ಮುಂದಿನದು ಅತಿ ಮನೋಹರವಾದ ಪ್ರಸಂಗ ವಿ.ಸೀಯವರು ತಮ್ಮ ಮಿತ್ರರೊಂದಿಗೆ ಕವಿವರ್ಯ ಠಾಕೂರರನ್ನು ಖಾಸಗಿಯಾಗಿ ಭೇಟಿ ಮಾಡಿದ, ಹತ್ತು ನಿಮಿಷಗಳಿಗೆಂದು ನಿಗದಿಯಾಗಿದ್ದ ಆ ಭೇಟಿ ಅದರ ನಾಲ್ಕು ಪಟ್ಟು ಬೆಳೆದುದರ ವರ್ಣನೆ. ಠಾಕೂರರು ಮೈಸೂರಲ್ಲಿ ತಂಗಿದ್ದುದು ಅತಿಸುಂದರವಾದ ಪರಿಸರದಲ್ಲಿದ್ದ (ಅಂದಿನ ಮೈಸೂರೇ ಸುಂದರ!) ವಸಂತ ಮಹಲ್ – Summar Palaceನಲ್ಲಿ. ಅಲ್ಲಿಗೆ, ವಿಶ್ವಕವಿಯ ಸಂದರ್ಶನಕ್ಕೆ ಅವರು ಹೇಗೆ ಹೋದರೆಂಬುದರ ಚಿತ್ರಣ ಮುಂದಿನದು. ಆ ಚಿತ್ರದಲ್ಲಿ ಎಳೆದ ಒಂದೊಂದು ರೇಖೆಯೂ, ಅದಕ್ಕೆ ಬಳಿದ ಒಂದೊಂದು ಬಣ್ಣವೂ ‘ಸೊಗಸು’ ‘ಬಲ್ಸೊಗಸು’ ಎಂದು ಕೊಂಡಾಡಿ ಬಾಯಿ ಚಪ್ಪರಿಸುವಂತಿವೆ. ಆದುದರಿಂದ ಚಪಲತೆಯನ್ನು ತಡೆಯಲಾಗದೆ ಅದೆಲ್ಲವನ್ನೂ, ಒಂದೂ ಬಿಡದೆ, ಉದ್ಧರಿಸುತ್ತಿದ್ದೇನೆ:

“ಮೈಸೂರು ಆಗ ಇನ್ನೂ ಮಲ್ಲಿಗೆ ಹೂವಿಗೂ ಚಿಗುರು ವೀಳೆಯದೆಲೆಗೂ ಈರನಗೆರೆಯ ಮೊಗರು ಬದನೆಕಾಯಿಗೂ ಉತ್ತಮ ಊದುಕಟ್ಟಿಗೂ ಖ್ಯಾತವಾದ ಪಟ್ಟಣ. ಅಲ್ಲಿ ದೊರೆಯುತ್ತಿದ್ದ ಪನ್ನೀರು, ಅತ್ತರು ನಿಜವಾದ ಶ್ರೀಗಂಧ, ಹಸಿ ಗಂಧ ಸೌಗಂಧದವು. ಯುವರಾಜರ ಅರಮನೆಗೆ ಸೇರಿದ ಒಬ್ಬ ಯುವಕ ನಮಗೆ ಪರಿಯಸ್ಥನಾದುದರಿಂದ ಖಾಸಾ ಹಾರ ಮಾಡುವ ಒಬ್ಬರಿಗೆ ಹೇಳಿ, ನಾಲ್ಕೂವರೆ ಅಡಿ ನಿಲವುಳ್ಳ, ನಾಲ್ಕೈದು ಎಳೆ ಕಟ್ಟಿ ತೋರವಾದ ಆದರೂ ಹಗುರವಾದ, ಹೊಸ ಮಲ್ಲಿಗೆ ಮೊಗ್ಗಿನ ಹಾರವೊಂದನ್ನು ಮಾಡಿಸಿದ್ದೆವು. ಅದಕ್ಕೆ ಮೂರು ಸಣ್ಣ ಕುಚ್ಚು, ಕೊರಳ ಹಿಂದೆ, ತೋಳಿಗೆ ತೂಗಲು; ಕೆಳಗೆ ಪದಕದಂತೆ ಇನ್ನೊಂದು ದೊಡ್ಡ ಕುಚ್ಚು, ಕೆಂಪು ಗುಲಾಬಿಯ ಐದೈದು ಮೊಗ್ಗುಗಳಿಂದ ಮಾಡಿಸಿತ್ತು. ನಡುವೆ ಅಲ್ಲಲ್ಲಿ ಕೆಂಡಸಂಪಿಗೆ, ಮರುಗ, ಪಚ್ಚೆಯ ತೆನೆ, ಕಸ್ತೂರಿ ಜಾಜಿಯ ಸೇರುವೆ, ನೆಯಿಗೆ ಇತ್ತು. ಇದಕ್ಕೆ ಪನ್ನಿರು ಚಿಮುಕಿಸಿ ತೆಗೆದುಕೊಂಡು ಹೋಗಿದ್ದೆವು. ಒಂದು ಸಣ್ಣ ಬೆಳ್ಳಿಯ ಡಬ್ಬಿಯಲ್ಲಿ ಅತ್ತರಿತ್ತು. ಮೂರು ತೊಲೆ ಅಂಬರ್ ಊದುಕಡ್ಡಿಯನ್ನು ತೆಗೆದುಕೊಂಡು ಹೋಗಿದ್ದೆವು. ಅದರಲ್ಲಿ ಅಷ್ಟನ್ನೂ ಹಚ್ಚಲು ಮುಂಚೆಯೇ ಏರ್ಪಾಡಾಗಿತ್ತು. ಒಳಮನೆಯ ಬಾಗಿಲಿಗೆ ಹೋಗಿ ನಿಂತಾಗ, ಕವಿಗಳು ನಮ್ಮನ್ನು ಸ್ವಾಗತಿಸಿ, ಒಂದು ಕಡೆ ಕುಳ್ಳಿರ ಹೇಳಿ ತಾವೂ ಎದುರಿನ ಸೋಫಾದಲ್ಲಿ ಕುಳಿತುಕೊಂಡರು. ಒಂದು ಬೆತ್ತದ ಪೆಟ್ಟಿಗೆಯಲ್ಲಿ ಬೆಳ್ಳಿಯ ತಟ್ಟೆಯಲ್ಲಿ ಹೂ, ಎರಡು ಕಟ್ಟು ಹೊಂಬಣ್ಣದ ಆರಿಸಿದ ಬುತ್ತಿ ಚಿಗುರು ವೀಳೆಯದೆಲೆ, ಕಲ್ಲುಸಕ್ಕರೆ, ಬಾದಾಮಿ, ಘಮ್ಮೆನ್ನುವ ಸಂಭಾರ ಬೆರಸಿದ ಅಡಿಕೆಪುಡಿ, ಒಂದು ಡಜನ್ ಒಳ್ಳೆಯ ಕಿತ್ತಳೆಹಣ್ಣು ತೆಗೆದುಕೊಂಡು ಹೋಗಿದ್ದೆವು. ಊದುಬತ್ತಿ ಹೊತ್ತಿಸಿ, ಅದನ್ನು ಅವರಿಗೆ ಅರ್ಪಿಸಿ, ಅವರ ಕೊರಳಿಗೆ ಮಾಲೆ ಹಾಕಿ ನಾಲ್ವರೂ ನಮಸ್ಕಾರ ಮಾಡಿದೆವು. ಪೆಟ್ಟಿಗೆ ತೆಗೆದಕೂಡಲೆ ಅಂಥ ಅನ್ನಿವೇಶದಲ್ಲಿಯೂ ಕವಿಗಳಿಗೆ ಪರಿಮಳ ತಟ್ಟಲಾರಂಭಿಸಿರಬೇಕು. ಆ ಹೂಮಾಲೆಯನ್ನು ನಾವು ಕೊರಳಿಗೆ ಅರ್ಪಿಸಿದಾಗ, ತುರಾಯನ್ನು ಕೈಗೆ ಕೊಟ್ಟಾಗ ಅವರಿಗೆ ನಿಜವಾಗಿ ಸಂತೋಷವಾಗಿರಬೇಕು. ‘Beautiful flowers, marvellous flowers; some of the finest I have worn; you have brought me joy, joy!’ ಎಂದರು. ಹತ್ತು ಸಲ ಮೂಸಿ ನೋಡಿದರು. ಎರಡುಸಲ ಕಣ್ಣಿಗೊತ್ತಿಕೊಂಡರು. ನಮ್ಮಲ್ಲಿ ಒಬ್ಬೊಬ್ಬರನ್ನೂ- ಅವರ ಭುಜದ ಎತ್ತರಕ್ಕೆ ಹೋಗುವವರು ಯಾರೂ ಇರಲಿಲ್ಲ-ಅಪ್ಪಿಕೊಂಡರು. ಹತ್ತು ನಿಮಿಷಗಳ ಸಂದರ್ಶನ ನಲ್ವತ್ತೈದು ನಿಮಿಷಗಳಿಗೆ ಬೆಳೆಯಿತು. ನಮ್ಮ ಕುಲ ಗೋತ್ರ, ನಮ್ಮ ವಿದ್ಯಾವ್ಯಾಸಂಗ ಎಲ್ಲವನ್ನೂ ವಿಚಾರಿಸಿದರು. ಅವರ ಒಂದು ಕವಿತೆಯ ಗಾಯನ ರೀತಿಯನ್ನು ಹೇಳಿದರು. ಟೌನಹಾಲಲ್ಲಿ ‘ಭುವನ ಮನಮೋಹಿನಿ’ ಹೇಳಿದ್ದರು; ಇಲ್ಲಿ ‘ಸಿವುಲಿ ಪೂಲ್’ ಎಂಬ ಗೀತೆಯನ್ನು ಲಘುವಾಗಿ ಅದರ ಧಾಟಿ ತಿಳಿಯುವಂತೆ ಕುರುಕಿದರು. ಅಂದು ನಮಗೆ ಹುಡುಗತನದ ಉತ್ಸಾಹದಲ್ಲಿ ಉಂಟಾದ ಆನಂದ ವಯಸ್ಸು ಕಳೆದ ಹಾಗೆಲ್ಲ ನೆನಪಿನಲ್ಲಿ ಅಚ್ಚಳಿಯದೆ ನಿಂತು, ಇಳಿ ವಯಸ್ಸಿನ ಯೌವನ ಸೋರಿದ ಈಗಲೂ ಅಂತಹುದಕ್ಕೆ ಋಣಿಯಾಗಿ ಮಾಡಿದೆ. ಭೋಗ, ವಿಲಾಸ, ಸೌಂದರ್ಯ ಇವುಗಳ ಕಲ್ಪನೆಯೇ ವಿದ್ಯಾಥಿಗಳಿಗೆ ಆಗದೆ ಹೋದರೆ ಬಾಳು ಒಣಗುತ್ತದೆ. ಅದಕ್ಕೆ ಆಗಬೇಕಾದ ಶುಚಿ ಸಂಸ್ಕಾರಗಳಲ್ಲಿ ಕೆಲವದರ ಪರಿಚಯವೇ ಇಲ್ಲದಂತಾಗಿ ಮನಸ್ಸು ಬರಾಡಾಗುತ್ತದೆ. ಸಾವಿರ ವಿಲಾಸಗಳ ಸೌಭಾಗ್ಯ, ಸವಿ, ಸುವರ್ನತೆ ಬಾಳಿಗೆ ಪರಿಚಿತವಾಗಿರಬೇಕು”. ಹೀಗೆ ವಿ.ಸೀಯವರು ಆ ಸಂದರ್ಭ ಚಿತ್ರಣವನ್ನು ಮುಗಿಸುತ್ತಾರೆ.

‘ಕಾಲೇಜು ದಿನಗಳ’ ಎರಡು ಉಪಾಂತ್ಯ ಪ್ರಕರಣಗಳೂ ಹಾಗೆಯೇ. ಅವು ಕೇವಲ ಭಾವಗೀತ; ಅಲ್ಲಿರುವುದು ಪದ್ಯ ಗಂಧಿಯಾದ ಗದ್ಯ. ಅವುಗಳೊಂದಿಗೆ, ಠಾಕೂರ್ ಸಂದರ್ಶನಕ್ಕೆ ಪೀಠಿಕಾ ರೂಪದಲ್ಲಿರುವ ಮೈಸೂರು ನಗರ ವರ್ಣನೆಯನ್ನು ಓದಿಕೊಳ್ಳಬೇಕು. ಒಂದು ಕಾಲದ ಮೈಸೂರಿನ ಸೌಂದರ್ಯ, ಜನಜೀವನ, ರಸಿಕತೆಗಳೆಲ್ಲ ಒಟ್ಟಾಗಿ, ಸೊಗಸಾಗಿ ಕಣ್ಣಿಗೆ ಕಟ್ಟುತ್ತವೆ. ಮನಸ್ಸಿನ್ನು ತುಂಬಿಕೊಳ್ಳುತ್ತವೆ :

“ಮೈಸೂರಿನ ನೆನಪುಗಳು ಓ! ‘ಸಾಲದೊಂದು ದಿನ ಹೇಳಿ ಮುಗಿಸುವರೆ’ “ಎಂದು ಶ್ರೀಯವರು ಇನ್ನಾವಲ್ಲಿಯೊ ಬರೆದರು. ಒಂದು ದಿನವೇನು, ಇಷ್ಟು ದಿನ ಈವರೆಗೆ ಬರೆದಿದ್ದೇನೆ.

ಈಗ ಮೈಸೂರನ್ನು ನೋಡಿದರೆ ನಿಟ್ಟುಸಿರು ಬರುತ್ತದೆ. ಆ ಕಾಲದ ರಸ್ತೆಗಳ ಶುಚಿ, ಒಪ್ಪ, ಅವಕ್ಕೆ ದಿನವೂ ಸಲ್ಲಿಸುತ್ತಿದ್ದ ನೀರ ತಳಿ; ಆಗಿನ ಉಪವನ ವಿಹಾರಗಳ ದಿಟ್ಟ ಸ್ವಚ್ಛತೆ! ಮೂರೂ ಕೆರೆಗಳ ದಂಡೆಯಲ್ಲಿನ ಕಲ್ಲಪೀಠಗಳ ಹಾಸು; ಪ್ರತಿಯೊಂದರ ಹಿಂದೆ ಪಕ್ಕಗಳಲ್ಲಿ ಮರದ ಜಾಲರಿ ಚೌಕಟ್ಟು, ಅವುಗಳ ಮೇಲೆ ಹಬ್ಬಿಸಿದ ಲಕ್ಕೆ, ಹಾಲಿ, ಸುಗಂಧ ರಾಜ, ಹಳದಿ ಗಂಟೆಹೂ ಬಳ್ಳಿ; ಭಾಗ್‌ಗಳಲ್ಲಿ, ಊರ ಹೊರಗೆ ನೈದಿಲೆ, ತಾವರೆಕೊಳ; ಲಲಿತಾದ್ರಿಗೆ ದಾರಿ ಒಡೆಯುವ ಬೆಟ್ಟದ ತಪ್ಪಲಲ್ಲಿ ಪ್ರತಿಫಲಿಸುವ ಚಿತ್ರ ವಿಚಿತ್ರ ದೀಪಮಾಲೆ; ಕೆರೆಯ ಆಚೆ ದಂಡೆ ಸಾಲಾಗಿ ಸೂಜಿಮಲ್ಲಿಗೆ ಸಾಲಂತೆ ಕುಳ್ಳಿರುವ ಬಿಳಿಯ ನೀರು ಕಾಗೆ, ಕ್ರೌಂಚ ಬಲಾಕದಂಥವು; ಊರ ರಸ್ತೆಗಳ ಇಕ್ಕಡೆಯ ದೀಪತೋರಣ, ವಿಜಯದಶಮಿ ವರ್ಧಂತಿಗಳಲ್ಲಿ ಪಟ್ಟದ ಆನೆ ಕುದುರೆಗಳ ಮೇಲೆ, ಮಹಾರಾಜರ ಹಿಂದೆ, ಮುಂದೆ ವೈಭವದ ಮೆರವಣಿಗೆ; ಚಿರತೆಯ ಚರ್ಮದ ಅಲಂಕಾರ ಮಾಡಿದ ದಡಿ, ಆಸನ ಪಟ್ಟಿಕೆಗಳ ಮೇಲೆ ಕುಳಿತು ಕರಿಯ ಸಮವಸ್ತ್ರ ಧರಿಸಿದ, ಪಟ್ಟಿ ರುಮಾಲು ತೊಟ್ಟ, ಮೈಗಾವಲು ರಾವುತ ದಳ; ಪರಕಾಲ ಮಠದಲ್ಲಿ ದಿನಕ್ಕೆ ಆರು ಸಲವಾದರೂ ಕ್ಲುಪ್ತವಾಗಿ ನಗಾರಿ ನೌಬತ್ತು ಸೇವೆ, ಇಲ್ಲವೆ ಸುಸ್ವರವಾದ, ಬಾನೆತ್ತರ ಎಸೆವ ಓಲಗ – ಇವು ಅವಿಸ್ಮರಣೀಯ. ನೌಬತ್ತಿನ ಕೀಚು ದನಿ ಎಲ್ಲೋ ಅರಬ್ಬೀ ದೇಶದಲ್ಲಿ ಸಾಲೊಂಟೆಗಳ ಮೇಲೆ ನಡೆಯುವುದೆಂದು ವರ್ಣಿತವಾಗುವ ಕ್ಯಾರವಾನ್‌ಪ್ರಯಾಣಗಳಲ್ಲಿ ಶ್ರಮ ಕಳೆಯಲು ಬಾಜಿಸುವ ವಾದನವಿರಬೇಕು. ನಡುರಾತ್ರಿಯ ಮಂಪರದಲ್ಲೆಂಬಂತೆ, ಕನವರಿಸುವಂತೆ ಎರಡು ನಿಮಿಷ ಊದಿ ನಿಲ್ಲುವ ದೈವತ ನಿಷಾಧಗಳ ನಾದ ಅಲೌಕಿಕವಾದುದು. ರಾತ್ರಿ ಇನ್ನೇನು ಎಲ್ಲರೂ ಎಲ್ಲ ಮನೆಗಳಲ್ಲಿಯೂ ಮಲಗಿದರು ಎನ್ನುವ ಹೊತ್ತಿಗೆ ಸರಿಯಾಗಿ ನಲ್ಲರಿಗೊ ಅಭಿಸಾರಿಗಳಿಗೊ ಒದಗಲೆಂದಿರಬೇಕು, “ಜಾಜಿ ಉವ್ವ, ಮಲ್ಲಿಗೆ ಉವ್ವss….. ss…..; ಜಾಜಿ ಉವ್ವ, ಮಲ್ಲಿಗೆ ಉವ್ವ” ಎಂದು ಮಧ್ಯಮ ಸ್ವರದ ಮೆಲು ಕೂಗು; ರಸಿಕತೆಯ ವಾಡಿಕೆ ಬಲಿತ, ಊರಿದ ಊರು ಮೈಸೂರು.

ಪರಕಾಲ ಯತೀಂದ್ರರೆಂದೆ. ಅವರು ಅರಮನೆಯ ಗುರುಪೂಜೆಗೆ ಹೋಗುವ ಪಲ್ಲಕ್ಕಿ ಮರವಣಿಗೆ ಒತ್ತಟ್ಟಿಗಿರಲಿ, ಹುಣ್ಣಿಮೆಯಂದೊ ಕ್ಲುಪ್ತವಾದ ಮತ್ತಾವ ಬೇರೊಂದು ದಿನ ಕೇಶಸಂಸ್ಕಾರಕ್ಕೆ ನಿಷತ್‌ಬಾಗಿನ ಎದುರಿನ ಕೊಳಕ್ಕೆ ಮೇನೆಯಲ್ಲಿ ಹೋಗುವ ಕಾವಿ ವಿಲಾಸ. ಮಠದಲ್ಲಿಯೇ ಉತ್ಸವ ಕಾಲಗಳಲ್ಲಿ ನಡೆವ ತೇರು ದೀಪಸ್ತಂಭಗಳ ನೇರ್ಪಿನ ದೀಪೋತ್ಸವ, ಅಥವಾ ಕೃಷ್ಣಸ್ವಾಮಿಗೆ ನಡೆಸುವ ತೊಟ್ಟಿಲ ರತ್ನದ ತೊಟ್ಟಿಲ ಸೇವೆ – ನೋಡಲು ಎಷ್ಟು ಕಣ್ಣು ಸಾಕು! ನವರಾತ್ರಿಯ ಕಾಲದಲ್ಲಿ ಅಥವಾ ದೀಪಾವಳಿ, ವರ್ಧಂತಿ ಸಮಯದಲ್ಲಿ ‘Lakeview’ ಇಂದ ಹೊರಟು, ಪರಕಾಲ ಮಠದ ತಿರುವನ್ನು ತಿರುಗಿಕೊಂಡು ಅದೇ ರಸ್ತೆಯಿಂದ ಹಿಂದೆ ಮುಂದೆ ಬೆಳ್ಳಿಯ ಕೋಲವರು, ಚಾಮರ ಸೇವೆಯವರು ನಿಂತಿರಲು, ನಾಲ್ಕು ಕುದುರೆ ಸಾರೋಟಿನಲ್ಲಿ ದರಬಾರಿಗೆ ಹೋಗುತ್ತಿರುವಾಗ ದಿವಾನರ ದಿಬ್ಬಣ ಚಿತ್ರ…… ಗಾಡಿಗಳಲ್ಲಿ, ಕಾರುಗಳಲ್ಲಿ, ಕಾಲು ನಡಿಗೆಯಲ್ಲಿ, ಒಂಟಿಯಾಗಿ, ಸಣ್ಣ ಗುಂಪುಗಳಲ್ಲಿ ನಿಲುವಂತಾಗಿ ಧರಿಸಿ, ಜರತಾರಿಯ ತೂಗುಪಟ್ಟಿ ಉತ್ತರೀಯ ಹಿಂದೆ, ಮುಂದೆ, ತೋಳ ಮೇಲೆ ಆಡುತ್ತಿರಲು, ಕಿವಿಯ ಹತ್ತಕಡುಕು ಉಂಗುರ ಮಿರುಗಿಸುತ್ತ, ಇನ್ನೂ ಖಾಸಾಹಾರ ಕರ್ಚಿಹಾರಗಳನ್ನು ಕೊರಲಲ್ಲೇ ಹಾಕಿಕೊಂಡು ಊರ ತುಂಬ ತಾರಾಡುವ ದರ್ಬಾರಿಗಳ ಮೋಜು…… ಅರಮನೆಯ ಹೊರ ಅಂಗಳದಲ್ಲಿ ಗೋಪಾಲ ಕೃಷ್ಣಸ್ವಾಮಿ ಗುಡಿ ಪ್ರದೇಶದಲ್ಲಿ ನಡೆಯುತ್ತಿದ್ದ ಗೋಮಂಡಲದ ಅಲಂಕಾರ, ಇವನ್ನು ನೋಡಲು ಊರ ಚೆನ್ನಿಗರು, ಪಡ್ಡೆ ಹೆಣ್ಣು ಗಂಡು, ಸೇಬು ಕೀಳಲೆಂಬ ದುರ್ಜನ ತವಕದಲ್ಲಿ ದಿಡ್ಡಿ ಬಾಗಿಲುಗಳಲ್ಲಿ ಹುಮಸ್ಸಿನಿಂದ ನೂಕಿ ನುಗ್ಗಿ ದಾಟಿ ಹೋಗುವ ರಸಕೆಲೆತ, ಮದ, ಚೆಲ್ಲಾಟ, ಆ ಕಾಲದಲ್ಲಿ ಇನ್ನೂ ಯಗ್ಗಿಲ್ಲದೆ ಬಳಸಬಹುದಾಗಿದ್ದ ಹೊಲೆಯರೆಂಬ ಹೆಣ್ಣುಮಕ್ಕಳು ಮಿಂದು, ಉಟ್ಟು, ತೊಟ್ಟು ವೀಳೆಯದೆಲೆ ಮಕ್ಕರಿಗಳ ಮುಂದೆ ಎಲೆ ಕಟ್ಟುಗಳನ್ನು ಹರಡಿ ಕುಳಿತು “ಬುತ್ತಿ ಚಿಗುರು ಕೊನ್ನಿ, ವಳ್ಳಿ ಚಿಗುರು. ರತ್ನಿ ಚಿಗುರು ಕೊನ್ನಿ ಬುದ್ಧಿ, ಯಾಕೆ ಅಂಗೇ ಓದೀರಾ?” ಎಂದು ಕಣ್ಣು ಕೈ ಮಾಡಿ ಕರೆವ ಸರಸ; ಅದಕ್ಕೆ ಸರಿಯಾಗಿ ಒಲೆವ ಅವರ ಹರಳೋಲೆಯ, ಕೈ ಕಡಗದ, ಹಸಿರಂಗಿ ಅಥವಾ ಮಲ್ ಕುಪ್ಪಸದ ಓರಣ – ಎಷ್ಟು ಹುಡುಗರನ್ನು ಒಲಿಸುತ್ತಿರಲಿಲ್ಲ! ಹವಾ ಸೇವನೆಗಾಗಿ ಬೆಟ್ಟ ಹತ್ತಿ ಹೋದಿರೆನ್ನಿ: ಬೆಟ್ಟದ ಮೇಲಿನ ರಾಜ ರಸ್ತೆಗಳಿಗೆ ಓರೆಯಾಗಿ ಹಾಗೆ ತಿರುಗಿ ಹೀಗೆ ಬಳುಕಿ ಒಯ್ಯುವ ಸಣ್ಣ ಸೀಳು ರಸ್ತೆಗಳು ಚೊಕ್ಕಟವಾಗಿ ಗುಡಿಸಿರುತ್ತಿದ್ದವು! ಯಾವಾಗ ಮಾಸ್ವಾಮಿಯವರು ಚಿತ್ತೈಸುವರೊ ಎಂಬ ಎಚ್ಚರ ಅದನ್ನು ಸಾಧಿಸಿತ್ತು.

ಮೇಲೆ ಸೀಳು ದಾರಿ ತಿರುಗುವಲ್ಲಿ ತೆಳ್ಳಗೆ ಬೆಳೆದ ಮರದ ಸುತ್ತ ಹಾಕಿದ್ದ ಕಲ್ಲು ಬೆಂಚು; ನಡುವೆ ಬಣ್ಣ ಬಣ್ಣದ ಕಗ್ಗಲ್ಲನ್ನು ಗಾಜಿನಂತೆ ನುಣುಪು ಮಾಡಿ ಕಬೀರ್, ತ್ಯಾಗರಾಜ, ಪುರಂದರದಾಸ, ರೈದಾಸ ವಾಣಿಯನ್ನು ಬಂಗಾರದಕ್ಷರದಲ್ಲಿ ಕೆತ್ತಿಸಿ ಪ್ರಕಾಶಿಸಿದ ಕಲ್ಲರೆಗಳು. ನವಕಾಲದ ಆಟಗಳಾದ ಹಾಕಿ, ಫುಟ್‌ಬಾಲ್, ಟೆನ್ನಿಸ್, ಕ್ರಿಕೆಟ್ ಬೇಸರವಾಯಿತೊ ಊರೊಳಗೆ ನಾಡವರ ಕುಸ್ತಿ ಪ್ರಮೇಯಗಳು ಇದ್ದೇ ಇರುತ್ತಿದ್ದವು. ಜಟ್ಟಿ ತಿಮ್ಮ ನೆಲಕ್ಕೆ ಬಿದ್ದನೆಂದರೆ ಪೀಟ್‌ಮಾಡುವ ಗಂಡು ಯಾರು ಹುಟ್ಟಿದ್ದ ಭೂಮಂಡಲದಲ್ಲಿ! ಕಲ್ಲೂ ಅಲ್ಲ, ಕೀಕರ್‌ಸಿಂಗ್ ಅಲ್ಲ, ಗಾಮಾ ಕೈಯಲ್ಲಿ ಕೂಡ ಆಗದ ಸಾಹಸ! ಅವನು ಒಂದು ಉಡ. ಅಖಂಡವಾದ ಅವನ ಮೈಯಲ್ಲಿ ಯಾರ ಹಿಡಿಗೆ ಎಡೆ ಸಿಕ್ಕುತ್ತಿತ್ತು? ಕೊಪ್ಪಲ ಚಿಕ್ಕ, ಬಸವ ಇವರ ಗಂಡುಗಾಡಿ ಬೇರೆ ತರದ್ದು. ಚಿಕ್ಕನ ಮೈ ನೋಡಬೇಕು! ನಡುವಿನಿಂದ ಭುಜದವರೆಗೆ ನಾಗರ ಹಾವಿನ ಹೆಡೆಯಂತೆ ಒಂದು ಹದದಲ್ಲಿ ಕಟ್ಟಿದ ಮೈಹಸರ ಅವನದು. ಬಸವನ ಮುಸಿ ನಗೆ, ಲಲಿತ ವಿಲಾಸ, ದೃಢ ನಿಲುವು, ಶ್ವಾಸ ಯಾವ ದೇಶದ ವಸ್ತಾದಿಯನ್ನೂ ಲೆಕ್ಕಿಸದ ಠೀವಿಯದು. ಆ ಕಾಲದಲ್ಲಿ ಬಹುಮಂದಿ ಕಾಲೇಜ್ ವಿದ್ಯಾರ್ಥಿಗಳು, ತರುಣರು ಮೈಸೂರಿನಲ್ಲಿ ಗರಡಿ ಮನೆಗಳಿಗೆ ಹೋಗುತ್ತಿದ್ದರು. ಅವರ ದಟ್ಟ ಚಲ್ಲಟಗಳ ಷೋಕು ನೋಡುವಂಥದು. ಉಸ್ತಾದರನ್ನು ಅನುಸರಿಸಿ ಇತರರು ಕಟ್ಟುವ ದಟ್ಟಿ, ನರಪೇತರು ನಡೆವ ಹೊಳ್ಳುವಸ್ತಾದಿ ವಿಲಾಸ, ಮಳವಳ್ಳಿ ಚಡಾವು, ಕೊಳ್ಳೆಗಾಲದ ವಸ್ತ್ರ! ಯಾವಲ್ಲಿ ನೋಡಿ: ರಂಗು, ರಂಗು, ರಂಗು ಎಲ್ಲೆಲ್ಲಿಯೂ! ದಟ್ಟವಾಗಿ ಒಂದರ ಮೇಲೊಂದು ನುಗ್ಗಿಬರುತ್ತವೆ ನೆನಪುಗಳು….. ಹೂವೆ, ಗಂಧವೆ, ಚಂದವೆ? ಆಟವೆ, ಕೇಕೆಯೆ, ಗಾನವೆ? ಕೈ ಚಿಟಿಕೆ ಹೊಡೆಯುತ್ತ ತಾಳದಲ್ಲಿ ಅನಾಮಿಕಕ್ಕೆ ಬಂದು ಸ್ವರನ್ನು ಕುರುಕುತ್ತ, ರಾಗವನ್ನೊ ಪಲ್ಲವಿಯನ್ನೊ ಹೇಳಿಕೊಳ್ಳುತ್ತ ನಡೆವ ಜನವೇ ಎಲ್ಲೆಲ್ಲಿಯೂ. ಆ ಯುಗ-ಅಲಸರದೆನ್ನುವಿರ? – ಮುಗಿದುಹೋಯಿತು. ಅದು ವಿವಿಧ ರಾಗರಂಜನೆಗಳ ಪ್ರಪಂಚ. ಸಕಲರ ಸ್ವಾತಂತ್ಯ್ರದ, ಸಮತೆಯ ಗದ್ಯತೆ ಬಂದುಬಿಟ್ಟಿದೆ, ಮೈಸೂರಲ್ಲಿಯೂ ಬೇರೆಲ್ಲಿನಂತೆ ಇಂದು. ನಿರಾಕಾರ; ನಿರಾನಂದ…..

ಪುಸ್ತಕದಲ್ಲಿ ವಿ.ಸೀಯವರ ಓದು, ಅವರ ಪಠ್ಯ ವಿಷಯಗಳು, ತರಗತಿಯ ಪಾಠಗಳು, ಅಧ್ಯಾಪಕರು ಕೇಳುವ ಪ್ರಶ್ನೆಗಳು ವಿದ್ಯಾರ್ಥಿಗಳ, ಉತ್ತರಗಳು ಎದುರಾಗುವ ಸಮಸ್ಯೆಗಳು, ಅವುಗಳನ್ನು ಪಾರಾಗುವ ಬಗೆಗಳು, ಒದಗಿ ಬಂದ ಕೆಲವು ವಿಲಕ್ಷಣ ಪ್ರಸಂಗಗಳು, ವರ್ಷಾಂತ್ಯದ ಪರೀಕ್ಷೆಗಳು, ಮತ್ತು ಅವುಗಳಲ್ಲಿ ತೇರಿಕೊಂಡು ಕಾಲೇಜ್ ಜೀವನದಲ್ಲಿ ಕೊನೆ ಮುಟ್ಟಿದ ಒಂದು ಸಂತೋಷ, ಹಾಗೆಯೇ ಮುಂದಿನದನ್ನು ಎಣಿಸಿದಾಗ ಉಂಟಾಗುವ ಉದ್ವೇಗ-ಇವೆಲ್ಲವನ್ನು ಅವರು ಬಿಡಿಬಿಡಿಯಾಗಿ ಹೇಳಿದ್ದಾರೆ. ‘ಕಾಲೇಜ್ ದಿನಗಳು’ ಎಂದ ಮೇಲೆ ಅವೆಲ್ಲವನ್ನು ಹೇಳಲೂ ಬೇಕು. ವಿ.ಸೀಯವರು ಹೇಳಬೇಕಾದುದ್ದನ್ನು ಚೆನ್ನಾಗಿ ಹೇಳಿದ್ದಾರೆ. ತಮ್ಮ ಶೈಕ್ಷಣಿಕ ಜೀವನಯಾತ್ರೆಯಲ್ಲಿ ವಾಚಕರನ್ನು ಸಹಯಾತ್ರಿಕರನ್ನಾಗಿ ಮಾಡಿದ್ದಾರೆ.

ಸುವಿದ್ಯಾಲಕ್ಷಣ, ಅದರ ಪರಿಣಾಮಗಳ ಸುಂದರ ವರ್ಣನೆಯೊಂದಿಗೆ ಕಾಲೇಜ್ ಜೀವನವನ್ನು ಕುರಿತ ಈ ಕಥನವನ್ನು ವಿ.ಸೀಯವರು ಉಪಸಂಹರಿಸಿದ್ದಾರೆ. ಶಿಕ್ಷಣವೆಂದರೆ ತರಗತಿಯಲ್ಲಿ ಗೊಂಬೆಗಳಂತೆ ಕುಳಿತು ಉಸಿರಾಡದೆ ಪಾಠ ಕೇಳುವುದು, ಕೇಳಿದ ಪಾಠವನ್ನು ಉರು ಹೊಡೆಯುವುದು, ಉರು ಹೊಡೆದದ್ದನ್ನು ಪರೀಕ್ಷಾಂಗಣವನ್ನು ಕಕ್ಕುವುದು ಅಷ್ಟೇ ಅಲ್ಲ. ಹತ್ತು ಬಗೆಯ ಅನುಭವಗಳನ್ನು ಉಮಡು ಅರಗಿಸಿ ಬದುಕನ್ನು ತುಂಬಿಕೊಳ್ಳುವುದೂ ಗಟ್ಟಿಗೊಳಿಸುವುದೂ ಅಷ್ಟೇ ಅಥವಾ ಅದಕ್ಕಿಂತ ಹೆಚ್ಚು ಮುಖ್ಯವಾದದ್ದು. ವಿ.ಸೀಯವರ ವ್ಯಕ್ತಿತ್ವ ಹಾಗೆ ರೂಪುಗೊಂಡಿತು. ಆರ್ಥಿಕ ಅನುಕೂಲ್ಯವಿರದಿದ್ದರೂ ಅನುಭವ ಸಂಪತ್ತಿನಿಂದ ಹೃದಯ ಶ್ರೀಮಂತರಾದರು. “ವಿದ್ಯೆ ಓದುಗಳು ಪಾಂಡಿತ್ಯವೊಂದನ್ನೇ ಅಲ್ಲ ನಿರ್ಮಾಣ ಮಾಡುವುದು, ಸ್ವತಂತ್ರನಾದ ಒಬ್ಬೊಬ್ಬ ಮನುಷ್ಯನನ್ನು. ಇದು ಜೀವಶಿಲ್ಪ, ದೇವಕಲ್ಪ…. ನಮ್ಮ ನಡೆಯಲ್ಲಿ ನಾವು ಕಾಣಿಸುವ ಧೈರ್ಯ, ಸ್ಥೈರ್ಯ, ಉತ್ಸಾಹಗಳಲ್ಲಿ ನಮ್ಮ ವಿದ್ಯೆ, ಶಿಕ್ಷಣ, ವ್ಯಾಸಂಗ ಫಲಿಸಬೇಕು” ಎಂಬುದು ವಿ.ಸೀಯವರ ಆಶಯ. ‘ಸಾ ವಿದ್ಯಾ ಯಾ ವಿಮುಕ್ತಯೇ’ ಎಂಬ ವೇದಾಂತದ ಸೂಕ್ತಿಯನ್ನೂ, ‘ಧರ್ಮಜ್ಞಃ ಯದಿ ಧರ್ಮಿಷ್ಠೋ ಧರ್ಮಂ ಚರಿತುಮಿಚ್ಛಸಿ’ ಎಂಬ ವಾಲ್ಮೀಕಿಯ ಶ್ಲೋಕವನ್ನೂ ಸ್ಮರಿಸುವ ವಿ.ಸೀಯವರು ವಿಲಿಯಂ ಹೆನ್ಲೆ ಎಂಬ ಆಂಗ್ಲ ಸುಪ್ರಸಿದ್ದ ಕವನವನ್ನು ಪಠ್ಯದಲ್ಲೂ ಅದರ ಅನುವಾದನ್ನು ಅನುಬಂಧವಾಗಿರಲೂ ಕಾಣಿಸಿದ್ದಾರೆ. ‘ಆತ್ಮಗೀತೆ’ ಎಂಬ ಶೀರ್ಷಿಕದ ಆ ಕವಿತೆ ವಿ.ಸೀಯವರದೇ ‘ಅಭಿ’ ಎಂಬುವರ ಸಾರವನ್ನೇ ಮತ್ತೊಮ್ಮೆ ಸಾಕ್ಷಾತ್ಕರಿಸುತ್ತದೆ.

ವಿ.ಸೀಯವರು ‘ಗದ್ಯಶಿಲ್ಪಿ’ ಎಂಬುದು ಕೇವಲ ಯಥಾರ್ಥವಾದ Truism ಅವರ – ‘ಕಾಲೇಜ್ ದಿನಗಳು’ ಅದನ್ನು ಪುಷ್ಟೀಕರಿಸುತ್ತದೆ. ಅವರದೇ ‘ಪಂಪಾಯಾತ್ರೆಯನ್ನು ಸರಿಗಟ್ಟು’ವ ಭಾಷಾಶೈಲಿಯನ್ನು ‘ಕಾಲೇಜ್ ದಿನಗಳ’ಲ್ಲೂ ಕಂಡು, ಓದಿ, ಸುಖಿಸುತ್ತೇನೆ. ಎಪ್ಪತ್ತು ಎಂಬತ್ತು ವರ್ಷಗಳ ಹಿಂದಣ ಕಾಲೇಜ್ ಜೀವನವನ್ನು ಕಟ್ಟಿಕೊಂಡು ಮಾಡುವುದೇನು ಎಂಬುವರೂ ವಿ.ಸೀಯವರ ವಿವರಣ ಕುಶಲತೆಗಾಗಿ, ಭಾಷಾ ಸೌಂದರ್ಯಕ್ಕಾಗಿ ಮತ್ತು ನಿರೂಪಿತವಾದ ಸಮೃದ್ಧ ಜೀವನಾನುಭವಕ್ಕಾಗಿ ಅವಶ್ಯ ಓದಬೇಕಾದ ಪುಸ್ತಕ ‘ಕಾಲೇಜು ದಿನಗಳು’,

ಮುಂಬಯಿ ವಾಸ

‘ಕಾಲೇಜು ದಿನಗಳು’ ಪುಸ್ತಕ ರೂಪದಲ್ಲಿ ಮುದ್ರಣಗೊಂಡ ಐದು ವರ್ಷಗಳ ಅನಂತರ ‘ಮುಂಬಯಿ ವಾಸ : ನೆನಪುಗಳು’ ಪ್ರಕಟವಾಯಿತು. ಅದು ಒಂದು ವಿಧದಲ್ಲಿ ಸ್ಮೃತಿ ಸಂಚಯ; ಮತ್ತೊಂದು ಅರ್ಥದಲ್ಲಿ ಪ್ರವಾಸಾನುಭವ; ಮಗದೊದು ರೀತಿಯಲ್ಲಿ ‘ಕಾಲೇಜ್ ದಿನಗಳ’ ವಿಸ್ತರಣ. ಎಂದರೆ ‘ಮುಂಬಯಿಯ ವಾಸ’ದಲ್ಲಿ ವಿವೃತವಾಗಿರುವ ಕಾಲಘಟ್ಟವೂ ೧೯೨೦ರ ದಶಕಕ್ಕೆ ಸೇರಿದುದಾಗಿದೆ. ಆದರೆ ಅದರ ಲೇಖನ ಪ್ರಕಟಣೆಯಗಳೆಲ್ಲ ನಡೆದುದು ೧೯೭೬ರಲ್ಲಿ, ಎಂದರೆ ಮುಂಬಯಿ ವಾಸಕ್ಕೂ ಪುಸ್ತಕ ಪ್ರಕಟನೆಯ ವರ್ಷಕ್ಕೂ ಮಧ್ಯೇ ಐವತ್ತು ವರ್ಷಗಳಿಗೂ ಹೆಚ್ಚಿನ ಅಂತರವಿದೆ. ಕಾಲೇಜ್ ದಿನಗಳಂತೆಯೇ ವಿ.ಸೀಯವರು ಈ ಪುಸ್ತಕವನ್ನೂ ನೆನಪಿನ ಬಲದಿಂದಲೇ ಬರೆದುದಾಗಿದೆ. ಆದರೆ ಆ ನೆನಪಿನ ಹುರಿ ಎಲ್ಲೂ ಎಲೆಬಿಡದೆ ಗಟ್ಟಿಯಾಗಿಯೇ ಇರುವುದರಿಂದ ಕಥನದ ಅಧಿಕೃತತೆಗೆ ಎಲ್ಲೂ ಚ್ಯುತಿ ಬಂದಿಲ್ಲ; ಅದು ಸಂದೇಹಾಸ್ಪದವೆಂದೋ, ಸತ್ಯದೂರವೆಂದೋ ತೋರುವುದಿಲ್ಲ.

ವಿ.ಸೀಯವರು ಪ್ರೌಢಶಾಲಾ ವಿದ್ಯಾರ್ಥಿದಶೆಯಲ್ಲೇ ಬೆಂಗಳೂರಲ್ಲಿ ಮಾಸ್ತರಿಕೆ ಮಾಡಿದ್ದುಂಟು. ಮುಂದೆ, ೧೯೨೨ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ ಪದವೀಧರರಾದ ಕೂಡಲೇ ಅಲ್ಲಿಯೇ ಶಾರದಾ ವಿಲಾಸ ಪ್ರೌಢಶಾಲೆಯಲ್ಲೂ ಕೆಲವು ವರ್ಷ ಅಧ್ಯಾಪಕರಾಗಿಯೂ ಇದ್ದರು. ಆ ಸಮಯದಲ್ಲೇ ಮುಂಬಯಿಗೆ ಹೋಗಿ ನ್ಯಾಯಶಾಸ್ತ್ರ ಓದಬೇಕೆಂಬ ಹಂಬಲ ಅವರಿಗಾಯಿತು. ಖರ್ಚಿಗೆ ಒಂದು ದಾರಿ ಬೇಕಲ್ಲ, ಅದಕ್ಕಾಗಿ ಒಂದು ನೌಕರಿಯನ್ನೂ ಹಿಡಿದರು. ಅದು ಗಳಿಕೆ ಮತ್ತು ಕಲಿಕೆ ಎಂಬ ಬಗೆಯದು. ಆ ನೌಕರಿ ಮತ್ತು ಓದುಗಳ ಅವಧಿ ಕೇವಲ ಎಂಟೇ ತಿಂಗಳು. ಮತ್ತೆ ಕಾರಣಾಂತರದಿಂದ, ಮೈಸೂರಿಗೇ-ಶಾರದಾ ವಿಲಾಸದ ಅಧ್ಯಾಪನಕ್ಕೇ ಹಿಂದಿರುಗಿದರು. ಹೀಗೆ ಮುಂಬಯಿ ವಾಸ ಎಂಟೇ ತಿಂಗಳ ಅಲ್ಪಾವಧಿಯದ್ದಾಗಿದ್ದರೂ ವಿ.ಸೀಯವರ ಅನುಭವ, ಅಭಿಪ್ರಾಯಗಳು ಪುಸ್ತಕದಲ್ಲಿ ರೋಚಕವಾಗಿ ಚಿತ್ರಿತವಾಗಿವೆ. ಮುಂಬಯಿ ಎಂಬುದು ಈಗ ಹೇಗೆಯೋ ಆಗಲೂ ಹಾಗಯೇ ಒಂದು ಜನ ಸಮುದ್ರ. ಎಷ್ಟೇ ತೊರೆಗಳು ಬಂದರೂ ತನನ ಒಡಲಲ್ಲ ಕರಗಿಸಿಕೊಳ್ಳುವಷ್ಟು ಆಗಾಧ, ಅಪಾರ, ಅಂತಹ ಕಡಲಲ್ಲಿ ತಾವೊಂದು ಹನಿಯಾಗಿ ಇದ್ದುದನ್ನು ವಿ.ಸೀಯವರು ಇಲ್ಲಿ ಬಿಡಿಸಿ ಬಿತ್ತರಿಸಿದ್ದಾರೆ. ಹಾಗೆ ಬಿಡಿಸುವಾಗ ಆ ಹನಿಯಲ್ಲೂ ಕಾಮನ ಬಿಲ್ಲಿನ ಬಣ್ಣ ಬೆಡಗುಗಳನ್ನು ಮೂಡಿಸಿದ್ದಾರೆ.

‘ಕಾಲೇಜು ದಿನಗಳು’ ಮತ್ತು ‘ಮುಂಬಯಿ ವಾಸ’ಗಳಲ್ಲಿ ಕೆಲವು ಸಮಾನಾಂಶಗಳಿವೆ;  ಕೆಲವು ಭಿನ್ನಾಂಶಗಳೂ ಇವೆ. ಸಮಾನಾಂಶಗಳೆಂದರೆ ವಿ.ಸೀಯವರ ಸ್ಮರಣ, ಗ್ರಹಣ ಮತ್ತು ವಿವರಣ ಶಕ್ತಿ. ಭಿನ್ನಾಂಶಗಳೆಂದರೆ ಕಾಲೇಜ್ ದಿನಗಳಲ್ಲಿ ಆರ್ಥಿಕ ಸಮಸ್ಯೆಯೊಂದನ್ನು ಬಿಟ್ಟರೆ ಮಿಕ್ಕಂತೆ ಸಂತೋಷ ಸಂಭ್ರಮ; ವಿದ್ಯಾರ್ಥಿ ಜೀವನದಲ್ಲಿ ದಿನ ಸರಿದದ್ದೇ ತಿಳಿಯುವುದಿಲ್ಲ. ಭವಿಷ್ಯತ್ತಿನ ಚಿಂತೆ ಆ ಹೊತ್ತಿಗೆ ಇಲ್ಲ. ಮುಂಬಯಿ ವಾಸದಲ್ಲಿ ಉದ್ವೇಗ, ಚಿಂತೆ, ಅನ್ನದ ಪ್ರಶ್ನೆಯೇ ಮುಖ್ಯ, ಕಾಲೇಜ್ ದಿನಗಳಲ್ಲಿ ಚಿತ್ರಿತವಾಗಿರುವುದು ಉದ್ಯಾನನಗರಿ ಮೈಸೂರಿನ ಸಾಂಸ್ಕೃತಿಕ ಪರಿಸರ, ಮಹಾರಾಜ ಕಾಲೇಜಿನ ಶೈಕ್ಷಣಿಕ ಆವರಣ; ಮುಂಬಯಿ ವಾಸದಲ್ಲಿ ಮಹಾನಗರಿಯೊಂದರ ಸಂಕೀರ್ಣ, ಯಾಂತ್ರಿಕ ಜೀವನ; ಉದ್ಯೋಗ ಕ್ಷೇತ್ರವಾಗಿದ್ದ ಕರೆನ್ಸಿ ಆಫೀಸಿನಲ್ಲಿ ಗಡಿಯಾರದ ಮುಳ್ಳಿನಂತಹ ದುಡಿಮೆ. ಒಟ್ಟಿನಲ್ಲಿ ಕಾಳಿದಾಸನ ‘ಶಾಕುಂತಲ’ದಲ್ಲಿ ಬರುವಂತೆ ಒಂದು ‘ಶಾಂತಮಿದಂ ಆಶ್ರಮ ಪದಂ’ ಎಂಬಂತಿದ್ದರೆ ಮತ್ತೊಂದು ‘ಜನಾಕೀರ್ಣ ಮನ್ಸೇ ಹುತವಹ ಪರೀತಂ ಗೃಹಮಿವ’ ಎಂಬಂತೆ ಗುಲ್ಲು ಗದ್ದಲಗಳಿಂದ ಕೂಡಿದ್ದು. ಆದರೆ ಎರಡನೆಯದರಲ್ಲೂ ಚೆಲುವಿನ ನೆಲೆಗಳನ್ನೂ ಒಲವಿನ ಬೆಲೆಗಳನ್ನೂ ವಿ.ಸೀಯವರು ಗುರುತಿಸಿದ್ದಾರೆ.

ವಿ.ಸೀಯವರು ತಮ್ಮ ವಿದ್ಯಾರ್ಹತೆ ಮತ್ತು ವಿಷಯ ತಜ್ಞತೆಗಳನ್ನು ಕುರಿತಾದ ಸಾಕ್ಷ್ಯ ಪತ್ರಗಳೊಂದಿಗೆ ಮುಂಬಯಿಗೆ ಹೊರಟವರು, ಕೊಂಕಣ ಸುತ್ತಿ ಮೈಲಾರಕ್ಕೆ ಹೋದಂತೆ, ಮೊದಲು ಹೋದುದು ಕಲ್ಕತ್ತಾಕ್ಕೆ, ಗುರು ಡಾ. ರಾಧಾಕೃಷ್ಣನ್ ದರ್ಶನಕ್ಕೆ; ಅಲ್ಲಿಂದ ಕಾಶಿಗೆ-ಅಕ್ಕನನ್ನು ನೋಡುವುದಕ್ಕೆ, ಮುಂದೆ ಮುಂಬಯಿಗೆ. ಇದು ಅವರ ಪ್ರಯಾಣ ಮಾರ್ಗ. ಆದರೆ ಕಥನ ಮುಂಬಯಿಂದಲೇ ಪ್ರಾರಂಭವಾಗುತ್ತದೆ. -‘ಫ್ಯಾಶ್ ಬ್ಲಾಕ್’ ತಂತ್ರದಂತೆ.

ಮುಂಬಯಿ ವಾಸದ ಮೊದಲ ಕೆಲವು ದಿನಗಳನ್ನು ವಿ.ಸೀಯವರು ಕೆಲಸದ ಹುಡುಕಾಟ, ಅದಕ್ಕಾಗಿ ಅಲೆದಾಟಗಳಲ್ಲಿ ಕಳೆದರು. ಅದರಿಂದ ಒಂದು ಲಾಭವಾಯಿತು. ಅದೆಂದರೆ ಮುಂಬಯಿಯ ಹಾದಿ ಬೀದಿಗಳ, ಮನೆ ಮಹಡಿಗಳ, ಅಂಗಡಿ ಮಾರುಕಟ್ಟೆಗಳ ಪರಿಚಯ. ಈ ಸುತ್ತಾಟದಲ್ಲಿ ಅವರು ಸೋತರು; ಕೈಯಲ್ಲಿದ್ದ ಕಾಸು ಕರಗುತ್ತ ಬಂತು. ಕೈಚೆಲ್ಲಿ ಇನ್ನೇನು ಬಂದ ದಾರಿಗೆ ಸುಂಕವಿಲ್ಲವೆಂದು ಮುಂಬಯಿಗೆ ಬೆನ್ನಿಕ್ಕುವುದೋ ಎಂದು ಯೋಚಿಸಿದರು. ಹಾಗೆ ನಿರಾಶೆಯ ಕಾವಳ ಕವಿದಾಗ ಅದೃಷ್ಟ ಒದ್ದುಕೊಂಡು ಬರುತ್ತದೆ. ಅನಿರೀಕ್ಷಿತವಾಗಿ, ಅನಾಯಾಸವಾಗಿ ‘ಡೆಪ್ಯೂಟಿ ಕಂಟ್ರೋಲರ್ ಆಫ್ ಕರೆನ್ಸಿ’ ಕಛೇರಿಯಲ್ಲಿ ಒಂದು ಉದ್ಯೋಗ ಲಭಿಸಿತು. ತಿಂಗಳಿಗೆ ನೂರು ರೂಪಾಯಿ ಪಗಾರ. ಆ ಕಾಲಕ್ಕೆ ಮಿಕ್ಕವರ ಹುಬ್ಬು ಮೇಲೇರುವಂತಹ, ದೊಡ್ಡ ಮೊತ್ತ ಅದಾಗಿತ್ತು. ಕೆಲಸ ಭಾರವಾದದ್ದೇನೂ ಆಗಿರಲಿಲ್ಲ;- ‘ಇಂದ’ ಮತ್ತು ‘ಗೆ’ ದಾಖಲೆಯಲ್ಲಿ ಕಚೇರಿಗೆ ಬರುವ ಕಚೇರಿಯಿಂದ ಹೋಗುವ ಪತ್ರ ವಿವರಗಳನ್ನು ನಮೂದಿಸುವುದಷ್ಟೇ ಆಗಿತ್ತು.

ಮುಂಬಯಿಯಲ್ಲಿ ಇದ್ದಷ್ಟು ಕಾಲ ವಿ.ಸೀಯವರು ಹೊಟೆಲಲ್ಲಿ, ಮತ್ತೆ ತಮ್ಮೂರವರ ಜತೆಯಲ್ಲಿ, ಆಮೇಲೆ ಹಿತವಂದಿಗರೊಂದಿಗೆ ಗಂಡು ಬಿಡಾರದಲ್ಲಿ ದಿನ ಕಳೆದರು. ಕಚೇರಿ ಕೆಲಸದೊಂದಿಗೇ ‘ಲಾ ಸ್ಕೂಲ್’ (ಇದು ಆ ಕಾಲದ ಪ್ರಯೋಗ)ನಲ್ಲಿ ನ್ಯಾಯಶಾಸ್ತ್ರದ ಓದಿಗಾಗಿ ಸೇರ್ಪಡೆಯಾದರು. ಸಮಯ ಸರಿದಂತೆ ಮುಂಬಯಿವಾಸ ಅವರ ಪ್ರವೃತ್ತಿಗೆ ಒಗ್ಗಲಿಲ್ಲ, ಆಹಾರ ಅರುಚಿ, ಪರಿಸರ ಅಹಿತಕರ ಎನಿಸಿತು. ಆರೋಗ್ಯ ಕೆಟ್ಟಿತು. ರಜಾ ಹಾಕಿ ನೇರವಾಗಿ ಊರಿಗೆ ಬಂದರು. ಹಾಗೆ ಬಂದವರು ಮುಂಬಯಿಯ ಕರೆನ್ಸಿ ಕಚೇರಿಗೆ ತ್ಯಾಗ ಪತ್ರವನ್ನು ಬರೆದು ಕಳುಹಿಸಿದರು. ಹೀಗೆ ಮುಂಬಯಿ ವಾಸ ಮುಗಿಯಿತು. ಆದರೆ ವಿಶ್ವಾಸ ಸ್ನೇಹಗಳಿಂದ ನಡೆಯಿಸಿಕೊಂಡ ಕಚೇರಿ ಅಧಿಕಾರಿಗಳಿಗೆ, ಸಹೋದ್ಯೋಗಿಗಳಿಗೆ ತಿಳಿಸಿ, ಒಪ್ಪಿಗೆ ಪಡೆದು ಬರಲಿಲ್ಲವಲ್ಲಾ ಎಂಬ ಕೊರಗು ವಿ.ಸೀಯವರಲ್ಲಿ ಉಳಿಯಿತು. ಹಾಗಿದ್ದರೂ ಕಾಲಾಂತರದಲ್ಲಿದ್ದಯೇ ಆದರೂ ಕನ್ನಡ ಸಾಹಿತ್ಯಕ್ಕೆ ಲಾಭವಾಯಿತು: ಅದೆಂದರೆ ಮುಂಬಯಿ ವಾಸಾಮಭವದ ಕಥನ.

ಸರಸ ಕಳೆದ ಶತಮಾನದ ಪ್ರಥಮ ಪಾದದಲ್ಲೇ ಮುಂಬಯಿ ಮಹಾನಗರ -Metropolis ಎನಿಸಿತ್ತು. ಈಗ ಅದು ಇನ್ನಷ್ಟು ಬೃಹತ್ತಾಗಿ ಸಂಕೀರ್ಣವಾಗಿ ಬೆಳೆದಿದೆ. ೧೯೬೫ರಲ್ಲಿ ವಿ.ಸೀಯವರು ಮುಂಬಯಿಗೆ ಹೋದಾಗ ಅದು ಹೇಗಿತ್ತು ಎಂಬ ಪ್ರಸ್ತಾವ ಈ ಪುಸ್ತಕದಲ್ಲಿ ಒಂದು ಕಡೆ ಬಂದಿದೆ. ಆಗಲೇ ಅದು ಭರತಖಂಡದ ಇತರ ನಗರಗಳಿಗಿಂತ ವಿಶಿಷ್ಟವಾಗಿತ್ತು. ಹಾಗಿದ್ದರೂ ವಿ.ಸೀಯವರು ಆ ಜನಾರಣ್ಯದಲ್ಲಿ ದಾರಿ ತಪ್ಪಲಿಲ್ಲ. ಆ ಜನಸಮುದ್ರದಲ್ಲಿ ಕರಗಲಿಲ್ಲ; ಅದರಿಂದ ಹೊರಬಂದರು. ಹಾಗೆ ಹೊರಬಂದದ್ದರಿಂದಲೇ ಈ ಪುಸ್ತಕ ಬರೆಯಲು ಸಾಧ್ಯವೂ ಆಯಿತು!

ವಿ.ಸೀಯವರು ಉದ್ಯೋಗದಲ್ಲಿದ್ದ ಕಚೇರಿ ಜೀವನ ಈ ಪುಸ್ತದಲ್ಲಿ ಮುಖ್ಯಭಾಗ. ಕಚೇರಿಯ ಅಧಿಕಾರಿಗಳು, ಸಹಯೋಗಿಗಳು ಮತ್ತು ಸಹಕಾರಿಗಳು; ಅವರಲ್ಲಿ ಉಪಕಾರಿಗಳು, ಮತ್ಸರಿಗಳು ಮತ್ತು ನಿರಾಸಕ್ತರು, ಸಹೃದಯಿಗಳು ಮತ್ತು ವಿಘ್ನ ಸಂತೋಷಗಳು – ಈ ಎಲ್ಲ ಬಗೆಯ ಜನರನ್ನೂ ಕಾಣುತ್ತೇವೆ. ಪುಸ್ತಕದಲ್ಲಿ ಅಲ್ಲಲ್ಲಿ ಊಟ ಉಪಾಹಾರಗಳ ವರ್ಣನೆಯೂ ಧಾರಾಳವಾಗಿಯೇ ಇವೆ. ಊಟ ತಿಂಡಿಗಳ ವಿಷಯದಲ್ಲಿ ವಿ.ಸೀಯವರ ರುಚಿ ಲೋಕ ಪ್ರಸಿದ್ಧ. ಯಾವುದೋ ಹೋಟೇಲಿನಲ್ಲಿ ತಿಂದ ತಿಂಡಿ, ಕುಡಿದ ಬಾದಾಮಿ ಹಾಲು, ತಮ್ಮ ಗಂಡುಬಿಡಾರದಲ್ಲಿ ಮಾಡಿದ ಕೈಯಡುಗೆಗಳ ವರ್ಣನೆಗಳೆಲ್ಲ ರುಚಿ ರುಚಿಯಾಗಿಯೇ ಇವೆ. ಹಾಗೆಯೇ ಅವಕಾಶ ಆದಾಗಲೆಲ್ಲ ವಿ.ಸೀಯವರು ಮುಂಬಯಿಯ ‘ಅಪೆರಾ ಹೌಸಿ’ನಲ್ಲಿ ನಡೆಯುತ್ತಿದ್ದ ನಾಟಕ ಪ್ರದರ್ಶನಗಳಿಗೂ ಹೋಗಿ, ಪಟ್ಟ ಸಂತೋಷಗಳನ್ನೂ ವಿವರಿಸಿದ್ದಾರೆ. ಮುಂಬಯಿ ವಾಸಿಗಳ ಭಾಷಾ ವೈವಿಧ್ಯವನ್ನು, ವೇಷಭೂಷಣಗಳ ವೈಚಿತ್ಯ್ರವನ್ನು ಮತ್ತು ಸಂಸ್ಕೃತಿ ವೈಶಿಷ್ಟ್ಯವನ್ನು ಅಲ್ಲಲ್ಲಿ ಕಾಣಿಸಿದ್ದಾರೆ. ವಿ.ಸೀಯವರಿಗೆ ಪ್ರಿಯವಾದ ಸಮುದ್ರ ವರ್ಣನೆ, ಮುಂಬಯಿಯ ವರ್ಷ ವೈಭವಗಳಿಗೂ ಪುಸ್ತಕದಲ್ಲಿ ಯುಕ್ತ ಅವಕಾಶಗಳಿವೆ.

ಮನುಷ್ಯ ಸ್ವಭಾವ ಸಂಬಂಧಗಳ ಪ್ರಸ್ತಾವ ಪುಸ್ತಕದಲ್ಲಿ ಅಲ್ಲಲ್ಲಿ ಬಂದಿವೆ. ಸಹ ಮಾನವನ ಸುಖದಲ್ಲಿ ಭಾಗಿಯಾಗಿ ಅದನ್ನು ಹಿಗ್ಗಿಸುವುದು, ದುಃಖದಲ್ಲಿ ಪಾಲ್ಗೊಂಡು ಅದನ್ನು ಕುಗ್ಗಿಸುವುದು, ನಿರುತ್ಸಾಹ ಸಂದರ್ಭದಲ್ಲಿ ಉತ್ತೇಜನದ ಮಾತನ್ನು ಆಡುವುದು, ಶ್ರೇಯೋಭಿವೃದ್ಧಿಯನ್ನು ಕಂಡು ಸಂತೋಷ ಪಡುವುದು, ಅಥವಾ ಇವೆಲ್ಲಕ್ಕೂ ವಿರುದ್ಧವಾಗಿ ಕಾರಣವೋ ನಿಷ್ಕಾರಣವೋ ಮತ್ಸರವೋ ವೈಮನಸ್ಸೋ ಏನೇ ಇರಲಿ ಪರನಿಂದೆ ಪರಪೀಡನೆಯಲ್ಲೇ ಸಂತುಷ್ಟನಾಗುವುದು-ಇವೆಲ್ಲವುಗಳಿಂದ ಒಬ್ಬ ಮನುಷ್ಯನ ಗುಣಶೀಲಗಳು ಪ್ರಕಟವಾಗುತ್ತವೆ. ವಿ.ಸೀಯವರು ತಮ್ಮ ಸ್ಮೃತಿ ಕಥನದಲ್ಲಿ ಅಂತಹ ಅನೇಕ ಪ್ರಸಂಗಗಳನ್ನು ಕಾಣಿಸಿದ್ದು ಒಂದೆರಡನ್ನು ಉದಾಹರಿಸುತ್ತೇನೆ.

ಕರೆನ್ಸಿ ಕಚೇರಿಯಲ್ಲಿ ವಿ.ಸೀಯವರ ಸಹೋದ್ಯೋಗಿ ಕುಲಕರ್ಣಿ ಎಂಬ ಸಜ್ಜನನಿದ್ದ. ಪಿತೂರಿ, ಆಕ್ಷೇಪಣೆ ಅವನ ಸ್ವಭಾವದ್ದಲ್ಲ. ಮೂಲತಃ ಗಟ್ಟಿ ಆಳು, ಆದರೆ ಅನಾರೋಗ್ಯದಿಂದ ಬಡಕಲಾಗಿದ್ದು ಆತನ ರಜೆಯೆಲ್ಲ ಮುಗಿದಿತ್ತು. ಕಚೇರಿಯ ಅಧಿಕಾರಿ ಪಾರ್ಸನ್ಸ್ ಮಹಾಶಯ ಕುಲಕರ್ಣಿಯ ಗುಣಸ್ವಭಾವಗಳನ್ನೂ ಅನಾರೋಗ್ಯವನ್ನೂ ಬಲ್ಲವರು. ನಿಯಮದಂತೆ ಆತನಿಗೆ ಮತ್ತಷ್ಟು ರಜೆ ಕೊಡುವಂತಿಲ್ಲ ಎಂಬುದನ್ನು ತಿಳಿದಾಗ, ಕೆಲಸದ ಅವಧಿಯನ್ನು ಕಡಿಮೆ ಮಾಡುತ್ತಾರೆ, ಮಾತ್ರವಲ್ಲ ಚಿಕಿತ್ಸೆಗಾಗಿ ಒತ್ತಾಯದಿಂದ ತಾವೇ ಹಣ ಕೊಡುತ್ತಾರೆ. ಅವರ ಈ ಸೌಜನ್ಯ ಕುಲಕರ್ಣಿಗೆ ಕಣ್ಣೀರು ತರಿಸುತ್ತದೆ. ಅದೇ ಅಧಿಕಾರಿ ಅವಧಿ ಮೀರಿ ಕಚೇರಿ ಕೆಲಸ ಮಾಡುತ್ತಿದ್ದ ಒಬ್ಬ ಸಿಬ್ಬಂದಿಯನ್ನು ಕರೆದು, ‘Go back home. No wife and children waitinfg for you? Do the work early to morrow’ ಎಂದು ಮನೆಗೆ ಕಳುಹಿಸಿದ್ದರೆಂದು ಹೇಳುವ ವಿ.ಸೀ “ಈ ಗುಣ ಎಷ್ಟು ಉದಾರವಾದದ್ದು, ಎಷ್ಟು ಉನ್ನತ. ಮಾನವೀ ಕರುಣೆಯಿಂದ ಕೂಡಿದ್ದು ಎಂಬುದನ್ನು ಯಾರೂ ಕಾಣಬಹುದು” ಎಂದು ಬರೆದು, “ಎಲ್ಲಕ್ಕಿಂತ ದೊಡ್ಡದು ಮಾನವತೆ, ಸೌಜನ್ಯ. ಮಾನವರ ಹೃದಯ ತೆರೆಯಬೇಕು. ವಿಸ್ತಾರವಾಗಬೇಕು. ದೇವತೆಗಳಿಗೆ ಕೊಟ್ಟಿರುವ ಸುಮನಸಾಃ ಎಂಬ ಹೆಸರಿಲ್ಲದಿದ್ದರೆ ದೇವತ್ವಕ್ಕೇ ಬೆಲೆಯಿಲ್ಲವೆನ್ನಿಸುತ್ತದೆ” ಎಂಬ ಮಾತುಗಳಿಂದ ಆ ಪ್ರಕರಣವನ್ನು ಮುಗಿಸಿದ್ದಾರೆ.

ಇದಕ್ಕೆ ವಿರುದ್ಧವಾದ ಒಂದು ಪ್ರಸಂಗದ ಉಲ್ಲೇಖ ಈ ಮೊದಲೇ ಬಂದಿದೆ. ಅದು ಒಬ್ಬ ವರಿಷ್ಠಾಧಿಕಾರಿಗೆ ಬಂದಿದ್ದ ಒಂದು ಟೆಲಿಗ್ರಾಮನ್ನು ವಿ.ಸೀಯವರು ಪ್ರಮಾಣದಿಂದ ತೆರೆದಿದ್ದು; ಅದನ್ನು ತಿಳಿದ ವಿಘ್ನಸಂತೋಷಿ ಸಹೋದ್ಯೋಗಿಗಳಿಗೆ “ಈಗ ಸಿಕ್ಕಿ ಬಿದ್ದ, ಬಯ್ಗುಳ ತಿನ್ನುತ್ತಾನೋ, ಅಲ್ಲ ಕೆಲಸವನ್ನೇ ಕಳಕೊಳ್ಳುತ್ತಾನೋ” ಎಂದು ಒಳಗೊಳಗೇ ಸಮಾಧಾನ. ಅದಕ್ಕೆ ಒಂದು ಹಿನ್ನೆಲೆಯೂ ಇತ್ತು. ಕೆಲಸಕ್ಕೆ ಸೇರುತ್ತಲೇ ವಿ.ಸೀಯವರಿಗೆ ತಿಂಗಳ ಸಂಬಳ ಒಂದು ನೂರು ರೂಪಾಯಿಯೆಂದು ಗೊತ್ತಾಗಿತ್ತು. ಆ ಕಾಲಕ್ಕೆ ಅದು ದೊಡ್ಡ ಮೊತ್ತ. ಅವರಿಗಿಂತ ಸೇವಾ ಜೇಷ್ಠರಿಗೆ ಅವರು ಸೇರಿದಾಗ ಆ ಸಂಬಳ ಇರಲಿಲ್ಲ. ಆ ಕುರಿತು ಅಂತಹವರೆಲ್ಲ ಸೇರಿ ಮೇಲಿನವರಿಗೊಂದು ಮನವಿ ಪತ್ರವನ್ನು ಒಪ್ಪಿಸಿ, ನಿರಾಶೆ ಪಟ್ಟದ್ದೂ ಇತ್ತು. ವಿ.ಸೀಯವರು ಪ್ರಾಂಜಲವಾಗಿ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದರಿಂದಲೂ, ಅಧಿಕಾರಿಯದು ಧಾರಾಳ ಮನಸ್ಸಾದುದರಿಂದಲೂ ತಾರನ್ನು ತೆರೆದದ್ದಕ್ಕಾಗಿ ಶಿಕ್ಷೆಗೆ ಒಳಪಡುವ ಪ್ರಸಂಗವೇನೂ ಅವರಿಗೆ ಒದಗಲಿಲ್ಲ. ಪೀಟಕ ಪ್ರವೃತ್ತಿಯರಿಗೆ ಮಾತ್ರ ನಿರೀಕ್ಷಾ ಭಂಗವಾಯಿತು; ಆದರೆ ಸಹೃದಯಿಗಳಿಗೆ ಸಂತೋಷವಾಯಿತು. ಒಬ್ಬ ಸಜ್ಜನ, “These fellows are properly served; it is a genuine mistake; it is good you explained it to the Saheb’ ಎಂದು ಮೆಟ್ಟಿ ಬೆನ್ನು ತಟ್ಟಿದರು. ಮಿಕ್ಕವರಿಗೆ ವಿ.ಸೀಯವರ ತೂಕ ಗೊತ್ತಾಗಿ ಅವರನ್ನು ಕಡೆಗಣಿಸುವಂತಿಲ್ಲ ಎಂಬ ಅರಿವು ಮೂಡಿಸು.

ವಿ.ಸೀಯವರ ರುಚಿಶುದ್ಧಿ, ಮೃದುಹಾಸ್ಯ, ಸೌಂದರ್ಯ ಪ್ರಜ್ಞೆಗಳಿಗೆ ಪುಸ್ತಕದಲ್ಲಿ ಅನೇಕ ಉದಾಹರಣೆಗಳಿವೆ. ಅನ್ನ ಪಾನಾದಿಗಳ ವಿಷಯದಲ್ಲಿ ವಿ.ಸೀಯವರ ಪರಿಷ್ಕಾರ ಪ್ರಸಿದ್ಧವಸ್ಥೆ. ಅದನ್ನೇ ಕವಿ ವಿನಾಯಕರು, “ಪೆನ್ನಿನಲ್ಲಿ ಮಸಿತುಂಬುವ ಗಾಜುಗೊಳವೆಯಿಂದ ನೀನು ಕಾಫಿನಲ್ಲಿ ಹಾಲನು ಹನಿ ಬಿಡುವಿಯೆಂದರು” (‘ರೂಪಾರಾಧಕ’) ಎಂದು ಮುಂತಾಗಿ ವರ್ಣಿಸಿದ್ದೂ ಇದೆ. ೧೯೨೨ರಷ್ಟು ಹಿಂದೆಯೇ, ಇನ್ನೂ ಇಪ್ಪತ್ತಮೂರು ಇಪ್ಪತ್ತನಾಲ್ಕರ ಪ್ರಾಯದಲ್ಲೇ ವಿ.ಸೀಯವರ ರಸನೇಂದ್ರಿಯ ಪಟುತ್ವ ಹೇಗಿತ್ತು ಎಂಬುದಕ್ಕೂ ಪುಸ್ತಕದಲ್ಲಿ ಉದಾಹರಣೆಗಳಿವೆ. ಅವರ ಸೌಂದರ್ಯ ಪ್ರಜ್ಞೆ ಅವರ ರುಚಿಶುದ್ಧಿಯ ಮತ್ತೊಂದು ಮುಖ. ಅದು ಎಷ್ಟು ಸೂಕ್ಷ್ಮ ಗ್ರಾಹಿಯೇ ಅಷ್ಟೇ ಸುಸಂಸ್ಕೃತ. ಈಯೊಂದು ಚಿತ್ರವನ್ನು ನೋಡಿ, ತಿಳಿಯುತ್ತದೆ: “ಏಕಮುಖತೆ, ಒಂದರ ಕಾರ್ಪಣ್ಯ ಎಂದಿಗೇ ಆಗಲಿ, ಹಿಡಿಸದವನು ನಾನು. ನನ್ನ ಮನಸ್ಸಿಗೆ ಟೀ ಪರವಾದ ರುಚಿರುಚಿಯಾದ ವಾದಗಳು ತೋರುತ್ತಿದ್ದವು. ಕಾಫಿಯವರದು ಒಂದೇ. ಟೀ ಮಾಡುವ ವಿಧಾನಗಳು, ಅದನ್ನು ಕುಡಿಯುವ ರೀತಿ ನಿತಿಗಳು ಅನೇಕವಾದ್ದರಿಂದ ಸ್ವಭಾವತಃ ಆ ಕಡೆ ವಿಶ್ವಾಸವಿಲ್ಲದವರ ಮನಸ್ಸನ್ನೂ ಆ ಆಲೋಚನೆಗೆ ಎಳೆಯುವುದೇ ಅನಗತ್ಯವಾಗುತ್ತಿತ್ತು. ‘ನೀವು ಹೇಗೆ ಬೇಕಾದರೂ ಮಾಡಿಕೊಳ್ಳಿ’- ಎಷ್ಟು ಬಗೆಯ ಟೀಯಾದರೂ ಮಾಡಿಕೊಳ್ಳಿ, ಎಷ್ಟೇ ಹಾಲಾದರೂ ಬಳಸಿ ಟೀ ಕುಡಿದುಕೊಳ್ಳಿ ಎಂದು ಬಿಡುತ್ತಿದ್ದರು. ನಮ್ಮ ರೂಮಿಗೆ ಬಂದ ಹೊರಗಿನ ಸ್ನೇಹಿತರಿಗಿರಲಿ ಎಂದು ಒಂದು ಡಬ್ಬ ಹಳದಿ ರಂಗಿನ ಅಥವಾ ಹಸಿರು ರಂಗಿನ ಲಿಪ್ಟನ್ ಟೀಯನ್ನು ತಂದಿಟ್ಟುಕೊಳ್ಳುತ್ತಿದ್ದೆ. ತಿಂಗಳಿಗೆ ಮುಂಚೆ ಅದು ಮುಗಿದುಹೋದರೆ, ತಪ್ಪು ನನ್ನದಾಗುವುದರಿಂದ ಹೊಸ ಡಬ್ಬವನ್ನು ತರುವುದೂ ನನ್ನದೇ ಆಗುತ್ತಿತ್ತು. ಮನೆಯಲ್ಲಿ ಟೀ ಕುಡಿಯುವುದು ರಜಾ ದಿನಗಳಲ್ಲಿ ಮಾತ್ರವಾದ್ದರಿಂದ , ಕಾಪಿಗೆ ಕಾಯಿಸಿದ ನೀರನ್ನು ಬೇರೆ ಸೇರಿಸಿ, ಹಾಲು ಸೇರಿಸಿ, ಇನ್ನೊಂದು ಲೋಟಕ್ಕೆ ಅದನ್ನು  ಬಗ್ಗಿಸಿಕೊಂಡು, ಕುಡಿಯುವುದು ತಕರಾರಿನ ಕೆಲಸ. ಟೀ ಸಂಸ್ಕಾರ ಇರುವವರು ಇನ್ನಷ್ಟು ಹೆಚ್ಚು ವಿತರಣೇಯ ಪರಿಪಾಠಿ ಇಟ್ಟುಕೊಂಡ ಹೊರತು ಅದರ ರಸ ದಕ್ಕುವುದಿಲ್ಲ. ಅದಕ್ಕೆ ಟೀ ಸೆಟ್ ಬೇಕು, ಬೇರೆ ಬಗೆಯ ಆವರಣ ಬೇಕು. ಬೇಕಾದ ಯಾರೊ ಮರಳುವ ಹಾಗೆ ನೀರು ಕಾಯಿಸಿ, ಕೆಟಲಿಗೆ ಸೊಪ್ಪು ಹಾಕಿ, ನಿರು ಹುಯಿದು, ಜರಡಿ, ಕುಡಿಯುವ ಬಟ್ಟಲು, ಚಮಚ, ಹಾಲಿಗೆ ಸಕ್ಕರೆಗೆ ಬೇರೆ ಪಾತ್ರೆ-ಪೋರ್ಸೆಲೈನ್-ಪಿಂಗಾಣಿ-ಚೈನಾ ಎದುರಿಗಿರದಿದ್ದರೆ ಆ ಟೀ ಸುಖಕರವಲ್ಲ. ತೆಳ್ಳಗೆ ಹೊರ ಜರಡಿಯಲ್ಲಿ ಮಾತ್ರ ಶೋಧಿಸಿ ಪಿಂಗಾಣಿ ಪಾತ್ರೆಗಳಲ್ಲಿನ ಕೇಸರಿ, ಕಾದ ಬಂಗಾರಗಳ ಹಾಗೆ ನೆಲಸುವ ಅದರ ಉದಾರ ರಮಣೀಯತೆ, ಅಹೋ, ಲೊಕೋತ್ತರ! ಬೆಳ್ಳಗೆಯ ತಂಬಿಗೆಯಲ್ಲಿ ಕೇಸರಿ ಬೆರಸಿದ ನೀರು ನೋಡಿದರೆ ಅದರ ಹತ್ತಿರದ ಹೋಲಿಕೆ ಬರಬಹುದು. ಇನ್ನೊಂದು ರಹಸ್ಯವಿದು. ತಿಳಿಯಾಗಿ ಇಳಿದ ಅದಕ್ಕೆ ಸಕ್ಕರೆ ಹಾಕಿ ಹಾಲಿಲ್ಲದೆ ಕುಡಿದರೆ ಟೀ ರುಚಿ ವಿಶೇಷ; ಅಥವಾ ನಿಂಬೆರಸ ಸೇರಿಸಿಕೊಳ್ಳಬಹುದು. ಅದಕ್ಕೆ ಹಾಲು ಹಾಕಿದಾಗಲೂ ಬೀಳಬೇಕಾದ ಹಾಲು ತುಂಬಾ ಕಡಮೆ. ಒಂದೊ ಎರಡೊ ಚಮಚ ಸಾಕು. ಚಾ ಸೊಪ್ಪನ್ನು ಕುದಿಸಿ ಕಾಫಿ ಶೋಧಿಸುವಾಗ ಗಟ್ಟಿಯಾಗಿ ಕಾಫಿ ಹಿಂಡುವಂತೆ ಗೊಜ್ಜು ಮಾಡಿಕೊಂಡವರಿಗೆ ಬೇರೆ ಒಂದು ಹೆಚ್ಚು ಜನ್ಮ ಎತ್ತುವಂತೆ ಮಾಡುತ್ತಾನಂತೆ, ಶ್ರೀ ಮಹಾವಿಷ್ಣು. ಟೀ ಶಾಸ್ತ್ರದಲ್ಲಿ ಅದನ್ನು ಕಾಣದವರು. ಕಂಡು ಪುಳಕಗೊಳ್ಳದವರು, ಇನ್ನೊಂದೆರಡು ಜನ್ಮದ ಗಡಿಯನ್ನು ದಾಟಿ ಆ ಸಂಸ್ಕಾರ ದೊರಕೊಳ್ಳುವವರೆಗೂ ಮುಕ್ತಿ ಪಡೆಯಲು ಯೋಗ್ಯರಲ್ಲವೇನೊ ಎನಿಸುತ್ತದೆ.ಆ ಬಣ್ಣ ಅಷ್ಟು ನಯನ ಮನೋಹರ. ಶೋಧಿಸಿದ ಕಾಫಿಯ ಬಣ್ನ ಹಾಗಿರುತ್ತದೆಯೇ? ಯಾರೂ ತಮ್ಮನ್ನು ತಾವೇ ಕೇಳಿಕೊಳ್ಳಲಿ! ಸತ್ಯ ಕಾಣುತ್ತದೆ”.

ಇದು ಮತ್ತೊಂದು ಉದಾಹರಣೆ: “…… ನಮ್ಮ ಕಡೆ ದಾಕ್ಷಿ ಬಹುಮಟ್ಟಿಗೆ ಕಪ್ಪು ಬಿಳಿಯರೂ ಸಿಹಿಯಾಗಿರಬಲ್ಲದಾದರೂ ಹಿಂದಿನ ಕಾಲದ ಇಲ್ಲಿನ ಬಿಳಿಯ ದಾಕ್ಷಿ ಹುಳಿಯಾಗಿರುತ್ತಿದ್ದದ್ದೇ ಸಾಮಾನ್ಯ. ಈ ದ್ರಾಕ್ಷಿಯಲ್ಲಿ ಸಣ್ಣ ಗಾತ್ರದ್ದು, ದೊಡ್ಡದು ಎರಡೂ ಇದ್ದುವು….. ಅಷ್ಟು ಸಿಹಿ ದ್ರಾಕ್ಷಿಯ ಅನುಭವ ಆವೊತ್ತೆ ದೊರೆತದ್ದು.. ತಾನು ಬೊಂಬಾಯಲ್ಲಿ ಮೊದಲು ಹದಿನೈದು ವರ್ಷಕ್ಕೆ ಹಿಂದೆ ಬಂದೆ; ಯಾವುದೊ ಅನುಕೂಲ ಸನ್ನಿವೇಶ ಒದಗಲು ಅಂದಿನ ತಮ್ಮ ಪದವಿಗೆ ಏರಲಾಯಿತು. ಮೊದಲು ತನಗೂ ಈ ದ್ರಾಕ್ಷಿಗೂ ಚಿಕೂಗೂ ಹೀಗಿಯೇ ಪ್ರೀತಿ ಉಂಟಾಯಿತು ಎಂದು ನಮ್ಮ ಸ್ನೇಹಿತರು ಹೇಳಿದರು. ಚಿಕೂ ನೋಡಲು ಅಷ್ಟು ಆಪ್ಯಾಯನಕರ ರೂಪಿನದಲ್ಲ. ಅದು ದೂರದಿಂದ, ಸಿಪ್ಪೆಯ ಬಣ್ಣ ಬೇರೆಯಾದರೂ, ಒಣಗದ ಅಲೂಗಡ್ಡೆಯಂತೆ ಕಾಣುತ್ತದೆ. ಮೇಲೆ ನೋಡಿದರೆ ಇದನ್ನು ಏನು ಹಣ್ಣೆನ್ನುತ್ತಾರೆ ಅನ್ನಿಸುತ್ತದೆ. ಅದನ್ನು ಕತ್ತರಿಸಿ ಚಕ್ಕಳ ಹೊರಮಾಡಿ ಒಂದು ಚಮಚದಲ್ಲಿ ಬಗೆದು (ಅಂಜೂರದಲ್ಲಿ ವಿಶೇವಾಗಿ ಕೆಂಪಗಿರುವ ಭಾಗವನ್ನು ಮಾತ್ರ ತಿನ್ನುವಂತೆ) ತಿಂದರೆ ಆ ಹಣ್ಣ ರುಚಿ ಇನ್ನಾವ ಹಣ್ಣಿಗೂ ಬರುವುದಿಲ್ಲವೆಂದೂ ಕಂಡಿತು. ಆದರೆ. ಒಮ್ಮೆಗೆ ಎಷ್ಟನ್ನು ತಿಂದರೆ ತೃಪ್ತಿಯಾದೀತು? ಕೆಲವು ಹಣ್ಣುಗಳನ್ನು ಸೇರಿಸಿ ರಸಾಯನ ಮಾಡುವಾಗ ಅದರ ಸಣ್ಣ ತುಂಡುಗಳು ವಿಶಿಷ್ಟವಾದ ರುಚಿಯನ್ನು ಅಪ್ಪಟ ಜೇನುತುಪ್ಪದೊಡನೆ ಬೆರಸಿದಾಗ ಕೊಡಬಲ್ಲದೆಂದು ತಿಳಿಯಿತು. ಇನ್ನೊಂದು ರಹಸ್ಯ : ಮೊಟ್ಟೆಯಾಕಾರದ ಹಣ್ಣು ಗುಂಡನೆಯದಕ್ಕಿಂತ ಹೆಚ್ಚು ರುಚಿಯದು ಸಾಮಾನ್ಯವಾಗಿ ಎಂಬ ಸಂಗತಿ; ಸಂಖ್ಯಾಮಾನದಲ್ಲಿ ನೋಡಿದರೆ ಇದು ನಿಜವಾದರೂ ಎಲ್ಲ ಮೊಟ್ಟೆಯಾಕೃತಿಯ ಚಿಕೂ ಒಂದೇ ರೀತಿಯ ಉತ್ತಮ ರುಚಿಯದು, ಎಲ್ಲ ಗುಂಡು ಚಿಕೂ ಸಪ್ಪೆ, ಅರುಚಿ ಎಂದು ಹೇಳುವ ಧಾರ್ಷ್ಟ್ಯಕ್ಕೆ ಹೋಗಲಾರೆ. ಇದು ಮಾತ್ರ ನಿಜ. ನುಣುಪಾಗಿ ತೆಳ್ಳನೆಯ ಹೊರಚರ್ಮ ಇರುವ ಹಣ್ಣು ಎಲ್ಲಿನಂತೆಯೇ ಇಲ್ಲಿಯೂ ಸೊಗಸು. ಇಷ್ಟರಮೇಲೆ ಅವರವರ ರುಚಿ, ಅದೃಷ್ಟ ಹೇಗಿದ್ದರೆ ಹಾಗೆ. ಬೆಂಗಳೂರು ಲಾಲ್‌ಬಾಗಲ್ಲಿ ಬಸವನಗುಡಿ ಗೇಟಿಂದ ಒಳಗೆ ಹೋಗುವಾಗ್ಗೆ ಒಂದು ಸಣ್ಣ ಸೇತುವೆ ಹಿಂದೆ ಸ್ವಲ್ಪ ದೂರದಲ್ಲಿ ಉನ್ನತ ಶ್ರೀಮಂತಿಕೆಯಂತೆ ನಿಂತ ಯೂಕಲಿಪ್ಟಸ್ ಗಿಡಕ್ಕೆ ಈಚೆ ಇರುವ ಒಂದು ಗಿಡದ ಹಣ್ಣು ನಾನು ಐವತ್ತು ವರ್ಷಗಳಲ್ಲಿ ಸವಿದಿರುವ ಚಿಕೂ ಹಣ್ಣುಗಳ ಗುಣದಲ್ಲಿ ಅತ್ಯುತ್ತಮ- ಉತ್ತಮ ಎಂದಾಗ ಅತಿ ಏಕೆ? ಇದು ಸಾಧಾರಣವಾಗಿ ಸಾಮಾನ್ಯರಿಗೆ ದೊರಕುವುದಿಲ್ಲ, ದೇವತೆಗಳಿಗೆ ಮೀಸಲಾದ್ದರಿಂದ ಇರಬೇಕು. ಆದರೂ ಹಾಗೆ ಹೇಳುವುದು ರೂಢಿಯಾದ ಜಾತಿಗಳಲ್ಲಿ ಒಂದು ಎಂದು ಹೇಳಬಲ್ಲೆ. ಅದರಲ್ಲಿನ ಸಿಹಿಯ ಜೊತೆಗೆ ಅದರೊಡನೆ ಬೆರೆತ ಪರಿಮಳ ನಾಲಗೆಯ ಮೇಲೆ ಹಾಯೆನಿಸಿ ಮರೆಯಲಾಗದ ಒಂದು ರುಚಿಯನ್ನು ಕೊಡುತ್ತದೆ. ರೂಪಾಯಿ ಕೊಟ್ಟರೆ ದೊರಕದ್ದು. ಉತ್ತರ ಕರ್ನಾಟಕದಲ್ಲಿ ಬೊಂಬಾಯಿ ಪ್ರಾಂತದ ಸಂಸ್ಕಾರ ಬಹುಕಾಲ ಬೆಳೆದದ್ದರಿಂದ ಅವರು ಸಾಮಾನ್ಯವಾಗಿ ಚಿಕೂವನ್ನು ಕತ್ತರಿಸಿ ಕೊಡುವ ಪದ್ಧತಿಗೆ ಇಟ್ಟುಕೊಂಡಿದ್ದಾರೆ. ಆ ಹೋಳುಗಳನ್ನು ಹಲ್ಲಲ್ಲಿ ಬಗೆದು ತಿನ್ನುವ ಅವರ ಪ್ರಕಾರ ಮಾತ್ರ ಚಮಚದಲ್ಲಿ ತೆಗೆಯುವ ಪ್ರಕಾರದಷ್ಟು ನಾಜೂಕಿನದಲ್ಲ. ಹಾಗೆಯೇ ಬೆರಳಿಂದ ಅದರ ಸಿಪ್ಪೆಯನ್ನು ನಮ್ಮ ಕಡೆಯವರು ತೆಗೆಯುವ ವಿಧಾನ ಕೂಡ ಅನಾಗರಿಕ. ನಯ ನಾಜೂಕು  ಅವರವರಿಗೆ ಬಿಟ್ಟದ್ದು. ಒಬ್ಬರಿಗೆ ಇನ್ನೊಬ್ಬರದು ಸಹ್ಯವಲ್ಲ. ಈ ಬಗೆಗೆ ಸ್ಪರ್ಧೆ ಆಕ್ಷೇಪಣೆ ಪುರ್ವಗ್ರಹ ಪಕ್ಷಪಾತ ಸಲ್ಲದು. ಎಲ್ಲ ವಿಮರ್ಶೆಯಲ್ಲಿಯೂ ಈ ಲಕ್ಷಣ ಹೊಂದೀತು. ನಮ್ಮ ಸ್ನೇಹಿತರಿಗೆ ತುಂಬಾ ಪ್ರಿಯವೆಂದು ಗೊತ್ತಿದ್ದ ೮/೧೦ ಎಳೆತರಕಾರಿಗಳ ಕೋಸಂಬರಿಯನ್ನು ನಮ್ಮ ಗೆಳೆಯರು ಮಾಡಿದ್ದರು. ಹೂ ಕೋಸು ಸೇರಿಸಿ ಎಳೆಯ ತರಕಾರಿ ಹಲವನ್ನು ಹಾಕಿ ಮಾಡಿದ್ದ ಕೋಸಂಬರಿಯೂ ಅದೇ ನನ್ನ ಮೊದಲ ಅನುಭವ. ಅವರು ಅದನ್ನು ಈ ಸ್ನೇಹಿತರಿಂದ ಹಿಂದಿನ ವರ್ಷ ಕಲಿತಿದ್ದರಂತೆ. ಜ್ಞಾನ, ವಿವೇಕ, ರುಚಿಯ ಅನುಭವ. ಯಾರ್ಯಾರಿಗೆ ಹೇಗೆ ಬರುತ್ತದೊ ಯಾವ ಗುರುವರ್ಗ ಹೇಗೆ ನಮ್ಮ ಬಾಳಿಗೆ ಆ ಸಂಸ್ಕಾರ ತರುತ್ತದೆಯೊ ಯಾರು ಹೇಳಬಲ್ಲರು?. ಒಂದು ಜೀವಕ್ಕೆ ಎಷ್ಟು ಸಾವಿರ ಮೂಲಗಳಿಮದ ಸ್ರವಿಸಿ ಸಂಸ್ಕಾರಾಂಶಗಳು ಸೇರಿ ರುಚಿ ಪಕ್ಷಪಾತಗಳ ಸಿದ್ಧಿ ದೊರಕುವುದೆಂಬುದನ್ನು ನೆನಪಿನಲ್ಲಿಡದೆ, ಇದು ನಮ್ಮದೆಂಬ ಅಹಂತೆಯನ್ನು ನಾವು ಅತಿ ಮಾಡಿಕೊಳ್ಳುತ್ತೇವೆ. ಒಂದು ಹಲ್ಲು ತಿಕ್ಕುವ ವಿಧಾನ, ತಲೆ ಕೆರೆದುಕೊಳ್ಳುವ ವಿಧಾನ. ಮುಖಕ್ಕೆ ಸೋಪಿನ ಬ್ರಷ್ ಎಳೆಯುವ ವಿಧಾನ, ನೀರಲ್ಲಿ ಕೈಯ ಬೆರಳುಕೊನೆಯಿಟ್ಟು ಮಾತ್ರ ಅದನ್ನು ಶುಚಿಗೊಳಿಸಿಕೊಳ್ಳುವ ವಿಧಾನ, ಮೀಸೆ ಕತ್ತರಿಸಿಕೊಳ್ಳುವ ರೀತಿ, ಮುಖಕ್ಷೌರ ಮಾಡಿಕೊಳ್ಳುವ ಪ್ರಕಾರಗಳು, ನಿಂತು ಮಾತನಾಡುವ ವಿಧಾನ, ಟೆಲಿಫೋನ್ ವೈಖರಿ, ಕಾಫೀ ನೀರು ಕುಡಿಯುವ ವಿಧಾನ, ಆಕಳಿಸುವ ಕೆಮ್ಮುವ ವಿಧಾನ, ಹೊಸಕಾಲದವರು ಸಿಗರೇಟ್ ಸೇದುವ, ಹಳೆಯವರು ವೀಳೆಯ ಜಗಿವ ಅಥವಾ ನಸ್ಯ ಹಾಕುವ ವಿಧಾನ, ಹಪ್ಪಳ ಮುರಿವ ವಿಧಾನ, ಬೆಂದ ಹಸಿ ಅವರೆ ಕಾಳನ್ನು ಹಿಸಿವ ವಿಧಾನ, ಕಡೆಗೆ ಊಟ ಮಾಡುವಾಗ ಹೇಗೆ ಕೂಡಬೇಕು, ಬೆಂದ ಹಸಿ ಅವರೆ ಕಾಳನ್ನು ಹಿಸಿವ ವಿಧಾನ, ಕಡೆಗೆ ಊಟ ಮಾಡುವಾಗ ಹೇಗೆ ಕೂಡಬೇಕು, ಬಾಯಿ ವಿಕಾರ ಮಾಡಬಾರದೆಂಬುದು, ಅಗಿವಾಗ ನೀರು ಕುಡಿವಾಗ ಪಕ್ಕದವರಿಗೆ, ಎದುರಿಗಿರುವವರಿಗೆ ಅಸಹ್ಯತರಬಾರದು, ಸಾರು ಮಜ್ಜಿಗೆ ಸುರಿದುಕೊಳ್ಳಬಾರದು ಇತ್ಯಾದಿ ಎಷ್ಟೆಂದು ಪಟ್ಟಿ ಮಾಡಲಾದೀತು? ಎಲ್ಲ ಅಭ್ಯಾಸಗಳೂ ಸುಮಾರು ಹೀಗೇ. ನಮ್ಮದೇ ಆದುದೆಷ್ಟು? ಮೌಲಿಕವಾದ್ದು ಎಷ್ಟು? ಇಂಥಲ್ಲಿ ಕೂಡ ನಯ ನಾಗರಿಕತೆ ಬೆಡಗು ಬೆಳೆಯುತ್ತವೆ. ತಿನ್ನುವಾಗ ಕುಡಿವಾಗ ನಡೆವಾಗ ನುಡಿವಾಗ ಎಷ್ಟು ಬಗೆಯ ಸೊಗಸನ್ನು ಬೆಡಗನ್ನು ವಿಕಾರಗಳನ್ನು ಕಾಣಿಸುತ್ತಾರೆ ಎಂಬುದನ್ನು ಯೋಚಿಸಿದರೆ, ರೂಪವಿರೂಪಗಳ ವಿವೇಚನೆ ತಕ್ಕಮಟ್ಟಿಗೆ ಆಗುತ್ತದೆ. ಒಂದೊಂದು ವ್ಯಕ್ತಿನಿಷ್ಠ, ಶೀಲನಿಷ್ಠ, ಸಂಸ್ಕಾರ ಜನ್ಯ ವ್ಯಾಪಾರಗಳು. ಅನಂತಾ ವೈ ವಿದ್ಯಾಃ”.