆಯೆಂದು ಕೊಳ್ಳುತ್ತಾನೆ ವಿದಗ್ಧ ಭರತ ಚಕ್ರೇಶ್ವರ!

ಕುಸುಮಾಜಿಯ ಅಂತಃಪುರದಲ್ಲೊಂದು ಗೂಡಿನ ಗಿಳಿಯಿದೆ-ಹೆಸರು ಅಮೃತವಾಚಕ ಅರಸ ಮಡದಿಯ ಬಳಿ ಬರುವಾಗ ಗಿಲಿ ಸ್ವಾಗತಿಸುತ್ತದೆ :

ಬಂದೆಯ ಭಾವ ಬಂದೆಯ ಸುಪ್ರಭಾವ
ಯ್ತಂದೆಯ ಸುಗುಣ ಸ್ವಭಾವಾ
ಬಂದುದ ಲೇಸು ಮಹಾನುಭಾವಯೆಂದು
ದಂದು ಮುದ್ದಿನ ರಾಜಕೀರಾ ||

ಹೀಗೆ ಬರಮಾಡಿಕೊಂಡು, ಕುಶಲ ಪ್ರಶ್ನೆ ಕೇಳುವ ಗಿಳ, “ನೀನಿಲ್ಲಿಗೆ ಬರುವುದೇ ವಿರಳ. ಇನ್ನು ಬಿಡಲಾರೆ, ಕಾಲಿಗೆ ಉರುಲನಿಕ್ಕೆ ಇಲ್ಲಿಯೇ ಕಟ್ಟಿ ಬಿಡುತ್ತೇನೆ” ಎಂದೂ ಹೇಳುತ್ತದೆ! ಮತ್ತೆ :

ನನಗೆ ನೇರಿಲ ಹಣ್ಣು ವನದಳುಂಟಕ್ಕನಾ
ನನದೊಳು ನೇರಿಲ ಹಣ್ಣು
ನಿನಗುಂಟು ಸುಖಿಸಿಕೊಂಡಿರು ನಾನು ನೀನಿಂತು
ಬಿನದದೊಳಿರುತಿಹೆವಿಲ್ಲಿ ||

ಎಂದು ಒತ್ತಾಯಿಸುತ್ತದೆ, ಆ ಸೊಗಸುಗಾರ ಗಿಳಿ. ‘ಭರತೇಶ ವೈಭವ’ದ ಶೃಂಗಾರ ಸಮುದ್ರದಲ್ಲಿ ಇಂತಹ ಹಾಸ್ಯರಸ ಬಿಂದುಗಳು ಮೊಗೆದು ಕುಡಿದಷ್ಟೂ, ಎತ್ತಿ ಆಡಿದಷ್ಟೂ ಇವೆ.

೩. ತ್ರಿಪದಿಯಲ್ಲಿ

ತ್ರಿಪದಿಯ ವಾಮನ ಸರ್ವಜ್ಞನಲ್ಲೂ ವ್ಯಂಗ್ಯವಿಡಂಬನೆಗಳ ಮಿಂಚು ಸಂಚಲಿಸುವುದನ್ನು ಅಲ್ಲಲ್ಲಿ ಕಾಣಬಹುದು :

ನೆಲವನ್ನು ಮುಗಿಲನ್ನು ಹೊಲಿವರುಂಟೆಂದರವ
ಹೊಲಿವರು ಹೊಲಿವರೆನಬೇಕು ಮೂರ್ಖನಲಿ
ಕಲಹಬೇಡೆಂದ ಸರ್ವಜ್ಞ ||

ಒಬ್ಬಾತ ಮೂರ್ಖ ತನ್ನೆದುರು ಬಂದ ದಾರಿಗನೊಂದಿಗೆ ಈಗ ‘ಹಗಲೋ ಇರುಳೋ’ ಎಂದು ಕೇಳಿದನಂತೆ; ಅದಕ್ಕೆ ಜಾಣ ದಾರಿಗ ‘ನನ್ನದು ಪರವೂರು’ ಎಂದು ತಪ್ಪಿಸಿಕೊಂಡನಂತೆ! ಸರ್ವಜ್ಞನ ದಾರಿಯೂ ಅದೇ. ದುಡ್ಡಿನ ದೊಡ್ಡಪ್ಪಂದಿರನ್ನು ಸರ್ವಜ್ಞ ಹೀಗೆ ನಗೆಯಾಡುತ್ತಾನೆ !:

ಸಿರಿಯಣ್ಣನುಳ್ಳನಕ ಹಿರಿಯಣ್ಣನೆನಿಸಿಪ್ಪ
ಸಿರಿಯಣ್ಣ ಹೋದ ಮರುದಿನ ಹಿರಿಯಣ್ಣ
ನರಿಯಣ್ಣನಹನೆಂದ ಸರ್ವಜ್ಞ ||

ನಗೆಯ ಬಗೆಗೆ ಒಂದು ಸರ್ವಜ್ಞ ವಚನವಿದೆ :

ಕತ್ತೆಯರಚಿದಡಲ್ಲಿ ತೊತ್ತು ಹಾಡಿದಡಲ್ಲಿ
ಮತ್ತೆ ಕುಲ ರಸಿಕನಿರುವಲ್ಲಿ ಕಡು ನಗೆಯ
ಹುತ್ತು ಕಾಣಯ್ಯ ಸರ್ವಜ್ಞ ||

ಸರ್ವಜ್ಞ ಅಂತಹ ಕುಲರಸಿಕ; ಅವನ ತ್ರಿಪದಿಗಳಲ್ಲಿ ಕೆಲವಾದರೂ ‘ನಗೆಯ ಹುತ್ತು’ಗಳೇ ಆಗಿವೆ.

ಸರ್ವಜ್ಞ ವಿರಚಿತ ಎನ್ನಲಾಗುವ ಒಗಟುಗಳೂ ಕೆಲವಿದೆ. ಒಗಟುಗಳ ಉದ್ದೇಶವೆಂದರೆ ಬುದ್ಧಿಗೆ ಕಸರತ್ತು, ಮನಸ್ಸಿಗೆ ವಿನೋದ. ಒಂದು ಒಗಟನ್ನು ಕೇಳಿ :

ನೆತ್ತಿಯಲಿ ಉಂಬುವುದು ಸುತ್ತಲೂ ಸುರಿಯುವುದು
ಎತ್ತಿದರೆ ಎರಡು ಹೋಳಹುದು ಕವಿಗಳಿದ
ಕುತ್ತರವ ಹೇಳಿ ಸರ್ವಜ್ಞ ಬಿಸುವ ಕಲ್ಲು ||

ಅದೇನೆಂದು ಹೇಳಿ ನೋಡೋಣ – ಅದೇ ಬೀಸುವ ಕಲ್ಲು

೪. ದಾಸ ಸಾಹಿತ್ಯ, ಅನುಭಾವ ಗೀತಗಳಲ್ಲಿ

ಕೊನೆಯದಾಗಿ ದಾಸರ ಪದಗಳಲ್ಲಿ ವಿನೋದ ವೈಖರಿ ಹೀಗಿದೆ ಎಂಬುದನ್ನು ಹೇಳಿ ಈ ಪ್ರಸಂಗವನ್ನು ಮುಗಿಸುತ್ತೇನೆ. ಧರ್ಮಪ್ರಚಾರ, ನೀತಿ ನಿರೂಪಣೆ ಭಕ್ತಿ ಪ್ರಚೋದನೆ ದಾಸರ ಮುಖ್ಯ ಉದ್ದೇಶವಾದರೂ ಸಂದರ್ಭೋಚಿತವಾಗಿ ತಮ್ಮ ಹಾಡುಗಳ ಕರ್ಮಣಿ ಸರದಲ್ಲಿ ಹಾಸ್ಯದ ಚೆಂಬವಳಗಳನ್ನೂ ಪೋಣಿಸಿದ್ದಾರೆ.

ತುರುಕರು ಕರೆದರೆ ಉಣಬಹುದಣ್ಣ
ತುರುಕರು ಕರೆದರೆ ಅತಿಪುಣ್ಯವಯ್ಯ

ಎಂದು ಮೊದಲಾಗುವ ಹಾಡಿಗೆ ಶ್ಲೇಷಾರ್ಥವನ್ನು ಕಲ್ಪಿಸಿ ಸಂತೋಷಪಡಬಹುದು. ಬಲು ಭಾಗ್ಯಯಂತರಾದ ಕೌಪೀನವಂತರನ್ನು ದಾಸರು ಹೀಗೆ ಸ್ತುತಿಸುತ್ತಾರೆ :

ಲಂಗೋಟಿಬಲುವೊಳ್ಳೆದಣ್ಣ ಒಬ್ಬ
ರ್ಹಂಗಿಲ್ಲದೆ ಮಡಿಗೆ ಒದಗುವುದಣ್ಣ ||

ಬಡವರಿಗಾಧಾರವಣ್ಣ ಲಂಗೋಟಿ
ಬೈರಾಗಿಗಳ ಭಾಗ್ಯವಣ್ಣ ||

ಇಬ್ಬರು ಹೆಂಡಿರ ಕಾಟ ಎಂತಹದ್ದೆಂಬುದನ್ನು ವೈರಾಗ್ಯ ಮೂರ್ತಿ ದಾಸರು ವರ್ಣಿಸಿದ ರೀತಿ ಎಷ್ಟು ಮಾರ್ಮಿಕವೋ ಅಷ್ಟೇ ಹಾಸ್ಯ ಪೂರ್ಣ :

ಇಬ್ಬರೆಂಡಿರ ಸುಖವ ಇಂದು ಕಂಡೆನಯ್ಯ
ಅಬ್ಬಬ್ಬ ಎಂದಿಗೂ ಸಾಕು ಸಾಕಯ್ಯ ||

ಹಿರಿಯಳ ಕೊಡೆ ನಾ ಸರಸವಾಡುವೆನೆಂದು
ಇರುಳು ಉಪ್ಪರಿಗೆ ನಾನೇರುತಿರಲು
ಚರಣವೊಬ್ಬಳು ಪಿಡಿದು ಶಿರವನೊಬ್ಬಳು ಪಿಡಿದು
ಸರಸರನೆ ಕೆಳಗೆ ಮೇಲೆಳೆಯುತಿಹರಯ್ಯ ||

ಅವಳ ಮಗ್ಗುಲೊಳಿರಲು ಇವಳ ಮಗ್ಗಲ ಕಾಟ
ಇವಳ ಮಗ್ಗುಲೊಳಿರಲು ಅವಳ ಕಾಟ
ಅವಳಿಂದ ಸುಖವಿಲ್ಲ ಇವಳಿಂದ ಫಲವಿಲ್ಲ
ಇವರಿಬ್ಬರ ಸಂಗ ಅಭಿಮಾನ ಭಂಗ ||

ಒಂದು ಉಗಾಭೋಗದಲ್ಲಿ ಅತ್ತೆ ಸೊಸೆಯರ ನಡುವನ ಸಂಬಂಧವನ್ನು ಹೇಳುತ್ತ, ‘ಅತ್ತೆ’ ಪದವನ್ನು ಎತ್ತಿಕೊಂಡು ಆಟವಾಡಿಸುವ ಬಗೆ ಬಲು ಮೋಜಿನದು :

ಅತ್ತೆ ಅತ್ತೆ ಅತ್ತೆಯೆಂದತ್ತೆ
ಅತ್ತೆ ಸತ್ತರೆ ಸೊಸೆ ಅಳುವಂತೆ ಆಯಿತು |
ಅತ್ತೆ ಸತ್ತರೆ ಸೊಸೆಗೆ ಬುದ್ಧಿಯಾಯಿತು ||
ಅತ್ತೆ ಸತ್ತರೆ ಸೊಸೆಯರಿಗೆದೆಗಿಚ್ಚು ಹೋಯಿತೆಂದು |
ಅತ್ತೆ | ಪುರಂದರ ವಿಠಲನ್ನ ಪಾದದಲ್ಲಿ ಭಕ್ತಿಯಿಲ್ಲದವರ ಮುಮದೆ
ಪಾಡಿ ನಾನತ್ತೆ ||

ಕರ್ನಾಟಕದ ಕಬೀರ ಶಿಶುನಾಳ ಶರೀಫರ ರಚನೆಗಳಲ್ಲೂ ನೀತಿಬೋಧಕ ವಿನೋದ ಪದ್ಯಗಳನ್ನು ಕಾಣಬಹುದು :

ಲೋಕದ ಕಾಳಜಿ ಮಾಡತೇನಂತಿನೀ
ಯಾರು ಬ್ಯಾಡಾಂತಾರ ಮಾಡಪ್ಪ ಚಿಂತಿ ||

ನೀನು ಮಾಡೋದು ಘಳಿಗಿ ಸಂತಿ
ಮೇಲು ಮಾಳಗಿ ಕಟ್ಟಬೇಕಂತಿ
ಆನೆ ಅಂಬಾರಿ ಏರ ಬೇಕಂತಿ
ಮಣ್ಣಲಿ ಇಳಿಯೂದ ಥಣ್ಣಗ ಮರತಿ ||

ಬದುಕು ಬಾಳೇವು ನಂದೇ ಅಂತೀ
ನಿಧಿ ಸೇರಿದಷ್ಟೂ ಸಾಲದು ಅಂತೀ
ಕದವ ತೆರೆದು ಕಡೆ ಯಾತ್ರೆಗೆ ನಡೆವಾಗ
ಒದಗದು ಯಾವುದೂ ಸುಮ್ಮನೆ ಅಳತಿ ||

‘ಮೊಗ ಕಾಣುವಷ್ಟು ತಿಳಿ’ಯಾದ ಪದ್ಯಗಳಿಗೆ ವ್ಯಾಖ್ಯಾನ ವಿವರಣೆ ಅನವಶ್ಯಕ, ಓದುವಾಗ ತುಟಿ ಬಿರಿದು ನಗು ಬರುತ್ತದೆ, ಒಳಗಣ್ಣು ತೆರೆದಾಗ ಬದುಕಿನ ನಶ್ವರತೆ ದೊಡ್ಡ ಕಾಣುತ್ತದೆ.

‘ನಕ್ಕು ನಕ್ಕು ಹೊಟ್ಟೆ ಬೆಳಸು’ ಎಂಬುದೊಂದು ಆಂಗ್ಲ ವಾಕ್ಯ. ಈ ಹೊತ್ತಿನ ಪರಿಸ್ಥಿತಿಯಲ್ಲಿ ಹೊಟ್ಟೆ ಬೆಳೆಯುವುದು ಅಷ್ಟೇನೂ ಹಿತಕರವಲ್ಲ! ಸಕ್ಕರೆ ರೋಗಕ್ಕೂ ರಕ್ತದ ಒತ್ತಡಕ್ಕೂ ಅದು ಕಾರಣ ಎನ್ನುವುದುಂಟು. ಆದುದರಿಂದ ಆ ಮಾತನ್ನು ‘ನಕ್ಕು ನಕ್ಕು ತಲೆಭಾರ ಇಳಿಸು’ ಎಂದು ತಿದ್ದಿಕೊಳ್ಳಬಹುದು! ತಲೆಭಾರ ಇಳಿದಷ್ಟು Tension ಕಡಿಮೆಯಾದಷ್ಟು ಆರೋಗ್ಯ ವೃದ್ಧಿ, ಸುಖ ಸಮೃದ್ಧಿ ಮತ್ತು ದೀರ್ಘಾಯುಷ್ಯ. ನಮ್ಮ ಜನ ಸಾಮಾನ್ಯರೂ ಈ ರಹಸ್ಯವನ್ನು ಎಂದೋ ಮನಗಂಡಿದ್ದರು. ಅವರು ಅರೆಹೊಟ್ಟೆ ಉಂಡರೂ ಬಾಯ್ತುಂಬ ನಗುತ್ತಿದ್ದರು. ‘ಹೊಟ್ಟೆಗೆ ಹಿಟ್ಟಿಲ್ಲ, ಜುಟ್ಟಿಗೆ ಮಲ್ಲಿಗೆ ಹೂ’ ಎಂಬುದು ವ್ಯಂಗ್ಯೋಕ್ತಿಯಾಗಬೇಕಿಲ್ಲ. ಪ್ರೊ. ಎಸ್ವಿಪಿಯವರ ಒಂದು ಸುಭಾಷಿತ ಹೀಗಿದೆ :

ಕಟ್ಟಿಗೆ ಹೊರೆಯನೆ ಹೊತ್ತರು ತಲೆಯೊಳು
ತುರುಬಿನೊಳಿರಲೊಂದು ಹೂವು
ಹೊರೆ ಭಾರವಾರದಾಗ ಹೂವಿನ ಕಂಪೊಳು
ಕಡಿಮೆಯೆಂದೆನಿಪುದು ನೋವು

ಆದುದರಿಂದ ನಗುವೆಂಬುದು ‘ಬೇಜಾರಕ್ಕೆ ಭೇಷಜ’, ಸುಖಮ ಜೀವನಕ್ಕೆ ದಾರಿದೀಪ. ಡಿ.ವಿ.ಜಿಯವರ ಮಂಕುತಿಮ್ಮನಂತೆ ನಾವೆಲ್ಲ ‘ನಗುವ ನಗಿಸುವ, ನಗುತ ಬಾಳವ ವರವ’ ನಾವು ನಾವು ನಂಬಿರುವ ದೇವರಿಂದ ಬೇಡಿಕೊಂಡು ನೆಮ್ಮದಿಯಿಂದ ಬಾಳೋಣ!.

 

 


[*] ಈ ಉಪನ್ಯಾಸದಲ್ಲಿ ‘ಹಾಸ್ಯ’ ಮತ್ತು ‘ವಿನೋದ’ಗಳನ್ನು ಏಕಾರ್ಥದಲ್ಲಿ ಪ್ರಯೋಗಿಸಲಾಗಿದೆ.