I

ಮಂಜೇಶ್ವರ ಗೋವಿಂದ ಪೈಯವರು ಕಟ್ಟಿದ ಸಂಸ್ಕೃತಿಲೋಕವನ್ನು ಕುರಿತ ಎರಡು ದಿನಗಳ ವಿಚಾರ ಸತ್ರವನ್ನು ಉದ್ಘಾಟಿಸಿದ ಡಾ. ಕಲ್ಬುರ್ಗಿಯವರು ಭಾಷಣ ಮಾಡುತ್ತಿದ್ದಂತೆ ಭಾವೋದ್ವೇಗಕ್ಕೆ ಒಳಗಾದರು; ಪೈಯವರ ನೆನಪು ಅವರ ಎದೆಯನ್ನು ತೊಯ್ಯಿಸಿದುದೇ ಅದಕ್ಕೆ ಕಾರಣ. ಪೈಯವರ ಬರಹವನ್ನು ಪ್ರೀತಿಯಿಂದ ಓದಿದವರಿಗೆ, ಅವರ ಬದುಕನ್ನು ಹತ್ತಿರದಿಂದ ಕಂಡವರಿಗೆ ಹೀಗಾಗುವುದು ಸಹಜ. ಪೈಯವರದು ತಿರುಳು ಹುರುಳಗಳ ಹುಲುಸಾದ ವಾಙ್ಮಯ; ಅವರದು ಋಷಿ ಸದೃಶವಾದ ವ್ಯಕ್ತಿತ್ವ. ಬನ್ನಂಜೆ ಗೋವಿಂದಾಚಾರ್ಯರು ಬಣ್ಣಿಸಿದಂತೆ ಅವರು ‘ಬೆಳ್ಳಿಮೀಸೆಯ ಮಗು’ವಾಗಿದ್ದರು; ಅವರದು ಮಗುವಿನದೇ ಬಗೆಯಾಗಿತ್ತು. ನಾನಾದರೂ ಈ ಹೊತ್ತು ಪೈಯವರ ಈ ಭಾವಮೂರ್ತಿಯ ಹತ್ತಿರದಲ್ಲಿ, ಹೆಚ್ಚುಕಮ್ಮಿ ಡಾ. ಕಲ್ಬುರ್ಗಿಯವರದೇ ಭಾವದಿಂದ, ಧನ್ಯತೆಯಿಂದ ನಿಂತಿದ್ದೇನೆ. ಶಾಲಾದಿನಗಳಿಂದಲೇ ನಾನು ಪೈಯವರ ಹೆಸರು ಕೇಳಿದವನು, ಅವರ ಪದ್ಯಕಾವ್ಯಗಳನ್ನೂ ಗದ್ಯಪ್ರಬಂಧಗಳನ್ನೂ ಯಥಾಶಕ್ತಿ ಓದಿಕೊಂಡವನು. ಕಾಲಾಂತರದಲ್ಲಿ ನನ್ನ ಸುದೈವ ನನಗೆ ಗೋವಿಂದ ಪೈಯವರ ಪಾರ್ಥಿವ ಮೂರ್ತಿಯ ದರ್ಶನ ಭಾಗ್ಯವನ್ನು ಒದಗಿಸಿತು: ಪಡುಗಡಲತಡಿಯ ಮಂಜೇಶ್ವರದ ಮನೆಯಲ್ಲಿ, ಇನ್ನೊಂದು ಕಡಲೇ ಆಗಿದ್ದ ಪೈಯವರನ್ನು ಸನಿಹದಿಂದ ಕಂಡು, ಅವರ ಕಾಲುಮುಟ್ಟಿ, ಅವರಿಗೆ ಕೈಮುಗಿದು, ಅವರ ಹರಕೆಗೈಯನ್ನು ತಲೆಯಮೇಲೆ ಇರಿಸಿಕೊಂಡವನು ನಾನು. ಒಂದೆರಡಲ್ಲ, ಐದು ಸಲ ನನಗೆ ಆ ಸಂತೋಷ ಪ್ರಾಪ್ತವಾಗಿತ್ತು. ನಾನು ಓದುತ್ತಿದ್ದ ಮಂಗಳೂರು ಎಲೋಸಿಯಸ್ ಕಾಲೇಜಿನ ‘ಕರ್ಣಾಟಕ ಸಂಘ’ದಲ್ಲಿ ಒಂದು ಉಪನ್ಯಾಸಕ್ಕಾಗಿ ಅವರನ್ನು ಆಮಂತ್ರಿಸಿ ಅವರನ್ನು ಆದರಿಸುವ ಸೌಭಾಗ್ಯವೂ ನನಗೆ ಲಭಿಸಿತ್ತು. ನೇರಳೆ ಬಣ್ಣದ ಶಾಯಿಯಲ್ಲಿ ಅವರು ಬರೆದ ಮೂರು ಪತ್ರಗಳನ್ನು ಒಂದು ಅಮೂಲ್ಯ ಸಂಪತ್ತೆಂಬ ಶ್ರದ್ದೆಯಿಂದ ಇಂದಿಗೂ ನಾನು ಉಳಿಸಿಕೊಂಡಿದ್ದೇನೆ. ಆವರ ಬರವಣಿಗೆಯ ಬಗೆಗೂ, ಬದುಕನ್ನು ಕುರಿತೂ ಅಲ್ಲಿ-ಇಲ್ಲಿ ಮಾತಾಡುವ ಸುಸಂದರ್ಭಗಳೂ ನನಗೆ ಲಭಿಸಿವೆ. ಇಷ್ಟನ್ನು ಪ್ರಾಸ್ತಾವಿಕವಾಗಿ ಹೇಳಿ, ಮುಂದಿನ ಅಧ್ಯಕ್ಷ ಭಾಷಣಕ್ಕೆ ತಮ್ಮೆಲ್ಲರ ಒಪ್ಪಿಗೆಯನ್ನು ಕೇಳುತ್ತಿದ್ದೇನೆ.

II

ಕವಿ ಗೋವಿಂದ ಪೈಯವರ ತೇಜೋಮೂರ್ತಿ. ೧೯೬೩ರ ಸೆಷ್ಟೆಂಬರ್ ೬ ರಂದು, ಎಂಬತ್ತರ ಅಪರವಯಸ್ಸಿನ ಅಪರ ಸಮುದ್ರದಲ್ಲಿ ಅಸ್ತಂಗತವಾಯಿತು. ಆಗ ಕನ್ನಡದ ಮತ್ತೊಬ್ಬ ಹಿರಿಯ ಕವಿ ವಿನಾಯಕರು ಅರ್ಪಿಸಿದ ಒಂದು ಕಾವ್ಯಾಂಜಲಿಯ ಕೆಲವು ಪದ ಕುಸುಮಗಳು ಹೀಗಿವೆ:

ಸಂಶೋಧನ?- ಎತ್ತಿದ ಕೈ
ಕಾವ್ಯ ಸಿದ್ಧಿ?- ಪಡೆದಿಹ ಮೈ
ಬಾಳ ಸರಣಿ?- ಸಕಲರ ಸೈ
– ಗೋವಿಂದ ಪೈ

ವಿನಾಯಕರು ಎತ್ತಿದ ಪ್ರಶ್ನೆಗಳಿಗೆಲ್ಲ ತಾವೇ ಉತ್ತರವನ್ನೂ ಕೊಟ್ಟಿದ್ದಾರೆ. ಹಾಗೆ ಪ್ರಶ್ನೆಗಳಿಗೆ ಉತ್ತರವಾಗಿದ್ದವರು, ಉತ್ತರೋತ್ತರವಾಗಿದ್ದವರು ಗೋವಿಂದ ಪೈ!

ವಿನಾಯಕರು ಪೈಯವರನ್ನು ‘ಮೈ ಪಡೆದ ಕಾವ್ಯ ಸಿದ್ಧಿ’ ಎಂದಿದ್ದಾರೆ. ಪೈಯವರದು ಕಾವ್ಯಸಿದ್ಧಿ ಮಾತ್ರವಲ್ಲ, ಸಿದ್ಧಿಯ ಶಿಖರ. ಇನ್ನೊಬ್ಬ ಕವಿ, – ಹೊಸಗನ್ನಡದ ಕವಿರತ್ನ ಜಿ. ಪಿ. ರಾಜರತ್ನಂ ಅವರು ಪೈಯವರದು ‘ಕಾವ್ಯದುರ್ಗ’ ಎಂದಿದ್ದಾರೆ. ಅದು ಉನ್ನತವೂ ಹೌದು, ದುರ್ಗಮವೂ ಹೌದು ಎಂಬುದು ತಾತ್ಪರ್ಯ. ಅಂತಹ ಕಾವ್ಯದುರ್ಗದ ಆರೋಹಣ ಚಾರಣ ಸಾಹಸಿಗಳಿಗೆ ಮಾತ್ರ ಸಾಧ್ಯ. ನಾನು ಅಂತಹ ಸಾಹಸಿ ಸರ್ವಥಾ ಅಲ್ಲ; ಪೈಯವರ ಕಾವ್ಯರಸ ಗಂಗಾವತರಣ ಮಾಡಿಸಬಲ್ಲ ಭಗೀರಥ ಶಕ್ತಿಯೂ ನನ್ನಲ್ಲಿಲ್ಲ. ಮಂಜೇಶ್ವರದಲ್ಲಿ ಅವರಿದ್ದ ಮನೆಯ ಮುಂದೆಯೇ ಬಿತ್ತರದ ಪಡುವಣ ಕಡಲು ಇದೆಯಷ್ಟೆ. ಆ ಕಡಲ ಕರೆಯಲ್ಲಿ ನಿಂತರೆ ಸಾಕು, ಎದ್ದೆದ್ದು ಬರುವ ತೆರೆನೊರೆಗಳಿಂದ ಮೈ ಒದ್ದೆಯಾಗುತ್ತದೆ. ನಾನು ಪೈಯವರ ಕಾವ್ಯಜಲಧಿಯ ತೀರದಲ್ಲಿ ಆಚೆ ಈಚೆ ಓಡಾಡುವಾಗ ಮೈಗೆ ಚಿಮ್ಮಿದ ಹನಿಗಳನ್ನೇ ಎತ್ತಿ, ಬೊಗಸೆಯಲ್ಲಿ ತುಂಬಿ ಅವುಗಳ ಸೊಗಸನ್ನು ಕಂಡಿದ್ದೇನೆ. ರುಚಿಯನ್ನು ಸವಿದಿದ್ದೇನೆ. ಅವುಗಳನ್ನು ನಿಮಗೂ ಕಾಣಿಸುವ ಒಂದು ಪ್ರಯತ್ನವೇ ಈ ಉಪನ್ಯಾಸ.

ಪೈಯವರ ಕವನ ಸಂಗ್ರಹಗಳು ನಾಲ್ಕು; ಖಂಡ ಅಥವಾ ಕಾವ್ಯ ಎರಡು. ಕವನ ಸಂಕಲನಗಳಲ್ಲಿ ಒಂದೇ ಒಂದು- ಗಿಳಿ ವಿಂಡುಮಾತ್ರ ಅವರ ಜೀವಿತ ಕಾಲದಲ್ಲಿ, -ಎಂದರೆ, ೧೯೩೦ರಲ್ಲಿ ಪ್ರಕಟವಾಯಿತು. ಉಳಿದ ನಂದಾದೀಪ(೧೯೬೮) ಹೃದಯರಂಗ(೧೯೬೯) ಮತ್ತು ಇಂಗಡಲು (೧೯೬೩) ಮರಣಾ ನಂತರದ ಪ್ರಕಟಣೆಗಳು. ವಾಸ್ತವವಾಗಿ ಇಂಗಡಲುನ್ನು ಒಂದು ಆಂಥಾಲಜಿಎನ್ನಬಹುದಾಗಿದೆ. ಕಥನ ಕಾವ್ಯಗಳಾಗಿರುವ ಗೊಲ್ಗೊಥಾ೧೯೩೭ರಲ್ಲೂ ವೈಶಾಖಿ೧೯೪೭ರಲ್ಲೂ ಪ್ರಕಟಗೊಂಡವು. ಪೈಯವರ ಜೀವಿತಾವಧಿಯಲ್ಲೇ ಪ್ರಕಟವಾದ ಗಿಳಿವಿಂಡು‘, ‘ಗೊಲ್ಗೊಥಾ’ ಮತ್ತು ‘ವೈಶಾಖಿ’ಗಳ ಮಧ್ಯಂತರವನ್ನು ಗಮನಿಸಬೇಕು. ೧೮೮೩ರಲ್ಲಿ ಜನಿಸಿದ ಪೈಯವರ ಮೊದಲ ಪದ್ಯ ‘ಸುವಾಸಿನಿ’ಯೆಂಬ ಪತ್ರಿಕೆಯಲ್ಲಿ ೧೯೦೦ರಲ್ಲಿ ಅಚ್ಚಾಯಿತು. ಅದು ಆ ಪತ್ರಿಕೆಯನ್ನೇ ಕುರಿತಾದದ್ದು, – ಅದರಲ್ಲಿರುವುದು ಮೂರೇ ಕಂದ ಪದ್ಯ ಅದಕ್ಕೊಂದು ಬಹುಮಾನವೂ ಬಂದಿತ್ತಂತೆ!). ಆ ಮುಂದಿನ ದಿನಗಳಲ್ಲಿ ಅವರು ಆಗಾಗ ಬರೆಯುತ್ತಿದ್ದರು. ಪತ್ರಿಕೆಗಳಲ್ಲಿ ಅವು ಅಚ್ಚಾಗುತ್ತಲೂ ಇದ್ದುವು. ಆದರೆ ಪ್ರಥಮ ಕವನ ಸಂಗ್ರಹ ‘ಗಿಳಿ ವಿಂಡು’ ಕನ್ನಡ ಕಾವ್ಯಾಕಾಶದಲ್ಲಿ ಕಾಣಿಸಿಕೊಂಡದ್ದು, ಅದರ ಚೆಲುವು ಕನ್ನಡಿಗರ ಎದೆ ತುಂಬುವಂತೆ ಆದದ್ದು ಮಾತ್ರ ೧೯೮೦ರಲ್ಲಿ, ಎಂದರೆ ಪೈಯವರ ನಲ್ವತ್ತೇಳನೆಯ ವಯಸ್ಸಿನಲ್ಲಿ! ಆ ಅನಿಯತತೆಗೆ ಕಾರಣ ಕಾವ್ಯರಚನೆಯಲ್ಲೂ ಅದರ ಪ್ರಕಟಣೆಯಲ್ಲೂ ಪೈಯವರ ಅನಾಸಕ್ತಿ. ಅವರೇ ಅದನ್ನು ತಮ್ಮ ‘ಆತ್ಮಕಥನ’ವೊಂದರಲ್ಲಿ (ಅದು ಮೊದಲ ಸಲ ಮಿಂಚಿನ ಬಳ್ಳಿಯ ‘ಕಂನಾಡ ಸಾಹಿತ್ಯಜ್ಞರ ಆತ್ಮಕಥನ’ದಲ್ಲೂ ಆಮೇಲೆ ಕಾವ್ಯಾಲಯದ ‘ಕನ್ನಡದ ಮೊರೆ’ಯಲ್ಲೂ ಮುಂದೆ ‘ಗೋವಿಂದ ಪೈ ಸಮಗ್ರ ಸಂಪುಟ’ದಲ್ಲೂ ಪ್ರಕಟವಾಯಿತು). ಹೀಗೆ ಹೇಳಿದ್ದಾರೆ: “…ನಾನೊಬ್ಬ ದೊಡ್ಡ ಮೈಗಳ್ಳ, ಯಾವ ಕೆಲಸಕ್ಕೂ ಬಾರದ ಅತೀವ ಸೋಮಾರಿ….. ನಾನು ಬರೆವುದಾದರೂ ಆಟಿಗೊಮ್ಮೆ, ಸೋಣಕ್ಕೊಮ್ಮೆ…. ನಡು ವಯಸ್ಸಿನಲ್ಲಿ ಅದೆಷ್ಟೋ ವರ್ಷ ಶಾರದೆಯನ್ನು ವನವಾಸಕ್ಕೆ ಅಟ್ಟಿಬಿಟ್ಟೆ”. ಈ ಮಾತುಗಳೆಲ್ಲ ಪೈಯವರ ಸಹಜ ವಿನಯದ ಪ್ರತೀಕವೇ ವಿನಾ ಯಥಾರ್ಥವೆಂದು ಭಾವಿಸಲಾಗದು. ಅವರು ಅದೇ ಲೇಖನ ಅದೇ ವಾಕ್ಯ ವೃಂದದಲ್ಲಿ ಹೇಳಿರುವಂತೆ ಕವಿತಾ ಮಾರ್ಗದೊಂದಿಗೆ ಸಂಶೋಧನ ಮಾರ್ಗ ಕ್ರಮಣದಲ್ಲೂ ಅವರು ಆಸಕ್ತರಾದುದರಿಂದ, ಎರಡರಲ್ಲೂ ಒಟ್ಟೊಟ್ಟಿಗೆ ಹೆಜ್ಜೆ ಹಾಕುವುದು ಕಷ್ಟವಾಯಿತು. ಹಾಗಾಗಿ ಕವಿತೆ ಹಿಂದಾಯಿತು, ಸಂಶೋಧನ ಮುಂದಾಯಿತು. ಅದರಿಂದಾಗಿ ಕನ್ನಡ ಕಾವ್ಯಲೋಕಕ್ಕೆ ನಷ್ಟವಾಯಿತು. ಅದನ್ನು ಮನಗಂಡದ್ದರಿಂದಲೇ ಜಿ.ಆರ್. ಪಾಂಡೇಶ್ವರರು ‘ಪಂಡಿತವಕ್ಕಿ’ ಎಂಬ ಮಾರ್ಮಿಕ ಕವಿತೆಯೊಂದನ್ನು ಬರೆದದ್ದು. (‘ಚೆಂಗಲವೆ’) ಅದೊಂದು ಅನ್ಯಾಪದೇಶ; ಪೈಯವರನ್ನೇ ಕುರಿತದ್ದು. ಆದರೆ ಕೆಲವು ಪಂಕ್ತಿಗಳು ಹೀಗಿವೆ:

ಇತಿಹಾಸ ಸೂತ್ರದಲ್ಲಿ ಕೋದ ಮುತ್ತುಗಳ
ಸತ್ಯ ಮಿಥ್ಯಗಳ ಸಂವಾದ ಬಿತ್ತುಗಳ
ತಿಂದಿನಿಸು ತೃಪ್ತಿಯನು ತೋರದಿದೆ ಹಕ್ಕಿ
ಮುಂದಿರುವ ಮೃತ್ಯುವನು ಕಾಣ ಕಣ್ಣಿಕ್ಕಿ!

*          *          *          *

ರನ್ನ ಪಂಪಾದಿಗಳ ಕಾವ್ಯ ಕಾನನದ
ಉನ್ನತೋನ್ನತ ವೃಕ್ಷ ರಾಜಸಂಪದದ
ನಿನ್ನೆಗಳ ನೆನೆನೆನೆದು ಮರುಳ ಮೌನದಲಿ
ತನ್ನ ತಾನರಿಯದೆಯೆ ಶುಷ್ಕ ವ್ಯಾಜದಲಿ
ಹಾಡುವುದ ಮರೆತಿಂತು ಕುಳಿತೆಯೋ ಹಕ್ಕಿ?
ಹಾಡಲರಿಯದೆ ನಾವು ಅಳುತಿಹೆವು ಬಿಕ್ಕಿ!

ಹಾಡಬಲ್ಲ ಹಕ್ಕಿ ಹಾಡ ಮರೆತು ಕುಳಿತಿದೆ; ಹಾಡಲಾರದ ಹಕ್ಕಿ-ಹಾಡೆಂಬ ಭ್ರಮೆಯಿಂದ ಬಿಕ್ಕಿ ಬಿಕ್ಕಿ ಅಳುತ್ತಿದೆ! ಕನ್ನಡಜನಕೋಟಿಯ ಭಾವಗಳಿಗೆ ಪಾಂಡೇಶ್ವರರು ಹೀಗೆ ಕೊರಳಾದರು. ಆ ಕರೆ, ಆ ಮೊರೆ ಪೈಯವರ ಕಿವಿಯನ್ನಷ್ಟೇ ಅಲ್ಲ, ಎದೆಯನ್ನೂ ಮುಟ್ಟಿರಬೇಕು. ಫಲವಾಗಿ ೧೯೪೬ರಲ್ಲಿ ಹೆಬ್ಬೆರಳುಎಂಬ ರಸನಿರ್ಭರ ನಾಟಕವನ್ನೂ, ೧೯೪೭ರಲ್ಲಿ ಖಂಡ ಶರ್ಕರೆಯಂತಿರುವ ‘ವೈಶಾಖಿ’ ಖಂಡಕಾವ್ಯವನ್ನೂ ಅವರು ಪ್ರಕಟಿಸಿದರು. ಪೈಯವರ ಅಭಿಮಾನಿ, ಸಾಹಿತ್ಯ ಸಹೃದಯಿ ಜಿ. ಪಿ. ರಾಜರತ್ನಂರ ಬಲವಾದ ಒತ್ತಾಯದಿಂದ, ೧೯೬೨ರಲ್ಲಿ ಅವರು ತಮ್ಮ ‘ಗಿಳಿವಿಂಡ’ನ್ನು ಪುನರ್ಮುದ್ರಿಸಿದರು. ಮತ್ತೆ ಅವರು ಮೌನವಾದರು (೧೯೬೩ರಲ್ಲಿ ದೀರ್ಘಮೌನಕ್ಕೇ ಸಂದರು). ಒಂದು ವಿಧದಲ್ಲಿ ಅದನ್ನು ಅನಿಯತತೆಯೆಂದೋ ಮೌನವೆಂದೋ ಹೇಳುವುದೂ ಸರಿಯಲ್ಲ. ಪತ್ರಿಕೆಗಳಲ್ಲೂ, ಸ್ಮರಣ ಸಂಚಿಕೆಗಳಲ್ಲೂ ಪೈಯವರ ಕವಿತೆಗಳು ಆಗಾಗ ಪ್ರಕಟವಾಗುತ್ತಲೇ ಇದ್ದುವು; ಗುಚ್ಛವಾಗಿ, ಕಟ್ಟುಗೊಳಲಿಲ್ಲ ಅಷ್ಟೇ. ಆದರೇನಂತೆ? ಅವರು ಎಷ್ಟು ಬರೆದರೋ, ಏನನ್ನು ಬರೆದರೋ ಅವೆಲ್ಲವೂ ಕನ್ನಡದ ಹೊಲದಲ್ಲಿ ಬೆಳೆದ ಬಂಗಾರದ ಕಾಳು.

ಪೈಯವರ ಪರೋಕ್ಷದಲ್ಲಿ ಪ್ರಕಟವಾದ ‘ನಂದಾದೀಪ’ದಲ್ಲಿರುವ ಪ್ರತ್ಯೇಕ ಕವಿತೆಗಳಿಗೆಲ್ಲ ಅವುಗಳ ಪ್ರಥಮ ಪಂಕ್ತಿಗಳೇ ಶೀರ್ಷಿಕೆಗಳಾಗಿವೆ. ‘ನಂದಾದೀಪ’ದಲ್ಲಿ ಸೇರದ ಕವಿತೆಗಳು ಮುಂದೆ ‘ಹೃದಯರಂಗ’ವೆಂಬ ತಲೆಕಟ್ಟಿನಲ್ಲಿ ಅಚ್ಚುಗೊಂಡವು. ‘ಗಿಳಿವಿಂಡು’, ‘ನಂದಾದೀಪ’ ಮತ್ತು ‘ಹೃದಯರಂಗ’ದಲ್ಲಿರುವ ಕವಿತೆಗಳಲ್ಲಿ ಕೆಲವನ್ನು ಆರಿಸಿ, ಪೋಣಿಸಲಾದ ಸಂಕಲನವೇ ‘ಇಂಗಡಲು’. ಪೈ ಕಾವ್ಯಗಳ ಮುದ್ರಣ, ಪುನರ್ಮುದ್ರಣಗಳ ಪುಣ್ಯವೆಲ್ಲ ಮೈಸೂರಿನ ‘ಕಾವ್ಯಾಲಯ’ದ ಮಡಿಲಿಗೆ ಬೀಳುತ್ತದೆ.

III

ಪೈಯವರು ತಮ್ಮ ಕಾವ್ಯರಚನೆಯ  ಅನಿಯತೆತೆಗೆ ಕಾರಣವೇನೆಂಬುನ್ನು ಹೇಳಿರುವಂತೆಯೇ, ಅವುಗಳ ಪ್ರೇರಣೆ ಯಾವುದೆಂಬುದನ್ನೂ ತಿಳಿಸಿದ್ದಾರೆ. ‘ಹಕ್ಕಿ ಉಲಿಯುವುದು ಹಿಗ್ಗಿನಲ್ಲಿ, ನಾನು ಹಾಡುವುದು ದುಗುಡದಲ್ಲಿ’ ಎಂಬುದು ಪೈಯವರ ಮಾತು. ಇದು ಆಂಗ್ಲಕವಿ ಶೈಲಿಯ “Our swetest songs, songs are those that tell of saddest thourght” ಎಂಬ ಉದ್ಗಾರವನ್ನು ನೆನಪಿಗೆ ತರುತ್ತದೆ. ಒಳಗಿನ ಯಾವುದೋ ಮಿಡಿತ, ತುಡಿತ ಇಲ್ಲವೇ ಒತ್ತಡವನ್ನು ‘ಇನ್ನು ತಡೆಯಲಾರೆ’ ಎಂಬ ಹಂತದಲ್ಲಿ ಪೈಯವರು ಲೇಖನಿಯನ್ನು ಎತ್ತಿಕೊಳ್ಳುತ್ತಾರೆ; ಒಳಗಿನ ಕಾವನ್ನು, ನೋವನ್ನು, ಸುಯ್ಯನ್ನು ಅಥವಾ ಬಿಕ್ಕನ್ನು ಅದರ ಮೊನೆಯಿಂದ ಉಕ್ಕಿಸುತ್ತಾರೆ.

ಹೀಗೆ ‘ಅಟಿಗೊಮ್ಮೆ, ಸೋಣಕ್ಕೊಮ್ಮೆ’ ಬರೆವುದನ್ನು ಜನ ಓದಬೇಕು. ಮೆಚ್ಚಿ ಆಡಬೇಕು ಎಂಬ ನಿರೀಕ್ಷೆಯೇನೂ ಅವರಲ್ಲಿಲ್ಲ. ‘ತುಲಸೀದಾಸನೆಂದಂತೆ ನನ್ನ ಬರವಣಿಗೆ ಸ್ವಾಂತಃ ಸುಖಾಯ’ ಎಂದು ಹೇಳುವ ಪೈಯವರು ರತ್ನಾಕರವರ್ಣಿಯೊಂದಿಗೆ ಸಹಮತಿಸುತ್ತಾರೆ: ‘ಬೇಕಾದರಾಲಿಸುವುದು, ಬೇಡವಾಗೆ ಪರಾಕು ಮಾಡುವುದು’. ಹೀಗೆ ಅನಿಯತವಾಗಿ, ನಿರ್ವೇದ ನಿರ್ಲೀಪ್ತತೆಗಳಿಂದ ಬರೆದುದನ್ನು ಪೈಯವರು ತಮ್ಮದೆಂದು ಹೇಳಿಕೊಳ್ಳುವುದಿಲ್ಲ; ಬದಲು, ‘ನನ್ನ ಕೈಯಲ್ಲಿ ಲೆಕ್ಕಣಿಕೆ ಹೇಗೋ ಹಾಗೆ ವಿಧಾತನ ಕೈಯಲ್ಲಿ ನಾನು’ ಎನ್ನುತ್ತಾರೆ. ಇದು ‘ನಾಹಂ ಕರ್ತಾ ಹರಿಕರ್ತಾ’ ಎಂಬ ಪ್ರಪತ್ತಿ, ಸರ್ವಾರ್ಪಣ ಭಾವ. ನಿಜ ಜೀವನದಲ್ಲಿ ಪರಮಭಾಗವತರಾಗಿದ್ದ ಪೈಯವರಿಗೆ ಇದು ಸಹಜವೆಂದಷ್ಟೇ ಹೇಳಬಹುದು.

ಕನ್ನಡದ ಪಂಡಿತಶ್ರೇಷ್ಠರಲ್ಲಿ ಒಬ್ಬರಾಗಿದ್ದ ಮುಳಿಯ ತಿಮ್ಮಪ್ಪಯ್ಯನವರು ವಿಧಿವಶ (೧೯೫೦, ಜನೆವರಿ ೧೬)ರಾದಾಗ ಇನ್ನೊಬ್ಬ ಪಂಡಿತ ಪ್ರಕಾಂಡ ಸೇಡಿಯಾಪು ಕೃಷ್ಣಭಟ್ಟರು ಪತ್ರಿಕೆಯೊಂದರಲ್ಲಿ ಅರ್ಪಿಸಿದ ಶ್ರದ್ಧಾಂಜಲಿಯಲ್ಲಿ “ಹೊಸಗನ್ನಡಕ್ಕೆ  ದಕ್ಷಿಣ ಕನ್ನಡದ ಗುರುಜನರು ಮೂವರು” ಎಂದು ಹೇಳಿ, ಆಮೂವರನ್ನು ಪಂಜೆ, ಪೈ ಮತ್ತು ಮುಳಿಯದವರೆಂದು ಹೆಸರಿಸಿ ಅವರಲ್ಲಿ ಪೈಯವರ ಗುಣ ವಿಶೇಷಗಳನ್ನು, “ಪ್ರಾಸಭಂಜಕ, ದೇಶವಿದೇಶ ಕಾವ್ಯಮಾರ್ಗ ಮಹಾರಥಿಕ, ಸಂಶೋಧಕ ಮನೋರಂಜಕ” ಎಂಬುದಾಗಿ ಎತ್ತಿ ಆಡಿದ್ದಾರೆ. ಈ ಉಪನ್ಯಾಸಕ್ಕೆ ‘ಪ್ರಾಸ ಭಂಜಕ, ದೇಶವಿದೇಶಕಾವ್ಯಮಾರ್ಗ ಮಹಾರಥಿಕ ಪೈ’ಯವರೇ ಮುಖ್ಯರಾಗಿರುವುದರಿಂದ ಆ ಕುರಿತೇ ಕೆಲವು ಮಾತುಗಳನ್ನು ಹೇಳಬಹುದಾಗಿದೆ.

ಪೈಯವರು ಕಾವ್ಯರಚನೆಗೆ ಕೈಯಿಕ್ಕಿದ್ದು ಒಂದು ಸಂಕ್ರಮಣಸನ್ನಿವೇಶದಲ್ಲಿ ಹಳಗನ್ನಡ ಪದ್ಧತಿಗೆ ವಿದಾಯವನ್ನು ಹೇಳಿದ ಕನ್ನಡಕಾವ್ಯ ಹೊಸತಿನ ಮುಂಬೆಳಗಿನಲ್ಲಿ ಮತ್ತೆ ಕಣ್ತೆರೆಯುವ ಸಂದರ್ಭ ಅದಾಗಿತ್ತು. ಎಂದರೆ, ಹತ್ತೊಂಬತ್ತನೆಯ ಶತಮಾನದ ಅಂತ್ಯ, ಇಪ್ಪತ್ತನೆಯ ಶತಕದ ಆರಂಭ. ‘ಹೊಸಗನ್ನಡದ ಮುಂಗೋಳಿ’ ಮುದ್ದಣ ಆಗಲೇ ‘ಪದ್ಯಂ ವಧ್ಯಂ ಗದ್ಯಂ ಹೃದ್ಯಂ’ ಎಂದು ಘೋಷಿಸಿದ್ದ; ‘ಕರ್ಮಣಿ ಸರದೊಳ್ ಚೆಂಬವಳಂ ಕೋದಂತೆ’ ಕನ್ನಡದ ಸಂಸ್ಕೃತಗಳನ್ನು ಹದವಾಗಿ ಹೊಂದಿಸಿ ಕಾವ್ಯಮಾಲೆಯನ್ನು ಕಟ್ಟುವ ತನ್ನ ಸಂಕಲ್ಪವನ್ನು ಸ್ಪಷ್ಟಪಡಿಸಿದ್ದ. ಎಂದರೆ, ಆ ಹಿಂದಿನ ‘ಸ್ವಸ್ತಿ ಶ್ರೀ ಮತ್ಸುರಾಸುರೇಂದ್ರ ಮಣಿಮಕುಟ ತಟಘಟಿತ’ ವಾದದ್ದಲ್ಲ. ಮುದ್ದಣ್ಣನ ಕಾವ್ಯಕರ್ಮ ಎಂಬುದು ಅಧ್ಯಾಹಾರ. ಸಂಸ್ಕೃತ ಕನ್ನಡಕ್ಕೆ ‘ತೊಡರಾಗಬಾರದು, ತೊಡವು ಆಗ ಬೇಕೆಂಬುದು’ ಮುದ್ದಣ್ಣನ ಅಭಿಮತ. ಹೀಗೆ ಒತ್ತಟ್ಟು ಮುದ್ದಣ ಪದ್ಯಕಾವ್ಯಕ್ಕೆ ಬೆನ್ನಿಕ್ಕಿ ಗದ್ಯಕಥನಕ್ಕೆ ಸಮ್ಮುಖನಾಗುತ್ತಿರುವಂತೆಯೇ ಇನ್ನೊಂದೆಡೆ ಇಂಗ್ಲಿಷ್ ಭಾಷಾ ಸಾಹಿತ್ಯದ ನೆಳಲು ಕನ್ನಡ ವಾಙ್ಮಯದ ಮೇಲೆ ಬಿತ್ತು; ನೆಳಲು ಬಿದ್ದುದು ಮಾತ್ರವಲ್ಲದೆ, ಪಡುವಣದ ಗಾಳಿ ಕನ್ನಡದ ಒಡಲೊಳಗೂ ಹರಿದಾಡ ತೊಡಗಿತು. ‘ಇದು ಆಂಗ್ಲೇಯ’ ಎಂದು ತೋರದಂತೆಯೇ ಆಂಗ್ಲ ಭಾಷಾ ವಾಙ್ಮಯ ಕನ್ನಡ ಕವಿ ಸಾಹಿತಿಗಳನ್ನು ಪ್ರಭಾವಿಸಿತು. ಪಂಜೆ ಮಂಗೇಶರಾಯರ ಕಿರುಗತೆ ಕಿರುಗವನಗಳಲ್ಲಿ,  ಹಟ್ಟಿಯಂಗಡಿ ನಾರಾಯಣರಾವ್ ಮತ್ತು ಬಿ. ಎಂ. ಶ್ರೀಕಂಠಯ್ಯನವರ ಆಂಗ್ಲ ಕವಿತಾನು ವಾದಗಳಲ್ಲಿ ಈ ಪ್ರಭಾವ ಭಾವಗಮ್ಯ ಮಾತ್ರವಲ್ಲ ದೃಷ್ಟಿ ಗೋಚರವೂ ಆಯಿತು. ಇಂಗ್ಲಿಷ್ ಸಾಹಿತ್ಯಕ್ಕೆ ಸಹಜವಾಗಿದ್ದ ಸಣ್ಣಕಥೆ, ಕಾದಂಬರಿ, ನಾಟಕ, ಪ್ರಬಂಧ, ಪ್ರವಾಸ ಕಥನಾದಿಗಳೆಲ್ಲ ಬಾಷಾಂತರ ರೂಪಾಂತರಗಳಾಗಿ ಇಲ್ಲವೇ, ಅವುಗಳಿಂದ ಪ್ರೇರಿತವಾಗಿ ಕನ್ನಡದ ಕಳದಲ್ಲೂ ಒಂದೊಂದಾಗಿ ಮೊಳಕೆಯೊಡೆದುವು. ಆ ಹೊಸಬೆಳೆಯನ್ನು ಕನ್ನಡ ಜನ ಸಂತೋಷದಿಂದ, ತೆರೆಗೈಗಳಿಂದ ಎತ್ತಿ ತಮ್ಮೆದೆಗಳ ಕಣಜಗಳಲ್ಲಿ ತುಂಬಿಕೊಂಡರು. ಸಂಸ್ಕೃತ ಪದಭೂಯಿಷ್ಠವಾಗಿ, ನಿಬಿಡ ಛಂದೋಬಂಧಗಳಲ್ಲಿ ರಚಿತವಾಗುತ್ತಿದ್ದ ದೀರ್ಘ ಕಾವ್ಯಗಳನ್ನೇ ಓದಿ ಓದಿ ಅಥವಾ ಕೇಳಿ ಕೇಳಿ ಅಭ್ಯಾಸವಾಗಿದ್ದ ಕಾವ್ಯಪ್ರೇಮಿಗಳ ಕಣ್ಣು, ಕಿವಿ ಮನಸ್ಸುಗಳನ್ನು ಇಂಗ್ಲಿಷ್ ಕವಿತೆಯ ಹ್ರಸ್ವತೆ, ಮುಕ್ತತೆ, ವಿವಿಧತೆ ಮತ್ತು ಸಮೃದ್ಧತೆಗಳು ಇಡಿಯಾಗಿ ಒಲಿಸಿಕೊಂಡವು. ‘ಇಂತಹವು ಕನ್ನಡದಲ್ಲೂ ಬರಬಾರದೇಕೆ’ ಎಂದು ಅವರು ಹಂಬಲಿಸುವಂತಾಯಿತು.

ಅಂತಹ ಸಂದರ್ಭದಲ್ಲೇ ಗೋವಿಂದ ಪೈಯವರು ಕನ್ನಡ ಕವಿತಾ ಮಾರ್ಗದಲ್ಲೊಂದು ಹೊಸತಾದ ಮತ್ತು ದಟ್ಟವಾದ ಹೆಜ್ಜೆಯಿರಿಸಿದರು. – ಅದೇ ಪ್ರಾಸತ್ಯಾಗದ ಧೀರ ನಿರ್ಧಾರ. ಮುಕ್ತ (Free verse) ಅಥವಾ ನವ್ಯಕಾವ್ಯವು ಪ್ರಚುರವಾಗುವ ಮೊದಲು ಎಲ್ಲ ಕಾಲ ದೇಶಗಳ ಕವಿತೆಗಳಲ್ಲೂ ಒಂದಲ್ಲ ಒಂದು ರೀತಿಯ ಛಂದೋ ಬದ್ಧತೆ ಇದ್ದೇ ಇತ್ತು; ಅದರಂತೆ ಕನ್ನಡದಲ್ಲೂ ಇತ್ತು. ಅದು ಬಹುಮಟ್ಟಿಗೆ ಸಂಸ್ಕೃತದಿಂದ ಪ್ರೇರಿತವಾದದ್ದು ಇಲ್ಲವೇ ಸಂಸ್ಕೃತ ಛಂದಸ್ಸುಗಳ ಅನುಸರಣ. ಆದರೆ, ಸಂಸ್ಕೃತದಲ್ಲಿ ಇಲ್ಲದ ಒಂದು ವೈಲಕ್ಷಣ್ಯವೂ ಕಾವ್ಯದಲ್ಲಿತ್ತು-ಅದೆಂದರೆ ದ್ವಿತೀಯಾಕ್ಷರ ಪ್ರಾಸ. ಪದ್ಯವನ್ನು ಗದ್ಯದಿಂದ ಪ್ರತ್ಯೇಕಿಸುವುದು ಅದರ ಛಂದೋಬದ್ಧತೆಯೆಂಬುದು ನಿಜವಾದರೂ ಕಾವ್ಯಕ್ಕೆ ಆದಿಪ್ರಾಸ, ಅಂತ್ಯಪ್ರಾಸ ಅಥವಾ ಅನುಪ್ರಾಸಗಳು ಅನಿವಾರ್ಯವೇನೂ ಇಲ್ಲ. ‘ಸಂಸ್ಕೃತದಲ್ಲಿರುವಂತೆ ಕನ್ನಡ ಕವಿತೆಯಲ್ಲೂ ಛಂದಸ್ಸು ಇರಲಿ; ಆ ಬದ್ದತೆಯಿಂದ ಕಾವ್ಯಕ್ಕೆ ಒಂದು ಬಂಧುರತೆಯೂ ಒದಗುತ್ತದೆ. ಅದರಿಂದ ಕಾವ್ಯ ಶ್ರುತಿರಮ್ಯವಾಗಿ ಸ್ಮರಣ ಸುಲಭವೆನಿಸುತ್ತದೆ. ಆದರೆ ಸಂಸ್ಕೃತದಲ್ಲಿ ಅಷ್ಟಾಗಿ ಇಲ್ಲದ ಆದಿಪ್ರಾಸದ ತ್ರಾಸ ಕನ್ನಡ ಕವಿತೆಗೆ ಅನಿವಾರ್ಯವೇನು? ಪ್ರಾಸದ ಕೋಟೆಯನ್ನು ಒಡೆದರೆ ಕೊಳ್ಳೆ ಹೋಗುವದಾರೂ ಏನು?’ – ಹೀಗೆ ಯೋಚಿಸಿದ ಪೈಯವರು, ೧೯೧೧ರಲ್ಲಿ, ಕನ್ನಡ ಕಾವ್ಯೇತಿಹಾಸದಲ್ಲೇ ಮೊತ್ತಮೊದಲ ಸಲ, ಆದಿಪ್ರಾಸವನ್ನು ತ್ಯಜಿಸಿ ಒಂದು ಪದ್ಯವನ್ನು ಬರೆದರು, – ಅದೇ ‘ಹೊಲೆಯನು ಯಾರು?’ ಆ ಕವಿತೆ ಪತ್ರಿಕೆಯಲ್ಲಿ ಪ್ರಕಟವಾದದ್ದೇ ತಡ, ಅಂದಿನ ಕಾವ್ಯರಂಗದಲ್ಲಿ ಒಂದು ಕೋಲಾಹಲವೇ ಆಯಿತಂತೆ! ಸ್ವತಃ ಪೈಯವರ ಗುರುವೇ ಆಗಿದ್ದ ಪಂಜೆಯವರೇ ಶಿಷ್ಯನ ಪ್ರಾಸಭ್ರಷ್ಟ ಕವಿತೆಯನ್ನು ಒಪ್ಪಿಕೊಳ್ಳಲಿಲ್ಲವಂತೆ! ಆದರೇನು? ಪೈಯವರ ಮಾತಿನಲ್ಲೇ ಹೇಳುವುದಿದ್ದರೆ, “ತೊಟ್ಟ ಬಾಣ ತೊಟ್ಟೇ ತೀರಿತು, ಬಿಟ್ಟ ಪ್ರಾಸ ಬಿಟ್ಟೇ ಹೋಯಿತು!” ಆನೆ ನಡೆದುದೇ ಹೆದ್ದಾರಿ. ಮುಂದೆ, ಕನ್ನಡಕವಿಗಳು ಒಬ್ಬೊಬ್ಬರಾಗಿ ಪೈಯವರ ಮಾರ್ಗವನ್ನು ಅನುಸರಿಸಿದರು.

ಪೈಯವರು ‘ಪ್ರಾಸಭಂಜಕ’ ಮಾತ್ರವಲ್ಲ, ‘ದೇಶ ವಿದೇಶ ಕಾವ್ಯಮಾರ್ಗ ಮಹಾರಥಿಕ’ರೂ ಪಥಿಕರೂ ಹೌದು. ಕವಿ ಮುದ್ದಣನಿಂದ ಮುಂದಿನ, ಎಂದರೆ ೧೯೦೦ ರಿಂದ ಮೊದಲಾಗುವ ಘಟ್ಟವನ್ನು ‘ನವೋದಯ ಕಾಲ’ವೆಂದು ಸಾಹಿತ್ಯ ಚರಿತ್ರಕಾರರು ಗುರುತಿಸುತ್ತಾರೆ. ನವೋದಯ ಕಾಲದ ಅಥವಾ ಕಾವ್ಯದ ನಾವೀನ್ಯ ವಸ್ತು ಭಾಷೆ ಮತ್ತು ಬಂಧಗಳಲ್ಲಿ ಪ್ರಮುಖವಾಗಿ ಪ್ರಕಟವಾಗುತ್ತವೆ. ಆ ಹಿಂದಿನ ‘ಉದಧಿಪುರಾಧಿಪ ದೂತಗಮನಾಜಿ’ಗಳ ಮಹಾಕಾವ್ಯ, ಖಂಡಕಾವ್ಯಗಳ ಉತ್ಸರ್ಗವಾಗಿ ಭಾವಗೀತಗಳ ಉಛ್ರಾಯವಾದದ್ದು ಆ ಮುಂದಿನ ವೈಶಿಷ್ಟ್ಯ. ‘ಕನ್ನಡ ನಾಡಿನ ಮುಂಬಾನಿನ ಚೆಂಬಣ್ಣ’ವನ್ನು ನೋಡಿ ಹಿಗ್ಗುತ್ತ. ಪಡುಗಡುಲ ಮೇಲಿಂದ ಬೀಸಿ ಬಂದ ತಂಗಾಳಿಗೆ ಎದೆಯೊಡ್ಡುತ್ತ ಕಾಲಕ್ಕೆ ತಕ್ಕಂತೆ ಹೆಜ್ಜೆಯಿರಿಸಿದ ಕನ್ನಡ ಕವಿಗಳಲ್ಲಿ ಪೈಯವರದು ಎತ್ತರದ ತಲೆ ಮತ್ತು ಎದ್ದು ಕಾಣುವ ಹೆಸರು. ಹಟ್ಟಿಯಂಗಡಿ ನಾರಾಯಣರಾಯರ ‘ಆಂಗ್ಲ ಕವಿತಾವಳಿ’ (೧೯೧೮) ಮತ್ತು ಬಿ. ಎಂ. ಶ್ರೀಯವರ ನವೀನ ಛಂದೋಬಂಧಗಳ ‘ಇಂಗ್ಲಿಷ್ ಗೀತಗಳು’ (೧೯೨೬) ಪ್ರಕಟವಾಗುವುದಕ್ಕೆ ನಾತಿಪೂರ್ವದಲ್ಲೇ ಪೈಯವರು ಪ್ರಾಸ ತ್ಯಾಗದ ನಿರ್ಧಾರ ಮಾಡಿದ್ದರೆಂಬುದನ್ನು ನೆನೆಯಬೇಕು. ಪೈಯವರ ಕನ್ನಡ ಪ್ರೀತಿ ಸಗಾಢವೂ ಪ್ರಶ್ನಾತೀತವೂ ಆದದ್ದು. ಆದರೆ ಕಾಲೇಜಿನಲ್ಲಿ ಅವರು ಐಚ್ಛಿಕ ಭಾಷೆಯಾಗಿ ಓದಿದ್ದು ಇಂಗ್ಲಿಷ್‌ನ್ನು ಎಂಬುದನ್ನು ಮರೆಯುವಂತಿಲ್ಲ. ಅವರು ಇಂಗ್ಲಿಷನ್ನು ಓದಿದ್ದಷ್ಟೇ ಅಲ್ಲ, ಬಿ.ಎ. ಪದವಿಯಲ್ಲಿ ಸ್ವರ್ಣ ಪದಕವನ್ನೂ ಪಡೆದವರು. ಇಂಗ್ಲಿಷ್ ಭಾಷಾಪ್ರಭುತ್ವ ಮತ್ತು ಸಾಹಿತ್ಯಾಭ್ಯಾಸಗಳ ಮುಖೇನ ಅವರು ಜಗತ್ತಿನ ವಿವಿಧ ಕಾವ್ಯ ಪ್ರಕಾರಗಳ ಸಮೀಪ ಪರಿಚಯವನ್ನು ಹೊಂದಿದರು. ಅವುಗಳ ನಾವೀನ್ಯವನ್ನು ಮತ್ತು ಸ್ವಾರಸ್ಯವನ್ನು ಆ ಕವಿಗಳಿಗಿದ್ದ ಸ್ವಾತಂತ್ಯ್ರವನ್ನು ಕನ್ನಡಿಗರಿಗೆ ಪರಿಚಯಿಸಬೇಕೆಂಬುದು ಅವರ ಹೆಬ್ಬಯಕೆಯಾಗಿತ್ತು. ಅದು ಸಂಸ್ಕೃತದ ಅನಾದರವಾಗಲಿ, ಕನ್ನಡದ ಮೇಲಿನ ಅಪ್ರೀತಿಯಾಗಲೀ ಅಲ್ಲವೇ ಅಲ್ಲ. ಅನ್ಯ ಭಾಷೆಗಳಿಂದ ಕನ್ನಡಕ್ಕೆ ಏನಾದರೂ ಬರುವುದಿದ್ದರೆ ಅಥವಾ ಕನ್ನಡಕ್ಕೆ ಏನನ್ನಾದರೂ ತರುವುದಿದ್ದರೆ ಅದು ಕನ್ನಡದ್ದಾಗಿಯೇ ಇರಬೇಕು, ಕನ್ನಡವೆಂದೇ ತೋರಬೇಕು. ಇದು ಪಂಜೆಯವರ ಮಾರ್ಗ. ಅವರ ಶಿಷ್ಯ ಪೈಯವರದೂ ಅದರದೇ ಅನುಸರಣ. ಇಂಗ್ಲಿಷ್ ಮಾತ್ರವೇ ಅಲ್ಲ. ಜರ್ಮನ್‌, ಫ್ರೆಂಚ್ ಮೊದಲಾದ ವಿದೇಶಿ, ಹಿಂದಿ ಮುಂತಾದ ದೇಶೀ ಭಾಷಾಜ್ಞಾನವೂ ಪೈಯವರಿಗೆ ಇದ್ದುದರಿಂದ ಅವರ ಕಾವ್ಯದೃಷ್ಟಿ ವಿಶಾಲವಾಯಿತು, ಕಾವ್ಯಮಾರ್ಗ ವಿಸ್ತಾರವಾಯಿತು.

IV

ಪೈಯವರ ಪ್ರಥಮ ಸಂಕಲನ ‘ಗಿಳಿವಿಂಡಿ’ನಲ್ಲಿರುವ ನಲ್ವತ್ತೈದು ಕವಿತೆಗಳಲ್ಲಿ ಕೆಲವು ಆದಿಪ್ರಾಸ ಸಹಿತವಾಗಿವೆ; ಎಂದರೆ, ಅವೆಲ್ಲವೂ ೧೯೧೧ ಕ್ಕಿಂತ ಹಿಂದೆಯೇ ರಚಿತವಾಗಿದ್ದವು ಎಂದು ಭಾವಿಸಬಹುದು. ಉಳಿದವುಗಳಲ್ಲಿ ಪಾದಾಂತ್ಯದ ಪ್ರಾಸ ವೈವಿಧ್ಯವನ್ನು ಕಾಣಬಹುದು. ಸಂಗ್ರಹದಲ್ಲಿರುವ ಸ್ವತಂತ್ರ ಕವಿತೆಗಳ ಎಡೆಯಲ್ಲಿ ಅನ್ಯಭಾಷೆಗಳಿಂದ ಅನುವಾದಿತ, ರೂಪಾಂತರಿತ ಅಥವಾ ಪ್ರೇರಿತವಾದ ಐದು ಗೀತಗಳೂ ನಲ್ವತ್ತನಾಲ್ಕನೆಯದಾಗಿ ಪಾರಸೀಕ ಕವಿ ‘ಉಮ್ಮರ್ ಖಯ್ಯಾಮ’ನ ಲೋಕ ಪ್ರಸಿದ್ಧ  ‘ರುಬಾಯಿಯಾತ್’ನಿಂದ ಆರಿಸಿದ ಐವತ್ತು ಚೌಪದಿಗಳ ಭಾಷಾಂತರವೂ ಇವೆ. ಸಂಕಲನ ಕಾವ್ಯಾನುಕ್ರಮಣಿಕೆಯಲ್ಲಿ ಮೊದಲ ಪದ್ಯ ‘ಚಿಟ್ಟೆಗೆ’ ಆಂಗ್ಲಕವಿ ವರ್ಡ್ಸ್‌‌ವರ್ಥನ Butterflyಯನ್ನು ಅವಲಂಬಿಸಿದುದಾರೆ, ಮೂರನೆಯ ‘ಬಾನಾಡಿಗೆ’ ಎಂಬುದು ಶೆಲ್ಲಿಯ ‘To a skeylark’ ಎಂಬ ಸುವಿಖ್ಯಾತ ಕವಿತೆಯ ಅನುವಾದ. ನಾಲ್ಕನೆಯದು ‘ಹಿಂದೂಸ್ತಾನ್‌ಹಮಾರಾ’- ಡಾ. ಮಹಮ್ಮದ್ ಇಕ್ಬಾಲರ, ಅದೇ ಶೀರ್ಷಿಕೆಯ ಸುಪರಿಚಿತ ಪದ್ಯವನ್ನು ಆಧರಿಸಿದ್ದಾಗಿವೆ. ಐದನೆಯ ‘ವಿದಾಯ’ ಎಂಬುದು ಗುರುದೇವ ಠಾಕೂರರ Farewell ಎಂಬುದರ ಅನುವರ್ತನ. ಇಪ್ಪತ್ತೊಂಬತ್ತನೆಯದಾದ ‘ಕೊಳುಗುಳದ ಮನವಿ’ ಎಂಬುದು ಜರ್ಮನ್‌ಕವಿ ಥಿಯೋಡೋರ್ ಕೋರ್ನರ್ ಎಂಬಾತನ ಕವಿತೆಯಿಂದ ಪ್ರೇರಿತವಾದದ್ದು. ಈಯೆಲ್ಲವುಗಳ ಮೂಲದ ಹತ್ತಿರ ಪೈಯವರ ಪದ್ಯಗಳನ್ನಿರಿಸಿ ಪ್ರತ್ಯೇಕ ಪದ, ಪಂಕ್ತಿ, ಪದ್ಯಗಳನ್ನು ಪರಸ್ಪರ ಹೋಲಿಸುವ, ತೂಗುವ, ಒರೆಗೆ ತಿಕ್ಕುವ ಉದ್ದೇಶ ನನ್ನದಲ್ಲ. ಒಂದೇ ಮಾತು: ಮೂಲದ ಸತ್ವವಾಗಲೀ, ಸಾರವಾಗಲೀ ಪೈಯವರ ಬೆರಳುಗಳ ಎಡೆಯಿಂದ ಸೋರಿ ಹೋಗಿಲ್ಲ; ಬದಲು ಲೆಕ್ಕಣಿಕೆಯ ಮೊನೆಯಿಂದ ಸುರಿದು ಬಂದು ಹರಳುಗಟ್ಟಿದೆ ಎಂದಷ್ಟೇ ಹೇಳಬಲ್ಲೆ. ಪೈಯವರ ಸ್ವತಂತ್ರ ಕವಿತೆಗಳ ಬಗೆಗೆ ಏನೂ ಟಿಪ್ಪಣೆ ಮಾಡದೆ ‘ಕೊಳಗುಳದ ಮನವಿ’ ಮತ್ತು ‘ಉಮರ್ ಖಯ್ಯಾಮ್‌’ ಸಂಗ್ರಹವನ್ನು ಕುರಿತು ಇನ್ನೂ ಎರಡು ಮಾತುಗಳನ್ನು ಹೇಳುತ್ತಿದ್ದೇನೆ.

‘ಕೊಳಗುಳದ ಮನವಿ’ ಅನುವಾದವಾದರೂ ಸ್ವತಂತ್ರವಂದೇ ತೋರುವಷ್ಟು ಸಹಜವೂ ಸತ್ವಪೂರ್ಣವೂ ಆಗಿರುವ ಕವಿತೆ. ಅದು ಪೈಯವರ ಬಹುಶ್ರುತತೆಗೂ ದೇಶವಿದೇಶ ಕಾವ್ಯ ಪಾರೀಣತೆಗೂ ಒಂದು ಪ್ರಬಲ ನಿದರ್ಶನ. ಜರ್ಮನ್ ಮೂಲದಲ್ಲಿ ಆ ಕವಿತೆಯ ಶೀರ್ಷಿಕೆಯನ್ನು ಉಚ್ಚರಿಸುವುದಕ್ಕೆ – ಅದು ‘ಜಿಬೆಟ್ ವಾಹ್ರೆಂಡ್‌ದೆರ್ ಶ್ಲಾಚ್ಟ್’ ಎಂಬ ಹಾಗೆ ಇದೆ. – ನಾಲಗೆ ಹೊರಳುವುದಿಲ್ಲ. ಆ ಜರ್ಮನ್ ಕವಿತೆಯನ್ನು ಸ್ವತಃ ಪೈಯವರೇ ಮೂಲಕ್ಕೆ ಸಮೀಪತರವಾಗಿ ಮೂಲ ಬಂಧದಲ್ಲೇ ಇಂಗ್ಲಿಷಿಗೆ ಅನುವಾದಿಸಿ, ಅದಕ್ಕೆ ‘Prayer during the Battle’ ಎಂಬ ಶೀರ್ಷಿಕೆಯನ್ನು ಇರಿಸಿದ್ದಾರೆ. ಮೂಲದಲ್ಲಿರುವುದು ಐದೇ ಪದ್ಯಗಳಾದರೆ ಪೈಯವರು ಅವುಗಳ ಭಾವವನ್ನು ಹತ್ತುಪದ್ಯಗಳಿಗೆ ವಿಸ್ತರಿಸಿದ್ದಾರೆ. ಈ ವಿಸ್ತರಣೆ ಬೇಳೆ ಕಾಳುಗಳೇ ಇಲ್ಲದ ತಿಳಿಸಾರಿನಂತೆ ತೋರದ ಕೆನೆಮೊಸರಿನಂತೆ ಗಟ್ಟಿಯಾಗಿದೆ. ಪ್ರತ್ಯೇಕ ಪದ್ಯಗಳಲ್ಲಿ ಏಳು ಪಂಕ್ತಿಗಳಿದ್ದು ಕವಿತೆಯ ಬಂಧವೂ ಅತ್ಯಂತ ವಿಶಿಷ್ಟವಾಗಿದೆ. ಮೊದಲ ಪದ್ಯದ ಮೊದಲನೆಯ ಪಂಕ್ತಿ ‘ಕರೆವೆನಾ ನಿನ್ನನೊಡೆಯಾ’ ಎಂಬುದಾಗಿದೆ. ಕೊನೆಯದಾದ ಹತ್ತನೆಯ ಪದ್ಯದ ಕೊನೆಯ ಪಂಕ್ತಿಗೂ ‘ಕರೆವೆನಾ…..’ ಎಂದೇ ಇದೆ. ಹಾಗೆಯೇ ಮೊದಲ ಪದ್ಯದ ಕೊನೆಯ ಪಾದ ‘ನಿನಗೆ ಮಣಿ ಮಣಿವೆ ನೊಡೆಯಾ’ ಎಂದಿದೆ, ಅದು ಎರಡನೆಯ ಪದ್ಯದ ಕೊನೆಯ ಪಾದ ‘ನಿನಗೆ ಮಣಿ ಮಣಿವೆ ನೊಡೆಯಾ’ ಎಂದಿದೆ, ಅದು ಎರಡನೆಯ ಪದ್ಯದ ಮೊದಲ ಪಾದವಾಗುತ್ತದೆ. ಎರಡನೆಯ ಪದ್ಯದ ಅಂತಿಮ ಪಾದವೇ. ಮೂರನೆಯ ಪದ್ಯದಲ್ಲಿ ಪುನರಾವರ್ತನೆಯಾಗುತ್ತದೆ ಹೀಗಿದೆ ಪದ್ಯಗಳ ಸರಣಿ.

‘ಕೊಳಗುಳದಲ್ಲಿ’ ಎಂದರೆ ಯುದ್ದರಂಗದಲ್ಲಿ ವೀರನೊಬ್ಬ ದೇವರಲ್ಲಿ ಮಾಡುವ ಪ್ರಾರ್ಥನೆ ಕವಿತೆಯ ವಸ್ತು. ‘ಯುದ್ಧಕ್ಕೆ ದೇಹ ಬಲ ಮುಖ್ಯ, ಆದರೆ ವಿಜಯಕ್ಕೆ ದೈವಾನುಗ್ರಹ ಮುಖ್ಯ ತಮ’ವೆಂಬುದು ಕವಿತೆಯ ಆಶಯ. ‘ಹೋರಿ ಗೆದ್ದಾಗ ನಿನಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ; ಅಂತೆಯೇ ಕಾದಿ ಸಾಯುವಾಗ ನಿನ್ನ ನಾಮ ನನ್ನ ನಾಲಗೆಯಲ್ಲಿ ನಲಿಯುತ್ತಿರಲಿ’ ಎಂದು ಆ ಕಟ್ಟಾಳು ದೇವರಲ್ಲಿ ಪ್ರಾರ್ಥಿಸುತ್ತಾನೆ. ಕವಿತೆಯ ಆಶಯ ಪದ್ಯದಿಂದ ಪದ್ಯಕ್ಕೆ ಗೊಪುರ ಸದೃಶವಾಗಿ ಮೇಲು ಮೇಲಕ್ಕೆ ಏರುತ್ತದೆ. ದುರ್ಗಮ ದುರ್ಗದ ಕೊತ್ತಳದಲ್ಲಿ ನಿಂತ ಪ್ರೇಕ್ಷಣ ರಸಿಕ ನಾಲ್ದೆಸೆಗೆ ಕಣ್ಣು ಹಾಯಿಸುವಾಗ ಹೇಗೆ ರೋಮಾಂಚಿತನಾಗುತ್ತಾನೋ ಅದೇ ಅನುಭೂತಿ ಈ ಕವಿತೆಯನ್ನು ಓದಿ ಮುಗಿಸುವಾಗ ಸಹೃದಯನಿಗೂ ಆಗುತ್ತದೆ. ಗೋವಿಂದ ಪೈಯವರ ಕಾವ್ಯ ಭಂಡಾರಕ್ಕೆ ಹೆಬ್ಬಾಗಿಲಂತಿರುವ ‘ಕವಿ ಗೋವಿಮದ ಪೈ’ ಎಂಬ ಸೊಗಸಾದ ಒಂದು ಪುಸ್ತಕದಲ್ಲಿ, ಜಿ. ಪಿ. ರಾಜರತ್ನಂ ಅವರು ಈ ಕವಿತೆಯನ್ನೇ ಬಾಯ್ತುಂಬ ಬಣ್ಣಿಸಿ, ಇದು ಪೈಯವರ ಕವಿತೆಗಳಲ್ಲಿ “ಅ” (A1) ಎಂದು ಷರಾ ಬರೆದಿದ್ದಾರೆ.

ಇನ್ನು ಉಪಾಂತ್ಯದ ‘ಉಮರ್ ಖಯ್ಯಾಮ್’. ಈ ಅನುವಾದ ಫಿಟ್ಸ್ ಜೆರಾಲ್ಡ್ ಎಂಬ ಕವಿಯ ಆಂಗ್ಲ ಅನುವಾದವನ್ನು ಆಧರಿಸಿದ್ದಾಗಿದೆ. ಮೂಲದ ಎಪ್ಪತ್ತೈದು ಚೌಪದಿಗಳಲ್ಲಿ ಐವತ್ತನ್ನಷ್ಟೇ ಪೈಯವರು ಆರಿಸಿ ಅನುವಾದಿಸಿದ್ದಾರೆ. ಪ್ರಾಯಃ ಪಾರಸೀ ಕವಿ ಉಮರನನ್ನು ಕನ್ನಡಕ್ಕೇ ಅವತರಣಗೊಳಿಸುವ ಪ್ರಥಮ ಪ್ರಯತ್ನ ಒಂದೇ ಕಾಲಕ್ಕೆ (೧೯೩೦) ಇಬ್ಬರು ಕವಿ ವಿಭೂತಿಗಳಿಂದ ನಡೆಯಿತೆಂಬುದು ಒಂದು ವೈಚಿತ್ಯ್ರವೇ ಹೌದು. ಒಬ್ಬರು ಪೈಯವರಾದರೆ ಮತ್ತೊಬ್ಬರು ಡಿ.ವಿ.ಜಿಯವರು. ಡಿ.ವಿ.ಜಿಯವರ ‘ಉಮರಮನ ಒಸಗೆ’ಯಲ್ಲಿ ಸಮಗ್ರ ಪದ್ಯಗಳ ಅನುವಾದವಲ್ಲದೆ ಕವಿ-ಕಾವ್ಯಗಳನ್ನು ಕುರಿತಂತೆ ಸುದೀರ್ಘ ಪೀಠಿಕೆಯೂ ಇದೆ. ಇದು ಕಾವ್ಯಾಭ್ಯಾಸಿಗಳಿಗೆ ಅದು ಉಪಯುಕ್ತವಾಗಿದೆ. ಕಾವ್ಯ ಕುತೂಹಲಿಗಳು ಮೂಲದೊಂದಿಗೆ ಪೈ ಮತ್ತು ಡಿ.ವಿ.ಜಿಯವರ ಪದ್ಯಾನುವಾದಗಳನ್ನು ಹೋಲಿಸಿ ನೋಡಿ ಬೆಲೆ ಕಟ್ಟಬಹುದಾಗಿದೆ.

ಪೈಯವರು ಹೇಗೆ ‘ದೇಶ ವಿದೇಶ ಕಾವ್ಯಮಾರ್ಗ ಮಹಾರಥಿಕ’ರೋ ಹಾಗೆಯೇ ಅವರದು ಮತ ಪಂಥ ವಿದೂರವೂ ದೇಶ ಕಾಲಾತೀತವೂ ಆಗಿದ್ದ ವಿಶಾಲ, ಉದಾರ ಮನೋಧರ್ಮ. ಅದು ಅವರ ‘ಗೊಲ್ಗೊಥಾ’, ‘ವೈಶಾಖಿ’ಗಳಲ್ಲಿ ಸುವ್ಯಕ್ತವಾದರೆ ಅವುಗಳಿಗಿಂತ ಮೊದಲೇ ಪ್ರಕಟವಾದ ‘ಗಿಳಿವಿಂಡಿ’ನಲ್ಲಿ ಕವಿತೆಗಳಲ್ಲಿ ಸೂಚ್ಯವಾಗಿದೆ. ಅವರ ಪ್ರಪ್ರಥಮ ಆದಿಪ್ರಾಸ ರಹಿತ ಕವನ ‘ಹೊಲೆಯನು ಯಾರು’ ಎಂಬುದರಲ್ಲಿ ಭರತ ಕಂಡಕ್ಕೆ ಬಹುಕಾಲದಿಂದ ತಟ್ಟಿರುವ ಶಾಪ-ಅಸ್ಪ್ರಶ್ಯತೆಯ ನಿರಾಕರಣವಿದೆ. ಮೊದಲನೆಯ ವಿಶ್ವಸಮರದ ಸಂದರ್ಭದಲ್ಲಿ ಬಲಾಢ್ಯವಾಗಿದ್ದ ಇಟಾಲಿಯಾ ತುರ್ಕಿಸ್ತಾನದ ಮೇಲೆ ದಂಡು ದಾಳಿಯನ್ನು ನಡೆಯಿಸಿದಾಗ ಎಷ್ಟೋ ದೂರದಲ್ಲಿರುವ ಪೈಯವರ ಹೃದಯ ದ್ರವಿಸುತ್ತದೆ; ತುಕಿಯ ಹೀನ ದೀನ ಸ್ಥಿತಿಯನ್ನು ನೆನೆದು ಅವರ ಕಣ್ಣು ಹನಿಗೂಡುತ್ತದೆ; ಆ ರಾಷ್ಟ್ರದ ಪರವಾಗಿ, ಅದರ ಕ್ಷೇಮಕ್ಕಾಗಿ ಅವರು ದೇವರೊಡನೆ ಪ್ರಾರ್ಥನೆಯನ್ನೂ ಮಾಡುತ್ತಾರೆ! ‘ಯೇಸು-ಕೃಷ್ಣ’ ಎಂಬ ಕವಿತೆಯಂತೂ ಪೈಯವರ ಸರ್ವಧರ್ಮ ಸಮಭಾವಕ್ಕೂ ಅವರು ಮಾಡುವ ಸರ್ವದೇವ ನಮಸ್ಕಾರಕ್ಕೂ ಉತ್ತಮ ಉದಾಹರಣೆಯಾಗಿದೆ. ಆ ಕವಿತೆಯಲ್ಲಿ ಹನ್ನೆರಡು ಚೌಪದಿಗಳಿದ್ದು ಪ್ರತ್ಯೇಕ ಚೌಪದಿಯ ಪ್ರತಿಪಂಕ್ತಿಯಲ್ಲೂ ಕ್ರಿಸ್ತ ಮತ್ತು ಕೃಷ್ಣರ ಸಮೀಕರಣವನ್ನು ಅವರು ಚಮತ್ಕಾರಿಕವಾಗಿ ಸಾಧಿಸಿದ್ದಾರೆ. ಅವರ ಈ ಸಮೀಕರಣ ವಿಧಾನ ಸ್ವಾರಸ್ಯಕರವೂ ಆಗಿದೆ. ಸಾಲು ಸಾಲುಗಳಲ್ಲೂ ಕೃಷ್ಣ ಕಥೆಯೂ ಕ್ರಿಸ್ತ ಚರಿತ್ರೆಯೂ ಸಮ್ಮಿಳಿತವಾಗುತ್ತವೆ. ಕೊನೆಯಲ್ಲಿ ಪೈಯವರು ಕೇಳುತ್ತಾರೆ: ‘ಯದುನಾಥನೆ ಯೂದನಾಥನಲ್ಲವೇ?’ ‘ಹೌದು’ ಎನ್ನುವುದೇ ಉತ್ತರ!.

V

‘ಗಿಳಿವಿಂಡು’ ಪೈಯವರ ಪ್ರಥಮ ಕವನ ಸಂಗ್ರಹವಾದದ್ದರಿಂದ ನಾಲ್ಕು ಮಾತು ಹೆಚ್ಚಾಗಿ ಹೇಳಿದೆ. ‘ನಂದಾದೀಪ’ ಮತ್ತು ‘ಹೃದಯರಂಗ’ಗಳನ್ನು ಕುರಿತು ನಾನು ವಿಸ್ತರಿಸುವುದಿಲ್ಲ. ‘ನಂದಾದೀಪ’ ಮೂಲತಃ ಒಂದು ಶ್ರದ್ಧಾಸುಮನ ಗುಚ್ಛ; – ಎಂದರೆ ಪತ್ನೀವಿಯೋಗ (೧೯೨೭) ದುಃಖದಿಂದ ಪ್ರೇರಿತವಾದದ್ದು. ಅಲ್ಲಿರುವ ಕವಿತೆಗಳೆಲ್ಲ ಒಂದು ಸಂಗ್ರಹ ರೂಪದಲ್ಲಿ ಪ್ರಕಟವಾದದ್ದು ೧೯೨೮ರಲ್ಲಿ, ಪೈಯವರ ಮರಣಾಂತರದಲ್ಲಾದರೂ, ಅವುಗಳ ರಚನೆಗೆ ಅವರು ೧೯೨೮ರ ಹಿಂದೆಯೇ ಕೈಯಿಕ್ಕಿದರು. ಆ ಸಂದರ್ಭವನ್ನು ಕುರಿತು ಅವರು: “ನನ್ನ ಸಹಧರ್ಮಿಣಿಯ ನೆನಪಿಗೆ ಬಾಷ್ಪಾಂಜಲಿಯಾಗಿ ಕೆಲವು ಕವಿತೆಗಳನ್ನು ರಚಿಸಬೇಕೆಂದು ಅದೇ ಮೇ ತಿಂಗಳಲ್ಲಿ ಬರೆಯ ತೊಡಗಿದೆ. ಅಂದು ಅವಳ ಅಗಳಿಕೆಯಿಂದ ನನ್ನಲ್ಲಿ ಹೊತ್ತಿ, ಮುಂದು ನಾನು ಇದ್ದಿರುವನಕ ನಂದದ ಶೋಕಾನಲಯದಿಂದ ದೇವರ ಮುಂದೆ ಹಚ್ಚಿರಿಸಿದ ದೀಪ ಎಂಬ ಅರ್ಥದಲ್ಲಿ ಆ ಕವಿತೆಗಳನ್ನು ‘ನಂದಾದೀಪ’ ಎಂದೆ…” ಎಂಬುದಾಗಿ “ಕಂನಾಡ ಸಾಹಿತ್ಯಜ್ಞರ ಆತ್ಮಕಥನ” (೧೯೩೩) ದಲ್ಲಿರುವ ತಮ್ಮ ಲೇಖನದಲ್ಲಿ ಹೇಳಿದ್ದಾರೆ. ಅದೇ ‘ಆತ್ಮಕಥನ’ದಲ್ಲಿ ಪೈಯವರು ಇನ್ನೂ ಒಂದು ಮಾತು ಆಡಿದ್ದಿದೆ. ಆ ಮಾತು – “ಹಕ್ಕಿ ಉಲಿಯುವುದು ಹಿಗ್ಗಿನಲ್ಲಿ, ನಾನು ಹಾಡುವುದು ದುಗುಡದಲ್ಲಿ” ಎಂಬುದನ್ನು ಈ ಹಿಂದೆಯೇ ಉಲ್ಲೇಖಿಸಿದ್ದಾಗಿದೆ. ತಮ್ಮ ಮಡದಿಯ ಅಗಲಿಕೆಯ ಕಾವು-ನೋವುಗಳು ಹೃತ್ಯಂತಿಯನ್ನು ಮೀಟಿದಾಗಲೆಲ್ಲ ಪೈಯವರು ಸೂಸಿದ ಕಣ್ಣಹನಿಗಳೇ ಅವರ ಲೇಖನಿಯಿಂದ ಹೊಮ್ಮಿ ಬಂದು, ಪೋಣಿಕೆಗೊಂಡ ಕವನಕುಸುಮಗಳಾದುವು. ಈ ಸಂಗ್ರಹದಲ್ಲಿರುವ ಮೂವತ್ತೇಳು ಕವಿತೆಗಳಿಗೆ ವಿಯೋಗ ದುಃಖವೇ ಸ್ಥಾಯಿಯಾದರೂ, ಎಲ್ಲವುಗಳಲ್ಲೂ ಅಗಲಿಕೆಯ ನೋವೇ ಮಡುಗಟ್ಟಿದೆ ಎಂಬ ಅರ್ಥವಲ್ಲ. ಅನಾನ್ಯ ಭಾವಗಳೂ ಘನೀಕರಿಸಿದ್ದನ್ನು ಅಲ್ಲಲ್ಲಿ ಮನಗಾಣಬಹುದು. ಒಂದು ಆರ್ತತೆ, ಇನ್ನೊಂದು ಆರ್ದ್ರತೆ ಮತ್ತೊಂದು ಯಾಚನೆ, ಮಗದೊಂದು ಪ್ರಾರ್ಥನೆ ಹೀಗಿದೆ – ಅವುಗಳಲ್ಲಿ ಉದ್ಭುದ್ಧವಾಗುವ ಭಾವ ಪರಂಪರೆ.

VI

ಒಂದು ಕಾಲದಲ್ಲಿ ಕನ್ನಡವೂ ಸೇರಿದಂತೆ ಭಾರತೀಯ ವಾಙ್ಮಯದಲ್ಲಿ ಮಹಾಕಾವ್ಯಗಳಿದ್ದುವು, ಅವುಗಳಿಗಿಂತ ಸ್ವಲ್ಪ ಸಣ್ಣದಾದ ಖಂಡ ಕಾವ್ಯಗಳೂ ಇದ್ದುವು. ಕಾಲಾಂತರದಲ್ಲಿ ಇಂಗ್ಲಿಷ್ ಪ್ರಭಾವದಿಂದ ‘ಕಥನ ಕಾವ್ಯ’ಗಳು ಕಾಣಿಸಿಕೊಂಡವು. ಅವು ಇಂಗ್ಲಿಷಿನಲ್ಲಿ ಪ್ರಚುರವಾಗಿರುವ Story ಅಥವಾ Narrative Poem ಸಂವಾದಿಯಾಗಿವೆ. ಅವುಗಳನ್ನು ಪದ್ಯರೂಪದಲ್ಲಿರುವ ನೀಳ್ಗತೆಗಳು ಎನ್ನಬಹುದು. ಇಂಗ್ಲಿಷಿನಲ್ಲಿ ಜಾಫ್ರಿ ಛಾಸರ್ (‘ಕ್ಯಾಂಟರ್ಬರಿ ಟೇಲ್ಸ್’) ಮ್ಯಾಥ್ಯೂ ಅರ್ನಾಲ್ಡ್ (‘ಸೊಹ್ರಾಬ್‌ರುಸ್ತುಂ’) ಬ್ರೌನಿಂಗ್ (‘ಪೈಡ್‌ಪೈಪರ್ ಆಫ್‌ಹ್ಯಾಮಲಿನ್‌’) ವರ್ಡ್ಸವರ್ಥ್ (‘ಮೈಖೇಲ್’, ‘ಲಾವೋದಾಮಿಯಾ’) ಮೊದಲಾದವರ ಕಥನ ಕಾವ್ಯಗಳು ಸುಪ್ರಸಿದ್ಧವಾಗಿವೆ. ಹಿಂದೆ ಕನ್ನಡದಲ್ಲಿ ಇಂತಹವು ಇರಲಿಲ್ಲವೆಂದಲ್ಲ. ‘ಗೋವಿನ ಕಥೆ’, ‘ಕೆರೆಗೆ ಹಾರ’ ಮುಂತಾದುವು ಕಥನ ಕವನಗಳಿಗೆ ಉತ್ಕೃಷ್ಟ ಉದಾಹರಣೇಗಳು. ಆದರೆ ಆ ಕಾಲದಲ್ಲಿ ಅವುಗಳನ್ನು ‘ಕಥನ ಕಾವ್ಯ’ ಎಂದು ಕರೆಯುತ್ತಿರಲಿಲ್ಲ ಅಷ್ಟೇ. ಕಳೆದ ಶತಮಾನದ ನವೋದಯದ ಸಂದರ್ಭದಲ್ಲಿ – ಹಳತೇ ಆಗಿದ್ದರೂ – ಇಂಗ್ಲಿಷ್ ಪ್ರೇರಣೆಯಿಂದ, ಹೊಸ ರೂಪದಲ್ಲಿ ಕನ್ನಡದಲ್ಲಿ ಕಾಣಿಸಿಕೊಂಡ ಕಾವ್ಯ ಪ್ರಕಾರಗಳಲ್ಲಿ ‘ಕಥನ ಕಾವ್ಯ’ವೂ ಒಂದು ಮುಖ್ಯವಾದ ಬೆಳೆ. ಪಂಜೆಯವರ ‘ಕಡೆಕಂಜಿ’, ‘ಡೊಂಬರ ಚೆನ್ನಿ’, ‘ನಾಗಣ್ಣನ ಕನ್ನಡಕ’ಗಳೂ, ಮಾಸ್ತಿಯವರ ‘ನವರಾತ್ರಿ’ ಸಂಪುಟದಲ್ಲಿರುವ ನೀಳ್ಗವನಗಳೂ ಹಾಗೆಯೇ ಅವರ ‘ಸ್ಥಳಗಳ ಹೆಸರು’, ‘ಮಾಂಬಿ’, ‘ಚಿಕ್ಕಮಲ್ಲಮ್ಮ’ ಮೊದಲಾದುವೂ ಬೇಂದ್ರೆಯವರ ‘ಕೃಷ್ಣಾಕುಮಾರಿ’, ಕಡೆಂಗೋಡ್ಲು ಅವರ ‘ನಲ್ಮೆ’ ಮತ್ತು ಸೇಡಿಯಾಪು ಅವರ ‘ಚಂದ್ರಖಂಡ’ದಲ್ಲಿರುವ ಕಥನ ಕಾವ್ಯಗಳೂ ಆನಂದಕಂದರ ‘ವಿರಹಿಣಿ’ ಮೊದಲಾದವೂಗಳೂ ಕಳೆದ ಶತಮಾನದ ಪೂರ್ಣರ್ಧದಲ್ಲಿ ಪ್ರಕಟವಾದವು. ಅದೇ ಕಾಲದಲ್ಲಿ ಕುವೆಂಪು ಅವರು ‘ಕಥನ ಕವನಗಳು’ ಎಂಬ ಹೆಸರಲ್ಲೇ ಒಂದು ಪುಸ್ತಕವನ್ನು ಪ್ರಕಟಿಸಿದರು. ಪೈಯವರ ‘ಗೊಲ್ಗೊಥಾ’ ಮತ್ತು ‘ವೈಶಾಖಿ’ ಈ ಕಾವ್ಯ ಪ್ರಕಾರದ ಎರಡು ಶ್ರೇಷ್ಠ ನಿದರ್ಶನಗಳು. ಪೈಯವರು ಸಾಹಿತ್ಯ ಸ್ವರೂಪವನ್ನು ಕುರಿತಂತೆ ಬೇರೊಂದು ಸಂದರ್ಭದಲ್ಲಿ ಬಳಸಿದ ವಿಶೇಷಣಗಳನ್ನು ಅವರದೇ ಕಾವ್ಯದ್ವಯಕ್ಕೆ ಅನ್ವಯಿಸಿ ಹೇಳುವುದಿದ್ದರೆ ಒಂದು ‘ಮಿಂಚಿನ ಬರೆ’ಯಂತಿದ್ದರೆ ಮತ್ತೊಂದು ‘ಚಿನ್ನದ ಗೆರೆ’ಯಾಗಿದೆ. ಅಥವಾ ರಾಜರತ್ನಂ ಹೇಳಿದಂತೆ ಒಂದು ‘ಕಾವ್ಯಾಂಗ’ವಾಗಿ ಕಂಗೊಳಿಸಿದರೆ ಮತ್ತೊಂದು ‘ಭವ್ಯಾಂಗ’ವಾಗಿ ಬೆಳಗುತ್ತದ.

‘ಗೊಲ್ಗೊಥಾ’ ಮತ್ತು ‘ವೈಶಾಖಿ’ ಎಂಬ ಶೀರ್ಷಿಕೆಗಳೇ ಸಾಂಕೇತಿಕವಾಗಿವೆ. ಏಸುಕ್ರಿಸ್ತನನ್ನು ಗೊಲ್ಗೊಥಾ ಬೆಟ್ಟದಲ್ಲಿ ಶಿಲುಬೆಗೆ ಏರಿಸಲಾದದ್ದರಿಂದ, ಮೊದಲಿನದ್ದಕ್ಕೆ ಅದೇ ಶೀರ್ಷಿಕೆ. ಗೌತಮ ಬುದ್ಧ ಜನಿಸಿದ್ದು, ಆತನಿಗೆ ಜ್ಞಾನೋದಯವಾದದ್ದು ಮತ್ತು ಆತ ಶರೀರ ತ್ಯಾಗ ಮಾಡಿದ್ದು ಈ ಮೂರೂ ವೈಶಾಖ ಶುಕ್ಲ ಪೂರ್ಣಿಮೆಯಂದೇ ಆದದ್ದರಿಂದ ಮತ್ತೊಂದಕ್ಕೆ ‘ವೈಶಾಖಿ’ ಎಂಬ ಶೀರೋನಾಮೆ. ‘ಗೊಲ್ಗೊಥಾ’ ಏಸುಸ್ವಾಮಿಯ ‘ಮೃತಿನಾಟಕ’ದ ಅಂತಿಮ ದೃಶ್ಯವಾಗಿದ್ದರೆ ‘ವೈಶಾಖಿ’ ತಥಾಗತ ಬುದ್ದನ ‘ಪರಿನಿರ್ವಾಣ ನಾಟಕ’ದ  ಅಂತಿಮ ಅಂಕವಾಗಿದೆ. ಮೊದಲನೆಯದರಲ್ಲಿ ಒಂದು ಶುಕ್ರವಾರದ ಸೂರ್ಯೋದಯದಿಂದ ಸೂರ್ಯಾಸ್ತ ಚಂದ್ರೋದಯದ ವರೆಗಿನ ಹೃದಯವಿದಾರಕ ಘಟನಾವಳಿ ವರ್ಣಿತವಾಗಿದೆ. ಎರಡನೆಯದರಲ್ಲಿ ಚತುರ್ದಶಿಯ ಚಂದ್ರಾಸ್ತ ಅನಂತರ ಸೂರ್ಯೋದಯ, ಪೂರ್ಣಿಮೆಯ ಚಂದ್ರೋದಯ, ಮತ್ತೆ ಚಂದ್ರಾಸ್ತಮಾನಗಳವರೆಗಿನ ಗಂಭೀರ-ಶಾಂತಸನ್ನಿವೇಶಗಳು ಚಿತ್ರಿತವಾಗಿವೆ. ‘ಗೊಲ್ಗೊಥಾ’ದಲ್ಲಿ ಮುನ್ನೂರ ಎಪ್ಪತ್ತಾರು ಪಂಕ್ತಿ; ‘ವೈಶಾಖಿ’ಯಲ್ಲಿ ಏಳುನೂರ ಮೂವತ್ತೆರಡು ಪಾದ. ಎರಡೂ ಸರಳ ರಗಳೆಯಲ್ಲಿವೆ. ಪೈಯವರು ಅದನ್ನು ‘ಝಂಪೆ’ ಎಂದು ಕರೆದಿದ್ದಾರೆ.

ಈ ಎರಡೂ ಕಾವ್ಯಗಳ ಆಕಾರ ಸಣ್ಣದು, ಆದರೆ ಅಂತಸ್ಸತ್ವ ದೊಡ್ಡದು. ಎರಡೂ ಕಾವ್ಯಗಳಲ್ಲಿ ಪೈಯವರ ದೃಷ್ಟಿಯ ವೈಶಾಲ್ಯದೊಂದಿಗೆ ಅಧ್ಯಯನದ ಆಗಾಧತೆಯ ಪರಿಚಯವೂ ನಮಗಾಗುತ್ತದೆ. ‘ಗೊಲ್ಗೊಥಾ’ವನ್ನು ಬರೆಯಬೇಕಿದ್ದರೆ ಪೈಯವರು ಜಾನ್, ಮ್ಯಾಥ್ಯೂ, ಮಾರ್ಕ್‌ಮತ್ತು ಲ್ಯೂಕ್‌ರ ಸುವಾರ್ತೆ (Gospel)ಗಳನ್ನು ಆಮೂಲಾಗ್ರವಾಗಿ ಪರಿಶೀಲನೆ ಮಾಡಿ, ವಿಷಯವನ್ನು ಸಂಗ್ರಹಿಸಿದ್ದಾರೆ. ಅದೇ ‘ವೈಶಾಖಿ’ಯ ರಚನೆಗೆ ಬೌದ್ಧ ಧರ್ಮಸಂಬಂಧಿಯಾದ ಮಹಾಪರಿನಿರ್ವಾಣ, ಮಹಾ ಮಂಗಲ, ಧರ್ಮಚಕ್ರ ಪ್ರವರ್ತನವೇ ಮೊದಲಾದ ಸೂತ್ರಗಳನ್ನು ಆಧರಿಸಿದ್ದಾರೆ. ಎರಡೂ ಕಾವ್ಯಗಳಲ್ಲಿ ಬರುವ ಎಷ್ಟೋ ಪದ ವಿಶೇಷಗಳೂ, ಉದ್ಧರಣಗಳೂ ಪೈಯವರ ಅಧ್ಯಯನ ಶೀಲತೆಗೆ ಅಧಿಕೃತತೆಯ ಮುದ್ರೆಗಳನ್ನು ಒತ್ತುತ್ತವೆ. ‘ಗೊಲ್ಗೊಥಾ’ ಸಣ್ಣ ಕಾವ್ಯ ನಿಜ, ಆದರೆ ಅದು ಆಸಕ್ತ  ಓದುಗನನ್ನು ಗಾಢವಾಗಿ ಪ್ರಭಾನಿಸಬಲ್ಲದು ಎಂಬುದಕ್ಕೆ ಎರಡು ನಿದರ್ಶನಗಳನ್ನು ಜಿ. ಪಿ. ರಾಜರತ್ನಂ ಅವರ ‘ಕವಿ ಗೋವಿಂದ ಪೈ’ ಎಂಬ ಪುಸ್ತಕದಿಂದ ಉಲ್ಲೇಖಿಸುತ್ತಿದ್ದೇನೆ. ಒಂದು : ಯಾವುದೋ ಒಂದು ಸಭೆಯಲ್ಲಿ ರಾಜರತ್ನಂ ‘ಗೊಲ್ಗೊಥಾ’ವನ್ನು ಕುರಿತು ಮಾಡಿದ ಉಪನ್ಯಾಸವನ್ನು ಕೇಳಿದ ಕ್ರಿಶ್ಚಿಯನ್ ಧರ್ಮ ಗುರುವೊಬ್ಬರು ಅವರ ಹತ್ತಿರ ಬಂದು ‘ಈ ಕಾವ್ಯವನ್ನು ಬರೆದವರು ಕ್ರಿಶ್ಚಿಯನ್ನರೇ’ ಎಂದು ಕೇಳಿದರಂತೆ. ‘ಅಲ್ಲ’ ಎಂದು ರಾಜರತ್ನಂ ಹೇಳಿದಾಗ ಅವರು ತುಂಬ ಆಶ್ಚರ್ಯ ಪಟ್ಟು, “ಕ್ರಿಶ್ಚಿಯನ್ ಅಲ್ಲದವರಿಗೆ ಇದು ಹೇಗೆ ಸಾಧ್ಯವಾಯಿತು” ಎಂದು ಉದ್ಗರಿಸಿದಂತೆ! ಇನ್ನೊಂದು : ಅಂತಹುದೇ ಇನ್ನೊಂದು ಸಭೆಯಲ್ಲಿ, ಒಬ್ಬ ಶ್ರೋತೃ ರಾಜರತ್ನಂ ಅವರ ಬಳಿ ಸಾರಿ “ಈ ಕಾವ್ಯವನ್ನು ಕುರಿತು ಇನ್ನೆಲ್ಲೂ ಭಾಷಣ ಮಾಡಬೇಡಿ, ಅದರಿಂದ ಕ್ರಿಸ್ತ ಪಾದ್ರಿಗಳಿಗೆ ಅವರ ಮತ ಪ್ರಚಾರಕ್ಕೆ ಅನುಕೂಲವಾಗುತ್ತದೆ” ಎಂದು ಹೇಳಿದರಂತೆ! (‘ಕವಿ ಗೋವಿಂದ ಪೈ’, ಪು. ೪೯).

VII

ಗೋವಿಂದ ಪೈಯವರ ಬಿಡಿ ಕವಿತೆಗಳಿರಲಿ, ಖಂಡ ಅಥವಾ ಕಥನ ಕಾವ್ಯಗಳೇ ಆಗಲಿ. ಅವುಗಳಲ್ಲಿ ಯಾವುದಾದರೊಂದು ಸತ್ವವೋ, ತತ್ವವೋ, ಸಂದೇಶವೋ ಇದ್ದೇ ಇರುತ್ತದೆ. ವಿಕಾರ ಕೃತಿ ಎಂಬಂತಹವು ಇಲ್ಲವೇ ಇಲ್ಲ. ಅಲ್ಪ, ನಗಣ್ಯ ಎಂದು ತೋರುವ ವಸ್ತು ವಿಷಯಗಳೂ ಸಹ ಪೈಯವರ ಬಗೆಯ ಚಿಪ್ಪಿನಲ್ಲಿ ಮುತ್ತಿನಂತೆ ಹರಳು ಗಟ್ಟಿ ಹೊಳೆಯುತ್ತವೆ. ಶಾಕುಂತಲ ನಾಟಕದ ಸಪ್ತಮಾಂಕದಲ್ಲಿ ದುಷ್ಯಂತ ಮಹಾರಾಜ ಹೇಮಕೂಟದಿಂದ ಸತೀಸುತ ಸಹಿತವಾಗಿ ಹಸ್ತಿನಾವತಿಗೆ ಇಳಿದು ಬರುವಾಗ ಕೆಳಗಿನ ಭೂಮಂಡಲ ಎಷ್ಟೊಂದು ಮನೋಹರವಾಗಿ ಕಂಡಿತೆಂಬ ವರ್ಣನೆಯಿದೆ. ಪೈಯವರಂತಹ ಉದಾರ ಚಿತ್ತರೂ ಉದಾತ್ತ ಚರಿತರೂ ಎತ್ತರದಲ್ಲಿ ನಿಂತು ಎಲ್ಲವನ್ನೂ ಕಾಲದೇಶಾತೀತವಾಗಿ ಕಾಣಬಲ್ಲವರು, ಅವುಗಳನ್ನು ಸುಭಗ-ಸುಂದರವಾಗಿ ಕಂಡರಸಬಲ್ಲವರು. ಅವರ ಎದೆಯಗಲಕ್ಕೆ ಬೆಳಕಿಂಡಿಗಳಂತಿರುವ ಕೆಲವು ಕಿರುಗವನಗಳನ್ನು ಈ ಹಿಂದೆ ಹೆಸರಿಸಿದ್ದಾಗಿದೆ. ಅವರ ಎರಡು ನೀಳ್ಗವನಗಳು ಎಲ್ಲವಕ್ಕೂ ಮಿಗಿಲಾದ ರನ್ನಗನ್ನಡಿಗಳೇ ಆಗಿವೆ. ‘ಗೊಲ್ಗೊಥಾ’ದ ಅರ್ಪಣ ಪುಟದಲ್ಲಿ “ನನ್ನ ತಮ್ಮಂದಿರ ಮುದ್ದು ಮಕ್ಕಳಿಗೆ” ಎಂದು ಹೇಳಿರುವ ಪೈಯವರು,

ದೇವರೆಂಬುದೆ ಸತ್ಯ, ಸತ್ಯವೆಂಬುದೆ ದೇವ
ರೆಲ್ಲ ರಥಕೊಂದೆ ಪಥ ತತ್ತ್ವವಿದೆ ಭಾವ್ಯಂ
ಇಂತಖಿಲ ಧರ್ಮಗಳೊಳೇಕೆ ದೇವನನೋವ
ಲೆಂದು ಮಕ್ಕಳಿರ ನಿಮಗಿತ್ತೆನೀ ಕಾವ್ಯಂ

ಎಂಬ ಉನ್ನತ ಸಂದೇಶವೊಂದನ್ನು ಸಾರಿದ್ದಾರೆ. ಬೆಳೆಯುವ ಮಕ್ಕಳ ಎದೆಯ ಹೂದೋಟಗಳಲ್ಲಿ ಇಂತಹ ಉದಾತ್ತವಿಚಾರಗಳ ಬೀಜವನ್ನು ಬಿತ್ತಿದರೆ ಅವು ಖಂಡಿತವಾಗಿಯೂ ಕಾಲಾಂತರದಲ್ಲಿ ಹುಲುಸಾಗಿ ಬೆಳೆದು ಹೂ, ಕಾಯಿ, ಹಣ್ಣುಗಳಿಂದ ತುರುಗುವುದರಲ್ಲಿ ಸಂದೇಹವೇನೂ ಇಲ್ಲ. ಪೈಯವರು ಯಾವಜ್ಜೀನವೂ ಇಂತಹ ಸುವಿಚಾರಗಳನ್ನು ಮೆಯ್ಗೂಡಿಸಿಕೊಂಡವರಾದುದರಿಂದಲೇ ‘ಗೊಲ್ಗೊಥಾ’, ‘ವೈಶಾಖಿ’ಗಳಂತಹ ಕಾವ್ಯರಚನೆ ಅವರಿಗೆ ಸಾಧ್ಯವಾಯಿತು. ಇಲ್ಲೇ ಇನ್ನೂ ಒಂದು ಮಾತು: ಪೈಯವರಿಗೆ ಈ ಯಮಳ ಕಾವ್ಯಗಳಂತೆಯೇ ಇಂತಹ ಇನ್ನೂ ಎರಡು ಕಾವ್ಯಗಳನ್ನು ಬರೆಯುವ ಆಶಯವೂ ಇತ್ತು ಅವುಗಳೆಂದರೆ ಭಗವಾನ್ ಶ್ರೀಕೃಷ್ಣನ ಶರೀರ ತ್ಯಾಗವನ್ನು ಚಿತ್ರಿಸುವ ‘ಪ್ರಭಾಸ’ ಮತ್ತು ಮಹಾತ್ಮಾಗಾಂಧಿಯ ಅಂತಿಮ ದಿನವನ್ನು ವರ್ಣಿಸುವ ‘ದೇಹಲಿ’. ಈ ಶೀರ್ಷಿಕೆಗಳೂ ‘ವೈಶಾಖಿ’. ‘ಗೊಲ್ಗೊಥಾ’ಗಳಂತೆಯೇ ಧ್ವನಿಪೂರ್ಣವಾಗಿವೆ. ಆದರೆ ಈ ಎರಡೂ ಕವಿಯ ಸಂಕಲ್ಪಮಾತ್ರವಾಗಿಯೇ ಉಳಿದು ಕನ್ನಡಿಗರಿಗೆ ಅವುಗಳನ್ನು ಪಡೆಯುವ ಭಾಗ್ಯವಿಲ್ಲದಾಯಿತು ಎಂಬುದು ಮಾತ್ರ ವಿಷಾದನೀಯ.[1]

VIII

ಕೊನೆಯದಾಗಿ ಪೈಯವರ ಕಾವ್ಯ ಸ್ವರೂಪವನ್ನು ಎರಡು ಮಾತು. ಜಿ. ಪಿ. ರಾಜರತ್ನಂ ಅವರು ತಮ್ಮ ‘ಕವಿ ಗೋವಿಂದ ಪೈ’ ಎಂಬ ಪುಸ್ತಕದಲ್ಲಿ ಆ ಕುರಿತು ಹೇಳಿದ್ದನ್ನೇ ಇಲ್ಲಿ ಉಲ್ಲೇಖಿಸಿದರೆ ಸಾಕಾದೀತು : “ಗೋವಿಂದ ಪೈಗಳ ಕವನಗಳು ಓದಿಕೊಂಡರೆ ಕಿವಿ ತುಂಬ ಇರುತ್ತವೆ; ಅರ್ಥ ಮಾಡಿಕೊಂಡರೆ ಮನಸ್ಸು ತುಂಬಿ ಬರುತ್ತದೆ” ಎಂದು ಹೇಳುವ ರಾಜರತ್ನಂ “ಆದರೆ ಬೇಗ ಅರ್ಥ ಆಗದಂತೆ ತಡೆ ಬುರುವುದು ಅವರು ಅನಾಯಾಸವಾಗಿ ಬಳಸುವ ಕನ್ನಡ ಪಗಳಿಂದ” ಎಂಬ ಟಿಪ್ಪಣಿಯನ್ನೂ ಸೇರಿಸಿದ್ದಾರೆ. ಅದು ನಿಜ. ಆದರೆ ಅರ್ಥ ಆಗದೇ ಇರುವುದಕ್ಕೆ ಕಾರಣ ಪೈಯವರು ಮಾಡುವ ಕ್ಲಿಷ್ಟ ಅಥವಾ ಅಪರಿಚಿತ ಪದ ಪ್ರಯೋಗ, ನಮ್ಮ ಪರಿಮಿತವಾದ ಪದಸಂಪತ್ತು ಮಾತ್ರವೇ ಅಲ್ಲ; ಸಹ ಒಂದು ಕಾರಣ ಎಂದೂ ಹೇಳಬೇಕಾಗುತ್ತದೆ. ಪೈಯವರದು ಅದ್ಬುತವಾದ ಭಾಷಾಪ್ರಭುತ್ವ ಮತ್ತು ಶಬ್ದ ಸಂಗ್ರಹ. ಸಂದರ್ಭಕ್ಕೆ ಸಮುಚಿತವೂ ಅರ್ಥ ಭಾವ ಸಮುಜ್ವಲಕಾರಕವೂ ಆಗಿರುವ ನುಡಿಗಳನ್ನೂ ನುಡಿಗಟ್ಟುಗಳನ್ನೂ ಅವರು ಎಲ್ಲೆಲ್ಲಿಂದಲೋ ಅನಾಯಾಸವಾಗಿ ಆರಿಸಿ ತಂದು ಅಪ್ರಯತ್ನವಾಗಿ ಬಳಸಬಲ್ಲವರು. ಅಷ್ಟೇ ಅಲ್ಲ, ಪ್ರಾಚೀನ ಪದಗಳಿಗೆ ನವೀನ ರೂಪಧಾರಣೆ ಮಾಡುವುದು, ಅನೇಕಾರ್ಥಗಳಲ್ಲಿ ಅವನ್ನು ಪ್ರಯೋಗಿಸುವುದು, ನೂತನ ಪದಗಳನ್ನು ಟಂಕಿಸುವುದು, ಇವೆಲ್ಲ ಅವರೊಬ್ಬ ‘ಶಬ್ದಬ್ರಹ್ಮ’ ಎಂಬುನ್ನು ನಿದರ್ಶಿಸುತ್ತವೆ. ಅವರದೊಂದು ಕವಿತೆಯಲ್ಲಿ ‘ವೆರಂ’ ಎಂಬ ಪದಪ್ರಯೋಗವಿದೆ. ಅದನ್ನು ಕೆಲವರು ‘ವರಂ’ ಎಂದರೆ ತನಕ, ವರೆಗೆ (ಅನ್ನೆವರಂ, ಇನ್ನೆವರಂ) ಎಂದು ಭ್ರಮಿಸಬಹುದಾಗಿದೆ. ಆದರೆ ಪೈಪದಕೋಶದಲ್ಲಿ ಅದಕ್ಕೆ ‘ನಿಸ್ಸಂದೇಹ’ ಎಂದು ಅರ್ಥ. ಹಾಗೆಯೇ ಇನ್ನೊಂದೆಡೆ ‘ಅರಬಿಂದನೊಂದು’ ಎಂಬುದರ ಬಳಕೆಯಿದೆ. ಇದು ಮಹರ್ಷಿ ಅರವಿಂದ ಘೋಷರಿಗೆ ಸಂಬಂಧಸಿದ್ದೇನೋ ಎಂಬ ಸಂದೇಹವಾದೀತು. ಪೈಯವರದು ಆ ಅರ್ಥ ಅಲ್ಲ, ‘ಅರಬು’ ಎಂದರೆ ‘ಅಜ್ಞಾನ’ ಎಂಬ ಅರ್ಥ. ಮಗದೊಂದೆಡೆ ಅವರು ‘ಸುರಿಗೆವೋದಂ ತೇಗ’ ಎನ್ನುತ್ತಾರೆ. ಇದೇನು ತೇಗ? – ವೃಕ್ಷ ವಿಶೇಷವೇ? ಸರ್ವಥಾ ಅಲ್ಲ. ಸಿಖ್ಖರ ಒಂಬತ್ತನೆಯ ಗುರು ತೇಗ (ಅಥವಾ ತೇಜ) ಬಹುದೂರವನ್ನು ಕುರಿತದ್ದು ಅದು ಸುರಿಗೆ (ಎಂದರೆ ಕತ್ತಿ)ಯಿಂದ ಅವನನ್ನು ಇರಿದು ಕೊಲ್ಲಲಾಯಿತು ಎಂಬುದನ್ನು ಆ ಸೊಲ್ಲು ಹೇಳುತ್ತದೆ. ಆಸಕ್ತರು ಕುತೂಹಲ ಶಮನಾರ್ಥ ಪ್ರೊ. ಎ. ವಿ. ನಾವಡರು ಸಂಪಾದಿಸಿರುವ ಗೋವಿಂದ ಪೈ ಪದ ಪ್ರಯೋಗ ಕೋಶಎಂಬ ಉಪಯುಕ್ತ ಗ್ರಂಥವನ್ನು ನೋಡಬಹುದು. ಹಾಗೆ ನೋಡಿದಾಗ ಪೈಯವರ ಶಬ್ದ ಸಾಮ್ರಾಜ್ಯ ಹೇಗೆ ಅಸೀಮವಾದದ್ದು ಎಂಬುದು ಅವರಿಗೆ ಮನವರಿಕೆಯಾದೀತು. ನಮಸ್ಕಾರ.

 


[1] ಪೈಯವರು ‘ಪ್ರಭಾಸ’ಕ್ಕೆ ಶ್ರೀಕಾರವನ್ನೂ ಬರೆದಿದ್ದರು. ಆ ಕಾವ್ಯ ಸಮುದ್ರ ವರ್ಣನೆಯಿಂದ ಆರಂಭವಾಗುವುದಿತ್ತು ಎಂಬುದನ್ನು ಸೂಚಿಸುವ ‘ಉರುಳುರುಳು ಸಾಗರವೇ ಮುನ್ನೀರಿನಾಗರವೇ…’ ಎಂಬಂತಹ ಕೆಲವು ಪಂಕ್ತಿಗಳು ಲಭ್ಯವಾಗಿವೆ.