ಶಾಲಾ ವಿದ್ಯಾಥಿಗಳಲ್ಲಿ ಅಧ್ಯಾಪಕರು ಕೇಳುವ ಒಂದು ಸಾಮಾನ್ಯ ಪ್ರಶ್ನೆಯೆಂದರೆ “ಮೆಲುಕಾಡುವ ಜೀವಿಗಳು ಯಾವುವು?” ಅದಕ್ಕೆ ಜಾಣ ಹುಡುಗರ ಉತ್ತರ “ನಾಲ್ಕು ಕಾಲಿನ ಪ್ರಾಣಿಗಳು ಸಾರ್!” ಆ ಪ್ರಾಣಿಗಳು ಒಮ್ಮೆ ತ್ವರಿತವಾಗಿ ನುಂಗಿದ ಆಹಾರ ಪದಾರ್ಥಗಳನ್ನು ಮತ್ತೆ ನಿಧಾನವಾಗಿ ಅಗಿದು ಅರಗಿಸಿಕೊಳ್ಳುವುದೇ ಮೇಲುಕಾಟ. ಅದಕ್ಕಾಗಿ ನುಂಗಿದ ವಸ್ತುಗಳನ್ನು ಜಾಕರಿಸಿ ಮತ್ತೊಮ್ಮೆ ಬಾಯಂಗಳಕ್ಕೆ ತಂದುಕೊಳ್ಳುತ್ತವೆ. ಚತುಷ್ಪಾದಿ ಪ್ರಾಣಿಗಳು ಮಾತ್ರವಲ್ಲ – ದ್ವಿಪಾದಿ ಮನುಷ್ಯನೂ ಮೆಲು ಕಾಡುತ್ತಾನೆ. ಆದರೆ ಈ ಮೆಲುಕು ಪ್ರಾಣಿಗಳು ಆಹಾರ ವಸ್ತುಗಳದ್ದಲ್ಲ : ಅದು ವಿವಿಧ ಅನುಭವಗಳ, ಬಗೆಬಗೆಯ ನೆನಪುಗಳ ಮೆಲುಕು. ಎಷ್ಟೋ ಕಾಲದ ಹಿಂದೆ ಅಥವಾ ನಿನ್ನೆ ಮೊನ್ನೆ ಅದರಾಚೆ ಕಂಡ ಉಂಡ ಅರಗಿಸಿದ ಅನುಭವಗಳನ್ನು, ವಸ್ತುಗಳನ್ನು ಅಥವಾ ವಿಷಯಗಳನ್ನು ಮತ್ತೊಮ್ಮೆ ಬಗೆಯಂಗಳಕ್ಕೆ ತಂದುಕೊಳ್ಳುವುದು, ಸಂದು ಹೋದ ಕಾಲದ ಘಟನೆಗಳನ್ನು ಮತ್ತೊಮ್ಮೆ ಕೆದಕಿ ಬೆದಕುವುದು ಅವುಗಳ ಪರಿಮಾಣ, ಪರಿಣಾಮಗಳನ್ನು ಅಳೆದು ತೂಗುವುದು – ಇದುವೇ ಮನುಷ್ಯನ ಮೆಲುಕಾಟ. ಅನುಭವಗಳ ಅಥವಾ ಘಟನೆಗಳ ಮರುಕೊಳಿಕೆ ಎಂದರೆ ನೆನಪು. ಅದು ಮನುಷ್ಯ ಜೀವಿಯ ವಿಶೇಷ ಶಕ್ತಿ, ವೈಶಿಷ್ಟ್ಯ. ಅದು ಕಂಪ್ಯೂಟರಿಗೂ ಮಿಗಿಲಾದ ಒಂದು ಚೋದ್ಯ. ನೆನಪು ಮೊನೆಯಾಗಿರುವುದು ಬುದ್ಧಿಮತ್ತೆಯ, ಅದರ ಪ್ರಖರತೆಯ ಲಕ್ಷಣ; ನೆನಪು ಮೊಂಡಾವುದು ಬುದ್ಧಿಮಾಂದ್ಯದ, ವಿಕಲತೆಯ ಸೂಚನೆ.

ಒಂದು ಕಾಲವಿತ್ತು : ಈಗ ನಾವು ವಾಙ್ಮಯವೆಂದು ಕರೆಯುವ ವೇದೋಪನಿಷತ್ತು, ಜ್ಞಾನ ವಿಜ್ಞಾನ, ಶಾಸ್ತ್ರ ಸಾಹಿತ್ಯ ಎಲ್ಲವೂ ನೆನಪಿನ ಬಲದಿಂದಲೇ ಉಳಿಯುತ್ತಿದ್ದವು, ಬೆಳೆಯುತ್ತಿದ್ದವು. ಆದುದರಿಂದಲೇ ನಮ್ಮಲ್ಲಿ ‘ಶ್ರುತಿ’ (ಕೇಳುವುದು) ‘ಸ್ಮೃತಿ’ (ನೆನಪಿಡುವುದು) ಎಂಬ ಪದಗಳು ಸೃಷ್ಟಿಯಾಗಿ ಪ್ರಚಲಿತವೆನಿಸಿದ್ದು. ಮೂಲತಃ ನಮ್ಮ ವಾಙ್ಮಯ ‘ಉಕ್ತ’ ವಿನಾ ‘ಲಿಖಿತ’ವಲ್ಲ. ಆದುದರಿಂದಲೇ ಶ್ರವಣ ಸ್ಮರಣಗಳು ಅವಶ್ಯವಕವೂ ಅನಿವಾರ್ಯವೂ ಆದದ್ದು. ಲೇಖನವೂ ಲೇಖನ ರೂಪವಾದ ಮುದ್ರಣವೂ ಕಾಲಾಂತರದ ಪ್ರಕ್ರಿಯೆ. ಭಾಷೆಗೊಂದು ಲಿಪಿ ಅಥವಾ ಅಕ್ಷರ ಮಾಲೆಯ ಆವಿಷ್ಕಾರದ ಅನಂತರದ ಘಟ್ಟವೇ ಲೇಖನ, ಮುದ್ರಣ ಇತ್ಯಾದಿ. ಅವೆಲ್ಲವುಗಳ ವಿವರಣೆ ಇಲ್ಲಿ ಅಪ್ರಾಸಂಗಿಕ.

ಯಾವುದೋ ಕಾಲದಲ್ಲಿ ಕಂಡದ್ದನ್ನು, ಕೇಳಿದ್ದನ್ನು, ಪಡೆದದ್ದನ್ನು ಅಥವಾ ಕಳಕೊಂಡದ್ದನ್ನು ಕಾಲಾನಂತರ ನೆನಪಿನ ಮೆಲುಕಾಡುವುದರಲ್ಲಿ ಒಂದು ಸುಖವೋ, ಸ್ವಾರಸ್ಯವೋ ಉಂಟು. ಕುವೆಂಪು ಅವರು ತಮ್ಮ ‘ಮಲೆನಾಡಿನ ಚಿತ್ರಗಳು’ ಎಂಬ ಪುಸ್ತಕದ ಪ್ರಸ್ತಾವನೆಯಲ್ಲಿ “ನೆನಪು ಬಾಳಿನ ಬುತ್ತಿ. ಅನುಭವಗಳ ಅಕ್ಷಯ ನಿಧಿ” ಎಂದಿದ್ದಾರೆ. ಕಡೆಂಗೋಡ್ಲು ಶಂಕರಭಟ್ಟರು ತಮ್ಮ ‘ಮಾದ್ರಿಯಚಿಕೆ’ಯೆಂಬ ಖಂಡಕಾವ್ಯದಲ್ಲಿ “ಅನುಭವವು ಸವಿಯಲ್ಲ, ಅವರ ನೆನಪೇ ಸವಿಯು” ಎಂಬ ಮಾತನ್ನು ಆಡಿಸಿದ್ದಾರೆ. ಅನುಭವವು ಕಹಿಯಾದರೆ ನೆನಪು ಸಿಹಿಯಾಗುವುದು ಹೇಗೆ? ಎಂಬ ಪ್ರಶ್ನೆ ಏಳಬಹುದು. ತತ್ಕಾಲದಲ್ಲಿ ಅಸ್ವಾದ್ಯವೂ ಅಪ್ರಿಯವೂ ಎನಿಸಿದ್ದು ಕಾಲಾಂತರದಲ್ಲಿ ಸ್ವಾದ್ಯವೂ ಪ್ರಿಯವೂ ಆಗುವುದು ಅಸಂಭಾವ್ಯವೇನಲ್ಲ. ‘…..ತತ್ತದಗ್ರೇ ವಿಷಮಿವ ಪರಿಣಾಮೇಮೃತೋಪಮಮ್’ ಎನ್ನುತ್ತದೆ ಗೀತೆ. ಅದನ್ನೇ ಸರಳವಾಗಿ ಹೇಳುವುದಿದ್ದರೆ ನೆಲ್ಲಿಕಾಯಿಯನ್ನು ತಿಂದ ಹಾಗೆ-ಬಾಯಿಗೆ ಹಾಕಿ ಜಗಿದಾಗ ಕಹಿ, ಸ್ವಲ್ಪಹೊತ್ತಿನಲ್ಲಿ ಅದು ಸಿಹಿ. ಕೆಲವೊಮ್ಮೆ ನೆನಪುಗಳೂ ಹಾಗೆಯೇ ಎನ್ನಬಹುದು. ಅಥವಾ ಅನುಭವವೂ ಅದರ ನೆನಪೂ ಎರಡೂ ಕಹಿಯಾಗಿಯೇ ಇವೆ ಎನ್ನೋಣ. ಆಗ, ಮಾಡುವುದೇನು? ವಿ.ಸೀಯವರು ‘ನೆನಪ’ನ್ನೇ ಕುರಿತು ಹ್ರಸ್ವ, ಆದರೆ ಹಾರ್ದವಾದ ಒಂದು ಪ್ರಬಂಧ ರಚಿಸಿದ್ದಾರೆ. ಅದರ ಕೊನೆಯಲ್ಲಿ ಒಳ್ಳೆಯ ಒಳ್ಳೆಯಲ್ಲದ ನೆನಪುಗಳ ಬಗ್ಗೆ ಹೇಳುತ್ತಾ ಹೀಗೆ ಬರೆದಿದ್ದಾರೆ: “….ಅಂಥ (ಎಂದರೆ ಒಳ್ಳೆಯ, ಸವಿಯಾದ) ನೆನಪು ಉಳಿಯಲಿ, ಅಲ್ಲದವು ಮರೆಯಲಿ ಎನ್ನಲೇ? ಅದು ಆಶೆ, ಆದರೆ ಶಕ್ಯವೇ?….. ದೇವರೆ,…..ಯಾವುದು ಒಳ್ಳೆಯದೊ ನನಗೆ ಹಿತವೂ ಅದನ್ನು ನೀನು ನನ್ನಲ್ಲಿ, ನನಗಾಗಿ ಉಳಿಸು ಎಂದು ಪ್ರಾರ್ಥಿಸೋಣವೇ?….. ಶಕ್ತಿ ಸಂತೋಷಗಳನ್ನು ಬದಲಿಸುವ ನೆನಪುಗಳು ಉಳಿಯಲಿ, ವಿರುದ್ಧವಾದುವು ಅಳಿಯವಾದರೆ ಏನು ಮಾಡುವುದು? ಅವೂ ಉಳಿಯಲಿ….” (‘ಬೆಳದಿಂಗಳು’) ನೆನಪು ಬೇಕೇ ಬೇಕು. ಒಮ್ಮೊಮ್ಮೆ ನೆನಪಿನೊಂದಿಗೆ ಹೊಂದಾಣಿಕೆಯೂಬೇಕು. ಒಂಟೆ ಇರಲಿ, ಡುಬ್ಬ ಬೇಡ ಎಂದರೆ ಆಗುತ್ತದೆಯೇ?

ನೆನಪು ಮಾಡಿಕೊಳ್ಳುವುದು ಒಂದಾದರೆ ನೆನಪುಗಳನ್ನು ಬರೆದಿಡುವುದು ಮತ್ತೊಂದು; ಬರೆದದ್ದು ಸಾಹಿತ್ಯವೆನಿಸುವುದು ಮೂರನೆಯದು ಮತ್ತು ಮುಖ್ಯವಾದದ್ದು. ಸರ್ವಜ್ಞ ಕವಿ ಹೇಳಿದಂತೆ, ‘ಎಲ್ಲಿ ಬಲ್ಲವರಿಲ್ಲ, ಬಲ್ಲಿದರು ಬಹಳಲ್ಲ, ಬಲ್ಲಿದರು ಇದ್ದು ಫಲವಿಲ್ಲ, ಸಾಹಿತ್ಯವೆಲ್ಲರಿಗೆ ಸಲ್ಲ…..’ ಹಳೆಯ ನೆನಪುಗಳನ್ನು ಮೆಲುಕುತ್ತ, ಅವುಗಳನ್ನು ಒಟ್ಟುಗೂಡಿಸಿ, ಸಾಹಿತ್ಯಿಕವಾಗಿ ಮೂಲೆ ಕಟ್ಟುವ ಶಕ್ತಿಯನ್ನು – ಬೇಂದ್ರೆಯವರು ಹಾಡಿದಂತೆ – “ಪಡೆದು ಬಂದಿರಬೇಕು”. ಪಡೆದು ಬಂದವರು ನಮ್ಮಲ್ಲಿ ಹೆಚ್ಚಿಲ್ಲ. ನೆನಪುಗಳ ಮಾಲೆ ಅಥವಾ ಸ್ಮೃತಿಸಂಚಯವೆಂಬುದು ಆತ್ಮಕಥನದ ಒಂದು ಭಾಗವಾಗುತ್ತದೆ, ಅಥವಾ ಅದಕ್ಕೆ ಪೂರಕವೆನಿಸುತ್ತದೆ. ಇಂಗ್ಲಿಷ್ ವಾಙ್ಮಯದಲ್ಲಿ ‘Memoirs’ ಎಂಬುದು ಒಂದು ಪ್ರಕಾರ. ಕನ್ನಡದಲ್ಲಿ ಅದು ಹೊಸಬೆಳೆ; ಆ ಬೆಳೆಯೂ ಹೆಚ್ಚಿಲ್ಲ. ನಲ್ವತ್ತರ ದಶಕದಲ್ಲಿ ಧಾರವಾಡದ ‘ಮಿಂಚಿನ ಬಳ್ಳಿ’ ಅಚ್ಚು ಹಾಕಿದ ‘ಕನ್ನಡ ಸಾಹಿತ್ಯಜ್ಞರ ಆಥ್ಮಕಥನ’, ನವರತ್ನ ರಾಮರಾಯರು ಪೋಣಿಸಿದ ‘ಕೆಲವು ನೆನಪುಗಳು’, ಮೈಸೂರು ವಾಸುದೇವಾಚಾರ್ಯರು, ‘ಕೋದಿರುವ ‘ನೆನಪುಗಳು’, ಜಿ.ಪಿ. ರಾಜರತ್ನಂ ಅವರ ‘ನೆನಪಿನಬೀರು’, ಡಿ.ವಿ.ಜಿಯವರ ‘ಜ್ಞಾಪಕ ಚಿತ್ರ ಶಾಲಾ’ ಸಮುಚ್ಛಯವೂ ಪಕ್ಕನೇ ನೆನಪಿಗೆ ಬರುತ್ತವೆ. ಇಂತಹ ಸ್ಮೃತಿ ಚಿತ್ರ ಮೂಲೆಯಲ್ಲಿ ಎರಡು ತೋರ ಮುತ್ತುಗಳೆಂದರೆ ವಿ.ಸೀಯವರ ಕಾಲೇಜು ದಿನಗಳುಮತ್ತು ಮುಂಬಯಿ ವಾಸ‘.

‘ಕಾಲೇಜು ದಿನಗಳು’ ಮತ್ತು ‘ಮುಂಬಯಿ ವಾಸ’ಗಳ ವಿಶೇಷತೆಯೆಂದರೆ ವಿ.ಸೀಯವರು ತಮ್ಮ ಕಾಲೇಜು ವಿದ್ಯಾಭ್ಯಾಸವನ್ನು ಪೂರೈಸಿ, ಮುಂಬೈ ವಾಸವನ್ನೂ ಮುಗಿಸಿ ಸುಮಾರು ಐವತ್ತು ಅರವತ್ತು ವರ್ಷಗಳ ಬಳಿಕ ಅವುಗಳನ್ನು ಬರೆದದ್ದು. ಆ ಪುಸ್ತಕದಲ್ಲಿ ಅಡಕವಾಗಿರುವ ವಿವರಗಳಾಗಲಿ, ಆ ವಿವರಗಳನ್ನು ಮಾಸದಂತೆ ನೆನಪಿಟ್ಟುಕೊಂಡು ಕಣ್ಣಿಗೆ ಕಟ್ಟುವಂತೆ ಬಣ್ಣಿಸಿದ ಬಗೆಯಾಗಲಿ ತುಂಬ ಸೊಗಸಾಗಿವೆ, ಓದುಗರ ಮನಸ್ಸನ್ನೂ ಮುಟ್ಟುವಂತಿವೆ. ವಿ.ಸೀ ಯವರ ವಿವರಣ ಸಮರ್ಥತೆಯನ್ನೂ ವಸ್ತು, ವಿಷಯ, ವ್ಯಕ್ತಿ, ವರ್ಣನಕ್ಷಮತೆಯನ್ನೂ ಪರಿಭಾವಿಸುವಾಗ ಆಶ್ಚರ್ಯವಾಗುತ್ತದೆ. ಅವರ ಸ್ಮರಣ ಶಕ್ತಿಯಂತೂ ಇಂಗ್ಲಿಷಿನಲ್ಲಿ Elephantine memory ಎಂದು ಹೇಳುತ್ತಾರಲ್ಲ, ಆ ತೀವ್ರತೆಯದು. ಅದೇ ಎರಡೂ ಪುಸ್ತಕಗಳ ಜೀವಾಧಾರ, ಅವುಗಳ ಸತ್ವಸಾರ.

ವಿ.ಸೀಯವರ ಈ ಸ್ಮೃತಿಸಂಚಯಗಳಲ್ಲಿ ಅವರು ನಾಲ್ಕು ವರ್ಷ ಓದಿದ ಮೈಸೂರು ಮಹಾರಾಜ ಕಾಲೇಜಿನ ಒಂದು ಕಾಲದ ಆವರಣ, ಗಿರಿ ವೃಂದ, ಸತೀರ್ಥ ಸಂದೋಹ, ಪಠ್ಯವಿಷಯಗಳ ವರ್ಣನೆಗಳೂ ಮುಂಬಯಿಯ ಕರೆನ್ಸಿ ಆಫೀಸಿನಲ್ಲಿ ಎಳೆಂಟು ತಿಂಗಳ ದುಡಿಮೆ, ಅಲ್ಲಿಯ ಅಧಿಕಾರೀ ಜನ, ಸಹಯೋಗಿ ಸಮೂಹ, ಮಹಾನಗರದ ಜನಸಾಂದ್ರತೆ, ಜೀವನ ಕ್ರಮ, ರಸ್ತೆ, ಕೇರಿ, ಕಡಲು ಇವುಗಳ ಚಿತ್ರಣಗಳೂ ಇವೆ. ಅಲ್ಲಲ್ಲಿ ಸಂಭಾಷಣೆಗಳೂ ಬರುತ್ತವೆ. ಅವೆಲ್ಲ ಯಥಾವತ್ತಾಗಿಯೇ ಇದ್ದುವು ಎನ್ನವಂತಿಲ್ಲ. ಕರ್ತೃ, ಕರ್ಮ, ಕ್ರಿಯೆಗಳೂ, ನಾಮಪದ, ಕ್ರಿಯಾ ವಿಶೇಷಣಗಳು ವಾಕ್ಯವೇಷ್ಟನ ಚಿಹ್ನೆಗಳೂ ಪುಸ್ತಕದಲ್ಲಿರುವಂತೆಯೇ ಇದ್ದುವು ಎನ್ನಲಾಗದು. ಎಂದೋ ಆಡಿದ ಮಾತುಕತೆಗಳ ಸಾರವನ್ನು ಉಳಿಸುವುದಕ್ಕೆ, ಅಂದಿನದೇ ಸ್ವಾರಸ್ಯವನ್ನು ಮತ್ತೆ ತರುವುದಕ್ಕೆ ವಿ.ಸೀಯವರು ತಮ್ಮದೇ ಪದ, ವಾಕ್ಯ, ಭಾಷೆಗಳನ್ನು ಬಳಸಿದ್ದಾರೆ. ಸ್ಮೃತಿ ಸಂಚಯಕ್ಕೆ ಒಂದು ಅಧಿಶ್ವಕತೆಯೂ ಯಥಾರ್ಥತೆಯೂ ಬರುವುದಕ್ಕೆ ಅದೆಲ್ಲವೂ ಪೂರಕವೆನಿಸುತ್ತವೆ.

ಕಾಲೇಜು ದಿನಗಳು

ವಿ.ಸೀಯವರು ಮೈಸೂರು ಮಹಾರಾಜ ಕಾಲೇಜು ವಿದ್ಯಾರ್ಥಿಯಾಗಿದ್ದದ್ದು ಕಳೆದ ಶತಮಾನದ ಎರಡನೆಯ ದಶಕದ ಕೊನೆಯಲ್ಲಿ, ಮೂರನೆಯ ದಶಕದ ಮೊದಲಲ್ಲಿ, ಎಂದರೆ ೧೯೧೭ರಿಂದ ೧೯೨೨ರ ವರೆಗಿನ ಐದು ವರ್ಷಗಳ ಅವಧಿ. ಆದರೆ ಆ ಕುರಿತು ಅವರು ಬರೆದದ್ದು ಅರವತ್ತರ ದಶಕದಲ್ಲಿ, ೧೯೬೯ರಲ್ಲಿ. ಮತ್ತೆ ಎರಡು ವರ್ಷಗಳ ಬಳಿಕ-೧೯೭೧ರಲ್ಲಿ ಬರೆದ್ದನ್ನು ಅಚ್ಚುಹಾಕಿಸಿದರು. ಸಾಮಾನ್ಯವಾಗಿ ಯಾವುದೋ ಒಂದು ನಿರ್ದಿಷ್ಟ ಕಾಲಖಂಡದ ಯಾವುದೋ ಒಂದು ವಸ್ತು. ವಿಷಯ ಅಥವಾ ಘಟನೆ ಐವತ್ತು  ವರ್ಷಗಳ ಅನಂತರ ಬಿಸಿಯಾರಿ, ರುಚಿಕಟ್ಟು ತಂಗುಳು ಆಗಬೇಕು. ಆದರೆ ‘ಕಾಲೇಜು ದಿನಗಳ’ಲ್ಲಿ ಹಾಗೆ ಆಗಿಲ್ಲ. ವಿ.ಸೀಯವರ ಜ್ಞಾಪಕಶಕ್ತಿ, ವಿವರಣ ಕವಶಲ ಮತ್ತು ಲೇಖನಿಯ ರಸಾಗ್ರತೆಯಿಂದಾಗಿ ಉಕ್ತವಾದುದೆಲ್ಲವೂ ಸಕಾಲಿಕ, ಸಹಜ, ಸವಿವರವೆನಿಸಿ ಚೇತೋಹಾರಿಯಾದ ಅನುಭವವನ್ನು ನೀಡುತ್ತವೆ.

ಕರ್ನಾಟಕದಲ್ಲಿ (ಅಥವಾ ಹಿಂದಿನ ಮೈಸೂರು ಪ್ರಾಂತ್ಯದಲ್ಲಿ) ಹೆಚ್ಚು ಕಡಿಮೆ ಒಂದೇ ಕಾಲದಲ್ಲಿ ಎರಡು ಉಲ್ಲೇಖನೀಯ ಘಟನೆಗಳು ಸಂಭವಿಸಿದವು : ಒಂದು ೧೯೧೫ರಲ್ಲಿ  ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನೆ, ಮತ್ತೊಂದು ೧೯೧೬ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಕಾರ್ಯಾರಂಭ. ನವವಿಶ್ವವಿದ್ಯಾನಿಲಯದ ಮೊದಲ ತಂಡದ ವಿದ್ಯಾರ್ಥಿಯಾಗಿ ೧೯೧೭ರ ಜುಲಾಯಿ ೧೭ ರಂದು ಮಹಾರಾಜ ಕಾಲೇಜಿನಲ್ಲಿ ಸೇರ್ಪಡೆಯಾಗುವ ಭಾಗ್ಯ ವಿ,ಸೀಯವರದಾಗಿತ್ತು. ವಾಸ್ತವವಾಗಿ ವಿಶ್ವವಿದ್ಯಾನಿಲಯವೆಂದರೆ ಮಹಾರಾಜ ಕಾಲೇಜೇ ಆಗಿತ್ತು. ಮೂರು ವರ್ಷ ಬಿ.ಎ ಆಮೇಲೆ ಎರಡು ವರ್ಷ ಎಂ.ಎ ಓದಿ ೧೯೨೨ರಲ್ಲಿ ವಿ.ಸೀಯವರು ಕಾಲೇಜಿನಿಂದ ಹೊರಬಂದರು. ಹಾಗೆ ಹೊರ ಬರುವಾಗ ಅವರು ಮನಸ್ಸಿನಲ್ಲಿ ಅಕ್ಕಮಹಾದೇವಿಯಂತೆ, ‘ನಿನ್ನ ಮಂಡೆಗೆ ಹೂವನಲ್ಲದೆ ಹುಲ್ಲ ತಾರೆನು’ ಎಂಬ ಸಂಕಲ್ಪವನ್ನು ಮಾಡಿರಬೇಕು. ಏಕೆಂದರೆ ತಮ್ಮ ಪುಸ್ತಕದ ಆರಂರ್ಭದಲ್ಲೇ ಅವರು, “ಮೈಸೂರು ವಿಶ್ವವಿದ್ಯಾನಿಲಯಕ್ಕೆ ನಮ್ಮಂಥವರಿಂದ ಮಾನ ಬಂದಿದೆಯೋ ಇಲ್ಲವೊ. ನಮಗಂತೂ ಅದು ತಾಯಿ. ನೊರೆಹಾಲು ಸಕ್ಕರೆ ಊಡಿ ಸಾಕಿದವಳು. ನಾವು ಅದರ ಮೊದಲ ವರ್ಷದ ವಿದ್ಯಾರ್ಥಿಗಳು” ಎಂದು ಬರೆದಿದ್ದಾರೆ. ‘ಮಾನ ಬಂದಿದೆಯೋ’ ಎಂಬುದು ವಿ.ಸೀಯವರ ನಯ, ಸಭ್ಯತೆ. ಖಂಡಿತವಾಗಿಯೂ ಮಾನ ಬಂದಿದೆ. “ತೇ ಗೃಹಿಣೀ ಗೃಹಮುಚ್ಯ – ಮನೆಯೆಂದರೆ ಮನೆಯೊಡತಿ ಎಂಬಂತೆ ವಿಶ್ವವಿದ್ಯಾನಿಲಯವೆಂದರೆ ಕಾರ್ಯ ಸೌಧ ಮಾತ್ರವಲ್ಲ, ಪ್ರವಚನ ಕಕ್ಷೆಗಳಷ್ಟೇ ಅಲ್ಲ; ಅದರಲ್ಲಿ ಅಲ್ಲಿಯ ಅಧಿಕಾರಿಗಳು, ಶಿಕ್ಷಕರು, ಛಾತ್ರರು ಎಲ್ಲರೂ ಸೇರುತ್ತಾರೆ. ಸರ್ವೇಪಲ್ಲಿ ರಾಧಾಕೃಷ್ಣನ್ ಅಂತಹವರು ಅಧ್ಯಾಪಕರಾಗಿದ್ದುದರಿಂದ, ವಿ.ಸೀಯಂತಹವರು ವಿದ್ಯಾರ್ಥಿಗಳಾಗಿದ್ದುದರಿಂದ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಮಾನ ಬಂತು. ಈ ಮಾನವಂತಿಕೆ ಏಕ ಪಕ್ಷೀಯವಲ್ಲ, ಪರಸ್ಪರವಾದದ್ದು.

‘ಕಾಲೇಜು ದಿನಗಳು’ ಮೊದಲ ಸಲ ಅಚ್ಚಾದಾಗ ಕಿರೀಟ ಅಷ್ಟದಳಾಕಾರದ ಇನ್ನೂರ ಐವತ್ತು ಪುಟಗಳಿದ್ದುವು. ೧೯೯೭ರಲ್ಲಿ ಅದು ಮತ್ತು ‘ಮುಂಬಯಿ ವಾಸ’ಗಳೆರಡೂ ಸೇರಿ ಸಂಯುಕ್ತ ಸಂಪುಟಗಳಾಗಿ ಮುದ್ರಿತವಾಗಿವೆ. ಆ ಪಠ್ಯವೆಲ್ಲವನ್ನೂ ಕುರಿತು ನಾನು ಹೇಳುವುದಿಲ್ಲ, ಹೇಳಲೂ ಆರೆ ಪುಸ್ತಕದ ಮುಖ್ಯಭಾಗದ ಮೇಲೆ ಒಂದು ಹಕ್ಕಿನೋಟ ಹಾಯಿಸಿ ಕೆಲವು ತೇಲು ಮಾತುಗಳನ್ನು ಹೇಳುತ್ತಿದ್ದೇನೆ. ವಿ.ಸೀಯವರ ಕಾಲದ ವಿಶ್ವವಿದ್ಯಾನಿಲಯ, ಅವರ ಗುರುವೃಂದ, ಸತೀರ್ಥ ಸಮೂಹ, ಪಠ್ಯವಿಷಯ, ಮತ್ತು ಮೈಸೂರಿನ ಸಾಂಸ್ಕೃತಿಕ ಜೀವನ ಇವು ಪುಸ್ತಕದಲ್ಲಿ ಎಷ್ಟು ವಿಧದಲ್ಲಿ ಯಾವ ಹದದಲ್ಲಿ ಬಂದಿವೆ, ಬಣ್ಣನೆಗೊಂಡಿವೆ ಎಂಬುದನ್ನು ತಿಳಿಸುವ ಒಂದು ಪ್ರಯತ್ನ ಈ ಉಪನ್ಯಾಸ. ಇಲ್ಲೇ ಇನ್ನೂ ಒಂದು ಮಾತನ್ನು ನೆನೆಯಬೇಕು – ವಿ.ಸೀಯವರು ಮೈಸೂರು ವಿಶ್ವವಿದ್ಯಾನಿಲಯದ ಮೊದಲ ತಂಡದ ವಿದ್ಯಾರ್ಥಿಯಾಗಿದ್ದರೂ ತಮ್ಮ ಕಾಲೇಜ್ ಜೀವನದ ಬಗೆಗೆ ಬರೆದದ್ದು ಐವತ್ತು ವರ್ಷಗಳ ಅನಂತರ ಕಾಲದವರು ಅವರಿಗಿಂತ ಮೊದಲೇ ಎಂಬುದನ್ನು ಹಿಂದೆಯೇ ಹೇಳಿದೆ. ಅವರ ಅನಂತರ ಮೈಸೂರು ವಿಶ್ವವಿದ್ಯಾನಿಲಯ ಅಥವಾ ಮಹಾರಾಜ ಕಾಲೇಜನ್ನು ಕುರಿತು ಸಣ್ಣದಾಗಿಯೋ ದೊಡ್ಡದಾಗಿಯೋ ಬರೆದು ಪ್ರಕಟಿಸಿದ್ದೂ ಇದೆ. ಉದಾಹರಣೆಗೆ ಎಸ್.ಅನಂತನಾರಾಯಣರು ‘ನಾಲ್ಕು ವರ್ಷದ ಕಾಲ’ ಎಂಬ ಸರಳ ಸುಂದರ ಕವಿತೆಯನ್ನು ಬರೆದಿದ್ದು (ಅದು ಅವರ ‘ಬಾಡದ ಹೂ’ ಎಂಬ ಸಂಗ್ರಹದಲ್ಲಿದೆ. ಶ್ರೀ ಎ. ಸುಬ್ಬರಾಯರು ತಮ್ಮ ಮಧುರ ಕಂಠದಿಂದ ಅದನ್ನು ಹಾಡಿ ಜನಪ್ರಿಯಗೊಳಿಸಿದ್ದಾರೆ). ಅದು ಮಹಾರಾಜ ಕಾಲೇಜಿನ ವಿದ್ಯಾರ್ಥಿ ಜೀವನವನ್ನೇ ಕುರಿತಾಗಿದೆ. ತೀ.ನಂ ಶ್ರೀಕಂಠಯ್ಯ ನವರ ‘ಕಾಸಿನ ಸಂಘ’ ಮತ್ತು ‘ಗುರುಸ್ಮರಣೆ’ ಎಂಬ ಎರಡು ಗದ್ಯ ಪ್ರಬಂಧಗಳನ್ನೂ (ಅವು ‘ನಂಟರು’ ಎಂಬ ಸಂಕಲನದಲ್ಲಿವೆ). ಎ.ಎನ್. ಮೂರ್ತಿರಾಯರ ‘ಮಹಾರಾಜ ಹೃದ್ಯ ಕಾಲೇಜಿನ ಕಾಮನ್ ರೂಮ್‌’ (ಅದು ‘ಅಲೆಯುವ ಮನ’ ಎಂಬ ಪ್ರಬಂಧ ಗುಚ್ಚದಲ್ಲಿದೆ) ಎಂಬ ಲೇಖನವನ್ನು ಓದುವಾಗ ಮಹಾರಾಜ ಕಾಲೇಜಿನ ಒಂದು ರಸಚಿತ್ರ ನಮ್ಮ ಕಣ್ಣಮುಂದೆ ನಿಲ್ಲುತ್ತದೆ. ವಿ.ಸೀ ಯವರ ಪುಸ್ತಕವನ್ನು ಓದಿದ ಮೇಲೆ ಅದು ಮತ್ತಷ್ಟು ಸುಂದರವೂ ಸಾಂದ್ರವೂ ಆಗುತ್ತದೆ. ಆಂಗ್ಲ ಸಾಹಿತ್ಯದ ದೈತ್ಯ ಎನಿಸಿಕೊಂಡ ಡಾ. ಸಾಮ್ಯಯಲ್ ಜಾನ್ಸನ್ ಮಹಾಶಯ ಆಕ್ಸ್‌ಫರ್ಡ್‌ನಲ್ಲಿ ತನ್ನ ವಿದ್ಯಾರ್ಥಿ ಜೀವನವನ್ನು ವರ್ಣಿಸುತ್ತಾ, “Sir,  we nere a nest of singing birds” ಎಂದು ಉದ್ಗರಿಸಿದ್ದುಂಟು. ವಿ.ಸೀಯವರ ಪುಸ್ತವನ್ನು ಓದುವಾಗಲೂ ಅಂತಹದೇ ಭಾವನೆ ಮೂಡುತ್ತದೆ.

ವಿ.ಸೀಯವರ ಎರಡು ಸ್ಮೃತಿಸಂಚಯಗಳಲ್ಲಿ ‘ಕಾಲೇಜ್ ದಿನಗಳು’ ಮೊದಲನೆಯದು ತಾನೇ? ಅದು ಅವರ ವಿದ್ಯಾರ್ಥಿ ಜೀವನಕ್ಕೆ ಸಂಬಂಧಿಸಿದ್ದಾದ್ದರಿಂದ ಸಹಜವಾಗಿಯೇ ಅದರಲ್ಲಿ ಅವರ ಕುಟುಂಬ ಪ್ರಸ್ತಾವವೂ ಬರುತ್ತದೆ. ವಿ.ಸೀಯವರದು ವೈದಿಕ ಸಂಪ್ರದಾಯ, ಪುರೋಹಿತರ ಮನೆತನ. ಈವೊತ್ತು ಪೌರೋಹಿತ್ಯಕ್ಕೆ ಆರ್ಥಿಕ ಆನುಕೂಲ್ಯವಿದೆ. ಹಿಂದೆ ಹೀಗಿರಲಿಲ್ಲ. ಅಲ್ಲಿ-ಇಲ್ಲಿ ನಡೆಯುವ ಮದುವೆ-ಮುಂಜಿ, ಹೋಮ-ಹವನಗಳಿಂದ ಸಿಗುವ ಆಣೆ, ನಾಲ್ಕಾಣೆಗಳಿಂದಲೇ ಹೊಟ್ಟೆ ಹೊರೆಯಬೇಕಿತ್ತು. ಹಾಗಾಗಿ ವಿ.ಸೀಯವರ ಬಾಲ್ಯ ಜೀವನ ಸುಖಕರವಾದುದಾಗಿರಲಿಲ್ಲ. ಬೆಂಗಳೂರಲ್ಲಿ ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಣಗಳನ್ನು ಹೇಗೋ ಹೇಗೋ ಪೂರೈಸಿದರು. ಕಾಲೇಜು ವಿದ್ಯಾಭ್ಯಾಸದ ಮಾತು ಬಂದಾಗ ದುಡ್ಡಿನ ಪ್ರಶ್ನೆಯೂ ಎದ್ದಿತು. ಆಗ ಮೈಸೂರಲ್ಲಿ ಚೌಬೀನೆ ವ್ಯಾಪಾರಿಯಾಗಿದ್ದ ‘ರಾಯರು’ (ಪುಸ್ತಕದಲ್ಲಿ ಅವರು ರಾಯರೆಂದೇ ಸಂಬೋಧಿತರಾಗಿದ್ದಾರೆ). ಆಪದ್ಭಾಂಧವರಾಗಿ ಕಾಣಿಸಿಕೊಂಡರು, ಐದು ವರ್ಷಗಳ ಕಾಲ ರಾಯರು ಮತ್ತು ಅವರ ಸಹಧರ್ಮಿಣಿ (ವಿ.ಸೀಯವರು ಅವರನ್ನು ಭೂದೇವಿ, ಅನ್ನಪೂರ್ಣೆ ಎಂದು ಕರೆದಿದ್ದಾರೆ)ಯ ವಾತ್ಸಲ್ಯಪೂರ್ಣ ಕ್ವತಾಶ್ರಯದಲ್ಲಿ ವಿ.ಸೀಯವರ ಬಿ.ಎ ಮತ್ತು ಎಂ.ಎ ಓದು ಸುಗಮವಾಗಿ ಮುಂದುವರಿದು ಸಫಲವಾಗಿ ಕೊನೆಮುಟ್ಟಿತು.

ವಿ.ಸೀಯವರು ಕಾಲೇಜು ಸೇರಿದಾಗ ವಿದ್ಯಾರ್ಥಿ ಸಂಖ್ಯೆ ಮಿತವಾಗಿತ್ತು. ಪ್ರೊ. ಸಿ.ಆರ್. ರೆಡ್ಡಿಯೆಂಬ ಮಾನ್ಯರು ಆಗ ಪ್ರಿನ್ಸಿಪಾಲರಾಗಿದ್ದರು. ತತ್ವಶಾಸ್ತ್ರ ಪ್ರಾಧ್ಯಾಪಕರಾಗಿದ್ದ ಅವರು ಕಾರ್ಯದಕ್ಷ, ಶಿಷ್ಯವತ್ಸಲ ಎನಿಸಿದ್ದರು. ವಾಕ್ಕೋವಿದರೂ ಆಗಿದ್ದ ಪ್ರೊ. ರೆಡ್ಡಿಯವರ ನಾಲಗೆ biting, acidic ಎಂದು ಹೇಳುವವರೂ ಇದ್ದರು. ವಿ.ಸೀ ಯವರು ಐಚ್ಛಿಕ ವಿಷಯಗಳೆಂದು ಅರ್ಥಶಾಸ್ತ್ರ, ರಾಜನೀತಿ ಮತ್ತು ತತ್ವಶಾಸ್ತ್ರಗಳನ್ನೂ ಭಾಷೆಗಳಾಗಿ ಇಂಗ್ಲಿಷ್ ಮತ್ತು ಕನ್ನಡವನ್ನೂ ಆರಿಸಿಕೊಂಡಿದ್ದರು. ಕಾಲೇಜ್ ಸೇರಿದ ಕೆಲವೇ ದಿನಗಳಲ್ಲಿ ಜರಗಿದ ‘ವಿದ್ಯಾರ್ಥಿ ಸ್ವಾಗತ ಸಭೆಯ’ ಸಂಭ್ರಮ ಸಂತೋಷಗಳನ್ನು ವಿ.ಸೀಯವರು ವಿಶದವಾಗಿ ವರ್ಣಿಸಿದ್ದಾರೆ. ಹಾಗೆ ವರ್ಣಿಸುತ್ತ, “ನನ್ನ ಬದುಕಿನಲ್ಲೆಲ್ಲ ಮೊದಲ ಬಾರಿಗೆ ಇಂಥ ಸಮಾರಂಭದಲ್ಲಿ ಭಾಗ ಪಡೆಯುವ ಅವಕಾಶ ಉಂಟಾದ್ದದ್ದು; ಈಗಲೂ ಅದು ಒಂದು ಸ್ವರ್ನ ಸ್ವಪ್ನದಂತಿದೆ” ಎಂದಿದ್ದಾರೆ. ಅದು ಒಬ್ಬಾನೊಬ್ಬ ಆಂಗ್ಲ ಲೇಖಕ ತನ್ನ ಆಕ್ಸ್‌ಫರ್ಡ್ ಜೀವನವನ್ನು ಸ್ಮರಿಸುತ್ತ “My heart was full and over Fllowing; My head was high euough to stike the stars” ಎಂದು ಉದ್ದರಿಸಿದ್ದನ್ನು ನೆನಪಿಗೆ ತರುತ್ತದೆ.

ಕಾಲೇಜು ಪ್ರಿನ್ಸಿಪಾಲರಾಗಿದ್ದ ಪ್ರೊ. ರೆಡ್ಡಿಯವರು ಮಾತ್ರವಲ್ಲ, ವಿ.ಸೀಯವರಿಗೆ ವಿವಿಧ ಪಠ್ಯವಿಷಯಗಳನ್ನು ಬೋಧಿಸಿದ ಇತರ ಗುರುಜನರ ಮಹನೀಯರ ಉಲ್ಲೇಖಗಳೂ ಅವರ ವ್ಯಕ್ತಿತ್ವ ವರ್ಣನೆಗಳು ಪುಸ್ತಕದಲ್ಲಿ ಸಾಂದರ್ಭಿಕವಾಗಿ ಆದರೆ ಹೃದ್ಯವಾಗಿ, ಸಮುಚಿತವಾಗಿ ಬಂದಿವೆ. ಪ್ರೊ. ರೆಡ್ಡಿಯವರ ಅನಂತರ ಪ್ರಿನ್ಸಿಪಾಲದವರು ಪ್ರೊ. ಎನ್.ಎಸ್ ಸುಬ್ಬರಾಯರು. ಅವರು ಇಂಗ್ಲೆಂಡಿನಲ್ಲಿ ಬಾರ್-ಎಟ್‌ಲಾ ಪರೀಕ್ಷೆಯನ್ನು ಗೆದ್ದು ಬಂದ ಬುದ್ಧಿವಂತರು. ವಿಸೀಯವರಿಗೆ ಅವರಲ್ಲಿ ಅಸೀಮ ಭಕ್ತಿ, ಅವರಿಗೆ ಇವರಲ್ಲಿ ಅಷ್ಟೇ ಪ್ರೀತಿ (ಪ್ರೊ. ಸುಬ್ಬರಾಯರ ಕುರಿತು ವಿ.ಸೀಯವರು ಪ್ರತ್ಯೇಕ, ಸುದೀರ್ಘ ಲೇಖನವನ್ನೇ ಬರೆದಿದ್ದು ಅದು ಅವರ ‘ಮಹನೀಯರು’ ಎಂಬ ಸಂಪುಟದಲ್ಲಿದೆ.) ಈ ಭಕ್ತಿ, ಪ್ರೀತಿಗಳ ಪ್ರಸ್ತಾಪವನ್ನು ಪುಸ್ತಕದಲ್ಲಿ ಅಲ್ಲಲ್ಲಿ ಕಾಣಬಹುದು. ವಿ.ಸೀಯವರು ಕಾಲೇಜ್ ಸೇರುವ ಮೊದಲೇ, ಬೆಂಗಳೂರಲ್ಲಿದ್ದಾಗಲೇ, “ಸುಬ್ಬರಾಯರ ಚಲ ನಾಗರಹಾವಿನ ಚಲ, ಅವರನ್ನು ಎದರು ಹಾಕಿ ಕೊಂಡು ಯಾರೂ ಬದುಕುವ ಹಾಗಿಲ್ಲ, ಅವರ ಅಭಿಪ್ರಾಯ ಯಾರ ವಿಷಯದಲ್ಲಿ ಯಾದರೂ ಕೆಟ್ಟುದಾದರೆ ಅದು ಅವರನ್ನು ನಾಶಮಾಡುತ್ತದೆ” ಎಂತಹ ‘ಅಂತೆ’ ಸುದ್ಧಿಗಳನ್ನೂ ಕೇಳಿದ್ದರು. ಆದರೆ ಅವರನ್ನು ಕಣ್ಣಾರೆ ಕಂಡಮೇಲೆ, ಅವರ ವಿದ್ಯಾರ್ಥಿಯಾದ ಬಳಿಕ, ಅವರ ಹತ್ತಿರ ಹೋದಂತೆ ತಮ್ಮ ಅಭಿಪ್ರಾಯ ಹೇಗೆ ಬದಲಾಯಿತು, ಭಯಮಿತ್ರಿತ ಗೌರವ ಕೇವಲ ಗೌರವ ಪುರಸ್ಸರನಾದ, ಹಾರ್ದಿಕವಾದ ಭಕ್ತಿಯಾಯಿತೆಂಬುದನ್ನೂ ವರ್ಣಿಸುತ್ತಾರೆ. (ವಿ.ಸೀ. ರಾಯರ ಶಿಸ್ತು, ಅದಬ್‌ತನವನ್ನು ವಿ.ಸೀ ಅವರು ಒಪ್ಪಿಕೊಂಡರೂ ಅವರ ಅಂತರಂಗದ ಆರ್ದ್ರತೆಯನ್ನು ಚೆನ್ನಾಗಿಯೇ ಗುರುತಿಸಿದ್ದಾರೆ.) “ಆರು ಅಡಿಯಷ್ಟು ಸುಮಾರು ಎತ್ತರವಾಗಿದ್ದವರು ಸುಬ್ಬರಾಯರು. ಚೆಲುವರೂ ಬುದ್ಧವಂತರೂ, ದಕ್ಷರೂ, ಪ್ರಿನ್ಸಿಪಾಲರೂ ಆದ ಅವರ ಎದುರಿಗೆ ‘ಕಂ-ದಪ್ಯಃ?” ಎಂದು ಪ್ರಶ್ನಸಿ, ಉತ್ತರವನ್ನೂ ವಿ.ಸೀಯವರನ್ನು ಕೊಡುತ್ತಾರೆ.

ಪ್ರೊ. ಸುಬ್ಬರಾಯರ ಸ್ಮರಣ ಶಕ್ತಿಯನ್ನು ಹಲವರು ವಿವಿಧ ಪ್ರಸಂಗಗಳಲ್ಲಿ ಪ್ರಸ್ತಾವಿಸಿದ್ದಾರೆ. ಆ ಕುರಿತು ಚಿಟ್ಟೆ ಕತೆಗಳೇ ಹುಟ್ಟಿಕೊಂಡಿವೆ. ವಿ.ಸೀಯವರೂ ಅದನ್ನು ಎತ್ತಿ ಹೇಳಿದ್ದಾರೆ. “ಸುಬ್ಬರಾಯರ ನೆನಪಿನ ಶಕ್ತಿ ಅದ್ಭುತವಾದದ್ದು” ಎಂಬುದನ್ನು ಉದಾಹರಣೆಗಳೊಂದಿಗೆ ಹೇಳಿ, “……. ಆ ನೆನಪು ಚಲದ ದುಷ್ಟ್ರತೀತಿಗೆ ಭೀತಿಯನ್ನು ಎರೆಯಲು” ಕಾರಣವಾಯಿತೆಂಬುದನ್ನು ತಿಳಿಸುತ್ತಾರೆ. ಅವರ ಪ್ರವಚನ ವೈಖರಿ, ತರಗತಿಯ ನಿಯತ್ತುಗಳನ್ನು ನಿರೂಪಿಸುತ್ತಾರೆ. ಹಾಗೆಯೇ ಬಿ.ಎ ತೇರ್ಗಡೆಯಾದ ಬಳಿಕ, ಎಂ.ಎ ಗೆ ಸೇರಲೋ ಬೇಡವೋ ಎಂಬ ತುಯ್ತದಲ್ಲಿದ್ದ ವಿ.ಸೀಯವರನ್ನು ಒಮ್ಮೆ ಬೆಂಗಳೂರು ರೈಲು ನಿಲ್ದಾಣದಲ್ಲಿ ಕಂಡ ಸುಬ್ಬರಾಯರು ಎಲ್ಲವನ್ನು ಅವರಿಂದ ಕೇಳಿ ತಿಳಿದು, ತಾವು ಹೇಳಬೇಕಾದುದನ್ನು ಹೇಳಿ, ಜೇಬಿಗೆ ಕೈಹಾಕಿ ಎರಡು ಸವರನ್ ಚಿನ್ನದ ನಾಣ್ಯ ತೆಗೆದುಕೊಟ್ಟುದನ್ನು ನೆನೆಯುತ್ತಾರೆ. Simple strokes of sublimety’ ಎನ್ನುವಂತೆ ಇಂತಹ ಒಂದು ಮಾತು, ಒಂದು ಘಟನೆಯಲ್ಲಿ ಒಂದು ವ್ಯಕ್ತಿಯ ಅಂತರಂಗ ತೆರೆಯುತ್ತದೆ, ಅದರ ಹಿರಿತನ ಕಾಣುತ್ತದೆ.

‘ತಸ್ಯವೇ ಸರ್ವಶಿಷ್ಯಸ್ಯ ನೋಪದೇಶ ದರಿದ್ರತಾ’ ಎಂಬಮತೆ ಮಹಾ ಮೇಧಾವಿಗಳೂ, ವಿದ್ವಾಂಸರೂ, ಪ್ರವಚನ ಕುಶಲರೂ, ಸುಪ್ರಸಿದ್ಧರೂ ಆದಂತಹ ಹತ್ತಾರು ಮಂದಿ ಮಹನೀಯರಲ್ಲಿ ಶಿಷ್ಯತ್ವವನ್ನು ನಡೆಯಿಸುವ ಸುದೈವಿ ವಿ.ಸೀಯವರಾಗಿದ್ದರು. ಅವರೆಲ್ಲರನ್ನು ಯುಕ್ತ ಅವಕಾಶಗಳಲ್ಲಿ ಎದೆತುಂಬ ನೆನೆದು, ಬಾಯ್ತುಂಬ ಬಣ್ಣಿಸುತ್ತಾರೆ. ‘ಅಪರಶಂಕರ’ರೆಂದೇ ಸಂಮಾನ್ಯರಾದ ಡಾ. ಸರ್ವೇಪಲ್ಲಿ ರಾಧಾಕೃಷ್ಣನ್, ತತ್ವಶಾಸ್ತ್ರ ಪಾರೀಣರಾದ ಪ್ರೊ.ಎಂ. ಹಿರಿಯಣ್ಣ ಮತ್ತು ಪ್ರೊ. ಎ.ಆರ್.ವಾಡಿಯಾ, ಪ್ರಿನ್ಸಿಪಾಲರೂ ಇಂಗ್ಲಿಷ್ ಪ್ರಾಧ್ಯಾಪಕರೂ ಆಗಿದ್ದ ಪ್ರೊ. ಜೆ.ಸಿ. ರಾಲೋ, ‘ಕನ್ನಡದ ಕಣ್ವ’ರೆಂದೇ ಸ್ತುತ್ಯರಾದ ಪ್ರೊ. ಬಿ.ಎಂ. ಶ್ರೀಕಂಠಯ್ಯ, ಕನ್ನಡದ ಪಂಡಿತ ಕಾನಕಾನಹಳ್ಳಿ ವರದಾಚಾರ್ಯ, ತೆಲುಗು ವಿದ್ವಾಂಸ ರಾಳ್ಳಪಳ್ಳಿ ಅನಂತಕೃಷ್ಣ ಶರ್ಮ ಇವರನ್ನೆಲ್ಲ ತುಂಬ ಆದರದಿಂದ, ಸಂತೋಷದಿಂದ, ಕೃತಜ್ಞತೆಯಿಂದ ವಿ.ಸೀಯವರು ಸಂಸ್ಮರಿಸಿದ್ದಾರೆ. ಕನ್ನಡದ ಅಶ್ವನೀಕುಮಾರರೆಂದು ವರ್ಣಿತರಾದ ಪ್ರೊ. ಟಿ.ಎಸ್. ವೆಂಕಣ್ಣಯ್ಯ ಮತ್ತು ಪ್ರೊ. ಎ,ಆರ್.ಕೃಷ್ಣಶಾಸ್ತ್ರಿ, ಸರಸ ಲೇಖಕ ಮತ್ತು ವಾಗ್ಮಿ ಎಂ.ಆರ್. ಶ್ರೀನಿವಾಸಮೂರ್ತಿ ಇವರ ಪ್ರಸ್ತಾವವೂ ಪುಸ್ತಕದಲ್ಲಿದೆ. ವಿ.ಸೀಯವರು ಅವರೆಲ್ಲರ ಬಗೆಗೆ ಬರೆದುದರಿಂದ ನಾರೋ ಆರೋ ವಾಕ್ಯಗಳನ್ನು ಉದ್ಧರಿಸಿದರೂ ಅದು ಸಾಕಷ್ಟು ವಿಸ್ತಾರವಾದೀತು. ಆದುದರಿಂದ ಯಾರೊಬ್ಬರನ್ನೂ ಕುರಿತು ತಾರತಮ್ಯ ಮಾಡದೆ, ಪಕ್ಷಪಾತ ಇಲ್ಲದೆ ವಿ.ಸೀಯವರ ನುಡಿಕನ್ನಡಿಗಳಲ್ಲೇ ಆ ಮಹನೀಯಯರನ್ನು ಪಡಿಮೂಡಿಸುವ ಪ್ರಯತ್ನ ಈ ಮುಂದಿನದು.

ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಪ್ರಾಧಾಪಕರಾಗಿದ್ದ ಡಾ. ಸರ್ವೇಪಳ್ಳಿ ರಾದಾಕೃಷ್ಣನ್ ಮೈಸೂರು ಮಹಾರಾಜಾ ಕಾಲೇಜಿಗೆ ಬಂದು ಅಲ್ಲಿ ಇದ್ದಷ್ಟು ಕಾಲ ಅವರಂತೆ ಸರ್ವಜನ ಪ್ರಿಯರಾದವರು ಮತ್ತೊಬ್ಬರಿರಲಿಲ್ಲವೆನ್ನುವ ವಿ.ಸೀ ಅವರ ವೇಷಭೂಷಣವನ್ನು ಹೀಗೆ ಚಿತ್ರಿಸಿದ್ದಾರೆ : “ರೇಷ್ಮೆಯ ಲಾಂಗ್ ಕೋಟು, ಮಲ್ ಪಂಚೆ, ಕಾಲಿಗೆ ಕಂದು ಬಣ್ಣದ ಸ್ಲಿಪ್ಪರು, ತಲಗೆ ಬಿಳಿಯ ಮಸ್ಲಿನ್ ರುಮಾಲು; ಆದರೆ ಮುಖದ ಮೇಲೆ ಮೀಸೆ ಇತ್ತು. ಅವರನ್ನು ಕುರಿತು ಎಲ್ಲರಿಗೂ ಪ್ರೀತಿ ಗೌರವ ಭಕ್ತಿ ಉಂಟಾಗುತ್ತಿತ್ತು”. ಮುಂದೆ ಹೇಳುತ್ತಾರೆ: “ವಿದ್ಯಾರ್ಥಿಗಳ ಸಂಬಂಧದಲ್ಲಿ ಅವರ ಮುಖ ಎಂದೂ ಮಸುಕಾದುದಿಲ್ಲ; ಮಾತು ಕಠಿಣವಾದುದಿಲ್ಲ; ನಗೆ ಆರಿದುದಿಲ್ಲ….. ನಮ್ಮಂಥವರ ಬದುಕಿನಲ್ಲಿ ಯಾವುದೋ ಹೊಸ ಸ್ನಿಗ್ಧತೆ, ಸೊಖೋಷ್ಣತೆ, ಅವರ ಸಂಪರ್ಕದಿಂದ ಪ್ರವಹಿಸಿ ಬರುವಂತೆ ಆಯಿತು……” ಇನ್ನೊಂದು ಕಡೆ “ಅವರ ಸಜ್ಜನತೆ, ನಗು ಮುಖ, ಸುಲಭತೆ ಯಾರನ್ನು ಕಂಡರೂ ವಿಶ್ವಾಸದಿಂದ ನಡೆದುಕೊಳ್ಳುವ ರೀತಿ ಎಲ್ಲರಿಗೂ ಅವರಲ್ಲಿ ತಮ್ಮ ಮನೆಯ ಹಿರಿಯರೆಂಬಂತೆ ಪ್ರೀತಿ ಉಂಟುಮಾಡುತ್ತಿತ್ತು” ಎನ್ನುತ್ತಾರೆ. ಅವರ ಬೋಧನ ಕುಶಲತೆಯನ್ನು ವಿಸ್ತಾರವಾಗಿ, ಸೋದಾಹರಣವಾಗಿ ಸ್ಮರಿಸುತ್ತಾರೆ.

ಡಾ. ರಾಧಾಕೃಷ್ಣನ್ ಅವರು ಮೈಸೂರನ್ನು ಬಿಟ್ಟು ಕಲ್ಕತ್ತ ವಿಶ್ವವಿದ್ಯಾಲಯಕ್ಕೆ ಹೋದ ಸನ್ನಿವೇಶ ಬಹುಪ್ರಸಿದ್ಧವಾದದ್ದು ಆ ಘಟನೆಯನ್ನು ಕಂಡವರು ಕೆಲವರಾದರೆ, ಕಾಣದಿದ್ದರೂ ಅದನ್ನೂ ಬಗೆಬಗೆಯಾಗಿ ಬಣ್ಣಿಸಿದರು ಇನ್ನೂ ಹಲವರು. ಅತಿ ಮರ್ಮ ಸ್ಪರ್ಶಿಯಾಗಿದ್ದ ಆ ವಿದಾಯಕ್ಕೆ ವಿ.ಸೀಯವರು ಪ್ರತ್ಯಕ್ಷ ಸಾಕ್ಷಿ. ಅವರ ವರ್ಣನೆ ಅಧಿಕೃತವಾದದ್ದು. ಅವರು ಬರೆದಿದ್ದಾರೆ: “ಅವರನ್ನು ಸಾಗುಗೊಳಿಸಿದ ಸಮಾರಂಭಗಳು ನೂರಾರು. ಮೈಸೂರು ವಿದ್ಯಾರ್ಥಿಗಳಿಗೆ ಯಾರಲ್ಲಿಯಾಗಲಿ ಹುಚ್ಚು ಹಿಡಿಯುವುದು ಶಕ್ಯವಾಗಿದ್ದರೆ ರಾಧಾಕೃಷ್ಣನ್ ಅವರನ್ನು ಬೀಳ್ಕೊಡುವ ಸಮಾರಂಭಗಳಲ್ಲಿ ಪ್ರಕಟವಾದುದು ಅಂಥ ಹುಚ್ಚಿನ ತ್ವತೀಯಾವಸ್ಥೆ…… ಅವರು ಹೊರಡುವ ದಿನ ನೆನಪಿನಲ್ಲಿಟ್ಟು ನಿಂತಿದೆ. ಅವರನ್ನು ಫೀಟನ್ ಗಾಡಿಯಲ್ಲಿ ಕುಳ್ಳಿರಿಸಿಕೊಂಡು, ಆ ಗಾಡಿಗೆ ಸರ್ವಾಲಂಕಾರ ಮಾಡಿ, ಒಂದು ತೇರನ್ನು ಎಳೆದುಕೊಂಡು ಬರುವಂತೆ ವಿದ್ಯಾಥಿಗಳು ಸ್ಟೇಷನ್ನಿಗೆ ಮುಂದಿಂದ ಎಳೆದುಕೊಂಡು, ಹಿಂದಿನಿಂದ ನೂಕಿಕೊಂಡು ತಂದರು. ಅವರು ಕುಳಿತು ಕೊಳ್ಳುವ ರೈಲುಗಾಡಿಗೆ ಬಗೆ ಬಗೆಯ ಹೂಗಳಿಂದ ಅಲಂಕಾರ ಮಾಡಿದ್ದರು….. ಇಷ್ಟು ಜನರ ಪ್ರೀತಿ, ಸೌಹಾರ್ದ, ಭಕ್ತಿಗಳನ್ನು ಒಬ್ಬ ಪ್ರಾಚಾರ್ಯ ಗಳಿಸಿಕೊಳ್ಳುವುದು ಶಕ್ಯವಾದರೆ ಅದಕ್ಕಿಂತ ದೊಡ್ಡ ಸಾಧನೆ….. ಇನ್ನಾವುದುಂಟು? ಇದು ಭಾಗ್ಯ, ಇದು ಭಾಗ್ಯ, ಇದು ಭಾಗ್ಯವಯ್ಯ ಎನ್ನಿಸಿತು”.

ವರ್ಚಸ್ಸಿನಲ್ಲಿ ಡಾ. ರಾಧಾಕೃಷ್ಣನ್ ಅವರಂತೆ ಅಲ್ಲವಾದರೂ ತಮ್ಮದೇ ವ್ಯಕ್ತಿತ್ವ ವಿಶೇಷವನ್ನು ಹೊಂದಿದ್ದವರು ಪ್ರೊ. ಎಂ. ಹಿರಿಯಣ್ಣನವರು. ಅವರನ್ನು ಕುರಿತು ವಿ.ಸೀಯವರು ಭಾವಪೂರ್ಣವಾಗಿ ಬರೆದಿದ್ದಾರೆ. ಕೆಲವು ಸಾಲುಗಳು ಹೀಗಿವೆ: “ಆ ಕ್ಲಾಸುಗಳಲ್ಲಿ (ಎಂದರೆ ಹಿರಿಯಣ್ಣನವರ ಕ್ಲಾಸುಗಳಲ್ಲಿ) ರಾಧಾಕೃಷ್ಣನ್ ಕ್ಲಾಸಿನ ವಾಕ್ ರಂಜನೆ, ವೈಭವ ಇಲ್ಲ. ಅದು ಕುಶಾಗ್ರವಾದ ಉಕ್ಕಿನ ಕಂಠದಿಂದ, ಮಿಂಚಿನ ಬಳ್ಳಿಯಿಂದ ಬರೆದ ಬರೆಹ. ಆದರೆ ಈ ಬೆಳಕು ಹುಣ್ಣಿಮೆ ಚಂದ್ರನದು, ಸೂರ್ಯನದಲ್ಲ….” ಎಂದು ಇಬ್ಬರು ಪ್ರಕಾಂಡವನ್ನು ತುಲನೆ ಮಾಡಿ, ಹಿರಿಯಣ್ಣನವರ ವೇಷಭೂಷಣಗಳನ್ನು ವರ್ಣಿಸಿ, “…..ಕ್ಲಾಸಿಗೆ ಬರುತ್ತಿದ್ದಾಗ ಯಾವುದೋ ಬೇರೆ ಪ್ರಪಂಚ ನಮ್ಮ ಕಡೆಗೆ ಇಳಿದು ಬರುತ್ತಿತ್ತು ಎಂಬ ಭಾವನೆ. ಅಲ್ಲಿ ಸಂತೋಷ, ಕಾವ್ಯ, ರಂಜನೆಗೆ ಅವಕಾಶ ಇರಲಿಲ್ಲ. ದೇವಸ್ಥಾನದ ಒಂದು ಭಾವ ಅಲ್ಲಿ” ಎಂದು ಪೂಜ್ಯತೆಯನ್ನು ತೋರುತ್ತಾರೆ.

ವ್ಯಕ್ತಿ ಚಿತ್ರಣದಲ್ಲಿ ವಿ.ಸೀಯವರದು ಸಿದ್ದಹಸ್ತ. ಎರಡು ವಾಕ್ಯ, ನಾಲ್ಕು ಪದಗಳಿಂದಲೇ ಒಂದು ವ್ಯಕ್ತಿಯ ಬಹಿರಂಗವನ್ನು ತೋರಿ, ಅಂತರಂಗವನ್ನು ತೆರೆದು, ಓದುಗರ ಕಣ್ಣಿಗೆ ಕಟ್ಟಿಸಬಲ್ಲರು. ‘ಕನ್ನಡ ತರಗತಿಯಲ್ಲಿ ವಿಶೇಷತೆಯೇನೂ ಇರಲಿಲ್ಲ’ ಎನ್ನುವ ವಿ.ಸೀ ಕಾನಕಾನಹಳ್ಳಿ ವರದಾಚಾರ್ಯರ ಪಾಠದಲ್ಲಿದ್ದ ಅತಿಶಯತೆಯನ್ನು ವಿವರಿಸುವ ರೀತಿ ಸ್ವಾರಸ್ಯಕರ: “ಹುಡುಗರು ಯಾರಾದರೂ ಗಲಾಟೆ ಮಾಡಿದರೆ ಗ್ರಹಾಚಾರ ಬಿಡಿಸುತ್ತಿದ್ದರು. ‘ರಾಜಶೇಖರ ವಿಲಾಸ’ದಲ್ಲಿ ಅನೇಕ ವೇಳೆ ಓದುತ್ತಿದ್ದ ಶೃಂಗಾರ ಭಾಗಗಳ ಅರ್ಥವಿವರಣೆ…. ಹುಡುಗರನ್ನು ಇನ್ನೂ ಬಲಿತವರನ್ನು ಕೆರಳಿಸುತ್ತಿತ್ತು. ಅಂತಹ ಸಂದರ್ಭಗಳಲ್ಲಿ…. ‘ಇಲ್ಲಿ ಬನ್ನಿ ಅಣ್ಣಯ್ಯ’ ಎಂದು ಕರೆಯುವರು. ಮೆಲ್ಲನೆ ಅವರಿಗೆ, ಆದರೆ ಕ್ಲಾಸಿಗೆಲ್ಲ ಕೇಳುವಂತೆ…..’ ‘ನಿಮಗೆ ಮದುವೆ ಆಗಿದೆಯೋ’? ಎಂದು ಕೇಳುವರು, ಎರಡನೆಯ ಹೆಜ್ಜೆ ‘ಹೆಂಡತಿ ಮನೆಗೆ ಬಂದಿದ್ದಾರೋ’ ಎನ್ನುವರು ‘ಇಲ್ಲವಾದರೆ, ಸದ್ಯ ನಿಮಗೆ ಅರ್ಥವಾಗುವುದಿಲ್ಲ’ ಎನ್ನುವರು… ಯಾವ ಚೇಷ್ಟೆ ಹೇಗೆ ಬರಲಿ, ಅದಕ್ಕೆ ತಕ್ಕಂತೆ ಪ್ರತಿ ವಾಕ್ ಅವರದು”.

ಶ್ರೀ ವರದಾಚಾರ್ಯರ ವ್ಯುತ್ವನ್ನ ಬುದ್ಧಿಗೆ, ವಿ.ಸೀ. ಕೊಟ್ಟಿರುವ ಇನ್ನೂ ಒಂದು ಉದಾಹರಣೆ ಹೀಗಿವೆ: ಬಲವಾಗಿ ಮೀಸೆ ಬೆಳೆದಿದ್ದ, ಪ್ರಾಯದ ವಿದ್ಯಾರ್ಥಿಯೊಬ್ಬ ತರಗತಿಯಲ್ಲಿದ್ದನಂತೆ. ಒಮ್ಮೆ ಆಚಾರ್ಯರು ಮಾಡುತ್ತಿದ್ತ ಪಾಠದ ಮಧ್ಯೇ ವೇಶ್ಯೆಯರ ಮಾತು ಬಂತು. ಆ ದಡಿಯ ‘ವೇಶ್ಯೆಯರಿಗೇಕೆ ಮಕ್ಕಳಾಗುವುದಿಲ್ಲ’ ಎಂದು ಕೇಳಿದ. ‘ಅವರಿಗೂ ಆಗತಾರ ಅಣ್ಣಯ್ಯ’ ಎಂದವರೇ ಆತನನ್ನು ಕರೆದು, ಕಿಟಕಿ ಹತ್ತಿರ ನಿಲ್ಲಿಸಿ, ಹೊರಗಡೆ ರಸ್ತೆ ಬದಿಯ ಕಾಲ್ದಾರಿಯನ್ನು ತೋರಿಸಿ ಕೇಳಿದರು: “ಅಲ್ಲಿ ಏಕಣ್ಣಯ್ಯ ಏನೂ ಬೆಳೆಯುವುದಿಲ್ಲ?” ಮೀಸೆ ಹೊತ್ತ ಅಣ್ಣ ‘ಅರ್ಥವಾಯಿತು, ಪಂಡಿತರೆ’ ಎಂದ. ಆಚಾರ್ಯರು “ಹೋಗಿ ಗಂಭೀರವಾಗಿ ನಿಮ್ಮ ಸ್ಥಳದಲ್ಲಿ ಕುಳಿತುಕೊಳ್ಳಿ ದೊಡ್ಡ ಮೀಸೆ ಸಾರ್ಥಕವಾಗುತ್ತದೆ” ಎಂದರಂತೆ!.

ಆ ಕಾಲದ ಅಧ್ಯಾಪಕರ ವಿಷಯ ವೈದುಷ್ಯ, ಪ್ರವಚನವೈಖರಿ, ವಿನೋದ ಪ್ರಜ್ಞೆ, ವ್ಯಕ್ತಿ ವೈಶಿಷ್ಟಯಗಳಿಗೆ ಇಂತಹ ಅನೇಕ ಸರಸ, ಸ್ಮರಣೀಯ, ಪ್ರಸಂಗಗಳನ್ನು ಉದಾಹರಿಸಿ ಅವುಗಳನ್ನು ವಿವರಿಸಿದ್ದಾರೆ. ಅದೇ ವರದಾಚಾರ್ಯರಿಗೆ ನೆಗಡಿ ಬಂದು ಸೀನುವುದಕ್ಕೆ ಹೊರಟರೆ ಕಾಲೇಜಿನ ಎಂಟು ದಿಕ್ಕುಗಳಲ್ಲೂ ಪ್ರತಿಧ್ವನಿಸಿ, ಕಟ್ಟಡದ ತಳಹದಿ ಎಲ್ಲ ಅಲ್ಲಾಡಿ ಬಿಡುತ್ತದೋ ಎಂದು ಭಯವಾಗುತ್ತಿತಂತೆ! ಒಮ್ಮೆ ಅವರು ಹಾಗೆ ಸೀತಾಗ, ಪಕ್ಕದ ಕೊಠಡಿಯಲ್ಲಿದ್ದ ಇಂಗ್ಲಿಷ್ ಪ್ರೊಫೆಸರ್ ಗಾಬರಿಯಿಂದ ಹೊರಗೆ ಬಂದು, ವಿಷಯವನ್ನು ಕೇಳಿ ತಿಳಿದು, “Good Heavens! It is phenoment” ಎಂದು ಉದ್ಗರಿಸಿದಂತೆ! ವಿ.ಸೀ. ಹೇಳುತ್ತಾರೆ. “ನಿಜವಾಗಿ ನಮ್ಮ ಪಂಡಿತರ ಸೀನು ಫೆನಾಮಿನಲ್ಲೇ ಸರಿ”.

ಒಂದು ಕಾಲದ ಮೈಸೂರು ಮಹಾರಾಜ ಕಾಲೇಜನ್ನು ಕರ್ನಾಟಕದ ‘ಆಕ್ಸ್‌ಫರ್ಡ್’ ಎಂದು ಕರೆದವರಿದ್ದಾರೆ. ವಿ.ಸೀಯವರ ಈ ಸ್ಮೃತಿ ಸಂಚಯವನ್ನು ಓದುವಾಗ ಆ ಮಾತು ಮತ್ತೆ ಮತ್ತೆ ನೆನಪಿಗೆ ಬರುತ್ತದೆ, ನಿಜವೆಂದು ತೋರುತ್ತದೆ. ಅವರು ಪಡೆದಿದ್ದ ಗುರು ಜನರು ಎಂತೆಂತಹ ಮೇಧಾವಿಗಳು! ಉನ್ನತ ಸ್ಕಂಧರು! ಉದಾರ ಚರಿತರು! ಯಾರಿಗಾದರೂ ‘ಪಾಠ ಕಷ್ಟವಾಯಿತು’ ಎಂದು ಹೇಳಿದರೆ What are we here for? we will make it easy ಎಂದು ಹೇಳುವ ಪ್ರವಚನ ಕುಶಲರು. ‘ನಾವು ಹುಡುಗರನ್ನು ಪಾಸು ಮಾಡಿಸುವ Coaches ತಯಾರಕರು ಮಾತ್ರ ಅಲ್ಲ, Educators ಎಂದೆನ್ನುವ ಧೀಮಂತರೂ ಧೈರ್ಯವಂತರೂ ಆ ಕಾಲದಲ್ಲಿದ್ದರು. ಅವೆಲ್ಲವನ್ನೂ ಹೇಳುತ್ತ ವಿ.ಸೀಯವರು ವರ್ಕ್ಸ್‌ವರ್ಥ್ ಕವಿಯ ಈ ಉದ್ಗಾರವನ್ನು ನೆನಪಿಗೆ ತರುತ್ತಾರೆ: “Bliss was it in that down to be alive, but to be young was very heaven!” ವಿ.ಸೀ. ಅವರು ಅಂತಹುದೇ ಸನ್ನಿವೇಶದಲ್ಲಿ ಜೀವಿಸಿದ್ದರು, ತರುಣರಾಗಿದ್ದರು, ಮೈಸೂರು ಮಹಾರಾಜ ಕಾಲೇಜ್ ವಿದ್ಯಾರ್ಥಿಯೂ ಆಗಿದ್ದರು.

ವಿ.ಸೀಯವರು ಕಾಲೇಜಿನ ಆಚಾರ್ಯರನ್ನು ಮಾತ್ರವಲ್ಲ, ತಮಗೆ ಆಶ್ರಯದಾತರಾಗಿದ್ದ ರಾಯರು ಮತ್ತು ಅವರ ಸಹಧರ್ಮಿಣಿ, ಮೈಸೂರು ಸಂಸ್ಥಾನದ ದಿವಾನ್ ಮಿರ್ಜಾ ಇಸ್ಮಾಯಿಲ್, ಮೈಸೂರಿನ ಸಾಂಸ್ಕೃತಿಕ ಜೀವನದ ಪ್ರತಿನಿಧಿಗಳಾಗಿ, ಅದರ ಕಂಪು ಸೊಂಪುಗಳನ್ನು ಹತ್ತು ಕಡೆಗೂ ಹರಡಿದ ವೀಣೆ ಶೇಷಣ್ಣ ಮತ್ತು ಸುಬ್ಬಣ್ಣನವರು, ಗಾಯಕ ಬಿಡಾರಂ ಕೃಷ್ಣಪ್ಪ, ಪಿಟೀಲಿನ ಚೌಡಯ್ಯ ಇವರ ವರ್ಣನೆಗಳು; ನಾಡ ಮತ್ತು ಹೊರನಾಡ ಇತರ ವಿದ್ವಾಂಸರ ಉಲ್ಲೇಖಗಳು ಯಥಾವಕಾಶವಾಗಿ ಮನೋಜ್ಞವಾಗಿ ಈ ಪುಸ್ತಕದಲ್ಲಿ ಬಂದಿವೆ. ತಮ್ಮ ಕುತೂಹಲ ಆಸಕ್ತಿಗಳನ್ನು ಅದುಮಲಾಗದೆ ತರಗತಿಗಳನ್ನು ತಪ್ಪಿಸಿ, ನಗರದಲ್ಲಿ ಅಲ್ಲಲ್ಲಿ ಜರಗುತ್ತಿದ್ದ ಸಂಗೀತ ಕಛೇರಿಗಳಿಗೂ ನೃತ್ಯ ಪ್ರದರ್ಶನಗಳಿಗೂ ಹೋದುದನ್ನೂ ವಿ.ಸೀಯವರು ನೆನೆಯುತ್ತಾರೆ.

ವಿ.ಸೀಯವರು ತಮಗೆ ಆಶ್ರಯದಾತರಾಗಿದ್ದ ರಾಯರು ಮತ್ತವರ ಪತ್ನಿಯವರ ಹೆಸರು ಎಲ್ಲೂ ಬಾರದಂತೆ ತುಂಬ ಎಚ್ಚರಿಕೆ ತೋರಿದ್ದಾರೆ. ಹೆಸರು ಹೆಳದಿದ್ದರೂ ಅವರ ವ್ಯಕ್ತಿತ್ವದ ಬೆಳಕು ದಟ್ಟವಾಗಿದೆ. ರಾಯರ ಕುಟುಂಬಜೀವನವನ್ನು ಪ್ರಸ್ತಾವಿಸುವಾಗ ಒಂದು ಸೂಕ್ಷ್ಮ ವಿಚಾರವನ್ನು ವಿ.ಸೀಯವರು ತುಂಬ ನಯವಾಗಿ, ನವಿರಾಗಿ ಹೇಳಿದ್ದಾರೆ. ರಾಯರು ಸಜ್ಜನ, ಉಪಕಾರಿ, ದಾನಿ; ಆದರೆ ಅವರಿಗೆ ಶ್ರೀದೇವಿ ಭೂದೇವಿಯರಂತೆ ಪತ್ನಿ, ಉಪಪತ್ನಿ ಇಬ್ಬರೂ ಇದ್ದರು. ಅದು ಆ ಕಾಲಕ್ಕೆ ಅಸಹಜವಾಗಿರಲಿಲ್ಲ, ದರ್ಪ, ದೌಲತ್ತುಗಳ ಲಕ್ಷಣವೆನಿಸಿತ್ತು. ಆ ಇಬ್ಬರಿಗೂ ಹೊಂದಿಕೊಂಡು, ಎರಡು ಹೆಣ್ಣು ಮಂಡೆಗಳು ಒಂದಕ್ಕೊಂದು ಡಿಕ್ಕಿ ಹೊಡೆಯದಂತೆ ಇಬ್ಬರನ್ನೂ ಹೊಂದಿಸಿಕೊಂಡು, ಎರಡು ದಂಡೆಗಳ ನಡುವೆ ಹರಿಯುವ ಹೊಳೆಯಲ್ಲಿ ದೋಣಿ ಸಾಗುವಂತೆ, ಬಾಳ ತೊರೆಯಲ್ಲಿ ರಾಯರ ಸಂಸಾರ ನೌಕೆ ಚಲಿಸುತ್ತಿದ್ದುದನ್ನು ವಿ.ಸೀಯ ಹತ್ತಿರದಿಂದ ನೋಡಿದ್ದರು, ನೋಡಿ ಎಚ್ಚರದಿಂದ ಇದ್ದವರು.

ವಿದ್ಯಾರ್ಥಿ ಜೀವನಕ್ಕೆ ಪ್ರತ್ಯಕ್ಷವಾಗಿ ಸಂಬಂಧಿಸಿರದಿದ್ದರೂ ತಮ್ಮ ವ್ಯಕ್ತಿಜೀವನದ ಮೇಲೆ ಗಾಢ ಪ್ರಭಾವ ಬೀರಿದ, ನೆನಪಿನಲ್ಲಿ ದಟ್ಟವಾಗಿ ಉಳಿದ ಕೆಲವು ಸಂದರ್ಭಗಳನ್ನೂ ವಿ.ಸೀಯವರು ನಿರೂಪಿಸಿದ್ದಾರೆ. ಅಂತಹುಗಳಲ್ಲಿ ಬಹುಮುಖ್ಯವೂ ಅತಿಸುಂದರವೂ ಆದದ್ದು ವಿ.ಸೀಯವರು ತಮ್ಮ ಮಿತ್ರರೊಂದಿಗೆ ಗುರುದೇವ ರವೀಂದ್ರನಾಥ ಠಾಕೂರರನ್ನು ಸಂದರ್ಶಿಸಿದ ಸನ್ನಿವೇಶ. ಒಂದು ಅಧ್ಯಾಯ ಪೂರ್ತಿಯಾಗಿ ಅವರು ಅದನ್ನು ನಿರೂಪಿಸಿದ್ದಾರೆ. ಆ ಭಾಗ ವಿ.ಸೀಯವರು ವರ್ಣನ ಪ್ರವಣತೆಗೊಂದು ಸುಂದರ ನಿದರ್ಶನ. ತದ್ವತ್ತಾಗಿ ಅಲ್ಲವಾದರೂ ಸಂಗ್ರಹವಾಗಿಯಾದರೂ ಆ ಸಂದರ್ಶನ ಸ್ವಾರಸ್ಯವನ್ನು ಹೇಳಲೇಬೇಕು:

ವಿ.ಸೀಯವರಿಗೆ ಠಾಕೂರ್ ದರ್ಶನ ಭಾಗ್ಯ ಎರಡು ಸಲ ಪ್ರಾಪ್ತಿಸಿತ್ತು. ಮೊದಲಸಲ ಬೆಂಗಳೂರಲ್ಲಿ, ೧೯೧೮ರಲ್ಲಿ;- ಆಗ ಮೈಸೂರಿನಲ್ಲಿ ಓದುತ್ತಿದ್ದ ವಿ.ಸೀಯವರು ಠಾಕೂರರನ್ನು ನೋಡಲೆಂದೇ ತಮ್ಮ ವಿದ್ಯಾರ್ಥಿ ಮಿತ್ರೊಂದಿಗೆ ತುಂಬ ಉತ್ಸಾಹದಿಂದ ಬೆಂಗಳೂರಿಗೆ ಹೋಗಿದ್ದರಂತೆ. ಆದರೆ ಬೆಂಗಳೂರು ತನ್ನ ಪಾಡಿಗೆ ಏನೂ ಆಗಿಲ್ಲವೆಂಬಂತೆ, ತಣ್ಣಗಿದ್ದುದನ್ನು ನೋಡಿದ ವಿ.ಸೀ ವಿಷಣ್ಣ ಭಾವದಿಂದ ಹೀಗೆ ಹೇಳುತ್ತಾರೆ. ‘ಅಷ್ಟು ದೊಡ್ಡ ಕವಿ ಬೆಂಗಳೂರಿಗೆ ಬಂದಾಗ ಧರ್ಮಾಂಬುಧಿ ಕೆರೆ ಇದ್ದ ಹಾಗೆಯೇ ಇದೆ; ಅಳೆಪೇಟೆ, ರಾಣಾಸಿಂಗನ ಪೇಟೆ, ಚಾಮರಾಜಪೇಟೆ ಯಾವ ಸಂಭ್ರಮವನ್ನೂ ತೋರಿಸದೆ ಎಂದಿನಂತೆಯೇ ಇವೆ ಎಂಬ ಗದ್ಯತೆಗೆ ನಾನಂತೂ ಬೇಸತ್ತೆ’!.

ಎರಡನೆಯ ಸಲ, ೧೯೧೯-೨೦ರ ಸುಮಾರಿಗೆ ಮತ್ತೊಮ್ಮೆ ಠಾಕೂರರು ದಕ್ಷಿಣಾ ಪಥಕ್ಕೆ ಆಗಮಿಸಿದಾಗ ಮೈಸೂರಿಗೂ ಬಂದು ಮಹಾರಾಜ ಕಾಲೇಜಿನಲ್ಲಿ ಭಾಷಣ ಮಾಡಿದುದು ಈ ಅಧ್ಯಾಯದ ಹೃದಯ ಭಾಗ. ಠಾಕೂರರು ಮೈಸೂರಲ್ಲಿದ್ದ ಎರಡು ದಿನಗಳಲ್ಲಿ ಒಂದು ದಿನ ನಿಷಾತ್ ಬಾಗ್‌ನಲ್ಲಿ ತಮ್ಮ ‘Karna and Kunthi’ ಎಂಬ ಕಿರುನಾಟಕವನ್ನು ಮೋಹಕವಾಗಿ ಓದಿದರಂತೆ. ವಂದನಾರ್ಪಣೆಯ ಹೊತ್ತಿಗೆ ವಿ.ಸೀಯ ಗುಂಪಿನಲ್ಲಿದ್ದ ಹುಡುಗನೊಬ್ಬನಿಗೆ ಉತ್ಸಾಹ ಉಕ್ಕೇರಿ ಬಂತಂತೆ. ಆತ ಮುಂದೆ ನುಗ್ಗಿ, “You are the greatest poet of India, Sir, of the great world ಎಂದವನೇ, ‘You are Iatayu’ ಎಂದೂ ಉದ್ಗರಿಸಿದ; ಅಲ್ಲಿಗೂ ನಿಲ್ಲದೆ ‘The Indian Rubber’ ಎಂದು ಹೇಳುವ ಹೊತ್ತಿಗೆ ಯಾರೋ ಎರಡೂ ಕಡೆಯಿಂದ ಘೇರಾಯಿಸಿ ಅವನ ಬಾಯಿ ಮುಚ್ಚಿ ಅವನನ್ನು ಹಿಂದಕ್ಕೆ ಎತ್ತಿಕೊಂಡು ಹೊರಟು ಹೋದರು. ‘ಟಗೋರರಿಗೂ ಈ ಮಹಾಸಂದರ್ಭ ಅರ್ಥವಾಗಿ ಗಟ್ಟಿಯಾಗಿ ನಕ್ಕರು’ ಎಂದು ವಿ.ಸೀ ಆ ಹಾಸ್ಯ ಸನ್ನಿವೇಶವನ್ನು ವರ್ಣಿಸಿ ಮುಗಿಸುತ್ತಾರೆ.