ಮುಂಬಯಿಯ ಒಂದಾನೊಂದು ಸಭಾಗ್ರಹದಲ್ಲಿ ವಿ.ಸೀಯವರು ನೋಡಿದ ಒಬ್ಬಾಕೆ ಮಹಿಳೆಯ ಚಿತ್ರಣದಲ್ಲಿ ಅವರ ಸೌಂದರ್ಯ ಪ್ರಜ್ಞೆ, ರುಚಿಶುದ್ಧಿ ಎರಡೂ ಪ್ರಕಟವಾಗುತ್ತವೆ: ಎರಡು ಸಂಗತಿಗಳು ನನಗೆ ಅಂದು ಕಣ್ಣಿಗೆ ಬಿದ್ದವು. ಒಂದು ನಾಯಕರಾಗಿ ಕೂಡಲು ಸ್ಥಳವಿಲ್ಲದೆ ಪ್ಲಾಟ್‌ಫಾರ್ಮ್ ಮೇಲೆ ಕುಳಿತವರು ಚುರಮುರಿ ಸೇಂಗಾ ಕೊಂಡು ಅದಕ್ಕೆ ಕೊತ್ತುಂಬರಿಸೊಪ್ಪಿನ ಚಟ್ಣಿ ಹಾಕಿಕೊಂಡು ಯಾವ ಸಂಕೋಚವೂ ಇಲ್ಲದೆ ನೆರೆದವರೆಲ್ಲರ ಗಮನ ಆ ಕಡೆ ಬೀಳಬಹುದು ಎಂಬುದನ್ನು ಲಕ್ಷಿಸದೆ ತಿನ್ನುತ್ತಿದ್ದ ಧಾರಾಳ. ನಮ್ಮ ಕಡೆಯ ಶ್ರೀಮದ್ ಗಾಂಭಿರ್ಯ ಇಲ್ಲದ್ದು ವಿಲಕ್ಷಣವಾಗಿ ಕಂಡಿತು. ಇನ್ನೊಂದು ಸಂಗತಿ ನಾನಲ್ಲಿ ಕಂಡ ಕೇಶವಾಗಿ  ಒಬ್ಬ ಮಹಿಳೆಯದು. ಆಕೆ ಪ್ರಭು ಜಾತಿಯ ಅಥವಾ ತತ್ಸಮವಾದ ಯಾವುದೊ ಒಂದು ಮನೆತನಕ್ಕೆ ಸೇರಿದವರು. ೨೫-೩೦ ವಯಸ್ಸಿರಬಹುದು. ಚೆಲುವಾದ ಗಾತ್ರ. ತೆಳ್ಳನೆಯ ಎಳನೀಲಿ ಹಸುರಿನ ಸೀರೆ ಕಾಲ್ತುಂಬ ಉಟ್ಟವರು. ಒಂದು ಬಗೆಯ ಕೇಸರಿ ಬಣ್ಣದ ರವಿಕೆ ತೊಟ್ಟಿದ್ದರು. ಶ್ರೀಮಂತರಿರಬೇಕು. ಒಂದು ಕೈಯಲ್ಲಿ ಕೆಂಪಿನ ಬಳೆ‌. ಇನ್ನೊಂದರಲ್ಲಿ ಚಿನ್ನದ ಸಣ್ಣ ಗಡಿಯಾರ. ಎಡ ಅನಾಮಿಕದಲ್ಲಿ ಒಂದು ರತ್ನಗುಂಗುರ. ಕಿವಿಯಲ್ಲಿ ಮುತ್ತಿನೋಲೆ. ಸುತ್ತೋಲೆಯ ನಡುವೆ ಒಳ್ಳೆಯ ಕೆಂಪು ಒಂದು. ಕೊರಳಲ್ಲಿ ಒಂದೆಳೆಯ ಮುತ್ತಿನ ಸರ. ತೂಗು ಪದಕ. ಸಾಧಾರಣವಾಗಿ ಅಷ್ಟು ಒಡವೆ ಧರಿಸಿ ಜನ ಬರುವುದಿಲ್ಲ. ಆಕೆಯ ಕಾಲಲ್ಲಿ ಒಂದು ಬಗೆಯ ಸ್ಯಾಟಿನ್ ಸ್ಲಿಪರ್ ಇತ್ತು. ನಮ್ಮ ಕಡೆಗಿನ್ನೂ ಬಂದಿರದ. ಕುತ್ತಿಗೆ ಸ್ವಲ್ಪ ಹೆಚ್ಚು ತೆರೆದ. ಕಂಕುಳ ಸಮಕ್ಕೆ ಭುಜ ಶಿಖರದ ಹೆಚ್ಚು ಹತ್ತಿರಕ್ಕೆ ಬರುವಂತೆ ತೊಟ್ಟಿದ್ದ ಚೋಳಿ. ತಲೆಕೂದಲು ಬಹು ಅಂದವಾಗಿ ಗಂಟು ಹಾಕಿಯೊ ಸೆಕ್ಕಿಕೊಂಡೊ ಸಂಸ್ಕಾರಗೊಂಡಿತ್ತು. ಇಂದು ಬಳಕೆಗೆ ಬಂದಿರುವ ಕೃತಕ ಕೇಶಪಾಶವಲ್ಲ. ನೈಜ ಮೊಗ್ಗಿನ ಒಂದು ಸಾಲುಹೂವನ್ನು ತುರುಬಿನ ಮೇಲೆ ಕಟ್ಟಿಕೊಂಡಿದ್ದರು. ಎಷ್ಟು ತುಂಬು ಕೂದಲು ತಲೆಯಲ್ಲಿ! ಕೇಶರಾಶಿಯ ಬೆಳವಣಿಗೆಯನ್ನು ಹೆಚ್ಚಿಸಲು ಶಕ್ಯವುಳ್ಳ ತೈಲಾದಿಗಳ ಪ್ರಕಟಣೆಗಳಲ್ಲಿ ಕೂಡ ಅಷ್ಟು ತುಂಬು ತುರುಬಿನ ಚಿತ್ರಗಳನ್ನು ನಾನು ಕಂಡಿಲ್ಲ.ಆದರೂ ಆ ತಲೆಗೆ ಅದು ಹೊರವಾಗದಂತೆ ಆಕೆ ತಲೆ ಬಾಚಿಕೊಂಡಿದ್ದರು. ಅದರ ತೂಗು ಬಿಗಿಯಲ್ಲ. ಕಟ್ಟಿದ ಕೂದಲು ಹೆಚ್ಚಾಗಿ ವಿಲಾಸಗಳನ್ನು ಕಾಣಿಸಬೇಕೆಂಬ ದೃಷ್ಟಿಯಿಂದ ಯಾವ ಮುಂಗುರಳ ವ್ಯವಸ್ಥೆಯನ್ನೂ ಮಾಡಿಕೊಂಡಿರಲಿಲ್ಲವಾದರೂ ಆ ಕೂದಲ ನವುರು ಅತಿಶಯವಾದ್ದು. ಯಾವ ರೇಶಿಮೆಯ ಎಳೆಯೂ ಅದಕ್ಕೆ ಹೋಲಿಸಿದರೆ ಹಗ್ಗವೇ, ಅಷ್ಟು ಸೂಕ್ಷ್ಮ. ತಾವರೆಯ ದಂಟನ್ನು ಮುರಿದರೆ ಅದರ ಅಂಟಿನಲ್ಲಿ ದಾರದ ಎಳೆಯಂತೆ ಬರುವ ಎಳೆಯನ್ನು ಕಾವ್ಯದಲ್ಲಿ ವರ್ಣಿಸಿರುವುದನ್ನು ಓದಿದ್ದೇನೆ. ಕಿಸಮಯವಾಗಿ ಅದು ಸವಕಲಾಗಿದೆ. ಆದರೆ ಸಣ್ಣಗೆ ಗಾಳಿ ಊದಿದರೆ ಬಾಚಿದ ಕೂದಲ ಮೇಲೆ ಕಿರಿದಾಗಿ ಎದ್ದು ಚಲಿಸುವ ಅದರ ಎಳೆ ಎಷ್ಟು ಮನೋಹರವಾಗಿರಬಲ್ಲದು! ಆ ನವುರಿನ ನವಿರನ್ನು ಹೇಗೆ ಮೋಹಕವಾಗಿ ಮಾಡಬಲ್ಲದು ಎಂಬುದು ನನ್ನ ಕಣ್ಣಿಗೆ ಒಂದು ಹೊಸ ಸಂಪತ್ತಿಯ ಕಾಣ್ಕೆಯನ್ನು ತಂದುಕೊಟ್ಟಿತು……” ಎಂದು ಹೇಳುವ ವಿ.ಸೀಯವರು ಸಮಾನವಾದ ಇನ್ನೊಂದು ದೃಶ್ಯವನ್ನು ಹೀಗೆ ಜ್ಞಾಪಿಸುತ್ತಾರೆ :

“ಅಂಥುದನ್ನು ಇನ್ನೆರಡೇ ಸಲ ನಾನು ನೋಡಿರುವುದು, ಎರಡೂ ಬೆಂಗಳೂರಲ್ಲಿ. ಒಂದು ಬೆಂಗಳೂರು ರೋಟರಿ ಕ್ಲಬ್ಬಿನ ಒಂದು ಅಧಿವೇಶನ ನಡೆದು ನನಗೆ ಭಾಷಣ ಮಾಡಲು ಅವಕಾಶ ದೊರೆತಾಗ ೧೯೫೦ರ ದಶಕದಲ್ಲಿ ಕಂಡ ಒಬ್ಬ ಹೆಣ್ಣು ಮಗಳ ತಲೆಗೂದಲು. ಮುಂದಿನ ಸಾಲಲ್ಲಿ ಕುಳಿತಿದ್ದ ಈಕೆಯ ಕೇಶ ಸಂಸ್ಕಾರ ಬೊಂಬಾಯಲ್ಲಿ ನಾನು ಕಂಡ ಚೆಲುವಿಗೆ ಸಾಟಿಯಾದ್ದು. ಈಕೆ ತುರುಬನ್ನು ಸಾಮಾನ್ಯವಾಗಿ ಕಟ್ಟಿದ್ದರು. ತುರುಬಿಗೆ ಒಂದೇ ಒಂದು ಹೂಃ : ಆಶ್ಚರ್ಯ ಆ ಗಾತ್ರ. ಒಂದು ಏಳು ಸುತ್ತಿನ ಮಲ್ಲಿಗೆ ಹೂ. ಅಷ್ಟು ಕೇಶವನ್ನು ಒಂದು ಹೂ ಸೊಗಸಿತ್ತು, ಸಿಂಗರಿಸಿತ್ತು ಎಂಬುದು ನನ್ನ ಮನ ತಟ್ಟಿದುದು ಆಗ. ಈಗ್ಗೆ ೨೦-೩೦ ವರ್ಷಗಳ ಹಿಂದೆ ಕ್ವಿಲ್ಲರ್ ಕೌಚ್ ಅವರು The art of writing ಎಂಬ ತಮ್ಮ ಭಾಷಣಗಳ ಸಂಕಲನದಲ್ಲಿ Style ಎಂಬುದನ್ನು ವಿವರಿಸುತ್ತ, ತಾನು ಹೇಗೆ The most beautiful face that these eyess will ever see ಎಂದು ಹೇಳಿ ವರ್ಣನೆ ಮಾಡಿ, ರೇಷ್ಮೆಯ ಕಪ್ಪು ಉಡೆ ಉಟ್ಟು ತುಂಬು ಕೇಶಬಂಧಕ್ಕೆ. ಒಂದು ಸಣ್ಣ ವಜ್ರದ ಅಲಂಕರಣವನ್ನು ಸಿಕ್ಕಿಸಿಕೊಂಡಿದ್ದುದನ್ನು ನೋಡಿ, ‘It startles’ ಎಂದು ಹೇಳಿ ನಿಜವಾದ ಚೆಲುವನ್ನು ಕಂಡೆನೆಂದರೊ, ಅಥವಾ ನಿಜವಾದ ಶೈಲಿಗೆ ಹೇಗೆ Startles  ಎಂಬ ಮಾತನ್ನು ಆಡಿದ್ದರೊ ಅದನ್ನು ನೆನಪಿಗೆ ತಂದಿತು ಈ ಕೇಶ ಸಂಸ್ಕಾರ. ಈ ಒಂದು ಮಲ್ಲಿಗೆ ಹೂವಿನ ಅಲಂಕರಣವೂ ಹಾಗೇ It startled. ಎಷ್ಟು ಚೆಲುವು! ಒಪ್ಪು! ಎಂಥ ಅಭಿರುಚಿ! ಸುಮ್ಮನೆ ಹೂವಿನ ಕತ್ತೆ ಹೊರೆ ಹೊತ್ತರೆ ಕೇಶಾಲಂಕರಣವಾದೀತೆ? ಕಡಮೆಯಿಂದ ಆಗುತ್ತಿರಲಿಲ್ಲ, ಹೆಚ್ಚು ಬೇಕಿರಲಿಲ್ಲ. Adequacy ಎಂಬ ಲಕ್ಷಣ ಗದ್ಯ ಸಂಸ್ಕಾರದ್ದು. ಆದರೂ ಈ ರಮ್ಯತೆಯನ್ನು ಬೆಳಗುವುದರಲ್ಲಿ ಕೂಡ ಇದು ಎತ್ತಿ ಕಾಣುತ್ತಿತ್ತು ಎಂಬುದು ವಿಸ್ಮಯದ ಸಂಗತಿ. ಈಕೆಯ ತಲೆಕೂದಲು ಬೊಂಬಾಯಲ್ಲಿ ಕಂಡಂತೆಯೇ ಆಕೆಯ ಕೂದಲಿನಂತೆಯೇ ಚೆದರುವುದು, ಗಾಳಿಗಾಡುವುದು; ಒಂದೂ ಎರಡೊ ಎಸಳುಕಾಣುವ ಹಾಗೆ. ಹಣೆಯ ಮೇಲೆ ಅಲ್ಲಿ ಇಲ್ಲಿ ಕವಿದು, ಆಡಿ ಬರುವುದು, ಈಕೆ ಕಾಣಳು ಅದು ಎಂಥ ಕಣ್ಣ ಮೋಹ ಎಂದು. ಆದರೂ ಹೆಣ್ಣಿಗೆ ತಿಳಿದಿರುತ್ತದೆ. ತನ್ನ ಸೌಂದರ್ಯದ ಲಕ್ಷಣಗಳು ಯಾವುದು ಎಂಬುದು. ಅದನ್ನು ಪಡೆದ ಗಂಡಿಗೆ ಅದು ತಾನು ಪಡೆದ ಹೆಚ್ಚಿಗೆ ಎಂಥುದು ಎಂಬುದೂ ವೇದ್ಯವೇ ಆಗಿರುತ್ತದೆ…..”

ವಿ.ಸೀಯವರದು ಸಹಜವಾದ ಗಂಭೀರ ಸ್ವಭಾವ; ಅವರ ವಾಙ್ಮಯವೂ ಹಾಗೆಯೇ-ವಿಷಯ ಸಮೃದ್ಧವಾಗಿ, ವಿಚಾರ ಪೂರಿತವಾದದ್ದು. ಆದರೆ ಅವರಲ್ಲಿ ಹಾಸ್ಯಪ್ರಜ್ಞೆ ಇಲ್ಲ ಎನ್ನಲಾಗದು. ಕಡಿಮೆಯಾದರೂ, ಬರವಣಿಗೆಯಲ್ಲಿ ಅದು ಅಲ್ಲಲ್ಲಿ ಮಿಂಚಿನ ಗೆರೆಗಳಂತೆ ಹೊಳೆ ಹೊಳೆಯುತ್ತವೆ. ಅವರ ‘ಪಂಪಯಾತ್ರೆ’ ಅಥವಾ ‘ಬೆಳದಿಂಗಳು’ ಮತ್ತು ‘ಸೀಕರಣೆ’ಗಳೆಂಬ ಪ್ರಬಂಧ ಸಂಕಲನಗಳ ಪುಟಗಳನ್ನು ಬಿಡಿಸಿದರೆ ಆಗಾಗ ಅಪ್ರಯತ್ನವಾಗಿ ಓದುಗನ ತುಟಿ ತೆರೆಯುತ್ತದೆ, ನಗು ಅರಳುತ್ತದೆ. ‘ಕಾಲೇಜ್ ದಿನ’ಗಳಲ್ಲೂ ಅಂತಹ ಸಂದರ್ಭಗಳಿವೆ. ‘ಮುಂಬಯಿ ವಾಸ’ದಲ್ಲೂ ಪ್ರಸಂಗಗಳು ನಗೆಯ ಕಂಪನ್ನು ಹಗುರವಾಗಿ ಹರಡುತ್ತವೆ. ಮುಂಬಯಿಯಲ್ಲಿ ಕೆಲಸ ಹುಡುಕುತ್ತಿದ್ದ ವಿ.ಸೀಯವರು ಒಂದಾನೊಂದು ಹೈಸ್ಕೂಲಿನ ಪ್ರಿನ್ಸಿಪಾಲನನ್ನು ಕಂಡ ದಯೆ ತೋರಬಹುದೇ? ಎಂದು ಕೇಳುವ ಸಂದರ್ಭ ವರ್ಣನೆ ಹೀಗಿದೆ :

“….ಒಂದು ಸ್ಕೂಲಿಗೆ ಕೆಲಸ ಹುಡುಕಲು ಹೋಗಿ ಅಲ್ಲಿನ ಪ್ರಿನ್ಸಿಪಲ್-ಯಾವುದೊ ಜೆಂಹಾಗೀರ್ ಎಂದು ಆರಂಭವಾಗುತ್ತಿದ್ದ ಹೆಸರಿನವರನ್ನು ಕಂಡೆ. ಹೊರಗೆ ನೋಡಲು ಇಂಗ್ಲಂಡ್ ಪ್ರಧಾನಿಯಾಗಿದ್ದ ಡೇವಿಡ್ ಲಾಯ್ಡ್ ಜಾರ್ಜ್ ಮುಖದಂತಿತ್ತು. ಮುಖಕಟ್ಟಿನಲ್ಲಿ ಪ್ರಿಯ ಅಪ್ರಿಯ, ಕಠಿಣ ಮೃದು ಏನೂ ಕಾಣುತ್ತಿರಲಿಲ್ಲ ‘Come for a job?’ ಎಂದರು. ಯಾವ ಪದವಿ ಗಳಿಸಿದ್ದೇನೆಂದು, ಏನೇನು ಮಾಡಿದ್ದೇನೆಂದು ಕೇಳಿದರು. ಇಷ್ಟು ತೆಳ್ಳಗೆ ಕುಳ್ಳಗೆ ಇದ್ದೀಯಲ್ಲ ಎಂದರು. ನಾನು ಓದಿದ್ದೂ ಮಾಡಿದ್ದೂ ಕೇಳಿ ತೃಪ್ತರಾದಂತೆ ಕಂಡಿತು. ಹೃದಯ ಹೆಚ್ಚು ಭರವಸೆಗೊಂಡಿತು. ಮುಂದೆ ಒಂದು ಪ್ರಶ್ನೆ ಕೇಳಿದರು ‘ಮದುವೆ ಆಗಿದೆಯೋ?’ ಒಳಗುಟ್ಟನ್ನು ಅರಿಯದೆ ‘ಇಲ್ಲ’ ಎಂದೆ. ‘ಏನು ಮಾಡಲಿ? ಮದುವೆ ಆಗದಿರುವ ಉಪಾಧ್ಯಾಯರನ್ನು ನಾವು ಇಲ್ಲಿ ನೇಮಿಸುವುದಿಲ್ಲ, ದುರ್ದೈವ’ ಎಂದರು. ಆತನು ಪಾರ್ಸಿ. ಬಹುಶಃ ಮದುವೆಯಾಗಿದ್ದೆನೆಂದು ಸುಳ್ಳು ಹೇಳಿದಿದ್ದರೆ ನನ್ನನ್ನು ಕೆಲಸಕ್ಕೆ ತೆಗೆದುಕೊಳ್ಳುತ್ತಿದ್ದರೆಂದು ಕಾಣುತ್ತದೆ. ಆ ಸುಮಾರಲ್ಲಿ ಪಾರ್ಸಿ ಪಂಗಡಕ್ಕೆ ಒಂದು ನಿಲುವು ಬಂದಿತ್ತು. ಮಹಮದಲಿ ಜಿನ್ನ ಸಾಹೇಬರು ಕೋಟ್ಯಧೀಶ್ವರರಾದ ಜೆಹಾಂಗೀರ್ ಪೆಟಿಟ್ ಅವರ ಮೊಮ್ಮಗಳನ್ನು ಆಕರ್ಷಿಸಿ ಆಕೆಯನ್ನು ಮದುವೆಯಾಗಿಬಿಟ್ಟಿದ್ದರು. ತಮ್ಮ ಕುಲಕ್ಕೆ ಹೊರಗಿನವರನ್ನು ತಮ್ಮ ವಿದ್ಯಾಸಂಸ್ಥೆಗಳಲ್ಲಿ, ಅದರಲ್ಲಿಯೂ ಹಣ್ಣು ಮಕ್ಕಳು ಓದುವ ವಿದ್ಯಾಶಾಲೆಗಳಲ್ಲಿ ಕೆಲಸಕ್ಕೆ ಅವರು ಹಿಂಜರಿಯುತ್ತಿದ್ದರೇನೊ! ಒಂದು ಪಾರ್ಸಿ ಹೆಣ್ಣು ನನ್ನಂತಹವನಿಗೆ ಯಾವ ರೀತಿ ಒಲಿದಾಳು ಎಂದು ಕೂಡಾ ಯೋಚಿಸಿಬಾರದೆ? ಅವರವರ ಭಯ ಅವರವರಿಗೆ; ಯಾವ ಹುತ್ತದಲ್ಲಿ ಯಾವ ಹಾವೋ ಕಂಡವರಾರು? ನನ್ನ ಸೌಮ್ಯತೆಗೊ ಧ್ವನಿಗೊ ಪಾಠಕ್ಕೊ ಒಂದೊ ಇಂಥ ಸೆಣಕಲ ಬಡವನನ್ನು ಕಟ್ಟಿಕೊಂಡರೆ ಇವನನ್ನು ಆಡಿಸಿಕಂಡು ತಾನು ಪ್ರಾಜಾಪತ್ಯ ಮಾಡಬಹುದಾಗುತ್ತದೆ ಎಂದೊ ಒಲಿದುಬಿಟ್ಟರೆ ಮಾಡುವುದೇನು? ಎಂದು ಕೊಳ್ಳುತ್ತಿರಬೇಕು. ಇಂಥವಕ್ಕೆಲ್ಲ ಅವಕಾಶವೇ ಇಲ್ಲವಾಯಿತು. ನನಗೆ ಮದುವೆ ಆಗಬಾರದಿತ್ತೆ? ಎನಿಸಿದರೂ ಮನಸ್ಸಿಗೆ ಉಂಟಾದ ಭಂಗದ ಚಿಂತೆಯಲ್ಲಿ ಹೊರಬೀಳಬೇಕಾಯಿತು”.

ಮುಂದಿನದು ಮುಂಬಯಿಯ ‘ಲಾಸ್ಕೂಲ್’ನಲ್ಲಿ ತರಗತಿಗಳು ಹೇಗಿರುತ್ತಿದ್ದುವು ಎಂಬುದರ ಒಂದು ಮಾದರಿ :

“…..ಇನ್ನೊಂದು ವಿಚಿತ್ರ ಸಂಗತಿ ಎಂದರೆ ಕ್ಲಾಸಿಗೆ ವಿದ್ಯಾರ್ಥಿಗಳು ಮಾತ್ರವೇ ಬರುತ್ತಿರಲಿಲ್ಲ. ಕೆಲವೇಳೆ ತಮ್ಮನೊ ಮಗನೊ ಜೊತೆಗೆ ಬರುತ್ತಿದ್ದ ಪ್ರಕರಣಗಳುಂಟು. ಅವರನ್ನು ಬಿಟ್ಟು ಇವರು ಮನೆಗೆ ಹೋಗುವ ಹಾಗಿಲ್ಲ. ಇನ್ನೆಲ್ಲಿ ಅವರನ್ನು ಬಿಟ್ಟಿರುವುದು ಎಂದು ಜೊತೆಗೇ ಲಾ ಕ್ಲಾಸಿಗೇ ಕರೆತರುತ್ತಿದ್ದರು. ಮನೆಗೆ ಹೋಗುವಾಗ ಹತ್ತಿರದ ಪೇಟೆಯಿಂದ ಕೊಂಡು ಹೋಗಬೇಕಿದ್ದ ಕಾಯಿಪಲ್ಲೆಯಗಳನ್ನು ಸಣ್ಣ ಬುಟ್ಟಿಗಳಲ್ಲಿ ತರುತ್ತಿದ್ದುದುಂಟು. ಅವನ್ನು ತರುವುದಕ್ಕೆ ಕೂಡ ಸಂಕೋಚಪಟ್ಟುಕೊಳ್ಳಬೇಕು. ಹೊಸದಾಗಿ ಹುರಿದು ಪುಡಿಮಾಡಿಸಿದ ಕಾಫೀ ಪುಡಿ ಪೊಟ್ಟಣಗಳನ್ನು ಹೊತ್ತು ಅದರ ಪರಿಮಳವನ್ನು ಕ್ಲಾಸಲ್ಲಿ ಕೂತವರಿಗೆಲ್ಲ ಮಾಡಿಸುತ್ತಿದ್ದುಂಟು. ಮೀನು ತಂದ ಒಂದೆರಡು ಸಲ ಮಾತ್ರ : ಒಂದು ದಿನ ಮೀನು ಕೂಡ ಬಂದಿತ್ತು. ಪಟವರ್ಧನ್ ಅವರು ತಮಾಷೆಗೆ ಆ ದಿನ ‘I deeply appreciate virtues of many house-holders. The vegetables are all right; the Coffee powder is bearable; to some of us inspiring, But, fish, gentlemen. fish….. There must be some limit, don’t you think?’ ಎನ್ನಬೇಕಾಯಿತು. ಫಲವೇನು? ನುಡಿಯುವುದನ್ನೂ ನುಡಿಯಬೇಕಾದುದ್ದನ್ನೂ ನುಡಿಯಬಹುದು; ನಡೆಯುವುದು, ನಡಸುವುದು ಎಷ್ಟು ಕಷ್ಟತರ ಎಂಬುದು ಜೀವನದ ಎಲ್ಲ ಪ್ರಕರಣಗಳಂತೆ. ನಮಗೆ ನಮ್ಮ ಕ್ಲಾಸಲ್ಲಿಯೂ ಪ್ರತಿದಿನ ಅನುಭವಕ್ಕೆ ಬರುತ್ತಿತ್ತು. ಒಮ್ಮೆ ನಾಲ್ಕೈದು ವರ್ಷ ವಯಸ್ಸಿನ ಒಬ್ಬ ಹುಡುಗ ‘ಹೋಗೋಣ ಬಾಪ್ಪ’ ಎಂಬ ಮರಾಠಿ ಮಾತನ್ನು ಬಳಸಿದ ಎಲ್ಲರೂ ಚಕಿತರಾದರು, ಸಂಕೋಚಪಟ್ಟರು. ಇನ್ನೂ ಒಂದೆರಡೂ ಪ್ರಸಂಗಗಳನ್ನು ನಾನು ಎತ್ತಲು ಬಯಸುವುದಿಲ್ಲ…..”

ಮುಂಬಯಿ ಒಂದು ಜನಸಾಗರ ಅಥವಾ ಜನಾರಣ್ಯ ಎಂಬುದು ಈಗ ಕ್ಲೀಷೆಯಾಗಿದೆ. ವಿ.ಸೀಯವರು ಮುಂಬಯಿಯಲ್ಲಿ ವಾಸವಾಗಿದ್ದ ಇಪ್ಪತ್ತರ ದಶಕಕ್ಕೂ ಅವರು ಆ ಕುರಿತು ಬರೆದ ಎಪ್ಪತ್ತರ ದಶಕಕ್ಕೂ ನಡುವೆ ಐವತ್ತು ವರ್ಷಗಳ ಅಂತರವಿದೆ. ಆದರೆ ಜನದಟ್ಟಣೆಯಲ್ಲಿ, ವಾಹನಗಳ ಓಡಾಟದಲ್ಲಿ, ಸದ್ದು ಗದ್ದಲಗಳಲ್ಲಿ, ಬದುಕಿನ ಬನ್ನ ಬವಣೆಗಳಲ್ಲಿ, ನಗರ ಜೀವನದ ಸಂಕೀರ್ಣತೆಯಲ್ಲಿ ಮುಂಬಯಿ ಆ ಕಾಲದಲ್ಲೂ ಅದ್ವಿತೀಯವೇ ಆಗಿತ್ತು. ಅದನ್ನು ವಿ.ಸೀಯವರು ಪುಸ್ತಕದ ಉದ್ದಕ್ಕೂ ಆಗಾಗ ಎತ್ತಿ ಆಡಿದ್ದಾರೆ. ಉಪಸಂಹಾರದ ಭಾಗದಲ್ಲಿ ತಮ್ಮ ಮುಂಬಯಿ ವಾಸದ ಫಲಶ್ರುತಿಯನ್ನು ಕಾಣಿಸಿದ್ದಾರೆ. ಮಾತ್ರವಲ್ಲ ವಿದೇಶ (ಎಂದರೆ ಪರಸ್ಥಳ) ವಾಸದಲ್ಲಿ ವ್ಯಕ್ತಿಗೆ ಆಗುವ ಲಾಭವೇನು, ನಷ್ಟ ಎಂತಹದ್ದು ಎಂಬುದನ್ನೂ ಕಾಣಿಸಿದ್ದಾರೆ :

“…..ಹೊರಗೆ ಒಂದು ಕಡೆ ನಾವು ಹೋಗಿ ನಿಂತರೆ ನಮಗೆ ಆ ಸ್ಥಳದ, ಜನದ ಜೀವನ ರೀತಿ, ಬದುಕಿನ ನಾನಾ ಪ್ರಕಾರಗಳ ತಿಳಿವಳಿಕೆ ಪಡೆದುಕೊಳ್ಳದೆ ದಡ್ಡರಾಗಿ ಹಿಂದಿರುವುದು ನಮ್ಮಲ್ಲಿ ಗುಣವೆಂದು ಏಣಿಸುವ ಮಡಿ ಬುದ್ಧಿ ಇದೆ. ಇದು ನಮಗೆ ವಸ್ತುಪರಿಜ್ಞಾನ. ಲೋಕಪರಿಜ್ಞಾನ ಇಲ್ಲದಂತೆ ಮಾಡಿದೆ. ಇಹಕ್ಕಿಂತ ಪರಕ್ಕೆ ಹೆಚ್ಚು ಪ್ರಾಧಾನ್ಯ ಎಂಬ ಮಂತ್ರೋಚ್ಛಾರಣೆ ಮಾಡುತ್ತಿದ್ದು ಎರಡರಿಂದಲೂ ವಂಚಿತರಾಗಿದ್ದೇವೆ. ಅಜ್ಞಾನವೇ ದೊಡ್ಡದೆಂದುಕೊಳ್ಳುತ್ತೇವೆ. ಓದಿಗೆಂದು ಕಪ್ಪುನೀರು ದಾಟಿ ಲಂಡನ್ ಗವರ್ ಸ್ಟ್ರೀಟಲ್ಲಿ ಯಾವುದೊ ಮುದುಕಿ ಮಾಡಿಹಾಕಿದ ಇಡ್ಡಲಿ ತಿಂದುಕೊಂಡು ಹರಣ ಭರಿಸಿ ಡಾಕ್ಟೋರೇಟ್ ಪಡೆಯುತ್ತೇವೆ; ಇಲ್ಲವೇ ಒಣದ್ರಾಕ್ಷಿ ತಿಂದುಕೊಂಡು ಸಾಗಿಸುತ್ತೇವೆ ಎನ್ನುವುದು ಸಂಯಮವಲ್ಲ, ಕ್ಷಾಮಸಾಧನೆ. ‘ಕಲ್ಲು ನೀರೊಳಗೆ ಎಷ್ಟು ದಿನವಿದ್ದರೇನು ಮೆದುವಾಗಬಲ್ಲದೆ? ಅಯ್ಯ’ ಎಂದ ಅಣ್ಣನವರ ನುಡಿ ಇಂಥಲ್ಲಿಗೂ ಒಪ್ಪುತ್ತದೆ. ಯಾವ ಯಾವ ಕಡೆಯ ಜನ ಯಾವ ಬಗೆಯ ಜೀವನಕ್ಕೆ ಸೇರುತ್ತಾರೆ, ನಗರದ ಶಕ್ತಿ, ನೈರ್ಮಲ್ಯ, ಸಂಪತ್ತಿಗಳಿಗೆ ದುಡಿಯುತ್ತಾರೆ, ಸುಖಭೋಗಲಾಲಸೆಗಳಿಗೆ ಬದುಕನ್ನು ಮಾರಿಕೊಳ್ಳುತ್ತಾರೆ, ಯಾವುದು ಬಲ, ಯಾವುದು ದೌರ್ಬಲ್ಯ, ಯಾವುದನ್ನು ಬೆಳೆಸಬೇಕು, ಯಾವುದಕ್ಕೆ ಅಡ್ಡಿ ಉಂಟುಮಾಡಿಕೊಳ್ಳಬೇಕು, ಬದುಕಬೇಕೆನ್ನುವವರು ವ್ಯಕ್ತಿಗಳಾಗಿ, ಜನತೆಯಾಗಿ, ಒಂದು ನಗರ ಜೀವನ ದೊಡ್ಡದಾಗಬೇಕಾದರೆ ಹೇಗೆ? ಎಂಬುದರ ಅರಿವಾಗಬೇಕೆಂದು ಒಳಮನಸ್ಸಿನಲ್ಲಿತ್ತು. ಆ ಸಣ್ಣ ವಯಸ್ಸಿನಲ್ಲಿ ಇದೆಲ್ಲ ಎಷ್ಟು ಮಟ್ಟಿಗೆ ಸಿದ್ಧಿಸುತ್ತಿತ್ತೊ ಕಾಣೆ. ಬಯಕೆಯೇನೋ ಬಲವೇ. ಆಧುನಿಕ ನಗರವೆಂಬುದರ, ಈ ದೇಶದ ಬೃಹತ್ ವ್ಯಾಪಾರೋದ್ಯೋಗಗಳ ರಾಜಧಾನಿ ಎನ್ನಬಹುದಾದ ಮಹಾನಗರದ ಅನುಭವ ಬರಬೇಕಾದರೆ ಬೊಂಬಾಯಂತಹ ಪಟ್ಟಣದಲ್ಲಿ ತಾನೆ? ಕಲ್ಕತ್ತ ಪಾಶ್ಚಿಮಾತ್ಯ ಬೆಡಗು, ಶಿಸ್ತು ಮೆರೆವ ಪಟ್ಟಣ, ವಿದೇಶಿ. ಇದರ ಜೀವನ ಪೂರ್ತಿ ಸ್ವದೇಶಿ. ವಿದೇಶದ ಸಂಪತ್ತೆಲ್ಲ ಇಲ್ಲಿನ ಜೀವನದೊಳಕ್ಕೆ ಬಂದು ಸೇರುತ್ತಿದ್ದರೂ ಇಲ್ಲಿ ಪ್ರತಿಷ್ಠೆ, ಮುಖ್ಯ ಪ್ರಾಬಲ್ಯ ಪಡೆದಿದ್ದುದು ಪಾರ್ಸಿ, ಗುಜರಾತಿ, ಮಾರವಾಡಿ ಎಂದರೆ ನಮ್ಮ ಜನದ್ದು. ಅವಿಶ್ರಾಂತವಾದ ಪೇಟೆಯ ಜೀವನ. ಕೊಳ್ಳುವುದು. ಮಾರುವುದು. ಲಾಭ, ನಷ್ಟ ಎರಡೇ ಈ ಊರು ಬಲ್ಲದ್ದು. ಇದರಲ್ಲಿ ಬೆರೆತು ಬೆಳೆಯಿತೊ: ಯಾರೂ ಈ ಲೆಕ್ಕ ಅಳತೆಗಳಲ್ಲಿ ಬೆಳೆಯಬಹುದು. ಸಂಸ್ಥೆ, ಸಮಾಜ, ವ್ಯಕ್ತಿ ಇಲ್ಲವಾದರೆ ಅಂಥದನ್ನು ಮುರಿಯುತ್ತದೆ ಬೊಂಬಾಯಿ. ಎಣಿಕೆಗೆ ಬರುವುದಿಲ್ಲ. ಬುದ್ಧಿವಂತನಾದ ಯಾವನೂ ಐದು ರೂಪಾಯಿ ಕೆಲಸಕ್ಕೆ ಸೇರಿಕೊಂಡು ಐದು ಹತ್ತು ವರ್ಷಗಳಲ್ಲಿ ಜಾಣತನ ಉಳ್ಳವನಾದರೆ ಲಕ್ಷಾಂತರ ರೂಪಾಯಿ ವಹಿವಾಟಿನ ಅನುಕೂಲಾವಕಾಶಗಳನ್ನು ದುಡಿಸಿಕೊಳ್ಳಬಹುದು. ಗಣ್ಯ, ಶ್ರೀಮಂತ ಬದುಕನ್ನು ಕಟ್ಟಿಕೊಳ್ಳಬಹುದು. ಆ ನಡುವೆ ಯಾವುದನ್ನು ಶುದ್ದ ಧರ್ಮ ಎನ್ನುತ್ತೇವೆಯೊ ಅದನ್ನು ಎಷ್ಟು ಮಟ್ಟಿಗೆ ಸಾಧಿಸಬಹುದು, ಎಂದೀರಿ. ಅಂಥವರಿಲ್ಲವೆ ಅಲ್ಲಿ? ಅದು ವ್ಯಾಪಾರದ ಬದುಕು ನಿಜ. ಆರ್ಥಿಕ ವ್ಯವಹಾರಕ್ಕೆ ಸಂಬಂಧಿಸಿದ ನಡವಳಿಕೆ, ಸ್ನೇಹ, ಸ್ನೇಹ ಮಂಡಲ, ಸಹಕಾರ ಮಂಡಲ, ಇವುಗಳಲ್ಲದೇ ಅಲ್ಲಿ ವ್ಯಾಪಕವಾಗಿರುವುದು. ಅದರಿಂದಲೂ ಮನಸ್ಸಿನ ಮೇಲೆ ದೊಡ್ಡ ಪರಿಣಾಮ ಆಗಬಾರದೆ? ಕಂಡಲ್ಲಿದೆ; ‘ನಾನಾ ಪರಿಯಲಿ ಸಂತೆ ನೆರೆದಂತೆ, ನಾನಪಂಥದ ಹಿಡಿದು ಹೋದಂತೆ’ ಎಂದು ದಾಸರು ಹೇಳುವ ಮಾತಿನ ಅರ್ಥಪರಿಚಯ ಅಲ್ಲಿ ನಿಜವಾಗಿ ಆದೀತು. ಯಾರೊ ಎಲ್ಲೆಲ್ಲಿನವರೊ ಏತೇತಕ್ಕೊ ಬಂದು ಸೇರುವರು. ಹಗಲೊ ರಾತ್ರಿಯೊ ಕೆಲಸ ಸಾಧಿಸಿಕೊಂಡು ಬೊಂಬಾಯಿಂದ ಹೊರಡುವರು. ಬಿಹಾರಿ, ಬೇಹಾರಿಜನ. ಅವರನ್ನು, ಆ ಮಂಡಲವನ್ನು ಸಂವೀಕ್ಷಿಸಬೇಡವೆ? ವಿದ್ಯಾವಂತರೆಂಬುವರಿಗೆ ಅಲ್ಲಿಗೇ ಸೇರಿದವರಂತೆ ಉಳಿದು ಸಂಸಾರ ಮಾಡಿಕೊಂಡಿರುವ ಜನ ಎಷ್ಟು ಮಂದಿ ಈ ದೊಡ್ಡ ವ್ಯವಹಾರಗಳಿಗೆ ಸಂಬಂಧಪಟ್ಟವರೊ ಹೇಳಲು ಶಕ್ಯವಿಲ್ಲ. ಪಾರ್ಸಿಯವರನ್ನು ಬಿಟ್ಟರೆ ದೊಡ್ಡ ಪ್ರಭಾವಗಳವರೆಲ್ಲ ಬಹುಮಟ್ಟಿಗೆ ಇಲ್ಲಿಗೆ ಬಂದು ಹೊರಟುಹೋಗುವವರು, ಅಲ್ಲಿಗೇ ಜೀವನ ಆಳದಲ್ಲಿ, ಕಚ್ಚಿಕೊಳ್ಳದೆ ಸೇರದೆ ಇರುವವರು, ದ್ರವ್ಯ ಸಂಪಾದಿಸಿ ಬೇರೆಲ್ಲಿಗೂ ಹೋಗುವವರು. ಇಲ್ಲಿಗೆ ಸೇರಿದ ಜೀವನಕ್ಕೆ ಸೇರಿದ, ಸೇರದಂತಹ ಜೀವನ ಅವರದು. ‘ಅಲ್ಲಿ ಇದೆ ನಮ್ಮ ಮನೆ, ಬಂದೆವಿಲ್ಲಿ ಸುಮ್ಮನೆ’ ಎಂಬುದು ಲೋಕಾತೀತ ಜೀವನ ರೀತಿ. ಲೋಕದ್ದು ಒಂದು ಸಂಪನ್ನ ಚಿತ್ರ ಕಟ್ಟಿಕೊಳ್ಳುವುದು ಅಗತ್ಯ. ಸಾಯುವಾಗ ಊರಿಗೆ ಹೋಗಿ ಸಾಯಿ, ಇರುವವರೆಗೂ ತಕ್ಕಂತೆ ಬಾಳು. ಬದುಕಿನ ಒಂದು ಮಂಡಲದಲ್ಲಿ ನಮ್ಮಂತಹರ ಬದುಕು ಒಂಟಿ. ಆ ಒಂಟಿತನಕ್ಕೆ ಹೊಂದಿಕೊಳ್ಳುವುದು ಕಷ್ಟ. ಅದರ ಭರಣ, ತಾರಣ ಇನ್ನೂ ಕಷ್ಟ, ದುರ್ಭರವಾಗಬಲ್ಲದು. “Alone, alone, all all alone, On a wide wide Sea ಎಂಬ ಮಾತು ವಿಸ್ತಾರವಾಗಿ ಹಬ್ಬಿದ ಸಾಗರದ ಮೇಲೆಯೇ ಅಲ್ಲ, ದಟ್ಟವಾದ ಜನಸಂದಣಿಯ ನಡುವೆ, ವ್ಯಾಪಾರೋದ್ಯೋಗಗಳ ನಡುವೆ, ಅದರ ತುಮುಲದ ನಡುವೆ ಸಿಕ್ಕಿಕೊಂಡ ಇಂಥ ಒಂಟಿ ಜೀವನ ಅಯ್ಯೊ ಎನಿಸುತ್ತದೆ. ಮಾಡುವುದೇನು? ಇದನ್ನು ನೋಡಬೇಕು-ಜೀವನದ ಒಂದು ದೊಡ್ಡ ಮುಖವನ್ನು ಅರ್ಥಮಾಡಿಕೊಳ್ಳಬೇಕಾದರೆ. ಅಲ್ಲಿ ಈಸಬೇಕು, ಇದ್ದು ಜಯಿಸಬೇಕು. ಮುಳುಗುವುದು ದುರ್ಬಲನ, ಹೇಡಿಯ, ಅಸಾಹಸಿಯ ಬದುಕು. ಬದುಕೇನು? ಸಾವು. ಅಂಥ ಅಣ್ಣಪ್ಪ ಊರಲ್ಲಿದ್ದರೂ ಒಂದೇ, ದಂಡದಲ್ಲಿದ್ದರೂ ಒಂದೇ; ಸೊನ್ನೆ, ವ್ಯರ್ಥ”.

ಪುಸ್ತಕದಲ್ಲಿ ಪ್ರಾಸಂಗಿಕವಾಗಿ ಸಣ್ಣದಾದರೂ, ಅತಿಮಹತ್ವದ ಒಂದು ಉಲ್ಲೇಖವಿದೆ. ಅದೇ ‘ವಿ.ಸೀತಾರಾಮಯ್ಯ’ ಎಂಬ ವ್ಯಕ್ತಿವಾಚಕ ನಾಮಪದವು ‘ವಿ.ಸೀ.’ ಎಂಬ ಎರಡಕ್ಷರಗಳ ಸಂಕೇತವಾಗಿ ಹೇಗೆ ಹ್ರಸ್ವವಾಯಿತೆಂಬುದರ ಸೂಚನೆ. ಹೊಸಗನ್ನಡದ ಆಚಾರ್ಯ ಪುರುಷರಲ್ಲಿ ಒಬ್ಬರಾದ ಪ್ರೊ. ಎ.ಆರ್. ಕೃಷ್ಣಶಾಸ್ತ್ರಿಯವರು ಬೆಂಗಳೂರು ಸೆಂಟ್ರಲ್ ಕಾಲೇಜಿನಿಂದ ‘ಪ್ರಬುದ್ಧ ಕರ್ನಾಟಕ’ ಪತ್ರಿಕೆಯನ್ನು ಪ್ರಾರಂಭಿಸಿದ ಹೊಸತರಲ್ಲೇ ವಿ.ಸೀತಾರಾಮಯ್ಯನವರನ್ನು ಪ್ರೀತಿಪೂರ್ವಕವಾಗಿ ಒತ್ತಾಯಿಸಿ, ಪತ್ರಿಕೆಗಾಗಿ ಒಂದು ಪುಸ್ತಕ ವಿಮರ್ಶೆಯನ್ನು ಬರೆಯಿಸಿ ಪತ್ರಿಕೆಯಲ್ಲಿ ಪ್ರಕಟಿಸಿದುದನ್ನೂ, ಆ ಅವಲೋಕನದ ಅಂತ್ಯದಲ್ಲಿ ಹೆಸರನ್ನು ಮೊಟಕು ಮಾಡಿ ಅರೆ ಇಂಗ್ಲಿಷ್, ಅರೆ ಕನ್ನಡದಲ್ಲಿ ‘ವಿ.ಸೀ’ ಎಂದು ಪ್ರಕಟಿಸಿದರೆಂಬುದನ್ನೂ ಜ್ಞಾಪಿಸಿದ್ದಾರೆ. ಮುಂದೆ ಈ ಎರಡಕ್ಷರಗಳಿಂದಲೇ ಪ್ರೊ. ವಿ. ಸೀತಾರಾಮಯ್ಯನವರು ಕನ್ನಡಿಗರ ಕಣ್ಣಿಗೆ ಕಟ್ಟಿ, ನೆನಪಿನಲ್ಲಿ ಉಳಿದರು.

ನಾನು ಈವರೆಗೆ ಅವಲೋಕಿಸಿದ ವಿ.ಸೀಯವರು ಎರಡು ಸ್ಮೃತಿ ಸಂಚಯಗಳಲ್ಲಿ ನನಗೆ ‘ಕಾಲೇಜ್ ದಿನ’ಗಳಲ್ಲಿ ಅಧಿಕ ಪಕ್ಷಪಾತ. ಎಂದರೆ ಅದರ ಗುಣಬಾಹುಳ್ಯ ಮತ್ತೊಂದರಲ್ಲಿ ಅದೇ ಪ್ರಮಾಣದಲ್ಲಿ ಇಲ್ಲ ಎಂಬ ಅರ್ಥ ಅಲ್ಲವೇ ಅಲ್ಲ. ಮುಖ್ಯಕಾರಣ ನನ್ನ ಮನೋಧರ್ಮ. ಅದನ್ನು ಓದುತ್ತಿರುವಂತೆ ನನ್ನ ಕಾಲೇಜಿನಲ್ಲಿ ಒಂದು ವಿದ್ಯಾರ್ಥಿ ಜೀವನ, ಆಮೇಲೆ ಒಂದು ಕಾಲೇಜಿನಲ್ಲಿ ಮಾಡಿದ ಅಧ್ಯಾಪನಗಳ ನೆನಪು ಮರುಕೊಳಿಸುತ್ತದೆ. ಮತ್ತೊಂದು ಕಾರಣ ಕಾಲೇಜ್ ದಿನಗಳಲ್ಲಿ ವಣಿತವಾದ ಆವರಣ ಮೈಸೂರಿನದು, ಮಹಾರಾಜ ಕಾಲೇಜಿನದು. ಎರಡನೆಯದರಲ್ಲಿ ಚಿತ್ರಿತವಾದದ್ದು ಮುಂಬಯಿ ಮಹಾನಗರದಲ್ಲಿ ವಿ.ಸಿಯವರ ನಿರುದ್ಯೋಗ ಪರ್ವ. ಒಂದು ಈ ಮೊದಲೇ ಹೇಳಿದ ಕಣ್ವಾಶ್ರಮದಂತೆ ‘ಶಾಂತ’ವಾದರೆ ಮತ್ತೊಂದು ಹಸ್ತನಾವತಿಯಂತೆ ‘ಸಂಕೀರ್ಣ’. ನನಗೆ ಮುಂಬಾಯಿಯನ್ನು ಕಲ್ಪಸಿಕೊಂಡಾಗಲೇ ಭಯವಾಗುತ್ತದೆ. ಹಾಗಿದರೂ ‘ಮುಂಬಯಿವಾಸ’ದ ಬರವಣಿಗೆ ಚೆಲುವನ್ನು ಅಲ್ಲಗಳೆಯುಲಾರೆ. ಡಾ. ಬಿ.ಪಿ. ರಾಧಾಕೃಷ್ಣರು ತಮ್ಮ ‘ಸಾರ್ಥಕ ಬದುಕಿ’ನಲ್ಲಿ ‘ಮುಂಬಯಿವಾಸ’ವನ್ನು ಕುರಿತು ಹೀಗೆ ಹೇಳಿದ್ದಾರೆ. “ಅತ್ಯುತ್ತಮ ಪ್ರವಾಸ ಕಥನ….. ಇಂಥ ಸೊಗಸಿನ ಬರವಣಿಗೆ ಇಂಗ್ಲಿಷಿನಲ್ಲೂ ವಿರಳ…… ಇಂಗ್ಲಿಷಿಗೆ ಭಾಷಾಂತರಗೊಂಡರೆ ಬಹುಜನ ಓದಿ ಮೆಚ್ಚಬಹುದು”. ಇದಕ್ಕಿಂತ ಹಿಂದೆ ಅವರು ಇನ್ನೊಂದು ಮಾತು ಹೇಳಿದ್ದಿದೆ. “ಈ ಪುಸ್ತಕ ಬಹುಜನರ ಕಣ್ಣಿಗೆ ಬಿದ್ದಂತಿಲ್ಲ, ಈ ಪುಸ್ತಕದ ವಿಮರ್ಶೆ ನಾನು ಓದಿದ ನೆನಪಿಲ್ಲ. ವಿ.ಸೀ ಕೃತಿಗಳ ಬಗ್ಗೆ ಬರೆದಿರುವ ಯಾರೂ ಈ ಪುಸ್ತಕವನ್ನು ಪ್ರಸ್ತಾಪಿಸಿಲ್ಲ”. ಒಮ್ಮೆಮ್ಮೆ ಕನ್ನಡಿಗರಲ್ಲಿ ಅತಿ ಧಾರಾಳತನವಾದರೆ ಕೆಲವೊಮ್ಮೆ ಎಲ್ಲೂ ಇಲ್ಲದ ಕಾರ್ಪಣ್ಯ. ಇದು ಕನ್ನಡದ ಒಂದು ವೈಚಿತ್ಯ್ರ. ಹೆಚ್ಚು ಕಡಿಮೆ ವಿ.ಸೀಯವರ ಎಲ್ಲ ಕೃತಿಗಳಿಗೂ ಈ ಮಾತು ಒಪ್ಪುತ್ತದೆ. ವಿ.ಸೀಯವರದು ಸುಮಾರು ಆರುವತ್ತು ವರ್ಷಗಳ ಸಾಹಿತ್ಯದ ಕೃಷಿ. ಆದರೆ ಅವರ ಪುಸ್ತಕಗಳ ಸಹೃದಯ ವಿಮರ್ಶೆಗಳು ಬಂದದ್ದು ತೀರ ಕಡಿಮೆ.

‘ಮುಂಬಯಿ ವಾಸ’ದಲ್ಲಿ ವ್ಯಕ್ತಿ, ಸ್ಥಳ, ಸಂದರ್ಭಗಳ ವರ್ಣನೆಗಳು, ವಿ.ಸೀಯವರ ಉದ್ಯೋಗ ಜೀವನಕ್ಕೆ ಸಂಬಂಧಿಸಿದ ವಿವರಣೆಗಳು ಮನೋಜ್ಞವಾಗಿವೆ. ಭಾಷಾ ಶೈಲಿಗಳು ಅವಕ್ಕೆ ತಕ್ಕಂತೆ ಸಮುಚಿತವಾಗಿವೆ. ಆದರೂ ‘ಕಾಲೇಜ್ ದಿನ’ಗಳಲ್ಲಿರುವ ಸುಕುಮಾರತೆಯನ್ನು ಇಲ್ಲಿ ಕಾಣಲಾಗದು. ಇಲ್ಲವೆಂದಲ್ಲ-ಕಡಿಮೆಯಾಗಿದೆ. ವಿ.ಸೀಯವರ ಭಾಷಾಶೈಲಿ ಬರಬರುತ್ತ ಪೆಡಸಾದದ್ದಕ್ಕೆ ಈ ಒಂದು ನಿದರ್ಶನ, ಪ್ರಶ್ನೆ, ಉದ್ಗಾರ, ವಿವರಣ ಚಿಹ್ನೆಗಳ ಬಾಹುಳ್ಯವೂ ಅನೇಕ ಪದಪ್ರಯೋಗಳ ಕ್ಲಿಷ್ಟತೆಯೂ ಓದುಗನನ್ನು ಕೆಂಗಡಿಸುತ್ತವೆ. ಸ್ವತಃ ವಿ.ಸೀಯವರೇ ಅದನ್ನು ಒಪ್ಪಿಯೂ ಇದ್ದಾರೆ. ನಂದಿಬೆಟ್ಟವನ್ನು ಕಾಲ್ನಡಿಗೆಯಲ್ಲಿ ಏರುವುದು ಕಷ್ಟ. ಆದರೆ ಮೇಲಕ್ಕೇರಿ ಬೆಟ್ಟದ ನೆತ್ತಿಯ ಮೇಲೆ ನಿಂತು ನಾಲ್ದೆಸೆಗಳಿಗೆ ನೋಟವನ್ನು ಹಾಯಿಸಿದಾಗ ಒದಗುವ ಸುಖ ಕೇವಲ ಅನುಭವ ವೇದ್ಯ. ‘ಮುಂಬಯಿವಾಸ’ದಂತಹ ಪುಸ್ತಕವನ್ನು ಸಹನೆಯಿಂದ ಪಠಿಸಿದಾಗ ಆಗುವ ಸಂತೋಷವೂ ಅದೇ ಬಗೆಯದು. ಇಲ್ಲೇ ಇನ್ನೊಂದು ಮಾತನ್ನೂ ಹೇಳಬಹುದು. ಕನ್ನಡ ಪದಕೋಶಕ್ಕೆ ವಿ.ಸೀಯವರ ಕೊಡುಗೆ ಮರೆಯುವಂತಹದ್ದಲ್ಲ. ಶಬ್ದಗಳನ್ನು ನಿರ್ದಿಷ್ಟಾರ್ಥದಲ್ಲಿ, ವಿಶಿಷ್ಟರೂಪದಲ್ಲಿ ಅವರು ಪ್ರಯೋಗಿಸುತ್ತಾರೆ, ಮತ್ತು ಅನೇಕ ಪದಸ್ವಷ್ಟಿ ಮಾಡಿದ್ದಾರೆ. ಉದಾ: ಹಾರ್ದ, ವಿಲಾಸ, ಸೇರುವ, ಮನೆವಿ, ಹಾಯು, ನೆಲಸು ಇತ್ಯಾದಿ. ಇಂತಹ ಎಷ್ಟೋ ಪ್ರಯೋಗಗಳನ್ನು ಎರಡೂ ಪುಸ್ತಕಗಳಲ್ಲಿ ಕಾಣಬಹುದು.

ಎರಡು ಅಂಶಗಳನ್ನು – ಈ ಎರಡೂ ವಿ.ಸೀಯವರ Treait, ವ್ಯಕ್ತಿವೈಲಕ್ಷಣ್ಯ ಎನ್ನಬಹುದಾದುವು – ಹೇಳಿ ಈ ಉಪನ್ಯಾಸವನ್ನು ಮುಗಿಸುತ್ತೇನೆ :

ವಯಸ್ಸು, ವರ್ಚಸ್ಸು, ವೈದುಷ್ಯ ಎಲ್ಲದರಲ್ಲೂ ಅವರು ನನಗಿಂತ ಎಷ್ಟೋ ಎತ್ತರದವರು. ನನ್ನ ಕೈಗಳನ್ನು ಅವರ ಪಾದಗಳ ಮೇಲಿರಿಸಿ ಮುಗಿಯಬೇಕಾದವನು, ಗುರುಭಾವದಿಂದ ಅವರನ್ನು ತಲೆಯೆತ್ತಿ ನೋಡಬೇಕಾದವನು ನಾನು, – ಅಷ್ಟು ಕಿರಿಯ. ಅವರೋ ತಮ್ಮ ಬಲಗೈಯನ್ನು ನನ್ನ ತಲೆ ಮೇಲಿರಿಸಿ ಹರಸತಕ್ಕ ಹಿರಿಯರು ಹಾಗೆ ಹರಸಿದರು. ಅವರಲ್ಲಿ ನನಗಿರುವ ಈ ಪೂಜ್ಯ ಭಾವದಿಂದ, ನಮ್ರತೆಯಿಂದ ಆಯೆರಡು ಅಂಶಗಳನ್ನು ಬರೆಯುತ್ತಿದ್ದೇನೆ. ಒಂದು ರೀತಿಯಲ್ಲಿ ಆಯೆರಡೂ ಸಂಗತಿಗಳನ್ನು ತಾವೆಲ್ಲರೂ ತಿಳಿದಿರಲೇಬೇಕು. ಏಕೆಂದರೆ ತಾವೆಲ್ಲ ಅವರ ಅಂತರಂಗ ಪ್ರವೇಶಿಸಿದವರು, ಆತ್ಮೀಯರು.

ವಿ.ಸೀಯವರನ್ನು ಸ್ನೇಹ ವಿಶ್ವಾಸಗಳಿಂದ ಆದರಿಸುತ್ತಿದ್ದ ಡಾ. ಶಿವರಾಮಕಾರಂತರು ಆಡಿದ ಒಂದು ಮಾತನ್ನು ತಾವೆಲ್ಲ ಕೇಳಿರಬೇಕು. ಅದೆಂದರೆ, “ಲೋಕದಲ್ಲಿ ಹಲವರು ಹಲವು ರೀತಿಯಿಂದ ಕೆಟ್ಟಿದ್ದಾರೆ. ಆದರೆ ರುಚಿ ಶುದ್ಧಿಯಿಂದ ಕೆಟ್ಟವರಿದ್ದರೆ ಅದು ವಿ.ಸೀತಾರಾಮಯ್ಯ”! ಇದು ನಿಂದೆಯಲ್ಲ, ನಿಂದಾಸ್ತುತಿಯೆಂಬುದು ಸ್ಪಷ್ಟ. ಊಟ ಉಪಾಹಾರಗಳಲ್ಲಿ, ಉಡುಗೆ ತೊಡುಗೆಗಳಲ್ಲಿ ವಿ.ಸೀಯವರ ರುಚಿಪಕ್ಷಪಾತ, ಪರಿಷ್ಕಾರ ದ್ವಷ್ಟಿಗಳ ಬಗೆಗೆ ಹಲವರು ಬರೆದದ್ದುಂಟು. ಗೋಕಾಕರ ಕವಿತೆಯನ್ನು ಹಿಂದೆ ಪ್ರಸ್ತಾವಿಸಿದೆ. ಬಿ.ಜಿ.ಎಲ್.ಸ್ವಾಮಿಯವರ ‘ಪಂಚ ಕಲಶ ಗೋಪುರ’ ಮತ್ತು ಎಸ್.ಆರ್. ರಾಮಸ್ವಾಮಿಯವರ ‘ದೀವಟಿಗೆಗಳ’ಲ್ಲಿರುವ ಲೇಖನಗಳನ್ನು ಓದಿಕೊಂಡರೆ ಈ ಅಭಿಪ್ರಾಯಕ್ಕೆ ಪುಷ್ಟಿ ದೊರಯುತ್ತದೆ. ವಿ.ಸೀಯವರ ಬರವಣಿಗೆಗಳಲ್ಲಿ ಭಕ್ಷ್ಯ ಭೊಜ್ಯ, ಶಾಕ ಪಾಕಗಳ ಪರಿಠವಣೆ ಆಗಾಗ ಕಾಣಸಿಕೊಳ್ಳುತ್ತವೆ. ದೋಸೆ, ಬದನೆ, ಸೀಕರಣೆಗಳ ಬಗೆಗೆ ಅವರು ಪ್ರಬಂಧಗಳನ್ನೇ ಬರೆದಿದ್ದಾರೆ. ಎಲ್ಲೋ ತಿಂದ ಕಚ್ಚಾಯ, ಕುಡಿದ ಪಾನಕ, ಸವಿದ ಪಾಯಸಗಳನ್ನು ಅವರು ಆಗಾಗ ನೆನೆಯುತ್ತಾರೆ. ಕಾಲೇಜ್ ದಿನಗಳಲ್ಲೂ ಮುಂಬಯಿ ವಾಸದಲ್ಲೂ ತಿಂಡಿ ತೀರ್ಥಗಳನ್ನು ರುಚಿರುಚಿಯಾಗಿ ವರ್ಣಿಸಿ ಓದುಗರ ಬಾಯಲ್ಲೂ ನೀರೂರುವಂತೆ ಮಾಡುತ್ತಾರೆ.

ಭಕ್ಷ್ಯ ಭೋಜ್ಯ, ವೇಷ ಭೂಷಣಾದಿಗಳ ವಿಷಯದಲ್ಲಿ ವಿ.ಸೀಯವರ ರುಚಿ ಶುದ್ಧಿ ಅತ್ಯಂತ ಶ್ಲಾಘನೀಯವಾದದ್ದು. ಅನುಸರಣೀಯವಾದದ್ದೂ ಹೌದು. ಅವರು ಅವುಗಳನ್ನು ವರ್ಣಿಸುವ ರೀತಿಯೂ ಸುಭಗವಾದದ್ದು. ಆದರೆ ಅದರ ಪುನರುಕ್ತಿ. ಪುನರಾವೃತ್ತಿಗಳು ಉಚಿತಕ್ಕಿಂತ ಹೆಚ್ಚೆಂದು ತೋರಿ ಏಕತಾನತೆಯನ್ನು ಉಂಟುಮಾಡುತ್ತವೆ. ವಿ.ಸೀಯವರಿಗೆ ಅದಮ್ಯ, ಅಮಿತ ಜಿಹ್ವಾಚಾಪಲ್ಯ ಎಂಬ ಭಾವನೆಗೆ ಎಡೆಮಾಡುತ್ತವೆ. ಪಾಯಸದಲ್ಲಿ ದ್ರಾಕ್ಷಿ, ಏಲಕ್ಕಿ, ಗೋಡಂಬಿಗಳು ಒಂದು ಪ್ರಮಾಣದಲ್ಲಿರಬೇಕು. ಆದರೆ ಅವುಗಳೇ ತುಂಬಿಕೊಂಡರೆ ಹೇಗೆ?

ಇನ್ನೊಂದು ಅಂಶ ವಿ.ಸೀಯವರ ಸ್ವನಿರಾಕರಣೆ – Self negation’ ವಿ.ಸೀಯವರು ಸ್ವಭಾವತಃ ನಿರಾಶವಾದಿಯಲ್ಲ, ವಿಧಿವಾದಿಯಲ್ಲ, ಪಲಾಯನವಾದಿಯೂ ಅಲ್ಲ; ಅವರು ಪುರುಷ ಪ್ರಯತ್ನ ಆತ್ಮವಿಶ್ವಾಸಗಳ ಪ್ರತಿಪಾದಕರು. ಅವರ ‘ಅಭೀಃ’, ‘ವಿಶ್ವಾಸ’ಗಳಂತಹ ಕವಿತೆಗಳನ್ನು ಓದಿದರೆ ಅದು ತಿಳಿಯುತ್ತದೆ. ‘ಕಾಲೇಜ್ ದಿನಗಳಲ್ಲಿ’ ಅವರು ಉಲ್ಲೇಖಿಸಿರುವ ವಿಲಿಯಂ ಹೆನ್ಲೆಯ ಆವೊಂದು ಕವಿತೆ ‘ನನ್ನ ವಿಧಿಯ ಮೇಲಧಿಕಾರವೆನ್ನದೇ, ಕಫ್ತಾನ ನಾನೆ ನನ್ನಾತ್ಮಕೆ’ ಎನ್ನುತ್ತದೆ. ಕಾಲೇಜ್ ದಿನಗಳಲ್ಲೇ ಒಂದು ಸಣ್ಣ ಪ್ರಸಂಗವಿದೆ : ನಿರ್ದಿಷ್ಟ ಅವಧಿಯಲ್ಲಿ ಕಾಲೇಜ್ ಫಿಯನ್ನು ತೆರೆದಿದ್ದವರಿಗೆ ಜುಲ್ಮಾನೆ ಹಾಕುವುದು ಒಂದು ಕ್ರಮ. ಒಮ್ಮೆ ವಿ.ಸೀಯವರೂ ಅಂತಹ ಜುಲ್ಮಾನೆ ತೆರಬೇಕಾಗಿ ಬಂತು. ಆದರೆ ಪ್ರಿನ್ಸಿಪಾಲ್ ರೆಡ್ಡಿಯವರನ್ನು ಭೇಟಿ ಮಾಡಿ ತಮ್ಮ ಕಷ್ಟವನ್ನು ಹೇಳಿ ವಿನಾಯಿತಿಯನ್ನು ಕೋರಿದರು. ಅವರು ‘ಆಗುವುದಿಲ್ಲ, ಒಬ್ಬನಿಗೆ ಮಾಫಿ ಮಾಡಿದರೆ ಮಿಕ್ಕವರೂ ಕೇಳಿಬರುತ್ತಾರೆ ಎಂದರು. ಹಾಗೆ ಅವರು ಹೇಳಿದ್ದರೂ ಬೇರೆಯವರಿಗೆ ವಿನಾಯಿತಿ ತೋರಿದ್ದಾರೆಂಬುದು ವಿ.ಸೀಯವರಿಗೆ ತಿಳಿಯಿತು. ಅದನ್ನು ತಿಳಿದಾಗ ವಿ.ಸೀ ಹುಡುಗನಾದರೆ ಏನು? ಕೋಪ ಬಂತು. ಮತ್ತೊಮ್ಮೆ ಪ್ರಿನ್ಸಿಪಾಲ್ ರೂಮಿಗೆ ಸಂಭ್ರಮದಿಂದ ಹೋಗಿ ನಿಲ್ಲುತ್ತಾರೆ. ತಮಗೂ ವಿನಾಯಿತಿಯನ್ನು ಪಡೆದೇ ತೀರುತ್ತಾರೆ. ಅದು ಒಂದು ರೀತಿಯ ಆಗ್ರಹ, ಸದಾಗ್ರಹ. ಆತ್ಮಪ್ರತ್ಯಯದ ಲಕ್ಷಣ. ವೈಚಿತ್ಯ್ರವೆಂದರೆ ಅದಕ್ಕೆ ವಿರುದ್ಧವಾದ ಅನೇಕ ಉಲ್ಲೇಖಗಳು ವಿ.ಸೀಯವರ ವಾಙ್ಮಯದಲ್ಲಿ ಗೋಚರಿಸುತ್ತವೆ. ಸ್ವನಿರಾಕರಣೆ ಒಂದು ದೃಷ್ಟಿಯಿಂದ, ವಿನಯ ಶೀಲತೆಯಾದರೂ ಅದು ದೀನತೆಯ ಮಟ್ಟಕ್ಕೆ ಇಳಿಯಬಾರದು. ವಿ.ಸೀಯವರಲ್ಲಿ ವಿನಯ ಪರತೆಗೂ ದೀನತೆಗೂ ಒಮ್ಮೊಮ್ಮೆ ಅಂತರವೇ ಕಾಣುವುದಿಲ್ಲ. ಬಾಲ್ಯ ಜೀವನದಲ್ಲಿ ಕಂಡುಂಡ ನೋವು ಕಾವು, ಪ್ರಬುದ್ಧ ಜೀವನದಲ್ಲೂ ಅವರು ಅನುಭವಿಸಿರಬಹುದಾದ ಆಶಾಭಂಗ, ಅವರ ಕೃತಿಗಳನ್ನು ಕುರಿತು ಸಾಧಾರಣವಾದ ಒಂದು ಅವಜ್ಞೆ ಇವೆಲ್ಲ ಒಂದುಗೂಡಿ ‘Obsession’ ನಿತ್ಯದ ಗೀಳು ಎಂಬಂತೆ ಅವರ ಅಂತರಂಗವನ್ನು ಕೊರೆಯುತ್ತಿದ್ದಿರಬೇಕು. ಅದರ ಬಹಿಃಪ್ರಕಟಣೆಯೇ ದೀನತೆಯ ಮಟ್ಟಕ್ಕಿಳಿದ ಈ ಸ್ವನಿರಾಕರಣೆ. ‘ಕಾಲೇಜ್ ದಿನಗಳ’ಲ್ಲೂ ‘ಮುಂಬಯಿ ವಾಸ’ದಲ್ಲೂ ರಸಾನ್ನದೊಂದಿಗೆ ಸೇರಿ ಹಲ್ಲಿಗೆ ತಾಗಿ ನೋವುಂಟು ಮಾಡುವ ಹರಳು ಕಲ್ಲುಗಳಂತಿರುವ ಇಂತಹ ವಾಕ್ಯ ಸಂದೋಹಗಳನ್ನು ಕಾಣುತ್ತೇವೆ. (ವಿ.ಸೀಯವರ ಇತರ ಕೃತಿಗಳಲ್ಲೂ ಇಂತಹ ಅನೇಕ ಉದ್ಗಾರಗಳಿವೆ, ಅವುಗಳ ಉದ್ಭರಣ ಇಲ್ಲಿ ಅಪ್ರಕೃತ.) ಒಂದಾನೊಂದು ಪರೀಕ್ಷೆಯಲ್ಲಿ ಅವರು ಹತ್ತರಲ್ಲಿ ಒಂಬತ್ತು ಅಂಕಗಳಿಸಿದ್ದರೂ “ಎಂದಿಗೂ ನಾನು ಸೆಕೆಂಡ್ ಕ್ಲಾಸ್ ಶಾಪಗ್ರಸ್ತ” ಎಂದು ನೊಂದುಕೊಳ್ಳುತ್ತಾರೆ. ಮತ್ತೊಂದು ಕಡೆ “ಆಗಲೂ ನಾನು ಅರ್ಥಶಾಸ್ತ್ರಿಯಲ್ಲ, ಈಗಲೂ ಅಷ್ಟಕಷ್ಟೆ” ಎನ್ನುತ್ತಾರೆ. (ವಾಸ್ತವಾಂಶವೆಂದರೆ ಕನ್ನಡದಲ್ಲಿ ಅರ್ಥಶಾಸ್ತ್ರವನ್ನು ಕುರಿತು ಪ್ರಮಾಣ ಭೂತವಾದ ಗ್ರಂಥರಚಿಸಿದ ಆದ್ಯರೇ ಅವರಾಗಿದ್ದಾರೆ!) “ತೂಕ, ಗಾತ್ರ, ಎತ್ತರ ಯಾವುದರಲ್ಲಿಯೂ ಅಷ್ಟೇನೂ ಕಣ್ಣಿಗೆ ಹೊಡೆಯಲಾರದ ವ್ಯಕ್ತಿತ್ವ ನನ್ನದು” ಎಂಬುದು ಮತ್ತೊಂದು ಮಾತು. “…..ನನ್ನ ಮುಖದಲ್ಲಿ ನಗೆ ಅರಳಿ ಕಾಣುವುದಿಲ್ಲವೇನೋ….. ನನ್ನಂಥವರಿಗೆ ಹಾಗೆಯೇ ಏನೋ….” ಎಂಬುದು ಇನ್ನೊಂದು ಉದ್ಗಾರ. “ಆ ಸಣ್ಣ ವಯಸ್ಸಿಗೆ ನನ್ನ ಮುಖ ಎಷ್ಟು ಮುದಿ ಬಿದ್ದಿತ್ತೊ….” ಎಂಬ ನಿಟ್ಟಿಸಿರು ಹೊಮ್ಮುತ್ತದೆ ಯಾವುದೋ ಪ್ರಸಂಗದಲ್ಲಿ. “…. ಇಪ್ಪತ್ತೈದಕ್ಕೆ ನನಗೆ ಮದುವೆಯಾದಾಗ ‘ಇದು ಯಾವುದೋ ಒಂದು ಹಳೆಯ ಮುದಿ….’ ಎಂದುಕೊಂಡಂತೆ!” ಎಂಬುದು ತಮ್ಮ ಬಗೆಗೆ ಬರೆದುಕೊಂಡ ಒಂದು ಶಿಫಾರಸ್ಸು!.

ಎರಡೂ ವಸ್ತುಗಳಿಂದ ಇಂತಹ ಎಷ್ಟೋ ಮಾತುಗಳನ್ನು ಎತ್ತಿ ತೋರಬಹುದು. ಇಷ್ಟು ಸಾಕು. – ಎಲ್ಲವುಗಳ ಒಳದನಿ, ಒಳನೋವು, ಒಂದೇ ಬಗೆಯದು. ಅವು ಹಾಗಿರಲಿ, ಎಲ್ಲ ಬಿಟ್ಟು ತಮ್ಮ ‘ವಿ.ಸೀ’ ಎಂಬ ಸಂಕ್ಷಿಪ್ತನಾಮದ ಬಗೆಗೂ ಅವರಿಗೆ ಅಸಮಾಧಾನ. “ಅರೆ ಇಂಗ್ಲಿಷ್, ಅರೆ ಕನ್ನಡ ನನ್ನ ಬಾಳಿನ ಅಖಂಡ ದೌರ್ಭಾಗ್ಯ!” ಎಂದು ಹೆಸರಿನ ಬಗೆಗೂ ನಿಟ್ಟುಸಿರು ಬಿಡುತ್ತಾರೆ. ಆದರೆ ನನ್ನಂತಹವರಿಗೆ ‘ವಿ.ಸೀ’ ಎಂಬ ಎರಡಕ್ಷರ ಮಂತ್ರ ಸದೃಶವಾಗಿ, ಪೂಜ್ಯಭಾವನೆಯನ್ನೇ ಪ್ರಚೋದಿಸುತ್ತದೆ.

ವಿ.ಸೀಯವರ ಸಮಕಾಲೀನ ಸಾಹಿತಿಗಳಲ್ಲಿ ಎಲ್ಲರೂ ಬೆಳ್ಳಿಯ ಚಮಚೆಯನ್ನು ಬಾಯಲ್ಲಿಟ್ಟುಕೊಂಡೇ ಹುಟ್ಟಿದವರಲ್ಲ. ಕವಿ ಮುದ್ದಣ ಉದ್ಘೋಷಿಸಿದಂತೆ ‘ಭವತಿ ಭಿಕ್ಷಾಂ ದೇಹಿ’ ಎಂಬ ಸಪ್ತಾಕ್ಷರೀ ಮಂತ್ರ ಧಾರಣೆ ಮಾಡದಿದ್ದರೂ ಕಷ್ಟ ಕಾರ್ಪಣ್ಯಗಳನ್ನು ಕಂಡವರು, ಅವುಗಳಲ್ಲಿ ಬೆಂದವರು ಅನೇಕರಿದ್ದಾರೆ. ಬೇಂದ್ರೆಯವರು ಒಮ್ಮೆ, “ದಾರಿದ್ಯ್ರ ಲಕ್ಷ್ಮಿ ನನ್ನ ಮನೆ ಹೊಸ್ತಿಲಲ್ಲೇ ನಿಂತಿದ್ದಾಳೆ, ಆದರೂ ನನ್ನ ರೊಟ್ಟಿಮೇಲೆ ತುಪ್ಪ ಬೀಳದೆ ನಾನು ಉಂಡದ್ದಿಲ್ಲ” ಎಂಬ ಅರ್ಥದ ಮಾತುಗಳನ್ನು ಆಡಿದ್ದರು. ವಿ.ಸೀಯವರಿಗೆ ಆತ್ಮೀಯರೇ ಆಗಿದ್ದ ಸೇಡಿಯಾಪು ಕೃಷ್ಣಭಟ್ಟರು ಜನ್ಮಾರಭ್ಯ ಅನಾರೋಗ್ಯ ಪೀಡಿತರು; ತಾರುಣ್ಯದಲ್ಲೇ ಒಂದು ಕಣ್ಣನ್ನು, ಅಪರ ಬಯಸ್ಸಿನಲ್ಲಿ ಮತ್ತೊಂದನ್ನು ಕಳಕೊಂಡವರು. ಶಾಲಾ ಮೇಷ್ಟ್ರು, ಹೈಸ್ಕೂಲು ಪಂಡಿತ, ಕಾಲೇಜ್ ಲೆಕ್ಚರರ್ ಹೀಗೆ ನಾನಾ ವೃತ್ತಿಗಳನ್ನು ಮಾಡಿ, ಕಾಲೇಜಿನಿಂದ ನಿವೃತ್ತರಾಗುವ ಕಾಲಕ್ಕೆ ಅವರ ಪಡೆದ ಪರಮಾವಧಿ ಪಗಾರ ಮೂರಂಕೆಯನ್ನೂ ಮೀರಿರಲಿಲ್ಲ! ಜತೆಗೆ ವೈದ್ಯಕದಿಂದ ಒಂದಿಷ್ಟು ಸಂಪಾದನೆ, ಅಷ್ಟೇ, ಆದರೆ ಅವರೆಂದಿಗೂ ‘ಅಯ್ಯೋ’ ಎಂದವರಲ್ಲ, ಅನಾರೋಗ್ಯ, ಅಂಧತ್ವ, ವೃದ್ಧಾಪ್ಯಗಳಿಂದ ಜರ್ಝರಿತವಾದರೂ ಕೊನೆಯವರೆಗೂ ಮೊಗವನೆತ್ತಿನಡೆದವರು. ವಿ.ಸೀಯವರನ್ನು ಗುರು ಸದ್ವಶರೆಂದು ಭಾವಿಸಿದ್ದ ರಾಜರತ್ನಂ ಪಟ್ಟ ಪಾಡು ದೇವರಿಗೇ ಪ್ರೀತಿ! ಎಂ.ಎ. ಪದವೀಧರರಾದ ಹತ್ತು ವರ್ಷಗಳ ಅನಂತರ ಅಧ್ಯಾಪಕ ವೃತ್ತಿ. ಬೆಂಗಳೂರು ಸೆಂಟ್ರಲ್ ಕಾಲೇಜಿನಿಂದ ನಿವೃತ್ತರಾಗುವಾಗ ಅವರ ಪದನಾಮ “ರೀಡರ್”. ಅದು ಇಪ್ಪತ್ತೈದು ವರ್ಷಗಳ ಅಧ್ಯಾಪನದ ಅಂತ್ಯದಲ್ಲಿ ಅವರು ಏರಿದ ಶಿಖರ! ಹಾಗಿದ್ದರೂ ಅವರು ರಾಜಮಾರ್ಗದಲ್ಲೇ ಕ್ರಮಿಸಿದರು. ಇಂತಹ ಅನೇಕ ಉದಾಹರಣೆಗಳನ್ನು ಕೊಡಬಹುದು, ಆದರೆ ಅದು ಅನವಶ್ಯಕ. ಕನ್ನಡ ಸಾರಸ್ವತ ಲೋಕದಲ್ಲಿ ವಿ.ಸೀಯವರು ಒಂಟಿಯಲ್ಲ ಎಂಬುದಕ್ಕಾಗಿ ಮಾತ್ರ ಆ ಪ್ರಸ್ತಾವ. ವಿಸ್ತಾರವಾದ, ಗಂಭೀರವಾದ ಅಧ್ಯಯನ, ಅನಿತರ ಸಾಧಾರಣ ಸ್ವೋಪಜ್ಞತೆ, ಕಾರಯತ್ರೀ ಭಾವಯತ್ರೀ ಪ್ರತಿಭಾ ಸಮನ್ವಯ, ಅನೇಕ ಖ್ಯಾತನಾಮರ ಸಂಪರ್ಕ ಮತ್ತು ಸಾಮೀಪ್ಯ, ವಿವಿಧ ಪದಾಧಿಕಾರ ಎಲ್ಲವೂ ವಿ.ಸೀಯವರಿಗೆ ಸಿದ್ಧಿಸಿದ್ದವು, ಲಭಿಸಿದ್ದುವು. ಆದರೂ….. ಆದರೂ….. ಏನೋ ಕೊರತೆ, ಏನೋ ಅರಕೆ, ಒಳಗೊಳಗೇ ಕೊರಗು! ಅದು ವಿ.ಸೀ!

ಕೆ.ವಿ. ಅಯ್ಯರ್ ಬರೆದ ‘ಕೈಲಾಸಂ’ ಗ್ರಂಥದ ಮುನ್ನುಡಿಯಲ್ಲಿ ಡಿ.ವಿ.ಜಿಯವರ ಒಂದು ಮಾತು ಹೀಗಿದೆ : “ಯಾವ ಗನಿಯಲ್ಲಿ ಯಾವ ಲೋಹವೋ?” ವಿ.ಸೀಯವರ ಅಂತರಂಗಕ್ಕೂ ಈ ಮಾತು ಒಂದು ಬೆಳಕಿನ ಕಿಂಡಿಯಂತಿದೆ.