ಕವಿ ಮುದ್ದಣನ ‘ಶ್ರೀ ರಾಮಾಶ್ವಮೇಧ’ದ ಸರಸ ಸಂವಾದ ಪ್ರಸಂಗಕವೊಂದರಲ್ಲಿ ಈ ಮಾತು ಬರುತ್ತದೆ : ‘ಚಕ್ಕುಲಿ ಗಾರಿಗೆಗಳ್ ಕಾಮದೇವಂಗೆ; ಅವಲುಂ ಪುರಿಗಡಲೆಯುಂ ಮುದ್ದಣಂಗೆ. ಕಬ್ಬು ಕಬ್ಬಿಂಗಗೆ; ತೇಂಗಾಯ್ ಎನಗೈಸೆ…..’ ಒಟ್ಟಿನಲ್ಲಿ ಎಲ್ಲವೂ ಹೇಳುವ ಕವಿ ಮುದ್ದಣನಿಗೇ ಸಲ್ಲುತ್ತವೆ, ವಿನಾ ಕೇಳುವ ಕಿವಿ ಮನೋರಮೆಗೆ ಅಲ್ಲ. ಅದು ಹಾಗಿರಲಿ, ಗಂಟುಡೊಂಕುಗಳ ಕಬ್ಬಿಗೂ ಮಾತಿನ ಮಲ್ಲರಾದ ಕಬ್ಬಿಗರಿಗೂ ಎಲ್ಲಿಯದೋ ನಂಟು, ಯಾವುದೋ ಅಂಟು! ಕಾವ್ಯಾರಾಮದಲ್ಲಿ ಸಾಮಾನ್ಯವಾಗಿ ಕಂಗೊಳಿಸುವಂತಹದ್ದು ಪಾರಿಜಾತ, ಮಂದಾರ, ತಾವರೆ, ಮಲ್ಲಿಗೆ, ಸುರಗಿ, ಸುರಹೊನ್ನೆ ಮೊದಲಾದವುಗಳಾದರೆ, ಅಷ್ಟೇನೂ ಮೃದುಕೋಮಲವಲ್ಲದ, ಸುಂದರವೂ ಅಲ್ಲದ ಕೋಲು ಕೋಲಾದ, ಗಂಟು ಗಂಟಾದ ಕಬ್ಬನ್ನೂ ನಮ್ಮ ಕನ್ನಡ ಕಬ್ಬಿಗರು ಆಗಾಗ ತಮ್ಮ ಚೆಲುಮಾತಿನ ಚಿತ್ತಾರಗಳ ನಡುನಡುವೆ ಹೊಗಿಸಿ, ಅದಕ್ಕೊಂದು ಎಡೆ ಕಾಣಿಸಿ ಸಂತಸ ಪಡುವುದೊಂದು ಅಚ್ಚರಿಯೇ ಸರಿ! ಕಬ್ಬು ಮತ್ತು ಕಬ್ಬಿಗ ಎಂಬ ಪ್ರಾಸ ಸಹಿತ ಪದಪ್ರಯೋಗದ ಔಚಿತ್ಯವನ್ನು ಪರಿಭಾವಿಸಿ : ಸಂಸ್ಕೃತದ ‘ಇಕ್ಷು’ ಮತ್ತು ‘ಕವಿ’ ಎಂಬುದಕ್ಕಿಂತ ಉಚ್ಚಾರ ಸುಲಭವಾದ ಸುದ್ದಗನ್ನಡದ ‘ಕಬ್ಬು’ ಮತ್ತು ‘ಕಬ್ಬಿಗ’ ಎಂಬುದೇ ಕೇಳುವುದಕ್ಕೆ ಇಂಪು! ‘ಕಬ್ಬಿಗ’ ಎಂದರೆ ಕವಿ ಎಂಬುದರ ಕನ್ನಡ ರೂಪ. ಕಾವ್ಯದಿಂದ ಕಬ್ಬ; ಕಬ್ಬ ಮಾಡುವವನೇ ‘ಕಬ್ಬು+ಇಗ’ ಎಂದರೆ ಕವಿ. ಗಾಣಿಗ (ಗಾಣ+ಇಗ), ತೋಟಿಗ (ತೋಟ+ಇಗ) ಎಂಬ ಹಾಗೆ ಈ ಪ್ರಯೋಗ, ಕಬ್ಬ+ಇಗ ಎಂಬುದಕ್ಕೆ ಕಬ್ಬನ್ನು ಬೆಳೆದು ಅದರಿಂದ ಹಾಲು ಹಿಂಡೆವವನು ಎಂದೂ ಅರ್ಥೈಸಿಕೊಂಡರೆ ತಪ್ಪೆಂದೂ ಹೇಳುವಂತಿಲ್ಲ.!

ಕಾವ್ಯಾರಾಮನದಲ್ಲಿ ಕಬ್ಬು ಆಗಾಗ ಕಾಣಿಸಿಕೊಳ್ಳುವುದಿದ್ದರೂ ಗಂಟು ಗಂಟಿನ ಕಬ್ಬಿನ ದಂಟುಗಳನ್ನು ಕುರಿತಾಗಿಯೇ ಇರುವ ವರ್ಣನೆಗಳು ಕಡಿಮೆ. ಆದರೆ ಹೋಲಿಕೆಗಳಾಗಿ ಗಂಟು ಕಬ್ಬೂ ಕಬ್ಬಿನ ಹಾಲೂ ಕಬ್ಬದ ಸಾಳುಗಳಲ್ಲಿ ಅಲ್ಲಲ್ಲಿ ಸೇರಿ ರಸಜಿಹ್ವೆಗೆ ರುಚಿಯೇರಿಸುವುದುಮಟು. ಸಂಸ್ಕೃತದ ಒಂದು ಚಾಟು ಶ್ಲೋಕ ಹೀಗಿದೆ. –

ಭಾರತಂ ಇಕ್ಷುದಂಡಂಚ
ಸಿಂಧುಮಿಂದುಂಚ ವರ್ಣಯ
ಪಾದಮೇಕಂ ಪ್ರದಾಸ್ಯಾಮಿ
ಪ್ರತಿಪರ್ವ ರಸೋದಯಃ

ಇ ಶ್ಲೋಕ ಪ್ರಶ್ನೋತ್ತರ ರೂಪದಲ್ಲಿದೆ. ಒಬ್ಬ ಜಾಣ ಇನ್ನೊಬ್ಬನಿಗೆ ಒಂದು ಸವಾಲು ಹಾಕುತ್ತಾನೆ : ‘ಮಹಾಭಾರತವನ್ನೂ ಕಬ್ಬಿನ (ಇಕ್ಷು) ಜಿಲ್ಲೆಯನ್ನೂ ಬಿತ್ತರದ ಕಡಲನ್ನೂ ಚಂದ್ರಬಿಂಬವನ್ನೂ ವರ್ಣಿಸು’. ಅದಕ್ಕೆ ಇನ್ನೊಬ್ಬ ಜಾಣನ ಉತ್ತರ : ‘ಓಹೋ ಅದಕ್ಕೇನಂತೆ, ನನಗೆ ಒಂದೇ ಪಾದ ಸಾಕು : ಪ್ರತಿಪರ್ವ ರಸೋದಯ’ ಎಂದರೆ ಪರ್ವ ಪರ್ವಗಳ ವ್ಯಾಸಭಾರತ ರಸವತ್ತಾಗಿದ್ದರೆ, ಗಂಟುಗಂಟುಗಳ ನಡುವೆ ಕಬ್ಬಿನ ಕೋಲು ಸವಿಸೂಸುತ್ತದೆ; ಭರತ ಇಳಿತಗಳ ಎಡೆಯಲ್ಲಿ ಹೆಗ್ಗಡಲು ಕಂಗೊಳಿಸಿದರೆ, ಪಕ್ಷಗಳ ಅಂತರದಲ್ಲಿ ಚಂದ್ರಬಾಬು ಚಂದ್ರಬಿಂಬ ಸೊಗಯಿಸುತ್ತದೆ ಎಂಬುದು ಶ್ಲೋಕದ ತಾತ್ಪರ್ಯ. ಸುಂದರ ವಸ್ತುಗಳಲ್ಲೂ, ಮಧುರ ದ್ರವ್ಯಗಳಲ್ಲೂ ಕಬ್ಬಿನ ಲೆಕ್ಕವೂ ಸಲ್ಲುತ್ತದೆ ಎಂಬುದು ಮುಖ್ಯ ವಿಷಯ.

ಆಸ್ತಿಕ ಜನ ಭಕ್ತಿ ಶ್ರದ್ಧೆಗಳಿಂದ ಪಠಿಸುವ ‘ಲಲಿತಾ ಸಹಸ್ರನಾಮ’ದ ಆರಂಭ ಶ್ಲೋಕಗಳಲ್ಲಿ ಒಂದು ಹೀಗಿದೆ –

ರಾಗ ಸ್ವರೂಪ ಪಾಶಾಢ್ಯಾಃ
ಕ್ರೋಧಾಕಾರಾಂಕುಶೋಜ್ವಲಾ
ಮನೋರೂಪೇಕ್ಷುಕೋದಂಡಾ
ಪಂಚ ತನ್ಮಾತ್ರ ಸಾಯಕಾ

ಜಗನ್ಮಾತೆ ಲಲಿತಾ ದೇವಿ ಮನುಷ್ಯ ಸಾಮಾನ್ಯರನ್ನು ಹರಿದು ಮುಕ್ಕುವ ರಾಗ, ರೋಷ, ಮನಸ್ಸು, ಹಾಗೂ ರೂಪ, ರಸ, ಗಂಧಾದಿ ಪಂಚಗುಣಗಳನ್ನು ಪಾಶ, ಅಂಕುಶ, ಚಾಪ ಮತ್ತು ಬಾಣಗಳಾಗಿ ಹಿಡಿದು ನಿಂತಿದ್ದಾಳೆ, ಅವುಗಳನ್ನು ನಿಗ್ರಹಿಸುತ್ತಾಳೆ ಎಂಬುದು ಶ್ಲೋಕದ ಅರ್ಥ. ಶ್ಲೋಕದಲ್ಲಿ ಮನೋರೂಪವನ್ನು ಇಕ್ಷುಕೋದಂಡಕ್ಕೆ ಹೋಲಿಸಲಾಗಿದೆ. ಸಿಟ್ಟು ಸೆಡವುಗಳಿಗೆ ಹೇಗೋ ಹಾಗೆ ಒಲುಮೆ ಬಲುಮೆಗಳಿಗೂ ಮನಸ್ಸೇ ಮುಖ್ಯ, ಮನಸ್ಸೇ ಮೂಲ. ಕಬ್ಬಿನ ಗಣೆಯಂತೆಯೇ ಅದರ ಬಾಗು-ಬಳುಕು; ಗಂಟು-ನುಣುಪು. ಶ್ಲೋಕದಲ್ಲಿರುವ ರೂಪಾಕಾಲಂಕಾರದ ಔಚಿತ್ಯ ಸ್ವಾರಸ್ಯಗಳನ್ನು ಪರಿಭಾವಿಸಿದಂತೆಲ್ಲ ಅವು ಇಕ್ಷುರಸದಂತೆಯೇ ಮನಸ್ಸಿಗೆ ಇಳಿದು ಪೂಜ್ಯಭಾವ ಪ್ರಚೋದಕವೆನಿಸುತ್ತವೆ.

ಕಬ್ಬಿನಲ್ಲಿ ಬಿಳಿ ಅಥವಾ ನಾಮದ ಕಬ್ಬು ಎಂಬ ಪ್ರಭೇದವಿದೆ. ಸಂಸ್ಕೃತದಲ್ಲಿ ಅದನ್ನು ‘ಪುಂಡ್ರೇಕ್ಷು’ ಎನ್ನುತ್ತಾರೆ. ‘ಪುಂಡ್ರ’ ಎಂದರೆ ನಾಮ ಎಂಬ ಅರ್ಥ (ಅನೇಕ ಆಚಾರ ನಿಷ್ಠರ ಲಲಾಟಫಲಕಗಳಲ್ಲಿ ತ್ರಿಪುಂಡ್ರ ಊರ್ಧ್ವ ಪುಂಡ್ರಗಳು ಎದ್ದು ಕಾಣುತ್ತವೆ). ಅಂತಹ ನಾಮದ ಕಬ್ಬನ್ನು ತನ್ನ ಕೈಯಲ್ಲಿ ಕೈದುವಾಗಿ ಹಿಡಿದವಳು ಶ್ಯಾಮಲಾ ದೇವಿ. ಸುಪ್ರಸಿದ್ಧವಾದ ಶ್ಯಾಮಲಾದಂಡಕದಲ್ಲಿ, ‘ಪುಂಡ್ರೇಕ್ಷು ಪಾಶಾಂಕುಶ ಪುಷ್ಪಬಾಣಹಸ್ತೇ’ ಎಂದು ಆಕೆ ವರ್ಣಿತೆಯಾಗಿದ್ದಾಳೆ. ದೇವೀ ಲಲಿತೆಯಾಗಲಿ, ಶ್ಯಾಮಲೆಯಾಗಲಿ ‘ಇಕ್ಷುಕೋದಂಡಧಾರಿಣಿ’ ಎಂಬುದು ಭಕ್ತನಜರ ಕಲ್ಪನೆ. ಆದರೆ ರಸಿಕ ಕವಿಪುಂಗವರಿಗೆ ಇಕ್ಷುದಂಡವೆಂಬುದು ಮನಸಿಜ ಮನ್ಮಥನ ಆಯುಧವಿಶೇಷ; ಪ್ರೇಮದ ಪ್ರತೀಕ. ಮನ್ಮಥನನ್ನು ಇಕ್ಷುಚಾಪ, ಇಕ್ಷುಧನ್ವ, ಇಕ್ಷು ಕೋದಂಡಧಾರಿ ಅಥವಾ ಪಾಣಿ ಎಂದು ಬಗೆಬಗೆಯಾಗಿ ಕರೆದು ಎಷ್ಟೆಷ್ಟು ಬರೆದರೂ, ಬಣ್ಣಿಸಿದರೂ ಅವರಿಗೆ ತೃಪ್ತಿಯಿಲ್ಲ. ಮನ್ಮಥ ಇಕ್ಷುಚಾಪನಾದರೆ, ಇಕ್ಷುದಂಡಕ್ಕೆ ಸ್ಮರಚಾಪವೆಂಬ ಅತಿಶಯತೆ. ಮನ್ಮಥ ಹೇಗೆ ಕಬ್ಬಿನ ಬಿಲ್ಗಾರನೋ ಹಾಗೆಯೇ ಪೂಗಣೆಯ ಪುಷ್ಪಶರನೂ ಆಗಿದ್ದಾನೆ. ಕಬ್ಬಿನ ಬಿಲ್ಲಿಗೆ ಹೂಬಾಣಗಳನ್ನು ಹೂಡಿ, ಹದಿಹರೆಯ ಕುದಿಹರೆಯ, ಮುದಿಹರೆಯ ಎಂಬ ಅಂಕೆ ಅಂತರಗಳಿಲ್ಲದೆ, ಹೆಣ್ಣು ಗಂಡುಗಳ ಮೇಲೆ ಅವುಗಳನ್ನು ಎಸೆಎಸೆದು ಅವರನ್ನು ನುಗ್ಗುನುರಿ ಮಾಡಿ ಗಹಗಹಿಸಿ ನಗುವುದೇ ಮನೋಜ ಕುಮಾರನ ವಿನೋದವಿಕ್ರಮ! ತಾನು ಅಜೇಯನೆಂಬ ಅದಟಿನಿಂದ ತಪೋಮಗ್ನ ಪರಮೇಶ್ವರನನ್ನು ಕೆಣಕಿದಾಗ ಮದನನ ಮದಭಂಗವಾದದ್ದೂ ತ್ರಿಪುರ ಹರನ ಹಣೆಗಣ್ಣಿನ ಉರಿಯಲ್ಲಿ ಆತ ಸುಟ್ಟುಬೂದಿಯಾದದ್ದೂ, ರತಿದೇವಿಯ ಕಂಬನಿಯಲ್ಲಿ ಕರಗಿದ ಪರಶಿವನ ಅನುಗ್ರಹದಿಂದಾಗಿ ಭಸ್ಮರಾಶಿಯಿಂದ ಅನಂಗನಾಗಿ ಮತ್ತೆ ಎದ್ದು ಬಂದದ್ದೂ ಬೇರೆಯೇ ಕಥೆ.

ನಮ್ಮ ಕನ್ನಡ ಕವಿಗಳು ಸಂಸ್ಕೃತ ಕವಿಗಳನ್ನು ಬಿಟ್ಟಿಲ್ಲ. ಪಂಪನಿಂದ ಕುವೆಂಪುವರೆಗಿನ ಅಥವಾ ಅವರಿಗೂ ಮುಂದಿನ ಕವಿ ಸಾಹಿತಿಗಳ ಕಾವ್ಯಪ್ರಬಂಧಗಳಲ್ಲಿ ಕಬ್ಬು ಅಲ್ಲಲ್ಲಿ ಎದ್ದುನಿಂತು ಗರಿ ಹರಡಿ ತೂಗಿ ತೊನೆಯುವುದನ್ನು ಕಾಣುತ್ತೇವೆ. ಪಂಪನ ಆದಿಪುರಾಣದಲ್ಲಿ ‘ಧನುಕಾಮಂಗಿಕ್ಷುದಂಡಂ’ ಎಂದು ಮೊದಲಾಗುವ ವರ್ಣನೆಯಿದೆ. ಜನ್ನ ಕವಿಯ ‘ಯಶೋಧರ ಚರಿತೆ’ಯಲ್ಲಿ ಕೈಹಿಡಿದ ನಾಡೊಡೆಯ, ಚೆಲುವಿನಗನಿ ಯಶೋಶರನನ್ನು ಬಿಟ್ಟು, ಎಂಟು ಬಾಗುಗಳ ತೊನ್ನಿಗ, ಅರಮನೆಯ ಬದಗ ಅಷ್ಟವಂಕನನ್ನು ಒಲಿಯುತ್ತಾಳೆ ಅಮೃತಮತಿ. ಕಾಮಾಂಧೆ ಅಮೃತಮತಿ ತನ್ನ ವಿಕಾರ ಪ್ರಣಯವನ್ನು ಸಮರ್ಥಿಸುವ ರೀತಿ ಹೇಗಿದೆ ಕೇಳಿ:

ಕರಿದಾದೊಡೆ ಕತ್ತುರಿಯಂ
ಮುರುಡಾದೊಡೆ ಮಲಯಜಂಗಳಂ ಕೊಂಕಿದೊಡೇಂ |
ಸ್ಮರಚಾಪಮನಿಳಿಯಕಯ್ವರೆ
ಮರುಳೇ ಪೊಲ್ಲಮೆಯೆ ಲೇಸು ನಲ್ಲರ ಮೆಯ್ಯೊಳ್ ||

ಈ ಪದ್ಯದಲ್ಲಿ ನಮಗೆ ಪ್ರಕೃತವಾದದ್ದು ‘ಸ್ಮರಚಾಪಮನಿಳಿಕಯ್ವರೆ’ ಎಂಬ ಪಂಕ್ತಿ. ಸ್ಮರಚಾಪವೆಂದರೆ ಕಬ್ಬುತಾನೇ? ಕಸ್ತೂರಿ ಕಪ್ಪು, ಗಂಧ ಒರಟು, ಕಬ್ಬು ಡೊಂಕು. ಆದರೇನಂತೆ? ಈ ಮೂರನ್ನೂ ‘ಒಲ್ಲೆ’ ಎನ್ನುವರು ಯಾರೂ ಇಲ್ಲ!

ಇನ್ನೊಬ್ಬ ಕಬ್ಬಿಗ, ಅಚ್ಚಗನ್ನಡದಲ್ಲೇ ಕಬ್ಬ ಹೊಸೆಯುತ್ತೇನೆಂದು ಪಂಥ ತೊಟ್ಟು ಹೊರಟ ಅಂಡಯ್ಯ, ತನ್ನ ‘ಕಬ್ಬಿಗರ ಕಾವ್ಯ’ದಲ್ಲಿ ಕರ್ವುವಿಲ್ಲನಾದ ಕಾಮನನ್ನೇ ನಾಯಕನನ್ನಾಗಿ ಮಾಡಿ, ಆತ ಫಾಲಾಕ್ಷನಿಂದ ಸೋತದ್ದಲ್ಲ. ಆತನನ್ನೇ ತನ್ನ ಕಬ್ಬಿನ ಬಿಲ್ಲಿನಿಂದ ಸದೆಬಡಿದ, ಗೆದ್ದ ಎಂಬಂತೆ ಚಿತ್ರಿಸಿದ್ದಾನೆ.

ಕನ್ನಡದ ನವಕವಿಗಳಲ್ಲೂ ಕಬ್ಬಿನ ಪ್ರಸಕ್ತಿಯಿದೆ. ವರಕವಿ ಬೇಂದ್ರೆಯವರು ‘ಗರಿ’ ಗೆದರಿ ಹಾರತೊಡಗಿದ ಹೊಸದರಲ್ಲೇ ಹಾಡಿದ್ದರು : :”ಕಬ್ಬಿನಾ ಗಣೆ ಡೊಂಕು ಅದರ ಹಾಲದು ಡೊಂಕೆ ರಸಿಕಾಪೇಳೊ”. ಸುಗಮ ಸಂಗೀತಗಾರರು ಸುಶ್ರಾವ್ಯವಾಗಿ ಹಾಡುವ ಕವಿತೆಗಲ್ಲಿ ಈ ಬೇಂದ್ರೆಗೀತವೂ ಸೇರಿಕೊಂಕಡಿದೆ. ರಸಋಷಿ ಕುವೆಂಪು ಅವರು ಹೊಸಗನ್ನಡದ ಹಿರಿಯರಲ್ಲಿ ಒಬ್ಬರಾದ ಒಂಜೆಯವರನ್ನು “ಕಚ್ಚಿದರೆ ಕಬ್ಬು! ಹಿಂಡಿದರೆ ಜೇನು” ಎಂದು ವರ್ಣಿಸಿ ಅವರ ಸ್ನೇಹಾರ್ದ ಚಿತ್ರವೊಂದನ್ನು ಬಿಡಿಸಿ ಓದುಗರ ಬಗೆಗಣ್ಣಿನ ಎದುರಲ್ಲಿ ನಿಲ್ಲಿಸಿದ್ದಾರೆ. ಕುವೆಂಪು ಅವರ ಒಂದು ಕವನ ಸಂಚಯದ ಹೆಸರೇ ‘ಇಕ್ಷುಗಂಗೋತ್ರಿ’. ಹೊತ್ತಗೆಯ ಹೂರಣ ಏನೇ ಇರಲಿ, ಅದರ ತಲೆಕಟ್ಟು ಕವಿಯ ಇಕ್ಷುಪ್ರೀತಿಯನ್ನು ಸೂಚಿಸುತ್ತದೆ.

ನಗರವಾಸಿ ಪ್ರೌಢ ಕವಿಗಳು ಮಾತ್ರವಲ್ಲ, ಹಳ್ಳಿಯೂರಿನ ಅಜ್ಞಾತ ಆಶುಕವಿಗಳಿಗೂ ಕಬ್ಬಿನ ಪ್ರೀತಿಕಡಿಮೆಯೇನಲ್ಲ. ಹಾಗೆ ನೋಡಿದರೆ ಕಬ್ಬನ್ನು ಬೆಳೆಯುವವರೇ ಹಳ್ಳಿಗರು. ಹಸುಗೂಸಿನ ಬೆನ್ನು ತಟ್ಟುತ್ತಾ ಹಳ್ಳಿಯ ತಾಯಿ ಹಾಡುವುದು ಹೀಗಿದೆ : “ಚಂದಪ್ಪ ಚಾಮೀ ಬನ್ನೀ ಬನ್ನಿ | ಕಬ್ಬಿನ ಕೋಲನ್ನು ಹಿಡಿಯುತ ಬನ್ನಿ” ಬಾನಿನಗಲದಲ್ಲಿ ನಡೆದಾಡುವ ಚಂದಮಾಮನಿಗೆ ಕಬ್ಬನ್ನು ಕೈಗೂಡಿಸುವ ಚಾತುರ್ಯ ಎಷ್ಟು ಸೊಗಸಾಗಿದೆ ! ಕೃಷಿ ಕರ್ಮಗಳಿಗೆ ಮಳೆ ನೀರನ್ನೇ ಹೊಂದಿಕೊಂಡಿರುವ ಹಳ್ಳಿ ಮಂದಿ ಮಾಡುವ ಪ್ರಾರ್ಥನೆ ಇದು –

ಹುಯ್ಯೋ ಹುಯ್ಯೋ ಮಳೆರಾಯ
ಕಬ್ಬಿನ ತೋಟಕ್ಕೆ ನೀರಿಲ್ಲ

ರೈತನಿಗೆ ಜೋಳ, ಬತ್ತ, ರಾಗಿಯ ಹೊಲಗಳಿಗಿಂತ ಕಬ್ಬಿನ ತೋಟವೇ ಮಿಗಿಲಾಗಿ ತೋರುತ್ತದೆ.

ನಮ್ಮ ಪೂಜಾವಿಧಿಗಳಲ್ಲೂ ಕಬ್ಬು ಸೇರಿಕೊಂಡಿದೆ. ಪೂಜಾ ಮಂಟಪಗಳನ್ನು ಕಟ್ಟುವಾಗ ನಾಲ್ಕು ಬದಿಗಳಲ್ಲಿ ಸೋಗೆ ಸಹಿತವಾದ ಕಬ್ಬುಗಳನ್ನು ನಿಲ್ಲಿಸುವುದು ಸಂಪ್ರದಾಯ. ಜನ ತಮ್ಮ ಆರಾಧ್ಯ ಮೂರ್ತಿಗಳಿಗೆ ಸಮರ್ಪಿಸುವ ನೈವೇದ್ಯಗಳಲ್ಲಿ ಅಷ್ಟದ್ರವ್ಯಗಳಿರಬೇಕು. ಅಷ್ಟದ್ರವ್ಯಗಳ್ಲಿ ಕಬ್ಬೂ ಸೇರಿಕೊಳ್ಳುತ್ತದೆ. ಗಜರಾಜನಿಗೆ ಕಬ್ಬಿನ ಗರಿ ಇಷ್ಟವಾದರೆ ಗಜಮುಖನಿಗೆ ಕಬ್ಬು ಬೇಕೇ ಬೇಕು. ಗಣೇಶ ಚತುರ್ಥಿಯ ಪಂಚಕಜ್ಜಾಯದಲ್ಲಿ ಕಬ್ಬಿನ ಚೂರುಗಳು ಇದ್ದೇ ಇರುತ್ತವೆ. ಅಷ್ಟೇ ಅಲ್ಲ, ಕೆಲವು ಕಡೆ ಚೌತಿ ಗಣಪನ ನಾಲ್ಕು ಸುತ್ತಲೂ ಸಿಪ್ಪೆ ತೆಗೆದ ಕಬ್ಬನ್ನು ಇರಿಸಿ ‘ಕದಿಕೆ’ ಕಟ್ಟುವ ರೂಢಿಯೂ ಇದೆ. ಕವಿ ಪಾರ್ತಿಸುಬ್ಬನದು ಎನ್ನಲಾಗುವ ‘ಯಕ್ಷಗಾನ ಸಭಾ ಲಕ್ಷಣ’ದಲ್ಲಿ ಒಂದು ಸುಪ್ರಸಿದ್ಧ ಗಣಪತಿ ಸ್ತುತಿ ಹೀಗಿದೆ-

ಗಜಮುಖದವಗೆ ಗಣಪಗೆ
ಒಳ್ಳಿತಾದವಲು ತೆಂಗಿನ ಕಾಯಿ ಕಡಲೆಯು
ಎಳ್ಳುಂಡೋರಿಗೆ ಕಬ್ಬು ಮೆಲುವವಗೆ….
ಆರತಿಯೆತ್ತಿರೇ….

ಅಷ್ಟ ಕಾಮ ಪರಮೇಶ್ವರನನ್ನು ಸುಟ್ಟವನು; ಮಗ ಮದನನನ್ನು ಸುಡುದಿದ್ದರೂ ಗೆದ್ದವನು. ಪುರಂದರ ದಾಸರು ಹೇಳುವುದನ್ನು ಕೇಳಿ –

ಕುಕ್ಷಿ ಮಹಾ ಲಂಬೋದರನೇ ಇಕ್ಷುಚಾಪನ ಗೆಲಿದನೇ
ಕಾಮನಿಗೆ ಇಕ್ಷುಚಾಪ ಎಂಬ ವಿಶೇಷಣ ಗಣಪತಿ ಕಾಮ ವಿದೂರ,
ಬ್ರಹ್ಮಚಾರಿ

ಕಲ್ಪನಾ ಪ್ರಧಾನವಾದ ಕಾವ್ಯ ಪುರಾಣಗಳಲ್ಲಿರುವ ಕಬ್ಬಿನ ವರ್ಣನೆ ಒತ್ತಟ್ಟಿಗಿರಲಿ. ನೈಜವಾದ ಪ್ರಕೃತಿ ವಿಜ್ಞಾನದಲ್ಲೂ ಅದಕ್ಕೊಂದು ವೈಶಿಷ್ಟ್ಯವಿದೆ. ಸಸ್ಯಶಾಸ್ತ್ರೀಯವಾಗಿ ‘ಪೊಯೇಸಿಯೇ’ (Poaceae) ಎಂಬ ಕುಟುಂಬಕ್ಕೆ ಕಬ್ಬು ಸೇರುತ್ತದೆ. ಸಸ್ಯಜಗತ್ತಿನಲ್ಲಿ ಈ ಕುಟುಂಬವೇ ಅತಿದೊಡ್ಡದು. ಶಕ್ತಿಮೂಲವಾಗಿರುವ ಶರ್ಕರಪಿಷ್ಟವನ್ನು ಕಬ್ಬು ಗರಿಷ್ಠ ಪ್ರಮಾಣದಲ್ಲಿ ಉತ್ಪಾದಿಸುತ್ತದೆ. ಕಬ್ಬಿನರಸದಲ್ಲಿ ‘ಗ್ಲುಕೋಸ್’ ಅಂಶ ಧಾರಾಳವಾಗಿರುವುದರಿಂದ ಅದು ಶಕ್ತಿವರ್ಧಕ. ಆಯುರ್ವೇದೀಯವಾಗಿಯೂ ಕಬ್ಬು ಉಪಯುಕ್ತ, ಇಕ್ಷುರಸ ಪಿತ್ತಶಾಮಕ; ‘ಮೂತ್ರಲ’ ಎಂದರೆ, ಮೂತ್ರವಿಸರ್ಜನೆಗೆ ಸಹಕಾರಿ.

ಪ್ರಾಚೀನ ಭಾರತ ವರ್ಷದ ಚಪ್ಪನ್ನ ದೇಶಗಳಲ್ಲಿ ಒಂದಾಗಿದ್ದದ್ದು ಗೌಡದೇಶ. ಈಗಿನ ಬಂಗಾಳ ಮತ್ತು ಬಿಹಾರಗಳಲ್ಲಿ ಅದು ವ್ಯಾಪಿಸಿತ್ತು. ‘ಗುಡ’ ಎಂಬ ಶಬ್ದದ ಭಾವನಾಮ ಗೌಡ. ಗುಡ ಎಂದರೆ ಬೆಲ್ಲ. ಬೆಲ್ಲಕ್ಕೆ ಬೇಕಾದದ್ದು ಕಬ್ಬು. ಒಂದು ಕಾಲದಲ್ಲಿ ಕಬ್ಬಿನ ಬೆಳೆ ಹುಲುಸಾಗಿದ್ದುದರಿಂದಲೇ ಆ ಭೂಭಾಗ ‘ಗೌಡದೇಶ’ವೆಂದು ಪ್ರಸಿದ್ಧವಾಯಿತು. ಗೌಡದೇಶವನ್ನು ಪ್ರೌಂಡ್ರಕ ದೇಶವೆಂದೂ ಕರೆಯುತ್ತಿದ್ದರು. ಎಂದರೆ ನಾಮದ ಕಬ್ಬು ಹೆಚ್ಚಾಗಿದ್ದ ಪ್ರದೇಶ. ವಾಸುದೇವ ಕೃಷ್ಣನ ಪ್ರತಿಸ್ಪರ್ಧಿಯಾದ ನಕಲಿ ವಾಸುದೇವನೊಬ್ಬನಿದ್ದ – ಪೌಂಡ್ರಕ ವಾಸುದೇವ. ಅವನು, ಗೌಡ ಅಥವಾ ಪೌಂಡ್ರಕ ದೇಶದವನೇ ಇರಬೇಕು!

ನೋಡಿ, ಎಲ್ಲಿಂದ ಎಲ್ಲಿಗೆ ಬಂತು ಕಬ್ಬಿನ ಕತೆ!. ಅಗೆದು ಬಗೆದು ನೋಡಿದರೆ ಇನ್ನೂ ಇದೆ, ಇಕ್ಷುಕಾಂಡ. ಅದು ನಿಜವಾಗಿಯೂ ಪ್ರತಿಪರ್ವರಸೋದಯ!