ಈವೊತ್ತಿಗೆ ಸುಮಾರು ಐವತ್ತು ಅರವತ್ತು ವರ್ಷಗಳ ಹಿಂದೆ ‘ದಲಿತ’ ಎಂಬ ಪದ ಅಷ್ಟಾಗಿ ಬಳಕೆಯಲ್ಲಿ ಇರಲಿಲ್ಲ, ಎಂದರೆ ಆ ಪದಸೂಚಕವಾದ ಒಂದು ಸಾಮಾಜಿಕ ವ್ಯವಸ್ಥೆಯಾಗಲಿ ಆ ವ್ಯವಸ್ಥೆಯ ಒಳಗಿದ್ದವರು ಅನುಭವಿಸುತ್ತಿದ್ದ ಸಂಕಷ್ಟಗಳಾಗಲಿ ಇರಲಿಲ್ಲ ಎಂಬ ಅರ್ಥವಲ್ಲ. ಮನುಧರ್ಮಶಾಸ್ತ್ರದಲ್ಲಿ ನಿರೂಪಿತವಾಗಿದೆ ಎಂದು ಹಲವರು ಹೇಳುವ, ನಂಬುವ ಚಾತುರ್ವಣ್ಯವಸ್ಥೆಯಲ್ಲಿ ‘ವರ್ಣ’ವನ್ನು ‘ಜಾತಿ’ಯೊಂದಿಗೆ ಸಮೀಕರಿಸುವ, ನಾಲ್ಕು ಜಾತಿಗಳಲ್ಲಿ ತಾರತಮ್ಯವನ್ನು ಆರೋಪಿಸುವ ಪ್ರವೃತ್ತಿ ಕಾಲಾಂತರದ ಬೆಳವಣಿಗೆ. ಈ ಬೆಳವಣಿಗೆಯ ಜತೆಯಲ್ಲೇ ಶತಮಾನಗಳಿಂದ ಅವಜ್ಞೆ, ಶೋಷಣೆ, ನಿಂದನೆ ವಿಡಂಬನೆಗಳಿಗೆ ಒಳಗಾಗಿ ಈಗ ನಾವು ‘ದಲಿತ’ ಎಂದು ಗುರುತಿಸಿ ಕರೆಯುವ, ಹಿಂದೆ ಅಸ್ಪೃಶ್ಯವೆಂಬ ರೂಕ್ಷಪದದಿಂದ ವರ್ಣಿತವಾಗಿದ್ದ ಅಸಹಾಯಕ, ದುರ್ಬಲ, ಮೂಕ ಮನುಷ್ಯ ಜೀವಿಗಳನ್ನು ನಾವು ಎತ್ತಿಕೊಳ್ಳಬೇಕು, ನಮ್ಮ ಹತ್ತಿರಕ್ಕೆ ತಂದು ಕೊಳ್ಳಬೇಕೆಂಬ ಒಂದು ಅನುಕಂಪವೂ ಸವರ್ಣಿಯರೆಂದು ಮಾನ್ಯರಾಗಿದ್ದ ಜನರಲ್ಲಿ ಜಾಗರಿತವಾಯಿತು. ಈ ಜಾಗೃತಿ ಕೇವಲ ಮಾನವೀಯವಾಗಿತ್ತೇ ವಿನಾ ಅದರಲ್ಲಿ ಸ್ವಾರ್ಥ ಭಾವವಾಗಲೀ ಪ್ರಚಾರ ದೃಷ್ಟಿಯಾಗಲೀ ಲವಶೇಷವೂ ಇರಲಿಲ್ಲ. ಹೀಗೆ ಜಾಗೃತರಾದವರಲ್ಲಿ ರಾಜಕೀಯ ನೇತಾರರು, ಸಾಮಾಜಿಕ ಕಾರ್ಯಕರ್ತರು, ಮತ ಸುಧಾರಕರು, ಸಾಧು ಸಂತರು, ಕವಿ ಸಾಹಿತಿಗಳು ಎಲ್ಲರೂ ಸೇರಿದ್ದರು. ಗಾಂಧೀಜಿಯವರಂತೂ ‘ಅಸ್ಪೃಶ್ಯತೆಯೆಂಬುದು ಮನುಷ್ಯ ಧರ್ಮ ಮತ್ತು ದೈವತತ್ವಗಳ ಜೋಡಿ ಕೊಲೆ’ಯೆಂದೇ ಉದ್ಗರಿಸಿದರು. ಅನೇಕ ಮತಸುಧಾರಕರು, ರಾಜಕೀಯಧುರೀಣರು ಮತ್ತು ಸಾಮಾಜಿಕ ಅಸ್ಪೃಶ್ಯತೆಯ ವಿರುದ್ಧ ಪ್ರತ್ಯಕ್ಷವಾಗಿ ಆಂದೋಲನವನ್ನು ಪ್ರೇರಿಸಿರಾದರೆ ಕವಿ ಸಾಹಿತಿಗಳು ವಿಚಾರ ಕ್ರಾಂತಿಯನ್ನು ಉದ್ದೀಪಿಸುವಂತಹ ಕೃತಿರಚನೆಗೆ ಕೈಯಿಕ್ಕಿದರು. ಕನ್ನಡದಲ್ಲಿ ಅಂತಹದೊಂದು ಅಪೂರ್ವ ಕೃತಿ ೧೯೩೩ರಲ್ಲಿ ಪ್ರಕಟವಾಯಿತು. ಅದೇ ಶಿವರಾಮ ಕಾರಂತರ ಚೋಮನ ದುಡಿ‘.

ಭಾರತೀಯ ಸಾಹಿತ್ಯ ಚರಿತ್ರೆಯಲ್ಲೇ ೧೯೩೦ರ ದಶಕವನ್ನು ಒಂದು ವಿಶಿಷ್ಟ ಕಾರಣಕ್ಕಾಗಿ ಬಹುಮುಖ್ಯ ಕಾಲಘಟ್ಟ ಎನ್ನುವುದಿದೆ. ‘ಹರಿಜನ’ರೆಂದು ಗಾಂಧೀಜಿ ಕರೆದ ಜನವರ್ಗದ ದಯನೀಯ ಸ್ಥಿತಿಯನ್ನು ಚಿತ್ರಿಸುವ ಎರಡು ಕಾದಂಬರಿಗಳು ಪ್ರಕಟವಾದದ್ದೇ ಆ ದಶಕದ ವೈಶಿಷ್ಟ್ಯ. ಆ ಕಾದಂಬರಿಗಳಲ್ಲಿ ಒಂದು ಕಾರಂತರ ‘ಚೋಮನ ದುಡಿ’ಯಾದರೆ ಮತ್ತೊಂದು ಮುಲ್ಕ್‌ರಾಜ್‌ಆನಂದರ ‘The untouchable’ ಎಂಬ ಆಂಗ್ಲ ಕೃತಿ. ಅದು ೧೯೩೫ರಲ್ಲಿ ಪ್ರಕಾಶಿತಲಾಯಿತು. ಆ ಕಾದಂಬರಿಯ ತಲೆಬರಹವೇ ಬಹುಮಟ್ಟಿಗೆ ಒಳಕತೆಯನ್ನೂ ಹೇಳುತ್ತದೆ. ಆದರೆ ‘ಚೋಮನ ದುಡಿ’ ಹಾಗಲ್ಲ. ಅದು ಸಾಂಕೇತಿಕ; ಸಾಂಕೇತಿಕ ಮಾತ್ರವೇ ಅಲ್ಲ.- ಚೋಮನು ಮೆಟ್ಟುವ (ಎಂದರೆ ಬಾರಿಸುವ) ದುಡಿಯ ದನಿ ತಾತ್ಕಾಲಿಕವಲ್ಲ, ನಿರಂತರವಾದದ್ದು. ಹೇಗೆ ಹೆನ್ರಿಕ್ ಇಬ್ಸೆನ್ನನ ‘ಬೊಂಬೆ ಮನೆ’ (Doll’s House)ಯ ಡೋರಾ ಬಾಗಿಲು ಮುಚ್ಚಿದ ಸದ್ದು ಸಮಸ್ತ ಯುರೋಪ್ ಖಂಡವನ್ನೇ ಎಚ್ಚರಿಸಿತೋ ಅದೇ ರೀತಿ ಕಾರಂತರ ಕಾದಂಬರಿಯ ಚೋಮ ಬಾರಿಸಿದ ದುಡಿಯ ದನಿಯೂ ಪ್ರೇಮ, ಕರುಣೆ, ಮಾನವೀಯತೆಗಳಿಗೆ ಚಿರ ತೆರೆದ ಎದೆಗಳಲ್ಲಿ ಅನುಕರಣಗೊಳ್ಳುತ್ತಲೇ ಇರುತ್ತದೆ.

ಕಾರಂತರ ಆರಂಭದ ಕಾದಂಬರಿಗಳೆಂದು ವಿಚಿತ್ರ ಕೂಟ, ಭೂತ, ನಿರ್ಭಾಗ್ಯ ಜನ್ಮ, ದೇವ ದೂತರು ಮತ್ತು ಕನ್ಯಾಬಲಿಗಳನ್ನು ಹೆಸರಿಸುವುದಿದೆ. ಈ ಐದರಲ್ಲಿ ‘ಕನ್ಯಾಬಲಿ’ ಮಾತ್ರ ನಿಜವಾದ ಸಾಮಾಜಿಕ ಕಾದಂಬರಿ ಎನ್ನಬಹುದಾಗಿದೆ. ಆದರೆ ಕಾರಂತರ ಸ್ವೋಪಜ್ಞತೆ ಮತ್ತು ಕಥನ ಕುಶಲತೆ ನಿಚ್ಚಳವಾಗಿಯೂ ಕಂಡುಬಂದದ್ದು ಆರನೆಯದಾದ ‘ಚೋಮನ ದುಡಿ’ಯಲ್ಲಿ ಕಾರಂತರಲ್ಲಿದ್ದ ತೀವ್ರವಾದ ಸಾಮಾಜಿಕ ಪ್ರಜ್ಞೆಯನ್ನು ಅದು ಪ್ರಕಟಿಸುತ್ತದೆ. ಇಪ್ಪತ್ತನೆಯ ಶತಕದ ಆದಿಭಾಗದಲ್ಲಿ, ಶಿಷ್ಟ ಸಂಪ್ರದಾಯದ ನಿಷ್ಠೆಗಳನ್ನು  ಮೆಯ್ಗೂಡಿಸಿಕೊಂಡಿದ್ದ ಒಂದು ಪರಂಪರೆಯನ್ನು ಹುಟ್ಟಿ ಬೆಳೆದವರು ಕೋಟಿ ಶಿವರಾಮ ಕಾರಂತರು. ಆದರೆ ಅವರು ತಮ್ಮ ಸುತ್ತ ಒಂದು ಕೋಶವನ್ನು ಕಟ್ಟಿಕೊಂಡ ‘ಕೋಶಿ’ ಕಾರಂತರು ಆಗಲಿಲ್ಲ. ಮನುಷ್ಯನ ಪುರೋಗಮನಕ್ಕೆ ಪೂರಕವಾಗುವ ಮೌಲ್ಯಗಳನ್ನು ಸ್ವೀಕರಿಸಿ ಪ್ರತಿಪಾದಿಸುವ ಮತ್ತು ಮಾನವತೆಗೆ ಕಲಂಕವೆಂದೋ ಕಂಟಕವೆಂದೋ ಕಂಡವುಗಳನ್ನು ಖಂಡತುಂಡವಾಗಿ ಪ್ರತಿಭಟಿಸಿ ನಿರಾಕರಿಸುವ ಒಂದು ಧೀರ ಮನೋಧರ್ಮವನ್ನು ಅವರು ರೂಪಿಸಿಕೊಂಡರು. ಆ ಅರ್ಥದಲ್ಲಿ ಅವರು ‘ಕಡಲ ತೀರದ ಭಾರ್ಗವ’ ಹೌದು. ‘ಚೋಮನ ದುಡಿ’ ಈ ಮನೋಧರ್ಮದ ಪ್ರತಿಬಿಂಬವಾಗಿದೆ. ಚೋಮ ದುರ್ಬಲ, ಶೋಷಿತ; ಅವನ ದುಡಿ ದೌರ್ಬಲ್ಯದ ಸಂಕೇತ, ಶೋಷಣೆಯ ಪ್ರತಿಭಟನೆ-ಅಸಹಾಯಕ, ನಿಷ್ಪಲ, ಪ್ರತಿಭಟನೆ. ಏಕೆಂದರೆ ಬಲ ಶಾಲಿಗಳೋ ಸಮೂಹ ಸಂಘನೆಗಳೋ ಏನನ್ನಾದರೂ ಪ್ರತಿಭಟಿಸಿದರೆ ಪರಿಣಾಮ ಕ್ಷಿಪ್ರ, ತೀವ್ರ ಮತ್ತು ದೂರಗಾಮಿ. ಆದರೆ ಅಸಹಾಯಕರನ್ನು ಹಾಗಲ್ಲ. ಎಳೆ ಮಕ್ಕಳೋ ಮೂಕ ಪಶುಗಳೋ ತಮ್ಮ ನೋವು, ಸಿಗ್ಗು ಸೆಡವುಗಳನ್ನು ಪ್ರಕಟಿಸುವ ರೀತಿಯೊಂದಿವೆ, ಅದೆಂದರೆ, ತಮ್ಮ ಕೈಗೆ ಸಿಕ್ಕುವುಗಳನ್ನು, ಕಣ್ಣಿಗೆ ಕಂಡವುಗಳನ್ನು ಹೊಡೆದು ಬಡಿದು, ಹರಿದು ಮುರಿದು, ಕಚ್ಚಿ ಚುಚ್ಚಿ, ನಾಲ್ಕು ಕಡೆ ತೂರಾಡುವುದು ಅದರಲ್ಲೇ ಉಪಶಮನವನ್ನು ಕಾಣುವುದು. ಚೋಮನೂ ಹಾಗೆಯೇ : ದುಡಿಯ ಬಡಿತ, ಅವನ ನಿಕ್ಷಿಪ್ತ-ವಿಕ್ಷಿಪ್ತ ಭಾವಗಳ ಪ್ರತಿಸ್ಪಂದನ.

‘ಚೋಮನ ದುಡಿ’ಯ ಕಥಾ ಸಾರಾಂಶ ಇದು : ಚೋಮ ಭೋಗನಹಳ್ಳಿಯ ಒಂದು ಕೊಪ್ಪದ ನಿವಾಸಿ. ಒಂದು ಕಾಲದಲ್ಲಿ ಅಸ್ಪೃಶ್ಯರೆಂದು ಪರಿಗಣಿತವಾಗಿದ್ದು ಸಮುದಾಯಕ್ಕೆ ಸೇರಿದವರು ಚೋಮ. ಅವರಲ್ಲೂ ತೀರ ಕೆಳಗಿನದಾಗಿದ್ದ ‘ಮಾರಿ’ಯೆಂಬ ಬಳಗ ಆತನದು. ಅವನ ಹೆಂಡತಿ ತೀರಿಕೊಂಡಿದ್ದಾಳೆ. ಮಿಕ್ಕ ಕುಟುಂಬವೆಂದರೆ ಐವರು ಮಕ್ಕಳು-ಚನಿಯ, ಗುರುವರೆಂಬ ಎರಡು ಗಂಡು, ಆಮೇಲೆ ಬೆಳ್ಳಿಯೆಂಬ ಹೆಣ್ಣು ಅವಳ ಬೆನ್ನೆಲ್ಲಿ ಹುಟ್ಟಿದ ಕಾಳ ಮತ್ತು ನೀಲ ಎಂಬ ಇನ್ನೆರಡು ಗಂಡು. ಈ ಐವರೊಂದಿಗೆ ಎರಡು ಎಳೆಯಕರುಗಳು ಮತ್ತೊಂದು ನಾಯಿ-ಬಾಡು. ಚೋಮನದು ಮುರುಕು ಗುಡಿಸಲು. ಮಾನ ಮುಚ್ಚುವಷ್ಟು ಬಟ್ಟೆ, ಹೊಟ್ಟೆ ತುಂಬುವಷ್ಟು ಅನ್ನವನ್ನು ಆ ಕುಟುಂಬ ಕಂಡದ್ದಿಲ್ಲ. ಜಮೀನುದಾರ ಸಂಕಪ್ಪಯ್ಯನ ಮೂಲದಾಳು ಚೋಮ.[1] ಕುಟುಂಬ ಕಡುಬಡತನದ್ದಾದರೂ ಸದಸ್ಯರಲ್ಲಿ ಒಂದು ಅನ್ಯೋನ್ಯತೆ ಇತ್ತು. ಅದನ್ನು ಕಾರಂತರು ಒಂದು “ಹೂವಿನ ಎಸಳುಗಳಲ್ಲಿನ ಅನ್ಯೋನ್ಯತೆ” ಎಂದು ವರ್ಣಿಸಿದ್ದಾರೆ.

ಚೋಮನ ಬಾಳ ದಾರಿಯ ಗುರಿಗಳೆಂದರೆ ಒಂದು ತುಂಡು ಗದ್ದೆಯಲ್ಲಿ, ಅದು ಗೇಣಿಯದ್ದಾದರೂ ಸರಿ-ಬೇಸಾಯ ಮಾಡುವುದು ಮತ್ತು ಮಕ್ಕಳು ಪ್ರಾಯಕ್ಕೆ ಬಂದಾಗ ಅವರಿಗೆ ಮದುವೆ ಮಾಡಿಸುವುದು. ಎಲ್ಲೋ ಕಾಡಲ್ಲಿ ಅನಾಥವಾಗಿದ್ದ ಎರಡು ಎಳೆಗರುಗಳನ್ನು ಹಿಡಿದು ತಂದು ‘ಅವು ನಾಳೆ ಉಳುವ ಎತ್ತುಗಳಾಗುತ್ತವೆ’ ಎಂಬ ಆಸೆಯಿಂದಲೇ ಚೋಮ ಅವುಗಳನ್ನು ಸಾಕುತ್ತಾನೆ. ಧನಿ ಸಂಕಪ್ಪಯ್ಯನಲ್ಲಿ ಭಯ ಗೌರವಗಳಿಂದ ತಗ್ಗಿ ಬಗ್ಗಿ ನಡೆಯುವ ಚೋಮ ಒಂದೆರಡು ಸಲ ಕೆಲದನಿಯಲ್ಲೇ ತನ್ನ ಬೇಸಾಯದ ಆಸೆಯನ್ನು ತೋಡಿಕೊಳ್ಳುತ್ತಾನೆ. ಸಂಕಪ್ಪಯ್ಯ ಮೇಲುಜಾತಿಯವ, ‘ಧನಿ’ತನದ ಭಾವ ಅವನಲ್ಲುಂಟುಂಬೆದೂ ನಿಜ. ಅದರೊಂದಿಗೆ ಚೋಮನಲ್ಲಿ ಅನುಕಂಪವೂ ಇದೆ. ಅವನಿಗೆ ಕೈಯಲ್ಲಾದ ನೆರವು ನೀಡಬೇಕೆಂಬ ಉಪಕಾರ ಬುದ್ಧಿಯೂ ಇದೆ. ಆದರೆ ಹಳೆಗಾಲದ ನಂಬಿಕೆ ನಡವಳಿಕೆಗಳ ತನ್ನ ತಾಯಿಯ ಮಾತನ್ನು ಮೀರಿ ಮುನ್ನಡಿಯಿಡುವ ಧೈರ್ಯ ಅವನಲ್ಲಿಲ್ಲ. ಪರಿಸ್ಥಿತಿ ತನಗೆ ಅನುಕೂಲಕರವಾಗಿಲ್ಲ ಎಂಬುದು ಗೊತ್ತಿದ್ದರೂ ಚೋಮ ಆಸೆ ಬಿಡುವುದೇ ಇಲ್ಲ, ತನನ ಬುದ್ಧಿಗೆ ಹೊಳೆದಂತೆ ಗದ್ದೆ ಬೇಸಾಯದ ದಾರಿ ಹುಡುಕುತ್ತಲೇ ಇರುತ್ತಾನೆ. ಅದೇ ಹೊತ್ತಿಗೆ, ಅವನು ಹಿಂದೆ ಕೆಲಸಕ್ಕಿದ್ದ ಕಳಸದ ಕಾಫಿ ತೋಟದ ಮೇಸ್ತ್ರಿ ಮನ್ವೇ ಬಂದು ತೋಟದ ದೊರೆ ಮಿಂಗೇಲರಲ್ಲಿ ಬಾಕಿ ಉಳಿಸಿರುವ ಸಾಲವನ್ನು ಸಲಾಯಿಸುವಂತೆ ಒತ್ತಾಯಿಸುತ್ತಾನೆ. ತಾನು ಮಾಡಿದ ಸಾಲ ತೀರಿಸಿ, ಸಾಧ್ಯವಾದರೆ ನಾಲ್ಕು ಕಾಸು ಕೂಡಿಸುವುದಕ್ಕಾಗಿ ಚೋಮ ಹಿರಿಯ ಮಕ್ಕಳು ಚನೀಯ ಮತ್ತು ಗುರುವರನ್ನು ಕಳಸದ ತೋಟಕ್ಕೆ ಕೆಲಸಕ್ಕೆ ಕಳುಹಿಸುತ್ತಾನೆ. ಅಲ್ಲಿ ಅವರು ಎಷ್ಟೇ ದುಡಿದರೂ, ಸಂಬಳವೆಲ್ಲ ಹಿಂದಿನ ಸಾಲಕ್ಕೇ ಸಂದಾಯವಾಗುವುದೇ ವಿನಾ ಅವರ ಕೈಯಲ್ಲಿ ಪುಡಿಗಾಸೂ ಉಳಿಯುವುದಿಲ್ಲ. ಅಲ್ಲಿದ್ದಾಗಲೇ ಗುರುವ ಒಬ್ಬ ಕಿರಿಸ್ತಾನ ಹುಡುಗಿಗೆ ಮನಸೋಲುತ್ತಾನೆ. ಒಂದು ತಿಂಗಳ ರಜೆಯಲ್ಲಿ ಘಟ್ಟದ ಕೆಳಗಿನ ಆಳುಗಳೆಲ್ಲ ಊರಿಗೆ ಹೊರಟಾಗ ಚನಿಯ ಗುರುವರೂ ಅವರನ್ನು ಸೇರುತ್ತಾರೆ. ನಡುದಾರಿಯಲ್ಲಿ ಗುರುವ ತಾನು ಮೆಚ್ಚಿದ ಮಾರಿಯ ಜತೆಯಲ್ಲಿ ಓಡಿಹೋಗುತ್ತಾನೆ. ಚನಿಯನೊಬ್ಬನೇ ಊರಿಗೆ ಬಂದು ಗೋಳಿನ ಕತೆ ಹೇಳುತ್ತಾನೆ. ಮನೆಯ ಗೋಳು ಇಮ್ಮಡಿಸುತ್ತದೆ. ಊರು ಸೇರಿದ ನಾಲ್ಕೇ ದಿನಗಳಲ್ಲಿ ಚನಿಯ ಘಟ್ಟದಿಂದ ಕಟ್ಟಿಕೊಂಡು ಬಂದ ಜ್ವರದಿಂದ ನರಳಿ ಸಾಯುತ್ತಾನೆ. ಚೋಮನ ಹುಣ್ಣಿಗೆ ಉಪ್ಪು ನೀರು ಬಿದ್ದಂತಾಗುತ್ತದೆ. ಮತ್ತೆ ಘಟ್ಟದ ಮೇಸ್ತ್ರಿ ಸಾಲ ಸಂದಾಯಕ್ಕಾಗಿ ತಕಾರಾರು ಮಾಡುತ್ತಾನೆ. ಬೇರೆ ದಾರಿ ಕಾಣದೆ ಮಗಳು ಬೆಳ್ಳಿ ಮತ್ತು ಮಗ ನೀಲರನ್ನು ಘಟ್ಟದ ಕೆಲಸಕ್ಕೆ ಕಳುಹಿಸುವುದಕ್ಕೆ ಒಪ್ಪುತ್ತಾನೆ.

ಘಟ್ಟ ಸೇರಿದ ಬೆಳ್ಳಿ ಮನ್ವೇಲನ ಕಾಮದ ಕಣ್ಣಿಗೆ ಈಡಾಗುತ್ತಾಳೆ. ಕಾಯದ ದೌರ್ಬಲ್ಯ ಅವಳನ್ನು ಕಾಮದ ದಾಸಿಯನ್ನಾಗಿ ಮಾಡುತ್ತದೆ. ಆಮೇಲೆ ದೊರೆ ಮಿಂಗೇಲನ ಸಜ್ಜೆಯನ್ನೂ ಬೆಳ್ಳಿ ಏರಬೇಕಾಗುತ್ತದೆ. ತೋಟದ ಕೆಲಸವೊಂದಲ್ಲದೆ ಈ ಹೆಚ್ಚಿನ ದುಡಿಮೆಯಿಂದಾಗಿಯೂ ಅವಳ ಕೈಯಲ್ಲಿ ಹೆಚ್ಚಿನ ನಾಲ್ಕು ಕಾಸು ಓಡಾಡುವಂತಾಗುತ್ತದೆ. ಆದರೆ ಮಾನ ಕಳೆದು, ಜತೆಯವರ ಕುಟುಕು ಮಾತು ಕೇಳಿ ಅಲ್ಲಿರುವುದ ಸರಿಯಲ್ಲವೆಂದು ಬೆಳ್ಳಿ ತನ್ನ ದುಡಿಮೆಯ ದುಡ್ಡು, ಮನ್ವೇಲು, ಮಿಂಗೇಲರು ಕೊಟ್ಟ ಭಕ್ಷೀಸುಗಳಿಂದ ಅಪ್ಪ ಮಾಡಿದ ಸಾಲವನ್ನೇಲ್ಲ ತೀರಿಸಿ, ತಮ್ಮನೊಂದಿಗೆ ಊರಿಗೆ ಬರುತ್ತಾಳೆ.

ತನಗೆ ಒಕ್ಕಲುತನ ದಕ್ಕಲಿಲ್ಲವೆಂದು ಕುಗ್ಗುತ್ತಲೆ ಇರುವ ಚೋಮ ಮಗಳಿಂದ ಘಟ್ಟದ ದೊರೆಯ ಸಾಲ ಸಂದಾಯವಾದುದನ್ನು ತಿಳಿದು ಸ್ವಲ್ಪ ಹಿಗ್ಗುತ್ತಾನೆ. ಮತ್ತೆ ಬೇಸಾಯದ ಆಸೆ ಚಿಗುರುತ್ತದೆ; ಮಗಳ ಮದುವೆಯ ಕನಸು ಕಟ್ಟುತ್ತದೆ. ಅಷ್ಟರಲ್ಲೇ ಚೋಮನ ಬಡಕುಟುಂಬದ ಮೇಲೆ ಮತ್ತೊಂದು ಸಿಡಿಲೆರಗುತ್ತದೆ. ಕಿರಿಯ ಮಕ್ಕಳಲ್ಲಿ ಒಬ್ಬನಾದ ನೀಲ ಈಜುವುದಕ್ಕೆಂದು ನೀರಿಗಿಳಿದವನು ಸಾಯುವುದನ್ನು ಮುದಿ ಚೋಮ ಕಣ್ಣಾರೆ ಕಾಣಬೇಕಾಗುತ್ತದೆ. ಹಿರಿಮಗನ ಸಾವು, ಹೆಣ್ಣಿಗಾಗಿ ಮತ್ತೊಬ್ಬ ಮಗನ ಮತಾಂತರ, ಮೂರನೆಯ ಮಗನ ದುರ್ಮರಣ ಬೇಸಾಯದ ಪ್ರಯತ್ನ ಕೈಗೂಡಲಿಲ್ಲವೆಂಬ ನಿರಾಶೆಗಳೆಲ್ಲ ಚೋಮನನ್ನು ಹಿಳಿದು ಹಿಂಡುತ್ತವೆ. ಆಗಲೇ ಮತ್ತೊಂದು ಘಟನೆ ಒಂಟೆಯ ಬೆನ್ನುಮೂಳೆ ಮುರಿಯುವ ಕೊನೆಯ ಹುಲ್ಲು ಕಡ್ಡಿಯಾಗುತ್ತದೆ. ಅದೆಂದರೆ ತನ್ನ ದುರ್ವಿಧಿಯಾಗಿ ಬೆನ್ನಟ್ಟುತ್ತಿರುವ ಮನ್ವೇಲನೊಂದಿಗೆ ಮಗಳು ಬೆಳ್ಳಿ ಚಾಪೆಯೇರಿದುದನ್ನು ಕಂಡಾಗ ಚೋಮನ ಕಾವು ನೋವುಗಳೆಲ್ಲದರ ಕಟ್ಟಿಯೊಡೆಯುತ್ತದೆ. ಮನ್ವೇಲನನ್ನು ಹೊಡೆದು ಓಡಿಸುತ್ತಾನೆ. ಮಗಳನ್ನು ಮನೆಯಿಂದ ಹೊರಗೆ ತಳ್ಳುತ್ತಾನೆ. ಕಿರಿಮಗ ಕಾಳನ ಬೆನ್ನಿಗೆ ಬಡಿಯುತ್ತಾನೆ. ಒಕ್ಕಲುತನಕ್ಕೆ ಸಲ್ಲದಿರುವ ಎತ್ತುಗಳನ್ನು ಕಟ್ಟಿ ಮಾಡುವುದೇನೆಂದು ಅವುಗಳನ್ನು ಕಾಡಿಗೆ ಹೊಡೆದು ಅಟ್ಟುತ್ತಾನೆ. ತನ್ನಲ್ಲಿದ್ದ ನೊಗ ನೇಗಿಲುಗಳನ್ನು ಸುಟ್ಟು ಬೂದಿ ಮಾಡುತ್ತಾನೆ. ಮತ್ತೆ ಆವೇಶ, ಆಕ್ರೋಶ, ರೌದ್ರಗಳಿಂದ ದುಡಿಯನ್ನು ಬಾರಿಸಿ, ಬಾರಿಸಿ, ದೇಹ ದಣಿದು ಮನುಸ್ಸು ಸೋತು ದುಡಿ ಹಿಡಿದಿರುವಂತೆಯೇ, ಬಾರಿಸಲು ಕೈ ಎತ್ತಿರುವಂತೆಯೇ, ಚೋಮ ಕೊನೆಯ ಉಸಿರೆಳೆಯುತ್ತಾನೆ!

ಕನ್ನಡದಲ್ಲಿ ಪ್ರಕಟಗೊಂಡಿರುವ ದಲಿತ ಜೀವನ ಚಿತ್ರಣಗಳಲ್ಲಿ ‘ಚೋಮನ ದುಡಿ’ಗೆ ಅಗ್ರಪೀಠ ಮಾತ್ರವಲ್ಲ, ಪ್ರಥಮಸ್ಥಾನವೂ ಸಲ್ಲಬೇಕು. ಇಂದಿಗೆ ಎಪ್ಪತ್ತೈದು ವರ್ಷಗಳ ಹಿಂದೆ ವಸ್ತುವಿನ ದೃಷ್ಟಿಯಿಂದ ಇಂತಹದ್ದೊಂದು ಕಾದಂಬರಿಯನ್ನು ಬರೆಯುವುದೇ ಒಂದು ಸಾಹಸ. ಕನ್ನಡ ಕಾದಂಬರೀ ಕ್ಷೇತ್ರದಲ್ಲಿ ಅಗಲಿದ್ದ ಕ್ರಾಂತಿಯ ಒಂದು ಮುಂಗಾಣ್ಕೆ ‘ಚೋಮನ ದುಡಿ’ ಎನ್ನಲೂಬಹುದು. ಇಪ್ಪತ್ತನೆಯ ಶತಕದ ಮೊದಲ ಎರಡು ದಶಕಗಳಲ್ಲಿ ಕನ್ನಡದ ಬಳ್ಳಿಯಲ್ಲಿ ಸ್ವತಂತ್ರ ಸಾಮಾಜಿಕ ಕಾದಂಬರಿಗಳು ಅಲ್ಲೊಮದು ಇಲ್ಲೊಂದರಂತೆ ಅರಳಿದುವಾದರೆ ಆ ಮುಂದಿನ ದಶಕಗಳಲ್ಲಿ ಅವು ಒತ್ತೊತ್ತಾಗಿ ಕಾಣಿಸಿಕೊಳ್ಳ ತೊಡಗಿದುವು. ಮಾಸ್ತಿಯವರ ‘ಸುಬ್ಬಣ್ಣ’; ಅ.ನ.ಕೃ ಅವರ ‘ಕಣ್ಣೀರು’, ‘ಜೀವನಯಾತ್ರೆ’, ‘ಉದಯರಾಗ’, ‘ಸಂಧ್ಯಾರಾಗ’; ಕುವೆಂಪು ಅವರ ‘ಕಾನೂರು ಸುಬ್ಬಮ್ಮ ಹೆಗ್ಗಡತಿ’; ಆನಂದಕಂದರ ‘ಸುದರ್ಶನ’, ‘ರಾಜಯೋಗಿ’, ‘ಅಶಾಂತಿಪರ್ವ’ – ಇಂತಹ ಕೆಲವನ್ನು ಉಲ್ಲೇಖಿಸಬಹುದು. ಆದರೆ ಕಥಾವಸ್ತು, ಅದರ ವಿನ್ಯಾಸ ಮತ್ತು ವಿಶ್ಲೇಷಣೆಗಳ ದೃಷ್ಟಿಯಿಂದ ‘ಚೋಮನ ದುಡಿ’ಗೊಂದು ಪ್ರತ್ಯೇಕತೆಯೂ ವಿಶಿಷ್ಟ್ಯತೆಯೂ ಇದೆ. ಅಂತಹ ವಸ್ತುಗಳನ್ನು ಆ ಮೊದಲು ಹೆಚ್ಚು ಜನ ಆಯ್ಕೆ ಮಾಡಿದಂತಿಲ್ಲ. ಮಾಸ್ತಿಯವರ ಕೆಲವು ಕತೆಗಳಲ್ಲಿ ಕೆಲವು ‘ನಿಮ್ನ’ (ಎಂದು ಕರೆಯಲಾಗುತ್ತಿದ್ದ) ಜನವರ್ಗಗಳ ಚಿತ್ರಣವನ್ನು ಕಾಣಬಹುದು. ಅದೇ ರೀತಿ ಉಡುಪಿಯ ಕೊರಡ್ಕಲ್ ಶ್ರೀನಿವಾಸರಾಯರ ‘ಧನಿಯರ ಸತ್ಯನಾರಾಯಣ’ ಎಂಬ ಸಣ್ಣಕತೆಯಲ್ಲೂ (೧೯೩೮) ಶೋಷಕನ ನಿರ್ದಯೆ, ಶೋಷಿತನ ದೈನ್ಯಗಳು ಕರುಳನ್ನು ಕತ್ತರಿಸುವಂತೆ ವರ್ಣಿತವಾಗಿವೆ. ಆದರೆ ಎಡಗೈಯವ, ಹೊಲೆಯ ಮುಂತಾದ ಅಪಶಬ್ದಗಳಿಂದ ನಿರ್ದೇಶಿತವಾಗುತ್ತಿದ್ದ ಜನವರ್ಗಗಳನ್ನು ಕುರಿತು ಒಂದು ಕಾದಂಬರಿಯನ್ನು ಬರೆದು, ಆ ಜನರ ದಾರುಣಜೀವನವನ್ನು ಕನ್ನಡಿಗರ ಕಣ್ಣು ಮುಂದೆ ದಟ್ಟವಾಗಿ ತೆರೆದಿಟ್ಟವರಲ್ಲಿ ಕಾರಂತರೇ ಮೊದಲಿಗರೆನ್ನಬಹುದು.

ನಮ್ಮ ಸಾಮಾಜಿಕ ವ್ಯವಸ್ಥೆಯ ಎರಡು ಮುಖಗಳನ್ನು ‘ಚೋಮನ ದುಡಿ’ಯಲ್ಲಿ ಕಾಣುತ್ತೇವೆ. ಅವುಗಳೆಂದರೆ ಶೋಷಕ ಮತ್ತು ಶೋಷಿತ. ಶೋಷಕನಿಗೆ ತಾನು ಮಡುತ್ತಿರುವುದು ಶೋಷಣೆ ಎಂದು ತಿಳಿಯುವುದಿಲ್ಲ, ಅದು ಅವರಿಗೆ ಅಧಿಕಾರ, ಪದ್ಧತಿಗಳಾಗಿ ಕಾಣುತ್ತವೆ. ‘ಚೋಮನ ದುಡಿ’ಯ ಸಂಕಪ್ಪಯ್ಯ ಶೋಷನೆಯ ಪ್ರತಿನಿಧಿ ನಿಜ. ಆದರೆ ಆತನನ್ನು ದುಷ್ಟ ಎನ್ನುವಂತಿಲ್ಲ. ಅಧಿಕಾರದ ಚಲಾವಣೆ ಇದೆ; ಆದರೆ ಎದೆಯ ಆಳದಲ್ಲಿ ಅನುಕಂಪದ ಅಲೆಯೂ ಇದೆ. ಚೋಮನಿಗೆ ಉಳುಮೆಗಾಗಿ ತುಂಡುನೆಲ ಕೊಟ್ಟರೇನು ಎಂದು ಆತನ ಒಳದನಿ ಕೇಳುತ್ತದೆ. ಆದರೆ ಪದ್ಧತಿ, ವ್ಯವಸ್ಥೆಗಳ ಪ್ರತೀಕ ತಾಯಿಯ ರೂಪದಲ್ಲಿ ಆ ದನಿಯನ್ನು ಅಲ್ಲಿಗೇ ಒತ್ತಿಹಿಡಿಯುತ್ತದೆ. ‘ಸಮಾಜ ಇರುವುದೇ ಹೀಗೆ. ಚೋಮನಂಥ (ಅಸ್ಪೃಶ್ಯ)ವನು ಬೇಸಾಯ ಮಾಡಿ ಜೀವಿಸುವುದುಂಟೇ? ಜನ ಏನೆನ್ನಬಹುದು? ಆತ ಇನ್ನೊಬ್ಬರಲ್ಲಿ ದುಡಿದೇ ಅನ್ನ ಸಂಪಾದಿಸತಕ್ಕವನು’ ಎಂಬುದು ತಾಯಿಯ ವಾದಸರಣಿ ಎಂದರೆ ಆ ಕಾಲದ ಸಮಾಜ ಆ ಮಾತನ್ನು ಅವಳಿಂದ ಹೇಳಿಸುತ್ತದೆ. ತಾಯ ಮಾತನ್ನು ಎಂದರೆ ‘ಸಂಪ್ರದಾಯ’ವನ್ನು ಮೀರುವ, ಮುರಿಯುವ ಧೈರ್ಯ ಸಂಕಪ್ಪಯ್ಯನಿಗಿಲ್ಲ. ಸಂಕಪ್ಪಯ್ಯ ಅಥವಾ ಅವನ ತಾಯಿ ಎಂದೇ ಅಲ್ಲ. ಸ್ವತಃ ಚೋಮನ ಮುದ್ಧಿನ ಮಗಳು ಬೆಳ್ಳಿಯೂ ತನ್ನ ತಂದೆಯ ಬೇಸಾಯದ ಹುಚ್ಚನ್ನು ಒಪ್ಪಿಕೊಳ್ಳುವುದಿಲ್ಲ. ಎಂದರೆ ಶತಮಾನಗಳಿಂದ ಗಾನದೆತ್ತುಗಳಂತೆ ದುಡಿದು, ಕೂಲಿ ನಾಲಿ ಮಾಡಿ, ಎಂಜಲನ್ನವನ್ನು ಉಂಡು ಬದುಕುತ್ತಿದ್ದ ಒಂದು ಜನಸಮುದಾಯ ಅದೇ ತನ್ನ ಬದುಕಿನ ಬಗೆಯೆಂಬ ನಂಬಿಕೆಯನ್ನು ಬೆಳಸಿಕೊಂಡಿತ್ತು. ಬೆಳ್ಳಿ ಆ ನಂಬಿಕೆಗೆ ಬಾಯಾಗುತ್ತಾಳೆ. ಅವಳು ಅಪ್ಪನೊಂದಿಗೆ ವಾದಿಸುವ ರೀತಿ ಇದು: “ಅಪ್ಪಾ, ಸುಮ್ಮನೆ ಇಲ್ಲದ ಚಿಂತೆಯನ್ನು ನೀನು ಕಟ್ಟಿಕೊಳ್ಳುತ್ತೀ. ನಾವು ಹೊಲೆಯರಾಗಿ ಹುಟ್ಟಿ, ನಮ್ಮ ಅಂತಸ್ತಿಗೂ ಮೀರಿದ ಆಸೆ ಹಿಡಿದರೆ ಹೇಗೆ? ಅದೃಷ್ಟಬೇಕಲ್ಲವೇ? ಮುಖ್ಯ ಬೇಕು ಅದೃಷ್ಟ. ದೇವರು ಹಣೆಯಲ್ಲಿ ಬರೆದಿರಬೇಕು…” ಕವಿ ಗೋವಿಂದ ಪೈಯವರ ‘ಹುಲ್ಲು ಕಟಿಗ’ ಎಂಬ ಕವಿತೆಯಲ್ಲಿ ಬರುವ ಒಂದು ಸಾಲು ಹೀಗಿದೆ: “ಮಣ್ಣೊಳಿಹ ಹುಳಕೊಡೆಯ ಬೆಣ್ಣೆಯೋಗರದದೊಲವೆ?” ಮಣ್ಣಲ್ಲಿ ಹುಟ್ಟಿ, ಮಣ್ಣನ್ನೇ ತಿಂದು, ಆ ಮೇಲೆ ಸತ್ತು ಮಣ್ಣಾಗುವ ಎರೆಹುಳುದಂತಹ ಬಾಳು ಒಂದು ಕಾಲದ ಅಸ್ಪೃಶ್ಯರದಾಗಿತ್ತು. ‘ಚೋಮನದುಡಿ’ಯಲ್ಲಿ ಅಂತಹ ಬದುಕಿನ ಬವಣೆ ಕಣ್ಣಿಗೆ ಕಟ್ಟಿ ಎದೆಯನ್ನು ತಟ್ಟುತ್ತದೆ.

ಕಾದಂಬರಿಯ ಶೀರ್ಷಿಕೆಯೇ ಸೂಚಿಸುವಂತೆ ಚೋಮನೇ ಕಥಾರಂಗದ ಪ್ರಧಾನ ಭೂಮಿಕೆ- ಅವನೇ ಆದಿ. ಮಧ್ಯ ಮತ್ತು ಅಂತ್ಯ. ಮೇಲಿನದು ಅವನ ದುಡಿಯ ಸದ್ದಿನಿಂದಲೇ ಕಥೆಯ ಆರಂಭ; ಅದೇ ಸದ್ದಿನಿಂದ ಅದರ ಅಂತ್ಯವೂ ಆಗುತ್ತದೆ. ಒಂದು ಕಾಲದ ಸಾಮಾನ್ಯ ಸಾಮಾಜಿಕ ದೃಷ್ಟಿಯಲ್ಲಿ ಆತ ಅಂತ್ಯಜ, ಅಸ್ಪೃಶ್ಯ, ಆತ ನಿರಕ್ಷರ ಕುಕ್ಷಿ. ಆದರೆ ಅವನಲ್ಲೂ ಮನುಷ್ಯತ್ವ ಇದೆ. ಕಣ್ಣ ಮುಂದಿಲ್ಲದ ಮಡದಿಯಲ್ಲಿ ಹಿಂಗಲಾಗದ ಪ್ರೀತಿ; ಕಣ್ಣ ಮುಂದಿಡುವ ಮಕ್ಕಳಲ್ಲಿ ಎಣೆಯಿಲ್ಲದ ಅಕ್ಕರೆ. ಹಗಲಿರಳೂ ಬೆನ್ನು ಮುರಿಯುವಷ್ಟು ದುಡಿಯಿಸುವ ಧನಿಯಲ್ಲೂಅವನಿಗೆ ನಿಷ್ಠೆ. ತಾನು ನಂಬಿದ ದೇವರಲ್ಲಿ ಅವನದೇ ಆದ ಭಕ್ತಿ, ಧರ್ಮದಲ್ಲಿ ಶ್ರದ್ಧೆ. ಬದುಕಿನಲ್ಲಿ ಒಂದರ ಮೇಲೊಂದರಂತೆ ಬಂದು ಎರಗಿದ ಕಷ್ಟ ನಷ್ಟಗಳಿಂದ ತತ್ತರಿಸಿದಾಗ, ತಾನು ಈವರೆಗೆ ನಂಬಿ ನಡೆವ ದೇವರು ಧರ್ಮಗಳು ತನ್ನ ಕೈಬಿಟ್ಟಿವೆ, ಇನ್ನು ‘ಪಾದ್ರಿ’ ಮತವನ್ನು ಅಪ್ಪಿಕೊಳ್ಳುವುದೇ ಸರಿಯೆಂದೂ ಒಮ್ಮೆ ಚೋಮ ಯೋಚಿಸುತ್ತಾನೆ. ಆದರೆ ಮರುಗಳಿಗೆಯಲ್ಲೇ “ಪಾದ್ರಿ ಮತದವರು ಸಾಯುವುದಿಲ್ಲವೇ? ಕಷ್ಟ, ಸುಖ ಒಂದಲ್ಲ ಒಂದು ರೀತಿಯಿಂದ ಕ್ರಿಸ್ತೀಯರಿಗೂ ತಪ್ಪಿದುದುಂಟೇ?” ಎಂದು ತನ್ನನ್ನು ತಾನೇ ಸಂತೈಸಿ, “ಏನೇ ಬರಲಿ, ಇದ್ದಂತೆ ಇದ್ದು ಬಂದದ್ದನ್ನು ಅನುಭವಿಸುತ್ತೇನೆ” ಎಂದು ತಾಳಿಕೊಳ್ಳುತ್ತಾನೆ.

ಚೋಮನಿಗೆ ಮನುಷ್ಯರಲ್ಲಿ, ತನ್ನ ಮಕ್ಕಳು ಮರಿಯಲ್ಲಿ ಮಾತ್ರ ಪ್ರೀತಿ ಮಮತೆ ಎಂದಲ್ಲ. ಎಳೆಗರುಗಳಾಗಿದ್ದಾಗಲೇ ಎಲ್ಲಿಂದಲೋ ತಂದು ಸಾಕಿ ಬೆಳೆಯಿಸಿದ ಎರಡೆತ್ತುಗಳಲ್ಲೂ, ಗುಡಿಸಲ ಸುತ್ತಲೂ ಬಾಲನಾಡಿಸುತ್ತ ಸುಳಿದಾಡುವ ಬಾಡು ನಾಯಿಯಲ್ಲೂ ಅವನಿಗೆ ಕರುಣೆ, ಮರುಕಗಳಿವೆ. ತನ್ನದಾದ ಗದ್ದೆ ಇಲ್ಲದಿದ್ದರೂ ಎಂದಾದರೂ ಆ ಭಾಗ್ಯ ಬಂದಾಗ ಬೇಸಾಯಕ್ಕಿರಲಿ ಎಂಬ ದೂರದ ಆಸೆಯಿಂದ ಚೋಮ ಎತ್ತುಗಳನ್ನು ಬಲು ಅಕ್ಕರೆಯಿಂದ ಸಾಕುತ್ತಾನೆ. ‘ಅಂತಹ ಅವಕಾಶ ಒದಗಲಾರದು, ಬರಿದೆ ಎತ್ತುಗಳನ್ನು ಕಟ್ಟಿಕೊಂಡು ಮಾಡುವುದೇನು? ಅವುಗಳನ್ನು ಮಾರಿದರೆ ನಾಲ್ಕು ಕಾಸಾದರೂ ಸಿಕ್ಕಬಹದು’ ಎಂದು ಅವರಿವರು – ಸ್ವತಃ ಮಗಳು ಬೆಳ್ಳಿಯೇ- ಹೇಳಿದರೂ ಚೋಮ ಮಾರುವುದಕ್ಕೆ ಒಪ್ಪುವುದೇ ಇಲ್ಲ. ಒಮ್ಮೆ ‘ತಾನು ಬೇಸಾಯಗಾರನಾಗಲಿಲ್ಲವಲ್ಲಾ’ ಎಂಬ ನೋವು ಅವನಿಂದ ಎಂತಹ ಅಕೃತ್ಯವನ್ನು ಮಾಡಿಸುತ್ತದೆ ಎಂದರೆ ಆ ವರ್ಣನೆಯನ್ನು ಓದುವಾಗಲೇ ಕಣ್ಣು ಮಂಜಾಗುತ್ತದೆ. ಆ ವರ್ಣನೆ ವಾಚ್ಯವಲ್ಲ, ಸೂಚ್ಯ ಅತ್ಯಂತ ಕಲಾತ್ಮಕ. ಎಂದಿನಂತೆ ಕುಡಿದು ಬಂದ ಚೋಮ ಎತ್ತುಗಳನ್ನು ಕಟ್ಟಿದ್ದ ಕೊಟ್ಟಿಗೆಗೆ ಹೋಗಿ ಅವುಗಳೊಂದಿಗೆ ಬಲು ಹೊತ್ತು ಮಾತಾಡುತ್ತಾನೆ. “ಎಷ್ಟು ಹೊತ್ತಿಗೆ ಅದು ಮುಗಿಯಿತೋ, ಏನು ಕಥೆಯೋ?” ಎನ್ನುತ್ತಾರೆ ಕಾರಂತರು. ಮರುದಿನ ಬೆಳಗ್ಗೆ, ಎತ್ತುಗಳನ್ನು ಮೇವಿಗೆ ಅಟ್ಟುವುದಕ್ಕಾಗಿ ಕೊಟ್ಟಿಗೆಗೆ ಹೋದ ಬೆಳ್ಳಿಯ ಕಣ್ಣಿಗೆ ಕಂಡದ್ದೇನು? “ಎರಡೂ ಎತ್ತುಗಳು ಮುಂಗಾಲಿಂದ ಕುಂಟುತ್ತಿವೆ!, ಒಂದರ ಕಾಲಿಂದ ತುಸು ರಕ್ತವೂ ಇಳಿಯುತ್ತಿತ್ತು. ಏನೆಂದು ತಿಳಿಯಲಿಲ್ಲ, ಹೊರಗೆ ಬಂದು ನೋಡಿದರೆ ತಂದೆ ಚೋಮನ ಮಗ್ಗುಲಲ್ಲೊಂದು ದೊಣ್ಣೆಯಿತ್ತು!” ಕುಂಟುಗಾಲು, ಹನಿಯುವ ನೆತ್ತರು, ಬಿದ್ದಿರುವ ದೊಣ್ಣೆ ಎಲ್ಲವನ್ನೂ ಹೇಳುತ್ತವೆ.

ಒಂದು ಚಿತ್ರ;- ಇದಕ್ಕೆ ವ್ಯಕಿರಿಕ್ತವಾದ ಇನ್ನೆರಡು ಚಿತ್ರಗಳಿವೆ. ಎತ್ತುಗಳನ್ನು ಮಾರುವಂತೆ ಮತ್ತೆ ಮತ್ತೆ ಒತ್ತಾಯಿಸುವ ಬೆಳ್ಳಿಯೊಂದಿಗೆ ಚೋಮ ಹೇಳುವುದು ಹೀಗಿದೆ: “ಬೇಡ, ನೀನು ಎತ್ತುಗಳನ್ನು ಮಾರುವ ಬದಲು ಈ ಮುದಿಯನನ್ನೇ ಯಾರಿಗಾದರೂ ಮಾರಿ ಬಿಡು….. ಇಲ್ಲ, ನನ್ನನ್ನು ಹೊಳೆಗೆ ನೂಕು…. ಆಮೇಲೆ ಎತ್ತನ್ನು ಮಾರು…..” ಆಗ ಬೆಳ್ಳಿ ಮೌನವಾಗುತ್ತಾಳೆ. “ಚೋಮನಿಗೆ ಆ ಎತ್ತುಗಳ ಮೇಲಿದ್ದ ಮಮತೆ ಕಡಿಯದೆಂದು ತೋರು”ತ್ತದೆ; “ಹೊಟ್ಟೆಯ ಮಕ್ಕಳ ಮೇಲೆ ಇಲ್ಲದಂಥ ಪ್ರೀತಿ ಈ ಮೂಕು ಜೀವಿಗಳ ಮೇಲೆ ಹೇಗೆ ಬಂದಿತು” ಎಂದು ಬೆಳ್ಳಿ ಆಶ್ಚರ್ಯಪಡುತ್ತಾಳೆ.

ಮೂರನೆಯ ಚಿತ್ರ – ಇದು ಕೊನೆಯದೂ ಹೌದು. ದುರ್ಘಟನೆಗಳು ದುಃಖಗಳೂ ಸಾಲುಗಟ್ಟಿ ಬಂದು ಚೋಮನನ್ನು ನಾಲ್ಕೂ ನಿಟ್ಟಿನಿಂದ ಆತ ಎಂದೆಂದಿಗೂ ಮಾರಲಾರೆ ಎಂದಿದ್ದ ಎತ್ತುಗಳನ್ನು, “ಅವುಗಳ ನೆನಪನ್ನು ಹರಿಯಲು, ಅವುಗಳು ಕರುಗಳಾಗಿರುವಾಗ ಯಾವ ಕಾಡಿನಲ್ಲಿ ದೊರಕಿದ್ದುವೋ” ಅದೇ ಕಾಡಿಗೆ ಅಟ್ಟಿಬಿಡುತ್ತಾನೆ. ಆ ಮೇಲೆ ಗುಡಿಸಲಿನ ಒಲಹೊಕ್ಕು ದುಡಿ ಬಾರಿಸುತ್ತಾ ಬಾರಿಸುತ್ತಾ ಕೊನೆಯುಸಿರೆಳೆಯುತ್ತಾನೆ. ಗುಡಿಸಲ ಹೊರಗಿದ್ದ ಬೆಳ್ಳಿ ದುಡಿಯ ಸದ್ದು ಅಡಗಿದಾಗ ಗಾಬರಿಯಿಂದ ಹತ್ತಿರ ಬರುತ್ತಾಳೆ. ಬಂದು ನೊಡುವುದೇನನ್ನು? ಎತ್ತುಗಳೆರಡೂ ಬಂದು ಬಾಗಿಲಿಗೆ ಅಡ್ಡವಾಗಿ ನಿಂತಿದ್ದುವು. ಚೋಮನನ್ನು ಅನುಸರಿಸಿ, ಅವನ ಹಿಂದೆಯೇ ಅವು ಬಂದಿದ್ದುವು! ಹೀಗಿವೆ ಚೋಮ ಮತ್ತು ಎತ್ತುಗಳ ನಂಟು!

ಸಂಗೀತದಲ್ಲಿ ಆಧಾರ ಶ್ರುತಿ ಎಂಬುದೊಂದು ಇರುವ ಹಾಗೆ ಕಾದಂಬರಿಯಲ್ಲಿ ಚೋಮ ‘ಮೆಟ್ಟುವ’ ದುಡಿಯ ದನಿಯೇ ಆಧಾರ ಶ್ರುತಿ. ಅದರಲ್ಲಿ ಎಡಬಿಡದೆ ದುಡಿಯ ದನಿ ಕಿವಿಗೆ ಬೀಳುತ್ತದೆ. ಚೋಮ ಕುಡಿದು ಬಾರಿಸುತ್ತಾನೆ; ಮುನಿದು ಬಾರಿಸುತ್ತಾನೆ; ಹೊತ್ತು ಗೊತ್ತಿಲ್ಲದೆ ಬಾರಿಸುತ್ತಾನೆ; ಎಲ್ಲವನ್ನೂ ಕಳೆದು ಎದೆಯೊಡದಾಗಲೂ ಬಾರಿಸುತ್ತಾನೆ. “ಒಂದೊಂದು ಗಳಿಗೆಯಲ್ಲಿ ಅವನ ಮನಸ್ಸು ತೀರ ವಿಹ್ವಲವಾಯಿತೆಂದರೆ ಪ್ರಪಂಚವನ್ನು ಮರೆಯಿಸಬಲ್ಲ ಅವನ ದುಡಿಯಿದೆ. ಅವನ ಒಡಲಿಗೂ ದುಡಿಗೂ ನಡುವೆ ಸೇಂದಿಯ ಸೇತುವೆಯಿದೆ” ಎನ್ನುತ್ತಾರೆ ಕಾರಂತರು. ವಿಹ್ವಲತೆಯೊಂದೇ ಅಲ್ಲ, ಅವನ ಎಲ್ಲ ಬಗೆಯ ಭಾವನೆಗಳ, ಭಾವವಿಕಾರಗಳ ಪಡಿದನಿ ಅವನ ದುಡಿಯಲ್ಲಿ ಹೊಮ್ಮುತ್ತವೆ.

ಚೋಮನ ದುಡಿಯಲ್ಲಿ ಅನೇಕ ಪ್ರಸಂಗಗಳು ದಲಿತಜೀವನದ ವಿಷಾದ ಚಿತ್ರಗಳನ್ನು ಕಣ್ಣ ಮುಂದಿಡುತ್ತವೆ. ಒಂದೆರಡು ವಾಕ್ಯಗಳಲ್ಲಿ, ಇಲ್ಲ ವಾಕ್ಯಪುಂಜಗಳಲ್ಲಿ ಕಾರಂತರು ಅಂತಹ ಪ್ರಸಂಗಗಳನ್ನು ನಿರೂಪಿಸುತ್ತಾರೆ :

“ಹೊತ್ತು ಮುಳುಗಿದ ಮೇಲೆ ಚೋಮನ ಗುಡಿಸಲಲ್ಲಿದೀಪ ಉರಿಸಿದವರಿಲ್ಲ, ದೀಪ ಉರಿಸಲು ಅವನಲ್ಲೇನು ಮುತ್ತು ಸುರಿಯುತ್ತಾರೆಯೇ?”

“ಕಾಫಿ ತೋಟಗಳಿಗೆ ಹೋಗಿ ಋಣ ಇದುವರೆಗೆ ಸಂದಾಯವಾದುದೇ ಇಲ್ಲ. ಪ್ರತಿ ವರ್ಷವೂ ಅವರು (ಕೆಲಸದಾಳುಗಳು) ಸಾಲ ತೆಗೆಯುತ್ತಲೇ ಇರಬೇಕು, ತೆಗೆದ ಸಾಲ ತುಸುವೂ ಕಡಿಮೆಯಾಗದೆ ಉಳಿಯುತ್ತಲೇ ಇರಬೇಕು. ಕಾಫಿ ತೋಟದ ಚಳಿಜ್ವರ, ಸಾಲಗಳೇರಡೂ ಒಂದೇ ಸಮ, ಹಿಡಿದ ಮೇಲೆ ಅವು ಬಿಡುವುದೊಂದೇ ದಿನ”.

ಘಟ್ಟದ ತೋಟಕ್ಕೆ ಹೊರಟ ಚನಿಯ ಗುರುವರ ಮನಸ್ಥಿತಿಯ ಚಿತ್ರಣ ಹೀಗಿದೆ. “ತೋಟವು ಜನಕ್ಕೆಲ್ಲ ಕತ್ತಲಾಗಿ ಕಂಡರೂ ತಾವು ಮಾತ್ರ ಬೆಳುದಿಂಗಳನ್ನು ಅಲ್ಲಿ ಕಾಣುತ್ತೇವೆ ಎಂಬ ಹಿರಿಯ ಆಸೆ” ಅವರದು.

ಘಟ್ಟದ ಮೇಲಿಂದ ಹಿಂದಿರುಗಿದ ನಾಲ್ಕೇ ದಿನಗಳಲ್ಲಿ ತೀವ್ರವಾದ ಜ್ವರಭಾದೆಯಿಂದ ಚನಿಯ ಸತ್ತಾಗಿನ ಒಂದು ಸನ್ನಿವೇಶ ಹೀಗಿದೆ: “ಒಂದು ಕಡೆ ಬಾಡು ನಾಯಿ ನೆಲಕ್ಕೆ ಮೂತಿಯನ್ನು ಬಾಚಿ ಮಲಗಿತ್ತು. ಅದರ ಕಣ್ಣಲ್ಲೂ ನೀರ ಹನಿಗಳಿದ್ದುವು. ಕೊಟ್ಟಿಗೆಯಲ್ಲಿ ಕಟ್ಟಿದ ಎತ್ತುಗಳನ್ನು ಮಾತಾಡಿಸದೆ ಒಂದು ದಿನ ಸಂದಿತ್ತು” ಓದುವಾಗ ಕರುಳು ಚುರುಕೆನ್ನುತ್ತದೆ.

ಚೋಮನ ಕಿರಿಮಗ ನೀಲ ಹಳ್ಳದ ನೀರಲ್ಲಿ ಮುಳುಗಿ ಸಾಯುವಂತಾದಾಗ, “ಒಬ್ಬ ಬ್ರಾಹ್ಮಣ ತರುಣನು ಧಾವಿಸಿ, ನೀಲವನ್ನು ಎಳೆದು ತರಲು ಮುಂದುವರಿದನು, ಅವನ ಹಿರಿಯರು ಅವನನ್ನು ತಡೆದರು! ‘ಅವರು ಹೊಲೆಯನಲ್ಲವೇ’ ಎಂದ ಬೆದರಿಸಿದರು”. ಆ ಸಂದರ್ಭವನ್ನು ವಿವರಿಸುತ್ತಾ, ಕೊನೆಯಲ್ಲಿ ಕಾರಂತರು ಹೀಗೆ ಹೇಳುತ್ತಾರೆ. “ಚೋಮನಿಗೆ ಹೊಲೆಯನ ಬಾಳ್ವೆಯ ಹುಣ್ಣು ಎಂಥದ್ದೆಂದು ಸಂಪೂರ್ಣ ಅನುಭವವಾಯಿತು. ಶವವನ್ನು ಹೊತ್ತು ಮನೆಗೆ ತಂದನು”.

ಮನ್ವೇಲ ಮತ್ತು ಬೆಳ್ಳಿ ತನ್ನ ಗುಡಸಿಲಿನ ಒಳಗಡೆ ಒಂದೇ ಚಾಪೆಯಲ್ಲಿ ಹತ್ತಿರ ಹತ್ತಿರ ಕೂತು ಮಾತಾಡುತ್ತಿರುವುದನ್ನು ಕಂಡಾಗ ಚೋಮನ ಮೈನಡುಗಿ, ಸಿಟ್ಟು ನೆತ್ತಿಗೇರುತ್ತದೆ. ಮನ್ವೇಲನನ್ನು ಹೊಡೆದೋಡಿಸಿ, ಬೆಳ್ಳಿಯ ಕತ್ತನ್ನು ಅಮುಕಿ ಹಿಡಿದು, ಹೊರಕ್ಕೆ ತಳ್ಳಿ, ಹತ್ತಿರ ಬಂದ ಕಾಳನನ್ನು ಹೆದರಿಸಿ ದೂರಕ್ಕೆ ಅಟ್ಟಿದ ಚೋಮನ ಕೋಪ ತಾಪ, ಹತಾಶೆ ಅಸಹಾಯಕತೆಗಳೆಲ್ಲ ಮನಸ್ಸನ್ನು ಹಿಂಡುತ್ತವೆ. ಎಂದಿಲ್ಲದ ಆವೇಶದಿಂದ ಧನಿಯ ಹೊಲವನ್ನು ಉತ್ತು, ಎತ್ತುಗಳನ್ನು ಚೆನ್ನಾಗಿ ಮಿಯಿಸಿ, ಮತ್ತೆ ಅವುಗಳನ್ನು ಕಾಡಿಗೆ ಹೊಡೆದಟ್ಟಿ, ನೊಗನೇಗಿಲುಗಳನ್ನು ಕುಟ್ಟು ಮುರಿಯುವುದು, ಸುಟ್ಟು ಬೂದಿ ಮಾಡುವುದು ಎಲ್ಲವೂ ಕರುಣಾಜನಕ. ಅವನ ಜೀವನದ ರುದ್ರನಾಟಕದ ಕೊನೆಯ ದೃಶ್ಯವಂತೂ ಅತ್ಯಂತ ಹೃದಯ ವೇಧಕ.

“ಸರಿ ಒಮ್ಮೆಗೇ ದುಡಿಯನ್ನು ಹಿಡಿದು ಬಾರಿತೊಡಗಿದನು. ……ಅದರಂತೆ ದುಡಿಯನ್ನು ಅವನು ಈ ಜೀವಮಾನದಲ್ಲಿ ಬಾರಿಸಿರಲಿಲ್ಲ. ಇನ್ನು ಬಾರಿಸುವಂತಿಲ್ಲ. ತೀರ ಸ್ವಲ್ಪ ಹೊತ್ತು ಬಾರಿಸಿದುದು. ಆದರೆ ನಿಜಕ್ಕೂ ಅದು ಪ್ರಳಯ ತಾಂಡವದ ಡಮರುನಿನಾದ! ದುಡಿಯ ಢಮಡಮ್ಮವು. ನಿಂತಿತು, ಒಮ್ಮೆಗೇ ನಿಂತಿತು. ಚೋಮನ ಹೃದಯದ ಡಮರೂ ನಿಂತಿತು! ಅದೂ ಒಮ್ಮೆಗೇ ನಿಂತಿತು!.

“ಏನೋ ಭೀತಿಯಾಗಿ ಬೆಳ್ಳಿ ಬಾಗಿಲ ಬಳಿಗೆ ಓಡಿ ಬಂದಳು. ……..ಗುಡಿಸಲ ಒಳಕ್ಕೆ ಹೋದಳು! ಅರೆಗತ್ತಲಲ್ಲಿ ಕಂಡಿತು, ಚೋಮನ ಸಮಾಧಿ!

“ಹಿಡಿದ ದುಡಿ, ಎತ್ತಿದ ಕೈ, ತುಂಬಿದ ಆವೇಶ! ಎಲ್ಲವೂ ಇದ್ದಕ್ಕಿಂದ್ದತೆಯೇ ಇವೆ. ಆದರೆ ‘ಚೋಮ’ನಿಲ್ಲ!”

ಕಾರಂತರ ಕಾದಂಬರಿಗಳಲ್ಲಿ ಅಷ್ಟೇ ಏಕೆ, ಕನ್ನಡದ ಕಾದಂಬರಿಗಳಲ್ಲೇ, ತೀರ ವಿರಳವಾದ ಉಪಸಂಹಾರ ಇದಾಗಿದೆ. ತೀರ ನಾಟಕೀಯವಾಗಿದೆ, ಅಷ್ಟೇ ಪರಿಣಾಮಕಾರಿಯೂ ಆಗಿದೆ.

ಕಾರಂತರು ಚೋಮನದುಡಿಯನ್ನು ಬರೆದ ಕಾಲದಲ್ಲಿ ಒಬ್ಬ ಲೇಖಕ ಒಂದು ಕಥೆಯನ್ನು ಎಷ್ಟು ಪರಿಣಾಮಕಾರಿಯಾಗಿ, ಎಷ್ಟು ಕಲಾತ್ಮಕವಾಗಿ, ಒಂದು ವಿಶಿಷ್ಟ ಆಶಯವೋ ಸಂದೇಶವೋ ಇದ್ದರೆ ಅದನ್ನು ಎಷ್ಟು ಬೋಧಪ್ರದನಾಗಿ ಹೇಳಿದ್ದಾನೆ, ಹಾಗೆ ಹೇಳುವಲ್ಲಿ ಭಾಷೆ, ಶೈಲಿ, ಅಲಂಕಾರ ವರ್ಣನೆಗಳೆಲ್ಲ ಹೇಗೆ ಹಿತವಾಗಿ, ಯುಕ್ತವಾಗಿ, ಉಚಿತವಾಗಿ  ಬಳಕೆಯಾಗಿವೆ ಎಂಬುದನ್ನು ವಿವರಿಸುವುದರಲ್ಲಿ ವಿಮರ್ಶೆ ವಿರಮಿಸುತ್ತಿತ್ತು. ಆದರೆ ವರ್ತಮಾನದಲ್ಲಿ ವಿಮರ್ಶೆ ಹೆಚ್ಚು ವ್ಯಾಪಕವಾಗಿದೆ, ಬಹುಮುಖಿಯಾಗಿದೆ ಮತ್ತು ವಿಶ್ಲೇಷಣಾತ್ಮಕವೂ ಆಗಿದೆ. ವಿಮರ್ಶಕ ಒಂದು ಕೃತಿಯನ್ನು ನವವಿಮರ್ಶೆಯ ಲಕ್ಷಣಗಳ ಒರೆಗಲ್ಲಿಗೆ ಹಚ್ಚುತ್ತಾನೆ; ಅಂತಹುದೇ ಮತ್ತೊಂದು ಕೃತಿಯೊಂದಿಗೆ ತೂಗುತ್ತಾನೆ; ಕೃತಿ ರಚನೆಯಲ್ಲಿ ಲೇಖಕನ ಪ್ರಾಜಲತೆ, ಕ್ಷಮತೆ, ಸಂವೇದನಶೀಲತೆಗಳು ಹೇಗೆ ಏನು ಎಂಬುದನ್ನು, ಆ ಕೃತಿಯ ಸಾಮಯಿಕತೆ (Relevance) ಎಷ್ಟೆಂಬುದನ್ನು ಬೆಲೆಕಟ್ಟಿ ತಿಳಿಸುತ್ತಾನೆ. ಕಾರಂತರು ‘ಚೋಮನದುಡಿ’ಯನ್ನು ಬರೆದ ಮೇಲಿನ ಈ ಎಪ್ಪತ್ತೈದು ವರ್ಷಗಳಲ್ಲಿ, ಅದರಲ್ಲೂ ಕಳೆದ ಇಪ್ಪತ್ತು ಮೂವತ್ತು ವರ್ಷಗಳಲ್ಲಿ ನಮ್ಮಲ್ಲಿ ‘ದಲಿತ ಪ್ರಜ್ಞೆ’ ಹೆಚ್ಚು ತೀವ್ರವಾಗಿದೆ. ದಲಿತ ಲೇಖಕರೂ ಬಹುಸಂಖ್ಯೆಯಲ್ಲಿದ್ದಾರೆ. ಆ ಕಾರಣವಾಗಿ, ನಮ್ಮ ಕೆಲವು ವಿಮರ್ಶಕರ ದೃಷ್ಟಿಯಲ್ಲಿ ಕಾರಂತರ ‘ಚೋಮನದುಡಿ’ ಅಥೆಂಟಿಕ್ (Authentic) ಎಂದರೆ ‘ಅಧಿಕೃತ’ ಅಲ್ಲ; ಕಾರಂತರಿಗೆ ದಲಿತ ಜೀವನದ ಪರೋಕ್ಷ ಅನುಭವವೇ; ವಿನಾ ಸ್ವಾನುಭವ ಇಲ್ಲ; ಆದುದರಿಂದ ದಲಿತ ಜೀವನದ ಹಸಿ ಬಿಸಿ, ಕಾವು ನೋವು ಕಾರಂತರಿಗೆ ಅಥವಾ ಅವರಂಥವರ ಲೇಖನಿಗೆ ತಟ್ಟುವಂತಿಲ್ಲ ಎಂಬ ಅಭಿಪ್ರಾಯಗಳು ವ್ಯಕ್ತವಾದದ್ದಿದೆ. ಇಂತಹ ಅಭಿಮತಗಳು ಅಥವಾ ಅಭಿನವೇಶಗಳು ಒಂದು ಸಾಹಿತ್ಯಕೃತಿಗೆ ನ್ಯಾಯವನ್ನು ಒದಗಿಸಲಾರವು. ಒಂದು ಕಥೆ ಕಾದಂಬರಿಯ ವಸ್ತು, ಪಾತ್ರ ಘಟನೆಗಳೆಲ್ಲವೂ ಆಕರ ಲೇಖನ ಅವುಗಳ ಪ್ರತ್ಯಕ್ಷಾನುಭವದ ಮೂಷೆಯಲ್ಲೇ ಪಾಕಗೊಳ್ಳುತ್ತವೆ ಎಂದು ಹೇಳಲಾಗದು; ಅದನ್ನು ನಿರೀಕ್ಷಿಸಲೂ ಬಾರದು. ಎಲ್ಲವೂ ಪ್ರತ್ಯಕ್ಷಾನುಭವ ಸಿದ್ಧವಾಗಬೇಕು ಎಂಬ ವಾದವನ್ನು ಬೆಳಸುತ್ತ ಹೋದರೆ ಪ್ರಾಚೀನ ಕಾವ್ಯಗಳ ದೇವ ದೇವತೆಯರು, ರಾಕ್ಷಸವಾನರರು, ಧೀರ ಪುರುಷರು, ವೀರ ನಾರಿಯರು ಇವರನ್ನೆಲ್ಲ ಚಿತ್ರಿಸುವ ಅಧಿಕಾರ ಯಾವ ಕವಿಗೂ ಇರುವುದಿಲ್ಲ! ಪ್ರಾಚೀನ ಕಾವ್ಯಗಳ ಮಾತು ಬೇಡ, ‘ಗೋವಿಂದ ಕಥೆ’ಯ ಅಧಿಕೃತತೆಯನ್ನು ಪ್ರಶ್ನಿಸಬೇಕಾಗುತ್ತದೆ. ಮಕ್ಕಳ ಮುದುಕರ. ಪ್ರತಿವ್ರತೆ ಪತಿತೆಯರ ಬಾಳಿನ ಗೋಳಿನ ಕತೆಗಳನ್ನೆಲ್ಲ ಅವರವರೇ ಹೇಳಬೇಕಾಗುತ್ತದೆ. ಒಟ್ಟಿನಲ್ಲಿ ಒಬ್ಬ ಲೇಖಕ ತನನ ಕತೆಯನ್ನಷ್ಟೇ ಬರೆಯಬಹುದಲ್ಲದೆ ಇನ್ನೊಬ್ಬನ ವ್ಯಥೆಯನ್ನು ಹೇಳಲಾರ, ಹೇಳಲೂ ಬಾರದು ಎಂಬಲ್ಲಿಯವರೆಗೆ ವಾದ ಬೆಳೆಯಬಹುದು! – ತಾತ್ಪರ್ಯವಿಷ್ಟೆ : ನಿಜ ಜೀವನದ ಅನುಭವ ಒಂದು, ಸಾಹಿತ ಕೃತಿಯಲ್ಲಿ ಅದನ್ನು ಅಭಿವ್ಯಕ್ತಿಸುವುದು ಮತ್ತೊಂದು. ಸಾಹಿತ್ಯ ರಚನೆಯಲ್ಲಿ ಸಂವೇದನೆಯೇ, (Sensibility) ಅದರ ಪ್ರಕಟನ ಕುಶಲತೆಯೇ (Expression) ಪ್ರಧಾನ ಅಂಶ. ನೋವು ಯಾರದೋ ಇರಬಹುದು, ನಲಿವು ಇನ್ನಾರದೋ ಆಗಬಹುದು. ಸಮರ್ಥ ಲೇಖನ ಅವುಗಳನ್ನು ತನ್ನದಾಗಿ ಮಾಡಿ, ತನ್ನದೆಯ ಕುಲುಮೆಯಲ್ಲಿ ಕರಗಿಸಿ, ಭಾವನೆಯ ಅಚ್ಚಿನಲ್ಲಿ ಎರಕ ಹೊಯ್ದು, ಬಣ್ಣನೆಯ ಪುಟವಿಟ್ಟು ಬೆಳೆಬಾಳುವ ಬಂಗಾರದ ಒಡವೆಯಾಗಿ ಮಾಡಿ ಓದುಗರಿಗೆ ಒಪ್ಪಿಸುತ್ತಾನೆ. ಅವರು ಅದನ್ನು ಕೊಂಡು, ತೊಟ್ಟು ನಲಿಯುತ್ತಾರೆ. ‘The test for pudding is eating’ ಎನ್ನುವುದುಂಟು. ಒಂದು ಸಾಹಿತ್ಯ ಕೃತಿಯನ್ನು ಯಾರು ರಚಿಸಿದ್ದಾರೆ ಎಂದು ಕೇಳುವುದಲ್ಲ, ಹೇಗೆ ರಚಿಸಿದ್ದಾರೆ ಎಂದು ಕೇಳುವುದು ಸಹೃದಯತೆ, ಗುಣಪಕ್ಷಪಾತ.

 


[1] ‘ಮೂಲ’ದವನೆಂದರೆ ಒಬ್ಬ ಧನಿಯ ಒಕ್ಕಲಾಗಿ, ಅವನಲ್ಲೇ ಕೂಲಿ ನಾಲಿ ಮಾಡಿ ಬದುಕಬೇಕಾದವನು. ಅಲ್ಲಿಂದ ಬಿಡುಗಡೆ ಎಂಬುದೇ ಇಲ್ಲ.