ಭಾರತೀಯ ಕಾವ್ಯ ಮೀಮಾಂಸಕರು ವಾಙ್ಮಯವನ್ನು ‘ಕಾವ್ಯ’ವೆಂದೂ ‘ಶಾಸ್ತ್ರ’ವೆಂದೂ ವಿಭಾಗಿಸಿದ್ದು, ಇತ್ತೀಚಿನವರೆಗೂ ಆ ದಾರಿಯನ್ನೇ ಹಿಡಿದು ಕನ್ನಡ ವಾಙ್ಮಯವನ್ನು ಗುರುತಿಸುವುದು ರೂಢಿಯಾಗಿತ್ತು. ಆಂಗ್ಲಸಾಹಿತ್ಯ ಸಂಪರ್ಕದ ಪರಿಣಾಮವಾಗಿ ಈ ಎರಡು ವಿಭಾಗಗಳನ್ನು ಒಡೆದು ಪದ್ಯ ಮತ್ತು ಗದ್ಯಗಳೆಂದೂ ಅವುಗಳನ್ನು ಮತ್ತೆ ನಾಟಕ, ವಿಮರ್ಶೆ, ವ್ಯಕ್ತಿಚಿತ್ರ, ವಿಡಂಬನೆ, ಕಥೆ, ಕಾದಂಬರಿ ಎಂದು ಮುಂತಾಗಿ ಪ್ರತ್ಯೇಕಿಸಿ ಅವುಗಳ ಒಳಗೆ ‘ಪಾಲುಪಟ್ಟಿ’ಯನ್ನು ತಯಾರಿಸಲಾಯಿತು. ಇಂತಹ ಹಂಜೋಣದಿಂದ ಉಂಟಾದ ಗೊಂದಲವನ್ನು ಅಡಗಿಸುವುದಕ್ಕಾಗಿ ಅವುಗಳ ರೂಪ ನಿರ್ದೇಶನ ಮಾಡಿ ಲಕ್ಷಣಗಳನ್ನು ಹೇಳುವ ಪ್ರಯತ್ನವೂ ನಡೆಯಿತು. ಲಾಕ್ಷಣಿಕ ‘ಶ್ಯಾನುಭೋಗ’ರು ಸಂಕೋಲೆ ಹಿಡಿದು ಒಂದೊಂದು ಪ್ರಕಾರದ ವಿಸ್ತೀರ್ಣವು ಎಷ್ಟೆಷ್ಟು ಎಕರೆ ಎಂದು ಅಳೆದು ‘ಸರ್ವೇಕಲ್ಲು’ಗಳನ್ನು ಹಾಕುವ ಕಾರ್ಯವನ್ನು ಕೈಗೊಂಡರು. ಇಂತಹ ‘ಸರ್ವೇ’ಯಲ್ಲಿ ಪ್ರತ್ಯೇಕ ಶ್ಯಾನುಭೋಗರು ಬಳಸಿಕೊಂಡು ‘ಚೈನು’ಗಳಲ್ಲಿ ಪರಸ್ಪರ ವ್ಯತ್ಯಾಸವಿದ್ದೇ ಇತ್ತು. ಇದರಿಂದಾಗಿ ಅವರ ‘ಚೈನಿಗೆ’ ಸರಿಯಾಗಿ ಸಿಕ್ಕದಿರುವ ಸಾಹಿತ್ಯ ಪ್ರಕಾರಗಳಲ್ಲಿ ಇಂಗ್ಲಿಷಿನ ‘ಎಸ್ಸೆ’ ಎಂಬುದು ಒಂದಾಗಿದೆ. ಅಂತಹದೊಂದು ವಿಶಿಷ್ಟ ಪ್ರಕಾರವು ಕನ್ನಡದಲ್ಲಿಯೇ? ಇದ್ದರೆ ಅದಾವುದು? ಇಲ್ಲವೆಂದಾದರೆ ಅಂತಹದೊಂದನ್ನು ‘ನಿರ್ಮಾಣಿಸ’ಬೇಡವೇ? ಅದನ್ನು ‘ಪ್ರಬಂಧ’ವೆಂದು ಬಂಧಿಸಬಹುದೇ? ‘ನಿಬಂಧ’ವೆಂದು ನಿರ್ವಾಚಿಸಬಹುದೇ? ‘ಪ್ರಸಂಗ’ವೆಂದು ಕರೆಯಬಹುದೇ? ‘ನ್ಯಾಸ’ವಾಗಿ ಇಡಬಹುದೆ? ಅಥವಾ ‘ಹರಟೆ’ಯಾಗಿ ಹಾರಿಸಬಹುದೇ? ಹೀಗೆ ಮದುವೆಯಾದ ಅನಂತರ ಹೆಣ್ಣಿಗೆ ಹೊಸತೊಂದು ಹೆಸರಿಡುವ ಕೆಲವರ ಸಂಪ್ರದಾಯದಂತೆ ‘ಎಸ್ಸೆ’ಯನ್ನು ‘ಕನ್ನಡೀಕರಿಸಿ’ ಅದಕ್ಕೆ ಯಾವ ಹೆಸರಿಡುವುದೆಂದು ಹಲವು ಚರ್ಚಿಸಿದರು; ಚರ್ಚಿಸುತ್ತಿದ್ದಾರೆ; ಇನ್ನೂ ಚರ್ಚಿಸಲೂಬಹುದು. ಕನ್ನಡದಲ್ಲಿ ‘ಎಸ್ಸೆ’ ಎಂಬ ಶಬ್ದವನ್ನೇ ‘ಅನಾಮತ್ತಾ’ಗಿ ಬಳಸಬಹುದೇ? ಸಲ್ಲದು ಎಂದಾದರೆ ಪ್ರಬಂಧ, ನಿಬಂಧ ಇತ್ಯಾದಿಗಳಲ್ಲಿ ಅದಕ್ಕೊಪ್ಪುವ  ಪ್ರತಿಶಬ್ದವು ಯಾವುದು? ಈ ಶಬ್ದಗಳಲ್ಲೂ ಇವುಗಳ ಅರ್ಥಗಳಲ್ಲೂ ಸಾಮ್ಯವಿದೆಯೇ ಅಥವಾ ವೈಷಮ್ಯವೇ? – ಎಂಬೀ ಪ್ರಶ್ನೆಗಳನ್ನು ಈ ಲೇಖನದಲ್ಲಿ ಯಥಾಮತಿ ಉತ್ತರಿಸಲಾಗಿದೆ.

‘ಪ್ರಬಂಧ’ವೊಂದನ್ನುಳಿದು ನ್ಯಾಸ, ಪ್ರಸಂಗ, ಹರಟೆ ಇತ್ಯಾದಿ ಶಬ್ದಗಳನ್ನು ಒಂದು ಸಾಹಿತ್ಯ ಪ್ರಕಾರವನ್ನು ನಿರ್ದೇಶಿಸಲು ಬಳಸುತ್ತಿರುವುದು ಇತ್ತೀಚೆಗೆ ಮಾತ್ರ ಎಂದೆನ್ನಬಹುದು. ‘ಪ್ರಬಂಧ’ವು ನಮ್ಮಲ್ಲಿ ಬಹುವರ್ಷಗಳಿಂದಲೂ ಪ್ರಚುರವಾಗಿದೆ. ಸಂಸ್ಕೃತದ ‘ಭೋಜ ಪ್ರಬಂಧ’ದಂತೆ ಕನ್ನಡದ ‘ವಿಕ್ರಮಾರ್ಜುನ ವಿಜಯ’, ‘ಜಗನ್ನಾಥ ವಿಜಯಾ’ದಿಗಳನ್ನೂ ಪ್ರಬಂಧಗಳೆಂದು ಕರೆಯುವುದಿದೆ. ಯಕ್ಷಗಾನ ಪ್ರಸಂಗಗಳನ್ನು ಯಕ್ಷಗಾನ ಪ್ರಬಂಧವೆನ್ನುವುದಿದೆ. ಕನ್ನಡದಲ್ಲಿ ಮಾತ್ರವಲ್ಲ, ಇತರ ದೇಶೀಯ ಸಾಹಿತ್ಯಗಳಲ್ಲೂ ‘ಪ್ರಬಂಧ’ವು ಪ್ರಯುಕ್ತವಾಗುವುದಿದೆ. ತಮಿಳುನಾಡಿನ ಆಳ್ವಾರರ ಭಕ್ತಿಗೀತೆಗಳನ್ನು ‘ಪ್ರಬಂಧ’ಗಳೆಂದು ಹೆಸರಿಸುವುದು ಇದಕ್ಕೊಂದು ನಿರ್ದೇಶನ.

ಇಷ್ಟು ವಿಪುಲವಾಗಿ ವಿಶಾಲಾರ್ಥದಲ್ಲಿ ಪ್ರಚಾರದಲ್ಲಿರುವ ‘ಪ್ರಬಂಧ’ಕ್ಕೆ “ಅನುಜ್ಝಿತಾರ್ಥ ಸಂಬಂಧಃಪ್ರಬಂಧಃ” ಎಂದು ಲಕ್ಷಣ ಹೇಳಿದ್ದಾರೆ ಇದರಂತೆ “ಪರಿವಿಡಿಯೂ ಹೊಂದಿಕೆಯೂ ಕೆಡದಂತೆ ಅಭಿಪ್ರಾಯಗಳನ್ನು ಮಂಡಿಸುವುದು ಪ್ರಬಂಧವೆನಿಸುತ್ತದೆ. ವಸ್ತು ಪ್ರಸಿದ್ಧವಾಗಿರಬಹುದು; ಕಲ್ಪಿತವಾಗಿರಬಹುದು. ಭಾಷೆ, ಗದ್ಯ, ಪದ್ಯ, ಚಂಪೂ ಎಂಬ ಯಾವ ರೂಪದಲ್ಲಿಯೂ ಇರಬಹುದು. ಗಾತ್ರಕ್ಕೂ ಮಿತಿಯೆಂಬುದು ಇಲ್ಲ.” *(‘ಕನ್ನಡದಲ್ಲಿ ಪ್ರಬಂಧ ವ್ಯವಸಾಯ’ -ಕಡಂಗೋಡ್ಲು ಶಂಕರಭಟ್ಟ) ಹೀಗೆ ಪ್ರಬಂಧಕ್ಕೆ ನಿಷ್ಕೃಷ್ಟವಾದ ಲಕ್ಷಣ, ವ್ಯಾಖ್ಯೆಗಳಿದ್ದರೂ ಅದನ್ನು ಪ್ರಯೋಗಿಸುವಲ್ಲಿ ಕಾಲಕ್ರಮೇಣ ಅರ್ಥ ವ್ಯತ್ಯಾಸವಾದುದನ್ನು ಕಾಣಬಹುದಾಗಿದೆ. ಈ ನಾಣ್ಯವು ಹಿಂದಿನಂತೆ ಈಗಲೂ ಚಲಾವಣೆಯಲ್ಲಿದ್ದರೂ ಅದರ ಮೌಲ್ಯದಲ್ಲಿ ಮಾತ್ರ ವ್ಯತ್ಯಯವಾಗಿದೆ.

ಇನ್ನು, ಇಂಗ್ಲಿಷಿನ ‘ಎಸ್ಸೆ’ಯತ್ತ ಕಣ್ಣು ಹಾಯಿಸಬಹುದು. ‘Essay’ ಗೆ ಫ್ರೆಂಚ್ ಭಾಷೆಯ ‘essais’ ಎಂಬುದು ಜನಕವೆನ್ನುತ್ತಾರೆ. ‘essais’ ಎಂದರೆ an attempt – ಪ್ರಯತ್ನ ಎಂದು ಅರ್ಥ, ಫ್ರಾನ್ಸಿನ ‘ಮೊಂಟೋ’ (Montaigne) ಎಂಬುವನೇ ಆ ಬಗೆಯ ‘ಪ್ರಯತ್ನ’ಕ್ಕೆ ಮೊದಲು ತೊಡಗಿದವನೆಂದು ಹೇಳಲಾಗುತ್ತಿದೆ. ಅವನ ಅಭಿಪ್ರಾಯದಲ್ಲಿ ಅದು ‘It myself I portrary’. ಎಂದರೆ “ಒಂದು ಬಗೆಯ ಆತ್ಮ ಚಿತ್ರಣ”. ಆಂಗ್ಲ ಸಾಹಿತ್ಯದ ‘ಭೀಮ’ನೆನಿಸಿರುವ ಡಾ. ಜಾನ್‌ಸನ್‌ ಹೇಳಿದ ಲಕ್ಷಣವೂ ಪ್ರಸಿದ್ಧವಾದುದು. ‘An essay is a loose sally of the mind; an irregular indigested piece’. ಈ ಎರಡು ಹೇಳಿಕೆಗಳಲ್ಲೇ ಪರಸ್ಪರ ವಿಸಂವಾದವನ್ನು ಗುರುತಿಸಬಹುದು. ಒಬ್ಬನಿಗೆ ‘Essay’ ‘ಆತ್ಮಚಿತ್ರಣ’ವಾದರೆ ಇನ್ನೊಬ್ಬನಿಗೆ ‘ಮನಸ್ಸಿನ ಒಂದು ಅಲೆದಾಟ; ಆಸಕ್ತ ವಿಷಯಗಳ ಪಿಂಡ.’ ಬೇಕನ್ (Lord Bacon) ಎಂಬಾತನು ತನ್ನ ‘essay’ಗಳನ್ನು ‘Dispersed meditations’ – ‘ಚೆದರಿದ ಚಿಂತನೆಗಳು’ ಎಂದುಕೊಂಡಿದ್ದಾನೆ. ಆಂಗ್ಲ ಸಾಹಿತ್ಯದ ಶ್ರೇಷ್ಠ Essayist ಎಂದೆನಿಸಿರುವ ಚಾರ್ಲ್ಸ್ ಲ್ಯಾಂಬ್ (Charles Lamb) ಒಂದೆಡೆಯಲ್ಲಿ ‘The Essays want no preface; they are all preface. The ppreface is nothing but a talk with  the reader; and they do nothing else.’ ಎಂದಿದ್ದಾನೆ. ಇದು ಆ ಸಾಹಿತ್ಯ ಪ್ರಕಾರಕ್ಕೆ ಅವನಿತ್ತ ವ್ಯಾಖ್ಯೆಯೆನ್ನಬಹುದು. ಇಂಗ್ಲಿಷಿನಲ್ಲಿ Essayಯನ್ನು ಕುರಿತ, ಪರಸ್ಪರ ವಿಷಮವಾದ ಇಂತಹ ಹಲವು ಲಕ್ಷಣಗಳನ್ನೂ, ವ್ಯಾಖ್ಯೆಗಳನ್ನೂ ಕಾಣಬಹುದು. ನಮ್ಮಲ್ಲಿ ಕಾಲಾಂತರದಲ್ಲಿ ‘ಪ್ರಬಂಧ’ದ ಅರ್ಥ ವ್ಯತ್ಯಾಸವಾಗಿರುವುದಾದರೂ ಅದಕ್ಕೊಂದು ನಿರ್ದಿಷ್ಟವಾದ ಲಕ್ಷಣವಿದೆ. ಆದರೆ ಇಂಗ್ಲಿಷಿನ “Essay’ಯು ತುಂಬ ಬಳಕೆಯಲ್ಲಿರುವುದಾದರೂ ಆ ಪ್ರಕಾರವನ್ನು ಬೇರೆ ಬೇರೆಯಾಗಿ ವಿಭಜಿಸಿದ್ದರೂ ಅದಕ್ಕೊಂದು ಖಚಿತವಾದ ವ್ಯಾಖ್ಯೆಯಿಲ್ಲ.

‘ಎಸ್ಸೆ’ಗೆ ಹಲವರು ಕಟ್ಟಿರುವ ಅರ್ಥ, ಮಾಡಿರುವ ವ್ಯಾಖ್ಯೆಗಳನ್ನೂ ನಮ್ಮ ‘ಪ್ರಬಂಧ’ದ ಲಕ್ಷಣ, ವಿವರಗಲನ್ನೂ ಗಮನಿಸಿದರೆ ಅವುಗಳ ಮೂಲಧಾತುವಿನಲ್ಲಿ ಸಂಬಂಧವಿರುವಂತೆ ಭಾಸವಾಗುತ್ತದೆ. ‘ಪ್ರಬಂಧ’ಕ್ಕೆ ಬೇಕಾದಂತೆ ‘ಎಸ್ಸೆ’ಗೂ ಒಮದು ವಸ್ತು ಬೇಕು – ಸುತ್ತಿಗೊಂದು ಸುಲಿಯಂತೆ. ಆದರೆ ಅದರಲ್ಲಿ ವಸ್ತುವಿನ ನಿರೂಪನವಿಧಾನಕ್ಕೆ ಪ್ರಾಧಾನ್ಯ. ನಿರ್ವಹಣೆಯಲ್ಲಿ ಗಹನತೆಯಿರಬಾರದು. “ಸರಳತೆ, ಮೃದುಪರಾಮರ್ಶೆ, ಅಭಿಮುಖೀಕರಣಶಕ್ತಿ.” *(‘ಕನ್ನಡದಲ್ಲಿ ಪ್ರಬಂಧ ವ್ಯವಸಾಯ’ – ಕಡಂಗೋಡ್ಲು ಶಂಕರಭಟ್ಟ) ಇವು ‘ಎಸ್ಸೆ’ಯ ಪ್ರಮುಖ ಗುಣಗಳೆಂದು ಪರಿಗಣಿತವಾಗಿವೆ. ತನ್ನ ಅಭಿಪ್ರಾಯಗಳನ್ನು ಅನ್ಯರಿಗೆ ಕಾಣಿಸುವಾಗ ಒಬ್ಬ ಲೇಖಕನ ಅಂತರಂಗವೂ ಅದರಲ್ಲಿ ಪ್ರಕಟವಾಗಬಹುದು (ಬೇಕನ್, ಲ್ಯಾಂಬ್ ಇವರ ಮಾತುಗಳನ್ನು ಗಮನಿಸಿ). ಎಂದರೆ ‘ಎಸ್ಸೆ’ಯಲ್ಲಿ “ಬೇರೆ ಬಗೆಯ ಬರೆಹಗಳಲ್ಲಿ ಇಲ್ಲದಂತಹ ಆತ್ಮೀಯವೂ ಮುದ್ರೆಸ್ಫುಟವಾಗಿ ಅಂಚಿತವಾಗಿರಬೇಕು; ಗದ್ಯದಲ್ಲಿ ಬರೆಯಲ್ಪಟ್ಟಿರಬೇಕು”. *(‘ಕನ್ನಡದಲ್ಲಿ ಪ್ರಬಂಧ ವ್ಯವಸಾಯ’ – ಕಡಂಗೋಡ್ಲು ಶಂಕರಭಟ್ಟ) ‘ಪ್ರಬಂಧ’ದ ವ್ಯಾಖ್ಯೆಯಲ್ಲಿ ಇಲ್ಲದ ಕೆಲವಂಶಗಳನ್ನು ‘ಎಸ್ಸೆ’ಯನ್ನು ಕುರಿತಾದುದರಲ್ಲಿ ಕಾಣಬಹುದಾದರೂ ಒಟ್ಟಿನಲ್ಲಿ “ಇದು ಸಾಧಾರಣವಾಗಿ ‘ಪ್ರಬಂಧ’ ಎಂದರೆ ಅರ್ಥವಿಕಲ್ಪವಾಗುವುದಿಲ್ಲ. ಒಂದೇ ಒಂದು ಅರ್ಥವಾಗುತ್ತದೆ. ‘Essay’ ಎಂದರೇನೋ ಅದೇ ಇದು”.[1]

ಹಿಂದಿನವರು ‘ಪ್ರಬಂಧ’ ಶಬ್ದವನ್ನು ಯಾವ ಅರ್ಥದಲ್ಲಿ, ಯಾವ ಸಂದರ್ಭದಲ್ಲಿ ಪ್ರಯೋಗಿಸುತ್ತಿದ್ದರೋ ಅದೇ ಅರ್ಥದಲ್ಲಿ ಅಂತಹುದೇ ಸಂದರ್ಭದಲ್ಲಿ ಆ ಶಬ್ದವನ್ನು ನಾವಿಂದು ಉಪಯೋಗಿಸುತ್ತಿಲ್ಲ. ಹಿಂದೆ ಸಾಮಾನ್ಯವಾಗಿ ‘ಕಾವ್ಯ’ಕ್ಕೆ (ವಿಶಾಲಾರ್ಥದಲ್ಲಿ) ಪರ್ಯಾಯವೆಂಬಂತೆ ‘ಪ್ರಬಂಧ’ ಬಳಕೆಯಾಗುತ್ತಿತ್ತು ಎಂಬುದನ್ನು ಆಗಲೇ ಹೇಳಿದೆ. ಉದಾ. “ಪ್ರಥಿತ ಯಶನಾಂ ಭಾಸ ಕವಿಸೌಮಿಲ್ಲಕ ಕವಿಮಿಶ್ರಾದೀನಾಂ ಪ್ರಬಂಧನಾ ನಾತಿಕ್ರಮ್ಯ…..” ಇಲ್ಲಿ ‘ಪ್ರಬಂಧ’ ವೆಂಬುದಕ್ಕೆ (ನಾಟಕ) ಕಾವ್ಯವೆಂದು ಅರ್ಥ. ಅಪ್ಟೆಯವರ ನಿಘಂಟುವಿನಲ್ಲಿ ‘ಪ್ರಬಂಧ’ಕ್ಕೆ ‘Any literary work or composition, especially a poetical composition’ ಎಂದು ಮುಂತಾಗಿ ಅರ್ಥವಿವರಣೆಯಿದೆ. ಹೀಗೆ ವಿಶಾಲಾರ್ಥದಲ್ಲಿ ಪ್ರಯುಕ್ತವಾಗುತ್ತಿದ್ದ ‘ಪ್ರಬಂಧ’ವು ಇಂದು ಪರಿಮಿತವಾದ, ಎಂದರೆ ಒಂದು ನಿರ್ದಿಷ್ಟ ಸಾಹಿತ್ಯ ಪ್ರಕಾರವನ್ನು ನಿರ್ದೇಶಿಸುವಷ್ಟು ಮಾತ್ರ ಅರ್ಥವನ್ನು  ಒಳಗೊಂಡಿದೆ. ಇಂಗ್ಲಿಷಿನಲ್ಲಿ ‘ಎಸ್ಸೆ’ಯ ವಿಪುಲ ಲಕ್ಷಣಗಳಲ್ಲಿ ಭಿನ್ನತೆಯೇ ಅಧಿಕವೆಂಬುದನ್ನು ಹಿಂದೆಯೇ ಸೂಚಿಸಲಾಗಿದೆ. ‘ಎಸ್ಸೆ’ಯ ವ್ಯಾಖ್ಯೆಯನ್ನು ಮೀರಿ ಇಂದಿನಂತೆ ಹಿಂದೆಯೂ ಕೃತಿರಚನೆಗಳಾಗುತ್ತಿದ್ದುವು. ಕೆಲವರ ಅಭಿಪ್ರಾಯದಂತೆ ‘ಎಸ್ಸೆ’ಯ ವಸ್ತು ಘನವಾಗಿದ್ದರೂ ನಿರೂಪಣೆ ಹೃದ್ಯವಾಗಿರಬೇಕು. ಆದರೆ ಅದನ್ನು ಮೀರಿ ‘ಎಸ್ಸೆ’ಗಳನ್ನು ಬರೆದವರಿದ್ದಾರೆ. ಉದಾ : ಜೊನಾಥನ್ ಸ್ವಿಪ್ಟ್ (Jonathan Swift) ಎಂಬ ಆಂಗ್ಲಲೇಖಕ. ಆತ ಪೊರಕೆಯನ್ನು ಕೇಂದ್ರವಾಗಿರಿಸಿ (‘Meditation upon a broomstic’) ತತ್ವಚಿಂತನ, ವಿಚಾರಮಂಥನ ಮಾಡಿದ್ದಾನೆ. ‘ಎಸ್ಸೆ’ಯು ‘ಗದ್ಯದಲ್ಲಿ ಬರೆಯಲ್ಪಟ್ಟಿರಬೇಕು’ ಎಂಬುದು ಇನ್ನೊಂದು ಹೇಳಿಕೆ. ಆದರೆ ಅಲೆಕ್ಸಾಂಡರ್ ಪೋಪ್ (Alexander Pope)  ಪದ್ಯರೂಪದಲ್ಲಿ ‘ಎಸ್ಸೆ’ಯನ್ನು ಬರೆದಿದ್ದಾನೆ (An essay on criticism). ಇಂತಹ ಸಂದರ್ಭಗಳಲ್ಲಿ ವಸ್ತು, ನಿರೂಪಣೆ ಇತ್ಯಾದಿಗಳ ಕುರಿತು ಇರುವ ವಿಧಿನಿಷೇಧಗಳನ್ನು ಉಲ್ಲಂಘಿಸಲಾಗಿದೆ ಎಂಬುದು ವಿಚಾರಣೀಯ. ತತ್ವ ಮತ್ತು ಪ್ರಯೋಗಗಳಲ್ಲಿ ಇಂತಹ ಅಸಾಮಂಜಸ್ಯಗಳು ತಲೆದೋರುವುದನ್ನು ತಡೆಗಟ್ಟಲೆಂಬಂತೆ ‘ಎಸ್ಸೆ’ಯನ್ನು ನಾಲ್ಕಾರು ಬಗೆಯಲ್ಲಿ ವಿಭಜಿಸಿ ಅವುಗಳಿಗೆ ಪ್ರತಿ ಪ್ರತ್ಯೇಕ ಲಕ್ಷಣಗಳನ್ನು ರೂಪಿಸುವ ಪ್ರಯತ್ನವೂ ಆಗಿದೆ. ಆದರೆ ಅದರ ವಿವರಣೆಯು ಅಪ್ರಕೃತವಾಗಿದೆ.

ಇಂಗ್ಲಿಷಿನ ‘ಎಸ್ಸೆ’ಗೆ ಪ್ರತಿಯಾಗಿ ಕನ್ನಡದಲ್ಲಿ ಯಾವ ಶಬ್ದವನ್ನು ಬಳಸಬಹುದು? ಹಿಂದೆಯೇ ಹೇಳಿದಂತೆ ‘ಎಸ್ಸೆ’ಗೆ ಪ್ರತಿಯಾಗಿ ಹಲವರು ಹಲವು ಶಬ್ದಗಳನ್ನು ಮುಂದೆ ಮಾಡಿದ್ದಾರೆ. ‘ಪ್ರಸಂಗ’ವೆನ್ನಬಹುದು, ‘ನ್ಯಾಸ’ವೆನ್ನಬಹುದು ಎಂಬ ಸೂಚನೆಗಳು ಬಂದಿವೆ. ಈ ಶಬ್ದಗಳಿಗೆ ಅಖಿಲ ಕನಾಟಕ ವ್ಯಾಪ್ತಿಯಿಲ್ಲ. ಇವುಗಳ ಅರ್ಥವೂ ಅಷ್ಟೊಂದು ವಿಶಾಲ, ಸಮುಚಿತ ಎನ್ನುವಂತಿಲ್ಲ. ‘ಎಸ್ಸೆ’ ಎಂದರೆ ನಾನು ತಾನೆಂದು ಜಗಳವಾಡುವ ಸ್ಪರ್ಧಿಗಳು ಮೂರೇ ಎಂದೆನ್ನಬಹದು. ಅವು ಪ್ರಬಂಧ, ನಿಬಂಧ ಮತ್ತು ಹರಟೆ. ಇವುಗಳಲ್ಲಿ ‘ಎಸ್ಸೆ’ಗೆ ಪ್ರತಿಯಾಗಿ ಯಾವುದನ್ನು ಆರಿಸಬಹುದು? ಯಾವುದು ಉಚಿತತರ?

“‘ಹರಟೆ’ ಎಂಬುದನ್ನು ನಾವು ಇಂದು ಉಪಯೋಗಿಸುವುದು ಇಂಗ್ಲಿಷಿನ ‘Essay’ ಎಂಬುದರ ಪರ್ಯಾಯ ಪದವಾಗಿ[2] ಎಂದು ಒಬ್ಬರು ಅಭಿಪ್ರಾಯ ಪಟ್ಟಿದ್ದಾರೆ. ವಿಚಾರಾಂತ್ಯದಲ್ಲಿ ಈ ಅಭಿಪ್ರಾಯವು ಸಾಧುವಲ್ಲವೆಂದೆನ್ನಿಸುತ್ತದೆ. ಇಂಗ್ಲಿಷ್ ಲೇಖಕರು ತಾವು ಯಾವ ಬಗೆಯ ‘ಎಸ್ಸೆ’ಗಳನ್ನು ಬರೆಯುತ್ತಿದ್ದರೋ, ಬರೆಯ ಬಯಸುತ್ತಿದ್ದರೋ ಅಂತಹವುಗಳನ್ನೇ ಲಕ್ಷ್ಯವಾಗಿರಿಸಿ ‘ಎಸ್ಸೆ’ಯ ಲಕ್ಷಣಗಳನ್ನು ಹೇಳುತ್ತಿರುವುದು ಕಂಡುಬರುತ್ತಿದೆ. ಉದಾಹರಣೆಗಾಗಿ ಡಾ. ಜಾನ್‌ಸನನು ಹೇಳಿರುವ ಲಕ್ಷಣವನ್ನು ಪರಿಶೀಲಿಸಬಹುದು. ಆ ಲಕ್ಷಣವನ್ನು ಮನಸ್ಸಿನಲ್ಲಿರಿಸಿ, ‘An Eassy on India’s Nonalignment Policy’ ಎಂದರೆ ಅರ್ಥಗೌರವವೇ ಉಳಿಯಲಾರದು. ಆದರೆ “Essay on catching the train’ ಎಂಬಲ್ಲಿ ಜಾನ್‌ಸನನ ಲಕ್ಷಣ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಇದರಿಂದ ‘ಎಸ್ಸೆ’ಗೆ ಘನ ಹಾಗೂ ಲಘುವಾದ ಎರಡು ಅರ್ಥಗಳಿವಯೆಂಬುದು ವ್ಯಕ್ತವಾಗುತ್ತದೆ. ಆದರೆ ಕನ್ನಡದ ‘ಹರಟೆ’ಯು ಹಾಗಾಗಬಾರದು. ಇಂದು ನಾವು ಆ ಶಬ್ದವನ್ನಾಗಲಿ ಅದರ ಅರ್ಥವನ್ನಾಗಲಿ ಅಂತಸ್ಸತ್ವವನ್ನಾಗಲಿ ಲಘುವೆಂದೇ ತಿಳಿದಿದ್ದೇವೆ; ಹಗುರವಾಗಿಯೇ ‘ಹರೆಟೆ’ಯನ್ನು ಬಳಸುತ್ತೇವೆ; ಹರಟೆ ಹೊಡೆಯುತ್ತೇವೆ. “ವಿಮರ್ಶಕರು ‘ಹರಟೆ’ ಇದಕ್ಕೆ ಒಳ್ಳೇ ಅರ್ಥವನ್ನು ಕೊಟ್ಟಿದ್ದಾರೆ. ‘ರಗಳೆ’ ಎಂದಾಕ್ಷಣಕ್ಕೆ ಕಾವ್ಯವು ರಗಳೆಯಾಗಿದೆ ಎಂದು ಹೇಳುವುದು ತರವಲ್ಲ. ಹರಟೆಯಲ್ಲಿ ಒಳ್ಳೆಯ ಗುಣಗಳಿವೆ”[3]  ಎಂದು ಇನ್ನೊಬ್ಬರು ವಾದಿಸಿದ್ದಾರೆ.[4] ‘ರಗಳೆ’ಯೆಂದರೆ ಒಂದು ಬಗೆಯ ಕಾವ್ಯವೆಂದು ರೂಢಿಯಲ್ಲಿದ್ದರೂ ಮೂಲತಃ ಅದೊಂದು ಬಂಧದ ಹೆಸರು (‘ರಘಟಾಬಂಧ’ದ ಹೆಚ್ಚಿನ ವಿಚಾರ ವಿಮರ್ಶೆ ಇಲ್ಲಿ ಅವಶ್ಯವಲ್ಲ). ರಗಳೆ (ಬಂಧ) ಯಲ್ಲಿರುವುದೇ ‘ರಗಳೆ’ (ಕಾವ್ಯ) ಎಂಬ ಅರ್ಥವು ‘ಹರಿಹರನ ರಗಳೆ’ ಎಂಬಾಗ ವ್ಯಂಜಿತವಾಗುತ್ತದೆ. ‘ರಗಳೆ’ (ಕಾವ್ಯ)ಯೆಂಬುದಾಗಿ ಆ ಹೆಸರಿನ ಬಂಧದಲ್ಲಿರುವ ಕಾವ್ಯವನ್ನು ಮಾತ್ರ ಕರೆಯುವರಲ್ಲದೆ ಬೇರೆಯವುಗಳನ್ನಲ್ಲ. ಹಾಗೆಯೇ ‘ಹರಟೆ’ಯಲ್ಲಿ ‘ಒಳ್ಳೆಯ ಗುಣಗಳಿವೆ’ ಎಂಬ ಮಾತ್ರದಿಂದ ಸಿಕ್ಕಂತೆ ಬಳಸಿದರೆ ಅದು ಉದ್ದಿಷ್ಟಾರ್ಥವನ್ನು ಕೊಡಲಾರದು. “ರಾಘವಾಂಕನು ಚಿತ್ರಿಸಿದ ವಸಿಷ್ಠನ ಕುರಿತೊಂದು ‘ಹರಟೆ’ ಬರೆಯಿರಿ”. ಎಂದರೆ ಹೆಚ್ಚಾಗಿ ವಿಪರ್ಯಾಸವಾಗುತ್ತದೆ. ಹರಟೆಯನ್ನು ಕುರಿತು ಒಂದೆಡೆಯಲ್ಲಿ “ಬಂಧಕ್ಕಿಂತ ನಿರ್ಬಂಧ ಇಲ್ಲಿ ಹೆಚ್ಚಾಗಿ ಕಾಣುವ ಲಕ್ಷಣ. ಮನಸ್ಸು ಯಾವ ರೀತಿಯೋ ಒಂದು ವಿಷಯದಲ್ಲಿ ಆಡಲು ತೊಡಗಿ ಎಲ್ಲೇಲ್ಲಿಗೋ ಇಚ್ಛೆ ಬಂದಂತೆ ನಡೆಯುವುದು ಇಲ್ಲಿನ ರೀತಿ. ಕ್ರಮ ಇದೇ ಎಂಬುದಿಲ್ಲ”[5] ಎಂದು ವಿ.ಸೀ.ಯವರೂ, ಇನ್ನೊಂದೆಡೆಯಲ್ಲಿ “ನಮ್ಮಲ್ಲಿ ‘ಹರಟೆ’ ಎಂಬ ಪದವನ್ನು ಇಂಗ್ಲಿಷಿನ ‘ಎಸ್ಸೆ’ (Essay)ಗೆ ಪರ್ಯಾಯ ಪದವಾಗಿ ಪ್ರಯೋಗಿಸುವುದುಂಟು. ಈ ಪ್ರಯೋಗ ಅಷ್ಟೇನೂ ಸಾಧುವಲ್ಲ ಎನ್ನಿಸುತ್ತದೆ. ಹರಟೆಗೆ ಆರಂಭವುಂಟೇ ಹೊರತು ಅಂತ್ಯವೂ ಇಲ್ಲ, ಕೇಂದ್ರವೂ ಇಲ್ಲ. ‘ಎಸ್ಸೆ’ದಾಗರೋ (ಇದನ್ನು ‘ಪ್ರಬಂಧ’ವೆಂದು ಕರೆಯೋಣ). ಆದಿ, ಅಂತ್ಯ, ಕೇಂದ್ರಗಳೆಲ್ಲವೂ ಉಂಟು”[6] ಎಂದು ಎ.ಎನ್.ಮೂರ್ತಿ ರಾಯರೂ ಹೇಳಿದ್ದಾರೆ. ‘ಒಳ್ಳೆಯ ಗುಣಗಳಿರುವ’ ಹರಟೆಗಳನ್ನು ‘ಹೊಡೆದ’ ಈ ಇಬ್ಬರು ಮಾನ್ಯರ ಅಭಿಪ್ರಾಯಗಳಲ್ಲೂ ಒಂದು ತೂಕವಿದೆ.

ಇನ್ನು ‘ನಿಬಂಧ’ವೆಂಬ ಶಬ್ದವನ್ನು ಪರಿಶೀಲಿಸಬಹುದು. ‘ಪ್ರಬಂಧ’ಕ್ಕಿರುವಷ್ಟೆ ಹಳಮೆ ಇದಕ್ಕಿದ್ದರೂ ಇದರ ಬಳಕೆಯನ್ನು ಉತ್ತರ ಕರ್ನಾಟಕದಲ್ಲಷ್ಟೇ ಹೆಚ್ಚಾಗಿ ಕಾಣಬಹುದು. ಅಪ್ಟೆಯವರ ನಿಘಂಟುವಿನಲ್ಲಿ ‘ಪ್ರಬಂಧ’ಕ್ಕಿರುವ ಅರ್ಥಗಳಲ್ಲಿ ಕೆಲವನ್ನು ‘ನಿಬಂಧ’ಕ್ಕೂ ಕಾಣಿಸಲಾಗಿದೆ. ಮಾತ್ರವಲ್ಲ, ‘ಪ್ರಬಂಧ’ಕ್ಕಿಲ್ಲದ ‘a treatise’, ‘a compendium’ಎಂಬ ವಿಶೇಷಾರ್ಥಗಳನ್ನೂ ಅಲ್ಲಿಕಾಣಬಹುದು. ಆದುದರಿಂದ ‘ನಿಬಂಧ’ವನ್ನು ‘ವ್ಯಾಖ್ಯಾನ’ವೆಂಬುದಕ್ಕಾಗಲಿ ‘ಸಾರಸಂಗ್ರಹ’ವೆಂಬುದಕ್ಕಾಗಲಿ ಪರ್ಯಾಯ ಶಬ್ದವಾಗಿ ಉಪಯೋಗಿಸಬಹುದು. ‘ಪ್ರಬಂಧ-ನಿಬಂಧ’ಗಳಿಗೆ ಸಮಾನಾರ್ಥವಿದ್ದರೂ ‘ಪ್ರಬಂಧ’ಕ್ಕಿರುವ ‘ಕಾವ್ಯ’ವೆಂಬ ವಿಶಾಲಾರ್ಥ ಸಂಬಂಧವಿಲ್ಲ.

ಕೊನೆಯದಾಗಿ ‘ಪ್ರಬಂಧ’. ಪ್ರಬಂಧ ಶಬ್ದದ ಅರ್ಥ, ಅದರ ಪ್ರಾಚೀನತೆ, ಪ್ರಾಚುರ್ಯ ಮತ್ತು ಲಕ್ಷಣಾದಿಗಳನ್ನು ಕುರಿತು ಹಿಂದೆಯೇ ಹೇಳಲಾಗಿದೆ. ಪ್ರಬಂಧಕ್ಕಿದ್ದ ಹಿಂದಿನ ವಿಸಾಲವಾದ ಅರ್ಥ ಈಗ ಇಲ್ಲ. ಹಿಂದೆ ‘ಬರವಣಿಗೆ’ (Composition) ಎಂಬ ಅರ್ಥದಲ್ಲಿ ಅದು ಪ್ರಯುಕ್ತವಾಗುತ್ತಿದ್ದರೆ ಈಗ ಸಾಮಾನ್ಯವಾಗಿ ಬಿಡಿಬರೆಹವೆಂಬುದಕ್ಕೆ ಪರ್ಯಾಯವೆನಿಸಿದೆ. ವಿಚಾರ ಪ್ರಧಾನವಾದ ವಿಮರ್ಶೆ, ಸಂಶೋಧನೆ, ಟೀಕೆ, ಚರ್ಚೆ ಮೊದಲಾದವುವನ್ನು, ಒಟ್ಟಿನಲ್ಲಿ, ‘ಹರಟೆ’ಯಲ್ಲದ ಬರಹಗಳನ್ನು ನಾವಿಂದು ‘ಪ್ರಬಂಧ’ವೆನ್ನುತ್ತೇವೆ. ಒಬ್ಬರು ‘ಎಸ್ಸೆ’ಗೆ ಪ್ರತಿಯಾಗಿ ‘ಲಲಿತ ಪ್ರಬಂಧ’ವನ್ನು ಪ್ರಯೋಗಿಸಿದ್ದಾರೆ. ಅಲ್ಲದೆ ‘ಎಸ್ಸೆ’ಯ ವಿವಿಧರೂಪಗಳನ್ನು ಲಘುಕಥಾ ಪ್ರಬಂಧ, ಹಾಸ್ಯ ಲಲಿತ ಪ್ರಬಂಧ, ವರ್ಣನಪರ ಲಲಿತ ಪ್ರಬಂಧ, ಪತ್ರದ ಲಲಿತ ಪ್ರಬಂಧ, ವಿಮರ್ಶಾತ್ಮಕ ಲಲಿತ ಪ್ರಬಂಧ ಎಂದು ಮುಂತಾಗಿ ಅನುವಾದಿಸುವ ಪ್ರಯತ್ನವನ್ನೂ ಮಾಡಿದ್ದಾರೆ.[7] ಇದು ಕೆಲಮಟ್ಟಿಗೆ ಹಾಸ್ಯಾಸ್ಪದವಾಗಿ ತೋರುತ್ತಿದೆ. ‘ಎಸ್ಸೆ’ಯನ್ನು ‘ಲಲಿತ ಪ್ರಬಂಧ’ವೆನ್ನುವುದಾದರೆ ‘ಪ್ರಬಂಧ’ವೆಂಬ ವಿಶೇಷ್ಯದ ಅರ್ಥವೇನು? ಲಕ್ಷಣವೇನು? ಅವರು ‘ಎಸ್ಸೆ’ಗೆ ಪ್ರತಿಶಬ್ದವು ‘ಪ್ರಬಂಧ’ವೆಂದು ಪರೋಕ್ಷವಾಗಿ ಒಪ್ಪಿ ಅದಕ್ಕೆ ಲಲಿತವೆಂಬ ವಿಶೇಷಣವನ್ನು ಅಂಟಿಸಿದ್ದಾರೆ. ಮುಂಡಾಸಿನ ಮೇಲೊಂದು ಟೊಪ್ಪಿಯನ್ನಿಡುವಂತೆ! ಅವರು ‘ಲಲಿತ’ವೆಂಬ ಶಬ್ದವನ್ನು ‘ಲಘು’ವೆಂಬ ಅರ್ಥದಲ್ಲಿ ಪ್ರಯೋಗಿಸಿದ್ದಾರೆಂದು ತೋರುತ್ತದೆ. ಇಂಗ್ಲಷಿನ ‘Personal Essay’ ಎಂಬುದನ್ನು ‘ಹರಟೆ’ ಎಂದು ಅಥವಾ ಸಂಸ್ಕೃತೀಕರಿಸಿ ‘ಲಘು (‘ಲಲಿತ’ವಲ್ಲ) ಪ್ರಬಂಧ’ವೆನ್ನಬಹುದು.

ಇಂಗ್ಲಿಷಿನಲ್ಲಿ ‘ಎಸ್ಸೆ’ಯನ್ನು ಹೇಗೆ ಲಘುವಾಗಿಯೂ ಪ್ರೌಢವಾಗಿಯೂ ಉಪಯೋಗಿಸಲಾಗುವುದೋ ಹಾಗೆಯೇ ‘ಪ್ರಬಂಧ’ವನ್ನೂ ಬಳಸಬಾರದೇಕೆ? ಅದರಲ್ಲೂ “ಇಂಗ್ಲಿಷ್ ಪದದ ಅಭಿಪ್ರಾಯಕ್ಕೆ ಸಮೀಪಗತವಾಗಿರುವಾಗ”? ಆದುದರಿಂದ ‘ಎಸ್ಸೆ’ಗೆ ಪ್ರತಿಶಬ್ದವಿಲ್ಲ, ಕನ್ನಡದಲ್ಲೂ ‘ಎಸ್ಸೆ’ ಎಂದೇ ಹೇಳಬೇಕೆಂಬ ದೀನಭಾವಕ್ಕೆ ಎಡೆಯಿಲ್ಲ. ಮೇಲೆ ಹೇಳಿದ ಮಹನೀಯರು ‘ಪ್ರಬಂಧ’ವನ್ನು Thesis, Treatise ಎಂದು ಕರೆಯಬಹುದು. ‘ಎಸ್ಸೆ’ಗೆ ಪ್ರತಿಯಾಗಿ ‘ನಿಬಂಧ’ ಅಥವಾ ಇದೇ ಅರ್ಥವನ್ನು ಕೊಟ್ಟು ಇನ್ನೂ ಚೆನ್ನಾಗಿರುವ ಲಲಿತಪ್ರಬಂಧ ಎಂಬುದನ್ನು ತೆಗೆದುಕೊಳ್ಲಬಹುದೆಂದೂ ಸೂಚಿಸಿದ್ದಾರೆ. Thesis ಸಣ್ಣದಾಗಿದರೆ ಅದು ‘ಪ್ರೌಢಲಲಿತಪ್ರಬಂಧ’ವಾಗುವಂತೆ! ಪ್ರೌಢಿಮೆಯನ್ನೂ ಲಾಲಿತ್ಯವನ್ನೂ ಒಂದೆಡೆಯಲ್ಲಿ ಸೇರಿಸುವುದು ಇಂಗ್ಲಿಷಿನಲ್ಲಿ ‘The most lamentable comedy’ ಎಂಬ ಹಾಗಾಗದೆ? ‘ರೀಸರ್ಚ್’ (Research) ಮತ್ತು ‘ಥೀಸಿಸ್’ (Thesis)ಗಳಲ್ಲಿ ಸಾಹಚರ್ಯವೇರ್ಪಟ್ಟಿರುವುದರಿಂದ ಇಂಗ್ಲಿಷಿನ Thesisನ್ನು ‘ಸಂಶೋಧನ ಪ್ರಬಂಧ’ವೆಂದೋ ‘ಮಹಾಪ್ರಬಂಧ’ವೆಂದೋ ಕರೆಯುವುದು ಉಚಿತ. ‘ಎಸ್ಸೆ’ಯನ್ನು ‘ಪ್ರಬಂಧ’ವೆನ್ನುವುದೇ ಸಮಂಜಸ; ಸಮರ್ಪಕ. ಹಾಗಲ್ಲದೆ ‘ನಿಬಂಧ’ವಾಗಬೇಕು, ‘ಹರಟೆ’ಯಾಗಬೇಕು, ‘ನ್ಯಾಸ’ವಾಗಬೇಕು, ‘ಪ್ರಸಂಗ’ವಾಗಬೇಕು ಎಂಬುದಾಗಿ ಸಾಮಾನ್ಯವಾಚಕನನ್ನು ಗೊಂದಲದಲ್ಲಿ ಕೆಡಹುವುದಕ್ಕಿಂತ ‘ಪ್ರಬಂಧ’ದ ಹಿಂದು ಮುಂದುಗಳನ್ನು ಗಮನಿಸಿ, ಪರಾಮರ್ಶಿಸಿ ‘ಎಸ್ಸೆ’ ಎಂದರೆ ಇದೇ ಎಂದು ಒಪ್ಪುವುದೇ ಲೇಸು.

 


[1] ‘ಕನ್ನಡದಲ್ಲಿ ಪ್ರಬಂಧ ವ್ಯವಸಾಯ’ – ಕಡಂಗೋಡ್ಲು ಶಂಕರಭಟ್ಟ

[2] ಪ್ರೊ. ರಾ.ಯ. ಧಾರವಾಡಕರ : ‘ಸಾಹಿತ್ಯ ಸಮಿಕ್ಷೆ’

[3] ವರದರಾಜ ಹುಯಿಲಗೋಳ :’ಕನ್ನಡ ಸಾಹಿತ್ಯದಲ್ಲಿ ಲಲಿತ ಪ್ರಬಂಧಗಳು’

[4] ವರದರಾಜ ಹುಯಿಲಗೋಳ :’ಕನ್ನಡ ಸಾಹಿತ್ಯದಲ್ಲಿ ಲಲಿತ ಪ್ರಬಂಧಗಳು’

[5] ವರದರಾಜ ಹುಯಿಲಗೋಳ :’ಕನ್ನಡ ಸಾಹಿತ್ಯದಲ್ಲಿ ಲಲಿತ ಪ್ರಬಂಧಗಳು’

[6] ವರದರಾಜ ಹುಯಿಲಗೋಳ :’ಕನ್ನಡ ಸಾಹಿತ್ಯದಲ್ಲಿ ಲಲಿತ ಪ್ರಬಂಧಗಳು’

[7] ವರದರಾಜ ಹುಯಿಲಗೋಳ :’ಕನ್ನಡ ಸಾಹಿತ್ಯದಲ್ಲಿ ಲಲಿತ ಪ್ರಬಂಧಗಳು’