ಕನ್ನಡದ ಶ್ರೇಷ್ಠ ಕಥೆಗಾರಲ್ಲಿ ಒಬ್ಬರಾಗಿದ್ದ ‘ಆನಂದ’ (ಅಜ್ಜಂಪುರ ಸೀತಾರಾಮ)ರ ‘ಸಂಸಾರ ಶಿಲ್ಪ ಮತ್ತು ಇತರ ಕಥೆಗಳು’ ಎಂಬ ಸಂಕಲನದ ಆರಂಭದಲ್ಲಿ ‘ಈ ಕಥೆಗಳ ಕಥೆ’ಯೆಂಬ ಪೀಠಿಕಾಭಾಗವೊಂದಿದೆ. ಅದರಲ್ಲಿ ಆನಂದರು ವರ್ತಮಾನದ ತಮ್ಮ ಕನ್ನಡದ ಕವಿವರ್ಮ ಬೇಂದ್ರೆ ಮತ್ತು ಶತಮಾನಗಳ ಹಿಂದಿನ ಅಥೆನ್ಸ್ ನಗರದ ಮಹಾ ಬುದ್ಧಿಶಾಲಿ ಸಾಕ್ರಟೀಸರು ಮರಾಠರ ಗಂಡು ಮೆಟ್ಟು ಪುಣೆಯಲ್ಲಿ ಒಂದು ದಿನ ಪರಸ್ಪರ ಭೇಟಿಯಾದರೆಂದೂ ಇಬ್ಬರೂ ಕಾಲ ದೇಶಗಳನ್ನೂ ತಮ್ಮನ್ನೂ ಮರೆತು ತಾಸುಗಟ್ಟಲೆ ಹರಟೆ ಹೊಡೆದರೆಂದೂ ಸ್ಥಾವರ ಜಂಗಮಗಳೆಲ್ಲವೂ ಅವರನ್ನೇ ನೋಡುತ್ತಾ, ಕೇಳುತ್ತಾ ಮೂಕವಿಸ್ಮಿತವಾದುವೆಂದೂ ಕೊನೆಗೆ ಆಯಿಬ್ಬರು ಮಾತುಗಾರರ ಮಡದಿಯರು ಬಂದು ಕರೆದಾಗಲೇ ಅವರಿಬ್ಬರಿಗೂ ಎಚ್ಚರವಾಯಿತೆಂದೂ ಹೇಳಿದ್ದಾರೆ. ಆ ಸಂದರ್ಭವನ್ನು ಆನಂದರು ಅದೊಮದು ಕಲ್ಪನಾವರ್ಣ ದ್ರವ್ಯವೆಂದು ತೋರದಂತೆ ಸಹಜವಾಗಿಯೂ ಕುತೂಹಲವನ್ನು ಕೆರಳಿಸುವಂತೆ ಸ್ವಾರಸ್ಯಕರವಾಗಿಯೂ ನಿರೂಪಿಸಿದ್ದಾರೆ.

ಆನಂದರ ಕಥಾಸಂಗ್ರಹ ಪೀಠಿಕಾ ಭಾಗವನ್ನು ಇಲ್ಲಿ ಪ್ರಸ್ತಾವಿಸಿದುದರ ಉದ್ದೇಶ ಇಷ್ಟೆ: ಸಾಕ್ರೆಟೇಸನ ಮಾತು ಹಾಗಿರಲಿ, ನಮ್ಮ ಬೇಂದ್ರೆಯವರು ಹೇಗೆ ಅಭಿಜಾತ ಪ್ರತಿಭೆಯ ವರಕವಿಯೇ ಹಾಗೆಯೇ ಅವರೊಬ್ಬ ಸರಸ ಮಾತುಗಾರನೂ, ಹರಟೆಗಾರನೂ ಆಗಿದ್ದರು ಎಂಬುದನ್ನು ಆನಂದರು ಹೇಗೆ ಮನಗಂಡಿದ್ದರು ಮತ್ತು ಓದುಗರಿಗೆ ಮನಗಾಣಿಸಿದ್ದರು. ಎಂಬುದನ್ನು ತಿಲಿಸುವುದಾಗಿದೆ. ಮಾತ್ರವಲ್ಲ, ದಶಕಗಳಷ್ಟು ಹಿಂದೆಯೇ ಬೇಂದ್ರೆಯವರು ಒಬ್ಬ ಹರಟೆಗಾರನೆಂದೂ ಪ್ರಸಿದ್ಧರಾಗಿದ್ದರು ಎಂಬುದೂ ಅದರಿಂದ ಮನವರಿಕೆ ಆಗುತ್ತದೆ. ನಗೆ ಮತ್ತು ಹರಟೆ ಒಂದೇ ನಾಣ್ಯದ ಎರಡು ಮಗ್ಗಲುಗಳು. ಬೇಂದ್ರೆಯವರ ಕಣ್ಣಕಾಂತಿ, ಮುಖದ ಭಾವ. ಮಾತಿನ ವರಸೆ, ಕೈಯ ತಿರುವು, ಕೋರು ರುಮಾಲು ಅಥವಾ ಟೊಪ್ಪಿ, ತಲೆಯಾಡಿಸುವ ಭಂಗಿ, ಹೆಗಲ ಮೇಲೆ ಬಂದೂಕಿನಂತೆ ಇರಿಸಿಕೊಳ್ಳುತ್ತಿದ್ದ ಕೊಡೆ ಎಲ್ಲದರಲ್ಲೂ ಒಂದು ನಗೆಗಾರಿಕೆಯ ಛಾಪು ಎದ್ದು ಕಾಣುತ್ತಿತ್ತು. ಮಾಸ್ತಿಯವರು ಅವರನ್ನು ‘ಗಾರುಡಿಗ’ ಎಂದು ಕರೆದದ್ದು ಅವರ ಕವಿತ್ವವನ್ನು ಉದ್ದೇಶಿಸಿಯೇ ಆಗಿದ್ದರೂ ಆ ವರ್ಣನೆ ಅವರ ಮಾತಿನ ಮೋಡಿಗೂ ಅಷ್ಟೇ ಚೆನ್ನಾಗಿ ಸಲ್ಲುತ್ತದೆ. ಮಾತು ಮಾತುಗಳನ್ನು ಮಥಿಸಿನಾದದ ನವನೀತನನ್ನು ಹೊಮ್ಮಿಸಿಬಲ್ಲ ಬೇಂದ್ರೆ ಮಾತು ಮಾತುಗಳಿಂದ ನಗೆಯ ಪಿಚಕಾಚಾರಿಯನ್ನೂ ಒತ್ತ ಬಲ್ಲವರಾಗಿದ್ದರು. ಬಾಯ್ಮಾತಿನ ಅದೇ ನಗೆಗಾರಿಕೆ ಬೇಂದ್ರೆಯವರ ಪದ್ಯ ಗದ್ಯ ಎರಡರಲ್ಲೂ ಅಲ್ಲಲ್ಲಿ ಬುಗ್ಗೆಯೊಡೆಯುವುದನ್ನು ಕಾಣಬಹುದು. ೧೯೩೨ರಲ್ಲಿ ಮೊದಲ ಸಲ ಅಚ್ಚಾದ ‘ಗರಿ’ಯೆಂಬ ಕವನ ಸಂಕಲನದಿಂದ ತೊಡಗಿ ಬೇಂದ್ರೆಯವರ ಮರಣಾತ್ಪರದಲ್ಲಿ ಮುದ್ರಣಗೊಂಡ ‘ಪರಾಕಿ’, ‘ಕಾವ್ಯವೈಖರಿ’ಗಳಂತಹ ಕವನ ಸಂಗ್ರಹಗಳಲ್ಲೂ ೧೯೪೦ರಲ್ಲಿ ಪ್ರಕಟವಾದ ‘ನಿರಾಭರಣ ಸುಂದರಿ’ಯೆಂಬ ಲೇಖನ ಗುಚ್ಛದಲ್ಲೂ ೧೯೩೬ರ ‘ಹುಚ್ಛಾಟಗಳು’ ಮತ್ತು ೧೯೫೦ರ ‘ಹೊಸ ಸಂಸಾರ ಮತ್ತು ಇತರ ನಾಟಕ’ಗಳಲ್ಲೂ ಅವರ ನಗೆಗಾರಿಕೆ ಹೊನಲಾಗಿ ಗುಳುಗುಳಿಸಿ ಬಣ್ಣ ಬಣ್ಣವಾಗಿ ಹರಿಯುವುದನ್ನು ನೋಡಬಹುದು. ಬೇಂದ್ರೆ ಹಾಸ್ಯ ಮನಸ್ಸಿಗೆ ಮದನೀಡಿ, ಮುಖವನ್ನು ಅರಳಿಸುವ ಮಲ್ಲಿಗೆಯ ಘಮಲು ಮಾತ್ರವಲ್ಲ, ಅದು ಆಗಾಗ ವ್ಯಂಗ್ಯ ವಿಡಂಬನೆಯಾಗಿ ಹೊರಹೊಮ್ಮಿ ನೀರುಳ್ಳಿಯ ಘಾಟಿನಂತೆ ಕಣ್ಣಲ್ಲಿ ನೀರನ್ನೂ ಇಳಿಸಬಲ್ಲುದು. ಎರಡಕ್ಕೂ ಅದರದರ ಪ್ರಯೋಜನವುಂಟು. ಪುಷ್ಪ ಸೌಂದರ್ಯವರ್ಧಕನಾದರೆ ಪಲಾಂಡು ಆರೋಗ್ಯದಾಯಕ. ಆರೋಗ್ಯವೇ ಸೌಂದರ್ಯವಾಗುವಂತೆ ವ್ಯಂಗ್ಯ ವಿಡಂಬನೆಯೂ ಹಾಸ್ಯದ ಭಿನ್ನ ರೂಪವೇ ಆಗಿದೆ. ಆದರೆ ಅದು ಹಾಸ್ಯದಷ್ಟು ಕೋಮಲವಲ್ಲ, ಸ್ವಲ್ಪ ಪರುಷ. ಈ ಪ್ರಬಂಧದಲ್ಲಿ ಬೇಂದ್ರೆ ವಾಙ್ಮಯದಲ್ಲಿ ಶುದ್ಧ ಹಾಸ್ಯವಾಗಲೀ ವ್ಯಂಗ್ಯ ವಿಡಂಬನೆಯಾಗಲೀ ಎಲ್ಲೆಲ್ಲಿ ಎಷ್ಟೆಷ್ಟು ಬಂದಿವೆ ಎಂಬುದನ್ನು ಸಮಗ್ರವಾಗಿ ಅಲ್ಲ, ನಾಲ್ಕಾರು ಉದಾಹರಣೆಗಳಿಂದ ಸ್ಥೂಲವಾಗಿ ನಿರೂಪಿಸುವ ಒಂದು ಸಣ್ಣ, ಆದರೆ ಪ್ರಾಂಜಲ ಪ್ರಯತ್ನವಿದೆ.

ಬೇಂದ್ರೆಯವರು ೧೯೧೬ ರಷ್ಟು ಹಿಂದೆಯೇ ಪದ್ಯಕಾವ್ಯಗಳ ರಂಗವಲ್ಲಿಯನ್ನು ಬರೆಯುವುದಕ್ಕೂ ಗದ್ಯಲೇಖನಗಳ ಹಸೆಯನ್ನು ಹೊಸೆಯುವುದಕ್ಕೂ ಕೈಯಿಕ್ಕಿದ್ದರಾದರೂ ಅವರ ಪ್ರತಿಭಾ ಪಕ್ಷಿಗೆ ರೆಕ್ಕೆಯೊಡೆದು, ಅದು ಗರಿಗೆದರಿ ಕನ್ನಡ ಕಾವ್ಯಾಕಾಶದಲ್ಲಿ ನಿರಾಳವಾಗಿ ಹಾರತೊಡಗಿದ್ದೂ ಕನ್ನಡ ಜನ ಕೋಟಿ ಕಣ್ತೆರೆದು ಹಣೆಮೇಲೆ ಕೈಯಿರಿಸಿ, ಅದನ್ನು ನೋಡಿ ಬೆರೆಗಾದದ್ದೂ ೧೯೩೨ರಲ್ಲಿ – ಅವರ ಕವನ ಸಂಗ್ರಹ ಗರಿ ತೆರೆದುಕೊಂಡಾಗಲೇ ಎನ್ನಬಹುದು. ಆ ಸಂಕಲನದಲ್ಲಿ ಸಾರ್ವಕಾಲಿಕ ಎನ್ನಬಹುದಾದ ಬೇಂದ್ರೆಯವರ ಅನೇಕ ಕವಿತೆಗಳಿವೆ. ಅಂತಹವುಗಳಲ್ಲಿ ‘ಹಕ್ಕಿ ಹಾರುತಿದೆ ನೋಡಿದಿರಾ’ ಎಂಬುದು ಕವಿಕಲ್ಪನೆಯ ಉತ್ತುಂಗ ಶಿಖರ. ಅದೇ ಕವಿತೆಯನ್ನು ಅನುಕರಿಸಿ ಸ್ವತಃ ಬೇಂದ್ರೆಯವರೇ ‘ಬೆಕ್ಕು ಹಾರುತಿದೆ ನೋಡಿದಿರಾ’ ಎಂಬ ಅಣಕವಾಡು ಬರೆದಿದ್ದಾರೆ. ಅಣಕವಾಡು ಎಂಬುದೂ ಒಂದು ಹಾಸ್ಯ ಪ್ರಭೇದವಾಗಿದ್ದು ಅದು ಇಂಗ್ಲಿಷಿನ Parady  ಎಂಬುದಕ್ಕೆ ಪ್ರತಿ ಪದ.

[1] ಈಗ ಹಕ್ಕಿ ಮತ್ತು ಬೆಕ್ಕುಗಳ ಹಾರಾಟವನ್ನು ಹತ್ತಿರದಿಂದ ನೋಡಿ ಹೋಲಿಸಿ ಒಂದರ ಸೊಬಗೇನು ಮತ್ತೊಂದರ ಚದುರೇನು ಎಂಬುದನ್ನು ಪರಿಭಾವಿಸಬಹುದು :

ಹಕ್ಕಿ ಹಾರುತಿದೆ ನೋಡಿದಿರಾ?
…………………………
ಕರಿನೆರೆ ಬಣ್ಣದ ಪುಚ್ಛಗಳ
ಬಿಳಿ ಹೊಳೆ ಬಣ್ಣದ ಗರಿಗರಿಯುಂಟು
ಕೆನ್ನೆನ ಹೊನ್ನವ ಬಣ್ಣಬಣ್ಣಗಳಾ
ರೆಕ್ಕೆಗಳೆರಡೂ ಪಕ್ಕದಲುಂಟು
ಹಕ್ಕಿ ಹಾರುತಿದೆ ನೋಡಿದಿರಾ?
………………………….
ರಾಜ್ಯದ ಸಾಮ್ರಾಜ್ಯದ ತೆನೆ ಒಕ್ಕಿ
ಮಂಡಲ ಗಿಂಡಲಗಳ ಗಡಮುಕ್ಕಿ
ತೇಲಿಸಿ ಮುಳುಗಿಸಿ ಖಂಡ ಖಂಡಗಳ
ಸಾರ್ವಭೌಮರಾ ನೆತ್ತಿಯ ಕುಕಕಿ
ಹಕ್ಕಿ ಹಾರುತಿದೆ ನೋಡಿದಿರಾ?
ಬೆಕ್ಕು ಹಾರುತಿದೆ ನೋಡಿದಿರಾ
………………………………
ಕರಿನೆರೆ ಬಣ್ಣದ ಮೊಸಡೆಯ ಗಂಟು
ತಿಳಿ ಹೊಳೆ ಬಣ್ಣದ ಮೀಸೆಗಳೆಂಟು
ಹಚ್ಚನೆ ಬೆಚ್ಚನ ಪಚ್ಚೆಯ ಪೈರಿನ
ಬಣ್ಣದ ಕಣ್ಣೂ ಕಿವಿ ಬದಿಗುಂಟು
ಬೆಕ್ಕು ಹಾರುತಿದೆ ನೋಡಿದಿರಾ?
………………………………
ರಾಜ್ಯದ ಹೆಗ್ಗಣಗಳ ತಾನೊಕ್ಕಿ
ಜೊಂಡಿಗದಾ ಹುಲುಗಡಣವ ಮುಕ್ಕಿ
ಹಾರಿಸಿ ಹೇಂಟೆಯ ಹಿಂಡುಹಿಂಡುಗಳ
ಜಂಭದ ಕೋಳಿಯ ನೆತ್ತಿಯ ಕುಕ್ಕಿ
ಬೆಕ್ಕು ಹಾರುತಿದೆ ನೋಡಿದಿರಾ?

ಇವು ಆ ಎರಡೂ ಕವಿತೆಗಳ ಎರಡೆರಡು ಪದ್ಯಗಳು. ಒಬ್ಬ ನಿಜವಾದ ನಗೆಗಾರ ಮಿಕ್ಕವರನ್ನು ಮಾತ್ರ ನಗಿಸುವುದಿಲ್ಲ, ತನ್ನನ್ನೇ ತಾನೇ ನೋಡಿದಾಗಲೂ ನಗಬಲ್ಲ, ನಗಲೂಬೇಕು ಎಂಬುದನ್ನು ‘ಬೆಕ್ಕು ಹಾರುತಿದೆ……’ ಎಂಬ ಅಣಕವಾಡು ನಿರ್ದೇಶಿಸುತ್ತದೆ. (‘ಗರಿ’ಯನ್ನು ಕುರಿತು ಬರೆದ ಮನೋಜ್ಞ ವಿಮರ್ಶೆಯೊಂದರಲ್ಲಿ ಆಚಾರ್ಯ ತೀನಂಶ್ರೀಯವರು, ‘ಹಕ್ಕಿ ಹಾರುತಿದೆ…..’ ಯಂತಹ ತಮ್ಮ ಉತ್ಕೃಷ್ಟ ಕವಿತೆಯ ಮೇಲೆ ಸ್ವತಃ ಬೇಂದ್ರೆಯವರೇ ‘ಬೆಕ್ಕು ಹಾರುತಿದೆ…..’ ಯಂತಹ ಅಣಕವಾಡನ್ನು ಏಕೆ ಕಟ್ಟಿದರೋ’ ಎಂದು ಪ್ರಶ್ನಿಸಿದ್ದೂ ಇದೆ.) ಬೇಂದ್ರೆಯವರು ಅದೇ ಧಾಟಿಯಲ್ಲಿ ಬೇರೆ ಕೆಲವು ಪದ್ಯಗಳನ್ನೂ ಹೆಣೆದಿದ್ದಾರೆ. ಅವರ ಲಘು ಗದ್ಯಲೇಖನ ಸಂಗ್ರಹ ಎನ್ನಬಹುದಾದ ನಿರಾಭರಣ ಸುಂದರಿಯಲ್ಲಿ ಆರು ನಗೆ ಹಾಡುಗಳ ಒಂದು ಪ್ರತ್ಯೇಕ ವಿಭಾಗವೂ ಇದೆ. ಆ ಹಾಡುಗಳಲ್ಲಿ ಒಂದು ‘ಒರದಾ ತಗಣಿ ಒರದಾ!’ ಗೋಪಾಲ ದಾಸರ ‘ವರದಾ! ಕಂಚೀ ವರದಾ’ ಎಂಬ ಒಂದು ಸುಂದರ ಸ್ತೋತ್ರಗೀತವನ್ನು ಬೇಂದ್ರೆಯವರು ಅದೇ ಅಸಾವೇರಿ ರಾಗದ ಅಟತಾಳದಲ್ಲಿ ಅಣಕವಾಡಿದ್ದಾರೆ :

ಒರಲಿ ತಾ ಹರಿಯೆಂದು
ಒರಗಿದಾಕ್ಷಣ ಒಂದು | ನೆರೆಯೆ
ಬಂದು ನೆರೆಯೆ
ಮಗ್ಗಲದೆಲುಬ ಕೊರೆಯೆ ||ಪಲ್ಲವಿ||
ನಿರುತ ತನ್ನಯ ಕರಚರಣಗಳ
ಕೊರೆದು ಕಾಡುವ ಕಾಟತಾಳದೆ
ಒರದಾ ತಗಣಿ ಒರದಾ || ಅನುಪಲ್ಲವಿ||

ಹೀಗೆ ಪ್ರಾರಂಭವಾಗುತ್ತದೆ, ಆ ಮತ್ಕುಣಮರ್ದನ ವಿಡಂಬನಗೀತ. ‘ಗರಿ’ಯ ಅನಂತರ ಅವಧಿಯಲ್ಲಿ ಬೇಂದ್ರೆಯವರ ಇತರ ಕವನ ಸಂಗ್ರಹಗಳು ಪ್ರಕಟವಾಗಿದ್ದರೂ ಅವರ ಕಾವ್ಯ ಪ್ರತಿಭೆಗೆ ಸಮುಜ್ವಲ ನಿದರ್ಶನವಾಗಿ ಅತಿಶಯ ಪ್ರಸಿದ್ಧಿಯನ್ನು ತಂದೊದಗಿಸಿದ ಮತ್ತೊಂದು ಕವನ ಸಂಚಯವೆಂದರೆ ನಾದಲೀಲೆಅದರಲ್ಲಿರುವ ‘ಅವರ್ಣನೀಯ ಅರ್ವಾಚೀನ ಸೌಂದರ್ಯ’ವೆಂಬ ಕವಿತೆ ಸ್ವಲ್ಪ ವಿಡಂಬನಾತ್ಮಕವಾಗಿ  ಹಾಸ್ಯಗರ್ಭಿತವಾದದ್ದು. ಅ ಕಾಲದಲ್ಲೇ (೧೯೩೮) ನಮ್ಮ ಗಂಡು-ಹೆಣ್ಣುಗಳು ಸಹಜ ಸೌಂದರ್ಯಕ್ಕಿಂತ ಹೆಚ್ಚಾಗಿ ‘ಫ್ಯಾಶನ್’ಗಳಿಗೆ ಹೇಗೆ ಮರುಳಾಗುತ್ತಿದ್ದರು ಎಂಬುದನ್ನು ಬೇಂದ್ರೆಯವರು ಹೀಗೆ ನಗೆಯಾಡಿದ್ದಾರೆ :

ಕುರುಡಿರಲಿ ಮೆಳ್ಳಿರಲಿ ಕಪ್ಪು ಕನ್ನಡಕವಿರೆ
ನಯನಗಳನೇನು ಬಣ್ಣಿಸಲಿ ಮಣ್ಣು?
…………………………………
ತುಟಿಗಳನು ಬಣ್ಣಿಸಲೆ? ತುಂಬೆಲ್ಲ ತಂಬುಲವು
ಹಲ್ಲುಗಳ ಬಣ್ಣಿಸಲೆ? ನಿನ್ನವಹುದೋ
ಸಾರಣೆಯ ಕಾರಣೆಯ ಗಲ್ಲಗಳ ಬಣ್ಣಿಸಲೆ?
ಬಣ್ಣನೆಯು ಏನು ನಿನ್ನವಹುದೋ
……………………………..
ಅಂಗಾಂಗ ವ್ಯಂಗವಿರಬಹುದು ಇರದಿರಬಹುದು
ವ್ಯಂಗ್ಯಕಾವ್ಯದ ಹಾಗೆ ನಿನ್ನ ಮಾಟ
ನಿನ್ನ ಮೈಯನ್ನೆಲ್ಲ ನೀನೆ ಬಣ್ಣಿಸಿಕೊಂಡೆ
ಬೇರೆ ಬಣ್ಣನೆ ಬರಿಯ ಬಣ್ಣದಾಟ

ಬ್ರಹ್ಮಸೃಷ್ಟಿಯಲ್ಲಿ ಒಂದಾಗಿರುವ ಹೆಣ್ಣಿನಲ್ಲಿ ಗಂಡಿನಲ್ಲೂ ಸಹ-ಸಹಜ ಅಂಗಾಂಗಗಳಿರುತ್ತವೆ; ಅವುಗಳದೇ ಆಕಾರ ಸೌಷ್ಠವ ಇರುತ್ತವೆ. ಆದರೆ ಕೃತಕ ಪ್ರಸಾಧನ ಸಾಧನದಿಂದಾಗಿ ಅವೆಲ್ಲವೂ ಮುಚ್ಚಿಕೊಳ್ಳುತ್ತವೆ ಎಂಬುದನ್ನು ಬೇಂದ್ರೆಯವರು ಹದವಾದ ವ್ಯಂಗ್ಯವನ್ನು ಬೆರಸಿದ ಸೊಗಸಾದ ನಗೆಯ ಉಂಡಗಳಲ್ಲಿ ಕಟ್ಟಿ ಕೊಟ್ಟಿದ್ದಾರೆ. ವ್ಯಂಗ್ಯ ಎಂಬುದು ಕಾವ್ಯ ಶಾಸ್ತ್ರದ ಒಂದು ಪರಿಭಾಷೆ. ಹಾಗೆಯೇ ಕಾವ್ಯಾಂಶಗಳಲ್ಲಿ ವರ್ಣನೆ (ಅದರ ತದ್ಭವ ‘ಬಣ್ಣನೆ’) ಎಂಬುದೂ ಒಂದು. ಬೇಂದ್ರೆಯವರು ಶ್ಲೇಷಾರ್ಥದಲ್ಲಿ ಈ ಎರಡೂ ಪದವಿಶೇಷಗಳನ್ನು ಪ್ರಯೋಗಿಸಿರುವುದು ಅವರ ಕಾವ್ಯ ಚಾತುರಿಯನ್ನು ನಿದರ್ಶಿಸುತ್ತದೆ.

ಸಖಿಗೀತ ಬೇಂದ್ರೆಯವರ ಸುಂದರವೂ ಸುಪರಿಚಿತವೂ ಆಗಿರುವ, ಅದೇ ಹೆಸರಿನ ನೀಳ್ಗವನವನ್ನು ಒಳಗೊಂಡಿರುವ ಮತ್ತೊಂದು ಕವನ ಸಂಚಯ. ಅದರ ಉತ್ತರಾರ್ಧದಲ್ಲಿರುವ ಬಿಡಿ ಕವಿತೆಗಳಲ್ಲಿ ‘ಒಂದು ಹುಬ್ಬಳ್ಳಿಯಾಂವ’, ಅದು ಜನಸಾಮಾನ್ಯರ ನಾಲಗೆಯಲ್ಲೂ ನಲಿಯುತ್ತ ಅತ್ಯಂತ ಜನಪ್ರಿಯವಾಗಿರುವ ರಚನೆ. ಪ್ರಣಯ ಭಾರದಿಂದ ಉನ್ಮತ್ತೆಯಾಗಿರುವ ವೇಶ್ಯೆಯೊಬ್ಬಳು ತನ್ನ ಅಳಲನ್ನು ತೋಡಿಕೊಳ್ಳುವ ಬಗೆಯೆಂದು ಬೇಂದ್ರೆಯವರು ಕವಿತೆಯ ಭಾವಸೂಚನೆ ಮಾಡಿದ್ದಾರೆ. ಆ ಹಿನ್ನೆಲೆಯನ್ನು ಬದಿಗಿರಿಸಿ ಓದಿದರೂ ಅದೊಂದು ಸ್ವತಂತ್ರ ಭಾವಗೀತವಾಗಿಯೇ ಹಾಡುವ ಬಾಯನ್ನೂ ಕೇಳುವ ಕಿರಿಯನ್ನು ಮೇಲುಕಾಡುವ ಮನಸ್ಸನ್ನೂ ತುಂಬಿಕೊಳ್ಳುತ್ತದೆ. ‘ಮಿತ್ರರಸ’ಗಳೆಂದು ಪರಿಗಣಿತವಾಗಿರುವ ಶೃಂಗಾರ ಹಾಸ್ಯಗಳೆರಡೂ ಕವಿತೆಯಲ್ಲಿ ಕಾರಂಜಿಯಾಗಿ ಚಿಮ್ಮುತ್ತಿವೆ :

ಇನ್ನೂ ಯಾಕ ಬರಲಿಲ್ಲವಾ ಹುಬ್ಬಳ್ಳಿಯಾಂವಾ
ವಾರದಾಗ ಮೂರು ಸರತಿ ಬಂದು ಹೋದಾಂವಾ ||

ಎಂದು ಕಾತರದಿಂದ ಕಾಯುತ್ತಿರುವ ಅಭಿಸಾರಿಕೆ ತನ್ನ ಪ್ರಿಯಕರನ ಭಂಗಿಯನ್ನು ಭಾವವನ್ನೂ ಹೀಗೆ ಕಣ್ಣೆದುರು ನಿಲ್ಲಿಸಿಕೊಳ್ಳುತ್ತಾಳೆ :

ಭಾರಿ ಜರದ ವಾರಿ ರುಮ್ಮಾಲಾ ಸುತ್ತಿ ಕೊಂಡಾವಾ
ತುಂಬ ಮೀಸೆ ತೀಡಿಕೋತಾ ಹುಬ್ಬ ಹಾರಿಸಾಂವಾ
ಮಾತು ಮಾತಿಗೆ ನಕ್ಕು ನಗಿಸಿ ಆಡಿಸ್ಯಾಡ್ಯಾಂವಾ
ಏನೋ ಅಂದರ ಏನೋ ಕಟ್ಟಿ ಹಾಡ ಹಾಡಾಂವಾ

ಆತ ಮುಗ್ಧ ಪ್ರಣಯಿಯಲ್ಲ; ಅನುಭವೀ ರಸಿಕ. ಹೇಂಟೆಯನ್ನು ಒಲಿಸಿಕೊಳ್ಳಲು ಆಟವಾಡುವ ಹುಂಜದಂತೆ ಅವನ ಚದುರು :

ಇರು ಅಂದರ ಬರತೇನಂತ ಎದ್ದು ಹೋದಾಂವಾ
ಹಿಡಿ ಹಿಡೀಲೆ ರೊಕ್ಕ ತಗದ ಹಿಡಿಹಿಡಿ ಅನ್ನಾಂವಾ
ಖರೇ ಅಂತ ಕೈಮಾಡಿದರೆ ಹಿಡsದು ಬಿಡಾಂವಾ ||

ಯಾವ ಯಾವ ಆಟ ಮಾಟಗಳಿಂದ, ಮುದ್ದು ಮಾತುಗಳಿಂದ ಹೆಣ್ಣನ್ನು ಒಲಿಸಿಕೊಂಡಿದ್ದ ಗಂಡು ಆತ ಎಂಬುದನ್ನು ಆ ಹೆಣ್ಣಿನ ಬಾಯಿಂದಲೇ ಕೇಳಬೇಕು: ‘ಚಹಾದ ಜೋಡಿ ಚೂಡಾಧಾಂಗ ನೀನನಗೆಂದು’ ಹೇಳಿದ್ದ; ‘ಚೌಡಿಯಲ್ಲ ಚೂಡಾಮಣಿಯೆಂದು’ ಕರೆದಿದ್ದ; ‘ಬೆರಳಿಗುಂಗುರ ತೊಡಿಸಿದ್ದ’; ‘ಮೂಗಿಗೆ ಮೂಗು ಬೊಟ್ಟಿರಿಸಿ’ ‘ಕಣ್ಣಿನಾಗಿನ ಗೊಂಬೀ ಹಾಂಗ’ ಎಂದು ನಂಬಿಸಿದ್ದ. ಗಂಡು ಬೀಸಿದ ಮೋಡಿಯ ಬಲೆಗೆ ಬಿದ್ದ ಹೆಣ್ಣು ಕೆಳದಿಯರನ್ನು ಕೇಳುತ್ತಾಳೆ :

ಯಲ್ಲಿ! ಮಲ್ಲಿ! ಪಾರಿ! ಸಾರಿ! ನೋಡಿರೇನವ್ವಾ?
ನಿಂಗೀ! ಸಂಗೀ! ಸಾವಂತರೀ! ಎಲ್ಲ್ಹಾನನ್ನನ್ನಾಂವಾ?
ಸೆಟ್ಟರ ಹುಡುಗ ಸೆಟಗೊಂಡ್ಹೋದಾ ಅಂತ ನನ್ನ ಜೀವಾ?
ಹಾದೀ ಬೀದೀ ಹುಡುಕು ತೈತ್ರೆ ಬಿಟ್ಟ ಎಲ್ಲಾ ಹ್ಯಾಂವಾ ||

ಹೆಣ್ಣಿನ ಈ ಹಾಡು ತುಟಿಯರಳಿಸಿ ನಗು ಬರಿಸುತ್ತದೆ, ಆದರೆ ಆಕೆಯ ಪಾಡು ನಮಗರಿಯದಂತೆ ಕಣ್ಣಂಚಿನಲ್ಲಿ ಹನಿ ಗೂಡಿಸುತ್ತದೆ.

ಬೇಂದ್ರೆಯವರ ಮುಗಿಲ ಮಲ್ಲಿಗೆಯಲ್ಲಿ ‘ಯಾರಿಗೆ ಬೇಕಾಗೈತಿ ನಿಮ್ಮ ಕವಿತಾ’ ಎಂಬುದೊಂದು ರಚನೆಯಿದೆ. ಅದನ್ನು ಅವರು ಮೊದಲ ಸಲ ಬರೆದು ಜರಿದ್ದು ೧೯೬೦ರಲ್ಲಿ, ಮಣಿಪಾಲದಲ್ಲಿ ಜರಗಿದ್ದ ಸಾಹಿತ್ಯ ಸಮ್ಮೇಳನದಲ್ಲಿ. ಕೇಳಿದ ಜನ ನಕ್ಕೂ ನಕ್ಕೂ ಅವರ ತುಟಿ ಸೀಳಾಗುವಂತಾಯಿತು! – (ಬೇಂದ್ರೆಯವರು ತಮ್ಮ ಕವಿತೆಗಳನ್ನು ತಾವೇ ಉಚಿತ ಮುಖಭಾವ ಮತ್ತು ಹಸ್ತವಿನ್ಯಾಸಗಳಿಂದ ಓದಿದಾಗ ಆಗುವ ಪರಿಣಾಮವೇ ಬೇರೆ.) ಅವರ ಕವಿತೆಗಳು ಹೇಗೆ ಮನನ ಮನೋರಮವೋ ಹಾಗೆಯೇ ಶ್ರವಣಸುಖಕರವೂ ಆಗಿವೆ. ‘ಹಳ್ಳಿಯ ಪುಢಾರಿ ಹಳ್ಳಿ ಸಾಹಿತಿಗೆ ಹಾಕಿದ ಪ್ರಶ್ನೆ ಇದು’ ಎನ್ನುವ ಬೇಂದ್ರೆಯವರು ಆ ಪುಢಾರಿ ಮಾತನ್ನು ತಮ್ಮ ಕವಿತೆಯಲ್ಲಿ ಹೀಗೆ ಪಡಿ ನುಡಿದ್ದಾರೆ:

ಯಾರಿಗೆ ಬೇಕಾಗೈತಿ ನಿಮ್ಮ ಕವಿತಾ?
ಇದ್ರ ಒಂದು ಬ್ರೆಡ್ ತಾ
ಮ್ಯಾಲ ಅದಕಾ ಬೆಣ್ಣಿ ತಾ
ಇಲ್ಲ? ಹೋಗ್ಲಿ ಎಣ್ಣಿ ತಾ……

ಹಾಕ ಮ್ಯಾಲೆ ಖಾರದ ಪುಡಿ
ಹೊಟ್ಟೀ ತುಂಬ ಅದನ್ನು ಜಡಿ
ಕುಡಿ, ಸಿಕ್ಕಷ್ಟು ಚಾಕುಡಿ
ಹಿಡಿ, ಬಂದ ಹಾದೀs ಹಿಡಿ
ಸಾಯಕಲ್ಲ ಮ್ಯಾಲೆ ಟಾಂಗ ಹೊಡಿ

ಬರೀತಾನಂತ ಬರೀತಾನs
ಸುಳ್ಳೇ ತಲಿ ಕೆರೀತಾನ
ಇಲ್ಲೊ ಅಲ್ಲಿ ಕೂದಲಾ
ಅದು ಬರೀ ತಲಿ
ಸುಟ್ಟು ಹೋಗ್ಯಾವ ಎಲ್ಲಾನು

ಪ್ರಾಚೀನ ಚಾರ್ವಾಕನ ತಮ್ಮನಂತಿರುವ ಈ ಅರ್ವಾಚೀನ ಪುಡಾರಿ ಕೊನೆಯಲ್ಲಿ ಹೇಳುವುದೇನು? ಕೇಳಿ :

ಒಗೀ ಕವಿತಾ
ತಾ ಇಲ್ಲಿ ಕೈತಾ
ಹಾಕು ಕೈಮ್ಯಾಲೆ ಕೈ
ಅನ್ನು ಕರ್ನಾಟಕ ಮಾತಾಕು ಜೈ

ಇಂದಿನ ಸಂಕೀರ್ಣ ವಿಕ್ಷಿಪ್ತ ಮನುಷ್ಯಜೀವನ ಬೇಂದ್ರೆಯವರ ಗಂಭೀರ ಕವನಗಳಿಗೆ ಹೇಗೋ ಹಾಗೆಯೇ ವ್ಯಂಗ್ಯ ವಿನೋದ ಕವಿತೆಗಳಿಗೂ ವಸ್ತುವಾದದ್ದಿದೆ. ಅವರ ಉತ್ತರಾಯಣದಲ್ಲಿ ‘ಪಂಟು’ ಎಂಬ ಕವಿತೆಯೊಂದಿದೆ. ಅದರ ಆರಂಭ ಹೀಗಿದೆ:

ಅಲ್ಲಿಂಕು ಇಲ್ಲಿಂಕು
ನಡುವಿಲ್ಲ ಲಿಂಕು
ಬರಿ ಮಸಿಯ ಗೊಣ್ಣೆ
ಪಿತ್ತ ಕೆರಳಿದ ಹಾಗೆ
ಮೂಕಸನ್ನೆ

‘ಪಂಟು’ ಅಂದರೆ ಸತ್ಯದೂರವಾದ ಅಸಂಬದ್ಧ ವಾಕ್ಚಾತುರ್ಯವೆಂದು ಬೇಂದ್ರೆಯವರು ಅರ್ಥಸೂಚನೆ ಮಾಡಿದ್ದಾರೆ. ಬಿಳಿ ಹಾಳೆಯ ಮೇಲೆ ‘ಇಂಕು’ ಚೆಲ್ಲಿ ಬರವಣಿಗೆಯೆಲ್ಲ ಗೋಜಲು ಗೋಜಲಾಗಿ ಕಾಣುವ ಹಾಗೆ ಪ್ರಾಚೀನ ಅರ್ವಾಚೀನ, ಸಮಷ್ಟಿ-ವ್ಯಷ್ಟಿಗಳ ನಡುವೆ ‘ಲಿಂಕು’ ತಪ್ಪಿದ ಇಂದಿನ ಬದುಕು ಬಾಳುವೆಗಳೂ ಹಾಗೆಯೇ ಆಗಿವೆ. ಬೇಂದ್ರೆಯವರು ಜಾದುಗರಿಗೆ ಕಚಗುಳಿಯಿಟ್ಟು ನಗಿಸುವುದರೊಂದಿಗೆ ಅವರನ್ನು ಚಿಂತನೆಗೂ ಹಚ್ಚುತ್ತಾರೆ.

ಸಂವೇದನಶೀಲತೆ ಒಬ್ಬ ಕವಿಯ ಗುಣತಿಶಯಗಳಲ್ಲಿ ಪ್ರಮುಖವಾದದ್ದು. ಆತ ಮನುಷ್ಯ ಪ್ರಾಣಿಗಳಲ್ಲಿ ಮಾತ್ರವಲ್ಲ, ಸ್ಥಾವರ ಜಂಗಮಮಗಳಲ್ಲೂ ಅನುಕ್ರೋಶ ಪರನಾಗಿರುತ್ತಾನೆ. ಹಾಗಿರುತ್ತ ಒಬ್ಬ ಮುದುಕ ಅಥವಾ ಮುದುಕಿಯನ್ನು ನಿಜವಾದ ಕವಿ ನಿರ್ಲಕ್ಷಿಸುವುದಕ್ಕೆ, ಅಪಹಾಸ್ಯ ಮಾಡುವುದಕ್ಕೆ ಸಾಧ್ಯವೇ? ಒಂದು ‘ಕಕಮರಿ ನಾಯಿ’ಗಾಗಿ ಕರಗಿದ[2] ಕವಿಯ ಕರುಳು ಬಡಮುದುಕಿಯೊಬ್ಬಳನ್ನು ಕಂಡಾಗ ಖಂಡಿತವಾಗಿಯೂ ಅಪಹಾಸ್ಯ ಮಾಡಲಾರದು. ಮೇಲ್ನೋಟಕ್ಕೆ ಕುಚೇಷ್ಟೆಯೆಂದೇ ತೋರುವ ಒಂದು ಪದ್ಯವನ್ನು ಬೇಂದ್ರೆಯವರು ಬರೆದಿದ್ದಾರೆ. ಅದರ ತಲೆಬರಹವೇ ‘ಮುದುಕಿ’! ಆ ಮುದುಕಿ ಎಂತಹವಳು? –

ನಾಡ ಸಂರಕ್ಷಣೆಗೆ ತೋಪು ಇರದಿರಲು
ನಾಡಿಗೊಂದಿರಬೇಕು ಬಯ್ಯುವಾ ಮುದುಕಿ
ಊರ ಸಂರಕ್ಷಣೆಗೆ ನಾಯಿ ಇರದಿರಲು
ಊರಿಗೊಂದಿರಬೇಕು ಬಾಯ್ಬುಡುಕ ಮುದುಕಿ
ಕೇರಿಯನ್ನೆಚ್ಚರಿಸೆ ಗಂಟೆ ಇರದಿರಲು
ಕೇರಿಗೊಂದಿರಬೇಕು ಕೆಮ್ಮುವಾ ಮುದುಕಿ

ಭೂಮಿಗೆ ಭಾರ, ಅನ್ನಕ್ಕೆ ದಂಡ ಎಂದು ಮನೆಮಂದಿ ಮೂಲೆಗೆ ತಳ್ಳಿರುವ ಒಬ್ಬ ಮುದುಕಿಯಿಂದ ಮನೆಗೆ ಅಷ್ಟೇ ಅಲ್ಲ ಊರು ಕೇರಿಗಳಿಗೇ ಎಷ್ಟೊಂದು ಪ್ರಯೋಜನ! ಮುದುಕಿಯನ್ನು ನಗೆಯಾಡುತ್ತಲೇ ಬೇಂದ್ರೆಯವರು ಓದುಗರ ಎದೆಗಡಲಲ್ಲಿ ಆಕೆಗಾಗಿ ಅನುಕಂಪನದ ಅಲೆಗಳನ್ನೂ ಎಬ್ಬಿಸುತ್ತಾರೆ!

ಬೇಂದ್ರೆಯವರ ನಾಟಕಗಳಲ್ಲೂ ಪದ್ಯಗಳಿರುವುದುಂಟು. ಅವು ಒಮ್ಮೆಮ್ಮೆ ನಗೆ ಹೂವಾದರೆ ಕೆಲವೊಮ್ಮೆ ನೆಗ್ಗಿನ ಮುಳ್ಳುಗಳಾಗಿ ಚುಚ್ಚುತ್ತವೆ. ‘ಸಾಯೋ ಆಟ’ದ ಆರಂಭದಲ್ಲಿ ನಾಂದಿಯಂತಿರುವ ಕೆಲವು ಪದ್ಯ ಪಂಕ್ತಿಗಳಿವೆ :

ಸತ್ತವರು ಕೊನೆ ತನಕ ಸುಖವಾಗಿ ಇರಲಿ
ಕೊನೆ ತನಕ ಸತ್ತವರು ಇರಲಿ ಸುಖವಾಗಿ
ಸತ್ತವರು ಎಂದಿಗೂ ಸಾಯದಿರಲಿ,
ಯಮನೇ ರುದ್ರನೇ ಸಾಯದಿರಲಿ,
ಸತ್ತವರೂ ಸಾಯದಿರಲಿ!

ನಮ್ಮಲ್ಲಿ ‘ಬದುಕಿಯೂ ಸತ್ತಂತೆ’ ಎಂಬುದು ಆಡು ಮಾತು. ಹಾಗೆಯೇ ‘ಸತ್ತು ಬದುಕಿದ’ ಎಂಬುದು ನಾಡ ನುಡಿ. ಎಷ್ಟೋ ಸಲ ‘ಬದುಕಿರುವುದಕ್ಕಿಂತ ಸಾಯುವುದೇ ಸುಖಕರ’ ಎಂದು ತೋರುವುದಿದೆಯಲ್ಲ – ಮೇಲಿನ ಪದ್ಯ ಅದೇ ಭಾವದ ಪಡಿನುಡಿ!

ಬೇಂದ್ರೆಯವರು ತಮ್ಮ ನಾಟಕಗಳಂತೆಯೇ ಕೆಲವಾರು ಕವಿತೆಗಳಲ್ಲೂ ವಿಡಂಬನೆಯ ಕಣೆ ಕೆದರಿರುವುದನ್ನು ಕಾಣಬಹುದು. ‘ಕರಡಿ ಕುಣಿತ’ ಅಂತಹದೊಂದು ವಿಡಂಬನ ಪದ್ಯ. ಎರಡು ಶತಮಾನಗಳ ದಾಸ್ಯ ಶ್ವಂಖಲೆಯಿಂದ ದೇಶ ಸ್ವತಂತ್ರವಾದಾಗ ಸುಂದರ ಸುಭದ್ರ ರಾಷ್ಟ್ರ ನಿರ್ಮಾಣದ ಕನಸನ್ನು ಕಂಡವರು ಅದೆಷ್ಟು ಜನ! ಇನ್ನೆಷ್ಟು ಮಂದಿಗೆ ಮುಗಿಲ ಮಲ್ಲಿಗೆಯ ಕಂಪು ತಂಪುಗಳಿಗೆ ಮೆಯ್ಯೊಡ್ಡುವ ಬಯಕೆ! – ಆದರೆ ಅಂತಹವರು ಕಂಡದ್ದೂ ಪಡೆದದ್ದೂ ಏನನ್ನೂ? ಸರ್ವತ್ರವೂ ತತ್ವರಹಿತ, ನೀತಿ ಭ್ರಷ್ಟ, ಸ್ವಾರ್ಥಪರ ಮತ್ತು ಕರ್ತವ್ಯ ವಿಮುಖವಾದ ಜೀವನ. ಸಂವೇದನಶೀಲ ಕವಿಮನಸ್ಸು ಅದರಿಂದ ಕೆರಳುವುದು ಸಹಜವೇ ಆಗಿದೆ. ಅಂತಹ ಸಂದರ್ಭದಲ್ಲಿ ಬೇಂದ್ರೆಯವರ ಲೇಖನಿ ಈಟಿಯಾಗಿ ಇರಿಯುತ್ತದೆ, ನುಡಿ ಬೆಂಕಿಯಕಿಡಿಯಾಗಿ ಸುಡುತ್ತದೆ. ಯಾರು ಪ್ರಾಣದ ಹಂಗಿಲ್ಲದೆ ತಾಯ್ನಾಡಿಗಾಗಿ ದುಡಿದರೋ ಅಂತಹವರು ಅಥವಾ ಅಂತಹವರ ಪೀಳಿಗೆ ದೇಸವನ್ನು ನುಂಗಿನೊಣೆ ಯುಕ್ತಿರುವುದನ್ನು ಕಂಡ ಬೇಂದ್ರೆಯವರು ಅಂತಹವರ ಮೇಲೆ ಚಾಟಿ ಬಿಸಿದ್ದಾರೆ; ಅವರ ನಿಜದ ಬಣ್ಣವನ್ನು ಬಯಲಾಗಿಸಿದ್ದಾರೆ. ಅವರ ‘ಸೂರ್ಯಪಾನದಲ್ಲಿರುವ ‘ಕೇಳಿರೊಂದು ಸೋಜಿಗ’, ‘ದರಿದ್ರ ನಾರಾಯಣ’ ಮೊದಲಾದ ಕವಿತಗಳಲ್ಲಿ ವ್ಯಂಗ್ಯ ವೈಭವ ಢಾಳವಾಗಿ ಕಣ್ಣಿಗೆ ಕಟ್ಟುತ್ತದೆ. ಅಂತಹವುಗಳಲ್ಲಿ ‘ಕರಡು ಕುಣಿತ’ ಆಗಾಗ ಕಣ್ಣು ಕಿವಿಗಳಿಗೆ ಬೀಳುವ ಒಂದು ವಿಡಂಬನ ಕವಿತೆ :

ಕಬ್ಬಿಣ, ಕೈಕಡಗ, ಕುಣಿಕೋಲು, ಕೂದಲ
ಕಂಬಳಿ ಹೊದ್ದಾಂವ ಬಂದಾನ
ಗುಣು ಗುಣು ಗುಟ್ಟುತ ಕಡಗವ ಕುಟ್ಟುತ
ಕರಡಿಯನಾಡಿಸುತ ನಿಂದಾನ!

ಮನುಷ್ಯನಿಗೆ ಹೊಟ್ಟೆ ತುಂಬಿದರೆ ಸಾಲದು, ಬೊಜ್ಜೂ ಬೆಳೆಯಬೇಕು, ಅದಕ್ಕಾಗಿ ಆತ ಹೇಗೂ ಕುಣಿಯಬಲ್ಲ, ಯಾರನ್ನೂ ಕಾಣಿಸಬಲ್ಲ –

ಮನಬಲ್ಲ ಮಾನವ ಕುಣಿದಾನ ಕುಣಿಸ್ಯಾನ
ಪ್ರಾಣದ ಪ್ರಾಣಿ ಹಿಂದಾನ
ಕರಡೀಯ ಹೆಸರೀಲೆ ಚರಿತಾರ್ಥ ನಡಿಸ್ಯಾನ
ಪರಮಾರ್ತ ಎಂಬಂತೆ ಬಂದಾನ

ಕರಡಿಗಿಂತಲೂ ಕಡೆಯಾಗಿರುವ ಮನುಷ್ಯನ ವಿಕೃತಿಗೆ ಬೇಂದ್ರೆ ಹೀಗೆ ಬೆರಗಾಗುತ್ತಾರೆ:

ಕರಡೀ ಕುಣಿತಕ್ಕಿಂತ ನರರ ಬುದ್ಧಿಯ ಕುಣಿತ
ಮಿಗಿಲಹುದು ಕವಿ ಕಂಡು ನುಡಿದಾನ!

ಶತಮಾನಗಳ ಹೀಂದೆಯೇ ಆಚಾರ್ಯ ಶಂಕರರು ‘ಉದರ ನಿಮಿತ್ತ ಬಹುಕೃತವೇಷ’ ಎಂದು ಉದ್ಗರಿಸಿದ್ದಿದೆ. ಅದೀಗ ಹತ್ತು ನೂರು ಪಟ್ಟು ದೊಡ್ಡದಾಗಿ ದೆಸೆಗಳಿಂದ ಮರುನುಡಿಯುತ್ತಿದೆ. ಬೇಂದ್ರೆ ಕವಿತೆಯಲ್ಲೂ ಅದೇ ಭಾವ ಅನುರಣಿಸುತ್ತಿದೆ.

ಜಾನಪದ ಜಾಣ್ಣುಡಿಗಳಂತಿರುವ ಸೂಸಲು ನಗೆಯ ಸೂಕ್ತಿಗಳನ್ನೂ ಬೇಂದ್ರೆಯವರು ಬರೆದಿದ್ದಾರೆ :

ಕೂಸು ಕುಂಚಿಗೆ ತಿಂತ್ಯು | ಹಾಸೀಗಿ ನೆಲ ತಿಂತ್ಯು
ಅಜ್ಜಯ್ನ ಗಡ್ಡ ಇಲಿತಿಂತು | ಅಡಗೊಳು
ಅಜ್ಜಿಯ ತಿಂತು ಕಜ್ಜಾಯ ||

ಬೇಲಿ ಹೊಲವನು ತಿಂತ್ಯು | ಸಾಲಿ ಹುಡುಗರ ತಿಂತ್ಯು
ಕೆಲಸವ ತಿಂತ್ಯು ಕಚೇರಿ | ಇಟ್ಟಲ್ಲೆ
ಟ್ರೆಝರಿಯೆ ತಿಂತ್ಯು ಬ್ಯಾಂಕನ್ನು ||

ಹೀಗೆ ಒಗಟುಗಳಂತಿರುವ ತ್ರಿಪದಿಗಳ ಹಾಸುಹೊಕ್ಕುಗಳಿಂದ ನಗೆಯ ಬಲೆಯನ್ನು ನೇಯುತ್ತಹೋಗುವ ಬೇಂದ್ರೆ ಕೊನೆಯಲ್ಲೊಂದು ಒಳ್ನುಡಿಯನ್ನು ಹೇಳುತ್ತಾರೆ :

ನಗಿಯಲ್ಲಿ ಹೊಗಿಬ್ಯಾಡ ಹೋಗಿ | ಹಿಂದೆ ಧಗಿಬ್ಯಾಡ
ಬಾಳಿಗೆ ಎರಡು ಬಗಿಬ್ಯಾಡ | ನನಗೆಣೆಯಾ
ಬ್ಯಾಸರಿಕೋ ಬ್ಯಾಡೊ ನಗುವಾಗ ||

ಹೀಗೆ ನಗೆ ನಿಂಚಿನ ಎಷ್ಟೋ ಗೆರೆಗಳು ಬೇಂದ್ರೆ ಕವಿತೆಗಳಲ್ಲಿ ಅಲ್ಲಲ್ಲಿ ಪಳಚ್ಚನೆ ಹೊಳೆಯುತ್ತವೆ.

ಬೇಂದ್ರೆ ಕಾವ್ಯದ ವೈಶಿಷ್ಟ್ಯಗಳಲ್ಲಿ ಶ್ಲೇಷಾರ್ಥಕವಾದ ಚತುರೋಕ್ತಿಯೂ ಒಂದು. ಅಂತಹ ಗುಣವಿಶೇಷತೆ ಅವರ ಗಂಭೀರಕವಿತೆಗಳಲ್ಲಿ ಕಾಣುವಂತೆಯೋ ಇತರ ಬಂಧಗಳಲ್ಲೂ ಗೋಚರಿಸುತ್ತದೆ :

ನೆಲದ ಮ್ಯಾಲೆ ನಡೀಲಿಕ್ಕೆ ಬರವೊಲ್ಲದು
ಅಂತ ರಿಕ್ಷಾದೊಳಗೆ ಹೋಗಿದ್ದೇ!

‘ಅಂತ-ರಿಕ್ಷಾ’ ಎಂಬುದನ್ನು ಅಂತರಿಕ್ಷಾ ಎಂದೂ ಅನ್ವಯಿಸಿಕೊಳ್ಳಬಹುದು. ಒಮ್ಮೊಮ್ಮೆ ಬೇಂದ್ರೆ ಕವಿತೆಗಳ ಭಾವಗ್ರಹಣ ಕಷ್ಟ ಸಾಧ್ಯವಾದರೂ ಅವರ ಪದಪ್ರಯೋಗಗಳೂ ಪ್ರಾಸಾನು ಪ್ರಾಸಗಳೂ ಚಮತ್ಕಾರಿಕವಾಗಿ ರೋಚಕವೆನಿಸುತ್ತವೆ.

‘ನಕ್ಕು ನಗಿಸುವಾ ನುಡಿಲೇಸು’ ಎಂಬುದು ಸರ್ವಜ್ಞನ ಸಂದೇಶ. ‘ನಕ್ಕು ಹೊಟ್ಟೆ ಬೆಳಸು’ ಎಂಬುದು ಇಂಗ್ಲಿಶ್ ಹೇಳಿಕೆ. ‘ನಗುವು ಸಹಜದ ಧರ್ಮ’ ಎನ್ನುವುದು ಡಿ.ವಿ.ಜಿ.ಯವರ ಸೂಕ್ತಿ ‘ಸಮರಸವೇ ಜೀವನ’ ಎಂಬುದು ಬೇಂದ್ರೆಯವರ ಸಂದೇಶ. ಸಮರಸವೆಂದರೆ ಷಡ್ರಸ ನವರಸ ಎರಡಕ್ಕೂ ಅನ್ವಯ. ಭೊಜನಾದಿಗಳಲ್ಲಿ ಷಡ್ರಸವಾದರೆ ಕಾವ್ಯ ಪ್ರಕಾರಗಳಲ್ಲಿ ನವರಸ. ಷಡ್ರಸ ಭೋಜನ ರುಚಿಕರ ಮತ್ತು ಆರೋಗ್ಯ ಪ್ರದ ಕಾವ್ಯ (ಸಾಹಿತ್ಯ) ರಸಗಳಿಂದ ಆನಂದ ಮತ್ತು ಆತ್ಮಸಂಸ್ಕಾರ. ಬೇಂದ್ರೆಯವರ ವಿಫುಲ ಕವಿತೆಗಳಲ್ಲಿ ವಿವಿಧ ಭಾವರಸಗಳಿಗೆ ಪ್ರಾಧಾನ್ಯವಿದೆ. ಹಾಗೆಯೇ ೧೯೨೦ ರಿಂದ ೧೯೫೦ರ ಅವಧಿಯಲ್ಲಿ ಅವರ ಪ್ರಕಟಿಸಿದ ಸಂಗ್ರಹಗಳಲ್ಲಿ ವ್ಯಂಗ್ಯ ವನೋದಾತ್ಮಕ ಪದ್ಯಗಳಿದ್ದರೂ ಗಂಭೀರ ಸುಂದರ ಭಾವಗೀತಗಳೇ ಅಧಿಕ. ಆ ಮುಂದಿನ ಅವಧಿಯಲ್ಲಿ ಅವರು ಪ್ರಕಟಿಸಿದ ಮುಕ್ತಕಂಠ, ಜೀವಲಹರಿ, ನಮನ, ಸಂಚಯ, ಶ್ರೀಮಾತಾ, ನಾಕುತಂತಿ, ಮರ್ಯಾದೆ, ಚತುರೋತ್ತಿ, ಪರಾಕಿ, ಕಾವ್ಯವೈಖರಿ, ಮೊದಲಾದವುಗಳಲ್ಲಿ ಹಾಸ್ಯ ವಿಡಂಬನೆಗಳು ಅಲ್ಲಲ್ಲಿ ಕಚಗುಳಿಯಿಡುತ್ತವೆ, ಚುಚ್ಚುತ್ತವೆ. ಬೇಂದ್ರೆ ಹೇಳುತ್ತಾರೆ : “ನಗೆ ಎರಡು ಬಗೆ…… ಒಂದು ವಿಷ, ಒಂದು ಅಮೃತ, ಅಮೃತಮಯವಾದ ನಗೆ ‘ನಕ್ಕು ನಗಿಸುವ’ ನಗೆ, ಲೇಸು ನಗೆ ರಸನಗೆ”. ಅಂತಹ ರಸನಗೆ ನಮ್ಮೆಲ್ಲರ ಒಳ ಹೊಗಲಿ, ನಮ್ಮೆಲ್ಲರ ಒಳಗಿರಲಿ, ಆಗಾಗ ಅದು ಹೊರ ಹೊಮ್ಮುತ್ತಲೂ ಇರಲಿ ಎಂದು ಹಾರೈಸೋಣ.[1] ಪ್ರಸಿದ್ಧವಾಗಿರುವ ಯಾವುದಾದರೊಮದು ಸಾಹಿತ್ಯ ಕೃತಿಯನ್ನು – ಮುಖ್ಯವಾಗಿ ಕಾವ್ಯ ಅಥವಾ ಕವಿತೆಗಳ್ನು ಅವುಗಳ ಪದ, ಪಾದ ಅಥವಾ ಬಂಧಗಳಲ್ಲಿ ಅನುಕರಿಸಿ ಇಲ್ಲವೇ ಅಣಕಿಸಿ, ವಿರುದ್ಧ ಅಥವಾ ವಿಪರೀತಾರ್ಥಗಳು ಹೊರಡುವಂತೆ ಬರೆಯುವುದೇ Parady ಲಕ್ಷಣ. ಇಂಗ್ಲಿಷಿನಲ್ಲಿ ಇದೆ. Mocrk Heroic – ವಿಡಂಬನ ಮಹಾಕಾವ್ಯ ಎಂಬುದೂ ಉದಾ : ಅಲೆಕ್ಸಾಂಡ್‌ರ ಪೋಪ್‌ನ The Rape of the lock – ಕನ್ನಡದಲ್ಲಿ ಅಣಕವಾಡುಗಳೂ ಅವುಗಳ ಸಂಗ್ರಹಗಳೂ ಬಂದಿವೆ. ಉದಾ. ರಾ.ಶಿ.ಯವರ ‘ಕೆಣಕೋಣ ಬಾರಾ’ ಆದರೆ ವಿಡಂಬನ ಮಹಾಕಾವ್ಯಗಳು ಬಂದಂತಿಲ್ಲ. ಹೆಸರಿಸಬಹುದಾದ ಒಂದು ಕಾವ್ಯವೆಂದರೆ ಜಿ.ಪಿ.ರಾಜರತ್ನಂ ಅವರ ‘ಮಹಾಕವಿ ಪುರುಷ ಸರಸ್ವತಿ’.

[2] ನೋಡಿ : ‘ಕರಿಮರಿನಾಯಿ’ – ಗರಿ.