ಪಂಜೆ ಮಂಗೇಶರಾಯರು (೧೮೭೪-೧೯೩೭) ಮತ್ತು ಪಡಕೋಣೆ ರಮಾನಂದಾ ರಾಯರು (೧೮೯೬-೧೯೮೩) ಇಬ್ಬರೂ ದಕ್ಷಿಣ ಕನ್ನಡದವರು; ಚಿತ್ರಾಪೂರ ಸಾರಸ್ವತರು. ಸಾರಸ್ವತ ಎಂದರೆ ಸರಸ್ವತೀ ನದೀತೀರದಿಂದ ಬಂದವರು ಎಂಬುದು ಒಂದು ಅರ್ಥ; ವಿದ್ಯಾ ವಿನಯ ಸಂಪನ್ನ ಎಂಬುದು ಮತ್ತೊಂದು ಅರ್ಥ. ಇಬ್ಬರೂ ವೃತ್ತಿಯಲ್ಲಿ ಅಧ್ಯಾಪಕರು: ಪಂಜೆಯವರು ಕಾಲೇಜಿನಿಂದ ಹೈಸ್ಕೂಲಿಗೆ ಬಂದವರು, ಶಾಲಾ ಪರೀಕ್ಷಕರಾಗಿಯೂ ಇದ್ದವರು. ಪಡಕೋಣೆಯವರು ಕಾಲೇಜಿನಲ್ಲೇ ಅಧ್ಯಾಪಕರಾಗಿ ಅಲ್ಲೇ ನಿವೃತ್ತರಾದವರು. ಇಬ್ಬರೂ ಸರಸ ಸಾಹಿತಿಗಳು ‘ಕಿರು-ಗವನದ ಕಿರುಗತೆಗಳ ಕೊಂಡಾಟದ ಪಂಜೆಯವರು’ ಒಬ್ಬರಾದರೆ, ‘ಪರಮಾನಂದ ಕರವಾದ ಹಾಸ್ಯದ ಪ. ರಮಾನಂದರಾಯರು’ ಮತ್ತೊಬ್ಬರು!

ಪಂಜೆ ಮಂಗೇಶರಾಯರು ಶಿಶು ಸಾಹಿತ್ಯಕಾರರೆಂದೇ ಪ್ರಸಿದ್ದರಾದವರು; ಆ ಕ್ಷೇತ್ರದಲ್ಲಿ ಆವರು ಇಂದಿಗೂ ಪ್ರಾತಃಸ್ಮರಣೀಯರೂ ಅದ್ವಿತೀಯರೂ ಆಗಿರುವವರು ಆದರೆ ಸಾಹಿತ್ಯದ ಇತರ ಕ್ಷೇತ್ರಗಳಲ್ಲೂ ಅವರು ಉಳುಮೆ ಮಾಡಿದ್ದಾರೆ, ಒಳ್ಳೆಯ ಬೆಳೆ ತೆಗೆದಿದ್ದಾರೆ. ತುಳು ‘ಪಾಡ್ದೊನೆ’ಯನ್ನು ಆಧರಿಸಿರುವ ಅವರ ‘ಕೋಟಿ-ಚೆನ್ನಯ’ ಒಂದು ಸತ್ವಪೂರ್ಣವಾದ ಗದ್ಯ ಕೃತಿ. ಪ್ರಥುಲಾ, ಶೈಲಿನಿ ಮುಂತಾದ ಕಿರುಕಾದಂಬರಿಗಳೂ ವಾಚನೀಯವಾಗಿವೆ. ಅವರು ಸ್ಥಳನಾಮ ಸಂಶೋಧನೆ ಮಾಡಿದ್ದಾರೆ; ಕಾವ್ಯ-ಪಾತ್ರ ಪರಿಶೀಲನೆ ನಡೆಯಿಸಿದ್ದಾರೆ. ಪ್ರಾಚೀನ ಶಿಲಾಶಾಸನಗಳ ಮೇಲೆ ಕಣ್ಣು ಹಾಯಿಸಿ, ಕೈಯಾಡಿಸಿದ್ದಾರೆ. ಕನ್ನಡದ ಸಣ್ಣ ಕತೆಗಾರರಲ್ಲಿ ಪಂಜೆಯವರೇ ಮೊದಲಿಗರೆಂಬ ಅಗ್ಗಳಿಕೆಯೂ ಅವರಿಗೆ ಸಂದಿದೆ. ಅವುಗಳೊಂದಿಗೆ ಲಘು ಪ್ರಬಂಧ (Personal essays) ವೆಂದು ಈಗ ಕರೆಯಲಾಗುವ ಕೆಲವು ರಚನೆಗಳನ್ನೂ ಪಂಜೆಯವರು ಮಾಡಿದ್ದಾರೆ. ಇಂತಹ ರಚನೆಗಳಲ್ಲಿ ಆತ್ಮಕಥನ ಅಥವಾ ಸ್ವಕೀಯವಾದ ಅಂಶಗಳು ಧಾರಾಳವಾಗಿಯೆ ಇವೆ. ಅವರ ಕಥೆಗಳು ಎನ್ನಲಾಗುವ ಕೃತಿಗಳೂ ‘ಚಿತ್ರ’ ಗಳಂತೆ (ಉದಾ: ಗೋರೂರು ರಾಮಸ್ವಾಮಿ ಅಯ್ಯಂಗಾರರ ‘ಶಾಲು ಶಾಬಿ’ ಎ.ಎನ್. ಮೂರ್ತಿಯವರ ‘ವ್ಯಾಘ್ರ ಗೀತೆ’, ಕುವೆಂಪು ಅವರ ‘ಬಂದನಾ ಹುಲಿರಾಯನು’ ಮುಂತಾದವುಗಳಂತೆ) ಭಾಸವಾಗುತ್ತವೆ. ಆದುದರಿಂದ ಪಂಜೆಯವರ ಕೃತಿಗಳಲ್ಲಿ ಶುದ್ಧಾಂಗವಾದ ಕತೆಗಳು ಎಷ್ಟು, ಹರಟೆಗಳು ಯಾವುವು ಎಂಬುದನ್ನು ‘ಸರ್ವೆ’ ಮಾಡಿ ‘ಗಡಿಕಲ್ಲು’ ಹಾಕುವುದು ಕಷ್ಟವೇ ಸರಿ. ಹೀಗಾಗಲು ಕಾರಣವೂ ಇದೆ: ಪಂಜೆಯವರು ಬರೆಯುತ್ತಿದ್ದ ಕಾಲದಲ್ಲಿ,[1] ಸಾಹಿತ್ಯವನ್ನು ಒಂದು ಮೊತ್ತವಾಗಿ ನೋಡುವುದು ಸಾಮಾನ್ಯವಾಗಿತ್ತಲ್ಲದೆ ಕತೆ, ಕಾದಂಬರಿ, ಕವಿತೆ, ಪ್ರಬಂಧ ಎಂದು ಮೊದಲಾಗಿ ಪೃಥಕ್ಕರಿಸಿ ನೋಡುವ ವರ್ಗ ದೃಷ್ಟಿ ಆಗ ಅಷ್ಟು ಬೆಳೆದಿರಲಿಲ್ಲ. ‘ಸಕಲ ಲಕ್ಷಣಕಾಗಿ ಬಿರುಸು ಮಾಡಿದರೆ ಪುಸ್ತಕದ ಬದನೆಕಾಯಹುದು’ ಎಂಬ ಕವಿ ರತ್ನಾಕರ ವಾಣಿಗೆ ಆಗ ಬಹುಜನ ಸಮ್ಮತಿಯಿತ್ತು. ಆದುದರಿಂದ ‘ಪ್ರಬಂಧ’ವೆಂಬ ಪದಕ್ಕಿರುವ ವಿಸ್ತಾರವಾದ ಅರ್ಥವನ್ನು ಅನುಲಕ್ಷಿಸಿ, ಪಂಜೆಯವರ ಪ್ರಬಂಧಗಳನ್ನು ಕುರಿತು ಕೆಲವು ಮಾತುಗಳನ್ನು ಈ ಮುಂದೆ ಬರೆಯಲಾಗಿದೆ.

ಕನ್ನಡದ ಮೊದಲ ಸಣ್ಣ ಕತೆ ಎನ್ನಲಾಗುವ ‘ಭಾರತ ಶ್ರವಣ’ದಿಂದ ತೊಡಗಿ ಅದೇ ವರ್ಗಕ್ಕೆ ಸೇರಬಹುದಾದ ‘ನನ್ನ ಹೆಂಡತಿ’ಯವರೆಗಿನ ಎಂಟು ಚಿತ್ರಗಳನ್ನು (ಅಥವಾ ಕಥಾ ಪ್ರಬಂಧಗಳನ್ನು) ೧೯೦೦-೧೯೦೩ರ ಸಾಲಿನಲ್ಲಿ. ‘ಸುವಾಸಿನಿ’ಯೆಂಬ ಪತ್ರಿಕೆಯಲ್ಲಿ ಪಂಜೆಯವರು ಪ್ರಕಟಿಸಿದರು. ಯಾವುದಾದರೊಂದು ವಿಶಿಷ್ಟ ಘಟನೆಗೆ ಹಾಸ್ಯದ ಲೇಪವನ್ನು ಹಾಕಿ ಹೃದ್ಯವಾಗಿ ನಿರೂಪಿಸಬಲ್ಲ ಶಕ್ತಿ ಪಂಜೆಯವರಿಗಿತ್ತು. ಆದರೆ ಸಣ್ಣ ಕತೆಯ ನಿರ್ದಿಷ್ಟ ಲಕ್ಷಣಗಳನ್ನು ಪಂಜೆಯವರ ರಚನೆಗಳಿಗೆ ಅನ್ವಯಿಸಲಾಗದು. ಹೊಸಗನ್ನಡ ಸಾಹಿತ್ಯವು ಕಣ್ದೆರೆಯುತ್ತಿದ್ದ ಕಾಲದಲ್ಲಿ ಪಂಜೆಯವರು ಅವುಗಳನ್ನು ಬರೆದರೆಂಬುದನ್ನೂ ಮರೆಯಬಾರದು.

ಕನ್ನಡ ಕವಿಕಾವ್ಯ ವಿಷಯಕವಾದ ಏಳು ವಿಮರ್ಶನ ಪ್ರಬಂಧಗಳನ್ನು ಪಂಜೆಯವರು ಬರೆದಿದ್ದಾರೆ. ಅವುಗಳಲ್ಲಿ ನಾಲ್ಕು ಭಾಷಣಗಳು, ಮೂರು ಲೇಖನಗಳು. ಭಾಷಣ-ಲೇಖನಗಳ ನಡುವೆ ಹೆಚ್ಚಿನ ಅಂತರವೇನಿಲ್ಲ; ಬಾಯ್ದೆರೆಯಾಗಿ ಆಡಿದರೆ ಭಾಷಣ, ಬರೆದು ಓದಿದರೆ ಪ್ರಬಂಧ. ‘ಕನ್ನಡಕ್ಕೆ ಕೈಪಿಡಿ’ಯೆಂಬುದು ಒಂದು ಲೇಖನ. ಕನ್ನಡದಲ್ಲಿ ವಿವಿಧ ಶಬ್ದಾರ್ಥ ನಿಷ್ಟತ್ತಿಯನ್ನು ಹೇಳುವ ಕೈಪಿಡಿ-ನಿಘಂಟುಗಳ ಅವಶ್ಯಕತೆಯನ್ನು ಆ ಲೇಖನ ಪ್ರತಿಪಾದಿಸುತ್ತದೆ. ‘ನಂದಳಿಕೆ ಲಕ್ಷ್ಮೀನಾರಾಯಣಪ್ಪನವರು’ ಎಂಬುದು ಆ ಕವಿಯನ್ನೂ, ಆವರ ಕೃತಿಗಳನ್ನೂ ಕುರಿತು ಬಿರುಸಾದ ಚರ್ಚೆ ನಡೆಯುತ್ತಿದ್ದ ಕಾಲದಲ್ಲಿ (೧೯೨೦ರ ದಶಕದಲ್ಲಿ) ಪ್ರಕಟವಾಯಿತು. ಮುದ್ದಣನ ಕಾಲ-ದೇಶ-ಕರ್ತೃತ್ವಗಳನ್ನು ಆ ಲೇಖನ ಸಾಧಾರಣವಾಗಿಯೂ ಸಮರ್ಥವಾಗಿಯೂ ಪ್ರತಿಪಾದಿಸಿ ಸ್ಥಾಪಿಸುತ್ತದೆ. ಒಂದೆರಡು ಕಡೆಗಳಲ್ಲಿ ಪಂಜೆಯವರ ಲೇಖನವು ಗದ್ಯದ ಬಯಲನ್ನು ಮೀರಿ ಕಾವ್ಯದ ಉದ್ಯಾನವನ್ನು ಪ್ರವೇಶಿಸುತ್ತದೆ, ಪರಮ ಸುಂದರವೆನಿಸುತ್ತದೆ. ‘ಸರ್ವಜ್ಞ ಓನಾಮ ಪದ್ಧತಿ’ ಎಂಬುದು ಬಾಲಬೋಧೆಯು ಹೇಗಿರಬೇಕು ಎಂಬುದನ್ನು ಸರ್ವಜ್ಞನ ತ್ರಿಪದಿಗಳ ಆಧಾರದಿಂದಲೇ ವಿಶ್ಲೇಷಿಸುವ ಒಂದು ಪ್ರಯತ್ನವಾಗಿದೆ.

ಪಂಜೆಯವರು ನವೀನ ಪಂಥವನ್ನು ಪುರಸ್ಕರಿಸದವರಾದರೂ ಪ್ರಾಚೀನ ಪರಂಪರೆಯನ್ನು ತಿರಸ್ಕರಿಸಿದವರಲ್ಲ. ಹಳತು-ಹೊಸತುಗಳನ್ನು ಮೈಯ್ಗೂಡಿಸಿಕೊಂಡು ಕನ್ನಡ ಸಾಹಿತ್ಯವು ಸತ್ಪ ಸಂಪನ್ನವಾಗಬೇಕೆಂಬ ಉದಾರ ಸಮನ್ವಯ ಭಾವ ಅವರದಾಗಿತ್ತು. ‘ಹೊಸದಾರಿ’ ಎಂಬ ಉಪನ್ಯಾಸವು ಪಂಜೆಯವರ ಈ ಮನೋಭಾವವನ್ನು ನಿದರ್ಶೀಸುತ್ತದೆ. ‘ಕನ್ನಡದಲ್ಲಿ ಸುಧಾರಣೆ’ ಎಂಬುದು ರಾಯಚೂರು ಸಾಹಿತ್ಯ ಸಮ್ಮೇಳನಾಧ್ಯಕ್ಷ ಸ್ಥಾನದಿಂದ ಪಂಜೆಯವರು ಮಾಡಿದ ಭಾಷಣ. ಕನ್ನಡ ಭಾಷಾ ಸಾಹಿತ್ಯಗಳು ಸರ್ವಾಂಗೀಣವಾಗಿ ಬೆಳೆದು, ಸೋದರ ಭಾಷಾಸಾಹಿತ್ಯಗಳಿಗೆ ಹೆಗಲೆಣೆಯಾಗಿ ನಿಲ್ಲಬೇಕಾದರೆ ಕನ್ನಡದಲ್ಲಿ ಆಗಬೇಕಾದ ಸುಧಾರಣೆಗಳು, ನಡೆಯಬೇಕಾದ ಉಪಚಾರ-ಶುಶ್ರೂಷೆಗಳು ಯಾವುವು ಎಂಬುದನ್ನು ಅವರು ವಿಸ್ತಾರವಾಗಿ, ಪ್ರಾಂಜಲವಾಗಿ ಮತ್ತು ಹೃದಯಂಗಮವಾಗಿ ತಮ್ಮ ಭಾಷಣದಲ್ಲಿ ವಿವರಿಸಿದ್ದಾರೆ.

ಪಂಜೆಯವರು ಬಾಲಸಾಹಿತ್ಯದ ಆದ್ಯಪ್ರವರ್ತಕರು ಎಂಬುದರಲ್ಲಿ ಎರಡು ಮಾತಿಲ್ಲ. ಆದುದರಿಂದ ಅದರ ಗುಣಲಕ್ಷಣಗಳನ್ನು ವಿವರಿಸುವುದಕ್ಕೆ ಅವರಿಗಿಂತ ಅರ್ಹರು ಮತ್ತೊಬ್ಬರಿಲ್ಲ. ‘ಬಾಲಸಾಹಿತ್ಯ’ವೆಂಬ ಭಾಷಣದಲ್ಲಿ ಆ ಪ್ರಕಾರದ ತಂತ್ರವನ್ನು ಮನೋಜ್ಞವಾಗಿ ವರ್ಣಿಸಿದ್ದಾರೆ. ಹಳಗನ್ನಡ ಕವಿಗಳಲ್ಲಿ ಪಂಜೆಯವರಿಗೆ ಪರಮಪ್ರಿಯನಾಗಿದ್ದವನೆಂದರೆ ಕುಮಾರವ್ಯಾಸ. ‘ಕುಮಾರವ್ಯಾಸನ ಹೆಗ್ಗಳಿಕೆ’ಯೆಂಬ ಉಪನ್ಯಾಸದಲ್ಲಿ ಗದುಗು ಭಾರತದ ರಸಸ್ಥಾನಗಳನ್ನು ಸ್ಥೂಲವಾಗಿ ನಿರ್ದೇಶಿಸಿದ್ದಾರೆ. ಕುಮಾರವ್ಯಾಸನ ಕರ್ಣ ಪಾತ್ರವನ್ನು ಪಂಜೆಯವರು ವರ್ಣಿಸುವ ರೀತಿ ಹೀಗಿದೆ: “ಅರಮನೆಯ ಸಿಂಹ ಕರ್ಣ, ಹೊಲಗೇರಿಯ ಹಂದಿಯಾಗಿ ಬೆಳೆದ. ಕುಟ್ಟಿ ಕೆಡವಬಲ್ಲ ಗಂಡುಗಲಿ, ಆದರೆ ಹುಟ್ಟು ತಿಳಿಯದ ಹೀನ. ನಾಡಿಯ ರಕ್ತ ದಿವ್ಯವಿದ್ದರೇನು? ನಾಡಿನಲ್ಲಿ ಅಪಾಙ್ತೇಯ, ಬಹಿಷ್ಕೃತ. ವಿದ್ಯೆ ಕಲಿವ ಆಸೆ, ಉತ್ಸಾವಿದೆ, ಗುರೂಪದೇಶದ ಭಾಗ್ಯವಿಲ್ಲ. ಕುಲೀನರಲ್ಲಿ ಮೋರೆಯೆತ್ತಲಾರದ ಮೂಕ. ತಾಯಿ ತೊರೆದಳು, ತಂದೆ ಕರೆಯಬಾರದವ-ಇದು ನಾರಣಪ್ಪನ ಚಿತ್ರ….” ಒಂದು ಸನ್ನಿವೇಶವನ್ನೋ, ಪಾತ್ರವನ್ನೋ ಓದುಗರ ಕಣ್ತುಂಬುವಂತೆ ಖಚಿತವಾಗಿ ಕಡೆಯಬಲ್ಲ ಕೈ ಪಂಜೆಯವರದು.

ಪಂಜೆಯವರು ಎರಡು ಸಂಶೋಧನ ಪ್ರಬಂಧಗಳನ್ನೂ ಎರಡು ಭಾಷಾಶಾಸ್ತ್ರೀಯ ಲೇಖನಗಳನ್ನೂ ಬರೆದಿದ್ದಾರೆ. ‘ಮೂಡಬಿದರೆಯ ಹೊಸ ಬಸದಿಯ ಶಿಲಾಶಾಸನಗಳು’ ಎಂಬುದು ದೀರ್ಘವಾದ ಲೇಖನ. ಇದರಲ್ಲಿ ಐದು ಶಾಸನಗಳನ್ನು ಪಂಜೆಯವರು ಉಲ್ಲೇಖಿಸಿ ಅವುಗಳ ಚಾರಿತ್ರಿಕಾಂಶಗಳನ್ನು ವಿಶ್ಲೇಷಿಸಿದ್ದಾರೆ. ‘ಬಿಳಗಿಯ ಕೆಲವು ಶಾಸನಗಳು’ ಎಂಬುದು ಇನ್ನೊಂದು ಸಂಶೋಧನ ಪ್ರಬಂಧ. ಬಿಳಗಿಯ ಅರಸು ಮನೆತನದ ಮೇಲೂ, ಸಮಕಾಲೀನವಾದ ಇತರ ಅರೆಸೊತ್ತಿಗೆಗಳ ಮೇಲೂ ಈ ಲೇಖನ ಬೆಳಕು ಚೆಲ್ಲುತ್ತದೆ. ಸಂಶೋಧನೆವೆಂಬುದು ವಾದ-ಪ್ರತಿವಾದಗಳ ಸಮರ ಭುಮಿ. ಪಂಜೆಯವರ ಅನುಮೇಯಗಳ ಬಗೆಗೆ ಭಿನ್ನಾಭಿಪ್ರಾಯವಿರಬಹುದಾದರೂ ಅವರ ವಾದಸರಣಿಯನ್ನು ಮೆಚ್ಚಬೇಕಾಗುತ್ತದೆ. ಮಕ್ಕಳ ಕತೆ ಕವಿತೆಗಳಿಂದ ಚಿಣ್ಣರ ಅಣ್ಣನೆನಿಸಿದ ಪಮಜೆಯವರು ಸಂಶೋಧನೆಯ ಗೊಂಡಾರಣ್ಯದಲ್ಲೂ ಹೇಗೆ ನಿರಾಯಾಸವಾಗಿ ವಿಹರಿಸಬಲ್ಲರೆಂಬುದನ್ನು ಈ ಲೇಖನಗಳು ನಿದರ್ಶಿಸುತ್ತವೆ.

‘ಪದಾರ್ಥವೇನು?’  ಎಂಬುದು ಒಂದು ಲೇಖನಮಾಲೆ. ಅಡುಗೆ-ಊಟಗಳಲ್ಲಿ ಬಳಕೆಯಾಗುವ ‘ಪದಾರ್ಥವೇನು’ ಎಂಬ ಪ್ರಶ್ನೆಯನ್ನೇ ಹಿಡಿದು ಪಂಜೆಯವರು ಕನ್ನಡದ ಕೆಲವು ಶಬ್ದ ಸರ್ವಕಾಲಿಕವಾಗಿದೆ, ಅವುಗಳ ನಿಷ್ಪತ್ತಿಯನ್ನೂ ಈ ಲೇಖನಗಳಲ್ಲಿ ವಿವೇಚಿಸಿದ್ದಾರೆ. ಈ ಪದಗಳಿಗೆ ತುಳು-ಕೊಂಕಣಿ ಮುಂತಾದ ಆಡುನುಡಿಗಳಲ್ಲಿರುವ ಸಮಾನರೂಪಗಳೂ ಇಲ್ಲಿ ಪ್ರಸ್ತಾವಿತವಾಗಿವೆ. ಲೇಖನ ವಿಷಯ ಶಾಸ್ತ್ರೀಯವಾಗಿದ್ದರೂ ಅದರ ಧಾಟಿ ಲಘುವಾಗಿ, ಜನಸಾಮಾನ್ಯರೂ ಓದಿ ಅರ್ಥಮಾಡಿಕೊಳ್ಳುವಂತಿದೆ. ಪಂಜೆಯವರಿಗೆ ಸಹಜವಾಗಿದ್ದ ನಗೆಗಾರಿಕೆಯ ತುಂತುರುಗಳೂ ಅಲ್ಲಲ್ಲಿ ಸಿಡಿಯುತ್ತವೆ. ‘ಸ್ಥಳನಾಮ’ವೆಂಬ ಇನ್ನೊಂದು ಲೇಖನವು. ಹೆಸರೇ ಹೇಳುವಂತೆ, ಕನ್ನಡನಾಡಿನ ಅದರಲ್ಲೂ ದಕ್ಷಿಣ ಕನ್ನಡದ ಕೆಲವು ಸ್ಥಳಗಳ ಹೆಸರುಗಳ ಹುಟ್ಟನ್ನು ಕುರಿತು ಪಂಜೆಯವರು ನಡೆಯಿಸಿದ ವಿಚಾರವಿಲಾಸ. ಅವರ  ನಿರ್ಣಯಗಳೆಲ್ಲ ನಿಸ್ಸಂದಿಗ್ಧವೆಂದು ಹೇಳಲಾಗದು. ಆದರೆ ಪ್ರತಿಪಾದನ ಕ್ರಮ ರೋಚಕವಾಗಿದೆ. ಕನ್ನಡದಲ್ಲಿ ಪರಂಪರಾಗತವಾದ ವ್ಯಾಕರಣವನ್ನು ಬಿಟ್ಟರೆ, ಭಾಷಾಶಾಸ್ತ್ರ, ಧ್ವನಿಶಾಸ್ತ್ರಗಳು ಬೆಳೆಯದೇ ಇದ್ದ ಕಾಲದಲ್ಲಿ, ಆ ಹೊಲದಲ್ಲಿ ಮೊದಮೊದಲು ಉಳುಮೆ ಮಾಡಿವರಲ್ಲಿ ಪಂಜೆಯವರೂ ಒಬ್ಬರೆಂಬುದನ್ನು ಮರೆಯಲಾಗದು.

ಇಂಗ್ಲೀಷನ ‘ಎಸ್ಸೆ’ಗೆ ಸಮಾನಾರ್ಥಕವಾಗಬಹುದಾದ ಒಂಬತ್ತು ಲೇಖನಗಳನ್ನು ಪಂಜೆಯವರು ‘ಹರಟೆ ಮಲ್ಲ’ ಎಂಬ ಅಂಕಿತದಲ್ಲಿ ಪ್ರಕಟಿಸಿದ್ದಾರೆ. ಅವು ‘ಸತ್ಯದೀಪಿಕೆ’ಯೆಂಬ ಪತ್ರಿಕೆಯ ಅಂಕಣ ಬರಹಗಳು. ಹೊರನೋಟಕ್ಕೆ ಅವುಗಳಲ್ಲಿ ಹರಟೆಯ ವ್ಯಂಗ್ಯ-ವಿನೋದ-ವಿಷಯಾಂತರ-ಸ್ವಕೀಯ ಪ್ರಸ್ತಾವಗಳಿದ್ದರೂ ಒಳಹೂರಣದಲ್ಲಿ ಸಮಕಾಲೀನ ರಾಜಕೀಯ ಪ್ರಸಕ್ತಿಯಿದೆ, ಸಾಮಾಜಿಕ ವಿಧಿ-ವಿಧಾನಗಳ ವಿಡಂಬನೆಯಿದೆ, ಸಾರ್ವಜನಿಕ ಸಂಘ ಸಂಸ್ಥೆಗಳ ದೋಷೋದ್ಘಾಟನೆಯೂ ಇದೆ. ಒಂದು ವರ್ಷದಲ್ಲಿ ಎರಡು ಗೋಕುಲಾಷ್ಟಮಿಗಳು ಬಂದು ಜನರೆಲ್ಲ ವಾದ ನಿಮಗ್ನರಾದಾಗ ಪಂಜೆಯವರು ಅವರನ್ನು ಹೀಗೆ ಸಂತೈಸಿ ನಗೆಯಾಡುತ್ತಾರೆ:

ಅಚ್ಯುತಾಷ್ಟಮಿಯ ದಿನ ಎರಡೆನ್ನಬೇಡಿ
ಅಚ್ಚುಬೆಲ್ಲದ ಲಡ್ಡುಗೆಗಳ ರುಚಿಯ ನೋಡಿ

ಅದು ವಂಗಭಂಗ ಚಳವಳಿಯ ಕಾಲ (೧೯೦೫). ಪಂಜೆಯವರು ಅದರ ಪರಿಣಾಮವನ್ನು ಹೀಗೆ ಹೇಳುತ್ತಾರೆ:

ಕರ್ಜನೋ ನಿಷ್ಕ್ರಾಂತೋ ಮಿಂಟೋ ಪ್ರವಿಶ್ಯತಿ

ಲಾರ್ಡಕರ್ಜನ್ ನಿರ್ಗಮಿಸಿ ಮಿಂಟೋಪ್ರಭು ಆಗಮಿಸಿದಾಗ ಶುದ್ಧಸಂಸ್ಕೃತದಲ್ಲಿ ಆತನಿಗೆ ಸ್ವಾಗತ!

ಉಪಾಧ್ಯಾಯ ಮತ್ತು ಪೋಲಿಸ್ ಇವರನ್ನು ತೂಗಿ ಪಂಜೆಯವರು ಹೀಗೆ ಬೆಲೆ ಕಟ್ಟಿದ್ದಾರೆ ಎಂಬುದನ್ನು ಗಮನಿಸಿ:

“ಮಾಸ್ತರ್ ಮತ್ತು ಕಾನಸ್ಟೇಬಲ್ ಈ ಮಾತುಗಳಲ್ಲಿ ಎರಡೆಯದರಲ್ಲೇ ಅಕ್ಷರ ಗೌರವವು ಅಧಿಕವಾಗಿದೆ. ಮಾಸ್ತರನು ಪಾಸ್ ಮಾಡಬೇಕು, ಕಾನ್‌ಸ್ಟೇಬಲನು ತಪಾಸ್ ಮಾಡಬೇಕು. ಹೀಗಿದ್ದರೂ ಪೋಲೀಸಿನವನಿಗೆ ಕೈತುಂಬ ಗಂಟಾದರೂ ಉಂಟು; ಉಪಾಧ್ಯಾಯನಿಗೆ ಬೆರಳಗಂಟಲ್ಲದೆ ಮತ್ತೇನೂ ಇಲ್ಲ!”

ಎಂಬತ್ತು ವರ್ಷಗಳ ಹಿಂದೆ ಪಂಜೆಯವರು ಎತ್ತಿದ ಈ ಉದ್ಗಾರ ಎಷ್ಟು ಮಾರ್ಮಿಕವಾಗಿದೆ!.

ಆಂಗ್ಲಸಾಹಿತಿ ಜೊನಾಥನ್ ಸ್ವಿಫ್ಟ್  ‘A Meditation upon broomstick’ ಎಂಬ ಪ್ರಬಂಧವನ್ನು ಬರೆದಂತೆ, ನಮ್ಮ ಪಂಜೆಯವರೂ ಪೊರಕೆಯನ್ನು ಬಣ್ಣಿಸುವ ಈ ಪರಿಯನ್ನು ನೋಡಿ: “…ಅಯ್ಯೋ! ಕಸಬರಿಯೆ! ನಿನ್ನ ಅವಸ್ತೆಯನ್ನು ಏನು ವರ್ಣಿಸಲಿ? ಹೇ ಸಮ್ಮಾರ್ಜನಿ! ಪೂರ್ವದಲ್ಲಿ ನೀನು ಕಲ್ಪವೃಕ್ಷದ ಶಿರಸ್ಸಿನ ಮೇಲೆ ಕೂತುಕೊಂಡಿದ್ದೆ. ಈಗ ನನ್ನ ಸ್ವಜಾತಿ ಬಾಂಧವರಂತೆ ಮೂಲೆಯ ಪಾಲಾದೆಯಲ್ಲ! ನಿನ್ನ ಅಭಿವೃದ್ಧಿಗೆ ಇದ್ದ ರಸ, ಆಧಾರಕ್ಕೆ ಇದ್ದ ಗೆಲ್ಲು, ನಿನ್ನ ಅಹಂಕಾರಕ್ಕೆ ಇದ್ದ ಎಲೆ-ಇವೆಲ್ಲಾ ನಿನ್ನಿಂದ ದೂರವಾದವಲ್ಲಾ! ಅಯ್ಯೋ, ನಿನ್ನ ಹಣೆಬರಹವೇ; ಹಾಳು ಮೂಳಿಯ ಕೈಗೆ ಬಿದ್ದು ಇದ್ದವರ ಎಂಜಲು ಗುಡಿಸುವ ಗತಿಯಾಯಿತೇ? ಬೇರೆಯವರ ಮುಸುರೆಯನ್ನು ಗುಡಿಸಿ, ನಿನ್ನ ಮೋರೆ ಮುಸುರೆಯಾಗುವುದಲ್ಲೇ? …ಸಾಕಷ್ಟು ಉದ್ದವಿದ್ದರೆ ಕಸಗುಡಿಸುವೆ. ಸವೆದುಹೋದರೆ ಕಸ-ಕೊಳ್ಳುವಷ್ಟು ಶಕ್ತಿ ಸಹ ನಿನ್ನಲ್ಲಿಲ್ಲ. ಕಡ್ಡಿಗಳೇ, ಒಟ್ಟಿಗೆ ಇರಿ. ಬಿಡಿಯಾಗಬೇಡಿರಿ. ಕಟ್ಟು ಬಿಚ್ಚಿದರೆ ಯಾರಿಗೆ ಯಾರಿಲ್ಲ. ಕಟ್ಟಿನಲ್ಲೇ ನಿಲ್ಲಿರಿ. ಹಾಗಿದ್ದರೆ ಯಾರಾದರೂ ನಿಮ್ಮನ್ನು ಕೈಕೊಂಡು ಹಗೆಯ ಮೇಲೆ ಆಯುಧವಾಗಿ ಹಿಡಿಯಬಹುದು…”!

‘ವಾಸುಕಿಯೂ ಬೇಸರಿಸುವಷ್ಟು ದೇಸಿಗಳಿವೆ’ ಎಂದು ಪ್ರಾಚೀನ ವೈಯಾಕರಣನೊಬ್ಬ ಉದ್ಗರಿಸಿದುದುಂಟು. ಪಂಜೆಯವರು ತಮ್ಮ ತಮ್ಮದೊಂದು ಹರಟೆಯಲ್ಲಿ ಅಂತಹ ಕೆಲವು ದೇಶೀಯ ಪ್ರಭೇಧಗಳನ್ನು ಪಟ್ಟಿಮಾಡಿದ್ದಾರೆ: ಅಚ್ಚಗನ್ನಡ, ಉಚ್ಚಗನ್ನಡ, ತುಚ್ಚಗನ್ನಡ ಇತ್ಯಾದಿ. ಈ ಮೂರಕ್ಕೂ ಉದಾಹರಣೆಗಳನ್ನು ನೀಡಿ, ನಾಲ್ಕನೆಯದಾದ ಕಚೇರಿ ಕನ್ನಡವೆಂಬುದೂ ಒಂದಿದೆಯೆಂದು ಹೇಳಿದ್ದಾರೆ. ಅದು ಹೀಗಿದೆ: “ಮಂಗ್ಳೂರ ಶ್ಯಾರಿನಲ್ಲಿದ್ದ ಅಕಸಾವ್ಕಾರ ನರ್ಸಯ ಕಮ್ಮಿ ಯಾನೆ ನಾರಾಯಣರಾಯ್ರಿಗೆ ಚಾಲ್ಗೇಣಿ ವೊಕ್ಲುಕೆಲ್ಸಿ ಜಾತಿ ಸುಬ್ರಾ ಬಂಡಾರಿ ಬರ್ಸಿ ಕೊಟ್ಟ ಗೇಣ್ಚೇಟೀ ಕ್ರಮವೆಂತೆಂದ್ರೆ”-

ನಾಲಗೆಯನ್ನು ಹೇಗೆ ಹೊರಳಿಸಿದರೂ, ಬಾಯನ್ನು ಎಷ್ಟು ಅಗಲಿಸಿದರೂ ಹೊರಡದ ಉಚ್ಚಾರಗಳೇ ಕಚೇರಿ ಕನ್ನಡದ ವೈಶಿಷ್ಟ್ಯ! ಪಂಜೆಯವರು ಹರಟೆಗಳಲ್ಲಿ, ಮಂಗಳೂರಿನ ಅಂದಿನ ಮುನ್ಸಿಪಾಲಿಟಿಯ ಲೇವಡಿ ಅಲ್ಲಲ್ಲಿ ಬಂದಿದೆ. ಹಳ್ಳ ತಿಟ್ಟುಗಳಿಂದ ದುರ್ಗಮವಾದ ಮುನ್ಸಿಪಲ್ ರಸ್ತೆಗಳನ್ನು ಪಂಜೆಯವರು ವಿಡಂಬಿಸುವ ರೀತಿ ಇದು: “ಅಲ್ಲಾಲಿಯ ಆಗ ಬೋಟೆಂದು ಮುಂಚೆ ಕೆಲವರು ಮಾಡುತ್ತಿದ್ದ ನೆಲಹಡಗನ್ನು ಈಗಿನ ಮುನಿಸಿಪಲ್ ರಸ್ತೆಯಲ್ಲಿ ನಡೆಯಿಸಿದರೆ ಎಷ್ಟು ಚಂದ ಕಾಣುತ್ತಿತ್ತು! ಮುನಿಸಿಪಲ್ ಖಜಾನೆಯಲ್ಲಿ ತೂತು ಬಿದ್ದುದರಿಂದ ರಸ್ತೆಯಲ್ಲಿ ನೀರು ಹರಿಯುವುದು ಆಶ್ಚರ್ಯವೇ?” ಪಂಜೆಯವರ ಲೆಕ್ಕಣಿಕೆಯ ಮೊನೆ ಮುನಿಸಿಪಾಲಿಟಿಯನ್ನು ಹೇಗೆ ಎಲ್ಲೆಲ್ಲಿ ಚುಚ್ಚುತ್ತದೆ ಎಂಬುದನ್ನು ನೋಡಿ: “…ಹಂಪನಕಟ್ಟೆಯಿಂದ ಮಡಿಕೇರಿ ಗುಡ್ಡದವರೆಗೆ, ರಸ್ತೆ ಎಲ್ಲಾ ಹುಣ್ಣುಹುಣ್ಣಾಗಿ ಕೀವು ತುಂಬಿದೆ… ಮಳೆಗಾಲ ಮುಗಿಯುತ್ತಾ ಬಂತು; ಕೊಳೆಕಾಲ ಮಾತ್ರ ತಪ್ಪಲಿಲ್ಲ…” ಇದು ಇನ್ನೊಂದು ನಿದರ್ಶನ: “…ನಮ್ಮ ಮುನಿಸಿಪಾಲಿಟಿಗೆ ಕೆಲವು ವರ್ಷಗಳಿಂದ ಬಡತನ ಬಂದಿದೆ. ರಾ. ರಾ. ಸಾಲದನ್ನ ಅಧ್ಯಕ್ಷರಾದರು. ಅವರ ಹೆಸರಿಗೆ ಸರಿಯಾಗಿ ಚೇಯರ್ಮನ್ನರು ಸಾಲದಣ್ಣರಾದರು. ಬಳಿಕ ಬಂದದ್ದು ರಾ. ರಾ. ಲಾಬರು; ಖಜಾನೆಯಲ್ಲಿ ನಿಂತದ್ದು ನಷ್ಟರು. ಆಗ ಸುಬ್ಬರಾಯರು ಏರಿದ್ದಾರೆ. ಶುಭವೊ, ಅಶುಭವೋ ಇನ್ನೂ ನೋಡಬೇಕು…” ಸಲ್ದಾನ್ನ, ಲೋಬೋ, ಸುಬ್ಬರಾಯ ಎಂಬ ಹೆಸರುಗಳನ್ನು ಹಿಡಿದು ಪಂಜೆಯವರು ಜಗ್ಗಾಡುವ ರೀತಿ ವಿನೋದ ಪೂರ್ಣವಾಗಿದೆ. ಮುಂದಿನದೂ ಅಂತಹದೇ ವ್ಯಂಗ್ಯ ವಿನೋದ: “…ರಸ್ತೆ ಸರಿ ಮಾಡುವುದಕ್ಕೆಂದು ಮಾರ್ಗದ ಬದಿಯಲ್ಲಿ ಜನರ ಕಣ್ಣಿಗೆ ಮಣ್ಣು ಹಾಕಿದ್ದಾರೆ. ಬಾವಟೆ ಗುಡ್ಡೆಯಲ್ಲಿ… ಮಾರ್ಗಗಳನ್ನು ನೆಲಸಮ ಮಾಡುವುದಕ್ಕೆ ಗುಡ್ಡಕ್ಕೆ ಮಣ್ಣು ಹೊತ್ತದ್ದು ತೋರುತ್ತದೆ…!”

ಪಂಜೆಯವರ ಒಂದು ಹರಟೆಯಲ್ಲಿ ಆಶ್ವರ್ಯಕರವಾದ ಒಂದು ಉಲ್ಲೇಖವಿದೆ: “ಮಂಗಳೂರಿಂದ ಉಡುಪಿಗೆ ರೈಲುಮಾರ್ಗವಾಗಲು ಸರ್ವೇ ಮಾಡುತ್ತಾರಂತೆ” ಎಂದು ಹೇಳಿ “ಇದು ನಿಜವೇ ಸ್ವಾಮಿ?” ಎಂದು ಕೇಳಿದ್ದಾರೆ. ಕಳೆದ ಎಂಬತ್ತೈದು ವರ್ಷಗಳಿಂದಲೂ ನಮ್ಮ ರಾಜಕೀಯ ಧುರೀಣರ ಶ್ರೀಮುಖದಿಂದ ಇಂತಹ ಮುಕ್ತಾಫಲ ಆಗಾಗ ಉದುರುತ್ತಿದೆ! ಕರಾವಳಿಯ ಕಡಲಿಗೆ ಎಷ್ಟೋ ನೀರು ಹರಿದಿದೆ, ಆದರೆ ಮಂಗಳೂರು-ಉಡುಪಿ ರೈಲು ಮಾತ್ರ ಇನ್ನೂ ಹರಿದಿಲ್ಲ.[2]

‘ಹಲ್ಲಿ’ಯನ್ನು ಕುರಿತು ಪಂಜೆಯವರು ಬರೆದಿರುವ ಲೇಖನ ತುಂಬ ಸೊಗಸಾಗಿದೆ. ವಿಷಯ ಪ್ರಾಣಿಶಾಸ್ತ್ರವಾಗಿದ್ದರೂ ಸಾಹಿತ್ಯ ಪ್ರಬಂಧದಂತೆ ಪಠನೀಯವಾಗಿದೆ: “ಹಲ್ಲಿಯ ಆಟವನ್ನು ಇರುಳು ನೋಡಬೇಕು. ಅದು ನಮ್ಮ ನಾಟಕದ ವೇಷಗಾರರಂತೆ ಹಗಲಲ್ಲಿ ಕತ್ತಲು ಮೂಲೆಯಲ್ಲಿ ಅವಿತು ನಿದ್ದೆ ಮಾಡಿ, ದೀಪ ಹುಚ್ಚುತ್ತಲೇ ರಂಗಭೂಮಿಗೆ ಇಳಿಯುತ್ತದೆ. ಶಲಭವಧೆಯಲ್ಲಿ ಮುಖ್ಯ ಪಾತ್ರವು ಮುಸಲಿಯೆ… ಅದರ ಮಸುಕಾದ ಬಣ್ಣ, ವಿಕಾರವಾದ ತಲೆ, ತಣ್ಣಗಾದ ಮೈ ಇವುಗಳಿಂದ ಹಲ್ಲಿಯು ಜನಗಳಿಗೆ ಅಷ್ಟು ಪಾತ್ರವಾಗಿಲ್ಲ… ಸುಮ್ಮನೆ ಬಿದ್ದುಕೊಂಡಿರುವಾಗ ಕೂಡ ಏನನ್ನೋ ನುಂಗುವಂತೆ ಬಾಯಿಂದ ಮುಕ್ಕುತ್ತಿರುವ ದುರುಭ್ಯಾಸವೂ ಅದಕ್ಕುಂಟು”. ಹೀಗೆ ಹಲ್ಲಿಯ ರೂಪ-ಸ್ವಾಬಾವಾದಿಗಳನ್ನು ಮಕ್ಕಳಿಗೂ ಮನದಟ್ಟುವಂತೆ ಬಣ್ಣಿಸಿದ್ದಾರೆ. “ಮಕ್ಕಳಿಗೆ ಮುದ್ದಾಗಿಯೂ ಪ್ರಬುದ್ಧರಿಗೆ ಬುದ್ಧಿ ಪ್ರದವಾಗಿಯೂ” ಬರೆಯಬಲ್ಲ ಕುಶಲತೆ ಪಂಜೆಯವರದು!

ಪಂಜೆಯವರು ನಿಬಂಧಗಳಲ್ಲಿ ‘ಹಳೆಯ ಸಬ್ ಎಸಿಸ್ತಾಂಟನ ಸುಳ್ಳು ಡೈರಿಯಿಂದ’ ಎಂಬುದು ಕನ್ನಡದಲ್ಲೊಂದು ಅಮೂಲ್ಯವಾದ ವಾಙ್ಮಯ ಸೃಷ್ಟಿ. ಅದು ಆತ್ಮ ಕಥನರೂಪದಲ್ಲಿ ಸುಮಾರು ಹದಿನೈದು-ಇಪ್ಪತ್ತು ಪುಟಗಳಷ್ಟೇ ಚಿಕ್ಕದಾಗಿದ್ದರೂ ದಶಕಗಳ ಹಿಂದಿನ ಶಿಕ್ಷಣ ರಂಗದ ಮೇಲೆ ನಿಚ್ಚಳವಾದ ಬೆಳಕನ್ನು ಬಿರುವ ಬರವಣಿಗೆ. ಮುಖ್ಯವಾಗಿ ದಕ್ಷಿಣ ಕನ್ನಡದ ಹಳ್ಳಿ ಶಾಲೆಗಳ ಸ್ಥಿತಿ, ಉಪಾಧ್ಯಾಯರ ಪರಿಸ್ಥಿತಿ, ಅಧಿಕಾರ-ವರಿಷ್ಟರ ರೀತಿ-ನಿತಿ ಇವೆಲ್ಲವನ್ನೂ ಕನ್ನಡಿಸುತ್ತದೆ. ಪಂಜೆಯವರು ಕಾಲೇಜ್ ಶಿಕ್ಷಕನಾಗಿ ವೃತ್ತಿಜೀವನವನ್ನು ಆರಂಭಿಸಿ, ಶಾಲಾ ಪರೀಕ್ಷಕನಾಗಿ ದುಡಿದು, ಹೈಸ್ಕೂಲು ಮುಖ್ಯೋಪಾಧ್ಯಾಯನಾಗಿ ನಿವೃತ್ತರಾದವರು. ಪಂಜೆಯವರೇ ಹೇಳುವಂತೆ. ಎರಡು ಶಿಕ್ಷಕ ವೃತ್ತಿಗಳ ಮಧ್ಯಸ್ಥವಾಗಿದ್ದ ಆ ಅವಧಿ “ಕಡುಬಿನೊಳಗಣ ಹೂರಣ”. ಆ ಹೂರಣದ ಸವಿಯನ್ನು ಈ ಕಥನದ ಸಾಲು ಸಾಲುಗಳಲ್ಲೂ ಸವಿದು ಚಪ್ಪರಿಸುತ್ತೇವೆ. ಪಂಜೆಯವರು ತಮ್ಮ ನಡೆ-ನುಡಿಗಳಿಂದ ಅಧ್ಯಾಪಕರಿಗೆ ಆತ್ಮೀಯರಾದಂತೆ, ಬರವಣಿಗೆಯ ರೀತಿಯಿಂದ ವಾಚಕರಿಗೂ ಪ್ರಿಯರಾಗುತ್ತಾರೆ. ‘ಡೈರಿ’ಯಲ್ಲಿ ಉಕ್ತವಾದ ಎಷ್ಟೋ ಘಟನೆಗಳು ರಸಘಟ್ಟಿಗಳಾಗಿವೆ. ತಿಮ್ಮಪ್ಪ ಮಾಸ್ತರರ ಈಯೊಂದು ವರ್ಣನೆಯೇ ಸಾಕು; ಓದುತ್ತಿದ್ದಂತೆ ತಿಮ್ಮಪ್ಪ ಮಾಸ್ತರರು ಗತಕಾಲದ ಸಮಾಧಿಯಿಂದ ಎದ್ದು ಬಂದು ಕಣ್ಣ ಮುಂದೆ ನಿಲ್ಲುತ್ತಾರೆ; “…ತಿಮ್ಮಪ್ಪ ಮಾಸ್ತರರ ಶಾಲೆ ಪುತ್ತೂರಲ್ಲಿ, ಮನೆ ಬಾಯಾರಲ್ಲಿ; ಹಾಜರಿ ಶಾಲೆಯಲ್ಲಿ, ಕೆಲಸ ಎಲ್ಲರ ಮನೆಯಲ್ಲಿ. ಅವರು ಶಾಲೆಯ ಕೆಲಸ ಒಂದು ಹೊರತು ಮಿಕ್ಕ ಎಲ್ಲ ಕೆಲಸವನ್ನೂ ಸರಿಯಾಗಿ ಚೆನ್ನಾಗಿ ಮಾಡುತ್ತಿದ್ದರು…” ತಿಮ್ಮಪ್ಪ ಮಾಸ್ತರರ ಎಡಗಣ್ಣೊಂದು ಮಾತ್ರ ಕುರುಡು. ಅದರ ಕಾರಣವನ್ನು ಅವರ ಬಾಯಿಂದಲೇ ಹೀಗೆ ಹೇಳಿಸಿದ್ದಾರೆ: “…ಸ್ವಾಮಿ, ಒಂದು ದಿನ ಸುಪರ್‌ವಾಯ್ಸರು ಶಾಲೆಗೆ ಬಂದು, ಮಕ್ಕಳಿಗೆ ಒಂದು ಪಾಠ ಮಾಡಿ ಎಂದು ನನಗೆ ಅಪ್ಪಣೆ ಮಾಡಿದರು. ‘ಡೊಂಬರ ಚೆನ್ನಿ’ಯ ಪಾಠ. ಅದು ತಮ್ಮ ಕವನವಂತೆ…. ಆ ಪಾಠ ಕಲಿಸುವಾಗ ‘ಬೇಗ ತಿರನೆ ತಿರುಗಿ ಸರನೆ ಲಾಗ ಹಾಕಿದ ಡೊಂಬನು’ ಎಂಬ ಚರಣ ಬಂತು. ಅದರ ಅರ್ಥ ಮಕ್ಕಳಿಗೆ ಹತ್ತಲಿಲ್ಲ. ಆಗ ನಾನೇ ಡೊಂಬನಾದೆ, ಲಾಗ ಹಾಕಿ ತೋರಿಸಿದೆ. ಹೊಡೆದ ಲಾಗಕ್ಕೆ ಕೈ ತಪ್ಪಿ ನಾನು ನೆಲದ ಮೇಲಾದೆ; ನನ್ನ ಕಾಲು ತಾಗಿ, ಬೋರ್ಡು ಜಾರಿ ನನ್ನ ಮುಖಕ್ಕೆ ಬಂದು ಬಡಿಯಿತು. ಬೋರ್ಡಿನ ಅಂಚಿನ ಮೊನೆಯ ಪೆಟ್ಟು ಕಣ್ಣಿಗೇ ಬಿತ್ತು. ಮದ್ದು ಮಾಡಿದೆ, ಲೇಪ ಹಚ್ಚಿದೆ. ಏನು ಮಾಡಿದರೂ ಕಣ್ಣೊಂದು ಇಂಗಿ ಹೋಯಿತು!” ಇಂತಹ ದುಃಖಕರ ಕಥೆಯನ್ನೂ ತಿಮ್ಮಪ್ಪ ಮಾಸ್ತರರು ನಗು ನುಡಿಯಿಂದ ಮುಗಿಸುತ್ತಾರೆ! “…ಸ್ವಾಮಿ, ಹೋದ ವರ್ಷ ತಮ್ಮ ಕಣ್ಣು ಶಾಲೆಯ ಬೋರ್ಡಿನ ಮೇಲೆ ಬಿತ್ತು. ಈ ವರ್ಷ ಶಾಲೆಯ ಬೋರ್ಡು ನನ್ನಕಣ್ಣ ಮೇಲೆ ಬಿತ್ತು…!” ಹೀಗೆ, ಕಣ್ಣು ಹೋದರೂ ಅದಕ್ಕಾಗಿ ಕಣ್ಣೀರಿಳಿಸಿದ, ಬಡವರಾದರೂ ಬಡತನವನ್ನೇ ಒಪ್ಪಿ ಅಪ್ಪಿಕೊಂಡ ಶಾಲಾ ‘ಮೇಷ್ಟ್ರು’ಗಳ “ಹಸನ್ಮುಖ, ಮೃದು ನುಡಿ, ವಿಶಾಲಹೃದಯ, ಉದಾರ ಬುದ್ಧಿ, ಪರೋಪಕಾರ, ಶಾಂತ ಜೀವನ”ಗಳನ್ನು ಪಂಜೆಯವರು ಎತ್ತಿ ಆಡುತ್ತಾರೆ.

ಪಂಜೆಯವರಂತೆಯೇ ಶಿಕ್ಷಣರಂಗದ ವಿವಿಧ ಅನುಭವಗಳನ್ನು ವರ್ಣಿಸಿದ ಕನ್ನಡದ ಇನ್ನೊಬ್ಬ ಸಾಹಿತಿಯೆಂದರೆ ಎಂ. ಆರ್. ಶ್ರೀನಿವಾಸಮೂರ್ತಿಯವರು. ಪಂಜೆಯವರ ಅನುಭವ ಕಥನವು ಆತ್ಮಚರಿತ್ರದಂತಿದ್ದರೆ ಮೂರ್ತಿಯವರದು ಮಧ್ಯಮ ಪುರುಷ ಏಕವಚನದಲ್ಲಿ, ಕಾದಂಬರಿಯಂತೆ ಉಕ್ತವಾಗಿದೆ; ಮತ್ತು ಪಂಜೆಯವರದಕ್ಕಿಂತ ವಿಸ್ತಾರವೂ ಆಗಿದೆ. ‘ರಂಗಣ್ಣನ ಕನಸಿನ ದಿನಗಳ’ಲ್ಲಿರುವ ಸಮೃದ್ಧಿಯನ್ನು ಪಂಜೆಯವರದಲ್ಲಿ ಕಾಣಲಾರೆವು. ಆದರೆ ಪಂಜೆಯವರ ಬರವಣಿಗೆ ಸತ್ವದಲ್ಲಿ ಕಡಮೆಯೇನಲ್ಲ. ಅದು ಹೆಚ್ಚು ವಾಸ್ತವಿಕವೂ ಹೌದು. ಎಂ. ಆರ್. ಶ್ರೀಯವರಂತೆಯೇ ‘ಕವಿಶಿಷ್ಯ’ರೂ ತಮ್ಮ ಅನುಭವವನ್ನೇ ಮೂಲಾಧಾರವಾಗಿ ಇರಿಸಿಕೊಂಡು ಒಂದು ಬೃಹದ್ಗ್ರಂಥವನ್ನು ರಚಿಸಬಹುದಿತ್ತು. ಅದು ಕನ್ನಡಕ್ಕೆ ಪಂಜೆಯವರ ಚಿರಕಾಲಿಕವಾದ ಕೊಡುಗೆಯೆಂದೂ ಎನಿಸುತ್ತಿತ್ತು. ಅನುಭವ ಸಂಪತ್ತು, ಭಾಷಾಸೌಂದರ್ಯ, ನಿರೂಪಣ ಕೌಶಲ ಈ ಮೂರೂ ಪಂಜೆಯವರಲ್ಲಿದ್ದರೂ ಅವರು ದೊಡ್ಡದೇನನ್ನೂ ಬರೆಯಲಿಲ್ಲ. ಆದರೆ ಬರೆದದ್ದೆಲ್ಲ ರಸತುಂಬಿದ ಗಟ್ಟಿಕಾಳು.

ಕನ್ನಡದಲ್ಲಿ ಹಾಸ್ಯಪ್ರಧಾನ ಕೃತಿಗಳು ವಿರಳವಾಗಿದ್ದ ಕಾಲವೊಂದಿತ್ತು. ಅತಿಪ್ರಾಚೀನವೂ ಭಾರತೀಯಸಾಹಿತ್ಯವೆಲ್ಲವಕ್ಕೂ ಮಾತೃಸ್ವರೂಪಿಣಿಯೂ ಆಗಿರುವ ಸಂಸ್ಕೃತದಲ್ಲೇ ಹಾಸ್ಯ ಕೃತಿಗಳು ದುರ್ಲಭ ಎಂದಮೇಲೆ ಕನ್ನಡದ ಮಾತೇನು? ಮರುಧರೆಯ ಜಲಾಶಯಗಳಂತೆ ಅಲ್ಲೊಂದು ಇಲ್ಲೊಂದು ಹಾಸ್ಯರಸ ಬಿಂದುಗಳು ಗೋಚರಿಸಿದರೂ ನಗೆ ಒಂದು ಬುಗ್ಗೆಯಾಗಿ ಚಿಮ್ಮಿ ಓದುಗರ ಬಗೆ ಮತ್ತು ಮೊಗಗಳನ್ನು ಅರಳಿಸಲು ತೊಡಗಿದ್ದು ಈ ಶತಕದ (ಇಪ್ಪತ್ತನೇ ಶತಕ) ಆದಿಯಿಂದಲೇ ಎನ್ನಬೇಕು. ಹೊಸಗನ್ನಡದ ಮೊದಲ ‘ನಗೆ’ಗಾರನೆಂದರೆ ‘ಕಬ್ಬಿಗರ ಬಲ್ಲಹ’ ಮುದ್ದಣವೇ ಸರಿ. ಹಳೆಗನ್ನಡದಲ್ಲಿ ವಾಮನನಾಗಿದ್ದ ಹಾಸ್ಯಮೂರ್ತಿ, ಆಂಗ್ಲಸಾಹಿತ್ಯಸಂಪರ್ಕವು ನಿಕಟವಾಗುತ್ತಿದ್ದಂತೆ ಹೊಸಗನ್ನಡದಲ್ಲಿ ತ್ರಿವಿಕ್ರಮನಾಗಿ ಬೆಳೆಯಿತು. ಪ್ರತ್ಯೇಕ ಲೇಖನಗಳಲ್ಲಿ ಮಾತ್ರವಲ್ಲದೆ, ಕಥೆ ಕಾದಂಬರಿಗಳಲ್ಲಿ, ವ್ಯಂಗ್ಯ ವಿಡಂಬನೆಗಳಲ್ಲಿ, ಅಣಕವಾಡುಗಳಲ್ಲಿ, ನಾಟಕ ಪ್ರಹಸನಗಳಲ್ಲಿ ಅನೇಕ ಮುಖವಾಗಿ ಹಾಸ್ಯವು ಹೊರಹೊಮ್ಮಿತು. ‘ಕೈಲಾಸಂ’ ನಾಟಕಗಳೂ ‘ಕೊರವಂಜಿ’ಯಂತಹ ಪತ್ರಿಕೆಗಳೂ, ಕನ್ನಡಿಗರ ಮೇಲೆ ನಗೆಯ ಮೋಡಿಯನ್ನು ಬೀರಿದವು. ಹೀಗೆ ಹಾಸ್ಯವು ಒಂದು ಹೊನಲಾಗಿ ಹರಿಯತೊಡಗಿದಾಗ ಅದರದೊಂದು ಬೆಳ್ನೊರೆಯಂತೆ ಕಣ್ಮನಗಳನ್ನು ಸೆಳೆದ ಪುಸ್ತಕವೇ ಪಡುಕೋಣೆ ರಮಾನಂದರಾಯರ ‘ಹುಚ್ಚು ಬೆಳದಿಂಗಳಿನ ಹೂಬಾಣಗಳು’.

ಪಡಕೋಣೆಯವರು ಕಾಲೇಜಿನಲ್ಲಿ ರಸಶಾಸ್ತ್ರದ ಪ್ರಾಧ್ಯಾಪಕರಾಗಿದ್ದವರು; ಅವರೊಂದಿಗೆ ಕನ್ನಡಿಗರಿಗೆಲ್ಲ ಹಾಸ್ಯರಸವನ್ನು ಉಂಡು ಉಣಿಸಬಲ್ಲವರು. ಅವರ ‘ಹೂಬಾಣಗಳು’ ಹದಿನಾಲ್ಕು ಪ್ರಬಂಧಗಳ ಒಂದು ಬತ್ತಳಿಕೆ. ಈ ಬಾಣಗಳ ಮೊನೆಗೆ ಸವರಿದ ನಗೆಯ ಲೇಪ ಒಂದೇ ಪ್ರಮಾಣದಲ್ಲಿದೆ ಎನ್ನಲಾಗದು. ಕೊಡೆಯ ವಿಚಾರ, ಹರಿಕಮತನ ನೆನಪು, ಚಿಕ್ಕರಾಮು ಅಜ್ಜಿಗೆ ಹೇಳಿದ ಕಥೆ, ನನ್ನ ಭಾವ, ಅಂಕುಡೊಂಕು ಸಂಕಸಾಲ, ಪತ್ತೇದಾರನಾದ ಸೂಕ್ಷ್ಮಬುದ್ಧಿ, ನಾನು ನಾಗಣ್ಣ – ಈ ಏಳರಲ್ಲಿ ಹಾಸ್ಯವೇ ಮುಖ್ಯ. ಮಿಕ್ಕ ಏಳರಲ್ಲಿ ಅಷ್ಟಿಷ್ಟು ನಗೆಯ ತುಂತುರುಗಳಿದ್ದರೂ ಅವು ಕಥಾಂಶ ಪ್ರಧಾನ. ಹಾಸ್ಯಪ್ರಬಂಧಗಳಲ್ಲಿ ‘ನನ್ನ ಭಾವ’ನನ್ನು ಮಾತ್ರ ಕನ್ನಡಿಗರು ಎಂದೆಂದಿಗೂ ಮರೆಯಲಾರರು. ಕನ್ನಡಕ್ಕೊಬ್ಬನೇ ‘ನನ್ನ ಭಾವ’ ಎಂದರೂ ಸರಿಯೆ: ಆತ ಶೂದ್ರಕನ ಶಕಾರ, ಕುಮಾರವ್ಯಾಸನ ಉತ್ತರಕುಮಾರ, ಶೇಕ್ಸಪೀಯರನ ಫಾಲ್‌ಸ್ಟಾಫರಂತೆ ಚಿರಂಜೀವಿ. ಅನವಶ್ಯಕ ಪ್ರಶ್ನೆಗಳನ್ನು ಕೇಳಿ ತಲೆ ತಿನ್ನುವವರು ನಮ್ಮಲ್ಲೇನೂ ಕಡಮೆಯಿಲ್ಲ. ಅಂತಹ ಅಧಿಕಪ್ರಸಂಗಿಯೊಬ್ಬ ‘ನನ್ನ ಭಾವ’ನಾಗಿ ಅವತರಿಸಿದ್ದಾನೆ. ಆತ ಕೇಳುವ ಹುಚ್ಚುಪ್ರಶ್ನೆ, ಅದಕ್ಕೆ ನಿರೂಪಕ (ಲೇಖಕ) ನೀಡುವ ತಕ್ಕ ಉತ್ತರ ಓದುಗರು ತುಟಿ ಮೀರಿ ನಗುವಂತೆ ಮಾಡುತ್ತವೆ. ಕೊನೆಕೊನೆಗೆ ಭಾವನ ಪ್ರಶ್ನೆಗಳ ಹಾವಳಿಯನ್ನು ಎದುರಿಸಲಾಗದೆ ಮುಖಕ್ಷೌರದ ಒಂದು ಪ್ರಸಂಗದಲ್ಲಿ, ಲೇಖಕನ ಸಹನೆ ಮೀರಿ, ಕ್ಷೌರದ ಕತ್ತಿಯನ್ನು ಅವನತ್ತ ಬೀಸಿ, “…ಇದು ನಿನ್ನಂಥ ಭಾವಂದಿರ ಕುತ್ತಿಗೆಯನ್ನು ಕಡಿಯುವ ಕತ್ತಿ!” ಎಂದು ಗುಡುಗುತ್ತಾನೆ. ಅದನ್ನೆಲ್ಲ ಹಲ್ಲು ಕಿರಿದು, ಕಣ್ಣು ಪಿಳುಕಿಸಿ, ತಣ್ಣಗೆ ಕೇಳುತ್ತಿದ್ದ ಭಾವ, “ಭಾವಯ್ಯಾ, ನಿನಗೆ ಸಿಟ್ಟು ಬಂದಿದೆಯೇ?” ಎಂದು ಪ್ರಶ್ನಿಸುವಾಗಲಂತೂ ನಗುವಿನಿಂದ ಓದುಗನ ಪಕ್ಕೆ ಬಿರಿಯುತ್ತದೆ. ಭಾವನ ಈ ಪ್ರಶ್ನೆ ಶೇಕ್ಸಪಿಯರನ Look my lord, it comes ಮುಂತಾದ ಉದ್ಗಾರಗಳಂತೆ ಸಂದರ್ಭೊಚಿತವಾಗಿ ಉದ್ಧರಣ ಯೋಗ್ಯವಾಗಿದೆ.

‘ಹೂ ಬಾಣ’ಗಳಲ್ಲಿ ನಗು ಬರಿಸುವ ಇನ್ನೆರಡು ಬರೆಹಗಳೆಂದರೆ ‘ಹರಿಕಮತನ ನೆನಪು’ ಮತ್ತು ‘ಅಂಕು ಡೊಂಕು ಸಂಕಪಾಲ’. ‘ಹೂಬಾಣ’ಗಳಲ್ಲಿ ನಿರೂಪಕ ಸ್ಥಾಯಿಯಾದರೆ ಹರಿಕಮತ ಸಂಚಾರಿ; ಇಬ್ಬರೂ ಸೇರುವಾಗ ರಸೋತ್ಪತ್ತಿ. ಮಡದಿ ರುಕ್ಮಿಣಿ ‘ಬಣ್ಣದ ಬೀಸಣಿಗೆ’ ಎಂಬ ಸಿನೆಮಾ ನೋಡಬೇಕೆಂದುದನ್ನು ಹರಿಕಮತ ಮರೆತೇ ಬಿಟ್ಟಿರುತ್ತಾನೆ. ಮಿತ್ರ ರಮಾನಂದನನ್ನು (ನಿರೂಪಕ) ಕಂಡಾಗ, ಅದೇನೆಂದು ನೆನೆಯಲು ಚಡಪಡಿಸುತ್ತಾನೆ. ಆತ ಹರಿಕಮತನ ನೆರವಿಗೆ ಬಂದು, ಅವನಿಗೆ ನೆನಪಾಗಲೆಂದು ‘ಬ’ಕಾರದಿಂದ ತೊಡಗುವ ಒಂದೊಂದೇ ಪದಗಳನ್ನು ಉಚ್ಚರಿಸಿ ಸೋತು ಬಕರಾ ಆಗುತ್ತಾನೆ. ಇದು ‘ಹರಿಕಮತನ ನೆನಪು’ ಎಂಬ ಪ್ರಬಂಧದ ಸಾರ. ರೈಲುಗಾಡಿಯಲ್ಲಿ ಆಡವಾಡಿಕೊಳ್ಳುತ್ತಿದ್ದ ಮಕ್ಕಳು ಹೇಳಿದ ‘ಅಂಕುಡೊಂಕು ಸಂಕಪಾಲ’ ಎಂಬ ಒಗಟು ಅದೇ ಗಾಡಿಯಲ್ಲಿದ್ದ ಲೇಖಕನ ತಲೆಯನ್ನು ಹೊಕ್ಕು, ಬೇತಾಳದಂತೆ ಬೆಂಬತ್ತಿ ಅದರಿಂದ ಬಿಡಿಸಿಕೊಳ್ಳಲಾಗದೆ ಆತ ಒದ್ದಾಡುತ್ತಿರುತ್ತಾನೆ. ಅದೇ ಹೊತ್ತಿಗೆ ಮಿತ್ರನನ್ನು ನೋಡಲೆಂದು ಹರಿಕಮತನು ಬಂದಾಗ, ಆ ಒಗಟಿನ ಬೇತಾಳ ಲೇಖಕನನ್ನು ಬಿಟ್ಟು ಅವನನ್ನು ಹಿಡಿದುಕೊಳ್ಳುವುದೂ ರೋಚಕವಾಗಿದೆ.

‘ಕೊಡೆಯ ವಿಚಾರ’ದಲ್ಲಿ ಲೇಖಕನ ಹಾಸ್ಯ ಕಲ್ಪನೆ ಕೊಡೆಯ ಬೆನ್ನೇರಿ ವಿಹರಿಸುವುದನ್ನು ಕಾಣುತ್ತೇವೆ. ಕೊಡೆಯ ಬಟ್ಟೆ, ಬಣ್ಣ, ಗಾತ್ರ, ಕಡ್ಡಿ, ಕಾಲು ಮುಂತಾದುವನ್ನೆಲ್ಲ ವರ್ಣಿಸಿ, ‘ಕೊಡೆಗೂ ತನಗೂ ದೀರ್ಘಕಾಲದ ದಾಂಪತ್ಯ ಸುಖವನ್ನು ವಿಧಾತನು ಕರುಣಿಸಲೇ ಇಲ್ಲವೆಂದು’ ಲೇಖಕನು ಕೊರಗುವುದಾಗಲಿ, ಸ್ವಂತದ ಕೊಡೆ ಕೈಬಿಟ್ಟಾಗ ಪರರ ಕೊಡೆಗೆ ಕೈಕೊಡಬೇಕೆಂಬ ರಹಸ್ಯ ಮಂತ್ರೋಪದೇಶವಾಗಲಿ ವಿನೋದಪೂರ್ಣವಾಗಿದೆ. ‘ಚಿಕ್ಕ ರಾಮು ಅಜ್ಜಿಗೆ ಹೇಳಿದ ಕಥೆ’ಯನ್ನು ಅಜ್ಜಿ ಕೂಡ ನಂಬದಿದ್ದರೂ ಕಲ್ಪನೆ ರಮ್ಯವಾಗಿದೆ. ‘ಪತ್ತೇದಾರನಾದ ಸೂಕ್ಷ್ಮಬುದ್ಧಿ’ ಎಂಬುದು ಒಂದು ಕಾಲದಲ್ಲಿ ಅಣಬೆಗಳಂತೆ ತಲೆಯೆತ್ತುತ್ತಿದ್ದ, ಸಾಸಿವೆ ಕಾಳಿನಷ್ಟೂ ಸಾಹಿತ್ಯಾಂಶವಿಲ್ಲದಿದ್ದರೂ ‘ಅದ್ಭುತ ರಮ್ಯ’ವೆಂದು ಮೆರೆಯುತ್ತಿದ್ದ, ಪತ್ತೇದಾರಿ ಕಾದಂಬರಿಗಳೆಂಬ ‘ಆಣೆಯ ಆಭಾಸ’ (Penny dreadful)ಗಳನ್ನು ನವಿರಾಗಿ ವಿಡಂಬಿಸುತ್ತದೆ. ಸತಿ ಪತಿಯರ ವಕ್ರಚೇಷ್ಟೆಗಳು ಹಾಸ್ಯಕ್ಕೆ ಧಾರಾಳ ಅವಕಾಶ ಒದಗಿಸುವುದನ್ನು ‘ನಾನು ನಾಗಣ್ಣ’ ಎಂಬ ಲೇಖನದಲ್ಲಿ ಕಾಣುತ್ತೇವೆ.

ಕಥಾತ್ಮಕವಾದ ಏಳು ಪ್ರಬಂಧಗಳಲ್ಲಿ ‘ವಿಮೋಚನೆ’ ಹೆಚ್ಚು ರಸವತ್ತಾಗಿದೆ. ಕಮಲೆಯೆಂಬ ಮುದ್ದುಹುಡುಗಿ ಸರ್ವೋತ್ತಮನಾಯಕನೆಂಬವನ ಕಲ್ಲೆದೆಯನ್ನೂ ಕರಗಿಸಿ, ಅದರಲ್ಲಿ ದಯಾಗುಣದ ಎಳಲತೆಯೊಂದು ಕುಡಿಯೊಡೆಯುವಂತೆ ಮಾಡುವ ಸನ್ನಿವೇಶ ವರ್ಣನೆ ನಾಯಕನಷ್ಟೇ ಅಲ್ಲ, ವಾಚಕನೂ ಕಂಬನಿ ಮಿಡಿಯುವಷ್ಟು ಪ್ರಭಾವಿಯಾಗಿದೆ. ‘ಶ್ರೀನಿವಾಸನ ಅಕೃತ್ಯ’, ‘ರಮೇಶ’, ‘ಚಿನ್ನದ ತೊಟ್ಟಿಲು’ಗಳಲ್ಲಿ ಎತ್ತಿಹೇಳಬೇಕಾದ ಕಥನ ಕೌಶಲವೇನೂ ಇಲ್ಲ. ಕೈಯೊಳಗಿನ ಒಂದು ಹಕ್ಕಿಯನ್ನು ಹಾರಬಿಟ್ಟು, ಪೊದೆಯೊಳಗಿನ ಎರಡಕ್ಕಾಗಿ ಕೈಚಾಚಿ ಮೂರನ್ನೂ ಕಳಕೊಳ್ಳುವ ರಮೇಶನ ಮೂರ್ಖತೆಗಾಗಿ ಒಂದಿಷ್ಟು ಮರುಕವಾಗುತ್ತದೆ. ಒಂದು ಕಾಲದ ಕಂಪನಿನಾಟಕಗಳನ್ನು ನಗೆಯ ಜರಡಿಯಲ್ಲಿ ಸೋಸುವುದನ್ನು ‘ಆತ್ಮಹತ್ಯೆ’ ಎಂಬುದರಲ್ಲಿ ಕಾಣಬಹುದು. ‘ಬಾಳಿನ ಗುಟ್ಟು ತಾಳುವುದರಲ್ಲಿ’ ಎಂಬ ಸಂದೇಶವನ್ನು ಬಿರುತ್ತ ಇಡಿಯ ಗ್ರಂಥಕ್ಕೆ ಸಂಹರಣರೂಪದಲ್ಲಿದೆ ಅಂತ್ಯದ ‘ದೀಪಾವಳಿ’ ಎಂಬ ಲಘುಪ್ರಬಂಧ.

‘ಹೂಬಾಣ’ಗಳ ಮೇಲೆ ಮಾರ್ಕ್‌‌ಟ್ವೈನ್‌, ವೋಡ್‌ಹೌಸ್‌, ಜೇಕಬ್ಸ್‌, ಓ. ಹೆನ್ರಿ ಮೊದಲಾದ ಆಂಗ್ಲ ಲೇಖಕರ ನೆರಳು ಹಾದಿರುವುದನ್ನು ಪಡುಕೋಣೆಯವರೇ ಒಪ್ಪಿಕೊಂಡಿದ್ದಾರೆ. ಹಾಗಿದ್ದರೂ ಪ್ರಬಂಧಗಳು ‘ಸೀರೆಯುಟ್ಟ ದೊರೆಸಾನಿ’ಯಂತೆ ತೋರುವುದಿಲ್ಲ; ಕನ್ನಡನಾಡಿನ ಗರತಿಯಂತಿಯೇ ಕಾಣುತ್ತವೆ. ಪಾಶ್ಚಾತ್ಯ ಲೇಖಕರ ವರ್ಚಸ್ಸಿನಿಂದಲೇ ಆದರೂ ಕನ್ನಡದಲ್ಲಿ ಹುಲುಸಾದ ನಗೆಯ ಒಂದು ಬೆಳೆ ಬಂದಿರುವುದಕ್ಕಾಗಿ ಸಂತೋಷಪಡಬೇಕು. ಬೇಂದ್ರೆಯವರು ಮುನ್ನುಡಿಯಲ್ಲಿ ಹೇಳಿದಂತೆ, “ಪರಮಾನಂದರಾಯರ ಪರಮಾನಂದಕರವಾದ ಈ ಬರಹಗಳು ಕೇವಲ ‘ಪ್ರಯೋಗ’ಗಳೆಂದು ಯಾರೂ ಒಪ್ಪಲಾರರು. ಅಲ್ಲಿಯ ನಗೆಯಲ್ಲಿ ಹೊಸತನವಿದೆ, ನವೀನ ದೃಷ್ಟಿಯಿದೆ, ಶೈಲಿಯಲ್ಲಿ ಹಿಡಿತವಿದೆ… ಒಂದೊಂದರಲ್ಲೂ ಒಂದೊಂದು ಬಗೆಯ ಮೋದಕ, ಮಾದಕ, ಆಹ್ಲಾದಕ, ಚೋದಕ ಶಕ್ತಿಯಿದೆ”.

ಪುಸ್ತಕದ ಹಾಳೆಗಳನ್ನು ತಿರುವುತ್ತಿರುವಂತೆಯೇ ಎಷ್ಟೋ ಹೂಬಾಣಗಳು ಎದೆಯನ್ನು ಹೊಕ್ಕು ನಗೆಬುಗ್ಗೆಯನ್ನು ಚಿಮ್ಮಿಸುತ್ತವೆ;

“ಕೊಡೆ ರಾಮಗೆ ಸೀತೆಯನು… ರಾಮದೇವರ ಕಾಲದಲ್ಲಿಯೂ ಕೊಡೆಗಳಿದ್ದುವು”.

“ಅಂಗಡಿಕಾರನು… ಬಟ್ಟಲಲ್ಲಿ ಪಾಯಸವನ್ನು ಹಾಕಿ ನನ್ನ ಮುಂದಿಟ್ಟನು. ಪಾಯಸ ಆ ಬಟ್ಟಲಲ್ಲಿ ನಿಜವಾಗಿಯೂ ಇತ್ತೆಂದು ಭೂತಗನ್ನಡಿಯಿಂದ ನೋಡಿ ಸಮಾಧಾನಪಟ್ಟೆನು”.

“ನಿಶ್ಯಬ್ಧವನ್ನು ‘ದೇವಿ’ ಎಂದು ನಮ್ಮ ಬರೆಹಗಾರರು ಯಾಕೆ ಸಂಬೋಧಿಸುವರೋ ನನಗೆ ತಿಳಿಯದು. ನಿಶ್ಯಬ್ಧವಾಗಿರುವ ದೇವಿಯರನ್ನು ನಾನು ಇನ್ನೂ ನೋಡಬೇಕಷ್ಟೆ”.

‘ಹೂಬಾಣ’ಗಳಲ್ಲಿರುವುದು ನಗೆಯ ಹನಿಗಳಲ್ಲ, ಹಳ್ಳ. ಅದು ಕೊಳೆ ಕಸಗಳಿಲ್ಲದ ತಿಳಿನೀರಿನ ಹಳ್ಳ. ‘ಪರಮಾನಂದರಾಯರು ಪರಮಾನಂದಕರ’ ಹಾಸ್ಯದ ಅರಿವಾಗಬೇಕಾದರೆ ಆ ಹಳ್ಳದಲ್ಲಿ ಮುಳುಗಿ ಏಳಬೇಕು.

ನಮ್ಮಲ್ಲಿ ಹಾಸ್ಯವನ್ನು ಮೃದುಹಸಿತ, ಅಪಹಸಿತ, ಅತಿಹಸಿತ ಎಂದು ಮುಂತಾಗಿ ವಿಭಾಗಿಸುವುದುಂಟು. ಪಡುಕೋಣೆಯವರಲ್ಲಿ ಅಪಹಾಸ್ಯ ಅತಿಹಾಸ್ಯಗಳಿಲ್ಲ. ಆದರೆ, ಒಮ್ಮೊಮ್ಮೆ ಅವರ ಹಾಸ್ಯ ಸ್ವಲ್ಪ ಬಾಲಿಶವಾಗಿಯೂ ಭಾಷೆ ಕೊಂಚ ಪೆಡಸಾಗಿಯೂ ಕಾಣುವುದುಂಟು. ‘ನಾನು ನಾಗಣ್ಣ’ ಇದಕ್ಕೊಂದು ಉದಾಹರಣೆ. ‘ಬಾಳ್ವೆಯ ಮಸಾಲೆ’ ಯಾವುದೆಂಬುದೇ ತಿಳಿಯುವುದಿಲ್ಲ! ಹಾಗಿದ್ದರೂ ‘ಹೂಬಾಣ’ಗಳಲ್ಲಿ ಧನಾಂಶಗಳು ಹೆಚ್ಚು, ಋಣಾಂಶಗಳು ಕಡಿಮೆ. ಪರಮಾನಂದರ ಹಾಸ್ಯದ ಅಂತರಂಗವನ್ನು ತೆರೆದು ತೋರುವ ಅರ್ಥಪೂರ್ಣ ಚಿತ್ರಗಳೂ ಕೆಲವಿವೆ, ಈ ಪುಸ್ತಕದಲ್ಲಿ. ಅದರಿಂದಾಗಿ ನಗೆಹೂವಿಗೆ ಪರಿಮಳವೂ ಸೇರಿದಂತೆ ವಾಚಕನ ಮನೋಭೂಮಿಕೆಯಲ್ಲಿ ಆಹ್ಲಾದಕರ ಆವರಣವೊಂದರ ನಿರ್ಮಾಣವಾಗುತ್ತದೆ.

ಅನುಬಂಧ

ಪಡಕೋಣೆಯವರು ಹಾಸ್ಯಲೇಖನ ಮಾತ್ರವಲ್ಲ, ಚಿಂತನಶೀಲರೂ ಹೌದು ಎಂಬುದನ್ನು ಮನಗಾಣಿಸುವ ಬರೆಹವೊಂದು ತೀರ ಹಿಂದೆಯೇ ಪ್ರಕಟವಾಗಿತ್ತು. ಬಿ. ಎಂ. ಶ್ರೀಯವರಿಗೆ ಅರ್ಪಿತವಾದ ‘ಸಂಭಾವನೆ’ (೧೯೪೧)ಯಲ್ಲಿ ಅವರದೊಂದು ಪ್ರಬಂಧವಿದೆ; ‘ಜೀವನ’ವೆಂಬುದು ಅದರ ಶೀರ್ಷಿಕೆ. ಉಪನಿಷತ್ಕಾರರು ‘ಕೇನ ಕೇನ’ ಎಂದು ಕೇಳಿದಂತೆ, ಆಚಾರ್ಯ ಶಂಕರರು ‘ಕಸ್ತ್ವಂ ಕೋಹಂ’ ಎಂದು ಹಾಡಿದಂತೆ ರಮಾನಂದರಾಯರೂ ಜೀವನದಿಯ ಮೂಲ ಯಾವುದು, ಅದು ಹರಿಯುವುದು ಹೇಗೆ, ಕೊನೆಗೊಳ್ಳುವುದು ಎಲ್ಲಿ ಎಂಬುದನ್ನು ಹುಟ್ಟು, ಬಾಲ್ಯ, ಯೌವನ, ಗೃಹಸ್ಥಾಶ್ರಮ, ನಾಲುವತ್ತರ ನಲಗು, ಸಂಧ್ಯಾರಾಗ, ಸಾವು, ಸಾವು ಗೆದ್ದಿತೇ? ಎಂಬ ಉಪಶೀರ್ಷಿಕೆಗಳಲ್ಲಿ, ಕಾವ್ಯ ಎನ್ನಬಹುದಾದ ಗದ್ಯದಲ್ಲಿ ಎಳೆಎಳೆಗಳನ್ನು ಬಿಡಿಸಿ ವಿವೇಚಿಸಿದ್ದಾರೆ; ಸಾವಿನ ತೊಟ್ಟಿನಲ್ಲೇ ಜೀವದಹುಟ್ಟೂ ಅಡಗಿಕೊಂಡಿದೆ ಎಂಬ ತತ್ತ್ವವನ್ನು ಮನೋಜ್ಞವಾಗಿ ನಿರೂಪಿಸಿದ್ದಾರೆ.

ಪಡುಕೋಣೆಯವರ ‘ಹೂಬಾಣಗಳ’ಲ್ಲಿರುವ ಹರಿಕಮತ ಹತ್ತು ವರ್ಷಗಳ ಬಳಿಕ (೧೯೬೦) ಮರುಹುಟ್ಟು ಪಡೆದು ಮನೋಹರ ಗ್ರಂಥಮಾಲೆಯ ‘ನಡೆದುಬಂದ ದಾರಿ’ಯಲ್ಲಿ ತನ್ನ ಹೆಜ್ಜೆ ಗುರುತನ್ನೂ ಮೂಡಿಸಿದ್ದಾನೆ. ಆ ಸಂಪುಟದಲ್ಲಿ ‘ಹರಿಕಮತನ ಹಿಂದೀ’ ಎಂಬ ಲೇಖನವೊಂದಿದೆ. ಸಂಪಾದಕರು ಅದನ್ನು ಕಥೆ ಎಂದು ಕರೆದಿದ್ದರೂ ಅದು ವಾಸ್ತವದಲ್ಲಿ ಹಾಸ್ಯಪ್ರಬಂಧ. ‘ಹಿಂದೀ ತಗಣೆ’ ಕಚ್ಚಿಸಿಕೊಂಡ ಹರಿಕಮತ, ಸಂಶಯದೃಷ್ಟಿಯ ಮಡದಿ ರುಕ್ಮಿಣಿ, ಆತನ ಮಿತ್ರ (ನಿರೂಪಕ), ಮಿತ್ರನ ಪತ್ನಿ ಸುಶೀಲೆ ಮತ್ತು ಕಾತ್ಯಾಯಿನಿ ಅಮ್ಮಾಳ್ ಈ ಐದು ಕಂಬಗಳ ಮೇಲೆ ಇಲ್ಲಿಯ ಹಾಸ್ಯದ ಹಂದರ ನಿಂತಿದೆ. ಅಪರವಯಸ್ಸಿನಲ್ಲಿ ಹರಿಕಮತನು ಹಿಂದೀ ಕಲಿಯಲು ಹೊರಟದ್ದು-ಅದೂ ಒಬ್ಬಾಕೆ ಮಹಿಳೆಯಿಂದ,-ಎಲ್ಲಿಲ್ಲದ ಗೃಹಕಲಹಕ್ಕೆ ಕಾರಣವಾಗುವುದೂ ಮತ್ತೆ ಎಲ್ಲವೂ ಬಟ್ಟಲ ಬಿರುಗಾಳಿಯಂತೆ ತಣ್ಣಗಾಗುವುದೂ ಇದರಲ್ಲಿರುವ ಸ್ವಾರಸ್ಯ. ಪ್ರಬಂಧದ ಕೊನೆಯಲ್ಲಿ ಒಂದು ನೀತಿತತ್ವ ಇದೆ. ಅದು ಹೀಗಿದೆ: “ಹೊಸ ಹೊಸ ಭಾಷೆಗಳನ್ನು ಪ್ರಾಯ ಹೋದ ಗಂಡಸರು ಕಲಿಯಲು ಹವಣಿಸುವುದು ಶುದ್ಧ ಮೂರ್ಖತನ. ಇದು ಹೆಂಗಸರಿಗೇನೇ ಮೀಸಲಾದ ಉದ್ಯಮ. ಎಷ್ಟಾದರೂ ಭಾಷೆಗಳ ಅಧಿದೇವತೆ ಹೆಂಗುಸಲ್ಲವೇ?”

 


[1] ಎಂದರೆ ಇಪ್ಪತ್ತನೆಯ ಶತಮಾನದ ಮೊದಲ ಮೂರು ದಶಕ.

[2] ಈ ಪ್ರಬಂಧ ರಚನೆಯ ಕಾಲಕ್ಕೆ(೧೯೮೧) ಕೊಂಕಣಿ ರೈಲ್ವೇ ಮಾರ್ಗ ಆಗಿರಲಿಲ್ಲ.