‘ನ ಕಾರ್ತಿಕ ಸಮೋ ಮಾಸೋ’ ಎಂಬುದೊಂದು ಶ್ಲೋಕಪಾದ. ಕಾರ್ತಿಕಕ್ಕೆ ಸಮನಾದ ಮಾಸ ಮತ್ತೊಂದಿಲ್ಲ ಎಂಬುದು ತಾತ್ಪರ್ಯ. ‘ಆಶ್ವೀಜ-ಕಾರ್ತಿಕ ಶರದೃತು’ ಎಂದು ನಾವೆಲ್ಲ ಚಿಕ್ಕವರಾಗಿದ್ದಾಗ ಮಗ್ಗಿ ಪುಸ್ತಕ ಓದಿ ಉರು ಹೊಡೆದದ್ದುಂಟು. ಷಡೃತುಗಳಲ್ಲಿ ಮೊದಲನೆಯದಾದ ‘ವಸಂತ’ವನ್ನು ‘ಋತು ರಾಜ’ ಎಂದು ವರ್ಣಿಸುವುದಿದೆ. ಆದರೆ ಭಾರತವಾಸಿಗಳಾದ ನಮಗೆ ವಾಸ್ತವದಲ್ಲಿ ಶರದೃತುವೇ ಅತ್ಯಂತ ಸುಖಕರವೂ ಸುಂದರತರವೂ ಆಗಿರುವ ಕಾಲ. ವರ್ಷ ಋತುವಿನ ಮಳೆಯ ಅಬ್ಬರ ತಗ್ಗಿ, ಆಕಾಶವೆಲ್ಲ ನಿರಭ್ರನೀಲವಾಗಿ, ಕೆರೆತೊರೆಗಳಲ್ಲಿ ತಿಳಿನೀರು ತುಂಬಿ, ಹೊಲಗದ್ದೆಗಳಲ್ಲಿ ಹೊಂಬಣ್ಣದ ಪಯಿರುಗಳು ತೊನೆದಾಡುವ ಸೃಷ್ಟಿ ಸೌಂದರ್ಯವು ಮನಸ್ಸನ್ನು ಮುತ್ತಿ ಮೋಹಿಸುವ ಕಾಲವೆಂದರೆ ಶರದೃತು ಸರಿ.

ಇಂತಹ ಸುಂದರ ಶರದೃತುವಿನ ಒಂದು ವಿಶಿಷ್ಟ ಪರ್ವವೆಂದರೆ ದೀಪಾವಳಿ ಹೌದು, ಹೆಸರೇ ಹೇಳುವಂತೆ ಸಾಲು ದೀಪಗಳ, ದೀಪಮಾಲೆಗಳ ಹಬ್ಬ, ಮೂರು ದಿನಗಳ ಕಾಲ ಮನೆಯಹೊಸ್ತಿಲು, ಕಿಟಕಿಯ ದಳಿ, ಅಂಗಳದ ಅಗಲ, ಪಾಗಾರದ ಮೇಲೆ ಎಲ್ಲೆಲ್ಲೂ ಹಣತೆಗಳ ಹೊಂಬಳಕಿನ ಕುಡಿಯಾಟ. ನೆಲ ಸಾಲದೆಂದು ಬಗೆಬಗೆಯ ಗೂಡುದೀಪಗಳನ್ನು ಕಟ್ಟಿ ಮುಗಿಲಿಗೂ ಏರಿಸುವ ಉತ್ಸಾಹ!

ಮನೆ ಮನೆಗಳ, ಊರು ಕೇರಿಗಳ ಕಿರಿಯರೆಲ್ಲ ಒಂದಾಗಿ, ಅವರೊಮದಿಗೆ ಹಿರಿಯರೂ ಸೇರಿ ಸದ್ದುಗದ್ದಲಗಳ ಪಟಾಕಿಯನ್ನು ಸಿಡಿಸಿ, ಬಣ್ಣದ ಬೆಳಕುಗಳ ಬಾಣ ಬಿರುಸುಗಳನ್ನು ಉರಿಸಿ ಎಲ್ಲರೂ ಹಿಗ್ಗುವ ಹಬ್ಬ ದೀಪಾವಳಿ. ಜನಸಾಮಾನ್ಯಕ್ಕೆ ಹಬ್ಬ (‘ಪರ್ಬ’)ವೆಂದರೂ ದೀಪಾವಳಿಯೆಂದರೂ ಏಕಾರ್ಥಕ. ‘ಹಬ್ಬದ ದಿನವೂ ಹಳೆಯ ಗಂಡೇ’ ಎಂಬುದೊಂದು ಗಾದೆ ಮಾತು. ಹಬ್ಬದಂದು ಎಲ್ಲರೂ ಹೊಸಬರಾಗಬೇಕೆಂಬುದು ಅವರ ಅರ್ಥ. ಎಣ್ಣೆ ಸ್ನಾನ, ಹೊಸ ಬಟ್ಟೆ, ಸಿಹಿ ತಿಂಡಿ, ಸವಿಮಾತು ಎಂದರೆ ದೀಪಾವಳಿ.

ಷಡೃತುಗಳು ಸಾರ-ಸ್ವಾರಸ್ಯಗಳನ್ನು ಬಾಯಾರೆ ಬಣ್ಣಿಸುವ ಕವಿಜನರು ದೀಪಾವಳಿಯ ವೈಶಿಷ್ಟ್ಯಕ್ಕೆ ಮೂಕವಾಗಿರಲು ಸಾಧ್ಯವೇ? ಹಿಗ್ಗಿನ ಹಬ್ಬವಾಗಿರುವ ದೀವಳಿಗೆಯ ಬಗೆಗೆ ನಮ್ಮ ಕವಿವಿಭೂತಿಗಳು ಬಗೆ ಬಗೆಯ ಕಬ್ಬಗಳನ್ನು ಹೊಸದು ಹಾಡಿದ್ದಾರೆ. ‘ಅಪ್ಪನ ಜೇಬಿನ ದುಡ್ಡುಗಳೆಲ್ಲವು ಚಟಪಟಗುಟ್ಟುತ ಸಿಡಿಯುವುವು’ ಎಂಬಂತಹ ಸರಳ ಸುಂದರ ಶಿಶು ಗೀತಗಳನ್ನು ಬರೆದವರಿದ್ದಾರೆ. ಆ ಹಬ್ಬದ ಹೊರಗೇನು, ಒಳಗೇನು ಎಂಬುದನ್ನು ತೆರೆದು ಒರೆದವರಿದ್ದಾರೆ. ‘ಹಾಡಿದ್ದೇ ಹಾಡುವ ಕಿಸುಬಾಯಿ ದಾಸ’ರಾಗದೆ ಹೊಸ ಪದ, ಹೊಸಹದಗಳಿಂದ ದೀವಳಿಗೆಯ ಹುರುಳಿನ ಎಳೆಗಳನ್ನು ಬಿಡಿಸಿ ತೋರಿದವರಿದ್ದಾರೆ. ಈ ಕಿರು ಬರಹ ಅಂತಹ ನಾಲ್ಕೈದು ಮಂದಿ ಕನ್ನಡ ಕವಿಪುಂಗವರ ರಚನೆಗಳಲ್ಲಿ ಕೆಲವೊಂದರ ಮೇಲೆ ಒಂದು ತೋರ ನೋಟವನ್ನು ಹಾಯಿಸುವ ಪ್ರಯತ್ನವಾಗಿದೆ.

ಹೊಸಗನ್ನಡದ ಕವಿತ್ರಯರಲ್ಲಿ ಒಬ್ಬರಾಗಿರುವ ಪು.ತಿ.ನ ಅವರದು ಸಾತ್ವಿಕ ಜೀವ ಮತ್ತು ಭಾವಃ ಅವುಗಳಿಗೆ ತಕ್ಕಂತೆ ಅವರ ಬರೆಹ. ಅವರ ‘ಗಣೇಶ ದರ್ಶನ’ದಲ್ಲಿ ‘ದೀಪಾವಳಿ’ ಎಂಬ ಕವಿತೆಯೊಂದಿದೆ :

ಬಂದಿತು ದೀಪಾವಳಿ ಮನೆಮನೆಯೊಳು
ಕುಡಿಯಾಡಿಸುತಿದೆ ನರುಬೆಳಕು

ಎಂದು ತೊಡಕುವ ಆ ಕವನ ಮೇಲ್ಮೈಯಲ್ಲಿ ಹಬ್ಬದ ಸಡಗರದ ಸಾರಣೆಯಾದರೆ ಒಳಪದರದಲ್ಲಿ ವಿಶ್ವತತ್ವ-ಈಶ ಶಕ್ತಿಗಳ ಕಂಡರಣೆಯಾಗಿದೆ. ನರಕಾಸುರನು ಲೋಕಪೀಡನಕ್ಕೂ ಬಲಿ ಚಕ್ರವರ್ತಿ ಮದೋನ್ಮತ್ತತೆಗೂ ಪ್ರತಿನಿಧಿಗಳಾದರೆ ಭಗವಂತನು ಮಾಡುವ ಜಗತ್ ಸೃಷ್ಟಿ ಮತ್ತು ಅದರಲ್ಲಿ ನೆಲೆಗೊಳಿಸುವ ಸೌಂದರ್ಯ ಸ್ವರೂಪಗಳ ಪ್ರತೀಕವೇ ವರ್ಣಲಾಲಿತ್ಯದ ದೀಪಮಾಲೆ ಎಂಬುದನ್ನು ಆ ಕವಿತೆ ಧ್ವನಿಸುತ್ತದೆ.

‘ಒಲವಿನ ಕವಿ’ಯೆಂದು ಮಾನ್ಯರಾಗಿರುವ ಕೆ.ಎಸ್.ನ ಅವರ ‘ನವಪಲ್ಲವ’ದಲ್ಲಿರುವ ‘ದೀಪಾವಳಿ’ ಯಾವುದು ಯಾವುದಕ್ಕೆ ದೀಪ ಎನ್ನುವುದನ್ನು ನಿದರ್ಶಿಸಿ, ದೀಪಾವಳಿಯ ದರ್ಶನವೇನು ಎಂಬುದನ್ನು ನಿರ್ದೇಶಿಸುತ್ತದೆ :

ಬಲ್ಮೆ ತೋಳಿಗೆ ದೀಪ,
ದುಡಿಮೆ ಬೆವರಿನ ದೀಪ,
ಸಹನೆ ಅನುಭವ ದೀಪ ಬದುಕಿನಲ್ಲಿ
ಮುನಿಸು ಒಲವಿಗೆ ದೀಪ,
ಉಣಿಸು ಒಡಲಿಗೆ ದೀಪ
ಕರುಣೆ ನಂದಾದೀಪ ಲೋಕದಲ್ಲಿ

‘ಸಮನ್ವಯ ಕವಿ’ಯೆಂದು ಸುವಿಖ್ಯಾತರಾಗಿರುವ ಜಿ.ಎಸ್. ಶಿವರುದ್ರಪ್ಪನವರೂ ‘ದೀಪಾವಳಿ’ಯನ್ನು ವರ್ಣಿಸಿದ್ದಾರೆ. ಅವರ ‘ದೇವ ಶಿಲ್ಪ’ದಲ್ಲಿರುವ ಆ ಕವಿತ ಪು.ತಿ.ನ ಅವರ ಹಾಡಿನಂತೆಯೇ ಮೊದಲಾದರೂ ಅದರ ಜಾಡು ಸ್ವಲ್ಪ ಬೇರೆ ಬಗೆಯದು. ಅದು ಓದುಗನನ್ನು ವರ್ತಮಾನದಿಂದ ಭೂತಕಾಲದ ದೂರಕ್ಕೆ, ಎತ್ತರಕ್ಕೆ, ಗರ್ಭಕ್ಕೆ ಕೊಂಡೊಯ್ಯುತ್ತದೆ; ಚುಟುಕಿನಲ್ಲಿ ಅವತಾರ ಕಲ್ಪನೆಯನ್ನು ವಿಶ್ಲೇಷಿಸುತ್ತದೆ, ಬಲಿ ವಾಮನರನ್ನು ನೆನಪಿಗೆ ತರುತ್ತದೆ, ಬೆಳಕಿನ ಬಣ್ಣಗಳು ಪಟಾಕಿಯ ಸದ್ದುಗಳೂ ಹೇಗೆ ಹಬ್ಬದ ಕಬ್ಬಗಳಾಗಿವೆ ಎಂಬುದನ್ನು ಸೊಗಸಾಗಿ ಹೇಳುತ್ತದೆ.

ಮತ್ತೊಬ್ಬ ಸಮನ್ವಯ ಕವಿ ಕಣವಿಯವರ ಎರಡು ಕವಿತೆಗಳಲ್ಲಿ ‘ದೀಪಾವಳಿ’ ಎಂಬುದು ಶರದೃತು ಸೌಂದರ್ಯವನ್ನೆಲ್ಲ ಕನ್ನಡಿಸುತ್ತದೆ. ಜತೆಗೆ ದೀಪಾವಳಿಯ ದೀಪಕ್ಕೆ ಆಧುನಿಕತೆಯ ಪರಿವೇಷವನ್ನೂ ತೊಡಿಸುತ್ತದೆ; ಪ್ರತಿಮಾ ವಿಧಾನವನ್ನೂ ಅದು ಒಳಗೊಳ್ಳುತ್ತದೆ. ದೀಪಾವಳಿ ಹೇಗೆ ಹೇಗೆ ಬಂತು ಎಂಬುದನ್ನು ಹೇಳುತ್ತ,

ಹೊಲ, ಗದ್ದೆ, ಗಿರಣಿ, ಗಣಿ, ಕಚೇರಿ,
ಕಾರ್ಖಾನೆಯಲಿ ಬೆವರು ಸುರಿಸಿ
ಸಂಪು, ಹರತಾಳ, ಕೊಲೆ, ಸುಲಿಗೆ
ಅಪಘಾತ; ರಕ್ತ ಕುಂಕುಮವಿರಿಸಿ
……………………………….
ಕಲ್ಲಿನೇಟಿಗೆ ಎಲ್ಲ ವಿದ್ಯುದ್ದೀಪ ಒಡೆದು
ಚೂರಾಗಿರಲು ಬಂತು ದೀಪಾವಳಿ

ಅದು, ‘ಹಲವಾರು ಸಲ ಮಾವನ ಮನೆಗೆ ಬಂದ ಅಳಿಯನಂತೆ’ಯೂ ‘ಭೆಟ್ಟಿಯಾದಾಗೊಮ್ಮೆ ‘ಚಹ ಕುಡಿಸಪ್ಪಾ’ ಎನ್ನುವ ಗೆಳೆಯನಂತೆ’ಯೂ ಬರುತ್ತದೆ!

ಕಣವಿಯವರ ‘ಆಕಾಶಬುಟ್ಟಿ’ ಅವರ ಆರಂಭದ ರಚನೆಗಳಲ್ಲಿ ಒಂದಾಗಿದ್ದು, ಎತ್ತರದಲ್ಲಿ ಹಾರುವ ಆಕಾಶಬುಟ್ಟಿ ಎಂದರೆ ಗೂಡು ದೀಪದಂತೆಯೇ ಕವಿಯ ಹೆಸರನ್ನೂ ಮೇಲಕ್ಕೆ ಎತ್ತರಿಸಿದ ಕವಿತೆ.

ಹೊಗೆ ತುಂಬಿ
ನಗೆ ತುಂಬಿ
ಬಣ್ನ ಬಣ್ಣದ ನವಿರು ಕಾಗದದ ಬುಟ್ಟಿಯಲಿ
ಜೀವ ತುಂಬಿ

ಎಂದು ಮೊದಲಾಗುವ ಈ ಕವನದ ಪಂಕ್ತಿಗಳು ಅರ್ಥಭಾವಗಳನ್ನು ಎತ್ತರೆತ್ತರಕ್ಕೆ ಒಯ್ಯುತ ಮಾನವನ ಊರ್ಧ್ವಗಾಮೀ ಪ್ರವೃತ್ತಿಗೊಂದು ಬೆಳಕಿನ ಏಣಿಯೂ ಆಗುತ್ತವೆ.

ಹೀಗೆ, ದೀಪಾವಳಿಯೆಂಬ ಪರ್ವವಿಶೇಷದ, ಅದರ ಸೌಂದರ್ಯ ಸ್ವಾರಸ್ಯಗಳ ಮನೋಜ್ಞ ಚಿತ್ರಣಗಳು ಹಲವು ಕವಿತೆಗಳಲ್ಲಿ ಕಂಡುಬಂದರೆ, ಇಮದಿನ ಸಂಕೀರ್ಣ ಜಗತ್ತಿನಲ್ಲಿ, ದುರ್ಭರ ಜೀವನ ವ್ಯವಸ್ಥೆಯಲ್ಲಿ ದೀಪಾವಳಿಯ ಅರ್ಥಾನುಸಂಧಾನವೂ ಹೇಗೆ ವ್ಯತ್ಯಸ್ತವಾಗುತ್ತದೆ ಎಂಬುದನ್ನು ಇನ್ನೂ ಕೆಲವು ಕೃತಿಗಳಲ್ಲಿ ಗುರುತಿಸಬಹುದು. ನಮ್ಮ ‘ನಯದ ಪತಾಕೆ’ ವಿ.ಸೀ.ಯವರು ತಮ್ಮದೊಂದು ಕವನದಲ್ಲಿ ದೀಪಾವಳಿ ಮತ್ತೊಂದು ಮುಖವನ್ನು ಅನಾವರಣಗೊಳಿಸುತ್ತಾರೆ. ‘ದೀಪಾವಳಿ ದೀಪಾವಳೀ’ ಎಂಬ ಕವಿತೆಯಲ್ಲಿ ‘ವರುವರುಷವು ಬಂದಂತೆಯೆ ಈ ವರುಷ ಬಂದಿದೆ, ಯಾವ ಹರುಷ ತಂದಿದೆ’? ಎಂದು ಕೇಳಿ :

ಬಾಳ್ ದೀವಾಳಿಯಾಗಿದೆ
ಬೀದಿ ಮನೆಗೆ, ಕೇರಿ ಗುಡಿಗೆ, ವಿದ್ಯುದಹಂಕಾರ ಕಟ್ಟಿ
ದೀಪಾವಳಿ ತೂಗಿದೆ
ಬಾಳ್ ದಿವಾಳಿಯಾಗಿದೆ

ಎಂದು ಹೇಳಿದ್ದಾರೆ. ಧರ್ಮ ನಷ್ಟವಾಗಿ, ದೌರ್ಜನ್ಯ ದಾರಿದ್ಯ್ರಗಳೆ ಹಲ್ಲು ಮೊರೆಯುತ್ತಿರುವ ಇಂದಿನ ರೂಕ್ಷ ಜಗತ್ತಿನಲ್ಲಿ ಸ್ನಿಗ್ಧ ಭಾವಗಳೂ ಸ್ನೇಹಬಂಧಗಳೂ ಮರೆಯಾಗಿ ಬಿಟ್ಟಿವೆ ಎಂದು ವಿ.ಸೀ. ನಿರಾಶೆಯ ನಿಟ್ಟುಸಿರು ಬಿಡುತ್ತಾರೆ.

ನವ್ಯ ಕಾವ್ಯದ ನವೀನ ಪಥಗಾಮಿಯಾದ ಗೋಪಾಲಕೃಷ್ಣ ಅಡಿಗರ ‘ಚಂಡೆ ಮದ್ದಳೆ’ಯಲ್ಲಿ ದೀಪಾವಳಿಯ ಅರ್ಥ ಪರಂಪರೆ ಮತ್ತೊಮದು ಪರಿಯಲ್ಲಿ ತೆರೆದುಕೊಳ್ಳುತ್ತದೆ. ನವ್ಯಕಾವ್ಯದ ಪ್ರತಿಮಾ ನಿಬಿಡವಾದ ಈ ಕವಿತೆಯಲ್ಲಿ ಕವಿ ಅಡಿಗರು ವ್ಯಾವಹಾರಿಕ ಜಗತ್ತಿನ ನಿರ್ದಯತೆ, ಸಾಂಸಾರಿಕ ಜೀವನದ ಕೃಪಣತೆಗಳಿಂದ ಬದುಕು ಭಾರವಾಗಿ ಹಬ್ಬದ ದಿನದಂದೂ ತಲೆಮೇಲೆ ಕೈಹೊತ್ತು ಕತ್ತಲೆ ಕೋಣೆಯಲ್ಲಿ ಕುಕ್ಕರಿಸುವ ಮನುಷ್ಯ ಪ್ರಾಣಿಯನ್ನು ಕರೆದು ಎಂದು ಹೆಣ್ಣಿಗೆ ಹೋಲಿಸಿ ಹೀಗೆ ಹೇಳುತ್ತಾರೆ: ‘ಹೊರಗೆ ಬಾ, ಬಯಲ ಬೆಳಕಿನಲ್ಲಿ ನಲಿದಾಡುತ್ತಿರುವ ಮಕ್ಕಳನ್ನು ನೋಡು, ಒಂದರೆಗಳಿಗೆ ದುಗುಡು ದುಮ್ಮಾನಗಳನ್ನು ಮುಟೆಗಟ್ಟಿ ಆಚೆಗೆಸೆದು ಬದುಕನ್ನು ಹಗುರ ಮಾಡಿಕೋ’ –

ಹೊರಗೆ ವಿದ್ಯುದ್ದೀಪ ಲಹರಿ ಲಹರಿ….
ಅಂತಃಪುರದಿ ಮಾತ್ರ ಅಂಧಕಾರಾಲಾಪ
ಬೇಡ ಕಣೋ, ಸುಖದ ಕ್ಷಣ ಹಿಡಿದುಹಾಕಿಸು ಕಟ್ಟು
ಕಣ್ಣ ಮುಂದೇ ಅದನು ತೂಗು ಹಾಕು
ಇಂದು ದೀಪಾವಳಿಗೆ ಅಗಲ ಬಾಗಿಲ
…………………………………………….
ಎಲ್ಲು ಹೋಗದು ಕಣೊ ನಿನ್ನ ಕಾಳ ಕೋಣೆ

ಎಂದು ಜೋಲುಮೋರೆಯ ಆ ಸಣಕಲನನ್ನು ಸಂತೈಸುತ್ತಾರೆ, ಹಿಡಿದೆತ್ತಿ ಬೆನ್ನು ತಟ್ಟಿ ನಿಲ್ಲಿಸುತ್ತಾರೆ.

ಕೆ.ಎಸ್.ನ ಅವರು ತಮ್ಮ ‘ಶಿಲಾಲತೆ’ ಎಂಬ ಸಂಗ್ರಹದಲ್ಲಿ ದೀಪಾವಳಿಯನ್ನು ರಾಥ್ರಿ ಹೊತ್ತು ರೈಲು ಹತ್ತಿ, ದೂರದಿಂದ ಪಯಣ ಮಾಡಿ ಮನೆಗೆ ಬರುವ ನಂಟನಂತೆ ಕಂಡು, ಕರೆದು, ಬರಮಾಡಿಕೊಳ್ಳುತ್ತಾರೆ; ‘ಬದುಕೆಂದರೆ ಬರಿಯ ಉಪ್ಪು ಕಡಲಲ್ಲ, ಅಲ್ಲಲ್ಲಿ ಸಕ್ಕರೆಯ ದಿಬ್ಬಗಳೂ ಬೆಳಕಿನ ಕೊತ್ತಳಗಳೂ ಉಂಟು. ಅದರಿಂದ ಬಾಳನ್ನು ಸಿಹಿ ಮಾಡಿಕೊಳ್ಳೋಣ, ಬೆಳಗಿಕೊಳ್ಳೋಣ’ ಎಂದು ಹೇಳುತ್ತಾರೆ –

ಇದು ಬೆಂಕಿ? ಇರಬಹುದು, ನನಗೆ ಬೆಳಕು
ತುಂಬು ನೀಲಿಯ ಮೇಲೆ ಹೆಜ್ಜೆ ಬೆಳಕು
ನೆಲ ಜಲಗಳಾಸೆಗಳೆ ದೀಪಾವಳಿ
ರತ್ನ ಪಕ್ಷಿಯ ಕಣ್ಣ ದೀಪಾವಳಿ

ಎಂದು ತಮ್ಮನ್ನು ತಾವೇ ರಮಿಸಿಕೊಳ್ಳುತ್ತಾರೆ.

ಜಿ.ಎಸ್.ಎಸ್ ಅವರು ತಮ್ಮ ‘ಗೋಡೆ’ಯಲ್ಲಿ ‘ದೀಪಾವಳಿಯ ದಿನದ ಮಳೆ’ಯ ಚಿತ್ತಾರವನ್ನು ಬರೆದಿದ್ದಾರೆ. ಹಬ್ಬದ ದಿನ ಇದ್ದಕಿದ್ದಂತೆ ಮಳೆ ಬಂದು ಸೊಗವನ್ನೆಲ್ಲ ಸೋಸಿಕೊಂಡು ಹೋಗುವ ರೀತಿಯನ್ನು ಒಂದು ಹೆಣ್ಣಿಗೆ ಹೋಲಿಸಿ

ಸಾಕಪ್ಪಾ ಸಾಕು, ಇವಳ ಸಹವಾಸ
ನಿಮಿಷಕ್ಕೊಮ್ಮೆ ಬಟ್ಟೆ ಬದಲಾಯಿಸುವ
ಚಟದವಳಂತೆ, ದಿನದಿಂದ ದಿನಕ್ಕಿ
ಭಾವಗಳ ಬದಲಾವಣೆ ನಂಬಿದರೆ, ಬಂತು ಬವಣಿ
ನಾವು ಹೇಳದ ಹಾಗೆ ಇವಳು ಕೇಳುವಳಲ್ಲ;
ಇವಳು ಹೇಳಿದ ಹಾಗೆ ನಾವು ಕೇಳದೆಯೆ
ದಾರಿಯೇ ಇಲ್ಲ

ಎಂದು ಕೈಚೆಲ್ಲುತ್ತಾರೆ; ಬದುಕುವ ದಾರಿಯನ್ನು ತೋರುತ್ತಾರೆ.

ಅವರದೇ ‘ತೆರೆದ ದಾರಿ’ಯಲ್ಲಿರುವ ‘ದೀಪಾವಳಿ-೧೬೬೩’ ಭಾರತ-ಚೀನಾ ಸಮರದ ಹಿನ್ನೆಲೆಯಲ್ಲಿ ಒಳಗೊಂಡು, ಸಾಮಯಿಕವೆನಿಸಿದರೂ ಭಾರತೀಯರಲ್ಲಿ ರಾಷ್ಟ್ರಭಕ್ತಿಯನ್ನು ಪ್ರಚೋದಿಸಿ, ಧೈರ್ಯೋತ್ಸಾಹಗಳನ್ನು ಉದ್ದೀಪಿಸುವಂತಹದ್ದು:

          ನಮ್ಮ ಜನಗಣಮನದ ಅಧಿನಾಯಕ ಪ್ರಜ್ಞೆ
ಕಣ್ತರೆದು ನಿಂತಲ್ಲಿ ದೀಪಾವಳಿ
ಎಂದಿನಂತಲ್ಲ ಇದು ನಮಗೆ ಈ ಸಲ ಬಂದ
ಹೊಸ ಬೆಳಕಿನೆಚ್ಚರದ ದೀಪಾವಳಿ

ಎಂಬೀ ಸಂದೇಶ ಅಂದಿಗೆ ಮಾತ್ರವಲ್ಲ, ಎಂದೆಂದಿಗೂ ಸಮುಚಿತವೆನಿಸುತ್ತದೆ.

ಭೌತಲೋಕದ ಕಾಲ ವಿಶೇಷವೆನಿಸಿರುವ ಪರ್ವದಿನವೊಮದು ಕವಿವರ್ಯರ ಭಾವಲೋಕಗಳಲ್ಲಿ ವಿಧ ವಿಧವಾದ ಅರ್ಥಚ್ಛಾಯೆಗಳನ್ನು ಹೇಗೆ ಹರಡುತ್ತದೆ ಎಂಬುದಕ್ಕೆ ಮೆಲಿನದು ನಾಲ್ಕೈದು ಉದಾಹರಣೆಗಳು ಅಷ್ಟೆ. ಸರಸ ದೀಪಾವಳಿಯ ಪದ್ಯರೂಪದ ಕಿರನಲೀಲೆಗಳನ್ನು ರಸವಿದೂರ ಗದ್ಯದ ಶಬ್ದಲೇಖನಗಳಲ್ಲಿ ಇಡಿಯಾಗಿ ಹಿಡಿದಿರಿಸುವುದು ಕಡುಕಷ್ಟ; ಅದು ಕೇವಲ ಅನುಭವೈಕ ವೇದ್ಯ. ಹಾಗೆ ಆದಾಗಲೇ ಸುಂದರ ರಸಾನುಭವ ಪರಮ ಸಿದ್ಧಿ.

ಕೆ.ಎಸ್.ನ ಅವರ ಶುಭ ಕಾಮನೆಯೇ ಈ ಹ್ರಸ್ವ ಈ ಲೇಖನಕ್ಕೆ ಸೂಕ್ತ ಉಪಸಂಹಾರ:

ಬೆಳಕಿನಸ್ತಿತ್ವವನೆ
ಅಣಕಿಸುವ ಕತ್ತಲೆಗೆ
ತಕ್ಕ ಉತ್ತರವಲ್ಲಿ ಕೇಳಿ ಬರಲಿ!
ದೀಪಾವಳಿಯ ಜ್ಯೋತಿ
ಅಭಯ ಹಸ್ತವನೆತ್ತಿ
ಎಲ್ಲರಿಗೂ ಎಲ್ಲಕ್ಕೆ ಶುಭ ಕೋರಲಿ!