ಕಳೆದ ಶತಮಾನದ ಎರಡನೆಯ ದಶಕದಿಂದ ತೊಡಗಿ, ತಾವು ವಿಧಿವಶವಾಗುವ ೧೯೨೫ರ ತನಕ, ಎಂದರೆ ಸುಮಾರು ಅರುವತ್ತು ವರ್ಷಗಳಿಗಿಂತಲೂ ಹೆಚ್ಚಿನ ಅವಧಿಯಲ್ಲಿ ಬಹುವಿಧವಾದ ಗ್ರಂಥರಚನೆಯಿಂದ ಕನ್ನಡ ವಾಙ್ಮಯವನ್ನು ಶ್ರೀಮಂತಗೊಳಿಸಿದ ಧೀಮಂತ ಸ್ಮರಣೀಯರಲ್ಲಿ ಡಿ.ವಿ. ಗುಂಡಪ್ಪನವರು ಅಗ್ರಮಾನ್ಯರು. ಅವರ ವಾಙ್ಮಯದ ವೈಶಿಷ್ಟ್ಯವೆಂದರೆ ವಿಷಯ ವೈವಿಧ್ಯ ಮತ್ತು ವಿಸ್ತಾರ, ಗಂಭೀರ ಸುಂದರ ಭಾಷಾ ಶೈಲಿ ಮತ್ತು ಸ್ವೋಪಜ್ಞ ಮನೋಧರ್ಮ. ಅವರ ವಾಙ್ಮಯವನ್ನು ಸಾಹಿತ್ಯ, ರಾಜನೀತಿ ಮತ್ತು ಆಧ್ಯಾತ್ಮ ಎಂದು ಕ್ರೋಡೀಕರಿಸಬಹುದು. ಆಯೆಲ್ಲ ರಚನೆಗಳ ಆಳದಲ್ಲಿ ಅನುರಣನಗೊಳ್ಳುತ್ತಿರುವ ಸ್ಥಾಯೀ ಭಾವ ಒಂದೇ ಒಂದು : ಅದೇ ಸೌಂದರ್ಯ ದರ್ಶನ, ಸಾಹಿತ್ಯ ರಸಗ್ರಹಣ, ನೀತಿಚಿಂತನ ಮತ್ತು ಧರ್ಮಾನುಸರಣಗಳಿಂದ ವ್ಯಷ್ಟಿಯಂತೆಯೇ ಸಮಷ್ಟಿ ಜೀವನವೂ ಹೇಗೆ ಸುಂದರವೆನಿಸಿ ಸಾರ್ಥಕವಾಗಬಹುದೆಂಬ ಗಾಢಚಿಂತನ. ಅದನ್ನು ಪ್ರಾಯಃ ಅಪವಾದವೇ ಇಲ್ಲವೆಂಬಂತೆ, ಡಿ.ವಿ.ಜಿ ಯವರ ಎಲ್ಲ ಕೃತಿಗಳಲ್ಲೂ ಮನಗಾಣಬಹುದು. ಆದುದರಿಂದ ಅವರು ಮಾಡಿರುವ ಧಾರ್ಮಿಕ ಮತ್ತು ತಾತ್ವಿಕ ಚಿಂತನೆಗಳ ಅಗಲ ಮತ್ತು ಆಳಗಳನ್ನು ಅಳೆಯುವಾಗ ಅವರ ಎಲ್ಲ ಗ್ರಂಥಗಳನ್ನೂ ಸ್ಥೂಲವಾಗಿಯೇ ಆದರೂ ಅವಲೋಕಿಸಬೇಕಾಗುತ್ತದೆ.

ಡಿ.ವಿ.ಜಿಯವರ ‘ಕೀರ್ತಿಯ ಕಾಮಧೇನು’ ಎನ್ನಬಹುದಾದ ಮಂಕು ತಿಮ್ಮನ ಕಗ್ಗವು “ಶ್ರೀ ವಿಷ್ಣು ವಿಶ್ವಾದಿ ಮೂಲ ಮಾಯಾಲೋಲ….” ಎಂದು ಪ್ರಾರಂಭವಾಗಿ, “ಶರಣುವೊಗು ಜೀವನ ರಹಸ್ಯದಲಿ…. ಶರಣು ವಿಶ್ವಾತ್ಮದಲಿ ಮಂಕುತಿಮ್ಮ” ಎಂದು ಅಂತ್ಯವಾಗುತ್ತದೆ. ಮಂಕುತಿಮ್ಮನ ತಮ್ಮನಾದ ಮರುಳ ಮುನಿಯನ ಕಗ್ಗವಾದರೋ ‘ಶ್ರೀ ಮಜ್ಜನಗನ್ಮುಕುರ ವಿಸ್ತಾರದೊಳಾರ್ ತನ್ನ….” ಎಂದು ತೊಡಗಿ, “ಜಯವೆನ್ನ ಜೀವಕ್ಕೆ ಜಯ ಜೀವ ಲೋಕಕ್ಕೆ…. ಜಯ ನಿರ್ಮಮಾತ್ಮಂಗೆ” ಎಂದು ಕೊನೆಗೊಳ್ಳುತ್ತದೆ. ಈ ಎರಡೂ ಕಗ್ಗಗಳ ಎಷ್ಟೋ ಪದ್ಯಗಳಲ್ಲಿ ಜೀವ-ಜಗತ್ತು-ಬ್ರಹ್ಮ ವಿಚಾರಗಳು ಪುನಃ ಪೌನ್ಯವಾಗಿ ಬಂದೇ ಬರುತ್ತವೆ; ಒಟ್ಟು ಕಾವ್ಯಾಶಯಕ್ಕೆ ಮುನ್ನುಡಿಯೂ ಕನ್ನಡಿಯೂ ಆಗುತ್ತವೆ. ಉದಾಹರಣೆಗಾಗಿ ಹುಡುಕಾಡಬೇಕಾಗಿಲ್ಲ; ಪುಟ ತಿರುಗಿಸಿದರೆ ಸಾಕು, – ಪದ್ಯವಾದ ಮೇಲೆ ಪದ್ಯ ಕಣ್ಮುಂದೆ ಹೊಳೆಯುತ್ತವೆ. ಈ ಪದ್ಯವನ್ನು ನೋಡಿ.-

ನಾಟಕವ ನೋಡು ಬ್ರಹ್ಮಾಂಡ ರಂಗಸ್ಥಲದಿ
ಕೋಟಿ ನಟರಾಂತಿಹರು ಚಿತ್ರ ಪಾತ್ರಗಳ ||
ಆಟಕ್ಕೆ ಕಥೆಯಿಲ್ಲ, ಮೊದಲಲ್ಲಿ, ಕಡೆಯಿಲ್ಲ
ನೋಟಕರೆ ಮಾಟಕರುಮಂಕುತಿಮ್ಮ ||

(ಈ ಸಂದರ್ಭದಲ್ಲಿ ಭಗವದ್ಗೀತೆಯ

ಈಶ್ವರ : ಸರ್ವಭೂತಾನಾಂ ಹೃದ್ದೇಶೇsರ್ಜುನ ತಿಷ್ಠತಿ
ಭ್ರಾಮಯನ್ ಸರ್ವಭೂತಾನಿ ಯಂತ್ರಾರೂಢಾನಿ ಮಾಯಯಾ‘||

ಎಂಬ ಶ್ಲೋಕವನ್ನೂ ಶೇಕ್ಸಪೀಯರನ ‘All the world is a stage……’ ಎಂಬ ಪದ್ಯವನ್ನೂ ನೆನಪಿಗೆ ತಂದು ಕೊಳ್ಳಬಹುದು. ಆದರೆ ಇವುಗಳಲ್ಲಿ ಪರಸ್ಪರ ಹೋಲಿಕೆ ಇದೆ ಎಂದು ವಾದಿಸಬೇಕಿಲ್ಲ.)

‘ಮರುಳ ಮುನಿಯನ ಕಗ್ಗ’ದ ಈ ಪದ್ಯವನ್ನು ನೋಡಿ.-

ಜಗಕೆಲ್ಲ ಕಾರಣಂ ಪ್ರೇರಣಂ ಧಾರಣಂ
ಭಗವಂತನೆಂಬೊಂದದೇನೋ ಇಹುದಲ್ತೆ ||
ಬಗೆವ ನಾಮದರ ಸಂಬಂಧಗಳ ಗೂಢಮದು
ಮುಗಿವ ಕೈಗಳನದಕೆಮರುಳ ಮುನಿಯ ||

ಯಮಳವೆನಿಸಿದ ಈ ಅಮಳ ಕಾವ್ಯಗಳು ಜೀವನಕ್ಕೆ ಧರ್ಮದೀಪಿಕೆಯಾಗಿ ನಿಲ್ಲುತ್ತವೆ; ತತ್ವದರ್ಶಿಕೆಯಾಗಿ ಸಲ್ಲುತ್ತವೆ. ‘ಮಂಕುತಿಮ್ಮನ ಕಗ್ಗ’ ಮತ್ತು ‘ಮರುಳ ಮುನಿಯನ ಕಗ್ಗ’ಗಳನ್ನು ಕುರಿತು ಸೋದಾಹರಣವಾಗಿ ಸುದೀರ್ಘವಾಗಿ ಚರ್ಚಿಸಬಹುದಾದರೂ ಅದು ಅನವಶ್ಯಕ. ಏಕೆಂದರೆ ‘ಮಂಕುತಿಮ್ಮನ ಕಗ್ಗ’ ಅನೇಕರಿಗೆ ಭಗವದ್ಗೀತೆಯಂತೆ ನಿತ್ಯ ಪಾರಾಯಣ ಗ್ರಂಥ; ಅದರ ಆಶಯವೆಲ್ಲ ಅವರಿಗೆ ಹೃದ್ಗತ. ‘ಮರುಳ ಮುನಿಯ’, ‘ಮಂಕುತಿಮ್ಮ’ನ ತಮ್ಮನಾದುದರಿಂದ ಅದರ ಬಗೆಗೂ ವಿವರಣೆ ಬೇಕಿಲ್ಲ. ಒಟ್ಟಿನಲ್ಲಿ, ‘ಭಗವದ್ಗೀತಾ ಕಿಂಚಿದಥೀತಾ ಗಂಗಾ ಜಲ ಲವ ಕಣಿಕಾ ಪೀತಾ’ ಎಂದು ಆಚಾರ್ಯ ಶಂಕರರು ಹಾಡಿದಂತೆ ಈ ‘ಕಗ್ಗ’ಗಳ ಪ್ರತಿ ಪದ್ಯವೂ ಮನನ  ಮನೋರಮವೂ ಚಿಂತನ ಚಿಂತಾಮಣಿಯೂ ಆಗಿದೆ.

ಡಿ.ವಿ.ಜಿಯವರ ಆರಂಭದ ಕೃತಿಗಳಲ್ಲಿ ಒಂದು ‘ನಿವೇದನ’ ಎಂಬ ಕವನ ಸಂಗ್ರಹ. ಸಂಗ್ರಹದ ಶೀರ್ಷಿಕೆಯೇ ಆವರ ದೈವಭಕ್ತಿ ಮತ್ತು ಅಧ್ಯಾತ್ಮ ಚಿಂತನವನ್ನು ಸೂಚಿಸುತ್ತದೆ:

ಚಿತ್ರವನು ನವಿಲಿನೊಳು ವಿಚಿತ್ರವನು ಗಗನದೊಳು
ಪತ್ರಪುಷ್ಪಗಳ ವಿವಿಧ ವರ್ಣಗಳಿಂದ
ಚಿತ್ರಿಸಿದರಾರು?…….

ಎಂದು ಹಾಡಿದ ತ್ರಿಪದಿಯ ಸರ್ವಜ್ಞನಂತೆ ಡಿ.ವಿ.ಜಿಯವರೂ ಸೃಷ್ಟಿ ವೈಚಿತ್ರವನ್ನು

ಮೇಲೆ ನೋಡೆ ಕಣ್ಣ ತಣಿಪ
ನೀಲ ಪಟದಿ ವಿವಿಧ ರೂಪ
ಜಾಲಗಳನು ಚಿತ್ರಿಸಿರ್ಪ ಚಿತ್ರ ಚತುರನಾರ್
ಕಾಲದಿಂದ ಮಾಸದಾ
ವಿಚಿತ್ರ ವೆಸಪನಾರ್

ಎಂದು ಪರಿಭಾವಿಸಿ ಪರಮಾಶ್ಚರ್ಯ ಚಿಕಿತರಾಗುತ್ತಾರೆ.

ಈ ಸಂಗ್ರಹದಲ್ಲಿರುವ ಮುಂದಿನ ಒಂಬತ್ತು ಕವನಗಳು ಸ್ಪಷ್ಟಿ ವೈಚಿತ್ರಗಳಾಗಿರುವ ಬೆಡಗಿನ ಕೊಡಗಿನಲ್ಲಿ, ಜೋಗದ ಜಲಪಾತದಲ್ಲಿ, ಬಾಬುಬುಡಾನ್ ಗಿರಿಯಲ್ಲಿ ಹೇಗೋ ಹಾಗೆಯೇ ಶ್ರೀ ಗೊಮ್ಮಟಸ್ವಾಮಿಯ ತುಂಗಾಕೃತಿಯಲ್ಲೂ ಬೇಲೂರಿನ ಶಿಲಾಬಾಲಿಕೆಯರ ಲಾಲಿತ್ಯದಲ್ಲೂ ಚಾಮುಂಡಿಬೆಟ್ಟದ ದೀಪಮಾಲಿಕೆಯಲ್ಲೂ ಭಗವಂತನ ಲೀಲಾವಿಲಾಸ ಹೇಗೆ ಮೆಯ್ದಾಳಿದೆ ಪರಿಯನ್ನು ಚಿತ್ರಿಸುತ್ತವೆ. ‘ನಿವೇದನ’ದ ಎರಡನೆಯ ಭಾಗದಲ್ಲಿರುವ ಏಳು ಪದ್ಯಗಳಲ್ಲೂ ಪ್ರಕಟವಾಗುವ ಡಿ.ವಿ.ಜಿಯವರ ದೃಷ್ಟಿ ವಿಶೇಷ ಅದೇ ಆಗಿದೆ. ಎಂದರೆ ಸರ್ವಶಕ್ತ ಪರಮೇಶ್ವರನಲ್ಲಿ ಸ್ವತಾಸಹಭಾಗ, ಸಮರ್ಪಣೆ ಮತ್ತು ವಿಲಯನದಿಂದ ಜೀವನ್ಮುಕ್ತಿಯನ್ನು ಕಾಣುವುದಾಗಿದೆ.

ಮರ್ಯಾದಾಪುರುಷೋತ್ತಮ ಶ್ರೀರಾಮ ಮತ್ತು ಪರಿಪೂರ್ಣಾವತಾರ ಶ್ರೀಕೃಷ್ಣ ಇವರ ವ್ಯಕ್ತಿತ್ವದ ವರ್ಣವಿಶ್ಲೇಷಣೆಯನ್ನು ಮಾಡಬಲ್ಲ ಪಟ್ಟಕ (Prism)ಗಳಂತಹ ಎರಡು ಕೃತಿಗಳನ್ನು ಡಿ.ವಿ.ಜಿಯವರು ರಚಿಸಿದ್ದಾರೆ. ಅವುಗಳೆಂದರೆ ಶ್ರೀರಾಮ ಪರೀಕ್ಷಣಂಮತ್ತು ‘ಶ್ರೀಕೃಷ್ಣ ಪರೀಕ್ಷಣಂ. ರಾಮಾಯಣದ ಭೂಮಿಕೆಗಳಾಗಿರುವ ಅಹಲ್ಯೆ, ತಾರೆ, ಸೀತೆ, ಮಂಡೋದರಿ, ಲಕ್ಷ್ಮಣ, ಹನುಮಂತಾದಿಗಳಿಂದ ನಾನಾ ವಿಧದ ಪ್ರಶ್ನೆ ಕೇಳಿಸಿ, ಆ ಪ್ರಶ್ನೆಗಳಿಗೆ ನೀಡುವ ಉತ್ತರಗಳಲ್ಲಿ ಧರ್ಮಸೂಕ್ಷ್ಮವನ್ನು ಕಾಣಿಸಿ, ಶ್ರೀ ರಾಮ ತನ್ನ ಹೃದಯವನ್ನು ಲೋಕದ ಮುಂದೆ ಹೇಗೆ ಅನಾವರಣಗೊಳಿಸುತ್ತಾನೆ ಎಂಬುದು ‘ಶ್ರೀ ರಾಮ ಪರೀಕ್ಷಣ’ದ ಸಾರಭಾಗ. ಈ ಕಾವ್ಯದಿಂದ “ರಸಜ್ಞರಿಗೆ ಕಾವ್ಯಾಮೃತ, ಲೌಕಿಕರಿಗೆ ಧರ್ಮ ಮತ್ತು ಜೀವನ ರಹಸ್ಯಗಳ ಬೋಧೆ. ಮುಮುಕ್ಷುಗಳಿಗೆ ಆಧ್ಯಾತ್ಮಜ್ಞಾನ” ಪ್ರಾಪ್ತಿ ಎಂಬುದು ಎಂ.ಆರ್ ಶ್ರೀನಿವಾಸಮೂರ್ತಿಯವರ ಅಭಿಪ್ರಾಯ.

ಶ್ರೀರಾಮ ಕಥೆಯೆಂಬುದು ಹೆಚ್ಚು ಕಮ್ಮಿ ಪಾತ್ರವನ್ನು ಮೀರದೆ, ಸಮತಲ ಪ್ರದೇಶಗಳಲ್ಲಿ ಗಂಭೀರಗತಿಯಿಂದ ಪ್ರವಹಿಸುವ ಮಹಾನದಿ. ಆದರೆ ಶ್ರೀ ಕೃಷ್ಣಚಾರಿತ್ರ ಹಾಗಲ್ಲ…. ಅದು ಒಮ್ಮೆ ಗಿರಿಶಿಖರದಿಂದ ಧುಮ್ಮಿಕ್ಕಿ, ಕಣ್ಣನ್ನು ಕೋರೈಸಿ, ಕಿವಿಯನ್ನು ಕೊರೆದು, ಎದೆಯನ್ನು ಜುಮ್ಮೆನಿಸುವ ಜಲಧಾರೆಯಾದರೆ ಮತ್ತೊಮ್ಮೆ ಗುಡ್ಡಬೆಟ್ಟಗಳಲ್ಲಿ ಏರಿ ಇಳಿದು, ನೆಲದಗಲದಲ್ಲಿ ಸುತ್ತಿ  ಸುಳಿದು ಆಗಾಗ ತೆರೆ ನೊರೆಗಳ ಮುತ್ತುಗಳನ್ನು ಹರಡುತ್ತ ಹರಿಯುವ ನಿರ್ಝರಿಣಿ ಮಗದೊಮ್ಮೆ, ನೋಡುತ್ತ ಇರುವಂತೆಯೇ ಹತ್ತಾರು ಸೀಳುಗಳಾಗಿ ಒಡೆದು, ಎಲ್ಲೆಲ್ಲೋ ಸುಳಿದು, ಆಮೇಲೆ ಎಲ್ಲವೂ ಒಂದಾಗಿ ವಿಶಾಲ ಪಾತ್ರದಲ್ಲಿ ಪ್ರವಹಿಸಿ, ಮಹಾಸಾಗರದಲ್ಲಿ ಸಂಗಮಿಸಿ ತನ್ನ ಅಸ್ತಿತ್ವವನ್ನೇ ಯಾರೂ ಗುರುತಿಸಲಾರದಂತೆ ಮರೆಯಿಸುವ ತರಂಗಿಣೀ ವಿಸ್ಮಯವೆನಿಸುತ್ತದೆ. ಆದುದರಿಂದಲೇ ಕೃಷ್ಣನದು ಕಥೆಗಿಂತ ಹೆಚ್ಚಾಗಿ ಲೀಲೆ, ಲೀಲಾವಿನೋದ, ಆ ಕಾರಣವಾಗಿಯೇ ಕವಿ ಕಲಾಕಾರರೂ ಯೋಗಿ ವಿಭೂತಿಗಳೂ ಮಾಡುವ ಕ್ವಷ್ಣ ವರ್ಣನೆಗಳಲ್ಲಿ ಐಕಮತ್ಯವಿಲ್ಲ. ಜಗನ್ನಾಟಕ ಸೂತ್ರಧಾರಿಯಾದರೂ ನವನೀತ ತಸ್ಕರ, ಯೋಗೇಶ್ವರನಾದರೂ ನಾರೀಚೋರ-ಹೀಗೆ ವಿಧವಿಧವಾಗಿ ವರ್ಣಿತವಾಗಿರುವ ಶ್ರೀ ಕೃಷ್ಣನ ವ್ಯಕ್ತಿತ್ವವನ್ನು ಡಿ.ವಿ.ಜಿಯವರು ಶ್ರೀ ಕೃಷ್ಣ ‘ಪರೀಕ್ಷಣಂ’, ಎಂಬ ಕಾವ್ಯದಲ್ಲಿ ತಮ್ಮ ಚಿಕಿತ್ಸಕ ಬುದ್ಧಿಯಿಂದ ವಿಶ್ಲೇಷಿಸಿ, ವಿವರಿಸಿದ್ದಾರೆ. ಸುಮಾರು ಒಂದು ನೂರು ಪುಟಗಳಷ್ಟಿರುವ ವಿಸ್ತಾರವಾದ ಪೀಠಿಕೆಯಲ್ಲಿ ಶ್ರೀ ಕೃಷ್ಣ ತತ್ವದ ಎಲ್ಲ ಪಾರ್ಶ್ವ ಪರೀಕ್ಷೆಯನ್ನೂ ಮಾಡಿ ಅದರ ನಿಜಾರ್ಥವೇನೆಂಬುದನ್ನು ಸೋದಾಹರಣವಾಗಿಯೂ ಯುಕ್ತಿಯುಕ್ತವಾಗಿಯೂ ನಿರೂಪಿಸಿದ್ದಾರೆ. ತನ್ನಿಮಿತ್ತವಾಗಿ ಧರ್ಮಸೂಕ್ಷ್ಮ, ಭಕ್ತಿಮಾರ್ಗ, ಕರ್ಮಸ್ವರೂಪಗಳೆಲ್ಲವೂ ಈ ಕಾವ್ಯದಲ್ಲಿ ವಿವೃತವಾಗಿವೆ. ಶ್ರೀರಾಮ ಶ್ರೀಕೃಷ್ಣರ ವ್ಯಕ್ತಿತ್ವವನ್ನೂ ಅವರ ಜೀವನತತ್ವವನ್ನೂ ಪರಾಮರ್ಶಿಸುವ ಡಿ.ವಿ.ಜಿಯವರು, “ಇಹ ಜೀವನದಲ್ಲಿ ನಮ್ಮ ಜನ ಪರಮಾರ್ಥ ಪೀಠಿಕೆಯನ್ನೂ ಪೌರುಷ ವ್ಯಾಯಾಮ ಪ್ರಶಸ್ತಿಯನ್ನೂ ಪ್ರಕೃತಿ ಪ್ರಸಾದ ಭೋಜನವನ್ನೂ ಕಾಣುವಂತಾಗಲಿ” ಎಂದು ಆಶಿಸಿದ್ದಾರೆ. ಅದರಿಂದ ಲೋಕಾಲೋಕ ಸಮನ್ವಯ, ತ್ಯಾಗಭೋಗ ಸಮನ್ವಯ ಮತ್ತು ಭುಕ್ತಿ ಮುಕ್ತಿ ಸಮನ್ವಯಗಳೂ ಆಗುವೆಂಬುದು ಅವರ ವಿಶ್ವಾಸ.

ಡಿ.ವಿ.ಜಿಯವರ ತತ್ವಚಿಂತನೆಯ ಹರಳುಗಳು ಅವರ ಶೃಂಗಾರ ಮಂಗಳಂ ಎಂಬ ಕಾವ್ಯದಲ್ಲೂ ಕಂಗೊಳಿಸುತ್ತವೆ. ಆಂಗ್ಲಕವಿ ಕೀಟ್ಸ್ ಪ್ರಾಚೀನ ಚಿತಾಭಸ್ಮ ಕರಂಡಕವೊಂದನ್ನು ವರ್ಣಿಸುತ್ತ, “¨Beauty is truth; truth beauty” ಎಂದು ಎತ್ತಿದ ಉದ್ಗಾರ ದಿಗ್ಬಿಂತಗಳಲ್ಲಿ ಅನುರಣಿಸಿ, ಅನೇಕಾನೇಕ ಸೌಂದರ್ಯ ಮೋಮಾಂಸಕರ ಹ್ವತ್ತಂತಿಗಳನ್ನು ಮೀಟಿ, ಬಗೆ ಬಗೆಯ ನಾದ ತರಂಗಗಳನ್ನು ಎಬ್ಬಿಸಿದೆ. ಡಿ.ವಿ.ಜಿಯವರೂ ಆ ಉದ್ಘೋಷದಿಂದಲೇ ಉದ್ದೀಪ್ತರಾಗಿ ಜಗತ್ಸ್ವಷ್ಟಿ, ಜಗದ್ವಿಕಾಸ, ಸತ್ಯ ಸುಂದರತತ್ವ, ಪ್ರೇಮಾದ್ವೈತ ಮತ್ತು ವಿರಹಿಯ ಅನುಭವಗಳೆಂಬ ಸಾಕ್ಷ್ಯಪಂಚಕಗಳಿಂದ ಸತ್ಯ ಮತ್ತು ಸೌಂದರ್ಯಗಳ ಪ್ರತ್ಯೇಕ ಲಕ್ಷಣಗಳನ್ನೂ ಸಮೀಪ ಸಂಬಂಧಗಳನ್ನೂ ಈ ಪುಟ್ಟಪುಸ್ತಕದಲ್ಲಿ ಮನೋಜ್ಞವಾಗಿ ವಿವರಿಸಿದ್ದಾರೆ. “ಸತ್ಯವೂ ಸೌಂದರ್ಯವೂ ಪ್ರತ್ಯೇಕ ಪ್ರತ್ಯೇಕಗಳಲ್ಲ….. ವಿಶ್ವಕರ್ತನ ಒಳಮೈ ಸತ್ಯ, ಹೊರಮೈ ಸೌಂದರ್ಯ ಇದು ಜೀವನ ಧರ್ಮಕ್ಕೆ ಮೂಲಾಧಾರ. ಸತ್ಯವನ್ನು ಮರೆಯದೆ ಸೌಂದರ್ಯವನ್ನು ಭಜಿಸುವಾತನು ಸುಕೃತ ಜೀವಿ” ಎಂದು ಸಾರಿದ್ದಾರೆ.

ಡಿ.ವಿ.ಜಿಯವರ ಅತಿಪ್ರಮುಖವಾದ ಮತ್ತು ಬಹುಪ್ರಸಿದ್ಧವಾದ ಕೃತಿಗಳಲ್ಲಿ ಒಂದು ಉಮರನ ಒಸಗೆಆಂಗ್ಲೇಯ ಕವಿ ಫಿಟ್ಸ್‌ಜೆರಾಲ್ಡನ ಅನುವಾದವನ್ನು ಆಧರಿಸಿ, ಉಮರ್ ಖಯ್ಯಾಮನ ಪಾರ್ಸಿ ಮೂಲದ, ಶೃಂಗಾರವೆಂದು ಮೇಲ್ನೋಟಕ್ಕೇ ತೋರುವ ಆ ಕಾವ್ಯದ ರಸಬಿಂದುಗಳನ್ನು ಕನ್ನಡ ಕಾವೇರಿಯಲ್ಲಿ ಕಲಸಿ ಬೆರಸಿದ ಡಿ.ವಿ.ಜಿ ಪಾಕಕೌಶಲ್ಯ ಒಂದಾದರೆ, ಒಟ್ಟು ಎಪ್ಪತ್ತು ಪುಟಗಳ ಸುದೀರ್ಘ ಪೀಠಿಕೆಯಲ್ಲಿ ಸುಮಾರು ನಲ್ವತ್ತು ಪುಟಗಳ ಅವಕಾಶದಲ್ಲಿ ಉಮರನ ಕಾವ್ಯ ತತ್ವ, ಉಮರ್ ಖಯ್ಯಾಮ್ ಮತ್ತು ಲ್ಯಾಟಿನ್ ಕವಿ ಲ್ಯುಕ್ರೀಷಿಯಸ್ ಇವರ ಕೃತಿಗಳಲ್ಲಿರುವ ಅಭಿಪ್ರಾಯ ಸಾಮ್ಯ, ಅಂತೆಯೇ ಉಮರ್ ಮತ್ತು ಆಂಗ್ಲಕವಿ ರಾಬರ್ಟ್ ಬ್ರೌನಿಂಗ್ ಇವರ ಕೃತಿಗಳಲ್ಲಿರುವ ಅಭಿಪ್ರಾಯ ವೈಷಮ್ಯಗಳನ್ನು ಎಳೆಎಳೆಗಳನ್ನು ಬಿಡಿಸಿ ತೂಗಿ ಹೇಳಿದ ತೋಲನಕ್ಷಮತೆ ಮತ್ತೊಂದಾಗಿದೆ. ಜೀವ ಜಗತ್ತುಗಳ ಸಂಬಂಧ ಯಾವ ಬಗೆಯದು, ಮನುಷ್ಯ ಸ್ವಭಾವ ಹೇಗಿರುತ್ತದೆ ಎಂಬುದನ್ನೂ ಪ್ರಚಲಿತವಾಗಿರುವ ಅನೇಕ ಮತಸಿದ್ಧಾಂತಗಳಲ್ಲಿ ಜನಸಾಮಾನ್ಯನಿಗೆ ಯಾವುದು ಎಷ್ಟು ಸ್ವೀಕಾರ್ಯ ಮತ್ತು ಅವುಗಳಲ್ಲಿ ಒಂದು “ಸಮನ್ವಯ ಸೂತ್ರ” ಹೇಗೆ ಸಾಧ್ಯ ಎಂಬುದನ್ನೂ ವಿವರಿಸುವಲ್ಲಿ ಡಿ.ವಿ.ಜಿಯವರ ಅಧ್ಯಯನದ ಆಗಾಧತೆಯೂ ಸ್ವತಂತ್ರ ಚಿಂತನಶೀಲ ಮನೋಧರ್ಮವೂ ದಟ್ಟವಾಗಿ ಕಾಣುತ್ತವೆ. ಉಮರ್, ಲ್ಯುಕ್ರೀಷಿಯನ್ ಮತ್ತು ಬ್ರೌನಿಂಗರ ಸಂದೇಶಗಳನ್ನು ಡಿ.ವಿ.ಜಿ ಹೀಗೆ ಸಂಗ್ರಹಿಸಿದ್ದಾರೆ: “ಒಬ್ಬನದು ಸೌಂದರ್ಯಾನುಭವ, ಉಲ್ಲಾಶ ಸಂಪಾದನೆ; ಒನ್ನೊಬ್ಬನದು ಅಹಂಕಾರ ಖಂಡನೆ, ಸರಳತಾಭ್ಯಾಸ; ಮತ್ತೊಬ್ಬನದು ಭಗವದ್ಭಕ್ತಿ, ಪ್ರಗತಿಯತ್ನ.” ಈಯೆಲ್ಲ ಸಂದೇಶಗಳೂ “ಒಂದು ಇನ್ನೊಂದರಿಂದ ತಿದ್ದಿಸಿಕೊಂಡು, ಒಂದನ್ನೊಂದು ಮಿತಮಾಡಿಕೊಂಡು, ಒಂದಕ್ಕೊಂದು ಸಹಕಾರಿಯಾಗಬೇಕು” ಎಂದೂ ಡಿ.ವಿ.ಜಿ ಆಶಿಸುತ್ತಾರೆ. ಜೀವನದಲ್ಲಿ ತ್ಯಾಗಭೋಗಗಳ ಸ್ಥಾನವೇನೆಂಬುದನ್ನು ಅವರು ಚರ್ಚಿಸುತ್ತ, “ನಿಜವಾದ ವಿರಕ್ತಿ ಇರುವುದು ಲೋಕಾನುಭವದಿಂದ ಓಡಿ ಹೋಗುವುದರಲ್ಲಿ ಅಲ್ಲ, ಅದನ್ನು ತಕ್ಕ ಸ್ಥಳದಲ್ಲಿ ಇರಿಸುವುದರಲ್ಲಿ. ಅದು ತುಂಬ ಹತ್ತಿರವೂ ಬೇಡ, ತುಂಬ ದೂರವೂ ಬೇಡ. ನಿಜವಾದ ವಿರಕ್ತಿಯಲ್ಲಿ ‘ಬೇಡ’ವೆಂಬುದಕ್ಕೆ ಒಂದು ಸ್ಥಾನವಿರುವಂತೆಯೇ ಬೇಕೆಂಬುದಕ್ಕೂ ಇರುತ್ತದೆ…… ಒಂದೇ ಗುಡ್ಡಿನಿಂದ ಎರಡು ಕಣ್ಣುಗಳ ಮೂಲಕ ನೋಡುವ ಕಾಗೆಯಂತೆ, ಒಂದೇ ಅಭಿಪ್ರಾಯವನ್ನು ಎರಡು ಭಾಷೆಗಳಲ್ಲಿ ವ್ಯಕ್ತಪಡಿಸಬಲ್ಲ ದ್ವಿಭಾಷಿಯಂತೆ, ಜ್ಞಾನಿಯಾದವನು ಬ್ರಹ್ಮಾನಂದ ವಿಷಯಾನಂದಗಳೆರಡನ್ನೂ ಅನುಭವಿಸುತ್ತಾನೆ” ಎಂಬ ನೆಲೆಯನ್ನು ಡಿ.ವಿ.ಜಿ ಮುಟ್ಟುತ್ತಾರೆ, ಮುಟ್ಟಿ ಬದುಕಿಗೆ ಬೆಲೆಯನ್ನು ಕಟ್ಟುತ್ತಾರೆ.

ಈ ವರೆಗೆ ಡಿ.ವಿ.ಜಿಯವರ ಕೆಲವು ಪದ್ಯಕೃತಿಗಳಲ್ಲಿ ಅವರ ಧಾರ್ಮಿಕ ಮತ್ತು ತಾತ್ವಿಕ ಚಿಂತನೆಗಳು ಹೇಗೆ ಘನೀಕರಿಸಿವೆ ಎಂಬುದನ್ನು ಅಲ್ಲಿಷ್ಟು ಇಲ್ಲಿಷ್ಟು ಮುಟ್ಟಿ ನೋಡಿ ಹೇಳಿದುದಾಯಿತು. ಇನ್ನು ಮುಂದಿನದು ಅವರ ಗದ್ಯ ಪ್ರಬಂಧಗಳಲ್ಲಿ ಆ ಅಂಶಗಳು ಹೇಗೆ ಪ್ರತಿಪಾದಿತವಾಗಿವೆ ಎಂಬುದನ್ನು ಸ್ಥೂಲವಾಗಿ ನಿರ್ದೇಶಿಸುವ ಪ್ರಯತ್ನ. ದೇವರು, ಋತಸತ್ಯಧರ್ಮ, ಪುರುಷ ಸೂಕ್ತ, ಈಶೋಪನಿಷತ್ತು, ಬಾಳಿಗೊಂಡು ನಂಬಿಕೆ, ಸಂಸ್ಕೃತಿ ಮತ್ತು ಗೀತಾತಾತ್ವರ್ಯ – ಈ ಏಳು ಪುಸ್ತಿಕೆ, ಪುಸ್ತಕ ಮತ್ತು ಗ್ರಂಥಗಳನ್ನು ಇಲ್ಲಿ ಹೆಸರಿಸಿದೆ. ಇವುಗಳಲ್ಲಿ ಪುರುಷ ಸೂಕ್ತ, ಈಶೋಪನಿಷತ್ತು ಮತ್ತು ಗೀತಾತಾತ್ಪರ್ಯಗಳನ್ನು ‘ಭಾಷ್ಯ’ಗಳೆಂದೂ ಮಿಕ್ಕ ನಾಲ್ಕನ್ನು ‘ಪ್ರಕರಣ ಗ್ರಂಥ’ಗಳೆಂದೂ ವಿಭಜಿಸಿ ಅವುಗಳ ರಚನಾಕಾಲವನ್ನು ಅನುಸರಿಸಿಯೂ ವಿವರಿಸಬಹುದಾಗಿದೆ. ಆದರೆ ಆ ಯಾವ ದಾರಿಯನ್ನೂ ಹಿಡಿಯದೇ ಅವುಗಳ ಗಾತ್ರಾನುಗುಣವಾಗಿ ನಾಲ್ಕು ನಾಲ್ಕು ಮಾತುಗಳನ್ನು ಈ ಮುಂದೆ ಬರೆಯಲಾಗಿದೆ :

. ದೇವರು : ದೇವರು ಇದ್ದಾನೆಯೇ? ದೇವರು ಎಂದರೆ ಏನು? ದೇವರು ಎಂಬ ವಸ್ತು ಅಥವಾ ತತ್ವ ನಿಜವಾಗಿಯೂ ಉಂಟೇ? ಲೋಕ ಸಾಮಾನ್ಯವನ್ನು ಬಹುಕಾಲದಿಂದ ಭಾದಿಸುತ್ತಿರುವ ಇಂತಹ ಕೆಲವು ಪ್ರಶ್ನೆಗಳನ್ನು ‘ದೇವರು’ ಎಂಬ ಪುಟ್ಟ ಪುಸ್ತಕದಲ್ಲಿ ಉತ್ತರಿಸಲು ಡಿ.ವಿ.ಜಿಯವರು ಪ್ರಯತ್ನಿಸಿದ್ದಾರೆ. ಉಪನಿಷತ್ತಿನ ಉಪದೇಶ, ವೇದಾಂತ ಮತ, ಬಹು ರೂಪತೆ, ಲೀಲಾವಿಲಾಸ, ವಿಶ್ವ ವ್ಯವಸ್ಥೆ, ನಾನಾ ಮತ ಸಮನ್ವಯ ಇತ್ಯಾದಿಯಾಗಿ ಡಿ.ವಿ.ಜಿಯವರು ಪ್ರಕರಣ ವಿಭಾಗ ಮಾಡಿ ತಮ್ಮ ಅಭಿಮತವನ್ನು ವಿವರಿಸುತ್ತಾ ದೇವರು ಇದ್ದಾನೆ, ಯಾವಾಗಲೂ ಎಲ್ಲೆಲ್ಲೂ ಇದ್ದಾನೆ. ಆತ ಜಗತ್ತನ್ನು ಆಳುತ್ತಿದ್ದಾನೆ. ದೇವರ ಒಂದಂಶ ಜೀವಿಗಳಲ್ಲಿ ಅಡಗಿರುತ್ತದೆ; – ಪುಣ್ಯಕ್ಕೆ ಶುಭವನ್ನೂ ಪಾಪಕ್ಕೆ ದಂಡವನ್ನೂ ವಿಧಿಸುತ್ತದೆ ಎಂಬುದಾಗಿ ಡಿ.ವಿ.ಜಿ. ಅನುಮೇಯಿಸುತ್ತಾರೆ. ಪ್ರಾಸಂಗಿಕವಾಗಿ ‘ಪವಾಡ’ವೆಂಬ ವೈಚಿತ್ಯ್ರವನ್ನೂ ಅವರು ಪ್ರಸ್ತಾಪಿಸಿದ್ದಾರೆ. ಅದನ್ನು ನಂಬಬಹುದು ಅಥವಾ ಬಿಡಬಹುದು; ದೈವ ಶ್ರದ್ದೆಗೆ ಅದೇನೂ ಅವಶ್ಯವಲ್ಲ ಎಂಬುದು ಡಿ.ವಿ.ಜಿ.ಯವರ ಅಭಿಪ್ರಾಯ. ಡಿ.ವಿ.ಜಿಯವರು ಅನಾರೋಗ್ಯಕಾರಣವಾಗಿ ಆಸ್ಪತ್ರೆಯಲ್ಲಿ ಮಲಗಿದ್ದಾಗ ಹೇಳಿ ಬರೆಯಿಸಿದ್ದು ಈ ಪುಸ್ತಕ. ಎಂದರೆ ಆ ಸ್ಥಿತಿಯಲ್ಲಿ ಮನಸ್ಸಮಾಧಾನವನ್ನು ತಂದು ಕೊಳ್ಳುವುದು ಪುಸ್ತಕ ರಚನೆಯ ಉದ್ದೇಶ. ವಿಷಯ ತೀರ ಘನವಾದದ್ದು-ಗಂಭೀರ ಅಧ್ಯಯನ, ವಿಸ್ತಾರ ಜ್ಞಾನ, ಅನೇಕಾನೇಕವಾದ ಪ್ರಮಾಣಗಳನ್ನು ಲಕ್ಷಿಸುವಂತಹದ್ದು. ಡಿ.ವಿ.ಜಿಯವರರಲ್ಲಿ ಅವೆಲ್ಲವೂ ಇದ್ದವು. ಆದರೂ ಈ ಪುಸ್ತಿಕೆ ದೇವರನ್ನು ಕುರಿತಾದ ಪ್ರಶ್ನಾವಳಿಗೆ ಕೊನೆಯ ಉತ್ತರ ಎನ್ನುವಂತಿಲ್ಲ ಅಥವಾ ದೇವರ ಅಸ್ತಿತ್ವವನ್ನು ನಿಸ್ಸಂಧಿಗ್ಧವಾಗಿ ಸ್ಥಾಪಿಸಿದೆ ಎಂದೂ ಹೇಳುವಂತಿಲ್ಲ. ಅದಕ್ಕೆ ಮುಖ್ಯಕಾರಣ ತೀರ ಸಣ್ಣದಾದ ಗಾತ್ರ ವಿಷಯದ ಸಮಗ್ರ ಪ್ರತಿಪಾದನೆಗೆ ಅದರಲ್ಲಿ ಅವಕಾಶವಿಲ್ಲ, ಸ್ವತಃ ಡಿ.ವಿ.ಜಿಯವರೇ ಹೇಳಿದಂತೆ ಅದೊಂದು ‘ವಿಚಾರ ಲಹರಿ’ ಅಷ್ಟೇ. ಆದರೂ ಅದು ವಿಚಾರ ಪ್ರಚೋದಕವಾದದ್ದು.

ಡಿ.ವಿ.ಜಿಯವರ ‘ದೇವರು’ ಪ್ರಕಟವಾದದ್ದು ೧೯೭೩ರಲ್ಲಿ. ಕೆಲವು ವರ್ಷ (೧೯೯೧)ಗಳ ಅನಂತರ ಪ್ರೊ.ಎ.ಎನ್. ಮುರ್ತಿರಾಯರೂ ಅದೇ ಹೆಸರಿನ, ಆದರೆ ಅದಕ್ಕಿಂತ ದೊಡ್ಡದಾದ ಒಂದು ಪುಸ್ತಕವನ್ನು ಬರೆದರು. ಅದು ಕರ್ನಾಟಕ ಸರಕಾರದ ಪಂಪಪ್ರಶಸ್ತಿ ಪುರಸ್ಕೃತವೂ ಆಯಿತು. ಪುಸ್ತಕದ ಮುಖ್ಯ ಆಶಯ ಡಿ.ವಿ.ಜಿಯವರದಕ್ಕೆ ವಿರುದ್ಧವಾದದ್ದು; – ಎಂದರೆ ಜನರು ನಂಬುವ, ಅವರು ಹೇಳುವಂತಹ ದೇವರು ಇಲ್ಲ ಎಂಬುದನ್ನು ಪ್ರಸ್ಥಾಪಿಸುವುದಾಗಿದೆ.

.’ಋತಎಸತ್ಯಧರ್ಮ‘ : ಎಂಬುದು ‘ದೇವರ’ ಜತೆಗೆ ಓದಿಕೊಳ್ಳಬಹುದಾದ ಪುಸ್ತಕ. ಅದಕ್ಕೂ ‘ದೇವರ’ದೇ ಗಾತ್ರ. ಶಾಸ್ತ್ರ ಮರ್ಯಾದೆಯಲ್ಲಿ ಚರ್ಚೆಯನ್ನು ನಡೆಯಿಸಿ, ಋತ-ಸತ್ಯ-ಧರ್ಮಗಳಿಗಿರುವ ಪರ್ಯಾಯ ಪದಗಳನ್ನೂ ನಾನಾರ್ಥಗಳನ್ನೂ ಅವು ದ್ಯೋತಿಸುವ ಸಂಕೇತಗಳನ್ನೂ ಅವುಗಳಲ್ಲಿರುವ ಅನ್ಯೋನ್ಯ ಸಂಬಂಧಗಳನ್ನೂ ಡಿ.ವಿ.ಜಿಯವರು ಈ ಪುಸ್ತಕದಲ್ಲಿ ನಿರೂಪಿಸಿದ್ದಾರೆ. ಪುಸ್ತಕದ ಗಾತ್ರ ಸಣ್ಣದು; ಆದರೆ ಸತ್ವದಲ್ಲಿ ಕಡಿಮೆಯನ್ನುವಂತಿಲ್ಲ. ಹಾಗೆಯೇ ಈ ರೀತಿಯ ಪುಸ್ತಕಗಳ ಅರ್ಥಗ್ರಹಣ ಮಾಡುವುದಕ್ಕೆ ವಾಚಕಗಳಲ್ಲಿ ತಕ್ಕುದಾದ ಅಧಿಕಾರವೂ ಅಪೇಕ್ಷಣೀಯವಾಗಿದೆ.

. ಪುರುಷ ಸೂಕ್ತ : ಯಜುರ್ವೇದ ತೈತ್ತಿರೀಯಾರಣಕ್ಯದಲ್ಲಿ ಉಕ್ತವಾಗಿರುವ ಪೂರ್ವ ನಾರಾಯಣ, ಉತ್ತರ ನಾರಾಯಣ ಹಾಗೂ ವೈಷ್ಣವಾನುವಾಕ ಎಂಬ ಭಾಗಗಳನ್ನು ಒಳಗೊಂಡದ್ದು ಮೂವತ್ತು ಮಂತ್ರಗಳ ಪುರುಷ ಸೂಕ್ತ. ವಿವರಣಾತ್ಮಕವಾದ ಪೀಠಿಕೆಯೊಂದಿಗೆ ಸಂಸ್ಕೃತ ಮೂಲ, ಕನ್ನಡಾನುವಾದ, ತಾತ್ಪರ್ಯ ಮತ್ತು ಟಿಪ್ಪಣಿ ಸಹಿತವಾದ ಪುರುಷ ಸೂಕ್ತವನ್ನು ‘ಪ್ರಯೋಗ ಪರೀಕ್ಷಾರ್ಥವಾಗಿ’ ಪ್ರಕಟಿಸಿದ್ದೆಂದು ಡಿ.ವಿ.ಜಿ ಹೇಳಿದ್ದಾರೆ. ಹಾಗೆ ಪ್ರಕಟಿಸುವಾಗ ಸಾಯಣಾಚಾರ್ಯ ಮತ್ತು ಭಟ್ಟಭಾಸ್ಕರರ ಭಾಷ್ಯಗಳು ಅವರಿಗೆ ಆಧಾರವೆಂದೂ ತಿಳಿಸಿದ್ದಾರೆ. ಈ ಬಗೆಯ ತಾತ್ವಿಕ ಗ್ರಂಥ ರಚನೆಯಲ್ಲಿ ಇದೇ ಡಿ.ವಿ.ಜಿಯವರ ಪ್ರಥಮ ಪ್ರಯತ್ನವೆಂದು ಹೇಳಲಾಗಿದೆ.

. ಈಶೋಪನಿಷತ್ತು : ‘ಪುರುಷ ಸೂಕ್ತ’ದ ಮಾರ್ಗದಲ್ಲೇ ಮುನ್ನಡೆದ ಡಿ.ವಿ.ಜಿಯವರು ವೇದದ ಸಾರ ಭಾಗಗಳಲ್ಲಿ ಒಂದೆನಿಸಿರುವ ‘ಈಶೋಪನಿಷತ್ತ’ನ್ನು ಕನ್ನಡಿಸಿದ್ದಾರೆ. ಗ್ರಂಥ ವ್ಯಾಸಂಗಿಗಳಿಗೆ ಅನುಕೂಲವಾಗುವಂತೆ ಅಡಕವಾದ ಅವತರಣಿಕೆಯನ್ನು ಬರೆದು, ಉಪನಿಷತ್ತುಗಳ ಅಂತರಾರ್ಥವೇನೆಂಬುದನ್ನು ವಿವರಿಸಿ, ಈಶೋಪನಿಷತ್ತಿನ ವಿಶಿಷ್ಟ ಸಂದೇಶವನ್ನು ಹೀಗೆ ಸಂಗ್ರಹಿಸಿದ್ದಾರೆ : ‘ಬದುಕಬೇಕು, ಭೋಗವೇ ದೊಡ್ಡದೆಂದುಕೊಳ್ಳದೆ ಬದುಕಬೇಕು; ನಿಯತವಾದ ಕಾರ್ಯಗಳನ್ನು ಮಾಡಬೇಕು; ಸ್ವಾರ್ಥದ ಸೋಂಕಿಲ್ಲದೆ ಮಾಡಬೇಕು. ಸಂತೋಷ ಪಡಬೇಕು; ಅಹಂಕಾರ ಮಮಕಾರಗಳನ್ನು ದೂರಮಾಡಿ ಸಂತೋಷ ಪಡಬೇಕು. ಪ್ರವೃತ್ತಿಯಿಲ್ಲದ, ಲೌಕಿಕ ಜೀವನವಿಲ್ಲದ, ಅಂತರಂಗ ಶೋಧನವಿಲ್ಲದ ನಿವೃತ್ತಿಗೆ-ಸನ್ಯಾಸಕ್ಕೆ ಸಾರ್ಥಕ್ಯವಿಲ್ಲ. ಅಂಥ ಪರಿಶುದ್ಧ ನಿವೃತ್ತಿ ಮೂಲಕವಲ್ಲದೆ ತತ್ವಸಾಕ್ಷತ್ಕಾರವಿಲ್ಲ. ತತ್ವ ಸಾಕ್ಷತ್ಕಾರವಿಲ್ಲದೆ ಮನುಷ್ಯನಿಗೆ ಲೋಕಜೀವನದ ದ್ವಂದ್ವ ಜಾಲಕೆಯಿಂದ ಬಿಡುಗಡೆಯಿಲ್ಲ’.

ಉಪನಿಷತ್ತುಗಳಲ್ಲೇ ಅತಿವಿಶಿಷ್ಟವೆನಿಸಿರುವ  ಈಶೋಪನಿಷತ್ತಿನ ಈ ಸಂದೇಶಸಾರವನ್ನು ಮತ್ತೆ ವಿವರಿಸಬೇಕಿಲ್ಲ. ಡಿ.ವಿ.ಜಿ ಯವರ ಈ ಅನುವಾದವೂ ಅದರ ಸಂದೇಶ ಸಾರಸಂಗ್ರಹವೂ ಅತ್ಯಂತ ಶ್ಲಾಘನೀಯವಾಗಿದೆ. ಅಷ್ಟೇ ಹೃದಯಂಗಮವೂ ಆಗಿದೆ.

. ಬಾಳಿಗೊಂದು ನಂಬಿಕೆ : ಹೆಚ್ಚು ಶಿಕ್ಷಣಸಂಸ್ಕಾರವಿಲ್ಲದ, ಸಾಮಾನ್ಯ ಅಕ್ಷರಸ್ಥರ ಮನಸ್ಸನ್ನೂ ಮುಟ್ಟಬಹುದಾದಂತೆ ಡಿ.ವಿ.ಜಿಯವರು ಜೀವನ ಸೌಂದರ್ಯ ಮತ್ತು ಜೀವಿತೋದ್ದೇಶಗಳನ್ನು ಎರಡು ಪುಸ್ತಕಗಳಲ್ಲಿ ಅತಿಸುಂದರವಾಗಿ, ಪರಿಣಾಮಕಾರಿಯಾಗಿ ನಿರೂಪಿಸಿದ್ದಾರೆ. ಅವುಗಳೆಂದರೆ ‘ಬಾಳಿಗೊಂದು ನಂಬಿಕೆ’ ಮತ್ತು ‘ಸಂಸ್ಕೃತಿ’, ‘ಬಾಳಿಗೊಂದು ನಂಬಿಕೆ’ ಡಿ.ವಿ.ಜಿಯವರ ಜೀವನದರ್ಶನವನ್ನೂ, ಧರ್ಮಜಿಜ್ಞಾಸೆಯನ್ನೂ ತುಂಬ ಅಡಕವಾಗಿ, ಅಷ್ಟೇ ಸೊಗಸಾಗಿ ಪ್ರತಿಪಾದಿಸುತ್ತದೆ. ಒಂದು ವಿಧದಲ್ಲಿ ‘ಮಂಕು ತಿಮ್ಮನ ಕಗ್ಗ’ದಲ್ಲಿ ಪದ್ಯರೂಪದಲ್ಲಿ ಹೇಳಿದುದನ್ನೇ ಸರಳವಾದ ಕಾವ್ಯದಲ್ಲಿ, ಸಂಗ್ರಹ ರೂಪದಲ್ಲಿ ಭಟ್ಟಿ ಇಳಿಸಿದ್ದಾರೆ ಎಂದರೂ ತಪ್ಪಲ್ಲ. ಮನುಷ್ಯ ಜೀವನ ಅರ್ಥಪೂರ್ಣ ಎನಿಸಬೇಕಾದರೆ ಅದಕ್ಕೆ ಧರ್ಮದ ನೆಲಗಟ್ಟು ಇರಬೇಕು, ಅದು ನೀತಿಯನ್ನು ನೆಚ್ಚಿರಬೇಕು; ಅದಕ್ಕೆ ದೈವಭಕ್ತಿಯೂ ಬೇಕು. ಹಾಗೆಯೇ ಆತ್ಮವಿಶ್ವಾಸ, ಪ್ರಯತ್ನ ಬುದ್ಧಿ ಬೇಕೇ ಬೇಕು. ಅಗ್ಗದ ವೈರಾಗ್ಯ, ಅಳುಮೋರೆ, ಸೋಲು ಮನಸ್ಸು ತಕ್ಕುದಲ್ಲ. ಹಣೆ ಬರೆಹ, ವಿಧಿವಿಲಾಸಗಳಲ್ಲಿ ಅತಿವಿಶ್ವಾಸ ಸಲ್ಲದು. ಧರ್ಮಕ್ಕೆ ಅವಿರುದ್ಧವಾದ ದೈಹಿಕ ಸುಖಭೋಗಗಳಿಗೆ ಮನುಷ್ಯ ವಿಮುಖನಾಗಬಾರದು. ಭೌತವಿಜ್ಞಾನದ ನೆಲದಲ್ಲಿ ಗಟ್ಟಿಯಾಗಿ ನಿಂತು, ಆಧ್ಯಾತ್ಮಜ್ಞಾನದ ಎತ್ತರಕ್ಕೆ ಅವನು ಕೈಚಾಚಬೇಕು. ನಮ್ಮ ವೇದಾಂತತತ್ವಗಳು ದೀರ್ಘಾಯುಷ್ಯ, ದೇಹಸುಖಗಳನ್ನು ಪುರಸ್ಕರಿಸುತ್ತವೆ. ಕಷ್ಟದ ಕಡಲಲ್ಲಿ ಬದುಕಿನ ನೌಕೆ ಮುಳುಗುವುದೆಂದು ತೋರಿದಾಗ ಪ್ರಾರ್ಥನೆಯೊಂದೇ ಸಾಲದು, ನೌಕೆಯೊಳಗೆ ತುಂಬಿ, ಅದನ್ನೇ ಮುಳುಗಿಸಬಲ್ಲ ನೀರನ್ನು ಎತ್ತಿ ಎತ್ತಿ ಹೊರ ಚೆಲ್ಲಲೂಬೇಕು. (ಇಂಗ್ಲಿಷಿನಲ್ಲಿ ಅಂತಹುದೇ ಒಂದು ದೃಷ್ಟಾಂತ ಕಥನವಿದೆ : Pump and Pray) ಗೀತಾಚಾರ್ಯ ಶ್ರೀಕೃಷ್ಣ ಕರ್ತವ್ಯ ಮೂಢ ಅರ್ಜುನನಿಗೆ ಉಪದೇಶಿಸಿದ್ದೂ ಅದನ್ನೇ : ‘ಮಾಮನುಸ್ಮುರ ಯುಧ್ಯಚ’ ಇದು ‘ಬಾಳಿಗೊಂದು ನಂಬಿಕೆ’ಯ ಸಾರ.

ಪುಸ್ತಕದ ಕೊನೆಯಲ್ಲಿ ಮಂತ್ರ ಸದೃಶವಾಗಿ, ಸಂದೇಶರೂಪದಲ್ಲಿರುವ ನುಡಿಗಳಲ್ಲಿ ಬಾಳಿನ ದಾರಿ ಗುರಿಗಳನ್ನು ಡಿ.ವಿ.ಜಿಯವರು ಹೀಗೆ ತೋರಿದ್ದಾರೆ, ಗುರುತಿಸಿದ್ದಾರೆ.

“ದೇವರೆಂಬುದು ಬೇರೆ ಇದ್ದಿರಲಿ, ಇಲ್ಲದಿದ್ದರೂ ಪರವೆ ಇಲ್ಲ. ನಮ್ಮ ಜೀವನವಂತೂ ನಮಗೆ ಪ್ರತ್ಯಕ್ಷ ಸಂಗತಿ. ನಮ್ಮ ಜೀವನೇ ನಮಗೆ ದೇವರ ಸಾಕ್ಷಿ…. ಜೀವನವು ದೇವರು ಕೊಟ್ಟವರ; ಜೀವನವನ್ನು ಅಂದಗೊಳಿಸುವುದೇ ನಾವು ದೇವರಿಗೆ ಸಲ್ಲಿಸುವ ಕೃತಜ್ಞತೆ. ಜೀವನ ಸಮೃದ್ಧಿ, ಜೀವನ ಸಂಸ್ಕಾರ, ಜೀವನ ಸೌಂದರ್ಯ ಇದು ಬರಿಯ ಐಹಿಕಾಸಕ್ತಿಯಲ್ಲ, ಚಾರ್ವಾಕತನವಲ್ಲ, ಭೋಗ ನಿಷ್ಠೆಯಲ್ಲ. ಇದು ವೇದ ವೇದಾಂತಗಳ ಸಾರ”. ಡಿ.ವಿ.ಜಿಯವರು ಮುಂದುವರಿದು

“ಜೀವನೋತ್ಸಾಹ, ಪೌರುಷ ಪ್ರಕಾಶ, ಲೋಕಸ್ನೇಹ” ಇವುಗಳ ಸತ್ಪಲವಾಗಿ “ಪ್ರಗತಿ, ವಿಜ್ಞಾನ ಮತ್ತು ಸೌಜನ್ಯ” ಎನ್ನುತ್ತಾರೆ.

ಡಿ.ವಿ.ಜಿಯವರ ಧಾರ್ಮಿಕ ಮತ್ತು ತಾತ್ವಿಕ, ದೈವಿಕ ಮತ್ತು ಜೈವಿಕ ಚಿಂತನೆಗಳು ‘ಬಾಳಿಗೊಂದು ನಂಬಿಕೆ’ಯ ಸರಳ ಗದ್ಯದ ಸುಂದರ ವಾಕ್ಯಗಳಲ್ಲಿ ಪ್ರಕಟವಾದಂತೆ ಬೇರೆ ಯಾವ ಗ್ರಂಥದಲ್ಲೂ ಆಗಿಲ್ಲವೆಂದರೂ ಸಲ್ಲುತ್ತದೆ. ‘ಕಗ್ಗ’ದ ಪದ್ಯ ಪಂಕ್ತಿಗಳಂತೆಯೇ ಇಲ್ಲಿರುವ ಒಂದೊಂದು ಮಾತೂ ಅರಿವಿನ ಕಿಡಿ, ಬೆಳಕಿನ ಕುಡಿ.

. ಸಂಸ್ಕೃತಿ : ನಮ್ಮಲ್ಲಿ ಸಂಸ್ಕಾರ, ಸಭ್ಯತೆ ಮುಂತಾದ ಪದಗಳು ಬಹುಕಾಲದಿಂದ ಬಳಕೆಯಲ್ಲಿವೆ. ಅದೇ ಅರ್ಥವನ್ನು ಕೊಡುವ, ಆದರೆ ಇಂಗ್ಲಿಷಿನ ‘Culture’ ಎಂಬುದಕ್ಕೆ ಸಮೀಪತರವಾಗಿರುವ ‘ಸಂಸ್ಕೃತಿ’ ಎಂಬ ಶಬ್ದವಿಶೇಷ ಕಳೆದ ಶತಮಾನದಲ್ಲಿ ಜನಜೀವನವನ್ನು ಪ್ರವೇಶಿಸಿ ಹೆಚ್ಚು ಹೆಚ್ಚು ಚಲಾವಣೆ ಆಗುತ್ತಿದೆ. ಸಂಸ್ಕೃತಿ ಎಂದರೇನು, ಅದು ಎಲ್ಲೆಲ್ಲಿ ಹೇಗೆ ಹೇಗೆ ಪ್ರಕಟವಾಗುತ್ತಿದೆ ಎಂಬುದನ್ನು ಅದೇ ಹೆಸರಿನ ಪುಸ್ತದಲ್ಲಿ, ಕನ್ನಡದಲ್ಲಿ ಪ್ರಾಯಃ ಮೊತ್ತಮೊದಲ ಸಲ, ಸವಿರವಾಗಿ, ಸೋದಾಹರಣವಾಗಿ ವಿವರಿಸಿದವರು ಡಿ.ವಿ.ಜಿ. ‘Culture is a way of life’ ಎಂಬ ಹೇಳಿಕೆಯುಂಟು. ನಮ್ಮ ನಡೆ ನುಡಿ, ಉಡುಗೆ ತೊಡುಗೆ, ನಂಬಿಕೆ ನೆಚ್ಚಿಕೆಗಳೆಲ್ಲವೂ ಎಂದರೆ. ಬದುಕಿನ ಎಲ್ಲ ಮಗ್ಗಲುಗಳೂ ಸಂಸ್ಕೃತಿಯಲ್ಲಿ ಸೇರಿಕೊಳ್ಳುತ್ತವೆ. ಡಿ.ವಿ.ಜಿಯವರು ಅವೆಲ್ಲವುಗಳ ಮೇಲೂ ನೋಟವನ್ನೂ ಹಾಯಿಸಿದ್ದಾರೆ. ಭಾರತೀಯ ಶಾಸ್ತ್ರ ಪುರಾಣಗಳಿಂದಲೂ, ವಿವಿಧ ಕಾವ್ಯ ಗ್ರಂಥಗಳಿಂದಲೂ, ಎಮರ್ಸನ್, ನ್ಯೂಮನ್, ಮ್ಯಾಥ್ಯೂ ಅರ್ನಾಲ್ಡರಂತಹ ಪಾಶ್ಚಾತ್ಯ ವಿಚಾರವೇತ್ತರ ಉಪನ್ಯಾಸಗಳಿಂದಲೂ ವಿಪುಲ ಉದಾಹರಣೆಗಳನ್ನು ಎತ್ತಿಕೊಂಡು ಸಂಸ್ಕೃತಿಯ ಅರ್ಥ ಮತ್ತು ವ್ಯಾಪ್ತಿಯನ್ನು ಮನನೀಯವಾಗಿ ವಿವರಿಸಿದ್ದಾರೆ. ಸ್ವಸ್ಥಾನ ಪರಿಜ್ಞಾನ, ಪರೇಂಗಿತ ಪರಿಗ್ರಹಣ, ಸ್ವಾರ್ಥ ನಿಯಮನ, ಸಮನ್ವಯ ಬುದ್ಧಿ ಮತ್ತು ಸರಳತೆಗಳೇ ಸುಸಂಸ್ಕೃತಿ ಲಕ್ಷಣಗಳೆಂದು ಅವರು ಉಲ್ಲೇಖಿಸಿರುವುದು ವಿಚಾರಕ್ಷಮವೂ ಅನುಸರಣ ಯೋಗ್ಯವೂ ಆಗಿವೆ.

. ಶ್ರೀ ಮದ್ಭಗವದ್ಗೀತಾ ತಾತ್ಪರ್ಯ : ಡಿ.ವಿ.ಜಿಯವರು ಬರೆದಿರುವ ಉದ್ಗ್ರಂಥಗಳಲ್ಲಿ ಅದ್ವೀತಿಯವೂ ಅವರು ಮಾಡಿರುವ ಧರ್ಮ ತತ್ವವಿಶ್ಲೇಷಣೆಗೆ ಪ್ರಬಲ ನಿದರ್ಶನವೂ ವ್ಯಾಖ್ಯಾನ ವಿಚಕ್ಷಣೆಗೆ ಸುಯೋಗ್ಯ ನಿಕಷವೂ ಆದುದರೆಂದರೆ ಅವರ ‘ಶ್ರೀ ಮದ್ಭವದ್ಗೀತಾ ತಾತ್ವರ್ಯ.’ ಜಗತ್ತಿನ ವಾಙ್ಮಯದಲ್ಲೇ ಅತ್ಯಧಿಕ ಸಂಖ್ಯೆಯಲ್ಲಿ ಭಾಷ್ಯ ಭಾಷಾಂತರ ಟೀಕೆ ಟಿಪ್ಪಣೆಗಳಿಗೆ ಒಳಗಾದ ಗ್ರಂಥಗಳಲ್ಲಿ ‘ಗೀತೆ’ಯೂ ಒಂದೆನ್ನುವುದಿದೆ. ನಮ್ಮ ಆಚಾರ್ಯತ್ರಯರು, ಅನೇಕಾನೇಕ ಸಾಧುಸಂತರು, ತಿಲಕ, ಅರವಿಂದ, ಗಾಂಧೀಜಿ, ವಿನೋಬಾ ಮೊದಲಾದ ರಾಜನೀತಿಜ್ಞರು, ಪಂಡಿತ ಪ್ರಕಾಂಡರು, ಚಿಂತಕ ಶಿಖಾಮಣಿಗಳು ಗೀತೆಯನ್ನು ಯಥಾಮತಿಯಾಗಿ ವಿಶ್ಲೇಷಿಸಿದ್ದಾರೆ, ಅವುಗಳಲ್ಲಿ ನಾನಾರ್ಥಗಳನ್ನು ಕಂಡಿದ್ದಾರೆ, ಜೀವನ ಸಮನ್ವಯ ಮಾಡಿದ್ದಾರೆ. ಆದರೆ ಡಿ.ವಿ.ಜಿಯವರ ಈ ವ್ಯಾಖ್ಯಾನ ಹತ್ತರೊಂದಿಗೆ ಹನ್ನೊಂದನೆಯದಲ್ಲ. ಅದಕ್ಕೆ ತನ್ನದೇ ನೆಲೆ ಬೆಲೆಗಳಿವೆ. ಗೀತಾರ್ಣವವನ್ನು ತಮ್ಮದೇ ಬುದ್ಧಿ ಮಂಥಾನದಿಂದ ಮಥಿಸಿ ನವೀನತರವಾದ ಅರ್ಥ ನವನೀತವನ್ನು ಡಿ.ವಿ.ಜಿಯವರು ಹೊರತೆಗೆದಿದ್ದಾರೆ. ‘ಗೀತೆ ಮೋಕ್ಷಶಾಸ್ತ್ರ ಮಾತ್ರವಲ್ಲ, ಜೀವನಶಾಸ್ತ್ರವೂ ಹೌದು’ ಎಂದು ಪ್ರತಿಪಾದಿಸಿ ತಮ್ಮ ವ್ಯಾಖ್ಯಾನ ಕುಶಲತೆಯಿಂದ ನನ್ನು ಸಮರ್ಥಿಸಿದ್ದಾರೆ.

‘ಗೀತಾ ತಾತ್ವರ್ಯ’ಕ್ಕೆ ಡಿ.ವಿ.ಜಿಯವರು ನೀಡಿರುವ ಉಪಶೀರ್ಷಿಕೆ ‘ಜೀವನ ಧರ್ಮ ಯೋಗ’. ಇದು ಅವರ ದೃಷ್ಟಿ ವಿಶೇಷವನ್ನು ಸೂಚಿಸುತ್ತದೆ. ಗೀತೆ ಇರುವುದು ಕಂಠಪಾಠಕ್ಕೋ ಪರೋಪದೇಶಕ್ಕೋ ಯುಕ್ತಿವಾದಕ್ಕೋ ಅಲ್ಲ; ಅದರ ಇರುವಿಕೆ ನಿತ್ಯಾನುಸಂಧಾನಕ್ಕೆ ಮತ್ತು ಅನುಸರಣಕ್ಕೆ ಎಂಬುದು ಡಿ.ವಿ.ಜಿಯವರ ಅಭಿಮತ. ಗ್ರಂಥಾರಂಭದ ಸುಮಾರು ಐವತ್ತು ಪುಟಗಳ ಭೂಮಿಕೆಯಲ್ಲಿ ಗೀತಾವ್ಯಾಸಂಗಕ್ಕೆ ಅವಶ್ಯವಾದ ಪೂರ್ವಸಿದ್ಧತೆ, ಗ್ರಂಥ ಸ್ವರೂಪ, ಗೀತೆ ಕಾವ್ಯವೇ ಶಾಸ್ತ್ರವೇ, ಪುರುಷಾರ್ಥ ಚತುಷ್ಟಯ, ಮನುಷ್ಯ ಸ್ವಭಾವ ರಚನೆಯೇ ಮೊದಲಾದ ಅನೇಕ ವಿಷಯಗಳನ್ನು ಚರ್ಚಿಸಿ, ಗೀತೆ ತಾತ್ವಿಕವಾದದ್ದು ಮಾತ್ರವಲ್ಲ ಆನ್ವಯಿಕವೂ ಹೌದು ಎಂಬುದನ್ನು ಸ್ಥಾಪಿಸಿದ್ದಾರೆ. ಡಿ.ವಿ.ಜಿಯವರು ಹೇಳುತ್ತಾರೆ: “ಗೀತೆಯು ಸರ್ವಾಂಗ ಸಂಪೂರ್ಣವಾಗಿ ಸಾರ್ಥಕ ಜೀವನ ದರ್ಶನ. ಮನುಷ್ಯ ಜೀವನದ ಯಾವ ಭಾಗವನ್ನೂ ಅದು ಗಣನೆಗೆ ತೆಗೆದುಕೊಳ್ಳದೆ ಬಿಟ್ಟಿಲ್ಲ, ಮನುಷ್ಯ ಯೋಗ್ಯತೆಯ ಯಾವ ಮಟ್ಟದವರ ಬಗೆಗೂ ಅದು ಹಿತಚಿಂತನೆ ಮಾಡದೆ ಬಿಟ್ಟಿಲ್ಲ. ಅದು ಸರ್ವತೋಮುಖವಾಗಿ ಸರ್ವಾಂಗ ಪಟುವಾಗಿರುವ ತತ್ವಕಲಾಪ. ಅದರ ಅಂತರಂಗಗಳಲ್ಲಿ ಅನ್ಯೋನ್ಯ ವ್ಯಾಘಾತಕವಿಲ್ಲದೆ ಎಲ್ಲವೂ ಸುಸಂಗತವಾಗಿವೆ. ಯಾರಾದರೂ ತನ್ನ ಯಾವ ಪ್ರಶ್ನೆಗಾದರೂ ಅದರಲ್ಲಿ ಉತ್ತರ ದೊರೆಯಲಿಲ್ಲವೆಂದು ಭಾವಿಸುವಂತೆ ಅದಾಗ ಆತನು ನಿರಾಶನಾಗಬಾರದು. ಪುನಃ ಪುನಃ ಗೀತಾ ವಾಕ್ಯಗಳನ್ನು ಮನನ ಮಾಡಬೇಕು… ಗ್ರಂಥದ ಒಂದು ಪ್ರಕರಣದಲ್ಲಿ ಹುಟ್ಟುವ ಪ್ರಶ್ನೆಗೆ ಬೇರೊಂದು ಪ್ರಕರಣದಲ್ಲಿ ಉತ್ತರವಿರುತ್ತದೆ….. ಜೀವನ ಕೆಟ್ಟದಲ್ಲ, ಅದರ ವಿಷಯದಲ್ಲಿ ಜಿಹಾಸೆಪಡತಕ್ಕದಲ್ಲ; ಮತ್ತು ಅದರಲ್ಲಿರುವ ಕಷ್ಟಗಳನ್ನು ಎದುರಿಸಿ ಪೌರುಷದಿಂದ ಹೋರಾಡತಕ್ಕದ್ದು. ಇದೇ ಗೀತೆಯ ಉಪದೇಶ”.

ಗೀತಾ ಶ್ಲೋಕಗಳ ಅರ್ಥ ಅಂತರಾರ್ಥಗಳನ್ನು ವಿವರಿಸುವಾಗ ಡಿ.ವಿ.ಜಿಯವರು ಬುದ್ಧಿ  ಸಮ್ಮತವಾಗುವಂತೆ ತರ್ಕಗಳನ್ನು ಹೂಡಿದ್ದಾರೆ; ಹೃದಯ ಗ್ರಾಹ್ಯವಾಗುವಂತೆ ವಿಚಾರಗಳ ಪ್ರತಿಪಾದನೆ ಮಾಡಿದ್ದಾರೆ. ತಮ್ಮ ಅಭಿಪ್ರಾಯಗಳ ಸೂಚಕವೆಂಬಂತೆ ಅವರು ಗೀತೆಯ ಅಧ್ಯಾಯಗಳಿಗೆ ಪ್ರಾಕೃತ ಕಾರುಣ್ಯ ಯೋಗ, ತತ್ವವಿವೇಕ ಯೋಗ, ಸ್ವಧರ್ಮ ಯೋಗ, ನಿರ್ಲೇಪ ಕರ್ಮಯೋಗ ಇತ್ಯಾದಿಯಾಗಿ ಉಚಿತವಾದ ಪುನರ್ನಾಮಕರಣ ಮಾಡಿದ್ದಾರೆ. ಡಿ.ವಿ.ಜಿಯವರು ಅರ್ಥವಿವರಣೆ ಅಥವಾ ತಾತ್ವರ್ಯ ನಿರ್ಣಯಕ್ಕಾಗಿ ಗೀತೆಯ ಪ್ರತಿಶ್ಲೋಕಗಳನ್ನೂ ಉದ್ಧರಿಸುವುದಿಲ್ಲ, ಬದಲು ಯುಕ್ತವಾದ ಕೆಲವನ್ನು, ಒಮ್ಮೊಮ್ಮೆ ಶ್ಲೋಕಾರ್ಧಗಳನ್ನು ಅಥವಾ ಕೆಲವೇ ಪದಪುಂಜಗಳನ್ನು ಮಾತ್ರವೇ ಎತ್ತಿಕೊಳ್ಳುತ್ತಾರೆ. ಹಾಗೆ ಆರಿಸಿಕೊಂಡು, ಅವುಗಳನ್ನು  ಹಿಂಜಿ ಹಿಂಜಿ ಉಚಿತತರವೂ ಅತ್ಯಂತ ಸ್ಮರಣೀಯವೂ, ಅನುಸರಣಯೋಗ್ಯವು ಆಗಿರುವ ಅರ್ಥಗಳನ್ನು ಅವುಗಳಿಂದ ಹೊರಡಿಸುತ್ತಾರೆ. ಪ್ರತಿ ಪ್ರಕರಣಗಳಿಗೂ ಅವಶ್ಯವಾದ ಅನುಬಂಧಗಳನ್ನೂ ಸೇರಿಸಿದ್ದಾರೆ.

ಗ್ರಂಥಾರಂಭದ ಭೂಮಿಕೆಯಂತೆಯೇ ಅತ್ಯಂತ ಉಪಸಂಹರಣ ಭಾಗವೂ ಅನಂತರದ ಎಂಟು ಪರಿಶಿಷ್ಟಗಳೂ ತೀರ ಮೌಲಿಕವಾಗಿವೆ. ವಿಶ್ವಮಾನವಧರ್ಮ ಎಂದರೇನು, ವರ್ಣ ವಿಭಾಗದ ಶೈಥಿಲ್ಯ ಏಕಾಯಿತು, ಸ್ತ್ರೀ ಕರ್ತವ್ಯ ಯಾವುದು-ಇಂತಹ ಪ್ರಶ್ನೆಗಳನ್ನೂ ಮತತ್ರಯ ವಿಚಾರದಲ್ಲಿ ಸಾಮರಸ್ಯ ಹೇಗೆ ಅವಶ್ಯ, ಭಕ್ತಿ ಜ್ಞಾನಕರ್ಮಗಳ ಲಕ್ಷಣ ಮತ್ತು ಅನ್ಯೋನ್ಯ ಶ್ರೇಷ್ಠತೆ, ಮೋಕ್ಷ ಸುಖಸ್ವರೂಪ, ಮತಧರ್ಮಗಳೆಂದರೆ ಮಾದಕ ದ್ರವ್ಯಗಳೇ ಎಂಬಂತಹ ವಿಷಯಗಳನ್ನೂ ಗಂಭೀರವಾಗಿ ಚರ್ಚಿಸಿದ್ದಾರೆ. ಒಟ್ಟಿನಲ್ಲಿ, ವಿ. ಸೀತಾರಾಮಯ್ಯನವರು ತಮ್ಮ ಡಿ.ವಿ.ಗುಂಡಪ್ಪಎಂಬ ಇಂಗ್ಲಿಷ್ ಗ್ರಂಥದಲ್ಲಿ ಹೇಳಿದುದನ್ನೇ ಇಲ್ಲಿ ಉಲ್ಲೇಖಿಸಿದರೆ. ‘ಗೀತಾತಾತ್ಪರ್ಯ’ವನ್ನು ಕುರಿತು ಹೇಳಬೇಕಾದುದನ್ನೇಲ್ಲ ಹೇಳಿದಂತೆಯೇ ಆಗುತ್ತದೆ:

“Perhaps the thorough and systematic work in exposition and interpre-written by D.V.G is the work on the Bhaghvadgita which he calls ‘Jeevanadharm Yoga…..’. Practically the whole field of thought,  life, ethics, philosofhy and rligion in inter-relation is considered in this book….. This seems almost the culmination of a thought procets…..” (ಪು: ೬೫ ಮತ್ತು ೬೯).

ಇಂತಹದೊಂದಿಗೆ ಘನಕಾರ್ಯಕ್ಕೆ, ಸದ್ಗ್ರಂಥಕ್ಕೆ ಕೇಂದ್ರೀಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪ್ರಧಾನವಾದದ್ದು ಸಮುಚಿತವೆಂದೇ ಹೇಳಬೇಕು.

ಇಲ್ಲಿಗೆ, ಈ ವರೆಗೆ ಪುಸ್ತಕ ರೂಪದಲ್ಲಿ ಪ್ರಕಟವಾಗಿರುವ ಡಿ.ವಿ.ಜಿಯವರ ಧಾರ್ಮಿಕ-ತಾತ್ವಿಕ ಚಿಂತನೆಗಳ ಪರಿಚಯ ಮುಗಿಯುತ್ತದೆ. ಕಾವ್ಯ ಅಥವಾ ಸಾಹಿತ್ಯ ಜೀವನವನ್ನು ಲಕ್ಷಿಸಿರತಕ್ಕದ್ದು. ಧರ್ಮ ತತ್ವವಾದರೂ ಜೀವನವನ್ನೇ ಉದ್ದೇಶಿಸಿದ್ದು. ಆದುದರಿಂದಲೇ ಭರತ ವರ್ಷದ ವಿವಿಧ ಭಾಷೆಗಳಲ್ಲಿ ಚಿಂತನವು ಕಾವ್ಯವಾಗಿ ಕಾವ್ಯವು ಚಿಂತನರೂಪದಲ್ಲಿ ಕಾಲಕಾಲಕ್ಕೆ ಪ್ರಕಟವಾದುದನ್ನು ಕಾಣುತ್ತೇವೆ. ಆಧುನಿಕ ಕನ್ನಡದಲ್ಲಿ ಧರ್ಮಜಿಜ್ಞಾಸೆ, ದೈವ ಚಿಂತನ ಮತ್ತು ಜೀವನತತ್ವಗಳನ್ನು ಸಮನ್ವಯಿಸಿ ಸಾಹಿತ್ಯ ರಚಿಸಿದವರಲ್ಲಿ ಡಿ.ವಿ.ಜಿಯವರು ಅಗ್ರಗಣ್ಯರೆಂಬುದನ್ನು ಆಸಕ್ತರಿಗೆ ಮನಗಾಣಿಸುವ ಪ್ರಯತ್ನವೇ ಈ ಕಿರುಬರಹ. ನಮ್ಮ ಆಲಂಕಾರಿಕರು ಶಾಂತವನ್ನು ನವರಸಗಳಲ್ಲಿ ಒಂದಾಗಿ ಪರಿಗಣಿಸಿದ್ದಾರೆ. ಅದುರಸಪ್ರಸ್ಥಾನದಲ್ಲಿ ಕೊನೆಯದೂ ಹೌದು. ಎಂದರೆ. ಜೀವನಯಾತ್ರೆಯ ಪ್ರಾರಂಭ ಶೃಂಗಾರ ವೀರ ಕರುಣ ಇತ್ಯಾದಿಗಳಲ್ಲಿ; ಅದರ ಅಂತ್ಯ ಶಾಂತದಲ್ಲಿ. ಮನುಷ್ಯ ಜೀವಿಯ ಆತ್ಯಂತಿಕವಾದ ಸಿದ್ಧಿಯೇ ಶಾಂತಿ. ಅದು ದ್ವಂದ್ವಗಳನ್ನು ಮೀರಿ, ದಾಟಿ, ಏರಿ ಮುಟ್ಟಬೇಕಾದ ನೆಲೆ. ಕೇದಾರ ಬದರಿಗಳಂತಹ ದುರ್ಗಮ ಕ್ಷೇತ್ರಾರೋಹಿಗಳು ಊರುಗೋಲು ಹಿಡಿದುಕೊಳ್ಳುವಂತೆ ಶಾಂತಪದ ಪ್ರಾಪ್ತಿಗಾಗಿ ಹಂಬಲಿಸುವವರು ಕರ್ಮಪಥದಲ್ಲಿ ದೇವರು, ಧರ್ಮ, ಭಕ್ತಿಗಳನ್ನು ಅಥವಾ ಈ ಮೂರರಲ್ಲಿ ಯಾವುದಾದರೂ ಒಂದು ಊರೆಯನ್ನು ಹಿಡಿದೇ ನಡೆಯಬೇಕಾಗುತ್ತದೆ. ಡಿ.ವಿ.ಜಿಯವರು ಸ್ವತಃ ಈ ನಂಬಿಕೆಯನ್ನು ಹಿಡಿದು, ಬಾಳದಾರಿಯಲ್ಲಿ ನಡೆದವರು. ಅವರಿಗೆ ಪುರುಷ ಪ್ರಯತ್ನದಲ್ಲೂ ಭೌತವಿಜ್ಞಾನದಲ್ಲೂ ಶ್ರದ್ಧೆಯಿದೆ. ಅದರೊಂದಿಗೆ  ದೈವವ್ಯಾಪಾರ ಧರ್ಮಾಚರಣಗಳಲ್ಲೂ ಅಚಲ ವಿಶ್ವಾಸವಿದೆ. ದೈವಭಕ್ತಿ-ಜೀವನ ಪ್ರೀತಿ, ಪುರುಷ ಪ್ರಯತ್ನ – ದೈವ ಶರಣಾಗತಿ ಈ ಸಮನ್ವಯ ಅನೇಕರಿಗೆ ಆಶ್ವರ್ಯಕರವಾಗಿ, ಪರಸ್ಪರ ವಿರುದ್ಧವಾದುದಾಗಿ ಕಂಡದ್ದಿದೆ. ಆದರೆ ಡಿ.ವಿ.ಜಿಯವರಿಗೆ ಅದು ಉಸಿರಾಟದಷ್ಟೇ ಸಹಜ ಕಾರ್ಯ. ಮಾತ್ರವಲ್ಲ, ಜನಜೀವನದ ಐಹಿಕಾಮುಷ್ಮಿಕ ಸುಖಕ್ಕೆ ಇದನ್ನು ಬಿಟ್ಟರೆ ಬೇರೆ ದಾರಿಯಿಲ್ಲ ಎಂಬುದೂ ಅವರ ನಂಬಿಕೆ. ವ್ಯಕ್ತಿ ಹಿತದಂತೆಯೇ ‘ದೇಶ ಹಿತಕ್ಕೂ ಧಾರ್ಮಿಕ ಸಾಹಿತ್ಯ ಅನಿವಾರ್ಯ’ವೆಂದು ಅವರು ಗೀತಾತಾತ್ಪರ್ಯದ ಮುನ್ನಡಿಯಲ್ಲಿ ಹೇಳಿದ್ದಾರೆ. ತಮ್ಮ ‘ರಾಜ್ಯಶಾಸ್ತ್ರ’ವೆಂಬ ಗ್ರಂಥದಲ್ಲಿ ಸ್ವಾತಂತ್ರ-ಸಮತ್ವ ಮತ್ತು ಧರ್ಮಗಳ ಅನ್ಯೋನ್ಯಸಂಬಂಧವನ್ನು ಅವರು ಪ್ರತಿಪಾದಿಸಿದ್ದಾರೆ. ವಿದ್ಯಾರಣ್ಯರಂತಹ ಯತಿಶ್ರೇಷ್ಠ ರಾಜನೀತಿಜ್ಞರ ಜೀವನದರ್ಶನಗಳಿಂದ ಡಿ.ವಿ.ಜಿಯವರು ಪ್ರಭಾವಿತರಾದುದೂ ಅದಕ್ಕೆ ಕಾರಣವಿರಬಹುದು.

ಡಿ.ವಿ.ಜಿಯವರಿಗೆ ಮನುಷ್ಯ ಶಕ್ತಿಯಲ್ಲಿ ನಂಬಿಕೆ ವೈಜ್ಞಾನಿಕ ಮನೋಧರ್ಮದಲ್ಲಿ ಒಪ್ಪಿಗೆಯಿದ್ದರೂ ಅವರು ವರ್ಣವ್ಯವಸ್ಥೆಯನ್ನು ಪ್ರತಿಪಾದಿಸುತ್ತಾರೆ, ಸಂಪ್ರದಾಯವನ್ನು ಸಮರ್ಥಿಸುತ್ತಾರೆ ಎಂಬಂತಹ ಆಕ್ಷೇಪಗಳೂ ಬಂದದ್ದುಂಟು. ಅವರಲ್ಲಿ ಕ್ರಾಂತಿಕಾರೀ ಪ್ರವೃತ್ತಿ ಇರಲಿಲ್ಲವೆಂದೂ ಕೆಲವರಿಗೆ ಅಸಮಾಧಾನವಾದದ್ದಿದೆ. ಇಂತಹ ಸಂದರ್ಭಗಳಲ್ಲಿ ನನಗೆ ತೋರುವುದು ಇದು :

೧. ಒಂದು ವ್ಯಕ್ತಿ ತನಗೆ ಬೇಕಾದ ಎಲ್ಲ ಸರಕುಗಳೂ ಒಂದೇ ಅಂಗಡಿಯಲ್ಲಿ ಸಿಗದಿದ್ದರೆ ಅದಕ್ಕಾಗಿ ಆತ ಅತೃಪ್ತಿ ಪಡಬೇಕಾದದ್ದಾಗಲೀ ಆಕ್ರೋಶಕ್ಕೆ ಒಳಗಾಗುವುದಾದಲೀ ಬೇಕಿಲ್ಲ. ಆ ಅಂಗಡಿಯಲ್ಲಿ ಸಿಗುವ ಸರಕುಗಳನ್ನು ಅಲ್ಲಿಂದ ಕೊಂಡು, ಮಿಕ್ಕವಕ್ಕೆ ಬೇರೆ  ಭಂಡಸಾಲೆಗೆ ಹೋದರಾಯಿತು. ಒಬ್ಬ ಸಾಹಿತಿಯನ್ನು ನಾವು ಒಂದು ‘ಸರ್ವ ಸರಕಿನ ಮಳಿಗೆ’ ಎಂದು ತಿಳಿಯಬಾರದು.

೨. ಡಿ.ವಿ.ಜಿಯವರು ಸಮರ್ಥಿಸುವರೆಂದು ಕೆಲವರು ಹೇಳುವ ‘ವರ್ಣ’ಕ್ಕೂ ಈಗಿನ ಜಾತಿವ್ಯವಸ್ಥೆಗೂ ಹೆಚ್ಚಿನ ಸಂಬಂಧವೇನೂ ಇಲ್ಲ. ಡಿ.ವಿ.ಜಿಯವರು ಹೇಳುವ ವರ್ಣಗಳು ನಾಲ್ಕು, ಈಗಿನ ಜಾತಿಗಳು ನಾನ್ನೂರು. ಸಮಾಜದ ಸಮಷ್ಟಿಹಿತ ದೃಷ್ಟಿಯಿಂದ ಮತ್ತು ಪ್ರತ್ಯೇಕ ವ್ಯಕ್ತಿಯ ಸಹಜಾಸಕ್ತಿ ಮತ್ತು ಕ್ರಿಯಾಶಕ್ತಿಗಳನ್ನು ಅನುಲಕ್ಷಿಸಿ ರೂಪಿತವಾದ ವರ್ಣವ್ಯವಸ್ಥೆಯಲ್ಲಿ ಉಚ್ಚನೀಚವೆಂಬ ತಾರತಮ್ಯ ತಲೆದೊರಿದ್ದು ಕಾಲಾಂತರದಲ್ಲಿ, ವ್ಯಕ್ತಿಗಳ ವಿಹಿತ ಸ್ವಾರ್ಥಕಾರಣವಾಗಿ ಎಂಬುದು ಅನೇಕ ವಿಚಾರವೇತ್ತರ ಮತ್ತು ಸಮಾಜಶಾಸ್ತ್ರಜ್ಞರ ಅಭಿಮತ. ವೃತ್ತಿ ಮತ್ತು ಜಾತಿ(ಎಂದರೆ ಹುಟ್ಟು)ಗಳನ್ನು ಏಕಾರ್ಥಕವೆಂದು ಭ್ರಮಿಸಿರುವದೇ ಇಂದಿನ ಹೆಚ್ಚಿನ ಗೊಂದಲಕ್ಕೆ ಕಾರಣವೆನ್ನಬಹುದು. ಡಿ.ವಿ.ಜಿಯವರು ‘ಗೀತಾತಾತ್ವರ್ಯ’ದ ಉಪಸಂಹಾರದಲ್ಲಿ ಒಂದು ಕಡೆ “ಜಾತಿವ್ಯವಸ್ಥೆ ವರ್ಣವ್ಯವಸ್ಥೆಯಲ್ಲಿ ಮೂಲತಃ ದೋಷವಿಲ್ಲ, ಗುಣವುಂಟು. ಐರೋಪ್ಯರ ಜೀವವಿಜ್ಞಾನ ವಂಶವಿಜ್ಞಾನಗಳು ಇದಕ್ಕೆ ವಿರೋಧವಾಗಿ ಏನನ್ನೂ ಕಂಡಿಲ್ಲ” ಎಂದು ಹೇಳಿ, ಮತ್ತೊಂದು ಕಡೆ, ಗೀತಾನುಯಾಯಿಗಳ ಕರ್ತವ್ಯವೇನೆಂಬುದನ್ನು ಜ್ಞಾಪಿಸುತ್ತ “ಲೋಕ ಸಂದರ್ಭಗಳ ವೈಪರೀತ್ಯದಿಂದ ಅವರು ಎದೆಗುಂದಿ ದಿಙ್ಮೂಢರಾಗಿ ನಿಲ್ಲತಕ್ಕದ್ದಲ್ಲ… ಅವರು… ಸ್ವಸ್ವಜೀವಿತಾ ವೃತ್ತಿಗಳನ್ನು ಸ್ವಸ್ವಗುಣ ಸಾಮರ್ಥ್ಯಗಳಿಗೆ ತಕ್ಕಂತೆ ಆರಿಸಿಕೊಳ್ಳುವುದು ಯುಕ್ತವಾಗಿದೆ. ಹುಟ್ಟಿನಿಂದ ಬ್ರಾಹ್ಮಣನೇ ಆಗಲಿ, ಕ್ಷತ್ರಿಯನೇ ಆಗಲಿ, ವೈಶ್ಯನೇ ಆಗಲಿ, ಶೂದ್ರನೇ ಆಗಲಿ ಜೀವಿಕಾ ವೃತ್ತಿಗೆ ಯಾವುದು ಆಯಾ ಕಾಲದಲ್ಲಿ ಅನುಕೂಲವೆಂದು ತೋರುತ್ತದೋ ಅದನ್ನು ಅವಲಂಬಿಸಲಿ. ಆ ವೃತ್ತಿಯಿಂದ ಅವನ ಮುಖ್ಯಧರ್ಮಕ್ಕೆ ಹಾನಿ ಬಾರದಿದ್ದರೆ ಸಾಕು. ಇಲ್ಲಿ ಮುಖ್ಯಧರ್ಮವೆಂಬುದು ಸಕಲರಿಗೂ ಅನ್ವಯಿಸತಕ್ಕ ಧರ್ಮ”ವೆಂದೂ “….ವರ್ಣವೃತ್ತಿ ಮುಖ್ಯ; ಅದಕ್ಕಿಂತ ಮುಖ್ಯ ನ್ಯಾಯ ಸಮ್ಮತವಾದ ಜೀವಿಕೆ” (ವೃತ್ತಿ, ೬೨೪) ಎಂದು ಸ್ಪಷ್ಟವಾಗಿಯೇ ಹೇಳಿದ್ದಾರೆ.

೩. ‘ಕ್ರಾಂತಿ’, ‘ಬಂಡಾಯ’ದಂತಹ ಮಾತುಗಳನ್ನು ನಾವು ಆಗಾಗ ಕೇಳುತ್ತೇವೆ, ಹೇಳುತ್ತೇವೆ. ರಾಷ್ಟ್ರ, ಸಮಾಜದ ಅಥವಾ ವ್ಯಕ್ತಿ ಜೀವನದ ಯಾವುದಾದರೊಂದು ಕ್ಷೇತ್ರದಲ್ಲಿ ಯಾವುದಾದರೊಂದು ಅವಶ್ಯ ಪರಿವರ್ತನೆ ಆಗಬೇಕಿದ್ದರೆ ಅದಕ್ಕೆ ಕ್ರಾಂತಿಯೊಂದೇ ಮಾರ್ಗವಲ್ಲ. ಕ್ರಾಂತಿ ಎಂದಾಗ ಸಾಮಾನ್ಯವಾಗಿ ನಮ್ಮಲ್ಲಿ ಮೂಡುವ ಭಾವನೆಗಳೆಂದರೆ ಪ್ರತಿಭಟನೆ, ವೈಮನಸ್ಸು, ಘರ್ಷಣೆ, ರಕ್ತಪಾತ ಇತ್ಯಾದಿ. ಗಾಂಧೀಜಿಯಂತಹ ಮಹಾಪುರುಷರು ವಿಶಿಷ್ಟ ಉದ್ದೇಶ ಸಿದ್ಧಿಗಾಗಿ ಕ್ರಾಂತಿಯನ್ನು ಬಿಟ್ಟು ಅನ್ಯಮಾರ್ಗಗಳೂ ಇವೆ ಎಂಬುದನ್ನು ಸಾಧಿಸಿತೋರಿಸಿದ್ದಾರೆ. ಸಾಮ ಮಾರ್ಗದಿಂದ ವ್ಯಕ್ತಿಗಳ ಮನಃ ಪರಿವರ್ತನೆ ಮತ್ತು ಹೃದಯಗಳು ಪರಸ್ಪರ ಸಾಮಿಪ್ಯವೂ, ಸೌಮನಸ್ಸಿನಿಂದಲೇ ಉದ್ದೇಶ ಸಿದ್ಧಿಯೂ ಆಗುವುದಿದ್ದರೆ ಅದಕ್ಕಿಂತ ಉಪಾದೇಯವಾದದ್ದು ಮತ್ತೊಂದಿಲ್ಲ. ಬಲಾತ್ಕಾರ, ನಿರ್ಭಂಧ, ನಿಷೇಧಗಳಿಂದ ವ್ಯಕ್ತಿಗಳಲ್ಲಿ ಬಾಹ್ಯಪರಿವರ್ತನೆ ಆಗಬಹುದು ಆದರೆ ಮನಃ ಪರಿವರ್ತನ ಅಲ್ಲ. ಗಿಡದಲ್ಲಿ ಮೊಗ್ಗು, ಹೂ, ಕಾಯಿ ಹಣ್ಣುಗಳು ಕಾಣಿಸಿಕೊಳ್ಳುವಂತಹ ನಿಸರ್ಗ ಸಹಜ ಪ್ರಕ್ರಿಯೆಯಂತೆ ಮನಃ ಪರಿವರ್ತನೆ, ಜೀವವಿಕಾಸ ನಡೆಯಬೇಕು. ಅದು ಸ್ವಲ್ಪ ನಿಧಾನವಾಗಬಹುದು. ಆದರೆ ಅದೇ ಶಾಶ್ವತ, ಸುಭದ್ರ. ಹೊಡಿ ಬಡಿ, ಕೀಳು ಕೊಚ್ಚು, ಬಯ್ದು ಭರಿಗಿಸು ಎಂಬಂತಹ ಕ್ರಾಂತಿ ಮಂತ್ರ ರೋಗಕ್ಕಿಂತಲೂ ಅಪಾಯಕಾರಿಯಾದ ಚಿಕಿತ್ಸಾ ವಿಧಾನ. ಆದುದರಿಂದ ಆವೇಶ ಅವಸರ ಸಲ್ಲದು; ಎಚ್ಚರ ಬೆಚ್ಚರಬೇಕು ಎಂಬುದು ಡಿ.ವಿ.ಜಿಯವರ ಮತ್ತು ಅವರಂತಹವರ ಧೋರಣೆ. ಅದನ್ನು ಎಲ್ಲರೂ ಒಪ್ಪಬೇಕೆಂದಿಲ್ಲ, ಆದರೆ ಆ ಧೋರಣೆ ಸರ್ವಥಾ ಚಿಂತನಯೋಗ್ಯವಾದದ್ದು. ಡಿ.ವಿ.ಜಿಯವರ ಜೀವನ ದೃಷ್ಟಿ ಧೋರಣೆಗಳ ಬಗೆಗೆ ಅಭಿಪ್ರಾಯ ವ್ಯತ್ಯಾಸಗಳನ್ನು ಒಪ್ಪಿಯೂ ಅವರ ವಾಙ್ಮಯಸಮೃದ್ಧಿಯನ್ನು, ಅದರ ಅನೇಕ ಸತ್ವಗುಣಗಳನ್ನು ಮೆಚ್ಚಿಕೊಂಡಾಡುವುದು ಸಾಧ್ಯ. ಟಿ.ಪಿ. ಕೈಲಾಸಂ ಬೇರೊಂದು ಸಂಧರ್ಭದಲ್ಲಿ, ಬೇರೋಬ್ಬ ಮಹಾನೀಯರ ಬಗ್ಗೆ ಆಡಿದ ಮಾತು ‘For what we have received let us be truly thankful’ ಎಂಬುದು ಜೀವನದ ಯಾವುದೇ ಕ್ಷೇತ್ರದಲ್ಲೂ ಯಾರೊಬ್ಬರ ಬಗೆಗೂ ಸಮಂಜಸವಾದ ನಿಲುವು ಎಂಬುದು ನನ್ನ ಭಾವನೆ.